ಆದಿಪರ್ವ, ಅನುಕ್ರಮಣೀಪರ್ವ[1], ಅಧ್ಯಾಯ 1

 

 

ನೈಮಿಷಾರಣ್ಯಕ್ಕೆ ಸೂತ ಪೌರಾಣಿಕ ಉಗ್ರಶ್ರವನ ಆಗಮನ ಮತ್ತು ಋಷಿಗಳು ಮಹಾಭಾರತ ಕಥೆಯನ್ನು ಕೇಳಲು ಬಯಸಿದುದು (ಶ್ಲೋಕ 1-19). ಮಂಗಲಾಚರಣೆ ಮತ್ತು ಮಹಾಭಾರತದ ಘನತೆಯ ಕಿರುಪರಿಚಯ (20-26). ಸೃಷ್ಟಿ ವಿಚಾರ, ಕಾಲದ ಮಹತ್ವ (27-45). ಮಹಾಭಾರತದ ರಚನೆ ಮತ್ತು ಉಪದೇಶ (46-64). ಕಥೆಯ ಕಿರು ಸಾರಾಂಶ (65-95). ಯುದ್ಧಾನಂತರದಲ್ಲಿ ಧೃತರಾಷ್ಟ್ರನು ಸಂಜಯನಿಗೆ ತನ್ನ ದುಃಖವನ್ನು ಹೇಳಿಕೊಳ್ಳುವುದು (96-161) ಮತ್ತು ಸಂಜಯನು ಅವನನ್ನು ಸಂತೈಸುವುದು (162-190). ಮಹಾಭಾರತದ ಘನತೆಯ ವರ್ಣನೆ (191-210).

 

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್  । ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇತ್[1] ।।

ನಾರಾಯಣನನ್ನೂ, ನರೋತ್ತಮ ನರ[2]ನನ್ನೂ ಮತ್ತು ದೇವೀ ಸರಸ್ವತಿಯನ್ನೂ ನಮಸ್ಕರಿಸಿ ನಂತರ ಜಯ[3]ವನ್ನು ಪಠಿಸಬೇಕು[4].

ಲೋಮಹರ್ಷಣಪುತ್ರ ಉಗ್ರಶ್ರವಾಃ ಸೂತಃ ಪೌರಾಣಿಕೋ ನೈಮಿಷಾರಣ್ಯೇ ಶೌನಕಸ್ಯ ಕುಲಪತೇರ್ದ್ವಾದಶವಾರ್ಷಿಕೇ ಸತ್ರೇ[5] ।। 1 ।। ಸಮಾಸೀನಾನಭ್ಯಗಚ್ಛದ್ಬ್ರಹ್ಮರ್ಷೀನ್ಸಂಶಿತವ್ರತಾನ್  । ವಿನಯಾವನತೋ ಭೂತ್ವಾ ಕದಾಚಿತ್ಸೂತನಂದನಃ[6] ।। 2 ।। 

ಒಮ್ಮೆ ಸೂತನಂದನ[7] ಲೋಮಹರ್ಷಣ[8]ಪುತ್ರ ಸೂತ[9] ಪೌರಾಣಿಕ ಉಗ್ರಶ್ರವ[10]ನು ನೈಮಿಷಾರಣ್ಯ[11]ದಲ್ಲಿ ಕುಲಪತಿ[12] ಶೌನಕ[13]ನ ಹನ್ನೆರಡು ವರ್ಷಗಳ ಸತ್ರ[14]ದಲ್ಲಿ ಕುಳಿತಿದ್ದ ಸಂಶಿತವ್ರತ[15] ಬ್ರಹ್ಮರ್ಷಿಗಳ ಬಳಿ ವಿನಯಾವನತನಾಗಿ ಆಗಮಿಸಿದನು.

ತಮಾಶ್ರಮಮನುಪ್ರಾಪ್ತಂ ನೈಮಿಷಾರಣ್ಯವಾಸಿನಃ[16] ಚಿತ್ರಾಃ ಶ್ರೋತುಂ ಕಥಾಸ್ತತ್ರ ಪರಿವವ್ರುಸ್ತಪಸ್ವಿನಃ ।। 3 ।। ಅಭಿವಾದ್ಯ ಮುನೀಂಸ್ತಾಂಸ್ತು ಸರ್ವಾನೇವ ಕೃತಾಂಜಲಿಃ । ಅಪೃಚ್ಛತ್ಸ ತಪೋವೃದ್ಧಿಂ ಸದ್ಭಿಶ್ಚೈವಾಭಿನಂದಿತಃ ।। 4 ।। ಅಥ ತೇಷೂಪವಿಷ್ಟೇಷು ಸರ್ವೇಷ್ವೇವ ತಪಸ್ವಿಷು । ನಿರ್ದಿಷ್ಟಮಾಸನಂ ಭೇಜೇ ವಿನಯಾಲ್ಲೋಮಹರ್ಷಣಿಃ ।। 5 ।। ಸುಖಾಸೀನಂ ತತಸ್ತಂತು ವಿಶ್ರಾಂತಮುಪಲಕ್ಷ್ಯ ಚ । ಅಥಾಪೃಚ್ಛದೃಷಿಸ್ತತ್ರ ಕಶ್ಚಿತ್ಪ್ರಸ್ತಾವಯನ್ಕಥಾಃ ।। 6 ।। ಕುತ ಆಗಮ್ಯತೇ ಸೌತೇ ಕ್ವ ಚಾಯಂ ವಿಹೃತಸ್ತ್ವಯಾ । ಕಾಲಃ ಕಮಲಪತ್ರಾಕ್ಷ ಶಂಸೈತತ್ಪೃಚ್ಛತೋ ಮಮ ।। 7 ।। [17]

ನೈಮಿಷಾರಣ್ಯವಾಸಿ ತಪಸ್ವಿಗಳು ವಿಚಿತ್ರ ಕಥೆಗಳನ್ನು ಕೇಳಲು ಅಲ್ಲಿ ಆಶ್ರಮಕ್ಕೆ ಆಗಮಿಸಿದ ಅವನನ್ನು ಸುತ್ತುವರೆದರು. ಸತ್ಪುರುಷರಿಂದ ಅಭಿನಂದಿತನಾದ ಅವನು ಕೈ ಜೋಡಿಸಿ ಮುನಿಗಳೆಲ್ಲರಿಗೂ ಅಭಿವಂದಿಸಿ ತಪೋವೃದ್ಧಿಯ ಕುರಿತು ವಿಚಾರಿಸಿದನು. ಆ ತಪಸ್ವಿಗಳೆಲ್ಲರೂ ಕುಳಿತುಕೊಳ್ಳಲು ಲೋಮಹರ್ಷಣಿಯ ಪುತ್ರನು ವಿನಯದಿಂದ ಅವರು ತೋರಿಸಿದ ಆಸನದಲ್ಲಿ ಕುಳಿತುಕೊಂಡನು. ಸೂತನು ಸುಖಾಸೀನನೂ ವಿಶ್ರಾಂತನೂ ಆಗಿದ್ದುದನ್ನು ನೋಡಿ ಓರ್ವ ಋಷಿಯು ಮಾತುಕತೆಗಳನ್ನು ಪ್ರಾರಂಭಿಸುತ್ತಾ ಅವನನ್ನು ಕೇಳಿದನು: “ಸೌತೇ[18]! ನೀನು ಎಲ್ಲಿಂದ ಆಗಮಿಸುತ್ತಿದ್ದೀಯೆ? ಈ ಸಮಯವನ್ನು ಎಲ್ಲಿ ಕಳೆದೆ? ಕಮಲಪತ್ರಾಕ್ಷ[19]! ನಾನು ಕೇಳಿದುದಕ್ಕೆ ಹೇಳು.”

ಸೂತ ಉವಾಚ[20] । ಜನಮೇಜಯಸ್ಯ ರಾಜರ್ಷೇಃ ಸರ್ಪಸತ್ರೇ ಮಹಾತ್ಮನಃ । ಸಮೀಪೇ ಪಾರ್ಥಿವೇಂದ್ರಸ್ಯ ಸಮ್ಯಕ್ಪಾರಿಕ್ಷಿತಸ್ಯ ಚ ।। 8 ।। ಕೃಷ್ಣದ್ವೈಪಾಯನಪ್ರೋಕ್ತಾಃ ಸುಪುಣ್ಯಾ ವಿವಿಧಾಃ ಕಥಾಃ  । ಕಥಿತಾಶ್ಚಾಪಿ ವಿಧಿವದ್ಯಾ ವೈಶಂಪಾಯನೇನ ವೈ ।। 9 ।। ಶ್ರುತ್ವಾಹಂ ತಾ ವಿಚಿತ್ರಾರ್ಥಾ ಮಹಾಭಾರತಸಂಶ್ರಿತಾಃ । ಬಹೂನಿ ಸಂಪರಿಕ್ರಮ್ಯ ತೀರ್ಥಾನ್ಯಾಯತನಾನಿ ಚ ।। 10 ।। ಸಮಂತಪಂಚಕಂ ನಾಮ ಪುಣ್ಯಂ ದ್ವಿಜನಿಸೇವಿತಮ್ । ಗತವಾನಸ್ಮಿ ತಂ ದೇಶಂ ಯುದ್ಧಂ ಯತ್ರಾಭವತ್ಪುರಾ । ಪಾಂಡವಾನಾಂ ಕುರೂಣಾಂ ಚ ಸರ್ವೇಷಾಂ ಚ ಮಹೀಕ್ಷಿತಾಮ್ ।। 11 ।। ದಿದೃಕ್ಷುರಾಗತಸ್ತಸ್ಮಾತ್ಸಮೀಪಂ ಭವತಾಮಿಹ । ಆಯುಷ್ಮಂತಃ ಸರ್ವ ಏವ ಬ್ರಹ್ಮಭೂತಾ ಹಿ ಮೇ ಮತಾಃ ।। 12 ।।

ಸೂತನು ಹೇಳಿದನು: “ಮಹಾತ್ಮ, ರಾಜರ್ಷಿ[21], ಪಾರ್ಥಿವೇಂದ್ರ, ಪರಿಕ್ಷಿತ[22]ನ ಮಗ, ಜನಮೇಜಯನ ಸರ್ಪಸತ್ರ[23]ದಲ್ಲಿ ಕೃಷ್ಣದ್ವೈಪಾಯನ[24]ನು ಹೇಳಿದ್ದ ವಿವಿಧ ಸುಪುಣ್ಯ ಕಥೆಗಳನ್ನು ವೈಶಂಪಾಯನ[25]ನು ವಿಧಿವತ್ತಾಗಿ ಸಂಪೂರ್ಣವಾಗಿ ಹೇಳಿದನು. ವಿಚಿತ್ರಾರ್ಥಗಳನ್ನೊಳಗೊಂಡ ಆ ಮಹಾಭಾರತವನ್ನು ಕೇಳಿ ನಾನು ಹಲವಾರು ತೀರ್ಥ ಕ್ಷೇತ್ರಗಳನ್ನು ಸುತ್ತಾಡಿ, ಹಿಂದೆ ಕುರು-ಪಾಂಡವರು ಮತ್ತು ಸರ್ವ ಮಹೀಕ್ಷಿತರು ಯುದ್ಧ ಮಾಡಿದ್ದ, ದ್ವಿಜ[26]ಸಂಸೇವಿತ ಸಮಂತಪಂಚಕ[27] ಎಂಬ ಹೆಸರಿನ ಪುಣ್ಯ ಪ್ರದೇಶಕ್ಕೆ ಹೋದೆ. ಅಲ್ಲಿಂದ ಆಯುಷ್ಮಂತರೂ ಮತ್ತು ನನ್ನ ಮತದಂತೆ ಬ್ರಹ್ಮ ಸಂಭೂತರೂ ಆದ ನಿಮ್ಮೆಲ್ಲರನ್ನೂ ನೋಡಲು ನಿಮ್ಮ ಸಮೀಪ ಬಂದಿದ್ದೇನೆ.

ಅಸ್ಮಿನ್ಯಜ್ಞೇ ಮಹಾಭಾಗಾಃ ಸೂರ್ಯಪಾವಕವರ್ಚಸಃ । ಕೃತಾಭಿಷೇಕಾಃ ಶುಚಯಃ ಕೃತಜಪ್ಯಾಹುತಾಗ್ನಯಃ । ಭವಂತ ಆಸತೇ ಸ್ವಸ್ಥಾ ಬ್ರವೀಮಿ ಕಿಮಹಂ ದ್ವಿಜಾಃ ।। 13 ।। ಪುರಾಣಸಂಶ್ರಿತಾಃ ಪುಣ್ಯಾಃ ಕಥಾ ವಾ ಧರ್ಮಸಂಶ್ರಿತಾಃ । ಇತಿವೃತ್ತಂ ನರೇಂದ್ರಾಣಾಮೃಷೀಣಾಂ ಚ ಮಹಾತ್ಮನಾಮ್ ।। 14 ।। [28]

ದ್ವಿಜರೇ! ಸ್ನಾನ ಮಾಡಿ ಶುಚಿರ್ಭೂತರಾಗಿ ಜಪ-ಅಗ್ನಿಹೋತ್ರಗಳನ್ನು ಮುಗಿಸಿ ಈ ಯಜ್ಞದಲ್ಲಿ ಸ್ವಸ್ಥರಾಗಿ ಕುಳಿತಿರುವ, ಸೂರ್ಯ-ಪಾವಕ[29]ರ ವರ್ಚಸ್ಸಿನ ಮಹಾನುಭಾವರಾದ ನಿಮಗೆ ನಾನು ಏನು ಹೇಳಲಿ? ಪುರಾಣ[30]ಗಳಲ್ಲಿರುವ ಪುಣ್ಯ ಕಥೆಗಳನ್ನೋ ಅಥವಾ ಮಹಾತ್ಮ ಋಷಿ-ನರೇಂದ್ರರ ಧರ್ಮಗಳನ್ನೊಳಗೊಂಡ ಇತಿಹಾಸ[31]ವನ್ನೋ?

ಋಷಯ ಊಚುಃ । ದ್ವೈಪಾಯನೇನ ಯತ್ಪ್ರೋಕ್ತಂ ಪುರಾಣಂ ಪರಮರ್ಷಿಣಾ । ಸುರೈರ್ಬ್ರಹ್ಮರ್ಷಿಭಿಶ್ಚೈವ ಶ್ರುತ್ವಾ ಯದಭಿಪೂಜಿತಮ್ ।। 15 ।। ಸ್ಯಾಖ್ಯಾನವರಿಷ್ಠಸ್ಯ ವಿಚಿತ್ರಪದಪರ್ವಣಃ । ಸೂಕ್ಷ್ಮಾರ್ಥನ್ಯಾಯಯುಕ್ತಸ್ಯ ವೇದಾರ್ಥೈರ್ಭೂಷಿತಸ್ಯ ಚ ।। 16 ।। ಭಾರತಸ್ಯೇತಿಹಾಸಸ್ಯ ಪುಣ್ಯಾಂ ಗ್ರಂಥಾರ್ಥಸಂಯುತಾಮ್ । ಸಂಸ್ಕಾರೋಪಗತಾಂ ಬ್ರಾಹ್ಮೀಂ ನಾನಾಶಾಸ್ತ್ರೋಪಬೃಂಹಿತಾಮ್ ।। 17 ।। ಜನಮೇಜಯಸ್ಯ ಯಾಂ ರಾಜ್ಞೋ ವೈಶಂಪಾಯನ ಉಕ್ತವಾನ್ । ಯಥಾವತ್ಸ ಋಷಿಸ್ತುಷ್ಟ್ಯಾ ಸತ್ರೇ ದ್ವೈಪಾಯನಾಜ್ಞಯಾ ।। 18 ।। ವೇದೈಶ್ಚತುರ್ಭಿಃ ಸಮಿತಾಂ ವ್ಯಾಸಸ್ಯಾದ್ಭುತಕರ್ಮಣಃ । ಸಂಹಿತಾಂ ಶ್ರೋತುಮಿಚ್ಛಾಮೋ ಧರ್ಮ್ಯಾಂ ಪಾಪಭಯಾಪಹಾಮ್ ।। 19 ।।

ಋಷಿಗಳು ಹೇಳಿದರು: “ಪರಮ ಋಷಿ ದ್ವೈಪಾಯನನು ಹೇಳಿದ ಯಾವುದನ್ನು ಕೇಳಿ ಸುರ-ಬ್ರಹ್ಮರ್ಷಿಗಳೂ ಗೌರವಿಸಿದರೋ, ಮತ್ತು ಸತ್ರದಲ್ಲಿ ದ್ವೈಪಾಯನನ ಆಜ್ಞೆಯಂತೆ ವೈಶಂಪಾಯನನು ರಾಜ ಜನಮೇಜಯನಿಗೆ, ಅವನಿಗೆ ಮೆಚ್ಚುಗೆಯಾಗುವಂತೆ, ಯಾವುದನ್ನು ಯಥಾವತ್ತಾಗಿ ಹೇಳಿದನೋ ಆ ನ್ಯಾಯಯುಕ್ತ ಸೂಕ್ಷ್ಮಾರ್ಥಗಳಿರುವ, ವಿಚಿತ್ರ ಪದಜೋಡಣೆಗಳಿರುವ, ವೇದಾರ್ಥಗಳಿಂದ ಅಲಂಕೃತವಾಗಿರುವ, ಗ್ರಂಥಾರ್ಥಗಳಿಂದ ತುಂಬಿರುವ, ಸಂಸ್ಕಾರಯುಕ್ತ ಮಾತುಗಳಿಂದ ಕೂಡಿರುವ, ನಾನಾ ಶಾಸ್ತ್ರಗಳನ್ನು ಆಧರಿಸಿರುವ, ವ್ಯಾಸನ ಅದ್ಭುತ ಕೃತಿ, ನಾಲ್ಕೂ ವೇದಗಳಿಗೆ ಸೇರಿರುವ, ಪಾಪ ಮತ್ತು ಭಯಗಳನ್ನು ಅಪಹರಿಸುವ, ಧರ್ಮಗಳ ಸಂಗ್ರಹವಾದ, ಭಾರತದ ಪುಣ್ಯ ಇತಿಹಾಸವನ್ನು ಕೇಳ ಬಯಸುತ್ತೇವೆ.”

ಸೂತ ಉವಾಚ । ಆದ್ಯಂ ಪುರುಷಮೀಶಾನಂ ಪುರುಹೂತಂ ಪುರುಷ್ಟುತಮ್ । ಋತಮೇಕಾಕ್ಷರಂ ಬ್ರಹ್ಮ ವ್ಯಕ್ತಾವ್ಯಕ್ತಂ ಸನಾತನಮ್ ।। 20 ।। ಅಸಚ್ಚ ಸಚ್ಚೈವ ಚ ಯದ್ವಿಶ್ವಂ ಸದಸತಃ ಪರಮ್ । ಪರಾವರಾಣಾಂ ಸ್ರಷ್ಟಾರಂ ಪುರಾಣಂ ಪರಮವ್ಯಯಮ್ ।। 21 ।। ಮಂಗಲ್ಯಂ ಮಂಗಲಂ ವಿಷ್ಣುಂ ವರೇಣ್ಯಮನಘಂ ಶುಚಿಮ್ । ನಮಸ್ಕೃತ್ಯ ಹೃಷೀಕೇಶಂ ಚರಾಚರಗುರುಂ ಹರಿಮ್ ।। 22 ।। ಮಹರ್ಷೇಃ ಪೂಜಿತಸ್ಯೇಹ ಸರ್ವಲೋಕೇ ಮಹಾತ್ಮನಃ । ಪ್ರವಕ್ಷ್ಯಾಮಿ ಮತಂ ಕೃತ್ಸ್ನಂ ವ್ಯಾಸಸ್ಯಾಮಿತತೇಜಸಃ ।। 23 ।। [32]

ಸೂತನು ಹೇಳಿದನು: “ಆದ್ಯ, ಪುರುಷ, ಈಶಾನ[33], ಪುರುಹೂತ[34], ಪುರುಷ್ಟುತ[35], ಸತ್ಯ, ಏಕಾಕ್ಷರ ಬ್ರಹ್ಮ[36], ವ್ಯಕ್ತ, ಅವ್ಯಕ್ತ, ಸನಾತನ, ಸತ್ ಮತ್ತು ಅಸತ್ ರೂಪಗಳಲ್ಲಿದ್ದರೂ ಎರಡರಿಂದಲೂ ಬೇರೆಯಾಗಿರುವ, ವಿಶ್ವವೇ ಆಗಿರುವ, ಮೇಲಿನ ಮತ್ತು ಕೆಳಗಿನವುಗಳನ್ನು ಸೃಷ್ಟಿಸಿರುವ, ಪುರಾಣ, ಪರಮ ಶ್ರೇಷ್ಠ, ಅವ್ಯಯ, ಮಂಗಲ್ಯ[37], ಮಂಗಲಕರ, ವರೇಣ್ಯ, ಅನಘ[38], ಶುಚಿ, ಚರಾಚರಗಳ ಗುರು, ವಿಷ್ಣು, ಹರಿ ಹೃಷೀಕೇಶನಿಗೆ ನಮಸ್ಕರಿಸಿ, ಸರ್ವಲೋಕಪೂಜಿತ ಮಹಾತ್ಮ ಮಹರ್ಷಿ ಅಮಿತ ತೇಜಸ್ವೀ ವ್ಯಾಸನ ಸಂಪೂರ್ಣ ಮತವನ್ನು ಹೇಳುತ್ತೇನೆ.

ಆಚಖ್ಯುಃ ಕವಯಃ ಕೇಚಿತ್ಸಂಪ್ರತ್ಯಾಚಕ್ಷತೇ ಪರೇ । ಆಖ್ಯಾಸ್ಯಂತಿ ತಥೈವಾನ್ಯೇ ಇತಿಹಾಸಮಿಮಂ ಭುವಿ ।। 24 ।। ಇದಂ ತು ತ್ರಿಷು ಲೋಕೇಷು ಮಹಜ್ಞಾನಂ ಪ್ರತಿಷ್ಠಿತಮ್ । ವಿಸ್ತರೈಶ್ಚ ಸಮಾಸೈಶ್ಚ ಧಾರ್ಯತೇ ಯದ್ದ್ವಿಜಾತಿಭಿಃ ।। 25 ।। ಅಲಂಕೃತಂ ಶುಭೈಃ ಶಬ್ದೈಃ ಸಮಯೈರ್ದಿವ್ಯಮಾನುಷೈಃ । ಚಂದೋವೃತ್ತೈಶ್ಚ ವಿವಿಧೈರನ್ವಿತಂ ವಿದುಷಾಂ ಪ್ರಿಯಮ್ ।। 26 ।। [39]

ಭುವಿಯಲ್ಲಿ ಈ ಇತಿಹಾಸವನ್ನು ಕೆಲವು ಕವಿಗಳು ಹೇಳಿದ್ದಾರೆ. ಇತರರು ಈಗಲೂ ಹೇಳುತ್ತಿದ್ದಾರೆ. ಹಾಗೆಯೇ ಅನ್ಯರು ಮುಂದೆಯೂ ಹೇಳುತ್ತಾರೆ. ವಿಸ್ತಾರವಾಗಿ ಮತ್ತು ಸಂಕ್ಷಿಪ್ತವಾಗಿ[40] ದ್ವಿಜರು ನೆನಪಿನಲ್ಲಿಟ್ಟುಕೊಂಡಿರುವ ಈ ಮಹಾಜ್ಞಾನವು ಮೂರು ಲೋಕಗಳಲ್ಲಿಯೂ[41] ಪ್ರತಿಷ್ಠಿತವಾಗಿದೆ. ದೇವ-ಮನುಷ್ಯರು ಬಳಸುವ ಶುಭ ಶಬ್ದಗಳಿಂದ ಅಲಂಕೃತವಾಗಿದೆ. ವಿವಿಧ ಛಂದಸ್ಸುಗಳನ್ನೊಳಗೊಂಡು ವಿದ್ವಾಂಸರಿಗೆ ಪ್ರಿಯವಾಗಿದೆ.

ನಿಷ್ಪ್ರಭೇಽಸ್ಮಿನ್ನಿರಾಲೋಕೇ ಸರ್ವತಸ್ತಮಸಾವೃತೇ । ಬೃಹದಂಡಮಭೂದೇಕಂ ಪ್ರಜಾನಾಂ ಬೀಜಮಕ್ಷಯಮ್ ।। 27 ।। ಯುಗಸ್ಯಾದೌ ನಿಮಿತ್ತಂ ತನ್ಮಹದ್ದಿವ್ಯಂ ಪ್ರಚಕ್ಷತೇ । ಯಸ್ಮಿಂಸ್ತತ್ ಶ್ರೂಯತೇ ಸತ್ಯಂ ಜ್ಯೋತಿರ್ಬ್ರಹ್ಮ ಸನಾತನಮ್ ।। 28 ।। ಅದ್ಭುತಂ ಚಾಪ್ಯಚಿಂತ್ಯಂ ಚ ಸರ್ವತ್ರ ಸಮತಾಂ ಗತಮ್ । ಅವ್ಯಕ್ತಂ ಕಾರಣಂ ಸೂಕ್ಷ್ಮಂ ಯತ್ತತ್ಸದಸದಾತ್ಮಕಮ್ ।। 29 ।। ಯಸ್ಮಾತ್ಪಿತಾಮಹೋ ಜಜ್ಞೇ ಪ್ರಭುರೇಕಃ ಪ್ರಜಾಪತಿಃ । ಬ್ರಹ್ಮಾ ಸುರಗುರುಃ ಸ್ಥಾಣುರ್ಮನುಃ ಕಃ ಪರಮೇಷ್ಠ್ಯಥ ।। 30 ।।

ಬೆಳಕೇ ಇಲ್ಲದಿದ್ದಾಗ, ಎಲ್ಲೆಲ್ಲಿಯೂ ಕತ್ತಲೆಯು ಮುಚ್ಚಿ ಏನೂ ಕಾಣದಿದ್ದಾಗ, ಅಕ್ಷಯ ಬೀಜ ಬೃಹತ್ ಅಂಡವೊಂದೇ ಇತ್ತು. ಇದೇ ಯುಗ[42]ದ ಆದಿಯಲ್ಲಿ ದಿವ್ಯ ಮಹಾ ಕಾರಣವಾಗಿತ್ತೆಂದು ಹೇಳುತ್ತಾರೆ. ಇದರಲ್ಲಿಯೇ ಆ ಸತ್ಯ ಜ್ಯೋತಿ ಸನಾತನ ಬ್ರಹ್ಮವು ನೆಲೆಸಿದೆಯೆಂದು ಕೇಳುತ್ತೇವೆ. [43] ಸತ್ ಮತ್ತು ಅಸತ್ ರೂಪೀ ಆ ಅವ್ಯಕ್ತ ಸೂಕ್ಷ್ಮ ಕಾರಣವು ಅದ್ಭುತವೂ, ಅಚಿಂತ್ಯವೂ ಆಗಿದ್ದು ಸರ್ವತ್ರ ಸಮನಾಗಿ ಹರಡಿಕೊಂಡಿದೆ. ಇದರಿಂದಲೇ ಪಿತಾಮಹ, ಪ್ರಜಾಪತಿ, ಸುರಗುರು, ಸ್ಥಾಣು, ಮನು, ಕ[44], ಪರಮೇಷ್ಠಿ, ಏಕೈಕ ಪ್ರಭು ಬ್ರಹ್ಮ[45]ನು ಹುಟ್ಟಿದನು.

ಪ್ರಾಚೇತಸಸ್ತಥಾ ದಕ್ಷೋ ದಕ್ಷಪುತ್ರಾಶ್ಚ ಸಪ್ತ ಯೇ । ತತಃ ಪ್ರಜಾನಾಂ ಪತಯಃ ಪ್ರಾಭವನ್ನೇಕವಿಂಶತಿಃ ।। 31 ।। ಪುರುಷಶ್ಚಾಪ್ರಮೇಯಾತ್ಮಾ ಯಂ ಸರ್ವಂ ಋಷಯೋ ವಿದುಃ । ವಿಶ್ವೇದೇವಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ ।। 32 ।। ಯಕ್ಷಾಃ ಸಾಧ್ಯಾಃ ಪಿಶಾಚಾಶ್ಚ ಗುಹ್ಯಕಾಃ ಪಿತರಸ್ತಥಾ । ತತಃ ಪ್ರಸೂತಾ ವಿದ್ವಾಂಸಃ ಶಿಷ್ಟಾ ಬ್ರಹ್ಮರ್ಷಯೋಽಮಲಾಃ ।। 33 ।। ರಾಜರ್ಷಯಶ್ಚ ಬಹವಃ ಸರ್ವೈಃ ಸಮುದಿತಾ ಗುಣೈಃ । ಆಪೋ ದ್ಯೌಃ ಪೃಥಿವೀ ವಾಯುರಂತರಿಕ್ಷಂ ದಿಶಸ್ತಥಾ ।। 34 ।। ಸಂವತ್ಸರರ್ತವೋ ಮಾಸಾಃ ಪಕ್ಷಾಹೋರಾತ್ರಯಃ ಕ್ರಮಾತ್ । ಯಚ್ಚಾನ್ಯದಪಿ ತತ್ಸರ್ವಂ ಸಂಭೂತಂ ಲೋಕಸಾಕ್ಷಿಕಮ್ ।। 35 ।।

ನಂತರ ಪ್ರಚೇತಸನ ಮಗ ದಕ್ಷ, ದಕ್ಷನ ಏಳು ಮಕ್ಕಳು[46] ಮತ್ತು ಇಪ್ಪತ್ತೊಂದು ಪ್ರಜಾಪತಿಗಳು[47], ಋಷಿಗಳು ಸಂಪೂರ್ಣವಾಗಿ ತಿಳಿದಿರುವ ಅಪ್ರಮೇಯಾತ್ಮ ಪುರುಷ, ವಿಶ್ವೇದೇವರು, ಆದಿತ್ಯರು[48], ವಸುಗಳು ಮತ್ತು ಅಶ್ವಿನೀ ದೇವತೆಗಳು ಹುಟ್ಟಿದರು. ನಂತರ ಯಕ್ಷರು, ಸಾಧ್ಯರು, ಪಿಶಾಚರು, ಗುಹ್ಯಕರು, ಪಿತೃಗಳು ಹಾಗೂ ವಿದ್ವಾಂಸ-ಶಿಷ್ಟ-ಅಮಲ ಬ್ರಹ್ಮರ್ಷಿಗಳು ಹುಟ್ಟಿದರು[49]. ಹಾಗೆಯೇ ಸರ್ವ ಗುಣ ಸಮುದಿತ ರಾಜರ್ಷಿಗಳೂ, ನಂತರ ಆಪ[50], ಬೆಳಕು[51], ಪೃಥ್ವಿ, ವಾಯು, ಆಕಾಶ[52] ಮತ್ತು ದಿಕ್ಕುಗಳೂ ಹುಟ್ಟಿದವು. ಸಂವತ್ಸರ[53], ಋತುಗಳು[54], ಮಾಸ[55], ಪಕ್ಷ[56] ಮತ್ತು ಹಗಲು-ರಾತ್ರಿಗಳು[57] ಹಾಗೂ ಲೋಕಸಾಕ್ಷಿಕ ಅನ್ಯ ಸರ್ವವೂ ಕ್ರಮವಾಗಿ ಉದ್ಭವಿಸಿದವು.

ಯದಿದಂ ದೃಶ್ಯತೇ ಕಿಂಚಿದ್ಭೂತಂ ಸ್ಥಾವರಜಂಗಮಮ್ । ಪುನಃ ಸಂಕ್ಷಿಪ್ಯತೇ ಸರ್ವಂ ಜಗತ್ಪ್ರಾಪ್ತೇ ಯುಗಕ್ಷಯೇ ।। 36 ।। ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ । ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ।। 37 ।। ಏವಮೇತದನಾದ್ಯಂತಂ ಭೂತಸಂಹಾರಕಾರಕಮ್ । ಅನಾದಿನಿಧನಂ ಲೋಕೇ ಚಕ್ರಂ ಸಂಪರಿವರ್ತತೇ ।। 38 ।।

ಈ ಜಗತ್ತಿನಲ್ಲಿ ಇರುವ ಮತ್ತು ಕಾಣುವ ಸ್ಥಾವರ ಜಂಗಮಗಳೆಲ್ಲವೂ ಯುಗಕ್ಷಯದಲ್ಲಿ[58] ಪುನಃ ಸಂಕ್ಷಿಪ್ತವಾಗುತ್ತವೆ. ಋತುವು ಬದಲಾದಾಗ ಅದರ ನಾನಾ ರೂಪಲಕ್ಷಣಗಳು ಕಾಣುವಂತೆ ಯುಗದ ಆದಿಯಲ್ಲಿ ಆ ಯುಗ[59]ದ ರೂಪಲಕ್ಷಣಗಳು ಕಂಡುಬರುತ್ತವೆ. ಈ ರೀತಿ ಹುಟ್ಟು-ನಾಶಗಳಿಲ್ಲದ ಲೋಕದಲ್ಲಿ ಸೃಷ್ಟಿ-ಸಂಹಾರಕಾರಕ ಚಕ್ರವು ಆದಿ-ಅಂತ್ಯಗಳಿಲ್ಲದೆ ಸುತ್ತುತ್ತಿರುತ್ತದೆ.[60]

ತ್ರಯಸ್ತ್ರಿಂಶತ್ಸಹಸ್ರಾಣಿ ತ್ರಯಸ್ತ್ರಿಂಶಚ್ಛತಾನಿ ಚ । ತ್ರಯಸ್ತ್ರಿಂಶಚ್ಚ ದೇವಾನಾಂ ಸೃಷ್ಟಿಃ ಸಂಕ್ಷೇಪಲಕ್ಷಣಾ ।। 39 ।। ದಿವಸ್ಪುತ್ರೋ ಬೃಹದ್ಭಾನುಶ್ಚಕ್ಷುರಾತ್ಮಾ ವಿಭಾವಸುಃ । ಸವಿತಾ ಚ ಋಚೀಕೋಽರ್ಕೋ ಭಾನುರಾಶಾವಹೋ ರವಿಃ ।। 40 ।। ಪುತ್ರಾ ವಿವಸ್ವತಃ ಸರ್ವೇ ಮಹ್ಯಸ್ತೇಷಾಂ ತಥಾವರಃ । ದೇವಭ್ರಾಟ್ತನಯಸ್ತಸ್ಯ ತಸ್ಮಾತ್ಸುಭ್ರಾಢಿತಿ ಸ್ಮೃತಃ ।। 41 ।। ಸುಭ್ರಾಜಸ್ತು ತ್ರಯಃ ಪುತ್ರಾಃ ಪ್ರಜಾವಂತೋ ಬಹುಶ್ರುತಾಃ । ದಶಜ್ಯೋತಿಃ ಶತಜ್ಯೋತಿಃ ಸಹಸ್ರಜ್ಯೋತಿರಾತ್ಮವಾನ್ ।। 42 ।। ದಶ ಪುತ್ರಸಹಸ್ರಾಣಿ ದಶಜ್ಯೋತೇರ್ಮಹಾತ್ಮನಃ । ತತೋ ದಶಗುಣಾಶ್ಚಾನ್ಯೇ ಶತಜ್ಯೋತೇರಿಹಾತ್ಮಜಾಃ ।। 43 ।। ಭೂಯಸ್ತತೋ ದಶಗುಣಾಃ ಸಹಸ್ರಜ್ಯೋತಿಷಃ ಸುತಾಃ । ತೇಭ್ಯೋಽಯಂ ಕುರುವಂಶಶ್ಚ ಯದೂನಾಂ ಭರತಸ್ಯ ಚ ।। 44 ।। ಯಯಾತೀಕ್ಷ್ವಾಕುವಂಶಶ್ಚ ರಾಜರ್ಷೀಣಾಂ ಚ ಸರ್ವಶಃ  । ಸಂಭೂತಾ ಬಹವೋ ವಂಶಾ ಭೂತಸರ್ಗಾಃ ಸವಿಸ್ತರಾಃ ।। 45 ।।

ಸಂಕ್ಷಿಪ್ತವಾಗಿ ಹೇಳುವುದಾದರೆ, ಮೂವತ್ತಾರು ಸಾವಿರದ ಮುನ್ನೂರಾ ಮೂವತ್ಮೂರು (36,333[61]) ದೇವತೆಗಳ ಸೃಷ್ಟಿಯಾಗಿದೆ. ಕಣ್ಣಿನ ಆತ್ಮ ಮಹಾತ್ಮಾ ಸೂರ್ಯ, ವಿಭಾವಸು, ಸವಿತಾ, ಋಚೀಕ, ಅರ್ಕ, ಭಾನು, ಆಶಾಭಾವವನ್ನು ತರುವ ರವಿಯು ದಿವಿಯ[62] ಪುತ್ರನು[63]. ವಿವಸ್ವತ[64]ನ ಎಲ್ಲ ಮಕ್ಕಳಲ್ಲಿ ಕೊನೆಯವನು ಮಹ್ಯ[65]. ಅವನ ಮಗನು ದೇವತೆಯಂತೆ ಹೊಳೆಯುತ್ತಿದ್ದುದರಿಂದ ಅವನು ಸುಭ್ರಾಜನೆಂದಾದನು[66]. ಸುಭ್ರಾಜನಾದರೋ ಮೂವರು ಪ್ರಜಾವಂತ ಬಹುಶ್ರುತ[67] ಪುತ್ರರನ್ನು ಪಡೆದನು: ದಶಜ್ಯೋತಿ, ಶತಜ್ಯೋತಿ ಮತ್ತು ಆತ್ಮವಂತ ಸಹಸ್ರಜ್ಯೋತಿ. ಮಹಾತ್ಮ ದಶಜ್ಯೋತಿಗೆ ಹತ್ತುಸಾವಿರ ಪುತ್ರರೂ[68] ಮತ್ತು ಅದಕ್ಕೂ ಹತ್ತುಪಟ್ಟು ಅನ್ಯ ಪುತ್ರರು ಶತಜ್ಯೋತಿಗಾದರು. ಸಹಸ್ರಜ್ಯೋತಿಯು ಅವರಿಗಿಂತಲೂ ಹತ್ತುಪಟ್ಟು ಮಕ್ಕಳನ್ನು ಪಡೆದನು. ಇವರಿಂದಲೇ ಈ ಕುರು, ಯದು, ಭರತ, ಯಯಾತಿ, ಇಕ್ಷ್ವಾಕು ಮೊದಲಾದ ಸರ್ವ ರಾಜರ್ಷಿ ವಂಶಗಳು ಜನಿಸಿದವು ಮತ್ತು ಭೂತಸೃಷ್ಟಿಯು ವಿಸ್ತರಿಸಿತು.

ಭೂತಸ್ಥಾನಾನಿ ಸರ್ವಾಣಿ ರಹಸ್ಯಂ ತ್ರಿವಿಧಂ ಚ ಯತ್  । ವೇದಯೋಗಂ ಸವಿಜ್ಞಾನಂ ಧರ್ಮೋಽರ್ಥಃ ಕಾಮ ಏವ ಚ ।। 46 ।। ಧರ್ಮಕಾಮಾರ್ಥಶಾಸ್ತ್ರಾಣಿ ಶಾಸ್ತ್ರಾಣಿ ವಿವಿಧಾನಿ ಚ  । ಲೋಕಯಾತ್ರಾವಿಧಾನಂ ಚ ಸಂಭೂತಂ ದೃಷ್ಟವಾನೃಷಿಃ  ।। 47 ।। ಇತಿಹಾಸಾಃ ಸವೈಯಾಖ್ಯಾ ವಿವಿಧಾಃ ಶ್ರುತಯೋಽಪಿ ಚ  । ಇಹ ಸರ್ವಮನುಕ್ರಾಂತಮುಕ್ತಂ ಗ್ರಂಥಸ್ಯ ಲಕ್ಷಣಮ್  ।। 48 ।। ವಿಸ್ತೀರ್ಯೈತನ್ಮಹಜ್ಞಾನಂ ಋಷಿಃ ಸಂಕ್ಷೇಪಮಬ್ರವೀತ್  । ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸಧಾರಣಮ್  ।। 49 ।।

ಸರ್ವ ಭೂತಸ್ಥಾನಗಳಿಗೂ ಮೂರು ವಿಧದ ರಹಸ್ಯಗಳಿವೆ: ವೇದ, ಯೋಗ ಮತ್ತು ವಿಶೇಷ ಜ್ಞಾನ ಹಾಗೂ ಧರ್ಮ, ಅರ್ಥ ಮತ್ತು ಕಾಮ. ಋಷಿಯು ಧರ್ಮಕಾಮಾರ್ಥ ಶಾಸ್ತ್ರಗಳೇ ಮೊದಲಾದ ವಿವಿಧ ಶಾಸ್ತ್ರಗಳನ್ನೂ, ಮತ್ತು  ಲೋಕಯಾತ್ರಾ ವಿಧಾನಗಳನ್ನೂ ತೋರಿಸಿದ್ದಾನೆ. ವ್ಯಾಖ್ಯಾಸಹಿತವಾದ ಎಲ್ಲ ಇತಿಹಾಸಗಳೂ ಮತ್ತು ವಿವಿಧ ಶ್ರುತಿಗಳೂ ಇದರಲ್ಲಿವೆ. ಇದೇ ಈ ಗ್ರಂಥದ ಗುಣವೆಂದು ಹೇಳಿದ್ದಾರೆ. ಆ ಮಹಾಜ್ಞಾನವನ್ನು ವಿಸ್ತರಿಸಿ ಋಷಿಯು ಸಂಕ್ಷಿಪ್ತವಾಗಿಯೂ ಹೇಳಿದ್ದಾನೆ. ಏಕೆಂದರೆ ಲೋಕದ ವಿದ್ವಾಂಸರು ಇದನ್ನು ವಿಸ್ತಾರ-ಸಂಕ್ಷಿಪ್ತ ರೂಪಗಳಲ್ಲಿ ನೆನಪಿನಲ್ಲಿಟ್ಟುಕೊಳ್ಳ ಬಯಸುತ್ತಾರೆ.

ಮನ್ವಾದಿ ಭಾರತಂ ಕೇಚಿದಾಸ್ತೀಕಾದಿ ತಥಾಪರೇ  । ತಥೋಪರಿಚರಾದ್ಯನ್ಯೇ ವಿಪ್ರಾಃ ಸಮ್ಯಗಧೀಯತೇ  ।। 50 ।। ವಿವಿಧಂ ಸಂಹಿತಾಜ್ಞಾನಂ ದೀಪಯಂತಿ ಮನೀಷಿಣಃ  । ವ್ಯಾಖ್ಯಾತುಂ ಕುಶಲಾಃ ಕೇಚಿದ್ಗ್ರಂಥಂ ಧಾರಯಿತುಂ ಪರೇ  ।। 51 ।।

ಸಂಪೂರ್ಣ ಭಾರತವನ್ನು ಕೆಲವು ವಿಪ್ರರು ಮನುವಿನಿಂದ ಪ್ರಾರಂಭಿಸಿ, ಇನ್ನು ಕೆಲವರು ಆಸ್ತೀಕನಿಂದ ಪ್ರಾರಂಭಿಸಿ, ಹಾಗೆಯೇ ಇನ್ನೂ ಕೆಲವರು ಉಪರಿಚರನಿಂದ ಪ್ರಾರಂಭಿಸಿ ಅಧ್ಯಯನ ಮಾಡುತ್ತಾರೆ.[69] ವಿದ್ವಾಂಸರು ಇದರಲ್ಲಿರುವ ಜ್ಞಾನವನ್ನು ಪ್ರಕಾಶಗೊಳಿಸುತ್ತಾರೆ. ಕೆಲವರು ಗ್ರಂಥದ ವ್ಯಾಖ್ಯಾನದಲ್ಲಿ ಮತ್ತು ಇತರರು ಅದನ್ನು ನೆನಪಿಟ್ಟುಕೊಳ್ಳುವು-ದರಲ್ಲಿ ಕುಶಲರಾಗಿದ್ದಾರೆ.

ತಪಸಾ ಬ್ರಹ್ಮಚರ್ಯೇಣ ವ್ಯಸ್ಯ ವೇದಂ ಸನಾತನಮ್  । ಇತಿಹಾಸಮಿಮಂ ಚಕ್ರೇ ಪುಣ್ಯಂ ಸತ್ಯವತೀಸುತಃ  ।। 52 ।। ಪರಾಶರಾತ್ಮಜೋ ವಿದ್ವಾನ್ಬ್ರಹ್ಮರ್ಷಿಃ ಸಂಶಿತವ್ರತಃ  ।[70] ಮಾತುರ್ನಿಯೋಗಾದ್ಧರ್ಮಾತ್ಮಾ ಗಾಂಗೇಯಸ್ಯ ಚ ಧೀಮತಃ ।। 53 ।। ಕ್ಷೇತ್ರೇ ವಿಚಿತ್ರವೀರ್ಯಸ್ಯ ಕೃಷ್ಣದ್ವೈಪಾಯನಃ ಪುರಾ  । ತ್ರೀನಗ್ನೀನಿವ ಕೌರವ್ಯಾನ್ಜನಯಾಮಾಸ ವೀರ್ಯವಾನ್  ।। 54 ।। ಉತ್ಪಾದ್ಯ ಧೃತರಾಷ್ಟ್ರಂ ಚ ಪಾಂಡುಂ ವಿದುರಮೇವ ಚ  । ಜಗಾಮ ತಪಸೇ ಧೀಮಾನ್ಪುನರೇವಾಶ್ರಮಂ ಪ್ರತಿ  ।। 55 ।। ತೇಷು ಜಾತೇಷು ವೃದ್ಧೇಷು ಗತೇಷು ಪರಮಾಂ ಗತಿಮ್  । ಅಬ್ರವೀದ್ಭಾರತಂ ಲೋಕೇ ಮಾನುಷೇಽಸ್ಮಿನ್ಮಹಾನೃಷಿಃ ।। 56 ।। [71] ಜನಮೇಜಯೇನ ಪೃಷ್ಟಃ ಸನ್ಬ್ರಾಹ್ಮಣೈಶ್ಚ ಸಹಸ್ರಶಃ  । ಶಶಾಸ ಶಿಷ್ಯಮಾಸೀನಂ ವೈಶಂಪಾಯನಮಂತಿಕೇ  ।। 57 ।। ಸ ಸದಸ್ಯೈಃ ಸಹಾಸೀನಃ ಶ್ರಾವಯಾಮಾಸ ಭಾರತಮ್  । ಕರ್ಮಾಂತರೇಷು ಯಜ್ಞಸ್ಯ ಚೋದ್ಯಮಾನಃ ಪುನಃ ಪುನಃ  ।। 58 ।।

ಸತ್ಯವತೀಸುತನು ತಪಸ್ಸು ಮತ್ತು ಬ್ರಹ್ಮಚರ್ಯಗಳಿಂದ ಸನಾತನ ವೇದವನ್ನು ವಿಂಗಡಿಸಿ ಈ ಪುಣ್ಯ ಇತಿಹಾಸವನ್ನು ರಚಿಸಿದನು. ಪರಾಶರಾತ್ಮಜ ವಿದ್ವಾನ್ ಬ್ರಹ್ಮರ್ಷಿ ಸಂಶಿತವ್ರತ ಧರ್ಮಾತ್ಮಾ ಕೃಷ್ಣದ್ವೈಪಾಯನನು ತಾಯಿ ಮತ್ತು ಧೀಮತ[72] ಗಾಂಗೇಯನ ಸೂಚನೆಯಂತೆ ವಿಚಿತ್ರವೀರ್ಯನ ಪತ್ನಿಯರಲ್ಲಿ ಅಗ್ನಿಸದೃಶರೂ ವೀರರೂ ಆದ ಮೂವರು ಕೌರವರನ್ನು ಹುಟ್ಟಿಸಿದನು. ಧೃತರಾಷ್ಟ್ರ, ಪಾಂಡು ಮತ್ತು ವಿದುರರಿಗೆ ಜನ್ಮವನ್ನಿತ್ತು ಆ ಧೀಮಾನನು ತಪಸ್ಸಿಗೆ ಪುನಃ ಆಶ್ರಮಕ್ಕೆ ತೆರಳಿದನು. ಅವರು ಹುಟ್ಟಿ, ವೃದ್ಧರಾಗಿ, ಪರಮ ಗತಿಯಲ್ಲಿ ಹೋದ ಬಳಿಕ ಮಹಾನೃಷಿಯು ಭಾರತವನ್ನು ಈ ಮನುಷ್ಯಲೋಕಕ್ಕೆ ಹೇಳಿದನು. ಸಹಸ್ರಾರು ಬ್ರಾಹ್ಮಣರೊಂದಿಗೆ ಜನಮೇಜಯನು ಕೇಳಿಕೊಳ್ಳಲು ಹತ್ತಿರ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಇದನ್ನು ಹೇಳಲು ಆಜ್ಞೆಯನ್ನಿತ್ತನು. ಯಜ್ಞ ಕರ್ಮಗಳ ನಡುವೆ ಕುಳಿತಿದ್ದ ಸದಸ್ಯರು ಪುನಃ ಪುನಃ ಕೇಳಿಕೊಳ್ಳಲು ವೈಶಂಪಾಯನನು ಭಾರತವನ್ನು ಹೇಳಿದನು.

ವಿಸ್ತರಂ ಕುರುವಂಶಸ್ಯ ಗಾಂಧಾರ್ಯಾ ಧರ್ಮಶೀಲತಾಮ್  । ಕ್ಷತ್ತುಃ ಪ್ರಜ್ಞಾಂ ಧೃತಿಂ ಕುಂತ್ಯಾಃ ಸಮ್ಯಗ್ದ್ವೈಪಾಯನೋಽಬ್ರವೀತ್ ।। 59 ।। ವಾಸುದೇವಸ್ಯ ಮಾಹಾತ್ಮ್ಯಂ ಪಾಂಡವಾನಾಂ ಚ ಸತ್ಯತಾಮ್ । ದುರ್ವೃತ್ತಂ ಧಾರ್ತರಾಷ್ಟ್ರಾಣಾಮುಕ್ತವಾನ್ ಭಗವಾನೃಷಿಃ ।। 60 ।। [73] ಚತುರ್ವಿಂಶತಿಸಾಹಸ್ರೀಂ ಚಕ್ರೇ ಭಾರತಸಂಹಿತಮ್  । ಉಪಾಖ್ಯಾನೈರ್ವಿನಾ ತಾವದ್ಭಾರತಂ ಪ್ರೋಚ್ಯತೇ ಬುಧೈಃ ।। 61 ।। ತತೋಽಧ್ಯರ್ಧಶತಂ ಭೂಯಃ ಸಂಕ್ಷೇಪಂ ಕೃತವಾನೃಷಿಃ  । ಅನುಕ್ರಮಣಿಮಧ್ಯಾಯಂ ವೃತ್ತಾಂತಾನಾಂ ಸಪರ್ವಣಾಮ್  ।। 62 ।। [74]

ದ್ವೈಪಾಯನನು ಕುರುವಂಶದ ವಿಸ್ತಾರ, ಗಾಂಧಾರಿಯ ಧರ್ಮಶೀಲತೆ, ಕ್ಷತ್ತ[75]ನ ಪ್ರಜ್ಞೆ, ಮತ್ತು ಕುಂತಿಯ ಧೈರ್ಯಗಳ ಬಗ್ಗೆ ಚೆನ್ನಾಗಿ ಹೇಳಿದ್ದಾನೆ. ಭಗವಾನ್ ಋಷಿಯು ವಾಸುದೇವ[76]ನ ಮಹಾತ್ಮೆ, ಪಾಂಡವರ ಸತ್ಯತೆ, ಮತ್ತು ಧಾರ್ತರಾಷ್ಟ್ರ[77]ರ ದುರ್ನಡತೆಗಳ ಕುರಿತು ಹೇಳಿದ್ದಾನೆ. ಅವನು 24 ಸಾವಿರ ಶ್ಲೋಕಗಳ ಭಾರತಸಂಹಿತೆಯನ್ನು ರಚಿಸಿದನು. ಉಪಾಖ್ಯಾನಗಳಿಲ್ಲದ ಅದನ್ನೇ ಭಾರತ ಎಂದು ವಿದ್ವಾಂಸರು ಹೇಳುತ್ತಾರೆ. ನಂತರ ಋಷಿಯು ಪರ್ವಗಳೊಂದಿಗೆ ವೃತ್ತಾಂತಗಳು ಸಂಕ್ಷೇಪವಾಗಿರುವ 150 ಶ್ಲೋಕಗಳ ಇನ್ನೊಂದು ಅನುಕ್ರಮಣೀ ಅಧ್ಯಾಯವನ್ನು ರಚಿಸಿದನು.

ಇದಂ ದ್ವೈಪಾಯನಃ ಪೂರ್ವಂ ಪುತ್ರಮಧ್ಯಾಪಯಚ್ಛುಕಮ್  । ತತೋಽನ್ಯೇಭ್ಯೋಽನುರೂಪೇಭ್ಯಃ ಶಿಷ್ಯೇಭ್ಯಃ ಪ್ರದದೌ ಪ್ರಭುಃ  ।। 63 ।। [78] ನಾರದೋಽಶ್ರಾವಯದ್ದೇವಾನಸಿತೋ ದೇವಲಃ ಪಿತೄನ್  । ಗಂಧರ್ವಯಕ್ಷರಕ್ಷಾಂಸಿ ಶ್ರಾವಯಾಮಾಸ ವೈ ಶುಕ ।। 64 ।। [79]

ಪ್ರಭು ದ್ವೈಪಾಯನನು ಮೊದಲು ಇದನ್ನು ಪುತ್ರ ಶುಕನಿಗೆ ಹೇಳಿಕೊಟ್ಟನು. ನಂತರ ಅನ್ಯ ಅನುರೂಪ ಶಿಷ್ಯರಿಬ್ಬರಿಗೆ ನೀಡಿದನು. ನಾರದ[80]ನು ಇದನ್ನು ದೇವತೆಗಳಿಗೆ ಹೇಳಿದನು. ಅಸಿತ-ದೇವಲ[81]ನು ಪಿತೃಗಳಿಗೆ ಮತ್ತು ಶುಕನು ಗಂಧರ್ವ-ಯಕ್ಷ-ರಾಕ್ಷಸರಿಗೆ ಹೇಳಿದನು.

ದುರ್ಯೋಧನೋ ಮನ್ಯುಮಯೋ ಮಹಾದ್ರುಮಃ ಸ್ಕಂಧಃ ಕರ್ಣಃ ಶಕುನಿಸ್ತಸ್ಯ ಶಾಖಾಃ  । ದುಃಶಾಸನಃ ಪುಷ್ಪಫಲೇ ಸಮೃದ್ಧೇ ಮೂಲಂ ರಾಜಾ ಧೃತರಾಷ್ಟ್ರೋಽಮನೀಷೀ  ।। 65 ।। ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ ಸ್ಕಂಧೋಽರ್ಜುನೋ ಭೀಮಸೇನೋಽಸ್ಯ ಶಾಖಾಃ  । ಮಾದ್ರೀಸುತೌ ಪುಷ್ಪಫಲೇ ಸಮೃದ್ಧೇ ಮೂಲಂ ಕೃಷ್ಣೋ ಬ್ರಹ್ಮ ಚ ಬ್ರಾಹ್ಮಣಾಶ್ಚ  ।। 66 ।।

ಕ್ರೋಧಪೂರ್ಣ ದುರ್ಯೋಧನನು ಮಹಾವೃಕ್ಷ. ಕರ್ಣನು ಕಾಂಡ. ಶಕುನಿಯು ಅದರ ರೆಂಬೆಗಳು. ದುಃಶಾಸನನು ಸಮೃದ್ಧ ಪುಷ್ಪ-ಫಲಗಳು ಮತ್ತು ಅಜ್ಞಾನಿ ರಾಜ ಧೃತರಾಷ್ಟ್ರನು ಬೇರು. ಧರ್ಮಮಯ ಯುಧಿಷ್ಠಿರನು ಮಹಾವೃಕ್ಷ. ಅರ್ಜುನನು ಕಾಂಡ. ಭೀಮಸೇನನು ಅದರ ರೆಂಬೆಗಳು. ಮಾದ್ರಿಯ ಮಕ್ಕಳೀರ್ವರು ಸಮೃದ್ಧ ಪುಷ್ಪ-ಫಲಗಳು ಮತ್ತು ಪರಬ್ರಹ್ಮ ಕೃಷ್ಣ ಮತ್ತು ಬ್ರಾಹ್ಮಣರು ಬೇರುಗಳು.

ಪಾಂಡುರ್ಜಿತ್ವಾ ಬಹೂನ್ದೇಶಾನ್ಯುಧಾ ವಿಕ್ರಮಣೇನ ಚ । ಅರಣ್ಯೇ ಮೃಗಯಾಶೀಲೋ ನ್ಯವಸತ್ಸಜನಸ್ತದಾ  ।। 67 ।। ಮೃಗವ್ಯವಾಯನಿಧನೇ ಕೃಚ್ಛ್ರಾಂ ಪ್ರಾಪ ಸ ಆಪದಮ್  । ಜನ್ಮಪ್ರಭೃತಿ ಪಾರ್ಥಾನಾಂ ತತ್ರಾಚಾರವಿಧಿಕ್ರಮಃ  ।। 68 ।। ಮಾತ್ರೋರಭ್ಯುಪಪತ್ತಿಶ್ಚ ಧರ್ಮೋಪನಿಷದಂ ಪ್ರತಿ । ಧರ್ಮಸ್ಯ ವಾಯೋಃ ಶಕ್ರಸ್ಯ ದೇವಯೋಶ್ಚ ತಥಾಶ್ವಿನೋಃ ।। 69 ।। [82] ತಾಪಸೈಃ ಸಹ ಸಂವೃದ್ಧಾ ಮಾತೃಭ್ಯಾಂ ಪರಿರಕ್ಷಿತಾಃ  । ಮೇಧ್ಯಾರಣ್ಯೇಷು ಪುಣ್ಯೇಷು ಮಹತಾಮಾಶ್ರಮೇಷು ಚ  ।। 70 ।। [83]

ಬೇಟೆಯಲ್ಲಿ ಆಸಕ್ತಿಯಿದ್ದ ಪಾಂಡುವು ಪರಾಕ್ರಮದಿಂದ ಬಹು ದೇಶಗಳನ್ನು ಯುದ್ಧದಲ್ಲಿ ಗೆದ್ದು ತನ್ನವರೊಂದಿಗೆ ಅರಣ್ಯದಲ್ಲಿ ವಾಸಿಸಿದನು. ಜಿಂಕೆಯನ್ನು ಕೊಂದು ಅವನು ಕಡು ಆಪತ್ತನ್ನು ಹೊಂದಿದನು. ಪಾರ್ಥರ[84] ಜನ್ಮದಿಂದ ಮೊದಲ್ಗೊಂಡ ಆಚಾರವಿಧಿಕ್ರಮಗಳು ಅಲ್ಲಿಯೇ ನಡೆದವು. ತಾಯಂದಿರು ಧರ್ಮೋಪನಿಷದದ ಪ್ರಕಾರ ಧರ್ಮ, ವಾಯು, ಶಕ್ರ[85] ಮತ್ತು ಅಶ್ವಿನೀ ದೇವತೆಗಳಿಂದ ಪುತ್ರರನ್ನು ಪಡೆದರು. ಇಬ್ಬರು ತಾಯಿಂದಿರಿಂದಲೂ ಪರಿರಕ್ಷಿತರಾಗಿ ಅವರು ಪುಣ್ಯ ಮತ್ತು ಶುದ್ಧ ಅರಣ್ಯಗಳಲ್ಲಿ ಮಹಾತ್ಮರ ಆಶ್ರಮಗಳಲ್ಲಿ ತಾಪಸಿಗಳ ಮಧ್ಯೆ ಬೆಳೆದರು.

ಋಷಿಭಿಶ್ಚ ತದಾನೀತಾ ಧಾರ್ತರಾಷ್ಟ್ರಾನ್ಪ್ರತಿ ಸ್ವಯಮ್  । ಶಿಶವಶ್ಚಾಭಿರೂಪಾಶ್ಚ ಜಟಿಲಾ ಬ್ರಹ್ಮಚಾರಿಣಃ  ।। 71 ।। ಪುತ್ರಾಶ್ಚ ಭ್ರಾತರಶ್ಚೇಮೇ ಶಿಷ್ಯಾಶ್ಚ ಸುಹೃದಶ್ಚ ವಃ  । ಪಾಂಡವಾ ಏತ ಇತ್ಯುಕ್ತ್ವಾ ಮುನಯೋಽಂತರ್ಹಿತಾಸ್ತತಃ  ।। 72 ।। ತಾಂಸ್ತೈರ್ನಿವೇದಿತಾನ್ದೃಷ್ಟ್ವಾ ಪಾಂಡವಾನ್ಕೌರವಾಸ್ತದಾ । ಶಿಷ್ಟಾಶ್ಚ ವರ್ಣಾಃ ಪೌರಾ ಯೇ ತೇ ಹರ್ಷಾಚ್ಚುಕ್ರುಶುರ್ಭೃಶಂ ।। 73 ।। ಆಹುಃ ಕೇಚಿನ್ನ ತಸ್ಯೈತೇ ತಸ್ಯೈತ ಇತಿ ಚಾಪರೇ  । ಯದಾ ಚಿರಮೃತಃ ಪಾಂಡುಃ ಕಥಂ ತಸ್ಯೇತಿ ಚಾಪರೇ  ।। 74 ।। ಸ್ವಾಗತಂ ಸರ್ವಥಾ ದಿಷ್ಟ್ಯಾ ಪಾಂಡೋಃ ಪಶ್ಯಾಮ ಸಂತತಿಮ್ । ಉಚ್ಯತಾಂ ಸ್ವಾಗತಮಿತಿ ವಾಚೋಽಶ್ರೂಯಂತ ಸರ್ವಶಃ  ।। 75 ।।

ಅನಂತರ ಸ್ವಯಂ ಋಷಿಗಳು ಜಟೆಗಳನ್ನು ಧರಿಸಿದ್ದ ಆ ಸುಂದರ ಬ್ರಹ್ಮಚಾರೀ ಮಕ್ಕಳನ್ನು ಧಾರ್ತರಾಷ್ಟ್ರರಲ್ಲಿಗೆ ಕರೆತಂದರು. “ಇವರು ಪಾಂಡುವಿನ ಮಕ್ಕಳು. ನಿಮ್ಮ ಪುತ್ರರು, ಸಹೋದರರು, ಶಿಷ್ಯರು, ಮತ್ತು ಸುಹೃದಯರು” ಎಂದು ಹೇಳಿ ಮುನಿಗಳು ಅಂತರ್ಧಾನರಾದರು. ಅವರು ಕರೆತಂದ ಪಾಂಡವರನ್ನು ನೋಡಿ ಕೌರವರು, ಶಿಷ್ಟರು, ಮತ್ತು ಎಲ್ಲ ವರ್ಣಗಳ[86] ಪೌರರು ಹರ್ಷದಿಂದ ಜೋರಾಗಿ ಉದ್ಗಾರಗೈದರು. “ಇವರು ಅವನ ಮಕ್ಕಳಲ್ಲ” ಎಂದು ಕೆಲವರು ಹೇಳಿದರು. ಇನ್ನು ಕೆಲವರು “ಇವರು ಅವನ ಮಕ್ಕಳೇ ಹೌದು” ಎಂದರು. ಇನ್ನು ಕೆಲವರು “ಬಹುಕಾಲದ ಹಿಂದೆಯೇ ಮೃತನಾದ ಪಾಂಡುವಿಗೆ ಇವರು ಹೇಗೆ ಮಕ್ಕಳಾಗುತ್ತಾರೆ?” ಎಂದು ಕೊಂಡರು. “ಒಳ್ಳೆಯದಾಯಿತು. ಪಾಂಡುವಿನ ಸಂತತಿಯನ್ನು ನೋಡುತ್ತಿದ್ದೇವೆ! ಸರ್ವಥಾ ಸ್ವಾಗತ. ಸ್ವಾಗತವೆಂದೇ ಹೇಳಬೇಕು” ಎಂದು ಎಲ್ಲಕಡೆ ಮಾತನಾಡಿಕೊಳ್ಳುತ್ತಿದ್ದುದು ಕೇಳಿಬರುತ್ತಿತ್ತು.

ತಸ್ಮಿನ್ನುಪರತೇ ಶಬ್ದೇ ದಿಶಃ ಸರ್ವಾ ವಿನಾದಯನ್  । ಅಂತರ್ಹಿತಾನಾಂ ಭೂತಾನಾಂ ನಿಸ್ವನಸ್ತುಮುಲೋಽಭವತ್ ।। 76 ।। ಪುಷ್ಪವೃಷ್ಟಿಃ ಶುಭಾ ಗಂಧಾಃ ಶಂಖದುಂದುಭಿನಿಸ್ವನಾಃ  । ಆಸನ್ಪ್ರವೇಶೇ ಪಾರ್ಥಾನಾಂ ತದದ್ಭುತಮಿವಾಭವತ್  ।। 77 ।। ತತ್ಪ್ರೀತ್ಯಾ ಚೈವ ಸರ್ವೇಷಾಂ ಪೌರಾಣಾಂ ಹರ್ಷಸಂಭವಃ  । ಶಬ್ದ ಆಸೀನ್ಮಹಾಂಸ್ತತ್ರ ದಿವಸ್ಪೃತ್ಕೀರ್ತಿವರ್ಧನಃ  ।। 78 ।। ತೇಽಪ್ಯಧೀತ್ಯಾಖಿಲಾನ್ವೇದಾನ್ ಶಾಸ್ತ್ರಾಣಿ ವಿವಿಧಾನಿ ಚ । ನ್ಯವಸನ್ಪಾಂಡವಾಸ್ತತ್ರ ಪೂಜಿತಾ ಅಕುತೋಭಯಾಃ  ।। 79 ।। ಯುಧಿಷ್ಠಿರಸ್ಯ ಶೌಚೇನ ಪ್ರೀತಾಃ ಪ್ರಕೃತಯೋಽಭವನ್  । ಧೃತ್ಯಾ ಚ ಭೀಮಸೇನಸ್ಯ ವಿಕ್ರಮೇಣಾರ್ಜುನಸ್ಯ ಚ ।। 80 ।। ಗುರುಶುಶ್ರೂಷಯಾ ಕುಂತ್ಯಾ ಯಮಯೋರ್ವಿನಯೇನ ಚ  । ತುತೋಷ ಲೋಕಃ ಸಕಲಸ್ತೇಷಾಂ ಶೌರ್ಯಗುಣೇನ ಚ  ।। 81 ।।

ಆ ಶಬ್ದಗಳು ಶಾಂತವಾಗಲು ಸರ್ವ ದಿಶೆಯಲ್ಲಿಯೂ ಪ್ರತಿಧ್ವನಿಸುವ ಅಂತರ್ಹಿತ ಭೂತಗಳ ತುಮುಲ ಧ್ವನಿಗಳುಂಟಾದವು. ಪಾರ್ಥರು ಪ್ರವೇಶಿಸುತ್ತಿದ್ದಂತೆ ಶುಭ ಸುಗಂಧದ ಪುಷ್ಪವೃಷ್ಟಿಯಾಯಿತು. ಶಂಖ-ದುಂದುಭಿಗಳು ಮೊಳಗಿದವು. ಅದೊಂದು ಅದ್ಭುತವಾಗಿತ್ತು. ಅವರ ಮೇಲಿನ ಪ್ರೀತಿಯಿಂದಾಗಿ ಸರ್ವ ಪೌರರೂ ಹರ್ಷಿತರಾದರು. ದಿವವನ್ನು ಮುಟ್ಟಿದ ಕೀರ್ತಿವರ್ಧಕ ಮಹಾ ಶಬ್ದವು ಅಲ್ಲಿ ಉಂಟಾಯಿತು. ಪಾಂಡವರು ಅಲ್ಲಿ ಪೂಜಿತರಾಗಿ ಯಾವ ಭಯವೂ ಇಲ್ಲದೇ ವಾಸಿಸುತ್ತಾ ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ ಅಧ್ಯಯನ ಮಾಡಿದರು. ಯುಧಿಷ್ಠಿರನ ಶೌಚ[87], ಭೀಮಸೇನನ ಧೃತಿ[88], ಅರ್ಜುನನ ವಿಕ್ರಮ[89], ಕುಂತಿಯ ಗುರುಶುಶ್ರೂಷೆ[90], ಮತ್ತು ಅವಳಿ ಮಕ್ಕಳ ವಿನಯ[91] ಗಳಿಂದಾಗಿ ಜನರು ಸಂತೋಷಗೊಂಡರು. ಮತ್ತು ಸಕಲ ಲೋಕವೂ ಅವರ ಶೌರ್ಯ[92]ಗುಣಗಳಿಂದ ಸಂತುಷ್ಟವಾಯಿತು.

ಸಮವಾಯೇ ತತೋ ರಾಜ್ಞಾಂ ಕನ್ಯಾಂ ಭರ್ತೃಸ್ವಯಂವರಾಮ್ । ಪ್ರಾಪ್ತವಾನರ್ಜುನಃ ಕೃಷ್ಣಾಂ ಕೃತ್ವಾ ಕರ್ಮ ಸುದುಷ್ಕರಮ್  ।। 82 ।। ತತಃ ಪ್ರಭೃತಿ ಲೋಕೇಽಸ್ಮಿನ್ಪೂಜ್ಯಃ ಸರ್ವಧನುಷ್ಮತಾಮ್  । ಆದಿತ್ಯೈವ ದುಷ್ಪ್ರೇಕ್ಷ್ಯಃ ಸಮರೇಷ್ವಪಿ ಚಾಭವತ್  ।। 83 ।। ಸ ಸರ್ವಾನ್ಪಾರ್ಥಿವಾನ್ಜಿತ್ವಾ ಸರ್ವಾಂಶ್ಚ ಮಹತೋ ಗಣಾನ್ । ಆಜಹಾರಾರ್ಜುನೋ ರಾಜ್ಞೇ ರಾಜಸೂಯಂ ಮಹಾಕ್ರತುಮ್ ।। 84 ।। ಅನ್ನವಾನ್ದಕ್ಷಿಣಾವಾಂಶ್ಚ ಸರ್ವೈಃ ಸಮುದಿತೋ ಗುಣೈಃ  । ಯುಧಿಷ್ಠಿರೇಣ ಸಂಪ್ರಾಪ್ತೋ ರಾಜಸೂಯೋ ಮಹಾಕ್ರತುಃ ।। 85 ।। ಸುನಯಾದ್ವಾಸುದೇವಸ್ಯ ಭೀಮಾರ್ಜುನಬಲೇನ ಚ  । ಘಾತಯಿತ್ವಾ ಜರಾಸಂಧಂ ಚೈದ್ಯಂ ಚ ಬಲಗರ್ವಿತಮ್  ।। 86 ।।

ಅನಂತರ ಅರ್ಜುನನು ರಾಜರ ಸಭೆಯಲ್ಲಿ ದುಷ್ಕರ ಕಾರ್ಯವೊಂದನ್ನು ಎಸಗಿ, ಪತೀಸ್ವಯಂವರದಲ್ಲಿದ್ದ ಕನ್ಯೆ ಕೃಷ್ಣೆ[93]ಯನ್ನು ಪಡೆದುಕೊಂಡನು. ಅಂದಿನಿಂದ ಅವನು ಲೋಕದ ಸರ್ವಧನುಷ್ಮಂತರಿಗೆ ಪೂಜ್ಯನಾದನು ಮತ್ತು ಆದಿತ್ಯನಂತೆ ಸಮರದಲ್ಲಿ ಎದುರಿಸಲು ಅಸಾಧ್ಯನಾದನು. ಅರ್ಜುನನು ಸರ್ವ ಪಾರ್ಥಿವರನ್ನೂ ಮತ್ತು ಎಲ್ಲ ಮಹಾಗಣಗಳನ್ನೂ ಗೆದ್ದು ರಾಜನಿಂದ[94] ಮಹಾಕ್ರತು ರಾಜಸೂಯವನ್ನು ಮಾಡಿಸಿದನು. ವಾಸುದೇವನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಜರಾಸಂಧ ಮತ್ತು ಬಲಗರ್ವಿತ ಚೈದ್ಯ[95]ರನ್ನು ಸಂಹರಿಸಿ ಯುಧಿಷ್ಠಿರನು ಅನ್ನಸಮೃದ್ದವೂ ದಕ್ಷಿಣಾಸಮೃದ್ಧವೂ ಮತ್ತು ಸರ್ವ ಗುಣಗಳಿಂದಲೂ[96] ಸಮುದಿತವಾಗಿದ್ದ ಮಹಾಕ್ರತು ರಾಜಸೂಯವನ್ನು ನೆರವೇರಿಸಿದನು.

ದುರ್ಯೋಧನಮುಪಾಗಚ್ಛನ್ನರ್ಹಣಾನಿ ತತಸ್ತತಃ  । ಮಣಿಕಾಂಚನರತ್ನಾನಿ ಗೋಹಸ್ತ್ಯಶ್ವಧನಾನಿ ಚ  ।। 87 ।। ಸಮೃದ್ಧಾಂ ತಾಂ ತಥಾ ದೃಷ್ಟ್ವಾ ಪಾಂಡವಾನಾಂ ತದಾ ಶ್ರಿಯಮ್ । ಈರ್ಷ್ಯಾಸಮುತ್ಥಃ ಸುಮಹಾಂಸ್ತಸ್ಯ ಮನ್ಯುರಜಾಯತ  ।। 88 ।। ವಿಮಾನಪ್ರತಿಮಾಂ ಚಾಪಿ ಮಯೇನ ಸುಕೃತಾಂ ಸಭಾಮ್  । ಪಾಂಡವಾನಾಮುಪಹೃತಾಂ ಸ ದೃಷ್ಟ್ವಾ ಪರ್ಯತಪ್ಯತ  ।। 89 ।। ಯತ್ರಾವಹಸಿತಶ್ಚಾಸೀತ್ಪ್ರಸ್ಕಂದನ್ನಿವ ಸಂಭ್ರಮಾತ್  । ಪ್ರತ್ಯಕ್ಷಂ ವಾಸುದೇವಸ್ಯ ಭೀಮೇನಾನಭಿಜಾತವತ್  ।। 90 ।।

ಆಗ ದುರ್ಯೋಧನನು ಎಲ್ಲ ಕಡೆಗಳಿಂದ ಬಂದ ಬೆಲೆಬಾಳುವ ಮಣಿ, ಕಾಂಚನ, ರತ್ನ, ಗೋವು, ಆನೆ ಮತ್ತು ಅಶ್ವಧನಗಳನ್ನು ಸ್ವೀಕರಿಸುತ್ತಿದ್ದನು. ಆಗ ಪಾಂಡವರ ಸಂಪತ್ತು ಹಾಗೆ ಸಮೃದ್ಧಿಯಾದುದನ್ನು ನೋಡಿ ಅವನಲ್ಲಿ ಮಹತ್ತರ ಈರ್ಷೆಯು ಬೆಳೆಯಿತು, ಕೋಪವು ಹುಟ್ಟಿಕೊಂಡಿತು. ಪಾಂಡವರಿಗೆ ಉಡುಗೊರೆಯಾಗಿ ದೊರೆತಿದ್ದ ಮಯ ಸುನಿರ್ಮಿತ ವಿಮಾನಸದೃಶ ಸಭೆಯನ್ನು ನೋಡಿ ಅವನು ಇನ್ನೂ ಹೆಚ್ಚು ಬೆಂದನು. ಅಲ್ಲಿಯೇ, ವಾಸುದೇವನ ಪ್ರತ್ಯಕ್ಷದಲ್ಲಿ, ಭ್ರಮೆಗೊಂಡು ಜಾರಿ ಬಿದ್ದಾಗ ಅವನು ಭೀಮಸೇನನಿಂದ ಅವಹೇಳನಕ್ಕೊಳಪಟ್ಟನು.

ಸ ಭೋಗಾನ್ವಿವಿಧಾನ್ಭುಂಜನ್ರತ್ನಾನಿ ವಿವಿಧಾನಿ ಚ । ಕಥಿತೋ ಧೃತರಾಷ್ಟ್ರಸ್ಯ ವಿವರ್ಣೋ ಹರಿಣಃ ಕೃಶಃ  ।। 91 ।। ಅನ್ವಜಾನಾತ್ತತೋ ದ್ಯೂತಂ ಧೃತರಾಷ್ಟ್ರಃ ಸುತಪ್ರಿಯಃ  । ತಚ್ಛ್ರುತ್ವಾ ವಾಸುದೇವಸ್ಯ ಕೋಪಃ ಸಮಭವನ್ಮಹಾನ್  ।। 92 ।। ನಾತಿಪ್ರೀತಮನಾಶ್ಚಾಸೀದ್ವಿವಾದಾಂಶ್ಚಾನ್ವಮೋದತ  । ದ್ಯೂತಾದೀನನಯಾನ್ ಘೋರಾನ್ಪ್ರವೃದ್ಧಾಂಶ್ಚಾಪ್ಯುಪೈಕ್ಷತ  ।। 93 ।। ನಿರಸ್ಯ ವಿದುರಂ ದ್ರೋಣಂ ಭೀಷ್ಮಂ ಶಾರದ್ವತಂ ಕೃಪಮ್  । ವಿಗ್ರಹೇ ತುಮುಲೇ ತಸ್ಮಿನ್ನಹನ್ ಕ್ಷತ್ರಂ ಪರಸ್ಪರಮ್  ।। 94 ।।

ವಿವಿಧ ಭೋಗ ಮತ್ತು ವಿವಿಧ ರತ್ನಗಳನ್ನು ಭೋಗಿಸುತ್ತಿದ್ದರೂ ಅವನು ಈರ್ಷೆಯಿಂದ ವಿವರ್ಣನಾಗಿ ಕೃಶನಾದುದು ಧೃತರಾಷ್ಟ್ರನಿಗೆ ತಿಳಿಯಿತು. ಸುತಪ್ರಿಯ ಧೃತರಾಷ್ಟ್ರನು ದ್ಯೂತವನ್ನು ಆಜ್ಞಾಪಿಸಿದನು. ಅದನ್ನು ಕೇಳಿ ವಾಸುದೇವನು ಅತ್ಯಂತ ಕುಪಿತನಾದನು. ಇಷ್ಟವಿಲ್ಲದಿದ್ದರೂ ಧೃತರಾಷ್ಟ್ರನು ವಿವಾದಗಳನ್ನು ಅನುಮೋದಿಸಿ ಬೆಳೆಯುತ್ತಿದ್ದ ದ್ಯೂತಾದಿ ಘೋರ ಅನ್ಯಾಯಗಳನ್ನು ಉಪೇಕ್ಷಿಸಿದನು. ವಿದುರ, ದ್ರೋಣ, ಭೀಷ್ಮ, ಶಾರದ್ವತ[97] ಕೃಪರನ್ನು ನಿರಾಕರಿಸಿ ಆ ತುಮುಲ ಯುದ್ಧದಲ್ಲಿ ಕ್ಷತ್ರಿಯರು ಪರಸ್ಪರರನ್ನು ಸಂಹರಿಸಿದರು.

ಜಯತ್ಸು ಪಾಂಡುಪುತ್ರೇಷು ಶ್ರುತ್ವಾ ಸುಮಹದಪ್ರಿಯಮ್  । ದುರ್ಯೋಧನಮತಂ ಜ್ಞಾತ್ವಾ ಕರ್ಣಸ್ಯ ಶಕುನೇಸ್ತಥಾ  । ಧೃತರಾಷ್ಟ್ರಶ್ಚಿರಂ ಧ್ಯಾತ್ವಾ ಸಂಜಯಂ ವಾಕ್ಯಮಬ್ರವೀತ್  ।। 95 ।। ಶೃಣು ಸಂಜಯ ಮೇ ಸರ್ವಂ ನ ಮೇಽಸೂಯಿತುಮರ್ಹಸಿ । ಶ್ರುತವಾನಸಿ ಮೇಧಾವೀ ಬುದ್ಧಿಮಾನ್ ಪ್ರಾಜ್ಞಸಮ್ಮತಃ  ।। 96 ।। ನ ವಿಗ್ರಹೇ ಮಮ ಮತಿರ್ನ ಚ ಪ್ರೀಯೇ ಕುರುಕ್ಷಯೇ  । ನ ಮೇ ವಿಶೇಷಃ ಪುತ್ರೇಷು ಸ್ವೇಷು ಪಾಂಡುಸುತೇಷು ಚ  ।। 97 ।। ವೃದ್ಧಂ ಮಾಮಭ್ಯಸೂಯಂತಿ ಪುತ್ರಾ ಮನ್ಯುಪರಾಯಣಾಃ  । ಅಹಂ ತ್ವಚಕ್ಷುಃ ಕಾರ್ಪಣ್ಯಾತ್ಪುತ್ರಪ್ರೀತ್ಯಾ ಸಹಾಮಿ ತತ್  । ಮುಹ್ಯಂತಂ ಚಾನುಮುಹ್ಯಾಮಿ ದುರ್ಯೋಧನಮಚೇತನಮ್  ।। 98 ।।

ಪಾಂಡುಪುತ್ರರ ಜಯದ ಆ ಮಹಾ ಅಪ್ರಿಯ ವಿಷಯವನ್ನು ಕೇಳಿ ಮತ್ತು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮತವನ್ನು ತಿಳಿದು ಧೃತರಾಷ್ಟ್ರನು ತುಂಬಾ ಹೊತ್ತು ಯೋಚಿಸಿ ಸಂಜಯನಿಗೆ ಇಂತೆಂದನು: “ಸಂಜಯ! ನನ್ನಿಂದ ಎಲ್ಲವನ್ನೂ ಕೇಳು. ನನ್ನನ್ನು ನಿಂದಿಸಬಾರದು. ನೀನು ವಿದ್ಯಾವಂತ, ಮೇಧಾವಿ, ಬುದ್ಧಿಮಾನ ಮತ್ತು ಪ್ರಾಜ್ಞಸಮ್ಮತನಾಗಿರುವೆ. ಕುರುಕ್ಷಯದ ಯುದ್ಧದಲ್ಲಿ ನನ್ನ ವಿಚಾರ-ಇಷ್ಟಗಳಿರಲಿಲ್ಲ. ನನ್ನ ಪುತ್ರರಲ್ಲಿ ಮತ್ತು ಪಾಂಡುಸುತರಲ್ಲಿ ನನಗೆ ಭೇದಭಾವಗಳಿರಲಿಲ್ಲ. ಕ್ರೋಧಪರಾಯಣ ಪುತ್ರರು ವೃದ್ಧನಾದ ನನ್ನನ್ನು ನಿಂದಿಸುತ್ತಿದ್ದರು. ಕಣ್ಣಿಲ್ಲದ ನಾನು ದೀನತೆ-ಪುತ್ರಪ್ರೀತಿಗಳಿಂದ ಅದನ್ನು ಸಹಿಸಿಕೊಂಡೆ. ಮೂಢ ದುರ್ಯೋಧನನು ದುಃಖಿಸಿದರೆ ನಾನೂ ದುಃಖಿಸುತ್ತಿದ್ದೆ.

ರಾಜಸೂಯೇ ಶ್ರಿಯಂ ದೃಷ್ಟ್ವಾ ಪಾಂಡವಸ್ಯ ಮಹೌಜಸಃ  । ತಚ್ಚಾವಹಸನಂ ಪ್ರಾಪ್ಯ ಸಭಾರೋಹಣದರ್ಶನೇ  ।। 99 ।। ಅಮರ್ಷಿತಃ ಸ್ವಯಂ ಜೇತುಮಶಕ್ತಃ ಪಾಂಡವಾನ್ರಣೇ  । ನಿರುತ್ಸಾಹಶ್ಚ ಸಂಪ್ರಾಪ್ತುಂ ಶ್ರಿಯಮಕ್ಷತ್ರಿಯೋ ಯಥಾ  । ಗಾಂಧಾರರಾಜಸಹಿತಶ್ಚದ್ಮದ್ಯೂತಮಮಂತ್ರಯತ್  ।। 100 ।। ತತ್ರ ಯದ್ಯದ್ಯಥಾ ಜ್ಞಾತಂ ಮಯಾ ಸಂಜಯ ತಚ್ಛೃಣು  । ಶ್ರುತ್ವಾ ಹಿ ಮಮ ವಾಕ್ಯಾನಿ ಬುದ್ಧ್ಯಾ ಯುಕ್ತಾನಿ ತತ್ತ್ವತಃ  । ತತೋ ಜ್ಞಾಸ್ಯಸಿ ಮಾಂ ಸೌತೇ ಪ್ರಜ್ಞಾಚಕ್ಷುಷಮಿತ್ಯುತ  ।। 101 ।।

ರಾಜಸೂಯದಲ್ಲಿ ಮಹೌಜಸ ಪಾಂಡವನ ಸಂಪತ್ತನ್ನು ನೋಡಿ ಮತ್ತು ಸಭಾರೋಹಣದರ್ಶನದಲ್ಲಿ ಹಾಸ್ಯಕ್ಕೊಳಪಟ್ಟು ಸಿಟ್ಟಾಗಿ ತಾನು ಪಾಂಡವರನ್ನು ರಣದಲ್ಲಿ ಗೆಲ್ಲಲು ಅಶಕ್ತ ಎಂದು ನಿರುತ್ಸಾಹಗೊಂಡು ಅವನು ಗಾಂಧಾರರಾಜನ ಜೊತೆಗೂಡಿ ಸಂಪತ್ತನ್ನು ಪಡೆಯಲೋಸುಗ ಕ್ಷತ್ರಿಯರಿಗೆ ಶೋಭಿಸದ ಕಪಟ ದ್ಯೂತದ ಸಂಚನ್ನು ಹೂಡಿದನು. ಸಂಜಯ! ಇದರ ಮೊದಲು ಮತ್ತು ನಂತರ ಏನೆಲ್ಲ ಆಯಿತು ಎಂದು ನನಗೆ ತಿಳಿದಿದ್ದನ್ನು ಹೇಳುತ್ತೇನೆ ಕೇಳು. ಸೌತೇ[98]! ನನ್ನ ಈ ಮಾತುಗಳನ್ನು ಕೇಳಿದರೆ ನನಗೂ ಪ್ರಜ್ಞೆಯ ಕಣ್ಣಿದೆ ಎಂದು ನಿನಗೆ ತಿಳಿಯುತ್ತದೆ.

ಯದಾಶ್ರೌಷಂ ಧನುರಾಯಮ್ಯ ಚಿತ್ರಂ ವಿದ್ಧಂ ಲಕ್ಷ್ಯಂ ಪಾತಿತಂ ವೈ ಪೃಥಿವ್ಯಾಮ್  । ಕೃಷ್ಣಾಂ ಹೃತಾಂ ಪಶ್ಯತಾಂ ಸರ್ವರಾಜ್ಞಾಂ ತದಾ ನಾಶಂಸೇ ವಿಜಯಾಯ ಸಂಜಯ  ।। 102 ।। ಯದಾಶ್ರೌಷಂ ದ್ವಾರಕಾಯಾಂ ಸುಭದ್ರಾಂ ಪ್ರಸಹ್ಯೋಧಾಂ ಮಾಧವೀಮರ್ಜುನೇನ  । ಇಂದ್ರಪ್ರಸ್ಥಂ ವೃಷ್ಣಿವೀರೌ ಚ ಯಾತೌ ತದಾ ನಾಶಂಸೇ ವಿಜಯಾಯ ಸಂಜಯ  ।। 103 ।। ಯದಾಶ್ರೌಷಂ ದೇವರಾಜಂ ಪ್ರವೃಷ್ಟಂ ಶರೈರ್ದಿವ್ಯೈರ್ವಾರಿತಂ ಚಾರ್ಜುನೇನ  । ಅಗ್ನಿಂ ತಥಾ ತರ್ಪಿತಂ ಖಾಂಡವೇ ಚ ತದಾ ನಾಶಂಸೇ ವಿಜಯಾಯ ಸಂಜಯ  ।। 104 ।। [99]

ಸಂಜಯ! ಸರ್ವ ರಾಜರೂ ನೋಡುತ್ತಿದ್ದಂತೆ ಅದ್ಭುತ ಧನುಸ್ಸನ್ನು ಹೂಡಿ ಲಕ್ಷ್ಯವನ್ನು ಹೊಡೆದು ನೆಲಕ್ಕೆ ಕೆಡವಿ ಕೃಷ್ಣೆಯನ್ನು ಕೊಂಡೊಯ್ದರು ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು. ಅರ್ಜುನನು ಮಾಧವೀ[100] ಸುಭದ್ರೆಯನ್ನು ದ್ವಾರಕೆಯಿಂದ ಅಪಹರಿಸಿದ ಮತ್ತು ವೃಷ್ಣಿವೀರರಿಬ್ಬರೂ[101] ಇಂದ್ರಪ್ರಸ್ಥಕ್ಕೆ ಬಂದರು ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಮಳೆಸುರಿಸುತ್ತಿದ್ದ ದೇವರಾಜನನ್ನು ಅರ್ಜುನನು ದಿವ್ಯ ಶರಗಳಿಂದ ತಡೆದು ಅಗ್ನಿಗೆ ಖಾಂಡವವನ್ನಿತ್ತು ತೃಪ್ತಿಪಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಹೃತರಾಜ್ಯಂ ಯುಧಿಷ್ಠಿರಂ ಪರಾಜಿತಂ ಸೌಬಲೇನಾಕ್ಷವತ್ಯಾಮ್  । ಅನ್ವಾಗತಂ ಭ್ರಾತೃಭಿರಪ್ರಮೇಯೈಸ್ತದಾ ನಾಶಂಸೇ ವಿಜಯಾಯ ಸಂಜಯ  ।। 105 ।। [102] ಯದಾಶ್ರೌಷಂ ದ್ರೌಪದೀಮಶ್ರುಕಂಠೀಮ್ ಸಭಾಂ ನೀತಾಂ ದುಃಖಿತಾಮೇಕವಸ್ತ್ರಾಮ್  । ರಜಸ್ವಲಾಂ ನಾಥವತೀಮನಾಥವತ್ತದಾ ನಾಶಂಸೇ ವಿಜಯಾಯ ಸಂಜಯ  ।। 106 ।। ಯದಾಶ್ರೌಷಂ ವಿವಿಧಾಸ್ತಾತ ಚೇಷ್ಟಾ ಧರ್ಮಾತ್ಮನಾಂ ಪ್ರಸ್ಥಿತಾನಾಂ ವನಾಯ  । ಜ್ಯೇಷ್ಠಪ್ರೀತ್ಯಾ ಕ್ಲಿಶ್ಯತಾಂ ಪಾಂಡವಾನಾಂ ತದಾ ನಾಶಂಸೇ ವಿಜಯಾಯ ಸಂಜಯ  ।। 107 ।। [103]

ಸಂಜಯ! ಜೂಜಿನಲ್ಲಿ ಸೌಬಲ[104]ನಿಂದ ಪರಾಜಿತನಾಗಿ ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡರೂ, ಅಪ್ರಮೇಯ ಸಹೋದರರು ಅವನನ್ನು ಅನುಸರಿಸಿದರು ಎಂದು ಕೇಳಿದಂದೇ ನನಗೆ ವಿಜಯದಲ್ಲಿ ಸಂಶಯವಿತ್ತು.  ಸಂಜಯ! ಒಂದೇ ವಸ್ತ್ರವನ್ನುಟ್ಟಿದ್ದ ನಾಥರಿದ್ದರೂ ಅನಾಥಳಂತೆ ದುಃಖಿತಳಾಗಿದ್ದ ಅಶ್ರುಕಂಠೀ[105] ರಜಸ್ವಲೆ ದ್ರೌಪದಿಯನ್ನು ಸಭೆಗೆ ಎಳೆತಂದುದನ್ನು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು. ಅಯ್ಯಾ! ವನಕ್ಕೆ ತೆರಳುವಾಗ ಅಣ್ಣನ ಮೇಲಿನ ಪ್ರೀತಿಯಿಂದ ಕಷ್ಟಪಡುತ್ತಿದ್ದ ಧರ್ಮಾತ್ಮ ಪಾಂಡವರ ವಿವಿಧ ಚೇಷ್ಟೆಗಳನ್ನು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಸ್ನಾತಕಾನಾಂ ಸಹಸ್ರೈರನ್ವಾಗತಂ ಧರ್ಮರಾಜಂ ವನಸ್ಥಮ್  । ಭಿಕ್ಷಾಭುಜಾಂ ಬ್ರಾಹ್ಮಣಾನಾಂ ಮಹಾತ್ಮನಾಂ ತದಾ ನಾಶಂಸೇ ವಿಜಯಾಯ ಸಂಜಯ  ।। 108 ।। ಯದಾಶ್ರೌಷಂ ಅರ್ಜುನೋ ದೇವದೇವಂ ಕಿರಾತರೂಪಂ ತ್ರ್ಯಂಬಕಂ ತೋಷ್ಯ ಯುದ್ಧೇ  । ಅವಾಪ ತತ್ಪಾಶುಪತಂ ಮಹಾಸ್ತ್ರಂ ತದಾ ನಾಶಂಸೇ ವಿಜಯಾಯ ಸಂಜಯ  ।। 109 ।। [106] ಯದಾಶ್ರೌಷಂ ತ್ರಿದಿವಸ್ಥಂ ಧನಂಜಯಂ ಶಕ್ರಾತ್ಸಾಕ್ಷಾದ್ದಿವ್ಯಮಸ್ತ್ರಂ ಯಥಾವತ್  । ಅಧೀಯಾನಂ ಶಂಸಿತಂ ಸತ್ಯಸಂಧಂ ತದಾ ನಾಶಂಸೇ ವಿಜಯಾಯ ಸಂಜಯ  ।। 110 ।। [107]

ಸಂಜಯ! ವನಸ್ಥನಾದ ಧರ್ಮರಾಜನನ್ನು ಸಹಸ್ರಾರು ಸ್ನಾತಕರು ಮತ್ತು ಭಿಕ್ಷೆಯಿಂದಲೇ ಜೀವಿಸುತ್ತಿದ್ದ ಮಹಾತ್ಮಾ ಬ್ರಾಹ್ಮಣರು ಅನುಸರಿಸಿ ಹೋದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು. ಸಂಜಯ! ಅರ್ಜುನನು ಕಿರಾತರೂಪಿ ದೇವದೇವ ತ್ರಯಂಬಕನನ್ನು ಯುದ್ಧದಲ್ಲಿ ತೃಪ್ತಿಪಡಿಸಿ ಮಹಾಸ್ತ್ರ ಪಾಶುಪತವನ್ನು ಪಡೆದನೆಂದು ಕೇಳಿದಾಗಲೇ ನಾನು ವಿಜಯದ ಆಸೆಯನ್ನು ತೊರೆದಿದ್ದೆನು. ದೇವಲೋಕದಲ್ಲಿದ್ದ ಸತ್ಯಸಂಧ ಧನಂಜಯ[108]ನು ಸಾಕ್ಷಾತ್ ಶಕ್ರನ ಉಪದೇಶದಿಂದ ಯಥಾವತ್ತಾಗಿ ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದಂದೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

ಯದಾಶ್ರೌಷಂ ವೈಶ್ರವಣೇನ ಸಾರ್ಧಂ ಸಮಾಗತಂ ಭೀಮಮನ್ಯಾಂಶ್ಚ ಪಾರ್ಥಾನ್  । ತಸ್ಮಿನ್ದೇಶೇ ಮಾನುಷಾಣಾಮಗಮ್ಯೇ ತದಾ ನಾಶಂಸೇ ವಿಜಯಾಯ ಸಂಜಯ  ।। 111 ।। ಯದಾಶ್ರೌಷಂ ಘೋಷಯಾತ್ರಾಗತಾನಾಂ ಬಂಧಂ ಗಂಧರ್ವೈರ್ಮೋಕ್ಷಣಂ ಚಾರ್ಜುನೇನ  । ಸ್ವೇಷಾಂ ಸುತಾನಾಂ ಕರ್ಣಬುದ್ಧೌ ರತಾನಾಂ ತದಾ ನಾಶಂಸೇ ವಿಜಯಾಯ ಸಂಜಯ  ।। 112 ।। [109] ಯದಾಶ್ರೌಷಂ ಯಕ್ಷರೂಪೇಣ ಧರ್ಮಂ ಸಮಾಗತಂ ಧರ್ಮರಾಜೇನ ಸೂತ  । ಪ್ರಶ್ನಾನುಕ್ತಾನ್ವಿಬ್ರುವಂತಂ ಚ ಸಮ್ಯಕ್ ತದಾ ನಾಶಂಸೇ ವಿಜಯಾಯ ಸಂಜಯ  ।। 113 ।। [110]

ಸಂಜಯ! ಭೀಮ ಮತ್ತು ಅನ್ಯ ಪಾರ್ಥರು ಮನುಷ್ಯರಿಗೆ ಅಗಮ್ಯವಾದ ಪ್ರದೇಶದಲ್ಲಿ ವೈಶ್ರವಣ[111]ನನ್ನು ಸಂಧಿಸಿದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು. ಸಂಜಯ! ಕರ್ಣನ ಬುದ್ಧಿಯಲ್ಲಿ ವಿಶ್ವಾಸವಿಟ್ಟು ಘೋಷಯಾತ್ರೆಗೆ ಹೋದ ನನ್ನ ಮಕ್ಕಳನ್ನು ಗಂಧರ್ವರು ಬಂಧಿಸಿದಾಗ ಅರ್ಜುನನು ಬಿಡುಗಡೆ ಮಾಡಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು. ಸೂತ ಸಂಜಯ! ಯಕ್ಷರೂಪದಲ್ಲಿ ಭೇಟಿಯಾದ ಧರ್ಮನು ಕೇಳಿದ ಪ್ರಶ್ನೆಗಳಿಗೆ ಧರ್ಮರಾಜನು ಚೆನ್ನಾಗಿಯೇ ಉತ್ತರಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು.

ಯದಾಶ್ರೌಷಂ ಮಾಮಕಾನಾಂ ವರಿಷ್ಠಾನ್ ಧನಂಜಯೇನೈಕರಥೇನ ಭಗ್ನಾನ್  । ವಿರಾಟರಾಷ್ಟ್ರೇ ವಸತಾ ಮಹಾತ್ಮನಾ ತದಾ ನಾಶಂಸೇ ವಿಜಯಾಯ ಸಂಜಯ  ।। 114 ।। ಯದಾಶ್ರೌಷಂ ಸತ್ಕೃತಾಂ ಮತ್ಸ್ಯರಾಜ್ಞಾ ಸುತಾಂ ದತ್ತಾಮುತ್ತರಾಮರ್ಜುನಾಯ  । ತಾಂ ಚಾರ್ಜುನಃ ಪ್ರತ್ಯಗೃಹ್ಣಾತ್ ಸುತಾರ್ಥೇ ತದಾ ನಾಶಂಸೇ ವಿಜಯಾಯ ಸಂಜಯ  ।। 115 ।।

ವಿರಾಟರಾಷ್ಟ್ರದಲ್ಲಿ ವಾಸಿಸುತ್ತಿದ್ದಾಗ ಮಹಾತ್ಮಾ ಧನಂಜಯನು ನಮ್ಮವರಲ್ಲಿಯ ಶ್ರೇಷ್ಠರನ್ನು ಏಕರಥನಾಗಿಯೇ[112] ಭಗ್ನಗೊಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ! ಮತ್ಸ್ಯರಾಜನು ಅರ್ಜುನನನ್ನು ಸತ್ಕರಿಸಿ ಸುತೆ ಉತ್ತರೆಯನ್ನು ಕೊಟ್ಟಾಗ ಅರ್ಜುನನು ಅವಳನ್ನು ತನ್ನ ಸುತನಿಗಾಗಿ ಸ್ವೀಕರಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

ಯದಾಶ್ರೌಷಂ ನಿರ್ಜಿತಸ್ಯಾಧನಸ್ಯ ಪ್ರವ್ರಾಜಿತಸ್ಯ ಸ್ವಜನಾತ್ಪ್ರಚ್ಯುತಸ್ಯ  । ಅಕ್ಷೌಹಿಣೀಃ ಸಪ್ತ ಯುಧಿಷ್ಠಿರಸ್ಯ ತದಾ ನಾಶಂಸೇ ವಿಜಯಾಯ ಸಂಜಯ  ।। 116 ।। ಯದಾಶ್ರೌಷಂ ನರನಾರಾಯಣೌ ತೌ ಕೃಷ್ಣಾರ್ಜುನೌ ವದತೋ ನಾರದಸ್ಯ  । ಅಹಂ ದ್ರಷ್ಟಾ ಬ್ರಹ್ಮಲೋಕೇ ಸದೇತಿ ತದಾ ನಾಶಂಸೇ ವಿಜಯಾಯ ಸಂಜಯ  ।। 117 ।। ಯದಾಶ್ರೌಷಂ ಮಾಧವಂ ವಾಸುದೇವಂ ಸರ್ವಾತ್ಮನಾ ಪಾಂಡವಾರ್ಥೇ ನಿವಿಷ್ಟಮ್  । ಯಸ್ಯೇಮಾಂ ಗಾಂ ವಿಕ್ರಮಮೇಕಮಾಹುಸ್ತದಾ ನಾಶಂಸೇ ವಿಜಯಾಯ ಸಂಜಯ  ।। 118 ।। [113]

ಸ್ವಜನರಿಂದ ತ್ಯಕ್ತನಾಗಿ ಸೋತು ನಿರ್ಧನನಾಗಿ ವನವಾಸಗೈದ ಯುಧಿಷ್ಠಿರನು ಏಳು ಅಕ್ಷೌಹಿಣೀ[114] ಸೇನೆಯನ್ನು ಒಂದುಗೂಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಬ್ರಹ್ಮಲೋಕದಲ್ಲಿ ಸದಾ ನಾನು ನೋಡುವ ನರ-ನಾರಾಯಣರೇ ಈ ಕೃಷ್ಣಾರ್ಜುನರು ಎಂದು ನಾರದನು ಹೇಳಿದುದನ್ನು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಭೂಮಿಯನ್ನು ಒಂದೇ ಪಾದದಲ್ಲಿ ಅಳೆದನೆಂದು ಹೇಳುವ ವಿಕ್ರಮಿ ಮಾಧವ[115] ವಾಸುದೇವನು ಪಾಂಡವರಿಗಾಗಿದ್ದಾನೆ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಕರ್ಣದುರ್ಯೋಧನಾಭ್ಯಾಂ ಬುದ್ಧಿಂ ಕೃತಾಂ ನಿಗ್ರಹೇ ಕೇಶವಸ್ಯ  । ತಂ ಚಾತ್ಮಾನಂ ಬಹುಧಾ ದರ್ಶಯಾನಂ ತದಾ ನಾಶಂಸೇ ವಿಜಯಾಯ ಸಂಜಯ  ।। 119 ।। ಯದಾಶ್ರೌಷಂ ವಾಸುದೇವೇ ಪ್ರಯಾತೇ ರಥಸ್ಯೈಕಾಮಗ್ರತಸ್ತಿಷ್ಟಮಾನಾಮ್  । ಆರ್ತಾಂ ಪೃಥಾಂ ಸಾಂತ್ವಿತಾಂ ಕೇಶವೇನ ತದಾ ನಾಶಂಸೇ ವಿಜಯಾಯ ಸಂಜಯ  ।। 120 ।। [116] ಯದಾಶ್ರೌಷಂ ಮಂತ್ರಿಣಂ ವಾಸುದೇವಂ ತಥಾ ಭೀಷ್ಮಂ ಶಾಂತನವಂ ಚ ತೇಷಾಮ್  । ಭಾರದ್ವಾಜಂ ಚಾಶಿಷೋಽನುಬ್ರುವಾಣಂ ತದಾ ನಾಶಂಸೇ ವಿಜಯಾಯ ಸಂಜಯ  ।। 121 ।।

ಕೇಶವ[117]ನನ್ನು ಬಂಧಿಸಲು ಯೋಚಿಸುತ್ತಿದ್ದ ಕರ್ಣ-ದುರ್ಯೋಧನರಿಗೆ ಅವನು ತನ್ನ ಬಹು ರೂಪಗಳನ್ನು ತೋರಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ವಾಸುದೇವನು ಹಿಂದಿರುಗುವಾಗ ಪೃಥೆ[118]ಯು ಅವನ ರಥದ ಎದುರಿನಲ್ಲಿ ನಿಂತು ಶೋಕಿಸಲು ಕೇಶವನು ಅವಳನ್ನು ಸಂತವಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ವಾಸುದೇವನು ಅವರ ಮಂತ್ರಿಯಾಗಿದ್ದಾನೆ ಹಾಗೂ ಶಾಂತನವ[119] ಭೀಷ್ಮ ಮತ್ತು ಭಾರದ್ವಾಜ[120]ರು ಅವರಿಗೆ ಆಶೀರ್ವಾದವನ್ನು ಹೇಳಿದರು ಎಂದು ಕೇಳಿದಾಗಲೇ ನಮ್ಮ ಗೆಲುವಿನ ಕುರಿತು ಸಂಶಯವಾಗಿತ್ತು ಸಂಜಯ!

ಯದಾಶ್ರೌಷಂ ಕರ್ಣ ಉವಾಚ ಭೀಷ್ಮಂ ನಾಹಂ ಯೋತ್ಸ್ಯೇ ಯುಧ್ಯಮಾನೇ ತ್ವಯೀತಿ  । ಹಿತ್ವಾ ಸೇನಾಮಪಚಕ್ರಾಮ ಚೈವ ತದಾ ನಾಶಂಸೇ ವಿಜಯಾಯ ಸಂಜಯ  ।। 122 ।। ಯದಾಶ್ರೌಷಂ ವಾಸುದೇವಾರ್ಜುನೌ ತೌ ತಥಾ ಧನುರ್ಗಾಂಡೀವಮಪ್ರಮೇಯಮ್  । ತ್ರೀಣ್ಯುಗ್ರವೀರ್ಯಾಣಿ ಸಮಾಗತಾನಿ ತದಾ ನಾಶಂಸೇ ವಿಜಯಾಯ ಸಂಜಯ  ।। 123 ।। ಯದಾಶ್ರೌಷಂ ಕಶ್ಮಲೇನಾಭಿಪನ್ನೇ ರಥೋಪಸ್ಥೇ ಸೀದಮಾನೇಽರ್ಜುನೇ ವೈ  । ಕೃಷ್ಣಂ ಲೋಕಾನ್ದರ್ಶಯಾನಂ ಶರೀರೇ ತದಾ ನಾಶಂಸೇ ವಿಜಯಾಯ ಸಂಜಯ  ।। 124 ।।

“ನೀನು ಯುದ್ಧಮಾಡುವಾಗ ನಾನು ಯುದ್ಧ ಮಾಡುವುದಿಲ್ಲ!” ಎಂದು ಭೀಷ್ಮನಿಗೆ ಹೇಳಿ ಕರ್ಣನು ಸೇನೆಯನ್ನು ಬಿಟ್ಟು ಹೋದುದನ್ನು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ! ವಾಸುದೇವ, ಅರ್ಜುನ ಮತ್ತು ಅಪ್ರಮೇಯ ಗಾಂಡೀವ ಈ ಮೂವರು ಉಗ್ರವೀರ್ಯರೂ ಒಂದಾಗಿದ್ದಾರೆ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ! ಅರ್ಜುನನು ದುಃಖಿತನಾಗಿ ರಥದಲ್ಲಿ ಕುಸಿದು ಕುಳಿತಾಗ ಕೃಷ್ಣನು ಶರೀರದಲ್ಲಿ ವಿಶ್ವವನ್ನೇ ತೋರಿಸಿದನೆಂದು ಕೇಳಿದಾಗಲೇ ನನಗೆ ಗೆಲುವಿನ ಸಂಶಯವಾಗಿತ್ತು ಸಂಜಯ!

ಯದಾಶ್ರೌಷಂ ಭೀಷ್ಮಮಮಿತ್ರಕರ್ಶನಂ ನಿಘ್ನಂತಮಾಜಾವಯುತಂ ರಥಾನಾಮ್  । ನೈಷಾಂ ಕಶ್ಚಿದ್ವಧ್ಯತೇ ದೃಶ್ಯರೂಪಸ್ತದಾ ನಾಶಂಸೇ ವಿಜಯಾಯ ಸಂಜಯ  ।। 125 ।। [121] ಯದಾಶ್ರೌಷಂ ಭೀಷ್ಮಮತ್ಯಂತಶೂರಂ ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಮ್  । ಶಿಖಂಡಿನಂ ಪುರತಃ ಸ್ಥಾಪಯಿತ್ವಾ ತದಾ ನಾಶಂಸೇ ವಿಜಯಾಯ ಸಂಜಯ  ।। 126 ।। ಯದಾಶ್ರೌಷಂ ಶರತಲ್ಪೇ ಶಯಾನಂ ವೃದ್ಧಂ ವೀರಂ ಸಾದಿತಂ ಚಿತ್ರಪುಂಖೈಃ  । ಭೀಷ್ಮಂ ಕೃತ್ವಾ ಸೋಮಕಾನಲ್ಪಶೇಷಾಂಸ್ತದಾ ನಾಶಂಸೇ ವಿಜಯಾಯ ಸಂಜಯ  ।। 127 ।।

ಅಮಿತ್ರಕರ್ಶನ ಭೀಷ್ಮನು ಹತ್ತುಸಾವಿರ ರಥಿಗಳನ್ನು ಕೊಂದರೂ ಅವರಲ್ಲಿ ಪ್ರಮುಖನಾದವನು ಯಾರೂ ಕಾಣಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ಪಾರ್ಥ[122]ನು ಅತ್ಯಂತ ಶೂರ, ಗೆಲ್ಲಲಸಾದ್ಯ ಭೀಷ್ಮನನ್ನು ಉರುಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಸೋಮಕರನ್ನು[123] ಅಲ್ಪಗೊಳಿಸಿದ ಆ ವೃದ್ಧ ವೀರ ಭೀಷ್ಮನು ಚಿತ್ರಪುಂಖ ಶರಗಳಿಂದ ಹೊಡೆಯಲ್ಪಟ್ಟು ಶರತಲ್ಪದಮೇಲೆ ಮಲಗಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಶಾಂತನವೇ ಶಯಾನೇ ಪಾನೀಯಾರ್ಥೇ ಚೋದಿತೇನಾರ್ಜುನೇನ  । ಭೂಮಿಂ ಭಿತ್ತ್ವಾ ತರ್ಪಿತಂ ತತ್ರ ಭೀಷ್ಮಂ ತದಾ ನಾಶಂಸೇ ವಿಜಯಾಯ ಸಂಜಯ  ।। 128 ।। ಯದಾಶ್ರೌಷಂ ಶುಕ್ರಸೂರ್ಯೌ ಚ ಯುಕ್ತೌ ಕೌಂತೇಯಾನಾಮನುಲೋಮೌ ಜಯಾಯ  । ನಿತ್ಯಂ ಚಾಸ್ಮನ್ ಶ್ವಾಪದಾ ವ್ಯಾಭಷಂತಸ್ ತದಾ ನಾಶಂಸೇ ವಿಜಯಾಯ ಸಂಜಯ  ।। 129 ।। ಯದಾ ದ್ರೋಣೋ ವಿವಿಧಾನಸ್ತ್ರಮಾರ್ಗಾನ್ ವಿದರ್ಶಯನ್ಸಮರೇ ಚಿತ್ರಯೋಧೀ  । ನ ಪಾಂಡವಾನ್ ಶ್ರೇಷ್ಠತಮಾನ್ನಿಹಂತಿ ತದಾ ನಾಶಂಸೇ ವಿಜಯಾಯ ಸಂಜಯ  ।। 130 ।।

ಮಲಗಿದ್ದ ಶಾಂತನವನು ಪಾನೀಯವನ್ನು ಕೇಳಿದಾಗ ಅರ್ಜುನನು ಭೂಮಿಯನ್ನು ಭೇದಿಸಿ ಭೀಷ್ಮನನ್ನು ತೃಪ್ತಿಗೊಳಿಸಿದ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಶುಕ್ರ-ಸೂರ್ಯರು[124] ಕೌಂತೇಯರ ಜಯವನ್ನೇ ಬಯಸಿ ಒಂದಾಗಿದ್ದಾರೆ ಮತ್ತು ಕ್ರೂರ ಮೃಗಗಳು ನಿತ್ಯವೂ ನಮ್ಮಕಡೆ ಗರ್ಜಿಸುತ್ತಿವೆ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಚಿತ್ರಯೋಧೀ ದ್ರೋಣನು ಸಮರದಲ್ಲಿ ವಿವಿಧ ಅಸ್ತ್ರಗಳ ಪ್ರದರ್ಶಿಸಿದರೂ ಪಾಂಡವರಲ್ಲಿ ಶ್ರೇಷ್ಠನಾದ ಯಾರನ್ನೂ ಕೊಲ್ಲಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಚಾಸ್ಮದೀಯಾನ್ಮಹಾರಥಾನ್ ವ್ಯವಸ್ಥಿತಾನರ್ಜುನಸ್ಯಾಂತಕಾಯ  । ಸಂಶಪ್ತಕಾನ್ನಿಹತಾನರ್ಜುನೇನ ತದಾ ನಾಶಂಸೇ ವಿಜಯಾಯ ಸಂಜಯ  ।। 131 ।। ಯದಾಶ್ರೌಷಂ ವ್ಯೂಹಮಭೇದ್ಯಮನ್ಯೈರ್ಭಾರದ್ವಾಜೇನಾತ್ತಶಸ್ತ್ರೇಣ ಗುಪ್ತಮ್  । ಭಿತ್ತ್ವಾ ಸೌಭದ್ರಂ ವೀರಮೇಕಂ ಪ್ರವಿಷ್ಟಂ ತದಾ ನಾಶಂಸೇ ವಿಜಯಾಯ ಸಂಜಯ  ।। 132 ।। ಯದಾಭಿಮನ್ಯುಂ ಪರಿವಾರ್ಯ ಬಾಲಂ ಸರ್ವೇ ಹತ್ವಾ ಹೃಷ್ಟರೂಪಾ ಬಭೂವುಃ  । ಮಹಾರಥಾಃ ಪಾರ್ಥಮಶಕ್ನುವಂತಸ್ತದಾ ನಾಶಂಸೇ ವಿಜಯಾಯ ಸಂಜಯ  ।। 133 ।।

ಅರ್ಜುನನನ್ನು ಕೊಲ್ಲಲು ಹಠಹಿಡಿದಿದ್ದ ನಮ್ಮ ಮಹಾರಥಿ ಸಂಶಪ್ತಕರು ಅರ್ಜುನನಿಂದಲೇ ಅಂತ್ಯರಾದರೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಭಾರದ್ವಾಜನು ರಚಿಸಿ ಶಸ್ತ್ರಗಳಿಂದ ರಕ್ಷಿಸಿದ ಮತ್ತು ಅನ್ಯರಿಗೆ ಅಭೇಧ್ಯ ವ್ಯೂಹವನ್ನು ವೀರ ಸೌಭದ್ರಿ[125]ಯೊಬ್ಬನೇ ಭೇದಿಸಿ ಪ್ರವೇಶಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಪಾರ್ಥನನ್ನು ಎದುರಿಸಲು ಅಶಕ್ತರಾದ ಮಹಾರಥಿಗಳೆಲ್ಲರೂ ಬಾಲಕ ಅಭಿಮನ್ಯುವನ್ನು ಸುತ್ತುವರೆದು ಕೊಂದು ಹರ್ಷಿತರಾದರೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಮಭಿಮನ್ಯುಂ ನಿಹತ್ಯ ಹರ್ಷಾನ್ಮೂಢಾನ್ಕ್ರೋಶತೋ ಧಾರ್ತರಾಷ್ಟ್ರಾನ್ ಕ್ರೋಧಂ ಮುಕ್ತಂ ಸೈಂಧವೇ ಚಾರ್ಜುನೇನ ತದಾ ನಾಶಂಸೇ ವಿಜಯಾಯ ಸಂಜಯ  ।। 134 ।। ಯದಾಶ್ರೌಷಂ ಸೈಂಧವಾರ್ಥೇ ಪ್ರತಿಜ್ಞಾಂ ಪ್ರತಿಜ್ಞಾತಾಂ ತದ್ವಧಾಯಾರ್ಜುನೇನ  । ಸತ್ಯಾಂ ನಿಸ್ತೀರ್ಣಾಂ ಶತ್ರುಮಧ್ಯೇ ಚ ತೇನ ತದಾ ನಾಶಂಸೇ ವಿಜಯಾಯ ಸಂಜಯ  ।। 135 ।।

ಅಭಿಮನ್ಯುವನ್ನು ಕೊಂದು ಮೂಢ ಧಾರ್ತರಾಷ್ಟ್ರರು ಹರ್ಷೋದ್ಗಾರ ಮಾಡುತ್ತಿದ್ದಾಗ ಅರ್ಜುನನು ತನ್ನ ಕ್ರೋಧವನ್ನು ಸೈಂಧವ[126]ನ ಮೇಲೆ ಬಿಟ್ಟನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ! ಸೈಂಧವನನ್ನು ಕೊಲ್ಲುವ ಪ್ರತಿಜ್ಞೆಯನ್ನು ಮಾಡಿದ ಅರ್ಜುನನು ಶತ್ರುಗಳ ಮಧ್ಯದಲ್ಲಿಯೇ ಪ್ರತಿಜ್ಞೆಯನ್ನು ಸತ್ಯವಾಗಿಸಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಾಗಿತ್ತು ಸಂಜಯ!

ಯದಾಶ್ರೌಷಂ ಶ್ರಾಂತಹಯೇ ಧನಂಜಯೇ ಮುಕ್ತ್ವಾ ಹಯಾನ್ಪಾಯಯಿತ್ವೋಪವೃತ್ತಾನ್  । ಪುನರ್ಯುಕ್ತ್ವಾ ವಾಸುದೇವಂ ಪ್ರಯಾತಂ ತದಾ ನಾಶಂಸೇ ವಿಜಯಾಯ ಸಂಜಯ  ।। 136 ।। ಯದಾಶ್ರೌಷಂ ವಾಹನೇಷ್ವಾಶ್ವಸತ್ಸು ರಥೋಪಸ್ಥೇ ತಿಷ್ಠತಾ ಗಾಂಡಿವೇನ  । ಸರ್ವಾನ್ಯೋಧಾನ್ವಾರಿತಾನರ್ಜುನೇನ ತದಾ ನಾಶಂಸೇ ವಿಜಯಾಯ ಸಂಜಯ  ।। 137 ।। ಯದಾಶ್ರೌಷಂ ನಾಗಬಲೈರ್ದುರುತ್ಸಹಂ ದ್ರೋಣಾನೀಕಂ ಯುಯುಧಾನಂ ಪ್ರಮಥ್ಯ  । ಯಾತಂ ವಾರ್ಷ್ಣೇಯಂ ಯತ್ರ ತೌ ಕೃಷ್ಣಪಾರ್ಥೌ ತದಾ ನಾಶಂಸೇ ವಿಜಯಾಯ ಸಂಜಯ  ।। 138 ।।

ಧನಂಜಯನ ಬಳಲಿದ ಕುದುರೆಗಳನ್ನು ಮಾಧವನು ರಣಮಧ್ಯದಲ್ಲಿಯೇ ಬಿಚ್ಚಿ, ನೀರುಕುಡಿಸಿ ವಿಶ್ರಾಂತಿಪಡಿಸಿ, ಪುನಃ ರಥಕ್ಕೆ ಕಟ್ಟಿ ನಡೆಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಕುದುರೆಗಳು ವಿಶ್ರಾಂತಿಪಡೆಯುತ್ತಿದ್ದಾಗ ಅರ್ಜುನನು ರಥದಲ್ಲಿಯೇ ನಿಂತು ಗಾಂಡೀವದಿಂದ ಸರ್ವ ಯೋಧರನ್ನೂ ತಡೆಹಿಡಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ವಾರ್ಷ್ಣೇಯ ಯುಯುಧಾನ[127]ನು ದ್ರೋಣನ ಸಹಿಸಲಸಾಧ್ಯ ಗಜಸೇನೆಯನ್ನು ಸದೆಬಡಿದು ಕೃಷ್ಣ-ಪಾರ್ಥರಿದ್ದೆಡೆ ಹೋದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಕರ್ಣಮಾಸಾದ್ಯ ಮುಕ್ತಂ ವಧಾದ್ಭೀಮಂ ಕುತ್ಸಯಿತ್ವಾ ವಚೋಭಿಃ  । ಧನುಷ್ಕೋಟ್ಯಾ ತುದ್ಯ ಕರ್ಣೇನ ವೀರಂ ತದಾ ನಾಶಂಸೇ ವಿಜಯಾಯ ಸಂಜಯ  ।। 139 ।। ಯದಾ ದ್ರೋಣಃ ಕೃತವರ್ಮಾ ಕೃಪಶ್ಚ ಕರ್ಣೋ ದ್ರೌಣಿರ್ಮದ್ರರಾಜಶ್ಚ ಶೂರಃ  । ಅಮರ್ಷಯನ್ಸೈಂಧವಂ ವಧ್ಯಮಾನಂ ತದಾ ನಾಶಂಸೇ ವಿಜಯಾಯ ಸಂಜಯ  ।। 140 ।। ಯದಾಶ್ರೌಷಂ ದೇವರಾಜೇನ ದತ್ತಾಂ ದಿವ್ಯಾಂ ಶಕ್ತಿಂ ವ್ಯಂಸಿತಾಂ ಮಾಧವೇನ  । ಘಟೋತ್ಕಚೇ ರಾಕ್ಷಸೇ ಘೋರರೂಪೇ ತದಾ ನಾಶಂಸೇ ವಿಜಯಾಯ ಸಂಜಯ  ।। 141 ।। ಯದಾಶ್ರೌಷಂ ಕರ್ಣಘಟೋತ್ಕಚಾಭ್ಯಾಂ ಯುದ್ಧೇ ಮುಕ್ತಾಂ ಸೂತಪುತ್ರೇಣ ಶಕ್ತಿಮ್  । ಯಯಾ ವಧ್ಯಃ ಸಮರೇ ಸವ್ಯಸಾಚೀ ತದಾ ನಾಶಂಸೇ ವಿಜಯಾಯ ಸಂಜಯ  ।। 142 ।।

ಕರ್ಣನು ತನಗೆ ಸಿಲುಕಿದ್ದ ವೀರ ಭೀಮನನ್ನು ಧನುಸ್ಸಿನಿಂದ ಅವನ ಕಿವಿಯನ್ನು ಚುಚ್ಚಿ ಮಾತುಗಳಿಂದ ಮೂದಲಿಸಿ ವಧಿಸದೇ ಬಿಟ್ಟನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ದ್ರೋಣ, ಕೃತವರ್ಮ, ಕೃಪ, ಕರ್ಣ, ದ್ರೌಣಿ[128], ಮತ್ತು ಶೂರ ಮದ್ರರಾಜ[129] ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ದೇವರಾಜ[130]ನು ಕೊಟ್ಟಿದ್ದ ದಿವ್ಯ ಶಕ್ತಿ[131]ಯನ್ನು ಮಾಧವನಿಂದಾಗಿ  ಘೋರರೂಪೀ ರಾಕ್ಷಸ ಘಟೋತ್ಕಚನ ಮೇಲೆ ಬಿಡುವಂತಾಯಿತು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು, ಸಂಜಯ! ಸಮರದಲ್ಲಿ ಸವ್ಯಸಾಚಿ[132]ಯ ವಧೆಗೆಂದು ಮೀಸಲಾಗಿಟ್ಟಿದ್ದ ಶಕ್ತಿಯನ್ನು ಕರ್ಣ-ಘಟೋತ್ಕಚರ ಯುದ್ಧದಲ್ಲಿ ಸೂತಪುತ್ರ[133]ನು ಪ್ರಯೋಗಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ದ್ರೋಣಮಾಚಾರ್ಯಮೇಕಂ ಧೃಷ್ಟದ್ಯುಮ್ನೇನಾಭ್ಯತಿಕ್ರಮ್ಯ ಧರ್ಮಮ್  । ರಥೋಪಸ್ಥೇ ಪ್ರಾಯಗತಂ ವಿಶಸ್ತಂ ತದಾ ನಾಶಂಸೇ ವಿಜಯಾಯ ಸಂಜಯ  ।। 143 ।। ಯದಾಶ್ರೌಷಂ ದ್ರೌಣಿನಾ ದ್ವೈರಥಸ್ಥಂ ಮಾದ್ರೀಪುತ್ರಂ ನಕುಲಂ ಲೋಕಮಧ್ಯೇ  । ಸಮಂ ಯುದ್ಧೇ ಪಾಂಡವಂ ಯುಧ್ಯಮಾನಂ ತದಾ ನಾಶಂಸೇ ವಿಜಯಾಯ ಸಂಜಯ  ।। 144 ।। ಯದಾ ದ್ರೋಣೇ ನಿಹತೇ ದ್ರೋಣಪುತ್ರೋ ನಾರಾಯಣಂ ದಿವ್ಯಮಸ್ತ್ರಂ ವಿಕುರ್ವನ್  । ನೈಷಾಮಂತಂ ಗತವಾನ್ಪಾಂಡವಾನಾಂ ತದಾ ನಾಶಂಸೇ ವಿಜಯಾಯ ಸಂಜಯ  ।। 145 ।। [134]

ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತ[135]ನಾಗಿದ್ದ ಆಚಾರ್ಯ ದ್ರೋಣನನ್ನು ಸಂಹರಿಸಿ ಧೃಷ್ಟದ್ಯುಮ್ನನು ಧರ್ಮವನ್ನು ಅತಿಕ್ರಮಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಮಾದ್ರೀಪುತ್ರ ನಕುಲನು ಸೇನೆಯ ಮಧ್ಯದಲ್ಲಿ ದ್ರೌಣಿಯ ರಥವನ್ನು ಅಸ್ತವ್ಯಸ್ತ ಮಾಡಿ ಯುದ್ಧದಲ್ಲಿ ಪಾಂಡವನಾದ ತಾನೂ ಸರಿಸಾಟಿಯೆಂದು ತೋರಿಸಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ದ್ರೋಣಾವಸಾನದ ನಂತರ ದ್ರೋಣಪುತ್ರನು ಬಿಟ್ಟ ದಿವ್ಯ ನಾರಾಯಣಾಸ್ತ್ರವು ಪಾಂಡವರನ್ನು ಕೊನೆಗೊಳಿಸುವಲ್ಲಿ ಅಸಫಲವಾದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಕರ್ಣಮತ್ಯಂತಶೂರಂ ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಮ್  । ತಸ್ಮಿನ್ ಭ್ರಾತೄಣಾಂ ವಿಗ್ರಹೇ ದೇವಗುಹ್ಯೇ ತದಾ ನಾಶಂಸೇ ವಿಜಯಾಯ ಸಂಜಯ  ।। 146 ।। ಯದಾಶ್ರೌಷಂ ದ್ರೋಣಪುತ್ರಂ ಕೃಪಂ ಚ ದುಃಶಾಸನಂ ಕೃತವರ್ಮಾಣಮುಗ್ರಮ್  । ಯುಧಿಷ್ಠಿರಂ ಶೂನ್ಯಮಧರ್ಷಯಂತಂ ತದಾ ನಾಶಂಸೇ ವಿಜಯಾಯ ಸಂಜಯ  ।। 147 ।। ಯದಾಶ್ರೌಷಂ ನಿಹತಂ ಮದ್ರರಾಜಂ ರಣೇ ಶೂರಂ ಧರ್ಮರಾಜೇನ ಸೂತ  । ಸದಾ ಸಂಗ್ರಾಮೇ ಸ್ಪರ್ಧತೇ ಯಃ ಸ ಕೃಷ್ಣಂ ತದಾ ನಾಶಂಸೇ ವಿಜಯಾಯ ಸಂಜಯ  ।। 148 ।।

ಯುದ್ಧದಲ್ಲಿ ಗೆಲ್ಲಲಸಾದ್ಯ ಅತಿ ಶೂರ ಕರ್ಣನು ದೇವತೆಗಳಿಗೂ ಗುಹ್ಯವಾದ ಆ ಸಹೋದರರ ಸಮರದಲ್ಲಿ ಪಾರ್ಥನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ದ್ರೋಣಪುತ್ರ, ಕೃಪ, ದುಃಶಾಸನ ಮತ್ತು ಉಗ್ರ ಕೃತವರ್ಮರು ಏಕಾಂಗಿಯಾಗಿದ್ದ ಯುಧಿಷ್ಠಿರನನ್ನು ಸೋಲಿಸಲಿಲ್ಲವೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಸೂತ! ಸಂಜಯ! ಸಂಗ್ರಾಮದಲ್ಲಿ ಸದಾ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ ರಣದಲ್ಲಿ ಹತನಾದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು.

ಯದಾಶ್ರೌಷಂ ಕಲಹದ್ಯೂತಮೂಲಂ ಮಾಯಾಬಲಂ ಸೌಬಲಂ ಪಾಂಡವೇನ  । ಹತಂ ಸಂಗ್ರಾಮೇ ಸಹದೇವೇನ ಪಾಪಂ ತದಾ ನಾಶಂಸೇ ವಿಜಯಾಯ ಸಂಜಯ  ।। 149 ।। ಯದಾಶ್ರೌಷಂ ಶ್ರಾಂತಮೇಕಂ ಶಯಾನಂ ಹ್ರದಂ ಗತ್ವಾ ಸ್ತಂಭಯಿತ್ವಾ ತದಂಭಃ  । ದುರ್ಯೋಧನಂ ವಿರಥಂ ಭಗ್ನದರ್ಪಂ ತದಾ ನಾಶಂಸೇ ವಿಜಯಾಯ ಸಂಜಯ  ।। 150 ।। ಯದಾಶ್ರೌಷಂ ಪಾಂಡವಾಂಸ್ತಿಷ್ಟಮಾನಾನ್ ಗಂಗಾಹ್ರದೇ ವಾಸುದೇವೇನ ಸಾರ್ಧಮ್  । ಅಮರ್ಷಣಂ ಧರ್ಷಯತಃ ಸುತಂ ಮೇ ತದಾ ನಾಶಂಸೇ ವಿಜಯಾಯ ಸಂಜಯ  ।। 151 ।।

ಕಲಹದ್ಯೂತ ಮೂಲ, ಮಾಯಾಬಲ ಪಾಪಿ ಸೌಬಲನು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ಅಲ್ಲಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ ಪಡೆದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ! ಗಂಗಾಸರೋವರದ ದಡದಲ್ಲಿ ವಾಸುದೇವನೊಂದಿಗೆ ಪಾಂಡವರು ನಿಂತು ಕುಪಿತನಾದ ನನ್ನ ಮಗನನ್ನು ಬೆದರಿಸಿದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ವಿವಿಧಾಂಸ್ತಾತ ಮಾರ್ಗಾನ್ ಗದಾಯುದ್ಧೇ ಮಂಡಲಂ ಸಂಚರಂತಮ್  । ಮಿಥ್ಯಾ ಹತಂ ವಾಸುದೇವಸ್ಯ ಬುದ್ಧ್ಯಾ ತದಾ ನಾಶಂಸೇ ವಿಜಯಾಯ ಸಂಜಯ  ।। 152 ।। ಯದಾಶ್ರೌಷಂ ದ್ರೋಣಪುತ್ರಾದಿಭಿಸ್ತೈರ್ಹತಾನ್ ಪಾಂಚಾಲಾನ್ದ್ರೌಪದೇಯಾಂಶ್ಚ ಸುಪ್ತಾನ್  । ಕೃತಂ ಬೀಭತ್ಸಮಯಶಸ್ಯಂ ಚ ಕರ್ಮ ತದಾ ನಾಶಂಸೇ ವಿಜಯಾಯ ಸಂಜಯ  ।। 153 ।। ಯದಾಶ್ರೌಷಂ ಭೀಮಸೇನಾನುಯಾತೇನಾಶ್ವತ್ಥಾಮ್ನಾ ಪರಮಾಸ್ತ್ರಂ ಪ್ರಯುಕ್ತಮ್  । ಕ್ರುದ್ಧೇನೈಷೀಕಮವಧೀದ್ಯೇನ ಗರ್ಭಂ ತದಾ ನಾಶಂಸೇ ವಿಜಯಾಯ ಸಂಜಯ  ।। 154 ।।

ಅಯ್ಯಾ! ಗದಾಯುದ್ಧದ ವಿವಿಧ ಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಅವನು ವಾಸುದೇವನ ಬುದ್ಧಿಯಂತೆ ಅನ್ಯಾಯವಾಗಿ ಹತನಾದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಮಲಗಿದ್ದ ಪಾಂಚಾಲ ಮತ್ತು ದ್ರೌಪದೇಯರನ್ನು[136] ದ್ರೋಣಪುತ್ರಾದಿಗಳು ಕೊಲ್ಲುವ ಬೀಭತ್ಸ ಮತ್ತು ಅಯಶಸ್ಕರ ಕರ್ಮವನ್ನೆಸಗಿದರೆಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ! ಭೀಮಸೇನನಿಂದ ಬೆನ್ನಟ್ಟಲ್ಪಟ್ಟ ಅಶ್ವತ್ಥಾಮನು ಸಿಟ್ಟಿನಿಂದ ಹುಲ್ಲಿನ ಮೂಲಕ ಪರಮಾಸ್ತ್ರ[137]ವನ್ನು ಬಿಟ್ಟು ಗರ್ಭವಧೆಗೈದುದನ್ನು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಬ್ರಹ್ಮಶಿರೋಽರ್ಜುನೇನ ಮುಕ್ತಂ ಸ್ವಸ್ತೀತ್ಯಸ್ತ್ರಮಸ್ತ್ರೇಣ ಶಾಂತಮ್  । ಅಶ್ವತ್ಥಾಮ್ನಾ ಮಣಿರತ್ನಂ ಚ ದತ್ತಂ ತದಾ ನಾಶಂಸೇ ವಿಜಯಾಯ ಸಂಜಯ  ।। 155 ।। ಯದಾಶ್ರೌಷಂ ದ್ರೋಣಪುತ್ರೇಣ ಗರ್ಭೇ ವೈರಾಟ್ಯಾ ವೈ ಪಾತ್ಯಮಾನೇ ಮಹಾಸ್ತ್ರೇ  ।[138] ದ್ವೈಪಾಯನಃ ಕೇಶವೋ ದ್ರೋಣಪುತ್ರಂ ಪರಸ್ಪರೇಣಾಭಿಶಾಪೈಃ ಶಶಾಪ  ।। 156 ।। [139] ಶೋಚ್ಯಾ ಗಾಂಧಾರೀ ಪುತ್ರಪೌತ್ರೈರ್ವಿಹೀನಾ ತಥಾ ವಧ್ವಃ ಪಿತೃಭಿರ್ಭ್ರಾತೃಭಿಶ್ಚ  । ಕೃತಂ ಕಾರ್ಯಂ ದುಷ್ಕರಂ ಪಾಂಡವೇಯೈಃ ಪ್ರಾಪ್ತಂ ರಾಜ್ಯಮಸಪತ್ನಂ ಪುನಸ್ತೈಃ  ।। 157 ।।

ಅಶ್ವತ್ಥಾಮನ ಬ್ರಹ್ಮಶಿರ[140]ವು ಅರ್ಜುನನು ಸ್ವಸ್ತಿ ಎಂದು ಬಿಟ್ಟ ಅಸ್ತ್ರದಿಂದ ಶಾಂತಗೊಂಡಿತು ಮತ್ತು ಅಶ್ವತ್ಥಾಮನು ತನ್ನ ಮಣಿರತ್ನವನ್ನು ಕೊಟ್ಟನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ! ದ್ರೋಣಪುತ್ರನ ಮಹಾಸ್ತ್ರವು ವೈರಾಟಿ[141]ಯ ಗರ್ಭದ ಮೇಲೆ ಬೀಳಲು ದ್ವೈಪಾಯನ ಮತ್ತು ಕೇಶವರು ದ್ರೋಣಪುತ್ರನಿಗೆ ಶಪಿಸಿದರು ಮತ್ತು ಅವನೂ ಅವರಿಗೆ ಅಭಿಶಾಪಗಳನ್ನಿತ್ತನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು. ಪಾಂಡವರು ಪ್ರತಿಸ್ಪರ್ಧಿಗಳಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯವನ್ನು ಮಾಡಿದ್ದಾರೆ. ಆದರೆ ಮಕ್ಕಳು, ಮೊಮ್ಮಕ್ಕಳು, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯು ಶೋಚನೀಯಳಾಗಿದ್ದಾಳೆ.

ಕಷ್ಟಂ ಯುದ್ಧೇ ದಶ ಶೇಷಾಃ ಶ್ರುತಾ ಮೇ ತ್ರಯೋಽಸ್ಮಾಕಂ ಪಾಂಡವಾನಾಂ ಚ ಸಪ್ತ  । ದ್ವ್ಯೂನಾ ವಿಂಶತಿರಾಹತಾಕ್ಷೌಹಿಣೀನಾಂ ತಸ್ಮಿನ್ಸಂಗ್ರಾಮೇ ವಿಗ್ರಹೇ ಕ್ಷತ್ರಿಯಾಣಾಮ್  ।। 158 ।। ತಮಸಾತ್ವಭ್ಯವಸ್ತೀರ್ಣೋ ಮೋಹ ಆವಿಶತೀವ ಮಾಮ್  । ಸಂಜ್ಞಾಂ ನೋಪಲಭೇ ಸೂತ ಮನೋ ವಿಹ್ವಲತೀವ ಮೇ  ।। 159 ।। ಇತ್ಯುಕ್ತ್ವಾ ಧೃತರಾಷ್ಟ್ರೋಽಥ ವಿಲಪ್ಯ ಬಹುದುಃಖಿತಃ  । ಮೂರ್ಚ್ಛಿತಃ ಪುನರಾಶ್ವಸ್ತಃ ಸಂಜಯಂ ವಾಕ್ಯಮಬ್ರವೀತ್  ।। 160 ।। ಸಂಜಯೈವಂಗತೇ ಪ್ರಾಣಾಂಸ್ತ್ಯಕ್ತುಮಿಚ್ಛಾಮಿ ಮಾಚಿರಮ್  । ಸ್ತೋಕಂ ಹ್ಯಪಿ ನ ಪಶ್ಯಾಮಿ ಫಲಂ ಜೀವಿತಧಾರಣೇ  ।। 161 ।।

ಆ ಸಂಗ್ರಾಮದಲ್ಲಿ 18 ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಯುದ್ಧದಲ್ಲಿ ಕೇವಲ 10 ಮಂದಿ - ನಮ್ಮವರು ಮೂರು[142] ಮತ್ತು ಪಾಂಡವರ ಕಡೆಯವರು ಏಳು[143] - ಉಳಿದಿದ್ದಾರೆ ಎಂದು ಕೇಳಿ ಕಷ್ಟವಾಗುತ್ತಿದೆ. ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು ಕಳೆದುಕೊಂಡಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ.” ಬಹು ದುಃಖಿತ ಧೃತರಾಷ್ಟ್ರನು ಹೀಗೆ ಹೇಳಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು: “ಸಂಜಯ! ಕೂಡಲೇ ಈ ಪ್ರಾಣವನ್ನು ತ್ಯಜಿಸ ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ.”

ತಂ ತಥಾವಾದಿನಂ ದೀನಂ ವಿಲಪಂತಂ ಮಹೀಪತಿಮ್  । ಗಾವಲ್ಗಣಿರಿದಂ ಧೀಮಾನ್ಮಹಾರ್ಥಂ ವಾಕ್ಯಮಬ್ರವೀತ್  ।। 162 ।। ಶ್ರುತವಾನಸಿ ವೈ ರಾಜ್ಞೋ ಮಹೋತ್ಸಾಹಾನ್ಮಹಾಬಲಾನ್ । ದ್ವೈಪಾಯನಸ್ಯ ವದತೋ ನಾರದಸ್ಯ ಚ ಧೀಮತಃ  ।। 163 ।। ಮಹತ್ಸು ರಾಜವಂಶೇಷು ಗುಣೈಃ ಸಮುದಿತೇಷು ಚ  । ಜಾತಾನ್ದಿವ್ಯಾಸ್ತ್ರವಿದುಷಃ ಶಕ್ರಪ್ರತಿಮತೇಜಸಃ  ।। 164 ।। ಧರ್ಮೇಣ ಪೃಥಿವೀಂ ಜಿತ್ವಾ ಯಜ್ಞೈರಿಷ್ಟ್ವಾಪ್ತದಕ್ಷಿಣೈಃ  । ಅಸ್ಮಿನ್ಲೋಕೇ ಯಶಃ ಪ್ರಾಪ್ಯ ತತಃ ಕಾಲವಶಂ ಗತಾಃ  ।। 165 ।।

ಹೀಗೆ ಹೇಳುತ್ತಾ ದೀನನಾಗಿ ವಿಲಪಿಸುತ್ತಿದ್ದ ಮಹೀಪತಿಗೆ ಧೀಮಾನ್ ಗಾವಲ್ಗಣಿ[144]ಯು ಮಹಾರ್ಥವುಳ್ಳ ಈ ಮಾತುಗಳನ್ನಾಡಿದನು: “ಧೀಮತ ದ್ವೈಪಾಯನ ಮತ್ತು ನಾರದರು ಹೇಳಿದ ಮಹಾಬಲಶಾಲಿ ಮಹೋತ್ಸಾಹೀ ರಾಜರ ಕುರಿತು ಕೇಳಿದ್ದೀಯೆ. ಮಹಾ ರಾಜವಂಶಗಳಲ್ಲಿ ಜನಿಸಿದ ಉತ್ತಮ ಗುಣಶಾಲೀ, ದಿವ್ಯಾಸ್ತ್ರ ವಿದುಷ, ಶಕ್ರಪ್ರತಿಮತೇಜಸ್ವಿಗಳು ಧರ್ಮದಿಂದ ಪೃಥ್ವಿಯನ್ನು ಗೆದ್ದು ಧಾರಾಳ ದಕ್ಷಿಣೆಗಳಿಂದ ಯಜ್ಞಕಾರ್ಯಗಳನ್ನೆಸಗಿ ಈ ಲೋಕದಲ್ಲಿ ಯಶವನ್ನು ಹೊಂದಿ ನಂತರದಲ್ಲಿ ಕಾಲವಶರಾಗಿ ಹೋದರು.

ವೈನ್ಯಂ ಮಹಾರಥಂ ವೀರಂ ಸೃಂಜಯಂ ಜಯತಾಂ ವರಮ್  । ಸುಹೋತ್ರಂ ರಂತಿದೇವಂ ಚ ಕಕ್ಷೀವಂತಂ ತಥೌಶಿಜಮ್  ।। 166 ।। ಬಾಹ್ಲೀಕಂ ದಮನಂ ಶೈಬ್ಯಂ ಶರ್ಯಾತಿಮಜಿತಂ ಜಿತಮ್  । ವಿಶ್ವಾಮಿತ್ರಮಮಿತ್ರಘ್ನಂ ಅಂಬರೀಷಂ ಮಹಾಬಲಮ್  ।। 167 ।। ಮರುತ್ತಂ ಮನುಮಿಕ್ಷ್ವಾಕುಂ ಗಯಂ ಭರತಮೇವ ಚ  । ರಾಮಂ ದಾಶರಥಿಂ ಚೈವ ಶಶಬಿಂದುಂ ಭಗೀರಥಮ್  ।। 168 ।। ಯಯಾತಿಂ ಶುಭಕರ್ಮಾಣಂ ದೇವೈರ್ಯೋ ಯಾಜಿತಃ ಸ್ವಯಮ್। ಚೈತ್ಯಯೂಪಾಂಕಿತಾ ಭೂಮಿರ್ಯಸ್ಯೇಯಂ ಸವನಾಕರಾ ।। 169 ।। ಇತಿ ರಾಜ್ಞಾಂ ಚತುರ್ವಿಂಶನ್ನಾರದೇನ ಸುರರ್ಷಿಣಾ  । ಪುತ್ರಶೋಕಾಭಿತಪ್ತಾಯ ಪುರಾ ಶೈಬ್ಯಾಯ ಕೀರ್ತಿತಾಃ  ।। 170 ।। 

ಹಿಂದೆ ಪುತ್ರಶೋಕದಿಂದ ಬಳಲುತ್ತಿದ್ದ ಶೈಬ್ಯನಿಗೆ ಸುರರ್ಷಿ ನಾರದನು ಮಹಾರಥಿ ವೀರ ವೈನ್ಯ, ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯ, ಸುಹೋತ್ರ, ರಂತಿದೇವ, ಕಕ್ಷೀವತ, ಔಶಿಜ, ಬಾಹ್ಲೀಕ, ದಮನ, ಶೈಬ್ಯ, ಶರ್ಯಾತಿ, ಅಜಿತ, ಜಿತ, ವಿಶ್ವಾಮಿತ್ರ, ಅಮಿತ್ರಘ್ನ, ಮಹಾಬಲಿ ಅಂಬರೀಷ, ಮರುತ್ತ, ಮನು, ಇಕ್ಷ್ವಾಕು, ಗಯ, ಭರತ[145], ದಾಶರಥಿ ರಾಮ, ಶಶಬಿಂದು, ಭಗೀ-ರಥ, ಮತ್ತು ಇಡೀ ಭೂಮಿಯನ್ನೇ ಯಜ್ಞಕುಂಡವನ್ನಾಗಿ ಗುರುತುಹಾಕಿ ಸ್ವಯಂ ದೇವತೆಗಳಿಂದ ಯಜ್ಞಗಳನ್ನು ಮಾಡಿಸಿದ ಶುಭಕರ್ಮಿ ಯಯಾತಿ - ಈ 24 ರಾಜರ ಕುರಿತು ಹೇಳಿದ್ದನು[146].

ತೇಭ್ಯಶ್ಚಾನ್ಯೇ ಗತಾಃ ಪೂರ್ವಂ ರಾಜಾನೋ ಬಲವತ್ತರಾಃ  । ಮಹಾರಥಾ ಮಹಾತ್ಮಾನಃ ಸರ್ವೈಃ ಸಮುದಿತಾ ಗುಣೈಃ  ।। 171 ।। ಪೂರುಃ ಕುರುರ್ಯದುಃ ಶೂರೋ ವಿಷ್ವಗಶ್ವೋ ಮಹಾಧೃತಿಃ  । ಅನೇನಾ ಯುವನಾಶ್ವಶ್ಚ ಕಕುತ್ಸ್ಥೋ ವಿಕ್ರಮೀ ರಘುಃ  ।। 172 ।। ವಿಜಿತೀ ವೀತಿಹೋತ್ರಶ್ಚ ಭವಃ ಶ್ವೇತೋ ಬೃಹದ್ಗುರುಃ  । ಉಶೀನರಃ ಶತರಥಃ ಕಂಕೋ ದುಲಿದುಹೋ ದ್ರುಮಃ  ।। 173 ।। ದಂಭೋದ್ಭವಃ ಪರೋ ವೇನಃ ಸಗರಃ ಸಂಕೃತಿರ್ನಿಮಿಃ  । ಅಜೇಯಃ ಪರಶುಃ ಪುಂಡ್ರಃ ಶಂಭುರ್ದೇವಾವೃಧೋಽನಘಃ  ।। 174 ।। ದೇವಾಹ್ವಯಃ ಸುಪ್ರತಿಮಃ ಸುಪ್ರತೀಕೋ ಬೃಹದ್ರಥಃ  । ಮಹೋತ್ಸಾಹೋ ವಿನೀತಾತ್ಮಾ ಸುಕ್ರತುರ್ನೈಷಧೋ ನಲಃ  ।। 175 ।। ಸತ್ಯವ್ರತಃ ಶಾಂತಭಯಃ ಸುಮಿತ್ರಃ ಸುಬಲಃ ಪ್ರಭುಃ  । ಜಾನುಜಂಘೋಽನರಣ್ಯೋಽರ್ಕಃ ಪ್ರಿಯಭೃತ್ಯಃ ಶುಭವ್ರತಃ  ।। 176 ।। ಬಲಬಂಧುರ್ನಿರಾಮರ್ದಃ ಕೇತುಶೃಂಗೋ ಬೃಹದ್ಬಲಃ  । ಧೃಷ್ಟಕೇತುರ್ಬೃಹತ್ಕೇತುರ್ದೀಪ್ತಕೇತುರ್ನಿರಾಮಯಃ  ।। 177 ।। ಅವಿಕ್ಷಿತ್ಪ್ರಬಲೋ ಧೂರ್ತಃ ಕೃತಬಂಧುರ್ದೃಡೇಷುಧಿಃ  । ಮಹಾಪುರಾಣಃ ಸಂಭಾವ್ಯಃ ಪ್ರತ್ಯಂಗಃ ಪರಹಾ ಶ್ರುತಿಃ  ।। 178 ।।

ಇವರಲ್ಲದೇ ಇನ್ನೂ ಇತರ ಬಲಶಾಲಿ ಮಹಾತ್ಮ ಮಹಾರಥಿ ಸರ್ವ ಸುಗುಣೋಪೇತ ರಾಜರು ಈ ಹಿಂದೆ ಕಾಲವಶರಾದರು: ಪೂರು, ಕುರು, ಯದು, ಶೂರ, ಮಹಾಧೃತಿ ವಿಷ್ವಗಶ್ವ, ಅನೇನ, ಯುವನಾಶ್ವ, ಕಕುತ್ಸ್ಥ, ವಿಕ್ರಮೀ ರಘು, ವಿಜಿತಿ, ವೀತಿಹೋತ್ರ, ಭವ, ಶ್ವೇತ, ಬೃಹದ್ಗುರು, ಉಶೀನರ, ಶತರಥ, ಕಂಕ, ದುಲಿದುಹ, ದ್ರುಮ, ದಂಭೋದ್ಭವ, ಪರ, ವೇನ, ಸಗರ, ಸಂಕೃತಿ, ನಿಮಿ, ಅಜೇಯ, ಪರಶು, ಪುಂಡ್ರ, ಶಂಭು, ಅನಘ ದೇವಾವೃಧ, ದೇವಾಹ್ವಯ, ಸುಪ್ರತಿಮ, ಸುಪ್ರತೀಕ, ಬೃಹದ್ರಥ, ಮಹೋತ್ಸಾಹ, ವಿನೀತಾತ್ಮ, ಸುಕ್ರತು, ನೈಷಧ ನಲ, ಸತ್ಯವ್ರತ, ಶಾಂತಭಯ, ಸುಮಿತ್ರ, ಪ್ರಭು ಸುಬಲ, ಜಾನುಜಂಘ, ಅನರಣ್ಯ, ಅರ್ಕ, ಪ್ರಿಯಭೃತ್ಯ, ಶುಭವ್ರತ, ಬಲಬಂಧು, ನಿರಾಮರ್ದ, ಕೇತುಶೃಂಗ, ಬೃಹದ್ಬಲ, ಧೃಷ್ಟಕೇತು, ಬೃಹತ್ಕೇತು, ದೀಪ್ತಕೇತು, ನಿರಾಮಯ, ಅವಿಕ್ಷಿತ್, ಪ್ರಬಲ, ಧೂರ್ತ, ಕೃತಬಂಧು, ದೃಢೇಷುಧಿ, ಮಹಾಪುರಾಣ, ಸಂಭಾವ್ಯ, ಪ್ರತ್ಯಂಗ, ಪರಹಾ ಮತ್ತು ಶ್ರುತಿ.

ಏತೇ ಚಾನ್ಯೇ ಚ ಬಹವಃ ಶತಶೋಽಥ ಸಹಸ್ರಶಃ  । ಶ್ರೂಯಂತೇಽಯುತಶಶ್ಚಾನ್ಯೇ ಸಂಖ್ಯಾತಾಶ್ಚಾಪಿ ಪದ್ಮಶಃ  ।। 179 ।। ಹಿತ್ವಾ ಸುವಿಪುಲಾನ್ಭೋಗಾನ್ಬುದ್ಧಿಮಂತೋ ಮಹಾಬಲಾಃ । ರಾಜಾನೋ ನಿಧನಂ ಪ್ರಾಪ್ತಾಸ್ತವ ಪುತ್ರೈರ್ಮಹತ್ತಮಾಃ  ।। 180 ।। ಯೇಷಾಂ ದಿವ್ಯಾನಿ ಕರ್ಮಾಣಿ ವಿಕ್ರಮಸ್ತ್ಯಾಗ ಏವ ಚ  । ಮಾಹಾತ್ಮ್ಯಮಪಿ ಚಾಸ್ತಿಕ್ಯಂ ಸತ್ಯತಾ ಶೌಚಮಾರ್ಜವಮ್  ।। 181 ।। ವಿದ್ವದ್ಭಿಃ ಕಥ್ಯತೇ ಲೋಕೇ ಪುರಾಣೈಃ ಕವಿಸತ್ತಮೈಃ  । ಸರ್ವರ್ದ್ಧಿಗುಣಸಂಪನ್ನಾಸ್ತೇ ಚಾಪಿ ನಿಧನಂ ಗತಾಃ  ।। 182 ।। ತವ ಪುತ್ರಾ ದುರಾತ್ಮಾನಃ ಪ್ರತಪ್ತಾಶ್ಚೈವ ಮನ್ಯುನಾ  । ಲುಬ್ಧಾ ದುರ್ವೃತ್ತಭೂಯಿಷ್ಠಾ ನ ತಾನ್ ಶೋಚಿತುಮರ್ಹಸಿ  ।। 183 ।। ಶ್ರುತವಾನಸಿ ಮೇಧಾವೀ ಬುದ್ಧಿಮಾನ್ಪ್ರಾಜ್ಞಸಮ್ಮತಃ  । ಯೇಷಾಂ ಶಾಸ್ತ್ರಾನುಗಾ ಬುದ್ಧಿರ್ನ ತೇ ಮುಹ್ಯಂತಿ ಭಾರತ  ।। 184 ।।

ಇವರು ಮತ್ತು ಇನ್ನೂ ಹಲವಾರು ರಾಜರು ನೂರಾರು, ಸಹಸ್ರಾರು, ಹತ್ತುಸಾವಿರ ಮತ್ತು ಪದ್ಮ[147]ಸಂಖ್ಯೆಗಳಲ್ಲಿ ಕೇಳಿಬರುತ್ತಾರೆ. ಈ ಬುದ್ಧಿವಂತ ಮಹಾಬಲ ಮಹತ್ತಮ ರಾಜರು ವಿಪುಲ ಭೋಗಗಳನ್ನು ತೊರೆದು ನಿನ್ನ ಪುತ್ರರಂತೆಯೇ ನಿಧನ ಹೊಂದಿದರು. ಯಾರ ದಿವ್ಯ ಕರ್ಮಗಳು, ವಿಕ್ರಮ, ತ್ಯಾಗ, ಮಹಾತ್ಮೆ, ಆಸ್ತಿಕ್ಯ, ಸತ್ಯತೆ, ಶುದ್ಧತೆ ಮತ್ತು ಸರಳತೆಯನ್ನು ಲೋಕದ ವಿದ್ವಾಂಸ ಕವಿಸತ್ತಮರು ಪುರಾಣಗಳಲ್ಲಿ ಹೇಳಿದ್ದಾರೋ ಆ ಎಲ್ಲ ಗುಣಸಂಪನ್ನರೂ ನಿಧನರಾಗಿ ಹೋಗಿದ್ದಾರೆ. ನಿನ್ನ ದುರಾತ್ಮ ಮಕ್ಕಳು ಸಿಟ್ಟು-ಲೋಭಗಳಿಂದ ಉರಿಯುತ್ತಿದ್ದರು. ಅತ್ಯಂತ ದುರ್ವೃತ್ತರಾಗಿದ್ದ ಅವರ ಕುರಿತು ಶೋಕಿಸಬಾರದು. ಭಾರತ! ವಿದ್ಯಾವಂತ, ಮೇಧಾವಿ, ಬುದ್ಧಿವಂತ, ಮತ್ತು ಪ್ರಾಜ್ಞಸಮ್ಮತನಾಗಿದ್ದೀಯೆ. ಶಾಸ್ತ್ರಗಳನ್ನು ಅನುಸರಿಸುವ ಬುದ್ಧಿಯು ಶೋಕಿಸುವುದಿಲ್ಲ.

ನಿಗ್ರಹಾನುಗ್ರಹೌ ಚಾಪಿ ವಿದಿತೌ ತೇ ನರಾಧಿಪ  । ನಾತ್ಯಂತಮೇವಾನುವೃತ್ತಿಃ ಶ್ರೂಯತೇ ಪುತ್ರರಕ್ಷಣೇ  ।। 185 ।। ಭವಿತವ್ಯಂ ತಥಾ ತಚ್ಚ ನಾತಃ ಶೋಚಿತುಮರ್ಹಸಿ  । ದೈವಂ ಪ್ರಜ್ಞಾವಿಶೇಷೇಣ ಕೋ ನಿವರ್ತಿತುಮರ್ಹತಿ  ।। 186 ।। ವಿಧಾತೃವಿಹಿತಂ ಮಾರ್ಗಂ ನ ಕಶ್ಚಿದತಿವರ್ತತೇ  । ಕಾಲಮೂಲಮಿದಂ ಸರ್ವಂ ಭಾವಾಭಾವೌ ಸುಖಾಸುಖೇ  ।। 187 ।। ಕಾಲಃ ಪಚತಿ ಭೂತಾನಿ ಕಾಲಃ ಸಂಹರತಿ ಪ್ರಜಾಃ  । ನಿರ್ದಹಂತಂ ಪ್ರಜಾಃ ಕಾಲಂ ಕಾಲಃ ಶಮಯತೇ ಪುನಃ  ।। 188 ।। ಕಾಲೋ ವಿಕುರುತೇ ಭಾವಾನ್ಸರ್ವಾನ್ಲೋಕೇ ಶುಭಾಶುಭಾನ್ । ಕಾಲಃ ಸಂಕ್ಷಿಪತೇ ಸರ್ವಾಃ ಪ್ರಜಾ ವಿಸೃಜತೇ ಪುನಃ  । ಕಾಲಃ ಸರ್ವೇಷು ಭೂತೇಷು ಚರತ್ಯವಿಧೃತಃ ಸಮಃ  ।। 189 ।। [148] ಅತೀತಾನಾಗತಾ ಭಾವಾ ಯೇ ಚ ವರ್ತಂತಿ ಸಾಂಪ್ರತಮ್  । ತಾನ್ಕಾಲನಿರ್ಮಿತಾನ್ಬುದ್ಧ್ವಾ ನ ಸಂಜ್ಞಾಂ ಹಾತುಮರ್ಹಸಿ ।। 190 ।।

ನರಾಧಿಪ! ನಿಗ್ರಹ-ಅನುಗ್ರಹಗಳೆರಡೂ ನಿನಗೆ ತಿಳಿದಿವೆ. ಪುತ್ರರಕ್ಷಣೆಯ ವಿಷಯದಲ್ಲಿ ತುಂಬಾ ದೂರ ಹೋಗಬಾರದು ಎಂದು ಕೇಳಿದ್ದೇವೆ. ಹೀಗೆಯೇ ಆಗಬೇಕೆಂದು ಇದ್ದುದಕ್ಕೆ ಶೋಕಿಸುವುದು ಸರಿಯಲ್ಲ. ಪ್ರಜ್ಞಾವಿಶೇಷದಿಂದ ಯಾರುತಾನೆ ದೈವವನ್ನು ತಡೆಗಟ್ಟಬಲ್ಲರು? ವಿಧಾತನು ವಿಹಿಸಿದ ಮಾರ್ಗವನ್ನು ಯಾರೂ ಬಿಟ್ಟು ಹೋಗುವುದಿಲ್ಲ. ಇರುವುದು-ಇಲ್ಲದಿರುವುದು, ಸುಖ-ದುಃಖ ಎಲ್ಲಕ್ಕೂ ಕಾಲವೇ ಮೂಲವು. ಭೂತಗಳನ್ನು ಕಾಲವು ಪಕ್ವಗೊಳಿಸುತ್ತದೆ. ಕಾಲವು ಪ್ರಜೆಗಳನ್ನು ಸಂಹರಿ-ಸುತ್ತದೆ. ಕಾಲವು ಪ್ರಜೆಗಳನ್ನು ಸುಡುತ್ತದೆ ಮತ್ತು ಕಾಲವೇ ಪುನಃ ಶಮನ-ಗೊಳಿಸುತ್ತದೆ. ಲೋಕದ ಸರ್ವ ಶುಭಾಶುಭ ಭಾವಗಳನ್ನೂ ಕಾಲವೇ ಮಾಡುತ್ತದೆ. ಹುಟ್ಟಿಸಿದ ಎಲ್ಲವನ್ನೂ ಕಾಲವು ನಾಶಗೊಳಿಸಿ ಪುನಃ ಸೃಷ್ಟಿಸುತ್ತದೆ. ಇರುವ ಎಲ್ಲದರಲ್ಲಿಯೂ ಕಾಲವು ಒಂದೇ ಸಮನೆ ಕೆಲಸಮಾಡುತ್ತಿರುತ್ತದೆ. ಹಿಂದೆ ನಡೆದ ಮತ್ತು ಮುಂದೆ ನಡೆಯುವವು ಕಾಲನಿರ್ಮಿತವಾದವು ಎಂದು ತಿಳಿದೂ ಬುದ್ಧಿಯನ್ನು ಕಳೆದುಕೊಳ್ಳುವುದು ಸರಿಯಲ್ಲ.””

ಸೂತ ಉವಾಚ[149] ಅತ್ರೋಪನಿಷದಂ ಪುಣ್ಯಾಂ ಕೃಷ್ಣದ್ವೈಪಾಯನೋಽಬ್ರವೀತ್ । ಭಾರತಾಧ್ಯಯನಾತ್ಪುಣ್ಯಾದಪಿ ಪಾದಮಧೀಯತಃ  । ಶ್ರದ್ದಧಾನಸ್ಯ ಪೂಯಂತೇ ಸರ್ವಪಾಪಾನ್ಯಶೇಷತಃ  ।। 191 ।। [150] ದೇವರ್ಷಯೋ ಹ್ಯತ್ರ ಪುಣ್ಯಾ ಬ್ರಹ್ಮರಾಜರ್ಷಯಸ್ತಥಾ  । ಕೀರ್ತ್ಯಂತೇ ಶುಭಕರ್ಮಾಣಸ್ತಥಾ ಯಕ್ಷಮಹೋರಗಾಃ  ।। 192 ।। ಭಗವಾನ್ವಾಸುದೇವಶ್ಚ ಕೀರ್ತ್ಯತೇಽತ್ರ ಸನಾತನಃ  । ಸ ಹಿ ಸತ್ಯಂ ಋತಂ ಚೈವ ಪವಿತ್ರಂ ಪುಣ್ಯಮೇವ ಚ  ।। 193 ।। ಶಾಶ್ವತಂ ಬ್ರಹ್ಮ ಪರಮಂ ಧ್ರುವಂ ಜ್ಯೋತಿಃ ಸನಾತನಮ್  । ಯಸ್ಯ ದಿವ್ಯಾನಿ ಕರ್ಮಾಣಿ ಕಥಯಂತಿ ಮನೀಷಿಣಃ  ।। 194 ।। ಅಸತ್ಸತ್ಸದಸಚ್ಚೈವ ಯಸ್ಮಾದ್ದೇವಾತ್ಪ್ರವರ್ತತೇ  । ಸಂತತಿಶ್ಚ ಪ್ರವೃತ್ತಿಶ್ಚ ಜನ್ಮಮೃತ್ಯುಃ ಪುನರ್ಭವಃ  ।। 195 ।।

ಸೂತನು ಹೇಳಿದನು: “ಇದರಲ್ಲಿ ಕೃಷ್ಣದ್ವೈಪಾಯನನು ಪುಣ್ಯ ಉಪನಿಷತ್ತನ್ನು ಹೇಳಿದ್ದಾನೆ. ಭಾರತದ ಶ್ಲೋಕದ ಒಂದು ಪಾದ[151]ವನ್ನು ಕಲಿತ ಪುಣ್ಯದಿಂದಲೇ ಶ್ರದ್ಧಾವಂತನು ಸರ್ವಪಾಪಗಳಿಂದ ಅಶೇಷವಾಗಿ ಪವಿತ್ರನಾಗುತ್ತಾನೆ. ಈ ಪುಣ್ಯ ಕೃತಿಯಲ್ಲಿ ದೇವರ್ಷಿ[152], ಬ್ರಹ್ಮರ್ಷಿ[153], ಮತ್ತು ರಾಜರ್ಷಿಗಳ ಹಾಗೂ ಯಕ್ಷ[154], ಮಹೋರಗ[155]ಗಳ ಶುಭಕರ್ಮಗಳ ಕೀರ್ತನೆಯಿದೆ. ಇದರಲ್ಲಿ ಸನಾತನನೂ, ಸತ್ಯನೂ, ಋತನೂ, ಪವಿತ್ರನೂ, ಪುಣ್ಯನೂ ಆದ ಭಗವಾನ್ ವಾಸುದೇವನ ಕೀರ್ತನೆಯಿದೆ. ಅವನು ಶಾಶ್ವತ, ಬ್ರಹ್ಮ, ಪರಮ, ಧ್ರುವ, ಸನಾತನ ಜ್ಯೋತಿ. ಅವನ ದಿವ್ಯಕರ್ಮಗಳನ್ನು ವಿದ್ವಾಂಸರು ಹೇಳುತ್ತಿರುತ್ತಾರೆ. ಇರುವವು ಮತ್ತು ಇಲ್ಲದಿರುವವು - ಸಂತತಿ, ಪ್ರವೃತ್ತಿ, ಜನ್ಮ, ಮೃತ್ಯು, ಪುನರ್ಜನ್ಮ - ಎಲ್ಲವೂ ಅವನಿಂದಲೇ ಹುಟ್ಟುತ್ತವೆ.

ಅಧ್ಯಾತ್ಮಂ ಶ್ರೂಯತೇ ಯಚ್ಚ ಪಂಚಭೂತಗುಣಾತ್ಮಕಮ್  । ಅವ್ಯಕ್ತಾದಿ ಪರಂ ಯಚ್ಚ ಸ ಏವ ಪರಿಗೀಯತೇ  ।। 196 ।। ಯತ್ತದ್ಯತಿವರಾ ಯುಕ್ತಾ ಧ್ಯಾನಯೋಗಬಲಾನ್ವಿತಾಃ  । ಪ್ರತಿಬಿಂಬಮಿವಾದರ್ಶೇ ಪಶ್ಯಂತ್ಯಾತ್ಮನ್ಯವಸ್ಥಿತಮ್  ।। 197 ।। ಶ್ರದ್ದಧಾನಃ ಸದೋದ್ಯುಕ್ತಃ ಸತ್ಯಧರ್ಮಪರಾಯಣಃ  । ಆಸೇವನ್ನಿಮಮಧ್ಯಾಯಂ ನರಃ ಪಾಪಾತ್ಪ್ರಮುಚ್ಯತೇ  ।। 198 ।। ಅನುಕ್ರಮಣಿಮಧ್ಯಾಯಂ ಭಾರತಸ್ಯೇಮಮಾದಿತಃ  । ಆಸ್ತಿಕಃ ಸತತಂ ಶೃಣ್ವನ್ನ ಕೃಚ್ಛ್ರೇಷ್ವವಸೀದತಿ  ।। 199 ।। ಉಭೇ ಸಂಧ್ಯೇ ಜಪನ್ಕಿಂಚಿತ್ಸದ್ಯೋ ಮುಚ್ಯೇತ ಕಿಲ್ಬಿಷಾತ್ । ಅನುಕ್ರಮಣ್ಯಾ ಯಾವತ್ಸ್ಯಾದಹ್ನಾರಾತ್ರ್ಯಾ ಚ ಸಂಚಿತಮ್  ।। 200 ।। ಭಾರತಸ್ಯ ವಪುರ್ಹ್ಯೇತತ್ಸತ್ಯಂ ಚಾಮೃತಮೇವ ಚ  ।

ಇದರಲ್ಲಿ ಅಧ್ಯಾತ್ಮವನ್ನು ಕೇಳುತ್ತೇವೆ. ಪಂಚಭೂತಗಳು-ತ್ರಿಗುಣಗಳಲ್ಲಿನ ಅವ್ಯಕ್ತಾದಿ ತತ್ತ್ವಗಳೂ, ಹಾಗೂ ಇವೆಲ್ಲವುಗಳನ್ನು ಮೀರಿದ ಯಾವ ಪರಮ ತತ್ತ್ವವನ್ನು ಧ್ಯಾನಯೋಗಬಲಾನ್ವಿತ ಯತಿವರರು ತಮ್ಮ ಆತ್ಮದಲ್ಲಿ ಪ್ರತಿಬಿಂಬದಲ್ಲಿ ಕಾಣುತ್ತಾರೋ ಅದರ ವರ್ಣನೆಯೂ ಇದೆ. ಸತ್ಯಧರ್ಮಪರಾಯಣ, ಶ್ರದ್ಧಾವಂತ, ಒಳ್ಳೆಯದನ್ನೇ ಮಾತನಾಡುವ ನರನು ಈ ಅಧ್ಯಾಯವನ್ನು ಸೇವಿಸಿದರೆ ಪಾಪದಿಂದ ವಿಮುಕ್ತನಾಗುತ್ತಾನೆ. ಭಾರತದ ಈ ಅನುಕ್ರಮಣೀ ಅಧ್ಯಾಯವನ್ನು ಮೊದಲಿನಿಂದ ಸತತವೂ ಕೇಳುವ ಆಸ್ತೀಕನು ಅತಿಕಷ್ಟಗಳಲ್ಲಿಯೂ ಕುಸಿಯುವುದಿಲ್ಲ. ಎರಡೂ ಸಂಧ್ಯೆಗಳಲ್ಲಿ[156] ಅನುಕ್ರಮಣಿಯ ಸ್ವಲ್ಪವನ್ನಾದರೂ ಜಪಿಸುವವರು ಹಗಲು-ರಾತ್ರಿಗಳ ಸಂಚಿತ ಪಾಪದಿಂದ ಮುಕ್ತರಾಗುತ್ತಾರೆ. ಈ ಅಧ್ಯಾಯವು ಸತ್ಯ-ಅಮೃತಗಳಿಂದ ತುಂಬಿದ ಭಾರತದ ದೇಹವು.

ನವನೀತಂ ಯಥಾ ದಧ್ನೋ ದ್ವಿಪದಾಂ ಬ್ರಾಹ್ಮಣೋ ಯಥಾ ।। 201 ।। ಹ್ರದಾನಾಮುದಧಿಃ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪದಾಮ್  । ಯಥೈತಾನಿ ವರಿಷ್ಠಾನಿ ತಥಾ ಭಾರತಮುಚ್ಯತೇ  ।। 202 ।। ಯಶ್ಚೈನಂ ಶ್ರಾವಯೇಚ್ಛ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ । ಅಕ್ಷಯ್ಯಮನ್ನಪಾನಂ ತತ್ಪಿತೄಂಸ್ತಸ್ಯೋಪತಿಷ್ಠತಿ  ।। 203 ।।

ಮೊಸರಿಗೆ ಬೆಣ್ಣೆಯು ಹೇಗೋ, ಮನುಷ್ಯರಲ್ಲಿ ಬ್ರಾಹ್ಮಣರು ಹೇಗೋ, ಜಲಾಶಯಗಳಲ್ಲಿ ಸಮುದ್ರವು ಹೇಗೋ, ನಾಲ್ಕು ಕಾಲಿನ ಪ್ರಾಣಿಗಳಲ್ಲಿ ಗೋವು ಹೇಗೋ ಹಾಗೆ ಭಾರತವು ಶ್ರೇಷ್ಠವೆನಿಸಲ್ಪಟ್ಟಿದೆ. ಶ್ರಾದ್ಧದಲ್ಲಿ ಬ್ರಾಹ್ಮಣನು ಈ ಅಧ್ಯಾಯದ ಕಾಲುಭಾಗವನ್ನು ಪಠಿಸಿದರೂ, ಅದರಿಂದ ಪಿತೃಗಳಿಗೆ ಅಕ್ಷಯ ಅನ್ನ-ಪಾನೀಯಗಳು ಪ್ರಾಪ್ತವಾಗುತ್ತವೆ.

ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್  । ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರತರಿಷ್ಯತಿ  ।। 204 ।। ಕಾರ್ಷ್ಣಂ ವೇದಮಿಮಂ ವಿದ್ವಾನ್ ಶ್ರಾವಯಿತ್ವಾರ್ಥಮಶ್ನುತೇ  । ಭ್ರೂಣಹತ್ಯಾಕೃತಂ ಚಾಪಿ ಪಾಪಂ ಜಹ್ಯಾನ್ನಸಂಶಯಃ  ।। 205 ।। ಯ ಇಮಂ ಶುಚಿರಧ್ಯಾಯಂ ಪಠೇತ್ಪರ್ವಣಿ ಪರ್ವಣಿ  । ಅಧೀತಂ ಭಾರತಂ ತೇನ ಕೃತ್ಸ್ನಂ ಸ್ಯಾದಿತಿ ಮೇ ಮತಿಃ  ।। 206 ।। ಯಶ್ಚೇಮಂ ಶೃಣುಯಾನ್ನಿತ್ಯಮಾರ್ಷಂ ಶ್ರದ್ಧಾಸಮನ್ವಿತಃ  । ಸ ದೀರ್ಘಮಾಯುಃ ಕೀರ್ತಿಂ ಚ ಸ್ವರ್ಗತಿಂ ಚಾಪ್ನುಯಾನ್ನರಃ  ।। 207 ।।

ಇತಿಹಾಸ-ಪುರಾಣಗಳಿಂದ ವೇದಾರ್ಥವನ್ನು ಸ್ಪಷ್ಟೀಕರಿಸಬೇಕು. ಇವನು ನನ್ನನ್ನು ಕೆಡಿಸುತ್ತಾನೆ ಎಂದು ವೇದವು ಅಲ್ಪವಿದನಿಗೆ ಹೆದರುತ್ತದೆ. ಕೃಷ್ಣ[157]ನ ಈ ವೇದವನ್ನು ಹೇಳುವ ವಿದ್ವಾಂಸನು ಸಂಪತ್ತನ್ನು ಹೊಂದುತ್ತಾನೆ. ಭ್ರೂಣಹತ್ಯೆಯನ್ನು ಮಾಡಿದ ಪಾಪವನ್ನೂ ಕಳೆದುಕೊಳ್ಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ನನ್ನ ಅಭಿಪ್ರಾಯದಲ್ಲಿ ಶುಚಿಯಾಗಿ ಪರ್ವ[158] ಪರ್ವಗಳಲ್ಲಿ ಈ ಅಧ್ಯಾಯವನ್ನು ಓದಿದರೆ ಇಡೀ ಭಾರತವನ್ನೇ ಓದಿದಹಾಗೆ. ಮಹರ್ಷಿಯ ಈ ಕೃತಿಯನ್ನು ನಿತ್ಯವೂ ಶ್ರದ್ಧಾಸಮನ್ವಿತನಾಗಿ ಕೇಳುವ ನರನು ದೀರ್ಘಾಯಸ್ಸು, ಕೀರ್ತಿ ಮತ್ತು ಸ್ವರ್ಗಗತಿಯನ್ನು ಹೊಂದುತ್ತಾನೆ.

ಚತ್ವಾರ ಏಕತೋ ವೇದಾ ಭಾರತಂ ಚೈಕಮೇಕತಃ  । ಸಮಾಗತೈಃ ಸುರರ್ಷಿಭಿಸ್ತುಲಾಂ ಆರೋಪಿತಂ ಪುರಾ  । ಮಹತ್ತ್ವೇ ಚ ಗುರುತ್ವೇ ಚ ಧ್ರಿಯಮಾಣಂ ತತೋಽಧಿಕಮ್  ।। 208 ।। ಮಹತ್ತ್ವಾದ್ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ  । ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ  ।। 209 ।। [159]

ಹಿಂದೆ ಸುರರ್ಷಿಗಳು ನಾಲ್ಕೂ ವೇದಗಳನ್ನು ಒಂದುಕಡೆ ಮತ್ತು ಭಾರತವನ್ನು ಇನ್ನೊಂದು ಕಡೆ ಇಟ್ಟು ತುಲನೆ ಮಾಡಿದಾಗ ಮಹತ್ವ ಮತ್ತು ಗುರುತ್ವಗಳಲ್ಲಿ ಭಾರತವೇ ಹೆಚ್ಚಾಗಿರುವುದನ್ನು ಅರಿತರು. ಮಹತ್ವದಲ್ಲಿ ಭಾರವಾಗಿರುವುದರಿಂದ ಮಹಾಭಾರತವೆಂದಾಯಿತು. ಇದರ ಅರ್ಥವನ್ನು ತಿಳಿದವನು ಸರ್ವ ಪಾಪಗಳಿಂದ ಮುಕ್ತನಾಗುತ್ತಾನೆ.

ತಪೋ ನ ಕಲ್ಕೋಽಧ್ಯಯನಂ ನ ಕಲ್ಕಃ ಸ್ವಾಭಾವಿಕೋ ವೇದವಿಧಿರ್ನ ಕಲ್ಕಃ  । ಪ್ರಸಹ್ಯ ವಿತ್ತಾಹರಣಂ ನ ಕಲ್ಕಸ್ತಾನ್ಯೇವ ಭಾವೋಪಹತಾನಿ ಕಲ್ಕಃ  ।। 210 ।।

ತಪಸ್ಸು ಕೆಟ್ಟದ್ದಲ್ಲ; ಅಧ್ಯಯನವು ಕೆಟ್ಟದ್ದಲ್ಲ; ಸ್ವಾಭಾವಿಕ ವೇದವಿಧಿಗಳೂ ಕೆಟ್ಟವಲ್ಲ; ದುಡಿದು ಧನವನ್ನು ಸಂಪಾದಿಸುವುದೂ ಕೆಟ್ಟದಲ್ಲ. ಆದರೆ ಭಾವಗಳನ್ನು ಮೀರಿ ಮಾಡಿದರೆ ಅವೆಲ್ಲವೂ ಕೆಟ್ಟವಾಗುತ್ತವೆ.” [160],[161]

 

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅನುಕ್ರಮಣೀಪರ್ವಣಿ ಪ್ರಥಮೋಽಧ್ಯಾಯಃ[162] ।।

ಇದು ಶ್ರೀಮಹಾಭಾರತದಲ್ಲಿ ಆದಿಪರ್ವದಲ್ಲಿ ಅನುಕ್ರಮಣೀಪರ್ವದಲ್ಲಿ ಒಂದನೇ ಅಧ್ಯಾಯವು.

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅನುಕ್ರಮಣೀಪರ್ವಃ ।।

ಇದು ಶ್ರೀಮಹಾಭಾರತದಲ್ಲಿ ಆದಿಪರ್ವದಲ್ಲಿ ಅನುಕ್ರಮಣೀಪರ್ವವು.

[1] ಅನುಕ್ರಮಣಿಕಾಪರ್ವ ಎಂಬ ಹೆಸರೂ ಇದೆ.

[1]ಸರಸ್ವತೀಂ ಚೈವ ದ ಬದಲಾಗಿ “ಸರಸ್ವತೀಂ ವ್ಯಾಸಂ ಎಂಬ ಪಾಠಾಂತರವಿದೆ. ಇದು ವ್ಯಾಸ ಭಾರತದ ಮಂಗಳಶ್ಲೋಕವಾದುದರಿಂದ ವ್ಯಾಸರು ಮಂಗಳ ಶ್ಲೋಕದಲ್ಲಿ ತಾವೇ ತಮಗೆ ನಮಸ್ಕಾರವನ್ನು ಹೇಳಿಕೊಳ್ಳುವುದಿಲ್ಲವೆಂದು “ದೇವೀಂ ಸರಸ್ವತೀಂ ಚೈವ ಎನ್ನುವುದೇ ಸರಿ ಎಂದು ಒಂದು ಅಭಿಪ್ರಾಯ. ಇನ್ನು ಕೆಲವರು ವ್ಯಾಸ ಎನ್ನುವುದು ಒಂದು ಪದವಿಯನ್ನು ಸೂಚಿಸುವುದರಿಂದ ವೇದವ್ಯಾಸರೂ ಆ ಪದವಿಗೆ ನಮಸ್ಕರಿಸುವುದು ಅನುಚಿತಲ್ಲ ಎಂದು ದೇವೀಂ ಸರಸ್ವತೀಂ ವ್ಯಾಸಂ ಎನ್ನುವುದೂ ಸರಿ ಎಂಬ ಇನ್ನೊಂದು ಅಭಿಪ್ರಾಯ. ಬಹುಷಃ ವ್ಯಾಸಭಾರತದ ಮೂಲದಲ್ಲಿ ದೇವೀಂ ಸರಸ್ವತೀಂ ಚೈವ ಎಂದಿದ್ದು ನಂತರದ ಪಾಠಕರು ಭಾರತವನ್ನು ರಚಿಸಿದ ವ್ಯಾಸನಿಗೂ ವಂದನೆಗಳನ್ನು ಸಲ್ಲಿ-ಸುವ ನಿಟ್ಟಿನಲ್ಲಿ ದೇವೀಂ ಸರಸ್ವತೀಂ ವ್ಯಾಸಂ ಎಂದು ಮಾರ್ಪಡಿಸಿರಬಹುದು. ಭಾರತವನ್ನು ಪಠಿಸುವುದರ ಮುನ್ನ ದೇವೀಂ ಸರಸ್ವತೀ ವ್ಯಾಸಂ ಎನ್ನುವುದರಿಂದ ಇಂಥಹ ಅದ್ಭುತ ಕಾವ್ಯವನ್ನು ನಮಗಿತ್ತ ವ್ಯಾಸನಿಗೆ ನಮಸ್ಕರಿಸುವೆವು ಎನ್ನಬಹುದು (ಭಾರತ ದರ್ಶನ).

[2] ನಾರಾಯಣನೇ ಕೃಷ್ಣ. ಅರ್ಜುನನೇ ನರ. ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ ಅಯನಂ ತಸ್ಯ ತಾಃ ಪೂರ್ವಂ ತೇನ ನಾರಾಯಣಃ ಸ್ಮೃತಃ ।। ಅರ್ಥಾತ್: ನೀರನ್ನು ನಾರಾ ಎಂದು ಕರೆಯುತ್ತಾರೆ. ನೀರಿನಿಂದಲೇ ನರನು ಹುಟ್ಟಿದನು. ಹಿಂದೆ ನೀರೇ ಅವನ ಹಾಸಿಗೆಯಾಗಿದ್ದುದರಿಂದ ಅವನು ನಾರಾಯಣನೆಂದಾದನು (ಖಿಲಪರ್ವ ಹರಿವಂಶ, ಅಧ್ಯಾಯ 1, ಶ್ಲೋಕ 24). ನಾರಾಯಣೋ ಹಿ ವಿಶ್ವಾತ್ಮಾ ಚತುರ್ಮೂರ್ತಿಃ ಸನಾತನಃ ಧರ್ಮಾತ್ಮಜಃ ಸಂಬಭೂವ ಪಿತೈವಂ ಮೇಽಭ್ಯಭಾಷತ ।। ಕೃತೇ ಯುಗೇ ಮಹಾರಾಜ ಪುರಾ ಸ್ವಾಯಂಭುವೇಽಂತರೇ ನರೋ ನಾರಾಯಣಶ್ಚೈವ ಹರಿಃ ಕೃಷ್ಣಸ್ತಥೈವ ಚ ।। ತೇಭ್ಯೋ ನಾರಾಯಣನರೌ ತಪಸ್ತೇಪತುರವ್ಯಯೌ ಬದರ್ಯಾಶ್ರಮಮಾಸಾದ್ಯ ಶಕಟೇ ಕನಕಾಮಯೇ ।। ಅರ್ಥಾತ್: ನಾರಾಯಣನೇ ಸಂಪೂರ್ಣ ಜಗತ್ತಿನ ಆತ್ಮ, ಚತುರ್ಮೂರ್ತಿ ಮತ್ತು ಸನಾತನ ದೇವತೆ. ಅವನೇ ಒಮ್ಮೆ ಧರ್ಮನ ಪುತ್ರನ ರೂಪದಲ್ಲಿ ಪ್ರಕಟನಾಗಿದ್ದನು. ಹಿಂದಿನ ಸ್ವಾಯಂಭುವ ಮನ್ವಂತರದ ಸತ್ಯಯುಗದಲ್ಲಿ ಆ ಭಗವಂತನ ನಾಲ್ಕು ಅವತಾರಗಳಾಗಿದ್ದವು: ನರ, ನಾರಾಯಣ, ಹರಿ ಮತ್ತು ಕೃಷ್ಣ. ವರಲ್ಲಿ ಅವ್ಯಯ ನರ-ನಾರಾಯಣರು ಬದರಿಕಾಶ್ರಮಕ್ಕೆ ಹೋಗಿ ಒಂದು ಸುವರ್ಣಮಯ ರಥದ ಮೇಲೆ ನಿಂತು ಘೋರ ತಪಸ್ಸನ್ನಾಚರಿಸತೊಡಗಿದರು. (ಶಾಂತಿಪರ್ವ, ಅಧ್ಯಾಯ 321, ಶ್ಲೋಕ 8-10). ಅರ್ಜುನ ಮತ್ತು ಕೃಷ್ಣರು ನರ-ನಾರಾಯಣರು ಎಂದು ಮಹಾಭಾರತವು ನಮಗೆ ಹಲವು ಬಾರಿ ತಿಳಿಸುತ್ತದೆ.

[3] ಇದು ಮಹಾಭಾರತದ ಆರಂಭದ ಶ್ಲೋಕವಲ್ಲದೇ ಇತರ ಗ್ರಂಥಗಳ ಆರಂಭ ಶ್ಲೋಕವೂ ಹೌದು. “ಜಯ” ಎನ್ನುವುದು ಮಹಾಭಾರತದ ಅಂತಿಮ ಯುದ್ಧ ಮತ್ತು ವಿಜಯದ ವರ್ಣನೆಯಿರುವ ಭಾಗದ ಹಳೆಯ ಹೆಸರಾಗಿತ್ತೆಂದಿದೆ. ಅಷ್ಟಾದಶ ಪುರಾಣಾನಿ ರಾಮಸ್ಯ ಚರಿತಂ ತಥಾ ಕಾರ್ಷ್ಣಂ ವೇದಂ ಪಂಚಮಂ ಚ ಯಂ ಮಹಾಭಾರತಂ ವಿದುಃ ।। ತಥೈವ ವಿಷ್ಣುಧರ್ಮಾಶ್ಚ ಶಿವಧರ್ಮಾಶ್ಚ ಶಾಶ್ವತಾ ಜಯೇತಿ ನಾಮ ತೇಷಾಂ ಚ ಪ್ರವದಂತಿ ಮನೀಷಿಣಃ ।। ಅರ್ಥಾತ್: ಹದಿನೆಂಟು ಪುರಾಣಗಳು, ರಾಮನ ಚರಿತೆ, ಕೃಷ್ಣದ್ವೈಪಾಯನನ ಪಂಚಮವೇದವೆಂದು ತಿಳಿಯಲ್ಪಟ್ಟಿರುವ ಮಹಾಭಾರತ, ಶಾಶ್ವತ ವಿಷ್ಣುಧರ್ಮಗಳು ಮತ್ತು ಶಿವಧರ್ಮಗಳು – ಇವುಗಳನ್ನು ಮನೀಷಿಣರು ಜಯ ಎಂದು ಕರೆಯುತ್ತಾರೆ (ಭವಿಷ್ಯ ಪುರಾಣ) (ಭಾರತದರ್ಶನ). “ಚತುರ್ಣಾಂ ಪುರುಷಾರ್ಥಾನಾಮಪಿ ಹೇತೌ ಜಯೋ ಮತಃ” ಚತುರ್ವಿಧ ಪುರುಷಾರ್ಥಗಳಿಗೆ ಕಾರಣಭೂತವಾದುದರಲ್ಲಿಯೂ ಜಯಶಬ್ದಪ್ರಯೋಗವಿದೆಯೆಂಬ ಕೋಶವಚನದಿಂದಲೂ, ಇಲ್ಲಿ ಜಯ ಎಂಬ ಪದಕ್ಕೆ ಭಾರತವೆಂದೇ ಅರ್ಥಮಾಡಿಕೊಳ್ಳಬೇಕು (ಅಳಸಿಂಗರಾಚಾರ್ಯ)

[4] ಈ ಶ್ಲೋಕಕ್ಕೆ ಇನ್ನೂ ಇತರ ಅನುವಾದಗಳಿವೆ: (1) ಪುರುಷೋತ್ತಮನಾದ ನಾರಾಯಣನನ್ನೂ, ನರನನ್ನೂ (ನರ-ನಾರಾಯಣಮಹರ್ಷಿಗಳನ್ನೂ) ಸರಸ್ವತೀದೇವಿಯನ್ನೂ, ವ್ಯಾಸಮುನಿಯನ್ನೂ ನಮಸ್ಕರಿಸಿ, ಆಮೇಲೆ ಶ್ರೀ ಮಹಾಭಾರತವೆಂಬ ಇತಿಹಾಸವನ್ನು ನುಡಿಯಬೇಕು (ಅಳಸಿಂಗರಾಚಾರ್ಯ) (2) ನಾರಾಯಣನನ್ನೂ, ನರಶ್ರೇಷ್ಠನಾದ ಅರ್ಜುನನನ್ನೂ, ಸರಸ್ವತೀದೇವಿಯನ್ನೂ – ನಮಸ್ಕರಿಸಿದನಂತರಲ್ಲಿ ಜಯವನ್ನು (ಮಹಾಭಾರತವನ್ನು) ಪ್ರವಚಮಾಡಬೇಕು. ನಾರಾಯಣನನ್ನೂ, ನರಶ್ರೇಷ್ಠನಾದ ನರಮುನಿಯನ್ನೂ (ಅರ್ಜುನನನ್ನೂ) ಮತ್ತು ಸರಸ್ವತೀದೇವಿಯನ್ನೂ ನಮಸ್ಕರಿಸಿ ಅನಂತರ ಜಯವನ್ನು (ಮಹಾಭಾರತವನ್ನು) ಹೇಳಬೇಕು. (ಭಾರತದರ್ಶನ) (3) ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸ ವಾಗ್ದೇವಿಯರ ಬಳಿಕ ಪೇಳ್ವುದು ಜಯವ ।। (ಎ. ಆರ್. ಕೃಷ್ಣಶಾಸ್ತ್ರಿ, ವಚನ ಭಾರತ, 1950).

[5] ಮಹಾಭಾರತವು ಗದ್ಯದಿಂದ ಪ್ರಾರಂಭವಾಗುತ್ತಿರುವುದನ್ನು ಗಮನಿಸಬೇಕು. ಇಂತಹ ಗದ್ಯ ರಚನೆಗಳು ಮಹಾಭಾರತದ ಅನೇಕ ಕಡೆಗಳಲ್ಲಿ ಬರುತ್ತದೆ.

[6] ಮಹಾಭಾರತದ ಎರಡನೇ ಶ್ಲೋಕವಾದ ಇದು ಅನುಷ್ಟುಭ್ ಛಂದಸ್ಸಿನಲ್ಲಿದೆ. ಛಂದಸ್ಸುಗಳ ಕುರಿತು ಹೆಚ್ಚಿನ ಮಾಹಿತಿಗೆ ಅನುಬಂಧ 2.3ನ್ನು ನೋಡಿ.

[7] ಸೂತನ ಮಗ ಅಥವಾ ಸೂತನಿಗೆ ಆನಂದವನ್ನು ತರುವವನು.

[8] ಲೋಮಹರ್ಷಣ (ದಕ್ಷಿಣಾತ್ಯ ಪಾಠಗಳಲ್ಲಿ ರೋಮಹರ್ಷಣ ಎಂದಿದೆ) ನು ಮಹರ್ಷಿ ವ್ಯಾಸನ ಶಿಷ್ಯರಲ್ಲಿ ಒಬ್ಬನು. ಸೂತನಾದ ಇವನು ವ್ಯಾಸನಿಂದ ಇತಿಹಾಸ-ಪುರಾಣಗಳನ್ನು ಪಡೆದುಕೊಂಡನು. ಲೋಮಹರ್ಷಣನು ಸುಮಾರು 12 (ಅಗ್ನಿ, ಬ್ರಹ್ಮ, ಬ್ರಹ್ಮಾಂಡ, ಗರುಡ, ಕೂರ್ಮ, ಲಿಂಗ, ಮತ್ಸ್ಯ, ನಾರದೀಯ, ಪದ್ಮ, ಶಿವ, ವರಾಹ ಮತ್ತು ವಾಯು) ಪುರಾಣಗಳನ್ನು ಹೇಳಿದನೆಂದಿದೆ. ತಸ್ಯ ತೇ ಸರ್ವಲೋಮಾಣಿ ವಚಸಾ ಹೃಷಿತಾನಿ ಯತ್ ದ್ವೈಪಾಯನಸ್ಯ ಭಗವಾಂಸ್ತತೋ ವೈ ಲೋಮಹರ್ಷಣಃ ।। ಅರ್ಥಾತ್: ಅವನ ಮಾತಿನಿಂದ ಸರ್ವರೋಮಗಳೂ ಹರ್ಷಗೊಳ್ಳುವುದರಿಂದ ಭಗವಾನ್ ದ್ವೈಪಾಯನನ ಶಿಷ್ಯನು ಲೋಮಹರ್ಷಣನೆಂದಾದನು (ಕೂರ್ಮಪುರಾಣ, 1.1.4).

[9] ಮಹಾಭಾರತದಲ್ಲಿ ಸೂತ ಪದವು ಪಾತ್ರಕ್ಕನುಸಾರವಾಗಿ ವಿವಿಧ ಅರ್ಥಗಳನ್ನು ಸೂಚಿಸುತ್ತದೆ. ಈ ಶ್ಲೋಕದಲ್ಲಿ ಸೂತ ಪದವು ಪುರಾಣ-ಇತಿಹಾಸಗಳನ್ನು ಹೇಳುವ ವ್ಯಾಸನ ಶಿಷ್ಯನನ್ನು ಸೂಚಿಸುತ್ತದೆ. ಇನ್ನೊಂದೆಡೆ ಸೂತ ಶಬ್ದವು ಕ್ಷತ್ರಿಯನಿಗೆ ಬ್ರಾಹ್ಮಣಿಯಲ್ಲಿ ಹುಟ್ಟಿ ಸ್ತುತಿಕ್ರಿಯೆಗಳಲ್ಲಿ ತೊಡಗುವ ಸೂತ ಜಾತಿಯನ್ನು ಸೂಚಿಸುತ್ತದೆ. ಧೃತರಾಷ್ಟ್ರನ ಸಖ ಸಂಜಯನು ಸೂತನಾಗಿದ್ದನು. ಸಾರಥಿಗಳಿಗೂ ಸೂತ ಪದವನ್ನು ಬಳಸಲಾಗಿದೆ. ಕರ್ಣನ ಸಾಕು ತಂದೆಯು ಸೂತನಾಗಿದ್ದುದರಿಂದ ಕರ್ಣನಿಗೆ ಸೂತತ್ವವುಂಟಾಯಿತು. ವಿರಾಟ ರಾಜನ ಸೇನಾಪತಿ ಕೀಚಕನನ್ನೂ ಸೂತನೆಂದು ಸೂಚಿಸಲಾಗಿದೆ.

[10] ಉಗ್ರಶ್ರವನು ಲೋಮಹರ್ಷಣನ ಮಗ. ಪದ್ಮಪುರಾಣದ ಸೃಷ್ಟಿಖಂಡದಲ್ಲಿ ಲೋಮಹರ್ಷಣನು ಉಗ್ರಶ್ರವನಿಗೆ ಪುರಾಣಗಳೆಲ್ಲವನ್ನೂ ತಿಳಿಸಿಕೊಟ್ಟು ಕೇಳಿದವರಿಗೆ ವಿಸ್ತಾರವಾಗಿ ತಿಳಿಸು ಎಂದು ಹೇಳಿದುದರ ವರ್ಣನೆಯಿದೆ: ಸೂತಮೇಕಾಂತಮಾಸೀನಂ ವ್ಯಾಸಶಿಷ್ಯೋ ಮಹಾಮತಿಃ ಮಹರ್ಷಣನಾಮಾವೈ ಉಗ್ರಶ್ರವಸಮಾಹ ತತ್ ।। ಋಷೀಣಾಮಾಶ್ರಮಾಂಸ್ತಾತ ಸರ್ವಧರ್ಮಾನ್ಸಮಾಸತಃ ಪೃಚ್ಛತಾಂ ವಿಸ್ತರಾದ್ಬ್ರೂಹಿ ಯನ್ಮತ್ತಃ ಶ್ರುತವಾನಸಿ ।। ವೇದವ್ಯಾಸನ್ಮಯಾ ಪುತ್ರ ಪುರಾಣಾನ್ಯಖಿಲಾನಿ ಚ ತವಾಖ್ಯಾತಾನಿ ಪ್ರಾಪ್ತಾನಿ ಮುನಿಭ್ಯೋ ವದ ವಿಸ್ತರಾತ್ ।। (ಪದ್ಮಪುರಾಣ, ಸೃಷ್ಟಿಖಂಡ, ಅಧ್ಯಾಯ 1, ಶ್ಲೋಕ 2-4). ಉಗ್ರಶ್ರವಸ್ಸೆಂಬುದರಲ್ಲಿ ಉಗ್ರವೆಂದರೆ ನೃಸಿಂಹನು. ಅವನ ಕಥಾಶ್ರವಣವುಳ್ಳವನೆಂದು ವ್ಯುತ್ಪತ್ತಿಯು. (ಅಳಸಿಂಗರಾಚಾರ್ಯ)

[11] ನೈಮಿಷಾರಣ್ಯವು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ಒಂದು ತೀರ್ಥಕ್ಷೇತ್ರವು [ಅನುಬಂಧ 3.1].

[12] ಕುಲಪತಿಯೆಂದರೆ “ಏಕೋ ದಶಸಹಸ್ರಾಣಿ ಯೋನ್ನದಾನಾದಿನಾಭರೇತ್ ಸ ವೈ ಕುಲಪತಿಃ” ಹತ್ತು ಸಾವಿರಮಂದಿ ಶಿಷ್ಯರನ್ನು ತಾನೊಬ್ಬನೇ ಅನ್ನದಾನಾದಿಗಳಿಂದ ಭರಿಸುವವನು ಕುಲಪತಿಯೆನಿಸುತ್ತಾನೆ. (ಅಳಸಿಂಗರಾಚಾರ್ಯ)

[13] ಶೌನಕನು ಸಂಸ್ಕೃತ ವ್ಯಾಕರಣಕಾರನು ಮತ್ತು ಋಗ್ವೇದ-ಪ್ರಾತಿಶಾಖ್ಯ, ಬೃಹದ್ದೇವತಾ, ಚರಣವ್ಯೂಹ ಮತ್ತು ಋಗ್ವೇದದ ಆರು ಅನುಕ್ರಮಣಿಗಳನ್ನು ರಚಿಸಿದವನು ಎಂದು ಪುರಾಣಗಳಲ್ಲಿದೆ. ಕಾತ್ಯಾಯನ ಮತ್ತು ಅಶ್ವಲಾಯನರ ಗುರುವೆಂದೂ ಋಗ್ವೇದದ ಬಾಷ್ಕಲ ಮತ್ತು ಶಕಲ ಶಾಖೆಗಳನ್ನು ಒಂದುಗೂಡಿಸಿದವನೆಂದೂ ಇದೆ. ವಿಷ್ಣು ಪುರಾಣದ ಪ್ರಕಾರ ಶೌನಕನು ಗೃತ್ಸಮದನ ಮಗನು. ಮುಂದೆ ಪೌಲೋಮಪರ್ವದಲ್ಲಿ ಬರುವಂತೆ ಶೌನಕನು ಭಾರ್ಗವ ಕುಲದ ಶುನಕನ ಮೊಮ್ಮಗನು (ಭೃಗು-ಚ್ಯವನ-ಪ್ರಮತಿ-ರುರು-ಶುನಕ) ಎಂದಿದೆ.  

[14] ಸತ್ರ ಎಂದರೆ ದೀರ್ಘವಾದ ಯಾಗ ಎಂದರ್ಥ.

[15] ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು. ಇತಿಹಾಸ-ಪುರಾಣಗಳಲ್ಲಿ “ಸಂಶಿತವ್ರತ” ಎಂಬ ಶಬ್ದವನ್ನು ಹೆಚ್ಚಾಗಿ ಪಾತ್ರಗಳ ಗುಣಸೂಚಕವಾಗಿ ಬಳಸಿದ್ದಾರೆ.

[16] (ಅಧಿಕಪಾಠ) ಉವಾಚ ತಾನೃಷೀನ್ಸರ್ವಾನ್ಧ್ಯನ್ಯೋ ವೋಽಸ್ಮ್ಯದ್ಯ ದರ್ಶನಾತ್ । ವೇದ ವೈಯಾಸಿಕೀಃ ಸರ್ವಾಃ ಕಥಾ ಧರ್ಮಾರ್ಥಸಂಹಿತಾಃ । ವಕ್ಷ್ಯಾಮಿ ವೋ ದ್ವಿಜಶ್ರೇಷ್ಠಾಃ ಶೃಣ್ವನ್ತ್ವದ್ಯ ತಪೋಧನಾಃ । ತಸ್ಯ ತದ್ವಚನಂ ಶ್ರುತ್ವಾ ನೈಮಿಷಾರಣ್ಯವಾಸಿನಃ । ಅರ್ಥಾತ್: ಆ ಋಷಿಗಳೆಲ್ಲರಿಗೂ ಹೇಳಿದನು: “ತಪೋಧನರೇ! ಇಂದು ನಿಮ್ಮ ದರ್ಶನನಿಂದ ನಾನು ಧನ್ಯನಾಗಿದ್ದೇನೆ. ದ್ವಿಜಶ್ರೇಷ್ಠರೇ! ಇಂದು ಧರ್ಮಾರ್ಥಗಳನ್ನೊಳಗೊಂಡ ವೇದಗಳನ್ನು ವಿಸ್ತರಿಸುವ ಎಲ್ಲ ಕಥೆಗಳನ್ನೂ ಹೇಳುತ್ತೇನೆ. ಕೇಳಿ.” ಅವನ ಆ ಮಾತನ್ನು ಕೇಳಿ ನೈಮಿಷಾರಣ್ಯವಾಸಿಗಳು (ಡಿ9-12 ಟಿ1 ಜಿ2 ಡಿ4)

[17] (ಅಧಿಕಪಾಠ) ಏವಂ ಪೃಷ್ಟೋಽಬ್ರವೀತ್ಸಮ್ಯಗ್ಯಥಾವಲ್ಲೋಮಹರ್ಷಣಿಃ । ವಾಕ್ಯಂ ವಚನಸಂಪನ್ನಸ್ತೇಷಾಂ ತು ಚರಿತಾಶ್ರಯಮ್ । ತಸ್ಮಿನ್ಸದಸಿ ವಿಸ್ತೀರ್ಣೇ ಮುನೀನಾಂ ಭಾವಿತಾತ್ಮನಾಮ್ । ಅರ್ಥಾತ್: ಹೀಗೆ ಕೇಳಲು ವಚನಸಂಪನ್ನ ಲೋಮಹರ್ಷಣಿಯು ಭಾವಿತಾತ್ಮ ಮುನಿಗಳ ಆ ವಿಶಾಲ ಸಭೆಯಲ್ಲಿ ಉತ್ತಮ ಚರಿತ್ರೆಗಳನ್ನು ಹೇಳತೊಡಗಿದನು. (ಕೆ4 ವಿ1 ಬಿ, ಡಿ)

[18] ಸೂತನ ಮಗ ಸೌತಿ.

[19] ಕಮಲದ ಎಲೆಗಳಂತೆ ವಿಶಾಲ ನೇತ್ರಗಳುಳ್ಳವನೇ. ಇತಿಹಾಸ-ಪುರಾಣಗಳಲ್ಲಿ “ಕಮಲಪತ್ರಾಕ್ಷ” ಎಂಬ ಶಬ್ದವನ್ನು ಸಾಧಾರಣವಾಗಿ ಪಾತ್ರಗಳ ರೂಪವನ್ನು, ವಿಶೇಷವಾಗಿ ಕಣ್ಣಿನ ಆಕಾರವನ್ನು ವರ್ಣಿಸಲು ಬಳಸುತ್ತಾರೆ.

[20] ಮಹಾಭಾರತವು ಎಲ್ಲ ಪುರಾಣಗಳಂತೆ ಸಂವಾದರೂಪದಲ್ಲಿದೆ. ಸಂವಾದದಲ್ಲಿ ಸಂವಾದಗಳನ್ನು ಕಾಣುತ್ತೇವೆ. ಈ ಸಂವಾದಗಳನ್ನು ನೇರವಾಗಿ ಕೇಳಿದವರೇ ಆ ಸಂವಾದಗಳನ್ನು ನೆನಪಿಸಿಕೊಂಡು ವರದಿಮಾಡುತ್ತಾರೆ. ಉದಾಹರಣೆಗೆ, ಸೂತ ಉಗ್ರಶ್ರವನು ವೈಶಂಪಾಯನ ಮತ್ತು ಜನಮೇಜಯರ ನಡುವೆ ನಡೆದ ಸಂವಾದವನ್ನು ತಾನೇ ಅಲ್ಲಿದ್ದು ಕೇಳಿ ಅದನ್ನು ನೈಮಿಷಾರಣ್ಯದಲ್ಲಿದ್ದ ಋಷಿಗಳಿಗೆ, ತಾನು ಕೇಳಿದ್ದುದನ್ನು ಹೇಳುತ್ತಾನೆ. ಹಾಗೆಯೇ ವೈಶಂಪಾಯನನು ವ್ಯಾಸನು ತನಗೆ ಹೇಳಿದ್ದುದನ್ನು ಜನಮೇಜಯನಿಗೆ, ವ್ಯಾಸನ ಸಮ್ಮುಖದಲ್ಲಿಯೇ, ಹೇಳುತ್ತಾನೆ. ವ್ಯಾಸನು ರಚಿಸಿದ ಮಹಾಭಾರತದ ಸುಮಾರು ಮೂರನೇ ಒಂದು ಭಾಗವಾದ ಯುದ್ಧಪರ್ವಗಳಲ್ಲಿ ಅಧಿಕಭಾಗವು ಸಂಜಯ ಮತ್ತು ಧೃತರಾಷ್ಟ್ರರ ಸಂವಾದವಾಗಿದೆ. ಹೀಗೆ ಮಹಾಭಾರತದಲ್ಲಿ ಸಂವಾದಗಳನ್ನು ಸೂಚಿಸುವ “ಉವಾಚ” ಎಂಬ ಶಬ್ದವು ತುಂಬಿಕೊಂಡಿದೆ.

[21] ತಪಸ್ಸನ್ನಾಚರಿಸಿ, ಋಷಿಗಳ ಸ್ಥಾನವನ್ನು ಪಡೆದಿರುವ ಕ್ಷತ್ರಿಯ ರಾಜರು ರಾಜರ್ಷಿಗಳು. ಉದಾಹರಣೆಗೆ ಜನಕ, ಯಯಾತಿ, ಮೊದಲಾದವರು.

[22] ಪರಿಕ್ಷಿತನು ಅಭಿಮನ್ಯುವಿನ ಮಗ, ಅರ್ಜುನನ ಮೊಮ್ಮಗ. ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಪರಿಕ್ಷಿತನು ಮೃತನಾಗಿಯೇ ಹುಟ್ಟಿದ್ದನು. ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿ ಪರಿಕ್ಷಿತನನ್ನು ಬದುಕಿಸಿದ್ದನು. ಪರಿಕ್ಷೀಣೇ ಕುಲೇ ಯಸ್ಮಾಜ್ಜಾತೋಽಯಮಭಿಮನ್ಯುಜಃ ಪರಿಕ್ಷಿದಿತಿ ನಾಮಾಸ್ಯ ಭವತ್ವಿತ್ಯಬ್ರವೀತ್ತದಾ ।। ಅರ್ಥಾತ್: ಆಗ ಕೃಷ್ಣನು “ಪರಿಕ್ಷೀಣಿಸುತ್ತಿರುವ ಕುಲದಲ್ಲಿ ಹುಟ್ಟಿರುವದರಿಂದ ಈ ಅಭಿಮನ್ಯುವಿನ ಮಗನ ಹೆಸರು ಪರಿಕ್ಷಿತ್ ಎಂದಾಗುತ್ತದೆ” ಎಂದನು (ಮಹಾಭಾರತ, ಆಶ್ವಮೇಧಿಕಪರ್ವ, ಅಧ್ಯಾಯ 65-69). ಭಾಗವತದಲ್ಲಿ ಇವನ ಹಸರು ಪರೀಕ್ಷಿತ ಎಂದಿದೆ. [ಅನುಬಂಧ 3.3]

[23] ತನ್ನ ತಂದೆಯ ಮೃತ್ಯುವಿಗೆ ಕಾರಣನಾದ ತಕ್ಷಕ ಮತ್ತು ಅವನ ನಾಗಕುಲವನ್ನು ನಾಶಗೊಳಿಸಲು ಜನಮೇಜಯನು ನಡೆಸಿದ ಸರ್ಪಸತ್ರದ ಕುರಿತಾದ ವರ್ಣನೆಯು ಇದೇ ಪರ್ವದ ಆಸ್ತೀಕಪರ್ವ (ಅಧ್ಯಾಯ 13-52) ದಲ್ಲಿ ಬರುತ್ತದೆ.

[24] ವೇದಗಳನ್ನು ವಿಂಗಡಿಸಿದವನು ವೇದವ್ಯಾಸ. ಅದೊಂದು ಪದವಿಯ ಹೆಸರು. ಪ್ರತಿ ಮಹಾಯುಗಗಳಿಗೆ ಒಂದು ವ್ಯಾಸನಿರುತ್ತಾನೆ. ಅಷ್ಟಾವಿಂಶತಿಕೃತ್ವೋ ವೈ ವೇದೋ ವ್ಯಸ್ತೋ ಮಹರ್ಷಿಭಿಃ ವೈವಸ್ವತೇಂಽತರೇ ತಸ್ಮಿನ್ ದ್ವಾಪರೇಷು ಪುನಃ ಪುನಃ ।। ವೇದವ್ಯಾಸಾ ವ್ಯತೀತಾ ಯೇ ಅಷ್ಟಾವಿಂಶತಿ ಸತ್ತಮ ಚತುರ್ಧಾ ಯೈಃ ಕೃತೋ ವೇದೋ ದ್ವಾಪರೇಷು ಪುನಃ ಪುನಃ ।। ಅರ್ಥಾತ್: ಈ ವೈವಸ್ವತ ಮನ್ವಂತರದಲ್ಲಿ 28 ಮಹರ್ಷಿಗಳು ಪ್ರತಿಯೊಂದು ದ್ವಾಪರ ಯುಗಗಳಲ್ಲಿಯೂ ಪುನಃ ಪುನಃ ವೇದಗಳನ್ನು ವಿಂಗಡಿಸಿದರು. (ವಿಷ್ಣುಪುರಾಣ, ಅಂಶ 3, ಅಧ್ಯಾಯ 3, ಶ್ಲೋಕಗಳು 9-10). ಈ ಮನ್ವಂತರದ 28ನೇ ವ್ಯಾಸನು ಕೃಷ್ಣ ದ್ವೈಪಾಯನನು. ಕೃಷ್ಣ ಎನ್ನುವುದು ಅವನ ಮೂಲ ಹೆಸರು. ದ್ವೀಪೇ ನ್ಯಸ್ತಃ ಸ ಯದ್ಬಾಲಸ್ತಸ್ಮಾ-ದ್ದ್ವೈಪಾಯನೋಽಭವತ್ ಅರ್ಥಾತ್: ದ್ವೀಪದಲ್ಲಿ ಹುಟ್ಟಿದನಾದ್ದರಿಂದ ಅವನು ದ್ವೈಪಾಯನನಾದನು. (ಮಹಾಭಾರತ, ಆದಿಪರ್ವ, ಅಧ್ಯಾಯ 57).

[25] ವೈಶಂಪಾಯನನು ವ್ಯಾಸನ ಶಿಷ್ಯನು. ಮನುಷ್ಯಲೋಕದಲ್ಲಿ ಮಹಾಭಾರತ ಮತ್ತು ಹರಿವಂಶಗಳನ್ನು ಮೊಟ್ಟಮೊದಲು ಹೇಳಿದವನು. ವ್ಯಾಸನಿಂದ (ಕೃಷ್ಣ) ಯಜುರ್ವೇದವನ್ನು ಪಡೆದುಕೊಂಡವನು. ಬ್ರಹ್ಮಣಾ ಚೋದಿತೋ ವ್ಯಾಸೋ ವೇದಾನ್ ವ್ಯಸ್ತುಂ ಪ್ರಚಕ್ರಮೇ ಅಥ ಶಿಷ್ಯಾನ್ ಸ ಜಗ್ರಾಹ ಚತುರೋ ವೇದಪಾರಗಾನ್ ।। ಋಗ್ವೇದಶ್ರಾವಕಂ ಪೈಲಂ ಜಗ್ರಾಹ ಸ ಮಹಾಮುನಿಃ ವೈಶಂಪಾಯನನಾಮಾನಂ ಯಜುರ್ವೇದಸ್ಯ ಚಾಗ್ರಹೀತ್ ।। ಜೈಮಿನಿಂ ಸಾಮವೇದಸ್ಯ ತಥೈವಾಥರ್ವವೇದವಿತ್ ಸುಮಂತುಸ್ತಸ್ಯ ಶಿಷ್ಯೋಽಭೂದ್ವೇಸವ್ಯಾಸಸ್ಯ ಧೀಮತಃ ।। (ವಿಷ್ಣುಪುರಾಣ, ಅಂಶ 3, ಅಧ್ಯಾಯ 4, ಶ್ಲೋಕಗಳು 7-9). ಅಶ್ವಲಾಯನ ಗೃಹ್ಯಸೂತ್ರವು ಇವನನ್ನು ಮಹಾಭಾರತಾಚಾರ್ಯ ಎಂದು ಕರೆಯುತ್ತದೆ.

[26] ಎರಡು ಬಾರಿ ಹುಟ್ಟಿದವರು, ಪುನರ್ಜನ್ಮ ಪಡೆದುಕೊಂಡವರು, ಉಪನಯನ ಸಂಸ್ಕಾರದಿಂದ ಪುನರ್ಜನ್ಮ ಪಡೆದುಕೊಂಡವರು, ಚಾತುರ್ವಣ್ಯದ ಮೊದಲ ನಾಲ್ಕು ವರ್ಣದವರು.

[27] ತ್ರೇತಾಯುಗದಲ್ಲಿ ಕುರುಕ್ಷೇತ್ರಕ್ಕಿದ್ದ ಹೆಸರು. ತ್ರೇತಾಯುಗದಲ್ಲಿ ಪರಶುರಾಮನು 21 ಬಾರಿ ಕ್ಷತ್ರಿಯರನ್ನು ನಾಶಗೊಳಿಸಿ ಅವರ ರಕ್ತದಿಂದ ಐದು ಸರೋವರಗಳನ್ನು ರಚಿಸಿ ಪಿತೃಗಳಿಗೆ ತರ್ಪಣಗಳನ್ನು ಇತ್ತಿದುದರಿಂದ ಆ ಪ್ರದೇಶಕ್ಕೆ ಸಮಂತಪಂಚಕ ಎಂಬ ಹೆಸರು ಬಂದಿತು (ಮಹಾಭಾರತ, ಆದಿ ಪರ್ವ, ಅಧ್ಯಾಯ 2). ಅದೇ ಪ್ರದೇಶದಲ್ಲಿ, ದ್ವಾಪರ ಯುಗದಲ್ಲಿ, ಕುರು ಎಂಬ ಚಂದ್ರವಂಶೀಯ ರಾಜನು ತಪಸ್ಸನ್ನಾಚರಿಸಿ, ಆ ಕ್ಷೇತ್ರದಲ್ಲಿ ಯುದ್ಧಮಾಡಿ ಮಡಿದ ಕ್ಷತ್ರಿಯರಿಗೆ  ಸ್ವರ್ಗಪ್ರಾಪ್ತಿಯಾಗಲೆಂಬ ವರವನ್ನು ಇಂದ್ರನಿಂದ ಪಡೆದುದರಿಂದ ಅದು ಕುರುಕ್ಷೇತ್ರವೆಂದೂ ತಪಃಕ್ಷೇತ್ರವೆಂದೂ ಆಯಿತು (ಮಹಾಭಾರತ, ಶಲ್ಯಪರ್ವ, ಅಧ್ಯಾಯ 52).

[28] (ಅಧಿಕಪಾಠ) ಶ್ರುತಂ ಮೇ ಭಾರತಾಖ್ಯಾನಂ ಧರ್ಮಕಾಮಾರ್ಥಮೋಕ್ಷದಮ್ । ಜನಮೇಜಯೇನ ಪೃಷ್ಟಃ ಸನ್ವೈಶಂಪಾಯನ ಉಕ್ತವಾನ್ । ಋಷೀಣಾಮಗ್ರತಸ್ತತ್ರ ಧರ್ಮಿಷ್ಠಾನಾಂ ಮಹಾತ್ಮನಾಮ್ । ವ್ಯಾಸದೇವಾಜ್ಞಯಾ ತತ್ರ ಯದ್ವೈಶಂಪಾಯನಸ್ತದಾ । ಶ್ರುತಂ ವೈ ಭಾರತಾಖ್ಯಾನಂ ವೇದಾರ್ಥೈಶ್ಚೋಪಬೃಂಹಿತಮ್ । ತತ್ರ ಮೇ ವಿದಿತಂ ಸರ್ವಂ ಭಾರತಾಖ್ಯಾನಮಾದಿತಃ । ಅರ್ಥಾತ್: ಜನಮೇಜಯನು ಕೇಳಿದಾಗ ವೈಶಂಪಾಯನನು ಹೇಳಿದ ಧರ್ಮಕಾಮಾರ್ಥಮೋಕ್ಷಗಳನ್ನು ನೀಡುವ ಭಾರತಾಖ್ಯಾನವನ್ನು ನಾನು ಕೇಳಿದೆ. ಅಲ್ಲಿ ಧರ್ಮಿಷ್ಠ ಮಹಾತ್ಮಾ ಋಷಿಗಳ ಎದಿರು ವ್ಯಾಸದೇವನ ಆಜ್ಞೆಯಂತೆ ವೈಶಂಪಾಯನನು ಯಾವ ಭಾರತಾಖ್ಯಾನವನ್ನು ಹೇಳಿದನೋ ಆ ಭಾರತಾಖ್ಯಾನವನ್ನು ನಾನು ಆರಂಭದಿಂದ ತಿಳಿದಿದ್ದೇನೆ. (ಕೆ-6)

[29] ಪಾವಕ=ಅಗ್ನಿ, ಬೆಂಕಿ.

[30] ಪುರಾಣಗಳು ವೈದೀಕ ಸಾಹಿತ್ಯಗಳಲ್ಲಿ ಒಂದು ಅಂಗ. ಪುರಾಣಗಳ ಕಿರು ಪರಿಚಯಕ್ಕೆ ಇಲ್ಲಿ ನೋಡಿ.

[31] ಇತಿಹಾಸವೂ ವೈದೀಕ ಸಾಹಿತ್ಯದ ಇನ್ನೊಂದು ಅಂಗ. ಇತಿಹಾಸಗಳ ಕಿರು ಪರಿಚಯಕ್ಕೆ ಅನುಬಂಧ 2.6ನ್ನು ನೋಡಿ.

[32] (ಅಧಿಕಪಾಠ) ನಮೋ ಭಗವತೇ ತಸ್ಮೈ ವ್ಯಾಸಾಯಾಮಿತತೇಜಸಮ್ । ಯಸ್ಯ ಪ್ರಸಾದಾದ್ವಕ್ಷ್ಯಾಮಿ ನಾರಾಯಣಕಥಾಮಿಮಾಮ್ । ಸರ್ವಾಶ್ರಮಾಭಿಗಮನಂ ಸರ್ವತೀರ್ಥಾವಗಾಹನಮ್ । ನ ತಥಾ ಫಲದಂ ಸೂತೇ ನಾರಾಯಣಕಥಾ ಯಥಾ । ನಾಸ್ತಿ ನಾರಾಯಣಸಮಂ ನ ಭೂತಂ ನ ಭವಿಷ್ಯತಿ । ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ಸಾಧಯಾಮ್ಯಹಮ್ । ಅರ್ಥಾತ್: ಯಾರ ಪ್ರಸಾದದಿಂದ ನಾರಾಯಣನ ಈ ಕಥೆಯನ್ನು ಹೇಳುತ್ತಿರುವೆನೋ ಆ ಅಮಿತತೇಜಸ್ವೀ ಭಗವಾನ್ ವ್ಯಾಸನಿಗೆ ನಮಸ್ಕಾರವು. ಸರ್ವಾಶ್ರಮಗಳಿಗೆ ಹೋದರೂ ಸರ್ವತೀರ್ಥಗಳಲ್ಲಿ ಮಿಂದರೂ ನಾರಾಯಣನ ಕಥೆಯಿಂದಾಗುವ ಫಲವು ಆಗುವುದಿಲ್ಲ. ನಾರಾಯಣನ ಸಮನು ಹಿಂದೆ ಇರಲಿಲ್ಲ ಮುಂದೆಯೂ ಇರುವುದಿಲ್ಲ. ಈ ಸತ್ಯವಾಕ್ಯದಿಂದ ನಾನು ಸರ್ವ ಉದ್ದೇಶಗಳನ್ನೂ ಸಾಧಿಸಬಲ್ಲೆನು. (ಟಿ, ಜಿ)

[33] “ಈಶಾನ” ಶಬ್ದಕ್ಕೆ ಹಲವಾರು ಅರ್ಥಗಳಿವೆ. ಶಿವನ ಪಂಚಬ್ರಹ್ಮರೂಪಗಳಲ್ಲಿ ಈಶಾನ ರೂಪವು ಒಂದು. ಏಕಾದಶ ರುದ್ರರಲ್ಲಿ ಈಶಾನನು ಒಬ್ಬನು. ಅಷ್ಟದಿಕ್ಪಾಲಕರಲ್ಲಿ ಓರ್ವನು. ಆದರೆ ಇಲ್ಲಿ ಇದು ಹರಿಯ ಹೆಸರುಗಳಲ್ಲಿ ಒಂದಾಗಿ ಆಳುವವನು ಅಥವಾ ಒಡೆಯ ಎಂಬ ಅರ್ಥವನ್ನು ಕೊಡುತ್ತದೆ.

[34] ಪುರುಹೂತಂ ಪುರುಭಿರ್ಬಹುಭಿರ್ಹೋತೃಭಿಃ ಹೂತಂ ಆಹುತಂ ಅರ್ಥಾತ್: ಎಲ್ಲ ಯಜ್ಞಗಳಲ್ಲಿ ಪೂಜಿಸಲ್ಪಡುವವನು.

[35] ಪುರುಭಿಃ ಸಾಮಗೈಃ ಸ್ತುತಂ ಪುರುಷ್ಟುತಂ ಅರ್ಥಾತ್: ಎಲ್ಲರಿಂದಲೂ ಸ್ತುತಿಸಲ್ಪಡುವವನು.

[36] ಏಕಶ್ಚಾಸಾವಕ್ಷರಶ್ಚ ತಂ ಏಕಾಕ್ಷರಂ ಏಕಂ ಅದ್ವಿತೀಯಂ ಸಮಾಧಿಕರಹಿತಮಿತಿ ವಾ ಅಕ್ಷರಂ ನಾಶರಹಿತಂ (ಗೀತಾ ಪ್ರೆಸ್)

[37] ಮಂಗಲ್ಯಂ ಮಂಗಲಪ್ರದಂ (ಗೀತಾ ಪ್ರೆಸ್)

[38] ಪಾಪರಹಿತ.

[39] (ಅಧಿಕಪಾಠ) ಪುಣ್ಯೇ ಹಿವವತಃ ಪಾದೇ ಮೇಧ್ಯೇ ಗಿರಿಗುಹಾಲಯೇ । ವಿಶೋಧ್ಯ ದೇಹಂ ದರ್ಮಾತ್ಮಾ ದರ್ಭಸಂಸ್ತರಮಾಶ್ರಿತಃ । ಶುಚಿಃ ಸನಿಯಮೋ ವ್ಯಾಸಃ ಶಾಂತಾತ್ಮಾ ತಪಸಿ ಸ್ಥಿತಃ । ಭಾರತಸ್ಯೇತಿಹಾಸಸ್ಯ ಧರ್ಮೇಣಾನ್ವೀಕ್ಷ್ಯ ತಾಂ ಗತಿಮ್ । ಪ್ರವಿಶ್ಯ ಯೋಗಂ ಜ್ಞಾನೇನ ಸೋಽಪಶ್ಯತ್ಸರ್ವಮಂತತಃ । ಅರ್ಥಾತ್: ಹಿಮಾಲಯದ ಪವಿತ್ರ ತಪ್ಪಲಿನಲ್ಲಿ ಗಿರಿಗುಹೆಯಲ್ಲಿ ಶುಚಿ ಶಾಂತಾತ್ಮಾ ವ್ಯಾಸನು ದೇಹಶುದ್ಧಿಯನ್ನು ಮಾಡಿಕೊಂಡು ಕುಶಾಸನವನ್ನು ಹಾಸಿ ತಪಸ್ಸಿನಲ್ಲಿ ತೊಡಗಿದ್ದನು. ಯೋಗವನ್ನು ಪ್ರವೇಶಿಸಿ ಅವನು ಧರ್ಮಪೂರ್ವಕ ಮಹಾಭಾರತ ಇತಿಹಾಸದ ಸ್ವರೂಪವನ್ನು ಆಲೋಚಿಸಿ ಜ್ಞಾನದೃಷ್ಟಿಯಿಂದ ಆದಿಯಿಂದ ಅಂತ್ಯದವರೆಗೆ ಎಲ್ಲವನ್ನೂ ಪ್ರತ್ಯಕ್ಷವೋ ಎಂಬಂತೆ ಕಂಡನು. (ಕೆ5 ಡಿ6)

[40] ಸಮಾಸಃ ಸಂಕ್ಷೇಪಃ ವ್ಯಾಸಃ ವಿಸ್ತಾರಃ ।। (ಗೀತಾ ಪ್ರೆಸ್)

[41] ಒಟ್ಟು ಹದಿನಾಲ್ಕು ಲೋಕಗಳಿವೆ. ಅವುಗಳಲ್ಲಿ ಭೂಲೋಕ (ಪಾದಗಮ್ಯಂ ತು ಯತ್ಕಿಂಚಿದ್ವಸ್ತ್ವಸ್ತಿ ಪೃಥಿವೀಂ), ಭುವರ್ಲೋಕ (ಭೂಮಿಸೂರ್ಯಾಂತರಂ ಯತ್ತು ...ಭುವರ್ಲೋಕಸ್ತು ದ್ವಿತೀಯೋ) ಮತ್ತು ಸ್ವರ್ಲೋಕ (ಧ್ರುವಸೂರ್ಯಾಂತರಂ ಯತ್ತು ಸ್ವರ್ಲೋಕಃ) ಗಳನ್ನು ತ್ರೈಲೋಕ್ಯಮೇತತ್ಕೃತಕಂ ತ್ರೈಲೋಕ್ಯಗಳೆಂದು ಹೇಳುತ್ತಾರೆ. (ಬ್ರಹ್ಮಮಹಾಪುರಾಣ, ಅಧ್ಯಾಯ 23, ಶ್ಲೋಕಗಳು 17-19). ಲೋಕಗಳ ಕುರಿತಿನ ಹೆಚ್ಚಿನ ಮಾಹಿತಿಗೆ ಅನುಬಂಧ 2.8ನ್ನು ನೋಡಿ.

[42] ಇಲ್ಲಿ ಬಳಸಿರುವ “ಯುಗ” ಶಬ್ದವು ಕಲ್ಪ ಅಥವಾ ಬ್ರಹ್ಮನ ಒಂದು ಹಗಲನ್ನು ಸೂಚಿಸುತ್ತದೆ. ಕಲ್ಪದ ಕುರಿತಿನ ಹೆಚ್ಚಿನ ಮಾಹಿತಿಗೆ ಅನುಬಂದ 2.7ನ್ನು ನೋಡಿ.

[43] ತತ್ ಸೃಷ್ಟ್ವಾ ತದೇವಾನು ಪ್ರವಿಶತ್ ಅರ್ಥಾತ್: ಬ್ರಹ್ಮನು ಅಂಡವನ್ನು ರಚಿಸಿ ಸ್ವಯಂ ತಾನೇ ಅದರಲ್ಲಿ ಪ್ರವೇಶಿಸಿದನು (ತೈತ್ತಿರೀಯ ಉಪನಿಷತ್). ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ವರ್ಣಿತವಾಗಿರುವ ಸೃಷ್ಟಿಯ ವಿಚಾರಗಳ ಸಂಗ್ರಹಕ್ಕೆ ಇಲ್ಲಿ ನೋಡಿ.

[44] ದಕ್ಷಪ್ರಜಾಪತಿಯ ಇನ್ನೊಂದು ಹೆಸರು.

[45] ತ್ರಿಮೂರ್ತಿಗಳಲ್ಲಿ ಸೃಷ್ಟಿಕಾರ್ಯದ ಹೊಣೆಯಿರುವವನು ಬ್ರಹ್ಮ. ಇವನು ಕಲ್ಪದ ಪ್ರಾರಂಭದಲ್ಲಿ ನಾರಾಯಣದ ನಾಭಿಕಮಲದಿಂದ ಹುಟ್ಟುವವನು. ಬ್ರಹ್ಮನನ್ನು ಚತುರ್ಮುಖನೆಂದೂ, ನಾಲ್ಕು ಕೈಗಳುಳ್ಳವನೆಂದೂ, ಹಂಸವಾಹನನೆಂದೂ ವರ್ಣನೆಯಿದೆ. ಇವನು ಸತ್ಯಲೋಕ ಅಥವಾ ಬ್ರಹ್ಮಲೋಕದಲ್ಲಿ ಇರುತ್ತಾನೆ. ಮೇರು ಪರ್ವತದ ಶಿಖರದಲ್ಲಿ ಬ್ರಹ್ಮಲೋಕವಿದೆ ಎಂದೂ ಹೇಳುತ್ತಾರೆ. ಇವನ ನಾಲ್ಕು ಕೈಗಳಲ್ಲಿ ಕಮಲ, ವೇದಗಳು, ಜಪಮಾಲೆ (ಕೆಲವೊಮ್ಮೆ ಯಜ್ಞದಲ್ಲಿ ಬಳಸುವ ಸ್ರುಕ್) ಮತ್ತು ಕಮಂಡಲುಗಳನ್ನು ಹಿಡಿದಿದ್ದಾನೆ. ಬ್ರಹ್ಮನ ಒಟ್ಟು ಆಯಸ್ಸು 311.04 ಟ್ರಿಲಿಯನ್ ಮನುಷ್ಯ ವರ್ಷಗಳು ಎಂದು ಪುರಾಣಗಳು ಹೇಳುತ್ತವೆ. ಬ್ರಹ್ಮನ ಪತ್ನಿ ಸರಸ್ವತಿ. ಇಲ್ಲಿ ಹೇಳಿರುವ ಬ್ರಹ್ಮನೇ ಬೇರೆ. ಆಧ್ಯಾತ್ಮ ಸಿದ್ಧಾಂತಗಳಲ್ಲಿ ಬರುವ ಬ್ರಹ್ಮವಸ್ತುವೇ ಬೇರೆ.

[46] ಕ್ರೋಧ, ತಮ, ದಮ, ವಿಕೃತ, ಅಂಗೀರ, ಕರ್ದಮ ಮತ್ತು ಅಶ್ವ.

[47] ಬ್ರಹ್ಮಾಂಡಪುರಾಣದ ಪ್ರಕಾರ: ಋಷಯಃ ಸಪ್ತ ಪೂರ್ವೇ ಯೇ ಮನವಶ್ಚ ಚತುರ್ದಶಃ ಏತೇ ಪ್ರಜಾನಾಂ ಪತಯ ಏಭಿಃ ಕಲ್ಪಃ ಸಮಾಪ್ಯತೇ ।। ಸಪ್ತ ಋಷಿಗಳು (ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು ಮತ್ತು ಕಶ್ಯಪ) ಮತ್ತು ಹದಿನಾಲ್ಕು ಮನುಗಳು (ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಪಸ, ರೈವತ, ಚಾಕ್ಷುಷ, ವೈವಸ್ವತ, ಸಾವರ್ಣಿಕ, ದಕ್ಷಸಾವರ್ಣಿಕ, ಬ್ರಹ್ಮಸಾವರ್ಣಿಕ, ಧರ್ಮಸಾವರ್ಣಿಕ, ರುದ್ರ ಸಾವರ್ಣಿಕ, ರುಚಿರ ಮತ್ತು ಭೌಮ).

[48] ಅದಿತಿಯ ಮಕ್ಕಳು. ಒಟ್ಟು ಹನ್ನೆರಡು ಆದಿತ್ಯರು: ವಿವಸ್ವಾನ್, ಆರ್ಯಮಾನ್, ತ್ವಷ್ಟ, ಸವಿತೃ, ಭಗ, ಧಾತಾ, ಮಿತ್ರ, ವರುಣ, ಅಂಶ, ಪೂಷಾನ, ಇಂದ್ರ, ವಿಷ್ಣು.

[49] ಯಕ್ಷರು: ಮಂಗಳವನ್ನುಂಟುಮಾಡುವ ಮತ್ತು ಕೆಲವೊಮ್ಮೆ ಚೇಷ್ಟೆ ಮಾಡುವ ಯಕ್ಷರು ನೀರಿರುವ ಸರೋವರಾದಿ ಸ್ಥಳಗಳು, ವೃಕ್ಷಗಳು, ಮತ್ತು ಕಾಡು-ವನಗಳಲ್ಲಿ ನೆಲೆಸುವ ಅಮಾನುಷ ಜೀವಿಗಳು. ಇವರು ಧನಾಧಿಪತಿ ಮತ್ತು ಉತ್ತರಾಧಿಪತಿ ಕುಬೇರನ ಕಿಂಕರರು. ಸಾಧ್ಯರು ಧರ್ಮ ಮತ್ತು ದಕ್ಷನ ಮಗಳು ಸಾಧ್ಯೆಯಲ್ಲಿ ಹುಟ್ಟಿದ 12 ಮಕ್ಕಳು: ಮಾನಸ, ಮಂತ್ರಿ, ಪ್ರಾಣ, ನರ, ಪಣ, ನರಕ, ವಿನಿರ್ಭಯ, ನಯ, ದಂಶ, ನಾರಾಯಣ, ವೃಕ್ಷ, ಪ್ರಭು. ಇವರು ಭೂಮಿ ಮತ್ತು ಸ್ವರ್ಗಗಳ ಮಧ್ಯದ ಭುವರ್ಲೋಕದಲ್ಲಿ ವಾಸಿಸುತ್ತಾರೆ. ಪಿಶಾಚರು ಮಾಂಸವನ್ನು ತಿನ್ನುವ ಜೀವಿಗಳು. ದಕ್ಷನ ಮಗಳು ಕ್ರೋಧಾ ಅಥವಾ ಪಿಶಾಚಿಯ ಮಕ್ಕಳು. ಗುಹ್ಯಕರು ಅಂದರೆ ಅಡಗಿಕೊಂಡಿರುವವರು ಎಂದರ್ಥ. ಯಕ್ಷರಂತೆಯೇ ಇವರು ಅತಿಮಾನುಷ ಜೀವಿಗಳು. ಅವರಂತೆ ಕುಬೇರನ ಕಿಂಕರರು. ಕೈಲಾಸ ಮತ್ತು ಗಂಧಮಾದನ ಪರ್ವತಗಳ ಗುಹೆಗಳಲ್ಲಿ ವಾಸಿಸುವವರು. ಬ್ರಹ್ಮನ ಪಕ್ಕೆಯಿಂದ ಹುಟ್ಟಿದ ಪಿತೃಗಳು ಎರಡು ಬಗೆ: ಮನುಷ್ಯ ಮತ್ತು ದೇವ. ವಂಶದಲ್ಲಿ ಹಿಂದೆ ಆಗಿ ಮರಣಹೊಂದಿದ ಹಿರಿಯರು ಮನುಷ್ಯ ಪಿತೃಗಳು. ಕವ್ಯಗಳನ್ನಿತ್ತು ಅವರನ್ನು ಪೂಜಿಸುತ್ತಾರೆ. ಮನುಷ್ಯರ ಮೂಲರಾದ ದೇವಪಿತೃಗಳಲ್ಲಿ ಏಳು ಪಂಗಡಗಳಿವೆ: (1) ಅಗ್ನಿಶ್ವತ್ತ – ದೇವತೆಗಳ ಪಿತೃಗಳು (2) ಬರ್ಹಿಶದ್ – ರಾಕ್ಷಸರ ಪಿತೃಗಳು (3) ವೈರಾಜ – ಮಹರ್ಷಿಗಳ ಪಿತೃಗಳು (4) ಸೋಮಪ – ಬ್ರಾಹ್ಮಣರ ಪಿತೃಗಳು (5) ಹವಿಷ್ಮತ್ – ಕ್ಷತ್ರಿಯರ ಪಿತೃಗಳು (6) ಆಜ್ಯಪ – ವೈಶ್ಯರ ಪಿತೃಗಳು (7) ಸುಕಾಲಿನ್ – ಶೂದ್ರರ ಪಿತೃಗಳು. ಸಪ್ತರ್ಷಿಗಳನ್ನು ಬ್ರಹ್ಮರ್ಷಿಗಳೆಂದು ಕರೆಯುತ್ತಾರೆ. ಪ್ರತಿ ಮನ್ವಂತರಗಳಲ್ಲಿ ಸಪ್ತರ್ಷಿಗಳು ಬೇರೆ ಬೇರೆ ಆಗುತ್ತಾರೆ. ಈ ವೈವಸ್ವತ ಮನ್ವಂತರದಲ್ಲಿ ಅತ್ರಿ, ವಸಿಷ್ಠ, ಕಶ್ಯಪ, ಗೌತಮ, ಭರದ್ವಾಜ, ವಿಶ್ವಾಮಿತ್ರ, ಮತ್ತು ಜಮದಗ್ನಿಯರು ಸಪ್ತರ್ಷಿಗಳು.

[50] ಪಂಚಭೂತಗಳಲ್ಲಿ ಒಂದಾದ ಜಲ ಅಥವಾ ನೀರು.

[51] ದ್ಯೌಃ ಶಬ್ದಕ್ಕೆ ಸ್ವರ್ಗ ಅಥವಾ ದಿವಿ ಎಂಬ ಅರ್ಥವಿದ್ದರೂ ಈ ಶ್ಲೋಕದಲ್ಲಿ ಸೂಚಿತವಾಗಿರುವ ಪೃಥ್ವಿ, ವಾಯು, ಆಕಾಶ, ಆಪ ಮೊದಲಾದ ಪಂಚಭೂತಗಳಲ್ಲಿ ಒಂದಾದ ಅಗ್ನಿ ಅಥವಾ ಬೆಳಕೆಂದೇ ಇಲ್ಲಿ ಅರ್ಥೈಸಿದ್ದೇನೆ.

[52] ಅಂತರಿಕ್ಷ ಶಬ್ದಕ್ಕೆ ಭೂಮಿ ಮತ್ತು ಸ್ವರ್ಗಗಳ ನಡುವಿನ ಜಾಗವೆಂದಿದ್ದರೂ ಈ ಶ್ಲೋಕದಲ್ಲಿ ಸೂಚಿತವಾಗಿರುವ ಪೃಥ್ವಿ, ವಾಯು, ದ್ಯೌ, ಆಪ ಮೊದಲಾದ ಪಂಚಭೂತಗಳಲ್ಲಿ ಒಂದಾದ ಆಕಾಶ ಎಂದೇ ಇಲ್ಲಿ ಅರ್ಥೈಸಿದ್ದೇನೆ.

[53] ಸಂವತ್ಸರ ಎಂದರೆ ವರ್ಷ ಎಂದರ್ಥ. ಹೆಚ್ಚಿನ ಮಾಹಿತಿಗೆ ಅನುಬಂಧ 2.7ನ್ನು ನೋಡಿ.

[54] ಹವಾಮಾನಗಳನ್ನು ಸೂಚಿಸುವ ಋತುಗಳು ಆರು: (1) ವಸಂತ (ಚೈತ್ರ-ವೈಶಾಖ) (2) ಗ್ರೀಷ್ಮ (ಜ್ಯೇಷ್ಠ-ಆಷಾಢ) (3) ವರ್ಷ (ಶ್ರಾವಣ-ಭಾದ್ರಪದ) (4) ಶರತ್ (ಆಶ್ವಯುಜ-ಕಾರ್ತೀಕ) (5) ಹೇಮಂತ (ಮಾರ್ಗಶಿರ-ಪುಷ್ಯ) (6) ಶಿಶಿರ (ಮಾಘ-ಫಾಲ್ಗುಣ).

[55] ವೈದೀಕ ಪಂಚಾಂಗದ ಪ್ರಕಾರ ಮಾಸ ಎಂದರೆ ತಿಂಗಳು. ಹೆಚ್ಚಿನ ಮಾಹಿತಿಗೆ ಅನುಬಂಧ 2.7ನ್ನು ನೋಡಿ.

[56] ಪಕ್ಷಗಳು ತಿಂಗಳಿನ ಎರಡು ಭಾಗಗಳು. ಅಹೋರಾತ್ರಾಃ ಪಂಚದಶ ಪಕ್ಷ ಇತ್ಯಭಿಶಬ್ದಿತಃ ಅರ್ಥಾತ್: ಹದಿನೈದು ಅಹೋರಾತ್ರಿಗಳಿಗೆ ಪಕ್ಷ ಎಂದು ಕರೆಯುತ್ತಾರೆ (ಮಹಾಭಾರತ ಖಿಲಪರ್ವ, ಹರಿವಂಶ, ಅಧ್ಯಾಯ 8). ಅಮವಾಸ್ಯೆ ಮತ್ತು ಹುಣ್ಣಿಮೆಯ ನಡುವಿನ ದಿನಗಳನ್ನು ಗೌರಪಕ್ಷ ಅಥವಾ ಶುಕ್ಲ ಪಕ್ಷ ಅಥವಾ ಶುದ್ಧ ಎಂದೂ ಹುಣ್ಣಿಮೆಯಿಂದ ಅಮವಾಸ್ಯೆಗಳ ನಡುವಿನ ದಿನಗಳನ್ನು ಕೃಷ್ಣ ಪಕ್ಷ ಅಥವಾ ವದ್ಯಪಕ್ಷ ಅಥವಾ ಬಹುಳ ಎಂದೂ ಕರೆಯುತ್ತಾರೆ.

[57] ಈ ವರಾಹಕಲ್ಪದ ಆದಿಯಲ್ಲಿ  ಬ್ರಹ್ಮನು ಸೃಷ್ಟಿಮಾಡಿಸಲೆಣಿಸಿದಾಗ ತನ್ನ ತಮೋಮಯ ಶರೀರದಿಂದ ಅಸುರರನ್ನು ಸೃಷ್ಟಿಸಿ ಆ ಶರೀರವನ್ನು ವಿಸರ್ಜಿ-ಸಲು ಆ ತಮೋಮಯಶರೀರವು ರಾತ್ರಿಯಾಯಿತೆಂದೂ, ತನ್ನ ಸತ್ತ್ವಮಯ ಶರೀರದಿಂದ ದೇವತೆಗಳನ್ನು ಸೃಷ್ಟಿಸಿ ಆ ಶರೀರವನ್ನು ತೊರೆದಾಗ ಅದರಿಂದ ಹಗಲುಂಟಾಯಿತೆಂದು ಶ್ರೀಮಾರ್ಕಂಡೇಯಮಹಾಪುರಾಣದ 45ನೇ ಅಧ್ಯಾಯದಲ್ಲಿ ಬಂದಿದೆ. (ಅನುಬಂಧ 9ನ್ನು ನೋಡಿ).

[58] ಇಲ್ಲಿ ಯುಗಕ್ಷಯ ಅಂದರೆ ಕಲ್ಪಾಂತ್ಯ ಅಥವಾ ಬ್ರಹ್ಮನ ಹಗಲು ಕಳೆದು ಅವನಿಗೆ ರಾತ್ರಿಯಾದಾಗ ಎಂದರ್ಥ.

[59] ಇಲ್ಲಿ ಯುಗ ಎಂಬ ಶಬ್ದವು ನಾಲ್ಕು ಯುಗಗಳನ್ನು ಸೂಚಿಸುತ್ತದೆ: ಕೃತ (ಸತ್ಯ ಅಥವಾ ದೇವ) ಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಹೆಚ್ಚಿನ ಮಾಹಿತಿಗೆ ಅನುಬಂಧ 2.7ನ್ನು ನೋಡಿ.

[60] ಬ್ರಹ್ಮನಿಗೆ ಹಗಲಾದಾಗಾಗ ಕಾಣಿಸಿಕೊಂಡು ಅವನಿಗೆ ರಾತ್ರಿಯಾದಾಗ ಸಂಕ್ಷಿಪ್ತವಾಗುವ ಈ ವಿಶ್ವಕ್ಕೆ ಹುಟ್ಟು-ಸಾವುಗಳಿಲ್ಲ. ಕೇವಲ ಹಗಲು-ರಾತ್ರಿಗಳು ನಿರಂತರವಾಗಿ ಸಾಗುತ್ತಿರುತ್ತದೆ.

[61] ಭಾರತ ದರ್ಶನದಲ್ಲಿ 33,000+3,300+33 ಒಟ್ಟು 36,333 ಎಂದು ಹೇಳಿದೆ. ಬಿಬೇಕ್ ದೆಬ್ರೋಯ್ ಅವರ ಆಂಗ್ಲ ಅನುವಾದದಲ್ಲಿ 33,333 ಎಂದು ಹೇಳಿದೆ.

[62] ಅದಿತಿ, ಹೊಳೆಯುವವಳು, ಹೊಳೆಯುವ ಲೋಕ, ದಿವ.

[63] ಈ ಶ್ಲೋಕಕ್ಕೆ ಬೇರೊಂದು ಅನುವಾದವೂ ಇದೆ: “ಜ್ಯೋತಿರ್ಮಯ ಆದಿತ್ಯನಿಗೆ ವಿವಸ್ವಂತನೆಂಬ ಹೆಸರೂ ಇದೆ. ಅವನಿಗೆ ದಿವಃಪುತ್ರ, ಬೃಹದ್ಭಾನು, ಚಕ್ಷು, ಆತ್ಮಾ, ವಿಭಾವಸು, ಸವಿತಾ, ಋಚೀಕ, ಅರ್ಕ, ಭಾನು, ಆಶಾವಹ, ರವಿ ಮತ್ತು ಮನು ಎಂಬ ಪುತ್ರರಿದ್ದರು.” (ಭಾರತ ದರ್ಶನ) ಆದರೆ ವಿಭಾವಸು, ಸವಿತಾ, ಅರ್ಕ, ಭಾನು, ರವಿ ಇವು ಸೂರ್ಯನ ಅನ್ವರ್ಥನಾಮಗಳೇ ಹೊರತು ಅವನ ಮಕ್ಕಳೆಂದೆನಿಸುವುದಿಲ್ಲ.

[64] ಸೂರ್ಯನ ಇನ್ನೊಂದು ಹೆಸರು ವಿವಸ್ವತ.

[65] ಅಥವಾ ಮನು?

[66] ದೇವಭ್ರಾಟನು ಮನುವಿನ ಮಗನೆಂದೂ ಸುಭ್ರಾಜನು ದೇವಭ್ರಾಟನ ಮಗನೆಂಬ ಅನುವಾದವೂ ಇದೆ (ಭಾರತ ದರ್ಶನ).

[67] ಬಹುಶ್ರುತರು ಎಂದರೆ ಅನೇಕ ವಿದ್ಯೆಗಳನ್ನು ಕಲಿತವರು ಅಥವಾ ಬಹಳ ಶಿಕ್ಷಣವನ್ನು ಪಡೆದವರು ಅಥವಾ ಅತಿ ವಿದ್ವಾಂಸರು ಎಂದರ್ಥ.

[68] ಒಬ್ಬನಿಗೇ ಹತ್ತು ಸಾವಿರ ಪುತ್ರರಾದರು ಎನ್ನುವುದು ನಂಬಲಿಕ್ಕಾಗದ ಮಾತು ಎಂದೆನಿಸುತ್ತದೆ. ಆದರೆ, ಪುರಾಣಗಳ ಪ್ರಕಾರ, ಕೃತಯುಗದಲ್ಲಿ ಮನುಷ್ಯರ ಪ್ರಮಾಣಗಳು – ಅವರ ಶರೀರ, ವೀರ್ಯ, ಆಯುಸ್ಸು, ಮತ್ತು ಸಂತಾನಗಳು ಕಲಿಯುಗದ ಮನುಷ್ಯರಿಗಿಂತ ಎಷ್ಟೋ ಹೆಚ್ಚಿನ ಪ್ರಮಾಣಗಳಲ್ಲಿರುತ್ತವೆ. ಮಹಾ-ಭಾರತದಲ್ಲಿ ಮತ್ತು ಪುರಾಣಗಳಲ್ಲಿ ಇಂಥಹ ವಿಷಯಗಳು ಬಾರಿ ಬಾರಿ ಬರು-ತ್ತವೆ. ಆದರೆ ನಾವು ಅದನ್ನು ಈಗಿನ ಪ್ರಮಾಣಗಳಿಗೆ ಹೋಲಿಸದೇ, ಆಯಾ ಕಾಲಗಳಲ್ಲಿ ಆಯಾ ಪರಿಮಾಣಗಳಿತ್ತೆಂದು ತಿಳಿಯಬೇಕು.

[69] ಮನುವಿನಿಂದ ಅಂದರೆ ಬಹುಷಃ 1ನೇ ಅಧ್ಯಾಯದಿಂದ, ಆಸ್ತೀಕನಿಂದ ಅಂದರೆ ಬಹುಷಃ 13ನೇ ಅಧ್ಯಾಯದಿಂದ ಮತ್ತು ಉಪರಿಚರನಿಂದ ಅಂದರೆ ಬಹುಷಃ 57ನೇ ಅಧ್ಯಾಯದಿಂದ ಎಂದು ಅರ್ಥಮಾಡಿಕೊಳ್ಳಬಹುದು (ಎ.ಆರ್. ಕೃಷ್ಣಶಾಸ್ತ್ರೀ)

[70] (ಅಧಿಕಪಾಠ) ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್ । ಕೋ ಹ್ಯನ್ಯಃ ಪುಂಡರೀಕಾಕ್ಷಾನ್ಮಹಾಭಾರತಕೃದ್ಭವೇತ್ । ಭಾತಿ ಸರ್ವೇಷು ವೇದೇಷು ರತಿಃ ಸರ್ವೇಷು ಜಂತುಷು । ತರಣಂ ಸರ್ವಲೋಕಾನಾಂ ತಸ್ಮಾದ್ಭಾ-ರತಮುಚ್ಯತೇ । ಅರ್ಥಾತ್: ಕೃಷ್ಣದ್ವೈಪಾಯನ ವ್ಯಾಸನನ್ನು ಪ್ರಭು ನಾರಾಯಣ-ನೆಂದು ತಿಳಿ. ಏಕೆಂದರೆ ಪುಂಡರೀಕಾಕ್ಷ ನಾರಾಯಣನಲ್ಲದೆ ಬೇರೆ ಯಾರು ತಾನೇ ಮಹಾಭಾರತದ ಕರ್ತೃವಾದಾನು? ಸರ್ವವೇದಗಳನ್ನೂ ಪ್ರಕಾಶಿಸುತ್ತದೆ. ಸರ್ವ ಜಂತುಗಳಿಗೂ ಆನಂದವನ್ನು ನೀಡುತ್ತದೆ, ಸರ್ವಲೋಕಗಳನ್ನೂ ಉದ್ಧರಿಸುತ್ತದೆ. ಆದುದರಿಂದ ಇದನ್ನು ಮಹಾಭಾರತವೆಂದು ಹೇಳುತ್ತಾರ. (ಕೆ6)

[71] (ಅಧಿಕಪಾಠ) ಏವಂ ವೈ ಸಂಗ್ರಹಾಧ್ಯಾಯಃ ಪೂರ್ವಮೇವ ಮಹರ್ಷಿಣಾ । ಕ್ರಮಣಪ್ರಸ್ತರೈರ್ಯುಕ್ತಃ ಕಥಂಚಿದಪ್ಯತೀವ ಹಿ । ಏತದರ್ಥಂ ಚ ವಿಹಿತಃ ಸಂಗ್ರ-ಹೋಽಯಂ ಯಥಾಶ್ರುತಃ । ತಚ್ಛೃತ್ವಾ ಸರ್ವಮಾಖ್ಯಾತಂ ಲೋಕೇ ಜ್ಞಾಸ್ಯಂತಿ ಮಾನವಾಃ । ಅರ್ಥಾತ್: ಹಿಂದೆಯೇ ಮಹರ್ಷಿಯು ರಚಿಸಿದ್ದ ಸಂಗ್ರಹಾಧ್ಯಾಯ-ವು. ಕ್ರಮಪ್ರಕಾರವಾಗಿ ಘಟನೆಗಳನ್ನು ಒಳಗೊಂಡಿರುವ ಇದು ಅತ್ಯಂತ ಪ್ರಿಯ-ವಾದುದು. ಇದರಲ್ಲಿ ಕೇಳಿದಂತೆ ಇಲ್ಲಿ ಎಲ್ಲ ಅರ್ಥಗಳೂ ಸಂಗ್ರಹವಾಗಿವೆ. ಇದನ್ನು ಕೇಳಿ ಲೋಕದಲ್ಲಿ ಮಾನವರು ಮಹಾಭಾರತವೆಲ್ಲವನ್ನೂ ತಿಳಿಯುತ್ತಾರೆ. (ಡಿಎ)

[72] ಬುದ್ಧಿವಂತ.

[73] (ಅಧಿಕಪಾಠ) ಇದಂ ಶತಸಹಸ್ರಾಖ್ಯಂ ಶ್ಲೋಕಾನಾಂ ಪುಣ್ಯಕರ್ಮಣಾಮ್ । ಉಪಾಖ್ಯಾನೈಃ ಸಹ ಜ್ಞೇಯಂ ಶ್ರಾವ್ಯಂ ಭಾರತಮುತ್ತಮಮ್ । ಅರ್ಥಾತ್: ಪುಣ್ಯಕರ್ಮಿಗಳ ಉಪಾಖ್ಯಾನಗಳನ್ನೊಳಗೊಂಡಿರುವ, ಕೇಳಬೇಕಾದ ಈ ಉತ್ತ-ಮ ಭಾರತವು ಒಂದು ಲಕ್ಷ ಶ್ಲೋಕಗಳದ್ದು ಎಂದು ತಿಳಿಯಬೇಕು. (ಡಿ3,7,9-12)

[74] (ಅಧಿಕಪಾಠ) ಇಲ್ಲಿ ಡಿ6,8 ಟಿ2 ಜಿ3-6 ಮತ್ತು ಎಂ ಗಳಲ್ಲಿ ಮಹಾಭಾರತ ರಚನೆಯ ಕುರಿತಾದ 60 ಸಾಲುಗಳ ಅಧಿಕ ಶ್ಲೋಕಗಳಿವೆ.

[75] ದಾಸೀಪುತ್ರ, ವಿದುರ.

[76] ಕೃಷ್ಣನ ಇನ್ನೊಂದು ಹೆಸರು ವಾಸುದೇವ. ವಸುದೇವನ ಮಗನಾದುದರಿಂದ ಅವನು ವಾಸುದೇವನಾದನು.

[77] ಧೃತರಾಷ್ಟ್ರನ ಮಕ್ಕಳು ಧಾರ್ತರಾಷ್ಟ್ರರು, ದುರ್ಯೋಧನಾದಿ 100 ಕೌರವರು.

[78] (ಅಧಿಕಪಾಠ) ಸಂಹಿತಾಸ್ತೈಃ ಪೃಥಕ್ತ್ವೇನ ಭಾರತಸ್ಯ ಪ್ರಕೀರ್ತಿತಾಃಅರ್ಥಾತ್: ಪ್ರತ್ಯೇಕವಾಗಿ ಅವನು ಭಾರತ ಸಂಹಿತೆಗಳನ್ನು ಹೇಳಿದ್ದಾನೆ. (ಜಿ7 ಟಿ1) ಷಷ್ಠಿಂ ಶತಸಹಸ್ರಾಣಿ ಚಕಾರಾನ್ಯಾಂ ಸ ಸಂಹಿತಾಮ್ । ತ್ರಿಶಚ್ಛತಸಹಸ್ರಂ ಚ ದೇವಲೋಕೇ ಪ್ರತಿಷ್ಠಿತಮ್ । ಪಿತ್ರೈ ಪಂಚದಶ ಪ್ರೋಕ್ತಂ ರಕ್ಷೋಯಕ್ಷೇ ಚತುರ್ದಶ । ಏಕಂ ಶತಸಹಸ್ರಂ ತು ಮಾನುಷೇಷು ಪ್ರತಿಷ್ಠಿತಮ್ । ಅರ್ಥಾತ್: ಅವನು 60 ಲಕ್ಷ ಶ್ಲೋಕಗಳ ಇನ್ನೊಂದು ಸಂಹಿತೆಯನ್ನು ರಚಿಸಿದನು. ಅದರ 30 ಲಕ್ಷ ಶ್ಲೋಕಗಳು ದೇವಲೋಕದಲ್ಲಿ, 15 ಲಕ್ಷ ಪಿತೃಲೋಕದಲ್ಲಿ ಮತ್ತು 14 ಲಕ್ಷ  ರಾಕ್ಷಸ-ಯಕ್ಷರಲ್ಲಿ ಪ್ರತಿಷ್ಠಿತವಾಗಿವೆ. ಒಂದು ಲಕ್ಷ ಶ್ಲೋಕಗಳು ಮನುಷ್ಯಲೋಕದಲ್ಲಿ ಪ್ರತಿಷ್ಠಿತವಾಗಿವೆ. (ಟಿ1 ಜಿ7)

[79] (ಅಧಿಕಪಾಠ) ಅಸ್ಮಿಂಸ್ತು ಮಾನುಷೇ ಲೋಕೇ ವೈಶಂಪಾಯನ ಉಕ್ತವಾನ್ । ಶಿಷ್ಯೋ ವ್ಯಾಸಸ್ಯ ಧರ್ಮಾತ್ಮಾ ಸರ್ವವೇದವಿದಾಂ ವರಃ । ಏಕಂ ಶತಸಹಸ್ರಂ ತು ಮಯೋಕ್ತಂ ವೈ ನಿಬೋದತ । ಅರ್ಥಾತ್: ಈ ಮನುಷ್ಯಲೋಕದಲ್ಲಿ ಸರ್ವ ವೇದವಿದರಲ್ಲಿ ಶ್ರೇಷ್ಠ ವ್ಯಾಸ ಶಿಷ್ಯ ವೈಶಂಪಾಯನನು ಇದನ್ನು ಹೇಳಿದನು. ಆದರೆ ನಾನು ಹೇಳುವ ಒಂದು ಲಕ್ಷ ಶ್ಲೋಕಗಳ ಮಹಾಭಾರತವನ್ನು ಕೇಳಿ. (ಜಿ7 ಟಿ1) ವೈಶಂಪಾಯನವಿಪ್ರರ್ಷಿಃ ಶ್ರಾವಯಾಮಾಸ ಪಾರ್ಥಿವಮ್ । ಪಾರಿಕ್ಷಿತಂ ಮಹಾಬಾಹುಂ ನಾಮ್ನಾ ತು ಜನಮೇಜಯಮ್ । ಅರ್ಥಾತ್: ವಿಪ್ರರ್ಷಿ ವೈಶಂಪಾಯನನು ಪರಿಕ್ಷಿತನ ಮಗ ಜನಮೇಜಯನೆಂಬ ಹೆಸರಿನ ಮಹಾಬಾಹು ಪಾರ್ಥಿವನಿಗೆ ಇದನ್ನು ಹೇಳಿದನು. (ಟಿ1)

[80] ಪಿತಾಮಹ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನಾದ ನಾರದನು ತ್ರಿಲೋಕ ಸಂಚಾರಿ. ವಿಷಯಗಳನ್ನು ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಶೀಘ್ರವಾಗಿ ಕೊಂಡೊಯ್ಯುವವನು. ಇವನು ಮಹಾಭಾರತದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾನೆ ಹಾಗೂ ಇದರಲ್ಲಿ ಇವನ ಕುರಿತಾದ ಹಲವಾರು ವಿಷಯಗಳು ವಿಸ್ತೃತವಾಗಿ ಬರುತ್ತವೆ.

[81] ಯೋಗಶಾಸ್ತ್ರದ ವಿದ್ವಾಂಸನಾದ ಋಷಿ ಅಸಿತ-ದೇವಲನು ಪಾಂಡವರ ಪುರೋಹಿತ ಧೌಮ್ಯನ ಅಣ್ಣನು. ಇವನು ಜೈಗೀಷವ್ಯನ ಶಿಷ್ಯನಾದ ಕಥೆಯು ಮುಂದೆ ಮಹಾಭಾರತದಲ್ಲಿ ಬರುತ್ತದೆ. ಹಿಮವತನ ಮಗಳಾದ ಏಕಪರ್ಣಳು ಇವನ ಪತ್ನಿಯೆಂದಿದೆ.

[82] (ಅಧಿಕಪಾಠ) ತತೋ ಧರ್ಮೋಪನಿಷದಂ ಭೂತ್ವಾ ಭರ್ತುಃ ಪ್ರಿಯಾ ಪೃಥಾ । ಧರ್ಮಾನಿಲೇಂದ್ರಾಸ್ತಾಭಿಃ ಸಾಜುಹಾವ ಸುತವಾಂಛಯಾ । ತದ್ದತ್ತೋಪನಿಷನ್ಮಾದ್ರೀ ಚಾಶ್ವಿನಾವಾಜುಹಾವ ಚ । ಜಾತಾ ಪಾರ್ಥಾಸ್ತತಃ ಸರ್ವೇ ಕುಂತ್ಯಾ ಮಾದ್ರ್ಯಾಶ್ಚ ಮಂತ್ರತಃ । ಅರ್ಥಾತ್: ಮಕ್ಕಳನ್ನು ಬಯಸಿ ಪತಿಯ ಧರ್ಮೋಪದೇಶವನ್ನು ಕೇಳಿ ಪ್ರಿಯೆ ಪೃಥೆಯು ಧರ್ಮ, ವಾಯು ಮತ್ತು ಇಂದ್ರರನ್ನು ಆಹ್ವಾನಿಸಿದಳು. ಅವಳಿಂದ ಉಪದೇಶವನ್ನು ಪಡೆದ ಮಾದ್ರಿಯು ಅಶ್ವಿನೀ ದೇವತೆಗಳನ್ನು ಆಹ್ವಾನಿಸಿದಳು. ಆಗ ಕುಂತೀ-ಮಾದ್ರಿಯರಲ್ಲಿ ಎಲ್ಲ ಪಾರ್ಥರೂ ಮಂತ್ರದಿಂದ ಹುಟ್ಟಿದರು. (ಡಿ10,11 ಟಿ ಜಿ4-6)

[83] (ಅಧಿಕಪಾಠ) ತೇಷು ಜಾತೇಷು ಸರ್ವೇಷು ಪಾಂಡವೇಷು ಮಹಾತ್ಮಸು । ಮಾದ್ರ್ಯಾ ತು ಸಹ ಸಂಗಮ್ಯ ಋಷಿಶಾಪಪ್ರಭಾವತಃ । ಮೃತಃ ಪಾಂಡುರ್ಮಹಾಪುಣ್ಯೇ ಶತಶೃಂಗೇ ಮಹಾಗಿರೌ । ಅರ್ಥಾತ್: ಮಹಾತ್ಮಾ ಪಾಂಡವರೆಲ್ಲರೂ ಹುಟ್ಟಿದ ಬಳಿಕ ಪಾಂಡುವು ಮಾದ್ರಿಯೊಡನೆ ಕೂಡಿ ಋಷಿಶಾಪದ ಪ್ರಭಾವದಿಂದ ಮಹಾಪುಣ್ಯ ಶತಶೃಂಗ ಮಹಾಗಿರಿಯಲ್ಲಿ ಮೃತನಾದನು. (ಡಿ4 ಟಿ1 ಜಿ4)

[84] ಕುಂತಿ ಅಥವಾ ಪೃಥೆಯ ಮಕ್ಕಳು ಪಾರ್ಥರು.

[85] ಇಂದ್ರನ ಇನ್ನೊಂದು ಹೆಸರು.

[86] ವೈದೀಕ ಧರ್ಮವು ನಾಲ್ಕು ವರ್ಣಗಳ ಕುರಿತು ಹೇಳುತ್ತದೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಈ ವರ್ಣಗಳ ಉತ್ಪತ್ತಿ, ವರ್ಣಧರ್ಮ, ಮತ್ತು ಯುಗಕ್ಕನುಗುಣವಾಗಿ ವರ್ಣಗಳಲ್ಲುಂಟಾಗುವ ಸಂಕರ ಮೊದಲಾದ ವಿಷಯಗಳು ವಿಸ್ತಾರವಾಗಿ ಮಹಾಭಾರತದಲ್ಲಿ ಬರುತ್ತದೆ.

[87] ಆಚಾರಾಪರಿಹಾರಶ್ಚ ಸಂಸರ್ಗಶ್ಚಾಪ್ಯನಿಂದಿತೈಃ ಆಚಾರೇ ಚ ವ್ಯವಸ್ಥಾನಂ ಶೌಚಮಿತ್ಯಭಿಧೀಯತೇ ।। ಅರ್ಥಾತ್: ಶಾಸ್ತ್ರೋಕ್ತವಾದ ಆಚಾರಗಳನ್ನು ಪರಿತ್ಯಾಗಮಾಡದಿರುವುದು, ಸತ್ಪುರುಷರೊಡನೆ ಸಹವಾಸ, ಸದಾಚಾರದಲ್ಲಿ ದೃಢವಿಶ್ವಾಸ – ಇವಕ್ಕೆ ಶೌಚವೆಂದು ಹೆಸರು (ಭಾರತ ದರ್ಶನ).

[88] ಇಷ್ಟಾರ್ಥಸಂಪತ್ತೌ ಚಿತ್ತಸ್ಯಾವ್ಕೃತಿರ್ಧೃತಿಃ ಅರ್ಥಾತ್: ಇಷ್ಟವಾದುದೇ ನಡೆಯಲಿ ಅನಿಷ್ಟವಾದುದೇ ನಡೆಯಲಿ – ಮನಸ್ಸನ್ನು ವಿಕಾರಗೊಳಿಸದಿರುವುದೇ ಧೃತಿ ಅಥವಾ ಧೈರ್ಯ (ಭಾರತ ದರ್ಶನ).

[89] ಸರ್ವಾತಿಶಯಸಾಮರ್ಥ್ಯಂ ವಿಕ್ರಮಂ ಪರಿಚಕ್ಷತೇ ಅರ್ಥಾತ್: ಸರ್ವರನ್ನೂ ಮೀರಿಸುವ ಸಾಮರ್ಥ್ಯವಿರುವಿಕೆಯು ವಿಕ್ರಮವೆನಿಸಿಕೊಳ್ಳುತ್ತದೆ (ಭಾರತ ದರ್ಶನ).

[90] ವೃತ್ತಾನುವೃತ್ತಿಃ ಶುಶ್ರೂಷಾ ಅರ್ಥಾತ್: ಸದಾಚಾರಪರಾಯಣರಾದ ಗುರುಜನರನ್ನು ಅನುಸರಣೆಮಾಡಿಕೊಂಡಿರುವುದೇ ಶುಶ್ರೂಷೆ (ಭಾರತ ದರ್ಶನ).

[91] ಜಿತೇಂದ್ರಿಯತ್ವಂ ವಿನಯೋಽಥವಾನುದ್ಧತಶೀಲತಾ ಅರ್ಥಾತ್: ಜಿತೇಂದ್ರಿಯತೆಗೆ ವಿನಯವೆಂದು ಕರೆಯುತ್ತಾರೆ (ಭಾರತ ದರ್ಶನ).

[92] ಶೌರ್ಯಮಧ್ಯವಸಾಯಸ್ಸ್ಯಾದ್ಬಲಿನೋಽಪಿ ಪರಾಭವೇ ಅರ್ಥಾತ್: ಶತ್ರುವು ಮಹಾಬಲಿಷ್ಠನಾಗಿದ್ದರೂ ಅವನನ್ನು ಪರಾಜಯಗೊಳಿಸಲು ಮಾಡುವ ಪ್ರಯತ್ನಕ್ಕೆ ಶೌರ್ಯವೆಂದು ಹೆಸರು (ಭಾರತ ದರ್ಶನ).

[93] ದ್ರೌಪದಿ

[94] ಯುಧಿಷ್ಠಿರನಿಂದ.

[95] ಚೇದಿ ದೇಶದ ರಾಜ, ಶಿಶುಪಾಲ

[96] ಆಚಾರ್ಯ, ಬ್ರಹ್ಮಾ, ಋತ್ವಿಕ್, ಸದಸ್ಯರು, ಯಜಮಾನ, ಯಜಮಾನ ಪತ್ನೀ, ಧನಸಂಪತ್ತಿ, ಶ್ರದ್ಧೆ, ಉತ್ಸಾಹ, ವಿಧಿ-ವಿಧಾನಗಳನ್ನು ಯಥಾವತ್ತಾಗಿ ಪರಿಪಾಲಿಸುವುದು ಮತ್ತು ಸದ್ಬುದ್ಧಿ – ಇವೇ ಯಜ್ಞದ ಮಹಾಗುಣಗಳು (ಭಾರತ ದರ್ಶನ).

[97] ಋಷಿ ಶರದ್ವತನ ಮಗ.

[98] ಸೂತನ ಮಗ ಸೌತಿ. ಇಲ್ಲಿ ಸಂಜಯನನ್ನ ಉದ್ದೇಶಿಸಿ ಬಳಸಿದ “ಸೌತೇ” ಶಬ್ದಕ್ಕೂ ಮತ್ತು ಹಿಂದಿನ ಶ್ಲೋಕ 7ರಲ್ಲಿ ಉಗ್ರಶ್ರವನನ್ನು ಉದ್ದೇಶಿಸಿ ಬಳಸಿದ “ಸೌತೇ” ಶಬ್ದಕ್ಕೂ ವ್ಯತ್ಯಾಸವಿದೆ. ಸಂಜಯನು ರಥವನ್ನು ನಡೆಸುವ ಸೂತನು. ಉಗ್ರಶ್ರವನು ಪುರಾಣ-ಇತಿಹಾಸಗಳನ್ನು ಹೇಳುವ ಸೂತನು.

[99] (ಅಧಿಕಪಾಠ) ಇಲ್ಲಿ ಎನ್, ಕೆ1, ಕೆ3,4 ಡಿಆರ್1,3,4 ಡಿ2-4,7-12,14, ಡಿ6, ಡಿ11 ಗಳಲ್ಲಿ 10 ಸಾಲುಗಳ ಅಧಿಕ ಶ್ಲೋಕಗಳಿವೆ .

[100] ಮಧುವಂಶದಲ್ಲಿ ಜನಿಸಿದವಳು; ಮಾಧವನ ತಂಗಿ. ಯದುವಂಶದಲ್ಲಿಯೇ ಹುಟ್ಟಿದ್ದ ಮಧು ಎಂಬ ರಾಜನಿಂದಾಗಿ ಆ ವಂಶಕ್ಕೆ ಮಧುವಂಶವೆಂಬ ಹೆಸರೂ ಬಂದಿತ್ತು.

[101] ವೃಷ್ಣಿ ವಂಶದಲ್ಲಿ ಹುಟ್ಟಿದ ವೀರರು: ಶ್ರೀಕೃಷ್ಣ-ಬಲರಾಮರು. ಯದುವಂಶದಲ್ಲಿ ಹುಟ್ಟಿದ್ದ ವೃಷ್ಣಿ ಎಂಬ ರಾಜನಿಂದಾಗಿ ಆ ವಂಶಕ್ಕೆ ವೃಷ್ಣಿವಂಶವೆಂಬ ಹೆಸರೂ ಬಂದಿತ್ತು.

[102] (ಅಧಿಕಪಾಠ) ಯದಾಶ್ರೌಷಂ ವಾಸಸಾಂ ತತ್ರ ರಾಶಿಂ ಸಮಾಕ್ಷಿಪತ್ಕಿತವೋ ಮಂದಬುದ್ಧಿಃ । ದುಃಶಾಸನೋ ಗತವಾನ್ನೈವ ಚಾಂತಂ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಧೂರ್ತ ಮತ್ತು ಮಂದಬುದ್ಧಿ ದುಃಶಾಸನನು ದ್ರೌಪದಿಯ ವಸ್ತ್ರವನ್ನು ಸೆಳೆದಾಗ ಅಲ್ಲಿ ಅಂತ್ಯವೇ ಇಲ್ಲದ ವಸ್ತ್ರಗಳ ರಾಶಿಯಾಯಿತು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! (ಡಿ12)

[103] (ಅಧಿಕಪಾಠ) ಯದಾಶ್ರೌಷಂ ದ್ರೌಪದೀಂ ತಾಂ ಬ್ರುವಾಣಾಂ ಪ್ರವ್ರಜ್ಯಾ-ಯಾಮಶ್ರುಕಂಠೀಂ ರುದಂತೀಮ್ । ಪತ್ಯೌ ಯುಕ್ತಾಂ ನಾತ್ರ ವಸ್ತುಂ ಹಿ ಧರ್ಮ-ಸ್ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಬಿಟ್ಟುಬಿಡೆಂದು ಹೇಳುತ್ತಾ ರೋದಿಸುತ್ತಿದ್ದ ಅಶ್ರುಕಂಠೀ ದ್ರೌಪದಿಗೆ ಪತಿಗಳಿದ್ದರೂ ಅಲ್ಲಿ ಧರ್ಮವಲ್ಲದೇ ಬೇರೊಂದಿದ್ದಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಕೆ3)

[104] ಸುಬಲನ ಮಗ ಸೌಬಲ, ಶಕುನಿ.

[105] ಕಣ್ಣೀರಿನಿಂದ ಗಂಟಲು ಕಟ್ಟಿಹೋಗಿದ್ದ

[106] (ಅಧಿಕಪಾಠ) ಯದಾಶ್ರೌಷಂ ವನವಾಸೇಷು ಪಾರ್ಥಾನ್ಸಮಾಗತಾನೃಷಿ-ಮುಖ್ಯೈಃ ಪುರಾಣೈಃ । ಉಪಾಸ್ಯಮಾನಾನ್ಸಗಣೈರ್ಜಾತು ಸರ್ವಾಂಸ್ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ವನವಾಸದಲ್ಲಿಯೂ ಕುಂತೀ-ಪುತ್ರರ ಬಳಿ ಪುರಾಣ ಮಹರ್ಷಿಗಳು ಹೋಗುತ್ತಿದ್ದರು ಹಾಗೂ ಅವರನ್ನು ಉಪಾಸಿಸಿ ಪಾರ್ಥರು ಅವರೊಡನೆ ಸಖ್ಯವನ್ನು ಹೊಂದಿದ್ದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಡಿ9-11 ಎಸ್)

[107] (ಅಧಿಕಪಾಠ) ಯದಾಶ್ರೌಷಂ ಕಾಲೇಯಾಸ್ತತಸ್ತೇ ಪೌಲೋಮಾನೋ ವರದತ್ತಾ-ಶ್ಚ ದೃಪ್ತಾಃ । ದೇವೈರಜೇಯಾ ನಿರ್ಜಿತಾ ಅರ್ಜುನೇನ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ವರವನ್ನು ಪಡೆದು ದೃಪ್ತರಾಗಿದ್ದ ಹಾಗೂ ದೇವ-ತೆಗಳಿಗೂ ಅಜೇಯರಾಗಿದ್ದ ಪೌಲೋಮರು ಮತ್ತು ಕಾಲೇಯರನ್ನು ಅರ್ಜುನನು ಸೋಲಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಜಿ7) ಯದಾಶ್ರೌಷಮಸುರಾಣಾಂ ವಧಾರ್ಥಂ ಕಿರೀಟಿನಂ ಯಾತಮಮಿತ್ರ-ಕರ್ಷಣಮ್ । ಕೃತಾರ್ಥಂ ಚಾಪ್ಯಗತಂ ಶಕ್ರಲೋಕಾತ್ತದಾ ನಾಶಂಸೇ ವಿಜಯಾ-ಯ ಸಂಜಯ । ಅರ್ಥಾತ್: ಅಮಿತ್ರಕರ್ಷಣ ಕಿರೀಟಿ ಅರ್ಜುನನು ಅಸುರರ ವಧೆಗೆಂದು ಹೋದನು ಮತ್ತು ಶಕ್ರಲೋಕದಿಂದ ಕೃತಾರ್ಥನಾಗಿ ಹಿಂದಿರುಗಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! (ಕೆ0,2,4,5 ಟಿ1) ಯದಾಶ್ರೌಷಂ ತೀರ್ಥಯಾತ್ರಾಪ್ರವೃತ್ತಂ ಪಾಂಡೋಃ ಸುತಂ ಸಹಿತಂ ರೋಮಶೇನ । ತಸ್ಮಾಚ್ಛೃತಂ ಚಾರ್ಜುನಸ್ಯಾಸ್ತ್ರಲಾಭಂ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಲೋಮಶಮುನಿಯು ಪಾಂಡುಪುತ್ರನೊಡನೆ ತೀರ್ಥಯಾತ್ರೆಯಲ್ಲಿ ತೊಡಗಿದ್ದಾನೆ ಮತ್ತು ಅವನು ಅರ್ಜುನನಿಗೆ ಅಸ್ತ್ರಲಾಭವಾದುದನ್ನು ಅವನಿಂದಲೇ ಕೇಳಿತಿಳಿದುಕೊಂಡನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಡಿ14)

[108] ಅರ್ಜುನನ ಇನ್ನೊಂದು ಹೆಸರು.

[109] (ಅಧಿಕಪಾಠ) ಯದಾಶ್ರೌಷಂ ದ್ರೌಪದೀಂ ಸೈಂಧವೇನ ನಾನೀತಾಂ ಮೋಕ್ಷಿತಾಂ ಚಾರ್ಜುನೇನ । ಜಯದ್ರಥಂ ಮೋಕ್ಷಿತಂ ಜೀವಶೇಷಂ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಸೈಂಧವನು ಅಪಹರಿಸಿದ್ದ ದ್ರೌಪದಿಯನ್ನು ಅರ್ಜುನನು ಬಿಡಿಸಿದನು ಮತ್ತು ಜಯದ್ರಥನನ್ನು ಜೀವವನ್ನು ಮಾತ್ರ ಉಳಿಸಿ ಬಿಡುಗಡೆ ಮಾಡಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಡಿ-14)

[110] (ಅಧಿಕಪಾಠ) ಯದಾಶ್ರೌಷಂ ನ ವಿದುರ್ಮಮಕಾಸ್ತಾನ್ಪ್ರಚ್ಛನ್ನರೂಪಾನ್ವಸತಃ ಪಾಂಡವೇಯಾನ್ । ವಿರಾಟರಾಷ್ಟ್ರೇ ಸಹ ಕೃಷ್ಣಯಾ ತಾಂಸ್ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಕೃಷ್ಣೆಯೊಡನೆ ಪಾಂಡವರು ವಿರಾಟರಾಷ್ಟ್ರದಲ್ಲಿ ನಮಗೆ ತಿಳಿಯದಂತೆ ಅಜ್ಞಾತರೂಪದಲ್ಲಿ ವಾಸಿಸಿದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಟಿ1) ಯದಾಶ್ರೌಷಂ ತಾನಥಾಜ್ಞಾತವಾಸೇ ತ್ವಪಶ್ಯಮಾನಾನ್ವಿವಿಧೈರೂಪಾಯೈಃ । ದಕ್ಷಾನ್ಪಾರ್ಥಾನ್ಮೇ ಸುತೈರಗ್ನಿಕಲ್ಪಾಂಸ್ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಅವರು ನನ್ನ ಸುತರಿಗ ತಿಳಿಯದಂತೆ ಅಗ್ನಿಯು ಹೇಗೋ ಹಾಗೆ ವಿವಿಧ ರೂಪಗಳಲ್ಲಿ ಅಜ್ಞಾತವಾಸದಲ್ಲಿದ್ದರು ಎಂದು ಕೇಳಿದಾಗಲೇ ನನಗ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಕೆ4) ಯದಾಶ್ರೌಷಂ ಕೀಚಕಾನಾಂ ವರಿಷ್ಠಂ ನಿಷೂದಿತಂ ಭ್ರಾತೃಶ-ತೇನ ಸಾರ್ಧಮ್ । ದ್ರೌಪದ್ಯರ್ಥಂ ಭೀಮಸೇನೇನ ಸಂಖ್ಯೇ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ದ್ರೌಪದಿಗಾಗಿ ಕೀಚಕರಲ್ಲಿ ಹಿರಿಯವನನ್ನು, ನೂರೂ ಸಹೋದರರೊಂದಿಗೆ ಭೀಮಸೇನನು ಹೋರಾಟದಲ್ಲಿ ಸಂಹರಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಡಿ9-11)

[111] ಕುಬೇರನ ಇನ್ನೊಂದು ಹೆಸರು.

[112] ಏಕರಥನಾಗಿ ಎಂದರೆ ಬೇರೆ ಯಾರ ಸಹಾಯವೂ ಇಲ್ಲದೇ ಒಬ್ಬನೇ ಒಂದೇ ರಥದಲ್ಲಿ ಕುಳಿತು ಎಂದರ್ಥ. ವಿರಾಟಪರ್ವದಲ್ಲಿ ಬರುವ ಯುದ್ಧದಲ್ಲಿ ಅರ್ಜುನನೊಬ್ಬನೇ ಕುರುಸೇನೆಯನ್ನು ಭಗ್ನಗೊಳಿಸುತ್ತಾನೆ.

[113] (ಅಧಿಕಪಾಠ) ಯದಾಶ್ರೌಷಂ ಲೋಕಹಿತಾಯ ಕೃಷ್ಣಂ ಶಮಾರ್ಥಿನಮುಪ-ಯಾತಂ ಕುರೂಣಾಮ್ । ಶಮಂ ಕುರ್ವಾಣಮಕೃತಾರ್ಥಂ ಚ ಯಾತಂ ತದಾ ನಾಶಂಸೇ ವಿಜಯಾ-ಯ ಸಂಜಯ । ಅರ್ಥಾತ್: ಲೋಕಹಿತಕ್ಕಾಗಿ ಶಾಂತಿಯನ್ನ-ರಸಿ ಕೃಷ್ಣನು ಕುರುಗಳಲ್ಲಿಗೆ ಬಂದನು ಮತ್ತು ಶಾಂತಿಯನ್ನಂಟು ಮಾಡುವುದರಲ್ಲಿ ಅಕೃತಾರ್ಥನಾಗಿಯೇ ಹಿಂದಿರುಗಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಟಿ1)

[114] ಸೇನೆಯ ಪರಿಮಾಣ. ಒಂದು ಅಕ್ಷೌಹಿಣೀ ಸೇನೆಯಲ್ಲಿ 21,870 ರಥಗಳು, 21,870 ಆನೆಗಳು, 65,610 ಕುದುರೆಗಳು ಮತ್ತು 1,09,350 ಕಾಲ್ದಾಳುಗಳು ಇರುತ್ತಾರೆ. ಇದರ ವಿಸ್ತೃತ ವರ್ಣನೆಯು 2ನೇ ಅಧ್ಯಾಯದಲ್ಲಿ ಬರುತ್ತದೆ.

[115] ಕೃಷ್ಣನ ಇನ್ನೊಂದು ಹೆಸರು.

[116] (ಅಧಿಕಪಾಠ) ಯದಾಶ್ರೌಷಂ ವಾಸುದೇವೇ ಪ್ರಯಾತೇ ರಥಾಂಗಹಸ್ತೇ ಫಾಲ್ಗುನೇನಾನ್ವಿತೇಽಪಿ । ಗ್ರಹೀತುಕಾಮಂ ಮಮ ಪುತ್ರಂ ದ್ವಿಪೇನ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: (ಟಿ2 ಜಿ1 -3)

[117] ಕೃಷ್ಣನ ಇನ್ನೊಂದು ಹೆಸರು. ಕುದುರೆಯ ರೂಪದಲ್ಲಿದ್ದ ಅಸುರ ಕೇಶಿಯನ್ನು ಕೊಂದುದರಿಂದ ಅವನು ಕೇಶವನಾದನು ಎಂದು ಮುಂದೆ ಖಿಲಪರ್ವ ಹರಿವಂಶದ ವಿಷ್ಣುಪರ್ವದ ಅಧ್ಯಾಯ 67ರಲ್ಲಿ ಬರುತ್ತದೆ.

[118] ಕುಂತಿಯ ಇನ್ನೊಂದು ಹೆಸರು.

[119] ರಾಜಾ ಶಂತನುವಿನ ಮಗ.

[120] ಭರದ್ವಾಜನ ಮಗ, ದ್ರೋಣ.

[121] (ಅಧಿಕಪಾಠ) ಯದಾಶ್ರೌಷಂ ಚಾಪಗೇಯೇನ ಸಂಖ್ಯೇ ಸ್ವಯಂ ಮೃತ್ಯುಂ ವಿಹಿತಂ ಧಾರ್ಮಿಕೇಣ । ತಚ್ಚಾಕಾರ್ಷುಃ ಪಾಂಡವೇಯಾಃ ಪ್ರಹೃಷ್ಟಾಸ್ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಧರ್ಮಾತ್ಮಾ ಆಪಗೇಯ ಭೀಷ್ಮನು ಸ್ವಯಂ ತಾನೇ ತನ್ನ ಮೃತ್ಯುವಿನ ರಹಸ್ಯವನ್ನು ಹೇಳಿದನು ಮತ್ತು ಅದನ್ನು ತಿಳಿದು ಪಾಂಡವರು ಸಂತೋಷದಿಂದ ಅದರಂತೆಯೇ ಮಾಡಿದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಕೆ2,4,6 ವಿ1 ಬಿ ಡಿ ಟಿ1)

[122] ಅರ್ಜುನನ ಇನ್ನೊಂದು ಹೆಸರು. ಕುಂತಿ ಅಥವಾ ಪೃಥೆಯ ಮಗ ಎಂದರ್ಥ.

[123] ಪಾಂಚಾಲರು. ಪಾಂಚಾಲರ ವಂಶದಲ್ಲಿ ಸೋಮಕನೆಂಬ ರಾಜನಿದ್ದನು. ಅವನಿಂದಾಗಿ ಆ ವಂಶದವರಿಗೆ ಸೋಮಕರೆಂಬ ಹೆಸರು ಬಂದಿತು.

[124] ಸೂರ್ಯ-ಶುಕ್ರ ಇವೆರಡೂ ಗ್ರಹಗಳು. ವೈದೀಕ ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳನ್ನು ಗುರುತಿಸಿದ್ದಾರೆ: ಸೂರ್ಯ, ಚಂದ್ರ, ಬುಧ, ಬೃಹಸ್ಪತಿ (ಗುರು), ಶುಕ್ರ, ಮಂಗಳ, ಶನಿ, ರಾಹು ಮತ್ತು ಕೇತು.

[125] ಅಭಿಮನ್ಯುವಿನ ಇನ್ನೊಂದು ಹೆಸರು. ಸುಭದ್ರೆಯ ಮಗ ಸೌಭದ್ರಿ.

[126] ಸಿಂಧು ದೇಶದ ರಾಜಕುಮಾರ, ಜಯದ್ರಥ.

[127] ಯುಯುಧಾನ ಸಾತ್ಯಕಿಯ ಇನ್ನೊಂದು ಹೆಸರು. ವೃಷ್ಣಿಕುಲದಲ್ಲಿ ಹುಟ್ಟಿದವನು ವಾರ್ಷ್ಣೇಯ. ಕೃಷ್ಣನಿಗೂ ವಾರ್ಷ್ಣೇಯ ಎಂಬ ಹೆಸರಿದೆ.

[128] ಅಶ್ವತ್ಥಾಮನ ಇನ್ನೊಂದು ಹೆಸರು. ದ್ರೋಣನ ಮಗ ದ್ರೌಣಿ.

[129] ಶಲ್ಯನ ಇನ್ನೊಂದು ಹೆಸರು.

[130] ಇಂದ್ರನ ಇನ್ನೊಂದು ಹೆಸರು.

[131] ಶಕ್ತಿಯು ಒಂದು ಆಯುಧ.

[132] ಅರ್ಜುನನ ಇನ್ನೊಂದು ಹೆಸರು. ಎರಡೂ ಕೈಗಳಿಂದ ಬಾಣಪ್ರಯೋಗಮಾಡ-ಬಲ್ಲವನಾದುದರಿಂದ ಅವನು ಸವ್ಯಸಾಚಿ ಎಂದಾದನು.

[133] ಕರ್ಣನ ಇನ್ನೊಂದು ಹೆಸರು. ಸೂತ ಅಧಿರಥನ ಸಾಕುಮಗನಾಗಿದ್ದುದರಿಂದ ಅವನು ಸೂತಪುತ್ರನೆಂದಾದನು. ಅಧಿರಥನು ರಥವನ್ನು ನಡೆಸುವ ಸೂತನಾಗಿದ್ದನು.

[134] (ಅಧಿಕಪಾಠ) ಯದಾಶ್ರೌಷಂ ಭೀಮಸೇನೇನ ಪೀತಂ ರಕ್ತಂ ಭ್ರಾತುರ್ಯುಧಿ ದುಃಶಾಸನಸ್ಯ । ನಿವಾರಿತಂ ನಾನ್ಯತಮೇನ ಭೀಮಂ ತದಾ ನಾಶಂಸೇ ವಿಜಯಾ-ಯ ಸಂಜಯ । ಅರ್ಥಾತ್: ಯುದ್ಧದಲ್ಲಿ ಭೀಮಸೇನನು ತಮ್ಮ ದುಃಶಾಸನನ ರಕ್ತವನ್ನು ಕುಡಿದನು ಮತ್ತು ಆಗ ಬೇರೆ ಯಾರೂ ಭೀಮನನ್ನು ತಡೆಯಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಕೆ 2,4,6 ಡಿ1,2,6,-8,11 ಕೆ1 ಕೆ8 ಡಿ3,4) ಯದಾಶ್ರೌಷಂ ಭೀಮಕರ್ಮಾಣಮುಗ್ರಂ ರಣೇ ಭೀಮಂ ಶೋಣಿತಂ ಪೀತವಂತಮ್ । ಭಿತ್ವಾ ವಕ್ಷೋ ಯುವರಾಜಸ್ಯ ಸೂತ ತದಾ ನಾಶಂಸೇ ವಿಜಯಾಯ ಸಂಜಯ । ಅರ್ಥಾತ್: ಸೂತ! ರಣದಲ್ಲಿ ಭೀಮಕರ್ಮಿ ಉಗ್ರ ಭೀಮನು ಯುವರಾಜ ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಕೆ3)

[135] ಪ್ರಾಯಗತ ಅಂದರೆ ಪ್ರಾಯೋಪವೇಶ ಅಂದರೆ ಆಮರಣಾಂತರವಾಗಿ ಏನನ್ನೂ ತಿನ್ನದೇ ಕುಳಿತುಕೊಳ್ಳುವುದು ಎಂದರ್ಥ. ಜೀವನದಲ್ಲಿ ಆಸೆಗಳೇ ಇಲ್ಲದಿದ್ದಾಗ ಮಹಾಭಾರತದಲ್ಲಿನ ಪಾತ್ರಗಳು ಪ್ರಾಯೋಪವೇಶ ಮಾಡಿದ ಪ್ರಸಂಗಗಳು ಹಲವಾರಿವೆ. ಇಲ್ಲಿರುವ ಉದಾಹರಣೆಯಂತೆ ತನ್ನ ಮಗ ಅಶ್ವತ್ಥಾಮನು ಹತನಾದನೆಂದು ಕೇಳಿ ಬಹು ದುಃಖಿತನಾಗಿ ದ್ರೋಣನು ರಣಭೂಮಿಯಲ್ಲಿಯೇ ತನ್ನ ರಥದ ಮೇಲೆ ಕುಳಿತು ಯೋಗಮಾರ್ಗವನ್ನನುಸರಿಸಿ ಪ್ರಾಯೋಪವೇಶಮಾಡಿ ದೇಹತ್ಯಾಗಮಾಡಿದನು ಎಂದಿದೆ. ಅದೇ ರೀತಿ ಬಾಹ್ಲೀಕನ ಮಗ ಸೋಮದತ್ತನೂ ಕೂಡ ರಣಭೂಮಿಯಲ್ಲಿ ಪ್ರಾಯೋಪವೇಶಮಾಡಿದಾಗ ಸಾತ್ಯಕಿಯು ಅವನನ್ನು ಕೊಂದ ವಿಷಯವು ಬರುತ್ತದೆ. ದುರ್ಯೋಧನ ಮತ್ತು ದ್ರೌಪದಿಯರು ಕೂಡ ಪ್ರಾಯೋಪವೇಶವನ್ನು ಮಾಡಿದ್ದರು ಎಂಬ ವಿಷಯವು ಬರುತ್ತದೆ.

[136] ದ್ರೌಪದಿಯ ಐವರು ಮಕ್ಕಳು: ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಸುತಸೋಮ, ಅರ್ಜುನನಿಂದ ಶೃತಕೀರ್ತಿ, ನಕುಲನಿಂದ ಶತಾನೀಕ ಮತ್ತು ಸಹದೇವನಿಂದ ಶ್ರುತಕರ್ಮ. (ಆದಿಪರ್ವ, ಅಧ್ಯಾಯ 90)

[137] ಬ್ರಹ್ಮಾಸ್ತ್ರ.

[138] (ಅಧಿಕಪಾಠ) ಸಂಜೀವಯಾಮೀತಿ ಹರೇಃ ಪ್ರತಿಜ್ಞಾಂ ತದಾ ನಾಶಂಸೇ ವಿಜಯಾಯ ಸಂಜಯ ಅರ್ಥಾತ್:  ಅವನನ್ನು ಬದುಕಿಸುತ್ತೇನೆಂಬ ಹರಿಯ ಪ್ರತಿಜ್ಞೆಯನ್ನು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! (ಡಿ10,11 ಟಿ1 ಜಿ1)

[139] (ಅಧಿಕಪಾಠ) ಬುಧ್ವಾ ಚಾಹಂ ಬುದ್ಧಿಹೀನೋಽದ್ಯ ಸೂತ ಸಂತಪ್ಯೇಽಹಂ ಪುತ್ರಪೌತ್ರೈಶ್ಚ ಹೀನಃ । ಸಂಚಿಂತಯನ್ನದ್ಯ ವಿಹೀನಬುದ್ಧಿಃ ಕರ್ತವ್ಯತಾಂ ನಾಭಿಜಾನಾಮಿ ಸೂತ । ಅರ್ಥಾತ್: ಸೂತ! ಇಂದು ಪುತ್ರ-ಪೌತ್ರರಿಂದ ಹೀನನಾಗಿರುವ ನಾನು ಬುದ್ಧಿಹೀನನೆಂದು ತಿಳಿದು ಸಂತಪಿಸುತ್ತಿದ್ದೇನೆ. ಸೂತ! ಇಂದು ಬುದ್ಧಿವಿಹೀನನಾಗಿ ಚಿಂತಿಸಿ ಏನನ್ನು ಮಾಡಬೇಕೆಂದು ತಿಳಿಯದವನಾಗಿದ್ದೇನೆ. (ಡಿ6,8 ಟಿ1 ಜಿ2,4,6)

[140] ಬ್ರಹ್ಮಾಸ್ತ್ರ.

[141] ವಿರಾಟರಾಜನ ಪುತ್ರಿ ಉತ್ತರಾ; ಅಭಿಮನ್ಯುವಿನ ಪತ್ನಿ.

[142] ಕೃಪ, ಕೃತವರ್ಮ ಮತ್ತು ಅಶ್ವತ್ಥಾಮ.

[143] ಪಂಚಪಾಂಡವರು, ಕೃಷ್ಣ ಮತ್ತು ಸಾತ್ಯಕಿ.

[144] ಸಂಜಯನ ಇನ್ನೊಂದು ಹೆಸರು. ಋಷಿ ಗವಲ್ಗಣನ ಅಂಶದಿಂದ ಹುಟ್ಟಿದವನಾದುದರಿಂದ ಗಾವಲ್ಗಣಿ.

[145] ದುಃಷಂತನ ಮಗ ಭರತ.

[146] ಇಲ್ಲಿ ಬಂದಿರುವ 24 ರಾಜರ ಪಟ್ಟಿಯಲ್ಲಿ ದಾಮೋದರ ಸಾತವಲೇಕರ್ ಅವರು “ಅಮಿತ್ರಘ್ನಂ” ಎಂಬ ಶಬ್ದವನ್ನು ಅಂಬರೀಷನ ಸಂಬೋಧನೆಯೆಂದು ಅನುವಾದಿಸಿ “ರಾಮಂ ದಾಶರಥಿಂ” ಎನ್ನುವುದಕ್ಕೆ “ಪರಶುರಾಮ ಮತ್ತು ದಾಶರಥಿ ರಾಮ” ಎಂದು ಅನುವಾದಿಸಿದ್ದಾರೆ. ಆದರೆ ಇಲ್ಲಿ ಪರಶುರಾಮನನ್ನು ಕ್ಷತ್ರಿಯನೆಂದು ಸೇರಿಸುವುದು ಸರಿಯಲ್ಲ ಎಂದೆನಿಸುತ್ತದೆ.

[147] 1000 ಬಿಲಿಯನ್; ’ಪದ್ಮ’ ಶಬ್ದವು ಪುರಾಣ-ಇತಿಹಾಸಗಳಲ್ಲಿ ಕಂಡುಬರುವ ಅತಿ ದೊಡ್ಡ ಸಂಖ್ಯೆ.

[148] (ಅಧಿಕಪಾಠ) ಅತೀತಾನಾಗತಾನ್ವಾಪಿ ವರ್ತಮಾನಾಸ್ತಥಾ ಬುಧಾಃ । ನಾನು-ಶೋಚಂತಿ ರಾಜೇಂದ್ರ ಕಾಲೋ ಹಿ ಜಗದಂತಕಃ । ಅರ್ಥಾತ್: ರಾಜೇಂದ್ರ! ಆಗಿಹೋದುದರ, ಮುಂದೆ ಆಗುವ ಮತ್ತು ವರ್ತಮಾನದಲ್ಲಿ ನಡೆಯುತ್ತಿರುವುದರ ಕುರಿತು ಬುದ್ಧಿವಂತರು ಶೋಕಿಸುವುದಿಲ್ಲ. ಏಕೆಂದರೆ ಕಾಲವೇ ಜಗದಂತಕವು. (ಡಿ5) ಕಾಲಃ ಸುಪ್ತೇಷು ಜಾಗರ್ತಿ ಕಾಲೋ ಹಿ ದುರತಿಕ್ರಮಃ । ಅರ್ಥಾತ್: ನಾವು ಮಲಗಿದ್ದರೂ ಕಾಲವು ಎಚ್ಚರವಾಗಿರುತ್ತದೆ. ಏಕೆಂದರೆ ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. (ಕೆ5)

[149] (ಅಧಿಕಪಾಠ) ಇತ್ಯೇವಂ ಪುತ್ರಶೋಕಾರ್ತಂ ಧೃತರಾಷ್ಟ್ರಂ ಜನೇಶ್ವರಮ್ । ಆಶ್ವಾಸ್ಯ ಸ್ವಸ್ಥಮಕರೋತ್ಸೂತೋ ಗಾವಲ್ಗಣಿಸ್ತದಾ । ಅರ್ಥಾತ್: ಹೀಗೆ ಪುತ್ರಶೋಕಾರ್ತನಾದ ಜನೇಶ್ವರ ಧೃತರಾಷ್ಟ್ರನನ್ನು ಸಮಾಧಾನಪಡಿಸಿ ಸೂತ ಗಾವಲ್ಗಣಿಯು ಆಗ ಅವನನ್ನು ಸ್ವಸ್ಥನಾಗಿಸಿದನು. (ಟಿ ಜಿ6 ಎಂ2-4) ಏವಮುಕ್ತ್ವಾ ಚ ರಾಜಾನಂ ಸಂಜಯೋ ವಿರರಾಮ ಹ । ಧೃತರಾಷ್ಟ್ರೋಽಪಿ ತಚ್ಛ್ರುತ್ವಾ ಧೃತಿಮೇವ ಸಮಾಶ್ರಯತ್ । ದಿಷ್ಟ್ಯೇದಮಾಗತಮಿತಿ ಮತ್ವಾ ಸ ಪ್ರಾಜ್ಞಸತ್ತಮಃ । ಅರ್ಥಾತ್: ರಾಜನಿಗೆ ಹೀಗೆ ಹೇಳಿ ಸಂಜಯನು ಸುಮ್ಮನಾದನು. ಅದನ್ನು ಕೇಳಿದ ಪ್ರಾಜ್ಞಸತ್ತಮ ಧೃತರಾಷ್ಟ್ರನೂ ಕೂಡ ನಡೆದುಹೋದುದು ದೈವವೆಂದು ತಿಳಿದು ಧೈರ್ಯವನ್ನು ಪಡೆದುಕೊಂಡನು. (ಜಿ4,5)

[150] (ಅಧಿಕಪಾಠ) ಭಾರತಂ ಭಾನುಮಾನಿಂದುರ್ಯದಿ ನ ಸ್ಯುರಮೀ ತ್ರಯಃ । ಅಜ್ಞಾನತಿಮಿರಾಂಧಸ್ಯ ಕಾವಸ್ಥಾ ಜಗತೋ ಭವೇತ್ । ಮತಿಮಂಥಾನಮಾವಿಧ್ಯ ಯೇನ ವೇದಮಹಾರ್ಣವಾತ್ । ಜಗದ್ಧಿತಾಯ ಜನಿತೋ ಮಹಾಭಾರತಚಂದ್ರಮಾಃ । ಅರ್ಥಾತ್: ಭಾರತ, ಭಾನು ಮತ್ತು ಇಂದು ಈ ಮೂರು ಬೆಳಗದೇ ಇದ್ದರೆ ಈ ಜಗತ್ತು ಅಜ್ಞಾನವೆಂಬ ಅಂಧಕಾರದಲ್ಲಿ ಇರುತ್ತಿರಲಿಲ್ಲವೇ? ವೇದವೆಂಬ ಮಹಸಾಗರವನ್ನು ಬುದ್ಧಿಯೆಂಬ ಕಡಗೋಲಿನಿಂದ ಮಥಿಸಿ ಜಗತ್ತಿನ ಹಿತಕ್ಕಾಗಿ ಮಹಾಭಾರತವೆಂಬ ಚಂದ್ರವು ಹುಟ್ಟಿತು. (ಟಿ2)

[151] ಶ್ಲೋಕದ ಒಂದು ಪಾದ ಎಂದರೆ 32 ಸ್ವರಗಳ ಶ್ಲೋಕಗಳಲ್ಲಿನ ಮೊದಲನೆಯ 8 ಅಥವಾ ಎರಡನೆಯ 8 ಅಥವಾ ಮೂರನೆಯ 8 ಅಥವಾ ನಾಲ್ಕನೆಯ 8 ಸ್ವರಗಳು ಎಂದರ್ಥ.

[152] ಜ್ಞಾನಮಾತ್ರದಲ್ಲಿ ಅಧಿಕಾರವನ್ನು ಪಡೆದು ದೇವಲೋಕದಲ್ಲಿ ಸಂಚರಿಸುವವರು ದೇವರ್ಷಿಗಳು. ನಾರದನೇ ಮೊದಲಾದ ದೇವರ್ಷಿಗಳು ಅಥವಾ ಸುರರ್ಷಿಗಳು ಮಹಾಭಾರತದ ಪಾತ್ರಗಳಲ್ಲಿ ಸೇರಿಕೊಂಡಿದ್ದಾರೆ.

[153] ಜ್ಞಾನಮಾರ್ಗ ಕರ್ಮಮಾರ್ಗಗಳೆರಡರಲ್ಲಿಯೂ ಅಧಿಕಾರವನ್ನು ಪಡೆದು ಭೂಲೋಕದಲ್ಲಿ ವಾಸಿಸುವವರು. ವಸಿಷ್ಠನೇ ಮೊದಲಾದ ಬ್ರಹ್ಮರ್ಷಿಗಳ ಕಥೆಯು ಭಾರತದಲ್ಲಿದೆ.

[154] ಮಣಿಮತನೇ ಮೊದಲಾದ ಯಕ್ಷರ ಕಥೆಗಳು ಮಹಾಭಾರತದಲ್ಲಿದೆ.

[155] ಶೇಷ, ವಾಸುಕಿ ಮೊದಲಾದ ಮಹಾ ಉರಗಗಳ ಕಥೆಗಳು ಹಾಗೂ ಪ್ರಮುಖ ನಾಗಗಳ ಹೆಸರುಗಳು ಮಹಾಭಾರತದಲ್ಲಿ ಬರುತ್ತದೆ.

[156] ಪ್ರಾತಃಕಾಲ ಸೂರ್ಯೋದಯದ ವೇಳೆಯಲ್ಲಿ ಒಂದು ಸಂಧಿಕಾಲವಿದೆ ಮತ್ತು ಸಾಯಂಕಾಲ ಸೂರ್ಯಾಸ್ತದ ವೇಳೆಯಲ್ಲಿ ಒಂದು ಸಂಧಿಕಾಲವಿದೆ.

[157] ಕೃಷ್ಣದ್ವೈಪಾಯನ ವ್ಯಾಸ.

[158] ಇಲ್ಲಿ ಪರ್ವ ಎಂದರೆ ಹುಣ್ಣಿಮೆ, ಅಮವಾಸ್ಯೆ, ಸಂಕ್ರಮಣಕಾಲಗಳು ಎಂದರ್ಥ.

[159] (ಅಧಿಕ ಪಾಠ) ಚತುರ್ಭ್ಯಃ ಸರಹಸ್ಯೇಭ್ಯೋ ವೇದೇಭ್ಯೋ ಹ್ಯಧಿಕಂ ಯದಾ । ತದಾ ಪ್ರಭೃತಿ ಲೋಕೇಽಸ್ಮಿನ್ಮಹಾಭಾರತಮುಚ್ಯತೇ । ಅರ್ಥಾತ್: ನಾಲ್ಕೂ ವೇದಗಳ ರಹಸ್ಯಗಳನ್ನು ಹೊಂದಿರುವುದರಿಂದ ಅಂದಿನಿಂದ ಈ ಲೋಕದಲ್ಲಿ ಇದು ಮಹಾಭಾರತ ಎಂದೆನಿಸಿಕೊಂಡಿತು. (ಕೆ)

[160] ವೇದಗಳೂ, ಉಪನಿಷತ್ತುಗಳೂ, ಬ್ರಹ್ಮಪ್ರತಿಪಾದಕಗಳಾಗಿ, ಮೋಕ್ಷೋಪಾಯಗಳನ್ನು ತಿಳಿಸುವಾಗ, ಯುದ್ಧಪ್ರಧಾನವಾಗಿ ಬಂಧಹೇತುಗಳಾದ ಕರ್ಮಗಳನ್ನೇ ಬೋಧಿಸುವ ಈ ಭಾರತವನ್ನು ಅವುಗಳಿಗಿಂತಲೂ ಮೇಲೆಂದು ಹೇಳುವುದು ಹೇಗೆ ಎಂದು ಸಂದೇಹಿಸಬಾರದು. ಏಕೆಂದರೆ ಇವುಗಳಿಂದ ಆಗುವ ಗುಣಾವಗುಣಗಳೆಲ್ಲವೂ ಮನುಷ್ಯನ ಮನೋಭಿಪ್ರಾಯವನ್ನು ಅನುಸರಿಸಿರುವವು. ಫಲಾಪೇಕ್ಷೆ-ಯಿಲ್ಲದೇ ಮಾಡಿದರೆ ಕೃಛ್ರ-ಚಾಂದ್ರಾಯಣಾದಿ ವ್ರತಗಳೂ ಕೂಡ ಕರ್ಮಬಂಧ-ನಕ್ಕೆ ಕಾರಣವಾಗಲಾರವು. ಆಯಾ ವರ್ಣಾಶ್ರಮಗಳಿಗೆ ತಕ್ಕಂತೆ ವೇದವಿಹಿತ ಕರ್ಮಗಳೂ ಬಂಧಹೇತುಗಳಾಗಲಾವು. ಕಷ್ಟಗಳನ್ನು ಸಹಿಸಿಕೊಂಡು ಧರ್ಮವ-ನ್ನು ಮೀರದೇ ಮಾಡುವ ಧನಾರ್ಜನೆಯೂ ಕರ್ಮಹೇತುವಾಗಲಾರದು. ಇವುಗಳನ್ನೇ ದುರಭಿಪ್ರಾಯದಿಂದ ಅಂದರೆ ಫಲಾಪೇಕ್ಷೆಯಿಂದ ಮಾಡಿದರೆ ಕರ್ಮಬಂಧನಕ್ಕೆ ಕಾರಣವಾಗುವವು. ಈ ಭಾರತದಲ್ಲಿರುವ ಮೋಕ್ಷಧರ್ಮಾದಿ ಪ್ರಕರಣಗಳು ನಿಷ್ಕಾಮಕರ್ಮಗಳನ್ನೇ ಪ್ರತಿಪಾದಿಸಿರುವುದರಿಂದ ಮತ್ತು ಅಲ್ಲಲ್ಲಿ ಬ್ರಹ್ಮಸ್ವರೂಪವನ್ನು ನಿರೂಪಿಸುವುದರಿಂದಲೂ ಇದು ಬೇರೆ ಎಲ್ಲ ಕೃತಿಗಳಿಗಿಂತಲೂ ಮೇಲೆನಿಸುತ್ತದೆ. (ಅಳಸಿಂಗಾಚಾರ್ಯರ ಅನುವಾದ) ಇನ್ನೊಂದು ಅರ್ಥವು ಈ ರೀತಿಯಿದೆ: ತಪಸ್ಸು, ಅಧ್ಯಯನ, ವೇದವಿಧಿಗಳು, ಧನಸಂಪಾದನೆ ಇವು ಯಾವುವೂ ಕೆಟ್ಟವಲ್ಲ. ಆದರೆ ಇವೇ ಕ್ರಿಯೆಗಳನ್ನು ಅವುಗಳಲ್ಲಿ ಸ್ವಾಭಾವಿಕವಾಗಿರುವ ಉದ್ದೇಶಗಳಿಗಿಂತಲೂ ಬೇರೆಯೇ ಉದ್ದೇಶಗಳಿಂದ ಮಾಡಿದರೆ ಅವು ಕೆಟ್ಟವೆನಿಸುತ್ತವೆ. ಉದಾಹರಣೆಗೆ, ದುಷ್ಟ ಸಂಕಲ್ಪದಿಂದ ತಪಸ್ಸನ್ನಾಚರಿಸುವುದು ದೋಷ ಮತ್ತು ಪ್ರತಿಷ್ಠೆಯ ಸಾಧನೆಗಾಗಿ ಅಧ್ಯಯನವನ್ನು ಮಾಡುವುದು ದೋಷ.

[161] (ಅಧಿಕಪಾಠ) ಇಲ್ಲಿ ಜಿ2,3 ಗಳಲ್ಲಿ ಮಹಾಭಾರತದ ಘನತೆಯನ್ನು ವರ್ಣಿಸುವ 31 ಸಾಲುಗಳ ಅಧಿಕ ಶ್ಲೋಕಗಳಿವೆ.

[162] ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿಯೂ ಬರುವ “ಇತಿ ಶ್ರೀಮಹಾಭಾರತೇ....” ಎಂಬ ಈ ವಾಕ್ಯಗಳು ಪುಣೆಯ ವಿಮರ್ಶಾತ್ಮಕ ಆವೃತ್ತಿಯಲ್ಲಿಲ್ಲ. ಅಧ್ಯಾಯ ಸಂಖ್ಯೆ ಮತ್ತು ಅಧ್ಯಾಯದ ಶೀರ್ಷಿಕೆಯನ್ನು ಗುರುತಿಸಲು ನಾನು ಇವುಗಳನ್ನು ಗೀತಾ ಪ್ರೆಸ್, ಗೋರಕ್ಷಪುರ ಪ್ರಕಾಶಿತ ಮಹಾಭಾರತ ಸಂಪುಟಗಳಿಂದ ತೆಗೆದುಕೊಂಡಿದ್ದೇನೆ.

 

Leave a Reply

Your email address will not be published. Required fields are marked *