ಪರೀಕ್ಷಿತ

ಪರೀಕ್ಷಿತನು ಪಾಂಡವ ಅರ್ಜುನನ ಮಗ ಅಭಿಮನ್ಯುವಿಗೆ ಉತ್ತರೆಯಲ್ಲಿ ಹುಟ್ಟಿದ ಮಗನು. 

ಪಾಂಡವರು ಅಶ್ವಮೇಧ ಯಜ್ಞಕ್ಕಾಗಿ ಮರುತ್ತನ ನಿಧಿಯನ್ನು ಪಡೆಯಲು ಹಿಮಾಲಯಕ್ಕೆ ಹೋಗಿದ್ದಾಗ ಮತ್ತು ಅಶ್ವಮೇಧಕ್ಕೆಂದು ಕೃಷ್ಣನು ಇತರ ವೃಷ್ಣಿವೀರರೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದಾಗ ಪರಿಕ್ಷಿತನ ಜನ್ಮವಾಯಿತು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ ಕೃಷ್ಣನು ಸಾತ್ಯಕಿಯೊಡನೆ ಅಂತಃಪುರವನ್ನು ಪ್ರವೇಶಿಸಿದನು. ಅವಸರದಲ್ಲಿ ಬರುತ್ತಿದ್ದ ಕೃಷ್ಣನನ್ನು ನೋಡಿ ಅವನ ಸೋದರತ್ತೆ ಕುಂತಿಯು ವಾಸುದೇವನಿಗೆ “ಓಡಿ ಹೋಗು!” ಎಂದು ಪುನಃ ಪುನಃ ಕೂಗಿಕೊಳ್ಳುತ್ತಿದ್ದಳು. ಅವಳ ಹಿಂದೆ ದ್ರೌಪದಿ, ಸುಭದ್ರೆ ಮತ್ತು ಬಾಂಧವ ಸ್ತ್ರೀಯರು ಕರುಣಾಜನಕವಾಗಿ ರೋದಿಸುತ್ತಿದ್ದರು. ಆಗ ಕುಂತಿಯು ಕೃಷ್ಣನ ಬಳಿಸಾರಿ ಕಣ್ಣೀರುಸುರಿಸುತ್ತಾ ಗದ್ಗದ ಧ್ವನಿಯಲ್ಲಿ ಹೇಳಿದಳು: “ವಾಸುದೇವ! ನಿನ್ನಿಂದಾಗಿ ದೇವಕಿಯು ಉತ್ತಮ ಪುತ್ರವತಿಯೆನಿಸಿಕೊಂಡಳು! ನೀನೇ ನಮಗೆ ಗತಿ, ಆಧಾರಭೂತ. ಈ ಕುಲದ ರಕ್ಷಣೆಯೂ ನಿನ್ನ ಅಧೀನದಲ್ಲಿದೆ. ನಿನ್ನ ಸೋದರಳಿಯನ ಮಗನಾದ ಇವನು ಅಶ್ವತ್ಥಾಮನಿಂದ ಹತನಾಗಿ ಹುಟ್ಟಿದ್ದಾನೆ. ಇವನನ್ನು ಬದುಕಿಸು! ಅಶ್ವತ್ಥಾಮನು ಐಷೀಕವನ್ನು ಬ್ರಹ್ಮಾಸ್ತ್ರವನ್ನಾಗಿ ಅಭಿಮಂತ್ರಿಸಿ ಪ್ರಯೋಗಿಸಿದಾಗ “ಸತ್ತು ಹುಟ್ಟಿದವನನ್ನು ನಾನು ಬದುಕಿಸುತ್ತೇನೆ” ಎಂದು ನೀನು ಪ್ರತಿಜ್ಞೆಯನ್ನು ಮಾಡಿದ್ದೆ. ಹಾಗೆಯೇ ಇವನು ಮೃತನಾಗಿಯೇ ಹುಟ್ಟಿದ್ದಾನೆ ನೋಡು! ಉತ್ತರೆ, ಸುಭದ್ರೆ, ದ್ರೌಪದೀ, ನಾನು, ಧರ್ಮಪುತ್ರ, ಭೀಮ, ಫಲ್ಗುನ, ನಕುಲ ಮತ್ತು ಸಹದೇವರನ್ನು ನೋಡು! ನಮ್ಮೆಲ್ಲರನ್ನು ನೀನು ಈ ದುಃಖದಿಂದ ಪಾರುಮಾಡಬೇಕು!" ವಾರ್ಷ್ಣೇಯನಿಗೆ ಹೀಗೆ ಹೇಳಿ ಪೃಥಾಳು ದುಃಖಾರ್ತಳಾಗಿ ತನ್ನ ಬಾಹುಗಳನ್ನು ಮೇಲೆತ್ತಿಕೊಂಡು ದೊಪ್ಪನೆ ನೆಲದ ಮೇಲೆ ಬಿದ್ದುಬಿಟ್ಟಳು. ಆಗ ಅನ್ಯ ಸ್ತ್ರೀಯರೂ ನೆಲದ ಮೇಲೆ ಬಿದ್ದರು. ಕಣ್ಣೀರಿಡುತ್ತಿದ್ದ ಎಲ್ಲರೂ “ಅಯ್ಯೋ! ವಾಸುದೇವನ ಅಳಿಯನ ಮಗನು ಮೃತನಾಗಿ ಹುಟ್ಟಿದನಲ್ಲಾ!” ಎಂದು ಕೂಗಿಕೊಂಡರು. ಅವರೆಲ್ಲರನ್ನೂ ಕೇಳಿದ ಜನಾರ್ದನನು ಆಗ ನೆಲದ ಮೇಲೆ ಬಿದ್ದಿದ್ದ ಕುಂತಿಯನ್ನು ಹಿಡಿದು ಮೇಲೆಬ್ಬಿಸಿ ಸಂತೈಸತೊಡಗಿದನು.

ಪೃಥೆಯನ್ನು ಮೇಲೆಬ್ಬಿಸಿದ ನಂತರ ಸುಭದ್ರೆಯು ತನ್ನ ಅಣ್ಣನನ್ನು ನೋಡಿ ದುಃಖಾರ್ತಳಾಗಿ ಅಳುತ್ತಲೇ ಈ ಮಾತುಗಳನ್ನಾಡಿದಳು: “ಪುಂಡರೀಕಾಕ್ಷ! ಕುರುವಂಶೀಯರೆಲ್ಲರೂ ಸಂತಾನವಿಲ್ಲದೇ ಕ್ಷಯಿಸುತ್ತಿರಲಾಗಿ ಧೀಮಂತ ಪಾರ್ಥನ ಆಯುಸ್ಸನ್ನೇ ಕಳೆದುಕೊಂಡಿರುವ ಈ ಮೊಮ್ಮಗನನ್ನು ನೋಡು! ದ್ರೋಣಪುತ್ರನು ಭೀಮಸೇನನ ಮೇಲೆ ಪ್ರಯೋಗಿಸಿದ ಇಷೀಕವು ಉತ್ತರೆ, ಅರ್ಜುನ ಮತ್ತು ನನ್ನ ಮೇಲೆ ಬಿದ್ದಿತ್ತು. ಅದು ಪ್ರಜ್ವಲಿಸುತ್ತಾ ನನ್ನ ಹೃದಯದಲ್ಲಿಯೇ ನೆಲೆಸಿಕೊಂಡಿರುವುದರಿಂದ ನನ್ನ ಮಗನ ಮಗನನ್ನು ನಾನು ಕಾಣದಾಗಿದ್ದೇನೆ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿದನೆಂದು ಕೇಳಿ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಏನು ಹೇಳುವನು? ಭೀಮಸೇನ, ಅರ್ಜುನ, ಮತ್ತು ಮಾದ್ರವತಿಯ ಮಕ್ಕಳೀರ್ವರೂ ಏನು ಹೇಳುವರು? ದ್ರೋಣಪುತ್ರನು ಪಾಂಡವರ ಎಲ್ಲವನ್ನೂ ಕೊಳ್ಳೆಹೊಡೆದುಬಿಟ್ಟನು! ಅಭಿಮನ್ಯುವು ತನ್ನ ತಂದೆಯರಿಗೆ ಪ್ರಿಯನಾಗಿದ್ದನೆನ್ನುವುದರಲ್ಲಿ ಸಂಶಯವೇ ಇಲ್ಲ. ದ್ರೋಣಪುತ್ರನ ಅಸ್ತ್ರದಿಂದ ಸೋಲಿಸಲ್ಪಟ್ಟ ಅವರು ಇದನ್ನು ಕೇಳಿ ಏನು ಹೇಳುವರುಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿರುವುದಕ್ಕಿಂತಲೂ ಮಿಗಿಲಾದ ದುಃಖವು ಯಾವುದು ತಾನೇ ಇರುವುದುಇಂದು ಶಿರಬಾಗಿ ನಮಸ್ಕರಿಸಿ ನಾನು ನಿನ್ನ ಪ್ರಸಾದವನ್ನು ಬೇಡಿಕೊಳ್ಳುತ್ತಿದ್ದೇನೆ. ಪೃಥೆ-ದ್ರೌಪದಿಯರನ್ನೂ ನೋಡು! ದ್ರೋಣಸುತನು ಪಾಂಡವರ ಗರ್ಭಗಳನ್ನು ನಾಶಗೊಳಿಸಲು ಹೊರಟಾಗ ನೀನು ಕ್ರುದ್ಧನಾಗಿ ದ್ರೌಣಿಗೆ ಹೀಗೆ ಹೇಳಿದ್ದೆಯಲ್ಲವೇ“ಬ್ರಹ್ಮಬಂಧು ನರಾಧಮನೇ! ನಿನ್ನ ಅಪೇಕ್ಷೆಯು ನೆರವೇರದಂತೆ ಮಾಡುತ್ತೇನೆ. ಕಿರೀಟಿಯ ಮಗನ ಮಗನನ್ನು ನಾನು ಬದುಕಿಸುತ್ತೇನೆ!” ನಿನ್ನ ಆ ವಚನವನ್ನು ಕೇಳಿದಾಗಲೇ ನಿನ್ನ ಬಲವೇನೆನ್ನುವುದನ್ನು ನಾನು ಅರಿತುಕೊಂಡೆ. ಅಭಿಮನ್ಯುವಿನ ಮಗನನ್ನು ಬದುಕಿಸಿ ಕರುಣಿಸು! ಒಂದು ವೇಳೆ ನೀನು ಹೇಳಿದ್ದ ಆ ಶುಭವಚನವನ್ನು ಸಫಲಗೊಳಿಸದೇ ಇದ್ದರೆ ನಾನೂ ಕೂಡ ಮೃತಳಾದೆನೆಂದೇ ಭಾವಿಸು! ಅಭಿಮನ್ಯುವಿನ ಸುತನನ್ನು ನೀನು ಇಂದು ಬದುಕಿಸದೇ ಇದ್ದರೆ ಜೀವಿಸಿರುವ ನಿನ್ನಿಂದ ಇನ್ನು ನನಗೇನಾಗಬೇಕಾಗಿದೆಮೋಡವು ಮಳೆಗರೆದು ಸಸ್ಯವನ್ನು ಪುನರ್ಜೀವನಗೊಳಿಸುವಂತೆ ನಿನ್ನ ಕಣ್ಣುಗಳಂಥಹದೇ ಕಣ್ಣುಗಳಿದ್ದ ಅಭಿಮನ್ಯುವಿನ ಈ ಮಗನನ್ನು ಬದುಕಿಸು! ನೀನು ಧರ್ಮಾತ್ಮ. ಸತ್ಯವಂತ ಮತ್ತು ಸತ್ಯವಿಕ್ರಮ. ನೀನು ನಿನ್ನ ಮಾತನ್ನು ಸತ್ಯವಾಗಿಸಬೇಕು! ನೀನು ಇಚ್ಛಿಸಿದರೆ ಮೃತಗೊಂಡ ಮೂರು ಲೋಕಗಳನ್ನೂ ಬದುಕಿಸಬಲ್ಲೆ! ಹೀಗಿರುವಾಗ ಸತ್ತು ಹುಟ್ಟಿರುವ ನಿನ್ನ ಈ ಅಳಿಯನ ಮಗನನ್ನು ಬದುಕಿಸಲಾರೆಯಾನಿನ್ನ ಪ್ರಭಾವವೇನೆಂದು ತಿಳಿದುಕೊಂಡಿರುವುದರಿಂದಲೇ ನಾನು ನಿನಗೆ ಹೇಳುತ್ತಿದ್ದೇನೆ. ಪಾಂಡುಪುತ್ರರಿಗೆ ಈ ಪರಮ ಅನುಗ್ರಹವನ್ನು ಕರುಣಿಸು! ತಂಗಿಯೆಂದಾದರೂ ಅಥವಾ ಪುತ್ರನನ್ನು ಕಳೆದುಕೊಂಡಿರುವಳೆಂದಾದರೂ ಅಥವಾ ಮರುಕಗೊಂಡು ಬೇಡುತ್ತಿರುವ ನನ್ನ ಮೇಲಿನ ದಯೆಯಿಂದಲಾದರೂ ಇದನ್ನು ನೀನು ಮಾಡಬೇಕು.”

ಇದನ್ನು ಕೇಳಿ ದುಃಖಮೂರ್ಚಿತನಾದ ಕೇಶವನು ಅಲ್ಲಿದ್ದ ಜನರನ್ನು ಹರ್ಷಗೊಳಿಸುವನೋ ಎಂಬಂತೆ ಗಟ್ಟಿಯಾಗಿ “ಹಾಗೆಯೇ ಆಗಲಿ!” ಎಂದು ಹೇಳಿದನು. ಬಿಸಿಲಿನಿಂದ ಬಳಲಿದವನಿಗೆ ನೀರನ್ನು ಕೊಟ್ಟು ಸಂತಸಗೊಳಿಸುವಂತೆ ಆ ವಿಭು ಪುರುಷರ್ಷಭನು ತನ್ನ ಆ ವಾಕ್ಯದಿಂದ ಅಲ್ಲಿದ್ದ ಜನರನ್ನು ಸಂತಸಗೊಳಿಸಿದನು. ತಕ್ಷಣವೇ ಅವನು ಯಥಾವಿಧಿಯಾಗಿ ಬಿಳಿಯ ಹೂಗಳಿಂದ ಪೂಜಿಸಿ ಅಲಂಕರಿಸಿದ್ದ ಜನ್ಮಗೃಹವನ್ನು ಪ್ರವೇಶಿಸಿದನು. ಅಲ್ಲಿ ಎಲ್ಲಕಡೆಗಳಲ್ಲಿ ಜಲಪೂರ್ಣ ಕುಂಭಗಳಿದ್ದವು. ತುಪ್ಪದಲ್ಲಿ ನೆನೆದ ತುಂಬೇಗಿಡದ ಪಂಜುಗಳು ಬೆಳಗುತ್ತಿದ್ದವು. ಸುತ್ತಲೂ ಬಿಳೀಸಾಸಿವೆಯನ್ನು ಚೆಲ್ಲಿದ್ದರು. ಥಳಥಳಿಸುತ್ತಿರುವ ಶುಭ್ರ ಶಸ್ತ್ರಗಳನ್ನು ಇಟ್ಟಿದ್ದರು. ಸುತ್ತಲೂ ಅಗ್ನಿಗಳು ಪ್ರಜ್ವಲಿಸುತ್ತಿದ್ದವು. ಪರಿಚಾರಕ್ಕೆಂದಿದ್ದ ವೃದ್ಧಸ್ತ್ರೀಯರು ಅಲ್ಲಿ ಸೇರಿದ್ದರು. ಅಲ್ಲಿ ದಕ್ಷರೂ ಕುಶಲರೂ ಆಗಿದ್ದ ಚಿಕಿತ್ಸಕರಿದ್ದರು. ಅಲ್ಲಿ ಸುತ್ತಲೂ ರಾಕ್ಷಸರನ್ನು ನಾಶಗೊಳಿಸುವ ವಿಧಿಯನ್ನು ತಿಳಿದಿದ್ದ ಕುಶಲ ಜನರನ್ನೂ ಇರಿಸಿದ್ದ ದ್ರವ್ಯಗಳನ್ನೂ ಆ ಅಚ್ಯುತ ತೇಜಸ್ವಿಯು ನೋಡಿದನು. ಯಥಾಯುಕ್ತವಾಗಿದ್ದ ಜನ್ಮಗೃಹವನ್ನು ನೋಡಿ ಹರ್ಷಗೊಂಡ ಹೃಷೀಕೇಶನು “ಸಾಧು! ಸಾಧು!” ಎಂದನು. ಪ್ರಹೃಷ್ಟವದನನಾಗಿ ವಾರ್ಷ್ಣೇಯನು ಹಾಗೆ ಹೇಳುತ್ತಿರಲು ದ್ರೌಪದಿಯು ಅವಸರದಲ್ಲಿ ವೈರಾಟಿಯಲ್ಲಿಗೆ ಹೋಗಿ ಅವಳಿಗೆ ಈ ಮಾತುಗಳನ್ನಾಡಿದಳು: “ಭದ್ರೇ! ಇದೋ ಇಲ್ಲಿ ನೋಡು! ನಿನ್ನ ಮಾವ ಅಚಿಂತ್ಯಾತ್ಮ ಅಪರಾಜಿತ ಪುರಾಣಋಷಿ ಮಧುಸೂದನನು ಬರುತ್ತಿದ್ದಾನೆ!”

 

Comments are closed.