ವೈವಸ್ವತ ಮನು

ಮತ್ಯ್ಸಾವತಾರದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೫) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.

 

 

 

 

 

 

 

 

 

 

ವಿವಸ್ವತನಿಗೆ ಪ್ರತಾಪಿ, ಪರಮ ಋಷಿ, ನರಶಾರ್ದೂಲ, ಪ್ರಜಾಪತಿಯ ಸಮದ್ಯುತಿ ಮಗನಿದ್ದನು. ಓಜಸ್ಸಿನಲ್ಲಿ, ತೇಜಸ್ಸಿನಲಿ, ಸಂಪತ್ತಿನಲ್ಲಿ, ಮತ್ತು ವಿಶೇಷವಾಗಿ ತಪಸ್ಸಿನಲ್ಲಿ ಆ ಮನುವು ತನ್ನ ತಂದೆಯನ್ನೂ ಪಿತಾಮಹನನ್ನೂ ಮೀರಿಸಿದ್ದನು. ಆ ನರಾಧಿಪನು ವಿಶಾಲ ಬದರಿಯಲ್ಲಿ ಬಾಹುಗಳನ್ನು ಮೇಲಕ್ಕೆತ್ತಿ, ಒಂದೇ ಕಾಲಿನ ಮೇಲೆ ನಿಂತು ತೀವ್ರವಾದ ಮಹಾತಪಸ್ಸನ್ನು ಮಾಡಿದನು. ತಲೆಯನ್ನು ಕೆಳಮಾಡಿ ಕಣ್ಣುರೆಪ್ಪೆಗಳನ್ನು ಬಡಿಯದೇ ಅವನು ಹತ್ತುಸಾವಿರ ವರ್ಷಗಳ ಪರ್ಯಂತ ಘೋರ ತಪಸ್ಸನ್ನು ಕೈಗೊಂಡನು. ಒಮ್ಮೆ ಅವನು ಹೀಗೆ ಒದ್ದೆಯಾಗಿದ್ದ ಚೀರವನ್ನುಟ್ಟು ಜಟಾಧರಿಯಾಗಿ ತಪಸ್ಸಿನಲ್ಲಿ ನಿರತನಾಗಿರಲು ಒಂದು ಮೀನು ವಿರಿಣೀತೀರಕ್ಕೆ ಬಂದು ಈ ಮಾತುಗಳನ್ನಾಡಿತು: “ಭಗವನ್! ನಾನೊಂದು ಚಿಕ್ಕ ಮೀನು. ನಾನು ದೊಡ್ಡ ಮೀನುಗಳಿಂದ ಭಯಪಟ್ಟಿದ್ದೇನೆ. ಆದುದರಿಂದ ನೀನು ನನ್ನನ್ನು ರಕ್ಷಿಸಬೇಕು. ಸನಾತನವಾಗಿ ವಿಹಿತವಾಗಿರುವ ನಡತೆಯಂತೆ ವಿಶೇಷವಾಗಿ ಬಲವಂತ ಮೀನುಗಳು ದುರ್ಬಲ ಮೀನುಗಳನ್ನು ತಿನ್ನುತ್ತವೆ. ಈ ವಿಶೇಷವಾಗಿ ಅಲೆಯಂತೆ ಹೊಡೆಯುತ್ತಿರುವ ಈ ಮಹಾ ಭಯದಿಂದ ನನ್ನನ್ನು ಉದ್ಧರಿಸಬೇಕು. ಹಾಗೆ ಮಾಡಿದರೆ ನಾನು ನಿನಗೆ ಪ್ರತೀಕಾರವನ್ನು ಮಾಡುತ್ತೇನೆ.”

ಮೀನಿನ ಮಾತುಗಳನ್ನು ಕೇಳಿದ ವೈವಸ್ವತ ಮನುವು ಕೃಪೆಯಿಂದ ತುಂಬಿ, ಆ ಮೀನನ್ನು ತನ್ನ ಅಂಗೈಗಳಲ್ಲಿ ಎತ್ತಿಕೊಂಡನು. ವೈವಸ್ವತ ಮನುವು ಚಂದ್ರನ ಕಿರಣಗಳಂತೆ ಹೊಳೆಯುತ್ತಿದ್ದ ಆ ಮೀನನ್ನು ನೀರಿನಿಂದ ಎತ್ತಿ ನೀರಿನ ಭರಣಿಯಲ್ಲಿ ಇರಿಸಿದನು. ಅಲ್ಲಿ ಪರಮ ಸತ್ಕೃತವಾದ ಆ ಮೀನು ಬೆಳೆಯಿತು. ಮನುವು ಅದನ್ನು ಪುತ್ರನೆಂದೇ ತಿಳಿದು ವಿಶೇಷವಾಗಿ ಆರೈಕೆಮಾಡಿದನು. ಬಹಳ ಸಮಯದ ನಂತರ ಆ ಮೀನು ತುಂಬಾ ದೊಡ್ಡದಾಗಿ ಆ ನೀರಿನ ಭರಣಿಯು ಅದಕ್ಕೆ ಸಾಕಾಗಲಿಲ್ಲ. ಆಗ ಮನುವನ್ನು ನೋಡಿ ಮತ್ಸ್ಯವು ಪುನಃ ಹೀಗೆ ಮಾತನಾಡಿತು: “ಭಗವನ್! ದಯವಿಟ್ಟು ನನ್ನನ್ನು ಬೇರೆ ಕಡೆ ಕೊಂಡೊಯ್ದಿಡು!” ಮುನಿ ಮನುವು ಆಗ ಆ ಮೀನನ್ನು ಭರಣಿಯಿಂದ ತೆಗೆದು ದೊಡ್ಡ ಸರೋವರವೊಂದಕ್ಕೆ ತಂದು ಅಲ್ಲಿ ಅದನ್ನು ಎಸೆದನು.

ಆ ಮೀನು ಬಹಳ ವರ್ಷಗಳವರೆಗೆ ಬೆಳೆಯತೊಡಗಿತು. ಆ ಸರೋವರವು ಎರಡು ಯೋಜನ ಅಗಲವೂ ಒಂದು ಯೋಜನ ವಿಸ್ತೀರ್ಣವಾಗಿಯೂ ಇದ್ದಿತು. ಅದರಲ್ಲಿಯೂ ಕೂಡ ಮತ್ಸ್ಯವು ಹಿಡಿಯದಿದ್ದಾಗ ಮತ್ತು ಚಲಿಸಲಿಕ್ಕಾಗದಿದ್ದಾಗ ಅದು ಮನುವಿಗೆ ಹೇಳಿತು: “ಭಗವನ್! ದಯವಿಟ್ಟು ನನ್ನನ್ನು ಸಮುದ್ರಮಹಿಷೀ ಗಂಗೆಗೆ ತೆಗೆದುಕೊಂಡು ಹೋಗು. ನೀನು ಒಪ್ಪಿಕೊಂಡರೆ ನಾನು ಅಲ್ಲಿ ವಾಸಿಸುತ್ತೇನೆ.” ಅದರ ಮಾತಿನಂತೆ ಭಗವಾನ್ ಮನುವು ಆ ಮೀನನ್ನು ಗಂಗಾನದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ತಾನೇ ಎಸೆದನು. ಅಲ್ಲಿ ಮತ್ಸ್ಯವು ಕೆಲವು ಕಾಲ ಬೆಳೆಯಿತು. ಆಗ ಪುನಃ ಮನುವನ್ನು ನೋಡಿ ಮತ್ಸ್ಯವು ಮಾತನಾಡಿತು: “ಭಗವನ್! ದೊಡ್ಡದಾಗಿ ಬೆಳಿದಿರುವ ನಾನು ಗಂಗೆಯಲ್ಲಿಯೂ ಚಲಿಸಲು ಅಶಕ್ತನಾಗಿದ್ದೇನೆ. ತಕ್ಷಣವೇ ಸಮುದ್ರಕ್ಕೆ ಕರೆದೊಯ್ದು ನನಗೆ ಕೃಪೆ ತೋರು.”

ಮನುವು ಮತ್ಸ್ಯವನ್ನು ಗಂಗೆಯ ನೀರಿನಿಂದ ಮೇಲೆತ್ತಿ ಸಮುದ್ರಕ್ಕೆ ತಂದು ಅಲ್ಲಿ ತಾನೇ ಅದನ್ನು ವಿಸರ್ಜಿಸಿದನು. ತುಂಬಾ ದೊಡ್ಡದಾಗಿದ್ದರೂ ಆ ಮತ್ಸ್ಯವು ಮನುವಿನ ಮನಸ್ಸಿಗೆ ಎತ್ತಿಕೊಳ್ಳಲು ತುಂಬಾ ಸುಲಭವಾಗಿತ್ತು ಮತ್ತು ಮುಟ್ಟಲು- ಮೂಸಲು ಸುಖಕರವಾಗಿತ್ತು. ಸಮುದ್ರದಲ್ಲಿ ಬಿಡಲ್ಪಟ್ಟ ಆ ಮತ್ಸ್ಯವು ಮನುವಿಗೆ ಮುಗುಳ್ನಗುತ್ತಾ ಈ ಮಾತುಗಳನ್ನಾಡಿತು: “ಭಗವನ್! ನೀನು ನನಗೆ ಎಲ್ಲರೀತಿಯ ರಕ್ಷಣೆಯನ್ನೂ ನೀಡಿದ್ದೀಯೆ. ಈಗ ಕಾಲಪ್ರಾಪ್ತವಾದಾಗ  ನೀನು ಏನು ಮಾಡಬೇಕೆಂದು ನನ್ನಿಂದ ಕೇಳು. ಸ್ವಲ್ಪವೇ ಸಮಯದಲ್ಲಿ ಈ ಭೂಮಿಯಲ್ಲಿರುವ ಸ್ಥಾವರ ಜಂಗಮಗಳೆಲ್ಲವೂ ಪ್ರಲಯದಲ್ಲಿ ಹೋಗುತ್ತವೆ. ಲೋಕಗಳನ್ನು ತೊಳೆಯುವ ಕಾಲವು ಬಂದೊದಗಿದೆ. ಆದುದರಿಂದ ನಿನಗೆ ಹಿತವಾದುದನ್ನು ಇಂದು ತಿಳಿಸಿಕೊಡುತ್ತಿದ್ದೇನೆ. ಚಲಿಸುವ ಮತ್ತು ಚಲಿಸದಿರುವ, ಹಂದಾಡುವ ಮತ್ತು ಹಂದಾಡದಿರುವ ಎಲ್ಲರಿಗೂ ಪರಮದಾರುಣ ಕಾಲವು ಬಂದೊದಗಿದೆ. ನೀನು ಒಂದು ದೃಢ ನೌಕೆಯನ್ನು ಮಾಡಬೇಕು. ಅದಕ್ಕೊಂದು ಹಗ್ಗವನ್ನು ಕಟ್ಟಿರಬೇಕು. ಸಪ್ತಋಷಿಗಳೊಡನೆ ಅದನ್ನು ಏರಬೇಕು. ನಾನು ಹಿಂದೆ ಹೇಳಿದ ಎಲ್ಲವುಗಳ ಬೀಜಗಳನ್ನು ಆ ನಾವೆಯಲ್ಲಿಟ್ಟು ನನಗೆ ಕಾಯಬೇಕು. ನಾನು ಬಂದಿದುದನ್ನು ನನ್ನ ಕೋಡುಗಳಿಂದ ಗುರುತಿಸಬಹುದು. ಹೀಗೆ ನೀನು ಕಾರ್ಯನಿರ್ವಹಿಸಬೇಕು. ನಾನು ಹೋಗುತ್ತೇನೆ. ನನ್ನ ಈ ಮಾತುಗಳನ್ನು ಅತಿಯಾಗಿ ಶಂಕಿಸಬೇಡ!”  

“ನಾನು ಹಾಗೆಯೇ ಮಾಡುತ್ತೇನೆ” ಎಂದು ಮನುವು ಮತ್ಸ್ಯಕ್ಕೆ ಉತ್ತರಿಸಿದನು. ಪರಸ್ಪರರಿಂದ ಬೀಳ್ಕೊಂಡು ತಮಗೆನಿಸಿದ್ದಲ್ಲಿಗೆ ಹೋದರು. ಅನಂತರ ಮಹಾರಾಜ ಮನುವು ಮತ್ಸ್ಯವು ಹೇಳಿದಂತೆ ಎಲ್ಲ ಬೀಜಗಳನ್ನೂ ಒಟ್ಟುಗೂಡಿಸಿ, ಸುಂದರ ನಾವೆಯಲ್ಲಿ ಇಟ್ಟು ಉಕ್ಕುತ್ತಿದ್ದ ಸಾಗರದಲ್ಲಿ ತೇಲಿದನು. ಮನುವು ಮತ್ಸ್ಯದ ಕುರಿತು ಚಿಂತಿಸಿದನು. ಅವನು ಚಿಂತಿಸುತ್ತಿದ್ದಾನೆ ಎಂದು ತಿಳಿದು ಕೋಡನ್ನುಳ್ಳ ಮತ್ಸ್ಯವು ಅಲ್ಲಿಗೆ ಬಂದಿತು. ಹೇಳಿದಂತೆ ಕೋಡನ್ನು ಹೊಂದಿ ರೂಪದಲ್ಲಿ ಪರ್ವತದಂತಿರುವ ಅದನ್ನು ಇಂದ್ರ ಮನುವು ಸಮುದ್ರದಲ್ಲಿ ನೋಡಿದನು. ಅವನು ಹಗ್ಗಕ್ಕೆ ಗಂಟು ಮಾಡಿ ಅದನ್ನು ಮತ್ಸ್ಯದ ತಲೆಯ ಮೇಲಿದ್ದ ಕೋಡಿಗೆ ಸಿಲುಕಿಸಿದನು. ಗಂಟಿಗೆ ಸಿಲುಕಿದ ಆ ಮತ್ಸ್ಯವು ಆ ನಾವೆಯನ್ನು ಬಹುವೇಗದಿಂದ ಸಮುದ್ರದಲ್ಲಿ ಎಳೆದುಕೊಂಡು ಹೋಯಿತು. ಅದು ಅಲೆಗಳೊಂದಿಗೆ ನರ್ತಿಸುತ್ತಿದ್ದ, ನೀರಿನಿಂದ ಭೋರ್ಗರೆಯುತ್ತಿದ್ದ ಸಮುದ್ರವನ್ನು ನಾವೆಯೊಂದಿಗೆ ದಾಟಿತು. ಮಹಾಗಾಳಿಯ ಹೊಡೆತಕ್ಕೆ ಸಿಲುಕಿದ ಆ ನಾವೆಯು ಅಮಲಿನಲ್ಲಿದ್ದ ಚಪಲ ಸ್ತ್ರೀಯಂತೆ ಓಲಾಡುತ್ತಿತ್ತು. ನೋಡಲು ಒಂದು ಚೂರು ಭೂಮಿಯೂ ಇರಲಿಲ್ಲ, ಆಕಾಶದ ಬಿಂದುವೂ ಇರಲಿಲ್ಲ. ಆಕಾಶ ಮತ್ತು ದಿಗಂತ ಎಲ್ಲವೂ ನೀರಿನಿಂದ ತುಂಬಿತ್ತು. ಈ ರೀತಿ ಲೋಕವು ಸಂಕುಲಕ್ಕೆ ಸಿಲುಕಿದಾಗ ಕೇವಲ ಸಪರ್ಷಿಗಳು, ಮನು ಮತ್ತು ಮತ್ಸ್ಯರನ್ನು ಕಾಣಬಹುದಾಗಿತ್ತು. ಈ ರೀತಿ ಬಹಳ ವರ್ಷಗಳ ಪರ್ಯಂತ ಆ ಮತ್ಸ್ಯವು ನಾವೆಯನ್ನು ನಿರಾಯಾಸವಾಗಿ ಆ ನೀರಿನ ಮೇಲೆ ಎಳೆಯಿತು. ಅನಂತರ ಮತ್ಸ್ಯವು ನಾವೆಯನ್ನು ಹಿಮಾಲಯದ ಪರಮ ಶಿಖರಕ್ಕೆ ಎಳೆದೊಯ್ಯಿತು.

ಆಗ ತೆಳುವಾಗಿ ಮುಗುಳ್ನಗುತ್ತಾ ಮತ್ಸ್ಯವು ಋಷಿಗಳಿಗೆ ಹೇಳಿತು: “ತಡಮಾಡದೇ ನೌಕೆಯನ್ನು ಈ ಹಿಮಾಲಯದ ಶಿಖರಕ್ಕೆ ಕಟ್ಟಿ.” ಮತ್ಸ್ಯನ ಮಾತುಗಳನ್ನು ಕೇಳಿ ಅವರು ಬೇಗನೆ ನೌಕೆಯನ್ನು ಹಿಮಾಲಯದ ಶಿಖರಕ್ಕೆ ಕಟ್ಟಿದರು. ಈಗಲೂ ಕೂಡ ಹಿಮಾಲಯದ ಆ ಪರಮ ಶೃಂಗವು ನೌಬಂಧನ ಎಂಬ ಹೆಸರಿನಿಂದ ಖ್ಯಾತಿಯಾಗಿದೆ.

ರೆಪ್ಪೆಬಡಿಯದ ಆ ಮತ್ಸ್ಯವು ಸೇರಿದ್ದ ಋಷಿಗಳಿಗೆ ಹೇಳಿತು: “ನಾನು ಪ್ರಜಾಪತಿ ಬ್ರಹ್ಮ. ನನಗಿಂತ ಅಧಿಕವಾದುದು ಇನ್ನೊಂದಿಲ್ಲ. ಮತ್ಸ್ಯರೂಪದಿಂದ ನಿಮ್ಮನ್ನು ಈ ಭಯದಿಂದ ಮೋಕ್ಷಗೊಳಿಸಿದ್ದೇನೆ. ಈಗ ಮನುವು ಎಲ್ಲ ಪ್ರಜೆಗಳನ್ನೂ – ದೇವಾಸುರಮಾನವರನ್ನು, ಎಲ್ಲ ಲೋಕಗಳನ್ನೂ, ಚಲಿಸುವ ಮತ್ತು ಜಲಿಸದಿರುವವುಗಳನ್ನು – ಸೃಷ್ಟಿಸುವವನಿದ್ದಾನೆ. ಅತಿ ತೀವ್ರ ತಪಸ್ಸಿನಿಂದ ಅವನಿಗೆ ಮುಂದಾಗುವುದೆಲ್ಲವೂ ತೋರಿಸಿಕೊಳ್ಳುತ್ತದೆ. ನನ್ನ ಪ್ರಸಾದದಿಂದ ಪ್ರಜೆಗಳ ಸೃಷ್ಟಿಯಲ್ಲಿ ಯಾವುದೇ ತಪ್ಪೂ ನಡೆಯುವುದಿಲ್ಲ.”

ಈ ಮಾತುಗಳನ್ನಾಡಿ ಕ್ಷಣಾರ್ಧದಲ್ಲಿ ಮತ್ಸ್ಯವು ಕಾಣಿಸದೇ ಹೋಯಿತು. ಮನು ವೈವಸ್ವತನು ಸ್ವಯಂ ಪ್ರಜೆಗಳನ್ನು ಸೃಷ್ಟಿಸಲು ಬಯಸಿದನು. ಪ್ರಜೆಗಳನ್ನು ಸೃಷ್ಟಿಸುವುದು ಹೇಗೆಂದು ತಿಳಿಯದೇ ಮಹತ್ತರ ತಪಸ್ಸನ್ನು ತಪಿಸಿದನು. ಆ ಮಹಾತಪಸ್ಸಿನಿಂದ ಯುಕ್ತನಾದ ಮನುವು ತಾನೇ ಸರ್ವ ಪ್ರಜೆಗಳನ್ನು ಸೃಷ್ಟಿಸಲು ತೊಡಗಿದನು.

ಮನುವಿನ ಈ ಚರಿತ್ರೆಯನ್ನು ಪ್ರಾರಂಭದಿಂದ ಯಾರು ನಿತ್ಯವೂ ಕೇಳುತ್ತಾರೋ ಆ ನರರು ಸುಖಿಗಳೂ, ಸರ್ವಾರ್ಥ ಸಿದ್ಧರೂ ಆಗಿ ಸ್ವರ್ಗಲೋಕವನ್ನು ಪಡೆಯುತ್ತಾರೆ.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *