ತ್ರಿತಾಖ್ಯಾನ

Related imageಪೂರ್ವಯುಗದಲ್ಲಿ ಆದಿತ್ಯಸನ್ನಿಭರಾದ ಮೂವರು ಸಹೋದರ ಮುನಿಗಳಿದ್ದರು: ಏಕತ, ದ್ವಿತ ಮತ್ತು ತ್ರಿತ. ಅವರೆಲ್ಲರೂ ಪ್ರಜಾಪತಿಯ ಸಮನಾಗಿದ್ದರು ಮತ್ತು ಹಾಗೆಯೇ ಪ್ರಜಾವಂತರಾಗಿದ್ದರು. ತಪಸ್ಸಿನಿಂದಾಗಿ ಎಲ್ಲರೂ ಬ್ರಹ್ಮಲೋಕವನ್ನು ಗೆದ್ದ ಬ್ರಹ್ಮವಾದಿಗಳಾಗಿದ್ದರು. ಸದಾ ಧರ್ಮರತನಾಗಿದ್ದ ಅವರ ತಂದೆ ಗೌತಮನು ಅವರ ತಪಸ್ಸು-ನಿಯಮ-ದಮಗಳಿಂದ ಪ್ರೀತನಾಗಿದ್ದನು. ದೀರ್ಘಕಾಲದವರೆಗೆ ಅವರಿಗೆ ಪ್ರೀತಿಯನ್ನಿತ್ತು ಭಗವಾನ್ ಗೌತಮನು ತನಗೆ ಅನುರೂಪ ಸ್ಥಾನಕ್ಕೆ ಹೊರಟುಹೋದನು. ಅವನು ಸ್ವರ್ಗಕ್ಕೆ ಹೋಗಲು ಮಹಾತ್ಮನಿಂದ ಮೊದಲು ಯಜ್ಞಯಾಗಾದಿಗಳನ್ನು ನಡೆಸಿಕೊಳ್ಳುತ್ತಿದ್ದ ರಾಜರುಗಳು ಅವನ ಪುತ್ರರನ್ನು ಗೌರವಿಸತೊಡಗಿದರು. ಅವರಲ್ಲಿ ತನ್ನ ತಂದೆಯಂತೆಯೇ ತ್ರಿತನು ಕರ್ಮ ಮತ್ತು ಅಧ್ಯಯನಗಳಲ್ಲಿ ಅತ್ಯಂತ ಶ್ರೇಷ್ಠತೆಯನ್ನು ಪಡೆದಿದ್ದನು. ಪುಣ್ಯಲಕ್ಷಣ ಮಹಾಭಾಗ ಮುನಿಗಳೆಲ್ಲರೂ ಮಹಾಭಾಗನ ವಿದ್ವತ್ತನ್ನೇ ಗೌರವಿಸುತ್ತಿದ್ದರು. ಒಮ್ಮೊಮ್ಮೆ ಸಹೋದರರಾದ ಏಕ ಮತ್ತು ದ್ವಿತರು ವಿಶೇಷ ಧನಕ್ಕಾಗಿಯೇ ಯಜ್ಞಗಳನ್ನು ನಡೆಸಿಕೊಡುತ್ತಿದ್ದರು. ಅವರು ಹೀಗೆ ಯೋಚಿಸಿದರು: “ತ್ರಿತನನ್ನು ಕರೆದುಕೊಂಡು ಯಜ್ಞಗಳನ್ನು ನಡೆಸಿ ನಂತರ ಗೋವುಗಳನ್ನು ಪ್ರತಿಗ್ರಹಿಸೋಣ! ಯಜ್ಞದ ಮಹಾಫಲವನ್ನು ಪಡೆದು ಹೃಷ್ಟರಾಗಿ ಸೋಮವನ್ನು ಸೇವಿಸೋಣ!” ಹೀಗೆ ಮೂವರು ಸಹೋದರರು ಮಾಡಿದರು ಕೂಡ. ಗೋವುಗಳಿಗಾಗಿ ಎಲ್ಲರೂ ಸೇರಿ ಯಜ್ಞಗಳನ್ನು ನಡೆಸಿದರು. ಯಜ್ಞಗಳನ್ನು ಮುಗಿಸಿ ಅನೇಕ ಗೋವುಗಳನ್ನು ಅವರು ಪಡೆದರು. ಯಜ್ಞಕರ್ಮಗಳಿಂದ ವಿಧಾನಪೂರ್ವಕವಾಗಿ ಗೋವುಗಳನ್ನು ಸ್ವೀಕರಿಸಿ ಮಹಾತ್ಮ ಮಹರ್ಷಿಗಳು ಪೂರ್ವದಿಕ್ಕಿನಲ್ಲಿ ಪ್ರಯಾಣಮಾಡಿದರು.

ಅವರಲ್ಲಿ ಹರ್ಷಿತ ತ್ರಿತನು ಮುಂದುಗಡೆ ಹೋಗುತ್ತಿದ್ದನು. ಏಕತ ಮತ್ತು ದ್ವಿತರು ಹಿಂದಿನಿಂದ ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಆ ಮಹಾ ಪಶುಗಣವನ್ನು ನೋಡಿ ಅವರಿಬ್ಬರಿಗೂ ಒಂದು ಯೋಚನೆಯುಂಟಾಯಿತು: “ತ್ರಿತನಿಗೆ ದೊರಕದಂತೆ ನಾವು ಈ ಎಲ್ಲ ಗೋವುಗಳನ್ನೂ ಹೇಗೆ ನಮ್ಮದಾಗಿಸಿಕೊಳ್ಳಬಹುದು?” ಎಂದು. ಆ ಪಾಪಿ ಏಕತ ಮತ್ತು ದ್ವಿತರು ಅನ್ಯೋನ್ಯರಲ್ಲಿ ಮಾತನಾಡಿಕೊಂಡರು: “ತ್ರಿತನು ಯಜ್ಞಗಳಲ್ಲಿ ಕುಶಲನು. ತ್ರಿತನು ವೇದಗಳಲ್ಲಿ ನಿಷ್ಠಿತನು. ತ್ರಿತನು ಇನ್ನೂ ಇತರ ಬಹುರೀತಿಯ ಯಜ್ಞಗಳನ್ನು ಮಾಡಿಸಿ ಅನೇಕ ಗೋವುಗಳನ್ನು ಸಂಪಾದಿಸಿಕೊಳ್ಳಬಹುದು. ನಾವಿಬ್ಬರೂ ಒಟ್ಟಾಗಿ ಗೋವುಗಳನ್ನು ಹೊಡೆದುಕೊಂಡು ಹೊರಟುಹೋಗೋಣ. ನಮ್ಮಿಂದ ಬೇರ್ಪಟ್ಟ ತ್ರಿತನು ಬೇಕಾದಲ್ಲಿಗೆ ಹೋಗಲಿ.”

ರಾತ್ರಿ ವೇಳೆ ಅವರು ಹೋಗುತ್ತಿದ್ದ ದಾರಿಯಲ್ಲಿ ತೋಳವೊಂದಿತ್ತು. ಅಲ್ಲಿಯೇ ಹತ್ತಿರದಲ್ಲಿ ಸರಸ್ವತೀ ತೀರದಲ್ಲಿ ಒಂದು ದೊಡ್ಡ ಬಾವಿಯೂ ಇದ್ದಿತು. ದಾರಿಯಲ್ಲಿ ಎದುರಿಗೇ ನಿಂತಿದ್ದ ತೋಳವನ್ನು ನೋಡಿ ತ್ರಿತನು ಭಯದಿಂದ ಓಡುತ್ತಾ ಆ ಅಗಾಧ-ಮಹಾಘೋರ-ಸರ್ವಭೂತಭಯಂಕರ ಬಾವಿಯಲ್ಲಿ ಬಿದ್ದನು. ಬಾವಿಯಲ್ಲಿ ಬಿದ್ದ ಮುನಿಸತ್ತಮ ಮಹಾಭಾಗ ತ್ರಿತನು ಆರ್ತನಾದಗೈದನು. ಅದನ್ನು ಅವನ ಅಣ್ಣಂದಿರಿಬ್ಬರೂ ಕೇಳಿಸಿಕೊಂಡರು. ಅವನು ಬಾವಿಯಲ್ಲಿ ಬಿದ್ದುದನ್ನು ತಿಳಿದೂ ಕೂಡ ಸಹೋದರರಾದ ಏಕತ-ದ್ವಿತರು ತೋಳದ ಭಯದಿಂದ ಮತ್ತು ಲೋಭದಿಂದ ಅವನನ್ನು ಅಲ್ಲಿಯೇ ಬಿಟ್ಟು ನಡೆದರು. ಗೋವುಗಳ ಆಸೆಬುರುಕರಾದ ಅಣ್ಣಂದಿರಿಂದ ತೊರೆಯಲ್ಪಟ್ಟ ಆ ಮಹಾತಪಸ್ವಿ ತ್ರಿತನು ನೀರಿಲ್ಲದ, ಧೂಳಿನಿಂದ ಮುಕ್ಕಿ ಹೋಗಿದ್ದ ಆ ಬಾವಿಯಲ್ಲಿ ಒದ್ದಾಡಿದನು.

ಪಾಪಕರ್ಮಿಯು ನರಕದಲ್ಲಿ ಹೇಗೋ ಹಾಗೆ ಬೇರು-ಹುಲ್ಲುಗಳಿಂದ ತುಂಬಿಹೋಗಿದ್ದ ಆ ಬಾವಿಯಲ್ಲಿ ಬಿದ್ದಿದ್ದ ತ್ರಿತನು ತನ್ನ ದುಃಸ್ಥಿತಿಯ ಕುರಿತು ಯೋಚಿಸಿದನು. ಮೃತ್ಯುಭೀತಿಯಿಂದ ಮತ್ತು ಸೋಮವು ದೊರಕದೇ ಇದ್ದುದರಿಂದ ಆ ಪ್ರಾಜ್ಞನು ಬುದ್ಧಿಯನ್ನುಪಯೋಗಿಸಿ “ಇನ್ನು ಇಲ್ಲಿಯೇ ಇದ್ದುಕೊಂಡು ಹೇಗೆ ಸೋಮರಸವನ್ನು ಪಡೆಯಬಹುದು?” ಎಂದು ಯೋಚಿಸತೊಡಗಿದನು. ಹೀಗೆ ಆ ಬಾವಿಯಲ್ಲಿ ಯೋಚಿಸುತ್ತಿದ್ದ ಆ ಮಹಾತಪಸ್ವಿಯು ಅದೃಷ್ಟವೋ ಎಂಬಂತೆ ಅಲ್ಲಿ ನೇತಾಡುತ್ತಿದ್ದ ಒಂದು ಉದ್ದನೆಯ ಬಳ್ಳಿಯನ್ನು ನೋಡಿದನು. ಆಗ ಧೂಳಿನಿಂದ ತುಂಬಿಹೋಗಿದ್ದ ಆ ಬಾವಿಯಲ್ಲಿ ಮುನಿಯು ನೀರನ್ನು ಸ್ಮರಿಸಿಕೊಂಡನು. ಅಗ್ನಿಗಳನ್ನೂ ಮತ್ತು ತನ್ನಲ್ಲಿ ಹೋತ್ರನನ್ನು ಸಂಕಲ್ಪಿಸಿಕೊಂಡನು. ಅನಂತರ ಮಹಾತಪಸ್ವಿಯು ಆ ಬಳ್ಳಿಯನ್ನೇ ಸೋಮವೆಂದು ಸಂಕಲ್ಪಿಸಿಕೊಂಡನು. ಋಗ್-ಯಜು-ಸಾಮಗಳನ್ನು ಆ ಮುನಿಯು ಮನಸ್ಸಿನಲ್ಲಿಯೇ ಸ್ಮರಿಸಿಕೊಂಡನು. ಅಲ್ಲಿದ್ದ ಕಲ್ಲುಗಳನ್ನೇ ಗ್ರಾವಾಣಗಳನ್ನಾಗಿಸಿಕೊಂಡು ಅಭಿಷವವನ್ನು ಪ್ರಾರಂಭಿಸಿದನು. ನೀರನ್ನೇ ಆಜ್ಯವನ್ನಾಗಿ ಮಾಡಿಕೊಂಡು ತ್ರಿದಿವೌಕಸರಿಗೆ ಭಾಗಗಳನ್ನಿತ್ತನು. ಸೋಮದ ಅಭಿಷವವನ್ನು ಮಾಡಿ ತುಮುಲ ಧ್ವನಿಮಾಡಿದನು. ತ್ರಿತನು ಮಾಡಿದ ಆ ಸ್ವರವು ಸ್ವರ್ಗವನ್ನೂ ಸೇರಿತು. ಅವನು ಬ್ರಹ್ಮವಾದಿಗಳು ಹೇಳಿಟ್ಟಿದ್ದಂತೆ ಯಜ್ಞವನ್ನು ನಡೆಸಿದನು.

ಮಹಾತ್ಮ ತ್ರಿತನ ಆ ಯಜ್ಞವು ಹಾಗೆ ನಡೆಯುತ್ತಿರಲು ತ್ರಿದಿವದಲ್ಲಿದ್ದ ಎಲ್ಲರಿಗೂ ಉದ್ವಿಗ್ನತೆಯುಂಟಾಯಿತು. ಆದರೆ ಕಾರಣಮಾತ್ರ ತಿಳಿಯಲಿಲ್ಲ. ಆ ತುಮುಲ ಶಬ್ಧವು ಬೃಹಸ್ಪತಿಗೂ ಕೇಳಿಸಿತು. ಅದನ್ನು ಕೇಳಿದ ದೇವಪುರೋಹಿತನು ಸರ್ವ ದೇವಗೆಗಳಿಗೆ ಹೀಗೆಂದನು: “ಸುರರೇ! ತ್ರಿತನ ಯಜ್ಞವು ನಡೆಯುತ್ತಿರುವಲ್ಲಿಗೆ ಹೋಗೋಣ! ಇಲ್ಲವಾದರೆ ಕ್ರುದ್ಧನಾದ ಆ ಮಹಾತಪಸ್ವಿಯು ಅನ್ಯ ದೇವತೆಗಳನ್ನೂ ಸೃಷ್ಟಿಸಬಲ್ಲನು!”

ಅವನ ಆ ಮಾತನ್ನು ಕೇಳಿ ಸರ್ವದೇವತೆಗಳೂ ಒಟ್ಟಿಗೇ ತ್ರಿತನ ಯಜ್ಞವು ನಡೆಯುತ್ತಿರುವಲ್ಲಿಗೆ ಬಂದರು. ತ್ರಿತನಿದ್ದ ಆ ಬಾವಿಗೆ ಹೋಗಿ ದೇವತೆಗಳು ಅಲ್ಲಿ ಯಜ್ಞಕರ್ಮಗಳಲ್ಲಿ ದೀಕ್ಷಿತನಾಗಿದ್ದ ಆ ಮಹಾತ್ಮನನ್ನು ಕಂಡರು. ಪರಮಶ್ರೀಯಿಂದ ಕೂಡಿದ್ದ ಆ ಮಹಾತ್ಮನನ್ನು ಕಂಡು ಆ ಮಹಾಭಾಗನಿಗೆ ಹೇಳಿದರು: “ಹವಿಸ್ಸಿನ ಭಾಗಾರ್ಥಿಗಳಾಗಿ ನಾವು ಇಲ್ಲಿಗೆ ಬಂದಿದ್ದೇವೆ.”

ಆಗ ಋಷಿಯು ದೇವತೆಗಳಿಗೆ – “ದಿವೌಕಸರೇ! ಈ ಭಯಂಕರ ಬಾವಿಯಲ್ಲಿ ಬಿದ್ದು ಚೇತನವನ್ನೇ ಕಳೆದುಕೊಂಡಿರುವ ನನ್ನನ್ನು ನೋಡಿ!” ಎಂದು ಹೇಳಿದನು.

ಆಗ ತ್ರಿತನು ಅವರಿಗೆ ಯಥಾವಿಧಿಯಾಗಿ ಮಂತ್ರಯುಕ್ತ ಯಜ್ಞ ಭಾಗಗಳನ್ನಿತ್ತನು. ಅದರಿಂದ ಅವರು ತೃಪ್ತರಾದರು ಕೂಡ. ಯಥಾವಿಧಿಯಾಗಿ ಯಜ್ಞಭಾಗಗಳನ್ನು ಪಡೆದ ದಿವೌಕಸರು ಪ್ರೀತಾತ್ಮರಾಗಿ ಅವನ ಮನಸ್ಸಿನಲ್ಲಿ ಬಯಸಿದ ವರಗಳನ್ನು ಕೊಟ್ಟರು. “ದೇವತೆಗಳೇ! ನನ್ನನ್ನು ಇಲ್ಲಿಂದ ಮೇಲೆತ್ತಿ. ಮತ್ತು ಈ ಬಾವಿಯಲ್ಲಿಯ ನೀರನ್ನು ಯಾರು ಸ್ಪರ್ಷಿಸುತ್ತಾನೋ ಅವನಿಗೆ ಸೋಮಪಗತಿಯು ದೊರೆಯಲಿ” ಎಂದು ವರಗಳನ್ನು ಕೇಳಿದನು. ಕೂಡಲೇ ಅಲೆಗಳೊಂದಿಗೆ ಸರಸ್ವತಿಯು ಮೇಲೆ ಉಕ್ಕಿಬಂದಳು. ಅದರಿಂದ ಮೇಲೆತ್ತಲ್ಪಟ್ಟ ತ್ರಿತನು ಎದಿರು ನಿಂತು ದಿವೌಕಸರನ್ನು ಪೂಜಿಸಿದನು. ಹಾಗೆಯೇ ಆಗಲೆಂದು ಹೇಳಿ ವಿಬುಧರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ತ್ರಿತನಾದರೋ ಪ್ರೀತನಾಗಿ ತನ್ನ ಮನೆಗೆ ಸೇರಿದನು.

ಅನಂತರ ಆ ಮಹಾತಪಸ್ವಿ ಋಷಿಯು ತನ್ನ ಅಣ್ಣಂದಿರನ್ನು ಭೇಟಿಮಾಡಿ ಕ್ರುದ್ಧನಾಗಿ ಕಠೋರ ಮಾತುಗಳನ್ನಾಡಿ ಶಪಿಸಿದನು: “ಪಶುಲುಬ್ಧರಾಗಿ ನನ್ನನ್ನು ಬಿಟ್ಟು ಓಡಿ ಹೋದ ನೀವಿಬ್ಬರೂ ಅದೇ ಕೋರೆದಾಡೆಗಳುಳ್ಳ ಪ್ರಾಣಿಗಳಾಗಿ ಸಂಚರಿಸಿ! ನಿಮ್ಮ ಪಾಪಕರ್ಮದಿಂದ ನನ್ನಿಂದ ಶಪಿತರಾದ ನಿಮ್ಮ ಮಕ್ಕಳೂ ಕೂಡ ಗೋಲಾಂಗೂಲ-ಕರಡಿ-ವಾನರರಾಗಿ ಹುಟ್ಟುತ್ತಾರೆ.” ಹೀಗೆ ಹೇಳಲು ಕ್ಷಣದಲ್ಲಿಯೇ ಅವರು ರೂಪದಲ್ಲಿ ಆ ಸತ್ಯವಾದಿಯ ವಚನದಂತೆಯೇ ಆದರು.

Image result for indian motifs

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *