Adi Parva: Chapter 15

ಆದಿ ಪರ್ವ: ಆಸ್ತೀಕ ಪರ್ವ

೧೫

ಸಮುದ್ರ ಮಥನ

ಮೇರು ಪರ್ವತದಲ್ಲಿ ದೇವತೆಗಳ ಸಮಾಲೋಚನೆ (೧-೧೦). ನಾರಾಯುಣನು ಸಮುದ್ರವನ್ನು ಮಥಿಸಲು ಸೂಚಿಸುವುದು (೧೧-೧೩).

01015001 ಸೂತ ಉವಾಚ

01015001a ಏತಸ್ಮಿನ್ನೇವ ಕಾಲೇ ತು ಭಗಿನ್ಯೌ ತೇ ತಪೋಧನ|

01015001c ಅಪಶ್ಯತಾಂ ಸಮಾಯಾಂತಮುಚ್ಚೈಶ್ರವಸಮಂತಿಕಾತ್||

01015002a  ಯಂ ತಂ ದೇವಗಣಾಃ ಸರ್ವೇ ಹೃಷ್ಟರೂಪಾ ಅಪೂಜಯನ್|

01015002c ಮಥ್ಯಮಾನೇಽಮೃತೇ ಜಾತಮಶ್ವರತ್ನಮನುತ್ತಮಂ||

01015003a ಮಹೌಘಬಲಮಶ್ವಾನಾಮುತ್ತಮಂ ಜವತಾಂ ವರಂ|

01015003c ಶ್ರೀಮಂತಮಜರಂ ದಿವ್ಯಂ ಸರ್ವಲಕ್ಷಣಲಕ್ಷಿತಂ||

ಸೂತನು ಹೇಳಿದನು: “ತಪೋಧನ! ಇದೇ ಸಮಯದಲ್ಲಿ ಒಮ್ಮೆ ಆ ತಂಗಿಯರಿಬ್ಬರೂ ಅಮೃತ ಮಥನ ಸಮಯದಲ್ಲಿ ಹುಟ್ಟಿದ್ದ, ಸರ್ವ ದೇವಗಣ ಪೂಜಿತ, ಹೃಷ್ಟರೂಪಿ, ಅನುತ್ತಮ ಅಶ್ವರತ್ನ, ದಿವ್ಯ, ಸರ್ವಲಕ್ಷಣಲಕ್ಷಿತ, ಶ್ರೀಮಂತ, ಸದಾ ಯೌವನಿ, ಅಶ್ವಗಳಲ್ಲೇ ಉತ್ತಮ, ಶ್ರೇಷ್ಠ, ಮಹೌಘಬಲಶಾಲಿ ಉಚ್ಛೈಶ್ರವವು ತಮ್ಮ ಕಡೆಬರುತ್ತಿರುವುದನ್ನು ಕಂಡರು.”

01015004 ಶೌನಕ ಉವಾಚ

01015004a ಕಥಂ ತದಮೃತಂ ದೇವೈರ್ಮಥಿತಂ ಕ್ವ ಚ ಶಂಸ ಮೇ|

01015004c ಯತ್ರ ಜಜ್ಞೇ ಮಹಾವೀರ್ಯಃ ಸೋಽಶ್ವರಾಜೋ ಮಹಾದ್ಯುತಿಃ||

ಶೌನಕನು ಹೇಳಿದನು: “ಹೇಗೆ ಮತ್ತು ಏಕೆ ದೇವತೆಗಳು ಅಮೃತವನ್ನು ಮಥಿಸಿದರು? ಮಹಾವೀರ ಮಹಾದ್ಯುತಿ ಅಶ್ವರಾಜನು ಎಲ್ಲಿ ಹುಟ್ಟಿದನು? ವಿವರಿಸು.”

01015005 ಸೂತ ಉವಾಚ

01015005a ಜ್ವಲಂತಮಚಲಂ ಮೇರುಂ ತೇಜೋರಾಶಿಮನುತ್ತಮಂ|

01015005c ಆಕ್ಷಿಪಂತಂ ಪ್ರಭಾಂ ಭಾನೋಃ ಸ್ವಶೃಂಗೈಃ ಕಾಂಚನೋಜ್ಜ್ವಲೈಃ||

ಸೂತನು ಹೇಳಿದನು: “ಅನುತ್ತಮ ತೇಜೋರಾಶಿಯಾಗಿ ಪ್ರಜ್ವಲಿಸುತ್ತಿರುವ ಮೇರು[1] ಎಂಬ ಪರ್ವತವಿದೆ. ಅದರ ಉಜ್ವಲ ಕಾಂಚನ ಶೃಂಗದ ಮೇಲೆ ಬಿದ್ದ ಸೂರ್ಯಕಿರಣಗಳು ಅಲ್ಲಿಂದ ಹೊರಬೀಳುತ್ತಿದ್ದವು.

01015006a ಕಾಂಚನಾಭರಣಂ ಚಿತ್ರಂ ದೇವಗಂಧರ್ವಸೇವಿತಂ|

01015006c ಅಪ್ರಮೇಯಮನಾಧೃಷ್ಯಮಧರ್ಮಬಹುಲೈರ್ಜನೈಃ||

ಕಾಂಚನಾಭರಣ ಭೂಷಿತ, ದೇವಗಂಧರ್ವಸೇವಿತ, ಅಪ್ರಮೇಯವೂ ಅನಾಧೃಷವೂ ಆದ ಅದು ಅಧರ್ಮಿಗಳಿಗೆ ಕಾಣದೇ ಇರುವಂಥಹದು.

01015007a ವ್ಯಾಲೈರಾಚರಿತಂ ಘೋರೈರ್ದಿವ್ಯೌಷಧಿವಿದೀಪಿತಂ|

01015007c ನಾಕಮಾವೃತ್ಯ ತಿಷ್ಠಂತಮುಚ್ಛ್ರಯೇಣ ಮಹಾಗಿರಿಂ||

ದಿವ್ಯೌಷಧಿಗಳಿಂದ ಬೆಳಗುತ್ತಿರುವ ಆ ಮಹಾಗಿರಿಯ ಉತ್ತುಂಗ ಶಿಖರದಲ್ಲಿ ಘೋರ ಪ್ರಾಣಿಗಳು ಸಂಚರಿಸುತ್ತಿರುತ್ತವೆ.

01015008a ಅಗಮ್ಯಂ ಮನಸಾಪ್ಯನ್ಯೈರ್ನದೀವೃಕ್ಷಸಮನ್ವಿತಂ|

01015008c ನಾನಾಪತಗಸಂಘೈಶ್ಚ ನಾದಿತಂ ಸುಮನೋಹರೈಃ||

ಮನಸ್ಸಿಗೂ ಅಗಮ್ಯವಾದ ಅದು ಅನೇಕ ನದೀ ವೃಕ್ಷಗಳನ್ನು ಹೊಂದಿದೆ ಮತ್ತು ನಾನಾ ಪಕ್ಷಿಗಳ ಸುಮನೋಹರ ನಾದದಿಂದ ತುಂಬಿದೆ.

01015009a ತಸ್ಯ ಪೃಷ್ಟಮುಪಾರುಹ್ಯ ಬಹುರತ್ನಾಚಿತಂ ಶುಭಂ|

01015009c ಅನಂತಕಲ್ಪಮುದ್ವಿದ್ಧಂ ಸುರಾಃ ಸರ್ವೇ ಮಹೌಜಸಃ||

ಅನಂತ ಕಲ್ಪದಿಂದಲೂ ಎತ್ತರ ನಿಂತಿದ್ದ ಅದರ ಶುಭ ಶಿಖರದ ಮೇಲೆ ಮಹೌಜಸ ಸುರರೆಲ್ಲರೂ ಸಭೆಯನ್ನು ರಚಿಸಿದ್ದರು.

01015010a ತೇ ಮಂತ್ರಯಿತುಮಾರಬ್ಧಾಸ್ತತ್ರಾಸೀನಾ ದಿವೌಕಸಃ|

01015010c ಅಮೃತಾರ್ಥೇ ಸಮಾಗಮ್ಯ ತಪೋನಿಯಮಸಂಸ್ಥಿತಾಃ||

ಅಲ್ಲಿ ಕುಳಿತುಕೊಂಡು ತಪೋನಿಯಮ ಸಂಸ್ಥಿತ ದಿವೌಕಸರು ಅಮೃತವನ್ನು ಹೇಗೆ ಪಡೆಯಬಹುದು ಎಂದು ಪರಸ್ಪರರಲ್ಲಿ ವಿಚಾರಿಸುತ್ತಿದ್ದರು[2].

01015011a ತತ್ರ ನಾರಾಯಣೋ ದೇವೋ ಬ್ರಹ್ಮಾಣಮಿದಮಬ್ರವೀತ್|

01015011c ಚಿಂತಯತ್ಸು ಸುರೇಷ್ವೇವಂ ಮಂತ್ರಯತ್ಸು ಚ ಸರ್ವಶಃ||

ಮಂತ್ರಾಲೋಚನೆಯಲ್ಲಿ ತೊಡಗಿದ್ದ ಸುರರೆಲ್ಲರನ್ನೂ ಮತ್ತು ಬ್ರಹ್ಮನನ್ನೂ ಉದ್ದೇಶಿಸಿ ದೇವ ನಾರಾಯಣನು ಹೇಳಿದನು:

01015012a ದೇವೈರಸುರಸಂಘೈಶ್ಚ ಮಥ್ಯತಾಂ ಕಲಶೋದಧಿಃ|

01015012c ಭವಿಷ್ಯತ್ಯಮೃತಂ ತತ್ರ ಮಥ್ಯಮಾನೇ ಮಹೋದಧೌ||

“ದೇವತೆಗಳೂ ಅಸುರರೂ ಒಂದುಗೂಡಿ ಮಹಾಸಾಗರವನ್ನು ಕಡೆಯಲಿ. ಮಹಾ ಸಮುದ್ರವನ್ನು ಕಡೆಯುವಾಗ ಅಲ್ಲಿ ಅಮೃತವು ಹುಟ್ಟುವುದು.

01015013a ಸರ್ವೌಷಧೀಃ ಸಮಾವಾಪ್ಯ ಸರ್ವರತ್ನಾನಿ ಚೈವ ಹಿ|

01015013c ಮಂಥಧ್ವಮುದಧಿಂ ದೇವಾ ವೇತ್ಸ್ಯಧ್ವಮಮೃತಂ ತತಃ||

ದೇವತೆಗಳೇ! ಸಾಗರವನ್ನು ಕಡೆಯುವಾಗ ಮೊದಲು ಸರ್ವ ಔಷಧಿಗಳೂ, ಸರ್ವರತ್ನಗಳೂ ಮೇಲ್ಬರುತ್ತವೆ. ಕೊನೆಯಲ್ಲಿ ಅಮೃತವೂ ದೊರೆಯುತ್ತದೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಅಮೃತಮಂಥನೇ ಪಂಚದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಅಮೃತಮಂಥನದಲ್ಲಿ ಹದಿನೈದನೆಯ ಅಧ್ಯಾಯವು.

[1]ಪುರಾಣಗಳ ಪ್ರಕಾರ ಐದು ಶಿಖರಗಳುಳ್ಳ ಈ ಮೇರು ಪರ್ವತವು ಭೌತಿಕ, ಪಾರಮಾರ್ಥಿಕ ಮತ್ತು ಆಧ್ಯಾತ್ಮಿಕ ಪ್ರಪಂಚಗಳ ಮಧ್ಯ ನಾಡಿ. ಇದು ಭೂಮಂಡಲ ಅಂದರೆ ಗ್ರಹ-ನಕ್ಷತ್ರಗಳೋಪಾದಿಯಾಗಿ ಕಾಣುವ ಮಂಡಲದ ಮಧ್ಯದಲ್ಲಿದೆ ಮತ್ತು ಸೂರ್ಯ, ಗ್ರಹ ಮಂಡಲಗಳು ಮತ್ತು ನಕ್ಷತ್ರ ಮಂಡಲಗಳು ಮೇರು ಪರ್ವತವನ್ನು ದಿನಕ್ಕೊಂದು ಬಾರಿ ಪ್ರದಕ್ಷಿಣೆ ಮಾಡುತ್ತವೆ ಎಂದು ಪುರಾಣಗಳು ತಿಳಿಸುತ್ತವೆ. ಮೇರು ಪರ್ವತದ ಶಿಖರದಲ್ಲಿ ಬ್ರಹ್ಮ ಮತ್ತು ಇತರ ದೇವತೆಗಳು ವಾಸಿಸುತ್ತಾರೆ.

[2] ಶಿವಾಂಶಸಂಭೂತ ಅತ್ರಿಪುತ್ರ ದುರ್ವಾಸ ಋಷಿಯು ಇಂದ್ರನಿಗಿತ್ತ ಶಾಪವೇ ಸಮುದ್ರಮಥನಕ್ಕೆ ಮೂಲಕಾರಣ. ಒಮ್ಮೆ ದುರ್ವಾಸನು ವಿದ್ಯಾಧರಿಯೋರ್ವಳಿಂದ ಕೇಳಿ ಪಡೆದ ಮಂಗಳಕರ ಹಾರವೊಂದನ್ನು ದೇವೇಂದ್ರನಿಗೆ ಕೊಡಲು ಅವನು ಅದನ್ನು ಮದಿಸಿದ ಐರಾವತದ ಕುಂಭಸ್ಥಳದಲ್ಲಿಟ್ಟನು. ಮದದಿಂದ ಕುರುಡಾಗಿದ್ದ ಐರಾವತವು ಆ ಹಾರವನ್ನು ಸೊಂಡಿಲಿನಿಂದ ಮೂಸಿ ನೆಲದ ಮೇಲೆ ಎಸೆಯಿತು. ಅದನ್ನು ನೋಡಿ ಕುಪಿತನಾದ ದುರ್ವಾಸನು “ನಿನ್ನ ತ್ರೈಲೋಕ್ಯದ ಸಂಪತ್ತೆಲ್ಲವೂ ನಾಶವಾಗುತ್ತದೆ!” ಎಂದು ಇದ್ರನಿಗೆ ಶಪಿಸಿದನು. ಇಂದ್ರನ ಸಂಪತ್ತು ನಾಶವಾಗಲು ದೈತ್ಯರು ದೇವತೆಗಳನ್ನು ಜಯಿಸಿ ಸ್ವರ್ಗದ ಅಧಿಕಾರವನ್ನು ಪಡೆದುಕೊಂಡರು. ತಮ್ಮ ಸಂಪತ್ತು-ಬಲಗಳನ್ನು ಹಿಂದೆ ಪಡೆಯಲು ಶ್ರೀ ವಿಷ್ಣುವನ್ನು ದೇವತೆಗಳು ಕೇಳಿಕೊಳ್ಳಲು ನಾರಾಯಣನು ಅವರಿಗೆ ಕ್ಷೀರಸಾಗರವನ್ನು ಮಥಿಸಿ ಅಮೃತವನ್ನು ಪಡೆಯುವ ಉಪಾಯವನ್ನು ಸೂಚಿಸಿದನು [ವಿಷ್ಣುಪುರಾಣ, ಅಂಶ ೧, ಅಧ್ಯಾಯ ೯].

Leave a Reply

Your email address will not be published. Required fields are marked *