ಸಾರಸ್ವತೋಪಾಖ್ಯಾನ
ಹಿಂದೆ ಕೃತಯುಗದಲ್ಲಿ ನೈಮಿಷಾರಣ್ಯದ ತಪಸ್ವಿಗಳು ದ್ವಾದಶವಾರ್ಷಿಕದ ಅತಿ ದೊಡ್ಡ ಸತ್ರದಲ್ಲಿ ತೊಡಗಿರಲು ಅಲ್ಲಿ ಅನೇಕ ಋಷಿಗಳು ಭಾಗವಹಿಸಿದ್ದರು. ಆ ಸತ್ರದಲ್ಲಿ ಯಥಾವಿಧಿಯಾಗಿ ಉಳಿದುಕೊಂಡ ಆ ಮಹಾಭಾಗರು ನೈಮಿಷಾರಣ್ಯದಲ್ಲಿ ಸತ್ರದ ಹನ್ನೆರಡು ವರ್ಷಗಳೂ ಉಳಿದುಕೊಂಡಿದ್ದರು. ಅನೇಕ ಋಷಿಗಳು ತೀರ್ಥಕಾರಣದಿಂದ ಅಲ್ಲಿ ಆಗಮಿಸಿದ್ದರು. ಅನೇಕ ಋಷಿಗಳಿಂದ ಕೂಡಿದ್ದ ಸರಸ್ವತಿಯ ಆ ದಕ್ಷಿಣ ತೀರ್ಥಸಮೂಹಗಳು ನಗರಗಳಂತೆ ತೋರುತ್ತಿದ್ದವು. ತೀರ್ಥಲೋಭರಾದ ಆ ದ್ವಿಜಸತ್ತಮರು ಸರಸ್ವತೀ ತೀರದಲ್ಲಿ ಸಮಂತಪಂಚಕದವರೆಗೆ ವಾಸಮಾಡಿಕೊಂಡಿದ್ದರು. ಹವನಗೈಯುತ್ತಿದ್ದ ಆ ಭಾವಿತಾತ್ಮ ಮುನಿಗಳ ಸ್ವಾಧ್ಯಾಯಗಳು ಜೋರಾಗಿ ದಿಕ್ಕುಗಳನ್ನೇ ತುಂಬಿಕೊಂಡವು. ಆಗ್ನಿಹೋತ್ರಗಳಲ್ಲಿ ಹೋಮಮಾಡುತ್ತಿದ್ದ ಆ ಮಹಾತ್ಮರಿಂದ ಶ್ರೇಷ್ಠ ನದಿಯು ಎಲ್ಲ ಕಡೆಗಳಿಂದ ಬೆಳಗಿ ಶೋಭಿಸಿತು. ವಾಲ್ಯಖಿಲ್ಯರು, ಅಶ್ಮಕುಟ್ಟ[1] ತಾಪಸರು, ದಂತೋಲೂಖಲಿಗಳು[2], ಸಂಪ್ರಕ್ಷಾಲರು, ವಾಯುಭಕ್ಷಕರು, ಜಲಾಹಾರಿಗಳು, ಪರ್ಣಭಕ್ಷಕ ತಾಪಸರು, ಸ್ಥಂಡಿಲಶಾಯಿಗಳು[3] ಮತ್ತು ಹಾಗೆಯೇ ನಾನಾ ನಿಯಮಯುಕ್ತ ತಾಪಸರು ಅಲ್ಲಿದ್ದರು. ಸರಸ್ವತಿಯ ಸಮೀಪದಲ್ಲಿಯೇ ವಾಸಿಸುತ್ತಿದ್ದ ಆ ಮುನಿಗಳು ನದಿಶ್ರೇಷ್ಠೆ ಗಂಗೆಯ ಬಳಿಯಿದ್ದ ದಿವೌಕಸರಂತೆಯೇ ಶೋಭಿಸಿದರು. ಸತ್ರದಲ್ಲಿ ಯಾಜಿಗಳಾಗಿ ಅಲ್ಲಿಗೆ ಬಂದು ಸೇರಿದ್ದ ಮಹಾವ್ರತ ಋಷಿಗಳಿಗೆ ಕುರುಕ್ಷೇತ್ರದಲ್ಲಿ ಸ್ನಾನಮಾಡಲು ಅವಕಾಶವೇ ದೊರಕಲಿಲ್ಲ. ಆಗ ಅವರು ಯಜ್ಞೋಪವೀತಗಳಲ್ಲಿಯೇ ತೀರ್ಥಗಳನ್ನು ಸಂಕಲ್ಪಿಸಿ ಅಗ್ನಿಹೋತ್ರದಲ್ಲಿ ಆಹುತಿಗಳನ್ನು ವಿಧಿವತ್ತಾಗಿ ನೀಡಿದರು.
ಋಷಿಗಳಿಗಾದ ನಿರಾಶೆಯಿಂದ ಚಿಂತಾನ್ವಿತಳಾದ ಸರಸ್ವತಿಯು ಅವರಿಗೋಸ್ಕರವಾಗಿ ಅಲ್ಲಿ ಕಾಣಿಸಿಕೊಂಡಳು. ಪುಣ್ಯತಪಸ್ವಿ ಋಷಿಗಳ ಮೇಲಿನ ಕಾರುಣ್ಯದಿಂದ ಆ ಸರಿದ್ವರೆಯು ಅವರಿಗೆ ಅನೇಕ ವಿಶ್ರಾಮ ಕುಂಜರಗಳನ್ನು ಕಲ್ಪಿಸಿಕೊಟ್ಟು ಹಿಂದಿರುಗಿದಳು. ಅವರಿಗೋಸ್ಕರವಾಗಿ ಅಲ್ಲಿಗೆ ಬಂದ ನದಿಶ್ರೇಷ್ಠೆ ಸರಸ್ವತಿಯು ಪುನಃ ಪಶ್ಚಿಮಾಭಿಮುಖಳಾಗಿ ಪ್ರವಹಿಸತೊಡಗಿದಳು. ಆವರ ಆಗಮನವನ್ನು ಸಫಲಗೊಳಿಸಿ ಪುನಃ ಹಿಂದಿನಂತೆಯೇ ಹರಿಯುತ್ತೇನೆ ಎಂದು ಸಂಕಲ್ಪಿಸಿದ್ದ ಆ ಮಹಾನದಿಯು ಆ ಅದ್ಭುತ ಕ್ರಿಯೆಯನ್ನು ಮಾಡಿದಳು. ಆ ಕುಂಜವು ನೈಮಿಷೇಯ ಎಂದು ಕರೆಯಲ್ಪಟ್ಟಿತು.
ಇಡೀ ಜಗತ್ತೇ ಸಪ್ತ ಸರಸ್ವತಿಯರಿಂದ ವ್ಯಾಪ್ತವಾಗಿದೆ. ಏಕೆಂದರೆ ತಪೋಬಲರು ಕರೆದಲ್ಲಿಯೆಲ್ಲ ಸರಸ್ವತಿಯೂ ಹೋಗುತ್ತಾಳೆ. ಹಾಗೆ ಹೋಗುವಾಗ ಸರಸ್ವತಿಯು ಈ ಏಳು ನಾಮಧೇಯಗಳನ್ನು ಪಡೆದಳು: ಸುಪ್ರಭಾ, ಕಾಂಚನಾಕ್ಷೀ, ವಿಶಾಲಾ, ಮನೋಹ್ರದ, ಓಘವತೀ, ಸುವೇಣು ಮತ್ತು ವಿಮಲೋದಕ. ಮಹೀತಲದಲ್ಲಿ ಪಿತಾಮಹ ಬ್ರಹ್ಮನ ಮಹಾ ಯಜ್ಞವು ನಡೆಯುತ್ತಿತ್ತು. ಆ ವಿಶಾಲ ಯಜ್ಞವಾಟಿಯಲ್ಲಿ ದ್ವಿಜಾತಿಯವರು ಸೇರಿಕೊಂಡಿದ್ದರು. ಪುಣ್ಯಾಹ ಘೋಷಗಳಿಂದ, ವಿಮಲ ವೇದ ನಿನಾದಗಳಿಂದ ಮತ್ತು ದೇವತೆಗಳು ಯಜ್ಞವಿಧಿಗಳಲ್ಲಿ ತೋರಿಸಿದ ಉತ್ಸಾಹಗಳಿಂದ ಆ ಯಜ್ಞವಾಟಿಯು ತುಂಬಿಹೋಗಿತ್ತು. ಪ್ರಪಿತಾಮಹನು ಯಜಮಾನನಾಗಿ ದೀಕ್ಷಿತನಾಗಿದ್ದ ಆ ಸತ್ರದಲ್ಲಿ ಸರ್ವಕಾಮನೆಗಳೂ ಪೂರೈಸಿಕೊಳ್ಳುತ್ತಿದ್ದವು. ಮನಸ್ಸಿನಲ್ಲಿ ಚಿಂತಿಸಿದ ಧರ್ಮಾರ್ಥ ಕುಶಲಗಳೆಲ್ಲವೂ ದ್ವಿಜಾತಿಯವರ ಬಳಿ ಎದ್ದು ನಿಲ್ಲುತ್ತಿದ್ದವು. ಅಲ್ಲಿ ಗಂಧರ್ವರು ಹಾಡುತ್ತಿದ್ದರು. ಅಪ್ಸರಗಣಗಳು ನರ್ತಿಸುತ್ತಿದ್ದವು. ದಿವ್ಯ ವಾದ್ಯಗಳನ್ನು ಹಿತಕರವಾಗಿ ಬಾರಿಸುತ್ತಿದ್ದರು. ಆ ಯಜ್ಞದ ವೈಭವದಿಂದ ತೃಪ್ತರಾಗಿ ದೇವತೆಗಳೂ ಕೂಡ ಪರಮ ವಿಸ್ಮಿತರಾದರು. ಇನ್ನು ಮನುಷ್ಯ ಯೋನಿಯಲ್ಲಿ ಹುಟ್ಟಿದವರ ವಿಷಯದಲ್ಲಿ ಏನು? ಪುಷ್ಕರದಲ್ಲಿ ಪಿತಾಮಹನ ಈ ಮಹಾಯಜ್ಞವು ನಡೆಯುತ್ತಿರುವಾಗ ಋಷಿಗಳು “ನದಿಶ್ರೇಷ್ಠೇ ಸರಸ್ವತಿಯು ಇಲ್ಲ ಕಾಣಿಸುವುದಿಲ್ಲವಾದುದರಿಂದ ಈ ಯಜ್ಞದ ಮಹಾಫಲವು ಉಂಟಾಗಿಲ್ಲ!” ಎಂದರು.
ಅದನ್ನು ಕೇಳಿ ಪ್ರೀತನಾದ ಭಗವಾನನು ಸರಸ್ವತಿಯನ್ನು ಸ್ಮರಿಸಿದನು. ಪುಷ್ಕರದಲ್ಲಿ ಪಿತಾಮಹನ ಯಾಗದಲ್ಲಿ ಕರೆಯಲ್ಪಟ್ಟ ಸರಸ್ವತಿಯು ಸುಪ್ರಭಾ ಎಂಬ ಹೆಸರಿನವಳಾದಳು. ವೇಗಯುಕ್ತಳಾದ ಸರಸ್ವತಿಯನ್ನು ನೋಡಿ ಮುನಿಗಳು ತುಷ್ಟರಾಗಿ ಪಿತಾಮಹನ ಆ ಕ್ರತುವು ಬಹಳ ಮಾನ್ಯತೆವುಳ್ಳದ್ದು ಎಂದು ಗೌರವಿಸಿದರು. ಹೀಗೆ ಸರಿತಶ್ರೇಷ್ಠೆ ಸರಸ್ವತಿಯು ಪಿತಾಮಹನಿಗಾಗಿ ಮತ್ತು ಋಷಿಗಳ ಸಂತೃಪ್ತಿಗಾಗಿ ಪುಷ್ಕರದಲ್ಲಿ ಕಾಣಿಸಿಕೊಂಡಳು.
ನೈಮಿಷದಲ್ಲಿ ಸಮಾಗಮಿಸಿದ್ದ ಮುನಿಗಳ ಮಧ್ಯೆ ವೇದದ ಕುರಿತು ವಿಚಿತ್ರ ಚರ್ಚೆಗಳು ನಡೆದವು. ಅಲ್ಲಿದ್ದ ನಾನಾ ಸ್ವಾಧ್ಯಾಯಗಳನ್ನು ತಿಳಿದುಕೊಂಡಿದ್ದ ಮುನಿಗಳು ಒಂದಾಗಿ ಸರಸ್ವತಿಯನ್ನು ಸ್ಮರಿಸಿದರು. ಸೇರಿ ಸತ್ರದಲ್ಲಿ ತೊಡಗಿದ್ದ ಮಹಾತ್ಮರು ಧ್ಯಾನಿಸಲು ಅವರ ಸಹಾಯಾರ್ಥವಾಗಿ ಪುಣ್ಯೆ ಮಹಾಭಾಗೆ ಸರಸ್ವತಿಯು ಅಲ್ಲಿಗೆ ಬಂದಳು. ನೈಮಿಷದಲ್ಲಿ ಸತ್ರಯಾಜಿ ಮುನಿಗಳ ಬಳಿ ಆಗಮಿಸಿದ ಸರಿತಶ್ರೇಷ್ಠೆಯು ಕಾಂಚನಾಕ್ಷೀ ಎಂದು ಪೂಜಿತಳಾದಳು. ಗಯದ ರಾಜ ಗಯನೂ ಕೂಡ ಮಹಾಕ್ರತು ಗಯಯಜ್ಞದಲ್ಲಿ ಸರಿತಶ್ರೇಷ್ಠೆ ಸರಸ್ವತಿಯನ್ನು ಆಹ್ವಾನಿಸಿದನು. ಹಿಮವತ್ಪರ್ವದದ ತಪ್ಪಲಿನಲ್ಲಿ ಹುಟ್ಟಿದ ಆ ಶೀಘ್ರಗಾಮಿನೀ ನದಿಗೆ ಗಯೆಯಲ್ಲಿ ಸಂಶಿತವ್ರತ ಋಷಿಗಳು ವಿಶಾಲಾ ಎಂದು ಕರೆದರು. ಔದ್ಧಾಲಕನು ಯಜ್ಞವನ್ನು ಯಾಜಿಸುತ್ತಿದ್ದಾಗ ಅಲ್ಲಿಗೆ ಎಲ್ಲಕಡೆಗಳಿಂದ ಆಗಮಿಸಿದ ಮುನಿಗಳ ಮಂಡಲವು ಸೇರಿತ್ತು. ಕೋಸಲದ ಪುಣ್ಯ ಉತ್ತರ ಭಾಗದಲ್ಲಿ ಮಹಾತ್ಮ ಔದ್ದಾಲಕನು ಯಜ್ಞದ ಮೊದಲು ಸರಸ್ವತಿಯನ್ನು ಧ್ಯಾನಿಸಿದನು. ಋಷಿಗಳ ಕಾರಣದಿಂದ ಅಲ್ಲಿಗೈತಂದ ಸರಿಶ್ರೇಷ್ಠೆಯು ವಲ್ಕಲ-ಜಿನಧಾರೀ ಮುನಿಗಣಗಳಿಂದ ಪೂಜಿಸಲ್ಪಟ್ಟು ಅವರ ಮನಸ್ಸನ್ನು ಅಪಹರಿಸಿದುದಕ್ಕಾಗಿ ಮನೋಹ್ರದಾ ಎಂದು ವಿಖ್ಯಾತಳಾದಳು. ರಾಜರ್ಷಿಸೇವಿತ ಪುಣ್ಯ ಋಷಭದ್ವೀಪದಲ್ಲಿ ಅವಳು ಸುವೇಣುವೆನಿಸಿದಳು. ಮಹಾತ್ಮ ಕುರುವು ಯಜಮಾನನಾಗಿದ್ದ ಕುರುಕ್ಷೇತ್ರಕ್ಕೆ ಸರಿತಶ್ರೇಷ್ಠೆ ಮಹಾಭಾಗೆ ಸರಸ್ವತಿಯು ಹರಿದುಬಂದಳು. ಕುರುಕ್ಷೇತ್ರದಲ್ಲಿ ಆ ದಿವ್ಯನದೀ ಸರಸ್ವತಿಯನ್ನು ಮಹಾತ್ಮ ವಸಿಷ್ಠನು ಓಘವತಿ ಎಂದು ಕರೆದನು. ಗಂಗಾದ್ವಾರದಲ್ಲಿ ದಕ್ಷನು ಯಜ್ಞಮಾಡುತ್ತಿರುವಾಗ ಯಜಮಾನನಾಗಿದ್ದ ದಕ್ಷಬ್ರಹ್ಮನು ಕರೆಯಲು ಭಗವತಿಯು ಪುಣ್ಯ ಹೈಮವತ ಗಿರಿಗಳಿಂದ ವಿಮಲೋದೆಯಾಗಿ ಅಲ್ಲಿಗೆ ಹರಿದುಬಂದಳು. ಆ ತೀರ್ಥದಲ್ಲಿ ಒಂದಾಗಿ ಸೇರಿ, ಅಲ್ಲಿಂದ ಮುಂದೆ ಅದು ಸಪ್ತಸಾರಸ್ವತ ತೀರ್ಥವೆಂದು ಭುವಿಯಲ್ಲಿ ಪ್ರಸಿದ್ಧವಾಯಿತು.
ಒಮ್ಮೆ ಸುಂದರ ಕಡೆಗಣ್ಣಿನ ದಿಕ್ಕುಗಳನ್ನೇ ಬಟ್ಟೆಗಳಾಗಿ ಧರಿಸಿದ್ದ ಅನಿಂದಿತೆ ಸ್ತ್ರೀಯೊಬ್ಬಳು ಸರಸ್ವತೀ ನದಿಯ ನೀರಿನಲ್ಲಿ ಸ್ವೇಚ್ಛೆಯಿಂದ ಸ್ನಾನಮಾಡುತ್ತಿರುವುದನ್ನು ನೋಡಿ ಮಂಕಣಕನ ವೀರ್ಯಸ್ಖಲನವಾಗಿ ನೀರಿನಲ್ಲಿ ಬಿದ್ದಿತು. ಆ ಮಹಾತಪಸ್ವಿಯು ಆ ರೇತಸ್ಸನ್ನು ಕಲಶದಲ್ಲಿ ಸಂಗ್ರಹಿಸಿ, ಕಲಶದಲ್ಲಿದ್ದುದನ್ನು ಏಳು ಭಾಗಗಳನ್ನಾಗಿಸಿ ಹೋದನು. ಅಲ್ಲಿಂದ ಸಪ್ತ ಋಷಿ ಮರುದ್ಗಣಗಳು ಹುಟ್ಟಿದವು. ಅಲ್ಲಿಂದ ವಾಯುವೇಗ, ವಾಯುಬಲ, ವಾಯುಹಾ, ವಾಯುಮಂಡಲ, ವಾಯುಜ್ವಾಲ, ವಾಯುರೇತ ಮತ್ತು ವಾಯುಚಕ್ರರೆಂಬ ವೀರ್ಯವಾನ್ ಮರುತ್ತರು ಜನಿಸಿದರು.
[1] ಕಲ್ಲಿನಲ್ಲಿ ಕುಟ್ಟಿ ಧಾನ್ಯವನ್ನು ಸಿಪ್ಪೆಯಿಂದ ಬೇರ್ಪಡಿಸುವವರು.
[2] ವಾನಪ್ರಸ್ಥಾಶ್ರಮವನ್ನು ಕೈಗೊಂಡ ಇವರು ಧಾನ್ಯದ ಸಿಪ್ಪೆಯನ್ನು ಹಲ್ಲಿನಿಂದಲೇ ತೆಗೆದು ತಿನ್ನುವವರು. ಇದು ಮನುಸ್ಮೃತಿಯಲ್ಲಿ ಬರುವ ವಾನಪ್ರಸ್ಥಾಶ್ರಮ ನಿಯಮಗಳಲ್ಲೊಂದು: “ಆಶ್ಮಕುಟ್ಟೀ ಭವೇದ್ವಾಪಿ ದಂತೋಲೂಖಲಿಕೋಽಪಿ ವಾ”
[3] ನೆಲದ ಮೇಲೆಯೇ ಮಲಗುವವರು
[4] ಭಾರತದರ್ಶನ ಕನ್ನಡ ಮಹಾಭಾರತದಲ್ಲಿ ಸುರೇಣು ಎಂದಿದೆ.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ