Shalya Parva: Chapter 41

ಶಲ್ಯಪರ್ವ: ಸಾರಸ್ವತಪರ್ವ

೪೧

ವಸಿಷ್ಠಾಪವಾಹ ಚರಿತ್ರೆ (೧-೩೯).

09041001 ಜನಮೇಜಯ ಉವಾಚ

09041001a ವಸಿಷ್ಠಸ್ಯಾಪವಾಹೋ ವೈ ಭೀಮವೇಗಃ ಕಥಂ ನು ಸಃ|

09041001c ಕಿಮರ್ಥಂ ಚ ಸರಿಚ್ಚ್ರೇಷ್ಠಾ ತಂ ಋಷಿಂ ಪ್ರತ್ಯವಾಹಯತ್||

ಜನಮೇಜಯನು ಹೇಳಿದನು: “ವಸಿಷ್ಠಾಪವಾಹದಲ್ಲಿ ಸರಸ್ವತಿಯು ಏಕೆ ಭೀಮವೇಗದಲ್ಲಿ ಪ್ರವಹಿಸುತ್ತಾಳೆ? ಯಾವಕಾರಣಕ್ಕಾಗಿ ಆ ಸರಿತಶ್ರೇಷ್ಠೆಯು ಋಷಿ ವಸಿಷ್ಠನನ್ನು ತೇಲಿಸಿಕೊಂಡು ಹೋದಳು?

09041002a ಕೇನ ಚಾಸ್ಯಾಭವದ್ವೈರಂ ಕಾರಣಂ ಕಿಂ ಚ ತತ್ಪ್ರಭೋ|

09041002c ಶಂಸ ಪೃಷ್ಟೋ ಮಹಾಪ್ರಾಜ್ಞ ನ ಹಿ ತೃಪ್ಯಾಮಿ ಕಥ್ಯತಾಂ||

ಪ್ರಭೋ! ಮಹಾಪ್ರಾಜ್ಞ! ಯಾವ ಕಾರಣದಿಂದ ಅಲ್ಲಿ ವೈರವುಂಟಾಯಿತು? ಇದರ ಕುರಿತು ಹೇಳು. ನಿನ್ನ ಮಾತುಗಳನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ!”

09041003 ವೈಶಂಪಾಯನ ಉವಾಚ

09041003a ವಿಶ್ವಾಮಿತ್ರಸ್ಯ ಚೈವರ್ಷೇರ್ವಸಿಷ್ಠಸ್ಯ ಚ ಭಾರತ|

09041003c ಭೃಶಂ ವೈರಮಭೂದ್ರಾಜಂಸ್ತಪಃಸ್ಪರ್ಧಾಕೃತಂ ಮಹತ್||

ವೈಶಂಪಾಯನನು ಹೇಳಿದನು: “ಭಾರತ! ತಪಸ್ಸಿನಲ್ಲಿ ಪರಸ್ಪರರ ಸ್ಪರ್ಧೆಯುಂಟಾದುದರಿಂದ ವಿಶ್ವಾಮಿತ್ರ ಮತ್ತು ಋಷಿ ವಸಿಷ್ಠರಲ್ಲಿ ತುಂಬಾ ವೈರವು ಬೆಳೆಯಿತು.

09041004a ಆಶ್ರಮೋ ವೈ ವಸಿಷ್ಠಸ್ಯ ಸ್ಥಾಣುತೀರ್ಥೇಽಭವನ್ಮಹಾನ್|

09041004c ಪೂರ್ವತಃ ಪಶ್ಚಿಮಶ್ಚಾಸೀದ್ವಿಶ್ವಾಮಿತ್ರಸ್ಯ ಧೀಮತಃ||

ಸರಸ್ವತಿಯ ಪೂರ್ವದಿಕ್ಕಿನ ಸ್ಥಾಣುತೀರ್ಥವು ವಸಿಷ್ಠನ ಮಹಾ ಆಶ್ರಮವಾಗಿತ್ತು. ನದಿಯ ಪಶ್ಚಿಮದಲ್ಲಿ ಧೀಮತ ವಿಶ್ವಾಮಿತ್ರನ ಆಶ್ರಮವಿತ್ತು.

09041005a ಯತ್ರ ಸ್ಥಾಣುರ್ಮಹಾರಾಜ ತಪ್ತವಾನ್ಸುಮಹತ್ತಪಃ|

09041005c ಯತ್ರಾಸ್ಯ ಕರ್ಮ ತದ್ಘೋರಂ ಪ್ರವದಂತಿ ಮನೀಷಿಣಃ||

ಮಹಾರಾಜ! ಅಲ್ಲಿಯೇ ಸ್ಥಾಣುವು ಮಹಾತಪಸ್ಸನ್ನು ತಪಿಸಿದ್ದನು. ಅಲ್ಲಿ ಅವನು ಮಾಡಿದ ಘೋರ ತಪಸ್ಸಿನ ಕುರಿತು ಮನೀಷಿಣರು ಈಗಲೂ ವರ್ಣಿಸುತ್ತಾರೆ.

09041006a ಯತ್ರೇಷ್ಟ್ವಾ ಭಗವಾನ್ ಸ್ಥಾಣುಃ ಪೂಜಯಿತ್ವಾ ಸರಸ್ವತೀಂ|

09041006c ಸ್ಥಾಪಯಾಮಾಸ ತತ್ತೀರ್ಥಂ ಸ್ಥಾಣುತೀರ್ಥಮಿತಿ ಪ್ರಭೋ||

ಪ್ರಭೋ! ಭಗವಾನ್ ಸ್ಥಾಣುವು ಸರಸ್ವತಿಯನ್ನು ಪೂಜಿಸಿ ಅಲ್ಲಿ ಸ್ಥಾಪಿಸಿದುದರಿಂದ ಆ ತೀರ್ಥವು ಸ್ಥಾಣುತೀರ್ಥವೆಂದಾಯಿತು.

09041007a ತತ್ರ ಸರ್ವೇ ಸುರಾಃ ಸ್ಕಂದಮಭ್ಯಷಿಂಚನ್ನರಾಧಿಪ|

09041007c ಸೇನಾಪತ್ಯೇನ ಮಹತಾ ಸುರಾರಿವಿನಿಬರ್ಹಣಂ||

ನರಾಧಿಪ! ಅಲ್ಲಿಯೇ ಸರ್ವ ಸುರರೂ ಸುರಾರಿ ಸ್ಕಂದನನ್ನು ಮಹಾ ಸೇನಾಪತಿಯಾಗಿ ಅಭಿಷೇಕಿಸಿದರು.

09041008a ತಸ್ಮಿನ್ಸರಸ್ವತೀತೀರ್ಥೇ ವಿಶ್ವಾಮಿತ್ರೋ ಮಹಾಮುನಿಃ|

09041008c ವಸಿಷ್ಠಂ ಚಾಲಯಾಮಾಸ ತಪಸೋಗ್ರೇಣ ತಚ್ಚೃಣು||

ಅದೇ ಸರಸ್ವತೀ ತೀರ್ಥದಲ್ಲಿ ಮಹಾಮುನಿ ವಿಶ್ವಾಮಿತ್ರನು ಉಗ್ರ ತಪಸ್ಸಿನಿಂದ ವಸಿಷ್ಠನನ್ನು ವಿಚಲಿತನನ್ನಾಗಿಸಿದನು. ಅದರ ಕುರಿತು ಕೇಳು.

09041009a ವಿಶ್ವಾಮಿತ್ರವಸಿಷ್ಠೌ ತಾವಹನ್ಯಹನಿ ಭಾರತ|

09041009c ಸ್ಪರ್ಧಾಂ ತಪಃಕೃತಾಂ ತೀವ್ರಾಂ ಚಕ್ರತುಸ್ತೌ ತಪೋಧನೌ||

ಭಾರತ! ತಪೋಧನ ವಿಶ್ವಾಮಿತ್ರ-ವಸಿಷ್ಠರಿಬ್ಬರೂ ದಿನನಿತ್ಯವೂ ಉಗ್ರ ತಪಸ್ಸನ್ನು ಮಾಡುತ್ತಾ ಸ್ಪರ್ಧಿಸುತ್ತಿದ್ದರು.

09041010a ತತ್ರಾಪ್ಯಧಿಕಸಂತಾಪೋ ವಿಶ್ವಾಮಿತ್ರೋ ಮಹಾಮುನಿಃ|

09041010c ದೃಷ್ಟ್ವಾ ತೇಜೋ ವಸಿಷ್ಠಸ್ಯ ಚಿಂತಾಮಭಿಜಗಾಮ ಹ||

09041010e ತಸ್ಯ ಬುದ್ಧಿರಿಯಂ ಹ್ಯಾಸೀದ್ಧರ್ಮನಿತ್ಯಸ್ಯ ಭಾರತ||

ತಾನು ಅಧಿಕವಾಗಿ ತಪಿಸುತ್ತಿದ್ದರೂ ಮಹಾಮುನಿ ವಿಶ್ವಾಮಿತ್ರನು ವಸಿಷ್ಠನ ತೇಜಸ್ಸನ್ನು ನೋಡಿ ಚಿಂತಾಪರನಾದನು. ಆ ಧರ್ಮನಿತ್ಯನಲ್ಲಿ ಈ ಯೋಚನೆಯು ಮೂಡಿತು:

09041011a ಇಯಂ ಸರಸ್ವತೀ ತೂರ್ಣಂ ಮತ್ಸಮೀಪಂ ತಪೋಧನಂ|

09041011c ಆನಯಿಷ್ಯತಿ ವೇಗೇನ ವಸಿಷ್ಠಂ ಜಪತಾಂ ವರಂ||

09041011e ಇಹಾಗತಂ ದ್ವಿಜಶ್ರೇಷ್ಠಂ ಹನಿಷ್ಯಾಮಿ ನ ಸಂಶಯಃ||

“ಈ ಸರಸ್ವತಿಯು ಅತಿವೇಗದಿಂದ ಕೂಡಲೇ ತಪೋಧನ ಜಪಿಶ್ರೇಷ್ಠ ವಸಿಷ್ಠನನ್ನು ನನ್ನ ಸಮೀಪಕ್ಕೆ ಕರೆತರುತ್ತಾಳೆ. ಇಲ್ಲಿಗೆ ಬಂದ ದ್ವಿಜಶ್ರೇಷ್ಠನನ್ನು ನಾನು ಸಂಹರಿಸುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!”

09041012a ಏವಂ ನಿಶ್ಚಿತ್ಯ ಭಗವಾನ್ವಿಶ್ವಾಮಿತ್ರೋ ಮಹಾಮುನಿಃ|

09041012c ಸಸ್ಮಾರ ಸರಿತಾಂ ಶ್ರೇಷ್ಠಾಂ ಕ್ರೋಧಸಂರಕ್ತಲೋಚನಃ||

ಈ ರೀತಿ ನಿಶ್ಚಯಿಸಿದ ಮಹಾಮುನಿ ವಿಶ್ವಾಮಿತ್ರನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಸರಿತಶ್ರೇಷ್ಠೆ ಸರಸ್ವತಿಯನ್ನು ಸ್ಮರಿಸಿದನು.

09041013a ಸಾ ಧ್ಯಾತಾ ಮುನಿನಾ ತೇನ ವ್ಯಾಕುಲತ್ವಂ ಜಗಾಮ ಹ|

09041013c ಜಜ್ಞೇ ಚೈನಂ ಮಹಾವೀರ್ಯಂ ಮಹಾಕೋಪಂ ಚ ಭಾಮಿನೀ||

ವಿಶ್ವಾಮಿತ್ರ ಮುನಿಯು ತನ್ನನ್ನು ಧ್ಯಾನಿಸುತ್ತಿದ್ದಾನೆಂದೂ ಆ ಮಹಾವೀರ್ಯನು ಮಹಾಕೋಪದಿಂದಿದ್ದಾನೆಂದೂ ತಿಳಿದ ಭಾಮಿನೀ ಸರಸ್ವತಿಯು ವ್ಯಾಕುಲಗೊಂಡಳು.

09041014a ತತ ಏನಂ ವೇಪಮಾನಾ ವಿವರ್ಣಾ ಪ್ರಾಂಜಲಿಸ್ತದಾ|

09041014c ಉಪತಸ್ಥೇ ಮುನಿವರಂ ವಿಶ್ವಾಮಿತ್ರಂ ಸರಸ್ವತೀ||

ವಿವರ್ಣಳಾಗಿ ನಡುಗುತ್ತಾ ಸರಸ್ವತಿಯು ಕೈಮುಗಿದು ಮುನಿವರ ವಿಶ್ವಾಮಿತ್ರನ ಬಳಿ ಉಪಸ್ಥಿತಳಾದಳು.

09041015a ಹತವೀರಾ ಯಥಾ ನಾರೀ ಸಾಭವದ್ದುಃಖಿತಾ ಭೃಶಂ|

09041015c ಬ್ರೂಹಿ ಕಿಂ ಕರವಾಣೀತಿ ಪ್ರೋವಾಚ ಮುನಿಸತ್ತಮಂ||

ವೀರನನ್ನು ಕಳೆದುಕೊಂಡ ನಾರಿಯಂತೆ ತುಂಬಾ ದುಃಖಿತಳಾಗಿದ್ದ ಅವಳು “ಏನು ಮಾಡಬೇಕು?” ಎಂದು ಮುನಿಸತ್ತಮನಿಗೆ ಕೇಳಿದಳು.

09041016a ತಾಮುವಾಚ ಮುನಿಃ ಕ್ರುದ್ಧೋ ವಸಿಷ್ಠಂ ಶೀಘ್ರಮಾನಯ|

09041016c ಯಾವದೇನಂ ನಿಹನ್ಮ್ಯದ್ಯ ತಚ್ಚ್ರುತ್ವಾ ವ್ಯಥಿತಾ ನದೀ||

“ವಸಿಷ್ಠನನ್ನು ಶೀಘ್ರದಲ್ಲಿಯೇ ಇಲ್ಲಿಗೆ ಕರೆತಾ! ಅವನನ್ನು ಇಂದು ಸಂಹರಿಸುತ್ತೇನೆ!” ಎಂದು ಕ್ರುದ್ಧ ಮುನಿಯು ಅವಳಿಗೆ ಹೇಳಲು, ಅದನ್ನು ಕೇಳಿದ ನದಿಯು ವ್ಯಥಿತಳಾದಳು.

09041017a ಸಾಂಜಲಿಂ ತು ತತಃ ಕೃತ್ವಾ ಪುಂಡರೀಕನಿಭೇಕ್ಷಣಾ|

09041017c ವಿವ್ಯಥೇ ಸುವಿರೂಢೇವ ಲತಾ ವಾಯುಸಮೀರಿತಾ||

ಕಮಲದಂತಹ ಕಣ್ಣುಳ್ಳ ಅವಳು ಕೈಮುಗಿದು ಸುಂಟರಗಾಳಿಗೆ ಸಿಲುಕಿದ ಲತೆಯಂತೆ ಭೀತಳಾಗಿ ನಡುಗುತ್ತಾ ವಿವ್ಯಥಳಾದಳು.

09041018a ತಥಾಗತಾಂ ತು ತಾಂ ದೃಷ್ಟ್ವಾ ವೇಪಮಾನಾಂ ಕೃತಾಂಜಲಿಂ|

09041018c ವಿಶ್ವಾಮಿತ್ರೋಽಬ್ರವೀತ್ಕ್ರುದ್ಧೋ ವಸಿಷ್ಠಂ ಶೀಘ್ರಮಾನಯ||

ಅವಳು ಹೋಗದೇ ಇನ್ನೂ ಕೈಮುಗಿದು ನಡುಗುತ್ತಾ ನಿಂತಿರುವುದನ್ನು ನೋಡಿ ಕ್ರುದ್ಧ ವಿಶ್ವಾಮಿತ್ರನು “ವಸಿಷ್ಠನನ್ನು ಶೀಘ್ರವಾಗಿ ಇಲ್ಲಿಗೆ ಕರೆತಾ!” ಎಂದು ಪುನಃ ಹೇಳಿದನು.

09041019a ತತೋ ಭೀತಾ ಸರಿಚ್ಚ್ರೇಷ್ಠಾ ಚಿಂತಯಾಮಾಸ ಭಾರತ|

09041019c ಉಭಯೋಃ ಶಾಪಯೋರ್ಭೀತಾ ಕಥಮೇತದ್ಭವಿಷ್ಯತಿ||

ಭಾರತ! ಇಬ್ಬರ ಶಾಪಗಳಿಂದಲೂ ಭೀತಳಾದ ಸರಿತ ಶ್ರೇಷ್ಠೆಯು ಮುಂದೇನಾಗುವುದು ಎಂದು ಚಿಂತಿಸತೊಡಗಿದಳು.

09041020a ಸಾಭಿಗಮ್ಯ ವಸಿಷ್ಠಂ ತು ಇಮಮರ್ಥಮಚೋದಯತ್|

09041020c ಯದುಕ್ತಾ ಸರಿತಾಂ ಶ್ರೇಷ್ಠಾ ವಿಶ್ವಾಮಿತ್ರೇಣ ಧೀಮತಾ||

ಆಗ ಆ ಸರಿತಶ್ರೇಷ್ಠೆಯು ವಸಿಷ್ಠನ ಬಳಿಹೋಗಿ ಧೀಮಂತ ವಿಶ್ವಾಮಿತ್ರನು ಹೇಳಿದುದೆಲ್ಲವನ್ನೂ ಅವನಿಗೆ ತಿಳಿಸಿದಳು.

09041021a ಉಭಯೋಃ ಶಾಪಯೋರ್ಭೀತಾ ವೇಪಮಾನಾ ಪುನಃ ಪುನಃ|

09041021c ಚಿಂತಯಿತ್ವಾ ಮಹಾಶಾಪಂ ಋಷಿವಿತ್ರಾಸಿತಾ ಭೃಶಂ||

ಇಬ್ಬರ ಶಾಪದಿಂದಲೂ ಭೀತಳಾಗಿ ಪುನಃ ಪುನಃ ನಡುಗುತ್ತಿದ್ದ ಅವಳು ಋಷಿಯ ಮಹಾಶಾಪದ ಕುರಿತು ಬಹಳವಾಗಿ ಚಿಂತಿಸಿದಳು.

09041022a ತಾಂ ಕೃಶಾಂ ಚ ವಿವರ್ಣಾಂ ಚ ದೃಷ್ಟ್ವಾ ಚಿಂತಾಸಮನ್ವಿತಾಂ|

09041022c ಉವಾಚ ರಾಜನ್ಧರ್ಮಾತ್ಮಾ ವಸಿಷ್ಠೋ ದ್ವಿಪದಾಂ ವರಃ||

ರಾಜನ್! ಕೃಶಳೂ, ವಿವರ್ಣಳೂ, ಚಿಂತಾಸಮಾನ್ವಿತಳೂ ಆದ ಅವಳನ್ನು ನೋಡಿ ನರರಲ್ಲಿಯೇ ಶ್ರೇಷ್ಠ ಧರ್ಮಾತ್ಮಾ ವಸಿಷ್ಠನು ಹೀಗೆ ಹೇಳಿದನು:

09041023a ತ್ರಾಹ್ಯಾತ್ಮಾನಂ ಸರಿಚ್ಚ್ರೇಷ್ಠೇ ವಹ ಮಾಂ ಶೀಘ್ರಗಾಮಿನೀ|

09041023c ವಿಶ್ವಾಮಿತ್ರಃ ಶಪೇದ್ಧಿ ತ್ವಾಂ ಮಾ ಕೃಥಾಸ್ತ್ವಂ ವಿಚಾರಣಾಂ||

“ಸರಿತಶ್ರೇಷ್ಠೇ! ಮೊದಲು ನಿನ್ನ ರಕ್ಷಣೆ ಮಾಡಿಕೊಳ್ಳಬೇಕು. ಶೀಘ್ರವಾಗಿ ಹರಿದು ನನ್ನನ್ನು ಅವನಿರುವಲ್ಲಿಗೆ ತೇಲಿಸಿಕೊಂಡು ಹೋಗು. ಇಲ್ಲವಾದರೆ ವಿಶ್ವಾಮಿತ್ರನು ನಿನ್ನನ್ನು ಶಪಿಸಬಹುದು. ಇದರ ಕುರಿತು ನೀನು ವಿಚಾರ ಮಾಡಬೇಡ!”

09041024a ತಸ್ಯ ತದ್ವಚನಂ ಶ್ರುತ್ವಾ ಕೃಪಾಶೀಲಸ್ಯ ಸಾ ಸರಿತ್|

09041024c ಚಿಂತಯಾಮಾಸ ಕೌರವ್ಯ ಕಿಂ ಕೃತಂ ಸುಕೃತಂ ಭವೇತ್||

ಕೌರವ್ಯ! ಕೃಪಾಶೀಲನ ಆ ಮಾತನ್ನು ಕೇಳಿದ ನದೀ ಸರಸ್ವತಿಯು “ಏನು ಮಾಡಿದರೆ ಒಳ್ಳೇಯದಾದೀತು?” ಎಂದು ಚಿಂತಿಸತೊಡಗಿದಳು.

09041025a ತಸ್ಯಾಶ್ಚಿಂತಾ ಸಮುತ್ಪನ್ನಾ ವಸಿಷ್ಠೋ ಮಯ್ಯತೀವ ಹಿ|

09041025c ಕೃತವಾನ್ ಹಿ ದಯಾಂ ನಿತ್ಯಂ ತಸ್ಯ ಕಾರ್ಯಂ ಹಿತಂ ಮಯಾ||

ಅವಳಲ್ಲಿ ಈ ವಿಚಾರವು ಹುಟ್ಟಿಕೊಂಡಿತು: “ವಸಿಷ್ಠನು ನನ್ನ ಮೇಲೆ ಅತೀವ ದಯೆಯನ್ನು ಮಾಡಿದ್ದಾನೆ. ಅವನಿಗೆ ಹಿತವಾದ ಕಾರ್ಯವನ್ನು ನಾನೂ ಈಗ ಮಾಡಬೇಕಾಗಿದೆ.”

09041026a ಅಥ ಕೂಲೇ ಸ್ವಕೇ ರಾಜನ್ಜಪಂತಂ ಋಷಿಸತ್ತಮಂ|

09041026c ಜುಹ್ವಾನಂ ಕೌಶಿಕಂ ಪ್ರೇಕ್ಷ್ಯ ಸರಸ್ವತ್ಯಭ್ಯಚಿಂತಯತ್||

ತನ್ನ ತೀರದಲ್ಲಿ ಜಪಿಸುತ್ತಿದ್ದ ಮತ್ತು ಹವನಗೈಯುತ್ತಿದ್ದ ಋಷಿಸತ್ತಮ ಕೌಶಿಕನನ್ನು ನೋಡಿ ಸರಸ್ವತಿಯು ಯೋಚಿಸಿದಳು.

09041027a ಇದಮಂತರಮಿತ್ಯೇವ ತತಃ ಸಾ ಸರಿತಾಂ ವರಾ|

09041027c ಕೂಲಾಪಹಾರಮಕರೋತ್ಸ್ವೇನ ವೇಗೇನ ಸಾ ಸರಿತ್||

ಇದೇ ಸಮಯವೆಂದು ತಿಳಿದು ಸರಿತ ಶ್ರೇಷ್ಠೆ ಸರಸ್ವತಿಯು ವೇಗದಿಂದ ವಸಿಷ್ಠನ ಆಶ್ರಮವನ್ನೇ ಕೊಚ್ಚಿಕೊಂಡು ಹೋದಳು.

09041028a ತೇನ ಕೂಲಾಪಹಾರೇಣ ಮೈತ್ರಾವರುಣಿರೌಹ್ಯತ|

09041028c ಉಹ್ಯಮಾನಶ್ಚ ತುಷ್ಟಾವ ತದಾ ರಾಜನ್ ಸರಸ್ವತೀಂ||

ತನ್ನ ಇಡೀ ಆಶ್ರಮವೇ ತೇಲಿಕೊಂಡು ಹೋಗುತ್ತಿರುವುದರಿಂದ ಮೈತ್ರಾವರುಣಿ ವಸಿಷ್ಠನಿಗೆ ಯಾವ ತೊಂದರೆಯೂ ಆಗಲಿಲ್ಲ. ರಾಜನ್! ಅದರಿಂದ ತೃಪ್ತ ವಸಿಷ್ಠನು ಸರಸ್ವತಿಯನ್ನು ಈ ರೀತಿ ಸ್ತುತಿಸಿದನು:

09041029a ಪಿತಾಮಹಸ್ಯ ಸರಸಃ ಪ್ರವೃತ್ತಾಸಿ ಸರಸ್ವತಿ|

09041029c ವ್ಯಾಪ್ತಂ ಚೇದಂ ಜಗತ್ಸರ್ವಂ ತವೈವಾಂಭೋಭಿರುತ್ತಮೈಃ||

09041030a ತ್ವಮೇವಾಕಾಶಗಾ ದೇವಿ ಮೇಘೇಷೂತ್ಸೃಜಸೇ ಪಯಃ|

09041030c ಸರ್ವಾಶ್ಚಾಪಸ್ತ್ವಮೇವೇತಿ ತ್ವತ್ತೋ ವಯಮಧೀಮಹೇ||

09041031a ಪುಷ್ಟಿರ್ದ್ಯುತಿಸ್ತಥಾ ಕೀರ್ತಿಃ ಸಿದ್ಧಿರ್ವೃದ್ಧಿರುಮಾ ತಥಾ|

09041031c ತ್ವಮೇವ ವಾಣೀ ಸ್ವಾಹಾ ತ್ವಂ ತ್ವಯ್ಯಾಯತ್ತಮಿದಂ ಜಗತ್||

09041031e ತ್ವಮೇವ ಸರ್ವಭೂತೇಷು ವಸಸೀಹ ಚತುರ್ವಿಧಾ||

“ಸರಸ್ವತೀ! ಪಿತಾಮಹನ ಸರೋವರದಿಂದ ಹರಿದುಬಂದಿರುವೆ. ನಿನ್ನ ಉತ್ತಮ ನೀರಿನಿಂದ ಜಗತ್ತೆಲ್ಲವೂ ವ್ಯಾಪ್ತವಾಗಿದೆ. ದೇವೀ! ನೀನೇ ಆಕಾಶದಲ್ಲಿ ಹರಿದು ಮೇಘಗಳಲ್ಲಿ ನೀರನ್ನು ತುಂಬಿಸುವೆ! ಹಾಗೆ ಸರ್ವ ನೀರೂ ನೀನೇ ಆಗಿರುವೆ. ನಿನ್ನಿಂದಲೇ ನಾವು ವೇದಾಧ್ಯಯನ ಮಾಡಬಹುದಾಗಿದೆ. ನೀನು ಪುಷ್ಟಿ, ದ್ಯುತಿ, ಕೀರ್ತಿ, ಸಿದ್ಧಿ, ವೃದ್ಧಿ ಮತ್ತು ಉಮಾ. ನೀನೇ ವಾಣೀ, ನೀನೇ ಸ್ವಾಹಾ! ನಿನ್ನಿಂದಲೇ ಈ ಜಗತ್ತು ನಡೆಯುತ್ತಿದೆ. ನೀನೇ ಎಲ್ಲ ಪ್ರಾಣಿಗಳಲ್ಲಿಯೂ ಚತುರ್ವಿಧೆಯಾಗಿ ವಾಸಿಸುತ್ತಿರುವೆ!”

09041032a ಏವಂ ಸರಸ್ವತೀ ರಾಜನ್ಸ್ತೂಯಮಾನಾ ಮಹರ್ಷಿಣಾ|

09041032c ವೇಗೇನೋವಾಹ ತಂ ವಿಪ್ರಂ ವಿಶ್ವಾಮಿತ್ರಾಶ್ರಮಂ ಪ್ರತಿ||

09041032e ನ್ಯವೇದಯತ ಚಾಭೀಕ್ಷ್ಣಂ ವಿಶ್ವಾಮಿತ್ರಾಯ ತಂ ಮುನಿಂ||

ರಾಜನ್! ಮಹರ್ಷಿಯಿಂದ ಹೀಗೆ ಸ್ತುತಿಸಲ್ಪಡುತ್ತಿದ್ದ ಸರಸ್ವತಿಯು ವೇಗದಿಂದ ಆ ವಿಪ್ರನನ್ನು ವಿಶ್ವಾಮಿತ್ರನ ಆಶ್ರಮದ ಕಡೆ ಕೊಂಡೊಯ್ದು ಅವನು ಬಂದಿರುವುದನ್ನು ಮುನಿ ವಿಶ್ವಾಮಿತ್ರನಿಗೆ ನಿವೇದಿಸಿದಳು.

09041033a ತಮಾನೀತಂ ಸರಸ್ವತ್ಯಾ ದೃಷ್ಟ್ವಾ ಕೋಪಸಮನ್ವಿತಃ|

09041033c ಅಥಾನ್ವೇಷತ್ಪ್ರಹರಣಂ ವಸಿಷ್ಠಾಂತಕರಂ ತದಾ||

ಸರಸ್ವತಿಯು ಅವನನ್ನು ಕರೆತಂದಿರುವುದನ್ನು ನೋಡಿದ ವಿಶ್ವಾಮಿತ್ರನು ಕೋಪಸಮನ್ವಿತನಾಗಿ ವಸಿಷ್ಠನನ್ನು ಕೊಲ್ಲಲು ಆಯುಧವನ್ನು ಹುಡುಕತೊಡಗಿದನು.

09041034a ತಂ ತು ಕ್ರುದ್ಧಮಭಿಪ್ರೇಕ್ಷ್ಯ ಬ್ರಹ್ಮಹತ್ಯಾಭಯಾನ್ನದೀ|

09041034c ಅಪೋವಾಹ ವಸಿಷ್ಠಂ ತು ಪ್ರಾಚೀಂ ದಿಶಮತಂದ್ರಿತಾ||

09041034e ಉಭಯೋಃ ಕುರ್ವತೀ ವಾಕ್ಯಂ ವಂಚಯಿತ್ವಾ ತು ಗಾಧಿಜಂ||

ಅವನು ಕ್ರುದ್ಧನಾಗಿರುವುದನ್ನು ನೋಡಿ ಬ್ರಹ್ಮಹತ್ಯೆಯ ಭಯದಿಂದ ಆ ನದಿಯು ವಸಿಷ್ಠನನ್ನು ಪೂರ್ವದಿಕ್ಕಿನೆಡೆಗೆ ತೇಲಿಸಿಕೊಂಡು ಹೋದಳು. ಅವಳು ಇಬ್ಬರ ಮಾತಿನಂತೆಯೂ ಮಾಡಿದಳು. ಆದರೆ ಗಾಧಿಜನು ಮಾತ್ರ ವಂಚಿತನಾದನು.

09041035a ತತೋಽಪವಾಹಿತಂ ದೃಷ್ಟ್ವಾ ವಸಿಷ್ಠಂ ಋಷಿಸತ್ತಮಂ|

09041035c ಅಬ್ರವೀದಥ ಸಂಕ್ರುದ್ಧೋ ವಿಶ್ವಾಮಿತ್ರೋ ಹ್ಯಮರ್ಷಣಃ||

ಋಷಿಸತ್ತಮ ವಸಿಷ್ಠನನ್ನು ತೇಲಿಸಿಕೊಂಡು ಹೋದುದನ್ನು ನೋಡಿ ಸಂಕ್ರುದ್ಧನಾದ ಅಸಹನಶೀಲ ವಿಶ್ವಾಮಿತ್ರನು ಇಂತೆಂದನು:

09041036a ಯಸ್ಮಾನ್ಮಾ ತ್ವಂ ಸರಿಚ್ಚ್ರೇಷ್ಠೇ ವಂಚಯಿತ್ವಾ ಪುನರ್ಗತಾ|

09041036c ಶೋಣಿತಂ ವಹ ಕಲ್ಯಾಣಿ ರಕ್ಷೋಗ್ರಾಮಣಿಸಮ್ಮತಂ||

“ಸರಿತಶ್ರೇಷ್ಠೇ! ಕಲ್ಯಾಣೀ! ನನ್ನನ್ನು ವಂಚಿಸಿ ಪುನಃ ಹಿಂದಿರುಗಿದ ನೀನು ರಕ್ತವಾಹಿನಿಯಾಗಿ ರಾಕ್ಷಸಗಣಕ್ಕೆ ಅತ್ಯಂತ ಪ್ರಿಯಳಾಗು!”

09041037a ತತಃ ಸರಸ್ವತೀ ಶಪ್ತಾ ವಿಶ್ವಾಮಿತ್ರೇಣ ಧೀಮತಾ|

09041037c ಅವಹಚ್ಚೋಣಿತೋನ್ಮಿಶ್ರಂ ತೋಯಂ ಸಂವತ್ಸರಂ ತದಾ||

ಧೀಮತ ವಿಶ್ವಾಮಿತ್ರನಿಂದ ಶಪಿತಳಾದ ಸರಸ್ವತಿಯು ಒಂದು ವರ್ಷಕಾಲ ರಕ್ತ-ಮಿಶ್ರಿತ ನೀರಾಗಿ ಹರಿದಳು.

09041038a ಅಥರ್ಷಯಶ್ಚ ದೇವಾಶ್ಚ ಗಂಧರ್ವಾಪ್ಸರಸಸ್ತಥಾ|

09041038c ಸರಸ್ವತೀಂ ತಥಾ ದೃಷ್ಟ್ವಾ ಬಭೂವುರ್ಭೃಶದುಃಖಿತಾಃ||

ಸರಸ್ವತಿಯು ಹಾಗಾಗಿದ್ದುದನ್ನು ನೋಡಿ ಋಷಿ-ದೇವತೆ-ಗಂಧರ್ವರು, ಮತ್ತು ಹಾಗೆಯೇ ಅಪ್ಸರೆಯರು ಅತ್ಯಂತ ದುಃಖಿತರಾದರು.

09041039a ಏವಂ ವಸಿಷ್ಠಾಪವಾಹೋ ಲೋಕೇ ಖ್ಯಾತೋ ಜನಾಧಿಪ|

09041039c ಆಗಚ್ಚಚ್ಚ ಪುನರ್ಮಾರ್ಗಂ ಸ್ವಮೇವ ಸರಿತಾಂ ವರಾ||

ಜನಾಧಿಪ! ಹೀಗೆ ವಸಿಷ್ಠಾಪವಾಹವು ಲೋಕದಲ್ಲಿ ಪ್ರಖ್ಯಾತವಾಯಿತು. ಆ ಸರಿತ ಶ್ರೇಷ್ಠೆಯು ಪುನಃ ತನ್ನ ಮಾರ್ಗದಲ್ಲಿಯೇ ಹರಿಯತೊಡಗಿದಳು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ನಲ್ವತ್ತೊಂದನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.