ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು

ಬೇಟೆಗಾಗಿ ನಾಲ್ಕು ದಿಕ್ಕುಗಳಲ್ಲಿಯೂ ಪ್ರತ್ಯೇಕವಾಗಿ ಹೋಗಿದ್ದ ಶ್ರೇಷ್ಠತಮ ಧನುರ್ಧರ ಪಾಂಡವರು ಜಿಂಕೆ, ಹಂದಿ ಮತ್ತು ಕಾಡೆಮ್ಮೆಗಳನ್ನು ಬೇಟೆಯಾಡಿ ಒಂದು ಕಡೆ ಒಟ್ಟಾಗಿ ಸೇರಿದರು. ಆ ಮಹಾವನದಲ್ಲಿ ಸಂಚರಿಸುತ್ತಿದ್ದ ಜಿಂಕೆಗಳ ಕೂಗನ್ನು ಕೇಳಿ ಯುಧಿಷ್ಠಿರನು ತಮ್ಮಂದಿರಿಗೆ ಹೇಳಿದನು: “ಸೂರ್ಯನು ಬೆಳಗುತ್ತಿರುವ ದಿಕ್ಕನ್ನು ಎದುರಿಸಿ ಜಿಂಕೆ ಮತ್ತು ಪಕ್ಷಿಗಳು ಉಗ್ರ ವೇದನೆಯಲ್ಲಿ ಕ್ರೂರವಾಗಿ ಕೂಗುತ್ತಾ ಶತ್ರುಗಳ ಮಹಾ ಆಕ್ರಮಣವನ್ನು ಸೂಚಿಸಿ ಓಡುತ್ತಿವೆ. ಜಿಂಕೆಗಳನ್ನು ಬಿಟ್ಟು ಬೇಗನೆ ಹಿಂದಿರುಗೋಣ! ನನ್ನ ಮನಸ್ಸು ಉರಿಯುತ್ತಿರುವ ಬೆಂಕಿಯಂತೆ ಸುಡುತ್ತಿದೆ. ಈ ಕಾಮ್ಯಕವನವು ನನಗೆ ಗರುಡನಿಂದ ಹಾವುಗಳನ್ನು ಅಪಹರಿಸಲ್ಪಟ್ಟ ಸರೋವರದಂತೆ, ರಾಜನನ್ನೂ ಲಕ್ಷ್ಮಿಯನ್ನೂ ಕಳೆದುಕೊಂಡ ರಾಷ್ಟ್ರದಂತೆ ಅಥವಾ ಕುಡುಕರಿಂದ ಖಾಲಿಯಾದ ಮದ್ಯದ ಕೊಡದಂತೆ ತೋರುತ್ತಿದೆ.”

ಸೈಂಧವ ದೇಶದ ವೇಗಶಾಲೀ ಕುದುರೆಗಳನ್ನು ಕಟ್ಟಿದ್ದ ರಥಗಳನ್ನೇರಿ ಆ ವೀರರು ಗಾಳಿ ಅಥವಾ ಪ್ರವಾಹದ ವೇಗದಲ್ಲಿ ಆಶ್ರಮಕ್ಕೆ ಮರಳಿದರು. ಅವರು ಬರುತ್ತಿದ್ದಂತೆಯೇ ಕೀಳು ಧ್ವನಿಯಲ್ಲಿ ಕೂಗುತ್ತ ಒಂದು ನರಿಯು ಅವರ ಎಡಗಡೆಯಿಂದ ಹಾದುಹೋಯಿತು. ಅದರ ಕೂಗನ್ನು ಗುರುತಿಸಿ ಯುಧಿಷ್ಠಿರನು ಭೀಮ-ಧನಂಜಯರಿಗೆ ಹೇಳಿದನು: “ಈ ಪ್ರಾಣಿಯ ಕೂಗನ್ನು ಕೇಳಿದರೆ ಪಾಪಿ ಕುರುಗಳು ನಮ್ಮನ್ನು ಅಪಮಾನಿಸಿ ಘೋರ ಆಕ್ರಮಣವನ್ನು ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ!” ಅವರ ಆಶ್ರಮ ಪ್ರದೇಶವನ್ನು ತಲುಪುತ್ತಿದ್ದಂತೆಯೇ ಅವರು ಪ್ರಿಯ ಕಾಂತೆ ದ್ರೌಪದಿಯ ಬಾಲಕಿ ಧಾತ್ರೋಯಿಕೆಯು ಅಳುತ್ತಿರುವುದನ್ನು ನೋಡಿದರು. ಆಗ ಸಾರಥಿ ಇಂದ್ರಸೇನನು ಅವಸರದಲ್ಲಿ ರಥದಿಂದ ಹಾರಿ ಅವಳ ಬಳಿ ಓಡಿಬಂದು ಹಾಗೆ ಆರ್ತಳಾಗಿ ರೋದಿಸುತ್ತಿರುವ ಧಾತ್ರೋಯಿಕೆಯನ್ನು ಕೇಳಿದನು: “ನೆಲದ ಮೇಲೆ ಬಿದ್ದು ಹೀಗೇಕೆ ರೋದಿಸುತ್ತಿರುವೆ? ಕ್ರೂರಕರ್ಮಿಗಳ್ಯಾರೂ ರಾಜಪುತ್ರಿ ದ್ರೌಪದಿಗೆ ಭಲಾತ್ಕಾರ ಮಾಡಿಲ್ಲ ತಾನೇ?” ಆಗ ಧಾತ್ರೋಯಿಕೆಯು ತನ್ನ ಮುಖವನ್ನು ಒರೆಸಿಕೊಳ್ಳುತ್ತಾ ಇಂದ್ರಸೇನನಿಗೆ ಹೇಳಿದಳು: “ಜಯದ್ರಥನು ಐವರು ಇಂದ್ರರಂತಿರುವವರನ್ನೂ ಕಡೆಗಾಣಿಸಿ ಅವರ ಕೃಷ್ಣೆಯನ್ನು ಅಪಹರಿಸಿಕೊಂಡು ಹೋದ! ಅವರ ಮಾರ್ಗದ ಗುರುತು ಇನ್ನೂ ಹೊಸದಾಗಿದೆ. ಮರ-ಗಿಡಗಳು ತುಂಡಾಗಿದ್ದುದು ಇನ್ನೂ ಮಾಸಿಲ್ಲ. ಶೀಘ್ರವಾಗಿ ತಿರುಗಿ ಹೋಗಿ. ರಾಜಪುತ್ರಿಯು ಬಹುದೂರ ಹೋಗಿರಲಿಕ್ಕಿಲ್ಲ. ಹಿಂಸೆ-ಬೆದರಿಕೆಗಳಿಂದ ಹುಚ್ಚಾಗಿ, ಮುಖ ಕೆಂಪಾಗಿ, ಬುದ್ಧಿಕಳೆದುಕೊಂಡು ಅವಳು ತುಪ್ಪತುಂಬಿದ ಆಹುತಿಯ ಹುಟ್ಟನ್ನು ಹೇಗೋ ಹಾಗೆ ಆ ಅನರ್ಹನ ದೇಹವನ್ನು ಸುಟ್ಟುಹಾಕುವ ಮೊದಲೇ ಹೋಗಿ! ಉರಿಯುತ್ತಿರುವ ಬೆಂಕಿಯಲ್ಲಿ ಹವಿಸ್ಸನ್ನು ಸುರಿಯುವ ಮೊದಲೇ, ಶ್ಮಶಾನದಲ್ಲಿ ಮಾಲೆಗಳನ್ನು ಹರಡುವುದರ ಮೊದಲೇ, ಅದ್ವರದಲ್ಲಿ ಹವನ ಕುಂಡದಲ್ಲಿರುವ ಸೋಮವನ್ನು ನಾಯಿಯು ನೆಕ್ಕುವುದರ ಮೊದಲೇ ಹೋಗಿ! ನಿಮ್ಮ ಆ ಪ್ರಿಯೆಯ ಸುಂದರ ಮುಖವನ್ನು ಯಾವುದೋ ಕೆಲಸಕ್ಕೆ ಬಾರದವನು ನೈವೇದ್ಯಕ್ಕೆ ಇಟ್ಟಿರುವ ಭಕ್ಷ್ಯವನ್ನು ನಾಯಿಯು ಮುಟ್ಟುವ ಹಾಗೆ ಮುಟ್ಟುವ ಮೊದಲೇ ಈ ಮಾರ್ಗದ ಕುರುಹುಗಳನ್ನು ಹಿಡಿದು ಶೀಘ್ರವಾಗಿ ಕಾಲವು ತಪ್ಪಿಹೋಗುವುದರ ಮೊದಲೇ ಹೋಗಿ!”

ಯುಧಿಷ್ಠಿರನು ಹೇಳಿದನು: “ಭದ್ರೇ! ಸುಮ್ಮನಾಗು ಮತ್ತು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೋ! ನಮ್ಮೆದುರು ಕ್ರೂರವಾಗಿ ಈ ರೀತಿ ಮಾತನಾಡಬೇಡ! ಅವರು ರಾಜರಾಗಿರಲಿ ಅಥವಾ ರಾಜಪುತ್ರರಾಗಿರಲಿ, ವಂಚನೆಗೆ ಫಲವನ್ನು ಬಲವಾಗಿಯೇ ಪಡೆಯುತ್ತಾರೆ!” ಇಷ್ಟನ್ನು ಹೇಳಿ ಅವರು ಶೀಘ್ರವಾಗಿ ಕುರುಹುಗಳನ್ನೇ ಅನುಸರಿಸಿ ಬೇಟೆಯ ಹುಲಿಯಂತೆ ಪುನಃ ಪುನಃ ಏದುಸಿರು ಬಿಡುತ್ತಾ ಮಹಾಧನುಸ್ಸುಗಳ ಶಿಂಜನಿಯನ್ನು ಸೆಳೆಯುತ್ತಾ ಹೋದರು.

ಸೇನೆಯ ಕುದುರೆಗಳ ಖುರಗಳಿಂದ ಮೇಲೆದ್ದ ಧೂಳನ್ನು ಪ್ರವೇಶಿಸುತ್ತಿದ್ದಂತೆಯೇ ಪದಾತಿಗಳ ಮಧ್ಯದಲ್ಲಿ ಹೋಗುತ್ತಿದ್ದ ಧೌಮ್ಯನು ಭೀಮಸೇನನಿಗೆ “ಆಕ್ರಮಣಮಾಡು!” ಎಂದು ಕೂಗಿ ಹೇಳಿದನು. ಕುಶಲಾಗಿರು ಎಂದು ಧೌಮ್ಯನಿಗೆ ಹೇಳಿ ಆ ರಾಜಪುತ್ರರು ಹಸೀ ಮಾಂಸದ ತುಂಡನ್ನು ಕಂಡ ಗಿಡುಗಗಳಂತೆ ವೇಗವಾಗಿ ಆ ಸೇನೆಯ ಮೇಲೆರಗಿದರು. ಜಯದ್ರಥನನ್ನೂ ಮತ್ತು ಅವನ ರಥದಲ್ಲಿ ನಿಂತಿದ್ದ ಪ್ರಿಯೆ ದ್ರೌಪದಿಯನ್ನೂ ನೋಡಿ ಸಿಟ್ಟಾಗಿ ಆ ಐವರು ಪಾಂಡವರೂ ಒಟ್ಟಾಗಿ ಸಿಂಧುರಾಜನನ್ನು ಕೂಗಿ ಗರ್ಜಿಸಲು ಶತ್ರುಗಳೆಲ್ಲರೂ ಮೂರ್ಛಿತರಾದರು.

ಆ ಕುರುಪುಂಗವರ ಧ್ವಜಗಳ ತುದಿಯನ್ನು ಕಂಡ ದುರಾತ್ಮ ರಾಜಾ ಜಯದ್ರಥನು ತನ್ನ ರಥದಲ್ಲಿ ಹತಾಶಳಾಗಿ ನಿಂತಿದ್ದ ದ್ರೌಪದಿಗೆ ಹೇಳಿದನು: “ಕೃಷ್ಣೇ! ಈ ಐದು ಮಹಾರಥಗಳಲ್ಲಿ ಬರುತ್ತಿರುವವರು ನಿನ್ನ ಪತಿಗಳೇ ಇರಬೇಕು. ಅವರನ್ನು ಚೆನ್ನಾಗಿ ತಿಳಿದುಕೊಂಡಿರುವ ನೀನು ರಥದಲ್ಲಿರುವ ಪಾಂಡವರು ಯಾರು ಯಾರೆಂದು ಹೇಳು.”

ದ್ರೌಪದಿಯು ಹೇಳಿದಳು: “ಮೂಢ! ಈ ಹೊಲಸಾದ ಅತಿಘೋರ ಕರ್ಮವನ್ನೆಸಗಿ ಈಗ ಆ ಮಹಾಧನ್ವಿಗಳನ್ನು ಗುರುತಿಸುವುದರಿಂದ ನಿನಗೇನಾಗುತ್ತದೆ? ಒಟ್ಟಾಗಿ ಇಲ್ಲಿಗೆ ಬಂದಿರುವ ನನ್ನ ಪತಿಗಳು ಯುದ್ಧದಲ್ಲಿ ನಿಮ್ಮನ್ನು ಯಾರನ್ನೂ ಉಳಿಸುವುದಿಲ್ಲ! ಯಾವ ಧ್ವಜಾಗ್ರದಲ್ಲಿ ನಂದ-ಉಪನಂದ ಎಂಬ ಮೃದಂಗಗಳು ಮೊಳಗುತ್ತಿರುವುದು ಕಾಣುತ್ತಿದೆಯೋ ಆ ರಥದಲ್ಲಿ ಕುಳಿತಿರುವ ಪುಟವಿಟ್ಟ ಚಿನ್ನದ ಬಣ್ಣದ ನೀಳ ತೆಳು ಮೂಗನ್ನುಳ್ಳ ಅಗಲಗಣ್ಣಿನ ಆ ನನ್ನ ಪತಿಯು ಕುರುಶ್ರೇಷ್ಠತಮ ಧರ್ಮಸುತ ಯುಧಿಷ್ಠಿರ! ಶರಣಾಗತನಾದ ಶತ್ರುವಿಗೂ ಆ ನನ್ನ ಧರ್ಮಚಾರೀ ವೀರನು ಪ್ರಾಣಗಳನ್ನು ಕೊಡುತ್ತಾನೆ. ಮೂಢ! ನಿನ್ನ ಒಳ್ಳೆಯದಕ್ಕಾಗಿ ಶಸ್ತ್ರಗಳನ್ನು ತೊರೆದು ಕೈಮುಗಿದು ಅವನಿದ್ದಲ್ಲಿಗೆ ಬೇಗ ಓಡು!

“ಈಗ ಇನ್ನೊಂದು ರಥದಲ್ಲಿರುವ ಶಾಲದಂತೆ ಬೆಳೆದಿರುವ ಆ ಮಹಾಭುಜನನ್ನು ನೋಡುತ್ತಿರುವೆಯಲ್ಲಾ? ತುಟಿಗಳನ್ನು ಬಿಗಿದು ಹುಬ್ಬುಗಳನ್ನು ಗಂಟಿಕ್ಕಿರುವ ಅವನೇ ವೃಕೋದರನೆಂಬ ನನ್ನ ಪತಿ. ಇವನ ಕೃತ್ಯಗಳು ಅಮಾನುಷವಾದವುಗಳು. ಇವನ ಕೂಗು ಈ ಭೂಮಿಯಲ್ಲೆಲ್ಲಾ ಭೀಮ ಎಂದೇ ಪ್ರಖ್ಯಾತಗೊಂಡಿದೆ! ಅಪರಾಧಿಗಳನ್ನ್ಯಾರನ್ನೂ ಇವನು ಉಳಿಸುವುದಿಲ್ಲ. ವೈರಿಗಳನ್ನು ಎಂದೂ ಮರೆಯುವುದಿಲ್ಲ. ವೈರಕ್ಕೆ ಅಂತ್ಯವನ್ನು ನೀಡಿದ ನಂತರವೂ ತಕ್ಷಣವೇ ಇವನು ತಣ್ಣಗಾಗುವುದಿಲ್ಲ.

“ಮೃದು, ಉದಾರಿ, ಧೃತವಂತ, ಯಶಸ್ವಿ, ಜಿತೇಂದ್ರಿಯ, ವೃದ್ಧಸೇವಿ, ನರವೀರ, ಯುಧಿಷ್ಠಿರನ ತಮ್ಮನೂ ಶಿಷ್ಯನೂ ಆದ ಧನಂಜಯನೆನ್ನುವ ಇವನು ನನ್ನ ಪತಿ. ಕಾಮವಾಗಲೀ, ಭಯವಾಗಲೀ, ಲೋಭವಾಗಲೀ ಇವನನ್ನು ಧರ್ಮತ್ಯಾಗಿಯನ್ನಾಗಲೀ ಕ್ರೂರಕರ್ಮಿಯನ್ನಾಗಲೀ ಮಾಡಲಾರವು. ತೇಜಸ್ಸಿನಲ್ಲಿ ವೈಶ್ವಾನರನ ಸಮನಾಗಿರುವ ಈ ಕುಂತೀಸುತನು ಶತ್ರುಗಳನ್ನು ಚೆನ್ನಾಗಿ ಕಡೆಯುತ್ತಾನೆ.

“ಸರ್ವಧರ್ಮಾರ್ಥವಿಷಯಗಳನ್ನು ತಿಳಿದಿರುವ, ಭಯಾರ್ತರ ಭಯವನ್ನು ಅಪಹರಿಸುವ, ಭೂಮಿಯಲ್ಲಿ ಉತ್ತಮ ರೂಪಿಯೆಂದು ಕರೆಯಲ್ಪಡುವ, ಎಲ್ಲ ಪಾಂಡವರಿಂದಲೂ ರಕ್ಷಿತನಾಗಿರುವ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿರುವ ಮತ್ತು ಹಾಗೆಯೇ ನಡೆದುಕೊಳ್ಳುವ ಆ ವೀರ ಬುದ್ಧಿವಂತನೇ ನನ್ನ ಪತಿ ನಕುಲ. 

“ಲಘು-ಚಳಕದ ಕೈಯುಳ್ಳ ಖಡ್ಗಯೋಧೀ ಮಹಾಧೀಮಂತ ಆ ಅದ್ವಿತೀಯನು ಸಹದೇವ! ಈ ಶೂರ, ಕೃತಾಸ್ತ್ರ, ಮತಿವಂತ ಮನೀಷಿಯು ರಾಜ ಧರ್ಮಸುತನ ಪ್ರಿಯಂಕರ. ಇವನು ತೇಜಸ್ಸಿನಲ್ಲಿ ಸೂರ್ಯ-ಚಂದ್ರರ ಸಮಾನ. ಪಾಂಡವರಿಗೆ ಅತಿಕಿರಿಯ ಮತ್ತು ಪ್ರಿಯನಾದವನು. ಬುದ್ಧಿಯಲ್ಲಿ ಇವನ ಸಮಾನ ನರನು ಗೊತ್ತಿಲ್ಲ. ಸತ್ಸಂಗದಲ್ಲಿ ವಿನಿಶ್ಚಯಗಳನ್ನು ತಿಳಿದವನಂತೆ ಮಾತನಾಡುತ್ತಾನೆ. ಇವನು ಅಗ್ನಿಯನ್ನು ಪ್ರವೇಶಿಸಿ ತನ್ನ ಪ್ರಾಣವನ್ನಾದರೂ ತ್ಯಜಿಸಿಯಾನು ಆದರೆ ಧರ್ಮಕ್ಕೆ ಹೊರತಾಗಿ ನಡೆದುಕೊಳ್ಳುವುದಿಲ್ಲ. ಸದಾ ಕ್ಷತ್ರಧರ್ಮದಲ್ಲಿ ಮನಸ್ಸಿಟ್ಟು ನಡೆದುಕೊಳ್ಳುವ ಈ ನರವೀರನನ್ನು ಕುಂತಿಯು ತನ್ನ ಪ್ರಾಣಗಳಿಗಿಂತಲೂ ಅಧಿಕವಾಗಿ ಕಾಣುತ್ತಾಳೆ.

“ಸಾಗರದ ಕೊನೆಯಲ್ಲಿ ಮಕರದ ಬೆನ್ನಿಗೆ ಸಿಲುಕಿ ಒಡೆದುಹೋಗುವ ರತ್ನಗಳಿಂದ ತುಂಬಿದ ನಾವೆಯಂತೆ ನಿನ್ನ ಈ ಸೇನೆಯ ಎಲ್ಲ ಯೋಧರೂ ಪಾಂಡುಪುತ್ರರಿಂದ ಹತರಾಗಿ ನಾಶವಾಗುವುದನ್ನು ನೀನು ನೋಡುವೆ! ಯಾರನ್ನು ನೀನು ಅಪಮಾನಿಸಲು ತೊಡಗಿದ್ದೀಯೋ ಅವರ ಕುರಿತು ಹೇಳಿದ್ದಾಯಿತು. ಏನೂ ತಾಗದೇ ಇವರಿಂದ ನಿನ್ನ ದೇಹವನ್ನು ಉಳಿಸಿಕೊಂಡಿದ್ದೇ ಆದರೆ ನೀನು ಬದುಕಿದ್ದೂ ಪುನರ್ಜೀವನವನ್ನು ಪಡೆದಂತೆ!”

ಆಗ ಐವರು ಇಂದ್ರರಂತಿದ್ದ ಪಂಚಪಾರ್ಥರು ಕೈಮುಗಿದು ನಡುಗುತ್ತಿದ್ದ ಪದಾತಿಗಳನ್ನು ಬಿಟ್ಟು ಕ್ರುದ್ಧರಾಗಿ ರಥಾನೀಕರ ಮೇಲೆ ಶರಗಳ ಮಳೆಯನ್ನು ಸುರಿಸಿ ಎಲ್ಲೆಡೆಯಲ್ಲಿಯೂ ಅಂಧಕಾರಕವಿಯುವಂತೆ ಮಾಡಿದರು. “ಗಟ್ಟಿಯಾಗಿ ನಿಂತು ಅವರನ್ನು ಸುತ್ತುವರೆದು ಪ್ರಹರಿಸಿ!” ಎಂದು ಜಯದ್ರಥನು ಇತರ ರಾಜರನ್ನು ಪ್ರಚೋದಿಸಿದನು. ರಣದಲ್ಲಿ ಭೀಮಾರ್ಜುನರು ಮತ್ತು ಯುಧಿಷ್ಠಿರನೊಡನೆ ಯಮಳರನ್ನು ಕಂಡು ಸೇನೆಯಲ್ಲಿ ಘೋರತರ ಶಬ್ಧವು ಒಂದೇ ಸಮನೆ ಕೇಳಿಬರುತ್ತಿತ್ತು. ವ್ಯಾಘ್ರದಂತೆ ಬಲೋತ್ಕಟರಾಗಿದ್ದ ಅವರನ್ನು ನೋಡಿ ಅಲ್ಲಿದ್ದ ಶಿಬಿ-ಸಿಂಧು-ತ್ರಿಗರ್ತರು ವಿಷಾದಗೊಂಡರು. ಉಕ್ಕಿನ ಎರಕವನ್ನು ಹಾಕಿದ್ದ, ಹೇಮಚಿತ್ರದಂತೆ ಹೊಳೆಯುತ್ತಿದ್ದ ಮಹಾಗದೆಯನ್ನು ಹಿಡಿದು ಭೀಮನು ಸೈಂಧವನಲ್ಲಿಗೆ ಓಡಿ ಬರುತ್ತಿರುವಾಗ ಕೋಟಿಕಾಶ್ವನು ಅವರಿಬ್ಬರ ಮಧ್ಯೆ ರಥಗಳ ಮಹಾಸಾಲೊಂದನ್ನು ತಂದಿರಿಸಿ ಭೀಮನನ್ನು ತಡೆದನು. ಅವನು ಹಲವಾರು ಶಕ್ತಿ-ತೋಮರ-ಉಕ್ಕಿನ ಶರಗಳನ್ನು ಸುರಿದರೂ ಭೀಮನು ವಿಚಲಿತನಾಗಲಿಲ್ಲ. ಅವನು ಸೈಂಧವನ ಧ್ವಜದ ಮುಂದೆಯೇ ಒಂದು ಆನೆಯನ್ನು, ಅದನ್ನು ಏರಿದವನನ್ನು ಮತ್ತು ಹದಿನಾಲ್ಕು ಪದಾತಿಗಳನ್ನು ಹೊಡೆದುರುಳಿಸಿದನು. ಐದುನೂರು ಶೂರ ಮಹಾರಥಿ ಪರ್ವತವಾಸಿಗಳನ್ನು ಸಂಹರಿಸಿ ಭೀಮನು ಜಯದ್ರಥನನ್ನು ಸಮೀಪಿಸಿದನು.

ಅದೇ ಸಮಯದಲ್ಲಿ ರಾಜಾ ಯುಧಿಷ್ಠಿರನು ನಿಮಿಷಮಾತ್ರದಲ್ಲಿ ನೂರು ಸುವೀರಪ್ರಮುಖರನ್ನು ಸಂಹರಿಸಿದನು. ಅಲ್ಲಿಯೇ ನಕುಲನು ರಥದಿಂದ ಧುಮುಕಿ ಖಡ್ಗವನ್ನು ಬೀಸಿ ಆನೆಗಳ ಪಾದರಕ್ಷಕರ ಶಿರಗಳನ್ನು ಬೀಜಗಳಂತೆ ತೂರಿದನು. ಸಹದೇವನಾದರೋ ರಥದಲ್ಲಿಯೇ ನಿಂತು ಉಕ್ಕಿನ ಈಟಿಗಳಿಂದ ನವಿಲುಗಳನ್ನು ಮರಗಳಿಂದ ಕೆಳಗುರುಳಿಸುವಂತೆ ರಥಗಳಿಂದ ಶತ್ರುಗಳನ್ನು ಹೊಡೆದು ಬೀಳಿಸಿದನು.

ಆಗ ಗದಾಚತುರನಾಗಿದ್ದ ತ್ರಿಗರ್ತನು ಧನುಸ್ಸಿನೊಂದಿಗೆ ಮಹಾರಥದಿಂದ ಕೆಳಕ್ಕಿಳಿದು ಧರ್ಮರಾಜನ ಕುದುರೆಗಳನ್ನು ಹೊಡಿದುರುಳಿಸಿದನು. ಅದಕ್ಕೆ ಪ್ರತಿಯಾಗಿ ಯುಧಿಷ್ಠಿರನು ಬಾಣದಿಂದ ಅವನ ಎದೆಗೆ ಹೊಡೆಯಲು ಅವನು ಹೃದಯವೊಡೆದು ರಕ್ತಕಾರಿ ಬೇರುಕಡಿದ ಮರದಂತೆ ಯುಧಿಷ್ಠಿರನ ಎದುರೇ ಬಿದ್ದನು. ತನ್ನ ಕುದುರೆಗಳನ್ನು ಕಳೆದುಕೊಂಡ ಯುಧಿಷ್ಠಿರನು ಇಂದ್ರಸೇನನ ಸಹಾಯದಿಂದ ಕೆಳಗಿಳಿದು ಸಹದೇವನ ಮಹಾರಥವನ್ನೇರಿದನು.

ಅಷ್ಟರಲ್ಲಿ ಕ್ಷೇಮಂಕರ-ಮಹಾಮಖ ಇಬ್ಬರೂ ನಕುಲನನ್ನು ಎದುರಿಸಿ ಅವನ ಮೇಲೆ ತೀಕ್ಷ್ಣಶರಗಳ ಮಳೆಗಳನ್ನು ಸುರಿಸಿದರು. ಆಗ ಅವರಿಬ್ಬರನ್ನೂ ನಕುಲನು ಒಂದೊಂದು ಬಾಣಗಳಿಂದ ಸಂಹರಿಸಿದನು. ಆಗ ತ್ರಿಗರ್ತರಾಜ ಸುರಥನು ರಥಧ್ವಜವನ್ನು ಹಿಡಿದು ನಿಂತು ಆನೆಯಿಂದ ನಕುಲನ ರಥವನ್ನು ಪುಡಿಮಾಡಿಸಿದನು. ಆದರೆ ನಕುಲನು ಭಯಪಡದೇ ರಥದಿಂದ ಕೆಳಗಿಳಿದು ಖಡ್ಗವನ್ನು ಬೀಸುತ್ತಾ ಗಿರಿಯಂತೆ ಅಚಲನಾಗಿ ನಿಂತುಕೊಂಡನು. ಅವನನ್ನು ವಧಿಸಲು ಸುರಥನು ಕ್ರೋಧದಿಂದ ಸೊಂಡಿಲನ್ನು ಮೇಲೆತ್ತಿ ಬರುತ್ತಿದ್ದ ಒಂದು ಶ್ರೇಷ್ಠ ಆನೆಯನ್ನು ಕಳುಹಿಸಿದನು. ನಕುಲನಾದರೋ ಹತ್ತಿರ ಬರುತ್ತಿದ್ದ ಆ ಆನೆಯ ಸೊಂಡಿಲನ್ನು ದಂತಮೂಲವಾಗಿ ಖಡ್ಗದಿಂದ ಕತ್ತರಿಸಿದನು. ಅಲಂಕೃತಗೊಂಡಿದ್ದ ಆ ಆನೆಯು ಮಹಾನಾದವನ್ನು ಕೂಗಿ ತಲೆಯನ್ನು ಭೂಮಿಯಲ್ಲಿರಿಸಿ ಬಿದ್ದು ಅನೇಕ ಗಜಾರೋಹಿಗಳನ್ನು ಅಪ್ಪಳಿಸಿತು. ಆ ಮಹಾಕೃತ್ಯವನ್ನು ಮಾಡಿದ ನಕುಲನು ಭೀಮಸೇನನ ರಥವನ್ನೇರಿ ಆಶ್ರಯಪಡೆದನು.

ಕೋಟಿಕಾಶ್ಯನೊಂದಿಗೆ ಹೋರಾಡುತ್ತಿದ್ದ ಭೀಮಸೇನನು ಅವನ ಸಾರಥಿಯ ತಲೆಯನ್ನು ಹರಿತ ಕತ್ತಿಯಿಂದ ಕಡಿದುರುಳಿಸಿದನು.  ತನ್ನ ಸೂತನು ಹತನಾದುದೇ ರಾಜನಿಗೆ ತಿಳಿಯಲಿಲ್ಲ. ಸೂತನನ್ನು ಕಳೆದುಕೊಂಡ ಕುದುರೆಗಳು ರಣದಲ್ಲಿ ಎಲ್ಲಾಕಡೆ ಓಡತೊಡಗಿದವು. ಸೂತನನ್ನು ಕಳೆದುಕೊಂಡು ವಿಮುಖನಾದ ಕೋಟಿಕಾಶ್ವನನ್ನು ಭೀಮನು ಚೂಪಾದ ಪ್ರಾಸದಿಂದ ಹೊಡೆದು ಸಂಹರಿಸಿದನು.

ಧನಂಜಯನು ಹರಿತ ಭಲ್ಲಗಳಿಂದ ಎಲ್ಲ ಹನ್ನೆರಡು ಸೌವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿದನು. ರಣದಲ್ಲಿ ಕಣ್ಣಿಗೆ ಬಿದ್ದ ಶಿಬಿ, ಇಕ್ಷ್ವಾಕು, ತ್ರಿಗರ್ತ ಮತ್ತು ಸೈಂಧವ ಪ್ರಮುಖರನ್ನು ಅವನು ಸಂಹರಿಸಿದನು. ರಣರಂಗವು ಶಿರಗಳಿಲ್ಲದ ಶರೀರಗಳಿಂದ ಮತ್ತು ದೇಹಗಳಿಲ್ಲದ ಶಿರಗಳಿಂದ ಮುಚ್ಚಿಹೋಯಿತು. ನಾಯಿ-ಹದ್ದು-ಕಾಗೆ-ಗಿಡುಗ-ನರಿ-ಪಕ್ಷಿಗಳು ಅಲ್ಲಿ ಹತರಾಗಿದ್ದವರ ರಕ್ತ-ಮಾಂಸಗಳ ಔತಣವನ್ನು ಉಂಡವು.

ತನ್ನ ಜೊತೆಗಿದ್ದ ವೀರರು ಹತರಾಗಲು ಜಯದ್ರಥನು ನಡುಗುತ್ತಾ ಕೃಷ್ಣೆಯನ್ನು ರಥದಿಂದ ಕೆಳಗಿಳಿಸಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ವನದ ಕಡೆ ಪಲಾಯನಮಾಡತೊಡಗಿದನು. ಧೌಮ್ಯನೊಂದಿಗೆ ಬರುತ್ತಿದ್ದ ದ್ರೌಪದಿಯನ್ನು ನೋಡಿ ಧರ್ಮರಾಜನು ಅವರನ್ನು ವೀರ ಸಹದೇವನ ರಥದಲ್ಲಿ ತೆಗೆದುಕೊಂಡನು.

ಜಯದ್ರಥನು ಇಲ್ಲದ ಸೇನೆಯನ್ನು ಉಕ್ಕಿನ ಶರಗಳಿಂದ ಪ್ರಹರಿಸುತ್ತಿದ್ದ ಭೀಮಸೇನನನ್ನು ನೋಡಿ ಅರ್ಜುನನು ಅವನನ್ನು ತಡೆದನು: “ಯಾರ ಅಪಚಾರದಿಂದ ನಾವು ಈ ಕೊನೆಯಿಲ್ಲದ ಕ್ಲೇಶವನ್ನು ಪಡೆದಿದ್ದೀವೋ ಆ ಜಯದ್ರಥನನ್ನೇ ನಾನು ಈ ರಣದಲ್ಲಿ ಕಾಣುತ್ತಿಲ್ಲ! ಅವನನ್ನು ಹುಡುಕು! ಈ ಯೋಧರನ್ನು ಕೊಲ್ಲುವುದೇಕೆ? ಇದರಿಂದ ಏನೂ ಪ್ರಯೋಜನವಿಲ್ಲವೆಂದು ನನಗನ್ನಿಸುತ್ತದೆ.”

ಅರ್ಜುನನು ಹೀಗೆ ಹೇಳಲು ಭೀಮಸೇನನು ಯುಧಿಷ್ಠಿರನಿಗೆ ಹೇಳಿದನು: “ಶತ್ರುಗಳು ತಮ್ಮ ನಾಯಕರನ್ನು ಕಳೆದುಕೊಂಡು ದಿಕ್ಕುಪಾಲಾಗಿದ್ದಾರೆ. ನೀನು ದ್ರೌಪದಿಯನ್ನು ಕರೆದುಕೊಂಡು ಹಿಂದಿರುಗು! ಯಮಳರು ಮತ್ತು ಧೌಮ್ಯನೊಂದಿಗೆ ಆಶ್ರಮವನ್ನು ಸೇರಿ ದ್ರೌಪದಿಯನ್ನು ಸಮಾಧಾನಪಡಿಸು. ಈ ಮೂಢ ಜಯದ್ರನು ಇಂದು ನನ್ನಿಂದ ಜೀವಂತ ಉಳಿಯುವುದಿಲ್ಲ!”

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ದುಃಶಲೆ-ಗಾಂಧಾರಿಯರನ್ನು ಗೌರವಿಸಿ ದುರಾತ್ಮನಾಗಿದ್ದರೂ ಸೈಂಧವನನ್ನು ಕೊಲ್ಲಬಾರದು!”

ಇದನ್ನು ಕೇಳಿದ ದ್ರೌಪದಿಯು ವ್ಯಾಕುಲ-ಕೋಪ-ನಾಚಿಕೆಗಳಿಂದ ಕೂಡಿದವಳಾಗಿ ಭೀಮಾರ್ಜುನರಿಗೆ ಹೇಳಿದಳು: “ನನಗೆ ಪ್ರಿಯವಾದುದನ್ನು ಮಾಡಬೇಕೆಂದಿದ್ದರೆ ಆ ಪುರುಷಾಧಮ ದುರ್ಮತಿ ಕುಲಪಾಂಸಕ ಸೈಂಧವನನ್ನು ವಧಿಸಿ! ವೈರತ್ವವಿಲ್ಲದೇ ಭಾರ್ಯೆ-ರಾಜ್ಯಗಳನ್ನು ಅಪಹರಿಸಿದ ವೈರಿಯು ಸಂಗ್ರಾಮದಲ್ಲಿ ಬೇಡಿದರೂ ಜೀವಂತ ಉಳಿಯಬಾರದು!”

ಅವಳು ಹೀಗೆ ಹೇಳಲು ಭೀಮಾರ್ಜುನರಿಬ್ಬರೂ ಸೈಂಧವನನ್ನು ಹಿಂಬಾಲಿಸಿ ಹೋದರು. ಯುಧಿಷ್ಠಿರನು ಪುರೋಹಿತನೊಂದಿಗೆ ಕೃಷ್ಣೆಯನ್ನು ಕರೆದುಕೊಂಡು ಆಶ್ರಮಕ್ಕೆ ಹಿಂದಿರುಗಿದನು. ದಿಂಬು-ಲೋಟಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಆ ಆಶ್ರಮವನ್ನು ಪ್ರವೇಶಿಸಿ ಮಾರ್ಕಂಡೇಯರೇ ಮೊದಲಾದ ವಿಪ್ರರು ಅಲ್ಲಿರುವುದನ್ನು ಅವರು ಕಂಡರು. ಸಿಂಧು-ಸೌವೀರರನ್ನು ಗೆದ್ದು ದ್ರೌಪದಿಯನ್ನು ಪುನಃ ಪಡೆದು ಹಿಂದಿರುಗಿದ ನೃಪನನ್ನು ಕಂಡು ಅವರೆಲ್ಲರೂ ಮುದಿತರಾದರು. ಅವರಿಂದ ಪರಿವೃತನಾದ ರಾಜನು ಅಲ್ಲಿಯೇ ಕುಳಿತುಕೊಳ್ಳಲು ಭಾಮಿನೀ ಕೃಷ್ಣೆಯು ಯಮಳರೊಂದಿಗೆ ಆಶ್ರಮವನ್ನು ಪ್ರವೇಶಿಸಿದಳು.

ಶತ್ರುವು ಕ್ರೋಶಮಾತ್ರ ಹೋಗಿದ್ದಾನೆಂದು ಕೇಳಿದ ಭೀಮಾರ್ಜುನರು ಸ್ವಯಂ ಕುದುರೆಗಳನ್ನೇರಿ ಬೇಗನೆ ಅವನನ್ನು ಹಿಂಬಾಲಿಸಿದರು. ಆಗ ಅರ್ಜುನನು ಅನುಮಂತ್ರಿತ ಶರಗಳನ್ನು ಬಿಟ್ಟು ಸೈಂಧವನ ಕುದುರೆಗಳಿಗೆ ಹೊಡೆದನು. ಕೂಡಲೇ ಅಶ್ವಗಳನ್ನು ಕಳೆದುಕೊಂಡು ಏಕಾಂಗಿಯಾಗಿ ಭೀತನೂ ವ್ಯಾಕುಲನೂ ಆಗಿದ್ದ ಜಯದ್ರಥನಿದ್ದಲ್ಲಿಗೆ ಅವರು ಧಾವಿಸಿ ಬಂದರು. ಆದರೆ ಜಯದ್ರಥನು ವನದ ಕಡೆ ಓಡಿದನು. ಅರ್ಜುನನು ಅವನ ಬೆನ್ನೆತ್ತಿ ಹೋಗಿ ಹೇಳಿದನು: “ಈ ವೀರ್ಯವನ್ನಿಟ್ಟುಕೊಂಡು ಸ್ತ್ರೀಯನ್ನು ಏಕೆ ಬಲಾತ್ಕರಿಸಿ ಕೇಳಿದೆ? ರಾಜಪುತ್ರ! ಹಿಂದೆ ಬಾ! ನಿನಗೆ ಪಲಾಯನವು ಸರಿಯಾದುದಲ್ಲ! ಅನುಚರರನ್ನು ಕೊಲ್ಲಿಸಿ ಶತ್ರುಮಧ್ಯದಲ್ಲಿ ಏಕೆ ಪಲಾಯನ ಮಾಡುತ್ತಿರುವೆ?”

ಆದರೆ ಪಾರ್ಥನ ಈ ಮಾತಿಗೂ ಸೈಂಧವನು ಹಿಂದಿರುಗದೇ ಇರಲು, ಭೀಮನು “ನಿಲ್ಲು! ನಿಲ್ಲು!” ಎಂದು ಕೂಗುತ್ತಾ ಅವನ ಹಿಂದೆ ಓಡಿದನು. “ಅವನನ್ನು ಕೊಲ್ಲಬೇಡ!” ಎಂದು ದಯಾವಂತ ಅರ್ಜುನನು ಅವನಿಗೆ ಕೂಗಿ ಹೇಳಿದನು. ಆಯುಧಗಳನ್ನು ಹಿಡಿದು ಓಡಿ ಬರುತ್ತಿರುವ ಸಹೋದರರನ್ನು ನೋಡಿ ಜಯದ್ರಥನು ಬಹಳ ದುಃಖಿತನಾಗಿದ್ದರೂ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಇನ್ನೂ ಜೋರಾಗಿ ಓಡತೊಡಗಿದನು. ಆಗ ಭೀಮಸೇನನು ರಥದಿಂದ ಹಾರಿ, ಓಡಿಹೋಗುತ್ತಿರುವವನ ಬೆನ್ನೆತ್ತಿ, ಕೋಪದಿಂದ ಅವನ ಕೂದಲನ್ನು ಹಿಡಿದನು. ರೋಷದಿಂದ ಅವನನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದು ಕತ್ತನ್ನು ಹಿಡಿದು ಹೊಡೆಯತೊಡಗಿದನು. ಜಯದ್ರಥನು ಎಚ್ಚೆತ್ತು ಮೇಲೇಳಲು ಪ್ರಯತ್ನಿಸಿ ವಿಲಪಿಸುತ್ತಿರಲು ಭೀಮಸೇನನು ಕಾಲಿನಿಂದ ಅವನ ತಲೆಯನ್ನು ಒದ್ದನು. ತೊಡೆಯಿಂದ ಕೆಳಗೊತ್ತಿ ಮುಷ್ಟಿಯಿಂದ ಅವನು ಹೊಡೆಯಲು ಚೆನ್ನಾಗಿ ಪೆಟ್ಟುತಿಂದು ಪೀಡಿತನಾದ ರಾಜನು ಮೂರ್ಛಿತನಾದನು. ರೋಷದಲ್ಲಿದ್ದ ಭೀಮಸೇನನನ್ನು ಅರ್ಜುನನು ತಡೆದು: “ಕೌರವ! ದುಃಶಲೆಗಾಗಿಯಾದರೂ ರಾಜನು ಹೇಳಿದಂತೆ ಮಾಡು!” ಎಂದು ಹೇಳಿದನು. ಅದಕ್ಕೆ ಭೀಮಸೇನನು ಹೇಳಿದನು: “ಮುಗ್ಧಳಾದ ದ್ರೌಪದಿಯನ್ನು ಬಲಾತ್ಕರಿಸಿದ ಈ ಪಾಪಿ ನರಾಧಮನು ಬದುಕಿರಬಾರದು! ಸತತವೂ ಘೃಣಿಯಾಗಿರುವ ನಮ್ಮ ರಾಜನು ಹೇಳುವುದನ್ನು ನಾನು ಹೇಗೆ ತಾನೇ ಮಾಡಲು ಶಕ್ಯ? ನೀನೂ ಕೂಡ ನಿನ್ನ ಬಾಲಿಶ ಬುದ್ಧಿಯಿಂದ ಸದಾ ನನ್ನನ್ನು ಕಾಡುತ್ತಿರುತ್ತೀಯೆ!” ಹೀಗೆ ಹೇಳಿ ಬೀಮನು ಅರ್ಧಚಂದ್ರದ ಬಾಣವೊಂದರಿಂದ ಜಯದ್ರಥನ ತಲೆಯ ಮೇಲೆ ಐದು ಜುಟ್ಟುಗಳನ್ನು ಮಾತ್ರ ಬಿಟ್ಟು ಬೋಳಿಸಿದನು. ಜಯದ್ರಥನಿಗೆ ಎರಡು ಆಯ್ಕೆಗಳನ್ನಿಟ್ಟು ಹೇಳಿದನು: “ಮೂಢ! ಜೀವಿಸಲು ಇಚ್ಛಿಸುವೆಯಾದರೆ ನಾನು ಹೇಳುವುದನ್ನು ಕೇಳು. ಸಂಸತ್ತು-ಸಭೆಗಳಲ್ಲಿ ನಾನು ದಾಸನೆಂದು ನೀನು ಹೇಳಿಕೊಳ್ಳಬೇಕು. ಹೀಗೆ ಮಾತ್ರ ನಿನ್ನನ್ನು ಬದುಕಿರಲು ಬಿಡುತ್ತೇನೆ. ಇದು ಯುದ್ಧದಲ್ಲಿ ಗೆದ್ದವರ ವಿಧಿ!”

ಪ್ರಾಣಕ್ಕೆ ಕಷ್ಟಬಿದ್ದ ರಾಜಾ ಜಯದ್ರಥನು ಹಾಗೆಯೇ ಆಗಲಿ ಎಂದು ಹೇಳಿದನು. ಅನಂತರ ಭೀಮಾರ್ಜುನರು ಅವನನ್ನು ಹಂದಾಡದಂತೆ ಕಟ್ಟಿ ರಥದಲ್ಲಿ ಏರಿಸಿ ಆಶ್ರಮ ಮಧ್ಯದಲ್ಲಿ ಕುಳಿತಿದ್ದ ಯುಧಿಷ್ಠಿರನಲ್ಲಿಗೆ ಬಂದರು. ಆ ಅವಸ್ಥೆಯಲ್ಲಿದ್ದ ಜಯದ್ರಥನನ್ನು ನೋಡಿ ನಕ್ಕು “ಇವನನ್ನು ಬಿಟ್ಟುಬಿಡಿ!” ಎಂದು ಯುಧಿಷ್ಠಿರನು ಹೇಳಿದನು. ಆಗ ಭೀಮನು ಹೇಳಿದನು: “ಈ ಪಾಪಚೇತನನು ಪಾಂಡವರ ದಾಸನಾಗಿದ್ದಾನೆಂದು ದ್ರೌಪದಿಗೆ ಹೇಳು!” ಆಗ ಹಿರಿಯಣ್ಣನು ಮೃದವಾಗಿ ಈ ಮಾತುಗಳನ್ನಾಡಿದನು: “ನನ್ನ ಮಾತುಗಳೇ ಪ್ರಮಾಣವೆಂದಾದರೆ ಈ ಅಧಮಾಚಾರನನ್ನು ಬಿಟ್ಟುಬಿಡು!”

ಆಗ ಯುಧಿಷ್ಠಿರನನ್ನು ನೋಡಿ ದ್ರೌಪದಿಯು ಭೀಮನಿಗೆ ಹೇಳಿದಳು: “ರಾಜನ ದಾಸನನ್ನು ಬಿಡುಗಡೆಮಾಡು! ಐದು ಜುಟ್ಟುಗಳನ್ನು ಮಾಡಿದ್ದೀಯೆ! ಸಾಕು!” ಬಿಡುಗಡೆಹೊಂದಿದ ಜಯದ್ರಥನು ಯುಧಿಷ್ಠಿರನ ಬಳಿಹೋಗಿ ವಂದಿಸಿದನು. ಘೃಣೀ ಧರ್ಮಪುತ್ರ ಯುಧಿಷ್ಠಿರನು ಅರ್ಜುನನು ಹಿಡಿದು ನಿಲ್ಲಿಸಿದ್ದ ಜಯದ್ರಥನಿಗೆ ಹೇಳಿದನು: “ಅದಾಸನಾಗಿ ಹೋಗು! ಮುಕ್ತನಾಗಿದ್ದೀಯೆ! ಕ್ಷುದ್ರನಾದ ನಿನಗೆ ಮತ್ತು ನಿನ್ನ ಸಹಾಯಕರಿಗೆ ಧಿಕ್ಕಾರ! ನಿನ್ನಂಥಹ ನರಾಧಮನಲ್ಲದೇ ಬೇರೆ ಯಾರು ಈ ರೀತಿ ಮಾಡುತ್ತಿದ್ದರು?” ಅಶುಭವನ್ನೆಸಗಿದ ಅವನ ಸತ್ತ್ವವು ಹೊರಟುಹೋಗಿದೆಯೆಂದು ತಿಳಿದು ಯುಧಿಷ್ಠಿರನಿಗೆ ಅವನ ಮೇಲೆ ಕೃಪೆಯುಂಟಾಯಿತು. “ಬುದ್ಧಿವಂತನೇ! ನಿನ್ನ ಧರ್ಮವನ್ನು ಹೆಚ್ಚಿಸಿಕೋ! ಅಧರ್ಮಕ್ಕೆ ಮನಸ್ಸನ್ನು ತೊಡಗಿಸಬೇಡ! ಜಯದ್ರಥ! ಮಂಗಳವಾಗಲಿ! ಅಶ್ವ-ರಥ-ಪದಾತಿಗಳೊಡನೆ ಹೋಗು!”

ಇದನ್ನು ಕೇಳಿ ತುಂಬಾ ನಾಚಿಕೊಂಡು ಸುಮ್ಮನಾಗಿ ಮುಖವನ್ನು ತಗ್ಗಿಸಿಕೊಂಡು ದುಃಖಾರ್ತ ಜಯದ್ರಥನು ಗಂಗಾದ್ವಾರಕ್ಕೆ ಹೋದನು. ಅಲ್ಲಿ ಅವನು ವಿರೂಪಾಕ್ಷ ಉಮಾಪತಿ ದೇವನಿಗೆ ಶರಣು ಹೊಕ್ಕು ವಿಪುಲ ತಪಸ್ಸನ್ನು ನಡೆಸಿದನು. ವೃಷಭಧ್ವಜನು ಅವನ ಮೇಲೆ ಪ್ರೀತನಾಗಿ, ಸ್ವಯಂ ತಾನೇ ಹೋಗಿ ಅವನಿಂದ ಬಲಿಯನ್ನು ಸ್ವೀಕರಿಸಿ, ವರವನ್ನಿತ್ತನು. ಜಯದ್ರಥನು ಈ ವರವನ್ನು ಕೇಳಿದನು: “ಯುದ್ಧದಲ್ಲಿ ಐವರು ರಥಿಕ ಪಾಂಡವರೆಲ್ಲರನ್ನೂ ನಾನು ಜಯಿಸುವಂತಾಗಲಿ!” ಇದಕ್ಕೆ ದೇವನು “ಹಾಗೆ ಆಗುವುದಿಲ್ಲ! ದೇವತೆಗಳಿಗೂ ದುರಾಸದನಾದ ಮಹಾಬಾಹು ಅರ್ಜುನನನ್ನು ಬಿಟ್ಟು ಅಜೇಯರೂ ಅವಧ್ಯರೂ ಆದ ಅವರನ್ನು ನೀನು ಯುದ್ಧದಲ್ಲಿ ತಡೆಯಬಲ್ಲೆ! ಆ ದೇವ ಶಂಖಚಕ್ರಗದಾಧರ ಕೃಷ್ಣನಿಂದ ಅವನು ರಕ್ಷಿತನಾಗಿದ್ದಾನೆ!” ಎಂದು ಹೇಳಿದನು. ಇದನ್ನು ಕೇಳಿದ ಜಯದ್ರಥನು ತನ್ನ ಭವನಕ್ಕೆ ತೆರಳಿದನು. ಪಾಂಡವರು ಆ ಕಾಮ್ಯಕ ವನದಲ್ಲಿಯೇ ವಾಸಿಸಿದರು.

ದ್ರೌಪದೀಹರಣದ ಪ್ರಕರಣದ ನಂತರ ಮಾರ್ಕಂಡೇಯ ಮುನಿಯು ಯುಧಿಷ್ಠಿರನಿಗೆ ರಾಮೋಪಾಽಖ್ಯಾನ ಮತ್ತು ಸಾವಿತ್ರ್ಯುಪಾಖ್ಯಾನಗಳನ್ನು ವರ್ಣಿಸಿದನು.

Leave a Reply

Your email address will not be published. Required fields are marked *