ಪಿತಾಪುತ್ರಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಕಲ್ಯಾಣವನ್ನು ಬಯಸುವವನು ಏನು ಮಾಡಬೇಕು ಎನ್ನುವುದರ ಕುರಿತು ಮಗನು ತಂದೆಗಿತ್ತ ಈ ಉಪದೇಶವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 169ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಸರ್ವಭೂತಗಳನ್ನೂ ಕ್ಷಯಗೊಳಿಸುವ ಈ ಕಾಲವು ಕಳೆಯುತ್ತಲೇ ಇರುತ್ತದೆ. ಹೀಗಿರುವಾಗ ಮನುಷ್ಯನು ಶ್ರೇಯಸ್ಸಿಗಾಗಿ ಏನನ್ನು ಮಾಡಬಹುದು? ಅದನ್ನು ನನಗೆ ಹೇಳು.”

ಭೀಷ್ಮನು ಹೇಳಿದನು:

“ಇದಕ್ಕೆ ಸಂಬಂಧಿಸಿದಂತೆ ಈ ಒಂದು ಪುರಾತನ ಇತಿಹಾಸವಾದ ತಂದೆ-ಮಗನ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.”

***

ಸ್ವಾಧ್ಯಾಯನಿರತನಾದ ಓರ್ವ ಬ್ರಾಹ್ಮಣನಿದ್ದನು. ಅವನಿಗೆ ಮೇಧಾವೀ ಎಂಬ ಹೆಸರಿನ ಓರ್ವ ಮೇಧಾವೀ ಪುತ್ರನಾದನು. ಮೋಕ್ಷಧರ್ಮಾರ್ಥಗಳಲ್ಲಿ ಕುಶಲನಾಗಿದ್ದ ಮತ್ತು ಲೋಕತತ್ತ್ವಗಳನ್ನು ಅರಿತಿದ್ದ ಆ ಪುತ್ರನು ಸ್ವಾಧ್ಯಾಯದಲ್ಲಿ ನಿರತನಾಗಿದ್ದ ತನ್ನ ತಂದೆಗೆ ಹೇಳಿದನು:

“ಅಪ್ಪಾ! ಮನುಷ್ಯನ ಆಯುಸ್ಸು ತೀವ್ರ ಗತಿಯಲ್ಲಿ ಕಳೆದುಹೋಗುತ್ತಿದೆ. ಇದನ್ನು ತಿಳಿದೂ ಧೀರನಾದವನು ಏನು ಮಾಡಬಲ್ಲನು? ತಂದೆಯೇ! ನನಗೆ ಆ ಉಪಾಯವನ್ನು ಯಥಾರ್ಥವಾಗಿ ಉಪದೇಶಿಸು. ಅದರಂತೆ ನಾನು ಧರ್ಮಾಚರಣೆಯನ್ನು ಮಾಡಬಹುದು.”

ತಂದೆಯು ಹೇಳಿದನು:

“ಪುತ್ರ! ಬ್ರಹ್ಮಚರ್ಯದಲ್ಲಿದ್ದುಕೊಂಡು ವೇದಗಳನ್ನು ಅಧ್ಯಯನ ಮಾಡಿ ಪಿತೃಗಳನ್ನು ಪಾವನಗೊಳಿಸಲು ಪುತ್ರರನ್ನು ಬಯಸಬೇಕು. ವಿಧಿವತ್ತಾಗಿ ಅಗ್ನಿಯನ್ನು ಸ್ಥಾಪಿಸಿ ಯಜ್ಞಗಳನ್ನು ಮಾಡಬೇಕು. ಅನಂತರ ವನವನ್ನು ಪ್ರವೇಶಿಸಿ ಮುನಿಯಾಗಿರಬೇಕು.”

ಮಗನು ಹೇಳಿದನು:

“ಈ ಲೋಕವೇ ಆಕ್ರಮಣಕ್ಕೊಳಗಾಗಿರುವಾಗ, ಎಲ್ಲಕಡೆಗಳಿಂದ ಮುತ್ತಿಗೆಗೆ ಸಿಲುಕಿರುವಾಗ, ಯಶಸ್ವಿಯು ಕಡಿಮೆಯಾಗುತ್ತಿರುವಾಗ ನೀನು ಧೀರನಂತೆ ಎಂಥಹ ಮಾತುಗಳನ್ನಾಡುತ್ತಿರುವೆ!”

ತಂದೆಯು ಹೇಳಿದನು:

“ನನ್ನನ್ನು ಏಕೆ ನೀನು ಹೆದರಿಸುತ್ತಿದ್ದೀಯೆ? ಈ ಲೋಕವು ಯಾರ ಆಕ್ರಮಣಕ್ಕೊಳಪಟ್ಟಿದೆ? ಯಾರು ಇದನ್ನು ಮುತ್ತಿಗೆ ಹಾಕಿದ್ದಾರೆ? ಮತ್ತು ತನ್ನ ಕೆಲಸವನ್ನು ಚೆನ್ನಾಗಿ ಪೂರೈಸಿದ ಯಾರು ತಾನೇ ಕಡಿಮೆಯಾಗುತ್ತಿದ್ದಾರೆ?”

ಮಗನು ಹೇಳಿದನು:

“ಈ ಲೋಕವು ಮೃತ್ಯುವಿನಿಂದ ಆಕ್ರಮಣಿಸಲ್ಪಟ್ಟಿದೆ. ಮುಪ್ಪಿನಿಂದ ಮುತ್ತಲ್ಪಟ್ಟಿದೆ. ಹಗಲು-ರಾತ್ರಿಗಳು ಕಳೆದು ಹೋಗುತ್ತಿವೆ. ಇದನ್ನು ನೀನು ಏಕೆ ಅರಿಯುತ್ತಿಲ್ಲ? ಮೃತ್ಯುವು ಒಂದು ಕ್ಷಣವೂ ನಿಲ್ಲುವುದಿಲ್ಲ ಮತ್ತು ನಾನು ಅದರ ಜಾಲದಲ್ಲಿ ಸಿಲುಕಿಕೊಂಡು ಅಲೆದಾಡುತ್ತಿದ್ದೇನೆ ಎಂದು ತಿಳಿದೂ ನಾನು ಸ್ವಲ್ಪ ಸಮಯವಾದರೂ ಹೇಗೆ ಕಾಯಬಲ್ಲೆನು? ಒಂದೊಂದು ರಾತ್ರಿಯೂ ಕಳೆಯಲು ಅದರೊಂದಿಗೆ ಆಯುಸ್ಸು ಕೂಡ ಕಡಿಮೆಯಾಗುತ್ತಿರುವಾಗ ಕಡಿಮೆಯಾಗುತ್ತಿರುವ ನೀರಿನಲ್ಲಿ ವಾಸಿಸುತ್ತಿರುವ ಮೀನಿನಂತೆ ನಾನು ಹೇಗೆ ತಾನೇ ಸುಖವನ್ನು ಹೊಂದಬಲ್ಲೆನು? ಮಾನವನು ತನ್ನ ಕಾಮಗಳನ್ನು ಪೂರೈಸುವುದರೊಳಗೆ ಮೃತ್ಯುವು ಬಂದುಬಿಡುತ್ತದೆ. ಮೇಯುತ್ತಿದ್ದ ಆಡಿನ ಬಳಿ ಅಕಸ್ಮಾತ್ತಾಗಿ ಹುಲಿಯು ಬಂದು ಅದನ್ನು ದೋಚಿಕೊಂಡು ಹೋಗುವಂತೆ ಮನುಷ್ಯನ ಮನಸ್ಸು ಬೇರೊಂದು ವಿಷಯದಲ್ಲಿ ಮಗ್ನವಾಗಿರುವಾಗ ಒಮ್ಮಿಂದೊಮ್ಮೆಲೇ ಮೃತ್ಯುವು ಬಂದು ಅವನನ್ನು ಎತ್ತಿಕೊಂಡು ಹೋಗಿಬಿಡುತ್ತದೆ. ಆದುದರಿಂದ ಶ್ರೇಯ ಕಾರ್ಯವನ್ನು ಇಂದೇ ಮಾಡು. ಈ ಕಾಲವು ತಪ್ಪಿ ಹೋಗದಿರಲಿ. ಏಕೆಂದರೆ ಮೃತ್ಯುವು ನಿನ್ನನ್ನು ಎಳೆದುಕೊಂಡು ಹೋಗುವಾಗ ಎಲ್ಲ ಕೆಲಸಗಳೂ ಅರ್ಧದಲ್ಲಿಯೇ ನಿಂತುಬಿಡುತ್ತವೆ.

ನಾಳೆ ಮಾಡಬೇಕೆಂದಿದ್ದ ಕಾರ್ಯವನ್ನು ಇಂದೇ ಮಾಡಬೇಕು. ಸಾಯಂಕಾಲ ಮಾಡುತ್ತೇನೆ ಎಂದಿದ್ದ ಕಾರ್ಯವನ್ನು ಬೆಳಿಗ್ಗೆಯೇ ಮಾಡಬೇಕು. ಏಕೆಂದರೆ ಮೃತ್ಯುವು ಯಾರ ಕೆಲಸವು ಮುಗಿದಿದೆ ಮತ್ತು ಯಾರ ಕೆಲಸವು ಮುಗಿದಿಲ್ಲ ಎನ್ನುವುದನ್ನು ನೋಡಿ ಕಾಯುವುದಿಲ್ಲ. ಮೃತ್ಯುವಿನ ಕಾಲವು ಇಂದೇ ಎಂದು ಯಾರಿಗೆ ತಿಳಿದಿರುತ್ತದೆ? ಆದುದರಿಂದ ಯುವಾವಸ್ಥೆಯಲ್ಲಿಯೇ ಎಲ್ಲರಿಗೂ ಧರ್ಮಾಚರಣೆಯನ್ನು ಮಾಡಬೇಕು. ಏಕೆಂದರೆ ನಿಸ್ಸಂದೇಹವಾಗಿ ಜೀವನವು ಅನಿತ್ಯವು. ಧರ್ಮಾಚರಣೆಯಿಂದ ಈ ಲೋಕದಲ್ಲಿ ಮನುಷ್ಯನ ಕೀರ್ತಿಯು ವಿಸ್ತಾರವಾಗುತ್ತದೆ ಮತ್ತು ಪರಲೋಕದಲ್ಲಿಯೂ ಅವನಿಗೆ ಸುಖವು ದೊರೆಯುತ್ತದೆ. ಮೋಹದಿಂದ ಸಮಾವಿಷ್ಟನಾದವನು ಪುತ್ರ-ಪತ್ನಿಯರಿಗಾಗಿ ಉದ್ಯೋಗಶೀಲನಾಗುತ್ತಾನೆ ಮತ್ತು ಮಾಡಬೇಕಾದುದನ್ನು ಮತ್ತು ಮಾಡಬಾರದುದನ್ನು ಮಾಡಿ ಅವರ ಪಾಲನ-ಪೋಷಣೆಗೆ ಪ್ರಯತ್ನಿಸುತ್ತಾನೆ. ಮಲಗಿದ್ದ ಪ್ರಾಣಿಯನ್ನು ಹುಲಿಯು ಎತ್ತಿಕೊಂಡು ಹೋಗುವಂತೆ ಪುತ್ರ-ಪಶುಸಂಪನ್ನನಾಗಿದ್ದ ಮತ್ತು ಅವರಲ್ಲಿಯೇ ಮನಸ್ಸಿನ ಆಸಕ್ತಿಯನ್ನಿಟ್ಟುಕೊಂಡಿದ್ದವನನ್ನು ಒಂದು ದಿನ ಮೃತ್ಯುವು ಎತ್ತಿಕೊಂಡು ಹೋಗಿಬಿಡುತ್ತದೆ. ಹುಲಿಯು ಪಶುವನ್ನು ಹೇಗೋ ಹಾಗೆ ಮೃತ್ಯುವು ಕೇವಲ ಸಂಗ್ರಹಿಸುವುದರಲ್ಲಿಯೇ ತೊಡಗಿರುವ ಮತ್ತು ಕಾಮನೆಗಳ ತೃಪ್ತಿಯಿಲ್ಲದವನನ್ನು ಎತ್ತಿಕೊಂಡು ಹೋಗುತ್ತದೆ. ಇದನ್ನು ಮಾಡಿಯಾಯಿತು, ಇದನ್ನು ಇನ್ನೂ ಮಾಡಬೇಕು ಮತ್ತು ಇದು ಅರ್ಧದಲ್ಲಿಯೇ ನಿಂತುಹೋಯಿತು ಇವೇ ಮೊದಲಾಗಿ ಈಹಾಸುಖಾಸಕ್ತನಾದವನ್ನು ಕೃತಾಂತ ಕಾಲನು ವಶಮಾಡಿಕೊಳ್ಳುತ್ತಾನೆ. ಮನುಷ್ಯನು ತನ್ನ ಹೊಲ, ಅಂಗಡಿ ಮತ್ತು ಮನೆಗಳಲ್ಲಿಯೇ ಸಿಲುಕಿಕೊಂಡಿರುತ್ತಾನೆ ಮತ್ತು ತನ್ನ ಕರ್ಮಗಳ ಫಲವು ದೊರಕುವ ಮೊದಲೇ ಆ ಕರ್ಮಾಸಕ್ತನನ್ನು ಮೃತ್ಯುವು ಎತ್ತಿಕೊಂಡು ಹೋಗುತ್ತದೆ. ಈ ಶರೀರದ ಮೇಲೆ ಮೃತ್ಯು, ಮುಪ್ಪು, ವ್ಯಾಧಿ ಮತ್ತು ಅನೇಕ ಕಾರಣಗಳಿಂದುಂಟಾಗುವ ದುಃಖ ಇವುಗಳ ಆಕ್ರಮಣವು ನಡೆಯುತ್ತಿರುವಾಗ ನೀನು ಹೇಗೆ ತಾನೇ ಸ್ವಸ್ಥನಾಗಿ ಕುಳಿತುಕೊಳ್ಳಬಹುದು?

ದೇಹಧಾರೀ ಜೀವವು ಜನ್ಮವೆತ್ತುತ್ತಲೇ ಅಂತ್ಯಗೊಳಿಸಲು ಮೃತ್ಯು ಮತ್ತು ಮುಪ್ಪುಗಳು ಅದರ ಹಿಂದೆ ಬಿದ್ದಿರುತ್ತವೆ. ಈ ಸಮಸ್ತ ಸ್ಥಾವರ-ಜಂಗಮಗಳೂ ಇವೆರಡರಿಂದ ಬಂಧಿಸಲ್ಪಟ್ಟಿವೆ. ಗ್ರಾಮ-ನಗರಗಳಲ್ಲಿದ್ದುಕೊಂಡು ಮನೆಯಲ್ಲಿ ಪತ್ನೀ-ಪುತ್ರರಲ್ಲಿ ಆಸಕ್ತನಾಗಿರುವುದೇ ಮೃತ್ಯುವು. ವನದಲ್ಲಿರುವವನು ಈ ಇಂದ್ರಿಯರೂಪೀ ಗೋವುಗಳನ್ನು ಕಟ್ಟಲಿರುವ ಗೂಟದಂತೆ ಎಂದು ಶ್ರುತಿಗಳು ಹೇಳುತ್ತವೆ. ಗ್ರಾಮ-ನಗರದಲ್ಲಿ ಇರುವುದರಿಂದ ಅಲ್ಲಿಯ ಪತ್ನಿ-ಪುತ್ರ ಮೊದಲಾದ ವಿಷಯಗಳಲ್ಲಿ ಇರುವ ಆಸಕ್ತಿಯೇ ಜೀವನನ್ನು ಬಂಧಿಸುವ ಹಗ್ಗವು. ಪುಣ್ಯಾತ್ಮನೇ ಇದನ್ನು ತುಂಡರಿಸಿ ಬಿಡುಗಡೆಹೊಂದಬಲ್ಲನು. ಪಾಪಿಗಳಿಗೆ ಇದನ್ನು ತುಂಡರಿಸಲು ಸಾಧ್ಯವಾಗುವುದಿಲ್ಲ. ಮನಸ್ಸು, ಮಾತು ಮತ್ತು ಶರೀರಗಳಿಂದ ಯಾರು ಪ್ರಾಣಿಗಳನ್ನು ಹಿಂಸಿಸುವುದಿಲ್ಲವೋ ಅವನ ಜೀವಿತಾರ್ಥ ಕರ್ಮಗಳು ಅವನನ್ನು ಬಂಧಿಸುವುದಿಲ್ಲ. ಸತ್ಯವಂತನಲ್ಲದೇ ಬೇರೆ ಯಾವ ಮನುಷ್ಯನೂ ಎದುರಾಗಿ ಬರುವ ಮೃತ್ಯುಸೇನೆಯನನ್ನು ಎದುರಿಸಲಾರನು. ಆದುದರಿಂದ ಅಸತ್ಯವನ್ನು ತ್ಯಜಿಸಬೇಕು. ಅಮೃತತ್ವವು ಸತ್ಯದಲ್ಲಿಯೇ ಸ್ಥಿತವಾಗಿದೆ. ಆದುದರಿಂದ ಸತ್ಯವ್ರತವನ್ನು ಆಚರಿಸಬೇಕು. ಸತ್ಯಯೋಗಪರಾಯಣನಾಗಿರಬೇಕು. ಸತ್ಯದಲ್ಲಿಯೇ ರಮಿಸಬೇಕು. ಸಮನಾಗಿರುವ, ದಾಂತನಾಗಿರುವ ಮತ್ತು ಸತ್ಯವಂತನಾಗಿರುವವನು ಅಂತಕನನ್ನು ಜಯಿಸಬಲ್ಲನು. ಅಮೃತ ಮತ್ತು ಮೃತ್ಯು ಇವೆರಡೂ ಈ ದೇಹದಲ್ಲಿಯೇ ನೆಲೆಸಿವೆ. ಮೋಹದಿಂದ ಮೃತ್ಯುವನ್ನು ಮತ್ತು ಸತ್ಯದಿಂದ ಅಮೃತವನ್ನು ಪಡೆದುಕೊಳ್ಳುತ್ತೇವೆ[1].

ಆದುದರಿಂದ ಈಗ ನಾನು ಹಿಂಸೆಯನ್ನು ತೊರೆದು ಸತ್ಯಾರ್ಥಿಯಾಗುತ್ತೇನೆ. ಕ್ರಾಮಕ್ರೋಧಗಳನ್ನು ಹೊರಗೆ ಹಾಕಿ ದುಃಖ ಮತ್ತು ಸುಖಗಳಲ್ಲಿ ಸಮಾನ ಭಾವವನ್ನು ತಾಳುತ್ತೇನೆ. ಎಲ್ಲರೊಂದಿಗೂ ಕಲ್ಯಾಣಕರನಾಗಿದ್ದುಕೊಂಡು ದೇವತೆಗಳಂತೆ ಮೃತ್ಯುಭಯದಿಂದ ಮುಕ್ತನಾಗುತ್ತೇನೆ. ನಾನು ನಿವೃತ್ತಿಪರನಾಗಿ ಶಾಂತಿಮಯ ಯಜ್ಞದಲ್ಲಿ ತೊಡಗುತ್ತೇನೆ. ಇಂದ್ರಿಯಗಳು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಬ್ರಹ್ಮಯಜ್ಞದಲ್ಲಿ ತೊಡಗುತ್ತೇನೆ. ಉತ್ತರಾಯಣ ಮಾರ್ಗದಲ್ಲಿ ಹೋಗಲು ನಾನು ಜಪ ಮತ್ತು ಸ್ವಾಧ್ಯಾಯರೂಪೀ ವಾಗ್ಯಜ್ಞ, ಧ್ಯಾನರೂಪೀ ಮನೋಯಜ್ಞ ಮತ್ತು ಅಗ್ನಿಹೋತ್ರವೇ ಮೊದಲಾದ ಗುರುಶುಶ್ರೂಷಾದಿರೂಪೀ ಕರ್ಮಯಜ್ಞವನ್ನು ಅನುಷ್ಠಾನಮಾಡುತ್ತೇನೆ. ನನ್ನಂತಹ ಪ್ರಾಜ್ಞನು ಹಿಂಸಾಯುಕ್ತವಾದ ಪಶುಯಜ್ಞ ಮತ್ತು ಪಿಶಾಚಿಯಂತೆ ತನ್ನ ರಕ್ತ-ಮಾಂಸದಿಂದಲೇ ಮಾಡುವ ಕ್ಷತ್ರಯಜ್ಞವನ್ನು ಹೇಗೆ ತಾನೇ ಮಾಡಬಲ್ಲನು?

ಯಾರ ಮಾತು ಮತ್ತು ಮನಸ್ಸುಗಳು ಸರಿಯಾದ ಏಕಾಗ್ರತೆಯಲ್ಲಿರುವವೋ ಮತ್ತು ಯಾರು ತ್ಯಾಗ, ತಪಸ್ಸು ಮತ್ತು ಸತ್ಯಸಂಪನ್ನರಾಗಿರುವರೋ ಅವರು ನಿಶ್ಚಯವಾಗಿಯೂ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ವಿದ್ಯೆಗೆ ಸಮನಾದ ಕಣ್ಣಿಲ್ಲ; ವಿದ್ಯೆಗೆ ಸಮನಾದ ಬಲವಿಲ್ಲ. ಬಯಕೆಯ ಸಮನಾದ ದುಃಖವಿಲ್ಲ ಮತ್ತು ತ್ಯಾಗಕ್ಕೆ ಸಮನಾದ ಸುಖವಿಲ್ಲ. ನಾನು ಸಂತಾನರಹಿತನಾದರೂ ಪರಮಾತ್ಮನಲ್ಲಿಯೇ ಪರಮಾತ್ಮನಿಂದ ಉತ್ಪನ್ನನಾಗಿದ್ದೇನೆ. ಪರಮಾತ್ಮನಲ್ಲಿಯೇ ಸ್ಥಿತನಾಗಿದ್ದೇನೆ. ಮುಂದೆಯೂ ಕೂಡ ಆತ್ಮನಲ್ಲಿಯೇ ಲೀನನಾಗುತ್ತೇನೆ. ಸಂತಾನವು ನನ್ನನ್ನು ಪಾರುಮಾಡುವುದಿಲ್ಲ. ಪರಮಾತ್ಮನೊಂದಿಗೆ ಏಕತೆ ಮತ್ತು ಸಮತೆ, ಸತ್ಯಭಾಷೆ, ಸದಾಚಾರ, ಬ್ರಹ್ಮನಿಷ್ಠೆ, ಅಹಿಂಸೆ, ಸರಳತೆ ಮತ್ತು ಎಲ್ಲ ರೀತಿಯ ಸಕಾಮ ಕರ್ಮಗಳಿಂದ ನಿವೃತ್ತಿ – ಇವುಗಳಂಥಹ ಬೇರೆ ಯಾವ ಧನವೂ ಬ್ರಾಹ್ಮಣನಲ್ಲಿರುವುದಿಲ್ಲ. ಬ್ರಾಹ್ಮಣ ತಂದೆಯೇ! ನೀನು ಒಂದಲ್ಲ ಒಂದು ದಿನ ಸತ್ತುಹೋಗುತ್ತೀಯಾದುದುದರಿಂದ ಈ ಧನದ ಪ್ರಯೋಜನವಾದರೂ ಏನು ಅಥವಾ ಬಂಧು-ಬಾಂಧವರೊಂದಿಗೆ ನಿನಗಿರುವ ಕೆಲಸವಾದರೂ ಏನು ಮತ್ತು ಪತ್ನೀ-ಪುತ್ರರಿಂದ ನಿನಗೆ ದೊರೆಯುವ ಲಾಭವಾದರೂ ಏನು? ನಿನ್ನ ಹೃದಯರೂಪೀ ಗುಹೆಯಲ್ಲಿರುವ ಪರಮಾತ್ಮನನ್ನು ಹುಡುಕು. ನಿನ್ನ ಪಿತ-ಪಿತಾಮಹರು ಎಲ್ಲಿ ಹೋದರು ಎನ್ನುವುದನ್ನಾದರೂ ಯೋಚಿಸು!””

***

ಭೀಷ್ಮನು ಹೇಳಿದನು:

“ನೃಪ! ಮಗನ ಆ ಮಾತನ್ನು ಕೇಳಿ ತಂದೆಯು ಹೇಗೆ ಸತ್ಯಧರ್ಮದ ಪಾಲನೆಯಲ್ಲಿ ನಿರತನಾಗಿದ್ದನೋ ಹಾಗೆ ನೀನೂ ಕೂಡ ಸತ್ಯಧರ್ಮನಿರತನಾಗಿರು.”

 

[1] ಪ್ರಮಾದವೇ ಮೃತ್ಯುವೆಂದೂ ಅಪ್ರಮಾದವೇ ಅಮೃತತ್ವವೆಂದೂ ಸನತ್ಸುಜಾತನ ಪ್ರತಿಪಾದನೆಯಿದೆ: ಪ್ರಮಾದಂ ವೈ ಮೃತ್ಯುಮಹಂ ಬ್ರವೀಮಿ| ಸದಾಪ್ರಮಾದಮಮೃತತ್ವಂ ಬ್ರವೀಮಿ|| (ಉದ್ಯೋಗ ಪರ್ವ, ಸನತ್ಸುಜಾತ ಪರ್ವ, ಅಧ್ಯಾಯ ೪೨).