Image result for flowers against white backgroundವಂಶಾವಳಿ

ಆದಿ ವಂಶಾವಳಿ

ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ ಪುತ್ರ ಪೌತ್ರರಾದರು.

ಹನ್ನೆರಡು ಭುವನೇಶ್ವರ ಆದಿತ್ಯರು ಅದಿತಿಯಲ್ಲಿ ಜನಿಸಿದರು. ಮೊದಲ ಹತ್ತು ಮಂದಿ - ಧಾತ, ಮಿತ್ರ, ಯಮ, ಶಕ್ರ, ವರುಣ, ಅಂಶ, ಭಗ, ವಿವಸ್ವತ, ಪೂಷ ಮತ್ತು ಸವಿತ. ಹನ್ನೊಂದನೆಯವನು ತ್ವಷ್ಟ ಮತ್ತು ಹನ್ನೆರಡನೆಯವನು ವಿಷ್ಣು. ಕೊನೆಯವನು ಸರ್ವ ಆದಿತ್ಯರಲ್ಲಿ ಅಧಿಕ ಗುಣವಂತನು.

ದಿತಿಗೆ ಹಿರಣ್ಯಕಶಿಪುವೆಂಬ ಹೆಸರಿನಿಂದ ಖ್ಯಾತ ಒಬ್ಬನೇ ಮಗನಿದ್ದನು. ಆ ಮಹಾತ್ಮನಿಗೆ ಐವರು ಪುತ್ರರಿದ್ದರು. ಅವರಲ್ಲಿ ಮೊದಲನೆಯವನು ಪ್ರಹ್ಲಾದ, ಅವನ ನಂತರ ಸಂಹ್ಲಾದ, ಮೂರನೆಯವನು ಅನುಹ್ಲಾದ, ಮತ್ತು ನಂತರ ಶಿಬಿ ಮತ್ತು ಬಾಷ್ಕಲ. ಪ್ರಹ್ಲಾದನ ಮೂರೂ ಪುತ್ರರೂ ಖ್ಯಾತರಾಗಿದ್ದರು: ವಿರೋಚನ, ಕುಂಭ, ನಿಕುಂಭರೆಂದು ವಿಶೃತರಾಗಿದ್ದರು. ಪ್ರತಾಪಿ ಬಲಿಯೊಬ್ಬನೇ ವಿರೋಚನನ ಪುತ್ರ. ಬಾಣ ಎಂಬ ಹೆಸರಿನ ಮಹಾಸುರನು ಬಲಿಯ ಪುತ್ರ.

ದನುವಿನ ನಲವತ್ತು ಪುತ್ರರೂ ಸರ್ವತ್ರ ಖ್ಯಾತರಾಗಿದ್ದರು. ಅವರಲ್ಲಿ ಮೊದಲು ಹುಟ್ಟಿದವನು ಮಹಾಯಶಸ್ವಿ ರಾಜಾ ವಿಪ್ರಚಿತ್ತಿ. ಶಂಬರ, ನಮುಚಿ, ಪುಲೋಮ, ಅಸಿಲೋಮ. ಕೇಶಿ, ದುರ್ಜಯ, ಅಯಃಶಿರ, ಅಶ್ವಶಿರ, ಅಯಃಶಂಕು, ಗಗನಮೂರ್ಧಾ, ವೇಗವಾನ, ಕೇತುಮಾನ್, ಸ್ವರ್ಭಾನು, ಅಶ್ವ, ಅಶ್ವಪತಿ, ವೃಶಪರ್ವ, ಅಜಕ, ಅಶ್ವಗ್ರೀವ, ಸೂಕ್ಷ್ಮ, ತುಹುಂಡ, ಇಸೃಪ, ಏಕಚಕ್ರ, ವಿರೂಪಾಕ್ಷ, ಹರ, ಹರಿ, ನಿಚಂದ್ರ, ನಿಕುಂಭ, ಕೃಪಥ, ಕಾಪಥ, ಶರಭ, ಶಲಭ, ಸೂರ್ಯ, ಚಂದ್ರ, ಇವರೆಲ್ಲರೂ ದಾನವ ವಂಶದಲ್ಲಿ ಖ್ಯಾತರು. ದೇವತೆಗಳಾದ ಸೂರ್ಯ ಮತ್ತು ಚಂದ್ರರೇ ಬೇರೆ ಎಂದೂ ಕೇಳಿದ್ದೇವೆ. ಇವರನ್ನೂ ಬಿಟ್ಟು ಇನ್ನೂ ಹತ್ತು ಸತ್ಯವಂತ ಮಹಾಬಲಿ ದಾನವ ಪುಂಗವರು ದನುವಿನ ಪುತ್ರರು. ಏಕಾಕ್ಷ, ವೀರ ಮೃತಪ, ಪ್ರಲಂಬ, ನರಕ, ವಾತಾಪಿ, ಶತ್ರುತಪನ, ಮಹಾಸುರ ಶಠ, ಗವಿಷ್ಠ, ದನಾಯು, ದಾನವ ದೀರ್ಘಜಿಹ್ವ, ಮತ್ತು ಇವರ ಅಸಂಖ್ಯ ಪುತ್ರರೂ ಮತ್ತು ಪೌತ್ರರು.

ಸಿಂಹಿಕೆಯು ಚಂದ್ರ ಮತ್ತು ಸೂರ್ಯರ ವೈರಿ ರಾಹುವೆಂಬ ಪುತ್ರನಿಗೆ ಮತ್ತು ಸುಚಂದ್ರ, ಚಂದ್ರಹಂತಾರ ಹಾಗೂ ಚಂದ್ರವಿಮರ್ದನರಿಗೆ ಜನ್ಮವಿತ್ತಳು.

ಅಸಂಖ್ಯ ಕ್ರೂರಳ ಪುತ್ರ ಪೌತ್ರರು ಕ್ರೂರ ಸ್ವಭಾವದವರಾಗಿದ್ದರು. ಆ ಕ್ರೂರ ಕರ್ಮಿ ಅರಿಮರ್ದನ ಗುಂಪಿಗೆ ಕ್ರೋಧವಶ ಎನ್ನುವ ಹೆಸರಿದೆ. ಅವಳಿಗೆ ಇನ್ನೂ ನಾಲ್ವರು ಅಸುರಪುಂಗವರು ಪುತ್ರರಾದರು: ವಿಕ್ಷರ, ಬಲ, ವೀರ, ಮತ್ತು ಮಹಾಸುರ ವೃತ್ರ.

ಕಾಲಾಳ ಪುತ್ರರು ಕಾಲದಂತೆ ಪ್ರಹಾರಿಗಳಿದ್ದರು. ಅವರು ಭೂಮಿಯಲ್ಲಿ ದಾನವರಲ್ಲಿಯೇ ಮಹಾವೀರರೂ ಪರಂತಪಸ್ವಿಗಳೂ ಎಂದು ಖ್ಯಾತರಾದರು. ವಿನಾಶನ, ಕ್ರೋಧ, ಹಂತ, ಕ್ರೋಧಶತ್ರು ಮೊದಲಾದವರು ಕಾಲಳ ಮಕ್ಕಳೆಂದು ವಿಶೃತರಾಗಿದ್ದಾರೆ. ಅಸುರರ ಉಪಾಧ್ಯಾಯ ಶುಕ್ರನು ಋಷಿಪುತ್ರನಾಗಿದ್ದನು. ಉಶಾಸನನ ನಾಲ್ವರು ಪುತ್ರರೂ ಅಸುರ ಯಾಜಕರಾಗಿ ವಿಖ್ಯಾತರಾಗಿದ್ದರು. ತ್ವಷ್ಟಾವರ ಮತ್ತು ಅತ್ರಿ ಇಬ್ಬರೂ ಮಂತ್ರಕರ್ಮಿ, ತೇಜದಲ್ಲಿ ಸೂರ್ಯಸಂಕಾಶರೂ ಆಗಿದ್ದು ಬ್ರಹ್ಮಲೋಕ ಪ್ರಭಾವನರಾಗಿದ್ದರು. ಇವರಲ್ಲಿ ಜನಿಸಿದ ಪೀಳಿಗೆಗಳೆಲ್ಲವನ್ನೂ ಎಣಿಸುವುದು ಅಶಕ್ಯ. ಅವರ ಸಂಖ್ಯೆ ಅನಂತ.

ತಾರ್ಕ್ಷ್ಯ, ಅರಿಷ್ಟನೇಮಿ, ಗರುಡ, ಅರುಣ, ಆರುಣಿ ಮತ್ತು ವಾರುಣಿಯರು ವಿನತೆಯ ಮಕ್ಕಳು.

ಶೇಷ, ಅನಂತ, ವಾಸುಕಿ, ತಕ್ಷಕ, ಕೂರ್ಮ, ಕುಲಿಕ ಈ ಎಲ್ಲ ಮಹಾ ಬಲಶಾಲಿ ನಾಗಗಳು ಕದ್ರುವಿನ ಮಕ್ಕಳು.

ಭೀಮಸೇನ, ಉಗ್ರಸೇನ, ಸುಪರ್ಣ, ವರುಣ, ಗೋಪತಿ, ಧೃತರಾಷ್ಟ್ರ, ಮತ್ತು ಏಳನೆಯವನು ಸೂರ್ಯವರ್ಚ; ಪತ್ರವಾನ, ಅರ್ಕಪರ್ಣ, ಪ್ರಖ್ಯಾತ ಪ್ರಯುತ, ವಿಖ್ಯಾತ ಮತ್ತು ಸರ್ವವನ್ನು ತಿಳಿದ ಭೀಮ ಮತ್ತು ಚಿತ್ರರಥರು; ಶಾಲಿಶಿರ ಮತ್ತು ಹದಿಲ್ಕನೆಯವನು ಪ್ರದ್ಯುಮ್ನ, ಹದಿನೈದನೆಯವನು ಕಲಿ, ಹದಿನಾರನೆಯವನು ನಾರದ, ಇವರೆಲ್ಲ ದೇವ ಗಂಧರ್ವರೂ ಮುನಿಯ ಮಕ್ಕಳು.

ಅನವದ್ಯ, ಅನುವಾಸ, ಪ್ರಿಯಾ, ಅನೂಪ, ಸುಭಗ, ಮತ್ತು ಭಾಸ ಇವರೆಲ್ಲರೂ ಪ್ರಾವಳಲ್ಲಿ ಜನಿಸಿದರು. ಸಿದ್ಧರಾದ ಪೂರ್ಣ, ಬರ್ಹಿ, ಮಹಾಯಶ ಪೂರ್ಣಾಶ, ಬ್ರಹ್ಮಚಾರೀ, ರತಿಗುಣ, ಏಳನೆಯವನು ಸುಪರ್ಣ, ವಿಶ್ವಾವಸು, ಭಾನು, ಮತ್ತು ಹತ್ತನೆಯವನು ಸುಚಂದ್ರ ಈ ಎಲ್ಲ ದೇವ ಗಂಧರ್ವರೂ ಪ್ರಾವಳ ಮಕ್ಕಳು. ಈ ಮಹಾಭಾಗೆ ದೇವಿಯಿಂದ ಹಿಂದೆ ದೇವರ್ಷಿಯಿಂದ ಪುಣ್ಯಲಕ್ಷಣಗಳಿಂದೊಡಗೂಡಿದ ಅಪ್ಸರೆಯರ ವಂಶವು ಉತ್ಪನ್ನವಾಯಿತು. ಅಲಂಬುಸಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ಅನಘೆ ತುಲಾ, ಅರುಣಾ, ರಕ್ಷಿತಾ, ರಂಭಾ, ಮನೋರಮಾ, ಅಸಿತ, ಸುಬಾಹು, ಸುವ್ರತಾ, ಸುಭುಜಾ, ಸುಪ್ರಿಯಾ; ಅತಿಬಾಹು, ವಿಖ್ಯಾತರಾದ ಹಾಹಾ, ಹುಹು, ತುಂಬುರು ಈ ನಾಲ್ವರು ಗಂಧರ್ವಸತ್ತಮರು.

ಅಮೃತ, ಬ್ರಾಹ್ಮಣ, ಗೋವು, ಗಂಧರ್ವರು ಮತ್ತು ಅಪ್ಸರೆಯರು ಕಪಿಲಳ ಮಕ್ಕಳು.

ಸ್ಥಾಣುವಿಗೆ ಹನ್ನೊಂದು ವಿಖ್ಯಾತ, ಪರಮ ಮನಸ್ಕ ಮಕ್ಕಳಿದ್ದರು. ಮಹಾಯಶ ಮೃಗವ್ಯಾಧ, ಶರ್ವ, ನಿಋತಿ, ಅಜೈಕಪಾದ, ಅಹಿರ್ಬುಂಧ್ಯ, ಪರಂತಪ ಪಿನಾಕೀ, ದಹನ, ಈಶ್ವರ, ಮಹಾದ್ಯುತಿ ಕಪಾಲೀ, ಸ್ಥಾಣು, ಮತ್ತು ಭಗವಾನ ಭಾವ ಇವರೆಲ್ಲರೂ ಏಕಾದಶ ರುದ್ರರೆಂದು ಕರೆಯಲ್ಪಟ್ಟಿದ್ದಾರೆ.

ಅಂಗಿರಸನಿಗೆ ಮೂರು ಧೃತವ್ರತ ಪುತ್ರರು: ಬೃಹಸ್ಪತಿ, ಉತಥ್ಯ, ಮತ್ತು ಸಂವರ್ತ.

ಅತ್ರಿಯ ಮಕ್ಕಳು ಬಹಳ ಎಂದು ಕೇಳಿದ್ದೇವೆ. ಅವರೆಲ್ಲರೂ ವೇದವಿದರೂ, ಸಿದ್ಧರೂ, ಶಾಂತಾತ್ಮರೂ ಆದ ಮಹರ್ಷಿಗಳು.

ರಾಕ್ಷಸ, ವಾನರ ಮತ್ತು ಕಿನ್ನರರು ಪುಲಸ್ತ್ಯನ ಮಕ್ಕಳು.

ಮೃಗ, ಸಿಂಹ, ವ್ಯಾಘ್ರ, ಮತ್ತು ಕಿಂಪುರುಷರು ಪುಲಹನ ಮಕ್ಕಳು.

ಕ್ರತು ಸಮರಾದ, ಮೂರೂ ಲೋಕಗಳಲ್ಲಿ ವಿಶೃತ ಸತ್ಯವ್ರತಪರಾಯಣ ಸೂರ್ಯನ ಸಹಚಾರಿ ಪುತ್ರರು ಕ್ರತುವಿಗೆ ಜನಿಸಿದರು.

ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು. ಆ ಮಹಾತ್ಮನ ಭಾರ್ಯೆಯು ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು. ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು. ಅವರಲ್ಲಿ ಹತ್ತನ್ನು ಧರ್ಮನಿಗೆ, ಇಪ್ಪತ್ತೇಳನ್ನು ಚಂದ್ರನಿಗೆ ಮತ್ತು ಹದಿಮೂರನ್ನು ಕಶ್ಯಪನಿಗೆ ದೇವ ವಿಧಿಯಂತೆ ಕೊಟ್ಟನು.

ಧರ್ಮನ ಪತ್ನಿಗಳು: ಕೀರ್ತಿ, ಲಕ್ಷ್ಮಿ, ಧೃತಿ, ಮೇಧಾ, ಪುಷ್ಟಿ, ಶ್ರದ್ದಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ.

ಸೋಮನ ಇಪ್ಪತ್ತೇಳು ಪತ್ನಿಯರು ಲೋಕಪರಿಶೃತರಾಗಿದ್ದಾರೆ. ಆ ಶುಭವ್ರತೆ ಸೋಮಪತ್ನಿಯರು ಎಲ್ಲರೂ ಕಾಲದ ಕಣ್ಣುಗಳಾಗಿದ್ದು ನಕ್ಷತ್ರ ಯೋಗಿನಿಯರಾಗಿ ಲೋಕಯಾತ್ರೆಯಲ್ಲಿ ನಿರತರಾಗಿದ್ದಾರೆ.

ಮುನಿಗಳ ದೇವ ಪಿತಾಮಹ. ಅವನ ಪುತ್ರ ಪ್ರಜಾಪತಿ. ಅವನ ಪುತ್ರರು ಅಷ್ಟ ವಸುಗಳು. ಧರ, ಧೃವ, ಸೋಮ, ಆಹ, ಅನಿಲ, ಅನಲ, ಪ್ರತ್ಯೂಷ, ಮತ್ತು ಪ್ರಭಾಸ ಇವರುಗಳು ಅಷ್ಟ ವಸುಗಳೆಂದು ಕರೆಯಲ್ಪಟ್ಟಿದ್ದಾರೆ. ಧರ ಮತ್ತು ಬ್ರಹ್ಮವಿದ ಧೃವ ಧೂಮ್ರಾಯಳ ಮಕ್ಕಳು. ಚಂದ್ರನು ಮನಸ್ವಿನಿಯಲ್ಲಿ ಮತ್ತು ಶ್ವಸನನು (ಅನಿಲನು) ಶ್ವಸಳಲ್ಲಿ ಜನಿಸಿದರು. ಅಹನು ರತಳ ಪುತ್ರ, ಹುತಾಶನನು ಶಂಡಿನ್ಯಳ ಪುತ್ರ, ಪ್ರತ್ಯೂಷ ಮತ್ತು ಪ್ರಭಾತರು ಪ್ರಭಾಸನ ಪುತ್ರರೆಂದು ಹೇಳುತ್ತಾರೆ. ದ್ರವಿಣ ಮತ್ತು ಹುತಹವ್ಯಹಾ ಧರನ ಪುತ್ರರು. ಲೋಕಪ್ರಕಾಲನ ಭಗವಾನ್ ಕಾಲನು ಧ್ರುವನ ಪುತ್ರ. ಸೋಮನ ಸುತನು ವರ್ಚಸ್ವಿ ವರ್ಚಾ. ಅವನಿಗೆ ಮನೋಹರೆಯಲ್ಲಿ ಶಿಶಿರ, ಪ್ರಾಣ ಮತ್ತು ರಮಣರು ಜನಿಸಿದರು. ಅಹನ ಸುತರು ಜ್ಯೋತಿ, ಶ್ರಮ, ಶಾಂತ ಮತ್ತು ಮುನಿ. ಶರವಣಾಲಯ ಶ್ರೀಮಾನ್ ಕುಮಾರನು ಅಗ್ನಿಯ ಪುತ್ರ. ಅವನಿಗೆ ಶಾಖ, ವಿಶಾಖ ಮತ್ತು ಕೊನೆಯವ ನೈಗಮೇಷ. ಕೃತ್ತಿಕೆಯರಿಂದ ಪೋಷಿಸಲ್ಪಟ್ಟ ಅವನು ಕಾರ್ತಿಕೇಯನೆಂದು ಕರೆಯಲ್ಪಟ್ಟಿದ್ದಾನೆ. ಅನಿಲನ ಭಾರ್ಯೆ ಶಿವಾ; ಅವಳ ಮತ್ತು ಅನಿಲರ ಈರ್ವರು ಮಕ್ಕಳು ಪುರೋಜವ ಮತ್ತು ಅವಿಜ್ಞಾತಿ. ಪ್ರತ್ಯೂಷನ ಋಷಿಪುತ್ರನ ಹೆಸರು ದೇವಲ. ದೇವಲನಿಗೆ ಕ್ಷಮಾವಂತರೂ ವಿಧ್ವಾಂಸರೂ ಆದ ಈರ್ವರು ಪುತ್ರರು. ವರಸ್ತ್ರೀ, ಬ್ರಹ್ಮಚಾರಿಣೀ, ಯೋಗಸಿದ್ಧೆ, ಮತ್ತು ನಿರಾಸಕ್ತಳಾಗಿ ಸರ್ವ ಜಗತ್ತನ್ನೂ ಸಂಚರಿಸಿದ ಬೃಹಸ್ಪತಿಯ ತಂಗಿಯು ಎಂಟನೆಯ ವಸುವಾದ ಪ್ರಭಾಸನ ಭಾರ್ಯೆಯು. ಅವರಲ್ಲಿ ಶಿಲ್ಪಪ್ರಜಾಪತಿ, ಸಹಸ್ರ ಶಿಲ್ಪಗಳ ಕರ್ತೃ, ಮೂವತ್ತು ದೇವತೆಗಳ ಶಿಲ್ಪಿ, ಸರ್ವ ಭೂಷಣಗಳ ಕರ್ತ, ಶಿಲ್ಪವಂತರಲ್ಲಿಯೇ ಶ್ರೇಷ್ಠ, ದೇವತೆಗಳ ದಿವ್ಯ ವಿಮಾನಗಳನ್ನು ರಚಿಸಿದ ಮಹಾಭಾಗ ವಿಶ್ವಕರ್ಮನು ಜನಿಸಿದನು. ಈ ಮಹಾತ್ಮನ ಶಿಲ್ಪದಿಂದ ಉಪಜೀವಿಸುವ ಮನುಷ್ಯರು ನಿತ್ಯನೂ ಅವ್ಯಯನೂ ಆದ ಈ ವಿಶ್ವಕರ್ಮನನ್ನು ಪೂಜಿಸುತ್ತಾರೆ.

ಸರ್ವಲೋಕಸುಖಕಾರಕ ಭಗವಾನ್ ಧರ್ಮನು ನರರೂಪವನ್ನು ಧರಿಸಿ ಬ್ರಹ್ಮನ ಎಡ ಸ್ತನವನ್ನು ಒಡೆದು ಹೊರಬಂದನು. ಅವನಿಗೆ ಸರ್ವಭೂತಮನೋಹರ, ತಮ್ಮ ತೇಜಸ್ಸಿನಿಂದ ಲೋಕವನ್ನೆಲ್ಲ ಪರಿಪಾಲಿಸುತ್ತಿರುವ ಮೂವರು ಪುತ್ರರು: ಶಮ, ಕಾಮ ಮತ್ತು ಹರ್ಷ. ಕಾಮನ ಭಾರ್ಯೆ ರತಿ, ಶಮನ ಅಂಗನೆ ಪ್ರಾಪ್ತಿ, ಮತ್ತು ಹರ್ಷನ ಭಾರ್ಯೆ ಲೋಕಗಳೇ ಯಾರ ಮೇಲೆ ನಿಂತಿವೆಯೋ ಆ ನಂದೀ.

ಕಶ್ಯಪನು ಮರೀಚಿಯ ಪುತ್ರ ಮತ್ತು ಕಶ್ಯಪನಿಂದ ಸುರಾಸುರರೂ ಮತ್ತು ಲೋಕ ಪ್ರಜೆಗಳೂ ಜನಿಸಿದರು. ಹೆಣ್ಣು ಕುದುರೆಯ ರೂಪಧಾರಿಣಿ ತ್ವಷ್ಟ್ರೀಯು ಸವಿತುವಿನ ಭಾರ್ಯೆ ಮತ್ತು ಈ ಮಹಾಭಾಗೆಯು ಅಂತರಿಕ್ಷದಲ್ಲಿ ಅವಳಿ ಅಶ್ವಿನಿಯರಿಗೆ ಜನ್ಮವಿತ್ತಳು. ಶಕ್ರನ ನಾಯಕತ್ವದಲ್ಲಿರುವ ಹನ್ನೆರಡು ಆದಿತ್ಯರಲ್ಲಿ ಯಾರಲ್ಲಿ ಮತ್ತು ಯಾರ ಮೇಲೆ ಲೋಕಗಳೆಲ್ಲವೂ ನಿಂತಿವೆಯೋ ಆ ವಿಷ್ಣುವೇ ಕಿರಿಯವನು.

ರುದ್ರ, ಸಾಧ್ಯ, ಮರುತ, ವಸು, ಭಾರ್ಗವ, ವಿದ್ಯ, ವಿಶ್ವೇದೇವ ಇವರೆಲ್ಲರದ್ದೂ ಒಂದೊಂದು ಪಕ್ಷ. ವೈನತೇಯ ಗರುಡ, ಬಲವಾನ್ ಅರುಣ, ಮತ್ತು ಭಗವಾನ್ ಬೃಹಸ್ಪತಿ ಇವರುಗಳನ್ನು ಆದಿತ್ಯರೆಂದು ಪರಿಗಣಿಸುತ್ತಾರೆ. ಈರ್ವರು ಅಶ್ವಿನಿಯರು, ಸರ್ವ ಔಷಧಿಗಳು ಮತ್ತು ಪಶುಗಳನ್ನು ಗುಹ್ಯಕರೆಂದು ತಿಳಿಯುತ್ತಾರೆ. ಈ ರೀತಿ ದೇವಗಣಗಳನ್ನು ಕ್ರಮಬದ್ಧವಾಗಿ ಹೇಳಲಾಗಿದೆ.

ಭಗವಾನ್ ಭೃಗುವು ಬ್ರಹ್ಮನ ಹೃದಯವನ್ನು ಸೀಳಿ ಹೊರಬಂದನು. ಭೃಗುವಿನ ಪುತ್ರ ಕವಿ, ಮತ್ತು ವಿದ್ವಾನ್ ಶುಕ್ರಗ್ರಹನು ಕವಿಸುತನು. ಸ್ವಯಂಭುವಿನಿಂದ ತ್ರೈಲೋಕ್ಯಪ್ರಾಣಾಧಾರವಾದ ವರ್ಷಾವರ್ಷ ಮತ್ತು ಭಯಾಭಯಗಳ ಒಡೆಯನಾಗಿ ನಿಯುಕ್ತಗೊಂಡ ಅವನು ಎಲ್ಲ ಭುವನವನ್ನೂ ಪರಿಭ್ರಮಿಸುತ್ತಾನೆ. ಯೋಗಾಚಾರ್ಯ, ಮಹಾಬುದ್ಧಿವಂತ, ಮೇಧವೀ, ಬ್ರಹ್ಮಚಾರಿ, ಮತ್ತು  ಯತವ್ರತನಾದ ಅವನು ದೈತ್ಯ ಮತ್ತು ಸುರರ ಗುರುವಾದನು. ಈ ರೀತಿ ಯೋಗಕ್ಷೇಮಕ್ಕೆಂದು ವಿಭುವಿನಿಂದ ನಿಯುಕ್ತಗೊಂಡ ಭಾರ್ಗವನು ಇನ್ನೊಬ್ಬ ಪುತ್ರ ಅನಿಂದಿತ ದೀಪ್ತತಪಸ್ಕ, ಧರ್ಮಾತ್ಮ ಮನೀಷಿಣಿ ಚ್ಯವನನನ್ನು ಪಡೆದನು. ಅವನು ತಾಯಿಯನ್ನು ಬಿಡುಗಡೆಗೊಳಿಸಲು ರೋಷಗೊಂಡಾಗ ಅವಳ ಗರ್ಭದಿಂದ ಚ್ಯುತನಾಗಿದ್ದನು. ಮನುವಿನ ಕನ್ಯೆ ಆರುಷಿಯು ಆ ಮನೀಷಿಣಿಯ ಪತ್ನಿ. ಅವಳ ತೊಡೆಯನ್ನು ಸೀಳಿ ಮಹಾತಪಸ್ವಿ, ಮಹಾತೇಜಸ್ವಿ ಬಾಲ್ಯದಲ್ಲಿಯೇ ಗುಣಯುಕ್ತ ಔರ್ವನು ಜನಿಸಿದನು. ಅವನ ಪುತ್ರ ಋಚೀಕ, ಅವನ ಮಗ ಜಮದಗ್ನಿ. ಮಹಾತ್ಮ ಜಮದಗ್ನಿಗೆ ನಾಲ್ವರು ಪುತ್ರರಿದ್ದರು. ಅವರಲ್ಲಿ ಕಿರಿಯವನು ರಾಮ. ಆದರೆ ಅವನು ಗುಣಗಳಲ್ಲಿ ಕಿರಿಯವನಿರಲಿಲ್ಲ. ಆ ಸರ್ವಶಾಸ್ತ್ರಾಸ್ತ್ರ ಕುಶಲನು ಕ್ಷತ್ರಿಯವಂಶವನ್ನೇ ಅಂತ್ಯಗೊಳಿಸಿದನು. ಔರ್ವನ ನೂರು ಪುತ್ರರಲ್ಲಿ ಜಮದಗ್ನಿಯು ಹಿರಿಯವನಾಗಿದ್ದನು. ಅವರಿಗೆ ಸಹಸ್ರಾರು ಪುತ್ರರಿದ್ದು ಭೃಗುಕುಲವು ವಿಸ್ತಾರವಾಯಿತು. ಬ್ರಹ್ಮನಿಗೆ ಅನ್ಯ ಎರಡು ಪುತ್ರರಿದ್ದರು - ಧಾತಾ ಮತ್ತು ವಿಧಾತ - ಅವರ ಚಿಹ್ನೆ ಜಗತ್ತಿನಲ್ಲೆಲ್ಲಾ ಉಳಿದಿದೆ ಮತ್ತು ಅವರು ಮನುವಿನ ಸಂಗಡ ಇರುತ್ತಾರೆ. ಅವರ ತಂಗಿಯೇ ದೇವಿ ಪದ್ಮಗೃಹೆ, ಶುಭೆ ಲಕ್ಷ್ಮಿ. ಅವಳ ಮಾನಸ ಪುತ್ರರು ಆಕಾಶಚಾರಿಣಿ ತುರಗಗಳು. ಶುಕ್ರನಲ್ಲಿ ಜನಿಸಿದ ದೇವಿಯು ವರುಣನ ಹಿರಿಯ ಹೆಂಡತಿ. ಅವಳು ಬಲ ಎನ್ನುವ ಪುತ್ರನಿಗೂ ಮತ್ತು ಸುರನಂದಿನಿಯಾದ ಸುರಾ ಎನ್ನುವ ಮಗಳಿಗೂ ಜನ್ಮವಿತ್ತಳು.

ಅನ್ನಕಾಮಿ ಪ್ರಜೆಗಳು ಅನ್ಯೋನ್ಯರನ್ನು ಭಕ್ಷಿಸುವ ಸಮಯದಲ್ಲಿ ಸರ್ವ ಭೂತವಿನಾಶಕ ಅಧರ್ಮನ ಜನ್ಮವಾಯಿತು. ಅವನ ಭಾರ್ಯೆಯು ನಿರೃತಿ ಮತ್ತು ಅವಳಲ್ಲಿ ನೈರೃತರೆಂಬ ರಾಕ್ಷಸರು ಹುಟ್ಟಿದರು. ಅವಳಿಗೆ ಸದಾ ಪಾಪಕರ್ಮರತ ಮೂವರು ಘೋರ ಪುತ್ರರಿದ್ದರು: ಭಯ, ಮಹಾಭಯ, ಮತ್ತು ಭೂತಾಂತಕ ಮೃತ್ಯು. ದೇವೀ ತಾಮ್ರಾ ಐದು ಲೋಕವಿಶ್ರುತ ಕನ್ಯೆಯರಿಗೆ ಜನ್ಮವಿತ್ತಳು: ಕಾಕೀ, ಶ್ಯೇನೀ, ಭಾಸೀ, ಧೃತರಾಷ್ಟ್ರೀ ಮತ್ತು ಶುಕೀ. ಕಾಕಿಯು ಉಲೂಕಗಳಿಗೆ (ಗೂಬೆಗಳಿಗೆ) ಜನ್ಮವಿತ್ತಳು, ಶ್ಯೇನಿಯು ಗಿಡುಗಗಳಿಗೆ ಜನ್ಮವಿತ್ತಳು, ಮತ್ತು ಬಾಸಿಯು ಹದ್ದುಗಳೇ ಮೊದಲಾದ ಪಕ್ಷಿಗಳಿಗೆ ಜನ್ಮವಿತ್ತಳು. ಭಾಮಿನಿ ಧೃತರಾಷ್ಟ್ರಿಯು ಸರ್ವ ಹಂಸ, ಕೊಕ್ಕರೆಗಳು ಮತ್ತು ಚಕ್ರವಾಕಗಳಿಗೆ ಜನ್ಮವಿತ್ತಳು. ಮನಸ್ವಿನಿ, ಕಲ್ಯಾಣಗುಣಸಂಪನ್ನೆ ಸರ್ವಲಕ್ಷಣಪೂಜಿತೆ ಶುಕಿಯು ಗಿಳಿಗಳಿಗೆ ಜನ್ಮವಿತ್ತಳು. ಅವಳಲ್ಲಿ ಒಂಭತ್ತು ಆತ್ಮಸಂಭ್ಬವ ಕ್ರೋಧವಶ ನಾರಿಯರು ಹುಟ್ಟಿದರು: ಮೃಗೀ, ಮೃಗಮಂದಾ, ಹರಿ, ಭದ್ರಮನಾ, ಮಾತಂಗೀ, ಶಾರ್ದೂಲೀ, ಶ್ವೇತಾ, ಮತ್ತು ಸುರಭಿ. ಸರ್ವಲಕ್ಷಣಸಂಪನ್ನೆ ಯಶಸ್ವಿನಿ ಮೃಗಳ ಮಗಳೇ ಸರ್ವ ಜಿಂಕೆಗಳ ಮೂಲ. ಕರಡಿ, ಸೃಮರ, ಮತ್ತು ಚಮರಗಳು ಮೃಗಮಂದಳ ಮಕ್ಕಳು. ಆನೆ ಐರಾವತವು ಭದ್ರಮನಾಳ ಮಗನಾಗಿ ಹುಟ್ಟಿದನು. ಮಹಾಗಜ, ದೇವನಾಗ ಐರಾವತನು ಅವಳ ಮಗ. ಹರಿಯಲ್ಲಿ ಕುದುರೆಗಳು ಮತ್ತು ತರಸ್ವಿಗಳಾದ ವಾನರರು ಜನಿಸಿದರು. ಗೋಲಾಂಗೂಲಗಳೂ ಹರಿಯ ಪುತ್ರರೆಂದೇ ತಿಳಿ. ಶಾರ್ದೂಲಿಯಲ್ಲಿ ಸಿಂಹ, ವ್ಯಾಘ್ರ ಮತ್ತು ಸರ್ವ ಚಿರತೆಗಳೂ ಜನಿಸಿದರು. ಆನೆಗಳೆಲ್ಲವೂ ಮಾತಂಗಿಯ ಮಕ್ಕಳು. ವೇಗವಂತನಾದ ದಿಗ್ಗಜ ಶ್ವೇತನು ಶ್ವೇತಳ ಮಗ. ಸುರಭಿಗೆ ಈರ್ವರು ಪುತ್ರಿಯರು ಜನಿಸಿದರು: ರೋಹಿಣೀ ಮತ್ತು ಯಶಸ್ವಿನಿ ಗಂಧರ್ವೀ. ರೋಹಿಣಿಯಲ್ಲಿ ಗೋವುಗಳು ಹುಟ್ಟಿದವು ಮತ್ತು ಕುದುರೆಗಳು ಗಂಧರ್ವಿಯ ಮಕ್ಕಳು. ರಾಜನ್! ಸುರಸೆಯಲ್ಲಿ ನಾಗಗಳು ಮತ್ತು ಕದ್ರುವಿನಲ್ಲಿ ಪನ್ನಗಗಳು ಜನಿಸಿದರು. ಅನಲಳು ಏಳು ರೀತಿಯ ಪಿಂಡಫಲಗಳನ್ನು ನೀಡುವ ವೃಕ್ಷಗಳಿಗೆ ಜನ್ಮವಿತ್ತಳು. ಶುಕಿಯು ಅನಲೆಯ ಮಗಳು ಮತ್ತು ಸುರಸೆಯು ಕದ್ರುವಿನ ಸುತೆ. ಅರುಣನ ಭಾರ್ಯೆ ಶ್ಯೇನಿಯು ವೀರ್ಯವಂತರೂ ಮಹಾಬಲಿಗಳೂ ಆದ ಸಂಪಾತಿ ಮತ್ತು ಜಟಾಯುಗಳಿಗೆ ಜನ್ಮವಿತ್ತಳು. ವಿನತೆಯ ಮಕ್ಕಳಾದ ಗರುಡ ಮತ್ತು ಅರುಣ ಈರ್ವರೂ ವಿಖ್ಯಾತರು.

ಭರತ ವಂಶಾವಳಿ

ಪ್ರಚೇತಸನಿಗೆ ಹತ್ತು ಪುತ್ರರಿದ್ದರು; ಎಲ್ಲರೂ ಅತೀವ ತೇಜಸ್ಸು ಮತ್ತು ಕಾಂತಿಯನ್ನು ಹೊಂದಿದ್ದರು. ತೇಜಸ್ಸಿನಲ್ಲಿ ಮಹರ್ಷಿಗಳ ಸಮನಾಗಿದ್ದರು. ಸಂತರ ಪ್ರಕಾರ ಅವರು ಮಾನವರ ಪೂರ್ವಜರು. ಹಿಂದೆ ಇವರೆಲ್ಲರೂ ಮಿಂಚಿನಲ್ಲಿ ಸುಟ್ಟು ಭಸ್ಮರಾದರು. ಈ ಪ್ರಾಚೇತಸರಿಂದ ದಕ್ಷನು ಹುಟ್ಟಿದನು. ಲೋಕಪಿತಾಮಹ ದಕ್ಷನಿಂದ ಪ್ರಜೆಗಳೆಲ್ಲರೂ ಹುಟ್ಟಿದರು. ಮುನಿ ದಕ್ಷ ಪ್ರಾಚೇತಸನು ವೀರಿಣ್ಯಳ ಜೊತೆ ಕೂಡಿ ತನ್ನಂಥಹ ಸಹಸ್ರ ಸಂಶಿತವ್ರತ ಪುತ್ರರನ್ನು ಪಡೆದನು. ದಕ್ಷನ ಈ ಸಾವಿರ ಸುತರ ಸಮಿತಿಗೆ ನಾರದನು ಮೋಕ್ಷವನ್ನು ನೀಡುವ ಉತ್ತಮ ಸಾಂಖ್ಯ ಜ್ಞಾನವನ್ನು ನೀಡಿದನು. ಪ್ರಜಾಪತಿ ದಕ್ಷನು ತನ್ನ ಐವತ್ತು ಪುತ್ರಿಯರನ್ನು ಪ್ರಜೋತ್ಪತ್ತಿಗೆ ತೊಡಗಿಸಿದನು. ಪುತ್ರಿಯರಲ್ಲಿ ಹತ್ತನ್ನು ಧರ್ಮನಿಗೆ, ಹದಿಮೂರನ್ನು ಕಶ್ಯಪನಿಗೆ, ಒಂಭತ್ತನ್ನು ಕಾಲನಿಗೆ ಮತ್ತು ಇಪ್ಪತ್ತೇಳನ್ನು ಚಂದ್ರನಿಗೆ ಕೊಟ್ಟನು. ಮಾರೀಚಿ ಕಶ್ಯಪನು ತನ್ನ ಹದಿಮೂರು ದಾಕ್ಷಾಯಣಿ ಪತ್ನಿಯರಲ್ಲಿ ವಿವಸ್ವತ ಮತ್ತು ಇಂದ್ರನೇ ಮೊದಲಾದ ವೀರ್ಯಸಂಪನ್ನ ಆದಿತ್ಯರನ್ನು ಪಡೆದನು. ವಿವಸ್ವತನಿಗೆ ಪ್ರಭು ವೈವಸ್ವತ ಯಮನು ಮಗನಾಗಿ ಜನಿಸಿದನು. ಮತ್ತು ಮಾರ್ತಂಡನು ಯಮನ ಪುತ್ರನಾಗಿ ಜನಿಸಿದನು. ಪ್ರಭು ಮಾರ್ತಂಡನಿಗೆ ಧೀಮಂತ ಮನುವು ಸುತನಾಗಿ ಜನಿಸಿದನು. ಮನುವಿನ ವಂಶದಲ್ಲಿ ಜನಿಸಿದವರನ್ನು ಮಾನವರು. ಬ್ರಾಹ್ಮಣ, ಕ್ಷತ್ರಿಯ ಮತ್ತು ಇತರ ಎಲ್ಲ ಮಾನವರೂ ಮನುವಿನಿಂದಲೇ ಜನಿಸಿದರು. ಅಲ್ಲಿಂದ ಬ್ರಾಹ್ಮಣತ್ವ ಮತ್ತು ಕ್ಷಾತ್ರತ್ವದ ಸಮಾಗಮವಾಯಿತು. ಮನುವಿನಲ್ಲಿ ಜನಿಸಿದ ಬ್ರಾಹ್ಮಣರು ವೇದಾಧ್ಯಯನದಲ್ಲಿ ತೊಡಗಿದರು. ಮನುವಿಗೆ ಹತ್ತು ಕ್ಷತ್ರಧರ್ಮ ಪರಾಯಣ ಮಹಾಬಲಶಾಲಿ ಮಕ್ಕಳಿದ್ದರು: ವೇನ, ಧೃಷ್ಣು, ನರಿಷಂತ, ನಾಭಾಗ, ಇಕ್ಷ್ವಾಕು, ಕರೂಷ್ಮಥ, ಶರ್ಯಾತಿ, ಎಂಟನೆಯವಳು ಮಗಳು ಇಲಾ, ಒಂಭತ್ತನೆಯವನು ಪೃಷಘ್ನ, ಮತ್ತು ಹತ್ತನೆಯವನು ನಾಭಾಗಾರಿಷ್ಠ. ಇವರಲ್ಲದೆ ಮನುವಿಗೆ ಐವತ್ತು ಪುತ್ರರು ಭೂಮಿಯಲ್ಲಿದ್ದರು ಮತ್ತು ಅವರೆಲ್ಲರೂ ಅನ್ಯೋನ್ಯರೊಡನೆ ಜಗಳವಾಡಿ ವಿನಾಶರಾದರು. ಇಲೆಯಿಂದ ವಿದ್ವಾನ್ ಪುರೂರವನು ಜನಿಸಿದನು. ಅವನ ತಾಯಿ ಮತ್ತು ತಂದೆ ಇಬ್ಬರೂ ಅವಳೇ. ಪುರೂರವನು ಹದಿಮೂರು ಸಮುದ್ರ ದ್ವೀಪಗಳನ್ನು ಆಳಿದನು. ಆ ಮಹಾಯಶನು ಮನುಷ್ಯನಾಗಿದ್ದರೂ ಸದಾ ಅಮಾನುಷರ ಸಂಗದಲ್ಲಿಯೇ ಇರುತ್ತಿದ್ದನು. ವೀರ್ಯೋನ್ಮತ್ತ ಪುರೂರವನು ಅವರ ಕ್ರೋಧವನ್ನು ಅಲ್ಲಗಳೆದು ವಿಪ್ರರೊಂದಿಗೆ ಜಗಳವಾಡಿ ವಿಪ್ರರ ಸಂಪತ್ತನ್ನು ಅಪಹರಿಸಿದನು. ಇದನ್ನು ನೋಡಿದ ಸನತ್ಕುಮಾರನು ಬ್ರಹ್ಮಲೋಕದಿಂದ ಬಂದು ರಾಜನಿಗೆ ಉತ್ತಮ ಸಲಹೆಗಳನ್ನು ನೀಡಿದರೂ ಅವನು ಅವುಗಳನ್ನು ಸ್ವೀಕರಿಸಲಿಲ್ಲ. ಆಗ ಕೃದ್ಧ ಮಹರ್ಷಿಗಳು ಇತ್ತ ಶಾಪವು ಮದಬಲದಿಂದ ಬುದ್ಧಿಕಳೆದುಕೊಂಡಿದ್ದ ಲೋಭಾನ್ವಿತ ನರಾಧಿಪನನ್ನು ನಾಶಪಡಿಸಿತು. ಊರ್ವಶಿಯೊಡನೆ ಗಂಧರ್ವ ಲೋಕದಲ್ಲಿ ವಾಸಿಸುತ್ತಿದ್ದ ಈ ವಿರಾಟನೇ ಕ್ರಿಯಾವಿಧಿಗಳಲ್ಲಿ ಬಳಸುವ ಮೂರು ವಿಧದ ಅಗ್ನಿಗಳನ್ನು ತಂದವನು. ಅವನು ಊರ್ವಶಿಯಲ್ಲಿ ಆರು ಮಕ್ಕಳನ್ನು ಪಡೆದನು: ಆಯುಸ್, ಧೀಮಾನ್, ದೃಢಾಯುಷ್, ಅಮಾವಸು, ವನಾಯುಶ್ ಮತ್ತು ಶೃತಾಯುಶ್.

ಆಯುಸನು ಸ್ವರ್ಭಾನುವಿನ ಮಗಳಿನಿಂದ ನಾಲ್ಕು ಪುತ್ರರನ್ನು ಪಡೆದನು: ನಹುಷ, ವೃದ್ಧಶರ್ಮ, ರಜಿಂರಂಭ ಮತ್ತು ಅನೇನಸ. ಆಯುಸನ ಪುತ್ರರಲ್ಲಿ ನಹುಷನು ಧೀಮಂತ ಮತ್ತು ಸತ್ಯಪರಾಕ್ರಮಿಯಾಗಿದ್ದು ಆ ಪೃಥಿವೀಪತಿಯು ಸುಮಹತ್ತರ ಧರ್ಮದಿಂದ ರಾಜ್ಯವನ್ನಾಳಿದನು. ನಹುಷನು ಪಿತೃ, ದೇವತೆ, ಋಷಿ, ವಿಪ್ರ, ಗಂಧರ್ವ, ಉರಗ, ರಾಕ್ಷಸ ಇವರೆಲ್ಲರನ್ನೂ ಮತ್ತು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಲ್ಲರನ್ನೂ ಪರಿಪಾಲಿಸಿದನು. ಆ ವೀರ್ಯವಂತನು ದಸ್ಯುಗಳ ಗುಂಪುಗಳನ್ನು ನಾಶಪಡಿಸಿ ಅವರು ಋಷಿಗಳಿಗೆ ಕರವನ್ನು ಕೊಡುವಂತೆ ಮಾಡಿದನು; ಮತ್ತು ಅವರು ಪಶುಗಳ ರೀತಿ ಭಾರವನ್ನು ಹೊರುವಂತೆ ಮಾಡಿದನು. ತನ್ನ ತೇಜಸ್ಸು, ತಪಸ್ಸು, ವಿಕ್ರಮ ಮತ್ತು ಓಜಸ್ಸಿನಿಂದ ದಿವೌಕಸರನ್ನು ಮೀರಿ ಇಂದ್ರನಂತೆ ರಾಜ್ಯವಾಳಿದನು. ನಹುಷನು ಆರು ಪ್ರಿಯವಾಸ ಪುತ್ರರಿಗೆ ಜನ್ಮವಿತ್ತನು: ಯತಿ, ಯಯಾತಿ, ಸಂಯಾತಿ, ಆಯಾತಿ, ಪಾಂಚ ಮತ್ತು ಉದ್ಧವ.

ನಾಹುಷ ಯಯಾತಿಯು ಸತ್ಯಪರಾಕ್ರಮಿ ಸಾಮ್ರಾಟನಾಗಿ ಮಹಿಯನ್ನು ಪಾಲಿಸಿದನು. ತನ್ನ ಅತಿ ಶಕ್ತಿಯಿಂದ ಪಿತೃಗಳನ್ನು ಮತ್ತು ದೇವತೆಗಳನ್ನು ಸದಾ ಅರ್ಚಿಸುತ್ತಾ ಅಪರಾಜಿತ ಯಯಾತಿಯು ಸರ್ವ ಪ್ರಜೆಗಳನ್ನೂ ಪ್ರೀತಿಯಿಂದ ಪಾಲಿಸಿದನು. ದೇವಯಾನಿ ಮತ್ತು ಶರ್ಮಿಷ್ಠೆಯರಲ್ಲಿ ಹುಟ್ಟಿದ ಅವನ ಪುತ್ರರೆಲ್ಲರೂ ಮಹೇಷ್ವಾಸರೂ ಸುಗುಣರೂ ಆಗಿದ್ದರು. ಯದು ಮತ್ತು ತುರ್ವಾಸು ದೇವಯಾನಿಯಲ್ಲಿ ಜನಿಸಿದರು. ಶರ್ಮಿಷ್ಠೆಯಲ್ಲಿ ದ್ರುಹು, ಅನು ಮತ್ತು ಪುರು ಜನಿಸಿದರು. ಬಹಳ ಕಾಲ ಧರ್ಮದಿಂದ ಪ್ರಜೆಗಳನ್ನು ಪಾಲಿಸಿದ ನಾಹುಷನು ರೂಪನಾಶಿನಿ ಮಹಾಘೋರ ವೃದ್ಧತ್ವವನ್ನು ಪಡೆದನು. ವೃದ್ಧಾಪ್ಯವನ್ನು ಹೊಂದಿದ ರಾಜನು ತನ್ನ ಪುತ್ರರಾದ ಯದು, ಪುರು, ತುರ್ವಸು, ದ್ರುಹು ಮತ್ತು ಅನುರಲ್ಲಿ ಕೇಳಿಕೊಂಡನು:

ಪುತ್ರರೇ! ಯೌವನವನ್ನು ಪಡೆದು ಯುವ ಯುವತಿಯರೊಂದಿಗೆ ಕಾಮದಿಂದ ವಿಹರಿಸಲು ಬಯಸುತ್ತೇನೆ. ಇದರಲ್ಲಿ ನನಗೆ ಸಹಾಯ ಮಾಡಿ.

ಆಗ ದೇವಯಾನಿಯ ಹಿರಿಯ ಮಗ ಯದುವು ಹೇಳಿದನು:

ನಮ್ಮ ಯೌವನವನ್ನು ಪಡೆದು ನೀನೇನು ಮಾಡುತ್ತೀಯೆ?

ಯಯಾತಿಯು ಹೇಳಿದನು:

ನನ್ನ ವೃದ್ಧಾಪ್ಯವನ್ನು ಸ್ವೀಕರಿಸು. ನೀನು ನೀಡುವ ಯೌವನದಿಂದ ನಾನು ವಿಷಯ ಸುಖವನ್ನು ಹೊಂದುತ್ತೇನೆ. ಒಂದು ದೀರ್ಘ ಯಜ್ನವನ್ನು ಯಜಿಸುತ್ತಿರುವಾಗ ಮುನಿ ಉಶಾಸನನಿಂದ ಶಾಪವನ್ನು ಪಡೆದು ಕಾಮಸುಖವನ್ನು ಅನುಭವಿಸುವ ಎಲ್ಲ ಸಾಮರ್ಥ್ಯವನ್ನೂ ಕಳೆದುಕೊಂಡೆನು. ಪುತ್ರರೇ ಈಗ ನಿಮ್ಮ ಯೌವನದಿಂದ ನಾನು ಸುಖವನ್ನು ಹೊಂದಬಲ್ಲೆ. ನನ್ನವರಾದ ನಿಮ್ಮಲ್ಲಿ ಯಾರಾದರೂ ಒಬ್ಬರು ನನ್ನ ಈ ವೃದ್ಧಾಪ್ಯ ಮತ್ತು ದೇಹವನ್ನು ಪಡೆದು ರಾಜ್ಯವನ್ನು ಆಳಿ. ಹೊಸ ಯೌವನವನ್ನು ಹೊಂದಿದ ನಾನು ನನ್ನ ಕಾಮಸುಖವನ್ನು ಪಡೆಯುತ್ತೇನೆ.

ಯದು ಮೊದಲಾದವರು ಯಾರೂ ಅವನ ಈ ಮಾತುಗಳನ್ನು ಸ್ವೀಕರಿಸದೇ ಇರುವಾಗ ಕಿರಿಯ ಸತ್ಯಪರಾಕ್ರಮಿ ಪುರುವು ಹೇಳಿದನು:

ರಾಜನ್! ಹೊಸ ಯೌವನ ಮತ್ತು ದೇಹವನ್ನು ಸ್ವೀಕರಿಸು. ನಾನು ನಿನ್ನ ವೃದ್ಧಾಪ್ಯವನ್ನು ಪಡೆದು ನಿನ್ನ ಆಜ್ಞೆಯಂತೆ ರಾಜ್ಯವನ್ನು ಆಳುತ್ತೇನೆ.

ಆಗ ಆ ರಾಜರ್ಷಿಯು ತನ್ನ ತಪೋವೀರ್ಯ ಬಲದಿಂದ ತನ್ನ ವೃದ್ಧಾಪ್ಯವು ಮಹಾತ್ಮ ಪುತ್ರನಿಗೆ ತಗಲುವಂತೆ ಮಾಡಿದನು. ಪುರುವಿನ ವಯಸ್ಸನ್ನು ಪಡೆದು ರಾಜನು ಯುವಕನಾದನು ಮತ್ತು ಯಯಾತಿಯ ವಯಸ್ಸನ್ನು ಪಡೆದ ಪುರುವು ರಾಜ್ಯವನ್ನಾಳಿದನು. ಒಂದು ಸಾವಿರ ವರ್ಷಗಳು ಕಳೆದನಂತರ ಇನ್ನೂ ಅತೃಪ್ತ ಕಾಮಿಯಾಗಿದ್ದ ಅಪರಾಜಿತ ಯಯಾತಿಯು ಪುತ್ರ ಪುರುವನ್ನುದ್ದೇಶಿಸಿ ಹೇಳಿದನು:

ಮಗನೇ! ನೀನೇ ನನ್ನ ನಿಜವಾದ ವಾರಸು, ನಿನ್ನಿಂದಲೇ ನನ್ನ ವಂಶವು ಮುಂದುವರೆಯುತ್ತದೆ. ಇದು ಪೌರವವಂಶವೆಂದು ಲೋಕಗಳಲ್ಲೆಲ್ಲಾ ಖ್ಯಾತಿಯಾಗುತ್ತದೆ. 

ನಂತರ ಆ ನೃಪಶಾರ್ದೂಲನು ಪುರುವಿಗೆ ರಾಜ್ಯಾಭಿಷೇಕವನ್ನು ಮಾಡಿ ಹಲವು ವರ್ಷಗಳ ನಂತರ ಕಾಲಧರ್ಮಕ್ಕೊಳಗಾದನು.

ಪೌರವ ವಂಶಾವಳಿ

ಪುರುವು ಪೌಷ್ಟಿಯಲ್ಲಿ ಮೂವರು ಮಹಾರಥಿ ಪುತ್ರರನ್ನು ಪಡೆದನು: ಪ್ರವೀರ, ಈಶ್ವರ, ಮತ್ತು ರೌದ್ರಾಶ್ವ. ಅವರಲ್ಲಿ ಪ್ರವೀರನು ವಂಶವನ್ನು ಮುಂದುವರಿಸಿದನು. ರಾಜನು ಶೇನಿಯಲ್ಲಿ ಮನಸ್ಯು ಎಂಬ ಶೂರ ಮಗನನ್ನು ಪಡೆದನು. ಆ ರಾಜೀವಲೋಚನನು ಭೂಮಿಯ ನಾಲ್ಕೂ ದಿಕ್ಕುಗಳನ್ನು ಆಳಿದನು. ಮನಸ್ಯುವು ಸೌವೀರಿಯಲ್ಲಿ ಮೂರು ಮಕ್ಕಳನ್ನು ಪಡೆದನು: ಸುಭ್ರು, ಸಂಹನನ, ಮತ್ತು ವಾಗ್ಮಿ. ಈ ಎಲ್ಲ ಪುತ್ರರೂ ಮಹಾರಥಿಗಳೂ ಶೂರರೂ ಆಗಿದ್ದರು. ರೌದ್ರಾಶ್ವನು ಅಪ್ಸರೆಯಿಂದ ಯಜ್ಞಾದಿಗಳನ್ನು ಮಾಡಿದ, ಮಹೇಶ್ವಾಸ, ಶೂರ. ಪ್ರಜಾವಂತ, ಬಹುಶೃತ ಹತ್ತು ಮಕ್ಕಳನ್ನು ಪಡೆದನು. ಸರ್ವರೂ ಸರ್ವಾಸ್ತ್ರವಿದ್ವಾಂಸರಾಗಿದ್ದರು. ಸರ್ವರೂ ಧರ್ಮಪರಾಯಣರಾಗಿದ್ದರು. ಋಚೇಪು, ಕಕ್ಷೇಪು, ಕುಕಣೇಪು, ಸ್ಥಂಡಿಲೇಪು, ವನೇಪು, ಮಹಾರಥಿ ಸ್ಥಲೇಪು, ತೇಜೇಪು, ಸತ್ಯೇಪು, ಧರ್ಮೇಪು, ಮತ್ತು ಹತ್ತನೆಯವನು ದೇವವಿಕ್ರಮಿ ಸಂನತೇಪು. ಅನಾಧೃಷ್ಟಿಯಲ್ಲಿ ಜನಿಸಿದ ಇವರೆಲ್ಲರೂ ರಾಜಸೂಯ-ಅಶ್ವಮೇಧಗಳನ್ನು ನೆರವೇರಿಸಿದರು. ರಾಜ ಋಚೇಪುವು ಮತಿನಾರನೆಂಬ ವಿದ್ವಾಂಸ ಪುತ್ರನನ್ನು ಪಡೆದನು. ರಾಜ ಮತಿನಾರನು ನಾಲ್ಕು ಅಮಿತವಿಕ್ರಮಿ ಪುತ್ರರನ್ನು ಪಡೆದನು: ತಂಸು, ಮಹತ್, ಅತಿರಥ ಮತ್ತು ಅಪ್ರತಿಮಧ್ಯುತಿ ದ್ರುಹ್ಯು. ಅವರಲ್ಲಿ ಮಹಾವೀರ ತಂಸುವು ಪೌರವ ವಂಶವನ್ನು ಮುಂದುವರೆಸಿ, ದೇದೀಪ್ಯಮಾನ ಕೀರ್ತಿಯನ್ನು ಹೊಂದಿ ಭೂಮಿಯನ್ನು ಗೆದ್ದನು.

ತಂಸುವಿಗೆ ಇಲಿನ ಎನ್ನುವ ವೀರ್ಯವಂತ ಮಗನು ಹುಟ್ಟಿದನು. ಆ ವಿಜಯಿಗಳಲ್ಲಿ ಶ್ರೇಷ್ಠನು ಇಡೀ ಭೂಮಿಯ ಮೇಲೆ ವಿಜಯ ಗಳಿಸಿದನು. ನೃಪ ಇಲಿನನು ರಥಂತರಿಯಲ್ಲಿ ಪಂಚಭೂತಗಳಿಗೆ ಸಮ ದುಃಷಂತನೇ ಮೊದಲಾದ ಐದು ಮಕ್ಕಳನ್ನು ಪಡೆದನು: ದುಃಷಂತ, ಶೂರ, ಭೀಮ, ಪ್ರವಸು ಮತ್ತು ವಸು. ಅವರಲ್ಲಿ ಹಿರಿಯವನು ರಾಜ ದುಃಷಂತ. ನೃಪ ದುಃಷಂತನಿಂದ ಶಕುಂತಲೆಯಲ್ಲಿ ಭರತನು ಹುಟ್ಟಿದನು. ಅವನಿಂದ ಮಹಾಯಶಸ್ವಿ ಭರತವಂಶವು ಪ್ರಾರಂಭವಾಯಿತು.

ಭರತನು ತನ್ನ ಮೂವರು ಪತ್ನಿಯರಲ್ಲಿ ಒಂಭತ್ತು ಪುತ್ರರನ್ನು ಪಡೆದನು. ನನ್ನ ಅನುರೂಪರಾದವರು ಯಾರೂ ಇಲ್ಲ ಎಂದು ಅವರಲ್ಲಿ ಯಾರನ್ನೂ ರಾಜನು ಒಪ್ಪಿಕೊಳ್ಳಲಿಲ್ಲ. ಆಗ ಭರತನು ಒಂದು ಮಹಾ ಕ್ರತುವನ್ನು ನಡೆಸಿ ಅದರಿಂದ ಭರದ್ವಾಜನಿಂದ ಭುಮನ್ಯು ಎಂಬ ಹೆಸರಿನ ಪುತ್ರನನ್ನು ಪಡೆದನು. ಆ ಪೌರವನಂದನನು ಭುಮನ್ಯುವನ್ನು ತನ್ನ ಪುತ್ರನೆಂದೇ ಸ್ವೀಕರಿಸಿ ಅವನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು. ಆಗ ಆ ಮಹೀಂದ್ರನಿಗೆ ವಿತಥನೆಂಬ ಪುತ್ರನು ಜನಿಸಿದನು. ನಂತರ ಆ ವಿತಥನಿಗೆ ಭುಮನ್ಯು ಎಂಬ ಹೆಸರಿನ ಸುತನು ಜನಿಸಿದನು.

ಋಚೀಕ ಭುಮನ್ಯುವು ಪುಷ್ಕರಣಿಯಲ್ಲಿ ಸುಹೋತ್ರ, ಸುಹೋತ, ಸುಹವಿ ಮತ್ತು ಸುಯಜು ಎಂಬ ಮಕ್ಕಳನ್ನು ಪಡೆದನು. ಅವರಲ್ಲಿ ಹಿರಿಯವ ಸುಹೋತ್ರನು ಇಡೀ ಭೂಮಿಯನ್ನೇ ರಾಜ್ಯವಾಗಿ ಪಡೆದು, ರಾಜಸೂಯ-ಅಶ್ವಮೇಧ ಯಜ್ನಗಳಿಂದ ಬಹಳ ರಾಜರನ್ನು ಜಯಿಸಿದನು. ಸುಹೋತ್ರನು ಸಾಗರ ಮತ್ತು ಅಂಬರಗಳ ನಡುವಿನ ಈ ಭೂಮಿಯಲ್ಲಿಯ ಆನೆ, ಗೋವು, ಕುದುರೆ ಮತ್ತು ಬಹು ರತ್ನ ಸಮಾಕುಲ ಸರ್ವವನ್ನೂ ಪರಿಪೂರ್ಣವಾಗಿ ಅನುಭವಿಸಿದನು. ಅವನು ಹೇರಿಸಿದ ಆನೆಗಳ, ಕುದುರೆಗಳ, ರಥಗಳ ಮತ್ತು ಬಹುಸಂಖ್ಯೆಯ ಜನರ ಭಾರಿ ವಜೆಯಿಂದ ಭೂಮಿಯು ಕೆಳಗೆ ಕುಸಿದಂತೆ ತೋರುತ್ತಿತ್ತು. ರಾಜ ಸುಹೋತ್ರನು ಧರ್ಮದಲ್ಲಿ ಪ್ರಜೆಗಳನ್ನು ಆಳುತ್ತಿರುವಾಗ ಭೂಮಿಯು ನೂರಾರು ಸಹಸ್ರಾರು ಚೈತ್ಯಗಳಿಂದಲೂ ಯಾಗ ಧ್ವಜಗಳಿಂದಲೂ ತುಂಬಿತ್ತು. ಭೂಮಿಯ ಮೇಲೆ ಫಸಲು ಮತ್ತು ಜನರು ಸಂವೃದ್ಧರಾಗಿದ್ದರು, ಮತ್ತು ದೇವತೆಗಳೊಂದಿಗೆ ಭೂಮಿಯೂ ಸಂತಸಗೊಂಡಿತ್ತು. ಈ ಪೃಥಿವೀಪತಿ ಸುಹೋತ್ರನಿಗೆ ಐಕ್ಷ್ವಾಕಿಯಲ್ಲಿ ಅಜಮೀಢ, ಸುಮೀಢ, ಮತ್ತು ಪುರುಮೀಢ ಎನ್ನುವ ಮಕ್ಕಳು ಜನಿಸಿದರು. ಅವರಲ್ಲಿ ಶ್ರೇಷ್ಠ ಅಜಮೀಢನಲ್ಲಿ ವಂಶವು ಮುಂದುವರೆಯಿತು.

ಅವನ ಮೂವರು ಪತ್ನಿಯರಲ್ಲಿ ಆರು ಪುತ್ರರು ಜನಿಸಿದರು: ಧೂಮ್ನಿಯಲ್ಲಿ ಋಕ್ಷ, ನೀಲಿಯಲ್ಲಿ ದುಃಷಂತ ಮತ್ತು ಪರಮೇಷ್ಠಿ, ಮತ್ತು ಕೇಶಿನಿಯಲ್ಲಿ ಜಹ್ನು, ಜನ ಮತ್ತು ರೂಪಿನರು ಜನಿಸಿದರು. ದುಃಷಂತ ಮತ್ತು ಪರಮೇಷ್ಠಿಯರಿಂದ ಸರ್ವ ಪಾಂಚಾಲರೂ ಮತ್ತು ಅಮಿತತೇಜಸ ಜಹ್ನುವುನಿಂದ ಕುಶಿಕರೂ ಜನಿಸಿದರು. ಜನ ಮತ್ತು ರೂಪಿನರಿಗಿಂತಲೂ ಹಿರಿಯವ ಋಕ್ಷನು ರಾಜನಾದನು, ಮತ್ತು ಋಕ್ಷನಿಂದ ಹುಟ್ಟಿದ ಸಂವರಣನಿಂದ ಕೌರವ ವಂಶವು ಪ್ರಾರಂಭವಾಯಿತು.

ಆರ್ಕ್ಷ ಸಂವರಣನು ಭೂಮಿಯ ಮೇಲೆ ಪ್ರಶಾಸನ ಮಾಡುತ್ತಿದ್ದಾಗ ಜನರಿಗೆ ಒಂದು ಮಹತ್ತರ ದುಷ್ಕಾಲ ಒದಗಿತು. ಆಗ ರಾಷ್ಟ್ರವು ನಾನಾ ವಿಧದ ಕ್ಷಯಗಳಿಂದಲೂ, ಅಕಾಲ ಮೃತ್ಯು, ಅನಾವೃಷ್ಠಿ, ವ್ಯಾಧಿಗಳಿಂದ ಪೀಡಿತಗೊಂಡಿತ್ತು.  ಪಾಂಚಾಲರು ತಮ್ಮ ಅಕ್ಷೌಹಿಣೀ ಚತುರಂಗ ಬಲದಿಂದ ಭಾರತರನ್ನು ಆಕ್ರಮಿಸಿ, ಇಡೀ ಭೂಮಿಯನ್ನೇ ನಡುಗಿಸುತ್ತಾ ಯುದ್ಧದಲ್ಲಿ ಅವರನ್ನು ಗೆದ್ದರು. ಆಗ ರಾಜ ಸಂವರಣನು ತನ್ನ ಪತ್ನಿ, ಅಮಾತ್ಯ, ಪುತ್ರ ಮತ್ತು ಸುಹೃಜ್ಜನರೊಂದಿಗೆ ಮಹಾ ಭಯದಿಂದ ಪಲಾಯನಗೈದನು. ಸಿಂಧೂ ನದಿಯ ತೀರದಲ್ಲಿ ಪರ್ವತದ ಸಮೀಪದಲ್ಲಿಯ ಮಹಾ ನಿಕುಂಜದಲ್ಲಿ ವಾಸಿಸಿದನು. ಕಷ್ಟಕ್ಕೀಡಾದ ಭರತರು ಅಲ್ಲಿ ಬಹಳಕಾಲ ವಾಸಿಸಿದರು - ಅಲ್ಲಿರುವವರಿಗೆ ಒಂದು ಸಹಸ್ರವರ್ಷಗಳೋ ಎಂಬಂತೆ ತೋರಿದವು. ಆಗ ಭಗವಾನ್ ವಸಿಷ್ಠ ಋಷಿಯು ಭರತರಲ್ಲಿಗೆ ಬಂದನು. ಅವನು ಬರುತ್ತಿದ್ದಂತೆ ಅವರೆಲ್ಲರೂ ಧಾರ್ಮಿಕವಾಗಿ ಎದ್ದು ನಿಂತು ಅಭಿವಂದಿಸಿ ಸ್ವಾಗತಿಸಿದರು. ಸರ್ವ ಭಾರತರೂ ಅರ್ಘ್ಯ, ಅಭ್ಯಾಹಾರಗಳಿಂದ, ನೈವೇದ್ಯ, ಮತ್ತು ಸರ್ವ ಸತ್ಕಾರಗಳಿಂದ ಆ ಋಷಿಯನ್ನು ಪೂಜಿಸಿದರು. ಅವನು ಅಲ್ಲಿ ಅವರೊಡನೆ ಎಂಟು ವರ್ಷಗಳಿದ್ದನು. ಆಗ ಸ್ವಯಂ ರಾಜನು “ನಮ್ಮ ಪುರೋಹಿತರಾಗಿದ್ದು ನಮಗೆ ನಮ್ಮ ರಾಜ್ಯವನ್ನು ಹಿಂದೆ ದೊರಕಿಸಿಕೊಡಿ!” ಎಂದು ಕೇಳಿದಾಗ, ವಸಿಷ್ಠನು ಓಂ ಎಂದು ಹೇಳಿ ಭಾರತರಿಗೆ ಒಪ್ಪಿಕೊಂಡನು.

ಆಗ ಅವನು ಪೌರವನನ್ನು ಸರ್ವಕ್ಷತ್ರಿಯರ ಸಾಮ್ರಾಜ್ಯನೆಂದು ಅಭೀಷೇಕಿಸಿ, ಇಡೀ ಪೃಥ್ವಿಯ ನಾಯಕನಾಗಿ ನಿಯೋಜಿಸಿದನು. ಹಿಂದೆ ಭರತರು ನೆಲೆಸಿದ್ದ ಉತ್ತಮ ಪುರದಲ್ಲಿ ಪುನಃ ರಾಜನು ನೆಲೆಸಿ, ಪುನಃ ಸರ್ವ ಮಹೀಕ್ಷಿತರೂ ಕಪ್ಪವನ್ನು ಕೊಡುವಂತೆ ಮಾಡಿಸಿದನು. ಪೃಥ್ವಿಯನ್ನು ಪುನಃ ಪಡೆದ ಮಹಾಬಲಿ ಅಜಮೀಢನು ಭಾರೀ ಭೂರಿದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನೆರವೇರಿಸಿದನು. ನಂತರ ಸಂವರಣನು ಸೂರ್ಯನ ಪುತ್ರಿ ತಪತಿಯಲ್ಲಿ ಕುರುವನ್ನು ಪಡೆದನು. ಅವನು ಧರ್ಮಜ್ಞನೆಂದು ಸರ್ವ ಪ್ರಜೆಗಳೂ ಅವನನ್ನು ರಾಜನನ್ನಾಗಿ ಆರಿಸಿದರು. ಅವನ ಹೆಸರಿನಿಂದಲೇ ಈ ಕುರುಜಂಗಲವು ಭೂಮಿಯಲ್ಲೆಲ್ಲಾ ವಿಖ್ಯಾತವಾಯಿತು; ಆ ಮಹಾತಪಸ್ವಿಯ ತಪಸ್ಸಿನಿಂದಲೇ ಕುರುಕ್ಷೇತ್ರವು ಪುಣ್ಯಕ್ಷೇತ್ರವಾಯಿತು. ಅವನಿಗೆ ಅಶ್ವವಂತ, ಅಭಿಶ್ವಂತ, ಚಿತ್ರರಥ, ಮುನಿ ಮತ್ತು ವಿಖ್ಯಾತ ಜನಮೇಜಯ ಈ ಐವರು ಪುತ್ರರು ಮನಸ್ವಿನೀ ವಾಹಿನಿಯಲ್ಲಿ ಜನಿಸಿದರು. ಅಭಿಶ್ವಂತನ ಮಕ್ಕಳು ಪರಿಕ್ಷಿತ, ಶಬಲಾಶ್ವ, ಅಭಿರಾಜ, ವಿರಾಜ, ಶಲ್ಮಲ, ಉಚ್ಛೈಶ್ರವ, ಭದ್ರಕಾರ ಮತ್ತು ಎಂಟನೆಯವನು ಜಿತಾರಿ. ಇವರೆಲ್ಲರೂ ತಮ್ಮ ತಮ್ಮ ಕರ್ಮ ಗುಣಗಳಿಂದ ವಿಖ್ಯಾತರಾಗಿದ್ದರು. ಅವರ ವಂಶದಲ್ಲಿ ಜನಮೇಜಯನೇ ಮೊದಲಾದ ಇನ್ನೂ ಏಳು ಬಲಶಾಲಿ ಪುತ್ರರು ಆದರು. ಕಕ್ಷಸೇನ, ಉಗ್ರಸೇನ, ಚಿತ್ರಸೇನ, ಇಂದ್ರಸೇನ, ಸುಷೇಣ, ಮತ್ತು ಭೀಮಸೇನ ಎಂಬ ಹೆಸರಿನ ಪರಿಕ್ಷಿತನ ಪುತ್ರರೆಲ್ಲರೂ ಧರ್ಮಾರ್ಥಕೋವಿದರಾಗಿದ್ದರು.

ಜನಮೇಜಯನ ಮಹಾಬಲಶಾಲಿ ಪುತ್ರರು ಭೂಮಿಯಲ್ಲಿ ವಿಖ್ಯಾತರಾದರು - ಹಿರಿಯವನು ಧೃತರಾಷ್ಟ್ರ, ಪಾಂಡು, ಬಾಹ್ಲೀಕ, ಮಹಾತೇಜಸ್ವಿ ನಿಷಧ, ಬಲಶಾಲಿ ಜಾಂಬೂನದ, ಕುಂಡೋದರ, ಪದಾತಿ, ಮತ್ತು ಎಂಟನೆಯವನು ವಸಾತಿ. ಇವರೆಲ್ಲರೂ ಧರ್ಮಾರ್ಥಕುಶಲರಾಗಿ ಸರ್ವ ಭೂತಹಿತದಲ್ಲಿ ನಿರತರಾಗಿದ್ದರು. ಧೃತರಾಷ್ಟ್ರನು ರಾಜನಾದನು. ಅವನ ಪುತ್ರರು ಕುಂಡಿಕ, ಹಸ್ತಿ, ವಿತರ್ಕ, ಕ್ರಾಥ, ಐದನೆಯವನು ಕುಂಡಲ, ಹವಿಃಶ್ರವ, ಇಂದ್ರಾಭ ಮತ್ತು ಅಪರಾಜಿತ ಸುಮನ್ಯು. ಪ್ರತೀಪನು ಮೂರು ಮಕ್ಕಳನ್ನು ಪಡೆದನು: ದೇವಾಪಿ, ಶಂತನು, ಮತ್ತು ಮಹಾರಥಿ ಬಾಹ್ಲೀಕ. ಧರ್ಮಮಾರ್ಗವನ್ನು ಅರಸಿ ದೇವಾಪಿಯು ಪರಿವ್ರಾಜನಾದನು. ಮಹಾರಥಿ ಬಾಹ್ಲೀಕ ಮತ್ತು ಶಂತನು ರಾಜ್ಯವನ್ನು ಪಡೆದರು. ಭರತಾನ್ವಯದಲ್ಲಿ ಇನ್ನೂ ಅನೇಕ ಸತ್ವವಂತರೂ, ಮಹಾರಥಿಗಳು, ದೇವರ್ಷಿಸಮಾನರೂ ಆದ ಬಹಳಷ್ಟು ರಾಜಸತ್ತಮರು ಜನಿಸಿದರು. ಇದೇ ರೀತಿಯಲ್ಲಿ ಮನುವಿನ ಅನ್ವಯದಲ್ಲಿ ಇತರ ದೇವಕಲ್ಪ ಮಹಾರಥಿಗಳು ಹುಟ್ಟಿ ಇಲನಿಂದ ಪ್ರಾರಂಭವಾದ ವಂಶವನ್ನು ಮುಂದುವರೆಸಿದರು.

ಸಂಪೂರ್ಣ ವಂಶಾವಳಿ

ದಕ್ಷನಿಂದ ಅದಿತಿ. ಅದಿತಿಯಿಂದ ವಿವಸ್ವತ. ವಿವಸ್ವತನಿಂದ ಮನು. ಮನುವಿನಿಂದ ಇಲ. ಇಲನಿಂದ ಪುರೂರವ. ಪುರೂರವನಿಂದ ಆಯುಸ್. ಆಯುಸನಿಂದ ನಹುಷ. ನಹುಷನಿಂದ ಯಯಾತಿ. ಯಯಾತಿಗೆ ಈರ್ವರು ಪತ್ನಿಯರು. ಉಶನಸನ ಪುತ್ರಿ ದೇವಯಾನಿ ಮತ್ತು ವೃಷಪರ್ವನ ಮಗಳು ಶರ್ಮಿಷ್ಠೆ. ಯದು ಮತ್ತು ತುರ್ವಸು ದೇವಯಾನಿಯಲ್ಲಿ ಮತ್ತು ದ್ರುಹ್ಯು, ಅನು ಮತ್ತು ಪುರು ವಾರ್ಷಪರ್ವಣೀ ಶರ್ಮಿಷ್ಠೆಯಲ್ಲಿ ಜನಿಸಿದರು. ಯದುವಿನಿಂದ ಯಾದವರಾದರು. ಪುರುವಿಂದ ಪೌರವರಾದರು. ಪುರುವಿನ ಪತ್ನಿ ಕೌಸಲ್ಯಾ. ಅವಳಲ್ಲಿ ಅವನು ಜನಮೇಜಯನನ್ನು ಪಡೆದನು. ಅವನು ಮೂರು ಅಶ್ವಮೇಧ ಯಜ್ಞಗಳನ್ನು ಮಾಡಿದನು. ವಿಶ್ವಜಿತ್ ಯಜ್ಞವನ್ನು ಮಾಡಿ ಅವನು ವನವನ್ನು ಪ್ರವೇಶಿಸಿದನು. ಜನಮೇಜಯನು ಮಾಧವೀ ಅನಂತಾ ಎನ್ನುವವಳನ್ನು ಮದುವೆಯಾದನು. ಅವರಲ್ಲಿ ಪ್ರಾಚಿನ್ವತನು ಜನಿಸಿದನು. ಅವನು ಸೂರ್ಯೋದಯವಾಗುವ ವರೆಗೆ ಪೂರ್ವದಿಶೆಯನ್ನು ಗೆದ್ದನು. ಆದುದರಿಂದ ಅವನ ಹೆಸರು ಪ್ರಾಚಿನ್ವತ. ಪ್ರಾಚಿನ್ವತನು ಅಶ್ಮಕಿಯನ್ನು ವಿವಾಹವಾದನು. ಅವಳಲ್ಲಿ ಸಂಯಾತಿಯು ಜನಿಸಿದನು. ಸಂಯಾತಿಯು ದೃಶದ್ವತನ ಮಗಳು ವರಾಂಗೀ ಎನ್ನುವವಳನ್ನು ವಿವಾಹವಾದನು. ಅವರಲ್ಲಿ ಅಹಂಪತಿಯು ಜನಿಸಿದನು. ಅಹಂಪತಿಯು ಕೃತವೀರ್ಯನ ಮಗಳು ಭಾನುಮತಿಯನ್ನು ವಿವಾಹವಾದನು. ಅವಳಲ್ಲಿ ಸಾರ್ವಭೌಮನು ಜನಿಸಿದನು. ಸಾರ್ವಭೌಮನು ಕೈಕೇಯೀ ಸುನಂದಾ ಎನ್ನುವವಳನ್ನು ಗೆದ್ದು ಅಪಹರಿಸಿ ಮದುವೆಯಾದನು. ಅವರಲ್ಲಿ ಜಯತ್ಸೇನನು ಜನಿಸಿದನು. ಜಯತ್ಸೇನನು ವಿದರ್ಭದ ಸುಶ್ರವಳನ್ನು ವಿವಾಹವಾದನು. ಅವಳಲ್ಲಿ ಅರ್ಚಿನನು ಜನಿಸಿದನು. ಅರ್ಚಿನನು ವಿದರ್ಭದ ಇನ್ನೊಬ್ಬ ಸ್ತ್ರೀ ಮರ್ಯಾದಳನ್ನು ವಿವಾಹವಾದನು. ಅವರಲ್ಲಿ ಮಹಾಭೌಮನು ಜನಿಸಿದನು. ಮಹಾಭೌಮನು ಪ್ರಸೇನಜಿತನ ಮಗಳು ಸುಜ್ಞಳನ್ನು ಮದುವೆಯಾದನು. ಅವಳಲ್ಲಿ ಅಯುತನಾಯಿಯು ಜನಿಸಿದನು. ಅವನು ಅಯುತ ಮನುಷ್ಯಮೇಧ ಯಾಗವನ್ನು ನಡೆಸಿದನು. ಆದುದರಿಂದ ಅವನ ಹೆಸರು ಅಯುತನಾಯಿಯೆಂದಾಯಿತು. ಅಯುತನಾಯಿಯು ಪೃತುಶ್ರವನ ಮಗಳು ಭಾಸಳನ್ನು ವಿವಾಹವಾದನು. ಅವಳಲ್ಲಿ ಅಕ್ರೋಧನನು ಜನಿಸಿದನು. ಅಕ್ರೋಧನನು ಕಳಿಂಗದ ಕರಂದುವನ್ನು ಮದುವೆಯಾಗಿ ಅವಳಲ್ಲಿ ದೇವತಿಥಿಯನ್ನು ಪಡೆದನು. ದೇವತಿಥಿಯು ವಿದೇಹದ ಮರ್ಯಾದಳನ್ನು ಮದುವೆಯಾದನು, ಮತ್ತು ಅವಳಲ್ಲಿ ಋಚನು ಜನಿಸಿದನು. ಋಚನು ಅಂಗದೇಶದ ಸುದೇವಳನ್ನು ವಿವಾಹವಾದನು. ಅವಳಲ್ಲಿ ಋಕ್ಷನು ಜನಿಸಿದನು. ಋಕ್ಷನು ತಕ್ಷಕನ ಮಗಳು ಜ್ವಾಲಾಳನ್ನು ಮದುವೆಯಾಗಿ, ಅವಳಲ್ಲಿ ಮತಿನಾರ ಎನ್ನುವವನ ತಂದೆಯಾದನು. ಸರಸ್ವತೀ ತೀರದಲ್ಲಿ ಮತಿನಾರನು ಹನ್ನೆರಡು ವರ್ಷಗಳ ದೀರ್ಘ ಸತ್ರವನ್ನು ನಡೆಸಿದನು. ಸತ್ರವು ಮುಗಿದಾಗ, ಸರಸ್ವತಿಯು ಬಂದು ಅವನನ್ನು ತನ್ನ ಪತಿಯನ್ನಾಗಿ ವರಿಸಿದಳು. ಅವಳಲ್ಲಿ ತಂಸುವು ಜನಿಸಿದನು.

ಇಲ್ಲಿ ಮತ್ತೆ ಅನುವಂಶವಾಯಿತು. ಮತಿನಾರನಿಂದ ಸರಸ್ವತಿಯಲ್ಲಿ ತಂಸುವು ಜನಿಸಿದನು. ತಂಸುವು ಕಾಲಿಂದಿಯಲ್ಲಿ ಇಲಿನನೆನ್ನುವ ಪುತ್ರನನ್ನು ಪಡೆದನು. ಇಲಿನನು ರಥಂತರಿಯಲ್ಲಿ ದುಃಷಂತನೇ ಮೊದಲಾದ ಐವರು ಪುತ್ರರನ್ನು ಪಡೆದನು. ದುಃಷಂತನು ವಿಶ್ವಾಮಿತ್ರನ ಮಗಳು ಶಕುಂತಲೆಯನ್ನು ವಿವಾಹವಾದನು. ಅವರಲ್ಲಿ ಭರತನು ಹುಟ್ಟಿದನು. ಭರತನು ಕಾಶಿಯ ಸಾರ್ವಸೇನನ ಮಗಳು ಸುನಂದಳನ್ನು ವಿವಾಹವಾದನು. ಅವಳಲ್ಲಿ ಭುಮನ್ಯುವು ಜನಿಸಿದನು. ಭುಮನ್ಯುವು ದಾಶಾರ್ಹರ ಜಯಾ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ಸುಹೋತ್ರನು ಜನಿಸಿದನು. ಸುಹೋತ್ರನು ಇಕ್ಷ್ವಾಕುವಂಶದ ಸುವರ್ಣಾ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಹಸ್ತಿಯು ಜನಿಸಿದನು. ಅವನೇ ಈ ಹಸ್ತಿನಾಪುರವನ್ನು ಕಟ್ಟಿದನು. ಹಸ್ತಿಯು ತ್ರಿಗರ್ತೀ ಯಶೋಧರೆಯನ್ನು ವಿವಾಹವಾದನು. ಅವಳಲ್ಲಿ ವಿಕುಂಠನನು ಜನಿಸಿದನು. ವಿಕುಂಠನನು ದಾಶಾರ್ಹಿ ಸುದೇವಳನ್ನು ಮದುವೆಯಾದನು. ಅವಳಲ್ಲಿ ಅಜಮೀಢನು ಜನಿಸಿದನು. ಅಜಮೀಢನು ೨೪ ಸಾವಿರ ಪುತ್ರರನ್ನು ಕೈಕೇಯಿ, ನಾಗ, ಗಂಧರ್ವಿ, ವಿಮಲಾ ಮತ್ತು ಋಕ್ಷರಿಂದ ಪಡೆದನು. ಅವರಲ್ಲಿ ಪ್ರತಿಯೊಬ್ಬರೂ ರಾಜರಾದರು. ಅವರಲ್ಲಿ ಸಂವರಣನು ವಂಶವನ್ನು ಮುಂದುವರೆಸಿದನು.

ಸಂವರಣನು ವಿವಸ್ವತನ ಮಗಳು ತಪತಿಯನ್ನು ವಿವಾಹವಾದನು. ಅವಳಲ್ಲಿ ಕುರುವು ಜನಿಸಿದನು. ಕುರುವು ದಾಶಾರ್ಹಿ ಶುಭಾಂಗಿಯನ್ನು ಮದುವೆಯಾದನು. ಅವಳಲ್ಲಿ ವಿದುರಥನನ್ನು ಪಡೆದನು. ವಿದುರಥನು ಮಾಧವಿ ಸಂಪ್ರಿಯಳನ್ನು ಮದುವೆಯಾಗಿ ಅವಳಲ್ಲಿ ಅರುಗ್ವತನನ್ನು ಪಡೆದನು. ಅರುಗ್ವತನು ಮಗಧ ದೇಶದ ಅಮೃತಾಳನ್ನು ವಿವಾಹವಾದನು. ಅವಳಲ್ಲಿ ಭೀಮಸೇನನು ಜನಿಸಿದನು. ಭೀಮಸೇನನು ಕೇಕಯದ ಸುಕುಮಾರಿಯನ್ನು ಮದುವೆಯಾಗಿ ಅವಳಲ್ಲಿ ಪರ್ಯಶ್ರವಸನನ್ನು ಪಡೆದನು. ಅವನನ್ನು ಪ್ರತೀಪ ಎಂದೂ ಕರೆಯುತ್ತಾರೆ. ಪ್ರತೀಪನು ಶಿಬಿ ದೇಶದ ಸುನಂದಳನ್ನು ವಿವಾಹವಾದನು. ಅವಳಲ್ಲಿ ದೇವಾಪಿ, ಶಂತನು ಮತ್ತು ಬಾಹ್ಲೀಕರನ್ನು ಪಡೆದನು. ದೇವಾಪಿಯು ಬಾಲ್ಯದಲ್ಲಿಯೇ ಅರಣ್ಯವನ್ನು ಸೇರಿದನು. ಶಂತನುವು ರಾಜನಾದನು. ಇದಕ್ಕೆ ಒಂದು ಶ್ಲೋಕವಿದೆ:

ಅವನು ತನ್ನ ಕೈಯಿಂದ ಮುಟ್ಟಿದ ಪ್ರತಿಯೊಬ್ಬ ವೃದ್ಧನೂ ಸುಖವನ್ನು ಅನುಭವಿಸಿದನು ಮತ್ತು ಪುನಃ ಯುವಕನಾದನು. ಆದುದರಿಂದ ಅವನನ್ನು ಶಂತನು ಎಂದು ಕರೆದರು.

ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ ಸತ್ಯವತಿಯನ್ನು ಕರೆತಂದು ಅವನಿಗೆ ಮದುವೆಮಾಡಿಸಿದನು. ಅವಳನ್ನು ಗಂಧಕಾಲೀ ಎಂದೂ ಕರೆಯುತ್ತಿದ್ದರು. ಅವಳು ಕನ್ಯೆಯಾಗಿರುವಾಗಲೇ ಪರಾಶರನಿಂದ ದ್ವೈಪಾಯನನಿಗೆ ಜನ್ಮವಿತ್ತಿದ್ದಳು. ಅವಳು ಶಂತನುವಿನಿಂದ ಈರ್ವರು ಪುತ್ರರನ್ನು ಪಡೆದಳು: ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಅವರಲ್ಲಿ ಚಿತ್ರಾಂಗದನು ಯೌವನ ಪ್ರಾಪ್ತಿಯಾಗುವುದರೊಳಗೇ ಗಂಧರ್ವನೋರ್ವನಿಂದ ಹತನಾದನು. ನಂತರ ವಿಚಿತ್ರವೀರ್ಯನು ರಾಜನಾದನು. ವಿಚಿತ್ರವೀರ್ಯನು ಕಾಶಿರಾಜ ಮತ್ತು ಅವನ ಪತ್ನಿ ಕೌಶಲ್ಯಳ ಪುತ್ರಿಯರೀರ್ವರನ್ನು ವಿವಾಹವಾದನು: ಅಂಬಿಕಾ ಮತ್ತು ಅಂಬಾಲಿಕಾ. ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡನು. ದೌಃಷಂತನ ಈ ವಂಶಾವಳಿಯು ನಿಂತುಹೋಗುತ್ತದೆಯೋ ಎಂದು ಸತ್ಯವತಿಯು ಚಿಂತಿಸತೊಡಗಿದಳು. ಅವಳು ಋಷಿ ದ್ವೈಪಾಯನನನ್ನು ನೆನಪಿಸಿಕೊಂಡಳು. ಅವನು ಅವಳ ಎದುರು ಬಂದು “ಏನು ಮಾಡಲಿ?” ಎಂದನು. “ನಿನ್ನ ತಮ್ಮ ವಿಚಿತ್ರವೀರ್ಯನು ಮಕ್ಕಳಿಲ್ಲದೆಯೇ ತೀರಿಕೊಂಡಿದ್ದಾನೆ. ಅವನ ಪತ್ನಿಯರಲ್ಲಿ ಅವನ ಮಕ್ಕಳ ತಂದೆಯಾಗು!”. “ಹಾಗೆಯೇ ಆಗಲಿ!” ಎಂದು ಅವನು ಮೂವರು ಮಕ್ಕಳ ತಂದೆಯಾದನು: ಧೃತರಾಷ್ಟ್ರ, ಪಾಂಡು ಮತ್ತು ವಿದುರ.

ಅವರಲ್ಲಿ ಧೃತರಾಷ್ಟ್ರನು ದ್ವೈಪಾಯನನ ವರದಾನದಿಂದ ಗಾಂಧಾರಿಯಲ್ಲಿ ನೂರು ಪುತ್ರರನ್ನು ಪಡೆದನು. ಧೃತರಾಷ್ಟ್ರನ ಆ ಪುತ್ರರಲ್ಲಿ ನಾಲ್ವರು ಪ್ರಧಾನರಾಗಿದ್ದರು: ದುರ್ಯೋಧನ, ದುಃಶಾಶನ, ವಿಕರ್ಣ ಮತ್ತು ಚಿತ್ರಸೇನ. ಪಾಡುವಿಗೆ ಇಬ್ಬರು ಪತ್ರಿಯರಿದ್ದರು: ಸ್ತ್ರೀ ರತ್ನರಾದ ಕುಂತೀ ಮತ್ತು ಮಾದ್ರೀ. ಒಮ್ಮೆ ಪಾಂಡುವು ಮೃಗಬೇಟೆಗೆಂದು ಹೋದಾಗ ಅಲ್ಲಿ ಜಿಂಕೆಗಳ ರೂಪದಲ್ಲಿ ಸಂಭೋಗಮಾಡುತ್ತಿದ್ದ ಋಷಿಯರನ್ನು ಕಂಡನು. ಗಂಡು ಜಿಂಕೆಯು ಹೆಣ್ಣು ಜಿಂಕೆಯ ಮೇಲೆ ಹಾರಿ ತನ್ನ ಕಾಮ ಸುಖವನ್ನು ತೀರಿಸಿಕೊಳ್ಳುತ್ತಿರುವಾಗಲೇ ಅವನು ಬಾಣವನ್ನು ಬಿಟ್ಟನು. ಬಾಣದಿಂದ ಗಾಯಗೊಂಡ ಅವನು ಪಾಂಡುವಿಗೆ ಹೇಳಿದನು: ಧರ್ಮದಲ್ಲಿ ನಡೆಯುತ್ತಿದ್ದ ಕಾಮರಸವನ್ನು ಅರಿತಿದ್ದವನಾದ ನೀನು ನಾನು ಕಾಮರಸವನ್ನು ಹೊಂದಿ ತೃಪ್ತನಾಗುವುದರೊಳಗೇ ನನ್ನನ್ನು ಹೊಡೆದ ಕಾರಣ ನೀನು ಕೂಡ ನನ್ನ ಪರಿಸ್ಠಿತಿಯಲ್ಲಿರುವಾಗ ತಕ್ಷಣವೇ ಕಾಮರಸವನ್ನು ಹೊಂದುವುದರೊಳಗೇ ಪಂಚಭೂತಗಳ ವಶನಾಗುತ್ತೀಯೆ! ವಿವರ್ಣರೂಪಿ ಪಾಂಡುವು ಶಾಪ ಪರಿಹಾರಾರ್ಥವಾಗಿ ತನ್ನ ಪತ್ನಿಯರನ್ನು ಕೂಡಲಿಲ್ಲ. ಅವನು ಹೇಳಿದನು: ನನ್ನ ಚಾಪಲ್ಯದಿಂದಲೇ ಇದನ್ನು ಪಡೆದಿದ್ದೇನೆ. ಮತ್ತು ಮಕ್ಕಳಿಲ್ಲದವನಿಗೆ ಯಾವ ಲೋಕವೂ ದೊರೆಯುವುದಿಲ್ಲ ಎಂದು ಕೇಳಿದ್ದೇನೆ. ನನಗೋಸ್ಕರ ಮಕ್ಕಳನ್ನು ಪಡೆ!ಎಂದು ಅವನು ಕುಂತಿಗೆ ಹೇಳಿದನು. ಆಗ ಅವಳು ಅಲ್ಲಿ ಪುತ್ರರನ್ನು ಪಡೆದಳು: ಧರ್ಮನಿಂದ ಯುಧಿಷ್ಠಿರ, ವಾಯುವಿನಿಂದ ಭೀಮಸೇನ, ಮತ್ತು ಶಕ್ರನಿಂದ ಅರ್ಜುನ. ಸಂತೋಷಗೊಂಡ ಪಾಂಡುವು ಹೇಳಿದನು: ನಿನ್ನ ಸಪತ್ನಿಗೆ ಮಕ್ಕಳಿಲ್ಲ. ಆ ಸಾಧ್ವಿಯಲ್ಲಿಯೂ ಮಕ್ಕಳಾಗಲಿ! ಹಾಗೆಯೇ ಆಗಲಿ! ಎಂದು ಕುಂತಿಯು ಹೇಳಿದಳು. ನಂತರ ಮಾದ್ರಿಯಲ್ಲಿ ಅಶ್ವಿನಿಯರಿಂದ ನಕುಲ ಸಹದೇವರು ಹುಟ್ಟಿದರು.

ಒಳ್ಳೆ ಅಲಂಕೃತಳಾದ ಮಾದ್ರಿಯನ್ನು ನೋಡಿದ ಪಾಂಡುವು ಭಾವುಕನಾಗಿ ಅವಳನ್ನು ಮುಟ್ಟುತ್ತಿದ್ದಂತೆಯೇ ವಿದೇಹತ್ವವನ್ನು ಹೊಂದಿದನು. ಮಾದ್ರಿಯು ಅವನ ಚಿತೆಯನ್ನೇರಿದಳು. ಅವಳು ಕುಂತಿಗೆ ಹೇಳಿದಳು: ಆರ್ಯೆಯಾದ ನೀನು ಈ ಅವಳಿ ಮಕ್ಕಳನ್ನು ಸರಿಯಾದ ನೋಡಿಕೋ! ನಂತರ ತಾಪಸಿಗಳು ಕುಂತಿಯ ಸಹಿತ ಪಂಚಪಾಂಡವರನ್ನು ಹಸ್ತಿನಾಪುರಕ್ಕೆ ಕರೆತಂದು ಭೀಷ್ಮ ಮತ್ತು ವಿದುರರಿಗೆ ಒಪ್ಪಿಸಿದರು. ಅವರು ಅರಗಿನಮನೆಯಲ್ಲಿ ಸುಟ್ಟು ಹೋಗುತ್ತಾರೆಂದಿದ್ದಾಗ ವಿದುರನ ಸೂಚನೆಯಿಂದ ಹಾಗೆ ಆಗಲಿಲ್ಲ. ನಂತರ ಹಿಡಿಂಬನನ್ನು ಸಂಹರಿಸಿ ಏಕಚಕ್ರಕ್ಕೆ ಹೋದರು. ಏಕಚಕ್ರದಲ್ಲಿ ಬಕ ಎನ್ನುವ ರಾಕ್ಷಸನನ್ನು ಕೊಂದು ಅಲ್ಲಿಂದ ಪಾಂಚಾಲನಗರಿಗೆ ಬಂದರು. ಅಲ್ಲಿ ದ್ರೌಪದಿಯನ್ನು ಭಾರ್ಯೆಯನ್ನಾಗಿ ಗೆದ್ದು ಕುಶಲರಾಗಿ ತಮ್ಮ ನಗರಿಗೆ ಹಿಂದಿರುಗಿದರು. ಅವಳಲ್ಲಿ ಪುತ್ರರಾದರು: ಯುಧಿಷ್ಠಿರನಿಂದ ಪ್ರತಿವಿಂಧ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶೃತಕೀರ್ತಿ, ನಕುಲನಿಂದ ಶತಾನೀಕ, ಮತ್ತು ಸಹದೇವನಿಂದ ಶೃತಕರ್ಮ.

ಯುಧಿಷ್ಠಿರನು ಶೈಬ್ಯ ಗೋವಾಸನನ ದೇವಕಿ ಎಂಬ ಹೆಸರಿನ ಕನ್ಯೆಯನ್ನು ಸ್ವಯಂವರದಲ್ಲಿ ಗೆದ್ದನು. ಅವಳಲ್ಲಿ ಯೌಧೇಯ ಎಂಬ ಹೆಸರಿನ ಪುತ್ರನನ್ನು ಪಡೆದನು. ಭೀಮಸೇನನು ಕಾಶಿಯ ಬಲಧರಾ ಎಂಬ ಹೆಸರಿನವಳನ್ನು ವೀರ್ಯಶುಲ್ಕವಾಗಿ ಪಡೆದು ಮದುವೆಯಾದನು. ಅವಳಲ್ಲಿ ಸರ್ವಗ ಎಂಬ ಹೆಸರಿನ ಪುತ್ರನನ್ನು ಪಡೆದನು. ಅರ್ಜುನನು ದ್ವಾರವತಿಗೆ ಹೋಗಿ ವಾಸುದೇವನ ಭಗಿನಿ ಸುಭದ್ರೆಯನ್ನು ವಿವಾಹವಾದನು. ಅವಳಲ್ಲಿ ಅಭಿಮನ್ಯು ಎನ್ನುವ ಪುತ್ರನನ್ನು ಪಡೆದನು. ನಕುಲನು ಚೈದ್ಯದೇಶದ ಕರೇಣುವತಿ ಎನ್ನುವವಳನ್ನು ಮದುವೆಯಾದನು. ಅವಳಲ್ಲಿ ನಿರಮಿತ್ರ ಎನ್ನುವ ಮಗನನ್ನು ಪಡೆದನು. ಸಹದೇವನು ಮಾದ್ರಿ ವಿಜಯಳನ್ನು ಸ್ವಯಂವರದಲ್ಲಿ ಗೆದ್ದು ಮದುವೆಯಾದನು. ಅವಳಲ್ಲಿ ಸುಹೋತ್ರ ಎನ್ನುವ ಪುತ್ರನನ್ನು ಪಡೆದನು. ಭೀಮಸೇನನು ಮೊದಲೇ ರಾಕ್ಷಸಿ ಹಿಡಿಂಬಿಯಲ್ಲಿ ಘಟೋತ್ಕಚ ಎಂಬ ಪುತ್ರನ್ನನ್ನು ಪಡೆದಿದ್ದನು. ಇವರೆಲ್ಲರೂ ಪಾಂಡವರ ಹನ್ನೊಂದು ಪುತ್ರರು.

ಅಭಿಮನ್ಯುವು ವಿರಾಟನ ಮಗಳು ಉತ್ತರೆಯನ್ನು ವಿವಾಹವಾದನು. ಅವಳಲ್ಲಿ ಅವನು ಸತ್ತಿದ್ದ ಮಗನನ್ನು ಪಡೆದನು. ಪುರುಷೋತ್ತಮ ವಾಸುದೇವನು

“ಈ ಆರುತಿಂಗಳ ಗರ್ಭವನ್ನು ನಾನು ಬದುಕಿಸುತ್ತೇನೆ ಪೃಥಾಳು ಅವನನ್ನು ತನ್ನ ಬಾಹುಗಳಲ್ಲಿ ತೆಗೆದುಕೊಳ್ಳಲಿ!”

ಎಂದು ಹೇಳಿದನು. ಅವನನ್ನು ಬದುಕಿಸಿ ಹೇಳಿದನು:

“ಪರಿಕ್ಷೀಣವಾಗುತ್ತಿದ್ದ ಕುಲದಲ್ಲಿ ಹುಟ್ಟಿದುದರಿಂದ ಇವನು ಪರಿಕ್ಷಿತನೆಂದಾಗಲಿ!”

ಎಂದನು. ಪರಿಕ್ಷಿತನು ಮಾದ್ರವತಿ ಎನ್ನುವವಳನ್ನು ವಿವಾಹವಾದನು. ಅವಳಲ್ಲಿ ಜನಮೇಜಯನನ್ನು ಪಡೆದನು. ಜನಮೇಜಯನಿಗೆ ವಪುಷ್ಟಮೆಯಲ್ಲಿ ಈರ್ವರು ಪುತ್ರರು ಜನಿಸಿದರು: ಶತಾನೀಕ ಮತ್ತು ಶಂಕು. ಶತಾನೀಕನು ವೈದೇಹಿಯನ್ನು ಮದುವೆಯಾದನು. ಅವಳಲ್ಲಿ ಪುತ್ರ ಅಶ್ವಮೇಧದತ್ತನು ಜನಿಸಿದನು. ಈ ರೀತಿ ಪುರುವಂಶ ಮತ್ತು ಪಾಂಡವ ವಂಶಗಳ ಕೀರ್ತನೆಯಿದೆ. ಈ ಪುರುವಂಶಾವಳಿಯನ್ನು ಕೇಳಿದವರು ಸರ್ವಪಾಪಗಳಿಂದಲೂ ವಿಮುಕ್ತರಾಗುತ್ತಾರೆ.

One Comment

  1. ಬಾ.ಹ.ಉಪೇಂದ್ರ

    ಇಕ್ಷ್ವಾಕುವಿನ ತೃತೀಯ ಸುತನ ಹೆಸರೇನು? ಅವನ ಮೊಮ್ಮಗನ ಹೆಸರೇನು? ಅವನನ್ನು ಕೊಂದವರು ಯಾರು?
    ವಿವಸ್ವತ ಸುತನ ಸುತನ ಸತಿಯತ್ತೆಯ ಅತ್ತಿಗೆಯ ಮಗನ ಸೋದರತ್ತೆಯ ಸವತಿಯ ಪತಿಯ ತೃತಿಯ ಸುತನ ಸುತನ ಸತಿಯ ಸುತನನ್ನು ಕೊಂದವರು ಯಾರು ?

Leave a Reply

Your email address will not be published. Required fields are marked *