ನಲೋಪಾಽಖ್ಯಾನ
Contents
Toggleನಲ-ದಮಯಂತಿಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಇಂದ್ರಲೋಕಾಭಿಗಮನ ಪರ್ವ (ಅಧ್ಯಾಯ ೫೦-೭೭) ದಲ್ಲಿ ಬರುತ್ತದೆ. ಅರ್ಜುನನಿಲ್ಲದೇ ವನದಲ್ಲಿ ಪಾಂಡವರು ದುಃಖಿತರಾಗಿರುವಾಗ ಋಷಿ ಬೃಹದಶ್ವನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.
ನಲ, ದಮಯಂತಿ ಮತ್ತು ಹಂಸ
ವೀರಸೇನನ ಬಲಶಾಲಿ ಮಗ, ಎಲ್ಲಾ ಸದ್ಗುಣ ಸಂಪನ್ನ, ರೂಪವಂತ, ಅಶ್ವಕೋವಿದ, ದೇವಪತಿಯಂತೆ ಮನುಜೇಂದ್ರರೆಲ್ಲರ ಮೇಲ್ಪಟ್ಟ, ಅವರೆಲ್ಲರಿಗಿಂತ ತೇಜಸ್ಸಿನಲ್ಲಿ ಸೂರ್ಯನಂತೆ ಶೋಭಿಸುತ್ತಿದ್ದ ನಲ ಎಂಬ ಹೆಸರಿನ ಒಬ್ಬ ರಾಜನಿದ್ದನು. ಶೂರನೂ, ಬ್ರಹ್ಮಜ್ಞನೂ, ವೇದಪಾರಂಗತನೂ, ಸತ್ಯವಾದಿಯೂ, ಮಹಾ ಅಕ್ಷೌಹಿಣಿಪತಿಯೂ ಆದ ಈ ನಿಷಧ ಮಹೀಪತಿಯು ಜೂಜಿನಲ್ಲಿ ಪ್ರೀತಿ ಹೊಂದಿದ್ದನು. ಸುಂದರ ನಾರಿಯರೆಲ್ಲರೂ ಆಸೆ ಪಡುವಂತಿದ್ದ ಅವನು ಉದಾರನೂ, ಇಂದ್ರಿಯಸಂಯಮನೂ ಆಗಿದ್ದು, ಧನುರ್ಧಾರಿಗಳಲ್ಲಿ ಶ್ರೇಷ್ಠನೂ, ಎಲ್ಲರ ರಕ್ಷಕನೂ ಆಗಿ ಸ್ವತಃ ಸಾಕ್ಷಾತ್ ಮನುವಿನಂತಿದ್ದನು. ಹಾಗೆಯೇ ವಿದರ್ಭದಲ್ಲಿ ಶೂರನೂ, ಸರ್ವಗುಣಯುಕ್ತನೂ, ಭೀಮಪರಾಕ್ರಮಿಯೂ, ಸಂತಾನವಿಲ್ಲದೆ, ಸಂತಾನವನ್ನು ಬಯಸುತ್ತಿದ್ದ ಭೀಮ ಎನ್ನುವ ರಾಜನಿದ್ದನು. ಅವನು ಸಂತಾನಕ್ಕೋಸ್ಕರ ನಿರಂತರ ಪರಮ ಯತ್ನವನ್ನು ಮಾಡಿದನು. ಆಗ ದಮನ ಎಂಬ ಹೆಸರಿನ ಬ್ರಹ್ಮರ್ಷಿಯೊಬ್ಬನು ಅವನಲ್ಲಿಗೆ ಆಗಮಿಸಿದನು. ಆ ದರ್ಮವಿತ್ತ, ಪ್ರಜಾಕಾಮಿ ರಾಜೇಂದ್ರ ಭೀಮನು ತನ್ನ ಮಹಿಷಿಯೊಡಗೊಂಡು ಆ ಸುವರ್ಚಸನನ್ನು ಸತ್ಕರಿಸಿದನು. ಅದರಿಂದ ಪ್ರಸನ್ನನಾದ ದಮನನು ರಾಜ-ರಾಣಿಯರಿಗೆ ವರವನ್ನಿತ್ತನು: ಒಂದು ಕನ್ಯಾರತ್ನ - ದಮಯಂತಿ, ಮತ್ತು ಮಹಾಯಶರೂ, ಉದಾರರೂ ಆದ ಮೂವರು ಕುಮಾರರು - ದಮ, ದಾಂತ, ಮತ್ತು ಸುವರ್ಚಸಿಯಾದ ದಮನ. ಇವರೆಲ್ಲರೂ ಗುಣಸಂಪನ್ನರೂ, ಘೋರರೂ, ಘೋರಪರಾಕ್ರಮಿಗಳೂ ಆಗಿದ್ದರು.
ಸುಮಧ್ಯಮೆ ದಮಯಂತಿಯು ರೂಪ, ತೇಜಸ್ಸು, ಯಶಸ್ಸು, ಸೌಂದರ್ಯ ಮತ್ತು ಸೌಭಾಗ್ಯಗಳಲ್ಲಿ ಲೋಕಗಳಲ್ಲೆಲ್ಲಾ ಪ್ರಸಿದ್ಧಳಾಗಿದ್ದಳು. ವಯಸ್ಸಿಗೆ ಬಂದ ಅವಳನ್ನು ಒಂದು ನೂರು ಸಮಲಂಕೃತ ಸಖಿಯರು, ಶಚಿಯಂತೆ ಸುತ್ತುವರೆಯುತ್ತಿದ್ದರು. ತನ್ನ ಸಖಿಯರ ಮಧ್ಯದಲ್ಲಿ, ಅನವದ್ಯಾಂಗಿ, ಸರ್ವಾಭರಣಭೂಷಿತೆ ಪುಷ್ಪಗಳಿಂದಲಂಕೃತ ಭೈಮಿಯು ಮಿಂಚಿನಂತೆ ಶೋಭಿಸುತ್ತಿದ್ದಳು. ಆ ಆಯತ ಲೋಚನೆಯು ಲಕ್ಷ್ಮಿಯಂತೆ ಅತೀವ ರೂಪಸಂಪನ್ನಳಾಗಿದ್ದಳು. ಇದಕ್ಕೂ ಪೂರ್ವದಲ್ಲಿ ದೇವ, ಯಕ್ಷ ಅಥವಾ ಮನುಷ್ಯರಲ್ಲಿ ಇಷ್ಟೊಂದು ರೂಪವತಿಯನ್ನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. ಆ ಸುಂದರ ಬಾಲಕಿಯು ದೇವತೆಗಳ ಚಿತ್ತವನ್ನೂ ಕಡೆಯುತ್ತಿದ್ದಳು.
ನರಶಾರ್ದೂಲ ನಲನು ರೂಪದಲ್ಲಿ ಭುವಿಯಲ್ಲೇ ಅಪ್ರತಿಮನಾಗಿದ್ದನು, ಮತ್ತು ರೂಪದಲ್ಲಿ ಕಂದರ್ಪನೇ ಸ್ವಯಂ ಅವತರಿಸಿದಂತಿದ್ದನು. ಜನರು ಕುತೂಹಲದಿಂದ ದಮಯಂತಿಯ ಸಮೀಪದಲ್ಲಿ ನಲನನ್ನು ಪ್ರಶಂಸಿಸುತ್ತಿದ್ದರು; ಮತ್ತು ನೈಷಧನ ಸಮೀಪದಲ್ಲಿ ಪುನಃ ಪುನಃ ಅವಳನ್ನು ಪ್ರಶಂಸಿಸುತ್ತಿದ್ದರು. ಹೀಗೆ ಸತತವಾಗಿ ಪರಸ್ಪರರ ಗುಣಗಳನ್ನು ಕೇಳುತ್ತಿದ್ದಂತೆ, ಇನ್ನೂ ನೋಡದಿರದ ಆ ವ್ಯಕ್ತಿಯ ಕುರಿತು ಕಾಮ ಬೆಳೆಯಿತು ಮತ್ತು ಅವರ ಹೃದಯಗಳಲ್ಲಿ ಪರಸ್ಪರರಿಗೆ ಪ್ರೀತಿ ವರ್ಧಿಸಿತು.
ಒಮ್ಮೆ ಈ ಕಾಮವನ್ನು ಹೃದಯದಲ್ಲೇ ಸಹಿಸಿಟ್ಟುಕೊಳ್ಳಲು ಅಸಮರ್ಥನಾದ ನಲನು ಯಾರಿಗೂ ತಿಳಿಯದಂತೆ ಅಂತಃಪುರದ ಸಮೀಪದ ವನದಲ್ಲಿ ಹೋಗಿ ಕುಳಿತುಕೊಂಡಿದ್ದನು. ಅಲ್ಲಿ ಅವನು ಬಂಗಾರದ ಹೊದಿಕೆಹೊಂದಿದ್ದ ಹಂಸಗಳನ್ನು ನೋಡಿದನು ಮತ್ತು ವನದಲ್ಲಿ ಓಡಾಡುತ್ತಿದ್ದ ಆ ಪಕ್ಷಿಗಳಲ್ಲಿ ಒಂದನ್ನು ಹಿಡಿದನು. ಆಗ ಆ ಅಂತರಿಕ್ಷಗ ನಲನಿಗೆ ಕೂಗಿ ಹೇಳಿದನು:
“ರಾಜ! ನನ್ನನ್ನು ಕೊಲ್ಲಬೇಡ. ನಿನಗೆ ಪ್ರಿಯವಾದದ್ದನ್ನು ನಾನು ಮಾಡಿಕೊಡುತ್ತೇನೆ. ನೈಷಧ! ದಮಯಂತಿಯ ಸಮಕ್ಷಮದಲ್ಲಿ, ಅವಳು ನಿನ್ನ ಹೊರತಾಗಿ ಬೇರೆ ಯಾವ ಪುರುಷನ ಕುರಿತೂ ಯೋಚಿಸದ ಹಾಗೆ, ನಿನ್ನ ಕುರಿತು ಅವಳಿಗೆ ಹೇಳುತ್ತೇನೆ.”
ಈ ಮಾತುಗಳನ್ನು ಕೇಳಿ ಮಹೀಪತಿಯು ಆ ಹಂಸವನ್ನು ಬಿಡುಗಡೆಮಾಡಿದನು ಮತ್ತು ಹಂಸಗಳೆಲ್ಲವೂ ಮೇಲೆ ಹಾರಿ ವಿದರ್ಭದ ಕಡೆ ಹೋದವು.
ಆ ಗುರುತ್ಮಂತಗಳು ವಿದರ್ಭನಗರಕ್ಕೆ ಹೋಗಿ ಅಲ್ಲಿ ದಮಯಂತಿಯ ಬಳಿಗೆ ಬಂದಿಳಿದವು ಮತ್ತು ಅವಳು ಆ ಪಕ್ಷಿಗಳನ್ನು ನೋಡಿದಳು. ಆ ಅದ್ಭುತ ರೂಪಿಗಳನ್ನು ನೋಡಿ ಸಖೀಗಣಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವಳು ಹರ್ಷದಿಂದ ಪಕ್ಷಿಗಳನ್ನು ಹಿಡಿಯಲೋಸುಗ ಅವುಗಳನ್ನು ಬೆನ್ನಟ್ಟಿದಳು. ಎಲ್ಲ ಸಖಿಯರೂ ಒಬ್ಬೊಬ್ಬರು ಅವರವರ ಹಂಸಗಳನ್ನು ಹಿಡಿಯಲು ಬೆನ್ನಟ್ಟಿದರು. ಆದರೆ ದಮಯಂತಿಯು ಅನುಸರಿಸುತ್ತಿದ್ದ ಹಂಸವು ಅವಳು ಸಮೀಪ ಬರುತ್ತಿದ್ದಂತಯೇ ಮನುಷ್ಯಧ್ವನಿಯನ್ನು ಧರಿಸಿ ದಮಯಂತಿಯನ್ನುದ್ದೇಶಿಸಿ ಮಾತನಾಡಿತು:
“ದಮಯಂತಿ! ನಿಷಧದಲ್ಲಿ ನಲ ಎಂಬ ಹೆಸರಿನ ರಾಜನಿದ್ದಾನೆ. ಅವನು ಅಶ್ವಿನಿಯರ ಸದೃಶನಾಗಿದ್ಡಾನೆ ಮತ್ತು ಮನುಷ್ಯರಲ್ಲೇ ರೂಪದಲ್ಲಿ ಅವನ ಸರಿಸಾಟಿಯಾದವರು ಯಾರೂ ಇಲ್ಲ. ಒಂದುವೇಳೆ ನೀನು ಅವನ ಭಾರ್ಯೆಯಾದೆ ಎಂದರೆ ನಿನ್ನ ಈ ರೂಪ ಮತ್ತು ಜನ್ಮ ಸಾರ್ಥಕವಾದಂತಾಗುತ್ತದೆ. ನಾವು ದೇವತೆ, ಗಂಧರ್ವ, ಮನುಷ್ಯ, ಉರಗ ಮತ್ತು ರಾಕ್ಷಸರನ್ನು ನೋಡಿದ್ದೇವೆ. ಆದರೆ ಇವನಂತವನನ್ನು ಇದೂವರೆಗೂ ಯಾರಲ್ಲಿಯೂ ಕಂಡಿಲ್ಲ. ನೀನೂ ಕೂಡ ನಾರಿಯರಲ್ಲಿ ರತ್ನದಂತಿದ್ದೀಯೆ. ಮತ್ತು ನಲನು ನರರಲಿಯೇ ಶ್ರೇಷ್ಟನಾಗಿದ್ದಾನೆ. ವಿಶಿಷ್ಟವಾದ ವ್ಯಕ್ತಿಯ ಸಂಗಮವು ವಿಶಿಷ್ಟವಾದ ವ್ಯಕ್ತಿಯೊಡನೆ ಆಯಿತೆಂದರೆ ಒಳ್ಳೆಯದೇ ಆಗುತ್ತದೆ.”
ಹಂಸದ ಈ ಮಾತುಗಳನ್ನು ಕೇಳಿ ದಮಯಂತಿಯು ಆ ಹಂಸಕ್ಕೆ “ನಲನಿಗೂ ಇದೇ ರೀತಿ ಹೇಳು” ಎಂದಳು. ಆ ಪಕ್ಷಿಯು ವೈದರ್ಭಿಗೆ “ಹಾಗೆಯೇ ಮಾಡುತ್ತೇನೆ!” ಎಂದು ವಚನವನ್ನಿತ್ತು, ನಿಷಧಕ್ಕೆ ಮರಳಿ, ನಲನಿಗೆ ಸರ್ವವನ್ನೂ ವರದಿಮಾಡಿತು.
ದಮಯಂತೀ ಸ್ವಯಂವರಕ್ಕೆ ಇಂದ್ರಾದಿ ದೇವತೆಗಳ ಆಗಮನ
ಹಂಸದ ಮಾತುಗಳನ್ನು ಕೇಳಿದ ದಮಯಂತಿಯು, ನಲನ ಕಾರಣದಿಂದಾಗಿ ಬಹಳಷ್ಟು ಅಸ್ವಸ್ಥಳಾದಳು. ದಮಯಂತಿಯು ಚಿಂತಾಪರಳಾಗಿ, ದೀನಳಾಗಿ, ಮುಖದ ಬಣ್ಣವನ್ನೇ ಕಳೆದುಕೊಂಡು, ಕೃಶಳಾಗಿ, ದೀರ್ಘ ನಿಟ್ಟುಸಿರು ಬಿಡುತ್ತಿದ್ದಳು. ಅವಳು ದಿಟ್ಟು ಹಿಡಿದು ಮೇಲೆಯೇ ನೋಡುತ್ತಿದ್ದು ಅಥವಾ ಯೋಚನೆಯಲ್ಲಿ ಮಗ್ನಳಾಗಿಯೇ ಇರುತ್ತಿದ್ದು, ಉನ್ಮತ್ತಳಾದಂತೆ ಕಾಣುತ್ತಿದ್ದಳು. ಅವಳು ಶಯನದಲ್ಲಿಯಾಗಲೀ, ಕುಳಿತುಕೊಳ್ಳುವುದರಲ್ಲಾಗಲೀ, ಅಥವಾ ಊಟದಲ್ಲಿಯಾಗಲೀ ಯಾವುದೇ ರೀತಿಯ ಆನಂದವನ್ನು ಕಾಣುತ್ತಿರಲಿಲ್ಲ. ಮತ್ತೆ ಮತ್ತೆ ಹಾ ಹಾ ಎಂದು ನರಳುತ್ತಾ ಅವಳು ದಿನ-ರಾತ್ರಿ ಎರಡರಲ್ಲಿಯೂ ನಿದ್ರಿಸುತ್ತಿರಲಿಲ್ಲ, ಅವಳ ಈ ಅವಸ್ಥೆಯನ್ನು ನೋಡಿದ ಸಖಿಯರು ಅವಳ ಇಂಗಿತವನ್ನು ಅರಿತರು. ನಂತರ ದಮಯಂತಿಯ ಸಖೀಗಣವು ದಮಯಂತಿಯು ಸ್ವಸ್ಥಳಿಲ್ಲ ಎಂದು ವಿದರ್ಭಪತಿಗೆ ನಿವೇದಿಸಿದರು. ದಮಯಂತಿಯ ಸಖೀಗಣದಿಂದ ಈ ಮಾತನ್ನು ಕೇಳಿದ ನೃಪತಿ ಭೀಮನು ತನ್ನ ಸುತೆಯ ಸಲುವಾಗಿ ಮಾಡಬೇಕಾದ ಕಾರ್ಯದ ಕುರಿತು ಯೋಚಿಸತೊಡಗಿದನು. ಮಹೀಪಾಲನು ತನ್ನ ಸುತೆಯು ಯೌವನವನ್ನು ಹೊಂದಿದ್ದಾಳೆ ಎಂದು ಸಮೀಕ್ಷಿಸಿ, ದಮಯಂತಿಯ ಸ್ವಯಂವರವನ್ನು ಏರ್ಪಡಿಸುವುದು ತನ್ನ ಕಾರ್ಯ ಎಂದು ಕಂಡುಕೊಂಡನು. ಅವನು “ವೀರರೇ! ನಮ್ಮ ಈ ಸ್ವಯಂವರಕ್ಕೆ ಬನ್ನಿ!” ಎಂದು ಎಲ್ಲ ಮಹೀಪಾಲರನ್ನೂ ಒಂದುಗೂಡಿಸಿದನು. ದಮಯಂತಿಯ ಸ್ವಯಂವರವನ್ನು ಕೇಳಿ ಪಾರ್ಥಿವ ಸರ್ವರೂ ರಾಜ ಭೀಮನ ಕರೆಯಂತೆ ಭೀಮನಲ್ಲಿಗೆ ಹೊರಟರು. ತಮ್ಮ ತಮ್ಮ ಆನೆ, ಕುದುರೆ, ರಥ ಮತ್ತು ವಿಚಿತ್ರ ಮಾಲ್ಯಾಭರಣಗಳಿಂದ ಅಲಂಕೃತರಾದ ಸೇನೆಗಳ ಘರ್ಜನೆಯಿಂದಾಗಿ ಇಡೀ ವಸುಂಧರೆಯೇ ಘರ್ಜಿಸುತ್ತಿದೆಯೋ ಎಂಬಂತೆ ಕಂಡುಬಂದಿತು.
ಇದೇ ಸಮಯದಲ್ಲಿ, ಮಹಾತ್ಮರೂ, ಮಹಾವ್ರತರೂ, ಪುರಾಣ ಋಷಿಸತ್ತಮರೂ ಆದ ನಾರದ ಮತ್ತು ಪರ್ವತರು ಸಂಚರಿಸುತ್ತಾ ಇಂದ್ರಲೋಕಕ್ಕೆ ಆಗಮಿಸಿದರು. ದೇವರಾಜನ ಭವನವನ್ನು ಪ್ರವೇಶಿಸಿ, ಸುಪೂಜಿತರಾದರು. ಅವರನ್ನು ಅರ್ಚಿಸಿದ ಸಹಸ್ರಾಕ್ಷ ವಿಭುವು ಅವರು ಎಲ್ಲಿ ಹೋದರೂ ಅವ್ಯಯವಾದ ಅವರ ಕುಶಲತೆಯ ಕುರಿತು ವಿಚಾರಿಸಿದನು. ನಾರದನು ಹೇಳಿದನು:
“ಈಶ್ವರ! ನಾವೀರ್ವರು ಹೋದಲ್ಲೆಲ್ಲಾ ಕುಶಲವಾಗಿಯೇ ಇದ್ದೇವೆ. ಮತ್ತು ಮಘವತ್! ಭೂಲೋಕದಲ್ಲಿಯೂ ಕೂಡ ನೃಪರೆಲ್ಲರೂ ಉತ್ತಮ ಕುಶಲತೆಯಿಂದ ಇದ್ದಾರೆ.”
ನಾರದನ ಮಾತನ್ನು ಕೇಳಿ ಬಲವೃತ್ರಹನು ಪ್ರಶ್ನಿಸಿದನು:
“ಜೀವವನ್ನೇ ತ್ಯಜಿಸಿ ಯುದ್ಧ ಮಾಡುವ ಧರ್ಮಜ್ಞರಾದ ಪೃಥಿವೀಪಾಲರು ಪರಾಙ್ಮುಖರಾಗದೇ, ಕಾಲಬಂದಾಗ ಶಸ್ತ್ರಗಳಿಂದ ನಿಧನಹೊಂದಿ ಈ ಲೋಕಕ್ಕೆ ಬರುತ್ತಾರೆ. ಆದರೆ ಈಗ ಅಂಥವರ ಸಂಖ್ಯೆಯು ಕಡಿಮೆಯಾಗುತ್ತಿದೆ. ಆದರೆ ಆ ಎಲ್ಲ ಶೂರ ಕ್ಷತ್ರಿಯರು ಈಗ ಎಲ್ಲಿದ್ದಾರೆ? ನನ್ನ ಪ್ರೀತಿಯ ಅತಿಥಿಗಳಾಗಿ ಮಹೀಪಾಲರು ಯಾರೂ ಬರುತ್ತಿರುವಂತೆ ಕಾಣುವುದಿಲ್ಲವಲ್ಲ!”
ಶಕ್ರನ ಈ ಪ್ರಶ್ನೆಗೆ ನಾರದನು ಉತ್ತರಿಸಿದನು:
“ಭಗವನ್! ನೀನು ಏಕೆ ಮಹೀಕ್ಷಿತರ್ಯಾರನ್ನೂ ನೋಡುತ್ತಿಲ್ಲ ಎಂದು ನನ್ನಿಂದ ಕೇಳು. ವಿದರ್ಭ ರಾಜನಿಗೆ ದಮಯಂತಿ ಎನ್ನುವ ಮಗಳಿದ್ದಾಳೆ. ರೂಪದಲ್ಲಿ ಅವಳು ಪೃಥ್ವಿಯ ಎಲ್ಲರನ್ನೂ ಮೀರಿಸಿದವಳು. ಸದ್ಯದಲ್ಲಿಯೇ ಅವಳ ಸ್ವಯಂವರವು ನಡೆಯಲಿದೆ. ಆದುದರಿಂದ ರಾಜರು ಮತ್ತು ರಾಜಪುತ್ರರೆಲ್ಲರೂ ಅಲ್ಲಿಗೆ ಹೋಗುತ್ತಿದ್ದಾರೆ. ಈ ಭೂರತ್ನವನ್ನು ಪಡೆಯಲು ಹೊರಟಿರುವ ಎಲ್ಲ ಮಹೀಕ್ಷಿತರೂ ಅವಳನ್ನು ವಿಶೇಷವಾಗಿ ಆಕಾಂಕ್ಷಿಸುತ್ತಿದ್ದಾರೆ!”
ಹೀಗೆ ಹೇಳುತ್ತಿರುವಾಗಲೇ, ಅಮರೋತ್ತಮ ಲೋಕಪಾಲಕರು ಅಗ್ನಿಯನ್ನೂ ಒಡಗೊಂಡು, ದೇವರಾಜನ ಬಳಿ ಆಗಮಿಸಿದರು. ಅವರೆಲ್ಲರೂ ನಾರದನ ಮಹತ್ತರ ಮಾತುಗಳನ್ನು ಕೇಳಿ ಹರ್ಷಗೊಂಡು “ನಾವೂ ಕೂಡ ಅಲ್ಲಿಗೆ ಹೋಗೋಣ!” ಎಂದರು. ಹೀಗೆ ಅವರೆಲ್ಲರೂ ಗಣ-ವಾಹನ ಸಮೇತರಾಗಿ ಎಲ್ಲ ಮಹೀಕ್ಷಿತರೂ ಸೇರಿದ್ದ ವಿದರ್ಭಕ್ಕೆ ಹೊರಟರು.
ದಮಯಂತಿಯಲ್ಲಿಯೇ ಅನುವೃತನಾದ ರಾಜ ನಲನೂ ಕೂಡ ರಾಜರ ಸಮಾಗಮದ ಕುರಿತು ಕೇಳಿ, ಮುದದಿಂದ ಅಲ್ಲಿಗೆ ಹೊರಟನು. ಮಾರ್ಗದಲ್ಲಿ ದೇವತೆಗಳು ಭೂತಲದಲ್ಲಿ ಪಯಣಿಸುತ್ತಿದ್ದ ಸಾಕ್ಷಾತ್ ಮನ್ಮಥನೇ ಅವತರಿಸಿದ್ದಾನೋ ಎನ್ನುವ ರೂಪ ಸಂಪದ ನಲನನ್ನು ನೋಡಿದರು. ಸೂರ್ಯನಂತೆ ಶೋಭಿಸುತ್ತಿದ್ದ ಅವನನ್ನು ನೋಡಿದ ಲೋಕಪಾಲರು, ತಮ್ಮ ತಮ್ಮ ಉದ್ದೇಶಗಳನ್ನೇ ಮರೆತು, ವಿಸ್ಮಿತರಾಗಿ ಅವನ ರೂಪಸಂಪತ್ತನ್ನೇ ನೋಡತೊಡಗಿದರು. ಆ ದಿವೌಕಸರು ಅಂತರಿಕ್ಷದಲ್ಲಿಯೇ ತಮ್ಮ ತಮ್ಮ ವಿಮಾನಗಳನ್ನು ನಿಲ್ಲಿಸಿ, ನಭಸ್ತಲದಿಂದ ಕೆಳಗಿಳಿದು, ನೈಷಧನನ್ನುದ್ದೇಶಿಸಿ ಹೇಳಿದರು:
“ಭೋ ಭೋ ನೈಷಧ! ನಲ! ಸತ್ಯವ್ರತ ನೀನು ನಮ್ಮ ದೂತನಾಗಿ ನಮಗೆ ಸಹಾಯವನ್ನು ಮಾಡು.”
ನಲನ ದೇವ ದೂತತ್ವ
“ಮಾಡುತ್ತೇನೆ!” ಎಂದು ಅವರಿಗೆ ಪ್ರತಿಜ್ಞೆಯನ್ನಿತ್ತ ನಲನು ಅಂಜಲೀಬದ್ಧನಾಗಿ ನಿಂತು ಅವರನ್ನು ಪ್ರಶ್ನಿಸಿದನು:
“ನೀವು ಯಾರು? ನನ್ನನ್ನು ದೂತನನ್ನಾಗಿ ಬಳಸಲು ಇಚ್ಛಿಸುವ ಇವನು ಯಾರು? ಇದರಲ್ಲಿ ನನ್ನ ಕಾರ್ಯವೇನು? ಯಥಾವತ್ತಾಗಿ ತಿಳಿಸಿರಿ.”
ನೈಷಧನ ಈ ಮಾತುಗಳಿಗೆ ಮಘವಾನನು ಉತ್ತರಿಸಿದನು:
“ದಮಯಂತಿಯನ್ನು ಬಯಸಿ ಬಂದ ಅಮರರು ನಾವು ಎಂದು ತಿಳಿ. ನಾನು ಇಂದ್ರ. ಇವನು ಅಗ್ನಿ. ಮತ್ತು ಈತನು ಅಪಾಂಪತಿ. ಮತ್ತು ಇವನು ನೃಣರ ಶರೀರಾಂತಕರ ಯಮ. ನೀನು “ನಾವು ಬಂದಿದ್ದೇವೆ!” ಎಂದು ದಮಯಂತಿಗೆ ಹೇಳು: “ಇಂದ್ರನೂ ಸೇರಿ ಲೋಕಪಾಲಕರು ನಿನ್ನನ್ನು ನೋಡುವ ಇಚ್ಛೆಯಿಂದ ಬರುತ್ತಿದ್ದಾರೆ. ದೇವತೆಗಳಾದ ಶಕ್ರ, ಅಗ್ನಿ, ವರುಣ ಮತ್ತು ಯಮರು ನಿನ್ನನ್ನು ಹೊಂದಲು ಇಚ್ಛಿಸುತ್ತಾರೆ. ಈ ದೇವತೆಗಳಲ್ಲಿ ಒಬ್ಬರನ್ನು ನಿನ್ನ ಪತಿಯನ್ನಾಗಿ ವರಿಸು!””
ಶಕ್ರನ ಈ ಮಾತುಗಳನ್ನು ಕೇಳಿದ ನಲನು ಅಂಜಲೀಬದ್ಧನಾಗಿ ಹೇಳಿದನು: “
ಅದೇ ಉದ್ದೇಶವನ್ನಿಟ್ಟುಕೊಂಡು ಹೊರಟ ನನ್ನನ್ನು ಕಳುಹಿಸುವುದು ಸರಿಯೆನಿಸುವುದಿಲ್ಲ!”
ದೇವತೆಗಳು ಹೇಳಿದರು:
“ನೈಷಧ! ಮಾಡುತ್ತೇನೆ ಎಂದು ಮೊದಲೇ ನಮಗೆ ಮಾತು ಕೊಟ್ಟಿದ್ದೀಯೆ. ಈಗ ಏಕೆ ನೀನು ಹಾಗೆ ಮಾಡುವುದಿಲ್ಲ? ನೈಷಧ! ಹೋಗು, ತಡಮಾಡಬೇಡ.”
ಹೀಗೆ ಹೇಳಿದ ದೇವತೆಗಳಿಗೆ ನೈಷಧನು ಉತ್ತರಿಸಿದನು:
“ಸುರಕ್ಷಿತ ಅರಮನೆಯನ್ನು ಹೇಗೆ ಪ್ರವೇಶಿಸಲು ಸಾದ್ಯ?”
“ನೀನು ಪ್ರವೇಶಿಸುತ್ತೀಯೆ!” ಎಂದು ಶಕ್ರನು ಉತ್ತರಿಸಿದನು. “ಹಾಗೆಯೇ ಆಗಲಿ” ಎಂದು ಅವನು ದಮಯಂತಿಯ ನಿವೇಶನಕ್ಕೆ ಹೋದನು.
ಅಲ್ಲಿ ಸಖೀಗಣದಿಂದ ಸಮಾವೃತಗೊಂಡ, ರೂಪದಿಂದ ದೇದೀಪ್ಯಮಾನಳಾದ, ವರವರ್ಣಿನೀ ವೈದರ್ಭಿಯನ್ನು ಕಂಡನು. ಅತೀವ ಸುಕುಮಾರಾಂಗಿ ತನುಮಧ್ಯೆ ಸುಲೋಚನೆಯು ತನ್ನ ತೇಜಸ್ಸಿನಿಂದ ಶಶಿಯ ಕಿರಣಗಳನ್ನು ಹಿಡಿದಿಟ್ಟಹಾಗಿದ್ದಳು. ಆ ಚಾರುಹಾಸಿನಿಯನ್ನು ನೋಡಿದೊಡನೆಯೇ ಅವನಲ್ಲಿ ಕಾಮವು ವೃದ್ದಿಸಿತು; ಆದರೆ ಕೊಟ್ಟ ಮಾತನ್ನು ಸತ್ಯಮಾಡಲೋಸುಗ ಆಕರ್ಷಣೆಯನ್ನು ಹೃದಯದಲ್ಲಿಯೇ ಹಿಡಿದಿಟ್ಟುಕೊಂಡನು. ನೈಷಧನನ್ನು ನೋಡಿದ ಆ ಪರಮಾಂಗನೆಯರು ಸಂಭ್ರಾಂತರಾಗಿ, ಅವನ ತೇಜಸ್ಸಿನಿಂದ ಘರ್ಶಿತರಾಗಿ ತಮ್ಮ ತಮ್ಮ ಆಸನಗಳಿಂದ ಎದ್ದು ನಿಂತರು. ಸುಪ್ರೀತರೂ ವಿಸ್ಮಯರೂ ಆದ ಅವರು ಅವನೊಡನೆ ಮಾತನಾಡದೇ, ತಮ್ಮ ಮನಸ್ಸಿನೊಳಗೆ ಅವನನ್ನು ಬಹಳಷ್ಟು ಪ್ರಶಂಸಿಸಿದರು:
“ಆಹಾ ರೂಪವೇ! ಆಹಾ ಕಾಂತಿಯೇ! ಆಹಾ ಈ ಮಹಾತ್ಮನ ಧೈರ್ಯವೇ! ಇವನ್ನ್ಯಾರು? ದೇವನಿರಬಹುದೇ? ಯಕ್ಷನಿರಬಹುದೇ? ಅಥವಾ ಗಂಧರ್ವನಿರಬಹುದೇ?”
ಅವರಲ್ಲಿ ಯಾರೂ ಒಂದು ಶಬ್ಧವನ್ನೂ ಮಾತನಾಡಲು ಶಕ್ಯರಿರಲಿಲ್ಲ. ಎಲ್ಲ ವರಾಂಗನೆಯರೂ ಅವನ ತೇಜಸ್ಸಿನಿಂದ ಘರ್ಶಿತರಾಗಿ ನಾಚಿಕೊಂಡಿದ್ದರು. ಆದರೆ ವಿಸ್ಮಿತ ದಮಯಂತಿಯು ವೀರ ನಲನನ್ನುದ್ದೇಶಿಸಿ ಮಾತನಾಡಿದಳು:
“ನನ್ನ ಹೃದಯದ ಆಸೆಯನ್ನು ವೃದ್ಧಿಸುವ, ಸರ್ವಾನವದ್ಯಾಂಗ ನೀನು ಯಾರು? ವೀರ! ಒಬ್ಬ ಅಮರನಂತೆ ನೀನು ಇಲ್ಲಿಗೆ ಬಂದಿದ್ದೀಯೆ. ನೀನು ಯಾರಿಗೂ ಕಾಣದಂತೆ ಇಲ್ಲಿಗೆ ಹೇಗೆ ಆಗಮಿಸಿದೆ ಎಂದು ತಿಳಿಯಲು ಬಯಸುತ್ತೇನೆ. ಯಾಕೆಂದರೆ ನನ್ನ ಈ ಅರಮನೆಯು ಸುರಕ್ಷಿತವಾಗಿದೆ ಮತ್ತು ರಾಜನ ಉಗ್ರಶಾಸನವಿದೆ.”
ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು:
“ಕಲ್ಯಾಣಿ! ನನ್ನನ್ನು ನಲನೆಂದು ತಿಳಿ. ದೇವದೂತನಾಗಿ ಇಲ್ಲಿಗೆ ಆಗಮಿಸಿದ್ದೇನೆ. ದೇವತೆಗಳು ನಿನ್ನನ್ನು ಹೊಂದಲು ಇಚ್ಛಿಸುವರು - ಶಕ್ರ, ಅಗ್ನಿ, ವರುಣ ಮತ್ತು ಯಮ. ಈ ದೇವರುಗಳಲ್ಲಿ ಯಾರಾದರೂ ಒಬ್ಬನನ್ನು ಪತಿಯಾಗಿ ವರಿಸು. ಅವರ ಪ್ರಭಾವದಿಂದಲೇ ನಾನು ಇಲ್ಲಿಗೆ ಯಾರಿಗೂ ಕಾಣಿಸಿಕೊಳ್ಳದೇ ಪ್ರವೇಶಿಸಿದ್ದೇನೆ. ನಾನು ಪ್ರವೇಶಿಸುವಾಗ ಯಾರೂ ನನ್ನನ್ನು ನೋಡಲಿಲ್ಲ ಮತ್ತು ತಡೆಯಲಿಲ್ಲ. ಈ ಉದ್ದೇಶಕ್ಕೋಸ್ಕರವೇ ಸುರಸತ್ತಮರಿಂದ ನಾನು ಕಳುಹಿಸಲ್ಪಟ್ಟಿದ್ದೇನೆ. ಇದನ್ನು ಕೇಳಿದನಂತರ ನಿನಗೆ ಇಷ್ಟಬಂದಹಾಗೆ ಮಾಡು.”
ಆ ದೇವತೆಗಳಿಗೆ ನಮಸ್ಕರಿಸಿ, ಅವಳು ಮುಗುಳ್ನಗುತ್ತಾ ನಲನಿಗೆ ಹೇಳಿದಳು:
“ರಾಜ! ನಿನ್ನ ಉದ್ದೇಶಗಳನ್ನು ಯಥಾವತ್ತಾಗಿ ಹೇಳು. ನಿನಗೆ ನನ್ನಿಂದ ಏನಾಗಬೇಕು? ನಾನು ಮತ್ತು ನನ್ನಲ್ಲಿರುವ ಎಲ್ಲವೂ ನಿನ್ನದೇ ಅಲ್ಲವೇ? ನಿನ್ನ ಇಚ್ಛೆಯನ್ನು ವಿಶ್ವಾಸದಿಂದ ಬಹಿರಂಗಪಡಿಸು. ಹಂಸಗಳ ವಚನಗಳು ನನ್ನ ದೇಹವನ್ನು ದಹಿಸುತ್ತಿವೆ! ನಿನಗೋಸ್ಕರವೇ ನಾನು ಈ ರಾಜರುಗಳನ್ನೆಲ್ಲಾ ಒಟ್ಟು ಸೇರಿಸಿದ್ದೇನೆ. ನಿನ್ನನ್ನು ಪ್ರೀತಿಸುತ್ತಿದ್ದ ನನ್ನನ್ನು ನೀನು ತಿರಸ್ಕರಿಸಿದರೆ ನಾನು ನಿನ್ನ ಕಾರಣದಿಂದಾಗಿ ವಿಷವನ್ನೋ, ಅಗ್ನಿಯನೋ, ಜಲವನ್ನೋ ಅಥವಾ ನೇಣನ್ನೋ ಮೊರೆಹೊಗುತ್ತೇನೆ.”
ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು:
“ಲೋಕಪಾಲಕರೇ ಇರುವಾಗ ನೀನು ಮನುಷ್ಯನನ್ನು ಹೇಗೆ ಇಚ್ಛಿಸುತ್ತೀಯೆ? ನಾನು ಆ ಮಹಾತ್ಮ ಲೋಕಕೃತ ಈಶ್ವರರ ಪಾದಧೂಳಿಗೂ ಸಮನಲ್ಲ. ನಿನ್ನ ಮನಸ್ಸನ್ನು ಅವರೆಡೆಗೇ ಒಲೆಯಿಸು. ದೇವತೆಗಳಿಗೆ ಅಪ್ರಿಯವಾಗಿ ನಡೆದುಕೊಂಡ ಮರ್ತ್ಯನಿಗೆ ಮೃತ್ಯುವೇ ಗತಿ. ಸುರೋತ್ತಮರನ್ನು ವರಿಸಿ ನನ್ನನ್ನು ರಕ್ಷಿಸು.”
ಆಗ ಶುಚಿಸ್ಮಿತೆ ದಮಯಂತಿಯು ಬಾಷ್ಪಗಳಿಂದೊಡಗೂಡಿದ ಮಾತಿನಿಂದ ನಿಧಾನವಾಗಿ ರಾಜನಿಗೆ ಉತ್ತರಿಸಿದಳು:
“ನರೇಶ್ವರ! ನನ್ನ ದೃಷ್ಟಿಯಲ್ಲಿ ಅಪಾಯವಿಲ್ಲದಂತಹ ಒಂದು ಉಪಾಯವಿದೆ. ಇದರಿಂದ ನಿನಗೆ ಯಾವುದೇರೀತಿಯ ದೋಷವೂ ಬರುವುದಿಲ್ಲ. ಅಗ್ನಿಪುರೋಗಮ ದೇವತೆಗಳನ್ನೂ ಸೇರಿಕೊಂಡು ನೀವೆಲ್ಲರೂ ನನ್ನ ಸ್ವಯಂವರಕ್ಕೆ ಬರಬೇಕು. ಆಗ ನಾನು ಲೋಕಪಾಲಕರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ಈ ರೀತಿ ನಿನಗೆ ಯಾವ ದೋಷವೂ ಬರುವುದಿಲ್ಲ.”
ವೈದರ್ಭಿಯು ಈ ರೀತಿ ಹೇಳಲು, ರಾಜ ನಲನು ಪುನಃ ದೇವತೆಗಳು ಎಲ್ಲಿ ಸಮಾಗತರಾಗಿದ್ದರೋ ಅಲ್ಲಿಗೆ ಮರಳಿದನು. ಅಲ್ಲಿಗೆ ಅವನು ಬರುತ್ತಿರುವುದನ್ನು ಈಶ್ವರನೂ ಸಹಿತ ಲೋಕಪಾಲಕರು ನೋಡಿ ಸರ್ವ ವೃತ್ತಾಂತವನ್ನೂ ಕೇಳಿದರು. ದೇವತೆಗಳು ಹೇಳಿದರು:
“ರಾಜ! ನೀನು ಶುಚಿಸ್ಮಿತೆ ದಮಯಂತಿಯನ್ನು ನೋಡಿದೆಯಾ? ನಮಗೆಲ್ಲರಿಗೆ ಅವಳು ಏನು ಹೇಳಿದಳು ಹೇಳು.”
ನಲನು ಹೇಳಿದನು:
“ನಿಮ್ಮೆಲ್ಲರ ಆದೇಶದಂತೆ ಎತ್ತರ ಗೋಡೆಗಳಿಂದ ಮತ್ತು ದಂಡಪಾಣಿ ಕಾವಲುಗಾರರಿಂದ ಆವೃತ ದಮಯಂತಿಯ ನಿವೇಶನವನ್ನು ಪ್ರವೇಶಿಸಿದೆನು. ಆದರೆ ನಿಮ್ಮ ತೇಜಸ್ಸಿನ ಪ್ರಭಾವದಿಂದ ಆ ಪಾರ್ಥಿವಸುತೆಯನ್ನು ಬಿಟ್ಟು ಬೇರೆ ಯಾರೂ ನಾನು ಪ್ರವೇಶಿಸುವುದನ್ನು ನೋಡಲಿಲ್ಲ. ನಾನು ಅವಳ ಸಖಿಯರನ್ನು ನೋಡಿದೆ, ಅವರೂ ನನ್ನನ್ನು ನೋಡಿದರು. ನನ್ನನ್ನು ನೋಡಿ ಅವರೆಲ್ಲರೂ ವಿಸ್ಮಿತರಾದರು. ನಿಮ್ಮ ಕುರಿತು ನಾನು ಆ ರುಚಿರಾನನೆಗೆ ಹೇಳಿದೆ. ಆದರೆ ಅವಳಿಗೆ ನನ್ನ ಮೇಲೆಯೇ ಸಂಕಲ್ಪವಿದೆ ಎಂದು ಹೇಳಿದಳು. “ನಿನ್ನ ಜೊತೆಗೆ ಸುರರೂ ಕೂಡ ನನ್ನ ಸ್ವಯಂವರಕ್ಕೆ ಬರಲಿ!” ಎಂದು ಆ ಬಾಲೆಯು ನನಗೆ ಹೇಳಿದಳು. “ಅವರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ಈ ರೀತಿ ನಿನಗೆ ಯಾವುದೇ ದೋಷವೂ ಬರುವುದಿಲ್ಲ.” ತ್ರಿದಶೇಶ್ವರರೇ! ಅಲ್ಲಿ ನಡೆದಿದ್ದನ್ನು ಯಥಾವತ್ತಾಗಿ ನಾನು ನಿಮಗೆ ತಿಳಿಸಿದ್ದೇನೆ. ಇನ್ನು ನಿಮಗೆ ತಿಳಿದಹಾಗೆ ಮಾಡಿ.”
ದಮಯಂತೀ ಸ್ವಯಂವರ
ನಂತರ ಪುಣ್ಯ ತಿಥಿ, ಕ್ಷಣ ಮತ್ತು ಶುಭ ಕಾಲವು ಪ್ರಾಪ್ತಿಯಾದಾಗ, ಭೀಮರಾಜನು ಮಹೀಪಾಲರಿಗೆ ಸ್ವಯಂವರದ ಕರೆಕೊಟ್ಟನು. ಅದನ್ನು ಕೇಳಿ ಕಾಮ ಪೀಡಿತ ಎಲ್ಲ ಪೃಥಿವೀಪಾಲರೂ ದಮಯಂತಿಯನ್ನು ಗೆಲ್ಲುವ ಭರವಸೆಯಿಂದ ತ್ವರಿತವಾಗಿ ಬಂದು ಸೇರಿದರು. ಕನಕಸ್ತಂಭಗಳಿಂದ ಮತ್ತು ತೋರಣಗಳಿಂದ ವಿರಾಜಿಸುತ್ತಿರುವ ಮಹಾರಂಗವನ್ನು ನೃಪರು ಸಿಂಹಗಳು ಪರ್ವತವನ್ನು ಪ್ರವೇಶಿಸುವಂತೆ ಪ್ರವೇಶಿಸಿದರು. ಅಲ್ಲಿ ಪೃಥಿವೀಕ್ಷಿತರು ಪುಷ್ಪಮಾಲೆಗಳನ್ನು ಮತ್ತು ಜಗಜಗಿಸುವ ಮಣಿಕುಂಡಲಗಳನ್ನು ಧರಿಸಿ, ವಿವಿಧ ಆಸನಗಳಲ್ಲಿ ಆಸೀನರಾದರು. ಆ ರಾಜ ಸಮಿತಿಯು ಭೋಗವತಿಯು ನಾಗಗಳಿಂದ ಮತ್ತು ಗಿರಿಗುಹೆಯು ವ್ಯಾಘ್ರಗಳಿಂದ ತುಂಬಿರುವ ಹಾಗೆ ನರವ್ಯಾಘ್ರರಿಂದ ತುಂಬಿಕೊಂಡಿತು. ಅಲ್ಲಿ ಅವರ ಬಾಹುಗಳು ಪರಿಘಗಳಂತೆ ಕಾಣುತ್ತಿದ್ದವು. ಐದುತಲೆಯ ಉರಗಗಳಂತೆ ಆಕಾರಗಳನ್ನು ಹೊಂದಿದ್ದು ನುಣುಪಾಗಿದ್ದವು. ಆಕಾಶದಲ್ಲಿ ನಕ್ಷತ್ರಗಳು ಶೋಭಿಸುವಂತೆ ರಾಜರ ಮುಖಗಳು ಸುಂದರ ಕೇಶಗಳಿಂದ, ಸುಂದರ ಹೊಳೆಯುತ್ತಿರುವ ನಾಸಿಕಗಳಿಂದ ಶೋಭಿಸುತ್ತಿದ್ದವು. ಆಗ ಶುಭಾನನೆ ದಮಯಂತಿಯು ತನ್ನ ಪ್ರಭೆಯಿಂದ ರಾಜರುಗಳ ಕಣ್ಣುಗಳನ್ನೂ, ಮನಸ್ಸುಗಳನ್ನೂ ಕದಿಯುತ್ತಾ ರಂಗವನ್ನು ಪ್ರವೇಶಿಸಿದಳು. ಅವಳ ಯಾವ ಯಾವ ಅಂಗದ ಮೇಲೆ ಆ ಮಹಾತ್ಮರ ದೃಷ್ಟಿಯು ಬಿದ್ದಿತೋ, ಬೇರೆಲ್ಲಿಯೂ ಹಾಯದಂತೆ ಅಲ್ಲಿಯೇ ಅವರ ದೃಷ್ಟಿಯು ಸಿಲುಕಿಕೊಂಡಿತು. ರಾಜರ ಹೆಸರುಗಳ ಸಂಕೀರ್ತನೆ ಮಾಡುತ್ತಿರುವಾಗ ಭೈಮಿಯು ಒಂದೇತರಹ ಕಾಣುತ್ತಿರುವ ಐವರು ಪುರುಷರನ್ನು ನೋಡಿದಳು. ರೂಪದಲ್ಲಿ ಯಾವ ವ್ಯತ್ಯಾಸಗಳೂ ಇಲ್ಲದೇ ಅಲ್ಲಿ ಕುಳಿತಿರುವ ಅವರನ್ನೆಲ್ಲ ನೋಡಿ ವೈದರ್ಭಿಯು ನೃಪ ನಲನು ಯಾರೆಂದು ಗುರುತಿಸಲಾಗದೇ ಸಂದೇಹಕ್ಕೊಳಗಾದಳು. ಯಾಕೆಂದರೆ ಅವರಲ್ಲಿ ಯಾರನ್ನು ನೋಡಿದರೂ ನೃಪ ನಲನನ್ನೇ ನೋಡುತ್ತಿದ್ದೇನೆ ಎಂದು ಅವಳಿಗನ್ನಿಸುತ್ತಿತ್ತು.
ಚಿಂತೆಯಿಂದ ಭಾಮಿನಿಯು ಮನಸ್ಸಿನಲ್ಲಿಯೇ ತರ್ಕಿಸತೊಡಗಿದಳು:
“ದೇವತೆಗಳು ಯಾರೆಂದು ನಾನು ಹೇಗೆ ತಿಳಿಯಲಿ ಮತ್ತು ಹೇಗೆ ನೃಪ ನಲನನ್ನು ಗುರುತಿಸಲಿ?”
ಹೀಗೆ ದುಃಖಿತಳಾಗಿ ಚಿಂತಿಸುತ್ತಿದ್ದ ಆ ವೈದರ್ಭಿಯು ಕೇಳಿದ್ದ ದೇವಚಿಹ್ನೆಗಳ ಕುರಿತು ಯೋಚಿಸತೊಡಗಿದಳು:
“ಇವರೇ ದೇವತೆಗಳು ಎಂದು ಗುರುತಿಸುವಂತಹ ಚಿಹ್ನೆಗಳ ಕುರಿತು ವೃದ್ಧರಿಂದ ಕೇಳಿದ್ದೇನೆ. ಆದರೆ ಅವುಗಳಲ್ಲಿ ಯಾವುದೂ ಭೂಮಿಯಮೇಲಿರುವ ಇವರಲ್ಲಿ ಕಂಡುಬರುತ್ತಿಲ್ಲವಲ್ಲಾ!”
ಪುನಃ ಪುನಃ ಬೇರೆ ಬೇರೆ ರೀತಿಗಳಲ್ಲಿ ವಿಚಾರಿಸುತ್ತಾ ಅವಳು ದೇವತೆಗಳಿಗೆ ಶರಣುಹೋಗುವ ಕಾಲ ಪ್ರಾಪ್ತವಾಗಿದೆ ಎಂದು ಅರಿತಳು. ವಾಚಾ-ಮನಸಾ ನಮಸ್ಕರಿಸಿ, ಪ್ರಾಂಜಲಿಬದ್ಧಳಾಗಿ, ನಡುಗುತ್ತಾ ದೇವತೆಗಳನ್ನುದ್ದೇಶಿಸಿ ಪ್ರಾರ್ಥಿಸಿದಳು:
“ಹಂಸಗಳ ವಚನವನ್ನು ಕೇಳಿ ನೈಷಧನೇ ನನ್ನ ಪತಿಯಾಗಲಿ ಎಂಬ ನನ್ನ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಿ ಕೊಡಲಿ! ವಾಚಾ-ಮನಸಾ ನಾನು ಅಭಿಚರಳಾಗಿಲ್ಲ ಎಂಬ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಲಿ! ದೇವತೆಗಳೇ ನನಗೆ ನಿಷಧಾಧಿಪನು ಪತಿಯಾಗಲಿ ಎಂದು ನಿರ್ಧರಿಸಿದ್ದರೆ, ಈ ಸತ್ಯದ ಮೂಲಕ ದೇವತೆಗಳು ನನಗೆ ಕಾಣಿಸಿಕೊಳ್ಳಲಿ! ನರಾಧಿಪ ಪುಣ್ಯಶ್ಲೋಕನನ್ನು ಗುರುತಿಸಲು ಸಹಾಯವಾಗುವಂತೆ ಈಶ್ವರಸಮೇತ ಈ ಲೋಕಪಾಲಕರು ತಮ್ಮ ಸ್ವರೂಪಗಳನ್ನು ಕಾಣಿಸಲಿ!”
ದಮಯಂತಿಯ ಆ ಕರುಣ ಪರಿವೇದನೆಯನ್ನು ಕೇಳಿ ಮತ್ತು ನೈಷಧನ ಕುರಿತು ಅವಳಿಗಿದ್ದ ಪರಮ ನಿಶ್ಚಯ ಮತ್ತು ಅನುರಾಗ, ಅವಳ ಮನೋವಿಶುದ್ಧಿ, ಬುದ್ಧಿ, ಮತ್ತು ಭಕ್ತಿ, ರಾಗವನ್ನು ನೋಡಿ, ಅವಳು ಕೇಳಿಕೊಂಡ ಹಾಗೆ ದೇವತೆಗಳು ತಮ್ಮ ಚಿಹ್ನೆಧಾರಣೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ತೋರಿಸಿದರು. ಬೆವರೇ ಇಲ್ಲದ, ಸ್ತಬ್ಧಲೋಚನರಾದ, ಶುಭ್ರಕುಸುಮಮಾಲೆಗಳನ್ನು ಧರಿಸಿದ, ಮಲಿನತೆಯೇ ಇಲ್ಲದೇ, ಕ್ಷಿತಿಯನ್ನು ಸ್ಪರ್ಶಿಸದೇ ನಿಂತಿರುವ ದೇವತೆಗಳನ್ನು ಅವಳು ನೋಡಿದಳು. ಮತ್ತು ನಲನು ತನ್ನ ನೆರಳಿನ ಮೂಲಕ, ಮಲಿನಮಾಲೆಯಿಂದ, ಬೆವರು ಮತ್ತು ಕೊಳೆಯಿಂದ, ಕಣ್ಣುರೆಪ್ಪೆಗಳ ಮಿಡಿತದಿಂದ ಮತ್ತು ಭೂಮಿಯನ್ನು ಮೆಟ್ಟಿ ನಿಂತಿರುವುದರಿಂದ ಗುರುತಿಸಲ್ಪಟ್ಟನು. ಈಗ ಭೈಮಿಯು ದೇವತೆಗಳನ್ನು ಮತ್ತು ಪುಣ್ಯಶ್ಲೋಕನನ್ನು ನೋಡಬಹುದಾದುರಿಂದ ಧರ್ಮಪ್ರಕಾರವಾಗಿ ನೈಷಧನನ್ನು ವರಿಸಿದಳು. ಆ ವಿಲಜ್ಜಮಾನಿ ಆಯತಲೋಚನೆಯು ಅವನ ವಸ್ತ್ರದ ಅಂಚನ್ನು ಹಿಡಿದಳು ಮತ್ತು ಪರಮ ಶೋಭನೀಯ ಮಾಲೆಯನ್ನು ಅವನ ಸ್ಕಂಧದ ಮೇಲೆ ಹಾಕಿದಳು. ಹೀಗೆ ಆ ವರವರ್ಣಿನಿಯು ಅವನನ್ನೇ ತನ್ನ ಪತಿಯನ್ನಾಗಿ ವರಿಸಿದಳು. ನೆರೆದಿದ್ದ ನರಾಧಿಪರೆಲ್ಲರೂ ಹಾಹಾಕಾರ ಮಾಡಿದರು, ಮತ್ತು ದೇವ-ಮಹರ್ಷಿಗಳು ವಿಸ್ಮಿತರಾಗಿ, ನೃಪ ನಲನನ್ನು ಪ್ರಶಂಸಿಸುತ್ತಾ, “ಸಾಧು! ಸಾಧು!” ಎಂದು ಉದ್ಗರಿಸಿದರು.
ಮಹೌಜಸ ಲೋಕಪಾಲಕರು ಭೈಮ್ಯಳಿಂದ ವರಿಸಿಕೊಂಡ ನೈಷಧನ ಕುರಿತು ಪ್ರಹೃಷ್ಟಮನಸರಾಗಿ, ನಲನಿಗೆ ಒಟ್ಟು ಎಂಟು ವರಗಳನ್ನಿತ್ತರು. ಶಚೀಪತಿ ಶಕ್ರನು ಪ್ರೀತನಾಗಿ ನೈಷಧನಿಗೆ ಯಜ್ನಗಳಲ್ಲಿ ತನ್ನ ಪ್ರತ್ಯಕ್ಷ್ಯದರ್ಶನದ ಮತ್ತು ನಡೆಯುವಲ್ಲೆಲ್ಲಾ ದಾರಿಯಲ್ಲಿ ವಿಘ್ನಬರದಂತೆ ವರವನ್ನಿತ್ತನು. ಹುತಾಶನನು ನೈಷಧನಿಗೆ ಬೇಕಾದಲ್ಲಿ ಅಗ್ನಿಯು ಸ್ವಯಂಭೂತನಾಗುವಹಾಗೆ, ಮತ್ತು ಅಗ್ನಿಯಿಂದ ಪ್ರಭಾವಿತ ಪ್ರದೇಶಗಳಿಗೆ ಪ್ರವೇಶಿಸಬಹುದೆಂಬ ವರವನ್ನಿತ್ತನು. ಯಮನು ಅನ್ನರಸವನ್ನೂ ಮತ್ತು ಧರ್ಮದಲ್ಲಿ ಪರಮಸ್ಥಿತಿಯನ್ನೂ ನೀಡಿದನು. ಅಪಾಂಪತಿಯು ನೈಷಧನು ಬಯಸಿದಲ್ಲಿ ಜಲವು ಇರುವಂತೆ, ಮತ್ತು ಸುಗಂಧದ ಉತ್ತಮ ಮಾಲೆಯನ್ನಿತ್ತನು. ಸರ್ವರೂ ಸೇರಿ ಅವನಿಗೆ ಅವಳಿ ಮಕ್ಕಳನ್ನು ಕೊಟ್ಟರು. ಈ ರೀತಿ ವರಗಳನ್ನಿತ್ತು ದೇವತೆಗಳು ತ್ರಿದಿವಕ್ಕೆ ತೆರಳಿದರು. ವಿವಾಹವನ್ನು ನೋಡಿದ ಪಾರ್ಥಿವರೆಲ್ಲರೂ ವಿಸ್ಮಯಾನ್ವಿತರಾಗಿ, ದಮಯಂತಿಯ ಸಲುವಾಗಿ ಸಂತೋಷಗೊಂಡು, ಬಂದ ದಾರಿಯಲ್ಲಿಯೇ ಹಿಂತೆರಳಿದರು.
ಪಾರ್ಥಿವ ಪುಣ್ಯಶ್ಲೋಕನೂ ಕೂಡ ನಾರೀರತ್ನವನ್ನು ಹೊಂದಿ, ಬಲವೃತ್ರಹನು ಶಚಿಯೊಂದಿಗೆ ರಮಿಸುವಹಾಗೆ ಅವಳೊಂದಿಗೆ ರಮಿಸಿದನು. ಅತೀವ ಮುದಿತನಾದ ವೀರ ರಾಜನು ಹೊಳೆಯುತ್ತಿರುವ ಅಂಶುಮಾನನಂತೆ ಧರ್ಮದಲ್ಲಿ ರಂಜಿಸುತ್ತಾ ಪ್ರಜೆಗಳನ್ನು ಪರಿಪಾಲಿಸಿದನು. ನಾಹುಷ ಯಯಾತಿಯಂತೆ ಅಶ್ವಮೇಧ ಮತ್ತು ಇನ್ನೂ ಇತರ, ಬಹಳಷ್ಟು ಆಪ್ತದಕ್ಷಿಣೆಗಳನ್ನೊಡಗೂಡಿದ ಕ್ರತುಗಳನ್ನು ಆ ಧೀಮಂತನು ನೆರವೇರಿಸಿದನು. ಅಮರನಂತೆ ನಲನು ದಮಯಂತಿಯ ಸಹಿತ ಪುನಃ ಪುನಃ ರಮಣೀಯ ವನ-ಉಪವನಗಳಲ್ಲಿ ವಿಹರಿಸಿದನು. ಹೀಗೆ ಯಜ್ಞಗಳನ್ನು ನಡೆಸುತ್ತಾ ಮತ್ತು ವಿಹರಿಸುತ್ತಾ ನರಾಧಿಪ ವಸುಧಾಧಿಪನು ವಸುಸಂಫುರ್ಣ ವಸುಧೆಯನ್ನು ರಕ್ಷಿಸುತ್ತಿದ್ದನು.
ಕಲಿಕೋಪ
ನೈಷಧನು ಭೈಮಿಯಿಂದ ವರಿಸಲ್ಪಟ್ಟ ನಂತರ ಮಹೌಜಸ ಲೋಕಪಾಲಕರು ತೆರಳುತ್ತಿರುವಾಗ ದ್ವಾಪರನ ಜೊತೆಗೂಡಿ ಬರುತ್ತಿದ್ದ ಕಲಿಯನ್ನು ಕಂಡರು. ಬಲವೃತ್ರಹ ಶಕ್ರನು ಕಲಿಯನ್ನು ನೋಡಿ ಕೇಳಿದನು:
“ಕಲಿ! ದ್ವಾಪರನನ್ನೊಡಗೂಡಿ ಎಲ್ಲಿಗೆ ಹೋಗುತ್ತಿರುವೆ ಹೇಳು.”
ಕಲಿಯು ಶಕ್ರನಿಗೆ ಉತ್ತರಿಸಿದನು:
“ದಮಯಂತಿಯ ಸ್ವಯಂವರಕ್ಕೆ ಹೋಗುತ್ತಿದ್ದೇನೆ. ಅಲ್ಲಿ ನಾನು ಅವಳನ್ನು ವರಿಸುತ್ತೇನೆ, ಯಾಕೆಂದರೆ ನನ್ನ ಮನಸ್ಸು ಅವಳಿಗಾಗಿಯೇ ಮಾರಿಹೋಗಿದೆ.”
ಇಂದ್ರನು ನಗುತ್ತಾ ಹೇಳಿದನು:
“ಸ್ವಯಂವರವು ಮುಗಿದು ಹೋಯಿತು! ನನ್ನ ಎದುರಿನಲ್ಲಿಯೇ ಅವಳು ರಾಜ ನಲನನ್ನು ಪತಿಯನ್ನಾಗಿ ವರಿಸಿದಳು.”
ಶಕ್ರನ ಈ ಮಾತುಗಳನ್ನು ಕೇಳಿ ಕಲಿಯು ಕೋಪಸಮನ್ವಿತನಾದನು. ಆ ಎಲ್ಲ ದೇವತೆಗಳನ್ನು ಉದ್ದೇಶಿಸಿ ಹೇಳಿದನು:
“ದೇವತೆಗಳ ಮಧ್ಯದಲ್ಲಿ ಒಬ್ಬ ಮನುಷ್ಯನನ್ನು ಪತಿಯನ್ನಾಗಿ ಆರಿಸಿಕೊಂಡರೆ ಅವಳಿಗೆ ನಿಜವಾಗಿಯೂ ವಿಪುಲ ದಂಡವೇ ದೊರೆಯಬೇಕು!”
ಕಲಿಯ ಈ ಮಾತುಗಳಿಗೆ ದಿವೌಕಸರು ಉತ್ತರಿಸಿದರು:
“ದಮಯಂತಿಯು ನಲನನ್ನು ವರಿಸಲು ನಾವೇ ಸಮ್ಮತಿಯನ್ನು ನೀಡಿದ್ದೇವೆ. ಯಥಾವತ್ತಾಗಿ ವ್ರತಚರಿತ, ಅಖಿಲ ಧರ್ವವನ್ನೂ ತಿಳಿದಿರುವ, ಸರ್ವಗುಣೋಪೇತ ನೃಪ ನಲನನ್ನು ಯಾರುತಾನೆ ವರಿಸುವುದಿಲ್ಲ? ಸತ್ಯ, ಧೃತಿ, ದಾನ, ತಪ, ಶೌಚ, ದಮ, ಮತ್ತು ಶಮ ಇವು ಆ ಪುರುಷವ್ಯಾಘ್ರನಲ್ಲಿ ನೆಲೆಗೊಂಡಿವೆ; ಆ ನೃಪನು ಲೋಕಪಾಲಕರಿಗೆ ಸಮನಾಗಿದ್ದಾನೆ. ಕಲಿ! ಇಂತಹ ಸದ್ಗುಣಿ ನಲನನ್ನು ಶಪಿಸಲು ಇಚ್ಛಿಸುವವನು ತನ್ನನ್ನು ತಾನೇ ಶಪಿಸಿ ತನ್ನನ್ನು ತಾನೇ ಹತ್ಯೆಮಾಡಿಕೊಳ್ಳುವ ಮೂಢನಂತೆ. ಅಂಥವನು ಕೃಚ್ಛ್ರ ನರಕದಲ್ಲಿ ತುಂಬಾ ಸಮಯ ಅಗಾಧ ನೋವನ್ನು ಅನುಭವಿಸುತ್ತಾನೆ.”
ಕಲಿ ಮತ್ತು ದ್ವಾಪರರಿಗೆ ಈ ರೀತಿ ಹೇಳಿದ ದೇವತೆಗಳು ದಿವಕ್ಕೆ ತೆರಳಿದರು.
ದೇವತೆಗಳು ಹೋದನಂತರ ಕಲಿಯು ದ್ವಾಪರನಿಗೆ ಹೇಳಿದನು:
“ನನ್ನ ಕೋಪವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ದ್ವಾಪರ! ನಲನನ್ನು ಹಿಡಿಯುತ್ತೇನೆ. ಅವನನ್ನು ರಾಜ್ಯಭ್ರಂಶನನ್ನಾಗಿ ಮಾಡುತ್ತೇನೆ; ಮತ್ತು ಅವನು ಭೈಮಿಯ ಜೊತೆ ರಮಿಸದಂತೆ ಮಾಡುತ್ತೇನೆ. ನೀನು ದಾಳಗಳನ್ನು ಪ್ರವೇಶಿಸಿ ನನಗೆ ಸಹಾಯವನ್ನು ಮಾಡಬೇಕು.”
ನಲ-ಪುಷ್ಕರರ ದ್ಯೂತ
ಈ ರೀತಿ ದ್ವಾಪರನ ಜೊತೆ ಒಪ್ಪಂದ ಮಾಡಿಕೊಂಡ ಕಲಿಯು ರಾಜ ನೈಷಧನಿರುವಲ್ಲಿಗೆ ಆಗಮಿಸಿದನು. ನೈಷಧನಲ್ಲಿ ಚಿರವಾಗಿ ವಾಸಿಸುವ ಸಲುವಾಗಿ ನಿತ್ಯವೂ ಅವಕಾಶವನ್ನು ಅಪೇಕ್ಷಿಸುತ್ತಿದ್ದ ಕಲಿಯು ಹನ್ನೆರಡನೆಯ ವರ್ಷಗಳ ನಂತರ ಅವಕಾಶವನ್ನು ಕಂಡನು. ಒಮ್ಮೆ ನೈಷಧನು ಮೂತ್ರವಿಸರ್ಜನೆ ಮಾಡಿ ಪಾದಗಳನ್ನು ತೊಳೆಯದೆಯೇ ಸಂಧ್ಯಾವಂದನೆ ಮಾಡಿದಾಗ ಕಲಿಯು ಅವನನ್ನು ಪ್ರವೇಶಿಸಿದನು. ನಲನನ್ನು ಪ್ರವೇಶಿಸಿದ ಅವನು ಪುಷ್ಕರನ ಸಮೀಪ ಹೋಗಿ “ಪುಷ್ಕರ! ನಲನೊಟ್ಟಿಗೆ ಜೂಜನ್ನಾಡು ಬಾ” ಎಂದನು.
“ನನ್ನ ಸಹಾಯದಿಂದ ನೀನು ನಿರ್ದಿಷ್ಟವಾಗಿ ನಲನನ್ನು ದ್ಯೂತದಲ್ಲಿ ಗೆಲ್ಲುತ್ತೀಯೆ. ನೃಪ ನಲನನ್ನು ಸೋಲಿಸಿ ನಿಷಧವನ್ನು ಗೆಲ್ಲು.”
ಕಲಿಯ ಈ ಮಾತುಗಳಂತೆ ಪುಷ್ಕರನು ನಲನಲ್ಲಿಗೆ ಹೋದನು. ಕಲಿಯಾದರೂ ಗೋವುಗಳ ಹೋರಿಯಾಗಿ ಪುಷ್ಕರನನ್ನು ಸೇರಿಕೊಂಡನು. ಪರವೀರಹ ಪುಷ್ಕರನು ನಲನ ಬಳಿಸಾರಿ ಸಹೋದರನಿಗೆ - “ಹೋರಿಗಳೊಂದಿಗೆ ಜೂಜಾಡೋಣ!” - ಎಂದು ಪುನಃ ಪುನಃ ಹೇಳಿದನು. ಮಹಾಮನ ರಾಜನು ಸಮಾಹ್ವಾನವನ್ನು ಬೇಡ ಎನ್ನದೇ, ವೈದರ್ಭಿಯು ನೋಡುತ್ತಿದ್ದಂತೆಯೇ ಇದು ಜೂಜಾಡುವ ಸಮಯವೆಂದು ನಿರ್ಧರಿಸಿಬಿಟ್ಟನು. ಕಲಿಯಿಂದ ಆವಿಷ್ಟಗೊಂಡ ನಲನು ಹಿರಣ್ಯ, ಸುವರ್ಣ, ರಥಗಳು ಮತ್ತು ವಸ್ತ್ರಗಳನ್ನು ದ್ಯೂತದಲ್ಲಿ ಸೋತನು. ಜೂಜಿನ ಮತ್ತಿನಲ್ಲಿ ಹುಚ್ಚಾಗಿ ಬಿಟ್ಟಿದ್ದ ಮತ್ತು ಪ್ರಜ್ಞೆಯೇ ಇಲ್ಲದೇ ಜೂಜಾಡುತ್ತಿದ್ದ ಅವನನ್ನು ತಡೆಯಲು ಅವನ ಸುಹೃದಯರು ಯಾರೂ ಶಕ್ತರಾಗಿರಲಿಲ್ಲ.
ಅನಂತರ ಸರ್ವ ಪೌರಜನರೂ ಮಂತ್ರಿಗಳನ್ನೊಡಗೂಡಿ ರಾಜನನ್ನು ನೋಡಿ ಅವನ ರೋಗವನ್ನು ನಿವಾರಿಸಲು ಬಂದರು. ಸೂತನು ಬಂದು ದಮಯಂತಿಗೆ ನಿವೇದಿಸಿದನು:
“ಸರ್ವ ಪೌರಜನರೂ ದ್ವಾರದಲ್ಲಿ ಕಾರ್ಯಕ್ಕೆಂದು ನಿಂತಿದ್ದಾರೆ. ಧರ್ಮಾರ್ಥದರ್ಶಿನಿ ರಾಜನ ವ್ಯಸನವನ್ನು ಸಹಿಸಲಾಗದೇ ಎಲ್ಲ ಪ್ರಜೆಗಳೂ ಬಂದು ನಿಂತಿದ್ದಾರೆ ಎಂದು ನೈಷಧನಿಗೆ ನಿವೇದಿಸಬೇಕು.”
ಶೋಕದಿಂದ ಹತಚೇತನಳಾದ ಭೈಮಿಯು ದುಃಖದಿಂದ ನಡುಗುತ್ತಾ, ಬಾಷ್ಪಗಳಿಂದೊಡಗೂಡಿದ ಮಾತುಗಳನ್ನು ನೈಷಧನಿಗೆ ಹೇಳಿದಳು:
“ರಾಜ! ರಾಜಭಕ್ತಿ ಪುರಸ್ಕೃತ ಸರ್ವ ಪೌರಜನರೂ ಮಂತ್ರಿಗಳನ್ನೊಡಗೊಂಡು ನಿನ್ನನ್ನು ಕಾಣಲು ಬಂದು ದ್ವಾರದಲ್ಲಿ ನಿಂತಿದ್ದಾರೆ. ನೀನು ಅವರನ್ನು ಕಾಣಬೇಕು!”
ಎಂದು ಪುನಃ ಪುನಃ ಕೇಳಿಕೊಂಡಳು. ಆದರೆ ಕಲಿಯಿಂದ ಆವಿಷ್ಟನಾಗಿದ್ದ ರಾಜನು ಆ ರುಚಿರಾಪಾಂಗಿ ಸುಮಧ್ಯಮಳಿಗೆ ಎನನ್ನೂ ಹೇಳಲಿಲ್ಲ. ಅನಂತರ ಮಂತ್ರಿಗಳ ಸಹಿತ ಸರ್ವ ಪುರವಾಸಿಗಳು “ಅವನು ಇಲ್ಲಿ ಇಲ್ಲವೇ ಇಲ್ಲ!” ಎನ್ನುತ್ತಾ ದುಃಖಾರ್ತ ವ್ರೀಡಿತರಾಗಿ ಮನೆಗಳಿಗೆ ತೆರಳಿದರು. ಈ ರೀತಿ ಪುಷ್ಕರ ಮತ್ತು ನಲನ ಈ ದ್ಯೂತವು ಬಹಳ ಮಾಸಗಳು ನಡೆಯಿತು ಮತ್ತು ಪುಣ್ಯಶ್ಲೋಕನು ಸೋಲುತ್ತಾ ಬಂದನು.
ನರಾಧಿಪ ಪುಣ್ಯಶ್ಲೋಕನು ಆಟದಲ್ಲಿ ಉನ್ಮತ್ತನಾಗಿ ಚೇತನವನ್ನೇ ಕಳೆದುಕೊಂಡಿರುವುದನ್ನು ಉನ್ಮತ್ತಳಲ್ಲದ ದಮಯಂತಿಯು ನೋಡಿದಳು. ನಂತರ ಭಯಶೋಕಸಮಾವಿಷ್ಟಳಾದ ಭೀಮಸುತೆಯು ಪಾರ್ಥಿವನ ಸಲುವಾಗಿ ಸುಮಹತ್ ಕಾರ್ಯದ ಬಗ್ಗೆ ಯೋಚಿಸಿದಳು. ಅವನ ಪಾಪವನ್ನು ಶಂಕಿಸುತ್ತಾ, ಅವನಿಗೆ ಪ್ರಿಯವಾದುದನ್ನು ಮಾಡುವ ಇಚ್ಛೆಯಿಂದ, ನಲನು ಸರ್ವವನ್ನೂ ಕಳೆದುಕೊಳ್ಳುತ್ತಿದ್ದಾನೆ ಎಂದು ಕೇಳಿ ಅವಳ ಸೇವಕಿಗೆ ಹೇಳಿದಳು:
“ಬೃಹತ್ಸೇನೆ! ನಲನ ಶಾಸನದಂತೆ ಹೋಗಿ ಅಮಾತ್ಯರನ್ನೆಲ್ಲರನ್ನೂ ಕರೆದುಕೊಂಡು ಬಾ. ಯಾವ ವಸ್ತುಗಳನ್ನು ಈಗಾಗಲೇ ಕಳೆದುಕೊಂಡಿದ್ದೇವೆ ಮತ್ತು ಯಾವವು ಇನ್ನೂ ನಮ್ಮ ಹತ್ತಿರ ಇವೆ ಎನ್ನುವುದನ್ನೂ ಅವರಿಗೆ ಹೇಳು.”
ಸರ್ವ ಮಂತ್ರಿಗಳೂ ನಲಶಾಸನವನ್ನು ತಿಳಿದು ಭಾಗ್ಯವು ನಮಗೆ ಈಗ ಮರಳಿಬಂದಿದೆಯೋ ಎನ್ನುತ್ತಾ ಬಂದರು. ಭೀಮಸುತೆಯು ಅವನಿಗೆ ಪ್ರಜೆಗಳು ಎರಡನೇ ಬಾರಿ ಮತ್ತೆ ಬಂದು ಉಪಸ್ಥಿತರಾಗಿದ್ದಾರೆ ಎಂದು ನಿವೇದಿಸಿದಳು, ಆದರೆ ಇದು ಅವನಿಗೆ ಇಷ್ಟವಾಗಲಿಲ್ಲ. ತನ್ನ ಈ ವಾಕ್ಯಗಳು ಪತಿಗೆ ಸಂತಸವನ್ನು ತರಲಿಲ್ಲ ಎಂದು ನೋಡಿದ ದಮಯಂತಿಯು ಬಹು ದುಃಖದಿಂದ ಪುನಃ ತನ್ನ ಮನೆಗೆ ಮರಳಿದಳು. ದಾಳಗಳು ಸತತವಾಗಿ ಪುಣ್ಯಶ್ಲೋಕನಿಗೆ ಪರಾಙ್ಮುಖವಾಗಿದ್ದವು ಮತ್ತು ನಲನು ಸರ್ವಸ್ವವನ್ನೂ ಕಳೆದುಕೊಂಡ ಎನ್ನುವುದನ್ನು ಕೇಳಿ ತನ್ನ ಸೇವಕಿಗೆ ಪುನಃ ಹೇಳಿದಳು.
“ಬೃಹತ್ಸೇನೆ! ನಲಶಾಸನದಂತೆ ಸೂತ ವಾರ್ಷ್ಣೇಯನನ್ನು ಕರೆದುಕೊಂಡು ಬಾ. ಕಲ್ಯಾಣಿ! ಮಹತ್ತರ ಕಾರ್ಯವೊಂದನ್ನು ಮಾಡುವುದಿದೆ.”
ದಮಯಂತಿಯ ಈ ಮಾತುಗಳನ್ನು ಕೇಳಿದ ಬೃಹತ್ಸೇನೆಯು ಆಪ್ತಕಾರಿ ಪುರುಷರ ಮೂಲಕ ವಾರ್ಷ್ಣೇಯನನ್ನು ಕರೆಸಿದಳು. ದೇಶಕಾಲಜ್ಞೆ ಭೈಮಿಯು ಕಾಲವು ಪ್ರಾಪ್ತವಾಗಿದೆ ಎಂದು ತಿಳಿದು ಮೃದುವಾದ ಮಾತುಗಳಲ್ಲಿ, ಸಾಂತ್ವನಿಸುತ್ತಾ ವಾರ್ಷ್ಣೇಯನಿಗೆ ಹೇಳಿದಳು:
“ರಾಜನು ನಿನ್ನ ಕುರಿತು ಹೇಗೆ ಸದಾ ಒಳ್ಳೆಯದಾಗಿ ನಡೆದುಕೊಳ್ಳುತ್ತಿದ್ದನು ಎಂದು ನೀನು ತಿಳಿದಿದ್ದೀಯೆ. ಈ ವಿಷಮ ಸಮಯದಲ್ಲಿ ಅವನಿಗೆ ನೀನು ಸಹಾಯಮಾಡಬೇಕಾಗಿದೆ. ಪುಷ್ಕರನಿಂದ ನೃಪತಿಯು ಜಯಸಲ್ಪಡುತ್ತಾ ಬಂದ ಹಾಗೆ ದ್ಯೂತದಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಬರುತ್ತಿದೆ. ದಾಳಗಳು ಪುಷ್ಕರನ ವಶದಲ್ಲಿರುವಂತೆ ವರ್ತಿಸುತ್ತಿವೆ. ಹಾಗೆಯೇ ದಾಳಗಳು ನಲನಿಗೆ ವಿನಾಶವನ್ನೇ ತರುತ್ತಿರುವುದು ಕಾಣುತ್ತಿದೆ. ಸುಹೃದಯರ ಮತ್ತು ಸ್ವಜನರ ವಾಕ್ಯಗಳನ್ನು ಕೇಳಬೇಕಿದ್ದರೂ ಕೇಳುತ್ತಿಲ್ಲ. ಮಹಾತ್ಮ ನೈಷಧನ ಹತ್ತಿರ ಏನೂ ಉಳಿದಿಲ್ಲ ಎಂದು ನನಗನ್ನಿಸುತ್ತಿದೆ. ಸಾರಥಿ! ಮೋಹಿತ ರಾಜನು ನನ್ನ ಮಾತನ್ನು ಅಭಿನಂದಿಸದೇ ಇದ್ದುದರಿಂದ ನಾನು ನಿನ್ನ ಶರಣು ಬಂದಿದ್ದೇನೆ. ನನ್ನ ಮಾತಿನಂತೆ ಮಾಡು. ಯಾವಾಗಲಾದರೂ ವಿನಾಶವೊದಗುತ್ತದೆ ಎಂದು ನನ್ನ ಮನಸ್ಸಿಗೆ ಶಾಂತಿಯೇ ಇಲ್ಲದಾಗಿದೆ. ನಲನ ಪ್ರೀತಿಯ ಮಹಾವೇಗವುಳ್ಳ ಅಶ್ವಗಳನ್ನು ರಥಕ್ಕೆ ಕಟ್ಟಿ, ಅದರಲ್ಲಿ ನನ್ನ ಅವಳಿ ಮಕ್ಕಳನ್ನು ಕುಂಡಿನಪುರಕ್ಕೆ ಕರೆದುಕೊಂಡು ಹೋಗು. ನನ್ನ ಬಂಧುಗಳಲ್ಲಿ ಮಕ್ಕಳನ್ನು, ಕುದುರೆಗಳನ್ನು ಮತ್ತು ರಥವನ್ನು ಇರಿಸಿ, ನೀನು ಅಲ್ಲಿ ಉಳಿಯಬಹುದು ಅಥವಾ ಬೇಕಾದ ಬೇರೆ ಕಡೆ ಹೋಗಬಹುದು.”
ದಮಯಂತಿಯ ಈ ವಾಖ್ಯಗಳೆಲ್ಲವನ್ನೂ ನಲಸಾರಥಿ ವಾರ್ಷ್ಣೇಯನು ನಲನ ಮುಖ್ಯ ಅಮಾತ್ಯರುಗಳಲ್ಲಿ ನಿವೇದಿಸಿದನು. ಅವರೆಲ್ಲರೂ ಸೇರಿ ನಿಶ್ಚಯಿಸಿ ಅವನಿಗೆ ಅನುಮತಿಯನ್ನು ಕೊಟ್ಟನಂತರ ಅವನು ಮಿಥುನರನ್ನು ವಾಹನದಲ್ಲಿ ಕುಳ್ಳಿರಿಸಿ ವಿದರ್ಭಕ್ಕೆ ಕರೆದೊಯ್ದನು. ಸೂತನು ಅಲ್ಲಿ ಕನ್ಯೆ ಇಂದ್ರಸೇನೆಯನ್ನು ಮತ್ತು ಬಾಲಕ ಇಂದ್ರಸೇನನನ್ನು ಹಾಗೂ ಕುದುರೆ-ರಥಗಳನ್ನಿರಿಸಿದನು. ಆರ್ತನಾಗಿ ಶೋಕದಿಂದ ನೃಪ ನಲನ ಕುರಿತು ಭೀಮನಿಗೆ ತಿಳಿಸಿದನು ಮತ್ತು ಹಾಗೆಯೇ ತಿರುಗಾಡುತ್ತಾ ಅಯೋಧ್ಯಾ ನಗರಿಗೆ ಬಂದನು. ದುಃಖಿತನಾಗಿ ಅಲ್ಲಿ ರಾಜ ಋತುಪರ್ಣನನ್ನು ಭೆಟ್ಟಿಮಾಡಿ ಅವನ ಸಾರಥಿಯಾಗಿ ಸೇರಿಕೊಂಡನು.
ನಲನ ವನಯಾತ್ರೆ
ವಾರ್ಷ್ಣೇಯನು ಹೋದ ನಂತರ ಪುಣ್ಯಶ್ಲೋಕನು ಜೂಜಾಡುತ್ತಾ ಪುಷ್ಕರನಿಂದ ರಾಜ್ಯ ಮತ್ತು ತನ್ನಲಿದ್ದ ಎಲ್ಲ ಸಂಪತ್ತನ್ನೂ ಕಳೆದುಕೊಂಡನು. ರಾಜ್ಯವನ್ನು ಕಳಿದುಕೊಂಡ ನಲನಿಗೆ ಪುಷ್ಕರನು ನಗುತ್ತಾ ಹೇಳಿದನು:
“ದ್ಯೂತವು ಮುಂದುವರಿಯಲಿ. ಈಗ ನಿನ್ನಲ್ಲಿ ಪಣವಾಗಿಡಲು ಏನಿದೆ? ದಮಯಂತಿ ಮಾತ್ರ ನಿನ್ನಲ್ಲಿ ಉಳಿದಿದ್ದಾಳೆ. ಬೇರೆ ಎಲ್ಲವನ್ನು ನಾನು ಗೆದ್ದಿದ್ದೇನೆ. ನಿನಗೆ ಮನಸ್ಸಿದ್ದರೆ ದಮಯಂತಿಯನ್ನು ಪಣವಾಗಿಡು.”
ಪುಷ್ಕರನ ಈ ಮಾತುಗಳನ್ನು ಕೇಳಿ ಪುಣ್ಯಶ್ಲೋಕನ ಹೃದಯವು ಸಿಟ್ಟಿನಿಂದ ಈರಿಕೊಂಡಿತು ಮತ್ತು ಅವನೇನೂ ಮಾತನಾಡಲಿಲ್ಲ. ಪರಮ ಕೋಪದಿಂದ ನಲನು ಪುಷ್ಕರನ ಕಡೆ ನೋಡಿ ಆ ಮಹಾಯಶನು ತನ್ನ ದೇಹದ ಮೇಲಿದ್ದ ಎಲ್ಲ ಭೂಷಣಗಳನ್ನು ತೆಗೆದು ಎಸೆದನು. ನಂತರ ವಿಪುಲ ಸಂಪತ್ತನ್ನು ತ್ಯಜಿಸಿ, ಏಕವಸ್ತ್ರದಲ್ಲಿ ಅತೀವ ದುಃಖದಿಂದ, ಸುಹೃದಯರ ಶೋಕವನ್ನು ವೃದ್ಧಿಸುತ್ತಾ ರಾಜನು ಹೊರ ಹೊರಟನು. ದಮಯಂತಿಯೂ ತನ್ನ ಉಟ್ಟ ವಸ್ತ್ರದಲ್ಲಿ ಅವನನ್ನು ಹಿಂಬಾಲಿಸಿದಳು. ನೈಷಧನು ಅವಳೊಡನೆ ನಿಷಧದ ಹೊರಗೆ ಮೂರು ರಾತ್ರಿಗಳನ್ನು ಕಳೆದನು.
ಪುಷ್ಕರನು “ಯಾರಾದರೂ ನಲನನ್ನು ಸೇರಿದರೆ ಅವನು ನನ್ನಿಂದ ವಧಿಸಲ್ಪಡುತ್ತಾನೆ!” ಎಂದು ಪುರದಲ್ಲೆಲ್ಲ ಘೋಷಣೆ ಮಾಡಿಸಿದನು. ಪುಷ್ಕರನ ಈ ವಾಕ್ಯಗಳಿಂದ ಮತ್ತು ಅವನ ವಿದ್ವೇಷದ ಕಾರಣ ಪುರಜನರು ಅವನಿಗೆ ಸತ್ಕಾರವನ್ನು ಮಾಡಲಿಲ್ಲ. ಹೀಗೆ ಸತ್ಕಾರಾರ್ಹನಾಗಿದ್ದರೂ ಸತ್ಕೃತನಾಗದೇ ನಗರದ ಬಳಿಯಲ್ಲಿಯೇ ರಾಜನು ಕೇವಲ ಜಲ ಸೇವನೆ ಮಾಡಿಕೊಂಡು ಮೂರು ರಾತ್ರಿಗಳನ್ನು ಕಳೆದನು. ಬಹಳ ದಿನಗಳು ಹಸಿವೆಯಿಂದ ಪೀಡಿತನಾದ ನಲನು ಒಮ್ಮೆ ಹಿರಣ್ಯಸದೃಷ ರೆಕ್ಕೆಗಳನ್ನು ಹೊಂದಿದ ಪಕ್ಷಿಗಳನ್ನು ಕಂಡನು. ಆಗ ಬಲಿ ನಿಷಧಾಧಿಪತಿಯು ಯೋಚಿಸಿದನು: “ಇವುಗಳು ನನ್ನ ಇಂದಿನ ಭೋಜನವಾಗುವವು ಮತ್ತು ಇವು ನನ್ನ ನಿಧಿ.” ನಂತರ ಅವನು ತನ್ನ ಉಟ್ಟ ಬಟ್ಟೆಯನ್ನು ಆ ಪಕ್ಷಿಗಳ ಮೇಲೆ ಹಾಕಿದನು. ಆದರೆ ಅವೆಲ್ಲವೂ ಆ ಬಟ್ಟೆಯನ್ನೇ ಎತ್ತಿಕೊಂಡು ಆಕಾಶಕ್ಕೆ ಹಾರಿದವು. ವಿವಸ್ತ್ರನಾಗಿ, ದೀನನಾಗಿ, ಅಧೋಮುಖನಾಗಿ ಭೌಮಿಯ ಪಕ್ಕದಲ್ಲಿ ನಿಂತಿದ್ದ ನಲನನ್ನು ನೋಡಿ ಹಾರುತ್ತಿರುವ ಆ ಪಕ್ಷಿಗಳು ಕೂಗಿ ಹೇಳಿದವು:
“ದುರ್ಬುದ್ಧಿಯೇ! ನಾವು ದಾಳಗಳು. ನಿನ್ನ ವಸ್ತ್ರಗಳನ್ನು ಕಸಿಯಲು ಬಂದಿದ್ದೇವೆ. ಯಾಕೆಂದರೆ ನೀನು ವಸ್ತ್ರಗಳನ್ನು ಧರಿಸಿ ಹೋಗುತ್ತಿರುವುದು ನಮಗೆ ಒಳ್ಳೆಯದೆನಿಸಲಿಲ್ಲ.”
ಹೋಗುತ್ತಿರುವ ದಾಳಗಳನ್ನು ಮತ್ತು ವಿವಸ್ತ್ರನಾದ ತನ್ನನ್ನು ನೋಡಿದ ರಾಜ ಪುಣ್ಯಶ್ಲೋಕನು ದಮಯಂತಿಗೆ ಹೇಳಿದನು:
“ಅನಿಂದಿತೇ! ಯಾರ ಪ್ರಕೋಪದಿಂದ ನಾವು ಈ ಐಶ್ವರ್ಯ ಚ್ಯುತಿ ಹೊಂದಿದ್ದೇವೋ, ಮತ್ತು ಈಗ ಜೀವನಕ್ಕೆ ಯಾವುದೂ ಉಪಾಯಗಳಿಲ್ಲದೇ ದುಃಖ ಮತ್ತು ಹಸಿವೆಗಳಿಂದ ಬಳಲುತ್ತಿದ್ದೇವೋ, ಯಾರ ಕಾರಣದಿಂದ ನಿಷಧ ಪುರಜನರು ನನಗೆ ಸತ್ಕಾರವನ್ನು ಮಾಡಲಿಲ್ಲವೋ ಅವರೇ ಈಗ ಪಕ್ಷಿಗಳಾಗಿ ಬಂದು ನನ್ನ ವಸ್ತ್ರಗಳನ್ನು ಅಪಹರಿಸಿದರು. ಮಹತ್ತರ ಕಷ್ಟಗಳನ್ನು ಹೊಂದಿ, ದುಃಖಿತನಾದ ನಾನು ನನ್ನ ಬುದ್ಧಿಯನ್ನೇ ಕಳೆದುಕೊಳ್ಳುತ್ತಿದ್ದೇನೆ. ನಾನು ನಿನ್ನ ಪತಿ. ನಿನ್ನ ಹಿತಕ್ಕಾಗಿಯೇ ಹೇಳುವ ಈ ಮಾತುಗಳನ್ನು ಕೇಳು. ಈ ದಕ್ಷಿಣಾಭಿಮುಖವಾಗಿ ಹೋಗುವ ದಾರಿ ಅವಂತಿ ಮತ್ತು ಋಕ್ಷವತ್ ಪರ್ವತವನ್ನು ದಾಟಿ ಹೋಗುತ್ತವೆ. ಅಲ್ಲಿ ಮಹಾಶೈಲ ವಿಂಧ್ಯವಿದೆ, ಸಮುದ್ರಕ್ಕೆ ಸೇರುತ್ತಿರುವ ನದಿ ಪಯೋಷ್ಣೀ, ಮತ್ತು ಪುಷ್ಪ-ಫಲಗಳಿಂದ ಕೂಡಿದ ಮಹಾ ಋಷಿಗಳ ಆಶ್ರಮಗಳಿವೆ. ಈ ದಾರಿಯು ವಿದರ್ಭಕ್ಕೆ ಮತ್ತು ಇದು ಕೋಸಲಕ್ಕೆ ಹೋಗುತ್ತದೆ. ಮತ್ತು ಮುಂದೆ ದಕ್ಷಿಣದಲ್ಲಿ ದಕ್ಷಿಣಾಪಥ ದೇಶವಿದೆ.”
ಆಗ ದಮಯಂತಿಯು ಕಣ್ಣೀರಿಡುತ್ತಾ, ದುಃಖದಲ್ಲಿ ಮಾತೇ ಬಾರದೇ ನೈಷಧನಿಗೆ ಈ ಕರುಣ ವಚನವನ್ನು ಹೇಳಿದಳು.
“ಪಾರ್ಥಿವ! ನಿನ್ನ ಸಂಕಲ್ಪವನ್ನು ಪುನಃ ಪುನಃ ಯೊಚಿಸುತ್ತಾ ನನ್ನ ಹೃದಯವು ಬಡಿಯುತ್ತಿದೆ ಮತ್ತು ಸರ್ವಾಂಗಗಳೂ ದುರ್ಬಲವಾಗುತ್ತಿವೆ. ರಾಜ್ಯ-ಧನಗಳನ್ನು ಕಳೆದುಕೊಂಡ, ವಿವಸ್ತ್ರನಾದ, ಹಸಿವೆ-ಬಾಯಾರಿಕೆಗಳಿಂದ ಬಳಲುತ್ತಿರುವ ನಿನ್ನನ್ನು ಈ ನಿರ್ಜನ ವನದಲ್ಲಿ ಬಿಟ್ಟು ನಾನು ಹೇಗೆ ಹೋಗಲಿ? ಇಲ್ಲ ಮಹಾರಾಜ! ಈ ಘೋರ ವನದಲ್ಲಿ ನಿನ್ನ ಈ ಬಳಲಿಕೆಯನ್ನು, ಹಸಿವೆಯನ್ನು ನಾಶಮಾಡುತ್ತೇನೆ ಮತ್ತು ಚಿಂತೆ-ದುಗುಡಗಳಿಂದ ನಿನಗೆ ಸುಖವನ್ನು ತರಲು ಪ್ರಯತಿಸುತ್ತೇನೆ. ಸರ್ವ ದುಃಖದಲ್ಲಿಯೂ ಭಾರ್ಯೆಯ ಸಮನಾದ ಔಷಧಿಯಿಲ್ಲ ಎಂದು ವೈದ್ಯರ ಮತ. ಈ ಸತ್ಯವನ್ನು ನಾನು ನಿನಗೆ ಹೇಳುತ್ತಿದ್ದೇನೆ.”
ನಲನು ಹೇಳಿದನು:
“ಸುಮಧ್ಯಮೆ ದಮಯಂತಿ! ನೀನು ಹೇಳಿದುದೆಲ್ಲವೂ ಸರಿಯೇ. ಆರ್ತನಿಗೆ ಹೆಂಡತಿಯಂಥ ಮಿತ್ರ ಅಥವಾ ಔಷಧ ಇನ್ನೊಂದಿಲ್ಲ. ನಿನ್ನನ್ನು ತ್ಯಜಿಸುವ ಇಚ್ಚೆ ನನ್ನಲ್ಲಿಲ್ಲ. ಸುಮ್ಮನೆ ಏಕೆ ಶಂಕಿಸುವೆ. ನಿನ್ನನ್ನು ತ್ಯಜಿಸುವ ಮೊದಲು ನನ್ನನ್ನು ನಾನೇ ತ್ಯಜಿಸಿಬಿಡುತ್ತೇನೆ.”
ದಮಯಂತಿಯು ಹೇಳಿದಳು:
“ಮಹಾರಾಜ! ನೀನು ನನ್ನನ್ನು ಬಿಡಲು ಬಯಸದಿದ್ದರೆ ನೀನು ನನಗೆ ವಿದರ್ಭದ ದಾರಿಯನ್ನು ಏಕೆ ತೋರಿಸಿದೆ? ನಾನೂ ಕೂಡ ನೀನು ನನ್ನನ್ನು ತ್ಯಜಿಸಬಾರದೆಂದೇ ಬಯಸುತ್ತೇನೆ. ಕಷ್ಟದಲ್ಲಿ ನೊಂದವನಾಗಿ ನನ್ನನ್ನು ತ್ಯಜಿಸಬೇಡ. ದಾರಿಗಳನ್ನೇ ನನಗೆ ತೋರಿಸುತ್ತಿದ್ದೀಯೆ. ಇದರಿಂದಲೇ ನನ್ನ ಶೋಕವು ಹೆಚ್ಚಾಗುತ್ತಿದೆ. ನಾನು ವಿದರ್ಭಕ್ಕೆ ಹೋಗಬೇಕೆಂದು ನಿನ್ನ ಅಭಿಪ್ರಾಯವಿದ್ಡರೆ, ನಿನ್ನ ಅನುಮತಿಯಿದ್ದರೆ, ನಾವಿಬ್ಬರೂ ಒಟ್ಟಿಗೇ ಹೋಗೋಣ. ವಿದರ್ಭರಾಜನು ನಿನ್ನನ್ನು ಪೂಜಿಸುತ್ತಾನೆ. ಅವನಿಂದ ಸತ್ಕೃತನಾಗಿ ನಾವು ನಮ್ಮ ಗೃಹದಲ್ಲಿ ಸುಖವಾಗಿ ಇರೋಣ.”
ನಲನು ಹೇಳಿದನು:
“ಆ ರಾಜ್ಯವು ಹೇಗೆ ನಿನ್ನ ತಂದೆಯದೋ ಹಾಗೆಯೇ ಅದು ನನ್ನದೂ ಹೌದು. ಸಂಶಯವೇ ಇಲ್ಲ. ಆದರೆ ನಾನು ಈ ವಿಷಮ ಪರಿಸ್ಥಿತಿಯಲ್ಲಿ ಹೋಗುವುದಿಲ್ಲ. ಹಿಂದೆ ಸಮೃದ್ಧನಾದ ನಾನು ನಿನ್ನ ಸಂತಸವನ್ನು ಹೆಚ್ಚಿಸಲು ಹೋಗಿದ್ದೆ. ಈಗ ಹೇಗೆ ಎಲ್ಲವನ್ನೂ ಕಳೆದುಕೊಂಡು, ನಿನ್ನ ದುಃಖವನ್ನು ಹೆಚ್ಚಿಸುತ್ತಾ ಅಲ್ಲಿಗೆ ಹೋಗಲಿ?”
ದಮಯಂತೀ ಪರಿತ್ಯಾಗ
ಅವಳ ಅರ್ಧ ವಸ್ತ್ರವನ್ನು ಸುತ್ತಿಕೊಂಡ ರಾಜ ನಲನು ಈ ರೀತಿ ಕಲ್ಯಾಣಿ ದಮಯಂತಿಗೆ ಪುನಃ ಪುನಃ ಸಂತವಿಸಿದನು. ಇಬ್ಬರೂ ಒಂದೇವಸ್ತ್ರವನ್ನು ಸುತ್ತಿಕೊಂಡು, ಅಲ್ಲಿಲ್ಲಿ ಸುತ್ತಾಡುತ್ತಾ, ಹಸಿವು-ಬಾಯಾರಿಕೆಗಳಿಂದ ಬಳಲಿ, ಯಾವುದೋ ಒಂದು ಭವನವನ್ನು ಸೇರಿದರು. ಆ ಭವನವನ್ನು ತಲುಪಿದೊಡನೆಯೇ ನಿಷಧಾಧಿಪನು ವೈದರ್ಭಿಯ ಸಹಿತ ನೆಲದ ಮೇಲೆಯೇ ಮಲಗಿಕೊಂಡನು. ಮಲಿನನಾದ, ತಲೆಕೂದಲು ಕಳೆದುಕೊಂಡ, ಸುಸ್ತಾದ ಅವನು ವಿವಸ್ತ್ರನಾಗಿ ದಮಯಂತಿಯ ಸಹಿತ ಆ ಧರಣಿತಲದಲ್ಲಿಯೇ ಮಲಗಿದನು. ಸುಕುಮಾರಿ, ತಪಸ್ವಿನಿ, ಒಮ್ಮೆಲೇ ಅಸಾದ್ಯ ದುಃಖವನ್ನು ಕಂಡ ಆ ಕಲ್ಯಾಣಿ ದಮಯಂತಿಯೂ ನಿದ್ರೆಯ ವಶಳಾಗಿಬಿಟ್ಟಳು. ದಮಯಂತಿಯು ನಿದ್ರೆಮಾಡಿದರೂ ಚಿತ್ತ ಮತ್ತು ಆತ್ಮಗಳು ಶೋಕದಿಂದ ಮಥನವಾಗುತ್ತಿದ್ದ ನಲನು ಮೊದಲಿನ ಹಾಗೆ ನಿದ್ದೆ ಮಾಡಲಿಲ್ಲ. ಅವನು ತನ್ನ ರಾಜ್ಯಾಪಹರಣ, ಸ್ನೇಹಿತರು ತನ್ನನ್ನು ತ್ಯಜಿಸಿದುದು ಮತ್ತು ವನದಲ್ಲಿ ತಾನು ಕಾಲಕಳೆಯುತ್ತಿರುವುದು ಈ ಎಲ್ಲದರ ಕುರಿತು ಚಿಂತಿಸತೊಡಗಿದನು.
“ನಾನು ಇದನ್ನು ಮಾಡಿದರೆ ಹೇಗೆ? ಇದನ್ನು ಮಾಡದಿದ್ದರೆ ಹೇಗೆ? ನಾನು ಸಾಯುವುದು ಒಳ್ಳೆಯದೋ ಅಥವಾ ಈ ಸ್ತ್ರೀಯನ್ನು ಪರಿತ್ಯಜಿಸುವುದು ಒಳ್ಳೆಯದೋ? ನನ್ನಲ್ಲೇ ಅನುರಕ್ತಳಾದ ಇವಳು ನನ್ನಿಂದಾಗಿ ದುಃಖವನ್ನು ಹೊಂದಿದ್ದಾಳೆ. ಆದರೆ ನಾನು ಇಲ್ಲದಿದ್ದರೆ ಇವಳು ಮುಂದೆ ಯಾವಾಗಲಾದರೂ ತನ್ನ ಜನರ ಕಡೆ ಹೋಗಿಯಾಳು. ನಾನು ಜೊತೆಯಲ್ಲಿದ್ದರೆ ಇವಳು ನಿರಂತರವಾಗಿ ದುಃಖವನ್ನು ಅನುಭವಿಸುವುದು ನಿಃಸಂಶಯ. ಬಿಟ್ಟುಹೋದರೆ ಆಪತ್ತು ಬರಬಹುದು. ಆದರೂ ಮುಂದೆ ಯಾವಾಗಲಾದರೂ ಸುಖವನ್ನು ಹೊಂದಬಹುದು.”
ಹೀಗೆ ಪುನಃ ಪುನಃ ಇದೇ ವಿಷಯವನ್ನು ಮನಸ್ಸಿನಲ್ಲಿ ತಿರುವಿ ಹಾಕಿ ಬಹಳಷ್ಟು ಸಾರಿ ನಿಶ್ಚಯ ಮಾಡಿ, ನಂತರ ಆ ನರಾಧಿಪನು ದಮಯಂತಿಯನ್ನು ಬಿಡುವುದೇ ಸರಿಯೆಂದು ನಿರ್ಧರಿಸಿದನು. ತಾನು ವಿವಸ್ತ್ರನಾಗಿದ್ದುದನ್ನು ಮತ್ತು ಅವಳು ಏಕವಸ್ತ್ರಳಾಗಿದ್ದುದನ್ನು ಚಿಂತಿಸಿ, ಅವಳ ವಸ್ತ್ರವನ್ನು ಅರ್ಧ ತುಂಡುಮಾಡುವುದಾಗಿ ನಿರ್ಧರಿಸಿದನು. ಆದರೆ “ನನ್ನ ಪ್ರಿಯೆಯನ್ನು ಎಚ್ಚರಿಸದ ಹಾಗೆ ಹೇಗೆ ವಸ್ತ್ರವನ್ನು ಕತ್ತರಿಸುವುದು?” ಎಂದು ಚಿಂತಿಸುತ್ತಾ ರಾಜಾ ನೈಷಧನು ಆ ಭವನದಲ್ಲಿಯೇ ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಿದ್ದನು. ಹೀಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದ ನಲನು ಭವನದ ಮೂಲೆಯಲ್ಲಿದ್ದ, ತೆರೆದಿಟ್ಟ ಉತ್ತಮವಾದ ಖಡ್ಗವೊಂದನ್ನು ಕಂಡನು. ಅದರಿಂದ ಪರಂತಪನು ಅವಳ ವಸ್ತ್ರವನ್ನು ಅರ್ಧ ಕತ್ತರಿಸಿ ಸುತ್ತಿಕೊಂಡನು. ನಂತರ ನಿದ್ರಿಸುತ್ತಿದ್ದ ವೈದರ್ಭಿಯನ್ನು ಬಿಟ್ಟು, ಬುದ್ಧಿ ಕಳೆದುಕೊಂಡವನಂತೆ ಓಡಿಹೋದನು. ಆದರೆ ನಿಬದ್ಧಹೃದಯ ನಿಷಧಾಧಿಪನು ಪುನಃ ಆ ಭವನಕ್ಕೆ ಬಂದು ದಮಯಂತಿಯನ್ನು ನೋಡಿ ಕಣ್ಣೀರಿಟ್ಟನು:
“ಈ ಮೊದಲು ವಾಯುವಾಗಲೀ ಆದಿತ್ಯನಾಗಲೀ ನನ್ನ ಪ್ರಿಯೆಯನ್ನು ಕಂಡಿರಲಿಲ್ಲ. ಆದರೆ ಈಗ ಅವಳು ಈ ಭವನಮಧ್ಯದಲ್ಲಿ ಬರೀ ನೆಲದ ಮೇಲೆ, ಅನಾಥಳಾಗಿ ಮಲಗಿದ್ದಾಳೆ. ತುಂಡು ವಸ್ತ್ರವನ್ನು ಸುತ್ತಿಕೊಂಡು ಈ ಚಾರುಹಾಸಿನಿ ವರಾರೋಹೆಯು ಉನ್ಮತ್ತಳಾದಂತೆ ಮಲಗಿದ್ದಾಳೆ. ಎಚ್ಚರವಾದ ನಂತರ ಇವಳು ಹೇಗಿರುವಳು? ನನ್ನಿಂದ ವಿರಹಿತಳಾದ ಈ ಶುಭೆ ಸತಿ ಭೈಮಿಯು ಮೃಗವ್ಯಾಲಗಳಿಂದ ತುಂಬಿದ ಈ ಘೋರ ವನದಲ್ಲಿ ಹೇಗೆ ಸಂಚರಿಸುವಳು?”
ಕಲಿಯಿಂದ ಆಕರ್ಷಿತನಾಗಿ ಮತ್ತು ಸೌಹೃದಯಳಿಂದ ಅಪಕೃಷ್ಯನಾಗಿ ನಲನು ಹೋಗುವುದು, ಪುನಃ ಭವನಕ್ಕೆ ಬರುವುದು, ಮತ್ತೆ ಹೋಗುವುದು ಈ ರೀತಿ ಮಾಡುತ್ತಿದ್ದನು. ದುಃಖಿತನಾದ ಅವನ ಹೃದಯವು ಎರಡಾಗಿ ಹರಿದಿತ್ತು; ಉಯ್ಯಾಲೆಯಂತೆ ಅದು ಒಮ್ಮೆ ಭವನದಿಂದ ದೂರ ಮತ್ತು ಇನ್ನೊಮ್ಮೆ ಅದರ ಹತ್ತಿರ ಡೋಲಾಡುತ್ತಿತ್ತು. ಕೊನೆಯಲ್ಲಿ ಕಲಿಯಿಂದ ಅಪಕೃಷ್ಟನಾಗಿ ಮೋಹಿತನಾದ ನಲನು ಬಹಳ ಕರುಣದಾಯಕವಾಗಿ ವಿಲಪಿಸುತ್ತಾ ನಿದ್ರಿಸುತ್ತಿರುವ ಭಾರ್ಯೆಯನ್ನು ಬಿಟ್ಟು ಓಡಿ ಹೋದನು. ಕಲಿಯಿಂದ ಅತ್ಮವನ್ನೇ ಕಳೆದುಕೊಂಡು, ಅದು ಇದು ಎಂದು ಏನನ್ನೂ ಯೊಚಿಸದೇ, ನಿರ್ಜನ ವನದಲ್ಲಿ ಭಾರ್ಯೆಯನ್ನು ಬಿಟ್ಟು ದುಃಖಿತನಾಗಿ ಹೊರಟುಹೋದನು.
ಅಜಗರನಿಂದ ದಮಯಂತಿಯ ಬಿಡುಗಡೆ
ಅಯಾಸವನ್ನು ನಿವಾರಿಸಿಕೊಂಡ ವರಾರೋಹೆ ದಮಯಂತಿಯು ನಲನು ಹೊರಟುಹೋದ ಬಳಿಕ ನಿರ್ಜನ ವನದಲ್ಲಿ ನಡುಗುತ್ತಾ ಎಚ್ಚರಗೊಂಡಳು. ಪತಿಯನ್ನು ಕಾಣದೇ, ದುಃಖಶೋಕಸಮನ್ವಿತಳಾಗಿ “ಮಹಾರಾಜ!” ಎಂದು ನೈಷಧನನ್ನು ಜೋರಾಗಿ ಕೂಗಿ ಕರೆದಳು:
“ಹಾ ನಾಥ! ಹಾ ಮಹಾರಾಜ! ಹಾ ಸ್ವಾಮೀ! ನನ್ನನ್ನು ಏಕೆ ಬಿಟ್ಟುಹೋದೆ? ನಾನು ಈ ನಿರ್ಜನ ವನದಲ್ಲಿ ಹತಳಾಗಿದ್ದೇನೆ! ವಿನಷ್ಟಳಾಗಿದ್ದೇನೆ! ಭೀತಳಾಗಿದ್ದೇನೆ! ನೀನು ಸದಾ ಧರ್ಮಜ್ಞ ಮತ್ತು ಸತ್ಯವಾದಿ. ಆದರೆ ಈಗ ಅಸತ್ಯವನ್ನು ನುಡಿದು ಮಲಗಿದ್ದ ನನ್ನನ್ನು ಹೇಗೆ ಬಿಟ್ಟು ಹೋದೆ? ವಿಶೇಷವಾಗಿ ಯಾರಿಗೂ ಕೆಟ್ಟದ್ದನ್ನು ಮಾಡದ, ಬೇರೆಯವರಿಂದ ಕೆಟ್ಟದ್ದನ್ನು ಮಾಡಿಸಿಕೊಂಡ ನೀನು - ನಿನ್ನ ವಶದಲ್ಲಿಯೇ ಇರುವ, ನಿನ್ನನ್ನೇ ಅನುಸರಿಸುವ - ಭಾರ್ಯೆಯನ್ನು ಹೇಗೆ ಬಿಟ್ಟು ಹೋದೆ? ಹಿಂದೆ ಲೋಕಪಾಲಕರ ಸನ್ನಿಧಿಯಲ್ಲಿ ನನಗೆ ಕೊಟ್ಟ ವಚನವನ್ನು ಸತ್ಯವನ್ನಾಗಿ ಮಾಡಲು ನಿನಗೆ ಸಾಧ್ಯವಿಲ್ಲವೇ? ಸಾಕು ಈ ಪರಿಹಾಸ! ನಾನು ಭೀತಳಾಗಿದ್ದೇನೆ! ನಿನ್ನನ್ನು ಕಾಣಿಸಿಕೋ. ನಿನ್ನನ್ನು ನೋಡಿದೆ! ರಾಜ! ನಿನ್ನನ್ನು ನೋಡಿದೆ! ನೀನು ಅಲ್ಲಿ ನಿಂತಿದ್ದೀಯೆ. ಗಿಡಗಳ ಹಿಂದಿ ಅಡಗಿಕೊಂಡಿದ್ದೀಯೆ. ನೀನು ಯಾಕೆ ನನಗೆ ಉತ್ತರಿಸುತ್ತಿಲ್ಲ? ನನ್ನನ್ನು ಇನ್ನು ಹಿಂಸಿಸಬೇಡ! ನಾನು ಇಲ್ಲಿ ವಿಲಪಿಸುತ್ತಿದ್ದೇನೆ ಎಂದು ತಿಳಿದರೂ ನೀನು ನನ್ನನ್ನು ನಿನ್ನ ಬಾಹುಗಳಲ್ಲಿರಿಸಿ ಸಂತವಿಸುತ್ತಿಲ್ಲವಲ್ಲ! ನಾನು ನಿನ್ನನ್ನು ಬಿಟ್ಟು ನನ್ನ ಬಗ್ಗೆ ಅಥವಾ ಬೇರೆ ಯಾವುದರ ಕುರಿತೂ ಯೋಚಿಸುತ್ತಿಲ್ಲ. ನೀನು ಒಬ್ಬನೇ ಹೇಗೆ ಇರುತ್ತೀಯೆ ಎಂದು ಶೋಕಿಸುತ್ತಿದ್ದೇನೆ. ರಾತ್ರಿ ಬಿದ್ದಮೇಲೆ ಹಸಿವು ಬಾಯಾರಿಕೆಗಳಿಂದ ಬಳಲಿದ ನೀನು ವೃಕ್ಷದ ಅಡಿಯಲ್ಲಿ ಕುಳಿತು ನನ್ನನ್ನೂ ನೋಡದೇ ಹೇಗೆ ಇರಬಲ್ಲೆ?”
ತೀವ್ರ ಶೋಕ-ಕೋಪಗಳಿಂದ ಉರಿಯುತ್ತಿದ್ದ ಅವಳು ದುಃಖದಿಂದ ಅಳುತ್ತಾ ಅತ್ತಿತ್ತ ಓಡತೊಡಗಿದಳು. ಆ ಬಾಲೆಯು ಒಂದು ಕ್ಷಣ ಮೇಲೇಳುತ್ತಿದ್ದಳು, ಇನ್ನೊಂದು ಕ್ಷಣ ವಿಹ್ವಲಳಾಗಿ ಬೀಳುತ್ತಿದ್ದಳು. ಒಂದು ಕ್ಷಣ ಬೀತಳಾಗಿ ಮುದುಡಿಕೊಂಡಿರುತ್ತಿದ್ದಳು, ಮತ್ತೊಂದು ಕ್ಷಣ ಜೋರಾಗಿ ಅಳುತ್ತಿದ್ದಳು. ತೀವ್ರ ಶೋಕ ಸಂತಪ್ತಳಾಗಿ ವಿಹ್ವಲಳಾದ ಆ ಪತಿವ್ರತೆ ಭೈಮಿಯು ನಿಟ್ಟುಸಿರು ಬಿಡುತ್ತಾ ಹೊರ ಬಂದು ಅಳುತ್ತಾ ಹೇಳಿದಳು:
“ಯಾರ ಅಭಿಶಾಪದಿಂದ ದುಃಖಾರ್ತನಾದ ನೈಷಧನು ದುಃಖವನ್ನು ಪಡೆದಿದ್ದಾನೋ ಅವನ ದುಃಖವೂ ಈ ದುಃಖಕ್ಕಿಂತ ಅಧಿಕವಾಗಲಿ! ಅಪಾಪಚೇತಸನಾದ ನಲನಿಗೆ ಈ ರೀತಿ ಮಾಡಿದ ಪಾಪಿಯು ಇದಕ್ಕಿಂತಲೂ ಹೆಚ್ಚು ದುಃಖವನ್ನು ಹೊಂದಿ, ಅಸುಖೀ ಜೀವನವನ್ನು ಬದುಕಲಿ!”
ಈ ರೀತಿ ಮಹಾತ್ಮ ರಾಜನ ಭಾರ್ಯೆಯು ವಿಲಪಿಸುತ್ತಾ ಮೃಗಗಳಿಂದ ತುಂಬಿದ ವನದಲ್ಲಿ ತನ್ನ ಪತಿಯನ್ನು ಅನ್ವೇಷಿಸಿದಳು. ಭೀಮಸುತೆಯು “ಹಾ ಹಾ ರಾಜ!” ಎಂದು ವಿಲಪಿಸುತ್ತಾ ಉನ್ಮತ್ತಳಾದವಳಂತೆ ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಓಡತೊಡಗಿದಳು. ಕಾರುಣ್ಯದಿಂದ ಬಹಳವಾಗಿ ರೋದಿಸಿ ಮತ್ತೆ ಮತ್ತೆ ವಿಲಪಿಸುತ್ತಾ ವೇಗದಲ್ಲಿ ಬರುತ್ತಿರುವಾಗ ಭೈಮಿಯು ಒಂದು ದೊಡ್ಡ ಹೆಬ್ಬಾವನ್ನು ಕಾಣದೇ ಎಡವಲು ಅದು ಅವಳನ್ನು ಹಿಡಿದುಕೊಂಡಿತು. ಆ ಹೆಬ್ಬಾವು ನುಂಗುವಾಗ ಕೂಡ ಶೋಕದಿಂದ ಪರಾಜಿತಳಾದ ಅವಳು ನೈಷಧನ ಕುರಿತು ದುಃಖಪಟ್ಟಷ್ಟು ತನಗಾಗಿ ದುಃಖಪಡಲಿಲ್ಲ.
“ಹಾ ನಾಥ! ಈ ನಿರ್ಜನ ವನದಲ್ಲಿ ನಾನು ಈ ಹೆಬ್ಬಾವಿನ ಬಾಯಿಗೆ ಅನಾಥಳಾಗಿ ಬಲಿಯಾಗಿದ್ದೇನೆ. ನೀನು ಏಕೆ ಬೇಗ ಬರುವುದಿಲ್ಲ? ಪಾಪದಿಂದ ಮುಕ್ತನಾಗಿ, ಪುನಃ ಬುದ್ಧಿ ಮತ್ತು ಧನವನ್ನು ಪಡೆದ ನಂತರ ನನ್ನನ್ನು ನೆನಪಿಸಿಕೊಂಡಾಗ ಹೇಗಿರುವೆ? ಬಳಲಿ ಹಸಿದಿದ್ದಾಗ ನಿನಗೆ ಶ್ರಮವನ್ನು ಹೋಗಲಾಡಿಸಲು ಯಾರಿದ್ದಾರೆ?”
ಅದೇ ವೇಳೆಯಲ್ಲಿ ಆ ಗಹನ ವನದಲ್ಲಿ ಸಂಚರಿಸುತ್ತಿದ್ದ ಮೃಗವ್ಯಾಧನೋರ್ವನು ಅವಳ ಆಕ್ರಂದನವನ್ನು ಕೇಳಿ ಓಡಿ ಬಳಿ ಬಂದನು. ಆ ಆಯತಾಕ್ಷಿಯನ್ನು ಹೆಬ್ಬಾವು ನುಂಗುತ್ತಿರುವುದನ್ನು ನೋಡಿ ಮೃಗವ್ಯಾಧನು ಬೇಗ ಅಲ್ಲಿಗೆ ಬಂದು ತಕ್ಷಣವೇ ತನ್ನ ಶಸ್ತ್ರದಿಂದ ಅದರ ಮುಖವನ್ನು ಕತ್ತರಿಸಿ ಕೆಳಗಿ ಬೀಳಿಸಿ ಆ ಹಾವು ಜೀವವಿಲ್ಲದೇ ನಿರ್ವಿಚೇಷ್ಟವಾಗುವರೆಗೂ ಕತ್ತರಿಸಿದನು. ನಂತರ ಅವಳನ್ನು ಅದರಿಂದ ಬಿಡಿಸಿ ವ್ಯಾಧನು ನೀರಿನಿಂದ ತೊಳೆದನು. ಅವಳಿಗೆ ಆಹಾರವನ್ನು ಕೊಟ್ಟು ಸಂತೈಸಿ ಕೇಳಿದನು:
“ಮೃಗಶಾವಾಕ್ಷಿ! ನೀನು ಯಾರವಳು? ಈ ವನಕ್ಕೆ ಏಕೆ ಬಂದೆ? ಭಾಮಿನಿ! ಇಂಥ ದೊಡ್ಡ ಅಪಾಯದಲ್ಲಿ ಹೇಗೆ ಸಿಲುಕಿಕೊಂಡೆ?”
ಈ ರೀತಿ ಕೇಳಿದುದಕ್ಕೆ ದಮಯಂತಿಯು ಎಲ್ಲವನ್ನೂ ಯಥಾವತ್ತಾಗಿ ಅವನಿಗೆ ಹೇಳಿದಳು. ಅರ್ಧವಸ್ತ್ರದಲ್ಲಿದ್ದ, ಪೂರ್ಣಚಂದ್ರನಂತೆ ಮುಖವುಳ್ಳ ಆ ಪೀನಶ್ರೋಣಿಪಯೋಧರೆ, ಸುಕುಮಾರಿ, ಅನವದ್ಯಾಂಗಿ, ಅರಾಲಪಕ್ಷನಯನೆ ಮತ್ತು ಮಧುರಭಾಷಿಣಿಯನ್ನು ನೋಡಿ ಮೃಗವ್ಯಾಧನು ಕಾಮವಶನಾದನು. ಶ್ಲಾಘನೀಯ ಮೃದು ಮಾತುಗಳಿಂದ ಸಂತವಿಸುತ್ತಿದ್ದ ಅವನು ತನ್ನನ್ನು ಬಯಸುತ್ತಿದ್ದಾನೆ ಎಂದು ಭಾಮಿನಿಯು ತಿಳಿದಳು. ಪತಿವ್ರತೆ ದಮಯಂತಿಯು ಅವನ ದುಷ್ಟತನವನ್ನು ಅರಿತು ತೀವ್ರ ರೋಷ ಸಮಾವಿಷ್ಟಳಾಗಿ, ಸಿಟ್ಟಿನಿಂದ ಪ್ರಜ್ವಲಿಸುವಂತೆ ಕಂಡಳು. ಕಾಮದಿಂದ ಅವಳನ್ನು ವಶಪಡಿಸಿಕೊಳ್ಳಲು ಆತುರನಾಗಿದ್ದ ಆ ಪಾಪಮತಿಯು ಭುಗಿಯುತ್ತಿರುವ ಬೆಂಕಿಯ ಶಿಖೆಯಂತಿರುವ ಅವಳನ್ನು ಹೊಂದಲಸಾಧ್ಯ ಎಂದು ಯೋಚಿಸಿದನು. ಆದರೆ ದುಃಖಾರ್ತಳಾದ, ಪತಿ-ರಾಜ್ಯಗಳನ್ನು ಕಳೆದುಕೊಂಡ ದಮಯಂತಿಯು ಒಂದೆರಡು ಹೆಜ್ಜೆ ಹಿಂದೆ ಸರಿದು ರೋಷದಿಂದ ಶಪಿಸಿದಳು:
“ನಾನು ನೈಷಧನ ಹೊರತಾಗಿ ಅನ್ಯರನ್ನು ಮನಸ್ಸಿನಲ್ಲಿಯೂ ಯೋಚಿಸದೇ ಇದ್ದರೆ, ಮೃಗಗಳನ್ನು ಅವಲಂಬಿಸಿ ಜೀವನ ಮಾಡುವ ಈ ಪಾಪಿಯು ಸತ್ತು ಬೀಳಲಿ!”
ಈ ವಚನವನ್ನು ಹೇಳಿದ ಮಾತ್ರದಲ್ಲಿ ಬೆಂಕಿ ಹಿಡಿದು ಸುಟ್ಟ ಮರದಂತೆ ಆ ವ್ಯಾಧನು ಭೂಮಿಯ ಮೇಲೆ ಬಿದ್ದನು.
ದಮಯಂತೀ ವಿಲಾಪ
ಮೃಗವ್ಯಾಧನನ್ನು ಕೊಂದ ಕಮಲಾಕ್ಷಿಯು ಝಿಲ್ಲೀಕ ಗಣಗಳ ನಿನಾದದೊಂದೊಡಗೂಡಿದ ಶೂನ್ಯವಾದ ಭಯಂಕರ ವನವನ್ನು ಪ್ರವೇಶಿಸಿದಳು. ಆ ವನವು ಸಿಂಹ, ವ್ಯಾಘ್ರ, ವರಾಹ, ರುರು ಮತ್ತು ಆನೆಗಳಿಂದೊಡಗೂಡಿತ್ತು. ನಾನಾ ಪಕ್ಷಿಗಣಗಳು ತುಂಬಿಕೊಂಡಿದ್ದವು ಮತ್ತು ಮ್ಲೇಚ್ಛ-ಡಕಾಯಿತರಿಂದ ಒಡಗೂಡಿತ್ತು. ಶಾಲ, ವೇಣು [ಬಿದಿರು], ಧವ, ಅಶ್ವತ್ಥ, ತಿಂಡುಕ, ಇಂಗುದ, ಕಿಂಶುಕ, ಅರ್ಜುನ, ಅರಿಷ್ಟ, ಸಂಚನ್ನ [ಬೇವು], ಚಂದನ, ಶಾಲ್ಮಲ, ಜಂಬೂ [ನೇರಳೆ], ಮಾವು, ಲೋಧ್ರ, ಖದಿರ, ಸಾಲ, ವೇತ್ರ, ಪದ್ಮಕ, ಸ್ಯಂದನ, ಅಮಲಕ, ಪ್ಲ್ಲಕ್ಷ, ಕದಂಬ, ಉದುಂಬರ, ಬದರಿ, ಬಿಲ್ವ, ಆಲ, ಪ್ರಿಯಾಲ, ತಾಲ, ಖರ್ಜೂರ, ಹರೀತಕ ಮತ್ತು ಬಿಭೀತಕ ಮೊದಲಾದ ವೃಕ್ಷಗಳ ಸಂಕುಲವೇ ಇತ್ತು. ಅಲ್ಲಿ ಅನೇಕವಿಧದ ಧಾತುಗಳನ್ನೂ, ಲೋಹಗಳ ಅದಿರನ್ನೂ, ಪಕ್ಷಿಗಳು ಗುಂಪಾಗಿ ನಿನಾದ ಮಾಡುತ್ತಿರುವುದನ್ನೂ, ಅದ್ಭುತವಾಗಿ ತೋರುತ್ತಿದ್ದ ಕಣಿವೆಗಳನ್ನೂ, ನದೀ, ಸರೋವರ, ಬಾವಿಗಳನ್ನೂ, ವಿವಿಧ ಮೃಗಗಳನ್ನೂ, ಬಹಳಷ್ಟು ಘೋರರೂಪಿ ಪಿಶಾಚ, ಉರಗ ಮತು ರಾಕ್ಷಸರನ್ನೂ, ಅನೇಕ ಚಿಲುಮೆಗಳನ್ನೂ, ತಟಾಕಗಳನ್ನೂ, ಬೆಟ್ಟ-ಶಿಖರಗಳನ್ನೂ, ನದಿ-ಸಾಗರಗಳು ಮತ್ತು ಅವುಗಳ ಅದ್ಭುತ ಪ್ರವಾಹಗಳನ್ನು, ಕಾಡೆಮ್ಮೆ-ಹಂದಿ-ಕರಡಿ-ಹಾವುಗಳು ಎಲ್ಲವನ್ನೂ ವಿದರ್ಭಾಧಿಪನ ಮಗಳು ನೋಡಿದಳು. ಪತಿಯ ವ್ಯಸನದಿಂದ ಸೋತುಹೋಗಿದ್ದ ಆ ತೇಜಸ್ವಿನಿ, ಯಶಸ್ವಿನಿ, ಶ್ರೀ, ಪರಮ ಸಹನಾಶಕ್ತಿಯನ್ನು ಹೊಂದಿದ್ದ, ನಲನನ್ನು ಹುಡುಕುವ ಒಂದೇ ಒಂದು ವಿಚಾರವನ್ನಿಟ್ಟುಕೊಂಡಿದ್ದ ನೃಪಸುತೆ ಭೈಮಿಯು ಅಂಥ ದಾರುಣ ಅಡವಿಯನ್ನು ಸೇರಿಯೂ ಯಾವುದರ ಕುರಿತೂ ಭಯ ಪಟ್ಟುಕೊಳ್ಳಲಿಲ್ಲ. ಒಂದು ಶಿಲೆಯಮೇಲೆ ಕುಳಿತುಕೊಂಡು ಭರ್ತೃಶೋಕದಿಂದ ಪೀಡಿತಳಾದ ವಿದರ್ಭತನಯೆಯು ದುಃಖಿತಳಾಗಿ ವಿಲಪಿಸಿದಳು. ದಮಯಂತಿಯು ಹೇಳಿದಳು:
“ಸಿಂಹೋರಸ್ಕ! ಮಹಾಬಾಹೋ! ನಿಷಧ ಜನಾಧಿಪ! ರಾಜನ್! ಈ ನಿರ್ಜನ ವನದಲ್ಲಿ ನನ್ನನ್ನು ಬಿಟ್ಟು ಎಲ್ಲಿ ಹೋಗಿರುವೆ? ಶ್ರೀಮಂತ ದಕ್ಷಿಣೆಗಳನ್ನಿತ್ತು ಅಶ್ವಮೇಧ ಮುಂತಾದ ಕ್ರತುಗಳನ್ನು ಮಾಡಿದ ನರವ್ಯಾಘ್ರ! ನೀನು ನನಗೆ ಹೇಗೆ ಸುಳ್ಳಾಗಿ ವರ್ತಿಸಿದೆ? ನನ್ನ ಎದುರು ನೀನು ಹೇಳಿದುದನ್ನು ಸತ್ಯವನ್ನಾಗಿಸು. ನಿನ್ನ ಮತ್ತು ನನ್ನೊಡನೆ ಹಂಸಪಕ್ಷಿಗಳು ಹೇಳಿದ್ದುದನ್ನು ನೆನಪಿಸಿಕೋ. ನಾಲ್ಕೂ ವೇದಗಳನ್ನೂ ಸಾಂಗೋಪಾಂಗವಾಗಿ ಸವಿಸ್ತಾರವಾಗಿ ತನ್ನದಾಗಿಸಿಕೊಂಡ ಮನುಜವ್ಯಾಘ್ರನು ಸತ್ಯವಂತನಲ್ಲವೇ? ಹಿಂದೆ ನೀನು ನನ್ನ ಎದಿರು ಆಡಿದ ಮಾತನ್ನು ಸತ್ಯವನ್ನಾಗಿಸು. ನಿನಗೆ ನಾನು ಇನ್ನು ಇಷ್ಟವೇ ಇಲ್ಲದವಳಾದೆನೇ? ಈ ಘೋರ ಅಡವಿಯಲ್ಲಿ ಯಾಕೆ ನೀನು ಉತ್ತರಿಸುತ್ತಿಲ್ಲ? ಈ ರೌದ್ರ ದಾರುಣಾಕಾರದ ಅರಣ್ಯರಾಜನು ನನ್ನನ್ನು ತಿನ್ನಲು ಬಾಯಿ ತೆರೆದಿದ್ದಾನೆಯಾದರೂ ನೀನು ಬಂದು ನನ್ನನ್ನು ಏಕೆ ರಕ್ಷಿಸುವುದಿಲ್ಲ? ಅಂದು ನೀನು ಸುಭಗೇ! ನಿನಗಿಂತ ಬೇರೆ ಯಾರೂ ಪ್ರಿಯರಿಲ್ಲ ಎಂದು ಹೇಳಿದ್ದೆ. ಹಿಂದೆ ಹೇಳಿದ ಈ ಮಾತನ್ನು ಸತ್ಯಗೊಳಿಸು. ಈ ಪತ್ನಿಯನ್ನು ನೀನು ಪ್ರೀತಿಸುವುದೇ ಆದರೆ ಉನ್ಮತ್ತಳಾಗಿ ವಿಲಪಿಸುತ್ತಿರುವ ನನಗೆ ಯಾಕೆ ಉತ್ತರಿಸುತ್ತಿಲ್ಲ? ನಾನು ಕೃಶಳಾಗಿದ್ದೇನೆ, ದೀನಳಾಗಿದ್ದೇನೆ, ವಿವರ್ಣಳಾಗಿದ್ದೇನೆ. ಅರ್ಧವಸ್ತ್ರವನ್ನು ಸುತ್ತಿಕೊಂಡು, ಏಕಾಂಗಿಯಾಗಿ, ಅನಾಥಳಂತೆ ವಿಲಪಿಸುತ್ತಿದ್ದೇನೆ. ಗುಂಪಿನಿಂದ ಭ್ರಷ್ಟವಾದ ಹರಿಣಿಯಂತಾಗಿದ್ದೇನೆ. ರೋದಿಸುತ್ತಿರುವ ನನ್ನನ್ನು ಯಾಕೆ ಗೌರವಿಸುತ್ತಿಲ್ಲ? ಮಹಾರಣ್ಯದಲ್ಲಿ ಏಕಾಕಿಯಾಗಿ ಮಾತನಾಡುತ್ತಿರುವ ಸತಿಗೆ ನೀನು ಏಕೆ ಉತ್ತರಿಸುತ್ತಿಲ್ಲ? ನಿನ್ನನ್ನು ಇಂದು ಈ ಗಿರಿಯ ಮೇಲೆ ಕಾಣುತ್ತಿಲ್ಲ. ಸಿಂಹವ್ಯಾಘ್ರಗಳಿಂದೊಡಗೂಡಿದ ಈ ಮಹಾಘೋರ ವನದಲ್ಲಿ ಮಲಗಿದ್ದೀಯಾ, ಕುಳಿತಿದ್ದೀಯಾ, ನಿಂತಿದ್ದೀಯಾ ಅಥವಾ ನನ್ನ ಶೋಕವನ್ನು ಹೆಚ್ಚಿಸಲು ಹೊರಟುಹೋಗುತ್ತಿದ್ದೀಯಾ? ನಿನ್ನ ಶೋಕದಿಂದ ಸೋತುಹೋದ, ದುಃಖಾರ್ತಳಾದ ನಾನು ಈ ಅರಣ್ಯದಲ್ಲಿ ನೃಪ ನಲನನ್ನು ನೋಡಿದ್ದೀರಾ ಅಥವಾ ಭೆಟ್ಟಿಯಾಗಿದ್ದೀರಾ ಎಂದು ಯಾರನ್ನು ಕೇಳಲಿ? ಕಳೆದುಹೋದ ಪರವ್ಯೂಹವಿನಾಶಕ, ಮಹಾತ್ಮ, ಅಭಿರೂಪಿ ನಲನ ಕುರಿತು ನನಗೆ ಹೇಳುವವರು ಇಲ್ಲಿ ಯಾರಿದ್ದಾರೆ? ನಾನು ಅನ್ವೇಷಿಸುತ್ತಿರುವ ಪದ್ಮನಿಭೇಕ್ಷಣ ರಾಜ ನಲನು ಇಲ್ಲಿ ಇದ್ದಾನೆ ಎನ್ನುವ ಮಧುರ ವಾಖ್ಯವನ್ನು ಇಂದು ಇಲ್ಲಿ ಹೇಳುವವರು ಯಾರಿದ್ದಾರೆ? ಅದೋ ಅಲ್ಲಿ ಶ್ರೀಮಾನ್ ಅರಣ್ಯರಾಜ ಚತುರ್ದಂಷ್ಟ್ರ ಮಹಾಹನು ಶಾರ್ದೂಲನು ನನ್ನನ್ನು ಭೆಟ್ಟಿಯಾಗಲು ಎದುರಾಗುತ್ತಿದ್ದಾನೆ. ಅಶಂಕಿತಳಾಗಿ ಅವನನ್ನೇ ಕೇಳುತ್ತೇನೆ: “ಭವಾನ್! ಮೃಗಗಳ ಅಧಿಪತಿ! ನನ್ನನ್ನು ವಿದರ್ಭರಾಜತನಯೆ ದಮಯಂತಿ, ಅಮಿತ್ರಘಾತಿ ನಿಷಧಾಧಿಪತಿ ನಲನ ಭಾರ್ಯೆಯೆಂದು ತಿಳಿ. ಪತಿಯನ್ನು ಅನ್ವೇಶಿಸುತ್ತಾ ಒಬ್ಬಳೇ ಕೃಪಣಳಾಗಿ ಶೋಕದಿಂದ ಸೋತುಹೋಗಿದ್ದೇನೆ. ಮೃಗೇಂದ್ರ! ನೀನು ನಲನನ್ನು ಕಂಡಿದ್ದೀಯಾ? ಆಶ್ವಾಸನೆ ಕೊಡು. ಒಂದುವೇಳೆ ನಲನ ಕುರಿತು ಮಾತನಾಡುವುದಿಲ್ಲವಾದರೆ ದುಃಖಿತಳಾದ ನನ್ನನ್ನು ತಿಂದು ವಿಶೋಕಳನ್ನಾಗಿ ಮಾಡು.” ಮೃಗರಾಜನು ಅರಣ್ಯದಲ್ಲಿ ನನ್ನ ಈ ವಿಲಾಪವನ್ನು ಕೇಳಿ ತನ್ನಷ್ಟಕ್ಕೇ ಸಾಗರವನ್ನು ಸೇರಲು ಸಲಿಲವಾಗಿ ಹರಿಯುತ್ತಿರುವ ನದಿಯ ಕಡೆ ಹೋಗುತ್ತಿದ್ದಾನೆ. ಶಿಲೆಗಳಿಂದ ಕೂಡಿದ, ಪುಣ್ಯಕರ, ಆಕಾಶವನ್ನೆಮುಟ್ಟುತ್ತವೆಯೋ ಎಂದು ತೋರುತ್ತಿರುವ ಎತ್ತರವಾಗಿರುವ ಬಹಳ ಶಿಖರಗಳಿಂದ ಕೂಡಿದ, ಅದರ ತಪ್ಪಲಿನಲ್ಲಿ ಗೈರಿಕಾದಿ ಧಾತುಗಳನ್ನು ಹೊಂದಿರುವ, ವಿವಿಧ ಪಲಗಳಿಂದ ಭೂಷಿತ, ಸಿಂಹ-ಹುಲಿ-ಆನೆ-ಹಂದಿ-ಬಲ್ಲೂಕ ಮೊದಲಾದ ಪ್ರಾಣಿಗಳಿಂದ ಕೂಡಿದ, ಬಹುವಿಧ ಪಕ್ಷಿಸಂಕುಲಗಳ ನಿನಾದದಿಂದೊಡಗೂಡಿದ, ಕಿಂಶುಕ-ಅಶೋಕ-ಬಕುಲ-ಪುನ್ನಾಗಗಳಿಂದ ಶೋಭಿತ, ಜಲಪಕ್ಷಿ ಸಂಕುಲಗಳಿಂದ ಕೂಡಿದ ನದಿ ಮತ್ತು ಶಿಖರಗಳಿಂದ ಪರಿಶೋಭಿತ ಈ ಗಿರಿರಾಜನನ್ನು ನೃಪತಿಯ ಕುರಿತು ಕೇಳುತ್ತೇನೆ. “ಭಗವನ್! ಅಚಲಶ್ರೇಷ್ಠ! ನಿನಗೆ ನನ್ನ ನಮಸ್ಕಾರಗಳು. ನಾನು ನಿನ್ನಲ್ಲಿಗೆ ಬಂದು ನಮಿಸುತ್ತಿದ್ದೇನೆ. ನನ್ನನ್ನು ರಾಜಪುತ್ರಿ, ರಾಜನ ಸೊಸೆ, ರಾಜನ ಪತ್ನಿ, ವಿಶೃತ ದಮಯಂತಿಯೆಂದು ತಿಳಿ. ವಿದರ್ಭಾಧಿಪತಿ ರಾಜ ಮಹಾರಥಿ, ಚಾತುರ್ವಣ್ಯವನ್ನೂ ರಕ್ಷಿಸುವ ಭೀಮ ಎಂಬ ಹೆಸರಿನ ಕ್ಷಿತಿಪತಿಯು ನನ್ನ ಪಿತ. ದಕ್ಷಿಣೆಗಳನ್ನು ಕೊಟ್ಟು ರಾಜಸೂಯ, ಅಶ್ವಮೇಧ ಮೊದಲಾದ ಕ್ರತುಗಳನ್ನು ಮಾಡಿದ, ಪಾರ್ಥಿವಶ್ರೇಷ್ಠ, ಸುಂದರ ವಿಶಾಲ ಕಣ್ಣುಗಳನ್ನುಳ್ಳ, ಬ್ರಹ್ಮಣ್ಯ, ಸಾಧುವೃತ್ತಿ, ಸತ್ಯವಾನ್, ಅನಸೂಯಕ, ಶೀಲವಂತ, ಸುಸಮಾಚಾರ, ಪೃಥುಶ್ರೀ, ಧರ್ಮವಿಂಚುಷಿ, ಅರಿಗಣಗಳನ್ನು ಜಯಿಸಿದ, ವಿದರ್ಭರನ್ನು ಚೆನ್ನಾಗಿ ಪರಿಪಾಲಿಸುತ್ತಿರುವ ಪ್ರಭು ಅವನ ಮಗಳೇ ನಾನು. ನಿನ್ನ ಬಳಿ ಬಂದಿದ್ದೇನೆ ಎಂದು ತಿಳಿ. ವೀರಸೇನ ಎಂಬ ತಕ್ಕುದಾದ ಹೆಸರಿನಿಂದ ವಿಖ್ಯಾತ ನಿಷಧದ ಮಹಾನೃಪ ನನ್ನ ಮಾವ. ಆ ರಾಜನ ಸುತ ವೀರ, ಶ್ರೀಮಾನ್, ಸತ್ಯಪರಾಕ್ರಮಿ, ಕ್ರಮದಂತೆ ಪ್ರಾಪ್ತವಾದ ಪಿತನ ಈ ರಾಜ್ಯವನ್ನು ಶಾಸನಮಾಡುತ್ತಿದ್ದಾನೆ. ಆ ಬ್ರಹ್ಮಣ್ಯ, ವೇದವಿದ್, ವಾಗ್ಮೀ, ಪುಣ್ಯಕೃತ, ಸೋಮಪೋಗ್ನಿಚಿತ್ತ, ಅರಿಂದಮ ಪುಣ್ಯಶ್ಲೋಕನು ನಲ ಎಂಬ ಹೆಸರಿನಿಂದ ಕೇಳಲ್ಪಟ್ಟಿದ್ದಾನೆ. ಯಾಗಮಾಡುತ್ತಾನೆ. ದಾನ ಮಾಡುತ್ತಾನೆ. ಯುದ್ಧ ಮಾಡುತ್ತಾನೆ. ಮತ್ತು ಸರಿಯಾಗಿ ಪ್ರಶಾಸನ ಮಾಡುತ್ತಾನೆ. ಸಂಪತ್ತನ್ನು ಕಳೆದುಕೊಂಡು ಪತಿಯನ್ನೂ ಕಳೆದುಕೊಂಡು ಅನಾಥಳಾಗಿ ವ್ಯಸನಗೊಂಡಿರುವ ನಾನು ಆ ಪತಿ ನರೋತ್ತಮನನ್ನು ಅನ್ವೇಷಿಸುತ್ತಾ ಇಲ್ಲಿಗೆ ಬಂದಿರುವ ಅವನ ಭಾರ್ಯೆಯೆಂದು ತಿಳಿ. ಗಗನವನ್ನು ಮುಟ್ಟುತ್ತಿರುವ ನಿನ್ನ ಈ ಶತ ಶೃಂಗಗಳಿಂದ ಎಲ್ಲಿಯಾದರೂ ಈ ದಾರುಣ ವನದಲ್ಲಿ ನಲನನ್ನು ನೋಡಿದ್ದೀಯಾ? ಗಜೇಂದ್ರವಿಕ್ರಮಿ, ಧೀಮಾನ್, ದೀರ್ಘಬಾಹು, ಅಮರ್ಶಣ, ವಿಕ್ರಾಂತ, ಸತ್ಯವಾಗ್ಮಿ, ಧೀರ, ಮಹಾಯಶ, ನಿಷಾಧಾಧಿಪತಿ ನನ್ನ ಪತಿ ನಲನನ್ನು ನೀನು ಎಲ್ಲಿಯಾದರೂ ನೋಡಿದ್ದೀಯಾ? ಈ ಪರ್ವತದಲ್ಲಿ ಏಕಾಕಿಯಾಗಿ ದುಃಖಿತಳಾಗಿ ವಿಲಪಿಸುತ್ತಿರುವ ನಿನ್ನ ಮಗಳಂತಿರುವ ನನ್ನನ್ನು ಇಂದು ಯಾಕೆ ಸಂತಯಿಸುತ್ತಿಲ್ಲ?” ಈ ವನದಲ್ಲಿ ಇದ್ದರೆ ನಿನ್ನನ್ನು ಕಾಣಿಸಿಕೋ. ನೈಷಧನ ಸ್ನಿಗ್ಧ, ಗಂಭೀರ, ಜೀಮೂತಸ್ವರಸನ್ನಿಭ, ಅಮೃತಸಮಾನ ಆ ಮಾತುಗಳನ್ನು ಯಾವಾಗ ಕೇಳುವೆನು? ಮಹಾತ್ಮ ರಾಜನ, ಶುಭವಾದ, ನನ್ನ ಶೋಕವನ್ನು ಹರಣಮಾಡುವ ವೈದರ್ಭೀ ಎಂದು ಕರೆಯುವ ಆ ಮಾತನ್ನು ಎಂದು ಕೇಳುತ್ತೇನೆ?”
ಈ ರೀತಿಯಲ್ಲಿ ಆ ಪಾರ್ಥಿವನಂದಿನಿ ದಮಯಂತಿಯು ಗಿರಿಶ್ರೇಷ್ಠನನ್ನುದ್ದೇಶಿಸಿ ಮಾತನಾಡಿದ ನಂತರ ಉತ್ತರ ದಿಶೆಯಲ್ಲಿ ಹೊರಟಳು. ಮೂರು ಹಗಲು ಮತ್ತು ರಾತ್ರಿ ಪ್ರಯಣ ಮಾಡಿ ಆ ಪರಮಾಂಗನೆಯು ಅತುಲ ತಾಪಸಿಗಳಿರುವ ದಿವ್ಯ ಕಾನನ ಅರಣ್ಯವೊಂದನ್ನು ಕಂಡಳು. ಅದು ವಸಿಷ್ಠ, ಭೃಗು, ಅತ್ರಿ ಮೊದಲಾದ, ನಿಯತ, ಸಂಯಮ, ಅಲ್ಪಾಹಾರಿ, ಶುಚಿಸಮನ್ವಿತ, ನೀರು ಅಥವಾ ವಾಯುವನ್ನೇ ಸೇವಿಸುತ್ತಿರುವ, ಪತ್ರಾಹಾರಿ, ಸ್ವರ್ಗಮಾರ್ಗವನ್ನೇ ನೋಡುತ್ತಿರುವ, ಜಿತೇಂದ್ರಿಯ ಮಹಾಭಾಗರಿಂದ ಉಪಶೋಭಿತವಾಗಿತ್ತು. ವಲ್ಕಲ-ಜಿನಗಳನ್ನು ಧರಿಸಿದ್ದ, ಆ ಇಂದ್ರಿಯಸಂಯಮಿ ಮುನಿ-ತಾಪಸಿಗಳ ರಮ್ಯ ಆಶ್ರಮ ಮಂಡಲವನ್ನು ನೋಡಿದಳು. ವಾನರ ಮತ್ತಿತರ ನಾನಾ ಮೃಗಗಳು ವಾಸಿಸುತ್ತಿರುವ, ತಾಪಸಿಗಳು ಸಮಾನ್ವಿತರಿರುವ ಆ ಆಶ್ರಮಪದವನ್ನು ನೋಡಿ, ಸುಂದರ ಹುಬ್ಬಿನ, ಸುಕೇಶೀ, ಸುಶ್ರೋಣೀ, ಸುಕುಚಾ, ಸುದ್ವಿಜಾನನೆ, ವರ್ಚಸ್ವಿನೀ, ಸುಪ್ರತಿಷ್ಠೆ, ಸಂಚಿತೋದ್ಯತಗಾಮಿನೀ, ವೀರಸೇನ ಸುತನ ಪ್ರಿಯೆ, ಸ್ತ್ರೀರತ್ನ, ಮನಸ್ವಿನೀ, ದಮಯಂತಿಯು ಆ ಆಶ್ರಮಪದವನ್ನು ಪ್ರವೇಶಿಸಿದಳು. ವಿನಯಾವನತಳಾಗಿ ನಿಂತು ಆ ತಪೋವೃದ್ಧರನ್ನು ಅಭಿನಂದಿಸಿದಳು. ಸರ್ವ ತಪಸ್ವಿಗಳೂ “ಸ್ವಾಗತ!” ಎಂದರು. ಅಲ್ಲಿ ತಪೋಧನರು ಅವಳನ್ನು ಯಥಾವತ್ತಾಗಿ ಸತ್ಕರಿಸಿ, ಕುಳಿತುಕೊಳ್ಳಲು ಹೇಳಿ, “ನಾವು ಏನು ಮಾಡಬಹುದು? ಹೇಳು!” ಎಂದು ಕೇಳಿದರು. ವರಾರೋಹೆಯು ಅವರಿಗೆ ಹೇಳಿದಳು:
“ಮಹಾಭಾಗರೇ! ಇಲ್ಲಿ ನಿಮ್ಮ ತಪಸ್ಸು, ಅಗ್ನಿ, ಧರ್ಮ, ಮೃಗಪಕ್ಷಿಗಳು ಮತ್ತು ಅನಘರಾದ ನೀವು ಕುಶಲದಿಂದಿದ್ದೀರಾ? ಸ್ವಧರ್ಮದಲ್ಲಿ ನಿರತರಾಗಿದ್ದೀರಾ?”
ಅವರು ಉತ್ತರಿಸಿದರು:
“ಭದ್ರೇ! ಯಶಸ್ವಿನೀ! ಇಲ್ಲಿ ಎಲ್ಲವೂ ಕುಶಲವಾಗಿದೆ. ಆದರೆ ಸರ್ವಾನವದ್ಯಾಂಗಿಯಾದ ನೀನು ಯಾರು ಮತ್ತು ಏನು ಮಾಡಲು ಇಚ್ಚಿಸಿರುವೆ ಹೇಳು. ನಿನ್ನ ಈ ಪರಮ ರೂಪ ಮತ್ತು ಕಾಂತಿಯನ್ನು ನೋಡಿ ನಾವೆಲ್ಲ ಬಹುವಿಸ್ಮಿತರಾಗಿದ್ದೇವೆ. ದುಃಖಿಸಬೇಡ, ಸಂತವಿಸಿಕೋ. ನೀನು ಈ ಅರಣ್ಯ, ಪರ್ವತ ಅಥವಾ ನದಿಗಳ ಮಹಾ ದೇವಿಯಾಗಿರಬಹುದೇ? ಸತ್ಯವನ್ನು ಹೇಳು.”
“ಅಲ್ಲ. ವಿಪ್ರರೇ! ನಾನು ಈ ಅರಣ್ಯದ, ಗಿರಿಯ ಅಥವಾ ನದಿಯ ದೇವತೆಯಲ್ಲ!” ಎಂದು ಅವಳು ಋಷಿಗಳಿಗೆ ಹೇಳಿದಳು.
“ತಪೋಧನರಾದ ನೀವೆಲ್ಲರೂ ನನ್ನನ್ನು ಮಾನುಷಿಯೆಂದು ತಿಳಿಯಿರಿ. ನೀವು ಕೇಳುತ್ತೀರಿ ಎಂದಾದರೆ ನಾನು ಸರ್ವವನ್ನೂ ವಿಸ್ತಾರವಾಗಿ ಹೇಳುತ್ತೇನೆ. ದ್ವಿಜಸತ್ತಮರೇ! ನಾನು ವಿದರ್ಭದ ಭೀಮ ಎಂಬ ಹೆಸರಿನ ಮಹಾದ್ಯುತಿ ಮಹೀಪಾಲನ ತನಯೆ ಎಂದು ಸರ್ವರೂ ತಿಳಿಯಿರಿ. ಧೀಮಾನ್, ಮಹಾಯಶ, ವೀರ, ಸಂಗ್ರಾಮಗಳಲ್ಲಿ ವಿಜಯಿ, ವಿದ್ವಾನ್, ವಿಶಾಂಪತಿ, ನಲ ಎಂಬ ಹೆಸರಿನ ನಿಷಧಾಧಿಪತಿಯು ನನ್ನ ಪತಿ. ಅವನು ದೇವತೆಗಳ ಅರ್ಚನಪರನಾಗಿದ್ದನು. ದ್ವಿಜರೇ ಮೊದಲಾದ ಜನರ ವತ್ಸಲನಾಗಿದ್ದನು ಮತ್ತು ನಿಷಧವಂಶದ ಮಹಾಭಾಗ ಮಹಾದ್ಯುತಿ ದೊರೆಯಾಗಿದ್ದನು. ಸತ್ಯವಾಗ್ಮಿ, ಧರ್ಮವಿದ, ಪ್ರಾಜ್ಞ, ಸತ್ಯಸಂಧ, ಅರಿಮರ್ದನ, ಬ್ರಹ್ಮಣ್ಯ, ದೈವತಪರ, ಶ್ರೀಮಾನ್ ಮತ್ತು ಪರಪುರಂಜಯ, ದೇವರಾಜ ಸಮದ್ಯುತಿ, ವಿಶಾಲಾಕ್ಷ, ಪೂರ್ಣೇಂದುವದನ ನಲ ಎಂಬ ಹೆಸರಿನ ನೃಪಶ್ರೇಷ್ಠನು ನನ್ನ ಪತಿ. ವೇದವೇದಾಂಗಪಾರಂಗತನಾಗಿದ್ದ ಅವನು ಪ್ರಧಾನ ಕ್ರತುಗಳನ್ನು ನೆರವೇರಿಸಿದನು. ರವಿ-ಸೋಮ ಸಮಪ್ರಭನಾದ ಅವನು ಯುದ್ಧದಲ್ಲಿ ತನ್ನ ಸ್ಪರ್ಧಾಳುಗಳನ್ನು ಸಂಹರಿಸಿದನು. ಕೆಲವು ನಿಕೃತಿಪ್ರಜ್ಞ, ಅಕಲ್ಯಾಣ, ನರಾಧಮರು ಸತ್ಯಧರ್ಮ ಪರಾಯಣನಾದ ಆ ಪೃಥಿವೀಪಾಲನನ್ನು ಜೂಜಾಡಲು ಕರೆದರು ಮತ್ತು ಜೂಜಿನಲ್ಲಿ ಕುಶಲರಾಗಿದ್ದ ಅವರು ರಾಜ್ಯ-ಸಂಪತ್ತನ್ನು ಗೆದ್ದರು. ದಮಯಂತಿಯೆಂದು ವಿಖ್ಯಾತಳಾದ ನಾನು ಆ ರಾಜರ್ಷಭನ ಪತ್ನಿ. ಪತಿಯನ್ನು ಕಾಣಲು ಕಾತುರಳಾಗಿದ್ದೇನೆ. ಆ ರಣವಿಶಾರದ, ಮಹಾತ್ಮ, ಕೃತಾಸ್ತ್ರ ಪತಿ ನಲನನ್ನು ಅನ್ವೇಷಿಸುತ್ತಾ ಈ ವನ-ಗಿರಿ-ಸರೋವರ-ನದಿಗಳಲ್ಲಿ, ರಮ್ಯ ಹುಲ್ಲುಗಾವಲುಗಳಲ್ಲಿ, ಮತ್ತು ಸರ್ವ ಅರಣ್ಯಗಳಲ್ಲಿ ದುಃಖಿತಳಾಗಿ ಸಂಚರಿಸುತ್ತಿದ್ದೇನೆ. ನಲ ಎಂಬ ಹೆಸರಿನ ನಿಷಾಧ ಜನಾಧಿಪ ನೃಪನು ನಿಮ್ಮ ಈ ಪುಣ್ಯ ತಪೋವನಕ್ಕೆ ಎಂದಾದರೂ ಬಂದಿದ್ದನೇ? ವಿಪ್ರರೇ! ಅವನ ಸಲುವಾಗಿಯೇ ನಾನು ಈ ಭಯಂಕರ, ಘೋರ, ಶಾರ್ದೂಲಮೃಗಗಳಿಂದ ಕೂಡಿದ, ದಾರುಣ ವನವನ್ನು ಸೇರಿದ್ದೇನೆ. ಇನ್ನು ಕೆಲವೇ ಅಹೋರಾತ್ರಿಗಳಲ್ಲಿ ನೃಪ ನಲನನ್ನು ನೋಡದಿದ್ದರೆ ನನ್ನ ದೇಹವನ್ನು ತ್ಯಾಗಮಾಡಿ ಶ್ರೇಯ ಲೋಕಕ್ಕೆ ಹೋಗುತ್ತೇನೆ. ಆ ಪುರುಷರ್ಷಭನನ್ನು ಬಿಟ್ಟು ನನ್ನ ಜೀವನದಲ್ಲಿ ಬೇರೆ ಯಾವುದಾದರೂ ಅರ್ಥವಿದೆಯೇ? ಭರ್ತೃಶೋಕಪೀಡಿತಳಾದ ನನಗೆ ಇನ್ನು ಯಾವ ಭವಿಷ್ಯವಿದೆ?”
ಈ ರೀತಿ ಏಕಾಂಗಿಯಾಗಿ ಅರಣ್ಯದಲ್ಲಿ ವಿಲಪಿಸುತ್ತಿರುವ ಭೀಮನಂದಿನಿ ದಮಯಂತಿಗೆ ಸತ್ಯವಾದಿ ತಾಪಸರು ಉತ್ತರಿಸಿದರು:
“ಶುಭೇ! ನಿನಗೆ ಕಲ್ಯಾಣವಾಗುತ್ತದೆ. ರಿಪುನಿಘಾತಿ, ನಿಷಾಧಾಧಿಪತಿ ನಲ ನೈಷಧನನ್ನು ಶೀಘ್ರದಲ್ಲಿಯೇ ಕಾಣುತ್ತೀಯೆ ಎಂದು ನಮ್ಮ ತಪಸ್ಸಿನ ಮೂಲಕ ತಿಳಿದಿದ್ದೇವೆ. ಆ ಶ್ರೇಷ್ಠ ಅರಿಂದಮ ಧರ್ಮಭೂತನು ಪೀಡೆಯಿಂದ ಬಿಡುಗಡೆಹೊಂದಿ, ಸರ್ವಪಾಪಗಳಿಂದ ವಿಮುಕ್ತನಾಗಿ, ಸರ್ವರತ್ನಗಳನ್ನು ಪಡೆದು ಅದೇ ಶ್ರೇಷ್ಠ ನಗರದಲ್ಲಿ ಪ್ರಶಾಸನಮಾಡುತ್ತಿರುವುದನ್ನು ನೀನು ಕಾಣುತ್ತೀಯೆ. ದ್ವೇಷಿಗಳಿಗೆ ಭಯವನ್ನು ಕೊಡುವ, ಸುಹೃದಯರ ಶೋಕವನ್ನು ನಾಶಪಡಿಸುವ, ಅಭಿಜನರ ಕಲ್ಯಾಣವನ್ನು ಮಾಡುವ, ನಿನ್ನ ಪತಿ ನೃಪನನ್ನು ನೋಡುವವಳಿದ್ದೀಯೆ!”
ನಲನ ಇಷ್ಟ ಮಹಿಷಿ, ಪಾರ್ಥಿವಾತ್ಮಜೆಗೆ ಈ ರೀತಿ ಹೇಳಿದ ಆ ತಾಪಸಿಗಳು ಅಗ್ನಿಹೋತ್ರ ಮತ್ತು ಆಶ್ರಮಗಳ ಸಹಿತ ಅಂತರ್ಧಾನರಾದರು. ಆ ಮಹದಾಶ್ಚರ್ಯವನ್ನು ಕಂಡ ವೀರಸೇನನ ಸೊಸೆ ಅನವದ್ಯಾಂಗಿ ದಮಯಂತಿಯು ವಿಸ್ಮಿತಳಾದಳು:
“ನಾನು ನೋಡಿದ್ದುದು ಸ್ವಪ್ನವೇ? ಇಲ್ಲಿ ನಡೆದದ್ದಾದರೂ ಏನು? ಆ ಎಲ್ಲ ತಾಪಸರೂ ಎಲ್ಲಿದ್ದಾರೆ? ಫಲಪುಷ್ಪಶೋಭಿತ, ಸುಂದರ ಗಿರಿಗಳು ಮತ್ತು ನಾನಾ ದ್ವಿಜರಿಂದ ಕೂಡಿದ, ರಮ್ಯ ಪುಣ್ಯಜಲದ ನದಿಯಿದ್ದಿದ್ದ ಆ ಆಶ್ರಮ ಮಂಡಲವು ಎಲ್ಲಿ ಹೋಯಿತು?”
ಶುಚಿಸ್ಮಿತೆ ಭೀಮಸುತೆ ದಮಯಂತಿಯು ಯೋಚನೆಯಲ್ಲಿ ಬಿದ್ದು, ಭರ್ತೃಶೋಕಪರಳಾಗಿ, ದೀನಳಾಗಿ, ವಿವರ್ಣವದನಳಾದಳು. ಅವಳು ಬೇರೊಂದು ಸ್ಥಳಕ್ಕೆ ಹೋಗಿ ಅಲ್ಲಿ ಒಂದು ಅಶೋಕ ವೃಕ್ಷವನ್ನು ನೋಡಿ ಬಾಷ್ಪಗಳಿಂದ ಸಂದಿಗ್ಧ ದನಿಯಲ್ಲಿ, ಕಣ್ಣುಗಳಲ್ಲಿ ಅಶ್ರುಗಳು ತುಂಬಿ ವಿಲಪಿಸಿದಳು. ತನ್ನ ರೆಂಬೆಗಳ ಭಾರಕ್ಕೆ ಬಗ್ಗಿದ್ದ, ಪಕ್ಷಿಗಳ ನಿನಾದದಿಂದ ಮನಸೆಳೆಯುತ್ತಿದ್ದ, ಪುಷ್ಪಿತ ಆ ತರುಶ್ರೇಷ್ಠ ಅಶೋಕದ ಬಳಿ ಹೋದಳು:
“ಈ ವನಮದ್ಯದಲ್ಲಿ ನಿಂತಿರುವ ಈ ಶ್ರೀಮಾನ್ ವೃಕ್ಷವು ಬಹು ಚಿಗುರುಗಳಿಂದ ಶೋಭಿಸಿ ದ್ರಮಿಡದಂತೆ ಸುಂದರವಾಗಿರುವೆ. ನೋಡಲು ಸುಂದರವಾದ ಅಶೋಕವೇ! ನನ್ನ ದುಃಖವನ್ನು ದೂರಮಾಡು. ಶೋಕ, ಭಯ, ಬಾಧೆಗಳ ರಹಿತನಾದ ನೃಪನನ್ನು ಎಲ್ಲಿಯಾದರೂ ನೋಡಿದ್ದೀಯಾ? ಅರಿದಮನ, ದಮಯಂತಿಯ ಪ್ರಿಯ ಪತಿ ನಿಷಾಧರ ಅಧಿಪತಿ ನನ್ನ ಪ್ರಿಯ ನಲ ಎನ್ನುವವನನ್ನು ನೋಡಿದ್ದೀಯಾ? ಏಕವಸ್ತ್ರಾರ್ಧವನ್ನು ಸುತ್ತಿಕೊಂಡು ಈ ಅರಣ್ಯಕ್ಕೆ ಆಗಮಿಸಿರುವ ಸುಕುಮಾರ ತನು ಮತ್ತು ತ್ವಚೆಯನ್ನು ಹೊಂದಿದ, ವ್ಯಸನದಿಂದ ಆರ್ದಿತನಾದ, ವೀರನನ್ನು ತೋರಿಸು. ಅಶೋಕ ಎನ್ನುವ ನಿನ್ನ ಹೆಸರನ್ನು ಸತ್ಯವನ್ನಾಗಿ ಮಾಡಿ ನನ್ನ ಶೋಕವನ್ನು ನಾಶಪಡಿಸು!”
ಈ ರೀತಿ ಆರ್ತಳಾದ ವರಾಂಗನೆ ಭೈಮಿಯು ಆ ಅಶೋಕ ವೃಕ್ಷವನ್ನು ಮೂರುಸಾರಿ ಸುತ್ತುವರೆದು, ಅದಕ್ಕೂ ಹೆಚ್ಚಿನ ದಾರುಣ ಪ್ರದೇಶವೊಂದಕ್ಕೆ ಹೋದಳು. ಪತಿಯನ್ನು ಅನ್ವೇಷಿಸುತ್ತಾ ಆ ಭೀಮಸುತೆಯು ಹಲವಾರು ವೃಕ್ಷಗಳು, ಅನೇಕ ಝರಿಗಳು, ಅನೇಕ ಪರ್ವತಗಳು, ಅನೇಕ ಮೃಗಪಕ್ಷಿಗಳು, ಕಂದರ-ಕಣಿವೆಗಳು ಮತ್ತು ಅದ್ಭುತ ನದಿಗಳನ್ನು ನೋಡಿದಳು. ಹಾಗೆ ಹೋಗುತ್ತಿರುವಾಗ ಮಾರ್ಗದಲ್ಲಿ ಶುಚಿಸ್ಮಿತೆ ದಮಯಂತಿಯು ಆನೆ-ಕುದುರೆ-ರಥಗಳ ಸಂಕುಲಗಳೊಂದಿಗೆ ಪ್ರಸನ್ನ ಸಲಿಲದಿಂದೊಡಗೂಡಿದ ಶುಭ ಮತ್ತು ರಮ್ಯ ನದಿಯ ಕಡೆ ಹೋಗುತ್ತಿದ್ದ ಒಂದು ದೊಡ್ಡ ಪ್ರಯಾಣಿಕರ ಗುಂಪನ್ನು ಕಂಡಳು. ವಿಸ್ತೀರ್ಣವಾದ ಆ ಆನಂದಕರ ನದಿಯಲ್ಲಿ ತಂಪಾದ ನೀರಿತ್ತು, ಕಳೆಗಳಿದ್ದವು. ಕ್ರೌಂಚ, ಕುರರ ಮತ್ತು ಚಕ್ರವಾಕಗಳ ಕರೆಗಳ ಗದ್ದಲದಿಂದೊಡಗೂಡಿತ್ತು. ಆಮೆ, ಮೊಸಳೆಗಳಿಂದೊಡಗೂಡಿತ್ತು. ಮರಳು ಮತ್ತು ದ್ವೀಪಗಳನ್ನು ಹೊಂದಿತ್ತು. ಆ ಮಹಾ ದಂಡನ್ನು ನೋಡಿದ ವರಾರೋಹೆ ಯಶಸ್ವಿನೀ ನಲಪತ್ನಿಯು ಓಡಿ ಹೋಗಿ ಆ ದಂಡಿನ ಮಧ್ಯದಲ್ಲಿ ಸೇರಿಕೊಂಡಳು. ಅರ್ಧವೇ ವಸ್ತ್ರವನ್ನು ಧರಿಸಿದ್ದ, ಕೃಶಳಾಗಿದ್ದ, ವಿವರ್ಣಳಾಗಿದ್ದ, ಮಲಿನಳಾಗಿದ್ದ, ಧೂಳುತುಂಬಿದ ತಲೆಗೂದಲಿನ ಆ ಶೋಕಾರ್ತೆಯು ಹುಚ್ಚಿಯಂತೆ ಕಂಡಳು. ಅವಳನ್ನು ನೋಡಿದ ಕೆಲವು ಜನರು ಭೀತರಾಗಿ ಓಡಿದರು. ಕೆಲವರು ಚಿಂತಾಪರರಾದರು. ಮತ್ತು ಇನ್ನು ಕೆಲವರು ಮಾತನಾಡಿಕೊಂಡರು. ಕೆಲವರು ನಕ್ಕರೆ ಇನ್ನು ಕೆಲವರು ಅಸಹ್ಯ ಪಟ್ಟುಕೊಂಡರು. ಅದರೆ ಕೆಲವರು ಅವಳಮೇಲೆ ದಯಪಟ್ಟುಕೊಂಡು ಕೇಳಿದರು:
“ಕಲ್ಯಾಣಿ! ನೀನು ಯಾರು? ನೀನು ಯಾರವಳು? ವನದಲ್ಲಿ ಏನನ್ನು ಅರಸುತ್ತಿದ್ದೀಯೆ? ನಿನ್ನನ್ನು ನೋಡಿ ನೀನು ಮನುಷ್ಯಳೇ ಎಂದು ವ್ಯಥಿತರಾಗಿದ್ದೇವೆ. ಸತ್ಯವನ್ನು ಹೇಳು. ನೀನು ಈ ವನ, ಪರ್ವತ ಅಥವಾ ದಿಕ್ಕಿನ ದೇವತೆಯೇ? ಕಲ್ಯಾಣಿ! ನಾವು ನಿನ್ನ ಶರಣಾಗುತ್ತೇವೆ. ನೀನು ಯಕ್ಷಿಯೋ ಅಥವಾ ರಾಕ್ಷಸಿಯೋ? ನೀನು ಯಾರಿದ್ದರೂ ನಮಗೆ ಒಳ್ಳೆಯ ಅದೃಷ್ಟವನ್ನಿತ್ತು ರಕ್ಷಿಸು. ಈ ನಮ್ಮ ದಂಡು ಇಲ್ಲಿಂದ ಶೀಘ್ರವಾಗಿ ಕ್ಷೇಮದಿಂದ ಹೊರಡುವಂತೆ ಮಾಡು. ನಿನ್ನನ್ನು ಶರಣು ಹೋಗುತ್ತೇವೆ!”
ದಂಡಿನಲ್ಲಿ ಪ್ರಯಾಣಿಸುತ್ತಿದ್ದವರ ಈ ಮಾತುಗಳಿಗೆ ನೃಪಾತ್ಮಜೆ, ಭರ್ತೃವ್ಯಸನ ದುಃಖಿತಳಾದ ಸಾಧ್ವಿ ದಮಯಂತಿಯು ದಂಡಿನ ನಾಯಕ ಮತ್ತು ದಂಡಿನ ಇತರ ಜನರಿಗೆ, ವೃದ್ಧರಿಗೆ ಬಾಲಕರಿಗೆ ಮತ್ತು ದಂಡಿನ ಮಾರ್ಗದರ್ಶಿಗಳಿಗೆ ಉತ್ತರಿಸಿದಳು:
“ನಾನೊಬ್ಬ ಮಾನುಷಿ. ಮನುಜಧಿಪತಿಯ ಸುತೆ, ನೃಪನ ಸೊಸೆ, ಮತ್ತು ಪತಿಯನ್ನು ನೋಡಲು ಕಾತರಿಸುತ್ತಿರುವ ರಾಜಭಾರ್ಯೆ ಎಂದು ತಿಳಿಯಿರಿ. ವಿದರ್ಭರಾಜ ನನ್ನ ಪಿತ ಮತ್ತು ಅಪರಾಜಿತ ಮಹಾಭಾಗ ನಲ ಎಂಬ ಹೆಸರಿನ ನೈಷಧ ರಾಜ ನನ್ನ ಪತಿ. ಅವನನ್ನೇ ನಾನು ಅರಸುತ್ತಿರುವೆ. ನನ್ನ ಪ್ರಿಯ, ಪಾರ್ಥಿವಶಾರ್ದೂಲ, ಅಮಿತ್ರಗಣಸೂದನ, ನೃಪತಿ ನಲನನ್ನು ನೋಡಿದ್ದರೆ ಬೇಗ ಹೇಳಿ!”
ಆಗ ಶುಚಿ ಎನ್ನುವ ಆ ದೊಡ್ಡ ದಂಡಿನ ಪ್ರಭು, ದಂಡಿನ ನಾಯಕನು ಅವಳಿಗೆ ಹೇಳಿದನು:
“ಕಲ್ಯಾಣಿ! ನನ್ನ ಮಾತನ್ನು ಕೇಳು. ನಾನು ಈ ದಂಡಿನ ನಾಯಕ ಸಾರ್ಥವಾಹ. ಯಶಸ್ವಿನೀ! ನಲ ಎನ್ನುವ ಯಾರನ್ನೂ ನಾನು ನೋಡಿಲ್ಲ. ಈ ಕಷ್ಟ ವನದಲ್ಲಿ ಆನೆ, ಚಿರತೆ, ಎಮ್ಮೆ, ಹುಲಿ, ಕರಡಿ ಮತ್ತು ಜಿಂಕೆಗಳನ್ನು ನೋಡಿದ್ದೇನೆ. ಮನುಷ್ಯರು ಯಾರೂ ಇಲ್ಲಿ ವಾಸಿಸುತ್ತಿಲ್ಲ. ಯಕ್ಷರಾಜ ಮಣಿಭದ್ರನು ಮಂಗಳವನ್ನುಂಟು ಮಾಡಲಿ!”
ಅವಳು ಎಲ್ಲ ವರ್ತಕರ ದಂಡಿನ ನಾಯಕನಿಗೆ ಕೇಳಿದಳು: “ಈ ದಂಡು ಎಲ್ಲಿಗೆ ಹೋಗುತ್ತಿದೆ? ದಯವಿಟ್ಟು ಹೇಳು!”
ಸಾರ್ಥವಾಹನು ಹೇಳಿದನು:
“ಇದು ಸತ್ಯವಾದಿ ಚೇದಿರಾಜ ಸುಬಾಹುವಿನ ಸಾರ್ಥ. ಮನುಜಾತ್ಮಜೇ! ಕ್ಷಿಪ್ರವಾಗಿ ಲಾಭವನ್ನು ಪಡೆಯಲು ಆ ರಾಜ್ಯಕ್ಕೆ ಹೋಗುತ್ತಿದ್ದೇವೆ.”
ಚೇದಿನಗರದಲ್ಲಿ ದಮಯಂತಿ
ಆ ಅನವದ್ಯಾಂಗಿಯು ದಂಡಿನ ನಾಯಕನ ಮಾತುಗಳನ್ನು ಕೇಳಿ ತನ್ನ ಪತಿಯನ್ನು ಕಾಣುವ ಆಸೆಯಿಂದ ಅವನ ಜೊತೆ ನಡೆದಳು. ಕಾಲಾನಂತರದಲ್ಲಿ ಆ ವರ್ತಕರು ದಾರುಣ ಮಹಾ ವನದಲ್ಲಿ ಸರ್ವತೋಭದ್ರವಾದ, ದಡದಲ್ಲಿ ಸಾಕಷ್ಟು ಹುಲ್ಲು, ಕಟ್ಟಿಗೆ, ಫಲ-ಗಡ್ಡೆಗಳನ್ನು ಹೊಂದಿದ್ದ, ನಾನಾ ಪಕ್ಷಿಗಳು ಮತ್ತು ಪದ್ಮಸೌಗಂಧಿಕಗಳಿಂದೊಡಗೂಡಿದ ಒಂದು ವಿಶಾಲ, ರಮ್ಯ ಸರೋವರವನ್ನು ಕಂಡರು. ಸಂತೋಷವನ್ನು ನೀಡುವ ಆ ಮನೋಹರ ಶುದ್ಧ ನೀರನ್ನು ನೋಡಿ, ಪ್ರಾಣಿಗಳು ದಣಿದಿದ್ದರಿಂದ, ಅಲ್ಲೇ ತಂಗಲು ನಿರ್ಧರಿಸಿದರು. ದಂಡಿನ ನಾಯಕನ ಅನುಮತಿಯಂತೆ ಆ ಉತ್ತಮ ವನವನ್ನು ಪ್ರವೇಶಿಸಿದ ದಂಡು ಆ ರಾತ್ರಿಯನ್ನು ಅಲ್ಲೇ ಕಳೆಯಲು ತಯಾರಿಮಾಡಿತು. ಅರ್ಧರಾತ್ರಿಯ ಸಮಯದಲ್ಲಿ, ನಿಃಶಬ್ಧರಾಗಿ ದಂಡಿನ ಎಲ್ಲರೂ ಮಲಗಿರುವ ಸಮಯದಲ್ಲಿ, ಆನೆಗಳ ಗುಂಪೊಂದು ಆ ಗಿರಿನದಿಯಲ್ಲಿ ನೀರು ಕುಡಿಯಲೆಂದು ಬಂದಿತು. ಪದ್ಮಗಳಿಂದೊಡಗೂಡಿದ ಸರೋವರದ ಮಾರ್ಗವನ್ನು ತಡೆಹಿಡಿದು ಮಲಗಿದ್ದ ಆ ಉತ್ತಮ ದಂಡನ್ನು ಅವುಗಳ ಗುಂಪು ತುಳಿದಾಡಿತು. ಮತ್ತು ಮಲಗಿದ್ದವರೆಲ್ಲ ನೆಲದಮೇಲೆ ಒದ್ದಾಡತೊಡಗಿದರು. ಹಾಹಾಕಾರ ಮಾಡುತ್ತಾ ಶರಣಾರ್ಥಿಗಳಾದ ವರ್ತಕರು, ಇನ್ನೂ ನಿದ್ದೆಯಿಂದ ಕುರುಡರಾಗಿ, ಮಹತ್ತರ ಭಯದಿಂದ ತಪ್ಪಿಸಿಕೊಳ್ಳಲು ವನದಲ್ಲಿನ ಗಿಡಗಂಟಿಗಳ ಹಿಂದೆ ಓಡಿದರು. ಕೆಲವರು ದಂತಗಳಿಂದ ಸೀಳಿಹೋದರು, ಇನ್ನು ಕೆಲವರು ತುಳಿಯಲ್ಪಟ್ಟು ಹತರಾದರು. ಎತ್ತು, ಕತ್ತೆ, ಒಂಟೆ, ಕುದುರೆ ಮತ್ತು ಕಾಲ್ದಾಳುಗಳ ಸಂಕುಲವು ಭಯದಿಂದ ಓಡುತ್ತಿದ್ದಾಗ ಪರಸ್ಪರರನ್ನು ಕೊಂದು ಹಾಕಿದವು. ಘೋರವಾಗಿ ಕೂಗುತ್ತಾ ಧರಣೀತಲದಲ್ಲಿ ಬಿದ್ದರು. ಭಗ್ನವಾದ ಅಂಗಗಳಿಂದ ವೃಕ್ಷಗಳನ್ನು ಹಿಡಿದು ಕಣಿವೆಗಳಲ್ಲಿ ಬಿದ್ದರು. ಹೀಗೆ ವರ್ತಕರ ಆ ಸಮೃದ್ಧ ಮಂಡಲವೆಲ್ಲವೂ ನಿಹತವಾಯಿತು.
ಬೆಳಕು ಹರಿಯುತ್ತಿದ್ದಂತೆ ಸಾವಿನಿಂದ ಬದುಕಿದ ಜನರು ಗಿಡ ಮಟ್ಟಿಗಳಿಂದ ಹೊರಬಂದು ಎಲ್ಲರ ಹತ್ಯೆಯನ್ನು ಕಂಡು “ಸಹೋದರ! ತಂದೇ! ಪುತ್ರ! ಸಖಾ!” ಎಂದು ಶೋಕಿಸಿದರು.
“ನಾನೇನು ದುಷ್ಕೃತವನ್ನು ಮಾಡಿದ್ದೇನೆಂದು ಈ ನಿರ್ಜನ ಅರಣ್ಯದಲ್ಲಿ ಈ ಜನಸಾಗರವು ಆನೆಗಳಿಂದ ತುಳಿಯಲ್ಪಟ್ಟು ನಾಶವಾಯಿತು? ಇದು ನನ್ನ ಮಂದಭಾಗ್ಯವೇ ಸರಿ!”
ಎಂದು ಆ ವೈದರ್ಭಿಯು ಶೋಕಿಸಿದಳು.
“ನಿಸ್ಸಂಶಯವಾಗಿಯೂ ನನಗೆ ಮುಂದೆ ದುಃಖಪ್ರಾಪ್ತಿಯಾಗುವುದಿದೆ. ಅಕಾಲದಲ್ಲಿ ಮೃತ್ಯು ಪ್ರಾಪ್ತಿಯಾಗುವುದಿಲ್ಲ ಎಂದು ವೃದ್ಧರು ಹೇಳಿದುದನ್ನು ಕೇಳಿದ್ದೇನೆ. ನಾನು ಆನೆಗಳಿಂದ ತುಳಿಯಲ್ಪಟ್ಟು ಸಾಯಲಿಲ್ಲ. ಇದರಿಂದ ತಿಳಿಯುವುದೇನೆಂದರೆ, ವಿಧಿಯು ನಿಶ್ಚಯಿಸದೇ ಯಾವುದೂ ಆಗುವುದಿಲ್ಲ. ಆದರೆ ನಾನು ಬಾಲ್ಯದಲ್ಲಿಯೂ ಕರ್ಮದಲ್ಲಿಯಾಗಲೀ, ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಅಪಕೃತವನ್ನು ಮಾಡಿಲ್ಲ. ಹಾಗಿದ್ದರೆ ಈ ದುಃಖವು ಬರಲು ಕಾರಣವೇನು? ನನ್ನ ಯೋಚನೆಯಂತೆ ಸ್ವಯಂವರದಲ್ಲಿ ಸೇರಿದ್ದ ದೇವತೆ ಲೋಕಪಾಲಕರನ್ನು ನಲನಿಗೋಸ್ಕರವಾಗಿ ತಿರಸ್ಕರಿಸಿದ್ದುದಕ್ಕಾಗಿ, ಅವರ ಪ್ರಭಾವದಿಂದ ಈ ರೀತಿಯ ವಿಯೋಗ ಪ್ರಾಪ್ತಿಯಾಯಿತೇನೋ!”
ಈ ರೀತಿ ದುಃಖಿತಳಾದ ಆ ದೀನ ವರಾಂಗನೆಯು ದುಃಖಶೋಕಪರಾಯಣಳಾಗಿ ವಿಲಪಿಸುತ್ತಾ ವೇದಪಾರಂಗತ ಬ್ರಾಹ್ಮಣರೊಡಗೂಡಿ ಹೊರಟಳು. ಬಹಳ ದೂರ ಪ್ರಯಾಣಮಾಡಿದ ನಂತರ ಅವಳು ಒಂದು ದೊಡ್ಡ ಪಟ್ಟಣಕ್ಕೆ ಆಗಮಿಸಿದಳು. ಸುಬಾಹುವೂ ಸತ್ಯವಾದಿಯೂ ಆದ ಚೇದಿ ರಾಜನ ಆ ಉತ್ತಮವಾದ ಪುರವನ್ನು ಅರ್ಧವಸ್ತ್ರವನ್ನೇ ಧರಿಸಿಯೇ ಅವಳು ಪ್ರವೇಶಿಸಿದಳು. ವಿವರ್ಣಳೂ, ಕೃಶಳೂ, ದೀನಳೂ, ಬಿಚ್ಚಿದ ತಲೆಗೂದಲಿನವಳೂ, ಹೊಲಸು ತುಂಬಿದವಳೂ, ಮತ್ತು ಹುಚ್ಚಿಯಂತೆ ಹೋಗುತ್ತಿರುವ ಅವಳನ್ನು ಪುರವಾಸಿಗಳು ನೋಡಿದರು. ಚೇದಿರಾಜಪುರವನ್ನು ಪ್ರವೇಶಿಸುತ್ತಿರುವ ಅವಳನ್ನು ನೋಡಿದ ಬಾಲಕರೂ ಗ್ರಾಮಪುತ್ರರೂ ಕುತೂಹಲದಿಂದ ಅವಳನ್ನು ಹಿಂಬಾಲಿಸಿದರು. ಅವಳು ರಾಜಭವನದ ಸಮೀಪ ಹೋಗುತ್ತಿದ್ದಂತೆಯೇ ಅವರೆಲ್ಲರೂ ಅವಳನ್ನು ಸುತ್ತುವರಿದರು. ಜನರಿಂದ ಸುತ್ತುವರಿಯಲ್ಪಟ್ಟಿದ್ದ ಅವಳನ್ನು ರಾಜಮಾತೆಯು ಅರಮನೆಯ ಮೇಲ್ಗಚ್ಚಿನಿಂದ ನೋಡಿದಳು. ಉತ್ತಮ ಪೀಠದಲ್ಲಿ ಕುಳಿತಿದ್ದ ಅವಳು ವಿಸ್ಮಿತಳಾಗಿ ಜನರೆಲ್ಲರನ್ನೂ ಹಿಂದೆಸರಿಸಿ ದಮಯಂತಿಯನ್ನು ಪ್ರಶ್ನಿಸಿದಳು:
“ದುಃಖಾವಿಷ್ಟಳಾಗಿದ್ದರೂ ಸುಂದರವಾದ ದೇಹವನ್ನು ಧರಿಸಿದ್ದೀಯೆ ಮತ್ತು ಮಿಂಚಿನಿಂದೊಡಗೂಡಿದ ಮೋಡದಂತೆ ಹೊಳೆಯುತ್ತಿರುವೆ. ನೀನು ಯಾರು ಮತ್ತು ಯಾರವಳು ಎನ್ನುವುದನ್ನು ಹೇಳು! ಅಮರಪ್ರಭೆ! ಭೂಷಣಗಳಿಲ್ಲದಿದ್ದರೂ ರೂಪದಲ್ಲಿ ನೀನು ಮನುಷ್ಯಳೆಂದು ಅನ್ನಿಸುವುದಿಲ್ಲ. ಅಸಹಾಯಕಳಾಗಿದ್ದರೂ ನಿನಗೆ ಈ ಜನರ ಭಯವಾಗುತ್ತಿಲ್ಲವಲ್ಲ!”
ಅವಳ ಈ ಮಾತುಗಳನ್ನು ಕೇಳಿ ಭೈಮಿಯು ಹೇಳಿದಳು: “ಪತಿಯ ಅನುವ್ರತಳಾದ ಓರ್ವ ಮಾನುಷಿಯೆಂದು ನನ್ನನ್ನು ತಿಳಿ. ನಾನು ಇಷ್ಟವಿದ್ದಲ್ಲಿ ವಾಸಿಸುವ, ಫಲಮೂಲಗಳನ್ನು ಸೇವಿಸುವ, ಎಕಾಂಗಿ. ಸಾಯಂಕಾಲ ಎಲ್ಲಿ ಆಗುತ್ತದೆಯೋ ಅಲ್ಲಿಯೇ ಉಳಿಯುವ, ಜಾತಿಸಂಪನ್ನಳಾದ ಓರ್ವ ಸೈರಂಧ್ರೀ. ಅಸಂಖ್ಯಗುಣಿಯಾದ ನನ್ನ ಪತಿಯು ನಿತ್ಯವೂ ನನ್ನಲ್ಲಿಯೇ ಅನುವ್ರತನಾದವನು. ನಾನೂ ಕೂಡ ನನ್ನ ವೀರ ಪತಿಯನ್ನು ನೆರಳಿನಂತೆ ಹಿಂಬಾಲಿಸಿಕೊಂಡು ಬಂದಿದ್ದೇನೆ. ದುರ್ದೈವವಷಾತ್ ಅವನಿಗೆ ಜೂಜಿನಲ್ಲಿ ಅತಿಯಾದ ಚಟವಿತ್ತು. ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನು ಒಬ್ಬನೇ ಅರಣ್ಯಕ್ಕೆ ಹೊರಟುಹೋದನು. ಏಕವಸ್ತ್ರನಾಗಿ, ಹುಚ್ಚನಂತೆ ವಿಹ್ವಲನಾಗಿದ್ದ ಆ ವೀರ ಪತಿಯನ್ನು ಅನುಸರಿಸಿ ನಾನೂ ಕಾಡಿಗೆ ಬಂದೆ. ಒಂದುದಿನ ವನದಲ್ಲಿ ಹಸಿವೆಯಿಂದ ಬಳಲಿದ್ದ ಆ ವೀರನು ಯಾವುದೋ ಕಾರಣದಿಂದಾಗಿ ಅವನಲ್ಲಿದ್ದ ಒಂದು ವಸ್ತ್ರವನ್ನೂ ಕಳೆದುಕೊಂಡನು. ಆ ನಗ್ನ, ಉನ್ಮತ್ತ, ಅರಿವನ್ನೇ ಕಳೆದುಕೊಂಡಿದ್ದ ಏಕವಸ್ತ್ರಧಾರಿಯನ್ನು ಅನುಸರಿಸುತ್ತಾ ಬಹಳಷ್ಟು ರಾತ್ರಿಗಳು ನಾನು ನಿದ್ದೆಯನ್ನೇ ಮಾಡಲಿಲ್ಲ. ಬಹುದಿನಗಳ ನಂತರ ಯಾವಾಗಲೋ ಒಮ್ಮೆ ನಾನು ನಿದ್ದೆಮಾಡುತ್ತಿರುವಾಗ ನನ್ನ ವಸ್ತ್ರವನ್ನು ಅರ್ಧ ಕತ್ತರಿಸಿ ಅದನ್ನೇ ಸುತ್ತಿಕೊಂಡು ತಪ್ಪನ್ನೇನೂ ಮಾಡಿರದ ನನ್ನನ್ನು ಬಿಟ್ಟು ಹೊರಟು ಹೋದನು. ನನ್ನ ಮನಸ್ಸು ದಹಿಸುತ್ತಿದ್ದಂತೆ ದಿನ ರಾತ್ರಿಯೂ ಪತಿಯನ್ನು ಹುಡುಕುತ್ತಿದ್ದೇನೆ. ಆದರೆ ನನ್ನ ಪ್ರಿಯನನ್ನು, ಪ್ರಾಣಧನೇಶ್ವರನನ್ನು ಕಾಣದಾಗಿದ್ದೇನೆ.”
ಅಶೃಪರಿಪೂರ್ಣಾಕ್ಷಿಯಾಗಿ ಬಹುವಾಗಿ ವಿಲಪಿಸುತ್ತಿದ್ದ ಆರ್ತ ಭೈಮಿಗೆ ತಾನೇ ಸ್ವತಃ ದುಃಖದಲ್ಲಿದ್ದಾಳೋ ಎನ್ನುವಂಥೆ ರಾಜಮಾತೆಯು ಹೇಳಿದಳು:
“ಕಲ್ಯಾಣಿ! ನೀನು ನನ್ನಲ್ಲಿಯೇ ಇರು. ನಿನ್ನ ವರ್ತನೆಯಿಂದ ನಾನು ಸಂತೋಷಗೊಂಡಿದ್ದೇನೆ. ನನ್ನ ಪುರುಷರು ನಿನ್ನ ಪತಿಯನ್ನು ಹುಡುಕುವರು. ಅಥವಾ ತಾನಾಗಿಯೇ ಇಲ್ಲಿ ಅಲ್ಲಿ ಸುತ್ತಾಡುತ್ತಾ ಅವನೇ ಇಲ್ಲಿಗೆ ಬರಬಹುದು. ನೀನು ಇಲ್ಲಿ ವಾಸಿಸುತ್ತಿರುವಾಗಲೇ ನಿನ್ನ ಪತಿಯನ್ನು ಪುನಃ ಹೊಂದುವೆ.”
ರಾಜಮಾತೆಯ ವಚನಗಳನ್ನು ಕೇಳಿ ದಮಯಂತಿಯು ಹೇಳಿದಳು:
“ವೀರಮಾತೆ! ನಿನ್ನಲ್ಲಿ ನಾನು ಇರುತ್ತೇನೆ. ಆದರೆ ಕೆಲವು ನಿಯಮಗಳಡಿಯಲ್ಲಿ! ನಾನು ಎಂಜಲನ್ನು ತಿನ್ನುವುದಿಲ್ಲ, ಬೇರೆಯವರ ಪಾದಗಳನ್ನು ತೊಳೆಯುವುದಿಲ್ಲ, ಮತ್ತು ಅನ್ಯ ಪುರುಷರೊಂದಿಗೆ ಎಂದೂ ಮಾತನಾಡುವುದಿಲ್ಲ. ಯಾರಾದರೂ ನನ್ನಜೊತೆ ಸರಿಯಾಗಿ ವರ್ತಿಸದೇ ಇದ್ದರೆ ಅವರಿಗೆ ಸರಿಯಾದ ದಂಡವು ದೊರೆಯಬೇಕು. ಆದರೆ, ಪತಿಯನ್ನು ಅನ್ವೇಷಿಸುವ ಸಲುವಾಗಿ ನಾನು ಬ್ರಾಹ್ಮಣರನ್ನು ಕಾಣುತ್ತೇನೆ. ಈ ರೀತಿ ಮಾಡುವುದು ಸಾದ್ಯವಾದರೆ ನಾನು ಇಲ್ಲಿ ವಾಸಿಸುವುದಕ್ಕೆ ಸಂಶಯವೇ ಇಲ್ಲ. ಅನ್ಯಥಾ ನನಗೆ ಇಲ್ಲಿ ವಾಸಿಸಲು ಸ್ವಲ್ಪವೂ ಮನಸ್ಸಿಲ್ಲ.”
ಪ್ರಹೃಷ್ಟಮನಸಳಾದ ರಾಜಮಾತೆಯು ಅವಳಿಗೆ ಹೇಳಿದಳು:
“ನಿನ್ನ ವ್ರತದ ನಿಯಮಗಳ ತಕ್ಕಂತೆ ಎಲ್ಲವನ್ನೂ ಮಾಡುತ್ತೇನೆ.”
ಭೈಮಿಗೆ ಈ ರೀತಿ ಹೇಳಿದ ನಂತರ ರಾಜಮಾತೆಯು ಸುನಂದ ಎಂಬ ಹೆಸರಿನ ತನ್ನ ಮಗಳಿಗೆ ಹೇಳಿದಳು:
“ಸುನಂದ! ಈ ದೇವರೂಪಿಣಿಯು ನಿನ್ನ ಸೈರಂಧ್ರಿಯಾಗಿ ಇರುವಳು, ಗುರುತಿಟ್ಟುಕೋ. ಇವಳೊಂದಿಗೆ ಯಾವ ಉದ್ವೇಗವೂ ಇಲ್ಲದೇ ಸ್ವತಃ ಆನಂದವಾಗಿರು!”
ನಲ-ಕಾರ್ಕೋಟಕ
ದಮಯಂತಿಯನ್ನು ತೊರೆದ ರಾಜ ನಲನು ಗಹನ ವನದಲ್ಲಿ ಉರಿಯುತ್ತಿರುವ ಒಂದು ದೊಡ್ಡ ಕಾಡ್ಗಿಚ್ಚನ್ನು ಕಂಡನು. ಕಿಚ್ಚಿನ ಮಧ್ಯದಿಂದ “ನಲ! ಇಲ್ಲಿಗೆ ಬಾ! ಪುಣ್ಯಶ್ಲೋಕ! ಬಾ!” ಎಂದು ಯಾವುದೋ ಜೀವಿಯು ಪುನಃ ಪುನಃ ಕರೆಯುವ ಶಬ್ಧವನ್ನು ಕೇಳಿದನು. “ಭಯಪಡಬೇಡ!” ಎಂದು ಕೂಗಿ ಹೇಳುತ್ತಾ ನಲನು ಆ ಅಗ್ನಿಯನ್ನು ಪ್ರವೇಶಿಸಿ, ಮಧ್ಯದಲ್ಲಿ ಸುರುಳಿಸುತ್ತಿ ಮಲಗಿದ್ದ ನಾಗರಾಜನನ್ನು ಕಂಡನು. ಆಗ ಆ ನಾಗವು ತರತರಿಸುತ್ತಾ ಅಂಜಲೀಬದ್ಧನಾಗಿ ನಲನನ್ನುದ್ದೇಶಿಸಿ ಮಾತನಾಡಿತು:
“ನೃಪ! ನನ್ನನ್ನು ನಾಗರಾಜ ಕಾರ್ಕೋಟಕನೆಂದು ತಿಳಿ. ಮಹಾತಪ ಮುಗ್ಧ ಬ್ರಾಹ್ಮಣನೊಬ್ಬನನ್ನು ನಾನು ಹಿಡಿದಿದ್ದೆ. ಕೋಪವಶನಾದ ಅವನಿಂದ ಶಪಿತನಾಗಿದ್ದೇನೆ. ಅವನ ಶಾಪದಿಂದಾಗಿ ಈ ಜಾಗದಿಂದ ಸ್ವಲ್ಪ ದೂರ ಚಲಿಸಲೂ ಅಶಕ್ಯನಾಗಿದ್ದೇನೆ. ನೀನು ನನ್ನನ್ನು ಉಳಿಸಿದರೆ, ನಿನಗೆ ಶ್ರೇಯಸ್ಸಾಗುವ ಉಪದೇಶವನ್ನು ನೀಡುತ್ತೇನೆ. ನಿನ್ನ ಸಖನಾಗಿರುವೆ. ನನ್ನಂತಹ ಪನ್ನಗವು ಇನ್ನೊಂದಿಲ್ಲ. ನಿನಗಾಗಿ ನಾನು ಹಗುರವಾಗುತ್ತೇನೆ. ಶೀಘ್ರವಾಗಿ ನನ್ನನ್ನು ಎತ್ತಿಕೊಂಡು ಹೋಗು!”
ಹೀಗೆ ಹೇಳಿದ ಆ ನಾಗೇಂದ್ರನು ಅಂಗುಷ್ಠಮಾತ್ರದಂತಾದನು. ನಲನು ಅವನನ್ನು ಎತ್ತಿ ಬೆಂಕಿಯು ಇಲ್ಲದೇ ಇರುವ ಸ್ಥಳಕ್ಕೆ ಕೊಂಡೊಯ್ದನು. ಸುಟ್ಟ ಕರಿಯಿಲ್ಲದೇ ಇರುವ ಜಾಗಕ್ಕೆ ಬಂದು ಆ ನಾಗನನ್ನು ಕೆಳಗಿಡುವಷ್ಟರಲ್ಲಿಯೇ ಕಾರ್ಕೋಟಕನು ಪುನಃ ಹೇಳಿದನು:
“ನಿಷಾಧ! ಹೆಜ್ಜೆಗಳನ್ನು ಎಣಿಸುತ್ತಾ ಇನ್ನೂ ಸ್ವಲ್ಪ ಮುಂದೆ ಹೋಗು. ಮಹಾರಾಜ! ಅಲ್ಲಿ ನಿನಗೆ ಪರಮ ಶ್ರೇಯವಾದದ್ದನ್ನು ಕೊಡುತ್ತೇನೆ.”
ಎಣಿಸುತ್ತಿದ್ದಂತೆಯೇ, ಹತ್ತನೇ ಹೆಜ್ಜೆಯಲ್ಲಿ ನಾಗನು ನಲನನ್ನು ಕಚ್ಚಿಬಿಟ್ಟನು. ಕಚ್ಚಿದಾಕ್ಷಣ ರೂಪವು ಕ್ಷಣದಲ್ಲಿ ಬದಲಾಗಿ ಹೋಯಿತು. ಮಹೀಪತಿ ನಲನು ತಾನು ವಿಕೃತನಾಗಿರುವುದನ್ನು ನೋಡಿ ವಿಸ್ಮಿತನಾಗಿ ನಿಂತನು ಮತ್ತು ಸ್ವರೂಪಧಾರಣ ಮಾಡಿದ ನಾಗನನ್ನು ನೋಡಿದನು. ಆಗ ನಾಗ ಕಾರ್ಕೋಟಕನು ನಲನನ್ನು ಸಂತವಿಸುತ್ತಾ ಹೇಳಿದನು:
“ಜನರು ನಿನ್ನನ್ನು ಗುರುತಿಸಬಾರದೆಂದು ನಾನು ನಿನ್ನ ರೂಪವನ್ನು ಅಪಹರಿಸಿದ್ದೇನೆ. ನಲ! ಯಾರಿಂದ ನೀನು ಈ ಮಹಾ ದುಃಖವನ್ನು ಅನುಭವಿಸುತ್ತಿದ್ದೀಯೋ, ಯಾರು ನಿನ್ನ ದೇಹದಲ್ಲಿ ವಾಸಿಸುತ್ತಿದ್ದನೋ ಅವನು ನನ್ನ ಈ ವಿಷದಿಂದ ದುಃಖವನ್ನು ಅನುಭವಿಸುತ್ತಾನೆ. ಎಲ್ಲಿಯವರೆಗೆ ನಿನ್ನನ್ನು ಬಿಡುವುದಿಲ್ಲವೋ ಅಲ್ಲಿಯ ವರೆಗೆ ಅವನು ನಿನ್ನಲ್ಲಿದ್ದು ದೇಹವನ್ನೆಲ್ಲಾ ಆವರಿಸಿರುವ ಈ ವಿಷದಿಂದ ದುಃಖಿತನಾಗಿರುವನು. ಕ್ರೋಧ ಅಸೂಯೆಗೊಳಗಾಗಿ ಯಾರು ಮುಗ್ಧನೂ ಕಷ್ಟಗಳಿಗೆ ಅನರ್ಹನೂ ಆದ ನಿನಗೆ ಮೋಸಮಾಡಿದನೋ ಅವನಿಂದ ನಿನ್ನನ್ನು ನಾನು ರಕ್ಷಿಸುತ್ತೇನೆ. ನನ್ನ ವರದಿಂದ ನೀನು ಯಾವ ಮೃಗಗಳಿಂದಲೂ, ಶತೃಗಳಿಂದಲೂ ಮತ್ತು ಬ್ರಹ್ಮವಿದರಿಂದಲೂ ಭಯಪಡಬೇಕಾಗಿಲ್ಲ. ಈ ವಿಷದಿಂದಾಗಿ ನಿನಗೆ ಯಾವುದೇ ರೀತಿಯ ಪೀಡೆಯೂ ಆಗುವುದಿಲ್ಲ. ಸಂಗ್ರಾಮಗಳಲ್ಲಿ ನೀನು ಯಾವತ್ತೂ ಜಯವನ್ನು ಗಳಿಸುವೆ. ನೀನೊಬ್ಬ ಬಾಹುಕ ಎಂಬ ಹೆಸರಿನ ಸೂತ ಎಂದು ಹೇಳಿಕೊಂಡು ಇಲ್ಲಿಂದ ಅಕ್ಷವಿದ್ಯ ನಿಪುಣನಾದ ಋತುಪರ್ಣನೆಡೆಗೆ ಹೋಗು. ನಿಷಧೇಶ್ವರ! ರಮ್ಯ ಅಯೋಧ್ಯಾ ನಗರಿಗೆ ಇಂದೇ ಹೊರಡು. ಆ ರಾಜನು ನಿನ್ನ ಅಶ್ವನೈಪುಣ್ಯತೆಗೆ ಬದಲಾಗಿ ನಿನಗೆ ಅಕ್ಷ ನೈಪುಣ್ಯತೆಯನ್ನು ನೀಡುತ್ತಾನೆ. ಆ ಶ್ರೀಮಾನ್ ಇಕ್ಷ್ವಾಕುಕುಲಜನು ನಿನ್ನ ಮಿತ್ರನಾಗುತ್ತಾನೆ. ಯಾವಾಗ ನೀನು ಅಕ್ಷ ವಿದ್ಯೆಯನ್ನು ಪಡೆಯುತ್ತೀಯೋ ಆ ನಂತರ ಶ್ರೇಯಸ್ಸು, ಪತ್ನಿ, ರಾಜ್ಯ ಮತ್ತು ಮಕ್ಕಳೀರ್ವರನ್ನೂ ಪುನಃ ಪಡೆಯುತ್ತೀಯೆ. ನಿನ್ನ ಮನಸ್ಸಿನಿಂದ ಶೋಕವನ್ನು ಹೊರಹಾಕು. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಯಾವಾಗ ನಿನಗೆ ನಿನ್ನ ಸ್ವರೂಪವನ್ನು ಪಡೆಯಲು ಮನಸ್ಸಾಗುತ್ತದೆಯೋ ಅವಾಗ ನನ್ನನ್ನು ನೆನಪಿಸಿಕೋ ಮತ್ತು ಈ ವಸ್ತ್ರವನ್ನು ಧರಿಸು. ಈ ವಸ್ತ್ರವನ್ನು ಧರಿಸಿದ ಕೂಡಲೇ ನೀನು ನಿನ್ನ ಸ್ವರೂಪವನ್ನು ಪುನಃ ಹೊಂದುತ್ತೀಯೆ!”
ಹೀಗೆ ಹೇಳಿ ಒಂದು ಜೊತೆ ದಿವ್ಯವಸ್ತ್ರಗಳನ್ನು ಅವನಿಗಿತ್ತನು. ಈ ರೀತಿ ನಲನಿಗೆ ಆದೇಶ ಮತ್ತು ವಸ್ತ್ರಗಳನ್ನಿತ್ತು ಆ ನಾಗರಾಜನು ಅಲ್ಲಿಯೇ ಅಂತರ್ಧಾನನಾದನು.
ನಲ ವಿಲಾಪ
ಈ ರೀತಿ ನಾಗವು ಅಂತರ್ಧಾನನಾದ ನಂತರ ನೈಷಧ ನಲನು ಹೊರಟು ಹತ್ತು ದಿನಗಳ ನಂತರ ಋತುಪರ್ಣನ ನಗರವನ್ನು ಪ್ರವೇಶಿಸಿದನು. ಅವನು ರಾಜನ ಬಳಿ ಹೋಗಿ ಹೇಳಿದನು:
“ನಾನು ಬಾಹುಕ! ಅಶ್ವಗಳನ್ನು ಓಡಿಸುವುದರಲ್ಲಿ ನನ್ನ ಸರಿಸಾಟಿಯಾದ ಇನ್ನೊಬ್ಬನು ಈ ಪೃಥ್ವಿಯಲ್ಲಿಯೇ ಇಲ್ಲ. ಎಲ್ಲ ಕಷ್ಟಗಳಲ್ಲಿ, ನೈಪುಣ್ಯತೆ ಬೇಕಾಗುವ ವಿಷಯಗಳಲ್ಲಿ ನನ್ನ ಸಲಹೆಯನ್ನು ಪಡೆಯಬಹುದು. ಎಲ್ಲದಕ್ಕೂ ವಿಶೇಷವಾಗಿ ನಾನು ಅಡುಗೆ ಮಾಡುವುದನ್ನೂ ತಿಳಿದಿದ್ದೇನೆ. ಇನ್ನೂ ಇತರ ಕುಶಲ ಮತ್ತು ದುಷ್ಕರ ಕರ್ಮಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ. ಋತುಪರ್ಣ! ನನ್ನನ್ನು ನಿನ್ನಲ್ಲಿ ಇರುಸಿಕೋ.”
ಋತುಪರ್ಣನು ಹೇಳಿದನು:
“ಬಾಹುಕ! ನೀನು ಇಲ್ಲಿಯೇ ಇರು. ನಿನಗೆ ಮಂಗಳವಾಗಲಿ. ಈ ಎಲ್ಲ ಕೆಲಸಗಳನ್ನೂ ನೀನು ಮಾಡಬಹುದು. ನನಗೆ ಯಾವಾಗಲೂ ವೇಗವಾಗಿ ಪ್ರಯಾಣಮಾಡಲು ವಿಶೇಷ ಅಭಿರುಚಿಯಿದೆ. ನನ್ನ ಕುದುರೆಗಳು ಶೀಘ್ರವಾಗಿ ಓಡುವಹಾಗೆ ತಯಾರಿ ಮಾಡು. ನೀನು ನನ್ನ ಅಶ್ವಾಧ್ಯಕ್ಷನಾಗಿರು ಮತ್ತು ನಿನ್ನ ವೇತನವು ನೂರು ನೂರು. ವಾರ್ಷ್ಣೇಯ ಮತ್ತು ಜೀವಲರು ಇಂದಿನಿಂದ ನಿತ್ಯವೂ ನಿನ್ನ ಜೊತೆಯಲ್ಲಿಯೇ ಕೆಲಸಮಾಡುವರು. ನೀನು ಅವರೊಂದಿಗೆ ರಮಿಸುತ್ತಾ ನನ್ನಲ್ಲಿಯೇ ವಾಸವಾಗಿರು.”
ಹೀಗೆ ಹೇಳಲ್ಪಟ್ಟ ನಲನು ಅಲ್ಲಿಯೇ ಋತುಪರ್ಣನ ನಗರಿಯಲ್ಲಿ ವಾರ್ಷ್ಣೇಯ ಜೀವಲರೊಂದಿಗೆ ಸತ್ಕಾರಗೊಂಡು ವಾಸಿಸುತ್ತಿದ್ದನು. ಅಲ್ಲಿ ವಾಸಿಸುತ್ತಿರುವಾಗ ರಾಜನು ವೈದರ್ಭಿಯ ಕುರಿತು ಚಿಂತಿಸುತ್ತಲೇ ಇದ್ದನು ಮತ್ತು ಯಾವಾಗಲೂ ಪ್ರತಿ ಸಂಜೆ ಈ ಒಂದು ಶ್ಲೋಕವನ್ನು ಹೇಳುತ್ತಿದ್ದನು:
“ಹಸಿವೆ ಬಾಯಾರಿಕೆಗಳಿಂದ ಬಳಲಿರುವ ತಪಸ್ವಿನೀ! ನೀನು ಎಲ್ಲಿ ಮಲಗಿರಬಹುದು? ಆ ಮಂದಬುದ್ಧಿಯನ್ನು ಸ್ಮರಿಸುತ್ತಾ ನೀನು ಯಾರ ಸೇವೆಯನ್ನು ಮಾಡುತ್ತಿರುವೆ?”
ರಾತ್ರಿವೇಳೆಯಲ್ಲಿ ಹೀಗೆ ಹೇಳುತ್ತಿದ್ದ ರಾಜನಲ್ಲಿ ಜೀವಲನು ಕೇಳಿದನು:
“ಬಾಹುಕ! ನಿತ್ಯವೂ ಯಾರ ಕುರಿತು ಶೋಕಿಸುತ್ತಿದ್ದೀಯೆ ಎಂದು ತಿಳಿಯಲು ಬಯಸುತ್ತೇನೆ.”
ರಾಜ ನಲನು ಅವನಿಗೆ ಹೇಳಿದನು:
“ಯಾವನೋ ಒಬ್ಬ ನಾರಿಯ ಮಂದಪ್ರಜ್ಞ ಪತಿಯು ಅವಳ ಕುರಿತು ಬಹಳಷ್ಟು ಚಿಂತಿಸುತ್ತಿದ್ದ. ಯಾವುದೋ ಕಾರಣದಿಂದ ಆ ಮಂದಬುದ್ಧಿಯು ಅವಳಿಂದ ಬೇರೆಯಾದನು ಮತ್ತು ಅಗಲಿದ ಆ ಮಂದಾತ್ಮನು ದುಃಖಪೀಡಿತನಾಗಿ ಹೀಗೆ ಭ್ರಮಿಸುತ್ತಿರುವನು. ಅವಳಿಲ್ಲದೇ ದಿನ ರಾತ್ರಿ ಶೋಕದಿಂದ ದಹಿಸುತ್ತಿದ್ದ ಅವನು ಸಾಯಂಕಾಲದಲ್ಲಿ ಅವಳನ್ನು ಸ್ಮರಿಸುತ್ತಾ ಒಂದು ಶ್ಲೋಕವನ್ನು ಹಾಡುವನು. ಭೂಮಿಯನ್ನೆಲ್ಲಾ ತಿರುಗಿ ಅವನಿಗೆ ಎಲ್ಲಿಯೋ ಏನೋ ದೊರಕಿತು. ಅಲ್ಲಿ ಅನರ್ಹನಾದ ಅವನು ದುಃಖಿಸುತ್ತಾ ಅವಳನ್ನು ಯಾವಾಗಲೂ ಸ್ಮರಿಸುತ್ತಿರುವನು. ಆ ನಾರಿಯಾದರೂ ಅಪಾಯಕಾರಿಯಾದ ವನಕ್ಕೂ ಆ ಪುರುಷನನ್ನು ಹಿಂಬಾಲಿಸಿದಳು. ಆ ಅಲ್ಪಪುಣ್ಯದವನಿಂದ ತ್ಯಜಿಸಲ್ಪಟ್ಟ ಅವಳು ಜೀವಂತವಿರುವುದೇ ದುಷ್ಕರ. ಅವಳು ಒಂಟಿ ಬಾಲಕಿ. ಮಾರ್ಗಗಳನ್ನು ತಿಳಿಯದವಳು. ವಿಷಯಗಳಲ್ಲಿ ಅನುಭವವಿಲ್ಲದವಳು. ಹಸಿದವಳು. ಬಾಯಾರಿದವಳು. ಅಂಥವಳು ಇನ್ನೂ ಜೀವಂತವಿರುವುದು ದುಷ್ಕರ. ನಿತ್ಯವೂ ಪ್ರಾಣಿಗಳು ಓಡಾಡುತ್ತಿರುವ ಅತಿ ದಾರುಣ ವನದಲ್ಲಿ ಅವಳ ಅಲ್ಪಪುಣ್ಯ, ಮಂದಪ್ರಜ್ಞ ಪತಿಯಿಂದ ತ್ಯಕ್ತಳಾದಳು.”
ಈ ರೀತಿ ರಾಜ ನೈಷಧನು ದಮಯಂತಿಯನ್ನು ಅನುಸ್ಮರಿಸುತ್ತಾ ರಾಜನ ನಿವೇಶನದಲ್ಲಿ ಅಜ್ಞಾತವಾಸವನ್ನು ವಾಸಿಸಿದನು.
ದಮಯಂತೀ-ಸುದೇವ ಸಂವಾದ
ರಾಜ್ಯವನ್ನು ಕಳೆದುಕೊಂಡ ನಲನು ಭಾರ್ಯೆ ಸಹಿತ ಹೊರಟುಹೋದ ನಂತರ ಭೀಮನು ನಲನನ್ನು ಹುಡುಕಲೋಸುಗ ದ್ವಿಜರನ್ನು ಕಳುಹಿಸಿದನು. ಪುಷ್ಕಳ ಧನವನ್ನಿತ್ತು ಭೀಮನು ಅವರಿಗೆ ಆದೇಶವನ್ನಿತ್ತನು:
“ನಲ ಮತ್ತು ನನ್ನ ಮಗಳು ದಮಯಂತಿಯನ್ನು ಹುಡುಕಿ. ಈ ಕಾರ್ಯವು ಸಂಪನ್ನವಾದ ನಂತರ, ನಿಷಾಧಾಧಿಪತಿಯನ್ನು ಕಂಡುಹಿಡಿದಲ್ಲಿ ಯಾರು ಅವರನ್ನು ಇಲ್ಲಿಗೆ ಕರೆತರುತ್ತೀರೋ ಅವರಿಗೆ ಸಹಸ್ರ ಗೋವುಗಳನ್ನು ಕೊಡುತ್ತೇನೆ. ಮತ್ತು ಅವನಿಗೆ ನಗರಕ್ಕೆ ಸಮನಾದ ದೊಡ್ಡ ಗ್ರಾಮವನ್ನು ಅಗ್ರಹಾರವನ್ನಾಗಿ ಕೊಡುತ್ತೇನೆ. ಒಂದುವೇಳೆ ದಮಯಂತಿ ಮತ್ತು ನಲರನ್ನು ಇಲ್ಲಿಗೆ ಕರೆತರಲು ಸಾಧ್ಯವಾಗದಿದ್ದರೆ ಅವರನ್ನು ಪತ್ತೆಮಾಡಿದರೂ ಸಾಕು ಅಂಥವನಿಗೆ ಸಾವಿರ ಗೋಧನವನ್ನು ಕೊಡುತ್ತೇನೆ.”
ಈ ರೀತಿ ಆದೇಶಗೊಂಡ ಬ್ರಾಹ್ಮಣರು ಸಂತೋಷದಿಂದ ನೈಷಧ ಮತ್ತು ಅವನ ಪತ್ನಿಯನ್ನು ಅರಸುತ್ತಾ ಎಲ್ಲ ದಿಕ್ಕುಗಳಿಗೂ ಹೊರಟರು.
ಸುದೇವ ಎಂಬ ಹೆಸರಿನ ದ್ವಿಜನೊಬ್ಬನು ಅವರನ್ನು ಹುಡುಕುತ್ತಾ ರಮ್ಯ ಚೇದಿಪುರಿಗೆ ಬಂದು ಅಲ್ಲಿ ಅರಮನೆಯಲ್ಲಿ ರಾಜನ ಪುಣ್ಯಾಹವಾಚನದಲ್ಲಿ ಸುನಂದಳ ಪಕ್ಕದಲ್ಲಿ ನಿಂತಿರುವ, ತನ್ನ ಅಪ್ರತಿಮ ರೂಪದಿಂದ ಧೂಮ ಆವರಿಸಿದ ಸೂರ್ಯನ ಕಿರಣಗಳಂತೆ ಮಂದವಾಗಿ ಪ್ರಖರಿಸುತ್ತಿರುವ ವೈದರ್ಭಿಯನ್ನು ನೋಡಿದನು. ಬಹಳಷ್ಟು ಮಲಿನಳೂ ಕೃಶಳೂ ಆಗಿದ್ದ ಆ ವಿಶಾಲಾಕ್ಷಿಯನ್ನು ನೋಡಿ, ಹಲವಾರು ಕಾರಣಗಳನ್ನು ಕೊಡುತ್ತಾ ಅವಳು ಭೈಮಿಯೇ ಇರಬಹುದೆಂದು ತರ್ಕಿಸಿದನು. ಸುದೇವನು ಹೇಳಿದನು:
“ಈ ಅಂಗನೆಯು ರೂಪದಲ್ಲಿ ನಾನು ಹಿಂದೆ ನೋಡಿದವಳ ಹಾಗೆಯೇ ಇದ್ದಾಳೆ. ಈಗ ನಾನು ಈ ಲೋಕಕಾಂತೆ ಶ್ರೀಯನ್ನು ನೋಡಿ ಕೃತಾರ್ಥನಾದೆ. ಅವಳ ಮುಖವು ಪೂರ್ಣಚಂದ್ರನಂತಿದೆ. ಮೈ ಶ್ಯಾಮ ವರ್ಣ. ಅವಳ ಸ್ತನಗಳು ಸುಂದರವಾಗಿ ದುಂಡಾಗಿವೆ. ದೇವಿಯಂತೆ ತನ್ನ ಪ್ರಭೆಯಿಂದ ಸರ್ವ ದಿಶೆಗಳನ್ನೂ ಕತ್ತಲೆಯಿಲ್ಲದಂತೆ ಮಾಡುತ್ತಿದ್ದಾಳೆ. ಕಣ್ಣುಗಳು ಪದ್ಮ ಅಥವಾ ಪಲಾಶ ಪತ್ರಗಳಂತಿವೆ. ಮನ್ಮಥನ ರತಿಯಂತಿದ್ದಾಳೆ. ಜಗತ್ತಿನಲ್ಲಿ ಸರ್ವರಿಗೂ ಇಷ್ಟವಾಗುವ ಪೂರ್ಣಚಂದ್ರನ ಬೆಳಕಿನಂತೆ ಇದ್ದಾಳೆ. ದೈವ ದೋಷದಿಂದ ವಿದರ್ಭವೆಂಬ ಸರೋವರದಿಂದ ಎಳೆದು ಕಿತ್ತಂತೆ ಇದ್ದಾಳೆ. ಧೂಳು ತುಂಬಿದ ಎಸಳಿನಂತ ದೇಹವುಳ್ಳವಳಾಗಿದ್ದಾಳೆ. ಕೆಸರಿನಿಂದ ತುಂಬಿದ ಕಮಲದ ದಂಟಿನಂತಿದ್ದಾಳೆ. ಪೂರ್ಣಿಮೆಯ ರಾತ್ರಿ ರಾಹುಗ್ರಸ್ತನಾದ ನಿಶಾಕರನಂತೆ ತೋರುತ್ತಿದ್ದಾಳೆ. ಪತಿಶೋಕಸಂತಪ್ತಳಾಗಿ, ದೀನಳಾಗಿ ಬತ್ತಿಹೋದ ನದಿಯಂತಿದ್ದಾಳೆ. ಎಸಳುಗಳು ವಿಧ್ವಸ್ತವಾದ ಕಮಲಗಳಿಂದೊಡಗೂಡಿದ, ಪಕ್ಷಿಗಳನ್ನು ಓಡಿಸಿದ, ಆನೆಗಳ ಸೊಂಡಿಲುಗಳಿಂದ ಕೆಸರೆಲ್ಲ ಮೇಲೆಬಂದಿದ್ದ, ವ್ಯಾಕುಲಗೊಂಡ ಪದ್ಮಿನಿಯಂತೆ ತೋರುತ್ತಿದ್ದಾಳೆ. ಸುಕುಮಾರಿಯೂ, ಸುಜಾತಾಂಗಿಯೂ, ರತ್ನಗಳಿಂದ ತುಂಬಿದ ಮನೆಯಲ್ಲಿರಲು ಯೋಗ್ಯಳೂ ಆದ ಇವಳು ಬಹಳ ಬೇಗನೆಯೇ ಕಿತ್ತು ತೆಗೆದ ಕಮಲವು ಉಷ್ಣದಿಂದ ಬಾಡುವಂತೆ ಬಾಡುತ್ತಿದ್ದಾಳೆ. ರೂಪ ಔದಾರ್ಯ ಗುಣಗಳಿಂದೊಡಗೂಡಿದ ಅವಳು ಆಭರಣಗಳಿಗೆ ಅರ್ಹಳಾದರೂ ಆಭರಣಗಳಿಲ್ಲ; ಆಕಾಶದಲ್ಲಿ ಮೋಡಕವಿದ ಚಂದ್ರಲೇಖೆಯಂತಿದ್ದಾಳೆ. ಪ್ರಿಯ ಕಾಮಭೋಗಗಳಿಂದ, ಬಂಧುಜನರಿಂದ ವಂಚಿತಳಾದ ಇವಳು ಪತಿಯ ದರ್ಶನಾಕಾಂಕ್ಷಿಯಾಗಿ ದೀನ ದೇಹವನ್ನು ಧರಿಸಿದ್ದಾಳೆ. ಭೂಷಣಗಳಿಲ್ಲದ ನಾರಿಗೆ ಪತಿಯೇ ಅತಿ ಉತ್ತಮ ಭೂಷಣ. ಇದು ಇಲ್ಲದೇ ಅವಳು ಎಷ್ಟು ಶೋಭನೆಯಾಗಿದ್ದರೂ ಶೋಭಿಸುವುದಿಲ್ಲ. ನಲನಿಗಾದರೂ ಇವಳಿಲ್ಲದೇ ಇರುವುದು ದುಷ್ಕರವಾಗಿರಬಹುದು - ಅವನು ಇನ್ನೂ ದೇಹವನ್ನು ಧರಿಸಿದ್ದಾನೆಯೋ ಅಥವಾ ಶೋಕದಿಂದ ಅವಸೀನನಾಗಿದ್ದಾನೋ? ಶತಪತ್ರಾಯತಾಕ್ಷಿ ಅಸಿತಕೇಶಳಾದ ಇವಳು ಇಲ್ಲಿದ್ದಾಳೆ. ಸುಖಾರ್ಹಳಾದ ಇವಳು ದುಖಿಯಾಗಿರುವುದನ್ನು ನೋಡಿ ನನ್ನ ಮನಸ್ಸಿಗೂ ವ್ಯಥೆಯಾಗುತ್ತಿದೆ. ಆದರೆ ಈ ಶುಭೆ ಸಾದ್ವಿಯು ಯಾವಾಗ ರೋಹಿಣಿಯು ಶಶಿಯನ್ನು ಸೇರುವಂತೆ ಪತಿಯನ್ನು ಸಮಾಗಮಿಸಿ ದುಃಖದ ಆ ದಡವನ್ನು ಸೇರುತ್ತಾಳೋ! ಇವಳನ್ನು ಪುನಃ ಪಡೆದ ನೈಷಧನು ನಿಃಸಂದೇಹವಾಗಿ ಹರ್ಷಿತನಾಗುವನು ಮತ್ತು ರಾಜ್ಯಭ್ರಷ್ಟನಾದ ಆ ರಾಜನು ಮೇದಿನಿಯನ್ನು ಪುನಃ ಪಡೆಯುವನು. ಶೀಲ ಮತ್ತು ವಯಸ್ಸಿನಲ್ಲಿ ಇಬ್ಬರೂ ಸರಿಸಮಾನರಾಗಿದ್ದಾರೆ; ಅಭಿಜನಸಂಯುತದಲ್ಲಿಯೂ ಸರಿಸಮಾನರಾಗಿದ್ದಾರೆ. ನೈಷಧನು ವೈದರ್ಭಿಗೆ ಅರ್ಹನಾದವನು ಮತ್ತು ಈ ಅಸಿತೇಕ್ಷಣೆಯು ಅವನಿಗೆ ಅರ್ಹಳು. ಪತಿದರ್ಶನಕ್ಕೆಂದು ಕಾತರಳಾದ ಆ ಅಪ್ರಮೇಯ ವೀರ ಸತ್ವವತನ ಪತ್ನಿಯನ್ನು ಸಂತಯಿಸುವುದು ನನಗೆ ಯುಕ್ತವಾದದ್ದು. ಪೂರ್ಣಚಂದ್ರನಂತೆ ಮುಖವುಳ್ಳ, ಪೂರ್ವದಲ್ಲಿ ದುಃಖವನ್ನೇ ಕಂಡಿರದ, ಈಗ ದುಃಖಾರ್ತಳಾದ, ಧ್ಯಾನತತ್ಪರಳಾದ ಅವಳಿಗೆ ಆಶ್ವಾಸನೆಯನ್ನು ಕೊಡುತ್ತೇನೆ.”
ವಿವಿಧ ಕಾರಣ ಲಕ್ಷಣಗಳಿಂದ ಈ ರೀತಿ ವಿಮರ್ಶೆಮಾಡಿದ ಆ ಬ್ರಾಹ್ಮಣ ಸುದೇವನು ಭೈಮಿಯ ಬಳಿ ಹೋಗಿ ಹೇಳಿದನು:
“ವೈದರ್ಭೀ! ನಾನು ಸುದೇವ. ನಿನ್ನ ಸಹೋದರನ ಸಖ. ಭೀಮನ ವಚನದಂತೆ ನಿನ್ನನ್ನು ಅನ್ವೇಷಿಸುತ್ತಾ ಇಲ್ಲಿಗೆ ಬಂದಿದ್ದೇನೆ. ರಾಣಿ! ನಿನ್ನ ಪಿತ, ಜನನಿ ಮತ್ತು ಸಹೋದರರು ಕುಶಲದಿಂದಿರುವರು. ಆಯುಶ್ಮಂತರಾದ ನಿನ್ನ ಮಕ್ಕಳೂ ಅವರೊಂದಿಗೆ ಕುಶಲದಿಂದಿದ್ದಾರೆ. ಆದರೆ ನಿನಗಾಗಿ ನಿನ್ನ ಬಂಧುವರ್ಗವೆಲ್ಲವೂ ಸತ್ವವನ್ನು ಕಳೆದುಕೊಂಡವರಂತೆ ಇರುವರು.”
ದಮಯಂತಿಯು ಸುದೇವನನ್ನು ಗುರುತಿಸಿದಳು ಮತ್ತು ಕ್ರಮೇಣವಾಗಿ ತನ್ನ ಸುಹೃದಯರ ಮತ್ತು ತನ್ನವರ ಎಲ್ಲವರ ಕುರಿತು ಕೇಳಿದಳು. ಸಹೋದರನ ಇಷ್ಟನಾದ, ದ್ವಿಜೋತ್ತಮ ಸುದೇವನನ್ನು ಒಮ್ಮಿಂದೊಮ್ಮೆಲೇ ನೋಡಿ ಶೋಕಕರ್ಶಿತಳಾದ ವೈದರ್ಭಿಯು ಗಟ್ಟಿಯಾಗಿ ಅತ್ತಳು. ಸುದೇವನೊಡನೆ ಏಕಾಂತದಲ್ಲಿ ಮಾತನಾಡುತ್ತಿದ್ದ ಮತ್ತು ಶೋಕಕರ್ಶಿತಳಾಗಿ ಅಳುತ್ತಿದ್ದ ಅವಳನ್ನು ನೋಡಿದ ಸುನಂದೆಯು
“ಸೈರಂಧ್ರಿಯು ಬ್ರಾಹ್ಮಣನನ್ನು ಭೆಟ್ಟಿಯಾಗಿ ಜೋರಾಗಿ ಅಳುತ್ತಿದ್ದಾಳೆ; ಒಪ್ಪಿಗೆಯಿದ್ದರೆ ಯಾಕೆಂದು ತಿಳಿ”
ಎಂದು ತನ್ನ ಜನನಿಗೆ ಹೇಳಿ ಕಳುಹಿಸಿದಳು. ಆಗ ಚೇದಿಪತಿಯ ಮಾತೆಯು ರಾಜನ ಅಂತಃಪುರದಿಂದ ಆ ಬಾಲಕಿಯು ಬ್ರಾಹ್ಮಣನ ಸಂಗಡ ಮಾತನಾಡುತ್ತಿದ್ದಲ್ಲಿಗೆ ಬಂದಳು. ರಾಜಮಾತೆಯು ಸುದೇವನನ್ನು ಕರೆಯಿಸಿ ಕೇಳಿದಳು:
“ಈ ಭಾಮಿನಿಯು ಯಾರ ಭಾರ್ಯೆ ಮತ್ತು ಯಾರ ಸುತೆ? ಈ ವಾಮಲೋಚನೆಯು ಹೇಗೆ ಗೊತ್ತಿದ್ದವರೆಲ್ಲರನ್ನೂ ಮತ್ತು ಪತಿಯನ್ನೂ ಕಳೆದುಕೊಂಡಿದ್ದಾಳೆ? ವಿಪ್ರ! ಈ ಸತಿಯು ಹೀಗೆ ಹೇಗೆ ಆದಳು ಎಂದು ನಿನಗೇನಾದರೂ ತಿಳಿದಿದೆಯಾ? ಈ ಎಲ್ಲವನ್ನೂ ಎನನ್ನೂ ಬಿಡದೆ ನಿನ್ನಿಂದ ನಾನು ಕೇಳಲು ಇಚ್ಛಿಸುತ್ತೇನೆ. ದೇವರೂಪಿಣಿಯಾದವಳ ಕುರಿತು ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಏನನ್ನೂ ಮುಚ್ಚಿಡದೇ ಹೇಳು.”
ಅವಳ ಹೇಳಿಕೆಯಂತೆ ದ್ವಿಜಸತ್ತಮ ಸುದೇವನು ಸುಖವಾಗಿ ಕುಳಿತುಕೊಂಡು ದಮಯಂತಿಯ ನಿಜ ಕಥೆಯನ್ನು ಯಥಾವತ್ತಾಗಿ ವರದಿಮಾಡಿದನು:
“ಭೀಮಪರಾಕ್ರಮಿ ಧರ್ಮಾತ್ಮಾ ಭೀಮನು ವಿದರ್ಭದ ರಾಜ. ದಮಯಂತಿ ಎಂದು ವಿಶೃತ ಕಲ್ಯಾಣಿ ಅವನ ಮಗಳು. ರಾಜ ನೈಷಧನು ನಲ ಎಂಬ ಹೆಸರಿನ ವೀರಸೇನನ ಮಗ. ಆ ಧೀಮತ ಪುಣ್ಯಶ್ಲೋಕನ ಭಾರ್ಯೆಯೇ ಆ ಕಲ್ಯಾಣಿ. ಆ ಮಹೀಪತಿಯು ದ್ಯೂತದಲ್ಲಿ ಸಹೋದರನಿಂದ ಗೆಲ್ಲಲ್ಪಟ್ಟು, ರಾಜ್ಯವನ್ನು ಕಳಿದುಕೊಂಡು ದಮಯಂತಿಯೊಡಗೂಡಿ ಹೊರಟುಹೋದನು. ಅವನು ಎಲ್ಲಿಗೆ ಹೋದನೆಂದು ಯಾರಿಗೂ ತಿಳಿಯದು. ದಮಯಂತಿಗೋಸ್ಕರವಾಗಿ ನಾವು ಈ ಪೃಥ್ವಿಯನ್ನೇ ತಿರುಗುತ್ತಿದ್ದೇವೆ. ಈಗ ನಿನ್ನ ಪುತ್ರನ ನಿವೇಶನದಲ್ಲಿ ಆ ಬಾಲಕಿಯನ್ನು ನೋಡಿದ್ದೇನೆ. ರೂಪದಲ್ಲಿ ಇವಳ ಸದೃಶಳಾದ ಇನ್ನೊಬ್ಬ ಮಾನುಷಿಯಿಲ್ಲ. ಈ ಶ್ಯಾಮೆಯ ಹುಬ್ಬುಗಳ ಮಧ್ಯೆ ಸಹಜವಾದ ಉತ್ತಮವಾದ, ಪದ್ಮದ ಆಕಾರದ ಮಚ್ಚೆಯಿದ್ದುದನ್ನು ನಾನು ನೋಡಿದ್ದೆ; ಈಗ ಅದು ಕಾಣುತ್ತಿಲ್ಲ. ಚಂದ್ರಮನು ಹಗುರಾದ ಮೋಡಗಳಿಂದ ಮುಚ್ಚಿಕೊಂಡಿರುವಂತೆ, ವಿಧಾತನು ವಿಭೂತಿ ಮತ್ತು ಐಶ್ವರ್ಯಗಳ ಚಿಹ್ನೆಯೆಂದು ಅವಳ ಮುಖದ ಮೇಲೆ ಇಟ್ಟ ಮಚ್ಚೆಯು ಕೊಳೆಯಿಂದ ಆವೃತವಾಗಿದೆ. ಮೋಡ ಆವರಿಸಿದ ಅಮವಾಸ್ಯೆಯ ರಾತ್ರಿ ಚಂದ್ರನ ಹೊರ ನಕ್ಷೆ ಹೇಗೋ ಹಾಗೆ ಈಗ ಅದು ಸರಿಯಾಗಿ ಕಾಣುತ್ತಿಲ್ಲ. ಆದರೆ ಅವಳ ರೂಪವು ಸ್ಪಲ್ಪವೂ ನಶಿಸಿಲ್ಲ; ಅವಳು ಮಲಿನಳಾಗಿರಬಹುದು ಮತ್ತು ಏನೂ ಅಲಂಕಾರಗಳನ್ನು ಮಾಡಿಕೊಳ್ಳದೇ ಇರಬಹುದು. ಆದರೂ ನೋಡುವವರಿಗೆ ಅವಳು ಕಾಂಚನದಂತೆ ಬೆಳಗುತ್ತಿದ್ದಾಳೆ. ಈ ದೇಹ ಮತ್ತು ಮಚ್ಚೆಯನ್ನು ನೋಡಿಯೇ ನಾನು ನನ್ನ ಬಾಲಕಿ ದೇವಿಯನ್ನು ಹೊಗೆಯಿಂದ ಮುಚ್ಚಿಕೊಂಡ ಬೆಂಕಿಯನ್ನು ಹೇಗೋ ಹಾಗೆ ಗುರುತಿಸಿದೆ.”
ಸುದೇವನ ಈ ಮಾತುಗಳನ್ನು ಕೇಳಿದ ಸುನಂದಳು ಆ ಮಚ್ಚೆಯನ್ನು ಮುಚ್ಚಿದ್ದ ಕೊಳೆಯನ್ನು ತೊಳೆಸಿದಳು. ಕೊಳೆಯನ್ನು ತೊಳೆದನಂತರ, ಮೋಡವಿಲ್ಲದ ಆಕಾಶದಲ್ಲಿ ನಿಶಾಕರನು ಹೊಳೆಯುವಂತೆ ದಮಯಂತಿಯ ಮಚ್ಚೆಯು ಕಾಣಿಸಿಕೊಂಡಿತು. ಮಚ್ಚೆಯನ್ನು ನೋಡಿದ ಸುನಂದ ಮತ್ತು ರಾಜಮಾತೆಯು ಅವಳನ್ನು ಸ್ವಲ್ಪ ಹೊತ್ತು ಅಪ್ಪಿ ಹಿಡಿದು ರೋದಿಸಿದರು. ಕಣ್ಣೀರನ್ನು ಒರೆಸಿಕೊಂಡು ರಾಜಮಾತೆಯು ಮೃದುವಾಗಿ ಹೇಳಿದಳು:
“ನೀನು ನನ್ನ ತಂಗಿಯ ಮಗಳು. ನಿನ್ನ ಮಚ್ಚೆಯು ಸೂಚಿಸುತ್ತಿದೆ. ನಾನು ಮತ್ತು ನಿನ್ನ ತಾಯಿ ದಶಾರ್ಣಾಧಿಪತಿ ಮಹಾತ್ಮ ರಾಜ ಸುದಾಮನ ಪುತ್ರಿಯರು. ಅವಳನ್ನು ಭೀಮರಾಜನಿಗೆ ಮತ್ತು ನನ್ನನ್ನು ವೀರಬಾಹುವಿಗೆ ಕೊಡಲಾಯಿತು. ನೀನು ಹುಟ್ಟಿದಾಗ ನಿನ್ನನ್ನು ನಾನು ನನ್ನ ತಂದೆಯ ಮನೆಯಲ್ಲಿ ನೋಡಿದ್ದೆ. ದಮಯಂತಿ! ಈ ಮನೆಯೂ ಕೂಡ ನಿನ್ನ ತಂದೆಯ ಮನೆ. ಮತ್ತು ನನ್ನ ಈ ಐಶ್ವರ್ಯವು ನಿನ್ನದಿದ್ದಂತೆಯೇ.”
ಪ್ರಹೃಷ್ಟ ಮನಸ್ಕಳಾದ ದಮಯಂತಿಯು ತಾಯಿಯ ತಂಗಿಯನ್ನು ಅಭಿವಂದಿಸಿ ಈ ಮಾತುಗಳನ್ನು ಹೇಳಿದಳು:
“ನಾನು ಯಾರೆಂದು ಗುರುತಿಸಲ್ಪಡದಿದ್ದರೂ ಇಲ್ಲಿ ನಿನ್ನ ರಕ್ಷಣೆಯಲ್ಲಿ ನನ್ನ ಎಲ್ಲ ಬಯಕೆಗಳೂ ಪೂರೈಸಲ್ಪಟ್ಟು ನಾನು ಸದಾ ಸುಖವಾಗಿಯೇ ಇದ್ದೆ. ಇನ್ನು ಮುಂದೆಯೂ ಇಲ್ಲಿ ನನ್ನ ವಾಸವು ಇನ್ನೂ ಸುಖಕರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಆದರೆ ನನಗೆ ಹೋಗಲು ಅನುಮತಿಯನ್ನು ಕೊಡಬೇಕು. ನನ್ನ ಇಬ್ಬರು ಬಾಲಕ ಮಕ್ಕಳು ಅಲ್ಲಿ ವಾಸಿಸುತ್ತಿದ್ದಾರೆ. ಪಿತೃ ವಿಹೀನರಾಗಿ ಶೋಕಾರ್ತರಾದ ಅವರು ನಾನೂ ಇಲ್ಲದೇ ಹೇಗಿದ್ದಾರೋ! ನಾನು ವಿದರ್ಭಕ್ಕೆ ಹೋಗಲು ಬಯಸುತ್ತೇನೆ. ಇನ್ನೂ ನನಗೆ ಪ್ರಿಯವಾದುದ್ದನ್ನು ಮಾಡಬೇಕೆಂದೆನಿಸಿದರೆ, ಈಗಲೇ ಒಂದು ಯಾನವನ್ನು ತರಿಸಿಕೊಡು.”
ಅವಳ ತಾಯಿಯ ಭಗಿನಿ ರಾಜಮಾತೆಯು ಹರ್ಷದಿಂದ ಖಂಡಿತ ಹಾಗೆಯೇ ಆಗಲಿ ಎಂದು ಪುತ್ರನ ಅನುಮತಿಯನ್ನು ಪಡೆದು ಪುರುಷರಿಂದ ಹೊರಲ್ಪಟ್ಟ, ಸಾಕಷ್ಟು ಅನ್ನ-ಪಾನ-ಸರಕುಗಳಿಂದ ತುಂಬಲ್ಪಟ್ಟ ಸುಂದರ ಪಲ್ಲಕ್ಕಿಯಲ್ಲಿ ದೊಡ್ಡ ದಂಡಿನೊಡನೆ ಅವಳನ್ನು ಕಳುಹಿಸಿಕೊಟ್ಟಳು. ಹೀಗೆ ಆ ಶುಭೆಯು ಅಲ್ಪ ಸಮಯದಲ್ಲಿಯೇ ವಿದರ್ಭಕ್ಕೆ ಆಗಮಿಸಿದಳು. ಅವಳ ಬಂಧು ಜನರೆಲ್ಲರೂ ಪ್ರಹೃಷ್ಟರಾಗಿ ಅವಳನ್ನು ಸ್ವಾಗತಿಸಿದರು. ಮಕ್ಕಳು ಮತ್ತು ಮಾತಾ-ಪಿತರನ್ನೂ ಸೇರಿ ಎಲ್ಲ ಬಂಧುಗಳು ಮತ್ತು ಸಖಿಜನರು ಕುಶಲದಿಂದಿದ್ದಾರೆಂದು ನೋಡಿ ಯಶಸ್ವಿನಿ ಕಲ್ಯಾಣಿ ದಮಯಂತಿಯು ವಿಧಿವತ್ತಾಗಿ ಬ್ರಾಹ್ಮಣ-ದೇವತೆಗಳ ಪೂಜೆಗೈದಳು. ಮಗಳನ್ನು ನೋಡಿ ಹರ್ಷಿತನಾದ ಪಾರ್ಥಿವನು ಸುದೇವನಿಗೆ ಗ್ರಾಮ, ದಕ್ಷಿಣೆ ಮತ್ತು ಸಹಸ್ರ ಗೋವುಗಳನ್ನಿತ್ತು ತೃಪ್ತಿಪಡಿಸಿದನು. ಅಲ್ಲಿ ತಂದೆಯ ಮನೆಯಲ್ಲಿ ರಾತ್ರಿಯನ್ನು ಕಳೆದು ವಿಶ್ರಾಂತಿಹೊಂದಿದ ಭಾಮಿನಿಯು ತನ್ನ ಮಾತೆಯೊಡನೆ ಈ ಮಾತುಗಳನ್ನಾಡಿದಳು.
ನಲಾನ್ವೇಷಣೆ
ದಮಯಂತಿಯು ಹೇಳಿದಳು:
“ಮಾತಾ! ನಾನು ಸತ್ಯವನ್ನು ಹೇಳುತ್ತಿದ್ದೇನೆ. ನನ್ನನ್ನು ಜೀವಂತ ನೋಡಬೇಕೆಂದು ನಿನ್ನ ಇಚ್ಚೆ ಇದ್ದರೆ ಆ ನರವೀರ ನಲನನ್ನು ಇಲ್ಲಿಗೆ ಕರೆತರೆಸು.”
ದಮಯಂತಿಯ ಈ ಮಾತುಗಳನ್ನು ಕೇಳಿ ಬಹುದುಃಖಿತಳಾಗಿ ಕಣ್ಣೀರಿಡುತ್ತಿದ್ದ ಆ ದೇವಿಗೆ ಯಾವುದೇ ರೀತಿಯ ಉತ್ತರವನ್ನು ಕೊಡಲೂ ಆಗಲಿಲ್ಲ. ಈ ಅವಸ್ಥೆಯನ್ನು ನೋಡಿ ಅಂತಃಪುರದಲ್ಲಿದ್ದವರೆಲ್ಲರೂ “ಹಾ! ಹಾ!” ಎಂದು ಅತೀವ ದುಃಖದಿಂದ ರೋದಿಸಿದರು. ಆಗ ಮಹಾರಾಣಿಯು ಭೀಮನಿಗೆ ಹೇಳಿದಳು:
“ನಿನ್ನ ಸುತೆ ದಮಯಂತಿಯು ತನ್ನ ಪತಿಯನ್ನು ಕುರಿತು ಶೋಕಿಸುತ್ತಿದ್ದಾಳೆ. ರಾಜ! ಸ್ವಲ್ಪವೂ ಲಜ್ಜಿಸದೇ ಅವಳು ಸ್ವತಃ ನನ್ನಲ್ಲಿ ಈ ಮಾತನ್ನು ಹೇಳಿಕೊಂಡಿದ್ದಾಳೆ. ಪುಣ್ಯಶ್ಲೋಕನನ್ನು ಹುಡುಕಲು ನಿನ್ನ ಜನರನ್ನು ಕಳುಹಿಸಿಕೊಡು.”
ಅವಳಿಂದ ಪ್ರಚೋದಿತನಾದ ರಾಜನು ನಲನನ್ನು ಹುಡುಕಲು ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಬ್ರಾಹ್ಮಣರನ್ನು ಎಲ್ಲ ದಿಕ್ಕುಗಳಿಗೂ ಕಳುಹಿಸಿದನು. ವಿದರ್ಭಾಧಿಪತಿಯ ಆದೇಶದಂತೆ ಆ ಬ್ರಾಹ್ಮಣರ್ಷಭರು ದಮಯಂತಿಯನ್ನು ಕಂಡು “ನಾವು ಹೊರಡುತ್ತಿದ್ದೇವೆ!” ಎಂದರು. ಭೈಮಿಯು ಅವರನ್ನುದ್ದೇಶಿಸಿ ಹೇಳಿದಳು:
“ಎಲ್ಲಾ ರಾಷ್ಟ್ರಗಳಲ್ಲಿ ಮತ್ತು ಎಲ್ಲೆಲ್ಲಿ ಜನಸಮೂಹಗಳಿರುತ್ತವೆಯೋ ಅಲ್ಲಲ್ಲಿ ಈ ಪ್ರಶ್ನೆಯನ್ನು ಪುನಃ ಪುನಃ ವಾಚಿಸಿ: “ಪ್ರಿಯ! ವಿಪಿನದಲ್ಲಿ ಅನುರಕ್ತಳಾಗಿ ಮಲಗಿದ್ದ ನಿನ್ನ ಈ ಪ್ರಿಯೆಯ ಅರ್ಧ ವಸ್ತ್ರವನ್ನು ಕತ್ತರಿಸಿ ಬಿಟ್ಟು ಹೊರಟು ಹೋದ ನೀನು ಎಲ್ಲಿದ್ದೀಯೆ? ನೀನು ಅವಳಿಗೆ ಎಲ್ಲಿಗೆ ಹೋಗಲು ತೋರಿಸಿದ್ದೆಯೋ ಅಲ್ಲಿಯೇ ಮುಗ್ಧಳಾದ ಅವಳು ಅರ್ಧವಸ್ತ್ರವನ್ನೇ ಧರಿಸಿ ಶೋಕಸಂತಪ್ತಳಾಗಿ ನಿನ್ನನ್ನು ಪ್ರತೀಕ್ಷಿಸುತ್ತಿದ್ದಾಳೆ. ನಿನ್ನ ಶೋಕದಿಂದ ಸತತವಾಗಿ ರೋದಿಸುತ್ತಿರುವ ಅವಳಿಗೆ ಪ್ರೀತಿಯುತ ಮಾತುಗಳನ್ನಿತ್ತು ಅನುಗ್ರಹಿಸು.” ವಾಯುವಿನಿಂದ ಹಬ್ಬಿಸಿದ ಪಾವಕನು ಹೇಗೆ ವನವನ್ನಿಡೀ ದಹಿಸುವನೋ ಹಾಗೆ ಎಲ್ಲೆಡೆಯೂ ಈ ವಾಖ್ಯವನ್ನು ಇದೇರೀತಿ ವಾಚಿಸಿ ನನ್ನ ಮೇಲೆ ಕೃಪೆ ಮಾಡಿ. “ಪತಿಯು ಯಾವಾಗಲೂ ಪತ್ನಿಯ ಸಹಾಯ ಮತ್ತು ರಕ್ಷಣೆ ಮಾಡಬೇಕಲ್ಲವೇ? ಆದರೆ ಧರ್ಮಜ್ಞನಾದ ನೀನು ಏಕೆ ಈ ಎರಡನ್ನೂ ತಿರಸ್ಕರಿಸಿದೆ? ನನ್ನ ಭಾಗ್ಯ ಕಳೆದು ಹೋದುದರಿಂದಲೇ ಸದಾ ಖ್ಯಾತನೂ. ಪ್ರಾಜ್ಞನೂ, ಕುಲೀನನೂ, ಅನುಕಂಪಿತನೂ ಆಗಿದ್ದ ನೀನು ಈಗ ನಿರನುಕ್ರೋಷನಾಗಿದ್ದೀಯೆ ಎಂದು ಶಂಕಿಸುತ್ತೇನೆ. ನನ್ನ ಮೇಲೆ ದಯೆತೋರು! ದಯೆಯೇ ಪರಮ ಧರ್ಮವೆಂದು ನಾನು ನಿನ್ನಿಂದಲೇ ಕೇಳಿದ್ದೇನೆ.” ನಿಮ್ಮ ಈ ಮಾತುಗಳಿಗೆ ಯಾರಾದರೂ ಪ್ರತಿಯಾಗಿ ಮಾತನಾಡಿದರೆ, ಆ ಮನುಷ್ಯನ ಕುರಿತು ಎಲ್ಲವನ್ನೂ - ಯಾರು, ಎಲ್ಲಿ ಏನು ಮಾಡುತ್ತಾನೆ - ತಿಳಿಯಿರಿ. ಈ ಮಾತುಗಳನ್ನು ಕೇಳಿ ಪ್ರತಿಯಾಗಿ ಯಾರಾದರೂ ಹೇಳಿದರೆ ತಕ್ಷಣವೇ ಅವರು ಹೇಳಿದ್ದುದನ್ನು ನನಗೆ ಬಂದು ತಿಳಿಸಿ. ಹಿಂದಿರುಗುವಾಗ ತಡಮಾಡಬಾರದು. ಮತ್ತು ನೀವು ಭೀಮನ ಹೇಳಿಕೆಯಂತೆ ಹೊರಗೆ ತಿರುಗುತ್ತಿದ್ದೀರಿ ಎಂದು ಅವನಿಗೆ ತಿಳಿಯಬಾರದು. ಅವನು ಶ್ರೀಮಂತನಿರಲಿ ಅಥವಾ ಬಡವನಿರಲಿ ಅಥವಾ ಐಶ್ವರ್ಯದ ಹಸಿವೆಯಿಂದಿರಲಿ, ಅವನ ಉದ್ದೇಶಗಳನ್ನು ತಿಳಿಯಿರಿ.”
ಇದನ್ನು ಕೇಳಿ ಹೊರಟ ಬ್ರಾಹ್ಮಣರು ವ್ಯಸನಿ ರಾಜ ನಲನನ್ನು ಅರಸುತ್ತಾ ಸರ್ವದಿಕ್ಕುಗಳಲ್ಲಿ ಹೊರಟರು. ನಲನನ್ನು ಅನ್ವೇಶಿಸುತ್ತಾ ಆ ದ್ವಿಜರು ಪುರ, ರಾಷ್ಟ್ರ, ಗ್ರಾಮ, ಗೋಶಾಲೆ, ಆಶ್ರಮ, ಎಲ್ಲಾ ಕಡೆ ಹೋದರು. ವಿಪ್ರರು ಹೋದಲ್ಲೆಲ್ಲಾ ದಮಯಂತಿಯು ಕೊಟ್ಟಿದ್ದ ವಾಖ್ಯವನ್ನು ಎಲ್ಲರಿಗೂ ಕೇಳುವಂತೆ ಹೇಳಿದರು.
ದಮಯಂತೀ ಪುನಃಸ್ವಯಂವರ
ದೀರ್ಘ ಕಾಲದ ನಂತರ ಪರ್ಣಾದ ಎಂಬ ಹೆಸರಿನ ದ್ವಿಜನು ನಗರಕ್ಕೆ ಹಿಂದಿರುಗಿ ಭೈಮಿಯಲ್ಲಿ ಈ ವಚನಗಳನ್ನು ಹೇಳಿದನು:
“ದಮಯಂತಿ! ದಿನ-ರಾತ್ರಿ ನೈಷಧನನ್ನು ಅರಸುತ್ತಾ ಅಯೋಧ್ಯಾ ನಗರಿಗೆ ಹೋಗಿ ಭಾಂಗಸ್ವರಿಯ ಉಪಸ್ಥಿತಿಯಲ್ಲಿದ್ದೆ. ಅಲ್ಲಿ ನೀನು ಇತ್ತ ವಾಕ್ಯವನ್ನು ಯಥೋಕ್ತವಾಗಿ ಮಹಾಭಾಗ ಋತುಪರ್ಣ ಮತ್ತು ಮಹಾಜನರಲ್ಲಿ ಹೇಳಿದೆನು. ಅದನ್ನು ಕೇಳಿದ ನರಾಧಿಪ ಋತುಪರ್ಣನು ಏನನ್ನೂ ಹೇಳಲಿಲ್ಲ. ಪರಿಷತ್ತಿನಲ್ಲಿದ್ದ ಇನ್ನು ಯಾರೂ ನಾನು ಹೇಳಿದುದಕ್ಕೆ ಉತ್ತರಿಸಲಿಲ್ಲ. ರಾಜನಿಂದ ಅನುಮತಿಯನ್ನು ಪಡೆದ ನಾನು ಒಬ್ಬನೇ ಇರುವಾಗ ಋತುಪರ್ಣನ ಪುರುಷನೋರ್ವನು-ಬಾಹುಕ ಎಂಬ ಹೆಸರು ಅವನದಾಗಿತ್ತು-ನನ್ನಲ್ಲಿ ಮಾತನಾಡಿದನು. ನರೇಂದ್ರನ ಸೂತನಾಗಿದ್ದ ಅವನು ಗಿಡ್ಡ ಕೈಕಾಲುಗಳುಳ್ಳವನಾಗಿ ವಿರೂಪಿಯಾಗಿದ್ದನು. ಅವನು ಶೀಘ್ರಯಾನದಲ್ಲಿ ಸುಕುಶಲನೂ, ಅಡುಗೆಯಲ್ಲಿ ಪರಿಣಿತನೂ ಆಗಿದ್ದನು. ಅವನು ಬಹಳಷ್ಟು ನಿಟ್ಟುಸಿರು ಬಿಡುತ್ತಿದ್ದ ಮತ್ತು ಪುನಃ ಪುನಃ ರೋದಿಸುತ್ತಿದ್ದ. ನನ್ನ ಕುಶಲವನ್ನು ಕೇಳಿದ ನಂತರದಲ್ಲಿ ಅವನು ನನಗೆ ಹೇಳಿದನು: “ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಅವರು ಎಂದೂ ಕೃದ್ಧರಾಗುವುದಿಲ್ಲ. ಸುಖದಿಂದ ಪ್ರರಿಭ್ರಷ್ಠನಾಗಿ ವಿಷಮ ಸ್ಥಿತಿಯಲ್ಲಿದ್ದ ಮೂಢನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅದಕ್ಕಾಗಿ ಸಿಟ್ಟಿಗೇಳುವುದು ಸರಿಯಲ್ಲ. ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟು ಅವನ ಮನಸ್ಸು ಸುಡುತ್ತಿರುವಾಗ ಅವನು ಬಿಟ್ಟು ಹೋಗಿದ್ದುದಕ್ಕೆ ಆ ಸುಂದರಿಯು ಸಿಟ್ಟಾಗುವುದು ಸರಿಯಲ್ಲ. ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡುದ್ದುದಕ್ಕೆ ಆ ಸುಂದರಿಯು ಕೋಪಿಸುವುದು ಸರಿಯಲ್ಲ.” ಅವನ ಆ ಮಾತುಗಳನ್ನು ಕೇಳಿ ತಡಮಾಡದೇ ಇಲ್ಲಿಗೆ ಬಂದಿದ್ದೇನೆ. ಇವುಗಳನ್ನು ಕೇಳಿದ ನೀನೇ ರಾಜನಿಗೆ ನಿವೇದಿಸು.”
ಪರ್ಣದನ ಮಾತುಗಳನ್ನು ಕೇಳಿ ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಕೊಂಡ ದಮಯಂತಿಯು ತಾಯಿಯ ಬಳಿಹೋಗಿ ಏಕಾಂತದಲ್ಲಿ ಹೇಳಿದಳು:
“ಅಮ್ಮ! ಈ ಮಾತು ರಾಜ ಭೀಮನಿಗೆ ಯಾವರೀತಿಯಲ್ಲೂ ತಿಳಿಯಬಾರದು! ನಿನ್ನ ಸನ್ನಿಧಿಯಲ್ಲಿ ದ್ವಿಜಸತ್ತಮ ಸುದೇವನಿಗೆ ಸೂಚನೆಗಳನ್ನು ಕೊಡುತ್ತೇನೆ. ನೀನು ನನಗೆ ಪ್ರಿಯವಾದುದನ್ನು ಮಾಡಲು ಇಚ್ಛಿಸಿದರೆ, ನನ್ನ ಈ ಉದ್ದೇಶವು ನೃಪತಿ ಭೀಮನಿಗೆ ತಿಳಿಯದಂತೆ ನೋಡಿಕೊಳ್ಳಬೇಕು. ಹೇಗೆ ಸುದೇವನು ನನ್ನನ್ನು ಬಂಧುಗಳೊಡನೆ ಕೂಡಿಸಿದನೋ ಅದೇ ಮಂಗಲಕಾರಕ ಸುದೇವನು ಈಗಲೇ ಅಯೋಧ್ಯಾ ನಗರಿಗೆ ಹೋಗಿ ನಲನೊಂದಿಗೆ ನನ್ನ ಸಮಾಗಮವಾಗುವಂತೆ ಮಾಡಲಿ.”
ದ್ವಿಜಸತ್ತಮ ಪರ್ಣಾದನು ವಿಶ್ರಾಂತಿಯನ್ನು ಪಡೆದ ನಂತರ ಭಾಮಿನಿ ವೈದರ್ಭಿಯು ಅವನನ್ನು ಅತೀವ ಧನದಿಂದ ಅರ್ಚಿಸಿದಳು.
“ವಿಪ್ರ! ನಲನು ಇಲ್ಲಿಗೆ ಬಂದಮೇಲೆ ಇನ್ನೂ ಹೆಚ್ಚಿನ ಸಂಪತ್ತನ್ನು ನಿನಗೆ ಕೊಡುತ್ತೇನೆ. ಯಾಕೆಂದರೆ ಬೇರೆ ಯಾರೂ ಮಾಡಲಿಕ್ಕಾಗದೇ ಇರುವುದನ್ನು ನೀನು ನನಗೆ ಮಾಡಿದ್ದೀಯೆ. ಶೀಘ್ರದಲ್ಲಿಯೇ ನಾನು ನನ್ನ ಪತಿಯನ್ನು ಸೇರುತ್ತೇನೆ.”
ಈ ರೀತಿ ಕೇಳಿ ಕೃತಾರ್ಥನಾದ ಆ ಮಹಾಮನಸ್ಕನು ಸುಮಂಗಲ ಆಶೀರ್ವಾದಗಳಿಂದ ಅವಳನ್ನು ಅರ್ಚಿಸಿ ತನ್ನ ಮನೆಗೆ ತೆರಳಿದನು. ನಂತರ ದಮಯಂತಿಯು ಸುದೇವನನ್ನು ಪುನಃ ಕರೆಯಿಸಿ ತಾಯಿಯ ಸನ್ನಿಧಿಯಲ್ಲಿ ಶೋಕಸಮನ್ವಿತಳಾಗಿ ಹೇಳಿದಳು:
“ಸುದೇವ! ಅಯೋಧ್ಯಾವಾಸಿ ನೃಪ ಋತುಪರ್ಣನಲ್ಲಿ ಹೋಗಿ ಹೇಳು: “ಭೈಮಿ ದಮಯಂತಿಯು ಅನ್ಯ ಪತಿಯನ್ನು ಬಯಸಿ ಪುನಃ ಇಂದು ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ. ಎಲ್ಲ ರಾಜರೂ ರಾಜಪುತ್ರರೂ ಅಲ್ಲಿಗೆ ಹೋಗುತ್ತಿದ್ದಾರೆ. ಕಾಲ ಗಣಿತದ ಪ್ರಕಾರ ಅದು ನಾಳೆಯೇ ನಡೆಯುತ್ತಿದೆ. ಸಾಧ್ಯವಿದ್ದರೆ ಶೀಘ್ರದಲ್ಲಿಯೇ ಹೊರಡು. ಸೂರ್ಯೋದಯದಲ್ಲಿಯೇ ಅವಳು ಎರಡನೆಯ ಪತಿಯನ್ನು ವರಿಸುತ್ತಾಳೆ. ಆ ವೀರ ನಲನು ಜೀವಂತನಿದ್ದಾನೋ ಮೃತನಾಗಿದ್ದಾನೋ ತಿಳಿಯದು.”
ನಂತರ ಬ್ರಾಹ್ಮಣ ಸುದೇವನು ಮಹಾರಾಜ ಋತುಪರ್ಣನಲ್ಲಿಗೆ ಹೋಗಿ ಅವಳು ಹೇಳಿಕೊಟ್ಟ ಹಾಗೆಯೇ ಹೇಳಿದನು.
ವಿದರ್ಭಕ್ಕೆ ಋತುಪರ್ಣನ ಪ್ರಯಾಣ
ಸುದೇವನ ಮಾತುಗಳನ್ನು ಕೇಳಿದ ನರಾಧಿಪ ಋತುಪರ್ಣನು ಸಾಂತ್ವನ ಮತ್ತು ಶ್ಲಾಘನೀಯ ಮಾತುಗಳಿಂದ ಬಾಹುಕನಿಗೆ ಹೇಳಿದನು:
“ಬಾಹುಕ! ದಮಯಂತಿಯ ಸ್ವಯಂವರಕ್ಕೆ ವಿದರ್ಭಕ್ಕೆ ಹೋಗಲು ಇಚ್ಚಿಸುತ್ತೇನೆ. ನೀನು ಅಶ್ವ ತತ್ವಜ್ಞ. ಒಂದೇ ದಿನದಲ್ಲಿ ಅಲ್ಲಿಗೆ ಹೋಗಲಿಕ್ಕಾಗುವುದಾದರೆ ಹೇಳು.”
ರಾಜನ ಈ ಮಾತುಗಳನ್ನು ಕೇಳಿದ ನಲನ ಮನಸ್ಸು ದುಃಖದಿಂದ ಮುದುಡಿಕೊಂಡಿತು ಮತ್ತು ಆ ಮಹಾಮನಸ್ಕನು ಚಿಂತಿಸತೊಡಗಿದನು:
“ದಮಯಂತಿಯು ಈ ರೀತಿ ಮಾಡುತ್ತಿದ್ದಾಳೆ ಎಂದರೆ ಅವಳು ದುಃಖದಿಂದ ಮೋಹಿತಳಾಗಿರಬಹುದು ಅಥವಾ ಇದು ನನಗಾಗಿಯೇ ಅವಳು ಯೋಚಿಸಿರುವ ಒಂದು ಮಹಾ ಉಪಾಯವಿರಬಹುದು. ಕ್ಷುದ್ರ ಪಾಪಿ ಬುದ್ಧಿಯಿಲ್ಲದ ನಾನು ಅವಳಿಗೆ ಮೋಸ ಮಾಡಿದ್ದೇನೆ. ಆದುದರಿಂದಲೇ ಆ ತಪಸ್ವಿನಿ ವೈದರ್ಭಿಯು ಈ ಕ್ರೂರ ಕೃತ್ಯವನ್ನು ಮಾಡಲು ಬಯಸಿರಬಹುದು. ಈ ಲೋಕದಲ್ಲಿ ಸ್ತ್ರೀ ಸ್ವಭಾವವು ಅಚಲ; ಆದರೆ ನನ್ನ ದೋಷವೂ ದಾರುಣವಾಗಿದೆ. ಇದೆಲ್ಲವೂ ಇರಲಿ. ಆದರೂ ಈ ತನುಮದ್ಯಮಳು, ಸೌಹಾರ್ದತೆಯನ್ನು ಮರೆತು, ನನ್ನ ಮೇಲಿನ ಶೋಕದಿಂದ ನಿರಾಶಳಾಗಿ, ಇಂತಹ ಕೆಲಸವನ್ನು ಮಾಡಬಹುದೇ? ಇಲ್ಲ ಅವಳು ಈ ರೀತಿ ಮಾಡುವವಳಲ್ಲ. ಅದರಲ್ಲೂ ವಿಶೇಷವಾಗಿ ಅವಳ ಮಕ್ಕಳಿದ್ದಾರೆ. ಆದ್ದರಿಂದ ನಾನೇ ಅಲ್ಲಿಗೆ ಹೋಗಿ ನಿಶ್ಚಯವಾಗಿ ತಿಳಿದುಕೊಳ್ಳುತ್ತೇನೆ. ನನಗೋಸ್ಕರ ಋತುಪರ್ಣನ ಇಚ್ಛೆಯಂತೆ ಮಾಡುತ್ತೇನೆ.”
ಈ ರೀತಿ ಮನಸ್ಸಿನಲ್ಲಿ ನಿಶ್ಚಯಿಸಿ, ದೀನಮನಸ್ಕ ಬಾಹುಕನು ಅಂಜಲೀಬದ್ಧನಾಗಿ ನರಾಧಿಪ ಋತುಪರ್ಣನನ್ನುದ್ದೇಶಿಸಿ ಹೇಳಿದನು:
“ನರಾಧಿಪ! ನಿನಗೆ ನನ್ನ ನಿಜವಾದ ಮಾತುಗಳನ್ನು ಹೇಳುವುದಾದರೆ ಒಂದೇ ದಿನದಲ್ಲಿ ವಿದರ್ಭನಗರಿಯನ್ನು ತಲುಪಬಹುದು.”
ನೃಪ ಭಾಂಗಸ್ವರಿಯ ಆಜ್ಞೆಯಂತೆ ಬಾಹುಕನು ಅಶ್ವಶಾಲೆಗೆ ಹೋಗಿ ಅಶ್ವಗಳನ್ನು ಪರೀಕ್ಷಿಸಿದನು. ಋತುಪರ್ಣನು ಬಹಳಷ್ಟು ಅವಸರಮಾಡಲು, ಬಾಹುಕನು ನಾಲ್ಕು ತೆಳ್ಳಗಿನ, ಮಾರ್ಗದಲ್ಲಿ ಸಮರ್ಥ, ತೇಜೋಬಲಸಮಾಯುಕ್ತ, ಕುಲಶೀಲಸಮನ್ವಿತ ವಾಯುವೇಗಿ ಸಿಂಧುಜ ಅಶ್ವಗಳನ್ನು ಆರಿಸಿದನು. ವಿಶಾಲ ಹೊರಳೆ ಮತ್ತು ಬಾಯಿಗಳನ್ನು ಹೊಂದಿದ್ದ ಆ ಅಶ್ವಗಳು ಹೀನ ಲಕ್ಷಣಗಳಿಂದ ವರ್ಜಿತವಾಗಿದ್ದವು. ಹತ್ತು ಕುರುಳುಗಳಿಂದ ಶುದ್ಧವಾಗಿದ್ದವು. ಅವುಗಳನ್ನು ನೋಡಿದ ರಾಜನು ಸ್ವಲ್ಪ ಸಿಟ್ಟಿಗೆದ್ದು ಹೇಳಿದನು:
“ಇದೇನು ನೀನು ಮಾಡುತ್ತಿರುವೆ? ನನ್ನನ್ನು ಮೋಸಗೊಳಿಸಲಿಕ್ಕೆಂದೇ ನೀನು ಈ ರೀತಿ ಮಾಡುತ್ತಿರಬಹುದು. ಈ ಅಲ್ಪಬಲಪ್ರಾಣ ಹಯಗಳು ನನ್ನ ರಥವನ್ನು ಎಳೆಯಬಲ್ಲವೇ? ಹೀಗೆ ಕಾಣುತ್ತಿರುವ ಈ ತುರಂಗಗಳು ಹೇಗೆ ಅ ಮಹಾ ದೂರವನ್ನು ಗಮಿಸಬಲ್ಲವು?”
ಬಾಹುಕನು ಹೇಳಿದನು:
“ಈ ಹಯಗಳು ವಿದರ್ಭಕ್ಕೆ ಹೋಗುವವು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ರಾಜನ್! ಬೇಕೆಂದರೆ ನಿನಗಿಷ್ಟವಾದ ಯಾವ ಕುದುರೆಗಳನ್ನು ಕಟ್ಟಬೇಕೆಂದು ಹೇಳು. ಅವುಗಳನ್ನೇ ಕಟ್ಟುತ್ತೇನೆ.”
ಋತುಪರ್ಣನು ಹೇಳಿದನು:
“ಬಾಹುಕ! ನೀನೇ ಹಯ ತತ್ವಜ್ಞ ಮತ್ತು ಕುಶಲ. ಇವುಗಳು ಆಗುತ್ತವೆ ಎಂದು ನೀನೆಂದರೆ ಬೇಗ ಅವುಗಳನ್ನು ಕಟ್ಟು.”
ನಂತರ ನಲನು ಕುಶಲತೆಯಿಂದ ಆ ನಾಲ್ಕು ಕುಲಶೀಲಸಮನ್ವಿತ ಅಶ್ವಗಳನ್ನು ರಥಕ್ಕೆ ಕಟ್ಟಿದನು. ರಾಜನು ತಯಾರಿದ್ದ ರಥವನ್ನು ಬೇಗನೇ ಏರಿದನು ಮತ್ತು ಆ ಉತ್ತಮ ಹಯಗಳು ಭೂಮಿಯಮೇಲೆ ಕಾಲುಗಳನ್ನೂರಿದವು. ನರವರ ಶ್ರೀಮಾನ್ ನಲರಾಜನು ಸೂತ ವಾರ್ಷ್ಣೇಯನನ್ನು ರಥದಲ್ಲಿ ಕೂರಿಸಿಕೊಂಡು ತೇಜೋಬಲಸಮನ್ವಿತ ಆ ಅಶ್ವಗಳನ್ನು ಸಂತವಿಸಿ, ಹಗ್ಗಗಳಿಂದ ಅವುಗಳನ್ನು ನಿಯಂತ್ರಿಸುತ್ತಾ ಹೊರಟನು. ಬಾಹುಕನಿಂದ ವಿಧಿವತ್ತಾಗಿ ಚೋದಿತಗೊಂಡ ಆ ಉತ್ತಮ ಹಯಗಳು ರಥದಲ್ಲಿ ಕುಳಿತವರನ್ನು ಮೂರ್ಛೆಗೊಳಿಸುವಂತೆ ಆಕಾಶದಲ್ಲಿ ಹಾರಿದವು. ವಾಯುವೇಗದಲ್ಲಿ ಓಡುತ್ತಿದ್ದ ಆ ಅಶ್ವಗಳನ್ನು ನೋಡಿದ ಅಯೋಧ್ಯಾಧಿಪತಿ ಧೀಮಂತನು ಪರಮ ವಿಸ್ಮಿತನಾದನು. ರಥಘೋಷವನ್ನು ಕೇಳಿ ಮತ್ತು ಹಯಗಳ ನಿಯಂತ್ರಣವನ್ನು ನೋಡಿ ವಾರ್ಷ್ಣೇಯನು ಬಾಹುಕನ ಹಯವಿದ್ಯೆಯ ಕುರಿತು ಯೋಚಿಸತೊಡಗಿದನು. “ಇವನು ದೇವರಾಜನ ಸಾರಥಿ ಮಾತಲಿಯಿರಬಹುದೇ? ಯಾಕೆಂದರೆ ಈ ವೀರ ಬಾಹುಕನಲ್ಲಿ ಅದೇ ಮಾಹಾ ಲಕ್ಷಣಗಳು ಕಾಣುತ್ತಿವೆ. ಅಥವಾ ಇವನು ಅಶ್ವಗಳ ಕುಲತತ್ವವನ್ನು ಅರಿತ, ಈಗ ಇಷ್ಟು ಕುರೂಪಿಯಾದ ಮನುಷ್ಯನ ದೇಹವನ್ನು ಹೊಂದಿರುವ ಶಾಲಿಹೋತ್ರನೇ? ಅಥವಾ ಇವನು ಪರಪುರಂಜಯ ರಾಜ ನಲನಾಗಿರಬಹುದೇ? ಆ ನೃಪತಿಯು ಇಲ್ಲಿಗೆ ಬಂದಿರಬಹುದೇ?” ಎಂದು ಅವನು ಯೋಚಿಸಿದನು.
“ನಲನಿಗೆ ತಿಳಿದಿದ್ದ ವಿದ್ಯೆ ಬಾಹುಕನಿಗೂ ತಿಳಿದಂತಿದೆ. ಬಾಹುಕ ಮತ್ತು ನಲನ ಜ್ಞಾನವು ಸರಿಸಮನಾಗಿ ತೋರುತ್ತಿದೆ. ಇವನ ಮತ್ತು ನಲನ ವಯಸ್ಸು ಕೂಡ ಒಂದೇ ಇರಬಹುದು ಎಂದು ನನಗನ್ನಿಸುತ್ತದೆ. ಇವನು ಮಹಾವೀರ ನಲನಲ್ಲ; ಆದರೂ ಇವನಲ್ಲಿ ಆ ವಿದ್ವತ್ತು ಇದೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ಮಹಾತ್ಮರು ದೈವ ವಿಧಿಗಳೆರಡರಿಂದಲೂ ಕೂಡಿ ಈ ಪೃಥಿವಿಯನ್ನು ತಿರುಗಿಸುತ್ತಿರುತ್ತಾರೆ ಎಂದು ಕೇಳಿದ್ದೇನೆ. ಆದರೂ ಈ ಅಕಾರ ವಿರೂಪಗಳ ಕುರಿತು ಸಂದಿಗ್ಧನಾಗಿದ್ದೇನೆ. ನನ್ನ ಮತಕ್ಕೆ ಪ್ರಮಾಣಗಳಿಲ್ಲ ಎಂದನ್ನಿಸುತ್ತದೆ. ವಯಸ್ಸಿನಲ್ಲಿ ಅವನ ಸರಿಸಮಾನನಾಗಿದ್ದಾನೆ ಆದರೆ ರೂಪದಲ್ಲಿ ವಿಪರ್ಯನಾಗಿದ್ದಾನೆ. ಆದರೂ ಕೊನೆಯಲ್ಲಿ ಬಾಹುಕನೇ ಸರ್ವಗುಣಯುಕ್ತ ನಲನೆಂದು ತೀರ್ಮಾನಿಸುತ್ತೇನೆ.”
ಈ ರೀತಿ ಮಹಾರಾಜ ಪುಣ್ಯಶ್ಲೋಕನ ಸಾರಥಿ ವಾರ್ಷ್ಣೇಯನು ಬಹಳಷ್ಟು ವಿಚಾರಿಸಿ ತನ್ನ ಹೃದಯದಲ್ಲಿ ಚಿಂತಿಸತೊಡಗಿದನು. ಆದರೆ ರಾಜೇಂದ್ರ ಋತುಪರ್ಣನು ಬಾಹುಕನ ಹಯಜ್ಞಾನದ ಕುರಿತು ಯೋಚಿಸಿ ಸಾರಥಿ ವಾರ್ಷ್ಣೇಯನೊಂದಿಗೆ ಹರ್ಷಿತನಾದನು. ಅವನ ಬಲ, ವೀರ್ಯ, ಉತ್ಸಾಹ, ಹಯಗಳ ಮೇಲಿದ್ದ ನಿಯಂತ್ರಣ ಮತ್ತು ಪರಮ ಯತ್ನವನ್ನು ನೋಡಿ ಅವನು ಅತೀವ ಸಂತಸಗೊಂಡನು.
ಕಲಿನಿರ್ಗಮನ
ಅವನು ಎಲ್ಲಿಯೂ ನಿಲ್ಲದೇ ಖೇಚರನು ಆಕಾಶದಲ್ಲಿ ಹಾರುವಂತೆ ನದಿ-ಪರ್ವತ-ವನ-ಸರೋವರಗಳನ್ನು ಅತಿಕ್ರಮಿಸಿದನು. ಹೀಗೆ ರಥವು ವೇಗದಿಂದ ಓಡುತ್ತಿರುವಾಗ ಪರಪುರಂಜಯ ನೃಪ ಭಾಂಗಸ್ವರಿಯು ತನ್ನ ಉತ್ತರೀಯವು ಕಳಚಿ ಬಿದ್ದುದನ್ನು ನೋಡಿದನು. ವೇಗದಲ್ಲಿ ಹೋಗುತ್ತಿರುವಾಗ ಉತ್ತರೀಯವು ಬಿದ್ದ ಕೂಡಲೇ ಮಹಾಮನ ರಾಜನು ನಲನಿಗೆ ಹೇಳಿದನು:
“ಅದನ್ನು ತೆಗೆದುಕೊಳ್ಳುತ್ತೇನೆ. ಮಹಾಬುದ್ಧಿ! ಈ ಮಹಾವೇಗದಲ್ಲಿ ಚಲಿಸುತ್ತಿರುವ ಹಯಗಳನ್ನು ನಿಲ್ಲಿಸು. ಯಾಕೆಂದರೆ ವಾರ್ಷ್ಣೇಯನು ಬಿದ್ದುಹೋದ ನನ್ನ ಉತ್ತರೀಯವನ್ನು ತೆಗೆದುಕೊಂಡು ಬರುತ್ತಾನೆ.”
ನಲನು ಉತ್ತರಿಸಿದನು:
“ಬಹಳ ದೂರದ ಹಿಂದೆಯೇ ನಿನ್ನ ಉತ್ತರೀಯವು ಬಿದ್ದುಹೋಯಿತು. ಅಲ್ಲಿಂದ ಒಂದು ಯೋಜನ ದೂರ ಈಗಾಗಲೇ ಬಂದುಬಿಟ್ಟಿದ್ದೇವೆ. ಪುನಃ ಅದನ್ನು ತೆಗೆದುಕೊಂಡು ಬರಲು ಶಕ್ಯವಾಗುವುದಿಲ್ಲ.”
ನಲನು ಹೀಗೆ ಹೇಳುತ್ತಿರುವಾಗಲೇ ನೃಪ ಭಾಂಗಸ್ವರಿಯು ಆ ವನದಲ್ಲಿ ಹಣ್ಣುಗಳಿಂದ ತುಂಬಿದ್ದ ಒಂದು ಬಿಭೀತಕವನ್ನು ಕಂಡನು. ಅದನ್ನು ನೋಡಿ, ಅವಸರದಲ್ಲಿದ್ದ ರಾಜನು ಬಾಹುಕನಿಗೆ ಹೇಳಿದನು:
“ಸೂತ! ಎಣಿಸುವುದರಲ್ಲಿ ನನಗಿದ್ದ ಈ ಪರಮ ಬಲವನ್ನು ನೋಡು. ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ. ಸರ್ವಜ್ಞನೆನ್ನುವನು ಯಾರೂ ಇಲ್ಲ. ಜ್ಞಾನವು ಒಬ್ಬನೇ ಪುರುಷನಲ್ಲಿ ಏಕತ್ರವಾಗಿ ಯಾವಾಗಲೂ ಇರುವುದಿಲ್ಲ. ಕೆಳಗೆ ಬಿದ್ದ ಮತ್ತು ಮೇಲೆ ಇರುವ ಎಲ್ಲವನ್ನೂ ಸೇರಿ ಈ ವೃಕ್ಷದಲ್ಲಿ ನೂರಾ ಒಂದು ಎಲೆ ಮತ್ತು ಪುಷ್ಪಗಳಿವೆ. ಒಂದು ಎಲೆ ಮತ್ತು ಒಂದು ಫಲ ಮಾತ್ರ ಅಧಿಕವಾಗಿದೆ. ಆ ಎರಡೂ ಶಾಖೆಗಳಲ್ಲಿ ಐದು ಕೋಟಿ ಎಲೆಗಳಿವೆ. ಆ ಎರಡೂ ಶಾಖೆಗಳನ್ನು ಮತ್ತು ರೆಂಬೆಗಳನ್ನು ತೆಗೆದುಕೊಂಡರೆ, ಅವುಗಳಲ್ಲಿ ಎರಡು ಸಾವಿರದ ಒಂದು ನೂರಾ ತೊಂಭತ್ತೈದು ಫಲಗಳು ದೊರಕುವವು.”
ಆಗ ಬಾಹುಕನು ರಥದಿಂದ ಕೆಳಗಿಳಿದು ರಾಜನನ್ನು ಉದ್ದೇಶಿಸಿ ಹೇಳಿದನು:
“ಶತ್ರುಕರ್ಶನ ರಾಜನ್! ನೀನು ಹೇಳುತ್ತಿರುವುದು ನನಗೆ ಮೀರಿದ್ದು. ಆದ್ದರಿಂದ ನೀನು ಲೆಖ್ಕ ಮಾಡಿದುದರಲ್ಲಿ ವಿಶೇಷವೇನೂ ಇಲ್ಲ. ನಿನ್ನ ಪ್ರತ್ಯಕ್ಷದಲ್ಲಿಯೇ ನಾನು ಈ ಬಿಭೀತಕವನ್ನು ಎಣಿಸುತ್ತೇನೆ. ಯಾಕೆಂದರೆ ನೀನು ಮಾಡಿದುದು ಸರಿಯೋ ಇಲ್ಲವೋ ಎಂದು ನನಗೆ ತಿಳಿಯದು. ನಿನ್ನ ಎದುರಿನಲ್ಲಿಯೇ ನಾನು ಇದರಲ್ಲಿರುವ ಫಲಗಳನ್ನು ಎಣಿಸುತ್ತೇನೆ. ವಾರ್ಷ್ಣೇಯ! ಸ್ವಲ್ಪ ಹೊತ್ತು ಈ ಕುದುರೆಗಳ ಹಗ್ಗವನ್ನು ಹಿಡಿದುಕೋ.”
ಆಗ ನೃಪನು “ವಿಲಂಬ ಮಾಡಲು ನಮಗೆ ಈಗ ಸಮಯವಿಲ್ಲ!” ಎಂದು ಸೂತನಿಗೆ ಹೇಳಿದನು. ಆದರೂ ಬಾಹುಕನು ಒತ್ತಾಯಮಾಡಿ ಹೇಳಿದುದರಿಂದ ನಿಂತರು.
“ಒಂದು ಸ್ವಲ್ಪವೇ ಸಮಯ ಪ್ರತೀಕ್ಷಿಸು. ಅಥವಾ ನೀನು ಮುಂದೆ ಹೋಗು. ಇಲ್ಲಿಂದ ದಾರಿಯು ಸುಗಮವಾಗಿದೆ. ಹೋಗು. ವಾರ್ಷ್ಣೇಯನು ಸಾರಥಿಯಾಗುತ್ತಾನೆ.”
ಋತುಪರ್ಣನು ಆಗ ಸಾಂತ್ವನ ಮಾತುಗಳನ್ನು ನುಡಿದನು:
“ಬಾಹುಕ! ಇಡೀ ಪೃಥಿವಿಯಲ್ಲಿ ನಿನ್ನಂತಹ ಸಾರಥಿಯು ಬೇರೆ ಯಾರೂ ಇಲ್ಲ. ನಿನ್ನಿಂದಾಗಿಯೇ ನನಗೆ ವಿದರ್ಭವನ್ನು ತಲುಪುವ ಭರವಸೆಯಿದೆ. ನಿನ್ನಲ್ಲಿ ನಾನು ಶರಣು ಹೋಗುತ್ತೇನೆ. ವಿಘ್ನವನ್ನು ಮಾಡಬೇಡ. ವಿದರ್ಭಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನನಗೆ ಸೂರ್ಯೋದಯದ ದರ್ಶನವನ್ನು ಮಾಡಿಸಿದೆಯಾದರೆ ನೀನು ಹೇಳಿದ ಕೆಲಸವನ್ನು ಮಾಡುತ್ತೇನೆ.”
“ಬಿಭೀತಕವನ್ನು ಎಣಿಸಿದ ನಂತರವೇ ವಿದರ್ಭಕ್ಕೆ ಕರೆದೊಯ್ಯುತ್ತೇನೆ. ನಾನು ಹೇಳಿದಂತೆಯೇ ಮಾಡು!” ಎಂದು ಬಾಹುಕನು ಅವನಿಗೆ ಹೇಳಿದನು. ಇಷ್ಟವಿಲ್ಲದಿದ್ದರೂ ರಾಜನು ಅವನಿಗೆ “ಎಣಿಸು!” ಎಂದನು. ಆತನು ರಥದಿಂದ ಕೆಳಗಿಳಿದು ಆ ಮರವನ್ನು ಕಡಿದು ಬೀಳಿಸಿದನು. ನಂತರ ಅವನು ವಿಸ್ಮಯಗೊಂಡು ರಾಜನನ್ನುದ್ದೇಶಿಸಿ ಹೇಳಿದನು:
“ನೀನು ಹೇಳಿದಷ್ಟೇ ಎಲೆಗಳು ಮತ್ತು ಫಲಗಳನ್ನು ಎಣಿಸಿದ್ದೇನೆ. ಇದೊಂದು ಅತ್ಯದ್ಭುತವಾದದ್ದು! ನಿನ್ನ ಬಲವನ್ನು ನಾನು ನೋಡಿದೆ. ನೃಪ! ನೀನು ಯಾವ ವಿದ್ಯೆಯ ಮೂಲಕ ಎಣಿಸಿದೆಯೋ ಅದನ್ನು ತಿಳಿಯಲು ಬಯಸುತ್ತೇನೆ.”
ಹೋಗುವುದರ ಅವಸರದಲ್ಲಿದ್ದ ರಾಜನು ಅವನಿಗೆ ಹೇಳಿದನು:
“ನನಗೆ ಅಕ್ಷಹೃದಯದ ಜ್ಞಾನವಿದೆ ಮತ್ತು ಸಂಖ್ಯೆಗಳಲ್ಲಿ ನಾನು ವಿಶಾರದನು.”
ಬಾಹುಕನು ಹೇಳಿದನು:
“ಪುರುಷರ್ಷಭ! ಈ ವಿದ್ಯೆಯನ್ನು ನನಗೆ ಕೊಟ್ಟು ನನ್ನಿಂದ ಈ ಅಶ್ವಹೃದಯವನ್ನು ಸ್ವೀಕರಿಸು.”
ಆಗ ರಾಜ ಋತುಪರ್ಣನು ಕಾರ್ಯಗೌರವಾರ್ಥವಾಗಿ ಮತ್ತು ಹಯಜ್ಞಾನದ ಆಸೆಯಿಂದ ಬಾಹುಕನಿಗೆ ಹೇಳಿದನು:
“ಬಾಹುಕ! ಹಾಗೆಯೇ ಆಗಲಿ. ಶ್ರೇಷ್ಠವಾದ ಅಕ್ಷಹೃದಯವನ್ನು ಸ್ವೀಕರಿಸು. ಆದರೆ ನನಗಾಗಿ ಅಶ್ವಹೃದಯವನ್ನು ನಿನ್ನಲ್ಲಿಯೇ ಇಟ್ಟುಕೋ!”
ಎಂದು ಹೇಳಿ ಋತುಪರ್ಣನು ನಲನಿಗೆ ಆ ವಿದ್ಯೆಯನ್ನು ಕೊಟ್ಟನು. ಅವನು ಅಕ್ಷಹೃದಯವನ್ನು ತಿಳಿದೊಡನೆಯೇ ಕಲಿಯು ಅವನ ಶರೀರದಿಂದ ಕಾರ್ಕೋಟಕ ವಿಷವನ್ನು ಮುಖದಿಂದ ಕಾರುತ್ತಾ ಹೊರಬಿದ್ದನು. ಯಾವ ಕಾರಣದಿಂದ ರಾಜನು ಬತ್ತಿಹೋಗಿದ್ಡನೋ ಮತ್ತು ದೀರ್ಘಕಾಲದಿಂದ ತಾನು ತಾನಾಗಿಯೇ ಇರಲಿಲ್ಲವೋ ಆ ಕಲಿಯ ಶಾಪಾಗ್ನಿಯು ಆರ್ತನಾದ ಅವನಿಂದ ಹೊರಬಂದಿತು. ವಿಷದಿಂದ ವಿಮುಕ್ತನಾದ ಕಲಿಯು ಸ್ವರೂಪವನ್ನು ಹೊಂದಲು ಕುಪಿತನಾದ ನಿಷಧಾಧಿಪ ನಲನು ಅವನಿಗೆ ಶಪಿಸಲು ಬಯಸಿದನು. ಭೀತಿಗೊಡ ಕಲಿಯು ನಡುಗುತ್ತಾ, ಅಂಜಲೀಬದ್ಧನಾಗಿ ಅವನಿಗೆ ಹೇಳಿದನು:
“ನೃಪತೇ! ನಿನ್ನ ಕೋಪವನ್ನು ಹಿಡಿದಿಟ್ಟುಕೋ. ನಿನಗೆ ಶ್ರೇಷ್ಠವಾದ ಕೀರ್ತಿಯನ್ನು ಕೊಡುತ್ತೇನೆ. ಹಿಂದೆ ನಿನ್ನಿಂದ ಪರಿತ್ಯಕ್ತಳಾದಾಗ ಕೋಪದಿಂದ ಇಂದ್ರಸೇನನ ಜನನಿಯು ನನ್ನನ್ನು ಶಪಿಸಿದ್ದಳು. ಅಂದಿನಿಂದ ನಾನು ನೋವಿನಿಂದ ಪೀಡಿತನಾಗಿದ್ದೇನೆ. ನಿನ್ನಲ್ಲಿ ಬಹಳಷ್ಟು ದುಃಖದಿಂದ ನಾಗರಾಜನ ವಿಷದಿಂದ ದಿನರಾತ್ರಿ ಬೇಯುತ್ತಾ ವಾಸಿಸುತ್ತಿದ್ದೆ. ಈ ಲೋಕದಲ್ಲಿ ಯಾವ ಮನುಜರು ನಿನ್ನ ಕೀರ್ತಿಯನ್ನು ನಿರಂತರವಾಗಿ ಪಾಡುತ್ತಾರೋ ಅವರಿಗೆ ನನ್ನಿಂದ ಎಂದೂ ಯಾವ ಭಯವೂ ಇರುವುದಿಲ್ಲ.”
ಇದನ್ನು ಕೇಳಿದ ರಾಜ ನಲನು ತನ್ನ ಕೋಪವನ್ನು ನಿಯಂತ್ರಿಸಿಕೊಂಡನು. ಕೂಡಲೇ ಭೀತಿಗೊಂಡ ಕಲಿಯು ಬಿಭೀತಕವನ್ನು ಪ್ರವೇಶಿಸಿದನು. ಕಲಿಯು ನೈಷಧನೊಡನೆ ಮಾತನಾಡಿದ್ದುದನ್ನು ಯಾರೂ ನೋಡಲಿಲ್ಲ. ಹೀಗೆ ಜ್ವರ ಬಿಟ್ಟ ಪರವೀರಹ ರಾಜ ನೈಷಧನು ಕಲಿಯು ನಾಶನಾದನೆಂದು ಮತ್ತು ಫಲಗಳನ್ನು ಎಣಿಸಲು ಕಲಿತೆನೆಂದು ಪರಮ ಸಂತಸಗೊಂಡು ಹಿಂದಿನ ತನ್ನ ಪರಮ ತೇಜಸ್ಸನ್ನು ಪುನಃ ಪಡೆದುಕೊಂಡನು. ಆ ತೇಜಸ್ವಿಯು ರಥವನ್ನೇರಿ ಹಯಗಳನ್ನು ವೇಗವಾಗಿ ಓಡಿಸಿದನು. ಕಲಿಯು ಆವರಿಸಿದುದರಿಂದ ಅಂದಿನಿಂದ ಬಿಭೀತಕವು ಅಪ್ರಸಿದ್ಧವಾಗಿದೆ. ಉತ್ತೇಜನಗೊಂಡ ನಲನು ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಆ ಉತ್ತಮ ಕುದುರೆಗಳನ್ನು ಪುನಃ ಪುನಃ ಹುರಿದುಂಬಿಸಿದನು ಮತ್ತು ಅವು ಪಕ್ಷಿಗಳಂತೆ ಹಾರತೊಡಗಿದವು. ಮಹಾಮನ ರಾಜನು ವಿದರ್ಭಾಭಿಮುಖವಾಗಿ ಪ್ರಯಾಣಿಸಿದನು ಮತ್ತು ನಲನು ಸಾಕಷ್ಟು ದೂರ ಹೋದ ನಂತರ ಕಲಿಯು ತನ್ನ ಮನೆಗೆ ತೆರಳಿದನು. ಕಲಿಯಿಂದ ವಿಮುಕ್ತನಾದ ರಾಜ ನಲನು ಜ್ವರವನ್ನು ಕಳೆದುಕೊಂಡನು. ಆದರೆ ತನ್ನ ರೂಪವನ್ನು ಮಾತ್ರ ಪಡೆಯಲಿಲ್ಲ.
ಭೀಮಪುರಕ್ಕೆ ಋತುಪರ್ಣನ ಆಗಮನ
ಸತ್ಯವಿಕ್ರಮ ಋತುಪರ್ಣನು ಸಾಯಂಕಾಲದಲ್ಲಿ ವಿದರ್ಭವನ್ನು ತಲುಪಿದನು. ಅವನು ಬಂದಿರುವುದರನ್ನು ಜನರು ರಾಜ ಭೀಮನಿಗೆ ತಿಳಿಸಿದರು. ರಾಜ ಭೀಮನ ವಚನದಂತೆ ತನ್ನ ರಥಘೋಶವು ಎಲ್ಲ ದಶದಿಕ್ಕುಗಳಲ್ಲಿಯೂ ಮೊಳಗುತ್ತಿರಲು ಕುಂಡಿನ ಪುರವನ್ನು ಪ್ರವೇಶಿಸಿದನು. ನಲನ ಕುದುರೆಗಳು ರಥದ ಧ್ವನಿಯನ್ನು ಕೇಳಿದವು ಮತ್ತು ಕೇಳಿ ಹಿಂದೆ ನಲಸನ್ನಿಧಿಯಲ್ಲಿದ್ದಂತೆ ಹರ್ಷಗೊಂಡವು. ಮಳೆಗಾಲದ ಆದಿಯಲ್ಲಿ ಮೇಘದ ಗಂಭೀರ ಗುಡುಗಿನಂತಿದ್ದ ನಲನ ಆ ರಥಘೋಷವನ್ನು ದಮಯಂತಿಯೂ ಕೇಳಿದಳು. ಹಯಗಳು ಯೋಚಿಸಿದ್ದಂತೆ ಭೈಮಿಯೂ ಕೂಡ ಹಿಂದೆ ನಲನು ತನ್ನ ಕುದುರೆಗಳನ್ನು ಹೂಡಿ ರಥ ಓಡಿಸುತ್ತಿದ್ದ ಹಾಗೆಯೇ ಈ ರಥಘೋಷವೂ ಇದೆ ಎಂದು ಯೋಚಿಸಿದಳು. ಗಚ್ಚಿನ ಮೇಲಿದ್ದ ನವಿಲುಗಳು, ಗಜಶಾಲೆಯಲ್ಲಿದ್ದ ಆನೆಗಳು, ಮತ್ತು ಕುದುರೆಗಳು ಮಹೀಪತಿಯ ಈ ರಥಘೋಶವನ್ನು ಕೇಳಿ, ಮಳೆಗಾಲ ಪ್ರಾರಂಭವಾಯಿತೇನೋ ಎಂದು ನೋಡುವರೀತಿಯಲ್ಲಿ ಮೇಲೆ ನೋಡತೊಡಗಿದವು. ದಮಯಂತಿಯು ಹೇಳಿದಳು:
“ಮೇದಿನಿಯನ್ನೇ ಆವರಿಸುವಂತಿದ್ದ ಈ ರಥನಿರ್ಘೋಷವು ನನಗೆ ಇಷ್ಟೊಂದು ಸಂತೋಷವನ್ನು ಕೊಡುತ್ತಿದೆಯಾದರೆ ಇವನು ಮಹೀಪತಿ ನಲನೇ ಇರಬೇಕು. ಇಂದು ಆ ಚಂದ್ರಾಭವಕ್ತ್ರ ಅಸಂಕೇಯಗುಣ ವೀರ ನಲನನ್ನು ನೋಡದೇ ಇದ್ದರೆ ನಾನು ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ. ಇಂದು ನಾನು ಆ ವೀರನ ಬಾಹುಗಳ ಸುಖಸ್ಪರ್ಷವನ್ನು ಹೊಂದದೇ ಇದ್ದರೆ ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ. ಇಂದು ಆ ಮೇಘನಿರ್ಘೋಷ, ಬಂಗಾರದಂತೆ ಹೊಳೆಯುವ ನೈಷಧನು ನನ್ನಲ್ಲಿಗೆ ಬರದೇ ಇದ್ದರೆ ನಿಸ್ಸಂದೇಹವಾಗಿ ನಾನು ನಾಶವಾಗುತ್ತೇನೆ. ಇಂದು ಮತ್ತಗಜವನ್ನೂ ನಿಲ್ಲಿಸುವಂತಹ ಸಿಂಹವಿಕ್ರಾಂತ ರಾಜೇಂದ್ರನು ಬರದೇ ಇದ್ದರೆ ನಾನು ನಿಸ್ಸಂದೇಹವಾಗಿಯೂ ನಾಶವಾಗುತ್ತೇನೆ. ಸುಳ್ಳನ್ನಾಡಿದ್ದೇ ನೆನಪಿಲ್ಲ. ಮಾಡಿದ ತಪ್ಪುಗಳು ಯಾವುದೂ ನೆನಪಿಲ್ಲ. ಆ ಮಹಾತ್ಮನು ತಮಾಷೆಗೆಂದಾದರೂ ಕೊಟ್ಟ ಮಾತನ್ನು ಇಟ್ಟುಕೊಳ್ಳದೇ ಇದ್ದುದು ನೆನಪಿಲ್ಲ. ವೀರನೂ, ಕ್ಷಮಾವಂತನೂ, ಮೃದುಸ್ವಭಾವದವನೂ, ಜಿತೇಂದ್ರಿಯನೂ ಆದ ಆ ನನ್ನ ಪ್ರಭು ನನ್ನ ನೈಷಧನಿಗೆ ಯಾವ ನೀಚ ವೃತ್ತಿಗಳೂ ಇಲ್ಲ. ಅವನ ಗುಣಗಳನ್ನು ಸ್ಮರಿಸುತ್ತಾ, ದಿನ ರಾತ್ರಿಯೂ ಅವನ ಕುರಿತೇ ಚಿಂತಿಸುತ್ತಾ, ಪ್ರಿಯನಿಂದ ದೂರವಾದ ಈ ಹೃದಯವು ಶೋಕದಿಂದ ದೀನವಾಗಿದೆ.”
ಈ ರೀತಿ ವಿಲಪಿಸುತ್ತಾ ಬುದ್ದಿ ಕಳೆದುಕೊಂಡವಳಂತೆ ಅವಳು ಪುಣ್ಯಶ್ಲೋಕನನ್ನು ನೋಡಲೋಸುಗ ಅರಮನೆಯ ಮಹಾ ಮಹಡಿಗೆ ಹತ್ತಿ ಹೋದಳು. ಅಲ್ಲಿಂದ ರಥದ ಮಧ್ಯಮ ಕಕ್ಷದಲ್ಲಿ ಬಾಹುಕ ಮತ್ತು ವಾರ್ಷ್ಣೇಯರ ಸಹಿತ ಕುಳಿತಿದ್ದ ಮಹೀಪಾಲ ಋತುಪರ್ಣನನ್ನು ನೋಡಿದಳು. ವಾರ್ಷ್ಣೇಯ ಮತ್ತು ಬಾಹುಕರು ಆ ಉತ್ತಮ ರಥವನ್ನು ನಿಲ್ಲಿಸಿ ರಥದಿಂದಿಳಿದು ಹಯಗಳನ್ನು ಬಿಚ್ಚಿದರು. ನರಾಧಿಪ ಋತುಪರ್ಣನು ರಥದಿಂದ ಇಳಿದು ಭೀಮಪರಾಕ್ರಮಿ ಮಹಾರಾಜ ಭೀಮನ ಬಳಿಬಂದನು. ಭೀಮನು ಅಕಸ್ಮಾತ್ತಾಗಿ ಯಾವುದೇ ಕಾರಣವೂ ಇಲ್ಲದೇ ಬಂದಿದ್ದ ಅವನನ್ನು ಉತ್ತಮ ಗೌರವದಿಂದ ಸ್ವಾಗತಿಸಿದನು. ಅವನಿಗೆ ಸ್ತ್ರೀಯರು ಹೂಡಿದ್ದ ಉಪಾಯವು ತಿಳಿದಿರಲಿಲ್ಲ. ತನ್ನ ಮಗಳ ಸಲುವಾಗಿಯೇ ಆ ನೃಪತಿಯು ಬಂದಿದ್ದಾನೆ ಎಂದು ತಿಳಿಯದೇ, “ಸ್ವಾಗತ! ನನ್ನಿಂದ ಯಾವ ಕಾರ್ಯವಾಗಬೇಕು?” ಎಂದು ರಾಜನು ಕೇಳಿದನು.
ಧೀಮಂತ ಸತ್ಯಪರಾಕ್ರಮಿ ರಾಜ ಋತುಪರ್ಣನಾದರೂ ರಾಜರನ್ನಾಗಲೀ, ರಾಜಪುತ್ರರನ್ನಾಗಲೀ ಯಾರನ್ನೂ ನೋಡಲಿಲ್ಲ. ಸ್ವಯಂವರದ ಮಾತನ್ನೂ ಕೇಳಲಿಲ್ಲ ಮತ್ತು ವಿಪ್ರರ ಸಮಾಗಮವನ್ನೂ ನೋಡಲಿಲ್ಲ. ಮನಸ್ಸಿನಲ್ಲಿಯೇ ಇದನ್ನೆಲ್ಲಾ ಯೋಚಿಸಿ ಕೋಸಲಾಧಿಪನು
“ನಿಮ್ಮನ್ನು ಅಭಿನಂದಿಸಲು ನಾನು ಬಂದಿದ್ದೇನೆ!”
ಎಂದು ಹೇಳಿದನು. ರಾಜ ಭೀಮನಾದರೂ ಮುಗುಳ್ನಕ್ಕು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು:
“ಬಹು ಗ್ರಾಮಗಳನ್ನು ಅತಿಕ್ರಮಿಸಿ ಶತಯೋಜನಕ್ಕಿಂತಲೂ ಅಧಿಕ ದೂರ ಬರಲು ಇವನಿಗೆ ಏನಾದರೊಂದು ಕಾರಣವಿರಬಹುದು. ಸುಮ್ಮನೇ ಇಲ್ಲಿಗೆ ಬಂದಿರಲಿಕ್ಕಿಲ್ಲ. ಇವನು ಇಲ್ಲಿಗೆ ಬರಲು ನಿರ್ದಿಷ್ಟವಾದ ಅಲ್ಪಕಾರ್ಯವೊಂದು ಇದ್ದಿರಬಹುದು.”
ಆ ನೃಪತಿಯನ್ನು ಸತ್ಕರಿಸಿ “ವಿಶ್ರಮಿಸು!” ಎಂದು ಕಳುಹಿಸಿದನು. “ಸತ್ಕೃತನಾಗಿದ್ದೇನೆ!” ಎಂದು ಪುನಃ ಪುನಃ ಅವನು ಹೇಳಿದನು. ಸತ್ಕಾರದಿಂದ ಹರ್ಷಿತನಾದ ಅವನು ರಾಜನ ಸಹಚರರೊಡಗೂಡಿ ತೋರಿಸಿದ ಅತಿಥಿಗೃಹಕ್ಕೆ ಹೋದನು.
ವಾರ್ಷ್ಣೇಯನ ಜೊತೆಯಲ್ಲಿ ನೃಪ ಋತುಪರ್ಣನು ಹೋದ ನಂತರ ಬಾಹುಕನು ರಥಶಾಲೆಗೆ ಹೋಗಿ ರಥವನ್ನು ನಿಲ್ಲಿಸಿದನು. ಆ ಅಶ್ವಗಳನ್ನು ಬಿಚ್ಚಿ ಅವುಗಳಿಗೆ ಶಾಸ್ತ್ರೋಕ್ತ ಪರಿಚರಿ ಮಾಡಿದನು. ಅವುಗಳ ನೀಡಿಕೆಗಳನ್ನು ಸ್ವಯಂ ಪೂರೈಸಿ ರಥವನ್ನೇರಿ ಕುಳಿತುಕೊಂಡನು. ನೃಪ ಭಾಂಗಸ್ವರಿ, ಸೂತಪುತ್ರ ವಾಷ್ಣೇಯ ಮತ್ತು ಕುರೂಪಿ ಬಾಹುಕನನ್ನು ಕಂಡು ಶೋಕಾರ್ತಳಾದ ವೈದರ್ಭಿ ದಮಯಂತಿಯು ಚಿಂತಿಸತೊಡಗಿದಳು:
“ನಲನಂತೆಯೇ ರಥಧ್ವನಿಯನ್ನು ಮಾಡಿದವರು ಯಾರು? ನೈಷಧನೇ ಕಾಣುತ್ತಿಲ್ಲವಲ್ಲ! ಬಹುಷಃ ವಾರ್ಷ್ಣೇಯನೇ ಈ ವಿದ್ಯೆಯನ್ನು ಕಲಿತಿರಬಹುದು. ಆದರಿಂದಲೇ ಅವನು ನಲನಂತೆಯೇ ರಥ ನಿರ್ಘೋಷ ಮಾಡಿರಬಹುದು. ಅಥವಾ ರಾಜ ಋತುಪರ್ಣನು ನಲನಷ್ಟೇ ನಿಪುಣನಿರಬಹುದು. ಆದ್ದರಿಂದ ಅವನ ರಥನಿರ್ಘೋಶವು ನಲನಂತೆಯೇ ಕೇಳಿರಬಹುದು.”
ಈ ರೀತಿ ತರ್ಕಿಸುತ್ತಾ ದಮಯಂತಿಯು ನೃಪ ನೈಷಧನನ್ನು ಹುಡುಕಲೋಸುಗ ದೂತಿಯೊಬ್ಬಳನ್ನು ಕಳುಹಿಸಿದಳು.
ನಲ-ಕೇಶಿನಿ ಸಂವಾದ
ದಮಯಂತಿಯು ಹೇಳಿದಳು:
“ಕೇಶಿನಿ! ಹೋಗಿ ರಥದಲ್ಲಿ ಕುಳಿತಿದ್ದ ವಿಕೃತ, ಹೃಸ್ವಬಾಹಿಕ ಆ ರಥವಾಹಕನು ಯಾರೆಂದು ತಿಳಿದುಕೋ. ಅವನಲ್ಲಿಗೆ ಹೋಗಿ ಮೃದುವಾಗಿ ಅವನು ಕುಶಲದಿಂದ್ದಾನೆಯೇ ಕೇಳು. ಈ ಪುರುಷನು ಯಾರೆಂದು ಯಥಾವತ್ತಾಗಿ ಕೇಳಿ ತಿಳಿದುಕೋ. ಅವನೇ ನೃಪ ನಲನಿರಬಹುದೆಂದು ಮಹತ್ತರ ಶಂಕೆ ನನ್ನಲ್ಲಿದೆ. ಯಾಕೆಂದರೆ ನನ್ನ ಮನಸ್ಸು ಸಂತೃಪ್ತಿಯಿಂದಿದೆ ಮತ್ತು ಹೃದಯವು ಶಾಂತವಾಗಿದೆ. ನೀನು ಮಾತನಾಡುವಾಗ ಪರ್ಣದನ ವಚನಗಳನ್ನೂ ಸೇರಿಸಿಕೋ ಮತ್ತು ಅವನಾಡಿದ ಪ್ರತಿಯೊಂದು ವಾಕ್ಯವನ್ನೂ ಸರಿಯಾಗಿ ಕೇಳಿ ತಿಳಿದುಕೋ.”
ಈ ರೀತಿ ದೂತಿಯು ಬಾಹುಕನನ್ನು ಸಮೀಪಿಸಿ ಅವನಲ್ಲಿ ಮಾತನಾಡಿದಳು. ಕಲ್ಯಾಣಿ ದಮಯತಿಯು ಗಚ್ಚಿನಮೇಲೆ ನಿಂತು ನೋಡುತ್ತಿದ್ದಳು. ಕೇಶಿನಿಯು ಹೇಳಿದಳು:
“ಮನುಷ್ಯೇಂದ್ರ! ನಿನಗೆ ಸ್ವಾಗತ. ನಿನ್ನ ಕುಶಲವನ್ನು ಕೇಳುತ್ತಿದ್ದೇನೆ. ದಮಯಂತಿಯು ಒಂದು ಮಾತನ್ನು ಹೇಳಿ ಕಳುಹಿಸಿದ್ದಾಳೆ. ಗಮನವಿಟ್ಟು ಕೇಳು. ನೀವೆಲ್ಲರೂ ಎಂದು ಹೊರಟಿದ್ದಿರಿ ಮತ್ತು ಇಲ್ಲಿಗೆ ಏಕೆ ಆಗಮಿಸಿದ್ದೀರಿ? ನ್ಯಾಯವೆನಿಸಿದರೆ ಸತ್ಯವನ್ನು ಹೇಳು. ವೈದರ್ಭಿಯು ಕೇಳಲು ಇಚ್ಚಿಸುತ್ತಾಳೆ.”
ಬಾಹುಕನು ಹೇಳಿದನು:
“ಭಾಮಿನೀ! ಕೌಸಲದ ಯಶಸ್ವಿ ರಾಜನು ದಮಯಂತಿಯ ಎರಡನೆಯ ಸ್ವಯಂವರವು ನಡೆಯುತ್ತಿದೆ ಎಂದು ಕೇಳಿದನು. ಅದನ್ನು ಕೇಳಿದ ರಾಜನು ಶತಯೋಜನದೂರವನ್ನು ದಾಟುವ ವಾಯುವೇಗಗಳನ್ನುಳ್ಳ ಹಯಗಳೊಂದಿಗೆ ಹೊರಟನು. ನಾನು ಅವನ ಸಾರಥಿ.”
ಕೇಶಿನಿಯು ಹೇಳಿದನು:
“ನಿಮ್ಮಲ್ಲಿರುವ ಈ ಮೂರನೆಯವನು ಎಲ್ಲಿಯವನು ಮತ್ತು ಯಾರವನು? ಮತ್ತು ನೀನು ಯಾರು ಮತ್ತು ನಿನಗೆ ಈ ಕೆಲಸವು ಹೇಗೆ ಪ್ರಾಪ್ತವಾಯಿತು?”
ಬಾಹುಕನು ಹೇಳಿದನು:
“ಭದ್ರೇ! ಅವನು ಪುಣ್ಯಶ್ಲೋಕನ ಸೂತ; ವಾರ್ಷ್ಣೇಯನೆಂದು ಹೆಸರು. ನಲನು ಹೊರಟು ಹೋದ ನಂತರ ಅವನು ಭಾಂಗಸ್ವರಿಯಲ್ಲಿ ವಾಸಿಸುತ್ತಿದ್ದಾನೆ. ನಾನಾದರೂ ಓರ್ವ ಅಶ್ವಕುಶಲ ಮತ್ತು ಉತ್ತಮ ಅಡುಗೆಗಳನ್ನು ಮಾಡಬಲ್ಲವ. ಸ್ವಯಂ ಋತುಪರ್ಣನೇ ನನ್ನನ್ನು ಅವನ ಸಾರಥಿ ಮತ್ತು ಅಡುಗೆ ಭಟನನ್ನಾಗಿ ಇರಿಸಿಕೊಂಡಿದ್ದಾನೆ.”
ಕೇಶಿನಿಯು ಹೇಳಿದಳು:
“ಬಾಹುಕ! ರಾಜ ನಲನು ಎಲ್ಲಿಗೆ ಹೋದನೆಂದು ವಾರ್ಷ್ಣೇಯನಿಗೆ ತಿಳಿದಿದೆಯೇ? ನಿನ್ನ ಸಮ್ಮುಖದಲ್ಲಿ ಅವನು ಎಂದಾದರೂ ಅವನ ಕುರಿತು ಹೇಳಿದ್ದುಂಟೇ?”
ಬಾಹುಕನು ಹೇಳಿದನು:
“ಆ ಅಶುಭಕರ್ಮಿ ನಲನ ಪುತ್ರರನ್ನು ಇಲ್ಲಿಯೇ ಇರಿಸಿ ಅವನು ಹೊರಟುಹೋದ. ನೈಷಧನು ಎಲ್ಲಿದ್ದಾನೆಂದು ಅವನಿಗೂ ಗೊತ್ತಿಲ್ಲ. ನಲನು ಎಲ್ಲಿದ್ದಾನೆ ಎಂದು ಬೇರೆ ಯಾರಿಗೂ ಗೊತ್ತಿಲ್ಲ. ಅವನು ಎಲ್ಲಿಯೋ ಗೂಢವಾಗಿ ವಾಸಿಸುತ್ತಿರಬಹುದು. ಆ ಮಹೀಪತಿಯು ಅದೃಶ್ಯನಾಗಿದ್ದಾನೆ. ತದನಂತರದಲ್ಲಿ ಇವನೇ ನಲನೆಂದು ಹೇಳುವ ಯಾವರೀತಿಯ ಲಕ್ಷಣಗಳೂ ಉಳಿಯಲಿಲ್ಲ. ಅವನಿಗೆ ಮತ್ತು ಅವನವಳಿಗೆ ಮಾತ್ರ ಅವನ ಲಕ್ಷಣಗಳು ಗೊತ್ತು.”
ಕೇಶಿನಿಯು ಹೇಳಿದಳು:
“ಮೊದಲು ಅಯೋಧ್ಯೆಗೆ ಬಂದಿದ್ದ ಬ್ರಾಹ್ಮಣನೊಬ್ಬನು ಓರ್ವ ನಾರಿಯ ಈ ಮಾತುಗಳನ್ನು ಪುನಃ ಪುನಃ ಹೇಳುತ್ತಿದ್ದನು: “ಜೂಜುಗಾರ! ನನ್ನ ವಸ್ತ್ರವನ್ನು ಕತ್ತರಿಸಿ ಹೊರಟುಹೋದ ನೀನು ಎಲ್ಲಿದ್ದೀಯೆ? ಪ್ರಿಯ! ಮಲಗಿ ನಿದ್ರಿಸುತ್ತಿದ್ದ ಪ್ರಿಯೆಯನ್ನು ವಿಪಿನದಲ್ಲಿಯೇ ಬಿಟ್ಟು ಹೋದೆಯಲ್ಲ? ನೀನು ತೋರಿಸಿದಲ್ಲಿಯೇ ಅವಳು ಹಗಲು ರಾತ್ರಿಯೂ ದಹಿಸುತ್ತಾ ಅರ್ಧವಸ್ತ್ರವನ್ನೇ ಧರಿಸಿ ನಿನ್ನನ್ನು ಪ್ರತೀಕ್ಷಿಸುತ್ತಾ ಇದ್ದಾಳೆ.! ನಿನ್ನ ದುಃಖದಿಂದಲೇ ಅವಳು ಸತತವಾಗಿ ರೋದಿಸುತ್ತಿದ್ದಾಳೆ. ಅವಳಲ್ಲಿ ದಯೆತೋರಿಸಿ ಪ್ರತಿವಾಕ್ಯವನ್ನು ನೀಡು. ಅವಳಿಗೆ ಪ್ರಿಯವಾದ ಕಥೆಯನ್ನು ಪುನಃ ಹೇಳು.” ಅದೇ ಮಾತುಗಳನ್ನು ಅನಿಂದಿತೆ ವೈದರ್ಭಿಯು ಕೇಳಲಿಚ್ಛಿಸುತ್ತಾಳೆ. ನೀನು ಕೊಟ್ಟ ಪ್ರತಿವಾಕ್ಯವನ್ನು ಕೇಳಿದಾಗಿನಿಂದ ಅದೇ ಹಿಂದಿನ ಮಾತುಗಳನ್ನು ಪುನಃ ಕೇಳಲು ವೈದರ್ಭಿಯು ಇಚ್ಚಿಸುತ್ತಾಳೆ.’’
ಈ ರೀತಿ ಕೇಶಿನಿಯು ಹೇಳಿದಾಗ ನಲನ ಹೃದಯವು ವ್ಯಥಿತಗೊಂದು ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು. ದಹಿಸುತ್ತಿರುವ ದುಃಖವನ್ನು ಅದುಮಿಟ್ಟು ಮಹೀಪತಿಯು ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಆ ಮಾತುಗಳನ್ನು ಪುನಃ ಹೇಳಿದನು:
“ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಇವರು ಎಂದೂ ಕೃದ್ಧರಾಗುವುದಿಲ್ಲ. ವಿಷಮ ಸ್ಥಿತಿಯಲ್ಲಿದ್ದ, ಸುಖದಿಂದ ಪರಿಭ್ರಷ್ಟನಾದ ಮೂಢನೊಬ್ಬನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅಲ್ಲಿ ಕ್ರೋಧಿಸುವುದು ಸರಿಯಲ್ಲ. ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟವನಾಗಿ, ಸುಡುತ್ತಿರುವ ಮನಸ್ಸುಳ್ಳವನಾಗಿದ್ದ ಅವನು ಬಿಟ್ಟು ಹೋಗಿದ್ದುದಕ್ಕೆ ಸುಂದರಿಯು ಕ್ರೋಧಿಸುವುದು ಸರಿಯಲ್ಲ. ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡುದ್ದುದಕ್ಕೆ ಸುಂದರಿಯು ಕೋಪಿಸುವುದು ಸರಿಯಲ್ಲ.”
ಈ ರೀತಿ ನಲನು ಈ ವಾಕ್ಯಗಳನ್ನು ಹೇಳುತ್ತಿದ್ದಂತೆಯೇ ಪರಮ ದುಃಖಿತನಾಗಿ, ಕಣ್ಣೀರನ್ನು ತಡೆಹಿಡಿಯಲು ಅಶಕ್ತನಾಗಿ ಜೋರಾಗಿ ಅಳ ತೊಡಗಿದನು. ಕೇಶಿನಿಯು ದಮಯಂತಿಯ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ಮತ್ತು ಅವನ ವಿಕಾರ ರೂಪವನ್ನೂ ವರದಿಮಾಡಿದಳು.
ನಲನಿಗೆ ಮಕ್ಕಳ ದರ್ಶನ
ಶೋಕಪರಾಯಣೆ ದಮಯಂತಿಯು ಅದನ್ನು ಕೇಳಿ ಅವನು ನಲನೇ ಇರಬಹುದೆಂದು ಶಂಕಿಸಿ ಕೇಶಿನಿಯಲ್ಲಿ ಹೇಳಿದಳು:
“ಕೇಶಿನಿ! ಹೋಗು. ಬಾಹುಕನ ಕುರಿತು ಇನ್ನೂ ಪರೀಕ್ಷೆ ಮಾಡು. ಏನನ್ನೂ ಹೇಳಬೇಡ; ಆದರೆ ಅವನ ಹತ್ತಿರವೇ ಇದ್ದು ಅವನು ಮಾಡುವುದನ್ನು ಗಮನಿಸು. ಅವನು ಏನಾದರೂ ವಿಶಿಷ್ಟವಾದದ್ದನ್ನು ಮಾಡಿದರೆ ಅವನು ಯಾಕೆ ಮತ್ತು ಎಂದು ಹಾಗೆ ಮಾಡಿದ ಎಂದು ಸರಿಯಾಗಿ ಗಮನಿಸು. ಅವನನ್ನು ಪ್ರತಿಬಂಧಿಸುವುದಕ್ಕಾಗಿ ಅವನಿಗೆ ಅಗ್ನಿಯನ್ನು ಕೂಡ ಕೊಡಬೇಡ; ನೀರನ್ನು ಕೇಳಿದರೆ ಅದನ್ನೂ ಕೊಡಬೇಡ. ನಿಧಾನವಾಗಿ ಇವನ್ನೆಲ್ಲ ಮಾಡು. ಅವನು ಮಾಡುವುದೆಲ್ಲವನ್ನೂ ನೋಡಿ ನನ್ನಲ್ಲಿಗೆ ಬಂದು ಹೇಳು. ಮತ್ತಿನ್ನೇನಾದರೂ ನಡೆದರೂ ನನ್ನಲ್ಲಿಗೆ ಬಂದು ಹೇಳು.”
ದಮಯಂತಿಯು ಹೀಗೆ ಹೇಳಿದ ನಂತರ ಕೇಶಿನಿಯು ಬೇಗನೆ ಹೋದಳು ಮತ್ತು ಆ ಹಯಜ್ಞನ ಲಕ್ಷಣಗಳನ್ನೆಲ್ಲಾ ಗಮನಿಸಿ ಮರಳಿ ಬಂದು ಆ ಬಾಹುಕನಲ್ಲಿ ಕಂಡ ದೇವ ಮತ್ತು ಮಾನುಷ ನಿಮಿತ್ತಗಳೆಲ್ಲವನ್ನೂ ಯಥಾವತ್ತಾಗಿ ದಮಯಂತಿಯಲ್ಲಿ ನಿವೇದಿಸಿದಳು. ಕೇಶಿನಿಯು ಹೇಳಿದಳು:
“ದಮಯಂತಿ! ಇಷ್ಟೊಂದು ಧೃಢನಾಗಿರುವ ಮತ್ತು ಉಚ್ಛನಾಗಿರುವ ಬೇರೆ ಯಾವ ಮನುಷ್ಯನನ್ನು ಈ ಹಿಂದೆ ನಾನು ಕೇಳಿರಲಿಲ್ಲ ಮತ್ತು ನೋಡಿಯೂ ಇರಲಿಲ್ಲ. ಗಿಡ್ಡವಾದ ಬಾಗಿಲಿನಿಂದ ಬಂದರೆ ತನ್ನ ತಲೆಯನ್ನು ಅವನು ತಗ್ಗಿಸುವುದಿಲ್ಲ. ಆದರೆ ಮೇಲ್ಮುಚ್ಚುಗೆಯೇ ಅವನು ಸುಖವಾಗಿ ಹೋಗಲಿ ಎಂದು ಮೇಲೇರುತ್ತದೆ. ಕಿರಿದಾದ ಪ್ರವೇಶದ್ವಾರವು ಅವನಿಗಾಗಿ ತಾನಾಗಿಯೇ ಅಗಲವಾಗುತ್ತದೆ. ರಾಜನು ಋತುಪರ್ಣನಿಗಾಗಿ ಅನೇಕ ಆಹಾರ ಪದಾರ್ಥಗಳನ್ನು ಮತ್ತು ಮಾಂಸಗಳನ್ನು ಕಳುಹಿಸಿದ್ದಾನೆ. ಅವುಗಳನ್ನು ತೊಳೆಯಲು ಅಲ್ಲಿ ಒಂದು ತೊಟ್ಟಿಯೂ ಇದೆ. ಅವನ ದೃಷ್ಟಿಮಾತ್ರದಿಂದಲೇ ಆ ಕುಂಭವು ನೀರಿನಿಂದ ತುಂಬಿಕೊಂಡಿತು. ಬಾಹುಕನು ಮಾಂಸವನ್ನು ತೊಳೆದಿಟ್ಟು, ಒಂದು ಮುಷ್ಠಿ ಕಟ್ಟಿಗೆಯನ್ನು ಹಿಡಿದು, ತುಂಡುಮಾಡಿ ಗುಂಪಿನಲ್ಲಿ ಇಟ್ಟೊಡನೆಯೇ ಒಮ್ಮಿಂದೊಮ್ಮೆಲೇ ಹವ್ಯವಾಹನನು ಅದರಲ್ಲಿ ಪ್ರಜ್ವಲಿಸಲು ಪ್ರಾರಂಭಿಸಿದನು. ಆ ಅದ್ಭುತವನ್ನು ಕಂಡು ವಿಸ್ಮಿತನಾದ ನಾನು ಇಲ್ಲಿಗೆ ಬಂದಿದ್ದೇನೆ. ಅಲ್ಲಿ ಇನ್ನೊಂದು ಸುಮಹದಾಶ್ಚರ್ಯವನ್ನು ನೋಡಿದೆ: ಶುಭೇ! ಅಗ್ನಿಯನ್ನು ಸ್ಪರ್ಷಮಾಡಿದರೂ ಅವನನ್ನು ಸುಡಲಿಲ್ಲ. ಅವನಿಗೆ ಬೇಕಾದಲಾಗಲೆಲ್ಲಾ ನೀರು ಒಮ್ಮಿಂದೊಮ್ಮೆಲೇ ಹರಿಯುತ್ತದೆ. ಇನ್ನೂ ಒಂದು ಸುಮದಾಶ್ವರ್ಯವನ್ನು ನೋಡಿದೆ: ಪುಷ್ಪಗಳನ್ನು ಕೈಯಲ್ಲಿ ಹಿಡಿದು ತಿಕ್ಕಿದರೂ ಆ ಹೂಗಳು ತಾಜಾ ಮತ್ತು ಸುಗಂಧಿತವಾಗುತ್ತವೆ. ಈ ಅದ್ಭುತಗಳನ್ನು ನೋಡಿದ ನಾನು ಬೇಗನೆ ಇಲ್ಲಿಗೆ ಬಂದೆ.”
ಪುಣ್ಯಶ್ಲೋಕನ ಈ ಕೃತ್ಯಗಳನ್ನು ಕೇಳಿದ ದಮಯಂತಿಯು ನಲನು ಪ್ರಾಪ್ತನಾದನೆಂದು ಆ ಕರ್ಮಚೇಷ್ಟೆಗಳು ಸೂಚಿಸುತ್ತವೆ ಎಂದು ತೀರ್ಮಾನಿಸಿದಳು. ತನ್ನ ಪತಿ ನಲನೇ ಬಾಹುಕನ ರೂಪಧರಿಸಿದ್ದಾನೆ ಎಂದು ಶಂಕಿಸಿ ರೋದಿಸಿದಳು ಮತ್ತು ಕೇಶಿನಿಗೆ ಮೃದು ವಾಕ್ಯಗಳಲ್ಲಿ ಹೇಳಿದಳು:
“ಭಾಮಿನಿ! ಪುನಃ ಹೋಗು. ಬಾಹುಕನು ಗಮನಿಸದೇ ಇರುವಾಗ ಅಡುಗೆ ಮನೆಯಿಂದ ಅವನು ತಯಾರಿಸಿದ ಮಾಂಸವನ್ನು ಸ್ವಲ್ಪ ತೆಗೆದುಕೊಂಡು ಇಲ್ಲಿಗೆ ಬಾ!”
ಕೇಶಿನಿಯು ಹೋಗಿ, ಬಾಹುಕನು ಯಾವುದರಲ್ಲಿಯೋ ಮಗ್ನನಾಗಿರುವಾಗ ಬಿಸಿಬಿಸಿಯಾದ ಮಾಂಸದ ತುಂಡೊಂದನ್ನು ಪ್ರಿಯಕಾರಿಣಿ ದಮಯಂತಿಗೆಂದು ತೆಗೆದು ತಕ್ಷಣ ತಂದು ಕೊಟ್ಟಳು. ಹಿಂದೆ ನಲನು ತಯಾರಿಸಿದ ಮಾಂಸದ ರುಚಿಯನ್ನು ಬಹಳಷ್ಟು ಅರಿತಿದ್ದ ಅವಳು ಅದರ ರುಚಿನೋಡಿದ ಕೂಡಲೇ ಇದನ್ನು ತಯಾರಿಸಿದ್ದು ನಲನೇ ಹೌದು ಎಂದು ತಿಳಿದು ಬಹುದುಃಖಿತಳಾದಳು. ಬಹಳಷ್ಟ್ರು ರೋದಿಸಿದ ನಂತರ ಮುಖವನ್ನು ತೊಳೆದು, ತನ್ನ ಅವಳಿ ಮಕ್ಕಳನ್ನು ಕೇಶಿನಿಯ ಸಂಗಡ ಕಳುಹಿಸಿದಳು. ಭ್ರಾತನೊಡನೆ ಇಂದ್ರಸೇನೆಯನ್ನು ಬಾಹುಕನು ಗುರುತಿಸಿದನು, ಮತ್ತು ರಾಜನು ಅವರಲ್ಲಿಗೆ ಓಡಿಹೋಗಿ ಬಿಗಿಯಾಗಿ ಅಪ್ಪಿಕೊಂಡನು. ಸುರಸುತರಂತಿದ್ದ ಮಕ್ಕಳನ್ನು ಸೇರಿದ ಬಾಹುಕನು ದುಃಖಪರಿತಾತ್ಮನಾಗಿ ಜೋರಾಗಿ ರೋದಿಸತೊಡಗಿದನು. ಈ ರೀತಿ ನೈಷಧನು ತನ್ನ ಭಾವನೆಗಳನ್ನು ಹಲವು ಬಾರಿ ತೋರಿಸುತ್ತಾ, ಒಮ್ಮೆಲೇ ಆ ಪುತ್ರರನ್ನು ಬಿಟ್ಟು ಕೇಶಿನಿಗೆ ಈ ರೀತಿ ಹೇಳಿದನು:
“ಭದ್ರೆ! ಈ ಅವಳಿಗಳು ನನ್ನ ಮಕ್ಕಳ ಸುಸದೃಶರಾಗಿದ್ದಾರೆ. ಒಮ್ಮಿಂದೊಮ್ಮೆಲೇ ಅವರನ್ನು ನೋಡಿದಾಗ ಕಣ್ಣೀರುಹರಿಸಿಬಿಟ್ಟೆ! ನೀನು ಇಲ್ಲಿಗೆ ಬಹಳಷ್ಟು ಸಾರಿ ಬರುತ್ತಿದ್ದೇಯೆ. ಜನರು ಕೆಟ್ಟದ್ದಾಗಿ ಯೋಚಿಸಬಹುದು. ನಾವು ಈ ದೇಶದಲ್ಲಿ ಅತಿಥಿಗಳು. ಹೋಗು ಭದ್ರೇ! ನಿನಗೆ ನನ್ನ ನಮನಗಳು.”
ನಲ-ದಮಯಂತೀ ಸಮಾಗಮ
ಧೀಮತ ಪುಣ್ಯಶ್ಲೋಕನ ಈ ಎಲ್ಲ ಭಾವುಕತೆಯನ್ನೂ ನೋಡಿದ ಕೇಶಿನಿಯು ಕ್ಷಿಪ್ರವಾಗಿ ಬಂದು ದಮಯಂತಿಯಲ್ಲಿ ನಿವೇದಿಸಿದಳು. ಅನಂತರ ಅವನು ನಲನೇ ಇರಬಹುದೆಂಬ ಶಂಕೆಯಿಂದ ಉತ್ಸುಕಳೂ, ದುಃಖಾರ್ತಳೂ ಆದ ದಮಯಂತಿಯು ಕೇಶಿನಿಯನ್ನು ತನ್ನ ತಾಯಿಯ ಬಳಿ ಹೀಗೆ ಹೇಳಿ ಕಳುಹಿಸಿದಳು:
“ಅವನು ನಲನಿರಬಹುದೆಂಬ ಶಂಕೆಯಿಂದ ನಾನು ಬಾಹುಕನನ್ನು ಬಹು ರೀತಿಗಳಿಂದ ಪರೀಕ್ಷಿಸಿದ್ದೇನೆ. ಅವನ ರೂಪವೊಂದರಲ್ಲಿ ಮಾತ್ರ ಶಂಕೆಯಿದೆ. ಅದನ್ನು ನಾನೇ ಸ್ವತಃ ತಿಳಿಯಬೇಕಾಗಿದೆ. ಅಮ್ಮ! ಅವನನ್ನು ಹೇಗಾದರೂ ಇಲ್ಲಿಗೆ ಕರೆಯಿಸು ಅಥವಾ ನನಗಾದರೂ ಅಲ್ಲಿಗೆ ಹೋಗಲು ಅನುಮತಿಯನ್ನು ಕೊಡು. ಇದನ್ನು ತಂದೆಯವರಿಗೆ ತಿಳಿಸಿಯೂ ಅಥವಾ ತಿಳಿಸದೆಯೂ ಮಾಡಬಹುದು.”
ವೈದರ್ಭಿಯ ಈ ಮಾತುಗಳನ್ನು ಕೇಳಿದ ದೇವಿಯು ಭೀಮನಲ್ಲಿ ಹೇಳಲು ಆ ಪಾರ್ಥಿವನು ಮಗಳ ಅಭಿಪ್ರಾಯಕ್ಕೆ ಅನುಮತಿಯನ್ನು ಕೊಟ್ಟನು. ತನ್ನ ಮಾತಾ ಪಿತೃಗಳ ಅನುಮತಿಯನ್ನು ಪಡೆದ ಅವಳು ತಾನು ವಾಸಿಸುತ್ತಿದ್ದಲ್ಲಿಗೆ ನಲನನ್ನು ಕರೆತರಿಸಿದಳು. ನಲನನ್ನು ನೋಡಿದ ಕೂಡಲೇ ಆ ವರವರ್ಣಿನಿ ದಮಯಂತಿಯು ತೀವ್ರ ಶೋಕಾವಿಷ್ಟಳಾದಳು. ಆಗ ಕಾಶಾಯ ವಸ್ತ್ರವನ್ನು ಧರಿಸಿದ್ದ, ಜಟಿಲಳಾದ, ಕೊಳೆ-ಧೂಳಿನಿಂದ ಕಲುಷಿತಳಾದ ದಮಯಂತಿಯು ಬಾಹುಕನನ್ನುದ್ದೇಶಿಸಿ ಮಾತನಾಡಿದಳು:
“ಬಾಹುಕ! ನೀನು ಈ ಹಿಂದೆ ಮಲಗಿದ್ದ ಸ್ತ್ರೀಯನ್ನು ವಿಪಿನದಲ್ಲಿ ಬಿಟ್ಟುಹೋದ ಧರ್ಮಜ್ಞ ಎಂಬ ಹೆಸರಿನ ಪುರುಷನನ್ನು ಯಾವಾಗಲಾದರೂ ನೋಡಿದ್ದೀಯಾ? ಪುಣ್ಯಶ್ಲೋಕ ನಲನನ್ನು ಬಿಟ್ಟು ಇನ್ನ್ಯಾರು ಮುಗ್ದಳಾದ, ಶ್ರಮದಿಂದ ಆಯಾಸಗೊಂಡಿದ್ದ ತನ್ನ ಪ್ರಿಯೆ ಹೆಂಡತಿಯನ್ನು ವಿಜನ ಪ್ರದೇಶದಲ್ಲಿ ಬಿಟ್ಟು ಹೋಗುತ್ತಾರೆ? ನನ್ನಿಂದ ಯಾವ ಮಹಾ ಅಪರಾಧವು ಆಯಿತೆಂದು ಆ ಮಹೀಪತಿಯು ನಿದ್ರೆಯಲ್ಲಿ ಪರವಶಳಾಗಿದ್ದ ನನ್ನನ್ನು ವಿಪಿನದಲ್ಲಿ ಬಿಟ್ಟು ಹೋದ? ಹಿಂದೆ ನಾನು ಸಾಕ್ಷಾತ್ ದೇವತೆಗಳನ್ನೇ ತಿರಸ್ಕರಿಸಿ ವರಿಸಿದ, ಅವನಲ್ಲೇ ಅನುವ್ರತಳಾದ, ಪುತ್ರಿಣಿ, ಅಭಿಕಾಮಿ ನನ್ನನ್ನು ಅವನು ಹೇಗೆ ಬಿಟ್ಟುಹೋದ? ಅಗ್ನಿಯ ಮುಂದೆ ಕೈ ಹಿಡಿಯುವಾಗ ಮತ್ತು ಹಂಸಗಳಿಗೆ ಅವಳಿಗೆ ಬೆಂಬಾಲಕನಾಗಿರುತ್ತೇನೆ ಎಂದು ಕೊಟ್ಟ ವಚನವಾದರೂ ಎಲ್ಲಿಗೆ ಹೋಯಿತು?”
ಈ ರೀತಿ ದಮಯಂತಿಯು ಹೇಳುತ್ತಿದ್ದಂತೆಯೇ ಅವಳ ಕಣ್ಣುಗಳಿಂದ ಶೋಕಜ ಕಣ್ಣೀರು ಧಾರಾಕಾರವಾಗಿ ಹರಿಯಿತು.
ಕೃಷ್ಣತಾರೆಗಳಂತೆ ಕೆಂಪಾಗಿದ್ದ ಆ ಕಣ್ಣುಗಳಲ್ಲಿ ನೀರು ಹರಿಯುತ್ತಿದ್ದುದನ್ನು ಕಂಡ ನಲನು ಶೋಕಾರ್ತನಾಗಿ ಹೇಳಿದನು:
“ಭೀರು! ನಾನು ರಾಜ್ಯವನ್ನು ಕಳೆದುಕೊಂಡಿದ್ದುದು ನನ್ನ ಸ್ವಂತ ಕರ್ಮದಿಂದಲ್ಲ; ಅದೆಲ್ಲಾ ಆದದ್ದು ಕಲಿಯಿಂದ. ನಿನ್ನನ್ನು ನಾನು ತ್ಯಜಿಸಿದ್ದೂ ಅವನಿಂದಲೇ! ಶ್ರೇಷ್ಠಳಾದ ನೀನು ವನದಲ್ಲಿರುವಾಗ ನಿನ್ನಿಂದಲೇ ಹಿಂದೆ ಶಪಿತನಾದ ಅವನು ವಸ್ತ್ರಗಳನ್ನು ಕಳೆದುಕೊಂಡ ನನ್ನೊಡನೆ ದುಃಖಿತನಾಗಿ ಶೋಕಿತನಾಗಿದ್ದನು. ಅಂದಿನಿಂದಲೂ ಕಲಿಯು ನನ್ನ ದೇಹದಲ್ಲಿದ್ದುಕೊಂಡು ನಿನ್ನ ಶಾಪದಿಂದಾಗಿ ಸತತವಾಗಿ ದಹಿಸುತ್ತಿದ್ದನು. ಈಗ ನಾನು ನನ್ನ ಪ್ರಯತ್ನ ಮತ್ತು ತಪಸ್ಸಿನಿಂದ ಅವನನ್ನು ಜಯಿಸಿದ್ದೇನೆ. ನಮ್ಮ ಈ ದುಃಖಕ್ಕೆ ಅಂತ್ಯವು ಇದ್ದೇ ಇದೆ. ಆ ಪಾಪಿಯು ನನ್ನನ್ನು ಬಿಟ್ಟು ಹೊರಟು ಹೋದನು. ಆನಂತರವೇ ನಾನು ನಿನಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಇನ್ನ್ಯಾವುದೂ ಉದ್ದೇಶವಿಲ್ಲ. ಆದರೆ, ಅನುರಕ್ತ ಮತ್ತು ಅನುವ್ರತ ಪತಿಯನ್ನು ತಿರಸ್ಕರಿಸಿ ನಿನ್ನ ಹಾಗಿನ ಒಬ್ಬ ನಾರಿಯು ಹೇಗೆ ಇನ್ನೊಬ್ಬನನ್ನು ವರಿಸಬಹುದು? ಪೃಥಿವಿಯನ್ನೆಲ್ಲಾ ತಿರುಗುತ್ತಿದ್ದ ದೂತರು ನೃಪಶಾಸನದಂತೆ ಭೈಮಿಯು ತನ್ನ ಬಯಕೆಯಂತೆಯೇ ತನಗೆ ಅನುರೂಪ ಎರಡನೆಯ ಪತಿಯನ್ನು ವರಿಸುವವಳಿದ್ದಾಳೆ ಎಂದು ಹೇಳಿದರು. ಅದನ್ನು ಕೇಳಿದ ತಕ್ಷಣವೇ ಭಾಂಗಸ್ವರಿಯು ತ್ವರಿತದಿಂದ ಇಲ್ಲಿಗೆ ಬಂದಿದ್ದಾನೆ.”
ನಲನ ಆ ಪರಿವೇದನೆಯನ್ನು ಕೇಳಿದ ದಮಯಂತಿಯು ಭೀತಳಾಗಿ, ನಡುಗುತ್ತಾ, ಕೈ ಮುಗಿದು ಈ ಮಾತುಗಳನ್ನು ಹೇಳಿದಳು:
“ನಿಷಧಾಧಿಪ! ಕಲ್ಯಾಣ! ನನ್ನನ್ನು ಪಾಪಿಯೆಂದು ಪರಿಶಂಕಿಸಬೇಡ. ಯಾಕೆಂದರೆ ನಾನು ದೇವತೆಗಳನ್ನೂ ತಿರಸ್ಕರಿಸಿ ನಿನ್ನನ್ನು ವರಿಸಿದ್ದೇನೆ. ನಿನ್ನನ್ನು ಬರುವಂತೆ ಮಾಡಲೋಸುಗವೇ ಎಲ್ಲಕಡೆಗೂ ಬ್ರಾಹ್ಮಣರು ಹೋಗಿ ದಶ ದಿಶೆಗಳಲ್ಲಿಯೂ ನನ್ನ ವಾಖ್ಯಗಳನ್ನು ಹಾಡಿ ಹೇಳಿದರು. ಈ ರೀತಿ ಪರ್ಣಾದ ಎಂಬ ಹೆಸರಿನ ವಿದ್ವಾನ್ ಬ್ರಾಹ್ಮಣನು ಕೋಸಲಕ್ಕೆ ಹೋದಾಗ ಅಲ್ಲಿ ಋತುಪರ್ಣನ ನಿವೇಶನದಲ್ಲಿ ನಿನ್ನನ್ನು ಕಂಡನು. ನನ್ನ ವಾಖ್ಯಗಳಿಗೆ ಸರಿಯಾದ ಪ್ರತಿವಾಖ್ಯವನ್ನು ನೀನು ಹೇಳಿದಹಾಗೆಯೇ ಅವನು ತಂದ ನಂತರ ನಿನ್ನನ್ನು ಇಲ್ಲಿಗೆ ಬರುವಂತೆ ಮಾಡುವ ಉಪಾಯವನ್ನು ನಾನು ಕಂಡೆ. ನಿನ್ನನ್ನು ಬಿಟ್ಟು ಈ ಲೋಕಗಳಲ್ಲಿ ಒಂದು ದಿನದಲ್ಲಿ ನೂರು ಯೋಜನೆಗಳನ್ನು ಅಶ್ವಗಳಮೇಲೆ ಪ್ರಯಾಣ ಮಾಡಲು ಸಮರ್ಥರಾದವರು ಬೇರೆ ಯಾರೊಬ್ಬರೂ ಇಲ್ಲ. ನಿನ್ನ ಈ ಚರಣಗಳನ್ನು ನಾನು ಹೇಗೆ ಅಪ್ಪಿ ಹಿಡಿದಿದ್ದೇನೋ ಹಾಗೆ ಎಂದೂ ನನ್ನ ಮನಸ್ಸಿನಲ್ಲಿಯೂ ನಿನಗೆ ಅಪಕೃತಿಯನ್ನು ಎಸೆಗಲಿಲ್ಲ. ಒಮ್ಮೆಯಾದರೂ ನಾನು ಪಾಪದಿಂದ ನಡೆದುಕೊಂಡಿದ್ದರೆ ಸದಾ ಚಲಿಸುತ್ತಿರುವ, ಈ ಲೋಕದಲ್ಲಿ ಇರುವವೆಲ್ಲವಕ್ಕೂ ಸಾಕ್ಷಿಯಾಗಿರುವ, ಯಾವಾಗಲೂ ಚಲಿಸುತ್ತಿರುವ ವಾಯುವು ನನ್ನ ಪ್ರಾಣವನ್ನು ಹಾರಿಸಲಿ. ಅದೇರೀತಿ ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ಬೇರೆಯವರ ಮನೆಗಳಿಗೆ ಸದಾ ಹೋಗುತ್ತಿರುವ ಸೂರ್ಯನು ನನ್ನ ಪ್ರಾಣವನ್ನು ಬಿಡುಗಡೆಮಾಡಲಿ. ಸರ್ವ ಭೂತಗಳೊಳಗೆ ಸಾಕ್ಷಿಯಾಗಿ ಸಂಚರಿಸುತ್ತಿರುವ ಚಂದ್ರಮನು ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ನನ್ನ ಪ್ರಾಣವನ್ನು ಕೊಂಡೊಯ್ಯಲಿ. ಮೂರೂ ಲೋಕಗಳಿಗೆ ಧಾರಕ ಈ ಮೂರೂ ದೇವತೆಗಳು ಸತ್ಯವೇನೆಂದು ಹೇಳುವರು ಅಥವಾ ನನ್ನನ್ನು ಇಲ್ಲಿಯೇ ತ್ಯಜಿಸುವರು.”
ಹೀಗೆ ಹೇಳುತ್ತಿದ್ದಂತೆಯೇ ಅಂತರಿಕ್ಷದಲ್ಲಿ ವಾಯುವು ಹೇಳಿದನು:
“ನಲ! ಇವಳಿಂದ ಯಾವ ಪಾಪವೂ ನಡೆದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ದಮಯಂತಿಯು ತನ್ನ ಶೀಲನಿಧಿಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ಡಾಳೆ. ಈ ಮೂರು ವರ್ಷಗಳು ಅವಳನ್ನು ರಕ್ಷಿಸುತ್ತಾ ಬಂದಿರುವ ನಾವೇ ಅದಕ್ಕೆ ಸಾಕ್ಷಿ. ನಿನಗಾಗಿ ಬಳಸಿದ ಈ ಉಪಾಯಕ್ಕೆ ಸರಿಸಾಟಿ ಇನ್ನೊಂದಿಲ್ಲ. ಯಾಕೆಂದರೆ ನಿನ್ನನ್ನು ಹೊರತು ಈ ಭುಮಿಯಲ್ಲಿ ಒಂದೇ ದಿನದಲ್ಲಿ ನೂರು ಯೋಜನೆ ಹೋಗುವಂತವರು ಇನ್ನೊಬ್ಬರಿಲ್ಲ. ಭೈಮಿಯು ನಿನ್ನನ್ನು ಪಡೆದಿದ್ದಾಳೆ. ನೀನು ಅವಳನ್ನು ಪಡೆದಿದ್ದೀಯೆ. ಈ ವಿಷಯದಲ್ಲಿ ಯಾವುದೇ ಸಂಶಯವನ್ನು ತಾಳದಿರು. ನಿನ್ನ ಭಾರ್ಯೆಯನ್ನು ಕೂಡು!”
ವಾಯುವು ಹೇಳುತ್ತಿದ್ದ ಹಾಗೆಯೇ ಪುಷ್ಪವೃಷ್ಟಿಯಾಯಿತು, ದೇವ ದುಂದುಭಿಗಳು ಮೊಳಗಿದವು ಮತ್ತು ಮಂಗಲಕರ ಗಾಳಿ ಬೀಸಿತು. ಆ ಅದ್ಭುತವನ್ನು ನೋಡಿ ಅರಿಂದಮ ರಾಜ ನಲನು ದಮಯಂತಿಯ ಮೇಲಿದ್ದ ಎಲ್ಲ ಶಂಕೆಗಳನ್ನು ಕಳೆದುಕೊಂಡನು. ವಸುಧಾಧಿಪನು ನಾಗರಾಜನನ್ನು ಸಂಸ್ಮರಿಸುತ್ತಾ ಶುದ್ದ ವಸ್ತ್ರವನ್ನು ಧರಿಸಿದನು ಮತ್ತು ತನ್ನ ಸ್ವ-ರೂಪವನ್ನು ಹೊಂದಿದನು. ಸ್ವರೂಪಿ ತನ್ನ ಪತಿಯನ್ನು ನೋಡಿ ಅನಿಂದಿತೆ ಭೀಮಸುತೆಯು ಗಟ್ಟಿಯಾಗಿ ಕೂಗುತ್ತಾ ಪುಣ್ಯಶ್ಲೋಕನನ್ನು ಆಲಿಂಗಿಸಿದಳು. ಮೊದಲಿನಂತೆ ಹೊಳೆಯುತ್ತಿದ್ದ ರಾಜ ನಲನೂ ಕೂಡ ಭೈಮಿಯನ್ನು ಆಲಂಗಿಸಿದನು ಮತ್ತು ತನ್ನ ಸುತರೀರ್ವರನ್ನೂ ಆನಂದದಿಂದ ಬರಮಾಡಿಕೊಂಡನು. ಅನಂತರ ಆ ಆಯತಾಕ್ಷಿ ಶುಭಾನನೆಯು ತನ್ನ ಮುಖವನ್ನು ಅವನ ಎದೆಯ ಮೇಲಿರಿಸಿ ದುಃಖ ತುಂಬಿಬಂದು ನಿಟ್ಟುಸಿರು ಬಿಟ್ಟಳು. ಕೊಳೆಯಿಂದ ಲೇಪಿತಗೊಂಡಿದ್ದ ಆ ಶುಚಿಸ್ಮಿತೆಯು ಕಣ್ಣೀರುತುಂಬಿದವಳಾಗಿ ಆ ಪುರುಷವ್ಯಾಘ್ರನನ್ನು ತುಂಬಾ ಹೊತ್ತು ಅಪ್ಪಿಕೊಂಡೇ ಇದ್ದಳು. ಆಗ ವೈದರ್ಭಿಯ ಜನನಿಯು ಭೀಮನಿಗೆ ದಮಯಂತಿ ಮತ್ತು ನಲರ ಮಧ್ಯೆ ನಡೆದುದೆಲ್ಲವನ್ನೂ ಹೇಳಿದಳು. ಆಗ ಮಹಾರಾಜನು ಹೇಳಿದನು:
“ಸುಖವಾಗಿ ವಿಶ್ರಮಿಸಿ ನಾಳೆ ಶೌಚಾದಿಗಳನ್ನು ಮುಗಿಸಿದನಂತರ ನಲ ಮತ್ತು ದಮಯಂತಿಯರನ್ನು ಒಟ್ಟಿಗೇ ನೋಡುತ್ತೇನೆ!”
ಆ ರಾತ್ರಿಯನ್ನು ಅವರಿಬ್ಬರೂ ಹಿಂದೆ ಅರಣ್ಯದಲ್ಲಿ ನಡೆದುದನ್ನು ಪರಸ್ಪರರಲ್ಲಿ ಹೇಳಿಕೊಳ್ಳುತ್ತಾ ಸಂತೋಷದಿಂದ ಕಳೆದರು. ಮೂರು ವರ್ಷಗಳ ನಂತರ ಭಾರ್ಯೆಯನ್ನು ಸೇರಿ ಅವನು ಸರ್ವಕಾಮಗಳನ್ನೂ ಪೂರೈಸಿದಂಥವನಾಗಿ ಪರಮ ಸುಖವನ್ನು ಹೊಂದಿದನು. ದಮಯಂತಿಯೂ ಕೂಡ ತನ್ನ ಪತಿಯನ್ನು ಕೂಡಿ ಅರ್ಧವೇ ಬೆಳೆದಿರುವ ಸಸಿಗಳ ಮೇಲೆ ಮಳೆ ಬಿದ್ದರೆ ಹೇಗೆ ಭೂಮಿಯು ಹರ್ಷಗೊಳ್ಳುವುದೋ ಹಾಗೆ ಹರ್ಷಿತಳಾದಳು. ಅವಳ ಪತಿಯನ್ನು ಪುನಃ ಸೇರಿ, ಆಯಾಸವನ್ನು ಕಳೆದುಕೊಂಡು, ಜ್ವರವು ಶಾಂತವಾಗಿ, ಹೃದಯವು ಹರ್ಷಭರಿತವಾಗಿ, ಎಲ್ಲ ಆಸೆಗಳನ್ನೂ ಪೂರೈಸಿಕೊಂಡವಳಾಗಿ ಭೌಮಿಯು ಉದಯಿಸುತ್ತಿರುವ ಚಂದ್ರನೊಡನಿರುವ ರಾತ್ರಿಯಂತೆ ಕಂಗೊಳಿಸಿದಳು.
ಋತುಪರ್ಣನ ಸ್ವದೇಶ ಗಮನ
ಆ ರಾತ್ರಿಯನ್ನು ಕಳೆದ ನಂತರ ರಾಜ ನಲನು ಸ್ವಲಂಕೃತನಾಗಿ ವೈದರ್ಭಿಯ ಸಹಿತ ವಸುಧಾಧಿಪನನ್ನು ಕಂಡನು. ನಲನು ತನ್ನ ಮಾವನಿಗೆ ವಿನಯದಿಂದ ನಮಸ್ಕರಿಸಿದನು ಮತ್ತು ಅವನ ನಂತರದಲ್ಲಿ ಶುಭೆ ದಮಯಂತಿಯು ತಂದೆಗೆ ವಂದಿಸಿದಳು. ಭೀಮನು ತನ್ನ ಮಗನೋ ಎನ್ನುವ ರೀತಿಯಲ್ಲಿ ಅವನನ್ನು ಸಂತೋಷದಿಂದ ಸ್ವಾಗತಿಸಿದನು ಮತ್ತು ತಕ್ಕುದಾದ ಗೌರವವನ್ನಿತ್ತನು. ನಲನ ಜೊತೆಗಿದ್ದ ಪತಿವ್ರತೆ ದಮಯಂತಿಯನ್ನು ಪ್ರಭುವು ಸಂತವಿಸಿದನು. ಯಥಾವಿಧಿಯಲ್ಲಿ ಗೌರವವನ್ನು ಸ್ಪೀಕರಿಸಿ ರಾಜ ನಲನು ಅವನಿಗೆ ತನ್ನ ಗೌರವವನ್ನು ಅರ್ಪಿಸಿದನು. ಈ ರೀತಿ ನಲನ ಆಗಮನವನ್ನು ನೋಡಿ ನಗರದಲ್ಲೆಲ್ಲಾ ಸಂಪ್ರಹೃಷ್ಟ ಜನರ ಮಹತ್ತರ ಹರ್ಷೋದ್ಗಾರವಾಯಿತು. ಪತಾಕ ಧ್ವಜ ಮಾಲೆಗಳಿಂದ ನಗರವು ಶೋಭೆಗೊಂಡಿತು. ರಾಜ ಮಾರ್ಗವು ಸಿಂಚಿಸಲ್ಪಟ್ಟಿತು ಮತ್ತು ಪುಷ್ಪಗಳಿಂದ ಹಾಸಿಸಲ್ಪಟ್ಟಿತು. ಪೌರರ ದ್ವಾರ ದ್ವಾರಗಳಲ್ಲಿ ಪುಷ್ಪಗುಚ್ಚಗಳನ್ನು ಇಡಲಾಗಿತ್ತು ಮತ್ತು ಎಲ್ಲಾ ದೇವಾಲಯಗಳಲ್ಲಿ ಅರ್ಚನೆಗಳನ್ನು ಏರ್ಪಡಿಸಲಾಯಿತು. ನರಾಧಿಪ ಋತುಪರ್ಣನೂ ಕೂಡ ಬಾಹುಕನು ವೇಷಬದಲಿಸಿ ನಲನಾಗಿದ್ದುದನ್ನು ಮತ್ತು ದಮಯಂತಿಯನ್ನು ಪುನಃ ಸೇರಿದುದನ್ನು ಕೇಳಿ ಬಹಳ ಹರ್ಷಿತನಾದನು. ರಾಜ ನಲನು ಅವನನ್ನು ಕರೆಯಿಸಿ ಪಾರ್ಥಿವನ ಕ್ಷಮೆಯನ್ನು ಕೇಳಿದನು. ಅವನು ಕೂಡ ಬುದ್ಧಿಸಮ್ಮತ ಕಾರಣಗಳಿಗಾಗಿ ಕ್ಷಮಿಸಿದನು. ಸತ್ಕೃತ ಮಹೀಪಾಲನು ವಿಸ್ಮಯಾನ್ವಿತನಾಗಿ ನೈಷಧನು ತನ್ನ ಪತ್ನಿಯನ್ನು ಪುನಃ ಸೇರಿದ್ದುದಕ್ಕಾಗಿ ಅಭಿನಂದಿಸಿದನು:
“ನೈಷಧ! ಅಜ್ಞಾತವಾಸಿಯಾಗಿ ನನ್ನ ಮನೆಯಲ್ಲಿ ವಾಸಿಸುತ್ತಿರುವಾಗ ನಿನಗೆ ಎನಾದರೂ ಅಪರಾಧವನ್ನು ಮಾಡಿರಬಹುದು. ಒಮ್ಮೆ ನಾನು ತಿಳಿದೋ ಅಥವಾ ತಿಳಿಯದೆಯೋ ನಿನಗೆ ನನ್ನಿಂದ ಎನಾದರೂ ತಪ್ಪಾಗಿದ್ದರೆ ನನ್ನನ್ನು ನೀನು ಕ್ಷಮಿಸ ತಕ್ಕದ್ದು.”
ನಲನು ಹೇಳಿದನು:
“ಪಾರ್ಥಿವ! ನಿನ್ನಿಂದ ನನ್ನ ಮೇಲೆ ಸ್ವಲ್ಪವೂ ಅಪರಾಧವಾಗಲಿಲ್ಲ. ಒಮ್ಮೆ ಆಗಿದ್ದರೂ ನನಗೆ ಅದರ ಕುರಿತು ಕೋಪವಿಲ್ಲ. ನಾನು ಅದನ್ನು ಕ್ಷಮಿಸಲೇ ಬೇಕು. ಈ ಪೂರ್ವದಲ್ಲಿ ನೀನು ನನ್ನ ಸಖನೂ ಮತ್ತು ಸಂಬಂಧಿಯೂ ಆಗಿರುವೆ. ಇನ್ನು ಮುಂದೆಯೂ ಕೂಡ ನನ್ನ ಮೇಲೆ ನಿನ್ನ ಪ್ರೀತಿಯಿರತಕ್ಕದ್ದು. ನನ್ನ ಮನೆಯಲ್ಲಿಗಿಂತಲೂ ನಿನ್ನ ಮನೆಯಲ್ಲಿ ನನ್ನ ಎಲ್ಲ ಆಸೆಗಳೂ ವಿಹಿತವಾಗಿ ಸುಖವಾಗಿದ್ದೆ. ನಿನ್ನ ಅನುಮತಿಯಿದ್ದರೆ ನನ್ನಲ್ಲಿರುವ ಈ ಅಶ್ವಜ್ಞಾನವನ್ನು ನಿನಗೆ ಕೊಡಲು ಇಚ್ಚಿಸುತ್ತೇನೆ.”
ಹೀಗೆ ಹೇಳಿ ನೈಷಧನು ಋತುಪರ್ಣನಿಗೆ ವಿದ್ಯೆಯನ್ನಿತ್ತನು; ಮತ್ತು ಅವನು ಅದನ್ನು ವಿಧಿಕರ್ಮಪೂರಕವಾಗಿ ಸ್ವೀಕರಿಸಿದನು. ಅಶ್ವಹೃದಯವನ್ನು ಪಡೆದ ನಂತರ ನೃಪ ಭಾಂಗಸ್ವರಿಯು ಬೇರೆ ಸೂತನೊಬ್ಬನನ್ನು ನಿಯೋಜಿಸಿ ತನ್ನ ನಗರಿಗೆ ತೆರಳಿದನು. ಋತುಪರ್ಣನು ತೆರಳಿದ ನಂತರ ರಾಜ ನಲನು ಕುಂಡಿನೀ ನಗರದಲ್ಲಿ ದೀರ್ಘಕಾಲದವರೆಗೆ ವಾಸಿಸಲಿಲ್ಲ.
ಪುಷ್ಕರ ಪರಾಭವ-ರಾಜ್ಯ ಪ್ರಾಪ್ತಿ
ಒಂದು ತಿಂಗಳ ನಂತರ ನೈಷಧನು ಭೀಮನ ಅನುಜ್ಞೆಯನ್ನು ಪಡೆದು, ಕೆಲವೇ ಜನರಿಂದೊಡಗೂಡಿ, ಒಂದೇ ಶುಭ್ರ ರಥದಲ್ಲಿ, ಹದಿನಾರು ಆನೆಗಳು, ಐವತ್ತು ಕುದುರೆಗಳು, ಮತ್ತು ಆರುನೂರು ಪದಸೈನಿಕರಿಂದೊಡಗೂಡಿ ನಗರದಿಂದ ನಿಷಧದ ಕಡೆ ಹೊರಟನು. ಮಹಿಯನ್ನೇ ನಡುಗಿಸುತ್ತಾ ಮಹಾಮನ ಮಹೀಪತಿಯು ಶೀಘ್ರದಲ್ಲಿಯೇ ಪುರವನ್ನು ಪ್ರವೇಶಿಸಿದನು. ವೀರಸೇನಸುತ ನಲನು ಪುಷ್ಕರನ ಬಳಿ ಹೋಗಿ ಹೇಳಿದನು:
“ಪುನಃ ಜೂಜಾಡೋಣ! ಈಗ ನಾನು ಬಹು ಸಂಪತ್ತನ್ನು ಗಳಿಸಿದ್ದೇನೆ. ದಮಯಂತಿ ಮತ್ತು ನಾನು ಏನೆಲ್ಲ ಸಂಪತ್ತನ್ನು ಅರ್ಜಿಸಿದ್ದೀನೋ ಆ ಎಲ್ಲವನ್ನೂ ಪಣವಿಡುತ್ತೇನೆ. ಪುಷ್ಕರ! ನೀನು ರಾಜ್ಯವನ್ನು ಪಣವಾಗಿಡು. ಒಂದೇ ಒಂದು ಪಣವನ್ನಿಟ್ಟು ಪುನಃ ದ್ಯೂತವನ್ನು ಮುಂದುವರಿಸಬೇಕೆಂದು ನಾನು ಸಿಶ್ಚಯಿಸಿದ್ದೇನೆ. ನಮ್ಮ ಪ್ರಾಣಗಳನ್ನೇ ಪಣವನ್ನಾಗಿಡೋಣ. ನಿನಗೆ ಒಳ್ಳೆಯದಾಗಲಿ. ಯಾರಾದರೂ ಇನ್ನೊಬ್ಬನ ರಾಜ್ಯವನ್ನಾಗಲೀ ಅಥವಾ ಸಂಪತ್ತನ್ನಾಗಲೀ ಗೆದ್ದು ತೆಗೆದುಕೊಂಡರೆ, ಅದಕ್ಕೊಂದು ಪ್ರತಿ ಪಣವನ್ನು ಇಡಬೇಕಾಗುತ್ತದೆ; ಇದನ್ನೇ ಕೊನೆಯ ಪಣವೆಂದು ಹೇಳಲಾಗುತ್ತದೆ. ನೀನು ದ್ಯೂತವನ್ನಾಡಲು ಇಚ್ಛಿಸದಿದ್ದರೆ, ನಿನಗೆ ಅಥವಾ ನನಗೆ ಚಿರಶಾಂತಿ ದೊರೆಯುವವರೆಗೆ ಎರಡು ರಥಗಳ ಮೇಲೆ ಯುದ್ಧದ ದ್ಯೂತವಾದರೂ ಪ್ರಾರಂಭವಾಗಬೇಕು. ವಂಶೀಯವಾಗಿ ಪಡೆದುಕೊಂಡ ಈ ರಾಜ್ಯವನ್ನು ಯಾವ ಮಾರ್ಗವನ್ನಾದರೂ ಅನುಸರಿಸಿ ಪುನಃ ಪಡೆದುಕೊಳ್ಳಬಹುದು ಎಂದು ವೃದ್ಧರು ಹೇಳುತ್ತಾರೆ. ಈ ಎರಡರಲ್ಲಿ ಒಂದನ್ನು ಈಗ ನಿಶ್ಚಯಮಾಡು. ದ್ಯೂತದಲ್ಲಿ ದಾಳಗಳನ್ನಾದರೂ ಎಸೆ ಅಥವಾ ಯುದ್ಧದಲ್ಲಿ ಧನುಸ್ಸನ್ನಾದರೂ ಎಳೆದು ಬಿಡು.”
ನೈಷಧನ ಈ ಮಾತುಗಳಿಗೆ ಪುಷ್ಕರನು ನಕ್ಕನು. ತನಗೇ ಜಯ ನಿಶ್ಚಯ ಎಂದು ತಿಳಿದು ಪೃಥಿವೀಪತಿಗೆ ಉತ್ತರಿಸಿದನು:
“ನೈಷಧ! ಪ್ರತಿಯಾಗಿ ಪಣವನ್ನಿಡಲು ನೀನು ಸಂಪತ್ತನ್ನು ಗಳಿಸಿದ್ದೀಯೆ ಎಂದರೆ ಎಷ್ಟು ಸಂತೋಷದ ವಿಷಯ! ದಮಯಂತಿಯ ದುಷ್ಕೃತ ಕರ್ಮಗಳೆಲ್ಲ ನಾಶವಾದವು ಎಂದರೆ ಎಷ್ಟು ಸಂತೋಷದ ವಿಷಯ! ಹೆಂಡತಿಯೊಂದಿಗೆ ನೀನೂ ಜೀವಂತವಾಗಿದ್ದೀಯಲ್ಲ ಇದು ಇನ್ನೂ ಸಂತೋಷದ ವಿಷಯ! ನಾನು ಗೆಲ್ಲುವ ಈ ಸಂಪತ್ತಿನಿಂದ ಸ್ವರ್ಗದಲ್ಲಿ ಸಮಲಂಕೃತ ಅಪ್ಸರೆಯರು ಶಕ್ರನನ್ನು ಸೇವಿಸುವಂತೆ ನನ್ನನ್ನು ವೈದರ್ಭಿಯು ಸೇವಿಸುವಳು ಎನ್ನುವುದು ನಿಜವಾಗುತ್ತಿದೆ. ನಿನ್ನನ್ನು ನಿತ್ಯವೂ ಸ್ಮರಿಸುತ್ತಿದ್ದೆ ಮತ್ತು ನಿನ್ನ ಪ್ರತೀಕ್ಷೆ ಮಾಡುತ್ತಿದ್ದೆ. ನನ್ನ ಸುಹೃದಯರಲ್ಲದವರ ಜೊತೆ ದ್ಯೂತವನ್ನಾಡಲು ನನಗೆ ಮನಸೇ ಇರಲಿಲ್ಲ. ಇಂದು ಅನಿಂದಿತೆ ವರಾರೋಹೆ ದಮಯಂತಿಯನ್ನು ಗೆದ್ದು ನಾನು ಕೃತಕೃತ್ಯನಾಗುತ್ತೇನೆ; ಏಕೆಂದರೆ ಅವಳು ನಿತ್ಯವೂ ನನ್ನ ಹೃದಯದಲ್ಲಿ ಇದ್ದವಳು!”
ಅವನ ಈ ಬಾಲಿಶ ಮಾತುಗಳನ್ನು ಕೇಳಿದ ನಲನು ಖಡ್ಗದಿಂದ ಅವನ ಶಿರವನ್ನು ಛೇಧಿಸಬೇಕೆನ್ನುವಷ್ಟು ಕುಪಿತನಾದನು. ಆಗ ನೃಪನು ಸಿಟ್ಟಿನಿಂದ ಕಣ್ಣುಗಳು ಕೆಂಪಾಗಿದ್ದರೂ ನಗುತ್ತಾ ಹೇಳಿದನು:
“ಆಡೋಣ ಬಾ! ಮಾತನಾಡುವುದು ಯಾಕೆ? ಗೆದ್ದು ಮಾತನಾಡುವೆಯೆಂತೆ!”
ಹೀಗೆ ನಲ-ಪುಷ್ಕರರ ದ್ಯೂತವು ಪುನಃ ಪ್ರಾರಂಭವಾಯಿತು. ಒಂದೇ ಒಂದು ಪಣದಲ್ಲಿ ಅವನು ನಲನಿಂದ ಪರಾಜಿತನಾದನು. ತನ್ನ ರತ್ನಕೋಶಗಳ ರಾಶಿಯನ್ನು ಮತ್ತು ತನ್ನ ಪ್ರಾಣವನ್ನೂ ಪಣವಿಟ್ಟು ಸೋತನು. ಪುಷ್ಕರನನ್ನು ಗೆದ್ದ ರಾಜನು ಮುಗುಳ್ನಗುತ್ತಾ ಹೇಳಿದನು:
“ಹತಕಂಟಕ! ಈ ಎಲ್ಲ ರಾಜ್ಯವೂ ನನ್ನದು. ಇದಕ್ಕೆ ಸ್ಪರ್ಧಿಗಳು ಯಾರೂ ಇಲ್ಲ. ರಾಜಭ್ರಷ್ಠ! ನೀನು ಇನ್ನು ವೈದರ್ಭಿಯಮೇಲೆ ಕಣ್ಣನ್ನು ಇಡಲು ಶಕ್ಯನಲ್ಲ. ಮೂಢನೇ ನೀನು ಮತ್ತು ನಿನ್ನ ಪರಿವಾರವೆಲ್ಲವೂ ದಾಸತ್ವವನ್ನು ಪಡೆದವರಾಗಿದ್ದೀರಿ. ಹಿಂದೆ ನಾನು ಸೋತಿದ್ದುದು ನಿನ್ನಿಂದಾಗಿ ಅಲ್ಲ. ಅದು ಕಲಿಯು ಮಾಡಿದ ಕರ್ಮವಾಗಿತ್ತು. ಆದರೆ ಮೂಢ! ಅದು ನಿನಗೆ ತಿಳಿದಿರಲಿಲ್ಲ. ಪರರು ಮಾಡಿದ ದೋಷಕ್ಕೆ ನಾನಾದರೂ ನಿನ್ನನ್ನು ಹೇಗೆ ನಿಂದಿಸಲಿ? ನೀನು ನಿನಗಿಷ್ಟವಿದ್ದಂತೆ ಜೀವಿಸು. ನಿನ್ನ ಪ್ರಾಣವನ್ನು ನಿನಗೇ ಹಿಂದಿರುಗಿಸುತ್ತಿದ್ದೇನೆ. ಹಾಗೆಯೇ ವೀರ! ನಿನ್ನ ಮೇಲೆ ನನ್ನ ಪ್ರೀತಿಯಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನನ್ನ ಭ್ರಾತೃ ಪ್ರೇಮವು ನಿನ್ನನ್ನು ಇಂದೂ ವಂಚಿಸುವುದಿಲ್ಲ. ಪುಷ್ಕರ! ನೀನು ನನ್ನ ಭ್ರಾತೃ. ನೂರು ವರ್ಷ ಜೀವಿಸು!”
ಈ ರೀತಿ ಸತ್ಯವಿಕ್ರಮ ನಲನು ಭ್ರಾತನನ್ನು ಸಂತವಿಸಿ, ಪುನಃ ಪುನಃ ಅಪ್ಪಿಕೊಳ್ಳುತ್ತಾ ಅವನ ಪುರಕ್ಕೆ ಬೀಳ್ಕೊಟ್ಟನು. ನೈಷಧನಿಂದ ಸಾಂತ್ವನಗೊಂಡ ಪುಷ್ಕರನು ಆ ಪುಣ್ಯಶ್ಲೋಕನಿಗೆ ಕೃತಾಂಜಲಿಯಾಗಿ ಅಭಿವಂದಿಸಿ ಉತ್ತರಿಸಿದನು:
“ನನ್ನ ಪ್ರಾಣ ಮತ್ತು ಅಧಿಷ್ಠಾನವನ್ನು ಹಿಂದಿರುಗಿಸಿದ ಪಾರ್ಥಿವ! ನೀನು ಅನೇಕ ವರ್ಷಗಳ ಪರ್ಯಂತ ಜೀವಿಸು ಮತ್ತು ನಿನ್ನ ಕೀರ್ತಿಯು ಅಕ್ಷಯವಾಗಿರಲಿ!”
ರಾಜ ಪುಷ್ಕರನು ನೃಪನ ಅತಿಥಿಯಾಗಿ ಒಂದು ತಿಂಗಳು ಅಲ್ಲಿಯೇ ಇದ್ದು ನಂತರ ಸಂತಸದಿಂದ ಸ್ವಜನರೊನ್ನೊಡಗೂಡಿ, ಮಹತ್ತರ ಸೇನೆಯೊಂದಿಗೆ, ವಿನೀತ ಪರಿಚಾರಕರೊಂದಿಗೆ, ರೂಪದಲ್ಲಿ ಆದಿತ್ಯನಂತೆ ಬೆಳಗುತ್ತಾ ಸ್ವಪುರಕ್ಕೆ ಪ್ರಯಾಣಿಸಿದನು. ವಿತ್ತವಂತ ಅನಾಮಯ ಪುಷ್ಕರನನ್ನು ಕಳುಹಿಸಿ, ರಾಜನು ಅದ್ಭುತವಾಗಿ ಅಲಂಕೃತವಾಗಿದ್ದ ತನ್ನ ಪುರವನ್ನು ಪ್ರವೇಶಿಸಿದನು. ಪ್ರವೇಶಿಸಿ ನಿಷಧಾಧಿಪನು ಪುರಜನರನ್ನು ಸಾಂತ್ವಯಿಸಿದನು. ಹೃಷ್ಟ ಪುರಜನರು ಪ್ರಶಾಂತರಾದಂತೆ ಮಹಾ ಉತ್ಸವವು ಪ್ರಾರಂಭವಾಗಿತ್ತು. ರಾಜನು ಮಹತ್ತರ ಸೇನೆಯೊಂದಿಗೆ ದಮಯಂತಿಯನ್ನು ಕರೆತಂದನು. ದಮಯಂತಿಯನ್ನು ತಂದೆ ಪರಮ ವೀರ ಅದಮೇಯಾತ್ಮ ಭೀಮಪರಾಕ್ರಮಿ ಭೀಮನು ಸತ್ಕರಿಸಿ ಕಳುಹಿಸಿಕೊಟ್ಟನು. ಪುತ್ರರೊಡನೆ ಆಗಮಿಸಿದ ವೈದರ್ಭಿಯೊಡನೆ ನೃಪ ನಲನು ನಂದನವನದಲ್ಲಿ ದೇವತೆಗಳಂತೆ ಸಂತೋಷದಿಂದ ಇದ್ದನು. ಜಂಬೂದ್ವೀಪದಲ್ಲಿರುವ ರಾಜರುಗಳಲ್ಲೇ ಪ್ರಕಾಶಿಸುತ್ತಾ ಆ ಮಹಾಯಶನು ಮರಳಿ ಗಳಿಸಿದ ರಾಜ್ಯದಲ್ಲಿ ಪುನಃ ವಾಸಿಸಿದನು. ಅವನು ಸಾಕಷ್ಟು ದಕ್ಷಿಣೆಗಳಿಂದ ವಿವಿಧ ಯಜ್ಞಗಳನ್ನು ವಿಧಿವತ್ತಾಗಿ ನೆರವೇರಿಸಿದನು.

The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ