Bhishma Parva: Chapter 79

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೯

ಧೃತರಾಷ್ಟನು  ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಂಜಯನು ಯುದ್ಧದ ವರ್ಣನೆಯನ್ನು ಮುಂದುವರಿಸಿದುದು (೧-೧೧). ಅವಂತಿಯ ವಿಂದಾನುವಿಂದರು ಮತ್ತು ಇರಾವಾನನ ನಡುವೆ ಯುದ್ಧ (೧೨-೨೩). ಘಟೋತ್ಕಚ-ಭಗದತ್ತರ ಯುದ್ಧ (೨೪-೪೧). ಶಲ್ಯ ಮತ್ತು ನಕುಲ-ಸಹದೇವರ ಯುದ್ಧ (೪೨-೫೫).

06079001 ಧೃತರಾಷ್ಟ್ರ ಉವಾಚ|

06079001a ಬಹೂನೀಹ ವಿಚಿತ್ರಾಣಿ ದ್ವೈರಥಾನಿ ಸ್ಮ ಸಂಜಯ|

06079001c ಪಾಂಡೂನಾಂ ಮಾಮಕೈಃ ಸಾರ್ಧಮಶ್ರೌಷಂ ತವ ಜಲ್ಪತಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡವರ ಮತ್ತು ನನ್ನವರ ನಡುವೆ ನಡೆದ ಅನೇಕ ವಿಚಿತ್ರ ದ್ವೈರಥಯುದ್ಧಗಳ ಕುರಿತು ನೀನು ಹೇಳಿದ ವಿವರಣೆಯನ್ನು ನಾನು ಕೇಳಿದೆ.

06079002a ನ ಚೈವ ಮಾಮಕಂ ಕಂ ಚಿದ್ಧೃಷ್ಟಂ ಶಂಸಸಿ ಸಂಜಯ|

06079002c ನಿತ್ಯಂ ಪಾಂಡುಸುತಾನ್ ಹೃಷ್ಟಾನಭಗ್ನಾಂಶ್ಚೈವ ಶಂಸಸಿ||

ಸಂಜಯ! ಆದರೆ ನೀನು ನನಗೆ ಇದೂವರೆಗೆ ನನ್ನವರ ಒಳ್ಳೆಯದರ ಕುರಿತು ಏನನ್ನೂ ಹೇಳಿಲ್ಲ. ಯಾವಾಗಲೂ ಪಾಂಡುಸುತರು ಹೃಷ್ಟರಾಗಿದ್ದುದನ್ನೂ ಅವರು ಅಭಗ್ನರೆನ್ನುವುದನ್ನೂ ಹೇಳುತ್ತಿರುವೆ.

06079003a ಜೀಯಮಾನಾನ್ವಿಮನಸೋ ಮಾಮಕಾನ್ವಿಗತೌಜಸಃ|

06079003c ವದಸೇ ಸಂಯುಗೇ ಸೂತ ದಿಷ್ಟಮೇತದಸಂಶಯಂ||

ನನ್ನವರು ವಿಮನಸ್ಕರಾಗಿದ್ದರು, ಪರಾಕ್ರಮ ಹೀನರಾಗಿದ್ದರು ಮತ್ತು ಸಂಯುಗದಲ್ಲಿ ಅವರಿಂದ ಪರಾಜಿತರಾದರು ಎಂದೇ ಹೇಳುತ್ತಿರುವೆ. ಸೂತ! ಇದು ದೈವವೇ ಎನ್ನುವುದರಲ್ಲಿ ಸಂಶಯವಿಲ್ಲ.”

06079004 ಸಂಜಯ ಉವಾಚ|

06079004a ಯಥಾಶಕ್ತಿ ಯಥೋತ್ಸಾಹಂ ಯುದ್ಧೇ ಚೇಷ್ಟಂತಿ ತಾವಕಾಃ|

06079004c ದರ್ಶಯಾನಾಃ ಪರಂ ಶಕ್ತ್ಯಾ ಪೌರುಷಂ ಪುರುಷರ್ಷಭ||

ಸಂಜಯನು ಹೇಳಿದನು: “ಪುರುಷರ್ಷಭ! ನಿನ್ನವರು ಯಥಾಶಕ್ತಿಯಾಗಿ ಯಥೋತ್ಸಾಹದಿಂದ ಪರಮ ಶಕ್ತಿ ಪೌರುಷಗಳನ್ನು ತೋರಿಸುತ್ತಾ ಯುದ್ಧಮಾಡುತ್ತಿದ್ದರು.

06079005a ಗಂಗಾಯಾಃ ಸುರನದ್ಯಾ ವೈ ಸ್ವಾದುಭೂತಂ ಯಥೋದಕಂ|

06079005c ಮಹೋದಧಿಗುಣಾಭ್ಯಾಸಾಲ್ಲವಣತ್ವಂ ನಿಗಚ್ಛತಿ||

ಸುರನದಿ ಗಂಗೆಯ ನೀರು ಸಿಹಿಯಾಗಿದ್ದರೂ ಸಮುದ್ರವನ್ನು ಸೇರಿದಾಗ ಅದರ ಗುಣವು ಲವಣತ್ವವನ್ನು ಹೊಂದುತ್ತದೆ.

06079006a ತಥಾ ತತ್ಪೌರುಷಂ ರಾಜಂಸ್ತಾವಕಾನಾಂ ಮಹಾತ್ಮನಾಂ|

06079006c ಪ್ರಾಪ್ಯ ಪಾಂಡುಸುತಾನ್ವೀರಾನ್ವ್ಯರ್ಥಂ ಭವತಿ ಸಂಯುಗೇ||

ಹಾಗೆಯೇ ರಾಜನ್! ಮಹಾತ್ಮರಾದ ನಿನ್ನವರು ಪೌರುಷದಿಂದಿದ್ದರೂ ಸಂಯುಗದಲ್ಲಿ ವೀರ ಪಾಂಡುಸುತರನ್ನು ಎದುರಿಸಿದ ಕೂಡಲೇ ಅದು ವ್ಯರ್ಥವಾಗಿ ಬಿಡುತ್ತಿದೆ.

06079007a ಘಟಮಾನಾನ್ಯಥಾಶಕ್ತಿ ಕುರ್ವಾಣಾನ್ಕರ್ಮ ದುಷ್ಕರಂ|

06079007c ನ ದೋಷೇಣ ಕುರುಶ್ರೇಷ್ಠ ಕೌರವಾನ್ಗಂತುಮರ್ಹಸಿ||

ಕುರುಶ್ರೇಷ್ಠ! ಅವರು ಸಂಘಟಿತರಾಗಿ ಯಥಾಶಕ್ತಿಯಾಗಿಯೇ ದುಷ್ಕರ ಕರ್ಮವನ್ನು ಮಾಡುತ್ತಿದ್ದಾರೆ. ಆದುದರಿಂದ ದೋಷವು ಆ ಕೌರವರಿಗೆ ಹೋಗಬಾರದು.

06079008a ತವಾಪರಾಧಾತ್ಸುಮಹಾನ್ಸಪುತ್ರಸ್ಯ ವಿಶಾಂ ಪತೇ|

06079008c ಪೃಥಿವ್ಯಾಃ ಪ್ರಕ್ಷಯೋ ಘೋರೋ ಯಮರಾಷ್ಟ್ರವಿವರ್ಧನಃ||

ವಿಶಾಂಪತೇ! ನಿನ್ನ ಮತ್ತು ನಿನ್ನ ಮಗನ ಮಹಾ ಅಪರಾಧದಿಂದ ಯಮರಾಷ್ಟ್ರವನ್ನು ವರ್ಧಿಸುವ ಈ ಘೋರ ಪ್ರಕ್ಷಯವು ಭೂಮಿಯ ಮೇಲೆ ನಡೆಯುತ್ತಿದೆ.

06079009a ಆತ್ಮದೋಷಾತ್ಸಮುತ್ಪನ್ನಂ ಶೋಚಿತುಂ ನಾರ್ಹಸೇ ನೃಪ|

06079009c ನ ಹಿ ರಕ್ಷಂತಿ ರಾಜಾನಃ ಸರ್ವಾರ್ಥಾನ್ನಾಪಿ ಜೀವಿತಂ||

ನೃಪ! ನಿನ್ನದೇ ದೋಷದಿಂದ ಉಂಟಾಗಿರುವುದರ ಕುರಿತು ಶೋಕಿಸಿ ಏನು ಪ್ರಯೋಜನ? ಏಕೆಂದರೆ ಈ ರಾಜರ ಜೀವಿತವನ್ನು ಈಗ ಏನೂ ರಕ್ಷಿಸಲಾರದು.

06079010a ಯುದ್ಧೇ ಸುಕೃತಿನಾಂ ಲೋಕಾನಿಚ್ಛಂತೋ ವಸುಧಾಧಿಪಾಃ|

06079010c ಚಮೂಂ ವಿಗಾಹ್ಯ ಯುಧ್ಯಂತೇ ನಿತ್ಯಂ ಸ್ವರ್ಗಪರಾಯಣಾಃ||

ಈ ವಸುಧಾಧಿಪರು ಯುದ್ಧದಲ್ಲಿ ಪುಣ್ಯವಂತರ ಲೋಕಗಳನ್ನು ಇಚ್ಛಿಸುತ್ತಿದ್ದಾರೆ. ನಿತ್ಯವೂ ಸ್ವರ್ಗಪರಾಯಣರಾಗಿ ಶತ್ರುಸೇನೆಗಳನ್ನು ನುಗ್ಗಿ ಯುದ್ಧಮಾಡುತ್ತಿದ್ದಾರೆ.

06079011a ಪೂರ್ವಾಹ್ಣೇ ತು ಮಹಾರಾಜ ಪ್ರಾವರ್ತತ ಜನಕ್ಷಯಃ|

06079011c ತನ್ಮಮೈಕಮನಾ ಭೂತ್ವಾ ಶೃಣು ದೇವಾಸುರೋಪಮಂ||

ಮಹಾರಾಜ! ಪೂರ್ವಾಹ್ಣದಲ್ಲಿ ಬಹಳ ಜನಕ್ಷಯವಾಯಿತು. ಏಕಾಗ್ರಚಿತ್ತನಾಗಿ ದೇವಾಸುರರ ನಡುವೆ ನಡೆದಂತಿದ್ದ ಅದರ ಕುರಿತು ಕೇಳು.

06079012a ಆವಂತ್ಯೌ ತು ಮಹೇಷ್ವಾಸೌ ಮಹಾತ್ಮಾನೌ ಮಹಾಬಲೌ|

06079012c ಇರಾವಂತಮಭಿಪ್ರೇಕ್ಷ್ಯ ಸಮೇಯಾತಾಂ ರಣೋತ್ಕಟೌ|

06079012e ತೇಷಾಂ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ||

ಅವಂತಿಯ ಮಹೇಷ್ವಾಸ ಮಹಾತ್ಮ ಮಹಾಬಲರಿಬ್ಬರೂ ಇರಾವಾನನನ್ನು ನೋಡಿ ರಣೋತ್ಕಟರಾಗಿ ಒಟ್ಟಿಗೇ ಎದುರಿಸಿದರು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

06079013a ಇರಾವಾಂಸ್ತು ಸುಸಂಕ್ರುದ್ಧೋ ಭ್ರಾತರೌ ದೇವರೂಪಿಣೌ|

06079013c ವಿವ್ಯಾಧ ನಿಶಿತೈಸ್ತೂರ್ಣಂ ಶರೈಃ ಸನ್ನತಪರ್ವಭಿಃ|

06079013e ತಾವೇನಂ ಪ್ರತ್ಯವಿಧ್ಯೇತಾಂ ಸಮರೇ ಚಿತ್ರಯೋಧಿನೌ||

ಸಂಕ್ರುದ್ಧ ಇರಾವಾನನು ದೇವರೂಪಿ ಸಹೋದರರನ್ನು ತಕ್ಷಣವೇ ನಿಶಿತ ಸನ್ನತಪರ್ವ ಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಸಮರದಲ್ಲಿ ಚಿತ್ರಯೋಧಿಗಳು ಅವನನ್ನು ಹೊಡೆದರು.

06079014a ಯುಧ್ಯತಾಂ ಹಿ ತಥಾ ರಾಜನ್ವಿಶೇಷೋ ನ ವ್ಯದೃಶ್ಯತ|

06079014c ಯತತಾಂ ಶತ್ರುನಾಶಾಯ ಕೃತಪ್ರತಿಕೃತೈಷಿಣಾಂ||

ರಾಜನ್! ಶತ್ರುನಾಶಕ್ಕೆ ಪ್ರಯತ್ನಿಸುತ್ತಾ, ಪ್ರಹಾರ ಪ್ರತಿಪ್ರಹಾರಗಳನ್ನು ಮಾಡುತ್ತಾ ಹಾಗೆ ಯುದ್ಧಮಾಡುತ್ತಿದ್ದ ಅವರಲ್ಲಿ ವಿಶೇಷ ಅಂತರವೇನೂ ಕಾಣಲಿಲ್ಲ.

06079015a ಇರಾವಾಂಸ್ತು ತತೋ ರಾಜನ್ನನುವಿಂದಸ್ಯ ಸಾಯಕೈಃ|

06079015c ಚತುರ್ಭಿಶ್ಚತುರೋ ವಾಹಾನನಯದ್ಯಮಸಾದನಂ||

ರಾಜನ್! ಆಗ ಇರಾವಾನನು ನಾಲ್ಕು ಬಾಣಗಳಿಂದ ಅನುವಿಂದನ ರಥದ ನಾಲ್ಕೂ ಕುದುರೆಗಳನ್ನು ಯಮಾಲಯಕ್ಕೆ ಕಳುಹಿಸಿಕೊಟ್ಟನು.

06079016a ಭಲ್ಲಾಭ್ಯಾಂ ಚ ಸುತೀಕ್ಷ್ಣಾಭ್ಯಾಂ ಧನುಃ ಕೇತುಂ ಚ ಮಾರಿಷ|

06079016c ಚಿಚ್ಛೇದ ಸಮರೇ ರಾಜಂಸ್ತದದ್ಭುತಮಿವಾಭವತ್||

ಮಾರಿಷ! ಎರಡು ಸುತೀಕ್ಷ್ಣ ಭಲ್ಲಗಳಿಂದ ಅವನ ಧನುಸ್ಸನ್ನೂ ಧ್ವಜವನ್ನೂ ಸಮರದಲ್ಲಿ ಕತ್ತರಿಸಿದನು. ರಾಜನ್! ಅದು ಅದ್ಭುತವಾಗಿತ್ತು.

06079017a ತ್ಯಕ್ತ್ವಾನುವಿಂದೋಽಥ ರಥಂ ವಿಂದಸ್ಯ ರಥಮಾಸ್ಥಿತಃ|

06079017c ಧನುರ್ಗೃಹೀತ್ವಾ ನವಮಂ ಭಾರಸಾಧನಮುತ್ತಮಂ||

ಆಗ ಅನುವಿಂದನು ಹೊಸತಾದ ಭಾರಸಾಧನ ಉತ್ತಮ ಧನುಸ್ಸನ್ನು ಹಿಡಿದು ವಿಂದನ ರಥವನ್ನೇರಿದನು.

06079018a ತಾವೇಕಸ್ಥೌ ರಣೇ ವೀರಾವಾವಂತ್ಯೌ ರಥಿನಾಂ ವರೌ|

06079018c ಶರಾನ್ಮುಮುಚತುಸ್ತೂರ್ಣಮಿರಾವತಿ ಮಹಾತ್ಮನಿ||

ಅವರಿಬ್ಬರು ಅವಂತಿಯ ವೀರರೂ ರಥಿಗಳಲ್ಲಿ ಶ್ರೇಷ್ಠರೂ ಒಂದೇ ರಥದಲ್ಲಿದ್ದುಕೊಂಡು ಮಹಾತ್ಮ ಇರಾವಂತನ ಮೇಲೆ ಬೇಗ ಶರಗಳನ್ನು ಪ್ರಯೋಗಿಸಿದರು.

06079019a ತಾಭ್ಯಾಂ ಮುಕ್ತಾ ಮಹಾವೇಗಾಃ ಶರಾಃ ಕಾಂಚನಭೂಷಣಾಃ|

06079019c ದಿವಾಕರಪಥಂ ಪ್ರಾಪ್ಯ ಚಾದಯಾಮಾಸುರಂಬರಂ||

ಅವರು ಬಿಟ್ಟ ಮಹಾವೇಗದ ಕಾಂಚನಭೂಷಣ ಶರಗಳು ದಿವಾಕರನ ಪಥವನ್ನು ಅನುಸರಿಸಿ ಆಕಾಶವನ್ನೆಲ್ಲಾ ತುಂಬಿದವು.

06079020a ಇರಾವಾಂಸ್ತು ತತಃ ಕ್ರುದ್ಧೋ ಭ್ರಾತರೌ ತೌ ಮಹಾರಥೌ|

06079020c ವವರ್ಷ ಶರವರ್ಷೇಣ ಸಾರಥಿಂ ಚಾಪ್ಯಪಾತಯತ್||

ಆಗ ಇರಾವಂತನು ಕ್ರುದ್ಧನಾಗಿ ಆ ಮಹಾರಥ ಸಹೋದರರಿಬ್ಬರ ಮೇಲೆ ಶರವರ್ಷವನ್ನು ಸುರಿಸಿ ಸಾರಥಿಯನ್ನು ಬೀಳಿಸಿದನು.

06079021a ತಸ್ಮಿನ್ನಿಪತಿತೇ ಭೂಮೌ ಗತಸತ್ತ್ವೇಽಥ ಸಾರಥೌ|

06079021c ರಥಃ ಪ್ರದುದ್ರಾವ ದಿಶಃ ಸಮುದ್ಭ್ರಾಂತಹಯಸ್ತತಃ||

ಪ್ರಾಣಕಳೆದುಕೊಂಡು ಸಾರಥಿಗಳಿಬ್ಬರೂ ಭೂಮಿಯ ಮೇಲೆ ಬೀಳಲು ಭ್ರಾಂತಗೊಂಡ ಕುದುರೆಗಳು ರಥವನ್ನು ದಿಕ್ಕು ದಿಕ್ಕುಗಳಿಗೆ ಕೊಂಡೊಯ್ದವು.

06079022a ತೌ ಸ ಜಿತ್ವಾ ಮಹಾರಾಜ ನಾಗರಾಜಸುತಾಸುತಃ|

06079022c ಪೌರುಷಂ ಖ್ಯಾಪಯಂಸ್ತೂರ್ಣಂ ವ್ಯಧಮತ್ತವ ವಾಹಿನೀಂ||

ಮಹಾರಾಜ! ನಾಗರಾಜನ ಮಗಳ ಮಗನಾದ ಅವನು ಅವರಿಬ್ಬರನ್ನು ಪರಾಜಯಗೊಳಿಸಿ ತನ್ನ ಪೌರುಷವನ್ನು ಪ್ರಕಟಪಡಿಸುತ್ತಾ ನಿನ್ನ ಸೇನೆಯನ್ನು ನಾಶಪಡಿಸತೊಡಗಿದನು.

06079023a ಸಾ ವಧ್ಯಮಾನಾ ಸಮರೇ ಧಾರ್ತರಾಷ್ಟ್ರೀ ಮಹಾಚಮೂಃ|

06079023c ವೇಗಾನ್ಬಹುವಿಧಾಂಶ್ಚಕ್ರೇ ವಿಷಂ ಪೀತ್ವೇವ ಮಾನವಃ||

ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ಧಾರ್ತರಾಷ್ಟ್ರನ ಮಹಾಸೇನೆಯು ವಿಷಪಾನಮಾಡಿದ ಮನುಷ್ಯನಂತೆ ಬಹುವಿಧವಾಗಿ ನಡೆದುಕೊಂಡಿತು.

06079024a ಹೈಡಿಂಬೋ ರಾಕ್ಷಸೇಂದ್ರಸ್ತು ಭಗದತ್ತಂ ಸಮಾದ್ರವತ್|

06079024c ರಥೇನಾದಿತ್ಯವರ್ಣೇನ ಸಧ್ವಜೇನ ಮಹಾಬಲಃ||

ಆದಿತ್ಯವರ್ಣದ ರಥದಲ್ಲಿ, ಧ್ವಜದೊಂದಿಗೆ ಮಹಾಬಲ ರಾಕ್ಷಸೇಂದ್ರ ಹೈಡಿಂಬನು ಭಗದತ್ತನನ್ನು ಎದುರಿಸಿದನು.

06079025a ತತಃ ಪ್ರಾಗ್ಜ್ಯೋತಿಷೋ ರಾಜಾ ನಾಗರಾಜಂ ಸಮಾಸ್ಥಿತಃ|

06079025c ಯಥಾ ವಜ್ರಧರಃ ಪೂರ್ವಂ ಸಂಗ್ರಾಮೇ ತಾರಕಾಮಯೇ||

ಆಗ ಹಿಂದೆ ತಾರಕಮಯಸಂಗ್ರಾಮದಲ್ಲಿ ವಜ್ರಧರನಂತೆ ಪ್ರಾಗ್ಜ್ಯೋತಿಷದ ರಾಜನು ಗಜರಾಜನನ್ನೇರಿದನು.

06079026a ತತ್ರ ದೇವಾಃ ಸಗಂಧರ್ವಾ ಋಷಯಶ್ಚ ಸಮಾಗತಾಃ|

06079026c ವಿಶೇಷಂ ನ ಸ್ಮ ವಿವಿದುರ್ಹೈಡಿಂಬಭಗದತ್ತಯೋಃ||

ಅಲ್ಲಿ ಗಂಧರ್ವ-ಋಷಿಗಳೊಂದಿಗೆ ಸೇರಿದ್ದ ದೇವತೆಗಳು ಹೈಡಿಂಬ ಭಗದತ್ತರ ನಡುವೆ ಯಾವ ವ್ಯತ್ಯಾಸವನ್ನೂ ಕಾಣಲಿಲ್ಲ.

06079027a ಯಥಾ ಸುರಪತಿಃ ಶಕ್ರಸ್ತ್ರಾಸಯಾಮಾಸ ದಾನವಾನ್|

06079027c ತಥೈವ ಸಮರೇ ರಾಜಂಸ್ತ್ರಾಸಯಾಮಾಸ ಪಾಂಡವಾನ್||

ಸುರಪತಿ ಶಕ್ರನು ಹೇಗೆ ದಾನವರನ್ನು ಕಾಡಿದನೋ ಹಾಗೆ ಸಮರದಲ್ಲಿ ರಾಜನು ಪಾಂಡವರನ್ನು ಪೀಡಿಸಿದನು.

06079028a ತೇನ ವಿದ್ರಾವ್ಯಮಾಣಾಸ್ತೇ ಪಾಂಡವಾಃ ಸರ್ವತೋದಿಶಂ|

06079028c ತ್ರಾತಾರಂ ನಾಭ್ಯವಿಂದಂತ ಸ್ವೇಷ್ವನೀಕೇಷು ಭಾರತ||

ಭಾರತ! ಅವನಿಂದ ಗಾಯಗೊಂಡ ಪಾಂಡವರು ತ್ರಾತಾರನಿಲ್ಲದೇ ತಮ್ಮ ಸೇನೆಯಲ್ಲಿ ಸರ್ವದಿಶಗಳಲ್ಲಿ ಓಡತೊಡಗಿದರು.

06079029a ಭೈಮಸೇನಿಂ ರಥಸ್ಥಂ ತು ತತ್ರಾಪಶ್ಯಾಮ ಭಾರತ|

06079029c ಶೇಷಾ ವಿಮನಸೋ ಭೂತ್ವಾ ಪ್ರಾದ್ರವಂತ ಮಹಾರಥಾಃ||

ಭಾರತ! ಅಲ್ಲಿ ರಥದಲ್ಲಿದ್ದ ಭೈಮಸೇನಿಯು ವಿಮನಸ್ಕರಾಗಿ ಓಡುತ್ತಿದ್ದ ಉಳಿದ ಮಹಾರಥರನ್ನು ನೋಡಿದನು.

06079030a ನಿವೃತ್ತೇಷು ತು ಪಾಂಡೂನಾಂ ಪುನಃ ಸೈನ್ಯೇಷು ಭಾರತ|

06079030c ಆಸೀನ್ನಿಷ್ಟಾನಕೋ ಘೋರಸ್ತವ ಸೈನ್ಯೇಷು ಸಂಯುಗೇ||

ಭಾರತ! ಪುನಃ ಪಾಂಡವರ ಸೈನ್ಯವು ಮರಳಿ ಬರಲು ಅಲ್ಲಿ ಅವರು ಮತ್ತು ನಿಮ್ಮವರ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು.

06079031a ಘಟೋತ್ಕಚಸ್ತತೋ ರಾಜನ್ಭಗದತ್ತಂ ಮಹಾರಣೇ|

06079031c ಶರೈಃ ಪ್ರಚ್ಛಾದಯಾಮಾಸ ಮೇರುಂ ಗಿರಿಮಿವಾಂಬುದಃ||

ರಾಜನ್! ಆಗ ಘಟೋತ್ಕಚನು ಮಹಾರಣದಲ್ಲಿ ಭಗದತ್ತನನ್ನು ಮೋಡವು ಮೇರುಗಿರಿಯನ್ನು ಹೇಗೋ ಹಾಗೆ ಶರಗಳಿಂದ ಮುಚ್ಚತೊಡಗಿದನು.

06079032a ನಿಹತ್ಯ ತಾಂ ಶರಾನ್ರಾಜಾ ರಾಕ್ಷಸಸ್ಯ ಧನುಶ್ಚ್ಯುತಾನ್|

06079032c ಭೈಮಸೇನಿಂ ರಣೇ ತೂರ್ಣಂ ಸರ್ವಮರ್ಮಸ್ವತಾಡಯತ್||

ತಕ್ಷಣವೇ ರಾಜನು ರಾಕ್ಷಸನ ಧನುಸ್ಸಿನಿಂದ ಬಂದ ಆ ಶರಗಳನ್ನು ನಾಶಪಡಿಸಿ ರಣದಲ್ಲಿ ಭೈಮಸೇನಿಯ ಎಲ್ಲ ಮರ್ಮಸ್ಥಾನಗಳಿಗೂ ಹೊಡೆದನು.

06079033a ಸ ತಾಡ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ|

06079033c ನ ವಿವ್ಯಥೇ ರಾಕ್ಷಸೇಂದ್ರೋ ಭಿದ್ಯಮಾನ ಇವಾಚಲಃ||

ಅನೇಕ ಸನ್ನತಪರ್ವ ಶರಗಳಿಂದ ಹೊಡೆಯುಲ್ಪಟ್ಟರೂ ಭೇದಿಸಲ್ಪಡುವ ಪರ್ವತದಂತೆ ರಾಕ್ಷಸೇಂದ್ರನು ನಿಂತಲ್ಲಿಂದ ಚಲಿಸಲಿಲ್ಲ.

06079034a ತಸ್ಯ ಪ್ರಾಗ್ಜ್ಯೋತಿಷಃ ಕ್ರುದ್ಧಸ್ತೋಮರಾನ್ಸ ಚತುರ್ದಶ|

06079034c ಪ್ರೇಷಯಾಮಾಸ ಸಮರೇ ತಾಂಶ್ಚ ಚಿಚ್ಛೇದ ರಾಕ್ಷಸಃ||

ಆಗ ಕ್ರುದ್ಧ ಪ್ರಾಗ್ಜ್ಯೋತಿಷನು ಹದಿನಾಲ್ಕು ತೋಮರಗಳನ್ನು ಅವನ ಮೇಲೆ ಪ್ರಯೋಗಿಸಲು ಅವುಗಳನ್ನೂ ಸಮರದಲ್ಲಿ ರಾಕ್ಷಸನು ತುಂಡರಿಸಿದನು.

06079035a ಸ ತಾಂಶ್ಚಿತ್ತ್ವಾ ಮಹಾಬಾಹುಸ್ತೋಮರಾನ್ನಿಶಿತೈಃ ಶರೈಃ|

06079035c ಭಗದತ್ತಂ ಚ ವಿವ್ಯಾಧ ಸಪ್ತತ್ಯಾ ಕಂಕಪತ್ರಿಭಿಃ||

ಆ ಮಹಾಬಾಹುವು ನಿಶಿತ ಶರಗಳಿಂದ ಆ ತೋಮರಗಳನ್ನು ಕತ್ತರಿಸಿ ಏಳು ಕಂಕಪತ್ರಿಗಳಿಂದ ಭಗದತ್ತನನ್ನೂ ಹೊಡೆದನು.

06079036a ತತಃ ಪ್ರಾಗ್ಜ್ಯೋತಿಷೋ ರಾಜನ್ಪ್ರಹಸನ್ನಿವ ಭಾರತ|

06079036c ತಸ್ಯಾಶ್ವಾಂಶ್ಚತುರಃ ಸಂಖ್ಯೇ ಪಾತಯಾಮಾಸ ಸಾಯಕೈಃ||

ಆಗ ರಾಜನ್! ಭಾರತ! ಪ್ರಾಗ್ಜ್ಯೋತಿಷದ ರಾಜನು ನಕ್ಕು ಸಾಯಕಗಳಿಂದ ಯುದ್ಧದಲ್ಲಿ ಅವನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು.

06079037a ಸ ಹತಾಶ್ವೇ ರಥೇ ತಿಷ್ಠನ್ರಾಕ್ಷಸೇಂದ್ರಃ ಪ್ರತಾಪವಾನ್|

06079037c ಶಕ್ತಿಂ ಚಿಕ್ಷೇಪ ವೇಗೇನ ಪ್ರಾಗ್ಜ್ಯೋತಿಷಗಜಂ ಪ್ರತಿ||

ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ರಾಕ್ಷಸೇಂದ್ರನು ವೇಗದಿಂದ ಪ್ರಾಗ್ಜ್ಯೋತಿಷನ ಆನೆಯ ಮೇಲೆ ಶಕ್ತಿಯನ್ನು ಎಸೆದನು.

06079038a ತಾಮಾಪತಂತೀಂ ಸಹಸಾ ಹೇಮದಂಡಾಂ ಸುವೇಗಿತಾಂ|

06079038c ತ್ರಿಧಾ ಚಿಚ್ಛೇದ ನೃಪತಿಃ ಸಾ ವ್ಯಕೀರ್ಯತ ಮೇದಿನೀಂ||

ಮೇಲೆ ಬೀಳುತ್ತಿದ್ದ ಸುವೇಗದ ಹೇಮದಂಡ ಶಕ್ತಿಯನ್ನು ನೃಪತಿಯು ಮೂರು ತುಂಡುಗಳನ್ನಾಗಿ ಮಾಡಿ ನೆಲದ ಮೇಲೆ ಹರಡಿದನು.

06079039a ಶಕ್ತಿಂ ವಿನಿಹತಾಂ ದೃಷ್ಟ್ವಾ ಹೈಡಿಂಬಃ ಪ್ರಾದ್ರವದ್ಭಯಾತ್|

06079039c ಯಥೇಂದ್ರಸ್ಯ ರಣಾತ್ಪೂರ್ವಂ ನಮುಚಿರ್ದೈತ್ಯಸತ್ತಮಃ||

ಶಕ್ತಿಯು ನಾಶವಾದುದನ್ನು ನೋಡಿ ಹೈಡಿಂಬನು, ಹಿಂದೆ ಹೇಗೆ ದೈತ್ಯಸತ್ತಮ ನಮುಚಿಯು ಇಂದ್ರನಿಂದ ಓಡಿಹೋಗಿದ್ದನೋ ಹಾಗೆ ಭಯದಿಂದ ಪಲಾಯನಗೈದನು.

06079040a ತಂ ವಿಜಿತ್ಯ ರಣೇ ಶೂರಂ ವಿಕ್ರಾಂತಂ ಖ್ಯಾತಪೌರುಷಂ|

06079040c ಅಜೇಯಂ ಸಮರೇ ರಾಜನ್ಯಮೇನ ವರುಣೇನ ಚ||

06079041a ಪಾಂಡವೀಂ ಸಮರೇ ಸೇನಾಂ ಸಮ್ಮಮರ್ದ ಸಕುಂಜರಃ|

06079041c ಯಥಾ ವನಗಜೋ ರಾಜನ್ಮೃದ್ನಂಶ್ಚರತಿ ಪದ್ಮಿನೀಂ||

ರಣದಲ್ಲಿ ಆ ಶೂರ, ವಿಕ್ರಾಂತ, ಖ್ಯಾತಪೌರುಷ, ಸಮರದಲ್ಲಿ ಯಮ-ವರುಣರಿಂದಲೂ ಅಜೇಯನನ್ನು ಸೋಲಿಸಿ ಅವನು ವನಗಜವು ಪದ್ಮಗಳಿರುವ ಸರೋವರವನ್ನು ಧ್ವಂಸಮಾಡುವಂತೆ ತನ್ನ ಆನೆಯೊಂದಿಗೆ ಪಾಂಡವೀ ಸೇನೆಯನ್ನು ಮರ್ದಿಸಿದನು.

06079042a ಮದ್ರೇಶ್ವರಸ್ತು ಸಮರೇ ಯಮಾಭ್ಯಾಂ ಸಹ ಸಂಗತಃ|

06079042c ಸ್ವಸ್ರೀಯೌ ಚಾದಯಾಂ ಚಕ್ರೇ ಶರೌಘೈಃ ಪಾಂಡುನಂದನೌ||

ಮದ್ರೇಶ್ವರನಾದರೋ ಸಮರದಲ್ಲಿ ತಂಗಿಯ ಮಕ್ಕಳಾದ ಪಾಂಡುನಂದನರು ಯಮಳರೊಂದಿಗೆ ಯುದ್ಧವನ್ನು ನಡೆಸಿದನು.

06079043a ಸಹದೇವಸ್ತು ಸಮರೇ ಮಾತುಲಂ ವೀಕ್ಷ್ಯ ಸಂಗತಂ|

06079043c ಅವಾರಯಚ್ಚರೌಘೇಣ ಮೇಘೋ ಯದ್ವದ್ದಿವಾಕರಂ||

ಸಮರದಲ್ಲಿ ಸಹದೇವನಾದರೋ ಮಾವನನ್ನು ನೋಡಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಣಗಳಿಂದ ಅವನನ್ನು ಮುಚ್ಚಿದನು.

06079044a ಚಾದ್ಯಮಾನಃ ಶರೌಘೇಣ ಹೃಷ್ಟರೂಪತರೋಽಭವತ್|

06079044c ತಯೋಶ್ಚಾಪ್ಯಭವತ್ಪ್ರೀತಿರತುಲಾ ಮಾತೃಕಾರಣಾತ್||

ಶರೌಘಗಳಿಂದ ಮುಚ್ಚಲ್ಪಟ್ಟಿದ್ದರೂ ಅವನು ಹೃಷ್ಟರೂಪನಾಗಿಯೇ ಇದ್ದನು. ತಾಯಿಯ ಕಾರಣದಿಂದ ಅವರಿಗೂ ತಮ್ಮ ಮಾವನ ಮೇಲೆ ಪ್ರೀತಿಯಿತ್ತು.

06079045a ತತಃ ಪ್ರಹಸ್ಯ ಸಮರೇ ನಕುಲಸ್ಯ ಮಹಾರಥಃ|

06079045c ಅಶ್ವಾನ್ವೈ ಚತುರೋ ರಾಜಂಶ್ಚತುರ್ಭಿಃ ಸಾಯಕೋತ್ತಮೈಃ|

06079045e ಪ್ರೇಷಯಾಮಾಸ ಸಮರೇ ಯಮಸ್ಯ ಸದನಂ ಪ್ರತಿ||

ರಾಜನ್! ಆಗ ಸಮರದಲ್ಲಿ ಆ ಮಹಾರಥನು ನಕುಲನ ನಾಲ್ಕೂ ಕುದುರೆಗಳನ್ನು ನಾಲ್ಕು ಉತ್ತಮ ಸಾಯಕಗಳಿಂದ ಹೊಡೆದು ಯಮಸದನದ ಕಡೆ ಕಳುಹಿಸಿದನು.

06079046a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ|

06079046c ಆರುರೋಹ ತತೋ ಯಾನಂ ಭ್ರಾತುರೇವ ಯಶಸ್ವಿನಃ||

ಕುದುರೆಯು ಹತವಾಗಲು ತಕ್ಷಣವೇ ರಥದಿಂದ ಹಾರಿ ಮಹಾರಥ ಯಶಸ್ವಿಯು ಸಹೋದರನ ರಥವನ್ನೇ ಏರಿದನು.

06079047a ಏಕಸ್ಥೌ ತು ರಣೇ ಶೂರೌ ದೃಢೇ ವಿಕ್ಷಿಪ್ಯ ಕಾರ್ಮುಕೇ|

06079047c ಮದ್ರರಾಜರಥಂ ಕ್ರುದ್ಧೌ ಚಾದಯಾಮಾಸತುಃ ಕ್ಷಣಾತ್||

ಒಂದೇ ಕಡೆ ನಿಂತು ಅವರಿಬ್ಬರು ಶೂರರೂ ದೃಢ ಧನುಸ್ಸನ್ನು ಎಳೆದು ಕ್ರುದ್ಧರಾಗಿ ಮದ್ರರಾಜನ ರಥವನ್ನು ಕ್ಷಣದಲ್ಲಿ ಮುಚ್ಚಿಬಿಟ್ಟರು.

06079048a ಸ ಚ್ಛಾದ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ|

06079048c ಸ್ವಸ್ರೀಯಾಭ್ಯಾಂ ನರವ್ಯಾಘ್ರೋ ನಾಕಂಪತ ಯಥಾಚಲಃ|

06079048e ಪ್ರಹಸನ್ನಿವ ತಾಂ ಚಾಪಿ ಶರವೃಷ್ಟಿಂ ಜಘಾನ ಹ||

ತಂಗಿಯ ಮಕ್ಕಳ ಅನೇಕ ಸನ್ನತಪರ್ವಗಳಿಂದ ಮುಚ್ಚಲ್ಪಟ್ಟಿರೂ ಪರ್ವತದಂತೆ ಆ ನರವ್ಯಾಘ್ರನು ಅಲುಗಾಡಲಿಲ್ಲ. ನಗುತ್ತಾ ಅವನೂ ಕೂಡ ಅವರ ಮೇಲೆ ಶರವೃಷ್ಟಿಯನ್ನು ಸುರಿಸಿದನು.

06079049a ಸಹದೇವಸ್ತತಃ ಕ್ರುದ್ಧಃ ಶರಮುದ್ಯಮ್ಯ ವೀರ್ಯವಾನ್|

06079049c ಮದ್ರರಾಜಮಭಿಪ್ರೇಕ್ಷ್ಯ ಪ್ರೇಷಯಾಮಾಸ ಭಾರತ||

ಭಾರತ! ಆಗ ವೀರ್ಯವಾನ್ ಸಹದೇವನು ಕ್ರುದ್ಧನಾಗಿ ಶರವನ್ನು ಹೂಡಿ ಮದ್ರರಾಜನ ಮೇಲೆ ಪ್ರಯೋಗಿಸಿದನು.

06079050a ಸ ಶರಃ ಪ್ರೇಷಿತಸ್ತೇನ ಗರುತ್ಮಾನಿವ ವೇಗವಾನ್|

06079050c ಮದ್ರರಾಜಂ ವಿನಿರ್ಭಿದ್ಯ ನಿಪಪಾತ ಮಹೀತಲೇ||

ಅವನಿಂದ ಬಿಡಲ್ಪಟ್ಟ ಆ ಶರವು ಗರುಡನಂತೆ ವೇಗವಾಗಿ ಹೋಗಿ ಮದ್ರರಾಜನನ್ನು ಭೇದಿಸಿ ಭೂಮಿಯ ಮೇಲೆ ಬಿದ್ದಿತು.

06079051a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥೇ ಮಹಾರಥಃ|

06079051c ನಿಷಸಾದ ಮಹಾರಾಜ ಕಶ್ಮಲಂ ಚ ಜಗಾಮ ಹ||

ಮಹಾರಾಜ! ಗಾಢವಾಗಿ ಗಾಯಗೊಂಡ ಆ ಮಹಾರಥನು ರಥದಲ್ಲಿಯೇ ಕುಳಿತುಕೊಂಡು, ಮೂರ್ಛಿತನಾದನು.

06079052a ತಂ ವಿಸಂಜ್ಞಂ ನಿಪತಿತಂ ಸೂತಃ ಸಂಪ್ರೇಕ್ಷ್ಯ ಸಂಯುಗೇ|

06079052c ಅಪೋವಾಹ ರಥೇನಾಜೌ ಯಮಾಭ್ಯಾಮಭಿಪೀಡಿತಂ||

ಅವನು ಮೂರ್ಛಿತನಾಗಿ ಬಿದ್ದುದನ್ನು ಗಮನಿಸಿದ ಸೂತನು ಸಂಯುಗದಲ್ಲಿ ಯಮಳರಿಂದ ಪೀಡಿತನಾದ ಅವನ ರಥವನ್ನು ಆಚೆ ಕೊಂಡೊಯ್ದನು.

06079053a ದೃಷ್ಟ್ವಾ ಮದ್ರೇಶ್ವರರಥಂ ಧಾರ್ತರಾಷ್ಟ್ರಾಃ ಪರಾಙ್ಮುಖಂ|

06079053c ಸರ್ವೇ ವಿಮನಸೋ ಭೂತ್ವಾ ನೇದಮಸ್ತೀತ್ಯಚಿಂತಯನ್||

ಹಿಂದೆ ಹೋಗುತ್ತಿದ್ದ ಮದ್ರೇಶ್ವರನ ರಥವನ್ನು ನೋಡಿ ಧಾರ್ತರಾಷ್ಟ್ರರೆಲ್ಲರೂ ವಿಮನಸ್ಕರಾಗಿ ಇವನು ಉಳಿಯುವುದಿಲ್ಲವೆಂದು ಚಿಂತಿಸಿದರು.

06079054a ನಿರ್ಜಿತ್ಯ ಮಾತುಲಂ ಸಂಖ್ಯೇ ಮಾದ್ರೀಪುತ್ರೌ ಮಹಾರಥೌ|

06079054c ದಧ್ಮತುರ್ಮುದಿತೌ ಶಂಖೌ ಸಿಂಹನಾದಂ ವಿನೇದತುಃ||

ಯುದ್ಧದಲ್ಲಿ ಸೋದರ ಮಾವನನ್ನು ಸೋಲಿಸಿ ಮಹಾರಥ ಮಾದ್ರೀಪುತ್ರರು ಮುದಿತರಾಗಿ ಶಂಖಗಳನ್ನು ಊದಿದರು ಮತ್ತು ಸಿಂಹನಾದಗೈದರು.

06079055a ಅಭಿದುದ್ರುವತುರ್ಹೃಷ್ಟೌ ತವ ಸೈನ್ಯಂ ವಿಶಾಂ ಪತೇ|

06079055c ಯಥಾ ದೈತ್ಯಚಮೂಂ ರಾಜನ್ನಿಂದ್ರೋಪೇಂದ್ರಾವಿವಾಮರೌ||

ವಿಶಾಂಪತೇ! ರಾಜನ್! ಅಮರರಾದ ಇಂದ್ರ-ಉಪೇಂದ್ರರು ದೈತ್ಯಸೇನೆಯನ್ನು ಹೇಗೋ ಹಾಗೆ ಅವರಿಬ್ಬರೂ ನಿನ್ನ ಸೈನ್ಯವನ್ನು ಹರ್ಷಿತರಾಗಿ ಬೆನ್ನಟ್ಟಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಂದ್ವಯುದ್ಧೇ ಏಕೋನಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.

Image result for horses against white background

Comments are closed.