Shalya Parva: Chapter 35

ಶಲ್ಯಪರ್ವ: ಸಾರಸ್ವತಪರ್ವ

೩೫

ಜನಮೇಜಯನು ಉದಪಾನ ತೀರ್ಥದ ಕುರಿತು ಜನಮೇಜಯನನ್ನು ಪ್ರಶ್ನಿಸಿದುದು (೧-೬). ತ್ರಿತಾಖ್ಯಾನ (೭-೫೩).

09035001 ವೈಶಂಪಾಯನ ಉವಾಚ

09035001a ತಸ್ಮಾನ್ನದೀಗತಂ ಚಾಪಿ ಉದಪಾನಂ ಯಶಸ್ವಿನಃ|

09035001c ತ್ರಿತಸ್ಯ ಚ ಮಹಾರಾಜ ಜಗಾಮಾಥ ಹಲಾಯುಧಃ||

ವೈಶಂಪಾಯನನು ಹೇಳಿದನು: “ಮಹಾರಾಜ! ಯಶಸ್ವಿ ಹಲಾಯುಧನು ಆ ನದಿಗೆ ಹೋಗಿ ಅಲ್ಲಿ ತ್ರಿತನ ಉದಪಾನಕ್ಕೆ ಹೋದನು.

09035002a ತತ್ರ ದತ್ತ್ವಾ ಬಹು ದ್ರವ್ಯಂ ಪೂಜಯಿತ್ವಾ ತಥಾ ದ್ವಿಜಾನ್|

09035002c ಉಪಸ್ಪೃಶ್ಯ ಚ ತತ್ರೈವ ಪ್ರಹೃಷ್ಟೋ ಮುಸಲಾಯುಧಃ||

ಮುಸಲಾಯುಧನು ಪ್ರಹೃಷ್ಟನಾಗಿ ಅಲ್ಲಿ ನೀರನ್ನು ಮುಟ್ಟಿ, ದ್ವಿಜರನ್ನು ಪೂಜಿಸಿ ಬಹಳ ದ್ರವ್ಯವನ್ನು ದಾನವನ್ನಾಗಿತ್ತನು.

09035003a ತತ್ರ ಧರ್ಮಪರೋ ಹ್ಯಾಸೀತ್ತ್ರಿತಃ ಸ ಸುಮಹಾತಪಾಃ|

09035003c ಕೂಪೇ ಚ ವಸತಾ ತೇನ ಸೋಮಃ ಪೀತೋ ಮಹಾತ್ಮನಾ||

ಅಲ್ಲಿ ಮಹಾತಪಸ್ವಿ ಧರ್ಮಪರ ತ್ರಿತನಿದ್ದನು. ಬಾವಿಯಲ್ಲಿ ವಾಸಿಸಿದ ಆ ಮಹಾತ್ಮನು ಅಲ್ಲಿಯೇ ಸೋಮವನ್ನು ಕುಡಿದನು.

09035004a ತತ್ರ ಚೈನಂ ಸಮುತ್ಸೃಜ್ಯ ಭ್ರಾತರೌ ಜಗ್ಮತುರ್ಗೃಹಾನ್|

09035004c ತತಸ್ತೌ ವೈ ಶಶಾಪಾಥ ತ್ರಿತೋ ಬ್ರಾಹ್ಮಣಸತ್ತಮಃ||

ಅಲ್ಲಿಯೇ ಅವನ ಸಹೋದರರಿಬ್ಬರು ಅವನನ್ನು ಬಿಟ್ಟು ಮನೆಗಳಿಗೆ ಹೊರಟು ಹೋದರು. ಆಗ ಬ್ರಾಹ್ಮಣಸತ್ತಮ ತ್ರಿತನು ಅವರಿಬ್ಬರನ್ನೂ ಶಪಿಸಿದನು.”

09035005 ಜನಮೇಜಯ ಉವಾಚ

09035005a ಉದಪಾನಂ ಕಥಂ ಬ್ರಹ್ಮನ್ಕಥಂ ಚ ಸುಮಹಾತಪಾಃ|

09035005c ಪತಿತಃ ಕಿಂ ಚ ಸಂತ್ಯಕ್ತೋ ಭ್ರಾತೃಭ್ಯಾಂ ದ್ವಿಜಸತ್ತಮಃ||

ಜನಮೇಜಯನು ಹೇಳಿದನು: “ಬ್ರಹ್ಮನ್! ಉದಪಾನವೆಂಬ ಹೆಸರು ಹೇಗೆ ಬಂದಿತು? ಆ ಮಹಾತಪಸ್ವಿ ದ್ವಿಜಸತ್ತಮನು ಅಲ್ಲಿ ಹೇಗೆ ಬಿದ್ದನು? ಅವನ ಅಣ್ಣಂದಿರು ಏಕೆ ಅವನನ್ನು ಅಲ್ಲಿಯೇ ಬಿಟ್ಟುಹೋದರು?

09035006a ಕೂಪೇ ಕಥಂ ಚ ಹಿತ್ವೈನಂ ಭ್ರಾತರೌ ಜಗ್ಮತುರ್ಗೃಹಾನ್|

09035006c ಏತದಾಚಕ್ಷ್ವ ಮೇ ಬ್ರಹ್ಮನ್ಯದಿ ಶ್ರಾವ್ಯಂ ಹಿ ಮನ್ಯಸೇ||

ಅವನನ್ನು ಬಾವಿಯಲ್ಲಿ ತಳ್ಳಿ ಏಕೆ ಅವನ ಅಣ್ಣಂದಿರು ಮನೆಗಳಿಗೆ ತೆರಳಿದರು? ಬ್ರಹ್ಮನ್! ಇದನ್ನು ನಾನು ಕೇಳಬಹುದು ಎಂದು ನಿನಗನ್ನಿಸಿದರೆ ನನಗೆ ಹೇಳು.”

09035007 ವೈಶಂಪಾಯನ ಉವಾಚ

09035007a ಆಸನ್ಪೂರ್ವಯುಗೇ ರಾಜನ್ಮುನಯೋ ಭ್ರಾತರಸ್ತ್ರಯಃ|

09035007c ಏಕತಶ್ಚ ದ್ವಿತಶ್ಚೈವ ತ್ರಿತಶ್ಚಾದಿತ್ಯಸಂನಿಭಾಃ||

ವೈಶಂಪಾಯನನು ಹೇಳಿದನು: “ರಾಜನ್! ಪೂರ್ವಯುಗದಲ್ಲಿ ಆದಿತ್ಯಸನ್ನಿಭರಾದ ಮೂವರು ಸಹೋದರ ಮುನಿಗಳಿದ್ದರು: ಏಕತ, ದ್ವಿತ ಮತ್ತು ತ್ರಿತ.

09035008a ಸರ್ವೇ ಪ್ರಜಾಪತಿಸಮಾಃ ಪ್ರಜಾವಂತಸ್ತಥೈವ ಚ|

09035008c ಬ್ರಹ್ಮಲೋಕಜಿತಃ ಸರ್ವೇ ತಪಸಾ ಬ್ರಹ್ಮವಾದಿನಃ||

ಅವರೆಲ್ಲರೂ ಪ್ರಜಾಪತಿಯ ಸಮನಾಗಿದ್ದರು ಮತ್ತು ಹಾಗೆಯೇ ಪ್ರಜಾವಂತರಾಗಿದ್ದರು. ತಪಸ್ಸಿನಿಂದಾಗಿ ಎಲ್ಲರೂ ಬ್ರಹ್ಮಲೋಕವನ್ನು ಗೆದ್ದ ಬ್ರಹ್ಮವಾದಿಗಳಾಗಿದ್ದರು.

09035009a ತೇಷಾಂ ತು ತಪಸಾ ಪ್ರೀತೋ ನಿಯಮೇನ ದಮೇನ ಚ|

09035009c ಅಭವದ್ಗೌತಮೋ ನಿತ್ಯಂ ಪಿತಾ ಧರ್ಮರತಃ ಸದಾ||

ಸದಾ ಧರ್ಮರತನಾಗಿದ್ದ ಅವರ ತಂದೆ ಗೌತಮನು ಅವರ ತಪಸ್ಸು-ನಿಯಮ-ದಮಗಳಿಂದ ಪ್ರೀತನಾಗಿದ್ದನು.

09035010a ಸ ತು ದೀರ್ಘೇಣ ಕಾಲೇನ ತೇಷಾಂ ಪ್ರೀತಿಮವಾಪ್ಯ ಚ|

09035010c ಜಗಾಮ ಭಗವಾನ್ ಸ್ಥಾನಮನುರೂಪಮಿವಾತ್ಮನಃ||

ದೀರ್ಘಕಾಲದವರೆಗೆ ಅವರಿಗೆ ಪ್ರೀತಿಯನ್ನಿತ್ತು ಭಗವಾನ್ ಗೌತಮನು ತನಗೆ ಅನುರೂಪ ಸ್ಥಾನಕ್ಕೆ ಹೊರಟುಹೋದನು.

09035011a ರಾಜಾನಸ್ತಸ್ಯ ಯೇ ಪೂರ್ವೇ ಯಾಜ್ಯಾ ಹ್ಯಾಸನ್ಮಹಾತ್ಮನಃ|

09035011c ತೇ ಸರ್ವೇ ಸ್ವರ್ಗತೇ ತಸ್ಮಿಂಸ್ತಸ್ಯ ಪುತ್ರಾನಪೂಜಯನ್||

ಅವನು ಸ್ವರ್ಗಕ್ಕೆ ಹೋಗಲು ಆ ಮಹಾತ್ಮನಿಂದ ಮೊದಲು ಯಜ್ಞಯಾಗಾದಿಗಳನ್ನು ನಡೆಸಿಕೊಳ್ಳುತ್ತಿದ್ದ ರಾಜರುಗಳು ಅವನ ಪುತ್ರರನ್ನು ಗೌರವಿಸತೊಡಗಿದರು.

09035012a ತೇಷಾಂ ತು ಕರ್ಮಣಾ ರಾಜಂಸ್ತಥೈವಾಧ್ಯಯನೇನ ಚ|

09035012c ತ್ರಿತಃ ಸ ಶ್ರೇಷ್ಠತಾಂ ಪ್ರಾಪ ಯಥೈವಾಸ್ಯ ಪಿತಾ ತಥಾ||

ರಾಜನ್! ಅವರಲ್ಲಿ ತನ್ನ ತಂದೆಯಂತೆಯೇ ತ್ರಿತನು ಕರ್ಮ ಮತ್ತು ಅಧ್ಯಯನಗಳಲ್ಲಿ ಅತ್ಯಂತ ಶ್ರೇಷ್ಠತೆಯನ್ನು ಪಡೆದಿದ್ದನು.

09035013a ತಂ ಸ್ಮ ಸರ್ವೇ ಮಹಾಭಾಗಾ ಮುನಯಃ ಪುಣ್ಯಲಕ್ಷಣಾಃ|

09035013c ಅಪೂಜಯನ್ಮಹಾಭಾಗಂ ತಥಾ ವಿದ್ವತ್ತಯೈವ ತು||

ಪುಣ್ಯಲಕ್ಷಣ ಮಹಾಭಾಗ ಮುನಿಗಳೆಲ್ಲರೂ ಆ ಮಹಾಭಾಗನ ವಿದ್ವತ್ತನ್ನೇ ಗೌರವಿಸುತ್ತಿದ್ದರು.

09035014a ಕದಾ ಚಿದ್ಧಿ ತತೋ ರಾಜನ್ ಭ್ರಾತರಾವೇಕತದ್ವಿತೌ|

09035014c ಯಜ್ಞಾರ್ಥಂ ಚಕ್ರತುಶ್ಚಿತ್ತಂ ಧನಾರ್ಥಂ ಚ ವಿಶೇಷತಃ||

ರಾಜನ್! ಒಮ್ಮೊಮ್ಮೆ ಸಹೋದರರಾದ ಏಕತ ಮತ್ತು ದ್ವಿತರು ವಿಶೇಷಧನಕ್ಕಾಗಿಯೇ ಯಜ್ಞಗಳನ್ನು ನಡೆಸಿಕೊಡುತ್ತಿದ್ದರು.

09035015a ತಯೋಶ್ಚಿಂತಾ ಸಮಭವತ್ತ್ರಿತಂ ಗೃಹ್ಯ ಪರಂತಪ|

09035015c ಯಾಜ್ಯಾನ್ಸರ್ವಾನುಪಾದಾಯ ಪ್ರತಿಗೃಹ್ಯ ಪಶೂಂಸ್ತತಃ||

ಪರಂತಪ! ಅವರು ಹೀಗೆ ಯೋಚಿಸಿದರು: “ತ್ರಿತನನ್ನು ಕರೆದುಕೊಂಡು ಯಜ್ಞಗಳನ್ನು ನಡೆಸಿ ನಂತರ ಗೋವುಗಳನ್ನು ಪ್ರತಿಗ್ರಹಿಸೋಣ!

09035016a ಸೋಮಂ ಪಾಸ್ಯಾಮಹೇ ಹೃಷ್ಟಾಃ ಪ್ರಾಪ್ಯ ಯಜ್ಞಂ ಮಹಾಫಲಂ|

09035016c ಚಕ್ರುಶ್ಚೈವ ಮಹಾರಾಜ ಭ್ರಾತರಸ್ತ್ರಯ ಏವ ಹ||

ಯಜ್ಞದ ಮಹಾಫಲವನ್ನು ಪಡೆದು ಹೃಷ್ಟರಾಗಿ ಸೋಮವನ್ನು ಸೇವಿಸೋಣ!” ಮಹಾರಾಜ! ಹೀಗೆ ಆ ಮೂವರು ಸಹೋದರರು ಮಾಡಿದರು ಕೂಡ.

09035017a ತಥಾ ತು ತೇ ಪರಿಕ್ರಮ್ಯ ಯಾಜ್ಯಾನ್ಸರ್ವಾನ್ಪಶೂನ್ಪ್ರತಿ|

09035017c ಯಾಜಯಿತ್ವಾ ತತೋ ಯಾಜ್ಯಾಽಲ್ಲಬ್ಧ್ವಾ ಚ ಸುಬಹೂನ್ಪಶೂನ್||

ಹಾಗೆ ಗೋವುಗಳಿಗಾಗಿ ಎಲ್ಲರೂ ಸೇರಿ ಯಜ್ಞಗಳನ್ನು ನಡೆಸಿದರು. ಯಜ್ಞಗಳನ್ನು ಮುಗಿಸಿ ಅನೇಕ ಗೋವುಗಳನ್ನು ಅವರು ಪಡೆದರು.

09035018a ಯಾಜ್ಯೇನ ಕರ್ಮಣಾ ತೇನ ಪ್ರತಿಗೃಹ್ಯ ವಿಧಾನತಃ|

09035018c ಪ್ರಾಚೀಂ ದಿಶಂ ಮಹಾತ್ಮಾನ ಆಜಗ್ಮುಸ್ತೇ ಮಹರ್ಷಯಃ||

ಯಜ್ಞಕರ್ಮಗಳಿಂದ ವಿಧಾನಪೂರ್ವಕವಾಗಿ ಗೋವುಗಳನ್ನು ಸ್ವೀಕರಿಸಿ ಆ ಮಹಾತ್ಮ ಮಹರ್ಷಿಗಳು ಪೂರ್ವದಿಕ್ಕಿನಲ್ಲಿ ಪ್ರಯಾಣಮಾಡಿದರು.

09035019a ತ್ರಿತಸ್ತೇಷಾಂ ಮಹಾರಾಜ ಪುರಸ್ತಾದ್ಯಾತಿ ಹೃಷ್ಟವತ್|

09035019c ಏಕತಶ್ಚ ದ್ವಿತಶ್ಚೈವ ಪೃಷ್ಠತಃ ಕಾಲಯನ್ಪಶೂನ್||

ಮಹಾರಾಜ! ಅವರಲ್ಲಿ ಹರ್ಷಿತ ತ್ರಿತನು ಮುಂದುಗಡೆ ಹೋಗುತ್ತಿದ್ದನು. ಏಕತ ಮತ್ತು ದ್ವಿತರು ಹಿಂದಿನಿಂದ ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು.

09035020a ತಯೋಶ್ಚಿಂತಾ ಸಮಭವದ್ದೃಷ್ಟ್ವಾ ಪಶುಗಣಂ ಮಹತ್|

09035020c ಕಥಂ ನ ಸ್ಯುರಿಮಾ ಗಾವ ಆವಾಭ್ಯಾಂ ವೈ ವಿನಾ ತ್ರಿತಂ||

ಆ ಮಹಾ ಪಶುಗಣವನ್ನು ನೋಡಿ ಅವರಿಬ್ಬರಿಗೂ ಒಂದು ಯೋಚನೆಯುಂಟಾಯಿತು: “ತ್ರಿತನಿಗೆ ದೊರಕದಂತೆ ನಾವು ಈ ಎಲ್ಲ ಗೋವುಗಳನ್ನೂ ಹೇಗೆ ನಮ್ಮದಾಗಿಸಿಕೊಳ್ಳಬಹುದು?” ಎಂದು.

09035021a ತಾವನ್ಯೋನ್ಯಂ ಸಮಾಭಾಷ್ಯ ಏಕತಶ್ಚ ದ್ವಿತಶ್ಚ ಹ|

09035021c ಯದೂಚತುರ್ಮಿಥಃ ಪಾಪೌ ತನ್ನಿಬೋಧ ಜನೇಶ್ವರ||

ಜನೇಶ್ವರ! ಆ ಪಾಪಿ ಏಕತ ಮತ್ತು ದ್ವಿತರು ಅನ್ಯೋನ್ಯರಲ್ಲಿ ಏನು ಮಾತನಾಡಿಕೊಂಡರು ಎನ್ನುವುದನ್ನು ಹೇಳುತ್ತೇನೆ. ಕೇಳು.

09035022a ತ್ರಿತೋ ಯಜ್ಞೇಷು ಕುಶಲಸ್ತ್ರಿತೋ ವೇದೇಷು ನಿಷ್ಠಿತಃ|

09035022c ಅನ್ಯಾಸ್ತ್ರಿತೋ ಬಹುತರಾ ಗಾವಃ ಸಮುಪಲಪ್ಸ್ಯತೇ||

“ತ್ರಿತನು ಯಜ್ಞಗಳಲ್ಲಿ ಕುಶಲನು. ತ್ರಿತನು ವೇದಗಳಲ್ಲಿ ನಿಷ್ಠಿತನು. ತ್ರಿತನು ಇನ್ನೂ ಇತರ ಬಹುರೀತಿಯ ಯಜ್ಞಗಳನ್ನು ಮಾಡಿಸಿ ಅನೇಕ ಗೋವುಗಳನ್ನು ಸಂಪಾದಿಸಿಕೊಳ್ಳಬಹುದು.

09035023a ತದಾವಾಂ ಸಹಿತೌ ಭೂತ್ವಾ ಗಾಃ ಪ್ರಕಾಲ್ಯ ವ್ರಜಾವಹೇ|

09035023c ತ್ರಿತೋಽಪಿ ಗಚ್ಚತಾಂ ಕಾಮಮಾವಾಭ್ಯಾಂ ವೈ ವಿನಾಕೃತಃ||

ನಾವಿಬ್ಬರೂ ಒಟ್ಟಾಗಿ ಈ ಗೋವುಗಳನ್ನು ಹೊಡೆದುಕೊಂಡು ಹೊರಟುಹೋಗೋಣ. ನಮ್ಮಿಂದ ಬೇರ್ಪಟ್ಟ ತ್ರಿತನು ಬೇಕಾದಲ್ಲಿಗೆ ಹೋಗಲಿ.”

09035024a ತೇಷಾಮಾಗಚ್ಚತಾಂ ರಾತ್ರೌ ಪಥಿಸ್ಥಾನೇ ವೃಕೋಽಭವತ್|

09035024c ತಥಾ ಕೂಪೋಽವಿದೂರೇಽಭೂತ್ಸರಸ್ವತ್ಯಾಸ್ತಟೇ ಮಹಾನ್||

ರಾತ್ರಿ ವೇಳೆ ಅವರು ಹೋಗುತ್ತಿದ್ದ ದಾರಿಯಲ್ಲಿ ತೋಳವೊಂದಿತ್ತು. ಅಲ್ಲಿಯೇ ಹತ್ತಿರದಲ್ಲಿ ಸರಸ್ವತೀ ತೀರದಲ್ಲಿ ಒಂದು ದೊಡ್ಡ ಬಾವಿಯೂ ಇದ್ದಿತು.

09035025a ಅಥ ತ್ರಿತೋ ವೃಕಂ ದೃಷ್ಟ್ವಾ ಪಥಿ ತಿಷ್ಠಂತಮಗ್ರತಃ|

09035025c ತದ್ಭಯಾದಪಸರ್ಪನ್ವೈ ತಸ್ಮಿನ್ಕೂಪೇ ಪಪಾತ ಹ||

09035025e ಅಗಾಧೇ ಸುಮಹಾಘೋರೇ ಸರ್ವಭೂತಭಯಂಕರೇ||

ದಾರಿಯಲ್ಲಿ ಎದುರಿಗೇ ನಿಂತಿದ್ದ ತೋಳವನ್ನು ನೋಡಿ ತ್ರಿತನು ಭಯದಿಂದ ಓಡುತ್ತಾ ಆ ಅಗಾಧ-ಮಹಾಘೋರ-ಸರ್ವಭೂತಭಯಂಕರ ಬಾವಿಯಲ್ಲಿ ಬಿದ್ದನು.

09035026a ತ್ರಿತಸ್ತತೋ ಮಹಾಭಾಗಃ ಕೂಪಸ್ಥೋ ಮುನಿಸತ್ತಮಃ|

09035026c ಆರ್ತನಾದಂ ತತಶ್ಚಕ್ರೇ ತೌ ತು ಶುಶ್ರುವತುರ್ಮುನೀ||

ಬಾವಿಯಲ್ಲಿ ಬಿದ್ದ ಮುನಿಸತ್ತಮ ಮಹಾಭಾಗ ತ್ರಿತನು ಆರ್ತನಾದಗೈದನು. ಅದನ್ನು ಅವನ ಅಣ್ಣಂದಿರಿಬ್ಬರೂ ಕೇಳಿಸಿಕೊಂಡರು.

09035027a ತಂ ಜ್ಞಾತ್ವಾ ಪತಿತಂ ಕೂಪೇ ಭ್ರಾತರಾವೇಕತದ್ವಿತೌ|

09035027c ವೃಕತ್ರಾಸಾಚ್ಚ ಲೋಭಾಚ್ಚ ಸಮುತ್ಸೃಜ್ಯ ಪ್ರಜಗ್ಮತುಃ||

ಅವನು ಬಾವಿಯಲ್ಲಿ ಬಿದ್ದುದನ್ನು ತಿಳಿದೂ ಕೂಡ ಸಹೋದರರಾದ ಏಕತ-ದ್ವಿತರು ತೋಳದ ಭಯದಿಂದ ಮತ್ತು ಲೋಭದಿಂದ ಅವನನ್ನು ಅಲ್ಲಿಯೇ ಬಿಟ್ಟು ನಡೆದರು.

09035028a ಭ್ರಾತೃಭ್ಯಾಂ ಪಶುಲುಬ್ಧಾಭ್ಯಾಮುತ್ಸೃಷ್ಟಃ ಸ ಮಹಾತಪಾಃ|

09035028c ಉದಪಾನೇ ಮಹಾರಾಜ ನಿರ್ಜಲೇ ಪಾಂಸುಸಂವೃತೇ||

ಮಹಾರಾಜ! ಗೋವುಗಳ ಆಸೆಬುರುಕರಾದ ಅಣ್ಣಂದಿರಿಂದ ತೊರೆಯಲ್ಪಟ್ಟ ಆ ಮಹಾತಪಸ್ವಿ ತ್ರಿತನು ನೀರಿಲ್ಲದ, ಧೂಳಿನಿಂದ ಮುಕ್ಕಿ ಹೋಗಿದ್ದ ಆ ಬಾವಿಯಲ್ಲಿ ಒದ್ದಾಡಿದನು.

09035029a ತ್ರಿತ ಆತ್ಮಾನಮಾಲಕ್ಷ್ಯ ಕೂಪೇ ವೀರುತ್ತೃಣಾವೃತೇ|

09035029c ನಿಮಗ್ನಂ ಭರತಶ್ರೇಷ್ಠ ಪಾಪಕೃನ್ನರಕೇ ಯಥಾ||

ಭರತಶ್ರೇಷ್ಠ! ಪಾಪಕರ್ಮಿಯು ನರಕದಲ್ಲಿ ಹೇಗೋ ಹಾಗೆ ಬೇರು-ಹುಲ್ಲುಗಳಿಂದ ತುಂಬಿಹೋಗಿದ್ದ ಆ ಬಾವಿಯಲ್ಲಿ ಬಿದ್ದಿದ್ದ ತ್ರಿತನು ತನ್ನ ದುಃಸ್ಥಿತಿಯ ಕುರಿತು ಯೋಚಿಸಿದನು.

09035030a ಬುದ್ಧ್ಯಾ ಹ್ಯಗಣಯತ್ಪ್ರಾಜ್ಞೋ ಮೃತ್ಯೋರ್ಭೀತೋ ಹ್ಯಸೋಮಪಃ|

09035030c ಸೋಮಃ ಕಥಂ ನು ಪಾತವ್ಯ ಇಹಸ್ಥೇನ ಮಯಾ ಭವೇತ್||

ಮೃತ್ಯುಭೀತಿಯಿಂದ ಮತ್ತು ಸೋಮವು ದೊರಕದೇ ಇದ್ದುದರಿಂದ ಆ ಪ್ರಾಜ್ಞನು ಬುದ್ಧಿಯನ್ನುಪಯೋಗಿಸಿ “ಇನ್ನು ಇಲ್ಲಿಯೇ ಇದ್ದುಕೊಂಡು ಹೇಗೆ ಸೋಮರಸವನ್ನು ಪಡೆಯಬಹುದು?” ಎಂದು ಯೋಚಿಸತೊಡಗಿದನು.

09035031a ಸ ಏವಮನುಸಂಚಿಂತ್ಯ ತಸ್ಮಿನ್ಕೂಪೇ ಮಹಾತಪಾಃ|

09035031c ದದರ್ಶ ವೀರುಧಂ ತತ್ರ ಲಂಬಮಾನಾಂ ಯದೃಚ್ಚಯಾ||

ಹೀಗೆ ಆ ಬಾವಿಯಲ್ಲಿ ಯೋಚಿಸುತ್ತಿದ್ದ ಆ ಮಹಾತಪಸ್ವಿಯು ಅದೃಷ್ಟವೋ ಎಂಬಂತೆ ಅಲ್ಲಿ ನೇತಾಡುತ್ತಿದ್ದ ಒಂದು ಉದ್ದನೆಯ ಬಳ್ಳಿಯನ್ನು ನೋಡಿದನು.

09035032a ಪಾಂಸುಗ್ರಸ್ತೇ ತತಃ ಕೂಪೇ ವಿಚಿಂತ್ಯ ಸಲಿಲಂ ಮುನಿಃ|

09035032c ಅಗ್ನೀನ್ಸಂಕಲ್ಪಯಾಮಾಸ ಹೋತ್ರೇ ಚಾತ್ಮಾನಮೇವ ಚ||

ಆಗ ಧೂಳಿನಿಂದ ತುಂಬಿಹೋಗಿದ್ದ ಆ ಬಾವಿಯಲ್ಲಿ ಮುನಿಯು ನೀರನ್ನು ಸ್ಮರಿಸಿಕೊಂಡನು. ಅಗ್ನಿಗಳನ್ನೂ ಮತ್ತು ತನ್ನಲ್ಲಿ ಹೋತ್ರನನ್ನು ಸಂಕಲ್ಪಿಸಿಕೊಂಡನು.

09035033a ತತಸ್ತಾಂ ವೀರುಧಂ ಸೋಮಂ ಸಂಕಲ್ಪ್ಯ ಸುಮಹಾತಪಾಃ|

09035033c ಋಚೋ ಯಜೂಂಷಿ ಸಾಮಾನಿ ಮನಸಾ ಚಿಂತಯನ್ಮುನಿಃ||

09035033e ಗ್ರಾವಾಣಃ ಶರ್ಕರಾಃ ಕೃತ್ವಾ ಪ್ರಚಕ್ರೇಽಭಿಷವಂ ನೃಪ||

ಅನಂತರ ಮಹಾತಪಸ್ವಿಯು ಆ ಬಳ್ಳಿಯನ್ನೇ ಸೋಮವೆಂದು ಸಂಕಲ್ಪಿಸಿಕೊಂಡನು. ಋಗ್-ಯಜು-ಸಾಮಗಳನ್ನು ಆ ಮುನಿಯು ಮನಸ್ಸಿನಲ್ಲಿಯೇ ಸ್ಮರಿಸಿಕೊಂಡನು. ನೃಪ! ಅಲ್ಲಿದ್ದ ಕಲ್ಲುಗಳನ್ನೇ ಗ್ರಾವಾಣಗಳನ್ನಾಗಿಸಿಕೊಂಡು ಅಭಿಷವವನ್ನು ಪ್ರಾರಂಭಿಸಿದನು.

09035034a ಆಜ್ಯಂ ಚ ಸಲಿಲಂ ಚಕ್ರೇ ಭಾಗಾಂಶ್ಚ ತ್ರಿದಿವೌಕಸಾಂ|

09035034c ಸೋಮಸ್ಯಾಭಿಷವಂ ಕೃತ್ವಾ ಚಕಾರ ತುಮುಲಂ ಧ್ವನಿಂ||

ನೀರನ್ನೇ ಆಜ್ಯವನ್ನಾಗಿ ಮಾಡಿಕೊಂಡು ತ್ರಿದಿವೌಕಸರಿಗೆ ಭಾಗಗಳನ್ನಿತ್ತನು. ಸೋಮದ ಅಭಿಷವವನ್ನು ಮಾಡಿ ತುಮುಲ ಧ್ವನಿಮಾಡಿದನು.

09035035a ಸ ಚಾವಿಶದ್ದಿವಂ ರಾಜನ್ಸ್ವರಃ ಶೈಕ್ಷಸ್ತ್ರಿತಸ್ಯ ವೈ|

09035035c ಸಮವಾಪ ಚ ತಂ ಯಜ್ಞಂ ಯಥೋಕ್ತಂ ಬ್ರಹ್ಮವಾದಿಭಿಃ||

ರಾಜನ್! ತ್ರಿತನು ಮಾಡಿದ ಆ ಸ್ವರವು ಸ್ವರ್ಗವನ್ನೂ ಸೇರಿತು. ಅವನು ಬ್ರಹ್ಮವಾದಿಗಳು ಹೇಳಿಟ್ಟಿದ್ದಂತೆ ಯಜ್ಞವನ್ನು ನಡೆಸಿದನು.

09035036a ವರ್ತಮಾನೇ ತಥಾ ಯಜ್ಞೇ ತ್ರಿತಸ್ಯ ಸುಮಹಾತ್ಮನಃ|

09035036c ಆವಿಗ್ನಂ ತ್ರಿದಿವಂ ಸರ್ವಂ ಕಾರಣಂ ಚ ನ ಬುಧ್ಯತೇ||

ಮಹಾತ್ಮ ತ್ರಿತನ ಆ ಯಜ್ಞವು ಹಾಗೆ ನಡೆಯುತ್ತಿರಲು ತ್ರಿದಿವದಲ್ಲಿದ್ದ ಎಲ್ಲರಿಗೂ ಉದ್ವಿಗ್ನತೆಯುಂಟಾಯಿತು. ಆದರೆ ಕಾರಣಮಾತ್ರ ತಿಳಿಯಲಿಲ್ಲ.

09035037a ತತಃ ಸುತುಮುಲಂ ಶಬ್ದಂ ಶುಶ್ರಾವಾಥ ಬೃಹಸ್ಪತಿಃ|

09035037c ಶ್ರುತ್ವಾ ಚೈವಾಬ್ರವೀದ್ದೇವಾನ್ಸರ್ವಾನ್ದೇವಪುರೋಹಿತಃ||

ಆ ತುಮುಲ ಶಬ್ಧವು ಬೃಹಸ್ಪತಿಗೂ ಕೇಳಿಸಿತು. ಅದನ್ನು ಕೇಳಿದ ದೇವಪುರೋಹಿತನು ಸರ್ವ ದೇವಗೆಗಳಿಗೆ ಹೀಗೆಂದನು:

09035038a ತ್ರಿತಸ್ಯ ವರ್ತತೇ ಯಜ್ಞಸ್ತತ್ರ ಗಚ್ಚಾಮಹೇ ಸುರಾಃ|

09035038c ಸ ಹಿ ಕ್ರುದ್ಧಃ ಸೃಜೇದನ್ಯಾನ್ದೇವಾನಪಿ ಮಹಾತಪಾಃ||

“ಸುರರೇ! ತ್ರಿತನ ಯಜ್ಞವು ನಡೆಯುತ್ತಿರುವಲ್ಲಿಗೆ ಹೋಗೋಣ! ಇಲ್ಲವಾದರೆ ಕ್ರುದ್ಧನಾದ ಆ ಮಹಾತಪಸ್ವಿಯು ಅನ್ಯ ದೇವತೆಗಳನ್ನೂ ಸೃಷ್ಟಿಸಬಲ್ಲನು!”

09035039a ತಚ್ಛೃತ್ವಾ ವಚನಂ ತಸ್ಯ ಸಹಿತಾಃ ಸರ್ವದೇವತಾಃ|

09035039c ಪ್ರಯಯುಸ್ತತ್ರ ಯತ್ರಾಸೌ ತ್ರಿತಯಜ್ಞಃ ಪ್ರವರ್ತತೇ||

ಅವನ ಆ ಮಾತನ್ನು ಕೇಳಿ ಸರ್ವದೇವತೆಗಳೂ ಒಟ್ಟಿಗೇ ತ್ರಿತನ ಯಜ್ಞವು ನಡೆಯುತ್ತಿರುವಲ್ಲಿಗೆ ಬಂದರು.

09035040a ತೇ ತತ್ರ ಗತ್ವಾ ವಿಬುಧಾಸ್ತಂ ಕೂಪಂ ಯತ್ರ ಸ ತ್ರಿತಃ|

09035040c ದದೃಶುಸ್ತಂ ಮಹಾತ್ಮಾನಂ ದೀಕ್ಷಿತಂ ಯಜ್ಞಕರ್ಮಸು||

ತ್ರಿತನಿದ್ದ ಆ ಬಾವಿಗೆ ಹೋಗಿ ದೇವತೆಗಳು ಅಲ್ಲಿ ಯಜ್ಞಕರ್ಮಗಳಲ್ಲಿ ದೀಕ್ಷಿತನಾಗಿದ್ದ ಆ ಮಹಾತ್ಮನನ್ನು ಕಂಡರು.

09035041a ದೃಷ್ಟ್ವಾ ಚೈನಂ ಮಹಾತ್ಮಾನಂ ಶ್ರಿಯಾ ಪರಮಯಾ ಯುತಂ|

09035041c ಊಚುಶ್ಚಾಥ ಮಹಾಭಾಗಂ ಪ್ರಾಪ್ತಾ ಭಾಗಾರ್ಥಿನೋ ವಯಂ||

ಪರಮಶ್ರೀಯಿಂದ ಕೂಡಿದ್ದ ಆ ಮಹಾತ್ಮನನ್ನು ಕಂಡು ಆ ಮಹಾಭಾಗನಿಗೆ ಹೇಳಿದರು: “ಹವಿಸ್ಸಿನ ಭಾಗಾರ್ಥಿಗಳಾಗಿ ನಾವು ಇಲ್ಲಿಗೆ ಬಂದಿದ್ದೇವೆ.”

09035042a ಅಥಾಬ್ರವೀದೃಷಿರ್ದೇವಾನ್ಪಶ್ಯಧ್ವಂ ಮಾಂ ದಿವೌಕಸಃ|

09035042c ಅಸ್ಮಿನ್ಪ್ರತಿಭಯೇ ಕೂಪೇ ನಿಮಗ್ನಂ ನಷ್ಟಚೇತಸಂ||

ಆಗ ಋಷಿಯು ದೇವತೆಗಳಿಗೆ – “ದಿವೌಕಸರೇ! ಈ ಭಯಂಕರ ಬಾವಿಯಲ್ಲಿ ಬಿದ್ದು ಚೇತನವನ್ನೇ ಕಳೆದುಕೊಂಡಿರುವ ನನ್ನನ್ನು ನೋಡಿ!” ಎಂದು ಹೇಳಿದನು.

09035043a ತತಸ್ತ್ರಿತೋ ಮಹಾರಾಜ ಭಾಗಾಂಸ್ತೇಷಾಂ ಯಥಾವಿಧಿ|

09035043c ಮಂತ್ರಯುಕ್ತಾನ್ಸಮದದಾತ್ತೇ ಚ ಪ್ರೀತಾಸ್ತದಾಭವನ್||

ಮಹಾರಾಜ! ಆಗ ತ್ರಿತನು ಅವರಿಗೆ ಯಥಾವಿಧಿಯಾಗಿ ಮಂತ್ರಯುಕ್ತ ಯಜ್ಞ ಭಾಗಗಳನ್ನಿತ್ತನು. ಅದರಿಂದ ಅವರು ತೃಪ್ತರಾದರು ಕೂಡ.

09035044a ತತೋ ಯಥಾವಿಧಿ ಪ್ರಾಪ್ತಾನ್ಭಾಗಾನ್ಪ್ರಾಪ್ಯ ದಿವೌಕಸಃ|

09035044c ಪ್ರೀತಾತ್ಮಾನೋ ದದುಸ್ತಸ್ಮೈ ವರಾನ್ಯಾನ್ಮನಸೇಚ್ಚತಿ||

ಯಥಾವಿಧಿಯಾಗಿ ಯಜ್ಞಭಾಗಗಳನ್ನು ಪಡೆದ ದಿವೌಕಸರು ಪ್ರೀತಾತ್ಮರಾಗಿ ಅವನ ಮನಸ್ಸಿನಲ್ಲಿ ಬಯಸಿದ ವರಗಳನ್ನು ಕೊಟ್ಟರು.

09035045a ಸ ತು ವವ್ರೇ ವರಂ ದೇವಾಂಸ್ತ್ರಾತುಮರ್ಹಥ ಮಾಮಿತಃ|

09035045c ಯಶ್ಚೇಹೋಪಸ್ಪೃಶೇತ್ಕೂಪೇ ಸ ಸೋಮಪಗತಿಂ ಲಭೇತ್||

“ದೇವತೆಗಳೇ! ನನ್ನನ್ನು ಇಲ್ಲಿಂದ ಮೇಲೆತ್ತಿ. ಮತ್ತು ಈ ಬಾವಿಯಲ್ಲಿಯ ನೀರನ್ನು ಯಾರು ಸ್ಪರ್ಷಿಸುತ್ತಾನೋ ಅವನಿಗೆ ಸೋಮಪಗತಿಯು ದೊರೆಯಲಿ” ಎಂದು ವರಗಳನ್ನು ಕೇಳಿದನು.

09035046a ತತ್ರ ಚೋರ್ಮಿಮತೀ ರಾಜನ್ನುತ್ಪಪಾತ ಸರಸ್ವತೀ|

09035046c ತಯೋತ್ಕ್ಷಿಪ್ತಸ್ತ್ರಿತಸ್ತಸ್ಥೌ ಪೂಜಯಂಸ್ತ್ರಿದಿವೌಕಸಃ||

ರಾಜನ್! ಕೂಡಲೇ ಅಲೆಗಳೊಂದಿಗೆ ಸರಸ್ವತಿಯು ಮೇಲೆ ಉಕ್ಕಿಬಂದಳು. ಅದರಿಂದ ಮೇಲೆತ್ತಲ್ಪಟ್ಟ ತ್ರಿತನು ಎದಿರು ನಿಂತು ದಿವೌಕಸರನ್ನು ಪೂಜಿಸಿದನು.

09035047a ತಥೇತಿ ಚೋಕ್ತ್ವಾ ವಿಬುಧಾ ಜಗ್ಮೂ ರಾಜನ್ಯಥಾಗತಂ|

09035047c ತ್ರಿತಶ್ಚಾಪ್ಯಗಮತ್ಪ್ರೀತಃ ಸ್ವಮೇವ ನಿಲಯಂ ತದಾ||

ರಾಜನ್! ಹಾಗೆಯೇ ಆಗಲೆಂದು ಹೇಳಿ ವಿಬುಧರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ತ್ರಿತನಾದರೋ ಪ್ರೀತನಾಗಿ ತನ್ನ ಮನೆಗೆ ಸೇರಿದನು.

09035048a ಕ್ರುದ್ಧಃ ಸ ತು ಸಮಾಸಾದ್ಯ ತಾವೃಷೀ ಭ್ರಾತರೌ ತದಾ|

09035048c ಉವಾಚ ಪರುಷಂ ವಾಕ್ಯಂ ಶಶಾಪ ಚ ಮಹಾತಪಾಃ||

ಅನಂತರ ಆ ಮಹಾತಪಸ್ವಿ ಋಷಿಯು ತನ್ನ ಅಣ್ಣಂದಿರನ್ನು ಭೇಟಿಮಾಡಿ ಕ್ರುದ್ಧನಾಗಿ ಕಠೋರ ಮಾತುಗಳನ್ನಾಡಿ ಶಪಿಸಿದನು:

09035049a ಪಶುಲುಬ್ಧೌ ಯುವಾಂ ಯಸ್ಮಾನ್ಮಾಮುತ್ಸೃಜ್ಯ ಪ್ರಧಾವಿತೌ|

09035049c ತಸ್ಮಾದ್ರೂಪೇಣ ತೇಷಾಂ ವೈ ದಂಷ್ಟ್ರಿಣಾಮಭಿತಶ್ಚರೌ||

“ಪಶುಲುಬ್ಧರಾಗಿ ನನ್ನನ್ನು ಬಿಟ್ಟು ಓಡಿ ಹೋದ ನೀವಿಬ್ಬರೂ ಅದೇ ಕೋರೆದಾಡೆಗಳುಳ್ಳ ಪ್ರಾಣಿಗಳಾಗಿ ಸಂಚರಿಸಿ!

09035050a ಭವಿತಾರೌ ಮಯಾ ಶಪ್ತೌ ಪಾಪೇನಾನೇನ ಕರ್ಮಣಾ|

09035050c ಪ್ರಸವಶ್ಚೈವ ಯುವಯೋರ್ಗೋಲಾಂಗೂಲರ್ಕ್ಷವಾನರಾಃ||

ನಿಮ್ಮ ಪಾಪಕರ್ಮದಿಂದ ನನ್ನಿಂದ ಶಪಿತರಾದ ನಿಮ್ಮ ಮಕ್ಕಳೂ ಕೂಡ ಗೋಲಾಂಗೂಲ-ಕರಡಿ-ವಾನರರಾಗಿ ಹುಟ್ಟುತ್ತಾರೆ.”

09035051a ಇತ್ಯುಕ್ತೇ ತು ತದಾ ತೇನ ಕ್ಷಣಾದೇವ ವಿಶಾಂ ಪತೇ|

09035051c ತಥಾಭೂತಾವದೃಶ್ಯೇತಾಂ ವಚನಾತ್ಸತ್ಯವಾದಿನಃ||

ವಿಶಾಂಪತೇ! ಹೀಗೆ ಹೇಳಲು ಕ್ಷಣದಲ್ಲಿಯೇ ಅವರು ರೂಪದಲ್ಲಿ ಆ ಸತ್ಯವಾದಿಯ ವಚನದಂತೆಯೇ ಆದರು.

09035052a ತತ್ರಾಪ್ಯಮಿತವಿಕ್ರಾಂತಃ ಸ್ಪೃಷ್ಟ್ವಾ ತೋಯಂ ಹಲಾಯುಧಃ|

09035052c ದತ್ತ್ವಾ ಚ ವಿವಿಧಾನ್ದಾಯಾನ್ಪೂಜಯಿತ್ವಾ ಚ ವೈ ದ್ವಿಜಾನ್||

ಅಮಿತವಿಕ್ರಾಂತ ಹಲಾಯುಧನು ಆ ನೀರನ್ನು ಸ್ಪರ್ಷಿಸಿ ದ್ವಿಜರನ್ನು ಪೂಜಿಸಿ ವಿವಿಧ ದಾನಗಳನ್ನಿತ್ತನು.

09035053a ಉದಪಾನಂ ಚ ತಂ ದೃಷ್ಟ್ವಾ ಪ್ರಶಸ್ಯ ಚ ಪುನಃ ಪುನಃ|

09035053c ನದೀಗತಮದೀನಾತ್ಮಾ ಪ್ರಾಪ್ತೋ ವಿನಶನಂ ತದಾ||

ಉದಪಾನವನ್ನು ನೋಡಿ ಪುನಃ ಪುನಃ ಅದನ್ನು ಪ್ರಶಂಸಿಸುತ್ತಾ ಆ ಅದೀನಾತ್ಮನು ಸರಸ್ವತಿಯು ಕಣ್ಮರೆಯಾಗಿದ್ದ ವಿನಶನ ಪ್ರದೇಶವನ್ನು ತಲುಪಿದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ತ್ರಿತಾಖ್ಯಾನೇ ಪಂಚತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ ಎನ್ನುವ ಮೂವತ್ತೈದನೇ ಅಧ್ಯಾಯವು.

Kannada translation of Saraswata Parva, by Chapter:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.