Aranyaka Parva: Chapter 104

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೪

ಭಗೀರಥ

ಬಹುಕಾಲದ ನಂತರ ರಾಜಾ ಭಗೀರಥನು ತನ್ನ ಬಂಧುಗಳ ಕಾರಣದಿಂದ ಸಮುದ್ರಕ್ಕೆ ಅದರ ಪ್ರಾಕೃತಿಕ ಸ್ವರೂಪವನ್ನು ಕೊಡುತ್ತಾನೆಂದು ಬ್ರಹ್ಮನು ಹೇಳುವುದು (೧-೨). ಯುಧಿಷ್ಠಿರನು ಕೇಳಲು ಲೋಮಶನು ಭಗೀರಥನ ಚರಿತ್ರೆಯನ್ನು ಪ್ರಾರಂಭಿಸಿದುದು (೩-೫). ಇಕ್ಷ್ವಾಕುವಂಶದ ರಾಜಾ ಸಗರನು ಹರನ ಪ್ರಸಾದದಿಂದ ತನ್ನ ಒಬ್ಬಳು ಪತ್ನಿಯಲ್ಲಿ ೬೦,೦೦೦ ಪುತ್ರರರನ್ನೂ ಇನ್ನೊಬ್ಬಳಲ್ಲಿ ಓರ್ವ ಮಗನನ್ನೂ ಪಡೆದುದು (೬-೨೨).

03104001 ಲೋಮಶ ಉವಾಚ|

03104001a ತಾನುವಾಚ ಸಮೇತಾಂಸ್ತು ಬ್ರಹ್ಮಾ ಲೋಕಪಿತಾಮಹಃ|

03104001c ಗಚ್ಚಧ್ವಂ ವಿಬುಧಾಃ ಸರ್ವೇ ಯಥಾಕಾಮಂ ಯಥೇಪ್ಸಿತಂ||

ಲೋಮಶನು ಹೇಳಿದನು: “ಲೋಕಪಿತಾಮಹ ಬ್ರಹ್ಮನು ಅಲ್ಲಿ ಸೇರಿದ್ದ ದೇವತೆಗಳಿಗೆ ಹೇಳಿದನು: “ವಿಬುಧರೇ! ನೀವೆಲ್ಲರೂ ನಿಮಗಿಷ್ಟವಾದಲ್ಲಿಗೆ ಹೋಗಿ.

03104002a ಮಹತಾ ಕಾಲಯೋಗೇನ ಪ್ರಕೃತಿಂ ಯಾಸ್ಯತೇಽರ್ಣವಃ|

03104002c ಜ್ಞಾತೀನ್ವೈ ಕಾರಣಂ ಕೃತ್ವಾ ಮಹಾರಾಜ್ಞೋ ಭಗೀರಥಾತ್||

ಮಹಾ ಕಾಲದ ನಂತರ ಮಹಾರಾಜ ಭಗೀರಥನು ತನ್ನ ಬಾಂಧವರ ಕಾರಣದಿಂದ ಸಮುದ್ರವು ತನ್ನ ಪ್ರಾಕೃತಿಕ ಸ್ವರೂಪವನ್ನು ಪಡೆಯುವಂತೆ ಮಾಡುತ್ತಾನೆ.”

03104003 ಯುಧಿಷ್ಠಿರ ಉವಾಚ|

03104003a ಕಥಂ ವೈ ಜ್ಞಾತಯೋ ಬ್ರಹ್ಮನ್ಕಾರಣಂ ಚಾತ್ರ ಕಿಂ ಮುನೇ|

03104003c ಕಥಂ ಸಮುದ್ರಃ ಪೂರ್ಣಶ್ಚ ಭಗೀರಥಪರಿಶ್ರಮಾತ್||

ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಮುನೇ! ಬಾಂಧವರು ಅದಕ್ಕೆ ಹೇಗೆ ಕಾರಣರಾದರು? ಭಗೀರಥನ ಪರಿಶ್ರಮದಿಂದ ಸಮುದ್ರವು ಹೇಗೆ ತುಂಬಿಕೊಂಡಿತು?

03104004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ|

03104004c ಕಥ್ಯಮಾನಂ ತ್ವಯಾ ವಿಪ್ರ ರಾಜ್ಞಾಂ ಚರಿತಮುತ್ತಮಂ||

ತಪೋಧನ! ಇದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ವಿಪ್ರ! ಆ ರಾಜನ ಉತ್ತಮ ಚರಿತ್ರೆಯನ್ನು ನೀನು ಹೇಳು.””

03104005 ವೈಶಂಪಾಯನ ಉವಾಚ|

03104005a ಏವಮುಕ್ತಸ್ತು ವಿಪ್ರೇಂದ್ರೋ ಧರ್ಮರಾಜ್ಞಾ ಮಹಾತ್ಮನಾ|

03104005c ಕಥಯಾಮಾಸ ಮಾಹಾತ್ಮ್ಯಂ ಸಗರಸ್ಯ ಮಹಾತ್ಮನಃ||

ವೈಶಂಪಾಯನನು ಹೇಳಿದನು: “ಧರ್ಮರಾಜ ಮಹಾತ್ಮನು ಹೀಗೆ ಹೇಳಲು ವಿಪ್ರೇಂದ್ರನು ಮಹಾತ್ಮ ಸಗರನ ಮಹಾತ್ಮೆಯನ್ನು ಹೇಳಿದನು.

03104006 ಲೋಮಶ ಉವಾಚ|

03104006a ಇಕ್ಷ್ವಾಕೂಣಾಂ ಕುಲೇ ಜಾತಃ ಸಗರೋ ನಾಮ ಪಾರ್ಥಿವಃ|

03104006c ರೂಪಸತ್ತ್ವಬಲೋಪೇತಃ ಸ ಚಾಪುತ್ರಃ ಪ್ರತಾಪವಾನ್||

ಲೋಮಶನು ಹೇಳಿದನು: “ಇಕ್ಷ್ವಾಕುಗಳ ಕುಲದಲ್ಲಿ ಸಗರ ಎಂಬ ಹೆಸರಿನ ರೂಪ, ಸಂಪತ್ತು ಮತ್ತು ಬಲಾನ್ವಿತ ರಾಜನು ಜನಿಸಿದನು. ಆ ಪ್ರತಾಪವಂತನಿಗೆ ಪುತ್ರರಿರಲಿಲ್ಲ.

03104007a ಸ ಹೈಹಯಾನ್ಸಮುತ್ಸಾದ್ಯ ತಾಲಜಂಘಾಂಶ್ಚ ಭಾರತ|

03104007c ವಶೇ ಚ ಕೃತ್ವಾ ರಾಜ್ಞೋಽನ್ಯಾನ್ಸ್ವರಾಜ್ಯಮನ್ವಶಾಸತ||

ಭಾರತ! ಅವನು ಹೈಹಯರನ್ನು ಹೊರಹೊಟ್ಟು, ತಾಲಜಂಘರನ್ನು ಮತ್ತು ಇತರ ರಾಜರನ್ನು ವಶೀಕರಿಸಿ ತನ್ನ ರಾಜ್ಯವನ್ನು ಆಳಿದನು.

03104008a ತಸ್ಯ ಭಾರ್ಯೇ ತ್ವಭವತಾಂ ರೂಪಯೌವನದರ್ಪಿತೇ|

03104008c ವೈದರ್ಭೀ ಭರತಶ್ರೇಷ್ಠ ಶೈಬ್ಯಾ ಚ ಭರತರ್ಷಭ||

ಭರತಶ್ರೇಷ್ಠ! ಭರತರ್ಷಭ! ಅವನಿಗೆ ರೂಪಯೌವನದರ್ಪಿತರಾದ ಇಬ್ಬರು ಪತ್ನಿಯರಿದ್ದರು - ವಿದರ್ಭರಾಜಕುಮಾರಿ ಮತ್ತು ಶಿಬಿಯ ಮಗಳು.

03104009a ಸ ಪುತ್ರಕಾಮೋ ನೃಪತಿಸ್ತತಾಪ ಸುಮಹತ್ತಪಃ|

03104009c ಪತ್ನೀಭ್ಯಾಂ ಸಹ ರಾಜೇಂದ್ರ ಕೈಲಾಸಂ ಗಿರಿಮಾಶ್ರಿತಃ||

ರಾಜೇಂದ್ರ! ಪುತ್ರರನ್ನು ಬಯಸಿದ ಆ ನೃಪತಿಯು ತನ್ನ ಇಬ್ಬರೂ ಪತ್ನಿಯರೊಂದಿಗೆ ಕೈಲಾಸ ಗಿರಿಯನ್ನು ಸೇರಿ ಮಹಾ ತಪಸ್ಸನ್ನು ಆಚರಿಸಿದನು.

03104010a ಸ ತಪ್ಯಮಾನಃ ಸುಮಹತ್ತಪೋ ಯೋಗಸಮನ್ವಿತಃ|

03104010c ಆಸಸಾದ ಮಹಾತ್ಮಾನಂ ತ್ರ್ಯಕ್ಷಂ ತ್ರಿಪುರಮರ್ದನಂ||

03104011a ಶಂಕರಂ ಭವಮೀಶಾನಂ ಶೂಲಪಾನಿಂ ಪಿನಾಕಿನಂ|

03104011c ತ್ರ್ಯಂಬಕಂ ಶಿವಮುಗ್ರೇಶಂ ಬಹುರೂಪಮುಮಾಪತಿಂ||

ಯೋಗಸಮನ್ವಿತನಾಗಿ ಮಹಾತಪಸ್ಸನ್ನು ಅವನು ತಪಿಸುತ್ತಿರಲು ಅಲ್ಲಿಗೆ ಮಹಾತ್ಮ, ಮುಕ್ಕಣ್ಣ, ತ್ರಿಪುರಮರ್ದನ, ಶಂಕರ, ಭವ, ಈಶ, ಶೂಲಪಾಣಿ, ಪಿನಾಕಿ, ತ್ರ್ಯಂಬಕ, ಉಗ್ರೇಶ, ಬಹುರೂಪಿ, ಉಮಾಪತಿ ಶಿವನು ಬಂದನು.

03104012a ಸ ತಂ ದೃಷ್ಟ್ವೈವ ವರದಂ ಪತ್ನೀಭ್ಯಾಂ ಸಹಿತೋ ನೃಪಃ|

03104012c ಪ್ರಣಿಪತ್ಯ ಮಹಾಬಾಹುಃ ಪುತ್ರಾರ್ಥಂ ಸಮಯಾಚತ||

ಆ ವರದನನ್ನು ಕಂಡ ತಕ್ಷಣ ಪತ್ನಿಯರ ಸಹಿತ ಆ ಮಹಾಬಾಹು ನೃಪನು ಸಾಷ್ಟಾಂಗ ನಮಸ್ಕರಿಸಿ ಪುತ್ರನನ್ನು ಬೇಡಿದನು.

03104013a ತಂ ಪ್ರೀತಿಮಾನ್ ಹರಃ ಪ್ರಾಹ ಸಭಾರ್ಯಂ ನೃಪಸತ್ತಮಂ|

03104013c ಯಸ್ಮಿನ್ವೃತೋ ಮುಹೂರ್ತೇಽಹಂ ತ್ವಯೇಹ ನೃಪತೇ ವರಂ||

03104014a ಷಷ್ಟಿಃ ಪುತ್ರಸಹಸ್ರಾಣಿ ಶೂರಾಃ ಸಮರದರ್ಪಿತಾಃ|

03104014c ಏಕಸ್ಯಾಂ ಸಂಭವಿಷ್ಯಂತಿ ಪತ್ನ್ಯಾಂ ತವ ನರೋತ್ತಮ||

ಅವನಿಂದ ಸಂತೋಷಗೊಂಡ ಹರನು ಭಾರ್ಯೆಯರೊಂದಿಗಿದ್ದ ನೃಪಸತ್ತಮನಿಗೆ ಹೇಳಿದನು: “ನೃಪತೇ! ನರೋತ್ತಮ! ನೀನು ಯಾವ ಮುಹೂರ್ತದಲ್ಲಿ ನನ್ನಲ್ಲಿ ವರವನ್ನು ಕೇಳಿಕೊಂಡಿದ್ದೀಯೋ ಅದರಂತೆ ನಿನಗೆ ಅರವತ್ತು ಸಾವಿರ ಶೂರರಾದ, ಸಮರದರ್ಪಿತ ಪುತ್ರರು ನಿನ್ನ ಪತ್ನಿಯರಲ್ಲಿ ಒಬ್ಬಳಲ್ಲಿ ಹುಟ್ಟುತ್ತಾರೆ. 

03104015a ತೇ ಚೈವ ಸರ್ವೇ ಸಹಿತಾಃ ಕ್ಷಯಂ ಯಾಸ್ಯಂತಿ ಪಾರ್ಥಿವ|

03104015c ಏಕೋ ವಂಶಧರಃ ಶೂರ ಏಕಸ್ಯಾಂ ಸಂಭವಿಷ್ಯತಿ||

03104015e ಏವಮುಕ್ತ್ವಾ ತು ತಂ ರುದ್ರಸ್ತತ್ರೈವಾಂತರಧೀಯತ||

ಪಾರ್ಥಿವ! ಆದರೆ ಅವರೆಲ್ಲರೂ ಒಟ್ಟಿಗೇ ಕ್ಷಯವನ್ನು ಹೊಂದುವರು. ಇನ್ನೊಬ್ಬ ಪತ್ನಿಯಲ್ಲಿ ವಂಶವನ್ನು ನಡೆಸಿಕೊಂಡು ಹೋಗುವ ಒಬ್ಬನೇ ಶೂರನು ಹುಟ್ಟುತ್ತಾನೆ.” ಹೀಗೆ ಹೇಳಿದ ರುದ್ರ ಶಂಕರನು ಅಲ್ಲಿಯೇ ಅಂತರ್ಧಾನನಾದನು.

03104016a ಸ ಚಾಪಿ ಸಗರೋ ರಾಜಾ ಜಗಾಮ ಸ್ವಂ ನಿವೇಶನಂ|

03104016c ಪತ್ನೀಭ್ಯಾಂ ಸಹಿತಸ್ತಾತ ಸೋಽತಿಹೃಷ್ಟಮನಾಸ್ತದಾ||

ಅನಂತರ ರಾಜ ಸಗರನು ತನ್ನ ಈರ್ವರು ಪತ್ನಿಯರೊಂದಿಗೆ ಅತೀವ ಸಂತೋಷಗೊಂಡು ತನ್ನ ಅರಮನೆಗೆ ಮರಳಿದನು.

03104017a ತಸ್ಯಾಥ ಮನುಜಶ್ರೇಷ್ಠ ತೇ ಭಾರ್ಯೇ ಕಮಲೇಕ್ಷಣೇ|

03104017c ವೈದರ್ಭೀ ಚೈವ ಶೈಬ್ಯಾ ಚ ಗರ್ಭಿಣ್ಯೌ ಸಂಬಭೂವತುಃ||

03104018a ತತಃ ಕಾಲೇನ ವೈದರ್ಭೀ ಗರ್ಭಾಲಾಬುಂ ವ್ಯಜಾಯತ|

03104018c ಶೈಬ್ಯಾ ಚ ಸುಷುವೇ ಪುತ್ರಂ ಕುಮಾರಂ ದೇವರೂಪಿಣಂ||

ಮನುಜಶ್ರೇಷ್ಠ! ಆಗ ಅವನ ಈರ್ವರು ಕಮಲೇಕ್ಷಣೆ ಭಾರ್ಯೆಯರು - ವೈದರ್ಭಿ ಮತ್ತು ಶೈಭ್ಯೆ - ಗರ್ಭಿಣಿಯರಾದರು. ಕಾಲಾಂತರದಲ್ಲಿ ವೈದರ್ಭಿಯ ಗರ್ಭದಿಂದ ಚೀನೀಕಾಯಿಯಂತಹ ಪಿಂಡವು ಹುಟ್ಟಿತು ಮತ್ತು ಶೈಭ್ಯೆಯಲ್ಲಿ ದೇವರೂಪಿ, ಕುಮಾರ ಪುತ್ರನು ಹುಟ್ಟಿದನು. 

03104019a ತದಾಲಾಬುಂ ಸಮುತ್ಸ್ರಷ್ಟುಂ ಮನಶ್ಚಕ್ರೇ ಸ ಪಾರ್ಥಿವಃ|

03104019c ಅಥಾಂತರಿಕ್ಷಾಚ್ಛುಶ್ರಾವ ವಾಚಂ ಗಂಭೀರನಿಸ್ವನಾಂ||

ರಾಜನು ಆ ಚೀನೀಕಾಯಿಯನ್ನು (ಗರ್ಭಪಿಂಡವನ್ನು) ಬಿಸಾಡಲು ಮನಸ್ಸುಮಾಡಿದಾಗ ಅಂತರಿಕ್ಷದಿಂದ ಗಂಭೀರ ಧ್ವನಿಯಲ್ಲಿ ವಾಣಿಯೊಂದು ಕೇಳಿಸಿತು.

03104020a ರಾಜನ್ಮಾ ಸಾಹಸಂ ಕಾರ್ಷೀಃ ಪುತ್ರಾನ್ನ ತ್ಯಕ್ತುಮರ್ಹಸಿ|

03104020c ಅಲಾಬುಮಧ್ಯಾನ್ನಿಷ್ಕೃಷ್ಯ ಬೀಜಂ ಯತ್ನೇನ ಗೋಪ್ಯತಾಂ||

03104021a ಸೋಪಸ್ವೇದೇಷು ಪಾತ್ರೇಷು ಘೃತಪೂರ್ಣೇಷು ಭಾಗಶಃ|

“ರಾಜನ್! ದುಡಕಬೇಡ! ನಿನ್ನ ಪುತ್ರರನ್ನು ತ್ಯಜಿಸಬೇಡ! ಈ ಚೀನೀಕಾಯಿಯಿಂದ ಬೀಜಗಳನ್ನು ತೆಗೆದು, ಒಂದೊಂದನ್ನೂ ಪ್ರತ್ಯೇಕ ತುಪ್ಪ ತುಂಬಿದ ಕೊಡಗಳಲ್ಲಿ ಇಟ್ಟು ಜಾಗರೂಕತೆಯಿಂದ ಕಾದಿರಿಸು.

03104021c ತತಃ ಪುತ್ರಸಹಸ್ರಾಣಿ ಷಷ್ಟಿಂ ಪ್ರಾಪ್ಸ್ಯಸಿ ಪಾರ್ಥಿವ||

03104022a ಮಹಾದೇವೇನ ದಿಷ್ಟಂ ತೇ ಪುತ್ರಜನ್ಮ ನರಾಧಿಪ|

03104022c ಅನೇನ ಕ್ರಮಯೋಗೇನ ಮಾ ತೇ ಬುದ್ಧಿರತೋಽನ್ಯಥಾ||

ಅನಂತರ ಪಾರ್ಥಿವ! ಅರವತ್ತು ಸಾವಿರ ಪುತ್ರರನ್ನು ಪಡೆಯುತ್ತೀಯೆ. ನರಾಧಿಪ! ಹೀಗೆಯೇ ನಿನ್ನ ಪುತ್ರರು ಜನಿಸಬೇಕೆಂದು ಮಹಾದೇವನು ನಿರ್ಧರಿಸಿದ್ದಾನೆ. ಬೇರೆ ಯಾವ ಕೆಲಸ-ಯೋಚನೆಗಳನ್ನೂ ನೀನು ಮಾಡಬಾರದು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಚತುರಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿ ಕಥನದಲ್ಲಿ ನೂರಾನಾಲ್ಕನೆಯ ಅಧ್ಯಾಯವು.

Related image

Comments are closed.