ಯುಧಿಷ್ಠಿರ-ಮಾರ್ಕಂಡೇಯ ಸಂವಾದ

Related imageಶುಭಾಶುಭ ಕರ್ಮಫಲ

ಮಹಾಮುನಿ ಮಾರ್ಕಂಡೇಯನು ಹೇಳಲು ಸಿದ್ಧನಾಗಿದ್ದಾನೆಂದು ನೋಡಿ ಕುರುರಾಜ ಪಾಂಡವನು ಕಥೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದನು: “ನೀನು ಸನಾತನ ದೇವ, ದೈತ್ಯರ ಮತ್ತು ಮಹಾತ್ಮ ಋಷಿಗಳ ಮತ್ತು ರಾಜರ್ಷಿಗಳ ಚರಿತ್ರೆಗಳನ್ನು ಎಲ್ಲವನ್ನೂ ತಿಳಿದಿದ್ದೀಯೆ. ತುಂಬಾ ಸಮಯದಿಂದ ನಾವು ಸೇವೆ ಮತ್ತು ಪೂಜೆಗಳಿಗೆ ಮಾನ್ಯನಾದ ನಿನ್ನ ಬರವನ್ನು ಕಾಯುತ್ತಿದ್ದೆವು. ಈಗ ದೇವಕೀಪುತ್ರನೂ ನಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದಾನೆ. ನಾನು ಸುಖವನ್ನು ಕಳೆದುಕೊಂಡಿರುವುದನ್ನು ಮತ್ತು ದುರ್ವೃತ್ತ ಧಾರ್ತರಾಷ್ಟ್ರರು ಉನ್ನತಿಹೊಂದಿದುದನ್ನು ನೋಡಿದರೆ ಮನುಷ್ಯನೇ ಶುಭವಾದ ಮತ್ತು ಅಶುಭವಾದ ಎಲ್ಲ ಕರ್ಮಗಳ ಕರ್ತ ಮತ್ತು ಅವನು ಅವುಗಳ ಫಲವನ್ನು ಸ್ವತಃ ಅನುಭವಿಸುತ್ತಾನೆ ಎಂದು ನನಗನ್ನಿಸುತ್ತದೆ. ಇದರಲ್ಲಿ ಈಶ್ವರನು ಹೇಗೆ ಕರ್ತನಾಗುತ್ತಾನೆ? ಅಥವಾ ನರರು ಸುಖದುಃಖಗಳನ್ನು ಇಲ್ಲಿಯೇ ಅನುಭವಿಸುತ್ತಾರೋ ಅಥವಾ ಅದು ಪರದೇಹದಲ್ಲಿಯೂ ಅವರನ್ನು ಅನುಸರಿಸುತ್ತವೆಯೋ? ದ್ವಿಜಸತ್ತಮ! ದೇಹಿಯು ದೇಹವನ್ನು ತೊರೆದಾಗ ಶುಭಾಶುಭಗಳು ಅವನನ್ನು ಹೇಗೆ ಹಿಂಬಾಲಿಸಿ ಬೇಟೆಯಾಡುತ್ತವೆ ಮತ್ತು ಪ್ರೇತವನ್ನು ಅಥವಾ ಇಲ್ಲಿ ಹೇಗೆ ಅವನನ್ನು ಸೇರುತ್ತವೆ? ಕರ್ಮವು ಈ ಲೋಕದಲ್ಲಿ ಮಾತ್ರ ಮಿತವಾಗಿರುತ್ತದೆಯೋ ಅಥವಾ ಪರಲೋಕದಲ್ಲಿಯೂ ಹಿಂಬಾಲಿಸುತ್ತದೆಯೋ? ಜೀವಿಯು ಪ್ರೇತವಾದಾಗ ಕರ್ಮಗಳು ಎಲ್ಲಿ ನಿಂತಿರುತ್ತವೆ?”

ಮಾರ್ಕಂಡೇಯನು ಹೇಳಿದನು: “ಮಾತುಗಾರರಲ್ಲಿ ಶ್ರೇಷ್ಠನೇ! ಈ ಪ್ರಶ್ನೆಯು ನಿನಗೆ ಯುಕ್ತವಾಗಿದೆ. ಏನನ್ನು ತಿಳಿಯಬೇಕೆಂಬುದು ನಿನಗೆ ತಿಳಿದಿದೆ. ಅರ್ಥವನ್ನು ಸಿದ್ಧಾಂತಗೊಳಿಸಲು ನೀನು ಕೇಳುತ್ತಿದ್ದೀಯೆ. ಈಗ ನಾನು ನರನು ಇಲ್ಲಿ ಮತ್ತು ಅಲ್ಲಿ ಸುಖದುಃಖಗಳನ್ನು ಹೇಗೆ ಹೊಂದುತ್ತಾನೆ ಎಂದು ಹೇಳುತ್ತೇನೆ. ಆದುದರಿಂದ ಏಕಮನಸ್ಕನಾಗಿ ಕೇಳು. ಮೊದಲಿಗೆ ಪ್ರಜಾಪತಿಯು ನಿರ್ಮಲ ಶರೀರಗಳನ್ನೂ ಧರ್ಮವನ್ನೇ ಅನುಸರಿಸುತ್ತಿದ್ದ ವಿಶುದ್ಧ ಶರೀರಿಗಳನ್ನೂ ಸೃಷ್ಟಿಸಿದನು. ಆ ನರರು ಅಮೋಘಬಲಸಂಕಲ್ಪರೂ, ಸುವ್ರತರೂ, ಸತ್ಯವಾದಿಗಳು, ಪುಣ್ಯರೂ, ಪುರಾಣರೂ, ಬ್ರಹ್ಮನಲ್ಲಿ ನೆಲೆಗೊಂಡವರೂ ಆಗಿದ್ದರು. ಅವರೆಲ್ಲರೂ ಸ್ವಚ್ಛಂದದಿಂದ ನಭಸ್ತಲದಲ್ಲಿ ದೇವತೆಗಳೊಂದಿಗೆ ಕೂಡುತ್ತಿದ್ದರು ಮತ್ತು ಆ ಎಲ್ಲ ಸ್ವಚ್ಛಂದಚಾರಿಗಳೂ ಪುನಃ ಇಲ್ಲಿಗೆ ಬರುತ್ತಿದ್ದರು. ಆ ನರರು ಬೇಕೆಂದಾಗ ಸಾಯುತ್ತಿದ್ದರು ಮತ್ತು ಬೇಕೆಂದಾಗ ಜೀವಿಸುತ್ತಿದ್ದರು. ಅವರಿಗೆ ಬಾಧೆಯೆನ್ನುವುದಿರಲಿಲ್ಲ. ನಿರಾತಂಕರಾಗಿದ್ದರು. ಸಿದ್ಧಾರ್ಥರಾಗಿದ್ದರು. ಉಪದ್ರವಗಳಿರಲಿಲ್ಲ. ಅವರು ದೇವಸಂಘಗಳನ್ನೂ ಮಹಾತ್ಮ ಋಷಿಗಳನ್ನೂ ಕಣ್ಣಾರೆ ಕಾಣುತ್ತಿದ್ದರು. ಸರ್ವ ಧರ್ಮಗಳೂ ಅವರಿಗೆ ಪ್ರತ್ಯಕ್ಷವಾಗಿದ್ದವು, ತಮ್ಮನ್ನು ನಿಯಂತ್ರಿಸಿಕೊಂಡಿದ್ದರು ಮತ್ತು ಮಾತ್ಸರ್ಯವೇ ಇರಲಿಲ್ಲ. ಅವರು ಸಾವಿರಾರು ವರ್ಷಗಳು ಇರುತ್ತಿದ್ದರು ಮತ್ತು ಸಹಸ್ರಾರು ಮಕ್ಕಳನ್ನು ಪಡೆಯುತ್ತಿದ್ದರು.

ಕಾಲಾಂತರದಲ್ಲಿ ಅವರು ಕೇವಲ ಭೂಮಿಯ ಮೇಲೆಯೇ ನಡೆಯುವವರಾದರು. ಅವರಲ್ಲಿ ಕಾಮಕ್ರೋಧಗಳುಂಟಾದವು. ಮಾಯ-ಮೋಸಗಳಿಂದ ಜೀವಿಸತೊಡಗಿದರು. ಲೋಭ-ಮೋಹಗಳೂ ಅವರಿಗುಂಟಾಯಿತು. ಮತ್ತು ದೇವತೆಗಳು ನರರನ್ನು ತ್ಯಜಿಸಿದರು. ಅಶುಭಕರ್ಮಗಳಿಂದ ಆ ಪಾಪಿಗಳು ಪ್ರಾಣಿಗಳಾಗಿ ಹುಟ್ಟಿದರು ಅಥವಾ ನರಕಕ್ಕೆ ಹೋದರು. ಮತ್ತು ವಿಚಿತ್ರ ಸಂಸಾರಗಳಲ್ಲಿ ಪುನಃ ಪುನಃ ಪಚನಗೊಂಡರು. ಅವರ ಆಸೆಗಳು ನಿರರ್ಥಕವಾಗತೊಡಗಿದವು. ಸಂಕಲ್ಪಗಳು ನಿರರ್ಥಕವಾದವು. ಜ್ಞಾನವು ನಿರರ್ಥಕವಾಯಿತು. ತಿಳಿಯದೆಯೇ ಅವರು ಎಲ್ಲವುಗಳಲ್ಲಿ ಶಂಕಿತರಾಗತೊಡಗಿದರು ಮತ್ತು ತಮ್ಮ ಅಶುಭ ಕರ್ಮಗಳ ಗುರುತುಗಳನ್ನು ಇಟ್ಟುಕೊಂಡು ತಮ್ಮ ಪಾಲಿನ ಕ್ಲೇಷಗಳನ್ನು ಅನುಭವಿಸತೊಡಗಿದರು. ದುಷ್ಟ ಕುಲಗಳಲ್ಲಿ ಹುಟ್ಟತೊಡಗಿದರು. ಬಹಳ ರೀತಿಯ ವ್ಯಾಧಿಗಳಿಗೊಳಗಾದರು. ದುರಾತ್ಮರೂ ಅಪ್ರತಾಪಿಗಳೂ ಆದ ಅವರು ಅಲ್ಪಾಯುಷಿಗಳಾದರು. ರೌದ್ರಕರ್ಮಗಳ ಫಲವಾಗಿ ಪಾಪವು ಹುಟ್ಟಿತು. ಎಲ್ಲ ಕಾಮಗಳಿಗೂ ಅಂಟಿಕೊಂಡರು. ನಾಸ್ತಿಕರಾದರು. ತಮ್ಮ ಸೇತುವೆಗಳನ್ನು ಕತ್ತರಿಸಿಕೊಂಡರು.

“ಜೀವಿಯು ಇಲ್ಲಿಯೇ ಸ್ವತಃ ಮಾಡಿದ ಕರ್ಮಗಳು ಪ್ರೇತದ ಗತಿಯನ್ನು ನಿರ್ಧರಿಸುತ್ತವೆ. ಪ್ರಾಜ್ಞನ ಮತ್ತು ಹೀನಬುದ್ಧಿಯ ಕರ್ಮಕೋಶಗಳು ಎಲ್ಲಿ ನಿಲ್ಲುತ್ತವೆ? ಮತ್ತು ಎಲ್ಲಿಂದ ಸುಕೃತ ದುಷ್ಕೃತಗಳ ಫಲವನ್ನು ಪಡೆಯುತ್ತಾನೆ? ಈಗ ಇವುಗಳಿಗೆ ಉತ್ತರವನ್ನು ಕೇಳು. ದೇವಸೃಷ್ಟಿಯಾದ ಈ ಮಾನವ ಆದಿಶರೀರವು ಶುಭ ಮತ್ತು ಅಶುಭವಾದ ಮಹಾ ಸಂಚಯವನ್ನು ಮಾಡಿಕೊಳ್ಳುತ್ತದೆ. ಆಯುಷ್ಯವು ಮುಗಿದಾಗ ಪ್ರಾಯವನ್ನು ಕಳೆದುಕೊಂಡ ಕಲೇವರವನ್ನು ತೊರೆದು ತಕ್ಷಣವೇ ಯೋನಿಯಲ್ಲಿ ಪುನಃ ಹುಟ್ಟುತ್ತಾನೆ. ಅದರಲ್ಲಿ ಕಾಲಾಂತರವೇ ಇರುವುದಿಲ್ಲ. ಅವನನ್ನೇ ಸದಾ ಅನುಸರಿಸಿಬಂದ ಸುಕೃತ ಮತ್ತು ದುಷ್ಕೃತ ಕರ್ಮಗಳ ಫಲಾನುಸಾರವಾಗಿ ಅವನು ಸುಖಾರ್ಹನಾಗಿ ಅಥವಾ ದುಃಖಾರ್ಹನಾಗಿ ಜನ್ಮಪಡೆಯುತ್ತಾನೆ. ಜ್ಞಾನದೃಷ್ಟಿಯಿಲ್ಲದವರು ಆ ಜಂತುವು ಮರಣಧರ್ಮಕ್ಕೊಳಗಾಗಿ ಶುಭ ಅಥವಾ ಅಶುಭ ಲಕ್ಷಣಗಳನ್ನು ಪಡೆದಿರುವುದಿಲ್ಲ ಎಂದು ನಂಬುತ್ತಾರೆ. ಆದರೆ ಇದು ಬುದ್ಧಿಯಿಲ್ಲದವರ ದಾರಿಯೆಂದು ಹೇಳುತ್ತಾರೆ.

“ಈಗ ಇದರ ನಂತರದ ಜ್ಞಾನವಂತರ ಉತ್ತಮವಾದ ಗತಿಯನ್ನು ತಿಳಿಸುತ್ತೇನೆ. ತಪಸ್ಸನ್ನು ತಪಿಸಿದ ಮನುಷ್ಯರು, ಎಲ್ಲ ಆಗಮಗಳನ್ನೂ ತಿಳಿದುಕೊಂಡಿರುವವರು, ವ್ರತಗಳಲ್ಲಿ ಸ್ಥಿರರಾಗಿರುವವರು, ಸತ್ಯಪರರು, ಗುರುಶುಶ್ರೂಷಣೆಯಲ್ಲಿ ನಿರತರಾದವರು, ಸುಶೀಲರು, ಶುದ್ಧಜಾತಿಯವರು, ಕ್ಷಮಿಸುವವರು, ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡವರು, ಉತ್ತಮ ತೇಜಸ್ಸುಳ್ಳವರು, ಪ್ರಾಯಶಃ ಶುಭಯೋನಿಗಳನ್ನು ಸೇರುತ್ತಾರೆ ಮತ್ತು ಶುಭಲಕ್ಷಣಗಳನ್ನು ಹೊಂದಿರುತ್ತಾರೆ. ಜಿತೇಂದ್ರಿಯರಾಗಿರುವುದರಿಂದ ಅವರು ನಿಯಂತ್ರಿಸುತ್ತಿರುತ್ತಾರೆ, ಶುದ್ಧರಾಗಿರುವುದರಿಂದ ರೋಗಿಗಳಾಗುವುದಿಲ್ಲ, ಬಾಧೆಗಳು ಕಡಿಮೆಯಿರುವುದರಿಂದ ಎಲ್ಲವೂ ಸುಲಭವಾಗಿರುತ್ತದೆ ಮತ್ತು ಉಪದ್ರವಗಳಿಲ್ಲದವರಾಗಿರುತ್ತಾರೆ. ಗರ್ಭಪತನವಾಗಿರಲಿ, ಹುಟ್ಟಿರಲಿ ಅಥವಾ ಗರ್ಭದಲ್ಲಿಯೇ ಇರಲಿ, ಅವರು ಜ್ಞಾನಚಕ್ಷುಗಳಿಂದ ಸ್ವಯಂ ತಮ್ಮನ್ನು ಮತ್ತು ಪರವನ್ನೂ ತಿಳಿದಿರುತ್ತಾರೆ. ಈ ಕರ್ಮಭೂಮಿಯನ್ನು ಪಡೆದು ಪುನಃ ಸುರಾಲಯಕ್ಕೆ ಹೋಗುತ್ತಾರೆ. ಕೆಲವೊಂದು ದೈವದಿಂದ, ಕೆಲವೊಂದು ಅದೃಷ್ಟದಿಂದ, ಕೆಲವೊಂದು ಸ್ವಕರ್ಮದಿಂದ ನರನು ಪಡೆಯುತ್ತಾನೆ. ಅದರ ಕುರಿತು ನೀನು ಇನ್ನೂ ಹೆಚ್ಚು ವಿಚಾರಮಾಡಬೇಡ. ಇದಕ್ಕೆ ಸಂಬಂಧಿಸಿದಂತೆ ಒಂದು ಉಪಮೆಯಿದೆ. ಹೇಳುತ್ತೇನೆ. ಕೇಳು.

“ಈ ಲೋಕದಲ್ಲಿ ಮನುಷ್ಯನಿಗೆ ಶ್ರೇಯಸ್ಸಾದುದು ಆದರೆ ಪರಲೋಕದಲ್ಲಿ ಅಲ್ಲದಿರುವುದು ಒಂದಿದೆ, ಇನ್ನೊಂದು ಪರಲೋಕದಲ್ಲಿ ಶ್ರೇಯಸ್ಸನ್ನು ನೀಡುತ್ತದೆ ಆದರೆ ಇಲ್ಲಿ ಅಲ್ಲ, ಮೂರನೆಯದು ಇಲ್ಲಿ ಮತ್ತು ಅಲ್ಲಿ ಶ್ರೇಯಸ್ಸನ್ನು ಕೊಡುವಂಥಹುದು ಮತ್ತು ಕೊನೆಯದು ಇಲ್ಲಿಯೂ ಮತ್ತು ಅಲ್ಲಿಯೂ ಶ್ರೇಯಸ್ಸನ್ನು ಕೊಡದಿರುವಂಥಹುದು ಇವೆ ಎಂದು ನನಗನ್ನಿಸುತ್ತದೆ. ಯಾರಲ್ಲಿ ವಿಪುಲ ಧನವಿದೆಯೋ ಅವರು ಒಳ್ಳೆಯ ಭೂಷಿತಾಂಗರಾಗಿ ನಿತ್ಯವೂ ರಮಿಸುತ್ತಾರೆ. ಅವರು ಈ ಲೋಕದಲ್ಲಿ ಸದಾ ದೇಹಸುಖದಲ್ಲಿ ನಿರತರಾಗಿರುತ್ತಾರೆ. ಆದರೆ ಯಾರು ಯೋಗಯುಕ್ತರಾಗಿ ತಪಸ್ಸಿನಲ್ಲಿ ಪ್ರಸಕ್ತರಾಗಿರುತ್ತಾರೋ, ಸ್ವಾಧ್ಯಾಯಶೀಲರಾಗಿರುತ್ತಾರೋ, ದೇಹವನ್ನು ಕ್ಷೀಣಿಸಿಕೊಳ್ಳುತ್ತಾರೋ, ಜಿತೇಂದ್ರಿಯರಾಗಿರುತ್ತಾರೋ, ಭೂತಹಿತರಾಗಿರುತ್ತಾರೋ, ಅವರಿಗೆ ಆ ಲೋಕ, ಇದಲ್ಲ. ಪ್ರಥಮವಾಗಿ ಯಾರು ಧರ್ಮದಲ್ಲಿಯೇ ನಡೆಯುತ್ತಾರೋ, ಕಾಲಧರ್ಮಕ್ಕೆ ತಕ್ಕಂತೆ ಧನವನ್ನೂ ಪತ್ನಿಯನ್ನೂ ಪಡೆದು ಕ್ರತುಗಳನ್ನು ಯಾಜಿಸುತ್ತಾರೋ ಅವರ ಈ ಲೋಕ ಮತ್ತು ಪರಲೋಕ ಎರಡೂ ಶ್ರೇಯಸ್ಕರವಾಗಿರುತ್ತದೆ. ಯಾರಿಗೆ ವಿದ್ಯೆಯಿಲ್ಲವೋ, ತಪಸ್ಸಿಲ್ಲವೋ, ದಾನವಿಲ್ಲವೋ, ಮಕ್ಕಳನ್ನು ಪಡೆಯುವುದಿಲ್ಲವೋ ಅಂಥಹ ಮೂಢ ಅಭಾಗ್ಯರು ಇಲ್ಲಿಯೂ ಮತ್ತು ಅಲ್ಲಿಯೂ ಸುಖವನ್ನು ಪಡೆಯುವುದಿಲ್ಲ.

“ಆದರೆ ನೀವೆಲ್ಲರೂ ಸುರರ ಕಾರ್ಯಹಿತವನ್ನು ತಿಳಿದುಕೊಂಡು ಬೇರೆಯೇ ಲೋಕದಿಂದ ಈ ಭೂಮಿಗೆ ಬಂದಿರುವವರು. ಅತೀವ ವೀರ್ಯಸತ್ವವುಳ್ಳವರು, ದಿವ್ಯ ತೇಜಸ್ಸುಳ್ಳವರು, ಮತ್ತು ಆರೋಗ್ಯ ದೇಹವನ್ನುಳ್ಳವರು. ಮಹಾ ಶೂರರ ಕೆಲಸಗಳನ್ನು ಮಾಡುವವರಿದ್ದೀರಿ. ತಪಸ್ಸು ಮತ್ತು ಆತ್ಮನಿಯಂತ್ರಣಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ. ದೇವತೆಗಳನ್ನು, ಋಷಿಗಳನ್ನು, ಪ್ರೇತಗಣಗಳೆಲ್ಲರನ್ನೂ ಶ್ರೇಷ್ಠವಿಧಿಗಳಿಂದ ತೃಪ್ತಿಗೊಳಿಸಿದ್ದೀರಿ. ಕ್ರಮೇಣವಾಗಿ ನಿಮ್ಮದೇ ಕರ್ಮಗಳಿಂದ ಪುಣ್ಯಕೃತರು ವಾಸಿಸುವ ಪರಮ ಸ್ವರ್ಗವನ್ನು ಹೊಂದುತ್ತೀರಿ. ಕೌರವೇಂದ್ರ! ಸುಖಾರ್ಹ! ನಿನ್ನ ಈ ಕ್ಲೇಶವನ್ನು ನೋಡಿ ಇದರಲ್ಲಿ ಶಂಕೆಯನ್ನಿಟ್ಟುಕೊಳ್ಳಬೇಡ.”

ಅನಂತರ ಮಹಾತ್ಮ ಮಾರ್ಕಂಡೇಯನಿಗೆ ಪಾಂಡುಸುತನು ಹೇಳಿದನು: “ದ್ವಿಜಮುಖ್ಯರ ಮಹಾತ್ಮೆಯನ್ನು ನಾವು ಕೇಳಬಯಸುತ್ತೇವೆ. ಹೇಳು.” ಈ ಮಾತುಗಳಿಗೆ ಆ ಮಹಾತಪಸ್ವಿ, ಮಹಾತೇಜಸ್ವಿ, ಸರ್ವಶಾಸ್ತ್ರವಿಶಾರದ ಭಗವಾನ್ ಮಾರ್ಕಂಡೇಯನು ತಾರ್ಕ್ಷ್ಯ ಅರಿಷ್ಟನೇಮಿ ಮತ್ತು ಅತ್ರಿಯರ ಕಥೆಯನ್ನು ಹೇಳಿದನು. ಅನಂತರ ಮಾರ್ಕಂಡೇಯನು ಯುಧಿಷ್ಠಿರನಿಗೆ ತಾರ್ಕ್ಷ್ಯ ಮತ್ತು ಸರಸ್ವತಿಯರ ನಡುವೆ ನಡೆದ ಸಂವಾದ (ಸರಸ್ವತೀ ಗೀತೆ) ಯನ್ನು ಹೇಳಿದನು. ಅನಂತರ ಆ ಪಾಂಡವನು ಪುನಃ ಮಾರ್ಕಂಡೇಯನಿಗೆ “ನನಗೆ ವೈವಸ್ವತ ಮನುವಿನ ಚರಿತ್ರೆಯನ್ನು ಹೇಳು.” ಎಂದು ಕೇಳಿಕೊಳ್ಳಲು, ಮುನಿಯು ಅವನಿಗೆ ವೈವಸ್ವತ ಮನುವಿನ ಕಥೆಯನ್ನು ಹೇಳಿದನು.

ಯುಗಕ್ಷಯ ವರ್ಣನೆ; ಮಾರ್ಕಂಡೇಯನಿಗೆ ಬಾಲ ಮುಕುಂದನ ದರ್ಶನ

ಆಗ ಯಶಸ್ವಿನಿ ಮಾರ್ಕಂಡೇಯನನ್ನು ಧರ್ಮರಾಜ ಯುಧಿಷ್ಠಿರನು ವಿನಯೋಪೇತನಾಗಿ ಪುನಃ ಹೀಗೆಂದು ಪ್ರಶ್ನಿಸಿದನು: “ಮಹಾಮುನೇ! ನೀನು ಸಹಸ್ರಾರು ಯುಗಗಳ ಅಂತ್ಯವನ್ನು ನೋಡಿದ್ದೀಯೆ. ಬ್ರಾಹ್ಮಣ ಮಹಾತ್ಮ ಪರಮೇಷ್ಠಿಯನ್ನು ಬಿಟ್ಟು ಬೇರೆ ಯಾರೂ ನಿನ್ನಷ್ಟು ವಯಸ್ಸಿನವನು ಇಲ್ಲವೆಂದು ತಿಳಿದಿದೆ. ಆಕಾಶವೇ ಇಲ್ಲದಿರುವಾಗ, ಈ ಲೋಕವು ದೇವದಾನವರಿಂದ ವರ್ಜಿತವಾದಾಗ ಪ್ರಲಯದಲ್ಲಿ ನೀನೇ ಬ್ರಹ್ಮನ ಬಳಿಯಲ್ಲಿರುತ್ತೀಯೆ. ಪ್ರಲಯವು ಸಂಪೂರ್ಣವಾದಾಗ, ಪಿತಾಮಹನು ಪ್ರವೃದ್ಧನಾದಾಗ, ನೀರನ್ನು ಅಲ್ಲಲ್ಲಿ ಸರಿಸಿ ಆಕಾಶದಲ್ಲಿ ವಾಯುವನ್ನು ತುಂಬಿಸಿ ಪರಮೇಷ್ಠಿಯು ನಡೆಸುವ ಈ ಚತುರ್ವಿಧ ಭೂತಗಳ ಸೃಷ್ಠಿಗಳನ್ನು ಯಥಾವತ್ತಾಗಿ ನೀನೇ ನೋಡುತ್ತೀಯೆ. ನೀನು ಲೋಕಗುರು, ಸಾಕ್ಷಾತ್ ಸರ್ವಲೋಕಪಿತಾಮಹನನ್ನು ತತ್ಪರನಾಗಿ ಸಮಾಧಿಯಲ್ಲಿದ್ದು ಆರಾಧಿಸುತ್ತೀಯೆ. ಆದುದರಿಂದ ಪರಮೇಷ್ಠಿಯ ಪ್ರಸಾದದಿಂದ ಸರ್ವರ ಅಂತಕ ಮೃತ್ಯುವಾಗಲೀ ದೇಹನಾಶಿನೀ ವೃದ್ಧಾಪ್ಯವಾಗಲೀ ನಿನ್ನ ಬಳಿ ಬರುವುದಿಲ್ಲ. ರವಿಯಿಲ್ಲದಿರುವಾಗ, ಅಗ್ನಿಯಿಲ್ಲದಿರುವಾಗ, ವಾಯು ಚಂದ್ರಮರಿಲ್ಲದಿರುವಾಗ, ಅಂತರಿಕ್ಷವಿಲ್ಲದಿರುವಾಗ, ಭೂಮಿಯೂ ಇಲ್ಲದಿರುವಾಗ, ಏನೂ ಉಳಿದಿರದೇ ಇದ್ದಾಗ, ಆ ಒಂದೇ ನೀರಿನಲ್ಲಿ ಲೋಕಗಳಲ್ಲಿನ ಸ್ಥಾವರಜಂಗಮಗಳು ನಷ್ಟವಾದಾಗ, ದೇವಾಸುರಗಣಗಳು ಮಹಾ ಉರಗಗಳು ನಷ್ಟವಾದಾಗ, ಪದ್ಮದಲ್ಲಿ ಮಲಗಿರುವ ಅಮಿತಾತ್ಮ, ಪದ್ಮನಿಕೇತನ, ಸರ್ವಭೂತೇಶ, ಬ್ರಹ್ಮನನ್ನು ನೀನೊಬ್ಬನೇ ನೋಡುತ್ತೀಯೆ. ಹಿಂದೆ ನಡೆದುದೆಲ್ಲವೂ ನಿನ್ನ ಪ್ರತ್ಯಕ್ಷತೆಯಲ್ಲಿಯೇ ನಡೆದಿವೆ. ಆದುದರಿಂದ ಸರ್ವಕ್ಕೆ ಕಾರಣೀಭೂತವಾದ ಕಥೆಯನ್ನು ಕೇಳಲು ಬಯಸುತ್ತೇವೆ. ನೀನೊಬ್ಬನೇ ಅದನ್ನು ಬಹಳ ಬಾರಿ ಅನುಭವಿಸಿದ್ದೀಯೆ. ಎಲ್ಲ ಲೋಕಗಳಲ್ಲಿಯೂ ನಿತ್ಯವೂ ನಡೆಯುವ ಯಾವುದೂ ನಿನಗೆ ತಿಳಿಯದೇ ಇರುವುದಿಲ್ಲ.”

ಮಾರ್ಕಂಡೇಯನು ಹೇಳಿದನು: “ಆಗಲಿ! ಆ ಸ್ವಯಂಭು, ಪುರುಷ, ಪುರಾಣ, ಶಾಶ್ವತ ಮತ್ತು ಅವ್ಯಯನಿಗೆ ನಮಸ್ಕರಿಸಿ ಹೇಳುತ್ತೇನೆ. ಈ ಪೃಥುದೀರ್ಘಾಕ್ಷ, ಪೀತವಾಸ ಜನಾರ್ದನನೇ ಸರ್ವಭೂತಗಳ ಭಾವನೆಗಳನ್ನು ಮಾಡುವವನು. ಕರ್ತಾ ಮತ್ತು ವಿಕರ್ತನೂ ಕೂಡ. ಇವನೇ ಅಚಿಂತ್ಯ, ಮಹದಾಶ್ಚರ್ಯ, ಪವಿತ್ರ, ಉತ್ತಮ, ಅನಾಧಿನಿಧನ, ಅಕ್ಷಯ, ಅವ್ಯಯ ಮತ್ತು ವಿಶ್ವ. ಇವನೇ ಮಾಡುವವನು, ಮಾಡಲ್ಪಟ್ಟವನಲ್ಲ. ಆದರೆ ಎಲ್ಲವಕ್ಕೂ ಕಾರಣ. ಈ ಪುರುಷನನ್ನು ಯಾರು ಅರಿತಿದ್ದಾರೆ ಎನ್ನುವುದು ದೇವತೆಗಳಿಗೂ ಗೊತ್ತಿಲ್ಲ. ಈ ಎಲ್ಲ ಆಶ್ಚರ್ಯಗಳೂ ಅವನಿಂದಲೇ ನಡೆಯುವವು.

“ಆದಿಯಲ್ಲಿ, ಈ ಸಂಪೂರ್ಣ ಜಗತ್ತು ನಾಶವಾಗಲು, ನಾಲ್ಕುಸಾವಿರ ವರ್ಷಗಳ ಕೃತಯುಗವು ಬರುತ್ತದೆಯೆಂದೂ, ಅದರ ಮೊದಲು ಮತ್ತು ನಂತರ ನಾಲ್ಕುನೂರು ವರ್ಷಗಳ ಸಂಧ್ಯೆ ಇದೆಯೆಂದೂ ಹೇಳುತ್ತಾರೆ. ತ್ರೇತಾಯುಗವು ಮೂರುಸಾವಿರ ವರ್ಷಗಳದ್ದೆಂದು ಹೇಳುತ್ತಾರೆ. ಅದರ ಮೊದಲು ಮತ್ತು ನಂತರ ಮೂರುನೂರರ ಸಂಧ್ಯಗಳಿವೆ. ಹಾಗೆಯೇ ದ್ವಾಪರದ ಪರಿಮಾಣವು ಎರಡು ಸಾವಿರವರ್ಷಗಳು. ಅದಕ್ಕೆ ಕೂಡ ಪ್ರತಿ ಇನ್ನೂರು ವರ್ಷಗಳ ಮೊದಲಿನ ಸಂಧ್ಯೆ ಮತ್ತು ನಂತರದ ಸಂಧ್ಯಗಳಿವೆ. ಅನಂತರ ಕಲಿಯುಗವು ಒಂದು ಸಾವಿರ ವರ್ಷಗಳದ್ದೆಂದು ಹೇಳುತ್ತಾರೆ. ಅದರ ಪ್ರತಿ ನೂರು ವರ್ಷಗಳ ಮೊದಲಿನ ಸಂಧ್ಯೆ ಮತ್ತು ನಂತರದ ಸಂಧ್ಯೆಗಳಿವೆ. ಸಂಧ್ಯ ಅಸಂಧ್ಯಗಳ ಪ್ರಮಾಣವು ಸಮನಾಗಿರುವುದನ್ನು ಗಮನಿಸು. ಕಲಿಯುಗವು ಮುಗಿದಾಗ ಕೃತಯುಗವು ಪುನಃ ಬರುತ್ತದೆ. ಈ ಹನ್ನೆರಡು ಸಾವಿರ ವರ್ಷಗಳನ್ನು ಯುಗವೆಂದು ಕರೆಯುತ್ತಾರೆ. ಅಂಥಹ ಒಂದು ಸಾವಿರ ಯುಗಗಳನ್ನು ಬ್ರಹ್ಮನ ಒಂದು ದಿನವೆಂದು ಹೇಳುತ್ತಾರೆ. ಲೋಕಗಳ ಪ್ರಲಯವಾದಾಗ ವಿಶ್ವವೆಲ್ಲವೂ ಬ್ರಹ್ಮಭವನದಲ್ಲಿ ಸೇರುತ್ತವೆ ಎಂದು ತಿಳಿದವರಿಗೆ ತಿಳಿದಿದೆ.

“ಯುಗಾಂತದಲ್ಲಿ ಸ್ವಲ್ಪವೇ ಸಮಯವಿರುವಾಗ, ಕೊನೆಯ ಸಾವಿರ ವರ್ಷಗಳಲ್ಲಿ ಎಲ್ಲ ಮನುಷ್ಯರೂ ಪ್ರಾಯಶಃ ಸುಳ್ಳನ್ನೇ ಹೇಳುತ್ತಾರೆ. ಆ ಕಾಲವು ಬಂದಾಗ ಪ್ರತಿನಿಧಿಗಳು ಯಜ್ಞಮಾಡುತ್ತಾರೆ, ಪ್ರತಿನಿಧಿಗಳು ದಾನಕೊಡುತ್ತಾರೆ, ಪ್ರತಿನಿಧಿಗಳು ವ್ರತಗಳನ್ನಾಚರಿಸುತ್ತಾರೆ. ಬ್ರಾಹ್ಮಣರು ಶೂದ್ರರ ಕೆಲಸವನ್ನು ಮಾಡುತ್ತಾರೆ. ಶೂದ್ರರು ಧನಾರ್ಜನೆ ಮಾಡುತ್ತಾರೆ ಅಥವಾ ಕ್ಷತ್ರಧರ್ಮದಂತೆ ನಡೆದುಕೊಳ್ಳುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣರು ಯಜ್ಞ-ಸ್ವಾಧ್ಯಾಯಗಳನ್ನು ಬಿಟ್ಟು, ಪಿಂಡೋದಕಗಳನ್ನು ತೊರೆದು, ಎಲ್ಲವನ್ನೂ ತಿನ್ನುವವರಾಗುತ್ತಾರೆ. ಬ್ರಾಹ್ಮಣರು ಜಪಗಳನ್ನು ಮಾಡುವುದಿಲ್ಲ. ಶೂದ್ರರು ಜಪಪರಾಯಣರಾಗುತ್ತಾರೆ. ಈ ರೀತಿ ವಿಪರೀತವಾದಾಗ ಅದು ಲೋಕ ಕ್ಷಯವನ್ನು ಮುನ್ಸೂಚಿಸುತ್ತದೆ.

“ಬಹುಮಂದಿ ಪಾಪ ಮತ್ತು ಸುಳ್ಳುವಾದಗಳಲ್ಲಿ ನಿರತರಾದ ಮ್ಲೇಚ್ಛರಾಜರು ಭೂಮಿಯನ್ನು ಸುಳ್ಳಿನ ಆಧಾರದ ಮೇಲೆ ಆಳುತ್ತಾರೆ. ಆಗ ಅಂಧ್ರರು, ಶಕರು, ಪುಲಿಂದರು, ಯವನರು, ಕಾಂಬೋಜರು, ಔರ್ಣಿಕರು ಮತ್ತು ಶೂದ್ರರು ಆಳುತ್ತಾರೆ. ಆಗ ಯಾವ ಬ್ರಾಹ್ಮಣನೂ ಸ್ವಧರ್ಮದಿಂದ ಉಪಜೀವಿಸುವುದಿಲ್ಲ. ಕ್ಷತ್ರಿಯರೂ ವೈಶ್ಯರೂ ಕೂಡ ತಪ್ಪು ಕೆಲಸಗಳನ್ನು ಮಾಡುತ್ತಿರುತ್ತಾರೆ. ಜನರು ಅಲ್ಪಾಯುಷಿಗಳಾಗಿರುತ್ತಾರೆ. ಸ್ವಲ್ಪ ಬಲವುಳ್ಳವರಾಗಿರುತ್ತಾರೆ. ಅಲ್ಪತೇಜಸ್ವಿಗಳೂ, ಅಲ್ಪಪರಾಕ್ರಮಿಗಳೂ ಆಗಿರುತ್ತಾರೆ. ಅಲ್ಪ ದೇಹಿಗಳೂ, ಅಲ್ಪಸಾರರೂ, ಹಾಗೆಯೇ ಅಲ್ಪ ಸತ್ಯಭಾಷಿಗಳೂ ಆಗಿರುತ್ತಾರೆ. ಯುಗಾಂತವು ಹತ್ತಿರಬಂದಂತೆ ಜನಪದಗಳು ಬಹಳಷ್ಟಾಗಿ ಶೂನ್ಯವಾಗುತ್ತವೆ. ಪ್ರದೇಶವು ಮೃಗವ್ಯಾಲಗಳಿಂದ ಆವೃತವಾಗುತ್ತದೆ, ಮತ್ತು ಬ್ರಹ್ಮಚಾರಿಗಳು ಸುಳ್ಳಾಗುತ್ತಾರೆ. ಶೂದ್ರರು ಭೋ! ಎಂದು ಕರೆಯುತ್ತಾರೆ ಮತ್ತು ಬ್ರಾಹ್ಮಣರು ಆರ್ಯ! ಎಂದು ಕರೆಯುತ್ತಾರೆ. ಯುಗಾಂತದಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತದೆ, ಎಲ್ಲ ಸುಗಂಧಗಳೂ ದುರ್ಗಂಧಗಳೆಂತೆನಿಸಿಕೊಳ್ಳುತ್ತವೆ. ಮತ್ತು ರಸಗಳು ಸ್ವಾದಿಸಲು ಬೇಡವಾಗುತ್ತವೆ. ಯುಗಕ್ಷಯದಲ್ಲಿ ಸ್ತ್ರೀಯರು ಹೆಚ್ಚು ಮಕ್ಕಳನ್ನು ಹಡೆಯುವವರಾಗುತ್ತಾರೆ. ಸಣ್ಣದೇಹದವರು, ಶೀಲಾಚಾರ ವರ್ಜಿತರೂ, ಬಾಯಿಸಂಭೋಗ ಮಾಡುವವರೂ ಆಗುತ್ತಾರೆ. ಯುಗಕ್ಷಯದಲ್ಲಿ ಜನಪದಗಳಲ್ಲಿ ಬಹುಮಹಡಿಗಳ ಕಟ್ಟಡಗಳಾಗುತ್ತವೆ, ಚೌರಾಯಗಳಲ್ಲಿ ತೋಳಗಳು ಬರುತ್ತಿರುತ್ತವೆ ಮತ್ತು ಸ್ತ್ರೀಯರು ಕೂದಲುಗಳುಳ್ಳವರಾಗುತ್ತಾರೆ. ಗೋವುಗಳು ಸ್ವಲ್ಪವೇ ಹಾಲು ಕೊಡುವಂಥವುಗಳಾಗುತ್ತವೆ. ಮರಗಳು ಕಾಗೆಗಳಿಂದ ತುಂಬಿಕೊಂಡಿದ್ದು ಸ್ವಲ್ಪವೇ ಪುಷ್ಪ-ಫಲಗಳನ್ನು ನೀಡುವಂಥವುಗಳಾಗುತ್ತವೆ. ಬ್ರಹ್ಮವಧೆಯನ್ನು ಅಂಟಿಸಿಕೊಂಡಿರುವ, ಸುಳ್ಳು ಹೊಗಳಿಕೆಯ ನೃಪರಿಂದ ದ್ವಿಜರು ಸ್ವೀಕರಿಸುವರು. ಲೋಭಮೋಹಗಳನ್ನು ಹೊದೆದುಕೊಂಡು, ಮಿಥ್ಯ ಧರ್ಮದ ಧ್ವಜವನ್ನು ಹಿಡಿದು, ಭಿಕ್ಷಾರ್ಥವಾಗಿ ದ್ವಿಜರು ದಿಕ್ಕು ದಿಕ್ಕುಗಳಲ್ಲಿಯೂ ಸುತ್ತಾಡುತ್ತಾರೆ. ತೆರಿಗೆಯ ಭಾರದ ಭಯದಿಂದ ಗೃಹಸ್ಥ ಪುರುಷರು ಕಳ್ಳರಾಗುತ್ತಾರೆ ಮತ್ತು ಮುನಿಗಳ ವೇಷಧರಿಸಿ ವಾಣಿಜ್ಯದಿಂದ ಉಪಜೀವನ ಮಾಡುತ್ತಾರೆ.

ಜನರು ಸುಳ್ಳಿನ ಕೂದಲು ಮತ್ತು ಉಗುರುಗಳನ್ನು ಧರಿಸುತ್ತಾರೆ. ಬ್ರಹ್ಮಚಾರಿಗಳು ಹಣದ ಆಸೆಯಿಂದ ಸುಳ್ಳಾಗಿರುವರು. ಆಶ್ರಮಗಳಲ್ಲಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಮದ್ಯವನ್ನು ಕುಡಿಯುತ್ತಾರೆ. ಗುರುಪತ್ನಿಯರನ್ನು ಹಂಚಿಕೊಳ್ಳುತ್ತಾರೆ. ಈ ಲೋಕದ ಮಾಂಸ ರಕ್ತವನ್ನು ವೃದ್ಧಿಸುವ ಸುಖವನ್ನು ಗುರಿಯಾಗಿಟ್ಟುಕೊಳ್ಳುತ್ತಾರೆ. ಯುಗಕ್ಷಯದಲ್ಲಿ ಬಹಳಮಂದಿ ಮೋಸಗಾರರಿರುವಲ್ಲಿ ಉತ್ತಮ ಊಟಗಳ ಕುರಿತು ಚರ್ಚಿಸುತ್ತಾರೆ. ಆಶ್ರಮಗಳೇ ಇರುವುದಿಲ್ಲ. ಭಗವಾನ್ ಪಾಕಶಾಸನನು ಕಾಲಕ್ಕೆ ತಕ್ಕಂತೆ ಮಳೆಯನ್ನು ಸುರಿಸುವುದಿಲ್ಲ. ಆಗ ಬಿತ್ತಿದ ಎಲ್ಲ ಬೀಜಗಳು ಸರಿಯಾಗಿ ಬೆಳೆಯುವುದಿಲ್ಲ. ಮತ್ತು ಅಧರ್ಮದ ಫಲವು ಅಧಿಕವಾಗಿರುತ್ತದೆ. ಧರ್ಮಸಮ್ಮತರು ಅಲ್ಪಾಯುಗಳಾಗುತ್ತಾರೆ. ಯಾಕೆಂದರೆ ಯಾವುದೇ ರೀತಿಯ ಧರ್ಮವೆನ್ನುವುದೇ ಇರುವುದಿಲ್ಲ. ಜನರು ತಮ್ಮ ವಸ್ತುಗಳನ್ನು ಹೆಚ್ಚಾಗಿ ಸುಳ್ಳು ಅಳತೆಗಳ ಮೂಲಕ ಮಾರುತ್ತಾರೆ. ವರ್ತಕರು ಬಹಳಷ್ಟು ಮೋಸವುಳ್ಳವರಾಗಿರುತ್ತಾರೆ. ಧರ್ಮಿಷ್ಠರು ನಷ್ಟ ಹೊಂದುತ್ತಾರೆ. ಪಾಪಿ ಜನರು ಅಭಿವೃದ್ಧಿ ಹೊಂದುತ್ತಾರೆ. ಧರ್ಮದ ಬಲವು ಕುಂದುತ್ತದೆ ಮತ್ತು ಅಧರ್ಮವು ಬಲಶಾಲಿಯಾಗುತ್ತದೆ. ಯುಗಕ್ಷಯದಲ್ಲಿ ಧರ್ಮಿಷ್ಠ ಮಾನವರು ಅಲ್ಪಾಯುಷರೂ ದರಿದ್ರರೂ ಆಗಿರುತ್ತಾರೆ. ಅಧರ್ಮಿಗಳು ದೀರ್ಘಾಯುಷಿಗಳೂ ಶ್ರೀಮಂತರೂ ಆಗಿರುತ್ತಾರೆ. ಪ್ರಜೆಗಳು ಅಧರ್ಮ ಉಪಾಯಗಳಿಂದ ವ್ಯವಹರಿಸುತ್ತಾರೆ. ಅಲ್ಪ ಸಂಗ್ರಹಗಳಿದ್ದರೂ ಮದಾನ್ವಿತರಾಗಿ ಧನವಂತರಾಗುತ್ತಾರೆ. ತಮ್ಮಲ್ಲಿ ವಿಶ್ವಾಸದಿಂದ ಇಟ್ಟಿರುವ ಧನವನ್ನು ನರರು ಮೋಸದಿಂದ ಅಪಹರಿಸಲು ತೊಡಗಿರುತ್ತಾರೆ. ಮನುಷ್ಯರನ್ನು ತಿನ್ನುವ ಪಕ್ಷಿಗಳು ಮತ್ತು ಮೃಗಗಳು ನಗರಗಳ ಉದ್ಯಾನಗಳಲ್ಲಿ ಮತ್ತು ಚೈತ್ಯಗಳಲ್ಲಿ ಸಂಚರಿಸುತ್ತಿರುತ್ತವೆ. ಸ್ತ್ರೀಯರು ಏಳೆಂಟು ವರ್ಷಗಳಲ್ಲಿಯೇ ಗರ್ಭಧರಿಸಬಲ್ಲವರಾಗುತ್ತಾರೆ ಮತ್ತು ಹತ್ತು-ಹನ್ನೆರಡು ವರ್ಷಗಳಲ್ಲಿಯೇ ಗಂಡಸರು ಪುತ್ರರನ್ನು ಹುಟ್ಟಿಸುವವರಾಗುತ್ತಾರೆ. ಅವರ ಹದಿನಾರನೆಯ ವರ್ಷದಲ್ಲಿಯೇ ನರರು ಹಣ್ಣಾಗುತ್ತಾರೆ ಮತ್ತು ಬೇಗನೇ ಆ ಮನುಷ್ಯರ ಆಯಸ್ಸು ಮುಗಿದುಹೋಗುತ್ತದೆ. ಯುಗವು ಕ್ಷೀಣವಾಗುವಾಗ ತರುಣರು ವೃದ್ಧರಂತೆ ನಡೆದುಕೊಳ್ಳುತ್ತಾರೆ ಮತ್ತು ವೃದ್ಧರು ತರುಣರ ನಡತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ನಾರಿಯರು ವಿಪರೀತರಾಗಿ, ತಮ್ಮ ಗಂಡಂದಿರನ್ನು ವಂಚಿಸಿ ಸೇವಕರೊಂದಿಗೆ ಮತ್ತು ಪಶುಗಳೊಂದಿಗೂ ಸಂಭೋಗಮಾಡುತ್ತಾರೆ.

“ಆ ಸಹಸ್ರಯುಗಗಳ ಕೊನೆಯಲ್ಲಿ, ಆಯಸ್ಸಿನ ಕ್ಷಯವು ಬಂದೊದಗಿದಾಗ ಬಹಳ ವರ್ಷದ ಅನಾವೃಷ್ಠಿಯು ಉಂಟಾಗುತ್ತದೆ. ಸತ್ವಗಳು ಕಳೆದು ಅಲ್ಪಸಾರವಿರುವ ಭೂಮಿಯ ಮೇಲಿರುವವುಗಳನ್ನು ಪ್ರಲಯವು ತೆಗೆದುಕೊಂಡು ಹೋಗುತ್ತದೆ. ಉರಿಯುತ್ತಿರುವ ಏಳು ದಿನಕರರು ಸಮುದ್ರ-ನದಿಗಳಲ್ಲಿರುವ ಎಲ್ಲ ನೀರನ್ನೂ ಕುಡಿಯುತ್ತಾರೆ. ಕಟ್ಟಿಗೆಯಾಗಿರಲಿ ಹುಲ್ಲಾಗಿರಲಿ, ಒಣಗಿರಲಿ ಅಥವಾ ಒದ್ದೆಯಾಗಿರಲಿ, ಎಲ್ಲವೂ ಭಸ್ಮವಾಗುವುದು ಕಂಡುಬರುತ್ತದೆ. ಮೊದಲೇ ಆದಿತ್ಯರಿಂದ ಒಣಗಿ ಹೋಗಿದ್ದ ಲೋಕವನ್ನು ಸಂವರ್ತಕ ವಹ್ನಿಯು ವಾಯುವಿನೊಂದಿಗೆ ವ್ಯಾಪಿಸುತ್ತಾನೆ. ಅಗ್ನಿಯು ಭೂಮಿಯನ್ನು ಒಡೆದು ರಸಾತಲವನ್ನು ಹೊಕ್ಕು ದೇವ, ದಾನವ, ಯಕ್ಷರಲ್ಲಿ ಮಹಾ ಭಯವನ್ನು ಹುಟ್ಟಿಸುತ್ತದೆ. ಅದು ನಾಗಲೋಕವನ್ನೂ ಮತ್ತು ಭೂಮಿಯ ಮೇಲಿರುವ ಎಲ್ಲವನ್ನೂ ಸುಟ್ಟು, ಕ್ಷಣದಲ್ಲಿ ಅದರ ಕೆಳಗಿರುವ ಎಲ್ಲವನ್ನೂ ನಾಶಪಡಿಸುತ್ತದೆ. ಸಂವರ್ತಕ ಅನಲನು ಅಮಂಗಳ ವಾಯುವಿನೊಂದಿಗೆ ಇಪ್ಪತ್ತು ಸಹಸ್ರ ನೂರು ಯೋಜನೆಗಳನ್ನು ಸುಟ್ಟುಹಾಕುತ್ತಾನೆ. ಆ ಜಗದ್ವಿಭುವು ಉರಿದು ದೇವಾಸುರಗಂಧರ್ವರನ್ನು ಯಕ್ಷ, ಉರಗ ರಾಕ್ಷಸರೊಂದಿಗೆ ಎಲ್ಲವನ್ನೂ ಸುಡುತ್ತಾನೆ. ಆನೆಗಳ ಹಿಂಡುಗಳಂತಿರುವ ಮಿಂಚಿನ ಮಾಲೆಗಳಿಂದ ಅಲಂಕೃತವಾದ ಅಧ್ಭುತವಾಗಿ ಕಾಣುವ ಮಹಾಮೇಘಗಳು ಮೇಲೇರುತ್ತವೆ. ಕೆಲವು ನೀಲಿ ಕಮಲಗಳಂತೆ ಕಪ್ಪಾಗಿದ್ದರೆ ಕೆಲವು ಕುಮುದಗಳಂತೆ ಬಿಳಿಯಾಗಿರುತ್ತವೆ. ಕೆಲವು ಕಿಂಜಲ್ಕಗಳಂತಿದ್ದರೆ ಕೆಲವು ಅರಿಶಿಣ ಬಣ್ಣದ ಮೋಡಗಳು. ಕೆಲವು ಆರಿದ್ರದಂತೆ ಕೆಂಪಾಗಿದ್ದರೆ ಕೆಲವು ಜೇನುಹುಳುಗಳಿದ್ದಂತೆ. ಕೆಲವು ಕಮಲದ ಎಸಳುಗಳಂತಿದ್ದರೆ ಕೆಲವು ಕುಂಕುಮದ ಬಣ್ಣದವುಗಳು. ಕೆಲವು ದೊಡ್ಡ ಪಟ್ಟಣಗಳ ಆಕಾರದಲ್ಲಿದ್ದರೆ ಕೆಲವು ಆನೆಗಳ ಹಿಂಡಿನಂತೆ. ಕೆಲವು ಕಾಡಿಗೆಯಷ್ಟು ಕಪ್ಪಾಗಿದ್ದರೆ ಕೆಲವು ಮೊಸಳೆಯ ಆಕಾರದಲ್ಲಿ.

“ವಿದ್ಯುತ್ತಿನ ಮಾಲೆಯನ್ನು ಧರಿಸಿ ಆ ಘನ ಘೋರರೂಪೀ ಮೋಡಗಳು, ಘೋರವಾಗಿ ಗುಡುಗನ್ನು ಮೊಳಗುತ್ತಾ ಮೇಲೇರುತ್ತವೆ. ಮೋಡಗಳು ನಭಸ್ಥಲವೆಲ್ಲವನ್ನೂ ವ್ಯಾಪಿಸುತ್ತವೆ. ಪರ್ವತ-ವನ-ಗಣಿಗಳೊಂದಿಗೆ ಪೃಥ್ವಿಯೆಲ್ಲವನ್ನೂ ತುಂಬಿ ನೀರಿನ ಪ್ರವಾಹವನ್ನು ಹರಿಸುತ್ತವೆ. ಪರಮೇಷ್ಠಿಯ ಆಜ್ಞೆಯಂತೆ ಆ ಘೋರವಾಗಿ ಗುಡುಗುವ ಮೋಡಗಳು ಎಲ್ಲೆಡೆಯೂ ಮಳೆಯನ್ನು ಸುರಿಸಿ ಪ್ರವಾಹವನ್ನುಂಟುಮಾಡುತ್ತವೆ. ತಮ್ಮಲ್ಲಿಯ ಮಹಾನೀರನ್ನು ಸುರಿಸಿ ವಸುಂಧರೆಯನ್ನು ತುಂಬಿ, ಅತಿಘೋರವಾದ ಅಮಂಗಳ ರೌದ್ರ ಪಾವಕನನ್ನು ನಾಶಪಡಿಸುತ್ತವೆ. ಆಗ ಹನ್ನೆರಡು ವರ್ಷಗಳ ಕಾಲ ಮೋಡಗಳು ಮೇಲೆದ್ದು ಆ ಮಹಾತ್ಮನ ಪ್ರಚೋದನೆಗೊಳಲ್ಪಟ್ಟು ಮಳೆಸುರಿಸಿ ಪ್ರವಾಹಗಳನ್ನುಂಟುಮಾಡುತ್ತವೆ. ಆಗ ಸಮುದ್ರವು ಉಬ್ಬರದ ಗತಿಯನ್ನು ಅತಿಕ್ರಮಿಸುತ್ತದೆ. ಪರ್ವತಗಳು ಮುರಿದು ಬೀಳುತ್ತವೆ ಮತ್ತು ಭೂಮಿ ಕೂಡ ಕುಸಿಯುತ್ತದೆ. ಆಗ ಎಲ್ಲ ಕಡೆಯಿಂದ ಭಿರುಗಾಳಿಯು ಬೀಸುತ್ತದೆ ಮತ್ತು ವಾಯುವೇಗಕ್ಕೆ ಸಿಲುಕಿದ ಮೋಡಗಳು ಚದುರಿ ನಾಶವಾಗುತ್ತವೆ. ಆಗ ಆ ಘೋರ ವಾಯುವನ್ನು ಸ್ವಯಂಭು ದೇವನು ಕುಡಿದು ಆದಿಪದ್ಮಾಲಯದಲ್ಲಿ ನಿಲ್ಲುತ್ತಾನೆ.

“ಯಾರೂ ಇಲ್ಲದ, ಸ್ಥಾವರ ಜಂಗಮಗಳು ನಷ್ಟವಾಗಿ ಹೋಗಿರುವ, ದೇವಾಸುರ ಗಣಗಳು ನಷ್ಟವಾಗಿ ಹೋಗಿದ್ದ, ಯಕ್ಷರಾಕ್ಷಸರಿಂದ ವರ್ಜಿತವಾಗಿದ್ದ, ಮನುಷ್ಯರಿಲ್ಲದ, ಪ್ರಾಣಿ-ವೃಕ್ಷಗಳಿಲ್ಲದ, ಅಂತರಿಕ್ಷವೇ ಇಲ್ಲದ ಈ ಲೋಕದಲ್ಲಿ ನಾನು ಏಕಾಂಗಿಯಾಗಿ ಚಿಂತಿಸುತ್ತಾ ತಿರುಗಾಡುತ್ತಿದ್ದೆ. ಈ ನಿರ್ಜನವಾದ ಘೋರ ಜಲರಾಶಿಯಮೇಲೆ ಸಂಚರಿಸುತ್ತಿರುವಾಗ, ಇದ್ದಿದ್ದ ಏನನ್ನೂ ಕಾಣದೇ ಅತೀವ ಭಯವು ನನ್ನನ್ನು ಆವರಿಸಿತು. ಈಸುತ್ತ ಬಹುದೂರ ಹೋದರೂ ಎಲ್ಲಿಯೂ ವಿಶ್ರಾಂತಿ ಪಡೆಯುವ ಆಶ್ರಯವು ದೊರೆಯದೇ ಮುಂದುವರೆಯುತ್ತಿದ್ದೆನು. ಆಗ ಒಮ್ಮೆ ಆ ನೀರಿನ ರಾಶಿಯಲ್ಲಿ ಒಂದು ವಿಶಾಲವಾದ ಅತಿ ದೊಡ್ಡ ನ್ಯಗ್ರೋಧ ವೃಕ್ಷವನ್ನು ಕಂಡೆನು. ಆ ವೃಕ್ಷದ ವಿಶಾಲ ರೆಂಬೆಯ ಮೇಲೆ ದಿವ್ಯ ವಸ್ತುಗಳಿಂದ ಅಲಂಕೃತವಾದ ಪರ್ಯಂಕದಲ್ಲಿ ಮಲಗಿದ್ದ ಪೂರ್ಣಚಂದ್ರನತೆ ಮುಖವುಳ್ಳ, ಅರಳಿದ ಕಮಲದಂತೆ ವಿಶಾಲ ಕಣ್ಣುಗಳಿರುವ ಬಾಲಕನನ್ನು ನೋಡಿದೆ. ಆಗ ನಾನು ಲೋಕಗಳೆಲ್ಲವೂ ನಾಶಹೊಂದಿರುವಾಗ ಈ ಶಿಶುವು ಇಲ್ಲಿ ಹೇಗೆ ಮಲಗಿದೆ? ಎಂದು ಮಹಾ ವಿಸ್ಮಯಗೊಂಡೆ. ತಪಸ್ಸಿನ ಮೂಲಕ ಚಿಂತಿಸಿದರೆ ಭೂತ. ವರ್ತಮಾನ ಭವಿಷ್ಯಗಳು ತಿಳಿದುಬಂದರೂ ಈ ಶಿಶುವನ್ನು ಅರಿಯದೇ ಹೋದೆನು. ಅವನ ವರ್ಣವು ಜೋಳದ ಹೂಗಳಿಂತಿದ್ದವು; ಅವನ ಎದೆಯ ಮೇಲೆ ಶ್ರೀವತ್ಸದ ಗುರುತಿತ್ತು; ಮತ್ತು ಸಾಕ್ಷಾತ್ ಲಕ್ಷ್ಮಿಯೇ ಅವನಲ್ಲಿ ವಾಸಿಸಿದ್ದಾಳೆಯೋ ಎಂಬಂತೆ ನನಗೆ ತೋರಿತು. ಆಗ ಆ ಪದ್ಮನಿಭಲೋಚನ, ಶ್ರೀವತ್ಸಧಾರೀ, ದ್ಯುತಿಮಾನ್ ಬಾಲಕನು ನನಗೆ ಕೇಳಿದರೆ ಸುಖವನ್ನುಂಟುಮಾಡುವ ಈ ಮಾತುಗಳನ್ನಾಡಿದನು: “ಮಾರ್ಕಂಡೇಯ! ಮಗೂ! ಭಾರ್ಗವ! ನೀನು ಬಳಲಿದ್ದೀಯೆ ಮತ್ತು ವಿಶ್ರಾಂತಿಯನ್ನು ಬಯಸುತ್ತೀಯೆ ಎಂದು ನಾನು ತಿಳಿದಿದ್ದೇನೆ. ನಿನಗಿಷ್ಟವಾದಷ್ಟು ಸಮಯ ಇಲ್ಲಿ ಕುಳಿತುಕೋ! ನನ್ನ ಶರೀರವನ್ನು ಪ್ರವೇಶಿಸಿ ಅದರೊಳಗೆ ವಿಶ್ರಾಂತಿಪಡೆ. ನಿನಗೆ ಪ್ರಸಾದವಾಗಿ ನಾನು ನಿನ್ನ ವಾಸಕ್ಕೆ ಜಾಗ ಮಾಡಿಕೊಡುತ್ತೇನೆ.”

ಆ ಬಾಲಕನು ಹೀಗೆ ಹೇಳಲು ನಾನು ನನ್ನ ದೀರ್ಘಕಾಲ ಜೀವಿಸಿದ ಮನುಷ್ಯತ್ವದಿಂದ ತುಂಬಾ ಬಳಲಿದೆನು. ಆಗ ಒಮ್ಮಿಂದೊಮ್ಮೆಲೇ ಬಾಲಕನ ಬಾಯಿಯು ಅಗಲವಾಗಿ ತೆರೆಯಿತು ಮತ್ತು ನಾನು ದೈವಯೋಗದಂತೆ, ನಿರ್ವಶನಾಗಿ ಆ ಬಾಯಿಯನ್ನು ಪ್ರವೇಶಿಸಿದೆ. ಆಗ ವೇಗವಾಗಿ ಅವನ ಒಡಲನ್ನು ಪ್ರವೇಶಿಸಲು ಅಲ್ಲಿ ರಾಷ್ಟ್ರ-ನಗರ-ನದಿಗಳಿಂದ ಕೂಡಿದ ಸಂಪೂರ್ಣ ಮೇದಿನಿಯನ್ನು ನೋಡಿದೆ. ಗಂಗಾ, ಶತದ್ರು, ಸೀತಾ, ಯಮುನಾ, ಕೌಶಿಕೀ, ಚರ್ಮಣ್ವತೀ, ವೇತ್ರವತಿ, ಚಂದ್ರಭಾಗ, ಸರಸ್ವತೀ, ಸಿಂಧು, ವಿಪಾಶ ಮುತ್ತು ನದೀ ಗೋದಾವರೀ, ವಸ್ವೋಕಸಾರ, ನಲಿನೀ, ನರ್ಮದಾ, ನದೀ ತಾಮ್ರ, ಪುಣ್ಯನೀರಿನ ಶುಭವನ್ನು ತರುವ ವೇಣ್ಣಾ, ಸುವೇಣ, ಕೃಷ್ಣವೇಣಾ, ಇರಾಮಾ, ಮಹಾನದೀ, ಶೋಣ, ವಿಶಲ್ಯಾ, ಕಂಪುನ ಮೊದಲಾದ ನದಿಗಳು ಮತ್ತು ಪೃಥ್ವಿಯಲ್ಲಿ ಹರಿಯುವ ಅನ್ಯ ನದಿಗಳನ್ನೂ ಆ ಮಹಾತ್ಮನ ಒಡಲಲ್ಲಿ ನೋಡಿದೆ. ಮೀನುಗಳ ಗಣಗಳು ವಾಸಿಸುತ್ತಿರುವ ರತ್ನಾಕರ, ನೀರಿನ ನಿಧಾನ ಸಮುದ್ರವನ್ನು ನೋಡಿದೆ. ಚಂದ್ರಸೂರ್ಯರಿಂದ ವಿರಾಜಿತ, ಅಗ್ನಿಸೂರ್ಯರ ಪ್ರಭೆಯಂತೆ ತೇಜಸ್ಸಿನಿಂದ ಬೆಳಗುತ್ತಿರುವ ಗಗನವನ್ನು ನೋಡಿದೆ. ಕಾನನಗಳಿಂದ ಶೋಭಿಸುವ ಭೂಮಿಯನ್ನೂ, ಬಹುಮಂದಿ ಬ್ರಾಹ್ಮಣರು ಸೋಮದಿಂದ ಯಾಜಿಸುವುದನ್ನು, ಕ್ಷತ್ರಿಯರು ಸರ್ವ ವರ್ಣದವರನ್ನು ರಂಜಿಸುವುದರಲ್ಲಿ ತೊಡಗಿರುವುದನ್ನು ನೋಡಿದೆ. ವೈಶ್ಯರು ಯಥಾನ್ಯಾಯವಾಗಿ ಕೃಷಿ ಮಾಡುತ್ತಿರುವ ಮತ್ತು ಶೂದ್ರರು ದ್ವಿಜರ ಶುಶ್ರೂಷೆಯಲ್ಲಿ ನಿರತರಾಗಿರುವುದನ್ನು ನೋಡಿದೆ. ಆ ಮಹಾತ್ಮನ ಕುಕ್ಷಿಯಲ್ಲಿ ಸಂಚರಿಸುತ್ತಾ ಹಿಮಾಲಯ ಮತ್ತು ಹೇಮಕೂಟ ಪರ್ವತಗಳನ್ನು ನೋಡಿದೆ. ನಿಷಧವನ್ನೂ ರಜತಾಚಿತ ಶ್ವೇತವನ್ನೂ ನೋಡಿದೆ. ಗಂಧಮಾದನ ಪರ್ವತವನ್ನೂ ನೋಡಿದೆ. ಮಂದರವನ್ನೂ ಮಹಾಗಿರಿ ನೀಲವನ್ನೂ ಮೇರು ಕನಕಪರ್ವತವನ್ನೂ ನೋಡಿದೆ. ಮಹೇಂದ್ರವನ್ನೂ, ಉತ್ತಮ ಗಿರಿ ವಿಂಧ್ಯವನ್ನೂ ನೋಡಿದೆ. ಸಂಚರಿಸುತ್ತಾ ನಾನು ಮಲಯ ಪರ್ವತವನ್ನೂ ನೋಡಿದೆ. ಇವುಗಳನ್ನು ಮತ್ತು ಪೃಥ್ವಿಯಲ್ಲಿರುವ ಇನ್ನೂ ಇತರ ಬಹಳಷ್ಠು ರತ್ನಗಳಿಂದ ಅಲಂಕೃತಗೊಂಡ ಪರ್ವತಗಳೆಲ್ಲವನ್ನೂ ಅವನ ಕುಕ್ಷಿಯಲ್ಲಿ ನೋಡಿದೆ. ಸಿಂಹಗಳು, ಹುಲಿಗಳು, ವರಾಹಗಳು, ನಾಗಗಳು ಮತ್ತು ಪೃಥ್ವಿಯಲ್ಲಿರುವ ಇತರ ಎಲ್ಲ ಸತ್ವಗಳನ್ನೂ ನಾನು ಅಲ್ಲಿ ಸಂಚರಿಸುತ್ತಿರುವಾಗ ನೋಡಿದೆನು.

“ಅವನ ಕುಕ್ಷಿಯನ್ನು ಪ್ರವೇಶಿಸಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಶಕ್ರಾದಿ ಸರ್ವ ದೇವಗಣಗಳನ್ನೂ, ಗಂಧರ್ವ, ಅಪ್ಸರ, ಯಕ್ಷ, ಋಷಿ, ಸಿಂಹಿಕಾತನಯರನ್ನೂ ಮತ್ತು ಇತರ ಸುರರ ಶತ್ರುಗಳನ್ನೂ ನೋಡಿದೆ. ನಾನು ಮೊದಲು ಲೋಕದಲ್ಲಿ ಏನೆಲ್ಲ ಸ್ಥಾವರಜಂಗಮಗಳನ್ನು ನೋಡಿದ್ದೆನೋ ಅವೆಲ್ಲವನ್ನೂ ಆ ಮಹಾತ್ಮನ ಕುಕ್ಷದಲ್ಲಿ ನೋಡಿದೆನು. ಈ ಎಲ್ಲ ಜಗತ್ತನ್ನೂ ಅವನ ಶರೀರದ ಒಳಗೆ ನೂರಕ್ಕೂ ಹೆಚ್ಚು ವರ್ಷಗಳ ಪರ್ಯಂತ ಸಂಚರಿಸಿ ಶೋಧಿಸಿದರೂ ಸತತವಾಗಿ ಓಡಿ ಯೋಚಿಸುತ್ತಿದ್ದರೂ ಅವನ ದೇಹದ ಕೊನೆಯನ್ನು ಎಲ್ಲಿಯೂ ನೋಡಲಿಲ್ಲ. ಆ ಮಹಾತ್ಮನ ಅಂತ್ಯವನ್ನು ತಲುಪಲಿಕ್ಕಾಗದೇ ಆ ವರೇಣ್ಯ, ವರದ ದೇವನನ್ನೇ ವಿಧಿವತ್ತಾಗಿ ಮನಸ್ಸು ಕರ್ಮಗಳಿಂದ ಶರಣು ಹೋದೆ. ಆಗ ಒಮ್ಮಿಂದೊಮ್ಮೆಲೇ ವಾಯುವೇಗದಲ್ಲಿ ತೆರೆದಿದ್ದ ಆ ಮಹಾತ್ಮನ ಬಾಯಿಯ ಮೂಲಕ ಹೊರಬಿದ್ದು ಅಲ್ಲಿಯೇ ನ್ಯಗ್ರೋಧದ ರೆಂಬೆಯ ಮೇಲೆ ಸಂಪೂರ್ಣ ಜಗತ್ತನ್ನೇ ಹಿಡಿದು ಅದೇ ಶ್ರೀವತ್ಸದಿಂದ ಮಾಡಲ್ಪಟ್ಟ ಗುರುತುಳ್ಳ ಬಾಲವೇಷದಲ್ಲಿ ಕುಳಿತಿರುವ ಅಮಿತತೇಜಸ್ವಿಯನ್ನು ನೋಡಿದೆ. ಆಗ ಆ ಶ್ರೀವತ್ಸಧಾರೀ ದ್ಯುತಿಮಾನ್ ಪೀತವಾಸಾ ಮಹಾದ್ಯುತಿ ಬಾಲಕನು ಮುಗುಳ್ನಗುತ್ತಾ ನನಗೆ ಹೇಳಿದನು: “ಮುನಿಸತ್ತಮ! ಮಾರ್ಕಂಡೇಯ! ಈ ನನ್ನ ಶರೀರದಲ್ಲಿ ವಾಸಿಸಿ ವಿಶ್ರಾಂತಿಯನ್ನು ಪಡೆದೆಯೇ? ನನಗೆ ಹೇಳು!”

“ಮುಹೂರ್ತದಲ್ಲಿಯೇ ನನಗೊಂದು ದಿವ್ಯದೃಷ್ಠಿಯು ಗೋಚರವಾಗಿ ನಿರ್ಮುಕ್ತನಾದ ಚೇತನವನ್ನು ಪಡೆದಿರುವ ಆತ್ಮನನ್ನು ನೋಡಿದೆನು. ಅಪರಿಮಿತ ಪ್ರಭಾವವುಳ್ಳ ಆ ಅಮಿತೌಜಸನನ್ನು ನೋಡಿ ಅವನ ಸುಪ್ರತಿಷ್ಠವಾಗಿದ್ದ ಕೆಂಪು ಹಿಮ್ಮಡಿಗಳ, ಮೃದು ಕೆಂಪು ಬೆರಳುಗಳ ಆ ಕೋಮಲ ಚರಣಗರೆಡನ್ನೂ ಹಿಡಿದು ತಲೆಬಾಗಿ ನಮಸ್ಕರಿಸಿದೆನು. ವಿನಯದಿಂದ ಅಂಜಲೀಬದ್ಧನಾಗಿ, ಪ್ರಯತ್ನದಿಂದ ಅವನ ಬಳಿ ಹೋಗಿ ಆ ಭೂತಾತ್ಮ, ದೇವ ಕಮಲಲೋಚನನನ್ನು ನೋಡಿದೆನು. ಅಂಜಲೀಬದ್ಧನಾಗಿ ಅವನನ್ನು ನಮಸ್ಕರಿಸಿ ಹೇಳಿದೆನು: “ದೇವ! ನಿನ್ನನ್ನು ಮತ್ತು ನಿನ್ನ ಈ ಉತ್ತಮ ಮಾಯೆಯನ್ನು ತಿಳಿಯ ಬಯಸುತ್ತೇನೆ. ನಿನ್ನ ಈ ಶರೀರವನ್ನು ಪ್ರವೇಶಿಸಿ ನಿನ್ನ ಜಠರದಲ್ಲಿ ಸಮಸ್ತ ಅಖಿಲ ಲೋಕಗಳನ್ನೂ ನೋಡಿದೆನು. ನಿನ್ನ ಶರೀರದಲ್ಲಿ ದೇವದಾನವ ರಾಕ್ಷಸರೂ ಯಕ್ಷಗಂಧರ್ವ ನಾಗರೂ ಜಗತ್ತಿನ ಸ್ಥಾವರ ಜಂಗಮಗಳೂ ಇವೆ. ನಿನ್ನ ಪ್ರಸಾದದಿಂದ ನನ್ನ ನೆನಪನ್ನು ನಾನು ಕಳೆದುಕೊಳ್ಳಲಿಲ್ಲ. ಬೇಗನೇ ಓಡುತ್ತಾ ನಿನ್ನ ಶರೀರದಲ್ಲಿ ಸತತವಾಗಿ ತಿರುಗಾಡಿದೆ. ನೀನು ಇಲ್ಲಿ ಏಕೆ ಸಾಕ್ಷಾತ್ ಶಿಶುವಾಗಿ ನಿಂತಿರುವೆ ಎಂದು ತಿಳಿಯ ಬಯಸುತ್ತೇನೆ. ಈ ವಿಶ್ವ ಜಗತ್ತನ್ನು ಕುಡಿದು ಏಕೆ ಜಗತ್ತೆಲ್ಲವೂ ನಿನ್ನ ಶರೀರದಲ್ಲಿದೆ ಎನ್ನುವುದನ್ನು ಹೇಳಬೇಕು. ಎಷ್ಟು ಕಾಲದವರೆಗೆ ನೀನು ಇಲ್ಲಿರುವೆ? ನಿನ್ನಿಂದ ವಿಸ್ತಾರವಾಗಿ ಹೇಗಿದೆಯೋ ಹಾಗೆ ಬ್ರಹ್ಮವನ್ನು ಕೇಳಲು ಬಯಸುತ್ತೇನೆ. ನಾನು ಏನನ್ನು ಕಂಡೆನೋ ಅದು ನನ್ನ ಅರಿವಿಗೆ ಸಿಲುಕದಂಥಹುದು.”

ನಾನು ಹೀಗೆ ಹೇಳಲು ಶ್ರೀಮಾನ್, ದೇವದೇವ, ಮಹಾದ್ಯುತಿ ವರದರಲ್ಲಿ ವರದನು ನನ್ನನ್ನು ಸಂತವಿಸುತ್ತಾ ಈ ಮಾತುಗಳನ್ನಾಡಿದನು: “ವಿಪ್ರ! ದೇವತೆಗಳೂ ಕೂಡ ನಾನು ಯಾರು ಎನ್ನುವುದನ್ನು ಸರಿಯಾಗಿ ತಿಳಿಯರು. ಆದರೆ ನಿನ್ನ ಮೇಲಿನ ಪ್ರೀತಿಯಿಂದ ನಾನು ಇದನ್ನು ಹೇಗೆ ಸೃಷ್ಟಿಸುತ್ತೇನೆ ಎನ್ನುವುದನ್ನು ಹೇಳುತ್ತೇನೆ. ನೀನು ಪಿತೃಭಕ್ತನಾಗಿದ್ದೀಯೆ. ನನಗೇ ನೀನು ಶರಣುಬಂದಿದ್ದೀಯೆ. ನಿನ್ನ ಬ್ರಹ್ಮಚರ್ಯವು ದೊಡ್ಡದು. ಆದುದರಿಂದಲೇ ನೀನು ನನ್ನನ್ನು ಸಾಕ್ಷಾತ್ ನೋಡಿದ್ದೀಯೆ. ನೀರನ್ನು ನಾರಾ ಎಂದು ಹೇಳುತ್ತಾರೆ. ನಾನು ಅದಕ್ಕೆ ಈ ಹೆಸರನ್ನು ಕೊಟ್ಟಿದ್ದೇನೆ. ಅದರಿಂದ ನನಗೆ ನಾರಾಯಣನೆಂದು ಕರೆಯುತ್ತಾರೆ. ನಾನು ಸದಾ ಅದರ ಗತಿಯನ್ನು ಅನುಸರಿಸುತ್ತೇನೆ. ನಾನು ನಾರಾಯಣನೆಂಬ ಹೆಸರಿನವನು - ಪ್ರಭವ, ಶಾಶ್ವತ ಮತ್ತು ಅವ್ಯಯ. ಇರುವ ಎಲ್ಲವುಗಳ ವಿಧಾತಾ ಮತ್ತು ಸಂಹರ್ತ. ನಾನು ವಿಷ್ಣು. ನಾನು ಬ್ರಹ್ಮ. ನಾನು ಸುರಾಧಿಪ ಶಕ್ರ. ನಾನು ರಾಜಾ ವೈಶ್ರವಣ ಮತ್ತು ಪ್ರೇತಾಧಿಪತಿ ಯಮ. ನಾನು ಶಿವ, ಸೋಮ, ಕಶ್ಯಪ ಮತ್ತು ಪ್ರಜಾಪತಿ. ನಾನು ಧಾತಾ, ವಿಧಾತಾ ಮತ್ತು ಯಜ್ಞ.  ಅಗ್ನಿಯು ನನ್ನ ಮುಖ, ಕ್ಷಿತಿಯು ಪಾದಗಳು, ಚಂದ್ರಾದಿತ್ಯರು ಕಣ್ಣುಗಳು, ದಿಕ್ಕುಗಳೊಂದಿಗೆ ನಭವು ನನ್ನ ದೇಹ ಮತ್ತು ವಾಯುವು ನನ್ನ ಮೂಗಿನಲ್ಲಿ ನೆಲೆಸಿದ್ದಾನೆ. ವೇದವಿದುಷರು ನನ್ನನ್ನು ಬಹಳಷ್ಟು ಆಪ್ತದಕ್ಷಿಣೆಗಳಿಂದ ಕೂಡಿದ ನೂರಾರು ಕ್ರತು ಮತ್ತು ಇಷ್ಟಗಳಿಂದ ಪೂಜಿಸುವಲ್ಲಿ ನಾನು ನೆಲೆಸಿದ್ದೇನೆ. ಪೃಥ್ವಿಯಲ್ಲಿನ ಸ್ವರ್ಗಾಕಾಂಕ್ಷಿಗಳಾದ ಕ್ಷತ್ರಿಯೇಂದ್ರ ಪಾರ್ಥಿವರು ನನ್ನನ್ನು ಯಜಿಸುತ್ತಾರೆ. ಇದರಿಂದ ಸ್ವರ್ಗಲೋಕವನ್ನು ಬಯಸುವ ವೈಶ್ಯರಿಗೂ ಸಹಾಯವಾಗುತ್ತದೆ. ಶೇಷನಾಗಿ ನಾನು ನಾಲ್ಕು ಸಮುದ್ರಗಳಿಂದ ಆವರಿಸಲ್ಪಟ್ಟ, ಮೇರು-ಮಂದರಗಳಿಂದ ಭೂಷಿತವಾದ, ಈ ವಸುಂಧರೆಯನ್ನು ಹೊರುತ್ತೇನೆ. ಹಿಂದೆ ಜಲದಲ್ಲಿ ಮುಳುಗಿಹೋಗಿದ್ದ ಜಗತ್ತನ್ನು ವರಾಹ ರೂಪವನ್ನು ಪಡೆದು ವೀರ್ಯದಿಂದ ಎಳೆದು ಮೇಲೆತ್ತಿದ್ದೆ. ಕುದುರೆಯ ಮುಖದ ಅಗ್ನಿಯಾಗಿ ನಾನು ಕ್ಷೋಭೆಗೊಂಡ ನೀರನ್ನು ಕುಡಿಯುತ್ತೇನೆ ಮತ್ತು ನಾನೇ ಅದನ್ನು ವಿಸರ್ಜಿಸುತ್ತೇನೆ. ನನ್ನ ವಿಕ್ರಮದಿಂದ ಕ್ರಮೇಣವಾಗಿ ಮುಖವು ಬ್ರಹ್ಮ, ಭುಜಗಳು ಕ್ಷತ್ರ. ತೊಡೆಗಳಲ್ಲಿ ವೈಶ್ಯರು ನೆಲೆಸಿದ್ದಾರೆ ಮತ್ತು ಪಾದಗಳಲ್ಲಿ ಶೂದ್ರರು ಭಜಿಸುತ್ತಾರೆ. ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವಣಗಳು ನನ್ನಿಂದ ಪ್ರಾದುರ್ಭವಿಸುತ್ತವೆ ಮತ್ತು ಇವುಗಳು ನನ್ನನ್ನೇ ಪ್ರವೇಶಿಸುತ್ತವೆ. ಶಾಂತಿಪರರಾದ ಯತಿಗಳು ಮುಕ್ತಿಯನ್ನು ಬಯಸುವ ಯತಿಗಳು, ಕಾಮ-ಕ್ರೋಧ-ದ್ವೇಷಗಳಿಂದ ಮುಕ್ತರಾದ, ನಿಃಸಂಗರಾದ, ಕಲ್ಮಷವನ್ನು ಕಳೆದುಕೊಂಡ, ಸತ್ವದಲ್ಲಿ ನೆಲೆಸಿರುವ, ನಿರಂಕಾರರಾದ, ನಿತ್ಯವೂ ಆಧ್ಯಾತ್ಮ ಕೋವಿದರಾದ ವಿಪ್ರರು ಸತತವಾಗಿ ನನ್ನನ್ನೇ ಚಿಂತಿಸಿ ಉಪಾಸಿಸುತ್ತಾರೆ. ನಾನು ಸಂವರ್ತಕ ಜ್ಯೋತಿ. ನಾನು ಸರ್ವರ್ತಕ ಯಮ. ನಾನು ಸಂವರ್ತಕ ಸೂರ್ಯ ಮತ್ತು ನಾನು ಸಂವರ್ತಕ ಅನಿಲ. ನಭಸ್ತಲದಲ್ಲಿ ಕಾಣುವ ತಾರಾರೂಪಗಳು ನನ್ನ ರೂಪಗಳೆಂದೇ ತಿಳಿ. ರತ್ನಾಕರಗಳು ನನ್ನ ಬಟ್ಟೆ, ಸಮುದ್ರವು ಹಾಸಿಗೆ ಮತ್ತು ಚತುರ್ದಿಶಗಳೇ ನನ್ನ ನಿಲಯವೆಂದು ತಿಳಿ. ಕಾಮ, ಕ್ರೋಧ, ಹರ್ಷ, ಭಯ, ಮತ್ತು ಹಾಗೆಯೇ ಮೋಹ ಮತ್ತು ಯಾವುದರಿಂದ ನರರು ಉತ್ತಮ ಕರ್ಮವನ್ನು ಮಾಡಿ ಪಡೆಯುವಂತಹ ಸತ್ಯ, ದಾನ, ಉಗ್ರ ತಪಸ್ಸು, ಜಂತುಗಳೊಂದಿಗೆ ಅಹಿಂಸೆ ಇವೆಲ್ಲವೂ ನನ್ನದೇ ರೂಪಗಳೆಂದು ತಿಳಿ. ದೇಹಧಾರಿಗಳು ನನ್ನದೇ ವಿಧಾನಕ್ಕೊಳಪಡುತ್ತಾರೆ, ಅವರು ತಮ್ಮದೇ ಕಾಮದಿಂದ ನಡೆಯುವುದಿಲ್ಲ. ಆದರೆ ನನ್ನ ನಿಯಂತ್ರಣದಲ್ಲಿರುವ ಮನಸ್ಸಿನ ಮೂಲಕ ನಡೆಯುತ್ತಾರೆ. ವೇದಗಳನ್ನು ಚೆನ್ನಾಗಿ ಕಲಿಯುವುದರಿಂದ, ವಿವಿಧ ಮಖಗಳನ್ನು ಯಜಿಸುವುದರಿಂದ, ಶಾಂತಾತ್ಮ, ಜಿತಕ್ರೋಧ ದ್ವಿಜರು ಏನನ್ನು ಪಡೆಯುವರೋ; ದುಷ್ಕೃತಕರ್ಮಿ ನರರಿಂದ ಲೋಭದಿಂದ ಕೂಡಿದ ಕೃಪಣರಾದ ಅನಾರ್ಯ ಅಕೃತಾತ್ಮರಿಂದ ಏನನ್ನು ಪಡೆಯಲು ಸಾಧ್ಯವಿಲ್ಲವೋ; ಆ ಮಹಾಫಲ, ಸುಕೃತಕರ್ಮಿಗಳ ಪರಮ ಗುರಿ, ದುಷ್ಪಾಪಿ ಮೂಢರಿಗೆ ಮುಚ್ಚಿದ ಆದರೆ ಯೋಗಿಗಳಿಗೆ ತೆರೆದಿರುವ ಮಾರ್ಗವೇ ನಾನೆಂದು ತಿಳಿ! ಯಾವಾಗಲೆಲ್ಲ ಧರ್ಮದ ಅಧೋಗತಿಯಾಗುತ್ತದೆಯೋ ಮತ್ತು ಅಧರ್ಮವು ತಲೆಯೆತ್ತುತ್ತದೆಯೋ ಆವಾಗಲೆಲ್ಲ ನಾನು ನನ್ನನ್ನು ಸೃಷ್ಟಿಸಿಕೊಳ್ಳುತ್ತೇನೆ. ಸುರಸತ್ತಮರಿಗೆ ಅವಧ್ಯರಾದ ಹಿಂಸಾನುರಕ್ತರಾದ ದೈತ್ಯರು ಮತ್ತು ದಾರುಣ ರಾಕ್ಷಸರು ಈ ಲೋಕದಲ್ಲಿ ಯಾವಾಗ ಹುಟ್ಟಿಕೊಳ್ಳುತ್ತಾರೋ ಆಗ ನಾನು ಶುಭಕರ್ಮಿಗಳ ಮನೆಗಳಲ್ಲಿ ಮನುಷ್ಯ ದೇಹವನ್ನು ಪ್ರವೇಶಿಸಿ ಎಲ್ಲವನ್ನೂ ಪ್ರಶಮನಗೊಳಿಸುತ್ತೇನೆ. ದೇವ-ಮನುಷ್ಯರನ್ನು, ಗಂಧರ್ವ-ಉರಗ-ರಾಕ್ಷಸರನ್ನು, ಸ್ಥಾವರ ಭೂತಗಳನ್ನೂ ಸೃಷ್ಟಿಸಿ, ನನ್ನ ಮಾಯೆಯಿಂದ ಸಂಹರಿಸುತ್ತೇನೆ. ಕರ್ಮದ ಕಾಲದಲ್ಲಿ ಪುನಃ ದೇಹವನ್ನು ಚಿಂತಿಸಿ, ಮನುಷ್ಯದೇಹವನ್ನು ಪ್ರವೇಶಿಸಿ, ಗಡಿಯನ್ನು ನಿರ್ಧಿಷ್ಟಪಡಿಸುವುದಕ್ಕಾಗಿ ನನ್ನನ್ನು ನಾನೇ ಸೃಷ್ಟಿಸಿಕೊಳ್ಳುತ್ತೇನೆ. ಕೃತಯುಗದಲ್ಲಿ ನನ್ನ ಬಣ್ಣ ಬಿಳಿ, ತ್ರೇತಾಯುಗದಲ್ಲಿ ನಾನು ಹಳದಿ, ದ್ವಾಪರದಲ್ಲಿ ಕೆಂಪುಬಣ್ಣವನ್ನು ಹೊಂದಿ, ಕಲಿಯುಗದಲ್ಲಿ ಕಪ್ಪಾಗಿರುತ್ತೇನೆ. ಕಾಲವು ಅಂತ್ಯವಾಗುವಾಗ ಮುಕ್ಕಾಲು ಭಾಗ ಅಧರ್ಮವು ಇರುತ್ತದೆ. ಕಾಲದ ಅಂತ್ಯಕಾಲವು ಬಂದಾಗ ನಾನು ಅತಿದಾರುಣನಾದ ಕಾಲನಾಗಿ ಏಕಾಂಗಿಯಾಗಿ ಸ್ಥಾವರಜಂಗಮಗಳೊಂದಿಗೆ ಮೂರು ಲೋಕಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇನೆ. ನಾನು ತ್ರಿವರ್ತ್ಮಾ. ಸರ್ವಾತ್ಮ. ಸರ್ವಲೋಕಗಳಿಗೂ ಸುಖವನ್ನು ತರುವವ. ಸಾಮ್ರಟ. ಎಲ್ಲಿಯೂ ಇರುವವ. ಅನಂತ, ಮತ್ತು ವಿಸ್ತಾರವಾಗಿ ಗಮಿಸಬಲ್ಲ ಹೃಷೀಕೇಶ. ನಾನೊಬ್ಬನೇ ಕಾಲಚಕ್ರವನ್ನು ನಡೆಸುತ್ತೇನೆ. ನಾನು ಬ್ರಹ್ಮ. ನಾನು ಅರೂಪಿ. ಸರ್ವಭೂತಗಳನ್ನು ಶಮನಗೊಳಿಸುತ್ತೇನೆ. ಮತ್ತು ಸರ್ವಲೋಕಗಳಿಗೆ ಬೇಕಾದುದನ್ನು ಮಾಡುತ್ತೇನೆ. ಹೀಗೆ ನಾನು ಸರ್ವಭೂತಗಳಲ್ಲಿ ನನ್ನನ್ನು ಸಂಪೂರ್ಣವಾಗಿ ಹೊಕ್ಕಿರುತ್ತೇನೆ. ಆದರೆ ಯಾರೂ ನನ್ನನ್ನು ತಿಳಿದಿಲ್ಲ. ನನ್ನ್ನೊಳಗೆ ಇರುವಾಗ ನೀನು ಏನೆಲ್ಲ ಕಷ್ಟಗಳನ್ನು ಅನುಭವಿಸಿದೆಯೋ ಅದೆಲ್ಲವೂ ನಿನಗೆ ಸುಖವನ್ನು ತರುವ ಶ್ರೇಯಸ್ಸಿಗಾಗಿಯೇ ಆಗಿವೆ. ನೀನು ಅಲ್ಲಿ ಲೋಕಗಳಲ್ಲಿರುವ ಏನೆಲ್ಲ ಸ್ಥಾವರಜಂಗಮಗಳನ್ನು ನೋಡಿದೆಯೋ ಅವೆಲ್ಲವೂ ನಾನೇ. ನನ್ನಿಂದಲೇ ವಿಹಿತವಾಗಿವೆ. ನನ್ನ ಶರೀರದ ಅರ್ಧ ಸರ್ವಲೋಕ ಪಿತಾಮಹ. ನಾನು ಶಂಖಚಕ್ರಗದೆಗಳನ್ನು ಹಿಡಿದಿರುವವನು. ನನ್ನ ಹೆಸರು ನಾರಾಯಣ. ಸರ್ವಲೋಕಪಿತಾಮಹ ವಿಶ್ವಾತ್ಮನಾದ ನಾನು ಒಂದು ಸಹಸ್ರ ಯುಗಗಳು ಕಳೆಯುವವರೆಗೆ ಮಲಗಿರುತ್ತೇನೆ. ಆ ಎಲ್ಲ ಕಾಲವೂ ಬ್ರಹ್ಮನು ಎಚ್ಚರಗೊಳ್ಳುವವರೆಗೆ ಶಿಶುವಲ್ಲದಿದ್ದರೂ ಶಿಶುವಿನ ರೂಪದಲ್ಲಿ ಇಲ್ಲಿಯೇ ಇರುತ್ತೇನೆ. ವಿಪ್ರರ್ಷಿಗಣಪೂಜಿತನಾದ ನಿನ್ನಿಂದ ನಾನು ಬಹಳಷ್ಟು ಬಾರಿ ಸಂತುಷ್ಟನಾಗಿ ಬ್ರಹ್ಮರೂಪದಲ್ಲಿರುವಾಗ ನಿನಗೆ ಈ ವರವನ್ನು ನೀಡಿದ್ದೆ. ಎಲ್ಲವೂ ಒಂದೇ ನೀರಾಗಿ ಸ್ಥಾವರಜಂಗಮಗಳು ನಷ್ಟವಾದುದನ್ನು ನೋಡಿ ನೀನು ಗಾಭರಿಗೊಂಡೆ. ಆದುದರಿಂದ ನಾನು ನಿನಗೆ ಜಗತ್ತನ್ನು ತೋರಿಸಿ ತಿಳಿಸಿದೆ. ನೀನು ನನ್ನ ಶರೀರವನ್ನು ಪ್ರವೇಶಿಸಿ ಅಲ್ಲಿ ಸಮಸ್ತ ಲೋಕವನ್ನೂ ನೋಡಿ ವಿಸ್ಮಿತನಾಗಿ ತಿಳಿಯದಾದೆ. ಆಗ ನಾನು ನನ್ನ ಬಾಯಿಯಿಂದಲೇ, ಸುರಾಸುರರಿಗೂ ತಿಳಿಯಲಿಕ್ಕಾಗದ, ನಾನು ಯಾರೆಂದು ನಿನಗೆ ವಿವರಿಸಿದ್ದೇನೆ. ಮಹಾತಪಸ್ವಿ ಭಗವಾನ್ ಬ್ರಹ್ಮನು ಎಚ್ಚೆತ್ತು ಏಳುವ ತನಕ ನೀನು ಇಲ್ಲಿ ಸುಖವಾಗಿ ತಿರುಗಾಡಿಕೊಂಡಿರು. ಸರ್ವಲೋಕಪಿತಾಮಹನು ಎಚ್ಚೆತ್ತಾಗ ಏಕಾಂಗಿಯಾಗಿ ಶರೀರದಿಂದಲೇ ಆಕಾಶ, ಪೃಥ್ವಿ, ಜ್ಯೋತಿ, ವಾಯು, ಸಲಿಲಗಳನ್ನೂ ಲೋಕಗಳಲ್ಲಿ ಬೇರೆ ಏನೆಲ್ಲ ಸ್ಥಾವರಜಂಗಮಗಳು ಇವೆಯೋ ಅವೆಲ್ಲವನ್ನೂ ಸೃಷ್ಟಿಸುತ್ತೇನೆ.”

“ಅವನು ಹೀಗೆ ಹೇಳಿದ ನಂತರ ಆ ಪರಮಾದ್ಭುತ ದೇವನು ಅಂತರ್ಧಾನನಾದನು, ಮತ್ತು ನಾನು ವಿಚಿತ್ರ ಬಹುಧಾಕಾರಗಳ ಪ್ರಜೆಗಳನ್ನು ನೋಡಿದೆನು. ಈ ರೀತಿ ನಾನು ಯುಗಕ್ಷಯವು ಪ್ರಾಪ್ತವಾದಾಗ ಆಶ್ಚರ್ಯವನ್ನು ಕಂಡೆ. ಹಿಂದೆ ಪದ್ಮನಿಭೇಕ್ಷಣನಾದ ಯಾವ ದೇವನನ್ನು ನಾನು ನೋಡಿದೆನೋ ಅವನೇ ನಿನ್ನ ಸಂಬಂಧಿಯಾದ ಜನಾರ್ದನ. ಅವನ ವರದಾನದಿಂದಲೇ ನನ್ನ ನೆನಪು ಮರೆತುಹೋಗಿಲ್ಲ ಮತ್ತು ದೀರ್ಘಾಯುಷಿಯಾಗಿ, ಸ್ವಚ್ಛಂದ ಮರಣಿಯಾಗಿದ್ದೇನೆ. ಅವನೇ ಈ ಕೃಷ್ಣ, ವಾರ್ಷ್ಣೇಯ, ಪುರಾಣ ಪುರುಷ, ವಿಭು, ಹರಿ, ಅಚಿಂತ್ಯಾತ್ಮ, ಮಹಾಭುಜ. ಆಡುವವನಂತೆ ಕುಳಿತುಕೊಂಡಿರುವವನು. ಇವನೇ ಧಾತಾ, ವಿಧಾತಾ, ಮತ್ತು ಸಾತ್ವತರ ಸಂಹರ್ತಾ, ಶ್ರೀವತ್ಸವಕ್ಷ, ಗೋವಿಂದ, ಪ್ರಜಾಪತಿಪತಿ ಮತ್ತು ಪ್ರಭು. ಈ ವೃಷ್ಣಿಶಾರ್ದೂಲನನ್ನು ನೋಡಿದಾಗ ಇವನು ಆದಿದೇವ, ಅಜ, ವಿಷ್ಣು, ಪುರುಷ, ಪೀತವಾಸಸನೆಂದು ನನಗೆ ನೆನಪಾಯಿತು. ಈ ಎಲ್ಲ ಇರುವವುಗಳ ಮಾತಾಪಿತನಾದ ಈ ಮಾಧವ ಶರಣ್ಯನಲಿ ಶರಣು ಹೋಗು.”

ಅವನು ಹೀಗೆ ಹೇಳಲು ಪಾರ್ಥರು ಮತ್ತು ಪುರುಷರ್ಷಭ ಯಮಳರು ದ್ರೌಪದಿ ಕೃಷ್ಣೆಯೊಡಗೂಡಿ ಜನಾರ್ದನನಿಗೆ ನಮಸ್ಕರಿಸಿದರು. ಮಾನಾರ್ಹರೆಂದು ಮನ್ನಿಸಿದ ಅವರನ್ನು ಹಿಂದಿರುಗಿ ಅವನು ಪರಮ ಪ್ರೀತಿಯಿಂದ ಯಥಾವಿಧಿಯಾಗಿ ಸಂತವಿಸಿದನು.

ಕಲಿಯುಗ ಲಕ್ಷಣ; ಕಲ್ಕ್ಯಾವತಾರ

ಕೌಂತೇಯ ಯುಧಿಷ್ಠಿರನಾದರೋ ಮಹಾಮುನಿ ಮಾರ್ಕಂಡೇಯನನ್ನು ತನ್ನ ಸಾಮ್ರಾಜ್ಯದ ಜಗತ್ತಿನ ಭವಿಷ್ಯದ ಗತಿಯ ಕುರಿತು ಪುನಃ ಪ್ರಶ್ನಿಸಿದನು: “ಮುನೇ! ಭಾರ್ಗವ! ನಾವು ನಿನ್ನಿಂದ ಆಶ್ಚರ್ಯವನ್ನುಂಟುಮಾಡುವ ಯುಗದ ಆದಿಯಲ್ಲಿ ಉಂಟಾಗುವ ಸೃಷ್ಟಿ ಮತ್ತು ಲಯಗಳ ಕುರಿತು ನಡೆದಂತೆ ಹೇಳಿದುದನ್ನು ಕೇಳಿದೆವು. ನಾನು ಈ ಕಲಿಯುಗದ ಕುರಿತು ಪುನಃ ಕುತೂಹಲನಾಗಿದ್ದೇನೆ. ಧರ್ಮಗಳೆಲ್ಲವೂ ಸೇರಿ ಗೊಂದಲಗಳುಂಟಾದಾಗ ಏನು ಉಳಿಯುತ್ತದೆ? ಯುಗಕ್ಷಯದಲ್ಲಿ ಮಾನವರು ಎಂಥಹ ವೀರ್ಯವನ್ನು ಪಡೆದಿರುತ್ತಾರೆ? ಎಂಥಹ ಆಹಾರ ವಿಹಾರಗಳನ್ನು ಮಾಡುತ್ತಾರೆ? ಅವರ ಆಯಸ್ಸು ಏನಿರುತ್ತದೆ? ಅವರ ಬಟ್ಟೆಗಳು ಏನಾಗಿರುತ್ತವೆ? ಯಾವ ಮಿತಿಯ ನಂತರ ಪುನಃ ಕೃತಯುಗವು ಹುಟ್ಟುತ್ತದೆ? ವಿಸ್ತಾರವಾಗಿ ಹೇಳು. ನೀನು ವಿಚಿತ್ರವಾದ ವಿಷಯಗಳ ಕುರಿತು ಮಾತನಾಡುತ್ತೀಯೆ.”

ಅವನು ಹೀಗೆ ಹೇಳಲು ಮುನಿಶ್ರೇಷ್ಠ ಮಹಾಮುನಿಯು ವೃಷ್ಣಿಶಾರ್ದೂಲನನ್ನೂ ಪಾಂಡವರನ್ನೂ ರಮಿಸಲು ಪುನಃ ಈ ಮಾತುಗಳನ್ನಾಡಿದನು: “ಭರತರ್ಷಭ! ಭವಿಷ್ಯದಲ್ಲಿ ಕಲುಷ ಕಾಲವು ಬರಲು ಸರ್ವಲೋಕದಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳುತ್ತೇನೆ. ಹಿಂದೆ ಕೃತದಲ್ಲಿ ಧರ್ಮವು ಮನುಷ್ಯರಲ್ಲಿ, ನಾಲ್ಕೂ ಕಲೆಗಳಲ್ಲಿ ಗೊಂದಲಗಳಿಲ್ಲದೇ, ತಡೆಯಿಲ್ಲದೇ ಸರಿಯಾಗಿದ್ದು ನೆಲೆಗೊಂಡಿತ್ತು. ತ್ರೇತದಲ್ಲಿ ಧರ್ಮವು ಒಂದು ಕಾಲು ಭಾಗವನ್ನು ಕಳೆದುಕೊಂಡು, ಮೂರೇ ಅಂಶಗಳಲ್ಲಿ ಪ್ರತಿಷ್ಠಿತವಾಗಿತ್ತು. ದ್ವಾಪರದಲ್ಲಿ ಧರ್ಮ-ಅಧರ್ಮಗಳು ಅರ್ಧ ಮಿಶ್ರಿತವಾರುತ್ತದೆ ಎಂದು ಹೇಳುತ್ತಾರೆ. ಈಗ ಮೂರು ಅಂಶಗಳಲ್ಲಿ ಅಧರ್ಮವು ಲೋಕಗಳನ್ನು ಆಕ್ರಮಿಸಿ ನಿಂತಿದೆ. ನಾಲ್ಕನೆಯ ಅಂಶದ ಧರ್ಮ ಮಾತ್ರ ಮನುಷ್ಯನಲ್ಲಿ ಉಳಿದುಕೊಂಡಿದೆ. ಯುಗದಿಂದ ಇನ್ನೊಂದು ಯುಗದಲ್ಲಿ ಮನುಷ್ಯರ ಆಯಸ್ಸು, ವೀರ್ಯ, ಬುದ್ಧಿ ಮತ್ತು ತೇಜಸ್ಸುಗಳಲ್ಲಿ ಒಂದೊಂದು ಅಂಶ ಕಡಿಮೆಯಾಗುತ್ತಾ ಬರುತ್ತದೆಯೆಂದು ತಿಳಿ. ರಾಜರು, ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರೂ ಕೂಡ ಧರ್ಮದಲ್ಲಿ ನಡೆಯುವವರಂತೆ ತೋರಿಸಿಕೊಳ್ಳುತ್ತಾರೆ. ಮನುಷ್ಯರು ಅಪ್ರಾಮಾಣಿಕರಾಗಿರುತ್ತಾರೆ. ಲೋಕದಲ್ಲಿ ಪಂಡಿತರೆಂದು ಅಭಿಮಾನಪಡುವ ನರರು ಸತ್ಯವನ್ನು ಚುಟುಕಾಗಿಸುತ್ತಾರೆ ಮತ್ತು ಇದರಿಂದ ಅವರ ಆಯಸ್ಸು ಕಡಿಮೆಯಾಗುತ್ತದೆ. ಆಯಸ್ಸು ಕಡಿಮೆಯಾಗಿದ್ದುದರಿಂದ ಅವರು ಸಂಪೂರ್ಣವಾಗಿ ಅವರ ಜ್ಞಾನವನ್ನು ಕಲಿಸಿಕೊಡಲು ಶಕ್ಯರಾಗಿರುವುದಿಲ್ಲ. ವಿದ್ಯಾಹೀನರಾದವರು ಅಜ್ಞಾನದಿಂದ ಲೋಭಕ್ಕೊಳಗಾಗುತ್ತಾರೆ. ಲೋಭಕ್ರೋಧಪರರಾದ, ಮೂಢರಾದ, ಕಾಮಾಸಕ್ತರಾದ ಮಾನವರು ಪರಸ್ಪರರ ಸಾವನ್ನು ಬಯಸಿ ವೈರಬದ್ಧರಾಗುತ್ತಾರೆ. ಬ್ರಾಹ್ಮಣರು-ಕ್ಷತ್ರಿಯರು ಮತ್ತು ಪರಸ್ಪರರಲ್ಲಿ ವಿವಾಹವಾಗಿ ತಪಸ್ಸು ಮತ್ತು ಸತ್ಯಗಳನ್ನು ತೊರೆದು ಶೂದ್ರರ ಸಮನಾಗುತ್ತಾರೆ. ಕೊನೆಯಲ್ಲಿದ್ದವರು ಮಧ್ಯಸ್ಥಾನದವರಾಗುತ್ತಾರೆ; ಮಧ್ಯದಲ್ಲಿದ್ದವರು ಕೊನೆಯ ಸ್ಥಾನಕ್ಕೆ ಇಳಿಯುತ್ತಾರೆ. ಯುಗಾಂತವು ಹತ್ತಿರಬರುವಾಗ ಈ ರೀತಿ ಲೋಕದಲ್ಲಿ ಆಗುತ್ತದೆ.

“ಯುಗಕ್ಷಯದಲ್ಲಿ ಸೆಣಬೇ ಅತಿಶ್ರೇಷ್ಠ ವಸ್ತ್ರವಾಗುತ್ತದೆ; ಬಡವರು ತಿನ್ನುವುದೇ ಅತಿ ಶ್ರೇಷ್ಠ ಬೆಳೆಯೆನಿಸಿಕೊಳ್ಳುತ್ತದೆ; ಮತ್ತು ಪುರುಷನೇ ಭಾರ್ಯೆಯ ಶತ್ರುವಾಗುತ್ತಾನೆ. ಯುಗಕ್ಷಯದಲ್ಲಿ ಗೋವುಗಳು ನಷ್ಟವಾಗಿ ಮನುಷ್ಯರು ಮೀನು ಮತ್ತು ಕೆಟ್ಟ ಮಾಂಸಗಳನ್ನು ತಿಂದು ಜೀವಿಸುವವರಾಗುತ್ತಾರೆ; ಆಡು-ಒಂಟೆಗಳ ಹಾಲನ್ನು ಕರೆಯುವವರಾಗುತ್ತಾರೆ. ಯುಗಕ್ಷಯದಲ್ಲಿ ಮಾನವರು ಅನ್ಯೋನ್ಯರಿಂದ ಕದಿಯುತ್ತಾರೆ ಮತ್ತು ಅನ್ಯೋನ್ಯರನ್ನು ಹಿಂಸಿಸುತ್ತಾರೆ. ಅವರು ಅಜಪರೂ, ನಾಸ್ತಿಕರೂ ಆಗುತ್ತಾರೆ. ಯುಗಕ್ಷಯದಲ್ಲಿ ನದೀತೀರಗಳನ್ನು ಗುದ್ದಲಿಗಳಿಂದ ಅಗೆದು ಔಷಧಿಗಳನ್ನು ಬೆಳೆಸುತ್ತಾರೆ. ಆದರೆ ಅವುಗಳಲ್ಲಿಯೂ ಅಲ್ಪ ಫಲಗಳುಂಟಾಗುವಂತಾಗುತ್ತದೆ. ಶ್ರಾದ್ಧ ಅಥವಾ ದೇವಪೂಜೆಗಳಲ್ಲಿ ನಿತ್ಯವೂ ಧೃತವ್ರತರಾಗಿದ್ದ ಪುರುಷರೂ ಕೂಡ ಲೋಭ ನಿರತರಾಗಿ ಪರಸ್ಪರರನ್ನು ಶೋಷಿಸುತ್ತಾರೆ. ಯುಗಕ್ಷಯದಲ್ಲಿ ತಂದೆಯು ಮಗನನ್ನು ಮತ್ತು ಮಗನು ತಂದೆಯನ್ನು ಶೋಷಿಸುತ್ತಾನೆ. ಪರಸ್ಪರರನ್ನು ಬಳಸಿಕೊಳ್ಳುವುದರಲ್ಲಿ ಮಿತಿಮೀರುತ್ತಾರೆ. ಬ್ರಾಹ್ಮಣರು ವೇದನಿಂದಕರಾಗಿ ವ್ರತಗಳನ್ನು ನಡೆಸುವುದಿಲ್ಲ; ಹೇತುವಾದುದರಿಂದ ಲೋಭಿತರಾಗಿ ಪೂಜೆಗಳನ್ನಾಗಲೀ ಯಜ್ಞಗಳನ್ನಾಗಲೀ ಮಾಡುವುದಿಲ್ಲ. ಮಾನವರು ಕೆಳಭೂಮಿಗಳಲ್ಲಿ ಕೃಷಿ ಮಾಡುತ್ತಾರೆ; ಹಾಲುಕೊಡುವ ಹಸುಗಳನ್ನು ನೇಗಿಲಿಗೆ ಕಟ್ಟುತ್ತಾರೆ; ಮತ್ತು ಒಂದೇವರ್ಷದ ಕರುಗಳನ್ನು ವಾಹನಗಳನ್ನಾಗಿ ಬಳಸುತ್ತಾರೆ. ಮಗನು ತಂದೆಯನ್ನು ಕೊಲ್ಲಬಹುದು ಮತ್ತು ಹಾಗೆಯೇ ತಂದೆಯೂ ಮಗನನ್ನು ಕೊಲ್ಲಬಹುದು. ಆದರೆ ನಿರುದ್ವೇಗರಾಗಿ ಬಹಳಷ್ಟು ವಾದಗಳಿಗೊಳಗಾಗಿ ಯಾರೂ ನಿಂದನೆಯನ್ನು ಹೊಂದುವುದಿಲ್ಲ. ಕ್ರಿಯೆಗಳನ್ನು ನಡೆಸದೇ, ಯಜ್ಞಗಳನ್ನು ಬಿಟ್ಟು, ಆನಂದವಿಲ್ಲದೇ, ಉತ್ಸವಗಳಿಲ್ಲದೇ ಇಡೀ ಜಗತ್ತೇ ಮ್ಲೇಚ್ಛವಾಗುತ್ತದೆ. ಮಾನವರು ಪ್ರಾಯಶಃ ಬಡವರ, ಬಂಧುಗಳ ಮತ್ತು ವಿಧವೆಯರದ್ದೂ ಕೂಡ ವಿತ್ತಗಳನ್ನು ಅಪಹರಿಸುತ್ತಾರೆ. ವೀರ್ಯಬಲಗಳನ್ನು ಕಳೆದುಕೊಂಡರೂ ಸೊಕ್ಕಾಗಿ ಲೋಭಮೋಹಪರಾಯಣರಾಗಿ, ಪಾಪಾಚಾರ ಪರಿಗ್ರಹರಾಗಿ ಮಾನವರು ದುಷ್ಟರಿಂದಲೂ ದಾನಗಳನ್ನು ಸ್ವೀಕರಿಸುತ್ತಾರೆ. ಪಂಡಿತರೆಂದು ಜಂಬಪಡುವ ಮೂರ್ಖ, ಪಾಪಬುದ್ಧಿಯ ರಾಜರು ಪರಸ್ಪರರನ್ನು ವಧಿಸಲು ಉದ್ಯುಕ್ತರಾಗಿ ಹೊಡೆದಾಡುತ್ತಾರೆ. ಯುಗದ ಅಂತ್ಯದಲ್ಲಿ ಕ್ಷತ್ರಿಯರು ಲೋಕಕಂಟಕರಾಗುತ್ತಾರೆ. ಯುಗಕ್ಷಯದಲ್ಲಿ ಮಾನಾಹಂಕಾರ ದರ್ಪಿತರಾಗಿ, ದುರಾಸೆಯುಳ್ಳವರಾಗಿ ಅವರು ರಕ್ಷಣೆಯನ್ನು ನೀಡದೇ ಕೇವಲ ಶಿಕ್ಷೆ ನೀಡುವುದರಲ್ಲಿ ಆಸಕ್ತರಾಗುತ್ತಾರೆ. ಅವರು ಸಾಧುಗಳ ಪತ್ನಿಯರನ್ನೂ ಸಂಪತ್ತುಗಳನ್ನೂ ಅತಿಕ್ರಮಿಸಿ ಅವರು ಅಳುತ್ತಿದ್ದರೂ ಅನುಕಂಪವಿಲ್ಲದೇ ಭೋಗಿಸುತ್ತಾರೆ. ಯುಗಾಂತವು ಹತ್ತಿರವಾಗುವಾಗ ಕನ್ಯೆಯನ್ನು ಯಾರೂ ಕೇಳುವುದಿಲ್ಲ; ಕನ್ಯೆಯನ್ನು ಯಾರೂ ಕೊಡುವುದೂ ಇಲ್ಲ. ಸ್ವಯಂ ತಾವೇ ಅವರನ್ನು ಹಿಡಿಯುವವರಾಗುತ್ತಾರೆ. ಯುಗಾಂತವು ಹತ್ತಿರವಾಗುವಾಗ ರಾಜರೂ ಕೂಡ ಮೂಢಚೇತಸರಾಗಿ ಅಸಂತುಷ್ಟರಾಗಿ ಪರರ ಸಂಪತ್ತನ್ನು ಸರ್ವ ಉಪಾಯಗಳಿಂದ ಅಪಹರಿಸುತ್ತಾರೆ. ಯುಗಾಂತವು ಹತ್ತಿರವಾಗುವಾಗ ಒಂದು ಕೈ ಇನ್ನೊಂದು ಕೈಯಲ್ಲಿರುವುದನ್ನು ಕದಿಯುತ್ತದೆ; ಜಗತ್ತೆಲ್ಲವೂ ಮ್ಲೇಚ್ಛೀಭೂತವಾಗುತ್ತದೆ. ಲೋಕದಲ್ಲಿ ಪಂಡಿತರೆಂದು ತಿಳಿದುಕೊಂಡಿರುವ ನರರು ಸತ್ಯವನ್ನು ಚುಟುಕುಗೊಳಿಸುತ್ತಾರೆ. ವಯಸ್ಸಾದವರು ಮಕ್ಕಳಂತೆ ಯೋಚಿಸುತ್ತಾರೆ ಮತ್ತು ಮಕ್ಕಳು ವಯಸ್ಸಾದವರ ಬುದ್ಧಿಯನ್ನು ಹೊಂದಿರುತ್ತಾರೆ. ಯುಗಾಂತವು ಹತ್ತಿರವಾಗುವಾಗ ನಾಚಿಕೆ ಸ್ವಭಾವದವರು ಶೂರರೆಂದು ತಿಳಿದುಕೊಳ್ಳುತ್ತಾರೆ ಮತ್ತು ಶೂರರು ನಾಚಿಕೆ ಸ್ವಭಾವದವರಾಗಿ ಅನ್ಯೋನ್ಯರಲ್ಲಿ ವಿಶ್ವಾಸವಿರುವುದಿಲ್ಲ. ಲೋಭಮೋಹಗಳು ವ್ಯವಸ್ಥಿತಗೊಂಡಿರುವ ಜಗತ್ತಿನಲ್ಲಿ ಎಲ್ಲರೂ ಒಂದನ್ನೇ ತಿನ್ನುತ್ತಾರೆ. ಅಧರ್ಮವು ವರ್ಧಿಸುತ್ತದೆ. ಧರ್ಮವು ಯಾವುದೂ ಇರುವುದಿಲ್ಲ. ಯುಗಕ್ಷಯದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಯಾರೂ ಉಳಿಯುವುದಿಲ್ಲ. ಆಗ ಲೋಕವು ಒಂದೇ ಜಾತಿಯದಾಗುತ್ತದೆ. ತಂದೆಯು ಮಗನನ್ನು ಮತ್ತು ಮಗನೂ ತಂದೆಯನ್ನು ಕ್ಷಮಿಸುವುದಿಲ್ಲ. ಪತ್ನಿಯರೂ ಕೂಡ ಪತಿಯ ಶುಶ್ರೂಷೆಯನ್ನು ಮಾಡುವುದಿಲ್ಲ. ಯುಗಾಂತವು ಹತ್ತಿರವಾದಾಗ ಜನರು ಗೋಧಿ ಮತ್ತು ಬಾರ್ಲಿಗಳನ್ನು ತಿನ್ನುವ ದೇಶಗಳಿಗೆ ವಲಸೆ ಹೋಗುತ್ತಾರೆ. ಬೇಕಾದುದನ್ನು ತಿಂದುಕೊಳ್ಳುತ್ತಾ, ಯುಗಾಂತವು ಹತ್ತಿರ ಬಂದಾಗ, ಪುರುಷರು ಮತ್ತು  ಸ್ತ್ರೀಯರು ಅನ್ಯೋನ್ಯರನ್ನು ಸಹಿಸಿಕೊಂಡಿರುವುದಿಲ್ಲ.

“ಶ್ರಾದ್ಧಗಳ ಮೂಲಕ ಪಿತೃಗಳನ್ನು ತೃಪ್ತಿಪಡಿಸದೇ ಜಗತ್ತೆಲ್ಲವೂ ಮ್ಲೇಚ್ಛಭೂತವಾಗುತ್ತದೆ. ಯಾರೂ ಯಾರೊಬ್ಬರ ವಿದ್ಯಾರ್ಥಿಯೂ ಯಾರೊಬ್ಬರ ಗುರುವೂ ಆಗಿರುವುದಿಲ್ಲ ಮತ್ತು ಆಗ ಲೋಕವು ಅಜ್ಞಾನದ ಕತ್ತಲೆಯಿಂದ ತುಂಬಿಹೋಗಿರುತ್ತದೆ. ಯುಗಾಂತವು ಹತ್ತಿರಬಂದಾಗ ಜೀವವು ಹೆಚ್ಚಾಗಿ ಹದಿನಾರು ವರ್ಷಗಳು ಮಾತ್ರ ಇರುತ್ತದೆ. ಆಗಲೇ ಪ್ರಾಣವನ್ನು ಬಿಡುತ್ತಾರೆ. ಐದು ಅಥವಾ ಆರು ವರ್ಷಗಳಲ್ಲಿಯೇ ಕನ್ಯೆಯರು ಪ್ರಸವಿಸುತ್ತಾರೆ. ಮತ್ತು ಏಳೆಂಟು ವರ್ಷಗಳಲ್ಲಿಯೇ ಹುಡುಗರು ತಂದೆಯರಾಗುತ್ತಾರೆ. ಯುಗಾಂತದಲ್ಲಿ ಪತಿ-ಪತ್ನಿಯರು ಪರಸ್ಪರರಲ್ಲಿ ತೃಪ್ತಿಯನ್ನು ಪಡೆಯುವುದಿಲ್ಲ. ಯುಗಕ್ಷಯದಲ್ಲಿ ಬಡವರಾಗಿರತ್ತಾರೆ, ಪ್ರಯೋಜನವಿಲ್ಲದ ಚಿಹ್ನೆಗಳನ್ನು ಧರಿಸುತ್ತಾರೆ, ಹಿಂಸೆಯು ಹುಟ್ಟುತ್ತದೆ, ಮತ್ತು ಯಾರೂ ಯಾರೊಬ್ಬರ ದಾತರೂ ಆಗಿರುವುದಿಲ್ಲ. ಯುಗಕ್ಷಯದಲ್ಲಿ ಜನಪದಗಳಲ್ಲಿ ಬಹುಮಹಡಿಗಳ ಕಟ್ಟಡಗಳಾಗುತ್ತವೆ, ಚೌರಾಯಗಳಲ್ಲಿ ತೋಳಗಳು ಬರುತ್ತಿರುತ್ತವೆ ಮತ್ತು ಸ್ತ್ರೀಯರು ಕೂದಲುಗಳುಳ್ಳವರಾಗುತ್ತಾರೆ. ಕಾಲವು ಕೊನೆಗೊಳ್ಳುವಾಗ ಎಲ್ಲರೂ ಎಲ್ಲವನ್ನೂ ತಿನ್ನುವ ಕ್ರೂರ ಮ್ಲೇಚ್ಛರಾಗುತ್ತಾರೆ ಮತ್ತು ಎಲ್ಲ ಕರ್ಮಗಳಲ್ಲಿ ದಾರುಣರಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಯುಗಾಂತದಲ್ಲಿ, ಮಾರುವಾಗ ಮತ್ತು ಕೊಳ್ಳುವಾಗ ಎಲ್ಲರೂ, ವೃತ್ತಿಲೋಭದಿಂದ, ಎಲ್ಲದರಲ್ಲಿಯು ಮೋಸಮಾಡುತ್ತಾರೆ. ಯುಗಾಂತವು ಹತ್ತಿರವಾದಾಗ ಸರಿಯಾಗಿ ತಿಳಿದುಕೊಳ್ಳದೇ ಜ್ಞಾನಿಗಳು ಕ್ರಿಯೆಗಳನ್ನು ನಡೆಸುತ್ತಾರೆ; ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. ಯುಗಕ್ಷಯವು ಬಂದಾಗ ಎಲ್ಲ ಜನರೂ ಸ್ವಭಾವತಃ ಕ್ರೂರಕರ್ಮಿಗಳಾಗಿದ್ದು ಅನ್ಯೋನ್ಯರನ್ನು ಶಂಕಿಸುವವರಾಗುತ್ತಾರೆ. ನಿರ್ವ್ಯರ್ಥವಾಗಿ ಉದ್ಯಾನವನಗಳನ್ನೂ ಮರಗಳನ್ನೂ ನಾಶಪಡಿಸುತ್ತಾರೆ. ಲೋಕದಲ್ಲಿ ದೇಹಧರಿಸಿರುವವರ ಜೀವಗಳು ನಾಶಹೊಂದುತ್ತವೆ. ಲೋಭಕ್ಕೆ ದಾಸರಾಗಿ ಈ ಭೂಮಿಯಲ್ಲಿ ಸಂಚರಿಸುತ್ತಾರೆ. ಬ್ರಾಹ್ಮಣರೂ ಕೂಡ ಬ್ರಹ್ಮಸ್ವವನ್ನು ಭೋಗಿಸುತ್ತಾರೆ. ದ್ವಿಜರೂ ಕೂಡ ಶೂದ್ರರಿಂದ ಆರ್ದಿತರಾಗಿ ಭಯಾರ್ತರಾಗಿ ತ್ರಾತರು ಯಾರನ್ನೂ ಪಡೆಯದೇ ಹಾಹಾಕಾರ ಮಾಡುತ್ತಾ ಭೂಮಿಯಲ್ಲಿ ತಿರುಗಾಡುತ್ತಿರುತ್ತಾರೆ.

“ಯಾವಾಗ ನರರು ರೌದ್ರರೂ, ಕ್ರೂರರೂ, ಪ್ರಾಣಿಹಿಂಸಕರೂ, ಜೀವಿಗಳನ್ನು ಕೊಲ್ಲುವವರೂ ಆಗುತ್ತಾರೋ ಆಗ ಯುಗವು ಅಂತ್ಯಗೊಳ್ಳುತ್ತದೆ. ಭಯಗೊಂಡು ಪಲಾಯನ ಮಾಡುವ ದ್ವಿಜರು ನದಿಗಳಲ್ಲಿ, ಪರ್ವತಗಳಲ್ಲಿ ಮತ್ತು ಕಣಿವೆಗಳಲ್ಲಿ ಆಶ್ರಯವನ್ನು ಹೊಂದುತ್ತಾರೆ. ದ್ವಿಜೋತ್ತಮರು ಕಾಗೆಗಳಂತೆ ದಸ್ಯುಗಳ ಪೀಡೆಗೊಳಗಾಗುತ್ತಾರೆ, ಮತ್ತು ಕೆಟ್ಟರಾಜರ ತೆರಿಗೆಯ ಭಾರದಿಂದಲೂ ಪೀಡಿತರಾಗಿರುತ್ತಾರೆ. ದಾರುಣ ಯುಗಕ್ಷಯದಲ್ಲಿ ಧೈರ್ಯವನ್ನು ತೊರೆದು ಶೂದ್ರರ ಪರಿಚಾರಕರಾಗಿ ಕೆಟ್ಟ ಕರ್ಮಗಳನ್ನು ಮಾಡುವವರಾಗುತ್ತಾರೆ. ಶೂದ್ರರು ಧರ್ಮವನ್ನು ನಿರ್ಧರಿಸುವವರಾಗುತ್ತಾರೆ; ಬ್ರಾಹ್ಮಣರು ಅವರ ಸೇವಕರಾಗಿ, ಶಿಷ್ಯರಾಗಿ ಅವರ ಪ್ರಮಾಣದಂತೆ ನಡೆದುಕೊಳ್ಳುವವರಾಗುತ್ತಾರೆ. ಯುಗಕ್ಷಯದಲ್ಲಿ ಈ ಲೋಕವು ಅಡಿಮೇಲಾಗುತ್ತದೆ. ಜನರು ದೇವತೆಗಳನ್ನು ವರ್ಜಿಸಿ ಏಡೂಕಗಳನ್ನು ಪೂಜಿಸುವವರಾಗುತ್ತಾರೆ. ಶೂದ್ರರು ದ್ವಿಜರ ಸೇವೆಯನ್ನು ಮಾಡುವುದಿಲ್ಲ. ಯುಗವು ಕ್ಷೀಣವಾಗುವಾಗ ಮಹರ್ಷಿಗಳ ಆಶ್ರಮಗಳಲ್ಲಿ, ಬ್ರಾಹ್ಮಣರ ವಸತಿಗಳಲ್ಲಿ, ದೇವಸ್ಥಾನಗಳಲ್ಲಿ, ಚೈತ್ಯಗಳಲ್ಲಿ, ನಾಗಾಲಯಗಳಲ್ಲಿ ದೇವಗೃಹಗಳ ಭೂಷಣವಿಲ್ಲದೇ ಏಡೂಕಗಳ ಚಿಹ್ನೆಗಳಿರುತ್ತವೆ. ಇದೇ ಯುಗಾಂತದ ಲಕ್ಷಣವನ್ನು ಸೂಚಿಸುತ್ತದೆ. ಯಾವಾಗ ನರರು ರೌದ್ರರಾಗಿ ನಿತ್ಯವೂ ಮಾಂಸಭಕ್ಷಕರೂ ಮದ್ಯವನ್ನು ಸೇವಿಸುವವರು ಆಗುತ್ತಾರೋ ಆಗ ಯುಗಕ್ಷಯವಾಗುತ್ತದೆ. ಯಾವಾಗ ಹೂವಿನಿಂದ ಹೂವು ಮತ್ತು ಹಣ್ಣಿನಿಂದ ಹಣ್ಣು ಹುಟ್ಟಿಕೊಳ್ಳುತ್ತದೆಯೋ ಆಗ ಯುಗಕ್ಷಯವಾಗುತ್ತದೆ. ಯುಗವು ಕಳೆಯುವಾಗ ಪರ್ಜ್ಯನ್ಯವು ಕಾಲಕ್ಕೆ ಮಳೆಸುರಿಸುವುದಿಲ್ಲ. ಮನುಷ್ಯರ ಕ್ರಿಯೆಗಳು ಅಕ್ರಮವಾಗಿರುತ್ತವೆ. ಮತ್ತು ಶೂದ್ರರು ಬ್ರಾಹ್ಮಣರೊಂದಿಗೆ ವಿರೋಧದಲ್ಲಿರುತ್ತಾರೆ. ಸ್ವಲ್ಪವೇ ಸಮಯದಲ್ಲಿ ಭೂಮಿಯು ಮ್ಲೇಚ್ಛ ಸಂಕೀರ್ಣವಾಗುತ್ತದೆ. ಕರಭಾರದ ಭಯದಿಂದ ವಿಪ್ರರು ಹತ್ತೂ ಕಡೆ ಪಲಾಯನಗೈಯುತ್ತಾರೆ. ಯಾವುದೂ ಬಿಡದೇ ಎಲ್ಲ ಜನಪದಗಳೂ ಅನಾವೃಷ್ಟಿಯಿಂದ ಪೀಡಿತರಾಗಿ, ಫಲಮೂಲಗಳಿಂದಲೇ ಉಪಜೀವನ ಮಾಡಿಕೊಂಡು ಆಶ್ರಮಗಳ ಮೇಲೆ ಅವಲಂಬಿಸಿರುತ್ತಾರೆ. ಈ ರೀತಿಯ ಕಷ್ಟಕಾಲದಲ್ಲಿ ಲೋಕದಲ್ಲಿ ಮರ್ಯಾದೆಯೇ ಇರುವುದಿಲ್ಲ. ಶಿಷ್ಯರು ಉಪದೇಶದಂತೆ ನಡೆದುಕೊಳ್ಳದೇ ವಿರುದ್ಧರಾಗಿರುತ್ತಾರೆ. ಅನಂತರ ಆಚಾರ್ಯರು ವತ್ಸರು ಮತ್ತು ಸ್ನೇಹಿತರಿಲ್ಲದೆಯೇ ಇರುತ್ತಾರೆ. ಮಿತ್ರರು, ಸಂಬಂಧಿಗಳು ಮತ್ತು ಬಾಂಧವರು ಹಣಕ್ಕಾಗಿ ಬಿಟ್ಟು ಹೋಗುತ್ತಾರೆ. ಯುಗಾಂತದಲ್ಲಿ ಸರ್ವಭೂತಗಳಿಗೆ ಅಭಾವವುಂಟಾಗುತ್ತದೆ. ದಿಕ್ಕುಗಳು ಪ್ರಜ್ವಲಿಸುತ್ತವೆ; ಎಲ್ಲ ನಕ್ಷತ್ರಗಳೂ ಚಲಿಸುತ್ತವೆ; ತಾರೆಗಳು ಅನಿಷ್ಟವನ್ನು ಸೂಚಿಸುತ್ತವೆ; ಗಾಳಿಯು ವಿನಾಶಕಾರಿಯಾಗುತ್ತದೆ; ಮತ್ತು ಮಹಾಭಯವನ್ನು ತೋರಿಸುವ ಬಹಳಷ್ಟು ಉಲ್ಕಾಪಾತಗಳಾಗುತ್ತವೆ.

“ಭಾಸ್ಕರನು ಇತರ ಆರರೊಂದಿಗೆ ಉರಿಯುತ್ತಾನೆ; ಎಲ್ಲೆಡೆಯಲ್ಲಿಯೂ ಗುಡುಗಿನ ತುಮುಲಗಳುಂಟಾಗುತ್ತವೆ; ಉದಯ ಮತ್ತು ಅಸ್ತಗಳಲ್ಲಿ ಸೂರ್ಯನನ್ನು ಮೋಡಗಳು ಕವಿದಿರುತ್ತವೆ. ಯುಗಾಂತವು ಹತ್ತಿರವಾದಾಗ ಸಹಸ್ರಾಕ್ಷನು ಕಾಲಕ್ಕೆ ಸರಿಯಾಗಿ ಮಳೆಸುರಿಸುವುದಿಲ್ಲ. ಸಸ್ಯಗಳು ಬೆಳೆಯುವುದಿಲ್ಲ. ಸ್ತ್ರೀಯರು ಗಡುಸಾಗಿರುತ್ತಾರೆ, ಕ್ರೂರವಾಗಿ ಮಾತನ್ನಾಡುತ್ತಾರೆ, ಮತ್ತು ಅವರ ಗಂಡಂದಿರ ಮಾತಿನಂತೆ ನಡೆದುಕೊಳ್ಳುವುದಿಲ್ಲ. ಯುಗಕ್ಷಯದಲ್ಲಿ ಮಕ್ಕಳು ತಂದೆತಾಯಂದಿರನ್ನು ಕೊಲ್ಲುತ್ತಾರೆ; ಸ್ತ್ರೀಯರು ಗಂಡಂದಿರನ್ನು ಕೊಂದು ಮಕ್ಕಳ ಆಶ್ರಯದಲ್ಲಿರುತ್ತಾರೆ. ಯುಗಾಂತದಲ್ಲಿ ಅಕಾಲದಲ್ಲಿ ಸೂರ್ಯ-ರಾಹುಗಳ ಗ್ರಹಣವಾಗುತ್ತದೆ; ಮತ್ತು ಎಲ್ಲಾಕಡೆಯಲ್ಲಿಯೂ ಅಗ್ನಿಯು ಪ್ರಜ್ವಲಿಸುತ್ತಿರುತ್ತದೆ. ಪರ್ಯಟಕರು ನೀರು, ಭೋಜನಗಳನ್ನು ಕೇಳಿದರೂ ದೊರೆಯದೇ ಇದ್ದಾಗ ಆಶ್ರಯಗಳಿಲ್ಲದೇ ರಸ್ತೆಗಳಲ್ಲಿಯೇ ವಾಸಿಸುತ್ತಾರೆ. ಯುಗಾಂತವು ಹತ್ತಿರವಾದಾಗ ಅಪಶಕುನದ ಕಾಗೆಗಳು, ಹಾವುಗಳು, ಪಕ್ಷಿಗಳು, ಮೃಗಗಳು ಮತ್ತು ಪ್ರಾಣಿಗಳು ಘೋರವಾಗಿ ಕಿರುಚುವರು. ಯುಗಾಂತವು ಹತ್ತಿರವಾದಾಗ ಮಿತ್ರರು ಮತ್ತು ಸಂಬಂಧಿಗಳು ತಮ್ಮ ಜನರನ್ನು ಮತ್ತು ಪರಿಸರಗಳನ್ನು ತೊರೆಯುತ್ತಾರೆ. ಯುಗಾಂತವು ಹತ್ತಿರವಾದಾಗ ಅವರು ದೇಶಗಳು, ದಿಶಗಳು, ಪಟ್ಟಣಗಳು, ಮತ್ತು ಪುರಗಳಲ್ಲಿ ಕ್ರಮಶವಾಗಿ ಆಶ್ರಯಪಡೆಯುತ್ತಾರೆ. ಹಾ ತಂದೇ! ಹಾ ಮಗನೇ! ಎಂದು ಸುದಾರುಣವಾಗಿ ಅನ್ಯೋನ್ಯರನ್ನು ಕೂಗಿ ಕರೆಯುತ್ತಾ ಜನರು ಭೂಮಿಯಮೇಲೆ ತಿರುಗುತ್ತಿರುತ್ತಾರೆ.

“ತುಮುಲಗಳೊಂದಿಗೆ ವರ್ತಮಾನದಲ್ಲಿ ಯುಗಕ್ಷಯವಾಗಲು ಬ್ರಾಹ್ಮಣರಿಂದ ಪ್ರಾರಂಭವಾಗಿ ಲೋಕವು ಕ್ರಮೇಣವಾಗಿ ಪುನಃ ಹುಟ್ಟಿಕೊಳ್ಳುತ್ತದೆ. ಈ ಕಾಲಾಂತರದಲ್ಲಿ ಪುನಃ ಲೋಕವು ವರ್ಧಿಸುತ್ತದೆ. ಪುನಃ ದೈವವು ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತದೆ. ಯಾವಾಗ ಚಂದ್ರ, ಸೂರ್ಯ, ತಿಷ್ಯ ಮತ್ತು ಬೃಹಸ್ಪತಿಗಳು ಒಂದೇ ರಾಶಿಯಲ್ಲಿ ಸೇರುತ್ತಾರೋ ಆಗ ಕೃತಯುಗವು ಪುನಃ ಪ್ರಾರಂಭವಾಗುತ್ತದೆ. ಪರ್ಜ್ಯನ್ಯನು ಕಾಲಕ್ಕೆ ಮಳೆಸುರಿಸುತ್ತಾನೆ. ನಕ್ಷತ್ರಗಳು ಶುಭವನ್ನುಂಟುಮಾಡುತ್ತವೆ. ಪ್ರದಕ್ಷಿಣೆಮಾಡುವ ಗ್ರಹಗಳೂ ಕೂಡ ಏಳ್ಗೆಯನ್ನು ಸೂಚಿಸುತ್ತವೆ. ಕ್ಷೇಮ, ಸುಭಿಕ್ಷ, ಆರೋಗ್ಯಗಳಿಂದ ನಿರಾಮಯವಾಗುತ್ತದೆ. ಕಾಲದ ಪ್ರಚೋದನೆಯಿಂದ ಕಲ್ಕಿ ವಿಷ್ಣುಯಶ ಎಂಬ ಹೆಸರಿನ ಮಹಾವೀರ್ಯ ಮಹಾಬುದ್ಧಿ ಪರಾಕ್ರಮಿಯಾದ ದ್ವಿಜನು ಸಂಭಲಗ್ರಾಮದಲ್ಲಿ ಶುಭವಾದ ಬ್ರಾಹ್ಮಣ ಗೃಹದಲ್ಲಿ ಹುಟ್ಟುತ್ತಾನೆ. ಅವನ ಮನಸ್ಸಿನಂತೆ ಸರ್ವ ವಾಹನಗಳೂ, ಆಯುಧಗಳೂ, ಯೋಧರೂ, ಶಸ್ತ್ರಗಳೂ ಕವಚಗಳೂ ನಿಯಂತ್ರಣದಲ್ಲಿರುತ್ತವೆ. ಅವನು ಧರ್ಮವಿಜಯೀ ರಾಜಾ ಚಕ್ರವರ್ತಿಯಾಗುತ್ತಾನೆ. ಅವನು ಈ ಸಂಕುಲಕ್ಕೆ ಸಿಲುಕಿದ ಲೋಕವನ್ನು ಶಾಂತಗೊಳಿಸುತ್ತಾನೆ. ಮೇಲೆದ್ದ ಆ ಉದಾರಮನಸ್ಸಿನ ಬ್ರಾಹ್ಮಣನು ದೀಪ್ತನಾಗಿ ಕ್ಷಯವನ್ನು ಕೊನೆಗೊಳಿಸಿ,  ಸರ್ವರ ವಿನಾಶಕಾರಿಯೂ ಯುಗದ ಪರಿವರ್ತಕನೂ ಆಗುತ್ತಾನೆ. ಬ್ರಾಹ್ಮಣರಿಂದ ಪರಿವಾರಿತನಾಗಿ ಆ ದ್ವಿಜನು ಎಲ್ಲ ಮ್ಲೇಚ್ಛಗಣಗಳನ್ನು ಎಲ್ಲೇ ಇದ್ದರೂ ಕಿತ್ತೊಗೆಯುತ್ತಾನೆ. ಚೋರರನ್ನು ನಾಶಮಾಡಿ ಅವನು ಮಹಾಯಜ್ಞ ಅಶ್ವಮೇಧದಲ್ಲಿ ವಿಧಿವತ್ತಾಗಿ ಈ ಭೂಮಿಯನ್ನು ದ್ವಿಜರಿಗೆ ಒಪ್ಪಿಸುತ್ತಾನೆ. ಅವನು ಸ್ವಯಂಭುವಿನಿಂದ ವಿಹಿತವಾದ ಮರ್ಯಾದೆಗಳನ್ನು ಪುನಃ ಸ್ಥಾಪನೆಮಾಡಿ ಪುಣ್ಯಕರವೂ ಯಶಕರವೂ ಆದ ಕರ್ಮಗಳನ್ನು ಮಾಡಿ ವೃದ್ಧಾಪ್ಯದಲ್ಲಿ ವನದಲ್ಲಿ ವಾಸಿಸುತ್ತಾನೆ. ಅವನ ಶೀಲವನ್ನೇ ಲೋಕವಾಸಿಗಳಾದ ಮನುಷ್ಯರು ಅನುಸರಿಸುವರು. ವಿಪ್ರರಿಂದ ಚೋರರು ನಾಶಗೊಳ್ಳಲು ಕೃತಯುಗದಲ್ಲಿ ಕ್ಷೇಮವುಂಟಾಗುತ್ತದೆ. ಆ ವಿಪ್ರಶಾರ್ದೂಲ ಕಲ್ಕಿಯು ಜಯಿಸಿದ ದೇಶಗಳಲ್ಲಿ ಕೃಷ್ಣಾಜಿನ, ಶಕ್ತಿ, ತ್ರಿಶೂಲ ಮತ್ತು ಆಯುಧಗಳನ್ನು ಸ್ಥಾಪಿಸಿ, ಮಾನಿನಿಗಳಾದ ದ್ವಿಜೋತ್ತಮ ವಿಪ್ರೇಂದ್ರರಿಂದ ಸ್ತುತಿಸಲ್ಪಟ್ಟು, ಸದಾ ದಸ್ಯುಗಳ ವಧೆಯಲ್ಲಿ ನಿರತನಾಗಿ ಭೂಮಿಯಲ್ಲಿ ಸಂಚರಿಸುತ್ತಾನೆ. ಇವನು ದಸ್ಯುಗಳ ನಾಶವನ್ನು ನಡೆಸುತ್ತಿರುವಾಗ ಅವರು ಹಾ ತಂದೇ! ಹಾ ಮಗನೇ! ಎಂದು ದಾರುಣವಾಗಿ ಕೂಗಿ ಕರೆಯುತ್ತಿರುವುದು ಕೇಳಿಬರುತ್ತದೆ. ಕೃತವು ಪ್ರಾಪ್ತವಾದಾಗ ಅಧರ್ಮವು ವಿನಾಶವಾಗಿ ಧರ್ವವು ವೃದ್ಧಿಯಾಗುತ್ತದೆ. ಆಗ ಜನರು ಕ್ರಿಯಾಶಾಲಿಗಳಾಗುತ್ತಾರೆ.

“ಕೃತಯುಗದಲ್ಲಿ ಉದ್ಯಾನಗಳು, ಚೈತ್ಯಗಳು, ತಟಾಕಗಳು, ಮತ್ತು ವಟಗಳು ಮತ್ತು ವಿವಿಧ ಯಜ್ಞಕ್ರಿಯೆಗಳು ನಡೆಯುತ್ತವೆ. ಬ್ರಾಹ್ಮಣರು ಸಾಧುಗಳಾಗಿರುತ್ತಾರೆ; ಮುನಿಗಳು ತಪಸ್ವಿಗಳಾಗುತ್ತಾರೆ; ಪಾಷಂಡಗಳಾಗಿದ್ದ ಆಶ್ರಮಗಳು ಸತ್ಯದಲ್ಲಿ ನೆಲೆಗೊಳ್ಳುತ್ತವೆ ಮತ್ತು ಜನರು ಪ್ರಜೆಗಳಾಗುತ್ತಾರೆ. ಬಿತ್ತಿದ ಬೀಜಗಳೆಲ್ಲವೂ ಬೆಳೆಯುತ್ತವೆ ಮತ್ತು ಎಲ್ಲ ಋತುಗಳಲ್ಲಿಯೂ ಬೆಳೆಗಳು ಬೆಳೆಯುತ್ತವೆ. ನರರು ದಾನಗಳಲ್ಲಿ ವ್ರತಗಳಲ್ಲಿ ನಿಯಮಗಳಲ್ಲಿ ನಿರತರಾಗಿರುತ್ತಾರೆ. ವಿಪ್ರರು ಜಪ-ಯಜ್ಞಪರರಾಗಿ, ಧರ್ಮವನ್ನೇ ಬಯಸಿ ಸಂತೋಷದಿಂದಿರುತ್ತಾರೆ. ರಾಜರು ಈ ವಸುಂಧರೆಯನ್ನು ಧರ್ಮದಿಂದ ಪಾಲಿಸುತ್ತಾರೆ. ಕೃತಯುಗದಲ್ಲಿ ವೈಶ್ಯರು ವ್ಯವಹಾರದಲ್ಲಿ ನಿರತರಾಗಿರುತ್ತಾರೆ; ವಿಪ್ರರು ಷಟ್ಕರ್ಮು ನಿರತರಾಗಿರುತ್ತಾರೆ; ಕ್ಷತ್ರಿಯರು ರಕ್ಷಣೆಯಲ್ಲಿ ತೊಡಗಿರುತ್ತಾರೆ ಮತ್ತು ಶೂದ್ರರು ಈ ಮೂರು ವರ್ಣದವರ ಶುಶ್ರೂಷೆಯಲ್ಲಿ ನಿರತರಾಗಿರುತ್ತಾರೆ. ನಾನು ವರ್ಣಿಸಿದ ಇದು ಕೃತಯುಗ, ತ್ರೇತ, ಮತ್ತು ದ್ವಾಪರ ಹಾಗೂ ಯುಗದ ಅಂತ್ಯಕಾಲಗಳ ಧರ್ಮ. ಯುಗಗಳ ಸಂಖ್ಯೆಗಳನ್ನು ಸರ್ವಲೋಕಗಳಿಗೂ ತಿಳಿದಿದೆ. ನನಗೆ ನೆನಪಿದ್ದಷ್ಟು ಕಳೆದ ಮತ್ತು ಮುಂದಾದವುಗಳೆಲ್ಲವನ್ನೂ ನಾನು ಹೇಳಿದ್ದೇನೆ. ವಾಯುವು ಹೇಳಿದ್ದ ಇದನ್ನು ಋಷಿಗಳು ಪುರಾಣದಲ್ಲಿ ಸಂಗ್ರಹಿಸಿದ್ದಾರೆ. ಚಿರಂಜೀವಿಯಾದ ನಾನು ಬಹಳ ಬಾರಿ ಈ ಸಂಸಾರಮಾರ್ಗವನ್ನು ನೋಡಿದ್ದೇನೆ ಅನುಭವಿಸಿದ್ದೇನೆ. ಅವುಗಳನ್ನು ನಾನು ನಿನಗೆ ಹೇಳಿದ್ದೇನೆ. ಈಗ ಭ್ರಾತೃಗಳೊಂದಿಗೆ ಧರ್ಮಸಂಶಯವನ್ನು ಹೋಗಲಾಡಿಸುವ ನನ್ನ ಈ ಮಾತುಗಳನ್ನು ಕೇಳು. ನಿನ್ನ ಆತ್ಮವನ್ನು ಧರ್ಮದೊಡನೆ ಜೋಡಿಸಿಕೋ! ಧರ್ಮಾತ್ಮನೇ ಇಲ್ಲಿಯ ಮತ್ತು ನಂತರದ ಸುಖವನ್ನು ಅನುಭವಿಸುತ್ತಾನೆ. ನಾನು ನಿನಗೆ ಹೇಳುವ ಈ ಶುಭ ವಾಣಿಯನ್ನು ಕೇಳು. ಎಂದೂ ಬ್ರಾಹ್ಮಣನನ್ನು ಸೋಲಿಸುವ ಕರ್ತವ್ಯವನ್ನು ಮಾಡಬೇಡ! ಕೋಪಗೊಂಡ ಬ್ರಾಹ್ಮಣನು ಪ್ರತಿಜ್ಞೆಯಿಂದ ಲೋಕಗಳನ್ನೇ ನಾಶಪಡಿಸುತ್ತಾನೆ.”

ಮಾರ್ಕಂಡೇಯನ ಮಾತನ್ನು ಕೇಳಿ ಕುರುಗಳ ಪ್ರವರ ನೃಪ ಧೀಮಂತ ಪರಮದ್ಯುತಿಯು ಶ್ರೇಷ್ಠವಾದ ಈ ಮಾತನ್ನಾಡಿದನು: “ಮುನೇ! ನಾನು ಪ್ರಜೆಗಳನ್ನು ಸಂರಕ್ಷಿಸಬೇಕಾದರೆ ಯಾವ ಧರ್ಮವನ್ನು ಪಾಲಿಸಬೇಕು? ಸ್ವಧರ್ಮದಿಂದ ಚ್ಯುತಿಹೊಂದದೇ ನಾನು ಹೇಗೆ ನಡೆದುಕೊಳ್ಳಲಿ?”

ಮಾರ್ಕಂಡೇಯನು ಹೇಳಿದನು: “ಸರ್ವಭೂತಗಳಿಗೆ ದಯಾವಂತನಾಗಿರು. ಅನಸೂಯಕನಾಗಿ ಅವರ ಹಿತಗಳಲ್ಲಿ ನಿರತನಾಗಿರು. ನಿನ್ನದೇ ಮಕ್ಕಳಂತೆ ಪ್ರಜೆಗಳ ರಕ್ಷಣೆಯಲ್ಲಿ ನಿರತನಾಗಿರು. ಅಧರ್ಮವನ್ನು ತೊರೆದು ಧರ್ಮದಲ್ಲಿ ನಡೆ. ಪಿತೃಗಳನ್ನು ಮತ್ತು ದೇವತೆಗಳನ್ನು ಪೂಜಿಸು. ಅಪ್ರಮಾದದಿಂದ ಮಾಡಿದವುಗಳನ್ನು ಉತ್ತಮ ದಾನಗಳಿಂದ ಜಯಿಸು. ಮಾನವನ್ನು ತೊರೆ. ವಿನೀತನಾಗು. ಸರ್ವ ಪೃಥಿವಿಯನ್ನೂ ಗೆದ್ದು ಸಂತೋಷಗೊಂಡು ಸುಖಿಯಾಗು. ಹಿಂದಿನ ಮತ್ತು ಮುಂದಿನ ಈ ಧರ್ಮವನ್ನು ನಾನು ನಿನಗೆ ಹೇಳಿದ್ದೇನೆ. ಭುವಿಯಲ್ಲಿ ಹಿಂದಿನ ಮುಂದಿನವುಗಳೆಲ್ಲವೂ ನಿನಗೆ ತಿಳಿದಿವೆ. ಆದುದರಿಂದ ನಿನ್ನ ಹೃದಯದಲ್ಲಿರುವ ಈ ಪರಿಕ್ಲೇಶವನ್ನು ತೊರೆ. ಕಾಲದಿಂದ ಪ್ರಚೋದಿತರಾಗಿ ಈ ಕಾಲದಲ್ಲಿ ಸರ್ವ ದಿವೌಕಸರೂ ಪ್ರಜೆಗಳೂ ಗೊಂದಲಗಳಲ್ಲಿದ್ದಾರೆ. ನಾನು ನಿನಗೆ ಹೇಳಿದುದರ ಕುರಿತು ತುಂಬಾ ವಿಚಾರಮಾಡಬೇಡ. ನನ್ನ ವಚನಗಳ ಮೇಲೆ ಅತಿಯಾದ ಶಂಕೆಯೇ ನಿನ್ನ ಧರ್ಮಲೋಪಕ್ಕೆ ಕಾರಣವಾಗಬಹುದು. ಪ್ರಥಿತವಾದ ಕುರುಗಳ ವಂಶದಲ್ಲಿ ಜನಿಸಿರುವೆ. ಈಗ ಕರ್ಮದಲ್ಲಿ, ಮನಸ್ಸಿನಲ್ಲಿ ಮತ್ತು ಮಾತಿನಲ್ಲಿ ಎಲ್ಲವನ್ನೂ ಆಚರಿಸು.”

ಯುಧಿಷ್ಠಿರನು ಹೇಳಿದನು: “ದ್ವಿಜಶ್ರೇಷ್ಠ! ನೀನು ಹೇಳಿದ ಮಾತುಗಳು ಕೇಳಲು ಮನೋಹರವಾಗಿವೆ. ನಿನ್ನ ಶಾಸನದಂತೆ ಮಾಡಲು ಪ್ರಯತ್ನಿಸುತ್ತೇನೆ. ನನ್ನಲ್ಲಿ ಲೋಭವಿಲ್ಲ, ಭಯವಿಲ್ಲ ಮತ್ತು ಮತ್ಸರವಿಲ್ಲ. ನೀನು ನನಗೆ ಹೇಳಿದುದೆಲ್ಲವನ್ನು ಮಾಡುತ್ತೇನೆ.”

ಆ ಮಹಾತ್ಮ ಪಾಂಡವನ ಮಾತುಗಳನ್ನು ಕೇಳಿ ಶಾಂರ್ಙ್ಗಧನ್ವಿಯ ಸಹಿತ ಪಾಂಡವರು ಹರ್ಷಿತರಾದರು. ಧೀಮಂತ ಮಾರ್ಕಂಡೇಯನಿಂದ ಶುಭ ಕಥನಗಳನ್ನು, ಪುರಾಣದ ವರ್ಣನೆಗಳನ್ನು ಕೇಳಿ ಅವರು ವಿಸ್ಮಿತರಾದರು.

ಮತ್ತೊಮ್ಮೆ ಪಾಂಡವನು ಮಾರ್ಕಂಡೇಯನಿಗೆ ಹೇಳಿದನು: “ದಯವಿಟ್ಟು ಬ್ರಾಹ್ಮಣರ ಮಹಾ ಭಾಗ್ಯದ ಕುರಿತು ಹೇಳಬೇಕು!” ಆಗ ಮಾರ್ಕಂಡೇಯನು ಮಂಡೂಕ-ವಾಮದೇವರ ಕಥೆಯನ್ನು ಹೇಳಿದನು.

ಇಂದ್ರದ್ಯುಮ್ನ

ಪಾಂಡವರು ಋಷಿ ಮಾರ್ಕಂಡೇಯನಲ್ಲಿ ಪುನಃ “ನಿನಗಿಂತಲೂ ದೀರ್ಘಾಯುಷಿಗಳಾದ ಬೇರೆ ಯಾರಾದರೂ ಇದ್ದಾರೆಯೇ” ಎಂದು ಕೇಳಿದರು.

ಅವನು ಅವರಿಗೆ ಹೇಳಿದನು: “ಇಂದ್ರದ್ಯುಮ್ನನೆಂಬ ಹೆಸರಿನ ರಾಜರ್ಷಿಯಿದ್ದಾನಲ್ಲ! ಅವನ ಪುಣ್ಯವು ಕ್ಷೀಣವಾದಾಗ ದಿವಿಯಿಂದ ಕೆಳಗೆ ಬಿದ್ದನು. “ನಿನ್ನ ಕೀರ್ತಿಯು ಮುಗಿದುಹೋಯಿತು” ಎಂದು ಅವರು ಹೇಳಿದರು. ಅವನು ನನ್ನ ಬಳಿ ಬಂದು ಕೇಳಿದನು: “ನಿಮಗೆ ನನ್ನ ಪರಿಚಯವಿದೆಯೇ” ಎಂದು. ಅವನಿಗೆ ನಾನು ಹೇಳಿದೆನು: “ನಾವು ರಾಸಾಯನಿಕರಲ್ಲ! ನಮ್ಮ ಶರೀರವನ್ನು ಅದುಮಿಟ್ಟುಕೊಂಡು ಅನುಷ್ಠಾನಮಾಡಿ ನಾವು ಗುರಿಯನ್ನು ತಲುಪುವವರು. ಆದರೆ ಹಿಮಾಲಯದಲ್ಲಿ ಪ್ರಾಕಾರಕರ್ಣ ಎಂಬ ಹೆಸರಿನ ಗೂಬೆಯಿದೆ. ಬಹುಷಃ ಅವನು ನಿನ್ನನ್ನು ಗುರುತಿಸಬಲ್ಲ. ಹಿಮಾಲಯವು ಬಹಳ ದೂರದಲ್ಲಿದೆ. ಅವನು ಅಲ್ಲಿ ವಾಸಿಸುತ್ತಾನೆ.”

“ಆ ರಾಜರ್ಷಿಯು ಅವನಿಗೆ ಕೇಳಿದನು: “ನೀನು ನನ್ನನ್ನು ಗುರುತಿಸಬಲ್ಲೆಯಾ” ಎಂದು. ಅವನು ಒಂದು ಕ್ಷಣ ಯೋಚಿಸಿ “ನಿನ್ನನ್ನು ನಾನು ಗುರುತು ಹಿಡಿಯಲಾರೆ” ಎಂದು ಹೇಳಿದನು. ಇದಕ್ಕೆ ರಾಜರ್ಷಿ ಇಂದ್ರದ್ಯುಮ್ನನು ಪುನಃ ಆ ಗೂಬೆಗೆ ಕೇಳಿದನು: “ನಿನಗಿಂತಲೂ ದೀರ್ಘಾಯುಷಿಗಳಾದ ಬೇರೆ ಯಾರಾದರೂ ಇದ್ದಾರೆಯೇ?” ಇದಕ್ಕೆ ಅವನು ಉತ್ತರಿಸಿದನು: “ಇಂದ್ರದ್ಯುಮ್ನಸರ ಎಂಬ ಹೆಸರಿನ ಸರೋವರವೊಂದಿದೆ. ಅಲ್ಲಿ ನಾಡೀಜಂಘ ಎಂಬ ಹೆಸರಿನ ಬಕಪಕ್ಷಿಯು ವಾಸಿಸುತ್ತಿದೆ. ಅವನು ನನಗಿಂತಲೂ ಹೆಚ್ಚು ವರ್ಷ ಬಾಳಿದವನು. ಅವನನ್ನು ಕೇಳು.” ಆಗ ಇಂದ್ರದ್ಯುಮ್ನನು ನನ್ನನ್ನೂ ಉಲೂಕನನ್ನೂ ಕರೆದುಕೊಂಡು ನಾಡೀಜಂಘ ಬಕನು ಇರುವ ಆ ಸರೋವರಕ್ಕೆ ಹೋದನು.

“ನಾವು ಅವನನ್ನು ಕೇಳಿದೆವು: “ನೀನು ರಾಜಾ ಇಂದ್ರದ್ಯುಮ್ನನನ್ನು ಗುರುತಿಸಬಲ್ಲೆಯಾ” ಎಂದು. ಅವನು ಒಂದು ಕ್ಷಣ ಯೋಚಿಸಿ ಹೇಳಿದನು: “ನಾನು ಇಂದ್ರದ್ಯುಮ್ನನೆನ್ನುವ ರಾಜನನ್ನು ತಿಳಿದಿಲ್ಲ.” ಆಗ ನಾವು ಕೇಳಿದೆವು: “ನಿನಗಿಂತಲೂ ಹೆಚ್ಚುವರ್ಷ ಜೀವಿಸಿರುವ ಬೇರೆ ಯಾರಾದರೂ ಇದ್ದಾರೆಯೇ?” ಎಂದು. ಅವನು ಹೇಳಿದನು: “ಇಲ್ಲಿಯೇ ಸರೋವರದಲ್ಲಿ ಅಕೂಪಾರ ಎಂಬ ಹೆಸರಿನ ಆಮೆಯು ವಾಸಿಸುತ್ತಿದೆ. ಅವನು ನನಗಿಂತಲೂ ಮೊದಲು ಹುಟ್ಟಿದವನು. ಬಹುಷಃ ಅವನು ರಾಜನನ್ನು ಗುರುತಿಸಬಲ್ಲ. ಅಕೂಪಾರನನ್ನು ಕೇಳೋಣ” ಎಂದು.

“ಆಗ ಬಕನು ಆ ಅಕೂಪಾರ ಕಚ್ಛಪವನ್ನು ಕೇಳಿತು: “ಒಂದು ವಿಷಯದ ಕುರಿತು ನಿನ್ನಲ್ಲಿ ನಾವು ಕೇಳಬಯಸುತ್ತೇವೆ. ದಯವಿಟ್ಟು ಹೊರಗೆ ಬಾ!” ಎಂದು. ಇದನ್ನು ಕೇಳಿ ಆ ಆಮೆಯು ಸರೋವರದಿಂದ ಮೇಲೆದ್ದು ಸರೋವರದ ದಡದಲ್ಲಿ ನಿಂತಿದ್ದ ನಮ್ಮ ಬಳಿ ಬಂದಿತು. ಬಂದ ಅವನನ್ನು ನಾವು ಪ್ರಶ್ನಿಸಿದೆವು: “ನೀನು ರಾಜ ಇಂದ್ರದ್ಯುಮ್ನನನ್ನು ತಿಳಿದಿದ್ದೀಯಾ?” ಎಂದು. ಅವನು ಒಂದು ಕ್ಷಣ ಯೋಚಿಸಿ, ಕಣ್ಣಲ್ಲಿ ನೀರನ್ನು ತಂದುಕೊಂಡು, ಉದ್ವಿಗ್ನಹೃದಯನಾಗಿ ಕಂಪಿಸುತ್ತಾ, ಮೂರ್ಛೆಹೋಗುವನೋ ಎಂದು ತೋರುತ್ತಾ, ಕೈಮುಗಿದು ಹೇಳಿದನು: “ಅವನನ್ನು ಹೇಗೆತಾನೇ ಗುರುತಿಸಲಾರೆ? ಹಿಂದೆ ಒಂದು ಸಾವಿರ ಬಾರಿ ಅವನು ನನ್ನ ಮೇಲೆ ಯಜ್ಞದ ವೇದಿಕೆಗಳನ್ನು ಕಟ್ಟಿದ್ದ. ಅವನು ದಕ್ಷಿಣೆಯಾಗಿ ಕೊಟ್ಟ ಹಸುಗಳ ಗೊರಸಿನಿಂದಲೇ ಈ ಸರೋವರವು ನಿರ್ಮಿತವಾಗಿದೆ. ಮತ್ತು ನಾನು ಇನ್ನೂ ಇದರಲ್ಲಿ ವಾಸಿಸುತ್ತಿದ್ದೇನೆ.”

“ಆ ಕಚ್ಛಪವು ಹೇಳಿದ್ದುದನ್ನು ಕೇಳುತ್ತಿದ್ದಂತೆಯೇ ದೇವಲೋಕದಿಂದ ದೇವರಥವು ಕಾಣಿಸಿಕೊಂಡಿತು. ಇಂದ್ರದ್ಯುಮ್ನನ ಕುರಿತಾದ ಈ ಮಾತುಗಳು ಕೇಳಿಬಂದವು: “ಸ್ವರ್ಗವು ನಿನಗಾಗಿ ತೆರೆದಿದೆ. ಯಥೋಚಿತವಾದ ಸ್ಥಾನವನ್ನು ಸ್ವೀಕರಿಸು. ನೀನು ಕೀರ್ತಿವಂತನಾಗಿದ್ದೀಯೆ. ಏನೂ ಯೋಚಿಸದೇ ಬಾ” ಎಂದು. ಪುಣ್ಯ ಕರ್ಮಗಳ ಶಬ್ಧವು ದಿವಿ ಭೂಮಿಗಳಲ್ಲಿ ಮೊಳಗುತ್ತದೆ. ಎಲ್ಲಿಯವರೆಗೆ ಈ ಶಬ್ದವು ಕೇಳಿಬರುತ್ತದೆಯೋ ಅಲ್ಲಿಯವರೆಗೆ ಪುರುಷನಿರುತ್ತಾನೆ. ಇರುವ ಯಾವುದರ ಅಕೀರ್ತಿಯನ್ನು ಲೋಕದಲ್ಲಿ ಹೇಳಲಾಗುತ್ತದೆಯೋ, ಆ ಅಕೀರ್ತಿಯ ಶಬ್ಧವು ಇರುವವರೆಗೆ ಅದು ಅಧಮಲೋಕಗಳಲ್ಲಿ ಬಿದ್ದಿರುತ್ತದೆ. ಆದುದರಿಂದ ಭುವಿಯಲ್ಲಿ ನರನು ಅಂತ್ಯದವರೆಗೂ ಕಲ್ಯಾಣಕರವಾಗಿ ನಡೆದುಕೊಳ್ಳಬೇಕು. ಪಾಪಿಷ್ಠ ನಡವಳಿಕೆಗಳನ್ನು ತೊರೆಯಬೇಕು. ಧರ್ಮವನ್ನೇ ಒಟ್ಟುಮಾಡಿಕೊಳ್ಳಬೇಕು.”

“ಇದನ್ನು ಕೇಳಿದ ಆ ರಾಜನು ಹೇಳಿದನು: “ನಾನು ಈ ವೃದ್ಧರನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದೀನೋ ಅಲ್ಲಿಗೆ ಕರೆದೊಯ್ದು ಬರುವವರೆಗೆ ನಿಲ್ಲು!” ಅವನು ನನ್ನನ್ನು, ಪ್ರಾಕಾರಕರ್ಣ ಗೂಬೆಯನ್ನು ಯಥೋಚಿತ ಸ್ಥಳಗಳಲ್ಲಿರಿಸಿ, ಅವನಿಗೆ ಯಥೋಚಿತವಾದ ಸ್ಥಾನವನ್ನು ನೀಡಲು ಸಿದ್ಧವಾಗಿದ್ದ ಯಾನದಲ್ಲಿಗೆ ಹಿಂದಿರುಗಿದನು.”

ಈ ರೀತಿ “ನನಗಿಂತಲೂ ಚಿರಜೀವಿಗಳಿರುವುದನ್ನು ಕಂಡಿದ್ದೇನೆ” ಎಂದು ಮಾರ್ಕಂಡೇಯನು ಪಾಂಡವರಿಗೆ ಹೇಳಿದನು. ಕೇಳಿದ ಪಾಂಡವರು ಪ್ರೀತರಾಗಿ “ಸಾಧು! ಸ್ವರ್ಗಲೋಕದಿಂದ ಚ್ಯುತನಾಗಿದ್ದ ರಾಜ ಇಂದ್ರದ್ಯುಮ್ನನನ್ನು ಸ್ವರ್ಗದಲ್ಲಿದ್ದ ಅವನ ಸ್ಥಾನಕ್ಕೆ ಪುನಃ ಕಳುಹಿಸಿ ಒಳ್ಳೆಯದನ್ನೇ ಮಾಡಿದೆ!” ಅದಕ್ಕೆ ಅವನು ಹೇಳಿದನು: “ದೇವಕೀಪುತ್ರ ಕೃಷ್ಣನೂ ನರಕದಲ್ಲಿ ಬಳಲುತ್ತಿದ್ದ ರಾಜರ್ಷಿ ನೃಗನನ್ನು ಕಷ್ಟಗಳಿಂದ ಮೇಲಕ್ಕೆತ್ತಿ ಪುನಃ ಸ್ವರ್ಗವನ್ನು ದೊರಕಿಸಿಕೊಡಲಿಲ್ಲವೇ?”

ಧರ್ಮರಾಜ ಯುಧಿಷ್ಠಿರನು ತಪೋವೃದ್ಧ, ಅಕಲ್ಮಷ, ದೀರ್ಘಾಯು ಮಾರ್ಕಂಡೇಯನಲ್ಲಿ ಪುನಃ ಕೇಳಿದನು: “ಧರ್ಮಜ್ಞ! ನಿನಗೆ ದೇವ, ದಾನವ, ರಾಕ್ಷಸರ ಮತ್ತು ಶಾಶ್ವತವಾಗಿರುವ ವಿವಿಧ ರಾಜವಂಶಗಳ ಋಷಿವಂಶಗಳ ಕುರಿತು ತಿಳಿದಿದೆ. ಈ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ದೇವತೆಗಳ, ಮನುಷ್ಯರ, ಉರಗ ರಾಕ್ಷಸರ ದಿವ್ಯ ಕಥೆಗಳು ನಿನಗೆ ತಿಳಿದಿವೆ. ನಿನ್ನಿಂದ ಈ ವಿಷಯದ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ. ಕುವಲಾಶ್ವನೆಂದು ಪ್ರಖ್ಯಾತನಾದ ಅಪರಾಜಿತ ಇಕ್ಷ್ವಾಕುವು ಹೇಗೆ ಹೆಸರನ್ನು ಬದಲಾಯಿಸಿಕೊಂಡು ದುಂಧುಮಾರನಾದ? ಇದನ್ನು ತತ್ವದಿಂದ ನಿನ್ನಿಂದ ಕೇಳಬಯಸುತ್ತೇನೆ. ಧೀಮತ ಕುವಲಾಶ್ವನ ಹೆಸರನ್ನು ಏಕೆ ಬದಲಾಯಿಸಲಾಯಿತು?” ಆಗ ಮಾರ್ಕಂಡೇಯನು ಯುಧಿಷ್ಠಿರನಿಗೆ ದುಂಧುಮಾರನ ಆಖ್ಯಾನವನ್ನು ಹೇಳಿದನು.

ಆಗ ಭರತಶ್ರೇಷ್ಠ ರಾಜ ಯುಧಿಷ್ಠಿರನು ಮಹಾದ್ಯುತಿ ಮಾರ್ಕಂಡೇಯನನ್ನು ಒಳ್ಳೆಯ ಮಾತಿನಿಂದ ಧರ್ಮಪ್ರಶ್ನೆಯನ್ನು ಕೇಳಿದನು: “ಭಗವನ್! ನೀನು ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಮತ್ತು ಧರ್ಮ ಸೂಕ್ಷವನ್ನು ತತ್ವತವಾಗಿ ಹೇಳುವುದನ್ನು ಕೇಳಬಯಸುತ್ತೇನೆ. ದೇವತೆಗಳು, ಸೂರ್ಯ-ಚಂದ್ರರು, ವಾಯು, ಭೂಮಿ, ಅಗ್ನಿ ಮತ್ತು ಮಾತಾಪಿತೃಗಳು, ಗೋವುಗಳು, ಮತ್ತು ದೇವವೆಂದು ವಿಹಿತವಾಗಿರುವ ಎಲ್ಲವನ್ನೂ ನಾವು ಪ್ರತ್ಯಕ್ಷವಾಗಿಯೇ ಕಾಣುತ್ತೇವೆ. ಈ ಎಲ್ಲವನ್ನೂ ನಾನು ಗುರುವೆಂದು ಮನ್ನಿಸುತ್ತೇನೆ. ಹಾಗೆಯೇ ಪತ್ರಿವ್ರತೆಯರಾದ ಸ್ತ್ರೀಯರನ್ನು ಕೂಡ. ಪತಿವ್ರತೆಯರು ಮಾಡುವ ಶುಶ್ರೂಷೆಗಳು ದುಷ್ಕರವೆಂದು ನನಗನ್ನಿಸುತ್ತವೆ. ಸದಾ ಪತಿಯೇ ದೈವವೆಂದು ಯೋಚಿಸುವ, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ನಿಯಂತ್ರಿಸಿರುವ ಪತಿವ್ರತೆಯರ ಮಹಾತ್ಮೆಯನ್ನು ಹೇಳಬೇಕು. ಸ್ತ್ರೀಯರು ಮಾತಾಪಿತೃಗಳ ಮತ್ತು ಪತಿಯ ಶುಶ್ರೂಷೆ ಮಾಡುವುದು ದುಷ್ಕರವೆಂದು ನನಗನ್ನಿಸುತ್ತದೆ. ಸ್ತ್ರೀಯರ ಧರ್ಮಕ್ಕಿಂತ ಘೋರವೂ ದುಷ್ಕರವೂ ಆದ ಇನ್ನೊಂದನ್ನು ನಾನು ಕಾಣೆ. ಸದಾ ನಿಷ್ಠೆಯಿಂದ ಸದಾಚಾರ ಸ್ತ್ರೀಯರು ಏನನ್ನು ಮಾಡುತ್ತಾರೋ ಅದನ್ನು ತಂದೆ ತಾಯಂದಿರು ದುಷ್ಕರವನ್ನಾಗಿಸುತ್ತಾರೆ. ಸ್ತ್ರೀಯಾಗಿ ಹುಟ್ಟಿ, ಪತಿವ್ರತೆಯಾಗಿದ್ದು, ಸದಾ ಸತ್ಯವನ್ನೇ ಆಡಿಕೊಂಡು, ಹೊಟ್ಟೆಯಲ್ಲಿ ಹತ್ತು ತಿಂಗಳು ಗರ್ಭವನ್ನು ಧರಿಸುವುದಕ್ಕಿಂತ ಅದ್ಭುತವಾದುದು ಬೇರೆ ಏನಿದೆ? ಪರಮ ಸಂಶಯವನ್ನು ಹೊಂದಿ, ಅತುಲ ವೇದನೆಯನ್ನನ್ನುಭವಿಸಿ ನಾರಿಯರು ಮಹಾ ದುಃಖದಿಂದ ಮಕ್ಕಳನ್ನು ಹಡೆಯುತ್ತಾರೆ ಮತ್ತು ಮಹಾ ಸ್ನೇಹದಿಂದ ಬೆಳೆಸುತ್ತಾರೆ. ಹಾಗೆಯೇ ಕ್ರೂರಕರ್ಮಗಳನ್ನು ಮಾಡುವ, ಎಲ್ಲರ ಜಿಗುಪ್ಸೆಗೆ ಪಾತ್ರರಾದವರೂ ಕೂಡ ಸದಾ ದುಷ್ಕರ ಸ್ವಕರ್ಮವನ್ನು ಮಾಡುತ್ತಿರುತ್ತಾರೆ ಎಂದು ನನಗನ್ನಿಸುತ್ತದೆ. ಕ್ಷತ್ರಧರ್ಮವನ್ನು ಸದಾಚಾರದಲ್ಲಿರಿಸಿಕೊಳ್ಳುವುದರ ಸತ್ಯವನ್ನೂ ನನಗೆ ಹೇಳು. ಕ್ರೂರ ಮತ್ತು ದುರಾತ್ಮನು ಧರ್ಮದಲ್ಲಿ ನಡೆದುಕೊಳ್ಳುವುದು ಕಷ್ಟ. ಈ ಪ್ರಶ್ನೆಯ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.”

ಮಾರ್ಕಂಡೇಯನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಕಷ್ಟದ ಪ್ರಶ್ನೆಯನ್ನು ಉತ್ತರಿಸುತ್ತೇನೆ. ಸತ್ಯವನ್ನು ಹೇಳಿದಂತೆ ನನ್ನನ್ನು ಕೇಳು. ಕೆಲವರು ತಾಯಿಯನ್ನು ಮತ್ತೆ ಕೆಲವರು ತಂದೆಯನ್ನು ಉಚ್ಛರೆಂದು ಪರಿಗಣಿಸುತ್ತಾರೆ. ಆದರೆ ಮಕ್ಕಳನ್ನು ಬೆಳೆಸುವ ದುಷ್ಕರ ಕಾರ್ಯವನ್ನು ತಾಯಂದಿರೇ ಮಾಡುತ್ತಾರೆ. ತಪಸ್ಸಿನ ಮೂಲಕ, ದೇವತೆಗಳನ್ನು ಪೂಜಿಸಿ ವಂದಿಸುವುದರ ಮೂಲಕ, ಧೃಢತೆಯ ಮೂಲಕ, ಅಭಿಚಾರ ಉಪಾಯಗಳ ಮೂಲಕ ತಂದೆಯರು ಪುತ್ರರನ್ನು ಪಡೆಯಲು ಬಯಸುತ್ತಾರೆ. ಈ ರೀತಿ ಮಹಾ ಕಷ್ಟಪಟ್ಟು ದುರ್ಲಭನಾದ ಪುತ್ರನನ್ನು ಪಡೆದು ಇವನು ಏನಾಗುತ್ತಾನೋ ಎಂದು ಸದಾ ಚಿಂತಿಸುತ್ತಿರುತ್ತಾರೆ. ತಂದೆ ತಾಯಿಯರು ತಮ್ಮ ಪುತ್ರರು ಯಶಸ್ಸು, ಕೀರ್ತಿ, ಐಶ್ವರ್ಯ ಮತ್ತು ಧರ್ಮದಲ್ಲಿ ಮಕ್ಕಳನ್ನೂ ಪಡೆಯಲೆಂದು ಆಶಿಸುತ್ತಾರೆ. ಅವರ ಆಶೆಗಳನ್ನು ಸಫಲಗೊಳಿಸುವವನು ಧರ್ಮವಿದು. ತಂದೆ ತಾಯಿಯರನ್ನು ನಿತ್ಯವೂ ತೃಪ್ತಿಗೊಳಿಸುವವನು ಇಲ್ಲಿ ಮತ್ತು ಪರದಲ್ಲಿ ಶಾಶ್ವತ ಕೀರ್ತಿ-ಧರ್ಮಗಳನ್ನು ಪಡೆಯುತ್ತಾನೆ. ಸ್ತ್ರೀಯರಿಗೆ ಯಜ್ಞ, ಶ್ರಾದ್ಧ, ಉಪವಾಸಗಳು ಉಪಯೋಗಕ್ಕೆ ಬರುವವಲ್ಲವು. ಪತಿಯ ಶುಶ್ರೂಷೆ ಮಾಡುವುದರಿಂದ ಅವಳಿಗೆ ಸ್ವರ್ಗವು ದೊರೆಯುತ್ತದೆ. ಈ ವಿಷಯದಲ್ಲಿ ಪತಿವ್ರತೆಯರ ನಿಯತ ಧರ್ಮವನ್ನು ಗಮನವಿಟ್ಟು ಕೇಳು.” ಆಗ ಮಾರ್ಕಂಡೇಯನು ಯುಧಿಷ್ಠಿರನಿಗೆ ಕೌಶಿಕ-ಪತಿವ್ರತೆ-ಧರ್ವವ್ಯಾಧರ ಕಥೆಯನ್ನು ಹೇಳಿದನು. ಧರ್ಮಸಂಯುಕ್ತ ಈ ಶುಭ ಕಥೆಯನ್ನು ಕೇಳಿದ ಧರ್ಮರಾಜನು ಆ ತಪಸ್ವಿನಿ ಋಷಿ ಮಾರ್ಕಂಡೇಯನನ್ನು ಪುನಃ ಪ್ರಶ್ನಿಸಿದನು: “ಯಾವ ಕಾರಣಕ್ಕಾಗಿ ಹಿಂದೆ ಅಗ್ನಿಯು ವನಕ್ಕೆ ಹೋದನು ಮತ್ತು ಆ ಮಹಾನೃಷಿ ಅಂಗಿರಸನು ಅಗ್ನಿಯಿಲ್ಲದಿರುವಾಗ ಅಗ್ನಿಯಾಗಿ ಹವಿಸ್ಸುಗಳನ್ನು ಕೊಂಡೊಯ್ಯುವವನಾದನು? ಅಗ್ನಿಯು ಒಬ್ಬನೇ ಆಗಿದ್ದರೂ ಕರ್ಮಗಳಲ್ಲಿ ಬಹುವಾಗಿ ಕಾಣುತ್ತಾನೆ. ಇದರ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತೇನೆ. ಕುಮಾರನು ಹೇಗೆ ಹುಟ್ಟಿದನು? ರುದ್ರನಿಂದ ಗಂಗೆ ಮತ್ತು ಕೃತ್ತಿಕೆಯರಲ್ಲಿ ಹುಟ್ಟಿದರೂ ಅಗ್ನಿಯ ಮಗನು ಹೇಗಾದನು? ಇದನ್ನು ನಿನ್ನಿಂದ ಕೇಳಲು ಬಯಸುತ್ತೇನೆ. ಕುತೂಹಲವುಂಟಾಗಿರುವುದರಿಂದ ನಡೆದಂತೆ ಹೇಳು.”

ಮಾರ್ಕಂಡೇಯನು ಹೇಳಿದನು: “ಹೇಗೆ ಸಿಟ್ಟಾಗಿ ಅಗ್ನಿಯು ತಪಸ್ಸನ್ನು ತಪಿಸಲು ವನಕ್ಕೆ ತೆರಳಿದನು, ಹೇಗೆ ಭಗವಾನ್ ಅಂಗಿರಸನು ಹಳೆಯ ಅಗ್ನಿಗಿಂತಲೂ ಹೆಚ್ಚಿನ ಸ್ವಪ್ರಭೆಯಿಂದ ಸುಡುತ್ತಾ ಕತ್ತಲೆಯನ್ನು ನಾಶಪಡಿಸುತ್ತಾ ಸ್ವಯಂ ಅಗ್ನಿಯಾದನು ಮತ್ತು ಮಹಾಭಾಗ ಹವ್ಯವಾಹನನು ಆಶ್ರಮದಲ್ಲಿರುವಾಗ ಅವನಂತೆಯೇ ಆಗಿ ಹೇಗೆ ಸರ್ವ ಜಗತ್ತನ್ನೂ ಪ್ರಕಾಶಿಸಿದನು ಎನ್ನುವುದರ ಕುರಿತಾದ ಈ ಪುರಾತನ ಇತಿಹಾಸವನ್ನು ಹೇಳುತ್ತಾರೆ.” ಆಗ ಮಾರ್ಕಂಡೇಯನು ಯುಧಿಷ್ಠಿರನಿಗೆ ವಿವಿಧ ಅಗ್ನಿಗಳ ಕೀರ್ತನೆಯುಳ್ಳ ಅಂಗಿರಸ ಕಥೆ ಮತ್ತು ಕಾರ್ತಿಕೇಯನ ಜನ್ಮ ವೃತ್ತಾಂತಗಳನ್ನು ಹೇಳಿದನು.

Related image

2 Comments

  1. ಮಾನ್ಯರೆ , ನಿಮ್ಮ ಈ ಎಲ್ಲಾ ಪುರಾಣ ಅನುವಾದ ತುಂಬಾ ಅದ್ಭುತವಾಗಿದೆ.

    ಅದೇ ರೀತಿ ತಾವು ಮನುಸ್ಮೃತಿ ಗ್ರಂಥದ ಅನುವಾದವನ್ನು ಮಾಡಿ, ಪ್ರಕಟಿಸಿ..

    ವಂದನೆಗಳೊಂದಿಗೆ ನಿಮ್ಮ ನೆಚ್ಚಿನ ಓದುಗ ಆನಂದ.

Leave a Reply

Your email address will not be published. Required fields are marked *