ಅಷ್ಟಾವಕ್ರ

ಅಷ್ಟಾವಕ್ರನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೩೨-೧೩೪) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

Related imageಉದ್ದಾಲಕನಿಗೆ ಕಹೋಡ ಎನ್ನುವ ಓರ್ವ ನಿಯತನಾದ ಶಿಷ್ಯನಿದ್ದನು. ವಶಾನುವರ್ತಿಯಾದ ಅವನು ದೀರ್ಘಕಾಲದವರೆಗೆ ಆಚಾರ್ಯನ ಶುಶ್ರೂಷೆಯನ್ನು ಮಾಡಿ ಅಧ್ಯಯನ ನಿರತನಾಗಿದ್ದನು. ಅವನ ಸುತ್ತಲೂ ಇನ್ನೂ ಅನೇಕ ವಿಪ್ರರಿದ್ದರೂ ಗುರುವು ಇವನಲ್ಲಿ ವಿಪ್ರನ ಚಿಹ್ನೆಯನ್ನು ಗುರುತಿಸಿ, ಅವನಿಗೆ ಆಗಲೇ ತಾನು ತಿಳಿದುದೆಲ್ಲವನ್ನೂ ಮತ್ತು ತನ್ನ ಮಗಳು ಸುಜಾತಳನ್ನು ಪತ್ನಿಯನ್ನಾಗಿಯೂ ನೀಡಿದನು. ಅವಳಿಗೆ ಅಗ್ನಿಸಮಾನವಾದ ಗರ್ಭವಾಯಿತು. ಅದು ಅಧ್ಯಯನ ಮಾಡುತ್ತಿರುವ ತನ್ನ ತಂದೆಗೆ ಹೇಳಿತು: “ತಂದೇ! ರಾತ್ರಿಯಿಡೀ ಅಧ್ಯಯನವನ್ನು ಮಾಡುತ್ತಿರುತ್ತೀಯೆ. ಆದರೂ ನಿನಗೆ ಸರಿಯಾಗಿ ಬರುತ್ತಿಲ್ಲ!” ಶಿಷ್ಯರ ಮಧ್ಯದಲ್ಲಿ ಅಪಮಾನಿತಗೊಂಡ ಆ ಮಹರ್ಷಿಯು ಕೋಪದಿಂದ ಹೊಟ್ಟೆಯಲ್ಲಿದ್ದವನಿಗೆ ಶಾಪವನ್ನಿತ್ತನು - “ಹೊಟ್ಟೆಯಲ್ಲಿರುವಾಗಲೇ ಮಾತನಾಡಲು ತೊಡಗಿದ ನೀನು ಎಂಟು ಕಡೆಗಳಲ್ಲಿ ವಕ್ರನಾಗುತ್ತೀಯೆ!” ಅವನು ಹಾಗೆಯೇ ವಕ್ರನಾಗಿ ಹುಟ್ಟಿದನು. ಆ ಮಹರ್ಷಿಯು ಅಷ್ಟಾವಕ್ರನೆಂದು ಪ್ರಥಿತನಾದನು. ಅವನ ಸೋದರ ಮಾವನು ಶ್ವೇತಕೇತು. ಅವರಿಬ್ಬರೂ ಒಂದೇ ವಯಸ್ಸಿನವರಾಗಿದ್ದರು. ಹೊಟ್ಟೆಯಲ್ಲಿ ಮಗನು ಬೆಳೆಯುತ್ತಿರುವಾಗ ಸುಜಾತಳು ತುಂಬಾ ದುಃಖಿತಳಾಗಿದ್ದಳು. ಸಂಪತ್ತನ್ನು ಬಯಸಿದ ಅವಳು ಬಡವನಾದ ತನ್ನ ಪತಿಗೆ ನೋವಾಗದಂತೆ ಹೇಳಿದಳು: “ಮಹರ್ಷೇ! ನಾವು ಸಂಪತ್ತಿಲ್ಲದೇ ಹೇಗೆ ಬದುಕೋಣ? ಇದು ನನ್ನ ಗರ್ಭದ ಹತ್ತನೆಯ ತಿಂಗಳು. ಮಗುವು ಹುಟ್ಟಿದ ನಂತರ ಬರುವ ಆಪತ್ತನ್ನು ನಿವಾರಿಸಿಕೊಳ್ಳಲು ನಿನ್ನಲ್ಲಿ ಏನೂ ಹಣವಿಲ್ಲವಲ್ಲ!” ಹೆಂಡತಿಯು ಹೀಗೆ ಹೇಳಲು ಕಹೋಡನು ವಿತ್ತವನ್ನರಸಿ ಜನಕನಲ್ಲಿಗೆ ಹೋದನು. ಆದರೆ ಅಲ್ಲಿ ವಾದವಿದು ಬಂದಿಯು ಆ ವಿಪ್ರನನ್ನು ಸೋಲಿಸಿ ಸಮುದ್ರದಲ್ಲಿ ಮುಳುಗಿಸಿದನು. ಕಹೋಡನು ಸೂತನಿಂದ ಸೋಲಿಸಲ್ಪಟ್ಟು ಸಮುದ್ರದಲ್ಲಿ ಮುಳುಗಿಸಲ್ಪಟ್ಟ ಎಂಬ ವಾರ್ತೆಯನ್ನು ಉದ್ದಾಲಕನು ಪಡೆದನು. ಆಗ ಅವನು ಅಲ್ಲಿಯೇ ಸುಜಾತಳಿಗೆ ಹೇಳಿದನು: “ಈ ಸಂಗತಿಯನ್ನು ಅಷ್ಟಾವಕ್ರನಿಂದ ಮುಚ್ಚಿಡಬೇಕು.” ಅವಳಾದರೂ ಈ ವಿಷಯವನ್ನು ಗೌಪ್ಯವಾಗಿಯೇ ರಕ್ಷಿಸಿದಳು. ಹುಟ್ಟಿದ ನಂತರವೂ ಆ ವಿಪ್ರನು ಏನನ್ನೂ ಕೇಳಲಿಲ್ಲ. ಅಷ್ಟಾವಕ್ರನು ಉದ್ದಾಲಕನನ್ನೇ ತಂದೆಯೆಂದು ಮತ್ತು ಶ್ವೇತಕೇತುವನ್ನು ಸಹೋದರನೆಂದು ತಿಳಿದನು.

ಹನ್ನೆರಡು ವರ್ಷಗಳಾದಾಗ ಅಷ್ಟಾವಕ್ರನು ತಂದೆಯ ತೊಡೆಯಮೇಲೆ ಕುಳಿತುಕೊಂಡಿದ್ದಾಗ ಶ್ವೇತಕೇತುವು ಅವನ ಕೈಗಳನ್ನು ಹಿಡಿದೆಳೆದು ಅಳುತ್ತಿರುವವನಿಗೆ “ಇದು ನಿನ್ನ ತಂದೆಯ ತೊಡೆಯಲ್ಲ!” ಎಂದನು. ಕೆಟ್ಟದಾಗಿ ಹೇಳಲ್ಪಟ್ಟ ಆ ಮಾತುಗಳು ಅವನ ಹೃದಯದಲ್ಲಿ ನೆಲೆಮಾಡಿತು ಮತ್ತು ಅವನು ಬಹಳ ದುಃಖಿತನಾದನು. ಮನೆಗೆ ಹೋಗಿ ಅಳುತ್ತಾ ತಾಯಿಯಲ್ಲಿ ಕೇಳಿದನು: “ನನ್ನ ತಂದೆ ಯಾರು?” ಆಗ ಸುಜಾತಳು ಪರಮ ದುಃಖಿತಳಾಗಿ ಅವನ ಶಾಪಕ್ಕೆ ಹೆದರಿ ಎಲ್ಲವನ್ನೂ ಅವನಿಗೆ ಹೇಳಿದಳು. ಅವನ ತಾಯಿಯಿಂದ ಸತ್ಯವೆಲ್ಲವನ್ನೂ ತಿಳಿದನಂತರ ಆ ಬ್ರಾಹ್ಮಣನು ಶ್ವೇತಕೇತುವಿಗೆ ಹೇಳಿದನು: “ನಾವಿಬ್ಬರೂ ರಾಜ ಜನಕನ ಯಜ್ಞಕ್ಕೆ ಹೋಗೋಣ. ಅವನ ಯಜ್ಞವು ಬಹುದಾಶ್ಚರ್ಯವೆಂದು ಕೇಳಿದ್ದೇವೆ. ಅಲ್ಲಿ ಬ್ರಾಹ್ಮಣರ ವಿವಾದವನ್ನು ಕೇಳೋಣ. ಅಲ್ಲಿ ಉತ್ತಮ ಊಟವನ್ನು ಮಾಡೋಣ. ಬ್ರಹ್ಮಘೋಷವು ಮಂಗಳಕರ ಮತ್ತು ಸೌಮ್ಯ. ಇದರಿಂದ ನಮ್ಮ ತಿಳುವಳಿಕೆಯೂ ವೃದ್ಧಿಯಾಗುತ್ತದೆ.”

ಆ ಇಬ್ಬರು ಮಾವ-ಅಳಿಯಂದಿರು ರಾಜ ಜನಕನ ಸಮೃದ್ಧ ಯಜ್ಞಕ್ಕೆ ಹೋದರು. ದಾರಿಯಲ್ಲಿ ಅವರನ್ನು ತಡೆಗಟ್ಟಲು, ರಾಜನನ್ನು ಭೇಟಿಮಾಡಿ ಅಷ್ಟಾವಕ್ರನು ಈ ಮಾತುಗಳನ್ನಾಡಿದನು: “ಕುರುಡನ ಮಾರ್ಗ, ಕಿವುಡನ ಮಾರ್ಗ, ಸ್ತ್ರೀಯ ಮಾರ್ಗ, ಕೂಲಿಯ ಮಾರ್ಗ, ಬ್ರಾಹ್ಮಣನನ್ನು ಭೇಟಿಯಾಗದೇ ಇದ್ದರೆ ರಾಜನ ಮಾರ್ಗ. ಭೇಟಿಯಾದರೆ ಅದು ಬ್ರಾಹ್ಮಣನದೇ ಮಾರ್ಗವಾಗುತ್ತದೆ.”

ದ್ವಾರಪತಿಯು ಹೇಳಿದನು: “ಹಾಗಾದರೆ ಇಂದು ನಾನು ಈ ದಾರಿಯನ್ನು ನಿನಗಾಗಿ ಬಿಟ್ಟುಕೊಡುತ್ತೇನೆ. ಎಲ್ಲಿ ಬೇಕಾದಲ್ಲಿ ಪ್ರಯಾಣಮಾಡು. ಎಷ್ಟೇ ಸಣ್ಣದಾದರೂ ಬೆಂಕಿಯನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರನೂ ಕೂಡ ನಿತ್ಯವೂ ಬ್ರಾಹ್ಮಣರನ್ನು ನಮಸ್ಕರಿಸುತ್ತಾನೆ.”

ಅಷ್ಟಾವಕ್ರನು ಹೇಳಿದನು: “ಮಗೂ! ನಾವು ಯಜ್ಞವನ್ನು ನೋಡಲು ಬಂದಿದ್ದೇವೆ. ನಮ್ಮ ಕುತೂಹಲವು ಹೆಚ್ಚಾಗುತ್ತಿದೆ. ನಾವು ಅತಿಥಿಗಳಾಗಿ ಪ್ರವೇಶಿಸುತ್ತಿದ್ದೇವೆ. ನಿನ್ನ ಆಜ್ಞೆಯನ್ನು ಬಯಸುತ್ತೇವೆ. ಐಂದ್ರದ್ಯುಮ್ನಿಯ ಯಜ್ಞವನ್ನು ನೋಡಿ ನಾವು ಜನಕೇಂದ್ರನನ್ನೂ ನೋಡಬಯಸುತ್ತೇವೆ. ನಮ್ಮ ಕೋಪದಿಂದ ಇದೇ ಕ್ಷಣದಲ್ಲಿ ಗುಣವಾಗದ ವ್ಯಾಧಿಯಿಂದ ಬಳಲಬೇಡ!”

ದ್ವಾರಪಾಲಕನು ಹೇಳಿದನು: “ನಾವು ಬಂದಿಯ ಆದೇಶದಂತೆ ನಡೆಯುತ್ತೇವೆ. ನಾನು ಹೇಳಿದಂತೆ ನಡೆದುಕೊಳ್ಳಿ. ಯಾವ ವಿಪ್ರ ಬಾಲಕರೂ ಇಲ್ಲಿಗೆ ಪ್ರವೇಶಿಸದಿರಲಿ. ಆದರೆ ವೃದ್ಧ ಮತ್ತು ವಿಧ್ವಾಂಸ ದ್ವಿಜಾಗ್ರರು ಪ್ರವೇಶಿಸಲಿ.”

ಅಷ್ಟಾವಕ್ರನು ಹೇಳಿದನು: “ವೃದ್ಧರಿಗೆ ಇಲ್ಲಿ ಪ್ರವೇಶವಿದೆಯೆಂದಾದರೆ ದ್ವಾರಪಾಲ! ನಾನು ಪ್ರವೇಶಿಸಲು ಅರ್ಹನಾಗಿದ್ದೇನೆ. ಯಾಕೆಂದರೆ ನಾವು ವೃದ್ಧರು ಮತ್ತು ವ್ರತಗಳನ್ನು ಪಾಲಿಸುತ್ತಿದ್ದೇವೆ. ವೇದಪ್ರಭಾವದಿಂದ ನಾವು ಪ್ರವೇಶಿಸಲು ಅರ್ಹರಾಗಿದ್ದೇವೆ. ಶುಶ್ರೂಷೆ ಮಾಡುವವರು ಮತ್ತು ಜಿತೇಂದ್ರಿಯರಾದ ನಾವು ನಿಷ್ಠೆಯಿಂದ ಜ್ಞಾನದ ಕೊನೆಯವರೆಗೆ ತಲುಪಿದ್ದೇವೆ. ಬಾಲಕರೆಂದು ನಮ್ಮನ್ನು ಅಪಮಾನಿಸಬೇಡ. ಸಣ್ಣದಾಗಿದ್ದರೂ ಬೆಂಕಿಯನ್ನು ಮುಟ್ಟಿದರೆ ಸುಡುತ್ತದೆ.”

ದ್ವಾರಪಾಲಕನು ಹೇಳಿದನು: “ಹಾಗಾದರೆ ವೇದಜುಷ್ಟವಾದ ಒಂದೇ ಒಂದು ಅಕ್ಷರವಾದರೂ ಬಹುರೂಪದಲ್ಲಿ ವಿರಾಜಿಸುವ ಸರಸ್ವತಿಯನ್ನು ಹೇಳು. ಬಾಲಕ! ನಿನ್ನ ದೇಹವನ್ನು ನೋಡಿಕೋ! ವಾದಸಿದ್ಧಿಯನ್ನು ಪಡೆಯದೇ ಇದ್ದರೂ ಯಾಕೆ ಹೊಗಳಿಕೊಳ್ಳುತ್ತಿದ್ದೀಯೆ?”

ಅಷ್ಟಾವಕ್ರನು ಹೇಳಿದನು: “ಶಾಲ್ಮೀಲ ವೃಕ್ಷದಲ್ಲಿ ಬೆಳೆಯುವ ಕಳೆಯಂತೆ ವೃದ್ಧರೆಂದರೆ ದೇಹದ ವಯಸ್ಸು ಹೆಚ್ಚಿನದು ಎಂದು ತಿಳಿಯಬಾರದು. ಸಣ್ಣದಾದರೂ, ಗಿಡ್ಡದಾದರೂ ಫಲವನ್ನು ಪಡೆದರೆ ವೃದ್ಧವೆನಿಸಿಕೊಳ್ಳುತ್ತದೆ. ಫಲವನ್ನೇ ಪಡೆಯದ ವೃಕ್ಷವು ವೃದ್ಧವೆಂದೆನಿಸಿಕೊಳ್ಳುವುದಿಲ್ಲ.”

ದ್ವಾರಪಾಲಕನು ಹೇಳಿದನು: “ಬಾಲಕರು ವೃದ್ಧರಾಗುವವರೆಗೆ ವೃದ್ಧರಿಂದಲೇ ತಮ್ಮ ಬುದ್ಧಿಯನ್ನು ಪಡೆಯುತ್ತಾರೆ. ಸ್ವಲ್ಪವೇ ಸಮಯದಲ್ಲಿ ಜ್ಞಾನವನ್ನು ಪಡೆಯುವುದು ಶಕ್ಯವಿಲ್ಲ. ಹಾಗಿದ್ದಾಗ ಬಾಲಕರಾದ ನೀವು ನಿಮ್ಮನ್ನು ವೃದ್ಧರೆಂದು ಏಕೆ ಕರೆದುಕೊಳ್ಳುತ್ತಿದ್ದೀರಿ?”

ಅಷ್ಟಾವಕ್ರನು ಹೇಳಿದನು: “ಬೆಳೆದ ಬಿಳಿಕೂದಲಿದ್ದರೆ ಮಾತ್ರ ವೃದ್ಧನೆಂದಾಗುವುದಿಲ್ಲ. ತಿಳಿದಿರುವವನನ್ನು ಬಾಲಕನಾಗಿದ್ದರೂ ದೇವತೆಗಳು ವೃದ್ಧನೆಂದು ತಿಳಿಯುತ್ತಾರೆ. ವಯಸ್ಸಿನಿಂದಾಗಲೀ, ಬಿಳಿಕೂದಲಿನಿಂದಾಗಲೀ, ಸಂಪತ್ತಿನಿಂದಾಗಲೀ, ಬಂಧುಗಳಿಂದಾಗಲೀ ಋಷಿಗಳು ಧರ್ಮವನ್ನು ಮಾಡಿಲ್ಲ. ಯಾರು ಕಲಿತಿದ್ದಾನೋ ಅವನೇ ದೊಡ್ಡವನು. ರಾಜಸಭೆಯಲ್ಲಿ ಬಂದಿಯನ್ನು ನೋಡಲು ಬಂದಿದ್ದೇವೆ. ದ್ವಾರಪಾಲಕ! ಪುಷ್ಕರ ಮಾಲಿನಿ ರಾಜನಿಗೆ ನಾವು ಬಂದಿರುವುದನ್ನು ಹೇಳು. ಇಂದು ನಾನು ತಿಳಿದವರೊಡನೆ ವಾದಮಾಡುವುದನ್ನು ನೋಡು. ಎಲ್ಲರೂ ಸುಮ್ಮನಿರುವಾಗ ನಾನು ಮೇಲಾಗುವುದನ್ನು ಅಥವಾ ಕೆಳಗಾಗುವುದನ್ನು ನೋಡು.”

ದ್ವಾರಪಾಲಕನು ಹೇಳಿದನು: “ವಿನೀತರಿಗೆ ಮತ್ತು ವಿದುಷರಿಗೆ ಮಾತ್ರ ಪ್ರವೇಶವುಳ್ಳ ಯಜ್ಞಶಾಲೆಗೆ ಹತ್ತುವರ್ಷದ ನೀವು ಹೇಗೆ ಪ್ರವೇಶಿಸುವಿರಿ? ನಿಮ್ಮನ್ನು ಒಳಗೆ ಬಿಡಲು ನಾನು ಉಪಾಯವನ್ನು ಹುಡುಕುತ್ತೇನೆ. ನೀವೂ ಕೂಡ ಪ್ರಯತ್ನಮಾಡಬೇಕು.”

ಅಷ್ಟಾವಕ್ರನು ಹೇಳಿದನು: “ಭೋ ಭೋ ರಾಜನ್! ಜನಕರಲ್ಲಿ ವರಿಷ್ಠ! ನಿನ್ನ ಸಭೆಗೆ ಜಯವಾಗಲಿ, ನಿನ್ನ ಸರ್ವ ಸಮೃದ್ಧಿಗೆ ಜಯವಾಗಲಿ! ನೀನು ನಡೆಸುತ್ತಿರುವ ಈ ಯಜ್ಞದಂಥಹ ಕರ್ತನು ಹಿಂದೆ ಯಯಾತಿ ಮಾತ್ರ ಇದ್ದನು! ವಿದ್ವಾನ್ ವೇದವಿದು ಬಂದಿಯು ವಾದದಲ್ಲಿ ಅನುಮಾನಿತರನ್ನು ಸೋಲಿಸಿ ನೀನು ಕಳುಹಿಸಿದ ಆಪ್ತ ಜನರಿಂದ ಎಲ್ಲರನ್ನೂ ಸಮುದ್ರದಲ್ಲಿ ಹಾಕಿ ಮುಳುಗಿಸಿದನೆಂದು ಕೇಳಲಿಲ್ಲವೇ? ಬ್ರಾಹ್ಮಣರಿಂದ ಇದನ್ನು ಕೇಳಿದ ನಾನು ಇಂದು ಬ್ರಹ್ಮನನ್ನು ಹೇಳಲು ಬಂದಿದ್ದೇನೆ. ಬಂದಿಯು ಎಲ್ಲಿದ್ದಾನೆ? ಸೂರ್ಯನು ನಕ್ಷತ್ರಗಳನ್ನು ಹೇಗೋ ಹಾಗೆ ನಾನು ಅವನನ್ನು ವಾದದಲ್ಲಿ ಎದುರಿಸಿ ನಾಶಗೊಳಿಸುತ್ತೇನೆ.”

ರಾಜನು ಹೇಳಿದನು: “ಎದುರಾಳಿಯ ವಾಕ್ಯಬಲವನ್ನು ತಿಳಿಯದೇ ಬಂದಿಯನ್ನು ನೀನು ಸೋಲಿಸುತ್ತೀಯೆ ಎಂದು ಹೇಳುತ್ತಿರುವೆಯಲ್ಲ! ಹೀಗೆ ಹೇಳಲು ಕೇವಲ ವಿಜ್ಞಾತವೀರರಿಗೆ ಶಕ್ಯ. ವಾದಶೀಲ ಬ್ರಾಹ್ಮಣರು ಇದನ್ನು ಕಂಡುಕೊಂಡಿದ್ದಾರೆ.”

ಅಷ್ಟಾವಕ್ರನು ಹೇಳಿದನು: “ಅವನೊಂದಿಗೆ ವಾದಮಾಡಿದವರು ನನ್ನ ಹಾಗಿಲ್ಲ. ವಾದದಲ್ಲಿ ಭೀತರಾದ ಅವರು ಅವನನ್ನು ಸಿಂಹನನ್ನಾಗಿ ಮಾಡಿದ್ದಾರೆ. ನನ್ನನ್ನು ಭೇಟಿಯಾದ ನಂತರ ಇಂದು ಗಾಲಿ ಕಳಚಿದ ಬಂಡಿಯಂತೆ ಮಾರ್ಗಮದ್ಯದಲ್ಲಿ ಉಳಿಯುತ್ತಾನೆ.”

ರಾಜನು ಹೇಳಿದನು: “ಆರು ಭೇದಗಳನ್ನು, ಹನ್ನೆರಡು ಅಕ್ಷಗಳನ್ನು, ಇಪ್ಪತ್ನಾಲ್ಕು ಪರ್ವಗಳನ್ನು ಮತ್ತು ಮುನ್ನೂರಾ ಅರವತ್ತು ಚಕ್ರದ ಕಾಲುಗಳನ್ನು ತಿಳಿದವನೇ ಪರಮ ಕವಿಯು.”

ಅಷ್ಟಾವಕ್ರನು ಹೇಳಿದನು: “ಸದಾ ತಿರುಗುತ್ತಿರುವ ಇಪ್ಪತ್ನಾಲ್ಕು ಪರ್ವಗಳು, ಆರು ಭೇದಗಳುಳ್ಳ ಹನ್ನೆರಡು ಪ್ರಧಿಗಳನ್ನು ಹೊಂದಿದ ಮತ್ತು ಮುನ್ನೂರಾ ಅರವತ್ತು ಕಾಲುಗಳುಳ್ಳ ಚಕ್ರವು ನಿನ್ನನ್ನು ರಕ್ಷಿಸಲಿ! ”

ರಾಜನು ಹೇಳಿದನು: “ಎರಡು ಕುದುರೆಗಳನ್ನು ಕಟ್ಟಿದಂತಿದೆ, ಆಕಾಶದಿಂದ ಗಿಡುಗವು ಬಂದೆರಗುವಂತಿದೆ. ಅದು ಯಾವ ದೇವತೆಯ ಗರ್ಭದಿಂದ ಬಂದಿದೆ ಮತ್ತು ಯಾರು ಆ ಗರ್ಭದಿಂದ ಹುಟ್ಟಿದ್ದಾರೆ?”

ಅಷ್ಟಾವಕ್ರನು ಹೇಳಿದನು: “ರಾಜನ್! ಅವುಗಳನ್ನು ನಿನ್ನ ಮನೆಯಿಂದ ಮತ್ತು ನಿನ್ನ ಶತ್ರುವಿನ ಮನೆಯಿಂದಲೂ ದೂರವಿಡು! ವಾಯುಸಾರಥಿಯು ಅವನ್ನು ಪಡೆಯುತ್ತಾನೆ ಮತ್ತು ಅವು ಅವನ ಗರ್ಭದಲ್ಲಿ ಬೆಳೆಯುತ್ತವೆ.”

ರಾಜನು ಹೇಳಿದನು: “ನಿದ್ರಿಸಿರುವಾಗ ಏನು ಕಣ್ಣನ್ನು ಮುಚ್ಚುವುದಿಲ್ಲ? ಹುಟ್ಟುವಾಗ ಯಾವುದು ಚಲಿಸುವುದಿಲ್ಲ? ಯಾವುದಕ್ಕೆ ಹೃದಯವೇ ಇಲ್ಲ? ಮತ್ತು ಯಾವುದು ವೇಗದಿಂದ ವೃದ್ಧಿಯಾಗುತ್ತದೆ?”

ಅಷ್ಟಾವಕ್ರನು ಹೇಳಿದನು: “ಮೀನು ನಿದ್ದೆಮಾಡುತ್ತಿರುವಾಗ ಕಣ್ಣು ಮುಚ್ಚುವುದಿಲ್ಲ ಮತ್ತು ಮೊಟ್ಟೆಯು ಹುಟ್ಟಿದಾಗ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ ಮತ್ತು ನದಿಯು ವೇಗದಲ್ಲಿ ಬೆಳೆಯುತ್ತದೆ.”

ರಾಜನು ಹೇಳಿದನು: “ನೀನು ಮನುಷ್ಯನಲ್ಲ ದೇವಸತ್ವವೆಂದು ತಿಳಿಯುತ್ತೇನೆ. ನೀನು ಬಾಲಕನಲ್ಲ ಆದರೆ ಸ್ಥಾವಿರನೆಂದು ನನ್ನ ಅಭಿಪ್ರಾಯ. ಮಾತಿನ ಪ್ರವಾಹದಲ್ಲಿ ನಿನ್ನ ಸಮಾನನು ಇಲ್ಲವೆಂದೇ ತಿಳಿಯಬಹುದು. ಆದುದರಿಂದ ನಿನಗೆ ದ್ವಾರವು ತೆರೆಯಲ್ಪಡುತ್ತದೆ. ಇದೋ ಬಂದಿಯು!”

ಅಷ್ಟಾವಕ್ರನು ಹೇಳಿದನು: “ರಾಜನ್! ಈ ಉಗ್ರಸೇನೆಯ ಸಮಿತಿಯಲ್ಲಿ ಅಪ್ರತಿಮ ರಾಜರುಗಳ ಸಮಾವೇಶದಲ್ಲಿ ಮಹಾಸರೋವರದಲ್ಲಿ ಹಂಸಗಳ ನಿನಾದದಂತೆ ವಾದಿಗಳಿಗೆ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಕ್ಕಿಲ್ಲ. ಅತಿವಾದಿಯೆಂದು ತಿಳಿದವನು ಇಂದು ವೇಗವಾಗಿ ಹರಿಯುತ್ತಿರುವ ನದಿಯಂತೆ ನನ್ನನ್ನು ಕೊಚ್ಚಿಕೊಂಡು ಹೋಗದಿರಲಿ! ಸಮಿತ್ತನ್ನು ಸುಡುತ್ತಿರುವ ಅಗ್ನಿಯ ತೇಜಸ್ಸುಳ್ಳ ನನ್ನ ಮುಂದೆ ಬಂದು ನಿಲ್ಲು ಬಂದಿನ್!”

ಬಂದಿನ್ ಹೇಳಿದನು: “ನಿದ್ದೆಯಲ್ಲಿದ್ದ ಹುಲಿಯನ್ನು ಅಥವಾ ತನ್ನ ಬಾಯಿಯನ್ನು ಸವರುತ್ತಿರುವ ವಿಷಭರಿತ ಹಾವನ್ನು ಕರೆದು ಎಬ್ಬಿಸಬೇಡ! ನಿನ್ನ ಪಾದದಿಂದ ಅವನ ತಲೆಯು ಒದ್ದೆಯಾದರೆ ಅದು ಕಚ್ಚದೇ ಇರುವುದಿಲ್ಲ ಎನ್ನುವುದನ್ನು ಚೆನ್ನಾಗಿ ತಿಳಿದುಕೋ! ಗಟ್ಟಿಯಾದ ದೇಹವಿದ್ದರೂ ದುರ್ಬಲನಾಗಿ ದರ್ಪದಿಂದ ಪರ್ವತವನ್ನು ಹೊಡೆದರೆ ಅವನದೇ ಕೈ ಮತ್ತು ಉಗುರುಗಳು ಗಾಯಗೊಳ್ಳುತ್ತವೆ. ಆ ಪರ್ವತದ ಮೇಲೆ ಯಾವುದೇ ರೀತಿಯ ಗಾಯವು ಕಾಣುವುದಿಲ್ಲ. ಮಿಥಿಲದ ರಾಜನಿಗೆ ಎಲ್ಲ ರಾಜರುಗಳು ಮೈನಾಕಪರ್ವತದಡಿಯಲ್ಲಿರುವ ಪರ್ವತಗಳಂತೆ. ಎತ್ತಿನ ಎದುರಿಗೆ ಕರುಗಳು ಹೇಗೋ ಹಾಗೆ ಈ ರಾಜರುಗಳು ಅವನಿಗಿಂತ ಚಿಕ್ಕವರು.”

ಆ ಸಮಿತಿಯಲ್ಲಿ ಕ್ರೋಧಿಷ್ಠನಾಗಿ ಅಷ್ಟಾವಕ್ರನು ಗರ್ಜಿಸುತ್ತಾ ಬಂದಿಗೆ ಹೇಳಿದನು: “ನಾನು ಹೇಳುವ ವಾಕ್ಯಕ್ಕೆ ಉತ್ತರವನ್ನು ಕೊಡು. ಮತ್ತು ನೀನು ಹೇಳಿದುದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ.”

ಬಂದಿನ್ ಹೇಳಿದನು: “ಒಂದೇ ಒಂದು ಅಗ್ನಿಯು ಬಹಳ ರೂಪಗಳಲ್ಲಿ ಉರಿಯುತ್ತದೆ. ಒಬ್ಬನೇ ಸೂರ್ಯನು ಇವೆಲ್ಲವನ್ನೂ ಬೆಳಗಿಸುತ್ತಾನೆ. ಒಬ್ಬನೇ ವೀರ ಸಂಹರಿಸುವ ದೇವರಾಜ. ಮತ್ತು ಪಿತೃಗಳ ಈಶ್ವರನೂ ಒಬ್ಬನೇ ಯಮ.”

ಅಷ್ಟಾವಕ್ರನು ಹೇಳಿದನು: “ಇಂದ್ರ ಮತ್ತು ಅಗ್ನಿಗಳೀರ್ವರು ಸಖರಂತೆ ನಡೆಯುತ್ತಾರೆ. ನಾರದ ಪರ್ವತರೆಂಬ ಇಬ್ಬರು ದೇವರ್ಷಿಗಳಿದ್ದಾರೆ. ಅಶ್ವಿನಿಯರಿಬ್ಬರು, ರಥಕ್ಕೆ ಚಕ್ರಗಳೆರಡು, ಮತ್ತು ವಿಧಾತ್ರನು ಪತಿ ಪತ್ನಿಯರೆಂದು ಇಬ್ಬರನ್ನು ಮಾಡಿದನು.”

ಬಂದಿನ್ ಹೇಳಿದನು: “ಈ ಪ್ರಜೆಗಳು ಮೂರು ಕರ್ಮಗಳಿಂದ ಹುಟ್ಟುತ್ತಾರೆ. ಮೂರು ವೇದಗಳು ಸೇರಿ ವಾಜಪೇಯವೆನಿಸುತ್ತದೆ. ಅಧ್ವರ್ಯರು ಮೂರು ಬಾರಿ ಒತ್ತುತ್ತಾರೆ. ಮೂರು ಲೋಕಗಳು ಮತ್ತು ಮೂರು ಜ್ಯೋತಿಗಳಿವೆ ಎಂದು ಹೇಳುತ್ತಾರೆ.”

ಅಷ್ಟಾವಕ್ರನು ಹೇಳಿದನು: “ಬ್ರಾಹ್ಮಣರಿಗೆ ನಾಲ್ಕು ಘಟ್ಟಗಳಿವೆ, ನಾಲ್ವರು ಸೇರಿ ಈ ಯಜ್ಞವನ್ನು ನಡೆಸುತ್ತಾರೆ. ದಿಕ್ಕುಗಳು ನಾಲ್ಕು. ನಾಲ್ಕು ವರ್ಣಗಳು ಮತ್ತು ಗೋವಿಗೆ ನಾಲ್ಕು ಕಾಲುಗಳಿವೆ ಎಂದು ಸದಾ ಹೇಳುತ್ತಾರೆ.”

ಬಂದಿನ್ ಹೇಳಿದನು: “ಅಗ್ನಿಗಳು ಐದು ಮತ್ತು ಪಂಕ್ತಿಗೆ ಐದು ಪಾದಗಳು. ಯಜ್ಞಗಳು ಐದು ವಿಧದವು ಮತ್ತು ಇಂದ್ರಿಯಗಳು ಐದು. ವೇದಗಳಲ್ಲಿ ಕಾಣುವವು ಐದು ಮತ್ತು ಚೂಡಗಳೂ ಐದು. ಲೋಕದಲ್ಲಿ ಪುಣ್ಯವೆಂದು ಐದು ನದಿಗಳು ಪ್ರಖ್ಯಾತವಾಗಿವೆ.”

ಅಷ್ಟಾವಕ್ರನು ಹೇಳಿದನು: “ಅಗ್ನಿಯನ್ನು ಇಡುವುದಕ್ಕೆ ಆರು ಆಕಳುಗಳನ್ನು ದಾನವನ್ನಾಗಿ ನೀಡಬೇಕು. ಕಾಲಚಕ್ರದಲ್ಲಿ ಆರೇ ಋತುಗಳಿವೆ. ಇಂದ್ರಿಯಗಳು ಆರು. ಕೃತ್ತಿಕಗಳು ಆರು. ಸರ್ವ ವೇದಗಳಲ್ಲಿ ಕಂಡುಬಂದಂತೆ ಸಾಧ್ಯಕರು ಆರು ಮಂದಿ.”

ಬಂದಿನ್ ಹೇಳಿದನು: “ಏಳು ಬಗೆಯ ಪಳಗಿಸಿದ ಮತ್ತು ಏಳು ಬಗೆಯ ವನ್ಯ ಪಶುಗಳಿವೆ. ಏಳು ಚಂದಸ್ಸುಗಳು ಒಂದು ಕ್ರತುವನ್ನು ಮಾಡುತ್ತವೆ. ಋಷಿಗಳು ಏಳು. ಏಳು ಗೌರವಗಳು. ವೀಣೆಯಲ್ಲಿ ಸಪ್ತ ತಂತ್ರಿಗಳಿವೆ ಎಂದು ಪ್ರಥಿತವಾಗಿದೆ.”

ಅಷ್ಟಾವಕ್ರನು ಹೇಳಿದನು: “ಎಂಟು ಶಾಣಗಳು ಸೇರಿ ಒಂದು ನೂರಾಗುತ್ತದೆ. ಸಿಂಹವನ್ನು ಕೊಲ್ಲುವ ಶರಭಕ್ಕೆ ಎಂಟು ಕಾಲುಗಳಿವೆ. ದೇವತೆಗಳಲ್ಲಿ ವಸುಗಳು ಎಂಟು ಎಂದು ಕೇಳಿದ್ದೇವೆ. ಸರ್ವಯಜ್ಞವು ಎಂಟು ಯೂಪಗಳನ್ನು ಹೊಂದಿದೆ.”

ಬಂದಿನ್ ಹೇಳಿದನು: “ಪಿತೃಗಳಿಗೆ ಒಂಭತ್ತು ಸಾಮಿಧಗಳನ್ನು ಹೇಳುತ್ತಾರೆ. ಸೃಷ್ಟಿಯು ಒಂಭತ್ತು ಹಂತಗಳಲ್ಲಿ ನಡೆಯುತ್ತದೆ ಎಂದು ಹೇಳುತ್ತಾರೆ. ಬೃಹತಿ ಸಂಪ್ರದಿಷ್ಟದಲ್ಲಿ ಒಂಭತ್ತು ಅಕ್ಷರಗಳಿವೆ. ಲೆಕ್ಕದಲ್ಲಿ ಶಾಶ್ವತವಾಗಿ ಒಂಭತ್ತೇ ಇರುವುದು.”

ಅಷ್ಟಾವಕ್ರನು ಹೇಳಿದನು: “ಲೋಕದಲ್ಲಿ ಪುರುಷನಿಗೆ ಹತ್ತು ದಶೆಗಳಿವೆ ಎಂದು ಹೇಳುತ್ತಾರೆ. ಒಂದು ಸಾವಿರದಲ್ಲಿ ಸಂಪೂರ್ಣವಾಗಿ ಹತ್ತು ನೂರುಗಳಿವೆ ಎಂದು ಹೇಳುತ್ತಾರೆ. ಗರ್ಭವತಿಯು ಹತ್ತು ತಿಂಗಳುಗಳು ಗರ್ಭವನ್ನು ಧರಿಸುತ್ತಾಳೆ. ಇರಕಗಳು ಹತ್ತು. ದಾಶರು ಹತ್ತು ಮತ್ತು ಆರ್ಣರು ಹತ್ತು.”

ಬಂದಿನ್ ಹೇಳಿದನು: “ಏಕಾದಶಿಗೆ ಹನ್ನೊಂದು ಪಶುಗಳು, ಅದರಲ್ಲಿ ಹನ್ನೊಂದು ಯೂಪಗಳೂ ಇರುತ್ತವೆ. ಪ್ರಾಣವಿರುವಕ್ಕೆ ವಿಕಾರಗಳು ಹನ್ನೊಂದು. ದಿವಿಯ ದೇವರಲ್ಲಿ ಹನ್ನೊಂದು ರುದ್ರರನ್ನು ಎಣಿಸುತ್ತಾರೆ.”

ಅಷ್ಟಾವಕ್ರನು ಹೇಳಿದನು: “ಒಂದು ಸಂವತ್ಸರದಲ್ಲಿ ಹನ್ನೆರಡು ತಿಂಗಳುಗಳಿವೆ ಎಂದು ಹೇಳುತ್ತಾರೆ. ಜಗತಿಯ ಪಾದದಲ್ಲಿ ಅಕ್ಷರಗಳು ಹನ್ನೆರಡು. ಪ್ರಾಕೃತ ಯಜ್ಞವು ಹನ್ನೆರಡು ದಿನಗಳು ನಡೆಯುತ್ತವೆ ಎಂದು ಹೇಳುತ್ತಾರೆ. ವಿಪ್ರರು ಹನ್ನೆರಡು ಆದಿತ್ಯರಿದ್ದಾರೆಂದು ಹೇಳುತ್ತಾರೆ.”

ಬಂದಿನ್ ಹೇಳಿದನು: “ತ್ರಯೋದಶೀ ತಿಥಿಯು ಮಹಾ ಉಗ್ರವೆಂದು ಹೇಳುತ್ತಾರೆ. ಈ ಭೂಮಿಯು ಹದಿಮೂರು ದ್ವೀಪಗಳನ್ನು ಹೊಂದಿದೆ.”

ಇದನ್ನು ಹೇಳಿ ಬಂದಿಯು ನಿಲ್ಲಿಸಿದನು. ಆ ಶ್ಲೋಕದ ಇನ್ನೊಂದು ಅರ್ಥವನ್ನು ಅಷ್ಟಾವಕ್ರನು ಸಂಪೂರ್ಣಮಾಡಿದನು: “ಕೇಶಿಯು ಹದಿಮೂರು ದಿನಗಳು ಹೋರಾಡಿದನು. ಅದಿಚ್ಚಂದಸಿಯು ಹದಿಮೂರರಿಂದ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾರೆ.”

ಸೂತಪುತ್ರನು ಸುಮ್ಮನಾಗಿದ್ದುದನ್ನು, ಅವನು ತಲೆತಗ್ಗಿಸಿ ನಿಂತಿದುದನ್ನು, ಮತ್ತು ಅಷ್ಟಾವಕ್ರನು ಮುಂದುವರೆದುದನ್ನು ನೋಡಿ ಅತಿ ದೊಡ್ಡ ನಿನಾದವು ಹುಟ್ಟಿಬಂದಿತು. ರಾಜ ಜನಕನ ಆ ಸಮೃದ್ಧ ಯಜ್ಞದಲ್ಲಿ ಈ ರೀತಿಯ ತುಮುಲವು ನಡೆಯುತ್ತಿರುವಾಗ, ಎಲ್ಲ ವಿಪ್ರರೂ ಕೈಮುಗಿದು ಅಷ್ಟಾವಕ್ರನನ್ನು ಗೌರವಿಸಲು ಮುಂದಾದರು.

ಅಷ್ಟಾವಕ್ರನು ಹೇಳಿದನು: “ವಾದದಲ್ಲಿ ಸೋತ ಅನೇಕ ಬ್ರಾಹ್ಮಣರನ್ನು ಇವನು ನೀರಿನಲ್ಲಿ ಮುಳುಗಿಸಿದ್ದಾನೆ ಎಂದು ಕೇಳಿದ್ದೇನೆ. ಇಂದು ಬಂದಿಯು ಅದೇ ಧರ್ಮವನ್ನು ಅನುಸರಿಸಲಿ. ಅವನನ್ನೂ ಹಿಡಿದು ಮುಳುಗಿಸಿ.”

ಬಂದಿನ್ ಹೇಳಿದನು: “ನಾನು ರಾಜಾ ವರುಣನ ಮಗ. ಅಲ್ಲಿ ಅವನ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿದೆ. ಜನಕ! ನಿನ್ನ ಸತ್ರಕ್ಕೆ ಸರಿಸಮನಾಗಿ ನಡೆಯುತ್ತಿರುವ ಅದಕ್ಕಾಗಿ ನಾನು ದ್ವಿಜಾಗ್ರರನ್ನು ಅಲ್ಲಿಗೆ ಕಳುಹಿಸುತ್ತಿದ್ದೆ. ವರುಣನ ಯಜ್ಞವನ್ನು ನೋಡಲು ಹೋಗಿರುವ ಅವರೆಲ್ಲರೂ ಪುನಃ ಹಿಂದಿರುಗಿ ಬರುತ್ತಾರೆ. ಪೂಜನೀಯನಾದ ಅಷ್ಟಾವಕ್ರನನ್ನು ಪೂಜಿಸುತ್ತೇನೆ. ಯಾಕೆಂದರೆ ಅವನ ಕಾರಣದಿಂದ ನಾನು ನನ್ನ ತಂದೆಯನ್ನು ಸೇರುತ್ತೇನೆ.”

ಅಷ್ಟಾವಕ್ರನು ಹೇಳಿದನು: “ನಿನ್ನಿಂದ ಸಮುದ್ರದಲ್ಲಿ ಮುಳುಗಿಸಲ್ಪಟ್ಟ ವಿಪ್ರರು ಕಲಿತವರಾಗಿದ್ದರೂ ಬುದ್ಧಿ ಮತ್ತು ಮಾತುಗಳಲ್ಲಿ ಸೋತರು. ಸಂತರು ಯೋಚನೆಮಾಡಿ ಮಾತನಾಡುವಂತೆ ನಾನು ಅವರನ್ನು ಮಾತಿನ ಮೂಲಕ ನೀರಿನಿಂದ ಮೇಲೆ ಎತ್ತಿದ್ದೇನೆ. ಜಾತವೇದಾಗ್ನಿಯು ಸತ್ಯವಂತರ ಮನೆಗಳನ್ನು ಹೇಗೆ ಸುಡುವುದಿಲ್ಲವೋ ಹಾಗೆ ಬಾಲಕ ಪುತ್ರರು ಕೃಪಣ ಮಾತುಗಳನ್ನಾಡಿದರೆ ಸಂತರು ಆ ಮಾತುಗಳ ಕುರಿತು ಯೋಚಿಸಬೇಕು. ಶ್ಲೇಷ್ಮಾತಕಿಯಿಂದ ನಿನ್ನ ವರ್ಚಸ್ಸು ಕ್ಷೀಣವಾಗಿದೆಯೋ ಅಥವಾ ನೀನು ಕೇಳಿದ ಹೊಗಳಿಕೆಗಳಿಂದ ಮತ್ತೇರಿದೆಯೋ? ಜನಕ! ನೀನು ಮಾವುತನಿಂದ ಸೂಚಿತಗೊಂಡ ಆನೆಯಂತಿದ್ದೀಯೆ. ನನ್ನ ಈ ಮಾತುಗಳನ್ನು ಕೇಳಬೇಡ.”

ಜನಕನು ಹೇಳಿದನು: “ನಿನ್ನ ದಿವ್ಯರೂಪೀ ಮಾತನ್ನು ಕೇಳುತ್ತಿದ್ದೇನೆ. ನೀನು ಅಮಾನುಷಿಯಾಗಿದ್ದು ಸಾಕ್ಷಾತ್ ದಿವ್ಯರೂಪಿಯಾಗಿದ್ದೀಯೆ. ಬಂದಿಯನ್ನು ನೀನು ವಿವಾದದಲ್ಲಿ ಸೋಲಿಸಿದ್ದೀಯೆ. ಈಗ ನೀನು ಬಂದಿಯನ್ನು ನಿನಗಿಷ್ಟವಾದಹಾಗೆ ಬಿಡು.”

ಅಷ್ಟಾವಕ್ರನು ಹೇಳಿದನು: “ರಾಜನ್! ಈ ಬಂದಿನಿಯು ಜೀವಿತವಿರುವುದರಿಂದ ನನಗೇನೂ ಪ್ರಯೋಜನವಿಲ್ಲ. ವರುಣನು ಅವನ ತಂದೆಯಾದರೆ ಅವನನ್ನು ಜಲಾಶಯದಲ್ಲಿ ಮುಳುಗಿಸು.”

ಬಂದಿನ್ ಹೇಳಿದನು: “ರಾಜನ್! ನಾನು ವರುಣನ ಮಗ. ನೀರಿನಲ್ಲಿ ಮುಳುಗುವುದಕ್ಕೆ ನನಗೆ ಭಯವಿಲ್ಲ. ಸ್ವಲ್ಪಯೇ ಸಮಯದಲ್ಲಿ ಅಷ್ಟಾವಕ್ರನು ಬಹುಕಾಲದ ಹಿಂದೆ ಕಳೆದುಕೊಂಡಿದ್ದ ತನ್ನ ತಂದೆ ಕಹೋಡನನ್ನು ಕಾಣುತ್ತಾನೆ.”

ಅನಂತರ ಮಹಾತ್ಮ ವರುಣನಿಂದ ಪೂಜಿತರಾದ ವಿಪ್ರರೆಲ್ಲರೂ ಜನಕನ ಮುಂದೆ ಎದ್ದುನಿಂತರು.

ಕಹೋಡನು ಹೇಳಿದನು: “ಜನಕ! ಇದಕ್ಕಾಗಿಯೇ ಜನರು ತಮ್ಮ ಕರ್ಮಗಳಿಂದ ಮಕ್ಕಳನ್ನು ಬಯಸುತ್ತಾರೆ. ನಾನು ಮಾಡಲಿಕ್ಕೆ ಅಸಾಧ್ಯವಾದುದನ್ನು ನನ್ನ ಮಗನು ಮಾಡಿದ್ದಾನೆ. ಅಬಲನಿಗೆ ಬಲವಂತನು ಜನಿಸಿದ್ದಾನೆ, ದಡ್ಡನಿಗೆ ಪಂಡಿತನು ಜನಿಸಿದ್ದಾನೆ ಮತ್ತು ತಿಳಿಯದೇ ಇದ್ದವನಿಗೆ ತಿಳಿದ ಮಗನು ಜನಿಸಿದ್ದಾನೆ.”

ಬಂದಿನ್ ಹೇಳಿದನು: “ಹರಿತ ಪರಶುವಿನಿಂದ ಸ್ವಯಂ ಅಂತಕನು ನಿನ್ನ ಶತ್ರುಗಳ ಶಿರವನ್ನು ಕತ್ತರಿಸುತ್ತಾನೆ. ರಾಜ! ನಿನಗೆ ರಕ್ಷಣೆಯಿರಲಿ!””

ಮಹಾ ಉಕ್ಥವನ್ನು ಹಾಗೂ ಮಹಾ ಸಾಮವನ್ನು ಹಾಡಲಾಯಿತು. ಆ ಸತ್ರದಲ್ಲಿ ಚೆನ್ನಾಗಿ ಸೋಮವನ್ನು ಕುಡಿಯಲಾಯಿತು. ಜನಕನ ಯಜ್ಞದಲ್ಲಿ ಸಂತೋಷಗೊಂಡ ಸಾಕ್ಷಾತ್ ದೇವತೆಗಳು ಶುಚಿಯಾದ ತಮ್ಮ ತಮ್ಮ ಭಾಗಗಳನ್ನು ಸ್ವೀಕರಿಸಿದರು. ಎಲ್ಲ ವಿಪ್ರರೂ ಮೊದಲಿಗಿಂತ ಪ್ರಕಾಶಮಾನರಾಗಿ ಮೇಲೆದ್ದ ನಂತರ ರಾಜಾ ಜನಕನ ಅನುಜ್ಞೆಯನ್ನು ಪಡೆದು ಬಂದಿಯು ಸಾಗರದ ನೀರನ್ನು ಪ್ರವೇಶಿಸಿದನು. ಅಷ್ಟಾವಕ್ರನು ತಂದೆಯನ್ನು ಪೂಜಿಸಿ, ಯಥಾವತ್ತಾಗಿ ಬ್ರಾಹ್ಮಣರಿಂದ ಪೂಜಿಸಿಕೊಂಡು, ತನ್ನ ಮಾವನೊಡನೆ ಬಂದಿಯನ್ನು ಸೋಲಿಸಿ ತನ್ನ ಉತ್ತಮ ಆಶ್ರಮಕ್ಕೆ ಹಿಂದಿರುಗಿದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *