ಮೂರನೆಯ ದಿನದ ಯುದ್ಧ

ರಾತ್ರಿಯು ಕಳೆದು ಪ್ರಭಾತವಾಗಲು ಶಾಂತನವ ಭೀಷ್ಮನು ಸೇನೆಗಳಿಗೆ ಯುದ್ಧಕ್ಕೆ ಹೊರಡುವಂತೆ ಆದೇಶವಿತ್ತನು. ಧಾರ್ತರಾಷ್ಟ್ರರ ವಿಜಯಾಕಾಂಕ್ಷಿಯಾದ ಕುರುಪಿತಾಮಹ ಶಾಂತನವ ಭೀಷ್ಮನು ಗಾರುಡ ಮಹಾವ್ಯೂಹವನ್ನು ರಚಿಸಿದನು. ಗರುಡನ ಕೊಕ್ಕಿನ ಪ್ರದೇಶತಲ್ಲಿ ಸ್ವಯಂ ದೇವವ್ರತನಿದ್ದನು. ಭರದ್ವಾಜ ಮತ್ತು ಕೃತವರ್ಮರು ಅದರ ಕಣ್ಣುಗಳಾಗಿದ್ದರು. ಅದರ ಶೀರ್ಷಭಾಗದಲ್ಲಿ ಅಶ್ವತ್ಥಾಮ-ಕೃಪರೂ, ತ್ರಿಗರ್ತರು, ಕೇಕಯರು, ವಾಟದಾನರೂ ಇದ್ದರು. ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮದ್ರಕ, ಸಿಂಧು-ಸೌವೀರರು, ಪಂಚನದರು ಜಯದ್ರಥನ ಸಹಿತ ಅದರ ಕುತ್ತಿಗೆಯ ಭಾಗದಲ್ಲಿ ಸೇರಿದ್ದರು. ಹಿಂಬಾಗದಲ್ಲಿ ರಾಜಾ ದುರ್ಯೋಧನನು ಸೋದರರು ಮತ್ತು ಅನುಗರಿಂದ ಆವೃತನಾಗಿದ್ದನು. ಅವಂತಿಯ ವಿಂದಾನುವಿಂದರು, ಕಾಂಬೋಜರು ಮತ್ತು ಶಕರೊಂದಿಗೆ ಶೂರಸೇನರು ಅದರ ಪುಕ್ಕಗಳಾದರು. ದಾಶೇರಕಣಗಳೊಂದಿಗೆ ಮಾಗಧರು ಮತ್ತು ಕಲಿಂಗರು ಕವಚಧಾರಿಗಳಾಗಿ ವ್ಯೂಹದ ಬಲಗಡೆಯಲ್ಲಿ ನಿಂತಿದ್ದರು. ಕಾನನರು, ವಿಕುಂಜರು, ಮುಕ್ತರು, ಪುಂಡ್ರದೇಶದವರು ಬೃಹದ್ಬಲನ ಸಹಿತ ಎಡಭಾಗದಲ್ಲಿ ನಿಂತಿದ್ದರು.

ಆ ಸೇನೆಯ ವ್ಯೂಹವನ್ನು ನೋಡಿ ಪರಂತಪ ಸವ್ಯಸಾಚಿಯು ಧೃಷ್ಟದ್ಯುಮ್ನನ ಸಹಿತ ಪ್ರತಿವ್ಯೂಹವಾಗಿ ಅರ್ಧಚಂದ್ರದ ವ್ಯೂಹವನ್ನು ರಚಿಸಿದನು. ಆ ವ್ಯೂಹವು ಅತಿದಾರುಣವಾಗಿತ್ತು. ಅದರ ದಕ್ಷಿಣ ಶೃಂಗದಲ್ಲಿ ಭೀಮಸೇನನು ನಾನಾಶಸ್ತ್ರಸಂಪನ್ನರಾದ ನಾನಾದೇಶದ ನೃಪರಿಂದ ಆವೃತನಾಗಿ ರಾರಾಜಿಸಿದನು. ಅವನ ಹಿಂದೆ ಮಹಾರಥ ವಿರಾಟ-ದ್ರುಪದರೂ, ತದನಂತರ ನೀಲಾಯುಧರೊಂದಿಗೆ ನೀಲನೂ ಇದ್ದರು. ನೀಲನ ಅನಂತರ ಮಹಾರಥ ಧೃಷ್ಟಕೇತುವು ಚೇದಿ-ಕಾಶಿ-ಕರೂಷ-ಪೌರವರಿಂದ ಸಂವೃತನಾಗಿ ನಿಂತಿದ್ದನು. ಆ ಮಹಾಸೇನೆಯ ಮಧ್ಯದಲ್ಲಿ ಧೃಷ್ಟದ್ಯುಮ್ನ-ಶಿಖಂಡಿಯರು ಪಾಂಚಾಲ-ಪ್ರಭದ್ರಕರೊಂದಿಗೆ ನಿಂತಿದ್ದರು. ಅಲ್ಲಿಯೇ ಗಜಸೇನೆಯಿಂದ ಸಂವೃತನಾಗಿ ಧರ್ಮರಾಜನೂ, ಅನಂತರ ಸಾತ್ಯಕಿಯೂ, ದ್ರೌಪದಿಯ ಐವರು ಪುತ್ರರೂ, ಅಭಿಮನ್ಯುವೂ, ಅವನ ಪಕ್ಕದಲ್ಲಿಯೇ ಇರವಾನನೂ, ಅವನ ನಂತರ ಭೈಮಸೇನಿ ಘಟೋತ್ಕಚನೂ ಅನಂತರ ಮಹಾರಥ ಕೇಕಯರೂ ಇದ್ದರು. ಆಗ ಎಡಭಾಗವನ್ನು ಸರ್ವಜಗತ್ತಿನ ರಕ್ಷಕನಾದ ಜನಾರ್ದನನಿಂದ ರಕ್ಷಣೆಯನ್ನು ಪಡೆದ ದ್ವಿಪದರಲ್ಲಿ ಶ್ರೇಷ್ಠನು ನಿಂತಿದ್ದನು. ಈ ರೀತಿಯಾಗಿ ಮಹಾವ್ಯೂಹವನ್ನು ಪ್ರತಿವ್ಯೂಹವಾಗಿ ರಚಿಸಿ ಪಾಂಡವರು ಧರ್ತರಾಷ್ಟ್ರರ ಮತ್ತು ಅವರ ಪಕ್ಷದಲ್ಲಿ ಸೇರಿದವರ ವಧೆಗಾಗಿ ಸಿದ್ಧರಾದರು.

ಆಗ ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾದ ಕೌರವರು ಮತ್ತು ಪರರ ರಥಸಂಕುಲಗಳ ನಡುವೆ ಯುದ್ಧವು ಪ್ರಾರಂಭವಾಯಿತು. ಅಲ್ಲಲ್ಲಿ ಅಶ್ವಸೇನೆಗಳು ರಥಸೇನೆಗಳು ಪರಸ್ಪರರನ್ನು ಕೊಲ್ಲುವುದರಲ್ಲಿ ತೊಡಗಿರುವುದು ಕಂಡುಬಂದಿತು. ಓಡುತ್ತಿರುವ ಮತ್ತು ಪುನಃ ಪುನಃ ಬೀಳುತ್ತಿರುವ ರಥಗಳ ತುಮುಲ ಶಬ್ಧವು ದುಂದುಭಿಸ್ವನಗಳೊಂದಿಗೆ ಮಿಶ್ರಿತವಾಯಿತು. ಪರಸ್ಪರರನ್ನು ಕೊಲ್ಲುತ್ತಿರುವ ಪ್ರಹರಿಸುತ್ತಿರುವ ಕೌರವರ ಮತ್ತು ಪಾಂಡವರ ನರವೀರರ ತುಮುಲವು ಆಕಾಶವನ್ನೇ ವ್ಯಾಪಿಸಿತು.

ಸಂಕುಲ ಯುದ್ಧ

ಅತಿರಥ ಧನಂಜಯನು ಅಲ್ಪವೇ ಸಮಯದಲ್ಲಿ ಶರಗಳಿಂದ ಕೌರವ ರಥಸೇನೆಯನ್ನು ವಧಿಸಿ ರಥಯೂಥಪರನ್ನು ಬೀಳಿಸಿದನು. ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನು ಅವರನ್ನು ವಧಿಸುತ್ತಿರಲು ಧಾರ್ತರಾಷ್ಟ್ರರು ರಣದಲ್ಲಿ ಪಾಂಡವನೊಂದಿಗೆ ಪ್ರತಿಯುದ್ಧಮಾಡಲು, ಬೆಳಗುವ ಯಶಸ್ಸನ್ನು ಬಯಸುತ್ತಾ ಮೃತ್ಯುವನ್ನೇ ಪಲಾಯನವನ್ನಾಗಿ ಮಾಡಿಕೊಂಡು ಪ್ರಯತ್ನಿಸಿದರು. ಏಕಾಗ್ರಚಿತ್ತರಾಗಿ ಅವರು ಪಾಂಡವರ ಸೇನೆಗಳನ್ನು ಅನೇಕ ಬಾರಿ ಧ್ವಂಸಗೊಳಿಸಿದರು. ರಥಗಳು ಮುರಿದು ಯೋಧರು ಓಡಿಹೋಗುತ್ತಿದ್ದರು. ಹಿಂದಿರುಗಿ ಬರುತ್ತಿದ್ದರು ಕೂಡ. ಅವರಲ್ಲಿ ಪಾಂಡವರ್ಯಾರು ಕೌರವರ್ಯಾರು ಯಾರಿಗೂ ಗೊತ್ತಾಗುತ್ತಿರಲಿಲ್ಲ. ದಿವಾಕರನನ್ನು ಮುಸುಕುವಷ್ಟು ಧೂಳು ಭುಮಿಯಲ್ಲಿ ಎದ್ದಿತು. ಅಲ್ಲಿ ದಿಕ್ಕುಗಳ್ಯಾವುವು ಉಪದಿಕ್ಕುಗಳ್ಯಾವು ಯಾವುದೂ ತಿಳಿಯುತ್ತಿರಲಿಲ್ಲ. ಅಲ್ಲಲ್ಲಿ ಅನುಮಾನದಿಂದ ಹೆಸರು-ಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು. ಏನು ಮಾಡಿದರೂ ಧೀಮತ ಸತ್ಯಸಂಧ ಭಾರದ್ವಾಜನಿಂದ ರಕ್ಷಿತವಾದ ಕೌರವರ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ಸವ್ಯಸಾಚಿಯಿಂದ ರಕ್ಷಿತವಾದ, ಭೀಮನಿಂದ ಸುರಕ್ಷಿತವಾದ ಮಹಾವ್ಯೂಹವನ್ನು ಭೇದಿಸಲಾಗಲಿಲ್ಲ. ಎರಡೂ ಸೇನೆಗಳಲ್ಲಿ ಸೇನೆಯ ಅಗ್ರಭಾಗವನ್ನು ಬಿಟ್ಟು, ರಥ-ಗಜಗಳನ್ನು ತೊರೆದು ಹೊರಗೆ ನಿಂತು ಯುದ್ಧಮಾಡುತ್ತಿದ್ದರು.

ಆ ಮಹಾಹವದಲ್ಲಿ ಹೊಳೆಯುತ್ತಿರುವ ತುದಿಯ ಋಷ್ಟಿಗಳಿಂದ ಮತ್ತು ಪ್ರಾಸಗಳಿಂದ ಹಯಾರೋಹಿಗಳು ಹಯಾರೋಹಿಗಳನ್ನು ಬೀಳಿಸುತ್ತಿದ್ದರು. ಆ ಅತಿಭಯಂಕರ ಸಮರದಲ್ಲಿ ರಥಿಗಳು ಕನಕಭೂಷಣ ಶರಗಳಿಂದ ಹೊಡೆದು ರಥಿಗಳನ್ನು ಕೆಳಗುರುಳಿಸುತ್ತಿದ್ದರು. ಗಜಾರೋಹಿಗಳು ಗಜಾರೋಹಿಗಳನ್ನು ಒಟ್ಟುಗೂಡಿ, ಸಂಸಕ್ತರಾಗಿ, ನಾರಾಚ-ಶರ-ತೋಮರಗಳಿಂದ ಬೀಳಿಸುತ್ತಿದ್ದರು. ಪರಸ್ಪರರನ್ನು ಕೊಲ್ಲಲು ಬಯಸಿ ಸಂಹೃಷ್ಟರಾದ ಪದಾತಿಗಳು ರಣದಲ್ಲಿ ಪದಾತಿಗಳನ್ನು ಭಿಂಡಿಪಾಲ-ಪರಶುಗಳಿಂದ ಹೊಡೆದು ಕೆಳಗುರುಳಿಸುತ್ತಿದ್ದರು. ಎರಡೂ ಸೇನೆಗಳಲ್ಲಿ ಪದಾತಿಗಳು ರಥಿಗಳನ್ನೂ, ರಥಿಗಳು ಪದಾತಿಗಳನ್ನೂ ನಿಶಿತ ಶರಗಳಿಂದ ಕೆಳಗೆ ಬೀಳಿಸುತ್ತಿದ್ದರು. ಗಜಾರೋಹಿಗಳು ಹಯಾರೋಹಿಗಳನ್ನೂ ಹಯಾರೋಹಿಗಳು ಗಜಾರೋಹಿಗಳನ್ನೂ ಬೀಳಿಸಲು ತೊಡಗಿ ಅಲ್ಲಿ ಅದ್ಭುತವಾಯಿತು. ಅಲ್ಲಲ್ಲಿ ಪದಾತಿಗಳು ಗಜಾರೋಹಿಗಳನ್ನೂ, ಅವರನ್ನು ಗಜಯೋಧರೂ ಉರುಳಿಸುವುದು ಕಂಡುಬಂದಿತು. ನೂರಾರು ಸಹಸ್ರಾರು ಪದಾತಿಸಂಘಗಳು ಹಯಾರೋಹರಿಂದ ಮತ್ತು ಸಾದಿಸಂಘಗಳು ಪದಾತಿಸಂಘಗಳಿಂದ ಬೀಳುವುದು ಕಂಡುಬಂದಿತು. ಆ ರಣಾಂಗಣದ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಧ್ವಜಗಳಿಂದಲೂ, ಧನುಸ್ಸುಗಳಿಂದಲೂ, ತೋಮರಗಳಿಂದಲೂ, ಪ್ರಾಸಗಳಿಂದಲೂ, ಗದೆಗಳಿಂದಲೂ, ಪರಿಘಗಳಿಂದಲೂ, ಕಂಪನಗಳಿಂದಲೂ, ಶಕ್ತ್ಯಾಯುಧಗಳಿಂದಲೂ, ಚಿತ್ರ-ವಿಚಿತ್ರವಾದ ಕವಚಗಳಿಂದಲೂ, ಕಣಪಗಳಿಂದಲೂ, ಅಂಕುಶಗಳಿಂದಲೂ, ಥಳಥಳಿಸುತ್ತಿದ್ದ ಖಡ್ಗಗಳಿಂದಲೂ, ಸುವರ್ಣಮಯ ರೆಕ್ಕೆಗಳುಳ್ಳ ಬಾಣಗಳಿಂದಲೂ, ಶೂಲಗಳಿಂದಲೂ, ಬಣ್ಣದ ಕಂಬಳಿಗಳಿಂದಲೂ, ಬಹುಮೂಲ್ಯವಾದ ರತ್ನಗಂಬಳಿಗಳಿಂದಲೂ ಆ ಭೂಮಿಯು ನಾನಾ ಬಣ್ಣದ ಪುಷ್ಪಹಾರಗಳಿಂದ ಅಲಂಕೃತವಾಗಿದೆಯೋ ಎನ್ನುವಂತೆ ತೋರುತ್ತಿತ್ತು. ನರ-ಅಶ್ವಗಳ ಕಾಯಗಳಿಂದ, ಬಿದ್ದಿದ್ದ ಆನೆಗಳಿಂದ, ಮಾಂಸಶೋಣಿತಕರ್ದಮಗಳಿಂದ ಕೂಡಿದ ಭೂಮಿಯು ಅಗಮ್ಯರೂಪವಾಗಿದ್ದಿತು. ಭೂಮಿಯ ಧೂಳು ರಣಶೋಣಿತದೊಂದಿಗೆ ಸೇರಿ ಕೆಸರುಂಟಾಯಿತು. ಎಲ್ಲ ದಿಕ್ಕುಗಳೂ ಧೂಳಿಲ್ಲದೇ ನಿರ್ಮಲವಾದವು. ಎಲ್ಲೆಡೆಯಲ್ಲಿಯೂ ಅಗಣಿತ ಕಬಂಧಗಳು (ರುಂಡಗಳಿಲ್ಲದ ಮುಂಡಗಳು) ಎದ್ದು ಓಡಾಡುತ್ತಿರುವುದು ಕಂಡುಬಂದಿತು. ಇದು ಜಗತ್ತಿನ ಭೂತಗಳ ವಿನಾಶದ ಚಿಹ್ನೆ. ನಡೆಯುತ್ತಿರುವ ಆ ಮಹಾರೌದ್ರ ಸುದಾರುಣ ಯುದ್ಧದಲ್ಲಿ ರಥಿಗಳು ಎಲ್ಲಕಡೆ ಓಡಿಹೋಗುತ್ತಿರುವುದು ಕಂಡುಬಂದಿತು.

ಆಗ ದ್ರೋಣ, ಭೀಷ್ಮ, ಜಯದ್ರಥ, ಪುರುಮಿತ್ರ, ವಿಕರ್ಣ, ಶಕುನಿ - ಈ ಸಮರದುರ್ಧರ್ಷ ಸಿಂಹತುಲ್ಯಪರಾಕ್ರಮಿಗಳು ಪುನಃ ಪುನಃ ಪಾಂಡವರ ಸೇನೆಗಳನ್ನು ಸದೆಬಡಿದರು. ಹಾಗೆಯೇ ಭೀಮಸೇನ, ಘಟೋತ್ಕಚ, ಸಾತ್ಯಕಿ, ಚೇಕಿತಾನ ಮತ್ತು ದ್ರೌಪದೇಯರೂ ಕೂಡ ಕೌರವರನ್ನು, ಸರ್ವರಾಜರೊಂದಿಗೆ ದೇವತೆಗಳು ದಾನವರನ್ನು ಹೇಗೋ ಹಾಗೆ ಓಡಿಸಿದರು. ಹಾಗೆ ಸಮರದಲ್ಲಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದ ಕ್ಷತ್ರಿಯರ್ಷಭರು ರಕ್ತದಿಂದ ತೋಯ್ದು ಘೋರರೂಪಿಗಳಾಗಿ ದಾನವರಂತೆ ರಾಜಿಸಿದರು. ಎರಡೂ ಸೇನೆಗಳಲ್ಲಿ ವೀರರು ರಿಪುಗಳನ್ನು ಸೋಲಿಸಿ ನಭಸ್ತಲದಲ್ಲಿರುವ ಮಹಾಮಾತ್ರ ಗ್ರಹಗಳಂತೆ ತೋರುತ್ತಿದ್ದರು. ಆಗ ದುರ್ಯೋಧನನು ಸಹಸ್ರ ರಥಗಳೊಂದಿಗೆ ಪಾಂಡವರನ್ನು ಮತ್ತು ಘಟೋತ್ಕಚನನ್ನು ಎದುರಿಸಿದನು. ಹಾಗೆಯೇ ಪಾಂಡವರೆಲ್ಲರೂ ಮಹಾಸೇನೆಯೊಂದಿಗೆ ಅರಿಂದಮ ಶೂರ ದ್ರೋಣ-ಭೀಷ್ಮರೊಂದಿಗೆ ಪ್ರತಿಯುದ್ಧ ಮಾಡಿದರು. ಕ್ರುದ್ಧನಾದ ಕಿರೀಟಿಯು ಸಮರ್ಥಿಸುತ್ತಿದ್ದ ಪಾರ್ಥಿವೋತ್ತಮರ ಮೇಲೆರಗಿದನು. ಆರ್ಜುನಿ-ಸಾತ್ಯಕಿಯರು ಸೌಬಲನ ಬಲವನ್ನು ಎದುರಿಸಿದರು. ಆಗ ಪುನಃ ಸಮರದಲ್ಲಿ ಜಯವನ್ನು ಬಯಸುತ್ತಿದ್ದ ಕೌರವರು ಮತ್ತು ಶತ್ರುಗಳ ನಡುವೆ ಲೋಮಹರ್ಷಣ ಸಂಗ್ರಾಮವು ನಡೆಯಿತು.

ಪಾಂಡವಯೋಧರ ಪರಾಕ್ರಮ, ಭೀಷ್ಮ-ದುರ್ಯೋಧನರ ಸಂವಾದ

ಫಲ್ಗುನನನ್ನು ನೋಡಿ ಕ್ರುದ್ಧರಾದ ಪಾರ್ಥಿವರು ಅನೇಕ ಸಹಸ್ರ ರಥಗಳಿಂದ ಅವನನ್ನು ಎಲ್ಲಕಡೆಗಳೆಂದಲೂ ಸುತ್ತುವರೆದರು. ಹೀಗೆ ರಥವೃಂದದಿಂದ ಕೋಟೆಯನ್ನಾಗಿಸಿಕೊಂಡು ಅನೇಕ ಸಹಸ್ರ ಶರಗಳಿಂದ ಎಲ್ಲ ಕಡೆಗಳಿಂದ ಅವನನ್ನು ಹೊಡೆದರು. ಕ್ರುದ್ಧರಾಗಿ ವಿಮಲ ತೀಕ್ಷ್ಣ ಶಕ್ತಿಗಳನ್ನೂ, ಗದೆಗಳನ್ನೂ, ಪರಿಘಗಳನ್ನೂ, ಪ್ರಾಸಗಳನ್ನೂ, ಪರಶುಗಳನ್ನೂ, ಮುದ್ಗರ-ಮುಸಲಗಳನ್ನೂ ಫಲ್ಗುನನ ರಥದ ಮೇಲೆ ಎಸೆದರು. ಹೀಗೆ ಪತಂಗಗಳಂತೆ ಎಲ್ಲಕಡೆಗಳಿಂದ ಸುರಿಯುತ್ತಿರುವ ಶಸ್ತ್ರಗಳನ್ನು ಪಾರ್ಥನು ಕನಕಭೂಷಣ ಶರಗಳಿಂದ ತಡೆದನು. ಅಲ್ಲಿ ಆ ಬೀಭತ್ಸುವಿನ ಅತಿಮಾನುಷ ಹಸ್ತಲಾಘವವನ್ನು ನೋಡಿ ದೇವ-ದಾನವ-ಗಂಧರ್ವ-ಪಿಶಾಚ-ಉರಗ-ರಾಕ್ಷಸರು “ಸಾಧು! ಸಾಧು!” ಎಂದು ಫಲ್ಗುನನನ್ನು ಗೌರವಿಸಿದರು. ಶೂರ ಸೌಬಲರೊಂದಿಗೆ ಗಾಂಧಾರರು ಮಹಾಸೇನೆಯೊಡನೆ ಸಾತ್ಯಕಿ ಮತ್ತು ಅಭಿಮನ್ಯುವನ್ನು ತಡೆದರು. ಅಲ್ಲಿ ಕ್ರುದ್ಧರಾದ ಸೌಬಲಕರು ವಾರ್ಷ್ಣೇಯನ ಉತ್ತಮ ರಥವನ್ನು ಯುದ್ಧದಲ್ಲಿ ಕ್ರೋಧದಿಂದ ನಾನಾವಿಧದ ಶಸ್ತ್ರಗಳಿಂದ ಎಳ್ಳಿನ ಗಾತ್ರದಷ್ಟು ಚೂರು ಚೂರು ಮಾಡಿದರು. ಆಗ ಮಹಾಭಯದಿಂದ ಪರಂತಪ ಸಾತ್ಯಕಿಯು ರಥವನ್ನು ಬಿಟ್ಟು ಬೇಗನೇ ಅಭಿಮನ್ಯುವಿನ ರಥವನ್ನೇರಿದನು. ಅವರಿಬ್ಬರೂ ಒಂದೇ ರಥದಲ್ಲಿದ್ದು ಸೌಬಲನ ಸೇನೆಯನ್ನು ಬೇಗನೆ ನಿಶಿತ ಸನ್ನತಪರ್ವ ಶರಗಳಿಂದ ನಾಶಗೊಳಿಸಿದರು.

ಇನ್ನೊಂದೆಡೆ ದ್ರೋಣ-ಭೀಷ್ಮರು ರಣದಲ್ಲಿ ಧರ್ಮರಾಜನ ಸೇನೆಯನ್ನು ಎದುರಿಸಿ ಅದನ್ನು ತೀಕ್ಷ್ಣವಾದ ಕಂಕಪತ್ರಗಳಿಂದ ಕೂಡಿದ ಶರಗಳಿಂದ ನಾಶಗೊಳಿಸುತ್ತಿದ್ದರು. ಆಗ ರಾಜ ಧರ್ಮಸುತ ಮತ್ತು ಮಾದ್ರೀಪುತ್ರ ಪಾಂಡವರೀರ್ವರು ದ್ರೋಣನ ಸರ್ವಸೇನೆಗಳ ಮೇಲೆ ಧಾಳಿಮಾಡಿದರು. ಅಲ್ಲಿ ಹಿಂದೆ ದೇವಾಸುರರ ನಡುವೆ ನಡೆದ ಸುದಾರುಣ ಯುದ್ಧದಂತೆ ಲೋಮಹರ್ಷಣ ತುಮುಲ ಮಹಾಯುದ್ಧವು ನಡೆಯಿತು. ಮಹಾಕಾರ್ಯಗಳನ್ನೆಸಗುತ್ತಿದ್ದ ಭೀಮಸೇನ-ಘಟೋತ್ಕಚರಿಬ್ಬರ ಬಳಿ ಬಂದು ದುರ್ಯೋಧನನು ಅವರಿಬ್ಬರನ್ನು ತಡೆದನು. ಯುದ್ಧಮಾಡುತ್ತಿರುವ ಹೈಡಿಂಬಿಯ ಪರಾಕ್ರಮವು ಅವನ ತಂದೆಯನ್ನೂ ಮೀರಿಸಿತ್ತು. ಭೀಮಸೇನನಾದರೋ ಸಂಕ್ರುದ್ಧನಾಗಿ, ನಗು ನಗುತ್ತಾ ಧುರ್ಯೋಧನನ ಎದೆಗೆ ಗುರಿಯಿಟ್ಟು ಬಾಣಪ್ರಯೋಗ ಮಾಡಿದನು. ಆಗ ರಾಜಾ ದುರ್ಯೋಧನನು ಶ್ರೇಷ್ಠ ಪ್ರಹಾರದಿಂದ ಮೂರ್ಛೆಗೊಂಡು ರಥದಲ್ಲಿಯೇ ಕುಸಿದು ಕುಳಿತನು. ಅವನು ಮೂರ್ಛಿತನಾದುದನ್ನು ತಿಳಿದು ಸಾರಥಿಯು ತ್ವರೆಮಾಡಿ ಅವನನ್ನು ರಣದಿಂದ ಆಚೆ ಕರೆದೊಯ್ದನು. ಆಗ ಸೈನ್ಯವು ಒಡೆಯಿತು. ಎಲ್ಲಕಡೆ ಓಡಿ ಹೋಗುತ್ತಿರುವ ಕೌರವ ಸೇನೆಯನ್ನು ಭೀಮನು ತೀಕ್ಷ್ಣ ಶರಗಳಿಂದ, ಅವರ ಹಿಂದೆ ಓಡಿಹೋಗಿ, ಸಂಹರಿಸಿದನು. ರಥಶ್ರೇಷ್ಠ ಪಾರ್ಷತ ಮತ್ತು ಧರ್ಮಪುತ್ರ ಪಾಂಡವರು ದ್ರೋಣ ಮತ್ತು ಗಾಂಗೇಯರು ನೋಡುತ್ತಿದ್ದಂತೆಯೇ ಶತ್ರುಸೇನೆಗಳನ್ನು ತೀಕ್ಷ್ಣವಾದ ವಿಶಿಖಗಳಿಂದ ಹೊಡೆದು ಸಂಹರಿಸುತ್ತಿದ್ದರು. ಓಡಿಹೋಗುತ್ತಿರುವ ದುರ್ಯೋಧನನ ಸೈನ್ಯವನ್ನು ಮಹಾರಥರಾದ ಭೀಷ್ಮ-ದ್ರೋಣರಿಬ್ಬರೂ ತಡೆದು ನಿಲ್ಲಿಸಲು ಶಕ್ಯರಾಗಲಿಲ್ಲ. ಭೀಷ್ಮದ್ರೋಣರು ತಡೆಯುತ್ತಿದ್ದರೂ ಅವರ ಕಣ್ಣೆದುರಿಗೇ ಆ ಸೇನೆಯು ಓಡಿ ಹೋಗುತ್ತಿತ್ತು. ಒಂದೇ ರಥದಲ್ಲಿ ನಿಂತು ಸೌಭದ್ರ-ಶಿನಿಪುಂಗವರು ಸೌಬಲಿಯ ಸೇನೆಗಳನ್ನು ಸಮರದಲ್ಲಿ ಎಲ್ಲಕಡೆ ಓಡಿಸಿದರು. ಆಗ ಸಹಸ್ರಾರು ರಥಗಳು ಒಂದೆಡೆಯಿಂದ ಇನ್ನೊಂದೆಡೆಗೆ ಓಡಿಹೋಗುತ್ತಿದ್ದವು. ಅವರಿಬ್ಬರು ಶೈನ-ಕುರುಪುಂಗವರು ಅಮವಾಸ್ಯೆಯಂದು ನಭಸ್ತಲದಲ್ಲಿ ಒಂದೇಕಡೆ ಸೋಮ-ಸೂರ್ಯರಂತೆ ಶೋಭಿಸುತ್ತಿದ್ದರು.

ಆಗ ಕ್ರುದ್ಧನಾದ ಅರ್ಜುನನಾದರೋ ಕೌರವ ಸೈನ್ಯದ ಮೇಲೆ ಮೋಡಗಳು ಮಳೆಸುರಿಸುವಂತೆ ಶರವರ್ಷಗಳನ್ನು ಸುರಿಸಿದನು. ಪಾರ್ಥನ ಶರಗಳಿಂದ ವಧಿಸಲ್ಪಡುತ್ತಿದ್ದ ಕೌರವ ಸೇನೆಯು ವಿಷಾದ-ಭಯ ಕಂಪಿತಗೊಂಡು ಓಡಿಹೋಯಿತು. ಓಡಿಹೋಗುತ್ತಿರುವವರನ್ನು ನೋಡಿ ದುರ್ಯೋಧನನ ಹಿತೈಷಿಗಳಾದ ಮಹಾರಥ ಭೀಷ್ಮ-ದ್ರೋಣರಿಬ್ಬರೂ ಸಂರಬ್ಧರಾಗಿ ಅವರನ್ನು ತಡೆಯಲು ಪ್ರಯತ್ನಿಸಿದರು. ಆಗ ರಾಜಾ ದುರ್ಯೋಧನನು ಎಚ್ಚೆತ್ತು ಎಲ್ಲಕಡೆ ಹೋಗುತ್ತಿರುವ ಆ ಸೈನ್ಯವನ್ನು ನಿಲ್ಲಿಸಿದನು. ಎಲ್ಲೆಲ್ಲಿ ದುರ್ಯೋಧನನನ್ನು ಯಾರ್ಯಾರು ನೋಡಿದರೋ ಅಲ್ಲಲ್ಲಿ ಮಹಾರಥ ಕ್ಷತ್ರಿಯರು ಹಿಂದಿರುಗಿದರು. ಅವರು ಹಿಂದಿರುಗುತ್ತಿರುವುದನ್ನು ನೋಡಿಯೇ ಇತರ ಜನರು ಅನ್ಯೋನ್ಯರೊಡನೆ ಸ್ಪರ್ಧಿಸುತ್ತಾ, ನಾಚಿಕೆಗೊಂಡು, ಹಿಂದಿರುಗಿ ಬರುತ್ತಿದ್ದರು. ಹಿಂದಿರುಗಿ ಬರುತ್ತಿರುವವರ ವೇಗವು ಚಂದ್ರೋದಯದ ಹೊತ್ತಿನಲ್ಲಿ ಸಮುದ್ರವು ಭರವುಕ್ಕಿ ಬರುವಂತಿತ್ತು. ಹಿಂದಿರುಗುತ್ತಿದ್ದ ಅವರನ್ನು ನೋಡಿ ರಾಜಾ ಸುಯೋಧನನು ತ್ವರೆಮಾಡಿ ಹೋಗಿ ಭೀಷ್ಮ ಶಾಂತನವನಿಗೆ ಈ ಮಾತುಗಳನ್ನಾಡಿದನು:

ಭಾರತ! ಪಿತಾಮಹ! ನಾನು ಹೇಳುವುದನ್ನು ಚೆನ್ನಾಗಿ ಕೇಳು. ನೀನು ಜೀವಿತವಿರುವಾಗ, ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣನು ಪುತ್ರನೊಡನೆ ಮತ್ತು ಸುಹೃಜ್ಜನರೊಡನೆ, ಮಹೇಷ್ವಾಸ ಕೃಪ ನೀವುಗಳು ಜೀವಿತವಿರುವಾಗಲೇ ಈ ರೀತಿ ಸೇನೆಗಳು ಪಲಾಯನಮಾಡುತ್ತಿವೆಯೆಂದರೆ ಅದು ಅನುರೂಪವೆಂದು ನನಗನ್ನಿಸುವುದಿಲ್ಲ. ಪಾಂಡವರೂ ಯಾವರೀತಿಯಲ್ಲಿಯೂ ಸಂಗ್ರಾಮದಲ್ಲಿ ನಿನ್ನ, ಹಾಗೆಯೇ ದ್ರೋಣ, ದ್ರೌಣಿ, ಕೃಪರಿಗಿಂತ ಅತಿಬಲವಂತರಲ್ಲ. ಸೇನೆಗಳನ್ನು ವಧಿಸುತ್ತಿರುವ ಇವರನ್ನು ಕ್ಷಮಿಸುತ್ತಿರುವೆಯೆಂದರೆ ಪಾಂಡುಸುತರ ಮೇಲೆ ಇನ್ನೂ ನಿನಗೆ ಅನುಗ್ರಹವಿದೆಯೆಂದಾಯಿತು. ಯುದ್ಧದ ಮೊದಲೇ ನೀನು ರಣದಲ್ಲಿ ಪಾಂಡವರು, ಪಾರ್ಷತ ಮತ್ತು ಸಾತ್ಯಕಿಯೊಡನೆ ಯುದ್ಧ ಮಾಡುವುದಿಲ್ಲವೆಂದು ನನಗೆ ಹೇಳಬೇಕಾಗಿತ್ತು. ನಿನ್ನ ಆ ಮಾತನ್ನು ಕೇಳಿ ಆಗಲೇ ಕರ್ಣನ ಸಹಿತ ನಿನ್ನ, ಆಚಾರ್ಯನ ಕೃಪನ ಜೊತೆಗೂಡಿ ಆಲೋಚಿಸಿ ಕಾರ್ಯವನ್ನು ಕೈಗೊಳ್ಳುತ್ತಿದ್ದೆ. ನಾನು ನಿಮ್ಮಿಬ್ಬರನ್ನೂ ಪರಿತ್ಯಜಿಸುವ ಸ್ಥಿತಿಯಲ್ಲಿಲ್ಲವಾದುದರಿಂದ ನೀವಿಬ್ಬರೂ ಪುರುಷರ್ಷಭರೂ ನಿಮಗೆ ತಕ್ಕುದಾದ ವಿಕ್ರಮದಿಂದ ಯುದ್ಧಮಾಡಬೇಕು.

ಈ ಮಾತನ್ನು ಕೇಳಿ ಭೀಷ್ಮನು ಪುನಃ ಪುನಃ ನಗುತ್ತಾ, ನಂತರ ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ದುರ್ಯೋಧನನಿಗೆ ಹೇಳಿದನು:ರಾಜನ್! ಹಿಂದೆಯೇ ನಾನು ಬಹಳಷ್ಟು ಯುಕ್ತವಾದ ಹಿತವಚನಗಳನ್ನು ನಿನಗೆ ಹೇಳಿದ್ದೇನೆ. ಪಾಂಡವರು ಯುದ್ಧದಲ್ಲಿ ವಾಸನನೊಡನೆ ದೇವತೆಗಳಿಗೂ ಅಜೇಯರು. ವೃದ್ಧನಾದ ನಾನು ಎಷ್ಟು ಮಾಡಲು ಶಕ್ಯನೋ ಅಷ್ಟನ್ನು ಇಂದು ಮಾಡುತ್ತೇನೆ. ಯಥಾಶಕ್ತಿ ಬಾಂಧವರೊಂದಿಗೆ ಇವರನ್ನು ಯಮಲೋಕಕ್ಕೆ ಕಳುಹಿಸುವುದನ್ನು ಮಾಡುತ್ತೇನೆ. ಇಂದು ನೀನು ನೋಡುತ್ತಿರುವಾಗಲೋ ಸರ್ವಲೋಕವೂ ನೋಡುತ್ತಿರಲು ಪಾಂಡುಸುತರನ್ನು ಅವರ ಬಂಧುಗಳು ಮತ್ತು ಸರ್ವಸೈನ್ಯಗಳೊಂದಿಗೆ ತಡೆಯುತ್ತೇನೆ.

ಹೀಗೆ ಭೀಷ್ಮನು ದುರ್ಯೋಧನನಿಗೆ ಹೇಳಲು ಕೌರವರು ಮುದಿತರಾಗಿ ಜೋರಾಗಿ ಶಂಖಗಳನ್ನು ಊದಿದರು ಮುತ್ತು ಭೇರಿಗಳನ್ನು ಮೊಳಗಿಸಿದರು. ಆಗ ಪಾಂಡವರೂ ಕೂಡ ಆ ಮಹಾ ನಿನಾದವನ್ನು ಕೇಳಿ ಶಂಖಗಳನ್ನು ಊದಿದರು ಮತ್ತು ಭೇರಿ-ಮುರಜಗಳನ್ನು ಮೊಳಗಿಸಿದರು.

ಭೀಷ್ಮನ ಪರಾಕ್ರಮ, ಕೃಷ್ಣನ ಚಕ್ರಧಾರಣೆ

ಆ ದಿನದ ಪೂರ್ವಾಹ್ಣವು ಹೆಚ್ಚಾಗಿ ಕಳೆದುಹೋಗಿರಲು ಜಯವನ್ನು ಪಡೆದ ಮಹಾತ್ಮ ಪಾಂಡವರು ಹೃಷ್ಟರಾಗಿದ್ದರು. ಸರ್ವಧರ್ಮಗಳ ವಿಶೇಷಜ್ಞ ದೇವವ್ರತನು ವೇಗಿ ಅಶ್ವಗಳೊಂದಿಗೆ, ದುರ್ಯೋಧನನ ಮಹಾ ಸೇನೆಯಿಂದ ಎಲ್ಲಕಡೆಗಳಿಂದಲೂ ರಕ್ಷಿತನಾಗಿ ಪಾಂಡವರ ಸೇನೆಯನ್ನು ಎದುರಿಸಿದನು. ಆಗ ಕೌರವರು ಮತ್ತು ಪಾಂಡವರೊಡನೆ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು. ಗಿರಿಗಳು ಸೀಳಿಹೋಗುತ್ತಿವೆಯೋ ಎನ್ನುವಂತೆ ಅಲ್ಲಿ ಧನುಸ್ಸುಗಳ ಠೇಂಕಾರ ಮತ್ತು ಚಪ್ಪಾಳೆಗಳ ಮಹಾ ಶಬ್ಧವುಂಟಾಯಿತು.ನಿಲ್ಲು!, ನಿಂತಿದ್ದೇನೆ!, ಇಗೋ ಹೊಡೆಯುತ್ತೇನೆ!”, “ಪಲಾಯನ ಮಾಡು!, ಸ್ಥಿರನಾಗಿರು!, ಸ್ಥಿರನಾಗಿದ್ದೇನೆ. ಪ್ರಹರಿಸು! ಎಂಬ ಶಬ್ಧಗಳು ಎಲ್ಲೆಡೆಯಲ್ಲಿ ಕೇಳಿಬಂದವು. ಬಂಗಾರದ ಕವಚಗಳ ಮೇಲೆ, ಕಿರೀಟಗಳೂ ಮತ್ತು ಧ್ವಜಗಳ ಮೇಲೆ ಬೀಳುತ್ತಿದ್ದ ಶಸ್ತ್ರಾಸ್ತ್ರಗಳ ಧ್ವನಿಯು ಪರ್ವತಗಳ ಮೇಲೆ ಬೀಳುವ ಕಲ್ಲುಗಳ ಧ್ವನಿಯನ್ನು ಹೋಲುತ್ತಿತ್ತು. ನೂರಾರು ಸಹಸ್ರಾರು ವಿಭೂಷಿತ ಉತ್ತಮಾಂಗಗಳು ಮತ್ತು ಬಾಹುಗಳು ಭೂಮಿಯ ಮೇಲೆ ಬಿದ್ದು ಕುಣಿಯುತ್ತಿದ್ದವು. ಕೆಲವೆಡೆ ರುಂಡವನ್ನು ಕಳೆದುಕೊಂಡಿದ್ದರೂ ಪುರುಷಸತ್ತಮರ ಮುಂಡಗಳು ಧನುಸ್ಸುಗಳನ್ನು ಮತ್ತು ಇತರ ಆಯುಧಗಳನ್ನು ಎತ್ತಿ ಹಿಡಿದು ನಿಲ್ಲುತ್ತಿದ್ದವು. ಆಗ ಮಹಾವೇಗದಿಂದ, ಆನೆಗಳ ಅಂಗಾಂಗಗಳೇ ರೌದ್ರಶಿಲೆಗಳಾಗಿ, ಮಾಂಸ-ರಕ್ತಗಳ ಮಿಶ್ರಣದ ಕೆಸರಿನ ರಕ್ತವಾಹಿನೀ ನದಿಯು ಹರಿಯತೊಡಗಿತು. ಶ್ರೇಷ್ಠ ಅಶ್ವ-ನರ-ನಾಗಗಳ ಶರೀರಗಳಿಂದ ಹುಟ್ಟಿದ ಅದು ನರಿ-ಹದ್ದುಗಳಿಗೆ ಸಂತೋಷವನ್ನು ನೀಡುತ್ತಾ ಪರಲೋಕದ ಮುಖವಾಗಿ ಹರಿಯುತ್ತಿತ್ತು. ಧಾರ್ತರಾಷ್ಟ್ರರ ಮತ್ತು ಪಾಂಡವರ ನಡೆದ ಯುದ್ಧದಂತೆ ಹಿಂದೆ ಏನನ್ನೂ ನೋಡಿರಲಿಲ್ಲ ಅಥವಾ ಕೇಳಿರಲಿಲ್ಲ. ಯುದ್ಧದಲ್ಲಿ ಕೆಳಬಿದ್ದಿದ್ದ ಯೋಧರಿಂದ ಮತ್ತು ನೀಲಗಿರಿಶೃಂಗಗಳಂತೆ ಬಿದ್ದಿರುವ ಆನೆಗಳ ಶೃಂಗಗಳಿಂದ ಆವೃತವಾಗಿರುವ ಅಲ್ಲಿ ರಥಗಳು ಚಲಿಸಲೂ ದಾರಿಯಿರಲಿಲ್ಲ. ಅಲ್ಲಿ ಹರಡಿ ಬಿದ್ದಿದ್ದ ಕವಚ, ಬಣ್ಣಬಣ್ಣದ ಧ್ವಜಗಳು ಮತ್ತು ಛತ್ರಗಳಿಂದ ಆ ರಣಸ್ಥಾನವು ಶರತ್ಕಾಲದ ನಭಸ್ತಲದಂತೆ ಶೋಭಿಸುತ್ತಿತ್ತು. ಕೆಲವರು ತಮ್ಮ ಕರುಳುಗಳು ಶರಗಳಿಂದ ಕತ್ತರಿಸಲ್ಪಟ್ಟು ಹೊರಬಂದು ಪೀಡಿತರಾಗಿದ್ದರೂ ಅಭೀತರಾಗಿ ಕೋಪದಿಂದ ಶತ್ರುಗಳನ್ನು ಬೆನ್ನಟ್ಟಿ ಓಡುತ್ತಿದ್ದರು. ರಣದಲ್ಲಿ ಬಿದ್ದಿರುವವರು “ತಾತ! ಭ್ರಾತ! ಸಖ! ಬಂಧೋ! ನನ್ನ ಮಾವ! ನನ್ನನ್ನು ಮೇಲೆತ್ತು! ನನ್ನನ್ನು ಬಿಟ್ಟುಹೋಗಬೇಡ!” ಎಂದು ಕೂಗುತ್ತಿದ್ದರು. ಅನ್ಯರು “ಎದ್ದು ಬಾ!”, “ಹೋಗಬೇಡ!”. “ಏತಕ್ಕೆ ಹೆದರುತ್ತೀಯೆ?”, “ಎಲ್ಲಿಗೆ ಹೋಗುತ್ತಿರುವೆ?” “ಸಮರದಲ್ಲಿ ನಾನು ಸ್ಥಿತನಾಗಿದ್ದೇನೆ. ಹೆದರದಿರು!” ಎಂದು ಕೂಗುತ್ತಿದ್ದರು.

ಅಲ್ಲಿ ಶಾಂತನವ ಭೀಷ್ಮನು ಕಾರ್ಮುಕವನ್ನು ಮಂಡಲಾಕಾರವಾಗಿರಿಸಿಕೊಂಡು ವಿಷಸರ್ಪೋಮವಾದ ಉರಿಯುತ್ತಿರುವ ಬಾಣಗಳನ್ನು ಪ್ರಯೋಗಿಸಿದನು. ಆ ಯತವ್ರತನು ಶರಗಳಿಂದ ದಿಕ್ಕುಗಳೆಲ್ಲವನ್ನೇ ಒಂದೇ ಮಾಡಿ ಪಾಂಡವರ ರಥಗಳನ್ನು ನೋಡಿ ನೋಡಿ ಹೊಡೆದನು. ಅವನು ತನ್ನ ಕೈಚಳಕವನ್ನು ಪ್ರದರ್ಶಿಸುತ್ತಾ ರಥದಲ್ಲಿ ನಿಂತು ನೃತ್ಯವಾಡುತ್ತಿರುವಂತೆ, ಉರಿಯುತ್ತಿರುವ ಕೊಳ್ಳಿಯ ಗಾಲಿಯಂತೆ ಅಲ್ಲಲ್ಲಿ ಕಾಣುತ್ತಿದ್ದನು. ಆ ಶೂರನು ಒಬ್ಬನೇ ಆಗಿದ್ದರೂ ಅವನ ಹಸ್ತಲಾಘವದಿಂದ ಪಾಂಡವ-ಸೃಂಜಯರಿಗೆ ಅವನು ಅನೇಕ ಲಕ್ಷಗಳಂತೆ ಕಾಣುತ್ತಿದ್ದನು. ಭೀಷ್ಮನು ಮಾಯೆಯಿಂದ ತನ್ನನ್ನು ಅನೇಕರೂಪಗಳನ್ನಾಗಿ ಮಾಡಿಕೊಂಡಿರಬಹುದೆಂದು ಅಲ್ಲಿರುವವರು ಭಾವಿಸಿದರು. ಪೂರ್ವದಲ್ಲಿ ಅವನನ್ನು ನೋಡಿದ ಜನರು ಪಶ್ಚಿಮದಲ್ಲಿಯೂ ಅವನನ್ನು ನೋಡುತ್ತಿದ್ದರು. ಉತ್ತರದಲ್ಲಿ ಒಂದು ಕ್ಷಣ ಕಾಣಿಸಿಕೊಂಡರೆ ಪುನಃ ದಕ್ಷಿಣದಲ್ಲಿ ಕಾಣಿಸಿಕೊಳ್ಳುತ್ತಿದ್ದನು. ಹೀಗೆ ಸಮರದಲ್ಲಿ ವೀರ ಗಾಂಗೇಯನು ಕಾಣುತ್ತಿದ್ದನು. ಪಾಂಡವರು ಕೇವಲ ಅವನ ಚಾಪದಿಂದ ಬರುತ್ತಿರುವ ಅನೇಕ ವಿಶಿಖ ಬಾಣಗಳನ್ನು ಕಾಣುತ್ತಿದ್ದರೇ ಹೊರತು ಅವನನ್ನು ನೋಡಲು ಶಕ್ಯರಾಗಿರಲಿಲ್ಲ. ವಾಹಿನಿಯನ್ನು ಸಂಹರಿಸುವ ಕೆಲಸವನ್ನು ಮಾಡುತ್ತಾ ಅಮಾನುಷ ರೂಪದಿಂದ ರಣದಲ್ಲಿ ಸಂಚರಿಸುತ್ತಿರುವ ಭೀಷ್ಮನ ಕುರಿತು ಅಲ್ಲಿದ್ದ ಅನೇಕ ವೀರರು ಬಹುವಿಧಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು: ಪತಂಗಗಳಂತೆ ವಿಧಿಚೋದಿತರಾಗಿ ಸಹಸ್ರರ ವಿನಾಶಕ್ಕಾಗಿ ಸಂಕ್ರುದ್ಧನಾಗಿರುವ ಭೀಷ್ಮನೆಂಬ ಅಗ್ನಿಯಲ್ಲಿ ರಾಜರು ಬೀಳುತ್ತಿದ್ದಾರೆ.

ಲಘುವೇಧಿ ಭೀಷ್ಮನು ನರ-ನಾಗ-ಅಶ್ವಗಳ ಮೇಲೆ ಬಿಟ್ಟ ಅನೇಕ ಶರಗಳಲ್ಲಿ ಯಾವುದೂ ವ್ಯರ್ಥವಾಗುತ್ತಿರಲಿಲ್ಲ. ಚೆನ್ನಾಗಿ ಚೂಪಾಗಿರುವ ಒಂದೇ ಒಂದು ಪತತ್ರಿ ಬಾಣದಿಂದಲೇ ವಜ್ರದಿಂದ ಉತ್ತಮ ಪರ್ವತವನ್ನು ಹೇಗೋ ಹಾಗೆ ಮುಳ್ಳಿನ ಕವಚಗಳಿಂದ ಕೂಡಿದ ಆನೆಯನ್ನು ಸೀಳಿಬಿಡುತ್ತಿದ್ದನು. ಅವನು ಒಂದೇ ಒಂದು ಸುತೀಕ್ಷ್ಣ ನಾರಾಚದಿಂದ ಕವಚಗಳನ್ನು ಧರಿಸಿದ್ದರೂ ಎರಡು ಅಥವಾ ಮೂರು ಗಜಾರೋಹಿಗಳನ್ನು ಸೇರಿಸಿ ಕೊಲ್ಲುತ್ತಿದ್ದನು. ಯುದ್ಧದಲ್ಲಿ ಯಾರು ಯಾರು ಯಾವಾಗಲಾದರೂ ಭೀಷ್ಮನನ್ನು ಎದುರಿಸಿದರೆಂದರೆ ಮುಹೂರ್ತದಲ್ಲಿಯು ಅವರು ನೆಲದಮೇಲೆ ಬೀಳುತ್ತಿರುವ ದೃಶ್ಯವು ಕಾಣುತ್ತಿತ್ತು. ಹೀಗೆ ಭೀಷ್ಮನ ಅತುಲ ವೀರ್ಯದಿಂದ ವಧಿಸಲ್ಪಟ್ಟ ಧರ್ಮರಾಜನ ಮಹಾಸೇನೆಯು ಸಹಸ್ರಭಾಗಗಳಾಗಿ ಒಡೆದು ಹೋಯಿತು. ಮಹಾತ್ಮ ವಾಸುದೇವ-ಪಾರ್ಥರು ನೋಡುತ್ತಿದ್ದಂತೆಯೇ ಶರವರ್ಷಗಳಿಂದ ತಾಪಿತವಾದ ಮಹಾಸೇನೆಯು ಚೆಲ್ಲಾಪಿಲ್ಲಿಯಾಯಿತು. ಭೀಷ್ಮನ ಬಾಣಗಳಿಂದ ಪೀಡಿತರಾಗಿ ಓಡಿ ಹೋಗುತ್ತಿರುವ ಮಹಾರಥರನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆ ವೀರರಿಗೆ ಸಾಧ್ಯವಾಗಲಿಲ್ಲ. ಮಹೇಂದ್ರಸಮನಾದ ವೀರನಿಂದ ವಧಿಸಲ್ಪಡುತ್ತಿರುವ ಆ ಮಹಾಸೇನೆಯು ಒಡೆದುಹೋಯಿತು. ಇಬ್ಬರೂ ಒಟ್ಟಿಗೇ ಓಡಿಹೋಗುತ್ತಿರಲಿಲ್ಲ. ವಧಿಸಲ್ಪಟ್ಟ ನರನಾಗಾಶ್ವಗಳಿಂದ, ಕೆಳಗೆ ಬಿದ್ದ ಧ್ವಜಕೂಬರಗಳಿಂದ ಪಾಂಡುಪುತ್ರರ ಸೇನೆಯು ಹಾಹಾಕಾರಮಾಡಿ ಚೇತನವನ್ನು ಕಳೆದುಕೊಂಡಿತು. ಅಲ್ಲಿ ದೈವಬಲವೇ ಮಾಡುವಂತೆ ತಂದೆಯರು ಪುತ್ರರನ್ನು, ಪುತ್ರರು ತಂದೆಯನ್ನು, ಪ್ರಿಯರು ಸಖರನ್ನು ಸಂಹರಿಸಿದರು. ಪಾಂಡುಪುತ್ರರ ಕೆಲವು ಸೈನಿಕರು ಕವಚವನ್ನು ಕಳಚಿ, ಕೂದಲನ್ನು ಬಿಚ್ಚಿ ಓಡಿಹೋಗುತ್ತಿರುವುದು ಕಂಡುಬಂದಿತು. ಪಾಂಡುಪುತ್ರನ ಸೇನೆಯು ಭ್ರಾಂತಗೊಂಡ ಗೋವುಗಳ ಸಮೂಹದಂತೆ, ಭ್ರಾಂತರಾಗಿ, ಆರ್ತಸ್ವರದಲ್ಲಿ ಕೂಗುತ್ತಾ ರಥಯೂಥಪರು ಓಡಿಹೋಗುತ್ತಿರುವುದು ಕಂಡುಬಂದಿತು.

ಒಡೆದುಹೋಗುತ್ತಿರುವ ಆ ಸೈನ್ಯವನ್ನು ನೋಡಿ ದೇವಕಿನಂದನನು ಉತ್ತಮ ರಥವನ್ನು ಹಿಡಿದು ನಿಲ್ಲಿಸಿ ಪಾರ್ಥ ಬೀಭತ್ಸುವಿಗೆ ಹೇಳಿದನು:ಪಾರ್ಥ! ನೀನು ಬಯಸುತ್ತಿದ್ದ ಸಮಯವು ಈಗ ಬಂದೊದಗಿದೆ. ಮೋಹವೇನಾದರೂ ಇದ್ದರೆ ಅದನ್ನು ಕೊಡವಿ ಹಾಕಿ ಇವನನ್ನು ಹೊಡೆ! ಹಿಂದೆ ನೀನು ರಾಜರ ಸಮಾಗಮದಲ್ಲಿ ಭೀಷ್ಮ-ದ್ರೋಣ ಪ್ರಮುಖರೆಲ್ಲರನ್ನೂ, ಧಾರ್ತರಾಷ್ಟ್ರನ ಸೈನಿಕರನ್ನೂ, ಅವರ ಅನುಯಾಯಿಗಳೊಂದಿಗೆ ಯಾರು ನನ್ನೊಂದಿಗೆ ಯುದ್ಧಮಾಡುವರೋ ಅವರನ್ನು ಸಂಹರಿಸುತ್ತೇನೆ ಎಂದು ಹೇಳಿದ್ದೆಯಲ್ಲ ಆ ಮಾತನ್ನು ಸತ್ಯಮಾಡು. ಎಲ್ಲ ಕಡೆಗಳಲ್ಲಿ ಒಡೆದು ಹೋಗುತ್ತಿರುವ ನಿನ್ನ ಸೈನ್ಯವನ್ನು, ಯುಧಿಷ್ಠಿರಬಲದಲ್ಲಿ ಓಡಿಹೋಗುತ್ತಿರುವ ಸರ್ವ ಮಹೀಪಾಲರನ್ನೂ ನೋಡು. ಸಮರದಲ್ಲಿ ಅಂತಕನಂತೆ ಬಾಯಿಕಳೆದುಕೊಂಡಿರುವ ಭೀಷ್ಮನನ್ನು ನೋಡಿ ಸಿಂಹನನ್ನು ನೋಡಿದ ಕ್ಷುದ್ರಮೃಗಗಳಂತೆ ಭಯಾರ್ತರಾಗಿ ನಾಶಹೊಂದುತ್ತಿದ್ದಾರೆ.

ಹೀಗೆ ಹೇಳಿದ ವಾಸುದೇವನಿಗೆ ಧನಂಜಯನು ಉತ್ತರಿಸಿದನು: ಎಲ್ಲಿ ಈ ಸೇನಾಸಾಗರವನ್ನು ಪ್ರಹರಿಸುತ್ತಿರುವ ಭೀಷ್ಮನಿರುವಲ್ಲಿಗೆ ಕುದುರೆಗಳನ್ನು ಓಡಿಸು! ಆಗ ರಜತವರ್ಣದ ಕುದುರೆಗಳನ್ನು ಮಾಧವನು ಸೂರ್ಯನಂತೆ ದುಷ್ಪ್ರೇಕ್ಷನಾಗಿದ್ದ ಭೀಷ್ಮನ ರಥವಿರುವಲ್ಲಿಗೆ ಓಡಿಸಿದನು. ಭೀಷ್ಮನೊಡನೆ ಯುದ್ಧಮಾಡಲು ಬಂದ ಮಹಾಬಾಹು ಪಾರ್ಥನನ್ನು ನೋಡಿ ಯುಧಿಷ್ಠಿರನ ಮುಹಾಸೇನೆಯು ಹಿಂದಿರುಗಿತು. ಕುರುಶ್ರೇಷ್ಠ ಭೀಷ್ಮನು ಮತ್ತೆ ಮತ್ತೆ ಸಿಂಹದಂತೆ ಗರ್ಜಿಸುತ್ತಾ ಧನಂಜಯನ ರಥವನ್ನು ಬೇಗನೆ ಶರವರ್ಷಗಳಿಂದ ಮುಚ್ಚಿದನು. ಕ್ಷಣದಲ್ಲಿಯೇ ಆ ಮಹಾ ಶರವರ್ಷದಿಂದ, ಹಯ-ಸಾರಥಿಗಳೊಂದಿಗೆ ಅವನ ರಥವು ಮುಚ್ಚಿಹೋಗಿ ಕಾಣದಂತಾಯಿತು. ಆದರೆ ಸತ್ತ್ವವಾನ್ ವಾಸುದೇವನು ಸಂಭ್ರಾಂತನಾಗದೇ ಧೈರ್ಯದಲ್ಲಿದ್ದುಕೊಂಡೇ ಭೀಷ್ಮನ ಸಾಯಕಗಳಿಂದ ಹೊಡೆಯಲ್ಪಟ್ಟ ಆ ಅಶ್ವಗಳನ್ನು ನಡೆಸುತ್ತಲೇ ಇದ್ದನು. ಆಗ ಪಾರ್ಥನು ಮೋಡದಂತೆ ಶಬ್ಧಮಾಡುತ್ತಿದ್ದ ದಿವ್ಯ ಧನುಸ್ಸನ್ನು ಹಿಡಿದು ಭೀಷ್ಮನ ಧನುಸ್ಸನ್ನು ಮೂರು ಶರಗಳಿಂದ ತುಂಡುಮಾಡಿ ಬೀಳಿಸಿದನು. ಧನುಸ್ಸು ತುಂಡಾಗಲು ಭೀಷ್ಮನು ನಿಮಿಷಾಂತರದಲ್ಲಿ ಇನ್ನೊಂದು ಮಹಾಧನುಸ್ಸನ್ನು ಸಜ್ಜುಗೊಳಿಸಿದನು. ಮೋಡದಂತೆ ಶಬ್ಧಮಾಡುತ್ತಿದ್ದ ಆ ಧನುಸ್ಸನ್ನು ಎರಡೂ ಕೈಗಳಿಂದ ಸೆಳೆಯಲು ಕ್ರುದ್ಧನಾದ ಅರ್ಜುನನು ಆ ಧನುಸ್ಸನ್ನು ಕೂಡ ತುಂಡರಿಸಿದನು. ಆಗ ಶಂತನುವಿನ ಮಗನು ಅವನ ಹಸ್ತಲಾಘವವನ್ನು ಪ್ರಶಂಸಿಸಿದನು: ಸಾಧು ಪಾರ್ಥ! ಮಹಾಬಾಹೋ! ಸಾಧು! ಭೋ ಪಾಂಡುನಂದನ! ಧನಂಜಯ! ಈ ಮಹತ್ಕಾರ್ಯವು ನಿನಗೇ ಯುಕ್ತರೂಪವಾದುದು. ಪುತ್ರ! ನಿನ್ನ ಈ ಸುದೃಢತೆಗೆ ಮೆಚ್ಚಿದ್ದೇನೆ. ನನ್ನೊಂದಿಗೆ ಯುದ್ಧಮಾಡು!

ಹೀಗೆ ಸಮರದಲ್ಲಿ ಪಾರ್ಥನನ್ನು ಪ್ರಶಂಸಿಸಿ ಆ ವೀರನು ಬೇರೆ ಮಹಾ ಧನುಸ್ಸನ್ನು ತೆಗೆದುಕೊಂಡು ಪಾರ್ಥನ ರಥದ ಮೇಲೆ ಶರಗಳನ್ನು ಪ್ರಯೋಗಿಸಿದನು. ಲಘುತ್ವದಿಂದ ಮಂಡಲಾಕಾರದಲ್ಲಿ ನಡೆಸಿ ಅವನ ಶರಗಳನ್ನು ವ್ಯರ್ಥಗೊಳಿಸಿ ವಾಸುದೇವನು ಕುದುರೆಗಳನ್ನು ಓಡಿಸುವುದರಲ್ಲಿ ತನಗಿದ್ದ ಪರಮ ಶಕ್ತಿಯನ್ನು ತೋರಿಸಿದನು. ಆಗಲೂ ಕೂಡ ಸುದೃಢರಾದ ವಾಸುದೇವ-ಧನಂಜಯರನ್ನು ಬೀಷ್ಮನು ಎಲ್ಲ ಅಂಗಾಂಗಳಿಗೆ ನಿಶಿತ ಬಾಣಗಳಿಂದ ಹೊಡೆದು ಗಾಯಗೊಳಿಸಿದನು. ಭೀಷ್ಮನ ಶರಗಳಿಂದ ಗಾಯಗೊಂಡ ಆ ನರವ್ಯಾಘ್ರರಿಬ್ಬರು ಗೂಳಿಗಳ ಕಾದಾಟದಲ್ಲಿ ಕೊಂಬುಗಳಿಂದ ಗೀರಲ್ಪಟ್ಟ ಚಿಹ್ನೆಗಳಿರುವ ಎರಡು ಗೂಳಿಗಳಂತೆ ಶೋಭಿಸಿದರು. ಸಂರಬ್ಧನಾದ ಭೀಷ್ಮನು ಪುನಃ ಸಂಕ್ರುದ್ಧನಾಗಿ ಸನ್ನತಪರ್ವ ಶರಗಳಿಂದ ಇಬ್ಬರೂ ಕೃಷ್ಣರನ್ನೂ ಎಲ್ಲ ಕಡೆಗಳಿಂದ ಮುಚ್ಚಿದನು. ರೋಷಿತನಾಗಿ ಆಗಾಗ ಜೋರಾಗಿ ನಗುತ್ತಾ ಭೀಷ್ಮನು ತೀಕ್ಷ್ಣ ಶರಗಳಿಂದ ವಾರ್ಷ್ಣೇಯನನ್ನು ಹೊಡೆದು ನಡುಗಿಸಿದನು. ಆಗ ಕೃಷ್ಣನು ಭೀಷ್ಮನ ಪರಾಕ್ರಮವನ್ನು ಮತ್ತು ಮಹಾಬಾಹು ಪಾರ್ಥನು ಮೃದುವಾಗಿ ಯುದ್ಧಮಾಡುತ್ತಿರುವುದನ್ನು ನೋಡಿದನು. ಯುದ್ಧದಲ್ಲಿ ಸೇನೆಗಳ ಮಧ್ಯದಲ್ಲಿದ್ದುಕೊಂಡು ಆದಿತ್ಯನಂತೆ ಉರಿಯುತ್ತಾ ಭೀಷ್ಮನು ಎಡೆಬಿಡದೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದನು. ಯುಗಾಂತದಂತೆ ಯುಧಿಷ್ಠಿರನ ಬಲದಲ್ಲಿದ್ದ ಶ್ರೇಷ್ಠ ಶ್ರೇಷ್ಠ ಪಾಂಡುಪುತ್ರರ ಸೈನಿಕರನ್ನು ನಾಶಮಾಡುತ್ತಿರುವ ಭೀಷ್ಮನನ್ನು ನೋಡಿದನು. ಅದನ್ನು ನೋಡಿ ಸಹಿಸಲಾಗದೇ ಪರವೀರಹ ಅಮೇಯಾತ್ಮ ಭಗವಾನ್ ಕೇಶವನು ಚಿಂತಿಸಿದನು: ಯುಧಿಷ್ಠಿರನ ಬಲವು ಇಲ್ಲವಾಗುತ್ತಿದೆ. ಒಂದೇ ಹಗಲಿನಲ್ಲಿ ರಣದಲ್ಲಿ ದೇವದಾನವರನ್ನೂ ನಾಶಮಾಡಬಲ್ಲ ಭೀಷ್ಮನಿಗೆ ಸೇನೆಗಳೊಂದಿಗೆ ಮತ್ತು ಅನುಯಾಯಿಗಳೊಂದಿಗೆ ಯುದ್ಧದಲ್ಲಿ ಪಾಂಡುಸುತರು ಯಾವ ಲೆಕ್ಕಕ್ಕೆ? ಮಹಾತ್ಮ ಪಾಂಡವನ ಮಹಾಸೇನೆಯು ಓಡಿಹೋಗುತ್ತಿದೆ. ಭಗ್ನವಾಗಿ ಓಡಿಹೋಗುತ್ತಿರುವ ಸೋಮಕರನ್ನು ನೋಡಿ ಕೌರವರು ರಣದಲ್ಲಿ ಪಿತಾಮಹನಿಗೆ ಹರ್ಷವನ್ನುಂಟುಮಾಡುತ್ತಾ ಬೆನ್ನಟ್ಟಿ ಹೋಗುತ್ತಿದ್ದಾರೆ. ಆದುದರಿಂದ ಇಂದು ಪಾಂಡವರಿಗೋಸ್ಕರ ನಾನು ಕವಚವನ್ನು ಧರಿಸಿ ಭೀಷ್ಮನನ್ನು ಕೊಂದು, ಮಹಾತ್ಮ ಪಾಂಡವರ ಈ ಭಾರವನ್ನು ನಾಶಪಡಿಸುತ್ತೇನೆ. ಅರ್ಜುನನೂ ಕೂಡ ತೀಕ್ಷ್ಣಶರಗಳಿಂದ ವಧಿಸುತ್ತಿರುವ ಭೀಷ್ಮನ ಮೇಲಿನ ಗೌರವದಿಂದ ರಣದಲ್ಲಿ ತನ್ನ ಕರ್ತವ್ಯವನ್ನು ತಿಳಿಯದವನಾಗಿದ್ದಾನೆ.

ಅವನು ಹಾಗೆ ಯೋಚಿಸುತ್ತಿರಲು ಪಿತಾಮಹನು ಪುನಃ ಸಂಕ್ರುದ್ಧನಾಗಿ ಶರಗಳನ್ನು ಪಾರ್ಥನ ರಥದ ಮೇಲೆ ಪ್ರಯೋಗಿಸಿದನು. ಆ ಬಹಳ ಸಂಖ್ಯೆಯ ಶರಗಳು ದಿಕ್ಕುಗಳೆಲ್ಲವನ್ನು ಮುಚ್ಚಿಬಿಟ್ಟವು. ಆಗ ಅಂತರಿಕ್ಷವಾಗಲೀ, ದಿಕ್ಕುಗಳಾಗಲೀ, ಭೂಮಿಯಾಗಲೀ, ರಶ್ಮಿಮಾಲೀ ಭಾಸ್ಕರನಾಗಲೀ ಕಾಣಲಿಲ್ಲ. ಗಾಳಿಯು ಭಯಂಕರವಾಗಿಯೂ, ಹೊಗೆಯಿಂದ ತುಂಬಿಕೊಂಡು ಬೀಸತೊಡಗಿತು. ಎಲ್ಲ ದಿಕ್ಕುಗಳೂ ಕ್ಷೋಭೆಗೊಂಡವು. ಆಗ ರಾಜ ಶಾಂತನವನ ಆದೇಶದಂತೆ ದ್ರೋಣ, ವಿಕರ್ಣ, ಜಯದ್ರಥ, ಭೂರಿಶ್ರವ, ಕೃತವರ್ಮ, ಕೃಪ, ಶ್ರುತಾಯು, ಅಂಬಷ್ಠಪತಿ, ವಿಂದಾನುವಿಂದರು, ಸುದಕ್ಷಿಣ, ಪ್ರಾಚಿಯವರು, ಸೌವೇರಗಣರೆಲ್ಲರೂ, ವಸಾತಯರು, ಕ್ಷುದ್ರಕಮಾಲರು ತ್ವರೆಮಾಡಿ ಕಿರೀಟಿಯನ್ನು ಸುತ್ತುವರೆದರು. ಶತ್ರುಪಕ್ಷದ ಲಕ್ಷೋಪಲಕ್ಷ ಅಶ್ವ-ಪದಾತಿ-ರಥಸೈನ್ಯಗಳು ಮತ್ತು ಗಜಸೈನ್ಯಗಳು ಕಿರೀಟಿಯನ್ನು ಘೇರಾಯಿಸಿ ನಿಂತಿರುವುದನ್ನು ಸಾತ್ಯಕಿಯು ದೂರದಿಂದಲೇ ನೋಡಿದನು. ಅರ್ಜುನ ವಾಸುದೇವರು ಪದಾತಿ-ನಾಗ-ಅಶ್ವ-ರಥಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ನೋಡಿ ಶಸ್ತ್ರಭೃತರಲ್ಲಿ ವರಿಷ್ಠನಾದ ಶಿನಿಪ್ರವೀರನು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದನು.

ಮಹಾಧನುಷ್ಮಂತನಾದ ಶಿನಿಪ್ರವೀರನು ಆ ಸೇನೆಗಳ ಮೇಲೆ ಎರಗಿದನು. ವೃತ್ರನಿಷೂದನನಿಗೆ ವಿಷ್ಣುವು ಹೇಗೆ ಸಹಾಯಮಾಡಿದನೋ ಹಾಗೆ ಅವನು ಅರ್ಜುನನಿಗೆ ಸಹಾಯಮಾಡಿದನು. ನಾಗಾಶ್ವರಥಧ್ವಜಗಳು ಬಹುಸಂಖ್ಯೆಗಳಲ್ಲಿ ನಾಶವಾಗಿರುವುದನ್ನು, ಎಲ್ಲ ಯೋಧರು ಭೀಷ್ಮನಿಂದ ಪೀಡಿತರಾಗಿರುವುದನ್ನು, ಯುಧಿಷ್ಠಿರನ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ಶಿನಿಪ್ರವೀರನು ಹೇಳಿದನು:ಕ್ಷತ್ರಿಯರೇ! ಎಲ್ಲಿಗೆ ಓಡಿಹೋಗುತ್ತಿದ್ದೀರಿ? ಪುರಾಣಗಳಲ್ಲಿ ಹೇಳಿರುವ, ಸತ್ಯವಂತರು ಮುಂದಿಟ್ಟಿರುವ ಕ್ಷತ್ರಿಯ ಧರ್ಮವು ಇದಲ್ಲ. ನೀವು ಮಾಡಿರುವ ಪ್ರತಿಜ್ಞೆಯನ್ನು ಬಿಡಬೇಡಿ. ನಿಮ್ಮ ವೀರಧರ್ಮವನ್ನು ಪರಿಪಾಲಿಸಿ!

ಆ ಮಾತನ್ನು ವಾಸವಾನುಜನು ಕೇಳಿದನು. ಎಲ್ಲಕಡೆ ಓಡಿಹೋಗುತ್ತಿರುವ ನರೇಂದ್ರಮುಖ್ಯರನ್ನು ನೋಡಿ, ಪಾರ್ಥನ ಮೃದು ಯುದ್ಧವನ್ನೂ ಯುದ್ಧದಲ್ಲಿ ಎಲ್ಲರನ್ನೂ ವಧಿಸುತ್ತಿರುವ ಭೀಷ್ಮನನ್ನೂ ನೋಡಿದನು. ಆಗ ಅದನ್ನು ಸಹಿಸಲಾಗದೇ ಮಹಾತ್ಮ ಸರ್ವದಶಾರ್ಹರ ಭರ್ತನು ಎಲ್ಲಕಡೆ ಕುರುಗಳನ್ನು ಉರುಳಿಸುತ್ತಿದ್ದ ಯಶಸ್ವಿನಿ ಶೈನೇಯನನ್ನು ಪ್ರಶಂಸಿಸುತ್ತಾ ಹೇಳಿದನು:ಶಿನಿಪ್ರವೀರ! ಯಾರು ಹೋಗುತ್ತಿದ್ದಾರೋ ಅವರು ಹೋಗಲಿ ಬಿಡು. ಸಾತ್ವತ! ಇಲ್ಲಿ ಯಾರು ನಿಂತಿದ್ದಾರೋ ಅವರು ಕೂಡ ಹೋಗಲಿ. ಇಂದು ನಾನು ಭೀಷ್ಮನನ್ನು ರಥದಿಂದ ಮತ್ತು ದ್ರೋಣನನ್ನೂ ಗಣಗಳೊಂದಿಗೆ ಯುದ್ಧದಲ್ಲಿ ಬೀಳಿಸುವುದನ್ನು ನೋಡು! ಕೌರವರಲ್ಲಿ ಯಾವ ರಥನೂ ರಣದಲ್ಲಿ ಇಂದು ಕ್ರುದ್ಧನಾದ ನನ್ನಿಂದ ಪ್ರಾಣವುಳಿಸಿಕೊಂಡು ಹೋಗುವುದಿಲ್ಲ. ಆದುದರಿಂದಲೇ ಈಗ ಉಗ್ರ ಚಕ್ರವನ್ನು ಹಿಡಿದು ಆ ಮಹಾವ್ರತನ ಪ್ರಾಣವನ್ನು ಅಪಹರಿಸಿಬಿಡುತ್ತೇನೆ. ಸಸೈನ್ಯನಾದ ಭೀಷ್ಮನನ್ನು ಮತ್ತು ಹಾಗೆಯೇ ರಥಪ್ರವೀರ ದ್ರೋಣನನ್ನು ಕೊಂದು ಧನಂಜಯ, ರಾಜ, ಭೀಮ ಮತ್ತು ಯಮಳರಿಗೆ ಪ್ರಿಯವನ್ನುಂಟುಮಾಡುತ್ತೇನೆ. ಇಂದು ಸಂತುಷ್ಟನಾಗಿ ಧೃತರಾಷ್ಟ್ರಪುತ್ರರೆಲ್ಲರನ್ನೂ ಮತ್ತು ಅವರ ಪಕ್ಷದಲ್ಲಿರುವು ನರೇಂದ್ರಮುಖ್ಯರನ್ನೂ ಸಂಹರಿಸಿ ರಾಜಾ ಅಜಾತಶತ್ರುವಿಗೆ ರಾಜ್ಯವನ್ನು ದೊರಕಿಸಿಕೊಡುತ್ತೇನೆ.

ಆಗ ವಸುದೇವಪುತ್ರನು ಸೂರ್ಯನ ಪ್ರಭೆಯುಳ್ಳ, ವಜ್ರಸಮ ಪ್ರಭಾವವನ್ನುಳ್ಳ, ಸುತ್ತಲೂ ಚೂಪಾದ ಅಲಗುಗಳ ಸುನಾಭ ಚಕ್ರವನ್ನು ಕೈಯಲ್ಲಿ ಹಿಡಿದು ಕುದುರೆಗಳ ಲಗಾಮುಗಳನ್ನು ಕೆಳಗಿಟ್ಟು, ರಥದಿಂದ ಕೆಳಕ್ಕೆ ಧುಮುಕಿದನು. ತನ್ನ ಗಂಭೀರ ನಡುಗೆಯಿಂದ ಭೂಮಿಯನ್ನೇ ನಡುಗಿಸುತ್ತಾ, ಬೆಳೆದು ಕೊಬ್ಬಿದ ದರ್ಪದಿಂದ ಕೂಡಿದ ಮದಾಂಧ ಸಲಗವನ್ನು ಸಿಂಹವು ಕೊಲ್ಲಲು ಬರುತ್ತಿರುವಂತೆ ವೇಗದಿಂದ ಕೃಷ್ಣನು ಭೀಷ್ಮನ ಬಳಿ ಬಂದನು. ಸೇನೆಗಳ ಮಧ್ಯದಲ್ಲಿದ್ದ ಭೀಷ್ಮನ ಕಡೆ ಕ್ರುದ್ಧನಾದ ಮಹೇಂದ್ರನ ತಮ್ಮ, ಪ್ರಮಾಥಿಯು ಕ್ರುದ್ಧನಾಗಿ ರಭಸದಿಂದ ಹೋಗುತ್ತಿರಲು ಅವನ ಪೀತಾಂಬರವು ಪಟಟನೆ ಹಾರಾಡುತ್ತಿರಲು ಅವನು ಮಿಂಚಿನಿಂದ ಕೂಡಿದ ಘನ ಮೋಡದಂತೆ ಪ್ರಕಾಶಿಸಿದನು. ಶೌರಿಯ ಆ ಸುದರ್ಶನ ಚಕ್ರವು ಪದ್ಮದಂತೆ ರಾರಾಜಿಸಿತು. ಅವನ ಸುಂದರ ಭುಜವೇ ದಂಟಾಗಿತ್ತು. ನಾರಾಯಣನ ನಾಭಿಯಿಂದ ಹುಟ್ಟಿದ ಉದಯಿಸುತ್ತಿರುವ ಸೂರ್ಯನ ವರ್ಣದ ಪದ್ಮದಂತೆ ರಾರಾಜಿಸುತ್ತಿತ್ತು. ಕೃಷ್ಣನ ಕೋಪವೆಂಬ ಸೂರ್ಯದಿಂದ ಅದು ಅರಳುವಂತಿತ್ತು. ಕ್ಷುರದ ಅಂಚಿನಂತೆ ಆ ಸುಜಾತಪತ್ರದ ತುದಿಗಳು ತೀಕ್ಷ್ಣವಾಗಿದ್ದವು. ಅವನ ದೇಹವೇ ಅದು ಉಗಮಿಸಿದ ಸರೋವರದಂತಿತ್ತು. ನಾರಾಯಣನ ಬಾಹುವೇ ದಂಟಾಗಿದ್ದ ಅದು ರಾರಾಜಿಸುತ್ತಿತ್ತು. ಕ್ರುದ್ಧನಾಗಿ ಚಕ್ರವನ್ನು ಹಿಡಿದು ಗಟ್ಟಿಯಾಗಿ ಗರ್ಜಿಸುತ್ತಾ ಬರುತ್ತಿದ್ದ ಮಹೇಂದ್ರಾವರಜನನ್ನು ನೋಡಿ ಕುರುಗಳ ಕ್ಷಯವಾಗುತ್ತಿದೆಯೆಂದು ಯೋಚಿಸಿ ಸರ್ವ ಭೂತಗಳೂ ಜೋರಾಗಿ ಕೂಗಿದವು. ಚಕ್ರವನ್ನು ಹಿಡಿದ ಆ ವಾಸುದೇವನು ಜೀವಲೋಕಗಳನ್ನೇ ಮುಗಿಸಿಬಿಡುವನೋ ಎಂಬಂತೆ ತೋರಿದನು. ಸಮಸ್ತ ಭೂತಗಳನ್ನು ಸುಟ್ಟು ಭಸ್ಮಮಾಡಲು ಹುಟ್ಟಿಕೊಂಡಿರುವ ಕಾಲಾಗ್ನಿಯೋ ಎಂಬಂತೆ ಆ ಲೋಕಗುರುವು ಕಾಣಿಸಿದನು.

ಚಕ್ರವನ್ನು ಹಿಡಿದು ತನ್ನಕಡೆ ಓಡಿ ಬರುತ್ತಿದ್ದ ದ್ವಿಪದರಲ್ಲಿ ವರಿಷ್ಠ, ದೇವನನ್ನು ನೋಡಿ ಗಾಭರಿಗೊಳ್ಳದೇ ಕಾರ್ಮುಕಬಾಣಗಳನ್ನು ಹಿಡಿದು ರಥದಲ್ಲಿಯೇ ನಿಂತಿದ್ದ ಶಾಂತನವನು ಹೇಳಿದನು:ಬಾ! ಬಾ! ದೇವೇಶ! ಜಗನ್ನಿವಾಸ! ಶಾಂಙ್ರಚಕ್ರಪಾಣೇ! ನಿನಗೆ ನಮಸ್ಕಾರ! ಲೋಕನಾಥ! ಭೂತಶರಣ್ಯ! ನನ್ನನ್ನು ಹೊಡೆದು ಈ ಉತ್ತಮ ರಥದಿಂದ ಉರುಳಿಸು. ಕೃಷ್ಣ! ಇಂದು ನಿನ್ನಿಂದ ಹತನಾಗಿ ಇಲ್ಲಿ ಮತ್ತು ಪರಲೋಕಗಳಲ್ಲಿ ಶ್ರೇಯಸ್ಸನ್ನು ಪಡೆಯುತ್ತೇನೆ. ಅಂಧಕವೃಷ್ಣಿನಾಥ! ಮೂರು ಲೋಕಗಳ ವೀರ! ನಿನ್ನಿಂದ ಹೊಡೆಯಲ್ಪಟ್ಟು ನಾನು ಸಂಭಾವಿತನಾಗುತ್ತೇನೆ.

ಆಗ ರಥದಿಂದ ಹಾರಿ ತ್ವರೆಮಾಡಿ ಯದುಪ್ರವೀರನನ್ನು ಬೆನ್ನಟ್ಟಿ ಹೋಗಿ ಪಾರ್ಥನು ಹರಿಯ ದಪ್ಪನೆಯ ನೀಳವಾದ ಉತ್ತಮ ಬಾಹುಗಳನ್ನು ತನ್ನ ವಿಶಾಲ ದಪ್ಪ ತೋಳುಗಳಿಂದ ಹಿಡಿದುಕೊಂಡನು. ಹಾಗೆ ಹಿಡಿದುಕೊಂಡಿದ್ದರೂ ತುಂಬಾ ರೋಷಗೊಂಡಿದ್ದ ಆ ಆದಿದೇವ ಯೋಗಿ ವಿಷ್ಣುವು ಅತ್ಯಂತ ವೇಗದಿಂದ - ಭಿರುಗಾಳಿಯಲ್ಲಿ ವೃಕ್ಷವು ಬುಡವನ್ನೂ ಎಳೆದುಕೊಂಡು ಹೋಗುವಂತೆ- ಜಿಷ್ಣುವನ್ನೂ ಎಳೆದುಕೊಂಡು ಹೋದನು. ಭೀಷ್ಮನ ಸಮೀಪಕ್ಕೆ ತನ್ನನ್ನು ಸೆಳೆದುಕೊಂಡು ಶೀಘ್ರವಾಗಿ ಓಡುತ್ತಿದ್ದ ಅವನ ಪಾದಗಳನ್ನು ಪಾರ್ಥನು ಬಲದಿಂದ ಹಿಡಿದುಕೊಂದನು. ಕಿರೀಟಮಾಲಿಯು ಹಾಗೆ ಬಲವಾಗಿ ಹಿಡಿದುಕೊಂಡು ಅವನನ್ನು ಹತ್ತನೆಯ ಹೆಜ್ಜೆಯಲ್ಲಿ ಹೇಗೋ ತಡೆದನು. ನಿಂತು ತನ್ನ ಕೈಗಳನ್ನು ಹಿಡಿದಿದ್ದ ಕೃಷ್ಣನಿಗೆ ಪ್ರೀತನಾಗಿ ಕಾಂಚನಚಿತ್ರಮಾಲೀ ಅರ್ಜುನನು ಹೇಳಿದನು: ಕೇಶವ!  ಕೋಪವನ್ನು ಉಪಸಂಹರಿಸು! ನೀನು ಪಾಂಡವರ ಗತಿ! ಪ್ರತಿಜ್ಞೆಮಾಡಿದಂತೆ ಮಾಡದೇ ಇರುವುದಿಲ್ಲ. ಮಕ್ಕಳ ಮತ್ತು ಸೋದರರ ಆಣೆಯಾಗಿ, ನಿನ್ನೊಡನೆ ಕೂಡಿಕೊಂಡು ಕುರುಗಳ ಅಂತ್ಯವನ್ನು ಮಾಡುತ್ತೇನೆ.

ಆಗ ಅವನ ಪ್ರತಿಜ್ಞೆಯನ್ನೂ ಆಣೆಯನ್ನೂ ಕೇಳಿ ಜನಾರ್ದನನು ಪ್ರೀತಿಮನಸ್ಕನಾದನು. ಕೌರವ ಸತ್ತಮನಿಗೆ ಪ್ರಿಯವಾದುದನ್ನು ಮಾಡುವುದರಲ್ಲಿಯೇ ಸ್ಥಿತನಾಗಿದ್ದ ಅವನು ಚಕ್ರದೊಂದಿಗೆ ಪುನಃ ರಥವನ್ನೇರಿದನು. ಅವನು ಆ ಕಡಿವಾಣಗಳನ್ನು ಪುನಃ ಹಿಡಿದನು. ಆ ವೈರಿಗಳ ಸಂಹಾರಿ ಶೌರಿಯು ಶಂಖವನ್ನು ಹಿಡಿದು ಆ ಪಾಂಚಜನ್ಯದ ಧ್ವನಿಯಿಂದ ದಿಶಗಳನ್ನು ಮೊಳಗಿಸಿದನು. ಕೊರಳಿಸ ಸರ, ತೋಳ್ಬಂದಿಗಳು ಮತ್ತು ಕುಂಡಲಗಳು ಅಸ್ತವ್ಯಸ್ತವಾಗಿದ್ದ, ಬಿಲ್ಲಿನಂತೆ ಬಾಗಿದ್ದ ಕಣ್ಣಿನ ಹುಬ್ಬುಗಳು ಧೂಳಿನಿಂದ ತುಂಬಿದ, ಶಂಖವನ್ನು ಹಿಡಿದ ಆ ವಿಶುದ್ಧದಂಷ್ಟ್ರನನ್ನು ನೋಡಿ ಕುರುಪ್ರವೀರರು ಜೋರಾಗಿ ಕೂಗಿದರು. ಆಗ ಕುರುಗಳ ಸರ್ವ ಸೇನೆಗಳಲ್ಲಿ ಮೃದಂಗ-ಭೇರಿ-ಪಟಹ-ಪ್ರಣಾದಗಳ, ರಥದ ಗಾಲಿಗಳ ಧ್ವನಿಯೂ, ದುಂದುಭಿಗಳ ಧ್ವನಿಯೂ, ಉಗ್ರ ಸಿಂಹನಾದಗಳೂ ಕೇಳಿಬಂದವು. ಪಾರ್ಥನ ಗಾಂಡೀವದ ಘೋಷವು ಮೋಡಗಳಂತೆ ಮೊಳಗಿ ನಭ-ದಿಶಗಳನ್ನು ತಲುಪಿತು. ಆ ಪಾಂಡವನ ಚಾಪದಿಂದ ಹೊರಬಂದ ವಿಮಲ ಪ್ರಸನ್ನ ಬಾಣಗಳು ಎಲ್ಲ ದಿಶಗಳಲ್ಲಿ ಹಾರಿದವು. ಕೌರವರ ಅಧಿಪನು, ಭೀಷ್ಮ ಮತ್ತು ಭೂರಿಶ್ರವರೊಂದಿಗೆ, ಸೇನೆಯೊಂದಿಗೆ ಆಕಾಶವನ್ನು ಸುಡುವ ಧೂಮಕೇತುವಿನಂತಿರುವ ಬಾಣವನ್ನು ಹಿಡಿದು ಅವನ ಕಡೆ ಮುನ್ನುಗ್ಗಿದನು.

ಅರ್ಜುನನ ಮೇಲೆ ಭೂರಿಶ್ರವನು ಏಳು ಸುವರ್ಣಪುಂಖಗಳ ಭಲ್ಲೆಗಳನ್ನು, ದುರ್ಯೋಧನನು ಉಗ್ರವೇಗದ ತೋಮರವನ್ನು, ಶಲ್ಯನು ಗದೆಯನ್ನು ಮತ್ತು ಶಾಂತನವನು ಶಕ್ತಿಯನ್ನು ಎಸೆದರು. ಭೂರಿಶ್ರವನು ಪ್ರಯೋಗಿಸಿದ್ದ ಆ ಏಳು ಬಾಣಗಳನ್ನು ಅವನು ತನ್ನದೇ ಏಳು ಬಾಣಗಳಿಂದ ತಡೆದನು ಮತ್ತು ಹರಿತ ಬಾಣದಿಂದ ದುರ್ಯೋಧನನ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ತೋಮರವನ್ನು ತುಂಡರಿಸಿದನು. ಆಗ ಆ ವೀರನು ತನ್ನ ಮೇಲೆ ವಿದ್ಯುತ್ಪ್ರಭೆಯಿಂದ ಬೀಳುತ್ತಿದ್ದ ಶಾಂತನವನು ಪ್ರಯೋಗಿಸಿದ ಶಕ್ತಿಯನ್ನು ಮತ್ತು ಮದ್ರಾಧಿಪನು ಬಿಸುಟ ಗದೆಯನ್ನು ಎರಡು ಬಾಣಗಳಿಂದ ತುಂಡರಿಸಿದನು. ತನ್ನ ಭುಜಗಳೆರಡರಿಂದ ಬಲವನ್ನುಪಯೋಗಿಸಿ ಬಣ್ಣದ, ಅಪ್ರಮೇಯ ಗಾಂಡೀವ ಧನುಸ್ಸನ್ನು ಎಳೆದು ವಿಧಿವತ್ತಾಗಿ ತುಂಬಾ ಘೋರವಾದ ಅದ್ಭುತ ಮಾಹೇಂದ್ರಾಸ್ತ್ರವನ್ನು ಅಂತರಿಕ್ಷದಲ್ಲಿ ಪ್ರಕಟಗೊಳಿಸಿದನು. ಆ ಮಹಾತ್ಮ, ಮಹಾಧನುಷ್ಮಾನ್ ಕಿರೀಟಮಾಲಿಯು ಆ ಉತ್ತಮ ಅಸ್ತ್ರದ ಮೂಲಕ ನಿರ್ಮಲವಾದ ಅಗ್ನಿಗೆ ಸಮನಾಗಿ ಪ್ರಜ್ವಲಿಸುತಿದ್ದ ಬಾಣಗಳ ಜಾಲದಿಂದ ಸೇನೆಗಳೆಲ್ಲವನ್ನೂ ತಡೆದನು. ಪಾರ್ಥನ ಧನುಸ್ಸಿನಿಂದ ಪ್ರಮುಕ್ತವಾದ ಶಿಲೀಮುಖಗಳು ರಥಗಳು, ಧ್ವಜಾಗ್ರಗಳು, ಧನುಸ್ಸುಗಳು, ಮತ್ತು ಬಾಹುಗಳನ್ನು ಕತ್ತರಿಸಿ, ಶತ್ರುಗಳ ನರೇಂದ್ರ, ನಾಗೇಂದ್ರ, ತುರಂಗಗಳ ದೇಹಗಳನ್ನು ಪ್ರವೇಶಿಸಿದವು. ಪಾರ್ಥನು ಹರಿತವಾದ ಒಂದೇಸಮನೆ ಸುರಿಯುತ್ತಿರುವ ಧಾರೆಗಳಂತಿರುವ ಶರಗಳಿಂದ ದಿಕ್ಕುಗಳನ್ನೂ ಉಪದಿಕ್ಕುಗಳನ್ನೂ ತುಂಬಿಸಿದನು. ಕಿರೀಟಮಾಲಿಯು ಗಾಂಡೀವ ಶಬ್ಧದಿಂದಲೇ ಅವರ ಮನಸ್ಸುಗಳಲ್ಲಿ ವ್ಯಥೆಯನ್ನುಂಟುಮಾಡಿದನು.

ಹೀಗೆ ಘೋರತಮ ಯುದ್ಧವು ನಡೆಯುತ್ತಿರಲು ಶಂಖಸ್ವನಗಳು, ದುಂದುಭಿಗಳ ನಿಸ್ವನಗಳು, ರಣಕೂಗುಗಳು ಉಗ್ರ ಗಾಂಡೀವ ನಿಸ್ವನದಲ್ಲಿ ಅಡಗಿಹೋದವು. ಆಗ ಗಾಂಡೀವಶಬ್ಧವನ್ನು ಕೇಳಿ ವಿರಾಟರಾಜನೇ ಮೊದಲಾದ ನರವೀರರು, ವೀರನಾದ ಪಾಂಚಾಲರಾಜ ದ್ರುಪದನು ದೀನಸತ್ತ್ವರಾಗಿ ಆ ಪ್ರದೇಶಕ್ಕೆ ಆಗಮಿಸಿದರು. ಎಲ್ಲೆಲ್ಲಿ ಗಾಂಡೀವಧನುಸ್ಸಿನ ಶಬ್ಧವು ಕೇಳಿಬರುತ್ತಿತ್ತೋ ಅಲ್ಲಲ್ಲಿ ಕೌರವ ಸೈನಿಕರೆಲ್ಲರೂ ದೈನ್ಯರಾಗಿ ನಿಂತುಬಿಡುತ್ತಿದ್ದರು. ಅವನನ್ನು ಎದುರಿಸಲು ಯಾರೂ ಹೋಗುತ್ತಿರಲಿಲ್ಲ. ಆ ಘೋರವಾದ ನೃಪಸಂಪ್ರಹಾರದಲ್ಲಿ ರಥಗಳು ಸೂತರೊಂದಿಗೆ ಪ್ರವೀರರು ಹತರಾದರು. ನಾರಾಚಗಳ ಹೊಡೆದಕ್ಕೆ ಸಿಲುಗಿ ಆನೆಗಳು, ಶುಭರುಕ್ಮಕಕ್ಷೆಗಳ ಮಹಾಪತಾಕೆಗಳು ಸುಟ್ಟು ಬಿದ್ದವು. ಕಿರೀಟಿಯಿಂದ ದೇಹ-ಕಾಯಗಳು ಒಡೆದು ಸತ್ತ್ವಗಳನ್ನು ಕಳೆದುಕೊಂಡು ತಕ್ಷಣವೇ ಬೀಳುತ್ತಿದ್ದರು. ಉಗ್ರವೇಗದಿಂದ ಬರುತ್ತಿದ್ದ ಪಾರ್ಥನ ಪತ್ರಿಗಳು ಮತ್ತು ನಿಶಿತ ಶಿತಾಗ್ರಗಳುಳ್ಳ ಭಲ್ಲೆಗಳಿಂದ ದೃಢಹತರಾಗಿ ಬೀಳುತ್ತಿದ್ದರು. ಸೇನಾಮುಖಗಳಲ್ಲಿದ್ದ ದೊಡ್ಡ ದೊಡ್ಡ ಧ್ವಜಗಳೂ, ಯಂತ್ರಗಳೂ, ಸ್ತಂಭಗಳೂ ಮುರಿದು ಬಿದ್ದವು. ಧನಂಜಯನಿಂದ ಹೊಡೆಯಲ್ಪಟ್ಟು ಪಾದತಿಸಮೂಹಗಳು, ರಥಗಳು, ಕುದುರೆಗಳು ಮತ್ತು ನಾಗಗಳು ತಕ್ಷಣವೇ ಸತ್ತ್ವಗಳನ್ನು ಕಳೆದುಕೊಂಡು ಪೆಟ್ಟುಬಿದ್ದ ಸ್ಥಳಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಭೂಮಿಯ ಮೇಲೆ ಬೀಳುತ್ತಿದ್ದವು. ಆ ಅಸ್ತ್ರಶ್ರೇಷ್ಠ ಐಂದ್ರದ ಪ್ರಭಾವದಿಂದ ತನು-ದೇಹಗಳು ತುಂಡಾಗಿ ಬಿದ್ದಿದ್ದರು. ಕಿರೀಟಿಯ ನಿಶಿತ ಶರೌಘಗಳಿಂದ ಕ್ಷತರಾದ ಮನುಷ್ಯರ ದೇಹಗಳಿಂದ ಹೊರಟ ರಕ್ತದ ಕೋಡಿಯು ನರದೇಹಗಳೇ ನೊರೆಯಾಗಿರುವ ಒಂದು ಘೋರ ನದಿಯಾಗಿ ಪರಿಣಮಿಸಿತು.

ಅತೀವ ವೇಗದಿಂದ ದೊಡ್ಡಪ್ರವಾಹದಿಂದ ಭೈರವ ರೂಪವನ್ನು ತಾಳಿ ಹರಿಯುತ್ತಿತ್ತು. ಆನೆ-ಕುದುರೆಗಳ ಹೆಣಗಳು ಅದರ ಎರಡು ದಡಗಳಾಗಿದ್ದವು. ನರೇಂದ್ರರ ಮಜ್ಜೆ ಮಾಂಸಗಳ ಮಿಶ್ರಣವು ಆ ರಕ್ತನದಿಯ ಕೆಸರಾಗಿತ್ತು. ಅನೇಕ ರಾಕ್ಷಸ ಭೂತಗಣಗಳು ಅದನ್ನು ಸೇವಿಸುತ್ತಿದ್ದರು. ಕಪೋಲದವರೆಗೂ ಹರಡಿದ್ದ ತಲೆಕೂದಲುಗಳು ಅದರ ದಂಡೆಯಲ್ಲಿರುವ ಹುಲ್ಲುಗಾವಲಿನಂತಿತ್ತು. ಶರೀರಗಳು ಇನ್ನೂ ಬೀಳುತ್ತಿರಲು ಅದು ನಾನಾ ಕವಲುಗಳಾಗಿ ಹರಿದು ಸಹಸ್ರವಾಹಿನಿಯಂತಿತ್ತು. ಮನುಷ್ಯರ, ಕುದುರೆಗಳ ಮತ್ತು ಆನೆಗಳು ಅದರಲ್ಲಿರುವ ಕಲ್ಲುಹರಳುಗಳಂತಿದ್ದವು. ಆ ಕಂಕಮಾಲೆಯನ್ನು ನಾಯಿಗಳು, ಹದ್ದುಗಳೂ, ತೋಳಗಳೂ, ರಣಹದ್ದುಗಳೂ, ಕಾಗೆಗಲೂ, ಮಾಂಸಾಶಿಗಳ ಸಮೂಹಗಳೂ, ಕಿರುಬಗಳೂ ಸುತ್ತುವರೆದಿದ್ದವು.

ಎಲ್ಲಕಡೆಯಲ್ಲಿಯೂ ವ್ಯಾಪಿಸಿರುವ, ಅರ್ಜುನನ ಬಾಣಸಮೂಗಳಿಂದ ಉತ್ಪನ್ನವಾದ, ಮಾಂಸ-ಮಜ್ಜೆ-ರಕ್ತಗಳಿಂದ ಕೂಡಿ ಹರಿಯುತ್ತಿದ್ದ ಭಯಂಕರವಾದ ಆ ಕ್ರೂರ ಮಹಾವೈತರಣಿಯಂತೆ ತೋರುವ ರಕ್ತನದಿಯನ್ನು ನೋಡಿದರು.  ಆಗ ಚೇದಿ-ಪಾಂಚಾಲ-ಕರೂಷ-ಮತ್ಸ್ಯರು ಮತ್ತು ಪಾರ್ಥರು ಎಲ್ಲರೂ ಒಟ್ಟಿಗೇ ಶತ್ರುಸೇನೆಯ ಧ್ವಜಪತಿಗಳನ್ನು ಮೃಗಗಳನ್ನು ಸಿಂಹಗಳು ತತ್ತರಿಸುವಂತೆ ಸಿಂಹನಾದಗೈದರು. ಅತಿ ಹರ್ಷದಿಂದ ಗಾಂಡೀವ ಧನ್ವಿ ಮತ್ತು ಜನಾರ್ದನರೂ ನಾದಗೈದರು. ಆಗ ರವಿಯು ತನ್ನ ಕಿರಣಗಳನ್ನು ಮುದುಡಿಕೊಳುತ್ತಿರುವುದನ್ನು ನೋಡಿ, ಶಸ್ತ್ರಗಳಿಂದ ಗಾಯಗೊಂಡವರಾಗಿ, ಸುಘೋರವಾದ ಸಹಿಸಲಸಾಧ್ಯವಾದ ಯುಗಾಂತಕಲ್ಪವಾದ ಆ ಐಂದ್ರಾಸ್ತ್ರವನ್ನು ಕಂಡು, ವಿಭಾವಸುವು ಲೋಹಿತರಾಜಿಯುಕ್ತನಾಗಿ ರಾತ್ರಿಯು ಸಂಧಿಗತವಾದುದನ್ನು ನೋಡಿ, ಭೀಷ್ಮ-ದ್ರೋಣ-ದುರ್ಯೋಧನ-ಬಾಹ್ಲೀಕರೊಂದಿಗೆ ಕೌರವರು ಹಿಮ್ಮೆಟ್ಟಿದರು. ಲೋಕಗಳಲ್ಲಿ ಕೀರ್ತಿಯನ್ನೂ ಯಶಸ್ಸನ್ನೂ ಪಡೆದು, ಶತ್ರುಗಳನ್ನೂ ಗೆದ್ದು ಧನಂಜಯನು ನರೇಂದ್ರರು ಮತ್ತು ಸೋದರರೊಂದಿಗೆ ಕರ್ಮವನ್ನು ಸಮಾಪ್ತಗೊಳಿಸಿ ರಾತ್ರಿ ಶಿಬಿರಕ್ಕೆ ಬಂದನು.

ಆಗ ನಿಶಾಮುಖದಲ್ಲಿ ಕುರುಗಳ ಕಡೆಯಲ್ಲಿ ಘೋರತರ ಗಲಾಟೆಯು ಕೇಳಿಬಂತು: ಅರ್ಜುನನು ಇಂದು ಹತ್ತು ಸಾವಿರ ರಥಗಳನ್ನೂ ಏಳುನೂರು ಆನೆಗಳನ್ನೂ ಸಂಹರಿಸಿದ್ದಾನೆ. ಪೂರ್ವದವರೂ, ಸೌವೀರಗಣಗಳೆಲ್ಲವೂ, ಕ್ಷುದ್ರಕಮಾಲರೂ ಕೆಳಗುರುಳಿದ್ದಾರೆ. ಧನಂಜಯನು ಮಾಡಿದ ಈ ಮಹಾಕೃತ್ಯವನ್ನು ಬೇರೆ ಯಾರೂ ಮಾಡಲು ಶಕ್ಯರಿಲ್ಲ. ಲೋಕ ಮಹಾರಥ ಕಿರೀಟಿಯು ತನ್ನ ಬಾಹುವೀರ್ಯದಿಂದ ಭೀಷ್ಮನೊಂದಿಗೆ ಶ್ರುತಾಯು, ರಾಜಾ ಅಂಬಷ್ಠಪತಿ, ಹಾಗೆಯೇ ದುರ್ಮರ್ಷಣ-ಚಿತ್ರಸೇನರು, ದ್ರೋಣ, ಕೃಪ, ಸೈಂಧವ, ಬಾಹ್ಲೀಕ, ಭೂರಿಶ್ರವ, ಶಲ್ಯ, ಶಲರನ್ನೂ ಗೆದ್ದಿದ್ದಾನೆ. ಹೀಗೆ ಮಾತನಾಡಿಕೊಳ್ಳುತ್ತಾ ನಿನ್ನವರು ಎಲ್ಲ ಗಣಗಳೂ ಹೆಚ್ಚು ಬೆಳಕು ಕೊಡುತ್ತಿದ್ದ ಸಾವಿರಾರು ಪಂಜುಗಳನ್ನೂ ಪ್ರಕಾಶಮಾನ ದೀವಟಿಗೆಗಳನ್ನೂ ತೆಗೆದುಕೊಂಡು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು. ಕಿರೀಟಿಯ ಬಾಣಗಳ ಪ್ರಹಾರದಿಂದ ತತ್ತರಿಸಿದ್ದ ಯೋಧರೆಲ್ಲರೂ ಕುರುಗಳ ಧ್ವಜಗಳ ನಿವೇಶನಗಳಲ್ಲಿ ವಿಶ್ರಾಂತಿಪಡೆದರು.

Leave a Reply

Your email address will not be published. Required fields are marked *