ಇರಾವಾನ

ಮಹಾಭಾರತದಲ್ಲಿ ಇರಾವಾನ್ ಅಥವಾ ಇರಾವಂತ್ ಎಂಬ ಎರಡೂ ಹೆಸರುಗಳಲ್ಲಿ ಕರೆಯಲ್ಪಟ್ಟಿರುವ ಇವನು ಅರ್ಜುನನ ಹಿರಿಯ ಮಗ. ನಾಗಕನ್ಯೆ ಉಲೂಪಿಯಲ್ಲಿ ಹುಟ್ಟಿದವನು. ನಾಗಲೋಕದಲ್ಲಿ ಬೆಳೆದವನು. ಮಹಾಭಾರತ ಯುದ್ಧದ ಎಂಟನೆಯ ದಿನ ಶಕುನಿಯ ಐವರು ಸಹೋದರರನ್ನು ಸಂಹರಿಸಿ, ರಾಕ್ಷಸ ಆರ್ಶ್ಯಶೃಂಗಿಯನ್ನು ಎದುರಿಸಿ ಮಾಯಾ ಯುದ್ಧದಲ್ಲಿ ಹತನಾದನು.

ಇರಾವಾನನ ಕುರಿತು ಮಹಾಭಾರತದಲ್ಲಿ ಮೊಟ್ಟಮೊದಲನೇ ಬಾರಿ ಯುದ್ಧಪರ್ವಗಳಲ್ಲಿ ಮೊದಲನೆಯದಾದ ಭೀಷ್ಮ ಪರ್ವದ ೪೩ನೇ ಅಧ್ಯಾಯದಲ್ಲಿ ಬರುತ್ತದೆ. ಆರ್ಜುನಿ ಅಂದರೆ ಅರ್ಜುನನ ಮಗನೆಂದು, ಫಾಲ್ಗುನಿ ಅಂದರೆ ಫಲ್ಗುನನ ಮಗನೆಂದೂ ಮತ್ತು ಮಹಾರನೆಂದೂ ಪರಿಚಯಿಸುತ್ತಾ ಯುದ್ಧದ ಮೊದಲನೆಯ ದಿನದ ಅಪರಾಹ್ಣದಲ್ಲಿ ನಡೆದ ದ್ವಂದ್ವಯುದ್ಧಗಳನ್ನು ವರದಿಮಾಡುತ್ತಾ ಸಂಜಯನು ಧೃತರಾಷ್ಟ್ರನಿಗೆ ಇರಾವನ ಮತ್ತು ಶ್ರುತಾಯುಷರ ಯುದ್ದದ ಕುರಿತು ಹೀಗೆ ಹೇಳುತ್ತಾನೆ:

ಆರ್ಜುನಿಸ್ತಸ್ಯ ಸಮರೇ ಹಯಾನ್ ಹತ್ವಾ ಮಹಾರಥಃ|

ನನಾದ ಸುಮಹನ್ನಾದಂ ತತ್ಸೈನ್ಯಂ ಪ್ರತ್ಯಪೂರಯತ್||

ಶ್ರುತಾಯುಸ್ತ್ವಥ ಸಂಕ್ರುದ್ಧಃ ಫಾಲ್ಗುನೇಃ ಸಮರೇ ಹಯಾನ್|

ನಿಜಘಾನ ಗದಾಗ್ರೇಣ ತತೋ ಯುದ್ಧಮವರ್ತತ||

ಆಗ ಸಂಕ್ರುದ್ಧನಾದ ಇರಾವಾನನು ಚೆನ್ನಾಗಿ ಪ್ರಯತ್ನಮಾಡಿ ಅಮರ್ಷಣ ಶ್ರುತಾಯುಷನೊಂದಿಗೆ ಪ್ರತಿಯುದ್ಧವನ್ನು ಮಾಡಿದನು. ಅರ್ಜುನನ ಮಹಾರಥ ಮಗನು ಸಮರದಲ್ಲಿ ಅವನ ಕುದುರೆಗಳನ್ನು ಕೊಂದು ಮಹಾ ಗರ್ಜನೆಯನ್ನು ಮಾಡಲು ಸೇನೆಯು ಅವನನ್ನು ಮೆಚ್ಚಿತು. ಆಗ ಶ್ರುತಾಯುಷನೂ ಸಂಕ್ರುದ್ಧನಾಗಿ ಸಮರದಲ್ಲಿ ಫಾಲ್ಗುನಿಯ ಕುದುರೆಗಳನ್ನು ಗದೆಯ ತುದಿಯಿಂದ ಹೊಡೆದುರುಳಿಸಿದನು. ಆಗ ಯುದ್ಧವು ಮುಂದುವರೆಯಿತು.

ಇದಕ್ಕೆ ಮೊದಲು ಮಹಾಭಾರತದಲ್ಲಿ ಇರಾವಾನನ ಕುರಿತು ಎಲ್ಲಿಯೂ ಉಲ್ಲೇಖವಿಲ್ಲದಿರುವುದು ಒಂದು ವಿಶೇಷವೇ ಸರಿ. ಅರ್ಜುನನಿಗೆ ಚಿತ್ರಾಂಗದೆಯಲ್ಲಿ ಬಭ್ರುವಾಹನ (ಆದಿಪರ್ವ, ಅಧ್ಯಾಯ ೨೦೯), ಸುಭದ್ರೆಯಲ್ಲಿ ಅಭಿಮನ್ಯು (ಆದಿಪರ್ವ, ಅಧ್ಯಾಯ ೨೧೩) ಮತ್ತು ದ್ರೌಪದಿಯಲ್ಲಿ ಶ್ರುತಕರ್ಮ (ಆದಿಪರ್ವ, ಅಧ್ಯಾಯ ೨೧೩) ಎಂಬ ಮಕ್ಕಳಿದ್ದರೆಂದು ಆದಿಪರ್ವದಲ್ಲಿಯೇ ಬಂದಿದ್ದರೂ ಇರಾವಾನನ ಕುರಿತು  ಭೀಷ್ಮಪರ್ವದ ಮೊದಲು ಬಂದಿಲ್ಲ.

ಯುದ್ಧದ ಮೂರನೇ ದಿನದಲ್ಲಿ ಪಾಂಡವಸೇನೆಯ ಅರ್ಧಚಂದ್ರ ವ್ಯೂಹವರ್ಣನೆಯಲ್ಲಿ ವೂಹಮಧ್ಯದಲ್ಲಿದ್ದ ಯುಧಿಷ್ಠಿರನ ಪಕ್ಕಕ್ಕೆ ಇರಾವಾನನೂ ವ್ಯೂಹದಲ್ಲಿ ಯುದ್ಧಕ್ಕೆ ನಿಂತಿದ್ದನು (ಭೀಷ್ಮ ಪರ್ವ ಅಧ್ಯಾಯ ೫೨ರಲ್ಲಿ). ಆದರೆ ಇಲ್ಲಿ ಇರಾವಾನನ ಯುದ್ಧದ ವಿಶೇಷ ವರ್ಣನೆಯೇನೂ ಇಲ್ಲ.

ತಥೈವ ಧರ್ಮರಾಜೋಽಪಿ ಗಜಾನೀಕೇನ ಸಂವೃತಃ|

ತತಸ್ತು ಸಾತ್ಯಕೀ ರಾಜನ್ದ್ರೌಪದ್ಯಾಃ ಪಂಚ ಚಾತ್ಮಜಾಃ||

ಅಭಿಮನ್ಯುಸ್ತತಸ್ತೂರ್ಣಂ ಇರಾವಾಂಶ್ಚ ತತಃ ಪರಂ|

ಭೈಮಸೇನಿಸ್ತತೋ ರಾಜನ್ಕೇಕಯಾಶ್ಚ ಮಹಾರಥಾಃ||

ಅಲ್ಲಿಯೇ ಗಜಸೇನೆಯಿಂದ ಸಂವೃತನಾಗಿ ಧರ್ಮರಾಜನೂ, ಅನಂತರ ಸಾತ್ಯಕಿಯೂ, ದ್ರೌಪದಿಯ ಐವರು ಪುತ್ರರೂ, ಅಭಿಮನ್ಯುವೂ, ಅವನ ಪಕ್ಕದಲ್ಲಿಯೇ ಇರಾವಾನನೂ, ಅವನ ನಂತರ ಭೈಮಸೇನಿ (ಘಟೋತ್ಕಚ) ಯೂ ಅನಂತರ ಮಹಾರಥ ಕೇಕಯರೂ ಇದ್ದರು.

ಏಳನೇ ದಿವಸದ ಪೂರ್ವಾಹ್ಣದಲ್ಲಿ ಇರಾವಾನನು ಅವಂತಿಯ ವಿಂದಾನುವಿಂದರೊಡನೆ ಯುದ್ಧಮಾಡುತ್ತಾನೆ (ಭೀಷ್ಮ ಪರ್ವ, ಅಧ್ಯಾಯ ೭೯).

ಆವಂತ್ಯೌ ತು ಮಹೇಷ್ವಾಸೌ ಮಹಾತ್ಮಾನೌ ಮಹಾಬಲೌ|

ಇರಾವಂತಮಭಿಪ್ರೇಕ್ಷ್ಯ ಸಮೇಯಾತಾಂ ರಣೋತ್ಕಟೌ|

ತೇಷಾಂ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ||

ಇರಾವಾಂಸ್ತು ಸುಸಂಕ್ರುದ್ಧೋ ಭ್ರಾತರೌ ದೇವರೂಪಿಣೌ|

ವಿವ್ಯಾಧ ನಿಶಿತೈಸ್ತೂರ್ಣಂ ಶರೈಃ ಸನ್ನತಪರ್ವಭಿಃ|

ತಾವೇನಂ ಪ್ರತ್ಯವಿಧ್ಯೇತಾಂ ಸಮರೇ ಚಿತ್ರಯೋಧಿನೌ||

ಯುಧ್ಯತಾಂ ಹಿ ತಥಾ ರಾಜನ್ವಿಶೇಷೋ ನ ವ್ಯದೃಶ್ಯತ|

ಯತತಾಂ ಶತ್ರುನಾಶಾಯ ಕೃತಪ್ರತಿಕೃತೈಷಿಣಾಂ||

ಇರಾವಾಂಸ್ತು ತತೋ ರಾಜನ್ನನುವಿಂದಸ್ಯ ಸಾಯಕೈಃ|

ಚತುರ್ಭಿಶ್ಚತುರೋ ವಾಹಾನನಯದ್ಯಮಸಾದನಂ||

ಭಲ್ಲಾಭ್ಯಾಂ ಚ ಸುತೀಕ್ಷ್ಣಾಭ್ಯಾಂ ಧನುಃ ಕೇತುಂ ಚ ಮಾರಿಷ|

ಚಿಚ್ಛೇದ ಸಮರೇ ರಾಜಂಸ್ತದದ್ಭುತಮಿವಾಭವತ್||

ತ್ಯಕ್ತ್ವಾನುವಿಂದೋಽಥ ರಥಂ ವಿಂದಸ್ಯ ರಥಮಾಸ್ಥಿತಃ|

ಧನುರ್ಗೃಹೀತ್ವಾ ನವಮಂ ಭಾರಸಾಧನಮುತ್ತಮಂ||

ತಾವೇಕಸ್ಥೌ ರಣೇ ವೀರಾವಾವಂತ್ಯೌ ರಥಿನಾಂ ವರೌ|

ಶರಾನ್ಮುಮುಚತುಸ್ತೂರ್ಣಮಿರಾವತಿ ಮಹಾತ್ಮನಿ||

ತಾಭ್ಯಾಂ ಮುಕ್ತಾ ಮಹಾವೇಗಾಃ ಶರಾಃ ಕಾಂಚನಭೂಷಣಾಃ|

ದಿವಾಕರಪಥಂ ಪ್ರಾಪ್ಯ ಚಾದಯಾಮಾಸುರಂಬರಂ||

ಇರಾವಾಂಸ್ತು ತತಃ ಕ್ರುದ್ಧೋ ಭ್ರಾತರೌ ತೌ ಮಹಾರಥೌ|

ವವರ್ಷ ಶರವರ್ಷೇಣ ಸಾರಥಿಂ ಚಾಪ್ಯಪಾತಯತ್||

ತಸ್ಮಿನ್ನಿಪತಿತೇ ಭೂಮೌ ಗತಸತ್ತ್ವೇಽಥ ಸಾರಥೌ|

ರಥಃ ಪ್ರದುದ್ರಾವ ದಿಶಃ ಸಮುದ್ಭ್ರಾಂತಹಯಸ್ತತಃ||

ತೌ ಸ ಜಿತ್ವಾ ಮಹಾರಾಜ ನಾಗರಾಜಸುತಾಸುತಃ|

ಪೌರುಷಂ ಖ್ಯಾಪಯಂಸ್ತೂರ್ಣಂ ವ್ಯಧಮತ್ತವ ವಾಹಿನೀಂ||

ಸಾ ವಧ್ಯಮಾನಾ ಸಮರೇ ಧಾರ್ತರಾಷ್ಟ್ರೀ ಮಹಾಚಮೂಃ|

ವೇಗಾನ್ಬಹುವಿಧಾಂಶ್ಚಕ್ರೇ ವಿಷಂ ಪೀತ್ವೇವ ಮಾನವಃ||

ಅವಂತಿಯ ಮಹೇಷ್ವಾಸ ಮಹಾತ್ಮ ಮಹಾಬಲರಿಬ್ಬರೂ ಇರಾವಾನನನ್ನು ನೋಡಿ ರಣೋತ್ಕಟರಾಗಿ ಒಟ್ಟಿಗೇ ಎದುರಿಸಿದರು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಸಂಕ್ರುದ್ಧ ಇರಾವಾನನು ದೇವರೂಪಿ ಸಹೋದರರನ್ನು ತಕ್ಷಣವೇ ನಿಶಿತ ಸನ್ನತಪರ್ವ ಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಸಮರದಲ್ಲಿ ಚಿತ್ರಯೋಧಿಗಳು ಅವನನ್ನು ಹೊಡೆದರು. ರಾಜನ್! ಶತ್ರುನಾಶಕ್ಕೆ ಪ್ರಯತ್ನಿಸುತ್ತಾ, ಪ್ರಹಾರ ಪ್ರತಿಪ್ರಹಾರಗಳನ್ನು ಮಾಡುತ್ತಾ ಹಾಗೆ ಯುದ್ಧಮಾಡುತ್ತಿದ್ದ ಅವರಲ್ಲಿ ವಿಶೇಷ ಅಂತರವೇನೂ ಕಾಣಲಿಲ್ಲ. ರಾಜನ್! ಆಗ ಇರಾವಾನನು ನಾಲ್ಕು ಬಾಣಗಳಿಂದ ಅನುವಿಂದನ ರಥದ ನಾಲ್ಕೂ ಕುದುರೆಗಳನ್ನು ಯಮಾಲಯಕ್ಕೆ ಕಳುಹಿಸಿಕೊಟ್ಟನು. ಮಾರಿಷ! ಎರಡು ಸುತೀಕ್ಷ್ಣ ಭಲ್ಲಗಳಿಂದ ಅವನ ಧನುಸ್ಸನ್ನೂ ಧ್ವಜವನ್ನೂ ಸಮರದಲ್ಲಿ ಕತ್ತರಿಸಿದನು. ರಾಜನ್! ಅದು ಅದ್ಭುತವಾಗಿತ್ತು. ಆಗ ಅನುವಿಂದನು ಹೊಸತಾದ ಭಾರಸಾಧನ ಉತ್ತಮ ಧನುಸ್ಸನ್ನು ಹಿಡಿದು ವಿಂದನ ರಥವನ್ನೇರಿದನು. ಅವರಿಬ್ಬರು ಅವಂತಿಯ ವೀರರೂ ರಥಿಗಳಲ್ಲಿ ಶ್ರೇಷ್ಠರೂ ಒಂದೇ ರಥದಲ್ಲಿದ್ದುಕೊಂಡು ಮಹಾತ್ಮ ಇರಾವಂತನ ಮೇಲೆ ಬೇಗ ಶರಗಳನ್ನು ಪ್ರಯೋಗಿಸಿದರು. ಅವರು ಬಿಟ್ಟ ಮಹಾವೇಗದ ಕಾಂಚನಭೂಷಣ ಶರಗಳು ದಿವಾಕರನ ಪಥವನ್ನು ಅನುಸರಿಸಿ ಆಕಾಶವನ್ನೆಲ್ಲಾ ತುಂಬಿದವು. ಆಗ ಇರಾವಂತನು ಕ್ರುದ್ಧನಾಗಿ ಆ ಮಹಾರಥ ಸಹೋದರರಿಬ್ಬರ ಮೇಲೆ ಶರವರ್ಷವನ್ನು ಸುರಿಸಿ ಸಾರಥಿಯನ್ನು ಬೀಳಿಸಿದನು. ಪ್ರಾಣಕಳೆದುಕೊಂಡು ಸಾರಥಿಗಳಿಬ್ಬರೂ ಭೂಮಿಯ ಮೇಲೆ ಬೀಳಲು ಭ್ರಾಂತಗೊಂಡ ಕುದುರೆಗಳು ರಥವನ್ನು ದಿಕ್ಕು ದಿಕ್ಕುಗಳಿಗೆ ಕೊಂಡೊಯ್ದವು. ಮಹಾರಾಜ! ನಾಗರಾಜನ ಮಗಳ ಮಗನಾದ ಅವನು ಅವರಿಬ್ಬರನ್ನು ಪರಾಜಯಗೊಳಿಸಿ ತನ್ನ ಪೌರುಷವನ್ನು ಪ್ರಕಟಪಡಿಸುತ್ತಾ ನಿನ್ನ ಸೇನೆಯನ್ನು ನಾಶಪಡಿಸತೊಡಗಿದನು. ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ಧಾರ್ತರಾಷ್ಟ್ರನ ಮಹಾಸೇನೆಯು ವಿಷಪಾನಮಾಡಿದ ಮನುಷ್ಯನಂತೆ ಬಹುವಿಧವಾಗಿ ನಡೆದುಕೊಂಡಿತು.

ಈ ಯುದ್ಧದ ವರ್ಣನೆಯಲ್ಲಿ ಅವನನ್ನು ಒಮ್ಮೆ”ಇರಾವಂತ”ನೆಂದೂ “ನಾಗರಾಜಸುತಾಸುತಃ” ಅಂದರೆ ನಾಗರಾಜನ ಮಗಳ ಮಗ ಎಂದೂ ಕರೆಯಲಾಗಿದೆ. ನಾಗರಾಜನ ಮಗಳು ಎಂದರೆ ಉಲೂಪಿ. ಇರಾವಾನನು ಐರಾವತನ ವಂಶಜ ನಾಗರಾಜ ಕೌರವ್ಯನ ಮಗಳು ಉಲೂಪಿಯಲ್ಲಿ ಅರ್ಜುನನಿಗೆ ಹುಟ್ಟಿದವನು. ಭೀಷ್ಮಪರ್ವದ ಅಧ್ಯಾಯ ೫೬ರಲ್ಲಿ ಬರುವ ಎಂಟನೆಯ ದಿನದ ಯುದ್ಧದ ವರ್ಣನೆಯಲ್ಲಿ ಸಂಜಯನು ಧೃತರಾಷ್ಟ್ರನಿಗೆ ಇರಾವಾನನ ಪರಿಚಯವನ್ನು ಈ ಕೆಳಗಿನ ಶ್ಲೋಕಗಳಲ್ಲಿ ಕೊಡುತ್ತಾನೆ:

ಅರ್ಜುನಸ್ಯಾಥ ದಾಯಾದ ಇರಾವಾನ್ನಾಮ ವೀರ್ಯವಾನ್|

ಸುತಾಯಾಂ ನಾಗರಾಜಸ್ಯ ಜಾತಃ ಪಾರ್ಥೇನ ಧೀಮತಾ||

ಐರಾವತೇನ ಸಾ ದತ್ತಾ ಅನಪತ್ಯಾ ಮಹಾತ್ಮನಾ|

ಪತ್ಯೌ ಹತೇ ಸುಪರ್ಣೇನ ಕೃಪಣಾ ದೀನಚೇತನಾ||

ಭಾರ್ಯಾರ್ಥಂ ತಾಂ ಚ ಜಗ್ರಾಹ ಪಾರ್ಥಃ ಕಾಮವಶಾನುಗಾಂ|

ಏವಮೇಷ ಸಮುತ್ಪನ್ನಃ ಪರಕ್ಷೇತ್ರೇಽರ್ಜುನಾತ್ಮಜಃ||

ಇವನು ಇರಾವನ್ ಎಂಬ ಹೆಸರಿನ ಅರ್ಜುನನ ವೀರ್ಯವಾನ್ ಮಗ. ನಾಗರಾಜನ ಮಗಳಲ್ಲಿ ಧೀಮತ ಪಾರ್ಥನಿಂದ ಹುಟ್ಟಿದವನು. ಗರುಡನಿಂದ ತನ್ನ ಪತಿಯನ್ನು ಕಳೆದುಕೊಂಡ ಮಕ್ಕಳಿರದ, ದೀನಚೇತನಳಾಗಿದ್ದ, ಕೃಪಣಳಾಗಿದ್ದ ಅವಳನ್ನು ಮಹಾತ್ಮ ಐರಾವತನು ಅವನಿಗೆ ಕೊಟ್ಟಿದ್ದನು. ಕಾಮವಶಾನುಗಳಾಗಿದ್ದ ಅವಳನ್ನು ಪಾರ್ಥನು ಪತ್ನಿಯನ್ನಾಗಿ ಸ್ವೀಕರಿಸಿದ್ದನು. ಇವನೇ ಇನ್ನೊಬ್ಬನ ಹೆಂಡತಿಯಲ್ಲಿ (ಪರಕ್ಷೇತ್ರದಲ್ಲಿ) ಹುಟ್ಟಿದ ಅರ್ಜುನನ ಮಗ.

ದ್ರೌಪದಿಯ ಕುರಿತು ಸಹೋದರರು ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುದಕ್ಕಾಗಿ ಅರ್ಜುನನು ವನವಾಸವನ್ನು ಕೈಗೊಂಡು ಗಂಗಾದ್ವಾರದಲ್ಲಿ ಸ್ನಾನಕ್ಕೆಂದು ಗಂಗೆಯಲ್ಲಿ ಇಳಿದಾಗ ಕಾಮ ಮೂರ್ಛಿತಳಾದ ಉಲೂಪಿಯು ಅವನನ್ನು ನಾಗಲೋಕಕ್ಕೆ ಕೊಂಡೊಯ್ದು ಅವನೊಂದಿಗೆ ರಾತ್ರಿಯನ್ನು ಕಳೆದ ವಿಷಯವು ಆದಿಪರ್ವದ ಅಧ್ಯಾಯ ೨೦೬ರಲ್ಲಿ ಬಂದಿದೆ. ಆದರೆ ಈ ಅಧ್ಯಾಯದಲ್ಲಿ ಉಲೂಪಿಯು ವಿಧವೆ ಎಂಬ ವಿಷಯವು ಬಂದಿರುವುದಿಲ್ಲ. ವಿಧವೆಯಾಗಿದ್ದ ಉಲೂಪಿಯಲ್ಲಿ ಹುಟ್ಟಿದವನಾದುದರಿಂದ ಇರಾವಾನನು ಅರ್ಜುನನಿಗೆ ಪರಕ್ಷೇತ್ರದಲ್ಲಿ ಹುಟ್ಟಿದ ಮಗನೆಂದು ತಿಳಿಯಬೇಕು.

ಇರಾವಾನ ಕುರಿತು ಈ ಇನ್ನೊಂದು ಶ್ಲೋಕವು ಪಾರ್ಥನ ದ್ವೇಷದಿಂದಾಗಿ ಚಿಕ್ಕಪ್ಪನಿಂದ ಪರಿತ್ಯಕ್ತನಾದ ಇರಾವಾನನು ನಾಗಲೋಕದಲ್ಲಿ ತನ್ನ ತಾಯಿಯಿಂದ ರಕ್ಷಿತನಾಗಿ ಬೆಳೆದನೆನ್ನುವುದು ತಿಳಿಯುತ್ತದೆ. ಆದರೆ ಇರಾವಾನನ ಚಿಕ್ಕಪ್ಪನ್ಯಾರು ಮತ್ತು ಅರ್ಜುನನೊಂದಿಗೆ ಅವನಿಗಿದ್ದ ದ್ವೇಷವು ಯಾವ ಕಾರಣಕ್ಕಾಗಿ ಎನ್ನುವುದು ಮಹಾಭಾರತದಲ್ಲಿ ವರ್ಣಿತವಾಗಿಲ್ಲ.

ಸ ನಾಗಲೋಕೇ ಸಂವೃದ್ಧೋ ಮಾತ್ರಾ ಚ ಪರಿರಕ್ಷಿತಃ|

ಪಿತೃವ್ಯೇಣ ಪರಿತ್ಯಕ್ತಃ ಪಾರ್ಥದ್ವೇಷಾದ್ದುರಾತ್ಮನಾ||

ಸಂಜಯನು ಇರಾವಾನನನ್ನು ರೂಪವಂತ, ಗುಣವಂತ, ವೀರ್ಯಸಂಪನ್ನ, ಸತ್ಯವಿಕ್ರಮಿ ಮತ್ತು ಅರ್ಜುನನ ಸಮಾನ ಗುಣಗಳನ್ನು ಹೊಂದಿದ್ದವನು ಎಂದು ವರ್ಣಿಸಿದ್ದಾನೆ. ಇರಾವಾನನು ಅರ್ಜುನನನ್ನು ದೇವಲೋಕದಲ್ಲಿ ಮೊದಲು ಭೇಟಿಯಾಗಿ, ತನ್ನನ್ನು ಪರಿಚಯಿಸಿಕೊಂಡು, ಯುದ್ಧಕಾಲದಲ್ಲಿ ಸಹಾಯಮಾಡುತ್ತೇನೆಂದು ಹೇಳಿಕೊಂಡಿದ್ದಂತೆ ಮಹಾಭಾರತ ಯುದ್ಧದಲ್ಲಿ ತನ್ನ ಅಶ್ವಸೇನೆಯೊಂದಿಗೆ ಬಂದು ಪಾಂಡವರನ್ನು ಸೇರಿದ್ದನು.

ರೂಪವಾನ್ವೀರ್ಯಸಂಪನ್ನೋ ಗುಣವಾನ್ಸತ್ಯವಿಕ್ರಮಃ|

ಇಂದ್ರಲೋಕಂ ಜಗಾಮಾಶು ಶ್ರುತ್ವಾ ತತ್ರಾರ್ಜುನಂ ಗತಂ||

ಸೋಽಭಿಗಮ್ಯ ಮಹಾತ್ಮಾನಂ ಪಿತರಂ ಸತ್ಯವಿಕ್ರಮಂ|

ಅಭ್ಯವಾದಯದವ್ಯಗ್ರೋ ವಿನಯೇನ ಕೃತಾಂಜಲಿಃ|

ಇರಾವಾನಸ್ಮಿ ಭದ್ರಂ ತೇ ಪುತ್ರಶ್ಚಾಹಂ ತವಾಭಿಭೋ||

ಮಾತುಃ ಸಮಾಗಮೋ ಯಶ್ಚ ತತ್ಸರ್ವಂ ಪ್ರತ್ಯವೇದಯತ್|

ತಚ್ಚ ಸರ್ವಂ ಯಥಾವೃತ್ತಮನುಸಸ್ಮಾರ ಪಾಂಡವಃ||

ಪರಿಷ್ವಜ್ಯ ಸುತಂ ಚಾಪಿ ಸೋಽಆತ್ಮನಃ ಸದೃಶಂ ಗುಣೈಃ|

ಪ್ರೀತಿಮಾನಭವತ್ಪಾರ್ಥೋ ದೇವರಾಜನಿವೇಶನೇ||

ಸೋಽರ್ಜುನೇನ ಸಮಾಜ್ಞಪ್ತೋ ದೇವಲೋಕೇ ತದಾ ನೃಪ|

ಪ್ರೀತಿಪೂರ್ವಂ ಮಹಾಬಾಹುಃ ಸ್ವಕಾರ್ಯಂ ಪ್ರತಿ ಭಾರತ|

ಯುದ್ಧಕಾಲೇ ತ್ವಯಾಸ್ಮಾಕಂ ಸಾಹ್ಯಂ ದೇಯಮಿತಿ ಪ್ರಭೋ||

ರೂಪವಂತನೂ, ಗುಣವಂತನೂ, ವೀರ್ಯಸಂಪನ್ನನೂ, ಸತ್ಯವಿಕ್ರಮಿಯೂ ಆದ ಅವನು ಅಲ್ಲಿಗೆ ಅರ್ಜುನನು ಹೋಗಿದ್ದುದನ್ನು ಕೇಳಿ ಇಂದ್ರಲೋಕಕ್ಕೆ ಹೋಗಿದ್ದನು. ಆ ಅವ್ಯಗ್ರನು ಅಲ್ಲಿಗೆ ಹೋಗಿ ತಂದೆ ಮಹಾತ್ಮ ಸತ್ಯವಿಕ್ರಮಿಗೆ ವಿನಯದಿಂದ ಕೈಮುಗಿದು ನಮಸ್ಕರಿಸಿ ಹೇಳಿದ್ದನು: “ಪ್ರಭೋ! ನಾನು ಇರಾವಾನ್. ನಿನ್ನ ಮಗ.” ಅವನು ತಾಯಿಯನ್ನು ಎಂದು ಭೇಟಿಯಾಗಿದ್ದನು ಎಲ್ಲವನ್ನೂ ಹೇಳಿಕೊಂಡನು. ಅವೆಲ್ಲವನ್ನು ನಡೆದ ಹಾಗೆಯೇ ಪಾಂಡವನು ನೆನಪಿಸಿಕೊಂಡನು. ದೇವರಾಜ ನಿವೇಶನದಲ್ಲಿ ಪಾರ್ಥನು ತನ್ನದೇ ಸಮಾನ ಗುಣಗಳನ್ನು ಹೊಂದಿದ್ದ ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂತೋಷಭರಿತನಾಗಿದ್ದನು. ನೃಪ! ಪ್ರಭೋ! ಭಾರತ! ಆಗ ದೇವಲೋಕದಲ್ಲಿ ಮಹಾಬಾಹು ಅರ್ಜುನನು ಸ್ವಕಾರ್ಯಕ್ಕಾಗಿ ಪ್ರೀತಿಪೂರ್ವಕವಾಗಿ ಯುದ್ಧಕಾಲದಲ್ಲಿ ನಮಗೆ ನಿನ್ನ ಸಹಾಯವನ್ನು ನೀಡು ಎಂದು ಆಜ್ಞೆಯಿತ್ತಿದ್ದನು. ಒಳ್ಳೆಯದು ಎಂದು ಹೇಳಿ ಅವನು ಯುದ್ಧಕಾಲದಲ್ಲಿ ಅನೇಕ ಕಾಮವರ್ಣಗಳ, ವೇಗಶಾಲೀ ಕುದುರೆಗಳಿಂದ ಸಂವೃತನಾಗಿ ಬಂದನು.

ಮಹಾಭಾರತ ಯುದ್ಧದಲ್ಲಿ ಇರಾವನನು ತನ್ನ ಅಶ್ವಸೇನೆಯೊಂದಿಗೆ ರಣವನ್ನು ಪ್ರವೇಶಿಸಿ, ಕೌರವರ ಅಶ್ವಸೇನೆಯನ್ನು ನಾಶಗೊಳಿಸಿದುದರ ವರ್ಣನೆಯು ಈ ರೀತಿಯಿದೆ:

ತತಃ ಕಾಂಬೋಜಮುಖ್ಯಾನಾಂ ನದೀಜಾನಾಂ ಚ ವಾಜಿನಾಂ|

ಆರಟ್ಟಾನಾಂ ಮಹೀಜಾನಾಂ ಸಿಂಧುಜಾನಾಂ ಚ ಸರ್ವಶಃ||

ವನಾಯುಜಾನಾಂ ಶುಭ್ರಾಣಾಂ ತಥಾ ಪರ್ವತವಾಸಿನಾಂ|

ಯೇ ಚಾಪರೇ ತಿತ್ತಿರಜಾ ಜವನಾ ವಾತರಂಹಸಃ||

ಸುವರ್ಣಾಲಂಕೃತೈರೇತೈರ್ವರ್ಮವದ್ಭಿಃ ಸುಕಲ್ಪಿತೈಃ|

ಹಯೈರ್ವಾತಜವೈರ್ಮುಖ್ಯೈಃ ಪಾಂಡವಸ್ಯ ಸುತೋ ಬಲೀ||

ಅಭ್ಯವರ್ತತ ತತ್ಸೈನ್ಯಂ ಹೃಷ್ಟರೂಪಃ ಪರಂತಪಃ||

ಬಾಢಮಿತ್ಯೇವಮುಕ್ತ್ವಾ ಚ ಯುದ್ಧಕಾಲ ಉಪಾಗತಃ|

ಕಾಮವರ್ಣಜವೈರಶ್ವೈಃ ಸಂವೃತೋ ಬಹುಭಿರ್ನೃಪ||

ತೇ ಹಯಾಃ ಕಾಂಚನಾಪೀಡಾ ನಾನಾವರ್ಣಾ ಮನೋಜವಾಃ|

ಉತ್ಪೇತುಃ ಸಹಸಾ ರಾಜನ್ ಹಂಸಾ ಇವ ಮಹೋದಧೌ||

ತೇ ತ್ವದೀಯಾನ್ಸಮಾಸಾದ್ಯ ಹಯಸಂಘಾನ್ಮಹಾಜವಾನ್|

ಕ್ರೋಡೈಃ ಕ್ರೋಡಾನಭಿಘ್ನಂತೋ ಘೋಣಾಭಿಶ್ಚ ಪರಸ್ಪರಂ|

ನಿಪೇತುಃ ಸಹಸಾ ರಾಜನ್ಸುವೇಗಾಭಿಹತಾ ಭುವಿ||

ನಿಪತದ್ಭಿಸ್ತಥಾ ತೈಶ್ಚ ಹಯಸಂಘೈಃ ಪರಸ್ಪರಂ|

ಶುಶ್ರುವೇ ದಾರುಣಃ ಶಬ್ದಃ ಸುಪರ್ಣಪತನೇ ಯಥಾ||

ತಥೈವ ಚ ಮಹಾರಾಜ ಸಮೇತ್ಯಾನ್ಯೋನ್ಯಮಾಹವೇ|

ಪರಸ್ಪರವಧಂ ಘೋರಂ ಚಕ್ರುಸ್ತೇ ಹಯಸಾದಿನಃ||

ತಸ್ಮಿಂಸ್ತಥಾ ವರ್ತಮಾನೇ ಸಂಕುಲೇ ತುಮುಲೇ ಭೃಶಂ|

ಉಭಯೋರಪಿ ಸಂಶಾಂತಾ ಹಯಸಂಘಾಃ ಸಮಂತತಃ||

ಪ್ರಕ್ಷೀಣಸಾಯಕಾಃ ಶೂರಾ ನಿಹತಾಶ್ವಾಃ ಶ್ರಮಾತುರಾಃ|

ವಿಲಯಂ ಸಮನುಪ್ರಾಪ್ತಾಸ್ತಕ್ಷಮಾಣಾಃ ಪರಸ್ಪರಂ||

ಆಗ ಕಾಂಬೋಜಮುಖ್ಯ ಮತ್ತು ನದಿಗಳಲ್ಲಿ ಹುಟ್ಟಿದ ಕುದುರೆಗಳಿಂದ, ಅರಟ್ಟರು, ಮಹೀಜರು ಮತ್ತು ಸಿಂಧುಜರಿಂದ ಸುತ್ತುವರೆಯಲ್ಪಟ್ಟು, ವನಾಯುಜರು, ಶುಭ್ರರು ಮತ್ತು ಪರ್ವತವಾಸಿಗಳಿಂದ, ಮತ್ತು ಇತರ ತಿತ್ತಿರಜ ಮೊದಲಾದ ವಾಯುವೇಗವುಳ್ಳ ಸುವರ್ಣಾಲಂಕೃತಗೊಂಡ, ಕವಚಕಗಳನ್ನು ಧರಿಸಿದ್ದ ಸುಕಲ್ಪಿತವಾದ, ಹಯಗಳೊಡನೆ ಪಾಂಡವನ ಬಲಶಾಲೀ ಮಗ ಹೃಷ್ಟರೂಪ ಪರಂತಪನು ಆ ಸೈನ್ಯವನ್ನು ಎದುರಿಸಿದನು. ರಾಜನ್! ಕಾಂಚನದೇಹದ, ನಾನಾವರ್ಣಗಳ, ಮನಸ್ಸಿನ ವೇಗವುಳ್ಳ ಆ ಕುದುರೆಗಳು ಒಮ್ಮಿಂದೊಮ್ಮೆಲೇ ಹಂಸಗಳಂತೆ ಮಹಾಸಾಗರದಿಂದ ಮೇಲೆದ್ದವು. ಅವು ನಿನ್ನ ಸೇನೆಯ ಕುದುರೆಗಳ ಗುಂಪನ್ನು ತಲುಪಿ ಮೂಗಿನಿಂದ ಮೂಗುಗಳನ್ನು, ಕುತ್ತಿಗೆಗಳನ್ನು ಪರಸ್ಪರ ಹೊಡೆಯಲು ನಿನ್ನವರ ಕುದುರೆಗಳು ತಕ್ಷಣವೇ ಭೂಮಿಯ ಮೇಲೆ ಬಿದ್ದವು. ಆ ಕುದುರೆಗಳ ಸಮೂಹಗಳು ಪರಸ್ಪರರನ್ನು ಹೊಡೆದು ಬೀಳಿಸುವಾಗ ಗರುಡನು ಕೆಳಗಿಳಿಯುವಂತೆ ದಾರುಣ ಶಬ್ಧವು ಕೇಳಿಬಂದಿತು. ಮಹಾರಾಜ! ಹಾಗೆಯೇ ಯುದ್ಧದಲ್ಲಿ ಅನ್ಯೋನ್ಯರನ್ನು ತಾಗಿ ಆ ಅಶ್ವಾರೋಹಿಗಳು ಘೋರ ಪರಸ್ಪರವಧೆಯಲ್ಲಿ ತೊಡಗಿದರು. ನಡೆಯುತ್ತಿದ್ದ ಆ ತುಮುಲ ಸಂಕುಲ ಯುದ್ಧದಲ್ಲಿ ಎರಡೂ ಕಡೆಯ ಕುದುರೆಗಳು ಗುಂಪು ಗುಂಪಾಗಿ ಎಲ್ಲ ಕಡೆ ಓಡುತ್ತಿದ್ದವು. ಸಾಯಕಗಳಿಂದ ಗಾಯಗೊಂಡು, ಅಶ್ವಗಳನ್ನು ಕಳೆದುಕೊಂಡು ಆಯಾಸಗೊಂಡ ಶೂರರು ಪರಸ್ಪರರನ್ನು ಎದುರಿಸಿ ನಾಶ ಹೊಂದಿದರು.

ಕೌರವನ ಅಶ್ವಸೇನೆಯು ನಾಶವಾಗಲು ಶಕುನಿಯ ಐವರು ಸಹೋದರರು ಇರಾವನನನ್ನು ಎದುರಿಸಿ ಹತರಾಗುತ್ತಾರೆ.

ತತಃ ಕ್ಷೀಣೇ ಹಯಾನೀಕೇ ಕಿಂಚಿಚ್ಛೇಷೇ ಚ ಭಾರತ|

ಸೌಬಲಸ್ಯಾತ್ಮಜಾಃ[1] ಶೂರಾ ನಿರ್ಗತಾ ರಣಮೂರ್ಧನಿ||

ವಾಯುವೇಗಸಮಸ್ಪರ್ಶಾ ಜವೇ ವಾಯುಸಮಾಂಸ್ತಥಾ|

ಆರುಹ್ಯಯ ಶೀಲಸಂಪನ್ನಾನ್ವಯಃಸ್ಥಾಂಸ್ತುರಗೋತ್ತಮಾನ್||

ಗಜೋ ಗವಾಕ್ಷೋ ವೃಷಕಶ್ಚರ್ಮವಾನಾರ್ಜವಃ ಶುಕ|

ಷಡೇತೇ ಬಲಸಂಪನ್ನಾ ನಿರ್ಯಯುರ್ಮಹತೋ ಬಲಾತ್||

ವಾರ್ಯಮಾಣಾಃ ಶಕುನಿನಾ ಸ್ವೈಶ್ಚ ಯೋಧೈರ್ಮಹಾಬಲೈಃ|

ಸನ್ನದ್ಧಾ ಯುದ್ಧಕುಶಲಾ ರೌದ್ರರೂಪಾ ಮಹಾಬಲಾಃ||

ತದನೀಕಂ ಮಹಾಬಾಹೋ ಭಿತ್ತ್ವಾ ಪರಮದುರ್ಜಯಂ|

ಬಲೇನ ಮಹತಾ ಯುಕ್ತಾಃ ಸ್ವರ್ಗಾಯ ವಿಜಯೈಷಿಣಃ|

ವಿವಿಶುಸ್ತೇ ತದಾ ಹೃಷ್ಟಾ ಗಾಂಧಾರಾ ಯುದ್ಧದುರ್ಮದಾಃ||

ತಾನ್ಪ್ರವಿಷ್ಟಾಂಸ್ತದಾ ದೃಷ್ಟ್ವಾ ಇರಾವಾನಪಿ ವೀರ್ಯವಾನ್|

ಅಬ್ರವೀತ್ಸಮರೇ ಯೋಧಾನ್ವಿಚಿತ್ರಾಭರಣಾಯುಧಾನ್||

ಯಥೈತೇ ಧಾರ್ತರಾಷ್ಟ್ರಸ್ಯ ಯೋಧಾಃ ಸಾನುಗವಾಹನಾಃ|

ಹನ್ಯಂತೇ ಸಮರೇ ಸರ್ವೇ ತಥಾ ನೀತಿರ್ವಿಧೀಯತಾಂ||

ಬಾಢಮಿತ್ಯೇವಮುಕ್ತ್ವಾ ತೇ ಸರ್ವೇ ಯೋಧಾ ಇರಾವತಃ|

ಜಘ್ನುಸ್ತೇ ವೈ ಪರಾನೀಕಂ ದುರ್ಜಯಂ ಸಮರೇ ಪರೈಃ||

ತದನೀಕಮನೀಕೇನ ಸಮರೇ ವೀಕ್ಷ್ಯ ಪಾತಿತಂ|

ಅಮೃಷ್ಯಮಾಣಾಸ್ತೇ ಸರ್ವೇ ಸುಬಲಸ್ಯಾತ್ಮಜಾ ರಣೇ|

ಇರಾವಂತಮಭಿದ್ರುತ್ಯ ಸರ್ವತಃ ಪರ್ಯವಾರಯನ್||

ತಾಡಯಂತಃ ಶಿತೈಃ ಪ್ರಾಸೈಶ್ಚೋದಯಂತಃ ಪರಸ್ಪರಂ|

ತೇ ಶೂರಾಃ ಪರ್ಯಧಾವಂತ ಕುರ್ವಂತೋ ಮಹದಾಕುಲಂ||

ಇರಾವಾನಥ ನಿರ್ಭಿನ್ನಃ ಪ್ರಾಸೈಸ್ತೀಕ್ಷ್ಣೈರ್ಮಹಾತ್ಮಭಿಃ|

ಸ್ರವತಾ ರುಧಿರೇಣಾಕ್ತಸ್ತೋತ್ತ್ರೈರ್ವಿದ್ಧ ಇವ ದ್ವಿಪಃ||

ಉರಸ್ಯಪಿ ಚ ಪೃಷ್ಠೇ ಚ ಪಾರ್ಶ್ವಯೋಶ್ಚ ಭೃಶಾಹತಃ|

ಏಕೋ ಬಹುಭಿರತ್ಯರ್ಥಂ ಧೈರ್ಯಾದ್ರಾಜನ್ನ ವಿವ್ಯಥೇ||

ಇರಾವಾನಥ ಸಂಕ್ರುದ್ಧಃ ಸರ್ವಾಂಸ್ತಾನ್ನಿಶಿತೈಃ ಶರೈಃ|

ಮೋಹಯಾಮಾಸ ಸಮರೇ ವಿದ್ಧ್ವಾ ಪರಪುರಂಜಯಃ||

ಪ್ರಾಸಾನುದ್ಧೃತ್ಯ ಸರ್ವಾಂಶ್ಚ ಸ್ವಶರೀರಾದರಿಂದಮಃ|

ತೈರೇವ ತಾಡಯಾಮಾಸ ಸುಬಲಸ್ಯಾತ್ಮಜಾನ್ರಣೇ||

ನಿಕೃಷ್ಯ ನಿಶಿತಂ ಖಡ್ಗಂ ಗೃಹೀತ್ವಾ ಚ ಶರಾವರಂ|

ಪದಾತಿಸ್ತೂರ್ಣಮಾಗಚ್ಛಜ್ಜಿಘಾಂಸುಃ ಸೌಬಲಾನ್ಯುಧಿ||

ತತಃ ಪ್ರತ್ಯಾಗತಪ್ರಾಣಾಃ ಸರ್ವೇ ತೇ ಸುಬಲಾತ್ಮಜಾಃ|

ಭೂಯಃ ಕ್ರೋಧಸಮಾವಿಷ್ಟಾ ಇರಾವಂತಮಥಾದ್ರವನ್||

ಇರಾವಾನಪಿ ಖಡ್ಗೇನ ದರ್ಶಯನ್ಪಾಣಿಲಾಘವಂ|

ಅಭ್ಯವರ್ತತ ತಾನ್ಸರ್ವಾನ್ಸೌಬಲಾನ್ಬಲದರ್ಪಿತಃ||

ಲಾಘವೇನಾಥ ಚರತಃ ಸರ್ವೇ ತೇ ಸುಬಲಾತ್ಮಜಾಃ|

ಅಂತರಂ ನಾಧ್ಯಗಚ್ಛಂತ ಚರಂತಃ ಶೀಘ್ರಗಾಮಿನಃ||

ಭೂಮಿಷ್ಠಮಥ ತಂ ಸಂಖ್ಯೇ ಸಂಪ್ರದೃಶ್ಯ ತತಃ ಪುನಃ|

ಪರಿವಾರ್ಯ ಭೃಶಂ ಸರ್ವೇ ಗ್ರಹೀತುಮುಪಚಕ್ರಮುಃ||

ಅಥಾಭ್ಯಾಶಗತಾನಾಂ ಸ ಖಡ್ಗೇನಾಮಿತ್ರಕರ್ಶನಃ|

ಉಪಹಸ್ತಾವಹಸ್ತಾಭ್ಯಾಂ ತೇಷಾಂ ಗಾತ್ರಾಣ್ಯಕೃಂತತ||

ಆಯುಧಾನಿ ಚ ಸರ್ವೇಷಾಂ ಬಾಹೂನಪಿ ಚ ಭೂಷಿತಾನ್|

ಅಪತಂತ ನಿಕೃತ್ತಾಂಗಾ ಗತಾ ಭೂಮಿಂ ಗತಾಸವಃ||

ವೃಷಕಸ್ತು ಮಹಾರಾಜ ಬಹುಧಾ ಪರಿವಿಕ್ಷತಃ|

ಅಮುಚ್ಯತ ಮಹಾರೌದ್ರಾತ್ತಸ್ಮಾದ್ವೀರಾವಕರ್ತನಾತ್||

ಭಾರತ! ಕುದುರೆಗಳ ಸೇನೆಗಳು ನಾಶವಾಗಿ ಸ್ವಲ್ಪವೇ ಉಳಿದಿರಲು ಸುಬಲನ ಶೂರ ಮಕ್ಕಳು ರಣಮೂರ್ಧನಿಗೆ ತೆರಳಿದರು. ಗಜ, ಗವಾಕ್ಷ, ವೃಷಕ, ಚರ್ಮವಾನ್, ಆರ್ಜವ ಮತ್ತು ಶುಕ ಈ ಆರು ಬಲಸಂಪನ್ನರು ಮುಟ್ಟಿದರೆ ವಾಯುವೇಗದಲ್ಲಿ ಹೋಗಬಲ್ಲ, ವೇಗದಲ್ಲಿ ವಾಯುವಿನ ಸಮನಾಗಿರುವ, ಶೀಲಸಂಪನ್ನ, ತರುಣ, ಉತ್ತಮ ಕುದುರೆಗಳನ್ನೇರಿ, ಮಹಾ ಸೇನೆಯೊಂದಿಗೆ ಬಂದರು. ಸ್ವಯಂ ಶಕುನಿಯಿಂದ ಮತ್ತು ಮಹಾಬಲ ಯೋಧರಿಂದ ತಡೆಯಲ್ಪಟ್ಟರೂ ಕೂಡ ಆ ರೌದ್ರರೂಪೀ ಯುದ್ಧ ಕುಶಲ ಮಹಾಬಲರು ಸನ್ನದ್ಧರಾದರು. ಮಹಾಬಾಹೋ! ಯುದ್ಧ ದುರ್ಮದರಾಗಿದ್ದ ಹೃಷ್ಟರಾಗಿದ್ದ ಗಾಂಧಾರರು ಸ್ವರ್ಗ ಅಥವಾ ವಿಜಯವನ್ನು ಬಯಸಿ ಮಹಾ ಸೇನೆಯೊಡಗೂಡಿ ಆ ಪರಮ ದುರ್ಜಯ ಸೇನೆಯನ್ನು ಭೇದಿಸಿ ಒಳಹೊಕ್ಕರು. ಅವರು ಹಾಗೆ ಪ್ರವೇಶಿಸಿದನ್ನು ನೋಡಿ ವೀರ್ಯವಾನ್ ಇರಾವಾನನೂ ಕೂಡ ಸಮರದಲ್ಲಿ ವಿಚಿತ್ರ ಆಭರಣ ಆಯುಧಗಳನ್ನು ಧರಿಸಿದ್ದ ಯೋಧರಿಗೆ ಹೇಳಿದನು: “ಅನುಚರರು ಮತ್ತು ವಾಹನಗಳೊಂದಿಗೆ ಬಂದಿರುವ ಈ ಧಾರ್ತರಾಷ್ಟ್ರನ ಯೋಧರು ಎಲ್ಲರೂ ಸಮರದಲ್ಲಿ ಮೃತ್ಯುವನ್ನಪ್ಪುವಂಥಹ ನೀತಿಯನ್ನು ಕೈಗೊಳ್ಳಿರಿ!” ಒಳ್ಳೆಯದು ಎಂದು ಹೇಳಿ ಇರಾವತನ ಎಲ್ಲ ಯೋಧರೂ ಸಮರದಲ್ಲಿ ಶತ್ರುಗಳಿಗೆ ದುರ್ಜಯರಾದ ಆ ಶತ್ರುಸೇನೆಯನ್ನು ಸಂಹರಿಸಿದರು. ಅವನ ಸೇನೆಯಿಂದ ತಮ್ಮ ಸೇನೆಯು ಸಮರದಲ್ಲಿ ಬಿದ್ದುದನ್ನು ನೋಡಿ ರಣದಲ್ಲಿ ಉದ್ರಿಕ್ತರಾಗಿ ಸುಬಲನ ಮಕ್ಕಳೆಲ್ಲರೂ ಇರಾವಂತನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು. ಹರಿತ ಪ್ರಾಸಗಳಿಂದ ಹೊಡೆಯುತ್ತಾ, ಪರಸ್ಪರರನ್ನು ಪ್ರಚೋದನೆಗೊಳಿಸುತ್ತಾ ಆ ಶೂರರು ಅವನನ್ನು ಸುತ್ತುವರೆದು ಮಹಾ ವ್ಯಾಕುಲವನ್ನುಂಟುಮಾಡಿದರು. ಆ ಮಹಾತ್ಮರ ತೀಕ್ಷ್ಣ ಪ್ರಾಸಗಳಿಂದ ಗಾಯಗೊಂಡು ಇರಾವಾನನು ರಕ್ತದಿಂದ ತೋಯ್ದು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಾಕುಲಗೊಂಡನು. ರಾಜನ್! ಒಬ್ಬನಾಗಿದ್ದರೂ ಅನೇಕರು ಎದುರಿನಿಂದ, ಹಿಂದಿನಿಂದ ಮತ್ತು ಪಕ್ಕಗಳಿಂದ ಚೆನ್ನಾಗಿ ಪ್ರಹರಿಸುತ್ತಿದ್ದರೂ ಅವನು ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಆಗ ಸಂಕ್ರುದ್ಧನಾದ ಪರಪುರಂಜಯ ಇರಾವಾನನು ಸಮರದಲ್ಲಿ ಅವರೆಲ್ಲರನ್ನೂ ನಿಶಿತ ಶರಗಳಿಂದ ಹೊಡೆದು ಮೂರ್ಛೆಗೊಳಿಸಿದನು. ತನ್ನ ಶರೀರರ ಸರ್ವಾಂಗಗಳಿಗೆ ಚುಚ್ಚಿಕೊಂಡಿದ್ದ ಪ್ರಾಸಗಳನ್ನು ಕಿತ್ತು ತೆಗೆದು ಅವುಗಳಿಂದಲೇ ರಣದಲ್ಲಿ ಸುಬಲನ ಮಕ್ಕಳನ್ನು ಪ್ರಹರಿಸಿದನು. ಅನಂತರ ನಿಶಿತ ಖಡ್ಗವನ್ನು ಎಳೆದು ತೆಗೆದುಕೊಂಡು ಗುರಾಣಿಯನ್ನೂ ಹಿಡಿದು ತಕ್ಷಣವೇ ಆ ಸೌಬಲರನ್ನು ಯುದ್ಧದಲ್ಲಿ ಸಂಹರಿಸಲು ಪದಾತಿಯಾಗಿಯೇ ನಡೆದನು. ಆಗ ಪುನಃ ಎಚ್ಚೆತ್ತಿದ್ದ ಆ ಎಲ್ಲ ಸುಬಲಾತ್ಮಜರು ಪುನಃ ಕ್ರೋಧಸಮಾವಿಷ್ಟರಾಗಿ ಇರವಂತನನ್ನು ಆಕ್ರಮಣಿಸಿದರು. ಬಲದರ್ಪಿತ ಇರವಾನನೂ ಕೂಡ ಖಡ್ಗದಲ್ಲಿ ತನ್ನ ಕೈಚಳಕವನ್ನು ತೋರಿಸುತ್ತಾ ಅವರೆಲ್ಲ ಸೌಬಲರನ್ನೂ ಎದುರಿಸಿದನು. ಚಾಕಚಕ್ಯತೆಯಿಂದ ಓಡಾಡುತ್ತಿದ್ದ ಆ ಸುಬಲಾತ್ಮಜರೆಲ್ಲರೂ ಶೀಘ್ರವಾಗಿ ಚಲಿಸುತ್ತಿರುವ ಅವನನ್ನು ಹೊಡೆಯಲು ಅವಕಾಶವನ್ನೇ ಪಡೆಯಲಿಲ್ಲ. ಯುದ್ಧದಲ್ಲಿ ನೆಲದ ಮೇಲೆ ನಿಂತಿದ್ದ ಅವನನ್ನು ನೋಡಿ ಅವರೆಲ್ಲರೂ ಅವನನ್ನು ಸುತ್ತುವರೆದು ಪುನಃ ಪುನಃ ಸೆರೆಹಿಡಿಯಲು ಪ್ರಯತ್ನಿಸಿದರು. ಆಗ ಮೇಲೆ ಬೀಳುತ್ತಿದ್ದ ಆ ಅಮಿತ್ರಕರ್ಶನನು ಅವರ ಎರಡೂ ಹಸ್ತಗಳನ್ನು ಕತ್ತರಿಸಿ ಶರೀರಗಳನ್ನೂ ತುಂಡರಿಸಿದನು. ಅವರೆಲ್ಲರ ಆಯುಧಗಳು ಮತ್ತು ಭೂಷಿತ ಬಾಹುಗಳು ಬಿದ್ದು ಅಂಗಗಳು ತುಂಡಾಗಿ ಅಸುನೀಗಿ ಅವರು ಭೂಮಿಯ ಮೇಲೆ ಬಿದ್ದರು. ಮಹಾರಾಜ! ವೃಷಕನು ಮಾತ್ರ ಹೆಚ್ಚಾಗಿ ಗಾಯಗೊಂಡು ವೀರರನ್ನು ತುಂಡರಿಸುವ ಆ ಮಹಾರೌದ್ರ ಯುದ್ಧದಿಂದ ತಪ್ಪಿಸಿಕೊಂಡನು.

ಶಕುನಿಯ ಸಹೋದರರು ಬಿದ್ದುದನ್ನು ನೋಡಿ ಭೀತನಾದ ದುರ್ಯೋಧನನು ಸಂಕ್ರುದ್ಧನಾಗಿ ಘೋರದರ್ಶನ ಮಹೇಷ್ವಾಸ ಮಾಯಾವೀ ಅರಿಂದಮ ಬಕವಧದ ಕಾರಣದಿಂದ ಹಿಂದಿನಿಂದಲೇ ಭೀಮಸೇನನ ವೈರಿಯಾಗಿದ್ದ ರಾಕ್ಷಸ ಆರ್ಶ್ಯಶೃಂಗಿಗೆ ಹೇಳಿದನು:

ಪಶ್ಯ ವೀರ ಯಥಾ ಹ್ಯೇಷ ಫಲ್ಗುನಸ್ಯ ಸುತೋ ಬಲೀ|

ಮಾಯಾವೀ ವಿಪ್ರಿಯಂ ಘೋರಮಕಾರ್ಷೀನ್ಮೇ ಬಲಕ್ಷಯಂ||

ತ್ವಂ ಚ ಕಾಮಗಮಸ್ತಾತ ಮಾಯಾಸ್ತ್ರೇ ಚ ವಿಶಾರದಃ|

ಕೃತವೈರಶ್ಚ ಪಾರ್ಥೇನ ತಸ್ಮಾದೇನಂ ರಣೇ ಜಹಿ||

“ವೀರ! ಹೇಗೆ ಈ ಫಲ್ಗುನನ ಬಲಶಾಲೀ ಮಾಯಾವೀ ಮಗನು ನನ್ನ ಸೇನೆಯನ್ನು ನಾಶಗೊಳಿಸಿ ವಿಪ್ರಿಯವಾದ ಘೋರ ಕೃತ್ಯವನ್ನೆಸಗಿದ್ದಾನೆ ನೋಡು! ಅಯ್ಯಾ! ನೀನೂ ಕೂಡ ಬಯಸಿದಲ್ಲಿಗೆ ಹೋಗಬಲ್ಲೆ. ಮಾಯಾಸ್ತ್ರಗಳಲ್ಲಿ ವಿಶಾರದನಾಗಿದ್ದೀಯೆ. ಪಾರ್ಥನೊಂದಿಗೆ ವೈರವನ್ನೂ ಸಾಧಿಸುತ್ತಿದ್ದೀಯೆ. ಆದುದರಿಂದ ರಣದಲ್ಲಿ ಇವನನ್ನು ಕೊಲ್ಲು!”

ಆಗಲೆಂದು ಹೇಳಿ ಘೋರದರ್ಶನ ರಾಕ್ಷಸನು ಸಿಂಹನಾದದೊಂದಿಗೆ ಅರ್ಜುನನ ಯುವ ಮಗನಿರುವಲ್ಲಿಗೆ ಹೊರಟನು. ಯುದ್ಧ ಕುಶಲರಾದ ಹರಿತ ಪ್ರಾಸಗಳನ್ನು ಹಿಡಿದ ಅಶ್ವಾರೋಹಿ ವೀರ ಯೋಧ ಪ್ರಹಾರೀ ತನ್ನದೇ ಸೈನಿಕರಿಂದ ಸುತ್ತುವರೆಯಲ್ಪಟ್ಟ ಅವನು ಸಮರದಲ್ಲಿ ಮಹಾಬಲ ಇರಾವಂತನನ್ನು ಸಂಹರಿಸಲು ಬಯಸಿದನು. ಪರಾಕ್ರಮೀ ಅಮಿತ್ರಘ್ನ ಇರಾವನನೂ ಕೂಡ ಸಂಕ್ರುದ್ಧನಾಗಿ ಆ ರಾಕ್ಷಸನನ್ನು ಕೊಲ್ಲಲು ಬಯಸಿ ತ್ವರೆಮಾಡಿ ಆಕ್ರಮಣಿಸಿದನು. ಪರಾಕ್ರಮೀ ಅಮಿತ್ರಘ್ನ ಇರಾವನನೂ ಕೂಡ ಸಂಕ್ರುದ್ಧನಾಗಿ ಆ ರಾಕ್ಷಸನನ್ನು ಕೊಲ್ಲಲು ಬಯಸಿ ತ್ವರೆಮಾಡಿ ಆಕ್ರಮಣಿಸಿದನು. ಮೇಲೆ ಬೀಳುತ್ತಿದ್ದ ಅವನನ್ನು ನೋಡಿ ಮಹಾಬಲ ರಾಕ್ಷಸನು ತ್ವರೆಮಾಡಿ ಮಾಯೆಯನ್ನುಪಯೋಗಿಸ ತೊಡಗಿದನು. ಆರ್ಶ್ಯಶೃಂಗಿ-ಇರಾವನರ ಮಾಯಾ ಯುದ್ಧದ ವರ್ಣನೆಯು ಇಂತಿದೆ:

ತೇನ ಮಾಯಾಮಯಾಃ ಕ್ಲಪ್ತಾಹಯಾಸ್ತಾವಂತ ಏವ ಹಿ|

ಸ್ವಾರೂಢಾ ರಾಕ್ಷಸೈರ್ಘೋರೈಃ ಶೂಲಪಟ್ಟಿಶಪಾಣಿಭಿಃ||

ತೇ ಸಂರಬ್ಧಾಃ ಸಮಾಗಮ್ಯ ದ್ವಿಸಾಹಸ್ರಾಃ ಪ್ರಹಾರಿಣಃ|

ಅಚಿರಾದ್ಗಮಯಾಮಾಸುಃ ಪ್ರೇತಲೋಕಂ ಪರಸ್ಪರಂ||

ತಸ್ಮಿಂಸ್ತು ನಿಹತೇ ಸೈನ್ಯೇ ತಾವುಭೌ ಯುದ್ಧದುರ್ಮದೌ|

ಸಂಗ್ರಾಮೇ ವ್ಯವತಿಷ್ಠೇತಾಂ ಯಥಾ ವೈ ವೃತ್ರವಾಸವೌ||

ಆದ್ರವಂತಮಭಿಪ್ರೇಕ್ಷ್ಯ ರಾಕ್ಷಸಂ ಯುದ್ಧದುರ್ಮದಂ|

ಇರಾವಾನ್ಕ್ರೋಧಸಂರಬ್ಧಃ ಪ್ರತ್ಯಧಾವನ್ಮಹಾಬಲಃ||

ಸಮಭ್ಯಾಶಗತಸ್ಯಾಜೌ ತಸ್ಯ ಖಡ್ಗೇನ ದುರ್ಮತೇಃ|

ಚಿಚ್ಛೇದ ಕಾರ್ಮುಕಂ ದೀಪ್ತಂ ಶರಾವಾಪಂ ಚ ಪಂಚಕಂ||

ಸ ನಿಕೃತ್ತಂ ಧನುರ್ದೃಷ್ಟ್ವಾ ಖಂ ಜವೇನ ಸಮಾವಿಶತ್|

ಇರಾವಂತಮಭಿಕ್ರುದ್ಧಂ ಮೋಹಯನ್ನಿವ ಮಾಯಯಾ||

ತತೋಽಂತರಿಕ್ಷಮುತ್ಪತ್ಯ ಇರಾವಾನಪಿ ರಾಕ್ಷಸಂ|

ವಿಮೋಹಯಿತ್ವಾ ಮಾಯಾಭಿಸ್ತಸ್ಯ ಗಾತ್ರಾಣಿ ಸಾಯಕೈಃ|

ಚಿಚ್ಛೇದ ಸರ್ವಮರ್ಮಜ್ಞಃ ಕಾಮರೂಪೋ ದುರಾಸದಃ||

ತಥಾ ಸ ರಾಕ್ಷಸಶ್ರೇಷ್ಠಃ ಶರೈಃ ಕೃತ್ತಃ ಪುನಃ ಪುನಃ|

ಸಂಬಭೂವ ಮಹಾರಾಜ ಸಮವಾಪ ಚ ಯೌವನಂ||

ಮಾಯಾ ಹಿ ಸಹಜಾ ತೇಷಾಂ ವಯೋ ರೂಪಂ ಚ ಕಾಮಜಂ|

ಏವಂ ತದ್ರಾಕ್ಷಸಸ್ಯಾಂಗಂ ಚಿನ್ನಂ ಚಿನ್ನಂ ವ್ಯರೋಹತ||

ಇರಾವಾನಪಿ ಸಂಕ್ರುದ್ಧೋ ರಾಕ್ಷಸಂ ತಂ ಮಹಾಬಲಂ|

ಪರಶ್ವಧೇನ ತೀಕ್ಷ್ಣೇನ ಚಿಚ್ಛೇದ ಚ ಪುನಃ ಪುನಃ||

ಸ ತೇನ ಬಲಿನಾ ವೀರಶ್ಚಿದ್ಯಮಾನ ಇವ ದ್ರುಮಃ|

ರಾಕ್ಷಸೋ ವ್ಯನದದ್ಘೋರಂ ಸ ಶಬ್ದಸ್ತುಮುಲೋಽಭವತ್||

ಪರಶ್ವಧಕ್ಷತಂ ರಕ್ಷಃ ಸುಸ್ರಾವ ರುಧಿರಂ ಬಹು|

ತತಶ್ಚುಕ್ರೋಧ ಬಲವಾಂಶ್ಚಕ್ರೇ ವೇಗಂ ಚ ಸಂಯುಗೇ||

ಆರ್ಶ್ಯಶೃಂಗಿಸ್ತತೋ ದೃಷ್ಟ್ವಾ ಸಮರೇ ಶತ್ರುಮೂರ್ಜಿತಂ|

ಕೃತ್ವಾ ಘೋರಂ ಮಹದ್ರೂಪಂ ಗ್ರಹೀತುಮುಪಚಕ್ರಮೇ|

ಸಂಗ್ರಾಮಶಿರಸೋ ಮಧ್ಯೇ ಸರ್ವೇಷಾಂ ತತ್ರ ಪಶ್ಯತಾಂ||

ತಾಂ ದೃಷ್ಟ್ವಾ ತಾದೃಶೀಂ ಮಾಯಾಂ ರಾಕ್ಷಸಸ್ಯ ಮಹಾತ್ಮನಃ|

ಇರಾವಾನಪಿ ಸಂಕ್ರುದ್ಧೋ ಮಾಯಾಂ ಸ್ರಷ್ಟುಂ ಪ್ರಚಕ್ರಮೇ||

ತಸ್ಯ ಕ್ರೋಧಾಭಿಭೂತಸ್ಯ ಸಂಯುಗೇಷ್ವನಿವರ್ತಿನಃ|

ಯೋಽನ್ವಯೋ ಮಾತೃಕಸ್ತಸ್ಯ ಸ ಏನಮಭಿಪೇದಿವಾನ್||

ಸ ನಾಗೈರ್ಬಹುಶೋ ರಾಜನ್ಸರ್ವತಃ ಸಂವೃತೋ ರಣೇ|

ದಧಾರ ಸುಮಹದ್ರೂಪಮನಂತ ಇವ ಭೋಗವಾನ್|

ತತೋ ಬಹುವಿಧೈರ್ನಾಗೈಶ್ಚಾದಯಾಮಾಸ ರಾಕ್ಷಸಂ||

ಚಾದ್ಯಮಾನಸ್ತು ನಾಗೈಃ ಸ ಧ್ಯಾತ್ವಾ ರಾಕ್ಷಸಪುಂಗವಃ|

ಸೌಪರ್ಣಂ ರೂಪಮಾಸ್ಥಾಯ ಭಕ್ಷಯಾಮಾಸ ಪನ್ನಗಾನ್||

ಮಾಯಯಾ ಭಕ್ಷಿತೇ ತಸ್ಮಿನ್ನನ್ವಯೇ ತಸ್ಯ ಮಾತೃಕೇ|

ವಿಮೋಹಿತಮಿರಾವಂತಮಸಿನಾ ರಾಕ್ಷಸೋಽವಧೀತ್||

ಸಕುಂಡಲಂ ಸಮುಕುಟಂ ಪದ್ಮೇಂದುಸದೃಶಪ್ರಭಂ|

ಇರಾವತಃ ಶಿರೋ ರಕ್ಷಃ ಪಾತಯಾಮಾಸ ಭೂತಲೇ||

ಆಗ ಅವನು ಇರಾವಾನನ ಅಶ್ವಾರೋಹಿಗಳಿಗೆ ಪ್ರತಿಯಾಗಿ ಮಾಯೆಯಿಂದ ಕುದುರೆಗಳನ್ನೇರಿದ ಶೂಲ-ಪಟ್ಟಿಶಗಳನ್ನು ಹಿಡಿದಿದ್ದ ಘೋರ ರಾಕ್ಷಸರ ಪಡೆಯನ್ನು ನಿರ್ಮಿಸಿದನು. ಆ ಎರಡು ಸಾವಿರ ಪ್ರಹಾರಿಣರು ಎದುರಾಗಿ ಬೇಗನೇ ಪರಸ್ಪರರನ್ನು ಪ್ರೇತಲೋಕಗಳಿಗೆ ಕಳುಹಿಸಿದರು. ಆ ಸೇನೆಗಳು ಹಾಗೆ ನಾಶವಾಗಲು ಅವರಿಬ್ಬರು ಯುದ್ಧ ದುರ್ಮದರೂ ಸಂಗ್ರಾಮದಲ್ಲಿ ವೃತ್ರ-ವಾಸವರಂತೆ ಎದುರಾಗಿ ನಿಂತರು. ಯುದ್ಧದುರ್ಮದ ರಾಕ್ಷಸನು ಮುಂದೆ ಬಂದುದನ್ನು ನೋಡಿ ಕ್ರೋಧಸಂರಬ್ಧನಾದ ಮಹಾಬಲ ಇರಾವಾನನು ಎದುರಾದನು. ತುಂಬಾ ಹತ್ತಿರಕ್ಕೆ ಬಂದಿದ್ದ ಆ ದುರ್ಮತಿಯ ಬಿಲ್ಲು ಭತ್ತಳಿಕೆಗಳನ್ನು ಖಡ್ಗದಿಂದ ಕತ್ತರಿಸಿದನು. ತನ್ನ ಧನುಸ್ಸು ತುಂಡಾಗಿದುದನ್ನು ನೋಡಿ ಅವನು ಕ್ರುದ್ಧನಾದ ಇರಾವಂತನನ್ನು ಮೋಹಗೊಳಿಸಲೋಸುಗ ಮಾಯೆಯಿಂದ ವೇಗದಿಂದ ಆಕಾಶವನ್ನು ಸೇರಿದನು. ಆಗ ಸರ್ವಮರ್ಮಗಳನ್ನೂ ತಿಳಿದಿದ್ದ, ಕಾಮರೂಪೀ, ದುರಾಸದ ಇರಾವಾನನೂ ಕೂಡ ಅಂತರಿಕ್ಷಕ್ಕೆ ಹಾರಿ ರಾಕ್ಷಸನನ್ನು ತನ್ನ ಮಾಯೆಯಿಂದ ಭ್ರಾಂತಗೊಳಿಸಿ ಅವನ ಶರೀರವನ್ನು ಸಾಯಕಗಳಿಂದ ಗಾಯಗೊಳಿಸಿದನು. ಹಾಗೆ ಆ ರಾಕ್ಷಸ ಶ್ರೇಷ್ಠನನ್ನು ಪುನಃ ಪುನಃ ಶರಗಳಿಂದ ಗಾಯಗೊಳಿಸಿದ ಹಾಗೆಲ್ಲ ಅವನು ಹೊಸ ಹೊಸ ಶರೀರಗಳನ್ನು ಪಡೆಯುತ್ತಿದ್ದನು ಮತ್ತು ಯೌವನವನ್ನು ತಾಳುತ್ತಿದ್ದನು. ಮಾಯಾವಿಗಳಿಗೆ ಸಹಜವಾಗಿ ಬೇಕಾದ ರೂಪ ವಯಸ್ಸು ದೊರೆಯುತ್ತವೆ. ಹೀಗೆ ಆ ರಾಕ್ಷಸನ ಅಂಗಗಳು ಕತ್ತರಿಸಿದಂತೆಲ್ಲಾ ಪುನಃ ಪುನಃ ಬೆಳೆಯುತ್ತಿದ್ದವು. ಇರಾವಾನನೂ ಕೂಡ ಸಂಕ್ರುದ್ಧನಾಗಿ ಆ ಮಹಾಬಲ ರಾಕ್ಷಸನನ್ನು ತೀಕ್ಷ್ಣ ಪರಶುವಿನಿಂದ ಪುನಃ ಪುನಃ ಕತ್ತರಿಸಿದನು. ಮರದಂತೆ ಆ ವೀರನನ್ನು ಬಲಶಾಲಿಯು ಕಡಿಯುತ್ತಿದ್ದಂತಲೆಲ್ಲಾ ರಾಕ್ಷಸನು ಘೋರವಾಗಿ ಕೂಗುತ್ತಿದ್ದನು. ತುಮುಲ ಶಬ್ಧವು ಉಂಟಾಯಿತು. ಪರಶುವಿನಿಂದ ಗಾಯಗೊಂಡ ರಾಕ್ಷಸನು ಬಹಳಷ್ಟು ರಕ್ತವನ್ನು ಸುರಿಸಿದನು. ಅದರಿಂದ ಕ್ರೋಧಗೊಂಡ ಬಲವಾನನು ವೇಗವಾಗಿ ಯುದ್ಧ ಮಾಡತೊಡಗಿದನು. ಸಮರದಲ್ಲಿ ತನ್ನ ಶತ್ರುವು ವರ್ಧಿಸುತ್ತಿರುವುದನ್ನು ನೋಡಿ ಆರ್ಶ್ಯಶೃಂಗಿಯು ಮಹಾ ಘೋರ ರೂಪವನ್ನು ತಾಳಿ ಸಂಗ್ರಾಮದ ಮಧ್ಯೆ ಎಲ್ಲರೂ ನೋಡುತ್ತಿರುವಂತೆಯೇ ಅವನನ್ನು ಹಿಡಿಯಲು ಮುಂದಾದನು. ಮಹಾತ್ಮ ರಾಕ್ಷಸನ ಆ ಮಾಯೆಯನ್ನು ನೋಡಿ ಇರಾವಾನನೂ ಕೂಡ ಸಂಕ್ರುದ್ಧನಾಗಿ ಅದರಂತಹ ಮಾಯೆಯನ್ನು ಸೃಷ್ಟಿಸಲು ತೊಡಗಿದನು. ಯುದ್ಧದಿಂದ ಹಿಂದೆಸರಿಯದ ಕ್ರೋಧಾಭಿಭೂತನಾದ ಇರಾವಾನನಿಗೆ ಅವನ ತಾಯಿಯ ಕಡೆಯವರು ನೆರವಾಗಲು ಬಂದರು. ರಾಜನ್! ಹೆಚ್ಚಾಗಿ ನಾಗಗಳಿಂದಲೇ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ಹೆಡೆಯುಳ್ಳ ಅನಂತನ ಮಹಾ ರೂಪವನ್ನೇ ತಾಳಿದನು. ಆಗ ಅವನು ಬಹುವಿಧದ ನಾಗಗಳಿಂದ ರಾಕ್ಷಸನನ್ನು ಮುಚ್ಚಿದನು. ಸರ್ಪಗಳಿಂದ ಆಚ್ಛಾದಿತನಾದ ಆ ರಾಕ್ಷಸಪುಂಗವನು ಒಂದು ಕ್ಷಣ ಯೋಚಿಸಿ ಗರುಡನ ರೂಪವನ್ನು ತಾಳಿ ನಾಗಗಳನ್ನು ಭಕ್ಷಿಸತೊಡಗಿದನು. ಅವನನ್ನು ಅನುಸರಿಸಿ ಬಂದಿದ್ದ ಅವನ ತಾಯಿಯ ಕಡೆಯವರನ್ನು ಮಾಯೆಯಿಂದ ಭಕ್ಷಿಸಿ, ಇರಾವಂತನನ್ನು ಮೋಹಗೊಳಿಸಿ ರಾಕ್ಷಸನು ಖಡ್ಗದಿಂದ ಅವನನ್ನು ವಧಿಸಿದನು. ಕುಂಡಲ ಮುಕುಟಗಳಿಂದ ಕೂಡಿದ, ಪದ್ಮ ಮತ್ತು ಚಂದ್ರನ ಕಾಂತಿಯುಳ್ಳ ಇರಾವತನ ಶಿರವನ್ನು ರಾಕ್ಷಸನು ಭೂಮಿಯ ಮೇಲೆ ಕೆಡವಿದನು.

ಇರಾವಂತನು ಸಂಗಮದಲ್ಲಿ ಹತನಾದುದನ್ನು ನೋಡಿ ರಾಕ್ಷಸ ಭೈಮಸೇನಿ ಘಟೋತ್ಕಚನು ಮಹಾಗರ್ಜನೆಯನ್ನು ಗರ್ಜಿಸಿ ಆರ್ಶ್ಯಶೃಂಗಿಯೊಡನೆ ಯುದ್ಧಮಾಡಿದನು. ನಂತರ ಸಮರದಲ್ಲಿ ಭೀಮಸೇನನು ಕೇಶವಾರ್ಜುನರಿಬ್ಬರಿಗೂ ಇರಾವತನ ವಧೆಯ ವೃತ್ತಾಂತವನ್ನು ಕೇಳಿಸಿದನು. ಮಗ ಇರಾವತನ ಮರಣವನ್ನು ಕೇಳಿ ದುಃಖದಿಂದ ಮಹಾ ಆವಿಷ್ಟನಾಗಿ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಸಮರದಲ್ಲಿ ವಾಸುದೇವನಿಗೆ ಇದನ್ನು ಹೇಳಿದನು: “ಇದನ್ನೇ ಮಹಾಪ್ರಾಜ್ಞ ವಿದುರನು ಹಿಂದೆ ನೋಡಿದ್ದನು. ಕುರುಗಳ ಮತ್ತು ಪಾಂಡವರ ಘೋರಕ್ಷಯವಾಗುತ್ತದೆಯೆಂದು ಆ ಮಹಾಮತಿಯು ಜನೇಶ್ವರ ಧೃತರಾಷ್ಟ್ರನನ್ನು ತಡೆಯುತ್ತಿದ್ದನು. ಮಧುಸೂದನ! ಸಂಗ್ರಾಮದಲ್ಲಿ ಅವಧ್ಯರಾದ ಅನೇಕ ವೀರರು ಹೋರಾಡುವಾಗ ಕೌರವರಿಂದ ಮತ್ತು ನಮ್ಮಿಂದ ಹತರಾಗಿದ್ದಾರೆ. ನರಶ್ರೇಷ್ಠ! ಧನಕ್ಕಾಗಿ ಕುತ್ಸಿತ ಕರ್ಮಗಳನ್ನು ಮಾಡಲಾಗುತ್ತದೆ. ಯಾವುದಕ್ಕಾಗಿ ಈ ಜ್ಞಾತಿಸಂಕ್ಷಯವು ನಡೆಯುತ್ತಿದೆಯೋ ಆ ಧನಕ್ಕೆ ಧಿಕ್ಕಾರ. ಜ್ಞಾತಿವಧೆಯಿಂದ ಗಳಿಸಿದ ಧನಕ್ಕಿಂತಲೂ ಅಧನನ ಮೃತ್ಯುವು ಶ್ರೇಯಸ್ಕರವಾದುದು. ಕೃಷ್ಣ! ಇಲ್ಲಿ ಸೇರಿರುವ ಬಾಂಧವರನ್ನು ಕೊಂದು ನಾವು ಏನನ್ನು ಪಡೆಯಲಿದ್ದೇವೆ? ದುರ್ಯೋಧನ ಮತ್ತು ಸೌಬಲ ಶಕುನಿಯರ ಅಪರಾಧದಿಂದ ಮತ್ತು ಕರ್ಣನ ದುರ್ಮಂತ್ರದಿಂದ ಕ್ಷತ್ರಿಯರು ಸಾಯುತ್ತಿದ್ದಾರೆ. ಮಧುಸೂದನ! ಮಹಾಬಾಹೋ! ಅಂದು ರಾಜನು ಅರ್ಧ ರಾಜ್ಯವನ್ನಾಗಲೀ ಅಥವಾ ಐದು ಗ್ರಾಮಗಳನ್ನಾಗಲೀ ಬೇಡಿದ ಸುಕೃತವು ಇಂದು ನನಗೆ ಅರ್ಥವಾಗುತ್ತಿದೆ. ಆದರೆ ದುರ್ಮತಿ ದುರ್ಯೋಧನನು ಅದಕ್ಕೂ ಒಪ್ಪಿಕೊಳ್ಳಲಿಲ್ಲ. ಧರಣೀತಲದಲ್ಲಿ ಮಲಗಿರುವ ಕ್ಷತ್ರಿಯ ಶೂರರನ್ನು ನೋಡಿ ನನ್ನನ್ನೇ ನಿಂದಿಸಿಕೊಳ್ಳುತ್ತೇನೆ. ಈ ಕ್ಷತ್ರಿಯ ಜೀವನಕ್ಕೆ ಧಿಕ್ಕಾರ! ಮಧುಸೂದನ! ರಣದಲ್ಲಿ ಕ್ಷತ್ರಿಯರು ನನ್ನನ್ನು ಅಶಕ್ತನೆಂದೇ ತಿಳಿದುಕೊಳ್ಳಬಹುದು. ಬಾಂಧವರೊಡನೆ ಯುದ್ಧಮಾಡುವುದು ನನಗೆ ಇಷ್ಟವಾಗುವುದಿಲ್ಲ. ಬೇಗನೆ ಕುದುರೆಗಳನ್ನು ಧಾರ್ತರಾಷ್ಟ್ರರ ಸೇನೆಯ ಕಡೆ ಓಡಿಸು. ಸಮರವೆಂಬ ಈ ಮಹಾಸಾಗರವನ್ನು ಭುಜಗಳೆರಡರಿಂದ ಈಸಿ ದಾಟುತ್ತೇನೆ. ಮಾಧವ! ಇದು ವ್ಯರ್ಥವಾಗಿ ಕಾಲಕಳೆಯುವ ಸಮಯವಲ್ಲ.”

ಪಾರ್ಥನು ಹೀಗೆ ಹೇಳಲು ಪರವೀರಹ ಕೇಶವನು ಗಾಳಿಯ ವೇಗವುಳ್ಳ ಆ ಬಿಳೀ ಕುದುರೆಗಳನ್ನು ಓಡಿಸಿದನು.

Image result for flowers against white background

[1] ಇಲ್ಲಿ ಸೌಬಲಸ್ಯಾತ್ಮಜಾಃ ಎಂದರೆ ಸೌಬಲ ಶಕುನಿಯ ಮಕ್ಕಳೆಂದು ಇದ್ದರೂ ಸುಬಲಸ್ಯಾತ್ಮಜಾಃ ಎಂದು ಮುಂದಿನ ಶ್ಲೋಕಗಳಲ್ಲಿ ಇದೆ. ವೃಷಕಾದಿಗಳು ಶಕುನಿಯ ಸಹೋದರರೆಂದು ಮುಂದೆ ದ್ರೋಣಪರ್ವದ ಅಧ್ಯಾಯ ೨೯ರಲ್ಲಿ ಬಂದಿರುವುದರಿಂದ ನಾನು ಇಲ್ಲಿ ಇವರು ಸುಬಲನ ಮಕ್ಕಳು ಎಂದರೆ ಶಕುನಿಯ ಸಹೋದರರೆಂದೇ ಭಾಷಾಂತರಿಸಿದ್ದೇನೆ.

Comments are closed.