Shalya Parva: Chapter 43

ಶಲ್ಯಪರ್ವ: ಸಾರಸ್ವತಪರ್ವ

೪೩

ಕುಮಾರನ ಪ್ರಭಾವ-ಅಭಿಷೇಕ (೧-೫೨).

09043001 ಜನಮೇಜಯ ಉವಾಚ

09043001a ಸರಸ್ವತ್ಯಾಃ ಪ್ರಭಾವೋಽಯಮುಕ್ತಸ್ತೇ ದ್ವಿಜಸತ್ತಮ|

09043001c ಕುಮಾರಸ್ಯಾಭಿಷೇಕಂ ತು ಬ್ರಹ್ಮನ್ವ್ಯಾಖ್ಯಾತುಮರ್ಹಸಿ||

ಜನಮೇಜಯನು ಹೇಳಿದನು: “ದ್ವಿಜಸತ್ತಮ! ಸರಸ್ವತಿಯ ಪ್ರಭಾವದ ಕುರಿತು ಹೇಳಿದ್ದಾಯಿತು. ಬ್ರಹ್ಮನ್! ಇನ್ನು ಕುಮಾರನ ಅಭಿಷೇಕದ ಕುರಿತು ಹೇಳಬೇಕು!

09043002a ಯಸ್ಮಿನ್ಕಾಲೇ ಚ ದೇಶೇ ಚ ಯಥಾ ಚ ವದತಾಂ ವರ|

09043002c ಯೈಶ್ಚಾಭಿಷಿಕ್ತೋ ಭಗವಾನ್ವಿಧಿನಾ ಯೇನ ಚ ಪ್ರಭುಃ||

ವಾಗ್ಮಿಗಳಲ್ಲಿ ಶ್ರೇಷ್ಠನೇ! ಯಾವ ಕಾಲ-ದೇಶಗಳಲ್ಲಿ ಹೇಗೆ ಯಾರು ಭಗವಂತ ಪ್ರಭುವನ್ನು ಅಭಿಷೇಕಿಸಿದರು?

09043003a ಸ್ಕಂದೋ ಯಥಾ ಚ ದೈತ್ಯಾನಾಮಕರೋತ್ಕದನಂ ಮಹತ್|

09043003c ತಥಾ ಮೇ ಸರ್ವಮಾಚಕ್ಷ್ವ ಪರಂ ಕೌತೂಹಲಂ ಹಿ ಮೇ||

ಸ್ಕಂದನು ಹೇಗೆ ದೈತ್ಯರೊಡನೆ ಮಹಾ ಕದನವನ್ನು ನಡೆಸಿದನು? ಅವೆಲ್ಲವನ್ನೂ ನನಗೆ ಹೇಳು. ನನಗೆ ಕುತೂಹಲವಾಗುತ್ತಿದೆ.”

09043004 ವೈಶಂಪಾಯನ ಉವಾಚ

09043004a ಕುರುವಂಶಸ್ಯ ಸದೃಶಮಿದಂ ಕೌತೂಹಲಂ ತವ|

09043004c ಹರ್ಷಮುತ್ಪಾದಯತ್ಯೇತದ್ವಚೋ ಮೇ ಜನಮೇಜಯ||

ವೈಶಂಪಾಯನನು ಹೇಳಿದನು: “ಜನಮೇಜಯ! ನಿನ್ನ ಕುತೂಹಲವು ಕುರುವಂಶಕ್ಕೆ ತಕ್ಕುದಾಗಿಯೇ ಆಗಿದೆ. ನಿನ್ನ ಈ ಮಾತು ನನ್ನಲ್ಲಿಯೂ ಹರ್ಷವನ್ನುಂಟುಮಾಡುತ್ತಿದೆ.

09043005a ಹಂತ ತೇ ಕಥಯಿಷ್ಯಾಮಿ ಶೃಣ್ವಾನಸ್ಯ ಜನಾಧಿಪ|

09043005c ಅಭಿಷೇಕಂ ಕುಮಾರಸ್ಯ ಪ್ರಭಾವಂ ಚ ಮಹಾತ್ಮನಃ||

ಜನಾಧಿಪ! ಮಹಾತ್ಮ ಕುಮಾರನ ಪ್ರಭಾವವನ್ನೂ ಅಭಿಷೇಕವನ್ನೂ ನಿನಗೆ ಹೇಳುತ್ತೇನೆ. ಅದನ್ನು ಕೇಳು.

09043006a ತೇಜೋ ಮಾಹೇಶ್ವರಂ ಸ್ಕನ್ನಮಗ್ನೌ ಪ್ರಪತಿತಂ ಪುರಾ|

09043006c ತತ್ಸರ್ವಭಕ್ಷೋ ಭಗವಾನ್ನಾಶಕದ್ದಗ್ಧುಮಕ್ಷಯಂ||

ಹಿಂದೆ ಮಹೇಶ್ವರನ ವೀರ್ಯವು ಸ್ಖಲನವಾಗಿ ಅಗ್ನಿಯಲ್ಲಿ ಬಿದ್ದಿತು. ಸರ್ವಭಕ್ಷಕನಾಗಿದ್ದರೂ ಭಗವಾನ್ ಅಗ್ನಿಯು ಆ ಅಕ್ಷಯ ತೇಜಸ್ಸನ್ನು ದಹಿಸಲು ಸಮರ್ಥನಾಗಲಿಲ್ಲ.

09043007a ತೇನಾಸೀದತಿ ತೇಜಸ್ವೀ ದೀಪ್ತಿಮಾನ್ ಹವ್ಯವಾಹನಃ|

09043007c ನ ಚೈವ ಧಾರಯಾಮಾಸ ಗರ್ಭಂ ತೇಜೋಮಯಂ ತದಾ||

ಅದರಿಂದಾಗಿ ಹವ್ಯವಾಹನನು ತೇಜಸ್ವಿಯೂ ದೀಪ್ತಮಾನನೂ ಆದನು. ಆದರೆ ಅವನಿಗೆ ಆ ತೇಜೋಮಯ ಗರ್ಭವನ್ನು ಧರಿಸಲಾಗಲಿಲ್ಲ.

09043008a ಸ ಗಂಗಾಮಭಿಸಂಗಮ್ಯ ನಿಯೋಗಾದ್ಬ್ರಹ್ಮಣಃ ಪ್ರಭುಃ|

09043008c ಗರ್ಭಮಾಹಿತವಾನ್ದಿವ್ಯಂ ಭಾಸ್ಕರೋಪಮತೇಜಸಂ||

ಪ್ರಭು ಬ್ರಹ್ಮನ ನಿಯೋಗದಂತೆ ಆ ದಿವ್ಯ ಭಾಸ್ಕರತೇಜಸ್ಸುಳ್ಳ ಗರ್ಭವನ್ನು ಗಂಗಾನದಿಗೆ ಹೋಗಿ ಅಲ್ಲಿ ಹಾಕಿಬಿಟ್ಟನು.

09043009a ಅಥ ಗಂಗಾಪಿ ತಂ ಗರ್ಭಮಸಹಂತೀ ವಿಧಾರಣೇ|

09043009c ಉತ್ಸಸರ್ಜ ಗಿರೌ ರಮ್ಯೇ ಹಿಮವತ್ಯಮರಾರ್ಚಿತೇ||

ಗಂಗೆಯೂ ಕೂಡ ಆ ಗರ್ಭವನ್ನು ಧರಿಸಿಕೊಂಡಿರಲು ಸಾಧ್ಯವಾಗಲಿಲ್ಲ. ಅವಳು ಅದನ್ನು ಅಮರರು ಪೂಜಿಸುವ ರಮ್ಯ ಹಿಮವತ್ ಗಿರಿಗಳಲ್ಲಿ ವಿಸರ್ಜಿಸಿದಳು.

09043010a ಸ ತತ್ರ ವವೃಧೇ ಲೋಕಾನಾವೃತ್ಯ ಜ್ವಲನಾತ್ಮಜಃ|

09043010c ದದೃಶುರ್ಜ್ವಲನಾಕಾರಂ ತಂ ಗರ್ಭಮಥ ಕೃತ್ತಿಕಾಃ||

ಆ ಅಗ್ನಿಪುತ್ರನು ಲೋಕಗಳನ್ನೆಲ್ಲಾ ಆವರಿಸಿ ಬೆಳೆಯತೊಡಗಿದನು. ಜ್ವಲನಾಕಾರದ ಆ ಗರ್ಭವನ್ನು ಕೃತ್ತಿಕೆಯರು ನೋಡಿದರು.

09043011a ಶರಸ್ತಂಬೇ ಮಹಾತ್ಮಾನಮನಲಾತ್ಮಜಮೀಶ್ವರಂ|

09043011c ಮಮಾಯಮಿತಿ ತಾಃ ಸರ್ವಾಃ ಪುತ್ರಾರ್ಥಿನ್ಯೋಽಭಿಚಕ್ರಮುಃ||

ಆ ಪುತ್ರಾರ್ಥಿಗಳೆಲ್ಲರೂ ಜೊಂಡುಹುಲ್ಲಿನ ಮಧ್ಯದಲ್ಲಿದ್ದ ಅನಲಾತ್ಮಜ ಈಶ್ವರ ಮಹಾತ್ಮನನ್ನು ನನ್ನವನು ನನ್ನವನು ಎಂದು ಕೂಗಿಕೊಂಡರು.

09043012a ತಾಸಾಂ ವಿದಿತ್ವಾ ಭಾವಂ ತಂ ಮಾತೄಣಾಂ ಭಗವಾನ್ಪ್ರಭುಃ|

09043012c ಪ್ರಸ್ನುತಾನಾಂ ಪಯಃ ಷಡ್ಭಿರ್ವದನೈರಪಿಬತ್ತದಾ||

ಅವರ ಮಾತೃಭಾವವನ್ನು ಅರಿತುಕೊಂಡ ಪ್ರಭು ಭಗವಾನನು ಅವರ ಸ್ತನಗಳಿಂದ ಸ್ರವಿಸುತ್ತಿದ್ದ ಹಾಲನ್ನು ತನ್ನ ಆರು ಮುಖಗಳಿಂದಲೂ ಕುಡಿದನು.

09043013a ತಂ ಪ್ರಭಾವಂ ಸಮಾಲಕ್ಷ್ಯ ತಸ್ಯ ಬಾಲಸ್ಯ ಕೃತ್ತಿಕಾಃ|

09043013c ಪರಂ ವಿಸ್ಮಯಮಾಪನ್ನಾ ದೇವ್ಯೋ ದಿವ್ಯವಪುರ್ಧರಾಃ||

ದಿವ್ಯರೂಪವನ್ನು ಧರಿಸಿದ್ದ ಕೃತ್ತಿಕಾ ದೇವಿಯರು ಆ ಬಾಲಕನ ಪ್ರಭಾವವನ್ನು ನೋಡಿ ಪರಮ ವಿಸ್ಮಿತರಾದರು.

09043014a ಯತ್ರೋತ್ಸೃಷ್ಟಃ ಸ ಭಗವಾನ್ಗಂಗಯಾ ಗಿರಿಮೂರ್ಧನಿ|

09043014c ಸ ಶೈಲಃ ಕಾಂಚನಃ ಸರ್ವಃ ಸಂಬಭೌ ಕುರುಸತ್ತಮ||

ಕುರುಸತ್ತಮ! ಗಂಗೆಯು ಯಾವ ಗಿರಿಶಿಖರದ ಮೇಲೆ ಆ ಭಗವಾನನನ್ನು ಬಿಟ್ಟಿದ್ದಳೋ ಆ ಶೈಲವೆಲ್ಲವೂ ಕಾಂಚನಮಯವಾಯಿತು.

09043015a ವರ್ಧತಾ ಚೈವ ಗರ್ಭೇಣ ಪೃಥಿವೀ ತೇನ ರಂಜಿತಾ|

09043015c ಅತಶ್ಚ ಸರ್ವೇ ಸಂವೃತ್ತಾ ಗಿರಯಃ ಕಾಂಚನಾಕರಾಃ||

ವರ್ಧಿಸುತ್ತಿರುವ ಆ ಗರ್ಭದಿಂದ ಪೃಥ್ವಿಯೂ ರಂಜಿತಳಾದಳು. ಸುತ್ತಲಿನ ಎಲ್ಲ ಗಿರಿಗಳೂ ಕಾಂಚನಮಯವಾದವು.

09043016a ಕುಮಾರಶ್ಚ ಮಹಾವೀರ್ಯಃ ಕಾರ್ತ್ತಿಕೇಯ ಇತಿ ಸ್ಮೃತಃ|

09043016c ಗಾಂಗೇಯಃ ಪೂರ್ವಮಭವನ್ಮಹಾಯೋಗಬಲಾನ್ವಿತಃ||

ಆ ಮಹಾವೀರ್ಯ ಕುಮಾರನು ಕಾರ್ತಿಕೇಯನೆಂದು ವಿಶೃತನಾದನು. ಮಹಾಯೋಗಬಲಾನ್ವಿತನು ಮೊದಲು ಗಾಂಗೇಯನೆನಿಸಿಕೊಂಡಿದ್ದನು.

09043017a ಸ ದೇವಸ್ತಪಸಾ ಚೈವ ವೀರ್ಯೇಣ ಚ ಸಮನ್ವಿತಃ|

09043017c ವವೃಧೇಽತೀವ ರಾಜೇಂದ್ರ ಚಂದ್ರವತ್ಪ್ರಿಯದರ್ಶನಃ||

ರಾಜೇಂದ್ರ! ಅತೀವ ತಪಸ್ಸು-ವೀರ್ಯಗಳಿಂದ ಸಮನ್ವಿತನಾಗಿದ್ದ ಆ ದೇವನು ಪ್ರಿಯದರ್ಶನ ಚಂದ್ರನಂತೆ ಬೆಳೆಯತೊಡಗಿದನು.

09043018a ಸ ತಸ್ಮಿನ್ಕಾಂಚನೇ ದಿವ್ಯೇ ಶರಸ್ತಂಬೇ ಶ್ರಿಯಾ ವೃತಃ|

09043018c ಸ್ತೂಯಮಾನಸ್ತದಾ ಶೇತೇ ಗಂಧರ್ವೈರ್ಮುನಿಭಿಸ್ತಥಾ||

ಅವನು ಆ ದಿವ್ಯ ಕಾಂಚನ ಜೊಂಡುಹುಲ್ಲಿನ ಮಧ್ಯೆ ಶ್ರೀಯಿಂದ ಸಮಾವೃತನಾಗಿ ಗಂಧರ್ವ-ಮುನಿಗಳಿಂದ ಸ್ತುತಿಸಲ್ಪಡುತ್ತಾ ಮಲಗಿದ್ದನು.

09043019a ತಥೈನಮನ್ವನೃತ್ಯಂತ ದೇವಕನ್ಯಾಃ ಸಹಸ್ರಶಃ|

09043019c ದಿವ್ಯವಾದಿತ್ರನೃತ್ತಜ್ಞಾಃ ಸ್ತುವಂತ್ಯಶ್ಚಾರುದರ್ಶನಾಃ||

ದಿವ್ಯ ವಾದ್ಯ-ನೃತ್ಯಗಳಲ್ಲಿ ಪರಿಣಿತ ಸಾವಿರಾರು ಸುಂದರ ದೇವಕನ್ಯೆಯರು ಅವನನ್ನು ಸ್ತುತಿಸಿ ಸಮೀಪದಲ್ಲಿ ನರ್ತಿಸುತ್ತಿದ್ದರು.

09043020a ಅನ್ವಾಸ್ತೇ ಚ ನದೀ ದೇವಂ ಗಂಗಾ ವೈ ಸರಿತಾಂ ವರಾ|

09043020c ದಧಾರ ಪೃಥಿವೀ ಚೈನಂ ಬಿಭ್ರತೀ ರೂಪಮುತ್ತಮಂ||

ಸರಿತೆಯರಲ್ಲಿ ಶ್ರೇಷ್ಠೆ ನದೀ ಗಂಗೆಯು ಅವನ ಹತ್ತಿರ ಕುಳಿತುಕೊಂಡಿದ್ದಳು. ಪೃಥ್ವಿಯು ಉತ್ತಮ ರೂಪವನ್ನು ತಾಳಿ ಬೆಳಗುತ್ತಾ ಅವನನ್ನು ಎತ್ತಿಕೊಂಡಿದ್ದಳು.

09043021a ಜಾತಕರ್ಮಾದಿಕಾಸ್ತಸ್ಯ ಕ್ರಿಯಾಶ್ಚಕ್ರೇ ಬೃಹಸ್ಪತಿಃ|

09043021c ವೇದಶ್ಚೈನಂ ಚತುರ್ಮೂರ್ತಿರುಪತಸ್ಥೇ ಕೃತಾಂಜಲಿಃ||

ಬೃಹಸ್ಪತಿಯು ಅವನ ಜಾತಕರ್ಮಾದಿ ಕ್ರಿಯೆಗಳನ್ನು ನಡೆಸಿದನು. ಚತುರ್ಮೂರ್ತಿ ವೇದವೂ ಕೂಡ ಕೈಮುಗಿದು ಅವನ ಬಳಿ ಕುಳಿತು ಪೂಜಿಸಿತು.

09043022a ಧನುರ್ವೇದಶ್ಚತುಷ್ಪಾದಃ ಶಸ್ತ್ರಗ್ರಾಮಃ ಸಸಂಗ್ರಹಃ|

09043022c ತತ್ರೈನಂ ಸಮುಪಾತಿಷ್ಠತ್ಸಾಕ್ಷಾದ್ವಾಣೀ ಚ ಕೇವಲಾ||

ನಾಲ್ಕು ಪಾದಗಳ ಧನುರ್ವೇದ, ಶಸ್ತ್ರಗ್ರಾಮ ಸಂಗ್ರಹವೂ, ಸಾಕ್ಷಾದ್ ವಾಣಿಯೂ ಅಲ್ಲಿ ಸೇರಿ ಅವನನ್ನು ಉಪಾಸಿಸುತ್ತಿದ್ದರು.

09043023a ಸ ದದರ್ಶ ಮಹಾವೀರ್ಯಂ ದೇವದೇವಮುಮಾಪತಿಂ|

09043023c ಶೈಲಪುತ್ರ್ಯಾ ಸಹಾಸೀನಂ ಭೂತಸಂಘಶತೈರ್ವೃತಂ||

ಅವನು ಭೂತ ಸಮೂಹಗಳಿಂದ ಸಮಾವೃತನಾಗಿ ಶೈಲಪುತ್ರಿಯ ಸಹಿತ ಕುಳಿತಿದ್ದ ಮಹಾವೀರ್ಯ ದೇವದೇವ ಉಮಾಪತಿಯನ್ನು ನೋಡಿದನು.

09043024a ನಿಕಾಯಾ ಭೂತಸಂಘಾನಾಂ ಪರಮಾದ್ಭುತದರ್ಶನಾಃ|

09043024c ವಿಕೃತಾ ವಿಕೃತಾಕಾರಾ ವಿಕೃತಾಭರಣಧ್ವಜಾಃ||

ಆ ಭೂತಸಂಘಗಳ ಶರೀರಗಳು ಪರಮಾದ್ಭುತವಾಗಿ ತೋರುತ್ತಿದ್ದವು. ವಿಕೃತರು ಮತ್ತು ವಿಕೃತಾಕಾರದವರು ವಿಕೃತ ಆಭರಣ-ಧ್ವಜಗಳನ್ನು ಧರಿಸಿದ್ದರು.

09043025a ವ್ಯಾಘ್ರಸಿಂಹರ್ಕ್ಷವದನಾ ಬಿಡಾಲಮಕರಾನನಾಃ|

09043025c ವೃಷದಂಶಮುಖಾಶ್ಚಾನ್ಯೇ ಗಜೋಷ್ಟ್ರವದನಾಸ್ತಥಾ||

ಹುಲಿ-ಸಿಂಹ-ಕರಡಿಯ ಮುಖಗಳಿದ್ದವು. ಬೆಕ್ಕು-ಮೊಸಳೆಗಳ ಮುಖವನ್ನು ಹೊಂದಿದ್ದರು. ಅನ್ಯರಿಗೆ ಚೇಳಿನ ಮುಖವಿದ್ದರೆ ಅನ್ಯರಿಗೆ ಆನೆ-ಒಂಟೆಗಳ ಮುಖಗಳಿದ್ದವು.

09043026a ಉಲೂಕವದನಾಃ ಕೇ ಚಿದ್ಗೃಧ್ರಗೋಮಾಯುದರ್ಶನಾಃ|

09043026c ಕ್ರೌಂಚಪಾರಾವತನಿಭೈರ್ವದನೈ ರಾಂಕವೈರಪಿ||

ಕೆಲವರ ಮುಖಗಳು ಗೂಬೆಗಳಂತಿದ್ದರೆ ಇನ್ನು ಇತರರ ಮುಖಗಳು ರಣಹದ್ದು-ಗುಳ್ಳೇನರಿಗಳಂತೆ ತೋರುತ್ತಿದ್ದವು. ಕ್ರೌಂಚ-ಪಾರಿವಾಳ-ಜಿಂಕೆ ಇವೇ ಮೊದಲಾದವುಗಳ ಮುಖಗಳನ್ನೂ ಹೊಂದಿದ್ದರು.

09043027a ಶ್ವಾವಿಚ್ಚಲ್ಯಕಗೋಧಾನಾಂ ಖರೈಡಕಗವಾಂ ತಥಾ|

09043027c ಸದೃಶಾನಿ ವಪೂಂಷ್ಯನ್ಯೇ ತತ್ರ ತತ್ರ ವ್ಯಧಾರಯನ್||

ನಾಯಿ-ಮುಳ್ಳುಹಂದಿ-ನೀರುಡ-ಆಡು-ಕುರಿ-ಹಸು ಮೊದಲಾದ ಪ್ರಾಣಿಗಳ ಮುಖಗಳನ್ನೂ ಅಲ್ಲಿದ್ದ ಭೂತಗಣಗಳು ಧರಿಸಿದ್ದವು.

09043028a ಕೇ ಚಿಚ್ಚೈಲಾಂಬುದಪ್ರಖ್ಯಾಶ್ಚಕ್ರಾಲಾತಗದಾಯುಧಾಃ|

09043028c ಕೇ ಚಿದಂಜನಪುಂಜಾಭಾಃ ಕೇ ಚಿಚ್ಚ್ವೇತಾಚಲಪ್ರಭಾಃ||

ಕೆಲವರು ಮೇಘ-ಪರ್ವತಗಳಂತೆ ಕಾಣುತ್ತಿದ್ದರು. ಕೆಲವರು ಚಕ್ರ-ಗದೆ ಮೊದಲಾದ ಆಯುಧಗಳನ್ನು ಹಿಡಿದಿದ್ದರು. ಕೆಲವರು ಅಂಜನದ ರಾಶಿಯಂತೆ ಕಪ್ಪಾಗಿದ್ದರು. ಕೆಲವರು ಶ್ವೇತಪರ್ವತ ಪ್ರಭೆಯಿಂದ ಕೂಡಿದ್ದರು.

09043029a ಸಪ್ತಮಾತೃಗಣಾಶ್ಚೈವ ಸಮಾಜಗ್ಮುರ್ವಿಶಾಂ ಪತೇ|

09043029c ಸಾಧ್ಯಾ ವಿಶ್ವೇಽಥ ಮರುತೋ ವಸವಃ ಪಿತರಸ್ತಥಾ||

ವಿಶಾಂಪತೇ! ಸಪ್ತಮಾತೃಗಣಗಳು, ಸಾಧ್ಯರು, ಮರುತರು, ವಸವರು ಮತ್ತು ಪಿತೃಗಳು ಅಲ್ಲಿಗೆ ಬಂದು ಸೇರಿದರು.

09043030a ರುದ್ರಾದಿತ್ಯಾಸ್ತಥಾ ಸಿದ್ಧಾ ಭುಜಗಾ ದಾನವಾಃ ಖಗಾಃ|

09043030c ಬ್ರಹ್ಮ ಸ್ವಯಂಭೂರ್ಭಗವಾನ್ಸಪುತ್ರಃ ಸಹ ವಿಷ್ಣುನಾ||

09043031a ಶಕ್ರಸ್ತಥಾಭ್ಯಯಾದ್ದ್ರಷ್ಟುಂ ಕುಮಾರವರಮಚ್ಯುತಂ|

09043031c ನಾರದಪ್ರಮುಖಾಶ್ಚಾಪಿ ದೇವಗಂಧರ್ವಸತ್ತಮಾಃ||

09043032a ದೇವರ್ಷಯಶ್ಚ ಸಿದ್ಧಾಶ್ಚ ಬೃಹಸ್ಪತಿಪುರೋಗಮಾಃ|

09043032c ಋಭವೋ ನಾಮ ವರದಾ ದೇವಾನಾಮಪಿ ದೇವತಾಃ||

09043032e ತೇಽಪಿ ತತ್ರ ಸಮಾಜಗ್ಮುರ್ಯಾಮಾ ಧಾಮಾಶ್ಚ ಸರ್ವಶಃ||

ಕುಮಾರವರ, ಅಚ್ಯುತನನ್ನು ನೋಡಲು ರುದ್ರರು, ಆದಿತ್ಯರು, ಸಿದ್ಧ-ನಾಗ-ದಾನವ-ಪಕ್ಷಿಗಳು, ವಿಷ್ಣು ಮತ್ತು ಮಕ್ಕಳೊಂದಿಗೆ ಭಗವಾನ್ ಸ್ವಯಂಭೂ ಬ್ರಹ್ಮ, ಶಕ್ರ, ನಾರದ ಪ್ರಮುಖರು, ದೇವ-ಗಂಧರ್ವಸತ್ತಮರು, ದೇವರ್ಷಿಗಳು, ಬೃಹಸ್ಪತಿಪ್ರಮುಖ ಸಿದ್ಧರು, ಯಾಮರು, ಧಾಮರು ಮತ್ತು ಎಲ್ಲರೂ ಅಲ್ಲಿಗೆ ಬಂದು ಸೇರಿದರು.

09043033a ಸ ತು ಬಾಲೋಽಪಿ ಭಗವಾನ್ಮಹಾಯೋಗಬಲಾನ್ವಿತಃ|

09043033c ಅಭ್ಯಾಜಗಾಮ ದೇವೇಶಂ ಶೂಲಹಸ್ತಂ ಪಿನಾಕಿನಂ||

ಮಹಾಯೋಗಬಲಾನ್ವಿತ ಭಗವಾನ್ ಬಾಲಕನಾದರೋ ದೇವೇಶ ಶೂಲಹಸ್ತ ಪಿನಾಕಿನಿಯ ಕಡೆ ಹೊರಟನು.

09043034a ತಮಾವ್ರಜಂತಮಾಲಕ್ಷ್ಯ ಶಿವಸ್ಯಾಸೀನ್ಮನೋಗತಂ|

09043034c ಯುಗಪಚ್ಚೈಲಪುತ್ರ್ಯಾಶ್ಚ ಗಂಗಾಯಾಃ ಪಾವಕಸ್ಯ ಚ||

09043035a ಕಿಂ ನು ಪೂರ್ವಮಯಂ ಬಾಲೋ ಗೌರವಾದಭ್ಯುಪೈಷ್ಯತಿ|

09043035c ಅಪಿ ಮಾಮಿತಿ ಸರ್ವೇಷಾಂ ತೇಷಾಮಾಸೀನ್ಮನೋಗತಂ||

ಅವನು ಬರುವುದನ್ನು ನೋಡಿ ಶಿವ, ಶೈಲಪುತ್ರಿ, ಗಂಗೆ ಮತ್ತು ಪಾವಕರು ಏಕಕಾಲದಲ್ಲಿ “ಈ ಬಾಲಕನು ಜನ್ಮಕೊಟ್ಟಿದುದಕ್ಕಾಗಿ ಗೌರವಿಸಲು ಯಾರಬಳಿಗೆ ಮೊದಲು ಬರುತ್ತಾನೆ?” ಎಂದು ಅಲೋಚಿಸಿದರು. “ಮೊದಲು ನನ್ನ ಬಳಿಗೆ ಬರುತ್ತಾನೆ!” ಎಂಬುದು ಅವರೆಲ್ಲರ ಮನೋಗತವಾಗಿತ್ತು.

09043036a ತೇಷಾಮೇತಮಭಿಪ್ರಾಯಂ ಚತುರ್ಣಾಮುಪಲಕ್ಷ್ಯ ಸಃ|

09043036c ಯುಗಪದ್ಯೋಗಮಾಸ್ಥಾಯ ಸಸರ್ಜ ವಿವಿಧಾಸ್ತನೂಃ||

ಆ ನಾಲ್ವರ ಅಭಿಪ್ರಾಯಗಳನ್ನು ತಿಳಿದ ಕುಮಾರನು ಯೋಗಬಲದಿಂದ ಒಂದೇ ಬಾರಿಗೆ ವಿವಿಧ ಶರೀರಗಳನ್ನು ಸೃಷ್ಟಿಸಿದನು.

09043037a ತತೋಽಭವಚ್ಚತುರ್ಮೂರ್ತಿಃ ಕ್ಷಣೇನ ಭಗವಾನ್ಪ್ರಭುಃ|

09043037c ಸ್ಕಂದಃ ಶಾಖೋ ವಿಶಾಖಶ್ಚ ನೈಗಮೇಷಶ್ಚ ಪೃಷ್ಠತಃ||

ಕ್ಷಣದಲ್ಲಿಯೇ ಆ ಪ್ರಭು ಭಗವಾನನು ಚತುರ್ಮೂರ್ತಿಯಾದನು ಶಾಖ, ವಿಶಾಖ, ನೈಗಮೇಷ, ಸ್ಕಂದರು ಎದಿರು ಕಾಣಿಸಿಕೊಂಡರು.

09043038a ಏವಂ ಸ ಕೃತ್ವಾ ಹ್ಯಾತ್ಮಾನಂ ಚತುರ್ಧಾ ಭಗವಾನ್ಪ್ರಭುಃ|

09043038c ಯತೋ ರುದ್ರಸ್ತತಃ ಸ್ಕಂದೋ ಜಗಾಮಾದ್ಭುತದರ್ಶನಃ||

ಹೀಗೆ ಪ್ರಭು ಭಗವಾನನು ತನ್ನನ್ನು ತಾನೇ ನಾಲ್ಕು ಮೂರ್ತಿಗಳನ್ನಾಗಿ ವಿಭಾಗಿಸಿಕೊಂಡನು. ಅದೊಂದು ಅದ್ಭುತವಾಗಿತ್ತು. ಸ್ಕಂದನು ರುದ್ರನಿರುವಲ್ಲಿಗೆ ಹೋದನು.

09043039a ವಿಶಾಖಸ್ತು ಯಯೌ ಯೇನ ದೇವೀ ಗಿರಿವರಾತ್ಮಜಾ|

09043039c ಶಾಖೋ ಯಯೌ ಚ ಭಗವಾನ್ವಾಯುಮೂರ್ತಿರ್ವಿಭಾವಸುಂ||

09043039e ನೈಗಮೇಷೋಽಗಮದ್ಗಂಗಾಂ ಕುಮಾರಃ ಪಾವಕಪ್ರಭಃ||

ವಿಶಾಖನು ದೇವೀ ಗಿರಿವರಾತ್ಮಜೆಯಿರುವಲ್ಲಿಗೆ ಹೋದನು. ಭಗವಾನ್ ಶಾಖನು ವಾಯುಮೂರ್ತಿ ವಿಭಾವಸುವಿರುವಲ್ಲಿಗೆ ಹೋದನು. ಪಾವಕಪ್ರಭ ಕುಮಾರ ನೈಗಮೇಷನು ಗಂಗೆಯ ಬಳಿ ಹೋದನು.

09043040a ಸರ್ವೇ ಭಾಸ್ವರದೇಹಾಸ್ತೇ ಚತ್ವಾರಃ ಸಮರೂಪಿಣಃ|

09043040c ತಾನ್ಸಮಭ್ಯಯುರವ್ಯಗ್ರಾಸ್ತದದ್ಭುತಮಿವಾಭವತ್||

ಆ ಎಲ್ಲ ನಾಲ್ಕು ದೇಹಗಳೂ ಸಮರೂಪಿಯಾಗಿ ಹೊಳೆಯುತ್ತಿದ್ದವು ಮತ್ತು ಏಕಕಾಲದಲ್ಲಿ ಆ ನಾಲ್ವರ ಬಳಿ ಹೋದವು. ಅದೊಂದು ಅದ್ಭುತವಾಗಿತ್ತು.

09043041a ಹಾಹಾಕಾರೋ ಮಹಾನಾಸೀದ್ದೇವದಾನವರಕ್ಷಸಾಂ|

09043041c ತದ್ದೃಷ್ಟ್ವಾ ಮಹದಾಶ್ಚರ್ಯಮದ್ಭುತಂ ರೋಮಹರ್ಷಣಂ||

ಮಹದಾಶ್ಚರ್ಯವೂ ರೋಮಹರ್ಷಣವೂ ಆದ ಆ ಅದ್ಭುತವನ್ನು ನೋಡಿ ದೇವ-ದಾನವ-ರಾಕ್ಷಸರಲ್ಲಿ ಮಹಾ ಹಾಹಾಕಾರವುಂಟಾಯಿತು.

09043042a ತತೋ ರುದ್ರಶ್ಚ ದೇವೀ ಚ ಪಾವಕಶ್ಚ ಪಿತಾಮಹಂ|

09043042c ಗಂಗಯಾ ಸಹಿತಾಃ ಸರ್ವೇ ಪ್ರಣಿಪೇತುರ್ಜಗತ್ಪತಿಂ||

ಆಗ ಗಂಗೆಯ ಸಹಿತ ರುದ್ರ, ದೇವೀ ಮತ್ತು ಪಾವಕರು ಎಲ್ಲರೂ ಜಗತ್ಪತಿ ಪಿತಾಮಹನಿಗೆ ನಮಸ್ಕರಿಸಿದರು.

09043043a ಪ್ರಣಿಪತ್ಯ ತತಸ್ತೇ ತು ವಿಧಿವದ್ರಾಜಪುಂಗವ|

09043043c ಇದಮೂರ್ವಚೋ ರಾಜನ್ಕಾರ್ತ್ತಿಕೇಯಪ್ರಿಯೇಪ್ಸಯಾ||

ರಾಜಪುಂಗವ! ರಾಜನ್! ವಿಧಿವತ್ತಾಗಿ ಅವನಿಗೆ ನಮಸ್ಕರಿಸಿ ಅವರು ಕಾರ್ತಿಕೇಯನಿಗೆ ಪ್ರೀತಿಯನ್ನುಂಟುಮಾಡಲು ಬಯಸಿ ಹೇಳಿದರು:

09043044a ಅಸ್ಯ ಬಾಲಸ್ಯ ಭಗವನ್ನಧಿಪತ್ಯಂ ಯಥೇಪ್ಸಿತಂ|

09043044c ಅಸ್ಮತ್ಪ್ರಿಯಾರ್ಥಂ ದೇವೇಶ ಸದೃಶಂ ದಾತುಮರ್ಹಸಿ||

“ದೇವೇಶ! ಭಗವನ್! ನಮ್ಮ ಪ್ರೀತ್ಯರ್ಥ್ಯವಾಗಿ ನಿನಗಿಷ್ಟವಾದ ಯಾವುದಾದರೂ ಅಧಿಕಾರವನ್ನು ಈ ಬಾಲಕನಿಗೆ ಕೊಡಬೇಕು!”

09043045a ತತಃ ಸ ಭಗವಾನ್ಧೀಮಾನ್ಸರ್ವಲೋಕಪಿತಾಮಹಃ|

09043045c ಮನಸಾ ಚಿಂತಯಾಮಾಸ ಕಿಮಯಂ ಲಭತಾಮಿತಿ||

ಆಗ ಆ ಭಗವಾನ್ ಧೀಮಾನ ಸರ್ವಲೋಕಪಿತಾಮಹನು ಇವನಿಗೆ ಏನನ್ನು ಕೊಡಲಿ ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು.

09043046a ಐಶ್ವರ್ಯಾಣಿ ಹಿ ಸರ್ವಾಣಿ ದೇವಗಂಧರ್ವರಕ್ಷಸಾಂ|

09043046c ಭೂತಯಕ್ಷವಿಹಂಗಾನಾಂ ಪನ್ನಗಾನಾಂ ಚ ಸರ್ವಶಃ||

09043047a ಪೂರ್ವಮೇವಾದಿದೇಶಾಸೌ ನಿಕಾಯೇಷು ಮಹಾತ್ಮನಾಂ|

09043047c ಸಮರ್ಥಂ ಚ ತಮೈಶ್ವರ್ಯೇ ಮಹಾಮತಿರಮನ್ಯತ||

ಈ ಮೊದಲೇ ಸರ್ವ ಐಶ್ವರ್ಯಗಳಿಗೆ ದೇವ-ಗಂಧರ್ವ-ರಾಕ್ಷಸ-ಭೂತ-ಯಕ್ಷ-ಪಕ್ಷಿ-ಪನ್ನಗರೆಲ್ಲರ ಮಹಾತ್ಮರನ್ನೂ ಅಧಿಪತಿಯರನ್ನಾಗಿ ಅಧಿಕಾರ ಕೊಟ್ಟಾಗಿದೆ. ಇವನಾದರೋ ಆ ಎಲ್ಲ ಐಶ್ವರ್ಯಗಳ ಅಧಿಪತಿಯಾಗಲು ಸಮರ್ಥ ಎಂದು ಆ ಮಹಾಮತಿಯು ಅಭಿಪ್ರಾಯಪಟ್ಟನು.

09043048a ತತೋ ಮುಹೂರ್ತಂ ಸ ಧ್ಯಾತ್ವಾ ದೇವಾನಾಂ ಶ್ರೇಯಸಿ ಸ್ಥಿತಃ|

09043048c ಸೇನಾಪತ್ಯಂ ದದೌ ತಸ್ಮೈ ಸರ್ವಭೂತೇಷು ಭಾರತ||

ಭಾರತ! ಮುಹೂರ್ತಕಾಲ ಯೋಚಿಸಿ ದೇವತೆಗಳ ಶ್ರೇಯಸ್ಸನ್ನೇ ಬಯಸುತ್ತಿದ್ದ ಅವನು ಕುಮಾರನಿಗೆ ಸರ್ವಭೂತಗಳ ಸೇನಾಪತ್ಯವನ್ನು ಕೊಟ್ಟನು.

09043049a ಸರ್ವದೇವನಿಕಾಯಾನಾಂ ಯೇ ರಾಜಾನಃ ಪರಿಶ್ರುತಾಃ|

09043049c ತಾನ್ಸರ್ವಾನ್ವ್ಯಾದಿದೇಶಾಸ್ಮೈ ಸರ್ವಭೂತಪಿತಾಮಹಃ||

ಸರ್ವದೇವತೆಗಳ ಸಮೂಹದಲ್ಲಿ ಯಾರೆಲ್ಲ ರಾಜರೆಂದು ಪ್ರಸಿದ್ಧರಾಗಿದ್ದರೋ ಅವರೆಲ್ಲರನ್ನು ಸರ್ವಭೂತಪಿತಾಮಹನು ಕುಮಾರನ ವಶಕ್ಕೊಪ್ಪಿಸಿದನು.

09043050a ತತಃ ಕುಮಾರಮಾದಾಯ ದೇವಾ ಬ್ರಹ್ಮಪುರೋಗಮಾಃ|

09043050c ಅಭಿಷೇಕಾರ್ಥಮಾಜಗ್ಮುಃ ಶೈಲೇಂದ್ರಂ ಸಹಿತಾಸ್ತತಃ||

ಆಗ ಬ್ರಹ್ಮನನ್ನು ಮುಂದಿರಿಸಿಕೊಂಡು ದೇವತೆಗಳು ಅಭಿಷೇಕಕ್ಕಾಗಿ ಕುಮಾರನನ್ನು ಕರೆದುಕೊಂಡು ಹಿಮವತ್ಪರ್ವತಕ್ಕೆ ತೆರಳಿದರು.

09043051a ಪುಣ್ಯಾಂ ಹೈಮವತೀಂ ದೇವೀಂ ಸರಿಚ್ಚ್ರೇಷ್ಠಾಂ ಸರಸ್ವತೀಂ|

09043051c ಸಮಂತಪಂಚಕೇ ಯಾ ವೈ ತ್ರಿಷು ಲೋಕೇಷು ವಿಶ್ರುತಾ||

09043052a ತತ್ರ ತೀರೇ ಸರಸ್ವತ್ಯಾಃ ಪುಣ್ಯೇ ಸರ್ವಗುಣಾನ್ವಿತೇ|

09043052c ನಿಷೇದುರ್ದೇವಗಂಧರ್ವಾಃ ಸರ್ವೇ ಸಂಪೂರ್ಣಮಾನಸಾಃ||

ಅಲ್ಲಿ ಸಮಂತಪಂಚಕದಲ್ಲಿ ಮೂರುಲೋಕಗಳಲ್ಲಿ ವಿಶ್ರುತಳಾಗಿದ್ದ ಹೈಮವತಿ ದೇವೀ ಸರಿತಶ್ರೇಷ್ಠೆ ಸರಸ್ವತಿಯು ಹರಿಯುತ್ತಿದ್ದಳು. ಆ ಸರ್ವಗುಣಾನ್ವಿತೆ ಪುಣ್ಯೇ ಸರಸ್ವತಿಯ ತೀರದಲ್ಲಿ ಸರ್ವ ದೇವ-ಗಂಧರ್ವರು ಸಂಪೂರ್ಣಮಾನಸರಾಗಿ ತಂಗಿದರು.”   

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಕುಮಾರಾಭಿಷೇಕೋಕ್ರಮೇ ತ್ರಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ ಎನ್ನುವ ನಲ್ವತ್ಮೂರನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.