ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತ್ರಾ ಕ್ಷೇತ್ರಗಳನ್ನು ವರ್ಣಿಸಿದುದು

Related imageಪೂರ್ವ ತೀರ್ಥಕ್ಷೇತ್ರಗಳ ಕೀರ್ತನೆ

ಬೇಸರದಿಂದಿದ್ದ ಪಾಂಡವರು ಎಲ್ಲರೂ ತೀರ್ಥಯಾತ್ರೆಗೆ ಹೊರಡಲು ಉತ್ಸುಕರಾಗಿದ್ದುದನ್ನು ಕಂಡು ಬೃಹಸ್ಪತಿಯ ಸಮನಾಗಿದ್ದ ಧೌಮ್ಯನು ಅವರಿಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು: “ಭರತರ್ಷಭ! ಬ್ರಾಹ್ಮಣರು ಅನುಮತಿ ನೀಡುವ, ಬೇರೆ ಬೇರೆ ದಿಕ್ಕುಗಳಲ್ಲಿರುವ ಪುಣ್ಯಾಶ್ರಮ, ತೀರ್ಥ, ಮತ್ತು ಪರ್ವತಗಳ ಕುರಿತು ಹೇಳುತ್ತೇನೆ. ಕೇಳು. ಮೊದಲು ಪಶ್ಚಿಮ ದಿಕ್ಕಿನಲ್ಲಿರುವ ರಾಜರ್ಷಿಗಣ ಸೇವಿತ ರಮ್ಯ ತೀರ್ಥಗಳ ಕುರಿತು ಸ್ಮೃತಿಗಳಲ್ಲಿ ಹೇಳಿರುವ ಹಾಗೆ ಹೇಳುತ್ತೇನೆ. ಅಲ್ಲಿ ದೇವರ್ಷಿಗಳು ಬಯಸುವ ನೈಮಿಷ ಎಂಬ ಹೆಸರಿನ ಅರಣ್ಯವಿದೆ. ಅಲ್ಲಿ ಬೇರೆ ಬೇರೆ ದೇವತೆಗಳಿಗೆ ಪುಣ್ಯಕರವಾದ ಅನೇಕ ತೀರ್ಥಗಳಿವೆ. ಅಲ್ಲಿ ದೇವರ್ಷಿಸೇವಿತ ರಮ್ಯ ಪುಣ್ಯ ಗೋಮತಿಯು ಹರಿಯುತ್ತದೆ, ದೇವತೆಗಳ ಯಜ್ಞ ಭೂಮಿಯಿದೆ ಮತ್ತು ವಿವಸ್ವತನ ಕಟುಕಸ್ಥಾನವಿದೆ. ಅಲ್ಲಿ ರಾಜರ್ಷಿಗಳಿಂದ ಸತ್ಕೃತ ಗಯ ಎನ್ನುವ ಪುಣ್ಯ ಪರ್ವತವಿದೆ ಮತ್ತು ಮೂವತ್ತು ದೇವತೆಗಳು ಸೇವಿಸುವ ಮಂಗಳಕರ ಬ್ರಹ್ಮಸರೋವರವಿದೆ. ಅದಕ್ಕಾಗಿಯೇ ಪುರಾತನ ಕೀರ್ತನೆಯಿದೆ - ಒಬ್ಬನಾದರೂ ಗಯಕ್ಕೆ ಹೋಗಲಿಕ್ಕೆಂದು ಬಹಳ ಪುತ್ರರನ್ನು ಬಯಸಬೇಕು. ಅಲ್ಲಿಯೇ ಮಹಾನದೀ ಮತ್ತು ಗಯಶಿರ ನದಿಗಳಿವೆ. ಅಲ್ಲಿಯೇ ಇರುವ ಅಕ್ಷಯಕರಣ ವಟವೃಕ್ಷವನ್ನು ವಿಪ್ರರು ಪ್ರಶಂಸಿಸುತ್ತಾರೆ. ಅಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅಕ್ಷಯವಾಗುತ್ತದೆ. ಅಲ್ಲಿ ಫಲ್ಗು ಎಂಬ ಹೆಸರಿನ ಪುಣ್ಯನದಿಯು ಹರಿಯುತ್ತದೆ. ಅಲ್ಲಿಯೇ ತಪೋಧನ ವಿಶ್ವಾಮಿತ್ರನು ಬ್ರಾಹ್ಮಣತ್ವವನ್ನು ಪಡೆದ ಬಹಳಷ್ಟು ಫಲಮೂಲಗಳಿರುವ ಕೌಶಿಕೀ ನದಿಯೂ ಹರಿಯುತ್ತದೆ. ಅಲ್ಲಿ ಭಗೀರಥನು ಬಹಳಷ್ಟು ದಕ್ಷಿಣೆಗಳಿಂದೊಡಗೂಡಿದ ಹಲವಾರು ಕ್ರತುಗಳನ್ನು ನೆರವೇರಿಸಿದ ಪುಣ್ಯ ಗಂಗಾನದಿಯ ತೀರವೂ ಇದೆ. ಪಾಂಚಾಲದೇಶದಲ್ಲಿ ಉತ್ಪಲಾವತದಲ್ಲಿ ಶಕ್ರನೊಂದಿಗೆ ಕೌಶಿಕ ವಿಶ್ವಾಮಿತ್ರನು ಯಾಗಮಾಡಿದನು. ಅಲ್ಲಿಗೆ ಹೋಗಿದ್ದ ಭಗವಾನ್ ಜಾಮದಗ್ನಿಯು ವಿಶಾಮಿತ್ರನ ಅಮಾನುಷ ಅತಿ ವಿಭೂತಿಯನ್ನು ನೋಡಿ ಈ ರೀತಿ ಹೇಳಿದ್ದನು: “ಕನ್ಯಕುಬ್ಜದಲ್ಲಿ ಕೌಶಿಕನು ಇಂದ್ರನೊಂದಿಗೆ ಸೋಮವನ್ನು ಕುಡಿದ ನಂತರ ಅವನು “ಕ್ಷಾತ್ರಪದದಿಂದ ಹೊರಬಂದ ನಾನು ಬ್ರಾಹ್ಮಣನಾಗಿದ್ದೇನೆ!” ಎಂದು ಘೋಷಿಸಿದನು.” ಋಷಿಗಳು ಭೇಟಿನೀಡುವ, ಪವಿತ್ರ, ಪುಣ್ಯ, ಪಾವನ, ಉತ್ತಮ, ಲೋಕವಿಶ್ರುತ ಗಂಗೆ ಮತ್ತು ಯಮುನೆಯರ ಸಂಗಮವಿದೆ. ಅಲ್ಲಿ ಹಿಂದೆ ಭೂತಾತ್ಮ ಪಿತಾಮಹನು ಯಜ್ಞ ಮಾಡಿದ್ದನು. ಅದು ಪ್ರಯಾಗವೆಂದು ವಿಖ್ಯಾತವಾಗಿದೆ. ಅಲ್ಲಿ ಮಹಾ ಶ್ರೇಷ್ಠವಾದ ಹಿರಣ್ಯ ಬಿಂದು ಮತ್ತು ಕಾಲಂಜರ ಗಿರಿಗಳೆಂದು ಎಂದು ಕರೆಯಲ್ಪಟ್ಟ ಅಗಸ್ತ್ಯನ ಆಶ್ರಮವಿದೆ. ಬೇರೆ ಯಾವ ಪರ್ವತಗಳಿಂಗಿಂತಲೂ ಪುಣ್ಯಕರವಾದ, ಮಂಗಳಕರವಾದ ಮಹೇಂದ್ರ ಎಂಬ ಹೆಸರಿನ ಮಹಾತ್ಮ ಭಾರ್ಗವನ ಶ್ರೇಷ್ಠ ಗಿರಿಯಿದೆ. ಹಿಂದೆ ಅಲ್ಲಿ ಪಿತಾಮಹನು ಯಾಗಮಾಡಿದ್ದನು. ಆ ಯಾಗದಲ್ಲಿ ಪುಣ್ಯ ಗಂಗೆಯು ಸದಸ್ಯಳಾಗಿದ್ದಳು. ಅಲ್ಲಿಯೇ ಬ್ರಹ್ಮಶಾಲ ಎಂದು ಖ್ಯಾತ ಪುಣ್ಯಕರ ಪ್ರದೇಶವಿದೆ. ಅಲ್ಲಿ ಪಾಪಗಳನ್ನು ತೊಳೆದುಕೊಂಡವರ ಗುಂಪೇ ಇದೆ. ಅದರ ದರ್ಶನವೇ ಪುಣ್ಯಕರವಾದುದು. ಪವಿತ್ರವೂ, ಮಂಗಳಕರವೂ, ಲೋಕದಲ್ಲಿ ಖ್ಯಾತವೂ, ಸನಾತನವೂ ಆದ ಮತಂಗನ ಬಯಲುಪ್ರದೇಶದ ಮಹಾ ಆಶ್ರಮವಿದೆ. ಹಾಗೆಯೇ ಅಲ್ಲಿ ರಮ್ಯವೂ, ಬಹಳ ಫಲ ಮೂಲ ನೀರಿನಿಂದ ಕೂಡಿದ ಕುಂಡೋದ ಪರ್ವತವಿದೆ. ಬಾಯಾರಿದ ನಿಷಾಧರು ಇದನ್ನು ನೀರಿನ ಮೂಲ ಮತ್ತು ನಿವಾಸಸ್ಥಾನವನ್ನಾಗಿ ಕಂಡರು. ಅಲ್ಲಿಯೇ ತಾಪಸರಿಂದ ಶೋಭಿತಗೊಂಡ ರಮ್ಯ ದೇವವನವಿದೆ. ಆ ಗಿರಿಯ ನೆತ್ತಿಯ ಮೇಲೆ ಬಾಹುದಾ ಮತ್ತು ನಂದಾ ನದಿಗಳು ಹರಿಯುತ್ತವೆ. ನಾನು ಈಗ ಪಶ್ಚಿಮದಿಕ್ಕಿನಲ್ಲಿರುವ ತೀರ್ಥಗಳು, ನದಿಗಳು, ಗಿರಿಪರ್ವತಗಳು ಮತ್ತು ಪುಣ್ಯ ಸ್ಥಳಗಳ ಕುರಿತು ನಿನಗೆ ಹೇಳಿದ್ದೇನೆ. ಈಗ ಉಳಿದ ಮೂರು ದಿಕ್ಕುಗಳಲ್ಲಿರುವ ಪುಣ್ಯ ತೀರ್ಥಗಳು, ನದಿಗಳು, ಪರ್ವತಗಳು ಮತ್ತು ಪುಣ್ಯಕ್ಷೇತ್ರಗಳ ಕುರಿತು ನನ್ನಿಂದ ಕೇಳು.

ದಕ್ಷಿಣ ತೀರ್ಥಕ್ಷೇತ್ರಗಳ ಕೀರ್ತನೆ

“ಭಾರತ! ಈಗ ಕೇಳು. ದಕ್ಷಿಣದಲ್ಲಿರುವ ಪುಣ್ಯ ತೀರ್ಥಗಳ ಕುರಿತು ನನಗೆ ತಿಳಿದಷ್ಟನ್ನು ವಿಸ್ತಾರವಾಗಿ ಹೇಳುತ್ತೇನೆ. ಆ ದಿಕ್ಕಿನಲ್ಲಿ ಪುಣ್ಯ ನದಿ ಗೋದಾವರಿಯ ಕುರಿತು ಹೇಳುತ್ತಾರೆ. ಬಹಳಷ್ಟು ಕಡೆಗಳಲ್ಲಿ ನಿಂತು, ಬಹಳಷ್ಟು ಕವಲುಗಳಾಗಿ ಹರಿಯುವ ಆ ನದಿಯನ್ನು ತಾಪಸಿಗಳು ಅನುಸರಿಸುತ್ತಾರೆ. ಮೃಗಪಕ್ಷಿಗಳ ಸಂಕೀರ್ಣಗಳಿಂದ ಮತ್ತು ತಾಪಸಿಗಳ ಆಶ್ರಮಗಳಿಂದ ಅಲಂಕರಿಸಲ್ಪಟ್ಟ ವೇಣ್ಣಾ ಮತ್ತು ಭೀಮರಥಿ ಈ ಎರಡು ನದಿಗಳು ಪಾಪಭಯವನ್ನು ಹೋಗಲಾಡಿಸುತ್ತವೆ. ಅಲ್ಲಿ ರಾಜರ್ಷಿ ನೃಗನ ನದಿ, ರಮ್ಯತೀರ್ಥ, ತುಂಬಾ ನೀರಿರುವ, ದ್ವಿಜರು ಸೇವಿಸುವ ಪಯೋಷ್ಣಿಯಿದೆ. ಅಲ್ಲಿಯೇ ಮಹಾಯೋಗಿ ಮಹಾತಪಸ್ವಿ ಮಾರ್ಕಂಡೇಯನು ಧರಣೀಪತಿ ನೃಗನ ಕುರಿತಾಗಿ ಜಗತ್ತೇ ಪಠಿಸುವ ಈ ಗಾಥವನ್ನು ಹೇಳಿದ್ದನು: “ನೃಗನ ಯಾಗದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ಅವನ ದಕ್ಷಿಣೆಯನ್ನು ಪಡೆದು ಅಮಲೇರಿದರು ಎಂದು ಬರೀ ಕೇಳಿದ್ದಲ್ಲ, ಪ್ರತ್ಯಕ್ಷವಾಗಿ ನೋಡಿದ್ದೇನೆ!” ವರುಣಸ್ರೋತ ಗಿರಿಯ ಮೇಲೆ ಪುಣ್ಯಕರ, ಮಂಗಳಕರ, ಮತ್ತು ತುಂಬಾ ಮೂಲಿಕೆ ಫಲಗಳಿಂದೊಡಗೂಡಿದ ಮಾಠರ ಎನ್ನುವ ವನವೂ ಯೂಪವೂ ಇದೆ. ಪ್ರವೇಣಿಯ ಉತ್ತರ ಭಾಗದಲ್ಲಿ ಮತ್ತು ಕಣ್ವನ ಪುಣ್ಯಾಶ್ರಮದಲ್ಲಿ ತಾಪಸರು ವಾಸಿಸುವ ಅರಣ್ಯಗಳಿವೆ ಎಂದು ಹೇಳುವುದನ್ನು ಕೇಳಿದ್ದೇವೆ. ಶೂರ್ಪಾರಕದಲ್ಲಿ ಮಹಾತ್ಮ ಜಮದಗ್ನಿಯ ರಮ್ಯವಾದ ಪಾಷಾಣ ತೀರ್ಥ ಮತ್ತು ಪುರಶ್ಚಂದ್ರಗಳಿವೆ. ಮರ್ತ್ಯದೇಶದಲ್ಲಿ ಬಹು ಆಶ್ರಮಗಳಿಂದೊಡಗೂಡಿದ ಅಶೋಕತೀರ್ಥ, ಪಾಂಡ್ಯದೇಶದಲ್ಲಿ ಅಗಸ್ತ್ಯ ಮತ್ತು ವಾರುಣ ತೀರ್ಥಗಳು, ಮತ್ತು ಅದೇ ಪಾಂಡ್ಯದೇಶದಲ್ಲಿ ಪುಣ್ಯ ಕುಮಾರಿಯರು ಇದ್ದಾರೆ ಎಂದು ಹೇಳುತ್ತಾರೆ. ಈಗ ತಾಮ್ರಪರ್ಣಿಯ ಕುರಿತು ಹೇಳುತ್ತೇನೆ. ಕೇಳು. ಅಲ್ಲಿ ದೇವತೆಗಳು ಮಹದಿಚ್ಛೆಯನ್ನು ಸಾಧಿಸಲು ತಪಸ್ಸನ್ನು ತಪಿಸಿದರು. ಅದೇ ತಣ್ಣೀರಿನ, ತುಂಬಾ ನೀರಿರುವ, ಪುಣ್ಯವೂ ಮಂಗಳಕರವೂ ಆದ ಗೋಕರ್ಣವೆಂದು ಮೂರು ಲೋಕಗಳಲ್ಲಿ ವಿಖ್ಯಾತವಾಗಿದೆ. ಅಲ್ಲಿಯೇ ತಮ್ಮ ಆತ್ಮವನ್ನು ಪಳಗಿಸದೇ ಇದ್ದವರಿಗೆ ಹೋಗಲು ಕಷ್ಟವಾಗುವ ಸರೋವರವಿದೆ. ಅಲ್ಲಿಯೇ ದೇವಸಭ ಗಿರಿಯಲ್ಲಿ ಅಗಸ್ತ್ಯನ ಶಿಷ್ಯ ತೃಣಸೋಮಾಗ್ನಿಯ ಫಲಮೂಲ ಸಮೃದ್ಧ ಪುಣ್ಯಾಶ್ರಮವಿದೆ.  ಅಲ್ಲಿ ಶ್ರೀಮಂತ, ಮಣಿಮಯ, ಮಂಗಳಕರ ವೈಡೂರ್ಯಪರ್ವತ ಮತ್ತು ಬಹಳಷ್ಟು ಫಲಮೂಲ ಮತ್ತು ನೀರಿನಿಂದೊಡಗೂಡಿದ ಅಗಸ್ತ್ಯಾಶ್ರಮಗಳಿವೆ. ಈಗ ನಾನು ಸುರಾಷ್ಟ್ರದಲ್ಲಿರುವ ಪುಣ್ಯಸ್ಥಳಗಳು, ಆಶ್ರಮಗಳು, ನದಿಗಳು, ಗಿರಿಗಳು, ಮತ್ತು ಸರೋವರಗಳ ಕುರಿತು ಹೇಳುತ್ತೇನೆ. ವಿಪ್ರರು ಅಲ್ಲಿರುವ ಚಮಸೋನ್ಮಜ್ಜನ ಮತ್ತು ಸಮುದ್ರ ತೀರದಲ್ಲಿರುವ ಮೂವತ್ತು ದೇವತೆಗಳ ತೀರ್ಥ ಪ್ರಭಾಸದ ಕುರಿತು ಹೇಳುತ್ತಾರೆ. ಅಲ್ಲಿ ತಾಪಸಿಗಳು ನಡೆದುಕೊಳ್ಳುವ ಪಿಂಡಾರಕ ಎಂಬ ಹೆಸರಿನ ಶುಭ ಪ್ರದೇಶವೂ ಕ್ಷಿಪ್ರವಾಗಿ ಸಿದ್ಧಿಯನ್ನು ಕೊಡುವ ಉಜ್ಜಯಂತ ಗಿರಿಯೂ ಇವೆ. ಅಲ್ಲಿ ಹಿಂದೆ ದೇವರ್ಷಿಗಳಲ್ಲಿ ಹಿರಿಯ ನಾರದನು ಹೇಳಿದ ಶ್ಲೋಕವೊಂದಿದೆ, ಕೇಳು. ಸುರಾಷ್ಟ್ರದಲ್ಲಿರುವ ಮೃಗಪಕ್ಷಿಗಳು ವಾಸಿಸುವ ಉಜ್ಜಯಂತದ ಮೇಲೆ ತನ್ನ ದೇಹವನ್ನು ದಂಡಿಸಿ ತಪಸ್ಸನ್ನಾಚರಿಸುವವನು ಸ್ವರ್ಗದಲ್ಲಿ ಮೆರೆಯುತ್ತಾನೆ. ಅಲ್ಲಿಯೇ ಪುರಾಣಗಳಲ್ಲಿ ಹೇಳಿರುವ ಸಾಕ್ಷಾದ್ದೇವ ಸನಾತನ ಧರ್ಮ ಮಧುಸೂದನನು ವಾಸಿಸುವ ಪುಣ್ಯ ದ್ವಾರವತಿಯಿದೆ. ವೇದವಿದ ವಿಪ್ರರು ಮತ್ತು ಆಧ್ಯಾತ್ಮವನ್ನು ತಿಳಿದ ಜನರು ಮಹಾತ್ಮ ಕೃಷ್ಣನೇ ಸನಾತನ ಧರ್ಮವೆಂದು ಹೇಳುತ್ತಾರೆ. ಗೋವಿಂದನೇ ಪವಿತ್ರರಲ್ಲಿ ಪರಮ ಪವಿತ್ರನೆಂದೂ, ಪುಣ್ಯಗಳಲ್ಲಿ ಪುಣ್ಯನೆಂದೂ, ಮಂಗಳಗಳಲ್ಲಿ ಮಂಗಳನೆಂದು ಹೇಳುತ್ತಾರೆ. ಮೂರು ಲೋಕಗಳಿಗೂ ದೇವದೇವ, ಸನಾತನ, ಪುಂಡರೀಕಾಕ್ಷ, ಹರಿ, ಅಚಿಂತ್ಯಾತ್ಮ ಮಧುಸೂದನನು ಅಲ್ಲಿಯೇ ವಾಸಿಸುತ್ತಾನೆ.

ಪಶ್ಚಿಮ ತೀರ್ಥಕ್ಷೇತ್ರಗಳ ಕೀರ್ತನೆ

“ಈಗ ನಾನು ಪಶ್ಚಿಮದಿಕ್ಕಿನಲ್ಲಿ ಅವಂತಿಯಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳ ಕುರಿತು ಹೇಳುತ್ತೇನೆ. ಪಶ್ಚಿಮದಿಕ್ಕಿನಲ್ಲಿ ಹರಿಯುವ, ಪ್ರಿಯಂಗು ಬಳ್ಳಿಗಳು ಮತ್ತು ಮಾವಿನ ವನಗಳಿಂದ ಕೂಡಿದ, ಬೆತ್ತದ ವನಗಳ ತೀರದಲ್ಲಿರುವ ನರ್ಮದೆಯು ಪುಣ್ಯ ನದಿ. ಆ ಪುಣ್ಯ ಕ್ಷೇತ್ರದಲ್ಲಿಯೇ ವಿಶ್ರವಸ ಮುನಿಗೆ ಧನಪತಿ, ನರವಾಹನ ಕುಬೇರನು ಜನಿಸಿದನು. ಅಲ್ಲಿ ದಿವ್ಯಪುಷ್ಪಫಲಗಳಿಂದೊಡಗೂಡಿದ ಹಸಿರುಬಣ್ಣದ ಮರಗಳಿರುವ ವೈಡೂರ್ಯಶಿಖರ ಎನ್ನುವ ಪುಣ್ಯ, ಶುಭ ಮತ್ತು ಶ್ರೇಷ್ಠ ಪರ್ವತವಿದೆ. ಆ ಶೈಲದ ಶಿಖರದಲ್ಲಿ ದೇವಗಂಧರ್ವಸೇವಿತ, ಅರಳಿದ ತಾವರೆಗಳಿಂದ ಕೂಡಿದ ಧೀಮಂತ ಸರೋವರವಿದೆ. ಆ ಪರ್ವತದಲ್ಲಿ ಸ್ವರ್ಗಕ್ಕೆ ಸಮಾನವಾದ ಪುಣ್ಯಕರ, ದಿವ್ಯ, ನಿತ್ಯವೂ ದೇವರ್ಷಿ ಸೇವಿತ ಬಹಳಷ್ಟು ಆಶ್ಚರ್ಯಗಳಿವೆ. ಅಲ್ಲಿಯೇ ಸರೋವರಗಳಿಂದ ಕೂಡಿದ ಪುಣ್ಯತೀರ್ಥ ರಾಜರ್ಷಿ ವಿಶ್ವಾಮಿತ್ರನದಿಯು ಹರಿಯುತ್ತದೆ. ಅದರ ದಡದಲ್ಲಿಯೇ ಸತ್ಯವಂತರ ನಡುವೆ ನಹಷನ ಮಗ ಯಯಾತಿಯು ಕೆಳಗೆ ಬಿದ್ದು ಪುನಃ ಧರ್ಮ ಸನಾತನ ಲೋಕಗಳನ್ನು ಪಡೆದನು. ಅಲ್ಲಿ ಪುಣ್ಯ ಸರೋವರವೂ ಮೈನಾಕ ಪರ್ವತವೂ ಮತ್ತು ಬಹಳಷ್ಟು ಫಲಮೂಲಗಳಿರುವ ಅಸಿತ ಎಂಬ ಹೆಸರಿನ ಪರ್ವತವೂ ಇವೆ. ಅಲ್ಲಿ ಕಕ್ಷಸೇನನ ಪುಣ್ಯಾಶ್ರಮವೂ ಮತ್ತು ಸರ್ವತ್ರ ಖ್ಯಾತ ಚ್ಯವನನ ಆಶ್ರಮವೂ ಇವೆ. ಅಲ್ಲಿ ಸ್ವಲ್ಪವೇ ತಪಸ್ಸಿನಿಂದ ಮಾನವರು ಸಿದ್ಧಿಯನ್ನು ಹೊಂದುತ್ತಾರೆ. ಅಲ್ಲಿ ಋಷಿಗಳ ಮತ್ತು ಭಾವಿತಾತ್ಮರ ಆಶ್ರಮಗಳಿಂದೊಡಗೂಡಿದ, ಮೃಗ ಪಕ್ಷಿಗಣಗಳಿಂದೊಡಗೂಡಿದ ಜಂಬೂಮಾರ್ಗವಿದೆ. ಅಲ್ಲಿಯೇ ಸತತವೂ ತಾಪಸರಿಂದೊಡಗೂಡಿದ ಕೇತುಮಾಲ, ಮೇಧ್ಯ ಮತ್ತು ಗಂಗಾರಣ್ಯಗಳಿವೆ. ಅಲ್ಲಿಯೇ ಪುಣ್ಯವೂ ದ್ವಿಜಸೇವಿತವೂ ಆದ ಖ್ಯಾತ ಸೈಂಧವಾರಣ್ಯ, ಪುಷ್ಕರ ಎಂಬ ಹೆಸರಿನ ವೈಖಾನಸರ, ಸಿದ್ಧರ ಮತ್ತು ಋಷಿಗಳ ಪ್ರಿಯ ಆಶ್ರಮ ಪಿತಾಮಹ ಬ್ರಹ್ಮನ ಪುಣ್ಯ ಸರೋವರವಿದೆ. ಪುಷ್ಕರವನ್ನು ಹೊಗಳಿ ಪ್ರಜಾಪತಿಯು ಹೇಳಿದ ಶ್ಲೋಕವಿದೆ. ಕೇಳು. “ಮನಸ್ಸಿನಲ್ಲಿಯಾದರೂ ಪುಷ್ಕರವನ್ನು ಬಯಸುವವನು ಎಲ್ಲ ಪಾಪಗಳನ್ನೂ ಕಳಚಿಕೊಂಡು ಸ್ವರ್ಗದಲ್ಲಿ ಮೆರೆಯುತ್ತಾನೆ.

ಉತ್ತರ ತೀರ್ಥಕ್ಷೇತ್ರಗಳ ಕೀರ್ತನೆ

“ರಾಜಶಾರ್ದೂಲ! ಈಗ ನಾನು ಉತ್ತರದಿಕ್ಕಿನಲ್ಲಿರುವ  ಪುಣ್ಯ ತೀರ್ಥಗಳ ಮತ್ತು ಪ್ರದೇಶಗಳ ಕುರಿತು ಹೇಳುತ್ತೇನೆ. ದಂಡೆಗಳಲ್ಲಿ ಸರೋವರ ಮತ್ತು ವನಗಳನ್ನು ಹೊಂದಿದ ಪುಣ್ಯವಾಹಿನಿ ಸರಸ್ವತಿಯಿದೆ. ಅಲ್ಲಿಯೇ ಮಹಾವೇಗದಿಂದ ಸಮುದ್ರದ ಕಡೆ ಹರಿಯುತ್ತಿರುವ ಯಮುನಾನದಿಯೂ ಇದೆ. ಅಲ್ಲಿಯ ಪುಣ್ಯತಮ ಮಂಗಳಕರ ಸಾರಸ್ವತೀ ತೀರ್ಥದಲ್ಲಿ ದ್ವಿಜರು ಹೋಗಿ ಸ್ನಾನಮಾಡುತ್ತಾರೆ. ಅಲ್ಲಿಯೇ ಪುಣ್ಯವೂ ಮಂಗಳಕರವೂ ಆದ ಅಗ್ನಿಶಿರ ಎನ್ನುವ ತೀರ್ಥವಿದೆ - ಅಲ್ಲಿ ಸಹದೇವನು ಯಾಗದ ಬಟ್ಟಲನ್ನು ಎಸೆದು ಅಳೆದ ಜಾಗದಲ್ಲಿ ಯಜ್ಞವನ್ನು ಮಾಡಿದ್ದನು. ಅದೇ ಸಂದರ್ಭದಲ್ಲಿ ಮೊದಲು ಇಂದ್ರನಿಂದ ಹಾಡಲ್ಪಟ್ಟ ಮತ್ತು ಈ ಲೋಕದಲ್ಲಿ ದ್ವಿಜರು ಹಾಡುವ ಈ ಇಂದ್ರಗೀತೆ ರಚಿಸಲ್ಪಟ್ಟಿತು. ಯಮುನಾನದಿಯ ತೀರದಲ್ಲಿ ಸಹದೇವನು ಒಂದು ಕೋಟಿ ಅಗ್ನಿಗಳನ್ನು, ಒಂದು ಲಕ್ಷ ದಕ್ಷಿಣೆಗಳನ್ನಿತ್ತು ರಚಿಸಿದನು. ಅಲ್ಲಿಯೇ ಮಹಾಯಶಸ್ವಿ ಚಕ್ರವರ್ತಿಯು ಮೂವತ್ತೈದು ಅಶ್ವಮೇಧಯಾಗಗಳನ್ನು ನೆರವೇರಿಸಿದನು. ದ್ವಿಜರ ಬಯಕೆಗಳನ್ನು ಪೂರೈಸಿದ ಅತ್ಯಂತ ಪುಣ್ಯಕರವೆಂದು ನಾನು ಹಿಂದೆಯೇ ಕೇಳಿದ್ದ ಸರಕಸ್ತನ ಆಶ್ರಮವಿದೆ. ಸರಸ್ವತೀ ನದಿಯು ಸಜ್ಜನರಿಂದ ಯಾವಾಗಲೂ ಪೂಜಿಸಲ್ಪಟ್ಟಿದೆ. ಋಷಿ ವಾಲಖಿಲ್ಯರು ಹಿಂದೆ ಇಲ್ಲಿಯೇ ಯಾಗಮಾಡಿದ್ದರು. ಅಲ್ಲಿಯೇ ಪುಣ್ಯತಮ ವಿಖ್ಯಾತ ಧೃಷದ್ವತೀ ನದಿಯಿದೆ. ಅಲ್ಲಿ ವೇದಜ್ಞ, ವೇದವಿದಿತ, ವೇದವಿದ್ಯೆಗಳನ್ನು ತಿಳಿದಿರುವ, ಸುಪುಣ್ಯ ವೈವರ್ಣ್ಯ ಮತ್ತು ವರ್ಣರು ನಿತ್ಯವೂ ಪುಣ್ಯಕರ ಯಾಗಗಳನ್ನು ಮಾಡುತ್ತಿರುತ್ತಾರೆ. ಹಿಂದೆ ಇಂದ್ರ ಮತ್ತು ವರುಣರನ್ನೊಡಗೂಡಿ ಬಹುಸಂಖ್ಯೆಯಲ್ಲಿ ದೇವತೆಗಳು ವಿಶಾಖಯೂಪದಲ್ಲಿ ತಪಸ್ಸುಮಾಡಿದ್ದರು. ಆದುದರಿಂದ ಅದು ಪುಣ್ಯತಮ. ಮಹಾನೃಷಿ ಮಹಾಭಾಗ ಮಹಾಯಶಸ್ವಿ ಜಮದಗ್ನಿಯು ಪುಣ್ಯವೂ ರಮ್ಯವೂ ಆದ ಪಕಾಶಕೇಷದಲ್ಲಿ ಪ್ರಮುಖ ಯಜ್ಞಮಾಡಿದ್ದನು. ಅಲ್ಲಿ ಸರ್ವ ನದಿಗಳೂ ಸಾಕ್ಷಾತ್ತಾಗಿ, ಪ್ರತಿಯೊಬ್ಬರೂ ತಮ್ಮ ತಮ್ಮ ನೀರನ್ನು ಹೊತ್ತು. ಆ ಋಷಿಸತ್ತಮನನ್ನು ಸುತ್ತುವರೆದು ನಿಂತಿದ್ದರು. ಅಲ್ಲಿಯೂ ಕೂಡ ಸ್ವಯಂ ವಿಶ್ವಾವಸುವು ಆ ಮಹಾತ್ಮ ವೀರನ ವೀರ್ಯವನ್ನು ನೋಡಿ ಈ ಶ್ಲೋಕವನ್ನು ಹಾಡಿದ್ದನು: “ಮಹಾತ್ಮ ಜಮದಗ್ನಿಯು ಯಾಗದಿಂದ ದೇವತೆಗಳನ್ನು ಪೂಜಿಸುತ್ತಿರುವಾಗ ಎಲ್ಲಾ ನದಿಗಳೂ ಆಗಮಿಸಿ ಅವನಿಗೆ ಮಧುವನ್ನು ಸಮರ್ಪಿಸಿದವು.” ಗಂಧರ್ವ-ಯಕ್ಷ-ರಾಕ್ಷಸ-ಅಪ್ಸರೆಯರರಿಂದ ಶೋಭಿತ, ಕಿರಾತ ಕಿನ್ನರರು ವಾಸಿಸುವ, ಶೈಲಗಳ ಶಿಖರಗಳಲ್ಲಿಯೇ ಶ್ರೇಷ್ಠ, ಬ್ರಹ್ಮರ್ಷಿಗಣಸೇವಿತ, ಗಂಗೆಯು ಉದ್ಭವಿಸುವ ಗಂಗಾದ್ವಾರವು ಪುಣ್ಯಕರವೆಂದು ವಿಖ್ಯಾತವಾಗಿದೆ. ಇಲ್ಲಿಯೇ ಸನತ್ಕುಮಾರ, ಪುಣ್ಯಕರ ಕನಖಲ ಮತ್ತು ಪುರೂರವನು ಹುಟ್ಟಿದ ಪುರು ಎನ್ನುವ ಹೆಸರಿನ ಪರ್ವತವೂ ಇವೆ. ಇಲ್ಲಿಯೇ ಮಹರ್ಷಿಗಣಸೇವಿತ, ಭೃಗುವು ತಪಸ್ಸನ್ನು ಮಾಡಿದ, ಭೃಗುತುಂಗ ಆಶ್ರಮ ಎಂದು ಖ್ಯಾತವಾದ ಮಹಾಗಿರಿಯಿದೆ. ಹಿಂದೆ ಆಗಿಹೋದ, ಮುಂದೆ ಆಗಲಿರುವ ಮತ್ತು ಈಗ ಆಗುತ್ತಿರುವ ಎಲ್ಲವೂ ಪ್ರಭು, ವಿಷ್ಣು, ಶಾಶ್ವತ, ಪುರುಷೋತ್ತಮ ನಾರಾಯಣನಲ್ಲಿವೆ. ಆ ಅತಿಯಶಸ್ವಿಯ ಪುಣ್ಯಕರ ವಿಶಾಲ, ಮೂರು ಲೋಕಗಳಲ್ಲಿಯೂ ವಿಶ್ರುತ ಬದರೀ ಆಶ್ರಮವು ಅಲ್ಲಿದೆ. ವಿಶಾಲ ಬದರಿಕಾಶ್ರಮದಲ್ಲಿ ಬಿಸಿನೀರನ್ನು ಹರಿಸುವ ಗಂಗೆಯು ತಣ್ಣಿರನ್ನು ಹರಿಸುತ್ತಾ, ಬಂಗಾರದ ಬಣ್ಣದ ಮರಳನ್ನು ಚೆಲ್ಲಿ ಹರಿಯುತ್ತಾಳೆ. ಅಲ್ಲಿ ಋಷಿಗಳೂ, ದೇವತೆಗಳೂ, ಮಹೌಜಸರೂ ಬಂದು ನಿತ್ಯವೂ ದೇವ ವಿಭು ನಾರಾಯಣನನ್ನು ನಮಸ್ಕರಿಸುತ್ತಾರೆ. ಎಲ್ಲಿ ದೇವ ಪರಮಾತ್ಮ ಸನಾತನ ನಾರಾಯಣನಿದ್ದಾನೆಯೋ ಅಲ್ಲಿ ಜಗತ್ತಿನ ಎಲ್ಲ ತೀರ್ಥಗಳೂ ಪುಣ್ಯಕ್ಷೇತ್ರಗಳು ಇವೆ. ಅವನು ಪುಣ್ಯ. ಅವನು ಪರಬ್ರಹ್ಮ. ಅವನೇ ತೀರ್ಥ. ಅವನೇ ತಪೋವನ. ಅಲ್ಲಿಯೇ ಎಲ್ಲ ದೇವರ್ಷಿ-ಸಿದ್ಧ-ತಪೋಧನರೂ ಇದ್ದಾರೆ. ಆದಿದೇವ ಮಹಾಯೋಗಿ ಮಧುಸೂದನನು ಎಲ್ಲಿದ್ದಾನೋ ಅದು ಪುಣ್ಯಗಳಿಗಿಂತಲೂ ಪುಣ್ಯಕರ ಎನ್ನುವುದರಲ್ಲಿ ಏನೂ ಸಂಶವನ್ನಿಟ್ಟುಕೊಳ್ಳಬೇಡ. ಇವೆಲ್ಲವೂ ಪೃಥ್ವಿಯಲ್ಲಿರುವ ಪುಣ್ಯ ತೀರ್ಥಗಳು ಮತ್ತು ಕ್ಷೇತ್ರಗಳ ವರ್ಣನೆ. ಇವುಗಳನ್ನು ವಸು-ಸಾಧ್ಯ-ಆದಿತ್ಯ-ಮರುತ್ತು-ಅಶ್ವಿನಿಯರು, ಋಷಿಗಳು, ಬ್ರಹ್ಮಕಲ್ಪ ಮಹಾತ್ಮರು ಎಲ್ಲರೂ ಸೇವಿಸುತ್ತಾರೆ. ಬ್ರಾಹ್ಮಣರು, ಋಷಿಗಳು, ಮತ್ತು ಮಹಾಭಾಗ ತಮ್ಮಂದಿರೊಂದಿಗೆ ಈ ಕ್ಷೇತ್ರಗಳಿಗೆ ಹೋದರೆ ನಿನ್ನ ದುಗುಡವನ್ನು ತೊರೆಯುತ್ತೀಯೆ.”

Related image

Leave a Reply

Your email address will not be published. Required fields are marked *