Image result for flowers against white backgroundಅಂಶಾವತರಣ

ಹಿಂದೆ ಜಾಮದಗ್ನಿಯು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಪರ್ವತೋತ್ತಮ ಮಹೇಂದ್ರದ ಮೇಲೆ ತಪಸ್ಸು ಮಾಡುತ್ತಿದ್ದನು. ಭಾರ್ಗವನಿಂದ ಲೋಕಗಳಲ್ಲಿ ಕ್ಷತ್ರಿಯರೇ ಇಲ್ಲದಂತಾದಾಗ ಕ್ಷಾತ್ರಿಣಿಯರು ಬ್ರಾಹ್ಮಣರಲ್ಲಿ ಗರ್ಭವನ್ನು ಬೇಡಿದರು. ಆಗ ಸಂಶಿತವ್ರತ ಬ್ರಾಹ್ಮಣರು ಋತುಮತಿಯರಾಗಿದ್ದಾಗ ಮಾತ್ರ ಸಂಭೋಗ ಮಾಡಿದರು. ಕಾಮಕ್ಕಾಗಿ ಎಂದೂ ಕೂಡಲಿಲ್ಲ. ಈ ರೀತಿಯ ಸಂಬಂಧದಿಂದ ಕ್ಷಾತ್ರಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಗರ್ಭಧರಿಸಿದರು ಮತ್ತು ಕ್ಷತ್ರಿಯ ವೀರಸಮನ್ವಿತ ಕುಮಾರ ಕುಮಾರಿಯರಿಗೆ ಜನ್ಮವಿತ್ತು ಪುನಃ ಕ್ಷತ್ರಿಯರ ಅಭಿವೃದ್ದಿಯಾಯಿತು. ಈ ರೀತಿ ಸುತಪಸ್ವಿ ಬ್ರಾಹ್ಮಣರು ಮತ್ತು ಕ್ಷಾತ್ರಿಣಿಯರಿಂದ ಕ್ಷತ್ರಿಯಕುಲವು ವೃದ್ಧಿಯಾಯಿತು. ಹೊಸ ಪೀಳಿಗೆಯು ಧರ್ಮ, ಸುದೀರ್ಘಾಯಸ್ಸುಗಳನ್ನು ಹೊಂದಿದ್ದು ಬ್ರಾಹ್ಮಣರೇ ಮೊದಲಾದ ನಾಲ್ಕು ವರ್ಣಗಳ ಪುನಃಸ್ಥಾಪನೆಯಾಯಿತು. ನಾರಿಯರು ಋತುಮತಿಯರಾಗಿದ್ದಾಗ ಮಾತ್ರ ಹೋಗುತ್ತಿದ್ದರೇ ಹೊರತು ಋತುಮತಿಯಾಗಿರದಿದ್ದಾಗ ಅಥವಾ ಕಾಮಕ್ಕೋಸ್ಕರ ಹೋಗುತ್ತಿರಲಿಲ್ಲ. ಈ ರೀತಿ ಧರ್ಮಪ್ರಕಾರ ಸಹಸ್ರಶತ ಸಂಖ್ಯೆಗಳಲ್ಲಿ ಧರ್ಮವ್ರತಪರಾಯಣ ಪೃಥ್ವೀಪಾಲರು ಜನಿಸಿದರು ಮತ್ತು ವೃದ್ಧಿಸಿದರು. ಸರ್ವ ನರರೂ ದುಃಖ ಮತ್ತು ಅನಾರೋಗ್ಯದಿಂದ ವಿಮುಕ್ತರಾಗಿದ್ದರು. ಗಜೇಂದ್ರನ ನಡೆಯ ಸಾಗರಗಳನ್ನು ಗಡಿಯಾಗಿ ಹೊಂದಿದ ಪೃಥ್ವಿಯು ಮತ್ತೊಮ್ಮೆ ಗಿರಿವನಕಾನನಗಳ ಸಮೇತ ಎದ್ದುನಿಂತಂತೆ ಆಯಿತು. ಪುನಃ ಕ್ಷತ್ರಿಯರಿಂದ ಧರ್ಮಪೂರ್ವಕವಾಗಿ ಆಳಲ್ಪಟ್ಟ ವಸುಂಧರೆಯಲ್ಲಿ ಬ್ರಾಹ್ಮಣರೇ ಮೊದಲಾದ ಅನ್ಯ ವರ್ಣದವರೂ ಉತ್ತಮ ಸಂತೋಷವನ್ನು ಹೊಂದಿದ್ದರು. ನರಾಧಿಪರೆಲ್ಲರೂ ಕಾಮ-ಕ್ರೋಧಗಳಿಂದ ಉಂಟಾಗಬಹುದಾದ ದೋಷಗಳನ್ನೆಲ್ಲ ತೊರೆದು, ದಂಡಿಸಬೇಕಾದವರಿಗೆ ದಂಡಿಸುತ್ತಾ ಧರ್ಮದಿಂದ ಭೂಮಿಯನ್ನು ಪಾಲಿಸಿದರು. ಈ ರೀತಿ ಕ್ಷತ್ರಿಯರೆಲ್ಲರೂ ಧರ್ಮಪರರಾಗಿರುವಾಗ ಸಹಸ್ರಾಕ್ಷ ಶತಕ್ರತುವು ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸಿ ದೇಶದ ಪ್ರಜೆಗಳನ್ನೆಲ್ಲಾ ಸುಖದಿಂದ ಇರಿಸುತ್ತಿದ್ದನು. ಯಾವ ಬಾಲಕನೂ ಮರಣಹೊಂದುತ್ತಿರಲಿಲ್ಲ, ಮತ್ತು ಯೌವನ ಪ್ರಾಪ್ತವಾಗದೇ ಯಾವ ಸ್ತ್ರೀಯೂ ಮಗುವಿನ ತಾಯಿಯಾಗುತ್ತಿರಲಿಲ್ಲ. ಈ ರೀತಿ ಸಾಗರಪರ್ಯಂತವೂ ಈ ಮೇದಿನಿಯು ದೀರ್ಘಾಯುಷಿ ಪ್ರಜೆಗಳಿಂದ ತುಂಬಿತ್ತು. ಕ್ಷತ್ರಿಯರು ಬಹುದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನಡೆಸಿದರು ಮತ್ತು ವಿಪ್ರರು ಉಪನಿಷತ್ ಮೊದಲಾದ ಅಂಗಗಳನ್ನೊಡಗೂಡಿದ ವೇದಗಳನ್ನು ಅಭ್ಯಾಸ ಮಾಡಿದರು. ಆಗ ಯಾವ ಬ್ರಾಹ್ಮಣನೂ ಬ್ರಹ್ಮವಿದ್ಯೆಯನ್ನು ಮಾರಾಟಮಾಡುತ್ತಿರಲಿಲ್ಲ ಮತ್ತು ಶೂದ್ರರ ಎದುರಿನಲ್ಲಿ ವೇದೋಚ್ಚಾರ ಮಾಡುತ್ತಿರಲಿಲ್ಲ. ವೈಶ್ಯರು ಈ ಕ್ಷಿತಿಯಲ್ಲಿ ಗೋವುಗಳ ಮೂಲಕ ಕೃಷಿ ಮಾಡಿದರು. ಆದರೆ ಬಡಕಲು ಗೋವುಗಳನ್ನು ಕಟ್ಟುತ್ತಿರಲಿಲ್ಲ ಮತ್ತು ಕೃಶಗೋವುಗಳಿಗೆ ಸಾಕಷ್ಟು ಆಹಾರವನ್ನು ಕೊಡುತ್ತಿದ್ದರು. ಕರುಗಳು ತಾಯಿಯ ಹಾಲನ್ನು ಮಾತ್ರ ಕುಡಿದು ಜೀವಿಸುವವರೆಗೆ ನರರು ಹಾಲನ್ನು ಕರೆಯುತ್ತಿರಲಿಲ್ಲ. ಯಾವ ವರ್ತಕನೂ ಸುಳ್ಳು ತಕ್ಕಡಿಯನ್ನು ಬಳಸಿ ಮಾರುತ್ತಿರಲಿಲ್ಲ. ಮಾನವರು ಧರ್ಮದಮೇಲೇ ದೃಷ್ಠಿಯನ್ನಿಟ್ಟುಕೊಂಡು ಧರ್ಮಪರಾಯಣರಾಗಿ ಧರ್ಮೋಪೇತ ಕರ್ಮಗಳಲ್ಲಿ ನಿರತರಾಗಿದ್ದರು. ಸರ್ವ ವರ್ಣದವರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದರು. ಈ ರೀತಿ ಧರ್ಮವು ಎಂದೂ ಕುಂದಲಿಲ್ಲ. ಗೋವು ಮತ್ತು ನಾರಿಯರು ಸಕಾಲದಲ್ಲಿ ಜನ್ಮನೀಡುತ್ತಿದ್ದರು. ಮತ್ತು ವೃಕ್ಷಗಳು ಋತುವಿಗೆ ತಕ್ಕಂತೆ ಪುಷ್ಪ-ಫಲಗಳನ್ನು ನೀಡುತ್ತಿದ್ದವು. ಈ ರೀತಿ ಕೃತಯುಗವು ನಡೆಯುತ್ತಿರುವಾಗ ಈ ಭೂಮಿಯು ಬಹಳಷ್ಟು ಶ್ರೇಷ್ಠ ಪ್ರಾಣಿಗಳಿಂದ ತುಂಬಿಕೊಂಡಿತ್ತು.

ಮನುಷ್ಯಲೋಕವು ಸಮೃದ್ದವಾಗಿರುವಾಗ ಅಸುರರು ರಾಜ ಕ್ಷತ್ರಿಯರಲ್ಲಿ ಜನಿಸತೊಡಗಿದರು. ಆದಿತ್ಯರಿಂದ ಬಹಳಷ್ಟು ಬಾರಿ ಯುದ್ಧದಲ್ಲಿ ಸೋತು ಐಶ್ವರ್ಯ ವಂಚಿತ ದೈತ್ಯರು ಕ್ಷಿತಿಯಲ್ಲಿ ಅವತರಿಸಿದರು. ಮನಸ್ವಿ ಮನುಷ್ಯರಲ್ಲಿ ದೇವತ್ವವನ್ನು ಬಯಸಿ ಆ ಅಸುರರು ಭೂಮಿಯ ಹಲವಷ್ಟು ಜೀವಿಗಳಲ್ಲಿ - ಗೋವುಗಳಲ್ಲಿ, ಕುದುರೆಗಳಲ್ಲಿ, ಕತ್ತೆಗಳಲ್ಲಿ, ಒಂಟೆಗಳಲ್ಲಿ, ಎಮ್ಮೆಗಳಲ್ಲಿ, ಆನೆಗಳಲ್ಲಿ, ಜಿಂಕೆಗಳಲ್ಲಿ ಮತ್ತು ಅನ್ಯ ಜೀವಿಗಳಲ್ಲಿ ಜನಿಸತೊಡಗಿದರು. ಇದಾಗಲೇ ಹುಟ್ಟಿದ್ದ ಮತ್ತು ಇನ್ನೂ ಹುಟ್ಟುತ್ತಿದ್ದವರೆಲ್ಲರನ್ನೂ ಹೊತ್ತು ತನ್ನನ್ನು ತಾನು ಪೋಷಿಸಿಕೊಳ್ಳಲು ಮಹೀಧರೆಯು ಅಸಮರ್ಥಳಾದಳು. ಅವರ ಲೋಕದಿಂದ ಚ್ಯುತರಾದ ಹಲವು ದಿತಿಯ ಪುತ್ರರು ಇಲ್ಲಿ ಬಲಸಮನ್ವಿತ ಮಹೀಪಾಲರಾಗಿ ಜನಿಸಿದರು. ಆ ವೀರ್ಯವಂತರು ನಾನಾರೂಪಗಳನ್ನು ಧರಿಸಿ ಮಹಿಯಲ್ಲೆಲ್ಲಾ ತುಂಬಿಕೊಂಡರು. ಆ ಅರಿಮರ್ದನರು ಸಾಗರ ಪರ್ಯಂತ ಭೂಮಿಯಲ್ಲಿ ತುಂಬಿಕೊಂಡರು. ಅವರು ಬ್ರಾಹ್ಮಣರನ್ನು, ಕ್ಷತ್ರಿಯರನ್ನು, ವೈಶ್ಯರನ್ನು ಮತ್ತು ಶೂದ್ರರನ್ನು ಪೀಡಿಸ ತೊಡಗಿದರು ಮತ್ತು ತಮ್ಮ ಅಸುರೀ ಶಕ್ತಿಯಿಂದ ಇನ್ನೂ ಅನ್ಯ ಜೀವಿಗಳನ್ನು ಪೀಡಿಸತೊಡಗಿದರು. ಭೂತಗಣಗಳಿಗೆ ಕಷ್ಟಗಳನ್ನೀಯುತ್ತಾ, ಅವರನ್ನು ಕೊಲ್ಲುತ್ತಾ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಮಹಿಯ ಎಲ್ಲೆಲ್ಲೂ ಸಂಚರಿಸುತ್ತಿದ್ದರು. ವೀರ್ಯಮದ ಮತ್ತು ಮದಬಲದಿಂದ ಮತ್ತರಾದ ಆ ಅಬ್ರಾಹ್ಮಣರು ಆಶ್ರಮವಾಸಿ ಮಹರ್ಷಿಗಳನ್ನೂ ಕೂಡ ಕಾಡತೊಡಗಿದರು. ಈ ರೀತಿ ವೀರ್ಯಬಲಗಳನ್ನು ಹೊಂದಿದ ಮಹಾಸುರರಿಂದ ತುಳಿಯಲ್ಪಟ್ಟ ಭೂಮಿಯು ಬ್ರಹ್ಮನ ಬಳಿ ಹೊರಟಳು. ದಾನವರ ಬಲದಿಂದಾಗಿ ಮಹಿಯನ್ನು ಹೊರುತ್ತಿದ್ದ ನಾಗ ಮತ್ತು ಗಜಗಳು ಅವಳನ್ನು ಹೊರಲು ಅಸಮರ್ಥರಾಗಿ ರೋದಿಸುತ್ತಿದ್ದರು. ಆಗ ಮಹಿಯು ಭಾರದಿಂದ ಭಯಪೀಡಿತಳಾಗಿ ಸರ್ವಭೂತಪಿತಾಮಹ ದೇವನನ್ನು ಶರಣು ಹೊಕ್ಕಳು.

ದೇವದ್ವಿಜಮಹರ್ಷಿಗಳಿಂದ ಆವೃತ, ಗಂಧರ್ವ ಮತ್ತು ಅಪ್ಸರೆಯರಿಂದ ನಮಸ್ಕರಿಸಿಕೊಳ್ಳುತ್ತಿರುವ, ಲೋಕಕರ್ತಾರನೂ, ಅವ್ಯಯನೂ ಆದ ಮಹಾಭಾಗ ಬ್ರಹ್ಮದೇವನನ್ನು ಕಂಡಳು. ಶರಣಾರ್ಥಿನಿಯಾದ ಭೂಮಿಯು ಲೋಕಪಾಲಕರೆಲ್ಲರ ಸನ್ನಿಧಿಯಲ್ಲಿ ಅವನಲ್ಲಿ ವಿಜ್ಞಾಪಿಸಿಕೊಂಡಳು. ಭೂಮಿಯು ಯಾವ ಕಾರಣಕ್ಕಾಗಿ ಅಲ್ಲಿಗೆ ಬಂದಿದ್ದಾಳೆ ಎನ್ನುವುದು ಪರಮೇಷ್ಟಿ ಸ್ವಯಂಭುವಿಗೆ ಮೊದಲೇ ತಿಳಿದಿತ್ತು. ಜಗತ್ತಿನ ಸೃಷ್ಟಿಯನ್ನೇ ಮಾಡುತ್ತಿರುವ ಅವನಿಗೆ ಸುರಾಸುರರ ಮತ್ತು ಉಳಿದ ಲೋಕಗಳ ಮನೋಗತವು ಹೇಗೆ ತಾನೆ ತಿಳಿದಿರುವುದಿಲ್ಲ? ಭೂಮಿಪತಿಗಳ ವಿಭು, ಸರ್ವಭೂತಗಳ ಈಶ, ಶಂಭು, ಪ್ರಜಾಪತಿಯು ಭೂಮಿಗೆ ಹೇಳಿದನು:

“ವಸುಂಧರೆ! ನನ್ನ ಸನ್ನಿಧಿಯಲ್ಲಿ ಯಾವ ಕಾರಣಕ್ಕಾಗಿ ಬಂದಿರುವೆಯೋ ಅ ಕೆಲಸಕ್ಕೆ ಸರ್ವ ದಿವೌಕಸರನ್ನೂ ನಿಯೋಜಿಸುತ್ತೇನೆ.”

ಈ ರೀತಿ ಹೇಳಿ ದೇವನು ಮಹಿಯನ್ನು ಕಳುಹಿಸಿಕೊಟ್ಟ ನಂತರ ಸರ್ವ ದೇವತೆಗಳಿಗೆ ಈ ರೀತಿ ಆದೇಶವನ್ನಿತ್ತನು:

“ಭೂಮಿಯ ಭಾರವನ್ನು ಕಡಿಮೆಮಾಡಲೋಸುಗ ನೀವೆಲ್ಲರು ನಿಮ್ಮ ನಿಮ್ಮ ಅಂಶಗಳನ್ನು ಅಲ್ಲಿ ಅವರಿಗೆ ವಿರೋಧಿಗಳಾಗಿ ಹುಟ್ಟಿಸಿ.”

ಹಾಗೆಯೇ ಗಂಧರ್ವ ಮತ್ತು ಅಪ್ಸರೆಯರ ಎಲ್ಲ ಗಣಗಳನ್ನೂ ಕರೆದು ಭಗವಂತನು

“ನಿಮ್ಮ ನಿಮ್ಮ ಅಂಶಗಳಲ್ಲಿ ಮನುಷ್ಯರಲ್ಲಿ ಯಥೇಚ್ಚವಾಗಿ ಜನ್ಮತಾಳಿ”

ಎಂದು ಉತ್ತಮ ಮಾತುಗಳನ್ನಾಡಿದನು. ಶಕ್ರಾದಿ ಸರ್ವರೂ ಸುರಗುರುವಿನ ಈ ತತ್ವಯುತ, ಅರ್ಥಯುತ ಒಳ್ಳೆಯ ಮಾತುಗಳನ್ನು ಕೇಳಿ ಅದನ್ನು ಸ್ವೀಕರಿಸಿದರು.

ಅದರಂತೆ ತಮ್ಮ ತಮ್ಮ ಅಂಶಗಳಲ್ಲಿ ಭೂಮಿಗೆ ಹೋಗಿ ಜನಿಸುವ ನಿಶ್ವಯವನ್ನು ಕೈಗೊಂಡ ಸರ್ವರೂ ವೈಕುಂಠದಲ್ಲಿರುವ ಅಮಿತ್ರಘ್ನ ನಾರಾಯಣನಲ್ಲಿಗೆ ಹೋದರು. ಅಲ್ಲಿ ಅವರು ಚಕ್ರಗದಾಪಾಣಿ, ಪೀತವಸ್ತ್ರದಲ್ಲಿ ಅಸಿತಪ್ರಭನಾಗಿ ಶೋಭಿಸುತ್ತಿರುವ ಸುರಾರಿಘ್ನ, ತನ್ನ ವಿಶಾಲ ಎದೆಯನ್ನೇ ನೋಡುತ್ತಿದ್ದ, ಪದ್ಮನಾಭನನ್ನು ಕಂಡರು. ಪುರುಷೋತ್ತಮನಿಗೆ ಇಂದ್ರನು “ಭೂಮಿಯಲ್ಲಿ ಅವತರಿಸು” ಎನ್ನಲಾಗಿ ಹರಿಯು “ಹಾಗೆಯೇ ಆಗಲಿ” ಎಂದನು.

ಆಗ ಇಂದ್ರನು ನಾರಾಯಣನಲ್ಲಿ

"ಸುರರೊಂದಿಗೆ ಸ್ವರ್ಗದಿಂದ ಭೂಮಿಗಿಳಿದು ನಮ್ಮ ನಮ್ಮ ಅಂಶಗಳಿಂದ ಅವತರಿಸಿತೋಣ!"

ಎಂದು ಒಪ್ಪಂದ ಮಾಡಿಕೊಂಡನು. ಸ್ವಯಂ ಶಕ್ರನೇ ಸರ್ವ ದಿವೌಕಸರಿಗೆ ಆದೇಶವನ್ನಿತ್ತು ನಾರಾಯಣನ ನಿವಾಸದಿಂದ ಹಿಂದಿರುಗಿದನು. ಅಮರ ಶತ್ರುಗಳ ವಿನಾಶಕ್ಕಾಗಿ ಮತ್ತು ಸರ್ವಲೋಕಹಿತಕ್ಕಾಗಿ ದಿವೌಕಸರು ಕ್ರಮೇಣವಾಗಿ ಸ್ವರ್ಗದಿಂದ ಭೂಮಿಗಿಳಿದರು. ದಿವೌಕಸರು ಅವರಿಗಿಷ್ಟವಾದಂತೆ ಬ್ರಹ್ಮರ್ಷಿ ವಂಶಗಳಲ್ಲಿ ಮತ್ತು ರಾಜರ್ಷಿ ಕುಲಗಳಲ್ಲಿ ಜನ್ಮತಾಳಿದರು. ಅವರು ಅನೇಕ ಸಂಖ್ಯೆಗಳಲ್ಲಿ ದಾನವ, ರಾಕ್ಷಸ, ಗಂಧರ್ವ, ನಾಗ ಮತ್ತು ಇತರ ನರಭಕ್ಷಕರನ್ನು ಸಂಹರಿಸಿದರು. ದಾನವರಿಗಾಗಲೀ ರಾಕ್ಷಸರಿಗಾಗಲೀ ಗಂಧರ್ವರಿಗಾಗಲೀ ಅಥವಾ ನಾಗಗಳಿಗಾಗಲೀ ಬಲಶಾಲಿಗಳಾದ ಅವರನ್ನು ಬಾಲ್ಯದಲ್ಲಿಯೂ ಕೊಲ್ಲಲಿಕ್ಕಾಗಲಿಲ್ಲ.

ವಿಪ್ರಚಿತ್ತಿ ಎಂಬ ಖ್ಯಾತ ದಾನವರ್ಷಭನಿದ್ದನು. ಅವನು ಮನುಜರ್ಷಭ ಜರಾಸಂಧನೆಂದು ವಿಖ್ಯಾತನಾದನು. ದಿತಿಯ ಪುತ್ರ ಹಿರಣ್ಯಕಶಿಪುವು ಮನುಷ್ಯಲೋಕದಲ್ಲಿ ನರರ್ಷಭ ಶಿಶುಪಾಲನಾಗಿ ಜನಿಸಿದನು. ಸಂಹ್ಲಾದನೆಂದು ವಿಖ್ಯಾತ ಪ್ರಹ್ಲಾದನ ಅನುಜನು ಬಾಹ್ಲೀಕಪುಂಗವ ಶಲ್ಯನಾಗಿ ಜನಿಸಿದನು. ಸಹೋದರರಲ್ಲಿ ಕಿರಿಯವ ತೇಜಸ್ವಿ ಅನುಹ್ಲಾದನು ಮನುಜೇಶ್ವರ ಧೃಷ್ಟಕೇತುವೆಂದು ಖ್ಯಾತನಾದನು. ರಾಜ ಶಿಬಿ ಎಂಬ ಹೆಸರಿನಿಂದ ಕರೆಯಲ್ಪಟ್ಟ ದಿತಿಯ ಮಗನು ಭೂಮಿಯ ಮೇಲೆ ದ್ರುಮ ಎಂಬ ಪಾರ್ಥಿವನಾಗಿ ವಿಖ್ಯಾತನಾದನು. ಬಾಷ್ಕಲ ಎಂಬ ಹೆಸರಿನ ಅಸುರಸತ್ತಮನು ಭಗದತ್ತನೆಂಬ ಮನುಜೇಶ್ವರನಾಗಿ ಖ್ಯಾತಿ ಹೊಂದಿದನು. ಅಯಃಶಿರ, ಅಶ್ವಶಿರ, ವೀರ್ಯವಾನ್ ಅಯಃಶಂಕು, ಗಗನಮೂರ್ಧಾ ಮತ್ತು ಐದನೆಯವನು ವೇಗವಾನ್ ಈ ಐವರು ವೀರ್ಯವಂತ ಮಹಾಸುರರು ಕೇಕಯರಲ್ಲಿ ಮಹಾತ್ಮ ಪಾರ್ಥಿವರ್ಷಭಸತ್ತಮರಾಗಿ ಜನಿಸಿದರು. ಇನ್ನೊಬ್ಬ ಪ್ರತಾಪವಾನ್ ಕೇತುಮಾನನೆಂದು ವಿಖ್ಯಾತ ಅಸುರನು ಪೃಥ್ವಿಯಲ್ಲಿ ಅಮಿತೌಜನೆಂಬ ರಾಜನಾಗಿ ಖ್ಯಾತನಾದನು. ಶ್ರೀಮಾನ್ ಸ್ವರ್ಭಾನುವೆಂದು ವಿಖ್ಯಾತ ಮಹಾಸುರನು ಉಗ್ರಕರ್ಮಿ ಉಗ್ರಸೇನನೆಂಬ ನರಾಧಿಪನಾಗಿ ಖ್ಯಾತನಾದನು. ಅಶ್ವ ಎಂದು ವಿಖ್ಯಾತ ಶ್ರೀಮಾನ್ ಮಹಾಸುರನು ಮಹಾ ವೀರ್ಯಪರಾಕ್ರಮಿ ಅಶೋಕ ಎಂಬ ಹೆಸರಿನ ರಾಜನಾದನು. ಆ ದೈತ್ಯನ ತಮ್ಮ ರಾಜ ಅಶ್ವಪತಿಯು ಮನುಜರ್ಷಭ ಹಾರ್ದಿಕ್ಯ ರಾಜನಾದನು. ವೃಶಪರ್ವನೆಂದು ವಿಖ್ಯಾತ ಶ್ರೀಮಾನ್ ಮಹಾಸುರನು ಪೃಥ್ವಿಯಲ್ಲಿ ದೀರ್ಘಪ್ರಜ್ಞನೆಂಬ ರಾಜನಾಗಿ ಖ್ಯಾತಿಗೊಂಡನು. ವೃಷಪರ್ವನ ಅನುಜ ಅಜಕನು ಪೃಥ್ವಿಯಲ್ಲಿ ನೃಪ ಮಲ್ಲನಾಗಿ ವಿಖ್ಯಾತನಾದನು. ಅಶ್ವಗ್ರೀವನೆಂದು ಖ್ಯಾತ ಸತ್ವವಾನ್ ಮಹಾಸುರನು ಪೃಥ್ವಿಯಲ್ಲಿ ನೃಪ ರೋಚಮಾನನಾಗಿ ಖ್ಯಾತಿ ಹೊಂದಿದನು. ಮತಿವಂತನೂ ಕೀರ್ತಿವಂತನೂ ಆದ ಸೂಕ್ಷ್ಮನು ಬೃಹಂತ ಎನ್ನುವ ಪಾರ್ಥಿವನಾಗಿ ವಿಖ್ಯಾತನಾದನು. ತುಹುಂಡನೆಂದು ವಿಖ್ಯಾತ ಅಸುರೋತ್ತಮನು ನರಾಧಿಪ ಸೇನಾಬಿಂದುವೆಂದು ಖ್ಯಾತನಾದನು. ಇಸೃಪಾ ಎಂಬ ಅಧಿಕ ಬಲಶಾಲಿ ಅಸುರನು ಭೂಮಿಯಲ್ಲಿ ಅತಿವಿಕ್ರಮ ಪಾಪಜಿ ಎಂಬ ಹೆಸರಿನ ರಾಜನಾಗಿ ವಿಖ್ಯಾತನಾದನು. ಏಕಚಕ್ರ ಎಂದು ಖ್ಯಾತ ಮಹಾಸುರನು ಕ್ಷಿತಿಯಲ್ಲಿ ಪ್ರತಿವಿಂದ್ಯ ಎಂಬ ಹೆಸರಿನಲ್ಲಿ ಖ್ಯಾತನಾದನು. ದೈತ್ಯ ಚಿತ್ರಯೋಧಿ ಮಹಾಸುರ ವಿರೂಪಾಕ್ಷನು ಭೂಮಿಯಲ್ಲಿ ಪಾರ್ಥಿವ ಚಿತ್ರವರ್ಮನೆಂದು ವಿಖ್ಯಾತನಾದನು. ಅರಿಹರನೂ ವೀರನೂ ದಾನವೋತ್ತಮನೂ ಆದ ಹರನು ಮನುಜರ್ಷಭ ಸುವಾಸ್ತುವಾಗಿ ಜನಿಸಿ ವಿಖ್ಯಾತನಾದನು. ಶತ್ರುಪಕ್ಷಕ್ಷಯಂಕರನೂ ಮಹಾತೇಜಸ್ವಿಯೂ ಆದ ಅಹರನು ಭೂಮಿಯಲ್ಲಿ ಬಾಹ್ಲೀಕ ಎಂಬ ಹೆಸರಿನ ರಾಜನಾದನು. ಅಸುರೋತ್ತಮ ಚಂದ್ರವಕ್ಷಸ ನಿಚಂದ್ರನು ಮುಂಜಕೇಶನೆಂಬ ಶ್ರೀಮಾನ ಪಾರ್ಥಿವನಾಗಿ ಖ್ಯಾತಿಹೊಂದಿದ್ದನು.  ಯುದ್ಧದಲ್ಲಿ ಅಜೇಯನಾದ ನಿಕುಂಭನು ಭೂಮಿಯಲ್ಲಿ ಮಹಾಮತಿ, ಶ್ರೇಷ್ಠ ಭೂಮಿಪತಿ ದೇವಾಧಿಪನೆಂದು ಹುಟ್ಟಿ ವಿಶ್ರುತನಾದನು. ದೈತ್ಯರಲ್ಲಿ ಶರಭ ಎಂಬ ಹೆಸರಿನ ಮಹಾಸುರನು ನರರಲ್ಲಿ ಪೌರವ ಎಂಬ ಹೆಸರಿನ ರಾಜರ್ಷಿಯಾದನು.  ಅಸುರರಲ್ಲಿ ಎರಡನೆಯ ಶಲಭನು ಪ್ರಹ್ರಾದ ಎಂಬ ಹೆಸರಿನಲ್ಲಿ ಬಾಹ್ಲೀಕ ನರಾಧಿಪನಾದನು. ಲೋಕಗಳಲ್ಲಿ ದಿತಿಜಶ್ರೇಷ್ಠ ತಾರಾಧಿಪನಂತಿದ್ದ ಚಂದ್ರನು ನೃಪಸತ್ತಮ ರಾಜರ್ಷಿ ಋಷಿಕ ಎಂಬ ಹೆಸರನ್ನು ಪಡೆದನು. ಮೃತಪ ಎಂದು ವಿಖ್ಯಾತ ಅಸುರೋತ್ತಮನು ನೃಪಸತ್ತಮ ನೃಪ ಪಶ್ಚಿಮಾನೂಪಕನು. ಮಹಾಸುರರಲ್ಲಿ ಪ್ರಖ್ಯಾತ ಮಹಾತೇಜಸ್ವಿ ಗವಿಷ್ಠನು ಪೃಥ್ವಿಯಲ್ಲಿ ದ್ರುಮಸೇನನೆಂಬ ನೃಪನಾಗಿ ಖ್ಯಾತಿಹೊಂದಿದನು. ಮಹಾಸುರರಲ್ಲಿ ವಿಖ್ಯಾತ ಶ್ರಿಮಾನ್ ಮಯೂರನು ಪೃಥಿವೀಪತಿ ವಿಶ್ವ ಎಂದು ವಿಖ್ಯಾತನಾದನು. ಸುಪರ್ಣನೆಂದು ವಿಖ್ಯಾತ ಅವನ ತಮ್ಮನು ಪೃಥ್ವಿಯಲ್ಲಿ ಕಾಲಕೀರ್ತಿ ಎಂಬ ರಾಜನಾಗಿ ಖ್ಯಾತನಾದನು. ಅಸುರಪ್ರವರರಲ್ಲಿ ಚಂದ್ರಹಂತನೆಂದು ಕೀರ್ತಿತನಾದವನು ಶುನಕ ಎಂಬ ಹೆಸರಿನ ನರಾಧಿಪ ರಾಜರ್ಷಿಯಾದನು. ಚಂದ್ರವಿನಾಶನನೆಂದು ಖ್ಯಾತಿಹೊಂದಿದ್ದ ಮಹಾಸುರನು ಜಾನಕಿ ಎಂಬ ಹೆಸರಿನ ನರಾಧಿಪ ರಾಜರ್ಷಿಯಾದನು. ದಾನವರ್ಷಭನೆಂದು ಕರೆಯಲ್ಪಟ್ಟ ದೀರ್ಘಜಿಹ್ವನು ಪೃಥ್ವಿಯಲ್ಲಿ ಪೃಥ್ವೀಪತಿ ಕಾಶಿರಾಜನೆಂದು ಖ್ಯಾತನಾದನು. ಸಿಂಹಿಕೆಯಲ್ಲಿ ಹುಟ್ಟಿ ಸೂರ್ಯಚಂದ್ರರ ಮರ್ದನಮಾಡಿದ ಗ್ರಹವು ಮನುಜಾಧಿಪ ಕ್ರಾಥ ಎಂದು ವಿಖ್ಯಾತನಾದನು. ಅನಾಯುವಿನ ನಾಲ್ವರು ಮಕ್ಕಳಲ್ಲಿ ಹಿರಿಯವನಾದ ವಸುಮಿತ್ರನು ವಿಕ್ಷರನೆಂಬ ಹೆಸರಿನ ತೇಜಸ್ವಿ ನೃಪನಾದನು. ವಿಕ್ಷರ ಮಹಾಸುರನ ಎರಡನೆಯ ತಮ್ಮನು ನೃಪ ಪಾಂಸುರಾಷ್ಟ್ರಾಧಿಪನಾಗಿ ವಿಶೃತನಾದನು. ಬಲವೀರನೆಂದು ಖ್ಯಾತ ಅಸುರೋತ್ತಮನು ಪೌಂಡ್ರಮತ್ಸ್ಯಕನೆಂಬ ನರಾಧಿಪನಾದನು. ವೃತ್ರ ಎಂದು ವಿಖ್ಯಾತ ಮಹಾಸುರನು ಮಣಿಮಾನ್ ಎಂಬ ಹೆಸರಿನ ರಾಜರ್ಷಿ ನರಾಧಿಪನಾದನು. ಅವನ ತಮ್ಮ ಕ್ರೋಧಹಂತನು ಭೂಮಿಯಲ್ಲಿ ನೃಪತಿ ದಂಡನೆಂದು ಅಭಿವಿಖ್ಯಾತನಾದನು. ಕ್ರೋಧವರ್ಧನನೆನ್ನುವವನು ದಂಡಧಾರನೆಂಬ ಮನುಜೇಶ್ವರನಾಗಿ ಖ್ಯಾತನಾದನು. ಕಾಲಕಾಯನ ಎಂಟು ಪುತ್ರರು ಶಾರ್ದೂಲಸಮವಿಕ್ರಮ ನರಾಧಿಪ ರಾಜಶಾರ್ದೂಲರಾಗಿ ಜನಿಸಿದರು. ಈ ಎಂಟು ಕಾಲಕೇಯ ಮಹಾಸುರರಲ್ಲಿ ಮೊದಲನೆಯವನು ಮಗಧದ ಶ್ರೀಮಾನ್ ರಾಜ ಜಯತ್ಸೇನನಾದನು. ಅವರಲ್ಲಿ ಎರಡನೆಯವನು ಶ್ರೀಮಾನ್ ಇಂದ್ರನ ಸಮ ನರಾಧಿಪ ಅಪರಾಜಿತನಾದನು. ಮಹಾಬಾಹುವಾದ ಮೂರನೆಯ ಮಹಾಸುರನು ಭುವಿಯಲ್ಲಿ ಭೀಮಪರಾಕ್ರಮಿ ನಿಷಾದಾಧಿಪತಿಯಾಗಿ ಜನಿಸಿದನು. ಅವರಲ್ಲಿ ಇನ್ನೊಬ್ಬ ನಾಲ್ಕನೆಯವನು ಭೂಮಿಯಲ್ಲಿ ರಾಜರ್ಷಿಸತ್ತಮ ಶ್ರೇಣಿಮಾನ್ ಎಂದು ವಿಖ್ಯಾತನಾಗಿದ್ದಾನೆ. ಇವರಲ್ಲಿ ಐದನೆಯ ಮಹಾಸುರನು ಪರಂತಪ ಮಹೌಜ ಎಂದು ವಿಖ್ಯಾತನಾದನು. ಆರನೆಯ ಮತಿವಂತ ಮಹಾಸುರನು ಭೂಮಿಯಲ್ಲಿ ರಾಜರ್ಷಿಸತ್ತಮ ಅಭೀರು ಎಂದು ವಿಖ್ಯಾತನಾದನು.

ಅದೇ ಗಣದಲ್ಲಿದ್ದ ಒಬ್ಬನು ಭೂಮಿಯಲ್ಲಿ ಸಾಗರ ಪರ್ಯಂತವೂ ಪ್ರಸಿದ್ಧ ಧರ್ಮಾರ್ಥತತ್ವವನ್ನು ತಿಳಿದಿದ್ದ ನೃಪತಿ ಸಮುದ್ರಸೇನನಾದನು. ಆ ಕಾಲೇಯರಲ್ಲಿ ಎಂಟನೆಯ ಪರಂತಪ ಬೃಹನನು ಸರ್ವಭೂತಹಿತೋರತ ಧರ್ಮಾತ್ಮ ರಾಜನಾದನು. ಕ್ರೋಧವಶ ಎಂಬ ಹೆಸರಿನಿಂದ ಕರೆಯಲ್ಪಟ್ಟ ಗಣದಿಂದ ಈ ಕ್ಷಿತಿಯಲ್ಲಿ ಬಹಳಷ್ಟು ವೀರರು ನರಾಧಿಪರಾಗಿ ಜನ್ಮತಾಳಿದರು. ಅವರ ಹೆಸರುಗಳು ಇಂತಿವೆ: ನಂದಿಕ, ಕರ್ಣವೇಷ್ಟ, ಸಿದ್ಧಾರ್ಥ, ಕೀಟಕ, ಸುವೀರ, ಸುಬಾಹು, ಮಹಾವೀರ, ಬಾಹ್ಲೀಕ, ಕ್ರೋಧ, ವಿಚಿತ್ಯ, ಸುರಸ, ಭೂಮಿಪ ಶ್ರೀಮಾನ್ ನೀಲ, ಮತ್ತು ವೀರಧಾಮ. ಇನ್ನೂ ಇತರರು ಭೂಮಿಪಾಲ, ದಂತವಕ್ತ್ರ, ದುರ್ಜಯ, ನೃಪಶಾರ್ದೂಲ ರಾಜಾ ರುಕ್ಮಿ, ಆಶಾಢ, ವಾಯುವೇಗ, ಭೂರಿತೇಜ, ಏಕಲವ್ಯ, ಸುಮಿತ್ರ, ವಾಟದಾನ, ಗೋಮುಖ, ಕಾರೂಷಕ, ರಾಜ ಕ್ಷೇಮಧೂರ್ತಿ, ಶೃತಾಯು, ಉದ್ಧವ, ಬೃಹತ್ಸೇನ, ಕ್ಷೇಮ, ಉಗ್ರತೀರ್ಥ, ಕುಹರ, ಕಲಿಂಗ ನರಾಧಿಪ, ಮತಿಮಾನ್, ಈಶ್ವರನೆಂದು ಪ್ರಸಿದ್ಧನಾದ ಮನುಷ್ಯೇಂದ್ರ, ಇವರೆಲ್ಲರೂ ಕ್ರೋಧವಶ ಗಣಕ್ಕೆ ಸೇರಿದ್ದು ಭೂಮಿಯಲ್ಲಿ ಮಹಾಕೀರ್ತಿವಂತರಾದ ಮಹಾಬಲಶಾಲಿಗಳಾದ ರಾಜರಾಗಿ ಹುಟ್ಟಿದರು.

ದೇವರಾಜಸಮದ್ಯುತಿ ದೇವಕ ಎಂಬ ಹೆಸರಿನವನು ಭೂಮಿಯಲ್ಲಿ ಗಂಧರ್ವಪತಿ ಮುಖ್ಯನಾಗಿ ಜನಿಸಿದನು. ಅಯೋನಿಜ ಭರದ್ವಾಜನ ಮಗ ದ್ರೋಣನು ಮಹಾ ಕೀರ್ತಿವಂತ ದೇವರ್ಷಿ ಬೃಹಸ್ಪತಿಯ ಒಂದು ಅಂಶದಿಂದ ಉತ್ಪನ್ನನಾದನು. ಅವನು ಧನ್ವಿಗಳಲ್ಲೆಲ್ಲ ಶ್ರೇಷ್ಠನಾಗಿದ್ದು ಸರ್ವಾಸ್ತ್ರ ವಿತ್ತಮನೂ ಮಹಾಕೀರ್ತಿವಂತನೂ ಮಹಾತೇಸ್ವಿಯೂ ಆಗಿ ಇಲ್ಲಿ ಮನುಷ್ಯರಲ್ಲಿ ಜನಿಸಿದನು. ಧನುರ್ವೇದದಲ್ಲಿಯೂ ವೇದಗಳಲ್ಲಿಯೂ ಪಂಡಿತನೆಂದು ತಿಳಿಯಲ್ಪಟ್ಟಿದ್ದ ಆ ದ್ರೋಣನು ಮಹಾ ಅದ್ಭುತ ಕಾರ್ಯಗಳನ್ನೆಸಗಿ ತನ್ನ ಕುಲದ ಕೀರ್ತಿಯನ್ನು ವೃದ್ಧಿಸಿದನು. ಮಹಾದೇವ, ಅಂತಕ ಯಮ, ಕಾಮ ಮತ್ತು ಕ್ರೋಧಗಳ ಏಕತ್ವದಿಂದ ಶೂರನೂ ಪರಂತಪನು ಮಹಾವೀರ್ಯನೂ ಶತ್ರುಪಕ್ಷ ಕ್ಷಯಂಕರನೂ ಕಮಲಪತ್ರಾಕ್ಷನೂ ವೀರನೂ ಆದ ಅಶ್ವತ್ಥಾಮನು ಭೂಮಿಯಲ್ಲಿ ಜನಿಸಿದನು. ವಸಿಷ್ಠನ ಶಾಪ ಮತ್ತು ವಾಸವನ ನಿರ್ದೇಶನದಂತೆ ಅಷ್ಟ ವಸುಗಳು ಗಂಗೆಯಲ್ಲಿ ಶಂತನುವಿನ ಸುತರಾಗಿ ಜನಿಸಿದರು. ಅವರಲ್ಲಿ ಕಿರಿಯವನೇ ಕುರುಗಳಿಗೆ ಅಭಯಕಾರಕ, ಮತಿವಂತ, ವೇದವಿದು, ವಾಗ್ಮಿ, ಶತ್ರುಪಕ್ಷ ಕ್ಷಯಂಕರ ಭೀಷ್ಮ. ಆ ಸರ್ವವಿದರಲ್ಲಿ ಶ್ರೇಷ್ಠನು ಮಹಾತೇಜಸ್ವಿ, ಮಹಾತ್ಮ ಭಾರ್ಗವ ಜಮದಗ್ನಿಯ ಮಗ ರಾಮನೊಂದಿಗೆ ಯುದ್ಧಗೈದನು.

ಕ್ಷಿತಿಯಲ್ಲಿ ಹುಟ್ಟಿದ ಅತಿಪೌರುಷನಾದ ಕೃಪ ಎಂಬ ಹೆಸರಿನ ಬ್ರಹ್ಮರ್ಷಿಯು ರುದ್ರರ ಗಣಗಳಿಂದ ಹುಟ್ಟಿದನು. ಲೋಕದಲ್ಲಿ ಮಹಾರಥಿ ಶಕುನಿ ಎಂಬ ಹೆಸರಿನ ಯಾವ ರಾಜನಿದ್ದನೋ ಅವನು ಅರಿಮರ್ದನಾದ ದ್ವಾಪರನಿಂದ ಸಂಭವಿಸಿದನು. ವೃಷ್ಣಿಕುಲೋದ್ವಹ, ಸತ್ಯಸಂಧ ಅರಿಮರ್ದನ ಸಾತ್ಯಕಿಯು ದೇವತೆಗಳಾದ ಮರುತರ ಅಂಶದಿಂದ ಹುಟ್ಟಿದನು. ಈ ಮನುಷ್ಯ ಲೋಕದಲ್ಲಿ ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಜರ್ಷಿ ದ್ರುಪದನೂ ಕೂಡ ಅದೇ ಗಣಗಳ ಅಂಶದಿಂದ ಸಂಭವಿಸಿದನು. ಅಪ್ರತಿಮ ಕರ್ಮಣಿ, ಕ್ಷತ್ರಿಯರ್ಷಭ, ಸತ್ತಮ, ಜನಾಧಿಪ ಕೃತವರ್ಮನೂ ಮತ್ತು ಅರಿಮರ್ದನ, ಪರರಾಷ್ಟ್ರಪ್ರತಾಪಿ, ವಿರಾಟನೆಂಬ ಹೆಸರಿನ ರಾಜರ್ಷಿಯೂ ಆ ಮರುತ ಗಣಗಳಿಂದಲೇ ಸಂಭವಿಸಿದರು. ಹಂಸನೆಂದು ವಿಖ್ಯಾತ ಗಂಧರ್ವಪತಿ ಅರಿಷ್ಟನ ಪುತ್ರನು ಕೃಷ್ಣದ್ವೈಪಾಯನನಿಂದ ಧೃತರಾಷ್ಟ್ರನೆಂದು ಖ್ಯಾತ ಕುರುವಂಶ ವಿವರ್ಧನನಾಗಿ ಜನಿಸಿದನು. ತಾಯಿಯ ದೋಷ ಮತ್ತು ಋಷಿಯ ಕೋಪದಿಂದ ಆ ದೀರ್ಘಬಾಹು ಮಹಾತೇಜಸ್ವಿ ಪ್ರಜ್ಞಾಚಕ್ಷು ನರಾಧಿಪನು ಕುರುಡನಾಗಿ ಹುಟ್ಟಿದನು. ಈ ಲೋಕದಲ್ಲಿ ಹುಟ್ಟಿದ ಬದ್ಧಿವಂತರಲ್ಲೆಲ್ಲಾ ಶ್ರೇಷ್ಠ ವಿದುರನು ಪುತ್ರವಂತರಲ್ಲೆಲ್ಲಾ ಶ್ರೇಷ್ಠ ಅತ್ರಿಯ ಸುಮಹಾಭಾಗ ಪುತ್ರನು. ದುರ್ಬುದ್ಧಿಯೂ ದುರ್ಮತಿಯೂ, ಕುರುಗಳನ್ನು ಅಪಕೀರ್ತಿಗೊಳಿಸಿದ ನೃಪ ದುರ್ಯೋಧನನು ಭುವಿಯಲ್ಲಿ ಕಲಿಯ ಅಂಶದಿಂದ ಜನಿಸಿದನು. ಜಗತ್ತಿನ ಸರ್ವಸ್ವವನ್ನು ನಾಶಪಡಿಸಿದ ಆ ಕಲಿಪುರುಷ ಪುರುಷಾಧಮನು ಪೃಥ್ವಿಯ ಸರ್ವವನ್ನೂ ಸಂಹರಿಸಿದನು. ಅವನಿಂದ ಕಿಚ್ಚೆಬ್ಬಿಸಿದ ವೈರದ ಮಹಾ ಬೆಂಕಿಯು ಸರ್ವ ಭೂತಗಳ ಅಂತ್ಯಕ್ಕೆ ಕಾರಣವಾಯಿತು. ಪುಲಸ್ತ್ಯನ ಪುತ್ರರೆಲ್ಲರೂ ಇಲ್ಲಿ ಮನುಷ್ಯರೊಡನೆ ದುಃಶಾಸನನೇ ಮೊದಲಾಗಿ ದುರ್ಮುಖ, ದುಃಸಹ ಮತ್ತು ಇಲ್ಲಿ ಹೆಸರಿಸದೇ ಇದ್ದ ಅವನ ಇತರ ನೂರು ಸಹೋದರರಾಗಿ ಜನಿಸಿದರು. ಎಲ್ಲರೂ ಕ್ರೂರಕರ್ಮಿಗಳಾಗಿದ್ದು ದುರ್ಯೋಧನನ ಸಹಾಯಕ್ಕೆಂದು ಜನಿಸಿದ್ದ ಪೌಲಸ್ತ್ಯರು.

ರಾಜ ಯುಧಿಷ್ಠಿರನು ಧರ್ಮ, ಭೀಮಸೇನನು ವಾಯು ಮತ್ತು ಅರ್ಜುನನು ದೇವರಾಜನ ಅಂಶಗಳೆಂದು ತಿಳಿ. ಹಾಗೆಯೇ ಭೂಮಿಯಲ್ಲಿ ರೂಪದಲ್ಲಿ ಅಪ್ರತಿಮ, ಸರ್ವಲೋಕಮನೋಹರ ನಕುಲ ಸಹದೇವರು ಅಶ್ವಿನೀ ದೇವತೆಗಳ ಅಂಶಗಳು. ಪ್ರತಾಪವಾನ್, ಸುವರ್ಚನೆಂದು ಖ್ಯಾತ ಸೋಮಪುತ್ರನು ಅರ್ಜುನನ ಬೃಹತ್ಕೀರ್ತಿವಂತ ಮಗನಾಗಿ ಜನಿಸಿದನು. ಮಹಾರಥಿ ದೃಷ್ಟಧ್ಯುಮ್ನನು ಅಗ್ನಿಯ ಅಂಶ. ಮೊದಲು ಸ್ತ್ರೀಯಾಗಿ ಹುಟ್ಟಿದ್ದ ಶಿಖಂಡಿಯು ರಾಕ್ಷಸನ ಅಂಶ. ದ್ರೌಪದಿಯ ಐವರು ಮಕ್ಕಳು ವಿಶ್ವೇದೇವ ಗಣಗಳಿಂದ. ಆಮುಕ್ತಕವಚ ಮತ್ತು ಕುಂಡಲಗಳೊಂದಿಗೆ ಜನಿಸಿದ ಮಹಾರಥಿಯು ದೇವತೆ ದಿವಾಕರನ ಅನುತ್ತಮ ಅಂಶದಿಂದ.

ನಾರಾಯಣನೆಂಬ ಹೆಸರಿನ ಯಾವ ಸನಾತನ ದೇವದೇವನಿದ್ದಾನೋ ಅವನ ಅಂಶವೇ ಮನುಷ್ಯರಲ್ಲಿ ಹುಟ್ಟಿದ ಪ್ರತಾಪಿ ವಾಸುದೇವ. ಮಹಾಬಲಿ ಬಲದೇವನು ನಾಗ ಶೇಷನ ಅಂಶ ಮತ್ತು ಮಹೌಜಸ ಪ್ರದ್ಯುಮ್ನನು ಸನತ್ಕುಮಾರ. ಈ ರೀತಿ ದಿವೌಕಸರ ಬಹಳಷ್ಟು ಅಂಶಗಳು ವಾಸುದೇವನ ಕುಲದಲ್ಲಿ ಅನ್ಯ ಕುಲವಿವರ್ಧನ ಮನುಷ್ಯೇಂದ್ರರಾಗಿ ಜನಿಸಿದರು. ವಾಸವನ ನಿಯೋಗದಂತೆ ಅಪ್ಸರಗಣಗಳ ಅಂಶಗಳೂ ಕ್ಷಿತಿಯಲ್ಲಿ ಜನ್ಮತಾಳಿದವು. ಅವರೆಲ್ಲರೂ ಹದಿನಾರು ಸಾವಿರ ದೇವಿಯರಾಗಿ ಮನುಷ್ಯಲೋಕದಲ್ಲಿ ನಾರಾಯಣನ ಪತ್ನಿಯರಾಗಿ ಜನಿಸಿದರು. ಅನಿಂದಿತಾ ಶ್ರೀಯ ಒಂದಂಶವು ಭೂಮಿಯಮೇಲೆ ಆಡಲೋಸುಗ ದ್ರುಪದನ ಕುಲದಲ್ಲಿ ಮಗಳಾಗಿ ವೇದಿಮಧ್ಯದಿಂದ ಜನಿಸಿದಳು. ಅವಳು ಸಣ್ಣವಳಾಗಿಯೂ ಇರಲಿಲ್ಲ. ದೊಡ್ಡವಳಾಗಿಯೂ ಇರಲಿಲ್ಲ. ನೀಲಿಯ ಕಮಲದ ಸುಗಂಧವನ್ನು ಹೊಂದಿದ್ದಳು. ಪದ್ಮಾಯತಾಕ್ಷಿಯಾದ, ಸುಂದರ ಕೂದಲುಗಳನ್ನು ಹೊಂದಿದ್ದ, ದುಂಡಾಗಿರುವ ಸುಂದರ ತೊಡೆಗಳನ್ನುಳ್ಳ, ವೈಡೂರ್ಯ ಮಣಿಸನ್ನಿಭಳಾದ, ಸರ್ವಲಕ್ಷಣಸಂಪನ್ನಳಾದ ಅವಳು ಐದೂ ಪುರುಷೇಂದ್ರರ ಚಿತ್ತಗಳನ್ನು ಕಡೆಯುವಂತಿದ್ದಳು. ಸಿದ್ಧಿ ಮತ್ತು ಧೃತಿ ದೇವಿಯರು ಆ ಐವರುಗಳ ತಾಯಿಯರಾದ ಕುಂತಿ ಮತ್ತು ಮಾದ್ರಿಯರಾಗಿ ಜನಿಸಿದರು. ದೇವಿ ಮತಿಯು ಸುಬಲನ ಮಗಳಾಗಿ ಜನಿಸಿದಳು. ಈ ರೀತಿ ದೇವಾಸುರರು ಮತ್ತು ಗಂಧರ್ವ ಅಪ್ಸರೆಯರು ಹಾಗೂ ರಾಕ್ಷಸರು ಅಂಶಾವತರಣವನ್ನು ತಾಳಿದರು.

ನಂತರ ಶಾಂತನವನಿಂದ ಗಂಗೆಯಲ್ಲಿ ಅಮಿತಧ್ಯುತಿ ಮಹಾವೀರ ಮಹಾಯಶಸ್ವಿ ಭೀಷ್ಮನು ವಸುವೀರ್ಯದಿಂದ ಹುಟ್ಟಿದನು.

ಹಿಂದೆ ಮಾಂಡವ್ಯ ಎಂದು ವಿಶೃತ ಬ್ರಾಹ್ಮಣನೊಬ್ಬನಿದ್ದನು. ಆ ಧೃತಿವಂತ ಸರ್ವಧರ್ಮಜ್ಞನು ಸತ್ಯ ಮತ್ತು ತಪಸ್ಸಿನಲ್ಲಿ ನಿರತನಾಗಿದ್ದನು. ಆ ಮಹಾತಪಸ್ವಿ ಮಹಾಯೋಗಿಯು ತನ್ನ ಆಶ್ರಮದ ಬಳಿಯ ಒಂದು ವೃಕ್ಷದ ಕೆಳಗೆ ಬಾಹುಗಳನ್ನು ಮೇಲೆತ್ತಿ ನಿಂತು ಮೌನವ್ರತ ತಾಳಿ ತಪಸ್ಸನ್ನು ಮಾಡುತ್ತಿದ್ದನು. ಅವನು ಬಹಳ ಕಾಲದಿಂದ ಹಾಗೆ ತಪಸ್ಸಿನಲ್ಲಿ ನಿರತನಾಗಿದ್ದನು. ಒಮ್ಮೆ ಬೆನ್ನಟ್ಟಿ ಬರುತ್ತಿದ್ದ ಬಹಳ ಸೈನಿಕರಿಂದ ಪಲಾಯನಮಾಡುತ್ತಿದ್ದ ದಸ್ಯುಗಳು ತಾವು ಕದ್ದಿದ್ದ ಸಂಪತ್ತನ್ನು ಹೊತ್ತುಕೊಂಡು ಆ ಆಶ್ರಮವನ್ನು ತಲುಪಿದರು. ಅವರು ಆ ದ್ರವ್ಯಗಳನ್ನು ಅವನ ಮನೆಯಲ್ಲಿಯೇ ಹುಗಿದಿಟ್ಟು ಸೇನೆಯು ಬರುತ್ತಿದ್ದಂತೆಯೇ ಭಯಪಟ್ಟು ಅಲ್ಲಿಂದ ಪುನಃ ಪಲಾಯನಗೈದರು. ಅವರು ಹೊರಟು ಹೋದ ತಕ್ಷಣವೇ ಕಳ್ಳರನ್ನು ಓಡಿಸಿಕೊಂಡು ಬಂದ ಸೈನಿಕರ ಬಲವು ಅಲ್ಲಿಗೆ ಬಂದು ಋಷಿಯನ್ನು ನೋಡಿತು. ಅದೇ ರೀತಿ ನಿಂತಿದ್ದ ಆ ತಪೋಧನನ್ನು ಅವರು ಪ್ರಶ್ನಿಸಿದರು:

ದ್ವಿಜಸತ್ತಮ! ದಸ್ಯುಗಳು ಯಾವ ಕಡೆ ಹೋದರು? ಬ್ರಹ್ಮನ್! ನಾವೂ ಕೂಡ ಅವರು ಹೋದ ಕಡೆ ಬೇಗ ಹೋಗುತ್ತೇವೆ.

ಆ ತಪೋಧನನು ಕಾವಲುಗಾರರೊಂದಿಗೆ ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಏನನ್ನೂ ಮಾತನಾಡಲಿಲ್ಲ. ಆಗ ಆ ರಾಜಪುರುಷರು ಅವನ ಆಶ್ರಮವನ್ನೆಲ್ಲಾ ಹುಡುಕಾಡಿ ಅಲ್ಲಿ ಅಡಗಿದ್ದ ಕಳ್ಳರನ್ನೂ ಮತ್ತು ಅವರು ಅಡಗಿಸಿಟ್ಟಿದ್ದ ದ್ರವ್ಯವನ್ನೂ ಕಂಡರು. ಆಗ ಕಾವಲುಗಾರರಲ್ಲಿ ಆ ಮುನಿಯ ಕುರಿತು ಅನುಮಾನವುಂಟಾಯಿತು. ಅವನನ್ನೂ ದಸ್ಯುಗಳನ್ನೂ ಹಿಡಿದು ರಾಜನಲ್ಲಿಗೆ ಕರೆತಂದರು. ರಾಜನು ಕಳ್ಳರೊಡನೆ ಅವನಿಗೂ “ಇವರನ್ನು ಕೊಲ್ಲಿರಿ!””ಎಂದು ತೀರ್ಮಾನವಿತ್ತನು. ಮುಗ್ಧ ಕೊಲೆಗಾರರು ಆ ಮಹಾತಪಸ್ವಿಯನ್ನು ಶೂಲಕ್ಕೇರಿಸಿದರು. ಆ ಮುನಿಯನ್ನು ಶೂಲಕ್ಕೇರಿಸಿ ಕಾವಲುಗಾರರು ಕದ್ದಿದ್ದ ಧನವನ್ನು ರಾಜನಿಗೆ ತಂದೊಪ್ಪಿಸಿದರು. ಆ ಧರ್ಮಾತ್ಮ ವಿಪ್ರರ್ಷಿಯು ನಿರಾಹಾರಿಯಾಗಿ ಆ ಶೂಲದ ಮೇಲೆ ಬಹಳ ಕಾಲದವರೆಗೆ ಇದ್ಡರೂ ಸಾಯಲಿಲ್ಲ. ತನ್ನ ಪ್ರಾಣವನ್ನು ಹಿಡಿದುಕೊಂಡೇ ಇದ್ದ ಅವನು ಇತರ ಋಷಿಗಳನ್ನು ಕರೆಯಿಸಿಕೊಂಡನು. ಶೂಲದ ಮೇಲೆಯೇ ತಪಸ್ಸನ್ನು ಮಾಡುತ್ತಿದ್ದ ಆ ಮಹಾತ್ಮನನ್ನು ನೋಡಿದ ಅವರು ಪರಮ ಸಂತಪ್ತರಾಗಿ ಹಿಂದಿರುಗಿದರು. ಅವರೆಲ್ಲರೂ ರಾತ್ರಿ ಬಾವಲಿಗಳಾಗಿ ಎಲ್ಲ ಕಡೆಯಿಂದಲೂ ಬಂದು ಯಥಾಶಕ್ತಿ ತಮ್ಮ ಬಲವನ್ನು ತೋರಿಸಿ ಆ ದ್ವಿಜೋತ್ತಮನನ್ನು ಪ್ರಶ್ನಿಸಿದರು:

ಬ್ರಾಹ್ಮಣ! ನೀನು ಯಾವ ಪಾಪವನ್ನು ಮಾಡಿದ್ದೀಯೆ ಎಂದು ಕೇಳ ಬಯಸುತ್ತೇವೆ.

ಆಗ ಆ ಮುನಿಶಾರ್ದೂಲನು ತಪೋಧನರಿಗೆ ಹೇಳಿದನು:

ನಾನು ಯಾರನ್ನು ದೋಷಿತರೆಂದು ಹೇಳಲಿ? ಇದು ನನ್ನದೇ ಅಪರಾಧ.

ಅವನು ಋಷಿಯೆಂದು ಕೇಳಿದ ರಾಜನು ಮಂತ್ರಿಗಳನ್ನೊಡಗೂಡಿ ಶೂಲದ ಮೇಲಿದ್ದ ಆ ಋಷಿಸತ್ತಮನ ಬಳಿ ಬಂದನು.

ಋಷಿಸತ್ತಮ! ನನ್ನ ಅಜ್ಞಾನ ಮತ್ತು ಮೋಹದಿಂದ ಈ ಅಪಕೃತವು ನಡೆದುಹೋಯಿತು. ನನ್ನ ಮೇಲೆ ಸಿಟ್ಟಾಗಬೇಡ. ನನ್ನನ್ನು ಅನುಗ್ರಹಿಸು.

ರಾಜನು ಹೀಗೆ ಹೇಳಿದಾಗ ಮುನಿಯು ಶಾಂತನಾದನು. ಅನುಗ್ರಹಿತ ರಾಜನು ಅವನನ್ನು ಕೆಳಕ್ಕಿಳಿಯಿಸಿದನು. ಅವನನ್ನು ಶೂಲದ ಮೇಲಿನಿಂದ ಕೆಳಗಿಳಿಸಿ ಅವನಿಂದ ಆ ಶೂಲವನ್ನು ಕೀಳಲು ಪ್ರಯತ್ನಿಸಿದಾಗ ಅದು ಬರಲೇ ಇಲ್ಲ. ಆಗ ಆ ಶೂಲವನ್ನು ಬುಡದಲ್ಲಿಯೇ ಕತ್ತರಿಸಿದನು. ಹೀಗೆ ಆ ಮುನಿಯು ತನ್ನ ಒಳಗೆ ಶೂಲವನ್ನು ಇಟ್ಟುಕೊಂಡೇ ಓಡಾಡುತ್ತಿದ್ದನು. ಮತ್ತು ತನ್ನ ತಪಸ್ಸಿನ ಮೂಲಕ ದುರ್ಲಭ ಪರ ಲೋಕವನ್ನು ಜಯಿಸಿದನು. ಅವನನ್ನು ಅಣೀಮಾಂಡವ್ಯನೆಂದು ಲೋಕಗಳಲ್ಲಿ ಕರೆಯುತ್ತಾರೆ. ಆ ಪರಮಾರ್ಥವಿದುಷಿ ವಿಪ್ರನು ಧರ್ಮಸದನವನ್ನು ಸೇರಿ ಆಸನಸ್ಥ ಪ್ರಭು ಧರ್ಮನನ್ನು ಕಂಡು ಪ್ರಶ್ನಿಸಿದನು:

ನನಗೆ ತಿಳಿಯದ ಯಾವ ದುಷ್ಕೃತ್ಯವನ್ನು ನಾನು ಮಾಡಿದ್ದೆನೆಂದು ನನಗೆ ಅಂಥಹ ಫಲವನ್ನು ಅನುಭವಿಸಬೇಕಾಯಿತು? ಶೀಘ್ರದಲ್ಲಿಯೇ ಇದಕ್ಕೆ ಉತ್ತರವನ್ನು ನೀಡಿ ನನ್ನ ತಪೋಬಲವನ್ನು ನೋಡು.

ಧರ್ಮನು ಹೇಳಿದನು:

ತಪೋಧನ! ನೀನು ಚಿಟ್ಟೆಗಳ ಬಾಲಗಳಿಗೆ ಹುಲ್ಲಿನ ಕಡ್ಡಿಗಳನ್ನು ಸುಚ್ಚಿದ್ದೆ. ಆ ಕರ್ಮಕ್ಕೆ ಈ ಫಲವು ಪ್ರಾಪ್ತಿಯಾಗಿದೆ.

ಮಾಂಡವ್ಯನು ಹೇಳಿದನು:

“ಧರ್ಮ! ಆ ಅಲ್ಪ ಅಪರಾಧಕ್ಕೆ ಇಷ್ಟೊಂದು ವಿಪುಲ ದಂಡವನ್ನಿತ್ತಿದ್ದೀಯೆ. ಆದುದರಿಂದ ನೀನು ಶೂದ್ರಯೋನಿಯಲ್ಲಿ ಮನುಷ್ಯನಾಗಿ ಜನಿಸುತ್ತೀಯೆ. ಇಂದು ನಾನು ಧರ್ಮಫಲಗಳ ಕುರಿತು ಒಂದು ನಿಯಮವನ್ನು ಹಾಕುತ್ತೇನೆ. ಹದಿನಾಲ್ಕು ವರ್ಷಗಳ ಪರ್ಯಂತ ಮಾಡಿದುದು ಪಾತಕವೆನಿಸುವುದಿಲ್ಲ. ಆದರೆ ಅದರ ನಂತರ ಮಾಡಿದುದೆಲ್ಲವೂ ದೋಷವೆಂದು ಪರಿಗಣಿಸಲ್ಪಡುತ್ತದೆ.”

ಈ ಅಪರಾಧಕಾಗಿ ಮಹಾತ್ಮನಿಂದ ಶಪಿತ ಧರ್ಮನು ವಿದುರನ ರೂಪದಲ್ಲಿ ಶೂದ್ರಯೋನಿಯಲ್ಲಿ ಜನಿಸಿದನು. ಅವನು ಧರ್ಮಾರ್ಥಗಳಲ್ಲಿ ಕುಶಲನಾಗಿದ್ದು ಲೋಭಕ್ರೋಧಗಳಿಂದ ವಿವರ್ಜಿತನಾಗಿದ್ದನು. ದೀರ್ಘದರ್ಶಿಯೂ, ಶಮಪರನೂ ಆದ ಅವನು ಕುರುಗಳ ಹಿತದಲ್ಲಿಯೇ ನಿರತನಾಗಿದ್ದನು.

ಮುನಿಸಮಾನ ಸಂಜಯನು ಗಾವಲ್ಗಣನಲ್ಲಿ ಸೂತನಾಗಿ ಜನಿಸಿದನು. ಮಹಾರಥಿ ಕರ್ಣನು ಹುಟ್ಟುವಾಗಲೇ ಸಹಜ ಕವಚ ಮತ್ತು ಮುಖವನ್ನು ಬೆಳಗಿಸುತ್ತಿದ್ದ ಹೊಳೆಯುವ ಕುಂಡಲಗಳನ್ನು ಧರಿಸಿ ಸೂರ್ಯನಿಂದ ಕನ್ಯೆ ಕುಂತಿಯಲ್ಲಿ ಜನಿಸಿದನು. ಲೋಕನಮಸ್ಕೃತ ವಿಷ್ಣುವು ಲೋಕ ಅನುಗ್ರಹಾರ್ಥವಾಗಿ ಮಹಾಯಶ ವಸುದೇವ ದೇವಕಿಯರಲ್ಲಿ ಜನಿಸಿದನು. ಆ ಅನಾದಿನಿಧನ, ದೇವ, ಕರ್ತಾ, ಜಗತ್ ಪ್ರಭು, ಅವ್ಯಕ್ತ, ಅಕ್ಷರ, ಬ್ರಹ್ಮ, ಪ್ರಧಾನ, ನಿರ್ಗುಣಾತ್ಮಕ, ಆತ್ಮ, ಅವ್ಯಯ, ಪ್ರಕೃತಿಯ ಪರಮ ಪ್ರಭಾವಿ, ಪುರುಷ, ವಿಶ್ವಕರ್ಮ, ಸತ್ವಯೋಗಿ, ಧೃವಾಕ್ಷರ, ಅನಂತ, ಅಚಲ, ದೇವ, ಹಂಸ ನಾರಾಯಣ ಪ್ರಭು, ಧಾತಾರ, ಅಜರ, ನಿತ್ಯ, ತಮಾಹು, ಪರಮವ್ಯಯ, ಪುರುಷ, ವಿಭು, ಕರ್ತ, ಸರ್ವಭೂತಪಿತಾಮಹನು ಧರ್ಮಸಂವರ್ಧನಕ್ಕಾಗಿ ಅಂಧಕ-ವೃಷ್ಣಿಗಳಲ್ಲಿ ಜನಿಸಿದನು. ನಾರಾಯಣನ ಅನುವ್ರತ ಅಸ್ತ್ರಜ್ಞರೂ, ಮಹಾವೀರ್ಯರೂ, ಸರ್ವಶಾಸ್ತ್ರವಿಶಾರದರೂ ಅಸ್ತ್ರವಿಶಾರದರೂ ಆದ ಸಾತ್ಯಕಿ-ಕೃತವರ್ಮರು ಸತ್ಯಕ ಮತ್ತು ಹೃದೀಕರಲ್ಲಿ ಜನಿಸಿದರು.

ಭರದ್ವಾಜನ ಸ್ಖಲಿತ ವೀರ್ಯವು ದ್ರೋಣಿಯಲ್ಲಿ ಬೆಳೆಯತೊಡಗಿತು. ಅದರಿಂದ ಮಹರ್ಷಿ, ಉಗ್ರತಪಸ್ವಿಯಿಂದ ದ್ರೋಣನು ಜನಿಸಿದನು. ಶರದ್ವತ ಗೌತಮನಿಂದ, ಹುಲ್ಲಿನ ರಾಶಿಯಲ್ಲಿ ಅವಳಿಗಳು ಜನಿಸಿದರು - ಅಶ್ವತ್ಥಾಮನ ಜನನಿ ಮತ್ತು ಮಹಾಬಲಿ ಕೃಪ. ಅಸ್ತ್ರಭೃತರಲ್ಲಿ ಶ್ರೇಷ್ಠ ಅಶ್ವತ್ಥಾಮನು ದ್ರೋಣನಿಂದ ಜನಿಸಿದನು. ಸಾಕ್ಷಾತ್ ಅಗ್ನಿಸಮದ್ಯುತಿ ವೀರ ವೀರ್ಯವಾನ್ ಧೃಷ್ಟಧ್ಯುಮ್ನನೂ ಕೂಡ ದ್ರೋಣವಿನಾಶಕ್ಕಾಗಿ ಧನುಸ್ಸನ್ನು ಹಿಡಿದೇ ಯಜ್ಞವು ನಡೆಯುತ್ತಿರುವಾಗ ಉರಿಯುತ್ತಿರುವ ಬೆಂಕಿಯಲ್ಲಿ ಜನಿಸಿದನು. ಅದೇ ಯಜ್ಞಕುಂಡದಲ್ಲಿ ತೇಜಸ್ವಿನಿ, ಶುಭೆ, ಉತ್ತಮ ರೂಪಿಣಿ, ತನ್ನ ರೂಪದಿಂದ ವಿಭ್ರಾಜಮಾನ ಕೃಷ್ಣೆಯೂ ಜನಿಸಿದಳು. ಪ್ರಹ್ಲಾದ ಶಿಷ್ಯರಾದ ನಗ್ನಜಿತ್ ಮತ್ತು ಸುಬಲರು ಹುಟ್ಟಿದರು. ಅವನಿಗೆ ಅರ್ಥವಿದ ದೇವಪ್ರಕೋಪನದಿಂದ ಪ್ರಜೆಗಳ ಧರ್ಮಹಾನಿಮಾಡುವಂಥ ಗಾಂಧಾರ ರಾಜಪುತ್ರ ಸೌಬಲ ಶಕುನಿ ಮತ್ತು ದುರ್ಯೋಧನನ ಮಾತೆ ಹುಟ್ಟಿದರು. ಕೃಷ್ಣದ್ವೈಪಾಯನನಿಂದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಜನೇಶ್ವರ ಧೃತರಾಷ್ಟ್ರ ಮತ್ತು ಮಹಾಬಲಿ ಪಾಂಡುವು ಜನಿಸಿದರು. ಪಾಂಡುವಿಗೆ ಅವನ ಈರ್ವರು ಪತ್ನಿಯರಲ್ಲಿ ದೇವಸಮಾನ ಐವರು ಪುತ್ರರು ಜನಿಸಿದರು. ಅವರಲ್ಲಿ ಜ್ಯೇಷ್ಠನು ಗುಣವಂತ ಯುಧಿಷ್ಠಿರ. ಧರ್ಮನಿಂದ ಯುಧಿಷ್ಠಿರ, ಮಾರುತನಿಂದ ವೃಕೋದರ, ಇಂದ್ರನಿಂದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಶ್ರೀಮಾನ್ ಧನಂಜಯನು ಜನಿಸಿದರು. ರೂಪ ಸಂಪನ್ನರೂ ಗುರುಶುಶ್ರೂಷಣಾ ನಿರತರೂ ಆದ ಅವಳಿ ನಕುಲ ಮತ್ತು ಸಹದೇವರು ಅಶ್ವಿನಿಯರಿಂದ ಜನಿಸಿದರು. ಧೀಮಂತ ಧೃತರಾಷ್ಟ್ರನಿಗೆ ದುರ್ಯೋಧನನೂ ಸೇರಿ ನೂರು ಪುತ್ರರು ಮತ್ತು ಯುಯುತ್ಸುವೂ ಜನಿಸಿದರು. ಅರ್ಜುನನಿಂದ ಸುಭದ್ರೆಯಲ್ಲಿ ವಾಸುದೇವನ ಅಳಿಯ ಮತ್ತು ಮಹಾತ್ಮ ಪಾಂಡುವಿನ ಮೊಮ್ಮಗ ಅಭಿಮನ್ಯುವು ಜನಿಸಿದನು. ಪಂಚ ಪಾಂಡವರಿಗೆ ಕೃಷ್ಣೆಯಲ್ಲಿಯೂ ಸಹ ಐವರು ರೂಪಸಂಪನ್ನ ಸರ್ವಶಸ್ತ್ರವಿಶಾರದ ಕುಮಾರರು ಜನಿಸಿದರು. ಯುಧಿಷ್ಠಿರನಿಂದ ಪ್ರತಿವಿಂದ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಚಾರುಕೀರ್ತಿ, ಮತ್ತು ನಕುಲನಿಂದ ಶತಾನೀಕ. ಮತ್ತು ಸಹದೇವನಿಂದ ಪ್ರತಾಪವಂತ ಶೃತಸೇನ. ಹಿಡಿಂಬೆಯಲ್ಲಿ ಭೀಮನಿಂದ ಘಟೋತ್ಕಚನು ವನದಲ್ಲಿ ಹುಟ್ಟಿದನು. ಶಿಖಂಡಿಯು ದ್ರುಪದನಲ್ಲಿ ಕನ್ಯೆಯಾಗಿ ಹುಟ್ಟಿ ಪುತ್ರತ್ವವನ್ನು ಪಡೆದಳು. ಅವಳಿಗೆ ಪ್ರಿಯವಾದುದನ್ನು ಮಾಡಲೋಸುಗ ಯಕ್ಷ ಸ್ಥೂಲನು ಪುರುಷತ್ವವನ್ನು ನೀಡಿದನು. ಎಲ್ಲ ಕುರು ರಾಜರೂ ಮತ್ತು ಸೇನೆಗಳೂ ಆ ಬೃಹತ್ ಯುದ್ಧದಲ್ಲಿ ಪರಸ್ಪರರೊಡನೆ ಹೋರಾಡಲು ಸೇರಿದ್ದರು. ಆ ಅಪರಿಮೇಯರೆಲ್ಲರ ಹೆಸರುಗಳನ್ನು ಒಂದು ವರ್ಷದಲ್ಲಿಯೂ ಹೇಳಲು ಶಕ್ಯವಿಲ್ಲ.

One Comment

  1. Namaste Ma’am please translate this Amshavtarana in English please

Leave a Reply

Your email address will not be published. Required fields are marked *