|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleಶಲ್ಯಪರ್ವ: ಸಾರಸ್ವತಪರ್ವ
೨೯
ರಣದಲ್ಲಿ ದುರ್ಯೋಧನನನ್ನು ಹುಡುಕಾಡಿ ಬಳಲಿದ ಪಾಂಡವರು ವಿಶ್ರಾಂತಿಪಡೆಯಲು ಸ್ವ-ಶಿಬಿರಕ್ಕೆ ತೆರಳಿದಿದು ಹಾಗೂ ಕೃಪ-ಅಶ್ವತ್ಥಾಮ-ಕೃತವರ್ಮರು ಖಾಲಿಯಾಗಿದ್ದ ಶಿಬಿರದಲ್ಲಿ ರಾತ್ರಿ ಉಳಿಯಬಾರದೆಂದು ನಿರ್ಧರಿಸಿ ದುರ್ಯೋಧನನನ್ನು ಕಾಣಲು ಸರೋವರಕ್ಕೆ ಬಂದುದು (೧-೯). ಕೃಪ-ಅಶ್ವತ್ಥಾಮ-ಕೃತವರ್ಮರೊಂದಿಗೆ ಸರೋವರದಲ್ಲಿದ್ದ ದುರ್ಯೋಧನನ ಸಂವಾದ (೧೦-೨೧). ಅವರ ಸಂವಾದವನ್ನು ಕೇಳಿಕೊಂಡ ಮೃಗವ್ಯಾಧರು ದುರ್ಯೋಧನನ ಕುರುಹನ್ನು ಪಾಂಡವರಿಗೆ ತಿಳಿಸಿದುದು (೨೨-೪೨). ಯುಧಿಷ್ಠಿರನು ತನ್ನ ಅನುಯಾಯಿಗಳೊಂದಿಗೆ ದ್ವೈಪಾಯನ ಸರೋವರವನ್ನು ತಲುಪಿದುದು (೪೩-೫೮). ದುರ್ಯೋಧನನೊಂದಿಗೆ ಮಾತನಾಡುತ್ತಿದ್ದ ಕೃಪ-ಅಶ್ವತ್ಥಾಮ-ಕೃತವರ್ಮರು ಪಾಂಡವರ ಆಗಮನವನ್ನು ಕೇಳಿ, ಸರೋವರದಿಂದ ಪಲಾಯನಗೈದುದು (೫೯-೬೬).
09029001 ಧೃತರಾಷ್ಟ್ರ ಉವಾಚ
09029001a ಹತೇಷು ಸರ್ವಸೈನ್ಯೇಷು ಪಾಂಡುಪುತ್ರೈ ರಣಾಜಿರೇ|
09029001c ಮಮ ಸೈನ್ಯಾವಶಿಷ್ಟಾಸ್ತೇ ಕಿಮಕುರ್ವತ ಸಂಜಯ||
ಧೃತರಾಷ್ಟ್ರನು ಹೇಳಿದನು: “ಸಂಜಯ! ರಣರಂಗದಲ್ಲಿ ಪಾಂಡುಪುತ್ರರಿಂದ ಸರ್ವಸೇನೆಗಳೂ ಹತರಾಗಲು ನನ್ನ ಸೇನೆಯಲ್ಲಿ ಅಳಿದುಳಿದಿದ್ದವರು ಏನು ಮಾಡಿದರು?
09029002a ಕೃತವರ್ಮಾ ಕೃಪಶ್ಚೈವ ದ್ರೋಣಪುತ್ರಶ್ಚ ವೀರ್ಯವಾನ್|
09029002c ದುರ್ಯೋಧನಶ್ಚ ಮಂದಾತ್ಮಾ ರಾಜಾ ಕಿಮಕರೋತ್ತದಾ||
ಆಗ ಕೃತವರ್ಮ, ಕೃಪ, ವೀರ್ಯವಾನ್ ದ್ರೋಣಪುತ್ರ ಮತ್ತು ಮಂದಾತ್ಮ ದುರ್ಯೋಧನರು ಏನು ಮಾಡಿದರು?”
09029003 ಸಂಜಯ ಉವಾಚ
09029003a ಸಂಪ್ರಾದ್ರವತ್ಸು ದಾರೇಷು ಕ್ಷತ್ರಿಯಾಣಾಂ ಮಹಾತ್ಮನಾಂ|
09029003c ವಿದ್ರುತೇ ಶಿಬಿರೇ ಶೂನ್ಯೇ ಭೃಶೋದ್ವಿಗ್ನಾಸ್ತ್ರಯೋ ರಥಾಃ||
09029004a ನಿಶಮ್ಯ ಪಾಂಡುಪುತ್ರಾಣಾಂ ತದಾ ವಿಜಯಿನಾಂ ಸ್ವನಂ|
09029004c ವಿದ್ರುತಂ ಶಿಬಿರಂ ದೃಷ್ಟ್ವಾ ಸಾಯಾಹ್ನೇ ರಾಜಗೃದ್ಧಿನಃ||
09029004e ಸ್ಥಾನಂ ನಾರೋಚಯಂಸ್ತತ್ರ ತತಸ್ತೇ ಹ್ರದಮಭ್ಯಯುಃ||
ಸಂಜಯನು ಹೇಳಿದನು: “ಮಹಾತ್ಮ ಕ್ಷತ್ರಿಯರ ಪತ್ನಿಯರು ಪಲಾಯನ ಮಾಡಿ ಶಿಬಿರವು ಶೂನ್ಯವಾಗಲು, ವಿಜಯಿ ಪಾಂಡುಪುತ್ರರ ಕೂಗನ್ನು ಕೇಳಿ, ಖಾಲಿಯಾದ ಶಿಬಿರವನ್ನು ನೋಡಿ ಆ ರಾತ್ರಿ ಅಲ್ಲಿ ಉಳಿಯಲು ಇಚ್ಛಿಸದೇ ಆ ಮೂವರು ಮಹಾರಥರು ತುಂಬಾ ಉದ್ವಿಗ್ನಗೊಂಡು ರಾಜನನ್ನು ನೋಡಬೇಕೆಂದು ಬಯಸಿ ಸರೋವರಕ್ಕೆ ಆಗಮಿಸಿದರು.
09029005a ಯುಧಿಷ್ಠಿರೋಽಪಿ ಧರ್ಮಾತ್ಮಾ ಭ್ರಾತೃಭಿಃ ಸಹಿತೋ ರಣೇ|
09029005c ಹೃಷ್ಟಃ ಪರ್ಯಪತದ್ರಾಜನ್ದುರ್ಯೋಧನವಧೇಪ್ಸಯಾ||
ರಾಜನ್! ಹೃಷ್ಟನಾಗಿದ್ದ ಧರ್ಮಾತ್ಮ ಯುಧಿಷ್ಠಿರನಾದರೋ ದುರ್ಯೋಧನನನ್ನು ವಧಿಸಲು ಬಯಸಿ ಸಹೋದರರೊಂದಿಗೆ ಅವನನ್ನು ರಣದಲ್ಲಿ ಹುಡುಕಾಡಿದನು.
09029006a ಮಾರ್ಗಮಾಣಾಸ್ತು ಸಂಕ್ರುದ್ಧಾಸ್ತವ ಪುತ್ರಂ ಜಯೈಷಿಣಃ|
09029006c ಯತ್ನತೋಽನ್ವೇಷಮಾಣಾಸ್ತು ನೈವಾಪಶ್ಯನ್ಜನಾಧಿಪಂ||
ಸಂಕ್ರುದ್ಧರಾಗಿ ನಿನ್ನ ಪುತ್ರನನ್ನು ಜಯಿಸಲು ಬಯಸಿದ್ದ ಅವರು ಎಷ್ಟೇ ಪ್ರಯತ್ನಪಟ್ಟು ಹುಡುಕಿದರೂ ಜನಾಧಿಪ ದುರ್ಯೋಧನನ್ನು ಕಾಣಲಿಲ್ಲ.
09029007a ಸ ಹಿ ತೀವ್ರೇಣ ವೇಗೇನ ಗದಾಪಾಣಿರಪಾಕ್ರಮತ್|
09029007c ತಂ ಹ್ರದಂ ಪ್ರಾವಿಶಚ್ಚಾಪಿ ವಿಷ್ಟಭ್ಯಾಪಃ ಸ್ವಮಾಯಯಾ||
ದುರ್ಯೋಧನನಾದರೋ ಗದಾಪಾಣಿಯಾಗಿ ತೀವ್ರ ವೇಗದಿಂದ ಆ ಸರೋವರಕ್ಕೆ ಹೋಗಿ ತನ್ನದೇ ಮಾಯೆಯಿಂದ ನೀರನ್ನು ಸ್ಥಂಭಿಸಿ ಪ್ರವೇಶಿಸಿದ್ದನು.
09029008a ಯದಾ ತು ಪಾಂಡವಾಃ ಸರ್ವೇ ಸುಪರಿಶ್ರಾಂತವಾಹನಾಃ|
09029008c ತತಃ ಸ್ವಶಿಬಿರಂ ಪ್ರಾಪ್ಯ ವ್ಯತಿಷ್ಠನ್ಸಹಸೈನಿಕಾಃ||
ಅವರ ವಾಹನಗಳೂ ಅತ್ಯಂತ ಬಳಲಿರಲು ಪಾಂಡವರೆಲ್ಲರೂ ಸೈನಿಕರೊಂದಿಗೆ ತಮ್ಮ ಶಿಬಿರಗಳಿಗೆ ಹಿಂದಿರುಗಿದರು.
09029009a ತತಃ ಕೃಪಶ್ಚ ದ್ರೌಣಿಶ್ಚ ಕೃತವರ್ಮಾ ಚ ಸಾತ್ವತಃ|
09029009c ಸಂನಿವಿಷ್ಟೇಷು ಪಾರ್ಥೇಷು ಪ್ರಯಾತಾಸ್ತಂ ಹ್ರದಂ ಶನೈಃ||
ಪಾರ್ಥರು ವಿಶ್ರಾಂತಿಪಡೆಯುತ್ತಿರಲಾಗಿ ಕೃಪ, ದ್ರೌಣಿ ಮತ್ತು ಸಾತ್ವತ ಕೃತಮರ್ವರು ಮೆಲ್ಲನೆ ಆ ಸರೋವರದ ಬಳಿ ಬಂದರು.
09029010a ತೇ ತಂ ಹ್ರದಂ ಸಮಾಸಾದ್ಯ ಯತ್ರ ಶೇತೇ ಜನಾಧಿಪಃ|
09029010c ಅಭ್ಯಭಾಷಂತ ದುರ್ಧರ್ಷಂ ರಾಜಾನಂ ಸುಪ್ತಮಂಭಸಿ||
ಜನಾಧಿಪನು ಮಲಗಿದ್ದ ಆ ಸರೋವರವನ್ನು ತಲುಪಿ ಅವರು ನೀರಿನಲ್ಲಿ ಮಲಗಿದ್ದ ದುರ್ಧರ್ಷ ರಾಜನನ್ನು ಸಂಬೋಧಿಸಿ ಹೀಗೆಂದರು:
09029011a ರಾಜನ್ನುತ್ತಿಷ್ಠ ಯುಧ್ಯಸ್ವ ಸಹಾಸ್ಮಾಭಿರ್ಯುಧಿಷ್ಠಿರಂ|
09029011c ಜಿತ್ವಾ ವಾ ಪೃಥಿವೀಂ ಭುಂಕ್ಷ್ವ ಹತೋ ವಾ ಸ್ವರ್ಗಮಾಪ್ನುಹಿ||
“ರಾಜನ್! ಕೂಡಲೇ ಮೇಲೇಳು! ನಮ್ಮೊಂದಿಗೆ ಸೇರಿ ಯುಧಿಷ್ಠಿರನೊಡನೆ ಯುದ್ಧಮಾಡು! ಗೆದ್ದರೆ ಪೃಥ್ವಿಯನ್ನು ಭೋಗಿಸುವೆ ಅಥವಾ ಹತನಾಗಿ ಸ್ವರ್ಗವನ್ನು ಪಡೆಯುವೆ!
09029012a ತೇಷಾಮಪಿ ಬಲಂ ಸರ್ವಂ ಹತಂ ದುರ್ಯೋಧನ ತ್ವಯಾ|
09029012c ಪ್ರತಿರಬ್ಧಾಶ್ಚ ಭೂಯಿಷ್ಠಂ ಯೇ ಶಿಷ್ಟಾಸ್ತತ್ರ ಸೈನಿಕಾಃ||
ದುರ್ಯೋಧನ! ಅವರ ಸೇನೆಯೆಲ್ಲವನ್ನೂ ನೀನು ಸಂಹರಿಸಿರುವೆ! ಅಳಿದುಳಿದಿರುವ ಸೈನಿಕರು ಕೂಡ ಬಳಲಿ ಬೆಂಡಾಗಿದ್ದಾರೆ.
09029013a ನ ತೇ ವೇಗಂ ವಿಷಹಿತುಂ ಶಕ್ತಾಸ್ತವ ವಿಶಾಂ ಪತೇ|
09029013c ಅಸ್ಮಾಭಿರಭಿಗುಪ್ತಸ್ಯ ತಸ್ಮಾದುತ್ತಿಷ್ಠ ಭಾರತ||
ವಿಶಾಂಪತೇ! ನಮ್ಮ ರಕ್ಷಣೆಯಿರುವ ನಿನ್ನ ಶಕ್ತಿಯ ವೇಗವನ್ನು ತಡೆದುಕೊಳ್ಳಲು ಅವರು ಶಕ್ಯರಿಲ್ಲ. ಆದುದರಿಂದ ಭಾರತ! ಮೇಲೇಳು!”
09029014 ದುರ್ಯೋಧನ ಉವಾಚ
09029014a ದಿಷ್ಟ್ಯಾ ಪಶ್ಯಾಮಿ ವೋ ಮುಕ್ತಾನೀದೃಶಾತ್ಪುರುಷಕ್ಷಯಾತ್|
09029014c ಪಾಂಡುಕೌರವಸಮ್ಮರ್ದಾಜ್ಜೀವಮಾನಾನ್ನರರ್ಷಭಾನ್||
ದುರ್ಯೋಧನನು ಹೇಳಿದನು: “ಒಳ್ಳೆಯದಾಯಿತು ಈ ರೀತಿಯ ಪುರುಷಕ್ಷಯಕಾರೀ ಪಾಂಡವ-ಕೌರವರ ಮಹಾಸಂಗ್ರಾಮದಿಂದ ಜೀವನ್ಮುಕ್ತರಾಗಿರುವ ನರರ್ಷಭ ನಿಮ್ಮನ್ನು ನಾನು ನೋಡುತ್ತಿದ್ದೇನೆ.
09029015a ವಿಜೇಷ್ಯಾಮೋ ವಯಂ ಸರ್ವೇ ವಿಶ್ರಾಂತಾ ವಿಗತಕ್ಲಮಾಃ|
09029015c ಭವಂತಶ್ಚ ಪರಿಶ್ರಾಂತಾ ವಯಂ ಚ ಭೃಶವಿಕ್ಷತಾಃ||
09029015e ಉದೀರ್ಣಂ ಚ ಬಲಂ ತೇಷಾಂ ತೇನ ಯುದ್ಧಂ ನ ರೋಚಯೇ|
ವಿಶ್ರಾಂತಿಪಡೆದು ಬಳಲಿಕೆಯನ್ನು ಕಳೆದುಕೊಂಡ ನಂತರ ನಾವೆಲ್ಲರೂ ಅವರನ್ನು ಜಯಿಸೋಣ. ನೀವೂ ಕೂಡ ಬಳಲಿದ್ದೀರಿ. ನಾನೂ ಕೂಡ ತುಂಬಾ ಗಾಯಗೊಂಡಿದ್ದೇನೆ. ಇನ್ನೂ ಅಪಾರ ಸೇನೆಯಿರುವ ಅವರೊಂದಿಗೆ ಈಗ ಯುದ್ಧಮಾಡುವುದು ಸೂಕ್ತವೆಂದು ನನಗನ್ನಿಸುತ್ತಿಲ್ಲ.
09029016a ನ ತ್ವೇತದದ್ಭುತಂ ವೀರಾ ಯದ್ವೋ ಮಹದಿದಂ ಮನಃ|
09029016c ಅಸ್ಮಾಸು ಚ ಪರಾ ಭಕ್ತಿರ್ನ ತು ಕಾಲಃ ಪರಾಕ್ರಮೇ||
ಇದು ಮಹಾ ವೀರತನವೆಂದು ನನ್ನ ಮನಸ್ಸಿಗೆ ಅನಿಸುತ್ತಿಲ್ಲ. ನನ್ನ ಮೇಲಿನ ಅಪಾರ ಭಕ್ತಿಯ ಹೊರತಾಗಿ ಇದು ಪರಾಕ್ರಮಕ್ಕೆ ಸಮಯವೆಂದು ಕಾಣುತ್ತಿಲ್ಲ.
09029017a ವಿಶ್ರಮ್ಯೈಕಾಂ ನಿಶಾಮದ್ಯ ಭವದ್ಭಿಃ ಸಹಿತೋ ರಣೇ|
09029017c ಪ್ರತಿಯೋತ್ಸ್ಯಾಮ್ಯಹಂ ಶತ್ರೂನ್ ಶ್ವೋ ನ ಮೇಽಸ್ತ್ಯತ್ರ ಸಂಶಯಃ||
ಇಂದು ಒಂದು ರಾತ್ರಿ ವಿಶ್ರಮಿಸಿಕೊಂಡ ನಂತರ ನಾಳೆ ನಿಮ್ಮೊಂದಿಗೆ ರಣದಲ್ಲಿ ನಾನು ಶತ್ರುಗಳನ್ನು ಎದುರಿಸಿ ಹೋರಾಡುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!””
09029018 ಸಂಜಯ ಉವಾಚ
09029018a ಏವಮುಕ್ತೋಽಬ್ರವೀದ್ದ್ರೌಣೀ ರಾಜಾನಂ ಯುದ್ಧದುರ್ಮದಂ|
09029018c ಉತ್ತಿಷ್ಠ ರಾಜನ್ಭದ್ರಂ ತೇ ವಿಜೇಷ್ಯಾಮೋ ರಣೇ ಪರಾನ್||
ಸಂಜಯನು ಹೇಳಿದನು: “ಹೀಗೆ ಹೇಳಲು ದ್ರೌಣಿಯು ಯುದ್ಧದುರ್ಮದ ರಾಜನನ್ನುದ್ದೇಶಿಸಿ ಹೇಳಿದನು: “ರಾಜನ್! ಎದ್ದೇಳು! ನಿನಗೆ ಮಂಗಳವಾಗಲಿ! ರಣದಲ್ಲಿ ಶತ್ರುಗಳನ್ನು ಜಯಿಸೋಣ!
09029019a ಇಷ್ಟಾಪೂರ್ತೇನ ದಾನೇನ ಸತ್ಯೇನ ಚ ಜಪೇನ ಚ|
09029019c ಶಪೇ ರಾಜನ್ಯಥಾ ಹ್ಯದ್ಯ ನಿಹನಿಷ್ಯಾಮಿ ಸೋಮಕಾನ್||
ರಾಜನ್! ಪೂರೈಸಿರುವ ಇಷ್ಟಿ-ದಾನಗಳ, ಸತ್ಯ-ಜಪಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇಂದು ನಾನು ಸೋಮಕರನ್ನು ನಾಶಗೊಳಿಸುತ್ತೇನೆ!
09029020a ಮಾ ಸ್ಮ ಯಜ್ಞಕೃತಾಂ ಪ್ರೀತಿಂ ಪ್ರಾಪ್ನುಯಾಂ ಸಜ್ಜನೋಚಿತಾಂ|
09029020c ಯದೀಮಾಂ ರಜನೀಂ ವ್ಯುಷ್ಟಾಂ ನ ನಿಹನ್ಮಿ ಪರಾನ್ರಣೇ||
ಈ ರಾತ್ರಿ ಕಳೆಯುವುದರೊಳಗೆ ಒಂದುವೇಳೆ ನಾನು ರಣದಲ್ಲಿ ಶತ್ರುಗಳನ್ನು ಸಂಹರಿಸದೇ ಇದ್ದರೆ ಯಜ್ಞಗಳನ್ನು ಮಾಡಿದ ಸಜ್ಜನರಿಗೆ ಉಚಿತವಾದ ಪ್ರಸನ್ನತೆಯನ್ನು ನಾನು ಹೊಂದದಂತಾಗಲಿ!
09029021a ನಾಹತ್ವಾ ಸರ್ವಪಾಂಚಾಲಾನ್ವಿಮೋಕ್ಷ್ಯೇ ಕವಚಂ ವಿಭೋ|
09029021c ಇತಿ ಸತ್ಯಂ ಬ್ರವೀಮ್ಯೇತತ್ತನ್ಮೇ ಶೃಣು ಜನಾಧಿಪ||
ವಿಭೋ! ಜನಾಧಿಪ! ಸರ್ವಪಾಂಚಾಲರನ್ನೂ ಸಂಹರಿಸದೇ ನಾನು ಕವಚವನ್ನು ಬಿಚ್ಚುವುದಿಲ್ಲ. ನಿನಗೆ ಹೇಳುತ್ತಿರುವ ಈ ನನ್ನ ಮಾತು ಸತ್ಯ!”
09029022a ತೇಷು ಸಂಭಾಷಮಾಣೇಷು ವ್ಯಾಧಾಸ್ತಂ ದೇಶಮಾಯಯುಃ|
09029022c ಮಾಂಸಭಾರಪರಿಶ್ರಾಂತಾಃ ಪಾನೀಯಾರ್ಥಂ ಯದೃಚ್ಚಯಾ||
ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಮಾಂಸದ ಭಾರವನ್ನು ಹೊತ್ತು ಪರಿಶ್ರಾಂತರಾಗಿದ್ದ ಕೆಲವು ವ್ಯಾಧರು ನೀರನ್ನು ಕುಡಿಯಲೋಸುಗ ಆ ಪ್ರದೇಶಕ್ಕೆ ಆಗಮಿಸಿದರು.
09029023a ತೇ ಹಿ ನಿತ್ಯಂ ಮಹಾರಾಜ ಭೀಮಸೇನಸ್ಯ ಲುಬ್ಧಕಾಃ|
09029023c ಮಾಂಸಭಾರಾನುಪಾಜಹ್ರುರ್ಭಕ್ತ್ಯಾ ಪರಮಯಾ ವಿಭೋ||
ವಿಭೋ! ಮಹಾರಾಜ! ಆಸೆಬುರುಕರಾದ ಅವರು ನಿತ್ಯವೂ ಪರಮ ಭಕ್ತಿಯಿಂದ ಭೀಮಸೇನನಿಗೆ ಮಾಂಸವನ್ನು ಹೊತ್ತುಕೊಂಡು ಹೋಗಿ ಕೊಡುತ್ತಿದ್ದರು.
09029024a ತೇ ತತ್ರ ವಿಷ್ಠಿತಾಸ್ತೇಷಾಂ ಸರ್ವಂ ತದ್ವಚನಂ ರಹಃ|
09029024c ದುರ್ಯೋಧನವಚಶ್ಚೈವ ಶುಶ್ರುವುಃ ಸಂಗತಾ ಮಿಥಃ||
ಅಲ್ಲಿ ಅವರು ಒಟ್ಟಾಗಿ ಅಡಗಿನಿಂತು ರಹಸ್ಯದಲ್ಲಿ ಅವರಾಡಿದ ಎಲ್ಲ ಮಾತುಗಳನ್ನೂ, ದುರ್ಯೋಧನನ ಮಾತನ್ನೂ ಕೇಳಿಸಿಕೊಂಡರು.
09029025a ತೇಽಪಿ ಸರ್ವೇ ಮಹೇಷ್ವಾಸಾ ಅಯುದ್ಧಾರ್ಥಿನಿ ಕೌರವೇ|
09029025c ನಿರ್ಬಂಧಂ ಪರಮಂ ಚಕ್ರುಸ್ತದಾ ವೈ ಯುದ್ಧಕಾಂಕ್ಷಿಣಃ||
ಯುದ್ಧಾಕಾಂಕ್ಷಿಗಳಾಗಿದ್ದ ಆ ಎಲ್ಲ ಮಹೇಷ್ವಾಸರೂ ಯುದ್ಧಮಾಡಲು ಬಯಸಿರದಿದ್ದ ಕೌರವನಿಗೆ ಪರಮ ನಿರ್ಬಂಧಗಳನ್ನು ಹಾಕುತ್ತಿದ್ದರು.
09029026a ತಾಂಸ್ತಥಾ ಸಮುದೀಕ್ಷ್ಯಾಥ ಕೌರವಾಣಾಂ ಮಹಾರಥಾನ್|
09029026c ಅಯುದ್ಧಮನಸಂ ಚೈವ ರಾಜಾನಂ ಸ್ಥಿತಮಂಭಸಿ||
ಆಗ ಅವರು ಮಹಾರಥ ಕೌರವರನ್ನೂ ಮತ್ತು ಯುದ್ಧಮಾಡಲು ಮನಸ್ಸಿಲ್ಲದ ರಾಜನು ನೀರಿನಲ್ಲಿ ಕುಳಿತುಕೊಂಡಿರುವುದನ್ನೂ ನೋಡಿದರು.
09029027a ತೇಷಾಂ ಶ್ರುತ್ವಾ ಚ ಸಂವಾದಂ ರಾಜ್ಞಶ್ಚ ಸಲಿಲೇ ಸತಃ|
09029027c ವ್ಯಾಧಾಭ್ಯಜಾನನ್ರಾಜೇಂದ್ರ ಸಲಿಲಸ್ಥಂ ಸುಯೋಧನಂ||
ರಾಜೇಂದ್ರ! ಅವರ ಮತ್ತು ನೀರಿನಲ್ಲಿದ್ದುಕೊಂಡು ಮಾತನಾಡುತ್ತಿದ್ದ ರಾಜನ ಸಂಭಾಷಣೆಯನ್ನು ಕೇಳಿ ವ್ಯಾಧರು ಸುಯೋಧನನು ನೀರಿನಲ್ಲಿ ಮುಳುಗಿಕೊಂಡಿದ್ದಾನೆಂದು ತಿಳಿದುಕೊಂಡರು.
09029028a ತೇ ಪೂರ್ವಂ ಪಾಂಡುಪುತ್ರೇಣ ಪೃಷ್ಟಾ ಹ್ಯಾಸನ್ಸುತಂ ತವ|
09029028c ಯದೃಚ್ಚೋಪಗತಾಸ್ತತ್ರ ರಾಜಾನಂ ಪರಿಮಾರ್ಗಿತಾಃ||
ಇದಕ್ಕೆ ಮೊದಲು ನಿನ್ನ ಮಗ ರಾಜನನ್ನು ಹುಡುಕಿಕೊಂಡು ಬರುತ್ತಿರುವ ಪಾಂಡುಪುತ್ರರಿಗೆ ದಾರಿಯಲ್ಲಿ ಇವರು ಸಿಕ್ಕಿದ್ದರು.
09029029a ತತಸ್ತೇ ಪಾಂಡುಪುತ್ರಸ್ಯ ಸ್ಮೃತ್ವಾ ತದ್ಭಾಷಿತಂ ತದಾ|
09029029c ಅನ್ಯೋನ್ಯಮಬ್ರುವನ್ರಾಜನ್ಮೃಗವ್ಯಾಧಾಃ ಶನೈರಿದಂ||
ಆ ಮೃಗವ್ಯಾಧರು ಪಾಂಡುಪುತ್ರನು ಆಗ ಆಡಿದ ಮಾತನ್ನು ಸ್ಮರಿಸಿಕೊಂಡು ಅನ್ಯೋನ್ಯರೊಡನೆ ಮೆಲ್ಲನೆ ಹೀಗೆ ಮಾತನಾಡಿಕೊಂಡರು:
09029030a ದುರ್ಯೋಧನಂ ಖ್ಯಾಪಯಾಮೋ ಧನಂ ದಾಸ್ಯತಿ ಪಾಂಡವಃ|
09029030c ಸುವ್ಯಕ್ತಮಿತಿ ನಃ ಖ್ಯಾತೋ ಹ್ರದೇ ದುರ್ಯೋಧನೋ ನೃಪಃ||
“ದುರ್ಯೋಧನನ ಕುರುಹನ್ನು ನೀಡೋಣ! ಪಾಂಡವನು ನಮಗೆ ಧನವನ್ನು ನೀಡುತ್ತಾನೆ. ಸರೋವರದಲ್ಲಿ ನೃಪ ದುರ್ಯೋಧನನಿರುವನೆಂದು ನಮಗೆ ಸ್ಪಷ್ಟವಾಗಿ ತಿಳಿದುಹೋಯಿತು.
09029031a ತಸ್ಮಾದ್ಗಚ್ಚಾಮಹೇ ಸರ್ವೇ ಯತ್ರ ರಾಜಾ ಯುಧಿಷ್ಠಿರಃ|
09029031c ಆಖ್ಯಾತುಂ ಸಲಿಲೇ ಸುಪ್ತಂ ದುರ್ಯೋಧನಮಮರ್ಷಣಂ||
ಆದುದರಿಂದ ನಾವೆಲ್ಲರೂ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋಗಿ ನೀರಿನಲ್ಲಿ ಮಲಗಿರುವ ಅಮರ್ಷಣ ದುರ್ಯೋಧನನ ಕುರಿತು ಹೇಳೋಣ!
09029032a ಧೃತರಾಷ್ಟ್ರಾತ್ಮಜಂ ತಸ್ಮೈ ಭೀಮಸೇನಾಯ ಧೀಮತೇ|
09029032c ಶಯಾನಂ ಸಲಿಲೇ ಸರ್ವೇ ಕಥಯಾಮೋ ಧನುರ್ಭೃತೇ||
ಧೀಮತ ಧನುರ್ಧರ ಭೀಮಸೇನನಿಗೆ ಧೃತರಾಷ್ಟ್ರನ ಮಗನು ನೀರಿನಲ್ಲಿ ಮಲಗಿರುವುದೆಲ್ಲವನ್ನೂ ಹೇಳೋಣ!
09029033a ಸ ನೋ ದಾಸ್ಯತಿ ಸುಪ್ರೀತೋ ಧನಾನಿ ಬಹುಲಾನ್ಯುತ|
09029033c ಕಿಂ ನೋ ಮಾಂಸೇನ ಶುಷ್ಕೇಣ ಪರಿಕ್ಲಿಷ್ಟೇನ ಶೋಷಿಣಾ||
ಸುಪ್ರೀತನಾಗಿ ಅವನು ನಮಗೆ ಹೇಳಿದಂತೆ ಬಹಳ ಧನವನ್ನು ನೀಡುತ್ತಾನೆ. ಕಷ್ಟದಿಂದ ನಮ್ಮನ್ನೇ ಶೋಷಿಸುವ ಈ ಶುಷ್ಕ ಮಾಂಸದಿಂದ ನಮಗೇನಾಗಬೇಕಾಗಿದೆ?”
09029034a ಏವಮುಕ್ತ್ವಾ ತತೋ ವ್ಯಾಧಾಃ ಸಂಪ್ರಹೃಷ್ಟಾ ಧನಾರ್ಥಿನಃ|
09029034c ಮಾಂಸಭಾರಾನುಪಾದಾಯ ಪ್ರಯಯುಃ ಶಿಬಿರಂ ಪ್ರತಿ||
ಹೀಗೆ ಮಾತನಾಡಿಕೊಂಡು ಸಂತೋಷಗೊಂಡ ಆ ಧನಾರ್ಥಿ ವ್ಯಾಧರು ಮಾಂಸದ ಹೊರೆಯನ್ನು ಹೊತ್ತುಕೊಂಡು ಶಿಬಿರದ ಕಡೆ ನಡೆದರು.
09029035a ಪಾಂಡವಾಶ್ಚ ಮಹಾರಾಜ ಲಬ್ಧಲಕ್ಷಾಃ ಪ್ರಹಾರಿಣಃ|
09029035c ಅಪಶ್ಯಮಾನಾಃ ಸಮರೇ ದುರ್ಯೋಧನಮವಸ್ಥಿತಂ||
09029036a ನಿಕೃತೇಸ್ತಸ್ಯ ಪಾಪಸ್ಯ ತೇ ಪಾರಂ ಗಮನೇಪ್ಸವಃ|
09029036c ಚಾರಾನ್ಸಂಪ್ರೇಷಯಾಮಾಸುಃ ಸಮಂತಾತ್ತದ್ರಣಾಜಿರಂ||
ಮಹಾರಾಜ! ಪ್ರಹಾರಿ-ಲಬ್ಧಲಕ್ಷ ಪಾಂಡವರಾದರೋ ಸಮರದಲ್ಲಿ ದುರ್ಯೋಧನನ ಕುರುಹನ್ನು ಕಾಣದೇ ಆ ಪಾಪಿಯು ಮೋಸದಿಂದ ಪಾರಾಗಬೇಕೆಂದು ಬಯಸಿ, ರಣಾಂಗಣದ ಎಲ್ಲ ಕಡೆಗಳಲ್ಲಿ ಚಾರರನ್ನು ಕಳುಹಿಸಿದ್ದರು.
09029037a ಆಗಮ್ಯ ತು ತತಃ ಸರ್ವೇ ನಷ್ಟಂ ದುರ್ಯೋಧನಂ ನೃಪಂ|
09029037c ನ್ಯವೇದಯಂತ ಸಹಿತಾ ಧರ್ಮರಾಜಸ್ಯ ಸೈನಿಕಾಃ||
ಧರ್ಮರಾಜನ ಸೈನಿಕರೆಲ್ಲರೂ ಒಟ್ಟಾಗಿ ಬಂದು ನೃಪ ದುರ್ಯೋಧನನು ಯಾರಿಗೂ ಕಾಣಲಿಲ್ಲವೆಂದು ನಿವೇದಿಸಿದರು.
09029038a ತೇಷಾಂ ತದ್ವಚನಂ ಶ್ರುತ್ವಾ ಚಾರಾಣಾಂ ಭರತರ್ಷಭ|
09029038c ಚಿಂತಾಮಭ್ಯಗಮತ್ತೀವ್ರಾಂ ನಿಶಶ್ವಾಸ ಚ ಪಾರ್ಥಿವಃ||
ಭರತರ್ಷಭ! ಚಾರರ ಆ ಮಾತನ್ನು ಕೇಳಿ ಪಾರ್ಥಿವನು ತೀವ್ರ ಚಿಂತಾಮಗ್ನನಾಗಿ ನಿಟ್ಟುಸಿರು ಬಿಟ್ಟನು.
09029039a ಅಥ ಸ್ಥಿತಾನಾಂ ಪಾಂಡೂನಾಂ ದೀನಾನಾಂ ಭರತರ್ಷಭ|
09029039c ತಸ್ಮಾದ್ದೇಶಾದಪಕ್ರಮ್ಯ ತ್ವರಿತಾ ಲುಬ್ಧಕಾ ವಿಭೋ||
ಭರತರ್ಷಭ! ವಿಭೋ! ಹಾಗೆ ಪಾಂಡವರು ದೀನರಾಗಿ ಕುಳಿತುಕೊಂಡಿರುವ ಸ್ಥಳಕ್ಕೆ ಆ ಆಸೆಬುರುಕರು ತ್ವರೆಮಾಡಿ ಆಗಮಿಸಿದರು.
09029040a ಆಜಗ್ಮುಃ ಶಿಬಿರಂ ಹೃಷ್ಟಾ ದೃಷ್ಟ್ವಾ ದುರ್ಯೋಧನಂ ನೃಪಂ|
09029040c ವಾರ್ಯಮಾಣಾಃ ಪ್ರವಿಷ್ಟಾಶ್ಚ ಭೀಮಸೇನಸ್ಯ ಪಶ್ಯತಃ||
ನೃಪ ದುರ್ಯೋಧನನ್ನು ನೋಡಿ ಹರ್ಷಗೊಂಡಿದ್ದ ಅವರು ಶಿಬಿರಕ್ಕೆ ಬಂದು ತಡೆಯಲ್ಪಟ್ಟರೂ ಭೀಮಸೇನನನ್ನು ನೋಡಿ ಒಳನುಗ್ಗಿದರು.
09029041a ತೇ ತು ಪಾಂಡವಮಾಸಾದ್ಯ ಭೀಮಸೇನಂ ಮಹಾಬಲಂ|
09029041c ತಸ್ಮೈ ತತ್ಸರ್ವಮಾಚಖ್ಯುರ್ಯದ್ವೃತ್ತಂ ಯಚ್ಚ ವೈ ಶ್ರುತಂ||
ಅವರು ಮಹಾಬಲ ಪಾಂಡವ ಭೀಮಸೇನನ ಬಳಿಸಾರಿ ಅವನಿಗೆ ಅಲ್ಲಿ ನಡೆದ ಮತ್ತು ಕೇಳಿದುದೆಲ್ಲವನ್ನೂ ವರದಿಮಾಡಿದರು.
09029042a ತತೋ ವೃಕೋದರೋ ರಾಜನ್ದತ್ತ್ವಾ ತೇಷಾಂ ಧನಂ ಬಹು|
09029042c ಧರ್ಮರಾಜಾಯ ತತ್ಸರ್ವಮಾಚಚಕ್ಷೇ ಪರಂತಪಃ||
ರಾಜನ್! ಆಗ ಪರಂತಪ ವೃಕೋದರನು ಅವರಿಗೆ ಬಹಳ ಧನವನ್ನಿತ್ತು ಅವೆಲ್ಲವನ್ನೂ ಧರ್ಮರಾಜನಿಗೆ ತಿಳಿಸಿದನು.
09029043a ಅಸೌ ದುರ್ಯೋಧನೋ ರಾಜನ್ವಿಜ್ಞಾತೋ ಮಮ ಲುಬ್ಧಕೈಃ|
09029043c ಸಂಸ್ತಭ್ಯ ಸಲಿಲಂ ಶೇತೇ ಯಸ್ಯಾರ್ಥೇ ಪರಿತಪ್ಯಸೇ||
“ರಾಜನ್! ನನ್ನ ಬೇಟೆಗಾರರು ದುರ್ಯೋಧನ ಕುರುಹನ್ನು ತಿಳಿದಿದ್ದಾರೆ. ಯಾರಿಗಾಗಿ ಪರಿತಪಿಸುತ್ತಿರುವೆಯೋ ಅವನು ಸರೋವರವನ್ನು ಸ್ತಂಭನಗೊಳಿಸಿ ನೀರಿನಲ್ಲಿ ಮಲಗಿದ್ದಾನೆ!”
09029044a ತದ್ವಚೋ ಭೀಮಸೇನಸ್ಯ ಪ್ರಿಯಂ ಶ್ರುತ್ವಾ ವಿಶಾಂ ಪತೇ|
09029044c ಅಜಾತಶತ್ರುಃ ಕೌಂತೇಯೋ ಹೃಷ್ಟೋಽಭೂತ್ಸಹ ಸೋದರೈಃ||
ವಿಶಾಂಪತೇ! ಭೀಮಸೇನನ ಆ ಪ್ರಿಯ ಮಾತನ್ನು ಕೇಳಿದ ಕೌಂತೇಯ ಅಜಾತಶತ್ರುವು ಸಹೋದರರೊಂದಿಗೆ ಹರ್ಷಿತನಾದನು.
09029045a ತಂ ಚ ಶ್ರುತ್ವಾ ಮಹೇಷ್ವಾಸಂ ಪ್ರವಿಷ್ಟಂ ಸಲಿಲಹ್ರದಂ|
09029045c ಕ್ಷಿಪ್ರಮೇವ ತತೋಽಗಚ್ಚತ್ಪುರಸ್ಕೃತ್ಯ ಜನಾರ್ದನಂ||
ಆ ಮಹೇಷ್ವಾಸನು ಸರೋವರದ ನೀರನ್ನು ಪ್ರವೇಶಿಸಿದ್ದಾನೆಂದು ಕೇಳಿ ಅವನು ಕ್ಷಿಪ್ರದಲ್ಲಿಯೇ ಜನಾರ್ದನನನ್ನು ಮುಂದಿರಿಸಿಕೊಂಡು ಅಲ್ಲಿಗೆ ಧಾವಿಸಿದನು.
09029046a ತತಃ ಕಿಲಕಿಲಾಶಬ್ದಃ ಪ್ರಾದುರಾಸೀದ್ವಿಶಾಂ ಪತೇ|
09029046c ಪಾಂಡವಾನಾಂ ಪ್ರಹೃಷ್ಟಾನಾಂ ಪಾಂಚಾಲಾನಾಂ ಚ ಸರ್ವಶಃ||
ವಿಶಾಂಪತೇ! ಆಗ ಪ್ರಹೃಷ್ಟ ಪಾಂಡವ-ಪಾಂಚಾಲರ ಕಿಲಕಿಲಾ ಶಬ್ಧವು ಎಲ್ಲೆಡೆ ಕೇಳಿಬಂದಿತು.
09029047a ಸಿಂಹನಾದಾಂಸ್ತತಶ್ಚಕ್ರುಃ ಕ್ಷ್ವೇಡಾಂಶ್ಚ ಭರತರ್ಷಭ|
09029047c ತ್ವರಿತಾಃ ಕ್ಷತ್ರಿಯಾ ರಾಜನ್ಜಗ್ಮುರ್ದ್ವೈಪಾಯನಂ ಹ್ರದಂ||
ಭರತರ್ಷಭ! ರಾಜನ್! ಸಿಂಹನಾದ ಗೈಯುತ್ತಾ ಗರ್ಜಿಸುತ್ತಾ ತ್ವರೆಮಾಡಿ ಆ ಕ್ಷತ್ರಿಯರು ದ್ವೈಪಾಯನ ಸರೋವರಕ್ಕೆ ಹೊರಟರು.
09029048a ಜ್ಞಾತಃ ಪಾಪೋ ಧಾರ್ತರಾಷ್ಟ್ರೋ ದೃಷ್ಟಶ್ಚೇತ್ಯಸಕೃದ್ರಣೇ|
09029048c ಪ್ರಾಕ್ರೋಶನ್ಸೋಮಕಾಸ್ತತ್ರ ಹೃಷ್ಟರೂಪಾಃ ಸಮಂತತಃ||
“ಪಾಪಿ ಧಾರ್ತರಾಷ್ಟ್ರನ ಕುರುಹು ಸಿಕ್ಕಿಬಿಟ್ಟಿತು! ಅವನನ್ನು ರಣದಲ್ಲಿ ಕಂಡುಬಿಟ್ಟೆವು!” ಎಂದು ಹೃಷ್ಟರೂಪ ಸೋಮಕರು ಎಲ್ಲಕಡೆ ಕೂಗಿಕೊಳ್ಳುತ್ತಿದ್ದರು.
09029049a ತೇಷಾಮಾಶು ಪ್ರಯಾತಾನಾಂ ರಥಾನಾಂ ತತ್ರ ವೇಗಿನಾಂ|
09029049c ಬಭೂವ ತುಮುಲಃ ಶಬ್ದೋ ದಿವಸ್ಪೃಕ್ಪೃಥಿವೀಪತೇ||
ಪೃಥಿವೀಪತೇ! ಅಲ್ಲಿ ವೇಗದಿಂದ ಹೋಗುತ್ತಿರುವ ಅವರ ರಥಗಳ ತುಮುಲ ಶಬ್ಧವು ಆಕಾಶವನ್ನೂ ತಲುಪಿತು.
09029050a ದುರ್ಯೋಧನಂ ಪರೀಪ್ಸಂತಸ್ತತ್ರ ತತ್ರ ಯುಧಿಷ್ಠಿರಂ|
09029050c ಅನ್ವಯುಸ್ತ್ವರಿತಾಸ್ತೇ ವೈ ರಾಜಾನಂ ಶ್ರಾಂತವಾಹನಾಃ||
09029051a ಅರ್ಜುನೋ ಭೀಮಸೇನಶ್ಚ ಮಾದ್ರೀಪುತ್ರೌ ಚ ಪಾಂಡವೌ|
09029051c ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಶಿಖಂಡೀ ಚಾಪರಾಜಿತಃ||
09029052a ಉತ್ತಮೌಜಾ ಯುಧಾಮನ್ಯುಃ ಸಾತ್ಯಕಿಶ್ಚಾಪರಾಜಿತಃ|
09029052c ಪಾಂಚಾಲಾನಾಂ ಚ ಯೇ ಶಿಷ್ಟಾ ದ್ರೌಪದೇಯಾಶ್ಚ ಭಾರತ||
09029052e ಹಯಾಶ್ಚ ಸರ್ವೇ ನಾಗಾಶ್ಚ ಶತಶಶ್ಚ ಪದಾತಯಃ||
ಭಾರತ! ವಾಹನಗಳು ಬಳಲಿದ್ದರೂ, ದುರ್ಯೋಧನನನ್ನು ಹುಡುಕುತ್ತಾ ಅರ್ಜುನ-ಭೀಮಸೇನ-ಮಾದ್ರೀಪುತ್ರ ಪಾಂಡವರಿಬ್ಬರು- ಪಾಂಚಾಲ್ಯ ಧೃಷ್ಟದ್ಯುಮ್ನ-ಅಪರಾಜಿತ ಶಿಖಂಡೀ-ಉತ್ತಮೌಜ-ಯುಧಾಮನ್ಯು-ಅಪರಾಜಿತ ಸಾತ್ಯಕಿ-ಉಳಿದ ಪಾಂಚಾಲರು-ದ್ರೌಪದೇಯರು-ಎಲ್ಲ ಕುದುರೆಗಳು-ಆನೆಗಳು ಮತ್ತು ನೂರಾರು ಪದಾತಿಗಳು ತ್ವರೆಮಾಡಿ ರಾಜಾ ಯುಧಿಷ್ಠಿರನನ್ನು ಹಿಂಬಾಲಿಸಿಕೊಂಡು ಹೋದರು.
09029053a ತತಃ ಪ್ರಾಪ್ತೋ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ|
09029053c ದ್ವೈಪಾಯನಹ್ರದಂ ಖ್ಯಾತಂ ಯತ್ರ ದುರ್ಯೋಧನೋಽಭವತ್||
ಮಹಾರಾಜ! ಅನಂತರ ಧರ್ಮಪುತ್ರ ಯುಧಿಷ್ಠಿರನು ಎಲ್ಲಿ ದುರ್ಯೋಧನನಿರುವನೆಂದು ಹೇಳಿದ್ದರೋ ಆ ದ್ವೈಪಾಯನ ಸರೋವರವನ್ನು ತಲುಪಿದನು.
09029054a ಶೀತಾಮಲಜಲಂ ಹೃದ್ಯಂ ದ್ವಿತೀಯಮಿವ ಸಾಗರಂ|
09029054c ಮಾಯಯಾ ಸಲಿಲಂ ಸ್ತಭ್ಯ ಯತ್ರಾಭೂತ್ತೇ ಸುತಃ ಸ್ಥಿತಃ||
ಶುದ್ಧ ಶೀತಲ ನೀರಿನಿಂದ ಕೂಡಿದ್ದು ಎರಡನೆಯ ಸಮುದ್ರವೋ ಎಂಬಂತೆ ತೋರುತ್ತಿದ್ದ ಆ ಸರೋವರದಲ್ಲಿ ಮಾಯೆಯಿಂದ ನೀರನ್ನು ಸ್ತಬ್ಧಗೊಳಿಸಿ ನಿನ್ನ ಮಗನು ಕುಳಿತಿದ್ದನು.
09029055a ಅತ್ಯದ್ಭುತೇನ ವಿಧಿನಾ ದೈವಯೋಗೇನ ಭಾರತ|
09029055c ಸಲಿಲಾಂತರ್ಗತಃ ಶೇತೇ ದುರ್ದರ್ಶಃ ಕಸ್ಯ ಚಿತ್ ಪ್ರಭೋ||
09029055e ಮಾನುಷಸ್ಯ ಮನುಷ್ಯೇಂದ್ರ ಗದಾಹಸ್ತೋ ಜನಾಧಿಪಃ||
ಭಾರತ! ಪ್ರಭೋ! ಮನುಷ್ಯೇಂದ್ರ! ಜನಾಧಿಪ! ಅತ್ಯದ್ಭುತ ವಿಧಿಯಲ್ಲಿ, ದೈವಯೋಗದಿಂದ ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ಆ ಗದಾಪಾಣಿಯು ಯಾವ ಮನುಷ್ಯನಿಗೂ ಕಾಣಿಸುತ್ತಿರಲಿಲ್ಲ.
09029056a ತತೋ ದುರ್ಯೋಧನೋ ರಾಜಾ ಸಲಿತಾಂತರ್ಗತೋ ವಸನ್|
09029056c ಶುಶ್ರುವೇ ತುಮುಲಂ ಶಬ್ದಂ ಜಲದೋಪಮನಿಃಸ್ವನಂ||
ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ರಾಜಾ ದುರ್ಯೋಧನನು ಮೇಘಗಳ ಗುಡುಗಿನಂತಹ ತುಮುಲ ಶಬ್ಧವನ್ನು ಕೇಳಿದನು.
09029057a ಯುಧಿಷ್ಠಿರಸ್ತು ರಾಜೇಂದ್ರ ಹ್ರದಂ ತಂ ಸಹ ಸೋದರೈಃ|
09029057c ಆಜಗಾಮ ಮಹಾರಾಜ ತವ ಪುತ್ರವಧಾಯ ವೈ||
09029058a ಮಹತಾ ಶಂಖನಾದೇನ ರಥನೇಮಿಸ್ವನೇನ ಚ|
09029058c ಉದ್ಧುನ್ವಂಶ್ಚ ಮಹಾರೇಣುಂ ಕಂಪಯಂಶ್ಚಾಪಿ ಮೇದಿನೀಂ||
ಮಹಾರಾಜ! ರಾಜೇಂದ್ರ! ಯುಧಿಷ್ಠಿರನಾದರೋ ಸೋದರೊಂದಿಗೆ ಮಹಾ ಶಂಖನಾದಗಳು ಮತ್ತು ರಥಚಕ್ರದ ಸದ್ದಿನೊಂದಿಗೆ ಮಹಾ ಧೂಳಿನ ರಾಶಿಯನ್ನೆಬ್ಬಿಸಿ ಮೇದಿನಿಯನ್ನು ನಡುಗಿಸುತ್ತಾ ನಿನ್ನ ಪುತ್ರನ ವಧೆಗಾಗಿ ಆ ಸರೋವರಕ್ಕೆ ಆಗಮಿಸಿದನು.
09029059a ಯೌಧಿಷ್ಠಿರಸ್ಯ ಸೈನ್ಯಸ್ಯ ಶ್ರುತ್ವಾ ಶಬ್ದಂ ಮಹಾರಥಾಃ|
09029059c ಕೃತವರ್ಮಾ ಕೃಪೋ ದ್ರೌಣೀ ರಾಜಾನಮಿದಮಬ್ರುವನ್||
ಯುಧಿಷ್ಠಿರನ ಸೈನ್ಯದ ಶಬ್ಧವನ್ನು ಕೇಳಿದ ಮಹಾರಥ ಕೃತವರ್ಮ, ಕೃಪ, ದ್ರೌಣಿಯರು ರಾಜನಿಗೆ ಇದನ್ನು ಹೇಳಿದರು:
09029060a ಇಮೇ ಹ್ಯಾಯಾಂತಿ ಸಂಹೃಷ್ಟಾಃ ಪಾಂಡವಾ ಜಿತಕಾಶಿನಃ|
09029060c ಅಪಯಾಸ್ಯಾಮಹೇ ತಾವದನುಜಾನಾತು ನೋ ಭವಾನ್||
“ವಿಜಯೋಲಾಸಿತ ಪಾಂಡವರು ಇಲ್ಲಿಗೇ ಬರುತ್ತಿದ್ದಾರೆ. ನಾವು ಇಲ್ಲಿಂದ ಹೊರಟುಹೋಗುತ್ತೇವೆ. ಅನುಮತಿಯನ್ನು ನೀಡು!”
09029061a ದುರ್ಯೋಧನಸ್ತು ತಚ್ಛೃತ್ವಾ ತೇಷಾಂ ತತ್ರ ಯಶಸ್ವಿನಾಂ|
09029061c ತಥೇತ್ಯುಕ್ತ್ವಾ ಹ್ರದಂ ತಂ ವೈ ಮಾಯಯಾಸ್ತಂಭಯತ್ಪ್ರಭೋ||
ಪ್ರಭೋ! ಆ ಯಶಸ್ವಿಗಳನ್ನು ಕೇಳಿದ ದುರ್ಯೋಧನನಾದರೋ ಹಾಗೆಯೇ ಆಗಲೆಂದು ಹೇಳಿ ಮಾಯೆಯಿಂದ ಪುನಃ ಸರೋವರವನ್ನು ಸ್ತಂಭಿಸಿದನು.
09029062a ತೇ ತ್ವನುಜ್ಞಾಪ್ಯ ರಾಜಾನಂ ಭೃಶಂ ಶೋಕಪರಾಯಣಾಃ|
09029062c ಜಗ್ಮುರ್ದೂರಂ ಮಹಾರಾಜ ಕೃಪಪ್ರಭೃತಯೋ ರಥಾಃ||
ಮಹಾರಾಜ! ರಾಜನ ಅನುಜ್ಞೆಯನ್ನು ಪಡೆದು ತುಂಬಾ ಶೋಕಪರಾಯಣರಾಗಿದ್ದ ಕೃಪನೇ ಮೊದಲಾದ ಮಹಾರಥರು ದೂರ ಹೊರಟುಹೋದರು.
09029063a ತೇ ಗತ್ವಾ ದೂರಮಧ್ವಾನಂ ನ್ಯಗ್ರೋಧಂ ಪ್ರೇಕ್ಷ್ಯ ಮಾರಿಷ|
09029063c ನ್ಯವಿಶಂತ ಭೃಶಂ ಶ್ರಾಂತಾಶ್ಚಿಂತಯಂತೋ ನೃಪಂ ಪ್ರತಿ||
ಮಾರಿಷ! ದೂರ ಹೋಗಿ ಆಯಾಸಗೊಂಡಿದ್ದ ಅವರು ಅಲ್ಲೊಂದು ಆಲದ ಮರವನ್ನು ನೋಡಿ ಅದರಡಿಯಲ್ಲಿ ನೃಪನ ಕುರಿತೇ ಚಿಂತಿಸುತ್ತಾ ವಿಶ್ರಾಂತಿಪಡೆದರು.
09029064a ವಿಷ್ಟಭ್ಯ ಸಲಿಲಂ ಸುಪ್ತೋ ಧಾರ್ತರಾಷ್ಟ್ರೋ ಮಹಾಬಲಃ|
09029064c ಪಾಂಡವಾಶ್ಚಾಪಿ ಸಂಪ್ರಾಪ್ತಾಸ್ತಂ ದೇಶಂ ಯುದ್ಧಮೀಪ್ಸವಃ||
“ಮಹಾಬಲ ಧಾರ್ತರಾಷ್ಟ್ರನು ನೀರನ್ನು ಸ್ತಂಭನಗೊಳಿಸಿ ಮಲಗಿದ್ದಾನೆ. ಯುದ್ಧವನ್ನು ಬಯಸಿರುವ ಪಾಂಡವರಾದರೋ ಆ ಪ್ರದೇಶಕ್ಕೆ ಬಂದುಬಿಟ್ಟಿದ್ದಾರೆ.
09029065a ಕಥಂ ನು ಯುದ್ಧಂ ಭವಿತಾ ಕಥಂ ರಾಜಾ ಭವಿಷ್ಯತಿ|
09029065c ಕಥಂ ನು ಪಾಂಡವಾ ರಾಜನ್ಪ್ರತಿಪತ್ಸ್ಯಂತಿ ಕೌರವಂ||
ಯುದ್ಧವು ಹೇಗೆ ನಡೆದೀತು? ರಾಜನು ಏನಾಗುತ್ತಾನೆ? ಪಾಂಡವ ರಾಜನು ಕೌರವನನ್ನು ಹೇಗೆ ಮೇಲೆಬ್ಬಿಸುತ್ತಾನೆ?”
09029066a ಇತ್ಯೇವಂ ಚಿಂತಯಂತಸ್ತೇ ರಥೇಭ್ಯೋಽಶ್ವಾನ್ವಿಮುಚ್ಯ ಹ|
09029066c ತತ್ರಾಸಾಂ ಚಕ್ರಿರೇ ರಾಜನ್ಕೃಪಪ್ರಭೃತಯೋ ರಥಾಃ||
ರಾಜನ್! ಹೀಗೆಯೇ ಚಿಂತಿಸುತ್ತಾ ಕೃಪನೇ ಮೊದಲಾದ ಆ ಮಹಾರಥರು ಕುದುರೆಗಳನ್ನು ರಥಗಳಿಂದ ಬಿಚ್ಚಿ ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಪಾಂಡವಾನಾಂ ಸರೋವರಾಗಮನೇ ಏಕೋನತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಪಾಂಡವಾನಾಂ ಸರೋವರಾಗಮನ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.
Kannada translation of Saraswata Parva, by Chapter:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ
