ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು

ವಿರಾಟ ಸಭೆಯಲ್ಲಿ ಪಾಂಡವ ಪಕ್ಷದವರ ಸಮಾಲೋಚನೆ; ಕೃಷ್ಣನಿಂದ ವಿಷಯ ಪ್ರಸ್ತಾವನೆ

ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು. ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು. ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ ರಾಜರೀರ್ವರು, ಮತ್ತು ತಂದೆಯೊಂದಿಗೆ ಬಲರಾಮ ಜನಾರ್ದನರಿಬ್ಬರೂ ಕುಳಿತಿದ್ದರು. ಪಾಂಚಾಲನ ಸಮೀಪದಲ್ಲಿ ಶಿನಿಪ್ರವೀರನು ರೌಹಿಣೀಯನ ಸಹಿತಲೂ, ಮತ್ಸ್ಯರಾಜನ ಹತ್ತಿರ ಜನಾರ್ದನನೂ, ಯುಧಿಷ್ಠಿರನೂ, ರಾಜ ದ್ರುಪದನ ಎಲ್ಲ ಮಕ್ಕಳೂ, ಭೀಮಾರ್ಜುನರೂ, ಮಾದ್ರಿಯ ಮಕ್ಕಳೀರ್ವರೂ, ಯುದ್ಧಪ್ರವೀರ ಪ್ರದ್ಯುಮ್ನ-ಸಾಂಬರೂ, ವಿರಾಟಪುತ್ರರೊಂದಿಗೆ ಅಭಿಮನ್ಯುವೂ ಕುಳಿತಿದ್ದರು. ವೀರ್ಯ ರೂಪ ಬಲಗಳಲ್ಲಿ ತಂದೆಯಂದಿರ ಸಮಾನರಾಗಿದ್ದ ಶೂರರಾದ ಎಲ್ಲ ದ್ರೌಪದೇಯ ಕುಮಾರರೂ ಬಣ್ಣಬಣ್ಣದ ಸುವರ್ಣಖಚಿತ ಶ್ರೇಷ್ಠ ಆಸನಗಳಲ್ಲಿ ಕುಳಿತಿದ್ದರು. ವಸ್ತ್ರಭೂಷಣಗಳಿಂದ ವಿಭ್ರಾಜಮಾನರಾಗಿ ಅಲ್ಲಿ ಕುಳಿತಿದ್ದ ಮಹಾರಥಿಗಳಿಂದ ಸಮೃದ್ಧ ಆ ರಾಜಸಭೆಯು ವಿಮಲ ಆಕಾಶದಲ್ಲಿ ಕಾಣುವ ಗ್ರಹಗಳಂತೆ ತೋರುತ್ತಿತ್ತು. ಆಗ ಪರಸ್ಪರರಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಿ ಆ ಪುರುಷಪ್ರವೀರರು ಒಂದು ಕ್ಷಣ ಪರಿಚಿಂತಿಸುತ್ತಾ ಕೃಷ್ಣನನ್ನೇ ನೋಡುತ್ತಾ ಸುಮ್ಮನಾದರು. ಅವರ ಮಾತುಗಳ ಕೊನೆಯಲ್ಲಿ ಮಾಧವನು ಪಾಂಡವರ ವಿಷಯದ ಕುರಿತು ಅವರ ಮನಸ್ಸನ್ನು ಸೆಳೆದನು. ಆ ರಾಜಸಿಂಹರು ಒಟ್ಟಿಗೇ ಅವನ ಮಹಾರ್ಥವುಳ್ಳ ಮಹೋದಯಕಾರಕ ವಾಕ್ಯಗಳನ್ನು ಕೇಳಿದರು.

ಕೃಷ್ಣನು ಹೇಳಿದನು: “ಸೌಬಲನಿಂದ ದಾಳದಾಟದಲ್ಲಿ ಗೆಲ್ಲಲ್ಪಟ್ಟು ಮೋಸದಿಂದ ಹೇಗೆ ಯುಧಿಷ್ಠಿರನ ರಾಜ್ಯವು ಅಪಹರಿಸಲ್ಪಟ್ಟಿತು ಮತ್ತು ನಂತರದ ಒಪ್ಪಂದದಂತೆ ಅವರು ಹೊರಗೆ ವಾಸಿಸಿದ್ದುದನ್ನೂ ನೀವೆಲ್ಲರೂ ಚೆನ್ನಾಗಿ ತಿಳಿದಿದ್ದೀರಿ. ಕ್ಷಣದಲ್ಲಿಯೇ ಮಹಿಯನ್ನು ಗೆಲ್ಲಲು ಶಕ್ತರಾಗಿದ್ದರೂ ಸತ್ಯದಲ್ಲಿ ಸ್ಥಿತರಾದ ಭಾರತಾಗ್ರ ಪಾಂಡುಸುತರು ಯಥಾವತ್ತಾಗಿ ನಡೆದುಕೊಂಡು ಹದಿಮೂರು ವರ್ಷಗಳ ಆ ಉಗ್ರರೂಪೀ ವ್ರತವನ್ನು ಪೂರೈಸಿದ್ದಾರೆ. ಸುದುಸ್ತರವಾಗಿದ್ದ ಈ ಹದಿಮೂರನೆಯ ವರ್ಷವನ್ನೂ ಕೂಡ ನಿಮ್ಮ ಸಮೀಪದಲ್ಲಿಯೇ ಯಾರಿಗೂ ತಿಳಿಯದಂತೆ ಎಲ್ಲ ರೀತಿಯ ಕ್ಲೇಶಗಳನ್ನು ಸಹಿಸಿಕೊಂಡು ಹೇಗೆ ಕಳೆದರು ಎನ್ನುವುದೂ ನಿಮಗೆಲ್ಲರಿಗೆ ತಿಳಿದಿದೆ. ಹೀಗಿರಲು ರಾಜ ಧರ್ಮಸುತನಿಗೂ ದುರ್ಯೋಧನನಿಗೂ ಇಬ್ಬರಿಗೂ ಒಳ್ಳೆಯದಾಗುವ ಹಾಗೆ ಕುರುಪಾಂಡವರಿಗೆ ಧರ್ಮವೂ, ಯುಕ್ತವೂ, ಯಶಸ್ಕರವೂ ಆದುದು ಏನು ಎಂದು ಯೋಚಿಸಬೇಕಾಗಿದೆ. ಧರ್ಮರಾಜನು ಸುರರ ರಾಜ್ಯವೇ ಆದರೂ ಅಧರ್ಮಯುಕ್ತವಾದುದನ್ನು ಬಯಸುವುದಿಲ್ಲ. ಆದರೆ ಒಂದೇ ಗ್ರಾಮದ ಒಡೆತನವನ್ನಾದರೂ, ಅದು ಧರ್ಮಾರ್ಥಯುಕ್ತವಾಗಿದ್ದರೆ, ಅವನು ಸ್ವೀಕರಿಸುತ್ತಾನೆ. ಧೃತರಾಷ್ಟ್ರನ ಮಕ್ಕಳು ಇವನ ಪಿತ್ರಾರ್ಜಿತ ರಾಜ್ಯವನ್ನು ಹೇಗೆ ಸುಳ್ಳುಕೆಲಸವನ್ನು ಮಾಡಿ ಅಪಹರಿಸಿದರು ಮತ್ತು ಇವನು ಹೇಗೆ ಸಹಿಸಲಸಾಧ್ಯ ಮಹಾ ಕಷ್ಟಗಳನ್ನು ಅನುಭವಿಸಿದನು ಎನ್ನುವುದು ನೃಪರೆಲ್ಲರಿಗೂ ತಿಳಿದೇ ಇದೆ. ಧೃತರಾಷ್ಟ್ರನ ಮಕ್ಕಳಿಗೆ ತಮ್ಮದೇ ಬಲದಿಂದ ಪಾರ್ಥನನ್ನು ರಣದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಕೂಡ ಹಿತೈಷಿಗಳೊಂದಿಗೆ ರಾಜನು ಅವರಿಗೆ ಒಳ್ಳೆಯದಾಗುವುದರ ಹೊರತಾಗಿ ಏನನ್ನೂ ಬಯಸುವುದಿಲ್ಲ. ಸ್ವಪ್ರಯತ್ನದಿಂದ ಭೂಮಿಪತಿಗಳನ್ನು ಸೋಲಿಸಿ ಗೆದ್ದು ಒಟ್ಟುಗೂಡಿಸಿದುದನ್ನೇ ಈ ಪುರುಷಪ್ರವೀರ, ಪಾಂಡುಸುತರೂ, ಕುಂತೀಸುತರೂ, ಮಾದ್ರವತೀಸುತರೀರ್ವರೂ ಕೇಳುತ್ತಿದ್ದಾರೆ. ಇವರು ಬಾಲಕರಾಗಿರುವಾಗ ಕೂಡ ಇವರ ಅ ಅಮಿತ್ರರು ಹೇಗೆ ರಾಜ್ಯವನ್ನು ತಮ್ಮದನ್ನಾಗಿಯೇ ಮಾಡಿಕೊಳ್ಳಲು ವಿವಿಧ ಉಪಾಯಗಳಿಂದ ಇವರನ್ನು ಕೊಲ್ಲಲು ಪ್ರಯತ್ನಿಸಿದರು ಎನ್ನುವುದನ್ನು ಯಥಾವತ್ತಾಗಿ ನೀವೆಲ್ಲರೂ ತಿಳಿದಿದ್ದೀರಿ. ಬೆಳೆದಿರುವ ಅವರ ಲೋಭವನ್ನು ಮತ್ತು ಯುಧಿಷ್ಠಿರನ ಧರ್ಮಾತ್ಮತೆಯನ್ನೂ ನೋಡಿ, ಅವರೀರ್ವರ ನಡುವೆಯಿರುವ ಸಂಬಂಧವನ್ನೂ ನೋಡಿ ನೀವೆಲ್ಲರೂ ಒಂದಾಗಿ ಮತ್ತು ಪ್ರತ್ಯೇಕವಾಗಿ ವಿಚಾರಮಾಡಬೇಕು. ಸದಾ ಸತ್ಯನಿರತರಾಗಿರುವ ಇವರು ಆ ಒಪ್ಪಂದವನ್ನು ಯಥಾವತ್ತಾಗಿ ಪಾಲಿಸಿದ್ದಾರೆ. ಈಗ ಧೃತರಾಷ್ಟ್ರ ಪುತ್ರರು ಅವರೊಂದಿಗೆ ಅನ್ಯಥಾ ನಡೆದುಕೊಂಡರೆ ಅವರನ್ನು ಅವರ ಬೆಂಬಲಿಗರೊಂದಿಗೆ ಇವರು ಕೊಲ್ಲುತ್ತಾರೆ. ಈಗ ರಾಜನಿಂದ ಇವರಿಗೆ ತಪ್ಪು ನಡೆಯಿತೆಂದರೆ ಇವರನ್ನು ಸುತ್ತುವರೆದಿರುವ ಸ್ನೇಹಿತರಿದ್ದಾರೆ. ಯುದ್ಧದಲ್ಲಿ ತಾವು ಸತ್ತರೂ ಅವರ ಶತ್ರುಗಳೊಂದಿಗೆ ಹೋರಾಡುವವರು ಅವರಿಗೆ ಈಗ ಇದ್ದಾರೆ. ಅಂಥವರು ಸ್ವಲ್ಪವೇ ಮಂದಿ ಇದ್ದು ಇವರಿಗೆ ಜಯವನ್ನು ಪಡೆಯುವ ಸಮರ್ಥರಿಲ್ಲರೆಂದು ನೀವು ತಿಳಿದರೂ ಕೂಡ ಇವರ ಸುಹೃದಯಿಗಳಾದ ಎಲ್ಲರೂ ಸೇರಿ ಒಟ್ಟಿಗೇ ಅವರ ವಿನಾಶಕ್ಕೆ ಯತ್ನಿಸಬಹುದು. ದುರ್ಯೋಧನ ವಿಚಾರವೇನು ಮತ್ತು ಅವನು ಏನು ಮಾಡುವವನಿದ್ದಾನೆ ಎನ್ನುವುದು ನಮಗೆ ತಿಳಿದಿಲ್ಲ. ಇನ್ನೊಂದು ಪಕ್ಷದವರ ವಿಚಾರವೇನೆಂದು ತಿಳಿಯದೇ ನಾವಾದರೂ ಮಾಡಬೇಕಾದುದರಲ್ಲಿ ಒಳ್ಳೆಯದು ಏನು ಎಂದು ಹೇಗೆ ತಾನೇ ನಿರ್ಧರಿಸಬಹುದು? ಆದುದರಿಂದ ಅವರ ಕಡೆ ಯುಧಿಷ್ಠಿರನ ಅರ್ಧರಾಜ್ಯವನ್ನು ನೀಡಬೇಕೆಂದು ಸಮರ್ಥ ದೂತನನ್ನು – ಧರ್ಮಶೀಲ, ಶುಚಿ, ಕುಲೀನ, ಅಪ್ರಮತ್ತ – ಪುರುಷನನ್ನು ಕಳುಹಿಸಬೇಕು.”

ಜನಾರ್ದನನ ಆ ಮಧುರ, ಸಮ, ಧರ್ಮಾರ್ಥಯುಕ್ತ ಮಾತನ್ನು ಕೇಳಿ ಅವನ ಅಣ್ಣನು ಅವನ ಮತವನ್ನು ಗೌರವಿಸಿ ಈ ಮಾತುಗಳನ್ನಾಡಿದನು: “ನೀವೆಲ್ಲರೂ ಗದನ ಅಣ್ಣನ ಧರ್ಮಾರ್ಥವತ್ತಾದ ಅಜಾತಶತ್ರುವಿಗೂ ಹಿತವಾಗುವಂತಹ ಮತ್ತು ರಾಜಾ ದುರ್ಯೋಧನನಿಗೂ ಹಿತವಾಗುವಂತಹ ಮಾತುಗಳನ್ನು ಕೇಳಿದಿರಿ. ಕುಂತಿಯ ವೀರ ಮಕ್ಕಳು ಅರ್ಧ ರಾಜ್ಯವನ್ನೂ ಬಿಡಲು ಸಿದ್ಧರಿದ್ದಾರೆ. ಧೃತರಾಷ್ಟ್ರ ಪುತ್ರನು ಅವರಿಗೆ ಅರ್ಧವನ್ನು ಕೊಟ್ಟು ನಮ್ಮೊಂದಿಗೆ ಸುಖಿಗಳಾಗಿ ಮೋದದಿಂದಿರಬಹುದು. ರಾಜ್ಯವನ್ನು ಪಡೆದು ಈ ಪುರುಷಪ್ರವೀರರು, ವಿರುದ್ಧ ಪಕ್ಷದವರು ಸರಿಯಾಗಿ ನಡೆದುಕೊಂಡಿದ್ದಾರೆಂದರೆ, ಪ್ರಶಾಂತರಾಗಿ ಸುಖದಿಂದಿರುವುದು ನಿಶ್ಚಯ. ಅವರು ಶಾಂತರಾಗಿರುವುದು ಪ್ರಜೆಗಳಿಗೆ ಹಿತವೇ ಸರಿ. ದುರ್ಯೋಧನನ ಮತವನ್ನು ತಿಳಿಯಲು ಮತ್ತು ಯುಧಿಷ್ಠಿರನ ಮಾತುಗಳನ್ನು ಹೇಳಲು ಕುರುಪಾಂಡವರ ಹಿತವನ್ನು ಬಯಸುವ ಯಾರಾದರನ್ನು ಅಲ್ಲಿಗೆ ಕಳುಹಿಸುವುದು ನನಗೂ ಸರಿಯೆನಿಸುತ್ತದೆ. ಅವನು ಕುರುಪ್ರವೀರ ಭೀಷ್ಮ, ಮಹಾನುಭಾವ ವೈಚಿತ್ರವೀರ್ಯ, ಮಗನೊಂದಿಗೆ ದ್ರೋಣ, ವಿದುರ, ಕೃಪ, ಗಾಂಧಾರರಾಜನೊಂದಿಗೆ ಸೂತಪುತ್ರ, ಇತರ ಎಲ್ಲ ಧೃತರಾಷ್ಟ್ರನ ಮಕ್ಕಳು, ಸೇನಾಧಿಪತಿಗಳು, ಕೋಶಾಧಿಕಾರಿಗಳು, ಧರ್ಮದಲ್ಲಿ ಮತ್ತು ಸ್ವಕರ್ಮಗಳಲ್ಲಿ ನಿರತ ಲೋಕಪ್ರವೀರರೂ, ಕಾಲವನ್ನು ತಿಳಿದ ವೃದ್ಧರೂ ಮತ್ತು ಅಲ್ಲಿ ಸೇರಿರುವ ಎಲ್ಲರಿಗೂ ಕೈಮುಗಿದು ಗೌರವದಿಂದ ಸಂಬೋಧಿಸಿ ಕುಂತೀಸುತನಿಗೆ ಬೇಕಾಗುವ ಮಾತುಗಳನ್ನು ವಿನಯದಿಂದ ಹೇಳಬೇಕು. ಯಾವುದೇ ಸಂದರ್ಭದಲ್ಲಿಯೂ ಅವನು ಚುಚ್ಚುಮಾತುಗಳನ್ನಾಡದಿರಲಿ. ಯಾಕೆಂದರೆ ಅವರು ಬಲವನ್ನೇ ಆಶ್ರಯಿಸಿ ಸಂಪತ್ತನ್ನು ಹಿಡಿದಿಟ್ಟುಕೊಂಡಿದ್ದಾರೆ. ಯುಧಿಷ್ಠಿರನಿಗೆ ಅಭ್ಯುದಯವಾಗಿ ಸುಖವಿದ್ದಾಗ ಅವನು ಪ್ರಮತ್ತನಾಗಿ ದ್ಯೂತದಲ್ಲಿ ರಾಜ್ಯವನ್ನು ಕಳೆದುಕೊಂಡ. ಈ ಆಜಮೀಢನು ಕುರುಪ್ರವೀರರು ಮತ್ತು ಎಲ್ಲ ಸುಹೃದಯಿಗಳು ಬೇಡವೆಂದರೂ ಆಟ ಗೊತ್ತಿಲ್ಲದಿದ್ದರೂ ಜೂಜನ್ನು ತಿಳಿದಿದ್ದ ಗಾಂಧಾರರಾಜನ ಮಗನೊಂದಿಗೆ ಪಗಡೆಯಾಟದ ಜೂಜಿನಲ್ಲಿ ಪಣವಿಟ್ಟಿದ್ದ. ಅಲ್ಲಿ ಸೋಲಿಸಬಹುದಾದ ಸಹಸ್ರಾರು ಇತರರಿದ್ದರು. ಆದರೆ ಯುಧಿಷ್ಠಿರನು ಅವರೆಲ್ಲರನ್ನು ಬಿಟ್ಟು ಸೌಬಲನನ್ನೇ ಆರಿಸಿ ಅಹ್ವಾನಿಸಿ ಅವನೊಂದಿಗೆ ಜೂಜಾಡಿ ಸೋತನು. ಆಟವು ಸದಾ ಅವನ ವಿರುದ್ಧ ಹೋಗುತಿದ್ದರೂ ಅವನನ್ನೇ ತನ್ನ ಪ್ರತಿಸ್ಪರ್ಧಿಯನ್ನಾಗಿ ಮುಂದುವರಿಸಿದನು. ಆಟದಲ್ಲಿ ಅವನಿಂದ ಸರಿಯಾಗಿಯೇ ಗೆಲ್ಲಲ್ಪಟ್ಟಿದ್ದಾನೆ. ಇದರಲ್ಲಿ ಶಕುನಿಯ ಅಪರಾದವೇನೂ ಇಲ್ಲ. ಆದುದರಿಂದ ಪ್ರೀತಿಯಲ್ಲಿ ಮಾತನಾಡಿ ವೈಚಿತ್ರವೀರ್ಯನ ಮನವೊಲಿಸಲಿ. ಇದರಿಂದ ಧೃತರಾಷ್ಟ್ರಪುತ್ರನ ಉದ್ದೇಶವೇನೆಂದು ತಿಳಿದುಕೊಳ್ಳಬಹುದು. ಪೌರುಷದಿಂದ ಸಾದ್ಯವಿಲ್ಲ.”

ಮಧುಪ್ರವೀರನು ಹೀಗೆ ಹೇಳಲು ಶಿನಿಪ್ರವೀರನು ಒಮ್ಮೆಲೇ ಎದ್ದು ಅವನ ಮಾತುಗಳನ್ನು ನಿಂದಿಸುತ್ತಾ ಕೋಪದಿಂದ ಈ ಮಾತುಗಳನ್ನಾಡಿದನು: “ಪುರುಷನು ತಾನು ಹೇಗಿದ್ದಾನೋ ಹಾಗೆಯೇ ಮಾತನ್ನಾಡುತ್ತಾನೆ. ನಿನ್ನ ಅಂತರಾತ್ಮವು ಹೇಗಿದೆಯೋ ಹಾಗೆಯೇ ನೀನು ಮಾತನಾಡುತ್ತಿರುವೆ. ಶೂರ ಪುರುಷರಿದ್ದಂತೆ ಕಾಪುರುಷರೂ ಇರುತ್ತಾರೆ. ಸರಿಯಾಗಿ ತೋರಿಸಿಕೊಳ್ಳುವ ಈ ಎರಡು ದೃಢ ಪಂಗಡಗಳಲ್ಲಿ ಪುರುಷರನ್ನು ವಿಂಗಡಿಸಬಹುದು. ಒಂದೇ ಮರದಲ್ಲಿ ಫಲಬರದೇ ಇರುವ ಮತ್ತು ಫಲಬಂದಿರುವ ಶಾಖೆಗಳಿರುವಂತೆ ಒಂದೇ ಕುಲದಲ್ಲಿ ದುರ್ಬಲ ಮತ್ತು ಮಹಾರಥರಿಬ್ಬರೂ ಹುಟ್ಟಬಹುದು. ಲಾಂಗಲಧ್ವಜ! ನೀನು ಹೇಳಿದ ಮಾತನ್ನು ನಾನು ಟೀಕಿಸುತ್ತಿಲ್ಲ. ಆದರೆ ನಿನ್ನ ಮಾತನ್ನು ಕೇಳುತ್ತಿರುವವರನ್ನು ಟೀಕಿಸುತ್ತಿದ್ದೇನೆ. ಈ ಪರಿಷತ್ತಿನ ಮಧ್ಯದಲ್ಲಿ ಧರ್ಮರಾಜನಲ್ಲಿ ಸ್ವಲ್ಪವಾದರೂ ದೋಷವಿದೆಯೆಂದು ಸ್ವಲ್ಪವೂ ಅನುಮಾನಪಡದೇ ಹೇಳುವುದಕ್ಕೆ ಹೇಗೆ ಅನುಮತಿಯನ್ನು ನೀಡುತ್ತಿದ್ದೇವೆ? ಅಕ್ಷಕೋವಿದರು ಅಕ್ಷವನ್ನು ಅರಿಯದ ಈ ಮಹಾತ್ಮನನ್ನು ಕರೆದು ನಂಬಿಸಿ ಸೋಲಿಸಿದರು. ಹಾಗಿರುವಾಗ ಅದು ಎಲ್ಲಿಯ ಧರ್ಮಜಯವೆನಿಸಿಕೊಳ್ಳುತ್ತದೆ? ಒಂದುವೇಳೆ ಕುಂತೀಸುತನು ಮನೆಯಲ್ಲಿ ಸಹೋದರರೊಡನೆ ಆಡುತ್ತಿರುವಾಗ ಅವರು ಬಂದು ಅವನನ್ನು ಗೆದ್ದಿದ್ದೇ ಆಗಿದ್ದರೆ ಅದು ಧರ್ಮಜಯವಾಗುತ್ತಿತ್ತು. ಆದರೆ ಅವರು ಸದಾ ಕ್ಷತ್ರಧರ್ಮರತನಾದ ರಾಜನನ್ನು ಕರೆದು ಮೋಸದಿಂದ ಅವನನ್ನು ಗೆದ್ದರು. ಹೀಗಿರುವಾಗ ಅವರಲ್ಲಿ ಅಂಥಹ ಪರಮ ಶುಭವಾದದ್ದು ಏನಿದೆ? ಪಣದಂತೆ ಸಂಪೂರ್ಣವಾಗಿ ವನವಾಸವನ್ನು ಪೂರೈಸಿ ಪಿತ್ರಾರ್ಜಿತ ರಾಜ್ಯವನ್ನು ಕೇಳುವಾಗ ಏಕೆ ಕೈಮುಗಿಯಬೇಕು? ಒಂದುವೇಳೆ ಯುಧಿಷ್ಠಿರನು ಪರರ ಸಂಪತ್ತನ್ನು ಬಯಸಿದರೆ ಅವನು ಬೇಡುವುದು ಸರಿಯಲ್ಲ. ಕೌಂತೇಯರು ವನವಾಸವನ್ನು ಮುಗಿಸಿದರೂ ಅವರನ್ನು ಕಂಡುಹಿಡಿದಿದ್ದೇವೆ ಎಂದು ಹೇಳುವ ಅವರು ರಾಜ್ಯವನ್ನು ತಮ್ಮದಾಗಿಟ್ಟುಕೊಳ್ಳುವ ಆಸೆಯಲ್ಲಿಲ್ಲ ಮತ್ತು ಧರ್ಮಯುಕ್ತರಾಗಿದ್ದಾರೆ ಎಂದು ಹೇಗೆ ಹೇಳಬಹುದು? ಭೀಷ್ಮ ಮತ್ತು ಮಹಾತ್ಮ ದ್ರೋಣರು ಅವರನ್ನು ಕರೆತಂದಿದ್ದರು. ಆದರೆ ಪಿತ್ರಾರ್ಜಿತ ಸಂಪತ್ತನ್ನು ಪಾಂಡವರಿಗೆ ಕೊಡಲು ಅವರು ಸಿದ್ಧರಿಲ್ಲ. ನಾನಾದರೋ ಅವರನ್ನು ರಣದಿದ ಬಲಾತ್ಕಾರವಾಗಿ ಹರಿತ ಬಾಣಗಳಿಂದ ಕರೆತಂದು ಮಹಾತ್ಮ ಕೌಂತೇಯನ ಪಾದಗಳಲ್ಲಿ ಕೆಡವಿಸುತ್ತೇನೆ. ಒಂದುವೇಳೆ ಅವರು ಧೀಮತನ ಕಾಲುಗಳಿಗೆ ಬೀಳದಿದ್ದರೆ ಅಮಾತ್ಯರೊಂದಿಗೆ ಯಮನ ಸದನಕ್ಕೆ ಹೋಗುತ್ತಾರೆ. ಪರ್ವತಗಳು ವಜ್ರವನ್ನು ಹೇಗೆ ಸಹಿಸಲಾರವೋ ಹಾಗೆ ಅವರು ಈ ಕುಪಿತ ಯುದ್ಧೋತ್ಸಾಹಿ ಯುಯುಧಾನನ ವೇಗವನ್ನು ಎದುರಿಸಲು ಸಾಧ್ಯವಿಲ್ಲ. ಯುದ್ಧದಲ್ಲಿ ಯಾರುತಾನೇ ಗಾಂಡೀವವನ್ನು ಹಿಡಿದವನನ್ನು, ಯಾರು ತಾನೇ ಚಕ್ರಾಯುಧವನ್ನು ಹಿಡಿದವನನ್ನು, ಹೋರಾಡುತ್ತಿರುವ ನನ್ನನ್ನು ಮತ್ತು ದುರಾಸದ ಭೀಮನನ್ನು ತಡೆದುಕೊಳ್ಳಬಲ್ಲರು? ಜೀವವನ್ನು ಬಯಸುವ ಯಾರುತಾನೇ ಯಮಕಲ್ಪ ಮಹಾದ್ಯುತೀ ಅವಳಿಗರನ್ನು, ಪಾರ್ಷತ ಧೃಷ್ಟದ್ಯುಮ್ನನನ್ನು, ಪಾಂಡವರ ಸಮಪ್ರಮಾಣ-ಸಮವೀರರಾದ, ದ್ರೌಪದಿಯ ಕೀರ್ತಿವರ್ಧಕ, ಮದೋತ್ಕಟ ಪಂಚ ಪಾಂಡವೇಯರನ್ನು, ಅಮರರಿಗೂ ದುಃಸಹನಾಗಿರುವ ಮಹೇಷ್ವಾಸ ಸೌಭದ್ರಿಯನ್ನು, ಕಾಲ ಮತ್ತು ವಜ್ರರ ಸಮನಾಗಿರುವ ಗದ, ಪ್ರದ್ಯುಮ್ನ ಮತ್ತು ಸಾಂಬರನ್ನು ಎದುರಿಸಿಯಾರು? ಶಕುನಿ ಕರ್ಣರೊಂದಿಗೆ ಆ ಧೃತರಾಷ್ಟ್ರನ ಮಗನನ್ನು ಕೊಂದು ನಾವು ಪಾಂಡವನನ್ನು ಅಭಿಷೇಕಿಸೋಣ! ನಮ್ಮನ್ನು ತುಳಿಯುವ ಶತ್ರುಗಳನ್ನು ಹನನ ಮಾಡುವುದು ಎಂದೂ ಅಧರ್ಮವೆನಿಸಿಕೊಳ್ಳುವುದಿಲ್ಲ. ಆದರೆ ಶತ್ರುಗಳ ಎದುರಿಗೆ ಭಿಕ್ಷುಕರಾಗುವುದು ಅಧರ್ಮವೂ ಅಯಶಸ್ಕರವೂ ಎನಿಸಿಕೊಳ್ಳುತ್ತದೆ. ಪಾಂಡವನು ಹೃದಯದಲ್ಲಿ ಏನನ್ನು ಬಯಸುತ್ತಾನೋ ಅದನ್ನು ಮಾಡೋಣ. ಅವನು ಧೃತರಾಷ್ಟ್ರನು ಕೊಟ್ಟ ರಾಜ್ಯವನ್ನು ಪಡೆಯಲಿ. ಇಂದು ಪಾಂಡುಸುತ ಯುಧಿಷ್ಠಿರನು ರಾಜ್ಯವನ್ನು ಪಡೆಯಬೇಕು ಅಥವಾ ಎಲ್ಲರೂ ರಣದಲ್ಲಿ ನಿಹತರಾಗಿ ನೆಲಕ್ಕುರುಳಬೇಕು!”

ದ್ರುಪದನು ಹೇಳಿದನು: “ಮಹಾಬಾಹೋ! ನೀನು ಹೇಳಿದಂತೆಯೇ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ದುರ್ಯೋಧನನು ಒಳ್ಳೆಯ ಮಾತುಗಳಿಗೆ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ. ಮಗನ ಮೇಲಿನ ಪ್ರೀತಿಯಿಂದ ಧೃತರಾಷ್ಟ್ರ, ಕಾರ್ಪಣ್ಯತೆಯಿಂದ ಭೀಷ್ಮ-ದ್ರೋಣರು ಮತ್ತು ಮೂರ್ಖತನದಿಂದ ರಾಧೇಯ-ಸೌಬಲರು ಅವನನ್ನೇ ಅನುಸರಿಸುತ್ತಾರೆ. ಬಲದೇವನ ಮಾತಾದರೋ ನನ್ನ ಜ್ಞಾನಕ್ಕೆ ಸಿಲುಕುವುದಿಲ್ಲ. ಅವನು ಹೇಳಿದುದನ್ನು ಸುನಯರಾಗಿರಲು ಬಯಸುವ ಪುರುಷರ ಮುಂದೆ ಮಾಡಬೇಕು. ಆದರೆ ಧಾರ್ತರಾಷ್ಟ್ರನನ್ನು ಮೃದುವಾದ ವಚನಗಳಲ್ಲಿ ಎಂದೂ ಮಾತನಾಡಿಸಬಾರದು. ಪಾಪಬುದ್ಧಿಯ ಅವನನ್ನು ನಯಮಾತುಗಳಿಂದ ಬದಲಾಯಿಸುವುದು ಅಸಾಧ್ಯ ಎಂದು ನನಗನ್ನಿಸುತ್ತದೆ. ಕತ್ತೆಗಳೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಬೇಕು. ಗೋವುಗಳೊಂದಿಗೆ ತೀಕ್ಷ್ಣವಾಗಿ ನಡೆದುಕೊಳ್ಳಬೇಕು. ಒಂದುವೇಳೆ ದುರ್ಯೋಧನನೊಡನೆ ಮೃದುವಾಗಿ ಮಾತನಾಡಿದರೆ ಆ ಪಾಪಿ ಪಾಪಚೇತಸಿಯು ಮೃದುವಾಗಿ ಮಾತನಾಡುವವನು ಅಶಕ್ತನೆಂದು ತಿಳಿದುಕೊಳ್ಳುತ್ತಾನೆ. ಮೃದುವಾಗಿ ನಡೆದುಕೊಂಡರೆ ಆ ಮೂಢನು ತಾನೇ ಗೆದ್ದೆನೆಂದು ತಿಳಿದುಕೊಂಡುಬಿಡುತ್ತಾನೆ. ನಾವು ಇದನ್ನೂ ಮಾಡೋಣ; ತಯಾರಿಯನ್ನೂ ಮಾಡೋಣ! ನಮ್ಮ ಮಿತ್ರರಲ್ಲಿ ಪ್ರಸ್ತಾವಿಸಿ ಸೇನೆಯನ್ನು ಒಟ್ಟುಗೂಡಿಸೋಣ! ಶೀಘ್ರವಾಗಿ ಹೋಗಬಲ್ಲ ದೂತರನ್ನು ಶಲ್ಯ, ದೃಷ್ಟಕೇತು, ಜಯತ್ಸೇನ, ಮತ್ತು ಕೇಕಯ ರಾಜರೆಲ್ಲರ ಬಳಿ ಕಳುಹಿಸೋಣ. ದುರ್ಯೋಧನನೂ ಕೂಡ ಎಲ್ಲೆಡೆ ದೂತರನ್ನು ಕಳುಹಿಸುತ್ತಾನೆ. ಆದರೆ ಒಳ್ಳೆಯವರು ಮೊದಲು ಬಂದು ಕೇಳಿಕೊಂಡವರ ಕಡೆ ಹೋಗುತ್ತಾರೆ. ಆದುದರಿಂದ ಅವಸರ ಮಾಡಿ ಮೊದಲೇ ನರೇಂದ್ರರನ್ನು ಕೇಳಿಕೊಳ್ಳೋಣ. ಮಹಾಕಾರ್ಯವೊಂದು ಕಾಯುತ್ತಿದೆ ಎಂದು ನನಗನ್ನಿಸುತ್ತಿದೆ. ಶೀಘ್ರದಲ್ಲಿಯೇ ಶಲ್ಯ ಮತ್ತು ಅವನ ಅನುಯಾಯಿ ನೃಪರಿಗೆ, ಪೂರ್ವಸಾಗರದಲ್ಲಿ ವಾಸಿಸುವ ಅಮಿತೌಜಸ ರಾಜ ಭಗದತ್ತನಿಗೆ, ಉಗ್ರ ಹಾರ್ದಿಕ್ಯ ಮತ್ತು ಆಹುಕರಿಗೆ, ದೀರ್ಘಪ್ರಜ್ಞ, ಮಲ್ಲ, ವಿಭೂ ರೋಚಮಾನನಿಗೆ ಹೇಳಿ ಕಳುಹಿಸೋಣ. ಇವರೆಲ್ಲರನ್ನೂ ಕರೆಸೋಣ: ಬೃಹಂತ, ಪಾರ್ಥಿವ ಸೇನಾಬಿಂದು, ಪಾಪಚಿತ್, ಪ್ರತಿವಿಂಧ್ಯ, ಚಿತ್ರವರ್ಮ, ಸುವಾಸ್ತುಕ, ಬಾಹ್ಲೀಕ, ಚೈದ್ಯಾಧಿಪತಿ ಮುಂಜಕೇಶ, ಸುಪಾರ್ಶ್ವ, ಸುಬಾಹು, ಮಹಾರಥಿ ಪೌರವ, ಶಕರ, ಪಹ್ಲರ, ದರದರ ನೃಪರು, ಕಾಂಬೋಜಾ, ಋಷಿಕಾ, ಪಶ್ಚಿಮ ಅನೂಪಕಾ, ಜಯತ್ಸೇನ, ಕಾಶಿ, ಮತ್ತು ಪಂಚನದಾ ನೃಪರು, ಜಾನಕಿ, ಸುಶರ್ಮ, ಮಣಿಮಾನ್, ಪೌತಿಪತ್ಸಕ, ಪಾಂಸುರಾಷ್ಟ್ರಾಧಿಪ, ವೀರ್ಯವಾನ್ ದೃಷ್ಟಕೇತು, ಔಡ್ರ, ದಂಡಧಾರ, ವೀರ್ಯವಾನ್ ಬೃಹತ್ಸೇನ, ಅಪರಾಜಿತ, ನಿಷಾದ, ಶ್ರೇನಿಮತ್, ವಸುಮತ್, ಮಹೌಜಸ ಬೃಹದ್ಬಲ, ಪರಪುರಂಜಯ ಬಾಹು, ಪುತ್ರರೊಂದಿಗೆ ವೀರ್ಯವಾನ ರಾಜ ಸಮುದ್ರಸೇನ, ಅದಾರಿ, ನದೀಜ, ರಾಜ ಕರ್ಣವೇಷ್ಟ, ಸಮರ್ಥ, ಸುವೀರ, ಮಾರ್ಜಾರ, ಕನ್ಯಕ, ಮಹಾವೀರ ಕದ್ರು, ನಿಕರಸ್ತುಮುಲ, ಕ್ರಥ, ವೀರಧರ್ಮ ನೀಲ, ವೀರ್ಯವಾನ್ ಭೂಮಿಪಾಲ, ದುರ್ಜಯ ದಂತವಕ್ತ್ರ, ರುಕ್ಮಿ, ಜನಮೇಜಯ, ಆಷಾಢ, ವಾಯುವೇಗ, ಪಾರ್ಥಿವ ಪೂರ್ವಪಾಲೀ, ಭೂರಿತೇಜ ದೇವಕ, ಅವನ ಮಗ ಏಕಲವ್ಯ, ರಾಜ ಕಾರೂಷಕ, ವೀರ್ಯವಾನ ಕ್ಷೇಮಧೂರ್ತಿ, ಉದ್ಭವ, ಕ್ಷೇಮಕ, ಪಾರ್ಥಿವ ವಾಟದಾನ, ಶ್ರುತಾಯು, ದೃಢಾಯು, ವೀರ್ಯವಾನ್ ಶಾಲ್ವಪುತ್ರ, ಕಲಿಂಗರ ರಾಜ ಯುದ್ಧ ಧುರ್ಮದ ಕುಮಾರ. ಇವರೆಲ್ಲರಿಗೂ ಶೀಘ್ರದಲ್ಲಿ ಹೇಳಿಕಳುಹಿಸಬೇಕೆಂದು ನನ್ನ ಬದ್ಧಿಗೆ ಹೊಳೆಯುತ್ತದೆ. ರಾಜನ್! ನನ್ನ ಈ ಪುರೋಹಿತ ಬ್ರಾಹ್ಮಣನನ್ನು ಶೀಘ್ರದಲ್ಲಿಯೇ ಧೃತರಾಷ್ಟ್ರನಲ್ಲಿಗೆ ಕಳುಹಿಸೋಣ. ದುರ್ಯೋಧನನಿಗೆ ಏನು ಹೇಳಬೇಕೆನ್ನುವುದನ್ನೂ, ಶಾಂತನವ, ನೃಪ ಧೃತರಾಷ್ಟ್ರ ಮತ್ತು ವಿದುಷರಲ್ಲಿ ಶ್ರೇಷ್ಠ ದ್ರೋಣನಿಗೆ ಏನು ಹೇಳಬೇಕೆನ್ನುವುದನ್ನೂ ಅವನಿಗೆ ತಿಳಿಸಿಕೊಡು.”

ವಾಸುದೇವನು ಹೇಳಿದನು: “ಸೋಮಕರ ಧುರಂಧರ! ರಾಜರಿಗೆ ತಕ್ಕುದಾದ ಮಾತಿದು. ಮಹೌಜಸ ಪಾಂಡವನ ಅರ್ಥಸಿದ್ಧಿಕರವಾದುದು. ಸುನೀತಮಾರ್ಗವನ್ನು ಬಯಸುವವರಿಗೆ ಇದೇ ಮೊದಲು ಮಾಡಬೇಕಾದ ಕಾರ್ಯ. ಅನ್ಯಥಾ ನಡೆದುಕೊಳ್ಳುವ ಮತ್ತು ಮಾಡುವ ಪುರುಷನು ಬಾಲಿಶನೇ ಸರಿ. ಅವರು ಪಾಂಡವರೊಂದಿಗೆ ವರ್ತಮಾನದಲ್ಲಿ ಹೇಗೆ ನಡೆದುಕೊಂಡರೂ ಕುರು ಮತ್ತು ಪಾಂಡವರೊಂದಿಗೆ ನಮ್ಮ ಸಂಬಂಧವು ಸಮನಾದುದು.  ನಿನ್ನಂತೆ ನಾವೆಲ್ಲರೂ ಇಲ್ಲಿಗೆ ವಿವಾಹಾರ್ಥವಾಗಿ ಆಹ್ವಾನಿತರಾಗಿ ಬಂದಿದ್ದೇವೆ. ವಿವಾಹವು ಮುಗಿದು ಸಂತೋಷಗೊಂಡು ಮನೆಗಳಿಗೆ ಹೋಗೋಣ. ನೀನಾದರೋ ವಯಸ್ಸಿನಲ್ಲಿ ಮತ್ತು ತಿಳುವಳಿಕೆಯಲ್ಲಿ ರಾಜರಲ್ಲೆಲ್ಲಾ ಹಿರಿಯವನು. ಆದುದರಿಂದ ಇಲ್ಲಿರುವ ನಾವೆಲ್ಲರೂ ನಿನ್ನ ಶಿಷ್ಯರಂತೆ ಎನ್ನುವುದರಲ್ಲಿ ಸಂಶಯವಿಲ್ಲ. ಧೃತರಾಷ್ಟ್ರನು ನಿನ್ನನ್ನು ಸತತವಾಗಿ ಬಹಳಷ್ಟು ಗೌರವಿಸುತ್ತಾನೆ. ಆಚಾರ್ಯ ದ್ರೋಣ ಮತ್ತು ಕೃಪರ ಗೆಳೆಯನೂ ಆಗಿರುವೆ. ಆದುದರಿಂದ ಇಂದು ಪಾಂಡವಾರ್ಥವಾಗಿ ಸಂದೇಶವನ್ನು ಅವರಿಗೆ ಕಳುಹಿಸಬೇಕೆಂದು ನಾನು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ. ನೀನು ಸಂದೇಶವನ್ನು ಕಳುಹಿಸಬೇಕೆಂದು ನಮ್ಮೆಲ್ಲರ ನಿರ್ಧಾರ. ಒಂದುವೇಳೆ ಕುರುಪುಂಗವರು ನ್ಯಾಯದಿಂದ ಶಾಂತಿಗಾಗಿ ನಡೆದುಕೊಂಡರೆ ಕುರು-ಪಾಂಡವರ ನಡುವಿನ ಸೌಭ್ರಾತೃತ್ವವು ಮಹಾ ಕ್ಷಯವನ್ನು ಹೊಂದುವುದಿಲ್ಲ. ಇಲ್ಲವಾದರೆ ಆ ಮಂದಬುದ್ಧಿ ಮೂಢ ದುರ್ಯೋಧನನನು ಅಮಾತ್ಯ-ಬಾಂಧವರೊಡನೆ ಕೃದ್ಧ ಗಾಂಡೀವಧನುಸ್ಸಿನಿಂದ ಕೊನೆಯನ್ನು ಕಾಣುತ್ತಾನೆ.”

ಅನಂತರ ರಾಜ ವಿರಾಟನು ವಾರ್ಷ್ಣೇಯನನ್ನು ಸತ್ಕರಿಸಿ ಅವನ ಗಣ ಬಾಂಧವರೊಡನೆ ಮನೆಗಳಿಗೆ ಕಳುಹಿಸಿಕೊಟ್ಟನು. ಕೃಷ್ಣನು ದ್ವಾರಕೆಗೆ ಹೋದ ನಂತರ ಯುಧಿಷ್ಠಿರನು ತನ್ನ ಅನುಯಾಯಿಗಳೊಂದಿಗೆ ಮತ್ತು ರಾಜ ವಿರಾಟನೊಂದಿಗೆ ಯುದ್ಧದ ಎಲ್ಲ ತಯಾರಿಗಳನ್ನೂ ನಡೆಸಿದನು. ಅನಂತರ ವಿರಾಟನು ಎಲ್ಲ ಭೂಮಿಪಾಲರನ್ನೂ ಮಹೀಪತಿ ದ್ರುಪದನನ್ನೂ ಬಾಂಧವರೊಂದಿಗೆ ಕಳುಹಿಸಿಕೊಟ್ಟನು. ಕುರುಸಿಂಹರ ಮತ್ತು ಮತ್ಸ್ಯ-ಪಾಂಚಾಲರ ಮಾತಿನಂತೆ ಸಂತೋಷಗೊಂಡು ಮಹಾಬಲ ಮಹೀಪಾಲರು ಬಂದು ಸೇರಿದರು. ಪಾಂಡುಪುತ್ರರು ಮಹಾಬಲವನ್ನು ಒಟ್ಟುಗೂಡಿಸಿದ್ದಾರೆ ಎಂದು ಕೇಳಿದ ಧೃತರಾಷ್ಟ್ರಪುತ್ರನೂ ಕೂಡ ಮಹೀಪತಿಗಳನ್ನು ಒಟ್ಟುಗೂಡಿಸಿದನು. ಆಗ ಕುರು-ಪಾಂಡವರ ಕಾರಣದಿಂದ ಪ್ರಯಾಣಿಸುತ್ತಿದ್ದ ಮಹೀಕ್ಷಿತರಿಂದ ಇಡೀ ಭೂಮಿಯು ತುಂಬಿಹೋಯಿತು. ಎಲ್ಲೆಡೆಯಿಂದ ಬರುತ್ತಿರುವ ಆ ವೀರರ ನಡುಗೆಯಿಂದ ಪರ್ವತ ವನಗಳಿಂದ ಕೂಡಿದ ಇಡೀ ಭೂಮಿದೇವಿಯು ನಡುಗುತ್ತಿರುವಂತೆ ತೋರಿತು.

ಅರ್ಜುನನು ಕೃಷ್ಣನನ್ನು ಸಾರಥಿಯನ್ನಾಗಿ ಆರಿಸಿಕೊಂಡಿದುದು

ಮಾಧವ ಕೃಷ್ಣ ಮತ್ತು ಬಲದೇವರು ನೂರಾರು ವೃಷ್ಣಿ, ಅಂಧಕ, ಮತ್ತು ಭೋಜರೆಲ್ಲರೊಡನೆ ದ್ವಾರವತಿಗೆ ಹೋಗಲು, ರಾಜಾ ಧೃತರಾಷ್ಟ್ರನ ಮಗನು, ಕಳುಹಿಸಿದ ಹಿತೈಷಿ ದೂತರ ಮೂಲಕ ಪಾಂಡವರು ನಡೆಸಿದ್ದ ಎಲ್ಲದರ ಕುರಿತು ವಿಷಯಗಳನ್ನು ಸಂಗ್ರಹಿಸಿಕೊಂಡನು. ಮಾಧವನು ಬರುತ್ತಿದ್ದಾನೆಂದು ಕೇಳಿದ ಅವನು ವಾಯುವೇಗದ ಉತ್ತಮ ಕುದುರೆಗಳನ್ನೇರಿ ಅತಿ ದೊಡ್ಡದಲ್ಲದ ದಂಡಿನೊಂದಿಗೆ ದ್ವಾರಕಾಪುರಿಗೆ ಬಂದನು. ಅದೇ ದಿವಸ ಕೌಂತೇಯ ಪಾಂಡುನಂದನ ಧನಂಜಯನೂ ಕೂಡ ರಮ್ಯ ಆನರ್ತನಗರಿಗೆ ಬಂದನು. ದ್ವಾರಕೆಗೆ ಬಂದ ಆ ಪುರುಷವ್ಯಾಘ್ರ ಕುರುನಂದನರಿಬ್ಬರೂ ಕೃಷ್ಣನು ಮಲಗಿಕೊಂಡಿದ್ದುದನ್ನು ನೋಡಿ ಮಲಗಿರುವವನ ಬಳಿಸಾರಿದರು. ಗೋವಿಂದನು ಮಲಗಿರುವಲ್ಲಿ ಸುಯೋಧನನು ಪ್ರವೇಶಿಸಿದನು ಮತ್ತು ಕೃಷ್ಣನ ಮಂಚದ ತಲೆಯ ಹತ್ತಿರದ ವರಾಸನದಲ್ಲಿ ಕುಳಿತುಕೊಂಡನು. ಅವನ ನಂತರ ಮಹಾಮನಸ್ವಿ ಕಿರೀಟಿಯು ಪ್ರವೇಶಿಸಿದನು ಮತ್ತು ಕೃಷ್ಣನ ಮಂಚದ ಕೊನೆಯಲ್ಲಿ ಕೈಮುಗಿದು ತಲೆಬಾಗಿ ನಿಂತುಕೊಂಡನು. ಆ ವಾರ್ಷ್ಣೇಯನು ಎಚ್ಚೆತ್ತಾಗ ಮೊದಲು ಕಿರೀಟಿಯನ್ನು ಕಂಡನು. ಅವನನ್ನು ಸ್ವಾಗತಿಸಿ ಯಥಾರ್ಹವಾಗಿ ಪ್ರತಿಪೂಜಿಸಿ ಮಧುಸೂದನನು ಅವನ ಆಗಮನದ ಕಾರಣವನ್ನು ಕೇಳಿದನು. ಆಗ ದುರ್ಯೋಧನನು ನಗುತ್ತಾ ಕೃಷ್ಣನಿಗೆ ಹೇಳಿದನು: “ಈ ಯುದ್ಧದಲ್ಲಿ ನೀನು ನನಗೆ ಸಹಾಯವನ್ನು ನೀಡಬೇಕು. ನನ್ನಲ್ಲಿ ಮತ್ತು ಅರ್ಜುನನನಲ್ಲಿ ನಿನ್ನ ಸಖ್ಯವು ಸಮನಾಗಿದೆ. ಮಾಧವ! ಹಾಗೆಯೇ ನೀನು ನಮ್ಮಿಬ್ಬರೊಡನೆ ಒಂದೇ ರೀತಿಯ ಸಂಬಂಧಿಕನೂ ಹೌದು. ಇಂದು ನಾನು ನಿನ್ನಲ್ಲಿಗೆ ಮೊದಲು ಬಂದವನು. ಸಂತರು ಮೊದಲು ಬಂದವರಲ್ಲಿ ಬಂದ ಕಾರಣವನ್ನು ಕೇಳುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವುದು. ನೀನಾದರೋ ಲೋಕದಲ್ಲಿರುವ ಸಂತರಲ್ಲಿಯೇ ಶ್ರೇಷ್ಠನೆನಿಸಿಕೊಂಡವನು! ಸತತವೂ ಸಮ್ಮತನಾಗಿರುವೆ. ಆದುದರಿಂದ ಒಳ್ಳೆಯ ನಡತೆಯನ್ನು ಅನುಸರಿಸು.”

ಕೃಷ್ಣನು ಹೇಳಿದನು: “ರಾಜನ್! ನೀನು ಮೊದಲು ಬಂದಿರುವೆ ಎನ್ನುವುದರಲ್ಲಿ ನಾನು ಸಂಶಯಪಡುವುದಿಲ್ಲ. ಆದರೆ ನನಗೆ ಮೊದಲು ಕಂಡವನು ಪಾರ್ಥ ಧನಂಜಯ. ಮೊದಲು ಬಂದಿರುವುದರಿಂದ ನಿನಗೆ ಮತ್ತು ಮೊದಲು ದರ್ಶನವಾದುದರಿಂದ ಇವನಿಗೆ ಇಬ್ಬರಿಗೂ ನಾನು ಸಹಾಯವನ್ನು ಮಾಡುತ್ತೇನೆ. ಆದರೆ ಮೊದಲ ಆಯ್ಕೆಯನ್ನು ಕಿರಿಯವರಿಗೆ ಕೊಡಬೇಕೆಂದು ಶ್ರುತಿಯು ಹೇಳುತ್ತದೆ. ಆದುದರಿಂದ ಪಾರ್ಥ ಧನಂಜಯನು ಮೊದಲ ಆಯ್ಕೆಗೆ ಅರ್ಹ. ಯುದ್ಧದಲ್ಲಿ ನನ್ನ ಸರಿಸಮರಾಗಿರುವ ಹತ್ತು ಕೋಟಿ ಎಲ್ಲ ಸಂಗ್ರಾಮಯೋಧರ ನಾರಾಯಣ ಎಂದು ಖ್ಯಾತವಾದ ಗೋಪರ ಸೇನೆಯಿದೆ. ಯುದ್ಧದಲ್ಲಿ ದುರಾಧರ್ಷ ಈ ಸೇನೆಯನ್ನು ನಿಮ್ಮಲ್ಲಿ ಒಬ್ಬನಿಗೆ ಮತ್ತು ಯುದ್ಧಮಾಡದೇ ಇರುವ, ಸಂಗ್ರಾಮದಲ್ಲಿ ನಿಃಶಸ್ತ್ರನಾಗಿರುವ ನಾನೊಬ್ಬನು ಇನ್ನೊಬ್ಬನಿಗೆ. ಪಾರ್ಥ! ಇವೆರಡರಲ್ಲಿ ನಿನ್ನ ಹೃದಯಕ್ಕೆ ಯಾವುದು ಬೇಕೆನಿಸುತ್ತದೆಯೋ ಅದನ್ನು ಆರಿಸಿಕೋ. ಧರ್ಮದಪ್ರಕಾರ ಮೊದಲ ಆಯ್ಕೆ ನಿನಗೇ ಇದೆ.”

ಕೃಷ್ಣನು ಹೀಗೆ ಹೇಳಲು ಕುಂತೀಪುತ್ರ ಧನಂಜಯನು ಸಂಗ್ರಾಮದಲ್ಲಿ ಯುದ್ಧಮಾಡದೇ ಇರುವ ಕೇಶವನನ್ನು ಆರಿಸಿಕೊಂಡನು. ಪಾರ್ಥಿವ ದುರ್ಯೋಧನನು ಸಹಸ್ರ ಸಹಸ್ರ ಸಂಖ್ಯೆಯ ಯೋಧರನ್ನು ಪಡೆದು, ಕೃಷ್ಣನು ತನ್ನ ಕಡೆ ಇಲ್ಲವೆಂದು ತಿಳಿದೂ ಆ ಸೈನ್ಯವನ್ನೆಲ್ಲ ಪಡೆದನೆಂದು ಪರಮ ಸಂತೋಷವನ್ನು ಹೊಂದಿದನು. ಅನಂತರ ಆ ಭೀಮಬಲನು ಮಹಾಬಲ ರೌಹಿಣೇಯನ ಬಳಿ ಹೋಗಿ ಬಂದಿದುದರ ಕಾರಣವನ್ನೆಲ್ಲಾ ಅವನಿಗೆ ನಿವೇದಿಸಿದನು. ಆಗ ಶೌರಿಯು ಧಾರ್ತರಾಷ್ಟ್ರನಿಗೆ ಈ ಮಾತನ್ನಾಡಿದನು: “ನರವ್ಯಾಘ್ರ! ವಿರಾಟನ ಪುರಿಯಲ್ಲಿ ವಿವಾಹದ ಸಮಯದಲ್ಲಿ ನಾನು ಏನೆಲ್ಲ ಹೇಳಿದೆನೆನ್ನುವುದು ನಿನಗೆ ತಿಳಿದಿರಲೇ ಬೇಕು. ಆಗ ನಾನು, ನಿನಗೋಸ್ಕರ, ಹೃಷೀಕೇಶನ ವಿರುದ್ಧವಾಗಿ ಮಾತನಾಡಿದೆ. ಪುನಃ ಪುನಃ ನನ್ನ ಸಂಬಂಧವು ಇಬ್ಬರೊಡನೆಯೂ ಸಮನಾದುದೆಂದು ಹೇಳಿದೆ. ಆದರೆ ಕೃಷ್ಣನು ಆಗ ಹೇಳಿದ ನನ್ನ ಮಾತುಗಳಂತೆ ನಡೆದುಕೊಳ್ಳಲಿಲ್ಲ. ಮತ್ತು ಕೃಷ್ಣನಿಲ್ಲದೇ ಒಂದು ಕ್ಷಣವಿರಲೂ ನನಗೆ ಉತ್ಸಾಹವಿಲ್ಲ. ವಾಸುದೇವನ ವಿರುದ್ಧ ಹೋಗಲಾರೆನೆಂದು ತಿಳಿದು ನಾನು ಪಾರ್ಥರಿಗೂ ದುರ್ಯೋಧನನಿಗೂ ಸಹಾಯ ಮಾಡುವುದಿಲ್ಲ ಎಂದು ನಿಶ್ಚಯಿಸಿದ್ದೇನೆ. ಸರ್ವ ಪಾರ್ಥಿವರಿಂದ ಪೂಜಿತಗೊಂಡ ಭಾರತ ವಂಶದಲ್ಲಿ ಜನಿಸಿದ್ದೀಯೆ. ಹೋಗು. ಕ್ಷಾತ್ರಧರ್ಮದಂತೆ ಯುದ್ಧಮಾಡು.”

ಹೀಗೆ ಹೇಳಲು ಅವನು ಹಲಾಯುಧನನ್ನು ಆಲಂಗಿಸಿದನು. ಕೃಷ್ಣನನ್ನು ಜಯನು ಅಪಹರಿಸಿದನೆಂದು ತಿಳಿದೂ ಯುದ್ಧದಲ್ಲಿ ಅವನನ್ನು ಗೆದ್ದುಬಿಟ್ಟೆ ಎಂದು ತಿಳಿದುಕೊಂಡನು.ಅನಂತರ ನೃಪ ಧೃತರಾಷ್ಟ್ರಸುತನು ಕೃತವರ್ಮನ ಬಳಿ ಹೋದನು. ಆಗ ಕೃತವರ್ಮನು ಅವನಿಗೆ ಒಂದು ಅಕ್ಷೌಹಿಣೀ ಸೇನೆಯನ್ನು ಕೊಟ್ಟನು. ಆ ಭಯಂಕರ ಸರ್ವಸೈನ್ಯಗಳಿಂದ ಸುತ್ತುವರೆಯಲ್ಪಟ್ಟು, ಸಂತೋಷಗೊಂಡ ಸ್ನೇಹಿತರೊಂದಿಗೆ ಹರ್ಷಿಸುತ್ತಾ ಕುರುನಂದನನು ಹೊರಟನು.

ದುರ್ಯೋಧನನು ಹೊರಟುಹೋದ ನಂತರ ಕೃಷ್ಣನು ಕಿರೀಟಿಯಲ್ಲಿ ಕೇಳಿದನು: “ಯುದ್ದವನ್ನೇ ಮಾಡದಿರುವ ನನ್ನನ್ನು ಏನನ್ನು ಯೋಚಿಸಿ ಆರಿಸಿಕೊಂಡೆ?”

ಅರ್ಜುನನು ಹೇಳಿದನು: “ಅವರೆಲ್ಲರನ್ನೂ ನೀನು ಕೊಲ್ಲಲು ಸಮರ್ಥ ಎನ್ನುವುದರಲ್ಲಿ ಸಂಶಯವಿಲ್ಲ. ಪುರುಷೋತ್ತಮ! ನಾನೊಬ್ಬನೇ ಅವರನ್ನು ಕೊಲ್ಲಲು ಸಮರ್ಥ. ನೀನಾದರೋ ಲೋಕದಲ್ಲಿ ಕೀರ್ತಿವಂತನಾಗಿರುವೆ ಮತ್ತು ಅದು ನಿನ್ನೊಂದಿಗೇ ಹೋಗುತ್ತದೆ. ನಾನೂ ಕೂಡ ಯಶಸ್ಸನ್ನು ಬಯಸುತ್ತಿದ್ದೇನಾದುದರಿಂದ ನಿನ್ನನ್ನು ನಾನು ಆರಿಸಿಕೊಂಡೆ. ನಿನ್ನಿಂದ ಸಾರಥ್ಯವನ್ನು ಮಾಡಿಸಿಕೊಳ್ಳಬೇಕು ಎಂದು ಸದಾ ನನ್ನ ಮನಸ್ಸಿನಲ್ಲಿತ್ತು. ತುಂಬಾ ಸಮಯದಿಂದಿರುವ ಈ ಬಯಕೆಯನ್ನು ನೀನು ಪೂರೈಸಿಕೊಡಬೇಕು.”

ವಾಸುದೇವನು ಹೇಳಿದನು: “ಪಾರ್ಥ! ನನ್ನೊಡನೆ ಸ್ಪರ್ಧಿಸುತ್ತಿದ್ದೀಯೆ ಎನ್ನುವುದು ಇದರಿಂದ ತೋರುತ್ತಿದೆ. ನಿನ್ನ ಸಾರಥ್ಯವನ್ನು ಮಾಡುತ್ತೇನೆ. ನಿನ್ನ ಬಯಕೆಯು ಪೂರೈಸಲಿ!”

ಹೀಗೆ ಸಂತೋಷಗೊಂಡ ಪಾರ್ಥನು ದಾಶಾರ್ಹಪ್ರವರನೊಡಗೂಡಿ ಪುನಃ ಯುಧಿಷ್ಠಿರನಲ್ಲಿಗೆ ಬಂದನು.

ಶಲ್ಯನು ಮೋಸಗೊಂಡು ದುರ್ಯೋಧನನ ಪಕ್ಷವನ್ನು ಸೇರಿದುದು

ದೂತರಿಂದ ಕೇಳಿದ ಶಲ್ಯನು ಮಹಾರಥ ಪುತ್ರರೊಂದಿಗೆ ಪಾಂಡವರಲ್ಲಿಗೆ ಬರುತ್ತಿದ್ದನು. ಅವನ ಸೇನೆಯ ಡೇರೆಯು ಅರ್ಧ ಯೋಜನೆಯಷ್ಟು ಜಾಗವನ್ನು ಆವರಿಸಿತ್ತು. ಅಷ್ಟೊಂದು ದೊಡ್ಡದಾಗಿತ್ತು ಆ ನರರ್ಷಭನ ಸೇನೆ. ಅವರೆಲ್ಲ ಶೂರರೂ ವಿಚಿತ್ರಕವಚಗಳನ್ನು ಧರಿಸಿದವರೂ, ವಿಚಿತ್ರ ಧ್ವಜ-ಬಿಲ್ಲುಗಳನ್ನು ಹೊಂದಿದವರೂ, ವಿಚಿತ್ರಾಭರಣಗಳನ್ನು ಧರಿಸಿದವರೂ, ವಿಚಿತ್ರ ರಥವಾಹನರೂ ಆಗಿದ್ದರು. ಸ್ವದೇಶದ ವೇಷಾಭರಣಗಳನ್ನು ಧರಿಸಿದ ನೂರಾರು ಸಾವಿರಾರು ಕ್ಷತ್ರಿಯರ್ಷಭ ವೀರರು ಅವನ ಸೇನೆಯ ಮುಖಂಡರಾಗಿದ್ದರು. ಅವನ ಸೇನೆಯು ನಿಧಾನವಾಗಿ ಅಲ್ಲಲ್ಲಿ ವಿಶ್ರಮಿಸುತ್ತಾ ಪಾಂಡವರಿರುವಲ್ಲಿಗೆ ಬರುತ್ತಿರಲು ಭೂಮಿಯ ಮೇಲಿರುವವುಗಳು ವ್ಯಥಿತಗೊಂಡವು. ಆಗ ಮಹಾಸೇನ ಮಹಾರಥನು ಬರುತ್ತಿದ್ದಾನೆಂದು ಕೇಳಿದ ದುರ್ಯೋಧನನು ಅವನನ್ನು ಸ್ವಯಂ ಎದುರುಗೊಂಡು ಗೌರವಿಸಿದನು. ಅವನನ್ನು ಪೂಜಿಸಲು ದುರ್ಯೋಧನನು ರಮಣೀಯ ಪ್ರದೇಶಗಳಲ್ಲಿ ರತ್ನ-ಚಿತ್ರಗಳಿಂದ ಸ್ವಲಂಕೃತ ಸಭೆಗಳನ್ನು ನಿರ್ಮಿಸಿದನು. ದೇಶ ದೇಶಗಳಲ್ಲಿ ಆ ಸಭೆಗಳಿಗೆ ಹೋಗಿ ಅಮರನಂತೆ ದುರ್ಯೋಧನನ ಸಚಿವರಿಂದ ಯಥಾರ್ಹನಾಗಿ ಪೂಜೆಗೊಂಡು, ದೇವತೆಗಳ ವಾಸದಂತೆ ಶೋಭಿಸುವ ಇನ್ನೊಂದು ಸಭೆಗೆ ಬಂದನು. ಅಲ್ಲಿ ಯುಕ್ತ ವಿಷಯಗಳಿಂದ ಅತಿಮಾನುಷ ಸುಖಭೋಗಗಳಿಂದ ಪೂಜಿಸಲ್ಪಟ್ಟು ಅವನು ತಾನು ಪುರಂದರನಿಗಿಂತ ಅಧಿಕನೇನೋ ಎಂದು ಭಾವಿಸಿದನು. ಆ ಕ್ಷತ್ರಿಯರ್ಷಭನು ಸಂತೋಷಗೊಂಡು ತನ್ನ ಸೇವಕರನ್ನು ಕೇಳಿದನು: “ಈ ಸಭೆಗಳನ್ನು ನಿರ್ಮಿಸಿದ ಯುಧಿಷ್ಠಿರನ ಜನರು ಎಲ್ಲಿದ್ದಾರೆ? ಈ ಸಭಾಕಾರರನ್ನು ನನ್ನೆದುರಿಗೆ ಕರೆದುಕೊಂಡು ಬನ್ನಿ.”

ಆಗ ಅಡಗಿಕೊಂಡಿದ್ದ ದುರ್ಯೋಧನನು ಮಾವನಿಗೆ ಕಾಣಿಸಿಕೊಂಡನು. ಅವನನ್ನು ನೋಡಿ ಇದು ಅವನ ಪ್ರಯತ್ನವೆಂದು ತಿಳಿದ ಮದ್ರರಾಜನು ಅವನನ್ನು ಆಲಂಗಿಸಿ “ನಿನಗಿಷ್ಟವಾದುದನ್ನು ಕೇಳಿ ಪಡೆದುಕೋ!” ಎಂದು ಹೇಳಿದನು.

ದುರ್ಯೋಧನನು ಹೇಳಿದನು: “ಕಲ್ಯಾಣ! ಸತ್ಯವಾಗ್ಮಿಯಾಗು. ನನಗೆ ವರವನ್ನು ನೀಡುವವನಾಗು. ನೀನು ನನ್ನ ಸರ್ವ ಸೇನೆಯ ನಾಯಕನಾಗಬೇಕು.”

“ಹಾಗೆಯೇ ಆಗಲಿ! ಇನ್ನೇನು ಮಾಡಲಿಕ್ಕಾಗುತ್ತದೆ?” ಎಂದು ಶಲ್ಯನು ಹೇಳಲು ಗಾಂಧಾರಿಯ ಮಗನು “ಆಯಿತು” ಎಂದು ಪುನಃ ಪುನಃ ಉತ್ತರಿಸಿದನು. ಹೀಗೆ ಶಲ್ಯನನ್ನು ಆಮಂತ್ರಿಸಿ ಅವನು ತನ್ನ ಪುರಕ್ಕೆ ಹಿಂದಿರುಗಿದನು. ಶಲ್ಯನು ಅವನು ನಡೆಸಿದುದನ್ನು ಹೇಳಲು ಕೌಂತೇಯನಲ್ಲಿಗೆ ಹೋದನು. ಉಪಪ್ಲವ್ಯಕ್ಕೆ ಹೋಗಿ ಡೇರೆಯನ್ನು ಪ್ರವೇಶಿಸಿ ಅಲ್ಲಿ ಪಾಂಡವರೆಲ್ಲರನ್ನೂ ಶಲ್ಯನು ಕಂಡನು. ಮಹಾಬಾಹು ಶಲ್ಯನು ಪಾಂಡುಸುತರನ್ನು ಸೇರಿ ಯಥಾವಿಧಿಯಾಗಿ ಪಾದ್ಯ, ಅರ್ಘ್ಯ ಮತ್ತು ಗೋವನ್ನು ಸ್ವೀಕರಿಸಿದನು. ಆಗ ಮೊದಲು ಅರಿಸೂದನ ಮದ್ರರಾಜನು ಕುಶಲವನ್ನು ಕೇಳಿ ಪರಮ ಪ್ರೀತಿಯಿಂದ ಯುಧಿಷ್ಠಿರನನ್ನು, ಭೀಮಾರ್ಜುನರನ್ನೂ ಮತ್ತು ಹಾಗೆಯೇ ಹೃಷ್ಟರಾಗಿದ್ದ ಯಮಳರಿಬ್ಬರನ್ನೂ ಬಿಗಿದಪ್ಪಿದನು. ಆಸನದಲ್ಲಿ ಕುಳಿತುಕೊಂಡ ಶಲ್ಯನು ಪಾರ್ಥನಿಗೆ ಹೇಳಿದನು: “ರಾಜಶಾರ್ದೂಲ! ನೀನು ಕುಶಲವಾಗಿದ್ದೀಯೆ ತಾನೇ? ಸುದುಷ್ಕರ ನಿರ್ಜನ ವನವಾಸವನ್ನು ನಿನ್ನ ಸಹೋದರರೊಂದಿಗೆ ಮತ್ತು ಈ ಗೌರವಾನ್ವಿತೆ ಕೃಷ್ಣೆಯೊಂದಿಗೆ ಒಳ್ಳೆಯದಾಗಿ ಕಳೆದೆ ತಾನೇ? ಘೋರ ಮತ್ತು ದುಷ್ಕೃತ ಅಜ್ಞಾತವಾಸವನ್ನೂ ನೀನು ಮಾಡಿ ಮುಗಿಸಿದ್ದೀಯೆ. ರಾಜ್ಯಭ್ರಷ್ಟನಾದವನಿಗೆ ದುಃಖ ಮಾತ್ರವಿದೆ. ಸುಖವು ಎಲ್ಲಿಯದು? ಧಾರ್ತರಾಷ್ಟ್ರನಿಂದ ತಂದೊಡ್ಡಿದ ಈ ಮಹಾ ದುಃಖದ ಪ್ರಮಾಣದಷ್ಟೇ ಸುಖವನ್ನು ನಿನ್ನ ಶತ್ರುಗಳನ್ನು ಸಂಹರಿಸಿ ಪಡೆಯುತ್ತೀಯೆ. ಲೋಕತತ್ವವು ನಿನಗೆ ತಿಳಿದೇ ಇದೆ. ಆದುದರಿಂದ ಮಗೂ! ನಿನ್ನ ಚಿತ್ತವು ಲೋಭದಿಂದ ಮಾಡುವುದನ್ನು ತಿಳಿದಿಲ್ಲ.”

ಅನಂತರ ರಾಜಾ ದುರ್ಯೋಧನನೊಡನೆ ಭೇಟಿಯಾದುದನ್ನು ಹೇಳಿ ತಾನು ಕೊಟ್ಟ ಭರವಸೆ ಮತ್ತು ಅವನು ಕೇಳಿದ ವರದಾನಗಳ ಕುರಿತು ವಿವರವಾಗಿ ಎಲ್ಲವನ್ನೂ ಹೇಳಿದನು.

ಯುಧಿಷ್ಠಿರನು ಹೇಳಿದನು: “ರಾಜನ್! ನೀನು ಒಳ್ಳೆಯದನ್ನೇ ಮಾಡಿದೆ. ಅಂತರಾತ್ಮದಲ್ಲಿ ಸಂತೋಷಗೊಂಡು ನೀನು ದುರ್ಯೋಧನನಿಗೆ ನಿನ್ನ ಮಾತನ್ನು ಕೇಳಿಸಿದೆ. ನಿನಗೆ ಮಂಗಳವಾಗಲಿ. ನಿನ್ನಿಂದ ಒಂದೇ ನಡೆಯಬೇಕು ಎಂದು ನಾನು ಬಯಸುತ್ತೇನೆ. ಯುದ್ಧದಲ್ಲಿ ನೀನು ವಾಸುದೇವನ ಸಮನಾಗಿದ್ದೀಯೆ. ಕರ್ಣಾರ್ಜುನರ ರಥಗಳ ದ್ವಂದ್ವಯುದ್ಧವು ಬಂದಾಗ ಕರ್ಣನ ಸಾರಥ್ಯವನ್ನು ನೀನು ಮಾಡಬೇಕಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನನಗೆ ಒಳ್ಳೆಯದನ್ನು ಮಾಡಲು ಬಯಸಿದರೆ ನೀನು ಆಗ ಅರ್ಜುನನನ್ನು ಪಾಲಿಸಬೇಕು. ಸೌತಿಯ ತೇಜೋವಧೆಯನ್ನು ಮಾಡಿ ನಮಗೆ ಜಯವನ್ನು ಒದಗಿಸಬೇಕು. ಮಾವ! ಮಾಡಬಾರದುದ್ದಾದರೂ ಇದನ್ನು ನೀನು ಮಾಡಬೇಕು.”

ಶಲ್ಯನು ಹೇಳಿದನು: “ಪಾಂಡವ! ನಿನಗೆ ಮಂಗಳವಾಗಲಿ! ಕೇಳು. ಯುದ್ಧದಲ್ಲಿ ದುರಾತ್ಮ ಸೂತಪುತ್ರನ ತೇಜೋವಧೆಗೆ ಕಾರಣನಾಗಬೇಕೆಂದು ಹೇಳಿದೆಯಲ್ಲ! ಸಂಗ್ರಾಮದಲ್ಲಿ ಖಂಡಿತವಾಗಿ ನಾನು ಅವನ ಸಾರಥಿಯಾಗುತ್ತೇನೆ. ಏಕೆಂದರೆ ಅವನು ನನ್ನನ್ನು ಯಾವಾಗಲೂ ವಾಸುದೇವನಿಗೆ ಸಮನೆಂದು ತಿಳಿದುಕೊಂಡಿದ್ದಾನೆ. ರಣದಲ್ಲಿ ಹೋರಾಡಲು ಬಯಸಿದಾಗ ಖಂಡಿತವಾಗಿ ನಾನು ಅವನಿಗೆ ಅವನ ದರ್ಪವನ್ನು ಅಪಹರಿಸುವ ಮತ್ತು ತೇಜಸ್ಸನ್ನು ಅಪಹರಿಸುವ ಅಹಿತ ಮಾತುಗಳನ್ನಾಡುತ್ತೇನೆ. ಇದರಿಂದ ಸುಲಭವಾಗಿ ಅವನನ್ನು ಕೊಲ್ಲಬಹುದು. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನೀನು ನನ್ನನ್ನು ಕೇಳಿದಂತೆಯೇ ನಾನು ಮಾಡುತ್ತೇನೆ. ನಿನಗೆ ಒಳ್ಳೆಯದಾಗುವಂತೆ ಇನ್ನೇನಾದರೂ ಇದ್ದರೆ ಅದನ್ನೂ ಮಾಡುತ್ತೇನೆ. ಕೃಷ್ಣೆಯೊಂದಿಗೆ ದ್ಯೂತದಲ್ಲಿ ಏನೆಲ್ಲ ದುಃಖವನ್ನು ನೀನು ಪಡೆದೆಯೋ, ಸೂತಪುತ್ರನಾಡಿದ ಪೌರುಷದ ಮಾತುಗಳು, ಜಟಾಸುರನಿಂದ ಮತ್ತು ಮಹಾದ್ಯುತಿ ಕೀಚಕರಿಂದ ಕಷ್ಟ, ದಮಯಂತಿಯಂತೆ ದ್ರೌಪದಿಯು ಅನುಭವಿಸಿದ ಎಲ್ಲ ಕಷ್ಟಗಳೂ, ಈ ಸರ್ವ ದುಃಖಗಳೂ ಸುಖದಲ್ಲಿ ಕೊನೆಗೊಳ್ಳುತ್ತವೆ. ಇದರಲ್ಲಿ ನೀನು ದುಃಖಿಸುವುದು ಏನೂ ಇಲ್ಲ. ವಿಧಿಯೇ ಬಲವತ್ತರ. ಮಹಾತ್ಮರಿಗೆ ದುಃಖಗಳು ಬರುತ್ತವೆ. ದೇವತೆಗಳು ಕೂಡ ದುಃಖವನ್ನು ಹೊಂದುತ್ತಾರೆ. ಮಹಾತ್ಮ ದೇವರಾಜ ಇಂದ್ರನು ಭಾರ್ಯೆಯೊಡನೆ ಮಹಾ ದುಃಖವನ್ನು ಅನುಭವಿಸಿದ್ದನೆಂದು ಕೇಳುತ್ತೇವೆ.”

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಮಹಾತ್ಮ ಇಂದ್ರನು ಭಾರ್ಯೆಯೊಡನೆ ಹೇಗೆ ಪರಮ ಘೋರ ದುಃಖವನ್ನು ಹೊಂದಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ.”

ಶಲ್ಯನು ಹೇಳಿದನು: “ರಾಜನ್! ಹಿಂದೆ ಇಂದ್ರನು ಭಾರ್ಯೆಯೊಡನೆ ಹೇಗೆ ದುಃಖವನ್ನು ಪಡೆದನು ಎನ್ನುವ ಇಂದ್ರವಿಜಯೋಪಾಽಖ್ಯಾನ ಎನ್ನುವ ಈ ಪುರಾತನ ಇತಿಹಾಸ ವೃತ್ತಾಂತವನ್ನು ಕೇಳು. ದ್ರೌಪದಿಯೊಂದಿಗೆ ಮತ್ತು ಮಹಾತ್ಮ ಸಹೋದರರೊಂದಿಗೆ ಮಹಾವನದಲ್ಲಿ ಕ್ಲಿಷ್ಟಗಳನ್ನು ಅನುಭವಿಸಿದುದನ್ನು ನಿನ್ನ ಹೃದಯಕ್ಕೆ ತೆಗೆದುಕೊಳ್ಳಬೇಡ. ಹೇಗೆ ಶಕ್ರನು ವೃತ್ರನನ್ನು ಕೊಂದು ಪಡೆದನೋ ಹಾಗೆ ನೀನೂ ಕೂಡ ರಾಜ್ಯವನ್ನು ಪಡೆಯುತ್ತೀಯೆ. ದುರಾಚಾರಿ, ಪಾಪಚೇತನ, ಬ್ರಹ್ಮದ್ವೇಷೀ ನಹುಷನೂ ಕೂಡ ಅಗಸ್ತ್ಯನ ಶಾಪದಿಂದ ಹತನಾಗಿ ಶಾಶ್ವತ ಸಮಯದದ ವರೆಗೆ ವಿನಿಷ್ಟನಾದನು. ಹಾಗೆ ದುರಾತ್ಮರಾದ ಕರ್ಣದುರ್ಯೋಧನರೇ ಮೊದಲಾದ ನಿನ್ನ ಶತ್ರುಗಳು ಕ್ಷಿಪ್ರವಾಗಿ ನಾಶವನ್ನು ಹೊಂದುತ್ತಾರೆ. ಆಗ ಸಾಗರಪರ್ಯಂತವಾದ ಈ ಮೇದಿನಿಯನ್ನು ಭ್ರಾತೃಗಳ ಸಹಿತ ಮತ್ತು ದ್ರೌಪದಿಯ ಸಹಿತ ಭೋಗಿಸುತ್ತೀಯೆ. ವೇದಸಮ್ಮಿತವಾದ ಶಕ್ರವಿಜಯದ ಈ ಆಖ್ಯಾನವನ್ನು ಜಯವನ್ನು ಬಯಸುವ ರಾಜನು ವ್ಯೂಢವನ್ನು ರಚಿಸುವಾಗ ಕೇಳಬೇಕು. ಆದುದರಿಂದ ನಿನ್ನ ವಿಜಯಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ಮಹಾತ್ಮರು ಸ್ತುತಿಸಲ್ಪಟ್ಟಾಗ ವೃದ್ಧಿ ಹೊಂದುತ್ತಾರೆ. ದುರ್ಯೋಧನನ ಅಪರಾಧದಿಂದ ಮತ್ತು ಭೀಮಾರ್ಜುನರ ಬಲದಿಂದ ಮಹಾತ್ಮ ಕ್ಷತ್ರಿಯರ ನಾಶವಾಗಲಿದೆ. ಇಂದ್ರವಿಜಯದ ಈ ಆಖ್ಯಾನವನ್ನು ಯಾರು ನಿಯತನಾಗಿ ಓದುತ್ತಾನೋ ಅವನು ಪಾಪವನ್ನು ಕಳೆದುಕೊಂಡು ಸ್ವರ್ಗವನ್ನು ಗೆದ್ದು ಇಲ್ಲಿ ಮತ್ತು ನಂತರದಲ್ಲಿ ಸಂತೋಷದಲ್ಲಿರುತ್ತಾನೆ. ಅವನಿಗೆ ಶತ್ರುಗಳ ಭಯವಿರುವುದಿಲ್ಲ. ಅಂಥವನು ಅಪುತ್ರನಾಗುವುದಿಲ್ಲ. ಆಪತ್ತನ್ನು ಪಡೆಯುವುದಿಲ್ಲ ಮತ್ತು ದೀರ್ಘಾಯುಷಿಯಾಗುತ್ತಾನೆ. ಎಲ್ಲೆಡೆಯೂ ಜಯವನ್ನು ಹೊಂದುತ್ತಾನೆ ಮತ್ತು ಎಂದೂ ಪರಾಜಯುವನ್ನು ಪಡೆಯುವುದಿಲ್ಲ.”

ಶಲ್ಯನು ಹೀಗೆ ಆಶ್ವಾಸನೆಯನ್ನು ನೀಡಲು ಧರ್ಮಭೃತರಲ್ಲಿ ಶ್ರೇಷ್ಠ ರಾಜನು ಶಲ್ಯನನ್ನು ವಿಧಿವತ್ತಾಗಿ ಪೂಜಿಸಿದನು. ಶಲ್ಯನ ಮಾತನ್ನು ಕೇಳಿದ ಮಹಾಬಾಹು ಕುಂತೀಪುತ್ರ ಯುಧಿಷ್ಠಿರನು ಮದ್ರರಾಜನಿಗೆ ಉತ್ತರಿಸಿದನು: “ನೀನು ಕರ್ಣನ ಸಾರಥ್ಯವನ್ನು ಮಾಡುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಅಲ್ಲಿ ನನ್ನನ್ನು ಸ್ತುತಿಸಿ ಕರ್ಣನ ತೇಜೋವಧೆಯನ್ನು ಮಾಡಬೇಕು.”

ಶಲ್ಯನು ಹೇಳಿದನು: “ನಾನು ಮಾತುಕೊಟ್ಟಂತೆ ಮಾಡುತ್ತೇನೆ. ಇನ್ನೂ ಏನನ್ನು ಮಾಡಲಿಕ್ಕಾಗುತ್ತದೆಯೋ ಅದನ್ನೂ ನಿನಗಾಗಿ ಮಾಡುತ್ತೇನೆ.” ನಂತರ ಮದ್ರಾಧಿಪನು ಕೌಂತೇಯನನ್ನು ಬೀಳ್ಕೊಂಡು ಸೇನೆಯೊಂದಿಗೆ ಶ್ರೀಮಾನ್ ಅರಿಂದಮ ದುರ್ಯೋಧನನ ಬಳಿಗೆ ಹೋದನು.

ಪಾಂಡವ-ಕೌರವರಲ್ಲಿ ಬಂದು ಸೇರಿದ ಸೇನೆಗಳು

ಆಗ ವೀರ ಸಾತ್ವತರ ಮಹಾರಥಿ ಯುಯುಧಾನನು ಮಹಾ ಚತುರಂಗ ಬಲದೊಂದಿಗೆ ಯುಧಿಷ್ಠಿರನಲ್ಲಿಗೆ ಬಂದನು. ನಾನಾದೇಶಗಳಿಂದ ಬಂದು ಸೇರಿದ್ದ ಅವನ ಆ ಮಹಾವೀರ, ನಾನಾಪ್ರಹರಣಗಳಲ್ಲಿ ವೀರ ಯೋಧರು ಸೇನೆಗೆ ಶೋಭೆಯನ್ನು ತಂದರು. ಆ ಬಲವು ಪರಶು, ಭಿಂಡಿಪಾಲ, ಶಕ್ತಿ, ತೋಮರ, ಮುದ್ಗರ, ಶಕ್ತಿ, ಮುಷ್ಟಿ, ಪರಶು, ಪ್ರಾಸ, ನಿರ್ಮಲ ಕರವಾಲ, ಖಡ್ಗ, ಕಾರ್ಮುಕ, ವಿವಿಧ ಶರಗಳು, ತೈಲಧೌತಗಳು, ಮತ್ತು ಪ್ರಕಾಶಗಳಿಂದ ಶೋಭಿಸಿತು. ಶಸ್ತ್ರಸ್ತ್ರಗಳಿಂದ ಶೋಭಿಸುತ್ತಿದ್ದ ಮೇಘಭರಿತ ಆಕಾಶದ ಬಣ್ಣವನ್ನು ತಳೆದ ಅವನ ಸೇನೆಯು ಮಿಂಚಿನಿಂದ ಕೂಡಿದ ಮೇಘದಂತೆ ಕಂಡಿತು. ಅವನ ಸೇನೆಯು ಒಂದು ಅಕ್ಷೌಹಿಣಿಯದಾಗಿತ್ತು. ಯುಧಿಷ್ಠಿರನ ಬಲವು ಅದನ್ನು ಪ್ರವೇಶಿಸಿದಾಗ ಸಾಗರವನ್ನು ಸೇರುವ ಸಣ್ಣ ನದಿಯಂತೆ ಕಾಣದಾಯಿತು. ಹಾಗೆಯೇ ಚೇದಿಗಳ ರಾಜ ಬಲಶಾಲಿ ಧೃಷ್ಟಕೇತುವು ಅಕ್ಷೌಹಿಣೀ ಸೇನೆಯನ್ನು ತೆಗೆದುಕೊಂಡು ಅಮಿತೌಜಸ ಪಾಂಡವನಲ್ಲಿಗೆ ಆಗಮಿಸಿದನು. ಜರಾಸಂಧನ ಮಗ ಮಹಾಬಲ ಮಾಗಧ ಜಯತ್ಸೇನನು ಅಕ್ಷೌಹಿಣೀ ಸೇನೆಯೊಂದಿಗೆ ಧರ್ಮರಾಜನಲ್ಲಿಗೆ ಬಂದನು. ಹಾಗೆಯೇ ಸಾಗರ ತೀರದಲ್ಲಿ ವಾಸಿಸುವ ರಾಜೇಂದ್ರ ಪಾಂಡ್ಯನು ಬಹುವಿಧದ ಯೋಧರಿಂದ ಆವೃತನಾಗಿ ಯುಧಿಷ್ಠಿರನ ಬಳಿ ಬಂದನು. ಸೇನೆಗಳು ಸೇರಿ ಅವನ ಸೇನೆಯು ಸುಂದರವೂ, ಬಲಶಾಲಿಯೂ, ಪ್ರೇಕ್ಷಣೀಯವೂ ಆಗಿತ್ತು. ನಾನಾ ದೇಶಗಳಿಂದ ಬಂದು ಸೇರಿದ್ದ ದ್ರುಪದನ ಸೇನೆಯು ಶೂರ ಪುರುಷರಿಂದ ಮತ್ತು ಮಹಾರಥಿ ಪುತ್ರರಿಂದ ಶೋಭಿಸುತ್ತಿತ್ತು. ಹಾಗೆಯೇ ವಾಹಿನೀಪತಿ ಮತ್ಸ್ಯರ ರಾಜ ವಿರಾಟನು ಪರ್ವತವಾಸೀ ಮಹೀಪಾಲರೊಂದಿಗೆ ಪಾಂಡವರಲ್ಲಿಗೆ ಬಂದನು. ಮಹಾತ್ಮ ಪಾಂಡವರಲ್ಲಿಗೆ ಇವರು ಮತ್ತು ಇತರ ವಿವಿಧ ಧ್ವಜ ಸಂಕುಲಗಳ ಏಳು ಅಕ್ಷೌಹಿಣೀಗಳು ಬಂದು ಸೇರಿದವು. ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾದ ಅವರು ಪಾಂಡವರನ್ನು ಸಂತೋಷಗೊಳಿಸಿದರು.

ಹಾಗೆಯೇ ಮಹೀಪಾಲ ಭಗದತ್ತನು ಒಂದು ಅಕ್ಷೌಹಿಣೀ ಸೇನೆಯನ್ನಿತ್ತು ಧಾರ್ತರಾಷ್ಟ್ರನ ಹರ್ಷವನ್ನು ಹೆಚ್ಚಿಸಿದನು. ಬಂಗಾರದಂತೆ ಹೊಳೆಯುತ್ತಿದ್ದ ಚೀನ-ಕಿರಾತರಿಂದ ಕೂಡಿದ್ದ ಅವನ ಸೇನೆಯು ಕರ್ಣಿಕಾರವನದಂತೆ ತೋರಿತು. ಹಾಗೆಯೇ ಭೂರಿಶ್ರವ ಮತ್ತು ಶೂರ ಶಲ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಅಕ್ಷೌಹಿಣಿಯನ್ನು ದುರ್ಯೋಧನನಿಗೆ ನೀಡಿದರು. ಹಾರ್ದಿಕ್ಯ ಕೃತವರ್ಮನು ಭೋಜ-ಅಂಧಕರ ಸೇನೆಯೊಂದಿಗೆ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ದುರ್ಯೋಧನನಲ್ಲಿಗೆ ಬಂದನು. ವನಮಾಲೆಗಳನ್ನು ಧರಿಸಿದ್ದ ಪುರುಷವ್ಯಾಘ್ರರಿಂದ ತುಂಬಿದ ಅವನ ಆ ಸೇನೆಯು ಮತ್ತ ಗಜಗಳು ಆಡುತ್ತಿರುವ ವನದಂತೆ ಶೋಭಿಸಿತು. ಜಯದ್ರಥನ ಮುಂದಾಳುತ್ವದಲ್ಲಿ ಇತರ ಸಿಂಧು ಸೌವೀರ ವಾಸಿ ಪೃಥ್ವೀಪಾಲರು ಪರ್ವತಗಳನ್ನು ನಡುಗಿಸುವಂತೆ ಆಗಮಿಸಿದರು. ಅವರ ಅಕ್ಷೌಹಿಣೀ ಸೇನೆಯು ಗಾಳಿಯಿಂದ ತೂರಿಸಿಕೊಂಡು ಬಂದ ಬಹುರೂಪದ ಮೋಡಗಳಂತೆ ತೋರಿತು. ಕಾಂಬೋಜ ಸುದಕ್ಷಿಣ, ಯವನ ಮತ್ತು ಶಕರು ಅಕ್ಷೌಹಿಣಿಯೊಂದಿಗೆ ಕೌರವನಲ್ಲಿಗೆ ಬಂದರು. ಶಲಭಗಳ ಗುಂಪಿನಂತಿದ್ದ ಅವನ ಸೇನೆಯು ಕೌರವನ ಸೇನೆಯನ್ನು ಸೇರಿ ಅಲ್ಲಿಯೇ ಅಂತರ್ಧಾನವಾಯಿತು. ಹಾಗೆಯೇ ಮಾಹಿಷ್ಮತೀ ವಾಸಿಗಳಾದ ನೀಲರು ನೀಲಾಯುಧಗಳೊಂದಿಗೆ ದಕ್ಷಿಣಾಪಥವಾಸಿಗಳಾದ ಮಹಾವೀರ ಮಹೀಪಾಲರು, ಮಹಾಬಲ ಸಂವೃತರಾದ ಅವಂತಿಯ ಮಹೀಪಾಲರಿಬ್ಬರು ಪ್ರತ್ಯೇಕ ಅಕ್ಷೌಹಿಣೀಗಳೊಂದಿಗೆ ಸುಯೋಧನನಲ್ಲಿಗೆ ಆಗಮಿಸಿದರು. ನರವ್ಯಾಘ್ರ ಪಾರ್ಥಿವ ಕೇಕಯ ಸಹೋದರರೈವರು ಅಕ್ಷೌಹಿಣಿಗಳಿಂದ ಆದ್ರವಂತ ಕೌರವ್ಯನನ್ನು ಸಂತೋಷಗೊಳಿಸಿದರು. ಇವರು ಮತ್ತು ಇತರ ಮಹಾತ್ಮ ಭೂಮಿಪರೆಲ್ಲರ ಮೂರು ಭಾಗಗಳ ವಾಹಿನಿಯೂ ಬಂದು ಸೇರಿತು. ಹೀಗೆ ದುರ್ಯೋಧನನಲ್ಲಿ ಹನ್ನೊಂದು ಅಕ್ಷೌಹಿಣೀ ಸೇನೆಯು ಬಂದು ಸೇರಿತು. ನಾನಾಧ್ವಜ ಸಮಾಕುಲರಾದ ಅವರು ಕೌಂತೇಯರೊಡನೆ ಯುದ್ಧಮಾಡಲು ಉತ್ಸುಕರಾಗಿದ್ದರು.

ಹಸ್ತಿನಾಪುರದಲ್ಲಿ ರಾಜನ ಸಬಲಮುಖ್ಯರಿಗೆ ಮತ್ತು ಪ್ರಧಾನರಿಗೆ ಕೂಡ ಸ್ಥಳವಿಲ್ಲದಂತಾಯಿತು. ಆಗ ಐದುನದಿಗಳ ಮತ್ತು ಕುರುಜಾಂಗಲವೆಲ್ಲವೂ, ಹಾಗೆಯೇ ಸಮಭೂಮಿಯ ರೋಹಿತಾರಣ್ಯವೂ, ಅಹಿಚ್ಛತ್ರ, ಕಾಲಕೂಟ, ಗಂಗಾಕೂಲ, ವಾರಣ, ವಾಟಧಾನ, ಯಮುನಾ ಪರ್ವತವೂ, ಧನಧಾನ್ಯಗಳಿಂದ ಸಮೃದ್ಧವಾದ ಈ ಎಲ್ಲ ಸುವಿಸ್ತೀರ್ಣ ಪ್ರದೇಶಗಳೂ ಕೌರವ ಸೇನೆಯ ಸಮಾಕುಲದಿಂದ ತುಂಬಿಹೋದವು.

Leave a Reply

Your email address will not be published. Required fields are marked *