Aranyaka Parva: Chapter 185

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೫

ವೈವಸ್ವತ ಮನು

ಮಾರ್ಕಂಡೇಯನು ವೈವಸ್ವತ ಮನುವಿನ ಚರಿತ್ರೆಯನ್ನು ಪ್ರಾರಂಭಿಸುವುದು (೧-೨). ಮನುವು ತಪಸ್ಸನ್ನಾಚರಿಸುತ್ತಿರಲು ಮೀನೊಂದು ಅವನ ರಕ್ಷಣೆಯನ್ನು ಕೇಳಿದ್ದುದು (೩-೯). ಅದನ್ನು ದೊಡ್ಡದಾಗುವವರೆಗೆ ಆರೈಕೆಮಾಡಿ, ಅತಿದೊಡ್ಡದಾದರಿಂದ ಅದನ್ನು ಸಾಗರಕ್ಕೆ ಬಿಡುವುದು (೧೦-೨೩). ಆ ಮೀನು ಮನುವಿಗೆ ಬರಲಿರುವ ಪ್ರಳಯದ ಕುರಿತು ಹೇಳಿದುದು (೨೪-೩೨). ಮೀನು ಹೇಳಿದಂತೆ ಮನುವು ಒಂದು ದೊಡ್ಡ ನಾವೆಯನ್ನು ನಿರ್ಮಿಸಿ ಎಲ್ಲ ಬೀಜಗಳನ್ನೂ ಒಟ್ಟುಗೂಡಿಸಿ ಸಾಗರವನ್ನು ಪ್ರವೇಶಿಸಿದುದು, ಪ್ರಲಯ ವರ್ಣನೆ (೩೩-೪೭). ಮೀನಿನ ಆದೇಶದಂತೆ ಮನುವು ಪುನಃ ಸೃಷ್ಟಿಸಿದುದು (೪೮-೫೪).

03185001 ವೈಶಂಪಾಯನ ಉವಾಚ|

03185001a ತತಃ ಸ ಪಾಂಡವೋ ಭೂಯೋ ಮಾರ್ಕಂಡೇಯಮುವಾಚ ಹ|

03185001c ಕಥಯಸ್ವೇಹ ಚರಿತಂ ಮನೋರ್ವೈವಸ್ವತಸ್ಯ ಮೇ||

ವೈಶಂಪಾಯನನು ಹೇಳಿದನು: “ಅನಂತರ ಆ ಪಾಂಡವನು ಪುನಃ ಮಾರ್ಕಂಡೇಯನಿಗೆ ಹೇಳಿದನು: “ನನಗೆ ವೈವಸ್ವತ ಮನುವಿನ ಚರಿತ್ರೆಯನ್ನು ಹೇಳು.”

03185002 ಮಾರ್ಕಂಡೇಯ ಉವಾಚ|

03185002a ವಿವಸ್ವತಃ ಸುತೋ ರಾಜನ್ಪರಮರ್ಷಿಃ ಪ್ರತಾಪವಾನ್|

03185002c ಬಭೂವ ನರಶಾರ್ದೂಲ ಪ್ರಜಾಪತಿಸಮದ್ಯುತಿಃ||

ಮಾರ್ಕಂಡೇಯನು ಹೇಳಿದನು: “ರಾಜನ್! ವಿವಸ್ವತನಿಗೆ ಪ್ರತಾಪಿ, ಪರಮ ಋಷಿ, ನರಶಾರ್ದೂಲ, ಪ್ರಜಾಪತಿಯ ಸಮದ್ಯುತಿ ಮಗನಿದ್ದನು.

03185003a ಓಜಸಾ ತೇಜಸಾ ಲಕ್ಷ್ಮ್ಯಾ ತಪಸಾ ಚ ವಿಶೇಷತಃ|

03185003c ಅತಿಚಕ್ರಾಮ ಪಿತರಂ ಮನುಃ ಸ್ವಂ ಚ ಪಿತಾಮಹಂ||

ಓಜಸ್ಸಿನಲ್ಲಿ, ತೇಜಸ್ಸಿನಲಿ, ಸಂಪತ್ತಿನಲ್ಲಿ, ಮತ್ತು ವಿಶೇಷವಾಗಿ ತಪಸ್ಸಿನಲ್ಲಿ ಆ ಮನುವು ತನ್ನ ತಂದೆಯನ್ನೂ ಪಿತಾಮಹನನ್ನೂ ಮೀರಿಸಿದ್ದನು.

03185004a ಊರ್ಧ್ವಬಾಹುರ್ವಿಶಾಲಾಯಾಂ ಬದರ್ಯಾಂ ಸ ನರಾಧಿಪಃ|

03185004c ಏಕಪಾದಸ್ಥಿತಸ್ತೀವ್ರಂ ಚಚಾರ ಸುಮಹತ್ತಪಃ||

ಆ ನರಾಧಿಪನು ವಿಶಾಲ ಬದರಿಯಲ್ಲಿ ಬಾಹುಗಳನ್ನು ಮೇಲಕ್ಕೆತ್ತಿ, ಒಂದೇ ಕಾಲಿನ ಮೇಲೆ ನಿಂತು ತೀವ್ರವಾದ ಮಹಾತಪಸ್ಸನ್ನು ಮಾಡಿದನು.

03185005a ಅವಾಕ್ಶಿರಾಸ್ತಥಾ ಚಾಪಿ ನೇತ್ರೈರನಿಮಿಷೈರ್ದೃಢಂ|

03185005c ಸೋಽತಪ್ಯತ ತಪೋ ಘೋರಂ ವರ್ಷಾಣಾಮಯುತಂ ತದಾ||

ತಲೆಯನ್ನು ಕೆಳಮಾಡಿ ಕಣ್ಣುರೆಪ್ಪೆಗಳನ್ನು ಬಡಿಯದೇ ಅವನು ಹತ್ತುಸಾವಿರ ವರ್ಷಗಳ ಪರ್ಯಂತ ಘೋರ ತಪಸ್ಸನ್ನು ಕೈಗೊಂಡನು.

03185006a ತಂ ಕದಾ ಚಿತ್ತಪಸ್ಯಂತಮಾರ್ದ್ರಚೀರಜಟಾಧರಂ|

03185006c ವೀರಿಣೀತೀರಮಾಗಮ್ಯ ಮತ್ಸ್ಯೋ ವಚನಮಬ್ರವೀತ್||

ಒಮ್ಮೆ ಅವನು ಹೀಗೆ ಒದ್ದೆಯಾಗಿದ್ದ ಚೀರವನ್ನುಟ್ಟು ಜಟಾಧಾರಿಯಾಗಿ ತಪಸ್ಸಿನಲ್ಲಿ ನಿರತನಾಗಿರಲು ಒಂದು ಮೀನು ವಿರಿಣೀತೀರಕ್ಕೆ ಬಂದು ಈ ಮಾತುಗಳನ್ನಾಡಿತು.

03185007a ಭಗವನ್ ಕ್ಷುದ್ರಮತ್ಸ್ಯೋಽಸ್ಮಿ ಬಲವದ್ಭ್ಯೋ ಭಯಂ ಮಮ|

03185007c ಮತ್ಸ್ಯೇಭ್ಯೋ ಹಿ ತತೋ ಮಾಂ ತ್ವಂ ತ್ರಾತುಮರ್ಹಸಿ ಸುವ್ರತ||

“ಭಗವನ್! ನಾನೊಂದು ಚಿಕ್ಕ ಮೀನು. ನಾನು ದೊಡ್ಡ ಮೀನುಗಳಿಂದ ಭಯಪಟ್ಟಿದ್ದೇನೆ. ಸುವ್ರತ! ಆದುದರಿಂದ ನೀನು ನನ್ನನ್ನು ರಕ್ಷಿಸಬೇಕು.

03185008a ದುರ್ಬಲಂ ಬಲವಂತೋ ಹಿ ಮತ್ಸ್ಯಂ ಮತ್ಸ್ಯಾ ವಿಶೇಷತಃ|

03185008c ಭಕ್ಷಯಂತಿ ಯಥಾ ವೃತ್ತಿರ್ವಿಹಿತಾ ನಃ ಸನಾತನೀ||

ಸನಾತನವಾಗಿ ವಿಹಿತವಾಗಿರುವ ನಡತೆಯಂತೆ ವಿಶೇಷವಾಗಿ ಬಲವಂತ ಮೀನುಗಳು ದುರ್ಬಲ ಮೀನುಗಳನ್ನು ತಿನ್ನುತ್ತವೆ.

03185009a ತಸ್ಮಾದ್ಭಯೌಘಾನ್ಮಹತೋ ಮಜ್ಜಂತಂ ಮಾಂ ವಿಶೇಷತಃ|

03185009c ತ್ರಾತುಮರ್ಹಸಿ ಕರ್ತಾಸ್ಮಿ ಕೃತೇ ಪ್ರತಿಕೃತಂ ತವ||

ಈ ವಿಶೇಷವಾಗಿ ಅಲೆಯಂತೆ ಹೊಡೆಯುತ್ತಿರುವ ಈ ಮಹಾ ಭಯದಿಂದ ನನ್ನನ್ನು ಉದ್ಧರಿಸಬೇಕು. ಹಾಗೆ ಮಾಡಿದರೆ ನಾನು ನಿನಗೆ ಪ್ರತೀಕಾರವನ್ನು ಮಾಡುತ್ತೇನೆ.”

03185010a ಸ ಮತ್ಸ್ಯವಚನಂ ಶ್ರುತ್ವಾ ಕೃಪಯಾಭಿಪರಿಪ್ಲುತಃ|

03185010c ಮನುರ್ವೈವಸ್ವತೋಽಗೃಹ್ಣಾತ್ತಂ ಮತ್ಸ್ಯಂ ಪಾಣಿನಾ ಸ್ವಯಂ||

ಆ ಮೀನಿನ ಮಾತುಗಳನ್ನು ಕೇಳಿದ ವೈವಸ್ವತ ಮನುವು ಕೃಪೆಯಿಂದ ತುಂಬಿ, ಆ ಮೀನನ್ನು ತನ್ನ ಅಂಗೈಗಳಲ್ಲಿ ಎತ್ತಿಕೊಂಡನು.

03185011a ಉದಕಾಂತಮುಪಾನೀಯ ಮತ್ಸ್ಯಂ ವೈವಸ್ವತೋ ಮನುಃ|

03185011c ಅಲಿಂಜರೇ ಪ್ರಾಕ್ಷಿಪತ್ಸ ಚಂದ್ರಾಂಶುಸದೃಶಪ್ರಭಂ||

ವೈವಸ್ವತ ಮನುವು ಚಂದ್ರನ ಕಿರಣಗಳಂತೆ ಹೊಳೆಯುತ್ತಿದ್ದ ಆ ಮೀನನ್ನು ನೀರಿನಿಂದ ಎತ್ತಿ ನೀರಿನ ಭರಣಿಯಲ್ಲಿ ಇರಿಸಿದನು.

03185012a ಸ ತತ್ರ ವವೃಧೇ ರಾಜನ್ಮತ್ಸ್ಯಃ ಪರಮಸತ್ಕೃತಃ|

03185012c ಪುತ್ರವಚ್ಚಾಕರೋತ್ತಸ್ಮಿನ್ಮನುರ್ಭಾವಂ ವಿಶೇಷತಃ||

ರಾಜನ್! ಅಲ್ಲಿ ಪರಮ ಸತ್ಕೃತವಾದ ಆ ಮೀನು ಬೆಳೆಯಿತು. ಮನುವು ಅದನ್ನು ಪುತ್ರನೆಂದೇ ತಿಳಿದು ವಿಶೇಷವಾಗಿ ಆರೈಕೆಮಾಡಿದನು.

03185013a ಅಥ ಕಾಲೇನ ಮಹತಾ ಸ ಮತ್ಸ್ಯಃ ಸುಮಹಾನಭೂತ್|

03185013c ಅಲಿಂಜರೇ ಜಲೇ ಚೈವ ನಾಸೌ ಸಮಭವತ್ಕಿಲ||

ಬಹಳ ಸಮಯದ ನಂತರ ಆ ಮೀನು ತುಂಬಾ ದೊಡ್ಡದಾಗಿ ಆ ನೀರಿನ ಭರಣಿಯು ಅದಕ್ಕೆ ಸಾಕಾಗಲಿಲ್ಲ.

03185014a ಅಥ ಮತ್ಸ್ಯೋ ಮನುಂ ದೃಷ್ಟ್ವಾ ಪುನರೇವಾಭ್ಯಭಾಷತ|

03185014c ಭಗವನ್ಸಾಧು ಮೇಽದ್ಯಾನ್ಯತ್ಸ್ಥಾನಂ ಸಂಪ್ರತಿಪಾದಯ||

ಆಗ ಮನುವನ್ನು ನೋಡಿ ಮತ್ಸ್ಯವು ಪುನಃ ಹೀಗೆ ಮಾತನಾಡಿತು: “ಭಗವನ್! ದಯವಿಟ್ಟು ನನ್ನನ್ನು ಬೇರೆ ಕಡೆ ಕೊಂಡೊಯ್ದಿಡು!”

03185015a ಉದ್ಧೃತ್ಯಾಲಿಂಜರಾತ್ತಸ್ಮಾತ್ತತಃ ಸ ಭಗವಾನ್ಮುನಿಃ|

03185015c ತಂ ಮತ್ಸ್ಯಮನಯದ್ವಾಪೀಂ ಮಹತೀಂ ಸ ಮನುಸ್ತದಾ||

ಪರಪುರಂಜಯ! ಭಗವಾನ್ ಮುನಿ ಮನುವು ಆಗ ಆ ಮೀನನ್ನು ಭರಣಿಯಿಂದ ತೆಗೆದು ದೊಡ್ಡ ಸರೋವರವೊಂದಕ್ಕೆ ತಂದು ಅಲ್ಲಿ ಅದನ್ನು ಎಸೆದನು.

03185016a ತತ್ರ ತಂ ಪ್ರಾಕ್ಷಿಪಚ್ಚಾಪಿ ಮನುಃ ಪರಪುರಂಜಯ|

03185016c ಅಥಾವರ್ಧತ ಮತ್ಸ್ಯಃ ಸ ಪುನರ್ವರ್ಷಗಣಾನ್ಬಹೂನ್||

03185017a ದ್ವಿಯೋಜನಾಯತಾ ವಾಪೀ ವಿಸ್ತೃತಾ ಚಾಪಿ ಯೋಜನಂ|

03185017c ತಸ್ಯಾಂ ನಾಸೌ ಸಮಭವನ್ಮತ್ಸ್ಯೋ ರಾಜೀವಲೋಚನ||

03185017e ವಿಚೇಷ್ಟಿತುಂ ವಾ ಕೌಂತೇಯ ಮತ್ಸ್ಯೋ ವಾಪ್ಯಾಂ ವಿಶಾಂ ಪತೇ||

03185018a ಮನುಂ ಮತ್ಸ್ಯಸ್ತತೋ ದೃಷ್ಟ್ವಾ ಪುನರೇವಾಭ್ಯಭಾಷತ|

03185018c ನಯ ಮಾಂ ಭಗವನ್ಸಾಧೋ ಸಮುದ್ರಮಹಿಷೀಂ ಪ್ರಭೋ||

03185018e ಗಂಗಾಂ ತತ್ರ ನಿವತ್ಸ್ಯಾಮಿ ಯಥಾ ವಾ ತಾತ ಮನ್ಯಸೇ||

ಆ ಮೀನು ಬಹಳ ವರ್ಷಗಳ ವರೆಗೆ ಬೆಳೆಯತೊಡಗಿತು. ಆ ಸರೋವರವು ಎರಡು ಯೋಜನ ಅಗಲವೂ ಒಂದು ಯೋಜನ ವಿಸ್ತೀರ್ಣವಾಗಿಯೂ ಇದ್ದಿತು. ರಾಜೀವಲೋಚನ! ವಿಶಾಂಪತೇ! ಅದರಲ್ಲಿಯೂ ಕೂಡ ಮತ್ಸ್ಯವು ಹಿಡಿಯದಿದ್ದಾಗ ಮತ್ತು ಚಲಿಸಲಿಕ್ಕಾಗದಿದ್ದಾಗ ಅದು ಮನುವಿಗೆ ಹೇಳಿತು: “ಭಗವನ್! ಸಾಧೋ! ಪ್ರಭೋ! ದಯವಿಟ್ಟು ನನ್ನನ್ನು ಸಮುದ್ರಮಹಿಷೀ ಗಂಗೆಗೆ ತೆಗೆದುಕೊಂಡು ಹೋಗು. ತಾತ! ನೀನು ಒಪ್ಪಿಕೊಂಡರೆ ನಾನು ಅಲ್ಲಿ ವಾಸಿಸುತ್ತೇನೆ.”

03185019a ಏವಮುಕ್ತೋ ಮನುರ್ಮತ್ಸ್ಯಮನಯದ್ಭಗವಾನ್ವಶೀ|

03185019c ನದೀಂ ಗಂಗಾಂ ತತ್ರ ಚೈನಂ ಸ್ವಯಂ ಪ್ರಾಕ್ಷಿಪದಚ್ಯುತಃ||

03185020a ಸ ತತ್ರ ವವೃಧೇ ಮತ್ಸ್ಯಃ ಕಿಂ ಚಿತ್ಕಾಲಮರಿಂದಮ|

03185020c ತತಃ ಪುನರ್ಮನುಂ ದೃಷ್ಟ್ವಾ ಮತ್ಸ್ಯೋ ವಚನಮಬ್ರವೀತ್||

03185021a ಗಂಗಾಯಾಂ ಹಿ ನ ಶಕ್ನೋಮಿ ಬೃಹತ್ತ್ವಾಚ್ಚೇಷ್ಟಿತುಂ ಪ್ರಭೋ|

03185021c ಸಮುದ್ರಂ ನಯ ಮಾಮಾಶು ಪ್ರಸೀದ ಭಗವನ್ನಿತಿ||

ಅದರ ಮಾತಿನಂತೆ ಭಗವಾನ್ ಮನುವು ಆ ಮೀನನ್ನು ಗಂಗಾನದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ತಾನೇ ಎಸೆದನು. ಅರಿಂದಮ! ಅಲ್ಲಿ ಮತ್ಸ್ಯವು ಕೆಲವು ಕಾಲ ಬೆಳೆಯಿತು. ಆಗ ಪುನಃ ಮನುವನ್ನು ನೋಡಿ ಮತ್ಸ್ಯವು ಮಾತನಾಡಿತು. “ಭಗವನ್! ಪ್ರಭೋ! ದೊಡ್ಡದಾಗಿ ಬೆಳಿದಿರುವ ನಾನು ಗಂಗೆಯಲ್ಲಿಯೂ ಚಲಿಸಲು ಅಶಕ್ತನಾಗಿದ್ದೇನೆ. ತಕ್ಷಣವೇ ಸಮುದ್ರಕ್ಕೆ ಕರೆದೊಯ್ದು ನನಗೆ ಕೃಪೆ ತೋರು.”

03185022a ಉದ್ಧೃತ್ಯ ಗಂಗಾಸಲಿಲಾತ್ತತೋ ಮತ್ಸ್ಯಂ ಮನುಃ ಸ್ವಯಂ|

03185022c ಸಮುದ್ರಮನಯತ್ಪಾರ್ಥ ತತ್ರ ಚೈನಮವಾಸೃಜತ್||

ಪಾರ್ಥ! ಮನುವು ಮತ್ಸ್ಯವನ್ನು ಗಂಗೆಯ ನೀರಿನಿಂದ ಮೇಲೆತ್ತಿ ಸಮುದ್ರಕ್ಕೆ ತಂದು ಅಲ್ಲಿ ತಾನೇ ಅದನ್ನು ವಿಸರ್ಜಿಸಿದನು.

03185023a ಸುಮಹಾನಪಿ ಮತ್ಸ್ಯಃ ಸನ್ಸ ಮನೋರ್ಮನಸಸ್ತದಾ|

03185023c ಆಸೀದ್ಯಥೇಷ್ಟಹಾರ್ಯಶ್ಚ ಸ್ಪರ್ಶಗಂಧಸುಖಶ್ಚ ವೈ||

ತುಂಬಾ ದೊಡ್ಡದಾಗಿದ್ದರೂ ಆ ಮತ್ಸ್ಯವು ಮನುವಿನ ಮನಸ್ಸಿಗೆ ಎತ್ತಿಕೊಳ್ಳಲು ತುಂಬಾ ಸುಲಭವಾಗಿತ್ತು ಮತ್ತು ಮುಟ್ಟಲು- ಮೂಸಲು ಸುಖಕರವಾಗಿತ್ತು.

03185024a ಯದಾ ಸಮುದ್ರೇ ಪ್ರಕ್ಷಿಪ್ತಃ ಸ ಮತ್ಸ್ಯೋ ಮನುನಾ ತದಾ|

03185024c ತತ ಏನಮಿದಂ ವಾಕ್ಯಂ ಸ್ಮಯಮಾನ ಇವಾಬ್ರವೀತ್||

ಸಮುದ್ರದಲ್ಲಿ ಬಿಡಲ್ಪಟ್ಟ ಆ ಮತ್ಸ್ಯವು ಮನುವಿಗೆ ಮುಗುಳ್ನಗುತ್ತಾ ಈ ಮಾತುಗಳನ್ನಾಡಿತು.

03185025a ಭಗವನ್ಕೃತಾ ಹಿ ಮೇ ರಕ್ಷಾ ತ್ವಯಾ ಸರ್ವಾ ವಿಶೇಷತಃ|

03185025c ಪ್ರಾಪ್ತಕಾಲಂ ತು ಯತ್ಕಾರ್ಯಂ ತ್ವಯಾ ತಚ್ಛ್ರೂಯತಾಂ ಮಮ||

“ಭಗವನ್! ನೀನು ನನಗೆ ಎಲ್ಲರೀತಿಯ ರಕ್ಷಣೆಯನ್ನೂ ನೀಡಿದ್ದೀಯೆ. ಈಗ ಕಾಲಪ್ರಾಪ್ತವಾದಾಗ  ನೀನು ಏನು ಮಾಡಬೇಕೆಂದು ನನ್ನಿಂದ ಕೇಳು.

03185026a ಅಚಿರಾದ್ಭಗವನ್ಭೌಮಮಿದಂ ಸ್ಥಾವರಜಂಗಮಂ|

03185026c ಸರ್ವಮೇವ ಮಹಾಭಾಗ ಪ್ರಲಯಂ ವೈ ಗಮಿಷ್ಯತಿ||

ಭಗವನ್! ಮಹಾಭಾಗ! ಸ್ವಲ್ಪವೇ ಸಮಯದಲ್ಲಿ ಈ ಭೂಮಿಯಲ್ಲಿರುವ ಸ್ಥಾವರ ಜಂಗಮಗಳೆಲ್ಲವೂ ಪ್ರಲಯದಲ್ಲಿ ಹೋಗುತ್ತವೆ.

03185027a ಸಂಪ್ರಕ್ಷಾಲನಕಾಲೋಽಯಂ ಲೋಕಾನಾಂ ಸಮುಪಸ್ಥಿತಃ|

03185027c ತಸ್ಮಾತ್ತ್ವಾಂ ಬೋಧಯಾಮ್ಯದ್ಯ ಯತ್ತೇ ಹಿತಮನುತ್ತಮಂ||

ಲೋಕಗಳನ್ನು ತೊಳೆಯುವ ಕಾಲವು ಬಂದೊದಗಿದೆ. ಆದುದರಿಂದ ನಿನಗೆ ಹಿತವಾದುದನ್ನು ಇಂದು ತಿಳಿಸಿಕೊಡುತ್ತಿದ್ದೇನೆ.

03185028a ತ್ರಸಾನಾಂ ಸ್ಥಾವರಾಣಾಂ ಚ ಯಚ್ಚೇಂಗಂ ಯಚ್ಚ ನೇಂಗತಿ|

03185028c ತಸ್ಯ ಸರ್ವಸ್ಯ ಸಂಪ್ರಾಪ್ತಃ ಕಾಲಃ ಪರಮದಾರುಣಃ||

ಚಲಿಸುವ ಮತ್ತು ಚಲಿಸದಿರುವ, ಹಂದಾಡುವ ಮತ್ತು ಹಂದಾಡದಿರುವ ಎಲ್ಲರಿಗೂ ಪರಮದಾರುಣ ಕಾಲವು ಬಂದೊದಗಿದೆ.

03185029a ನೌಶ್ಚ ಕಾರಯಿತವ್ಯಾ ತೇ ದೃಢಾ ಯುಕ್ತವಟಾಕರಾ|

03185029c ತತ್ರ ಸಪ್ತರ್ಷಿಭಿಃ ಸಾರ್ಧಮಾರುಹೇಥಾ ಮಹಾಮುನೇ||

ಮಹಾಮುನೇ! ನೀನು ಒಂದು ದೃಢ ನೌಕೆಯನ್ನು ಮಾಡಬೇಕು. ಅದಕ್ಕೊಂದು ಹಗ್ಗವನ್ನು ಕಟ್ಟಿರಬೇಕು. ಸಪ್ತ‌ಋಷಿಗಳೊಡನೆ ಅದನ್ನು ಏರಬೇಕು.

03185030a ಬೀಜಾನಿ ಚೈವ ಸರ್ವಾಣಿ ಯಥೋಕ್ತಾನಿ ಮಯಾ ಪುರಾ|

03185030c ತಸ್ಯಾಮಾರೋಹಯೇರ್ನಾವಿ ಸುಸಂಗುಪ್ತಾನಿ ಭಾಗಶಃ||

03185031a ನೌಸ್ಥಶ್ಚ ಮಾಂ ಪ್ರತೀಕ್ಷೇಥಾಸ್ತದಾ ಮುನಿಜನಪ್ರಿಯ|

03185031c ಆಗಮಿಷ್ಯಾಮ್ಯಹಂ ಶೃಂಗೀ ವಿಜ್ಞೇಯಸ್ತೇನ ತಾಪಸ||

ಮುನಿಜನಪ್ರಿಯ! ನಾನು ಹಿಂದೆ ಹೇಳಿದ ಎಲ್ಲವುಗಳ ಬೀಜಗಳನ್ನು ಆ ನಾವೆಯಲ್ಲಿಟ್ಟು ನನಗೆ ಕಾಯಬೇಕು. ತಾಪಸ! ನಾನು ಬಂದಿದುದನ್ನು ನನ್ನ ಕೋಡುಗಳಿಂದ ಗುರುತಿಸಬಹುದು.

03185032a ಏವಮೇತತ್ತ್ವಯಾ ಕಾರ್ಯಮಾಪೃಷ್ಟೋಽಸಿ ವ್ರಜಾಮ್ಯಹಂ|

03185032c ನಾತಿಶಂಕ್ಯಮಿದಂ ಚಾಪಿ ವಚನಂ ತೇ ಮಮಾಭಿಭೋ||

ಹೀಗೆ ನೀನು ಕಾರ್ಯನಿರ್ವಹಿಸಬೇಕು. ನಾನು ಹೋಗುತ್ತೇನೆ. ವಿಭೋ! ನನ್ನ ಈ ಮಾತುಗಳನ್ನು ಅತಿಯಾಗಿ ಶಂಕಿಸಬೇಡ!”

03185033a ಏವಂ ಕರಿಷ್ಯ ಇತಿ ತಂ ಸ ಮತ್ಸ್ಯಂ ಪ್ರತ್ಯಭಾಷತ|

03185033c ಜಗ್ಮತುಶ್ಚ ಯಥಾಕಾಮಮನುಜ್ಞಾಪ್ಯ ಪರಸ್ಪರಂ||

“ನಾನು ಹಾಗೆಯೇ ಮಾಡುತ್ತೇನೆ” ಎಂದು ಮತ್ಸ್ಯಕ್ಕೆ ಉತ್ತರಿಸಿದನು. ಪರಸ್ಪರರಿಂದ ಬೀಳ್ಕೊಂಡು ತಮಗೆನಿಸಿದ್ದಲ್ಲಿಗೆ ಹೋದರು.

03185034a ತತೋ ಮನುರ್ಮಹಾರಾಜ ಯಥೋಕ್ತಂ ಮತ್ಸ್ಯಕೇನ ಹ|

03185034c ಬೀಜಾನ್ಯಾದಾಯ ಸರ್ವಾಣಿ ಸಾಗರಂ ಪುಪ್ಲುವೇ ತದಾ||

03185034e ನಾವಾ ತು ಶುಭಯಾ ವೀರ ಮಹೋರ್ಮಿಣಮರಿಂದಮ|

ಅರಿಂದಮ! ವೀರ! ಅನಂತರ ಮಹಾರಾಜ ಮನುವು ಮತ್ಸ್ಯವು ಹೇಳಿದಂತೆ ಎಲ್ಲ ಬೀಜಗಳನ್ನೂ ಒಟ್ಟುಗೂಡಿಸಿ, ಸುಂದರ ನಾವೆಯಲ್ಲಿ ಇಟ್ಟು ಉಕ್ಕುತ್ತಿದ್ದ ಸಾಗರದಲ್ಲಿ ತೇಲಿದನು.

03185035a ಚಿಂತಯಾಮಾಸ ಚ ಮನುಸ್ತಂ ಮತ್ಸ್ಯಂ ಪೃಥಿವೀಪತೇ||

03185035c ಸ ಚ ತಚ್ಚಿಂತಿತಂ ಜ್ಞಾತ್ವಾ ಮತ್ಸ್ಯಃ ಪರಪುರಂಜಯ|

03185035e ಶೃಂಗೀ ತತ್ರಾಜಗಾಮಾಶು ತದಾ ಭರತಸತ್ತಮ||

ಪೃಥಿವೀಪತೇ! ಮನುವು ಮತ್ಸ್ಯದ ಕುರಿತು ಚಿಂತಿಸಿದನು. ಪರಪುರಂಜಯ! ಭರತಸತ್ತಮ! ಅವನು ಚಿಂತಿಸುತ್ತಿದ್ದಾನೆ ಎಂದು ತಿಳಿದು ಕೋಡನ್ನುಳ್ಳ ಮತ್ಸ್ಯವು ಅಲ್ಲಿ ಬಂದಿತು.

03185036a ತಂ ದೃಷ್ಟ್ವಾ ಮನುಜೇಂದ್ರೇಂದ್ರ ಮನುರ್ಮತ್ಸ್ಯಂ ಜಲಾರ್ಣವೇ|

03185036c ಶೃಂಗಿಣಂ ತಂ ಯಥೋಕ್ತೇನ ರೂಪೇಣಾದ್ರಿಮಿವೋಚ್ಚ್ರಿತಂ||

ಹೇಳಿದಂತೆ ಕೋಡನ್ನು ಹೊಂದಿ ರೂಪದಲ್ಲಿ ಪರ್ವತದಂತಿರುವ ಅದನ್ನು ಇಂದ್ರ ಮನುವು ಸಮುದ್ರದಲ್ಲಿ ನೋಡಿದನು.

03185037a ವಟಾಕರಮಯಂ ಪಾಶಮಥ ಮತ್ಸ್ಯಸ್ಯ ಮೂರ್ಧನಿ|

03185037c ಮನುರ್ಮನುಜಶಾರ್ದೂಲ ತಸ್ಮಿಂ ಶೃಂಗೇ ನ್ಯವೇಶಯತ್||

ಅವನು ಹಗ್ಗಕ್ಕೆ ಗಂಟು ಮಾಡಿ ಅದನ್ನು ಮತ್ಸ್ಯದ ತಲೆಯ ಮೇಲಿದ್ದ ಕೋಡಿಗೆ ಸಿಲುಕಿಸಿದನು.

03185038a ಸಂಯತಸ್ತೇನ ಪಾಶೇನ ಮತ್ಸ್ಯಃ ಪರಪುರಂಜಯ|

03185038c ವೇಗೇನ ಮಹತಾ ನಾವಂ ಪ್ರಾಕರ್ಷಲ್ಲವಣಾಂಭಸಿ||

ಪರಪುರಂಜಯ! ಗಂಟಿಗೆ ಸಿಲುಕಿದ ಆ ಮತ್ಸ್ಯವು ಆ ನಾವೆಯನ್ನು ಬಹುವೇಗದಿಂದ ಸಮುದ್ರದಲ್ಲಿ ಎಳೆದುಕೊಂಡು ಹೋಯಿತು.

03185039a ಸ ತತಾರ ತಯಾ ನಾವಾ ಸಮುದ್ರಂ ಮನುಜೇಶ್ವರ|

03185039c ನೃತ್ಯಮಾನಮಿವೋರ್ಮೀಭಿರ್ಗರ್ಜಮಾನಮಿವಾಂಭಸಾ||

ಮನುಜೇಶ್ವರ! ಅದು ಅಲೆಗಳೊಂದಿಗೆ ನರ್ತಿಸುತ್ತಿದ್ದ, ನೀರಿನಿಂದ ಭೋರ್ಗರೆಯುತ್ತಿದ್ದ ಸಮುದ್ರವನ್ನು ನಾವೆಯೊಂದಿಗೆ ದಾಟಿತು.

03185040a ಕ್ಷೋಭ್ಯಮಾಣಾ ಮಹಾವಾತೈಃ ಸಾ ನೌಸ್ತಸ್ಮಿನ್ಮಹೋದಧೌ|

03185040c ಘೂರ್ಣತೇ ಚಪಲೇವ ಸ್ತ್ರೀ ಮತ್ತಾ ಪರಪುರಂಜಯ||

ಪರಪುರಂಜಯ! ಮಹಾಗಾಳಿಯ ಹೊಡೆತಕ್ಕೆ ಸಿಲುಕಿದ ಆ ನಾವೆಯು ಅಮಲಿನಲ್ಲಿದ್ದ ಚಪಲ ಸ್ತ್ರೀಯಂತೆ ಓಲಾಡುತ್ತಿತ್ತು.

03185041a ನೈವ ಭೂಮಿರ್ನ ಚ ದಿಶಃ ಪ್ರದಿಶೋ ವಾ ಚಕಾಶಿರೇ|

03185041c ಸರ್ವಮಾಂಭಸಮೇವಾಸೀತ್ಖಂ ದ್ಯೌಶ್ಚ ನರಪುಂಗವ||

ನರಪುಂಗವ! ನೋಡಲು ಒಂದು ಚೂರು ಭೂಮಿಯೂ ಇರಲಿಲ್ಲ, ಆಕಾಶದ ಬಿಂದುವೂ ಇರಲಿಲ್ಲ. ಆಕಾಶ ಮತ್ತು ದಿಗಂತ ಎಲ್ಲವೂ ನೀರಿನಿಂದ ತುಂಬಿತ್ತು.

03185042a ಏವಂಭೂತೇ ತದಾ ಲೋಕೇ ಸಂಕುಲೇ ಭರತರ್ಷಭ|

03185042c ಅದೃಶ್ಯಂತ ಸಪ್ತರ್ಷಯೋ ಮನುರ್ಮತ್ಸ್ಯಃ ಸಹೈವ ಹ||

ಭರತರ್ಷಭ! ಈ ರೀತಿ ಲೋಕವು ಸಂಕುಲಕ್ಕೆ ಸಿಲುಕಿದಾಗ ಕೇವಲ ಸಪರ್ಷಿಗಳು, ಮನು ಮತ್ತು ಮತ್ಸ್ಯರನ್ನು ಕಾಣಬಹುದಾಗಿತ್ತು.

03185043a ಏವಂ ಬಹೂನ್ವರ್ಷಗಣಾಂಸ್ತಾಂ ನಾವಂ ಸೋಽಥ ಮತ್ಸ್ಯಕಃ|

03185043c ಚಕರ್ಷಾತಂದ್ರಿತೋ ರಾಜಂಸ್ತಸ್ಮಿನ್ಸಲಿಲಸಂಚಯೇ||

ರಾಜನ್! ಈ ರೀತಿ ಬಹಳ ವರ್ಷಗಳ ಪರ್ಯಂತ ಆ ಮತ್ಸ್ಯವು ನಾವೆಯನ್ನು ನಿರಾಯಾಸವಾಗಿ ಆ ನೀರಿನ ಮೇಲೆ ಎಳೆಯಿತು.

03185044a ತತೋ ಹಿಮವತಃ ಶೃಂಗಂ ಯತ್ಪರಂ ಪುರುಷರ್ಷಭ|

03185044c ತತ್ರಾಕರ್ಷತ್ತತೋ ನಾವಂ ಸ ಮತ್ಸ್ಯಃ ಕುರುನಂದನ||

ಪುರುಷರ್ಷಭ! ಕುರುನಂದನ! ಅನಂತರ ಮತ್ಸ್ಯವು ನಾವೆಯನ್ನು ಹಿಮಾಲಯದ ಪರಮ ಶಿಖರಕ್ಕೆ ಎಳೆದೊಯ್ಯಿತು.

03185045a ತತೋಽಬ್ರವೀತ್ತದಾ ಮತ್ಸ್ಯಸ್ತಾನೃಷೀನ್ಪ್ರಹಸಂ ಶನೈಃ|

03185045c ಅಸ್ಮಿನ್ ಹಿಮವತಃ ಶೃಂಗೇ ನಾವಂ ಬಧ್ನೀತ ಮಾಚಿರಂ||

ಆಗ ತೆಳುವಾಗಿ ಮುಗುಳ್ನಗುತ್ತಾ ಮತ್ಸ್ಯವು ಋಷಿಗಳಿಗೆ ಹೇಳಿತು: “ತಡಮಾಡದೇ ನೌಕೆಯನ್ನು ಈ ಹಿಮಾಲಯದ ಶಿಖರಕ್ಕೆ ಕಟ್ಟಿ.”

03185046a ಸಾ ಬದ್ಧಾ ತತ್ರ ತೈಸ್ತೂರ್ಣಮೃಷಿಭಿರ್ಭರತರ್ಷಭ|

03185046c ನೌರ್ಮತ್ಸ್ಯಸ್ಯ ವಚಃ ಶ್ರುತ್ವಾ ಶೃಂಗೇ ಹಿಮವತಸ್ತದಾ||

ಭರತರ್ಷಭ! ಮತ್ಸ್ಯನ ಮಾತುಗಳನ್ನು ಕೇಳಿ ಅವರು ಬೇಗನೆ ನೌಕೆಯನ್ನು ಹಿಮಾಲಯದ ಶಿಖರಕ್ಕೆ ಕಟ್ಟಿದರು.

03185047a ತಚ್ಚ ನೌಬಂಧನಂ ನಾಮ ಶೃಂಗಂ ಹಿಮವತಃ ಪರಂ|

03185047c ಖ್ಯಾತಮದ್ಯಾಪಿ ಕೌಂತೇಯ ತದ್ವಿದ್ಧಿ ಭರತರ್ಷಭ||

ಕೌಂತೇಯ! ಭರತರ್ಷಭ! ಈಗಲೂ ಕೂಡ ಹಿಮಾಲಯದ ಆ ಪರಮ ಶೃಂಗವು ನೌಬಂಧನ ಎಂಬ ಹೆಸರಿನಿಂದ ಖ್ಯಾತಿಯಾಗಿದೆ.

03185048a ಅಥಾಬ್ರವೀದನಿಮಿಷಸ್ತಾನೃಷೀನ್ಸಹಿತಾಂಸ್ತದಾ|

03185048c ಅಹಂ ಪ್ರಜಾಪತಿರ್ಬ್ರಹ್ಮಾ ಮತ್ಪರಂ ನಾಧಿಗಮ್ಯತೇ||

03185048e ಮತ್ಸ್ಯರೂಪೇಣ ಯೂಯಂ ಚ ಮಯಾಸ್ಮಾನ್ಮೋಕ್ಷಿತಾ ಭಯಾತ್||

ಆಗ ರೆಪ್ಪೆಬಡಿಯದ ಆ ಮತ್ಸ್ಯವು ಸೇರಿದ್ದ ಋಷಿಗಳಿಗೆ ಹೇಳಿತು: “ನಾನು ಪ್ರಜಾಪತಿ ಬ್ರಹ್ಮ. ನನಗಿಂತ ಅಧಿಕವಾದುದು ಇನ್ನೊಂದಿಲ್ಲ. ಮತ್ಸ್ಯರೂಪದಿಂದ ನಿಮ್ಮನ್ನು ಈ ಭಯದಿಂದ ಮೋಕ್ಷಗೊಳಿಸಿದ್ದೇನೆ.

03185049a ಮನುನಾ ಚ ಪ್ರಜಾಃ ಸರ್ವಾಃ ಸದೇವಾಸುರಮಾನವಾಃ|

03185049c ಸ್ರಷ್ಟವ್ಯಾಃ ಸರ್ವಲೋಕಾಶ್ಚ ಯಚ್ಚೇಂಗಂ ಯಚ್ಚ ನೇಂಗತಿ||

ಈಗ ಮನುವು ಎಲ್ಲ ಪ್ರಜೆಗಳನ್ನೂ ದೇವಾಸುರಮಾನವರನ್ನು, ಎಲ್ಲ ಲೋಕಗಳನ್ನೂ, ಚಲಿಸುವ ಮತ್ತು ಜಲಿಸದಿರುವವುಗಳನ್ನು ಸೃಷ್ಟಿಸುವವನಿದ್ದಾನೆ.

03185050a ತಪಸಾ ಚಾತಿತೀವ್ರೇಣ ಪ್ರತಿಭಾಸ್ಯ ಭವಿಷ್ಯತಿ|

03185050c ಮತ್ಪ್ರಸಾದಾತ್ಪ್ರಜಾಸರ್ಗೇ ನ ಚ ಮೋಹಂ ಗಮಿಷ್ಯತಿ||

ಅತಿ ತೀವ್ರ ತಪಸ್ಸಿನಿಂದ ಅವನಿಗೆ ಮುಂದಾಗುವುದೆಲ್ಲವೂ ತೋರಿಸಿಕೊಳ್ಳುತ್ತದೆ. ನನ್ನ ಪ್ರಸಾದದಿಂದ ಪ್ರಜೆಗಳ ಸೃಷ್ಟಿಯಲ್ಲಿ ಯಾವುದೇ ತಪ್ಪು ನಡೆಯುವುದಿಲ್ಲ.”

03185051a ಇತ್ಯುಕ್ತ್ವಾ ವಚನಂ ಮತ್ಸ್ಯಃ ಕ್ಷಣೇನಾದರ್ಶನಂ ಗತಃ|

03185051c ಸ್ರಷ್ಟುಕಾಮಃ ಪ್ರಜಾಶ್ಚಾಪಿ ಮನುರ್ವೈವಸ್ವತಃ ಸ್ವಯಂ||

03185051e ಪ್ರಮೂಢೋಽಭೂತ್ಪ್ರಜಾಸರ್ಗೇ ತಪಸ್ತೇಪೇ ಮಹತ್ತತಃ||

ಈ ಮಾತುಗಳನ್ನಾಡಿ ಕ್ಷಣಾರ್ಧದಲ್ಲಿ ಮತ್ಸ್ಯವು ಕಾಣಿಸದೇ ಹೋಯಿತು. ಮನು ವೈವಸ್ವತನು ಸ್ವಯಂ ಪ್ರಜೆಗಳನ್ನು ಸೃಷ್ಟಿಸಲು ಬಯಸಿದನು. ಪ್ರಜೆಗಳನ್ನು ಸೃಷ್ಟಿಸುವುದು ಹೇಗೆಂದು ತಿಳಿಯದೇ ಮಹತ್ತರ ತಪಸ್ಸನ್ನು ತಪಿಸಿದನು.

03185052a ತಪಸಾ ಮಹತಾ ಯುಕ್ತಃ ಸೋಽಥ ಸ್ರಷ್ಟುಂ ಪ್ರಚಕ್ರಮೇ|

03185052c ಸರ್ವಾಃ ಪ್ರಜಾ ಮನುಃ ಸಾಕ್ಷಾದ್ಯಥಾವದ್ಭರತರ್ಷಭ||

ಭರತರ್ಷಭ! ಆ ಮಹಾತಪಸ್ಸಿನಿಂದ ಯುಕ್ತನಾದ ಮನುವು ತಾನೇ ಸರ್ವ ಪ್ರಜೆಗಳನ್ನು ಸೃಷ್ಟಿಸಲು ತೊಡಗಿದನು.

03185053a ಇತ್ಯೇತನ್ಮಾತ್ಸ್ಯಕಂ ನಾಮ ಪುರಾಣಂ ಪರಿಕೀರ್ತಿತಂ|

03185053c ಆಖ್ಯಾನಮಿದಮಾಖ್ಯಾತಂ ಸರ್ವಪಾಪಹರಂ ಮಯಾ||

ಹೀಗೆ ನಾನು ಮತ್ಸ್ಯಕ ಎಂಬ ಪುರಾಣವನ್ನು ವಿವರಿಸಿದ್ದೇನೆ. ಸರ್ವಪಾಪಗಳನ್ನೂ ಹರಣಗೊಳಿಸುವ ಈ ಆಖ್ಯಾನವನ್ನು ನಾನು ಹೇಳಿದ್ದೇನೆ.

03185054a ಯ ಇದಂ ಶೃಣುಯಾನ್ನಿತ್ಯಂ ಮನೋಶ್ಚರಿತಮಾದಿತಃ|

03185054c ಸ ಸುಖೀ ಸರ್ವಸಿದ್ಧಾರ್ಥಃ ಸ್ವರ್ಗಲೋಕಮಿಯಾನ್ನರಃ||

ಮನುವಿನ ಈ ಚರಿತ್ರೆಯನ್ನು ಪ್ರಾರಂಭದಿಂದ ಯಾರು ನಿತ್ಯವೂ ಕೇಳುತ್ತಾರೋ ಆ ನರರು ಸುಖಿಗಳೂ, ಸರ್ವಾರ್ಥ ಸಿದ್ಧರೂ ಆಗಿ ಸ್ವರ್ಗಲೋಕವನ್ನು ಪಡೆಯುತ್ತಾರೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಮತ್ಸ್ಯೋಪಾಖ್ಯಾನೇ ಪಂಚಶೀತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಮತ್ಸ್ಯೋಪಾಖ್ಯಾನದಲ್ಲಿ ನೂರಾಎಂಭತ್ತೈದನೆಯ ಅಧ್ಯಾಯವು.

Related image

Comments are closed.