ಶಲ್ಯಪರ್ವ: ಸಾರಸ್ವತಪರ್ವ
Contents
Toggle೪೯
ಅಸಿತದೇವಲ-ಜೈಗೀಷವ್ಯರ ಕಥೆ (೧-೬೫).
09049001 ವೈಶಂಪಾಯನ ಉವಾಚ
09049001a ತಸ್ಮಿನ್ನೇವ ತು ಧರ್ಮಾತ್ಮಾ ವಸತಿ ಸ್ಮ ತಪೋಧನಃ|
09049001c ಗಾರ್ಹಸ್ಥ್ಯಂ ಧರ್ಮಮಾಸ್ಥಾಯ ಅಸಿತೋ ದೇವಲಃ ಪುರಾ||
ವೈಶಂಪಾಯನನು ಹೇಳಿದನು: “ಆ ಸ್ಥಳದಲ್ಲಿಯೇ ಹಿಂದೆ ಧರ್ಮಾತ್ಮ ತಪೋಧನ ಅಸಿತದೇವಲನು ಗೃಹಸ್ಥಾಶ್ರಮ ಧರ್ಮವನ್ನು ಆಶ್ರಯಿಸಿ ವಾಸಿಸುತ್ತಿದ್ದನು.
09049002a ಧರ್ಮನಿತ್ಯಃ ಶುಚಿರ್ದಾಂತೋ ನ್ಯಸ್ತದಂಡೋ ಮಹಾತಪಾಃ|
09049002c ಕರ್ಮಣಾ ಮನಸಾ ವಾಚಾ ಸಮಃ ಸರ್ವೇಷು ಜಂತುಷು||
ಆ ಧರ್ಮನಿತ್ಯ-ಶುಚಿ-ದಾಂತ-ಮಹಾತಪಸ್ವಿಯು ಯಾರನ್ನೂ ಹಿಂಸಿಸದೇ ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವ ಜೀವಿಗಳೊಂದಿಗೆ ಸಮನಾಗಿ ನಡೆದುಕೊಂಡಿದ್ದನು.
09049003a ಅಕ್ರೋಧನೋ ಮಹಾರಾಜ ತುಲ್ಯನಿಂದಾಪ್ರಿಯಾಪ್ರಿಯಃ|
09049003c ಕಾಂಚನೇ ಲೋಷ್ಟಕೇ ಚೈವ ಸಮದರ್ಶೀ ಮಹಾತಪಾಃ||
ಮಹಾರಾಜ! ಅಕ್ರೋಧನನಾದ ಆ ಮಹಾತಪಸ್ವಿಯು ಪ್ರಿಯ-ಅಪ್ರಿಯ ನಿಂದನೆಗಳನ್ನು ಮತ್ತು ಕಾಂಚನ-ಕಲ್ಲುಗಳನ್ನು ಒಂದೇ ಸಮನಾಗಿ ಕಾಣುತ್ತಿದ್ದನು.
09049004a ದೇವತಾಃ ಪೂಜಯನ್ನಿತ್ಯಮತಿಥೀಂಶ್ಚ ದ್ವಿಜೈಃ ಸಹ|
09049004c ಬ್ರಹ್ಮಚರ್ಯರತೋ ನಿತ್ಯಂ ಸದಾ ಧರ್ಮಪರಾಯಣಃ||
ದ್ವಿಜರೊಂದಿಗೆ ನಿತ್ಯವೂ ದೇವತೆ-ಅತಿಥಿಗಳನ್ನು ಪೂಜಿಸುತ್ತಿದ್ದನು ಮತ್ತು ಆ ಧರ್ಮಪರಾಯಣನು ನಿತ್ಯವೂ ಬ್ರಹ್ಮಚರ್ಯದಲ್ಲಿ ನಿರತನಾಗಿದ್ದನು.
09049005a ತತೋಽಭ್ಯೇತ್ಯ ಮಹಾರಾಜ ಯೋಗಮಾಸ್ಥಾಯ ಭಿಕ್ಷುಕಃ|
09049005c ಜೈಗೀಷವ್ಯೋ ಮುನಿರ್ಧೀಮಾಂಸ್ತಸ್ಮಿಂಸ್ತೀರ್ಥೇ ಸಮಾಹಿತಃ||
ಮಹಾರಾಜ! ಆಗ ಒಮ್ಮೆ ಧೀಮಾನ್ ಮುನಿ ಜೈಗೀಷವ್ಯನು ಯೋಗವನ್ನಾಶ್ರಯಿಸಿ ಭಿಕ್ಷುಕನಾಗಿ ಆ ತೀರ್ಥಕ್ಕೆ ಆಗಮಿಸಿದನು.
09049006a ದೇವಲಸ್ಯಾಶ್ರಮೇ ರಾಜನ್ನ್ಯವಸತ್ಸ ಮಹಾದ್ಯುತಿಃ|
09049006c ಯೋಗನಿತ್ಯೋ ಮಹಾರಾಜ ಸಿದ್ಧಿಂ ಪ್ರಾಪ್ತೋ ಮಹಾತಪಾಃ||
ರಾಜನ್! ಮಹಾರಾಜ! ಆ ಮಹಾದ್ಯುತಿ ಮಹಾತಪಸ್ವಿಯು ದೇವಲನ ಆಶ್ರಮದಲ್ಲಿ ವಾಸಮಾಡಿದ್ದುಕೊಂಡು ಯೋಗನಿತ್ಯನಾಗಿ ಸಿದ್ಧಿಯನ್ನು ಪಡೆದನು.
09049007a ತಂ ತತ್ರ ವಸಮಾನಂ ತು ಜೈಗೀಷವ್ಯಂ ಮಹಾಮುನಿಂ|
09049007c ದೇವಲೋ ದರ್ಶಯನ್ನೇವ ನೈವಾಯುಂಜತ ಧರ್ಮತಃ||
ಅವನು ಅಲ್ಲಿ ವಾಸಿಸುತ್ತಿರಲು ಮಹಾಮುನಿ ಜೈಗೀಷವ್ಯನನ್ನು ದೇವಲನು ನೋಡುತ್ತಲೇ ಇದ್ದನು. ಆದರೆ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸುತ್ತಿದ್ದ ಅವನು ಯೋಗಸಾಧನೆಗೆ ತೊಡಗುತ್ತಿರಲಿಲ್ಲ.
09049008a ಏವಂ ತಯೋರ್ಮಹಾರಾಜ ದೀರ್ಘಕಾಲೋ ವ್ಯತಿಕ್ರಮತ್|
09049008c ಜೈಗೀಷವ್ಯಂ ಮುನಿಂ ಚೈವ ನ ದದರ್ಶಾಥ ದೇವಲಃ||
ಮಹಾರಾಜ! ಹೀಗೆ ಅವರಿಬ್ಬರೂ ಇರುತ್ತಾ ಬಹಳಕಾಲ ಕಳೆಯಿತು. ಕೆಲವು ಸಮಯಗಳು ದೇವಲನು ಜೈಗೀಷವ್ಯ ಮುನಿಯನ್ನು ಕಾಣುತ್ತಲೇ ಇರಲಿಲ್ಲ.
09049009a ಆಹಾರಕಾಲೇ ಮತಿಮಾನ್ಪರಿವ್ರಾಡ್ಜನಮೇಜಯ|
09049009c ಉಪಾತಿಷ್ಠತ ಧರ್ಮಜ್ಞೋ ಭೈಕ್ಷಕಾಲೇ ಸ ದೇವಲಂ||
ಜನಮೇಜಯ! ಆಹಾರಕಾಲದಲ್ಲಿ ಪರಿವ್ರಾಜಕ ಮತಿಮಾನ್ ಧರ್ಮಜ್ಞ ಜೈಗೀಷವ್ಯನು ಭಿಕ್ಷೆಬೇಡುತ್ತಾ ದೇವಲನ ಬಳಿ ಬರುತ್ತಿದ್ದನು.
09049010a ಸ ದೃಷ್ಟ್ವಾ ಭಿಕ್ಷುರೂಪೇಣ ಪ್ರಾಪ್ತಂ ತತ್ರ ಮಹಾಮುನಿಂ|
09049010c ಗೌರವಂ ಪರಮಂ ಚಕ್ರೇ ಪ್ರೀತಿಂ ಚ ವಿಪುಲಾಂ ತಥಾ||
ಭಿಕ್ಷುರೂಪದಲ್ಲಿದ್ದ ಆ ಮಹಾಮುನಿಯು ಬಂದುದನ್ನು ನೋಡಿ ದೇವಲನು ಪರಮ ಗೌರವವನ್ನಿತ್ತು ಬಹಳ ಸಂತೋಷಗೊಳ್ಳುತ್ತಿದ್ದನು.
09049011a ದೇವಲಸ್ತು ಯಥಾಶಕ್ತಿ ಪೂಜಯಾಮಾಸ ಭಾರತ|
09049011c ಋಷಿದೃಷ್ಟೇನ ವಿಧಿನಾ ಸಮಾ ಬಹ್ವ್ಯಃ ಸಮಾಹಿತಃ||
ಭಾರತ! ದೇವಲನಾದರೋ ಯಥಾಶಕ್ತಿಯಾಗಿ ಋಷಿಗಳಿಗೆ ಅನುಗುಣವಾದ ವಿಧಿಗಳಿಂದ ಸಮಾಹಿತನಾಗಿ ಅವನನ್ನು ಪೂಜಿಸುತ್ತಿದ್ದನು.
09049012a ಕದಾ ಚಿತ್ತಸ್ಯ ನೃಪತೇ ದೇವಲಸ್ಯ ಮಹಾತ್ಮನಃ|
09049012c ಚಿಂತಾ ಸುಮಹತೀ ಜಾತಾ ಮುನಿಂ ದೃಷ್ಟ್ವಾ ಮಹಾದ್ಯುತಿಂ||
ನೃಪತೇ! ಒಮ್ಮೆ ಮಹಾದ್ಯುತಿ ಮುನಿ ಜೈಗೀಷವ್ಯನನ್ನು ನೋಡಿ ಮಹಾತ್ಮ ದೇವಲನಲ್ಲಿ ಮಹಾ ಚಿಂತೆಯು ಮೂಡಿತು.
09049013a ಸಮಾಸ್ತು ಸಮತಿಕ್ರಾಂತಾ ಬಹ್ವ್ಯಃ ಪೂಜಯತೋ ಮಮ|
09049013c ನ ಚಾಯಮಲಸೋ ಭಿಕ್ಷುರಭ್ಯಭಾಷತ ಕಿಂ ಚನ||
“ಅನೇಕ ವರ್ಷಗಳು ನಾನು ವಿಧಿವತ್ತಾಗಿ ಇವನನ್ನು ಪೂಜಿಸುತ್ತಲೇ ಬಂದಿದ್ದೇನೆ. ಆದರೆ ಈ ಆಲಸಿ ಭಿಕ್ಷುವು ನನ್ನೊಡನೆ ಏನೊಂದು ಮಾತನ್ನೂ ಆಡಲೇ ಇಲ್ಲವಲ್ಲ!”
09049014a ಏವಂ ವಿಗಣಯನ್ನೇವ ಸ ಜಗಾಮ ಮಹೋದಧಿಂ|
09049014c ಅಂತರಿಕ್ಷಚರಃ ಶ್ರೀಮಾನ್ಕಲಶಂ ಗೃಹ್ಯ ದೇವಲಃ||
ಹೀಗೆ ಆಲೋಚಿಸುತ್ತಾ ಶ್ರೀಮಾನ್ ದೇವಲನು ಕಲಶವನ್ನೆತ್ತಿಕೊಂಡು ಆಕಾಶಮಾರ್ಗವಾಗಿ ಸಮುದ್ರಕ್ಕೆ ಹೋದನು.
09049015a ಗಚ್ಚನ್ನೇವ ಸ ಧರ್ಮಾತ್ಮಾ ಸಮುದ್ರಂ ಸರಿತಾಂ ಪತಿಂ|
09049015c ಜೈಗೀಷವ್ಯಂ ತತೋಽಪಶ್ಯದ್ಗತಂ ಪ್ರಾಗೇವ ಭಾರತ||
ಭಾರತ! ಸರಿತ್ತುಗಳ ಒಡೆಯ ಸಮುದ್ರವನ್ನು ತಲುಪುತ್ತಲೇ ಆ ಧರ್ಮಾತ್ಮನು ತನಗಿಂತ ಮೊದಲೇ ಅಲ್ಲಿಗೆ ಬಂದಿದ್ದ ಜೈಗೀಷವ್ಯನನ್ನು ಕಂಡನು.
09049016a ತತಃ ಸವಿಸ್ಮಯಶ್ಚಿಂತಾಂ ಜಗಾಮಾಥಾಸಿತಃ ಪ್ರಭುಃ|
09049016c ಕಥಂ ಭಿಕ್ಷುರಯಂ ಪ್ರಾಪ್ತಃ ಸಮುದ್ರೇ ಸ್ನಾತ ಏವ ಚ||
ಆಗ ಪ್ರಭುವು ವಿಸ್ಮಿತನಾಗಿ ಈ ರೀತಿ ಚಿಂತಿಸತೊಡಗಿದನು: “ಈ ಭಿಕ್ಷುವು ಹೇಗೆ ತಾನೇ ಸಮುದ್ರವನ್ನು ತಲುಪಿ ಸ್ನಾನವನ್ನೂ ಮುಗಿಸಿದ್ದಾನೆ?”
09049017a ಇತ್ಯೇವಂ ಚಿಂತಯಾಮಾಸ ಮಹರ್ಷಿರಸಿತಸ್ತದಾ|
09049017c ಸ್ನಾತ್ವಾ ಸಮುದ್ರೇ ವಿಧಿವಚ್ಚುಚಿರ್ಜಪ್ಯಂ ಜಜಾಪ ಹ||
ಮಹರ್ಷಿ ಅಸಿತನು ಹೀಗೆ ಚಿಂತಿಸುತ್ತಿದ್ದನು. ಸಮುದ್ರದಲ್ಲಿ ವಿಧಿವತ್ತಾಗಿ ಸ್ನಾನಮಾಡಿ ಜಪವನ್ನೂ ಜಪಿಸಿದನು.
09049018a ಕೃತವಂಪ್ಯಾಹ್ನಿಕಃ ಶ್ರೀಮಾನಾಶ್ರಮಂ ಚ ಜಗಾಮ ಹ|
09049018c ಕಲಶಂ ಜಲಪೂರ್ಣಂ ವೈ ಗೃಹೀತ್ವಾ ಜನಮೇಜಯ||
ಜನಮೇಜಯ! ಆಹ್ನಿಕವನ್ನೂ ಪೂರೈಸಿ, ನೀರಿನಿಂದ ತುಂಬಿದ ಕಲಶವನ್ನು ಹಿಡಿದುಕೊಂಡು ಶ್ರೀಮಾನ್ ದೇವಲನು ಆಶ್ರಮಕ್ಕೆ ಹಿಂದಿರುಗಿದನು.
09049019a ತತಃ ಸ ಪ್ರವಿಶನ್ನೇವ ಸ್ವಮಾಶ್ರಮಪದಂ ಮುನಿಃ|
09049019c ಆಸೀನಮಾಶ್ರಮೇ ತತ್ರ ಜೈಗೀಷವ್ಯಮಪಶ್ಯತ||
ತನ್ನ ಆಶ್ರಮವನ್ನು ಪ್ರವೇಶಿಸುತ್ತಲೇ ಆ ಮುನಿಯು ಆಶ್ರಮದಲ್ಲಿ ಕುಳಿತಿದ್ದ ಜೈಗೀಷವ್ಯನನ್ನು ನೋಡಿದನು.
09049020a ನ ವ್ಯಾಹರತಿ ಚೈವೈನಂ ಜೈಗೀಷವ್ಯಃ ಕಥಂ ಚನ|
09049020c ಕಾಷ್ಠಭೂತೋಽಶ್ರಮಪದೇ ವಸತಿ ಸ್ಮ ಮಹಾತಪಾಃ||
ಆದರೆ ಜೈಗೀಷ್ಯವ್ಯನು ದೇವಲನೊಂದಿಗೆ ಯಾವುದೇ ರೀತಿಯಲ್ಲಿಯೂ ವ್ಯವಹರಿಸಲಿಲ್ಲ. ಆಶ್ರಮಪದದಲ್ಲಿ ಆ ಮಹಾತಪಸ್ವಿಯು ಕಟ್ಟಿಗೆಯಂತೆ ಮೌನಿಯಾಗಿದ್ದನು.
09049021a ತಂ ದೃಷ್ಟ್ವಾ ಚಾಪ್ಲುತಂ ತೋಯೇ ಸಾಗರೇ ಸಾಗರೋಪಮಂ|
09049021c ಪ್ರವಿಷ್ಟಮಾಶ್ರಮಂ ಚಾಪಿ ಪೂರ್ವಮೇವ ದದರ್ಶ ಸಃ||
09049022a ಅಸಿತೋ ದೇವಲೋ ರಾಜಂಶ್ಚಿಂತಯಾಮಾಸ ಬುದ್ಧಿಮಾನ್|
ರಾಜನ್! ಸಾಗರದ ಗಾಂಭೀರ್ಯದಿಂದ ಅವನು ಸಾಗರದ ನೀರಿನಲ್ಲಿ ತನಗಿಂತಲೇ ಮೊದಲು ಸ್ನಾನಮಾಡಿದುದನ್ನೂ ಮತ್ತು ತನಗಿಂತ ಮೊದಲೇ ಆಶ್ರಮವನ್ನು ಪ್ರವೇಶಿಸಿದುದನ್ನು ನೋಡಿ ಬುದ್ಧಿಮಾನ್ ಅಸಿತ ದೇವಲನು ಚಿಂತಿಸತೊಡಗಿದನು.
09049022c ದೃಷ್ಟಃ ಪ್ರಭಾವಂ ತಪಸೋ ಜೈಗೀಷವ್ಯಸ್ಯ ಯೋಗಜಂ||
09049023a ಚಿಂತಯಾಮಾಸ ರಾಜೇಂದ್ರ ತದಾ ಸ ಮುನಿಸತ್ತಮಃ|
09049023c ಮಯಾ ದೃಷ್ಟಃ ಸಮುದ್ರೇ ಚ ಆಶ್ರಮೇ ಚ ಕಥಂ ತ್ವಯಂ||
ರಾಜೇಂದ್ರ! ತಪಸ್ಸು-ಯೋಗಗಳಿಂದುಂಟಾದ ಜೈಗೀಷವ್ಯನ ಪ್ರಭಾವವನ್ನು ನೋಡಿ ಮುನಿಸತ್ತಮನು “ಇವನನ್ನು ನಾನು ಸಮುದ್ರ ಮತ್ತು ಆಶ್ರಮಗಳಲ್ಲಿ ಹೇಗೆ ನೋಡುತ್ತಿರುವೆ?” ಎಂದು ಆಲೋಚಿಸತೊಡಗಿದನು.
09049024a ಏವಂ ವಿಗಣಯನ್ನೇವ ಸ ಮುನಿರ್ಮಂತ್ರಪಾರಗಃ|
09049024c ಉತ್ಪಪಾತಾಶ್ರಮಾತ್ತಸ್ಮಾದಂತರಿಕ್ಷಂ ವಿಶಾಂ ಪತೇ||
09049024e ಜಿಜ್ಞಾಸಾರ್ಥಂ ತದಾ ಭಿಕ್ಷೋರ್ಜೈಗೀಷವ್ಯಸ್ಯ ದೇವಲಃ||
ಹೀಗೆ ಲೆಖ್ಕ ಹಾಕುತ್ತಲೇ ಮಂತ್ರಪಾರಗ ಮುನಿ ದೇವಲನು ಭಿಕ್ಷು ಜೈಗೀಷವ್ಯನ ಕುರಿತು ಚರ್ಚಿಸಲು ಅಲ್ಲಿಂದ ಅಂತರಿಕ್ಷಕ್ಕೇರಿದನು.
09049025a ಸೋಽಮ್ತರಿಕ್ಷಚರಾನ್ಸಿದ್ಧಾನ್ಸಮಪಶ್ಯತ್ಸಮಾಹಿತಾನ್|
09049025c ಜೈಗೀಷವ್ಯಂ ಚ ತೈಃ ಸಿದ್ಧೈಃ ಪೂಜ್ಯಮಾನಮಪಶ್ಯತ||
ಅಂತರಿಕ್ಷದಲ್ಲಿ ಹೋಗುತ್ತಿರುವಾಗ ಅವನು ಸಮಾಹಿತ ಸಿದ್ಧರನ್ನೂ, ಆ ಸಿದ್ಧರು ಜೈಗೀಷವ್ಯನನ್ನು ಪೂಜಿಸುತ್ತಿರುವುದನ್ನೂ ಕಂಡನು.
09049026a ತತೋಽಸಿತಃ ಸುಸಂರಬ್ಧೋ ವ್ಯವಸಾಯೀ ದೃಢವ್ರತಃ|
09049026c ಅಪಶ್ಯದ್ವೈ ದಿವಂ ಯಾಂತಂ ಜೈಗೀಷವ್ಯಂ ಸ ದೇವಲಃ||
ಆಗ ವ್ಯವಸಾಯೀ ದೃಢವ್ರತ ಅಸಿತನು ತುಂಬಾ ಕುಪಿತನಾದನು. ದೇವಲನು ಜೈಗೀಷವ್ಯನು ದಿವಕ್ಕೆ ಹೋಗುತ್ತಿರುವುದನ್ನೂ ನೋಡಿದನು.
09049027a ತಸ್ಮಾಚ್ಚ ಪಿತೃಲೋಕಂ ತಂ ವ್ರಜಂತಂ ಸೋಽನ್ವಪಶ್ಯತ|
09049027c ಪಿತೃಲೋಕಾಚ್ಚ ತಂ ಯಾಂತಂ ಯಾಮ್ಯಂ ಲೋಕಮಪಶ್ಯತ||
ಅವನು ಪಿತೃಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು. ಮತ್ತು ಪಿತೃಲೋಕದಿಂದ ಯಮಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು.
09049028a ತಸ್ಮಾದಪಿ ಸಮುತ್ಪತ್ಯ ಸೋಮಲೋಕಮಭಿಷ್ಟುತಂ|
09049028c ವ್ರಜಂತಮನ್ವಪಶ್ಯತ್ಸ ಜೈಗೀಷವ್ಯಂ ಮಹಾಮುನಿಂ||
ಮಹಾಮುನಿ ಜೈಗೀಷವ್ಯನು ಅಲ್ಲಿಂದಲೂ ಮೇಲೆ ಹಾರಿ ಸೋಮಲೋಕಕ್ಕೆ ಹೋಗುತ್ತಿರುವುದನ್ನೂ ದೇವಲನು ನೋಡಿದನು.
09049029a ಲೋಕಾನ್ಸಮುತ್ಪತಂತಂ ಚ ಶುಭಾನೇಕಾಂತಯಾಜಿನಾಂ|
09049029c ತತೋಽಗ್ನಿಹೋತ್ರಿಣಾಂ ಲೋಕಾಂಸ್ತೇಭ್ಯಶ್ಚಾಪ್ಯುತ್ಪಪಾತ ಹ||
ಅಲ್ಲಿಂದ ಅವನು ಏಕಾಂತಯಾಜಿಗಳ ಶುಭ ಲೋಕಗಳಿಗೆ ಹಾರಿದುದನ್ನೂ, ಅಲ್ಲಿಂದ ಅಗ್ನಿಹೋತ್ರಿಗಳ ಲೋಕಗಳಿಗೆ ಹಾರಿದುದನ್ನೂ ನೋಡಿದನು.
09049030a ದರ್ಶಂ ಚ ಪೌರ್ಣಮಾಸಂ ಚ ಯೇ ಯಜಂತಿ ತಪೋಧನಾಃ|
09049030c ತೇಭ್ಯಃ ಸ ದದೃಶೇ ಧೀಮಾಽಲ್ಲೋಕೇಭ್ಯಃ ಪಶುಯಾಜಿನಾಂ||
09049030e ವ್ರಜಂತಂ ಲೋಕಮಮಲಮಪಶ್ಯದ್ದೇವಪೂಜಿತಂ||
ಜೈಗೀಷವ್ಯನನ್ನು ದರ್ಶ-ಪೌರ್ಣಮಾಸ ಯಜ್ಞಗಳನ್ನು ಮಾಡಿದ ತಪೋಧನ ಧೀಮಂತರಿಗೆ ದೊರಕುವ ಲೋಕಗಳಲ್ಲಿಯೂ ನೋಡಿದನು. ಅಲ್ಲಿಂದ ಅವನು ಪಶುಯಾಜಿಗಳಿಗೆ ಲಭ್ಯವಾಗುವ ಅಮಲ ದೇವಪೂಜಿತ ಲೋಕಗಳಿಗೆ ಹೋಗುವುದನ್ನೂ ನೋಡಿದನು.
09049031a ಚಾತುರ್ಮಾಸ್ಯೈರ್ಬಹುವಿಧೈರ್ಯಜಂತೇ ಯೇ ತಪೋಧನಾಃ|
09049031c ತೇಷಾಂ ಸ್ಥಾನಂ ತಥಾ ಯಾಂತಂ ತಥಾಗ್ನಿಷ್ಟೋಮಯಾಜಿನಾಂ||
09049032a ಅಗ್ನಿಷ್ಟುತೇನ ಚ ತಥಾ ಯೇ ಯಜಂತಿ ತಪೋಧನಾಃ|
09049032c ತತ್ ಸ್ಥಾನಮನುಸಂಪ್ರಾಪ್ತಮನ್ವಪಶ್ಯತ ದೇವಲಃ||
ಅನಂತರ ಜೈಗೀಷವ್ಯನು ಬಹುವಿಧದ ಚಾತುರ್ಮಾಸ್ಯಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ಹೋಗುತ್ತಿರುವುದನ್ನೂ, ಹಾಗೆಯೇ ಅಗ್ನಿಷ್ಟೋಮ ಮತ್ತು ಅಗ್ನಿಷ್ಟುತ ಯಾಗಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ತಲುಪಿದುದನ್ನೂ ದೇವಲನು ನೋಡಿದನು.
09049033a ವಾಜಪೇಯಂ ಕ್ರತುವರಂ ತಥಾ ಬಹುಸುವರ್ಣಕಂ|
09049033c ಆಹರಂತಿ ಮಹಾಪ್ರಾಜ್ಞಾಸ್ತೇಷಾಂ ಲೋಕೇಷ್ವಪಶ್ಯತ||
ಬಹುಸುವರ್ಣಗಳ ದಕ್ಷಿಣೆಗಳನ್ನಿತ್ತು ಕ್ರತುಶ್ರೇಷ್ಠ ವಾಜಪೇಯವನ್ನು ಮಾಡಿದ್ದ ಮಹಾಪ್ರಾಜ್ಞರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ಕಂಡನು.
09049034a ಯಜಂತೇ ಪುಂಡರೀಕೇಣ ರಾಜಸೂಯೇನ ಚೈವ ಯೇ|
09049034c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ||
ಪುಂಡರೀಕ ಮತ್ತು ರಾಜಸೂಯಯಾಗಗಳನ್ನು ಮಾಡಿದವರ ಲೋಕಗಳಲ್ಲಿಯೂ ಜೈಗೀಷವ್ಯನನ್ನು ದೇವಲನು ನೋಡಿದನು.
09049035a ಅಶ್ವಮೇಧಂ ಕ್ರತುವರಂ ನರಮೇಧಂ ತಥೈವ ಚ|
09049035c ಆಹರಂತಿ ನರಶ್ರೇಷ್ಠಾಸ್ತೇಷಾಂ ಲೋಕೇಷ್ವಪಶ್ಯತ||
ಕ್ರತುಶ್ರೇಷ್ಠ ಅಶ್ವಮೇಧ ಮತ್ತು ಹಾಗೆಯೇ ನರಮೇಧ ಯಜ್ಞಗಳನ್ನು ಪೂರೈಸಿದ ನರಶ್ರೇಷ್ಠರಿಗೆ ದೊರಕುವ ಲೋಕಗಳಲ್ಲಿಯೂ ಅವನನ್ನು ನೋಡಿದನು.
09049036a ಸರ್ವಮೇಧಂ ಚ ದುಷ್ಪ್ರಾಪಂ ತಥಾ ಸೌತ್ರಾಮಣಿಂ ಚ ಯೇ|
09049036c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ||
ಸರ್ವಮೇಧ ಮತ್ತು ಮಾಡಲು ಕಷ್ಟಕರವಾದ ಸೌತ್ರಾಮಣಿ ಯಜ್ಞಮಾಡಿದವರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು.
09049037a ದ್ವಾದಶಾಹೈಶ್ಚ ಸತ್ರೈರ್ಯೇ ಯಜಂತೇ ವಿವಿಧೈರ್ನೃಪ|
09049037c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ||
ನೃಪ! ವಿವಿಧ ದ್ವಾದಶಾಹ ಸತ್ರಗಳಿಂದ ಯಜಿಸುವವರಿಗೆ ದೊರೆಯುವ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು.
09049038a ಮಿತ್ರಾವರುಣಯೋರ್ಲೋಕಾನಾದಿತ್ಯಾನಾಂ ತಥೈವ ಚ|
09049038c ಸಲೋಕತಾಮನುಪ್ರಾಪ್ತಮಪಶ್ಯತ ತತೋಽಸಿತಃ||
ಹಾಗೆಯೇ ಅಸಿತನು ವಿತ್ರಾವರುಣರ ಲೋಕ, ಆದಿತ್ಯರ ಲೋಕಗಳಿಗೆ ಹೋದಾಗ ಅಲ್ಲಿಯೂ ಜೈಗೀಷವ್ಯನನ್ನು ನೋಡಿದನು.
09049039a ರುದ್ರಾಣಾಂ ಚ ವಸೂನಾಂ ಚ ಸ್ಥಾನಂ ಯಚ್ಚ ಬೃಹಸ್ಪತೇಃ|
09049039c ತಾನಿ ಸರ್ವಾಣ್ಯತೀತಂ ಚ ಸಮಪಶ್ಯತ್ತತೋಽಸಿತಃ||
ರುದ್ರರ, ವಸುಗಳ ಮತ್ತು ಬೃಹಸ್ಪತಿಯ ಸ್ಥಾನಗಳಲ್ಲಿ ಎಲ್ಲ ಕಡೆ ಅಸಿತನು ಅವನನ್ನು ನೋಡಿದನು.
09049040a ಆರುಹ್ಯ ಚ ಗವಾಂ ಲೋಕಂ ಪ್ರಯಾಂತಂ ಬ್ರಹ್ಮಸತ್ರಿಣಾಂ|
09049040c ಲೋಕಾನಪಶ್ಯದ್ಗಚ್ಚಂತಂ ಜೈಗೀಷವ್ಯಂ ತತೋಽಸಿತಃ||
ಜೈಗೀಷವ್ಯನು ಗೋಲೋಕಕ್ಕೆ ಹಾರಿ ಅಲ್ಲಿಂದ ಬ್ರಹ್ಮಸತ್ರಿಗಳಿಗೆ ದೊರಕುವ ಲೋಕಗಳಿಗೆ ಹೋಗುತ್ತಿರುವುದನ್ನೂ ಅಸಿತನು ನೋಡಿದನು.
09049041a ತ್ರೀಽಲ್ಲೋಕಾನಪರಾನ್ವಿಪ್ರಮುತ್ಪತಂತಂ ಸ್ವತೇಜಸಾ|
09049041c ಪತಿವ್ರತಾನಾಂ ಲೋಕಾಂಶ್ಚ ವ್ರಜಂತಂ ಸೋಽನ್ವಪಶ್ಯತ||
ಆ ವಿಪ್ರನು ತನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ದಾಟಿ ಪತಿವ್ರತೆಯರ ಲೋಕಗಳಿಗೆ ಹೋಗುತ್ತಿರುವುದನ್ನೂ ನೋಡಿದನು.
09049042a ತತೋ ಮುನಿವರಂ ಭೂಯೋ ಜೈಗೀಷವ್ಯಮಥಾಸಿತಃ|
09049042c ನಾನ್ವಪಶ್ಯತ ಯೋಗಸ್ಥಮಂತರ್ಹಿತಮರಿಂದಮ||
ಅರಿಂದಮ! ಅನಂತರ ಅಸಿತನು ಯೋಗಸ್ಥನಾಗಿ ಅಂತರ್ಧಾನನಾಗಿದ್ದ ಜೈಗೀಷ ಮುನಿವರನನ್ನು ಕಾಣಲಿಲ್ಲ.
09049043a ಸೋಽಚಿಂತಯನ್ಮಹಾಭಾಗೋ ಜೈಗೀಷವ್ಯಸ್ಯ ದೇವಲಃ|
09049043c ಪ್ರಭಾವಂ ಸುವ್ರತತ್ವಂ ಚ ಸಿದ್ಧಿಂ ಯೋಗಸ್ಯ ಚಾತುಲಾಂ||
ಆಗ ಮಹಾಭಾಗ ದೇವಲನು ಜೈಗೀಷವ್ಯನ ವ್ರತತ್ವ, ಪ್ರಭಾವ, ಮತ್ತು ಯೋಗದ ಅತುಲ ಸಿದ್ಧಿಯ ಕುರಿತು ಚಿಂತಿಸಿದನು.
09049044a ಅಸಿತೋಽಪೃಚ್ಚತ ತದಾ ಸಿದ್ಧಾಽಲ್ಲೋಕೇಷು ಸತ್ತಮಾನ್|
09049044c ಪ್ರಯತಃ ಪ್ರಾಂಜಲಿರ್ಭೂತ್ವಾ ಧೀರಸ್ತಾನ್ಬ್ರಹ್ಮಸತ್ರಿಣಃ||
ಆಗ ಧೀರ ಅಸಿತನು ಅಂಜಲೀಬದ್ಧನಾಗಿ ಪ್ರಯಾಣಿಸುತ್ತಿದ್ದ ಬ್ರಹ್ಮಸತ್ರಿ ಲೋಕಸತ್ತಮ ಸಿದ್ಧರನ್ನು ಪ್ರಶ್ನಿಸಿದನು:
09049045a ಜೈಗೀಷವ್ಯಂ ನ ಪಶ್ಯಾಮಿ ತಂ ಶಂಸತ ಮಹೌಜಸಂ|
09049045c ಏತದಿಚ್ಚಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ||
“ಮಹೌಜಸ ಜೈಗೀಷವ್ಯನು ಕಾಣುತ್ತಿಲ್ಲವಲ್ಲ! ಇದರ ಕುರಿತು ಕೇಳಲು ಬಯಸುತ್ತೇನೆ. ನನಗೆ ಪರಮ ಕುತೂಹಲವಾಗಿದೆ!”
09049046 ಸಿದ್ಧಾ ಊಚುಃ
09049046a ಶೃಣು ದೇವಲ ಭೂತಾರ್ಥಂ ಶಂಸತಾಂ ನೋ ದೃಢವ್ರತ|
09049046c ಜೈಗೀಷವ್ಯೋ ಗತೋ ಲೋಕಂ ಶಾಶ್ವತಂ ಬ್ರಹ್ಮಣೋಽವ್ಯಯಂ||
ಸಿದ್ಧರು ಹೇಳಿದರು: “ದೇವಲ! ದೃಢವ್ರತ! ನಾವು ಹೇಳುವುದರ ಅರ್ಥವನ್ನು ಕೇಳು! ಜೈಗೀಷವ್ಯನು ಅವ್ಯಯವೂ ಶಾಶ್ವತವೂ ಆದ ಬ್ರಹ್ಮಲೋಕಕ್ಕೆ ಹೋಗಿದ್ದಾನೆ.”
09049047a ಸ ಶ್ರುತ್ವಾ ವಚನಂ ತೇಷಾಂ ಸಿದ್ಧಾನಾಂ ಬ್ರಹ್ಮಸತ್ರಿಣಾಂ|
09049047c ಅಸಿತೋ ದೇವಲಸ್ತೂರ್ಣಮುತ್ಪಪಾತ ಪಪಾತ ಚ||
ಬ್ರಹ್ಮಸತ್ರಿ ಸಿದ್ಧರ ಆ ಮಾತನ್ನು ಕೇಳಿ ತಕ್ಷಣವೇ ಅಸಿತ ದೇವಲನು ಮೇಲಕ್ಕೆ ಹಾರಿ, ಬಿದ್ದನು.
09049048a ತತಃ ಸಿದ್ಧಾಸ್ತ ಊಚುರ್ಹಿ ದೇವಲಂ ಪುನರೇವ ಹ|
09049048c ನ ದೇವಲ ಗತಿಸ್ತತ್ರ ತವ ಗಂತುಂ ತಪೋಧನ||
09049048e ಬ್ರಹ್ಮಣಃ ಸದನಂ ವಿಪ್ರ ಜೈಗೀಷವ್ಯೋ ಯದಾಪ್ತವಾನ್||
ಆಗ ಸಿದ್ಧರು ದೇವಲನಿಗೆ ಪುನಃ ಹೇಳಿದರು: “ದೇವಲ! ತಪೋಧನ! ವಿಪ್ರ! ಬ್ರಹ್ಮಸದನಕ್ಕೆ ಜೈಗೀಷವ್ಯನು ಪಡೆದುಕೊಂಡಿರುವ ಮಾರ್ಗದಲ್ಲಿ ನೀನು ಹೋಗಲಿಕ್ಕಾಗುವುದಿಲ್ಲ.”
09049049a ತೇಷಾಂ ತದ್ವಚನಂ ಶ್ರುತ್ವಾ ಸಿದ್ಧಾನಾಂ ದೇವಲಃ ಪುನಃ|
09049049c ಆನುಪೂರ್ವ್ಯೇಣ ಲೋಕಾಂಸ್ತಾನ್ಸರ್ವಾನವತತಾರ ಹ||
ಸಿದ್ಧರ ಆ ಮಾತನ್ನು ಕೇಳಿ ದೇವಲನು ಪುನಃ ಅನುಕ್ರಮವಾಗಿ ಆ ಎಲ್ಲ ಲೋಕಗಳಿಂದಲೂ ಕೆಳಗಿಳಿದನು.
09049050a ಸ್ವಮಾಶ್ರಮಪದಂ ಪುಣ್ಯಮಾಜಗಾಮ ಪತಂಗವತ್|
09049050c ಪ್ರವಿಶನ್ನೇವ ಚಾಪಶ್ಯಜ್ಜೈಗೀಷವ್ಯಂ ಸ ದೇವಲಃ||
ಪತಂಗದಂತೆ ತನ್ನ ಪುಣ್ಯ ಆಶ್ರಮಪದಕ್ಕೆ ತಲುಪಿದ ದೇವಲನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಕೂಡ ಜೈಗೀಷವ್ಯನನ್ನು ನೋಡಿದನು.
09049051a ತತೋ ಬುದ್ಧ್ಯಾ ವ್ಯಗಣಯದ್ದೇವಲೋ ಧರ್ಮಯುಕ್ತಯಾ|
09049051c ದೃಷ್ಟ್ವಾ ಪ್ರಭಾವಂ ತಪಸೋ ಜೈಗೀಷವ್ಯಸ್ಯ ಯೋಗಜಂ||
ಆಗ ದೇವಲನು ಧರ್ಮಯುಕ್ತ ಬುದ್ಧಿಯಿಂದ ಆಲೋಚಿಸಿ ತಪಸ್ವಿ ಜೈಗೀಷವ್ಯನ ಯೋಗದಿಂದುಂಟಾದ ಪ್ರಭಾವವನ್ನು ಕಂಡನು.
09049052a ತತೋಽಬ್ರವೀನ್ಮಹಾತ್ಮಾನಂ ಜೈಗೀಷವ್ಯಂ ಸ ದೇವಲಃ|
09049052c ವಿನಯಾವನತೋ ರಾಜನ್ನುಪಸರ್ಪ್ಯ ಮಹಾಮುನಿಂ|
09049052e ಮೋಕ್ಷಧರ್ಮಂ ಸಮಾಸ್ಥಾತುಮಿಚ್ಚೇಯಂ ಭಗವನ್ನಹಂ||
ರಾಜನ್! ಆಗ ದೇವಲನು ವಿನಯಾವನತನಾಗಿ ಮಹಾಮುನಿ ಜೈಗೀಷವ್ಯನ ಬಳಿಸಾರಿ ಆ ಮಹಾತ್ಮನಿಗೆ “ಭಗವನ್! ಮೋಕ್ಷಧರ್ಮವನ್ನು ಆಶ್ರಯಿಸುವ ಇಚ್ಛೆಯುಂಟಾಗಿದೆ” ಎಂದು ಹೇಳಿದನು.
09049053a ತಸ್ಯ ತದ್ವಚನಂ ಶ್ರುತ್ವಾ ಉಪದೇಶಂ ಚಕಾರ ಸಃ|
09049053c ವಿಧಿಂ ಚ ಯೋಗಸ್ಯ ಪರಂ ಕಾರ್ಯಾಕಾರ್ಯಂ ಚ ಶಾಸ್ತ್ರತಃ||
ಅವನ ಆ ಮಾತನ್ನು ಕೇಳಿ ಜೈಗೀಷವ್ಯನು ಅವನಿಗೆ ಯೋಗದ ಪರಮ ವಿಧಿಯನ್ನೂ, ಕಾರ್ಯಾಕಾರ್ಯಗಳನ್ನೂ ಶಾಸ್ತ್ರತಃ ಉಪದೇಶಿಸಿದನು.
09049054a ಸಂನ್ಯಾಸಕೃತಬುದ್ಧಿಂ ತಂ ತತೋ ದೃಷ್ಟ್ವಾ ಮಹಾತಪಾಃ|
09049054c ಸರ್ವಾಶ್ಚಾಸ್ಯ ಕ್ರಿಯಾಶ್ಚಕ್ರೇ ವಿಧಿದೃಷ್ಟೇನ ಕರ್ಮಣಾ||
ಸಂನ್ಯಾಸವನ್ನು ತೆಗೆದುಕೊಳ್ಳಲು ನಿಶ್ಚಯಿಸಿದ್ದ ಅವನನ್ನು ನೋಡಿ ಮಹಾತಪಸ್ವಿ ಜೈಗೀಷವ್ಯನು ಅವನಿಗೆ ವಿಧಿದೃಷ್ಟ ಕರ್ಮಗಳಿಂದ ಎಲ್ಲ ಕ್ರಿಯೆಗಳನ್ನೂ ನಡೆಸಿದನು.
09049055a ಸಂನ್ಯಾಸಕೃತಬುದ್ಧಿಂ ತಂ ಭೂತಾನಿ ಪಿತೃಭಿಃ ಸಹ|
09049055c ತತೋ ದೃಷ್ಟ್ವಾ ಪ್ರರುರುದುಃ ಕೋಽಸ್ಮಾನ್ಸಂವಿಭಜಿಷ್ಯತಿ||
ಅವನ ಸನ್ಯಾಸ ನಿಶ್ಚಯವನ್ನು ನೋಡಿ ಪಿತೃಗಳೊಂದಿಗೆ ಎಲ್ಲ ಪ್ರಾಣಿಗಳೂ “ಇನ್ನು ನಮಗೆ ಯಾರು ಅನ್ನವನ್ನು ವಿಭಜಿಸಿ ಕೊಡುತ್ತಾರೆ?” ಎಂದು ರೋದಿಸಿದರು.
09049056a ದೇವಲಸ್ತು ವಚಃ ಶ್ರುತ್ವಾ ಭೂತಾನಾಂ ಕರುಣಂ ತಥಾ|
09049056c ದಿಶೋ ದಶ ವ್ಯಾಹರತಾಂ ಮೋಕ್ಷಂ ತ್ಯಕ್ತುಂ ಮನೋ ದಧೇ||
ಹತ್ತು ದಿಕ್ಕುಗಳಿಂದಲೂ ಕೇಳಿಬರುತ್ತಿರುವ ಭೂತಗಳ ಕರುಣ ಮಾತುಗಳನ್ನು ಕೇಳಿ ದೇವಲನು ಸನ್ಯಾಸವನ್ನು ತ್ಯಜಿಸುವ ಮನಸ್ಸು ಮಾಡಿದನು.
09049057a ತತಸ್ತು ಫಲಮೂಲಾನಿ ಪವಿತ್ರಾಣಿ ಚ ಭಾರತ|
09049057c ಪುಷ್ಪಾಣ್ಯೋಷಧಯಶ್ಚೈವ ರೋರೂಯಂತೇ ಸಹಸ್ರಶಃ||
ಭಾರತ! ಆಗ ಸಹಸ್ರಾರು ಪುಣ್ಯ ಫಲಮೂಲಗಳು ಪುಷ್ಪ-ಔಷಧಿಗಳು ರೋದಿಸತೊಡಗಿದವು.
09049058a ಪುನರ್ನೋ ದೇವಲಃ ಕ್ಷುದ್ರೋ ನೂನಂ ಚೇತ್ಸ್ಯತಿ ದುರ್ಮತಿಃ|
09049058c ಅಭಯಂ ಸರ್ವಭೂತೇಭ್ಯೋ ಯೋ ದತ್ತ್ವಾ ನಾವಬುಧ್ಯತೇ||
“ಕ್ಷುದ್ರ ದುರ್ಮತಿ ದೇವಲನು ಪುನಃ ಗೃಹಸ್ಥಾಶ್ರಮದಲ್ಲಿದ್ದುಕೊಂಡು ನಮ್ಮನ್ನು ಕತ್ತರಿಸುತ್ತಾನೆ. ಸನ್ಯಾಸಾಶ್ರಮದ ಪೂರ್ವಾಂಗ ಕರ್ಮದಲ್ಲಿ ಎಲ್ಲ ಭೂತಗಳಿಗೂ ಅಭಯವನ್ನಿತ್ತುದನ್ನು ಇವನು ಗಮನಕ್ಕೆ ತೆಗೆದುಕೊಂಡಿಲ್ಲ!”
09049059a ತತೋ ಭೂಯೋ ವ್ಯಗಣಯತ್ಸ್ವಬುದ್ಧ್ಯಾ ಮುನಿಸತ್ತಮಃ|
09049059c ಮೋಕ್ಷೇ ಗಾರ್ಹಸ್ಥ್ಯಧರ್ಮೇ ವಾ ಕಿಂ ನು ಶ್ರೇಯಸ್ಕರಂ ಭವೇತ್||
ನಂತರ ಇನ್ನೊಮ್ಮೆ ಸ್ವಬುದ್ಧಿಯಿಂದ ಮೋಕ್ಷ ಮತ್ತು ಗೃಹಸ್ಥಧರ್ಮಗಳಲ್ಲಿ ಯಾವುದು ಶ್ರೇಯಸ್ಕರವೆನ್ನುವುದನ್ನು ಅಲೋಚಿಸಿದನು.
09049060a ಇತಿ ನಿಶ್ಚಿತ್ಯ ಮನಸಾ ದೇವಲೋ ರಾಜಸತ್ತಮ|
09049060c ತ್ಯಕ್ತ್ವಾ ಗಾರ್ಹಸ್ಥ್ಯಧರ್ಮಂ ಸ ಮೋಕ್ಷಧರ್ಮಮರೋಚಯತ್||
ರಾಜಸತ್ತಮ! ಹೀಗೆ ಮನಸಾರೆ ನಿಶ್ಚಯಿಸಿ ದೇವಲನು ಗ್ರಹಸ್ಥಧರ್ಮವನ್ನು ತೊರೆದು ಮೋಕ್ಷಧರ್ಮವನ್ನು ಆರಿಸಿಕೊಂಡನು.
09049061a ಏವಮಾದೀನಿ ಸಂಚಿಂತ್ಯ ದೇವಲೋ ನಿಶ್ಚಯಾತ್ತತಃ|
09049061c ಪ್ರಾಪ್ತವಾನ್ಪರಮಾಂ ಸಿದ್ಧಿಂ ಪರಂ ಯೋಗಂ ಚ ಭಾರತ||
ಭಾರತ! ಇದನ್ನು ಮೊದಲೇ ಯೋಚಿಸಿ ನಿಶ್ಚಯಿಸಿ ದೇವಲನು ಪರಮ ಸಿದ್ಧಿಯನ್ನೂ ಪರಮ ಯೋಗವನ್ನೂ ಪಡೆದನು.
09049062a ತತೋ ದೇವಾಃ ಸಮಾಗಮ್ಯ ಬೃಹಸ್ಪತಿಪುರೋಗಮಾಃ|
09049062c ಜೈಗೀಷವ್ಯಂ ತಪಶ್ಚಾಸ್ಯ ಪ್ರಶಂಸಂತಿ ತಪಸ್ವಿನಃ||
ಆಗ ಬೃಹಸ್ಪತಿಯನ್ನು ಮುಂದಿಟ್ಟುಕೊಂಡು ದೇವತೆ-ತಪಸ್ವಿಗಳು ಒಂದುಗೂಡಿ ಜೈಗೀಷವ್ಯನ ತಪಸ್ಸನ್ನು ಪ್ರಶಂಸಿಸಿದರು.
09049063a ಅಥಾಬ್ರವೀದೃಷಿವರೋ ದೇವಾನ್ವೈ ನಾರದಸ್ತದಾ|
09049063c ಜೈಗೀಷವ್ಯೇ ತಪೋ ನಾಸ್ತಿ ವಿಸ್ಮಾಪಯತಿ ಯೋಽಸಿತಂ||
ಆಗ ಋಷಿವರ ನಾರದನು ದೇವತೆಗಳಿಗೆ “ಜೈಗೀಷವ್ಯನಲ್ಲಿ ತಪಸ್ಸಿಲ್ಲ; ಅಸಿತನನ್ನು ವಿಸ್ಮಯಗೊಳಿಸಿದ್ದಾನೆ ಅಷ್ಟೆ!” ಎಂದನು.
09049064a ತಮೇವಂವಾದಿನಂ ಧೀರಂ ಪ್ರತ್ಯೂಚುಸ್ತೇ ದಿವೌಕಸಃ|
09049064c ಮೈವಮಿತ್ಯೇವ ಶಂಸಂತೋ ಜೈಗೀಷವ್ಯಂ ಮಹಾಮುನಿಂ||
ಅವರೊಂದಿಗೆ ವಾದಿಸುತ್ತಿದ್ದ ಆ ಧೀರ ನಾರದನಿಗೆ ಹಾಗೆ ಹೇಳಬೇಡವೆಂದು ಹೇಳಿ ದಿವೌಕಸರು ಮಹಾಮುನಿ ಜೈಗೀಷವ್ಯನನ್ನು ಪ್ರಶಂಸಿಸಿದರು.
09049065a ತತ್ರಾಪ್ಯುಪಸ್ಪೃಶ್ಯ ತತೋ ಮಹಾತ್ಮಾ
ದತ್ತ್ವಾ ಚ ವಿತ್ತಂ ಹಲಭೃದ್ದ್ವಿಜೇಭ್ಯಃ|
09049065c ಅವಾಪ್ಯ ಧರ್ಮಂ ಪರಮಾರ್ಯಕರ್ಮಾ
ಜಗಾಮ ಸೋಮಸ್ಯ ಮಹತ್ಸ ತೀರ್ಥಂ||
ಮಹಾತ್ಮ ಪರಮ ಆರ್ಯಕರ್ಮಿ ಹಲನು ಅಲ್ಲಿ ಕೂಡ ಸ್ನಾನಮಾಡಿ ದ್ವಿಜರಿಗೆ ವಿತ್ತವನ್ನು ದಾನವನ್ನಾಗಿತ್ತು ಧರ್ಮವನ್ನು ಗಳಿಸಿ, ಮಹಾ ಸೋಮತೀರ್ಥಕ್ಕೆ ಹೋದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಏಕೋನಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ
