ಭೃಗು-ಭರದ್ವಾಜ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಭಿನ್ನ ತತ್ತ್ವಗಳ ವರ್ಣನೆಯಿರುವ ಈ ಭೃಗು ಮತ್ತು ಭರದ್ವಾಜರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 175-186ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು. ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು? ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು? ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಈ ಲೋಕದಿಂದ ಆ ಲೋಕಕ್ಕೆ ಹೋಗುವ ಕ್ರಮವ್ಯಾವುದು? ಇವೆಲ್ಲವನ್ನೂ ನನಗೆ ಹೇಳಬೇಕು.”

ಭೀಷ್ಮನು ಹೇಳಿದನು:

“ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಭರದ್ವಾಜನ ಪ್ರಶ್ನೆಗೆ ಭೃಗುವು ನೀಡಿದ ಶ್ರೇಷ್ಠ ಉತ್ತರವನ್ನು ಉದಾಹರಿಸುತ್ತಾರೆ.

***

ಕೈಲಾಸಶಿಖರದಲ್ಲಿ ಓಜಸ್ಸಿನಿಂದ ದೀಪ್ತಮಾನನಾಗಿದ್ದ ಮಹರ್ಷಿ ಭೃಗುವು ಕುಳಿತಿದ್ದುದನ್ನು ನೋಡಿ ಭರದ್ವಾಜನು ಕೇಳಿದನು:

“ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು? ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು? ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಪರಲೋಕವು ಹೇಗಿರುತ್ತದೆ? ಇವೆಲ್ಲವನ್ನೂ ನನಗೆ ಹೇಳಬೇಕು.”

ಭಗವಾನ್ ಭರದ್ವಾಜನು ಹೀಗೆ ತನ್ನ ಸಂಶಯವನ್ನು ಕೇಳಲು ಬ್ರಹ್ಮಸಂಕಾಶ ಮಹರ್ಷಿಯು ಅವನಿಗೆ ಎಲ್ಲವನ್ನೂ ಹೇಳಿದನು.

“ಹಿಂದೆ ಮಹರ್ಷಿಗಳು ಮಾನಸನೆಂದು ವಿಖ್ಯಾತನಾದ ಅನಾದಿನಿಧನ ಅಭೇದ್ಯ, ಅಜರಾಮರ ದೇವನ ಕುರಿತು ಕೇಳಿದ್ದಾರೆ. ಅವನೇ ಅವ್ಯಕ್ತ ಎಂದೂ ವಿಖ್ಯಾತನಾಗಿದ್ದಾನೆ. ಅವನೇ ಶಾಶ್ವತ, ಅಕ್ಷಯ, ಮತ್ತು ಅವಿನಾಶಿಯು. ಅವನು ಸೃಷ್ಟಿಸಿದ ಭೂತಗಳು ಹುಟ್ಟುತ್ತಿರುತ್ತವೆ ಮತ್ತು ನಾಶವಾಗುತ್ತಿರುತ್ತವೆ. ಆ ದೇವನು ಪ್ರಥಮವಾಗಿ ಮಹತ್ತತ್ತ್ವವನ್ನು ಸೃಷ್ಟಿಸಿದನು. ಸರ್ವಭೂತಧರನಾದ ಅವನು ಆಕಾಶವೆಂದು ವಿಖ್ಯಾತವಾದುದನ್ನು ಸೃಷ್ಟಿಸಿದನು. ಆಕಾಶದಿಂದ ಜಲ ಮತ್ತು ಜಲದಿಂದ ಅಗ್ನಿ-ವಾಯುಗಳ ಉತ್ಪತ್ತಿಯಾಯಿತು. ಅಗ್ನಿ ಮತ್ತು ವಾಯುವಿನ ಸಂಯೋಗದಿಂದ ಪೃಥ್ವಿಯು ಹುಟ್ಟಿಕೊಂಡಿತು[1]. ಅನಂತರ ಸ್ವಯಂಭು ಮಾನಸದೇವನು ತೇಜೋಮಯವಾದ ದಿವ್ಯ ಪದ್ಮವನ್ನು ಸೃಷ್ಟಿಸಿದನು. ಅದರಿಂದ ವೇದಮಯ ನಿಧಿ ಬ್ರಹ್ಮನು ಹುಟ್ಟಿದನು. ಮಹಾತೇಜಸ್ವಿಯಾದ ಅಹಂಕಾರ ಎಂದು ಖ್ಯಾತನಾದ ಸರ್ವಭೂತಾತ್ಮಕೃತ್ ಬ್ರಹ್ಮನು ಈ ಐದು ಧಾತುಗಳಿಂದ ಕೂಡಿದ್ದಾನೆ. ಪರ್ವತಗಳು ಅವನ ಎಲುಬುಗಳು ಮತ್ತು ಮೇದಿನಿಯು ಅವನ ಮೇದ-ಮಾಂಸವು. ಸಮುದ್ರವು ಅವನ ರಕ್ತ ಮತ್ತು ಆಕಾಶವು ಅವನ ಹೊಟ್ಟೆ. ವಾಯುವು ಅವನ ನಿಃಶ್ವಾಸ, ಅಗ್ನಿಯು ತೇಜಸ್ಸು, ನದಿಗಳು ನಾಡಿಗಳು ಹಾಗೂ ಯಾರನ್ನು ಅಗ್ನಿ-ಸೋಮರೆಂದೂ ಕರೆಯುತ್ತಾರೋ ಆ ಸೂರ್ಯ-ಚಂದ್ರರು ಅವನ ಕಣ್ಣುಗಳು. ಆಕಾಶದ ಮೇಲ್ಭಾಗವು ಅವನ ಶಿರಸ್ಸು, ಭೂಮಿಯು ಪಾದಗಳು, ಮತ್ತು ದಿಕ್ಕುಗಳು ಭುಜಗಳು. ಅವನ ಅನಂತತ್ವದಿಂದಾಗಿ ಅವನು ಸಿದ್ಧಪುರುಷರಿಗೂ ತಿಳಿಯಲು ಅಸಾಧ್ಯನು ಎನ್ನುವುದರಲ್ಲಿ ಸಂಶಯವಿಲ್ಲ. ಆ ಸ್ವಯಂಭುವೇ ಭಗವಾನ್ ವಿಷ್ಣು. ಅವನು ಅನಂತನೆಂದು ಪ್ರಸಿದ್ಧನಾಗಿದ್ದಾನೆ. ಅವನೇ ಸರ್ವಭೂತಗಳಲ್ಲಿ ನೆಲೆಸಿದ್ದಾನೆ. ಅಕೃತಾತ್ಮರಿಗೆ ಅವನು ತಿಳಿಯಲಸಾಧ್ಯನು. ಅವನೇ ಸರ್ವಭೂತಗಳ ಉತ್ಪತ್ತಿಗಾಗಿ ಅಹಂಕಾರವನ್ನು ಸೃಷ್ಟಿಸಿದನು. ಈ ಜಗತ್ತು ಯಾವುದರಿಂದ ಉಂಟಾಯಿತು ಎಂಬ ನಿನ್ನ ಪ್ರಶ್ನೆಗೆ ನಾನು ಹೇಳಿದ್ದೇನೆ.”

ಭರದ್ವಾಜನು ಹೇಳಿದನು:

“ಆಕಾಶ, ದಿಕ್ಕುಗಳು, ಭೂತಲ ಮತ್ತು ವಾಯುವಿನ ಪರಿಮಾಣಗಳೇನು? ಅರ್ಥತಃ ಇದನ್ನು ಹೇಳಿ ನನ್ನ ಸಂಶಯವನ್ನು ಹೋಗಲಾಡಿಸು.”

ಭೃಗುವು ಹೇಳಿದನು:

“ಈ ಆಕಾಶವು ಅನಂತವು. ಇದರಲ್ಲಿ ಸಿದ್ಧ-ಚಾರಣರು ವಾಸಿಸುತ್ತಾರೆ. ನಾನಾ ಲೋಕಗಳಿಗೆ ಆಶ್ರಯವಾಗಿರುವ ಇದು ರಮ್ಯವಾಗಿದೆ ಮತ್ತು ಇದರ ಕೊನೆಯೇ ಸಿಗುವುದಿಲ್ಲ. ಅದರ ಮೇಲೆ ಮತ್ತು ಕೆಳಗೆ ಹೋದರೆ ಚಂದ್ರ-ಸೂರ್ಯರು ಕಾಣಿಸುವುದಿಲ್ಲ. ಅಲ್ಲಿ ಅಗ್ನಿವರ್ಚಸ ದೇವತೆಗಳು ಸ್ವಯಂ ಪ್ರಭೆಯಿಂದ ಬೆಳಗುತ್ತಿರುತ್ತಾರೆ. ಮಾನದ! ಆದರೆ ಆ ತೇಜಸ್ವೀ ನಕ್ಷತ್ರ ಸ್ವರೂಪೀ ದೇವತೆಗಳಿಗೂ ಕೂಡ ಆಕಾಶದ ಕೊನೆಯನ್ನು ನೋಡಲಿಕ್ಕಾಗುವುದಿಲ್ಲ. ಏಕೆಂದರೆ ಅದು ದುರ್ಗಮ ಮತ್ತು ಅನಂತವಾಗಿದೆ. ಇದನ್ನು ನನ್ನಿಂದ ಚೆನ್ನಾಗಿ ತಿಳಿದುಕೋ. ಮೇಲೆ ಮೇಲೆ ಪ್ರಕಾಶಿತವಾಗುವ ಸ್ವಯಂ ಪ್ರಕಾಶ ದೇವತೆಗಳಿಂದ ಈ ಅಪ್ರಮೇಯ ಆಕಾಶವು ತುಂಬಿರುವಂತೆ ತೋರುತ್ತದೆ.

ಪೃಥ್ವಿಯ ಅಂತ್ಯದಲ್ಲಿ ಸಮುದ್ರವಿದೆ. ಸಮುದ್ರದ ಅಂತ್ಯದಲ್ಲಿ ಘೋರ ಅಂಧಕಾರವಿದೆ. ಅಂಧಕಾರದ ಅಂತ್ಯದಲ್ಲಿ ಜಲವಿದೆ ಮತ್ತು ಜಲದ ಅಂತ್ಯದಲ್ಲಿ ಅಗ್ನಿಯಿದೆಯೆಂದು ಹೇಳುತ್ತಾರೆ. ರಸಾತಲದ ಕೊನೆಯಲ್ಲಿ ನೀರಿದೆ. ನೀರಿನ ಅಂತ್ಯದಲ್ಲಿ ನಾಗರಾಜ ಶೇಷನಿದ್ದಾನೆ. ಅವನ ನಂತರ ಪುನಃ ಆಕಾಶವಿದೆ ಮತ್ತು ಆಕಾಶದ ಅಂತ್ಯದಲ್ಲಿ ಪುನಃ ಜಲವಿದೆ. ಹೀಗೆ ಭಗವಂತ, ಆಕಾಶ, ಜಲ, ಮತ್ತು ಅಗ್ನಿ-ವಾಯುಗಳ ಪರಿಮಾಣವನ್ನು ತಿಳಿಯಲು ದೇವತೆಗಳಿಗೂ ಅತ್ಯಂತ ಕಠಿಣವಿದೆ. ಅಗ್ನಿ, ವಾಯು, ಜಲ ಮತ್ತು ಪೃಥ್ವೀ – ಇವುಗಳ ವರ್ಣ-ರೂಪಗಳು ಆಕಾಶದಂತೆಯೇ ಇರುತ್ತದೆ. ಆದುದರಿಂದ ಇವು ಆಕಾಶಕ್ಕಿಂತ ಭಿನ್ನವಲ್ಲ. ತತ್ತ್ವಜ್ಞಾನವಿಲ್ಲದ ಕಾರಣದಿಂದಲೇ ಅವುಗಳಲ್ಲಿ ಭೇದವು ಕಾಣಿಸುತ್ತದೆ. ಋಷಿಗಳು ವಿವಿಧ ಶಾಸ್ತ್ರಗಳಲ್ಲಿ ಮೂರು ಲೋಕಗಳು ಮತ್ತು ಸಮುದ್ರಗಳ ಕುರಿತು ಕೆಲವು ನಿಶ್ಚಿತ ಪ್ರಮಾಣಗಳನ್ನು ಹೇಳಿದ್ದಾರೆ. ಆದರೆ ಯಾವುದು ದೃಷ್ಟಿಗೆ ಸಿಗುವುದಿಲ್ಲವೋ ಮತ್ತು ಎಲ್ಲಿ ಇಂದ್ರಿಯಗಳು ತಲುಪುವುದಿಲ್ಲವೋ ಆ ಪರಮಾತ್ಮನ ಪರಿಮಾಣವನ್ನು ಯಾರಾದರೂ ಹೇಗೆ ಹೇಳಬಲ್ಲರು? ಈ ಸಿದ್ಧರು ಮತ್ತು ದೇವತೆಗಳ ಜ್ಞಾನವೂ ಕೂಡ ಪರಿಮಿತವಾದುದಲ್ಲವೇ? ಆದುದರಿಂದ ಪರಮಾತ್ಮ ಮಾನಸದೇವನು ತನ್ನ ನಾಮಕ್ಕೆ ಅನುಗುಣವಾಗಿಯೇ ಅನಂತನು. ಅವನ ಸುಪ್ರಸಿದ್ಧ ಅನಂತ ನಾಮವು ಅವನ ಗುಣಕ್ಕೆ ಅನುಸಾರವಾಗಿಯೇ ಇದೆ. ಪರಮಾತ್ಮನ ದಿವ್ಯ ರೂಪವು ಚಿಕ್ಕದಾದಾಗ ಮತ್ತು ಪುನಃ ದೊಡ್ಡದಾದಾಗ ಅವನ ಪರಿಮಾಣವನ್ನು ಯಥಾರ್ಥ ತಿಳಿಯಲು ಶಕ್ಯನಾದ, ಅವನಿಗಿಂತಲೂ ಭಿನ್ನನಾದ ಬೇರೆ ಯಾವ ಪ್ರತಿಭಾಶಾಲಿಯಿದ್ದಾನೆ?

ಅನಂತರ ಪದ್ಮದಿಂದ ಸರ್ವಜ್ಞ, ಮೂರ್ತಿಮಾನ್, ಪ್ರಭಾವಶಾಲೀ, ಪರಮ ಉತ್ತಮ ಮತ್ತು ಪ್ರಥಮ ಪ್ರಜಾಪತಿ ಧರ್ಮಮಯ ಬ್ರಹ್ಮನ ಪ್ರಾದುರ್ಭಾವವಾಯಿತು.”

ಭರದ್ವಾಜನು ಹೇಳಿದನು:

“ಬ್ರಹ್ಮನು ಕಮಲದಲ್ಲಿ ಹುಟ್ಟಿದನೆಂದರೆ ಕಮಲವೇ ಜ್ಯೇಷ್ಠವಾದಂತಾಯಿತು. ಆದರೆ ನೀನು ಬ್ರಹ್ಮನನ್ನು ಪೂರ್ವಜ ಎಂದು ಹೇಳಿದ್ದೀಯೆ. ಆದುದರಿಂದ ನನಗೆ ಈ ಸಂದೇಹವು ಉಳಿದುಕೊಂಡುಬಿಟ್ಟಿದೆ.”

ಭೃಗುವು ಹೇಳಿದನು:

“ಮಾನಸದೇವನ ಸ್ವರೂಪವನ್ನೇನು ಹೇಳಿದೆನೋ ಅದೇ ಬ್ರಹ್ಮರೂಪದಲ್ಲಿ ಪ್ರಕಟವಾಗಿದೆ. ಅದೇ ಬ್ರಹ್ಮನ ಆಸನವಾದುದಕ್ಕಾಗಿ ಪೃಥ್ವಿಯನ್ನು ಪದ್ಮ ಎಂದು ಕರೆಯುತ್ತಾರೆ. ಈ ಕಮಲದ ದಂಟು ಆಕಾಶದ ಎತ್ತರದ ವರೆಗೂ ಹೋಗಿರುವ ಮೇರು ಪರ್ವತವು. ಅದರ ಮಧ್ಯದಲ್ಲಿ ಸ್ಥಿತನಾಗಿ ಪ್ರಭುವು ಲೋಕಗಳನ್ನು ಸೃಷ್ಟಿಸುತ್ತಾನೆ.”

ಭರದ್ವಾಜನು ಹೇಳಿದನು:

“ದ್ವಿಜಸತ್ತಮ! ಮೇರುಮಧ್ಯದಲ್ಲಿ ಸ್ಥಿತನಾದ ಬ್ರಹ್ಮನು ವಿವಿಧ ಪ್ರಜಾಸೃಷ್ಟಿಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ನನಗೆ ಹೇಳು.”

ಭೃಗುವು ಹೇಳಿದನು:

“ಆ ಮಾನಸ ದೇವನು ತನ್ನ ಮಾನಸಿಕ ಸಂಕಲ್ಪದಿಂದಲೇ ವಿವಿಧ ಪ್ರಜೆಗಳನ್ನು ಸೃಷ್ಟಿಸಿದನು. ಅವನು ಭೂತಗಳ ಸಂರಕ್ಷಣೆಗಾಗಿ ಮೊಟ್ಟ ಮೊದಲು ಜಲವನ್ನು  ಸೃಷ್ಟಿಸಿದನು. ಅದೇ ಜಲವು ಸರ್ವಭೂತಗಳ ಪ್ರಾಣವು. ಅದರಿಂದಲೇ ಪ್ರಜೆಗಳ ವೃದ್ಧಿಯಾಗುತ್ತದೆ. ಜಲವಿಲ್ಲದೇ ಇದ್ದರೆ ನಾಶವಾಗುತ್ತವೆ. ಅದರಿಂದಲೇ ಈ ಎಲ್ಲವೂ ಆವೃತವಾಗಿದೆ. ಪೃಥ್ವಿ, ಪರ್ವತ, ಮೇಘಗಳು, ಮತ್ತು ಅನ್ಯ ಯಾವ ಮೂರ್ತಿವಂತ ವಸ್ತುಗಳಿವೆಯೋ ಆ ಎಲ್ಲವೂ ಜಲಮಯ ಎಂದು ತಿಳಿಯಬೇಕು. ಏಕೆಂದರೆ ಜಲವೇ ಅವೆಲ್ಲವನ್ನೂ ಸ್ಥಿರವಾಗಿರಿಸಿದೆ.”

ಭರದ್ವಾಜನು ಹೇಳಿದನು:

“ಜಲದ ಉತ್ಪತ್ತಿಯು ಹೇಗಾಯಿತು? ಆಗ್ನಿ ಮತ್ತು ವಾಯುಗಳ ಉತ್ಪನ್ನವು ಹೇಗಾಯಿತು? ಪೃಥ್ವಿಯ ಸೃಷ್ಟಿಯು ಹೇಗಾಯಿತು? ಇವುಗಳ ಕುರಿತು ನನ್ನಲ್ಲಿ ಮಹಾ ಸಂಶಯವಿದೆ.”

ಭೃಗುವು ಹೇಳಿದನು:

“ಹಿಂದೆ ಬ್ರಹ್ಮಕಲ್ಪದಲ್ಲಿ ಬ್ರಹ್ಮರ್ಷಿಗಳ ಸಮಾಗಮವಾಗಿತ್ತು. ಆ ಮಹಾತ್ಮರಲ್ಲಿ ಲೋಕಸೃಷ್ಟಿಯ ವಿಷಯದಲ್ಲಿ ಸಂದೇಹವು ಉತ್ಪನ್ನವಾಗಿತ್ತು. ಆ ದ್ವಿಜರು ಆಹಾರಗಳನ್ನು ತ್ಯಜಿಸಿ ಗಾಳಿಯನ್ನೇ ಸೇವಿಸುತ್ತಾ ನೂರು ದಿವ್ಯವರ್ಷಗಳ ಕಾಲ ಧ್ಯಾನಾಸಕ್ತರಾಗಿ ಮೌನವನ್ನಾಶ್ರಯಿಸಿ ನಿಶ್ಚಲರಾಗಿ ನಿಂತುಕೊಂಡರು. ಧ್ಯಾನಾಸಕ್ತರಾಗಿದ್ದ ಅವರೆಲ್ಲರ ಕಿವಿಗಳಲ್ಲಿ ಬ್ರಹ್ಮಮಯೀ ವಾಣಿಯು ಕೇಳಿಬಂದಿತು. ಆಕಾಶದಲ್ಲಿ ದಿವ್ಯ ಸರಸ್ವತಿಯು ಪ್ರಕಟವಾಗಿ ಹೀಗೆ ಹೇಳಿದಳು:

“ಪೂರ್ವಕಾಲದಲ್ಲಿ ಅನಂತ ಆಕಾಶವು ಪರ್ವತದಂತೆ ನಿಶ್ಚಲವಾಗಿತ್ತು. ಅದರಲ್ಲಿ ಚಂದ್ರ, ಸೂರ್ಯ, ವಾಯು ಯಾರೂ ಕಾಣುತ್ತಿರಲಿಲ್ಲ. ಎಲ್ಲವೂ ನಿದ್ರಿಸುತ್ತಿದ್ದಂತೆ ತೋರುತ್ತಿತ್ತು. ಆಗ ಅಂಧಕಾರದಿಂದ ಇನ್ನೊಂದು ಅಂಧಕಾರವು ಪ್ರಕಟಗೊಂಡಂತೆ ಆಕಾಶದಿಂದ ಜಲವು ಉತ್ಪನ್ನವಾಯಿತು. ಆ ಜಲಪ್ರವಾಹದಿಂದ ವಾಯುವು ಮೇಲೆದ್ದನು. ರಂಧ್ರವಿಲ್ಲದ ಪಾತ್ರೆಯು ಹೇಗೆ ನಿಃಶಬ್ದವಾಗಿರುವಂತೆ ತೋರುತ್ತದೆಯೋ ಮತ್ತು ಅದರಲ್ಲಿ ನೀರನ್ನು ತುಂಬಿಸುವಾಗ ಹೇಗೆ ವಾಯುವು ಶಬ್ದಮಾಡುತ್ತದೆಯೋ ಹಾಗೆ ನೀರಿನ ಪ್ರವಾಹದಿಂದ ವಾಯುವು ಚಲಿಸತೊಡಗಿತು. ಹೀಗೆ ಆಕಾಶದ ಕೊನೆಯವರೆಗೂ ನಿರಂತರವಾಗಿ, ಸ್ವಲ್ಪವೂ ಜಾಗವಿಲ್ಲದೇ ನೀರೇ ತುಂಬಿಕೊಂಡಿತ್ತು. ಆಗ ಆ ಏಕಾರ್ಣವ ಜಲಪ್ರದೇಶವನ್ನು ಭೇದಿಸಿ ಅತಿ ದೊಡ್ಡ ಶಬ್ದದೊಂದಿಗೆ ವಾಯುವು ಪ್ರಕಟಗೊಂಡಿತು. ಹೀಗೆ ಸಮುದ್ರದ ಜಲಸಮುದಾಯದಿಂದ ಪ್ರಕಟವಾದ ವಾಯುವು ಸರ್ವತ್ರ ಸಂಚರಿಸತೊಡಗಿತು ಮತ್ತು ಆಕಾಶದಲ್ಲಿ ಎಲ್ಲಿ ತಲುಪಿದರೂ ಅದು ಶಾಂತವಾಗಲಿಲ್ಲ. ವಾಯು ಮತ್ತು ಜಲದ ಆ ಸಂಘರ್ಷದಿಂದ ಅತ್ಯಂತ ತೇಜೋಮಯ ಮಹಾಬಲೀ ಅಗ್ನಿದೇವನ ಉತ್ಪನ್ನವಾಯಿತು. ಅವನ ಜ್ವಾಲೆಗಳು ಮೇಲ್ಮುಖವಾಗಿದ್ದವು. ಆ ಅಗ್ನಿಯು ಆಕಾಶದ ಎಲ್ಲ ಅಂಧಕಾರವನ್ನೂ ನಾಶಗೊಳಿಸಿ ಪ್ರಕಟವಾಯಿತು. ವಾಯುವಿನ ಸಂಯೋಗವನ್ನು ಪಡೆದುಕೊಂಡು ಅಗ್ನಿಯು ಜಲವನ್ನು ಆಕಾಶಕ್ಕೆ ಬೀಸತೊಡಗಿತು. ಅನಂತರ ಅದೇ ಜಲ, ಅಗ್ನಿ ಮತ್ತು ವಾಯುಗಳ ಸಂಯೋಗದಿಂದ ಘನೀಭೂತವಾಯಿತು. ಅದರ ಆ ತೇವವು ಆಕಾಶದಲ್ಲಿ ಬಿದ್ದಾಗ ಅದೇ ಘನೀಭೂತವಾಗಿ ಪೃಥ್ವಿಯ ರೂಪದಲ್ಲಿ ಬದಲಾಯಿತು. ಈ ಪೃಥ್ವಿಯನ್ನೇ ಸಂಪೂರ್ಣ ರಸ, ಗಂಧ, ಸ್ನೇಹ ಮತ್ತು ಪ್ರಾಣಿಗಳ ಕಾರಣವೆಂದು ತಿಳಿಯಬೇಕು. ಇದರಿಂದಲೇ ಎಲ್ಲವುಗಳ ಉತ್ಪತ್ತಿಯಾಯಿತು.”

ಭರದ್ವಾಜನು ಹೇಳಿದನು:

“ಈ ಲೋಕವನ್ನು ಆವೃತವಾಗಿರುವ ಮತ್ತು ಹಿಂದೆ ಬ್ರಹ್ಮನು ಸೃಷ್ಟಿಸಿದ ಈ ಅದಿ ಧಾತುಗಳು ಮಹಾಭೂತಗಳು ಎಂದು ಸೂಚಿತಗೊಂಡಿವೆ. ಆ ಮಹಾಮತಿಯು ಸಹಸ್ರಾರು ಭೂತಗಳನ್ನು ಸೃಷ್ಟಿಸಿರುವಾಗ ಈ ಐದಕ್ಕೇ ಹೇಗೆ ಭೂತತ್ವವು ಪ್ರಾಪ್ತವಾಯಿತು?”

ಭೃಗುವು ಹೇಳಿದನು:

“ಇವುಗಳಿಗೆ ಮಿತಿಯೇ ಇಲ್ಲದಿರುವುದರಿಂದ ಇವುಗಳಿಗೆ ಮಹಾ ಎಂಬ ಶಬ್ದವನ್ನು ಜೋಡಿಸಲಾಗಿದೆ. ಇವುಗಳಿಂದಲೇ ಭೂತಗಳ ಉತ್ಪತ್ತಿಯಾಗುತ್ತದೆ. ಆದುದರಿಂದ ಇವುಗಳಿಗೇ ಮಹಾಭೂತಗಳು ಎನ್ನುವುದು ಸುಸಂಗತವಾಗಿದೆ. ಪ್ರಾಣಿಗಳ ಶರೀರವು ಈ ಪಂಚ ಮಹಾಭೂತಗಳ ಸಂಘಾತವೇ ಆಗಿದೆ. ಇದರಲ್ಲಿ ಚೇಷ್ಟೆಯು ವಾಯುವಿನ ಭಾಗ, ಉದರವು ಆಕಾಶದ ಅಂಶ, ಉಷ್ಣವು ಅಗ್ನಿಯ ಅಂಶ, ದ್ರವಗಳು ಜಲದ ಅಂಶಗಳು ಮತ್ತು ಎಲುಬು-ಮಾಂಸಗಳು ಪೃಥ್ವಿಯ ಅಂಶಗಳು. ಹೀಗೆ ಸ್ಥಾವರಜಂಗಮಗಳೆಲ್ಲವೂ ಈ ಐದು ಭೂತಗಳಿಂದ ಯುಕ್ತವಾಗಿವೆ. ಇವುಗಳ ಸೂಕ್ಷ್ಮ ಅಂಶಗಳೇ ಇಂದ್ರಿಯಗಳೆಂದು ಕರೆಯಲ್ಪಟ್ಟಿರುವ ಕೇಳುವುದು, ಮೂಸುವುದು, ರುಚಿ, ಸ್ಪರ್ಶ, ಮತ್ತು ದೃಷ್ಟಿ.”

ಭರದ್ವಾಜನು ಹೇಳಿದನು:

“ಒಂದುವೇಳೆ ಸ್ಥಾವರಜಂಗಮಗಳೆಲ್ಲವೂ ಈ ಪಂಚಭೂತಗಳಿಂದ ಯುಕ್ತವಾದವುಗಳೆಂದರೆ ಸ್ಥಾವರಗಳ ಶರೀರದಲ್ಲಿ ಐದು ಧಾತುಗಳಿರುವುದು ಕಾಣಿಸುವುದಿಲ್ಲವಲ್ಲ. ವೃಕ್ಷಗಳಲ್ಲಿ ಉಷ್ಣತೆಯೂ ಇಲ್ಲ ಮತ್ತು ಚಲನೆಯೂ ಇಲ್ಲ. ವಾಸ್ತವವಾಗಿ ಅವು ಘನವಾದವುಗಳು. ಆದುದರಿಂದ ವೃಕ್ಷಗಳಲ್ಲಿ ಐದೂ ಭೂತಗಳು ಉಪಲಬ್ಧವಾಗುವುದಿಲ್ಲ. ವೃಕ್ಷಗಳು ಕೇಳುವುದಿಲ್ಲ, ನೋಡುವುದಿಲ್ಲ ಮತ್ತು ಗಂಧ-ರಸಗಳನ್ನು ತಿಳಿಯುವುದಿಲ್ಲ. ಸ್ಪರ್ಶವನ್ನೂ ಅವು ಗುರುತಿಸುವುದಿಲ್ಲ. ಹಾಗಿದ್ದಾಗ ಅವು ಹೇಗೆ ಪಂಚಭೌತಿಕಗಳಾದವು? ವೃಕ್ಷಗಳಲ್ಲಿ ದ್ರವತ್ವವಾಗಲೀ, ಅಗ್ನಿತ್ವವಾಗಲೀ, ಭೌಮತ್ವವಾಗಲೀ ಅಥವಾ ವಾಯುತ್ವವಾಗಲೀ ನೋಡಲು ಸಿಗುವುದಿಲ್ಲ. ಅಪ್ರಮೇಯ ಆಕಾಶವೂ ಅವುಗಳಲ್ಲಿ ಕಾಣುವುದಿಲ್ಲ. ಆದುದರಿಂದ ವೃಕ್ಷಗಳು ಪಂಚಭೌತಿಕವಾದವುಗಳು ಎಂದಾಗುವುದಿಲ್ಲ.”

ಭೃಗುವು ಹೇಳಿದನು:

“ಘನವಾಗಿದ್ದರೂ ವೃಕ್ಷಗಳಲ್ಲಿ ಆಕಾಶತತ್ತ್ವವಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಲೇ ಅವುಗಳಲ್ಲಿ ನಿತ್ಯವೂ ಫಲ-ಪುಷ್ಪಗಳ ಉತ್ಪತ್ತಿಯಾಗುತ್ತದೆ. ಉಷ್ಣದಿಂದಲೇ ಎಲೆಗಳು ಒಣಗುತ್ತವೆ; ಫಲ-ಪುಷ್ಪಗಳು ಬಾಡುತ್ತವೆ. ತೊಗಡೆಯು ಒಣಗುತ್ತದೆ. ಮುಟ್ಟಿದರೆ ಅವು ಬಾಡುತ್ತವೆ ಅಥವಾ ಉದುರಿ ಬೀಳುತ್ತವೆ. ಅದರಿಂದ ವೃಕ್ಷಗಳಲ್ಲಿ ಉಷ್ಣ ಮತ್ತು ಸ್ಪರ್ಶ ಈ ಎರಡೂ ಗುಣಗಳಿವೆಯೆಂದು ತಿಳಿಯುತ್ತದೆ. ವಾಯು, ಅಗ್ನಿ ಮತ್ತು ಸಿಡಿಲುಗಳ ಶಬ್ದವು ಕೇಳಿದ ಕೂಡಲೇ ಫಲ-ಪುಷ್ಪಗಳು ಶೀರ್ಣವಾಗಿ ಕೆಳಗೆ ಬೀಳುತ್ತವೆ. ವೃಕ್ಷಗಳು ಶ್ರೋತ್ರದಿಂದಲೇ ಶಬ್ದವನ್ನು ಗ್ರಹಿಸುತ್ತವೆ. ಆದುದರಿಂದ ಅವೂ ಕೂಡ ಕೇಳುತ್ತವೆ. ಬಳ್ಳಿಯು ಮರವನ್ನು ಸುತ್ತಿಕೊಂಡು ಎಲ್ಲ ಕಡೆ ಹಬ್ಬುತ್ತದೆ. ಕಣ್ಣಿಲ್ಲದವನಿಗೆ ಮಾರ್ಗವಿಲ್ಲವೆನ್ನುವುದು ಸ್ವಭಾವಸಿದ್ಧ. ಆದುದರಿಂದ ವೃಕ್ಷಗಳೂ ನೋಡುತ್ತವೆ. ಪವಿತ್ರ-ಅಪವಿತ್ರ ವಿವಿಧ ಗಂಧ-ಧೂಪಗಳ ಚಿಕಿತ್ಸೆಗೊಳಗಾದ ವೃಕ್ಷಗಳು ರೋಗರಹಿತಗೊಂಡು ಪುಷ್ಪ-ಫಲಗಳಿಂದ ಸಮೃದ್ಧವಾಗುತ್ತವೆ. ಆದುದರಿಂದ ವೃಕ್ಷಗಳೂ ವಾಸನೆಯನ್ನು ತೆಗೆದುಕೊಳ್ಳುತ್ತವೆ. ಅವು ಬೇರುಗಳಿಂದ ನೀರನ್ನು ಕುಡಿಯುತ್ತವೆ. ಅವುಗಳಿಗೂ ವ್ಯಾಧಿಗಳಾಗುತ್ತವೆ ಎನ್ನುವುದನ್ನು ಕಾಣುತ್ತೇವೆ. ವ್ಯಾಧಿಗಳಿಗೆ ಔಷಧಗಳನ್ನೂ ಕೂಡ ವೃಕ್ಷಗಳಿಗೆ ನೀಡಲಾಗುತ್ತದೆ. ಇದರಿಂದ ವೃಕ್ಷಗಳಿಗೂ ರಸಗ್ರಹಣ ಶಕ್ತಿಯಿದೆ ಎಂದು ತಿಳಿಯುತ್ತದೆ.  ಕಮಲದ ನಾಳವನ್ನು ಬಾಯಲ್ಲಿಟ್ಟುಕೊಂಡು ಉಸಿರನ್ನು ಎಳೆದುಕೊಳ್ಳುವುದರ ಮೂಲಕ ನೀರನ್ನು ಮೇಲಕ್ಕೆ ಸೆಳೆದುಕೊಳ್ಳುವಂತೆ ವೃಕ್ಷಗಳು ವಾಯುವಿನ ಸಹಾಯದಿಂದ ಬೇರುಗಳ ಮೂಲಕ ಕೆಳಗಿರುವ ನೀರನ್ನು ಕುಡಿಯುತ್ತವೆ.

ವೃಕ್ಷಗಳು ಸುಖ-ದುಃಖಗಳನ್ನು ಅನುಭವಿಸುತ್ತವೆ. ಕೊಡಲಿಯನ್ನು ಹಿಡಿದವನು ಹತ್ತಿರ ಹೋದರೆ ದುಃಖಿಸುತ್ತವೆ. ನೀರೆರೆಯುವವನು ಹತ್ತಿರ ಹೋದರೆ ಸಂತೋಷಪಡುತ್ತವೆ. ಕತ್ತರಿಸಿದರೆ ಪುನಃ ಅದು ಚಿಗುರುತ್ತದೆ. ವೃಕ್ಷಗಳಲ್ಲಿ ಜೀವವನ್ನು ಕಾಣುತ್ತೇನೆ. ಅವು ಅಚೇತನಗಳೆಂದು ತಿಳಿಯುವುದಿಲ್ಲ. ಬೇರುಗಳಿಂದ ತೆಗೆದುಕೊಂಡ ನೀರನ್ನು ವೃಕ್ಷದೊಳಗಿರುವ ಅಗ್ನಿ-ಮಾರುತಗಳು ಅರಗಿಸುತ್ತವೆ. ಹೀಗೆ ಆಹಾರದ ಪರಿಣಾಮದಿಂದಲೇ ವೃಕ್ಷದಲ್ಲಿ ಸ್ನಿಗ್ಧತೆಯಿದೆ ಮತ್ತು ಅದು ಬೆಳೆಯುತ್ತದೆ.

ಸರ್ವ ಜಂಗಮಗಳ ಶರೀರದಲ್ಲಿಯೂ ಪಂಚಧಾತುಗಳಿವೆ. ಆದರೆ ಅಲ್ಲಿ ಅವುಗಳ ಸ್ವರೂಪದಲ್ಲಿ ಭೇದವಿದೆ. ಆ ಪಂಚಭೂತಗಳ ಸಹಯೋಗದಿಂದಲೇ ಶರೀರವು ಚಲಿಸುತ್ತದೆ. ಶರೀರದಲ್ಲಿ ಚರ್ಮ, ಮಾಂಸ, ಎಲುಬು, ಮಜ್ಜೆ ಮತ್ತು ಸ್ನಾಯು – ಈ ಐದು ವಸ್ತುಗಳ ಸಮುದಾಯವು ಪೃಥ್ವೀಮಯವು. ತೇಜಸ್ಸು, ಕ್ರೋಧ, ನೇತ್ರ, ಉಷ್ಣತೆ ಮತ್ತು ಜಠರಾನಲ – ಶರೀರದಲ್ಲಿರುವ ಈ ಐದು ವಸ್ತುಗಳು ಅಗ್ನಿಮಯವು. ಕಿವಿಗಳು, ಮೂಗು, ಮುಖ, ಹೃದಯ ಮತ್ತು ಹೊಟ್ಟೆ – ಪ್ರಾಣಿಗಳ ಶರೀರದಲ್ಲಿರುವ ಈ ಐದು ಧಾತುಗಳು ಆಕಾಶದಿಂದ ಉತ್ಪನ್ನವಾದವುಗಳು. ಕಫ, ಪಿತ್ತ, ಬೆವರು, ಕೊಬ್ಬು ಮತ್ತು ರಕ್ತ – ಪ್ರಾಣಿಗಳ ಶರೀರದಲ್ಲಿರುವ ಈ ಐದು ವಸ್ತುಗಳು ಜಲರೂಪಗಳು. ಪ್ರಾಣದಿಂದ ಪ್ರಾಣಿಯು ಚಲಿಸುತ್ತವೆ. ವ್ಯಾನದಿಂದ ವ್ಯಾಯಾಮವನ್ನು ಮಾಡುತ್ತವೆ. ಅಪಾನ ವಾಯುವು ಮೇಲಿಂದ ಕೆಳಗೆ ಹೋಗುತ್ತದೆ. ಸಮಾನ ವಾಯುವು ಹೃದಯದಲ್ಲಿ ನೆಲೆಸಿರುತ್ತದೆ. ಉದಾನದಿಂದ ಪ್ರಾಣಿಯು ಉಚ್ಛ್ವಾಸವನ್ನು ತೆಗೆದುಕೊಳ್ಳುತ್ತದೆ ಹಾಗೂ ಕಂಠ-ತಾಲುಗಳ ಭೇದದಿಂದ ಶಬ್ದ-ಅಕ್ಷರಗಳ ಉಚ್ಛಾರಣೆಯಾಗುತ್ತದೆ. ಹೀಗೆ ಈ ಐದು ವಾಯುಗಳು ದೇಹಿಯು ಚಲಿಸುವಂತೆ ಮಾಡುತ್ತವೆ. ಶರೀರವಂತನು ಭೂಮಿಯಿಂದ ಗಂಧಗುಣವನ್ನು ಮತ್ತು ನೀರಿನಿಂದ ರಸವನ್ನು ತಿಳಿಯುತ್ತಾನೆ. ಕಣ್ಣುಗಳಿಂದ ಜ್ಯೋತಿಯಿಂದ ನೋಡುತ್ತಾನೆ ಮತ್ತು ವಾಯುವಿನಿಂದ ಸ್ಪರ್ಶವನ್ನು ತಿಳಿಯುತ್ತಾನೆ.

ಇವುಗಳಲ್ಲಿ ಗಂಧದ ಗುಣಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಇಷ್ಟ-ಅನಿಷ್ಟ ಗಂಧಗಳು, ಮಧುರ-ಕಟು ಗಂಧಗಳು, ನಿರ್ಹಾರೀ, ಸಂಹತ, ಸ್ನಿಗ್ಧ, ರೂಕ್ಷ, ವಿಶದ – ಹೀಗೆ ಭೂಸಂಬಂಧವಾದ ಒಂಭತ್ತು ಬಗೆಯ ಗಂಧಗಳನ್ನು ಹೇಳುತ್ತಾರೆ[2]. ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ಜಲದ ಗುಣಗಳೆಂದು ಹೇಳಿದ್ದಾರೆ. ರಸಜ್ಞಾನದ ಕುರಿತು ಹೇಳುತ್ತೇನೆ. ಅದನ್ನು ಕೇಳು. ರಸವು ಬಹುವಿಧವೆಂದು ಸುವಿಖ್ಯಾತ ಋಷಿಗಳು ಹೇಳುತ್ತಾರೆ. ಸಿಹಿ, ಉಪ್ಪು, ಕಹಿ, ಒಗರು, ಹುಳಿ ಮತ್ತು ಖಾರ – ಈ ಆರು ಜಲಮಯ ರಸಗಳೆಂದು ಹೇಳಿದ್ದಾರೆ.

ಶಬ್ದ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳು ಜ್ಯೋತಿಯಲ್ಲಿವೆ ಎಂದು ಹೇಳುತ್ತಾರೆ. ಜ್ಯೋತಿಯು ರೂಪಗಳನ್ನು ನೋಡುತ್ತದೆ ಮತ್ತು ರೂಪಗಳು ಅನೇಕ ಎಂದು ಹೇಳಿದ್ದಾರೆ. ಹೃಸ್ವ, ದೀರ್ಘ, ಸ್ಥೂಲ, ಚಚ್ಚೌಕ, ಅಣು, ವೃತ್ತ, ಬಿಳಿಪು, ಕಪ್ಪು, ಕೆಂಪು, ನೀಲಿ, ಹಳದಿ ಮತ್ತು ಆಕಾಶನೀಲಿ ಬಣ್ಣ – ಹೀಗೆ ಜ್ಯೋತಿಯ ರೂಪಗುಣಗಳು ವಿಸ್ತಾರವಾಗಿ ಹನ್ನೆರಡು ಎಂದು ಹೇಳಿದ್ದಾರೆ.

ಶಬ್ದ-ಸ್ಪರ್ಶಗಳು ವಾಯುವಿನ ಎರಡು ಗುಣಗಳೆಂದು ಹೇಳಿದ್ದಾರೆ. ವಾಯುವಿನ ಪ್ರಮುಖ ಗುಣವು ಸ್ಪರ್ಶ. ಸ್ಪರ್ಶದಲ್ಲಿಯೂ ಅನೇಕ ಭೇದಗಳಿವೆ ಎಂದು ಹೇಳಿದ್ದಾರೆ. ಕಠಿನ, ನುಣುಪು, ತೆಳವು, ಜಿಡ್ಡು, ಮೃದು, ದಾರುಣ, ಉಷ್ಣ, ಶೀತ, ಸುಖ, ದುಃಖ, ಸ್ನಿಗ್ಧ, ವಿಶದ – ಹೀಗೆ ವಾಯುವಿನ ವಿಸ್ತಾರ ಗುಣಗಳು ಹನ್ನೆರಡು ಎಂದು ಹೇಳುತ್ತಾರೆ.

ಆಕಾಶದ ಗುಣವು ಒಂದೆ – ಶಬ್ದ ಎಂದು ಹೇಳಿದ್ದಾರೆ. ಶಬ್ದದ ವಿವಿಧಾತ್ಮಕ ವಿಸ್ತಾರವನ್ನು ಹೇಳುತ್ತೇನೆ. ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ – ಇವು ಆಕಾಶದ ಏಳು ಗುಣ ಲಕ್ಷಣಗಳೆಂದು ಹೇಳಿದ್ದಾರೆ. ಶಬ್ದವು ಶ್ರೇಷ್ಠತೆಯನ್ನು ಹೊಂದಿ ಸರ್ವತ್ರವ್ಯಾಪ್ತವಾಗಿದ್ದರೂ ನಗಾರಿಯೇ ಮೊದಲಾದ ವಾದ್ಯಗಳಲ್ಲಿ ಇದು ವಿಷೇಷರೂಪದಿಂದ ಅಭಿವ್ಯಕ್ತವಾಗುತ್ತದೆ. ವಾಯುಸಂಬಂಧ ಗುಣಗಳೊಂದಿಗೆ ಶಬ್ದವು ಆಕಾಶದಲ್ಲಿ ಹುಟ್ಟಿದೆಯೆಂದು ಹೇಳುತ್ತಾರೆ. ವಾಯುಸಂಬಂಧೀ ಗುಣವು ಬಾಧಿತವಾಗದೇ ಶಬ್ದದೊಡನಿರುವಾಗ ಮನುಷ್ಯನು ಶಬ್ದವನ್ನು ಕೇಳುತ್ತಾನೆ. ಶಬ್ದಾದಿಗಳ ಉತ್ಪಾದಕ ಧಾತುವು ಧಾತುಗಳ ಮೂಲಕವೇ ಪೋಷಿತಗೊಳ್ಳುತ್ತವೆ. ಜಲ, ಅಗ್ನಿ ಮತ್ತು ವಾಯು ಇವು ಮೂರು ದೇಹಧಾರಿಗಳಲ್ಲಿ ಸದಾ ಜಾಗ್ರತವಾಗಿರುತ್ತವೆ.”

ಭರದ್ವಾಜನು ಹೇಳಿದನು:

“ಶರೀರದಲ್ಲಿರುವ ಅಗ್ನಿಯು ಪೃಥ್ವೀಧಾತುವನ್ನಾಶ್ರಯಿಸಿ ಹೇಗಿರುತ್ತದೆ? ವಾಯುವೂ ಕೂಡ ಪೃಥ್ವೀಧಾತುವನ್ನಾಶ್ರಯಿಸಿ ಅವಕಾಶ ವಿಶೇಷದಿಂದ ಹೇಗೆ ಶರೀರವನ್ನು ಚಲನಾಶೀಲವನ್ನಾಗಿ ಮಾಡುತ್ತದೆ?”

ಭೃಗುವು ಹೇಳಿದನು:

“ಅನಘ! ಬ್ರಹ್ಮನ್! ವಾಯುವಿನ ಗತಿ ಮತ್ತು ಪ್ರಾಣಿಗಳ ದೇಹಗಳಲ್ಲಿರುವ ಬಲಶಾಲೀ ವಾಯುವು ಹೇಗೆ ದೇಹಗಳನ್ನು ಚಲಿಸುವಂತೆ ಮಾಡುತ್ತಾನೆ ಎನ್ನುವುದನ್ನು ಹೇಳುತ್ತೇನೆ. ಅಗ್ನಿಯು ನೆತ್ತಿಯಲ್ಲಿರುವ ಸಹಸ್ರಾರವನ್ನಾಶ್ರಯಿಸಿ ಶರೀರವನ್ನು ಪರಿಪಾಲಿಸುತ್ತದೆ. ನೆತ್ತಿಯಲ್ಲಿರುವ ಪ್ರಾಣ-ಅಗ್ನಿ ಇವೆರಡೂ ಶರೀರವು ಚಲಿಸುವಂತೆ ಮಾಡುತ್ತವೆ. ಆ ಪ್ರಾಣಸಂಯುಕ್ತ ಅಗ್ನಿಯೇ ಸರ್ವಭೂತಾತ್ಮನು. ಅವನೇ ಸನಾತನ ಪುರುಷನು. ಅವನೇ ಮನಸ್ಸು, ಬುದ್ಧಿ, ಅಹಂಕಾರ, ಪಂಚಭೂತಗಳು ಮತ್ತು ವಿಷಯಗಳು. ಹೀಗೆ ಅಗ್ನಿಯಿಂದ ಯುಕ್ತವಾದ ಪ್ರಾಣದಿಂದ ಶರೀರದೊಳಗಿನ ಸಮಸ್ತ ವಿಭಾಗಗಳೂ ಮತ್ತು ಇಂದ್ರಿಯಾದಿ ಎಲ್ಲ ಬಾಹ್ಯ ಅಂಗಗಳೂ ಚಲಿಸುತ್ತವೆ. ಅನಂತರ ಪ್ರಾಣವು ಸಮಾನವಾಗಿ ಪರಿವರ್ತನೆಗೊಂಡು ತನ್ನ ಗತಿಯನ್ನಾಶ್ರಯಿಸಿ ಶರೀರದ ಸಂಚಾಲಕವಾಗುತ್ತದೆ. ಅಪಾನ ವಾಯುವು ಜಠರಾನಲ, ಮೂತ್ರಾಶಯ ಮತ್ತು ಗುದಗಳನ್ನಾಶ್ರಯಿಸಿ ಮಲ-ಮೂತ್ರಗಳನ್ನು ವಿಸರ್ಜಿಸುತ್ತಾ ಮೇಲಿಂದ ಕೆಳಗೆ ಚಲಿಸುತ್ತಿರುತ್ತದೆ. ಪ್ರಯತ್ನ, ಕರ್ಮ ಮತ್ತು ಬಲ ಈ ಮೂರರರಲ್ಲಿಯೂ ಪ್ರವೃತ್ತವಾಗಿರುವ ಆ ಒಂದು ವಾಯುವನ್ನು ಅಧ್ಯಾತ್ಮವಿದುಷ ಜನರು ಉದಾನ ಎಂದು ಕರೆಯುತ್ತಾರೆ. ಶರೀರದ ಸಂಧಿಗಳನ್ನೂ ಸೇರಿ ಎಲ್ಲಕಡೆ ವ್ಯಾಪ್ತವಾಗಿರುವ ವಾಯುವನ್ನು ವ್ಯಾನ ಎಂದು ಕರೆಯುತ್ತಾರೆ. ಶರೀರದ ಸಮಸ್ತ ಧಾತುಗಳಲ್ಲಿ ವ್ಯಾಪ್ತವಾಗಿರುವ ಅಗ್ನಿಯನ್ನು ಸಮಾನ ವಾಯುವು ಸಂಚಾಲಿತಗೊಳಿಸುತ್ತದೆ. ಆ ಸಮಾನವಾಯುವೇ ಶರೀರದಲ್ಲಿರುವ ರಸಗಳು, ಇಂದ್ರಿಯಗಳು ಮತ್ತು ಕಫ ಇತ್ಯಾದಿ ದೋಷಗಳನ್ನು ಸಂಚಲಿಸುತ್ತಾ ಸಂಪೂರ್ಣಶರೀರದಲ್ಲಿ ಸ್ಥಿತವಾಗಿದೆ.

ಅಪಾನ ಮತ್ತು ಪ್ರಾಣ ವಾಯುಗಳ ಮಧ್ಯೆ ನಾಭಿಭಾಗದಲ್ಲಿ ಪ್ರಾಣ ಮತ್ತು ಅಪಾನವಾಯುಗಳ ಆಶ್ರಯವನ್ನು ಪಡೆದು ಸ್ಥಿತವಾಗಿರುವ ಜಠರಾಗ್ನಿಯು ತಿಂದ ಅನ್ನವನ್ನು ಚೆನ್ನಾಗಿ ಪಚನಮಾಡುತ್ತದೆ. ಬಾಯಿಯಿಂದ ಪಾಯುವಿನವರೆಗಿರುವ ಈ ಪ್ರಾಣಪ್ರವಹಿಸುವ ಮಾರ್ಗದ ತುದಿಗೇ ಗುದವೆಂಬ ಹೆಸರಿದೆ. ಅದೇ ಮಹಾಮಾರ್ಗದಿಂದ ದೇಹಧಾರಿಗಳ ಅನ್ಯ ಎಲ್ಲ ಸಣ್ಣ ಸಣ್ಣ ಮಾರ್ಗಗಳೂ ಪ್ರಕಟವಾಗುತ್ತವೆ. ಆ ಮಾರ್ಗಗಳ ಮೂಲಕ ಎಲ್ಲ ಅಂಗಾಂಗಗಳಲ್ಲಿ ಪ್ರಾಣದ ಪ್ರಸಾರವು ಆಗುವುದರಿಂದ ಜಠರಾಗ್ನಿಯೂ ಕೂಡ ಪ್ರಾಣದೊಡನೆ ಎಲ್ಲ ಅಂಗಾಂಗಗಳಲ್ಲಿ ಪ್ರಸಾರವಾಗುತ್ತಿರುತ್ತದೆ. ಶರೀರದಲ್ಲಿರುವ ಉಷ್ಣತೆಯು ಶರೀರಿಗಳು ತಿನ್ನುವ ಅನ್ನವನ್ನು ಜೀರ್ಣಿಸುವ ಜಠರಾಗ್ನಿಯ ತಾಪ ಎಂದು ತಿಳಿದುಕೊಳ್ಳಬೇಕು. ಅಗ್ನಿಯ ವೇಗದಿಂದ ಪ್ರವಹಿಸುವ ಪ್ರಾಣವಾಯುವು ಗುದದ ಅಂತ್ಯದಲ್ಲಿ ಪ್ರತಿಹತವಾಗುತ್ತದೆ. ಪುನಃ ಪ್ರಾಣವಾಯುವು ಮೇಲಕ್ಕೆ ಪ್ರವಹಿಸಿ ಅಗ್ನಿಯನ್ನು ಮೇಲಕ್ಕೆತ್ತುತ್ತದೆ.

ನಾಭಿಯ ಕೆಳಭಾಗವು ತಿಂದ ಆಹಾರವು ಜೀರ್ಣವಾಗುವ ಸ್ಥಳ. ಇದಕ್ಕೆ ಪಕ್ವಾಶಯವೆಂದು ಹೆಸರು. ನಾಭಿಯ ಮೇಲ್ಭಾಗವು ತಿಂದ ಆಹಾರವು ಸಂಗ್ರಹವಾಗುವ ಸ್ಥಳ. ಇದಕ್ಕೆ ಆಮಾಶಯವೆಂದು ಹೆಸರು. ನಾಭಿಮಧ್ಯದಲ್ಲಿ ಶರೀರದ ಸರ್ವಪ್ರಾಣಗಳೂ ಇವೆ. ಹೃದಯದಿಂದ ಹೊರಟು ಮೇಲಕ್ಕೂ, ಕೆಳಗೂ, ಮತ್ತು ಪಾರ್ಶ್ವಗಳಿಗೂ ಹೋಗುವ ನಾಡಿಗಳು ದಶಪ್ರಾಣವಾಯುಗಳಿಂದ[3] ಪ್ರಚೋದಿತಗೊಂಡು ಅನ್ನರಸವನ್ನು ಶರೀರಾದ್ಯಂತ ಒಯ್ಯುತ್ತವೆ. ಮುಖದಿಂದ ಗುದದವರೆಗಿನ ವಾಯುಪ್ರವಾಹಮಾರ್ಗವೇ ಯೋಗಿಗಳ ಮಾರ್ಗವೂ ಆಗಿದೆ. ಈ ಮಾರ್ಗದ ಮೂಲಕವೇ ಕ್ಲೇಷಗಳನ್ನು ಜಯಿಸಿದ ಸರ್ವಸಮಭಾವದಿಂದಿರುವ ಧೀರ ಯೋಗಿಗಳು ಸುಷುಮ್ನಾನಾಡಿಯ ಮೂಲಕ ಆತ್ಮನನ್ನು ಸಹಸ್ರಾರದಲ್ಲಿ ನಿಲ್ಲಿಸುತ್ತಾರೆ. ಹೀಗೆ ಪ್ರಾಣಾಪಾನಗಳೇ ಮೊದಲಾದ ಸರ್ವವಾಯುಗಳಲ್ಲಿಯೂ ಸಮಾವೇಶಗೊಂಡಿರುವ ಜಠರಾಗ್ನಿಯು ಅಗ್ನಿಕುಂಡದಲ್ಲಿರುವ ಅಗ್ನಿಯಂತೆ ಶರೀರದಲ್ಲಿ ಪ್ರಜ್ವಲಿಸುತ್ತಿರುತ್ತದೆ.”

ಭರದ್ವಾಜನು ಹೇಳಿದನು:

“ಒಂದುವೇಳೆ ನೀನು ಹೇಳಿದಂತೆ ವಾಯುವೇ ದೇಹಿಗಳನ್ನು ಪ್ರಾಣಯುಕ್ತರನ್ನಾಗಿ ಮಾಡುವುದಾದರೆ, ಅದೇ ಪ್ರಾಣಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುವುದಾದರೆ, ಅದೇ ಉಚ್ಛ್ವಾಸ-ನಿಃಶ್ವಾಸಗಳನ್ನು ಮಾಡುವುದಾದರೆ, ಮತ್ತು ಮಾತಿಗೂ ವಾಯುವೇ ಕಾರಣವಾದರೆ – ಈ ಶರೀರದಲ್ಲಿ ಜೀವ ಎಂಬ ಬೇರೊಂದಿದೆ ಎಂದು ಹೇಳುವುದೇ ನಿರರ್ಥಕವಾಗುತ್ತದೆ. ಶರೀರದಲ್ಲಿರುವ ಉಷ್ಣವು ಅಗ್ನಿ, ತಿಂದ ಪದಾರ್ಥಗಳನ್ನು ಪಚನಮಾಡುವುದು ಅಗ್ನಿ, ಜೀರ್ಣಗೊಳಿಸುವುದು ಅಗ್ನಿ ಎಂದಾದರೆ ಜೀವ ಎಂಬ ಬೇರೊಂದು ವಸ್ತುವು ಶರೀರದಲ್ಲಿದೆ ಎಂದು ಹೇಳುವುದು ನಿರರ್ಥಕವಾಗುತ್ತದೆ. ಜಂತುವು ಮರಣಹೊಂದಿದಾಗ ಅಲ್ಲಿ ಜೀವವು ಉಪಲಭ್ಯವಾಗುವುದಿಲ್ಲ. ವಾಯುವೂ ಶರೀರವನ್ನು ತ್ಯಜಿಸಿರುತ್ತದೆ ಮತ್ತು ಉಷ್ಣಭಾವವೂ ಶರೀರದಲ್ಲಿರುವುದಿಲ್ಲ. ಒಂದು ವೇಳೆ ಜೀವವು ವಾಯುಸಮ ಮತ್ತು ಜೀವಕ್ಕೆ ವಾಯುವಿನೊಡನೆ ಅತಿ ಹತ್ತಿರದ ಸಂಬಂಧವಿದೆಯೆಂದಾದರೆ ವಾಯುಮಂಡಲದಂತೆ ಅದರ ಪ್ರತ್ಯಕ್ಷ ಅನುಭವವು ಆಗಬೇಕು. ಮರಣದ ಸಮಯದಲ್ಲಿ ವಾಯುವು ಹೋಗುವುದು ಕಾಣಬೇಕಾಗುತ್ತಿತ್ತು. ವಾಯುವಿನೊಂದಿಗೆ ಜೀವದ ಗಾಢ ಸಂಬಂಧವಿದ್ದಿದ್ದರೆ ಮೃತ್ಯುವಿನ ನಂತರ ಮಹಾಸಾಗರದಲ್ಲಿ ನೀರುತುಂಬಿದ ಪಾತ್ರೆಯನ್ನು ಬರಿದುಮಾಡುವಂತೆ ಶರೀರದಲ್ಲಿರುವ ವಾಯುವಿನ ಕೇವಲ ಸ್ಥಳಾಂತರವಾಯಿತೆಂದಾಯಿತಲ್ಲವೇ? ಅಥವಾ ಬಾವಿಯಲ್ಲಿ ನೀರನ್ನು ಸುರಿದರೆ ಅಥವಾ ಉರಿಯುತ್ತಿರುವ ಬೆಂಕಿಗೆ ಉರಿಯುತ್ತಿರುವ ದೀಪವನ್ನು ಹಾಕಿದರೆ ಅವೆರಡೂ ಶೀಘ್ರದಲ್ಲಿಯೇ ತಮ್ಮ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡುಬಿಡುತ್ತವೆ. ಅದೇ ರೀತಿಯಲ್ಲಿ ಪಂಚಭೌತಿಕ ಶರೀರವು ನಾಶವಾದಾಗ ಜೀವವೂ ಕೂಡ ಐದೂ ತತ್ತ್ವಗಳಲ್ಲಿ ವಿಲೀನಗೊಂಡು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದಾದರೆ ಶರೀರದಲ್ಲಿ ಜೀವಕ್ಕೆ ಅಸ್ತಿತ್ವವೆಲ್ಲಿದೆ?

ಇದರಿಂದ ಇಷ್ಟು ಸಿದ್ಧವಾಗುತ್ತದೆ: ಪಂಚಭೂತಗಳ ಸಂಘಾತದ ಹೊರತಾಗಿ ಜೀವ ಎನ್ನುವುದು ಪ್ರತ್ಯೇಕವಲ್ಲ. ಒಟ್ಟಾಗಿ ಸೇರಿರುವ ಈ ಪಂಚಭೂತಗಳಲ್ಲಿ ಯಾವುದಾದರೂ ಒಂದರ ಅಭಾವವಾದರೂ ಉಳಿದ ನಾಲ್ಕು ಉಳಿಯುವುದಿಲ್ಲ. ಇದನ್ನೇ ಮೃತ್ಯು ಎನ್ನುತ್ತಾರೆ.  ಪ್ರಾಣಿಯು ನೀರನ್ನು ಕುಡಿಯದೇ ಇದ್ದರೆ ಶರೀರದಲ್ಲಿನ ಜಲತತ್ತ್ವವು ನಾಶವಾಗುತ್ತದೆ. ಶ್ವಾಸವನ್ನು ನಿಗ್ರಹಿಸುವುದರಿಂದ ಶರೀರದಲ್ಲಿರುವ ವಾಯುತತ್ತ್ವವು ನಾಶವಾಗುತ್ತದೆ. ಹೊಟ್ಟೆಯನ್ನು ಸೀಳುವುದರಿಂದ ಆಕಾಶತತ್ತ್ವವು ನಾಶವಾಗುತ್ತದೆ. ಊಟಮಾಡದೇ ಇರುವುದರಿಂದ ಶರೀರದಲ್ಲಿಯ ಅಗ್ನಿತತ್ತ್ವವು ನಾಶವಾಗುತ್ತದೆ. ವ್ಯಾಧಿ-ವ್ರಣಗಳೇ ಮೊದಲಾದ ಪರಿಕ್ಲೇಶಗಳಿಂದ ಶರೀರದಲ್ಲಿರುವ ಪೃಥ್ವಿತತ್ತ್ವವೂ ನಾಶವಾಗುತ್ತದೆ. ಶರೀರದಲ್ಲಿರುವ ಈ ಐದು ತತ್ತ್ವಗಳಲ್ಲಿ ಯಾವುದೇ ಒಂದಕ್ಕೆ ಹಾನಿಯಾದರೂ ಸಮೂಹವೇ ನಾಶವಾಗುತ್ತದೆ. ಪಂಚಭೂತಗಳ ಸಂಘಾತದಿಂದುಂಟಾಗಿರುವ ಈ ಶರೀರವು ನಾಶವಾದ ಬಳಿಕ ಜೀವವು ಇರುವುದೇ ಆದರೆ ಅದು ಪಂಚಭೂತಗಳಲ್ಲಿ ಯಾವುದರ ಹಿಂದೆ ಹೋಗುತ್ತದೆ? ಪಂಚತತ್ತ್ವಗಳಿಂದ ವಿಹೀನವಾದ ಆ ಜೀವಕ್ಕೆ ಯಾವ ಅನುಭವಾಗುತ್ತದೆ? ಅದು ಏನನ್ನು ಕೇಳುತ್ತದೆ ಮತ್ತು ಏನನ್ನು ಹೇಳುತ್ತದೆ?

ಮೃತ್ಯುಸಮಯದಲ್ಲಿ ಜನರು ಗೋವು ಪರಲೋಕಕ್ಕೆ ಹೋಗುವಾಗ ನನ್ನನ್ನು ಪಾರುಮಾಡುತ್ತದೆ ಎಂಬ ಆಶಯದಿಂದ ಗೋದಾನವನ್ನು ಮಾಡುತ್ತಾರೆ. ಆದರೆ ಜೀವವಾದರೋ ಗೋದಾನವನ್ನು ಮಾಡಿ ಸತ್ತುಹೋದ ನಂತರ ಆ ಗೋವು ಯಾರನ್ನು ಪಾರುಮಾಡುತ್ತದೆ[4]? ಗೋವು, ಗೋದಾನವನ್ನು ಮಾಡಿದವನು ಮತ್ತು ಗೋವನ್ನು ಪಡೆದುಕೊಂಡವನು – ಈ ಮೂವರೂ ಇಲ್ಲಿಯೇ ತೀರಿಹೋದನಂತರ ಪರಲೋಕದಲ್ಲಿ ಅವರ ಸಮಾಗಮವು ಹೇಗಾಗುತ್ತದೆ? ಇವರಲ್ಲಿ ಯಾರು ಸಾಯುತ್ತಾರೋ ಅವರನ್ನು ಪಕ್ಷಿಗಳು ತಿಂದುಬಿಡುತ್ತವೆ ಅಥವಾ ಅವು ಪರ್ವತದ ಶಿಖರದಿಂದ ಕೆಳಗೆ ಬಿದ್ದು ಚೂರು ಚೂರಾಗುತ್ತವೆ ಅಥವಾ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿಬಿಡುತ್ತಾರೆ. ಹೀಗಿರುವಾಗ ಪುನಃ ಅವರು ಜೀವಿತರಾಗುವುದು ಹೇಗೆ ಸಾಧ್ಯ? ವೃಕ್ಷವನ್ನು ಬುಡಸಹಿತ ಕಿತ್ತಮೇಲೆ ಅದು ಪುನಃ ಚಿಗುರುವುದಿಲ್ಲ. ಆ ವೃಕ್ಷದ ಬೀಜಗಳು ಮಾತ್ರ ಅಂಕುರಿಸುತ್ತವೆ. ಅಂತೆಯೇ ಸತ್ತುಹೋದವನು ಪುನಃ ಎಲ್ಲಿಂದ ಬರುತ್ತಾನೆ? ಪೂರ್ವಕಾಲದಲ್ಲಿ ಬೀಜಮಾತ್ರದ ಸೃಷ್ಟಿಯಾಯಿತು. ಅದರಿಂದಲೇ ಈ ಜಗತ್ತು ನಡೆದುಕೊಂಡು ಬಂದಿದೆ. ಸತ್ತವರು ನಷ್ಟವಾಗಿ ಹೋಗುತ್ತಾರೆ ಮತ್ತು ಬೀಜದಿಂದ ಬೀಜವು ಉತ್ಪನ್ನವಾಗುತ್ತಿರುತ್ತದೆ.”

ಭೃಗುವು ಹೇಳಿದನು:

“ದೇಹ ನಾಶವಾದರೂ ಜೀವವು ನಾಶಹೊಂದುವುದಿಲ್ಲ. ಕೊಟ್ಟ ದಾನವಾಗಲೀ ಮಾಡಿದ ಕರ್ಮಫಲವಾಗಲೀ ಎಂದಿಗೂ ನಾಶವಾಗುವುದಿಲ್ಲ. ಶರೀರ ಮಾತ್ರ ನಷ್ಟವಾಗುತ್ತದೆ ಮತ್ತು ಪ್ರಾಣಿಯು ದೇಹಾಂತರವನ್ನು ಹೊಂದುತ್ತದೆ. ಸಮಿತ್ತು ಸುಟ್ಟುಹೋದರೂ ಹೇಗೆ ಅಗ್ನಿಯು ನಾಶವಾಗುವುದಿಲ್ಲವೋ ಹಾಗೆ ಶರೀರವು ನಾಶವಾದರೆ ಶರೀರಾಶ್ರಿತ ಜೀವವು ನಷ್ಟವಾಗುವುದಿಲ್ಲ.”

ಭರದ್ವಾಜನು ಹೇಳಿದನು:

“ಒಂದು ವೇಳೆ ಅಗ್ನಿಯಂತೆ ಜೀವದ ನಾಶವೂ ಆಗುವುದಿಲ್ಲವೆಂದಾದರೆ ಇಂಧನವು ಸುಟ್ಟುಹೋದ ನಂತರ ಅಗ್ನಿಯು ಆರಿಹೋಗುತ್ತದೆ ಮತ್ತು ಅದರಲ್ಲಿ ಆಗ ಅಗ್ನಿಯು ಉಪಲಬ್ಧವಾಗುವುದಿಲ್ಲ. ಆದುದರಿಂದ ಇಂಧನರಹಿತ ಆರಿಹೋಗಿರುವ ಅಗ್ನಿಯನ್ನು ನಷ್ಟವಾದುದೆಂದೇ ತಿಳಿಯುತ್ತೇನೆ. ಏಕೆಂದರೆ ಯಾವುದರ ಗತಿ, ಪ್ರಮಾಣ ಅಥವಾ ಸ್ಥಿತಿಯಿಲ್ಲವೋ ಅದನ್ನು ನಾಶವಾದುದೆಂದೇ ತಿಳಿಯಬೇಕಾಗುತ್ತದೆ. ಜೀವದ್ದೂ ಇದೇ ಪರಿಸ್ಥಿತಿಯಾಗಿದೆ.”

ಭೃಗುವು ಹೇಳಿದನು:

“ಸಮಿತ್ತುಗಳನ್ನು ಉಪಯೋಗಿಸಿದ ನಂತರ ಅಗ್ನಿಯು ಕಾಣುವುದಿಲ್ಲ ಅಷ್ಟೇ. ಅದು ಆಕಾಶದಲ್ಲಿ ಅವ್ಯಕ್ತರೂಪದಲ್ಲಿ ಸ್ಥಿತವಾಗಿಬಿಡುತ್ತದೆ. ಆದುದರಿಂದ ಅದು ಉಪಲಬ್ಧವಾಗುವುದಿಲ್ಲ. ಏಕೆಂದರೆ ಆಶ್ರಯರಹಿತ ಅಗ್ನಿಯನ್ನು ಗ್ರಹಿಸುವುದು ಅತ್ಯಂತ ಕಠಿಣ. ಹಾಗೆಯೇ ಶರೀರಸಂತ್ಯಾಗದಲ್ಲಿ ಜೀವವು ಆಕಾಶವನ್ನು ಸೇರಿರುತ್ತದೆ. ಅದು ಅತ್ಯಂತ ಸೂಕ್ಷ್ಮವಾಗಿರುವುದರ ಕಾರಣ ಆರಿಹೋದ ಅಗ್ನಿಯಂತೆ ಅನುಭವಕ್ಕೆ ಸಿಗುವುದಿಲ್ಲ. ಆದರೆ ಅವಶ್ಯವಾಗಿಯೂ ಅದು ಇರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಅಗ್ನಿಯು ಪ್ರಾಣಗಳನ್ನು ಧರಿಸುತ್ತದೆ. ಅದನ್ನೇ ಜೀವವೆಂದು ತಿಳಿ. ಆ ಅಗ್ನಿಯನ್ನು ವಾಯುವು ದೇಹದೊಳಗೆ ಧರಿಸಿರುತ್ತದೆ. ಶ್ವಾಸವು ನಿಂತಾಗ ವಾಯುವಿನೊಂದಿಗೆ ಅಗ್ನಿಯೂ ನಷ್ಟವಾಗುತ್ತದೆ. ಶರೀರದಲ್ಲಿರುವ ಅಗ್ನಿಯು ನಷ್ಟವಾದಾಗ ಅಚೇತನ ಶರೀರವು ಭೂಮಿಯ ಮೇಲೆ ಬಿದ್ದು ಭೂಮಿತ್ವವನ್ನು ಹೊಂದುತ್ತದೆ. ಅಚೇತನ ವಸ್ತುವಿಗೆ ಭೂಮಿಯೇ ಆಶ್ರಯಸ್ಥಾನವು. ಸರ್ವ ಸ್ಥಾವರ-ಜಂಗಮಗಳ ಪ್ರಾಣವಾಯುವೂ ಆಕಾಶವನ್ನು ಸೇರುತ್ತದೆ. ಅಗ್ನಿಯೂ ವಾಯುವನ್ನು ಅನುಸರಿಸಿ ಹೋಗುತ್ತದೆ. ಹೀಗೆ ಆಕಾಶ, ವಾಯು ಮತ್ತು ಅಗ್ನಿಗಳು ಒಂದೆಡೆ ಸೇರಿದ ನಂತರ ಜಲತತ್ತ್ವ ಮತ್ತು ಭೂಮಿತತ್ತ್ವಗಳು ಶವರೂಪದಲ್ಲಿ ಭೂಮಿಯ ಮೇಲಿರುತ್ತವೆ. ಎಲ್ಲಿ ಆಕಾಶವಿರುವುದೋ ಅಲ್ಲಿ ವಾಯುವಿರುತ್ತದೆ ಮತ್ತು ಎಲ್ಲಿ ವಾಯುವಿದೆಯೋ ಅಲ್ಲಿ ಅಗ್ನಿಯೂ ಇರುತ್ತದೆ. ಈ ಮೂರೂ ತತ್ತ್ವಗಳು ನಿರಾಕಾರವೆಂದು ತಿಳಿಯಬೇಕು. ಜಲ ಮತ್ತು ಪೃಥ್ವಿ ತತ್ತ್ವಗಳಿಗೆ ಆಕಾರಗಳಿವೆ.”

ಭರದ್ವಾಜನು ಹೇಳಿದನು:

“ಅನಘ! ಒಂದು ವೇಳೆ ದೇಹಧಾರಿಗಳ ಶರೀರದಲ್ಲಿ ಕೇವಲ ಅಗ್ನಿ, ವಾಯು, ಭೂಮಿ, ಆಕಾಶ ಮತ್ತು ಜಲತತ್ತ್ವಗಳೇ ಇರುವುದಾದರೆ ಆ ಶರೀರಗಳಲ್ಲಿರುವ ಜೀವದ ಲಕ್ಷಣಗಳೇನು? ಅದನ್ನು ನನಗೆ ಹೇಳು. ಪಂಚಭೂತಗಳಿಂದಾದ, ಪಂಚವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ, ಪಂಚ ಜ್ಞಾನೇಂದ್ರಿಯಗಳನ್ನು ಹೊಂದಿರುವ ಪ್ರಾಣಿಗಳ ಶರೀರದಲ್ಲಿ ವಾಸಿಸುವ ಜೀವವು ಎಂಥಹುದು ಎನ್ನುವುದನ್ನು ತಿಳಿಯ ಬಯಸುತ್ತೇನೆ. ರಕ್ತ-ಮಾಂಸಗಳ ಸಮೂಹದಿಂದ ಕೂಡಿರುವ, ಮೇಧಸ್ಸು-ಕರುಳು ಮತ್ತು ಮೂಳೆಗಳ ಸಂಚಯದಿಂದ ರೂಪಗೊಂಡಿರುವ ಈ ಶರೀರವನ್ನು ಕತ್ತರಿಸಿದರೆ ಜೀವವು ಸಿಗುವುದಿಲ್ಲ. ಪಂಚಭೂತಾತ್ಮಿಕ ಶರೀರದಲ್ಲಿ ಜೀವ ಎಂಬ ಪ್ರತ್ಯೇಕ ವಸ್ತು ಇಲ್ಲ ಎಂದು ತಿಳಿದರೆ ಶಾರೀರಿಕ ಮತ್ತು ಮಾನಸಿಕ ದುಃಖವನ್ನು ಅನುಭವಿಸುವವರು ಯಾರು? ಮಹರ್ಷೇ! ಜೀವನು ಬೇರೆಯವರು ಹೇಳುವ ಮಾತುಗಳನ್ನು ಕಿವಿಗಳಿಂದ ಕೇಳುತ್ತಲೇ ಇರುತ್ತಾನೆ. ಆದರೆ ಮನಸ್ಸು ವ್ಯಗ್ರವಾಯಿತೆಂದರೆ ಮುಂದಿನ ಮಾತುಗಳು ಕಿವಿಗೆ ಕೇಳಿಸುವುದೇ ಇಲ್ಲ. ಆದುದರಿಂದ ಮನಸ್ಸಿಗಿಂತಲೂ ಅತಿರಿಕ್ತವಾದ ಜೀವದ ಅಸ್ತಿತ್ವವು ನಿರರ್ಥಕವೆಂದು ಭಾವಿಸುತ್ತೇನೆ. ಮನಸ್ಸಿನಿಂದ ಯುಕ್ತವಾದ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಾನೆ. ಮನಸ್ಸು ವ್ಯಗ್ರವಾಯಿತೆಂದರೆ ಮುಂದೆ ಕಾಣುವ ದೃಶ್ಯವನ್ನು ಕಣ್ಣುಗಳು ನೋಡುತ್ತಿದ್ದರೂ ಮನಸ್ಸು ಗ್ರಹಿಸುವುದೇ ಇಲ್ಲ. ಪುನಃ ನಿದ್ರಾವಶನಾದವನು ನೋಡುವುದಿಲ್ಲ, ಮಾತನಾಡುವುದಿಲ್ಲ, ಕೇಳುವುದಿಲ್ಲ, ಮೂಸುವುದಿಲ್ಲ. ಅವನು ಸ್ಪರ್ಶ-ರಸಗಳನ್ನೂ ತಿಳಿಯುವುದಿಲ್ಲ. ಆದುದರಿಂದ ಈ ಜಿಜ್ಞಾಸೆಯುಂತಾಗುತ್ತದೆ – ಈ ಶರೀರದಲ್ಲಿರುವ ಯಾರು ಹರ್ಷಪಡುತ್ತಾರೆ ಮತ್ತು ಯಾರು ಕ್ರೋಧಕ್ಕೊಳಗಾಗುತ್ತಾರೆ? ಯಾರಿಗೆ ಶೋಕ ಮತ್ತು ಉದ್ವೇಗಗಳುಂಟಾಗುತ್ತವೆ? ಇಚ್ಛೆ, ಧ್ಯಾನ, ದ್ವೇಷ ಮತ್ತು ಮಾತುಕತೆಗಳನ್ನು ಯಾರು ಮಾಡುತ್ತಾರೆ?”

ಭೃಗುವು ಹೇಳಿದನು:

“ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳ ಸಂಬಂಧವು ಮನಸ್ಸಿಗೂ ಇರುವುದರಿಂದ ಮನಸ್ಸೂ ಪಂಚಭೂತಾತ್ಮಕವೇ ಆಗಿದೆ. ಮನಸ್ಸು ಈ ತತ್ತ್ವಗಳಿಗಿಂತಲೂ ಭಿನ್ನವಾದ ತತ್ತ್ವವಲ್ಲ. ಆದರೆ ಮನಸ್ಸು ಶರೀರನಿರ್ವಾಹಕವಲ್ಲ. ಅಂತರಾತ್ಮನೊಬ್ಬನೇ ಈ ಶರೀರವನ್ನು ಧರಿಸಿದ್ದಾನೆ. ಅವನೇ ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳನ್ನೂ ಇತರ ಗುಣಗಳನ್ನೂ ಅನುಭವಿಸುತ್ತಾನೆ. ಪಂಚೇಂದ್ರಿಯಗಳ ಗುಣಗಳನ್ನು ಧರಿಸುವ ಮನಸ್ಸನ್ನು ನೋಡುವವನು ಆ ಅಂತರಾತ್ಮನೇ ಮತ್ತು ಅವನೇ ಈ ಪಂಚಭೂತಾತ್ಮಕ ಶರೀರದ ಸಂಪೂರ್ಣ ಅವಯವಗಳಲ್ಲಿ ವ್ಯಾಪ್ತನಾಗಿ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಯಾವಾಗ ಶರೀರದೊಡನೆ ಅವನ ಸಂಬಂಧವು ಮುರಿದುಹೋಗುತ್ತದೆಯೋ ಆಗ ಆ ಶರೀರಕ್ಕೆ ಸುಖ-ದುಃಖಗಳ ಅನುಭವವಾಗುವುದಿಲ್ಲ[5]. ಯಾವಾಗ ಪಂಚಭೂತಾತ್ಮಿಕ ಶರೀರದಲ್ಲಿ ರೂಪ, ಸ್ಪರ್ಶ ಮತ್ತು ಉಷ್ಣದ ಭಾವಗಳಿಲ್ಲದಿರುವುದೋ ಆಗ ಶರೀರಸ್ಥ ಅಗ್ನಿಯು ಆರಿಹೋಗಿರುತ್ತದೆ. ಆಗ ಜೀವಾತ್ಮನು ಶರೀರವನ್ನು ತ್ಯಜಿಸಿದರೂ ನಾಶಹೊಂದುವುದಿಲ್ಲ.

ಸರ್ವವೂ ಜಲಮಯವು. ಪ್ರಾಣಿಗಳ ಶರೀರಗಳೂ ಜಲಮಯವು. ಈ ಜಲಮಯ ಶರೀರದಲ್ಲಿ ಇರುವ ಆತ್ಮನು ಮನಸ್ಸಿನಲ್ಲಿ ಅಭಿವ್ಯಕ್ತನಾಗುತ್ತಾನೆ. ಅವನೇ ಸರ್ವಭೂತಗಳ ಮತ್ತು ಸರ್ವಲೋಕಗಳ ಕರ್ತಾ ಬ್ರಹ್ಮ[6]. ಆತ್ಮನು ಸರ್ವಲೋಕಹಿತಾತ್ಮಕನೆಂದು ತಿಳಿ. ಅವನು ಪ್ರಾಣಿಗಳ ಶರೀರದಲ್ಲಿ  - ಕಮಲಪತ್ರದ ಮೇಲಿರುವ ನೀರಿನ ಬಿಂದುವು ಕಮಲಪತ್ರಕ್ಕೆ ಅಂಟಿಯೂ ಅಂಟಿಕೊಂಡಿರದಂತೆ  - ಇರುತ್ತಾನೆ. ಆ ಕ್ಷೇತ್ರಜ್ಞನು ನಿತ್ಯವೂ ಲೋಕಹಿತಾತ್ಮಕನೆನ್ನುವುದೆಂದು ತಿಳಿ. ತಮೋ, ರಜ ಮತ್ತು ಸತ್ತ್ವಗಳು ಜೀವದ ಗುಣಗಳೆಂದು ತಿಳಿ. ಜೀವಗುಣವು ಚೇತನಾಯುಕ್ತವಾದುದು ಎಂದು ಹೇಳುತ್ತಾರೆ. ಅದು ಸ್ವಯಂ ಚಲಿಸುತ್ತದೆ ಮತ್ತು ಶರೀರದ ಎಲ್ಲಕಡೆ ಚಲನೆಯನ್ನುಂಟುಮಾಡುತ್ತದೆ. ಶರೀರತತ್ತ್ವವನ್ನು ತಿಳಿದವರು ಕ್ಷೇತ್ರಜ್ಞನಾದ ಜೀವಕ್ಕಿಂತ ಏಳು ಭುವನಗಳನ್ನು ಸೃಷ್ಟಿಸಿದ ಪರಮಾತ್ಮನೇ ಶ್ರೇಷ್ಠ ಎಂದು ಹೇಳುತ್ತಾರೆ. ದೇಹವು ನಾಶವಾದರೂ ಜೀವವು ನಾಶವಾಗುವುದಿಲ್ಲ. ಅಜ್ಞಾನಿಗಳು ಮಾತ್ರ ಜೀವವು ಮೃತನಾದನೆಂದು ಹೇಳುತ್ತಾರೆ. ಜೀವವಾದರೋ ಮೃತದೇಹವನ್ನು ತ್ಯಜಿಸಿ ಬೇರೊಂದು ದೇಹವನ್ನು ಸೇರುತ್ತದೆ. ಶರೀರದಲ್ಲಿರುವ ಪಂಚಭೂತಗಳು ಪ್ರತ್ಯೇಕಗೊಳ್ಳುವುದೇ ಶರೀರದ ನಾಶ. ಹೀಗೆ ಸರ್ವಭೂತಗಳಲ್ಲಿಯೂ ಆತ್ಮನು ನಿಗೂಢನಾಗಿ ಅಜ್ಞಾನದಿಂದ ಆವೃತನಾಗಿರುತ್ತಾನೆ. ತತ್ತ್ವದರ್ಶಿಗಳ ತೀಕ್ಷ್ಣ ಮತ್ತು ಸೂಕ್ಷ್ಮ ಬುದ್ಧಿಗಳಿಂದ ಮಾತ್ರ ಅವನನ್ನು ನೋಡಬಹುದು.

ಲಘುವಾದ ಆಹಾರವನ್ನು ಸೇವಿಸುತ್ತಾ ರಾತ್ರಿಯ ಮೊದಲ ಮತ್ತು ಚರಮ ಪ್ರಹರಗಳಲ್ಲಿ ಧ್ಯಾನಯೋಗವನ್ನು ಅಭ್ಯಾಸಮಾಡುತ್ತಾ ಅಂತಃಕರಣವನ್ನು ಶುದ್ಧಿಮಾಡಿಕೊಂಡ ವಿದ್ವಾಂಸನು ಆ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಳ್ಳಬಹುದು. ಚಿತ್ತಶುದ್ಧಿಯಾದ ನಂತರ ಅವನು ಶುಭಾಶುಭ ಕರ್ಮಗಳಿಂದ ತನ್ನ ಸಂಬಂಧವನ್ನು ಕತ್ತರಿಸಿಕೊಂಡು ಪ್ರಸನ್ನಚಿತ್ತನಾಗಿ ಆತ್ಮಸ್ವರೂಪದಲ್ಲಿ ಸ್ಥಿತನಾಗುತ್ತಾನೆ ಮತ್ತು ಅನಂತ ಆನಂದವನ್ನು ಅನುಭವಿಸುತ್ತಾನೆ. ಸಮಸ್ತ ಶರೀರಗಳೊಳಗಿರುವ ಅಗ್ನಿಪ್ರಕಾಶಸ್ವರೂಪ ಚೈತನ್ಯವೇನಿದೆಯೋ ಅದನ್ನೇ ಸಮಷ್ಟಿ ಜೀವಸ್ವರೂಪ ಪ್ರಜಾಪತಿ ಎಂದು ಕರೆಯುತ್ತಾರೆ. ಅದೇ ಪ್ರಜಾಪತಿಯಿಂದ  ಈ ಸೃಷ್ಟಿಯುಂಟಾಯಿತು. ಆಧ್ಯಾತ್ಮತತ್ತ್ವವನ್ನು ನಿಶ್ಚಯಿಸಿಯೇ ಇದನ್ನು ಹೇಳಿದ್ದಾರೆ.

ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮನು ತನ್ನ ತೇಜಸ್ಸಿನಿಂದ ಸೂರ್ಯಾಗ್ನಿಸಮಾನ ಪ್ರಭೆಯ ಬ್ರಾಹ್ಮಣ ಪ್ರಜಾಪತಿಗಳನ್ನು ಸೃಷ್ಟಿಸಿದನು. ಅನಂತರ ಪ್ರಭುವು ಸ್ವರ್ಗಪ್ರಾಪ್ತಿಯ ಸಾಧಕಗಳಾದ ಸತ್ಯ, ಧರ್ಮ, ತಪಸ್ಸು, ಸನಾತನ ವೇದ, ಆಚಾರ ಮತ್ತು ಶೌಚಗಳ ನಿಯಮಗಳನ್ನು ಸೃಷ್ಟಿಸಿದನು. ಅನಂತರ ದೇವತೆಗಳು, ದಾನವರು, ಗಂಧರ್ವರು, ದೈತ್ಯರು, ಅಸುರರು, ಮಹೋರಗರು, ಯಕ್ಷರು, ರಾಕ್ಷಸರು, ನಾಗರು, ಪಿಶಾಚಿಗಳು ಮತ್ತು ಮನುಷ್ಯರನ್ನು ಸೃಷ್ಟಿಸಿದನು. ದ್ವಿಜಸತ್ತಮ! ಅನಂತರ ಅವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರನ್ನೂ ಮತ್ತು ಅನ್ಯ ಪಂಗಡದ ಪ್ರಾಣಿಸಮೂಹಗಳನ್ನೂ ನಿರ್ಮಿಸಿದನು. ಬ್ರಾಹ್ಮಣರ ವರ್ಣವು ಶ್ವೇತ, ಕ್ಷತ್ರಿಯರ ವರ್ಣವು ಕೆಂಪು, ವೈಶ್ಯರ ವರ್ಣವು ಹಳದಿ ಮತ್ತು ಶೂದ್ರರ ವರ್ಣವು ಕಪ್ಪು ಎಂದಾಯಿತು.”

ಭರದ್ವಾಜನು ಹೇಳಿದನು:

“ನಾಲ್ಕು ವರ್ಣಗಳಲ್ಲಿ ಒಂದೊಂದಕ್ಕೂ ವರ್ಣಭೇದವಿದೆಯೆಂದಾದರೆ ಎಲ್ಲ ವರ್ಣಗಳಲ್ಲಿಯೂ ವಿಭಿನ್ನ ಬಣ್ಣದ ಮನುಷ್ಯರಿರುವುದರಿಂದ ವರ್ಣಸಂಕರವೇ ಕಾಣುತ್ತದೆ. ಕಾಮ, ಕ್ರೋಧ, ಭಯ, ಲೋಭ, ಶೋಕ, ಚಿಂತೆ, ಹಸಿವು ಮತ್ತು ಬಳಲಿಕೆ ಎಲ್ಲವೂ ನಮ್ಮೆಲ್ಲರಿಗೂ ಸಮಾನವಾಗಿರುವಾಗ ವರ್ಣಭೇದಕ್ಕೆ ಕಾರಣವೇನು? ಎಲ್ಲರ ಶರೀರಗಳಿಂದಲೂ ಬೆವರು, ಮಲ-ಮೂತ್ರಗಳು, ಕಫ, ಪಿತ್ತ, ಮತ್ತು ರಕ್ತಗಳು ಹರಿಯುತ್ತವೆ. ಹೀಗಿರುವಾಗ ವರ್ಣಗಳನ್ನಾಗಿ ವಿಭಾಗಿಸಿರುವುದರ ಕಾರಣವೇನು? ಪಶು-ಪಕ್ಷಿ-ಮನುಷ್ಯಾದಿ ಜಂಗಮಪ್ರಾಣಿಗಳಲ್ಲಿಯೂ ವೃಕ್ಷವೇ ಮೊದಲಾದ ಸ್ಥಾವರ ಪ್ರಾಣಿಗಳಲ್ಲಿಯೂ ಅಸಂಖ್ಯಾತ ಜಾತಿಗಳಿವೆ. ಎಲ್ಲವೂ ನಾನಾ ಬಣ್ಣಗಳಿಂದ ಕೂಡಿವೆ. ಅವುಗಳಲ್ಲಿ ಬ್ರಾಹ್ಮಣಾದಿ ವರ್ಣಗಳನ್ನು ನಿಶ್ಚಯಿಸುವುದು ಹೇಗೆ?”

ಭೃಗುವು ಹೇಳಿದನು:

“ಮೊದಲು ವರ್ಣಗಳಲ್ಲಿ ಯಾವ ಅಂತರವೂ ಇರಲಿಲ್ಲ. ಬ್ರಹ್ಮನಿಂದ ಹುಟ್ಟಿದ ಕಾರಣ ಈ ಎಲ್ಲ ಜಗತ್ತೂ ಬ್ರಾಹ್ಮಣವೇ ಆಗಿತ್ತು. ನಂತರ ವಿಭಿನ್ನ ಕರ್ಮಗಳ ಕಾರಣದಿಂದ ಅವುಗಳಲ್ಲಿ ವರ್ಣಭೇದವುಂಟಾಯಿತು. ಸ್ವಧರ್ಮವನ್ನು ತ್ಯಜಿಸಿ ಕಾಮಭೋಗಗಳ ಪ್ರೇಮೀ, ತೀಕ್ಷ್ಣಸ್ವಭಾವದ, ಕ್ರೋಧೀ ಮತ್ತು ಸಾಹಸಕರ್ಮಗಳನ್ನು ಇಷ್ಟಪಡುವವರ ಶರೀರಗಳು ಈ ಕಾರಣಗಳಿಂದ ಕೆಂಪುಬಣ್ಣವನ್ನು ತಾಳಿತು ಮತ್ತು ಅಂಥಹ ಬ್ರಾಹ್ಮಣರು ಕ್ಷತ್ರಿಯಭಾವವನ್ನು ಪಡೆದುಕೊಂಡರು. ಸ್ವಧರ್ಮಗಳನ್ನು ಅನುಷ್ಠಾನಮಾಡದೇ ಗೋಪಾಲನೆ ಮತ್ತು ಕೃಷಿಗಳಿಂದ ಉಪಜೀವನವನ್ನು ನಡೆಸುವವರ ಶರೀರವು ಹಳದೀ ಬಣ್ಣವನ್ನು ತಳೆಯಿತು ಮತ್ತು ಅಂತಹ ಬ್ರಾಹ್ಮಣರು ವೈಶ್ಯತ್ವವನ್ನು ಪಡೆದುಕೊಂಡರು. ಯಾವ ಬ್ರಾಹ್ಮಣರು ಶೌಚ ಮತ್ತು ಸದಾಚಾರಭ್ರಷ್ಟರಾಗಿ ಹಿಂಸೆ ಮತ್ತು ಸುಳ್ಳಿನಲ್ಲಿ ಆಸಕ್ತರಾಗಿ ಲೋಭವಶರಾಗಿ ಎಲ್ಲಕರ್ಮಗಳಿಂದಲೂ ಜೀವನವನ್ನು ನಡೆಸಿದರೋ ಅವರ ಶರೀರವು ಕಪ್ಪು ಬಣ್ಣವನ್ನು ತಾಳಿತು ಮತ್ತು ಅವರು ಶೂದ್ರತ್ವವನ್ನು ಪಡೆದುಕೊಂಡರು. ಇಂತಹ ಕರ್ಮಗಳಿಂದಲೇ ಬ್ರಾಹ್ಮಣರು ವರ್ಣಾಂತರವನ್ನು ಹೊಂದಿದರು. ಆದರೆ ಅವರಿಗೆ ನಿತ್ಯಧರ್ಮಾನುಷ್ಠಾನ ಮತ್ತು ಯಜ್ಞಕ್ರಿಯೆಗಳನ್ನು ನಿಷೇಧಿಸಿಲ್ಲ.

ಹೀಗೆ ನಾಲ್ಕು ವರ್ಣಗಳುಂಟಾದಾಗ ಅವರಿಗಾಗಿ ಬ್ರಹ್ಮನು ಮೊದಲು ಬ್ರಾಹ್ಮೀ ಸರಸ್ವತಿ ವೇದವಾಣಿಯನ್ನು ಪ್ರಕಟಿಸಿದನು. ಆದರೆ ಲೋಭವಿಶೇಷದ ಕಾರಣ ಅಜ್ಞಾನಭಾವವನ್ನು ಹೊಂದಿದವರು ವೇದಾಧ್ಯಯನದ ಅನಧಿಕಾರಿಗಳಾಗಿಬಿಟ್ಟರು. ವೇದದ ಆಜ್ಞಾನುಸಾರ ಎಲ್ಲ ಕಾರ್ಯಗಳನ್ನೂ ಮಾಡುವ, ವೇದಮಂತ್ರಗಳನ್ನು ಸ್ಮರಿಸಿಕೊಂಡಿರುವ, ಮತ್ತು ಸದಾ ವ್ರತಾದಿ ನಿಯಮಗಳನ್ನು ಪಾಲಿಸುವ ಬ್ರಾಹ್ಮಣರ ತಪಸ್ಸು ಎಂದೂ ನಷ್ಟವಾಗುವುದಿಲ್ಲ. ಈ ಸಂಪೂರ್ಣ ಸೃಷ್ಟಿಯನ್ನೂ ಪರಬ್ರಹ್ಮ ಪರಮಾತ್ಮನ ರೂಪವೆಂದು ತಿಳಿಯದೇ ಇರುವವರಿಗೆ ಬ್ರಾಹ್ಮಣರೆಂದು ಕರೆಯಲ್ಪಡಲು ಅಧಿಕಾರವಿಲ್ಲ. ಇಂಥವರು ಬಹುವಿಧದ ಅನ್ಯ ಯೋನಿಗಳಲ್ಲಿ ಜನ್ಮತಾಳಬೇಕಾಗುತ್ತದೆ. ಜ್ಞಾನವಿಜ್ಞಾನವಿಹೀನರಾದ ಸ್ವೇಚ್ಛಾಚಾರಿಗಳು ಪಿಶಾಚಿ, ರಾಕ್ಷಸ, ಪ್ರೇತ ಮತ್ತು ನಾನಾವಿಧದ ಮ್ಲೇಚ್ಛಜಾತಿಗಳವರಾಗುತ್ತಾರೆ. ಹಿಂದಿನ ಋಷಿಗಳು ತಮ್ಮ ತಪಸ್ಸಿನ ಬಲದಿಂದ ಬ್ರಾಹ್ಮಣಸಂಸ್ಕಾರ ಸಂಪನ್ನ, ಸ್ವಧರ್ಮದಂತೆ ಮಾಡಬೇಕೆಂಬ ನಿಶ್ಚಯವುಳ್ಳ ಸಂತಾನಗಳನ್ನೇ ಸೃಷ್ಟಿಸಿದರು. ಬೇರೆಯವರು ಇತರರಿಂದ ಸೃಷ್ಟಿಸಲ್ಪಟ್ಟರು. ಬ್ರಹ್ಮಮೂಲವೂ, ಅಕ್ಷರವೂ, ಅವಿಕಾರಿಯೂ ಮತ್ತು ಧರ್ಮತಂತ್ರವನ್ನೇ ಆಶ್ರಯಿಸಿರುವ ಈ ಸೃಷ್ಟಿಯು ಆದಿದೇವ ಬ್ರಹ್ಮನ ಮನಸ್ಸಿನಿಂದ ಉತ್ಪನ್ನವಾಗಿರುವುದರಿಂದ ಇದನ್ನು ಮಾನಸೀ ಸೃಷ್ಟಿ ಎಂದು ಹೇಳುತ್ತಾರೆ.”

ಭರದ್ವಾಜನು ಹೇಳಿದನು:

“ದ್ವಿಜೋತ್ತಮ! ವಿಪ್ರರ್ಷೇ! ಮಾತನಾಡುವವರಲ್ಲಿ ಶ್ರೇಷ್ಠ! ಮನುಷ್ಯನು ಯಾವ ಕರ್ಮಗಳನ್ನು ಮಾಡುವುದರಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನಾಗುತ್ತಾನೆ ಎನ್ನುವುದನ್ನು ಹೇಳು.”

ಭೃಗುವು ಹೇಳಿದನು:

“ಜಾತಕರ್ಮಾದಿ ಸಂಸ್ಕಾರಗಳಿಂದ ಸಂಸ್ಕೃತನಾಗಿ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನಾಗಿ ಆರು ಕರ್ಮಗಳಲ್ಲಿ[7] ವ್ಯವಸ್ಥಿತನಾಗಿರುವ, ಶೌಚ ಮತ್ತು ಸದಾಚಾರಗಳಲ್ಲಿ ತೊಡಗಿರುವ, ಉತ್ತಮ ಯಜ್ಞಶಿಷ್ಠವನ್ನೇ ಉಣ್ಣುವ, ಗುರುಪ್ರಿಯ, ನಿತ್ಯವ್ರತಿ, ಸತ್ಯಪರನನ್ನೇ ಬ್ರಾಹ್ಮಣನೆನ್ನುತ್ತಾರೆ. ಸತ್ಯ, ದಾನ, ದಮ, ಅದ್ರೋಹ, ಆನೃಶಂಸ್ಯತ್ವ, ಕ್ಷಮೆ, ದಯೆ ಮತ್ತು ತಪಗಳು ಯಾರಲ್ಲಿ ಕಾಣುತ್ತವೆಯೋ ಅವನೇ ಬ್ರಾಹ್ಮಣನೆಂದು ಹೇಳಿದ್ದಾರೆ. ಕ್ಷತ್ರಿಯೋಚಿತ ಯುದ್ಧಾದಿ ಕರ್ಮಗಳಲ್ಲಿ ತೊಡಗಿರುವ, ವೇದಾಧ್ಯಯನ ಮಾಡುವ, ದಾನನೀಡುವ ಮತ್ತು ಪ್ರಜೆಗಳಿಂದ ಕರವನ್ನು ತೆಗೆದುಕೊಂಡು ಅವರ ರಕ್ಷಣೆಯನ್ನು ಮಾಡುವವನು ಕ್ಷತ್ರಿಯ ಎಂದು ಹೇಳುತ್ತಾರೆ. ಕೃಷಿ, ಗೋಪಾಲನೆ, ವಾಣಿಜ್ಯವನ್ನು ಮಾಡಿಕೊಂಡಿರುವ, ಸರ್ವದಾ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನನ್ನು ವೈಶ್ಯನೆಂದು ಕರೆಯುತ್ತಾರೆ. ವೇದಗಳನ್ನು ಮತ್ತು ಸದಾಚಾರಗಳನ್ನು ತ್ಯಜಿಸಿ ಎಲ್ಲವನ್ನೂ ತಿನ್ನುವ, ಎಲ್ಲ ಕರ್ಮಗಳನ್ನೂ ಮಾಡುವ, ಅಶುಚಿಯೂ ಅನಿತ್ಯನೂ ಆದವನನ್ನು ಶೂದ್ರ ಎಂದು ಕರೆಯುತ್ತಾರೆ.

ಮೇಲೆ ಹೇಳಿದ ಬ್ರಾಹ್ಮಣನ ಲಕ್ಷಣಗಳು ಶೂದ್ರನಲ್ಲಿದ್ದರೆ ಅವನು ಶೂದ್ರನಾಗಿಯೇ ಉಳಿಯುವುದಿಲ್ಲ. ಹಾಗೆಯೇ ಸತ್ಯಾದಿ ಗುಣಗಳು ಬ್ರಾಹ್ಮಣನಲ್ಲಿಲ್ಲದಿದ್ದರೆ ಅವನು ಬ್ರಾಹ್ಮಣನಾಗಿ ಉಳಿಯುವುದಿಲ್ಲ. ಸರ್ವೋಪಾಯಗಳಿಂದ ಲೋಭ ಮತ್ತು ಕ್ರೋಧಗಳನ್ನು ನಿಗ್ರಹಿಸಿಕೊಂಡಿರುವುದು ಮತ್ತು ಆತ್ಮಸಂಯಮವು ಪವಿತ್ರವೆಂದು ತಿಳಿದುಕೊಳ್ಳಬೇಕು. ನಿತ್ಯವೂ ತಪಸ್ಸನ್ನು ಕ್ರೋಧದಿಂದ ರಕ್ಷಿಸಬೇಕು ಮತ್ತು ಸಂಪತ್ತನ್ನು ಮತ್ಸರದಿಂದ ರಕ್ಷಿಸಿಕೊಳ್ಳಬೇಕು. ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ತನ್ನನ್ನು ತಾನು ಪ್ರಮಾದದಿಂದ ರಕ್ಷಿಸಿಕೊಳ್ಳಬೇಕು. ಎಲ್ಲ ಕಾರ್ಯಗಳನ್ನೂ ಕಾಮನೆಗಳ ಬಂಧನರಹಿತವನ್ನಾಗಿಸಿ ತ್ಯಾಗದ ಅಗ್ನಿಯಲ್ಲಿ ಸರ್ವವನ್ನೂ ಹೋಮಮಾಡಿದವನೇ ತ್ಯಾಗಿ ಮತ್ತು ಅವನೇ ಬುದ್ಧಿವಂತನು. ಸರ್ವಭೂತಗಳಿಗೂ ಹಿಂಸೆಮಾಡದೇ ಮೈತ್ರೀಭಾವದಿಂದ ವ್ಯವಹರಿಸಬೇಕು. ವಿಶ್ವಾಸಕ್ಕೆ ಅರ್ಹವಲ್ಲದ ಮಾರ್ಗದಲ್ಲಿ ಹೋಗಬಾರದು. ವಿಶ್ವಾಸಾರ್ಹ ಮಾರ್ಗದಲ್ಲಿ ಮನಸ್ಸನ್ನಿರಿಸಿಕೊಂಡಿರಬೇಕು. ಮಮತೆ ಮತ್ತು ಆಸಕ್ತಿಗಳನ್ನು ಪರಿತ್ಯಜಿಸಿ ಬುದ್ಧಿಯ ಮೂಲಕ ಇಂದ್ರಿಯಗಳನ್ನು ಜಯಿಸಿ, ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಭಯ-ಶೋಕರಹಿತವಾದ ಸ್ಥಾನವನ್ನು ಹೊಂದಬೇಕು. ಗೆಲ್ಲಲು ಅಸಾಧ್ಯವಾದ ಸಂಸಾರವನ್ನು ಜಯಿಸಲಿಚ್ಛಿಸುವ ಮುನಿಯು ನಿತ್ಯವೂ ತಪಸ್ಸಿನಲ್ಲಿಯೇ ನಿರತನಾಗಿ ಇಂದ್ರಿಯಗಳನ್ನು ದಮನಮಾಡಿ ಮನಸ್ಸನ್ನು ಸಂಯಮಗೊಳಿಸಬೇಕು. ಆಸಕ್ತಿಗೆ ಆಶ್ರಯಭೂತಗಳಾದವುಗಳಲ್ಲಿ ಅನಾಸಕ್ತನಾಗಿರಬೇಕು. ಇಂದ್ರಿಯಗಳಿಂದ ಗ್ರಹಿಸಲು ಸಾಧ್ಯವಾದವುಗಳನ್ನು ವ್ಯಕ್ತವೆಂದು ತಿಳಿಯಬೇಕು. ಯಾವುದು ಇಂದ್ರಿಯಗಳಿಗೆ ಅತೀತವಾದುದೋ ಮತ್ತು ಯಾವುದನ್ನು ಅನುಮಾನದಿಂದ ಮಾತ್ರ ತಿಳಿಯಬಹುದೋ ಅದನ್ನು ಅವ್ಯಕ್ತವೆಂದು ತಿಳಿಯಬೇಕು. ಮನಸ್ಸನ್ನು ಪ್ರಾಣದಲ್ಲಿ ಹಿಡಿದಿಟ್ಟಿರಬೇಕು. ಪ್ರಾಣವನ್ನು ಬ್ರಹ್ಮನಲ್ಲಿ ಸ್ಥಾಪಿಸಬೇಕು. ವೈರಾಗ್ಯದಿಂದಲೇ ನಿರ್ವಾಣವು ದೊರೆಯುತ್ತದೆ. ಇದನ್ನು ಪಡೆದವನು ಯಾವುದೇ ಅನಾತ್ಮ ವಿಷಯದ ಕುರಿತು ಯೋಚಿಸುವುದೂ ಇಲ್ಲ. ಯಾವಾಗಲೂ ಶೌಚ ಮತ್ತು ಸದಾಚಾರಗಳಿಂದ ಯುಕ್ತನಾಗಿ ಪ್ರಾಣಿಗಳ ವಿಷಯದಲ್ಲಿ ದಯಾಭಾವದಿಂದಿರುವುದು ಬ್ರಾಹ್ಮಣರ ಲಕ್ಷಣ.”

ಸತ್ಯವೇ ಬ್ರಹ್ಮ. ಸತ್ಯವೇ ತಪಸ್ಸು. ಸತ್ಯವೇ ಪ್ರಜೆಗಳನ್ನು ಸೃಷ್ಟಿಸುತ್ತದೆ. ಸತ್ಯವೇ ಲೋಕವನ್ನು ಧರಿಸಿದೆ ಮತ್ತು ಸತ್ಯದಿಂದಲೇ ಮನುಷ್ಯನು ಸ್ವರ್ಗಕ್ಕೆ ಹೋಗುತ್ತಾನೆ. ಅಸತ್ಯವು ಅಂಧಕಾರ ರೂಪವು. ತಮಸ್ಸು ಮನುಷ್ಯನನ್ನು ಕೆಳಗೆ ಎಳೆದುಕೊಂಡು ಹೋಗುತ್ತದೆ. ಅಜ್ಞಾನವೆಂಬ ಅಂಧಕಾರದಿಂದ ಆವೃತನಾದವನು ಬೆಳಕನ್ನು ಕಾಣುವುದಿಲ್ಲ. ಸ್ವರ್ಗವನ್ನು ಪ್ರಕಾಶವೆಂದೂ ನರಕವನ್ನು ಅಂಧಕಾರವೆಂದೂ ಹೇಳುತ್ತಾರೆ. ಸತ್ಯ ಮತ್ತು ಅಸತ್ಯ ಇವೆರಡನ್ನೂ ಹೊಂದಿರುವ ಮನುಷ್ಯಯೋನಿಯು ಜ್ಞಾನ ಮತ್ತು ಅಜ್ಞಾನ ಇವೆರಡರ ಸಮ್ಮಿಶ್ರಣದಿಂದ ಜಗತ್ತಿನ ಜೀವಗಳಿಗೆ ದೊರೆಯುತ್ತದೆ. ಈ ವಿಧದಲ್ಲಿ ಸತ್ಯ ಮತ್ತು ಅಸತ್ಯಗಳು ಲೋಕದ ವೃತ್ತಿಯೆಂದು ತಿಳಿಯಬೇಕು. ಅವೇ ಧರ್ಮ-ಅಧರ್ಮಗಳು, ಪ್ರಕಾಶ-ಅಂಧಕಾರಗಳು ಮತ್ತು ಸುಖ-ದುಃಖಗಳು. ಎಲ್ಲಿ ಸತ್ಯವಿದೆಯೋ ಅದೇ ಧರ್ಮ. ಎಲ್ಲಿ ಧರ್ಮವಿದೆಯೋ ಅದೇ ಪ್ರಕಾಶ. ಪ್ರಕಾಶವೇ ಸುಖ. ಇದೇ ರೀತಿ ಎಲ್ಲಿ ಅನೃತವಿದೆಯೋ ಅದು ಅಧರ್ಮ. ಯಾವುದು ಅಧರ್ಮವೋ ಅದು ಅಂಧಕಾರ. ಮತ್ತು ಅಂಧಕಾರವೇ ದುಃಖ. ಈ ವಿಷಯದಲ್ಲಿ ಹೀಗೆ ಹೇಳುತ್ತಾರೆ:

“ಶಾರೀರಿಕ ಮತ್ತು ಮಾನಸಿಕ ದುಃಖಗಳಿಂದ ಕೂಡಿರುವ, ಸುಖಕರವಾಗಿ ಕಂಡರೂ ಕೊನೆಯಲ್ಲಿ ದುಃಖವನ್ನೇ ಉಂಟುಮಾಡುವ ಈ ಲೋಕಸೃಷ್ಟಿಯನ್ನು ವೀಕ್ಷಿಸುತ್ತಿರುವ ವಿದ್ವಾಂಸರು ಪ್ರಾಪಂಚಿಕ ವಿಷಯಗಳಲ್ಲಿ ಮೋಹಗೊಳ್ಳುವುದಿಲ್ಲ.”

ಆದುದರಿಂದ ವಿಚಕ್ಷಣರು ದುಃಖವಿಮೋಚನೆಗಾಗಿ ಸದಾ ಪ್ರಯತ್ನಿಸುತ್ತಿರಬೇಕು. ಆದರೆ ಇಹಲೋಕ ಮತ್ತು ಪರಲೋಕಗಳೆರಡರಲ್ಲಿಯೂ ಪ್ರಾಣಿಗಳಿಗೆ ಸಿಗುವ ಸುಖವು ಅನಿತ್ಯವಾದುದು. ರಾಹುಗ್ರಸ್ತನಾದ ಚಂದ್ರನ ಬೆಳದಿಂಗಳು ಹೇಗೆ ಪ್ರಕಾಶಿಸುವುದಿಲ್ಲವೋ ಹಾಗೆ ತಮಸ್ಸಿನಿಂದ ಆವರಿಸಲ್ಪಟ್ಟ ಪ್ರಾಣಿಗಳ ಸುಖವೂ ನಶಿಸಿಹೋಗುತ್ತದೆ.

ಸುಖವು ಎರಡು ಪ್ರಕಾರದವುಗಳೆಂದು ಹೇಳಿದ್ದಾರೆ: ಶಾರೀರಕ ಮತ್ತು ಮಾನಸಿಕ. ಈ ಲೋಕದಲ್ಲಿ ಸರ್ವಾರಂಭ ಪ್ರವೃತ್ತಿಗಳೂ ಸುಖಕ್ಕಾಗಿಯೇ ಎಂದು ಹೇಳುತ್ತಾರೆ. ಈ ಸುಖವಲ್ಲದೇ ಧರ್ಮ-ಅರ್ಥ-ಕಾಮವೆಂಬ ತ್ರಿವರ್ಗಕ್ಕೆ ವಿಶೇಷವಾದ ಬೇರೆ ಯಾವ ಫಲವೂ ಇಲ್ಲ. ಇದೇ ಪ್ರಾಣಿಗಳ ಕಾಮ್ಯ ಗುಣವಿಶೇಷವು. ಧರ್ಮ-ಅರ್ಥಗಳು ಯಾವುದರ ಅಂಗವೋ ಆ ಸುಖಕ್ಕಾಗಿಯೇ ಕರ್ಮಗಳನ್ನು ಪ್ರಾರಂಭಿಸುತ್ತೇವೆ. ಏಕೆಂದರೆ ಸುಖವನ್ನುಂಟುಮಾಡುವುದೇ ಉದ್ಯಮೆಗಳ ಉದ್ದೇಶ. ಆದುದರಿಂದ ಸುಖದ ಉದ್ದೇಶಕ್ಕಾಗಿಯೇ ಕರ್ಮಗಳನ್ನು ಆರಂಭಿಸುತ್ತೇವೆ.”

ಭರದ್ವಾಜನು ಹೇಳಿದನು:

“ಸುಖಕ್ಕೇ ಉಚ್ಛಸ್ಥಾನವಿದೆ ಮತ್ತು ಸುಖಕ್ಕಿಂತಲೂ ಹೆಚ್ಚಿನದಾದ ಫಲವು ತ್ರಿವರ್ಗಗಳಿಗಿಲ್ಲ ಎಂದು ನೀನು ಹೇಳಿದ ಈ ಮಾತು ನನಗೆ ಸರಿಯೆಂದು ತೋರುವುದಿಲ್ಲ. ಏಕೆಂದರೆ ಮಹಾ ತಪಸ್ಸಿನಲ್ಲಿ ನಿರತರಾಗಿರುವ ಋಷಿಗಳಿಗೆ ಈ ವಾಂಛನೀಯ ಗುಣವಿಶೇಷ ಸುಖವು ಪ್ರಾಪ್ತವಾದರೂ ಅವರು ಅದನ್ನು ಬಯಸುವುದಿಲ್ಲ. ಮೂರೂ ಲೋಕಗಳ ಸೃಷ್ಟಿಕರ್ತಾ ಭಗವಾನ್ ಬ್ರಹ್ಮನು ಒಬ್ಬಂಟಿಗನಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ ಮತ್ತು ಕಾಮಸುಖದಲ್ಲಿ ಎಂದೂ ಮನಸ್ಸನ್ನು ತೊಡಗಿಸಿಕೊಳ್ಳುವುದಿಲ್ಲ ಎಂದು ಕೇಳಿದ್ದೇವೆ. ಭಗವತೀ ಉಮೆಯ ಪ್ರಾಣವಲ್ಲಭ ಭಗವಾನ್ ವಿಶ್ವೇಶ್ವರನೂ ಕೂಡ ತನ್ನ ಎದಿರು ಬಂದ ಕಾಮನನ್ನು ಸುಟ್ಟು ಶಾಂತಗೊಳಿಸಿ ಅವನನ್ನು ಅನಂಗನನ್ನಾಗಿಸಿದನು. ಆದುದರಿಂದ ಮಹಾತ್ಮಪುರುಷರು ಇದನ್ನು ಎಂದೂ ಸ್ವೀಕರಿಸುವುದಿಲ್ಲ ಎಂದು ನನ್ನ ಮತ. ಅವರಿಗೆ ಈ ಕಾಮ ಸುಖವು ಎಲ್ಲಕ್ಕಿಂತಲೂ ಹೆಚ್ಚಿನ ಸುಖವಿಶೇಷವಲ್ಲ. ಆದರೆ ನಿನ್ನ ಮಾತಿನಿಂದ ನನಗೆ ಇದೇ ಪ್ರತೀತವಾಗುತ್ತದೆ. ನೀನಾದರೋ ಈ ಸುಖಕ್ಕಿಂತಲೂ ದೊಡ್ಡದಾದ ಬೇರೆ ಯಾವ ಫಲವೂ ಇಲ್ಲವೆಂದು ಹೇಳಿದ್ದೀಯೆ. ಪುಣ್ಯಕರ್ಮದಿಂದ ಸುಖವುಂಟಾಗುತ್ತದೆ ಮತ್ತು ಪಾಪಕರ್ಮದಿಂದ ದುಃಖವುಂಟಾಗುತ್ತದೆ.”

ಭೃಗುವು ಹೇಳಿದನು:

“ಅಸತ್ಯದಿಂದ ಅಜ್ಞಾನದ ಉತ್ಪತ್ತಿಯಾಗಿದೆ. ಆದುದರಿಂದ ತಮೋಗ್ರಸ್ತ ಮನುಷ್ಯನು ಅಧರ್ಮವನ್ನೇ ಅನುಸರಿಸುತ್ತಾನೆ. ಧರ್ಮವನ್ನು ಅನುಸರಿಸುವುದಿಲ್ಲ. ಕ್ರೋಧ, ಲೋಭ, ಹಿಂಸೆ ಮತ್ತು ಅಸತ್ಯ ಮೊದಲಾದವುಗಳಿಂದ ಆಚ್ಛಾದಿತರಾದವರು ಈ ಲೋಕದಲ್ಲಿಯೂ ಸುಖಿಯಾಗಿರುವುದಿಲ್ಲ ಮತ್ತು ಪರಲೋಕದಲ್ಲಿಯೂ ಸುಖಿಯಾಗಿರುವುದಿಲ್ಲ. ಅವರು ನಾನಾ ವಿಧದ ರೋಗ, ವ್ಯಾಧಿ ಮತ್ತು ತಾಪಗಳಿಂದ ಸಂತಪ್ತರಾಗುತ್ತಿರುತ್ತಾರೆ. ವಧೆ-ಬಂಧನ ಮೊದಲಾದ ಕ್ಲೇಶಗಳಿಂದ ಹಾಗೂ ಹಸಿವು-ಬಾಯಾರಿಕೆ-ಆಯಾಸಗಳ ಸಂತಾಪದಿಂದಲೂ ಪೀಡಿತರಾಗುತ್ತಿರುತ್ತಾರೆ. ಇಷ್ಟೇ ಅಲ್ಲದೇ ಅವರಿಗೆ ಭಿರುಗಾಳಿ, ಪ್ರವಾಹ, ಅತಿಯಾದ ಬೇಸಗೆ ಮತ್ತು ಅತಿಯಾದ ಛಳಿಗಳಿಂದ ಉಂಟಾಗುವ ಭಯಂಕರ ಶಾರೀರಿಕ ಕಷ್ಟವನ್ನೂ ಸಹಿಸಬೇಕಾಗುತ್ತದೆ. ಬಂಧು-ಬಾಂಧವರ ಮೃತ್ಯು, ಧನನಾಶ, ಮತ್ತು ಪ್ರೇಮಿಗಳ ವಿಯೋಗಗಳಿಂದ ಆಗುವ ಮಾನಸಿಕ ಶೋಕಗಳನ್ನೂ ಸಹಿಸಬೇಕಾಗುತ್ತದೆ. ವೃದ್ಧಾಪ್ಯ ಮತ್ತು ಮೃತ್ಯುಗಳಿಂದಾಗುವ ಇನ್ನೂ ಅನೇಕ ಕ್ಲೇಶಗಳನ್ನೂ ಅವರಿಗೆ ಅನುಭವಿಸಬೇಕಾಗುತ್ತದೆ. ಈ ರೀತಿಯ ಶಾರೀರಿಕ ಮತ್ತು ಮಾನಸಿಕ ದುಃಖರಹಿತರಾಗಿರುವವರಿಗೇ ಸುಖದ ಅನುಭವವಾಗುತ್ತದೆ.

ಸ್ವರ್ಗಲೋಕದಲ್ಲಿ ಇಂತಹ ದುಃಖರೂಪ ದೋಷಗಳು ಉಂಟಾಗುವುದಿಲ್ಲ. ಅಲ್ಲಿ ಈಗ ಹೇಳುವ ವಿಷಯಗಳು ಆಗುತ್ತವೆ. ಸ್ವರ್ಗದಲ್ಲಿ ಸುಖಕರವಾದ ಗಾಳಿಯು ಬೀಸುತ್ತದೆ. ಮನೋಹರ ಸುಗಂಧವೂ ಪಸರಿಸಿರುತ್ತದೆ. ಹಸಿವು, ಬಾಯಾರಿಕೆ, ಆಯಾಸ, ವೃದ್ಧಾಪ್ಯ ಮತ್ತು ಪಾಪದ ಫಲಗಳ ಕಷ್ಟವನ್ನು ಅಲ್ಲಿ ಎಂದೂ ಭೋಗಿಸಬೇಕಾಗುವುದಿಲ್ಲ. ಸ್ವರ್ಗದಲ್ಲಿ ಸದಾ ಸುಖವೇ ಆಗುತ್ತದೆ.

ಈ ಮರ್ತ್ಯಲೋಕದಲ್ಲಿ ಸುಖ-ದುಃಖ ಎರಡೂ ಆಗುತ್ತಿರುತ್ತದೆ. ನರಕದಲ್ಲಿ ಕೇವಲ ದುಃಖವೆಂದು ಹೇಳಿದ್ದರೆ. ವಾಸ್ತವದಲ್ಲಿ ಸುಖವಾದರೋ ಪರಮಪದಸ್ವರೂಪ ಪರಬ್ರಹ್ಮ ಪರಮಾತ್ಮನೇ. ಪೃಥ್ವಿಯು ಸರ್ವಭೂತಗಳ ಜನನಿಯು. ಸಂಸಾರದ ಸ್ತ್ರೀಯರೂ ಕೂಡ ಪೃಥ್ವಿಯಂತೆ ಸಂತಾನಗಳ ಜನನಿಯರು. ಪುರುಷನೇ ಅಲ್ಲಿ ಪ್ರಜಾಪತಿ ಸಮಾನನು. ಪುರುಷನ ವೀರ್ಯವು ತೇಜಃಸ್ವರೂಪವೆಂದು ತಿಳಿಯಬೇಕು. ಪೂರ್ವಕಾಲದಲ್ಲಿ ಬ್ರಹ್ಮನೇ ಈ ಸ್ತ್ರೀ-ಪುರುಷಸ್ವರೂಪ ಜಗತ್ತನ್ನು ಸೃಷ್ಟಿಸಿದನು. ಇಲ್ಲಿ ಸಮಸ್ತ ಪ್ರಜೆಗಳೂ ತಮ್ಮ ತಮ್ಮ ಕಾಮಗಳಿಂದ ಆವೃತಗೊಂಡು ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತವೆ.”

ಭರದ್ವಾಜನು ಹೇಳಿದನು:

“ದಾನದ ಫಲವೇನು? ಧರ್ಮದಲ್ಲಿ ನಡೆದುಕೊಳ್ಳುವುದರ ಫಲವೇನು? ಚೆನ್ನಾಗಿ ತಪಿಸಿದ ತಪಸ್ಸಿನ, ಸ್ವಾಧ್ಯಾಯದ ಮತ್ತು ಅಗ್ನಿಹೋತ್ರದ ಫಲಗಳು ಏನೆಂದು ಹೇಳಿದ್ದಾರೆ?”

ಭೃಗುವು ಹೇಳಿದನು:

“ಅಗ್ನಿಹೋತ್ರದಿಂದ ಪಾಪವು ಪರಿಹಾರವಾಗುತ್ತದೆ. ಸ್ವಾಧ್ಯಾಯದಿಂದ ಉತ್ತಮ ಶಾಂತಿಯು ದೊರೆಯುತ್ತದೆ. ದಾನದಿಂದ ಭೋಗ ಮತ್ತು ತಪಸ್ಸಿನಿಂದ ಎಲ್ಲವೂ ದೊರೆಯುತ್ತದೆ ಎಂದು ಹೇಳುತ್ತಾರೆ. ದಾನದಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ಪರಲೋಕಕ್ಕಾಗಿ ಮತ್ತು ಇಹಲೋಕಕ್ಕಾಗಿ. ಸತ್ಪುರುಷರಿಗೆ ನೀಡುವ ಅಲ್ಪದಾನವೂ ಪರಲೋಕಕ್ಕೆ ಸಾಧನವಾಗುತ್ತದೆ. ಅಸತ್ಪುರುಷರಿಗೆ ನೀಡುವ ದಾನವು ಈ ಲೋಕದಲ್ಲಿ ಮಾತ್ರ ಭೋಗಾದಿ ಫಲಗಳನ್ನು ಕೊಡುತ್ತದೆ. ದಾನವು ಹೇಗಿರುತ್ತದೆಯೋ ಅದರ ಫಲವೂ ಅದಕ್ಕೆ ಅನುಗುಣವಾಗಿರುತ್ತದೆ.”

ಭರದ್ವಾಜನು ಹೇಳಿದನು:

“ಯಾವ ಧರ್ಮಾಚರಣೆಯು ಯಾರಿಗೆ ವಿಹಿತವಾಗಿದೆ? ಧರ್ಮದ ಲಕ್ಷಣವೇನು? ಧರ್ಮದಲ್ಲಿ ಎಷ್ಟು ವಿಧಗಳಿವೆ? ಇದನ್ನು ನೀನು ಹೇಳಬೇಕು.”

ಭೃಗುವು ಹೇಳಿದನು:

“ಸ್ವಧರ್ಮಾಚರಣೆಯಲ್ಲಿ ನಿರತರಾಗಿರುವ ಮನೀಷಿಣರಿಗೆ ಧರ್ಮಫಲಗಳು ಪ್ರಾಪ್ತವಾಗುತ್ತವೆ. ಸ್ವಧರ್ಮಕ್ಕೆ ವಿರುದ್ಧವಾದ ಆಚರಣೆಯನ್ನು ಮಾಡುವವರು ಮೋಹವಶರಾಗುತ್ತಾರೆ[8].”

ಭರದ್ವಾಜನು ಹೇಳಿದನು:

“ಹಿಂದೆ ಬ್ರಹ್ಮರ್ಷಿಗಳು ವಿಂಗಡಿಸಿರುವ ನಾಲ್ಕು ಆಶ್ರಮಗಳಲ್ಲಿ ಒಂದೊಂದಕ್ಕೂ ಇರುವ ಪ್ರತ್ಯೇಕ ಧರ್ಮಗಳ ಕುರಿತು ನನಗೆ ಹೇಳಬೇಕು.”

ಭೃಗುವು ಹೇಳಿದನು:

“ಜಗತ್ತಿನ ಕಲ್ಯಾಣಕ್ಕಾಗಿ ಭಗವಾನ್ ಬ್ರಹ್ಮನು ಪೂರ್ವಕಾಲದಲ್ಲಿಯೇ ಧರ್ಮವನ್ನು ರಕ್ಷಿಸಲೋಸುಗ ನಾಲ್ಕು ಆಶ್ರಮಗಳನ್ನು ನಿರ್ದೇಶಿಸಿದ್ದನು. ಅವುಗಳಲ್ಲಿ ಮೊದಲನೆಯದು -  ಬ್ರಹ್ಮಚರ್ಯಪಾಲನೆಯೊಂದಿಗೆ ಗುರುಕುಲವಾಸ. ಇದರಲ್ಲಿರುವ ಬ್ರಹ್ಮಚಾರಿಯು ಅಂತಃಶುದ್ಧಿ-ಬಹಿಃಶುದ್ಧಿ, ವೈದಿಕ ಸಂಸ್ಕಾರ ಮತ್ತು ವ್ರತ-ನಿಯಮಗಳನ್ನು ಪಾಲಿಸುತ್ತಾ ತನ್ನ ಮನಸ್ಸನ್ನು ವಶದಲ್ಲಿರಿಸಿಕೊಳ್ಳಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಎರಡೂ ಸಮಯಗಳಲ್ಲಿ ಸಂಧ್ಯೋಪಾಸನೆ, ಸೂರ್ಯೋಪಸ್ಥಾನ ಮತ್ತು ಅಗ್ನಿಹೋತ್ರಗಳ ಮೂಲಕ ಅಗ್ನಿದೇವನನ್ನು ಆರಾಧಿಸಬೇಕು. ಆಯಾಸ ಮತ್ತು ಆಲಸ್ಯಗಳನ್ನು ತೊರೆದು ಪ್ರತಿದಿನ ಗುರುವನ್ನು ನಮಸ್ಕರಿಸಬೇಕು ಮತ್ತು ವೇದಗಳ ಅಭ್ಯಾಸ-ಶ್ರವಣಗಳಿಂದ ತನ್ನ ಅಂತರಾತ್ಮವನ್ನು ಪವಿತ್ರಗೊಳಿಸಿಕೊಳ್ಳಬೇಕು. ಬೆಳಿಗ್ಗೆ, ಸಾಯಂಕಾಲ ಮತ್ತು ಮಧ್ಯಾಹ್ನ ಮೂರೂ ಹೊತ್ತು ಸ್ನಾನಮಾಡಬೇಕು. ಬ್ರಹ್ಮಚರ್ಯದ ಪಾಲನೆ, ಅಗ್ನಿಯ ಉಪಾಸನೆ ಮತ್ತು ಗುರುವಿನ ಸೇವೆಯನ್ನು ಮಾಡಬೇಕು. ಪ್ರತಿದಿನ ಭಿಕ್ಷೆ ಬೇಡಿ ತರಬೇಕು. ಭಿಕ್ಷೆಯಲ್ಲಿ ದೊರಕಿದಷ್ಟನ್ನೂ ಗುರುವಿಗೆ ಅರ್ಪಿಸಬೇಕು. ತನ್ನ ಅಂತರಾತ್ಮವನ್ನೇ ಗುರುವಿನ ಚರಣಗಳಲ್ಲಿಡಬೇಕು. ಗುರುವು ಏನೇ ಹೇಳಿದರೂ, ಯಾವುದೇ ಸೂಚನೆಯನ್ನಿತ್ತರೂ ಮತ್ತು ಯಾವುದೇ ಕಾರ್ಯಕ್ಕೆ ಆಜ್ಞೆಯನ್ನಿತ್ತರೂ ಅದಕ್ಕೆ ವಿಪರೀತವಾಗಿ ನಡೆದುಕೊಳ್ಳಬಾರದು. ಗುರುವಿನ ಕೃಪಾಪ್ರಸಾದದಿಂದ ದೊರೆಯುವ ಸ್ವಾಧ್ಯಾಯದಲ್ಲಿ ತತ್ಪರನಾಗಿರಬೇಕು. ಈ ವಿಷಯದಲ್ಲಿ ಒಂದು ಶ್ಲೋಕವಿದೆ: ಯಾರು ಗುರುವನ್ನು ಆರಾಧಿಸಿ ವೇದಾಧ್ಯಯನ ಮಾಡುತ್ತಾನೋ ಅವನಿಗೆ ಸ್ವರ್ಗಲೋಕವು ಪ್ರಾಪ್ತವಾಗುತ್ತದೆ ಮತ್ತು ಅವನ ಮಾನಸಿಕ ಸಂಕಲ್ಪವು ಸಿದ್ಧವಾಗುತ್ತದೆ.

ಗಾರ್ಹಸ್ಥ್ಯವು ಎರಡನೇ ಆಶ್ರಮವೆಂದು ಹೇಳಿದ್ದಾರೆ. ಈಗ ನಾನು ಅದರಲ್ಲಿ ಪಾಲಿಸಬೇಕಾದ ಸಮಸ್ತ ಉತ್ತಮ ಆಚರಣೆಗಳನ್ನು ವರ್ಣಿಸುತ್ತೇನೆ. ವಿದ್ಯೆಯನ್ನು ಮುಗಿಸಿ ಗುಲಕುಲದಿಂದ ಸ್ನಾತಕನಾಗಿ ಹಿಂದಿರುಗಿದ ಸದಾಚಾರೀ ಬ್ರಹ್ಮಚಾರಿಗೆ ಒಂದುವೇಳೆ ಸಹಧರ್ಮಿಣಿಯೊಂದಿಗೆ ಧರ್ಮಾಚರಣೆಮಾಡುವ ಮತ್ತು ಅದರ ಫಲದ ಇಚ್ಛೆಯಾದರೆ ಅವನಿಗೆ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ವಿಧಿಯಿದೆ. ಈ ಆಶ್ರಮದಲ್ಲಿ ಧರ್ಮ, ಅರ್ಥ ಮತ್ತು ಕಾಮ ಈ ಮೂರರ ಪ್ರಾಪ್ತಿಯಾಗುತ್ತದೆ. ಆದುದರಿಂದ ತ್ರಿವರ್ಗಸಾಧನೆಯನ್ನು ಬಯಸಿ ಗೃಹಸ್ಥನಾದವನು ಉತ್ತಮ ಕರ್ಮಗಳಿಂದ ಧನಸಂಗ್ರಹ ಮಾಡಬೇಕು ಅರ್ಥಾತ್ ಅವನು ಸ್ವಾಧ್ಯಾಯದಿಂದ ಪಡೆದುಕೊಂಡ ವಿಶಿಷ್ಠ ಯೋಗ್ಯತೆಯಿಂದ ಬ್ರಹ್ಮರ್ಷಿಗಳು ಧರ್ಮಶಾಸ್ತ್ರಗಳಲ್ಲಿ ನಿಶ್ಚಯಿಸಿದ ಮಾರ್ಗದಲ್ಲಿ ಅಥವಾ ಪರ್ವತದಿಂದ ಉಪಲಬ್ಧವಾಗುವ ಅದರ ಸಾರಭೂತ ಮಣಿ-ರತ್ನ, ದಿವ್ಯೌಷಧಿ, ಮತ್ತು ಚಿನ್ನ ಮೊದಲಾದ ಧನವನ್ನು ಸಂಗ್ರಹಿಸಬೇಕು. ಅಥವಾ ಹವ್ಯ, ಕವ್ಯ, ನಿಯಮ, ವೇದಾಭ್ಯಾಸ ಮತ್ತು ದೇವತೆಗಳ ಪ್ರಸನ್ನತೆಯಿಂದ ದೊರೆತ ಧನದ ಮೂಲಕ ಗೃಹಸ್ಥನು ತನ್ನ ಗೃಹಸ್ತಿಯನ್ನು ನಿರ್ವಹಿಸಬೇಕು. ಏಕೆಂದರೆ ಗಾರ್ಹಸ್ಥ್ಯ ಆಶ್ರಮವು ಎಲ್ಲ ಆಶ್ರಮಗಳ ಮೂಲವೆಂದು ಹೇಳುತ್ತಾರೆ. ಗುರುಕುಲದಲ್ಲಿ ವಾಸಿಸುವ ಬ್ರಹ್ಮಚಾರಿ, ವನದಲ್ಲಿದ್ದುಕೊಂಡು ಸಂಕಲ್ಪಾನುಸಾರ ವ್ರತ, ನಿಯಮ ಮತ್ತು ಧರ್ಮಪಾಲನೆ ಮಾಡುವ ವಿವಿಧ ವಾನಪ್ರಸ್ಥರು ಮತ್ತು ಸರ್ವವನ್ನೂ ತ್ಯಜಿಸಿ ಸರ್ವತ್ರ ಸಂಚರಿಸುವ ಸಂನ್ಯಾಸೀ ಇವರೆಲ್ಲರೂ ಗೃಹಸ್ಥಾಶ್ರಮಿಯಿಂದಲೇ ಭಿಕ್ಷಾ, ಉಡುಗೊರೆ, ಉಪಹಾರ ಮತ್ತು ದಾನಾದಿಗಳನ್ನು ಪಡೆದು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುವುದರಲ್ಲಿ ಪ್ರವೃತ್ತರಾಗುತ್ತಾರೆ.

ವಾನಪ್ರಸ್ಥಿಗಳಿಗೆ ಧನಸಂಗ್ರಹವು ನಿಷಿದ್ಧವು. ಈ ಶ್ರೇಷ್ಠ ಪುರುಷರು ಹೆಚ್ಚಾಗಿ ಶುದ್ಧ-ಹಿತಕರ ಅನ್ನಮಾತ್ರವನ್ನೇ ಬಯಸುತ್ತಾ ಸ್ವಾಧ್ಯಾಯ-ತೀರ್ಥಯಾತ್ರೆ-ದೇಶ ದರ್ಶನದ ನಿಮಿತ್ತ ಭೂಮಿಯಲ್ಲಿ ಸಂಚರಿಸುತ್ತಿರುತ್ತಾರೆ. ಇವರು ಮನೆಗೆ ಬಂದರೆ ಗೃಹಸ್ಥನು ಎದ್ದು ಮುಂದೆ ಹೋಗಿ ಅವರನ್ನು ಸ್ವಾಗತಿಸಬೇಕು. ಅವರ ಚರಣಗಳಲ್ಲಿ ತಲೆಯನ್ನಿಡಬೇಕು. ದೋಷದೃಷ್ಟಿಯನ್ನಿಡದೇ ಅವರೊಡನೆ ಉತ್ತಮವಾಗಿ ಮಾತನಾಡಬೇಕು. ಯಥಾಶಕ್ತಿ ಸುಖಕರ ಆಸನವನ್ನು ನೀಡಬೇಕು. ಸುಖಕರ ಹಾಸಿಗೆಯ ಮೇಲೆ ಅವರನ್ನು ಮಲಗಿಸಬೇಕು ಮತ್ತು ಉತ್ತಮ ಭೋಜನವನ್ನು ನೀಡಬೇಕು. ಹೀಗೆ ಅವರಿಗೆ ಪೂರ್ಣ ಸತ್ಕಾರವನ್ನು ನೀಡಬೇಕು. ಇದೇ ಆ ಶ್ರೇಷ್ಠ ಪುರುಷರ ಕುರಿತು ಗೃಹಸ್ಥನ ಕರ್ತವ್ಯಗಳಾಗಿವೆ. ಈ ವಿಷಯದಲ್ಲಿ ಶ್ಲೋಕವೊಂದಿದೆ: ಯಾವ ಗೃಹಸ್ಥನ ಮನೆಯ ಬಾಗಿಲಿನಿಂದ ಯಾರೇ ಅತಿಥಿಯು ಭಿಕ್ಷೆಯು ದೊರೆಯದೇ ನಿರಾಶನಾಗಿ ಹಿಂದಿರುಗುತ್ತಾನೋ ಆ ಗೃಹಸ್ಥನಿಗೆ ಅವನು ತನ್ನ ಪಾಪವನ್ನು ಕೊಟ್ಟು ಅವನ ಪುಣ್ಯವನ್ನು ತೆಗೆದುಕೊಂಡು ಹೋಗುತ್ತಾನೆ.

ಇದಲ್ಲದೇ ಗೃಹಸ್ಥಾಶ್ರಮದಲ್ಲಿದ್ದುಕೊಂಡು ಯಜ್ಞಮಾಡುವುದರಿಂದ ದೇವತೆಗಳು, ಶ್ರಾದ್ಧ-ತರ್ಪಣಗಳನ್ನು ಮಾಡುವುದರಿಂದ ಪಿತೃಗಳು, ವೇದ-ಶಾಸ್ತ್ರಗಳ ಶ್ರವಣ, ಅಭ್ಯಾಸ ಮತ್ತು ಧಾರಣೆಗಳಿಂದ ಋಷಿಗಳು ಹಾಗೂ ಸಂತಾನೋತ್ಪತಿಯಿಂದ ಪ್ರಜಾಪತಿ – ಇವರು ಪ್ರಸನ್ನರಾಗುತ್ತಾರೆ. ಈ ವಿಷಯದಲ್ಲಿ ಎರಡು ಶ್ಲೋಕಗಳಿವೆ: ಸರ್ವಭೂತಗಳಲ್ಲಿ ವಾತ್ಸಲ್ಯವಿರುವ ಮತ್ತು ಕೇಳಲು ಸುಖಕರವಾಗಿರುವ ಮಾತನ್ನು ಆಡಬೇಕು. ಇನ್ನೊಬ್ಬರಿಗೆ ನೋವನ್ನುಂಟುಮಾಡುವುದು, ಘಾತಿಯನ್ನುಂಟುಮಾಡುವುದು ಮತ್ತು ಕಠೋರ ಮಾತನಾಡುವುದು ನಿಂದನೀಯವು. ಪರತಿರಸ್ಕಾರ, ಅಹಂಕಾರ ಮತ್ತು ದಾಂಭಿಕತೆ – ಇವುಗಳು ನಿಂದನೀಯವು. ಅಹಿಂಸೆ, ಸತ್ಯ, ಅಕ್ರೋಧ – ಇವುಗಳು ಎಲ್ಲ ಆಶ್ರಮಿಗಳಿಗೂ ಹೇಳಿರುವ ತಪಸ್ಸು.

ಇವಲ್ಲದೇ ಗೃಹಸ್ಥಾಶ್ರಮದಲ್ಲಿ ಪುಷ್ಪಮಾಲೆಗಳು, ನಾನಾ ವಿಧದ ಆಭೂಷಣಗಳು, ವಸ್ತ್ರ, ಅಭ್ಯಂಗ, ಗಂಧೋಪಭೋಗ, ನೃತ್ಯ-ಗೀತ-ವಾದ್ಯಗಳು, ಕಣ್ಣು-ಕಿವಿಗಳಿಗೆ ಆನಂದವನ್ನುಂಟುಮಾಡುವ ದೃಶ್ಯಗಳು, ಭಕ್ಷ-ಭೋಜ್ಯ-ಪೇಯ-ಲೇಹ ಮತ್ತು ಚೋಷ್ಯಗಳು ದೊರೆಯುತ್ತವೆ. ಉದ್ಯಾನವನಗಳಲ್ಲಿ ಸಂಚರಿಸುತ್ತಾ ಆನಂದವನ್ನು ಪಡೆಯಬಹುದು. ಭಾರ್ಯೆಯೊಡನೆ ಕಾಮಸುಖವನ್ನೂ ಅನುಭವಿಸಬಹುದು. ಗೃಹಸ್ಥಾಶ್ರಮದಲ್ಲಿ ಯಾರಿಗೆ ಧರ್ಮಾರ್ಥಕಾಮಗಳು ನಿತ್ಯವೂ ಸಿದ್ಧಿಸುತ್ತವೆಯೋ ಅವನು ಈ ಲೋಕದಲ್ಲಿ ಎಲ್ಲ ವಿಧದ ಸುಖಗಳನ್ನೂ ಅನುಭವಿಸಿ ಕಡೆಯಲ್ಲಿ ಶಿಷ್ಟ ಪುರುಷನು ಹೊಂದುವ ಸದ್ಗತಿಯನ್ನು ಹೊಂದುತ್ತಾನೆ. ಸ್ವಧರ್ಮಾಚರಣೆಯಲ್ಲಿಯೇ ಇದ್ದುಕೊಂಡು ಉಂಛವೃತ್ತಿಯ ಜೀವನವನ್ನು ನಡೆಸುವ ಮತ್ತು ಕಾಮಸುಖಗಳನ್ನು ಪರಿತ್ಯಜಿಸಿದ ಗೃಹಸ್ಥನಿಗೆ ಸ್ವರ್ಗವು ದುರ್ಲಭವಲ್ಲ.”

ಮೂರನೇ ಆಶ್ರಮ ವಾನಪ್ರಸ್ಥವನ್ನು ಪಾಲಿಸುವ ಮನುಷ್ಯರು ಧರ್ಮಾನುಸರಣೆಯನ್ನು ಮಾಡುತ್ತಾ ಪವಿತ್ರ ತೀರ್ಥಗಳಲ್ಲಿ, ನದೀತೀರಗಳಲ್ಲಿ, ಚಿಲುಮೆಗಳ ಬಳಿ ಹಾಗೂ ಜಿಂಕೆ, ಎಮ್ಮೆ, ಹಂದಿ, ಸಿಂಹ ಮತ್ತು ಕಾಡಾನೆಗಳಿಂದ ತುಂಬಿರುವ ಏಕಾಂತ ವನಗಳಲ್ಲಿ ತಪಸ್ಸನ್ನಾಚರಿಸುತ್ತಾ ತಿರುಗಾಡುತ್ತಿರುತ್ತಾರೆ. ಗೃಹಸ್ಥರ ಉಪಭೋಗಕ್ಕಾಗುವ ಗ್ರಾಮಜನೋಚಿತ ಸುಂದರ ವಸ್ತ್ರ, ಸ್ವಾದಿಷ್ಟ ಭೋಜನ ಮತ್ತು ವಿಷಯಭೋಗಗಳನ್ನು ಪರಿತ್ಯಜಿಸಿ ಅವರು ವನಗಳಲ್ಲಿ ತಮ್ಮಷ್ಟಕ್ಕೆ ತಾವೇ ದೊರೆಯುವ ಅನ್ನ, ಫಲ, ಮೂಲ ಹಾಗೂ ಎಲೆಗಳ ಪರಿಮಿತ, ವಿಚಿತ್ರ ಮತ್ತು ನಿಯತ ಆಹಾರವನ್ನು ಸೇವಿಸುತ್ತಾರೆ. ನೆಲದ ಮೇಲೆಯೇ ಕುಳಿತುಕೊಳ್ಳುತ್ತಾರೆ. ನೆಲ, ಕಲ್ಲು, ಮರಳು, ನುರುಜುಗಲ್ಲು, ಬೂದಿ – ಇವುಗಳ ಮೇಲೆಯೇ ಮಲಗುತ್ತಾರೆ. ಕಾಶ, ಕುಶ, ಮೃಗಚರ್ಮ ಮತ್ತು ವಲ್ಕಲಗಳಿಂದ ಮಾಡಿದ ವಸ್ತ್ರಗಳನ್ನೇ ಉಡುತ್ತಾರೆ. ಗಡ್ಡ-ಮೀಸೆ-ಉಗುರು-ಜಟೆಗಳನ್ನು ಯಥೇಚ್ಚವಾಗಿ ಬೆಳೆಯಲು ಬಿಡುತ್ತಾರೆ. ನಿಯತ ಸಮಯಗಳಲ್ಲಿ ಸ್ನಾನಮಾಡುತ್ತಾ ನಿಶ್ಚಿತ ಕಾಲಗಳನ್ನು ಉಲ್ಲಂಘಿಸದೇ ಬಲಿ, ವೈಶ್ವದೇವ, ಅಗ್ನಿಹೋತ್ರಾದಿ ಕರ್ಮಗಳನ್ನು ಅನುಷ್ಠಾನಮಾಡುತ್ತಾರೆ. ಬೆಳಿಗ್ಗೆ ಅಗ್ನಿಹೋತ್ರ-ಪೂಜಾದಿಗಳಿಗೆ ಸಮಿತ್ತು-ದರ್ಭೆ-ಫಲ-ಪುಷ್ಪಾದಿಗಳನ್ನು ತಂದು ಆಶ್ರಮವನ್ನು ಸ್ವಚ್ಛಗೊಳಿಸಿದ ನಂತರ ಅವರಿಗೆ ಸ್ವಲ್ಪ ವಿಶ್ರಾಂತಿಯು ಸಿಗುತ್ತದೆ. ಶೀತೋಷ್ಣ-ವೃಷ್ಟಿ-ವಾತಗಳ ಪ್ರಖರತೆಯನ್ನು ಸದಾ ಸಹಿಸಿಕೊಳ್ಳುವ ವಾನಪ್ರಸ್ಥಾಶ್ರಮಿಗಳ ಚರ್ಮವು ಒಡೆದುಹೋಗಿರುತ್ತದೆ. ನಾನಾ ವಿಧದ ಕಠೋರ ನಿಯಮಗಳನ್ನು ಪಾಲಿಸುತ್ತಾ ಸತ್ಕರ್ಮಗಳನ್ನು ಅನುಷ್ಠಾನಮಾಡುವ ಅವರ ರಕ್ತ-ಮಾಂಸಗಳು ಒಣಗಿ ಹೋಗಿರುತ್ತವೆ. ಚರ್ಮ-ಮೂಳೆಗಳು ಮಾತ್ರವೇ ಉಳಿದುಕೊಂಡಿರುತ್ತವೆ. ಆದರೂ ಅವರು ಧೈರ್ಯಶಾಲಿಗಳಾಗಿ ಕೇವಲ ಸತ್ತ್ವಯೋಗದಿಂದ ಶರೀರಧಾರಣೆ ಮಾಡಿಕೊಂಡಿರುತ್ತಾರೆ. ಬ್ರಹ್ಮರ್ಷಿಗಳಿಂದಲೇ ವಿಹಿತವಾಗಿರುವ ಈ ವಾನಪ್ರಸ್ಥಾಶ್ರಮವನ್ನು ನಿಯಮಪೂರ್ವಕವಾಗಿ ಯಥಾವತ್ತಾಗಿ ಅನುಷ್ಠಾನಮಾಡುವವನು ಅಗ್ನಿಯಂತೆ ತನ್ನಲ್ಲಿರುವ ಪಾಪಗಳೆಲ್ಲವನ್ನೂ ಭಸ್ಮಮಾಡಿ ದುರ್ಲಭ ಲೋಕಗಳನ್ನು ಪಡೆಯುತ್ತಾನೆ.

ಈಗ ನಾನು ಸಂನ್ಯಾಸಿಗಳ ಆಚಾರ-ವ್ಯವಹಾರಗಳನ್ನು ಹೇಳುತ್ತೇನೆ. ಸಂನ್ಯಾಸಾಶ್ರಮವನ್ನು ಸ್ವೀಕರಿಸಿದವರು ಅಗ್ನಿಹೋತ್ರ, ಧನ, ಕಳತ್ರ ಮೊದಲಾದವುಗಳೆಲ್ಲವನ್ನೂ ಪರಿತ್ಯಜಿಸಿ, ಭೋಗಗಳನ್ನು ತೊರೆದು, ಸ್ನೇಹಪಾಶಗಳನ್ನು ಕಿತ್ತೊಗೆದು ಮನೆಯನ್ನು ಬಿಟ್ಟು ಹೋಗುತ್ತಾರೆ. ಮಣ್ಣುಹೆಂಟೆ, ಕಲ್ಲು ಮತ್ತು ಚಿನ್ನಗಳು ಸಮವೆಂದು ಅವರು ಭಾವಿಸುತ್ತಾರೆ. ಅವರ ಬುದ್ಧಿಯು ತ್ರಿವರ್ಗದಲ್ಲಿ ನಿರಾಸಕ್ತವಾಗಿರುತ್ತದೆ. ಶತ್ರು-ಮಿತ್ರ-ಉದಾಸೀನರಲ್ಲಿ ಅವರು ಸಮಾನದೃಷ್ಟಿಯುಳ್ಳವರಾಗಿರುತ್ತಾರೆ. ಸ್ಥಾವರ, ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭುಜ್ಜ ಪ್ರಾಣಿಗಳ ವಿಷಯದಲ್ಲಿ ಮಾತು-ಮನಸ್ಸು ಮತ್ತು ಕರ್ಮಗಳ ಮೂಲಕ ಯಾವುದೇ ವಿಧವಾದ ದ್ರೋಹವನ್ನು ಮಾಡುವುದಿಲ್ಲ. ಆಶ್ರಮ ಮಠಾದಿಗಳಲ್ಲಿ ವಾಸಿಸುವುದಿಲ್ಲ. ಸಂನ್ಯಾಸಿಗಳು ಯಾವಾಗಲೂ ಸಂಚರಿಸುತ್ತಲೇ ಇರುತ್ತಾರೆ. ರಾತ್ರಿಯ ಕಾಲದಲ್ಲಿ ಪರ್ವತಗುಹೆಗಳಲ್ಲಾಗಲೀ, ನದೀ ತೀರಗಳಲ್ಲಾಗಲೀ, ವೃಕ್ಷದ ಬುಡದಲ್ಲಾಗಲೀ, ದೇವಮಂದಿರಗಳಲ್ಲಾಗಲೀ, ನಗರಗಳಲ್ಲಾಗಲೀ ತಂಗುತ್ತಾರೆ. ನಗರಗಳಲ್ಲಿ ಐದು ರಾತ್ರಿಗಿಂತಲೂ ಹೆಚ್ಚು ಮತ್ತು ಗ್ರಾಮಗಳಲ್ಲಿ ಒಂದು ರಾತ್ರಿಗಿಂತಲೂ ಹೆಚ್ಚು ತಂಗುವುದಿಲ್ಲ. ವಿಶುದ್ಧ ಧರ್ಮವನ್ನು ಆಚರಿಸುವ ಮತ್ತು ತಮ್ಮ ವರ್ಣಾಶ್ರಮಧರ್ಮಗಳಿಗೆ ವಿರೋಧಕರ್ಮಗಳನ್ನು ಮಾಡದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯರ ಮನೆಗಳ ಮುಂದೆ ನಿಂತು ತಮ್ಮ ಪ್ರಾಣಧಾರಣೆಗೆ ಭಿಕ್ಷೆಯನ್ನು ಕೇಳದೇ ಭಿಕ್ಷಾಪಾತ್ರೆಯಲ್ಲಿ ಎಷ್ಟು ಸಂಗ್ರಹವಾಗುವುದೋ ಅಷ್ಟನ್ನೇ ತಿಂದು ತೃಪ್ತರಾಗುತ್ತಾರೆ. ಕಾಮ-ಕ್ರೋಧ-ಲೋಭ-ಮೋಹ-ಕೃಪಣತೆ-ದಂಭ-ನಿಂದೆ-ಅಪಮಾನ-ಹಿಂಸೆಗಳನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ. ಈ ವಿಷಯದ ಕುರಿತು ಒಂದು ಶ್ಲೋಕವಿದೆ: ಸರ್ವಪ್ರಾಣಿಗಳಿಗೂ ಅಭಯಪ್ರದಾನಮಾಡುತ್ತಾ ಸಂಚರಿಸುತ್ತಿರುವ ಮುನಿಗೆ ಪ್ರಪಂಚದಲ್ಲಿರುವ ಯಾವ ಪ್ರಾಣಿಗಳಿಂದಲೂ ಯಾವವಿಧದ ಭಯವೂ ಉಂಟಾಗುವುದಿಲ್ಲ. ಅಗ್ನಿಹೋತ್ರವನ್ನು ತನ್ನ ಶರೀರದಲ್ಲಿ ಆರೋಪಿಸಿಕೊಂಡು ಶರೀರವನ್ನೇ ಇಷ್ಟಕಾಚಿತಿಯನ್ನಾಗಿ ಮಾಡಿಕೊಂಡು ತನ್ನ ಬಾಯಿಯ ಮೂಲಕ ಭಿಕ್ಷಾರೂಪದ ಹವಿಸ್ಸನ್ನು ಹೋಮಮಾಡುವ ಸಂನ್ಯಾಸಿಯು ಅಗ್ನಿಚಯನವನ್ನು ಮಾಡುವ ಅಗ್ನಿಹೋತ್ರಿಯು ಹೋಗುವ ಲೋಕಕ್ಕೆ ಹೋಗುತ್ತಾನೆ. ಸುಸಂಕಲ್ಪಿತ ಬುದ್ಧಿಯುಕ್ತನಾಗಿ ಶುಚಿಯಾಗಿ ಯಥೋಕ್ತವಾದ ಮೋಕ್ಷಾಶ್ರಮ ಕರ್ಮಗಳನ್ನು ಮಾಡುವ ದ್ವಿಜಾತಿಯವನು ಇಂಧನ ರಹಿತವಾದ ಅಗ್ನಿಯಂತೆ ಪರಮಶಾಂತ ಜ್ಯೋತಿರ್ಮಯ ಬ್ರಹ್ಮಲೋಕವನ್ನು ಹೊಂದುತ್ತಾನೆ.”

ಭರದ್ವಾಜನು ಹೇಳಿದನು:

“ಈ ಲೋಕಕ್ಕಿಂತಲೂ ಶ್ರೇಷ್ಠವಾದ ಲೋಕವಿದೆಯೆಂದು ಕೇಳಿದ್ದೇನೆ. ಆದರೆ ಅದು ನೋಡಲು ಸಿಗುವುದಿಲ್ಲ. ಅದರ ಕುರಿತು ತಿಳಿಯ ಬಯಸುತ್ತೇನೆ. ಅದನ್ನು ಹೇಳಬೇಕು.”

ಭೃಗುವು ಹೇಳಿದನು:

ಉತ್ತರ ದಿಕ್ಕಿನಲ್ಲಿ ಹಿಮವತ್ಪರ್ವತದ ಪಕ್ಕದಲ್ಲಿ ಸರ್ವಗುಣಸಂಪನ್ನ ಪುಣ್ಯಮಯ ಪ್ರದೇಶವಿದೆ. ಅದನ್ನು ಲೋಕಗಳಲ್ಲಿಯೇ ಪರಮ ಶ್ರೇಷ್ಠ ಲೋಕವೆನ್ನುತ್ತಾರೆ. ಅದು ಪವಿತ್ರವೂ, ಕ್ಷೇಮ್ಯವೂ ಮತ್ತು ಕಾಮ್ಯವೂ ಆಗಿದೆ[9]. ಅಲ್ಲಿ ಪಾಪಕರ್ಮರಹಿತ, ಪವಿತ್ರ, ಅತ್ಯಂತ ನಿರ್ಮಲ, ಲೋಭ-ಮೋಹಶೂನ್ಯ ಮತ್ತು ಎಲ್ಲ ಪ್ರಕಾರದ ಉಪದ್ರವರಹಿತ ಮಾನವರು ವಾಸಿಸುತ್ತಾರೆ. ಸ್ವರ್ಗಸದೃಶವಾದ ಆ ದೇಶದಲ್ಲಿ ಸರ್ವ ಶುಭಗುಣಗಳೂ ಇವೆ ಎಂದು ಹೇಳುತ್ತಾರೆ. ಅಲ್ಲಿ ಕಾಲದಲ್ಲಿಯೇ ಮೃತ್ಯುವಾಗುತ್ತದೆ. ರೋಗ-ವ್ಯಾಧಿಗಳು ಯಾರನ್ನೂ ಸ್ಪರ್ಶಿಸುವುದೂ ಇಲ್ಲ. ತಮ್ಮ ತಮ್ಮ ಪತ್ನಿಯರೊಡನೆ ಇರುವ ಆ ಜನರಲ್ಲಿ ಪರಸ್ತ್ರೀಯರ ಕುರಿತು ಲೋಭವಿಲ್ಲ. ಅಲ್ಲಿ ಧನಕ್ಕಾಗಿ ಅನ್ಯೋನ್ಯರನ್ನು ಕೊಲ್ಲುವುದಿಲ್ಲ. ಯಾರೂ ವಿಸ್ಮಿತರಾಗುವುದಿಲ್ಲ. ಪರೋಕ್ಷವಾಗಿಯೂ ಅಧರ್ಮವು ನಡೆಯುವುದಿಲ್ಲ. ಅಲ್ಲಿ ಯಾರಲ್ಲಿಯೂ ಸಂದೇಹವೂ ಉಂಟಾಗುವುದಿಲ್ಲ. ಅಲ್ಲಿ ಮಾಡಿದ ಕರ್ಮಗಳ ಫಲಗಳು ಪ್ರತ್ಯಕ್ಷವಾಗಿ ಉಪಲಬ್ಧವಾಗುತ್ತವೆ. ಅಲ್ಲಿಯ ಕೆಲವು ಜನರು ದೊಡ್ಡ ದೊಡ್ಡ ಭವನಗಳಲ್ಲಿ ವಾಸಿಸುತ್ತಾರೆ. ಉತ್ತಮ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಉತ್ತಮೋತ್ತಮ ಪದಾರ್ಥಗಳನ್ನು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಸಮಸ್ತ ಕಾಮನಾಸಂಪನ್ನರಾಗಿ ಸುವರ್ಣಮಯ ಆಭೂಷಣಗಳಿಂದ ವಿಭೂಷಿತರಾಗಿರುತ್ತಾರೆ. ಇನ್ನು ಕೆಲವು ಜನರಿಗೆ ಪ್ರಾಣಧಾರಣೆಗೆ ಮಾತ್ರ ಸಾಕಾಗುವಷ್ಟು ಭೋಜನವು ದೊರೆಯುತ್ತದೆ. ಇನ್ನು ಕೆಲವು ಜನರು ಬಹಳ ಪರಿಶ್ರಮಯುಕ್ತ ತಪೋಮಯ ಜೀವನವನ್ನು ನಡೆಸುತ್ತಾ ಪ್ರಾಣವನ್ನು ಹಿಡಿದುಕೊಂಡಿರುತ್ತಾರೆ.

ಆದರೆ ಈ ಮನುಷ್ಯಲೋಕದಲ್ಲಿ ಕೆಲವರು ಧರ್ಮಪರಾಯಣರಾಗಿರುತ್ತಾರೆ. ಕೆಲವರು ವಂಚಕರಾಗಿರುತ್ತಾರೆ. ಕೆಲವರು ಸುಖಿಗಳಾಗಿರುತ್ತಾರೆ. ಕೆಲವರು ಧನಿಕರಾಗಿರುತ್ತಾರೆ. ಮತ್ತು ಇನ್ನು ಕೆಲವರು ದರಿದ್ರರಾಗಿರುತ್ತಾರೆ. ಈ ಲೋಕದಲ್ಲಿ ಶ್ರಮವಿದೆ. ಭಯವಿದೆ. ಮೋಹವಿದೆ. ತೀವ್ರವಾದ ಹಸಿವೆಯಾಗುತ್ತದೆ. ಧನದ ವಿಷಯದಲ್ಲಿ ಅತ್ಯಂತ ಲೋಭಿಗಳಾಗುತ್ತಾರೆ. ಇದರಿಂದಲೇ ಪಂಡಿತರೂ ಮೋಹಿತರಾಗುತ್ತಾರೆ. ಇಲ್ಲಿ ಧರ್ಮಾಧರ್ಮ ಕರ್ಮಗಳ ಕುರಿತು ಬಹುವಿಧದ ಚಿಂತನೆಗಳು ನಡೆಯುತ್ತವೆ. ಇವೆರಡರ ಸ್ವರೂಪ-ಪರಿಣಾಮಗಳನ್ನು ತಿಳಿದಿರುವವನು ಪಾಪದಿಂದ ಲಿಪ್ತನಾಗುವುದಿಲ್ಲ. ಕಪಟ, ವಂಚನೆ, ಚೌರ್ಯ, ಪರನಿಂದೆ, ಅಸೂಯೆ, ಮತ್ತೊಬ್ಬರಿಗೆ ಹಾನಿಯನ್ನುಂಟುಮಾಡುವುದು, ಪ್ರಾಣಿಹಿಂಸೆ, ಚಾಡಿಹೇಳುವುದು, ಸುಳ್ಳು ಹೇಳುವುದು – ಈ ದುರ್ಗುಣಗಳನ್ನು ಸೇವಿಸುವವನು ಮಾಡಿದ ತಪಸ್ಸೆಲ್ಲವೂ ಹಾಳಾಗುತ್ತದೆ. ಈ ದುರ್ಗುಣಗಳನ್ನು ಆಚರಿಸದೇ ಇರುವ ವಿದ್ವಾಂಸನ ತಪಸ್ಸು ವೃದ್ಧಿಯಾಗುತ್ತದೆ.

ಈ ಲೋಕವು ಕರ್ಮಭೂಮಿಯು. ಇಲ್ಲಿ ಶುಭಾಶುಭ ಕರ್ಮಗಳನ್ನು ಮಾಡಿ ಶುಭಕರ್ಮಗಳಿಂದ ಶುಭವನ್ನೂ ಅಶುಭಕರ್ಮಗಳಿಂದ ಅಶುಭವನ್ನೂ ಪಡೆಯುತ್ತಾರೆ. ಹಿಂದೆ ಇಲ್ಲಿಯೇ ಪ್ರಜಾಪತಿ, ದೇವತೆಗಳು ಮತ್ತು ಋಷಿಗಣಗಳು ಯಜ್ಞವನ್ನೂ ಅಭೀಷ್ಟ ತಪಸ್ಸನ್ನೂ ಮಾಡಿ ಪವಿತ್ರಾತ್ಮರಾಗಿ ಬ್ರಹ್ಮಲೋಕವನ್ನು ಸೇರಿದರು. ಪೃಥ್ವಿಯ ಉತ್ತರಭಾಗವು ಎಲ್ಲಕ್ಕಿಂತಲೂ ಪುಣ್ಯತಮ ಮತ್ತು ಶುಭವಾದುದು. ಇಲ್ಲಿ ಪುಣ್ಯವನ್ನು ಮಾಡಿದವರು ಅಲ್ಲಿಗೆ ಹೋಗುತ್ತಾರೆ. ಪಾಪಕರ್ಮಿಗಳು ಪಶು-ಪಕ್ಷಿಗಳ ಯೋನಿಗಳಲ್ಲಿ ಹುಟ್ಟುತ್ತಾರೆ. ಇನ್ನು ಕೆಲವರು ಆಯುಷ್ಯ ಕಳೆದನಂತರ ಭೂಮಿಯಲ್ಲಿ ಬಿದ್ದು ನಾಶಹೊಂದುತ್ತಾರೆ. ಲೋಭ-ಮೋಹವಶರಾಗಿ ಅನ್ಯೋನ್ಯರನ್ನು ತಿನ್ನಲು ಆಸಕ್ತರಾಗಿರುವವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಸಾಯುತ್ತಿರುತ್ತಾರೆ. ಅವರೆಂದಿಗೂ ಉತ್ಕೃಷ್ಟವಾದ ಉತ್ತರದಿಕ್ಕಿನ ಲೋಕಕ್ಕೆ ಹೋಗುವುದಿಲ್ಲ. ಗುರುವನ್ನು ಸೇವಿಸುವ ನಿಯತ ಬ್ರಹ್ಮಚಾರೀ ಮನೀಷಿಣರು ಸರ್ವಲೋಕಗಳ ಮಾರ್ಗಗಳನ್ನೂ ತಿಳಿದುಕೊಳ್ಳುತ್ತಾರೆ. ಹೀಗೆ ನಾನು ಬ್ರಹ್ಮನಿಂದಲೇ ನಿರ್ಮಿತವಾದ ಧರ್ಮವನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಈ ಲೋಕದಲ್ಲಿ ಧರ್ಮ-ಅಧರ್ಮಗಳನ್ನು ತಿಳಿದಿರುವವನೇ ಬುದ್ಧಿವಂತನು.””

***

ಭೀಷ್ಮನು ಹೇಳಿದನು:

“ರಾಜನ್! ಭೃಗುವು ಹೀಗೆ ಹೇಳಲು ಪ್ರತಾಪವಾನ್ ಪರಮಧರ್ಮಾತ್ಮಾ ಭರದ್ವಾಜನು ವಿಸ್ಮಿತನಾಗಿ ಭೃಗುವನ್ನು ಪ್ರತಿಪೂಜಿಸಿದನು. ರಾಜನ್! ಇದೋ ಜಗತ್ತಿನ ಸೃಷ್ಟಿಯ ಕುರಿತು ಸಂಪೂರ್ಣವಾಗಿ ಹೇಳಿಯಾಯಿತು. ಮಹಾಪ್ರಾಜ್ಞ! ಇನ್ನೂ ಏನನ್ನು ಕೇಳಬಯಸುತ್ತೀಯೆ?”

 

 

[1] ತೈತ್ತರೀಯ ಉಪನಿಷತ್ತಿನಲ್ಲಿ ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಪೃಥಿವ್ಯಾ ಓಷಧಯಃ| ಎಂದು ಸೃಷ್ಟಿಕ್ರಮವನ್ನು ಹೇಳಿದೆ (ಭಾರತ ದರ್ಶನ).

[2] ಈ ಒಂಭತ್ತು ಬಗೆಯ ಗಂಧಗಳ ಉದಾಹರಣೆಗಳನ್ನು ವ್ಯಾಖ್ಯಾನಕಾರರು ಈ ರೀತಿ ನೀಡಿದ್ದಾರೆ: (೧) ಇಷ್ಟ ಗಂಧ – ಕಸ್ತೂರಿಯೇ ಮೊದಲಾದ ಸುಗಂಧಗಳು (೨) ಅನಿಷ್ಟ ಗಂಧ – ಶವವೇ ಮೊದಲಾದವುಗಳಿಂದ ಬರುವ ದುರ್ಗಂಧ (೩) ಮಧುರ ಗಂಧ – ಪುಷ್ಪಗಳಿಂದ ಬರುವ ಸುವಾಸನೆ (೪) ಕಟು ಗಂಧ – ಮೆಣಸಿನ ಪುಡಿಯ ವಾಸನೆ (೫) ನಿರ್ಹಾರಿ – ಉಳಿದ ವಾಸನೆಗಳನ್ನು ನಾಶಪಡಿಸುವ ಇಂಗು-ಈರುಳ್ಳಿ ಇತ್ಯಾದಿ (೬) ಸಂಹತ – ಅನೇಕ ದ್ರವ್ಯಗಳನ್ನು ಸೇರಿಸುವುದರಿಂದ ಬರುವ ವಾಸನೆ (೭) ಸ್ನಿಗ್ಧ – ತತ್ಕ್ಷಣದಲ್ಲಿ ತೃಪ್ತಿಯನ್ನುಂಟುಮಾಡುವ ತುಪ್ಪವೇ ಮೊದಲಾದವುಗಳ ವಾಸನೆ (೮) ರೂಕ್ಷ – ಸಾಸಿವೆ ಎಣ್ಣೆ ಮೊದಲಾದವುಗಳ ವಾಸನೆ (೯) ವಿಶದ – ಶಾಲ್ಯನ್ನಾದಿಗಳ ಪರಿಮಳ (ಭಾರತ ದರ್ಶನ).

[3] ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನ, ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ ಇವೇ ದಶಪ್ರಾಣವಾಯುಗಳು. ಇವುಗಳಲ್ಲಿ ಕೊನೆಯ ಐದು ಪಂಚ ಉಪವಾಯುಗಳು (ಭಾರತ ದರ್ಶನ).

[4] ಮನುಷ್ಯನು ಮರಣದ ಸಮಯದಲ್ಲಿ “ಈ ಹಸುವು ಪರಲೋಕಕ್ಕೆ ಹೋಗಲಿರುವ ನನ್ನನ್ನು ಪಾರುಮಾಡುತ್ತದೆ” ಎಂದು ಸಂಕಲ್ಪಿಸಿ ದಾನಕೊಟ್ಟು ಮರಣಹೊಂದುತ್ತಾನೆ. ದಾನಕೊಟ್ಟ ಹಸುವಿಗೆ ದಾನಿಯನ್ನು ಉದ್ಧರಿಸುವ ಸಾಮರ್ಥ್ಯವಿದೆ ಎಂದು ಭಾವಿಸಿದರೂ ಆ ಹಸುವು ಯಾರನ್ನು ಉದ್ಧರಿಸುತ್ತದೆ? ಶರೀರವನ್ನು ಬಿಟ್ಟುಹೋದ ಪಂಚಭೂತಗಳನ್ನೇ ಅಥವಾ ಜೀವನನ್ನೇ? (ಭಾರತ ದರ್ಶನ)

[5] ಇದರಿಂದ ಮನಸ್ಸಿಗೂ ಅತಿರಿಕ್ತವಾಗಿ ಅದರ ಸಾಕ್ಷೀ ಆತ್ಮದ ಅಸ್ತಿತ್ವವು ಸ್ವತಃ ಸಿದ್ಧವಾಗುತ್ತದೆ (ಗೀತಾ ಪ್ರೆಸ್).

[6] ಇಲ್ಲಿ ಮನುಷ್ಯನ ಶರೀರವೇ ನೀರು, ಅದರಲ್ಲಿ ಮಲಗಿರುವ ಶೇಷಶಾಯೀ ನಾರಾಯಣ ಮತ್ತು ಅವನ ನಾಭಿಕಮಲದಲ್ಲಿರುವ ಬ್ರಹ್ಮ  - ಈ ಕಲ್ಪನೆಯು ಬರುತ್ತದೆ.

[7] ಅಧ್ಯಯನ, ಅಧ್ಯಾಪನ, ಯಜ್ಞ, ಯಾಜನ, ದಾನ ಮತ್ತು ಪರಿಗ್ರಹಗಳು ಆರು ಕರ್ಮಗಳು.

[8] ಈ ಶ್ಲೋಕದಲ್ಲಿ ಭರದ್ವಾಜನ ಮೂರೂ ಪ್ರಶ್ನೆಗಳಿಗೆ ಉತ್ತರವಿದೆ: (೧) ಸ್ವಧರ್ಮಾಚರಣೆಯೇ ಎಲ್ಲರ ಧರ್ಮವು. (೨) ವರ್ಣಾಶ್ರಮಧರ್ಮಗಳ ಅನುಷ್ಠಾನವೇ ಧರ್ಮದ ಲಕ್ಷಣ ಮತ್ತು (೩) ಎಷ್ಟು ವರ್ಣಗಳಿವೆಯೋ ಮತ್ತು ಎಷ್ಟು ಆಶ್ರಮಗಳಿವೆಯೋ ಅಷ್ಟು ವಿಧದ ಧರ್ಮಗಳಿವೆ (ಭಾರತ ದರ್ಶನ).

[9] ಆಚಾರ್ಯ ನೀಲಕಂಠನು ಶ್ಲೋಕ ಮತ್ತು ಮುಂದಿನ ಐದು ಶ್ಲೋಕಗಳನ್ನು ಆಧ್ಯಾತ್ಮಿಕವಾಗಿ ಅರ್ಥೈಸಿದ್ದಾನೆ. ಅವನು ಪರಲೋಕ ಅಥವಾ ಉತ್ಕೃಷ್ಠ ಲೋಕದ ಅರ್ಥವು ಪರಮಾತ್ಮ ಎಂದು ತಿಳಿದು ಅದೇ ದೃಷ್ಟಿಯಲ್ಲಿ ಶ್ರುತಿ ಮತ್ತು ಯುಕ್ತಿಯನ್ನಾಶ್ರಯಿಸಿ ಸಂಪೂರ್ಣಪ್ರಕರಣವನ್ನು ಅರ್ಥೈಸಿದ್ದಾನೆ (ಗೀತಾ ಪ್ರೆಸ್).

Leave a Reply

Your email address will not be published. Required fields are marked *