ಶಲ್ಯಪರ್ವ: ಸಾರಸ್ವತಪರ್ವ
Contents
Toggle೩೭
ಸಪ್ತಸಾರಸ್ವತ ವರ್ಣನೆ (೧-೨೮). ಮಂಕಣಕನ ಕಥೆ (೨೯-೫೦).
09037001 ಜನಮೇಜಯ ಉವಾಚ
09037001a ಸಪ್ತಸಾರಸ್ವತಂ ಕಸ್ಮಾತ್ಕಶ್ಚ ಮಂಕಣಕೋ ಮುನಿಃ|
09037001c ಕಥಂ ಸಿದ್ಧಶ್ಚ ಭಗವಾನ್ಕಶ್ಚಾಸ್ಯ ನಿಯಮೋಽಭವತ್||
ಜನಮೇಜಯನು ಹೇಳಿದನು: “ಭಗವಾನ್! ಸಪ್ತಸಾರಸ್ವತವು ಯಾವ ಕಾರಣದಿಂದಾಯಿತು? ಮಂಕಣಕ ಮುನಿಯು ಯಾರು? ಅವನು ಹೇಗೆ ಸಿದ್ಧನಾದನು? ಅವನು ಯಾವ ನಿಯಮಗಳನ್ನು ಅನುಸರಿಸುತ್ತಿದ್ದನು?
09037002a ಕಸ್ಯ ವಂಶೇ ಸಮುತ್ಪನ್ನಃ ಕಿಂ ಚಾಧೀತಂ ದ್ವಿಜೋತ್ತಮ|
09037002c ಏತದಿಚ್ಚಾಮ್ಯಹಂ ಶ್ರೋತುಂ ವಿಧಿವದ್ದ್ವಿಜಸತ್ತಮ||
ದ್ವಿಜೋತ್ತಮ! ಅವನು ಯಾವ ವಂಶದಲ್ಲಿ ಹುಟ್ಟಿದ್ದನು? ಅವನು ಏನನ್ನು ತಿಳಿದುಕೊಂಡಿದ್ದನು? ದ್ವಿಜಸತ್ತಮ! ಇದರ ಕುರಿತು ವಿಧಿವತ್ತಾಗಿ ಕೇಳಲು ಬಯಸುತ್ತೇನೆ.”
09037003 ವೈಶಂಪಾಯನ ಉವಾಚ
09037003a ರಾಜನ್ಸಪ್ತ ಸರಸ್ವತ್ಯೋ ಯಾಭಿರ್ವ್ಯಾಪ್ತಮಿದಂ ಜಗತ್|
09037003c ಆಹೂತಾ ಬಲವದ್ಭಿರ್ಹಿ ತತ್ರ ತತ್ರ ಸರಸ್ವತೀ||
ವೈಶಂಪಾಯನನು ಹೇಳಿದನು: “ರಾಜನ್! ಇಡೀ ಜಗತ್ತೇ ಸಪ್ತ ಸರಸ್ವತಿಯರಿಂದ ವ್ಯಾಪ್ತವಾಗಿದೆ. ಏಕೆಂದರೆ ತಪೋಬಲರು ಕರೆದಲ್ಲಿಯೆಲ್ಲ ಸರಸ್ವತಿಯು ಹೋಗುತ್ತಿದ್ದಳು.
09037004a ಸುಪ್ರಭಾ ಕಾಂಚನಾಕ್ಷೀ ಚ ವಿಶಾಲಾ ಮಾನಸಹ್ರದಾ|
09037004c ಸರಸ್ವತೀ ಓಘವತೀ ಸುವೇಣುರ್ವಿಮಲೋದಕಾ||
ಹಾಗೆ ಹೋಗುವಾಗ ಸರಸ್ವತಿಯು ಈ ಏಳು ನಾಮಧೇಯಗಳನ್ನು ಪಡೆದಳು: ಸುಪ್ರಭಾ, ಕಾಂಚನಾಕ್ಷೀ, ವಿಶಾಲಾ, ಮನೋಹ್ರದ, ಓಘವತೀ, ಸುವೇಣು ಮತ್ತು ವಿಮಲೋದಕ.
09037005a ಪಿತಾಮಹಸ್ಯ ಮಹತೋ ವರ್ತಮಾನೇ ಮಹೀತಲೇ|
09037005c ವಿತತೇ ಯಜ್ಞವಾಟೇ ವೈ ಸಮೇತೇಷು ದ್ವಿಜಾತಿಷು||
ಮಹೀತಲದಲ್ಲಿ ಪಿತಾಮಹ ಬ್ರಹ್ಮನ ಮಹಾ ಯಜ್ಞವು ನಡೆಯುತ್ತಿತ್ತು. ಆ ವಿಶಾಲ ಯಜ್ಞವಾಟಿಯಲ್ಲಿ ದ್ವಿಜಾತಿಯವರು ಸೇರಿಕೊಂಡಿದ್ದರು.
09037006a ಪುಣ್ಯಾಹಘೋಷೈರ್ವಿಮಲೈರ್ವೇದಾನಾಂ ನಿನದೈಸ್ತಥಾ|
09037006c ದೇವೇಷು ಚೈವ ವ್ಯಗ್ರೇಷು ತಸ್ಮಿನ್ಯಜ್ಞವಿಧೌ ತದಾ||
ಪುಣ್ಯಾಹ ಘೋಷಗಳಿಂದ, ವಿಮಲ ವೇದ ನಿನಾದಗಳಿಂದ ಮತ್ತು ದೇವತೆಗಳು ಯಜ್ಞವಿಧಿಗಳಲ್ಲಿ ತೋರಿಸಿದ ಉತ್ಸಾಹಗಳಿಂದ ಆ ಯಜ್ಞವಾಟಿಯು ತುಂಬಿಹೋಗಿತ್ತು.
09037007a ತತ್ರ ಚೈವ ಮಹಾರಾಜ ದೀಕ್ಷಿತೇ ಪ್ರಪಿತಾಮಹೇ|
09037007c ಯಜತಸ್ತತ್ರ ಸತ್ರೇಣ ಸರ್ವಕಾಮಸಮೃದ್ಧಿನಾ||
ಮಹಾರಾಜ! ಪ್ರಪಿತಾಮಹನು ಯಜಮಾನನಾಗಿ ದೀಕ್ಷಿತನಾಗಿದ್ದ ಆ ಸತ್ರದಲ್ಲಿ ಸರ್ವಕಾಮನೆಗಳೂ ಪೂರ್ಣಗೊಳ್ಳುತ್ತಿದ್ದವು.
09037008a ಮನಸಾ ಚಿಂತಿತಾ ಹ್ಯರ್ಥಾ ಧರ್ಮಾರ್ಥಕುಶಲೈಸ್ತದಾ|
09037008c ಉಪತಿಷ್ಠಂತಿ ರಾಜೇಂದ್ರ ದ್ವಿಜಾತೀಂಸ್ತತ್ರ ತತ್ರ ಹ||
ರಾಜೇಂದ್ರ! ಮನಸ್ಸಿನಲ್ಲಿ ಚಿಂತಿಸಿದ ಧರ್ಮಾರ್ಥ ಕುಶಲಗಳೆಲ್ಲವೂ ದ್ವಿಜಾತಿಯವರ ಬಳಿ ಬಂದು ಎದ್ದು ನಿಲ್ಲುತ್ತಿದ್ದವು.
09037009a ಜಗುಶ್ಚ ತತ್ರ ಗಂಧರ್ವಾ ನನೃತುಶ್ಚಾಪ್ಸರೋಗಣಾಃ|
09037009c ವಾದಿತ್ರಾಣಿ ಚ ದಿವ್ಯಾನಿ ವಾದಯಾಮಾಸುರಂಜಸಾ||
ಅಲ್ಲಿ ಗಂಧರ್ವರು ಹಾಡುತ್ತಿದ್ದರು. ಅಪ್ಸರಗಣಗಳು ನರ್ತಿಸುತ್ತಿದ್ದವು. ದಿವ್ಯ ವಾದ್ಯಗಳನ್ನು ಹಿತಕರವಾಗಿ ಬಾರಿಸುತ್ತಿದ್ದರು.
09037010a ತಸ್ಯ ಯಜ್ಞಸ್ಯ ಸಂಪತ್ತ್ಯಾ ತುತುಷುರ್ದೇವತಾ ಅಪಿ|
09037010c ವಿಸ್ಮಯಂ ಪರಮಂ ಜಗ್ಮುಃ ಕಿಮು ಮಾನುಷಯೋನಯಃ||
ಆ ಯಜ್ಞದ ವೈಭವದಿಂದ ತೃಪ್ತರಾಗಿ ದೇವತೆಗಳೂ ಕೂಡ ಪರಮ ವಿಸ್ಮಿತರಾದರು. ಇನ್ನು ಮನುಷ್ಯ ಯೋನಿಯಲ್ಲಿ ಹುಟ್ಟಿದವರ ವಿಷಯದಲ್ಲಿ ಏನು?
09037011a ವರ್ತಮಾನೇ ತಥಾ ಯಜ್ಞೇ ಪುಷ್ಕರಸ್ಥೇ ಪಿತಾಮಹೇ|
09037011c ಅಬ್ರುವನ್ನೃಷಯೋ ರಾಜನ್ನಾಯಂ ಯಜ್ಞೋ ಮಹಾಫಲಃ||
09037011e ನ ದೃಶ್ಯತೇ ಸರಿಚ್ಚ್ರೇಷ್ಠಾ ಯಸ್ಮಾದಿಹ ಸರಸ್ವತೀ||
ರಾಜನ್! ಪುಷ್ಕರದಲ್ಲಿ ಪಿತಾಮಹನ ಆ ಮಹಾಯಜ್ಞವು ನಡೆಯುತ್ತಿರುವಾಗ ಋಷಿಗಳು “ನದಿಶ್ರೇಷ್ಠೇ ಸರಸ್ವತಿಯು ಇಲ್ಲ ಕಾಣಿಸುವುದಿಲ್ಲವಾದುದರಿಂದ ಈ ಯಜ್ಞದ ಮಹಾಫಲವು ಉಂಟಾಗಿಲ್ಲ!” ಎಂದರು.
09037012a ತಚ್ಛೃತ್ವಾ ಭಗವಾನ್ಪ್ರೀತಃ ಸಸ್ಮಾರಾಥ ಸರಸ್ವತೀಂ|
09037012c ಪಿತಾಮಹೇನ ಯಜತಾ ಆಹೂತಾ ಪುಷ್ಕರೇಷು ವೈ||
09037012e ಸುಪ್ರಭಾ ನಾಮ ರಾಜೇಂದ್ರ ನಾಮ್ನಾ ತತ್ರ ಸರಸ್ವತೀ||
ಅದನ್ನು ಕೇಳಿ ಪ್ರೀತನಾದ ಭಗವಾನನು ಸರಸ್ವತಿಯನ್ನು ಸ್ಮರಿಸಿದನು. ರಾಜೇಂದ್ರ! ಪುಷ್ಕರದಲ್ಲಿ ಪಿತಾಮಹನ ಯಾಗದಲ್ಲಿ ಕರೆಯಲ್ಪಟ್ಟ ಸರಸ್ವತಿಯು ಸುಪ್ರಭಾ ಎಂಬ ಹೆಸರಿನವಳಾದಳು.
09037013a ತಾಂ ದೃಷ್ಟ್ವಾ ಮುನಯಸ್ತುಷ್ಟಾ ವೇಗಯುಕ್ತಾಂ ಸರಸ್ವತೀಂ|
09037013c ಪಿತಾಮಹಂ ಮಾನಯಂತೀಂ ಕ್ರತುಂ ತೇ ಬಹು ಮೇನಿರೇ||
ವೇಗಯುಕ್ತಳಾದ ಸರಸ್ವತಿಯನ್ನು ನೋಡಿ ಮುನಿಗಳು ತುಷ್ಟರಾಗಿ ಪಿತಾಮಹನ ಆ ಕ್ರತುವು ಬಹಳ ಮಾನ್ಯತೆಯುಳ್ಳದ್ದು ಎಂದು ಗೌರವಿಸಿದರು.
09037014a ಏವಮೇಷಾ ಸರಿಚ್ಚ್ರೇಷ್ಠಾ ಪುಷ್ಕರೇಷು ಸರಸ್ವತೀ|
09037014c ಪಿತಾಮಹಾರ್ಥಂ ಸಂಭೂತಾ ತುಷ್ಟ್ಯರ್ಥಂ ಚ ಮನೀಷಿಣಾಂ||
ಹೀಗೆ ಸರಿತಶ್ರೇಷ್ಠೆ ಸರಸ್ವತಿಯು ಪಿತಾಮಹನಿಗಾಗಿ ಮತ್ತು ಋಷಿಗಳ ಸಂತೃಪ್ತಿಗಾಗಿ ಪುಷ್ಕರದಲ್ಲಿ ಕಾಣಿಸಿಕೊಂಡಳು.
09037015a ನೈಮಿಷೇ ಮುನಯೋ ರಾಜನ್ಸಮಾಗಮ್ಯ ಸಮಾಸತೇ|
09037015c ತತ್ರ ಚಿತ್ರಾಃ ಕಥಾ ಹ್ಯಾಸನ್ವೇದಂ ಪ್ರತಿ ಜನೇಶ್ವರ||
ರಾಜನ್! ಜನೇಶ್ವರ! ನೈಮಿಷದಲ್ಲಿ ಸಮಾಗಮಿಸಿದ್ದ ಮುನಿಗಳ ಮಧ್ಯೆ ವೇದದ ಕುರಿತು ವಿಚಿತ್ರ ಚರ್ಚೆಗಳು ನಡೆದವು.
09037016a ತತ್ರ ತೇ ಮುನಯೋ ಹ್ಯಾಸನ್ನಾನಾಸ್ವಾಧ್ಯಾಯವೇದಿನಃ|
09037016c ತೇ ಸಮಾಗಮ್ಯ ಮುನಯಃ ಸಸ್ಮರುರ್ವೈ ಸರಸ್ವತೀಂ||
ಅಲ್ಲಿದ್ದ ನಾನಾ ಸ್ವಾಧ್ಯಾಯಗಳನ್ನು ತಿಳಿದುಕೊಂಡಿದ್ದ ಮುನಿಗಳು ಒಂದಾಗಿ ಸರಸ್ವತಿಯನ್ನು ಸ್ಮರಿಸಿದರು.
09037017a ಸಾ ತು ಧ್ಯಾತಾ ಮಹಾರಾಜ ಋಷಿಭಿಃ ಸತ್ರಯಾಜಿಭಿಃ|
09037017c ಸಮಾಗತಾನಾಂ ರಾಜೇಂದ್ರ ಸಹಾಯಾರ್ಥಂ ಮಹಾತ್ಮನಾಂ||
09037017e ಆಜಗಾಮ ಮಹಾಭಾಗಾ ತತ್ರ ಪುಣ್ಯಾ ಸರಸ್ವತೀ||
ಮಹಾರಾಜ! ರಾಜೇಂದ್ರ! ಸೇರಿ ಸತ್ರದಲ್ಲಿ ತೊಡಗಿದ್ದ ಮಹಾತ್ಮರು ಧ್ಯಾನಿಸಲು ಅವರ ಸಹಾಯಾರ್ಥವಾಗಿ ಪುಣ್ಯೆ ಮಹಾಭಾಗೆ ಸರಸ್ವತಿಯು ಅಲ್ಲಿಗೆ ಬಂದಳು.
09037018a ನೈಮಿಷೇ ಕಾಂಚನಾಕ್ಷೀ ತು ಮುನೀನಾಂ ಸತ್ರಯಾಜಿನಾಂ|
09037018c ಆಗತಾ ಸರಿತಾಂ ಶ್ರೇಷ್ಠಾ ತತ್ರ ಭಾರತ ಪೂಜಿತಾ||
ಭಾರತ! ನೈಮಿಷದಲ್ಲಿ ಸತ್ರಯಾಜಿ ಮುನಿಗಳ ಬಳಿ ಆಗಮಿಸಿದ ಸರಿತಶ್ರೇಷ್ಠೆಯು ಕಾಂಚನಾಕ್ಷೀ ಎಂದು ಪೂಜಿತಳಾದಳು.
09037019a ಗಯಸ್ಯ ಯಜಮಾನಸ್ಯ ಗಯೇಷ್ವೇವ ಮಹಾಕ್ರತುಂ|
09037019c ಆಹೂತಾ ಸರಿತಾಂ ಶ್ರೇಷ್ಠಾ ಗಯಯಜ್ಞೇ ಸರಸ್ವತೀ||
ಗಯದ ರಾಜ ಗಯನೂ ಕೂಡ ಮಹಾಕ್ರತು ಗಯಯಜ್ಞದಲ್ಲಿ ಸರಿತಶ್ರೇಷ್ಠೆ ಸರಸ್ವತಿಯನ್ನು ಆಹ್ವಾನಿಸಿದನು.
09037020a ವಿಶಾಲಾಂ ತು ಗಯೇಷ್ವಾಹುರೃಷಯಃ ಸಂಶಿತವ್ರತಾಃ|
09037020c ಸರಿತ್ಸಾ ಹಿಮವತ್ಪಾರ್ಶ್ವಾತ್ಪ್ರಸೂತಾ ಶೀಘ್ರಗಾಮಿನೀ||
ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿದ ಆ ಶೀಘ್ರಗಾಮಿನೀ ನದಿಗೆ ಗಯೆಯಲ್ಲಿ ಸಂಶಿತವ್ರತ ಋಷಿಗಳು ವಿಶಾಲಾ ಎಂದು ಕರೆದರು.
09037021a ಔದ್ದಾಲಕೇಸ್ತಥಾ ಯಜ್ಞೇ ಯಜತಸ್ತತ್ರ ಭಾರತ|
09037021c ಸಮೇತೇ ಸರ್ವತಃ ಸ್ಫೀತೇ ಮುನೀನಾಂ ಮಂಡಲೇ ತದಾ||
ಭಾರತ! ಔದ್ಧಾಲಕನು ಯಜ್ಞವನ್ನು ಯಾಜಿಸುತ್ತಿದ್ದಾಗ ಅಲ್ಲಿಗೆ ಎಲ್ಲಕಡೆಗಳಿಂದ ಆಗಮಿಸಿದ ಮುನಿಗಳ ಮಂಡಲವು ಸೇರಿತ್ತು.
09037022a ಉತ್ತರೇ ಕೋಸಲಾಭಾಗೇ ಪುಣ್ಯೇ ರಾಜನ್ಮಹಾತ್ಮನಃ|
09037022c ಔದ್ದಾಲಕೇನ ಯಜತಾ ಪೂರ್ವಂ ಧ್ಯಾತಾ ಸರಸ್ವತೀ||
ರಾಜನ್! ಕೋಸಲದ ಪುಣ್ಯ ಉತ್ತರ ಭಾಗದಲ್ಲಿ ಮಹಾತ್ಮ ಔದ್ದಾಲಕನು ಯಜ್ಞದ ಮೊದಲು ಸರಸ್ವತಿಯನ್ನು ಧ್ಯಾನಿಸಿದನು.
09037023a ಆಜಗಾಮ ಸರಿಚ್ಚ್ರೇಷ್ಠಾ ತಂ ದೇಶಂ ಋಷಿಕಾರಣಾತ್|
09037023c ಪೂಜ್ಯಮಾನಾ ಮುನಿಗಣೈರ್ವಲ್ಕಲಾಜಿನಸಂವೃತೈಃ||
09037023e ಮನೋಹ್ರದೇತಿ ವಿಖ್ಯಾತಾ ಸಾ ಹಿ ತೈರ್ಮನಸಾ ಹೃತಾ||
ಋಷಿಗಳ ಕಾರಣದಿಂದ ಅಲ್ಲಿಗೈತಂದ ಸರಿಶ್ರೇಷ್ಠೆಯು ವಲ್ಕಲ-ಜಿನಧಾರೀ ಮುನಿಗಣಗಳಿಂದ ಪೂಜಿಸಲ್ಪಟ್ಟು ಅವರ ಮನಸ್ಸನ್ನು ಅಪಹರಿಸಿದುದಕ್ಕಾಗಿ ಮನೋಹ್ರದಾ ಎಂದು ವಿಖ್ಯಾತಳಾದಳು.
09037024a ಸುವೇಣುರೃಷಭದ್ವೀಪೇ ಪುಣ್ಯೇ ರಾಜರ್ಷಿಸೇವಿತೇ|
09037024c ಕುರೋಶ್ಚ ಯಜಮಾನಸ್ಯ ಕುರುಕ್ಷೇತ್ರೇ ಮಹಾತ್ಮನಃ||
09037024e ಆಜಗಾಮ ಮಹಾಭಾಗಾ ಸರಿಚ್ಛ್ರೇಷ್ಠಾ ಸರಸ್ವತೀ||
ರಾಜರ್ಷಿಸೇವಿತ ಪುಣ್ಯ ಋಷಭದ್ವೀಪದಲ್ಲಿ ಅವಳು ಸುವೇಣುವೆನಿಸಿದಳು. ಮಹಾತ್ಮ ಕುರುವು ಯಜಮಾನನಾಗಿದ್ದ ಕುರುಕ್ಷೇತ್ರಕ್ಕೆ ಸರಿತಶ್ರೇಷ್ಠೆ ಮಹಾಭಾಗೆ ಸರಸ್ವತಿಯು ಹರಿದುಬಂದಳು.
09037025a ಓಘವತ್ಯಪಿ ರಾಜೇಂದ್ರ ವಸಿಷ್ಠೇನ ಮಹಾತ್ಮನಾ|
09037025c ಸಮಾಹೂತಾ ಕುರುಕ್ಷೇತ್ರೇ ದಿವ್ಯತೋಯಾ ಸರಸ್ವತೀ||
ರಾಜೇಂದ್ರ! ಕುರುಕ್ಷೇತ್ರದಲ್ಲಿ ಆ ದಿವ್ಯನದೀ ಸರಸ್ವತಿಯನ್ನು ಮಹಾತ್ಮ ವಸಿಷ್ಠನು ಓಘವತಿ ಎಂದು ಕರೆದನು.
09037026a ದಕ್ಷೇಣ ಯಜತಾ ಚಾಪಿ ಗಂಗಾದ್ವಾರೇ ಸರಸ್ವತೀ|
09037026c ವಿಮಲೋದಾ ಭಗವತೀ ಬ್ರಹ್ಮಣಾ ಯಜತಾ ಪುನಃ||
09037026e ಸಮಾಹೂತಾ ಯಯೌ ತತ್ರ ಪುಣ್ಯೇ ಹೈಮವತೇ ಗಿರೌ||
ಗಂಗಾದ್ವಾರದಲ್ಲಿ ದಕ್ಷನು ಯಜ್ಞಮಾಡುತ್ತಿರುವಾಗ ಯಜಮಾನನಾಗಿದ್ದ ದಕ್ಷಬ್ರಹ್ಮನು ಕರೆಯಲು ಭಗವತಿಯು ಪುಣ್ಯ ಹೈಮವತ ಗಿರಿಗಳಿಂದ ವಿಮಲೋದೆಯಾಗಿ ಅಲ್ಲಿಗೆ ಹರಿದುಬಂದಳು.
09037027a ಏಕೀಭೂತಾಸ್ತತಸ್ತಾಸ್ತು ತಸ್ಮಿಂಸ್ತೀರ್ಥೇ ಸಮಾಗತಾಃ|
09037027c ಸಪ್ತಸಾರಸ್ವತಂ ತೀರ್ಥಂ ತತಸ್ತತ್ಪ್ರಥಿತಂ ಭುವಿ||
ಆ ತೀರ್ಥದಲ್ಲಿ ಒಂದಾಗಿ ಸೇರಿ, ಅಲ್ಲಿಂದ ಮುಂದೆ ಅದು ಸಪ್ತಸಾರಸ್ವತ ತೀರ್ಥವೆಂದು ಭುವಿಯಲ್ಲಿ ಪ್ರಸಿದ್ಧವಾಯಿತು.
09037028a ಇತಿ ಸಪ್ತ ಸರಸ್ವತ್ಯೋ ನಾಮತಃ ಪರಿಕೀರ್ತಿತಾಃ|
09037028c ಸಪ್ತಸಾರಸ್ವತಂ ಚೈವ ತೀರ್ಥಂ ಪುಣ್ಯಂ ತಥಾ ಸ್ಮೃತಂ||
ಸರಸ್ವತಿಯ ಏಳು ನಾಮಗಳನ್ನೂ ಸಪ್ತಸಾರಸ್ವತವೆಂದು ಪ್ರಖ್ಯಾತವಾದ ಪುಣ್ಯ ತೀರ್ಥದ ಕುರಿತೂ ಹೇಳಿದ್ದಾಯಿತು.
09037029a ಶೃಣು ಮಂಕಣಕಸ್ಯಾಪಿ ಕೌಮಾರಬ್ರಹ್ಮಚಾರಿಣಃ|
09037029c ಆಪಗಾಮವಗಾಢಸ್ಯ ರಾಜನ್ಪ್ರಕ್ರೀಡಿತಂ ಮಹತ್||
ರಾಜನ್! ಈಗ ಕೌಮಾರ ಬ್ರಹ್ಮಚಾರಿ ಮಂಕಣನ ಮಹಾ ಕ್ರೀಡೆಯ ಕುರಿತು ಕೇಳು.
09037030a ದೃಷ್ಟ್ವಾ ಯದೃಚ್ಚಯಾ ತತ್ರ ಸ್ತ್ರಿಯಮಂಭಸಿ ಭಾರತ|
09037030c ಸ್ನಾಯಂತೀಂ ರುಚಿರಾಪಾಂಗೀಂ ದಿಗ್ವಾಸಸಮನಿಂದಿತಾಂ||
09037030e ಸರಸ್ವತ್ಯಾಂ ಮಹಾರಾಜ ಚಸ್ಕಂದೇ ವೀರ್ಯಮಂಭಸಿ||
ಭಾರತ! ಮಹಾರಾಜ! ಒಮ್ಮೆ ಸುಂದರ ಕಡೆಗಣ್ಣಿನ ದಿಕ್ಕುಗಳನ್ನೇ ಬಟ್ಟೆಗಳಾಗಿ ಧರಿಸಿದ್ದ ಅನಿಂದಿತೆ ಸ್ತ್ರೀಯೊಬ್ಬಳು ಸರಸ್ವತೀ ನದಿಯ ನೀರಿನಲ್ಲಿ ಸ್ವೇಚ್ಛೆಯಿಂದ ಸ್ನಾನಮಾಡುತ್ತಿರುವುದನ್ನು ನೋಡಿ ಮಂಕಣಕನ ವೀರ್ಯಸ್ಖಲನವಾಗಿ ನೀರಿನಲ್ಲಿ ಬಿದ್ದಿತು.
09037031a ತದ್ರೇತಃ ಸ ತು ಜಗ್ರಾಹ ಕಲಶೇ ವೈ ಮಹಾತಪಾಃ|
09037031c ಸಪ್ತಧಾ ಪ್ರವಿಭಾಗಂ ತು ಕಲಶಸ್ಥಂ ಜಗಾಮ ಹ||
09037031e ತತ್ರರ್ಷಯಃ ಸಪ್ತ ಜಾತಾ ಜಜ್ಞಿರೇ ಮರುತಾಂ ಗಣಾಃ||
ಆ ಮಹಾತಪಸ್ವಿಯು ಆ ರೇತಸ್ಸನ್ನು ಕಲಶದಲ್ಲಿ ಸಂಗ್ರಹಿಸಿ, ಕಲಶದಲ್ಲಿದ್ದುದನ್ನು ಏಳು ಭಾಗಗಳನ್ನಾಗಿಸಿ ಹೋದನು. ಅಲ್ಲಿಂದ ಸಪ್ತ ಋಷಿ ಮರುದ್ಗಣಗಳು ಹುಟ್ಟಿದವು.
09037032a ವಾಯುವೇಗೋ ವಾಯುಬಲೋ ವಾಯುಹಾ ವಾಯುಮಂಡಲಃ|
09037032c ವಾಯುಜ್ವಾಲೋ ವಾಯುರೇತಾ ವಾಯುಚಕ್ರಶ್ಚ ವೀರ್ಯವಾನ್||
09037032e ಏವಮೇತೇ ಸಮುತ್ಪನ್ನಾ ಮರುತಾಂ ಜನಯಿಷ್ಣವಃ||
ಅಲ್ಲಿಂದ ವಾಯುವೇಗ, ವಾಯುಬಲ, ವಾಯುಹಾ, ವಾಯುಮಂಡಲ, ವಾಯುಜ್ವಾಲ, ವಾಯುರೇತ ಮತ್ತು ವಾಯುಚಕ್ರರೆಂಬ ವೀರ್ಯವಾನ್ ಮರುತ್ತರು ಜನಿಸಿದರು.
09037033a ಇದಮನ್ಯಚ್ಚ ರಾಜೇಂದ್ರ ಶೃಣ್ವಾಶ್ಚರ್ಯತರಂ ಭುವಿ|
09037033c ಮಹರ್ಷೇಶ್ಚರಿತಂ ಯಾದೃಕ್ತ್ರಿಷು ಲೋಕೇಷು ವಿಶ್ರುತಂ||
ರಾಜೇಂದ್ರ! ಮೂರು ಲೋಕಗಳಲ್ಲಿಯೂ ವಿಶ್ರುತವಾದ ಭುವಿಯಲ್ಲೇ ಅತಿ ಆಶ್ಚರ್ಯಕರವಾದ ಮಹರ್ಷಿಯ ಚರಿತ್ರೆಯನ್ನು ಹೇಳುತ್ತೇನೆ. ಕೇಳು.
09037034a ಪುರಾ ಮಂಕಣಕಃ ಸಿದ್ಧಃ ಕುಶಾಗ್ರೇಣೇತಿ ನಃ ಶ್ರುತಂ|
09037034c ಕ್ಷತಃ ಕಿಲ ಕರೇ ರಾಜಂಸ್ತಸ್ಯ ಶಾಕರಸೋಽಸ್ರವತ್||
09037034e ಸ ವಿ ಶಾಕರಸಂ ದೃಷ್ಟ್ವಾ ಹರ್ಷಾವಿಷ್ಟಃ ಪ್ರನೃತ್ತವಾನ್||
ರಾಜನ್! ಹಿಂದೆ ಸಿದ್ಧ ಮಂಕಣಕನು ದರ್ಭೆಯ ಅಗ್ರಭಾಗವು ಕೈಗೆ ಚುಚ್ಚಿ ಗಾಯಗೊಂಡಾಗ ಅಲ್ಲಿಂದ ಶಾಕರಸವು ಸುರಿಯಿತು ಎಂದು ಕೇಳಿದ್ದೇವೆ. ಆ ಶಾಕರಸವನ್ನು ನೋಡಿದ ಮಂಕಣಕನು ಹರ್ಷಾವಿಷ್ಟನಾಗಿ ಕುಣಿದಾಡತೊಡಗಿದನು.
09037035a ತತಸ್ತಸ್ಮಿನ್ಪ್ರನೃತ್ತೇ ವೈ ಸ್ಥಾವರಂ ಜಂಗಮಂ ಚ ಯತ್|
09037035c ಪ್ರನೃತ್ತಮುಭಯಂ ವೀರ ತೇಜಸಾ ತಸ್ಯ ಮೋಹಿತಂ||
ವೀರ! ಅವನು ಕುಣಿಯುತ್ತಿದ್ದಾಗ ಅವನ ತೇಜಸ್ಸಿನಿಂದ ಮೋಹಗೊಂಡ ಸ್ಥಾವರ-ಜಂಗಮಗಳೆರಡೂ ಕುಣಿಯತೊಡಗಿದವು.
09037036a ಬ್ರಹ್ಮಾದಿಭಿಃ ಸುರೈ ರಾಜನ್ನೃಷಿಭಿಶ್ಚ ತಪೋಧನೈಃ|
09037036c ವಿಜ್ಞಪ್ತೋ ವೈ ಮಹಾದೇವ ಋಷೇರರ್ಥೇ ನರಾಧಿಪ||
09037036e ನಾಯಂ ನೃತ್ಯೇದ್ಯಥಾ ದೇವ ತಥಾ ತ್ವಂ ಕರ್ತುಮರ್ಹಸಿ||
ರಾಜನ್! ನರಾಧಿಪ! ಬ್ರಹ್ಮನೇ ಮೊದಲ್ಗೊಂಡು ಸುರರು, ಋಷಿಗಳು ಮತ್ತು ತಪೋಧನರು ಆ ಋಷಿಯ ಕುರಿತು ಮಹಾದೇವನಲ್ಲಿ “ದೇವ! ಇವನು ಕುಣಿಯದಂತೆ ಏನಾದರೂ ಮಾಡಬೇಕು!” ಎಂದು ವಿಜ್ಞಾಪಿಸಿಕೊಂಡರು.
09037037a ತತೋ ದೇವೋ ಮುನಿಂ ದೃಷ್ಟ್ವಾ ಹರ್ಷಾವಿಷ್ಟಮತೀವ ಹ|
09037037c ಸುರಾಣಾಂ ಹಿತಕಾಮಾರ್ಥಂ ಮಹಾದೇವೋಽಭ್ಯಭಾಷತ||
ಸುರರ ಹಿತವನ್ನು ಬಯಸಿದ ದೇವ ಮಹಾದೇವನು ಅತೀವ ಹರ್ಷಾವಿಷ್ಟನಾಗಿದ್ದ ಮುನಿಯನ್ನು ನೋಡಿ ಕೇಳಿದನು:
09037038a ಭೋ ಭೋ ಬ್ರಾಹ್ಮಣ ಧರ್ಮಜ್ಞ ಕಿಮರ್ಥಂ ನರಿನರ್ತ್ಸಿ ವೈ|
09037038c ಹರ್ಷಸ್ಥಾನಂ ಕಿಮರ್ಥಂ ವೈ ತವೇದಂ ಮುನಿಸತ್ತಮ||
09037038e ತಪಸ್ವಿನೋ ಧರ್ಮಪಥೇ ಸ್ಥಿತಸ್ಯ ದ್ವಿಜಸತ್ತಮ||
“ಭೋ! ಭೋ! ಬ್ರಾಹ್ಮಣ! ಧರ್ಮಜ್ಞ! ನೀನೇಕೆ ಹೀಗೆ ಕುಣಿಯುತ್ತಿರುವೆ? ಮುನಿಸತ್ತಮ! ಇಷ್ಟೊಂದು ಹರ್ಷಿತನಾಗಲು ಕಾರಣವೇನೆಂದು ಹೇಳು! ದ್ವಿಜಸತ್ತಮ! ತಪಸ್ವಿಯಾದ ನೀನು ಧರ್ಮಪಥದಲ್ಲಿಯೇ ಇದ್ದೀಯೆ!”
09037039 ಋಷಿರುವಾಚ
09037039a ಕಿಂ ನ ಪಶ್ಯಸಿ ಮೇ ಬ್ರಹ್ಮನ್ಕರಾಚ್ಚಾಕರಸಂ ಸ್ರುತಂ|
09037039c ಯಂ ದೃಷ್ಟ್ವಾ ವೈ ಪ್ರನೃತ್ತೋಽಹಂ ಹರ್ಷೇಣ ಮಹತಾ ವಿಭೋ||
ಋಷಿಯು ಹೇಳಿದನು: “ಬ್ರಹ್ಮನ್! ಕೈಯಿಂದ ಶಾಕರಸವು ಸುರಿಯುತ್ತಿರುವುದು ನಿನಗೆ ಕಾಣುತ್ತಿಲ್ಲವೇ? ವಿಭೋ! ಇದನ್ನು ನೋಡಿ ನಾನು ಮಹಾ ಹರ್ಷದಿಂದ ಕುಣಿಯುತ್ತಿದ್ದೇನೆ.”
09037040a ತಂ ಪ್ರಹಸ್ಯಾಬ್ರವೀದ್ದೇವೋ ಮುನಿಂ ರಾಗೇಣ ಮೋಹಿತಂ|
09037040c ಅಹಂ ನ ವಿಸ್ಮಯಂ ವಿಪ್ರ ಗಚ್ಚಾಮೀತಿ ಪ್ರಪಶ್ಯ ಮಾಂ||
ರಾಗದಿಂದ ಮೋಹಿತನಾಗಿದ್ದ ಆ ಮುನಿಗೆ ದೇವನು ನಗುತ್ತಾ “ವಿಪ್ರ! ನಾನು ಸ್ವಲ್ಪವೂ ವಿಸ್ಮಿತನಾಗಿಲ್ಲ. ನನ್ನನ್ನು ನೋಡು!” ಎಂದು ಹೇಳಿದನು.
09037041a ಏವಮುಕ್ತ್ವಾ ಮುನಿಶ್ರೇಷ್ಠಂ ಮಹಾದೇವೇನ ಧೀಮತಾ|
09037041c ಅಂಗುಲ್ಯಗ್ರೇಣ ರಾಜೇಂದ್ರ ಸ್ವಾಂಗುಷ್ಠಸ್ತಾಡಿತೋಽಭವತ್||
ರಾಜೇಂದ್ರ! ಮುನಿಶ್ರೇಷ್ಠನಿಗೆ ಹೀಗೆ ಹೇಳಿ ಧೀಮಂತ ಮಹಾದೇವನು ಬೆರಳಿನ ತುದಿಯಿಂದ ತನ್ನ ಎಡಗೈ ಹೆಬ್ಬೆರಳನ್ನು ಒತ್ತಿದನು.
09037042a ತತೋ ಭಸ್ಮ ಕ್ಷತಾದ್ರಾಜನ್ನಿರ್ಗತಂ ಹಿಮಸನ್ನಿಭಂ|
09037042c ತದ್ದೃಷ್ಟ್ವಾ ವ್ರೀಡಿತೋ ರಾಜನ್ಸ ಮುನಿಃ ಪಾದಯೋರ್ಗತಃ||
ರಾಜನ್! ಗಾಯಗೊಂಡ ಆ ಹೆಬ್ಬೆರಳಿನಿಂದ ಹಿಮಸದೃಶ ಭಸ್ಮವು ಹೊರಹೊಮ್ಮಿತು. ಅದನ್ನು ನೋಡಿ ಮುನಿಯು ನಾಚಿ ಮಹಾದೇವನ ಪಾದಗಳಿಗೆರಗಿದನು.
09037043 ಋಷಿರುವಾಚ
09037043a ನಾನ್ಯಂ ದೇವಾದಹಂ ಮನ್ಯೇ ರುದ್ರಾತ್ಪರತರಂ ಮಹತ್|
09037043c ಸುರಾಸುರಸ್ಯ ಜಗತೋ ಗತಿಸ್ತ್ವಮಸಿ ಶೂಲಧೃಕ್||
ಋಷಿಯು ಹೇಳಿದನು: “ರುದ್ರನಿಗಿಂತಲೂ ಅಧಿಕನಾದ ಬೇರೆ ಯಾವ ದೇವನನ್ನೂ ನಾನು ಮನ್ನಿಸುವುದಿಲ್ಲ. ಶೂಲಪಾಣೇ! ನೀನೇ ಸುರಾಸುರ ಜಗತ್ತಿನ ಗತಿ!
09037044a ತ್ವಯಾ ಸೃಷ್ಟಮಿದಂ ವಿಶ್ವಂ ವದಂತೀಹ ಮನೀಷಿಣಃ|
09037044c ತ್ವಾಮೇವ ಸರ್ವಂ ವಿಶತಿ ಪುನರೇವ ಯುಗಕ್ಷಯೇ||
ನಿನ್ನಿಂದಲೇ ಈ ವಿಶ್ವವು ಸೃಷ್ಟಿಸಲ್ಪಟ್ಟಿದೆಯೆಂದು ಮನೀಷಿಗಳು ಹೇಳುತ್ತಾರೆ. ಪುನಃ ಯುಗಕ್ಷಯದಲ್ಲಿ ನೀನೇ ಎಲ್ಲವನ್ನೂ ನಿನ್ನೊಳಗೆ ಸೇರಿಸಿಕೊಳ್ಳುತ್ತೀಯೆ!
09037045a ದೇವೈರಪಿ ನ ಶಕ್ಯಸ್ತ್ವಂ ಪರಿಜ್ಞಾತುಂ ಕುತೋ ಮಯಾ|
09037045c ತ್ವಯಿ ಸರ್ವೇ ಸ್ಮ ದೃಶ್ಯಂತೇ ಸುರಾ ಬ್ರಹ್ಮಾದಯೋಽನಘ||
ಅನಘ! ದೇವತೆಗಳಿಗೂ ನಿನ್ನನ್ನು ಅರಿತುಕೊಳ್ಳಲು ಸಾಧ್ಯವಾಗದಿರುವಾಗ ನಾನು ಹೇಗೆ ನಿನ್ನನ್ನು ಅರಿಯಬಲ್ಲೆ? ಬ್ರಹ್ಮಾದಿ ಸುರರೆಲ್ಲರೂ ನಿನ್ನಲ್ಲಿಯೇ ಕಾಣುತ್ತಾರೆ.
09037046a ಸರ್ವಸ್ತ್ವಮಸಿ ದೇವಾನಾಂ ಕರ್ತಾ ಕಾರಯಿತಾ ಚ ಹ|
09037046c ತ್ವತ್ಪ್ರಸಾದಾತ್ಸುರಾಃ ಸರ್ವೇ ಮೋದಂತೀಹಾಕುತೋಭಯಾಃ||
ದೇವತೆಗಳ ಕರ್ತ ಮತ್ತು ಎಲ್ಲವನ್ನೂ ಮಾಡಿಸುವವನು ನೀನೇ ಆಗಿರುವೆ. ನಿನ್ನ ಪ್ರಸಾದದಿಂದಲೇ ಸುರರೆಲ್ಲರೂ ಭಯವೇ ಇಲ್ಲದವರಾಗಿ ಆನಂದಿಸುತ್ತಾರೆ.”
09037047a ಏವಂ ಸ್ತುತ್ವಾ ಮಹಾದೇವಂ ಸ ಋಷಿಃ ಪ್ರಣತೋಽಬ್ರವೀತ್|
09037047c ಭಗವಂಸ್ತ್ವತ್ಪ್ರಸಾದಾದ್ವೈ ತಪೋ ಮೇ ನ ಕ್ಷರೇದಿತಿ||
ಮಹಾದೇವನನ್ನು ಹೀಗೆ ಸ್ತುತಿಸಿ ನಮಸ್ಕರಿಸಿ ಆ ಋಷಿಯು “ಭಗವನ್! ನಿನ್ನ ಪ್ರಸಾದದಿಂದ ನನ್ನ ತಪಸ್ಸು ಕ್ಷಯವಾಗದಿರಲಿ!” ಎಂದು ಕೇಳಿಕೊಂಡನು.
09037048a ತತೋ ದೇವಃ ಪ್ರೀತಮನಾಸ್ತಂ ಋಷಿಂ ಪುನರಬ್ರವೀತ್|
09037048c ತಪಸ್ತೇ ವರ್ಧತಾಂ ವಿಪ್ರ ಮತ್ಪ್ರಸಾದಾತ್ಸಹಸ್ರಧಾ||
09037048e ಆಶ್ರಮೇ ಚೇಹ ವತ್ಸ್ಯಾಮಿ ತ್ವಯಾ ಸಾರ್ಧಮಹಂ ಸದಾ||
ಆಗ ಪ್ರೀತಮನಸ್ಕನಾದ ದೇವನು ಪುನಃ ಋಷಿಗೆ ಹೇಳಿದನು: “ವಿಪ್ರ! ನನ್ನ ಪ್ರಸಾದದಿಂದ ನಿನ್ನ ತಪಸ್ಸು ಸಾವಿರಪಟ್ಟು ವರ್ಧಿಸಲಿ. ಮತ್ತು ನಿನ್ನೊಡನೆ ನಾನೂ ಕೂಡ ಈ ಆಶ್ರಮದಲ್ಲಿ ಇದ್ದುಬಿಡುತ್ತೇನೆ!
09037049a ಸಪ್ತಸಾರಸ್ವತೇ ಚಾಸ್ಮಿನ್ಯೋ ಮಾಮರ್ಚಿಷ್ಯತೇ ನರಃ|
09037049c ನ ತಸ್ಯ ದುರ್ಲಭಂ ಕಿಂ ಚಿದ್ಭವಿತೇಹ ಪರತ್ರ ಚ||
09037049e ಸಾರಸ್ವತಂ ಚ ಲೋಕಂ ತೇ ಗಮಿಷ್ಯಂತಿ ನ ಸಂಶಯಃ||
ಈ ಸಪ್ತಸಾರಸ್ವತದಲ್ಲಿ ನನ್ನನ್ನು ಅರ್ಚಿಸುವ ನರನಿಗೆ ಇಲ್ಲಿ ಅಥವಾ ನಂತರದಲ್ಲಿ ಯಾವುದೂ ದುರ್ಲಭವಾಗಲಾರದು. ಅವನು ಸಾರಸ್ವತ ಲೋಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ!”
09037050a ಏತನ್ಮಂಕಣಕಸ್ಯಾಪಿ ಚರಿತಂ ಭೂರಿತೇಜಸಃ|
09037050c ಸ ಹಿ ಪುತ್ರಃ ಸಜನ್ಯಾಯಾಮುತ್ಪನ್ನೋ ಮಾತರಿಶ್ವನಾ||
ಇದು ಭೂರಿತೇಜಸ ಮಂಕಣಕನ ಚರಿತ್ರೆ. ಅವನೇ ವಾಯುವಿಗೆ ಸುಜನ್ಯೆಯಲ್ಲಿ ಹುಟ್ಟಿದ ಮಗ.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಸಪ್ತಾತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತೇಳನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ
