ತ್ರಿಪುರವಧೋಪಾಽಖ್ಯಾನ
ತ್ರಿಪುರವಧೆಯ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಬ್ರಹ್ಮನು ಶಿವನ ಸಾರಥಿಯಾದಂತೆ ಶಲ್ಯನೂ ಕರ್ಣನ ಸಾರಥಿಯಾಗಬೇಕೆಂದು ಕೇಳಿಕೊಳ್ಳುವಾಗ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು.
ದೇವತೆಗಳ ಅಸುರರ ಮಹಾ ಸಮಾಗಮವಾಗಿತ್ತು. ಪ್ರಥಮವಾಗಿ ತಾರಕಾಮಯ ಸಂಗ್ರಾಮವು ನಡೆಯಿತು. ದೇವತೆಗಳಿಂದ ದೈತ್ಯರು ಸೋತರೆಂದು ನಾವು ಕೇಳಿದ್ದೇವೆ. ದೈತ್ಯರು ಸೋಲಲು ತಾರಕನ ಮೂವರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ- ಇವರು ಉಗ್ರವಾದ ತಪಸ್ಸನ್ನು ಕೈಗೊಂಡು ಪರಮ ನಿಯಮಗಳನ್ನು ಪಾಲಿಸುತ್ತಾ ತಮ್ಮ ದೇಹಗಳನ್ನು ತಪಸ್ಸಿನಿಂದ ಕೃಶಗೊಳಿಸತೊಡಗಿದರು. ಅವರ ದಮ, ತಪಸ್ಸು, ನಿಯಮಗಳಿಂದ ವರದ ಪಿತಾಮಹನು ಪ್ರೀತನಾಗಿ ಅವರಿಗೆ ವರಗಳನ್ನಿತ್ತನು. ಅವರು ಒಟ್ಟಿಗೇ ಸರ್ವಲೋಕಪಿತಾಮಹನಲ್ಲಿ ಸರ್ವಭೂತಗಳಿಂದ ಸರ್ವದಾ ಅವಧ್ಯತ್ವವನ್ನು ವರವನ್ನಾಗಿ ಕೇಳಿದರು. ಅವರಿಗೆ ದೇವ ಲೋಕಗಳ ಪ್ರಭು ಈಶ್ವರನು ಹೇಳಿದನು: “ಅಮರತ್ವವು ಎಲ್ಲರಿಗೂ ಇಲ್ಲ. ಆದುದರಿಂದ ಅಸುರರೇ. ಅದನ್ನು ಹಿಂದೆ ತೆಗೆದುಕೊಳ್ಳಿ. ನಿಮಗೆ ಇಷ್ಟವಾದ, ಇದಕ್ಕೆ ಸಮನಾದ ಬೇರೆ ವರವನ್ನು ಬೇಡಿಕೊಳ್ಳಿ.” ಅನಂತರ ಅವರು ಒಟ್ಟಿಗೇ ಬಹಳ ಸಮಾಲೋಚನೆಮಾಡಿ ಸರ್ವಲೋಕೇಶ್ವರನಿಗೆ ಈ ಪ್ರೀತಿಯ ಮಾತುಗಳನ್ನಾಡಿದರು:
“ದೇವ! ನಾವು ನಿನ್ನಿಂದ ಈ ವರವನ್ನು ಕೇಳಿಕೊಳ್ಳುತ್ತಿದ್ದೇವೆ. ನಾವು ಮೂರು ಪುರಗಳನ್ನು ನಿರ್ಮಿಸಿ ಅವುಗಳಲ್ಲಿದ್ದುಕೊಂಡು ಈ ಮಹಿಯನ್ನು ಈ ಲೋಕಗಳನ್ನು ನಿನ್ನ ಪ್ರಸಾದದಿಂದ ಸುತ್ತುವರೆಯುತ್ತೇವೆ. ಒಂದು ಸಾವಿರ ವರ್ಷಗಳು ಕಳೆದನಂತರ ನಾವು ಪರಸ್ಪರರನ್ನು ಒಟ್ಟಾಗಿ ಸೇರುತ್ತೇವೆ. ನಮ್ಮ ತ್ರಿಪುರಗಳೂ ಏಕೀಭಾವವನ್ನು ಹೊಂದುತ್ತವೆ. ಅವುಗಳು ಒಂದಾದಾಗ ಒಂದೇ ಬಾಣದಿಂದ ದೇವವರನು ಹೊಡೆದರೆ ಅದೇ ನಮಗೆ ಮೃತ್ಯುವಾಗುತ್ತದೆ.” ಅವರಿಗೆ ಹಾಗೆಯೇ ಆಗಲೆಂದು ಹೇಳಿ ದೇವನು ಸ್ವರ್ಗಕ್ಕೆ ಹೊರಟುಹೋದನು.
ವರಗಳನ್ನು ಪಡೆದು ಪ್ರೀತರಾದ ಅವರು ಪರಸ್ಪರರಲ್ಲಿ ಸಮಾಲೋಚಿಸಿ ಮೂರು ಪುರಗಳನ್ನು ಸೃಷ್ಟಿಸಲೋಸುಗ ಅಜರ, ದೈತ್ಯದಾನವ ಪೂಜಿತ ವಿಶ್ವಕರ್ಮ ಮಹಾಸುರ ಮಯನನ್ನು ಆಮಂತ್ರಿಸಿದರು. ಆಗ ಧೀಮಾನ್ ಮಯನು ತನ್ನದೇ ತಪಸ್ಸಿನಿಂದ ಮೂರು ಪುರಗಳನ್ನು – ಒಂದು ಕಾಂಚನ ಪುರ, ಇನ್ನೊಂದು ಬೆಳ್ಳಿಯ ಪುರ ಮತ್ತು ಇನ್ನೊಂದು ಕಬ್ಬಿಣದ ಪುರವನ್ನು ರಚಿಸಿದನು. ಕಾಂಚನ ಪುರವು ದಿವಿಯಲ್ಲಿ, ಬೆಳ್ಳಿಯದು ಅಂತರಿಕ್ಷದಲ್ಲಿ ಮತ್ತು ಕಬ್ಬಿಣದು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಮೇಲಿದ್ದಿತು. ಒಂದೊಂದು ಪುರಗಳೂ ವಿಸ್ತಾರ ಆಯಾಮಗಳಲ್ಲಿ ನೂರು ನೂರು ಯೋಜನಗಳಷ್ಟಿದ್ದವು. ಹಲವಾರು ಉಪ್ಪರಿಗೆಗಳುಳ್ಳ ಮನೆಗಳಿಂದಲೂ, ಬೃಹದಾಕಾರದ ಪ್ರಾಕಾರಗಳಿಂದಲೂ ತೋರಣಗಳಿಂದವೂ ಕೂಡಿದ್ದವು. ವಿವಿದ ಕಟ್ಟಡಗಳಿಂದಲೂ ದ್ವಾರಗಳಿಂದಲೂ ಉಪಶೋಭಿತ ಆ ಪುರಗಳಲ್ಲಿ ವಿಶಾಲ ರಾಜಮಾರ್ಗಗಳಿಂದಾಗಿ ಇಕ್ಕಟ್ಟಾಗಿರಲಿಲ್ಲ. ಆ ಪುರಗಳಲ್ಲಿ ಬೇರೆ ಬೇರೆ ರಾಜರಿದ್ದರು. ವಿಚಿತ್ರ ಕಾಂಚನಪುರಕ್ಕೆ ಮಹಾತ್ಮ ತಾರಕಾಕ್ಷನು ರಾಜನಾಗಿದ್ದನು, ಬೆಳ್ಳಿಯ ಪುರಕ್ಕೆ ಕಮಲಾಕ್ಷ ಮತ್ತು ಉಕ್ಕಿನ ಪುರಕ್ಕೆ ವಿದ್ಯುನ್ಮಾಲಿಯು ರಾಜರಾಗಿದ್ದರು. ಆ ಮೂವರು ದೈತ್ಯ ರಾಜರೂ ತಮ್ಮ ಅಸ್ತ್ರತೇಜಸ್ಸಿನಿಂದ ಮೂರು ಲೋಕಗಳನ್ನೂ ಆಕ್ರಮಣಿಸಿ ಅಧಿಕಾರವನ್ನು ಸ್ಥಾಪಿಸಿ ಪ್ರಜಾಪತಿಯೇ ತಾವೆನ್ನುವಂತೆ ಇದ್ದರು. ಮಹದೈಶ್ವರ್ಯವನ್ನು ಮತ್ತು ಸುರಕ್ಷಿತ ಆಶ್ರಯವನ್ನು ಬಯಸಿದ ಕೋಟಿಗಟ್ಟಲೆ ದಾನವರು ಆ ದಾನವಮುಖ್ಯರ ಬಳಿ ಬಂದು ಸೇರಿಕೊಂಡರು. ಅವರೆಲ್ಲರಿಗೂ ಮಯನು ಸರ್ವವಸ್ತುಗಳನ್ನೂ ಒದಗಿಸಿಕೊಟ್ಟನು. ಅವರನ್ನು ಆಶ್ರಯಿಸಿ ಸರ್ವರೂ ನಿರ್ಭಯರಾಗಿದ್ದರು. ತ್ರಿಪುರಗಳಲ್ಲಿ ಆಶ್ರಯಪಡೆದಿದ್ದವರಲ್ಲಿ ಯಾರು ಏನನ್ನು ಮನಸ್ಸಿನಲ್ಲಿ ಬಯಸಿದರೂ ಅವೆಲ್ಲ ಕಾಮನೆಗಳನ್ನೂ ಮಯನು ತನ್ನ ಮಾಯೆಯಿಂದ ಕೊಡುತ್ತಿದ್ದನು.
ತಾರಕಾಕ್ಷನಿಗೆ ಹರಿ ಎಂಬ ಹೆಸರಿನ ಮಹಾಬಲ ಮಗನಿದ್ದನು. ಅವನು ಪರಮ ತಪಸ್ಸನ್ನು ತಪಿಸಿ ಪಿತಾಮಹನನ್ನು ತೃಪ್ತಿಗೊಳಿಸಿದನು. ಅವನು ತುಷ್ಟನಾದ ದೇವನಲ್ಲಿ ಈ ವರವನ್ನು ಕೇಳಿದನು: “ಶಸ್ತ್ರಗಳಿಂದ ಹತರಾದವನ್ನು ಎಲ್ಲಿ ಹಾಕಿದರೆ ಅವರು ಪುನಃ ಇನ್ನೂ ಹೆಚ್ಚಿನ ಬಲವುಳ್ಳವರಾಗಿ ಬದುಕುವರೋ ಅಂಥಹ ಒಂದು ಭಾವಿಯು ನಮ್ಮ ಪುರದಲ್ಲಿ ಇರಲಿ!” ಆ ವರವನ್ನು ಪಡೆದ ತಾರಕಾಸುತ ವೀರ ಹರಿಯು ಮೃತರನ್ನು ಜೀವಿತಗೊಳಿಸಬಲ್ಲ ಬಾವಿಯೊಂದನ್ನು ತನ್ನ ಪುರದಲ್ಲಿ ನಿರ್ಮಿಸಿದನು. ಯಾವ ರೂಪದಲ್ಲಿಯೇ ಅಥವಾ ಯಾವ ವೇಷದಲ್ಲಿಯೇ ಸತ್ತಿರಲಿ ಮೃತನಾದವನನ್ನು ಆ ಬಾವಿಯಲ್ಲಿ ಹಾಕಿದೊಡನೆಯೇ ಅವನು ಅದೇ ರೂಪದಲ್ಲಿ ಬದುಕಿ ಬರುತ್ತಿದ್ದನು.
ಆ ಬಾವಿಯನ್ನು ಪಡೆದ ತ್ರಿಪುರವಾಸಿಗಳು ಸರ್ವಲೋಕಗಳನ್ನೂ ಬಾಧಿಸಿದರು. ಮಹಾತಪಸ್ಸುಗಳಿಂದ ಸಿದ್ಧಿಗಳನ್ನು ಪಡೆದ ಅವರು ಸುರರ ಭಯವನ್ನು ಹೆಚ್ಚಿಸಿದರು. ಯುದ್ಧದಲ್ಲಿ ಎಂದೂ ಅವರ ವಿನಾಶವಾಗುತ್ತಿರಲಿಲ್ಲ. ಆಗ ಅವರು ಲೋಭ-ಮೋಹಗಳಿಗೊಳಗಾಗಿ ಬುದ್ಧಿಕಳೆದುಕೊಂಡರು. ನಿರ್ಲಜ್ಜರಾಗಿ ಎಲ್ಲೆಡೆಯೂ ಅನೇಕ ಪ್ರಕಾರದ ತೊಂದರೆಗಳನ್ನು ನೀಡತೊಡಗಿದರು. ವರದಾನದಿಂದ ದರ್ಪಿತರಾದ ಅವರು ಅಲ್ಲಲ್ಲಿದ್ದ ದೇವತೆಗಳನ್ನು, ಅವರ ಗಣಗಳೊಂದಿಗೆ ಓಡಿಸಿ ತಮ್ಮ ಮನಸ್ಸಿಗೆ ಬಂದಂತೆ ಸಂಚರಿಸುತ್ತಿದ್ದರು. ಮರ್ಯಾದೆಗಳನ್ನು ಕಳೆದುಕೊಂಡ ದುಷ್ಟಚಾರೀ ದಾನವರು ದಿವೌಕಸರಿಗೆ ಪ್ರಿಯವಾದ ದೇವಾರಣ್ಯಗಳೆಲ್ಲವನ್ನೂ, ಪುಣ್ಯ ಋಷ್ಯಾಶ್ರಮಗಳನ್ನೂ, ಸುಂದರ ಜನಪದಗಳನ್ನೂ ನಾಶಗೊಳಿಸಿದರು. ಆಗ ದೇವತೆಗಳೆಲ್ಲರೂ ಒಟ್ಟಾಗಿ ಸುರೇತರರು ಮಾಡಿದ ಅತ್ಯಾಚಾರಗಳ ಕುರಿತು ಹೇಳಲು ಪಿತಾಮಹನಲ್ಲಿಗೆ ಹೋದರು. ಭಗವಂತ ಪಿತಾಮಹನಿಗೆ ಶಿರಸಾ ವಂದಿಸಿ ಎಲ್ಲವನ್ನೂ ತಿಳಿಸಿ, ಅವರ ವಧೆಯ ಉಪಾಯವನ್ನು ಕೇಳಿದರು. ಅದನ್ನು ಕೇಳಿದ ಭಗವಾನ್ ದೇವನು ದೇವತೆಗಳಿಗೆ ಹೇಳಿದನು: “ಆ ದುರಾತ್ಮ ಅಸುರರು ಬ್ರಹ್ಮದ್ವೇಷಿಗಳು ಕೂಡ. ನಿಮ್ಮನ್ನು ಪೀಡಿಸುವ ಅವರು ಸತತವೂ ಅಪರಾಧಗಳನ್ನೆಸಗುತ್ತಿದ್ದಾರೆ. ನನಗೆ ಸರ್ವಭೂತಗಳೂ ಸಮ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಅಧರ್ಮಿಗಳನ್ನು ಸಂಹರಿಸಬೇಕು ಎಂದು ನಾನು ಹೇಳಿಕೊಳ್ಳುತ್ತಾ ಬಂದಿದ್ದೇನೆ. ಆದಿತ್ಯರೇ! ಸ್ಥಾಣು ಜಿಷ್ಣು ಅಕ್ಲಿಷ್ಟಕರ್ಮಿ ಈಶಾನನನ್ನು ನಿಮ್ಮ ಯೋಧನನ್ನಾಗಿ ಆರಿಸಿಕೊಳ್ಳಿ. ಅವನು ಆ ಸುರೇತರರನ್ನು ಸಂಹರಿಸುತ್ತಾನೆ.”
ಅವನ ಈ ಮಾತನ್ನು ಕೇಳಿ ಶಕ್ರನ ನಾಯಕತ್ವದಲ್ಲಿದ್ದ ದೇವತೆಗಳು ಬ್ರಹ್ಮನನ್ನು ಮುಂದೆಮಾಡಿಕೊಂಡು ವೃಷಾಂಕನ ಶರಣು ಹೋದರು. ಆ ಧರ್ಮಜ್ಞರು ಋಷಿಗಳೊಂದಿಗೆ ಪರಮ ತಪಸ್ಸಾನಚರಿಸಿ ಆ ಬ್ರಹ್ಮ, ಶಾಶ್ವತ, ಸರ್ವತ್ಮ ಭವನಿಗೆ ಶರಣು ಹೋದರು. ಸ್ತುತಿ-ಪೂಜೆಗಳಿಗೆ ಸಂತುಷ್ಟನಾಗುವ, ಮಹಾ ಭಯದಲ್ಲಿಯೂ ಅಭಯಪ್ರದನಾಗಿರುವ, ಸರ್ವಾತ್ಮ, ಮಹಾತ್ಮ, ಸರ್ವದಲ್ಲಿಯೂ ತನ್ನನ್ನು ವ್ಯಾಪ್ತಗೊಳಿಸಿಕೊಂಡಿರುವ, ಅನೇಕ ವಿಶೇಷ ತಪಸ್ಸುಗಳಿಂದ ಯೋಗಯುಕ್ತನಾಗಿರುವ, ಅತ್ಮನನ್ನು ತಿಳಿದುಕೊಂಡಿರುವ, ಸಾಂಖ್ಯವನ್ನು ತಿಳಿದುಕೊಂಡಿರುವ, ತನ್ನ ಆತ್ಮವನ್ನು ವಶದಲ್ಲಿಟ್ಟುಕೊಂಡಿರುವ, ತೇಜೋರಾಶಿಯಾದ, ಲೋಕದಲ್ಲಿ ಅನನ್ಯಸದೃಶನಾದ, ವ್ರತವಂತನಾದ, ಅಕಲ್ಮಷನಾದ, ಆ ಈಶಾನ ಉಮಾಪತಿಯನ್ನು ಅವರು ನೋಡಿದರು. ಆ ಒಬ್ಬನೇ ಭಗವಂತನನ್ನು ಅವರು ನಾನಾರೂಪಗಳಲ್ಲಿ ಕಲ್ಪಿಸಿಕೊಂಡರು. ಆ ಮಹಾತ್ಮರು ತಮ್ಮ ತಮ್ಮಲ್ಲಿಯೇ ಅವನ ಪ್ರತಿಬಿಂಬರೂಪಗಳನ್ನು ಕಂಡರು ಮತ್ತು ಪರಸ್ವರರಲ್ಲಿಯೂ ಅವನನ್ನು ಕಂಡು ಎಲ್ಲರೂ ಪರಮ ವಿಸ್ಮಿತರಾದರು. ದೇವತೆಗಳು ಮತ್ತು ಬ್ರಹ್ಮರ್ಷಿಗಳು ಆ ಸರ್ವಭೂತಮಯ ಈಶ ಅಜ ಜತತ್ಪತಿಯನ್ನು ನೋಡಿ ಶಿರಗಳನ್ನು ಭೂಮಿಯಮೇಲಿಟ್ಟು ನಮಸ್ಕರಿಸಿದರು. ಸ್ವಸ್ತಿವಾಕ್ಯಗಳಿಂದ ಅವರನ್ನು ಮೇಲೆಬ್ಬಿಸಿ ಭಗವಾನ್ ಶಂಕರನು ನಸುನಗುತ್ತಾ “ಹೇಳಿ! ಹೇಳಿ!” ಎಂದು ನುಡಿದನು.
ತ್ರ್ಯಂಬಕನಿಂದ ಅಪ್ಪಣೆಪಡೆದ ಆ ಅಸ್ವಸ್ಥಚೇತಸರು “ನಮೋ ನಮಸ್ತೇಸ್ತು!” ಎಂದು ಭವನಿಗೆ ಹೇಳಿದರು. “ದೇವಾತಿದೇವನಿಗೆ, ಧನ್ವಿಗೆ, ಅತಿಮನ್ಯುವಿಗೆ, ಪ್ರಜಾಪತಿ ಯಜ್ಞನಾಶನಿಗೆ, ಪ್ರಜಾಪತಿಯಿಂದಲೂ ಸ್ತುತಿಸಲ್ಪಡುವವನಿಗೆ ನಮಸ್ಕಾರ! ಸ್ತುತನಿಗೆ, ಸ್ತುತ್ಯನಿಗೆ, ಸ್ತೂಯಮಾನನಿಗೆ, ಮೃತ್ಯುವಿಗೆ, ವಿಲೋಹಿತನಿಗೆ, ರುದ್ರನಿಗೆ, ನೀಲಗ್ರೀವನಿಗೆ, ಶೂಲಿಗೆ, ಅಮೋಘನಿಗೆ, ಮೃಗಾಕ್ಷನಿಗೆ, ಪ್ರವರಾಯುಧಯೋಧಿನಿಗೆ, ದುರ್ವಾರ್ಣನಿಗೆ, ಶುಕ್ರನಿಗೆ, ಬ್ರಹ್ಮನಿಗೆ, ಬ್ರಹ್ಮಚಾರಿಣಿಗೆ, ಈಶಾನನಿಗೆ, ಅಪ್ರಮೇಯನಿಗೆ, ನಿಯಂತ್ರಿಗೆ, ಚರ್ಮವಾಸಸನಿಗೆ, ತಪೋನಿತ್ಯನಿಗೆ, ಪಿಂಗನಿಗೆ, ವ್ರತಿಗೆ, ಕೃತ್ತಿವಾಸಸನಿಗೆ, ಕುಮಾರಪಿತುವಿಗೆ, ತ್ರ್ಯಕ್ಷನಿಗೆ, ಪ್ರವರಾಯುಧಧಾರಿಣಿಗೆ, ಪ್ರಪನ್ನರ ದುಃಖವನ್ನು ವಿನಾಶಗೊಳಿಸುವವನಿಗೆ, ಬ್ರಹ್ಮದ್ವೇಷಿಗಳ ಸಮೂಹ ವಿಧ್ವಂಸಕನಿಗೆ ನಮಸ್ಕಾರ. ವನಸ್ಪತಿಗಳ ಪತಿಗೆ, ನರರ ಪತಿಗೆ ನಮಸ್ಕಾರ. ಗೋಪತಿಗೆ, ನಿತ್ಯನಿಗೆ, ಯಜ್ಞಪತಿಗೆ ನಮಸ್ಕಾರ. ಸೇನಾಸಹಿತನಾದ ನಿನಗೆ ನಮಸ್ಕಾರ! ಉಗ್ರತೇಜಸ್ವಿ, ತ್ರ್ಯಂಬಕನಿಗೆ ನಮಸ್ಕಾರ! ಮನಸ್ಸು, ಮಾತು ಮತ್ತು ಕರ್ಮಗಳಿಂದ ನಿನ್ನನ್ನು ಭಜಿಸುವ ನಮ್ಮನ್ನು ಕಾಪಾಡು!”
ಆಗ ಪ್ರಸನ್ನನಾದ ಭಗವಾನನು ಅವರನ್ನು ಸ್ವಾಗತದೊಂದಿಗೆ ಅಭಿನಂದಿಸಿ “ನಿಮ್ಮ ಭಯವನ್ನು ದೂರಮಾಡಲು ನಾನೇನು ಮಾಡಬೇಕೆಂದು ಹೇಳಿ!” ಎಂದು ಕೇಳಿದನು.
ಆ ಮಹಾತ್ಮನು ಪಿತೃ-ದೇವ ಸಂಘಗಳಿಗೆ ವರವನ್ನು ನೀಡಲು, ಬ್ರಹ್ಮನು ಶಂಕರನನ್ನು ಸತ್ಕರಿಸಿ ಲೋಕಹಿತವಾದ ಈ ಮಾತನ್ನಾಡಿದನು: “ದೇವೇಶ! ನಿನ್ನ ಆದೇಶದಂತೆ ಈ ಪ್ರಜಾಪತಿ ಪದವನ್ನು ವಹಿಸಿಕೊಂಡಿರುವ ನಾನು ದಾನವರಿಗೆ ಮಹಾ ವರವನ್ನು ನೀಡಿದೆನು. ಮರ್ಯಾದೆಗಳನ್ನು ಅತಿಕ್ರಮಿಸಿರುವ ಅವರನ್ನು ಸಂಹರಿಸಬೇಕಾಗಿದೆ. ಭೂತಭವ್ಯೇಶ! ನಿನ್ನನ್ನು ಬಿಟ್ಟು ಬೇರೆ ಯಾರೂ ಅವರನ್ನು ಕೊಲ್ಲಲಾರರು. ಆದುದರಿಂದ ನೀನೇ ಅವರ ಶತ್ರುವಾಗಿ ಅವರನ್ನು ವಧಿಸು! ದೇವ! ಶರಣುಬಂದು ಬೇಡುತ್ತಿರುವ ದಿವೌಕಸರಿಗೆ ನೀನು ಕೃಪೆತೋರಿಸು! ದೇವೇಶ! ಶೂಲಧಾರೀ! ದಾನವರನ್ನು ಸಂಹರಿಸು!”
ಶ್ರೀ ಭಗವಾನನು ಹೇಳಿದನು: “ನಿಮ್ಮ ಶತ್ರುಗಳೆಲ್ಲರನ್ನೂ ಸಂಹರಿಸಬೇಕೆಂಬುದೇ ನನ್ನ ಅಭಿಪ್ರಾಯ. ಆದರೆ ಸುರಶತ್ರುಗಳಾದ ಅವರನ್ನು ನಾನೊಬ್ಬನೇ ವಧಿಸಲು ಸಮರ್ಥನಿಲ್ಲ. ನೀವೆಲ್ಲರೂ ಒಟ್ಟಾಗಿ ನನ್ನ ಅಸ್ತ್ರತೇಜಸ್ಸಿನಿಂದ ಯುದ್ಧದಲ್ಲಿ ಆ ಶತ್ರುಗಳನ್ನು ಜಯಿಸಿ. ಏಕೆಂದರೆ ಒಗ್ಗಟ್ಟಿನಲ್ಲಿಯೇ ಮಹಾಬಲವಿದೆ.”
ದೇವತೆಗಳು ಹೇಳಿದರು: “ನಮ್ಮ ತೇಜೋಬಲಕ್ಕಿಂತಲೂ ಎರಡು ಪಟ್ಟು ಅವರದ್ದು ಎಂದು ನಮಗೂ ಅನ್ನಿಸುತ್ತಿದೆ. ಏಕೆಂದರೆ ಅವರ ತೇಜೋಬಲವನ್ನು ನಾವು ನೋಡಿದ್ದೇವೆ.”
ಭಗವಾನನು ಹೇಳಿದನು: “ನಿಮ್ಮಮೇಲೆ ಅಪರಾಧಗಳನ್ನೆಸಗಿರುವ ಆ ಪಾಪಿಗಳು ಸರ್ವಥಾ ವಧ್ಯರು. ನನ್ನ ತೇಜೋಬಲದ ಅರ್ಧದಿಂದ ಆ ಎಲ್ಲ ಶತ್ರುಗಳನ್ನೂ ಸಂಹರಿಸಿರಿ!”
ದೇವತೆಗಳು ಹೇಳಿದರು: “ಮಹೇಶ್ವರ! ನಿನ್ನ ಅರ್ಧತೇಜಸ್ಸನ್ನೂ ಧರಿಸಲು ನಾವು ಶಕ್ಯರಿಲ್ಲ. ಆದುದರಿಂದ ನೀನೇ ನಮ್ಮೆಲ್ಲರ ಬಲದಿಂದ ಶತ್ರುಗಳನ್ನು ಸಂಹರಿಸು!”
ಹಾಗೆಯೇ ಆಗಲೆಂದು ಹೇಳಿ ದೇವೇಶನು ಅವರೆಲ್ಲರ ತೇಜಸ್ಸಿನ ಅರ್ಧವನ್ನು ಪಡೆದು ತೇಜಸ್ಸಿನಲ್ಲಿ ಅಧಿಕನಾದನು. ಆಗ ಆ ದೇವನು ಬಲದಲ್ಲಿ ಎಲ್ಲರಿಗಿಂತ ಹೆಚ್ಚು ಬಲವಂತನಾದನು. ಅಂದಿನಿಂದ ಶಂಕರನು ಮಹಾದೇವ ಎಂದು ಖ್ಯಾತನಾದನು. ಆಗ ಮಹಾದೇವನು ಹೇಳಿದನು: “ದಿವೌಕಸರೇ! ಧನುರ್ಬಾಣಗಳನ್ನು ಹಿಡಿದು ರಥವನ್ನೇರಿ ಆ ರಿಪುಗಳನ್ನು ಸಂಹರಿಸುತ್ತೇನೆ. ಯಾವುಗಳಿಂದ ನಾನು ಆ ದೈತ್ಯರನ್ನು ಮಹೀತಲಕ್ಕೆ ಬೀಳಿಸಬಲ್ಲೆನೋ ಅಂತಹ ರಥವನ್ನೂ, ಧನುರ್ಬಾಣಗಳನ್ನೂ ಹುಡುಕಿರಿ!”
ದೇವತೆಗಳು ಹೇಳಿದರು: “ದೇವೇಶ್ವರ! ತ್ರೈಲೋಕ್ಯಗಳಲ್ಲಿ ಅಲ್ಲಲ್ಲಿರುವ ಮೂರ್ತಿಗಳೆಲ್ಲವನ್ನೂ ಒಂದುಗೂಡಿಸಿ ನಿನಗೋಸ್ಕರ ಈ ಮಹೌಜಸ ರಥವನ್ನು ನಿರ್ಮಿಸಿದ್ದೇವೆ. ಈ ಶುಭ ರಥವು ವಿಶ್ವಕರ್ಮನ ಬುದ್ಧಿಯಿಂದ ರಚಿಸಲ್ಪಟ್ಟಿದೆ.”
ಹೀಗೆ ವಿಬುಧಶಾರ್ದೂಲರು ಆ ರಥವನ್ನು ನಿರ್ಮಿಸಿದರು. ವಿಶಾಲ ಪುರಮಾಲೆಗಳಿಂದ ಅಲಂಕೃತ, ಪರ್ವತ-ವನ-ದ್ವೀಪಸಂಪನ್ನಳಾದ ಸರ್ವಭೂತಗಳನ್ನು ಧರಿಸಿದ್ದ ಪೃಥ್ವೀ ದೇವಿಯನ್ನೇ ಅವರು ರಥವನ್ನಾಗಿ ಕಲ್ಪಿಸಿಕೊಟ್ಟರು. ಮಂದರ ಪರ್ವತವು ಅದರ ಅಚ್ಚುಮರವಾಗಿತ್ತು. ಮಹಾನದಿಯು ಅದರ ತಳಭಾಗವಾಗಿತ್ತು. ದಿಕ್ಕುಗಳು ಮತ್ತು ಉಪದಿಕ್ಕುಗಳು ಆ ರಥದ ಪರಿವಾರಗಳಾಗಿದ್ದವು. ಬೆಳಗುತ್ತಿದ್ದ ಗ್ರಹಗಳು ಅನುಕರ್ಷಗಳಾಗಿದ್ದವು. ನಕ್ಷತ್ರಗಳು ವರೂಥವಾಗಿದ್ದವು. ಧರ್ಮ-ಅರ್ಥ-ಕಾಮಗಳು ಒಂದಾಗಿ ತ್ರಿವೇಣಿಗಳಾಗಿ ಬಂಧಿಸಿದ್ದವು. ವಿವಿಧ ಔಷಧಿಗಳು ಮತ್ತು ನಾನಾ ಪುಷ್ಪ-ಫಲಗಳು ಉದ್ಗಮಗಳಾಗಿದ್ದವು. ಸೂರ್ಯ-ಚಂದ್ರರು ಆ ಉತ್ತಮ ರಥದ ಚಕ್ರಗಳಾಗಿದ್ದವು. ಶುಭ ರಾತ್ರಿ ಮತ್ತು ಹಗಲುಗಳು ಅದರ ಪೂರ್ವ ಮತ್ತು ಪಶ್ಚಿಮ ಪಕ್ಷಗಳಾಗಿದ್ದವು. ಧೃತರಾಷ್ಟ್ರನೇ ಮೊದಲಾದ ಹತ್ತು ನಾಗಪತಿಗಳು ಅದರ ದೃಢ ಈಷಾದಂಡಗಳಾಗಿದ್ದವು. ಎರಡು ಯುಗಗಳು ಮತ್ತು ಸಂವರ್ತಕ ಬಲಾಹಕಗಳು ರಥಚರ್ಮಗಳಾಗಿದ್ದವು. ಸಂಧ್ಯಾ, ಧೃತಿ, ಮೇಧಾ, ಸ್ಥಿತಿ, ಸನ್ನತಿ, ಗ್ರಹ-ನಕ್ಷತ್ರ-ತಾರೆಗಳಿಂದ ಚಿತ್ರಿತ ಆಕಾಶವನ್ನೇ ರಥಕ್ಕೆ ಚರ್ಮದ ಹೊದಿಕೆಯನ್ನಾಗಿ ಹೊದಿಸಿದ್ದರು. ಸುರರು, ನೀರು, ಪ್ರೇತ ಮತ್ತು ವಿತ್ತಗಳ ಒಡೆಯರಾದ ಇಂದ್ರ, ವರುಣ, ಯಮ ಮತ್ತು ಕುಬೇರ – ಈ ಲೋಕೇಶ್ವರರನ್ನು ಕುದುರೆಗಳನ್ನಾಗಿ ಕಟ್ಟಲಾಗಿತ್ತು. ಸಿನೀವಾಲೀ, ಅನುಮತಿ, ಕುಹೂ ಮತ್ತು ಸುವ್ರತ ರಾಕಾರನ್ನು ಕುದುರೆಗಳ ಕಡಿವಾಣಗಳನ್ನಾಗಿಯೂ ರೋಹಕರನ್ನು (ದೊಡ್ಡ ದೇವತೆಗಳನ್ನು) ಕಡಿವಾಣಗಳಲ್ಲಿರುವ ಮುಳ್ಳುಗಳನ್ನಾಗಿ ಕಲ್ಪಿಸಿದರು. ಕರ್ಮ, ಸತ್ಯ, ತಪಸ್ಸು ಮತ್ತು ಅರ್ಥಗಳು ಕಡಿವಾಣಗಳಲ್ಲಿದ್ದವು. ಮನಸ್ಸು ಅದರ ಅಧಿಷ್ಠಾನವಾಗಿತ್ತು ಮತ್ತು ಸರಸ್ವತಿಯು ರಥದ ದಾರಿಯಾಗಿ ಪರಿಣಮಿಸಿತು. ನಾನಾವರ್ಣಗಳ ಚಿತ್ರ-ವಿಚಿತ್ರ ಪತಾಕೆಗಳು ಗಾಳಿಯಲ್ಲಿ ಪರಪರನೆ ಹಾರಾಡುತ್ತಿದ್ದವು. ಮಿಂಚು ಮತ್ತು ಕಾಮನಬಿಲ್ಲುಗಳು ರಥವನ್ನು ಬೆಳಗಿಸಿದವು.
ಹೀಗೆ ಶತ್ರುಗಳನ್ನು ಸಂಹರಿಸಲು ದೇವತೆಗಳು ಉತ್ತಮ ರಥವನ್ನು ತಯಾರಿಸಲು ಶಂಕರನು ಆ ರಥದಲ್ಲಿ ತನ್ನ ಮುಖ್ಯ ಆಯುಧಗಳನ್ನು ಇರಿಸಿದನು. ಆಕಾಶವನ್ನೇ ರಥಯಷ್ಟಿಯನ್ನಾಗಿಸಿ ಅದರಲ್ಲಿ ನಂದಿಯನ್ನು ಸ್ಥಾಪಿಸಿದನು. ಬ್ರಹ್ಮದಂಡ, ಕಾಲದಂಡ, ರುದ್ರದಂಡ ಮತ್ತು ಜ್ವರಗಳು ಆ ರಥದ ಪಾರ್ಶ್ವರಕ್ಷಕರಾಗಿ ಆಯುಧಗಳನ್ನು ಮೇಲೆತ್ತಿ ನಿಂತವು. ಆ ಮಹಾತ್ಮನ ಚಕ್ರರಕ್ಷಕರಾಗಿ ಅಥರ್ವ ಮತ್ತು ಆಂಗಿರಸರಿದ್ದರು. ಋಗ್ವೇದ, ಸಾಮವೇದ ಮತ್ತು ಪುರಾಣಗಳು ಮುಂದೆಹೋಗುವ ಯೋಧರಾಗಿದ್ದವು. ಇತಿಹಾಸ ಯಜುರ್ವೇದಗಳು ರಥದ ಹಿಂಬಾಗದ ರಕ್ಷಕರಾಗಿದ್ದರು. ದಿವ್ಯವಾಣಿ ಮತ್ತು ವಿದ್ಯೆಗಳು ರಥದ ಪರಿಪಾರ್ಶ್ವಚರರಾಗಿದ್ದರು. ಸ್ತೋತ್ರ, ಕವಚ, ವಷಟ್ಕಾರ, ಓಂಕಾರಗಳು ರಥದ ಮುಖಭಾಗದಲ್ಲಿದ್ದು ಶೋಭಾಯಮಾನಗೊಳಿಸಿದವು. ಆರು ಋತುಗಳ ಸಂವತ್ಸರದಿಂದ ವಿಚಿತ್ರ ಧನುಸ್ಸನ್ನು ಮಾಡಿಕೊಂಡು ಆ ಅಜರನು ಮನುಷ್ಯರ ಕಾಲರಾತ್ರಿಯನ್ನು ಧನುಸ್ಸಿನ ಶಿಂಜಿನಿಯನ್ನಾಗಿ ಮಾಡಿಕೊಂಡನು. ವಿಷ್ಣು, ಅಗ್ನಿ ಮತ್ತು ಸೋಮರು ಬಾಣಗಳಾದರು. ಅಗ್ನಿ-ಸೋಮರಿಂದಲೇ ಇಡೀ ಜಗತ್ತಿದೆಯೆಂದೂ, ಜಗತ್ತು ವೈಷ್ಣವವೆಂದೂ ಹೇಳುತ್ತಾರೆ. ಅಮಿತತೇಜಸ್ವಿ ಭಗವಂತ ವಿಷ್ಣುವೇ ಭವನ ಆತ್ಮಸ್ವರೂಪನು. ಆದುದರಿಂದ ಅವರು ಹರನ ಧನುಸ್ಸು-ಮೌರ್ವಿಗಳ ಸ್ಪರ್ಷವನ್ನೂ ಸಹಿಸಿಕೊಳ್ಳಲಾರರಾಗಿದ್ದರು. ಆ ಶರದಲ್ಲಿ ಪ್ರಭುವು ತನ್ನ ಸುತೀಕ್ಷ್ಣ ಕೋಪವನ್ನು ಭೃಗು-ಅಂಗಿರಸರ ಕೋಪದಿಂದ ಹುಟ್ಟಿದ ಅತಿದುಃಸ್ಸಹವಾದ ಕ್ರೋಧಾಗ್ನಿಯನ್ನೂ ಸಂಸ್ಥಾಪಿಸಿದನು. ಆ ನೀಲಲೋಹಿತ, ಧೂಮ್ರ, ಕೃತ್ತಿವಾಸಾ, ಭಯಂಕರನು ಸಹಸ್ರ ಆದಿತ್ಯರ ತೇಜೋಜ್ವಲಗಳಿಂದ ಆವೃತನಾಗಿ ಪ್ರಜ್ವಲಿಸಿದನು. ಅಳ್ಳಾಡಿಸುವುದಕ್ಕೆ ಅಸಾಧ್ಯವಾಗಿರುವವರನ್ನೂ ಅಳ್ಳಾಡಿಸಿಬಿಡುವ, ಬ್ರಹ್ಮದ್ವೇಷಿಗಳನ್ನು ಜಯಿಸಿ ಸಂಹರಿಸುವ ಹರನು ಅಧರ್ಮಾಶ್ರಿತ ಜನರನ್ನು ಸಂಹರಿಸಿ ನಿತ್ಯವೂ ಧರ್ಮವನ್ನು ರಕ್ಷಿಸುತ್ತಾನೆ. ಘೋರರೂಪೀ ಭಯಂಕರ ಉಗ್ರ ಪ್ರಮಾಥಿಗಣಗಳಿಂದ ಆವೃತನಾಗಿ ಅವರ ಆತ್ಮಗುಣಗಳಿಂದ ಆವೃತನಾಗಿ ಭಗವಾನ್ ಸ್ಥಾಣುವು ಪ್ರಕಾಶಿಸಿದನು. ಈ ವಿಶ್ವ-ಜಗತ್ತೆಲ್ಲವೂ, ಜಂಗಮಾಜಂಗಮಗಳೆಲ್ಲವೂ ಆ ಅದ್ಭುತದರ್ಶನನ ಅಂಗಗಳನ್ನು ಸಮಾಶ್ರಯಿಸಿ ಶೋಭಿಸಿದವು.
ಆ ದಿವ್ಯರಥವನ್ನು ನೋಡಿ ಕವಚ-ಧನುಸ್ಸುಗಳನ್ನು ಹಿಡಿದಿದ್ದ ಶಿವನು ಸೋಮ-ವಿಷ್ಣು-ಅಗ್ನಿಸಂಭವ ಬಾಣವನ್ನು ತೆಗೆದುಕೊಂಡನು. ಆಗ ವಿಭು ದೇವತೆಗಳು ವಾಯುವನ್ನು ಪುಣ್ಯಗಂಧಯುಕ್ತ ಗಾಳಿಯನ್ನು ಬೀಸಲು ನಿಯುಕ್ತಗೊಳಿಸಿದರು. ಮಹಾದೇವನು ದೇವತೆಗಳನ್ನೂ ಭಯಗೊಳಿಸುತ್ತಾ ಭೂಮಿಯನ್ನು ನಡುಗಿಸುತ್ತಾ ರಥವನ್ನೇರಿದನು. ಖಡ್ಗ, ಬಾಣ, ಧನುಸ್ಸುಗಳನ್ನು ಧರಿಸಿ ಶೋಭಾಯಮಾನನಾಗಿದ್ದ ಆ ವರದನು ನಸುನಗುತ್ತಾ ಸಾರಥಿಯು ಯಾರಾಗುತ್ತಾನೆ ಎಂದು ದೇವತೆಗಳನ್ನು ಕೇಳಿದನು. ದೇವಗಣಗಳು ಅವನಿಗೆ ಹೇಳಿದರು: “ದೇವೇಶ! ಯಾರನ್ನು ನೀನು ನಿಯೋಜಿಸುತ್ತೀಯೋ ಅವನೇ ನಿನಗೆ ಸಾರಥಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”
ದೇವನು ಅವರಿಗೆ ಪುನಃ ಹೇಳಿದನು: “ನಿಮ್ಮಲ್ಲಿ ನನಗಿಂತಲೂ ಶ್ರೇಷ್ಠತರನಾದವನನ್ನು ನನ್ನ ಸಾರಥಿಯನ್ನಾಗಿ ಮಾಡಿ. ತಡಮಾಡಬೇಡಿ!”
ಮಹಾತ್ಮನಾದ ಅವನ ಆ ಮಾತನ್ನು ಕೇಳಿ ದೇವತೆಗಳು ಪಿತಾಮಹನಲ್ಲಿಗೆ ಹೋಗಿ ದೇವನನ್ನು ಸ್ತುತಿಸಿ ಅವನಿಗೆ ಹೇಳಿದರು: “ದೇವ! ತ್ರಿದಶರ ಶತ್ರುಗಳನ್ನು ನಾಶಗೊಳಿಸಲು ನೀನು ಹೇಳಿದಂತೆಯೇ ನಾವು ಮಾಡಿದ್ದೇವೆ. ವೃಷಭದ್ವಜನು ನಮ್ಮ ಮೇಲೆ ಪ್ರಸನ್ನನಾಗಿದ್ದಾನೆ. ವಿಚಿತ್ರ ಆಯುಧಗಳಿಂದ ಕೂಡಿರುವ ರಥವನ್ನೂ ನಾವು ಸಜ್ಜುಗೊಳಿಸಿದ್ದೇವೆ. ಆದರೆ ಆ ಉತ್ತಮ ರಥದಲ್ಲಿ ಸಾರಥಿಯು ಯಾರಾಗಬಲ್ಲರೆಂದು ನಮಗೆ ತಿಳಿದಿಲ್ಲ. ಆದುದರಿಂದ ದೇವಸತ್ತಮ! ಯಾರಾದರೂ ಸಾರಥಿಯನ್ನು ನಿಯೋಜಿಸಬೇಕು. ದೇವ! ನಮಗೆ ನೀನು ನೀಡಿದ ವಚನವನ್ನು ಸಫಲಗೊಳಿಸಿಕೊಡಬೇಕು! “ನಿಮಗೆ ಹಿತವಾದುದನ್ನು ಮಾಡುತ್ತೇನೆ!” ಎಂದು ನೀನು ನಮಗೆ ಹಿಂದೆ ಹೇಳಿದ್ದೆ. ಅದನ್ನು ನೀನು ಮಾಡಿಕೊಡಬೇಕು! ನಮ್ಮ ಶತ್ರುಗಳನ್ನು ಪಲಾಯನಗೊಳಿಸಬಲ್ಲ, ಶತ್ರುಗಳಿಗೆ ದುರ್ಗಮವಾದ ಆ ಉತ್ತಮ ರಥದಲ್ಲಿ ಕುಳಿತು ಯೋದ್ಧಾ ಪಿನಾಕಪಾಣಿಯು ದಾನವರನ್ನು ಭಯಗೊಳಿಸುತ್ತಾ ಉದ್ಧೋನ್ನತನಾಗಿದ್ದಾನೆ. ಸಶೈಲ ಧರಣಿಯೇ ರಥವಾಗಿದೆ. ನಾಲ್ಕು ವೇದಗಳು ಕುದುರೆಗಳಾಗಿವೆ. ಸಾರಥಿಯಿಂದ ರಕ್ಷಿತನಾದ ಯೋಧನಿರುವ ಆ ರಥಕ್ಕೆ ನಕ್ಷತ್ರವಂಶಗಳೇ ವರೂಥಗಳಾಗಿ ಹಿಂಬಾಲಿಸುತ್ತವೆ. ಇತರರಿಗಿಂತಲೂ ಸರ್ವಶ್ರೇಷ್ಠನಾದ ಸಾರಥಿಯು ಆ ಪ್ರತಿಷ್ಠ ರಥಕ್ಕೆ, ಕುದುರೆಗಳಿಗೆ, ಯೋದ್ಧನಿಗೆ, ಕವಚ, ಶಸ್ತ್ರಗಳು ಮತ್ತು ಕಾರ್ಮುಕಗಳಿಗೆ ಬೇಕಾಗಿದೆ. ನಿನ್ನನ್ನು ಬಿಟ್ಟು ಬೇರೆ ಯಾವ ಸಾರಥಿಯೂ ನಮಗೆ ಕಾಣುವುದಿಲ್ಲ. ಸರ್ವಗುಣಯುಕ್ತನಾದ ನೀನೇ ದೇವತೆಗಳಿಗೂ ಅಧಿಕನಾಗಿರುವೆ. ಬೇಗನೆ ಸಾರಥ್ಯವನ್ನು ವಹಿಸಿಕೊಂಡು ಆ ಉತ್ತಮ ಕುದುರೆಗಳನ್ನು ನಿಯಂತ್ರಿಸು.”
ಹೀಗೆ ತ್ರಿಲೋಕೇಶ ಪಿತಾಮಹನಿಗೆ ಶಿರಬಾಗಿ ನಮಸ್ಕರಿಸಿ ದೇವತೆಗಳು ಸಾರಥಿಯಾಗಲು ಅವನನ್ನು ಒಪ್ಪಿಸಿದರು. ಬ್ರಹ್ಮನು ಹೇಳಿದನು: “ದಿವೌಕಸರೇ! ನೀವು ಹೇಳಿದ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಲ್ಲ! ಕಪರ್ದಿನಿಯು ಯುದ್ಧಮಾಡುವಾಗ ನಾನು ಕುದುರೆಗಳನ್ನು ನಿಯಂತ್ರಿಸುತ್ತೇನೆ.”
ಆಗ ಲೋಕಸ್ರಷ್ಟಾ ಭಗವಾನ್ ದೇವ ಪಿತಾಮಹನು ದೇವತೆಗಳಿಂದ ಮಹಾತ್ಮ ಈಶಾನನ ಸಾರಥಿಯಾಗಿ ಕಲ್ಪಿತನಾದನು. ಆ ಲೋಕಪೂಜಿತ ರಥದಲ್ಲಿ ಅವನು ಬೇಗನೇ ಹತ್ತಿ ಕುಳಿತುಕೊಳ್ಳಲು ವಾಯುವಿನ ವೇಗಯುಕ್ತ ಕುದುರೆಗಳು ಕೂಡಲೇ ಮುಗ್ಗರಿಸಿದವು. ಮಹಿಯನ್ನು ಕಾಲುಗುರಿನಿಂದ ಮೆಟ್ಟಿ ಮಹೇಶ್ವರನು ಮೇಲೇರಲು ತ್ರಿಲೋಕೇಶ ಪ್ರಪಿತಾಮಹನು ಕಡಿವಾಣಗಳನ್ನು ಹಿಡಿದುಕೊಂಡು ಆ ಮನೋಮಾರುತಹಂಸಗಳಂತೆ ಓಡುವ ಕುದುರೆಗಳನ್ನು ಪ್ರಚೋದಿಸಿದನು. ಆ ವರದನು ರಥಾಧಿರೂಢನಾಗಿ ಅಸುರರ ಕಡೆ ಹೊರಡಲು ವಿಶ್ವೇಶನು ನಸುನಗುತ್ತಾ “ಸಾಧು! ಸಾಧು!” ಎಂದು ಹೊಗಳಿದನು. “ದೇವ! ಸಾವಧಾನವಾಗಿ ಕುದುರೆಗಳನ್ನು ದೈತ್ಯರಿರುವಲ್ಲಿಗೆ ಕೊಂಡೊಯ್ಯಿ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ನನ್ನ ಬಾಹುಬಲವನ್ನು ಇಂದು ನೋಡು!”
ಆಗ ಬ್ರಹ್ಮನು ವೇಗದಲ್ಲಿ ವಾಯುವೇಗಸಮನಾದ ಆ ಅಶ್ವಗಳನ್ನು ದೈತ್ಯದಾನವರಿಂದ ರಕ್ಷಿತ ತ್ರಿಪುರದ ಕಡೆಗೆ ನಡೆಸಿದನು. ಕೂಡಲೆ ಶರ್ವನು ಧನುಸ್ಸಿಗೆ ಹೆದೆಯನ್ನೇರಿಸಿ ಆ ಶರವನ್ನು ಹೂಡಿ ಪಾಶುಪತಾಸ್ತ್ರವನ್ನು ಅನುಸಂಧಾನಮಾಡಿ ತ್ರಿಪುರವನ್ನು ನೆನೆಸಿಕೊಂಡನು. ಹಾಗೆ ಧನುಸ್ಸನ್ನು ಎಳೆದು ಕ್ರುದ್ಧನಾಗಿ ಅವನು ನಿಂತಿರಲು ಕಾಲಾಂತರದಲ್ಲಿ ಆ ಪುರಗಳು ಒಂದೇ ಸಾಲಿನಲ್ಲಿ ಬಂದವು. ತ್ರಿಪುರಗಳು ಒಂದೇ ಸಾಲಿನಲ್ಲಿ ಬಂದು ಸೇರಲು ಮಹಾತ್ಮ ದೇವತೆಗಳಲ್ಲಿ ತುಮುಲ ಹರ್ಷೋದ್ಗಾರವಾಯಿತು. ಆಗ ದೇವಗಣಗಳೆಲ್ಲವೂ, ಸಿದ್ಧ-ಪರಮ ಋಷಿಗಳೂ ಮುದಾನ್ವಿತರಾಗಿ ಜಯ ಜಯ ಎಂದು ಉದ್ಗರಿಸಿದರು. ಆಗ ಅಸುರರನ್ನು ಸಂಹರಿಸುತ್ತಿದ್ದ ಅವರ್ಣನೀಯ, ಉಗ್ರರೂಪೀ, ಸಹಿಸಲಸಾಧ್ಯ ತೇಜಸ್ಸಿನಿಂದ ಕೂಡಿದ್ದ ದೇವನ ಎದುರಿಗೆ ತ್ರಿಪುರಗಳು ಒಟ್ಟಿಗೇ ಪ್ರಕಟವಾದವು. ಭಗವಾನ್ ಲೋಕೇಶ್ವರನು ಆ ಧನುಸ್ಸನ್ನು ಸೆಳೆದು ತ್ರೈಲೋಕ್ಯಸಾರವಾಗಿದ್ದ ಆ ಬಾಣವನ್ನು ತ್ರಿಪುರದ ಕಡೆ ಪ್ರಯೋಗಿಸಿದನು. ಅದು ಅಲ್ಲಿರುವ ಅಸುರಗಣಗಳೊಂದಿಗೆ ತ್ರಿಪುರಗಳನ್ನು ಸುಟ್ಟು ಪಶ್ಚಿಪಸಮುದ್ರದಲ್ಲಿ ಹಾಕಿಬಿಟ್ಟಿತು. ಹೀಗೆ ದಾನವರ್ಯಾರನ್ನೂ ಉಳಿಸದೇ ತ್ರೈಲೋಕ್ಯದ ಹಿತೈಷಿಣಿಯಾದ ಮಹೇಶ್ವರನು ಕ್ರೋಧದಿಂದ ಆ ತ್ರಿಪುರಗಳನ್ನು ಸುಟ್ಟುಹಾಕಿದನು. ಆತ್ಮಕ್ರೋಧದಿಂದ ಹುಟ್ಟಿದ ಅಗ್ನಿಯನ್ನೂ ಅವನು ಹಾಹಾ ಎಂದು ಪ್ರಶಮನಗೊಳಿಸಿ, ಅದಕ್ಕೆ “ಲೋಕಗಳನ್ನೆಲ್ಲ ಭಸ್ಮೀಕೃತವನ್ನಾಗಿಸಬೇಡ!” ಎಂದನು.
ಆಗ ಪ್ರಕೃತಿಯನ್ನೂ ಸೇರಿ ದೇವತೆಗಳೂ, ಮೂರು ಲೋಕಗಳೂ, ಋಷಿಗಳೂ ಸಂತೋಷಗೊಂಡು ಅಮಿತ ತೇಜಸ್ವಿ ಸ್ಥಾಣುವನ್ನು ಸ್ತುತಿಗಳಿಂದ ಸ್ತೋತ್ರಮಾಡಿದರು. ಭಗವಂತನ ಅನುಜ್ಞೆಯನ್ನು ಪಡೆದು ಪ್ರಜಾಪತಿಯ ನಾಯಕತ್ವದಲ್ಲಿದ್ದ ಸುರರು ಎಲ್ಲರೂ ಬಯಸಿದುದು ಆಯಿತೆಂದು ಪ್ರಸನ್ನರಾಗಿ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.

The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ
ತುಂಬಾ ಚೆನ್ನಾಗಿದೆ. ನನಗೆ ಅತ್ಯಾಶ್ಚರ್ಯ ಮತ್ತು ಕುತೂಹಲವೇ ಮೂಡಿದೆ. ಎಷ್ಟೂಂದು ವಿವರವಾಗಿ ಕತೆಯನ್ನು ವರ್ಣಿಸಲಾಗಿದೆ.
ಧನ್ಯವಾದಗಳು. ಮಹಾಭಾರತದ ಸೊಗಸೇ ಅದು. ಎಲ್ಲವನ್ನೂ ವಿವರವಾಗಿ ತಿಳಿಸುತ್ತದೆ. ಆಶ್ಚರ್ಯ-ಕುತೂಹಲಗಳನ್ನು ಹೆಚ್ಚಿಸುತ್ತದೆ.