ವಸಿಷ್ಠಾಪವಾಹ ಚರಿತ್ರೆ
ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 41ರಲ್ಲಿ ಹೇಳುತ್ತಾನೆ.
ತಪಸ್ಸಿನಲ್ಲಿ ಪರಸ್ಪರರ ಸ್ಪರ್ಧೆಯುಂಟಾದುದರಿಂದ ವಿಶ್ವಾಮಿತ್ರ ಮತ್ತು ಋಷಿ ವಸಿಷ್ಠರಲ್ಲಿ ತುಂಬಾ ವೈರವು ಬೆಳೆಯಿತು. ಸರಸ್ವತಿಯ ಪೂರ್ವದಿಕ್ಕಿನ ಸ್ಥಾಣುತೀರ್ಥವು ವಸಿಷ್ಠನ ಮಹಾ ಆಶ್ರಮವಾಗಿತ್ತು. ನದಿಯ ಪಶ್ಚಿಮದಲ್ಲಿ ಧೀಮತ ವಿಶ್ವಾಮಿತ್ರನ ಆಶ್ರಮವಿತ್ತು. ಅಲ್ಲಿಯೇ ಸ್ಥಾಣುವು ಮಹಾತಪಸ್ಸನ್ನು ತಪಿಸಿದ್ದನು. ಅಲ್ಲಿ ಅವನು ಘೋರ ತಪಸ್ಸಿನಲ್ಲಿ ತೊಡಗಿದ್ದನು. ಭಗವಾನ್ ಸ್ಥಾಣುವು ಸರಸ್ವತಿಯನ್ನು ಪೂಜಿಸಿ ಅಲ್ಲಿ ಸ್ಥಾಪಿಸಿದುದರಿಂದ ಆ ತೀರ್ಥವು ಸ್ಥಾಣುತೀರ್ಥವೆಂದಾಯಿತು. ಅಲ್ಲಿಯೇ ಸರ್ವ ಸುರರೂ ಸುರಾರಿ ಸ್ಕಂದನನ್ನು ಮಹಾ ಸೇನಾಪತಿಯಾಗಿ ಅಭಿಷೇಕಿಸಿದರು. ಅದೇ ಸರಸ್ವತೀ ತೀರ್ಥದಲ್ಲಿ ಮಹಾಮುನಿ ವಿಶ್ವಾಮಿತ್ರನು ಉಗ್ರ ತಪಸ್ಸಿನಿಂದ ವಸಿಷ್ಠನನ್ನು ವಿಚಲಿತನನ್ನಾಗಿಸಿದನು. ತಪೋಧನ ವಿಶ್ವಾಮಿತ್ರ-ವಸಿಷ್ಠರಿಬ್ಬರೂ ದಿನನಿತ್ಯವೂ ಉಗ್ರ ತಪಸ್ಸನ್ನು ಮಾಡುತ್ತಾ ಸ್ಪರ್ಧಿಸುತ್ತಿದ್ದರು. ತಾನು ಅಧಿಕವಾಗಿ ತಪಿಸುತ್ತಿದ್ದರೂ ಮಹಾಮುನಿ ವಿಶ್ವಾಮಿತ್ರನು ವಸಿಷ್ಠನ ತೇಜಸ್ಸನ್ನು ನೋಡಿ ಚಿಂತಾಪರನಾದನು. ಆ ಧರ್ಮನಿತ್ಯನಲ್ಲಿ ಈ ಯೋಚನೆಯು ಮೂಡಿತು: “ಈ ಸರಸ್ವತಿಯು ಅತಿವೇಗದಿಂದ ಕೂಡಲೇ ತಪೋಧನ ಜಪಿಶ್ರೇಷ್ಠ ವಸಿಷ್ಠನನ್ನು ನನ್ನ ಸಮೀಪಕ್ಕೆ ಕರೆತರುತ್ತಾಳೆ. ಇಲ್ಲಿಗೆ ಬಂದ ದ್ವಿಜಶ್ರೇಷ್ಠನನ್ನು ನಾನು ಸಂಹರಿಸುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!”
ಈ ರೀತಿ ನಿಶ್ಚಯಿಸಿದ ಮಹಾಮುನಿ ವಿಶ್ವಾಮಿತ್ರನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಸರಿತಶ್ರೇಷ್ಠೆ ಸರಸ್ವತಿಯನ್ನು ಸ್ಮರಿಸಿದನು. ವಿಶ್ವಾಮಿತ್ರ ಮುನಿಯು ತನ್ನನ್ನು ಧ್ಯಾನಿಸುತ್ತಿದ್ದಾನೆಂದೂ ಆ ಮಹಾವೀರ್ಯನು ಮಹಾಕೋಪದಿಂದಿದ್ದಾನೆಂದೂ ತಿಳಿದ ಭಾಮಿನೀ ಸರಸ್ವತಿಯು ವ್ಯಾಕುಲಗೊಂಡಳು. ವಿವರ್ಣಳಾಗಿ ನಡುಗುತ್ತಾ ಸರಸ್ವತಿಯು ಕೈಮುಗಿದು ಮುನಿವರ ವಿಶ್ವಾಮಿತ್ರನ ಬಳಿ ಉಪಸ್ಥಿತಳಾದಳು. ವೀರನನ್ನು ಕಳೆದುಕೊಂಡ ನಾರಿಯಂತೆ ತುಂಬಾ ದುಃಖಿತಳಾಗಿದ್ದ ಅವಳು “ಏನು ಮಾಡಬೇಕು?” ಎಂದು ಮುನಿಸತ್ತಮನಿಗೆ ಕೇಳಿದಳು. “ವಸಿಷ್ಠನನ್ನು ಶೀಘ್ರದಲ್ಲಿಯೇ ಇಲ್ಲಿಗೆ ಕರೆತಾ! ಅವನನ್ನು ಇಂದು ಸಂಹರಿಸುತ್ತೇನೆ!” ಎಂದು ಕ್ರುದ್ಧ ಮುನಿಯು ಅವಳಿಗೆ ಹೇಳಲು, ಅದನ್ನು ಕೇಳಿದ ನದಿಯು ವ್ಯಥಿತಳಾದಳು. ಕಮಲದಂತಹ ಕಣ್ಣುಳ್ಳ ಅವಳು ಕೈಮುಗಿದು ಸುಂಟರಗಾಳಿಗೆ ಸಿಲುಕಿದ ಲತೆಯಂತೆ ಭೀತಳಾಗಿ ನಡುಗುತ್ತಾ ವಿವ್ಯಥಳಾದಳು. ಅವಳು ಹೋಗದೇ ಇನ್ನೂ ಕೈಮುಗಿದು ನಡುಗುತ್ತಾ ನಿಂತಿರುವುದನ್ನು ನೋಡಿ ಕ್ರುದ್ಧ ವಿಶ್ವಾಮಿತ್ರನು “ವಸಿಷ್ಠನನ್ನು ಶೀಘ್ರವಾಗಿ ಇಲ್ಲಿಗೆ ಕರೆತಾ!” ಎಂದು ಪುನಃ ಹೇಳಿದನು. ಇಬ್ಬರ ಶಾಪಗಳಿಂದಲೂ ಭೀತಳಾದ ಸರಿತ ಶ್ರೇಷ್ಠೆಯು ಮುಂದೇನಾಗುವುದು ಎಂದು ಚಿಂತಿಸತೊಡಗಿದಳು. ಆಗ ಆ ಸರಿತಶ್ರೇಷ್ಠೆಯು ವಸಿಷ್ಠನ ಬಳಿಹೋಗಿ ಧೀಮಂತ ವಿಶ್ವಾಮಿತ್ರನು ಹೇಳಿದುದೆಲ್ಲವನ್ನೂ ಅವನಿಗೆ ತಿಳಿಸಿದಳು. ಇಬ್ಬರ ಶಾಪದಿಂದಲೂ ಭೀತಳಾಗಿ ಪುನಃ ಪುನಃ ನಡುಗುತ್ತಿದ್ದ ಅವಳು ಋಷಿಯ ಮಹಾಶಾಪದ ಕುರಿತು ಬಹಳವಾಗಿ ಚಿಂತಿಸಿದಳು.
ಕೃಶಳೂ, ವಿವರ್ಣಳೂ, ಚಿಂತಾಸಮಾನ್ವಿತಳೂ ಆದ ಅವಳನ್ನು ನೋಡಿ ನರರಲ್ಲಿಯೇ ಶ್ರೇಷ್ಠ ಧರ್ಮಾತ್ಮಾ ವಸಿಷ್ಠನು ಹೀಗೆ ಹೇಳಿದನು: “ಸರಿತಶ್ರೇಷ್ಠೇ! ಮೊದಲು ನಿನ್ನ ರಕ್ಷಣೆ ಮಾಡಿಕೊಳ್ಳಬೇಕು. ಶೀಘ್ರವಾಗಿ ಹರಿದು ನನ್ನನ್ನು ಅವನಿರುವಲ್ಲಿಗೆ ತೇಲಿಸಿಕೊಂಡು ಹೋಗು. ಇಲ್ಲವಾದರೆ ವಿಶ್ವಾಮಿತ್ರನು ನಿನ್ನನ್ನು ಶಪಿಸಬಹುದು. ಇದರ ಕುರಿತು ನೀನು ವಿಚಾರಣೆ ಮಾಡಬೇಡ!” ಕೃಪಾಶೀಲನ ಆ ಮಾತನ್ನು ಕೇಳಿದ ನದೀ ಸರಸ್ವತಿಯು “ಏನು ಮಾಡಿದರೆ ಒಳ್ಳೇಯದಾದೀತು?” ಎಂದು ಚಿಂತಿಸತೊಡಗಿದಳು. ಅವಳಲ್ಲಿ ಈ ವಿಚಾರವು ಹುಟ್ಟಿಕೊಂಡಿತು: “ವಸಿಷ್ಠನು ನನ್ನ ಮೇಲೆ ಅತೀವ ದಯೆಯನ್ನು ಮಾಡಿದ್ದಾನೆ. ಅವನಿಗೆ ಹಿತವಾದ ಕಾರ್ಯವನ್ನು ನಾನೂ ಈಗ ಮಾಡಬೇಕಾಗಿದೆ.”
ತನ್ನ ತೀರದಲ್ಲಿ ಜಪಿಸುತ್ತಿದ್ದ ಮತ್ತು ಹವನಗೈಯುತ್ತಿದ್ದ ಋಷಿಸತ್ತಮ ಕೌಶಿಕನನ್ನು ನೋಡಿ ಸರಸ್ವತಿಯು ಯೋಚಿಸಿದಳು. ಇದೇ ಸಮಯವೆಂದು ತಿಳಿದು ಸರಿತ ಶ್ರೇಷ್ಠೆ ಸರಸ್ವತಿಯು ತನ್ನ ವೇಗದಿಂದ ವಸಿಷ್ಠನ ಆಶ್ರಮವನ್ನೇ ಕೊಚ್ಚಿಕೊಂಡು ಹೋದಳು. ತನ್ನ ಇಡೀ ಆಶ್ರಮವೇ ತೇಲಿಕೊಂಡು ಹೋಗುತ್ತಿರುವುದರಿಂದ ಮೈತ್ರಾವರುಣಿ ವಸಿಷ್ಠನಿಗೆ ಯಾವ ತೊಂದರೆಯೂ ಆಗಲಿಲ್ಲ. ಅದರಿಂದ ತೃಪ್ತ ವಸಿಷ್ಠನು ಸರಸ್ವತಿಯನ್ನು ಈ ರೀತಿ ಸ್ತುತಿಸಿದನು: “ಸರಸ್ವತೀ! ಪಿತಾಮಹನ ಸರೋವರದಿಂದ ಹರಿದುಬಂದಿರುವೆ. ನಿನ್ನ ಉತ್ತಮ ನೀರಿನಿಂದ ಜಗತ್ತೆಲ್ಲವೂ ವ್ಯಾಪ್ತವಾಗಿದೆ. ದೇವೀ! ನೀನೇ ಆಕಾಶದಲ್ಲಿ ಹರಿದು ಮೇಘಗಳಲ್ಲಿ ನೀರನ್ನು ತುಂಬಿಸುವೆ! ಹಾಗೆ ಸರ್ವ ನೀರೂ ನೀನೇ ಆಗಿರುವೆ. ನಿನ್ನಿಂದಲೇ ನಾವು ವೇದಾಧ್ಯಯನ ಮಾಡಬಹುದಾಗಿದೆ. ನೀನು ಪುಷ್ಟಿ, ದ್ಯುತಿ, ಕೀರ್ತಿ, ಸಿದ್ಧಿ, ವೃದ್ಧಿ ಮತ್ತು ಉಮಾ. ನೀನೇ ವಾಣೀ, ನೀನೇ ಸ್ವಾಹಾ! ನಿನ್ನಿಂದಲೇ ಈ ಜಗತ್ತು ನಡೆಯುತ್ತಿದೆ. ನೀನೇ ಎಲ್ಲ ಪ್ರಾಣಿಗಳಲ್ಲಿಯೂ ಚತುರ್ವಿಧೆಯಾಗಿ[1] ವಾಸಿಸುತ್ತಿರುವೆ!”
ಮಹರ್ಷಿಯಿಂದ ಹೀಗೆ ಸ್ತುತಿಸಲ್ಪಡುತ್ತಿದ್ದ ಸರಸ್ವತಿಯು ವೇಗದಿಂದ ಆ ವಿಪ್ರನನ್ನು ವಿಶ್ವಾಮಿತ್ರನ ಆಶ್ರಮದ ಕಡೆ ಕೊಂಡೊಯ್ದು ಅವನು ಬಂದಿರುವುದನ್ನು ಮುನಿ ವಿಶ್ವಾಮಿತ್ರನಿಗೆ ನಿವೇದಿಸಿದಳು. ಸರಸ್ವತಿಯು ಅವನನ್ನು ಕರೆತಂದಿರುವುದನ್ನು ನೋಡಿದ ವಿಶ್ವಾಮಿತ್ರನು ಕೋಪಸಮನ್ವಿತನಾಗಿ ವಸಿಷ್ಠನನ್ನು ಕೊಲ್ಲಲು ಆಯುಧವನ್ನು ಹುಡುಕತೊಡಗಿದನು. ಅವನು ಕ್ರುದ್ಧನಾಗಿರುವುದನ್ನು ನೋಡಿ ಬ್ರಹ್ಮಹತ್ಯೆಯ ಭಯದಿಂದ ಆ ನದಿಯು ವಸಿಷ್ಠನನ್ನು ಪೂರ್ವದಿಕ್ಕಿನೆಡೆಗೆ ತೇಲಿಸಿಕೊಂಡು ಹೋದಳು. ಅವಳು ಇಬ್ಬರ ಮಾತಿನಂತೆಯೂ ಮಾಡಿದಳು. ಆದರೆ ಗಾಧಿಜನು ಮಾತ್ರ ವಂಚಿತನಾದನು. ಋಷಿಸತ್ತಮ ವಸಿಷ್ಠನನ್ನು ತೇಲಿಸಿಕೊಂಡು ಹೋದುದನ್ನು ನೋಡಿ ಸಂಕ್ರುದ್ಧನಾದ ಅಸಹನಶೀಲ ವಿಶ್ವಾಮಿತ್ರನು ಇಂತೆಂದನು: “ಸರಿತಶ್ರೇಷ್ಠೇ! ನನ್ನನ್ನು ವಂಚಿಸಿ ಪುನಃ ಹಿಂದಿರುಗಿದ ನೀನು ರಕ್ತವಾಹಿನಿಯಾಗಿ ರಾಕ್ಷಸಗಣಕ್ಕೆ ಅತ್ಯಂತ ಪ್ರಿಯಳಾಗು!”
ಧೀಮತ ವಿಶ್ವಾಮಿತ್ರನಿಂದ ಶಪಿತಳಾದ ಸರಸ್ವತಿಯು ಒಂದು ವರ್ಷಕಾಲ ರಕ್ತ-ಮಿಶ್ರಿತ ನೀರಾಗಿ ಹರಿದಳು. ಸರಸ್ವತಿಯು ಹಾಗಾಗಿದ್ದುದನ್ನು ನೋಡಿ ಋಷಿ-ದೇವತೆ-ಗಂಧರ್ವರು, ಮತ್ತು ಹಾಗೆಯೇ ಅಪ್ಸರೆಯರು ಅತ್ಯಂತ ದುಃಖಿತರಾದರು. ಹೀಗೆ ವಸಿಷ್ಠಾಪವಾಹವು ಲೋಕದಲ್ಲಿ ಪ್ರಖ್ಯಾತವಾಯಿತು. ಆ ಸರಿತ ಶ್ರೇಷ್ಠೆಯು ಪುನಃ ತನ್ನ ಮಾರ್ಗದಲ್ಲಿಯೇ ಹರಿಯತೊಡಗಿದಳು.
ಕ್ರುದ್ಧ ಧೀಮತ ವಿಶ್ವಾಮಿತ್ರನಿಂದ ಶಪಿತಳಾದ ಆ ಶುಭ್ರ ಶ್ರೇಷ್ಠ ತೀರ್ಥದಲ್ಲಿ ರಕ್ತವು ಹರಿಯತೊಡಗಿತು. ಎಲ್ಲ ರಾಕ್ಷಸರು ಅಲ್ಲಿಗೆ ಹೋಗಿ ರಕ್ತವನ್ನು ಕುಡಿದು ಸುಖವನ್ನು ಹೊಂದುತ್ತಿದ್ದರು. ತುಂಬಾ ತೃಪ್ತರಾಗಿ, ಚಿಂತೆಗಳನ್ನು ಕಳೆದುಕೊಂಡು ಸುಖಿಗಳಾಗಿ ಅವರು ಸ್ವರ್ಗವನ್ನೇ ಜಯಿಸಿದರೋ ಎನ್ನುವಂತೆ ನಗುತ್ತಾ ಕುಣಿದಾಡುತ್ತಿದ್ದರು. ಸ್ವಲ್ಪ ಕಾಲದ ನಂತರ ತಪೋಧನ ಋಷಿಗಳು ತೀರ್ಥಯಾತ್ರೆಗೈಯುತ್ತಾ ಸರಸ್ವತೀ ತೀರಕ್ಕೆ ಬಂದರು. ಅಲ್ಲಿದ್ದ ಎಲ್ಲ ತೀರ್ಥಗಳಲ್ಲಿ ಮುಳುಗಿ ಮುನಿಪುಂಗವರು ಪರಮ ಸಂತೋಷವನ್ನು ಹೊಂದಿದರು. ತಪೋಲುಬ್ಧರಾದ ಆ ವಿಶಾರದರು ಆ ತೀರ್ಥಕ್ಕೂ ಬಂದರು. ಅಲ್ಲಿಗೆ ಬಂದು ಆ ಮಹಾಭಾಗರು ದಾರುಣ ಸರಸ್ವತಿಯ ನೀರು ರಕ್ತದಿಂದ ಕೂಡಿದ್ದುದನ್ನೂ ಅನೇಕ ರಾಕ್ಷಸರು ಅದನ್ನು ಕುಡಿಯುತ್ತಿರುವುದನ್ನೂ ನೋಡಿದರು. ಆ ರಾಕ್ಷಸರನ್ನು ನೋಡಿ ಸಂಶಿತವ್ರತ ಮುನಿಗಳು ಸರಸ್ವತಿಯನ್ನು ಉದ್ಧರಿಸಲು ಪರಮ ಪ್ರಯತ್ನಗಳನ್ನು ಮಾಡಿದರು. ಆ ಮಹಾಭಾಗ ಮಹಾವ್ರತರೆಲ್ಲರೂ ಒಟ್ಟಾಗಿ ಸರಿತ ಶ್ರೇಷ್ಠೆಯನ್ನು ಕರೆದು ಇಂತೆಂದರು: “ಕಲ್ಯಾಣೀ! ನಿನ್ನ ಈ ಮಡುವು ರಾಕ್ಷಸರಿಂದ ಸಮಾಕುಲವಾಗಿರಲು ಕಾರಣವೇನೆಂದು ಹೇಳು! ಅದನ್ನು ಕೇಳಿ ನಾವು ಅದಕ್ಕೆ ಪರಿಹಾರದ ಪ್ರಯತ್ನವನ್ನು ಮಾಡುತ್ತೇವೆ.”
ನಡುಗುತ್ತಾ ಅವಳು ನಡೆದುದೆಲ್ಲವನ್ನೂ ಅವರಿಗೆ ಹೇಳಿದಳು. ದುಃಖಿತಳಾಗಿದ್ದ ಅವಳನ್ನು ನೋಡಿ ತಪೋಧನರು ಹೇಳಿದರು: “ಅನಘೇ! ಶಾಪದ ಕಾರಣವನ್ನು ನಾವು ಕೇಳಿದೆವು. ನಾವೆಲ್ಲ ತಪೋಧನರೂ ಇರುವ ಪ್ರಯತ್ನಗಳನ್ನು ಮಾಡುತ್ತೇವೆ!”
ಸರಿತಶ್ರೇಷ್ಠೆಗೆ ಹೀಗೆ ಹೇಳಿ ಅವರು “ನಾವೆಲ್ಲರೂ ಈ ಸರಸ್ವತಿಯನ್ನು ಶಾಪದಿಂದ ವಿಮೋಚನೆಗೊಳಿಸೋಣ!” ಎಂದು ಪರಸ್ಪರರಲ್ಲಿ ಮಾತನಾಡಿಕೊಂಡರು. ಅವರ ಆ ಮಾತಿನಿಂದಲೇ ಸರಸ್ವತಿಯು ತನ್ನ ಸ್ವಭಾವವನ್ನು ಪಡೆದು ಹಿಂದಿನಂತೆ ಪ್ರಸನ್ನ ನೀರಾಗಿ ಹರಿಯತೊಡಗಿದಳು. ಆ ಸರಿತಶ್ರೇಷ್ಠೆಯು ಶಾಪವಿಮುಕ್ತಳಾಗಿ ಮೊದಲಿನಂತೆಯೇ ಆದಳು. ಸರಸ್ವತಿಯ ನೀರಿಗೆ ಮುನಿಗಳು ಮಾಡಿದುದನ್ನು ನೋಡಿ ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ರಾಕ್ಷಸರು ಅಂಜಲೀ ಬದ್ಧರಾಗಿ ಆ ಕೃಪಾಯುಕ್ತ ಮುನಿಗಳೆಲ್ಲರಲ್ಲಿ ಪುನಃ ಪುನಃ ಕೇಳಿಕೊಂಡರು. “ನಾವು ಹಸಿವಿನಿಂದ ಸಂಕಟಪಡುತ್ತಿದ್ದೇವೆ. ಶಾಶ್ವತವಾಗಿ ಧರ್ಮಹೀನರೂ ಆಗಿದ್ದೇವೆ. ಸ್ವ-ಇಚ್ಛೆಯಿಂದ ನಾವು ಈ ಪಾಪಕಾರ್ಯಗಳನ್ನು ಮಾಡುತ್ತಿಲ್ಲ. ನಿಮ್ಮಂಥವರ ಅಪ್ರಸನ್ನತೆಯಿಂದಾಗಿಯೇ ನಾವು ದುಷ್ಕರ್ಮಗಳನ್ನು ಮಾಡುತ್ತಾ ಹೋಗುತ್ತೇವೆ. ನಮ್ಮ ಪಾಪವು ಸದಾ ವರ್ಧಿಸುತ್ತಾ ಬಂದು ಈಗ ನಾವು ಬ್ರಹ್ಮರಾಕ್ಷಸರಾಗಿದ್ದೇವೆ. ಬ್ರಾಹ್ಮಣರನ್ನು ದ್ವೇಷಿಸುವ ವೈಶ್ಯ-ಶೂದ್ರ-ಕ್ಷತ್ರಿಯರು ಇಲ್ಲಿ ರಾಕ್ಷಸರಾಗಿ ಹುಟ್ಟುತ್ತಾರೆ. ಆಚಾರ್ಯ-ಋತ್ವಿಜ-ಗುರು-ವೃದ್ಧಜನ ಮತ್ತು ಪ್ರಾಣಿಗಳನ್ನು ಯಾರು ಅಪಮಾನಿಸುತ್ತಾರೋ ಅವರು ಇಲ್ಲಿ ರಾಕ್ಷಸರಾಗುತ್ತಾರೆ. ಸ್ತ್ರೀಯರ ಯೋನಿದೋಷದಿಂದಾಗಿ ಪಾಪಗಳು ಹೆಚ್ಚಾಗುತ್ತವೆ. ಲೋಕಗಳನ್ನೇ ಉದ್ಧರಿಸಬಲ್ಲ ನೀವು ದ್ವಿಜಸತ್ತಮರು ನಮ್ಮ ಮೇಲೆ ಕಾರುಣ್ಯವನ್ನು ತೋರಿಸಬೇಕು.”
ಅವರ ಮಾತನ್ನು ಕೇಳಿ ಮುನಿಗಳು ಮಹಾನದಿ ಸರಸ್ವತಿಯನ್ನು ಸ್ತುತಿಸಿ ತೃಪ್ತಿಗೊಳಿಸಿದರು. ಅನಂತರ ಪ್ರಸನ್ನಮನಸ್ಕರಾದ ಅವರು ರಾಕ್ಷಸರ ಮೋಕ್ಷಕ್ಕಾಗಿ ಹೀಗೆ ಹೇಳಿದರು: “ಉಗುಳಾಗಲೀ ಕೀಟವಾಗಲೀ ಬಿದ್ದಿರುವ, ತಿಂದು ಮಿಕ್ಕಿದ, ಕೂದಲಿರುವ, ತಿರಸ್ಕಾರಪೂರ್ವಕವಾಗಿ ಕೊಟ್ಟಿರುವ, ಅಳುವಿನ ಕಣ್ಣೀರು ಬಿದ್ದಿರುವ, ನಾಯಿಯು ಮುಟ್ಟಿರುವ ಅನ್ನಗಳೆಲ್ಲವೂ ರಾಕ್ಷಸರು ಭಕ್ಷಿಸಲು ಯೋಗ್ಯವಾದವುಗಳು. ಆದುದರಿಂದ ವಿಧ್ವಾಂಸನು ಅಂಥಹ ದೋಷಗಳಿರುವ ಅನ್ನವನ್ನು ಯಾವಾಗಲೂ ಪ್ರಯತ್ನಪೂರ್ವಕವಾಗಿ ವರ್ಜಿಸಬೇಕು. ಇಂತಹ ಅನ್ನವನ್ನು ತಿನ್ನುವವನು ರಾಕ್ಷಸಾನ್ನವನ್ನು ತಿಂದಂತೆ!”
ಅನಂತರ ಆ ತೀರ್ಥವನ್ನು ಶುದ್ಧಿಗೊಳಿಸಿ ರಾಕ್ಷಸರ ಮೋಕ್ಷಕ್ಕಾಗಿ ಆ ತಪೋಧನ ಋಷಿಗಳು ಪುನಃ ನದೀ ಸರಸ್ವತಿಯನ್ನು ಪ್ರಚೋದಿಸಿದರು. ಋಷಿಗಳ ಇಂಗಿತವನ್ನು ಅರಿತ ಸರಿತಶ್ರೇಷ್ಠೆಯು ತನ್ನ ಶರೀರವನ್ನು ಎಣೆಗೆಂಪಾಗಿ ಪರಿವರ್ತಿಸಿಕೊಂಡಳು. ರಾಕ್ಷಸರು ಅವಳಲ್ಲಿ ಸ್ನಾನಮಾಡಿ ಶರೀರತ್ಯಾಗ ಮಾಡಿ ಸ್ವರ್ಗಕ್ಕೆ ಹೋದರು. ಆ ಅರುಣಾ ತೀರ್ಥವು ಬ್ರಹ್ಮಹತ್ಯಾದೋಷವನ್ನೂ ಹೋಗಲಾಡಿಸುವಂಥಹುದು. ಇದರ ಅರ್ಥವನ್ನು ಅರಿತುಕೊಂಡಿದ್ದ ಶತಕ್ರತು ದೇವರಾಜನು ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಬ್ರಹ್ಮಹತ್ಯಾಪಾಪದಿಂದ ವಿಮುಕ್ತನಾದನು.

[1] ಪರಾ, ಪಶ್ಯಂತೀ, ಮಧ್ಯಮಾ ಮತ್ತು ವೈಖರೀ ಈ ನಾಲ್ಕು ರೂಪಗಳಲ್ಲಿ ಸರಸ್ವತಿಯು ಎಲ್ಲ ಪ್ರಾಣಿಗಳಲ್ಲಿ ಆವಿರ್ಭೂತಳಾಗಿರುವಳು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ