ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು

Related imageಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು. ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ

“ಸೌತಿ! ನೀನು ಎಲ್ಲಿಂದ ಬರುತ್ತಿರುವೆ?”

ಎಂದು ಪ್ರಶ್ನಿಸಿದನು. ಅವನಿಗೆ ಉತ್ತರಿಸುತ್ತ ಸೂತನು ಹೇಳಿದನು:

“ನಾನು ರಾಜಾ ಪರೀಕ್ಷಿತನ ಮಗ ಮಹಾತ್ಮ ರಾಜರ್ಷಿ ಜನಮೇಜಯನ ಸರ್ಪಯಾಗದಲ್ಲಿ ವ್ಯಾಸ ಕೃಷ್ಣದ್ವೈಪಾಯನನು ರಚಿಸಿದ ವಿವಿಧ ಕಥೆಗಳನ್ನೂ ವಿಚಿತ್ರಾರ್ಥಗಳನ್ನೂ ಕೂಡಿದ ಪುಣ್ಯಕಾರಕ ಮಹಾಭಾರತ ಕಥೆಯನ್ನು ವೈಶಂಪಾಯನನು ವಿಧಿವತ್ತಾಗಿ ಹೇಳಿದುದನ್ನು ಕೇಳಿದೆ. ನಂತರ ಹಲವಾರು ತೀರ್ಥಕ್ಷೇತ್ರಗಳನ್ನು ಸುತ್ತಾಡಿ, ಹಿಂದೆ ಕುರು-ಪಾಂಡವರು ಮತ್ತು ಸರ್ವ ರಾಜರು ಯುದ್ಧಮಾಡಿದ ಸಮಂತಪಂಚಕ ಎಂಬ ಹೆಸರಿನ ಪುಣ್ಯ ಪ್ರದೇಶಕ್ಕೆ ಹೋದೆ. ಅಲ್ಲಿಂದ ನಾನು ಈ ಯಜ್ಞದಲ್ಲಿ ಭಾಗವಹಿಸಿರುವ ನಿಮ್ಮೆಲ್ಲರನ್ನೂ ಕಾಣಲು ಬಂದೆ. ದ್ವಿಜರೇ! ಸ್ನಾನ-ಜಪ-ಅಗ್ನಿಹೋತ್ರಗಳನ್ನು ಮುಗಿಸಿ ಕುಳಿತಿರುವ ನಿಮಗೆ ನಾನು ಏನು ಹೇಳಲಿ? ಧರ್ಮಸಂಗತಿಗಳನ್ನೊಡಗೂಡಿದ ಪುರಾಣ ಕಥೆಗಳನ್ನು ಹೇಳಲೇ? ಅಥವಾ ಮಹಾತ್ಮ ಋಷಿ-ನರೇಂದ್ರರ ವೃತ್ತಾಂತಗಳನ್ನು ಹೇಳಲೇ?”

ಋಷಿಗಳು ಮಹಾಭಾರತ ಇತಿಹಾಸವನ್ನು ಕೇಳಲು ಬಯಸುತ್ತೇವೆ ಎನ್ನಲು ಸೂತನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದನು. ಸೂತನು ಹೇಳಿದನು:

“ಆದ್ಯ, ಪುರುಷ, ಈಶ, ಪುರುಹೂತ, ಪುರುಷ್ಠುತ, ಋತ, ಏಕಾಕ್ಷರ, ಬ್ರಹ್ಮ, ವ್ಯಕ್ತಾವ್ಯಕ್ತ ಸನಾತನ, ಅಸಚ್ಚ ಸಚ್ಚ, ವಿಶ್ವ, ಸದಸತ, ಪರಮ, ಪರಾವರಗಳ ಸೃಷ್ಟ, ಪುರಾಣ, ಪರಮ, ಅವ್ಯಯ, ವರೇಣ್ಯ, ಅನಘ, ಶುಚಿ ಮಂಗಲಗಳಲ್ಲಿ ಮಂಗಲಕರ, ವಿಷ್ಣು, ಚರಾಚರಗಳ ಗುರು, ಹರಿ ಹೃಷೀಕೇಶನಿಗೆ ನಮಸ್ಕರಿಸಿ ಮಹರ್ಷಿ ವ್ಯಾಸನ ಅತಿ ಶ್ರೇಷ್ಠ ಕೃತಿಯೆಂದಿನಿಸಿಕೊಂಡಿರುವ ಮಹಾಭಾರತ ಕಥೆಯನ್ನು ಹೇಳಲು ಪ್ರಾರಂಭಿಸುತ್ತೇನೆ. ಋಷಿ ಪರಾಶರ ಮತ್ತು ಸತ್ಯವತಿ ಯರ ಮಗ ಕೃಷ್ಣದ್ವೈಪಾಯನನು ತಾಯಿ ಮತ್ತು ಗಂಗೆ ಯ ಮಗ ಧರ್ಮಾತ್ಮ ಭೀಷ್ಮ ನ ಸೂಚನೆಯಂತೆ ವಿಚಿತ್ರವೀರ್ಯ ನ ಪತ್ನಿಯರಲ್ಲಿ ಧೃತರಾಷ್ಟ್ರ, ಪಾಂಡು ಮತ್ತು ವಿದುರ ರೆಂಬ ಮೂವರು ಪುತ್ರರಿಗೆ ಜನ್ಮವಿತ್ತು ತಪಸ್ಸಿಗೋಸ್ಕರ ತನ್ನ ಆಶ್ರಮಕ್ಕೆ ತೆರಳಿದನು. ತನ್ನ ಮಕ್ಕಳು ವೃದ್ಧರಾಗಿ ಪರಮಗತಿಯನ್ನು ಹೊಂದಿದ ಬಳಿಕ ಆ ಮಹಾನೃಷಿಯು ಭಾರತವನ್ನು ತನ್ನ ಮನಸ್ಸಿನ ಅಂತರಾಳದಲ್ಲಿಯೇ ರಚಿಸಿ ಶಿಷ್ಯರಿಗೆ ಇದನ್ನು ಹೇಗೆ ಕಲಿಸಲಿ ಎಂದು ಚಿಂತಿಸಿದನು. ಅವನ ಆ ಚಿಂತನೆಯನ್ನು ಮನಗಂಡ ಲೋಕಗುರು ಸ್ವಯಂ ಭಗವಾನ್ ಬ್ರಹ್ಮನು ಲೋಕ ಕಲ್ಯಾಣಾರ್ಥವಾಗಿ ಅವನ ಆಸೆಯನ್ನು ಈಡೇರಿಸಲು ಅಲ್ಲಿಗೆ ಆಗಮಿಸಿದನು. ಅವನನ್ನು ನೋಡಿ ವಿಸ್ಮಿತನಾದ ದ್ವೈಪಾಯನನು ಕೈಜೋಡಿಸಿ ನಮಸ್ಕರಿಸಿ, ಉತ್ತಮ ಆಸನವನ್ನು ನೀಡಿ, ಪ್ರದಕ್ಷಿಣೆಮಾಡಿ, ಅವನ ಬಳಿ ನಿಂತುಕೊಂಡನು. ಪ್ರೀತಿಯ ಮಂದಹಾಸವನ್ನು ಬೀರುತ್ತಿದ್ದ ಬ್ರಹ್ಮನಿಂದ ಅನುಜ್ಞೆಪಡೆದ ಅವನೂ ಕೂಡ ಆಸನದಲ್ಲಿ ಕುಳಿತುಕೊಂಡು ಹೇಳಿದನು:

“ಭಗವನ್! ನಾನು ಪರಮಪೂಜಿತ ಕಾವ್ಯವೊಂದನ್ನು ರಚಿಸಿದ್ದೇನೆ. ಇದರಲ್ಲಿ ವೇದಗಳ, ವೇದಾಂಗಗಳಾದ ಉಪನಿಷತ್ತುಗಳ ಮತ್ತು ಇತರ ರಹಸ್ಯಗಳನ್ನು ವಿಸ್ತಾರವಾಗಿ ಅಳವಡಿಸಿದ್ದೇನೆ. ಇತಿಹಾಸ-ಪುರಾಣಗಳೂ ಸೇರಿರುವ ಇದರಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯ ಈ ಮೂರೂ ಕಾಲಗಳ ಮಿಶ್ರಣವಿದೆ. ಇದರಲ್ಲಿ ವೃದ್ಧಾಪ್ಯ, ಮೃತ್ಯು, ಭಯ, ವ್ಯಾದಿಗಳ ಭಾವಾಭಾವ ನಿಶ್ಚಯವಿದೆ ಮತ್ತು ವಿವಿಧ ಕಾಲ-ಧರ್ಮ-ಆಶ್ರಮಗಳ ಲಕ್ಷಣಗಳೂ ಇವೆ. ಇದರಲ್ಲಿ ನ್ಯಾಯ, ಶಿಕ್ಷೆ, ಚಿಕಿತ್ಸೆ, ದಾನಗಳ ವಿವರಗಳು, ಪಶುಪತಿ, ದೇವತೆಗಳು ಮತ್ತು ಮನುಷ್ಯರ ಜನ್ಮಕಾರಣಗಳೂ ಇವೆ. ಪುಣ್ಯತೀರ್ಥ ಪ್ರದೇಶಗಳ, ನದಿ-ಪರ್ವತ-ವನ-ಸಾಗರಗಳ ಕೀರ್ತನೆಯೂ ಇದರಲ್ಲಿದೆ. ದಿವ್ಯಪುರಗಳ ನಿರ್ಮಾಣ-ರಚನೆ, ಯುದ್ಧ ಕೌಶಲ, ಲೋಕಯಾತ್ರೆಗೆ ಅನುಕೂಲವಾಗುವಂಥವುಗಳು ಮತ್ತು ಹೀಗೆ ಸರ್ವವಸ್ತುಗಳ ಪ್ರತಿಪಾದನೆಯನ್ನೂ ಇದರಲ್ಲಿ ಮಾಡಿದ್ದೇನೆ. ಆದರೆ ಭುವಿಯಲ್ಲಿ ಇದನ್ನು ಬರೆಯುವವರು ಯಾರು ಎನ್ನುವುದು ತಿಳಿಯದಾಗಿದೆ!”

ಬ್ರಹ್ಮನು ಹೇಳಿದನು:

“ಕೃಷ್ಣ! ರಹಸ್ಯಜ್ಞಾನವನ್ನು ಪಡೆದಿರುವ ನಿನ್ನನ್ನು ವಿಶಿಷ್ಟ ತಪಸ್ವಿ-ಮುನಿಸಂಚಯದಲ್ಲಿ ಶ್ರೇಷ್ಠತರನೆಂದು ಮನ್ನಿಸುತ್ತೇನೆ. ಹುಟ್ಟಿದಾಗಿನಿಂದಲೇ ಬ್ರಹ್ಮವಾದಿಯಾಗಿರುವ ನಿನಗೆ ತಿಳಿದುದೆಲ್ಲವೂ ಸತ್ಯವೇ. ನೀನು ಇದನ್ನು ಕಾವ್ಯವೆಂದು ಹೇಳಿದುದರಿಂದ ಇದು ಕಾವ್ಯವೇ ಆಗುತ್ತದೆ. ಗೃಹಸ್ಥಾಶ್ರಮದ ವಿಶೇಷತೆ ಹೇಗೆ ಇತರ ಮೂರು ಆಶ್ರಮಗಳಲ್ಲಿಲ್ಲವೋ ಹಾಗೆ ಈ ಕಾವ್ಯದ ವಿಶೇಷತೆಗೆ ಬೇರೆ ಯಾವ ಕವಿಯೂ ಅಸಮರ್ಥ. ಮುನೇ! ಕಾವ್ಯವನ್ನು ಬರೆಯುವುದಕ್ಕೋಸ್ಕರ ಗಣೇಶನನ್ನು ಸ್ಮರಿಸು!” 

ಹೀಗೆ ಹೇಳಿ ಬ್ರಹ್ಮನು ತನ್ನ ಲೋಕಕ್ಕೆ ತೆರಳಿದನು.

ನಂತರ ಸತ್ಯವತೀ ಸುತ ವ್ಯಾಸನು ಗಣಪತಿ ಹೇರಂಬನ್ನು ಸ್ಮರಿಸಿದನು. ಸ್ಮರಣಮಾತ್ರದಲ್ಲಿ ಭಕ್ತರು ಎಣಿಸಿದುದನ್ನು ಪೂರೈಸುವ ವಿಘ್ನೇಶ ಗಣೇಶನು ಅಲ್ಲಿಗೆ ಆಗಮಿಸಿದನು. ಅವನನ್ನು ಕುಳ್ಳಿರಿಸಿ ಪೂಜಿಸಿದ ನಂತರ ವ್ಯಾಸನು ಅವನಿಗೆ

“ಗಣನಾಯಕ! ನನ್ನ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಹೇಳುವ ಈ ಭಾರತದ ಲೇಖಕನಾಗು!”

ಎಂದು ಕೇಳಿಕೊಂಡನು. ಅದಕ್ಕೆ ವಿಘ್ನೇಶನು ಹೇಳಿದನು:

“ಬರೆಯುವಾಗ ಒಂದು ಕ್ಷಣವೂ ವಿರಾಮವಿಲ್ಲದಂತಾದರೆ ಮಾತ್ರ ನಾನು ಇದರ ಲೇಖಕನಾಗಬಲ್ಲೆ!”.

ಅದಕ್ಕೆ ವ್ಯಾಸನು

“ಅರ್ಥಮಾಡಿಕೊಳ್ಳದೇ ಏನನ್ನೂ ಬರೆಯಬಾರದು!”

ಎಂದು ಉತ್ತರಿಸಲು, ಗಣೇಶನು ಓಂಕಾರದೊಂದಿಗೆ ಭಾರತದ ಲೇಖಕನಾದನು. ಆಗ ಮುನಿಯು ಕುತೂಹಲದಿಂದ ಶ್ಲೋಕಗಳ ಗಂಟು-ಗಂಟು ಹಾಕಿ ನಿಗೂಢಗಳನ್ನು ರಚಿಸಿದನು. ಸರ್ವಜ್ಞ ಗಣೇಶನೂ ಕೂಡ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಿದ್ದನು. ಆ ಸಮಯದಲ್ಲಿ ವ್ಯಾಸನು ಇತರ ಅನೇಕ ಶ್ಲೋಕಗಳನ್ನು ರಚಿಸುತ್ತಿದ್ದನು. ಅಂಥಹ ಸುಮಾರು ೮,೮೦೦ ಶ್ಲೋಕಕೂಟಗಳ ಗುಟ್ಟು ಇದೂವರೆಗೆ ಸುದೃಢವಾಗಿಯೇ ಇದ್ದು ಅವುಗಳ ಗೂಢಾರ್ಥಗಳನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲವಾಗಿದೆ.

ದ್ವೈಪಾಯನನು ಮೊದಲು ಇದನ್ನು ಮಗ ಶುಕ ನಿಗೆ ಉಪದೇಶಿಸಿ, ನಂತರ ಅನುರೂಪ ಶಿಷ್ಯರಿಬ್ಬರಿಗೆ ಹೇಳಿಕೊಟ್ಟನು. ನಾರದ ನು ಇದನ್ನು ದೇವತೆಗಳಿಗೆ, ಅಸಿತ ದೇವಲ ನು ಪಿತೃಗಳಿಗೆ ಮತ್ತು ಶುಕನು ಗಂಧರ್ವ-ಯಕ್ಷ-ರಾಕ್ಷಸರಿಗೆ ಹೇಳಿದನು. ಮನುಷ್ಯಲೋಕದಲ್ಲಿ ಮೊಟ್ಟಮೊದಲನೆಯ ಬಾರಿ ಸರ್ಪಯಾಗದ ಕರ್ಮಾಂತರಗಳಲ್ಲಿ ಸೇರಿದ್ದ ಸಹಸ್ರಾರು ಬ್ರಾಹ್ಮಣರ ಜೊತೆ ಕುಳಿತಿದ್ದ ಜನಮೇಜಯನು ಪುನಃ ಪುನಃ ಕೇಳಿಕೊಂಡಾಗ ವ್ಯಾಸನು ಸದಸ್ಯರೊಡನೆ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಭಾರತವನ್ನು ಹೇಳಲು ಅಪ್ಪಣೆಯನ್ನಿತ್ತನು.

ತನ್ನ ಪರಾಕ್ರಮದಿಂದ ಅನೇಕ ದೇಶಗಳನ್ನು ಯುದ್ಧದಲ್ಲಿ ಗೆದ್ದು ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ತನ್ನವರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಿದ್ದನು. ಒಮ್ಮೆ ಬೇಟೆಯಾಡುತ್ತಿರುವಾಗ ಒಂದು ಆಪತ್ತನ್ನು ತಂದುಕೊಂಡ ನಂತರ ಅವನ ಮಕ್ಕಳ ಹುಟ್ಟು ಮತ್ತು ವಿಧಿಕರ್ಮಾಚಾರಗಳು ಕಾಡಿನಲ್ಲಿಯೇ ನಡೆಯಿತು. ಕುಂತಿ ಮತ್ತು ಮಾದ್ರಿ – ಇಬ್ಬರು ತಾಯಂದಿರೂ ಧರ್ಮೋಪನಿಷಧದ ಪ್ರಕಾರ ಧರ್ಮ, ವಾಯು, ಇಂದ್ರ ಮತ್ತು ಅಶ್ವಿನೀ ದೇವತೆಗಳಿಂದ ಪುತ್ರರನ್ನು ಪಡೆದರು. ಮಕ್ಕಳು ಆ ದಟ್ಟ ಅರಣ್ಯದಲ್ಲಿ ಪುಣ್ಯಕರ ಮಹಾ ಆಶ್ರಮಗಳಲ್ಲಿ ತಾಪಸಿಗಳ ಮಧ್ಯೆ ಬೆಳೆದರು. ಪಾಂಡುವಿನ ಮರಣಾನಂತರ ಬ್ರಹ್ಮಚಾರಿಗಳಂತೆ ಜಟಾಧಾರಿಗಳಾಗಿ ತಾಪಸಿಗಳ ರೂಪಧರಿಸಿದ್ದ ಮಕ್ಕಳನ್ನು ಸ್ವಯಂ ಋಷಿಗಳೇ ಧೃತರಾಷ್ಟ್ರನಲ್ಲಿಗೆ ಕರೆತಂದರು.

“ಈ ನಮ್ಮ ಮೆಚ್ಚಿನ ಶಿಷ್ಯರು ನಿನ್ನ ತಮ್ಮ ಪಾಂಡುವಿನ ಮಕ್ಕಳು!”

ಎಂದು ಹೇಳಿ ಆ ಮುನಿಗಳು ನಗರದ್ವಾರದಲ್ಲಿಯೇ ಅಂತರ್ಧಾನರಾದರು. ಅವರು ಕರೆತಂದು ಬಿಟ್ಟುಹೋದ ಪಾಂಡವರನ್ನು ಕಂಡು ಕೌರವರು ಮತ್ತು ಪೌರರು ಎಲ್ಲರೂ ಹರ್ಷಭರಿತರಾದರು. ಕೆಲವರು

“ಚಿರಮೃತ ಪಾಂಡುವಿಗೆ ಮಕ್ಕಳು ಹೇಗಾದರು? ಇವರು ಅವನ ಮಕ್ಕಳಿರಲಿಕ್ಕಿಲ್ಲ!”

ಎಂದು ಹೇಳಿದರೆ ಕೆಲವರು

“ಇವರು ಅವನದ್ದೇ ಮಕ್ಕಳು!”

ಎಂದು ಒಪ್ಪಿಕೊಂಡರು.

“ಪಾಂಡುವಿನ ಸಂತತಿಯನ್ನು ನೋಡಲು ದೊರಕಿರುವ ನಾವೇ ಧನ್ಯರು. ಅವರಿಗೆ ಸರ್ವಥಾ ಸ್ವಾಗತ! ನಾವೆಲ್ಲರೂ ಅವರನ್ನು ಸ್ವಾಗತಿಸುತ್ತೇವೆ!”

ಎನ್ನುವ ಮಾತುಗಳು ಎಲ್ಲ ದಿಕ್ಕುಗಳಲ್ಲಿಯೂ ಕೇಳಿಬರುತ್ತಿತ್ತು. ಈ ರೀತಿ ಎಲ್ಲ ಕಡೆ ಶಬ್ಧ-ನಿನಾದಗಳು, ಸ್ವರ್ಗದಲ್ಲಿಯೂ ಕೇಳಿಬರುವಷ್ಟು ಹೆಚ್ಚಾಗುತ್ತಿರಲು ಅಶರೀರ ವಾಣಿಯು ಆ ತುಮುಲವನ್ನು ಶಾಂತಗೊಳಿಸಿತು. ಪಾಂಡವರು ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಹಲವಾರು ಅಧ್ಭುತಗಳು ನಡೆದವು: ಹೂಮಳೆಯು ಸುರಿಯಿತು. ಮಂಗಳಕರ ಸುಗಂಧಯುಕ್ತ ಗಾಳಿಯು ಬೀಸತೊಡಗಿತು. ಶಂಖ-ದುಂದುಭಿಗಳ ಸುಸ್ವರವು ಕೇಳಿಬಂದಿತು.

ಪಾಂಡವರು ಅಲ್ಲಿ ಯಾರಿಂದಲೂ ಕಡೆಗಣಿಸಲ್ಪಡದೇ, ಎಲ್ಲರಿಂದ ಪೂಜಿತರಾಗಿ ವಾಸಿಸುತ್ತಿದ್ದು ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ ಅಧ್ಯಯನ ಮಾಡಿದರು. ಯುಧಿಷ್ಠಿರನ ಪವಿತ್ರತೆ, ಭೀಮಸೇನನ ಧೈರ್ಯ, ಅರ್ಜುನನ ವಿಕ್ರಮ, ಕುಂತಿಯ ಶುಶ್ರೂಷೆ, ಅವಳಿ ಮಕ್ಕಳ ವಿನಯ ಮತ್ತು ಇವೆಲ್ಲವುಗಳನ್ನೂ ಮೀರಿದ ಅವರ ಶೌರ್ಯಗುಣಗಳಿಂದ ಎಲ್ಲ ಜನರೂ ಸಂತುಷ್ಟರಾದರು. ಸಮಯಾನಂತರದಲ್ಲಿ ಅರ್ಜುನನು ಸ್ವಯಂವರದಲ್ಲಿ ದುಷ್ಕರ ಕಾರ್ಯವೊಂದನ್ನೆಸಗಿ ರಾಜಕನ್ಯೆ ದ್ರುಪದನ ಮಗಳು ಕೃಷ್ಣೆಯನ್ನು ಪತ್ನಿಯನ್ನಾಗಿ ಪಡೆದನು. ಅಂದಿನಿಂದ ಅವನು ಸರ್ವಲೋಕದ ಧನುಷ್ಮಂತರಲ್ಲಿ ಪೂಜನೀಯ ಮತ್ತು ಸಮರದಲ್ಲಿ ಕಣ್ಣುಕುಕ್ಕುವ ಸೂರ್ಯನಂತೆ ನೋಡಲಸಾಧ್ಯ ಎನ್ನಿಸಿಕೊಂಡನು. ಅವನು ಎಲ್ಲ ರಾಜರನ್ನೂ ಅವರೆಲ್ಲರ ಮಹತ್ತರ ಸೈನ್ಯಗಳನ್ನೂ ಗೆದ್ದು ಯುಧಿಷ್ಠಿರನ ರಾಜಸೂಯ ಮಹಾಯಜ್ಞಕ್ಕೆ ಸಹಾಯಮಾಡಿದನು. ವಾಸುದೇವ ಕೃಷ್ಣನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಬಲಗರ್ವಿತ ಜರಾಸಂಧ ಮತ್ತು ಶಿಶುಪಾಲರನ್ನು ಸಂಹರಿಸಿ ಯುಧಿಷ್ಠಿರನು ಎಲ್ಲ ಉತ್ತಮ ಗುಣಗಳಿಂದಲೂ ಕೂಡಿದ ಬಹು ವಿಜೃಂಭಿತ ರಾಜಸೂಯ ಯಾಗವನ್ನು ಪೂರೈಸಿದನು.

ಆ ಸಮಯದಲ್ಲಿ ಮಣಿ-ಕಾಂಚನ-ರತ್ನ-ಗೋವು-ಆನೆ-ಅಶ್ವಧನಗಳಿಂದ ಕೂಡಿದ್ದ ಪಾಂಡವರ ಸಮೃದ್ಧ ಸಂಪತ್ತನ್ನು ನೋಡಿದ ದುರ್ಯೋಧನನಲ್ಲಿ ಅಸೂಯೆ-ಕೋಪಗಳು ಮೂಡಿದವು. ಪಾಂಡವರಿಗೆ ಉಡುಗೊರೆಯಾಗಿ ದೊರಕಿದ್ದ ಮಯ ನಿರ್ಮಿತ ವಿಮಾನಸದೃಶ ಸಭೆಯನ್ನು ನೋಡಿ ಅವನು ಇನ್ನೂ ಹೆಚ್ಚು ಬೆಂದನು. ಅಲ್ಲಿಯೇ ಭ್ರಮೆಗೊಂಡು ಜಾರಿ ಬಿದ್ದಾಗ ಅವನು ಭೀಮಸೇನನಿಂದ ಅವಹೇಳನೆಗೊಳಪಟ್ಟನು. ವಿವಿಧ ಭುಂಜನ-ರತ್ನಗಳನ್ನು ಭೋಗಿಸುತ್ತಿದ್ದರೂ ಅವನು ವಿವರ್ಣನಾಗಿ ಕೃಶನಾಗುತ್ತಿದ್ದಾನೆ ಎಂದು ಧೃತರಾಷ್ಟ್ರನಿಗೆ ತಿಳಿಯಿತು. ಮಗನ ಮೇಲಿನ ಪ್ರೀತಿಯಿಂದ ಅವನು ದ್ಯೂತವನ್ನು ಆಜ್ಞಾಪಿಸಿದನು. ವಿದುರ, ದ್ರೋಣ, ಭೀಷ್ಮ, ಕೃಪ ಇವರ ಮಾತುಗಳನ್ನು ನಿರಾಕರಿಸಿ ಘೋರ ಯುದ್ಧದಲ್ಲಿ ಕ್ಷತ್ರಿಯರು ಪರಸ್ಪರರನ್ನು ಸಂಹರಿಸುವಂತೆ ಮಾಡಿದನು. ಪಾಂಡುಪುತ್ರರು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮೇಲೆ ಜಯಗಳಿಸಿದರು ಎಂಬ ಅತಿ ಅಪ್ರಿಯ ವಿಷಯವನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಸಂಜಯನಿಗೆ ಹೇಳಿದನು:

ಸಂಜಯ! ನಾನು ಹೇಳುವುದೆಲ್ಲವನ್ನೂ ಕೇಳು. ಮೇಧಾವಿಯೂ, ಬುದ್ಧಿವಂತನೂ ಆಗಿರುವ ನೀನು ಇದಕ್ಕೆಲ್ಲ ನಾನೇ ಕಾರಣನೆಂದು ತಿಳಿದುಕೊಳ್ಳಬೇಡ! ಈ ಕುರುಕ್ಷಯಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಮತ್ತು ಇದು ನನಗೆ ಇಷ್ಟವಾಗಿಯೂ ಇರಲಿಲ್ಲ. ನನ್ನ ಪುತ್ರರಲ್ಲಿ ಮತ್ತು ಪಾಂಡುಪುತ್ರರಲ್ಲಿ ನನಗೆ ಯಾವುದೇ ವ್ಯಾತ್ಯಾಸಗಳಿರಲಿಲ್ಲ. ಕೆಟ್ಟದಾರಿ ಹಿಡಿದಿದ್ದ ನನ್ನ ಪುತ್ರರು ಈ ಕುರುಡ ವೃದ್ಧ ದೀನನನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಪುತ್ರರ ಮೇಲಿನ ಪ್ರೀತಿಯಿಂದ ಅವೆಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೆ. ಮೂಢ ದುರ್ಯೋಧನನು ಬೇಸರಗೊಂಡಾಗಲೆಲ್ಲಾ ನಾನೂ ಬೇಸರಗೊಳ್ಳುತ್ತಿದ್ದೆನು. ರಾಜಸೂಯದಲ್ಲಿ ಮಹಾತೇಜಸ್ವಿ ಪಾಂಡವರ ಅಪಾರ ಸಂಪತ್ತನ್ನು ನೋಡಿ ಮತ್ತು ಸಭಾದರ್ಶನದ ವೇಳೆಯಲ್ಲಿ ಹಾಸ್ಯಕ್ಕೊಳಪಟ್ಟ ಅವನು ಪಾಂಡವರನ್ನು ರಣದಲ್ಲಿ ಗೆಲ್ಲುವುದು ನನಗೆ ಸಾಧ್ಯವಾದುದಲ್ಲ ಎಂದು ತಿಳಿದು ನಿರುತ್ಸಾಹಗೊಂಡು ಶಕುನಿಯ ಜೊತೆಗೂಡಿ ಸಂಪತ್ತನ್ನು ಪಡೆಯಲೋಸುಗ ಕ್ಷತ್ರಿಯರಿಗೆ ಶೋಭಿಸದ ದ್ಯೂತಕ್ಕೆ ಅವರನ್ನು ಆಮಂತ್ರಿಸಿದನು. ಇದರ ಮೊದಲು ಮತ್ತು ನಂತರ ಏನೆಲ್ಲ ಆಯಿತು ಎಂದು ನನಗೆ ತಿಳಿದಿದ್ದನ್ನು ಹೇಳುತ್ತೇನೆ ಕೇಳು. ನನ್ನ ಈ ಮಾತುಗಳನ್ನು ಕೇಳಿದರೆ ನನಗೂ ಪ್ರಜ್ಞೆಯ ಕಣ್ಣಿದೆ ಎನ್ನುವುದು ನಿನಗೆ ತಿಳಿಯುತ್ತದೆ!

ಎಲ್ಲ ರಾಜರ ಸಮಕ್ಷಮದಲ್ಲಿ ಅರ್ಜುನನು ಅದ್ಭುತವಾಗಿ ಧನುಸ್ಸನ್ನು ಹೂಡಿ ಲಕ್ಷ್ಯವನ್ನು ನೆಲಕ್ಕುರುಳಿಸಿ ಕೃಷ್ಣೆಯನ್ನು ಕೊಂಡೊಯ್ದಾಗ, ಅರ್ಜುನನು ದ್ವಾರಕೆಯಿಂದ ಸುಭದ್ರೆಯನ್ನು ಅಪಹರಿಸಿಸಲು ಕೃಷ್ಣ-ಬಲರಾಮರಿಬ್ಬರೂ ಇಂದ್ರಪ್ರಸ್ಥಕ್ಕೆ ಬಂದಾಗ, ಮತ್ತು ದಿವ್ಯಶರಗಳ ಮಳೆಯನ್ನು ಸುರಿಸುತ್ತಿರುವ ದೇವರಾಜ ಇಂದ್ರನನ್ನು ತಡೆದು ಅರ್ಜುನನು ಅಗ್ನಿಗೆ ಖಾಂಡವವನ್ನಿತ್ತು ತೃಪ್ತಿಪಡಿಸಿದಾಗಲೇ ನನಗೆ ನಮ್ಮ ವಿಜಯದ ಕುರಿತು ಸಂಶಯವಿತ್ತು ಸಂಜಯ!

ಪತಿಗಳಿದ್ದರೂ ಅನಾಥಳಂತೆ ದುಃಖಿತಳಾಗಿ, ಏಕವಸ್ತ್ರಧಾರಿಯಾಗಿ, ಕಣ್ಣೀರಿನಿಂದ ಗಂಟಲು ಕಟ್ಟಿಹೋಗಿದ್ದ ರಜಸ್ವಲೆ ಅಶೃಕಂಠೀ ದ್ರೌಪದಿಯನ್ನು ಸಭೆಗೆ ಎಳೆದುತಂದರು; ಶಕುನಿಯಿಂದ ಜೂಜಿನಲ್ಲಿ ಸೋತು ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡರೂ ಅವನ ಸಹೋದರರು ಅವನನ್ನು ಅನುಸರಿಸಿದರು; ವನದಲ್ಲಿ ಎಲ್ಲ ಕಷ್ಟಗಳನ್ನು ಅನುಭವಿಸಿದರು ಮತ್ತು ಅಲ್ಲಿಯೂ ಕೂಡ ಯುಧಿಷ್ಠಿರನು ಮಹಾತ್ಮ ಬ್ರಾಹ್ಮಣರಿಗೆ ಭಿಕ್ಷೆ-ಬೋಜನಗಳನ್ನಿತ್ತನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಅರ್ಜುನನು ಕಿರಾತರೂಪೀ ದೇವದೇವ ತ್ರಯಂಬಕ ಶಿವನನ್ನು ಯುದ್ಧದಲ್ಲಿ ತೃಪ್ತಿಗೊಳಿಸಿ ಮಹಾಸ್ತ್ರ ಪಾಶುಪತವನ್ನು ಪಡೆದನು ಮತ್ತು ದೇವಲೋಕವನ್ನು ಪ್ರವೇಶಿಸಿ ಅಲ್ಲಿ ಸಾಕ್ಷಾತ್ ಇಂದ್ರನಿಂದ ದಿವ್ಯಾಸ್ತ್ರಗಳನ್ನು ಪಡೆದ, ಮತ್ತು ಭೀಮ ಮತ್ತು ಇತರ ಪಾರ್ಥರು ಮನುಷ್ಯರು ಮೊದಲೆಂದೂ ಹೋಗದೇ ಇದ್ದ ಪ್ರದೇಶಗಳಿಗೆ ಹೋದರೆಂದು ಯಾವಾಗ ಕೇಳಿದೆನೋ ಅಂದೇ ನಾನು ವಿಜಯದ ಆಸೆಯನ್ನು ತೊರೆದಿದ್ದೆನು.

ಕರ್ಣನನ್ನೇ ನಂಬಿ ಅವನು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದ ನನ್ನ ಮಗನು ಘೋಷಯಾತ್ರೆಯಲ್ಲಿ ಗಂಧರ್ವರಿಂದ ಬಂಧಿಯಾಗಿದ್ದಾಗ ಅರ್ಜುನನಿಂದ ಬಿಡುಗಡೆಗೊಳಿಸಲ್ಪಟ್ಟ; ಯಕ್ಷರೂಪದಲ್ಲಿ ಬಂದ ಧರ್ಮನು ಕೇಳಿದ ಪ್ರಶ್ನೆಗಳಿಗೆಲ್ಲ ಧರ್ಮರಾಜನು ಉತ್ತರಿಸಿ ಅವನನ್ನು ತೃಪ್ತಿಗೊಳಿದ; ಅವರು ವಿರಾಟರಾಷ್ಟ್ರದಲ್ಲಿ ವಾಸಿಸುತ್ತಿರುವಾಗ ಹಿರಿಯರಿಂದೊಡಗೂಡಿದ ನಮ್ಮ ಕಡೆಯವರೆಲ್ಲರನ್ನೂ ಏಕಾಕಿಯಾಗಿ ಅರ್ಜುನನು ಸೋಲಿಸಿದ; ಮತ್ಸ್ಯರಾಜನು ಅರ್ಜುನನನ್ನು ಸತ್ಕರಿಸಿ ತನ್ನ ಮಗಳು ಉತ್ತರೆಯನ್ನು ಕೊಟ್ಟಾಗ ಅರ್ಜುನನು ಅವಳನ್ನು ತನ್ನ ಮಗ ಅಭಿಮನ್ಯುವಿಗಾಗಿ ಸ್ವೀಕರಿಸಿದ; ಮತ್ತು ರಾಜ್ಯ ಸಂಪತ್ತುಗಳನ್ನು ಕಳೆದುಕೊಂಡು ತನ್ನವರ ಸಂಪರ್ಕವನ್ನೇ ಕಳೆದುಕೊಂಡಿದ್ದ ಯುಧಿಷ್ಠಿರನು ಏಳು ಅಕ್ಷೋಹಿಣೀ ಸೇನೆಯನ್ನು ಒಂದುಗೂಡಿಸಿದ – ಇವೆಲ್ಲವನ್ನೂ ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಕೃಷ್ಣಾರ್ಜುನರು ಬ್ರಹ್ಮಲೋಕದಲ್ಲಿ ಜೊತೆಜೊತೆಯಾಗಿ ಕಂಡುಬರುವ ನರನಾರಾಯಣರು ಎಂದು ಯಾವಾಗ ನಾರದನು ನನಗೆ ಹೇಳಿದನೋ, ಮತ್ತು ಇಡೀ ವಿಶ್ವವನ್ನೇ ಒಂದು ಪಾದದಲ್ಲಿ ಅಳೆದ ವಿಕ್ರಮಿ ಮಾಧವ ವಾಸುದೇವನ ಆತ್ಮವು ಪಾಂಡವರ ಹಿತವನ್ನೇ ಬಯಸುತ್ತದೆ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಇನ್ನೂ ಅನೇಕ ವಿಷಯಗಳನ್ನು ಕೇಳಿದಾಗಲೆಲ್ಲಾ ನಮಗೆ ಯುದ್ಧದಲ್ಲಿ ಗೆಲುವಾಗಲಿಕ್ಕಿಲ್ಲ ಎಂದು ನನಗನ್ನಿಸಿತ್ತು: ಕೇಶವನನ್ನು ಬಂಧಿಸಲು ಯೋಚಿಸುತ್ತಿದ್ದ ಕರ್ಣ-ದುರ್ಯೋಧನರಿಗೆ ಕೃಷ್ಣನು ತನ್ನ ಬಹುರೂಪಗಳನ್ನು ಕಾಣಿಸಿದುದು; ವಾಸುದೇವನು ಇಲ್ಲಿಂದ ಹಿಂದಿರುಗುವಾಗ ಕುಂತಿಯು ಅವನ ರಥದ ಎದುರಿನಲ್ಲಿ ನಿಂತು ಶೋಕಿಸಲು ಕೇಶವನು ಅವಳನ್ನು ಸಂತವಿಸಿದುದು; “ನೀನಿರುವ ವರೆಗೆ ನಾನು ಯುದ್ಧಮಾಡುವುದಿಲ್ಲ!” ಎಂದು ಭೀಷ್ಮನಿಗೆ ಹೇಳಿ ಕರ್ಣನು ಸೇನೆಯನ್ನು ಬಿಟ್ಟು ಹೋದುದು; ದುಃಖಿತ ಅರ್ಜುನನು ರಥದ ಮೇಲೆ ಕುಸಿದು ಶೋಕಿಸುತ್ತಿರುವಾಗ ಕೃಷ್ಣನು ತನ್ನ ಶರೀರದಲ್ಲಿ ವಿಶ್ವವನ್ನೇ ತೋರಿಸಿದುದು; ಮಹಾರಥಿ ಭೀಷ್ಮನು ಪ್ರತಿದಿನ ಹತ್ತು ಸಾವಿರ ರಥಿಗಳನ್ನು ಕೊಂದರೂ ಪಾಂಡವ ಪ್ರಮುಖರಲ್ಲಿ ಯಾರೊಬ್ಬನನ್ನೂ ಕೊಲ್ಲದೇ ಇದ್ದುದು; ಶಿಖಂಡಿಯನ್ನು ರಥದಲ್ಲಿರಿಸಿಕೊಂಡು ಪಾರ್ಥನು ಅತ್ಯಂತ ಶೂರ, ಗೆಲ್ಲಲಸಾಧ್ಯ ಭೀಷ್ಮನನ್ನು ಉರುಳಿಸಿದುದು.

ಚಿತ್ರಯೋಧೀ ದ್ರೋಣನೂ ಕೂಡ ಸಮರದಲ್ಲಿ ವಿವಿಧ ಅಸ್ತ್ರಗಳ ಪ್ರದರ್ಶನ ಮಾಡಿದರೂ ಪಾಂಡವರಲ್ಲಿ ಶ್ರೇಷ್ಠನಾದ ಯಾರೊಬ್ಬನನ್ನೂ ಕೊಲ್ಲಲಿಲ್ಲ. ವೀರ ಕರ್ಣನೂ ಕೂಡ ಧನುಸ್ಸಿನ ತುದಿಯಿಂದ ಭೀಮನನ್ನು ಎಳೆಯುತ್ತಾ ತನ್ನ ವಶದಲ್ಲಿ ತೆಗೆದುಕೊಂಡಿದ್ದರೂ ಬರಿಯ ಮೂದಲಿಕೆಯ ಮಾತುಗಳನ್ನು ಹೇಳಿ ಅವನನ್ನು ವಧಿಸದೇ ಬಿಟ್ಟನು. ದ್ರೋಣ, ಕೃತವರ್ಮ, ಕೃಪ, ಕರ್ಣ, ಅಶ್ವತ್ಥಾಮ ಮತ್ತು ಮದ್ರರಾಜ ಶಲ್ಯ ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು. ದೇವರಾಜನಿಂದ ದೊರೆತ ದಿವ್ಯ ಶಕ್ತಿಯನ್ನು ಕರ್ಣನು ಮಾಧವನ ಯೋಜನೆಯಂತೆ ಘೋರರೂಪೀ ರಾಕ್ಷಸ ಘಟೋತ್ಕಚನ ಮೇಲೆ ಉಪಯೋಗಿಸಿದನು. ಆಚಾರ್ಯ ದ್ರೋಣನು ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತನಾಗಿದ್ದಾಗ ಧರ್ಮವನ್ನು ಅತಿಕ್ರಮಿಸಿ ಧೃಷ್ಟದ್ಯುಮ್ನನು ಅವನನ್ನು ಸಂಹರಿಸಿದನು. ದ್ರೋಣಾವಸಾನದ ನಂತರ ಅವನ ಮಗ ಅಶ್ವತ್ಥಾಮನು ಬಿಟ್ಟ ದಿವ್ಯ ನಾರಾಯಣಾಸ್ತ್ರವೂ ಪಾಂಡವರನ್ನು ಕೊನೆಗೊಳಿಸುವಲ್ಲಿ ಅಸಫಲವಾಯಿತು. ಯುದ್ಧದಲ್ಲಿ ಗೆಲ್ಲಲಸಾಧ್ಯ ಅತಿ ಶೂರನ ಕರ್ಣನೂ ಕೂಡ ದೇವತೆಗಳಿಗೂ ಗುಹ್ಯವಾಗಿದ್ದ ಆ ಸಹೋದರರ ಸಮರದಲ್ಲಿ ಪಾರ್ಥನಿಂದ ಹತನಾದ! ಸಂಗ್ರಾಮ ಸಾರಥ್ಯದಲ್ಲಿ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ ಮತ್ತು ಕಲಹದ್ಯೂತದ ಮೂಲ, ಮಹಾಮಾಯ ಪಾಪಿ ಸೌಬಲ ಶಕುನಿಯು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತರಾದರು. ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗ ವಾಸುದೇವನನ್ನೊಡಗೂಡಿದ ಪಾಂಡವರು ಅದೇ ಸರೋವರದ ದಡದಮೇಲೆ ನಿಂತು ನನ್ನ ಮಗನನ್ನು ಅಸಹ್ಯ ಮತ್ತು ಅಶ್ಲೀಲವಾಗಿ ಮೂದಲಿಸಿದರು. ಗದಾಯುದ್ಧದಲ್ಲಿ ಅತ್ಯಂತ ಕುಶಲಿಯಾಗಿದ್ದ ನನ್ನ ಮಗನನ್ನು ಕೃಷ್ಣನ ಸಲಹೆಯಂತೆ ಅನ್ಯಾಯವಾಗಿ ಹೊಡೆದುರುಳಿಸಲಾಯಿತು! ಮಲಗಿದ್ದ ಪಾಂಚಾಲ ಮತ್ತು ದ್ರೌಪದಿಯ ಮಕ್ಕಳನ್ನು ಅಶ್ವತ್ಥಾಮ ಮತ್ತು ಇತರರು ಅನಾವಶ್ಯಕವಾಗಿ ಕೊಲ್ಲುವ ಬೀಭತ್ಸ ಕರ್ಮವನ್ನೆಸಗಿದರು. ಭೀಮಸೇನನು ಬೆನ್ನಟ್ಟಿ ಹೋಗಲು ಅಶ್ವತ್ಥಾಮನು ಸಿಟ್ಟಿನಿಂದ ಹುಲ್ಲುಕಡ್ಡಿಯ ಮೂಲಕ ಪರಮಾಸ್ತ್ರವನ್ನು ಬಿಟ್ಟು ಗರ್ಭವಧೆಗೈದನು. ಅಶ್ವತ್ಥಾಮನ ಬ್ರಹ್ಮಶಿರವು ಅರ್ಜುನನು ಸ್ವಸ್ತಿ ಎಂದು ಬಿಟ್ಟ ಅಸ್ತ್ರದಿಂದ ಶಾಂತಗೊಂಡಿತು.

ಪಾಂಡವರು ಸರಿಸಾಟಿಯಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಕ್ಕಳು, ಮೊಮ್ಮಕ್ಕಳು, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯ ಕುರಿತು ಶೋಕಿಸಬೇಕು. ಈ ಸಂಗ್ರಾಮದಲ್ಲಿ ೧೮ ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಕೇವಲ ೧೦ ಮಂದಿ ಮಾತ್ರ – ನಮ್ಮವರು ಮೂರು ಮತ್ತು ಪಾಂಡವರ ಕಡೆಯವರು ಏಳು – ಉಳಿದುಕೊಂಡಿದ್ದಾರೆ ಎನ್ನುವುದನ್ನು ಕೇಳಲು ಬಹಳ ಕಷ್ಟವಾಗುತ್ತಿದೆ. ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು ಕಳೆದುಕೊಂಡವನಂತಾಗಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ!”

ಬಹುದುಃಖಿತ ಧೃತರಾಷ್ಟ್ರನು ಈ ರೀತಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು:

“ಸಂಜಯ! ಈಗಲೇ ಈ ಪ್ರಾಣವನ್ನು ತ್ಯಜಿಸಲು ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ!”

ಈ ರೀತಿ ಹೇಳಿ ದೀನನಾಗಿ ವಿಲಪಿಸುತ್ತಿದ್ದ ಮಹೀಪತಿಗೆ ಧೀಮಂತ ಗಾವಲ್ಗಣಿ ಸಂಜಯನು ಮಹಾರ್ಥವುಳ್ಳ ಈ ಮಾತುಗಳನ್ನಾಡಿದನು:

“ಮಹಾಬಲಶಾಲಿಗಳೂ ಮಹೋತ್ಸಾಹಿಗಳೂ ಆದ ರಾಜರ ಕುರಿತು ಧೀಮಂತ ದ್ವೈಪಾಯನ ಮತ್ತು ನಾರದರು ಹೇಳಿದ  ಮಾತುಗಳನ್ನು ಕೇಳಿದ್ದೀಯೆ. ಮಹಾರಾಜವಂಶಗಳಲ್ಲಿ ಜನಿಸಿದ ಹಲವಾರು ಉತ್ತಮ ಗುಣಶಾಲಿಗಳೂ, ದಿವ್ಯಾಸ್ತ್ರವಿದುಷರೂ, ಶಕ್ರನಂತೆ ತೇಜಸ್ವಿಗಳೂ ಆದ ಎಷ್ಟೋ ರಾಜರುಗಳು ಧರ್ಮಪೂರಕವಾಗಿ ಈ ಭೂಮಿಯನ್ನು ಆಳಿ, ಧಾರಾಳ ದಕ್ಷಿಣೆಗಳಿಂದ ಯಜ್ಞಕಾರ್ಯಗಳನ್ನೆಸಗಿ ಈ ಲೋಕದಲ್ಲಿ ಯಶವನ್ನು ಹೊಂದಿ ನಂತರದಲ್ಲಿ ಎಲ್ಲರೂ ಕಾಲವಶರಾದರು. ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಬುದ್ಧಿವಂತ ಮಹಾಬಲ ರಾಜರುಗಳು ವಿಪುಲ ಭೋಗಗಳನ್ನು ತೊರೆದು ನಿನ್ನ ಪುತ್ರರ ಹಾಗೆ ಮಹತ್ತಮ ನಿಧನ ಹೊಂದಿದ್ದಾರೆ. ಯಾರ ದಿವ್ಯಕರ್ಮಗಳನ್ನು, ವಿಕ್ರಮ-ತ್ಯಾಗ-ಮಹಾತ್ಮೆ-ಅಸ್ತಿತ್ವ-ಸತ್ಯತೆ ಮತ್ತು ಶುದ್ಧತೆಗಳನ್ನು ಪುರಾಣಗಳು ಹೊಗಳಿದ್ದಾರೋ ಅವರೆಲ್ಲ ಗುಣಸಂಪನ್ನರೂ ಎಷ್ಟೋ ಕಾಲದ ಹಿಂದೆಯೇ ನಿಧನರಾಗಿ ಹೋಗಿದ್ದಾರೆ. ನಿನ್ನ ಮಕ್ಕಳಾದರೋ ದುರಾತ್ಮರಾಗಿದ್ದರು. ಸಿಟ್ಟು ಮತ್ತು ಲೋಭದಿಂದ ಉರಿಯುತ್ತಿದ್ದರು. ದುರ್ವೃತ್ತಿಗಳಾಗಿದ್ದರು. ಅಂಥವರಿಗಾಗಿ ನೀನು ಶೋಚಿಸುವುದು ಸರಿಯಲ್ಲ. ಭಾರತ! ನೀನು ಶೃತಿಗಳನ್ನು ಅರಿತವನೂ, ಮೇಧಾವಿಯೂ, ಬುದ್ಧಿವಂತನೂ, ಪ್ರಜ್ಞಸಮ್ಮತನೂ ಆಗಿದ್ದೀಯೆ. ಶಾಸ್ತ್ರಗಳನ್ನು ಅನುಸರಿಸುವವರು ಹೀಗೆ ಶೋಕಿಸುವುದಿಲ್ಲ. ನರಾಧಿಪ! ನೀನು ವಿಧಿಯ ನಿಗ್ರಹ-ಅನುಗ್ರಹಗಳನ್ನು ತಿಳಿದಿದ್ದೀಯೆ. ಪುತ್ರರಕ್ಷಣೆಗೆಂದು ನೀನು ಮಾಡಿದುದೆಲ್ಲವನ್ನೂ ವಿಧಿಯು ಮೊದಲೇ ನಿರ್ಧರಿಸಿತ್ತು. ಹೀಗೆಯೇ ಆಗಬೇಕೆಂದು ಇದ್ದುದಕ್ಕೆ ಶೋಕಿಸುವುದು ಸರಿಯಲ್ಲ. ಪ್ರಜ್ಞಾವಿಶೇಷದಿಂದ ಯಾರುತಾನೇ ದೈವವನ್ನು ತಡೆಗಟ್ಟಲು ಸಾಧ್ಯ? ವಿಧಾತನಿಂದ ಹಾಕಿ ಕೊಟ್ಟ ಮಾರ್ಗವನ್ನು ಬಿಟ್ಟು ಹೋಗುವುದು ಯಾರಿಗೂ ಅಸಾಧ್ಯ. ಆಗುವಂತದ್ದು-ಆಗದಿರುವಂತದ್ದು, ಸುಖ-ದುಃಖ ಇವೆಲ್ಲವೂ ಕಾಲದಿಂದಲೇ ಹುಟ್ಟುತ್ತವೆ. ಇರುವ ಎಲ್ಲವನ್ನೂ ಕಾಲವೇ ಸೃಷ್ಟಿಸುತ್ತದೆ ಮತ್ತು ಇರುವ ಎಲ್ಲವನ್ನೂ ಅದೇ ನಾಶಪಡಿಸುತ್ತದೆ. ಹುಟ್ಟಿದ ಎಲ್ಲವನ್ನೂ ಕಾಲವು ಸುಡುತ್ತದೆ ಮತ್ತು ಕಾಲವೇ ಆ ಅಗ್ನಿಯನ್ನು ಆರಿಸುತ್ತದೆ. ಲೋಕದಲ್ಲಿರುವ ಸರ್ವ ಶುಭಾಶುಭ ಭಾವಗಳನ್ನೂ ಕಾಲವೇ ಹುಟ್ಟಿಸಿತು. ಹುಟ್ಟಿಸಿದ ಎಲ್ಲವನ್ನೂ ಕಾಲವು ನಾಶಗೊಳಿಸಿ ಪುನಃ ಸೃಷ್ಟಿಸುತ್ತದೆ. ಇರುವ ಎಲ್ಲದರಲ್ಲಿಯೂ ಕಾಲವು ಒಂದೇ ಸಮನೆ ಕೆಲಸಮಾಡುತ್ತಿರುತ್ತದೆ. ಹಿಂದೆ ನಡೆದ ಮತ್ತು ಮುಂದೆ ನಡೆಯುವ ಎಲ್ಲವೂ ಕಾಲನಿರ್ಮಿತವಾದುದು  ಎಂದು ತಿಳಿದೂ ಶೋಕಿಸಿ ಬಳಲುವುದು ಸರಿಯಲ್ಲ!”

18 Comments

  1. ತುಂಬ ದೊಡ್ಡ ಕೆಲಸ.. ಒಳ್ಳೆದಾಗಲಿ

      • Yogish Shabharaya

        ಇದನ್ನು ಪ್ರಿಂಟ್ ತೆಗೆದುಕೊಳ್ಳುತ್ತೇನೆ. ಆಗಬಹುದಲ್ಲವೇ..? ನಿಮ್ಮ ಅಮೋಘವಾದ ಪ್ರಯತ್ನಕ್ಕೆ ಧನ್ಯವಾದಗಳು. ಆ ಪರಮಾತ್ಮನ ಅನುಗ್ರಹವು ನಿಮಗೆ ಪ್ರಾಪ್ತಿಯಾಗಲೆಂದು ಹಾರೈಸುವೆ. 🙏😍

  2. ರಮೇಶಣ್ಣ, ಎಂಥ ಅದ್ಭುತ ಕೆಲಸ, ಇದರ ಬಗ್ಗೆ ಈಗ ತಾನೇ ತಿಳಿದು ಓದಲು ಪ್ರಾಂಭಿಸಿದ್ದೇನೆ ಅಷ್ಟೇ. ನಮಗೆಲ್ಲ ನಿನ್ನ ಈ ಪ್ರತಿಭೆ, ಪರಿಶ್ರಮ ತುಂಬಾ ಹೆಮ್ಮೆಯ ವಿಷಯ. ಎಲೆಮರೆಯ ಕಾಯಿಯಂತೆ ಇಷ್ಟೊಂದು ಅಗಾಧವಾದ ಕೆಲಸ ಮಾಡಿದ್ದರು ಯಾವೊಂದು ಪ್ರಚಾರವನ್ನು ಬಯಸದೆ ತನ್ನಷ್ಟಕ್ಕೆ ಕರ್ಮಯೋಗಿಯಂತೆ ಇರುವ ನಿನ್ನ ಸ್ವಭಾವ ಬಹಳ ಇಷ್ಟವಾಯಿತು. ನಿಜಕ್ಕೂ ಮಂಜಪ್ಪಣ್ಣ , ಕಮಲಾಕ್ಷಕ್ಕ ಅಷ್ಟೇ ಅಲ್ಲದೆ ಇಡೀ ಬನದಕೊಪ್ಪ ವೂರಿಗೆ ಹೆಮ್ಮೆ ತರುವಂಥ ಕಾರ್ಯ ಮಾಡಿದ್ದಿಯ. ಶುಭವಾಗಲಿ.

    ಜಯಶ್ರೀ ಭಟ್ ( ಸಾಬಕ್ಕನ ಮಗಳು)
    ಸಿಂಗಪುರ

    • Dear Jayashri,
      Thank you very much for your kind words of appreciation. I could do this only because of the blessings of Lord Lakshmi-Narayana of our village, parents and elders including Sabakka…My best regards to you and your family.
      Ramesh

  3. ಪಂಡಿತರೇ, ತುಂಬು ಹೃದಯದ ಶುಭಾಶಯಗಳು . ಉತ್ತಮವಾದ ಕಾರ್ಯ . ಮುಂದುವರಿಯಲಿ

  4. joshi venkateshachar

    Good work may Almighty give strenth & Health waiting for the rest

  5. Great work sir.

  6. Kannadadalli idannu hege download maduvudu?

  7. Can you please inform whose translation to Kannada has been adopted? Or is his based on Jaimimi Bharara etc?

    • These are my own translations of the Sanskrit Shlokas in Vyasa Mahabharata. Jaimini Bharata deals with only one of the 18 Maha Parvas of the original Vyasa Mahabharata, i.e., Ashwamedhika Parva.
      Thanks

      • Thanks. Kindly clarify if you have
        translated every sloka or selected
        certain slokas. Please also inform in what
        way your translation differs from the
        translations done by AR Krishna sastry
        Devashikhamani Alasingrachar, Bharata darshana Dr Ramachandra swamy.

        • I have translated every shloka as per the Critical Edition of Mahabharata. However, I am yet to complete the translations of Shanti and Anushasana Parvas and Harivamsha. On this website I have shared my translations along with the original shlokas as per the critical edition (and wherever possible, how these Shlokas and translations differ from other translations). I have also segmented the Mahabharata as Episodes, Stories and Spiritual discourses/discussions – these are based on my translations but do not have the Sanskrit Shlokas.

          I have consulted the translations that you have mentioned for my own work. The main difference is that they do not have original Sanskrit Shlokas along side the Kannada translations.

          Thanks

Leave a Reply

Your email address will not be published. Required fields are marked *