ಬಲದೇವನ ತೀರ್ಥಯಾತ್ರೆ
ಮಹಾತ್ಮ ಪಾಂಡವರು ಉಪಪ್ಲವ್ಯದಲ್ಲಿ ವಾಸಿಸಿರುವಾಗ ಸರ್ವದೇಹಿಗಳ ಹಿತಾರ್ಥ ಶಾಂತಿಗಾಗಿ ಮಹಾಬಾಹು ಮಧುಸೂದನನನ್ನು ಧೃತರಾಷ್ಟ್ರನ ಬಳಿ ಕಳುಹಿಸಲಾಗಿತ್ತು. ಅವನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನನ್ನು ಸಂಧಿಸಿ ತಥ್ಯವೂ ವಿಶೇಷವಾಗಿ ಹಿತವೂ ಆದ ಮಾತುಗಳನ್ನಾಡಿದನು. ಆದರೆ ರಾಜನು ಅದರಂತೆ ಮಾಡಲಿಲ್ಲ. ಅಲ್ಲಿ ಶಾಂತಿಯನ್ನು ಪಡೆಯದೇ ಮಹಾಬಾಹು ಪುರುಷಸತ್ತಮ ಕೃಷ್ಣನು ಉಪಪ್ಲವ್ಯಕ್ಕೆ ಹಿಂದಿರುಗಿದನು. ಧಾರ್ತರಾಷ್ಟ್ರನಿಂದ ಕಳುಹಿಸಲ್ಪಟ್ಟ ಕೃಷ್ಣನು ಹಿಂದಿರುಗಿ ಪಾಂಡವರಿಗೆ ಇದನ್ನು ಹೇಳಿದನು: “ಕಾಲಚೋದಿತ ಕುರುಗಳು ನನ್ನ ಮಾತಿನಂತೆ ಮಾಡುವುದಿಲ್ಲ. ಪಾಂಡವೇಯರೇ! ಪುಷ್ಯನಕ್ಷತ್ರದಲ್ಲಿ ನನ್ನೊಡನೆ ಹೊರಡಿ!” ಆಗ ಸೇನಗಳ ವಿಭಜನೆಯು ನಡೆಯುತ್ತಿರಲು ಬಲಿಗಳಲ್ಲಿ ಶ್ರೇಷ್ಠ ಮಹಾಮನಸ್ವಿ ರೌಹಿಣೇಯನು ತಮ್ಮ ಕೃಷ್ಣನಿಗೆ ಹೇಳಿದನು: “ಮಹಾಬಾಹೋ! ಮಧುಸೂದನ! ಕೌರವರಿಗೂ ಸಹಾಯಮಾಡು!” ಕೃಷ್ಣನು ಆ ಮಾತಿನಂತೆ ಮಾಡಲಿಲ್ಲ. ಆಗ ಕೋಪಗೊಂಡ ಹಲಧರನು ಅನುರಾಧಾ ನಕ್ಷತ್ರಯೋಗದಂದು ಸರ್ವ ಯಾದವರೊಡಗೂಡಿ ಸರಸ್ವತೀ ನದಿಗೆ ತೀರ್ಥಯಾತ್ರೆಗೆ ಹೊರಟನು. ಭೋಜ ಕೃತವರ್ಮನಾದರೋ ದುರ್ಯೋಧನನನ್ನು ಆಶ್ರಯಿಸಿದನು. ಯುಯುಧಾನ ಸಾತ್ಯಕಿಯ ಸಹಿತ ವಾಸುದೇವನು ಪಾಂಡವರನ್ನು ಸೇರಿದನು. ಶೂರ ರೌಹಿಣೇಯನು ಹೊರಟುಹೋದ ನಂತರ ಪುಷ್ಯಾ ನಕ್ಷತ್ರದಲ್ಲಿ ಮಧುಸೂದನನು ಪಾಂಡವೇಯರನ್ನು ಮುಂದೆಮಾಡಿಕೊಂಡು ಕುರುಗಳನ್ನು ಎದುರಿಸಿ ಹೊರಟನು.
ಹೊರಟ ರಾಮನು ದಾರಿಯಲ್ಲಿಯೇ ನಿಂತು ತೀರ್ಥಯಾತ್ರೆಗೆ ಬೇಕಾಗುವ ಸಕಲ ಸಾಮಗ್ರಿಗಳನ್ನೂ, ಉಪಕರಣಗಳನ್ನೂ, ಅಗ್ನಿಗಳನ್ನೂ, ಯಾಜಕರನ್ನೂ ದ್ವಾರಕೆಯಿಂದ ತರಿಸಿಕೊಂಡನು. ಚಿನ್ನ, ಬೆಳ್ಳಿ, ಗೋವುಗಳು, ವಸ್ತ್ರಗಳು, ಕುದುರೆಗಳು, ಅನೆಗಳು, ರಥಗಳು, ಒಂಟೆಗಳು ಮತ್ತು ವಾಹನಗಳು – ತೀರ್ಥಯಾತ್ರೆಗೆಂದು ಎಲ್ಲವನ್ನೂ ಬೇಗ ಸೇವಕರಿಂದ ತರಿಸಿಕೊಂಡನು. ಸರಸ್ವತೀ ನದಿಯ ತೀರಕ್ಕೆ ಶೀಘ್ರವಾಗಿ ಪ್ರಯಾಣಿಸಬೇಕೆಂದೂ ಅದಕ್ಕೆ ನೂರಾರು ದ್ವಿಜರ್ಷಭರನ್ನೂ ಋತ್ವಿಜರನ್ನೂ ಕರೆತರಬೇಕೆಂದು ಆಜ್ಞೆಯಿತ್ತನು. ಹೀಗೆ ಕುರುಗಳ ಯುದ್ಧವು ನಡೆಯುವಾಗ ಬಲದೇವನು ಸೇವಕರಿಗೆ ಆಜ್ಞೆಯನ್ನಿತ್ತು ತೀರ್ಥಯಾತ್ರೆಗೆ ಹೊರಟನು. ಅವನು ಋತ್ವಿಜರು, ಸುಹೃದಯರು ಮತ್ತು ಅನ್ಯ ದ್ವಿಜಸತ್ತಮರೊಡನೆ ರಥ-ಆನೆ-ಕುದುರೆ-ಸೇವಕರೊಡನೆ, ಮತ್ತು ಅನೇಕ ಎತ್ತು, ಕತ್ತೆ ಮತ್ತು ಒಂಟೆಗಳನ್ನು ಕಟ್ಟಿದ್ದ ಯಾನಗಳಿಂದ ಪರಿವೃತನಾಗಿ ಸರಸ್ವತಿಯ ಪ್ರತಿಸ್ರೋತ ಸಮುದ್ರದ ಕಡೆ ಪ್ರಯಾಣಿಸಿದನು. ಯಾವ ದೇಶಗಳಲ್ಲಿ ಅವನು ಹೋದನೋ ಅಲ್ಲಿ ರೋಗಿಗಳಿಗೂ, ವೃದ್ಧರಿಗೂ, ಶಿಶುಗಳಿಗೂ, ಅಂಗವಿಕಲರಿಗೂ, ಬಳಲಿದವರಿಗೂ ಕೊಡಲು ಬೇಕಾದ ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದನು. ಎಲ್ಲೆಲ್ಲಿ ದ್ವಿಜರು ಯಾವುದನ್ನು ಬಯಸುತ್ತಿದ್ದರೋ ಅದನ್ನೇ ಅವರಿಗೆ ಅವನು ಕೊಡುತ್ತಿದ್ದನು. ಅವನು ತಂಗಿದಲ್ಲೆಲ್ಲಾ ರೌಹಿಣೇಯನ ಶಾಸನದಂತೆ ಎಲ್ಲರಿಗೂ ಭೋಜನ-ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಸುಖಾಪೇಕ್ಷೀ ವಿಪ್ರರ ಸತ್ಕಾರಾರ್ಥವಾಗಿ ಅಲ್ಲಿ ಮಹಾಬೆಲೆಯ ವಸ್ತ್ರಗಳ ಮತ್ತು ಮಂಚ ಮೊದಲಾದವುಗಳ ವ್ಯವಸ್ಥೆಗಳನ್ನೂ ಮಾಡಲಾಗಿತ್ತು. ಎಲ್ಲೆಲ್ಲಿ ವಿಪ್ರ-ಕ್ಷತ್ರಿಯರು ಮಲಗುತ್ತಿದ್ದರೋ ಅಲ್ಲಲ್ಲಿ ಅವನು ಸರ್ವ ವ್ಯವಸ್ಥೆಗಳನ್ನೂ ಮಾಡಿಸಿದ್ದುದು ಕಾಣುತ್ತಿತ್ತು. ಜನರಿಗೆ ಯಥಾಸುಖವಾಗಿ ಎಲ್ಲವೂ ಅಲ್ಲಿ ಸಿದ್ಧವಾಗಿದ್ದವು. ಪ್ರಯಾಣಿಕರಿಗೆ ವಾಹನಗಳೂ ಬಾಯಾರಿದವರಿಗೆ ಪಾನೀಯಗಳೂ ದೊರಕುತ್ತಿದ್ದವು. ಹಸಿದು ಬಂದವರಿಗೆ ಸ್ವಾದಿಷ್ಟ ಭೋಜನ ಮತ್ತು ಅತಿಥಿಗಳಿಗೆ ವಸ್ತ್ರಾಭರಣ ಉಡುಗರೆಗಳೂ ದೊರೆಯುತ್ತಿದ್ದವು. ಅವನೊಂದಿಗೆ ಹೋಗಿದ್ದ ಎಲ್ಲರಿಗೂ ಯಾತ್ರೆಯು ಸ್ವರ್ಗದಂತೆ ಸುಖಮಯವಾಗಿಯೇ ಇದ್ದಿತು. ನಿತ್ಯವೂ ಪ್ರಮೋದವಾಗಿತ್ತು. ಶುಭ-ಸ್ವಾದ ಭಕ್ಷಗಳಿದ್ದವು. ನೂರಾರು ಜನರಿಂದ ಮುತ್ತಲ್ಪಟ್ಟ ನಾನಾತರಗದ ಅಂಗಡಿಗಳೂ ಇದ್ದವು. ಆ ಮಾರ್ಗವು ನಾನಾ ವೃಕ್ಷ-ಲತೆಗಳಿಂದಲೂ ನಾನಾ ರತ್ನಗಳಿಂದಲೂ ವಿಭೂಷಿತವಾಗಿತ್ತು.
ಹಲಭೃತನೆಂದು ಪ್ರತೀತನಾಗಿದ್ದ ರಾಮನು ಪುಣ್ಯತೀರ್ಥಗಳಲ್ಲಿ ನಿಯಮಸ್ಥನಾಗಿ ಉಳಿಯುತ್ತಾ ದ್ವಿಜರಿಗೆ ಯಜ್ಞದಕ್ಷಿಣೆಗಳನ್ನೂ ದಾನಮಾಡಿದನು. ರಾಮನು ದ್ವಿಜಾತಿಪ್ರವರರಿಗೆ ವಸ್ತ್ರಗಳನ್ನು ಹೊದಿಸಿದ್ದ, ಕೊಂಬುಗಳಿಗೆ ಸುವರ್ಣವನ್ನು ಕಟ್ಟಿದ್ದ ಸಾವಿರಾರು ಹಾಲುಕರೆಯುವ ಹಸುಗಳನ್ನೂ, ನಾನಾ ದೇಶಗಳಲ್ಲಿ ಹುಟ್ಟಿದ್ದ ಕುದುರೆಗಳನ್ನೂ, ರಥಗಳನ್ನೂ, ದಾಸಿಯರನ್ನೂ, ರತ್ನ-ಮಣಿ-ಹವಳಗಳನ್ನೂ, ಶ್ರೇಷ್ಠ ಸುವರ್ಣವನ್ನೂ, ಪರಿಶುದ್ಧ ಬೆಳ್ಳಿಯನ್ನೂ, ಉಕ್ಕಿನ ಮತ್ತು ತಾಮ್ರದ ಪಾತ್ರೆಗಳನ್ನೂ, ನೀಡಿದನು. ಹೀಗೆ ಆ ಮಹಾತ್ಮನು ಸರಸ್ವತೀ ನದಿಯ ಶ್ರೇಷ್ಠ ತೀರ್ಥಗಳಲ್ಲಿ ಅಪಾರ ಧನವನ್ನು ದಕ್ಷಿಣೆಗಳನ್ನಾಗಿತ್ತನು. ಆ ಅಪ್ರತಿಮ ಪ್ರಭಾವಿಯು ಕ್ರಮೇಣವಾಗಿ ಕುರುಕ್ಷೇತ್ರಕ್ಕೂ ಆಗಮಿಸಿದನು.
ಮೊದಲು ಯದುಪ್ರವೀರನು ಋತ್ವಿಜ-ಸುಹೃದ್ಗಣಗಳೊಂದಿಗೆ ಪುಣ್ಯ ಪ್ರಭಾಸಕ್ಷೇತ್ರಕ್ಕೆ ಹೋದನು. ಅಲ್ಲಿ ಯಕ್ಷ್ಮ(ಕ್ಷಯರೋಗ) ದಿಂದ ಪೀಡಿತ ಉಡುರಾಜ ಚಂದ್ರನು ಶಾಪದಿಂದ ವಿಮುಕ್ತನಾಗಿ ಪುನಃ ತೇಜಸ್ಸನ್ನು ಪಡೆದು ಜಗತ್ತೆಲ್ಲವನ್ನೂ ಬೆಳಗಿಸಿದನು. ಅವನಿಗೆ ಪ್ರಭೆಯನ್ನು ನೀಡಿದ ಇದು ಭೂಮಿಯಲ್ಲಿ ಪ್ರಭಾಸವೆಂಬ ಶ್ರೇಷ್ಠತೀರ್ಥವೆನಿಸಿಕೊಂಡಿತು. ಅನಂತರ ಬಲರಾಮನು ಚಮಸೋದ್ಭೇದಕ್ಕೆ ಹೋದನು. ಹಲಾಯುಧನು ಅಲ್ಲಿ ವಿಶಿಷ್ಟ ದಾನಗಳನ್ನಿತ್ತು ಒಂದು ರಾತ್ರಿ ತಂಗಿ ವಿಧಿವತ್ತಾಗಿ ಸ್ನಾನಮಾಡಿದನು. ಅನಂತರ ಕೇಶವಾಗ್ರಜನು ವರಗಳನ್ನೀಯುವ ಉದಪಾನಕ್ಕೆ ಹೋದನು. ಅಲ್ಲಿ ಕಾಲಿಡುತ್ತಲೇ ಮಹಾ ಫಲಗಳು ದೊರೆಯುತ್ತವೆ. ಔಷಧಿಗಳ ಸ್ನಿಗ್ಧತ್ವದಿಂದಾಗಿ ಸಿದ್ಧರು ಇದೇ ಪ್ರದೇಶದಲ್ಲಿ ಸರಸ್ವತಿಯು ನಷ್ಟಳಾದಳೆಂದು ತಿಳಿದಿದ್ದಾರೆ. ಹಲಾಯುಧನು ಆ ನದಿಗೆ ಹೋಗಿ ಅಲ್ಲಿ ತ್ರಿತನ ಉದಪಾನಕ್ಕೆ ಹೋದನು. ಮುಸಲಾಯುಧನು ಪ್ರಹೃಷ್ಟನಾಗಿ ಅಲ್ಲಿ ನೀರನ್ನು ಮುಟ್ಟಿ, ದ್ವಿಜರನ್ನು ಪೂಜಿಸಿ ಬಹಳ ದ್ರವ್ಯವನ್ನು ದಾನವನ್ನಾಗಿತ್ತನು. ಅಲ್ಲಿ ಮಹಾತಪಸ್ವಿ ಧರ್ಮಪರ ತ್ರಿತನಿದ್ದನು. ಬಾವಿಯಲ್ಲಿ ವಾಸಿಸಿದ ಆ ಮಹಾತ್ಮನು ಅಲ್ಲಿಯೇ ಸೋಮವನ್ನು ಕುಡಿದನು. ಅಲ್ಲಿಯೇ ಅವನ ಸಹೋದರರಿಬ್ಬರು ಅವನನ್ನು ಬಿಟ್ಟು ಮನೆಗಳಿಗೆ ಹೊರಟು ಹೋದರು. ಆಗ ಬ್ರಾಹ್ಮಣಸತ್ತಮ ತ್ರಿತನು ಅವರಿಬ್ಬರನ್ನೂ ಶಪಿಸಿದನು. ಹಲಾಯುಧನು ಆ ನೀರನ್ನು ಸ್ಪರ್ಷಿಸಿ ದ್ವಿಜರನ್ನು ಪೂಜಿಸಿ ವಿವಿಧ ದಾನಗಳನ್ನಿತ್ತನು. ಉದಪಾನವನ್ನು ನೋಡಿ ಪುನಃ ಪುನಃ ಅದನ್ನು ಪ್ರಶಂಸಿಸುತ್ತಾ ಆ ಅದೀನಾತ್ಮನು ಸರಸ್ವತಿಯು ಕಣ್ಮರೆಯಾಗಿದ್ದ ವಿನಶನ ಪ್ರದೇಶವನ್ನು ತಲುಪಿದನು. ದ್ವೇಷದಿಂದ ಸರಸ್ವತಿಯು ನಷ್ಟಳಾಗಿ ಹೋಗಿದ್ದ ಆ ಸ್ಥಳವನ್ನು ಋಷಿಗಳು ನಿತ್ಯವೂ ವಿನಶನವೆಂದು ಕರೆಯುತ್ತಾರೆ. ಬಲರಾಮನು ಆ ಸರಸ್ವತಿಯಲ್ಲಿ ನೀರನ್ನು ಮುಟ್ಟಿ ಸರಸ್ವತೀ ತಟದಲ್ಲಿದ್ದ ಶ್ರೇಷ್ಠ ಸುಭೂಮಿಕಕ್ಕೆ ಹೋದನು. ಅಲ್ಲಿ ವಿಮಲ-ಶುಭ್ರ-ದೋಷರಹಿತ-ವಿಮಲಾನನೆ ಅಪ್ಸರೆಯರೂ ಕೂಡ ಕ್ರೀಡೆಗಳನ್ನು ಆಡುತ್ತಾರೆ. ಗಂಧರ್ವರೊಡನೆ ದೇವತೆಗಳು ಪ್ರತಿಮಾಸವೂ ಬ್ರಾಹ್ಮಣಸೇವಿತ ಆ ಪುಣ್ಯತೀರ್ಥಕ್ಕೆ ಬರುತ್ತಾರೆ. ಅಲ್ಲಿ ಗಂಧರ್ವ ಮತ್ತು ಅಪ್ಸರ ಗಣಗಳು ಒಟ್ಟಾಗಿ ಬಂದು ಸಂತೋಷಪಡುತ್ತಿರುವುದು ಕಂಡುಬರುತ್ತದೆ. ಅಲ್ಲಿ ದೇವತೆಗಳು ಮತ್ತು ಬಳ್ಳಿಗಳನ್ನಾಶ್ರಯಿಸಿರುವ ಪಿತೃಗಳು ತಮ್ಮ ಮೇಲೆ ಪುನಃ ಪುನಃ ದಿವ್ಯ ಪುಣ್ಯ ಪುಷ್ಪಗಳ ಮಳೆಯಾಗುತ್ತಿರುವುದರಿಂದ ಆನಂದಪಡುತ್ತಾರೆ. ಆ ಶ್ರೇಷ್ಠ ಸರಸ್ವತೀ ತಟವು ಅಪ್ಸರೆಯರ ಶುಭ ಕ್ರೀಡಾಭೂಮಿಯಾಗಿದ್ದು ಸುಭೂಮಿಕಾ ಎಂದು ವಿಖ್ಯಾತವಾಗಿದೆ.
ಮಾಧವನು ಅಲ್ಲಿ ಸ್ನಾನಮಾಡಿ ವಿಪ್ರರಿಗೆ ಧನವನ್ನು ದಾನಮಾಡಿ, ದಿವ್ಯ ಗೀತವನ್ನೂ ವಾದ್ಯಗಳ ನಿಃಸ್ವನವನ್ನೂ ಕೇಳಿದನು. ದೇವ-ಗಂಧರ್ವ-ರಾಕ್ಷಸರ ವಿಪುಲ ಛಾಯೆಗಳನ್ನು ನೋಡಿ ರೋಹಿಣೀಸುತನು ಗಂಧರ್ವರ ತೀರ್ಥಕ್ಕೆ ಬಂದನು. ಅಲ್ಲಿ ವಿಶ್ವಾವಸುವೇ ಮೊದಲಾದ ತಪಸಾನ್ವಿತರು ಸುಮನೋರಮ ನೃತ್ಯ-ವಾದ್ಯ-ಗೀತೆಗಳನ್ನು ಮಾಡುತ್ತಿರುತ್ತಾರೆ. ಹಲಧರನು ಅಲ್ಲಿ ವಿಪ್ರರಿಗೆ ವಿವಿಧ ಸಂಪತ್ತುಗಳನ್ನು – ಆಡು, ಕುರಿ, ಹಸು, ಕತ್ತೆ ಮತ್ತು ಒಂಟೆಗಳನ್ನೂ, ಸುವರ್ಣ-ರಜತಗಳನ್ನೂ ದಾನವನ್ನಾಗಿತ್ತನು. ದ್ವಿಜರಿಗೆ ಬೇಕಾದ ಭೋಜನಗಳನ್ನಿತ್ತು ಮಹಾಧನಗಳಿಂದ ತೃಪ್ತಿಗೊಳಿಸಿ ಮಾಧವನು ಸ್ತುತಿಸುತ್ತಿರುವ ವಿಪ್ರರೊಂದಿಗೆ ಮುಂದುವರೆದನು. ಆ ಗಂಧರ್ವತೀರ್ಥದಿಂದ ಅವನು ಗರ್ಗಸ್ರೋತ ಮಹಾತೀರ್ಥಕ್ಕೆ ಆಗಮಿಸಿದನು. ಅಲ್ಲಿ ಭಾವಿತಾತ್ಮ ವೃದ್ಧ ಗರ್ಗನು ತಪಸ್ಸಿನಿಂದ ಕಾಲಜ್ಞಾನವನ್ನೂ, ನಕ್ಷತ್ರಗಳ ಗತಿಯನ್ನೂ, ದಾರುಣ ಮತ್ತು ಶುಭ ಉತ್ಪಾತಗಳನ್ನೂ ತಿಳಿದುಕೊಂಡಿದ್ದನು. ಸರಸ್ವತಿಯ ಶುಭ ತೀರ್ಥದಲ್ಲಿ ಆ ಮಹಾತ್ಮನಿದ್ದುದರಿಂದ ಆ ತೀರ್ಥವು ಗರ್ಗಸ್ರೋತವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅಲ್ಲಿ ಸುವ್ರತ ಋಷಿಗಳು ಕಾಲಜ್ಞಾನಕ್ಕಾಗಿ ಮಹಾಭಾಗ ಗರ್ಗನನ್ನು ನಿತ್ಯವೂ ಉಪಾಸಿಸುತ್ತಿರುತ್ತಾರೆ. ನೀಲಾವಾಸ ಬಲರಾಮನು ಅಲ್ಲಿ ಹೋಗಿ ಭಾವಿತಾತ್ಮ ಮುನಿಗಳಿಗೆ ವಿಧಿವತ್ತಾಗಿ ಧನವನ್ನು ದಾನವನ್ನಾಗಿತ್ತು, ದ್ವಿಜರಿಗೆ ಉತ್ತಮ ಭಕ್ಷಗಳ ಬೋಜನಗಳನ್ನಿತ್ತು ಅಲ್ಲಿಂದ ಮಹಾಯಶಸ್ವಿ ಶಂಖತೀರ್ಥಕ್ಕೆ ಹೋದನು.
ಬಲಶಾಲೀ ತಾಲಧ್ವಜನು ಶ್ವೇತಪರ್ವತದ ಬಳಿ ಋಷಿಗಣಗಳಿಂದ ಸೇವಿಸಲ್ಪಟ್ಟಿದ್ದ ಮಹಾಮೇರುವಿನಂತೆ ಎತ್ತರವಾಗಿದ್ದ, ಸರಸ್ವತೀ ತಟದಲ್ಲಿ ಹುಟ್ಟಿದ್ದ, ಮಹಾಶಂಖವೆಂಬ ವೃಕ್ಷವನ್ನು ನೋಡಿದನು. ಅಲ್ಲಿ ಯಕ್ಷರೂ, ವಿದ್ಯಾಧರರೂ, ಅಮಿತೌಜಸ ರಾಕ್ಷಸರೂ, ಅಮಿತ ಬಲಶಾಲೀ ಪಿಶಾಚರೂ ಮತ್ತು ಸಹಸ್ರಾರು ಸಿದ್ಧರೂ ಇದ್ದರು. ಅವರೆಲ್ಲರೂ ವ್ರತ-ನಿಯಮಗಳೊಂದಿಗೆ ಆಹಾರವನ್ನು ತೊರೆದು ಆ ವನಸ್ಪತಿಯ ಫಲವನ್ನು ಕಾಲ ಕಾಲದಲ್ಲಿ ಭುಂಜಿಸುತ್ತಿದ್ದರು. ಅವರವರ ನಿಯಮಗಳನ್ನು ಪಾಲಿಸುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಅವರುಗಳು ಮನುಷ್ಯರಿಗೆ ಅದೃಶ್ಯರಾಗಿ ಅಲ್ಲಿ ಸಂಚರಿಸುತ್ತಿದ್ದರು. ಈ ರೀತಿ ಸರಸ್ವತೀ ತೀರದಲ್ಲಿರುವ ಆ ವನಸ್ಪತಿಯು ಈ ಲೋಕದಲ್ಲಿ ಪಾವನ ತೀರ್ಥವೆಂದು ಲೋಕವಿಶ್ರುತವಾಗಿದೆ. ಆ ಯಶಸ್ವೀ ತೀರ್ಥದಲ್ಲಿ ಯದುಶಾರ್ದೂಲನು ತಾಮ್ರದ ಪಾತ್ರೆಗಳನ್ನೂ ವಿವಿಧ ವಸ್ತ್ರಗಳನ್ನೂ ದಾನವನ್ನಾಗಿತ್ತನು. ಅಲ್ಲಿ ದ್ವಿಜರನ್ನು ಪೂಜಿಸಿ ಮತ್ತು ತಪೋಧನರಿಂದ ಪೂಜಿಸಲ್ಪಟ್ಟು ಹಲಾಯುಧನು ಪುಣ್ಯ ದ್ವೈತವನಕ್ಕೆ ಬಂದನು.
ಅಲ್ಲಿ ಬಲರಾಮನು ನಾನಾವೇಷಗಳನ್ನು ಧರಿಸಿದ್ದ ಮುನಿಗಳನ್ನು ನೋಡಿ, ನೀರಿನಲ್ಲಿ ಸ್ನಾನಮಾಡಿ, ದ್ವಿಜರನ್ನು ಪೂಜಿಸಿದನು. ಅಲ್ಲಿ ಕೂಡ ವಿಪ್ರರಿಗೆ ಪುಷ್ಕಳ ಭೋಗವಸ್ತುಗಳನ್ನು ದಾನವನ್ನಾಗಿತ್ತು ಬಲರಾಮನು ಸರಸ್ವತಿಯ ದಕ್ಷಿಣ ತೀರದ ಕಡೆ ಪ್ರಯಾಣಿಸಿದನು. ಅನತಿದೂರದಲ್ಲಿಯೇ ಅವನು ನಾಗಧನ್ವ ಎಂಬ ತೀರ್ಥಕ್ಕೆ ಆಗಮಿಸಿದನು. ಅಲ್ಲಿ ಅನೇಕ ಪನ್ನಗಗಳಿಂದ ಆವೃತನಾದ ಮಹಾದ್ಯುತಿ ಪನ್ನಗರಾಜ ವಾಸುಕಿಯ ನಿವೇಶನವಿದೆ. ಅಲ್ಲಿ ಹದಿನಾಲ್ಕು ಸಹಸ್ರ ಸಿದ್ಧ-ಋಷಿಗಳು ವಾಸಿಸುತ್ತಾರೆ. ಅಲ್ಲಿ ದೇವತೆಗಳು ಒಟ್ಟಾಗಿ ಪನ್ನಗೋತ್ತಮ ವಾಸುಕಿಯನ್ನು ಸರ್ವಪನ್ನಗಗಳ ರಾಜನಾಗಿ ಯಥಾವಿಧಿಯಾಗಿ ಅಭಿಷೇಕಿಸಿದರು. ಅಲ್ಲಿದ್ದ ಸರ್ಪಗಳಿಂದ ಯಾವ ಭಯವೂ ಇಲ್ಲ. ತನ್ನದೇ ತೇಜಸ್ಸಿನಿಂದ ಬೆಳಗುತ್ತಿದ್ದ ಬಲರಾಮನು ಅಲ್ಲಿ ಕೂಡ ವಿಧಿವತ್ತಾಗಿ ವಿಪ್ರರಿಗೆ ರತ್ನಸಂಚಯಗಳನ್ನು ದಾನವನ್ನಾಗಿತ್ತು ಪೂರ್ವ ದಿಕ್ಕಿಗೆ ಪ್ರಯಾಣಿಸಿದನು.
ಅನೇಕ ತೀರ್ಥಗಳಲ್ಲಿ ಮಿಂದು ಹೃಷ್ಟನಾಗಿ ಲಾಂಗಲಿಯು ದ್ವಿಜರಿಗೆ ಧನವನ್ನು ದಾನವನ್ನಾಗಿತ್ತು ತಪಸ್ವಿಗಳೊಡನೆ ಮುಂದುವರೆದನು. ಅಲ್ಲಿದ್ದ ಋಷಿಸಂಘಗಳಿಗೆ ಅಭಿವಂದಿಸಿ ಹಲಾಯುಧ ರಾಮನು ಋಷಿಗಳಿಂದ ಸೇವಿತ ಮಹಾ ತೀರ್ಥಕ್ಕೆ ಆಗಮಿಸಿದನು. ಅಲ್ಲಿ ನೈಮಿಷಾರಣ್ಯವಾಸಿಗಳಾಗಿದ್ದ ಮಹಾತ್ಮ ಋಷಿಗಳಿಗೋಸ್ಕರವಾಗಿ ಸರಸ್ವತಿಯು ಪೂರ್ವಕ್ಕೆ ತಿರುಗಿ ಹರಿಯುತ್ತಿದ್ದಳು. ಬಲರಾಮನು ತಿರುಗಿದ್ದ ಆ ಶ್ರೇಷ್ಠ ನದಿಯನ್ನು ನೋಡಿ ವಿಸ್ಮಿತನಾದನು. ಅಲ್ಲಿದ್ದ ಅನೇಕ ಲತಾಕುಂಜಗಳನ್ನೂ ಮತ್ತು ಆ ನದಿಯು ತಿರುಗಿಕೊಂಡಿರುವುದನ್ನೂ ನೋಡಿ ಮಹಾತ್ಮ ರಾಮನಿಗೆ ಅಚ್ಚರಿಯುಂಟಾಯಿತು. ಯದುನಂದನನು ಅಲ್ಲಿ ಕೂಡ ವಿಧಿವತ್ತಾಗಿ ಸ್ನಾನಾಚಮನೀಯಗಳನ್ನು ಮಾಡಿ ದ್ವಿಜಾತಿಯವರಿಗೆ ವಿವಿಧ ಭಾಂಡಗಳನ್ನು ದಾನಮಾಡಿದನು. ಬ್ರಾಹ್ಮಣರಿಗೆ ವಿವಿಧ ಭಕ್ಷ್ಯ-ಪಾನೀಯಗಳನ್ನು ಒದಗಿಸಿಕೊಟ್ಟನು. ದ್ವಿಜಾತಿಯವರಿಂದ ಗೌರವಿಸಲ್ಪಟ್ಟ ಹಲಾಯುಧ ಬಲರಾಮನು ಮುಂದೆ ಪ್ರಯಾಣ ಬೆಳೆಸಿ ನಾನಾ ದ್ವಿಜಗಣ ಸಹಸ್ರರಿಂದ ಕೂಡಿದ್ದ ಸರಸ್ವತಿಯ ತೀರ್ಥಗಳಲ್ಲಿಯೇ ಅತಿ ಶ್ರೇಷ್ಠವಾದ ಸಪ್ತಸಾರಸ್ವತೀ ತೀರ್ಥಕ್ಕೆ ಬಂದನು. ಆ ಕ್ಷೇತ್ರವು ಬದರ, ಇಂಗುದ, ಕಾಶ್ಮರ್ಯ, ಪ್ಲಕ್ಷ, ಅಶ್ವತ್ಥ, ವಿಭೀತಕ, ಪನಸ, ಪಲಾಶ, ಕರೀರ, ಪೀಲು, ಮೊದಲಾದ ಸರಸ್ವತೀ ತೀರದಲ್ಲಿ ಬೆಳೆಯುವ ಇನ್ನೂ ಅನೇಕ ವೃಕ್ಷಗಳಿಂದ, ಪರೂಷಕವನಗಳು, ಬಿಲ್ವ, ಆಮ್ರ, ಅತಿಮುಕ್ತ, ಪಾರಿಜಾತ ಮೊದಲಾದ ವೃಕ್ಷವನಗಳಿಂದ ಶೋಭಿತವಾಗಿದ್ದು. ಅಲ್ಲಿ ಸಾಕಷ್ಟು ಬಾಳೆಯ ವನಗಳಿದ್ದು ಸುಂದರವಾಗಿ ಮನೋರಮವಾಗಿದ್ದವು. ಅಲ್ಲಿ ಕೇವಲ ವಾಯು-ನೀರು-ಫಲ-ಪರ್ಣಗಳನ್ನು ತಿನ್ನುವ ದಂತಲೂಖಲಿಕರೂ, ಆಶ್ಮಕುಟ್ಟರೂ ಮತ್ತು ಅನೇಕ ವಾನಪ್ರಸ್ಥರೂ ಸೇರಿಕೊಂಡಿದ್ದರು. ಸ್ವಾಧ್ಯಾಯಿಗಳ ಮಂತ್ರಘೋಷಗಳಿಂದ ಮೊಳಗುತ್ತಿತ್ತು. ಜಿಂಕೆಗಳ ನೂರಾರು ಗುಂಪುಗಳು ಸುತ್ತಲೂ ಸಂಚರಿಸುತ್ತಿದ್ದವು. ಅಹಿಂಸಾವ್ರತನಿಷ್ಠ ಧರ್ಮನಿಷ್ಠ ಅನೇಕ ಜನರಿದ್ದ ಅಲ್ಲಿಯೇ ಮಹಾಮುನಿ ಸಿದ್ಧ ಮಂಕಣನು ತಪಸ್ಸು ಮಾಡುತ್ತಿದ್ದನು.
ಹಲಾಯುಧರಾಮನು ಅಲ್ಲಿ ತಂಗಿ ಆಶ್ರಮವಾಸಿಗಳನ್ನು ಪೂಜಿಸಿ ಮಂಕಣಕನಿಗೆ ಪ್ರೀತಿಯಿಂದ ಶುಭಕರ್ಮಗಳನ್ನು ಮಾಡಿದನು. ದ್ವಿಜಾತಿಯವರಿಗೆ ದಾನಗಳನ್ನು ನೀಡಿ ರಾತ್ರಿಯಲ್ಲಿ ಅಲ್ಲಿಯೇ ಕಳೆದು ಲಾಂಗಲಿಯು ಬೆಳಿಗ್ಗೆ ಎದ್ದು ಮುನಿಸಂಘಗಳನ್ನು ಪೂಜಿಸಿದನು. ಸರ್ವ ಮುನಿಗಳ ಅನುಜ್ಞೆಯನ್ನು ಪಡೆದು, ನೀರಿನಲ್ಲಿ ಸ್ನಾನಾಚಮಗಳನ್ನು ಪೂರೈಸಿ ಮಹಾಬಲ ರಾಮನು ತೀರ್ಥಗಳ ಸಲುವಾಗಿ ತ್ವರೆಮಾಡಿ ಮುಂದುವರೆದನು. ಅನಂತರ ಹಲಾಯುಧನು ಮಹಾಮುನಿಯು ಮುಕ್ತನಾಗಿದ್ದ ಕಪಾಲಮೋಚನ ಎಂಬ ಹೆಸರಿನ ಔಶನಸ ತೀರ್ಥಕ್ಕೆ ಹೋದನು. ಹಿಂದೆ ರಾಮನು ಎಸೆಯಲ್ಪಟ್ಟ ರಾಕ್ಷಸನ ಮಹಾಶಿರಸ್ಸು ಮಹೋದರನೆಂಬ ಮುನಿಯ ಮೊಣಕಾಲಿಗೆ ಅಂಟಿಕೊಂಡುಬಿಟ್ಟಿತ್ತು. ಅಲ್ಲಿಯೇ ಹಿಂದೆ ಮಹಾತ್ಮ ಕಾವ್ಯನು ತಪಸ್ಸನ್ನು ತಪಿಸುತ್ತಿದ್ದಾಗ ಆ ಮಹಾತ್ಮನಿಗೆ ಅಖಿಲ ನೀತಿಗಳೂ ಕಾಣಿಸಿಕೊಂಡವು. ಅಲ್ಲಿಯೇ ಅವನು ದೈತ್ಯ-ದಾನವರ ಯುದ್ಧದ ಕುರಿತು ಯೋಚಿಸುತ್ತಿದ್ದನು. ಬಲರಾಮನು ಆ ಉತ್ತಮ ತೀರ್ಥಪ್ರವರವನ್ನು ತಲುಪಿ ವಿಧಿವತ್ತಾಗಿ ಮಹಾತ್ಮ ಬ್ರಾಹ್ಮಣರಿಗೆ ಸಂಪತ್ತನ್ನು ದಾನವಾಗಿತ್ತನು.
ಅಲ್ಲಿ ಅನೇಕ ದಾನಗಳನ್ನಿತ್ತು ವಿಪ್ರರನ್ನು ಪೂಜಿಸಿ ವೃಷ್ಣಿಪ್ರವರ ಮಾಧವನು ರುಷಂಗುವಿನ ಆಶ್ರಮಕ್ಕೆ ಹೋದನು. ಅಲ್ಲಿಯೇ ಆರ್ಷ್ಟಿಷೇಣನು ಘೋರ ತಪಸ್ಸನ್ನು ತಪಿಸಿದ್ದನು ಮತ್ತು ಮಹಾಮುನಿ ವಿಶ್ವಾಮಿತ್ರನು ಬ್ರಾಹ್ಮಣ್ಯವನ್ನು ಪಡೆದುಕೊಂಡನು. ಅನಂತರ ಹಲಧರನು ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟು ರುಷಂಗುವು ದೇಹತ್ಯಾಗಮಾಡಿದ ಸ್ಥಳಕ್ಕೆ ಹೋದನು. ರುಷಂಗು ಬ್ರಾಹ್ಮಣನು ವೃದ್ಧನೂ ನಿತ್ಯ ತಪೋನಿರತನೂ ಆಗಿದ್ದನು. ಬಹಳಷ್ಟು ಚಿಂತಿಸಿ ಅವನು ದೇಹತ್ಯಾಗಮಾಡಲು ನಿಶ್ಚಯಿಸಿದನು. ಆಗ ಆ ಮಹಾತಪಸ್ವಿ ರುಷಂಗುವು ತನ್ನ ಮಕ್ಕಳೆಲ್ಲರನ್ನೂ ಕರೆದು “ನನ್ನನ್ನು ಪೃಥೂದಕಕ್ಕೆ ಕೊಂಡೊಯ್ಯಿರಿ!” ಎಂದು ಹೇಳಿದನು. ಆ ತಪೋಧನರು ಅತ್ಯಂತ ವೃದ್ಧನಾಗಿದ್ದ ತಪೋಧನ ರುಷಂಗುವನ್ನು ಸರಸ್ವತಿಯ ಆ ತೀರ್ಥಕ್ಕೆ ಕೊಂಡೊಯ್ದರು. ಪುತ್ರರು ಆ ಧೀಮಂತನನ್ನು ನೂರಾರು ತೀರ್ಥಗಳಿಂದ ಕೂಡಿದ್ದ, ವಿಪ್ರಸಂಘಗಳು ಸೇವಿಸುತ್ತಿದ್ದ ಪುಣ್ಯ ಸರಸ್ವತೀ ತೀರ್ಥಕ್ಕೆ ಕರೆತಂದರು. ಅಲ್ಲಿ ವಿಧಿವತ್ತಾಗಿ ಸ್ನಾನಮಾಡಿದ ಆ ಸುಮಹಾತಪಸ್ವಿ ಋಷಿಸತ್ತಮನು ತೀರ್ಥಗುಣಗಳನ್ನು ತಿಳಿದು ಸುಪ್ರೀತನಾಗಿ ಸಮೀಪದಲ್ಲಿದ್ದ ಎಲ್ಲಮಕ್ಕಳಿಗೂ ಹೇಳಿದನು: “ಸರಸ್ವತಿಯ ಉತ್ತರತೀರದ ಪ್ರಥೂದಕದಲ್ಲಿ ಯಾರು ಜಪಿಸುತ್ತಾ ತಮ್ಮ ಶರೀರವನ್ನೂ ತ್ಯಜಿಸುತ್ತಾರೋ ಅವರಿಗೆ ಮುಂದೆ ಮರಣವು ಕಾಡುವುದಿಲ್ಲ!” ಅಲ್ಲಿ ಧರ್ಮಾತ್ಮ ಹಲಾಯುಧನು ಮುಳುಗಿ ಸ್ನಾನಾಚಮನೀಯಗಳನ್ನು ಪೂರೈಸಿ ಆ ವಿಪ್ರವತ್ಸಲನು ವಿಪ್ರರಿಗೆ ಅನೇಕ ದಾನಗಳನ್ನಿತ್ತನು.
ಅನಂತರ ಬಲವಾನ್ ಪ್ರತಾಪವಾನ್ ಬಲಭದ್ರನು ಸಿಂಧುದ್ವೀಪಕ್ಕೆ ಹೋದನು. ಅಲ್ಲಿಯೇ ಲೋಕಪಿತಾಮಹ ಭಗವಂತನು ಲೋಕಾಲೋಕಗಳನ್ನು ಸೃಷ್ಟಿಸಿದ್ದನು. ಅಲ್ಲಿಯೇ ಸಂಶಿತವ್ರತ ಋಷಿಸತ್ತಮ ಆರ್ಷ್ಟಿಷೇಣನು ಮಹಾತಪಸ್ಸಿನಿಂದ ಬ್ರಾಹ್ಮಣ್ಯವನ್ನು ಪಡೆದಿದ್ದನು. ಅಲ್ಲಿಯೇ ರಾಜರ್ಷಿ ಸಿಂಧುದ್ವೀಪ, ಮಹಾಮುನಿ ದೇವಾಪಿ, ಮತ್ತು ಮಹಾಮುನಿ ಮಹಾತಪಸ್ವೀ ಉಗ್ರತೇಜಸ್ವೀ ಮಹಾತಪಸ್ವೀ ಭಗವಾನ್ ವಿಶ್ವಾಮಿತ್ರರು ಬ್ರಾಹ್ಮಣ್ಯವನ್ನು ಪಡೆದಿದ್ದರು. ಹಿಂದೆ ಕೃತಯುಗದಲ್ಲಿ ದ್ವಿಜೋತ್ತಮ ಆರ್ಷ್ಟಿಷೇಣನು ಗುರುಕುಲದಲ್ಲಿ ವಾಸಿಸಿಕೊಂಡು ನಿತ್ಯವೂ ಅಧ್ಯಯನದಲ್ಲಿ ತೊಡಗುತ್ತಿದ್ದನು. ನಿತ್ಯವೂ ಗುರುಕುಲದಲ್ಲಿ ವಾಸಿಸಿಕೊಂಡಿದ್ದರೂ ಅವನ ವೇದ-ಆಗಮಗಳ ವಿದ್ಯೆಯು ಸಂಪೂರ್ಣವಾಗಲೇ ಇಲ್ಲ. ನಿರ್ವಿಣ್ಣನಾದ ಅವನು ಮಹಾತಪಸ್ಸನ್ನು ತಪಿಸಿದನು. ಅವನ ಆ ತಪಸ್ಸಿನಿಂದ ಅವನಿಗೆ ಅನುತ್ತಮ ವೇದಗಳು ಪ್ರಾಪ್ತವಾದವು. ಆ ಋಷಿಸತ್ತಮನು ವಿದ್ವಾಂಸನೂ, ವೇದಯುಕ್ತನೂ ಸಿದ್ಧನೂ ಆದನು. ಅಲ್ಲಿದ್ದ ತೀರ್ಥಕ್ಕೆ ಆ ಸುಮಹಾತಪಸ್ವಿಯು ಈ ಮೂರು ವರಗಳನ್ನಿತ್ತನು: “ಇಂದಿನಿಂದ ಮಹಾನದಿಯ ಈ ತೀರ್ಥದಲ್ಲಿ ಸ್ನಾನಮಾಡುವ ಮನುಷ್ಯನು ಅಶ್ವಮೇಧದ ಪುಷ್ಕಲ ಫಲವನ್ನು ಪಡೆಯುತ್ತಾನೆ. ಇಂದಿನಿಂದ ಇಲ್ಲಿ ಸರ್ಪಭಯವು ಇರುವುದಿಲ್ಲ. ಮತ್ತು ಅಲ್ಪ ಯತ್ನದಿಂದಲೇ ಪುಷ್ಕಲ ಫಲವು ಪ್ರಾಪ್ತವಾಗುತ್ತದೆ.” ಹೀಗೆ ಹೇಳಿ ಆ ಮಹಾತೇಜಸ್ವಿ ಮುನಿಯು ತ್ರಿದಿವಕ್ಕೆ ತೆರಳಿದನು. ಹೀಗೆ ಆ ಭಗವಾನ್ ಪ್ರತಾಪವಾನ್ ಆರ್ಷ್ಟಿಷೇಣನು ಸಿದ್ಧನಾದನು. ಅದೇ ತೀರ್ಥದಲ್ಲಿ ಸಿಂಧುದ್ವೀಪ ಮತ್ತು ದೇವಾಪಿಗಳು ಮಹಾ ಬ್ರಾಹ್ಮಣ್ಯವನ್ನು ಪಡೆದರು. ಅಲ್ಲಿಯೇ ಜಿತೇಂದ್ರಿಯ ಕೌಶಿಕನೂ ಕೂಡ ತಪೋನಿರತನಾಗಿದ್ದು, ಉತ್ತಮವಾಗಿ ತಪಿಸಿದ ತಪಸ್ಸಿನಿಂದ ಬ್ರಾಹ್ಮಣತ್ವವನ್ನು ಪಡೆದುಕೊಂಡನು. ಆ ಶ್ರೇಷ್ಠ ತೀರ್ಥದಲ್ಲಿ ರಾಮನು ವಿವಿಧ ಸಂಪತ್ತುಗಳನ್ನು – ಹಾಲುನೀಡುವ ಹಸುಗಳನ್ನೂ, ವಾಹನಗಳನ್ನೂ, ಹಾಸಿಗೆಗಳನ್ನೂ, ದಾನವನ್ನಾಗಿತ್ತನು. ಹಾಗೆಯೇ ದ್ವಿಜೋತ್ತಮರನ್ನು ಪೂಜಿಸಿ ಅವನು ಶೋಭಿಸುವ ವಸ್ತ್ರಾಲಂಕಾರಗಳನ್ನೂ, ಭಕ್ಷ್ಯ-ಪಾನೀಯಗಳನ್ನೂ ಸಂತೋಷದಿಂದ ದಾನವಿತ್ತನು.
ಬ್ರಹ್ಮಯೋನಿಯಿಂದ ಯದುನಂದನನು ಆಕೀರ್ಣಕ್ಕೆ ಹೋದನು. ಅಲ್ಲಿ ಪಶುಗೋಸ್ಕರವಾಗಿ ಮಹಾತಪಸ್ವಿ ದಾಲ್ಭ್ಯ ಬಕನು ವಿಚಿತ್ರವೀರ್ಯನ ಮಗ ಧೃತರಾಷ್ಟ್ರನ ರಾಷ್ಟ್ರವನ್ನೇ ಹೋಮಮಾಡಿದನು. ಅದೇ ತೀರ್ಥದಲ್ಲಿ ಉದಾರಬುದ್ಧಿ ಬೃಹಸ್ಪತಿಯು ಅಸುರರ ವಿನಾಶಕ್ಕಾಗಿ ಮತ್ತು ದಿವೌಕಸರ ವೃದ್ಧಿಗಾಗಿ ಮಾಂಸವನ್ನು ಆಹುತಿಯನ್ನಾಗಿತ್ತು ಹೋಮಿಸಿದನು. ಆಗ ಅಸುರರು ಕ್ಷೀಣಿಸಿದರು ಮತ್ತು ಯುದ್ಧದಲ್ಲಿ ವಿಜಯೋಲ್ಲಸಿತ ದೇವತೆಗಳಿಂದ ಭಗ್ನರಾದರು. ಅಲ್ಲಿ ಕೂಡ ವಿಧಿವತ್ತಾಗಿ ಬಲರಾಮನು ಬ್ರಾಹ್ಮಣರಿಗೆ ಕುದುರೆ-ಆನೆ-ಹೇಸರಗತ್ತೆಗಳ ರಥ-ಬೆಲೆಬಾಳುವ ರತ್ನ-ಧನ-ದಾನ್ಯಗಳನ್ನು ಹೇರಳವಾಗಿ ನೀಡಿ ಯಾಯಾತ ತೀರ್ಥಕ್ಕೆ ಹೋದನು. ಅಲ್ಲಿ ನಹುಷನ ಮಗ ಮಹಾತ್ಮ ಯಯಾತಿಯು ಯಜ್ಞಮಾಡಿದಾಗ ಸರಸ್ವತಿಯು ಹಾಲು ತುಪ್ಪಗಳನ್ನು ನೀರಾಗಿ ಹರಿಸಿದ್ದಳು. ಅಲ್ಲಿಯೇ ಯಾಗಮಾಡಿ ಪುರುಷವ್ಯಾಘ್ರ ಪೃಥಿವೀಪತಿ ಯಯಾತಿಯು ಪುಷ್ಕಲ ಲೋಕಗಳನ್ನು ಪಡೆದು ಮುದಿತನಾಗಿ ಮೇಲೆ ಏರಿದನು. ಯಯಾತಿಯು ಯಜಮಾನನಾಗಿದ್ದಾಗ ಅಲ್ಲಿ ಸರಸ್ವತಿಯು ಮಹಾತ್ಮ ಬ್ರಾಹ್ಮಣರು ಬಯಸಿದುದೆಲ್ಲವನ್ನೂ ಒದಗಿಸಿಕೊಟ್ಟಳು. ಎಲ್ಲೆಲ್ಲಿ ವಿಪ್ರರು ಯಾವ್ಯಾವ ಆಸೆಗಳನ್ನು ಬಯಸಿದರೋ ಅಲ್ಲಲ್ಲಿ ಆ ಸರಿತಶ್ರೇಷ್ಠೆಯು ಅನೇಕ ರಸಗಳನ್ನು ಸೃಷ್ಟಿಸಿದಳು. ಗಂಧರ್ವರೊಂದಿಗೆ ದೇವತೆಗಳೂ ಕೂಡ ಆ ಯಜ್ಞದ ವೈಭವವನ್ನು ಕಂಡು ಪ್ರೀತರಾದರು. ಆ ಯಜ್ಞಸಂಪದವನ್ನು ನೋಡಿ ಮನುಷ್ಯರು ವಿಸ್ಮಿತರಾದರು.
ಅನಂತರ ತಾಲಕೇತು ಬಲರಾಮನು ಮಹಾಭಯಂಕರ ವೇಗದಿಂದ ಹರಿಯುವ ವಸಿಷ್ಠಾಪವಾಹ ತೀರ್ಥಕ್ಕೆ ಹೋದನು. ಅಲ್ಲಿಯೂ ಕೂಡ ಸ್ನಾನಾಚಮನೀಯಗಳನ್ನು ಮಾಡಿ ಅನೇಕ ವಿಧದ ದಾನಗಳನ್ನು ನೀಡಿ ಆರ್ಯಕರ್ಮದ ಧರ್ಮವನ್ನು ಪಡೆದು ಸೋಮನ ಮಹಾತೀರ್ಥಕ್ಕೆ ಹೋದನು. ಅಲ್ಲಿ ಹಿಂದೆ ಸಾಕ್ಷಾತ್ ಸೋಮನು ವಿಧಿವತ್ತಾಗಿ ರಾಜಸೂಯಯಾಗವನ್ನು ನೆರವೇರಿಸಿದ್ದನು. ಆ ಮುಖ್ಯಕ್ರತುವಿನಲ್ಲಿ ಧೀಮಾನ್ ವಿಪ್ರಮುಖ್ಯ ಮಹಾತ್ಮ ಅತ್ರಿಯು ಹೋತಾರನಾಗಿದ್ದನು, ಆ ಯಜ್ಞದ ಕೊನೆಯಲ್ಲಿ ದೇವತೆಗಳೊಂದಿಗೆ ದಾನವ-ದೈತ್ಯ-ರಾಕ್ಷಸರ ಮಹಾ ತಾರಕ ಎಂಬ ಹೆಸರಿನ ಅತಿ ತೀವ್ರ ಸಂಗ್ರಾಮವು ನಡೆಯಿತು. ಆ ಸಂಗ್ರಾಮದಲ್ಲಿ ಸ್ಕಂದನು ತಾರಕನೆಂಬುವವನನ್ನು ಸಂಹರಿಸಿದನು. ಆ ಸೋಮತೀರ್ಥದಲ್ಲಿಯೇ ದೈತ್ಯರನ್ನು ಅಂತ್ಯಗೊಳಿಸಿದ ಮಹಾಸೇನನು ದೇವತೆಗಳ ಸೇನಾಪತ್ಯವನ್ನು ಪಡೆದುಕೊಂಡನು. ಅಶ್ವತ್ಥವೃಕ್ಷವಿರುವ ಅಲ್ಲಿಯೇ ಸಾಕ್ಷಾತ್ ಕಾರ್ತಿಕೇಯ ಕುಮಾರನು ಸದಾ ನೆಲಸಿರುತ್ತಾನೆ.
ಹಿಂದೆ ಪೂರ್ವದಲ್ಲಿ ಅಪಾಂಪತಿ ವರುಣನು ಸುರಗಣಗಳಿಂದ ಅಭಿಷಿಕ್ತನಾದ ತೀರ್ಥವು ಔಜಸ ಎಂಬ ಹೆಸರಿನ ತೀರ್ಥವು. ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಸ್ಕಂದನನ್ನು ಅರ್ಚಿಸಿ ಲಾಂಗಲಿ ಬಲರಾಮನು ಬ್ರಾಹ್ಮಣರಿಗೆ ಚಿನ್ನ-ವಸ್ತ್ರ-ಆಭರಣಗಳನ್ನು ದಾನಮಾಡಿದನು. ಆ ಪೂಜ್ಯ ಶ್ರೇಷ್ಠ ತೀರ್ಥದಲ್ಲಿ ನೀರನ್ನು ಮುಟ್ಟಿ ರಾತ್ರಿಯನ್ನು ಕಳೆದ ಲಾಂಗಲಿಯು ಪ್ರೀತಮನಸ್ಕನಾಗಿ ಹರ್ಷಿತನಾದನು. ರಾಮನು ಅಲ್ಲಿ ಕೂಡ ಸ್ನಾನಮಾಡಿ, ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತು, ಅಗ್ನಿಯು ಶಮೀ ಮರದಲ್ಲಿ ಕಾಣದಂತೆ ಅಡಗಿಕೊಂಡಿದ್ದ ಆ ಅಗ್ನಿತೀರ್ಥಕ್ಕೆ ಹೋದನು.
ಲೋಕಾಲೋಕಗಳು ವಿನಾಶವಾಗತೊಡಗಿದಾಗ ದೇವತೆಗಳೆಲ್ಲರೂ ಸೇರಿ ಸರ್ವಲೋಕಪಿತಾಮಹ ಮಹಾತ್ಮನ ಬಳಿಸಾರಿ ಹೇಳಿದರು: “ಭಗವಾನ್! ಅಗ್ನಿಯು ಕಾಣದಂತಾಗಿದ್ದಾನೆ. ಕಾರಣವೇನೆಂದು ತಿಳಿಯದು! ಸರ್ವಲೋಕಗಳ ಕ್ಷಯವಾಗಬಾರದೆಂದು ಅಗ್ನಿಯನ್ನು ಹುಡುಕಿಕೊಡಬೇಕು!” ಭೃಗುವಿನ ಶಾಪದಿಂದ ಅತ್ಯಂತ ಭೀತನಾಗಿ ಪ್ರತಾಪವಾನ್ ಭಗವಾನ್ ಜಾತವೇದನು ಶಮೀವೃಕ್ಷದಲ್ಲಿ ಸೇರಿಕೊಂಡು ಅದೃಶ್ಯನಾಗಿಬಿಟ್ಟಿದ್ದನು. ವಹ್ನಿಯು ಹಾಗೆ ಪ್ರನಷ್ಟನಾಗಲು ವಾಸವನೊಂದಿಗೆ ಸರ್ವ ದೇವತೆಗಳೂ ತುಂಬಾ ದುಃಖಿತರಾಗಿ ನಷ್ಟನಾದ ಅಗ್ನಿಯನ್ನು ಹುಡುಕಿದರು. ಅನಂತರ ಅಗ್ನಿತೀರ್ಥಕ್ಕೆ ಬಂದು ಅಲ್ಲಿ ಶಮೀವೃಕ್ಷದ ಪೊಟರೆಯಲ್ಲಿ ಯಥಾವಿಧಿಯಾಗಿ ವಾಸಿಸುತ್ತಿದ್ದ ಜ್ವಲನನನ್ನು ನೋಡಿದರು. ಬೃಹಸ್ಪತಿಯೇ ಮೊದಲಾದ ಸರ್ವ ದೇವತೆಗಳೂ ವಾಸವನೊಂದಿಗೆ ಜ್ವಲನನನ್ನು ಕಂಡು ಹರ್ಷಿತರಾದರು. ಅವರು ಪುನಃ ಹಿಂದಿರುಗಲು, ಬ್ರಹ್ಮವಾದಿ ಭೃಗುವು ಏನು ಹೇಳಿ ಶಾಪವನ್ನಿತ್ತಿದ್ದನೋ ಹಾಗೆಯೇ ಅಗ್ನಿಯು ಸರ್ವಭಕ್ಷಕನಾದನು.
ಬಲರಾಮನು ಅಲ್ಲಿ ಸ್ನಾನಮಾಡಿ ಎಲ್ಲಿ ಸರ್ವಲೋಕಪಿತಾಮಹ ಭಗವಾನನು ಸೃಷ್ಟಿಸಿದನೋ ಆ ಬ್ರಹ್ಮಯೋನಿಗೆ ಹೋದನು. ಹಿಂದೆ ಪ್ರಭು ಬ್ರಹ್ಮನು ದೇವತೆಗಳೊಂದಿಗೆ ಅಲ್ಲಿ ಸ್ನಾನಮಾಡಿ ಯಥಾವಿಧಿಯಾಗಿ ದೇವತೆಗಳ ಆಹಾರಗಳನ್ನು ಸೃಷ್ಟಿಸಿದನು. ಅಲ್ಲಿ ಸ್ನಾನಮಾಡಿ ವಿವಿಧ ಸಂಪತ್ತುಗಳನ್ನು ದಾನವಾಗಿತ್ತು ಬಲರಾಮನು ಕುಬೇರತೀರ್ಥಕ್ಕೆ ಹೋದನು. ಅಲ್ಲಿ ಪ್ರಭು ಐಲಬಿಲ ಕುಬೇರನು ಮಹಾ ತಪಸ್ಸನ್ನು ತಪಿಸಿ ಧನಾಧಿಪತ್ಯವನ್ನು ಪಡೆದಿದ್ದನು. ಅಲ್ಲಿಯೇ ಧನ-ನಿಧಿಗಳು ಕುಬೇರನನ್ನು ಸೇವಿಸತೊಡಗಿದವು. ಲಾಂಗಲಿಯು ಅಲ್ಲಿ ಹೋಗಿ ಸ್ನಾನಮಾಡಿ ವಿಧಿವತ್ತಾಗಿ ಬ್ರಾಹ್ಮಣರಿಗೆ ಧನವನ್ನಿತ್ತನು. ಅಲ್ಲಿಯೇ ಹಿಂದೆ ಸುಮಹಾತ್ಮ ಕುಬೇರನು ವಿಪುಲ ತಪಸ್ಸನ್ನು ತಪಿಸಿದ್ದ ಉತ್ತಮ ಕಾನನವನ್ನು ನೋಡಿದನು. ಅಲ್ಲಿಯೇ ರಾಜಾ ಕುಬೇರನು ಧನಾಧಿಪತ್ಯವನ್ನೂ ಅಮಿತತೇಜಸ್ವಿ ರುದ್ರನೊಂದಿಗೆ ಸಖ್ಯವನ್ನೂ ಪಡೆದಿದ್ದನು. ಅಲ್ಲಿಯೇ ಮಹಾಬಾಹು ಧನಪತಿಯು ಸುರತ್ವವನ್ನೂ, ಲೋಕಪಾಲತ್ವವನ್ನೂ, ನಲಕೂಬರನೆನ್ನುವ ಪುತ್ರನನ್ನೂ ಪಡೆದನು. ಅಲ್ಲಿಯೇ ಮರುದ್ಗಣಗಳಿಂದ ಅಭಿಷಿಕ್ತನಾದ ಅವನು ನೈರುತ್ಯದ ಮತ್ತು ಐಶ್ವರ್ಯಗಳ ಅಧಿಪತ್ಯವನ್ನೂ, ಹಂಸಯುಕ್ತ-ಮನೋರಮ-ದಿವ್ಯ ಪುಷ್ಪಕ ವಿಮಾನವನ್ನು ಪಡೆದನು. ಶ್ವೇತಗಂಧಾನುಲಿಪ್ತ ಬಲರಾಮನು ಅಲ್ಲಿ ಸ್ನಾನಮಾಡಿ, ಪುಷ್ಕಲ ದಾನಗಳನ್ನಿತ್ತು ತ್ವರೆಮಾಡಿ ರಾಮತೀರ್ಥಕ್ಕೆ ಹೋದನು. ಬದರಪಾಚನವೆಂಬ ಹೆಸರಿದ್ದ ಅದು ಸರ್ವ ಸತ್ತ್ವಗಳಿಂದ ಕೂಡಿತ್ತು. ಸದಾ ಶುಭ ಪುಷ್ಪ-ಫಲಬರಿತವಾಗಿದ್ದ ಆ ತೀರ್ಥವನ್ನು ಅವನು ಸೇರಿದನು. ವೃಷ್ಣಿಪ್ರವರ ಬಲರಾಮನು ಅಲ್ಲಿಕೂಡ ಸ್ನಾನಮಾಡಿ ಮಹಾದ್ವಿಜರಿಗೆ ಸಂಪತ್ತುಗಳನ್ನಿತ್ತು ಆತ್ಮಸಮಾಹಿತನಾಗಿ ಶಕ್ರತೀರ್ಥಕ್ಕೆ ಹೋದನು. ಬಲರಾಮನು ಇಂದ್ರತೀರ್ಥಕ್ಕೆ ಹೋಗಿ ಅಲ್ಲಿ ಯಥಾವಿಧಿಯಾಗಿ ಸ್ನಾನಮಾಡಿ ಧನರತ್ನಾದಿಗಳನ್ನು ವಿಪ್ರರಿಗೆ ದಾನವನ್ನಾಗಿತ್ತನು. ಅಲ್ಲಿಯೇ ಅಮರರಾಜನು ನೂರು ಕ್ರತುಗಳನ್ನು ನೆರವೇರಿಸಿದ್ದನು ಮತ್ತು ದೇವೇಶನು ಬೃಹಸ್ಪತಿಗೆ ವಿಪುಲ ಧನವನ್ನು ದಾನಮಾಡಿದ್ದನು. ವೇದಪಾರಂಗರು ಹೇಳಿರುವಂತೆ ಎಲ್ಲವನ್ನೂ ಸಜ್ಜುಗೊಳಿಸಿ ವಿವಿಧ ದಕ್ಷಿಣೆಗಳನ್ನಿತ್ತು ಅವನು ನಿರರ್ಗಲವಾಗಿ ಅಲ್ಲಿ ಕ್ರತುಗಳನ್ನು ಪೂರೈಸಿದನು. ನೂರು ಕ್ರತುಗಳನ್ನು ವಿಧಿವತ್ತಾಗಿ ಪೂರೈಸಿ ಆ ಮಹಾದ್ಯುತಿಯು ಶತಕ್ರತುವೆಂದು ವಿಖ್ಯಾತನಾದನು. ಸರ್ವಪಾಪಗಳನ್ನೂ ತೊಳೆಯುವ ಆ ಶುಭ, ಪುಣ್ಯ, ಸನಾತನ ತೀರ್ಥವು ಇಂದ್ರತೀರ್ಥವೆಂಬ ಹೆಸರಿನಿಂದ ಖ್ಯಾತವಾಯಿತು. ಅಲ್ಲಿ ಕೂಡ ವಿಧಿವತ್ತಾಗಿ ಸ್ನಾನಮಾಡಿ ಮುಸಲಾಯುಧನು ಪಾನೀಯ-ವಸ್ತ್ರ-ಭೋಜನಗಳಿಂದ ಬ್ರಾಹ್ಮಣರನ್ನು ಪೂಜಿಸಿ, ಅಲ್ಲಿಂದ ತೀರ್ಥಶ್ರೇಷ್ಠ ಶುಭ ರಾಮತೀರ್ಥಕ್ಕೆ ಹೋದನು. ಅಲ್ಲಿ ಮಹಾತಪಸ್ವಿ ಮಹಾಭಾಗ ಭಾರ್ಗವ ರಾಮನು ಪೃಥ್ವಿಯ ಸರ್ವ ಕ್ಷತ್ರಿಯ ಪುಂಗವರನ್ನೂ ಸಂಹರಿಸಿ ಮುನಿಸತ್ತಮ ಕಶ್ಯಪನನ್ನು ಉಪಾಧ್ಯಾಯನನ್ನಾಗಿ ಗೌರವಿಸಿ ವಾಜಪೇಯ ಮತ್ತು ನೂರು ಅಶ್ವಮೇಧಗಳನ್ನು ನಡೆಸಿದ್ದನು ಮತ್ತು ಸಾಗರಗಳೊಂದಿಗೆ ಈ ಪೃಥ್ವಿಯನ್ನು ದಕ್ಷಿಣಾರ್ಥವಾಗಿ ಕೊಟ್ಟಿದ್ದನು.
ಆ ಪುಣ್ಯ ತೀರ್ಥ ಶುಭ ದೇಶದಲ್ಲಿ ಅಲ್ಲಿ ಯಥಾನ್ಯಾಯವಾಗಿ ಸ್ನಾನಮಾಡಿ ದ್ವಿಜರನ್ನು ಪೂಜಿಸಿ, ದ್ವಿಜರಿಗೆ ಧನ-ಸಂಪತ್ತುಗಳನ್ನಿತ್ತು, ಮುನಿಗಳಿಗೆ ಅಭಿವಂದಿಸಿ ಶುಭಾನನ ಬಲರಾಮನು ಯಮುನಾ ತೀರ್ಥಕ್ಕೆ ಆಗಮಿಸಿದನು. ಅಲ್ಲಿಯೇ ಅದಿತಿಯ ಪುತ್ರ ಮಹಾಭಾಗ ಸಿತಪ್ರಭ ವರುಣನು ರಾಜಸೂಯ ಯಾಗವನ್ನು ಮಾಡಿದ್ದನು. ಸಂಗ್ರಾಮದಲ್ಲಿ ಮನುಷ್ಯ-ದೇವತೆಗಳನ್ನು ಜಯಿಸಿ ಪರವೀರಹ ವರುಣನು ಆ ಶ್ರೇಷ್ಠಕ್ರತುವನ್ನು ಕೈಗೊಂಡಿದ್ದನು. ಆ ಶ್ರೇಷ್ಠ ಕ್ರತುವು ನಡೆಯುತ್ತಲೇ ಮೂರುಲೋಕಗಳನ್ನು ನಾಶಪಡಿಸುವ ದೇವ-ದಾನವ ಸಂಗ್ರಾಮವು ಪ್ರಾರಂಭವಾಯಿತು. ಶ್ರೇಷ್ಠ ಕ್ರತು ರಾಜಸೂಯವು ಮುಗಿದನಂತರ ಕ್ಷತ್ರಿಯರಲ್ಲಿ ಮಹಾಘೋರ ಸಂಗ್ರಾಮವು ಹುಟ್ಟುತ್ತದೆ. ಆ ಶ್ರೇಷ್ಠ ತೀರ್ಥದಲ್ಲಿ ಹಲಾಯುಧ ಮಾಧವ ರಾಮನು ಸ್ನಾನಮಾಡಿ ದ್ವಿಜರಿಗೆ ಸಂಪತ್ತನ್ನು ದಾನಮಾಡಿದನು. ಕಮಲೇಕ್ಷಣ ವನಮಾಲಿಯು ದ್ವಿಜರಿಂದ ಸ್ತುತಿಸಲ್ಪಟ್ಟು ಹೃಷ್ಟನಾಗಿ ಅಲ್ಲಿಂದ ಆದಿತ್ಯತೀರ್ಥಕ್ಕೆ ಹೋದನು. ಅಲ್ಲಿಯೇ ಭಗವಾನ್ ಜ್ಯೋತಿರ್ಮಯ ಭಾಸ್ಕರನು ಯಜ್ಞಮಾಡಿ ನಕ್ಷತ್ರಗಳ ಅಧಿಪತ್ಯವನ್ನೂ ಪ್ರಭಾವವನ್ನೂ ಪಡೆದನು. ಆ ಪುಣ್ಯ ಶಿವೆ ಸರಸ್ವತೀ ನದಿಯ ತೀರದ ತಿರ್ಥದಲ್ಲಿಯೇ ವಾಸವನೊಂದಿಗೆ ಸರ್ವ ದೇವತೆಗಳೂ, ವಿಶ್ವೇ ದೇವರೂ, ಮರುತ-ಗಂಧರ್ವ-ಅಪ್ಸರೆಯರೂ, ದ್ವೈಪಾಯನ, ಶುಕ, ಮಧುಸೂದನ ಕೃಷ್ಣ, ಯಕ್ಷ-ರಾಕ್ಷಸ-ಪಿಶಾಚಿಗಳೂ, ಇನ್ನೂ ಅನೇಕ ಸಹಸ್ರರು ಯೋಗಸಿದ್ಧಿಗಳನ್ನು ಪಡೆದರು. ಹಿಂದೆ ವಿಷ್ಣುವು ಅಸುರ ಮಧು-ಕೈಟಭರನ್ನು ಸಂಹರಿಸಿ ಈ ಉತ್ತಮ ತೀರ್ಥಪ್ರವರಲ್ಲಿ ಸ್ನಾನಮಾಡಿದ್ದನು. ಧರ್ಮಾತ್ಮ ದ್ವೈಪಾಯನನೂ ಕೂಡ ಅಲ್ಲಿಯೇ ಸ್ನಾನಮಾಡಿ ಪರಮ ಯೋಗ-ಸಿದ್ಧಿಗಳನ್ನೂ ಪರಮ ಗತಿಯನ್ನೂ ಪಡೆದನು. ಮಹಾತಪಸ್ವಿ ಅಸಿತ ದೇವಲನು ಕೂಡ ಅಲ್ಲಿಯೇ ಪರಮಯೋಗವನ್ನಾಶ್ರಯಿಸಿ ಋಷಿಯೋಗವನ್ನು ಪಡೆದನು.
ಮಹಾತ್ಮ ಪರಮ ಆರ್ಯಕರ್ಮಿ ಹಲನು ಅಲ್ಲಿ ಕೂಡ ಸ್ನಾನಮಾಡಿ ದ್ವಿಜರಿಗೆ ವಿತ್ತವನ್ನು ದಾನವನ್ನಾಗಿತ್ತು ಧರ್ಮವನ್ನು ಗಳಿಸಿ, ಮಹಾ ಸೋಮತೀರ್ಥಕ್ಕೆ ಹೋದನು. ಅಲ್ಲಿಯೇ ತಾರಕಾಮಯ ಮಹಾ ಸಂಗ್ರಾಮವೂ ನಡೆದಿತ್ತು. ಅಲ್ಲಿ ಕೂಡ ಸ್ನಾನಮಾಡಿ ದಾನಗಳನ್ನಿತ್ತು ಆತ್ಮವಾನ್ ಬಲರಾಮನು ಧರ್ಮಾತ್ಮ ಸಾರಸ್ವತ ಮುನಿಯ ತೀರ್ಥಕ್ಕೆ ಬಂದನು. ಅಲ್ಲಿ ಕೂಡ ಮಹಾಬಲ ಕೇಶವನ ಅಣ್ಣ ರೌಹಿಣೇಯನು ಸಂಪತ್ತನ್ನು ದಾನವನ್ನಾಗಿತ್ತು ಸಂತೋಷದಿಂದ ಕ್ರಮೇಣವಾಗಿ ವೃದ್ಧಕನ್ಯೆಯೆಂದು ಮಹಾಖ್ಯಾತಿಹೊಂದಿದ್ದ ತೀರ್ಥಕ್ಕೆ ಹೋದನು. ಅಲ್ಲಿರುವಾಗಲೇ ಹಲಾಯುಧನು ಶಲ್ಯನು ಹತನಾದುದನ್ನು ಕೇಳಿದ್ದನು. ಅಲ್ಲಿ ಕೂಡ ಪರಂತಪನು ದ್ವಿಜಾತಿಗಳಿಗೆ ದಾನಗಳನ್ನಿತ್ತನು. ಪಾಂಡವರಿಂದ ಸಂಗ್ರಾಮದಲ್ಲಿ ಹತನಾದ ಶಲ್ಯನ ಕುರಿತು ಶೋಕಿಸಿದನು. ಅನಂತರ ಸಮಂತಪಂಚಕ ದ್ವಾರದಿಂದ ಹೊರಟು ಮಾಧವ ರಾಮನು ಕುರುಕ್ಷೇತ್ರದ ಫಲಗಳ ಕುರಿತು ಋಷಿಗಣಗಳನ್ನು ಪ್ರಶ್ನಿಸಿದನು. ಯದುಸಿಂಹನು ಕುರುಕ್ಷೇತ್ರಫಲದ ಕುರಿತು ಕೇಳಲು ಆ ಮಹಾತ್ಮರು ಅವನಿಗೆ ಯಥಾವತ್ತಾಗಿ ಎಲ್ಲವನ್ನೂ ತಿಳಿಸಿಹೇಳಿದರು. ಅನಂತರ ಸಾತ್ವತನು ಕುರುಕ್ಷೇತ್ರವನ್ನು ನೋಡಿ ಅಲ್ಲಿ ದಾನಗಳನ್ನಿತ್ತು ಅಲ್ಲಿಯೇ ಇದ್ದ ದಿವ್ಯ ಮಹಾ ಆಶ್ರಮವೊಂದಕ್ಕೆ ಹೋದನು. ಆ ಪುಣ್ಯಾಶ್ರಮದಲ್ಲಿ ಹಿಪ್ಪೆ, ಮಾವು, ಅಶ್ವತ್ಥ, ಆಲ, ಚಿರಬಿಲ್ವ, ಹಲಸು, ಮತ್ತಿ ಮೊದಲಾದ ವೃಕ್ಷಸಂಕುಲಗಳಿದ್ದವು. ಪುಣ್ಯಲಕ್ಷಣಗಳಿಂದ ಕೂಡಿದ್ದ ಆ ಮುಖ್ಯ ಆಶ್ರಮವನ್ನು ಕಂಡು ಯಾದವಶ್ರೇಷ್ಠನು ಅಲ್ಲಿದ್ದ ಋಷಿಗಳೆಲ್ಲರನ್ನೂ “ನಿಮ್ಮ ಈ ಆಶ್ರಮವು ಯಾರದ್ದು?” ಎಂದು ಪ್ರಶ್ನಿಸಿದನು. ಅವರೆಲ್ಲ ಮಹಾತ್ಮರು ಹಲಾಯುಧನಿಗೆ ಹೇಳಿದರು: “ರಾಮ! ಹಿಂದೆ ಈ ಆಶ್ರಮವು ಯಾರದ್ದಾಗಿತ್ತೆಂದು ನಾವು ವಿಸ್ತರಿಸಿ ಹೇಳುತ್ತೇವೆ. ಕೇಳು. ಹಿಂದೆ ಇಲ್ಲಿ ದೇವ ವಿಷ್ಣುವು ಉತ್ತಮ ತಪಸ್ಸನ್ನು ತಪಿಸಿದನು. ಇಲ್ಲಿಯೇ ಅವನು ವಿವಿಧ ಸನಾತನ ಯಜ್ಞಗಳನ್ನು ನೆರವೇರಿಸಿದನು. ಇಲ್ಲಿಯೇ ಕೌಮಾರ್ಯದಿಂದಲೇ ಬ್ರಹ್ಮಚಾರಿಣಿಯಾಗಿದ್ದ ಯೋಗಯುಕ್ತಳಾಗಿ ತಪಃಸಿದ್ಧಿಯನ್ನು ಪಡೆದು ಸ್ವರ್ಗವನ್ನು ಸೇರಿದ ಸಿದ್ಧೆ ತಪಸ್ವಿನೀ ಬ್ರಾಹ್ಮಣಿಯು ಇರುತ್ತಿದ್ದಳು. ಅವಳು ಮಹಾತ್ಮ ಶಾಂಡಿಲ್ಯನ ಮಗಳು. ಧೃತವ್ರತೆ, ಸಾಧ್ವೀ, ಬ್ರಹ್ಮಚಾರಿಣೀ ಮತ್ತು ನಿಯತೆಯಾಗಿದ್ದಳು. ಅವಳು ಪರಮಯೋಗವನ್ನು ಪಡೆದು ಅನುತ್ತಮ ಸ್ವರ್ಗಕ್ಕೆ ಹೋದಳು. ಈ ಆಶ್ರಮದಲ್ಲಿ ಅಶ್ವಮೇಧದ ಶುಭ ಫಲವನ್ನು ಪಡೆದು ಸ್ವರ್ಗಕ್ಕೆ ಹೋದ ಆ ಮಹಾಭಾಗೆಯನ್ನು ನಿಯತಾತ್ಮರು ಪೂಜಿಸುತ್ತಾರೆ.”
ಹಿಮಾಲಯದ ಪಾರ್ಶ್ವದಲ್ಲಿದ್ದ ಅ ಪುಣ್ಯಾಶ್ರಮಕ್ಕೆ ಹೋಗಿ ನೋಡಿ ಯದುಪುಂಗವನು ಅಲ್ಲಿದ್ದ ಋಷಿಗಳನ್ನು ಅಭಿವಂದಿಸಿದನು. ನಂತರ ಎಲ್ಲವನ್ನೂ ಭುಜಗಳ ಮೇಲೆ ಹೊತ್ತು ಪರ್ವತವನ್ನು ಏರಲು ಉಪಕ್ರಮಿಸಿದನು. ಆ ಪರ್ವತದಮೇಲೆ ಸ್ವಲ್ಪ ದೂರ ಹೋಗುತ್ತಲೇ ಬಲಶಾಲಿ ತಾಲಧ್ವಜನು ಪುಣ್ಯವಾದ ಶ್ರೇಷ್ಠ ತೀರ್ಥ, ಸರಸ್ವತಿಯ ಉಗಮಸ್ಥಾನ, ಪ್ಲಕ್ಷಪ್ರಸ್ರವಣವನ್ನು ನೋಡಿ ಪರಮ ವಿಸ್ಮಿತನಾದನು. ನಂತರ ಅವನು ತೀರ್ಥಪ್ರವರ ಉತ್ತಮ ಕಾರಪಚನವನ್ನು ತಲುಪಿದನು. ಅಲ್ಲಿ ಕೂಡ ಬಹಾಬಲ ಹಲಾಯುಧನು ದಾನವನ್ನು ನೀಡಿ ಶೀತಲ ನೀರಿನಲ್ಲಿ ಸ್ನಾನಮಾಡಿ ಅಲ್ಲಿಂದ ಮುಂದುವರೆದನು. ಕಾರಪಚನದಿಂದ ಅವನು ಯಮುನೆಯ ತೀರದಲ್ಲಿದ್ದ ಮಿತ್ರಾವರುಣರ ಆಶ್ರಮವನ್ನು ತಲುಪಿ ಪರಮಪ್ರೀತನಾದನು. ಅಲ್ಲಿ ಹಿಂದೆ ಇಂದ್ರ, ಅಗ್ನಿ ಮತ್ತು ಯಮರು ಪ್ರಸನ್ನತೆಯನ್ನು ಪಡೆದುಕೊಂಡಿದ್ದರು. ಅಲ್ಲಿ ಕೂಡ ಆ ಧರ್ಮಾತ್ಮ ಮಹಾಬಲ ಯದುಪುಂಗವನು ಸ್ನಾನಮಾಡಿ, ಋಷಿಗಳು ಮತ್ತು ಸಿದ್ಧರ ಸಹಿತ ಕುಳಿತು ಶುಭ್ರ ಕಥೆಗಳನ್ನು ಕೇಳಿದನು.
ಹಾಗೆ ಅವರೊಡನೆ ಉಳಿದುಕೊಂಡಿರಲು, ರಾಮನಿದ್ದ ಪ್ರದೇಶಕ್ಕೆ ಭಗವಾನ್ ಋಷಿ ನಾರದನು ಆಗಮಿಸಿದನು. ಆ ಮಹಾತಪಸ್ವಿಯು ಜಟಾಮಂಡಲವನ್ನು ಧರಿಸಿದ್ದನು. ಸ್ವರ್ಣವರ್ಣದ ನಾರುಮಡಿಯನ್ನುಟ್ಟಿದ್ದನು. ಹೇಮದಂಡವನ್ನೂ ಕಮಂಡಲುವನ್ನೂ ಹಿಡಿದಿದ್ದನು. ನೃತ್ಯಗೀತೆಗಳಲ್ಲಿ ಕುಶಲನಾಗಿದ್ದ ದೇವಬ್ರಾಹ್ಮಣಪೂಜಿತನಾಗಿದ್ದ ಅವನು ಸುಖಶಬ್ಧವುಳ್ಳ ಕಚ್ಚಪೀ ಎಂಬ ಮನೋರಮ ವೀಣೆಯನ್ನು ಹಿಡಿದಿದ್ದನು. ನಿತ್ಯವೂ ಕಲಹಗಳನ್ನುಂಟುಮಾಡುವ ಆ ಕಲಹಪ್ರಿಯನು ರಾಮನು ಇದ್ದ ಪ್ರದೇಶಕ್ಕೆ ಆಗಮಿಸಿದನು. ಅವರೆಲ್ಲರೂ ಮೇಲೆದ್ದು ಯತವ್ರತನನ್ನು ಪೂಜಿಸಿದರು. ನಂತರ ಅವನು ಕುರುಗಳ ಸಮಾಚಾರವೇನೆಂದು ದೇವರ್ಷಿಯನ್ನು ಪ್ರಶ್ನಿಸಿದನು. ಸರ್ವಧರ್ಮಗಳನ್ನು ತಿಳಿದಿರುವ ನಾರದನು ಕುರುಸಂಕ್ಷಯದ ಕುರಿತು ನಡೆದಂತೆ ಎಲ್ಲವನ್ನೂ ಹೇಳಿದನು.
ಆಗ ರೌಹಿಣೇಯನು ದೀನಸ್ವರದಲ್ಲಿ ನಾರದನಿಗೆ ಹೇಳಿದನು: “ತಪೋಧನ! ಕ್ಷತ್ರಿಯರಿಗೆ ಎಂಥಹ ದುರವಸ್ಥೆಯುಂಟಾಯಿತು! ಅಲ್ಲಿದ್ದ ನೃಪರಿಗೇನಾಯಿತು? ಈ ಹಿಂದೆ ನಾನು ಇದರ ಕುರಿತು ಅಲ್ಲಲ್ಲಿ ಕೇಳುತ್ತಿದ್ದೆನು. ಆದರೆ ನನ್ನಲ್ಲಿ ವಿಸ್ತಾರವಾಗಿ ನಿನ್ನಿಂದ ಕೇಳಲು ಕುತೂಹಲವುಂಟಾಗಿದೆ.”
ನಾರದನು ಹೇಳಿದನು: “ಎಲ್ಲರಿಗಿಂತ ಮೊದಲು ಭೀಷ್ಮನು ಹತನಾದನು. ಅನಂತರ ದ್ರೋಣ, ಸಿಂಧುಪತಿ, ವೈಕರ್ತನ ಕರ್ಣ ಮತ್ತು ಅವನ ಮಹಾರಥ ಪುತ್ರರು ಹತರಾದರು. ರೌಹಿಣೇಯ! ಭೂರಿಶ್ರವ, ವೀರ್ಯವಾನ್ ಮದ್ರರಾಜ, ಮತ್ತು ಇನ್ನೂ ಇತರ ಅನೇಕ ಮಹಾಬಲ, ಸಮರದಿಂದ ಹಿಂದಿರುಗದೇ ಇದ್ದ, ರಾಜರು ಮತ್ತು ರಾಜಪುತ್ರರು ಕೌರವನ ಪ್ರೀತಿಗಾಗಿ ಪ್ರಿಯ ಪ್ರಾಣಗಳನ್ನು ತೊರೆದರು. ನಾನು ನಿನಗೆ ಹೇಳುವುದನ್ನು ಕೇಳು. ಅಲ್ಲಿ ಧಾರ್ತರಾಷ್ಟ್ರನ ಬಲದಲ್ಲಿ ಉಳಿದಿರುವವರು ಕೃಪ, ವೀರ್ಯವಾನ್ ಭೋಜ ಮತ್ತು ವಿಕ್ರಾಂತ ಅಶ್ವತ್ಥಾಮ. ಸೇನೆಗಳು ಭಗ್ನವಾಗಿ ದಿಕ್ಕಾಪಾಲಾಗಿ ಹೋಗಿವೆ. ಸೇನೆಯು ಹತವಾಗಲು ಮತ್ತು ಕೃಪಾದಿಗಳು ಪಲಾಯನಗೈಯಲು ತುಂಬಾ ದುಃಖಿತನಾದ ದುರ್ಯೋಧನನು ದ್ವೈಪಾಯನವೆಂಬ ಹೆಸರಿನ ಸರೋವರವನ್ನು ಹೊಕ್ಕಿದನು. ನೀರನ್ನು ಸ್ತಂಭಿಸಿ ಮಲಗಿದ್ದ ಧಾರ್ತರಾಷ್ಟ್ರನನ್ನು ಕೃಷ್ಣನೊಂದಿಗೆ ಪಾಂಡವರು ಉಗ್ರ ಮಾತುಗಳಿಂದ ನಿಂದಿಸಿದರು. ಎಲ್ಲ ಕಡೆಗಳಿಂದ ಮಾತಿನ ಬಾಣಗಳಿಂದ ಚುಚ್ಚಲ್ಪಟ್ಟ ಬಲವಾನ್ ವೀರ ದುರ್ಯೋಧನನು ಮಹಾ ಗದೆಯನ್ನು ಹಿಡಿದು ಮೇಲೆದ್ದು ಬಂದನು. ಈಗ ಅವನು ಭೀಮನೊಡನೆ ಯುದ್ಧಮಾಡಲು ಹೋಗುತ್ತಿದ್ದಾನೆ. ಅವರಿಬ್ಬರ ನಡುವೆ ಸುದಾರುಣ ಯುದ್ಧವು ನಡೆಯಲಿಕ್ಕಿದೆ. ನಿನ್ನಲ್ಲಿ ಕುತೂಹಲವಿದ್ದರೆ ಈಗಲೇ ಹೊರಡು! ತಡಮಾಡಬೇಡ! ನಿನಗೆ ಇಷ್ಟವಾದರೆ ನಿನ್ನ ಶಿಷ್ಯರ ನಡುವೆ ನಡೆಯುವ ಮಹಾಘೋರ ಯುದ್ಧವನ್ನು ನೋಡು!”
ನಾರದನ ಮಾತನ್ನು ಕೇಳಿ ಅವನು ತನ್ನೊಂದಿಗೆ ಬಂದಿದ್ದ ದ್ವಿಜರ್ಷಭರೆಲ್ಲರನ್ನು ಪೂಜಿಸಿ, ಕಳುಹಿಸಿಕೊಟ್ಟನು, ತನ್ನ ಅನುಯಾಯಿಗಳಿಗೆ ದ್ವಾರಕೆಗೆ ತೆರಳಿ ಎಂದು ಆದೇಶವನ್ನಿತ್ತನು. ಶ್ರೇಷ್ಠ ಪರ್ವತ ಶುಭ ಪ್ಲಕ್ಷಪ್ರಸ್ರವಣದಿಂದ ಕೆಳಗಿಳಿದು, ತೀರ್ಥಗಳ ಮಹಾಫಲಗಳ ಕುರಿತು ಕೇಳಿ ಪ್ರೀತಮನಸ್ಕನಾದ ಅಚ್ಯುತ ರಾಮನು ವಿಪ್ರರ ಸನ್ನಿಧಿಯಲ್ಲಿ ಈ ಗೀತೆಯನ್ನು ಹಾಡಿದನು: “ಸರಸ್ವತೀ ತೀರದಲ್ಲಿ ವಾಸಿಸುವುದರಿಂದ ಮನಸ್ಸಿಗೆ ಉಂಟಾಗು ಆಹ್ಲಾದವು ಮತ್ತೆಲ್ಲಿ ಲಭಿಸುತ್ತದೆ? ಸರಸ್ವತೀ ತೀರದಲ್ಲಿ ವಾಸಿಸುವುದರಿಂದ ಲಭಿಸುವ ಗುಣವು ಮತ್ತೆಲ್ಲಿ ದೊರೆಯುತ್ತದೆ? ಸರಸ್ವತೀ ತೀರದಲ್ಲಿದ್ದುಕೊಂಡು ಸ್ವರ್ಗಕ್ಕೆ ಹೋದ ಜನರು ಅಲ್ಲಿಯೂ ಕೂಡ ಸದಾ ಸರಸ್ವತೀ ನದಿಯನ್ನು ಸ್ಮರಿಸಿಕೊಂಡಿರುತ್ತಾರೆ! ಸರ್ವನದಿಗಳಲ್ಲಿ ಸರಸ್ವತಿಯು ಪುಣ್ಯೆಯು. ಸರಸ್ವತಿಯು ಸದಾ ಲೋಕಸುಖಕ್ಕಾಗಿ ಹರಿಯುವಳು. ಸರಸ್ವತಿಯನ್ನು ಸೇರಿದ ದುಷ್ಕೃತ ಜನರು ಇಲ್ಲಿಯಾಗಲೀ ಅಲ್ಲಿಯಾಗಲೀ ಸದಾ ಶೋಕಿಸುವುದಿಲ್ಲ.”
ಅನಂತರ ಪ್ರೀತಿಯಿಂದ ಮತ್ತೆ ಮತ್ತೆ ಸರಸ್ವತಿಯನ್ನು ನೋಡುತ್ತಾ ಆ ಪರಂತಪನು ಕುದುರೆಗಳನ್ನು ಹೂಡಿದ್ದ ಶುಭ್ರ ರಥವನ್ನೇರಿದನು. ಶೀಘ್ರಗಾಮಿ ಆ ರಥದಲ್ಲಿ ಕುಳಿತು ಯದುಪುಂಗವನು ಶಿಷ್ಯರ ಯುದ್ಧವನ್ನು ನೋಡುವ ಸಲುವಾಗಿ ಅವರ ಸಮೀಪಕ್ಕೆ ಆಗಮಿಸಿದನು.
