Udyoga Parva: Chapter 165

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೫

ಭೀಷ್ಮನಿಂದ ಕರ್ಣನ ತೇಜೋವಧೆ, ಭೀಷ್ಮನಿರುವವರೆಗೆ ಯುದ್ಧ ಮಾಡುವುದಿಲ್ಲವೆಂದು ಕರ್ಣನ ಪ್ರತಿಜ್ಞೆ

ಗಾಂಧಾರರಾದ ಅಚಲ-ವೃಷಕರು ರಥರೆಂದು ಹೇಳಿ ಕರ್ಣನು ರಥನೂ ಅಲ್ಲ ಅತಿರಥನೂ ಅಲ್ಲವೆಂದು ಭೀಷ್ಮನು ನುಡಿಯಲು ದ್ರೋಣನೂ ಅದಕ್ಕೆ ಸಮ್ಮತಿ ನೀಡಿದುದು (೧-೮). ಅದನ್ನು ಕೇಳಿದ ಕರ್ಣನು ಭೀಷ್ಮನನ್ನು ಹಳಿದು “ಗಾಂಗೇಯನು ಜೀವಿತನಾಗಿರುವಾಗ ಎಂದೂ ನಾನು ಯುದ್ದಮಾಡುವುದಿಲ್ಲ!” ಎಂದು ನುಡಿದುದು (೯-೨೭).

05165001 ಭೀಷ್ಮ ಉವಾಚ|

05165001a ಅಚಲೋ ವೃಷಕಶ್ಚೈವ ಭ್ರಾತರೌ ಸಹಿತಾವುಭೌ|

05165001c ರಥೌ ತವ ದುರಾಧರ್ಷೌ ಶತ್ರೂನ್ವಿಧ್ವಂಸಯಿಷ್ಯತಃ||

ಭೀಷ್ಮನು ಹೇಳಿದನು: “ಅಚಲ ಮತ್ತು ವೃಷಕ ಇಬ್ಬರು ಸಹೋದರರೂ ಒಟ್ಟಿಗೇ ರಥರು. ದುರಾಧರ್ಷರು. ನಿನ್ನ ಶತ್ರುಗಳನ್ನು ವಿಧ್ವಂಸಮಾಡುತ್ತಾರೆ.

05165002a ಬಲವಂತೌ ನರವ್ಯಾಘ್ರೌ ದೃಢಕ್ರೋಧೌ ಪ್ರಹಾರಿಣೌ|

05165002c ಗಾಂಧಾರಮುಖ್ಯೌ ತರುಣೌ ದರ್ಶನೀಯೌ ಮಹಾಬಲೌ||

ಅವರಿಬ್ಬರು ಗಾಂಧಾರಮುಖ್ಯರೂ ಬಲವಂತರು, ನರವ್ಯಾಘ್ರರು, ದೃಢಕ್ರೋಧರು, ಪ್ರಹಾರಿಗಳು, ತರುಣರು, ದರ್ಶನೀಯರು ಮತ್ತು ಮಹಾಬಲಿಗಳು.

05165003a ಸಖಾ ತೇ ದಯಿತೋ ನಿತ್ಯಂ ಯ ಏಷ ರಣಕರ್ಕಶಃ|

05165003c ಪ್ರೋತ್ಸಾಹಯತಿ ರಾಜನ್ಸ್ತ್ವಾಂ ವಿಗ್ರಹೇ ಪಾಂಡವೈಃ ಸಹ||

05165004a ಪರುಷಃ ಕತ್ಥನೋ ನೀಚಃ ಕರ್ಣೋ ವೈಕರ್ತನಸ್ತವ|

05165004c ಮಂತ್ರೀ ನೇತಾ ಚ ಬಂಧುಶ್ಚ ಮಾನೀ ಚಾತ್ಯಂತಮುಚ್ಚ್ರಿತಃ||

05165005a ಏಷ ನೈವ ರಥಃ ಪೂರ್ಣೋ ನಾಪ್ಯೇವಾತಿರಥೋ ನೃಪ|

ರಾಜನ್! ನೃಪ! ನಿನ್ನ ಆ ಪ್ರೀತಿಯ ಸಖ, ನಿತ್ಯವೂ ಯುದ್ಧದ ಕೂಗನ್ನು ಕೂಗುವ, ಪಾಂಡವರೊಂದಿಗೆ ಜಗಳವಾಡಲು ನಿನ್ನನ್ನು ಪ್ರೋತ್ಸಾಹಿಸುತ್ತಿರುವ, ಪೌರುಷದ ಮಾತುಗಳನ್ನು ಕೊಚ್ಚುವ, ನಿನ್ನ ಮಂತ್ರಿ, ನೇತಾ, ಬಂಧು, ಸೊಕ್ಕಿನವ, ಅತ್ಯಂತ ಉಚ್ಛ್ರಿತನಾಗಿರುವ ನೀಚ ವೈಕರ್ತನ ಕರ್ಣನು ಪೂರ್ಣ ರಥನೂ ಅಲ್ಲ, ಅತಿರಥನೂ ಅಲ್ಲ.

05165005c ವಿಯುಕ್ತಃ ಕವಚೇನೈಷ ಸಹಜೇನ ವಿಚೇತನಃ|

05165005e ಕುಂಡಲಾಭ್ಯಾಂ ಚ ದಿವ್ಯಾಭ್ಯಾಂ ವಿಯುಕ್ತಃ ಸತತಂ ಘೃಣೀ||

ವಿಚೇತನನಾಗಿ ಇವನು ತನ್ನ ಸಹಜ ಕವಚವನ್ನು ಕಳೆದುಕೊಂಡ. ಸತತವೂ ಕರುಣಿಯಾಗಿರುವ ಇವನು ದಿವ್ಯ ಕುಂಡಲಗಳೆರಡನ್ನೂ ಕಳೆದುಕೊಂಡ[1].

05165006a ಅಭಿಶಾಪಾಚ್ಚ ರಾಮಸ್ಯ ಬ್ರಾಹ್ಮಣಸ್ಯ ಚ ಭಾಷಣಾತ್|

05165006c ಕರಣಾನಾಂ ವಿಯೋಗಾಚ್ಚ ತೇನ ಮೇಽರ್ಧರಥೋ ಮತಃ|

05165006e ನೈಷ ಫಲ್ಗುನಮಾಸಾದ್ಯ ಪುನರ್ಜೀವನ್ವಿಮೋಕ್ಷ್ಯತೇ||

ರಾಮನ ಶಾಪದಿಂದ[2] ಮತ್ತು ಬ್ರಾಹ್ಮಣನಾಡಿದಂತೆ, ಕರಣಗಳನ್ನು ಕಳೆದುಕೊಂಡಿದುದರಿಂದ[3] ಇವನು ಅರ್ಧ ರಥನೆಂದು ನನ್ನ ಮತ. ಇವನು ಫಲ್ಗುನನನ್ನು ಎದುರಿಸಿ ಪುನಃ ಜೀವಿತನಾಗಿ ಬರಲಾರ!””

05165007 ಸಂಜಯ ಉವಾಚ|

05165007a ತತೋಽಬ್ರವೀನ್ಮಹಾಬಾಹುರ್ದ್ರೋಣಃ ಶಸ್ತ್ರಭೃತಾಂ ವರಃ|

05165007c ಏವಮೇತದ್ಯಥಾತ್ಥ ತ್ವಂ ನ ಮಿಥ್ಯಾಸ್ತೀತಿ ಕಿಂ ಚನ||

ಸಂಜಯನು ಹೇಳಿದನು: “ಆಗ ಶಸ್ತ್ರಭೃತರಲ್ಲಿ ಶ್ರೇಷ್ಠ ಮಹಾಬಾಹು ದ್ರೋಣನು ಹೇಳಿದನು: “ಇದು ಯಥಾವತ್ತಾಗಿದೆ. ಎಂದೂ ಸುಳ್ಳಾಗುವುದಿಲ್ಲ.

05165008a ರಣೇ ರಣೇಽತಿಮಾನೀ ಚ ವಿಮುಖಶ್ಚೈವ ದೃಶ್ಯತೇ|

05165008c ಘೃಣೀ ಕರ್ಣಃ ಪ್ರಮಾದೀ ಚ ತೇನ ಮೇಽರ್ಧರಥೋ ಮತಃ||

ರಣ ರಣದಲ್ಲಿಯೂ ಈ ಅತಿಮಾನಿಯು ವಿಮುಖನಾಗಿದ್ದುದೇ ಕಂಡುಬಂದಿದೆ. ಕರುಣಿ, ಪ್ರಮಾದೀ ಕರ್ಣನು ಅರ್ಧರಥನೆಂದು ನನ್ನ ಮತವೂ ಹೌದು.”

05165009a ಏತಚ್ಚ್ರುತ್ವಾ ತು ರಾಧೇಯಃ ಕ್ರೋಧಾದುತ್ಫುಲ್ಲಲೋಚನಃ|

05165009c ಉವಾಚ ಭೀಷ್ಮಂ ರಾಜೇಂದ್ರ ತುದನ್ವಾಗ್ಭಿಃ ಪ್ರತೋದವತ್||

ರಾಜೇಂದ್ರ! ಇದನ್ನು ಕೇಳಿದ ರಾಧೇಯನು ಕ್ರೋಧದಿಂದ ಕಣ್ಣುಗಳನ್ನು ದೊಡ್ಡದಾಗಿ ಮಾಡಿಕೊಂಡು ಭೀಷ್ಮನಿಗೆ ಹರಿತ ಕೊಕ್ಕೆಗಳಂತಿರುವ ಈ ಮಾತುಗಳನ್ನಾಡಿದನು:

05165010a ಪಿತಾಮಹ ಯಥೇಷ್ಟಂ ಮಾಂ ವಾಕ್ಶರೈರುಪಕೃಂತಸಿ|

05165010c ಅನಾಗಸಂ ಸದಾ ದ್ವೇಷಾದೇವಮೇವ ಪದೇ ಪದೇ|

“ಪಿತಾಮಹ! ಅನಾಗಸನಾಗಿದ್ದರೂ ನನ್ನನ್ನು ನೀನು ಪದೇ ಪದೇ ದ್ವೇಷದಿಂದಲೋ ಎನ್ನುವಂತೆ ನಿನಗಿಷ್ಟ ಬಂದಹಾಗೆ ಬಾಣಗಳಂತಿರುವ ಮಾತುಗಳಿಂದ ಚುಚ್ಚುತ್ತೀಯೆ.

05165010e ಮರ್ಷಯಾಮಿ ಚ ತತ್ಸರ್ವಂ ದುರ್ಯೋಧನಕೃತೇನ ವೈ||

05165011a ತ್ವಂ ತು ಮಾಂ ಮನ್ಯಸೇಽಶಕ್ತಂ ಯಥಾ ಕಾಪುರುಷಂ ತಥಾ|

05165011c ಭವಾನರ್ಧರಥೋ ಮಹ್ಯಂ ಮತೋ ನಾಸ್ತ್ಯತ್ರ ಸಂಶಯಃ||

ಆದರೆ ದುರ್ಯೋಧನನ ಸಲುವಾಗಿ ನಾನು ಇವೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನಾನೋರ್ವ ಕಾಪುರುಷನಂತೆ ಅಶಕ್ತನೋ ಎನ್ನುವ ರೀತಿಯಲ್ಲಿ ನೀನು ಅಭಿಪ್ರಾಯಪಡುತ್ತಿದ್ದೀಯೆ! ನೀನು ನನ್ನನ್ನು ಅರ್ಧರಥನೆಂದು ತಿಳಿದುಕೊಂಡಿದ್ದೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

05165012a ಸರ್ವಸ್ಯ ಜಗತಶ್ಚೈವ ಗಾಂಗೇಯ ನ ಮೃಷಾ ವದೇ|

05165012c ಕುರೂಣಾಮಹಿತೋ ನಿತ್ಯಂ ನ ಚ ರಾಜಾವಬುಧ್ಯತೇ||

ಗಾಂಗೇಯ! ನೀನು ನಿತ್ಯವೂ ಸರ್ವ ಜಗತ್ತಿನ, ಅದರಲ್ಲೂ ಕುರುಗಳ, ಅಹಿತವನ್ನೇ ಬಯಸುತ್ತೀಯೆ ಎಂದು ಹೇಳಿದರೆ ಸುಳ್ಳಾಗಲಾರದು. ಆದರೆ ರಾಜನಿಗೆ ಇದು ತಿಳಿದಿಲ್ಲ.

05165013a ಕೋ ಹಿ ನಾಮ ಸಮಾನೇಷು ರಾಜಸೂದಾತ್ತಕರ್ಮಸು|

05165013c ತೇಜೋವಧಮಿಮಂ ಕುರ್ಯಾದ್ವಿಭೇದಯಿಷುರಾಹವೇ|

05165013e ಯಥಾ ತ್ವಂ ಗುಣನಿರ್ದೇಶಾದಪರಾಧಂ ಚಿಕೀರ್ಷಸಿ||

ಎಕೆಂದರೆ ಯಾರುತಾನೇ ಸಮನಾಗಿರುವ ಎಲ್ಲರೂ ರಾಜಕರ್ಮಗಳಲ್ಲಿ ತೊಡಗಿರುವಾಗ ಈ ರೀತಿಯ ತೇಜೋವಧೆಯನ್ನು ಮಾಡಿ ಯುದ್ಧದಲ್ಲಿ ಭೇದವನ್ನು ತರುತ್ತಾರೆ? ನಿನ್ನಂತೆಯೇ ಇರುವವರಲ್ಲಿ ಗುಣ ನಿರ್ದೇಶನವನ್ನು ಮಾಡಿ ಅಪರಾಧವೆಸಗುತ್ತಿದ್ದೀಯೆ.

05165014a ನ ಹಾಯನೈರ್ನ ಪಲಿತೈರ್ನ ವಿತ್ತೈರ್ನ ಚ ಬಂಧುಭಿಃ|

05165014c ಮಹಾರಥತ್ವಂ ಸಂಖ್ಯಾತುಂ ಶಕ್ಯಂ ಕ್ಷತ್ರಸ್ಯ ಕೌರವ||

ಕೌರವ! ವಯಸ್ಸಿನಿಂದಾಗಲೀ, ಮುಖದ ಮೇಲೆ ಮೂಡಿದ ನೆರೆಗಳಿಂದಾಗಲೀ, ವಿತ್ತದಿಂದಾಗಲೀ, ಬಂಧುಗಳಿಂದಾಗಲೀ ಕ್ಷತ್ರಿಯರ ಮಹಾರಥತ್ವವನ್ನು ಅಳೆಯಲು ಸಾಧ್ಯವಿಲ್ಲ.

05165015a ಬಲಜ್ಯೇಷ್ಠಂ ಸ್ಮೃತಂ ಕ್ಷತ್ರಂ ಮಂತ್ರಜ್ಯೇಷ್ಠಾ ದ್ವಿಜಾತಯಃ|

05165015c ಧನಜ್ಯೇಷ್ಠಾಃ ಸ್ಮೃತಾ ವೈಶ್ಯಾಃ ಶೂದ್ರಾಸ್ತು ವಯಸಾಧಿಕಾಃ||

ಕ್ಷತ್ರಿಯನು ಬಲದಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ದ್ವಿಜನು ಸಲಹೆಗಳಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ವೈಶ್ಯರು ಧನದಲ್ಲಿ ಮತ್ತು ಶೂದ್ರರು ಅಧಿಕ ವಯಸ್ಸಿನಿಂದ ಶ್ರೇಷ್ಠರೆನಿಸಿಕೊಳ್ಳುತ್ತಾರೆ.

05165016a ಯಥೇಚ್ಚಕಂ ಸ್ವಯಂಗ್ರಾಹಾದ್ರಥಾನತಿರಥಾಂಸ್ತಥಾ|

05165016c ಕಾಮದ್ವೇಷಸಮಾಯುಕ್ತೋ ಮೋಹಾತ್ಪ್ರಕುರುತೇ ಭವಾನ್||

ಕಾಮದ್ವೇಷಗಳಿಗೊಳಗಾಗಿ ಮೋಹದಿಂದ ನೀನು ನಿನಗಿಷ್ಟವಾದ ಹಾಗೆ, ನಿನ್ನ ಗ್ರಹಿಕೆಗೆ ಬಂದ ಹಾಗೆ ರಥರು ಅತಿರಥರೆಂದು ಹೇಳುತ್ತಿದ್ದೀಯೆ.

05165017a ದುರ್ಯೋಧನ ಮಹಾಬಾಹೋ ಸಾಧು ಸಮ್ಯಗವೇಕ್ಷ್ಯತಾಂ|

05165017c ತ್ಯಜ್ಯತಾಂ ದುಷ್ಟಭಾವೋಽಯಂ ಭೀಷ್ಮಃ ಕಿಲ್ಬಿಷಕೃತ್ತವ||

ದುರ್ಯೋಧನ! ಮಹಾಬಾಹೋ! ಸಾಧು! ಸರಿಯಾಗಿ ನೋಡು! ನಿನಗೆ ಕೆಟ್ಟದ್ದನ್ನೇ ಮಾಡುವ ಈ ದುಷ್ಟಭಾವನೆಯ ಭೀಷ್ಮನನ್ನು ತ್ಯಜಿಸು.

05165018a ಭಿನ್ನಾ ಹಿ ಸೇನಾ ನೃಪತೇ ದುಃಸಂಧೇಯಾ ಭವತ್ಯುತ|

05165018c ಮೌಲಾಪಿ ಪುರುಷವ್ಯಾಘ್ರ ಕಿಮು ನಾನಾ ಸಮುತ್ಥಿತಾ||

ನೃಪತೇ! ಭಿನ್ನವಾದ ಸೇನೆಯನ್ನು ಪುನಃ ಜೋಡಿಸುವುದು ಕಷ್ಟವಾಗುತ್ತದೆ. ಪುರುಷವ್ಯಾಘ್ರ! ಇನ್ನು ಬೇರೆ ಬೇರೆಕಡೆಗಳಿಂದ ಬಂದಿರುವ ಸೇನೆಗಳ ಗತಿಯೇನು?

05165019a ಏಷಾಂ ದ್ವೈಧಂ ಸಮುತ್ಪನ್ನಂ ಯೋಧಾನಾಂ ಯುಧಿ ಭಾರತ|

05165019c ತೇಜೋವಧೋ ನಃ ಕ್ರಿಯತೇ ಪ್ರತ್ಯಕ್ಷೇಣ ವಿಶೇಷತಃ||

ಭಾರತ! ಯುದ್ಧದಲ್ಲಿ ದ್ವಂದ್ವವು ಯೋಧರಲ್ಲಿ ಹುಟ್ಟಿಕೊಂಡು ಬಿಟ್ಟಿದೆ. ವಿಶೇಷವಾಗಿ ಇವನು ನಮ್ಮ ಎದುರೇ ತೇಜೋವಧೆಯನ್ನು ಮಾಡುತ್ತಿದ್ದಾನೆ.

05165020a ರಥಾನಾಂ ಕ್ವ ಚ ವಿಜ್ಞಾನಂ ಕ್ವ ಚ ಭೀಷ್ಮೋಽಲ್ಪಚೇತನಃ|

05165020c ಅಹಮಾವಾರಯಿಷ್ಯಾಮಿ ಪಾಂಡವಾನಾಮನೀಕಿನೀಂ||

ರಥರ ವಿಜ್ಞಾನವೆಲ್ಲಿ, ಈ ಅಲ್ಪಚೇತಸ ಭೀಷ್ಮನೆಲ್ಲಿ? ಪಾಂಡವರ ಸೇನೆಗಳನ್ನು ನಾನೊಬ್ಬನೇ ತಡೆಯುತ್ತೇನೆ.

05165021a ಆಸಾದ್ಯ ಮಾಮಮೋಘೇಷುಂ ಗಮಿಷ್ಯಂತಿ ದಿಶೋ ದಶ|

05165021c ಪಾಂಡವಾಃ ಸಹಪಂಚಾಲಾಃ ಶಾರ್ದೂಲಂ ವೃಷಭಾ ಇವ||

ನನ್ನ ಅಮೋಘ ಬಾಣಗಳಿಗೆ ಸಿಲುಕಿ ಪಾಂಚಾಲರೊಂದಿಗೆ ಪಾಂಡವರು ಹುಲಿಯನ್ನು ಕಂಡ ಎತ್ತುಗಳಂತೆ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಾರೆ.

05165022a ಕ್ವ ಚ ಯುದ್ಧವಿಮರ್ದೋ ವಾ ಮಂತ್ರಾಃ ಸುವ್ಯಾಹೃತಾನಿ ವಾ|

05165022c ಕ್ವ ಚ ಭೀಷ್ಮೋ ಗತವಯಾ ಮಂದಾತ್ಮಾ ಕಾಲಮೋಹಿತಃ||

ಯುದ್ಧವಿಮರ್ದರೆಲ್ಲಿ? ಅಥವಾ ಸಲಹೆಗಳ ಉತ್ತಮ ಮಾತುಗಳೆಲ್ಲಿ? ಮತ್ತು ಆಯಸ್ಸು ಕಳೆದ ಮಂದಾತ್ಮ ಕಾಲಮೋಹಿತ ಭೀಷ್ಮನೆಲ್ಲಿ?

05165023a ಸ್ಪರ್ಧತೇ ಹಿ ಸದಾ ನಿತ್ಯಂ ಸರ್ವೇಣ ಜಗತಾ ಸಹ|

05165023c ನ ಚಾನ್ಯಂ ಪುರುಷಂ ಕಂ ಚಿನ್ಮನ್ಯತೇ ಮೋಘದರ್ಶನಃ||

ಇವನು ನಿತ್ಯವೂ ಸರ್ವ ಜಗತ್ತಿನೊಂದಿಗೆ ಸ್ಪರ್ಧಿಸುತ್ತಿರುತ್ತಾನೆ. ಕಣ್ಣು ಕಾಣಿಸದೇ ಇರುವ ಇವನು ಬೇರೆ ಯಾರನ್ನೂ ಪುರುಷನೆಂದು ಮನ್ನಿಸುವುದಿಲ್ಲ.

05165024a ಶ್ರೋತವ್ಯಂ ಖಲು ವೃದ್ಧಾನಾಮಿತಿ ಶಾಸ್ತ್ರನಿದರ್ಶನಂ|

05165024c ನ ತ್ವೇವಾಪ್ಯತಿವೃದ್ಧಾನಾಂ ಪುನರ್ಬಾಲಾ ಹಿ ತೇ ಮತಾಃ||

ವೃದ್ಧರನ್ನು ಕೇಳಬೇಕು ಎಂದು ಶಾಸ್ತ್ರನಿದರ್ಶನವಿರುವುದು ಸತ್ಯ. ಆದರೆ ಅತಿವೃದ್ಧರಾದವರಿಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಪುನಃ ಬಾಲಕರಂತಾಗುತ್ತಾರೆ ಎಂದು ನನಗನ್ನಿಸುತ್ತದೆ.

05165025a ಅಹಮೇಕೋ ಹನಿಷ್ಯಾಮಿ ಪಾಂಡವಾನ್ನಾತ್ರ ಸಂಶಯಃ|

05165025c ಸುಯುದ್ಧೇ ರಾಜಶಾರ್ದೂಲ ಯಶೋ ಭೀಷ್ಮಂ ಗಮಿಷ್ಯತಿ||

ನಾನೊಬ್ಬನೇ ಪಾಂಡವರನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ರಾಜಶಾರ್ದೂಲ! ಆ ಸುಯುದ್ಧದ ಯಶಸ್ಸು ಭೀಷ್ಮನಿಗೆ ಹೋಗುತ್ತದೆ.

05165026a ಕೃತಃ ಸೇನಾಪತಿಸ್ತ್ವೇಷ ತ್ವಯಾ ಭೀಷ್ಮೋ ನರಾಧಿಪ|

05165026c ಸೇನಾಪತಿಂ ಗುಣೋ ಗಂತಾ ನ ತು ಯೋಧಾನ್ ಕಥಂ ಚನ||

ಏಕೆಂದರೆ ನರಾಧಿಪ! ಭೀಷ್ಮನನ್ನು ನೀನು ನಿನ್ನ ಸೇನಾಪತಿಯನ್ನಾಗಿ ನಿಯೋಜಿಸಿದ್ದೀಯೆ. ಹೊಗಳಿಕೆಗಳು ಸೇನಾಪತಿಗೆ ಹೋಗುತ್ತವೆಯೇ ಹೊರತು ಯೋಧರಿಗೆ ಎಂದೂ ಇಲ್ಲ.

05165027a ನಾಹಂ ಜೀವತಿ ಗಾಂಗೇಯೇ ಯೋತ್ಸ್ಯೇ ರಾಜನ್ಕಥಂ ಚನ|

05165027c ಹತೇ ತು ಭೀಷ್ಮೇ ಯೋಧಾಸ್ಮಿ ಸರ್ವೈರೇವ ಮಹಾರಥೈಃ||

ರಾಜನ್! ಗಾಂಗೇಯನು ಜೀವಿತನಾಗಿರುವಾಗ ಎಂದೂ ನಾನು ಯುದ್ದಮಾಡುವುದಿಲ್ಲ! ಭೀಷ್ಮನು ಹತನಾದಾಗ ಸರ್ವ ಮಹಾರಥರೊಂದಿಗೆ ಯುದ್ಧ ಮಾಡುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಭೀಷ್ಮಕರ್ಣಸಂವಾದೇ ಪಂಚಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಭೀಷ್ಮಕರ್ಣಸಂವಾದದಲ್ಲಿ ನೂರಾಅರವತ್ತೈದನೆಯ ಅಧ್ಯಾಯವು.

Image result for indian motifs"

[1] ಬ್ರಾಹ್ಮಣನ ವೇಷದಲ್ಲಿ ಬಂದಿದ್ದ ಇಂದ್ರನಿಗೆ ಕರ್ಣನು ತನ್ನ ಕುಂಡಲ-ಕವಚಗಳನ್ನು ದಾನವನ್ನಾಗಿತ್ತ ವಿಷಯವು ಹಿಂದೆ ಅರಣ್ಯಕ ಪರ್ವದ ಅಧ್ಯಾಯ ೨೯೪ರಲ್ಲಿ ಬಂದಿದೆ.

[2] ಪರಶುರಾಮನು ಕರ್ಣನಿಗಿತ್ತ ಶಾಪದ ಕುರಿತು ವಿಸ್ತಾರವಾಗಿ ಮುಂದೆ ನಾರದನು ಯುಧಿಷ್ಠಿರನಿಗೆ ವರ್ಣಿಸುತ್ತಾನೆ (ಶಾಂತಿ ಪರ್ವ, ಅಧ್ಯಾಯ ೩).

[3] ಓರ್ವ ಬ್ರಾಹ್ಮಣನಿಂದ ಕರ್ಣನಿಗೆ ದೊರಕಿದ ಶಾಪದ ಕುರಿತು ವಿಸ್ತಾರವಾಗಿ ಮುಂದೆ ನಾರದನು ಯುಧಿಷ್ಠಿರನಿಗೆ ಹೇಳುತ್ತಾನೆ (ಶಾಂತಿ ಪರ್ವ, ಅಧ್ಯಾಯ ೨).

Comments are closed.