ಭಕ್ಷ್ಯ-ಅಭಕ್ಷ್ಯಗಳ ಮತ್ತು ದಾನಕ್ಕೆ ಪಾತ್ರ-ಅಪಾತ್ರರ ಕುರಿತು ಮನು ಮತ್ತು ಸಿದ್ಧರ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಸ್ವಾಯಂಭುವ ಮನುವುಹೇಳಿದ ಧರ್ಮದ ಸ್ವರೂಪ, ಪಾಪದ ಶುದ್ಧಿಗಾಗಿ ಪ್ರಾಯಶ್ಚಿತ್ತ, ಅಭಕ್ಷ್ಯ ವಸ್ತುಗಳ ವರ್ಣನೆ ಮತ್ತು ದಾನಕ್ಕೆ ಅಧಿಕಾರಿ-ಅನಧಿಕಾರಿಗಳನ್ನು ವಿವೇಚಿಸುವ ಈ ವ್ಯಾಸ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 37ರಲ್ಲಿ ಬರುತ್ತದೆ.

***

ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಚಿಂತಿಸಿ ಆ ತಪೋಧನನನ್ನು ಪುನಃ ಪ್ರಶ್ನಿಸಿದನು:

“ಪಿತಾಮಹ! ತಿನ್ನಬಹುದಾದುದು ಯಾವುದು? ತಿನ್ನಬಾರದವುಗಳು ಯಾವುವು? ಯಾವುದನ್ನು ದಾನಮಾಡಲು ಶ್ರೇಷ್ಠ? ದಾನಮಾಡಲು ಯಾರು ಪಾತ್ರರು ಮತ್ತು ಯಾರು ಅಪಾತ್ರರು ಎನ್ನುವುದನ್ನು ನನಗೆ ಹೇಳು!”

ವ್ಯಾಸನು ಹೇಳಿದನು:

“ಇದಕ್ಕೆ ಸಂಬಂಧಿಸಿದಂತೆ ಬಹಳ ಹಿಂದೆ ನಡೆದ ಸಿದ್ಧರು ಮತ್ತು ಮನು ಪ್ರಜಾಪತಿಯರ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

***

ಹಿಂದೆ ಆದಿಕಾಲದಲ್ಲಿ ತಪೋವ್ರತಗಳಲ್ಲಿ ನಿರತರಾಗಿದ್ದ ಸಿದ್ಧರು ಒಂದಾಗಿ ಧರ್ಮದ ಕುರಿತು ಪ್ರಜಾಪತಿಯಲ್ಲಿ ಕೇಳಿದ್ದರು:

“ಪ್ರಜಾಪತೇ! ಅನ್ನವು ಹೇಗಾಗುತ್ತದೆ? ದಾನವು ಹೇಗಾಗುತ್ತದೆ? ಅಧ್ಯಯನ-ತಪಸ್ಸುಗಳು ಹೇಗಾಗುತ್ತವೆ? ಮಾಡಬೇಕಾದ ಕಾರ್ಯಗಳು ಯಾವುವು? ಮಾಡಬಾರದ ಅಕಾರ್ಯಗಳು ಯಾವುವು? ಇವೆಲ್ಲವನ್ನೂ ನಮಗೆ ಹೇಳು!”

ಅವರು ಹೀಗೆ ಕೇಳಲು ಭಗವಾನ್ ಸ್ವಾಯಂಭು ಮನುವು ಹೇಳಿದನು:

“ಧರ್ಮದ ಕುರಿತು ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ಹೇಗಿರುವುದೋ ಹಾಗೆ ಕೇಳಿರಿ! ಕೊಡದಿರುವುದನ್ನು ತೆಗೆದುಕೊಳ್ಳದಿರುವುದು, ದಾನ, ಅಧ್ಯಯನ, ತಪಸ್ಸು, ಅಹಿಂಸೆ, ಸತ್ಯತೆ, ಕೋಪಮಾಡಿಕೊಳ್ಳದಿರುವುದು, ಕ್ಷಮೆ ಮತ್ತು ಯಜ್ಞ ಇವು ಧರ್ಮದ ಲಕ್ಷಣಗಳು. ದೇಶ-ಕಾಲಗಳನ್ನನುಸರಿಸಿ ಧರ್ಮವೆನಿಸಿದುದು ಅಧರ್ಮವೂ ಆಗಬಲ್ಲದು. ದಾನಮಾಡದೇ ಇರುವುದು, ಸುಳ್ಳುಹೇಳುವುದು, ಹಿಂಸೆ ಇವುಗಳನ್ನು ದೇಶ-ಕಾಲಗಳನ್ನನುಸರಿಸಿ ಧರ್ಮಕಾರ್ಯಗಳೆಂದೇ ಪರಿಗಣಿಸಲೂಬಹುದು. ದೇಶ-ಕಾಲಗಳನ್ನನುಸರಿಸಿ ಧರ್ಮ ಮತ್ತು ಅಧರ್ಮವೆಂಬ ಎರಡು ವಿಧಗಳನ್ನು ತಿಳಿದುಕೊಳ್ಳಬೇಕು. ಲೋಕಗಳನ್ನು ತಿಳಿದವರು ಅಪ್ರವೃತ್ತಿ ಮತ್ತು ಪ್ರವೃತ್ತಿ[1] ಎಂಬ ಎರಡು ಪ್ರಕಾರಗಳ ಕುರಿತು ಹೇಳುತ್ತಾರೆ. ಅಪ್ರವೃತ್ತ ಕರ್ಮಗಳ ಫಲವು ಅಮೃತತ್ವ ಮತ್ತು ಪ್ರವೃತ್ತ ಕರ್ಮಗಳ ಫಲವು ಮರ್ತ್ಯತ್ವ.

ಪ್ರವೃತ್ತ ಕರ್ಮಗಳಲ್ಲಿ ಎರಡು ಬಗೆಗಳಿವೆ – ಅಶುಭ ಮತ್ತು ಶುಭ ಕಾರ್ಯಗಳು. ಈ ಎರಡು ಬಗೆಯ ಕರ್ಮಗಳ ಫಲಗಳೂ ಕೂಡ ಶುಭ ಮತ್ತು ಅಶುಭಗಳೆಂದು ವಿಭಾಗಿಸಲ್ಪಟ್ಟಿವೆ. ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನೊಳಗೊಂಡ, ತನ್ನ ಪ್ರಾಣವು ಹೋಗುವಾಗ ಅದನ್ನು ಉಳಿಸಿಕೊಳ್ಳಲು ಮಾಡುವ ಅಶುಭ ಕರ್ಮಗಳೂ ಶುಭ ಫಲಗಳನ್ನೇ ಕೊಡುತ್ತವೆ. ಅಪೇಕ್ಷಪೂರ್ವಕವಾಗಿ ಅಶುಭಕರ್ಮಗಳನ್ನು ಮಾಡಿದವರಿಗೆ, ಮತ್ತು ತಾನು ಮಾಡಿರುವ ಕಾರ್ಯವು ಅಶುಭವಾಗಿರಬಹುದೋ ಎಂದು ಸಂಶಯವಾಗಿರುವ ಕಾರ್ಯವನ್ನು ಮಾಡಿದವರಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.

ಕ್ರೋಧ-ಮೋಹಗಳಿಗೆ ವಶನಾಗಿ ಮನಸ್ಸಿಗೆ ಪ್ರಿಯವನ್ನುಂಟುಮಾಡಲು ಅಥವಾ ಮನಸ್ಸಿಗೆ ಅಪ್ರಿಯವಾದುದನ್ನು ವಿನಾಶಗೊಳಿಸಲು ಮತ್ತು ಹಿಂದೆ ಉದಾಹರಿಸಿದ ದೃಷ್ಟಾಂತಗಳ ಪ್ರಕಾರ ಅಶುಭಕಾರ್ಯವನ್ನೆಸಗಿದರೆ ಅವುಗಳ ಪಾಪಗಳನ್ನು ಶರೀರಬಾಧೆಗಳಿಂದ, ಔಷಧಿಗಳಿಂದ ಮತ್ತು ಮಂತ್ರಗಳಿಂದ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡು ನಿವಾರಿಸಿಕೊಳ್ಳಬಹುದು. ವರ್ಣ-ಆಶ್ರಮ-ಕುಲಧರ್ಮಗಳನ್ನು ಸಂಪೂರ್ಣವಾಗಿ ವರ್ಜಿಸಿದವರಿಗೆ ಯಾವುದೇ ರೀತಿಯ ಪ್ರಾಯಶ್ಚಿತ್ತಗಳೂ ಇರುವುದಿಲ್ಲ. ಧರ್ಮಸಂಶಯವು ಉತ್ಪನ್ನವಾದಾಗ ಯಾವ ಕಾರ್ಯಗಳನ್ನು ಮಾಡಬೇಕೆನ್ನುವುದನ್ನು ವೇದ-ಶಾಸ್ತ್ರಗಳನ್ನು ತಿಳಿದ ಹತ್ತು ಅಥವಾ ಧರ್ಮಪಾಠಕರಾದ ಮೂರು ಮಂದಿಗಳ ನಿರ್ಣಯದಂತೆ ಮಾಡಬೇಕು.

ಬ್ರಾಹ್ಮಣನಾದವನು ಕೆಂಪು ಮಣ್ಣನ್ನೂ, ಇರುವೆಗಳನ್ನೂ, ಚಳ್ಳೆಹಣ್ಣನ್ನೂ, ವಿಷವನ್ನೂ ತಿನ್ನಬಾರದು. ಆಮೆಗಳನ್ನು, ಮುಳ್ಳುಗಳಿರದ ಮೀನುಗಳನ್ನು, ಕಪ್ಪೆಗಳನ್ನೂ ಬಿಟ್ಟು ನೇರೆ ಯಾವ ಜಲಚರ ಪ್ರಾಣಿಗಳನ್ನೂ ಬ್ರಾಹ್ಮಣರು ತಿನ್ನಬಾರದು. ಭಾಸ, ಹಂಸ, ಗರುಡ, ಚಕ್ರವಾಕ, ಬಕಪಕ್ಷಿ, ಕಾಗೆ, ಮದು, ಹದ್ದು, ಗಿಡುಗ, ಗೂಬೆ, ಮಾಂಸವನ್ನು ತಿನ್ನುವ ಎಲ್ಲ ಪಕ್ಷಿಗಳು, ನಾಲ್ಕು ಕಾಲಿನ ಕೋರೆಹಲ್ಲುಗಳಿರುವ ಹಿಂಸಮೃಗಗಳು, ಎರಡೂ ಕಡೆ ಹಲ್ಲಿರುವ ಪ್ರಾಣಿಗಳು, ನಾಲ್ಕು ಕೋರೆದಾಡೆಗಳಿರುವ ಪ್ರಾಣಿಗಳು ಇವೆಲ್ಲವೂ ಬ್ರಾಹ್ಮಣರಿಗೆ ಅಭಕ್ಷ್ಯವಾದವುಗಳು. ಕುರಿ, ಕುದುರೆ, ಕತ್ತೆ, ಒಂಟೆ, ಮತ್ತು ಜನನವಾಗಿ ಹತ್ತು ದಿನಗಳ ಒಳಗಿನ ಮನುಷ್ಯ ಸ್ತ್ರೀಯ, ಜಿಂಕೆಯ ಮತ್ತು ಹಸುಗಳ ಹಾಲನ್ನು ಬ್ರಾಹ್ಮಣನು ಕುಡಿಯಬಾರದು. ಪ್ರೇತಾನ್ನ[2], ಸೂತಿಕಾನ್ನ[3] ವು ಬ್ರಾಹ್ಮಣನಿಗೆ ನಿಷಿದ್ಧ. ಹಾಗೆಯೇ ಕರುಹಾಕಿದ ಹಸುವಿನ ಹಾಲನ್ನು ಮೊದಲ ಹತ್ತುದಿನಗಳು ಕುಡಿಯಬಾರದು. ಬಡಗಿ, ಚಮ್ಮಾರ, ವ್ಯಭಿಚಾರಿಣೀ, ಅಗಸ, ವೈದ್ಯ ಮತ್ತು ಗ್ರಾಮರಕ್ಷಕರ ಅನ್ನವನ್ನೂ ತಿನ್ನಬಾರದು. ಸಮಾಜ-ಗ್ರಾಮಗಳಿಂದ ಬಹಿಷ್ಕೃತನಾದವನ, ನರ್ತಕಿಯರ ಜೀವನವನ್ನು ನಡೆಸುವವರ, ತಮ್ಮನ ವಿವಾಹವಾದ ನಂತರ ವಿವಾಹವಾದವನ, ವಂದಿ-ಮಾಗದರ ಮತ್ತು ಜೂಜಿನಲ್ಲಿ ಆಸಕ್ತನಾಗಿರುವವನ ಅನ್ನವನ್ನೂ ತಿನ್ನಬಾರದು. ಎಡಗೈಯಿಂದ ಬಡಿಸಿದ ಅನ್ನ, ಊಟಕ್ಕೆ ಕುಳಿತುಕೊಳ್ಳುವುದಕ್ಕೆ ಮೊದಲೇ ಬಡಿಸಿದ ಅನ್ನ, ಒಂದು ರಾತ್ರಿಯನ್ನು ಕಳೆದಿರುವ ಅನ್ನ, ಮದ್ಯದ ಸಮೀಪದಲ್ಲಿರುವ ಅನ್ನ, ಇನ್ನೊಬ್ಬರಿಗೆ ಬಡಿಸಿ ಉಳಿದ ಅನ್ನ, ಎಲ್ಲರೂ ತಿಂದು ಉಳಿದ ಅನ್ನ ಇವುಗಳನ್ನೂ ತಿನ್ನಬಾರದು. ಹಿಟ್ಟು, ಕಬ್ಬಿನರಸ, ತರಕಾರಿ, ಹಾಲು ಇವುಗಳನ್ನು ವಿಕೃತಗೊಳಿಸಿ ತಯಾರಿಸಿದ ಆಹಾರ, ತಯಾರಿಸಿ ಬಹಳ ಸಮಯವಾದ ತಂಬಿಟ್ಟು, ಹುರಿದಹಿಟ್ಟು ಮತ್ತು ಕಲಸಿದ ಅನ್ನ ಇವುಗಳನ್ನೂ ತಿನ್ನಬಾರದು. ದೇವತಾಪ್ರೀತ್ಯರ್ಥವಾಗಿ ಮಾಡದೇ ಇದ್ದ ಪಾಯಸ, ತಿಲಾನ್ನ, ಮಾಂಸ, ಹೋಳಿಗೆ ಇವುಗಳನ್ನು ಗೃಹಸ್ಥ ಬ್ರಾಹ್ಮಣನು ತಿನ್ನಬಾರದು ಮತ್ತು ಕುಡಿಯಬಾರದು.

ದೇವತೆಗಳು, ಋಷಿಗಳು, ಪಿತೃಗಳು, ಮನುಷ್ಯ ಮುನಿಗಳು ಮತ್ತು ಮನೆಯ ದೇವತೆಗಳನ್ನು ಪೂಜಿಸಿದ ನಂತರವೇ ಗೃಹಸ್ಥನಾದವನು ಊಟ ಮಾಡಬೇಕು. ಪರಿವ್ರಾಜಕ ಭಿಕ್ಷುವಂತೆ ಪತ್ನೀ-ಪುತ್ರರೊಡನೆ ತನ್ನ ಮನೆಯಲ್ಲಿಯೇ ವಾಸಿಸಿರುವ ಗೃಹಸ್ಥನು ಧರ್ಮಫಲಗಳನ್ನು ಪಡೆಯುತ್ತಾನೆ.

ಧಾರ್ಮಿಕನಾಗಿರುವವನು ಯಶಸ್ಸಿಗಾಗಲೀ, ಭಯದಿಂದಾಗಲೀ, ನೃತ್ಯಗೀತೆಗಳಲ್ಲಿ ಮತ್ತು ಹಾಸ್ಯವೃತ್ತಿಗಳಲ್ಲಿ ತೊಡಗಿರುವವರಿಗೆ ದಾನಮಾಡಬಾರದು. ಬ್ರಹ್ಮವಾದಿನಿಯಾದ ಬ್ರಾಹ್ಮಣನನ್ನು ಬಿಟ್ಟು ಮತ್ತನಾಗಿರುವವನಿಗೂ, ಹುಚ್ಚನಿಗೂ, ಕಳ್ಳನಿಗೂ, ಪರನಿಂದೆಯನ್ನು ಮಾಡುವವನಿಗೂ, ಮೂಕನಿಗೂ, ಮುಖದಲ್ಲಿ ವರ್ಚಸ್ಸಿಲ್ಲದಿರುವವನಿಗೂ, ಅಂಗವಿಕಲನಿಗೂ, ಕುಳ್ಳನಿಗೂ, ದುಷ್ಟನಿಗೂ, ದುಷ್ಕುಲದಲ್ಲಿ ಹುಟ್ಟಿದವನಿಗೂ, ವ್ರತಗಳನ್ನು ಆಚರಿಸದೇ ಸುಸಂಕೃತನಾಗದೇ ಇರುವವನಿಗೂ, ವೇದದಿಂದ ವಿಹೀನನಾದವನಿಗೂ ದಾನನೀಡಬಾರದು.

ಶಾಸ್ತ್ರವಿಹಿತವಾಗಿ ಮತ್ತು ಶ್ರದ್ಧಿಯಿಲ್ಲದೇ ಅನರ್ಹನಿಗೆ ಕೊಟ್ಟ ದಾನವು ದಾನಕೊಡುವವನಿಗೂ ಮತ್ತು ದಾನವನ್ನು ಸ್ವೀಕರಿಸಿದವನಿಗೂ ಅನರ್ಥಗಳನ್ನುಂಟುಮಾಡುತ್ತದೆ. ಕಗ್ಗಲೀ ಮರದ ತುಂಡನ್ನೋ ಅಥವಾ ಕಲ್ಲುಗುಂಡನ್ನೋ ಆಶ್ರಯಿಸಿ ಸಮುದ್ರವನ್ನು ದಾಟಲು ಹೋದವನಂತೆ ದಾನಕೊಟ್ಟವನೂ ದಾನವನ್ನು ಪರಿಗ್ರಹಿಸಿದವನೂ ಅಧರ್ಮದಲ್ಲಿ ಮುಳುಗಿಹೋಗುತ್ತಾರೆ. ಹಸಿಯಾದ ಕಟ್ಟಿಗೆಯನ್ನು ಹಾಕಿದ ಅಗ್ನಿಯು ಹೇಗೆ ಚೆನ್ನಾಗಿ ಉರಿಯುವುದಿಲ್ಲವೋ ಹಾಗೆ ತಪಸ್ಸು-ಸ್ವಾಧ್ಯಾಯ ಮತ್ತು ಚಾರಿತ್ರಹೀನನಾಗಿರವವನು ದಾನವನ್ನು ಸ್ವೀಕರಿಸಿದರೆ ಅಂಥವನು ಶೋಭಿಸುವುದಿಲ್ಲ. ಆಶ್ರಯಸ್ಥಾನದೋಷಗಳಿಂದ ಶುದ್ಧವಾದ ನೀರನ್ನು ಕಪಾಲದಲ್ಲಿಟ್ಟರೆ ಅಥವಾ ಹಾಲನ್ನು ನಾಯಿಯ ಚರ್ಮದ ಚೀಲದಲ್ಲಿಟ್ಟರೆ ಹೇಗೋ ಹಾಗೆ ಆಚಾರಹೀನನಾದವನಲ್ಲಿರುವ ವೇದಗಳೂ ದೂಷಿತಗೊಳ್ಳುತ್ತವೆ.

ನಿರ್ಮಂತ್ರನಾಗಿರದ್ದರೂ, ವ್ರತಾದಿಗಳನ್ನು ನಡೆಸದೇ ಇದ್ದರೂ, ಶಾಸ್ತ್ರಜ್ಞಾನಗಳನ್ನು ಹೊಂದಿಲ್ಲದಿದ್ದರೂ, ಅನಸೂಯಕನದ ದೀನ ನರನಿಗೆ ಅನುಕ್ರೋಶದಿಂದ ದಾನವನ್ನು ಕೊಡಬಹುದು. ಇತರರಿಗೆ ಯಾವಾಗಲೂ ಕೇಡನ್ನೇ ಬಯಸುವವನಿಗೆ, ಅವನು ದರಿದ್ರನೇ ಆಗಿದ್ದರೂ, ದೀನನೇ ಆಗಿದ್ದರೂ, ಅನುಕಂಪದಿಂದ ದಾನಮಾಡಬಾರದು. ಬ್ರಹ್ಮವರ್ಜಿತ ಬ್ರಾಹ್ಮಣನಿಗೆ ಕೊಟ್ಟ ದಾನವು ಅಪಾತ್ರನಿಗೆ ದಾನಮಾಡಿದ ದೋಷದಿಂದ ಕೂಡಿರುವುದರಿಂದ ನಿಷ್ಫಲವಾಗುತ್ತದೆ ಎನ್ನುವುದರಲ್ಲಿ ವಿಚಾರ ಮಾಡುವುದೇ ಬೇಕಾಗಿಲ್ಲ. ಮರದಿಂದ ತಯಾರಿಸಿದ ಆನೆ, ಚರ್ಮದಿಂದ ತಯಾರಿಸಿದ ಜಿಂಕೆ ಮತ್ತು ಬ್ರಹ್ಮಜ್ಞಾನವಿಹೀನ ಬ್ರಾಹ್ಮಣ ಈ ಮೂವರೂ ಕೇವಲ ನಾಮಧಾರಕಗಳೇ ಹೊರತು ಅವುಗಳಲ್ಲಿ ನಿಜವಾದ ಸತ್ತ್ವವು ಇರುವುದಿಲ್ಲ. ಷಂಡನು ಸ್ತ್ರೀಯರಲ್ಲಿ, ಅಥವಾ ಹಸುವು ಇನ್ನೊಂದು ಹಸುವಿನಲ್ಲಿ ಫಲವನ್ನು ಹೊಂದಲಾರದೋ ಮತ್ತು ರೆಕ್ಕೆಗಳಿಲ್ಲದ ಪಕ್ಷಿಯು ಹೇಗೋ ಹಾಗೆ ಮಂತ್ರಗಳಲ್ಲಿದ ಬ್ರಾಹ್ಮಣನೂ ನಿಷ್ಪ್ರಯೋಜಕನು. ಧಾನ್ಯಗಳಿಲ್ಲದ ಗ್ರಾಮ ಮತ್ತು ನೀರಿಲ್ಲದ ಬಾವಿಯಂತೆ ವೇದಗಳಿಲ್ಲದ ಬ್ರಾಹ್ಮಣನಿಗೆ ದಾನವನ್ನಿತ್ತರೆ ಅಗ್ನಿಯಿಲ್ಲದ ಬೂದಿಯಲ್ಲಿ ಹೋಮಮಾಡಿದಷ್ಟೇ ಪ್ರಯೋಜನವಾಗುತ್ತದೆ. ವೇದವಿದ್ಯಾವಿಹೀನ ಬ್ರಾಹ್ಮಣನು ದೇವತೆಗಳಿಗೆ ಮತ್ತು ಪಿತೃಗಳಿಗೆ ನೀಡುವ ಹವ್ಯ-ಕವ್ಯಗಳನ್ನು ನಾಶಗೊಳಿಸುತ್ತಾನೆ. ಅಂಥಹ ಮೂರ್ಖನು ಧನಾಪಹಾರೀ ಶತ್ರುವಾಗಿ ಉತ್ತಮ ಲೋಕಗಳನ್ನು ಪಡೆಯಲು ಅರ್ಹನಾಗುವುದಿಲ್ಲ.”

***

[1] ಅಹಂಕಾರವಿಲ್ಲದೇ ಕರ್ಮಗಳನ್ನು ಮಾಡಿ ಕರ್ಮಫಲಗಳಲ್ಲಿ ನಿರಾಸಕ್ತನಾಗಿರುವುದು ಅಪ್ರವೃತ್ತಿ; ಅಹಂಕಾರದಿಂದ ಕರ್ಮಗಳನ್ನು ಮಾಡಿ ಅವುಗಳ ಫಲಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿರುವುದು ಪ್ರವೃತ್ತಿ.

[2] ಮರಣವಾದವರ ಮನೆಯಲ್ಲಿ ಹತ್ತು ದಿನಗಳ ಪರ್ಯಂತದ ಊಟ

[3] ಜನನವಾದವರ ಮನೆಯಲ್ಲಿ ಹತ್ತು ದಿನಗಳ ಪರ್ಯಂತದ ಊಟ

Leave a Reply

Your email address will not be published. Required fields are marked *