ದ್ರೌಪದೀಹರಣ: ಜಯದ್ರಥನಿಂದ ದ್ರೌಪದಿಯ ಅಪಹರಣ

ಮಹಾರಥ ಪಾಂಡವರು ಮೃಗಗಳಿಂದ ತುಂಬಿದ್ದ ಕಾಮ್ಯಕ ವನದಲ್ಲಿ ಅಮರರಂತೆ ವಿಹರಿಸುತ್ತಾ ರಮಿಸುತ್ತಿದ್ದರು. ಆಗ ಒಂದು ದಿನ ಯೋಗವೋ ಎಂಬಂತೆ ಬ್ರಾಹ್ಮಣರಿಗೋಸ್ಕರ ಬೇಟೆಯಾಡಲು ಪಾಂಡವರೆಲ್ಲರೂ ದ್ರೌಪದಿಯನ್ನು ತೃಣಬಿಂದುವಿನ ಆಶ್ರಮದಲ್ಲಿರಿಸಿ, ಪುರೋಹಿತ ಧೌಮ್ಯನ ಅಪ್ಪಣೆಯನ್ನು ಪಡೆದು, ನಾಲ್ಕು ದಿಕ್ಕುಗಳಿಗೆ ಹೋದರು. ಅದೇ ಸಮಯದಲ್ಲಿ ಸಿಂಧುಗಳ ರಾಜ ವೃದ್ಧಕ್ಷತ್ರನ ಮಗ ಜಯದ್ರಥನು ವಿವಾಹಾರ್ಥವಾಗಿ ಶಾಲ್ವದ ಕಡೆ ಪ್ರಯಾಣಮಾಡುತ್ತಿದ್ದನು. ರಾಜನಿಗೆ ಯೋಗ್ಯವಾದ ಅತಿದೊಡ್ಡ ಪರಿಚಾರಕ ಗಣಗಳಿಂದ ಕೂಡಿದವನಾಗಿ ಅನೇಕ ರಾಜರುಗಳೊಂದಿಗೆ ಹೋಗುತ್ತಿದ್ದ ಅವನು ಕಾಮ್ಯಕವನ್ನು ತಲುಪಿದನು. ಆ ನಿರ್ಜನ ವನದಲ್ಲಿ ಅವನು ಆಶ್ರಮದ್ವಾರದಲ್ಲಿ ನಿಂತಿದ್ದ ಪಾಂಡವರ ಪ್ರಿಯ ಭಾರ್ಯೆ ದ್ರೌಪದಿಯನ್ನು ಕಂಡನು. ಕಪ್ಪುಮೋಡಗಳಿಂದ ಚಿಮ್ಮಿದ ಮಿಂಚಿನಂತೆ ತನ್ನ ಉತ್ತಮ ರೂಪದಿಂದ ಆ ವನಪ್ರದೇಶವನ್ನೇ ಬೆಳಗುತ್ತಿದ್ದ, ಅಪ್ಸರೆಯೋ, ದೇವಕನ್ಯೆಯೋ ಅಥವಾ ದೇವನಿರ್ಮಿತ ಮಾಯೆಯೋ ಎಂಬಂತಿದ್ದ ಆ ಅನಿಂದಿತೆಯನ್ನು ಅವರೆಲ್ಲರೂ ನೋಡಿದರು. ಅವಳನ್ನು ನೋಡಿ ಜಯದ್ರಥನು ವಿಸ್ಮಿತನೂ ಹರ್ಷಿತನೂ ಆದನು. ಕಾಮಮೋಹಿತನಾದ ಅವನು ರಾಜ ಕೋಟಿಕಾಶ್ಯನಿಗೆ “ಮನುಷ್ಯಳೇ ಆಗಿದ್ದರೆ ಈ ಅನವದ್ಯಾಂಗಿಯು ಯಾರಾಗಿರಬಹುದು? ಈ ಅತಿಸುಂದರಿಯನ್ನು ನೋಡಿದ ಬಳಿಕ ಶಾಲ್ವನಗರದಲ್ಲಿ ನಡೆಯುವ ವಿವಾಹಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಇವಳನ್ನೇ ಕರೆದುಕೊಂಡು ಮನೆಗೆ ಹೋಗುತ್ತೇನೆ. ಹೋಗಿ ಇವಳು ಯಾರವಳು, ಯಾರು ಮತ್ತು ಎಲ್ಲಿಂದ ಬಂದಿದ್ದಾಳೆಂದು ತಿಳಿದುಕೊಂಡು ಬಾ. ಯಾವ ಕಾರಣಕ್ಕಾಗಿ ಈ ಸುಂದರ ಹುಬ್ಬಿನವಳು ಮುಳ್ಳಿನ ಈ ವನಕ್ಕೆ ಬಂದಿದ್ದಾಳೆ? ಇಂದು ಈ ತನುಮಧ್ಯಮೆಯು ನನ್ನ ಪ್ರೀತಿಯಲ್ಲಿ ಪಾಲ್ಗೊಳ್ಳುತ್ತಾಳೆಯೇ? ಈ ವರಸ್ತ್ರೀಯನ್ನು ಪಡೆದು ಇಂದು ನಾನು ನನ್ನ ಕಾಮವನ್ನು ಪೂರೈಸಿಕೊಳ್ಳಬಹುದೇ? ಕೋಟಿಕ! ಇವರ ರಕ್ಷಕರು ಯಾರು ಎನ್ನುವುದನ್ನೂ ಕೇಳಿಕೊಂಡು ಬಾ!” ಇದನ್ನು ಕೇಳಿದ ಕೋಟಿಕನು ರಥದಿಂದ ಹಾರಿ ನರಿಯು ವ್ಯಾಘ್ರದ ಬಳಿಸಾರುವಂತೆ ದ್ರೌಪದಿಯ ಬಳಿಬಂದು ಕೇಳಿದನು.

ಕೋಟಿಕಾಶ್ಯನು ಹೇಳಿದನು: “ಬಾಳೆಯ ಮರದ ರೆಂಬೆಯನ್ನು ಬಗ್ಗಿಸುತ್ತಿರುವ ನೀನು ಯಾರು? ಒಬ್ಬಳೇ ಆಶ್ರಮದಲ್ಲಿ ಶೋಭಾಯಮಾನಳಾಗಿ ನಿಂತಿರುವೆ! ರಾತ್ರಿಯಲ್ಲಿ ಉರಿದು ಗಾಳಿಯ ಸಹಾಯದಿಂದ ಅರಣ್ಯವನ್ನೇ ಸುಡುವಂಥಹ ಅಗ್ನಿಶಿಯಂತಿರುವೆ! ಅತೀವ ರೂಪಸಮನ್ವಿತೆಯಾಗಿರುವೆ! ಈ ಅರಣ್ಯದಲ್ಲಿ ನಿನಗೆ ಭಯವೆಂಬುದಿಲ್ಲವೇಕೆ? ನೀನು ದೇವಿಯೋ, ಯಕ್ಷಿಯೋ, ದಾನವಿಯೋ, ಅಪ್ಸರೆಯೋ ಅಥವಾ ದೈತ್ಯವರಾಂಗನೆಯೋ? ಅಥವಾ ನೀನು ಸುಂದರ ಉರಗರಾಜಕನ್ಯೆಯೋ? ನಾವು ಯಾರಾಗಿರಬಹುದೆಂದು ನೀನು ಕೇಳುತ್ತಿಲ್ಲ. ನಿನ್ನ ನಾಥರು ಯಾರೆಂದೂ ನಮಗೆ ತಿಳಿದಿಲ್ಲ. ನಿನ್ನ ಮಾನವನ್ನು ಹೆಚ್ಚಿಸಲು ನಾನು ಕೇಳುತ್ತಿದ್ದೇನೆ. ಭದ್ರೇ! ನಿನ್ನ ಹುಟ್ಟು, ಪ್ರಭು, ಬಂಧುಗಳು, ಪತಿ, ಕುಲಗಳ ಕುರಿತು ಹೇಳು. ಇಲ್ಲಿ ನೀನು ಏನು ಮಾಡುತ್ತಿರುವೆ ಎನ್ನುವುದನ್ನೂ ಹೇಳು. ನಾನು ರಾಜ ಸುರಥನ ಮಗ ಕೋಟಿಕಾಶ್ಯ. ಅಲ್ಲಿ ಕಾಂಚನ ರಥದಲ್ಲಿ ಅಹುತಿ ಹಾಕಿದ ಕುಂಡದಲ್ಲಿ ಪ್ರಜ್ವಲಿಸುವ ಅಗ್ನಿಯಂತಿರುವ ವೀರನು ತ್ರಿಗರ್ತರಾಜ ಕ್ಷೇಮಂಕರ. ಅವನ ಹಿಂದೆ ಮಹಾ ಧನುಸ್ಸನ್ನು ಹಿಡಿದಿರುವವನು ಕುಣಿಂದಾಧಿಪತಿಯ ಹಿರಿಯ ಮಗ. ನಿನ್ನನ್ನು ಅರಳಿದ ಕಣ್ಣುಗಳಿಂದ ದಿಟ್ಟಿಸಿ ನೋಡುತ್ತಿರುವವನು ಪರ್ವತವಾಸಿ. ಅಲ್ಲಿ ತಾವರೆಯ ಕೊಳದ ಸಮೀಪದಲ್ಲಿ ನಿಂತಿರುವ ಕಪ್ಪುಬಣ್ಣದ ಸುಂದರ ಯುವಕನು ಇಕ್ಷ್ವಾಕುರಾಜ ಸುಬಲನ ಮಗ. ಮಖದಲ್ಲಿ ಪ್ರಜ್ವಲಿಸುವ ಅಗ್ನಿಗಳಂತೆ ಅಲ್ಲಿ ಹಾರಾಡುತ್ತಿರುವ ಧ್ವಜಗಳಿರುವ ರಕ್ತವರ್ಣದ ರಥದಲ್ಲಿ ಕುಳಿತಿರುವವರು ಹನ್ನೆರಡು ಸೌವೀರಕ ರಾಜಪುತ್ರರು – ಅಂಗಾರಕ, ಕುಂಜರ, ಗುಪ್ತಕ, ಶತ್ರುಂಜಯ, ಸಂಜಯ, ಸುಪ್ತವೃದ್ಧ, ಪ್ರಭಂಕರ, ರವಿ, ಬ್ರಮರ, ಶೂರ, ಪ್ರತಾಪ ಮತ್ತು ಕುಹರ. ಆನೆ-ಕುದುರೆ-ಪದಾತಿಗಳೊಡನೆ ಆರು ಸಾವಿರ ರಥಗಳು ಹಿಂಬಾಲಿಸಿ ಬರುತ್ತಿರುವ ಅವನೇ ಸೌವೀರರಾಜ ಜಯದ್ರಥ. ನೀನು ಅವನ ಹೆಸರನ್ನು ಕೇಳಿರಬಹುದು! ಅವನ ಹಿಂದೆ ಆ ರಾಜನ ಯುವ ತಮ್ಮಂದಿರು ಸೇನೆಯನ್ನು ಕಾಯುತ್ತಿದ್ದಾರೆ. ಸುಕೇಶೀ! ಈಗ ನೀನು ಯಾರ ಭಾರ್ಯೆ ಮತ್ತು ಯಾರ ಪುತ್ರಿ ಎನ್ನುವುದನ್ನು ನನಗೆ ಹೇಳು!”

ಆಗ ದ್ರೌಪದಿಯು ಅವನನ್ನು ನೋಡುತ್ತಾ, ನಿಧಾನವಾಗಿ ಬಾಳೆಯ ಮರದ ರೆಂಬೆಯನ್ನು ಬಿಟ್ಟು, ತನ್ನ ಕೌಶಿಕದ ಉತ್ತರೀಯವನ್ನು ಒಟ್ಟುಮಾಡಿಕೊಂಡು, ಅವನಿಗೆ ಹೇಳಿದಳು: “ರಾಜಪುತ್ರ! ನನ್ನಂಥವಳು ಉತ್ತರಿಸಬಾರದೆಂದು ನಾನು ತಿಳಿದುಕೊಂಡಿದ್ದೇನೆ. ಆದರೆ ಇಲ್ಲಿ ನಿನ್ನ ಪ್ರಶ್ನೆಗಳಿಗೆ ಉತ್ತರಿಸುವವರು ಬೇರೆ ಯಾರೂ ಇಲ್ಲ. ನಾನೊಬ್ಬಳೇ ಇಲ್ಲಿ ಇರುವುದರಿಂದ ನಾನೇ ನಿನಗೆ ಉತ್ತರವನ್ನು ಕೊಡುತ್ತಿದ್ದೇನೆ. ನಾನೊಬ್ಬಳೇ ಇರುವಾಗ ಸ್ವಧರ್ಮದಲ್ಲಿ ನಿರತಳಾಗಿರುವ ನಾನು ನಿನ್ನೊಡನೆ ಹೇಗೆ ತಾನೇ ಸಂಭಾಷಿಸಲಿ? ನೀನು ಸುರಥನ ಪುತ್ರ ಕೋಟಿಕಾಶ್ಯನೆಂದು ನಾನು ಬಲ್ಲೆ. ಆದುದರಿಂದ ನನ್ನ ಬಂಧುಗಳ ಕುರಿತೂ ಹೇಳುತ್ತೇನೆ ಕೇಳು. ರಾಜ ದ್ರುಪದನ ಮಗಳು ನಾನು. ಕೃಷ್ಣೆಯೆಂದು ನನ್ನ ಹೆಸರು. ನಾನು ಐವರನ್ನು ಪತಿಗಳನ್ನಾಗಿ ವರಿಸಿದ್ದೇನೆ. ಅವರು ಖಾಂಡವಪ್ರಸ್ಥದವರು. ನೀನು ಕೇಳಿರಬಹುದು. ಯುಧಿಷ್ಠಿರ, ಭೀಮಸೇನ, ಅರ್ಜುನ, ನಕುಲ ಮತ್ತು ಸಹದೇವ – ಈ ಪಾಂಡವರು ನನ್ನನ್ನು ಇಲ್ಲಿಯೇ ಇರಿಸಿ ಬೇಟೆಗಾಗಿ ನಾಲ್ಕು ದಿಕ್ಕುಗಳಲ್ಲಿ ಬೇರೆಬೇರೆಯಾಗಿ ಹೋಗಿದ್ದಾರೆ. ಉತ್ತರಕ್ಕೆ ರಾಜ ಯುಧಿಷ್ಠಿರ, ದಕ್ಷಿಣಕ್ಕೆ ಭೀಮಸೇನ, ಪೂರ್ವಕ್ಕೆ ಅರ್ಜುನ ಮತ್ತು ಪಶ್ಚಿಮಕ್ಕೆ ಯಮಳರಿಬ್ಬರೂ ಹೋಗಿದ್ದಾರೆ. ಆ ರಥಸತ್ತಮರು ಹಿಂದಿರುಗಿ ಬರುವ ಸಮಯವಾಗಿದೆಯೆಂದು ನನಗನ್ನಿಸುತ್ತದೆ. ಅವರು ನಿಮ್ಮನ್ನು ಸಮ್ಮಾನಿಸಿದ ನಂತರ ನಿಮಗಿಷ್ಟಬಂದಲ್ಲಿಗೆ ಹೋಗಿ. ವಾಹನಗಳನ್ನು ಬಿಚ್ಚಿ ಕೆಳಗಿಳಿಯಿರಿ. ಮಹಾತ್ಮ ಧರ್ಮಸುತನು ಅತಿಥಿಗಳನ್ನು ಬಯಸುತ್ತಾನೆ. ನಿಮ್ಮನ್ನು ಇಲ್ಲಿ ನೋಡಿ ಅವನು ಸಂತೋಷಪಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”

ಕೋಟಿಕಾಶ್ಯನನ್ನು ನಂಬಿ ದ್ರೌಪದಿಯು ಈ ರೀತಿ ಹೇಳಿದಳು. ಆ ಅತಿಥಿಗಳಿಗೆ ಸ್ವಧರ್ಮದಂತೆ ಸತ್ಕರಿಸುವ ಕುರಿತು ಯೋಚಿಸುತ್ತಾ ಅವಳು ಆ ಪುಣ್ಯ ಪರ್ಣಕುಟೀರವನ್ನು ಪ್ರವೇಶಿಸಿದಳು.

ಕೋಟಿಕಾಶ್ಯನು ಹಿಂದಿರುಗಿದೊಡನೆಯೇ ಕುಳಿತು ಕಾಯುತ್ತಿದ್ದ ಜಯದ್ರಥನು ಅವನನ್ನು ಕೇಳಿದನು: “ಅತೀವ ಸುಂದರಿಯಾಗಿರುವ ಇವಳಲ್ಲಿ ನನ್ನ ಮನಸ್ಸು ರಮಿಸುತ್ತಿರಲು ನೀನು ಹೇಗೆ ತಾನೇ ಉತ್ತರಿಸಿದ ಅವಳನ್ನು ಬಿಟ್ಟು ಹಿಂದಿರುಗಿದೆ? ಈ ಸ್ತ್ರೀಯನ್ನು ನೋಡಿದ ನಂತರ ನನಗೆ ಇತರ ಸ್ತ್ರೀಯರು ಮಂಗಗಳಂತೆ ತೋರುತ್ತಾರೆ. ಅವಳ ದರ್ಶನದಿಂದಲೇ ನನ್ನ ಮನಸ್ಸು ಅವಳಿಂದ ಅಪಹೃತವಾಗಿದೆ. ಅವಳನ್ನು ನೋಡಿದ ನೀನು ಅವಳು ಮನುಷ್ಯಳೋ ಎನ್ನುವುದನ್ನು ಹೇಳು.”

ಕೋಟಿಕಾಶ್ಯನು ಹೇಳಿದನು: “ಇವಳು ರಾಜಪುತ್ರಿ ದ್ರೌಪದಿ ಕೃಷ್ಣೆ. ಒಟ್ಟಾಗಿ ಪಡೆದಿರುವ ಪಂಚ ಪಾಂಡವರ ಮಹಿಷಿ. ಸೌವೀರ! ಅವಳನ್ನು ನೀನು ನೋಡಿಯಾಯಿತು. ಇನ್ನು ಸುಖಿಯಾಗಿ ಸುವೀರಕ್ಕೆ ಹೊರಡು.”

ಇದನ್ನು ಕೇಳಿದ ದುಷ್ಟಭಾವ ಜಯದ್ರಥನು “ದ್ರೌಪದಿಯನ್ನು ನೋಡೋಣ!” ಎಂದು ಹೇಳಿ ದುಷ್ಟ ತೋಳವು ಸಿಂಹದ ಗುಹೆಯನ್ನು ಹೊಗುವಂತೆ ಏಳು ಜನರ ಜೊತೆ ಆ ಶೂನ್ಯ ಆಶ್ರಮವನ್ನು ಪ್ರವೇಶಿಸಿ ಕೃಷ್ಣೆಯೊಡನೆ ಈ ಮಾತನ್ನಾಡಿದನು: “ವರಾರೋಹೇ! ನಿನಗೆ ಕುಶಲವಾಗಲಿ! ನಿನ್ನ ಪತಿಗಳು ಆರೋಗ್ಯದಿಂದಿರುವರೇ? ನೀನು ಕುಶಲದಿಂದಿರಬೇಕೆನ್ನುವವರೂ ಅನಾಮಯರಾಗಿದ್ದಾರೆಯೇ?”

ದ್ರೌಪದಿಯು ಉತ್ತರಿಸಿದಳು: “ರಾಜ! ಕುಂತೀಪುತ್ರ ಕೌರವ್ಯ ಯುಧಿಷ್ಠಿರ, ಅವನ ತಮ್ಮಂದಿರು, ನಾನು ಮತ್ತು ನೀನು ಕೇಳುವ ಇತರರೂ ಕುಶಲರಾಗಿದ್ದಾರೆ. ಈ ಪಾದ್ಯ-ಆಸನಗಳನ್ನು ಸ್ವೀಕರಿಸು. ಈ ಐದು ಜಿಂಕೆಗಳನ್ನು ನಿಮಗೆ ಬೆಳಗಿನ ಊಟವನ್ನಾಗಿ ಕೊಡುತ್ತೇನೆ. ಸ್ವಯಂ ಯುಧಿಷ್ಠಿರನು ನಿಮಗೆ ಕೃಷ್ಣಮೃಗ, ಚುಕ್ಕೆಗಳುಳ್ಳ ಜಿಂಕೆ, ಶರಭ, ಕೋಳಿ, ಮೊಲ, ಬಿಳೀಕಾಲಿನ ಜಿಂಕೆ, ರುರು, ಸಂಬರ, ಹಸುಗಳು, ವರಾಹ, ಕಾಡೆಮ್ಮೆ ಮತ್ತು ಇತರ ಮೃಗಜಾತಿಗಳನ್ನು ಕೊಡುತ್ತಾನೆ.”

ಜಯದ್ರಥನು ಹೇಳಿದನು: “ಇದಾಗಲೇ ನೀನು ಬೆಳಗಿನ ಊಟದ ಎಲ್ಲ ಗೌರವವನ್ನೂ ನೀಡಿದ್ದೀಯೆ. ಬಾ! ನನ್ನ ರಥವನ್ನೇರಿ ಕೇವಲ ಸುಖವನ್ನೇ ಹೊಂದು. ಚೇತನ-ಸಂಪತ್ತುಗಳನ್ನು ಕಳೆದುಕೊಂಡು ಕೃಪಣರಾಗಿ ವನವಾಸಿಗಳಾಗಿರುವ ಪಾರ್ಥರನ್ನು ಅನುಮೋದಿಸುವುದು ನಿನಗೆ ತಕ್ಕುದಲ್ಲ. ಯಾವ ಪ್ರಾಜ್ಞ ಸ್ತ್ರೀಯೂ ಸಂಪತ್ತನ್ನು ಕಳೆದುಕೊಂಡವರನ್ನು ಗಂಡಂದಿರನ್ನಾಗಿ ಸುಖಿಸುವುದಿಲ್ಲ. ಗಂಡನು ಎತ್ತರಕ್ಕೆ ಹೋಗುವಾಗ ಎತ್ತರಕ್ಕೆ ಹೋಗಬೇಕು. ಅವನ ಸಂಪತ್ತು ಕಡಿಮೆಯಾದಾಗ ಅವನೊಂದಿಗೆ ವಾಸಿಸಬಾರದು. ಪಾಂಡವರು ಸಂಪತ್ತು ರಾಜ್ಯಗಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಅವರ ಮೇಲಿನ ಪ್ರೇಮದಿಂದಾಗಿ ನೀನು ಈ ಕ್ಲೇಶಗಳನ್ನು ಅನುಭವಿಸುತ್ತಿರುವೆಯಾ? ಸುಶ್ರೋಣೀ! ನನ್ನ ಭಾರ್ಯೆಯಾಗು. ಅವರನ್ನು ತ್ಯಜಿಸಿ ಸುಖವನ್ನು ಹೊಂದು. ನನ್ನೊಂದಿಗೆ ಅಖಿಲ ಸಿಂಧು-ಸೌವೀರಗಳನ್ನು ಪಡೆ!”

ಸಿಂಧುರಾಜನ ಹೃದಯ ಕಂಪಿಸುವ ಈ ಮಾತುಗಳನ್ನು ಕೇಳಿ ಕೃಷ್ಣೆಯು ಹುಬ್ಬುಗಂಟಿಕ್ಕಿ ದೂರ ಸರಿದಳು. ಅವನ ಮಾತನ್ನು ಕಡೆಗಳಿಸಿ ಅಪಮಾನಿಸುವಂತೆ ಅವಳು ಸೈಂಧವನಿಗೆ ಹೇಳಿದಳು: “ಹಾಗೆ ಮಾತನಾಡಬೇಡ! ನಾಚಿಕೆಪಡು!” ಪತಿಯಂದಿರು ಈಗಲೇ ಬರಲಿ ಎಂದು ಬಯಸುತ್ತಾ ಅವಳು ಪರರನ್ನು ವಿಲೋಭಗೊಳಿಸಲು ಮಾತಲ್ಲಿ ಮಾತುಗಳನ್ನು ಪೋಣಿಸತೊಡಗಿದಳು. ಅವಳ ಸುಂದರ ಮುಖವು ಸಿಟ್ಟಿನಿಂದ ಕೆಂಪಾಗಿ, ಕಣ್ಣುಗಳು ರಕ್ತದಂತೆ ಕೆಂಪಾಗಿ, ಹುಬ್ಬುಗಳು ಮೇಲೇರಿ ಗಂಟಿಕ್ಕಲು ದ್ರೌಪದಿಯು ಪುನಃ ಜಯದ್ರಥನ ಕಡೆ ತನ್ನ ಮುಖವನ್ನು ತಿರುಗಿಸಿ ಹೇಳಿದಳು:

“ಮೂಢ! ಮಹೇಂದ್ರನಂತೆ ಸ್ವಕರ್ಮಗಳಲ್ಲಿ ನಿರತರಾಗಿರುವ, ಯಕ್ಷ-ರಾಕ್ಷಸರನ್ನು ಯುದ್ಧದಲ್ಲಿ ಜಯಿಸಿರುವ, ತೀಕ್ಷ್ಣ ವಿಷಸರ್ಪಗಳಂತಿರುವ ಈ ಯಶಸ್ವಿನೀ ಮಹಾರಥಿಗಳನ್ನು ಅಪಮಾನಿಸುತ್ತಿರುವೆ! ನಿನಗೆ ಏಕೆ ನಾಚಿಕೆಯಾಗುವುದಿಲ್ಲ? ಪರಿಪೂರ್ಣ ವಿದ್ಯಾಸಂಪನ್ನರಾದ ಮತ್ತು ಪ್ರಶಂಸೆಗೆ ಪಾತ್ರರಾದ ತಪಸ್ವಿಗಳ ಕುರಿತು ಗೃಹಸ್ಥನಾಗಲೀ ವನಚರಿಯಾಗಲೀ ಯಾರೂ ಕೆಟ್ಟಮಾತುಗಳನ್ನಾಡುವುದಿಲ್ಲ. ನೀನೇಕೆ ಹೀಗೆ ಮಾತನಾಡುತ್ತಿರುವೆ? ಇಲ್ಲಿರುವ ಕ್ಷತ್ರಿಯ ಸನ್ನಿವೇಶದಲ್ಲಿ ಇಂದು ಪಾತಾಳಮುಖವಾಗಿ ಬೀಳುತ್ತಿರುವ ನಿನ್ನನ್ನು ಕೈಹಿಡಿದು ಮೇಲೆತ್ತುವವರು ಯಾರೂ ಇಲ್ಲ ಎಂದು ನನಗನ್ನಿಸುತ್ತಿದೆ. ಧರ್ಮರಾಜನನ್ನು ಜಯಿಸುವ ಆಸೆಯನ್ನಿಟ್ಟುಕೊಂಡಿರುವ ನೀನು ಹಿಮಾಲಯದ ಗಿರಿಕೂಟದಲ್ಲಿ ಹಿಂಡಿನ ಮಧ್ಯೆ ಕೊಬ್ಬಿ ಬೆಳೆದಿರುವ ಸಲಗವನ್ನು ಒಂದು ಕಡ್ಡಿಯನ್ನು ಹಿಡಿದು ಓಡಿಸಲು ಪ್ರಯತ್ನಿಸುತ್ತಿರುವವನಂತೆ ತೋರುತ್ತಿದ್ದೀಯೆ! ಮಲಗಿರುವ ಮಹಾಬಲಶಾಲೀ ಸಿಂಹವನ್ನು ಹುಡುಗುತನದಿಂದ ಒದ್ದು ಅದರ ಕಣ್ಣುಹುಬ್ಬಿನ ಕೂದಲನ್ನು ಕಿತ್ತು ಅವಸರದಿಂದ ಓಡಿಹೋಗುತ್ತಿರುವನಂತೆ ನೀನು ಸಿಟ್ಟಿಗೆದ್ದ ಭೀಮಸೇನನನ್ನು ನೋಡಿ ಓಡುವೆಯಂತೆ! ಪರ್ವತ ಕಂದರದಲ್ಲಿ ಮಲಗಿದ್ದ ಉಗ್ರ ಮಹಾಬಲಶಾಲೀ ಸಿಂಹವನ್ನು ಒದೆದವನಂತೆ ನೀನು ಸಿಟ್ಟಿಗೆದ್ದ ಉಗ್ರ ಅರ್ಜುನನನ್ನು ಎದುರಿಸಬೇಕಾಗುತ್ತದೆ. ಎರಡು ಕೃಷ್ಣವರ್ಣದ ತೀಕ್ಷ್ಣವಿಷದ ಹಾವುಗಳನ್ನು ಮೆಟ್ಟಿದವನಂತೆ ಆ ಕಿರಿಯ ಪಾಂಡವರೀರ್ವರೊಡನೆ ನೀನು ಯುದ್ಧಮಾಡಬೇಕಾಗುತ್ತದೆ. ತಮ್ಮನ್ನು ಇಲ್ಲವಾಗಿಸುವುದಕ್ಕಾಗಿಯೇ ಫಲನೀಡುವ ಬಿದಿರು, ಹುಲ್ಲು ಅಥವಾ ಬಾಳೆಯ ಮರದಂತೆ ಮತ್ತು ಮರಿಹಾಕಿ ಸಾಯುವ ಏಡಿಗಳಂತಿರುವ ಅವರಿಂದ ರಕ್ಷಿತಳಾದ ನನ್ನನ್ನು ಪಡೆಯಲು ನೀನು ಬಯಸುತ್ತಿರುವೆ!”

ಜಯದ್ರಥನು ಹೇಳಿದನು: “ಕೃಷ್ಣೇ! ಆ ನರಪುತ್ರರು ಹೇಗಿದ್ದಾರೆಂದು ನನಗೆ ಈ ಮೊದಲೇ ತಿಳಿದಿದೆ. ಆದರೆ ಇಂದು ನಿನ್ನ ಈ ಬೆದರಿಕೆಯು ನಮ್ಮನ್ನು ಓಡಿಸಲು ಅಸಮರ್ಥವಾಗಿದೆ. ನಾವೆಲ್ಲರೂ ಹದಿನೇಳು ಉಚ್ಛಕುಲಗಳಲ್ಲಿ ಜನಿಸಿದ್ದೇವೆ. ಪಾಂಡುಪುತ್ರರಲ್ಲಿ ಕಡಿಮೆಯಾಗಿರುವ ಆ ಆರು ಗುಣಗಳು ನಮ್ಮಲ್ಲಿ ಅಧಿಕವಾಗಿವೆ. ಕ್ಷಿಪ್ರವಾಗಿ ರಥವನ್ನಾಗಲೀ ಆನೆಯನ್ನಾಗಲೀ ಏರು. ಕೇವಲ ಮಾತಿನಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅಥವಾ ದೀನಳಾಗಿ ಮಾತನಾಡು! ಅದಕ್ಕೆ ಈ ಸೌವೀರರಾಜನು ನಿನ್ನ ಮೇಲೆ ಕರುಣೆತೋರಿಯಾನು!”

ದ್ರೌಪದಿಯು ಹೇಳಿದಳು: “ನಾನು ಮಹಾಬಲಶಾಲೀ! ನೀನೇಕೆ ಇಂದು ನನ್ನನ್ನು ದುರ್ಬಲಳೆಂದು ತಿಳಿದುಕೊಂಡಿದ್ದೀಯೆ? ನಾನು ಹೆದರಿ ದುರ್ಬಲಳಂತೆ ದೀನಳಾಗಿ ಇವನಲ್ಲಿ ಬೇಡಿಕೊಳ್ಳಬೇಕಂತೆ! ಇಬ್ಬರು ಕೃಷ್ಣರೂ ಒಂದೇ ರಥದಲ್ಲಿ ಕುಳಿತು ನನ್ನ ಸುಳಿವನ್ನು ಅರಸಿಕೊಂಡು ಬರುತ್ತಾರೆ! ಇಂದ್ರನೂ ಕೂಡ ನನ್ನನ್ನು ಅಪಹರಿಸಿಕೊಂಡು ಹೋಗಲು ಶಕ್ಯನಿಲ್ಲದಿರುವಾಗ ಮನುಷ್ಯಮಾತ್ರ ಕೃಪಣನಾದ ನೀನು ಹೇಗೆತಾನೇ ಇದನ್ನು ಮಾಡುವೆ? ರಥದಲ್ಲಿ ನಿಂತು ಪರವೀರಘಾತಿ ಕಿರೀಟಿಯು ನಿನ್ನ ಸೇನೆಯ ಮೇಲೆರಿಗಾದ ಬೇಸಗೆಯಲ್ಲಿ ಒಣಗಿದ ವನವನ್ನು ಬೆಂಕಿಯು ಹೇಗೋ ಹಾಗೆ ಸುಟ್ಟುಹಾಕುತ್ತಾನೆ. ಜನಾರ್ದನನ ಅನುಯಾಯಿ ವೃಷ್ಣಿವೀರರೂ, ಮಹೇಷ್ವಾಸ ಕೇಕಯರೂ ಮತ್ತು ನನ್ನ ಎಲ್ಲ ರಾಜಪುತ್ರರೂ ಒಂದಾಗಿ ನನ್ನನ್ನು ಅನುಸರಿಸಿ ಬರುತ್ತಾರೆ. ಅರ್ಜುನನ ಗಾಂಡೀವ, ಭೀಮಸೇನನ ಗದೆ ಮತ್ತು ಮಾದ್ರಿಯ ಮಕ್ಕಳ ಮಹಾಶಕ್ತಿಯ ಕ್ರೋಧವಿಷಗಳನ್ನು ನೀನು ಬಹಳಕಾಲದವರೆಗೆ ಅನುಭವಿಸುವೆ! ಇದೂವರೆಗೆ ನಾನು ಎಂದೂ ನನ್ನ ಮಹಾತ್ಮ ಪತಿಗಳನ್ನು ಮೀರಿ ನಡೆಯದಿದ್ದರೆ ಅದೇ ಸತ್ಯದಿಂದ ನಾನು ಇಂದು ಪಾರ್ಥರಿಂದ ಬಂಧಿಯಾಗಿ ಎಳೆದಾಡಲ್ಪಡುವ ನಿನ್ನನ್ನು ನೋಡುತ್ತೇನೆ. ಎಷ್ಟೇ ಕಷ್ಟಪಟ್ಟು ಕಾಡಿದರೂ ನೀನು ನನ್ನನ್ನು ಭ್ರಾಂತಗೊಳಿಸಲಾರೆ! ಕುರುಪ್ರವೀರರೊಂದಿಗೆ ಪುನಃ ನಾನು ಕಾಮ್ಯಕಕ್ಕೆ ಹಿಂದಿರುಗುತ್ತೇನೆ!”

ಹಿಡಿಯಲು ಪ್ರಯತ್ನಿಸುತ್ತಿರುವ ಅವರನ್ನು ದ್ರೌಪದಿಯು ಕಣ್ಣನ್ನು ಅರಳಿಸಿ ಕೋಪದಿಂದ ನೋಡಿ ಭೀತಳಾಗಿ “ನನ್ನನ್ನು ಮುಟ್ಟಬೇಡ! ಮುಟ್ಟಬೇಡ!” ಎಂದು ಕೂಗುತ್ತಾ ಪುರೋಹಿತ ಧೌಮ್ಯನ ಸಹಾಯಕ್ಕೆ ಕೂಗಿದಳು. ಜಯದ್ರಥನು ಅವಳ ಕೆಳವಸ್ತ್ರವನ್ನು ಹಿಡಿದನು. ಆದರೆ ತನ್ನ ಎಲ್ಲ ಶಕ್ತಿಯನ್ನೂ ಸೇರಿಸಿ ಅವಳು ಅವನನ್ನು ದೂರ ನೂಕಿದಳು. ಅವಳಿಂದ ನೂಕಲ್ಪಟ್ಟ ಆ ಪಾಪಿಯು ಬೇರುಕಿತ್ತ ಮರದಂತೆ ಕೆಳಗೆ ಬಿದ್ದನು. ಮಹಾವೇಗದಿಂದ ಮತ್ತೊಮ್ಮೆ ಅವನು ಅವಳನ್ನು ಹಿಡಿಯಲು, ಪುನಃ ಪುನಃ ಉಸಿರನ್ನು ಕಳೆದುಕೊಳ್ಳುತ್ತಾ ದ್ರೌಪದಿಯು ಧೌಮ್ಯನ ಪಾದಗಳಿಗೆ ವಂದಿಸಿ, ಅವರು ಅವಳನ್ನು ಎಳೆದುಕೊಂಡು ಹೋಗುತ್ತಿರಲು ಅವರ ರಥವನ್ನೇರಿದಳು.

ಧೌಮ್ಯನು ಹೇಳಿದನು: “ಜಯದ್ರಥ! ಮಹಾರಥಿಗಳನ್ನು ಗೆಲ್ಲದೆಯೇ ಇವಳನ್ನು ಎತ್ತಿಕೊಂಡು ಹೋಗಲಾರಿರಿ! ಪುರಾತನ ಕ್ಷತ್ರಿಯ ಧರ್ಮವನ್ನಾದರೂ ಆಚರಿಸು! ಈ ಕ್ಷುದ್ರಕಾರ್ಯವನ್ನೆಸಗಿ ಧರ್ಮರಾಜನೇ ನಾಯಕನಾಗಿರುವ ವೀರ ಪಾಂಡವರನ್ನು ಎದುರಿಸುವಾಗ ನೀನು ಈ ಪಾಪದ ಫಲವನ್ನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ!” ಹೀಗೆ ಹೇಳುತ್ತಾ ಧೌಮ್ಯನು ಅಪಹರಿಸಲ್ಪಟ್ಟು ಹೋಗುತ್ತಿರುವ ಆ ರಾಜಪುತ್ರಿಯನ್ನು ಹಿಂಬಾಲಿಸಿ ಪಾದತಿಗಳ ಮಧ್ಯದಲ್ಲಿ ಹೋದನು.

Leave a Reply

Your email address will not be published. Required fields are marked *