ಶಲ್ಯಪರ್ವ: ಸಾರಸ್ವತಪರ್ವ
Contents
Toggle೩೨
“ಹೇಗೆ ತಾನೇ ನೀನು ಶತ್ರುವಿಗೆ “ನಮ್ಮಲ್ಲಿ ಒಬ್ಬನನ್ನು ಸಂಹರಿಸಿ ರಾಜನಾಗು!” ಎಂದು ಹೇಳಿಬಿಟ್ಟೆ?” ಎಂದು ಕೃಷ್ಣನು ಯುಧಿಷ್ಠಿರನನ್ನು ನಿಂದಿಸಿದುದು (೧-೧೪). ಭೀಮಸೇನ ವಾಕ್ಯ (೧೫-೧೮). ಕೃಷ್ಣವಾಕ್ಯ (೧೯-೨೫). ತಾನು ದುರ್ಯೋಧನನೊಡನೆ ಗದಾಯುದ್ಧ ಮಾಡೂತ್ತೇನೆಂದು ಹೇಳಿ ಭೀಮಸೇನನು ಯುದ್ಧಕ್ಕೆ ಸಿದ್ಧನಾಗುವುದು (೨೬-೩೫). ಭೀಮಸೇನ-ದುರ್ಯೋಧನರ ಸಂವಾದ (೩೬-೫೨).
09032001 ಸಂಜಯ ಉವಾಚ
09032001a ಏವಂ ದುರ್ಯೋಧನೇ ರಾಜನ್ಗರ್ಜಮಾನೇ ಮುಹುರ್ಮುಹುಃ|
09032001c ಯುಧಿಷ್ಠಿರಸ್ಯ ಸಂಕ್ರುದ್ಧೋ ವಾಸುದೇವೋಽಬ್ರವೀದಿದಂ||
ಸಂಜಯನು ಹೇಳಿದನು: “ರಾಜನ್! ಹೀಗೆ ಮತ್ತೆ ಮತ್ತೆ ದುರ್ಯೋಧನನು ಗರ್ಜಿಸುತ್ತಿರಲು ಯುಧಿಷ್ಠಿರನ ಮೇಲೆ ಸಂಕ್ರುದ್ಧನಾಗಿ ವಾಸುದೇವನು ಇದನ್ನು ಹೇಳಿದನು:
09032002a ಯದಿ ನಾಮ ಹ್ಯಯಂ ಯುದ್ಧೇ ವರಯೇತ್ತ್ವಾಂ ಯುಧಿಷ್ಠಿರ|
09032002c ಅರ್ಜುನಂ ನಕುಲಂ ವಾಪಿ ಸಹದೇವಮಥಾಪಿ ವಾ||
“ಯುಧಿಷ್ಠಿರ! ಯುದ್ಧದಲ್ಲಿ ಎಂಥಹ ವರವನ್ನು ನೀನು ಕೊಟ್ಟುಬಿಟ್ಟೆ! ಒಂದುವೇಳೆ ಅವನು ಅರ್ಜುನ, ನಕುಲ, ಸಹದೇವ ಅಥವಾ ನಿನ್ನೊಡನೆ ಯುದ್ಧಮಾಡಲು ಬಯಸಿದರೆ ಏನಾಗುತ್ತದೆ?
09032003a ಕಿಮಿದಂ ಸಾಹಸಂ ರಾಜಂಸ್ತ್ವಯಾ ವ್ಯಾಹೃತಮೀದೃಶಂ|
09032003c ಏಕಮೇವ ನಿಹತ್ಯಾಜೌ ಭವ ರಾಜಾ ಕುರುಷ್ವಿತಿ||
ರಾಜನ್! “ನಮ್ಮೈವರಲ್ಲಿ ಒಬ್ಬನನ್ನೇ ಕೊಂದು ನೀನು ರಾಜನಾಗು!” ಎಂದು ಹೇಳಿ ಇದೇನು ಸಾಹಸಮಾಡಿಬಿಟ್ಟೆ?
09032004a ಏತೇನ ಹಿ ಕೃತಾ ಯೋಗ್ಯಾ ವರ್ಷಾಣೀಹ ತ್ರಯೋದಶ|
09032004c ಆಯಸೇ ಪುರುಷೇ ರಾಜನ್ಭೀಮಸೇನಜಿಘಾಂಸಯಾ||
ರಾಜನ್! ಭೀಮಸೇನನನ್ನು ಸಂಹರಿಸಲು ಬಯಸಿ ಇವನು ಕಳೆದ ಹದಿಮೂರು ವರ್ಷಗಳು ಭೀಮಸೇನನ ಲೋಹದ ಮೂರ್ತಿಯನ್ನು ಮಾಡಿಕೊಂಡು ಅದರೊಡನೆ ಗದಾಯುದ್ಧದ ಅಭ್ಯಾಸಮಾಡಿಕೊಂಡು ಬಂದಿರುವನು!
09032005a ಕಥಂ ನಾಮ ಭವೇತ್ಕಾರ್ಯಮಸ್ಮಾಭಿರ್ಭರತರ್ಷಭ|
09032005c ಸಾಹಸಂ ಕೃತವಾಂಸ್ತ್ವಂ ತು ಹ್ಯನುಕ್ರೋಶಾನ್ನೃಪೋತ್ತಮ||
ಭರತರ್ಷಭ! ನೃಪೋತ್ತಮ! ಈಗ ನಾವು ನಿನ್ನ ಕಾರ್ಯವನ್ನು ಹೇಗೆ ಪೂರೈಸಿಕೊಡಬಲ್ಲೆವು? ಕೇವಲ ದಯಾಪೂರ್ಣನಾಗಿ ಈ ದುಃಸ್ಸಾಹಸವನ್ನು ನೀನು ಮಾಡಿರುವೆ!
09032006a ನಾನ್ಯಮಸ್ಯಾನುಪಶ್ಯಾಮಿ ಪ್ರತಿಯೋದ್ಧಾರಮಾಹವೇ|
09032006c ಋತೇ ವೃಕೋದರಾತ್ಪಾರ್ಥಾತ್ಸ ಚ ನಾತಿಕೃತಶ್ರಮಃ||
ಪಾರ್ಥ ವೃಕೋದರನಲ್ಲದೇ ಇವನೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾರನ್ನೂ ನಾನು ಕಾಣೆ. ಇವನೂ ಕೂಡ ಚೆನ್ನಾಗಿ ಅಭ್ಯಾಸವನ್ನು ಮಾಡಿಲ್ಲ.
09032007a ತದಿದಂ ದ್ಯೂತಮಾರಬ್ಧಂ ಪುನರೇವ ಯಥಾ ಪುರಾ|
09032007c ವಿಷಮಂ ಶಕುನೇಶ್ಚೈವ ತವ ಚೈವ ವಿಶಾಂ ಪತೇ||
ವಿಶಾಂಪತೇ! ಹಿಂದಿನಂತೆಯೇ ಈಗ ಕೂಡ ಪುನಃ ದ್ಯೂತವನ್ನು ಪ್ರಾರಂಭಿಸಿಬಿಟ್ಟೆಯಲ್ಲ! ಇಂದಿನ ಈ ಜೂಜಾಟವು ಶಕುನಿಯೊಡನಾಡಿನ ಅಂದಿನಂತೆ ವಿಷಮವಾದುದು.
09032008a ಬಲೀ ಭೀಮಃ ಸಮರ್ಥಶ್ಚ ಕೃತೀ ರಾಜಾ ಸುಯೋಧನಃ|
09032008c ಬಲವಾನ್ವಾ ಕೃತೀ ವೇತಿ ಕೃತೀ ರಾಜನ್ವಿಶಿಷ್ಯತೇ||
ಭೀಮನು ಬಲಶಾಲಿ ಮತ್ತು ಸಮರ್ಥ. ರಾಜಾ ಸುಯೋಧನನು ಕುಶಲನು. ರಾಜನ್! ನೋಡಿದರೆ ಬಲಶಾಲಿ ಮತ್ತು ಕುಶಲಿ ಇಬ್ಬರಲ್ಲಿ ಕುಶಲಿಯೇ ಅಧಿಕನೆನಿಸಿಕೊಳ್ಳುತ್ತಾನೆ.
09032009a ಸೋಽಯಂ ರಾಜಂಸ್ತ್ವಯಾ ಶತ್ರುಃ ಸಮೇ ಪಥಿ ನಿವೇಶಿತಃ|
09032009c ನ್ಯಸ್ತಶ್ಚಾತ್ಮಾ ಸುವಿಷಮೇ ಕೃಚ್ಚ್ರಮಾಪಾದಿತಾ ವಯಂ||
ರಾಜನ್! ಅತ್ಯಂತ ವಿಷಮ ಪ್ರದೇಶದಲ್ಲಿ ಕಷ್ಟಪಡುತ್ತಿರುವ ಶತ್ರುವನ್ನು ನೀನು ಸಮಪ್ರದೇಶಕ್ಕೆ ತಂದು ಇಟ್ಟಿರುವೆ. ಸಮಪ್ರದೇಶದಲ್ಲಿದ್ದ ನಮ್ಮನ್ನು ವಿಷಮಪ್ರದೇಶಕ್ಕೆ ಕೊಂಡೊಯ್ದು ಮಹಾ ಕಷ್ಟದಲ್ಲಿ ಸಿಕ್ಕಿಸಿದೆ.
09032010a ಕೋ ನು ಸರ್ವಾನ್ವಿನಿರ್ಜಿತ್ಯ ಶತ್ರೂನೇಕೇನ ವೈರಿಣಾ|
09032010c ಪಣಿತ್ವಾ ಚೈಕಪಾಣೇನ ರೋಚಯೇದೇವಮಾಹವಂ||
ಯಾರುತಾನೇ ಸರ್ವ ಶತ್ರುಗಳನ್ನೂ ಸೋಲಿಸಿ ಒಂಟಿಗನಾಗಿರುವ ವೈರಿಗೆ ಒಂದೇ ಒಂದು ಪಣದಲ್ಲಿ ರಾಜ್ಯವನ್ನು ಕೊಡಲು ಬಯಸುತ್ತಾನೆ?
09032011a ನ ಹಿ ಪಶ್ಯಾಮಿ ತಂ ಲೋಕೇ ಗದಾಹಸ್ತಂ ನರೋತ್ತಮಂ|
09032011c ಯುಧ್ಯೇದ್ದುರ್ಯೋಧನಂ ಸಂಖ್ಯೇ ಕೃತಿತ್ವಾದ್ಧಿ ವಿಶೇಷಯೇತ್||
ಯುದ್ಧದಲ್ಲಿ ದುರ್ಯೋಧನನೊಡನೆ, ಅದರಲ್ಲೂ ವಿಶೇಷವಾಗಿ ಅಭ್ಯಾಸಮಾಡಿರುವ ಇವನೊಡನೆ, ಗದಾಪಾಣಿಯಾಗಿ ಯುದ್ಧಮಾಡುವ ನರೋತ್ತಮನನ್ನು ನಾನು ಈ ಲೋಕಗಳಲ್ಲಿ ಯಾರನ್ನೂ ಕಾಣುತ್ತಿಲ್ಲ.
09032012a ಫಲ್ಗುನಂ ವಾ ಭವಂತಂ ವಾ ಮಾದ್ರೀಪುತ್ರಾವಥಾಪಿ ವಾ|
09032012c ನ ಸಮರ್ಥಾನಹಂ ಮನ್ಯೇ ಗದಾಹಸ್ತಸ್ಯ ಸಮ್ಯುಗೇ||
ಫಲ್ಗುನನಾಗಲೀ, ನೀನಾಗಲೀ, ಮಾದ್ರೀಪುತ್ರರಾಗಲೀ ಯುದ್ಧದಲ್ಲಿ ಈ ಗದಾಪಾಣಿಯನ್ನು ಎದುರಿಸಲು ಸಮರ್ಥರೆಂದು ನನಗನ್ನಿಸುವುದಿಲ್ಲ.
09032013a ಸ ಕಥಂ ವದಸೇ ಶತ್ರುಂ ಯುಧ್ಯಸ್ವ ಗದಯೇತಿ ಹ|
09032013c ಏಕಂ ಚ ನೋ ನಿಹತ್ಯಾಜೌ ಭವ ರಾಜೇತಿ ಭಾರತ||
ಭಾರತ! ಹೇಗೆ ತಾನೇ ನೀನು ಶತ್ರುವಿಗೆ “ನಮ್ಮಲ್ಲಿ ಒಬ್ಬನನ್ನು ಸಂಹರಿಸಿ ರಾಜನಾಗು!” ಎಂದು ಹೇಳಿಬಿಟ್ಟೆ?
09032014a ವೃಕೋದರಂ ಸಮಾಸಾದ್ಯ ಸಂಶಯೋ ವಿಜಯೇ ಹಿ ನಃ|
09032014c ನ್ಯಾಯತೋ ಯುಧ್ಯಮಾನಾನಾಂ ಕೃತೀ ಹ್ಯೇಷ ಮಹಾಬಲಃ||
ವೃಕೋದರನೇ ಇವನನ್ನು ಎದುರಿಸಿದರೂ ನ್ಯಾಯರೀತಿಯಲ್ಲಿ ಯುದ್ಧಮಾಡುವ ನಮಗೆ ವಿಜಯದ ಸಂದೇಹವೇ ಇದೆ. ಏಕೆಂದರೆ ಮಹಾಬಲ ದುರ್ಯೋಧನನು ಗದಾಯುದ್ಧದಲ್ಲಿ ಪರಿಣಿತನಾಗಿದ್ದಾನೆ.”
09032015 ಭೀಮ ಉವಾಚ
09032015a ಮಧುಸೂದನ ಮಾ ಕಾರ್ಷೀರ್ವಿಷಾದಂ ಯದುನಂದನ|
09032015c ಅದ್ಯ ಪಾರಂ ಗಮಿಷ್ಯಾಮಿ ವೈರಸ್ಯ ಭೃಶದುರ್ಗಮಂ||
ಭೀಮನು ಹೇಳಿದನು: “ಮಧುಸೂದನ! ಯದುನಂದನ! ವಿಷಾದಪಡಬೇಡ! ಅತ್ಯಂತ ದುರ್ಗಮ ವೈರದ ದಡವನ್ನು ನಾನು ಇಂದು ಸೇರಿಯೇ ತೀರುತ್ತೇನೆ!
09032016a ಅಹಂ ಸುಯೋಧನಂ ಸಂಖ್ಯೇ ಹನಿಷ್ಯಾಮಿ ನ ಸಂಶಯಃ|
09032016c ವಿಜಯೋ ವೈ ಧ್ರುವಂ ಕೃಷ್ಣ ಧರ್ಮರಾಜಸ್ಯ ದೃಶ್ಯತೇ||
ಸುಯೋಧನನನ್ನು ನಾನು ಯುದ್ಧದಲ್ಲಿ ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ! ಕೃಷ್ಣ! ಧರ್ಮರಾಜನ ಕಣ್ಣೆದುರಿಗೆ ವಿಜಯವು ನಿಶ್ಚಯವಾದುದು!
09032017a ಅಧ್ಯರ್ಧೇನ ಗುಣೇನೇಯಂ ಗದಾ ಗುರುತರೀ ಮಮ|
09032017c ನ ತಥಾ ಧಾರ್ತರಾಷ್ಟ್ರಸ್ಯ ಮಾ ಕಾರ್ಷೀರ್ಮಾಧವ ವ್ಯಥಾಂ||
ಮಾಧವ! ನನ್ನ ಈ ಗದೆಯು ಅವನ ಗದೆಗಿಂತ ಒಂದೂವರೆಯಷ್ಟು ಹೆಚ್ಚು ಭಾರವಾಗಿದೆ. ಧಾರ್ತರಾಷ್ಟ್ರನ ಗದೆಯು ನನ್ನ ಗದೆಗೆ ಸಮಾನವಲ್ಲ. ವ್ಯಥೆಪಡೆಯದಿರು!
09032018a ಸಾಮರಾನಪಿ ಲೋಕಾಂಸ್ತ್ರೀನ್ನಾನಾಶಸ್ತ್ರಧರಾನ್ಯುಧಿ|
09032018c ಯೋಧಯೇಯಂ ರಣೇ ಹೃಷ್ಟಃ ಕಿಮುತಾದ್ಯ ಸುಯೋಧನಂ||
ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿರುವ ಮೂರುಲೋಕಗಳ ಅಮರರೊಂದಿಗೆ ಕೂಡ ನಾನು ಸಂತೋಷದಿಂದ ಯುದ್ಧಮಾಡಬಲ್ಲೆನು. ಇನ್ನು ರಣದಲ್ಲಿ ಸುಯೋಧನನೇನು?””
09032019 ಸಂಜಯ ಉವಾಚ
09032019a ತಥಾ ಸಂಭಾಷಮಾಣಂ ತು ವಾಸುದೇವೋ ವೃಕೋದರಂ|
09032019c ಹೃಷ್ಟಃ ಸಂಪೂಜಯಾಮಾಸ ವಚನಂ ಚೇದಮಬ್ರವೀತ್||
ಸಂಜಯನು ಹೇಳಿದನು: “ಹಾಗೆ ಮಾತನಾಡುತ್ತಿದ್ದ ವೃಕೋದರನನ್ನು ಸಂತೋಷದಿಂದ ಗೌರವಿಸಿ ವಾಸುದೇವನು ಈ ಮಾತುಗಳನ್ನಾಡಿದನು:
09032020a ತ್ವಾಮಾಶ್ರಿತ್ಯ ಮಹಾಬಾಹೋ ಧರ್ಮರಾಜೋ ಯುಧಿಷ್ಠಿರಃ|
09032020c ನಿಹತಾರಿಃ ಸ್ವಕಾಂ ದೀಪ್ತಾಂ ಶ್ರಿಯಂ ಪ್ರಾಪ್ತೋ ನ ಸಂಶಯಃ||
“ಮಹಾಬಾಹೋ! ನಿನ್ನನ್ನೇ ಆಶ್ರಯಿಸಿ ಧರ್ಮರಾಜ ಯುಧಿಷ್ಠಿರನು ಶತ್ರುಗಳನ್ನು ಕಳೆದುಕೊಂಡು ಬೆಳಗುತ್ತಿರುವ ತನ್ನ ಸಂಪತ್ತನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
09032021a ತ್ವಯಾ ವಿನಿಹತಾಃ ಸರ್ವೇ ಧೃತರಾಷ್ಟ್ರಸುತಾ ರಣೇ|
09032021c ರಾಜಾನೋ ರಾಜಪುತ್ರಾಶ್ಚ ನಾಗಾಶ್ಚ ವಿನಿಪಾತಿತಾಃ||
ರಣದಲ್ಲಿ ಧೃತರಾಷ್ಟ್ರನ ಸರ್ವ ಸುತರೂ, ರಾಜರೂ, ರಾಜಪುತ್ರರೂ, ಆನೆಗಳೂ ನಿನ್ನಿಂದ ಹತರಾಗಿ ಬಿದ್ದಿದ್ದಾರೆ.
09032022a ಕಲಿಂಗಾ ಮಾಗಧಾಃ ಪ್ರಾಚ್ಯಾ ಗಾಂಧಾರಾಃ ಕುರವಸ್ತಥಾ|
09032022c ತ್ವಾಮಾಸಾದ್ಯ ಮಹಾಯುದ್ಧೇ ನಿಹತಾಃ ಪಾಂಡುನಂದನ||
ಪಾಂಡುನಂದನ! ಮಹಾಯುದ್ಧದಲ್ಲಿ ನಿನ್ನನ್ನು ಎದುರಿಸಿ ಕಲಿಂಗರು, ಮಾಗಧರು, ಪೂರ್ವದವರು, ಗಾಂಧಾರರು ಮತ್ತು ಕುರವರು ಹತರಾಗಿದ್ದಾರೆ.
09032023a ಹತ್ವಾ ದುರ್ಯೋಧನಂ ಚಾಪಿ ಪ್ರಯಚ್ಚೋರ್ವೀಂ ಸಸಾಗರಾಂ|
09032023c ಧರ್ಮರಾಜಾಯ ಕೌಂತೇಯ ಯಥಾ ವಿಷ್ಣುಃ ಶಚೀಪತೇಃ||
ಕೌಂತೇಯ! ದುರ್ಯೋಧನನನ್ನು ಕೂಡ ಸಂಹರಿಸಿ ವಿಷ್ಣುವು ಶಚೀಪತಿಗೆ ಹೇಗೋ ಹಾಗೆ ನೀನು ಧರ್ಮರಾಜನಿಗೆ ಈ ಸಾಗರಮೇಖಲೆ ಭೂಮಿಯನ್ನು ಸಮರ್ಪಿಸು.
09032024a ತ್ವಾಂ ಚ ಪ್ರಾಪ್ಯ ರಣೇ ಪಾಪೋ ಧಾರ್ತರಾಷ್ಟ್ರೋ ವಿನಂಕ್ಷ್ಯತಿ|
09032024c ತ್ವಮಸ್ಯ ಸಕ್ಥಿನೀ ಭಂಕ್ತ್ಯಾ ಪ್ರತಿಜ್ಞಾಂ ಪಾರಯಿಷ್ಯಸಿ||
ರಣದಲ್ಲಿ ನಿನ್ನನ್ನು ಎದುರಿಸಿ ಪಾಪಿ ಧಾರ್ತರಾಷ್ಟ್ರನು ವಿನಾಶಹೊಂದುತ್ತಾನೆ. ಅವನ ಎಡ ತೊಡೆಯನ್ನು ಮುರಿದು ನೀನು ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವೆ.
09032025a ಯತ್ನೇನ ತು ಸದಾ ಪಾರ್ಥ ಯೋದ್ಧವ್ಯೋ ಧೃತರಾಷ್ಟ್ರಜಃ|
09032025c ಕೃತೀ ಚ ಬಲವಾಂಶ್ಚೈವ ಯುದ್ಧಶೌಂಡಶ್ಚ ನಿತ್ಯದಾ||
ಪಾರ್ಥ! ಸದಾ ಪ್ರಯತ್ನಪೂರ್ವಕವಾಗಿ ಧೃತರಾಷ್ಟ್ರಜನೊಡನೆ ಯುದ್ಧಮಾಡಬೇಕು. ಏಕೆಂದರೆ ಅವನು ಕುಶಲನು, ಬಲಿಷ್ಠನು ಮತ್ತು ನಿತ್ಯವೂ ಯುದ್ಧಕಲೆಯನ್ನು ಸಂಪೂರ್ಣವಾಗಿ ತಿಳಿದಿರುವನು.”
09032026a ತತಸ್ತು ಸಾತ್ಯಕೀ ರಾಜನ್ಪೂಜಯಾಮಾಸ ಪಾಂಡವಂ|
09032026c ವಿವಿಧಾಭಿಶ್ಚ ತಾಂ ವಾಗ್ಭಿಃ ಪೂಜಯಾಮಾಸ ಮಾಧವಃ||
ರಾಜನ್! ಆಗ ಮಾಧವ ಸಾತ್ಯಕಿಯು ಪಾಂಡವನನ್ನು ವಿವಿಧ ಮಾತುಗಳಿಂದ ಪ್ರಶಂಸಿಸಿದನು.
09032027a ಪಾಂಚಾಲಾಃ ಪಾಂಡವೇಯಾಶ್ಚ ಧರ್ಮರಾಜಪುರೋಗಮಾಃ|
09032027c ತದ್ವಚೋ ಭೀಮಸೇನಸ್ಯ ಸರ್ವ ಏವಾಭ್ಯಪೂಜಯನ್||
ಧರ್ಮರಾಜನ ನಾಯಕತ್ವದಲ್ಲಿದ್ದ ಪಾಂಚಾಲರೂ ಪಾಂಡವೇಯರೂ ಎಲ್ಲರೂ ಭೀಮಸೇನನ ಆ ಮಾತನ್ನು ಗೌರವಿಸಿದರು.
09032028a ತತೋ ಭೀಮಬಲೋ ಭೀಮೋ ಯುಧಿಷ್ಠಿರಮಥಾಬ್ರವೀತ್|
09032028c ಸೃಂಜಯೈಃ ಸಹ ತಿಷ್ಠಂತಂ ತಪಂತಮಿವ ಭಾಸ್ಕರಂ||
ಆಗ ಭೀಮಬಲ ಭೀಮನು ಸೃಂಜಯರೊಡನೆ ಸುಡುತ್ತಿರುವ ಭಾಸ್ಕರನಂತೆ ನಿಂತಿರುವ ಯುಧಿಷ್ಠಿರನಿಗೆ ಹೇಳಿದನು:
09032029a ಅಹಮೇತೇನ ಸಂಗಮ್ಯ ಸಂಯುಗೇ ಯೋದ್ಧುಮುತ್ಸಹೇ|
09032029c ನ ಹಿ ಶಕ್ತೋ ರಣೇ ಜೇತುಂ ಮಾಮೇಷ ಪುರುಷಾಧಮಃ||
“ರಣದಲ್ಲಿ ನಾನೇ ಇವನೊಡನೆ ಯುದ್ಧಮಾಡಲು ಬಯಸುತ್ತೇನೆ. ಏಕೆಂದರೆ ಈ ಪುರುಷಾಧಮನು ರಣದಲ್ಲಿ ನನ್ನನ್ನು ಗೆಲ್ಲಲು ಶಕ್ತನಿಲ್ಲ.
09032030a ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ನಿಹಿತಂ ಹೃದಯೇ ಭೃಶಂ|
09032030c ಸುಯೋಧನೇ ಧಾರ್ತರಾಷ್ಟ್ರೇ ಖಾಂಡವೇಽಗ್ನಿಮಿವಾರ್ಜುನಃ||
ಖಾಂಡವದಲ್ಲಿ ಅರ್ಜುನನು ಅಗ್ನಿಯನ್ನು ಸುರಿಸಿದಂತೆ ನನ್ನ ಹೃದಯದಲ್ಲಿ ಚೆನ್ನಾಗಿ ಹುದುಗಿರುವ ಕ್ರೋಧಾಗ್ನಿಯನ್ನು ಇಂದು ನಾನು ಧಾರ್ತರಾಷ್ಟ್ರ ಸುಯೋಧನನ ಮೇಲೆ ಸುರಿಯುತ್ತೇನೆ.
09032031a ಶಲ್ಯಮದ್ಯೋದ್ಧರಿಷ್ಯಾಮಿ ತವ ಪಾಂಡವ ಹೃಚ್ಚಯಂ|
09032031c ನಿಹತ್ಯ ಗದಯಾ ಪಾಪಮದ್ಯ ರಾಜನ್ಸುಖೀ ಭವ||
ಪಾಂಡವ! ರಾಜನ್! ಇಂದು ಈ ಪಾಪಿಯನ್ನು ಗದೆಯಿಂದ ಸಂಹರಿಸಿ ನಿನ್ನ ಹೃದಯದಲ್ಲಿ ನೆಟ್ಟಿಕೊಂಡಿರುವ ಮುಳ್ಳನ್ನು ಕಿತ್ತುಹಾಕುತ್ತೇನೆ. ಸುಖಿಯಾಗಿರು!
09032032a ಅದ್ಯ ಕೀರ್ತಿಮಯೀಂ ಮಾಲಾಂ ಪ್ರತಿಮೋಕ್ಷ್ಯೇ ತವಾನಘ|
09032032c ಪ್ರಾಣಾನ್ ಶ್ರಿಯಂ ಚ ರಾಜ್ಯಂ ಚ ಮೋಕ್ಷ್ಯತೇಽದ್ಯ ಸುಯೋಧನಃ||
ಅನಘ! ಇಂದು ಕೀರ್ತಿಮಯೀ ಮಾಲೆಯನ್ನು ನಿನಗೆ ತೊಡಿಸುತ್ತೇನೆ. ಸುಯೋಧನನನ್ನು ಪ್ರಾಣ-ಸಂಪತ್ತು-ರಾಜ್ಯಗಳಿಂದ ಇಂದು ಮೋಕ್ಷಗೊಳಿಸುತ್ತೇನೆ.
09032033a ರಾಜಾ ಚ ಧೃತರಾಷ್ಟ್ರೋಽದ್ಯ ಶ್ರುತ್ವಾ ಪುತ್ರಂ ಮಯಾ ಹತಂ|
09032033c ಸ್ಮರಿಷ್ಯತ್ಯಶುಭಂ ಕರ್ಮ ಯತ್ತಚ್ಚಕುನಿಬುದ್ಧಿಜಂ||
ತನ್ನ ಮಗನು ನನ್ನಿಂದ ಹತನಾದುದನ್ನು ಕೇಳಿ ರಾಜಾ ಧೃತರಾಷ್ಟ್ರನೂ ಕೂಡ ಇಂದು ಶಕುನಿಯ ಬುದ್ಧಿಯಿಂದ ಹುಟ್ಟಿದ ಅಶುಭ ಕರ್ಮಗಳನ್ನು ನೆನಪಿಸಿಕೊಳ್ಳುತ್ತಾನೆ!”
09032034a ಇತ್ಯುಕ್ತ್ವಾ ಭರತಶ್ರೇಷ್ಠೋ ಗದಾಮುದ್ಯಮ್ಯ ವೀರ್ಯವಾನ್|
09032034c ಉದತಿಷ್ಠತ ಯುದ್ಧಾಯ ಶಕ್ರೋ ವೃತ್ರಮಿವಾಹ್ವಯನ್||
ಹೀಗೆ ಹೇಳಿ ಆ ಭರತಶ್ರೇಷ್ಠ ವೀರ್ಯವಾನನು ಗದೆಯನ್ನು ಮೇಲೆತ್ತಿ ಶಕ್ರನು ವೃತ್ರನನ್ನು ಯುದ್ಧಕ್ಕೆ ಆಹ್ವಾನಿಸುವಂತೆ ಮೇಲೆದ್ದುನಿಂತನು.
09032035a ತಮೇಕಾಕಿನಮಾಸಾದ್ಯ ಧಾರ್ತರಾಷ್ಟ್ರಂ ಮಹಾಬಲಂ|
09032035c ನಿರ್ಯೂಥಮಿವ ಮಾತಂಗಂ ಸಮಹೃಷ್ಯಂತ ಪಾಂಡವಾಃ||
ಹಿಂಡಿನಿಂದ ಬೇರ್ಪಟ್ಟ ಸಲಗದಂತೆ ಒಂಟಿಯಾಗಿದ್ದ ಮಹಾಬಲ ಧಾರ್ತರಾಷ್ಟ್ರನನ್ನು ನೋಡಿ ಪಾಂಡವರೆಲ್ಲರೂ ಹರ್ಷಿತರಾದರು.
09032036a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ|
09032036c ಭೀಮಸೇನಸ್ತದಾ ರಾಜನ್ದುರ್ಯೋಧನಮಥಾಬ್ರವೀತ್||
ರಾಜನ್! ಗದೆಯನ್ನು ಎತ್ತಿಹಿಡಿದು ಶಿಖರಯುಕ್ತ ಕೈಲಾಸದಂತೆ ನಿಂತಿರುವ ದುರ್ಯೋಧನನನ್ನು ನೋಡಿ ಭೀಮಸೇನನು ಹೇಳಿದನು:
09032037a ರಾಜ್ಞಾಪಿ ಧೃತರಾಷ್ಟ್ರೇಣ ತ್ವಯಾ ಚಾಸ್ಮಾಸು ಯತ್ಕೃತಂ|
09032037c ಸ್ಮರ ತದ್ದುಷ್ಕೃತಂ ಕರ್ಮ ಯದ್ವೃತ್ತಂ ವಾರಣಾವತೇ||
“ನೀನು ಮತ್ತು ರಾಜಾ ಧೃತರಾಷ್ಟ್ರರು ನಮ್ಮ ಮೇಲೆ ವಾರಣಾವತಲ್ಲಿ ಎಸಗಿದ ದುಷ್ಕೃತಗಳನ್ನು ಸ್ಮರಿಸಿಕೋ!
09032038a ದ್ರೌಪದೀ ಚ ಪರಿಕ್ಲಿಷ್ಟಾ ಸಭಾಮಧ್ಯೇ ರಜಸ್ವಲಾ|
09032038c ದ್ಯೂತೇ ಯದ್ವಿಜಿತೋ ರಾಜಾ ಶಕುನೇರ್ಬುದ್ಧಿನಿಶ್ಚಯಾತ್||
09032039a ಯಾನಿ ಚಾನ್ಯಾನಿ ದುಷ್ಟಾತ್ಮನ್ಪಾಪಾನಿ ಕೃತವಾನಸಿ|
09032039c ಅನಾಗಃಸು ಚ ಪಾರ್ಥೇಷು ತಸ್ಯ ಪಶ್ಯ ಮಹತ್ಫಲಂ||
ರಾಜನ್! ದುಷ್ಟಾತ್ಮನ್! ಸಭಾಮಧ್ಯದಲ್ಲಿ ರಜಸ್ವಲೆ ದ್ರೌಪದಿಯನ್ನು ಕಾಡಿದುದು ಮತ್ತು ಶಕುನಿಯ ಬುದ್ಧಿನಿಶ್ಚಯದಂತೆ ದ್ಯೂತದಲ್ಲಿ ರಾಜನನ್ನು ಗೆದ್ದುದು – ಇವು ಮತ್ತು ಇನ್ನೂ ಅನೇಕ ಪಾಪಗಳನ್ನೆಸಗಿರುವೆ! ನಿರಪರಾಧಿ ಪಾರ್ಥರ ಮೇಲೆಸಗಿದ ಅವುಗಳ ಮಹಾಫಲವನ್ನು ನೋಡು!
09032040a ತ್ವತ್ಕೃತೇ ನಿಹತಃ ಶೇತೇ ಶರತಲ್ಪೇ ಮಹಾಯಶಾಃ|
09032040c ಗಾಂಗೇಯೋ ಭರತಶ್ರೇಷ್ಠಃ ಸರ್ವೇಷಾಂ ನಃ ಪಿತಾಮಹಃ||
ನೀನು ಮಾಡಿದುದರಿಂದಾಗಿ ಭರತಶ್ರೇಷ್ಠ-ಮಹಾಯಶ-ನಮ್ಮೆಲ್ಲರ ಪಿತಾಮಹ ಗಾಂಗೇಯನು ಹತನಾಗಿ ಶರತಲ್ಪದಲ್ಲಿ ಮಲಗಿದ್ದಾನೆ.
09032041a ಹತೋ ದ್ರೋಣಶ್ಚ ಕರ್ಣಶ್ಚ ಹತಃ ಶಲ್ಯಃ ಪ್ರತಾಪವಾನ್|
09032041c ವೈರಸ್ಯ ಚಾದಿಕರ್ತಾಸೌ ಶಕುನಿರ್ನಿಹತೋ ಯುಧಿ||
ದ್ರೋಣನು ಹತನಾದನು. ಕರ್ಣನೂ ಮತ್ತು ಪ್ರತಾಪವಾನ್ ಶಲ್ಯನೂ ಹತರಾದರು. ವೈರದ ಆದಿಕರ್ತ ಶಕುನಿಯೂ ಯುದ್ಧದಲ್ಲಿ ಮಡಿದನು.
09032042a ಭ್ರಾತರಸ್ತೇ ಹತಾಃ ಶೂರಾಃ ಪುತ್ರಾಶ್ಚ ಸಹಸೈನಿಕಾಃ|
09032042c ರಾಜಾನಶ್ಚ ಹತಾಃ ಶೂರಾಃ ಸಮರೇಷ್ವನಿವರ್ತಿನಃ||
ನಿನ್ನ ಶೂರ ಭ್ರಾತರರೂ, ಸೈನಿಕರೊಂದಿಗೆ ಪುತ್ರರೂ, ಸಮರದಿಂದ ಹಿಂದಿರುಗದ ಶೂರ ರಾಜರೂ ಹತರಾದರು.
09032043a ಏತೇ ಚಾನ್ಯೇ ಚ ನಿಹತಾ ಬಹವಃ ಕ್ಷತ್ರಿಯರ್ಷಭಾಃ|
09032043c ಪ್ರಾತಿಕಾಮೀ ತಥಾ ಪಾಪೋ ದ್ರೌಪದ್ಯಾಃ ಕ್ಲೇಶಕೃದ್ಧತಃ||
ಇವರು ಮತ್ತು ಅನ್ಯ ಅನೇಕ ಕ್ಷತ್ರಿಯರ್ಷಭರೂ ಹತರಾದರು. ದ್ರೌಪದಿಗೆ ಕ್ಲೇಶವನ್ನು ತಂದ ಪಾಪಿ ಪ್ರತಿಕಾಮಿಯೂ ಹತನಾದನು.
09032044a ಅವಶಿಷ್ಟಸ್ತ್ವಮೇವೈಕಃ ಕುಲಘ್ನೋಽಧಮಪೂರುಷಃ|
09032044c ತ್ವಾಮಪ್ಯದ್ಯ ಹನಿಷ್ಯಾಮಿ ಗದಯಾ ನಾತ್ರ ಸಂಶಯಃ||
ನೀನೊಬ್ಬನೇ ಕುಲಘ್ನ ಅಧಮ ಪುರುಷ ಉಳಿದುಕೊಂಡಿದ್ದೀಯೆ. ನಿನ್ನನ್ನು ಇಂದು ಗದೆಯಿಂದ ಕೊಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.
09032045a ಅದ್ಯ ತೇಽಹಂ ರಣೇ ದರ್ಪಂ ಸರ್ವಂ ನಾಶಯಿತಾ ನೃಪ|
09032045c ರಾಜ್ಯಾಶಾಂ ವಿಪುಲಾಂ ರಾಜನ್ಪಾಂಡವೇಷು ಚ ದುಷ್ಕೃತಂ||
ನೃಪ! ರಾಜನ್! ಇಂದು ರಣದಲ್ಲಿ ನಿನ್ನ ದರ್ಪವೆಲ್ಲವನ್ನೂ, ರಾಜ್ಯದಮೇಲಿನ ಅತ್ಯಾಶೆಯನ್ನೂ, ಪಾಂಡವರ ಮೇಲೆಸಗಿದ ದುಷ್ಕೃತಗಳನ್ನೂ ನಾಶಗೊಳಿಸುತ್ತೇನೆ!”
09032046 ದುರ್ಯೋಧನ ಉವಾಚ
09032046a ಕಿಂ ಕತ್ಥಿತೇನ ಬಹುಧಾ ಯುಧ್ಯಸ್ವಾದ್ಯ ಮಯಾ ಸಹ|
09032046c ಅದ್ಯ ತೇಽಹಂ ವಿನೇಷ್ಯಾಮಿ ಯುದ್ಧಶ್ರದ್ಧಾಂ ವೃಕೋದರ||
ದುರ್ಯೋಧನನು ಹೇಳಿದನು: “ವೃಕೋದರ! ವೃಥಾ ಕೊಚ್ಚಿಕೊಳ್ಳುವುದರಿಂದ ಏನಾಗಲಿಕ್ಕಿದೆ? ಇಂದು ನನ್ನೊಡನೆ ಯುದ್ಧಮಾಡು! ನಿನ್ನಲ್ಲಿರುವ ಯುದ್ಧಶ್ರದ್ಧೆಯನ್ನು ಇಂದು ನಾನು ನಾಶಗೊಳಿಸುತ್ತೇನೆ!
09032047a ಕಿಂ ನ ಪಶ್ಯಸಿ ಮಾಂ ಪಾಪ ಗದಾಯುದ್ಧೇ ವ್ಯವಸ್ಥಿತಂ|
09032047c ಹಿಮವಚ್ಛಿಖರಾಕಾರಾಂ ಪ್ರಗೃಹ್ಯ ಮಹತೀಂ ಗದಾಂ||
ಪಾಪಿ! ಹಿಮಾಲಯ ಶಿಖರಾಕಾರದ ಮಹಾ ಗದೆಯನ್ನು ಹಿಡಿದು ಗದಾಯುದ್ಧಕ್ಕೆ ನಿಂತಿರುವ ನನ್ನನ್ನು ನೀನು ನೋಡುತ್ತಿಲ್ಲವೇ?
09032048a ಗದಿನಂ ಕೋಽದ್ಯ ಮಾಂ ಪಾಪ ಜೇತುಮುತ್ಸಹತೇ ರಿಪುಃ|
09032048c ನ್ಯಾಯತೋ ಯುಧ್ಯಮಾನಸ್ಯ ದೇವೇಷ್ವಪಿ ಪುರಂದರಃ||
ಪಾಪಿ! ಇಂದು ಗದಾಪಾಣಿಯಾಗಿರುವ ನನ್ನನ್ನು ಯಾವ ಶತ್ರುವು ಗೆಲ್ಲುವ ಉತ್ಸಾಹತಾಳಿರುತ್ತಾನೆ? ನ್ಯಾಯರೀತಿಯಲ್ಲಿ ಯುದ್ಧಮಾಡುವ ದೇವ ಪುರಂದರನೂ ಈ ಉತ್ಸಾಹತೋರಿಸಲಿಕ್ಕಿಲ್ಲ!
09032049a ಮಾ ವೃಥಾ ಗರ್ಜ ಕೌಂತೇಯ ಶಾರದಾಭ್ರಮಿವಾಜಲಂ|
09032049c ದರ್ಶಯಸ್ವ ಬಲಂ ಯುದ್ಧೇ ಯಾವತ್ತತ್ತೇಽದ್ಯ ವಿದ್ಯತೇ||
ಕೌಂತೇಯ! ಶರತ್ಕಾಲದ ನಿರ್ಜಲ ಮೇಘದಂತೆ ವ್ಯರ್ಥವಾಗಿ ಗರ್ಜಿಸಬೇಡ! ನಿನ್ನಲ್ಲಿ ಎಷ್ಟು ಬಲವಿದೆಯೆಂದು ತಿಳಿದುಕೊಂಡಿರುವೆಯೋ ಅದನ್ನು ಯುದ್ಧದಲ್ಲಿ ಪ್ರದರ್ಶಿಸು!”
09032050a ತಸ್ಯ ತದ್ವಚನಂ ಶ್ರುತ್ವಾ ಪಾಂಚಾಲಾಃ ಸಹಸೃಂಜಯಾಃ|
09032050c ಸರ್ವೇ ಸಂಪೂಜಯಾಮಾಸುಸ್ತದ್ವಚೋ ವಿಜಿಗೀಷವಃ||
ಅವನ ಆ ಮಾತನ್ನು ಕೇಳಿ ವಿಜಯೇಚ್ಛಿ ಸೃಂಜಯರೊಂದಿಗೆ ಪಾಂಚಾಲರೆಲ್ಲರೂ ಆ ಮಾತನ್ನು ಗೌರವಿಸಿದರು.
09032051a ತಂ ಮತ್ತಮಿವ ಮಾತಂಗಂ ತಲಶಬ್ದೇನ ಮಾನವಾಃ|
09032051c ಭೂಯಃ ಸಂಹರ್ಷಯಾಮಾಸೂ ರಾಜನ್ದುರ್ಯೋಧನಂ ನೃಪಂ||
ರಾಜನ್! ಚಪ್ಪಾಳೆಶಬ್ಧಗಳಿಂದ ಮಾನವರು ಮದಿಸಿದ ಆನೆಯನ್ನು ಉದ್ರೇಕಗೊಳಿಸುವಂತೆ ರಾಜ ದುರ್ಯೋಧನನನ್ನು ಮತ್ತೆ ಮತ್ತೆ ಅವರು ಹರ್ಷಗೊಳಿಸಿದರು.
09032052a ಬೃಂಹಂತಿ ಕುಂಜರಾಸ್ತತ್ರ ಹಯಾ ಹೇಷಂತಿ ಚಾಸಕೃತ್|
09032052c ಶಸ್ತ್ರಾಣಿ ಸಂಪ್ರದೀಪ್ಯಂತೇ ಪಾಂಡವಾನಾಂ ಜಯೈಷಿಣಾಂ||
ಆಗ ಜಯೈಷಿ ಪಾಂಡವರ ಆನೆಗಳು ಘೀಳಿಟ್ಟವು. ಕುದುರೆಗಳು ಕೆನೆದವು, ಮತ್ತು ಶಸ್ತ್ರಗಳು ಪ್ರಜ್ವಲಿಸಿದವು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಭೀಮಸೇನದುರ್ಯೋಧನಸಂವಾದೇ ದ್ವಾತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಭೀಮಸೇನದುರ್ಯೋಧನಸಂವಾದ ಎನ್ನುವ ಮೂವತ್ತೆರಡನೇ ಅಧ್ಯಾಯವು.
