ಭೌಮಗುಣಕಥನ

Image result for flowers against white backgroundಇಲ್ಲಿ ಇರುವವುಗಳು ಎರಡು ರೀತಿಯವು: ಚಲಿಸುವವು ಮತ್ತು ಚಲಿಸದೇ ಇರುವವು. ಚಲಿಸುವವುಗಳಲ್ಲಿ ಮೂರು ವಿಧಗಳವು - ಯೋನಿಯಿಂದ ಜನಿಸುವವು, ಅಂಡದಿಂದ ಜನಿಸುವವು ಮತ್ತು ಉಷ್ಣ-ತೇವಗಳಿಂದ ಜನಿಸುವವು. ಚಲಿಸುವವುಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದವು ಯೋನಿಯಿಂದ ಹುಟ್ಟಿದವು. ಯೋನಿಜನ್ಮರಲ್ಲಿ ಪ್ರಮುಖರಾದವರು ಮಾನವರು ಮತ್ತು ಪಶುಗಳು. ನಾನಾರೂಪಗಳಲ್ಲಿರುವ ಇವುಗಳಲ್ಲಿ ಹದಿನಾಲ್ಕು ಭೇದಗಳಿವೆ. ಅವುಗಳಲ್ಲಿ ಏಳು ಅರಣ್ಯಗಳಲ್ಲಿ ವಾಸಿಸುವಂಥವು (ವನ್ಯ) ಮತ್ತು ಇನ್ನೊಂದು ಏಳು ಗ್ರಾಮವಾಸಿಗಳು. ಸಿಂಹ, ಹುಲಿ, ಹಂದಿ, ಕಾಡೆಮ್ಮೆ, ಆನೆ, ಕರಡಿ, ಮತ್ತು ಮಂಗಗಳು ಈ ಏಳು ಅರಣ್ಯವಾಸಿಗಳೆಂದು ಹೇಳುತ್ತಾರೆ. ಹಸು, ಆಡು, ಕುರಿ, ಮನುಷ್ಯ, ಕುದುರೆ, ಹೇಸರಗತ್ತೆ ಮತ್ತು ಕತ್ತೆ ಈ ಏಳು ಪಶುಗಳು ಗ್ರಾಮ್ಯವೆಂದೂ ಸಾಧುಗಳೆಂದೂ ಹೇಳಲ್ಪಟ್ಟಿವೆ. ಈ ಹದಿನಾಲ್ಕು ಗ್ರಾಮ್ಯ ಮತ್ತು ಅರಣ್ಯ ಪಶುಗಳ ಕುರಿತು ವೇದಗಳಲ್ಲಿ ಹೇಳಲಾಗಿದೆ. ಇವುಗಳ ಮೇಲೆಯೇ ಯಜ್ಞಗಳು ಅವಲಂಬಿಸಿವೆ. ಗ್ರಾಮ್ಯ ಪಶುಗಳಲ್ಲಿ ಪುರುಷನು ಶ್ರೇಷ್ಠ ಮತ್ತು ಅರಣ್ಯವಾಸಿಗಳಲ್ಲಿ ಸಿಂಹವು ಶ್ರೇಷ್ಠ. ಅನ್ಯೋನ್ಯರೊಂದಿಗೆ ಜೀವನವನ್ನು ಅವಲಂಬಿಸಿಕೊಂಡು ಇವೆಲ್ಲವೂ ಜೀವಿಸುತ್ತವೆ. ಸಸ್ಯಗಳು ಚಲಿಸದೇ ಇರುವವು. ಇವುಗಳಲ್ಲಿ ಐದು ಜಾತಿಗಳಿವೆಯೆಂದು ಹೇಳುತ್ತಾರೆ: ವೃಕ್ಷ (ಮರ), ಗುಲ್ಮ, ಲತೆ, ವಲ್ಲಿ, ಮತ್ತು ತ್ವಕ್ಷಾರಗಳು. ಈ ಹತ್ತೊಂಭತ್ತು ಮತ್ತು ಐದು ಮಹಾಭೂತಗಳು - ಒಟ್ಟು ಇಪ್ಪತ್ನಾಲ್ಕು ಗಾಯತ್ರಿಯೆಂದು ಲೋಕಸಮ್ಮತಗೊಂಡಿದೆ.

ಈ ಪುಣ್ಯೆ ಸರ್ವಗುಣಾನ್ವಿತೆ ಗಾಯತ್ರಿಯನ್ನು ತತ್ವಶಃ ತಿಳಿದುಕೊಂಡವರು ಈ ಲೋಕಗಳಲ್ಲಿ ನಾಶಹೊಂದುವುದಿಲ್ಲ. ಇವೆಲ್ಲವೂ ಭೂಮಿಯಲ್ಲಿಯೇ ಹುಟ್ಟುತ್ತವೆ. ಮತ್ತು ಎಲ್ಲವೂ ಭೂಮಿಯಲ್ಲಿಯೇ ನಾಶಹೊಂದುತ್ತವೆ. ಇರುವ ಎಲ್ಲವಕ್ಕೆ ಭೂಮಿಯೇ ಆಧಾರ. ಭೂಮಿಯೇ ಆಶ್ರಯ. ಈ ಭೂಮಿಯು ಯಾರದ್ದೋ ಅವರಿಗೇ ಅದರಲ್ಲಿರುವ ಎಲ್ಲ ಸ್ಥಾವರ-ಜಂಗಮಗಳು ಸೇರುತ್ತವೆ. ಅದನ್ನೇ ಬಯಸಿ ರಾಜರು ಪರಸ್ಪರರನ್ನು ಸಂಹರಿಸುತ್ತಾರೆ.

ಈ ಐದು ಸಮಾನ ಮಹಾಭೂತಗಳು – ಭೂಮಿ, ನೀರು, ವಾಯು, ಅಗ್ನಿ, ಮತ್ತು ಆಕಾಶ – ಕೂಡಿ ಜಗತ್ತಿನ ಸರ್ವವೂ ಇವೆಯೆಂದು ಮನೀಷಿಣರು ಹೇಳುತ್ತಾರೆ. ಭೂಮಿ, ನೀರು, ವಾಯು, ಅಗ್ನಿ, ಮತ್ತು ಆಕಾಶ ಇವು ತುದಿಯಿಂದ ಒಂದೊಂದು ಗುಣದಿಂದ ಅಧಿಕವಾದವುಗಳು. ಮೊದಲು ಭೂಮಿಯನ್ನು ಹೇಳಲು ಕಾರಣವೇನೆಂದರೆ ಅದು ಸಮಸ್ತಗುಣಗಳಿಂದಲೂ ಕೂಡಿದೆ. ಋಷಿಗಳು ಭೂಮಿಗೆ ಶಬ್ಧ, ಸ್ಪರ್ಷ, ರೂಪ, ರಸ, ಮತ್ತು ಐದನೆಯದಾಗಿ ಗಂಧ - ಈ ಎಲ್ಲ ಗುಣಗಳೂ ಇವೆಯೆಂದು ಹೇಳುತ್ತಾರೆ. ಜಲದಲ್ಲಿ ನಾಲ್ಕು ಗುಣಗಳಿವೆ. ಅದರಲ್ಲಿ ಗಂಧವಿಲ್ಲ. ತೇಜಸ್ಸಿಗೆ ಶಬ್ಧ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳಿವೆ. ವಾಯುವಿಗೆ ಶಬ್ಧ ಮತ್ತು ಸ್ಪರ್ಶಗಳು ಗುಣಗಳು. ಆಕಾಶದಲ್ಲಿ ಶಬ್ಧ ಮಾತ್ರ ಇದೆ. ಇವು ಈ ಐದು ಮಹಾಭೂತಗಳಲ್ಲಿರುವ ಐದು ಗುಣಗಳು. ಇವುಗಳನ್ನು ಆಧರಿಸಿಯೇ ಲೋಕಗಳು ಇವೆ ಮತ್ತು ಸರ್ವ ಲೋಕಗಳು ಇವುಗಳ ಮೂಲಕವೇ ನಡೆದುಕೊಳ್ಳುತ್ತವೆ. ಯಾವಾಗ ಈ ಪಂಚಭೂತಗಳು ಸಮಾನರೂಪದಲ್ಲಿರುತ್ತವೆಯೋ ಆಗ ಅವುಗಳು ಪರಸ್ಪರ ಕೂಡುವುದಿಲ್ಲ. ಈ ಪಂಚಭೂತಗಳು ನ್ಯೂನಾಧಿಕ ಭಾವಗಳನ್ನು ಹೊಂದಿದಾಗ ಅವು ಪರಸ್ಪರ ಸೇರುವವು. ಆಗ ಪ್ರಾಣಿಗಳು ದೇಹಧಾರಣೆ ಮಾಡುವವು. ಹಾಗಾಗದೇ ದೇಹವೇ ಉತ್ಪನ್ನವಾಗುವುದಿಲ್ಲ. ಇವು ಕ್ರಮವಾಗಿ ನಾಶ ಹೊಂದಿ ಅದರ ಹಿಂದಿನದನ್ನು ಹೋಗಿ ಸೇರಿಕೊಳ್ಳುತ್ತವೆ. ಆಕಾಶದ ಕಡೆಯಿಂದ ಪ್ರತಿಯೊಂದೂ ತಮ್ಮ ಹಿಂದಿನವುಗಳಿಂದ ಹುಟ್ಟಿಕೊಳ್ಳುತ್ತವೆ.

ಇವೆಲ್ಲವುಗಳ ಅಪರಿಮಿತ ರೂಪಗಳು ಈಶ್ವರನಿಂದಲೇ ಹುಟ್ಟುತ್ತವೆ. ಭಿನ್ನ-ಭಿನ್ನ ಲೋಕಗಳಲ್ಲಿ ಪಾಂಚಭೌತಿಕ ಧಾತುಗಳು ಕಂಡುಬರುತ್ತವೆ. ಅವುಗಳ ಪ್ರಮಾಣವೆಷ್ಟೆಂದು ಮನುಷ್ಯನು ತರ್ಕದಿಂದ ಮಾತ್ರ ಊಹಿಸಿಕೊಳ್ಳಬಹುದು. ಅಚಿಂತ್ಯವಾಗಿರುವ ಭಾವಗಳನ್ನು ತರ್ಕದಿಂದ ಸಾಧಿಸಬಾರದು. ಪ್ರಕೃತಿಗೂ ಆಚೆಯಿರುವುದು, ಭಿನ್ನವಾದುದು ಅಚಿಂತ್ಯದ ಲಕ್ಷಣ.

ಸುದರ್ಶನದ್ವೀಪವರ್ಣನೆ

ಭೂಮಿಯ ಆಚೆ ಇರುವ ಸುದರ್ಶನ ದ್ವೀಪವು ಚಕ್ರದಂತೆ ಗುಂಡಾಗಿರುವುದು. ಅದು ನದೀಜಲಗಳಿಂದ, ಮೋಡಗಳಂತಿರುವ ಪರ್ವತಗಳಿಂದ, ವಿವಿಧಾಕಾರದ ಪುರಗಳಿಂದ, ರಮ್ಯ ಜನಪದಗಳಿಂದ, ಪುಷ್ಪಫಲಗಳನ್ನು ನೀಡುವ ವೃಕ್ಷಗಳಿಂದ ತುಂಬಿಕೊಂಡಿದೆ. ಧನ-ಧಾನ್ಯಗಳಿಂದ ಸಂಪನ್ನವಾಗಿದೆ. ಎಲ್ಲ ಕಡೆಗಳಿಂದಲೂ ಲವಣ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದೆ. ಕನ್ನಡಿಯಲ್ಲಿ ಮನುಷ್ಯನು ತನ್ನ ಮುಖವನ್ನು ಹೇಗೆ ಕಾಣುತ್ತಾನೋ ಹಾಗೆ ಸುದರ್ಶನ ದ್ವೀಪವು ಚಂದ್ರಮಂಡಲದಲ್ಲಿ ಕಾಣುತ್ತದೆ. ಅದರ ಎರಡು ಭಾಗಗಳ ಒಂದರಲ್ಲಿ ಅಶ್ವತ್ಥವೃಕ್ಷವಿದೆ. ಇನ್ನೊಂದರಲ್ಲಿ ದೊಡ್ಡ ಮೊಲವಿದೆ. ಈ ಖಂಡಗಳು ಎಲ್ಲ ಔಷಧಿಗಳಿಂದ ತುಂಬಿಕೊಂಡಿದೆ. ಈ ಭಾಗಗಳನ್ನು ಬಿಟ್ಟರೆ ಉಳಿದ ಭಾಗಗಳಲ್ಲಿ ಕೇವಲ ನೀರಿದೆ.

ಪೂರ್ವ-ಪಶ್ಚಿಮವಾಗಿ ಸಮುದ್ರದ ಪರ್ಯಂತ ಆರು ಪರ್ವತರತ್ನಗಳಿವೆ. ಇವುಗಳ ಪೂರ್ವ ಮತ್ತು ಪಶ್ಚಿಮಗಳಲ್ಲಿ ಎರಡು ಸಮುದ್ರಗಳಿವೆ. ಇವುಗಳು - ಹಿಮಾಲಯ, ಹೇಮಕೂಟ, ನಿಷಧ, ವೈಡೂರ್ಯಮಯವಾದ ನೀಲ, ರಜತಪ್ರಭೆಯುಳ್ಳ ಶ್ವೇತ, ಸರ್ವಧಾತುಗಳಿಂದ ಕೂಡಿರುವ ಶೃಂಗವೆಂಬ ಹೆಸರಿನ ಪರ್ವತ. ಈ ಪರ್ವತಗಳು ಸಿದ್ಧ-ಚಾರಣರ ವಾಸಸ್ಥಾನಗಳು. ಇವುಗಳ ಒಳಭಾಗವು ಸಹಸ್ರಾರು ಯೋಜನ ವಿಶಾಲವಾಗಿವೆ. ಅಲ್ಲಿ ಪುಣ್ಯ ಜನಪದಗಳನ್ನುಳ್ಳ ವರ್ಷಗಳಿವೆ. ಅಲ್ಲಿ ನಾನಾ ಜಾತಿಯ ಎಲ್ಲ ಸತ್ವಗಳೂ ವಾಸಿಸುತ್ತವೆ.

ಇದು ಭಾರತ ವರ್ಷ. ಇದರ ನಂತರದ್ದು ಹೈಮವತ. ಹೇಮಕೂಟದ ನಂತರದ್ದು ಹರಿವರ್ಷವೆಂದು ಹೇಳುತ್ತಾರೆ. ನೀಲಪರ್ವತದ ದಕ್ಷಿಣಕ್ಕೂ ನಿಷಧ ಪರ್ವತದ ಉತ್ತರಕ್ಕೂ ಪೂರ್ವ-ಪಶ್ಚಿಮವಾಗಿ ಮಾಲ್ಯವತ್ ಎಂಬ ಹೆಸರಿನ ಪರ್ವತವಿದೆ. ಮಾಲ್ಯವತ್ಪರ್ವತದಿಂದಾಚೆ ಗಂಧಮಾದನ ಪರ್ವತವಿದೆ. ಈ ಎರಡು ಪರ್ವತಗಳ ಮಧ್ಯೆ ಗೋಲಾಕಾರದ ಕನಕಪರ್ವತ ಮೇರುವಿದೆ. ಉದಯಿಸುವ ಸೂರ್ಯನಂತೆ, ಹೊಗೆಯಿಲ್ಲದ ಅಗ್ನಿಯಂತೆ ಹೊಳೆಯುವ ಇದರ ಆಳವು ಹದಿನಾರು ಸಹಸ್ರ ಯೋಜನೆಗಳೆಂದು ಹೇಳುತ್ತಾರೆ. ಇದರ ಎತ್ತರವು ಎಂಭತ್ನಾಲ್ಕು ಯೋಜನೆಗಳು. ಇದರ ಅಗಲವೂ ಅಷ್ಟೇ ಆಗಿರುತ್ತದೆ. ಇದರ ಮೇಲೆ, ಕೆಳಗೆ, ಮತ್ತು ಸುತ್ತಲೂ ಲೋಕಗಳು ಆವರಿಸಿಕೊಂಡು ನಿಂತಿವೆ. ಅದರ ಪಾರ್ಶ್ವಗಳಲ್ಲಿ ನಾಲ್ಕು ದ್ವೀಪಗಳಿವೆ: ಭದ್ರ, ಕೇತುಮಾಲ, ಜಂಬೂದ್ವೀಪ, ಮತ್ತು ಉತ್ತರ ಕುರು.

ಮೇರುಪರ್ವತವನ್ನು ಗ್ರಹಗಳ ಅಧಿಪತಿ ಸೂರ್ಯನು ಸುತ್ತುಹಾಕುತ್ತಾನೆ. ನಕ್ಷತ್ರಗಳೊಂದಿಗೆ ಚಂದ್ರನೂ, ಮತ್ತು ವಾಯುವೂ ಅದಕ್ಕೆ ಪ್ರದಕ್ಷಿಣೆ ಮಾಡುತ್ತಾರೆ. ದಿವ್ಯ ಪುಷ್ಪ ಫಲಭರಿತವಾದ ಆ ಪರ್ವತವು ಎಲ್ಲಕಡೆಗಳಲ್ಲಿಯೂ ಬಂಗಾರಗಳಿಂದ ಮಾಡಲ್ಪಟ್ಟ ಶುಭ ಭವನಗಳಿಂದ ಆವೃತಗೊಂಡಿದೆ. ಆ ಶೈಲದಲ್ಲಿ ನಿತ್ಯವೂ ದೇವಗಣಗಳು, ಗಂಧರ್ವ-ಅಸುರ-ರಾಕ್ಷಸ-ಅಪ್ಸರ ಗಣಗಳು ಒಟ್ಟುಗೂಡಿ ಆಟವಾಡುತ್ತಿರುತ್ತಾರೆ. ಅಲ್ಲಿ ಬ್ರಹ್ಮ, ರುದ್ರ ಮತ್ತು ಸುರೇಶ್ವರ ಶಕ್ರನೂ ಕೂಡ ಒಟ್ಟು ಸೇರಿ ಅನೇಕ ದಕ್ಷಿಣೆಗಳಿಂದ ಕೂಡಿದ ವಿವಿಧ ಯಜ್ಞಗಳನ್ನು ಯಾಜಿಸುತ್ತಾರೆ. ಅಲ್ಲಿ ತುಂಬುರು, ನಾರದ, ವಿಶ್ವಾವಸು, ಹಹಾ ಹುಹೂ ಎಂಬ ಗಂಧರ್ವರು ಮತ್ತು ಅಮರಶ್ರೇಷ್ಠರು ವಿಭುವನ್ನು ಸ್ತೋತ್ರಗಳಿಂದ ಸ್ತುತಿಸುತ್ತಾರೆ. ಅಲ್ಲಿಗೆ ಪರ್ವ ಪರ್ವಗಳಲ್ಲಿ ಸದಾ ಮಹಾತ್ಮ ಸಪ್ತರ್ಷಿಗಳು ಮತ್ತು ಪ್ರಜಾಪತಿ ಕಶ್ಯಪರು ಬರುತ್ತಿರುತ್ತಾರೆ. ಇದರ ಶಿಖರದಲ್ಲಿಯೇ ಉಶನ ಕಾವ್ಯನನ್ನು ದೈತ್ಯರು ಗೌರವಿಸುತ್ತಾರೆ. ಚಿನ್ನ, ರತ್ನಗಳು ಮತ್ತು ರತ್ನ ಪರ್ವತವೂ ಇದರ ಸಂಬಂಧಿಗಳು. ಅದರ ನಾಲ್ಕನೇ ಒಂದು ಭಾಗವು ಕುಬೇರನಿಗೆ ಸೇರಿದೆ. ಅವನ ವಿತ್ತದ ಹದಿನಾರರ ಒಂದಂಶವನ್ನು ಅವನು ಮನುಷ್ಯರಿಗೆ ನೀಡುತ್ತಾನೆ.

ಅದರ ಉತ್ತರ ಭಾಗದಲ್ಲಿ ಸರ್ವಋತುಗಳಲ್ಲಿಯೂ ಕುಸುಮಗಳಿರುವ ಶುಭವಾದ ರಮ್ಯವಾದ ಬೆಟ್ಟದಾವರೆ ಕರ್ಣಿಕಾ ವನವಿದೆ. ಅಲ್ಲಿ ಸಾಕ್ಷಾತ್ ಪಶುಪತಿ ಭಗವಾನ್ ಭೂತಭಾವನನು ಉಮೆಯೊಂದಿಗೆ ದಿವ್ಯ ಭೂತಗಳಿಂದ ಸಮಾವೃತನಾಗಿ ರಮಿಸುತ್ತಾನೆ. ಅಲ್ಲಿ ಅವನು ಪಾದದವರೆಗೂ ಕರ್ಣಿಕಾರಗಳಿಂದ ಮಾಡಿದ ಮಾಲೆಯನ್ನು ಧರಿಸಿ ಉದಯಿಸುತ್ತಿರುವ ಮೂರು ಸೂರ್ಯಗಳಂತಿರುವ ಮೂರುಕಣ್ಣುಗಳಿಂದ ಬೆಳಗುತ್ತಾನೆ. ಅವನನ್ನು ಉಗ್ರತಪಸ್ವಿ, ಸುವ್ರತ, ಸತ್ಯವಾದಿ ಸಿದ್ಧರು ಮಾತ್ರ ನೋಡುತ್ತಾರೆ. ದುರ್ವೃತ್ತರು ಮಹೇಶ್ವರನನ್ನು ನೋಡಲು ಶಕ್ತರಿಲ್ಲ. ಆ ಶೈಲದ ಶಿಖರದಿಂದ ಹಾಲಿನಂತೆ ಬೆಳ್ಳಗೆ, ಮೂರು ಕವಲುಗಳಾಗಿ, ಭಯಂಕರ ನಿರ್ಘಾತ ನಿಸ್ವನದೊಂದಿಗೆ, ಪುಣ್ಯೆ ಪುಣ್ಯತಮೆ, ಜುಷ್ಟೆ, ಗಂಗಾ, ಭಾಗೀರಥಿ, ಶುಭೆಯು ಅತಿ ವೇಗದಿಂದ ಧುಮಿಕಿ ಶುಭ ಚಾಂದ್ರಮಸ ಸರೋವರಕ್ಕೆ ಬೀಳುತ್ತಾಳೆ. ಅವಳಿಂದ ನಿರ್ಮಾಣಗೊಂಡ ಆ ಸರೋವರವು ಸಾಗರದಂತಿದೆ. ಪರ್ವತಗಳಿಗೂ ಹೊರಲು ಅಸಾಧ್ಯವಾದ ಅವಳನ್ನು ಹಿಂದೆ ಮಹೇಶ್ವರನು ನೂರು ಸಾವಿರ ವರ್ಷಗಳು ತಲೆಯಲ್ಲಿ ಹೊತ್ತಿದ್ದನು.

ಆ ಮೇರುವಿನ ಪಶ್ಚಿಮ ಪಾರ್ಶ್ವದಲ್ಲಿ ಕೇತುಮಾಲವೆಂಬ ಪ್ರದೇಶವಿದೆ. ಅಲ್ಲಿಯೇ ನಂದನದಂತಿರುವ ತುಂಬಾ ವಿಶಾಲವಾಗಿರುವ ಜಂಬೂಖಂಡವಿದೆ. ಅಲ್ಲಿರುವವರ ಆಯುಸ್ಸು ಹತ್ತು ಸಾವಿರ ವರ್ಷಗಳು. ಮನುಷ್ಯರು ಬಂಗಾರದ ವರ್ಣದವರಾಗಿರುತ್ತಾರೆ ಮತ್ತು ಸ್ತ್ರೀಯರು ಅಪ್ಸರೆಯರಂತೆ ಇರುತ್ತಾರೆ. ಅವರು ನಿತ್ಯ ಅನಾಮಯರೂ, ಶೋಕವಿಲ್ಲದವರೂ, ಮುದಿತಮಾನಸರೂ ಆಗಿರುತ್ತಾರೆ. ಅಲ್ಲಿ ಹುಟ್ಟುವ ಮಾನವರು ಕರಗಿಸಿದ ಅಪ್ಪಟ ಚಿನ್ನದ ಪ್ರಭೆಯನ್ನು ಹೊಂದಿರುತ್ತಾರೆ. ಗಂಧಮಾದನದ ಶೃಂಗದಲ್ಲಿ ಗುಹ್ಯಕಾಧಿಪ ಕುಬೇರನು ರಾಕ್ಷಸರೊಂದಿಗೆ ಮತ್ತು ಅಪ್ಸರಗಣಗಳೊಂದಿಗೆ ಸಂವೃತನಾಗಿ ಮೋದಿಸುತ್ತಾನೆ. ಗಂಧಮಾದನದ ಬುಡದಲ್ಲಿ ಇನ್ನೊಂದುಕಡೆ ಇರುವ ಗಂಡಿಕರು ಹನ್ನೊಂದು ಸಾವಿರ ವರ್ಷಗಳ ಪರಮಾಯುಷಿಗಳಾಗಿರುತ್ತಾರೆ. ಅಲ್ಲಿರುವ ಕಪ್ಪು ಮನುಷ್ಯರು ಮಹಾಬಲಶಾಲಿಗಳೂ, ತೇಜೋಯುಕ್ತರೂ ಆಗಿದ್ದು, ಸ್ತ್ರೀಯರೆಲ್ಲರೂ ಕುವಲಯದ ಕಾಂತಿಯಿಂದ ಕೂಡಿದ್ದು, ನೋಡಲು ತುಂಬಾ ಚೆನ್ನಾಗಿರುತ್ತಾರೆ.

ನೀಲದ ಆಚೆಯಿರುವುದು ಶ್ವೇತ. ಶ್ವೇತದ ಆಚೆಯಿರುವುದು ಹಿರಣ್ಯಕ. ಅನಂತರ ಐರಾವತ ವರ್ಷ ಮತ್ತು ಅದಕ್ಕೂ ಆಚೆ ಶೃಂಗವತ. ದಕ್ಷಿಣ ಮತ್ತು ಉತ್ತರಗಳಲ್ಲಿ ಧನುಸ್ಸಿನ ಆಕಾರದಲ್ಲಿ ಎರಡು ವರ್ಷಗಳಿವೆ. ಮಧ್ಯದಲ್ಲಿರುವ ಇಲಾವೃತವೂ ಸೇರಿ ಒಟ್ಟು ಐದು ವರ್ಷಗಳು. ಈ ವರ್ಷಗಳಲ್ಲಿ ವಾಸಿಸುವವರು ಗುಣಗಳಲ್ಲಿ, ಆಯುಷ್ಪ್ರಮಾಣಗಳಲ್ಲಿ, ಆರೋಗ್ಯದಲ್ಲಿ, ಧರ್ಮ-ಕಾಮ-ಅರ್ಥಗಳಲ್ಲಿ ಉತ್ತರೋತ್ತರ ಸಮನ್ವಿತರು. ಹೀಗೆ ಪೃಥ್ವಿಯು ಪರ್ವತಗಳಿಂದ ಹೆಣೆಯಲ್ಪಟ್ಟಿದೆ.

ಕೈಲಾಸ ಪರ್ವತದ ಒಂದು ಭಾಗವಾಗಿರುವ ಹೇಮಕೂಟವೆಂಬ ದೊಡ್ಡ ಪರ್ವತದಲ್ಲಿ ರಾಜಾ ವೈಶ್ರವಣನು ಗುಹ್ಯಕರೊಂದಿಗೆ ಮೋದಿಸುತ್ತಾನೆ. ಈ ಕೈಲಾಸದಿಂದ ಉತ್ತರಕ್ಕೆ ಮೈನಾಕ ಪರ್ವತದ ಕಡೆ ಹಿರಣ್ಯಶೃಂಗವೆಂಬ ಅತಿ ದೊಡ್ಡ, ದಿವ್ಯ ಮಣಿಮಯ ಗಿರಿಯಿದೆ. ಅದರ ಮಗ್ಗುಲಲ್ಲಿ ಮಹಾ ದಿವ್ಯವಾದ, ಶುಭ ಕಾಂಚನವಾಲುಕವಿದೆ. ಅಲ್ಲಿ ಬಿಂದುವೆಂಬ ಹೆಸರಿನ ರಮ್ಯ ಸರೋವರದಲ್ಲಿ ರಾಜಾ ಭಗೀರಥನು ಗಂಗೆ ಭಾಗೀರಥಿಯನ್ನು ಸಾಕ್ಷಾತ್ಕರಿಸಿ ಬಹಳಷ್ಟು ವರ್ಷಗಳು ವಾಸಿಸಿದನು. ಅಲ್ಲಿಯ ನೆಲವು ಹಿರಣ್ಮಯವು, ಯೂಪಗಳು ಮಣಿಮಯವು. ಅಲ್ಲಿ ಸಹಸ್ರಾಕ್ಷನು ಮಹಾಯಶ ಇಷ್ಟಿಗಳನ್ನು ಮಾಡಿ ಸಿದ್ಧಿಯನ್ನು ಪಡೆದನು. ಅಲ್ಲಿ ಸರ್ವಲೋಕಗಳನ್ನೂ ಸೃಷ್ಟಿಸಿ ಭೂತಪತಿ, ಸನಾತನನು ತಿಗ್ಮತೇಜಸ್ಸಿನಿಂದ ಆವೃತನಾಗಿ ಭೂತಗಳಲ್ಲಿ ಸಮಾಗತನಾಗಿ ಉಪಾಸಿಸಲ್ಪಡುತ್ತಾನೆ. ಅಲ್ಲಿ ನರ-ನಾರಾಯಣರಿಬ್ಬರು, ಬ್ರಹ್ಮ, ಮನು ಮತ್ತು ಐದನೆಯವನಾಗಿ ಸ್ಥಾಣುವು ಇದ್ದಾರೆ. ಅಲ್ಲಿ ತ್ರಿಪಥಗೆ ದೇವಿಯು ಮೊದಲು ಪ್ರತಿಷ್ಠಿತಳಾಗಿದ್ದಳು. ಬ್ರಹ್ಮಲೋಕದಿಂದ ಅವಳು ಏಳು ಧಾರೆಗಳಾಗಿ – ವಸ್ವೋಕಸಾರಾ ನಲಿನೀ, ಪಾವನೀ, ಸರಸ್ವತೀ, ಜಂಬೂನದೀ, ಸೀತಾ, ಗಂಗಾ ಮತ್ತು ಏಳನೆಯದಾಗಿ ಸಿಂಧು - ಕೆಳಗಿಳಿದಳೆಂದು ಹೇಳುತ್ತಾರೆ. ಅವಳು ಅಚಿಂತ್ಯೆ, ದಿವ್ಯಸಂಕಲ್ಪೆ ಮತ್ತು ಪ್ರಭುವು ಇಲ್ಲಿಯೇ ಸಂವಿಧಾನನಾಗಿರುವನು. ಇಲ್ಲಿ ಸಹಸ್ರಯುಗಪರ್ಯಂತವಾಗಿ ಸತ್ರಗಳಿಂದ ಉಪಾಸನೆ ನಡೆಯುತ್ತಿತ್ತು. ಸರಸ್ವತಿಯು ಅಲ್ಲಲ್ಲಿ ಕಾಣುತ್ತಾಳೆ ಮತ್ತು ಅದೃಷ್ಯಳಾಗುತ್ತಾಳೆ. ಈ ದಿವ್ಯ ಸಪ್ತ ಗಂಗೆಯರು ಮೂರು ಲೋಕಗಳಲ್ಲಿ ವಿಶ್ರುತರು.

ಹಿಮವತ್ಪರ್ವತದಲ್ಲಿ ರಾಕ್ಷಸರು ಮತ್ತು ಹೇಮಕೂಟದಲ್ಲಿ ಗುಹ್ಯಕರು ಇರುವರು. ನಿಷಧ ಪರ್ವತದಲ್ಲಿ ಸರ್ಪರೂ, ನಾಗರೂ ಮತ್ತು ಗೋಕರ್ಣರೆಂಬ ತಪೋಧನರೂ ಇದ್ದಾರೆ. ಶ್ವೇತ ಪರ್ವತವನ್ನು ದೇವಾಸುರರ ಗೃಹವೆಂದು, ನಿಷಧ ಪರ್ವತವನ್ನು ಗಂಧರ್ವರ ಗೃಹವೆಂದೂ, ನೀಲ ಪರ್ವತವನ್ನು ಬ್ರಹ್ಮರ್ಷಿಗಳ ಗೃಹವೆಂದೂ ಹೇಳುತ್ತಾರೆ. ಶೃಂಗ ಪರ್ವತದಲ್ಲಿ ಪಿತೃಗಳು ಸಂಚರಿಸಿರುತ್ತಾರೆ. ಇವೇ ವಿಭಜನೆಗೊಂಡಿರುವ ಏಳು ವರ್ಷಗಳು. ಚಲಿಸುವ ಮತ್ತು ಅಚಲವಾಗಿರುವವು ಇವುಗಳಲ್ಲಿ ಕೂಡಿವೆ.

ಅವುಗಳಲ್ಲಿ ದೈವ-ಮಾನುಷವಾದ ಬಹುವಿಧದ ಲಕ್ಷಣಗಳು ಕಾಣುತ್ತವೆ. ಅವುಗಳನ್ನು ಎಣಿಸುವುದು ಅಶಕ್ಯ. ಶ್ರದ್ಧೆಯುಳ್ಳವರು ಇದನ್ನು ನಂಬುತ್ತಾರೆ.

ದಿವ್ಯ ಶಶಾಕೃತಿಯಲ್ಲಿರುವುದರ ಎರಡೂ ಪಕ್ಕಗಳಲ್ಲಿ, ಎಡ-ಬಲಗಳಲ್ಲಿ, ಎರಡು ವರ್ಷಗಳಿವೆ. ಈ ನಾಗದ್ವೀಪ ಮತ್ತು ಕಶ್ಯಪ ದ್ವೀಪಗಳು ಆ ಮೊಲದ ಕಿವಿಗಳಿದ್ದಂತೆ. ತಾಮ್ರವರ್ಣದ ಶ್ರೀಮಾನ್ ಮಲಯಪರ್ವತವು ಮೊಲದ ಆಕಾರದಲ್ಲಿರುವ ದ್ವೀಪದ ಶಿರದಂತಿರುವ ಎರಡನೆಯದು.

ನೀಲಪರ್ವತದ ದಕ್ಷಿಣದಲ್ಲಿ ಮತ್ತು ಮೇರು ಪರ್ವತದ ಉತ್ತರ ಪಾರ್ಶ್ವದಲ್ಲಿ ಸಿದ್ಧನಿಷೇವಿತ ಪುಣ್ಯ ಉತ್ತರ ಕುರುವಿದೆ. ಅಲ್ಲಿಯ ಸಿಹಿಹಣ್ಣಿನ ಮರಗಳು ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿದ್ದು, ಪುಷ್ಪಗಳು ಸುಗಂಧಯುಕ್ತವೂ ಫಲಗಳು ರಸವತ್ತಾಗಿಯೂ ಇರುತ್ತವೆ. ಅಲ್ಲಿರುವ ಕೆಲವು ವೃಕ್ಷಗಳು ಸರ್ವಕಾಮಗಳನ್ನು ಕೊಡುವವು. ಅಲ್ಲಿ ಕ್ಷೀರೀ ಎಂಬ ಹೆಸರಿನ ಬೇರೆ ವೃಕ್ಷಗಳೂ ಇವೆ. ಅವು ಸದಾ ಷಡ್ರಸ, ಅಮೃತೋಪಮ ಹಾಲನ್ನು, ಫಲಗಳಾಗಿ ವಸ್ತ್ರ-ಆಭರಣಗಳನ್ನೂ ಕೊಡುತ್ತವೆ. ಅಲ್ಲಿಯ ಭೂಮಿಯೆಲ್ಲಾ ಮಣಿಮಯವಾದುದು, ಮತ್ತು ಸೂಕ್ಷ್ಮವಾದ ಬಂಗಾರದ ಮರಳಿನಿಂದ ಕೂಡಿದೆ. ಎಲ್ಲೆಲ್ಲಿಯೂ ಸುಖಸಂಸ್ಪರ್ಷವಿದೆ. ಕೆಸರೆಂಬುದೇ ಇಲ್ಲ. ದೇವಲೋಕದಿಂದ ಚ್ಯುತರಾದ ಮಾನವರೆಲ್ಲರೂ ಅಲ್ಲಿ ಹುಟ್ಟುತ್ತಾರೆ. ಸಮ-ವಿಷಮಗಳಲ್ಲಿ ಅವರು ಸರಿಸಾಟಿಯಾದ ರೂಪಗುಣಗಳನ್ನು ಹೊಂದಿರುತ್ತಾರೆ. ಅಲ್ಲಿ ಅವಳಿ-ಜವಳಿ ಮಕ್ಕಳು ಹುಟ್ಟುತ್ತಾರೆ. ಅವರಲ್ಲಿ ಹುಟ್ಟುವ ಸ್ತ್ರೀಯರು ಅಪ್ಸರೆಯರಂತಿರುತ್ತಾರೆ. ಅವರು ಅಲ್ಲಿ ಕ್ಷೀರಿಗಳ ಅಮೃತಸನ್ನಿಭ ಕ್ಷೀರವನ್ನು ಕುಡಿಯುತ್ತಾರೆ. ಮಿಥುನರಾಗಿ ಹುಟ್ಟಿದವರು ಅಲ್ಲಿ ಸಮ ಸಮವಾಗಿಯೇ ಬೆಳೆಯುತ್ತಾರೆ, ಸರಿಸಮನಾದ ರೂಪ-ಗುಣಗಳನ್ನು ಹೊಂದಿರುತ್ತಾರೆ. ಅವರ ವೇಷಭೂಷಣಗಳೂ ಒಂದೇ ಆಗಿರುತ್ತವೆ. ಮತ್ತು ಚಕ್ರವಾಕ ಪಕ್ಷಿಗಳಂತೆ ಪರಸ್ಪರರಲ್ಲಿ ಅನುರಕ್ತರಾಗಿರುತ್ತಾರೆ. ನಿರಾಮಯರಾಗಿ, ವೀತಶೋಕರಾಗಿ, ನಿತ್ಯವೂ ಮುದಿತ ಮಾನಸರಾಗಿ ಅವರು ಹತ್ತು ಸಾವಿರದ ಹತ್ತು ನೂರು ವರ್ಷಗಳು ಜೀವಿಸುತ್ತಾರೆ ಮತ್ತು ಅನ್ಯೋನ್ಯರನ್ನು ತೊರೆಯುವುದಿಲ್ಲ. ಅವರು ಮೃತರಾದಾಗ ಭಾರುಂಡ ಎಂಬ ಹೆಸರಿನ, ತೀಕ್ಷ್ಣ ಕೊಕ್ಕುಗಳನ್ನುಳ್ಳ ಮಹಾಬಲಶಾಲೀ ಪಕ್ಷಿಗಳು ಅವರನ್ನು ಎತ್ತಿ ಪರ್ವತ ಕಣಿವೆಗಳಲ್ಲಿ ಎಸೆಯುತ್ತವೆ. ಇದು ಉತ್ತಮ ಕುರುವಿನ ಸಂಕ್ಷಿಪ್ತ ವರ್ಣನೆ.

ಮೇರುವಿನ ಪೂರ್ವಭಾಗದ ವರ್ಣನೆ ಈ ರೀತಿಯಿದೆ. ಅದರ ಪೂರ್ವದಲ್ಲಿರುವವಗಳಲ್ಲಿ ಭದ್ರಸಾಲವೃಕ್ಷಗಳನ್ನು ಕೂಡಿದ ಭದ್ರಾಶ್ವವೆಂಬ ವನವಿದೆ. ಅಲ್ಲಿ ಕಾಲಾಮ್ರವೆಂಬ ಮಹಾ ವೃಕ್ಷವೂ ಇದೆ. ಕಾಲಾಮ್ರವು ನಿತ್ಯ ಶುಭ ಪುಷ್ಪಫಲಗಳಿಂದ ಕೂಡಿರುತ್ತದೆ. ಆ ವೃಕ್ಷವು ಎತ್ತರದಲ್ಲಿ ಒಂದು ಯೋಜನದಷ್ಟಿದ್ದು, ಅದನ್ನು ಸಿದ್ಧಚಾರಣರು ಸೇವಿಸುತ್ತಾರೆ. ಅಲ್ಲಿಯ ಪುರುಷರು ಶ್ವೇತವರ್ಣದವರಾಗಿಯೂ, ತೇಜೋಯುಕ್ತರಾಗಿಯೂ, ಮಹಾಬಲಶಾಲಿಗಳಾಗಿಯೂ ಇರುತ್ತಾರೆ. ಸ್ತ್ರೀಯರು ಕುಮುದವರ್ಣದವರಾಗಿದ್ದು, ಸುಂದರಿಯರೂ ಪ್ರಿಯದರ್ಶನೆಯರೂ, ಚಂದ್ರಪ್ರಭೆಯುಳ್ಳವರೂ, ಚಂದ್ರವರ್ಣದವರೂ, ಪೂರ್ಣಚಂದ್ರನಂತಹ ಮುಖವುಳ್ಳವರೂ, ಚಂದ್ರನಂತೆ ಶೀತಲ ದೇಹವುಳ್ಳವರೂ ನೃತ್ಯ-ಗೀತ ವಿಶಾರದರೂ ಆಗಿರುತ್ತಾರೆ. ಅಲ್ಲಿ ಆಯುಸ್ಸು ಹತ್ತು ಸಾವಿರ ವರ್ಷಗಳು. ಕಾಲಾಮ್ರದ ರಸವನ್ನು ಕುಡಿದು ಅವರು ನಿತ್ಯವೂ ಯೌವನದಲ್ಲಿಯೇ ಇರುತ್ತಾರೆ.

ನೀಲಪರ್ವತದ ದಕ್ಷಿಣದಲ್ಲಿ, ನಿಷಧದ ಉತ್ತರದಲ್ಲಿ ಸುದರ್ಶನ ಎಂಬ ಹೆಸರಿನ ಸನಾತನ ಜಂಬೂವೃಕ್ಷವಿದೆ. ಸರ್ವಕಾಮಫಲಗಳನ್ನೂ ನೀಡುವ, ಪುಣ್ಯ, ಸಿದ್ಧಚಾರಣ ಸೇವಿತ, ಸನಾತನ ವೃಕ್ಷದಿಂದಾಗಿ ಅದನ್ನು ಜಂಬೂದ್ವೀಪವೆಂಬ ಹೆಸರಿನಿಂದಲೂ ಕರೆಯುತ್ತಾರೆ. ದಿವವನ್ನು ಮುಟ್ಟುವ ಆ ವೃಕ್ಷರಾಜನ ಎತ್ತರವು ಒಂದು ಸಾವಿರದ ಒಂದು ನೂರು ಯೋಜನವಿದೆ. ಒಡೆದು ರಸವನ್ನು ಸುರಿಸುವ ಆ ವೃಕ್ಷದ ಫಲಗಳ ಪರಿಧಿಯು ಒಂದು ಸಾವಿರದ ಐದು ನೂರು ಅರತ್ನಿಗಳು. ಈ ಹಣ್ಣುಗಳು ನೆಲದ ಮೇಲೆ ಬೀಳುವಾಗ ದೊಡ್ಡ ಶಬ್ಧವನ್ನು ಮಾಡುತ್ತವೆ ಮತ್ತು ಬೆಳ್ಳಿಯಂತಿರುವ ರಸವನ್ನು ಸುರಿಸುತ್ತವೆ. ಆ ಜಂಬೂ ಫಲಗಳ ರಸವು ನದಿಯಾಗಿ ಮೇರುವನ್ನು ಪ್ರದಕ್ಷಿಣೆಮಾಡಿ ಉತ್ತರ ಕುರುಗಳಲ್ಲಿಗೆ ಬರುತ್ತದೆ. ನಿತ್ಯವೂ ಆ ರಸವನ್ನು ಹೃಷ್ಟ ಜನರು ಕುಡಿಯುತ್ತಾರೆ. ಆ ಫಲದ ರಸವನ್ನು ಕುಡಿದವರಿಗೆ ಮುಪ್ಪು ಬಾಧಿಸುವುದಿಲ್ಲ. ಅಲ್ಲಿ ಜಾಂಬೂನದರೆಂಬ ಹೆಸರಿನ ಬಂಗಾರದ, ದೇವಭೂಷಣಗಳ, ತರುಣ ಆದಿತ್ಯವರ್ಣದ ಮಾನವರು ಹುಟ್ಟುತ್ತಾರೆ.

ಮಾಲ್ಯವತದ ಶೃಂಗದಲ್ಲಿ ಸಂವರ್ತಕ ಎಂಬ ಹೆಸರಿನ ಅಗ್ನಿ ಕಾಲಾಗ್ನಿಯು ಉರಿಯುತ್ತದೆ. ಹಾಗೆಯೇ ಮಾಲ್ಯವತದ ಶೃಂಗದ ಪೂರ್ವದಲ್ಲಿ ಹಲವಾರು ಸಣ್ಣ ಸಣ್ಣ ಪರ್ವತಗಳಿವೆ. ಮಾಲ್ಯವತವು ಐದು ಸಾವಿರ ಯೋಜನೆ ವಿಸ್ತೀರ್ಣದಲ್ಲಿ ನಿಂತಿದೆ. ಬ್ರಹ್ಮಲೋಕದಿಂದ ಚ್ಯುತರಾದವರೆಲ್ಲರೂ, ಎಲ್ಲ ಬ್ರಹ್ಮವಾದಿಗಳೂ ಅಲ್ಲಿ ಮಹಾರಜತ ಸಂಕಾಶ ಮಾನವರಾಗಿ ಜನಿಸುತ್ತಾರೆ. ತಪಸ್ಸನ್ನು ತಪಿಸಿ ಅವರು ಊರ್ಧ್ವರೇತಸರಾಗಿರುತ್ತಾರೆ. ಭೂತಗಳ ರಕ್ಷಣೆಗೋಸ್ಕರ ದಿವಾಕರನನ್ನು ಪ್ರವೇಶಿಸುತ್ತಾರೆ. ಅರವತ್ತಾರು ಸಾವಿರ ಸಂಖ್ಯೆಗಳ ಅವರು ಅರುಣನ ಮುಂದೆ ನಡೆದು ದಿವಾಕರನನ್ನು ಸುತ್ತುವರೆಯುತ್ತಾರೆ. ಅರವತ್ತಾರು ಸಾವಿರ ವರ್ಷಗಳು ಆದಿತ್ಯನನ್ನು ತಪಿಸಿ ಅವರು ಶಶಿಮಂಡಲವನ್ನು ಪ್ರವೇಶಿಸುತ್ತಾರೆ.

ಶ್ವೇತದ ದಕ್ಷಿಣಕ್ಕೆ ಮತ್ತು ನೀಲದ ಉತ್ತರದಲ್ಲಿರುವ ವರ್ಷದಲ್ಲಿ ರಮಣಕ ಎಂಬ ಹೆಸರಿನ ಮಾನವರು ಜನಿಸುತ್ತಾರೆ. ಅಲ್ಲಿಯ ಜನರು ಬಿಳಿಯ ಬಣ್ಣದವರಾಗಿದ್ದು, ಉತ್ತಮ ಕುಲದವರಾಗಿದ್ದು ಎಲ್ಲರೂ ನೋಡಲು ತುಂಬಾ ಸುಂದರರಾಗಿರುತ್ತಾರೆ. ಅಲ್ಲಿ ಜನಿಸಿದ ಮಾನವರಿಗೆ ದ್ವೇಷಿಗಳೆಂಬುವವರೇ ಇರುವುದಿಲ್ಲ. ನಿತ್ಯವೂ ಮುದಿತಮನಸ್ಕರಾದ ಅವರು ಹನ್ನೊಂದು ಸಾವಿರದ ಐದು ನೂರು ವರ್ಷಗಳು ಜೀವಿಸುತ್ತಾರೆ. ಶೃಂಗಿಣದ ದಕ್ಷಿಣದಲ್ಲಿ ಮತ್ತು ಶ್ವೇತದ ಉತ್ತರದಲ್ಲಿ ಹೈರಣ್ವತೀ ನದಿಯು ಹರಿಯುವ ಹೈರಣ್ವತವೆಂಬ ಹೆಸರಿನ ವರ್ಷವಿದೆ. ಅಲ್ಲಿರುವ ಸದಾ ಮುದಿತಪಾನಸರು ಯಕ್ಷನ ಅನುಯಾಯಿಗಳು, ಧನಿಗಳು, ಮಹಾಬಲರು ಮತ್ತು ನೋಡಲು ಸುಂದರರು. ಅಲ್ಲಿ ಜೀವಿಸುವವರ ಆಯುಸ್ಸಿನ ಪ್ರಮಾಣವು ಹನ್ನೊಂದು ಸಾವಿರದ ಐವತ್ತು ನೂರು ವರ್ಷಗಳು. ಶೃಂಗವತದಲ್ಲಿ ಮೂರು ಶಿಖರಗಳಿವೆ - ಒಂದು ಮಣಿಮಯವಾದುದು ಮತ್ತು ಇನ್ನೊಂದು ಅದ್ಭುತ ಬಂಗಾರದ್ದು. ಇನ್ನೊಂದು ಸರ್ವ ರತ್ನಮಯವಾಗಿದ್ದು ಭವನಗಳಿಂದ ಶೋಭಿಸುತ್ತದೆ. ಅಲ್ಲಿ ಸ್ವಯಂಪ್ರಭೆ ದೇವೀ ಶಾಂಡಿಲಿಯು ನಿತ್ಯವೂ ವಾಸಿಸುತ್ತಾಳೆ.

ಶೃಂಗದ ಉತ್ತರಕ್ಕೆ, ಸಮುದ್ರದ ಅಂಚಿನಲ್ಲಿ, ಐರಾವತವೆಂಬ ಹೆಸರಿನ ವರ್ಷವಿದೆ. ಇಲ್ಲಿ ಶೃಂಗವತವಿರುವುದರಿಂದ ಇದು ಅತಿ ಶ್ರೇಷ್ಠವಾದುದು. ಅಲ್ಲಿ ಸೂರ್ಯ ಸುಡುವುದಿಲ್ಲ. ಮಾನವರು ಜೀರ್ಣರಾಗುವುದಿಲ್ಲ. ನಕ್ಷತ್ರಗಳೊಡನೆ ಚಂದ್ರಮನು ಮಾತ್ರ ಬೆಳಕಾಗಿ ಆವರಿಸಿರುತ್ತಾನೆ. ಅಲ್ಲಿ ಮನುಷ್ಯರು ಪದ್ಮಪ್ರಭೆಯುಳ್ಳವರಾಗಿ, ಪದ್ಮವರ್ಣದವರಾಗಿ, ಪದ್ಮಪತ್ರದಂತಹ ಕಣ್ಣುಗಳುಳ್ಳವರಾಗಿ, ಪದ್ಮಪತ್ರದ ಸುಗಂಧಗಳುಳ್ಳವರಾಗಿ ಹುಟ್ಟುತ್ತಾರೆ. ಕಣ್ಣು ಮುಚ್ಚದಿರುವ, ಸುಗಂಧಗಳುಳ್ಳ ಅವರು ನಿರಾಹಾರರಾಗಿ ಜಿತೇಂದ್ರಿಯರಾಗಿರುತ್ತಾರೆ. ದೇವಲೋಕದಿಂದ ಕೆಳಗೆ ಬಿದ್ದ ಅವರು ಎಲ್ಲರೂ ಪಾಪಗಳಿಲ್ಲದವರು. ಅವರ ಆಯುಷ್ಪ್ರಮಾಣವು ಹದಿಮೂರು ಸಾವಿರ ವರ್ಷಗಳಿದ್ದು ಅಲ್ಲಿಯ ನರರು ಅಷ್ಟು ವರ್ಷಗಳು ಜೀವಿಸುತ್ತಾರೆ.

ಕ್ಷೀರಸಾಗರದ ಉತ್ತರದಲ್ಲಿ ಪ್ರಭು ಹರಿ ವೈಕುಂಠನು ಕನಕಾತ್ಮಕ ರಥದ ಮೇಲೆ ವಾಸಿಸುತ್ತಾನೆ. ಆ ರಥಕ್ಕೆ ಎಂಟು ಚಕ್ರಗಳಿವೆ, ಭೂತಯುಕ್ತವಾಗಿದೆ, ಮನೋವೇಗವನ್ನು ಹೊಂದಿದೆ, ಅಗ್ನಿಯ ಬಣ್ಣವಿದೆ, ಅತಿಯಾದ ವೇಗವಿದೆ, ಪರಿಷ್ಕೃತ ಬಂಗಾರದಿಂದ ಮಾಡಲ್ಪಟ್ಟಿದೆ. ಆ ಪ್ರಭುವು ಸರ್ವಭೂತಗಳ ವಿಭುವೂ ಹೌದು. ಅವನಲ್ಲಿ ಎಲ್ಲವೂ ಸಂಕ್ಷಿಪ್ತವಾಗುತ್ತವೆ. ಅವನಿಂದ ಎಲ್ಲವೂ ವಿಸ್ತರವಾಗುತ್ತವೆ. ಅವನೇ ಮಾಡುವವನು ಮತ್ತು ಮಾಡಿಸುವವನು ಕೂಡ. ಅವನೇ ಪೃಥ್ವಿ, ಆಪ, ಆಕಾಶ, ವಾಯು, ಮತ್ತು ತೇಜ. ಅವನು ಸರ್ವಭೂತಗಳ ಯಜ್ಞ ಮತ್ತು ಅವನ ಮುಖವು ಹುತಾಶನ.

ಕಾಲವು ಜಗತ್ತನ್ನು ಸಂಕ್ಷಿಪ್ತಗೊಳಿಸುತ್ತದೆ ಮತ್ತು ಪುನಃ ಸೃಷ್ಟಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇವೆಲ್ಲವೂ ಶಾಶ್ವತವಲ್ಲವೆಂದು ತಿಳಿದಿದೆ. ನರ-ನಾರಾಯಣರು ಸರ್ವಜ್ಞರು, ಸರ್ವಭೂತಭೃತರು. ದೇವತೆಗಳು ಅವನನ್ನು ವೈಕುಂಠ ಎಂದು ಕರೆಯುತ್ತಾರೆ. ಅವನು ವಿಷ್ಣುವೆಂದೂ ಪ್ರಭುವೆಂದೂ ತಿಳಿಯಲ್ಪಡುತ್ತಾನೆ.”

ಭಾರತದ ನದೀ-ದೇಶಗಳ ವರ್ಣನೆ

ಭಾರತವರ್ಷವು ದೇವ ಇಂದ್ರನಿಗೆ, ವೈವಸ್ವತ ಮನುವಿಗೆ, ವೈನ್ಯನ ಮಗ ಪೃಥುವಿಗೆ, ಮಹಾತ್ಮ ಇಕ್ಷ್ವಾಕುವಿಗೆ, ಯಯಾತಿಗೆ, ಅಂಬರೀಷನಿಗೆ, ಮಾಂಧಾತನಿಗೆ, ನಹುಷನಿಗೆ, ಹಾಗೆಯೇ ಮುಚುಕುಂದನಿಗೆ, ಶಿಬಿ ಔಶೀನರನಿಗೆ, ಋಷಭನಿಗೆ, ಇಲನಿಗೆ, ಮತ್ತು ನೃಪತಿ ನೃಗನಿಗೆ ಪ್ರಿಯವಾದು. ಇನ್ನೂ ಇತರ ಬಲಶಾಲಿ ಕ್ಷತ್ರಿಯರೆಲ್ಲರಿಗೂ ಭಾರತವು ಪ್ರಿಯವಾದುದು. ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನ, ಋಕ್ಷವಾನ್, ವಿಂಧ್ಯ, ಪಾರಿಯಾತ್ರ ಈ ಏಳು ಕುಲಪರ್ವತಗಳು. ಅವುಗಳ ಸಮೀಪದಲ್ಲಿ ಸಹಸ್ರಾರು ತಿಳಿಯದೇ ಇರುವ, ಸಾರವಂತ, ವಿಪುಲ ಚಿತ್ರ ಕಣಿವೆಗಳನ್ನುಳ್ಳ ಪರ್ವತಗಳಿವೆ. ಇನ್ನೂ ಇತರ ಸಣ್ಣ ಪರ್ವತಗಳಿವೆ - ಇವುಗಳ ಮೇಲೆ ಸಣ್ಣ ಮನುಷ್ಯರು ವಾಸಿಸುತ್ತಾರೆ. ಭಾರತವರ್ಷದಲ್ಲಿ ಆರ್ಯರು, ಮ್ಲೇಚ್ಛರು, ಮತ್ತು ಅವರಿಬ್ಬರ ಸಂಪರ್ಕದಿಂದ ಹುಟ್ಟಿದ ಮಿಶ್ರ ಜನರು ಕೂಡ ಇದ್ದಾರೆ.

ಇಲ್ಲಿಯವರು ಬಹಳಷ್ಟು ನದಿಗಳ ನೀರನ್ನು ಕುಡಿಯುತ್ತಾರೆ - ಗಂಗಾ, ಸಿಂಧು, ಸರಸ್ವತೀ, ಗೋದಾವರೀ, ನರ್ಮದಾ, ಬಾಹುದಾ, ಮಹಾನದೀ, ಶತದ್ರು, ಚಂದ್ರಭಾಗಾ, ಯಮುನಾ, ದೃಷಧ್ವತೀ, ವಿಪಾಶಾ, ವಿಪಾಪಾ, ಸ್ಥೂಲವಾಲುಕಾ, ವೇತ್ರವತೀ, ಕೃಷ್ಣವೇಣಾ, ನಿಮ್ನಗಾ, ಇರಾವತೀ, ವಿತಸ್ತಾ, ಪಯೋಷ್ಣೀ, ದೇವಿಕಾ, ವೇದಸ್ಮೃತಿ, ವೇತಸಿನಿ, ತ್ರಿದಿವಾ, ಇಷ್ಕುಮಾಲಿನೀ, ಕರೀಷಿಣೀ, ಚಿತ್ರವಹಾ, ಚಿತ್ರಸೇನಾ, ಗೋಮತೀ, ಧೂತಪಾಪಾ, ವಂದನಾ, ಕೌಶಿಕೀ, ತ್ರಿದಿವಾ, ಕೃತ್ಯಾ, ವಿಚಿತಾ, ಲೋಹತಾರಿಣೀ, ರಥಸ್ಥಾ, ಶತಕುಂಭಾ, ಸರಯೂ, ಚರ್ಮಣ್ವತೀ, ವೇತ್ರವತೀ, ಹಸ್ತಿಸೋಮಾ, ದಿಶ, ಶತಾವರೀ, ಪಯೋಷ್ಣೀ, ಪರಾ, ಭೈಮರಥೀ, ಕಾವೇರೀ, ಚುಲುಕಾ, ವಾಪೀ, ಶತಬಲಾ, ನಿಚೀರಾ, ಮಹಿತಾ, ಸುಪ್ರಯೋಗಾ, ಪವಿತ್ರಾ, ಕುಂಡಲಾ, ಸಿಂಧು, ವಾಜಿನೀ, ಪುರಮಾಲಿನೀ, ಪೂರಾಭಿರಾಮಾ, ವೀರಾ, ಭೀಮಾ, ಓಘವತೀ, ಪಲಾಶಿನೀ, ಪಾಪಹರಾ, ಮಹೇಂದ್ರಾ, ಪಿಪ್ಪಲಾವತೀ, ಪಾರಿಷೇಣ, ಅಸಿಕ್ನೀ, ಸರಲಾ, ಭಾರಮರ್ದಿನೀ, ಪುರುಹೀ, ಪ್ರವರಾ, ಮೇನಾ, ಮೋಘಾ, ಘೃತವತೀ, ಧೂಪತ್ಯಾಮತಿ, ಕೃಷ್ಣಾ, ಸೂಚೀ, ಚಾವೀ, ಸದಾನೀ, ರಾಮಧೃಷ್ಯಾಂ, ಕುಶಧಾರಾಂ, ಶಶಿಕಾಂತಾ, ಶಿವಾ, ವೀರವತೀ, ವಾಸ್ತು, ಸುವಾಸ್ತು, ಗೌರೀ, ಕಂಪನಾ, ಹಿರಣ್ವತೀ, ಚಿತ್ರವತೀ, ಚಿತ್ರಸೇನಾ, ನಿಮ್ನಗಾ, ರಥಚಿತ್ರಾ, ಜ್ಯೋತಿರಥಾ, ವಿಶ್ವಾಮಿತ್ರಾ, ಕಪಿಂಜಲಾ, ಉಪೇಂದ್ರಾ, ಬಹುಲಾ, ಕುಚರಾ, ಅಂಬುವಾಹಿನೀ, ವೈನಂದೀ, ಪಿಂಜಲಾ, ವೇಣ್ಣಾ, ತಾಮ್ರಾ, ಕಪಿಲಾ, ಶಲು, ಸುವಾಮ, ವೇದಾಶ್ವಾ, ಹರಿಸ್ರಾವಾ, ಮಹಾಪಗಾ, ಶೀಘ್ರಾ, ಪಿಚ್ಛಿಲಾ, ಭಾರದ್ವಾಜೀ, ಕೌಶಿಕೀ, ಶೋಣಾ, ಬಾಹುದಾ, ಚಂದನಾ, ದುರ್ಗಾ, ಅಂತಃಶಿಲಾ, ಬ್ರಹ್ಮಮೇಧ್ಯಾ, ಬೃಹದ್ವತೀ, ಚರಕ್ಷಾ, ಮಹಿರೋಹೀ, ಜಂಬುನದೀ, ಸುನಸಾ, ತಪಸಾ, ದಾಸೀ, ತ್ರಸಾಮನ್ಯಾ, ವರಾಣಸೀ, ಲೋಲೋಧೃತಕರಾ, ಪೂರ್ಣಾಶಾ, ಮಾನವೀ, ವೃಷಭಾ, ಸದಾನಿರಾಮಯಾ, ವೃತ್ಯಾ, ಮಂದಗಾ, ಮಂದವಾಹಿನೀ, ಬ್ರಹ್ಮಾಣೀ, ಮಹಾಗೌರೀ, ದುರ್ಗಾ, ಚಿತ್ರೋಪಲಾ, ಚಿತ್ರಬರ್ಹಾ, ಮಂಜು, ಮಕರವಾಹಿನೀ, ಮಂದಾಕಿನೀ, ವೈತರಣೀ, ಕೋಕಾ, ಮಹಾನದೀ, ಶುಕ್ತಿಮತೀ, ಅರಣ್ಯಾ, ಪುಷ್ಪವೇಣೀ, ಉತ್ಪಲಾವತೀ, ಲೋಹಿತಾ, ಕರತೋಯಾ, ವೃಷಭಂಗಿನೀ, ಕುಮಾರೀ, ಋಷಿಕುಲ್ಯಾ, ಬ್ರಹ್ಮಕುಲ್ಯಾ, ಸರಸ್ವತೀ, ಸುಪುಣ್ಯಾ, ಸರ್ವಾ, ಮತ್ತು ವಿಶ್ವ ಮಾತರ, ಗಂಗಾ - ಎಲ್ಲದಕ್ಕೆ ಎಲ್ಲವೂ ಮಹಾಬಲ ನದಿಗಳು. ಇನ್ನೂ ನೂರಾರು ಸಹಸ್ರಾರು ನದಿಗಳು ಕಾಣಿಸಿಕೊಳ್ಳುತ್ತವೆ. ಈ ನದಿಗಳು ಸ್ಮೃತಿಗಳಲ್ಲಿ ಹೇಳಿರುವಂತೆ ಮುಖ್ಯವಾದವುಗಳು.

ಭಾರತವರ್ಷದಲ್ಲಿ - ಕುರು, ಪಾಂಚಾಲ, ಶಾಲ್ವ, ಮಾದ್ರೇಯ ಜಾಂಗಲಗಳು, ಶೂರಸೇನರು, ಕಲಿಂಗರು, ಬೋಧಾ-ಮೌಕರು, ಮತ್ಯರು, ಸುಕುಟ್ಟರು, ಸೌಬಲರು, ಕುಂತಲರು, ಕಾಶಿ-ಕೋಶಲರು, ಚೇದಿವತ್ಸರು, ಕರೂಷರು, ಭೋಜರು, ಸಿಂಧು-ಪುಲಿಂದಕರು, ಉತ್ತಮೌಜಸರು, ದಶಾರ್ಣರು, ಮೇಕಲ-ಉತ್ಕಲರು, ಪಾಂಚಾಲರು, ಕೌಶಿಜರು, ಏಕಪೃಷ್ಠರು, ಯುಗಂಧರರು, ಸೌಧರು, ಮದ್ರರು, ಭುಜಿಂಗರು, ಕಾಶಯರು, ಅಪರಕಾಶಯರು, ಜಠರರು, ಕುಕ್ಕುಶರು, ಸುದಾಶಾರ್ಣರು, ಕುಂತಯರು, ಅವಂತಯರು, ಅಪರಕುಂತಯರು, ಗೋವಿಂದರು, ಮಂದಕರು, ಷಂಡರು, ವಿದರ್ಭರು, ಅನೂಪವಾಸಿಕರು, ಅಶ್ಮಕರು, ಪಾಂಸುರಾಷ್ಟ್ರರು, ಗೋಪರಾಷ್ಟ್ರರು, ಪನೀತಕರು, ಆದಿರಾಷ್ಟ್ರರು, ಸುಕುಟ್ಟರು, ಬಲಿರಾಷ್ಟ್ರರು, ಕೇವಲರು, ವಾನರಾಸ್ಯರು, ಪ್ರವಾಹರು, ವಕ್ರರು, ವಕ್ರಭಯರು, ಶಕರು, ವಿದೇಹಕರು, ಮಾಗಧರು, ಸುಹ್ಮಾರು, ವಿಜಯರು, ಅಂಗರು, ವಂಗರು, ಕಲಿಂಗರು, ಯಕೃಲ್ಲೋಮರು, ಮಲ್ಲರು, ಸುದೇಷ್ಣರು, ಪ್ರಾಹೂತರು, ಮಾಹಿಷಕಾರ್ಷಿಕರು, ವಾಹೀಕರು, ವಾಟಧಾನರು, ಆಭೀರರು, ಕಾಲತೋಯಕರು, ಅಪರಂಧ್ರಾರು, ಶೂದ್ರರು, ಪಹ್ಲವರು, ಚರ್ಮಖಂಡಿಕರು, ಅಟವೀಶಬರರು, ಮರುಭೌಮರು, ಉಪವೃಶರು, ಅನುಪಾವೃಶರು, ಸುರಾಷ್ಟ್ರರು, ಕೇಕಯರು, ಕುಟ್ಟಾಪಪರಾಂತರು, ದ್ವೈಧೇಯರು, ಕಾಕ್ಷರು, ಸಾಮುದ್ರನಿಷ್ಕುಟರು, ಆಂಧ್ರರು, ಮತ್ತು ಬಹಳ ಅಂತರ್ಗಿಯರು, ಬಹಿರ್ಗಿಯರು, ಅಂಗಮಲದರು, ಮಾಗಧರು, ಮಾನವರ್ಜಕರು, ಮಹ್ಯುತ್ತರರು, ಪ್ರಾವೃಷೇಯರು, ಭಾರ್ಗವರು, ಪುಂಡ್ರರು, ಭಾರ್ಗರು, ಕಿರಾತರು, ಸುದೋಷ್ಣರು, ಪ್ರಮುದರು, ಶಕರು, ನಿಷಾದರು, ನಿಷಧರು, ಆನರ್ತರು, ನೈರೃತರು, ದುಗೂಲರು, ಪ್ರತಿಮತ್ಸ್ಯರು, ಕುಶಲರು, ಕುನಟರು, ತೀರಗ್ರಾಹರು, ತರತೋಯರು, ರಾಜಿಕರು, ರಸ್ಯಕಾಗಣರು, ತಿಲಕರು, ಪಾರಸೀಕರು, ಮಧುಮಂತ, ಪ್ರಕುತ್ಸಕಾ, ಕಾಶ್ಮೀರರು, ಸಿಂಧುಸೌವೀರರು, ಗಾಂಧಾರರು, ದರ್ಶಕರು, ಅಭೀಸಾರರು, ಕುಲೂತರು, ಶೈವಲರು, ಬಾಹ್ಲಿಕರು, ದರ್ವೀಕರು, ಸಕಚರು, ದರ್ವಾರು, ವಾತಜಾಮರು, ಉರಗರು, ಬಹುವಾದ್ಯಾಶ್ಚ, ಸುದಾಮಾನರು, ಸುಮಲ್ಲಿಕರು, ವಧ್ರರು, ಕುಲಿಂದರು, ಕರೀಷಕರು, ಪತ್ಯಕರು, ವನಾಯವರು, ದಶಾಪಾರ್ಶ್ವರು, ರೋಮಾಣರು, ಕುಶಬಿಂದವರು, ಕಚ್ಛರು, ಗೋಪಲಕಚ್ಛರು, ಲಾಂಗಲರು, ಪರವಲ್ಲಕರು, ಕಿರಾತರು, ಬರ್ಬರರು, ಸಿದ್ಧರು, ವಿದೇಹರು, ತಾಮ್ರಲಿಂಗಕರು, ಓಷ್ಟ್ರರು, ಪುಂಡ್ರರು, ಸೈರಂಧ್ರರು, ಪಾರ್ವತೀಯರು, ಇನ್ನೂ ಇತರ ದಕ್ಷಿಣ ಜನಪದಗಳಾದ ದ್ರವಿಡರು, ಕೇರಲರು, ಪ್ರಾಚ್ಯರು, ಭೂಷಿಕರು, ವನವಾಸಿಗಳು, ಉನ್ನತ್ಯಕರು, ಮಾಹೀಷಕರು, ವಿಕಲ್ಪರು, ಮೂಷಕರು, ಕರ್ಣಿಕರು, ಕುಂತಿಕರು, ಸೌದ್ಭಿದರು, ನಲಕಾಲಕರು, ಕೌಕುಟ್ಟಕರು, ಚೋಲರು, ಕೋಂಕಣರು, ಮಾಲವಾಣಕರು, ಸಮಂಗರು, ಕೋಪನರು, ಕುಕುರಾಂಗದರು, ಧ್ವಜಿಗಳು, ಉತ್ಸವಸಂಕೇತರು, ತ್ರಿಗರ್ತರು, ಸರ್ವಸೇನರು, ತ್ರ್ಯಂಗರು, ಕೇಕರಕರು, ಪ್ರೋಷ್ಠರು, ಪರಸಂಚರಕರು, ವಿಂಧ್ಯಪುಲಕರು, ಪುಲಿಂದರು, ಕಲ್ಕಲರು, ಮಾಲಕರು, ಮಲ್ಲಕರು, ವರ್ತಕರು, ಕುಲಿಂದರು, ಕುಲಕರು, ಕರಣ್ಯರು, ಕುರಕರು, ಮೂಷಕರು, ಸ್ತನಬಾಲರು, ಸತಿಯರು, ಪತ್ತಿಪಂಜಕರು, ಆದಿದಾಯಾರು, ಸಿರಾಲರು, ಸ್ತೂಬಕರು, ಸ್ತನಪಾರು, ಹೃಷೀವಿದರ್ಭರು, ಕಾಂತೀಕಾಸ್ತರು, ಪರತಂಗಣರು, ಮತ್ತು ಉತ್ತರದ ಇತರ ಜನರಾದ ಮ್ಲೇಚ್ಛರು, ಯವನರು, ಕಂಬೋಜರು, ದಾರುಣ ಮ್ಲೇಚ್ಛಜಾತೀಯರು, ಕ್ಷದ್ದ್ರುಹರು, ಕುಂತಲರು, ಹೂಣರು, ಪಾರತಕರು, ಹಾಗೆಯೇ ಮರಧರು, ಚೀನರು, ದಶಮಾಲಿಕರು. ಇಲ್ಲಿ ಕ್ಷತ್ರಿಯ, ವೈಶ್ಯ, ಶೂದ್ರ ಕುಲಗಳೂ, ಶೂದ್ರರಾದ ಅಭೀರರು, ದರದರು, ಕಾಶ್ಮೀರರು ಪಶುಗಳೊಂದಿಗೆ ವಾಸಿಸುತ್ತಿದ್ದಾರೆ. ಖಶಿಕರೂ, ತುಖರರು, ಪಲ್ಲವರೂ, ಗಿರಿಗಹ್ವರೂ, ಆತ್ರೇಯರು, ಭರದ್ವಾಜರೂ, ಸ್ತನಯೋಷಿಕರೂ, ಔಪಕರೂ, ಕಲಿಂಗರೂ, ಕಿರಾತರ ಜಾತಿಯವರೂ, ತಾಮರರೂ, ಹಂಸಮಾರ್ಗರೂ, ಹಾಗೆಯೇ ಕರಭಂಜಕರೂ ವಾಸಿಸುತ್ತಿದ್ದಾರೆ.

ಅದರ ಗುಣ ಮತ್ತು ಬಲಗಳಂತೆ ಸರಿಯಾಗಿ ಅಭಿವೃದ್ಧಿಗೊಳಿಸಿದರೆ ಈ ಭೂಮಿಯು ಕಾಮಧೇನುವನ್ನು ಹಾಲುಕರೆದರೆ ಹೇಗೋ ಹಾಗೆ ತ್ರಿವರ್ಗದ ಮಹಾಫಲವನ್ನು ಕೊಡುತ್ತದೆ. ಅವಳನ್ನು ಧರ್ಮಾರ್ಥಕೋವಿದರಾದ ಶೂರ ರಾಜರು ಬಯಸುತ್ತಿದ್ದಾರೆ. ಅದರ ರಸವನ್ನು ಆಶಿಸಿ ಆ ತರಸ್ವಿಗಳು ರಣದಲ್ಲಿ ಪ್ರಾಣಗಳನ್ನು ತ್ಯಜಿಸುತ್ತಾರೆ. ಭೂಮಿಯು ದೇವ-ಮನುಷ್ಯ ಕಾಯದಲ್ಲಿರುವವರ ಬಯಕೆ ಮತ್ತು ಪರಾಯಣ. ವಸುಂಧರೆಯನ್ನು ಭೋಗಿಸಲು ಬಯಸಿ ರಾಜರು ಆಮಿಷಕ್ಕೆ ಹೊಡೆದಾಡುವ ನಾಯಿಗಳಂತೆ ಅನ್ಯೋನ್ಯರಲ್ಲಿ ಕಚ್ಚಾಡುತ್ತಿದ್ದಾರೆ. ಅವರ ಆಸೆಗಳಿಗೆ ತೃಪ್ತಿಯೆಂಬುದೇ ಇಲ್ಲ. ಸಂಪೂರ್ಣವಾಗಿ ಮತ್ತು ಚೆನ್ನಾಗಿ ಪರಿಪಾಲಿಸಲ್ಪಟ್ಟರೆ ಭೂಮಿಯು ಇರುವವುಗಳ ತಂದೆ, ತಾಯಿ, ಪುತ್ರ, ಆಕಾಶ ಮತ್ತು ಸ್ವರ್ಗವಾಗುತ್ತದೆ.

ಯುಗವರ್ಣನೆ

ಭಾರತ ವರ್ಷದಲ್ಲಿ ನಾಲ್ಕು ಯುಗಗಳಿವೆ - ಕೃತ, ತ್ರೇತಾ, ದ್ವಾಪರ ಮತ್ತು ಪುಷ್ಯ. ಮೊದಲನೆಯದರ ಹೆಸರು ಕೃತಯುಗ, ಅನಂತರದ್ದು ತ್ರೇತಾಯುಗ. ಅದು ಕಳೆದ ನಂತರ ದ್ವಾಪರ. ಮತ್ತೆ ಪುಷ್ಯಯುಗವು ಬರುತ್ತದೆ. ಕೃತಯುಗದಲ್ಲಿ ಆಯಸ್ಸಿನ ಪ್ರಮಾಣ ನಾಲ್ಕು ಸಾವಿರ ವರ್ಷಗಳು. ತ್ರೇತದಲ್ಲಿ ಮೂರು ಸಾವಿರ. ದ್ವಾಪರದಲ್ಲಿ ಎರಡು ಸಾವಿರ ವರ್ಷಗಳು. ಪುಷ್ಯದಲ್ಲಿ ಇಂತಿಷ್ಟೇ ಪ್ರಮಾಣವೆಂದಿರುವುದಿಲ್ಲ. ಆಗ ಗರ್ಭಾವಸ್ಥೆಯಲ್ಲಿಯೂ ಸಾಯಬಹುದು ಅಥವಾ ಹುಟ್ಟಿದ ಕೂಡಲೇ ಸಾಯಬಹುದು. ಕೃತಯುಗದಲ್ಲಿ ಮಹಾಬಲರೂ, ಮಹಾಸತ್ವರೂ, ಪ್ರಜಾಗುಣಸಮನ್ವಿತರೂ ಆದ ಮುನಿಗಳು, ಉತ್ತಮ ತಪೋಧನರು ಹುಟ್ಟುತ್ತಾರೆ. ಕೃತಯುಗದಲ್ಲಿ ಮಹೋತ್ಸಾಹಿಗಳು, ಮಹಾತ್ಮರು, ಧಾರ್ಮಿಕರು, ಸತ್ಯವಾದಿಗಳು, ಧನಿಕರು ಮತ್ತು ಅತೀವ ಸುಂದರರು ಜನಿಸುತ್ತಾರೆ. ತ್ರೇತದಲ್ಲಿ ಆಯುಷ್ಮಂತರೂ, ಮಹಾವೀರರೂ, ಯುದ್ಧದಲ್ಲಿ ಶ್ರೇಷ್ಠ ಧನುರ್ಧರರೂ ಆದ ಶೂರ ಕ್ಷತ್ರಿಯ ಚಕ್ರವರ್ತಿಗಳು ಜನಿಸುತ್ತಾರೆ. ದ್ವಾಪರದಲ್ಲಿ ಎಲ್ಲ ವರ್ಣದವರೂ ಮಹೋತ್ಸಾಹಿಗಳಾಗಿಯೂ, ಮಹಾವೀರ್ಯವಂತರಾಗಿಯೂ, ಪರಸ್ಪರರನ್ನು ಸಂಹರಿಸಲು ಇಚ್ಛೆಯುಳ್ಳವರೂ ಆಗಿ ಹುಟ್ಟುತ್ತಾರೆ. ಪುಷ್ಯದಲ್ಲಿ ಅಲ್ಪ ತೇಜಸ್ಸುಳ್ಳವರಾಗಿ ಕ್ರೋಧ, ಸೊಕ್ಕು, ದುರಾಸೆ, ಸುಳ್ಳುಗಳಿಂದೊಡಗೂಡಿದವರು ಹುಟ್ಟುತ್ತಾರೆ. ಪುಷ್ಯದಲ್ಲಿ ಮನುಷ್ಯರು ಈರ್ಷೆ, ಮಾನ, ಕ್ರೋಧ, ಮಾಯೆ, ಅಸೂಯೆ, ರಾಗ, ಲೋಭಗಳಿಗೊಳಗಾಗುತ್ತಾರೆ.

ಭೂಮಿ ಪರ್ವ

ಈ ಸಮಸ್ತ ಜಗತ್ತಿನಲ್ಲಿ ಬಹಳಷ್ಟು ದ್ವೀಪಗಳಿವೆ. ಆದರೆ ಏಳು ದ್ವೀಪಗಳ ಮತ್ತು ಚಂದ್ರ, ಆದಿತ್ಯಾದಿ ಗ್ರಹಗಳ ಕುರಿತ ವರ್ಣನೆಯು ಈ ರೀತಿಯಿದೆ. ಜಂಬೂಪರ್ವತ (ದ್ವೀಪ)ವು ಸಂಪೂರ್ಣ ಹದಿನೆಂಟು ಸಾವಿರ ಆರುನೂರು ಯೋಜನೆಗಳ ವಿಸ್ತೀರ್ಣದಲ್ಲಿದೆ. ನಾನಾಜನಪದಗಳಿಂದ ತುಂಬಿದ ಮತ್ತು ಮಣಿವಿದ್ರುಮಗಳಿಂದ ಚಿತ್ರಿತವಾದ ಲವಣ ಸಮುದ್ರದ ವಿಸ್ತಾರವು ಅದರ ಎರಡು ಪಟ್ಟು ಇದೆಯೆಂದು ಹೇಳುತ್ತಾರೆ. ಅನೇಕ ಖನಿಜಗಳಿಂದ ಕೂಡಿದ ವಿಚಿತ್ರ ಪರ್ವತಗಳಿಂದ ಅದು ಶೋಭಿಸುತ್ತದೆ. ಸಿದ್ಧಚಾರಣರಿಂದ ತುಂಬಿರುವ ಆ ಸಾಗರವು ಗೋಲಾಕಾರವಾಗಿದೆ. ಶಾಕದ್ವೀಪವು ಪ್ರಮಾಣದಲ್ಲಿ ಜಂಬೂದ್ವೀಪಕ್ಕಿಂತ ಎರಡು ಪಟ್ಟಿದೆ. ಶಾಕದ್ವೀಪವನ್ನು ಸುತ್ತುವರೆದಿರುವ ಕ್ಷೀರಸಾಗರವು ವಿಸ್ತಾರದಲ್ಲಿ ಶಾಕದ್ವೀಪಕ್ಕಿಂತ ಎರಡು ಪಟ್ಟಿದೆ. ಅಲ್ಲಿರುವ ಜನಪದಗಳು ಪುಣ್ಯವಾದವು ಮತ್ತು ಅಲ್ಲಿಯ ಜನರು ಸಾಯುವುದಿಲ್ಲ.

ಅಲ್ಲಿಯೇ ಇರುವ ಏಳು ಮಣಿಭೂಷಿತ ಪರ್ವತಗಳ, ಸಾಗರಗಳ, ನದಿಗಳ ಹೆಸರುಗಳು ಈ ರೀತಿಯಿವೆ. ಮೇರುವಿನಲ್ಲಿ ಎಲ್ಲವೂ ಅತೀವ ಗುಣವತ್ತಾಗಿವೆ ಮತ್ತು ಪುಣ್ಯವಾಗಿವೆ. ದೇವ-ಋಷಿ-ಗಂಧರ್ವರಿಂದ ಕೂಡಿರುವ ಮೇರುವನ್ನು ಪರಮವೆಂದು ಹೇಳುತ್ತಾರೆ. ಅದರ ನಂತರ ಬರುತ್ತದೆ ಮಲಯ ಎಂಬ ಹೆಸರಿನ ಪರ್ವತ. ಈ ಪರ್ವತದಿಂದಲೇ ಮೋಡಗಳು ಹುಟ್ಟುತ್ತವೆ ಮತ್ತು ಎಲ್ಲ ಕಡೆ ಪಸರಿಸುತ್ತವೆ. ನಂತರದ್ದು ಜಲಧಾರ ಎಂಬ ಮಹಾಗಿರಿಯಿದೆ. ಅಲ್ಲಿ ವಾಸವನು ನಿತ್ಯವೂ ಪರಮ ಜಲವನ್ನು ಪಡೆಯುತ್ತಾನೆ ಮತ್ತು ಅದೇ ನೀರನ್ನು ಮಳೆಗಾಳದಲ್ಲಿ ಮಳೆಯಾಗಿ ಸುರಿಸುತ್ತಾನೆ. ಅನಂತರ ಎತ್ತರದ ರೈವತಕ ಗಿರಿಯಿದೆ. ಅಲ್ಲಿ ವಿಧಿ ಪಿತಾಮಹನು ಮಾಡಿದ ರೇವತೀ ನಕ್ಷತ್ರವನ್ನು ದಿವಿಯಲ್ಲಿ ನಿತ್ಯವೂ ಪತಿಷ್ಠಿತಗೊಂಡಿದೆ. ಅದರ ಉತ್ತರದಲ್ಲಿ ಶ್ಯಾಮ ಎಂಬ ಹೆಸರಿನ ಮಹಾಗಿರಿಯಿದೆ. ಅಲ್ಲಿರುವ ಪ್ರಜೆಗಳು ಶ್ಯಾಮತ್ವವನ್ನು ಪಡೆದಿದ್ದಾರೆ. ಎಲ್ಲ ದ್ವೀಪಗಳಲ್ಲಿಯೂ ಗೌರವರ್ಣದವರು, ಕೃಷ್ಣವರ್ಣದವರು ಮತ್ತು ಇವೆರಡೂ ವರ್ಣಗಳ ನಡುವೆ ಇರುವವರು ಕಂಡುಬರುತ್ತಾರೆ. ಶ್ಯಾಮ ಗಿರಿಯಲ್ಲಿರುವವರು ಭಗವಾನ್ ಕೃಷ್ಣನ ಕಾಂತಿಯಿಂದ ಶ್ಯಾಮತ್ವವನ್ನು ಪಡೆದರು.

ಅದಕ್ಕೂ ನಂತರದ ಮಹೋದಯ ದುರ್ಗಶೈಲವಿದೆ. ಅಲ್ಲಿ ಬೀಸುವ ಗಾಳಿಯು ಕೇಸರೀ ಬಣ್ಣದಾಗಿದ್ದು ಕೇಸರೀಯತವಾಗಿದೆ. ಅವುಗಳ ವಿಸ್ತಾರವು ಕ್ರಮವಾಗಿ ಅದರ ಮೊದಲಿನದಕ್ಕಿಂತ ದ್ವಿಗುಣವಾಗಿರುತ್ತದೆ. ಅಲ್ಲಿ ಏಳು ವರ್ಷ(ಖಂಡ)ಗಳಿವೆ ಎಂದು ಮನೀಷಿಗಳು ಹೇಳುತ್ತಾರೆ. ಮಹಾಮೇರು ಪರ್ವತದ ಸಮೀಪ ಮಹಾಕಾಶವರ್ಷವಿದೆ. ಜಲದ (ಮಲಯ) ಪರ್ವತದ ಪಕ್ಕ ಕುಮುದೋತ್ತರವರ್ಷವಿದೆ. ಇಲಧಾರ ಪರ್ವತದ ಸಮೀಪ ಸುಕುಮಾರ ವರ್ಷವಿದೆ ಎಂದು ಹೇಳುತ್ತಾರೆ. ರೈವತದ ಪಕ್ಕದಲ್ಲಿರುವುದು ಕೌಮಾರವರ್ಷ. ಶ್ಯಾಮಪರ್ವತದ ಪಕ್ಕದಲ್ಲಿರುವುದು ಮಣೀಚಕ ವರ್ಷ. ಕೇಸರ ಪರ್ವತದ ಸಮೀಪದ್ದು ಮೋದಾಕೀಖಂಡ. ಮೋದಾಕೀಖಂಡದ ನಂತರ ಮಹಾಪುಮಾನ್ ಎಂಬ ಪರ್ವತವಿದೆ. ಆ ದ್ವೀಪದ ಮಧ್ಯದಲ್ಲಿ ವಿಖ್ಯಾತವಾದ ಶಾಕಾ ಎಂಬ ಹೆಸರಿನ ಮಹಾದ್ರುಮವಿದೆ. ಎತ್ತರ ಮತ್ತು ಅಗಲಗಳಲ್ಲಿ ಅದು ಜಂಬೂದ್ವೀಪದಲ್ಲಿರುವ ಜಂಬೂ ವೃಕ್ಷದಂತಿದೆ. ಅಲ್ಲಿಯ ಪುಣ್ಯಜನಪದರು ಶಂಕರನನ್ನು ಪೂಜಿಸುತ್ತಾರೆ. ಅಲ್ಲಿಗೆ ಸಿದ್ಧರೂ, ಚಾರಣರೂ, ದೇವತೆಗಳೂ, ಧಾರ್ಮಿಕ ಪ್ರಜೆಗಳೂ ಈ ನಾಲ್ವರೂ ಹೋಗುತ್ತಾರೆ. ಅಲ್ಲಿ ವರ್ಣಗಳು ಸ್ವಕರ್ಮದಲ್ಲಿ ನಿರತರಾಗಿರುವುದು ಕಂಡುಬರುತ್ತದೆ. ಕಳ್ಳತನವೆಂಬುದಿಲ್ಲ. ದೀರ್ಘಾಯುಷಿಗಳಾದ ಅವರು ಜರಾಮೃತ್ಯು ವಿವರ್ಜಿತರಾಗಿರುತ್ತಾರೆ. ಅಲ್ಲಿಯ ಪ್ರಜೆಗಳು ಮಳೆಗಾಲದ ನದಿಗಳಂತೆ ಬೆಳೆಯುತ್ತಾರೆ. ಅಲ್ಲಿಯ ನದಿಗಳಲ್ಲಿ ಪುಣ್ಯ ನೀರುಗಳಿವೆ. ಗಂಗೆಯೂ ಕೂಡ ಬಹು ನದಿಗಳಾಗಿ ಹರಿಯುತ್ತಾಳೆ. ಆ ನದಿಗಳು ಸುಕುಮಾರೀ, ಕುಮಾರೀ, ಸೀತಾ, ಕಾವೇರಕಾ, ಮಹಾನದೀ, ಮಣಿಜಲಾ, ಮತ್ತು ಇಕ್ಷುವರ್ಧನಿಕಾ. ಹೀಗೆ ಅಲ್ಲಿ ಸಹಸ್ರಾರು ನೂರಾರು ಪುಣ್ಯ ನದಿಗಳು ಹರಿಯುತ್ತವೆ. ವಾಸವನು ಅಲ್ಲಿ ಮಳೆಸುರಿಸುತ್ತಾನೆ. ಅವುಗಳ ಹೆಸರುಗಳನ್ನು ಪರಿಮಾಣಗಳನ್ನು ಪಟ್ಟಿ ಮಾಡಲು ಶಕ್ಯವಿಲ್ಲ. ಅವೆಲ್ಲವೂ ಪುಣ್ಯನದಿಗಳು. ಅಲ್ಲಿ ಲೋಕಸಮ್ಮತವಾದ ನಾಲ್ಕು ಪುಣ್ಯ ಜನಪದಗಳಿವೆ - ಮಗಾ, ಮಶಕಾ, ಮಾನಸ ಮತ್ತು ಮಂದಗಾ. ಮಗಾದಲ್ಲಿರುವವರು ಹೆಚ್ಚಾಗಿ ಸ್ವಕರ್ಮನಿರತರಾದ ಬ್ರಾಹ್ಮಣರು. ಮಶಕರಲ್ಲಿ ಸರ್ವಕಾಮಗಳನ್ನು ನೀಡುವ ಧಾರ್ಮಿಕ ರಾಜರಿದ್ದಾರೆ. ಮಾನಸರು ವೈಶ್ಯರ ಕರ್ಮೋಪಜೀವಿಗಳು. ಅವರು ಸರ್ವಕಾಮಸಮಾಯುಕ್ತರು, ಶೂರರು ಮತ್ತು ಧರ್ಮಾರ್ಥನಿಶ್ಚಿತರು. ಮಂದಗರು ಶೂದ್ರರು - ನಿತ್ಯವೂ ಧರ್ಮಶೀಲಪುರುಷರು. ಅಲ್ಲಿ ರಾಜನೂ ಇಲ್ಲ, ದಂಡಿಸುವವನೂ ಇಲ್ಲ, ದಂಡನೆಗೆ ಒಳಪಡುವವರೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ. ಇಷ್ಟನ್ನೇ ಆ ದ್ವೀಪದ ಕುರಿತು ಮಾತನಾಡಲು ಶಕ್ಯ. ಮತ್ತು ಆ ಮಹೌಜಸ ಶಾಕದ್ವೀಪದ ಕುರಿತು ಇಷ್ಟನ್ನೇ ಕೇಳಬೇಕು.

ಉತ್ತರದಲ್ಲಿರುವ ದ್ವೀಪಗಳಲ್ಲಿರುವ ಸಮುದ್ರದ ನೀರು ತುಪ್ಪ. ಅದರ ನಂತರದ ಸಮುದ್ರದ ನೀರು ಮೊಸರು. ನಂತರದ್ದು ಸುರೆಯೇ ನೀರಾಗಿರುವ ಸಾಗರ ಮತ್ತು ಇನ್ನೊಂದು ನೀರಿರುವ ಘರ್ಮಸಾಗರ. ಅವೆಲ್ಲವೂ ಪರಸ್ಪರರರಿಗಿಂತ ದ್ವಿಗುಣವಾಗಿವೆ. ಎಲ್ಲವೂ ಪರ್ವತಗಳಿಂದ ಸುತ್ತುವರೆಯಲ್ಪಟ್ಟಿವೆ. ಮಧ್ಯಮ ದ್ವೀಪದಲ್ಲಿ ಕೆಂಪುಶಿಲೆಯ ಗೌರವೆನ್ನುವ ಮಹಾ ಗಿರಿಯಿದೆ. ಅದಕ್ಕೆ ಪಶ್ಚಿಮದಲ್ಲಿ ಕೃಷ್ಣ ಎಂಬ, ನಾರಾಯಣನಿಗೆ ಪ್ರಿಯವಾದ ಗಿರಿಯಿದೆ. ಅಲ್ಲಿ ಕೇಶವನು ದಿವ್ಯ ರತ್ನಗಳನ್ನು ಸ್ವಯಂ ರಕ್ಷಿಸುತ್ತಾನೆ. ಪ್ರಜಾಪತಿಯಂತೆ ಆಸೀನನಾಗಿ ಪ್ರಜೆಗಳೆಗೆ ವಿವಿಧ ಸುಖಗಳನ್ನು ಕರುಣಿಸುತ್ತಾನೆ. ಅಲ್ಲಿಯ ಜನಪದಗಳ ಮಧ್ಯೆಯಿರುವ ಕುಶದ್ವೀಪ ಕುಶಸ್ತಂಬಗಳು, ಮತ್ತು ಶಲ್ಮಲಿ ದ್ವೀಪ ಮತ್ತು ಶಲ್ಮಲೀ ವೃಕ್ಷಗಳು (ಬೂರುಗದ ಮರಗಳು) ಸಂಪೂಜ್ಯವಾದವು. ಕ್ರೌಂಚದ್ವೀಪದಲ್ಲಿರುವ ರತ್ನಗಳ ಆಕರ ಮಹಾಕ್ರೌಂಚ ಗಿರಿಯನ್ನು ಚಾತುರ್ವರ್ಣದವರು ನಿತ್ಯವೂ ಪೂಜಿಸುತ್ತಾರೆ. ಗೋಮಂದ ಪರ್ವತವು ತುಂಬಾ ದೊಡ್ಡದು ಮತ್ತು ಸರ್ವ ಧಾತುಗಳನ್ನೂ ಹೊಂದಿರುವಂಥಹುದು. ಅಲ್ಲಿ ನಿತ್ಯವೂ ಮೋಕ್ಷಹೊಂದಿದವರಿಂದ ಸ್ತುತಿಸಲ್ಪಟ್ಟು ಶ್ರೀಮಾನ್ ಕಮಲಲೋಚನ ಪ್ರಭು ಹರಿ ನಾರಾಯಣನು ವಾಸಿಸುತ್ತಾನೆ. ಕುಶದ್ವೀಪದಲ್ಲಿ ವಿದ್ರುಮಗಳಿಂದ ಕೂಡಿರುವ ಸುಧಾಮ ಎಂಬ ಹೆಸರಿನ ದುರ್ಧರ್ಷ ಪರ್ವತವೂ ಮತ್ತು ಎರಡನೆಯದಾಗಿ ಹೇಮಪರ್ವತ ದ್ಯುತಿಮಾನ್, ಮೂರನೆಯದು ಕುಮುದ ಗಿರಿ, ನಾಲ್ಕನೆಯದು ಪುಷ್ಪವಾನ್, ಐದನೆಯದು ಕುಶೇಶಯ ಮತ್ತು ಆರನೆಯದರ ಹೆಸರು ಹರಿಗಿರಿ. ಈ ಆರು ಉತ್ತಮ ಪರ್ವತಗಳು. ಅವುಗಳ ವಿಸ್ತಾರಗಳು ಕ್ರಮೇಣವಾಗಿ ಹಿಂದಿನದಕ್ಕಿಂತ ದ್ವಿಗುಣವಾಗಿವೆ. ಔದ್ಭಿದವು ಮೊದಲನೆಯ ವರ್ಷ. ಎರಡನೆಯದು ವೇಣುಮಂಡಲ. ಮೂರನೆಯದು ರಥಾಕಾರ. ನಾಲ್ಕನೆಯದು ಪಾಲನವೆಂದು ಹೇಳುತ್ತಾರೆ. ಧೃತಿಮತ್ ಐದನೆಯ ವರ್ಷ. ಆರನೆಯ ವರ್ಷವು ಪ್ರಭಾಕರ. ಏಳನೆಯದು ಕಪಿಲ ವರ್ಷ. ಈ ಏಳು ವರ್ಷಪುಂಜಕಗಳು.

ಇವುಗಳಲ್ಲಿ ದೇವ-ಗಂಧರ್ವರು ಮತ್ತು ಪ್ರಜೆಗಳು ವಿಹರಿಸಿ ರಮಿಸುತ್ತಾರೆ. ಅವುಗಳಲ್ಲಿ ಜನರು ಸಾಯುವುದಿಲ್ಲ. ಆ ವರ್ಷಗಳಲ್ಲಿ ದಸ್ಯುಗಳೂ ಮ್ಲೇಚ್ಛ ಜಾತಿಯವರೂ ಇರುವುದಿಲ್ಲ. ಜನರೆಲ್ಲರೂ ಗೌರವರ್ಣದವರೂ ಸುಕುಮಾರರೂ ಆಗಿರುತ್ತಾರೆ. ಕ್ರೌಂಚದ್ವೀಪದಲ್ಲಿ ಕ್ರೌಂಚವೆಂಬ ಮಹಾಗಿರಿ. ಕ್ರೌಂಚದಿಂದ ಆಚೆಗೆ ವಾಮನಕ. ವಾಮನಕದಿಂದ ಅಂಧಕಾರಕ. ಅಂಧಕಾರದ ಆಚೆ ಪರ್ವತೋತ್ತಮ ಮೈನಾಕವಿದೆ. ಮೈನಾಕದ ಆಚೆ ಉತ್ತಮ ಗಿರಿ ಗೋವಿಂದವಿದೆ. ಗೋವಿಂದದ ಆಚೆ ವಿಸ್ತೀರ್ಣದಲ್ಲಿ ಅದರ ಎರಡು ಪಟ್ಟಿರುವ ನಿಬಿಡ ಎಂಬ ಹೆಸರಿನ ಪರ್ವತವಿದೆ. ಕೌಂಚದಲ್ಲಿರುವುದು ಕುಶಲ ದೇಶ. ವಾಮನದಲ್ಲಿರುವುದು ಮನೋನುಗ. ಮನೋನುಗದ ಆಚೆಯಿರುವ ದೇಶವು ಉಷ್ಣ. ಉಷ್ಣದ ಆಚೆ ಪ್ರಾವರಕ. ಪ್ರಾವರಕದ ಆಚೆಯಿರುವುದು ಅಂಧಕಾರಕ. ಅಂಧಕಾರಕದೇಶದ ನಂತರ ಮುನಿದೇಶವೆಂದು ಹೇಳುತ್ತಾರೆ. ಮುನಿದೇಶದ ಆಚೆ ದುಂದುಭಿಸ್ವನವೆಂದು ಹೇಳುತ್ತಾರೆ. ಈ ಸಿದ್ಧ-ಚಾರಣರಿಂದ ಕೂಡಿದ, ದೇವ-ಗಂಧರ್ವ ಸೇವಿತ ದೇಶಗಳಲ್ಲಿರುವವವರು ಗೌರವರ್ಣದವರು.

ಪುಷ್ಕರದಲ್ಲಿ ಪುಷ್ಕರ ಎನ್ನುವ ಮಣಿರತ್ನಗಳ ಪರ್ವತವಿದೆ. ಅಲ್ಲಿ ನಿತ್ಯವೂ ಸ್ವಯಂ ದೇವ ಪ್ರಜಾಪತಿಯು ವಾಸಿಸುತ್ತಾನೆ. ಅವನನ್ನು ನಿತ್ಯವೂ ಎಲ್ಲ ದೇವತೆಗಳೂ, ಮಹರ್ಷಿಗಳೂ ವಾಕ್, ಮನಸ್ಸು ಮತ್ತು ಅನುಕೂಲಗಳಿಂದ ಪೂಜಿಸುತ್ತಾರೆ. ಜಂಬೂದ್ವೀಪದ ವಿವಿಧ ರತ್ನಗಳನ್ನು ತಂದು ಇಲ್ಲಿ ಬಳಸಲಾಗುತ್ತದೆ. ಈ ಎಲ್ಲ ದ್ವೀಪಗಳ ಪ್ರಜೆಗಳು ಬ್ರಹ್ಮಚರ್ಯ, ಸತ್ಯ, ಮತ್ತು ದಮಗಳಿಂದ ಕೂಡಿದ ವಿಪ್ರರು. ಇವರ ಆರೋಗ್ಯ ಮತ್ತು ಆಯುಸ್ಸಿನ ಪ್ರಮಾಣಗಳೆರಡೂ ದ್ವಿಗುಣ ದ್ವಿಗುಣಗಳಾಗುತ್ತಾ ಹೋಗುತ್ತವೆ. ಈ ದ್ವೀಪಗಳಲ್ಲಿ ಒಂದೇ ಜನಪದವಿದೆ. ಈ ಜನಪದದಲ್ಲಿ ಒಂದೇ ಧರ್ಮವು ಕಾಣಿಸುತ್ತದೆ ಎಂದು ಹೇಳುತ್ತಾರೆ. ಸ್ವಯಂ ಪ್ರಜಾಪತಿ ಈಶ್ವರನು ದಂಡವನ್ನು ಹಿಡಿದು ನಿತ್ಯವೂ ಈ ದ್ವೀಪಗಳನ್ನು ರಕ್ಷಿಸಲು ನಿಂತಿರುವನು. ಅವನೇ ರಾಜಾ. ಅವನೇ ಶಿವ. ಅವನೇ ಪಿತ ಮತ್ತು ಪಿತಾಮಹ. ಜಡ-ಪಂಡಿತರನ್ನೂ ಸೇರಿ ಪ್ರಜೆಗಳನ್ನು ಅವನೇ ಕಾಯುತ್ತಾನೆ. ಅಲ್ಲಿ ಭೋಜನವು ತಾನೇ ತಯಾರಾಗಿ ಬರುತ್ತದೆ. ಅಲ್ಲಿ ಸಿದ್ಧವಾಗಿರುವ ಅದನ್ನು ಅಲ್ಲಿಯವರು ನಿತ್ಯವೂ ಭುಂಜಿಸುತ್ತಾರೆ. ಅದರ ಆಚೆ ಸಮಾ ಎಂಬ ಹೆಸರಿನ ಲೋಕಸಂಸ್ಥಿತಿಯು ಕಾಣಿಸುತ್ತದೆ. ಅದು ನಾಲ್ಕು ಕೋಣಗಳಿಂದ ಕೂಡಿದ್ದು ಮೂವತ್ಮೂರು ಮಂಡಲಗಳನ್ನು ಹೊಂದಿದೆ. ಅಲ್ಲಿ ನಾಲ್ಕು ಲೋಕಸಮ್ಮತ ದಿಗ್ಗಜಗಳು - ವಾಮನ, ಐರಾವತದಿಂದ ಶುರುವಾಗಿ ಸುಪ್ರತೀಕ ಮತ್ತು ಇನ್ನೊಂದು ಕರಟಾಮುಖ. ಅವುಗಳ ಪರಿಮಾಣಗಳನ್ನು ಲೆಕ್ಕಮಾಡಿ ಹೇಳಲು ಕಷ್ಟ. ಅವುಗಳ ಅಗಲ, ಎತ್ತರ ಮತ್ತು ಗಾತ್ರಗಳು ನಿತ್ಯವೂ ಅಸಂಖ್ಯವಾದುದು. ಅಲ್ಲಿ ವಾಯುವು ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿರುತ್ತಾನೆ. ಆ ಗಾಳಿಯನ್ನು ಈ ಗಜಗಳು ಪದ್ಮಸಂಕಾಶವಾದ, ಏನನ್ನೂ ಎಳೆದುಕೊಳ್ಳಬಹುದಾದ, ಮಹಾಪ್ರಭೆಯನ್ನುಳ್ಳ ತಮ್ಮ ಸೊಂಡಿಲುಗಳಿಂದ ಹಿಡಿದಿಟ್ಟುಕೊಂಡು, ಗಾಳಿಯನ್ನು ಪುನಃ ಮೆಲ್ಲನೇ ನಿತ್ಯವೂ ಬಿಡುತ್ತಿರುತ್ತವೆ. ಈ ರೀತಿ ದಿಗ್ಗಜಗಳ ಉಸಿರಾಟದಿಂದ ಹೊರಬಂದ ಗಾಳಿಯೇ ಇಲ್ಲಿಗೆ ಬಂದು, ಪ್ರಜೆಗಳು ಉಸಿರಾಡುತ್ತವೆ.

ಈಗ ಗ್ರಹಗಳ ಕುರಿತು ತತ್ವತವಾದ ವರ್ಣನೆ. ಗ್ರಹ ಸ್ವರ್ಭಾನುವು ಗೋಲಾಕರದ ಮಂಡಲದಲ್ಲಿದ್ದಾನೆಂದು ಕೇಳಿದ್ದೇವೆ. ಅದರ ವ್ಯಾಸವು ಹನ್ನೆರಡು ಸಾವಿರ ಯೋಜನಗಳು. ಅದರ ಸುತ್ತಳತೆ ೩೬ ಸಾವಿರ ಯೋಜನ, ಗಾತ್ರ(ದಪ್ಪ)ವು ೬ ಸಾವಿರ ಯೋಜನವೆಂದು ತಿಳಿದ ಪೌರಾಣಿಕರು ಹೇಳುತ್ತಾರೆ. ಚಂದ್ರನ ವ್ಯಾಸವು ಹನ್ನೊಂದು ಸಾವಿರ ಯೋಜನಗಳೆಂದು ಹೇಳುತ್ತಾರೆ. ಆ ಶೀತಾಂಶುವಿನ ಮಂಡಲದ ಸುತ್ತಳತೆಯು ೩೩ ಸಾವಿರ ಯೋಜನಗಳು ಮತ್ತು ದಪ್ಪವು ೫,೯೦೦ ಯೋಜನಗಳೆಂದು ಮಹಾತ್ಮರು ಹೇಳುತ್ತಾರೆ. ಸೂರ್ಯಗ್ರಹದ ವಿಸ್ತಾರ ೧೦,೦೦೦ ಯೋಜನಗಳು. ಸುತ್ತಳತೆ ೩೦,೦೦೦ ಯೋಜನಗಳು. ಸೂರ್ಯನ ಗಾತ್ರ ೫,೮೦೦ ಯೋಜನಗಳು. ಹೀಗೆ ಪರಮೋದಾರನಾದ ಶೀಘ್ರಗಾಮಿಯಾದ ವಿಭಾವಸುವಿನ ನಿರ್ದಿಷ್ಟ ಪರಿಮಾಣವನ್ನು ಹೇಳುತ್ತಾರೆ. ಇವುಗಳಲ್ಲಿ ರಾಹುವೇ ದೊಡ್ಡಗ್ರಹವಾದುದರಿಂದ ಕೆಲವು ಸಮಯಗಳಲ್ಲಿ ಇದು ಚಂದ್ರ-ಆದಿತ್ಯರನ್ನು ಮುಚ್ಚಿಬಿಡುತ್ತದೆ.

ಈ ಭೂಮಿಪರ್ವವನ್ನು ಮನಸ್ಸಿಟ್ಟು ಕೇಳುವ ರಾಜನು ಶ್ರೀಮಂತನಾಗುತ್ತಾನೆ, ಸಿದಾರ್ಥನಾಗುತ್ತಾನೆ, ಸಾಧುಸಮ್ಮತನಾಗುತ್ತಾನೆ. ಅವನ ಆಯಸ್ಸು, ಬಲ, ವೀರ್ಯ ಮತ್ತು ತೇಜಸ್ಸುಗಳು ವೃದ್ಧಿಸುತ್ತವೆ. ನಿಯತವಾದ ವ್ರತಾನುಷ್ಟಾನಗಳಲ್ಲಿದ್ದುಕೊಂಡು ಪರ್ವಕಲಗಳಲ್ಲಿ ಈ ಭೂಮಿಪರ್ವವನ್ನು ಶ್ರದ್ಧೆಯಿಂದ ಕೇಳುವವವರ ಪಿತೃಗಳೂ ಪಿತಾಮಹರೂ ಸಂಪ್ರೀತರಾಗುತ್ತಾರೆ.

Image result for indian motifs

Leave a Reply

Your email address will not be published. Required fields are marked *