Shalya Parva: Chapter 42

ಶಲ್ಯಪರ್ವ: ಸಾರಸ್ವತಪರ್ವ

೪೨

ಸರಸ್ವತಿಯು ಅರುಣತೀರ್ಥವಾದ ಕಥೆ (೧-೨೬). ಅರುಣತೀರ್ಥದ ಮಹಾತ್ಮೆ (೨೭-೪೧).

09042001 ವೈಶಂಪಾಯನ ಉವಾಚ

09042001a ಸಾ ಶಪ್ತಾ ತೇನ ಕ್ರುದ್ಧೇನ ವಿಶ್ವಾಮಿತ್ರೇಣ ಧೀಮತಾ|

09042001c ತಸ್ಮಿಂಸ್ತೀರ್ಥವರೇ ಶುಭ್ರೇ ಶೋಣಿತಂ ಸಮುಪಾವಹತ್||

ವೈಶಂಪಾಯನನು ಹೇಳಿದನು: “ಕ್ರುದ್ಧ ಧೀಮತ ವಿಶ್ವಾಮಿತ್ರನಿಂದ ಶಪಿತಳಾದ ಆ ಶುಭ್ರ ಶ್ರೇಷ್ಠ ತೀರ್ಥದಲ್ಲಿ ರಕ್ತವು ಹರಿಯತೊಡಗಿತು.

09042002a ಅಥಾಜಗ್ಮುಸ್ತತೋ ರಾಜನ್ರಾಕ್ಷಸಾಸ್ತತ್ರ ಭಾರತ|

09042002c ತತ್ರ ತೇ ಶೋಣಿತಂ ಸರ್ವೇ ಪಿಬಂತಃ ಸುಖಮಾಸತೇ||

ಭಾರತ! ರಾಜನ್! ಎಲ್ಲ ರಾಕ್ಷಸರು ಅಲ್ಲಿಗೆ ಹೋಗಿ ರಕ್ತವನ್ನು ಕುಡಿದು ಸುಖವನ್ನು ಹೊಂದುತ್ತಿದ್ದರು.

09042003a ತೃಪ್ತಾಶ್ಚ ಸುಭೃಶಂ ತೇನ ಸುಖಿತಾ ವಿಗತಜ್ವರಾಃ|

09042003c ನೃತ್ಯಂತಶ್ಚ ಹಸಂತಶ್ಚ ಯಥಾ ಸ್ವರ್ಗಜಿತಸ್ತಥಾ||

ತುಂಬಾ ತೃಪ್ತರಾಗಿ, ಚಿಂತೆಗಳನ್ನು ಕಳೆದುಕೊಂಡು ಸುಖಿಗಳಾಗಿ ಅವರು ಸ್ವರ್ಗವನ್ನೇ ಜಯಿಸಿದರೋ ಎನ್ನುವಂತೆ ನಗುತ್ತಾ ಕುಣಿದಾಡುತ್ತಿದ್ದರು.

09042004a ಕಸ್ಯ ಚಿತ್ತ್ವಥ ಕಾಲಸ್ಯ ಋಷಯಃ ಸತಪೋಧನಾಃ|

09042004c ತೀರ್ಥಯಾತ್ರಾಂ ಸಮಾಜಗ್ಮುಃ ಸರಸ್ವತ್ಯಾಂ ಮಹೀಪತೇ||

ಮಹೀಪತೇ! ಸ್ವಲ್ಪ ಕಾಲದ ನಂತರ ತಪೋಧನ ಋಷಿಗಳು ತೀರ್ಥಯಾತ್ರೆಗೈಯುತ್ತಾ ಸರಸ್ವತೀ ತೀರಕ್ಕೆ ಬಂದರು.

09042005a ತೇಷು ಸರ್ವೇಷು ತೀರ್ಥೇಷು ಆಪ್ಲುತ್ಯ ಮುನಿಪುಂಗವಾಃ|

09042005c ಪ್ರಾಪ್ಯ ಪ್ರೀತಿಂ ಪರಾಂ ಚಾಪಿ ತಪೋಲುಬ್ಧಾ ವಿಶಾರದಾಃ||

09042005e ಪ್ರಯಯುರ್ಹಿ ತತೋ ರಾಜನ್ಯೇನ ತೀರ್ಥಂ ಹಿ ತತ್ತಥಾ||

ಅಲ್ಲಿದ್ದ ಎಲ್ಲ ತೀರ್ಥಗಳಲ್ಲಿ ಮುಳುಗಿ ಮುನಿಪುಂಗವರು ಪರಮ ಸಂತೋಷವನ್ನು ಹೊಂದಿದರು. ರಾಜನ್! ತಪೋಲುಬ್ಧರಾದ ಆ ವಿಶಾರದರು ಆ ತೀರ್ಥಕ್ಕೂ ಬಂದರು.

09042006a ಅಥಾಗಮ್ಯ ಮಹಾಭಾಗಾಸ್ತತ್ತೀರ್ಥಂ ದಾರುಣಂ ತದಾ|

09042006c ದೃಷ್ಟ್ವಾ ತೋಯಂ ಸರಸ್ವತ್ಯಾಃ ಶೋಣಿತೇನ ಪರಿಪ್ಲುತಂ||

09042006e ಪೀಯಮಾನಂ ಚ ರಕ್ಷೋಭಿರ್ಬಹುಭಿರ್ನೃಪಸತ್ತಮ||

ನೃಪಸತ್ತಮ! ಅಲ್ಲಿಗೆ ಬಂದು ಆ ಮಹಾಭಾಗರು ದಾರುಣ ಸರಸ್ವತಿಯ ನೀರು ರಕ್ತದಿಂದ ಕೂಡಿದ್ದುದನ್ನೂ ಅನೇಕ ರಾಕ್ಷಸರು ಅದನ್ನು ಕುಡಿಯುತ್ತಿರುವುದನ್ನೂ ನೋಡಿದರು.

09042007a ತಾನ್ದೃಷ್ಟ್ವಾ ರಾಕ್ಷಸಾನ್ರಾಜನ್ಮುನಯಃ ಸಂಶಿತವ್ರತಾಃ|

09042007c ಪರಿತ್ರಾಣೇ ಸರಸ್ವತ್ಯಾಃ ಪರಂ ಯತ್ನಂ ಪ್ರಚಕ್ರಿರೇ||

ರಾಜನ್! ಆ ರಾಕ್ಷಸರನ್ನು ನೋಡಿ ಸಂಶಿತವ್ರತ ಮುನಿಗಳು ಸರಸ್ವತಿಯನ್ನು ಉದ್ಧರಿಸಲು ಪರಮ ಪ್ರಯತ್ನಗಳನ್ನು ಮಾಡಿದರು.

09042008a ತೇ ತು ಸರ್ವೇ ಮಹಾಭಾಗಾಃ ಸಮಾಗಮ್ಯ ಮಹಾವ್ರತಾಃ|

09042008c ಆಹೂಯ ಸರಿತಾಂ ಶ್ರೇಷ್ಠಾಮಿದಂ ವಚನಮಬ್ರುವನ್||

ಆ ಮಹಾಭಾಗ ಮಹಾವ್ರತರೆಲ್ಲರೂ ಒಟ್ಟಾಗಿ ಸರಿತ ಶ್ರೇಷ್ಠೆಯನ್ನು ಕರೆದು ಇಂತೆಂದರು:

09042009a ಕಾರಣಂ ಬ್ರೂಹಿ ಕಲ್ಯಾಣಿ ಕಿಮರ್ಥಂ ತೇ ಹ್ರದೋ ಹ್ಯಯಂ|

09042009c ಏವಮಾಕುಲತಾಂ ಯಾತಃ ಶ್ರುತ್ವಾ ಪಾಸ್ಯಾಮಹೇ ವಯಂ||

“ಕಲ್ಯಾಣೀ! ನಿನ್ನ ಈ ಮಡುವು ರಾಕ್ಷಸರಿಂದ ಸಮಾಕುಲವಾಗಿರಲು ಕಾರಣವೇನೆಂದು ಹೇಳು! ಅದನ್ನು ಕೇಳಿ ನಾವು ಅದಕ್ಕೆ ಪರಿಹಾರದ ಪ್ರಯತ್ನವನ್ನು ಮಾಡುತ್ತೇವೆ.”

09042010a ತತಃ ಸಾ ಸರ್ವಮಾಚಷ್ಟ ಯಥಾವೃತ್ತಂ ಪ್ರವೇಪತೀ|

09042010c ದುಃಖಿತಾಮಥ ತಾಂ ದೃಷ್ಟ್ವಾ ತ ಊಚುರ್ವೈ ತಪೋಧನಾಃ||

ನಡುಗುತ್ತಾ ಅವಳು ನಡೆದುದೆಲ್ಲವನ್ನೂ ಅವರಿಗೆ ಹೇಳಿದಳು. ದುಃಖಿತಳಾಗಿದ್ದ ಅವಳನ್ನು ನೋಡಿ ತಪೋಧನರು ಹೇಳಿದರು:

09042011a ಕಾರಣಂ ಶ್ರುತಮಸ್ಮಾಭಿಃ ಶಾಪಶ್ಚೈವ ಶ್ರುತೋಽನಘೇ|

09042011c ಕರಿಷ್ಯಂತಿ ತು ಯತ್ಪ್ರಾಪ್ತಂ ಸರ್ವ ಏವ ತಪೋಧನಾಃ||

“ಅನಘೇ! ಶಾಪದ ಕಾರಣವನ್ನು ನಾವು ಕೇಳಿದೆವು. ನಾವೆಲ್ಲ ತಪೋಧನರೂ ಇರುವ ಪ್ರಯತ್ನಗಳನ್ನು ಮಾಡುತ್ತೇವೆ!”

09042012a ಏವಮುಕ್ತ್ವಾ ಸರಿಚ್ಚ್ರೇಷ್ಠಾಮೂಚುಸ್ತೇಽಥ ಪರಸ್ಪರಂ|

09042012c ವಿಮೋಚಯಾಮಹೇ ಸರ್ವೇ ಶಾಪಾದೇತಾಂ ಸರಸ್ವತೀಂ||

ಸರಿತಶ್ರೇಷ್ಠೆಗೆ ಹೀಗೆ ಹೇಳಿ ಅವರು “ನಾವೆಲ್ಲರೂ ಈ ಸರಸ್ವತಿಯನ್ನು ಶಾಪದಿಂದ ವಿಮೋಚನೆಗೊಳಿಸೋಣ!” ಎಂದು ಪರಸ್ಪರರಲ್ಲಿ ಮಾತನಾಡಿಕೊಂಡರು.

09042013a ತೇಷಾಂ ತು ವಚನಾದೇವ ಪ್ರಕೃತಿಸ್ಥಾ ಸರಸ್ವತೀ|

09042013c ಪ್ರಸನ್ನಸಲಿಲಾ ಜಜ್ಞೇ ಯಥಾ ಪೂರ್ವಂ ತಥೈವ ಹಿ||

09042013e ವಿಮುಕ್ತಾ ಚ ಸರಿಚ್ಚ್ರೇಷ್ಠಾ ವಿಬಭೌ ಸಾ ಯಥಾ ಪುರಾ||

ಅವರ ಆ ಮಾತಿನಿಂದಲೇ ಸರಸ್ವತಿಯು ತನ್ನ ಸ್ವಭಾವವನ್ನು ಪಡೆದು ಹಿಂದಿನಂತೆ ಪ್ರಸನ್ನ ನೀರಾಗಿ ಹರಿಯತೊಡಗಿದಳು. ಆ ಸರಿತಶ್ರೇಷ್ಠೆಯು ಶಾಪವಿಮುಕ್ತಳಾಗಿ ಮೊದಲಿನಂತೆಯೇ ಆದಳು.

09042014a ದೃಷ್ಟ್ವಾ ತೋಯಂ ಸರಸ್ವತ್ಯಾ ಮುನಿಭಿಸ್ತೈಸ್ತಥಾ ಕೃತಂ|

09042014c ಕೃತಾಂಜಲೀಸ್ತತೋ ರಾಜನ್ರಾಕ್ಷಸಾಃ ಕ್ಷುಧಯಾರ್ದಿತಾಃ||

09042014e ಊಚುಸ್ತಾನ್ವೈ ಮುನೀನ್ಸರ್ವಾನ್ಕೃಪಾಯುಕ್ತಾನ್ಪುನಃ ಪುನಃ||

ರಾಜನ್! ಸರಸ್ವತಿಯ ನೀರಿಗೆ ಮುನಿಗಳು ಮಾಡಿದುದನ್ನು ನೋಡಿ ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ರಾಕ್ಷಸರು ಅಂಜಲೀ ಬದ್ಧರಾಗಿ ಆ ಕೃಪಾಯುಕ್ತ ಮುನಿಗಳೆಲ್ಲರಲ್ಲಿ ಪುನಃ ಪುನಃ ಕೇಳಿಕೊಂಡರು.

09042015a ವಯಂ ಹಿ ಕ್ಷುಧಿತಾಶ್ಚೈವ ಧರ್ಮಾದ್ಧೀನಾಶ್ಚ ಶಾಶ್ವತಾತ್|

09042015c ನ ಚ ನಃ ಕಾಮಕಾರೋಽಯಂ ಯದ್ವಯಂ ಪಾಪಕಾರಿಣಃ||

“ನಾವು ಹಸಿವಿನಿಂದ ಸಂಕಟಪಡುತ್ತಿದ್ದೇವೆ. ಶಾಶ್ವತವಾಗಿ ಧರ್ಮಹೀನರೂ ಆಗಿದ್ದೇವೆ. ಸ್ವ-ಇಚ್ಛೆಯಿಂದ ನಾವು ಈ ಪಾಪಕಾರ್ಯಗಳನ್ನು ಮಾಡುತ್ತಿಲ್ಲ.

09042016a ಯುಷ್ಮಾಕಂ ಚಾಪ್ರಸಾದೇನ ದುಷ್ಕೃತೇನ ಚ ಕರ್ಮಣಾ|

09042016c ಪಕ್ಷೋಽಯಂ ವರ್ಧತೇಽಸ್ಮಾಕಂ ಯತಃ ಸ್ಮ ಬ್ರಹ್ಮರಾಕ್ಷಸಾಃ||

ನಿಮ್ಮಂಥವರ ಅಪ್ರಸನ್ನತೆಯಿಂದಾಗಿಯೇ ನಾವು ದುಷ್ಕರ್ಮಗಳನ್ನು ಮಾಡುತ್ತಾ ಹೋಗುತ್ತೇವೆ. ನಮ್ಮ ಪಾಪವು ಸದಾ ವರ್ಧಿಸುತ್ತಾ ಬಂದು ಈಗ ನಾವು ಬ್ರಹ್ಮರಾಕ್ಷಸರಾಗಿದ್ದೇವೆ.

09042017a ಏವಂ ಹಿ ವೈಶ್ಯಶೂದ್ರಾಣಾಂ ಕ್ಷತ್ರಿಯಾಣಾಂ ತಥೈವ ಚ|

09042017c ಯೇ ಬ್ರಾಹ್ಮಣಾನ್ಪ್ರದ್ವಿಷಂತಿ ತೇ ಭವಂತೀಹ ರಾಕ್ಷಸಾಃ||

ಬ್ರಾಹ್ಮಣರನ್ನು ದ್ವೇಷಿಸುವ ವೈಶ್ಯ-ಶೂದ್ರ-ಕ್ಷತ್ರಿಯರು ಇಲ್ಲಿ ರಾಕ್ಷಸರಾಗಿ ಹುಟ್ಟುತ್ತಾರೆ.

09042018a ಆಚಾರ್ಯಂ ಋತ್ವಿಜಂ ಚೈವ ಗುರುಂ ವೃದ್ಧಜನಂ ತಥಾ|

09042018c ಪ್ರಾಣಿನೋ ಯೇಽವಮನ್ಯಂತೇ ತೇ ಭವಂತೀಹ ರಾಕ್ಷಸಾಃ||

09042018e ಯೋಷಿತಾಂ ಚೈವ ಪಾಪಾನಾಂ ಯೋನಿದೋಷೇಣ ವರ್ಧತೇ||

ಆಚಾರ್ಯ-ಋತ್ವಿಜ-ಗುರು-ವೃದ್ಧಜನ ಮತ್ತು ಪ್ರಾಣಿಗಳನ್ನು ಯಾರು ಅಪಮಾನಿಸುತ್ತಾರೋ ಅವರು ಇಲ್ಲಿ ರಾಕ್ಷಸರಾಗುತ್ತಾರೆ. ಸ್ತ್ರೀಯರ ಯೋನಿದೋಷದಿಂದಾಗಿ ಪಾಪಗಳು ಹೆಚ್ಚಾಗುತ್ತವೆ.

09042019a ತತ್ಕುರುಧ್ವಮಿಹಾಸ್ಮಾಕಂ ಕಾರುಣ್ಯಂ ದ್ವಿಜಸತ್ತಮಾಃ|

09042019c ಶಕ್ತಾ ಭವಂತಃ ಸರ್ವೇಷಾಂ ಲೋಕಾನಾಮಪಿ ತಾರಣೇ||

ಲೋಕಗಳನ್ನೇ ಉದ್ಧರಿಸಬಲ್ಲ ದ್ವಿಜಸತ್ತಮರಾದ ನೀವು ನಮ್ಮ ಮೇಲೆ ಕಾರುಣ್ಯವನ್ನು ತೋರಿಸಬೇಕು.”

09042020a ತೇಷಾಂ ತೇ ಮುನಯಃ ಶ್ರುತ್ವಾ ತುಷ್ಟುವುಸ್ತಾಂ ಮಹಾನದೀಂ|

09042020c ಮೋಕ್ಷಾರ್ಥಂ ರಕ್ಷಸಾಂ ತೇಷಾಮೂಚುಃ ಪ್ರಯತಮಾನಸಾಃ||

ಅವರ ಮಾತನ್ನು ಕೇಳಿ ಮುನಿಗಳು ಮಹಾನದಿ ಸರಸ್ವತಿಯನ್ನು ಸ್ತುತಿಸಿ ತೃಪ್ತಿಗೊಳಿಸಿದರು. ಅನಂತರ ಪ್ರಸನ್ನಮನಸ್ಕರಾದ ಅವರು ರಾಕ್ಷಸರ ಮೋಕ್ಷಕ್ಕಾಗಿ ಹೀಗೆ ಹೇಳಿದರು:

09042021a ಕ್ಷುತಕೀಟಾವಪನ್ನಂ ಚ ಯಚ್ಚೋಚ್ಚಿಷ್ಟಾಶಿತಂ ಭವೇತ್|

09042021c ಕೇಶಾವಪನ್ನಮಾಧೂತಮಾರುಗ್ಣಮಪಿ ಯದ್ಭವೇತ್||

09042021e ಶ್ವಭಿಃ ಸಂಸ್ಪೃಷ್ಟಮನ್ನಂ ಚ ಭಾಗೋಽಸೌ ರಕ್ಷಸಾಮಿಹ||

09042022a ತಸ್ಮಾಜ್ಜ್ಞಾತ್ವಾ ಸದಾ ವಿದ್ವಾನೇತಾನ್ಯನ್ನಾನಿ ವರ್ಜಯೇತ್|

09042022c ರಾಕ್ಷಸಾನ್ನಮಸೌ ಭುಂಕ್ತೇ ಯೋ ಭುಂಕ್ತೇ ಹ್ಯನ್ನಮೀದೃಶಂ||

“ಉಗುಳಾಗಲೀ ಕೀಟವಾಗಲೀ ಬಿದ್ದಿರುವ, ತಿಂದು ಮಿಕ್ಕಿದ, ಕೂದಲಿರುವ, ತಿರಸ್ಕಾರಪೂರ್ವಕವಾಗಿ ಕೊಟ್ಟಿರುವ, ಅಳುವಿನ ಕಣ್ಣೀರು ಬಿದ್ದಿರುವ, ನಾಯಿಯು ಮುಟ್ಟಿರುವ ಅನ್ನಗಳೆಲ್ಲವೂ ರಾಕ್ಷಸರು ಭಕ್ಷಿಸಲು ಯೋಗ್ಯವಾದವುಗಳು. ಆದುದರಿಂದ ವಿದ್ವಾಂಸನು ಅಂಥಹ ದೋಷಗಳಿರುವ ಅನ್ನವನ್ನು ಯಾವಾಗಲೂ ಪ್ರಯತ್ನಪೂರ್ವಕವಾಗಿ ವರ್ಜಿಸಬೇಕು. ಇಂತಹ ಅನ್ನವನ್ನು ತಿನ್ನುವವನು ರಾಕ್ಷಸಾನ್ನವನ್ನು ತಿಂದಂತೆ!”

09042023a ಶೋಧಯಿತ್ವಾ ತತಸ್ತೀರ್ಥಂ ಋಷಯಸ್ತೇ ತಪೋಧನಾಃ|

09042023c ಮೋಕ್ಷಾರ್ಥಂ ರಾಕ್ಷಸಾನಾಂ ಚ ನದೀಂ ತಾಂ ಪ್ರತ್ಯಚೋದಯನ್||

ಅನಂತರ ಆ ತೀರ್ಥವನ್ನು ಶುದ್ಧಿಗೊಳಿಸಿ ರಾಕ್ಷಸರ ಮೋಕ್ಷಕ್ಕಾಗಿ ಆ ತಪೋಧನ ಋಷಿಗಳು ಪುನಃ ನದೀ ಸರಸ್ವತಿಯನ್ನು ಪ್ರಚೋದಿಸಿದರು.

09042024a ಮಹರ್ಷೀಣಾಂ ಮತಂ ಜ್ಞಾತ್ವಾ ತತಃ ಸಾ ಸರಿತಾಂ ವರಾ|

09042024c ಅರುಣಾಮಾನಯಾಮಾಸ ಸ್ವಾಂ ತನುಂ ಪುರುಷರ್ಷಭ||

ಪುರುಷರ್ಷಭ! ಋಷಿಗಳ ಇಂಗಿತವನ್ನು ಅರಿತ ಸರಿತಶ್ರೇಷ್ಠೆಯು ತನ್ನ ಶರೀರವನ್ನು ಎಣೆಗೆಂಪಾಗಿ ಪರಿವರ್ತಿಸಿಕೊಂಡಳು.

09042025a ತಸ್ಯಾಂ ತೇ ರಾಕ್ಷಸಾಃ ಸ್ನಾತ್ವಾ ತನೂಸ್ತ್ಯಕ್ತ್ವಾ ದಿವಂ ಗತಾಃ|

09042025c ಅರುಣಾಯಾಂ ಮಹಾರಾಜ ಬ್ರಹ್ಮಹತ್ಯಾಪಹಾ ಹಿ ಸಾ||

ರಾಕ್ಷಸರು ಅವಳಲ್ಲಿ ಸ್ನಾನಮಾಡಿ ಶರೀರತ್ಯಾಗ ಮಾಡಿ ಸ್ವರ್ಗಕ್ಕೆ ಹೋದರು. ಮಹಾರಾಜ! ಆ ಅರುಣಾ ತೀರ್ಥವು ಬ್ರಹ್ಮಹತ್ಯಾದೋಷವನ್ನೂ ಹೋಗಲಾಡಿಸುವಂಥಹುದು.

09042026a ಏತಮರ್ಥಮಭಿಜ್ಞಾಯ ದೇವರಾಜಃ ಶತಕ್ರತುಃ|

09042026c ತಸ್ಮಿಂಸ್ತೀರ್ಥವರೇ ಸ್ನಾತ್ವಾ ವಿಮುಕ್ತಃ ಪಾಪ್ಮನಾ ಕಿಲ||

ಇದರ ಅರ್ಥವನ್ನು ಅರಿತುಕೊಂಡಿದ್ದ ಶತಕ್ರತು ದೇವರಾಜನು ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಬ್ರಹ್ಮಹತ್ಯಾಪಾಪದಿಂದ ವಿಮುಕ್ತನಾದನು.”

09042027 ಜನಮೇಜಯ ಉವಾಚ

09042027a ಕಿಮರ್ಥಂ ಭಗವಾನ್ ಶಕ್ರೋ ಬ್ರಹ್ಮಹತ್ಯಾಮವಾಪ್ತವಾನ್|

09042027c ಕಥಮಸ್ಮಿಂಶ್ಚ ತೀರ್ಥೇ ವೈ ಆಪ್ಲುತ್ಯಾಕಲ್ಮಷೋಽಭವತ್||

ಜನಮೇಜಯನು ಹೇಳಿದನು: “ಭಗವಾನ್ ಶಕ್ರನು ಬ್ರಹ್ಮಹತ್ಯಾದೋಷವನ್ನು ಏಕೆ ಪಡೆದುಕೊಂಡನು? ಮತ್ತು ಈ ತೀರ್ಥದಲ್ಲಿ ಮುಳುಗಿ ಅವನು ಹೇಗೆ ಅಕಲ್ಮಷನಾದನು?”

09042028 ವೈಶಂಪಾಯನ ಉವಾಚ

09042028a ಶೃಣುಷ್ವೈತದುಪಾಖ್ಯಾನಂ ಯಥಾವೃತ್ತಂ ಜನೇಶ್ವರ|

09042028c ಯಥಾ ಬಿಭೇದ ಸಮಯಂ ನಮುಚೇರ್ವಾಸವಃ ಪುರಾ||

ವೈಶಂಪಾಯನನು ಹೇಳಿದನು: “ಜನೇಶ್ವರ! ಹಿಂದೆ ವಾಸವನು ನಮುಚಿಯೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ಹೇಗೆ ಮುರಿದನು ಎನ್ನುವ ಈ ಉಪಾಖ್ಯಾನವನ್ನು ನಡೆದಹಾಗೆ ಕೇಳು.

09042029a ನಮುಚಿರ್ವಾಸವಾದ್ಭೀತಃ ಸೂರ್ಯರಶ್ಮಿಂ ಸಮಾವಿಶತ್|

09042029c ತೇನೇಂದ್ರಃ ಸಖ್ಯಮಕರೋತ್ಸಮಯಂ ಚೇದಮಬ್ರವೀತ್||

ವಾಸವನ ಭೀತಿಯಿಂದ ನಮುಚಿಯು ಸೂರ್ಯರಶ್ಮಿಯನ್ನು ಸೇರಿದನು. ಅವನೊಂದಿಗೆ ಇಂದ್ರನು ಸಖ್ಯಮಾಡಿಕೊಂಡು ಈ ರೀತಿಯ ಒಪ್ಪಂದವನ್ನೂ ಮಾಡಿಕೊಂಡನು:

09042030a ನಾರ್ದ್ರೇಣ ತ್ವಾ ನ ಶುಷ್ಕೇಣ ನ ರಾತ್ರೌ ನಾಪಿ ವಾಹನಿ|

09042030c ವಧಿಷ್ಯಾಮ್ಯಸುರಶ್ರೇಷ್ಠ ಸಖೇ ಸತ್ಯೇನ ತೇ ಶಪೇ||

“ಅಸುರಶ್ರೇಷ್ಠ! ಸಖಾ! ನಾನು ನಿನ್ನನ್ನು ಒದ್ದೆಯಾಗಿರುವ ಅಥವಾ ಒಣಗಿರುವುದರಿಂದಾಗಲೀ, ರಾತ್ರಿ ಅಥವಾ ಹಗಲಿನಲ್ಲಿಯಾಗಲೀ ಕೊಲ್ಲುವುದಿಲ್ಲ. ಸತ್ಯದ ಮೇಲೆ ಆಣೆಯಿಟ್ಟು ನಾನು ಶಪಥಮಾಡುತ್ತೇನೆ!”

09042031a ಏವಂ ಸ ಕೃತ್ವಾ ಸಮಯಂ ಸೃಷ್ಟ್ವಾ ನೀಹಾರಮೀಶ್ವರಃ|

09042031c ಚಿಚ್ಚೇದಾಸ್ಯ ಶಿರೋ ರಾಜನ್ನಪಾಂ ಫೇನೇನ ವಾಸವಃ||

ರಾಜನ್! ಈ ರೀತಿಯ ಒಪ್ಪಂದವನ್ನು ಮಾಡಿಕೊಂಡು ಈಶ್ವರ ವಾಸವನು ಮಂಜನ್ನು ಸೃಷ್ಟಿಸಿ ನೀರಿನ ನೊರೆಯಿಂದಲೇ ಅವನ ಶಿರವನ್ನು ಕತ್ತರಿಸಿದನು.

09042032a ತಚ್ಚಿರೋ ನಮುಚೇಶ್ಚಿನ್ನಂ ಪೃಷ್ಠತಃ ಶಕ್ರಮನ್ವಯಾತ್|

09042032c ಹೇ ಮಿತ್ರಹನ್ಪಾಪ ಇತಿ ಬ್ರುವಾಣಂ ಶಕ್ರಮಂತಿಕಾತ್||

ಛಿನ್ನವಾದ ನಮುಚಿಯ ಆ ಶಿರವು “ಹೇ ಮಿತ್ರಘಾತಕ! ಪಾಪಿ!” ಎಂದು ಹೇಳುತ್ತಾ ಶಕ್ರನನ್ನು ಹತ್ತಿರದಿಂದಲೇ ಅನುಸರಿಸಿ ಹೋಗುತ್ತಿತ್ತು.

09042033a ಏವಂ ಸ ಶಿರಸಾ ತೇನ ಚೋದ್ಯಮಾನಃ ಪುನಃ ಪುನಃ|

09042033c ಪಿತಾಮಹಾಯ ಸಂತಪ್ತ ಏವಮರ್ಥಂ ನ್ಯವೇದಯತ್||

ಹೀಗೆ ಆ ಶಿರದಿಂದ ಪುನಃ ಪುನಃ ನಿಂದಿಸಲ್ಪಡುತ್ತಿದ್ದ ಇಂದ್ರನು ಸಂತಪ್ತನಾಗಿ ಪಿತಾಮಹ ಬ್ರಹ್ಮನಿಗೆ ನಡೆದುದನ್ನು ನಿವೇದಿಸಿದನು.

09042034a ತಮಬ್ರವೀಲ್ಲೋಕಗುರುರರುಣಾಯಾಂ ಯಥಾವಿಧಿ|

09042034c ಇಷ್ಟ್ವೋಪಸ್ಪೃಶ ದೇವೇಂದ್ರ ಬ್ರಹ್ಮಹತ್ಯಾಪಹಾ ಹಿ ಸಾ||

ಅವನಿಗೆ ಲೋಕಗುರುವು “ದೇವೇಂದ್ರ! ಯಥಾವಿಧಿಯಾಗಿ ಅರುಣತೀರ್ಥದಲ್ಲಿ ಸ್ನಾನಾಚಮನೀಯಗಳನ್ನು ಮಾಡು! ಆ ತೀರ್ಥವು ಬ್ರಹ್ಮಹತ್ಯಾದೋಷವನ್ನು ಹೋಗಲಾಡಿಸುತ್ತದೆ.”

09042035a ಇತ್ಯುಕ್ತಃ ಸ ಸರಸ್ವತ್ಯಾಃ ಕುಂಜೇ ವೈ ಜನಮೇಜಯ|

09042035c ಇಷ್ಟ್ವಾ ಯಥಾವದ್ಬಲಭಿದರುಣಾಯಾಮುಪಾಸ್ಪೃಶತ್||

ಜನಮೇಜಯ! ಅವನು ಹೀಗೆ ಹೇಳಲು ಬಲಭಿದನು ಅರುಣತೀರ್ಥದಲ್ಲಿ ಯಥಾವತ್ತಾಗಿ ಸ್ನಾನಾಚಮನೀಯಗಳನ್ನು ಮಾಡಿದನು.

09042036a ಸ ಮುಕ್ತಃ ಪಾಪ್ಮನಾ ತೇನ ಬ್ರಹ್ಮಹತ್ಯಾಕೃತೇನ ಹ|

09042036c ಜಗಾಮ ಸಂಹೃಷ್ಟಮನಾಸ್ತ್ರಿದಿವಂ ತ್ರಿದಶೇಶ್ವರಃ||

ಅದರಿಂದ ತ್ರಿದಶೇಶ್ವರನು ಬ್ರಹ್ಮಹತ್ಯೆಯನ್ನು ಮಾಡಿದುದರಿಂದುಂಟಾದ ಪಾಪದಿಂದ ಮುಕ್ತನಾಗಿ ಸಂಹೃಷ್ಟನಾಗಿ ತ್ರಿದಿವಕ್ಕೆ ತೆರಳಿದನು.

09042037a ಶಿರಸ್ತಚ್ಚಾಪಿ ನಮುಚೇಸ್ತತ್ರೈವಾಪ್ಲುತ್ಯ ಭಾರತ|

09042037c ಲೋಕಾನ್ಕಾಮದುಘಾನ್ಪ್ರಾಪ್ತಮಕ್ಷಯಾನ್ರಾಜಸತ್ತಮ||

ಭಾರತ! ರಾಜಸತ್ತಮ! ನಮುಚಿಯ ಶಿರಸ್ಸಾದರೋ ಅಲ್ಲಿಯೇ ಬಿದ್ದುಹೋಯಿತು ಮತ್ತು ಅವನು ವಾಂಛಿತ ಫಲಗಳನ್ನು ನೀಡುವ ಅಕ್ಷಯ ಲೋಕಗಳನ್ನು ಪಡೆದನು.

09042038a ತತ್ರಾಪ್ಯುಪಸ್ಪೃಶ್ಯ ಬಲೋ ಮಹಾತ್ಮಾ

         ದತ್ತ್ವಾ ಚ ದಾನಾನಿ ಪೃಥಗ್ವಿಧಾನಿ|

09042038c ಅವಾಪ್ಯ ಧರ್ಮಂ ಪರಮಾರ್ಯಕರ್ಮಾ

         ಜಗಾಮ ಸೋಮಸ್ಯ ಮಹತ್ಸ ತೀರ್ಥಂ||

ಮಹಾತ್ಮ ಬಲರಾಮನು ಅಲ್ಲಿಯೂ ಕೂಡ ಸ್ನಾನಾಚಮನೀಯಗಳನ್ನು ಮಾಡಿ ಅನೇಕ ವಿಧದ ದಾನಗಳನ್ನು ನೀಡಿ ಆರ್ಯಕರ್ಮದ ಧರ್ಮವನ್ನು ಪಡೆದು ಸೋಮನ ಮಹಾತೀರ್ಥಕ್ಕೆ ಹೋದನು.

09042039a ಯತ್ರಾಯಜದ್ರಾಜಸೂಯೇನ ಸೋಮಃ

         ಸಾಕ್ಷಾತ್ಪುರಾ ವಿಧಿವತ್ಪಾರ್ಥಿವೇಂದ್ರ|

09042039c ಅತ್ರಿರ್ಧೀಮಾನ್ವಿಪ್ರಮುಖ್ಯೋ ಬಭೂವ

         ಹೋತಾ ಯಸ್ಮಿನ್ಕ್ರತುಮುಖ್ಯೇ ಮಹಾತ್ಮಾ||

ಪಾರ್ಥಿವೇಂದ್ರ! ಅಲ್ಲಿ ಹಿಂದೆ ಸಾಕ್ಷಾತ್ ಸೋಮನು ವಿಧಿವತ್ತಾಗಿ ರಾಜಸೂಯಯಾಗವನ್ನು ನೆರವೇರಿಸಿದ್ದನು. ಆ ಮುಖ್ಯಕ್ರತುವಿನಲ್ಲಿ ಧೀಮಾನ್ ವಿಪ್ರಮುಖ್ಯ ಮಹಾತ್ಮ ಅತ್ರಿಯು ಹೋತಾರನಾಗಿದ್ದನು,

09042040a ಯಸ್ಯಾಂತೇಽಭೂತ್ಸುಮಹಾನ್ದಾನವಾನಾಂ

         ದೈತೇಯಾನಾಂ ರಾಕ್ಷಸಾನಾಂ ಚ ದೇವೈಃ|

09042040c ಸ ಸಂಗ್ರಾಮಸ್ತಾರಕಾಖ್ಯಃ ಸುತೀವ್ರೋ

         ಯತ್ರ ಸ್ಕಂದಸ್ತಾರಕಾಖ್ಯಂ ಜಘಾನ||

ಆ ಯಜ್ಞದ ಕೊನೆಯಲ್ಲಿ ದೇವತೆಗಳೊಂದಿಗೆ ದಾನವ-ದೈತ್ಯ-ರಾಕ್ಷಸರ ಮಹಾ ತಾರಕ ಎಂಬ ಹೆಸರಿನ ಅತಿ ತೀವ್ರ ಸಂಗ್ರಾಮವು ನಡೆಯಿತು. ಆ ಸಂಗ್ರಾಮದಲ್ಲಿ ಸ್ಕಂದನು ತಾರಕನೆಂಬುವವನನ್ನು ಸಂಹರಿಸಿದನು.

09042041a ಸೇನಾಪತ್ಯಂ ಲಬ್ಧವಾನ್ದೇವತಾನಾಂ

         ಮಹಾಸೇನೋ ಯತ್ರ ದೈತ್ಯಾಂತಕರ್ತಾ|

09042041c ಸಾಕ್ಷಾಚ್ಚಾತ್ರ ನ್ಯವಸತ್ಕಾರ್ತ್ತಿಕೇಯಃ

         ಸದಾ ಕುಮಾರೋ ಯತ್ರ ಸ ಪ್ಲಕ್ಷರಾಜಃ||

ಆ ಸೋಮತೀರ್ಥದಲ್ಲಿಯೇ ದೈತ್ಯರನ್ನು ಅಂತ್ಯಗೊಳಿಸಿದ ಮಹಾಸೇನನು ದೇವತೆಗಳ ಸೇನಾಪತ್ಯವನ್ನು ಪಡೆದುಕೊಂಡನು. ಅಶ್ವತ್ಥವೃಕ್ಷವಿರುವ ಅಲ್ಲಿಯೇ ಸಾಕ್ಷಾತ್ ಕಾರ್ತಿಕೇಯ ಕುಮಾರನು ಸದಾ ನೆಲಸಿರುತ್ತಾನೆ.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ದ್ವಾಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ನಲ್ವತ್ತೆರಡನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.