ಋಷ್ಯಶೃಂಗ

ಋಷ್ಯಶೃಂಗನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೦-೧೧೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

ಬ್ರಹ್ಮರ್ಷಿ, ತಪಸ್ಸಿನಿಂದ ಆತ್ಮವನ್ನು ಅನುಭವಿಸಿದ ಅಮೋಘವೀರ್ಯ, ಸತ್ಯವಂತ, ಪ್ರಜಾಪತಿಯಂತೆ  ಬೆಳಗುವ ವಿಭಾಂಡಕನಲ್ಲಿ ಪ್ರತಾಪಿ, ಮಹಾಹೃದ, ಮಹಾತೇಜಸ್ವಿ, ಸ್ಥವಿರಸಂಹಿತ ಬಾಲಕ ಋಷ್ಯಶೃಂಗನು ಮಗನಾಗಿ ಜನಿಸಿದನು. ಕಾಶ್ಯಪ ವಿಭಾಂಡಕನು ಕೌಶಿಕೀ ನದಿಯನ್ನು ಸೇರಿ ಅಲ್ಲಿ ದೀರ್ಘಕಾಲ ಪರಿಶ್ರಮಿಸಿ ಋಷಿ-ದೇವತೆಗಳಿಂದ ಗೌರವಿಸಲ್ಪಟ್ಟು ತಪಸ್ಸಿನಲ್ಲಿ ನಿರತನಾಗಿದ್ದನು. ಅವನು ನೀರಿನಲ್ಲಿ ಸ್ನಾನಮಾಡುತ್ತಿರುವಾಗ ಅಪ್ಸರೆ ಊರ್ವಶಿಯನ್ನು ನೋಡಿ ಅವನ ವೀರ್ಯವು ಸ್ಖಲನವಾಯಿತು. ಆಗಲೇ ಅಲ್ಲಿಗೆ ಬಾಯಾರಿಕೆಯಿಂದ ಬಂದು ನೀರನ್ನು ಕುಡಿಯುತ್ತಿದ್ದ ಹೆಣ್ಣು ಜಿಂಕೆಯೊಂದು ಅದನ್ನು ಕುಡಿಯಿತು ಮತ್ತು ಅದು ಗರ್ಭಿಣಿಯಾಯಿತು. ದೈವನಿರ್ಮಿತವಾದ ವಿಧಿಯು ನಿಶ್ಚಯಿಸಿದುದು ಎಷ್ಟೇ ಅಮೋಘವಾಗಿದ್ದರೂ ನಡೆಯುತ್ತದೆ. ಆ ಜಿಂಕೆಯಲ್ಲಿ ಅವನ ಪುತ್ರ ಮಹಾನೃಷಿ ಋಷ್ಯಶೃಂಗನು ಜನಿಸಿದನು. ನಿತ್ಯವೂ ತಪಸ್ಸಿನಲ್ಲಿದ್ದ ಅವನು ವನದಲ್ಲಿಯೇ ಬೆಳೆದನು. ಆ ಮಹಾತ್ಮನ ಶಿರದಲ್ಲಿ ಜೆಂಕೆಯ ಕೋಡುಗಳಿದ್ದವು. ಆದುದರಿಂದ ಋಷ್ಯಶೃಂಗ ಎಂಬ ಹೆಸರು ಅವನಿಗೆ ಬಂದಿತು. ತನ್ನ ತಂದೆಯ ಹೊರತಾಗಿ ಬೇರೆ򩹱ಯಾವ ಮನುಷ್ಯರನ್ನೂ ಅವನು ನೋಡಿರಲಿಲ್ಲ. ನೃಪ! ಆದುದರಿಂದ ಅವನ ಮನಸ್ಸು ನಿತ್ಯವೂ ಬ್ರಹ್ಮಚರ್ಯದಲ್ಲಿತ್ತು.

ಅದೇ ಸಮಯದಲ್ಲಿ ದಶರಥನ ಸಖ ಲೋಮಪಾದನೆಂಬ ಖ್ಯಾತನು ಅಂಗ򘴁ದೇಶದ ರಾಜನಾಗಿದ್ದನು. ಅವನು ತನ್ನ ಮನಬಂದಂತೆ ಬ್ರಾಹ್ಮಣರನ್ನು ನಡೆಸಿಕೊಳ್ಳುತ್ತಿದ್ದನು. ಆದುದರಿಂದ ಬ್ರಾಹ್ಮಣರು ಆ ರಾಜನನ್ನು ಪರಿತ್ಯಜಿಸಿದರು. ರಾಜನ ಪುರೋಹಿತನೇ ಹೊರಟು ಹೋದುದರಿಂದ ಸಹಸ್ರಾಕ್ಷನು ಅಲ್ಲಿ ಮಳೆಯನ್ನು ಸುರಿಸಲಿಲ್ಲ ಮತ್ತು ಪ್ರಜೆಗಳು ಪೀಡಿತರಾದರು. ರಾಜನು ಇಂದ್ರನಿಂದ ಮಳೆತರಿಸಲು ತಪೋಧನ, ತಿಳಿದ, ಸಮರ್ಥ ಬ್ರಾಹ್ಮಣರಲ್ಲಿ ಕೇಳಿದನು: “ಮಳೆಯನ್ನು ಹೇಗೆ ಸುರಿಸಬಹುದು? ಉಪಾಯವನ್ನು ಹುಡುಕಿ!” ಈ ರೀತಿ ಪ್ರಶ್ನಿಸಲ್ಪಟ್ಟ ವಿವೇಕಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡರು. ಅವರಲ್ಲಿ ಒಬ್ಬ ಮುನಿಯು ರಾಜನಿಗೆ ಹೇಳಿದನು: “ರಾಜೇಂದ್ರ! ಬ್ರಾಹ್ಮಣರು ನಿನ್ನಮೇಲೆ ಕುಪಿತರಾಗಿದ್ದಾರೆ. ಅದನ್ನು ಸರಿಮಾಡು! ವನದಲ್ಲಿಯೇ ಬೆಳೆದ, ನಾರಿಗಳ ಕುರಿತು ತಿಳಿಯದೇ ಇದ್ದ, ಸತ್ಯರತನಾದ, ಮುನಿಸುತ ಋಷ್ಯಶೃಂಗನನ್ನು ಕರೆಯಿಸು. ಆ ಮಹಾತಪಸ್ವಿಯು ನಿನ್ನ ರಾಜ್ಯಕ್ಕೆ ಬಂದರೆ ತಕ್ಷಣವೇ ಮಳೆ ಸುರಿಯುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ!”

ಈ ಮಾತನ್ನು ಕೇಳಿದ ರಾಜನು ತನಗೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡನು. ಅವನು ಹೊರ ಹೋಗಿ ಬ್ರಾಹ್ಮಣರು ಪ್ರಸನ್ನರಾದ ನಂತರ ಹಿಂದಿರುಗಿದನು. ಆಗಮಿಸಿದ ರಾಜನನ್ನು ಪ್ರಜೆಗಳು ಸ್ವೀಕರಿಸಿದರು. ಅನಂತರ ಅಂಗಪತಿಯು ಮಂತ್ರಕೋವಿದ ಸಚಿವರನ್ನು ಕರೆಯಿಸಿ ಋಷ್ಯಶೃಂಗನನ್ನು ಕರೆತರಿಸುವುದರ ಕುರಿತು ಮಂತ್ರಾಲೋಚನೆ ಮಾಡಿ ನಿಶ್ಚಯಿಸಿದನು. ಶಾಸ್ತ್ರಜ್ಞರೂ, ಅರ್ಥಜ್ಞರೂ, ನೀತಿಪ್ರವೀಣರೂ ಆದ ಅಮಾತ್ಯರ ಸಹಾಯದಿಂದ ಆ ಅಚ್ಯುತನು ಒಂದು ಉಪಾಯವನ್ನು ತಯಾರಿಸಿದನು. ಪಾರ್ಥಿವ ಮಹೀಪತಿಯು ಅತ್ಯಂತ ಶ್ರೇಷ್ಠ, ಎಲ್ಲದರಲ್ಲಿ ಪಳಗಿದ ವೇಶ್ಯೆಯರನ್ನು ಕರೆಯಿಸಿ ಅವರಿಗೆ ಹೇಳಿದನು: “ಸುಂದರಿಯರೇ! ಏನಾದರೂ ಉಪಾಯದಿಂದ - ಆಸೆತೋರಿಸಿ ಅಥವಾ ಭರವಸೆಗಳನ್ನಿತ್ತು ಋಷಿಪುತ್ರ ಋಷ್ಯಶೃಂಗನನ್ನು ನನ್ನ ರಾಜ್ಯಕ್ಕೆ ಕರೆತರಬೇಕು!”

ಆ ಮಹಿಳೆಯರು ರಾಜನ ಭಯದಿಂದ ಮತ್ತು ಶಾಪದ ಭಯದಿಂದ ಹೆದರಿ񃗑ವಿವರ್ಣರಾಗಿ, ಮನಸ್ಸನ್ನು ಕಳೆದುಕೊಂಡು, “ಇದು ಸಾಧ್ಯವೇ ಇಲ್ಲ!” ಎಂದರು. ಆದರೆ ಅಲ್ಲಿದ್ದ ಓರ್ವ ವೃದ್ಧ ಮಹಿಳೆಯು ರಾಜನಿಗೆ ಹೇಳಿದಳು: “ಮಹಾರಾಜ! ಆ ತಪೋಧನನನ್ನು ಕರೆತರಲು ನಾನು ಪ್ರಯತ್ನಿಸುತ್ತೇನೆ. ನಾನು ಬಯಸಿದ ಕೆಲವು ಸೌಲಭ್ಯಗಳಿಗೆ ಅಪ್ಪಣೆ ಕೊಡಬೇಕು. ಆಗ ಆ ಋಷಿಸುತ ಋಷ್ಯಶೃಂಗನನ್ನು ಆಸೆತೋರಿಸಿ ಕರೆತರಬಲ್ಲೆ!”

ಆಗ ರಾಜನು ಅವಳ ಎಲ್ಲ ಬೇಡಿಕೆಗಳನ್ನೂ ಪೂರೈಸುವಂತೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಹಣ ಮತ್ತು ವಿವಿಧ ರತ್ನಗಳನ್ನು ಕೊಡಿಸಿದನು. ರೂಪ ಮತ್ತು ವಯಸ್ಸಿನಲ್ಲಿ ಸಂಪನ್ನರಾದ ಹಲವಾರು ಸ್ತ್ರೀಯರೊಂದಿಗೆ ಅಂಜಿಕೊಂಡೇ ಅವರು ವನಕ್ಕೆ ಹೋದರು. ರಾಜಕಾರ್ಯವನ್ನು ಯಶಸ್ವಿಗೊಳಿಸಲೋಸುಗ ನೃಪತಿಯ ಆದೇಶದಂತೆ ಮತ್ತು ಸ್ವಂತ ಬುದ್ಧಿಯನ್ನು ಓಡಿಸಿ ಅವಳು ಒಂದು ದೋಣಿಯಲ್ಲಿ ಆಶ್ರಮವೊಂದನ್ನು ನಿರ್ಮಿಸಿದಳು. ಅದು ಕೃತ್ರಿಮವಾದ ನಾನಾ ಹೂವು-ಹಣ್ಣುಗಳ ಮರಗಳಿಂದ, ನಾನಾತರಹದ ಗೊಂಚಲು ಹೂವುಗಳಿರುವ ಬಳ್ಳಿಗಳಿಂದ, ಎಲ್ಲ ತರಹದ ರುಚಿಗಳಿರುವ ಹಣ್ಣುಗಳಿಂದ ತುಂಬಿತ್ತು. ಆ ದೋಣಿಯ ಮೇಲಿನ ಆಶ್ರಮವು ಅತೀವ ರಮಣೀಯವಾಗಿಯೂ, ಅತೀವ ಮನೋಹರವಾಗಿಯೂ ಇದ್ದು ನೋಡಲು ಅದ್ಭುತವೂ ರಮ್ಯವೂ ಆಗಿತ್ತು. ಆ ನಾವೆಯನ್ನು ಕಾಶ್ಯಪಾಶ್ರಮದ ಸ್ವಲ್ಪವೇ ದೂರದಲ್ಲಿ ನಿಲ್ಲಿಸಿ, ಪುರುಷರು ಆ ಮುನಿಯ ಆಶ್ರಮದಲ್ಲಿ ತಿರುಗಾಡಿದರು. ಆಗ ವೇಶ್ಯೆಯು ಮಾಡಬೇಕಾದ ಕೆಲಸವನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವಕಾಶ ಹುಡುಕಿ ಬುದ್ಧಿವಂತೆ ಮಗಳನ್ನು ಕಾಶ್ಯಪನ ಹತ್ತಿರ ಕಳುಹಿಸಿದಳು. ಆ ಕುಶಲೆಯು ತಪೋನಿತ್ಯನ ಆಶ್ರಮದಲ್ಲಿ ಅವನ ಸನ್ನಿಧಿಗೆ ಹೋಗಿ ಅಲ್ಲಿ ಋಷಿಸುತನನ್ನು ಕಂಡಳು.

ವೈಶ್ಯೆಯು ಹೇಳಿದಳು: “ತಾಪಸಿ ಮುನಿಯು ಕುಶಲದಿಂದಿದ್ದಾನೆಯೇ? ಸಾಕಷ್ಟು ಫಲಮೂಲಗಳು ದೊರೆಯುತ್ತವೆಯೇ? ಈ ಆಶ್ರಮದಲ್ಲಿ ನಿನಗೆ ಸಂತೋಷವಾಗುತ್ತಿದೆಯೇ? ನಿನ್ನನ್ನು ಭೇಟಿಯಾಗಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ. ತಾಪಸರ ತಪಸ್ಸು ವೃದ್ಧಿಯಾಗುತ್ತಿದೆಯೇ? ನಿನ್ನ ತಂದೆಯು ತನ್ನ ತೇಜಸ್ಸನ್ನು ಕಳೆದುಕೊಳ್ಳಲಿಲ್ಲ ತಾನೇ? ಆ ವಿಪ್ರನು ನಿನ್ನಿಂದ ಸಂತೋಷಗೊಂಡಿದ್ದಾನೆ ತಾನೇ? ಋಷ್ಯಶೃಂಗ! ನೀನು ಆಧ್ಯಾಯನವನ್ನು ಮಾಡಿಮುಗಿಸಿದ್ದೀಯಾ?”

ಋಷ್ಯಶೃಂಗನು ಹೇಳಿದನು: “ನೀನು ಅತಿ ದೊಡ್ಡ ದೀಪದಂತೆ ಬೆಳಗುತ್ತಿದ್ದೀಯೆ! ನಿನಗೆ ಸಮಸ್ಕರಿಸುವುದು ಸರಿ ಎಂದು ನನಗನ್ನಿಸುತ್ತಿದೆ. ನಾನು ಬಯಸಿದಂತೆ ನಿನಗೆ ಪಾದ್ಯವನ್ನು ನೀಡುತ್ತೇನೆ ಮತ್ತು ಯಥಾಧರ್ಮವಾಗಿ ಫಲಮೂಲಗಳನ್ನು ಅರ್ಪಿಸುತ್ತೇನೆ. ಕೃಷ್ಣಾಜಿನವನ್ನು ಹಾಸಿ ಸುಖವನ್ನು ನೀಡುವ ದರ್ಭೆಯ ಆಸನದಲ್ಲಿ ಸುಖಾಸೀನನಾಗು. ನಿನ್ನ ಆಶ್ರಮವು ಎಲ್ಲಿದೆ ಮತ್ತು ಬ್ರಹ್ಮನ್! ದೇವತೆಗಳಂತೆ ಆಚರಿಸುತ್ತಿರುವ ಈ ವ್ರತದ ಹೆಸರೇನು?”

ವೈಶ್ಯೆಯು ಹೇಳಿದಳು: “ಸುಂದರ ಕಾಶ್ಯಪಪುತ್ರ! ನನ್ನ ಆಶ್ರಮವು ಈ ಬೆಟ್ಟವನ್ನು ದಾಟಿ ಮೂರು ಯೋಜನ ದೂರದಲ್ಲಿದೆ. ಅಲ್ಲಿ ನಮ್ಮ ಧರ್ಮದ ಪ್ರಕಾರ ಇನ್ನೊಬ್ಬರಿಗೆ ನಮಸ್ಕರಿಸುವುದಿಲ್ಲ ಮತ್ತು ಕಾಲು ತೊಳೆಯಲು ನೀರನ್ನು ಬಳಸುವುದಿಲ್ಲ.”

ಋಷ್ಯಶೃಂಗನು ಹೇಳಿದನು: “ನಾನು ಭಲ್ಲಾತಕ, ಪರೂಷಕ, ಇಂಗುಧ, ಧನ್ವನ, ಪ್ರಿಯಾಲ, ಮೊದಲಾದ ಗಳಿತ ಹಣ್ಣುಗಳನ್ನು ಮತ್ತು ಬೀಜಗಳನ್ನು ನಿನಗೆ ಋಚಿಯನ್ನು ಸವಿದು ಸಂತೋಷಪಡಲು ಕೊಡುತ್ತೇನೆ.”

ಆ ಎಲ್ಲವನ್ನೂ ತಿರಸ್ಕರಿಸಿ ಅವಳು ಅವನಿಗೆ ಬೆಲೆಬಾಳುವ, ಅತ್ಯಂತ ರುಚಿಕರ ಮತ್ತು ನೋಡಲು ಸುಂದರವಾಗಿದ್ದ ತಿಂಡಿಗಳನ್ನು ಕೊಟ್ಟಳು. ಅವುಗಳು ಋಷ್ಯಶೃಂಗನಿಗೆ ಮಹಾ ಆನಂದವನ್ನು ನೀಡಿದವು. ಸುಗಂಧಯುಕ್ತ ಮಾಲೆಗಳನ್ನೂ, ಬಣ್ಣಬಣ್ಣದ ಹೊಳೆಯುವ ಬಟ್ಟೆಗಳನ್ನೂ, ಮತ್ತು ಉತ್ತಮ ಮಾದಕ ಪಾನೀಯಗಳನ್ನೂ ಕೊಟ್ಟು, ನಗುನಗುತ್ತಾ ಆಟವಾಡುತ್ತಾ ಅವನನ್ನು ರಂಜಿಸಿದಳು. ಅವನ ಹತ್ತಿರ ಒಂದು ಚೆಂಡನ್ನಿಟ್ಟು, ಅರಳುವ ಹೂಗಳ ಬಳ್ಳಿಯಂತೆ ಅವನ ಅಂಗಾಂಗಗಳಿಗೆ ತನ್ನ ಅಂಗಾಂಗಳನ್ನು ಮುಟ್ಟಿಸುತ್ತಾ ಋಷ್ಯಶೃಂಗನನ್ನು ಮತ್ತೆ ಮತ್ತೆ ಆಲಂಗಿಸಿದಳು. ಅವಳು ಸರ್ಜಾ, ಅಶೋಕ ಮತ್ತು ತಿಲಕ ವೃಕ್ಷಗಳ ರೆಂಬೆಗಳನ್ನು ಬಗ್ಗಿಸಿ ಹೂವನ್ನು ಕಿತ್ತಳು. ಮತ್ತೇರಿದವಳಾಗಿ ನಾಚಿಕೆಯೇ ಇಲ್ಲವೋ ಎನ್ನುವಂತೆ ಆ ಮಹರ್ಷಿಯ ಮಗನ ಕಾಮವನ್ನು ಹೆಚ್ಚಿಸಲು ಪ್ರಯತ್ನಿಸಿದಳು. ಆಗ ಋಷ್ಯಶೃಂಗನ ದೇಹದಲ್ಲಿ ಬದಲಾವಣೆಗಳನ್ನು ಕಂಡು ಅವನ ದೇಹವನ್ನು ಪುನಃ ಪುನಃ ಅಪ್ಪಿ ಹಿಂಡಿದಳು. ಆಗ ನಿಧಾನವಾಗಿ ಅಗ್ನಿಹೋತ್ರದ ನೆಪವನ್ನು ಹೇಳಿ, ಅವನನ್ನೇ ನೋಡುತ್ತಾ, ಹಿಂದೆ ಹೋದಳು.

ಅವಳ򠈱ಹೋದನಂತರ ಮದನನಿಂದ ಮತ್ತನಾದ ಋಷ್ಯಶೃಂಗನು ತನ್ನ ಮನಸ್ಸನ್ನು ಕಳೆದುಕೊಂಡವನಂತಾದನು. ಅವಳು ಹೋದ ಕಡೆಯಲ್ಲಿಯೇ ಶೂನ್ಯ ದೃಷ್ಟಿಯಿಟ್ಟು ನೋಡುತ್ತಾ, ನಿಟ್ಟಿಸುರು ಬಿಡುತ್ತಾ, ಅವನ ಮುಖವು ಆರ್ತರೂಪವನ್ನು ತಾಳಿತು. ಆಗ ಸ್ವಲ್ಪವೇ ಕ್ಷಣದಲ್ಲಿ ಸಿಂಹದಂತಿದ್ದ ಪಿಂಗಲಾಕ್ಷ, ಉಗುರುಗಳ ವರೆಗೆ ತಲೆಕೂದಲನ್ನು ಬಿಟ್ಟಿದ್ದ, ಸ್ವಾಧ್ಯಾಯದಲ್ಲಿ ನಿರತನಾದ, ಸಮಾಧಿಯುಕ್ತನಾದ, ಕಾಶ್ಯಪ ವಿಭಾಂಡಕನು ಹತ್ತಿರ ಬಂದನು. ಅವನು ವಿಪರೀತಚಿತ್ತನಾಗಿ ಒಬ್ಬನೇ ಯೋಚಿಸುತ್ತಾ ಕುಳಿತಿರುವ ಮಗನನ್ನು ನೋಡಿದನು. ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತಾ ಮೇಲೆ ನೋಡುತ್ತಾ ದೀನನಾಗಿದ್ದ ಮಗನಿಗೆ ವಿಭಾಂಡಕನು ಹೇಳಿದನು: “ಮಗೂ! ಇನ್ನೂ ಸಮಿಧೆಗಳನ್ನು ತರಲಿಲ್ಲ ಏಕೆ? ಇನ್ನೂ ಇಂದಿನ ಅಗ್ನಿಹೋತ್ರವನ್ನು ನಡೆಸಲಿಲ್ಲವೇ? ಹೋಮದ ಹುಟ್ಟುಗಳನ್ನು ತೊಳೆದಿಟ್ಟಿದ್ದೀಯಾ? ಹೋಮಕ್ಕೆ ಕರುವಿನೊಂದಿಗೆ ಹಸುವನ್ನು ತಂದಿದ್ದೀಯಾ? ಮಗಾ! ಮೊದಲಿನಂತೆ ನೀನಿಲ್ಲ! ಚೇತನವನ್ನು ಕಳೆದುಕೊಂಡು ಚಿಂತಾಪರನಾಗಿ ಮನಸ್ಸನ್ನು ಕಳೆದುಕೊಂಡಿದ್ದೀಯೆ. ಇಂದು ನೀನು ತುಂಬಾ ದುಃಖಕ್ಕೊಳಗಾದ ಹಾಗಿದೆ. ಆದರೆ ಏಕೆ? ಇಂದು ಇಲ್ಲಿಯೇ ಇದ್ದ ನಿನ್ನನ್ನು ಕೇಳುತ್ತಿದ್ದೇನೆ.”

ಋಷ್ಯಶೃಂಗನು ಹೇಳಿದನು: “ಇಲ್ಲಿಗೆ ಒಬ್ಬ ಜಡೆಹಾಕಿದ ಬ್ರಹ್ಮಚಾರಿಯು ಬಂದಿದ್ದ. ಅವನು ಕುಳ್ಳಗೂ ಇರಲಿಲ್ಲ ಮತು􁲱ಅತಿಯಾಗಿ ಎತ್ತರವೂ ಇರಲಿಲ್ಲ. ತುಂಬಾ ಉತ್ಸಾಹಿಯಾಗಿದ್ದ. ಬಂಗಾರದ ಬಣ್ಣವನ್ನು ಹೊಂದಿದ್ದ ಅವನ ಕಣ್ಣುಗಳು ಕಮಲದ ಎಸಳುಗಳಂತಿದ್ದವು. ಸುರರ ಮಗನಂತೆ ಶೋಭಿಸುತ್ತಿದ್ದನು. ಅವನ ಸಮೃದ್ಧ ದೇಹವು ಸೂರ್ಯನಂತೆ ಬೆಳಗುತ್ತಿತ್ತು. ಅವನ ಕಣ್ಣುಗಳು ಚಕೋರಗಳಂತೆ ಬಿಳಿ ಮತ್ತು ಕಪ್ಪಾಗಿದ್ದವು. ಅವನ ಜಡೆಯು ನೀಲವಾಗಿ, ನೋಡಲು ಸುಂದರವಾಗಿ, ಸುಗಂಧಿತವಾಗಿತ್ತು. ಅದು ನೀಳವಾಗಿದ್ದು ಬಂಗಾರದ ದಾರದಿಂದ ಕಟ್ಟಲ್ಪಟ್ಟಿತ್ತು. ಅವನ ಕಂಠದಲ್ಲಿ ಅಂತರಿಕ್ಷದಲ್ಲಿ ಬೆಳಗುವ ಮಿಂಚಿನಂತೆ ಹೊಳೆಯುವ ಲೋಟಗಳಿಂತಿರುವವುಗಳನ್ನು ಧರಿಸಿದ್ದನು. ಅವನ ಕಂಠದ ಕೆಳಗೆ ರೋಮಗಳೇ ಇಲ್ಲದ ಅತಿ ಸುಂದರ ಎರಡು ಗೋಲಗಳಿದ್ದವು. ಅವನ ಹೊಕ್ಕಳು ಪ್ರದೇಶದಲ್ಲಿ ಚುಚ್ಚಲಾಗಿತ್ತು. ಅವನ ಸೊಂಟವೂ ದೊಡ್ಡದಾಗಿತ್ತು. ಅವನ ಪೋಷಾಕಿನ ಕೆಳಗೆ ನನಗಿದ್ದಹಾಗೆ ಪಟ್ಟಿಯಿತ್ತು – ಆದರೆ ಅದು ಬಂಗಾರದ್ದಾಗಿತ್ತು. ಇನ್ನೂ ಅನೇಕ ಅದ್ಭುತಗಳು ಅವನಲ್ಲಿ ಕಂಡುಬಂದವು. ಅವನ ಕಾಲುಗಳಲ್ಲಿ ಧ್ವನಿಮಾಡುವ ಗೆಜ್ಜೆಗಳಿದ್ದವು. ಕೈಗಳಲ್ಲಿಯೂ ಕೂಡ ಅಂತಹದೇ, ನನ್ನ ರುದ್ರಾಕ್ಷದಂತಿರುವ ದಾರವನ್ನು ಕಟ್ಟಿದ್ದನು. ಆದರೆ ಅದು ಝಣ ಝಣ ಶಬ್ದಮಾಡುತ್ತಿತ್ತು. ಅವನು ಹಂದಾಡಿದಾಗಲೆಲ್ಲ ಅವುಗಳು ಸರೋವರದಲ್ಲಿ ಮತ್ತೇರಿದ ಹಂಸಗಳಂತೆ ಶಬ್ಧಮಾಡುತ್ತಿದ್ದವು. ಅವನ ಉಡುಪು ನೋಡಲು ಅದ್ಭುತವಾಗಿತ್ತು. ಅವು ನನ್ನ ಉಡುಪಿನ ಹಾಗಿರದೇ, ತುಂಬಾ ಸುಂದರವಾಗಿತ್ತು. ಅವನ ಮುಖವೂ ನೋಡಲು ಅದ್ಭುತವಾಗಿತ್ತು. ಅವನ ಮಾತು ಹೃದಯಕ್ಕೆ ಸಂತಸವನ್ನು ನೀಡುತ್ತಿತ್ತು. ಅವನ ಮಾತು ಕೋಗಿಲೆಯ ಹಾಡಿನಂತಿತ್ತು. ಅವನನ್ನು ಕೇಳಿದಾಗಲೆಲ್ಲ ನನ್ನ ಅಂತರಾತ್ಮವು ವ್ಯಥಿತಗೊಳ್ಳುತ್ತಿತ್ತು. ಮಾಧವ ಮಾಸದ ಮಧ್ಯೆ ವನದಲ್ಲಿ ಗಾಳಿಯು ಪರಿಮಳವನ್ನು ಹೊತ್ತು ತರುವಂತೆ ಅವನೂ ಕೂಡ ಗಾಳಿಯು ಅವನ ಮೇಲೆ ಬಿದ್ದಾಗಲೆಲ್ಲ ಉತ್ತಮ ಪುಣ್ಯ ಸುಗಂಧವನ್ನು ಸೂಸುತ್ತಿದ್ದನು. ನೆತ್ತಿಯಮೇಲೆ ಸಮನಾಗಿ ಎರಡು ಭಾಗಗಳನ್ನಾಗಿಸಿ ಚೆನ್ನಾಗಿ ಜಡೆಕಟ್ಟಿದ್ದನು. ಸರಿಯಾದ ದುಂಡಾಗಿ ಕೂದಲುಗಳು ಗುಂಗುರಾಗಿ ಅವನ ಕಿವಿಗಳನ್ನು ಸುಂದರವಾಗಿ ಮುಚ್ಚಿದ್ದವು. ಅವನ ಬಲಗೈನಲ್ಲಿ ಹಣ್ಣಿನಂತೆ ಗೋಲಾಕಾರದ ಬಣ್ಣಬಣ್ಣದ ವಸ್ತುವೊಂದನ್ನು ಹಿಡಿದಿದ್ದನು. ಅದು ಭೂಮಿಯನ್ನು ಮುಟ್ಟಿದ ಕೂಡಲೆ ಪುನಃ ಪುನಃ ಮೇಲೆ ಅದ್ಭುತವಾಗಿ ಪುಟಿಯುತ್ತಿತ್ತು. ಅದನ್ನು ಹೊಡೆದು ಅವನು ತನ್ನ ದೇಹವನ್ನು ಗಾಳಿಗೆ ಸಿಕ್ಕ ಮರದಂತೆ ತಿರುಗಿಸುತ್ತಿದ್ದನು. ಅಪ್ಪಾ! ಅಮರರ ಮಗನಂತಿರುವ ಅವನನ್ನು ನೋಡಿದಾಗಲೆಲ್ಲ ನನ್ನಲ್ಲಿ ಅತ್ಯಂತ ಪ್ರೀತಿ ಮತ್ತು ಸಂತೋಷವು ಹುಟ್ಟುತ್ತಿತ್ತು. ಅವನು ನನ್ನ ಶರೀರವನ್ನು ಪುನಃ ಪುನಃ ಅಪ್ಪಿ ಹಿಡಿದು ನನ್ನ ಕೂದಲನ್ನು ಎಳೆದು ನನ್ನ ಮುಖವನ್ನು ಕೆಳಮಾಡಿ ಬಾಯಿಯ ಮೇಲೆ ಬಾಯಿಯನ್ನಿಟ್ಟು ಶಬ್ಧಮಾಡಿದನು. ಅದರಿಂದ ನನ್ನಲ್ಲಿ ಅತ್ಯಂತ ಸಂತೋಷವು ಹುಟ್ಟಿತು. ಅವನು ಪಾದ್ಯಕ್ಕೆ ಹೆಚ್ಚು ಗಮನಕೊಡಲಿಲ್ಲ. ನಾನು ಕೊಟ್ಟ ಹಣ್ಣುಗಳನ್ನೂ ಸ್ವೀಕರಿಸಲಿಲ್ಲ. ಇದೇ ನನ್ನ ವ್ರತ ಎಂದು ನನಗೆ ಹೇಳಿದನು ಮತ್ತು ನನಗೆ ಬೇರೆ ಹೊಸ ಹಣ್ಣುಗಳನ್ನು ಕೊಟ್ಟ. ಅವನ ಎಲ್ಲ ಹಣ್ಣುಗಳನ್ನೂ ನಾನು ತಿಂದೆ. ಅವುಗಳ ರುಚಿಯು ಈ ಹಣ್ಣುಗಳಂತೆ ಇರಲೇ ಇಲ್ಲ. ಈ ಹಣ್ಣುಗಳಿಗಿರುವಂತೆ ಅವುಗಳಲ್ಲಿ ತೊಗಟೆಯೂ ಇರಲಿಲ್ಲ ಮತ್ತು ನಮ್ಮ ಹಣ್ಣುಗಳಲ್ಲಿರುವಂತೆ ಅವುಗಳಲ್ಲಿ ಕಲ್ಲುಗಳಿರಲಿಲ್ಲ. ಆ ಉದಾರರೂಪಿಯು ನನಗೆ ಈ ಅತಿ ರುಚಿಯಾಗುಳ್ಳ ಪಾನೀಯವನ್ನು ನೀಡಿದನು. ಅದನು􋣱ಕುಡಿಯುತ್ತಲೇ ಅತೀವ ಖುಷಿಯು ನನ್ನನ್ನು ಸೆರೆಹಿಡಿಯಿತು ಮತ್ತು ಭೂಮಿಯೇ ಓಲಾಡುವಂತೆ ಆಯಿತು. ಇವು ರಂಗುರಂಗಿನ ಸುಗಂಧಯುಕ್ತ, ಅವನೇ ಕಟ್ಟಿದ ಮಾಲೆಗಳು. ಈ ಮಾಲೆಗಳನ್ನು ಇಲ್ಲಿ ಚೆಲ್ಲಿ ಅವನು ಬೆಳಗುತ್ತಾ ತನ್ನ ಆಶ್ರಮಕ್ಕೆ ತಪಸ್ಸಿಗೆಂದು ಹೊರಟುಹೋದನು. ಅವನು ಬಿಟ್ಟುಹೋದದ್ದು ನನ್ನನ್ನು ಮನಸ್ಸು ಕಳೆದುಕೊಂಡವನಂತೆ ಮಾಡಿದೆ. ನನ್ನ ದೇಹವು ಜ್ವರಬಂದವರಂತೆ ಬಿಸಿಯಾಗಿದೆ. ನೇರವಾಗಿ ಅವನಿರುವಲ್ಲಿಗೆ ಹೋಗ ಬಯಸುತ್ತೇನೆ ಮತ್ತು ಪ್ರತಿದಿನ ಅವನು ಇಲ್ಲಿಗೆ ಬರುವಂತೆ ಮಾಡಬಯಸುತ್ತೇನೆ. ಅಪ್ಪಾ! ಅವನಿರುವಲ್ಲಿ ತಿರುಗಿ ಹೋಗುತ್ತಿದ್ದೇನೆ. ಅವನ ವ್ರತಚರ್ಯದ ಹೆಸರೇನು? ಅವನೊಂದಿಗೆ ಅವನ ಹಾಗೆ ಇರಲು ಮತ್ತು ಆ ಉಗ್ರತಪಸ್ಸನ್ನು ಆಚರಿಸಲು ಬಯಸುತ್ತೇನೆ.”

ವಿಭಾಂಡಕನು ಹೇಳಿದನು: “ಮಗನೇ! ಅವರು ನೋಡಲು ಅದ್ಭುತ ರೂಪಧರಿಸಿ ತಿರುಗಾಡುವ ರಾಕ್ಷಸರು. ಅತುಲ್ಯ ರೂಪವಂತರಾದ ಆದರೆ ಘೋರರಾದ ಅವರು ಸದಾ ತಪಸ್ಸಿಗೆ ವಿಘ್ನವನ್ನು ತಂದು ನಿಲ್ಲಿಸುತ್ತಾರೆ. ಅವರ ಸುಂದರ ದೇಹಗಳನ್ನು ತೋರಿಸಿ ವಿವಿಧ ತರಹಗಳಲ್ಲಿ ಅವರು ಪ್ರಲೋಭಗೊಳಿಸಲು ನೋಡುತ್ತಿರುತ್ತಾರೆ. ತಮ್ಮ ಉಗ್ರ ಕರ್ಮಗಳಿಂದ ವನಗಳಲ್ಲಿದ್ದ ಮುನಿಗಳನ್ನು ಸುಖ ಮತ್ತು ಲೋಕಗಳಿಂದ ಬೀಳಿಸುತ್ತಾರೆ. ಅತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಮುನಿಯು, ಸತ್ಯವಂತರ ಲೋಕಗಳನ್ನು ಪ್ರಾರ್ಥಿಸುತ್ತಿದ್ದರೆ, ಅವರನ್ನು ದೂರವಿಡಬೇಕು. ಪಾಪವನ್ನು ತಿಳಿಯದ ಮಗನೇ! ತಾಪಸರಿಗೆ ವಿಘ್ನವನ್ನು ತಂದು ಆ ಪಾಪಚಾರಿಗಳು ಸಂತೋಷಪಡುತ್ತಾರೆ. ಆ ಮದ್ಯ ಪಾನೀಯಗಳು ಪಾಪಗಳು, ಅಸಚ್ಚ ಜನರು ತೆಗೆದುಕೊಳ್ಳುವವು. ಈ ಬಣ್ಣ ಬಣ್ಣದ, ಕಾಂತಿಯುಕ್ತ ಸುಗಂಧಿತ ಮಾಲೆಗಳು ಮುನಿಗಳಿಗಲ್ಲ. ಅವು ರಾಕ್ಷಸರಿಗೆ.”

ಅವರು ರಾಕ್ಷಸರೆಂದು ಮಗನನ್ನು ತಡೆದು ವಿಭಾಂಡಕನು ಅವಳನ್ನು ಹುಡುಕಲು ಹೋದನು. ಮೂರು ದಿನಗಳು ಹುಡುಕಿ ಅವಳನ್ನು ಕಾಣದೇ, ತನ್ನ ಆಶ್ರಮಕ್ಕೆ ಹಿಂದಿರುಗಿದನು. ಆದರೆ ಪುನಃ ಕಾಶ್ಯಪನು ಹಣ್ಣುಗಳನ್ನು ಹುಡುಕಲು ಹೋದಾಗ, ಆ ವೈಶ್ಯೆಯು ಮುನಿ ಋಷ್ಯಶೃಂಗನನ್ನು ಪುನಃ ಲೋಭಗೊಳಿಸಲು ಬಂದಳು. ಅವಳನ್ನು ನೋಡಿದೊಡನೆಯೇ ಪ್ರಹೃಷ್ಟನಾದ ಋಷ್ಯಶೃಂಗನು ಸಂಭ್ರಾಂತಗೊಂಡವನಂತೆ ಅವಳನ್ನು ಭೇಟಿಮಾಡಿದನು. ಮತ್ತು ಹೇಳಿದನು: “ಬೇಗನೆ ನನ್ನ ತಂದೆಯು ಬರುವುದರೊಳಗೆ ನಿನ್ನ ಆಶ್ರಮಕ್ಕೆ ಹೋಗೋಣ!” ಆಗ ಅವಳು ಕಾಶ್ಯಪನ ಒಬ್ಬನೇ ಮಗನನ್ನು ವಿವಿಧರೀತಿಗಳಲ್ಲಿ ಪ್ರಲೋಭಗೊಳಿಸುತ್ತಾ ದೋಣಿಯ ಮೇಲೆ ಕೂರಿಸಿ, ಅಂಗರಾಜನ ಬಳಿಗೆ ಕರೆದೊಯ್ದಳು. ಆಶ್ರಮದಂತೆ ಕಾಣುತ್ತಿದ್ದ ಅತೀವ ಶುಭ್ರವಾಗಿದ್ದ ಆ ನಾವೆಯನ್ನು ಅದರಂತೆಯೇ ತೋರುತ್ತಿದ್ದ ರಾಜಾಶ್ರಮ ಎಂಬ ಹೆಸರಿನ ಬಣ್ಣ ಬಣ್ಣದ ವನದ ಹತ್ತಿರ ನಿಲ್ಲಿಸಿದರು. ರಾಜನು ವಿಭಾಂಡಕನ ಒಬ್ಬನೇ ಮಗನನ್ನು ಅಂತಃಪುರದಲ್ಲಿ ಇರಿಸಿದನು. ತಕ್ಷಣವೇ ದೇವತೆಗಳು ಮಳೆಸುರಿಸಿದುದನ್ನು ನೋಡಿದನು. ಭೂಮಿಯು ನೀರಿನಿಂದ ತುಂಬಿಕೊಂಡಿತು. ತನ್ನ ಆಸೆಯು ಪರಿಪೂರ್ಣವಾಗಲು ಲೋಮಪಾದನು ತನ್ನ ಮಗಳು ಶಾಂತಿಯನ್ನು ಋಷ್ಯಶೃಂಗನಿಗೆ ಕೊಟ್ಟನು. ಕ್ರೋಧಕ್ಕೆ ಪ್ರತೀಕಾರವಾಗಿ ಅವನು ಮಾರ್ಗವನ್ನು ರಚಿಸಿ ಅಲ್ಲಲ್ಲಿ ಗೋವುಗಳನ್ನೂ ಗೋಪಾಲಕರನ್ನೂ ಇರಿಸಿದನು. ವಿಭಾಂಡಕನು ಬರುತ್ತಾನೆ ಎಂದು ರಾಜನು ವೀರ ಗೋಪಾಲಕರಿಗೆ ಹೇಳಿದನು: “ಮಹರ್ಷಿ ವಿಭಾಂಡಕನು ತನ್ನ ಮಗನನ್ನು ಹುಡುಕಿಕೊಂಡು ಬಂದು ನಿಮ್ಮನ್ನು ಪ್ರಶ್ನಿಸಿದರೆ ಅವನಿಗೆ ಪ್ರಾಂಜಲಿ ಬದ್ಧರಾಗಿ ಹೇಳಬೇಕು: “ಈ ಪಶುಗಳು ನಿನ್ನ ಮಗನಿಗೆ ಸೇರಿದ್ದು, ಈ ಬೆಳೆಗಳೂ ಕೂಡ. ಮಹರ್ಷೇ! ನಿನಗೆ ಪ್ರಿಯವಾಗುವ ಏನು ಕೆಲಸವನ್ನು ಮಾಡಬೇಕು? ನಾವೆಲ್ಲರೂ ನಿನ್ನ ದಾಸರು ಮತ್ತು ಮಾತಿಗೆ ಬದ್ಧರು.””

ಫಲಮೂಲಗಳನ್ನು ಹಿಡಿದು ತನ್ನ ಆಶ್ರಮಕ್ಕೆ ಹಿಂದಿರುಗಿದ ಮುನಿಯು ಚಂಡಕೋಪಿಷ್ಟನಾದನು. ಅಲ್ಲಿ ತನ್ನ ಪುತ್ರನನ್ನು ಹುಡುಕಿದರೂ ಇಲ್ಲದಿರುವುದನ್ನು ನೋಡಿದ ಅವನು ಇನ್ನೂ ಹೆಚ್ಚು ಕುಪಿತನಾದನು. ಅವನು ಕೋಪಕ್ಕೆ ಸಿಲುಕಿ, ಇದು ರಾಜನ ಕೆಲಸ ಎಂದು ಶಂಕಿಸಿ ಅಂಗರಾಜ ಮತ್ತು ಅವನ ರಾಜ್ಯವನ್ನು ಸುಟ್ಟುಬಿಡಲು ಚಂಪಾನಗರಿಗೆ ಹೋದನು. ಆಯಾಸಗೊಂಡು ಹಸಿವೆಯಿಂದ ಬಳಲಿದ ಕಾಶ್ಯಪನು ಮಾರ್ಗದಲ್ಲಿ ಸಮೃದ್ಧವಾಗಿದ್ದ ಗೋವುಗಳ ಹಿಂಡನ್ನು ನೋಡಿದನು. ಗೋಪರು ಅವನಿಗೆ ಅವನೇ ರಾಜನೋ ಎಂಬಂತೆ ವಿಧಿವತ್ತಾಗಿ ಪೂಜಿಸಿದರು ಮತ್ತು ರಾತ್ರಿ ಅಲ್ಲಿಯೇ ತಂಗಿದನು. ಅವರಿಂದ񎉁ಅತೀವ ಸತ್ಕಾರವನ್ನು ಪಡೆದು “ಸೌಮ್ಯರೇ! ಇದು ಯಾರದ್ದು?” ಎಂದು ಕೇಳಿದನು. ಆಗ ಎಲ್ಲರೂ ಅವನ ಬಳಿಬಂದು “ಈ ಧನವೆಲ್ಲವೂ ನಿನ್ನ ಮಗನದ್ದು!” ಎಂದು ಹೇಳಿದರು. ಸ್ಥಳ ಸ್ಥಳಗಳಲ್ಲಿ ಅವನಿಗೆ ಪೂಜೆ ದೊರೆಯಿತು ಮತ್ತು ಅವರಿಂದ ಅದೇ ಮಧುರ ಪ್ರಲಾಪಗಳನ್ನು ಕೇಳಿ ಸಿಟ್ಟನ್ನು ಕಳೆದು ಪ್ರಶಾಂತನಾಗಿ ಸಂತೋಷಗೊಂಡೇ ಅಂಗಪತಿಯ ಪುರವನ್ನು ಪ್ರವೇಶಿಸಿದನು. ಆ ನರರ್ಷಭನು ಅವನನ್ನು ಸಂಪೂಜಿಸಿದನು. ಅಲ್ಲಿ ವಿಭಾಂಡಕನು ದಿವಿಯಲ್ಲಿ ಇಂದ್ರದೇವನಂತಿರುವ ಮಗನನ್ನು ಮತ್ತು ಮಿಂಚಿನಂತೆ ಓಡಾಡುತ್ತಿರುವ ಸೊಸೆ ಶಾಂತಿಯನ್ನು ಕಂಡನು. ಗ್ರಾಮಗಳನ್ನೂ, ಗೋ ಹಿಂಡುಗಳನ್ನೂ, ಮಗ ಮತ್ತು ಶಾಂತಿಯನ್ನೂ ನೋಡಿದ ಅವನ ತೀವ್ರ ಕೋಪವು򺿡ಶಾಂತವಾಯಿತು. ಆಗ ವಿಭಾಂಡಕನು ಭೂಮಿಪತಿಗೆ ಪರಮ ಕರುಣೆಯನ್ನು ತೋರಿಸಿದನು. ಅಲ್ಲಿಯೇ ಮಗನನ್ನು ಇರಿಸಿ ಸೂರ್ಯಾಗ್ನಿಸಮಪ್ರಭಾವಿ ಮಹರ್ಷಿಯು ಹೇಳಿದನು: “ಮಗನು ಜನಿಸಿದ ಕೂಡಲೇ, ರಾಜನಿಗೆ ಪ್ರಿಯವಾದುದೆಲ್ಲವನ್ನೂ ಮಾಡಿ ವನಕ್ಕೆ ಮರಳಬೇಕು.”

ಅವನ ಮಾತುಗಳನ್ನು ನೆರವೇರಿಸಿ ಋಷ್ಯಶೃಂಗನು ತನ್ನ ತಂದೆಯಿರುವಲ್ಲಿಗೆ ಹೋದನು. ಶಾಂತಿಯಾದರೋ ಅವನನ್ನು ಅನುಸರಿಸಿ ಹೋದಳು. ಆಕಾಶದಲ್ಲಿ ರೋಹಿಣಿಯು ಚಂದ್ರನನ್ನು ಹಿಂಬಾಲಿಸುವಂತೆ, ಸುಭಗೆ ಅರುಂಧತಿಯು ವಸಿಷ್ಠನನ್ನು, ಲೋಪಾಮುದ್ರೆಯು ಅಗಸ್ತ್ಯನನ್ನು, ದಮಯಂತಿಯು ನಲನನ್ನು, ಶಚಿಯು ವಜ್ರಧರನನ್ನು, ನಾಡಾಯನಿಯು ಚಂದ್ರಸೇನನನ್ನು, ಮತ್ತು ವಶ್ಯೆಯು ನಿತ್ಯವೂ ಮುದ್ಗಲನನ್ನು ಸೇವೆಗೈಯುವಂತೆ ವನಸ್ಥನಾದ ಋಷ್ಯಶೃಂಗನಿಗೆ ಪ್ರೀತಿಯಿಂದ ಅವಳು ಪರಿಚರಿಯನ್ನು ಮಾಡಿದಳು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

One Comment

  1. ಮೋಹನಕುಮಾರ

    ಸ್ಪಷ್ಟ ಸರಳ ಸುಂದರ ಚಿತ್ರಣ ಋಷ್ಯಶೃಂಗದ ಭಾವಬಿಂಬವನ್ನು ಪರಮಾಸ್ವಾದನೀಯವಾಗಿ ನೀಡಿದೆ .
    ತುಂಬಾ ಇಷ್ಟವಾಯಿತು .
    ಧನ್ಯವಾದಗಳು .

Leave a Reply

Your email address will not be published. Required fields are marked *