ಶ್ರೀಮದ್ಭಗವದ್ಗೀತಾ

ಅರ್ಜುನವಿಷಾದ ಯೋಗ

ಧೃತರಾಷ್ಟ್ರನು ಹೇಳಿದನು:

ಸಂಜಯ! ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ ಯುದ್ಧಮಾಡಲು ಉತ್ಸುಕರಾಗಿ ಸೇರಿದ್ದ ನನ್ನವರು ಮತ್ತು ಪಾಂಡವರು ಏನು ಮಾಡಿದರು?

ಸಂಜಯನು ಹೇಳಿದನು:

“ಪಾಂಡವ ಸೇನೆಯು ಯುದ್ಧವ್ಯೂಹದಲ್ಲಿ ರಚಿಸಿಕೊಂಡಿದ್ದುದನ್ನು ನೋಡಿದ ರಾಜಾ ದುರ್ಯೋಧನನು ಆಚಾರ್ಯನ ಬಳಿಬಂದು ಹೇಳಿದನು:

“ಆಚಾರ್ಯ! ಪಾಂಡುಪುತ್ರರ ಈ ಮಹಾ ಸೇನೆಯನ್ನು ಬುದ್ಧಿವಂತಿಕೆಯಿಂದ ನಿನ್ನ ಶಿಷ್ಯ ದ್ರುಪದಪುತ್ರನು ವ್ಯೂಹದಲ್ಲಿ ರಚಿಸಿದುದನ್ನು ನೋಡು! ಅಲ್ಲಿ ಯುದ್ಧದಲ್ಲಿ ಶೂರರಾದ ಮಹೇಷ್ವಾಸ ಭೀಮಾರ್ಜುನರಿದ್ದಾರೆ, ಯುಯುಧಾನ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ, ಕುಂತಿಭೋಜ, ಶೈಬ್ಯ, ಯುಧಾಮನ್ಯು, ಉತ್ತಮೌಜಸ್ಸು, ಸೌಭದ್ರ, ದ್ರೌಪದಿಯ ಮಕ್ಕಳು - ಎಲ್ಲರೂ ಮಹಾರಥಿಗಳೇ ಇದ್ದಾರೆ. ನಮ್ಮಲ್ಲಿರುವ ವಿಶಿಷ್ಟ ನಾಯಕರನ್ನೂ ತಿಳಿದುಕೋ! ನಿನ್ನ ಸೂಚನೆಗಾಗಿ ನಾನು ಹೇಳುತ್ತೇನೆ. ನೀನು, ಭೀಷ್ಮ, ಕರ್ಣ, ಯುದ್ಧದಲ್ಲಿ ಸದಾ ಜಯವನ್ನೇ ಹೊಂದುವ ಕೃಪ, ಅಶ್ವತ್ಥಾಮ, ವಿಕರ್ಣ, ಮತ್ತು ಸೌಮದತ್ತಿ. ಇನ್ನೂ ಇತರ ಬಹಳ ಮಂದಿ ಶೂರರು, ನಾನಾ ಶಸ್ತ್ರಗಳನ್ನು ಪ್ರಹರಮಾಡಬಲ್ಲರು, ಎಲ್ಲಾ ಯುದ್ಧ ವಿಶಾರದರು ನನಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಭೀಷ್ಮನಿಂದ ರಕ್ಷಿಸಲ್ಪಟ್ಟ ನಮ್ಮ ಸೇನೆಯು ಪರ್ಯಾಪ್ತವಾಗಿಲ್ಲ. ಆದರೆ ಭೀಮನ ರಕ್ಷಣೆಯಲ್ಲಿರುವ ಅವರ ಸೇನೆಯು ಪರ್ಯಾಪ್ತವಾಗಿದೆ. ಈಗ ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ನಿಂತು ಎಲ್ಲ ಕಡೆಗಳಿಂದಲೂ ಭೀಷ್ಮನನ್ನು ರಕ್ಷಿಸಬೇಕು.”

ಅವನಿಗೆ ಹರ್ಷವನ್ನುಂಟುಮಾಡಲೋಸುಗ ಪ್ರತಾಪವಾನ್ ಕುರುವೃದ್ಧ ಪಿತಾಮಹನು ಸಿಂಹನಾದ ಮಾಡಿ ಜೋರಾಗಿ ಶಂಖವನ್ನು ಊದಿದನು. ಅದೇ ಸಮಯದಲ್ಲಿ ಒಂದೇ ಸಮನೆ ಶಂಖಗಳು, ಭೇರಿಗಳು, ಪಣವಾನಕಗಳು, ಮತ್ತು ಗೋಮುಖಗಳು ಮೊಳಗಿದವು. ಆ ಶಬ್ಧವು ಎಲ್ಲ ಕಡೆಯೂ ತುಂಬಿತು. ಆಗ ಬಿಳಿಯ ಕುದುರೆಗಳನ್ನು ಕಟ್ಟಿದ್ದ ಮಹಾರಥದಲ್ಲಿ ನಿಂತಿದ್ದ ಮಾಧವ ಪಾಂಡವರೂ ಕೂಡ ದಿವ್ಯ ಶಂಖಗಳನ್ನು ಊದಿದರು. ಹೃಷೀಕೇಶನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಪೌಂಢ್ರವೆಂಬ ಮಹಾಶಂಖವನ್ನೂ, ಕುಂತೀಪುತ್ರ ರಾಜ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಪಣಿಪುಷ್ಪಕವನ್ನೂ ಊದಿದರು. ಹಾಗೆಯೇ ಮಹಾ ಧನುಸ್ಸನ್ನು ಹಿಡಿದಿದ್ದ ಕಾಶೀರಾಜ, ಮಹಾರಥಿ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಸೋಲರಿಯದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು ಮತ್ತು ಸರ್ವ ಪೃಥ್ವೀಪತಿಗಳೂ, ಮಹಾಬಾಹು ಸೌಭದ್ರ ಅಭಿಮನ್ಯುವೂ ಬೇರೆ ಬೇರೆಯಾಗಿ ತಮ್ಮ ತಮ್ಮ ಶಂಖಗಳನ್ನು ಊದಿದರು. ಲೋಕವನ್ನೇ ತುಂಬಿದ ಆ ಶಂಖಘೋಷವು ಪೃಥಿವ್ಯಾಕಾಶಗಳಲ್ಲಿ ಮಾರ್ದನಿಗೊಂಡು ಕೌರವರ ಎದೆಗಳನ್ನು ನಡುಗಿಸಿತು.

ಶಸ್ತ್ರಗಳನ್ನು ಹಿಡಿದು ಕದನ ಕುತೂಹಲಿಗಳಾಗಿ ತನ್ನ ಎದಿರು ನಿಂತ ಧಾರ್ತರಾಷ್ಟ್ರ ಕೌರವರನ್ನು ನೋಡಿ ಕಪಿಧ್ವಜ ಅರ್ಜುನನು ಬಿಲ್ಲನ್ನೆತ್ತಿ ಹಿಡಿದು ಸರ್ವೇಂದ್ರಿಯ ನಿಯಾಮಕನಾದ ಶ್ರೀಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು:

“ಅಚ್ಯುತ! ಎರಡೂ ಸೇನೆಗಳ ನಡುವೆ ನನ್ನ ರಥವನ್ನು ಒಯ್ದು ನಿಲ್ಲಿಸು. ಈ ರಣರಂಗದಲ್ಲಿ ಕಾದಲು ಕಾದುಕುಳಿತವರನ್ನೂ, ಯಾರು ನನ್ನೆದುರು ಯುದ್ಧಮಾಡಲು ಉತ್ಸುಕರಾಗಿ ನಿಂತಿದ್ದಾರೆ ಎನ್ನುವುದನ್ನು ನಾನೊಮ್ಮೆ ನೋಡುತ್ತೇನೆ. ದುರ್ಬುದ್ಧಿ ದುರ್ಯೋಧನನಿಗೆ ಒಳ್ಳೆಯದನ್ನು ಮಾಡಲೆಂದು ಇಲ್ಲಿಗೈತಂದ ಯುದ್ಧಕುತೂಹಲಿಗಳು ಯಾರೆಂಬುದನ್ನು ಒಮ್ಮೆ ನೋಡುತ್ತೇನೆ.”

ಗುಡಾಕೇಶ ಅರ್ಜುನನು ಹೀಗೆ ಹೇಳಲು, ಹೃಷೀಕೇಶನು ರಥವನ್ನು ಎರಡೂ ಸೇನೆಗಳ ನಡುವೆ ಭೀಷ್ಮ-ದ್ರೋಣರೇ ಮೊದಲಾದ ಸರ್ವ ಮಹೀಕ್ಷಿತರ ಮುಂದೆ ತಂದು ನಿಲ್ಲಿಸಿ

“ಪಾರ್ಥ! ಸೇರಿರುವ ಈ ಕುರುಗಳನ್ನು ನೋಡು!”

ಎಂದನು. ಆ ಎರಡೂ ಸೇನೆಗಳಲ್ಲಿ ತಂದೆಗೆ ಸಮಾನರಾದವರು, ಅಜ್ಜಂದಿರು, ಗುರುಗಳು, ಸೋದರ ಮಾವಂದಿರು, ಒಡಹುಟ್ಟಿದವರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು, ಮತ್ತು ಸುಹೃದಯರು ನಿಂತಿರುವುದನ್ನು ಪಾರ್ಥನು ಕಂಡನು. ಅಲ್ಲಿ ಸೇರಿದ್ದ ಆ ಎಲ್ಲ ಬಂಧುಗಳನ್ನೂ ನೋಡಿದ ಕೌಂತೇಯನು ಕರುಣೆಯುಂಟಾಗಿ ನೊಂದುಕೊಂಡು ಈ ಮಾತುಗಳನ್ನಾಡಿದನು:

“ಕೃಷ್ಣ! ಇಲ್ಲಿ ಯುದ್ಧಕಾಗಿ ಕಲೆತ ಈ ಸ್ವಜನರನ್ನು ಕಂಡು ನನ್ನ ಅವಯವಗಳೆಲ್ಲ ಸಡಿಲಾಗುತ್ತಿವೆ. ಬಾಯಿ ಒಣಗುತ್ತಿದೆ. ಮೈ ನಡುಗುತ್ತಿದೆ. ನವಿರೇಳುತ್ತಿದೆ. ಗಾಂಡೀವ ಧನುಸ್ಸು ಕೈಯಿಂದ ಜಾರುತ್ತಿದೆ. ಚರ್ಮ ಸುಡುತ್ತಿದೆ. ನಿಲ್ಲುವುದಕ್ಕೂ ತ್ರಾಣವಿಲ್ಲ. ಮನಸ್ಸು ಗಾಬರಿಗೊಂಡಿದೆ. ಕೆಟ್ಟ ಶಕುನಗಳು ಕಾಣುತ್ತಿವೆ. ಈ ಯುದ್ಧದಲ್ಲಿ ಸ್ವಜನರನ್ನು ಕೊಂದರೆ ಏನು ಶ್ರೇಯಸ್ಸೋ ಕಾಣೆ. ನನಗೆ ಇದರಿಂದ ದೊರೆಯುವ ವಿಜಯವೂ ಬೇಡ. ರಾಜ್ಯವೂ ಬೇಡ. ಸುಖವೂ ಬೇಡ. ಈ ರಾಜ್ಯದಿಂದಾಗಲೀ ಭೋಗಗಳಿಂದಾಗಲೀ, ಬದುಕಿನಿಂದಾಗಲೀ ನಮಗೆ ಆಗಬೇಕಾಗಿದ್ದೇನಿದೆ? ರಾಜ್ಯ, ಭೋಗ, ಸುಖಗಳನ್ನು ನಾವು ಯಾರಿಗಾಗಿ ಕೋರುತ್ತಿದ್ದೇವೋ ಆ ಗುರುಗಳು, ಪಿತೃಗಳು, ಮಕ್ಕಳು, ಪಿತಾಮಹರು, ಮಾತುಲರು, ಮಾವಂದಿರು, ಮೊಮ್ಮಕ್ಕಳು, ಮೈದುನರು ಮತ್ತು ಇತರ ಸಂಬಂಧಿಕರೆಲ್ಲರೂ ಇಲ್ಲಿ ಯುದ್ದೋದ್ಯಮಿಗಳಾಗಿ ಬಂದಿದ್ದಾರೆ. ಇವರು ನನ್ನನ್ನು ಕೊಲ್ಲುವಂತಿದ್ದರೂ ನಾನವರನ್ನು ಕೊಲ್ಲಲಾರೆ. ನನಗೆ ಮೂರುಲೋಕದ ಒಡೆತನ ಸಿಗುವಹಾಗಿದ್ದರೂ ಕೊಲ್ಲಲಾರದವನು ಈ ಭೂಮಿಯ ಒಡೆತನದ ಆಸೆಗಾಗಿ ಕೊಂದೇನೇ? ಈ ಕೌರವರನ್ನು ಕೊಲ್ಲುವುದರಿಂದ ನಮಗಾಗುವ ಸಂತೋಷವೇನು? ಪಾತಕಿಗಳಾಗಿದ್ದರೂ ಈ ಬಂಧುಗಳನ್ನು ಕೊಂದು ನಮಗೆ ಪಾಪವೇ ಗಂಟು ಬಿದ್ದೀತು! ಬಂಧುಗಳಾದ ಕೌರವರನ್ನು ಕೊಲ್ಲುವುದು ಸರಿಯಲ್ಲ. ನಮ್ಮವರನ್ನೇ ಕೊಂದು ನಾವು ಹೇಗೆ ಸುಖಿಗಳಾದೇವು? ಇವರಾದರೋ ದುರಾಸೆಯಿಂದ ಬುದ್ಧಿಗೆಟ್ಟು ಮಿತ್ರದ್ರೋಹದಿಂದಾಗುವ ಪಾಪವನ್ನೂ ಕುಲನಾಶದಿಂದಾಗುವ ದೋಷವನ್ನೂ ತಿಳಿಯದವರಾಗಿದ್ದಾರೆ. ಕುಲಕ್ಷಯದಿಂದಾಗುವ ಕೇಡನ್ನು ತಿಳಿಯಬಲ್ಲ ನಮಗಾದರೂ ಈ ಪಾಪದಿಂದ ನಿವೃತ್ತರಾಗಬೇಕೆಂದು ತಿಳಿಯಬಾರದೇಕೆ? ಕುಲವು ನಾಶವಾಗಲು ಸನಾತನ ಕುಲಧರ್ಮಗಳು ನಾಶವಾಗುವುವು. ಧರ್ಮವು ನಷ್ಟವಾಗಲು ಕುಲವನ್ನೆಲ್ಲ ಅಧರ್ಮವೇ ಆವರಿಸಿಬಿಡುವುದು. ಅಧರ್ಮವೇ ಬೆಳೆದಾಗ ಕುಲಸ್ತ್ರೀಯರು ಕೆಡುವರು. ಹೆಂಗಸರು ಶೀಲಭ್ರಷ್ಟೆಯರಾಗಿ ಕೆಟ್ಟಾಗ ಜಾತಿಗಳ ಬೆರಕೆಯಾಗುವುದು. ಈ ವರ್ಣಸಾಂಕರ್ಯವು ಕುಲಘಾತಕರನ್ನೂ ಕುಲವನ್ನೂ ಕೂಡಿಯೇ ನರಕಕ್ಕೆ ಬೀಳಿಸುವುದು. ಅಂಥವರ ಪಿತೃಗಳು ಪಿಂಡಪ್ರದಾನವಿಲ್ಲದವರೂ ಜಲತರ್ಪಣವಿಲ್ಲದವರೂ ಆಗಿ ನರಕಕ್ಕೆ ಬೀಳುವರು. ಜಾತಿಯ ಬೆರಕೆಗೆ ಕಾರಣರಾದ ಕುಲಘಾತಕರ ಈ ದೋಷಗಳಿಂದ ಬಹುಕಾಲದಿಂದ ಅನುಸರಿಸಿಕೊಂಡು ಬಂದ ಕಾಲಧರ್ಮಗಳೂ, ಜಾತಿಧರ್ಮಗಳು ಕೆಟ್ಟು ಹೋಗುವವು. ಕುಲಧರ್ಮವನ್ನು ಕೆಡಿಸಿಕೊಂಡ ಮನುಷ್ಯರಿಗೆ ನರಕವಾಸವು ತಪ್ಪಿದ್ದಲ್ಲವೆಂಬುದನ್ನು ಕೇಳಿದ್ದೇವೆ. ರಾಜ್ಯದ ಲಾಭದಿಂದ ದೊರೆಯಬಹುದಾದ ಸುಖದ ಲೋಭದಿಂದ ಸ್ವಜನರನ್ನು ಕೊಲ್ಲಲು ಮುಂದಾಗಿರುವ ನಾವು ದೊಡ್ಡದೊಂದು ಪಾಪಕಾರ್ಯವನ್ನು ಮಾಡಲು ಹೊರಟಿದ್ದೀವಲ್ಲ! ಅಯ್ಯೋ! ಪ್ರತೀಕಾರವನ್ನು ಮಾಡದ, ಶಸ್ತ್ರವನ್ನು ಹಿಡಿಯದ ನನ್ನನ್ನು ಆಯುಧಪಾಣಿಗಳಾದ ಕೌರವರೇ ಕೊಂದುಬಿಟ್ಟರೆ ಎಷ್ಟೋ ಕ್ಷೇಮವಾದೀತು!”

ಇದನ್ನು ಹೇಳಿ ದುಃಖದಿಂದ ಕದಡಿದ ಮನಸ್ಸುಳ್ಳ ಅರ್ಜುನನು ಬಿಲ್ಲು ಬಾಣಗಳನ್ನು ಬಿಸುಟು ರಥದಲ್ಲಿ ಕುಳಿತುಬಿಟ್ಟನು. ಹೀಗೆ ಕನಿಕರದಿಂದ ಕಂಬನಿದುಂಬಿ ದುಃಖಿಸುತ್ತಿರುವ ಅರ್ಜುನನನಿಗೆ ಮಧುಸೂದನನು ಹೇಳಿದನು:

“ಒಳ್ಳೆಯವರಿಗೆ ಹೇಳಿಸಿದಲ್ಲದ, ಸ್ವರ್ಗವನ್ನು ದೊರಕಿಸದ, ಹಾಗೂ ಅಪಕೀರ್ತಿಕರವಾದ ಇಂಥ ಕೊಳಕು ಬುದ್ಧಿಯು ಈ ವಿಷಮಕಾಲದಲ್ಲಿ ನಿನಗೆಲ್ಲಿಂದ ಬಂದಿತು? ಪಾರ್ಥ! ನಪುಂಸಕನಂತೆ ನುಡಿಯದಿರು! ನಿನ್ನಂಥವರಿಗೆ ಇದು ಹೇಳಿಸಿದುದಲ್ಲ. ಹಗೆಗಳನ್ನು ಗೆಲ್ಲಬಲ್ಲ ನೀನು ಕೀಳಾದ ಈ ಎದೆಯಳುಕನ್ನು ತೊರೆದು ಎದ್ದು ನಿಲ್ಲು!”

ಅರ್ಜುನನು ಹೇಳಿದನು:

“ಮಧುಸೂದನ! ಪೂಜಾರ್ಹರಾಗಿರುವ ಭೀಷ್ಮನನ್ನೂ, ದ್ರೋಣನನ್ನೂ ಯುದ್ಧದಲ್ಲಿ ಎದುರಿಸಿ ಬಾಣಗಳಿಂದ ಹೇಗೆ ಹೊಡೆದೇನು? ಮಹಾನುಭಾವ ಗುರುಗಳನ್ನು ಕೊಂದು ರಾಜ್ಯಸುಖವನ್ನು ಪಡೆಯುವುದಕ್ಕಿಂತ ಕೊಲ್ಲದೆಯೆ ತಿರಿದು ತಿನ್ನುವುದು ಲೇಸು. ಸುಖಾಪೇಕ್ಷಿ ಗುರುಗಳನ್ನು ಕೊಂದರೆ ಅವರ ನೆತ್ತರಿನಿಂದ ತೋಯುವ ಭೋಗವನ್ನಲ್ಲವೆ ನಾವು ಉಣ್ಣಬೇಕು? ನಾವು ಗೆಲ್ಲುವೆವೋ ಅವರೇ ಗೆಲ್ಲುವರೋ! ಇವುಗಳಲ್ಲಿ ಯಾವುದು ಮೇಲಾದುದು ಎಂದು ಏನೂ ತಿಳಿಯದಾಗಿದೆ. ಯಾರನ್ನು ಕೊಂದು ನಾವು ಬದುಕಲು ಬಯಸುವುದಿಲ್ಲವೋ ಆ ಕೌರವರೇ ಇದಿರು ಬಂದು ನಿಂತಿದ್ದಾರೆ. ವ್ಯಸನದಿಂದಲೂ ಪಾಪಭೀತಿಯಿಂದಲೂ ಎದೆಗಾರಿಕೆಯನ್ನು ಕಳೆದುಕೊಂಡಿದ್ದೇನೆ. ಧರ್ಮದ ವಿಚಾರದಲ್ಲಿಯೂ ಮನಸ್ಸು ಮಂಕಾಗಿದೆ. ನಾನು ನಿನ್ನ ಶಿಷ್ಯನಾಗಿ ಶರಣುಬಂದಿದ್ದೇನೆ. ಯಾವುದು ಶ್ರೇಯವೆಂದು ನೀನೇ ನಿರ್ಣಯಿಸಿ ದಾರಿ ತೋರು! ದೇವತೆಗಳ ಒಡೆತನದಿಂದಾಗಲೀ, ಬಂಧುಗಳಿಲ್ಲದ ಈ ಸಂಪದ್ಭರಿತ ಭೂಮಿಯ ಒಡೆತನದಿಂದಾಗಲೀ ನನ್ನ ಇಂದ್ರಿಯಗಳನ್ನು ಹಿಂಡಿಬಿಡುವ ಈ ನೋವು ಮಾಯವಾಗದು. ಇದಕ್ಕೆ ಉಪಾಯವನ್ನು ಕಾಣದಾಗಿದ್ದೇನೆ.”

ಪರಂತಪ ಗುಡಾಕೇಶ ಅರ್ಜುನನು ಹೃಷೀಕೇಶ ಕೃಷ್ಣನಿಗೆ ಹೀಗೆ ಹೇಳಿ “ಗೋವಿಂದ! ನಾನು ಯುದ್ಧಮಾಡಲಾರೆ!” ಎಂದು ಸುಮ್ಮನಾದನು.

ಸಾಂಖ್ಯ ಯೋಗ

Image result for bhagavadgitaಎರಡೂ ಸೇನೆಗಳ ನಡುವೆ ಶೋಕಿಸುತ್ತಾ ಕುಳಿತಿದ್ದ ಅರ್ಜುನನನ್ನು ನೋಡಿ ಹೃಷೀಕೇಶನು ನಗುವವನಂತೆ ಹೀಗೆ ಹೇಳತೊಡಗಿದನು:

“ನೀನು ದುಃಖಪಡಬಾರದವರಿಗಾಗಿ ದುಃಖಿಸುತ್ತಿರುವೆ. ತಿಳಿದವರು ಆಡುವಂಥಹ ಮಾತುಗಳನ್ನೂ ಆಡುತ್ತಿರುವೆ. ತಿಳಿದವರು ಹೋದವರ (ಸತ್ತುಹೋದವರ) ಮತ್ತು ಇನ್ನೂ ಹೋಗದೇ ಇದ್ದವರ (ಇರುವವರ) ಕುರಿತು ಶೋಕಿಸುವುದಿಲ್ಲ. ನಾನಾಗಲೀ, ನೀನಾಗಲೀ, ಈ ಅರಸರಾಗಲೀ ಹಿಂದೆ ಇರಲಿಲ್ಲವೆಂದಲ್ಲ. ಮುಂದೆ ಇರುವುದಿಲ್ಲವೆಂದೂ ಅಲ್ಲ. ದೇಹವನ್ನು ಹೊಂದಿರುವಾಗ ಈ ಜೀವನಿಗೆ ಬಾಲ್ಯ, ತಾರುಣ್ಯ, ಮುಪ್ಪು ಎಂಬೀ ಬದಲಾವಣೆಗಳು ಹೇಗೆ ಬರುವವೋ ಹಾಗೆಯೇ ಒಂದು ದೇಹವು ಹೋದರೆ ಇನ್ನೊಂದು ದೇಹವು ಪ್ರಾಪ್ತವಾಗುವುದು. ತಿಳಿದವರು ಈ ವಿಷಯದಲ್ಲಿ ಗಲಿಬಿಲಿಗೊಳ್ಳುವುದಿಲ್ಲ. ಇಂದ್ರಿಯಗಳೊಡನೆ ವಿಷಯಗಳ ಸಂಯೋಗದಿಂದಲೇ ಶೀತ-ಉಷ್ಣ ಮತ್ತು ಸುಖ-ದುಃಖಗಳ ಅನುಭವವಾಗುವುದು. ಈ ಅನುಭವಗಳಿಗೆ ಮೊದಲೊಂದಿದೆ ಮತ್ತು ಕೊನೆಯೊಂದಿದೆ. ಆದುದರಿಂದ ಅವು ಅನಿತ್ಯವಾದವು. ಈ ಅನುಭವಗಳನ್ನು ಮೆಟ್ಟಿ ನಿಲ್ಲು! ಯಾರು ಈ ಅನುಭವಗಳಿಂದ ವ್ಯಥೆಪಡುವುದಿಲ್ಲವೋ ಮತ್ತು ಯಾರಿಗೆ ದುಃಖ ಸುಖಗಳು ಸಮನಾಗಿರುವವೋ ಆ ಧೀರ ಪುರುಷನು ಅಮೃತತ್ವವನ್ನು ಪಡೆದಂತೆ. ಯಾವುದು ಸತ್ಯವಲ್ಲವೋ ಅದರ ಇರುವಿಕೆಯಿಲ್ಲ. ಯಾವುದು ಸತ್ಯವೋ ಅದು ಇಲ್ಲದೇ ಇರುವುದಿಲ್ಲ. ತತ್ತ್ವವನ್ನು ಕಂಡುಕೊಂಡವರು ಇವೆರಡರ ಕುರಿತೂ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಯಾವುದರಿಂದ ಇವೆಲ್ಲವೂ ಇವೆಯೋ ಅದು ಅವಿನಾಶಿಯೆಂದು ತಿಳಿ. ಈ ಅವ್ಯಯವಾದುದನ್ನು ಯಾರೂ ವಿನಾಶಗೊಳಿಸಲಾರರು. ಆ ನಿತ್ಯ, ಅನಾಶಿನಿ, ಅಪ್ರಮೇಯನ ಈ ದೇಹಗಳು ಇಲ್ಲವಾಗುವಂಥವುಗಳು. ಆದುದರಿಂದ ಯುದ್ಧಮಾಡು! ಇದು ಕೊಲ್ಲುತ್ತದೆಯೆಂದೋ ಅಥವಾ ಕೊಲ್ಲಲ್ಪಡುತ್ತದೆಯೆಂದೋ ಯಾರು ತಿಳಿಯುತ್ತಾರೋ ಅವರಿಬ್ಬರೂ ತಿಳಿದುಕೊಂಡಿಲ್ಲ. ಇದು ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಇದು ಹುಟ್ಟಲೂ ಇಲ್ಲ ಸಾಯುವುದೂ ಇಲ್ಲ. ಇದ್ದುದಾದ ಇದು ಮುಂದೆ ಇಲ್ಲದಂತೆ ಆಗುವುದಿಲ್ಲ. ಇದು ಹುಟ್ಟಿದುದಲ್ಲ. ಇದು ನಿತ್ಯ. ಶಾಶ್ವತ. ಪುರಾಣ. ಶರೀರವನ್ನು ಕೊಂದರೂ ಇದು ಸಾಯುವುದಿಲ್ಲ. ಇದು ಅವಿನಾಶಿ, ಹುಟ್ಟಿಲ್ಲದುದು, ನಿತ್ಯ, ಮತ್ತು ಅವ್ಯಯ ಎಂದು ತಿಳಿದ ಪುರುಷನು ಹೇಗೆ ಯಾರನ್ನು ಕೊಲ್ಲಬಲ್ಲನು? ಯಾರನ್ನು ಕೊಲ್ಲಿಸಬಲ್ಲನು?

“ಜೀರ್ಣವಾದ ಬಟ್ಟೆಗಳನ್ನು ತೊರೆದು ಹೊಸಬಟ್ಟೆಗಳನ್ನು ಹೇಗೆ ಮನುಷ್ಯನು ತೊಡುತ್ತಾನೋ ಹಾಗೆ ಇದು ಜೀರ್ಣವಾದ ಶರೀರಗಳನ್ನು ತೊರೆದು ಬೇರೆ ಹೊಸ ದೇಹಗಳನ್ನು ಸೇರುತ್ತದೆ. ಇದನ್ನು ಶಸ್ತ್ರಗಳು ಕತ್ತರಿಸಲಾರವು. ಬೆಂಕಿಯು ಸುಡಲಾರದು. ನೀರು ನೆನಯಿಸಲಾರದು, ಮತ್ತು ಗಾಳಿಯು ಒಣಗಿಸಲಾರದು. ಇದನ್ನು ಕತ್ತರಿಸಲಾಗದು. ಇದನ್ನು ಸುಡಲಾಗದು. ತೋಯಿಸಲಾಗದು ಮತ್ತು ಒಣಗಿಸಲೂ ಆಗದು. ಇದು ನಿತ್ಯ, ಎಲ್ಲದರಲ್ಲಿ ಇರುವುದು, ಸ್ಥಿರವಾಗಿರುವುದು, ಅಚರವಾದುದು ಮತ್ತು ಸನಾತನವಾದುದು. ಇದು ಅವ್ಯಕ್ತ, ಇದು ಅಚಿಂತ್ಯ, ಮತ್ತು ಅವಿಕಾರಿ ಎಂದು ಹೇಳುತ್ತಾರೆ. ಆದುದರಿಂದ ಅದು ಹೀಗೇ ಎಂದು ತಿಳಿದಿದೆಯಾದುದರಿಂದ ನೀನು ಶೋಕಪಡಬೇಕಾದುದಿಲ್ಲ.

“ಒಂದುವೇಳೆ ನೀನು ಇದು ನಿತ್ಯವೂ ಹುಟ್ಟುತ್ತಿರುತ್ತದೆ ಮತ್ತು ಸಾಯುತ್ತಿರುತ್ತದೆ ಎಂದು ತಿಳಿದರೂ ಕೂಡ, ಈ ರೀತಿಯಾಗಿ ಶೋಕಿಸಬೇಕಾಗಿಲ್ಲ. ಯಾಕೆಂದರೆ ಹುಟ್ಟಿದುದಕ್ಕೆ ಸಾವು ನಿಶ್ಚಯವು. ಸತ್ತಿದುದಕ್ಕೆ ಹುಟ್ಟೂ ನಿಶ್ಚಯವೇ. ಅನಿವಾರ್ಯವಾದ ಈ ವಿಷಯದಲ್ಲಿ ದುಃಖಿಸುವುದು ಸರಿಯಲ್ಲ. ಆದಿಯಲ್ಲಿ ಎಲ್ಲವೂ ಅವ್ಯಕ್ತವಾಗಿದ್ದು, ಮಧ್ಯದಲ್ಲಿ ವ್ಯಕ್ತವಾಗುತ್ತವೆ. ಸಾವಿನನಂತರ ಅವು ಅವ್ಯಕ್ತವಾಗುತ್ತವೆ. ಇದರಲ್ಲಿ ದುಃಖಿಸುವುದೇನಿದೆ? ಕೆಲವರು ಇದನ್ನು ಆಶ್ಚರ್ಯವೆಂದು ಕಾಣುತ್ತಾರೆ. ಇತರರು ಇದನ್ನೇ ಆಶ್ಚರ್ಯವೆಂದು ಮಾತನ್ನಾಡುತ್ತಾರೆ. ಇನ್ನೂ ಇತರರು ಇದನ್ನು ಆಶ್ಚರ್ಯವೆಂದು ಕೇಳುತ್ತಾರೆ. ಇದನ್ನು ಕೇಳಿದನಂತರವೂ ಕೆಲವರಿಗೆ ಅರ್ಥವಾಗುವುದಿಲ್ಲ. ಎಲ್ಲ ದೇಹಗಳಲ್ಲಿರುವ ಈ ದೇಹಿಯು ನಿತ್ಯವೂ ಅವಧ್ಯ. ಆದುದರಿಂದ ಈ ಸರ್ವಭೂತಗಳ ಕುರಿತು ನೀನು ಶೋಚಿಸಬೇಕಾಗಿಲ್ಲ.

“ನಿನ್ನ ಸ್ವಧರ್ಮದ ಕುರಿತು ಯೋಚಿಸಿದರೆ ಅಲ್ಲಿಯೂ ಕೂಡ ನೀನು ಹಿಂಜರಿಯುವ ಅವಶ್ಯಕತೆಯಿಲ್ಲ. ಯಾಕೆಂದರೆ ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತ ಹೆಚ್ಚಿನ ಶ್ರೇಯಸ್ಸನ್ನು ಕೊಡುವಂಥಹುದು ಬೇರೆ ಯಾವುದೂ ಇಲ್ಲ. ಸ್ವರ್ಗಕ್ಕೆ ದ್ವಾರವಾಗಿರುವ, ತಾನಾಗಿಯೇ ಬಂದೊದಗಿದ ಇಂಥಹ ಯುದ್ಧವನ್ನು ಪಡೆದ ಕ್ಷತ್ರಿಯರು ಬಹಳ ಸಂತೋಷ ಪಡುತ್ತಾರೆ. ಈ ಧರ್ಮ ಸಂಗ್ರಾಮವನ್ನು ಹೋರಾಡದೇ ಇದ್ದರೆ ನೀನು ಸ್ವಧರ್ಮವನ್ನೂ, ಕೀರ್ತಿಯನ್ನೂ ತೊರೆದು ಪಾಪವನ್ನು ಪಡೆಯುತ್ತೀಯೆ. ಇರುವವರು ಕೊನೆಯವರೆಗೂ ನಿನ್ನ ಈ ಅಕೀರ್ತಿಯ ಕುರಿತು ಹೇಳುತ್ತಿರುತ್ತಾರೆ. ಸಂಭಾವಿತನಿಗೆ ಅಕೀರ್ತಿಯು ಮರಣಕ್ಕಿಂತಲೂ ಅಧಿಕವೆಂದು ಹೇಳುತ್ತಾರೆ. ಮಹಾರಥಿಗಳು ನೀನು ಭಯಪಟ್ಟು ರಣದಿಂದ ಹೊರಹೋದೆಯೆಂದು ತಿಳಿಯುತ್ತಾರೆ. ಯಾರು ನಿನ್ನನ್ನು ಈಗ ಗೌರವಿಸುತ್ತಿರುವರೋ ಅವರಿಗೇ ನೀನು ಹಗುರಾಗುತ್ತೀಯೆ. ನಿನಗೆ ಆಗದವರು ನಿನ್ನ ಸಾಮರ್ಥ್ಯವನ್ನು ನಿಂದಿಸಿ ಹೇಳಬಾರದ ಬಹಳಷ್ಟು ಮಾತುಗಳನ್ನಾಡುತ್ತಾರೆ. ಇದಕ್ಕಿಂದ ಹೆಚ್ಚಿನ ದುಃಖಕರವಾದುದು ಏನಿದೆ? ಒಂದುವೇಳೆ ನೀನು ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ. ಅಥವಾ ಗೆದ್ದರೆ ಭೂಮಿಯನ್ನು ಭೋಗಿಸುತ್ತೀಯೆ. ಆದುದರಿಂದ ಯುದ್ಧಮಾಡಲು ನಿರ್ಧರಿಸಿ ಏಳು. ಸುಖ-ದುಃಖ, ಲಾಭ-ನಷ್ಟ ಮತ್ತು ಜಯ-ಸೋಲುಗಳನ್ನು ಒಂದಾಗಿರಿಸಿಕೊಂಡು ಯುದ್ಧವನ್ನು ಮಾಡು. ಇದರಿಂದ ನೀನು ಪಾಪವನ್ನು ಪಡೆಯುವುದಿಲ್ಲ. ಇದು ಸಾಂಖ್ಯಯೋಗವು ಹೇಳಿರುವಂಥ ವಿಚಾರ.

“ಈಗ ಕರ್ಮಯೋಗವು ಹೇಳುವ ವಿಚಾರವನ್ನು ಕೇಳು. ಇದರಿಂದ ನೀನು ಕರ್ಮ ಬಂಧನದಿಂದ ಮುಕ್ತನಾಗುವೆ. ಇದರಲ್ಲಿ ಪ್ರಯತ್ನವು ನಷ್ಟವಾಯಿತೆನ್ನುವುದಿಲ್ಲ ಅಥವಾ ಪ್ರಯತ್ನವು ಕೆಟ್ಟ ಪರಿಣಾಮವನ್ನು ನೀಡಿತು ಎನ್ನುವುದಿಲ್ಲ. ಈ ರೀತಿ ಸ್ವಲ್ಪವಾದರೂ ನಡೆದುಕೊಳ್ಳುವುದರಿಂದ ಮಹಾಭಯವನ್ನು ದೂರವಿರಿಸಿಕೊಳ್ಳಬಹುದು. ಈ ನಡತೆಯಲ್ಲಿ ಇದು ಒಂದೇ ಒಂದು ವಿಚಾರವಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರಿಗೆ ಬಹುವಿಧದ, ಕೊನೆಯೇ ಇಲ್ಲದ ವಿಚಾರಗಳಿರುತ್ತವೆ. ಇದನ್ನು (ಕರ್ಮಯೋಗವನ್ನು) ತಿಳಿಯದವರು, ಸ್ವರ್ಗವನ್ನೇ ಪರಮ ಗುರಿಯನ್ನಾಗಿಸಿಕೊಂಡ ಕಾಮಾತ್ಮರು ವೇದದ ಪರವಾಗಿಯೇ ವಾದಿಸುತ್ತಾ ವೇದಕ್ಕೆ ಹೊರತಾಗಿ ಇನ್ನಿಲ್ಲ ಎಂದು ಜನ್ಮದ ಫಲವನ್ನು ಕೊಡುವ ಕರ್ಮದ ಕುರಿತು, ಭೋಗ ಐಶ್ವರ್ಯಗಳನ್ನು ನೀಡುವ ಬಹಳ ವಿಶೇಷ ಕ್ರಿಯೆಗಳ ಕುರಿತು ಹೂವಿನಂಥಹ ಮಾತುಗಳನ್ನು ಆಡುತ್ತಿರುತ್ತಾರೆ. ಭೋಗೈಶ್ವರ್ಯದಲ್ಲಿಯೇ ಆಸಕ್ತರಾಗಿ ಆ ಮಾತುಗಳಿಂದ ಚೇತನವನ್ನೇ ಕಳೆದುಕೊಂಡವರ ಬುದ್ಧಿಗೆ ವ್ಯವಸಾಯಾತ್ಮಿಕವಾದ ಸಮಾಧಿಯೇ ಗೊತ್ತಿರುವುದಿಲ್ಲ. ತ್ರಿಗುಣಗಳು ವೇದದ ವಿಷಯವಾಗಿವೆ. ತ್ರಿಗುಣಗಳನ್ನು ಮೀರಿದವನಾಗು! ದ್ವಂದ್ವಗಳಿಲ್ಲದವನಾಗು. ನಿತ್ಯವೂ ಸತ್ಯಗುಣದಲ್ಲಿರುವವನಾಗು. ಯೋಗ-ಕ್ಷೇಮವಿಲ್ಲದವನಾಗು. ಆತ್ಮವಂತನಾಗು. ತಿಳಿದಿರುವ ಬ್ರಾಹ್ಮಣನಿಗೆ ಎಲ್ಲಕಡೆಯೂ ನೀರಿನ ಪ್ರವಾಹವೇ ಇರುವಾಗ ಬಾವಿಯ ನೀರಿನ ಉಪಯೋಗವೆಷ್ಟೋ ಅಷ್ಟೇ ಎಲ್ಲವನ್ನೂ ತಿಳಿದಿರುವ ಬ್ರಾಹ್ಮಣನಿಗೆ ವೇದಗಳಿಂದ ಉಪಯೋಗ. ಕರ್ಮಾಚರಣೆಯಲ್ಲಿ ಮಾತ್ರ ನಿನಗೆ ಅಧಿಕಾರವಿದೆ. ಅದರ ಫಲದ ಮೇಲೆಂದೂ ಇಲ್ಲ. ಫಲವನ್ನು ಕಾರಣವಾಗಿಟ್ಟುಕೊಂಡು ಕರ್ಮ ಮಾಡಬೇಡ. ಕರ್ಮವನ್ನು ಮಾಡದೆಯೂ ಇರಬೇಡ. ಬಾಂಧವ್ಯವನ್ನು ತೊರೆದು, ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿದ್ದು, ಯೋಗಸ್ಥನಾಗಿ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎನ್ನುತ್ತಾರೆ. ಕರ್ಮವು ಬುದ್ಧಿಯೋಗಕ್ಕಿಂತ ತುಂಬಾ ಕೀಳು. ಬುದ್ಧಿಯೋಗದಲ್ಲಿ ಶರಣು ಹೋಗು. ಫಲಕ್ಕಾಗಿ ಕರ್ಮಮಾಡುವವರು ಕೃಪಣರು. ಬುದ್ಧಿಯುಕ್ತನಾದವನು ಸುಕೃತ ದುಷ್ಕೃತಗಳೆರಡನ್ನೂ ತೊರೆಯುತ್ತಾನೆ. ಆದುದರಿಂದ ಯೋಗವನ್ನು ಅಳವಡಿಸಿಕೋ. ಕರ್ಮದಲ್ಲಿ ಕೌಶಲ್ಯದಿಂದಿರುವುದೇ ಯೋಗ. ತಿಳಿದವರು ಬುದ್ಧಿಯುಕ್ತರಾಗಿ ಕರ್ಮದಿಂದುಂಟಾದ ಫಲವನ್ನು ತ್ಯಜಿಸಿ ಜನ್ಮಬಂಧನದಿಂದ ಬಿಡುಗಡೆ ಹೊಂದಿ ಅನಾಮಯ ಪದವನ್ನು ಪಡೆಯುತ್ತಾರೆ. ಯಾವಾಗ ಮನಸ್ಸಿನ ಕಿಲುಬು ತೊಗಲುವುದೋ ಆಗ ನೀನು ಕೇಳಿದ್ದರ ಮತ್ತು ಮುಂದೆ ಕೇಳಬಹುದಾದುದರ ಯತಾರ್ಥ ತಿಳುವಳಿಕೆಯನ್ನು ಪಡೆಯುವೆ. ಈಗ ಕೇಳಿದುದರ ಗೊಂದಲಗಳಿಂದ ಯಾವಾಗ ನೀನು ನಿಶ್ಚಲವಾಗಿ ನಿಲ್ಲುತ್ತೀಯೋ ಮತ್ತು ಸಮಾಧಾನದಿಂದ ಅಚಲ ಬುದ್ಧಿಯವನಾಗುತ್ತೀಯೋ ಆಗ ಯೋಗವನ್ನು ಹೊಂದುತ್ತೀಯೆ.”

ಅರ್ಜುನನು ಹೇಳಿದನು:

“ಕೇಶವ! ಸಮಾಧಿಯಲ್ಲಿರುವ ಸ್ಥಿತಪ್ರಜ್ಞನ ವ್ಯಾಖ್ಯೆ ಏನು? ಸ್ಥಿತಬುದ್ದಿಯುಳ್ಳವನ ಮಾತು ಹೇಗಿರುತ್ತದೆ? ಅವನು ಹೇಗೆ ಕುಳಿತಿರುತ್ತಾನೆ? ಓಡಾಡುತ್ತಿರುತ್ತಾನೆ?”

ಶ್ರೀಭಗವಾನನು ಹೇಳಿದನು:

“ಪಾರ್ಥ! ಮನೋಗತಗಳಾದ ಎಲ್ಲ ಕಾಮಗಳನ್ನೂ ಸಂಪೂರ್ಣವಾಗಿ ತೊರೆದಾಗ, ಆತ್ಮನು ಆತ್ಮನಲ್ಲಿಯೇ ತುಷ್ಟನಾದಾಗ, ಸ್ಥಿತಪ್ರಜ್ಞ ಎಂದು ಕರೆಯಲ್ಪಡುತ್ತಾನೆ. ದುಃಖಗಳಲ್ಲಿ ಕುಗ್ಗದ ಸುಖಗಳಲ್ಲಿ ಹಿಗ್ಗದ ಮನಸ್ಸುಳ್ಳ, ರಾಗ, ಭಯ ಮತ್ತು ಕ್ರೋಧಗಳನ್ನು ಕಳೆದುಕೊಂಡ ಮುನಿಯನ್ನು ಸ್ಥಿಥಪ್ರಜ್ಞನೆಂದು ಹೇಳುತ್ತಾರೆ. ಅವನ ಪ್ರಜ್ಞೆಯು ಎಲ್ಲಿಯೂ ಯಾವುದರೊಂದಿಗೂ ಅಂಟಿಕೊಳ್ಳದೇ ಪ್ರತಿಷ್ಠಿತವಾಗಿರುತ್ತದೆ. ಎಲ್ಲಿಂದಲೂ ಯಾವುದನ್ನೂ, ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಬಂದಿತೆಂದು ಸಂತೋಷಪಡುವುದಿಲ್ಲ ಅಥವಾ ಬೇಡವೆಂದು ತಿರಸ್ಕರಿಸುವುದಿಲ್ಲ. ಯಾವಾಗ ಇವನು ಇಂದ್ರಿಯಗಳನ್ನು ಸಂಪೂರ್ಣವಾಗಿ ಆಮೆಯು ತನ್ನ ಅಂಗಗಳನ್ನು ಹೇಗೋ ಹಾಗೆ ಒಳಗೆ ಎಳೆದುಕೊಳ್ಳುತ್ತಾನೋ ಆಗ ಅವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ. ನಿರಾಹಾರಿಯಾದ ದೇಹಿಗೆ ವಿಷಯಸುಖಗಳು ದೂರವಾಗುತ್ತವೆ. ಪರವನ್ನು ಕಂಡವನಿಗೆ ರುಚಿಯೂ ಕೂಡ ಬೇಡವಾಗುತ್ತದೆ. ಪಂಡಿತನಾದ ಮನುಷ್ಯನು ಪ್ರಯತ್ನಿಸಿದರೂ ಕೂಡ ಇಂದ್ರಿಯಗಳು ಹುಚ್ಚೆದ್ದರೆ ಮನಸ್ಸನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳುತ್ತವೆ.

“ನನ್ನಲ್ಲಿ ಯುಕ್ತನಾಗಿ ಅವೆಲ್ಲವನ್ನೂ ನಿಯಂತ್ರಿಸಬೇಕು. ಯಾರ ಇಂದ್ರಿಯಗಳು ಅವನ ವಶದಲ್ಲಿರುತ್ತದೆಯೋ ಅವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ. ಮನುಷ್ಯನು ವಿಷಯಗಳಲ್ಲಿ ಧ್ಯಾನವಿಟ್ಟಿರುವುದರಿಂದ ಅವುಗಳ ಜೊತೆ ಅಂಟಿಕೊಳ್ಳುತ್ತಾನೆ. ಅಂಟಿಕೊಳ್ಳುವುದರಿಂದ ಕಾಮವು ಹುಟ್ಟುತ್ತದೆ, ಕಾಮದಿಂದ ಕ್ರೋಧವು ಹುಟ್ಟುತ್ತದೆ. ಕ್ರೋಧದಿಂದ ಸಮ್ಮೋಹವುಂಟಾಗುತ್ತದೆ, ಸಮ್ಮೋಹದಿಂದ ಸ್ಮೃತಿವಿಭ್ರಮವಾಗುತ್ತದೆ. ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ, ಬುದ್ಧಿನಾಶದಿಂದ ಅವನು ನಾಶಹೊಂದುತ್ತಾನೆ. ಆದರೆ ರಾಗದ್ವೇಶಗಳಿಂದ ಮುಕ್ತವಾದ, ಅತ್ಮದ ವಶದಲ್ಲಿರುವು ಇಂದ್ರಿಯಗಳ ಮೂಲಕ ವಿಷಯಗಳನ್ನು ಪರಿಗ್ರಹಿಸಿದರೆ ಅವನು ಪ್ರಸಾದವನ್ನು ಹೊಂದುತ್ತಾನೆ. ಪ್ರಸಾದದಿಂದ ಸರ್ವದುಃಖಗಳ ಹರಣವಾಗುತ್ತದೆ. ಯಾಕೆಂದರೆ ಪ್ರಸನ್ನಚೇತಸನ ಬುದ್ಧಿಯು ನೆಲೆಯಲ್ಲಿ ನಿಂತಿರುತ್ತದೆ. ಬುದ್ಧಿಯು ನೆಲೆಯಿಲ್ಲದವನಲ್ಲಿ ಯುಕ್ತಭಾವನೆಯು ಇರುವುದಿಲ್ಲ. ಯುಕ್ತಭಾವನೆಯಿಲ್ಲದವನಿಗೆ ಶಾಂತಿಯೆನ್ನುವುದಿರುವುದಿಲ್ಲ. ಶಾಂತಿಯಿಲ್ಲದವನಿಗೆ ಸುಖವು ಎಲ್ಲಿಂದ? ಯಾರ ಮನಸ್ಸು ಅಲೆಯುವ ಇಂದ್ರಿಯಗಳನ್ನೇ ಅನುಸರಿಸಿ ಹೋಗುತ್ತದೆಯೋ ಅದು ಅವನ ಪ್ರಜ್ಞೆಯನ್ನು ನೀರಿನಲ್ಲಿ ದೋಣಿಯನ್ನು ಗಾಳಿಯು ಹೇಗೋ ಹಾಗೆ ತೇಲಿಸುತ್ತದೆ. ಆದುದರಿಂದ ಇಂದ್ರಿಯಗಳೆಲ್ಲವನ್ನೂ ಅವುಗಳ ವಿಷಯಗಳಿಂದ ಹಿಂದೆ ಎಳೆದುಕೊಂಡಿರುವವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ. ಅಂಥಹ ಸಂಯಮಿ ಮುನಿಯು ಸರ್ವಭೂತಗಳಿಗೂ ಕತ್ತಲೆಯೆನಿಸಿರುವಾಗ ಎಚ್ಚರದಿಂದಿರುತ್ತಾನೆ ಮತ್ತು ಭೂತಗಳು ಎಚ್ಚರದಿಂದಿರುವಾಗ ರಾತ್ರಿಯನ್ನು ಕಾಣುತ್ತಾನೆ. ಎಲ್ಲೆಡೆಯಿಂದ ನೀರು ಹರಿದುಬಂದು ಸೇರಿದರೂ ಸಮುದ್ರವು ಅಚಲವಾಗಿರುವಂತೆ ಎಲ್ಲ ಕಾಮಗಳು ಪ್ರವೇಶಿಸಿದರೂ ಅಚಲವಾಗಿರುವವನಿಗೆ ಶಾಂತಿ ದೊರೆಯುತ್ತದೆ. ವಿಷಯಗಳಲ್ಲಿ ಕಾಮವನ್ನಿಟ್ಟಿರುವವನಿಗಲ್ಲ. ಸರ್ವ ಕಾಮಗಳನ್ನೂ ತೊರೆದು ಯಾವುದಕ್ಕೂ ಅಂಟಿಕೊಳ್ಳದೇ ಎಲ್ಲಕಡೆ ಸಂಚರಿಸುತ್ತಿರುತ್ತಾನೋ, ಇದು ನಾನು ಮತ್ತು ನನ್ನದು ಎಂಬ ಅಹಂಕಾರವಿಲ್ಲದೇ ಇದ್ದವನಿಗೆ ಶಾಂತಿಯು ದೊರೆಯುತ್ತದೆ. ಇದೇ ಬ್ರಾಹ್ಮೀ ಸ್ಥಿತಿ. ಇದನ್ನು ಹೊಂದಿದವನು ವಿಮುಹ್ಯನಾಗುವುದಿಲ್ಲ. ಅಂತ್ಯಕಾಲದಲ್ಲಿ ಕೂಡ ಈ ಸ್ಥಿತಿಯನ್ನು ಹೊಂದಿದವನು ಬ್ರಹ್ಮನಿರ್ವಾನವನ್ನು ಪಡೆಯುತ್ತಾನೆ.” 

ಕರ್ಮಯೋಗ

Image result for bhagavadgitaಅರ್ಜುನನು ಹೇಳಿದನು:

“ಜನಾರ್ದನ! ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠವೆಂದು ನಿನ್ನ ಅಭಿಪ್ರಾಯವಾದರೆ ಘೋರವಾದ ಕರ್ಮದಲ್ಲಿ ನನ್ನನ್ನೇಕೆ ತೊಡಗಿಸುವೆ? ಒಮ್ಮೆ ಕರ್ಮ, ಒಮ್ಮೆ ಜ್ಞಾನ ಇವುಗಳನ್ನು ಬೆರೆಸಿ ತೊಡಕಾಗಿ ಮಾತನಾಡಿ ನನ್ನ ಬುದ್ಧಿಯನ್ನೇ ಮಂಕಾಗಿಸಿದ್ದೀಯೆ. ನನಗೆ ಶ್ರೇಯಸ್ಕರವಾದ ಒಂದೇ ಮಾರ್ಗವನ್ನು ನಿಶ್ಚಯಿಸಿ ಹೇಳು.”

ಶ್ರೀಭಗವಂತನು ಹೇಳಿದನು:

“ಅನಘ! ನಾನು ಮೊದಲೇ ಹೇಳಿದಂತೆ ಈ ಲೋಕದಲ್ಲಿ ಎರಡು ವಿಧದ ನಿಷ್ಠೆಗಳಿವೆ: ಸಾಂಖ್ಯರಿಗೆ ಜ್ಞಾನಯೋಗ ಮತ್ತು ಯೋಗಿಗಳಿಗೆ ಕರ್ಮಯೋಗ. ಕರ್ಮಗಳನ್ನು ಮಾಡದೇ ಇರುವುದರಿಂದ ಮನುಷ್ಯನಿಗೆ ಕರ್ಮಗಳಿಂದ ಮುಕ್ತಿ ದೊರೆಯುವುದಿಲ್ಲ. ಕೇವಲ ಸನ್ಯಾಸದಿಂದ ಸಿದ್ಧಿಯು ದೊರೆಯುವುದಿಲ್ಲ. ಯಾಕೆಂದರೆ ಯಾರೂ ಒಂದು ಕ್ಷಣವೂ ಕೂಡ ಕರ್ಮವನ್ನು ಮಾಡದೇ ಇರಲಾರನು. ಪ್ರಕೃತಿಯಿಂದ ಜನಿಸಿದ ಗುಣಗಳು ಅವಶ್ಯವಾಗಿ ಎಲ್ಲರಿಂದಲೂ ಕರ್ಮವನ್ನು ಮಾಡಿಸುತ್ತವೆ. ಕರ್ಮೇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಮನಸ್ಸಿನಲ್ಲಿ ಇಂದ್ರಿಯಗಳ ವಸ್ತುಗಳ ಕುರಿತು ಸ್ಮರಿಸುತ್ತಿರುವಂಥಹ ವಿಮೂಢಾತ್ಮನನ್ನು ಮಿಥ್ಯಾಚಾರಿ ಎಂದು ಹೇಳುತ್ತಾರೆ. ಯಾರು ಇಂದ್ರಿಯಗಳನ್ನು ಮನಸ್ಸಿನಿಂದ ನಿಯಂತ್ರಿಸಿ ಕರ್ಮಯೋಗದಲ್ಲಿ ಆಸಕ್ತನಾಗಿ ಕರ್ಮೇಂದ್ರಿಯಗಳಿಂದ ಕರ್ಮಮಾಡುತ್ತಾನೋ ಅವನು ವಿಶೇಷವೆನಿಸಿಕೊಳ್ಳುತ್ತಾನೆ. ನಿನಗೆ ನಿಯೋಜಿಸಿದ ಕರ್ಮಗಳನ್ನು ಮಾಡು. ಯಾಕೆಂದರೆ ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದು ಹೆಚ್ಚಿನದು. ಅಕರ್ಮಣದಿಂದ ಶರೀರಯಾತ್ರೆಯೂ ಅಸಾಧ್ಯವಾಗುತ್ತದೆ. ಯಜ್ಞಾರ್ಥವಲ್ಲದ ಕರ್ಮಗಳೀಂದ ಮನುಷ್ಯನು ಕರ್ಮಬಂಧನಕ್ಕೊಳಗಾಗುತ್ತಾನೆ. ಆದುದರಿಂದ ಫಲಗಳಿಗೆ ಅಂಟಿಕೊಳ್ಳದೇ ಕರ್ಮಗಳನ್ನು ಮಾಡು.

“ಹಿಂದೆ ಯಜ್ಞದೊಂದಿಗೆ ಪ್ರಜೆಗಳನ್ನು ಸೃಷ್ಟಿಸಿದ ಪ್ರಜಾಪತಿಯು ಹೇಳಿದನು: “ಇದರಿಂದ ಇಮ್ಮಡಿಗೊಳ್ಳಿ. ಇದೇ ನಿಮ್ಮ ಇಷ್ಟಗಳನ್ನು ಪೂರೈಸುತ್ತದೆ. ಇದರಿಂದ ದೇವತೆಗಳನ್ನು ಭಾವಯಿಸಿ. ಆ ದೇವತೆಗಳು ನಿಮ್ಮನ್ನು ಭಾವಯಿಸಲಿ. ಪರಸ್ಪರರನ್ನು ಭಾವಯಿಸಿಕೊಂಡು ಪರಮ ಶ್ರೇಯಸ್ಸನ್ನು ಪಡೆಯಿರಿ. ಯಜ್ಞದಿಂದ ಭಾವಿತರಾದ ದೇವತೆಗಳು ನಿಮಗೆ ಇಷ್ಟಗಳನ್ನೂ ಬೋಗಗಳನ್ನೂ ನೀಡುತ್ತಾರೆ. ಅವರಿಂದ ಪಡೆದುದ್ದುದನ್ನು ಅವರಿಗೇ ಕೊಡದೇ ಭೋಗಿಸುವವನು ಕಳ್ಳನೇ ತಾನೇ. ಯಜ್ಞಶಿಷ್ಟವನ್ನು ಸೇವಿಸುವವರು ಸರ್ವ ಕಿಲ್ಬಿಷಗಳಿಂದ ಮುಕ್ತರಾಗುತ್ತಾರೆ. ಆದರೆ ತಮಗಾಗಿಯೇ ಅಡುಗೆಮಾಡುವ ಪಾಪಿಗಳು ಪಾಪವನ್ನೆಸಗುತ್ತಾರೆ. ಅನ್ನದಿಂದ ಭೂತಗಳಾಗುತ್ತವೆ. ಪರ್ಜನ್ಯದಿಂದ ಅನ್ನವುಂಟಾಗುತ್ತದೆ. ಯಜ್ಞದಿಂದ ಪರ್ಜನ್ಯವಾಗುತ್ತದೆ. ಕರ್ಮದಿಂದಲೇ ಯಜ್ಞವಾಗುತ್ತದೆ.”

“ಕರ್ಮವು ಬ್ರಹ್ಮೋಧ್ಬವೆಂದು ತಿಳಿ. ಬ್ರಹ್ಮವು ಅಕ್ಷರದಿಂದ ಹುಟ್ಟಿದೆ. ಆದುದರಿಂದ ಸರ್ವಗತನಾದ ನಿತ್ಯನಾದ ಬ್ರಹ್ಮನು ಯಜ್ಞದಲ್ಲಿ ಪ್ರತಿಷ್ಠಿತನಾಗಿದ್ದಾನೆ. ಹೀಗೆ ತಿರುಗಿಸಲ್ಪಟ್ಟ ಚಕ್ರವನ್ನು ಇಲ್ಲಿ ಯಾರು ಅನುಸರಿಸುವುದಿಲ್ಲವೋ ಅಂಥಹ ಇಂದ್ರಿಯಗಳೊಡನೆ ಆಟವಾಡುತ್ತಿರುವ ಪಾಪಜೀವಿಯು ವ್ಯರ್ಥವಾಗಿ ಜೀವಿಸುತ್ತಾನೆ. ಯಾರು ಆತ್ಮನೊಂದಿಗೇ ಆನಂದಿಸುತ್ತಾನೋ ಆತ್ಮನಿಂದಲೇ ತೃಪ್ತನಾಗಿರುತ್ತಾನೋ ಮತ್ತು ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ ಅ ಮಾನವನಿಗೆ ಕಾರ್ಯವೆನ್ನುವುದೇ ಇಲ್ಲ. ಅವನಿಗೆ ಕರ್ಮವನ್ನು ಮಾಡುವುದರಲ್ಲಿ ಅಥವಾ ಕರ್ಮವನ್ನು ಮಾಡುವುದೇ ಇರುವುದರಲ್ಲಿ ಎಂದೂ ಅರ್ಥವಿಲ್ಲ. ಅವನಿಗೆ ಸರ್ವಭೂತಗಳಲ್ಲಿಯೂ ಯಾವರೀತಿಯ ಅವಲಂಬನೆಯೂ ಇರುವುದಿಲ್ಲ. ಆದುದರಿಂದ ಯಾವಾಗಲೂ ಅಸಕ್ತನಾಗಿ ಮಾಡಬೇಕಾದ ಕರ್ಮವನ್ನು ಮಾಡು. ಏಕೆಂದರೆ ಅಸಕ್ತನಾಗಿ ಕರ್ಮಮಾಡುವ ಪುರುಷನು ಅತ್ಯುತ್ತಮವಾದುದನ್ನು ಪಡೆಯುತ್ತಾನೆ. ಕರ್ಮದಿಂದಲೇ ಜನಕಾದಿಗಳು ಸಂಸಿದ್ಧಿಗೆ ಪ್ರಯತ್ನಿಸಿದರು. ಲೋಕಸಂಗ್ರಹವನ್ನು ಗುರಿಯಾಗಿಟ್ಟುಕೊಂಡೂ ಕರ್ಮಗಳನ್ನು ಮಾಡಬೇಕಾಗುತ್ತದೆ. ಶ್ರೇಷ್ಠನಾದವನು ಏನೇನು ಆಚರಣೆಗಳನ್ನು ಮಾಡುತ್ತಾನೋ ಅವುಗಳನ್ನೇ ಇತರ ಜನರೂ ಮಾಡುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಎತ್ತಿಹಿಡಿಯುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.

“ಮೂರು ಲೋಕಗಳಲ್ಲಿಯೂ ನಾನು ಮಾಡಬೇಕಾದ ಕರ್ತವ್ಯವೊಂದೂ ಇಲ್ಲ. ನಾನು ಪಡೆಯದೇ ಇದ್ದುದು ಅಥವಾ ಪಡೆಯಬೇಕಾಗಿದ್ದುದು ಏನೂ ಇಲ್ಲ. ಆದರೂ ನಾನು ಕರ್ಮಾಚರಣೆ ಮಾಡುತ್ತೇನೆ. ಒಂದು ವೇಳೆ ಯಾವಾಗಲಾದರೂ ನಾನು ಈ ಕರ್ಮಗಳನ್ನು ಅಯಸಗೊಳ್ಳದೇ ಮುಂದುವರಿಸಿಕೊಂಡು ಹೋಗಲಿಲ್ಲವೆಂದಾದರೆ ಮನುಷ್ಯರು ಎಲ್ಲರೀತಿಯಲ್ಲಿಯೂ ನನ್ನನ್ನು ಅನುಸರಿಸುತ್ತಾರೆ. ನಾನು ಕರ್ಮಗಳನ್ನು ಮಾಡದೇ ಇದ್ದರೆ ಈ ಲೋಕಗಳು ಕುಸಿದುಬೀಳುತ್ತವೆ. ಸಂಕರದ ಕರ್ತನಾಗುತ್ತೇನೆ ಮತ್ತು ಈ ಪ್ರಜೆಗಳ ನಾಶವಾಗುತ್ತದೆ. ಅವಿದ್ವಾಂಸರು ಹೇಗೆ ಸಕ್ತರಾಗಿ ಕರ್ಮಗಳನ್ನೆಸಗುತ್ತಾರೋ ಹಾಗೆ ಲೋಕಸಂಗ್ರಹವನ್ನು ಬಯಸಿ ವಿದ್ವಾಂಸನಾದವನು ಅಸಕ್ತನಾಗಿ ಕರ್ಮಗಳನ್ನು ಮಾಡಬೇಕು. ಕರ್ಮಕ್ಕೆ ಅಂಟಿಕೊಂಡಿರುವ ಅಜ್ಞಾನಿಗಳಲ್ಲಿ ಬುದ್ಧಿಭೇದವನ್ನು ಹುಟ್ಟಿಸಬಾರದು. ತಿಳಿದವನು ಯುಕ್ತನಾಗಿದ್ದು ಕರ್ಮಗಳನ್ನು ಮಾಡಿಕೊಂಡು ಅವರು ಎಲ್ಲ ಕರ್ಮಗಳನ್ನೂ ಮಾಡುವಂತೆ ಮಾಡಬೇಕು. ಪ್ರಕೃತಿಯ ಗುಣಗಳೇ ಎಲ್ಲರೀತಿಯಲ್ಲಿಯೂ ಕರ್ಮಗಳನ್ನು ಮಾಡಿಸುತ್ತವೆ. ಅಹಂಕಾರದ ವಿಮೂಢಾತ್ಮನು ನಾನು ಮಾಡುತ್ತೇನೆ ಎಂದು ತಿಳಿಯುತ್ತಾನೆ. ಆದರೆ ಗುಣ ಮತ್ತು ಕರ್ಮಗಳ ವಿಭಜನೆಯ ತತ್ವವನ್ನು ತಿಳಿದವನು ಗುಣಗಳು ಗುಣಗಳ ಮೇಲೆ ವರ್ತಿಸುತ್ತಿವೆ ಎಂದು ತಿಳಿದು ಅಂಟಿಕೊಳ್ಳುವುದಿಲ್ಲ. ಪ್ರಕೃತಿಯ ಗುಣಗಳಲ್ಲಿ ಮುಳುಗಿರುವವರು ಗುಣಗಳಿಂದುಂಟಾದ ಕರ್ಮಗಳಿಗೆ ಅಂಟಿಕೊಂಡಿರುತ್ತಾರೆ.

“ಎಲ್ಲವನ್ನೂ ತಿಳಿಯದೇ ಇರುವ ಆ ಮಂದರನ್ನು ಎಲ್ಲವನ್ನೂ ತಿಳಿದಿರುವವನು ವಿಚಲಿಸಬಾರದು. ಎಲ್ಲ ಕರ್ಮಗಳನ್ನೂ ನನಗೆ ಒಪ್ಪಿಸಿ ಆಧ್ಯಾತ್ಮಚೇತಸನಾಗಿ, ಫಲದ ಅಸೆಯನ್ನು ತೊರೆದು, ನನ್ನತನವನ್ನು ತೊರೆದವನಾಗಿ ವಿಗತಜ್ವರನಾಗಿ ಯುದ್ಧಮಾಡು. ನನ್ನ ಈ ಮತವನ್ನು ನಿತ್ಯವೂ ಯಾವ ಮಾನವನು ಶ್ರದ್ಧಾವಂತನಾಗಿ ಅನಸೂಯನಾಗಿ ಅನುಷ್ಠಾನಮಾಡುತ್ತಾನೋ ಅವನೂ ಕೂಡ ಕರ್ಮಗಳಿಂದ ಮುಕ್ತನಾಗುತ್ತಾನೆ. ಆದರೆ ನನ ಈ ಮತವನ್ನು ತಿರಸ್ಕರಿಸಿ ಇದರಂತೆ ನಡೆದುಕೊಳ್ಳುವುದಿಲ್ಲವೋ ಅಂಥಹ ಸರ್ವಜ್ಞಾನ ವಿಮೂಢರು ಅಚೇತಸರು ನಷ್ಟವೆಂದು ತಿಳಿ. ಜ್ಞಾನಿಯೂ ಕೂಡ ತನ್ನ ಪ್ರಕೃತಿಯ ಪ್ರಕಾರ ನಡೆದುಕೊಳ್ಳುತ್ತಾನೆ. ಆದುದರಿಂದ ಭೂತಗಳು ಪ್ರಕೃತಿಯನ್ನೇ ಅನುಸರಿಸುತ್ತವೆ.

“ನಿಗ್ರಹವು ಏನು ಮಾಡುತ್ತದೆ? ಇಂದ್ರಿಯ ಇಂದ್ರಿಯಕ್ಕೂ ಅದರ ವಿಷಯವಸ್ತುವಿನ ಕುರಿತಾದ ರಾಗ ದ್ವೇಷಗಳು ವವಸ್ಥಿತಗೊಂಡಿವೆ. ಅವೆರಡರ ಮಧ್ಯೆ ಸಿಲುಕಿಕೊಳ್ಳಬಾರದು. ಏಕೆಂದರೆ ಅವೆರಡೂ ಅವನ ಪ್ರತಿಸ್ಪರ್ಧಿಗಳು. ಗುಣಯುಕ್ತವಾಗಿಲ್ಲದಿದ್ದರೂ ಸ್ವಧರ್ಮವೇ ಚೆನ್ನಾಗಿ ಅನುಷ್ಠಾನಕ್ಕೆ ತಂದ ಪರಧರ್ಮಕ್ಕಿಂತ ಒಳ್ಳೆಯದು. ಸ್ವಧರ್ಮದಲ್ಲಿದ್ದುಕೊಂಡು ಸಾಯುವುದು ಶ್ರೇಯ. ಪರಧರ್ಮವು ಭಯವನ್ನು ತಂದೊಡ್ಡುತ್ತದೆ.”

ಅರ್ಜುನನು ಹೇಳಿದನು:

“ವಾರ್ಷ್ಣೇಯ! ಹಾಗಿದ್ದರೆ ಪುರುಷನು ಯಾವುದರಿಂದ ಪ್ರಚೋದನೆಗೊಂಡು ಪುರುಷನು ತನ್ನ ಇಷ್ಟದ ವಿರುದ್ಧವಾಗಿ ಬಲಾತ್ಕಾರದಿಂದ ಮಾಡಿಸಲ್ಪಟ್ಟಿದೆಯೋ ಎನ್ನುವಂತೆ ಪಾಪವನ್ನು ಎಸಗುತ್ತಾನೆ?”

ಶ್ರೀ ಭಗವಂತನು ಹೇಳಿದನು:

“ರಜೋಗುಣಸಮುದ್ಭವವಾದ ಈ ಕಾಮ ಮತ್ತು ಈ ಕ್ರೋಧಗಳು ಮಹಾಭಕ್ಷಕರು ಮತ್ತು ಮಹಾಪಾಪಿಗಳು. ಇವೇ ವೈರಿಗಳೆಂದು ತಿಳಿ. ಬೆಂಕಿಯು ಹೊಗೆಯಿಂದ ಮುಚ್ಚಿಕೊಂಡಿರುವಂತೆ, ಕನ್ನಡಿಯು ಕೊಳೆಯಿಂದ ಮುಚ್ಚಿಕೊಂಡಂತೆ ಭ್ರೂಣವು ಗರ್ಭದಿಂದ ಆವೃತಗೊಂಡಿರುವಂತೆ ಇದು ಅದರಿಂದ ಆವೃತಗೊಂಡಿದೆ. ಜ್ಞಾನಿಗಳ ನಿತ್ಯವೈರಿಯಾದ ಕಾಮರೂಪದ ತೃಪ್ತಿಯನ್ನುವುದೇ ಇಲ್ಲದ ಈ ಬೆಂಕಿಯಿಂದಲೇ ಜ್ಞಾನವು ಆವೃತವಾಗಿರುತ್ತದೆ. ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯು ಇದರ ಅಧಿಷ್ಠಾನವೆಂದು ಹೇಳುತ್ತಾರೆ. ಇವುಗಳಿಂದಲೇ ಇದು ಜ್ಞಾನಕ್ಕೆ ಮುಸುಕು ಹಾಕಿ ದೇಹಿಯನ್ನು ವಿಮೋಹಗೊಳಿಸುತ್ತದೆ. ಆದುದರಿಂದ ಮೊದಲು ಇಂದ್ರಿಯಗಳನ್ನು ನಿಯಂತ್ರಿಸಿ ಪಾಪವನ್ನೆಸಗುವ ಜ್ಞಾನ ವಿಜ್ಞಾನಗಳನ್ನು ನಾಶಪಡಿಸುವ ಇದನ್ನು ತೊರೆ.

“ಇಂದ್ರಿಯಗಳು ಶ್ರೇಷ್ಠವೆಂದು ಹೇಳುತ್ತಾರೆ. ಇಂದ್ರಿಯಗಳಿಗಿಂತಲೂ ಶ್ರೇಷ್ಠವಾದದ್ದು ಮನಸ್ಸು. ಮನಸ್ಸಿಗಿಂತಲೂ ಶ್ರೇಷ್ಠವಾದದ್ದು ಬುದ್ಧಿ. ಬುದ್ಧಿಗಿಂತಲೂ ಶ್ರೇಷ್ಠವಾದದ್ದು ಅವನು. ಹೀಗೆ ಬುದ್ಧಿಗಿಂತಲೂ ಶ್ರೇಷ್ಠವಾದುದನ್ನು ತಿಳಿದುಕೊಂಡು ಅತ್ಮನನ್ನು ಆತ್ಮನಲ್ಲಿ ತೊಡಗಿಸಿಕೊಂಡು, ಜಯಿಸಲು ಕಷ್ಟಕರವಾದ ಕಾಮರೂಪದ ಈ ಶತ್ರುವನ್ನು ಜಯಿಸು.

“ಅವ್ಯಯನಾದ ನಾನು ಈ ಯೋಗವನ್ನು ವಿವಸ್ವತನಿಗೆ ಹೇಳಿದೆ. ವಿವಸ್ಚತನು ಮನುವಿಗೆ ಹೇಳಿದನು. ಮನುವು ಇಕ್ಷ್ವಾಕುವಿಗೆ ಹೇಳಿದನು. ಪರಂಪರಾಗತವಾಗಿ ಬಂದ ಇದನ್ನು ರಾಜರ್ಷಿಗಳು ತಿಳಿದಿದ್ದರು. ಮಹಾ ಕಾಲದಿಂದಾಗಿ ಆ ಯೋಗವು ನಷ್ಟವಾಗಿದೆ. ಅದೇ ಪುರಾತನವಾದ ನಾನು ಹೇಳಿದ್ದ ಯೋಗವನ್ನು, ಈ ಉತ್ತಮ ರಹಸ್ಯವನ್ನು ಇಂದು ನನ್ನ ಭಕ್ತ ನನ್ನ ಸಖ ಎಂದು ನಿನಗೆ ಹೇಳುತ್ತಿದ್ದೇನೆ.”

ಜ್ಞಾನಯೋಗ

Related imageಅರ್ಜುನನು ಹೇಳಿದನು:

“ನಿನ್ನ ಜನ್ಮವು ಈಚಿನದು. ವಿವಸ್ವತನ ಜನ್ಮವು ಹಿಂದಿನದು. ಇದನ್ನು ನೀನು ಮೊದಲೇ ಹೇಳಿದೆ ಎನ್ನುವುದನ್ನು ಹೇಗೆ ಅರ್ಥಮಾಡಿಕೊಳ್ಳಲಿ?”

ಶ್ರೀ ಭಗವಾನನು ಹೇಳಿದನು:

“ನನ್ನ ಬಹಳಷ್ಟು ಜನ್ಮಗಳು ಕಳೆದುಹೋಗಿವೆ. ಅರ್ಜುನ ನಿನ್ನದು ಕೂಡ. ಅವೆಲ್ಲವನ್ನು ನಾನು ತಿಳಿದಿದ್ದೇನೆ. ಆದರೆ ನಿನಗವು ತಿಳಿದಿಲ್ಲ. ಹುಟ್ಟಿಲ್ಲದವನಾದರೂ ಅವ್ಯಯನಾದರೂ ಭೂತಗಳಿಗೆಲ್ಲ ಈಶ್ವರನಾದರೂ ನನ್ನನ್ನು ನಾನು ಪ್ರಕೃತಿಯ ಪ್ರಭಾವದಲ್ಲಿರಿಸಿಕೊಂಡು ನನ್ನ ಮಾಯೆಯಿಂದ ಹುಟ್ಟುತ್ತೇನೆ. ಯಾವಾಗ ಧರ್ಮದ ಗ್ಲಾನಿಯಾಗುತ್ತದೆಯೋ ಯಾವಾಗ ಅಧರ್ಮದ ಅಭ್ಯುತ್ಥಾನವಾಗುತ್ತದೆಯೋ ಆಗ ನನ್ನನ್ನು ನಾನೇ ಹುಟ್ಟಿಸಿಕೊಳ್ಳುತ್ತೇನೆ. ಸಜ್ಜನರನ್ನು ಕಾಪಾಡುವುದಕ್ಕಾಗಿಯೂ ಪಾಪಿಗಳ ವಿನಾಶಕ್ಕಾಗಿಯೂ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿಯೂ ನಾನು ಯುಗ ಯುಗಗಳಲ್ಲಿಯೂ ಹುಟ್ಟುತ್ತೇನೆ. ನನ್ನ ಈ ದಿವ್ಯ ಜನ್ಮ ಮತ್ತು ಕರ್ಮಗಳ ತತ್ಮವನ್ನು ಹೀಗೆಯೇ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ದೇಹವನ್ನು ತ್ಯಜಿಸಿ ಪುನರ್ಜನ್ಮವನ್ನು ಹೊಂದುವುದಿಲ್ಲ. ರಾಗ, ಭಯ ಕ್ರೋಧಗಳನ್ನು ಕಳೆದುಕೊಂಡು ನನ್ನಲ್ಲಿಯೇ ಇದ್ದು ನನ್ನನ್ನು ಉಪಾಶ್ರಿಸುವ ಬಹುಮಂದಿಗಳು ಜ್ಞಾನತಪಸ್ಸಿನಿಂದ ಪೂತರಾಗಿ ನನ್ನ ಭಾವವನ್ನು ತಾಳುತ್ತಾರೆ. ಯಾವಯಾವ ರೀತಿಗಳಲ್ಲಿ ನನ್ನ ಹತ್ತಿರ ಬರುತ್ತಾರೋ ಆ ಆ ರೀತಿಗಳಲ್ಲಿ ನಾನು ಅವರಿಗೆ ಅನುಗ್ರಹಿಸುತ್ತೇನೆ. ಮನುಷ್ಯರು ಎಲ್ಲ ರೀತಿಯಲ್ಲಿಯೂ ನನ್ನ ನಡತೆಯನ್ನೇ ಅನುಸರಿಸುತ್ತಾರೆ. ಕರ್ಮಗಳ ಸಿದ್ಧಿಯನ್ನು ಬಯಸಿ ಇಲ್ಲಿ ದೇವತೆಗಳಿಗೆ ಯಜಿಸುತ್ತಾರೆ.

“ಈ ಮನುಷ್ಯಲೋಕದಲ್ಲಿ ಕ್ಷಿಪ್ರವಾಗಿಯೇ ಕರ್ಮದ ಫಲವು ದೊರೆಯುತ್ತದೆ. ಗುಣ ಮತ್ತು ಕರ್ಮಗಳ ಪ್ರಕಾರ ವಿಭಜಿಸಿ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಅದರ ಕರ್ತಾರನಾಗಿದ್ದರೂ ಕೂಡ ನನ್ನನ್ನು ಅಕರ್ತಾರನೆಂದೂ ಅವ್ಯಯನೆಂದೂ ತಿಳಿ. ಕರ್ಮಗಳು ನನಗೆ ಅಂಟಿಕೊಳ್ಳುವುದಿಲ್ಲ; ಕರ್ಮಫಲಗಳೂ ನನ್ನನ್ನು ಮುಟ್ಟುವುದಿಲ್ಲ. ನನ್ನನ್ನು ಈ ರೀತಿಯಲ್ಲಿ ತಿಳಿದುಕೊಂಡವನು ಕೂಡ ಕರ್ಮಗಳಿಂದ ಬಂಧಿತನಾಗುವುದಿಲ್ಲ. ಇದನ್ನು ಹೀಗೆಯೇ ತಿಳಿದು ಹಿಂದೆ ಕೂಡ ಮುಮುಕ್ಷುಗಳು ಕರ್ಮವನ್ನು ಮಾಡುತ್ತಿದ್ದರು. ಆದುದರಿಂದ ನೀನೂ ಕೂಡ ಪೂರ್ವಜರು ಪೂರ್ವದಲ್ಲಿ ಮಾಡಿದಂತೆ ಕರ್ಮವನ್ನು ಮಾಡು. ಯಾವುದು ಕರ್ಮ ಮತ್ತು ಯಾವುದು ಅಕರ್ಮ ಎಂದು ಬುದ್ಧಿವಂತರೂ ಕೂಡ ಗೊಂದಲಕ್ಕೊಳಗಾಗುತ್ತಾರೆ. ಆ ಕರ್ಮವೇನೆಂಬುದನ್ನು ನಾನು ನಿನಗೆ ಹೇಳುತ್ತೇನೆ. ಇದನ್ನು ತಿಳಿದು ನೀನು ಅಶುಭದಿಂದ ಮುಕ್ತನಾಗುತ್ತೀಯೆ. ಯಾಕೆಂದರೆ ಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ದುಷ್ಟಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ಅಕರ್ಮದ ಕುರಿತೂ ತಿಳಿದುಕೊಳ್ಳಬೇಕು. ಕರ್ಮದ ಗತಿಯು ಗಹನವಾದದ್ದು. ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಯಾರು ಕಾಣುತ್ತಾನೋ ಅವನು ಮನುಷ್ಯರಲ್ಲಿಯೇ ಬುದ್ಧಿವಂತನು. ಅವನು ಎಲ್ಲ ಕರ್ಮಗಳನ್ನೂ ಮಾಡುವ ಯೋಗಿ.

“ಯಾರ ಎಲ್ಲ ಕರ್ಮಗಳು ಕಾಮ ಮತ್ತು ಸಂಕಲ್ಪಗಳಿಂದ ವರ್ಜಿತವಾಗಿರುವವೋ ಮತ್ತು ಯಾರ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟಿರುವವೋ ಅಂಥವನನ್ನು ಪಂಡಿತನೆಂದು ತಿಳಿದವರು ಕರೆಯುತ್ತಾರೆ. ಕರ್ಮಫಲದ ಸಂಗವನ್ನು ತೊರೆದು ನಿತ್ಯ ತೃಪ್ತನಾಗಿರುವ ಯಾವುದರಮೇಲೂ ಆಶ್ರಯಿಸಿರದವನು ಕರ್ಮಗಳಲ್ಲಿ ತೊಡಗಿದ್ದರೂ ನಿಜವಾಗಿ ಅವನು ಏನೂ ಮಾಡುತ್ತಿರುವುದಿಲ್ಲ. ಬೇಕೆನ್ನದಿಲ್ಲದಿರುವವನು, ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವನು, ತನ್ನದೆನಿಸಿರುವ ಎಲ್ಲವನ್ನೂ ತೊರೆದಿರುವವನು ಕೇವಲ ಶರೀರವನ್ನಿರಿಸಿಕೊಳ್ಳುವುದಕ್ಕಾಗಿ ಮಾಡುವ ಕರ್ಮಗಳಿಂದ ಪಾಪವನ್ನು ಹೊಂದುವುದಿಲ್ಲ. ಕೇಳದೇ ಬಂದಿರುವುದರಿಂದಲೇ ಸಂತುಷ್ಟನಾಗಿ ದ್ವಂದ್ವಗಳಿಲ್ಲದೇ ಮತ್ಸರವಿಲ್ಲದೇ ಸಿದ್ಧಿ ಅಸಿಧ್ಧಿಗಳನ್ನು ಸಮನಾಗಿರಿಸಿದವನು ಕರ್ಮಗಳನ್ನು ಮಾಡಿದರೂ ಬಂಧನಕ್ಕೊಳಗಾಗುವುದಿಲ್ಲ. ಸಂಗವನ್ನು ತೊರೆದ, ಜ್ಞಾನದಲ್ಲಿಯೇ ನೆಲೆಗೊಂಡ ಚೇತನವುಳ್ಳ ಮುಕ್ತನ ಯಜ್ಞವೆಂದು ಆಚರಿಸಿದ ಕರ್ಮಗಳೆಲ್ಲವೂ ನಾಶಗೊಳ್ಳುತ್ತದೆ. ಬ್ರಹ್ಮವೆಂಬ ಯಾಗದ ಹುಟ್ಟಿನಲ್ಲಿ ಬ್ರಹ್ಮವೆಂಬ ಹವಿಸ್ಸನ್ನಿಟ್ಟು ಬ್ರಹ್ಮನೇ ಬ್ರಹ್ಮವೆಂಬ ಅಗ್ನಿಯಲ್ಲಿ ಸುರಿದು ಅದು ಬ್ರಹ್ಮನಿಗೇ ಹೋಗಿ ಸೇರುತ್ತದೆ. ಹಾಗೆ ಸಮಾಧಿಯಲ್ಲಿರುವವನ ಕರ್ಮವೂ ಬ್ರಹ್ಮನಿಗೆ ಸೇರುತ್ತದೆ.

“ಇತರ ಯೋಗಿಗಳು ಯಜ್ಞದಿಂದ ದೇವತೆಗಳನ್ನು ಮಾತ್ರ ಪೂಜಿಸುತ್ತಾರೆ. ಇತರರು ಬ್ರಹ್ಮಾಗ್ನಿಯಲ್ಲಿ ಯಜ್ಞವನ್ನು ಯಜ್ಞದಿಂದಲೇ ಯಾಜಿಸುತ್ತಾರೆ. ಅನ್ಯರು ಶ್ರೋತ್ರುವೇ ಮೊದಲಾದ ಇಂದ್ರಿಯಗಳನ್ನೇ ಸಂಯಮಾಗ್ನಿಯಲ್ಲಿ ಯಾಜಿಸುತ್ತಾರೆ. ಅನ್ಯರು ಶಬ್ದವೇ ಮೊದಲಾದ ವಿಷಯಗಳನ್ನು ಇಂದ್ರಿಯಾಗ್ನಿಯಲ್ಲಿ ಯಾಜಿಸುತ್ತಾರೆ. ಇನ್ನೂ ಇತರರು ಇಂದ್ರಿಯಗಳ ಕರ್ಮಗಳನ್ನು ಮತ್ತು ಪ್ರಾಣಕರ್ಮಗಳೆಲ್ಲವನ್ನೂ ಜ್ಞಾನದಿಂದ ಉರಿಸಲ್ಪಟ್ಟ ಆತ್ಮ ಮತ್ತು ಸಂಯಮ ಯೋಗಗಳೆರಡರ ಅಗ್ನಿಯಲ್ಲಿ ಯಾಜಿಸುತ್ತಾರೆ. ಹಾಗೆಯೇ ಇತರ ಸಂಶಿತವ್ರತ ಯತಿಗಳು ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯ ಜ್ಞಾನಯಜ್ಞಗಳನ್ನು ಮಾಡುತ್ತಾರೆ. ಪ್ರಾಣಾಯಾಮ ಪರಾಯಣರು ಪ್ರಾಣಾಪಾನಗಳ ಗತಿಯನ್ನು ನಿಲ್ಲಿಸಿ ಅಪಾನದಲ್ಲಿ ಪ್ರಾಣವನ್ನು ಮತ್ತೆ ಕೆಲವರು ಪ್ರಾಣವನ್ನು ಅಪಾನದಲ್ಲಿ ಯಾಜಿಸುತ್ತಾರೆ. ಇತರರು ನಿಯತಾಹಾರಿಗಳಾಗಿ ಪ್ರಾಣಗಳನ್ನು ಪ್ರಾಣಗಳಲ್ಲಿ ಯಾಜಿಸುತ್ತಾರೆ. ಇವರೆಲ್ಲರೂ ಯಜ್ಞಗಳಿಂದ ಕಲ್ಮಷಗಳನ್ನು ನಾಶಪಡೆಸಿಕೊಂಡ ಯಜ್ಞವಿದರು. ಅಮೃತವಾದ ಯಜ್ಞಾಶಿಷ್ಠವನ್ನು ಭುಂಜಿಸಿದವರು ಸನಾತನ ಬ್ರಹ್ಮನನ್ನು ಸೇರುತ್ತಾರೆ. ಯಜ್ಞವಿಲ್ಲದೇ ಈ ಲೋಕವೇ ಇರುವುದಿಲ್ಲ. ಇನ್ನು ಬೇರೆ ಲೋಕಗಳು ಹೇಗಿರುತ್ತವೆ?  ಹೀಗೆ ಬಹುವಿಧದ ಯಜ್ಞಗಳು ಬ್ರಹ್ಮನ ಮುಖದಿಂದ ಹೊರಚೆಲ್ಲಿವೆ. ಅವೆಲ್ಲವೂ ಕರ್ಮದಿಂದಲೇ ಹುಟ್ಟಿದವೆಂದು ತಿಳಿ. ಇವೆಲ್ಲವನ್ನು ತಿಳಿದೇ ಮೋಕ್ಷವನ್ನು ಹೊಂದುವೆ.

“ದ್ರವ್ಯ ಯಜ್ಞಕ್ಕಿಂತಲೂ ಜ್ಞಾನಯಜ್ಞವು ಶ್ರೇಷ್ಠ. ಸರ್ವ ಕರ್ಮಗಳೂ ಅಂತ್ಯದಲ್ಲಿ ಜ್ಞಾನದಲ್ಲಿ ಪರಿಸಮಾಪ್ತವಾಗುತ್ತವೆ. ಅದನ್ನು ಸಾಷ್ಟಾಂಗ ನಮಸ್ಕಾರಮಾಡುವುದರ, ಮತ್ತೆ ಮತ್ತೆ ಪ್ರಶ್ನಿಸುವುದರ ಮತ್ತು ಸೇವೆಗಳ ಮೂಲಕ ತಿಳಿ. ತತ್ವವನ್ನು ಕಂಡ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ. ಇದನ್ನು ತಿಳಿದು ನೀನು ಪುನಃ ಈ ರೀತಿಯ ಮೋಹವನ್ನು ಹೊಂದುವುದಿಲ್ಲ. ಇದರಿಂದ ನೀನು ಯಾವುದನ್ನೂ ಬಿಡದೇ ಅನ್ಯ ಭೂತಗಳನ್ನೆಲ್ಲವನ್ನೂ ಆತ್ಮನಲ್ಲಿ ಅಥವಾ ನನ್ನಲ್ಲಿ ನೋಡುತ್ತೀಯೆ. ಸರ್ವ ಪಾಪಿಗಳಿಗಿಂತಲೂ ಹೆಚ್ಚಿನ ಪಾಪಗಳನ್ನು ಮಾಡಿದ್ದರೂ ಕೂಡ ನೀನು ಎಲ್ಲವನ್ನು ಜ್ಞಾನವೆಂಬ ದೋಣಿಯನ್ನು ಬಳಸಿಯೇ ದಡವನ್ನು ಸೇರಬಹುದು. ಚೆನ್ನಾಗಿ ಉರಿಯುತ್ತಿರುವ ಬೆಂಕಿಯು ಮರದ ತುಂಡುಗಳನ್ನು ಭಸ್ಮವಾಗಿಸುತ್ತದೆಯೋ ಹಾಗೆ ಜ್ಞಾನಾಗ್ನಿಯು ಸರ್ವಕರ್ಮಗಳನ್ನೂ ಭಸ್ಮೀಭೂತವಾಗಿಸುತ್ತದೆ. ನಿಜವಾಗಿಯೂ ಇಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವು ಇಲ್ಲ. ಯೋಗಸಂಸಿದ್ಧನು ಕಾಲಾಂತರದಲ್ಲಿ ಅದನ್ನು ಸ್ವಯಂ ಆತ್ಮನಲ್ಲಿ ತಿಳಿಯುತ್ತಾನೆ. ಶ್ರದ್ಧಾವಂತನೂ, ತತ್ಪರನೂ ಮತ್ತು ಸಂಯತೇಂದ್ರಿಯನೂ ಆದವನಿಗೆ ಜ್ಞಾನವು ದೊರೆಯುತ್ತದೆ. ಜ್ಞಾನವನ್ನು ಹೊಂದಿದ ತಕ್ಷಣವೇ ಅವನು ಪರಮ ಶಾಂತಿಯನ್ನು ಪಡೆಯುತ್ತಾನೆ.

“ಅಜ್ಞನು, ಶ್ರದ್ಧೆಯಿಲ್ಲದವನು, ಮತ್ತು ಸಂಶಯಾತ್ಮನು ವಿನಾಶಗೊಳ್ಳುತ್ತಾನೆ. ಸಂಶಯಾತ್ಮನಿಗೆ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವಿರುವುದಿಲ್ಲ. ಯೋಗದಿಂದ ಕರ್ಮಗಳನ್ನು ತೊರೆದ, ಜ್ಞಾನದಿಂದ ಸಂಶಯವನ್ನು ತರಿದ ಆತ್ಮವಂತನನ್ನು ಕರ್ಮಗಳು ಬಂಧಿಸುವುದಿಲ್ಲ. ಆದುದರಿಂದ ಅಜ್ಞಾನದಿಂದ ನಿನ್ನಿಂದಲೇ ಹುಟ್ಟಿರುವ ನಿನ್ನಲ್ಲಿಯೇ ಇರುವ ಈ ಸಂಶಯವನ್ನು ಜ್ಞಾನದ ಖಡ್ಗದಿಂದ ತರಿದೆಸೆದು ಯೋಗವನ್ನು ನಿನ್ನದಾಗಿಸಿಕೊಂಡು ಮೇಲೇಳು!”

ಕರ್ಮಸಂನ್ಯಾಸ ಯೋಗ

Related imageಅರ್ಜುನನು ಹೇಳಿದನು:

“ಕೃಷ್ಣ! ಕರ್ಮಗಳ ಸಂನ್ಯಾಸವನ್ನೂ ಮತ್ತೆ ಪುನಃ ಯೋಗವನ್ನೂ ಹೊಗಳುತ್ತೀಯೆ. ಇವೆರಡರಲ್ಲಿ ಯಾವುದು ಶ್ರೇಯವೋ ಅದನ್ನು ಸುನಿಶ್ಚಿತವಾಗಿ ನನಗೆ ಹೇಳು.”

ಶ್ರೀಭಗವಾನನು ಹೇಳಿದನು:

“ಕರ್ಮ ಸಂನ್ಯಾಸ ಮತ್ತು ಕರ್ಮ ಯೋಗ ಇವೆರಡೂ ಶ್ರೇಯಸ್ಕರವಾದವುಗಳು. ಆದರೆ ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವೇ ಹೆಚ್ಚಿನದು. ಯಾರು ದ್ವೇಷಿಸುವುದಿಲ್ಲವೋ ಆಸೆಪಡುವುದಿಲ್ಲವೋ ಅವನೇ ನಿತ್ಯ ಸಂನ್ಯಾಸಿಯೆಂದು ತಿಳಿಯಬೇಕು. ದ್ವಂದ್ವಗಳಿಲ್ಲದಿರುವವನೇ ನಿರಾಯಾಸವಾಗಿ ಬಂಧನದಿಂದ ಬಿಡುಗಡೆ ಹೊಂದುತ್ತಾನೆ. ಸಾಂಖ್ಯ (ಕರ್ಮಸಂನ್ಯಾಸ) ಮತ್ತು ಯೋಗ (ಕರ್ಮಯೋಗ) ಇವೆರಡೂ ಬೇರೆ ಬೇರೆಯೆಂದು ಬಾಲಕರು ಹೇಳುತ್ತಾರೆಯೇ ಹೊರತು ಪಂಡಿತರಲ್ಲ. ಇವುಗಳಲ್ಲಿ ಒಂದರಲ್ಲಿ ಸರಿಯಾಗಿ ನೆಲಸಿರುವವನು ಎರಡರ ಫಲವನ್ನೂ ಪಡೆಯುತ್ತಾನೆ. ಸಾಂಖ್ಯದಿಂದ ಯಾವ ಸ್ಥಾನವು ದೊರೆಯುತ್ತದೆಯೋ ಅದೇ ಸ್ಥಾನಕ್ಕೆ ಕರ್ಮಯೋಗಿಗಳೂ ಹೋಗುತ್ತಾರೆ. ಸಾಂಖ್ಯ ಮತ್ತು ಯೋಗಗಳು ಒಂದೇ ಎಂದು ಕಂಡುಕೊಂಡಿರುವವನೇ ನಿಜವಾಗಿ ಕಂಡುಕೊಂಡವನು.

“ಆದರೆ ಯೋಗದಲ್ಲಿರುವವನಿಗೆ ಸಂನ್ಯಾಸವನ್ನು ತಲುಪುವುದು ಬಹಳ ಕಷ್ಟ. ಯೋಗಯುಕ್ತನಾದ ಮುನಿಯು ಬೇಗನೇ ಬ್ರಹ್ಮನನ್ನು ಸೇರುತ್ತಾನೆ. ಯೋಗಯುಕ್ತನು ವಿಶುದ್ಧಾತ್ಮನಾಗಿ, ವಿಜಿತಾತ್ಮನಾಗಿ, ಜಿತೇಂದ್ರಿಯನಾಗಿ, ಸರ್ವಭೂತಾತ್ಮನೇ ಆತ್ಮನೆಂದು ಕರ್ಮಗಳನ್ನು ಮಾಡಿದರೂ ಅದು ಅವನಿಗೆ ಅಂಟಿಕೊಳ್ಳುವುದಿಲ್ಲ. ಕರ್ಮಯೋಗಯುಕ್ತ ತತ್ವಜ್ಞಾನಿಯು ತಾನು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿನ್ನುವಾಗ, ನಡೆಯುವಾಗ, ನಿದ್ರಿಸುವಾಗ, ಉಸಿರಾಡುವಾಗ, ಮಾತನಾಡುವಾಗ, ವಿಸರ್ಜಿಸುವಾಗ, ಹಿಡಿದುಕೊಳ್ಳುವಾಗ, ಕಣ್ಣು ತೆರೆಯುವಾಗ, ಮುಚ್ಚುವಾಗ ಇವು ಯಾವುದನ್ನೂ ನಾನು ಮಾಡುತ್ತಿಲ್ಲ. ಇಂದ್ರಿಯಗಳು ಇಂದ್ರಿಯ ವಿಷಯಗಳೊಂದಿಗೆ ವರ್ತಿಸುತ್ತಿವೆ ಎಂದು ತಿಳಿದಿರುತ್ತಾನೆ. ಕರ್ಮಗಳನ್ನು ಬ್ರಹ್ಮನಿಗರ್ಪಿಸಿ, ಅದರ ಫಲದೊಂದಿಗಿನ ಸಂಗವನ್ನು ತೊರೆದು ಯಾರು ಕರ್ಮಗಳನ್ನು ಮಾಡುತ್ತಾನೋ ಅವನಿಗೆ ನೀರಿನಲ್ಲಿರುವ ತಾವರೆಯೆಲೆಗೆ ಹೇಗೆ ನೀರಿನ ಲೇಪವಿರುವುದಿಲ್ಲವೋ ಹಾಗೆ ಕರ್ಮಗಳು ಅಂಟಿಕೊಳ್ಳುವುದಿಲ್ಲ. ಕರ್ಮಯೋಗಿಗಳು ಆತ್ಮಶುದ್ಧಿಗೋಸ್ಕರ ಫಲದ ಸಂಗವನ್ನು ತ್ಯಜಿಸಿ ಪ್ರತ್ಯೇಕವಾಗಿ ಶರೀರ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಕರ್ಮವನ್ನು ಮಾಡುತ್ತಾರೆ. ಕರ್ಮಯೋಗದಲ್ಲಿ ತೊಡಗಿರುವವನು ಕರ್ಮಫಲವನ್ನು ತ್ಯಜಿಸಿ ನಿಷ್ಠೆಯ ಶಾಂತಿಯನ್ನು ಹೊಂದುತ್ತಾನೆ.

“ಹೀಗೆ ಕರ್ಮಯೋಗದಲ್ಲಿ ತೊಡಗಿಲ್ಲದಿರುವವನು ಕಾಮಕಾರದಿಂದ ಫಲದಲ್ಲಿ ಆಸಕ್ತನಾಗಿ ಕಟ್ಟುಬೀಳುತ್ತಾನೆ. ಕರ್ಮಯೋಗಿಯು ಸರ್ವ ಕರ್ಮಗಳನ್ನು ಮನಸ್ಸಿನಿಂದ ಸಂನ್ಯಾಸಮಾಡಿ ಇಂದ್ರಿಯಗಳನ್ನು ಗೆದ್ದು ನವದ್ವಾರಗಳ ಪುರ ದೇಹದಲ್ಲಿ ಏನನ್ನೂ ಮಾಡದೆಯೂ ಮಾಡಿಸದೆಯೂ ಸುಖವಾಗಿ ನೆಲೆಸಿರುತ್ತಾನೆ. ಪ್ರಭುವು ಲೋಕದಲ್ಲಿ ಕತೃತ್ವವನ್ನೂ, ಕರ್ಮಗಳನ್ನೂ ಮತ್ತು ಕರ್ಮಫಲಸಂಯೋಗವನ್ನೂ ಸೃಷ್ಟಿಸಿಲ್ಲ. ಇವು ಸ್ವಭಾವತಃ ನಡೆಯುತ್ತವೆ. ವಿಭುವು ಯಾರಿಗೂ ಪಾಪವನ್ನಾಗಲೀ ಪುಣ್ಯವನ್ನಾಗಲೀ ಕೊಡುವುದಿಲ್ಲ. ಅಜ್ಞಾನದಿಂದ ಆವೃತವಾದ ಜ್ಞಾನದಿಂದಲೇ ಜೀವಿಗಳು ಮೋಹಿತರಾಗುತ್ತಾರೆ. ಯಾರ ಆತ್ಮನ ಕುರಿತಾದ ಅಜ್ಞಾನವನ್ನು ಜ್ಞಾನವು ನಾಶಗೊಳಿಸುತ್ತದೆಯೋ ಅವರಿಗೆ ಆದಿತ್ಯನಂತೆ ಆ ಪರಮ ಜ್ಞಾನವು ಹೊಳೆಯುತ್ತದೆ. ಆ ಬ್ರಹ್ಮನಲ್ಲಿಯೇ ಬುದ್ಧಿಯನ್ನಿಟ್ಟಿರುವ, ಅವನಲ್ಲಿಯೇ ಆತ್ಮವನ್ನಿಟ್ಟುರುವ, ಅವನಲ್ಲಿಯೇ ನಿಷ್ಠೆಯನ್ನಿಟ್ಟಿರುವ, ಅವನದೇ ಪರಾಯಣರಾಗಿರುವವರು ಜ್ಞಾನದಿಂದ ಕಲ್ಮಷಗಳನ್ನೆಲ್ಲ ತೊಳೆದುಕೊಂಡು ಅಪುನಾವೃತ್ತಿಯನ್ನು ಹೊಂದುತ್ತಾರೆ.

“ಪಂಡಿತರು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣರಲ್ಲಿ, ಗೋವುಗಳಲ್ಲಿ, ಆನೆಗಳಲ್ಲಿ, ನಾಯಿಗಳಲ್ಲಿ ಮತ್ತು ಚಾಂಡಾಲರಲ್ಲಿ ಒಂದನ್ನೇ ಕಾಣುತ್ತಾರೆ. ಯಾರ ಮನಸ್ಸು ಸಾಮ್ಯದಲ್ಲಿ ಸ್ಥಿತವಾಗಿರುತ್ತದೆಯೋ ಅವರು ಇಲ್ಲಿಯೇ ಸ್ವರ್ಗವನ್ನು ಗೆಲ್ಲುವರು. ಏಕೆಂದರೆ ದೋಷಗಳಿಲ್ಲದ ಬ್ರಹ್ಮನೂ ಸಮನೇ. ಆದುದರಿಂದ ಸಾಮ್ಯದಲ್ಲಿರುವವರು ಬ್ರಹ್ಮನಲ್ಲಿ ಸ್ಥಿತರಾಗಿದ್ದಂತೆ. ಪ್ರಿಯವಾದುದನ್ನು ಪಡೆದು ಹರ್ಷಿಸದ, ಅಪ್ರಿಯವಾದುದನ್ನು ಪಡೆದು ದುಃಖಿಸದ, ಸ್ಥಿರಬುದ್ಧಿಯ, ಅಸಮ್ಮೂಢ, ಬ್ರಹ್ಮವಿದುವು ಬ್ರಹ್ಮನಲ್ಲಿ ಸ್ಥಿತನಾಗಿರುತ್ತಾನೆ. ಬಾಹ್ಯಸ್ಪರ್ಷಗಳಲ್ಲಿ ಅನಾಸಕ್ತನಾಗಿ, ಆತ್ಮವನ್ನು ತಿಳಿದುಕೊಂಡು ಆತ್ಮನಲ್ಲಿಯೇ ಸುಖವನ್ನು ಪಡೆದುಕೊಳ್ಳುವ ಬ್ರಹ್ಮಯೋಗಯುಕ್ತಾತ್ಮನು ಅಕ್ಷಯ ಸುಖವನ್ನು ಪಡೆಯುತ್ತಾನೆ.

“ಏಕೆಂದರೆ ಸಂಸ್ಪರ್ಷದಿಂದ ಹುಟ್ಟುವ ಭೋಗಗಳು ದುಃಖವನ್ನು ಹುಟ್ಟಿಸುವವು. ಪ್ರಾರಂಭ ಮತ್ತು ಕೊನೆಗೊಳ್ಳುವ ಅವುಗಳಲ್ಲಿ ತಿಳಿದವರು ಸಂತೋಷಪಡುವುದಿಲ್ಲ. ಶರೀರವನ್ನು ಬಿಡುವ (ಸಾಯುವ) ಮೊದಲೇ ಕಾಮ-ಕ್ರೋಧಗಳಿಂದ ಹುಟ್ಟುವ ವೇಗವನ್ನು ಇಲ್ಲಿಯೇ (ಬದುಕಿರುವಾಗಲೇ) ಸಹಿಸಿಕೊಳ್ಳಲು ಶಕ್ತನಾದವನು ಯುಕ್ತ. ಆ ನರನು ಸುಖಿಯು. ಯಾರು ಒಳಗಿನಿಂದ ಸುಖಿಯಾಗಿರುವನೋ, ಒಳಗಿನಿಂದ ಆರಾಮಾಗಿರುವನೋ, ಒಳಗಿನ ಬೆಳಕನ್ನು ಹೊಂದಿರುವವನೋ ಆ ಯೋಗಿಯು ಬ್ರಹ್ಮಭೂತನಾಗಿ ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ. ಕಲ್ಪಷಗಳನ್ನು ಕಳೆದುಕೊಂಡಿರುವ, ಸಂಶಯ-ದ್ವಂದ್ವಗಳನ್ನು ಕಳೆದುಕೊಂಡಿರುವ, ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವ, ಇರುವ ಎಲ್ಲವುಗಳ ಹಿತದಲ್ಲಿ ಆಸಕ್ತನಾಗಿರುವ ಋಷಿಗಳು ಬ್ರಹ್ಮನಿರ್ವಾಣವನ್ನು ಹೊಂದುತ್ತಾರೆ. ಕಾಮಕ್ರೋಧಗಳನ್ನು ತೊರೆದ, ಚೇತಸವನ್ನು ನಿಯಂತ್ರಿಸಿಕೊಂಡು ಸಂಯತಾಂತಃಕರಣರಾದ, ಆತ್ಮವನ್ನು ಅರಿತುಕೊಂಡ ಯತಿ ಸಂನ್ಯಾಸಿಗಳಿಗೆ ಜೀವ ಮತ್ತು ಮೃತ್ಯು ಎರಡರಲ್ಲಿಯೂ ಬ್ರಹ್ಮನಿರ್ವಾಣವಾಗುತ್ತದೆ.

“ಹೊರಗಿನ ಸ್ಪರ್ಷ ಮೊದಲಾದವುಗಳನ್ನು ಹೊರಗೆ ಹಾಕಿ, ದೃಷ್ಟಿಯನ್ನು ಹುಬ್ಬುಗಳ ನಡುವೆ ಇರಿಸಿ, ಮೂಗಿನ ಒಳ ಮತ್ತು ಹೊರ ಸಂಚರಿಸುವ ಪ್ರಾಣ-ಅಪಾನಗಳನ್ನು ಸಮನಾಗಿ ಮಾಡಿಕೊಂಡು, ಇಂದ್ರಿಯಗಳು-ಮನಸ್ಸು-ಬುದ್ಧಿಗಳನ್ನು ನಿಯಂತ್ರಿಸಿಕೊಂಡು, ಮೋಕ್ಷಪರಾಯಣನಾಗಿ, ಇಚ್ಛೆ-ಭಯ-ಕ್ರೋಧಗಳನ್ನು ಇಲ್ಲವಾಗಿಸಿಕೊಂಡು ಸದಾ ಯಾರಿರುತ್ತಾರೋ ಅವರೇ ಮುಕ್ತರು. ನಾನು ಯಜ್ಞ-ತಪಸ್ಸುಗಳ ಭೋಕ್ತಾರ, ಸರ್ವಲೋಕಗಳ ಮಹೇಶ್ವರ, ಸರ್ವಭೂತಗಳ ಸುಹೃದ ಎಂದು ತಿಳಿದು ಶಾಂತಿಯನ್ನು ಹೊಂದುತ್ತಾನೆ.

“ಕರ್ಮಫಲವನ್ನು ಅನಾಶ್ರಯಿಸಿ ಕಾರ್ಯ ಕರ್ಮಗಳನ್ನು ಮಾಡುವವನೇ ಸಂನ್ಯಾಸೀ ಮತ್ತು ಯೋಗೀ. ಅಗ್ನಿಕಾರ್ಯಗಳನ್ನು ಮಾಡದಿರುವವನಾಗಲೀ, ಕ್ರಿಯೆಗಳನ್ನು ಮಾಡದಿರುವವನಾಗಲೀ ಅಲ್ಲ. ಯಾವುದನ್ನು ಸಂನ್ಯಾಸವೆಂದು ಹೇಳುತ್ತಾರೋ ಅದೇ ಯೋಗವೆಂದು ತಿಳಿ. ಏಕೆಂದರೆ ಸಂಕಲ್ಪವನ್ನು (ಕರ್ಮಫಲವನ್ನು) ಸಂನ್ಯಾಸಮಾಡದವನು ಎಂದೂ ಯೋಗಿಯಾಗುವುದಿಲ್ಲ. ಕರ್ಮಯೋಗವನ್ನು ಏರಲು ಬಯಸುವ ಮುನಿಗೆ ಕರ್ಮವೇ ಕಾರಣ-ಸಾಧನವಾಗುತ್ತದೆ. ಆದರೆ ಯೋಗಾರೂಢನಾದವನಿಗೆ ಶಮವೇ ಕಾರಣ-ಸಾಧನವೆಂದು ಹೇಳುತ್ತಾರೆ. ಯಾವಾಗ ಇಂದ್ರಿಯಾರ್ಥಗಳಲ್ಲಿ ಮತ್ತು ಕರ್ಮಫಲಗಳಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿರುವುದಿಲ್ಲವೋ, ಯಾವಾಗ ಸರ್ವ ಸಂಕಲ್ಪಗಳ ಸಂನ್ಯಾಸವನ್ನು ಮಾಡುತ್ತೇವೆಯೋ ಆಗ ಯೋಗಾರೂಢನಾಗಿದ್ದಾನೆ ಎಂದು ಹೇಳುತ್ತಾರೆ.

“ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ತನ್ನನ್ನು ತಾನೇ ಕೆಳಗೆ ತಳ್ಳಿಕೊಳ್ಳಬಾರದು. ಏಕೆಂದರೆ ತನಗೆ ತಾನೇ ಬಂಧು. ತನಗೆ ತಾನೇ ಶತ್ರುವೂ ಕೂಡ. ಯಾರು ತನ್ನನ್ನು ತಾನೇ ಜಯಿಸಿಕೊಂಡಿರುವನೋ (ನಿಯಂತ್ರಣದಲ್ಲಿಟ್ಟುಕೊಂಡಿರುವನೋ) ಅವನಿಗೆ ಅವನೇ ಬಂಧು. ಆದರೆ ಅನಾತ್ಮನಾದವನು (ತನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳದವನು) ತನ್ನ ಮೇಲೆ ತಾನೇ ಅಪಕಾರವನ್ನೆಸಗಿ ತನಗೆ ತಾನೇ ಶತ್ರುವಾಗಿ ನಡೆದುಕೊಳ್ಳುತ್ತಾನೆ. ಜಿತಾತ್ಮನಾಗಿ ಪ್ರಶಾಂತನಾಗಿರುವವನಲ್ಲಿ ಪರಮಾತ್ಮನು ಸಮಾಹಿತನಾಗಿರುತ್ತಾನೆ.

“ಬಿಸಿಲು-ಛಳಿಗಳಲ್ಲಿ, ಸುಖ-ದುಃಖಗಳಲ್ಲಿ ಮತ್ತು ಮಾನ-ಅಪಮಾನಗಳಲ್ಲಿ ಜ್ಞಾನ-ವಿಜ್ಞಾನ ತೃಪ್ತಾಪ್ತನಾಗಿ, ಕೂಟಸ್ಥನಾಗಿ ವಿಜಿತೇಂದ್ರಿಯನಾಗಿ, ಯುಕ್ತನಾಗಿ, ಮಣ್ಣಿನ ಹೆಂಟೆ, ಕಲ್ಲು ಮತ್ತು ಕಾಂಚನಗಳನ್ನು ಸಮನಾಗಿ ಕಾಣುವವನನ್ನು ಯೋಗೀ ಎಂದು ಕರೆಯುತ್ತಾರೆ. ಸುಹೃದಯರು, ಮಿತ್ರರು, ಉದಾಸೀನರಾಗಿದ್ದವರು, ಮಧ್ಯಸ್ಥರು, ದ್ವೇಷಿಗಳು ಮತ್ತು ಬಂಧುಗಳಲ್ಲಿ, ಮತ್ತು ಸಾಧು-ಪಾಪಿಗಳಲ್ಲಿ ಸಮಬುದ್ಧಿಯಾಗಿರುವವನು ಹೆಚ್ಚಿನವನು. ಯೋಗಿಯಾದವನು ಸತತವೂ ರಹಸ್ಯದಲ್ಲಿದ್ದುಕೊಂಡು ಆತ್ಮವನ್ನು ಯೋಗದಲ್ಲಿ - ಏಕಾಕಿಯಾಗಿ, ಚಿತ್ತ-ಆತ್ಮಗಳನ್ನು ನಿಯಂತ್ರಿಸಿಕೊಂಡು, ಆಸೆಗಳಿಲ್ಲದೇ, ಅಪರಿಗ್ರಹ (ಏನನ್ನೂ ಹಿಡಿದುಕೊಳ್ಳದೇ, ಏನಕ್ಕೂ ಅಂಟಿಕೊಳ್ಳದೇ) - ಇರಿಸಿಕೊಂಡಿರುತ್ತಾನೆ.”

ಅಭ್ಯಾಸ ಯೋಗ

ಶ್ರೀಭಗವಾನನು ಹೇಳಿದನು:

“ಶುಚಿಯಾದ ಜಾಗದಲ್ಲಿ, ಅತಿ ಎತ್ತರವೂ ಅತಿ ಕೆಳಗೂ ಇರದ ಬಟ್ಟೆ, ಚರ್ಮ, ಕುಶ ಇವುಗಳನ್ನು ಒಂದರ ಮೇಲೆ ಒಂದನ್ನು ಹಾಸಿರುವ ಸ್ಥಿರವಾದ ಆಸನವನ್ನು ತನಗಾಗಿ ಹಾಕಿಕೊಂಡು, ಆ ಆಸನದಲ್ಲಿ ಕುಳಿತುಕೊಂಡು ಮನಸ್ಸನ್ನು ಏಕಾಗ್ರವಾಗಿಸಿಕೊಂಡು, ಚಿತ್ತ-ಇಂದ್ರಿಯಕ್ರಿಯೆಗಳನ್ನು ನಿಯಂತ್ರಿಸಿಕೊಂಡು ಆತ್ಮ ವಿಶುದ್ಧಿಗಾಗಿ ಯೋಗವನ್ನು ಮಾಡಬೇಕು. ಕಾಯ (ಹೊಕ್ಕಳ ಮೇಲಿನ ದೇಹ), ತಲೆ ಮತ್ತು ಕುತ್ತಿಗೆಯನ್ನು ನೇರವಾಗಿಟ್ಟುಕೊಂಡು, ಅಲುಗಾಡದೇ ಸ್ಥಿರವಾಗಿರಿಸಿಕೊಂಡು, ಅಲ್ಲಿ-ಇಲ್ಲಿ ನೋಡದೇ ಮೂಗಿನ ತುದಿಯನ್ನೇ ನೋಡುತ್ತಾ, ಪ್ರಶಾಂತಾತ್ಮನಾಗಿ, ಭಯವಿಲ್ಲದವನಾಗಿ, ಬ್ರಹ್ಮಚರ್ಯವ್ರತದಲ್ಲಿದ್ದುಕೊಂಡು, ಮನಸ್ಸನು ಸಂಯಮದಲ್ಲಿಟ್ಟುಕೊಂಡು, ನನ್ನ ಮೇಲೆಯೇ ಚಿತ್ತವನ್ನಿರಿಸಿಕೊಂಡು, ನನ್ನದೇ ಪರನಾಗಿದ್ದುಕೊಂಡು ಯುಕ್ತನಾಗಿರಬೇಕು. ಹೀಗೆ ನಿಯತಮಾನಸನಾಗಿ ಯಾವಾಗಲೂ ಆತ್ಮನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವವನು ಪರಮ ನಿರ್ವಾಣವಾದ ನನ್ನ ಶಾಂತಿ ಸ್ಥಾನವನ್ನು ಪಡೆಯುತ್ತಾನೆ.

“ಅತಿಯಾಗಿ ಊಟಮಾಡುವವನಿಗೆ ಯೋಗವಿಲ್ಲ. ನಿಯಮಪೂರ್ವಕವಾಗಿ ಊಟಮಾಡದೇ ಇರುವವನಿಗೂ ಇಲ್ಲ. ಅತಿಯಾಗಿ ನಿದ್ದೆ ಮಾಡುವವನಿಗೂ ಯೋಗವಿಲ್ಲ. ನಿದ್ದೆಯಿಲ್ಲದೇ ಜಾಗ್ರತನಾಗಿರುವವನಿಗೂ ಇಲ್ಲ. ನಿಯತ ಪ್ರಮಾಣದಲ್ಲಿ ಆಹಾರ-ವಿಹಾರಗಳಲ್ಲಿ ತೊಡಗಿರುವ, ಎಷ್ಟು ಬೇಕೋ ಅಷ್ಟು ಕರ್ಮಗಳಲ್ಲಿ ನಿರತನಾಗಿರುವ, ನಿಯತ ಕಾಲಗಳಲ್ಲಿ ನಿದ್ದೆಮಾಡುವ ಮತ್ತು ಎಚ್ಚರದಿಂದಿರುವನಿಗೆ ದುಃಖವನ್ನು ಕಳೆಯಬಲ್ಲ ಯೋಗವು ಸಿದ್ಧಿಸುತ್ತದೆ. ಯಾವಾಗ ನಿಯಂತ್ರಣಕ್ಕೊಳಗಾದ ಚಿತ್ತವು ಆತ್ಮನಲ್ಲಿಯೇ ನೆಲೆಗೊಂಡಿರುವಾಗ, ಮತ್ತು ಎಲ್ಲ ಕಾಮಗಳ ತೃಷ್ಣೆಯನ್ನು ಕಳೆದುಕೊಂಡಾಗ ಯೋಗದಲ್ಲಿದ್ದಾನೆ ಎಂದು ಹೇಳುತ್ತಾರೆ. ಯತಚಿತ್ತನಾದ ಯೋಗಿಯನ್ನು, ಆತ್ಮವನ್ನು ಯುಂಜಿಸಿದ ಯೋಗಿಯನ್ನು ಗಾಳಿಯಿಲ್ಲದಿರುವ ಸ್ಥಳದಲ್ಲಿ ಅಲುಗಾಡದೇ ಇರುವ ದೀಪಕ್ಕೆ ಹೋಲಿಸುತ್ತಾರೆ. ಯಾವಾಗ ಚಿತ್ತವು ಯೋಗಸೇವನೆಯಿಂದ ಯಾವಕಡೆಯೂ ಹರಿದಾಡದಂತೆ ತಡೆಗಟ್ಟಲ್ಪಟ್ಟು ಸುಮ್ಮನಾಗಿರುವುದೋ, ಯಾವಾಗ ಆತ್ಮವು ಅತ್ಮನನ್ನು ಕಂಡುಕೊಂಡು ಆತ್ಮನಲ್ಲಿ ತೃಪ್ತವಾಗಿರುವುದೋ,

“ಅನಂತವೂ ಅತೀಂದ್ರಿಯವೂ ಆದ ಸುಖವನ್ನು ಬದ್ಧಿಯು ಯಾವಾಗ ಗ್ರಹಿಸಿಕೊಂಡು, ಇದನ್ನು ತತ್ವತಃ ಅರಿತುಕೊಂಡು, ಅಲುಗಾಡದೇ ಅದರಲ್ಲಿಯೇ ಇರುತ್ತದೆಯೋ, ಯಾವ ಲಾಭವನ್ನು ಪಡೆದು ಅದಕ್ಕಿಂತಲೂ ಅಧಿಕವಾದ ಲಾಭವು ಇನ್ನೊಂದಿಲ್ಲ ಎಂದು ತಿಳಿದು, ಯಾವುದರಲ್ಲಿದ್ದುಕೊಂಡು ಅತಿ ದೊಡ್ಡ ದುಃಖಬಂದೊದಗಿದಾಗ ಕೂಡ ವಿಚಲಿತನಾಗುವುದಿಲ್ಲವೋ, ಆ ದುಃಖ ಸಂಯೋಗವಿಯೋಗ ವಿದ್ಯೆಯನ್ನು ಯೋಗವೆಂದು ತಿಳಿಯಬೇಕು. ಆ ಅನಿರ್ವಿಣ್ಣಚೇತಸನು ನಿಶ್ಚಯವಾಗಿಯೂ ಯೋಗದಲ್ಲಿ ಯುಕ್ತನಾಗಿರುತ್ತಾನೆ. ಸಂಕಲ್ಪಪ್ರಭವಗಳಾದ ಸರ್ವ ಕಾಮಗಳನ್ನೂ ಅಶೇಷವಾಗಿ ತ್ಯಜಿಸಿ, ಮನಸ್ಸಿನ ಮೂಲಕ ಇಂದ್ರಿಯಗ್ರಾಮವನ್ನು ಎಲ್ಲಕಡೆಯಿಂದಲೂ ನಿಯಂತ್ರಿಸಿಕೊಂಡು, ಮೆಲ್ಲ ಮೆಲ್ಲನೆ ಧೃತಿಯಿಂದ ಹಿಡಿದು ಬುದ್ಧಿಯನ್ನು ಹಿಂತೆಗೆದುಕೊಂಡು, ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸಿ ಏನನ್ನೂ ಕೂಡ ಯೋಚಿಸದೇ ಇರಬೇಕು. ಚಂಚಲವೂ ಅಸ್ಥಿರವೂ ಆದ ಮನಸ್ಸು ಯಾವ ಯಾವುದರ ಕಡೆ ಹರಿಯತ್ತದೆಯೋ ಅವುಗಳಿಂದ ಅದನ್ನು ಹಿಡಿದು ತಂದು ಆತ್ಮದ ವಶದಲ್ಲಿಯೇ ಇಡಬೇಕು. ಈ ಪ್ರಶಾಂತಮನಸ ಯೋಗಿಯನ್ನು ರಜೋಗುಣವನ್ನು ಶಾಂತಗೊಳಿಸುವ, ಬ್ರಹ್ಮಭೂತವಾದ, ಅಕಲ್ಮಷವಾದ ಉತ್ತಮ ಸುಖವು ಬಳಿಸಾರುತ್ತದೆ. ಹೀಗೆ ಸದಾ ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವ ಯೋಗಿಯು ಕಲ್ಮಷಗಳನ್ನು ಕಳೆದುಕೊಂಡು ಸುಲಭವಾಗಿ ಬ್ರಹ್ಮಸಂಸ್ಪರ್ಶದಿಂದ ಉಂಟಾಗುವ ಅಂತ್ಯವನ್ನೂ ಮೀರಿದ ಸುಖವನ್ನು ಪಡೆಯುತ್ತಾನೆ.

“ತನ್ನನ್ನು ಇರುವ ಎಲ್ಲವುಗಳಲ್ಲಿ ಇರಿಸಿಕೊಂಡು, ಇರುವ ಎಲ್ಲವುಗಳನ್ನು ತನ್ನಲ್ಲಿ ಇರಿಸಿಕೊಂಡು ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡಿರುವವನು ಎಲ್ಲವುಗಳಲ್ಲಿ ಒಂದನ್ನೇ ಕಾಣುತ್ತಾನೆ. ಯಾರು ಎಲ್ಲದರಲ್ಲಿ ನನ್ನನ್ನು ಕಾಣುವನೋ ಮತ್ತು ಎಲ್ಲವನ್ನೂ ನನ್ನಲ್ಲಿ ಕಾಣುವನೋ ಅವನನ್ನು ನಾನು ಕಾಣದೇ ಇರುವುದಿಲ್ಲ ಮತ್ತು ಅವನೂ ನನ್ನನ್ನು ಕಾಣದೇ ಇರುವುದಿಲ್ಲ. ಏಕತ್ವದಲ್ಲಿದ್ದುಕೊಂಡು ಯಾರು ಸರ್ವಭೂತಗಳಲ್ಲಿಯೂ ಇರುವ ನನ್ನನ್ನು ಭಜಿಸುತ್ತಾನೋ ಆ ಯೋಗಿಯು ಹೇಗೇ ಇದ್ದರೂ ನನ್ನಲ್ಲಿ ಇರುತ್ತಾನೆ. ಯಾರು ಸುಖವನ್ನಾಗಲೀ ದುಃಖವನ್ನಾಗಲೀ ತನ್ನಲ್ಲಿರುವಂತೆಯೇ ಎಲ್ಲದರಲ್ಲಿಯೂ ಒಂದೇ ಎಂದು ಕಾಣುತ್ತಾನೋ ಅವನೇ ಪರಮ ಯೋಗಿಯೆಂದೆನಿಸಿಕೊಳ್ಳುತ್ತಾನೆ.”

ಅರ್ಜುನನು ಹೇಳಿದನು:

“ಮಧುಸೂದನ! ಸಮತ್ವದ ಯೋಗವೆಂದು ನೀನು ಏನನ್ನು ಹೇಳಿದೆಯೋ, ಚಂಚಲವಾಗಿರುವುದರಿಂದ ಅದು ಸ್ಥಿರ ಸ್ಥಿತಿಯನ್ನು ಪಡೆಯುವುದನ್ನು ನಾನು ಕಾಣೆ. ಏಕೆಂದರೆ ಮನಸ್ಸು ಚಂಚಲವಾದುದು. ಶರೀರವನ್ನು ಕಡೆಯುವಂಥಹುದು. ಬಲಶಾಲಿಯು. ದೃಢವಾದುದು. ವಾಯುವನ್ನು ಹಿಡಿದಿಟ್ಟುಕೊಳ್ಳುವುದು ಎಷ್ಟು ಕಷ್ಟವೋ ಅದನ್ನೂ ಹಿಡಿದಿಟ್ಟುಕೊಳ್ಳುವುದು ತುಂಬಾ ದುಷ್ಕರವೆಂದು ನನಗನ್ನಿಸುತ್ತದೆ.”

ಶ್ರೀ ಭಗವಾನನು ಹೇಳಿದನು:

“ಮಹಾಬಾಹೋ! ಚಂಚಲವಾಗಿರುವ ಮನಸ್ಸನ್ನು ನಿಗ್ರಹಿಸುವುದು ಕಷ್ಟ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ಇದು ಹಿಡಿತಕ್ಕೆ ಸಿಗುತ್ತದೆ. ತನ್ನನ್ನು ಸಂಯಮದಲ್ಲಿಟ್ಟುಕೊಂಡಿಲ್ಲದೇ ಇರುವವನಿಗೆ ಯೋಗವನ್ನು ಹೊಂದುವುದು ಬಹು ಕಷ್ಟವೆಂದು ನನ್ನ ಅಭಿಪ್ರಾಯ. ಆದರೆ ತನ್ನನ್ನು ವಶದಲ್ಲಿಟ್ಟುಕೊಂಡಿರುವವನು ಉಪಾಯವನ್ನುಪಯೋಗಿಸಿ ಪ್ರಯತ್ನಿಸುವುದರಿಂದ ಅದನ್ನು ಹೊಂದಲು ಶಕ್ಯನಾಗುತ್ತಾನೆ.”

ಅರ್ಜುನನು ಹೇಳಿದನು:

“ಕೃಷ್ಣ! ಪ್ರಯತ್ನ ಮಾಡದ, ಆದರೆ ಶ್ರದ್ಧೆಯಿರುವವನು, ಯೋಗದಿಂದ ಚಲಿಸಿಯೂ ಯೋಗ ಸಂಸಿದ್ಧಿಯನ್ನು ಪಡೆಯದವನು ಯಾವ ಗತಿಯನ್ನು ಹೊಂದುತ್ತಾನೆ? ಅಂಥವನು ಎರಡನ್ನೂ ಕಳೆದುಕೊಂಡು ಚೂರಾದ ಮೋಡದಂತೆ ದಿಕ್ಕು ತೋಚದೇ ಅಪ್ರತಿಷ್ಠನಾಗಿ ಬ್ರಹ್ಮನ ಪಥದಲ್ಲಿ ವಿಮೂಢನಾಗಿ ಕೆಟ್ಟುಹೋಗುವುದಿಲ್ಲ ತಾನೇ? ನನ್ನ ಈ ಸಂಶಯವನ್ನು ಅಶೇಷವಾಗಿ ತುಂಡರಿಸಬೇಕು. ಏಕೆಂದರೆ ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸಂಶಯವನ್ನು ಕತ್ತರಿಸಲಾರರು.”

ಶ್ರೀಭಗವಾನನು ಹೇಳಿದನು:

“ಪಾರ್ಥ! ಅವನಿಗೆ ಇಲ್ಲಿಯಾಗಲೀ ಅನಂತರದಲ್ಲಿಯಾಗಲೀ ವಿನಾಶವೆನ್ನುವುದಿಲ್ಲ. ಕಲ್ಯಾಣಕರ್ಮಗಳನ್ನು ಮಾಡಿದವನು ಎಂದೂ ದುರ್ಗತಿಯನ್ನು ಹೊಂದಲಾರನು. ಯೋಗಭ್ರಷ್ಟನಾದವನು ಪುಣ್ಯಕೃತರ ಲೋಕಗಳನ್ನು ಪಡೆದು ಶಾಶ್ವತ ವರ್ಷಗಳು ಅಲ್ಲಿಯೇ ವಾಸವಾಗಿದ್ದು ಶುಚಿಗಳ ಮತ್ತು ಶ್ರೀಮಂತರ ಕುಲದಲ್ಲಿ ಜನಿಸುವನು. ಅಥವಾ ಧೀಮಂತ ಯೋಗಿಗಳ ಕುಲದಲ್ಲಿಯೇ ಹುಟ್ಟುವನು. ಲೋಕದಲ್ಲಿ ಇದರ ಅಥವಾ ಈ ತರಹದ ಜನ್ಮವು ತುಂಬಾ ದುರ್ಲಭವಾದುದು. ಅಲ್ಲಿ ಅವನಿಗೆ ಹಿಂದಿನ ದೇಹದಲ್ಲಿದ್ದ ಬುದ್ಧಿ ಸಂಯೋಗವು ದೊರೆಯುತ್ತದೆ. ಆಗ ಪುನಃ ಅವನು ಸಂಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪೂರ್ವಾಭ್ಯಾಸದಿಂದಲೇ ಅವನು ಅವಶನಾಗಿ ಎಳೆಯಲ್ಪಟ್ಟು ಯೋಗದ ಕುರಿತು ಜಿಜ್ಞಾಸೆಮಾಡಿದರೂ ವೇದಗಳನ್ನೂ ಮೀರಿ ನಡೆದುಕೊಳ್ಳುತ್ತಾನೆ. ಹೀಗೆ ಪ್ರಯತ್ನದಿಂದ ಅಭ್ಯಾಸಮಾಡುವ ಯೋಗಿಯು ಕಿಲ್ಬಿಷಗಳಿಂದ ಸಂಶುದ್ಧನಾಗಿ, ಅನೇಕ ಜನ್ಮಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಸಂಸ್ಕಾರಸಮೂಹವನ್ನು ಕೂಡಿಹಾಕಿಕೊಂಡು ಅನಂತರ ಪರಮ ಗತಿಯನ್ನು ಸೇರುತ್ತಾನೆ.

“ತಪಸ್ವಿಗಳಿಗೂ ಅಧಿಕನು ಯೋಗಿ. ಜ್ಞಾನಿಗಳಿಗೂ ಅಧಿಕನೆಂದು ನನ್ನ ಮತ. ಯೋಗಿಯು ಕರ್ಮಿಗಳಿಗಿಂತಲೂ ಅಧಿಕ. ಆದುದರಿಂದ ಯೋಗಿಯಾಗು! ಎಲ್ಲ ಯೋಗಿಗಳಲ್ಲಿಯೂ ಕೂಡ, ಯಾರು ಅಂತರಾತ್ಮದಿಂದ ನನ್ನ ಕಡೆ ಬರುತ್ತಾನೋ, ಯಾರು ನನ್ನನ್ನು ಶ್ರದ್ಧೆಯಿಂದ ಭಜಿಸುತ್ತಾನೋ ಅವನೇ ಯುಕ್ತತಮನೆಂದು ನನ್ನ ಮತ.”

ಜ್ಞಾನವಿಜ್ಞಾನ ಯೋಗ

Related imageಶ್ರೀ ಭಗವಾನನು ಹೇಳಿದನು:

“ಪಾರ್ಥ! ನನ್ನಲ್ಲಿಯೇ ಆಸಕ್ತನಾಗಿ, ಮನಸ್ಸಿನಿಂದ ನನ್ನನ್ನೇ ಆಶ್ರಯಿಸಿ ಯೋಗವನ್ನಾಚರಿಸುತ್ತಾ ಅಸಂಶಯವಾಗಿ ಸಮಗ್ರವಾಗಿ ನನ್ನನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ಕೇಳು. ವಿಜ್ಞಾನದಿಂದೊಡಗೂಡಿದ ಈ ಜ್ಞಾನವನ್ನು ಸಂಪೂರ್ಣವಾಗಿ ನಿನಗೆ ನಾನು ಹೇಳಿಕೊಡುತ್ತೇನೆ. ಇದನ್ನು ತಿಳಿದ ನಂತರ ಇನ್ನು ಹೆಚ್ಚಿನದನ್ನು ತಿಳಿದುಕೊಳ್ಳಲು ಉಳಿಯುವುದೇ ಇಲ್ಲ.

“ಸಾವಿರ ಮನುಷ್ಯರಲ್ಲಿ ಯಾವನೋ ಒಬ್ಬನು ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸುವ ಸಿದ್ಧರಲ್ಲಿಯೂ ಯಾವನೋ ಒಬ್ಬನ್ನು ನನ್ನನ್ನು ಸರಿಯಾಗಿ ತಿಳಿದುಕೊಂಡಿರುತ್ತಾನೆ. ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತ್ತು ಅಹಂಕಾರ ಹೀಗೆ ಎಂಟು ವಿಧಗಳಲ್ಲಿ ನನ್ನ ಪ್ರಕೃತಿಯು ಭಿನ್ನವಾಗಿದೆ. ಇದು ನನ್ನ ಅಪರ (ಕೀಳು) ಪ್ರಕೃತಿ. ಯಾವುದರಿಂದ ಈ ಜಗತ್ತು ಆಧರಿಸಿದೆಯೋ ಆ ಇರುವವುಗಳಲ್ಲಿರುವ ಜೀವವು ಇದಕ್ಕಿಂತಲೂ ಉಚ್ಛವಾದ ನನ್ನ ಪ್ರಕೃತಿಯೆಂದು ತಿಳಿದುಕೋ. ಸರ್ವಭೂತಗಳೂ ಇವುಗಳಿಂದ ಉಂಟಾಗುವವೆಂದು ನಿಶ್ಚಯಿಸು. ನಾನೇ ಈ ಎಲ್ಲ ಜಗತ್ತಿನ ಪ್ರಭವ ಮತ್ತು ಪ್ರಲಯ. ನನಗಿಂತಲೂ ಇನ್ನು ಹೆಚ್ಚಿನ ಮತ್ತೊಂದು ಯಾವುದೂ ಇಲ್ಲ. ಇವೆಲ್ಲವೂ ನನ್ನಲ್ಲಿ ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳ ಸಾಲಿನಂತೆ ಇವೆ. ನೀರಿನಲ್ಲಿ ನಾನು ರಸ. ಶಶಿ-ಸೂರ್ಯರಲ್ಲಿ ನಾನು ಪ್ರಭೆ. ಸರ್ವವೇದಗಳಲ್ಲಿ ನಾನು ಪ್ರಣವ. ಆಕಾಶದಲ್ಲಿ ಶಬ್ಧ. ಮತ್ತು ನರರಲ್ಲಿ ನಾನು ಪೌರುಷ. ಪೃಥ್ವಿಯಲ್ಲಿ ಪುಣ್ಯಗಂಧವೂ, ವಿಭಾವಸುವಿನಲ್ಲಿ ತೇಜಸ್ಸೂ ಆಗಿರುವೆನು. ಸರ್ವಭೂತಗಳಲ್ಲಿ ಜೀವನವೂ, ತಪಸ್ವಿಗಳಲ್ಲಿ ತಪಸ್ಸೂ ಆಗಿದ್ದೇನೆ. ನನ್ನನ್ನು ಸರ್ವಭೂತಗಳ ಸನಾತನ ಬೀಜವೆಂದು ತಿಳಿ. ನಾನು ಬುಧಿವಂತರ ಬುದ್ಧಿ ಮತ್ತು ತೇಜಸ್ವಿಗಳ ತೇಜಸ್ಸು. ನಾನು ಕಾಮರಾಗವಿವರ್ಜಿತನಾದ ಬಲವಂತರ ಬಲ. ಇರುವವುಗಳಲ್ಲಿರುವ ಧರ್ಮವಿರುದ್ಧವಾದ ಕಾಮವೂ ನಾನೇ.

“ಸಾತ್ವಿಕ, ರಾಜಸ ಮತ್ತು ತಾಮಸಗಳ ಏನೆಲ್ಲ ಭಾವಗಳಿವೆಯೋ ಅವು ನಾನೇ ಎಂದು ತಿಳಿ. ಆದರೆ ನಾನು ಅವುಗಳಲ್ಲಿ ಇರುವುದಿಲ್ಲ. ಅವು ನನ್ನಲ್ಲಿ ಇರುತ್ತವೆ. ಈ ಮೂರು ಗುಣಗಳ ಭಾವಗಳಿಂದಲೇ ಈ ಜಗತ್ತೆಲ್ಲವೂ ಮೋಹಿತಗೊಂಡು ನಾನೇ ಪರಮ ಅವ್ಯಯನೆಂದು ತಿಳಿಯಲಾರದು. ನನ್ನ ಈ ಗುಣಮಯ ದೈವೀ ಮಾಯೆಯನ್ನು ದಾಟುವುದು ಬಹಳ ಕಷ್ಟ. ನನ್ನನ್ನೇ ಯಾರು ಶರಣು ಹೊಂದುತ್ತಾರೋ ಅವರು ನನ್ನ ಈ ಮಾಯೆಯನ್ನು ದಾಟಬಲ್ಲರು. ಕೆಟ್ಟ ಕರ್ಮಗಳನ್ನು ಮಾಡುವ ಮೂಢ ನರಾಧಮರು ನನಗೆ ಶರಣು ಬರುವುದಿಲ್ಲ. ಮಾಯೆಯಿಂದ ಅಪಹೃತರಾಗಿ ಅವರು ಅಜ್ಞಾನದಿಂದ ಅಸುರಭಾವವನ್ನು ಆಶ್ರಯಿಸುವರು.

“ನಾಲ್ಕು ವಿಧದ ಜನರು ನನ್ನನ್ನು ಭಜಿಸುತ್ತಾರೆ - ಒಳ್ಳೆಯ ಕರ್ಮಗಳನ್ನು ಮಾಡುವವರು, ಆರ್ತರು, ಜಿಜ್ಞಾಸುಗಳು (ಭಗವಂತನ ತತ್ವವನ್ನು ತಿಳಿಯಲು ಬಯಸುವವರು), ಅರ್ಥಾರ್ಥಿಗಳು (ಧನವನ್ನು ಬಯಸುವವರು) ಮತ್ತು ಜ್ಞಾನಿಗಳು (ಭಗವಂತನ ತತ್ವವನ್ನು ತಿಳಿದುಕೊಂಡಿರುವವರು). ಅವರಲ್ಲಿ ನಿತ್ಯಯುಕ್ತನಾಗಿರುವ, ಏಕಭಕ್ತಿಯನ್ನಿಟ್ಟಿರುವ ಜ್ಞಾನಿಯು ಹೆಚ್ಚಿನವನು. ಏಕೆಂದರೆ ಜ್ಞಾನಿಗೆ ನಾನು ಅತ್ಯಂತ ಪ್ರಿಯ ಮತ್ತು ನನಗೂ ಕೂಡ ಅವನು ಅತ್ಯಂತ ಪ್ರಿಯ. ಇವರೆಲ್ಲರೂ ಉದಾರರೇ. ಆದರೆ ಜ್ಞಾನಿಯು ನನ್ನ ಆತ್ಮನೇ ಎನ್ನುವುದು ನನ್ನ ಮತ. ಏಕೆಂದರೆ ಅವನು ಯುಕ್ತಾತ್ಮನಾಗಿದ್ದುಕೊಂಡು ಅನುತ್ತಮ ಗತಿಯಾದ ನನ್ನಲ್ಲಿಯೇ ಇರುತ್ತಾನೆ. ಬಹಳ ಜನ್ಮಗಳ ಕೊನೆಯಲ್ಲಿ ಜ್ಞಾನವಂತರು “ವಾಸುದೇವನೇ ಸರ್ವವು” ಎಂದು ನನ್ನನ್ನು ಸೇರುತ್ತಾರೆ. ಅಂತಹ ಮಹಾತ್ಮರು ಸುದುರ್ಲಭ.

“ಅವರವರ ಕಾಮಗಳಿಂದ ಜ್ಞಾನವನ್ನು ಕಳೆದುಕೊಂಡು, ಅಯಾಯಾ ಪ್ರಕೃತಿಗಳ ನಿಯಮಾನುಸಾರವಾಗಿ ತಾವೇ ನಿಯಂತ್ರಣಕ್ಕೊಳಪಟ್ಟು ಅನ್ಯ ದೇವತೆಗಳನ್ನು ಶರಣುಹೋಗುತ್ತಾರೆ. ಯಾರ್ಯಾರು ಯಾವ ಯಾವ ದೇವತಾತನುವನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸಲು ಬಯಸುತ್ತಾನೋ ಅವರವರಿಗೆ ತಕ್ಕಂತಹ ಅಚಲ ಶ್ರದ್ಧೆಯನ್ನು ನಾನೇ ಉಂಟುಮಾಡುತ್ತೇನೆ. ಅದೇ ಶ್ರದ್ಧೆಯಿಂದ ಕೂಡಿದವನಾಗಿ ಅವನು ಅದರ ಆರಾಧನೆಯನ್ನು ಮಾಡಲು ಪ್ರಯತ್ನಿಸುತ್ತಾನೆ. ಮತ್ತು ಅದರಿಂದ ನನ್ನಿಂದಲೇ ಉಂಟುಮಾಡಲ್ಪಟ್ಟ ಕಾಮಗಳನ್ನು ಪಡೆದುಕೊಳ್ಳುತ್ತಾನೆ. ಆದರೆ ಅವರಿಗೆ ದೊರೆಯುವ ಫಲವು ಅಂತ್ಯವುಳ್ಳವು. ಅವು ಅಲ್ಪಮೇಧಸ್ಸಿನವರಿಗೆ ಆಗುತ್ತದೆ. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನೇ ಸೇರುವರು. ಬುದ್ಧಿಯಿಲ್ಲದವರು ಅವ್ಯಕ್ತನಾದ ನಾನು ವ್ಯಕ್ತಿತ್ವವನ್ನು ಪಡೆದಿದ್ದೇನೆಂದು ತಿಳಿದುಕೊಳ್ಳುತ್ತಾರೆ. ಅವ್ಯಯನೂ ಅನುತ್ತಮನೂ ಆಗಿರುವ ನನ್ನ ಪರಮ ಭಾವವನ್ನು ಅರಿತಿರುವುದಿಲ್ಲ. ಯೋಗಮಾಯೆಯಿಂದ ಸಮಾವೃತನಾಗಿರುವ ನಾನು ಎಲ್ಲರಿಗೂ ಗೋಚರನಾಗುವುದಿಲ್ಲ. ಈ ಮೂಢ ಜನರು ಅಜನೂ ಅವ್ಯಯನೂ ಆಗಿರುವ ನನ್ನನ್ನು ಅರಿಯರು.

“ನಾನು ಹಿಂದೆ ಆಗಿಹೋಗಿರುವ, ಈಗ ಇರುವ ಮತ್ತು ಭವಿಷ್ಯದಲ್ಲಿ ಬರುವ ಭೂತಗಳನ್ನು ತಿಳಿದಿದ್ದೇನೆ. ಆದರೆ ನನ್ನನ್ನು ಯಾರೂ ಅರಿಯರು. ಇಚ್ಛೆ-ದ್ವೇಷಗಳಿಂದ ಹುಟ್ಟಿದ ದ್ವಂದ್ವಮೋಹದಿಂದ ಸರ್ವಭೂತಗಳು ತಮ್ಮ ವರ್ತಮಾನ ಜನ್ಮದಲ್ಲಿ ಸಮ್ಮೋಹಗೊಂಡಿರುತ್ತಾರೆ. ಯಾರ ಪುಣ್ಯಕರ್ಮಗಳಿಂದಾಗಿ ಪಾಪವು ಮುಗಿಯಲು ಬಂದಿದೆಯೋ ಆ ಜನರು ದ್ವಂದ್ವಮೋಹದಿಂದ ವಿಮುಕ್ತರಾಗಿ ದೃಢವ್ರತರಾಗಿ ನನ್ನನ್ನು ಭಜಿಸುತ್ತಾರೆ. ಜರಾಮರಣಮೋಕ್ಷಕ್ಕಾಗಿ ಯಾರು ನನ್ನನ್ನು ಆಶ್ರಯಿಸಿ ಪ್ರಯತ್ನಿಸುತ್ತಾರೋ ಅವರು ಆ ಬ್ರಹ್ಮವನ್ನು, ಸಂಪೂರ್ಣ ಅಧ್ಯಾತ್ಮವನ್ನು, ಮತ್ತು ಅಖಿಲ ಕರ್ಮವನ್ನೂ ಅರಿತುಕೊಳ್ಳುವರು. ನನ್ನನ್ನು ಆದಿಭೂತನೆಂದೂ, ಆದಿದೈವನೆಂದೂ ಮತ್ತು ಆದಿ ಯಜ್ಞನೆಂದೂ ಯಾರು ತಿಳಿಯುತ್ತಾರೋ ಅವರು ಮರಣಕಾಲದಲ್ಲಿಯೂ ಯುಕ್ತಚೇತಸರಾಗಿ ನನ್ನನ್ನು ಅರ್ಥಮಾಡಿಕೊಳ್ಳುವರು.”

ಅಕ್ಷರಬ್ರಹ್ಮ ಯೋಗ

Related imageಅರ್ಜುನನು ಹೇಳಿದನು:

“ಪುರುಷೋತ್ತಮ! ಆ ಬ್ರಹ್ಮವು ಯಾವುದು? ಅಧ್ಯಾತ್ಮವೆಂದರೇನು? ಕರ್ಮವೆಂದರೇನು? ಯಾವುದಕ್ಕೆ ಅಧಿಭೂತವೆಂದು ಹೇಳುತ್ತಾರೆ? ಅಧಿದೈವವೆಂದು ಯಾವುದನ್ನು ಕರೆಯುತ್ತಾರೆ? ಈ ದೇಹದಲ್ಲಿರುವ ಅಧಿಯಜ್ಞನು ಯಾರು? ಮರಣಕಾಲದಲ್ಲಿ ಹೇಗೆ ನಿಯತಾತ್ಮರು ನಿನ್ನನ್ನು ಅರಿತುಕೊಳ್ಳುತ್ತಾರೆ?”

ಶ್ರೀಭಗವಾನನು ಹೇಳಿದನು:

“ಪರಮ ಅಕ್ಷರವೇ ಬ್ರಹ್ಮ. ಸ್ವಭಾವವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಇರುವವುಗಳಲ್ಲಿ ಭಾವವನ್ನುಂಟುಮಾಡುವ ವಿಸರ್ಗವೇ (ಅಗಲುವಿಕೆ) ಕರ್ಮವೆಂದು ತಿಳಿಯಲ್ಪಟ್ಟಿದೆ. ಅಧಿಭೂತವು ಕ್ಷರ (ಕ್ಷಯಿಸುವ, ನಾಶವಾಗುವ) ಭಾವವು. ಪುರುಷ (ಎಲ್ಲವನ್ನೂ ಆವರಿಸಿಕೊಂಡಿರುವವ)ನು ಅಧಿದೈವತವು. ದೇಹದಲ್ಲಿರುವ ಅಧಿಯಜ್ಞವು ನಾನೇ. ಅಂತ್ಯಕಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಕಲೇವರವನ್ನು ಬಿಡುವವನು ನನ್ನದೇ ಭಾವವನ್ನು ಹೊಂದುತ್ತಾನೆ. ಇದರಲ್ಲಿ ಸಂಶಯವಿಲ್ಲ. ಅಂತ್ಯದಲ್ಲಿ ಯಾವ ಯಾವ ಭಾವವನ್ನು ಸ್ಮರಿಸಿಕೊಂಡು, ಸದಾ ಅದೇ ಭಾವವನ್ನು ಭಾವಿಸುತ್ತಾ, ಶರೀರತ್ಯಾಗ ಮಾಡುವರೋ ಅದೇ ಭಾವವನ್ನೇ ಅವರು ಹೊಂದುವರು. ಆದುದರಿಂದ ಸರ್ವ ಕಾಲಗಳಲ್ಲಿ ನನ್ನನ್ನು ಸ್ಮರಿಸು ಮತ್ತು ಯುದ್ಧಮಾಡು. ನನಗೆ ಅರ್ಪಿಸಿದ ಮನೋಬುಧ್ಧಿಯು ನನ್ನನ್ನೇ ಸೇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅಭ್ಯಾಸಯೋಗಯುಕ್ತನಾಗಿ, ಬೇರೆದಾರಿಯನ್ನು ಹಿಡಿಯದ ಚೇತಸ್ಸಿನಿಂದ ಅನುಚಿಂತನೆ ಮಾಡುವವನು ದಿವ್ಯ ಪರಮ ಪುರುಷನನ್ನು ಹೊಂದುವನು. ಕವಿ, ಪುರಾಣ, ಅನುಶಾಸಿತ, ಅಣುವಿಗಿಂದ ಅಣುವಾಗಿರುವ, ಎಲ್ಲಕ್ಕೂ ಧಾತೃವೆನಿಸಿರುವ, ಅಚಿಂತ್ಯರೂಪ, ಆದಿತ್ಯವರ್ಣ, ತಮಸ್ಸಿನ ಆಚೆಯಿರುವ ಆ ಪುರುಷನನ್ನು ಅವನು ಹೊಂದುವನು. ಮರಣಕಾಲದಲ್ಲಿ ಅಚಲ ಮನಸ್ಸಿನಿಂದ, ಭಕ್ತಿಯಿಂದಲೂ ಯೋಗಬಲದಿಂದಲೂ ಕೂಡಿದವನಾಗಿ, ಹುಬ್ಬುಗಳ ಮಧ್ಯೆ ಪ್ರಾಣವನ್ನು ತಂದವನು ಆ ದಿವ್ಯ ಪರಮ ಪುರುಷನನ್ನು ಹೊಂದುತ್ತಾನೆ. ವೇದವಿದರು ಯಾವ ಅಕ್ಷರವನ್ನು ಹೇಳುತ್ತಾರೋ, ವೀತರಾಗರಾದ ಯತಿಗಳು ಯಾವುದನ್ನು ಪ್ರವೇಶಿಸುವರೋ, ಬ್ರಹ್ಮಚರ್ಯವನ್ನು ನಡೆಸುವವರು ಏನನ್ನು ಬಯಸುವರೋ ಆ ಪದವನ್ನು ನಿನಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ.

“ಸರ್ವ ದ್ವಾರಗಳನ್ನು ಸಂಯಮದಲ್ಲಿಟ್ಟುಕೊಂಡು, ಮನಸ್ಸನ್ನು ಹೃದಯದಲ್ಲಿ ನಿರೋಧಿಸಿ, ಪ್ರಾಣವನ್ನು ಮೂರ್ಧ್ನಿಗೆ ತಂದು, ಯೋಗಧಾರಣೆ ಮಾಡಿ, ಓಂ ಎಂದು ಏಕಾಕ್ಷರ ಬ್ರಹ್ಮನನ್ನು ಹೇಳಿಕೊಳ್ಳುತ್ತಾ, ನನ್ನನ್ನು ಅನುಸ್ಮರಿಸಿಕೊಳ್ಳುತ್ತಾ ಯಾರು ದೇಹವನ್ನು ತ್ಯಜಿಸುತ್ತಾರೋ ಅವರು ಪರಮ ಗತಿಯನ್ನು ಪಡೆಯುತ್ತಾರೆ. ಅನನ್ಯಚೇತಸನಾಗಿ ಸತತವೂ ನಿತ್ಯವೂ ನನ್ನನ್ನು ಯಾರು ಸ್ಮರಿಸುವನೋ ಆ ನಿತ್ಯಯುಕ್ತ ಯೋಗಿಗೆ ನಾನು ಸುಲಭ. ನನ್ನನ್ನು ಸೇರಿ ಪರಮ ಗತಿಯನ್ನು ಸಾಧಿಸಿ ಪಡೆದ ಮಹಾತ್ಮರು ದುಃಖದ ಆಲಯವಾಗಿರುವ, ಅಶ್ವಾಶ್ವತವಾಗಿರುವ ಪುನರ್ಜನ್ಮವನ್ನು ಪಡೆಯುವುದಿಲ್ಲ. ಬ್ರಹ್ಮಭುವನದವರೆಗಿನ ಲೋಕಗಳು ಪುನರಾವೃತ್ತಿಗೊಳ್ಳುವವು. ಆದರೆ ನನ್ನನ್ನು ಸೇರಿದವರಿಗೆ ಪುನರ್ಜನ್ಮವೆನ್ನುವುದಿರುವುದಿಲ್ಲ. ಆಹೋರಾತ್ರಗಳನ್ನು ತಿಳಿದ ಜನರು ಬ್ರಹ್ಮನ ಹಗಲು ಸಹಸ್ರ ಯುಗ ಪರ್ಯಂತವು ಮತ್ತು ರಾತ್ರಿಯು ಸಹಸ್ರಯುಗಳ ನಂತರ ಕೊನೆಗೊಳ್ಳುತ್ತದೆ ಎನ್ನುವುದನ್ನು ತಿಳಿದಿರುತ್ತಾರೆ. ಹಗಲು ಬರುವಾಗ ಎಲ್ಲವೂ ಅವ್ಯಕ್ತದಿಂದ ವ್ಯಕ್ತವಾಗುತ್ತವೆ. ಮತ್ತು ರಾತ್ರಿಯು ಬರಲು ಅದೇ ಅವ್ಯಕ್ತದಲ್ಲಿ ಪ್ರಲಯವಾಗುತ್ತವೆ. ಈ ಭೂತಗ್ರಾಮಗಳು ಹೀಗೆ ಆಗಿ ಪ್ರಲಯವಾಗುತ್ತವೆ. ರಾತ್ರಿ ಬರಲು ಅವಶವಾಗುತ್ತವೆ. ಹಗಲಾಗಲು ಹುಟ್ಟುತ್ತವೆ. ಆದರೆ ಆ ಅವ್ಯಕ್ತಕ್ಕಿಂತಲೂ ಅವ್ಯಕ್ತವಾದ, ಸನಾತನ ಭಾವವು ಆ ಎಲ್ಲ ಭೂತಗಳು ನಶಿಸಿದರೂ ವಿನಾಶವಾಗುವುದಿಲ್ಲ. ಅವ್ಯಕ್ತ ಮತ್ತು ಅಕ್ಷರವೆಂದು ಏನನ್ನು ಹೇಳುತ್ತಾರೋ ಅದು ಪರಮ ಗತಿ. ಇದನ್ನು ಸೇರಿದರೆ ಹಿಂದಿರುಗುವುದಲ್ಲ. ಇದೇ ನನ್ನ ಪರಮ ಧಾಮ.

“ಆ ಪರಮ ಪುರುಷನು ಅನನ್ಯ ಭಕ್ತಿಯಿಂದ ದೊರೆಯುತ್ತಾನೆ. ಇವನಲ್ಲಿಯೇ ಸರ್ವ ಭೂತಗಳಿರುವವು. ಆತನಿಂದಲೇ ಇವೆಲ್ಲವೂ ವ್ಯಾಪವಾಗಿರುವುದು. ಯಾವ ಕಾಲದಲ್ಲಿ ಯೋಗಿಗಳು ಪ್ರಯಾಣಿಸುತ್ತಿರುವಾಗ ಆವೃತ್ತಿ-ಅನಾವೃತ್ತಿಗಳನ್ನು ಹೊಂದುತ್ತಾರೋ ಆ ಕಾಲದ ಕುರಿತು ನಿನಗೆ ಹೇಳುತ್ತೇನೆ. ಅಗ್ನಿ, ಜ್ಯೋತಿ, ಅಹಸ್ಸು, ಶುಕ್ಲ, ಮತ್ತು ಉತ್ತರಾಯಣದ ಆರು ಮಾಸಗಳಲ್ಲಿ ಪ್ರಯಾಣ ಮಾಡಿದ ಬ್ರಹ್ಮವಿದ ಜನರು ಬ್ರಹ್ಮನನ್ನು ಸೇರುತ್ತಾರೆ. ಧೂಮ, ರಾತ್ರಿ, ಕೃಷ್ಣಪಕ್ಷ, ಮತ್ತು ದಕ್ಷಿಣಾಯನದ ಆರು ಮಾಸಗಳಲ್ಲಿ ಪ್ರಯಾಣಿಸಿದ ಯೋಗಿಯು ಚಂದ್ರನ ಜ್ಯೋತಿಯನ್ನು ಸೇರಿ ಮರಳಿ ಬರುತ್ತಾರೆ. ಶುಕ್ಲ-ಕೃಷ್ಣಗಳೆಂಬ ಈ ಎರಡು ಗತಿಗಳು ಜಗತ್ತಿಗೆ ಶಾಶ್ವತವಾಗಿರುತ್ತವೆ. ಒಂದರಿಂದ ಅನಾವೃತ್ತಿಯನ್ನು ಹೊಂದುತ್ತಾರೆ. ಇನ್ನೊಂದರಿಂದ ಪುನಃ ಮರಳಿ ಬರುತ್ತಾರೆ. ಈ ಎರಡು ಸೃತಿಗಳನ್ನು ಸರಿಯಾಗಿ ತಿಳಿದುಕೊಂಡವನು ಯಾವಾಗಲೂ ಮೋಸಹೋಗುವುದಿಲ್ಲ. ಆದುದರಿಂದ ಎಲ್ಲ ಕಾಲಗಳಲ್ಲಿ ಯೋಗಯುಕ್ತನಾಗಿರು. ವೇದಗಳ, ಯಜ್ಞಗಳ, ತಪಸ್ಸಿನ, ಮತ್ತು ದಾನಗಳ ಹೇಳಿದುದಕಿಂತ ಹೆಚ್ಚು ಪುಣ್ಯಫಲವನ್ನು ಮತ್ತು ಪರಮ ಸ್ಥಾನವನ್ನು ಇದನ್ನು ತಿಳಿದ ಯೋಗಿಯು ಪಡೆಯುತ್ತಾನೆ.”

ರಾಜವಿದ್ಯಾ ಯೋಗ

Related imageಶ್ರೀಭಗವಾನನು ಹೇಳಿದನು:

“ಅನಸೂಯನೇ! ನಿನಗೆ ಈ ವಿಜ್ಞಾನಸಹಿತ ಜ್ಞಾನವನ್ನು ಹೇಳುತ್ತಾನೆ. ಇದನ್ನು ತಿಳಿದು ನೀನು ಅಶುಭದಿಂದ ಮೋಕ್ಷಹೊಂದುವೆ. ಈ ರಾಜವಿದ್ಯೆ ರಾಜಗುಹ್ಯವು ಉತ್ತಮವೂ ಮತ್ತು ಪವಿತ್ರವೂ. ಇದನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಬಹುದು. ಧರ್ಮ್ಯವಾದುದು. ಮಾಡಲು ಸುಲಭವಾದುದು. ಅವ್ಯಯವಾದುದು. ಈ ಧರ್ಮದಲ್ಲಿ ಶ್ರದ್ಧೆಯಿರದ ಪುರುಷರು ನನ್ನನ್ನು ಹೊಂದದೇ ಮೃತ್ಯು-ಸಂಸಾರಗಳ ವೃತ್ತದಲ್ಲಿ ಹಿಂದಿರುಗುತ್ತಾರೆ. ಈ ಜಗತ್ತೆಲ್ಲವೂ ಅವ್ಯಕ್ತಮೂರ್ತಿಯಾದ ನನ್ನಿಂದ ವ್ಯಾಪ್ತಿಯಾಗಿರುವುದು. ಇರುವ ಎಲ್ಲವೂ ನನ್ನಲ್ಲಿವೆ. ನಾನು ಅವುಗಳಲಿಲ್ಲ. ಮತ್ತು ಇರುವವುಗಳು ನನ್ನಲ್ಲಿರುವುದೂ ಇಲ್ಲ. ನನ್ನ ಈ ಈಶ್ವರ ಯೋಗವನ್ನು ನೋಡು! ಭೂತಭಾವನನಾದ ನನ್ನ ಆತ್ಮವು ಭೂತಭೃತ್ತೂ ಅಲ್ಲ. ಭೂತಸ್ಥನೂ ಅಲ್ಲ. ಹೇಗೆ ಸರ್ವತ್ರಗತವಾದ ಮಹಾವಾಯುವು ನಿತ್ಯವೂ ಆಕಾಶದಲ್ಲಿರುವುದೋ ಹಾಗೆ ಸರ್ವ ಭೂತಗಳೂ ನನ್ನಲ್ಲಿರುವವೆಂದು ನಿಶ್ಚಯಿಸು.

“ಕಲ್ಪವು ಕ್ಷಯವಾಗುವಾಗ ಸರ್ವ ಭೂತಗಳೂ ನನ್ನ ಪ್ರಕೃತಿಯನ್ನು ಸೇರುತ್ತವೆ. ಕಲ್ಪದ ಆದಿಯಲ್ಲಿ ಪುನಃ ಅವುಗಳನ್ನು ಸೃಷ್ಟಿಸುತ್ತೇನೆ. ನನ್ನ ಪ್ರಕೃತಿಯನ್ನು ಇಟ್ಟುಕೊಂಡು ಮತ್ತೆ ಮತ್ತೆ ಪ್ರಕೃತಿಯ ವಶದಿಂದ ಪರವಶವಾಗಿರುವ ಈ ಭೂತಗ್ರಾಮಗಳೆಲ್ಲವನ್ನೂ ಮತ್ತೆ ಮತ್ತೆ ಸೃಷ್ಟಿ ಮಾಡುತ್ತಿರುತ್ತೇನೆ. ಆದರೆ ಆ ಕರ್ಮಗಳು ಉದಾಸೀನನಂತಿರುವ, ಆ ಕರ್ಮಗಳಲ್ಲಿ ಅನಾಸಕ್ತನಾಗಿರುವ ನನ್ನನ್ನು ಕಟ್ಟಿಹಾಕುವುದಿಲ್ಲ. ನನ್ನ ಅಧ್ಯಕ್ಷತೆಯಲ್ಲಿ ಪ್ರಕೃತಿಯು ಸಚರಾಚರವೆಲ್ಲವನ್ನೂ ಹುಟ್ಟಿಸುತ್ತದೆ. ಇದೇ ಕಾರಣದಿಂದ ಜಗತ್ತು ಸುತ್ತುತ್ತಿರುವುದು. ಭೂತಮಹೇಶ್ವರನಾದ ನನ್ನ ಪರಮ ಭಾವವನ್ನು ತಿಳಿಯದೇ ಮೂಢರು ಮನುಷ್ಯ ದೇಹವನ್ನು ಆಶ್ರಯಿಸಿದ ನನ್ನನ್ನು ತಿರಸ್ಕರಿಸುತ್ತಾರೆ. ವ್ಯರ್ಥ ಆಶೆಗಳ, ವ್ಯರ್ಥ ಕರ್ಮಗಳ, ವ್ಯರ್ಥ ಜ್ಞಾನಗಳ ಅವರು ವಿಚೇತಸರರಾಗಿ ರಾಕ್ಷಸೀ, ಅಸುರೀ, ಮೋಹಿನೀ ಪ್ರಕೃತಿಯನ್ನು ಆಶ್ರಯಿಸುತ್ತಾರೆ. ಆದರೆ ಮಹಾತ್ಮರು ದೈವೀ ಪ್ರಕೃತಿಯನ್ನು ಆಶ್ರಯಿಸಿ ನನ್ನನ್ನು ಭೂತಾದಿ, ಅವ್ಯಯನೆಂದು ಅರ್ಥಮಾಡಿಕೊಂಡು, ಅನನ್ಯ ಮನಸ್ಕರಾಗಿ ನನ್ನನ್ನೇ ಭಜಿಸುತ್ತಾರೆ. ಸತತವೂ ನನ್ನ ಕೀರ್ತನೆ ಮಾಡುತ್ತಾ, ಪ್ರಯತ್ನ ಪಡುತ್ತಾ, ದೃಢವ್ರತರಾಗಿ ಭಕ್ತಿಯಿಂದ ನಮಸ್ಕರಿಸುತ್ತಾ ನಿತ್ಯಯುಕ್ತರಾಗಿ ಉಪಾಸಿಸುತ್ತಾರೆ. ಕೆಲವರು ಜ್ಞಾನಯಜ್ಞದಿಂದ ಯಜಿಸಿ ನನ್ನನ್ನು ಏಕತ್ವನಾಗಿ, ಪ್ರತ್ಯೇಕವಾಗಿ, ವಿಶ್ವತೋಮುಖನಾಗಿ ಬಹುವಿಧಗಳಲ್ಲಿ ಉಪಾಸಿಸುತ್ತಾರೆ. ನಾನೇ ಕ್ರತು. ನಾನೇ ಯಜ್ಞ, ಸ್ವಧಾ, ನಾನೇ ಔಷಧ. ಮಂತ್ರವು ನಾನು, ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತವು. ನಾನೇ ಈ ಜಗತ್ತಿನ ಪಿತಾಮಹ, ಮಾತಾ, ಧಾತಾ ಮತ್ತು ಪಿತಾಮಹ, ವೇದ್ಯ, ಪವಿತ್ರ, ಓಂಕಾರ, ಋಕ್-ಸಾಮ-ಯಜುರ್ವೇದಗಳು ಕೂಡ. ನಾನೇ ಗತಿ, ಭರ್ತಾ, ಪ್ರಭು, ಸಾಕ್ಷೀ, ನಿವಾಸ, ಶರಣ, ಸುಹೃತ್, ಪ್ರಭವ, ಪ್ರಲಯ, ಸ್ಥಾನ, ನಿಧಾನ, ಬೀಜ, ಮತ್ತು ಅವ್ಯಯ. ನಾನು ತಪಿಸುತ್ತೇನೆ. ನಾನು ಮಳೆಯನ್ನು ಹಿಂದೆ ತೆಗೆದುಕೊಳ್ಳುತ್ತೇನೆ ಮತ್ತು ಸುರಿಸುತ್ತೇನೆ ಕೂಡ. ನಾನು ಅಮೃತ ಮತ್ತು ಮೃತ್ಯುವೂ ಕೂಡ. ಇರುವುದು ಮತ್ತು ಇಲ್ಲದಿರುವುದೂ ನಾನೇ.

“ತ್ರೈವಿದ್ಯರು (ಋಕ್, ಯಜುಸ್ಸು ಮತ್ತು ಸಾಮವೇದಗಳನ್ನು ತಿಳಿದಿರುವವರು) ಸೋಮವನ್ನು ಕುಡಿದವರಾಗಿ, ಪಾಪಗಳನ್ನು ಕಳೆದುಕೊಂಡವರಾಗಿ, ನನಗೆ ಯಜ್ಞ-ಇಷ್ಟಿಗಳ ಮೂಲಕ ಸ್ವರ್ಗವನ್ನು ಪ್ರಾರ್ಥಿಸುತ್ತಾರೆ. ಅವರು ಪುಣ್ಯವಾದ ಸುರೇಂದ್ರಲೋಕವನ್ನು ಸೇರಿ, ದಿವಿಯಲ್ಲಿಯ ದಿವ್ಯ ದೇವಭೋಗಗಳನ್ನು ಭೋಗಿಸುವರು. ಅವರು ಆ ವಿಶಾಲ ಸ್ವರ್ಗಲೋಕವನ್ನು ಭೋಗಿಸಿ ಪುಣ್ಯವು ಕ್ಷೀಣವಾಗಲು ಮರ್ತ್ಯಲೋಕವನ್ನು ಪುನಃ ಪ್ರವೇಶಿಸುತ್ತಾರೆ. ಹೀಗೆ ತ್ರಯೀಧರ್ಮವನ್ನು ಅವಲಂಬಿಸಿದ ಕಾಮಕಾಮರು ಗತಾಗತವನ್ನು ಪಡೆಯುತ್ತಾರೆ. ಯಾವ ಜನರು ಅನನ್ಯರಾಗಿ ನನ್ನನ್ನೇ ಚಿಂತಿಸಿ ಉಪಾಸನೆ ಮಾಡುತ್ತಾರೋ ಆ ನಿತ್ಯಾಭಿಯುಕ್ತರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ. ಶ್ರದ್ಧಾನ್ವಿತರಾಗಿ ಯಾವ ಭಕ್ತರು ಅನ್ಯ ದೇವತೆಗಳನ್ನು ಯಜಿಸುತ್ತಾರೋ ಅವರೂ ಕೂಡ ನನ್ನನ್ನೇ ಅವಿಧಿಪೂರ್ವಕವಾಗಿ ಪೂಜಿಸುತ್ತಿರುತ್ತಾರೆ. ಸರ್ವ ಯಜ್ಞಗಳ ಭೋಕ್ತನೂ ಪ್ರಭುವೂ ನಾನೇ. ಆದರೆ ಅವರು ನನ್ನನ್ನು ತತ್ವದಿಂದ ತಿಳಿಯರು. ಆದ್ದರಿಂದ ಅವರು ಜಾರಿಬೀಳುವರು. ದೇವವ್ರತರಾದವರು ದೇವತೆಗಳನ್ನು ಸೇರುತ್ತಾರೆ. ಪಿತೃವ್ರತರಾದವರು ಪಿತೃಗಳನ್ನು ಸೇರುತ್ತಾರೆ. ಭೂತೇಜ್ಯರು ಭೂತಗಳನ್ನು ಸೇರುವರು. ನನ್ನನ್ನು ಯಾಜಿಸುವವರು ನನ್ನನ್ನು ಸೇರುತ್ತಾರೆ.

“ಪತ್ರ, ಪುಷ್ಪ, ಫಲ, ನೀರನ್ನು ಯಾರು ನನಗೆ ಭಕ್ತಿಯಿಂದ ನೀಡುತ್ತಾರೋ ಆ ಪ್ರಯತಾತ್ಮರು ಭಕ್ತಿಪೂರ್ವಕವಾಗಿ ಕೊಟ್ಟಿದ್ದುದನ್ನೇ ನಾನು ಸ್ವೀಕರಿಸುತ್ತೇನೆ. ನೀನು ಏನನ್ನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ, ಏನನ್ನು ಯಾಗಮಾಡುತ್ತೀಯೋ, ಏನನ್ನು ಕೊಡುತ್ತೀಯೋ, ಏನನ್ನು ತಪಿಸುತ್ತೀಯೋ ಅದನ್ನು ನನಗೆ ಅರ್ಪಣೆ ಮಾಡು. ಈ ರೀತಿ ಶುಭಾಶುಭಫಲಗಳ ಕರ್ಮಬಂಧನಗಳಿಂದ ಮುಕ್ತನಾಗುತ್ತೀಯೆ. ಸಂನ್ಯಾಸಯೋಗಯುಕ್ತನಾಗಿ ವಿಮುಕ್ತನಾಗಿ ನನ್ನ ಬಳಿ ಬರುತ್ತೀಯೆ. ನಾನು ಸರ್ವಭೂತಗಳಲ್ಲಿಯೂ ಸಮನಾಗಿರುವೆನು. ನಾನು ದ್ವೇಷಿಸುವವನು ಯಾರೂ ಇಲ್ಲ. ಪ್ರಿಯರಾದವರೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಭಜಿಸುವರೋ ಅವರು ನನ್ನಲ್ಲಿ ಮತ್ತು ನಾನು ಅವರಲ್ಲಿ ಇರುತ್ತೇವೆ. ತುಂಬಾ ದುರಾಚಾರಿಯಾಗಿದ್ದರೂ ಸದಾ ನನ್ನನ್ನೇ ಅನನ್ಯಭಾಜನಾಗಿ ಭಜಿಸಿದರೆ ಅವನನ್ನು ಸಾಧುವೆಂದೇ ತಿಳಿಯಬೇಕು. ಏಕೆಂದರೆ ಅವನು ಸರಿಯಾದ ವ್ಯವಸಾಯವುಳ್ಳವನಾಗಿರುತ್ತಾನೆ. ಕ್ಷಿಪ್ರವಾಗಿ ಅವನು ಧರ್ಮಾತ್ಮನಾಗುತ್ತಾನೆ. ಶಾಶ್ವತವಾದ ಶಾಂತಿಯನ್ನು ಪಡೆಯುವನು. ನನ್ನ ಭಕ್ತನು ಪ್ರಣಾಶವಾಗುವುದಿಲ್ಲ ಎನ್ನುವುದನ್ನು ತಿಳಿದುಕೋ. ಪಾಪಯೋನಿಗಳಾದ ಸ್ತ್ರೀಯರು, ವೈಶ್ಯೆಯರು, ಶೂದ್ರರೂ ಕೂಡ ನನ್ನನ್ನು ಸಮಾಶ್ರಯಿಸಿ ಪರಮ ಗತಿಯನ್ನು ಹೊಂದುತ್ತಾರೆ. ಇನ್ನು ಪುನಃ ಪುಣ್ಯ ಭಕ್ತರಾದ ಬ್ರಾಹ್ಮಣರು ಮತ್ತು ರಾಜರ್ಷಿಗಳೇನು?

“ಅನಿತ್ಯವೂ ಅಸುಖವೂ ಆದ ಈ ಲೋಕವನ್ನು ಪಡೆದಿರುವ ನನ್ನನ್ನೇ ಭಜಿಸು. ನನ್ನಲ್ಲಿಯೇ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ಸಮಸ್ಕರಿಸು. ನನ್ನ ಪರಾಯಣನಾಗಿ ಯುಕ್ತನಾಗಿದ್ದರೆ ಆತ್ಮನಾಗಿರುವ ನನ್ನನ್ನೇ ಬಂದು ಸೇರುವೆ.”

ವಿಭೂತಿ ಯೋಗ

Related imageಶ್ರೀಭಗವಾನನು ಹೇಳಿದನು:

“ಮಹಾಬಾಹೋ! ನನ್ನ ಪರಮ ವಚನವನ್ನು ಇನ್ನೂ ಕೇಳು. ಇದನ್ನು ನಿನ್ನ ಹಿತವನ್ನು ಬಯಸಿ, ನಿನಗೆ ಒಳ್ಳೆಯದಾಗಲು ಹೇಳುತ್ತಿದ್ದೇನೆ. ನನ್ನ ಪ್ರಭವವನ್ನು ಸುರಗಣಗಳಾಗಲೀ ಮಹರ್ಷಿಗಳಾಗಲೀ ಅರಿಯರು. ಏಕೆಂದರೆ ದೇವತೆಗಳು ಮತ್ತು ಮಹರ್ಷಿಗಳು ಎಲ್ಲರಿಗೂ ನಾನೇ ಆದಿ. ಯಾರು ನನ್ನನ್ನು ಅಜ, ಅನಾದಿ, ಮತ್ತು ಲೋಕಮಹೇಶ್ವರನೆಂದು ತಿಳಿದುಕೊಳ್ಳುತ್ತಾರೋ ಅವರು ಮರ್ತ್ಯರಲ್ಲಿ ಅಸಮ್ಮೂಢರಾಗಿ ಸರ್ವಪಾಪಗಳಿಂದ ವಿಮುಕ್ತರಾಗುತ್ತಾರೆ. ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮೆ, ಸತ್ಯ, ದಮ, ಶಮ, ಸುಖ, ದುಃಖ, ಭವ, ಅಭಾವ, ಭಯ, ಅಭಯವೂ ಕೂಡ, ಅಹಿಂಸಾ, ಸಮತಾ, ತುಷ್ಟಿ, ತಪಸ್ಸು, ದಾನ, ಯಶಸ್ಸು, ಅಯಶಸ್ಸು, ಆಗುವವು, ಆಗುತ್ತಿರುವವು, ಮತ್ತು ಆಗಿಹೋಗಿರುವವು, ಇವೆಲ್ಲವೂ ನನ್ನಿಂದಲೇ ಆಗುವವು. ಹಿಂದಿನ ಏಳು ಮಹರ್ಷಿಗಳೂ, ನಾಲ್ಕು ಮನುಗಳೂ ನನ್ನ  ಭಾವದಿಂದ ಮಾನಸರಾಗಿ ಹುಟ್ಟಿದರು. ಲೋಕಗಳಲ್ಲಿರುವ ಈ ಪ್ರಜೆಗಳು ಅವರದ್ದು. ನನ್ನ ಈ ವಿಭೂತಿಯೋಗವನ್ನು ಯಾರು ತತ್ತ್ವತವಾಗಿ ತಿಳಿದುಕೊಳ್ಳುತ್ತಾನೋ ಅವನು ಅವಿಕಂಪ ಯೋಗದಿಂದ ಯುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

“ನಾನು ಎಲ್ಲದರ ಪ್ರಭು. ನನ್ನಿಂದ ಎಲ್ಲವೂ ನಡೆಯುತ್ತದೆ. ಹೀಗೆಂದು ತಿಳಿದು ಭಾವಸಮನ್ವಿತರಾದ ಬುಧರು ನನ್ನನ್ನು ಭಜಿಸುತ್ತಾರೆ. ನನ್ನಲ್ಲೇ ಚಿತ್ತವನ್ನಿರಿಸಿ, ನನ್ನಲ್ಲಿಯೇ ಪ್ರಾಣವನ್ನು ಇಟ್ಟು, ಪರಸ್ಪರರನ್ನು ಬೋಧಿಸುತ್ತಾ, ನಿತ್ಯವೂ ನನ್ನ ಕುರಿತು ಮಾತನಾಡುತ್ತಾ ತೃಪ್ತರಾಗಿ ರಮಿಸುತ್ತಾರೆ. ಸತತಯುಕ್ತರಾಗಿ ಪ್ರೀತಿಪೂರ್ವಕವಾಗಿ ಭಜಿಸುವ ಅವರಿಗೆ ನಾನು ಈ ಬುದ್ಧಿಯೋಗವನ್ನು ಕೊಡುತ್ತೇನೆ. ಅದರಿಂದ ಅವರು ನನ್ನನ್ನೇ ಸೇರುವರು. ಅವರ ಮೇಲಿನ ಅನುಕಂಪದಿಂದಾಗಿ ನಾನು ಅಜ್ಞಾನದಿಂದ ಹುಟ್ಟಿರುವ ಕತ್ತಲೆಯನ್ನು ಬೆಳಗುತ್ತಿರುವ ಜ್ಞಾನದೀಪದಿಂದ ಆತ್ಮಭಾವದಲ್ಲಿದ್ದುಕೊಂಡು ನಾಶಗೊಳಿಸುತ್ತೇನೆ.”

ಅರ್ಜುನನು ಹೇಳಿದನು:

“ನೀನು ಪರಬ್ರಹ್ಮ, ಪರಂಧಾಮ, ಪರಮ ಪವಿತ್ರ, ಪುರುಷ, ಶಾಶ್ವತ, ದಿವ್ಯ, ಆದೀದೇವ, ಅಜ, ವಿಭು ಎಂದು ಎಲ್ಲ ಋಷಿಗಳೂ, ದೇವರ್ಷಿ ನಾರದನೂ, ಅಸಿತ ದೇವಲರೂ, ವ್ಯಾಸನೂ ಹೇಳುತ್ತಾರೆ. ಅದನ್ನೇ ಸ್ವತಃ ನೀನೂ ಕೂಡ ನನಗೆ ಹೇಳುತ್ತಿದ್ದೀಯೆ. ನೀನು ಹೇಳುತ್ತಿರುವುದೆಲ್ಲವನ್ನೂ ನಾನು ನಿಜವೆಂದೇ ತಿಳಿಯುತ್ತೇನೆ. ಭಗವನ್! ನಿನ್ನ ವ್ಯಕ್ತಿತ್ವವನ್ನು ದೇವ-ದಾನವರೂ ತಿಳಿಯಲಾರರು. ಸ್ವಯಂ ನೀನೇ ನಿನ್ನಿಂದಲೇ ನಿನ್ನನ್ನು ತಿಳಿದುಕೊಂಡಿದ್ದೀಯೆ. ನಿನ್ನ ದಿವ್ಯ ವಿಭೂತಿಗಳನ್ನು ಒಂದನ್ನೂ ಬಿಡದೇ ಹೇಳಬೇಕು. ಯಾವ ವಿಭೂತಿಗಳಿಂದ ನೀನು ಈ ಲೋಕಗಳನ್ನು ವ್ಯಾಪಿಸಿರುವೆಯೋ ಅವುಗಳನ್ನು ಹೇಳು. ಸದಾ ನಿನ್ನನ್ನೇ ಚಿಂತಿಸುತ್ತಾ ನಾನು ಹೇಗೆ ನಿನ್ನನ್ನು ತಿಳಿಯಬಲ್ಲೆ? ಯಾವ ಯಾವ ಭಾವಗಳಿಂದ ನಿನ್ನನ್ನು ನಾನು ಚಿಂತಿಸಬೇಕು? ನಿನ್ನ ಯೋಗವನ್ನೂ ವಿಭೂತಿಯನ್ನು ಇನ್ನೂ ವಿಸ್ತಾರವಾಗಿ ಹೇಳು. ಈ ಅಮೃತವನ್ನು ಕೇಳಿದಷ್ಟೂ ನನಗೆ ತೃಪ್ತಿಯಾಗುತ್ತಿಲ್ಲ.”

ಶ್ರೀ ಭಗವಾನನು ಹೇಳಿದನು:

“ಕುರುಶ್ರೇಷ್ಠ! ಇಗೋ ನನ್ನ ದಿವ್ಯವಾದ ಪ್ರಧಾನವಾದ ವಿಭೂತಿಗಳನ್ನು ಹೇಳುತ್ತೇನೆ. ನನ್ನ ವಿಸ್ತಾರಕ್ಕೆ ಅಂತ್ಯವೆನ್ನುವುದೇ ಇಲ್ಲ. ನಾನು ಸರ್ವಭೂತಗಳಲ್ಲಿ ನೆಲೆಸಿರುವ ಆತ್ಮ. ನಾನು ಭೂತಗಳ ಆದಿ, ಮಧ್ಯ ಮತ್ತು ಅಂತವೂ ಕೂಡ. ಆದಿತ್ಯರಲ್ಲಿ ನಾನು ವಿಷ್ಣು. ಜ್ಯೋತಿಷಗಳಲ್ಲಿ ಅಂಶುಮಾನ್ ರವಿ. ಮರೀಚಿಗಳಲ್ಲಿ ಮರುತನಾಗಿರುವೆ. ನಕ್ಷತ್ರಗಳಲ್ಲಿ ನಾನು ಶಶಿ. ವೇದಗಳಲ್ಲಿ ಸಾಮವೇದನಾಗಿರುವೆ. ದೇವತೆಗಳಲ್ಲಿ ವಾಸವನಾಗಿರುವೆ. ಇಂದ್ರಿಯಗಳಲ್ಲಿ ಮನಸ್ಸಾಗಿರುವೆ. ಭೂತಗಳಲ್ಲಿ ಚೇತನನಾಗಿರುವೆ. ರುದ್ರರಲ್ಲಿ ಶಂಕರನಾಗಿರುವೆ ಮತ್ತು ಧನವಂತರಲ್ಲಿ ಯಕ್ಷರಕ್ಷಕನಾಗಿರುವೆ. ವಸುಗಳಲ್ಲಿ ಪಾವಕನಾಗಿರುವೆ ಮತ್ತು ಶಿಖರಗಳಲ್ಲಿ ನಾನು ಮೇರು. ರಾಜಪುರೋಹಿತರಲ್ಲಿ ನಾನು ಮುಖ್ಯನಾದ ಬೃಹಸ್ಪತಿಯೆಂದು ತಿಳಿ. ಸೇನಾನಿಗಳಲ್ಲಿ ನಾನು ಸ್ಕಂದ. ಸರಸಗಳಲ್ಲಿ ಸಾಗರನಾಗಿರುವೆ. ಮಹರ್ಷಿಗಳಲ್ಲಿ ನಾನು ಭೃಗು. ಮಾತಿನಲ್ಲಿ ನಾನು ಏಕಾಕ್ಷರ. ಯಜ್ಞಗಳಲ್ಲಿ ಜಪಯಜ್ಞನಾಗಿರುವೆ. ಸ್ಥಾವರಗಳಲ್ಲಿ ಹಿಮಾಲಯ. ವೃಕ್ಷಗಳೆಲ್ಲವುಗಳಲ್ಲಿ ಅಶ್ವತ್ಥ, ದೇವರ್ಷಿಗಳಲ್ಲಿ ನಾರದ, ಗಂಧರ್ವರಲ್ಲಿ ಚಿತ್ರರಥ ಮತ್ತು ಸಿದ್ಧರಲ್ಲಿ ಕಪಿಲ ಮುನಿ. ಅಶ್ವಗಳಲ್ಲಿ ನಾನು ಅಮೃತೋದ್ಭವ ಉಚ್ಛೈಶ್ರವಸ್ಸೆಂದು ತಿಳಿ. ಗಜೇಂದ್ರಗಳಲ್ಲಿ ಐರಾವತ ಮತ್ತು ನರರಲ್ಲಿ ನರಾಧಿಪ. ಆಯುಧಗಳಲ್ಲಿ ನಾನು ವಜ್ರ. ಧೇನುಗಳಲ್ಲಿ ಕಾಮಧೇನು. ಪ್ರಜನ ಕಂದರ್ಪನೂ ಆಗಿರುವೆ. ಸರ್ಪಗಳಲ್ಲಿ ವಾಸುಕಿ. ನಾಗಗಳಲ್ಲಿ ಅನಂತನಾಗಿರುವೆ. ಯಾದಸರಲ್ಲಿ ನಾನು ವರುಣ. ಪಿತೃಗಳಲ್ಲಿ ಆರ್ಯಮ ಮತ್ತು ಸಂಯಮತರಲ್ಲಿ ನಾನು ಯಮ. ದೈತ್ಯರಲ್ಲಿ ಪ್ರಹ್ಲಾದನಾಗಿರುವೆ. ಎಣಿಸುವವರಲ್ಲಿ ನಾನು ಕಾಲ. ಮೃಗಗಳಲ್ಲಿ ಮೃಗೇಂದ್ರನು ನಾನು ಮತ್ತು ಪಕ್ಷಿಗಳಲ್ಲಿ ವೈನತೇಯ. ಪವತಾಮರಲ್ಲಿ ಪವನನಾಗಿರುವೆ. ಶಸ್ತ್ರಭೃತರಲ್ಲಿ ರಾಮನು ನಾನು. ಝುಷಗಳಲ್ಲಿ ಮಕರನಾಗಿರುವೆ. ಹರಿಯುವವುಗಳಲ್ಲಿ ಜಾಹ್ನವಿಯಾಗಿರುವೆ. ಸರ್ಗಗಳಿಗೆ ಆದಿ, ಮಧ್ಯ ಮತ್ತು ಅಂತ್ಯವೂ ನಾನೇ. ವಿದ್ಯೆಗಳಲ್ಲಿ ಆಧ್ಯಾತ್ಮವಿದ್ಯೆಯು ನಾನು. ಪ್ರವದತರಲ್ಲಿ ವಾದವು ನಾನು. ಅಕ್ಷರಗಳಲ್ಲಿ ಅಕಾರನಾಗಿದ್ದೇನೆ. ಸಾಮಾಸಿಕದಲ್ಲಿ ದ್ವಂದ್ವವೂ ಆಗಿದ್ದೇನೆ. ನಾನೇ ಅಕ್ಷಯವಾದ ಕಾಲ. ವಿಶ್ವತೋಮುಖ ಧಾತನು ನಾನು. ಸರ್ವಹರರಲ್ಲಿ ನಾನು ಮೃತ್ಯು. ಮುಂದೆ ಆಗುವವುಗಳಿಗೆ ಉದ್ಭವವು ನಾನು. ನಾರಿಯರ ಕೀರ್ತಿ, ಶ್ರೀ, ವಾಕ್ಕು, ಸ್ಮೃತಿ, ಮೇಧಾ, ಧೃತಿ ಮತ್ತು ಕ್ಷಮೆಯು ನಾನು. ಹಾಗೆಯೇ ಸಾಮಗಳಲ್ಲಿ ಬೃಹತ್ಸಾಮವು. ಛಂಧಸ್ಸುಗಳಲ್ಲಿ ಗಾಯತ್ರಿಯು ನಾನು. ಮಾಸಗಳಲ್ಲಿ ನಾನು ಮಾರ್ಗಶೀರ್ಷ. ಋತುಗಳಲ್ಲಿ ಕುಸುಮಾಕರನು. ಛಲವನ್ನು ಮಾಡುವವುಗಳಲ್ಲಿ ದ್ಯೂತವು ನಾನು. ತೇಜಸ್ವಿಗಳಲ್ಲಿರುವ ತೇಜಸ್ಸು ನಾನು. ವ್ಯವಸಾಯಗಳಲ್ಲಿ ಜಯನಾಗಿರುವೆನು ಮತ್ತು ಸತ್ಯವತರಲ್ಲಿರುವ ಸತ್ತ್ವವು ನಾನೇ. ವೃಷ್ಣಿಗಳಲ್ಲಿ ವಾಸುದೇವನಾಗಿರುವೆ. ಪಾಂಡವರಲ್ಲಿ ಧನಂಜಯ. ಮುನಿಗಳಲ್ಲಿ ನಾನು ವ್ಯಾಸ, ಮತ್ತು ಕವಿಗಳಲ್ಲಿ ಉಶಾನ ಕವಿ. ದಮನ ಮಾಡುವವರಲ್ಲಿ ದಂಡನಾಗಿರುವೆನು. ಜಿಗೀಷುಗಳಲ್ಲಿ (ಗೆಲ್ಲಬೇಕೆಂದಿರುವವರಲ್ಲಿ) ನೀತಿಯಾಗಿರುವೆನು. ಗುಹ್ಯರಲ್ಲಿ ಮೌನವಾಗಿರುವೆನು. ಜ್ಞಾನಿಗಳಲ್ಲಿ ಜ್ಞಾನವೇ ನಾನು.

“ಸರ್ವಭೂತಗಳಿಗೂ ಬೀಜವು ಯಾವುದೋ ಅದು ನಾನು. ನಾನಿಲ್ಲದೇ ಇರುವ ಭೂತ ಚರಾಚರಗಳ್ಯಾವುವೂ ಇಲ್ಲ. ನನ್ನ ದಿವ್ಯ ವಿಭೂತಿಗಳಿಗೆ ಅಂತವಿಲ್ಲ. ಆದರೆ ಈ ವಿಭೂತಿಯನ್ನು ವಿಸ್ತಾರವಾಗಿ ಒಂದು ಉದ್ದೇಶದಿಂದ ನಾನು ಹೇಳುತ್ತಿದ್ದೇನೆ. ಯಾವ ಯಾವ ಸತ್ತ್ವವು ವಿಭೂತಿಯುತವಾದುದೋ, ಶ್ರೀಯುಕ್ತವೋ, ಊರ್ಜಿತವಾದುದೋ ಅದನ್ನೇ ನೀನು ನನ್ನ ತೇಜೋಂಶದಿಂದ ಸಂಭವಿಸಿದುದೆಂದು ತಿಳಿದುಕೋ. ಇಷ್ಟೊಂದು ಬಹಳವಾಗಿ ತಿಳಿದುಕೊಳ್ಳುವುದರಲ್ಲಿ ಏನಿದೆ? ಈ ಜಗತ್ತೆಲ್ಲವನ್ನೂ ನಾನು ನನ್ನ ಒಂದೇ ಒಂದು ಅಂಶದಿಂದ ಹಿಡಿದಿಟ್ಟುಕೊಂಡಿದ್ದೇನೆ.”

ವಿಶ್ವರೂಪದರ್ಶನ ಯೋಗ

Related imageಅರ್ಜುನನು ಹೇಳಿದನು:

“ನನ್ನಮೇಲಿನ ಅನುಗ್ರಹದಿಂದ ಆಧ್ಯಾತ್ಮವೆಂದು ಕರೆಯಲ್ಪಡುವ ಯಾವ ಪರಮಗುಹ್ಯವಾದ ಮಾತನ್ನು ನೀನು ಹೇಳಿದೆಯೋ ಅದರಿಂದ ನನ್ನೀ ಮೋಹವು ತೊಲಗಿತು. ಕಮಪತ್ರಾಕ್ಷ! ಭೂತಗಳ ಹುಟ್ಟುವಿಕೆ ಮತ್ತು ನಾಶದ ಕುರಿತು, ನಿನ್ನ ಅವ್ಯಯವಾದ ಮಹಾತ್ಮೆಯನ್ನೂ ವಿಸ್ತಾರವಾಗಿ ನಾನು ಕೇಳಿದೆ. ನಿನ್ನನ್ನು ನೀನು ಹೇಗೆಂದು ಹೇಳಿಕೊಂಡಿರುವೆಯೋ ಅದು ಹಾಗೆಯೇ ಸರಿ. ನಿನ್ನ ಐಶ್ವರ ರೂಪವನ್ನು ನೋಡಲು ಬಯಸುತ್ತೇನೆ. ಒಂದುವೇಳೆ ನಾನು ಅದನ್ನು ನೋಡಲು ಶಕ್ಯನಾಗಿದ್ದರೆ ಯೋಗೇಶ್ವರ! ನನಗೆ ನಿನ್ನ ಅವ್ಯಯ ಆತ್ಮನನ್ನು ತೋರಿಸು!”

ಶ್ರೀಭಗವಾನನು ಹೇಳಿದನು:

“ಪಾರ್ಥ! ನನ್ನ ನೂರಾರು ಸಹಸ್ರಾರು ನಾನಾವಿಧಗಳ, ನಾನಾ ವರ್ಣ-ಆಕೃತಿಗಳ ದಿವ್ಯ ರೂಪಗಳನ್ನು ನೋಡು! ಆದಿತ್ಯರನ್ನೂ, ವಸುಗಳನ್ನೂ, ರುದ್ರರನ್ನೂ, ಅಶ್ವಿಯರನ್ನೂ, ಮತ್ತು ಮರುತರನ್ನೂ ನೋಡು. ಹಿಂದೆ  ನೋಡದೇ ಇರದ ಆಶ್ಚರ್ಯಗಳನ್ನೂ ನೋಡು! ಇಂದು ಚರಾಚರಗಳಿಂದ ಕೂಡಿದ ಸಂಪೂರ್ಣ ಜಗತ್ತು ಇಲ್ಲಿಯೇ ಇದೆ. ನೋಡು! ಬೇರೆ ಯಾವುದನ್ನು ನೋಡಲಿಚ್ಛಿಸುತ್ತೀಯೋ ಅವುಗಳನ್ನು ನನ್ನ ದೇಹದಲ್ಲಿಯೇ ನೋಡು! ಆದರೆ ನಿನ್ನ ಇದೇ ಕಣ್ಣುಗಳಿಂದ ನನ್ನನ್ನು ನೀಡು ನೋಡಲು ಶಕ್ತನಿಲ್ಲ. ನಿನಗೆ ದಿವ್ಯಚಕ್ಷುಗಳನ್ನು ಕೊಡುತ್ತೇನೆ. ನನ್ನ ಐಶ್ವರಯೋಗವನ್ನು ನೋಡು!”

ಹೀಗೆ ಹೇಳಿ ಮಹಾಯೋಗೇಶ್ವರ ಹರಿಯು ಪಾರ್ಥನಿಗೆ ಅನೇಕ ವಕ್ತ್ರನಯನಗಳುಳ್ಳ, ಅನೇಕ ಅದ್ಭುತದರ್ಶನಗಳುಳ್ಳ, ಅನೇಕದಿವ್ಯಾಭರಣಗಳ, ಅನೇಕ ದಿವ್ಯ ಆಯುಧಗಳನ್ನು ಹಿಡಿದಿರುವ, ದಿವ್ಯಮಾಲಾಂಬರಧರನಾಗಿ, ದಿವ್ಯಗಂಧಾನುಲೇಪನನಾಗಿ, ಸರ್ವವೂ ಆಶ್ಚರ್ಯಮಯವಾಗಿರುವ, ದೇವ, ಅನಂತ, ವಿಶ್ವತೋಮುಖವಾದ ತನ್ನ ಪರಮ ಐಶ್ವರ ರೂಪವನ್ನು ತೋರಿಸಿದನು. ಒಂದುವೇಳೆ ದಿವಿಯಲ್ಲಿ ಒಮ್ಮೆಗೇ ಸಹಸ್ರ ಸೂರ್ಯರ ಬೆಳಕು ಉದ್ಭವಾದರೆ ಅದು ಆ ಮಹಾತ್ಮನ ಬೆಳಕಿಗೆ ಸಮಾನವಾದೀತು! ಆಗ ಪಾಂಡವನು ಅನೇಕಪ್ರಕಾರವಾಗಿ ವಿಂಗಡವಾಗಿರುವ ಜಗತ್ತೆಲ್ಲವೂ ಆ ದೇವದೇವ ಶರೀರದಲ್ಲಿ ಏಕಸ್ಥವಾಗಿದ್ದುದನ್ನು ನೋಡಿದನು. ಧನಂಜಯನು ವಿಸ್ಮಯಾವಿಷ್ಟನಾಗಿ, ರೋಮಾಂಚನಗೊಂಡು, ದೇವನಿಗೆ ಶಿರಸಾ ಸಮಸ್ಕರಿಸಿ, ಕೈಮುಗಿದು ಹೇಳಿದನು:

“ದೇವಾ! ನಿನ್ನ ದೇಹದಲ್ಲಿ ಎಲ್ಲ ದೇವತೆಗಳನ್ನೂ, ಬೇರೆಬೇರೆ ಪ್ರಾಣಿಗಳ ಗುಂಪುಗಳನ್ನು, ಕಮಲಾಸನಸ್ಥನಾಗಿರುವ ಈಶ ಬ್ರಹ್ಮನನ್ನೂ, ಸರ್ವ ಋಷಿಗಳನ್ನೂ ಉರುಗರನ್ನೂ ಕಾಣುತ್ತಿದ್ದೇನೆ. ವಿಶ್ವೇಶ್ವರ! ವಿಶ್ವರೂಪ! ನಿನ್ನನ್ನು ಅನೇಕ ಬಾಹು, ಉದರ, ವಕ್ತ್ರ, ನೇತ್ರಗಳನ್ನುಳ್ಳವನಾಗಿ ಸರ್ವತವೂ ಅನಂತರೂಪನನ್ನಾಗಿ ನೋಡುತ್ತಿದ್ದೇನೆ. ಅಂತವೂ ಇಲ್ಲ. ಮದ್ಯವೂ ಇಲ್ಲ. ಮತ್ತೆ ಪ್ರಾರಂಭವೂ ಇಲ್ಲವೆಂದು ಕಾಣುತ್ತಿದ್ದೇನೆ. ಕಿರೀಟಿಯೂ, ಗದಿಯೂ, ಚಕ್ರಿಯೂ, ತೇಜೋರಾಶಿಯೂ, ಸರ್ವತವೂ ಬೆಳಗುತ್ತಿರುವವ, ದುರ್ನಿರೀಕ್ಷ್ಯನಾದ, ಎಲ್ಲೆಲ್ಲಿಯೂ ಅನಲ ಮತ್ತು ಅರ್ಕರಂತೆ ಜ್ವಾಲೆಗಳಿಂದ ಬೆಳಗುತ್ತಿರುವ ಅಪ್ರಮೇಯನಾದ ನಿನ್ನನ್ನು ನೋಡುತ್ತಿದ್ದೇನೆ. ಅರಿತುಕೊಳ್ಳಬೇಕಾಗಿರುವ ಪರಮ ಅಕ್ಷರನು ನೀನು. ಈ ವಿಶ್ವದ ಪರಮ ನಿಧಾನವು ನೀನು. ನೀನು ಅವ್ಯಯ, ಶಾಶ್ವತ ಮತ್ತು ಧರ್ಮಗೋಪ್ತ. ನೀನು ಸನಾತನ ಪುರುಷನೆಂದು ನನಗನ್ನಿಸುತ್ತಿದೆ. ಆದಿ, ಮಧ್ಯ, ಅಂತಗಳಿಲ್ಲದ, ಅನಂತವೀರ್ಯನಾದ, ಅನಂತಬಾಹುಗಳನ್ನುಳ್ಳ, ಶಶಿ-ಸೂರ್ಯರನ್ನೇ ನೇತ್ರಗಳನ್ನಾಗುಳ್ಳ, ಅಗ್ನಿಯಂತೆ ಉರಿಯುತ್ತಿರುವ, ನಿನ್ನದೇ ತೇಜಸ್ಸಿನಿಂದ ಈ ವಿಶ್ವವನ್ನು ಸುಡುತ್ತಿರುವ ನಿನ್ನನ್ನು ನೋಡುತ್ತಿದ್ದೇನೆ. ದಿವಿ ಮತ್ತು ಭೂಮಿಯ ನಡುವಿನದೆಲ್ಲವೂ ನಿನ್ನೊಬ್ಬನಿಂದಲೇ ವ್ಯಾಪ್ತವಾಗಿರುವುದು. ಮಹಾತ್ಮನ್! ನಿನ್ನ ಈ ಉಗ್ರ ಅದ್ಭುತ ರೂಪವನ್ನು ನೋಡಿ ಲೋಕತ್ರಯಗಳು ಪ್ರವ್ಯಥಿತವಾಗುತ್ತಿವೆ. ಈ ಸುರಸಂಘಗಳು ನಿನ್ನನ್ನೇ ಪ್ರವೇಶಿಸುತ್ತಿವೆ. ಕೆಲವರು ಭೀತರಾಗಿ ಕೈಮುಗಿದು ನಿಂತಿರುವರು. ಮಹರ್ಷಿ-ಸಿದ್ಧ ಗಣಗಳು “ಸ್ವಸ್ತಿ” ಎಂದು ಹೇಳುತ್ತಾ ನಿನ್ನನ್ನು ಪುಷ್ಕಲ ಸ್ತುತಿಗಳಿಂದ ಸ್ತುತಿಸುತ್ತಿದ್ದಾರೆ. ರುದ್ರರು, ಆದಿತ್ಯರು, ಸಾಧ್ಯರು, ವಿಶ್ವೇದೇವರು, ಅಶ್ವಿನಿಗಳು, ಮರುತರು, ಊಷ್ಮಪರು, ಗಂಧರ್ವರು, ಯಕ್ಷರು, ಅಸುರರು, ಮತ್ತು ಸಿದ್ಧ ಸಂಘಗಳೆಲ್ಲರೂ ವಿಸ್ಮಿತರಾಗಿ ನಿನ್ನನ್ನು ನೋಡುತ್ತಿದ್ದಾರೆ. ಮಹಾಬಾಹೋ! ಬಹುವಕ್ತ್ರನೇತ್ರಗಳನ್ನುಳ್ಳ, ಬಹು ಬಾಹು, ತೊಡೆ, ಪಾದಗಳನ್ನುಳ್ಳ, ಬಹು ಉದರಗಳನ್ನುಳ್ಳ, ಬಹುದಂಷ್ಟ್ರಕರಾಲನಾಗಿರುವ ನಿನ್ನನ್ನು ನೋಡಿ ನಾನೂ ಲೋಕಗಳೂ ಪ್ರವ್ಯಥಿತವಾಗಿದ್ದೇವೆ. ವಿಷ್ಣೋ! ನಭವನ್ನು ಸ್ಪರ್ಶಿಸುವ, ಅನೇಕ ವರ್ಣಗಳಲ್ಲಿ ಬೆಳಗುತ್ತಿರುವ, ಅಗಲ ತೆರೆದ ಬಾಯಿಯುಳ್ಳ, ಹೊಳೆಯುವ ವಿಶಾಲನೇತ್ರಗಳನ್ನುಳ್ಳ ನಿನ್ನನ್ನು ನೋಡಿಯೇ ನಾನು ಅಂತರಾತ್ಮದಲ್ಲಿ ಪ್ರವಥಿತನಾಗಿದ್ದೇನೆ. ಧೃತಿ ಮತ್ತು ಶಾಂತಿಯನ್ನು ಪಡೆಯದಂತಾಗಿದ್ದೇನೆ. ಕಾಲಾನಲನಂತಿರುವ ದಂಷ್ಟ್ರಾಕರಾಲ ಮುಖಗಳನ್ನು ನೋಡಿಯೇ ನನಗೆ ದಿಕ್ಕು ತೋಚದಂತಾಗಿದೆ. ನೆಲೆಯು ದೊರೆಯುತ್ತಿಲ್ಲ. ದೇವೇಶ! ಜಗನ್ನಿವಾಸ! ಪ್ರಸನ್ನನಾಗು.

“ಅವನಿಪಾಲಸಂಘಗಳೊಡನೆ ಈ ಧೃತರಾಷ್ಟ್ರನ ಮಕ್ಕಳೆಲ್ಲರೂ, ಭೀಷ್ಮ, ದ್ರೋಣ, ಸೂತಪುತ್ರರೊಂದಿಗೆ ನಮ್ಮ ಯೋಧಮುಖ್ಯರೊಂದಿಗೆ ಕೋರೆದಾಡೆಗಳಿಂದ ವಿಕರವಾಗಿ ಭಯಂಕರವಾಗಿರುವ ನಿನ್ನ ಮುಖಗಳನ್ನು ತ್ವರೆಮಾಡಿ ಹೊಗುತ್ತಿರುವರು. ಕೆಲವರು ಹಲ್ಲುಸಂದುಗಳಲ್ಲಿ ಸಿಲುಕಿಕೊಂಡು ಚೂರ್ಣಿತ ಉತ್ತಮಾಂಗಗಳೊಡನೆ ಕಾಣುತ್ತಿದ್ದಾರೆ. ಹೇಗೆ ನದಿಗಳ ನೀರು ಬಹುವೇಗದಿಂದ ಸಮುದ್ರಕ್ಕೆ ಅಭಿಮುಖವಾಗಿಯೇ ಓಡುತ್ತವೆಯೋ ಹಾಗೆಯೇ ಈ ನರಲೋಕವೀರರು ಪ್ರಜ್ವಲಿಸುತ್ತಿರುವ ನಿನ್ನ ಬಾಯಿಗಳೊಳಗೆ ಹೊಗುತ್ತಿರುವರು. ಹೇಗೆ ಧಗಧಗನೆ ಉರಿಯುತ್ತಿರುವ ಬೆಂಕಿಯನ್ನು ನಾಶಗೊಳ್ಳಲು ಪತಂಗಗಳು ಸಮೃದ್ಧವೇಗದಿಂದ ಮುನ್ನುಗ್ಗುತ್ತವೆಯೋ ಹಾಗೆ ಲೋಕಗಳು ನಾಶಗೊಳ್ಳಲು ನಿನ್ನ ಮುಖಗಳನ್ನೂ ಸಮೃದ್ಧವೇಗದಿಂದ ಹೊಗುತ್ತಿವೆ. ಸುತ್ತಲೂ ಸಮಗ್ರವಾದ ಲೋಕಗಳನ್ನೂ ಉರಿಯುತ್ತಿರುವ ವದನಗಳಿಂದ ನುಂಗುತ್ತಾ ಚಪ್ಪರಿಸುತ್ತಿದ್ದೀಯೆ. ವಿಷ್ಣೋ! ಸಮಗ್ರ ಜಗತ್ತೂ ನಿನ್ನ ತೇಜಸ್ಸಿನಿಂದ ತುಂಬಿಕೊಂಡು ಉಗ್ರ ಪ್ರಭೆಗಳಿಂದ ಪರಿತಪಿಸುತ್ತಿವೆ. ಉಗ್ರರೂಪನಾದ ನೀನು ಯಾರು? ನನಗೆ ಹೇಳು. ದೇವವರ! ಪ್ರಸನ್ನನ್ನಾಗು. ನಿನಗೆ ನಮಸ್ಕಾರ. ಆದ್ಯನಾದ ನಿನ್ನನ್ನು ಅರಿಯಲಿಚ್ಛಿಸುತ್ತೇನೆ. ನಿನ್ನ ಪ್ರವೃತ್ತಿಯನ್ನು ನಾನು ತಿಳಿಯಲಾರೆನು.”

ಶ್ರೀಭಗವಾನನು ಹೇಳಿದನು:

“ಲೋಕವನ್ನು ಕ್ಷಯಗೊಳಿಸುವ, ಪ್ರವೃದ್ಧನಾಗಿರುವ ಕಾಲನು ನಾನು (I am time grown old). ಇಲ್ಲಿ ನಾನು ಲೋಕಗಳನ್ನು ಸಮಾಹರಣಮಾಡಲು ತೊಡಗಿರುವೆನು. ನೀನಿಲ್ಲದಿದ್ದರೂ ಅಲ್ಲಿ ಒಂದೊಂದು ಸೇನೆಯಲ್ಲಿಯೂ ನಿಂತಿರುವ ಯೋಧರು ಇಲ್ಲವಾಗುವರು. ಆದುದರಿಂದ ಎದ್ದೇಳು. ಯಶಸ್ಸನ್ನು ಪಡೆ. ಶತ್ರುಗಳನ್ನು ಗೆದ್ದು ಸಮೃದ್ಧ ರಾಜ್ಯವನ್ನು ಗೆಲ್ಲು! ಇವರೆಲ್ಲರೂ ಈ ಮೊದಲೇ ನನ್ನಿಂದ ಹತರಾಗಿರುವರು. ಸವ್ಯಸಾಚಿನ್! ನೀನು ನಿಮಿತ್ತಮಾತ್ರನಾಗು! ನನ್ನಿಂದ ಹತರಾಗಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ಯೋಧವೀರರನ್ನೂ ಕೊಲ್ಲು. ವ್ಯಥೆಪಡಬೇಡ. ಯುದ್ಧಮಾಡು. ರಣದಲ್ಲಿ ನಿನ್ನ ದಾಯಾದಿಗಳನ್ನು ಗೆಲ್ಲುವೆ.”

ಕೇಶವನ ಈ ಮಾತನ್ನು ಕೇಳಿ ನಡುಗುತ್ತಿದ್ದ ಕಿರೀಟಿಯು ಅಂಜಲೀಬದ್ಧನಾಗಿ ಕೃಷ್ಣನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತ, ಹೆದರಿ ಹೆದರಿಕೊಂಡು ನಮಸ್ಕರಿಸುತ್ತಾ, ಕಣ್ಣಿರುತುಂಬಿದ ಕಂಠದಲ್ಲಿ ಹೇಳಿದನು:

“ಹೃಷೀಕೇಶ! ನಿನ್ನ ಪ್ರಕೀರ್ತಿಯಿಂದ ಜಗತ್ತು ಪ್ರಹರ್ಷಗೊಂಡಿದೆ. ಅನುರಾಗದಿಂದ ಕೂಡಿಕೊಂಡಿದೆ. ರಾಕ್ಷಸರು ಭೀತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದಾರೆ. ಮತ್ತು ಸಿದ್ಧಸಂಘಗಳೆಲ್ಲವೂ ನಮಸ್ಕರಿಸುತ್ತಿವೆ. ಮಹಾತ್ಮನ್! ಬ್ರಹ್ಮನಿಗೂ ಆದಿಕರ್ತೃವಾಗಿರುವ ದೊಡ್ಡವನಾಗಿರುವ ನಿನಗೆ ಏಕೆ ನಮಸ್ಕರಿಸುವುದಿಲ್ಲ? ಅನಂತ! ದೇವೇಶ! ಜಗನ್ನಿವಾಸ! ಸತ್ತ-ಅಸತ್ತರನ್ನೂ ಮೀರಿರುವವ ಅಕ್ಷರನು ನೀನು. ನೀನು ಆದಿದೇವ. ಪುರುಷ. ಪುರಾಣ. ನೀನು ಈ ವಿಶ್ವದ ಪರಮ ನಿಧಾನ. ತಿಳಿಯಬೇಕಾದುದೆಲ್ಲವನ್ನೂ ತಿಳಿತಿರುವೆ. ತಿಳಿಯಬೇಕಾಗಿರುವುದೂ ನೀನೆ. ನೀನು ಪರಂಧಾಮ. ಅನಂತರೂಪ! ವಿಶ್ವವೆಲ್ಲವೂ ನಿನ್ನಿಂದಲೇ ವ್ಯಾಪ್ತವಾಗಿದೆ. ನೀನು ವಾಯು, ಯಮ, ಅಗ್ನಿ, ವರುಣ, ಶಶಾಂಕ, ಪ್ರಜಾಪತಿ ಪ್ರಪಿತಾಮಹನೂ ಕೂಡ. ನಿನಗೆ ನಮಸ್ಕಾರ! ಸಾವಿರ ನಮಸ್ಕಾರಗಳು! ಮತ್ತೆ ಇನ್ನೊಮ್ಮೆ ನಮಸ್ಕಾರ! ನಿನಗೆ ನಮಸ್ಕಾರ! ಸರ್ವ! ನಿನಗೆ ಮುಂದಿನಿಂದ ನಮಸ್ಕಾರ. ಹಿಂದಿನಿಂದ ನಮಸ್ಕಾರ. ಎಲ್ಲ ಕಡೆಗಳಿಂದ ನಿನಗೆ ನಮಸ್ಕಾರ. ಅನಂತ ವೀರ್ಯ ಮತ್ತು ಅಮಿತವಿಕ್ರಮನು ನೀನು. ಸರ್ವವನ್ನೂ ಚೆನ್ನಾಗಿ ವ್ಯಾಪಿಸಿರುವೆ.

“ಆದುದರಿಂದ ಸರ್ವನಾಗಿರುವೆ. ನಿನ್ನ ಈ ಮಹಿಮೆಗಳನ್ನು ಅರಿಯದೆ, ಸಖನೆಂದು ತಿಳಿದು, “ಎಲೆ ಕೃಷ್ಣ!”, “ಎಲೆ ಯಾದವ!”, “ಎಲೆ ಗೆಳೆಯ!” ಎಂದು ದಿಟ್ಟತನದಿಂದ ಅಥವಾ ಪ್ರಣಯದಿಂದ ಅಥವಾ ಪ್ರಮಾದದಿಂದ ಏನು ಹೇಳಿರುವೆನೋ; ವಿಹಾರ, ಶಯ್ಯೆ, ಆಸನ ಮತ್ತು ಭೋಜನಗಳಲ್ಲಿ ಅಪಹಾಸಕ್ಕಾಗಿ ಒಬ್ಬನೇ ಇರುವಾಗ ಅಥವಾ ಇತರರ ಸಮಕ್ಷಮದಲ್ಲಿ ಏನು ಅಸತ್ಕಾರ ಮಾಡಿದೆನೋ ಅದನ್ನು ಅಪ್ರಮೇಯನಾದ ನೀನು ಕ್ಷಮಿಸಬೇಕು! ಈ ಲೋಕದ ಚರಾಚರಗಳ ಪಿತನಾಗಿರುವೆ. ನೀನು ಇದರ ಗರೀಯ ಗುರುವೂ ಪೂಜ್ಯನೂ ಆಗಿರುವೆ. ಅಪ್ರತಿಮಪ್ರಭಾವ! ಲೋಕತ್ರಯದಲ್ಲಿಯೂ ನಿನ್ನ ಸಮನಾದವನು ಇಲ್ಲ. ಇನ್ನು ನಿನಗಿಂತ ಹೆಚ್ಚಿನವನು ಎಲ್ಲಿ? ಆದುದರಿಂದ ಪ್ರಣಾಮಮಾಡಿ, ಕಾಯದಿಂದ ಅಡ್ಡಬಿದ್ದು ಈಶ ಈಡ್ಯನಾದ ನಿನ್ನನ್ನು ಪ್ರಸನ್ನಗೊಳಿಸುತ್ತಿದ್ದೇನೆ. ತಂದೆಯು ಮಗನನ್ನು, ಸಖನು ಸಖನನ್ನು ಮತ್ತು ಪ್ರಿಯನು ಪ್ರಿಯೆಯನ್ನು ಸಹಿಸಿಕೊಳ್ಳುವಂತೆ ದೇವ! ಸಹಿಸಿಕೊಳ್ಳಬೇಕು. ಹಿಂದೆ ಎಂದೂ ನೋಡಿರದುದನ್ನು ಕಂಡು ಹರ್ಷಿತನಾಗಿದ್ದೇನೆ. ಮತ್ತು ಭಯದಿಂದ ನನ್ನ ಮನಸ್ಸು ತುಂಬಾ ವ್ಯಥಿತಗೊಂಡಿದೆ. ದೇವ! ನನಗೆ ಅದೇ ರೂಪವನ್ನು ತೋರಿಸು. ದೇವೇಶ! ಜಗನ್ನಿವಾಸ! ಪ್ರಸನ್ನನಾಗು! ಕಿರೀಟಿಯೂ, ಗದಿಯೂ, ಚಕ್ರವನ್ನು ಹಿಡಿದಿರುವವನೂ ಆಗಿದ್ದ ಅದೇ ನಿನ್ನನ್ನು ನೋಡಲು ಬಯಸುತ್ತೇನೆ. ಸಹಸ್ರಬಾಹೋ! ವಿಶ್ವಮೂರ್ತೇ! ಅದೇ ಚತುರ್ಭುಜಗಳ ರೂಪದಿಂದ ತೋರು!”

ಶ್ರೀಭಗವಾನನು ಹೇಳಿದನು:

“ಅರ್ಜುನ! ನಾನು ನಿನ್ನ ಮೇಲೆ ಪ್ರಸನ್ನನಾಗಿರುವುದರಿಂದ ನಿನಗೆ ನಾನು ತೇಜೋಮಯವೂ, ವಿಶ್ವವೂ, ಅನಂತವೂ, ಆದಿಯಲ್ಲಿರುವುದೂ ಆದ ಈ ಪರಮ ರೂಪವನ್ನು ಆತ್ಮಯೋಗದಿಂದ ತೋರಿಸಿದೆ. ಇದಕ್ಕೂ ಮೊದಲು ನೀನಲ್ಲದೇ ಬೇರೆ ಯಾರೂ ನನ್ನನ್ನು ಹೀಗೆ ಕಂಡದ್ದಿಲ್ಲ. ವೇದ, ಯಜ್ಞ, ಅಧ್ಯಯನ, ದಾನಗಳಿಂದಾಗಲೀ ಕ್ರಿಯೆಗಳಿಂದಾಗಲೀ, ಉಗ್ರ ತಪಸ್ಸುಗಳಿಂದಗಲೀ ನನ್ನ ಈ ರೂಪವನ್ನು ನರಲೋಕದಲ್ಲಿ ನಿನ್ನ ಹೊರತು ಮತ್ತೊಬ್ಬನಿಂದ ನೋಡಲು ಶಕ್ಯವಿಲ್ಲ. ನನ್ನ ಈ ಘೋರ ರೂಪವನ್ನು ಕಂಡು ನಿನಗೆ ವ್ಯಥೆಯಾಗದಿರಲಿ. ವಿಮೂಢಭಾವವೂ ಆಗದಿರಲಿ. ಭಯವನ್ನು ಕಳೆದುಕೊಂಡು ಪುನಃ ನೀನು ಪ್ರೀತಮನಸ್ಕನಾಗು. ನನ್ನ ಅದೇ ರೂಪವನ್ನು ಇಗೋ ನೋಡು!”

ಹೀಗೆ ಅರ್ಜುನನಿಗೆ ಹೇಳಿ ವಾಸುದೇವನು ಪುನಃ ತನ್ನ ಮೊದಲಿನ ರೂಪವನ್ನು ತೋರಿಸಿದನು. ಪುನಃ ಸೌಮ್ಯರೂಪವನ್ನು ತಳೆದು ಭೀತನಾಗಿದ್ದ ಅವನನ್ನು ಆ ಮಹಾತ್ಮನು ಸಂತವಿಸಿದನು.

ಅರ್ಜುನನು ಹೇಳಿದನು:

“ಜನಾರ್ದನ! ಸೌಮ್ಯವಾದ ನಿನ್ನ ಈ ಮಾನುಷರೂಪವನ್ನು ನೋಡಿ ಈಗ ಸಚೇತನಗೊಂಡು ಸ್ವಭಾವವನ್ನು ಹಿಂದೆ ಪಡೆದಿದ್ದೇನೆ.”

ಶ್ರೀಭಗವಾನನು ಹೇಳಿದನು:

“ದೊರೆಯಲು ತುಂಬಾ ಕಷ್ಟವಾದ ಆದರೆ ನೀನು ನೋಡಿದ ನನ್ನ ಈ ರೂಪವನ್ನು ನೋಡಲು ದೇವತೆಗಳೂ ಕೂಡ ನಿತ್ಯವೂ ಬಯಸುತ್ತಿರುತ್ತಾರೆ. ನೀನು ಹೇಗೆ ನನ್ನನ್ನು ನೋಡಿದೆಯೋ ಹಾಗೆ ನೋಡಲು ವೇದಗಳಿಂದ ಸಾಧ್ಯವಿಲ್ಲ. ತಪಸ್ಸಿನಿಂದ ಆಗುವುದಿಲ್ಲ. ದಾನಗಳಿಂದ ಮತ್ತು ಇಜ್ಯಗಳಿಂದ ಆಗುವುದಿಲ್ಲ. ಅರ್ಜುನ! ಅನನ್ಯ ಭಕ್ತಿಯಿಂದ ಈ ವಿಧದ ನನ್ನನ್ನು ಇದ್ದಹಾಗೆ ತಿಳಿದುಕೊಳ್ಳಲು ಮತ್ತು ನೋಡಲು ಸಾಧ್ಯ. ನನಗಾಗಿಯೇ ಮಾಡುವವನು, ನಾನೇ ಪರಮಗತಿಯೆಂದು ತಿಳಿದುಕೊಂಡಿರುವವನು, ನನ್ನ ಭಕ್ತನು, ಸಂಗವರ್ಜಿತನಾಗಿ, ಸರ್ವಭೂತಗಳಲ್ಲಿ ನಿರ್ವೈರನಾಗಿರುವವನು ನನ್ನನ್ನೇ ಸೇರುತ್ತಾನೆ.”

ಭಕ್ತಿ ಯೋಗ

ಅರ್ಜುನನು ಹೇಳಿದನು:

“ಹೀಗೆ ಸತತಯುಕ್ತರಾಗಿ ನಿನ್ನನ್ನು ಪರ್ಯುಪಾಸನೆಮಾಡುವ ಭಕ್ತರು ಮತ್ತು ಅಕ್ಷರವು ಅವ್ಯಕ್ತವೂ ಆಗಿರುವುದನ್ನು ಪರ್ಯುಪಾಸನೆ ಮಾಡುವವರು - ಇವರಲ್ಲಿ ಯೋಗವಿತ್ತಮರು ಯಾರು?”

ಶ್ರೀಭಗವಾನನು ಹೇಳಿದನು:

“ನನ್ನಲ್ಲಿಯೇ ಮನಸ್ಸನ್ನಿಟ್ಟು, ನಿತ್ಯಯುಕ್ತರಾಗಿ ಪರಮ ಶ್ರದ್ಧೆಯಿಂದ ನನ್ನನ್ನು ಉಪಾಸನೆ ಮಾಡುವವರು ಹೆಚ್ಚಿನ ಯೋಗಿಗಳೆಂದು ನನ್ನ ಮತವು. ಆದರೆ ಅನಿರ್ದೇಶ್ಯವಾದ, ಅವ್ಯಕ್ತವಾದ, ಸರ್ವತ್ರಗವಾದ, ಅಚಿಂತ್ಯವಾದ, ಕೂಟಸ್ಥವಾದ, ಅಚಲವಾದ, ಧ್ರುವವಾದ ಅಕ್ಷರವನ್ನು, ಇಂದ್ರಿಯಗ್ರಾಮವನ್ನು ಸರಿಯಾಗಿ ನಿಯಂತ್ರಿಸಿಕೊಂಡು, ಸರ್ವತ್ರ ಸಮಬುದ್ಧಿಗಳಾಗಿ ಪರ್ಯುಪಾಸನೆ ಮಾಡುವವರೂ ಕೂಡ ನನ್ನನ್ನೇ ಪಡೆಯುವರು. ಅವ್ಯಕ್ತಾಸಕ್ತಚೇತಸರಿಗೆ ಕ್ಲೇಶವು ಅಧಿಕ. ಏಕೆಂದರೆ ದೇಹವಂತರಿಗೆ ಅವ್ಯಕ್ತವೆಂಬ ಗತಿಯು ದುಃಖದಿಂದ ದೊರೆಯುತ್ತದೆ. ಆದರೆ ಸರ್ವಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ, ಮತ್ಪರರಾಗಿ, ಅನನ್ಯವಾಗಿರುವ ಯೋಗದಿಂದ ನನ್ನನ್ನು ಧ್ಯಾನಿಸುತ್ತಾ ಉಪಾಸಿಸುಸುವ, ನನ್ನಲ್ಲಿಯೇ ತಮ್ಮ ಚಿತ್ತವನ್ನು ನೆಟ್ಟಿರುವವರನ್ನು ನಾನು ತಕ್ಷಣವೇ ಮೃತ್ಯುಸಂಸಾರದ ಸಾಗರದಿಂದ ಮೇಲೆತ್ತಿಬಿಡುತ್ತೇನೆ. ನನ್ನಲ್ಲಿಯೇ ಮನಸ್ಸನ್ನಿಡು. ನನ್ನಲ್ಲಿ ಬುದ್ಧಿಯನ್ನು ಹೊಗಿಸು. ಹೀಗೆ ಮಾಡಿದ ನಂತರ ನನ್ನಲ್ಲಿಯೇ ನಿವಾಸಮಾಡುವೆ. ಸಂಶಯವಿಲ್ಲ.

“ನನ್ನಲ್ಲಿ ಚಿತ್ತವನ್ನು ಸ್ಥಿರವಾಗಿ ಸಮಾಧಾನಗೊಳಿಸಿಕೊಂಡಿರುವುದಕ್ಕೆ ಶಕ್ತನಾಗದೇ ಇದ್ದರೆ ಅಭ್ಯಾಸಯೋಗದಿಂದ ನನ್ನನ್ನು ಪಡೆಯಲು ಇಚ್ಛಿಸು. ಅಭ್ಯಾಸಮಾಡಲೂ ಅಸಮರ್ಥನಾದರೆ ನನಗಾಗಿ ಕರ್ಮಪರನಾಗು. ನನಗಾಗಿ ಕರ್ಮಗಳನ್ನು ಮಾಡುತ್ತಿದ್ದರೂ ಸಿದ್ಧಿಯನ್ನು ಪಡೆಯುತ್ತೀಯೆ. ಆದರೆ ಇದನ್ನು ಕೂಡ ಮಾಡಲು ಅಶಕ್ತನಾದರೆ ನನ್ನ ಯೋಗವನ್ನು ಆಶ್ರಯಿಸಿ ಯತಾತ್ಮನಾಗಿ ಸರ್ವ ಕರ್ಮಗಳ ಫಲಗಳನ್ನು ತ್ಯಾಗಮಾಡು. ಏಕೆಂದರೆ ಅಭ್ಯಾಸಕ್ಕಿಂತ ಜ್ಞಾನವು ಶ್ರೇಯಸ್ಕರವು. ಜ್ಞಾನಕ್ಕಿಂತ ಧ್ಯಾನವು ಹೆಚ್ಚಿನದು. ಧ್ಯಾನಕ್ಕಿಂತ ಕರ್ಮಫಲತ್ಯಾಗವು ಹೆಚ್ಚಿನದು. ತ್ಯಾಗದ ನಂತರ ಶಾಂತಿ.

“ಇರುವ ಯಾವುದನ್ನೂ ದ್ವೇಷಿಸದೇ, ಮಿತ್ರನೂ ಕರುಣಿಯೂ ಆಗಿ, ನನ್ನದೆನ್ನುವುದನ್ನು ಬಿಟ್ಟು, ನಿರಹಂಕಾರನಾಗಿ, ದುಃಖ-ಸುಖಗಳಲ್ಲಿ ಸಮನಾಗಿ, ಕ್ಷಮಿಸುವವನಾಗಿ, ಸತತವೂ ಸಂತುಷ್ಟನಾಗಿ, ಯೋಗಿಯಾಗಿರುವ, ಧೃಢನಿಶ್ಚಯಿಯಾಗಿ ಪ್ರಯತ್ನಿಸುತ್ತಿರುವವನು, ಮನೋಬುದ್ಧಿಗಳನ್ನು ನನಗೆ ಅರ್ಪಿಸಿರುವವನು, ನನ್ನ ಭಕ್ತನು ನನಗೆ ಪ್ರಿಯ. ಯಾರಿಂದ ಲೋಕವು ಉದ್ವಿಗ್ನವಾಗುವುದಿಲ್ಲವೋ ಮತ್ತು ಯಾರು ಲೋಕದಿಂದ ಉದ್ವಿಗ್ನಗೊಳ್ಳುವುದಿಲ್ಲವೋ, ಯಾರು ಹರ್ಷ-ಅಮರ್ಷ (ತಡೆದುಕೊಳ್ಳಲಾರದೇ ಇರುವುದು)-ಭಯ-ಉದ್ವೇಗಳಿಂದ ಮುಕ್ತರಾಗಿದ್ದಾರೋ ಅವರು ನನಗೆ ಪ್ರಿಯರು. ಬೇಕು ಎಂಬ ಅಪೇಕ್ಷೆಗಳಿಲ್ಲದವನು, ಶುಚಿಯು, ದಕ್ಷನು, ಉದಾಸೀನನು (ಮಿತ್ರ-ಶತ್ರು ಪಕ್ಷಗಳಲ್ಲಿಲ್ಲದಿರುವವನು), ವ್ಯಥೆಗಳನ್ನು ಕಳೆದುಕೊಂಡವನು, ಫಲದ ಆಸೆಯಿಂದ ಮಾಡುವ ಎಲ್ಲ ಕರ್ಮಗಳನ್ನೂ ಪರಿತ್ಯಜಿಸಿದವನು ನನ್ನ ಭಕ್ತ. ನನಗೆ ಪ್ರಿಯನಾದವನು. ಯಾರು ಹರ್ಷಿಸುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಶೋಕಿಸುವುದಿಲ್ಲವೋ, ಆಸೆಪಡುವುದಿಲ್ಲವೋ ಆ ಶುಭಾಶುಭ ಪರಿತ್ಯಾಗೀ ಭಕ್ತಿಮಾನನು ನನಗೆ ಪ್ರಿಯನಾದವನು. ಶತ್ರು ಮತ್ತು ಮಿತ್ರರಲ್ಲಿ ಹಾಗೂ ಮಾನ-ಅಪಮಾನಗಳಲ್ಲಿ ಸಮನಾಗಿರುವ, ಶೀತ-ಉಷ್ಣಗಳಲ್ಲಿ, ಸುಖ-ದುಃಖಗಳಲ್ಲಿ ಸಮನಾಗಿದ್ದು ಸಂಗವನ್ನು ವಿವರ್ಜಿಸಿರುವವರು, ನಿಂದನೆ-ಸ್ತುತಿಗಳಲ್ಲಿ ಮೌನಿಯಾಗಿದ್ದುಕೊಂಡು ಸಮವೆಂದು ಸ್ವೀಕರಿಸುವ, ಯಾವುದರಿಂದಲೂ ಸಂತುಷ್ಟನಾಗುವ, ಇಂಥದೇ ಸ್ಥಾನವೆಂದಿಲ್ಲದಿರುವ, ಸ್ಥಿರಮತಿ, ಭಕ್ತಿಮಾನ ನರನು ನನಗೆ ಪ್ರಿಯನಾದವನು. ಆದರೆ ಯಾರು ಈಗ ಹೇಳಿದ ಧರ್ಮ್ಯಾಮೃತವನ್ನು ಶ್ರದ್ಧೆಯುಳ್ಳವರಾಗಿ ಮತ್ಪರಮರಾಗಿ ಪರ್ಯುಪಾಸನೆ ಮಾಡುತ್ತಾರೋ ಅವರು ನನಗೆ ಬಹಳ ಪ್ರಿಯರಾಗಿರುವರು.”

ಕ್ಷೇತ್ರ ಕ್ಷೇತ್ರಜ್ಞ ಯೋಗ

Related imageಶ್ರೀಭಗವಾನನು ಹೇಳಿದನು:

“ಕೌಂತೇಯ! ಈ ಶರೀರವನ್ನು ಕ್ಷೇತ್ರವೆಂದು ಕರೆಯುತ್ತಾರೆ. ಇದನ್ನು ಯಾರು ಅರಿಯುತ್ತಾರೋ ಅವರನ್ನು ತದ್ವಿದರು ಕ್ಷೇತ್ರಜ್ಞ ಎಂದು ಕರೆಯುತ್ತಾರೆ. ಸರ್ವಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಕ್ಷೇತ್ರ-ಕ್ಷೇತ್ರಜ್ಞರ ಜ್ಞಾನವೇ ಜ್ಞಾನವೆಂದು ನನ್ನ ಮತ. ಆ ಕ್ಷೇತ್ರವು ಯಾವುದು? ಹೇಗಿರುವಂಥಹುದು? ಅದಕ್ಕೆ ಯಾವ ವಿಕಾರಗಳಿವೆ? ಯಾವುದರಿಂದ ಯಾವುದು ಬಂದಿದೆ? ಆ ಕ್ಷೇತ್ರಜ್ಞನು ಯಾರು? ಅವನ ಪ್ರಭಾವವೇನು? ಅದನ್ನು ಸಂಕ್ಷಿಪ್ತವಾಗಿ ನನ್ನಿಂದ ಕೇಳು. ಇದರ ಕುರಿತು ಋಷಿಗಳು ಬಹುವಾಗಿ ವಿವಿಧ ಛಂದಸ್ಸುಗಳುಳ್ಳ ಗೀತಗಳಿಂದ, ಹೇತುಗಳಿಂದೊಡಗೂಡಿದ ನಿಶ್ಚಯಗಳಿಂದ,  ಬ್ರಹ್ಮಸೂತ್ರದ ಪದಗಳಿಂದ ಹೇಳಿದ್ದಾರೆ.

“ಮಹಾಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತ, ಹತ್ತು ಮತ್ತು ಒಂದು ಇಂದ್ರಿಯಗಳು, ಐದು ಇಂದ್ರಿಯಗೋಚರಗಳು, ಇಚ್ಛೆ, ದ್ವೇಷ, ಸುಖ, ದುಃಖ, ಸಂಘಾತ, ಚೇತನ, ಧೃತಿ ಇವೇ ಕ್ಷೇತ್ರವು. ವಿಕಾರಗಳನ್ನೂ ಸೇರಿಸಿ ಸಂಕ್ಷಿಪ್ತವಾಗಿ ಹೇಳಿದ್ದಾಯಿತು. ಅಮಾನಿತ್ವ (ತನ್ನನ್ನು ತಾನೇ ಮೆಚ್ಚಿಕೊಳ್ಳದಿರುವುದು), ಅದಂಭಿತ್ವ (ತನ್ನ ಧರ್ಮವನ್ನು ಪ್ರಕಟಮಾಡಿಕೊಳ್ಳದಿರುವುದು, ಅಹಿಂಸಾ, ಕ್ಷಾಂತಿ (ಇನ್ನೊಬ್ಬರು ತಪ್ಪು ಮಾಡಿದರೂ ಮನೋವಿಕಾರಗೊಳ್ಳದಿರುವುದು), ಆರ್ಜವ (ಋಜುವಾಗಿರುವುದು, ಕೊಂಕಿಲ್ಲದೇ ಇರುವುದು), ಆಚಾರ್ಯೋಪಾಸನೆ, ಶೌಚ, ಸ್ಥೈರ್ಯ, ಆತ್ಮವಿನಿಗ್ರಹ, ಇಂದ್ರಿಯಾರ್ಥಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಇವೇ ಜನ್ಮ-ಮೃತ್ಯು-ಜರ-ವ್ಯಾಧಿ-ದುಃಖ-ದೋಷಗಳ ದರ್ಶನವು. ಮಕ್ಕಳು, ಹೆಂಡತಿ, ಮನೆ ಮೊದಲಾದವುಗಳಲ್ಲಿ ಅಸಕ್ತಿ, ತಾನು ಬೇರೆಯಲ್ಲವೆಂಬ ಭಾವನೆ, ಬೇಕಾದವುಗಳು ಮತ್ತು ಬೇಡವಾದವುಗಳು ಎರಡರಲ್ಲಿ ಯಾವುದು ಬಂದಾಗಲೂ ಸಮನಾಗಿರುವುದು, ನನ್ನಲ್ಲಿ ಅನನ್ಯಯೋಗದಿಂದ ಬೇರೆ ಎಲ್ಲಿಯೂ ಹೋಗದ ಭಕ್ತಿ, ವಿವಿಕ್ತ ಪ್ರದೇಶಗಳನ್ನು ಸೇವಿಸುವುದು, ಜನಸಂಸದಿಯಲ್ಲಿ ಸಂತೋಷಪಡೆಯದಿರುವುದು, ಆಧ್ಯಾತ್ಮ ಜ್ಞಾನದಲ್ಲಿ ನಿತ್ಯನಾಗಿರುವುದು ಇವು ತತ್ವಜ್ಞಾನಾರ್ಥದರ್ಶನವು. ಇದನ್ನು ಜ್ಞಾನವೆಂದು ಹೇಳುತ್ತಾರೆ. ಇದಕ್ಕೆ ಹೊರತಾಗಿದ್ದುದು ಅಜ್ಞಾನ. ಯಾವುದು ತಿಳಿಯಬೇಕಾದುದೋ ಅದನ್ನು ಹೇಳುತ್ತೇನೆ. ಇದನ್ನು ತಿಳಿದು ಅಮೃತತ್ವವನ್ನು ಪಡೆಯಬಹುದು.

“ಅದು ಆದಿಯಿಲ್ಲದೇ ಇರುವ, ಇದೆ ಮತ್ತು ಇಲ್ಲ ಎಂದೆನಿಸಿಕೊಂಡಿರುವ ಅನಾದಿಮತ್ತಾದ ಪರಬ್ರಹ್ಮ. ಎಲ್ಲಕಡೆಯೂ ಅದರ ಪಾದ-ಪಾಣಿಗಳಿವೆ. ಅದು ಎಲ್ಲಕಡೆಯೂ ಕಣ್ಣು, ಶಿರ, ಮುಖಗಳನ್ನು ಹೊಂದಿದೆ. ಎಲ್ಲಕಡೆಯೂ ಕೇಳುತ್ತದೆ. ಲೋಕದಲ್ಲಿ ಎಲ್ಲವನ್ನೂ ಆವರಿಸಿಕೊಂಡಿದೆ. ಅದು ಸರ್ವೇಂದ್ರಿಯಗಳ ಗುಣಗಳಿಂದ ಕೂಡಿದೆ. ಆದರೆ ಸರ್ವ ಇಂದ್ರಿಯಗಳನ್ನು ವರ್ಜಿಸಿದೆ. ಅದು ಅಸಕ್ತ ಆದರೆ ಎಲ್ಲವನ್ನೂ ಧರಿಸಿದೆ. ಅದು ನಿರ್ಗುಣ. ಆದರೆ ಗುಣಗಳನ್ನು ಭೋಗಿಸುವಂತಹುದು. ಅದು ಇರುವವುಗಳ ಹೊರಗೂ ಒಳಗೂ ಇರುವುದು. ಚರವೂ ಅಚರವೂ ಆಗಿರುವುದು. ಸೂಕ್ಷ್ಮವಾಗಿರುವುದರಿಂದ ಅದು ಅರಿಯಲಸಾಧ್ಯವಾಗಿರುವುದು. ಅದು ದೂರದಲ್ಲಿರುವುದು. ಹತ್ತಿರದಲ್ಲಿಯೂ ಇರುವುದು. ಇರುವವುಗಳಲ್ಲಿ ಅವಿಭಕ್ತವಾಗಿಯೂ ವಿಭಕ್ತವಾಗಿಯೂ ಇರುವುದು. ಆ ತಿಳಿಯಬೇಕಾಗಿರುವ ಅದು ಇರುವವನ್ನು ಕಾಪಾಡುತ್ತದೆ. ಎಲ್ಲವನ್ನೂ ಕಬಳಿಸುತ್ತದೆ. ಮತ್ತು ಎಲ್ಲವನ್ನು ಹುಟ್ಟಿಸುತ್ತದೆ ಕೂಡ. ಅದು ಜ್ಯೋತಿಗಳಿಗೂ ಹೆಚ್ಚಿನ ಜ್ಯೋತಿ. ಕತ್ತಲಿಗೂ ಆಚೆಯಿರುವುದು. ಅದು ಜ್ಞಾನ, ತಿಳಿಯುವಂಥಹುದು, ಮತ್ತು ಜ್ಞಾನದ ಫಲ. ಎಲ್ಲರ ಹೃದಯಗಳಲ್ಲಿ ನೆಲೆಸಿದೆ.

“ಹೀಗೆ ಕ್ಷೇತ್ರವನ್ನೂ, ಜ್ಞಾನವನ್ನೂ, ಜ್ಞೇಯವನ್ನೂ ಸಂಕ್ಷಿಪ್ತವಾಗಿ ಹೇಳಿದ್ದಾಯಿತು. ನನ್ನ ಭಕ್ತನು ಇದನ್ನು ತಿಳಿದುಕೊಂಡು ನನ್ನದೇ ಭಾವವನ್ನು ಪಡೆಯುತ್ತಾನೆ. ಪ್ರಕೃತಿ ಮತ್ತು ಪುರುಷ ಎರಡೂ ಅನಾದಿಯೆಂದು ತಿಳಿ. ವಿಕಾರಗಳೂ ಗುಣಗಳೂ ಪ್ರಕೃತಿಯಿಂದ ಹುಟ್ಟಿದವೆಂದು ತಿಳಿ. ಪ್ರಕೃತಿಯು ಕಾರ್ಯಕರಣ ಕರ್ತೃತ್ವಕ್ಕೆ ಹೇತುವೆಂದೆನಿಸಿಕೊಂಡಿರುವುದು. ಪುರುಷನು ಸುಖದುಃಖಗಳನ್ನು ಅನುಭವಿಸುವುದಕ್ಕೆ ಹೇತುವೆಂದೆನಿಸಿಕೊಂಡಿರುವನು. ಪುರುಷನು ಪ್ರಕೃತಿಸ್ಥನಾಗಿಯೇ ಪ್ರಕೃತಿಯಿಂದ ಉಂಟಾದ ಗುಣಗಳನ್ನು ಅನುಭವಿಸುತ್ತಾನೆ. ಈ ಗುಣಸಂಗದ ಕಾರಣದಿಂದಲೇ ಅವನು ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಜನ್ಮತಾಳುತ್ತಾನೆ. ಈ ದೇಹದಲ್ಲಿರುವ ಪರಮ ಪುರುಷನು ಉಪದ್ರಷ್ಟನು (ತಾನು ಯಾವ ಕೆಲಸವನ್ನೂ ಮಾಡದೇ ಹತ್ತಿರದಲ್ಲಿದ್ದುಕೊಂಡು ಎಲ್ಲವನ್ನೂ ನೋಡುವವನು). ಅನುಮಂತನು (ಮಾಡುತ್ತಿರುವವರನ್ನು ಅನುಮೋದಿಸುವವನು). ಭರ್ತನು. ಭೋಕ್ತ (ಅನುಭವಿಸುವವನು). ಮಹೇಶ್ವರ. ಪರಮಾತ್ಮ ಎಂದೆನಿಸಿಕೊಂಡಿದ್ದಾನೆ. ಹೀಗೆ ಪುರುಷನನ್ನೂ ಗುಣಗಳ ಸಹಿತ ಪ್ರಕೃತಿಯನ್ನೂ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ವರ್ತಮಾನದಲ್ಲಿ ಏನೇ ಆಗಿದ್ದರೂ ಪುನಃ ಹುಟ್ಟುವುದಿಲ್ಲ.

“ಕೆಲವರು ಧ್ಯಾನದ ಮೂಲಕ, ಕೆಲವರು ಸಾಂಖ್ಯ ಯೋಗದ ಮೂಲಕ, ಇನ್ನು ಕೆಲವರು ಕರ್ಮಯೋಗದ ಮೂಲಕ ಆತ್ಮನಲ್ಲಿ ಆತ್ಮನನ್ನು ಆತ್ಮನಿಂದ ಕಂಡುಕೊಳ್ಳುತ್ತಾರೆ. ಆದರೆ ಬೇರೆ ಕೆಲವರು ತಾವೇ ಇದನ್ನು ತಿಳಿದುಕೊಳ್ಳದೇ ಮತ್ತೊಬ್ಬರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಅವರೂ ಕೂಡ ಶ್ರುತಿಪರಾಯಣಾರಾಗಿದ್ದುದರಿಂದ ಮೃತ್ಯುವನ್ನು ದಾಟುತ್ತಾರೆ. ಸ್ಥಾವರ ಜಂಗಮಗಳ ಸತ್ವವೇನು ಹುಟ್ಟುವುದೋ ಅದು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗಂದಿದ ಆಗುತ್ತದೆ ಎನ್ನುವುದನ್ನು ತಿಳಿದುಕೋ. ಇರುವ ಎಲ್ಲವುಗಳಲ್ಲಿ ನೆಲೆಸಿರುವ, ಅವು ನಾಶವಾದರೂ ತಾನು ನಾಶವಾಗದೇ ಇರುವ ಪರಮೇಶ್ವರನನ್ನು ಯಾರು ಕಂಡುಕೊಳ್ಳುತ್ತಾನೋ ಅವನೇ ಕಾಣುವವನು. ಏಕೆಂದರೆ ಸರ್ವತ್ರ ಸಮನಾಗಿರುವ ಈಶ್ವರನನ್ನು ಸಮನಾಗಿ ಕಾಣುವವರು ತಮ್ಮಿಂದ ತಮ್ಮನ್ನು ಕಳೆದುಕೊಳ್ಳುವುದಿಲ್ಲ. ಅದರಿಂದ ಪರಮ ಗತಿಯನ್ನು ಪಡೆಯುತ್ತಾರೆ.

“ಸರ್ವಪ್ರಕಾರದಲ್ಲಿಯೂ ಪ್ರಕೃತಿಯೇ ಕರ್ಮಗಳನ್ನು ಮಾಡಿಸುತ್ತದೆ ಮತ್ತು ಪುರುಷನು ಅಕರ್ತೃವೆಂದು ಯಾರು ಕಂಡಿಕೊಂಡಿದ್ದಾನೋ ಅವನೇ ಕಂಡಿರುವವನು. ಪ್ರತ್ಯೇಕವಾಗಿ ಇರುವವುಗಳು ಒಂದರಿಂದಲೇ ಆದವೆಂದು ಮತ್ತು ಅದೇ ವಿಸ್ತಾರಗೊಂಡಿದೆ ಎಂದು ಯಾವಾಗ ಕಾಣುತ್ತಾನೋ ಆಗ ಅವನು ಬ್ರಹ್ಮನನ್ನು ಸೇರುತ್ತಾನೆ. ಅನಾದಿಯಾಗಿರುವುದರಿಂದ ಮತ್ತು ನಿರ್ಗುಣನಾಗಿರುವುದರಿಂದ ಈ ಅವ್ಯಯ ಪರಮಾತ್ಮನು ಶರೀರದಲ್ಲಿದ್ದರೂ ಮಾಡುವುದಿಲ್ಲ, ಮತ್ತು ಕರ್ಮಫಲದಿಂದ ಲಿಪ್ತನಾಗುವುದಿಲ್ಲ. ಎಲ್ಲವನ್ನು ವ್ಯಾಪಿಸಿರುವ ಆಕಾಶವು ತನ್ನ ಸೂಕ್ಷ್ಮತೆಯಿಂದಾಗಿ ಹೇಗೆ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲವೋ ಹಾಗೆ ದೇಹದಲ್ಲಿ ಸರ್ವತ್ರವಾಗಿರುವ ಆತ್ಮನೂ ಅಂಟಿಕೊಳ್ಳುವುದಿಲ್ಲ. ಹೇಗೆ ರವಿಯು ಒಬ್ಬನೇ ಈ ಇಡೀ ಲೋಕವನ್ನು ಬೆಳಗಿಸುತ್ತಾನೋ ಹಾಗೆ ಕ್ಷೇತ್ರಿಯು ಕ್ಷೇತ್ರವೆಲ್ಲವನ್ನೂ ಪ್ರಕಾಶಿಸುತ್ತಾನೆ. ಹೀಗೆ ಕ್ಷೇತ್ರ-ಕ್ಷೇತ್ರಜ್ಞರ ನಡುವಿನ ಅಂತರವನ್ನೂ, ಇರುವವನ್ನು ಪ್ರಕೃತಿಯಿಂದ ಮೋಕ್ಷಗೊಳಿಸುವ ವಿಧಿಯನ್ನು ಯಾರು ಜ್ಞಾನದ ಕಣ್ಣುಗಳಿಂದ ತಿಳಿದುಕೊಂಡಿದ್ದಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ.”

ಗುಣತ್ರಯ ವಿಭಾಗ ಯೋಗ

Related imageಶ್ರೀಭಗವಾನನು ಹೇಳಿದನು:

“ಇನ್ನೊಮ್ಮೆ ಜ್ಞಾನಗಗಳಲ್ಲಿ ಉತ್ತಮವಾದ ಪರಮ ಜ್ಞಾನವನ್ನು ಹೇಳುತ್ತೇನೆ. ಇದನ್ನರಿತ ಮುನಿಗಳೆಲ್ಲರೂ ಪರಮ ಸಿದ್ಧಿಯನ್ನು ಪಡೆದರು. ಈ ಜ್ಞಾನವನ್ನು ಆಶ್ರಯಿಸಿ ನನ್ನ ಸಾಧರ್ಮ್ಯವನ್ನು ಹೊಂದಿದವರು ಸೃಷ್ಟಿಯಲ್ಲಿಯೂ ಹುಟ್ಟುವುದಿಲ್ಲ ಮತ್ತು ಪ್ರಲಯದಲ್ಲಿಯೂ ವ್ಯಥೆಪಡುವುದಿಲ್ಲ. ನನ್ನ ಯೋನಿಯು ಮಹಾ ಬ್ರಹ್ಮ. ಅದರಲ್ಲಿ ನಾನು ಗರ್ಭವನ್ನು ಇಡುತ್ತೇನೆ. ಆಗ ಸರ್ವಭೂತಗಳ ಸಂಭವವಾಗುತ್ತದೆ. ಸರ್ವಯೋನಿಗಳಲ್ಲಿ ಯಾವ ಮೂರ್ತಿಗಳು ಸಂಭವಿಸುತ್ತವೆಯೋ ಅವುಗಳಿಗೆ ಮಹಾಬ್ರಹ್ಮವು ಯೋನಿ ಮತ್ತು ನಾನು ಬೀಜವನ್ನು ನೀಡುವ ತಂದೆ. ಸತ್ತ್ವ, ರಜ, ತಮ ಎಂಬ ಪ್ರಕೃತಿಯಿಂದುಂಟಾದ ಗುಣಗಳು ದೇಹದಲ್ಲಿ ಅವ್ಯಯವಾದ ದೇಹಿಯನ್ನು ಬಂಧಿಸುವವು. ಇವುಗಳಲ್ಲಿ ಸತ್ತ್ವವು ನಿರ್ಮಲವಾಗಿರುವುದರಿಂದ, ಪ್ರಕಾಶಕವೂ ಅನಾಮಯವೂ ಆಗಿದ್ದು ಸುಖಸಂಗ ಮತ್ತು ಜ್ಞಾನಸಂಗಗಳಿಂದ ಬಂಧಿಸುತ್ತದೆ. ರಜವು ರಾಗಾತ್ಮಕವಾಗಿರುವುದೆಂದು ತಿಳಿ. ತೃಷ್ಣೆ-ಅಸಂಗಗಳನ್ನುಂಟುಮಾಡುತ್ತದೆ. ಇದು ದೇಹಿಯನ್ನು ಕರ್ಮಸಂಗದಿಂದ ಬಂಧಿಸುತ್ತದೆ. ತಮಸ್ಸು ಅಜ್ಞಾನದಿಂದ ಹುಟ್ಟಿರುವುದೆಂದೂ, ಸರ್ವ ದೇಹಿಗಳನ್ನೂ ಮೋಹಗೊಳಿಸುವುದೆಂದೂ ತಿಳಿ. ಅದು ಪ್ರಮಾದ, ಆಲಸ್ಯ, ಮತ್ತು ನಿದ್ದೆಗಳಿಂದ ಬಂಧಿಸುತ್ತದೆ.

ಸತ್ತ್ವವು ಸುಖದಲ್ಲಿ ಅಂಟಿಸುತ್ತದೆ. ರಜವು ಕರ್ಮಗಳಲ್ಲಿ ಮತ್ತು ತಮವು ಜ್ಞಾನವನ್ನು ಆವರಿಸಿಕೊಂಡು ಪ್ರಮಾದದಲ್ಲಿ ಅಂಟಿಸುತ್ತದೆ. ರಜ ಮತ್ತು ತಮಗಳನ್ನು ಗೆದ್ದ ನಂತರವೇ ಸತ್ತ್ವವುಂಟಾಗುತ್ತದೆ. ಹಾಗೆಯೇ ಸತ್ತ್ವ ತಮಗಳನ್ನು ಗೆದ್ದು ರಜವೂ, ಸತ್ತ್ವ ರಜಗಳನ್ನು ಗೆದ್ದು ತಮವೂ ಉಂಟಾಗುತ್ತದೆ. ಈ ದೇಹದ ಸರ್ವದ್ವಾರಗಳಲ್ಲಿಯೂ ಯಾವಾಗ ಜ್ಞಾನವೆಂಬ ಪ್ರಕಾಶವು ಉಂಟಾಗುವುದೋ ಆಗ ಸತ್ತ್ವವು ಬೆಳೆದುಕೊಂಡಿದೆ ಎಂದು ಹೇಳಬಹುದು. ಲೋಭ, ಪ್ರವೃತ್ತಿ, ಕರ್ಮಗಳ ಆರಂಭ, ಅಶಮ, ಸ್ಪೃಹಾ ಇವುಗಳು ರಜವು ವೃದ್ಧಿಯಾಗುವಾಗ ಉಂಟಾಗುವವು. ಅಪ್ರಕಾಶ, ಅಪ್ರವೃತ್ತಿ, ಪ್ರಮಾದ, ಮತ್ತು ಮೋಹ ಇವು ತಮಸ್ಸು ವೃದ್ಧಿಯಾದಾಗ ಉಂಟಾಗುವವು. ಸತ್ತ್ವವು ಪ್ರವೃದ್ಧವಾಗಿರುವಾಗ ದೇಹಧಾರಿಯು ಪ್ರಲಯಹೊಂದಿದರೆ ಅವನು ಉತ್ತಮ ಜ್ಞಾನಿಗಳ ಅಮಲ ಲೋಕಗಳನ್ನು ಹೊಂದುತ್ತಾನೆ. ರಜಸ್ಸಿನಲ್ಲಿ ಪ್ರಲಯವಾದರೆ ಹೋಗಿ ಕರ್ಮಸಂಗಿಗಳಲ್ಲಿ ಹುಟ್ಟುತ್ತಾನೆ. ಹಾಗೆಯೇ ತಮಸ್ಸಿನಲ್ಲಿ ಪ್ರಲೀನನಾದರೆ ಮೂಢಯೋನಿಗಳಲ್ಲಿ ಹುಟ್ಟುತ್ತಾನೆ.

“ಸುಕೃತವಾದ ಸಾತ್ತ್ವಿಕ ಕರ್ಮಗಳಿಗೆ ನಿರ್ಮಲ ಫಲವೆನ್ನುವರು. ರಜಸ್ಸಿನ ಫಲ ದುಃಖ. ಮತ್ತು ತಮಸ್ಸಿನ ಫಲ ಅಜ್ಞಾನ. ಸತ್ತ್ವದಿಂದ ಜ್ಞಾನವು ಹುಟ್ಟುತ್ತದೆ. ರಜಸ್ಸಿನಿಂದ ಲೋಭವುಂಟಾಗುತ್ತದೆ. ತಮಸ್ಸಿನಿಂದ ಪ್ರಮಾದ-ಮೋಹಗಳೂ ಅಜ್ಞಾನವೂ ಉಂಟಾಗುತ್ತವೆ. ಸತ್ತ್ವದಲ್ಲಿರುವವವರು ಮೇಲೆ ಹೋಗುವರು. ರಾಜಸರು ನಡುವೆ ಇರುವರು. ಕೆಳಗಿನ ಗುಣದ ವೃತ್ತದಲ್ಲಿರುವ ತಾಮಸರು ಕೆಳಕ್ಕೆ ಹೋಗುತ್ತಾರೆ. ದ್ರಷ್ಟನು ಯಾವಾಗ ಗುಣಗಳಿಗಿಂತ ಬೇರೊಬ್ಬ ಕರ್ತೃವಿಲ್ಲವೆಂದು ಕಂಡುಕೊಳ್ಳುತ್ತಾನೋ ಮತ್ತು ಗುಣಗಳಿಗಿಂತ ಆಚಿನದ್ದನ್ನು ಅರಿತುಕೊಳ್ಳುತ್ತಾನೋ ಆಗ ಅವನು ನನ್ನ ಭಾವವನ್ನು ಹೊಂದುವನು. ದೇಹಿಯು ದೇಹಕ್ಕೆ ಕಾರಣವಾಗಿರುವ ಈ ಮೂರು ಗುಣಗಳನ್ನೂ ದಾಟಿದರೆ ಜನ್ಮ-ಮೃತ್ಯು-ಜರಾ-ದುಃಖಗಳಿಂದ ವಿಮುಕ್ತನಾಗಿ ಅಮೃತತ್ವವನ್ನು ಪಡೆಯುತ್ತಾನೆ.”

ಅರ್ಜುನನು ಹೇಳಿದನು:

“ಪ್ರಭೋ! ಈ ಮೂರೂ ಗುಣಗಳನ್ನು ದಾಟಿದವನ ಗುರುತುಗಳೇನು? ಅವನ ಆಚಾರಗಳೇನು? ಮತ್ತು ಈ ಮೂರೂ ಗುಣಗಳನ್ನು ಹೇಗಿ ಮೀರಿರುವನು?”

ಶ್ರೀಭಗವಾನನು ಹೇಳಿದನು:

“ಪಾಂಡವ! ಅಂಥವನು ಬಂದಿರುವ ಪ್ರಕಾಶ, ಪ್ರವೃತ್ತಿ ಮತ್ತು ಮೋಹಗಳನ್ನು ದ್ವೇಷಿಸುವುದಿಲ್ಲ. ಹೋದವನ್ನು ಬಯಸುವುದಿಲ್ಲ. ಗುಣಗಳಿಂದ ಚಲಿತನಾಗಿದೇ ಉದಾಸೀನನಾಗಿ ಕುಳಿತಿರುವವನು, ಗುಣಗಳು ವರ್ತಿಸುತ್ತಿವೆ ಎಂದು ಅಲುಗಾಡದೇ ನಿಂತಿರುವವನು, ದುಃಖ-ಸುಖಗಳಲ್ಲಿ ಸಮನಾಗಿರುವವನು, ಸ್ವಸ್ಥನಾಗಿರುವವನು, ಮಣ್ಣು-ಕಲ್ಲು-ಕಾಂಚನಗಳನ್ನು ಸಮನಾಗಿ ನೋಡುವವನು, ಪ್ರಿಯ-ಅಪ್ರಿಯಗಳನ್ನು ಸಮನಾಗಿ ಕಾಣುವವನು, ನಿಂದೆ-ಸಂಸ್ತುತಿಗಳನ್ನು ಸಮವೆಂದು ತೆಗೆದುಕೊಳ್ಳುವ ಧೀರನು, ಮಾನ-ಅಪಾನಗಳನ್ನು ಸಮವೆಂದೂ ಮಿತ್ರ-ಅಮಿತ್ರರ ಪಕ್ಷವನ್ನು ಸಮನಾಗಿ ನೋಡುವ, ಸರ್ವಾರಂಭಪರಿತ್ಯಾಗಿಯು ಗುಣಾತೀತನೆಂದು ಕರೆಯಲ್ಪಡುತ್ತಾನೆ. ಮತ್ತು ಯಾರು ನನ್ನನ್ನು ಅವ್ಯಭಿಚಾರದಿಂದ ಭಕ್ತಿಯೋಗದಿಂದ ಸೇವಿಸುತ್ತಾನೋ ಅವನು ಈ ಗುಣಗಳನ್ನು ಸಂಪೂರ್ಣವಾಗಿ ದಾಟಿ ಬ್ರಹ್ಮಭೂಯನಂತಾಗುತ್ತಾನೆ. ಏಕೆಂದರೆ ನನ್ನಲ್ಲಿ ಬ್ರಹ್ಮ, ಅಮೃತ, ಅವ್ಯಯ, ಶಾಶ್ವತ ಧರ್ಮ, ಮತ್ತು ಏಕಾಂತಿಕ ಸುಖಗಳು ನೆಲೆಸಿವೆ.”

ಪುರುಷೋತ್ತಮ ಯೋಗ

Image result for bhagavadgitaಶ್ರೀಭಗವಾನನು ಹೇಳಿದನು:

“ಮೇಲುಗಡೆ ಬೇರುಗಳುಳ್ಳದ್ದೂ ಕೆಳಗಡೆ ರೆಂಬೆಗಳುಳ್ಳದ್ದೂ ಆದ ಅಶ್ವತ್ಥವು ಅವ್ಯಯ ಎನ್ನುತ್ತಾರೆ. ಅದರ ಎಲೆಗಳು ಛಂದಸ್ಸುಗಳು. ಇದನ್ನು ತಿಳಿದುಕೊಂಡವನೇ ವೇದವನ್ನು ಬಲ್ಲವನು. ಕೆಳಕ್ಕೂ ಮೇಲಕ್ಕೂ ಅದರ ಶಾಖೆಗಳು ಹಬ್ಬಿಕೊಂಡಿರುತ್ತವೆ. ಗುಣಗಳಿಂದ ಬೆಳೆಯುವ ಅದರಲ್ಲಿ ವಿಷಯಗಳು ಚಿಗುರುಗಳು. ಮನುಷ್ಯಲೋಕದಲ್ಲಿ ಕರ್ಮಾನುಬಂಧಗಳೇ ವ್ಯಾಪಿಸಿಕೊಂಡಿರುವ ಬೇರುಗಳು. ಇಲ್ಲಿ ಇದರ ರೂಪವು ಹಾಗೆಯೇ ಕಾಣಬರುವುದಿಲ್ಲ. ಇದಕ್ಕೆ ಅಂತವಾಗಲೀ, ಆದಿಯಾಗಲೀ, ನೆಲೆಯಾಗಲೀ ಇಲ್ಲ. ಚೆನ್ನಾಗಿ ಗಟ್ಟಿಯಾಗಿ ಬೇರೂರಿರುವ ಈ ಅಶ್ವತ್ಥವನ್ನು ದೃಢತೆ ಮತ್ತು ಅಸಂಗಗಳೆಂಬ ಶಸ್ತ್ರಗಳಿಂದ ಕತ್ತರಿಸಿ, ಹೋದರೆ ಪುನಃ ಹಿಂದಿರುಗಿ ಬರಲಾರದದಂತಹ ಆ ಪದದ ಕಡೆ ಪ್ರಯಾಣಿಸಬೇಕು. ಹಿಂದೆ ಯಾವಾತನಿಂದ ಹೊರಟು ಬಂದಿರುವೆಯೋ ಅದೇ ಆದ್ಯ ಪುರುಷನನ್ನು ಶರಣುಹೋಗಬೇಕು, ಮಾನ-ಮೋಹಗಳಿಲ್ಲದವರು, ಸಂಗದೋಷಗಳನ್ನು ಗೆದ್ದವರು, ಆಧ್ಯಾತ್ಮನಿತ್ಯರು, ಕಾಮಗಳನ್ನು ಕಳೆದುಕೊಂಡವರು, ದ್ವಂದ್ವಗಳಿಂದ ಮತ್ತು ಸುಖದುಃಖಗಳಿಂದ ವಿಮುಕ್ತರಾದವರು, ಅಮೂಢರು ಆ ಅವ್ಯಯ ಪದವನ್ನು ಸೇರುತ್ತಾರೆ. ಅಲ್ಲಿ ಸೂರ್ಯನೂ ಬೆಳಗುವುದಿಲ್ಲ. ಚಂದ್ರನೂ ಬೆಳಗುವುದಿಲ್ಲ. ಪಾವಕನೂ ಬೆಳಗುವುದಿಲ್ಲ. ಹೋದ ಸ್ಥಾನದಿಂದ ಹಿಂದಿರುಗದಿರುವ ಅದೇ ನನ್ನ ಪರಮ ಧಾಮವು. ಸನಾತನವಾದ ನನ್ನದೇ ಅಂಶವು ಜೀವಲೋಕದಲ್ಲಿ ಜೀವಭೂತವಾಗಿ ಪ್ರಕೃತಿಯಲ್ಲಿರುವ ಮನಸ್ಸು ಮತ್ತು ಆರು ಇಂದ್ರಿಯಗಳನ್ನು ಸೆಳೆದುಕೊಳ್ಳುತ್ತದೆ. ಈಶ್ವರನು ಶರೀರವನ್ನು ಪಡೆಯುವಾಗ ಮತ್ತು ಶರೀರವನ್ನು ತೆರಳುವಾಗ ವಾಯುವು ಗಂಧಗಳನ್ನು ಕೊಂಡೊಯ್ಯುವಂತೆ ತೆಗೆದುಕೊಂಡು ಹೋಗುತ್ತಾನೆ. ಕಿವಿ, ಕಣ್ಣು, ಸ್ಪರ್ಶ, ರಸ, ಘ್ರಾಣ ಮತ್ತು ಮನಸ್ಸುಗಳಲ್ಲಿ ಇದ್ದುಕೊಂಡು ವಿಷಯಗಳನ್ನು ಉಪಸೇವಿಸುತ್ತಾನೆ. ಬಿಟ್ಟುಹೋಗುವಾಗ, ಇರುವಾಗ, ಅಥವಾ ಗುಣಾನ್ವಿತನಾಗಿ ಭೋಗಿಸುವಾಗಲೂ ಕೂಡ ವಿಮೂಢರು ಇವನನ್ನು ಕಾಣುವುದಿಲ್ಲ. ಆದರೆ ಜ್ಞಾನದೃಷ್ಟಿಯಿರುವವರು ನೋಡುತ್ತಾರೆ. ಪ್ರಯತ್ನಿಸುತ್ತಿರುವ ಯೋಗಿಗಳು ಈತನು ತಮ್ಮಲ್ಲಿರುವುದನ್ನು ಕಂಡುಕೊಳ್ಳುವರು. ಅಕೃತಾತ್ಮರು ಪ್ರಯತ್ನಿಸಿದರೂ, ಅಚೇತಸರಾಗಿರುವುದರಿಂದ ಇವನನ್ನು ಕಾಣದೇ ಇರುವರು.

“ಯಾವ ತೇಜಸ್ಸು ಆದಿತ್ಯನಲ್ಲಿದ್ದುಕೊಂಡು ಅಖಿಲ ಜಗತ್ತನ್ನೂ ಬೆಳಗುತ್ತದೆಯೋ, ಯಾವುದು ಚಂದ್ರ ಮತ್ತು ಅಗ್ನಿಗಳಲ್ಲಿ ಇದೆಯೋ ಆ ತೇಜಸ್ಸು ನನ್ನದೆಂದು ತಿಳಿ. ನಾನು ಭೂಮಿಯನ್ನು ಹೊಕ್ಕು ಓಜಸ್ಸಿನಿಂದ ಭೂತಗಳನ್ನು ಪೊರೆಯುತ್ತೇನೆ. ರಸಾತ್ಮಕನಾದ ಸೋಮನಾಗಿ ಸರ್ವ ಔಷಧಿಗಳನ್ನೂ ಪೋಷಿಸುತ್ತೇನೆ. ನಾನು ಪ್ರಾಣಿಗಳ ದೇಹವನ್ನು ಆಶ್ರಯಿಸಿರುವ ವೈಶ್ವಾನರನಾಗಿ ಪ್ರಾಣಾಪಾನಸಮಾಯುಕ್ತನಾಗಿ ಚತುರ್ವಿಧ ಅನ್ನವನ್ನು ಪಚನಮಾಡುತ್ತೇನೆ. ಎಲ್ಲರ ಹೃದಯಗಳಲ್ಲಿ ನಾನು ನೆಲೆಸಿದ್ದೇನೆ. ನೆನಪು, ಜ್ಞಾನ ಮುತ್ತು ಅವುಗಳ ಹೋಗುವಿಕೆ ನನ್ನಿಂದಲೇ ಆಗುತ್ತದೆ. ಸರ್ವವೇದಗಳಿಗೂ ನಾನೇ ವೇದ್ಯನು. ವೇದಾಂತವನ್ನು ಮಾಡಿದವನು ನಾನು. ವೇದವಿದನೂ ನಾನು.

“ಲೋಕದಲ್ಲಿ ಈ ಇಬ್ಬರು ಪುರುಷರು - ಕ್ಷರ ಮತ್ತು ಅಕ್ಷರ. ಸರ್ವಭೂತಗಳು ಕ್ಷರ. ಅವುಗಳಲ್ಲಿರುವ ಕೂಟಸ್ಥನು ಅಕ್ಷರ. ಆದರೆ ಪರಮಾತ್ಮನೆನಿಸಿಕೊಂಡಿರುವ ಉತ್ತಮ ಪುರುಷನು ಬೇರೆ. ಆ ಅವ್ಯಯ ಈಶ್ವರನು ಲೋಕತ್ರಯಗಳನ್ನು ಪ್ರವೇಶಿಸಿ ಧರಿಸಿಕೊಂಡಿರುತ್ತಾನೆ. ಕ್ಷರವನ್ನು ದಾಟಿ ಅಕ್ಷರಕ್ಕಿಂತಲೂ ಉತ್ತಮನಾಗಿರುವುದರಿಂದ ನಾನು ಲೋಕದಲ್ಲಿಯೂ ವೇದಗಳಲ್ಲಿಯೂ ಪುರುಷೋತ್ತಮನೆಂದು ಪ್ರಥಿತನಾಗಿದ್ದೇನೆ. ಯಾರು ಅಸಮ್ಮೂಢರಾಗಿ ನಾನೇ ಪುರುಷೋತ್ತಮನೆಂದು ತಿಳಿದಿರುತ್ತಾನೋ ಆ ಸರ್ವವಿದುವು ಸರ್ವಭಾವದಿಂದ ನನ್ನನ್ನು ಭಜಿಸುತ್ತಾನೆ. ಈ ಗುಹ್ಯತಮ ಶಾಸ್ತ್ರವನ್ನು ನಾನು ಹೇಳಿದ್ದಾಯಿತು. ಇದನ್ನು ಅರಿತುಕೊಂಡವನು ಬುದ್ಧಿವಂತನೂ ಕೃತಕೃತ್ಯನೂ ಆಗುತ್ತಾನೆ.”

ದೈವಾಸುರಸಂಪದ್ವಿಭಾಗ ಯೋಗ

Image result for bhagavadgitaಶ್ರೀಭಗವಾನನು ಹೇಳಿದನು:

“ಭಾರತ! ಅಭಯ, ಸತ್ತ್ವಸಂಶುದ್ಧಿ (ಅಂತಃಕರಣದ ಶುದ್ಧಿ), ಜ್ಞಾನಯೋಗದಲ್ಲಿ ನಿಷ್ಠನಾಗಿರುವುದು, ದಾನ, ದಮ, ಯಜ್ಞ, ಸ್ವಾಧ್ಯಾಯ, ತಪ, ಆರ್ಜವ, ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಶಾಂತಿ, ಅಪೈಶುನ (ಚಾಡಿಕೋರತನವಿಲ್ಲದಿರುವುದು), ಭೂತದಯೆ, ಅಲೋಲುಪ್ಯತೆ (ವಿಷಯಗಳು ಹತ್ತಿರವಿರುವಾಗಲೂ ಇಂದ್ರಿಯಗಳ ವಿಕಾರವಿಲ್ಲದೇ ಇರುವುದು), ಮಾರ್ದವ (ಮೃದುವಾಗಿರುವುದು, ಕ್ರೂರಿಯಾಗಿಲ್ಲದಿರುವುದು), ಹ್ರೀ (ನಾಚಿಕೆ), ಅಚಾಪಲ (ಪ್ರಯೋಜನವಿಒಲ್ಲದ ಮಾತು-ಕೆಲಸಗಳನ್ನು ಮಾಡದಿರುವುದು), ತೇಜಸ್ಸು, ಕ್ಷಮೆ, ಧೃತಿ, ಶೌಚ, ಅದ್ರೋಹ, ಅತಿಮಾನಿತನಾಗಿಲ್ಲದಿರುವುದು ಇವು ದೈವೀ ಸಂಪದದಿಂದ ಹುಟ್ಟಿ ಉಂಟಾಗುತ್ತವೆ. ದಂಭ (ಧಾರ್ಮಿಕನೆಂದು ತೋರಿಸಿಕೊಳ್ಳುವುದು), ದರ್ಪ, ಅತಿಮಾನ, ಕ್ರೋಧ, ಬಿರುಸಾದ ಮಾತು, ಅಜ್ಞಾನ ಇವು ಅಸುರೀ ಸಂಪದದಿಂದ ಹುಟ್ಟಿವೆ. ದೈವೀ ಸಂಪತ್ತು ವಿಮೋಕ್ಷಕ್ಕೂ ಅಸುರೀ ಸಂಪದವು ನಿಬಂಧಕ್ಕೂ ಕಾರಣವೆಂದು ಅಭಿಪ್ರಾಯವಿದೆ. ಶೋಕಿಸದಿರು. ನೀನು ದೈವೀ ಸಂಪದದಿಂದ ಜನಿಸಿರುವೆ.

“ಈ ಲೋಕದಲ್ಲಿ ದೈವ ಮತ್ತು ಅಸುರಗಳೆಂಬ ಎರಡು ಭೂತಸರ್ಗಗಳಿವೆ. ದೈವದ ಕುರಿತು ವಿಸ್ತಾರವಾಗಿ ಹೇಳಿಯಾಯಿತು. ಅಸುರವನ್ನು ನನ್ನಿಂದ ಕೇಳು. ಅಸುರ ಜನರು ಪ್ರವೃತ್ತಿ-ನಿವೃತ್ತಿಗಳನ್ನು ಅರಿತಿರುವುದಿಲ್ಲ. ಅವರಲ್ಲಿ ಶೌಚವೂ, ಆಚಾರಗಳೂ, ಸತ್ಯವೂ ಇರುವುದಿಲ್ಲ. ಜಗತ್ತು ಅಸತ್ಯವಾದುದು, ಆಧಾರವಿಲ್ಲದಿರುವುದು, ಆಳುವ ಈಶ್ವರನಿಲ್ಲದಿರುವುದು, ಕಾಮದಿಂದ ಪ್ರೇರಿತರಾದ ಸ್ತ್ರೀಪುರುಷರ ಅನ್ಯೋನ್ಯಸಂಯೋಗದಿಂದಲೇ ಹುಟ್ಟಿರುವುದು, ಮತ್ತೇನು, ಕಾಮಹೇತುವಿನಿಂದಲೇ ಆದದ್ದು ಎಂದು ಅವರು ಹೇಳುವರು. ಈ ದೃಷ್ಟಿಯನ್ನು ಅವಲಂಬಿಸಿ, ನಷ್ಟಾತ್ಮರಾಗಿ ಈ ಅಲ್ಪಬುದ್ಧಿಗಳು ಉಗ್ರಕರ್ಮಿಗಳಾಗಿ ಅಹಿತರಾಗಿ ಜಗತ್ತಿನ ಕ್ಷಯಕ್ಕೆ ಕಾರಣರಾಗುತ್ತಾರೆ. ಪೂರೈಸಲಾಗದೇ ಇರುವ ಕಾಮಗಳನ್ನು ಆಶ್ರಯಿಸಿ, ದಂಭ-ಮಾನ-ಮದಗಳಿಂದೊಡಗೂಡಿ ಮೋಹದಿಂದ ಕೆಟ್ಟ ಮನೋನಿಶ್ಚಯಗಳನ್ನು ತಾಳಿ ಲೋಕದಲ್ಲಿ ಅಶುಚಿವ್ರತರಾಗಿ ನಡೆದುಕೊಳ್ಳುವರು. ಅಪರಿಮೇಯವಾದ, ಪ್ರಲಯಾಂತಕವಾದ ಚಿಂತೆಯನ್ನು ಆಶ್ರಯಿಸಿ, ಕಾಮೋಪಭೋಗಪರಮರಾಗಿ, ಇಷ್ಟೇ ಎಂದು ನಿಶ್ಚಯಿಸಿದವರಾಗಿ, ನೂರಾರು ಆಶಾಪಾಶಗಳಿಂದ ಬಂಧಿಸಲ್ಪಟ್ಟು, ಕಾಮಕ್ರೋಧಪರಾಯಣರಾಗಿ, ಅನ್ಯಾಯದಿಂದ ಧನವನ್ನು ಕೂಡಿಟ್ಟುಕೊಂಡು ಕಾಮಭೋಗಗಳನ್ನು ಪಡೆಯುತ್ತಾರೆ. ಇದು ನನಗೆ ಇಂದು ಸಿಕ್ಕಿತು, ನನಗಿಷ್ಟವಾದ ಇದನ್ನು ಪಡೆದುಕೊಳ್ಳುವೆನು, ಇದು ಇದ್ದರೂ ಮತ್ತೆ ಈ ಧನವೂ ನನಗಾಗಬೇಕು, ಆ ಶತ್ರುವು ನನ್ನಿಂದ ಹತನಾದನು ಇನ್ನು ಮಿಕ್ಕವರನ್ನೂ ಕೊಲ್ಲುತ್ತೇನೆ, ನಾನೇ ಈಶ್ವರ, ನಾನೇ ಭೋಗಿ, ನಾನೇ ಸಿದ್ಧ, ಬಲವಂತ, ಸುಖಿ, ಹಣವಂತ, ಉತ್ತಮ ಕುಲದವನು, ನನಗೆ ಸದೃಶನಾದ ಬೇರೆ ಯಾರಿದ್ದಾರೆ? ಯಾಗಮಾಡುತ್ತೇನೆ, ದಾನ ಕೊಡುತ್ತೇನೆ, ಸಂತೋಷ ಪಡುತ್ತೇನೆ - ಎಂದು ಅಜ್ಞಾನಮೋಹಿತರಾಗಿ, ಅನೇಕ ಚಿತ್ತವಿಭ್ರಾಂತರಾಗಿ, ಮೋಹಜಾಲದಲ್ಲಿ ಸಿಲುಕಿಕೊಂಡು, ಕಾಮಭೋಗಗಳಲ್ಲಿ ಪ್ರಸಕ್ತರಾಗಿ ಅಶುಚಿ ನರಕದಲ್ಲಿ ಬೀಳುವರು. ತಮ್ಮನ್ನು ತಾವೇ ಒಳ್ಳೆಯರೆಂದು ತಿಳಿದುಕೊಂಡು, ತಗ್ಗಿ ನಡೆಯುವ ಸ್ವಾಭವವಿಲ್ಲದವರಾಗಿ, ಮಾನಮದಾನ್ವಿತರಾಗಿ ಅವರು ದಂಭದಿಂದ ಅವಿಧಿಪೂರ್ವಕವಾಗಿ ನಾಮ ಯಜ್ಞಗಳನ್ನು ಮಾಡುತ್ತಿರುತ್ತಾರೆ. ಅಹಂಕಾರ, ಬಲ, ದರ್ಪ, ಕಾಮ ಮತ್ತು ಕ್ರೋಧಗಳನ್ನು ಆಶ್ರಯಿಸಿ ತಮ್ಮ ಮತ್ತು ಮಿಕ್ಕವರ ದೇಹಗಳಲ್ಲಿರುವ ನನ್ನನ್ನು ದ್ವೇಷಿಸುತ್ತಾ ಅಸೂಯೆಪಡುವರು. ಆ ದ್ವೇಷಿಗಳನ್ನು, ಕ್ರೂರ, ಅಶುಭ ನರಾಧಮರನ್ನು ನಾನು ಸಂಸಾರದಲ್ಲಿ ಸತತವೂ ಅಶುಭವಾದ ಅಸುರ ಯೋನಿಗಳಲ್ಲಿಯೇ ಕೆಡಹುತ್ತೇನೆ. ಜನ್ಮ ಜನ್ಮಗಳಲ್ಲಿಯೂ ಅಸುರೀ ಯೋನಿಯನ್ನು ಪಡೆದ ಆ ಮೂಢರು ನನ್ನನ್ನು ಪಡೆಯದೆಯೇ ಇನ್ನೂ ಅಧಮ ಗತಿಯನ್ನು ಹೊಂದುತ್ತಾರೆ.

“ಕಾಮ, ಕ್ರೋಧ ಮತ್ತು ಲೋಭ - ಇವು ಮೂರು ನರಕಕ್ಕೆ ಹೋಗಲು ದ್ವಾರಗಳು. ಆತ್ಮನ ನಾಶಕ್ಕೆ ಕಾರಣಗಳು. ಆದ್ದರಿಂದ ಈ ಮೂರನ್ನು ಬಿಡಬೇಕು. ಈ ಮೂರು ತಮೋದ್ವಾರಗಳಿಂದ ವಿಮುಕ್ತನಾದ ನರನು ತನಗೆ ಶ್ರೇಯಸ್ಸನ್ನು ತಂದುಕೊಳ್ಳುತ್ತಾನೆ. ಅದರಿಂದ ಪರಮ ಗತಿಯನ್ನು ಪಡೆಯುತ್ತಾನೆ. ಯಾರು ಶಾಸ್ತ್ರವಿಧಿಯನ್ನು ಬಿಟ್ಟು ಕಾಮದ ಪ್ರೇರಣೆಗೆ ಒಳಗಾಗಿ ವರ್ತಿಸುವರೋ ಅವರು ಸಿದ್ಧಿಯನ್ನೂ ಪಡೆಯುವುದಿಲ್ಲ, ಸುಖ ಮತ್ತು ಪರಮ ಗತಿಯನ್ನೂ ಪಡೆಯುವುದಿಲ್ಲ. ಆದುದರಿಂದ ಕಾರ್ಯ-ಅಕಾರ್ಯಗಳಲ್ಲಿ ನಿನಗೆ ಶಾಸ್ತ್ರವೇ ಪ್ರಮಾಣವು. ಶಾಸ್ತ್ರವಿಧಾನಗಳಲ್ಲಿ ಹೇಳಿರುವುದನ್ನು ತಿಳಿದು ಕರ್ಮವನ್ನು ಮಾಡಬೇಕು.”

ಶ್ರದ್ಧಾತ್ರಯವಿಭಾಗ ಯೋಗ

Related imageಅರ್ಜುನನು ಹೇಳಿದನು:

“ಕೃಷ್ಣ! ಶಾಸ್ತ್ರವಿಧಿಗಳನ್ನು ಬಿಟ್ಟು ಶ್ರದ್ಧಾನ್ವಿತರಾಗಿ ನಿನ್ನನ್ನು ಪೂಜಿಸುವವರ ನಿಷ್ಠೆಯಂಥಹುದು - ಸತ್ತ್ವವೋ, ರಜವೋ ಅಥವಾ ತಮವೋ?”

ಶ್ರೀಭಗವಾನನು ಹೇಳಿದನು:

“ಸ್ವಭಾವದಿಂದ ಹುಟ್ಟುವ ದೇಹಿಗಳ ಆ ಶ್ರದ್ಧೆಯು ಮೂರು ವಿಧವಾಗಿರುತ್ತದೆ - ಸಾತ್ತ್ವಿಕೀ, ರಾಜಸೀ ಮತ್ತು ತಾಮಸೀ. ಅದರ ಕುರಿತು ಕೇಳು. ಎಲ್ಲರ ಶ್ರದ್ಧೆಯೂ ಸತ್ತ್ವಾನುರೂಪವಾಗಿರುತ್ತದೆ. ಶ್ರದ್ಧಾಮಯನಾದ ಇವನು ಪುರುಷನು. ಯಾರಿಗೆ ಯಾವುದರಲ್ಲಿ ಶ್ರದ್ಧೆಯಿರುತ್ತದೆಯೋ ಅವರು ಅದೇ ಆಗುತ್ತಾರೆ. ಸಾತ್ತ್ವಿಕರು ದೇವತೆಗಳನ್ನು, ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸ ಜನರು ಪ್ರೇತ-ಭೂತಗಣಗಳು ಮತ್ತು ಇತರರನ್ನು ಪೂಜಿಸುತ್ತಾರೆ. ದಂಭಾಹಂಕಾರ ಸಂಯುಕ್ತರಾಗಿ, ಕಾಮರಾಗಬಲಾನ್ವಿತರಾಗಿ, ಶರೀರದಲ್ಲಿರುವ ಭೂತಗ್ರಾಮಗಳನ್ನೂ, ಶರೀರಸ್ಥನಾಗಿರುವ ನನ್ನನ್ನೂ ಒಣಗಿಸಿ ಅಚೇತಸರನ್ನಾಗಿಸಿ ಶಾಸ್ತ್ರವಿಹಿತವಲ್ಲದ ಘೋರ ತಪಸ್ಸನ್ನು ತಪಿಸುವ ಜನರು ಅಸುರ ನಿಶ್ಚಯರೆಂದು ತಿಳಿ.

“ಎಲ್ಲರಿಗೂ ಪ್ರಿಯವಾಗಿರುವ ಆಹಾರವೂ, ಯಜ್ಞ-ತಪಸ್ಸು-ದಾನಗಳೂ ಮೂರುವಿಧಗಳಾಗಿವೆ. ಅವುಗಳ ಭೇದವನ್ನು ಕೇಳು. ಆಯುಸ್ಸು, ಸತ್ತ್ವ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ವರ್ಧಿಸುವ, ರಸವತ್ತಾದ, ಜಿಡ್ಡುಳ್ಳ, ದೇಹದಲ್ಲಿ ಬಹುಕಾಲವಿರುವ, ಹೃದಯಕ್ಕೆ ಇಷ್ಟವಾಗುವ ಆಹಾರಗಳು ಸಾತ್ತ್ವಿಕನಿಗೆ ಪ್ರಿಯವಾದವುಗಳು. ಅತಿಯಾಗಿ ಕಟು, ಆಮ್ಲ, ಲವಣ, ಉಷ್ಣ, ತೀಕ್ಷ್ಣ, ರೂಕ್ಷ (ಒಣಗಿರುವ) ಮತ್ತು ಖಾರವಾಗಿರುವ ಆಹಾರವು ರಾಜಸರಿಗೆ ಇಷ್ಟವಾದವು. ಇವು ದುಃಖ, ಶೋಕ, ಅನಾರೋಗ್ಯಗಳನ್ನು ಕೊಡುತ್ತವೆ. ಸ್ವಲ್ಪವಾಗಿ ಬೆಂದಿರುವ, ಸಾರವಿಲ್ಲದ, ಕೆಟ್ಟ ವಾಸನೆಯ, ಹಳಸಿದ (ಬೇಯಿಸಿದ ನಂತರ ಒಂದು ರಾತ್ರಿಯನ್ನು ಕಳೆದ), ಊಟಮಾಡಿ ಮಿಕ್ಕಿದ್ದ, ಯಜ್ಞಕ್ಕೆ ತಕ್ಕುದಲ್ಲದ ಭೋಜನವು ತಾಮಸರಿಗೆ ಪ್ರಿಯವಾಗಿರುತ್ತದೆ.

“ಯಾಗವನ್ನು ಮಾಡಲೇ ಬೇಕೆಂದು ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಫಲಾಕಾಂಕ್ಷಿಗಳಾಗಿರದವರಿಂದ ವಿಧಿಧೃಷ್ಟವಾಗಿ ನಡೆಸಿದ ಯಜ್ಞವು ಸಾತ್ವಿಕವು. ಆದರೆ ಫಲವನ್ನೇ ಮನಸ್ಸಿನಲ್ಲಿಟ್ಟುಕೊಂಡು, ತೋರಿಸುವುದಕ್ಕಾಗಿಯೂ ಮಾಡುವ ಯಜ್ಞವು ರಾಜಸವೆಂದು ತಿಳಿ. ವಿಧಿಗಳಿಲ್ಲದೇ, ಕರೆದು ಆಹಾರವನ್ನು ನೀಡದೇ, ಮಂತ್ರಗಳಿಲ್ಲದೇ, ದಕ್ಷಿಣೆಗಳಿಲ್ಲದೇ, ಶ್ರದ್ಧೆಯಿಲ್ಲದೇ ನಡೆಸಿದ ಯಜ್ಞವು ತಾಮಸವೆಂದೆನಿಸಿಕೊಳ್ಳುತ್ತದೆ.

ದೇವ-ದ್ವಿಜ-ಗುರು-ಪ್ರಾಜ್ಞರ ಪೂಜನ, ಶೌಚ, ಆರ್ಜವ, ಬ್ರಹ್ಮಚರ್ಯ, ಮತ್ತು ಅಹಿಂಸೆಗಳನ್ನು ಶಾರೀರ ತಪಸ್ಸು ಎನ್ನುವರು. ಉದ್ವೇಗಕವಲ್ಲದ, ಸತ್ಯವೂ, ಪ್ರಿಯಹಿತವೂ ಆಗಿರುವ ವಾಕ್ಯ, ಸ್ವಾಧ್ಯಾಯ ಅಭ್ಯಾಸಗಳನ್ನು ವಾಙ್ಮಯ ತಪಸ್ಸೆಂದು ಹೇಳುತ್ತಾರೆ. ಮನಃಪ್ರಸನ್ನತೆ, ಸೌಮ್ಯತ್ವ, ಮೌನ, ಆತ್ಮವಿನಿಗ್ರಹ, ಭಾವಸಂಶುದ್ಧಿ, ಇವು ಮನಸ್ಸಿನ ತಪಸ್ಸುಗಳೆಂದು ಕರೆಯಲ್ಪಡುತ್ತವೆ. ಈ ಮೂರೂವಿಧದ ತಪಸ್ಸುಗಳನ್ನು ಫಲಾಕಾಂಕ್ಷಿಗಳಾಗಿರದ ನರರಿಂದ ತಪಿಸಲ್ಪಟ್ಟರೆ ಅದು ಸಾತ್ತ್ವಿಕ ಎಂದೆನಿಸಿಕೊಳ್ಳುತ್ತದೆ. ಸತ್ಕಾರ-ಮಾನ-ಪೂಜನೆಗಳಿಗಾಗಿ, ತೋರಿಸುವುದಕ್ಕೂ ಮಾಡುವ ಈ ತಪಸ್ಸುಗಳನ್ನು ಚಲಿಸುವ, ಸ್ಥಿರವಲ್ಲದ ರಾಜಸವೆಂದು ಹೇಳುತ್ತಾರೆ. ಮೂಢ ವಿಶ್ವಾಸದಿಂದ, ತನಗೇ ತೊಂದರೆಯನ್ನು ಮಾಡಿಕೊಂಡು ಅಥವಾ ಇನ್ನೊಬ್ಬರನ್ನು ಹಾಳುಮಾಡುವುದಕ್ಕಾಗಿ ಮಾಡುವ ತಪಸ್ಸು ತಾಮಸವೆಂದೆನಿಸಿಕೊಳ್ಳುತ್ತದೆ.

ದಾನಮಾಡಬೇಕೆಂದು, ಪ್ರತಿಯಾಗಿ ಉಪಕಾರಮಾಡಲು ಶಕ್ತನಿಲ್ಲದಿರುವವನಿಗೆ, ಶಕ್ತನಾಗಿದ್ದರೂ ಯಾವ ಅಪೇಕ್ಷೆಯೂ ಇಲ್ಲದೇ, ಸರಿಯಾದ ದೇಶ-ಕಾಲಗಳಲ್ಲಿ ಪಾತ್ರನಿಗೆ ಕೊಡುವ ದಾನವು ಸಾತ್ತ್ವಿಕವೆಂದೆಸಿಸಿಕೊಳ್ಳುತ್ತದೆ. ಆದರೆ ಪ್ರತ್ಯುಪಕಾರವನ್ನು ಪಡೆಯಲೋಸುಗ, ಅಥವ ಪುನಃ ಫಲವನ್ನು ಉದ್ದೇಶಿಸಿ, ಕಷ್ಟಪಟ್ಟು ಕೊಡುವ ದಾನವು ರಾಜಸವೆಂದೆನಿಸಿಕೊಳ್ಳುತ್ತದೆ. ಸರಿಯಾಗಿಲ್ಲದ ದೇಶ-ಕಾಲಗಳಲ್ಲಿ, ಅಪಾತ್ರನಿಗೆ, ಸತ್ಕಾರಗಳಿಲ್ಲದೇ, ಅವಹೇಳನೆ ಮಾಡುತ್ತಾ ಕೊಡುವ ದಾನವು ತಾಮಸದ ಉದಾಹರಣೆಯು.

ಓಂ, ತತ್ ಮತ್ತು ಸತ್ ಎಂದು ಬ್ರಹ್ಮಕ್ಕೆ ಮೂರು ವಿಧದ ನಿರ್ದೇಶಗಳನ್ನು ಹೇಳಿದ್ದಾರೆ. ಹಿಂದೆ ಇವುಗಳಿಂದಲೇ ಬ್ರಾಹ್ಮಣರನ್ನೂ, ವೇದಗಳನ್ನೂ, ಯಜ್ಞಗಳನ್ನೂ ಮಾಡಲಾಗಿತ್ತು. ಆದುದರಿಂದ ಬ್ರಹ್ಮವಾದಿಗಳ ವಿಧಾನೋಕ್ತ ಯಜ್ಞ-ದಾನ-ತಪಃ-ಕ್ರಿಯೆಗಳಲ್ಲಿ ಓಂ ಎಂದು ಹೇಳಿಯೇ ಪ್ರಾರಂಭವಾಗುತ್ತವೆ. ತತ್ ಎಂದು ಹೇಳಿ ಫಲವನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಮೋಕ್ಷಕಾಂಕ್ಷಿಗಳು ವಿವಿಧ ಯಜ್ಞ-ತಪಸ್ಸು-ಕ್ರಿಯೆಗಳನ್ನೂ ದಾನಕ್ರಿಯೆಗಳನ್ನೂ ಮಾಡುತ್ತಾರೆ. ಸತ್ ಎನ್ನುವುದು ಸದ್ಭಾವದಲ್ಲಿಯೂ, ಸಾಧುಭಾವಲ್ಲಿಯೂ ಬಳಕೆಯಾಗುತ್ತದೆ. ಮತ್ತು ಪ್ರಶಸ್ತವಾದ ಕರ್ಮಗಳಲ್ಲಿ ಸತ್ ಶಬ್ಧವು ಪ್ರಯೋಗವಾಗುತ್ತದೆ. ಯಜ್ಞ, ತಪಸ್ಸು ಮತ್ತು ದಾನಗಳಲ್ಲಿ ನೆಲೆಸಿರುವುದನ್ನು ಸತ್ ಎನ್ನುತ್ತಾರೆ. ಅದೇ ಅರ್ಥದಲ್ಲಿ ಮಾಡುವ ಕರ್ಮಗಳೂ ಸತ್ ಎಂದೇ ಹೇಳಲ್ಪಡುತ್ತದೆ. ಶ್ರದ್ಧೆಯಿಲ್ಲದೇ ನೀಡಿದ ಆಹುತಿ, ಕೊಟ್ಟ ದಾನ, ತಪಿಸಿದ ತಪಸ್ಸು, ಮತ್ತು ಮಾಡಿದ ಯಾವುದೂ ಅಸತ್ ಎಂದೆನಿಸಿಕೊಳ್ಳುತ್ತದೆ. ಅದು ಸತ್ತಮೇಲೂ ಇರುವುದಿಲ್ಲ. ಇಲ್ಲಿಯೂ ಇರುವುದಿಲ್ಲ.”

ಮೋಕ್ಷಸಂನ್ಯಾಸಯೋಗ

ಅರ್ಜುನನು ಹೇಳಿದನು:

“ಹೃಷೀಕೇಶ! ಸಂನ್ಯಾಸ ಮತ್ತು ತ್ಯಾಗಗಳ ತತ್ತ್ವಗಳನ್ನು ಪ್ರತ್ಯೇಕವಾಗಿ ತಿಳಿಯಬಯಸುತ್ತೇನೆ.”

ಶ್ರೀಭಗವಾನನು ಹೇಳಿದನು:

“ಕಾಮ್ಯಕರ್ಮಗಳನ್ನು ಬಿಡುವುದನ್ನು ಕವಿಗಳು ಸಂನ್ಯಾಸವೆಂದು ತಿಳಿಯುತ್ತಾರೆ. ಸರ್ವಕರ್ಮಗಳ ಫಲವನ್ನು ತ್ಯಜಿಸುವುದು ತ್ಯಾಗವೆಂದು ವಿಚಕ್ಷಣರು ಕರೆಯುತ್ತಾರೆ. ದೋಷವುಳ್ಳದ್ದಾದುದರಿಂದ ಕರ್ಮಗಳನ್ನು ಬಿಡಬೇಕು ಎಂದು ಕೆಲವು ಮನೀಷಿಣರು ಹೇಳುತ್ತಾರೆ. ಆದರೆ ಯಜ್ಞ, ದಾನ, ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು ಎಂದು ಇತರರು ಹೇಳುತ್ತಾರೆ. ತ್ಯಾಗದ ಕುರಿತಾದ ನಿಶ್ಚಯವನ್ನು ನನ್ನಿಂದ ಕೇಳು.

“ತ್ಯಾಗದಲ್ಲಿ ಮೂರುವಿಧಗಳಿವೆ ಎಂದು ಹೇಳುತ್ತಾರೆ. ಯಜ್ಞ, ದಾನ ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು. ಅವೂ ಕಾರ್ಯಗಳೇ. ಮನೀಷಿಣರಿಗೆ ಯಜ್ಞ-ದಾನ-ತಪಸ್ಸುಗಳು ಪಾವನವಾದವುಗಳು. ಆದರೆ ಈ ಕರ್ಮಗಳನ್ನೂ ಕೂಡ ಸಂಗ ಮತ್ತು ಫಲಗಳನ್ನು ತೊರೆದು ಮಾಡಬೇಕೆಂದು ನನ್ನ ಉತ್ತಮವಾದ ಮತ ಮತ್ತು ನಿಶ್ಚಯ. ಆದರೆ ನಿಯತವಾದ ನಿತ್ಯಕರ್ಮದ ಸಂನ್ಯಾಸವು ಯುಕ್ತವಲ್ಲ. ಮೋಹದಿಂದ ಅದನ್ನು ಪರಿತ್ಯಜಿಸುವುದನ್ನು ತಾಮಸವೆಂದು ಹೇಳಲ್ಪಡುತ್ತದೆ. ಯಾರು ದುಃಖ ಮತ್ತು ಶರೀರಕ್ಕೆ ಕಷ್ಟವಾಗುತ್ತದೆ ಎಂಬ ಭಯದಿಂದ ಕರ್ಮಗಳನ್ನು ತ್ಯಜಿಸುತ್ತಾರೋ ಅವರು ರಾಜಸ ತ್ಯಾಗವನ್ನು ಮಾಡಿದುದರಿಂದ ತ್ಯಾಗದ ಫಲವನ್ನು ಪಡೆಯುವುದಿಲ್ಲ. ಯಾವ ನಿತ್ಯಕರ್ಮಗಳನ್ನು ಮಾಡಬೇಕಾದವು ಎಂದು ಸಂಗವನ್ನೂ ಫಲವನ್ನೂ ತ್ಯಜಿಸಿ ಮಾಡುತ್ತಾರೋ ಆ ತ್ಯಾಗವು ಸಾತ್ತ್ವಿಕವೆಂದು ನನ್ನ ಮತ. ಸತ್ತ್ವಸಮಾವಿಷ್ಟನಾದ ಮೇಧಾವೀ ತ್ಯಾಗಿಯು ಚಿನ್ನಸಂಶಯನಾಗಿ ಅಕುಶಲಕರ್ಮಗಳನ್ನು ದ್ವೇಷಿಸುವುದೂ ಇಲ್ಲ, ಕುಶಲ ಕರ್ಮವನ್ನು ಪ್ರೀತಿಸುವುದೂ ಇಲ್ಲ.

“ಒಂದನ್ನೂ ಬಿಡದೆ ಎಲ್ಲ ಕರ್ಮಗಳನ್ನೂ ತ್ಯಜಿಸಲು ದೇಹಭೃತನಿಗೆ ಶಕ್ಯವಾಗುವುದಿಲ್ಲ. ಯಾರು ಕರ್ಮಫಲತ್ಯಾಗಿಯೋ ಅವನೇ ತ್ಯಾಗಿಯೆನಿಸುವನು. ತ್ಯಾಗಿಗಳಲ್ಲದವರಿಗೆ ಅನಿಷ್ಟ, ಇಷ್ಟ ಮತ್ತು ಮಿಶ್ರವೆಂದು ಮೂರು ವಿಧದ ಫಲಗಳು ಮರಣದ ನಂತರ ಉಂಟಾಗುತ್ತದೆ. ಆದರೆ ಸಂನ್ಯಾಸಿಗಳಿಗೆ ಎಂದೂ ಈ ಫಲಗಳುಂಟಾಗುವುದಿಲ್ಲ. ಸರ್ವಕರ್ಮಗಳ ಸಿದ್ಧಿಗೆ ಈ ಐದೂ ಕಾರಣಗಳು ಎಂದು ಸಾಂಖ್ಯ ಕೃತಾಂತದಲ್ಲಿ ಹೇಳಿದ್ದಾರೆ. ಅದನ್ನು ನನ್ನಿಂದ ತಿಳಿದುಕೋ. ಅಧಿಷ್ಠಾನ, ಕರ್ತ, ಪ್ರತ್ಯೇಕವಾಗಿರುವ ವಿವಿಧ ಕರಣಗಳು, ಪ್ರತ್ಯೇಕವಾದ ವಿವಿಧ ಚೇಷ್ಟೆಗಳು, ಮತ್ತು ಅಲ್ಲಿರುವ ದೈವವು ಐದನೆಯದು. ಶರೀರ-ವಾಕ್-ಮನಸ್ಸುಗಳಿಂದ ನರನು ನ್ಯಾಯವಾದ ಅಥವಾ ವಿಪರೀತವಾದ ಯಾವ ಕರ್ಮವನ್ನು ಪ್ರಾರಂಭಿಸುತ್ತಾನೋ ಅದಕ್ಕೆ ಈ ಐದು ಹೇತುಗಳು. ಆದರೆ ಅಲ್ಲಿಯೇ ಇರುವ ಆತ್ಮನನ್ನು ಕೇವಲ ಕರ್ತಾರನೆಂದು ಯಾರು ಅಕೃತಬುದ್ಧಿಯಿಂದ ತಿಳಿದುಕೊಳ್ಳುತ್ತಾನೋ ಆ ದುರ್ಮತಿಯು ತಿಳಿಯನು.

“ಯಾರಿಗೆ ನಾನು ಮಾಡಿದೆ ಎನ್ನುವ ಭಾವವಿರುವುದಿಲ್ಲವೋ, ಯಾರ ಬುದ್ಧಿಯು ಅಂಟಿಕೊಳ್ಳುವುದಿಲ್ಲವೋ ಅವನು ಈ ಲೋಕಗಳನ್ನು ಕೊಂದರೂ ಕೊಂದಹಾಗೆ ಆಗುವುದಿಲ್ಲ. ಏಕೆಂದರೆ ಅವನು ಆ ಕರ್ಮದೊಂದಿಗೆ ಬದ್ಧನಾಗಿರುವುದಿಲ್ಲ. ಜ್ಞಾನ, ಜ್ಞೇಯ ಮತ್ತು ಪರಿಜ್ಞಾತಾ - ಇವು ಕರ್ಮಚೋದನೆಯು ಮೂರು ವಿಧಗಳು. ಕರಣ, ಕರ್ಮ, ಕರ್ತ – ಇವು ಮೂರು ವಿಧದ ಕರ್ಮಸಂಗ್ರಹವು. ಜ್ಞಾನ, ಕರ್ಮ ಮತ್ತು ಕರ್ತ ಇವು ಭೇದದಿಂದ ಮೂರು ಬಗೆಯವು ಎಂದು ಗುಣಸಂಖ್ಯಾನದಲ್ಲಿ ಹೇಳುತ್ತಾರೆ. ಅವುಗಳನ್ನು ಯಥಾವತ್ತಾಗಿ ಕೇಳು.

“ಯಾವುದರಿಂದ ಸರ್ವಭೂತಗಳಲ್ಲಿಯೂ ಅವ್ಯಯವಾದ ಒಂದೇ ಭಾವವನ್ನು – ವಿಭಕ್ತವಾಗಿರುವವುಗಳಲ್ಲಿ ಅವಿಭಕ್ತತೆಯನ್ನು – ಕಂಡುಕೊಳ್ಳುತ್ತಾರೋ ಆ ಜ್ಞಾನವು ಸಾತ್ವಿಕವೆಂದು ತಿಳಿ. ಯಾವುದರಿಂದ ಸರ್ವಭೂತಗಳಲ್ಲಿಯೂ ಪ್ರತ್ಯೇಕತೆಯ ನಾನಾ ಭಾವಗಳನ್ನು ಪ್ರತ್ಯೇಕವಾಗಿಯೇ ತಿಳಿದುಕೊಳ್ಳುತ್ತಾರೋ ಆ ಜ್ಞಾನವು ರಾಜಸವೆಂದು ತಿಳಿ. ಆದರೆ ಯಾವುದು ಒಂದು ಕಾರ್ಯದಲ್ಲಿ ಅದೇ ಎಲ್ಲವೂ ಎಂಬಂತೆ ಸಕ್ತವಾಗಿರುವುದೋ ಹೇತುವಿಲ್ಲದ್ದೋ ತತ್ತ್ವಾರ್ಥವಿಲ್ಲದ್ದೋ ಅಲ್ಪವಾಗಿರುವುದೋ ಅದು ತಾಮಸವೆನಿಸುವುದು. ಅನಿಯತವಾಗಿ, ಸಂಗರಹಿತನಾಗಿ, ರಾಗದ್ವೇಷಗಳಿಲ್ಲದೇ, ಫಲವನ್ನು ಪಡೆಯಬೇಕೆಂಬ ಇಚ್ಛೆಯಿಲ್ಲದವನು ಮಾಡುವ ಕರ್ಮಗಳು ಸಾತ್ವಿಕವೆನಿಸುವವು. ಆದರೆ ಕರ್ಮಫಲವನ್ನು ಪಡೆಯಬೇಕೆಂಬ ಇಚ್ಛೆಯಿಂದ ಅಹಂಕಾರವುಳ್ಳವನು ಬಹಳ ಆಯಾಸಪಟ್ಟುಕೊಂಡು ಮಾಡುವ ಕರ್ಮಗಳು ರಾಜಸವೆನಿಸುತ್ತವೆ. ಆಗುವ ಪರಿಣಾಮಗಳನ್ನೂ, ಕ್ಷಯವನ್ನೂ, ಹಿಂಸೆಯ, ಪೌರುಷವನ್ನೂ ಲೆಕ್ಕಿಸದೇ ಮೋಹದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳುತ್ತಾರೆ.

“ಮುಕ್ತಸಂಗ, ಅನಹಂವಾದಿ, ಧೃತಿ-ಉತ್ಸಾಹ ಸಮನ್ವಿತ, ಸಿದ್ಧಿ-ಅಸಿದ್ಧಿಗಳಿಗೆ ನಿರ್ವಿಕಾರ ಕರ್ತನನ್ನು ಸಾತ್ವಿಕನೆಂದು ಹೇಳುತ್ತಾರೆ. ರಾಗೀ, ಕರ್ಮಫಲವನ್ನು ಬಯಸುವ, ಲುಬ್ಧ, ಹಿಂಸಾತ್ಮಕ, ಅಶುಚಿ, ಹರ್ಷ-ಶೋಕಾನ್ವಿತ ಕರ್ತನು ರಾಜಸನೆಂದು ಎನಿಸಿಕೊಳ್ಳುತ್ತಾನೆ. ಅಯುಕ್ತ, ಪ್ರಾಕೃತ, ಸ್ತಬ್ಧ, ಶಠ (ಮಾಯಾವೀ), ಇನ್ನೊಬ್ಬರ ಕೆಲಸವನ್ನು ಹಾಳುಮಾಡುವವನು, ಆಲಸಿ, ವಿಷಾದೀ, ದೀರ್ಘಸೂತ್ರೀ ಕರ್ತನನ್ನು ತಾಮಸನೆಂದು ಹೇಳುತ್ತಾರೆ.

“ಬುದ್ಧಿ ಮತ್ತು ಧೃತಿಗಳು ಗುಣದಿಂದ ಮೂರುವಿಧವಾಗಿರುವುದನ್ನು ಸಂಪೂರ್ಣವಾಗಿ ಬೇರೆ ಬೇರೆಯಾಗಿ ಹೇಳುವುದನ್ನು ಕೇಳು. ಯಾವ ಬುದ್ಧಿಯು ಪ್ರವೃತ್ತಿ, ನಿವೃತ್ತಿ, ಕಾರ್ಯ-ಅಕಾರ್ಯಗಳು, ಭಯ-ಅಭಯ, ಬಂಧನ-ಮೋಕ್ಷಗಳನ್ನು ತಿಳಿದಿರುತ್ತದೆಯೋ ಅದನ್ನು ಸಾತ್ವಿಕೀ ಎಂದು ತಿಳಿಯಬೇಕು. ಯಾವ ಬುದ್ಧಿಯು ಧರ್ಮ-ಅಧರ್ಮಗಳನ್ನು, ಕಾರ್ಯ-ಅಕಾರ್ಯಗಳನ್ನು ಯಥಾವತ್ತಾಗಿ ಅರಿತುಕೊಳ್ಳುವುದಿಲ್ಲವೋ ಅದನ್ನು ರಾಜಸೀ ಎಂದು ತಿಳಿದುಕೊಳ್ಳಬೇಕು. ತಮಸ್ಸಿನಿಂದ ಆವೃತವಾಗಿ ಅಧರ್ಮವನ್ನು ಧರ್ಮವೆಂದು ಸ್ವೀಕರಿಸಿ ಎಲ್ಲವುಗಳನ್ನೂ ವಿಪರೀತವಾಗಿ ಅರ್ಥಮಾಡಿಕೊಳ್ಳುವ ಬುದ್ಧಿಯು ತಾಮಸೀ. ಯಾವ ಅವ್ಯಭಿಚಾರಿ ಧೃತಿಯಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಕ್ರಿಯೆಗಳನ್ನು ಯೋಗದಿಂದ ಧರಿಸುತ್ತಾರೋ ಆ ಧೃತಿಯು ಸಾತ್ತ್ವಿಕಿ. ಯಾವ ಧೃತಿಯಿಂದ ಪ್ರಸಂಗದಿಂದ ಫಲಾಕಾಂಕ್ಷಿಯಾಗಿ ಧರ್ಮ-ಕಾಮ-ಅರ್ಥಗಳನ್ನು ಧರಿಸುತ್ತಾರೋ ಆ ಧೃತಿಯು ರಾಜಸೀ. ಯಾವುದರಿಂದ ಸ್ವಪ್ನ, ಭಯ, ಶೋಕ, ವಿಷಾಧ, ಮದಗಳನ್ನು ಬಿಡಲಿಕ್ಕಾಗುವುದಿಲ್ಲವೋ ಆ ಕೆಟ್ಟ ಬುದ್ಧಿಯ ಧೃತಿಯು ತಾಮಸೀ.

“ಈಗ ಮೂರು ವಿಧವಾದ ಸುಖವನ್ನು ನನ್ನಿಂದ ಕೇಳು. ಅಭ್ಯಾಸದಂತೆ ಮತ್ತೆ ಮತ್ತೆ ಅನುಭವಿಸುವ, ಯಾವುದು ದುಃಖವನ್ನು ಕೊನೆಗೊಳಿಸುತ್ತದೆಯೋ, ಯಾವುದು ಮೊದಲು ವಿಷದಂತಿದ್ದರೂ ಪರಿಣಾಮದಲ್ಲಿ ಅಮೃತೋಪಮವಾಗಿರುವುದೋ ಆ ಆತ್ಮಬುದ್ಧಿಯಿಂದ ಜನಿಸಿದ ಸುಖವನ್ನು ಸಾತ್ತ್ವಿಕವೆನ್ನುವರು. ವಿಷಯೇಂದ್ರಿಯಗಳ ಸಂಯೋಗದಿಂದ ಜನಿಸಿದ, ಮೊದಲು ಅಮೃತೋಪಮವಾಗಿದ್ದುಕೊಂಡು ಪರಿಣಾಮದಲ್ಲಿ ವಿಷದಂತಿರುವ ಸುಖವನ್ನು ರಾಜಸವೆಂದು ಹೇಳುತ್ತಾರೆ. ಯಾವುದು ಮೊದಲೂ ಮತ್ತು ಅನುಭವಿಸಿದ ನಂತರವೂ ಆತ್ಮನನ್ನು ಮೋಹಿತಗೊಳಿಸುವುದೋ ಆ ನಿದ್ರೆ, ಆಲಸ್ಯ ಮತ್ತು ಪ್ರಮೋದಗಳಿಂದ ಜನಿಸುವ ಸುಖವನ್ನು ತಾಮಸವೆಂದು ಉದಾಹರಿಸುತ್ತಾರೆ. ಪೃಥಿವಿಯಲ್ಲಾಗಲೀ,

“ದಿವಿಯಲ್ಲಿಯಾಗಲೀ, ಪುನಃ ದೇವತೆಗಳಲ್ಲಿಯಾಗಲೀ, ಈ ಮೂರು ಪ್ರಕೃತಿಜವಾದ ಗುಣಗಳಿಂದ ಕೂಡಿರದ ಸತ್ತ್ವವು ಯಾವುದೂ ಇಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳನ್ನೂ ಕೂಡ ಸ್ವಭಾವದಿಂದ ಹುಟ್ಟುವ ಗುಣಗಳ ಪ್ರಕಾರ ವಿಂಗಡಿಸಲ್ಪಟ್ಟಿದೆ. ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಆರ್ಜವ, ಜ್ಞಾನ, ವಿಜ್ಞಾನ, ಆಸ್ತಿಕ್ಯ ಇವು ಸ್ವಭಾವಜವಾದ ಬ್ರಹ್ಮಕರ್ಮವು. ಶೌರ್ಯ, ತೇಜಸ್ಸು, ಧೃತು, ದಕ್ಷತೆ, ಯುದ್ಧದಲ್ಲಿ ಪಲಾಯನ ಮಾಡದಿರುವುದು, ದಾನ, ಮತ್ತು ಈಶ್ವರಭಾವಗಳು ಸ್ವಭಾವಜವಾದ ಕ್ಷತ್ರಕರ್ಮವು. ಕೃಷಿ, ಗೋರಕ್ಷಣೆ, ವಾಣಿಜ್ಯ, ಇವು ಸ್ವಭಾವಜವಾದ ವೈಶ್ಯಕರ್ಮಗಳು. ಪರಿಚರ್ಯಾತ್ಮಕ ಕರ್ಮವು ಶೂದ್ರನಿಗೆ ಸ್ವಭಾವಜ. ತನ್ನ ತನ್ನ ಕರ್ಮದಲ್ಲಿ ಅಭಿರತನಾದ ನರನು ಸಂಸಿದ್ಧಿಯನ್ನು ಹೊಂದುತ್ತಾನೆ.

“ಸ್ವಕರ್ಮದಲ್ಲಿ ನಿರತನಾದವನು ಹೇಗೆ ಸಿದ್ಧಿಯನ್ನು ಹೊಂದುತ್ತಾನೆ ಎನ್ನುವುದನ್ನು ಕೇಳು. ಯಾರಿಂದ ಭೂತಗಳ ಪ್ರವೃತ್ತಿಯು ಉಂಟಾಗುವುದೋ, ಯಾರಿಂದಾಗಿ ಇವೆಲ್ಲವೂ ಇವೆಯೋ ಅವನನ್ನು ಸ್ವಕರ್ಮಗಳಿಂದ ಅರ್ಚಿಸಿ ಮಾನವನು ಸಿದ್ಧಿಯನ್ನು ಪಡೆಯುತ್ತಾನೆ. ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತಲೂ ಉತ್ತಮವಾಗಿರದ ಸ್ವಧರ್ಮವೇ ಶ್ರೇಯವಾದುದು. ಸ್ವಭಾವನಿಯತ ಕರ್ಮವನ್ನು ಮಾಡುವವನು ಕಿಲ್ಬಿಷವನ್ನು ಹೊಂದುವುದಿಲ್ಲ. ಸಹಜ ಕರ್ಮವನ್ನು ದೋಷಗಳಿದ್ದರೂ ಬಿಡಬಾರದು. ಏಕೆಂದರೆ ಹೊಗೆಯಿರುವ ಬೆಂಕಿಯ ಹಾಗೆ ಎಲ್ಲ ಕರ್ಮಗಳೂ ದೋಷವನ್ನೊಳಗೊಂಡಿರುತ್ತವೆ. ಎಲ್ಲದರಲ್ಲಿ ಸಂಗವಿಲ್ಲದ ಅಂತಃಕರಣವಿರುವವನು ಜಿತಾತ್ಮನಾಗಿ, ಆಸೆಗಳು ತೊಲಗಿರುವವನು ಸಂನ್ಯಾಸದಿಂದ ಕರ್ಮಗಳನ್ನು ಬಿಟ್ಟ ಪರಮ ಸಿದ್ಧಿಯನ್ನು ಪಡೆಯುತ್ತಾನೆ. ಆ ನೈಷ್ಕರ್ಮಸಿದ್ಧಿಯನ್ನು ಪಡೆದು ಬ್ರಹ್ಮನನ್ನು ಹೇಗೆ ಸೇರುತ್ತಾನೆ ಎನ್ನುವುದನ್ನು ಸಂಕ್ಷಿಪ್ತವಾಗಿ ನನ್ನಿಂದ ತಿಳಿದುಕೋ.

“ಅದು ಜ್ಞಾನದ ಅಂತವು. ವಿಶುದ್ಧ ಬುದ್ಧಿಯುಳ್ಳವನಾಗಿ, ಧೃತಿಯಿಂದ ತನ್ನನ್ನು ನಿಯಮದಲ್ಲಿರಿಸಿಕೊಂಡು, ಶಬ್ದವೇ ಮೊದಲಾದ ವಿಷಯಗಳನ್ನು ತೊರೆದು, ರಾಗ-ದ್ವೇಷಗಳನ್ನು ತಿರಸ್ಕರಿಸಿ, ಏಕಾಂತ ಸ್ಥಳಗಳನ್ನು ಸೇವಿಸುವ, ಅಲ್ಪ ಆಹಾರವನ್ನು ತೆಗೆದುಕೊಳ್ಳುವ ಸ್ವಭಾವವುಳ್ಳ, ಮಾತು-ಕಾಯ-ಮನಸ್ಸುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ಧ್ಯಾನಯೋಗಪರನಾದ, ನಿತ್ಯವೂ ವೈರಾಗ್ಯವನ್ನು ಆಶ್ರಯಿಸಿ, ಅಹಂಕಾರ-ಬಲ-ದರ್ಪ-ಕಾಮ-ಕ್ರೋಧ-ಪರಿಗ್ರಹ ಇವುಗಳನ್ನು ಬಿಟ್ಟು, ನಾನು-ನನ್ನದೆಂಬ ಭಾವನೆಯಿಲ್ಲದವನಾಗಿ ಶಾಂತನಾಗಿರುವವನು ಬ್ರಹ್ಮವೇ ಆಗುವುದಕ್ಕೆ ಸಮರ್ಥನಾಗುತ್ತಾನೆ. ಬ್ರಹ್ಮನಾಗಿ ಪ್ರಸನ್ನಾತ್ಮನಾಗಿರುವವನು ಶೋಕಿಸುವುದಿಲ್ಲ. ಬಯಸುವುದಿಲ್ಲ. ಸರ್ವಭೂತಗಳಲ್ಲಿಯೂ ಸಮನಾಗಿ ನನ್ನ ಮೇಲಿನ ಪರಮ ಭಕ್ತಿಯನ್ನು ಪಡೆದುಕೊಳ್ಳುತ್ತಾನೆ. ಭಕ್ತಿಯಿಂದ ನನ್ನನ್ನು ಯಾರು, ಎಷ್ಟು ಎನ್ನುವುದನ್ನು ತತ್ತ್ವತಃ ತಿಳಿದುಕೊಳ್ಳುತ್ತಾನೆ. ನನ್ನನ್ನು ತತ್ತ್ವತವಾಗಿ ತಿಳಿದುಕೊಂಡು ಅದರ ನಂತರ ನನ್ನನ್ನು ಪ್ರವೇಶಿಸುತ್ತಾನೆ. ಸದಾ ಎಲ್ಲ ಕರ್ಮಗಳನ್ನು ಮಾಡುತ್ತಿದ್ದರೂ ನನ್ನನ್ನು ಉಪಾಶ್ರಯಿಸಿದ ಅವನು ನನ್ನ ಪ್ರಸಾದದಿಂದ ಶಾಶ್ವತ ಅವ್ಯಯ ಪದವನ್ನು ಹೊಂದುತ್ತಾನೆ.

“ಚಿತ್ತದಿಂದ ಎಲ್ಲ ಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ ಮತ್ಪರನಾಗಿರು. ಬುದ್ಧಿಯೋಗವನ್ನವಲಂಬಿಸಿ ಸತತವಾಗಿ ನನ್ನಲ್ಲಿಯೇ ಚಿತ್ತವನ್ನಿಡು. ನನ್ನಲ್ಲಿ ಚಿತ್ತವನ್ನಿರಿಸಿಕೊಂಡಿದ್ದರೆ ಸರ್ವ ಕಷ್ಟಗಳನ್ನೂ ನನ್ನ ಪ್ರಸಾದದಿಂದ ದಾಟುತ್ತೀಯೆ. ಹಾಗೆ ಇಲ್ಲದಿದ್ದರೆ ಅಹಂಕಾರದಿಂದ ಕಳೆದುಹೋದರೆ ನಾಶಹೊಂದುವೆ. ಅಹಂಕಾರವನ್ನು ಆಶ್ರಯಿಸಿ ಯುದ್ಧಮಾಡುವುದಿಲ್ಲ ಎಂದು ತಿಳಿದುಕೊಂಡಿರುವೆಯಾದರೆ ನಿನ್ನ ಈ ವ್ಯವಹಾರವು ಸುಳ್ಳು. ಪ್ರಕೃತಿಯು ನಿನ್ನನ್ನು ಯುದ್ಧಕ್ಕೆ ಕಟ್ಟಿಹಾಕುತ್ತದೆ. ಸ್ವಭಾವಜವಾದ ನಿನ್ನ ಕರ್ಮದಿಂದ ನಿಬದ್ಧನಾಗಿ ಮೋಹದಿಂದ ಯಾವುದನ್ನು ಮಾಡಲು ಬಯಸುತ್ತಿಲ್ಲವೋ ಅದನ್ನು ಅವಶನಾಗಿಯಾದರೂ ಮಾಡುತ್ತೀಯೆ. ಯಂತ್ರಾರೂಢವಾಗಿರುವ ಸರ್ವಭೂತಗಳನ್ನೂ ಮಾಯೆಯಿಂದ ತಿರುಗಿಸುತ್ತಾ ಈಶ್ವರನು ಸರ್ವಭೂತಗಳ ಹೃದಯ ಪ್ರದೇಶದಲ್ಲಿ ನೆಲೆಸಿರುವನು. ಸರ್ವಭಾವದಿಂದ ಅವನನ್ನೇ ಶರಣು ಹೋಗು. ಅವನ ಪ್ರಸಾದದಿಂದ ಪರಮ ಶಾಂತಿಯನ್ನೂ ಶಾಶ್ವತ ಸ್ಥಾನವನ್ನೂ ಪಡೆಯುತ್ತೀಯೆ.

“ಹೀಗೆ ಗುಹ್ಯಕ್ಕಿಂತಲೂ ಗುಹ್ಯವಾಗಿರುವ ಜ್ಞಾನವನ್ನು ನಾನು ಹೇಳಿದ್ದೇನೆ. ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ ನಿನಗೆ ಇಚ್ಛೆಬಂದಹಾಗೆ ಮಾಡು. ಸರ್ವಗುಹ್ಯತಮವಾಗಿರುವ ನನ್ನ ಪರಮ ವಚನವನ್ನು ಇನ್ನೊಮ್ಮೆ ಕೇಳು. ನೀನು ದೃಢವಾಗಿ ಇಷ್ಟನಾಗಿರುವೆ. ಆದುದರಿಂದ ನಿನಗೆ ಹಿತವಾದುದನ್ನು ಹೇಳುತ್ತೇನೆ. ನನ್ನಲ್ಲಿ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ನಮಸ್ಕರಿಸು. ನನ್ನನ್ನೇ ಸೇರುವೆ. ಸತ್ಯವಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ನೀನು ನನಗೆ ಪ್ರಿಯನಾಗಿರುವೆ. ಸರ್ವ ಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನೊಬ್ಬನನ್ನೇ ಶರಣು ಹೊಗು. ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡುಗಡೆಗೊಳಿಸುತ್ತೇನೆ. ಶೋಕಿಸಬೇಡ.

“ನಿನಗೆ ಹೇಳಿದ ಇದನ್ನು ತಪಸ್ಸನ್ನಾಚರಿಸಿರದ, ಭಕ್ತನಾಗಿರದ, ಶುಶ್ರೂಷವನ್ನು ಮಾಡಿರದ, ನನ್ನನ್ನು ಅಸೂಯೆಪಡುವವನಿಗೆ ಎಂದೂ ಹೇಳಬಾರದು. ಯಾರು ಈ ಪರಮ ಗುಹ್ಯವಾದುದನ್ನು ನನ್ನ ಭಕ್ತರಿಗೆ ತಲುಪಿಸುತ್ತಾರೋ ಅವರು ನನ್ನಲ್ಲಿ ಪರಮ ಭಕ್ತಿಯನ್ನು ಮಾಡಿ ನನ್ನನ್ನೇ ಸೇರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಮತ್ತು ಮನುಷ್ಯರಲ್ಲಿ ಅವನಿಗಿಂತಲೂ ಹೆಚ್ಚು ನನಗೆ ಪ್ರಿಯವನ್ನು ಮಾಡುವವನು ಯಾರೂ ಇಲ್ಲ. ಅವನಿಗಿಂತಲೂ ನನಗೆ ಪ್ರಿಯನಾದವನು ಬೇರೆ ಯಾರೂ ಭೂಮಿಯ ಮೇಲೆ ಹುಟ್ಟುವುದೂ ಇಲ್ಲ. ಧರ್ಮಯುಕ್ತವಾದ ನಮ್ಮ ಈ ಸಂವಾದವನ್ನು ಯಾರು ಅಧ್ಯಯನ ಮಾಡುವವನೋ ಅವನು ಜ್ಞಾನಯಜ್ಞದಿಂದ ನನ್ನನ್ನು ಇಷ್ಟಪಡಿಸುತ್ತಾನೆ ಎಂದು ನನ್ನ ಮತಿ. ಶ್ರದ್ಧಾವಂತನೂ ಅಸೂಯಯಿಲ್ಲದವನೂ ಆಗಿ, ಯಾವ ನರನು ಇದನ್ನು ಕೇಳುತ್ತಾನೋ ಅವನು ಮುಕ್ತನಾಗಿ ಪುಣ್ಯಕರ್ಮಿಗಳ ಶುಭ ಲೋಕಗಳನ್ನು ಪಡೆಯುತ್ತಾನೆ. ಏಕಾಗ್ರ ಚಿತ್ತದಿಂದ ನೀನು ಇದನ್ನು ಕೇಳಿದೆ ತಾನೇ? ಧನಂಜಯ! ನಿನ್ನ ಅಜ್ಞಾನ ಸಮ್ಮೋಹಗಳು ಕಳೆದವು ತಾನೇ?”

ಅರ್ಜುನನು ಹೇಳಿದನು:

“ಅಚ್ಯುತ! ಮೋಹವು ನಷ್ಟವಾಯಿತು. ನಿನ್ನ ಪ್ರಸಾದದಿಂದ ನನಗೆ ಸ್ಮೃತಿಯು ದೊರಕಿತು. ಸಂದೇಹಗಳು ಹೊರಟು ಹೋಗಿವೆ. ನೀನು ಹೇಳಿದಂತೆ ಮಾಡುತ್ತೇನೆ.”

ಸಂಜಯನು ಹೇಳಿದನು:

ಹೀಗೆ ನಾನು ವಾಸುದೇವ ಮತ್ತು ಮಹಾತ್ಮ ಪಾರ್ಥರ ಈ ಅದ್ಭುತ, ರೋಮಹರ್ಷಣ ಸಂವಾದವನ್ನು ಕೇಳಿದೆನು. ಈ ಗುಹ್ಯತಮವಾದ ಪರಮ ಯೋಗವನ್ನು ಯೋಗೇಶ್ವರನಾದ ಸ್ವಯಂ ಕೃಷ್ಣನೇ ಹೇಳುವುದನ್ನು ವ್ಯಾಸಪ್ರಸಾದದಿಂದ ಸಾಕ್ಷಾತ್ ಕೇಳಿದೆನು. ರಾಜನ್! ಕೇಶವ-ಅರ್ಜುನರ ಈ ಅದ್ಭುತ ಪುಣ್ಯ ಸಂವಾದವನ್ನು ನೆನೆ ನೆನೆಸಿಕೊಂಡು ಮತ್ತೆ ಮತ್ತೆ ಹರ್ಷಗೊಳ್ಳುತ್ತಿದ್ದೇನೆ. ಮತ್ತು ಆ ಹರಿಯ ಅತ್ಯದ್ಭುತ ರೂಪವನ್ನು ನೆನೆ ನೆನೆದುಕೊಂಡು ನನಗೆ ಮಹಾವಿಸ್ಮಯವಾಗುತ್ತಿದೆ. ರಾಜನ್! ಪುನಃ ಪುನಃ ಹರ್ಷಗೊಳ್ಳುತ್ತಿದ್ದೇನೆ. ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ ಎಲ್ಲಿ ಧನುರ್ಧರ ಪಾರ್ಥನಿರುವನೋ ಅಲ್ಲಿ ಶ್ರೀ, ವಿಜಯ, ಭೂತಿ ಮತ್ತು ಧೃವವಾದ ನೀತಿಗಳಿರುವವು ಎಂದು ನನ್ನ ಮತ.

Related image

2 Comments

  1. ಹರೇಶ್ರೀನಿವಾಸ
    ನಮಸ್ಕಾರ
    ಪುರಾಣಗಳ ಪಿಡಿಎಫ್ ಮೊಬೈಲ್ನಲ್ಲಿ ಡೌನ್ಲೋಡ್ ಹೇಗೆ ಮಾಡುವುದು ತಿಳಿಸಿ

    • ಹರೇ ಶ್ರೀನಿವಾಸ. ನಮಸ್ಕಾರ. ಪುರಾಣಗಳ ಪಿಡಿಎಫ್ ಗಳನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡ್ಲಿಕ್ಕೆ ಆಗುವುದಿಲ್ಲ. ಕೇವಲ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಮಾತ್ರ ಇವನ್ನು ಡೌನ್ ಲೋಡ ಮಾಡಬಹುದು.

Leave a Reply

Your email address will not be published. Required fields are marked *