ಶಾಂತಿ ಪರ್ವ: ರಾಜಧರ್ಮ ಪರ್ವ

ಕರ್ಣನು ಹೇಗೆ ಶಪಿತನಾದನೆನ್ನುವುದನ್ನು ನಾರದನು ಯುಧಿಷ್ಠಿರನಿಗೆ ವಿವರಿಸಲು ಪ್ರಾರಂಭಿಸಿದುದು – ಕ್ಷತ್ರಿಯರನ್ನು ಶಸ್ತ್ರಪೂತರನ್ನಾಗಿಸಲು ದೇವತೆಗಳ ಸಂಕಲ್ಪದಂತೆ ಕುಂತಿಯಲ್ಲಿ ದೇವಗರ್ಭನಾಗಿದ್ದ ಕರ್ಣನಿಗೆ ಸೂತಪುತ್ರತ್ವ ಪ್ರಾಪ್ತಿಯಾದುದು (೧-೫). ಅರ್ಜುನನನ್ನು ಮೀರಿಸಬೇಕೆಂಬ ಆಸೆಯಿಂದ ದ್ರೋಣನಲ್ಲಿ ಬ್ರಹ್ಮಾಸ್ತ್ರವನ್ನು ಕೇಳಿದ ಕರ್ಣನಿಗೆ ದ್ರೋಣನು ನಿರಾಕರಿಸಿದುದು (೬-೧೪). ಕರ್ಣನು ಪರಶುರಾಮನಲ್ಲಿಗೆ ಹೋಗಿ ತಾನು ಓರ್ವ ಭಾರ್ಗವನೆಂದು ಹೇಳಿಕೊಂಡು ಅವನ ಶಿಷ್ಯನಾದುದು (೧೫-೧೮). ತಿಳಿಯದೇ ಓರ್ವ ಬ್ರಾಹ್ಮಣನ ಗೋವನ್ನು ಕೊಂದ ಕರ್ಣನಿಗೆ “ನಿನ್ನ ಪ್ರತಿಸ್ಪರ್ಧಿಯೊಡನೆ ಯುದ್ಧಮಾಡುವಾಗ ನಿನ್ನ ರಥಚಕ್ರವನ್ನು ಭೂಮಿಯು ನುಂಗಿಬಿಡುತ್ತದೆ!” ಎಂಬ ಶಾಪ ಬಂದೊದಗಿದುದು (೧೯-೨೯).

12002001 ವೈಶಂಪಾಯನ ಉವಾಚ|

12002001a ಸ ಏವಮುಕ್ತಸ್ತು ಮುನಿರ್ನಾರದೋ ವದತಾಂ ವರಃ|

12002001c ಕಥಯಾಮಾಸ ತತ್ಸರ್ವಂ ಯಥಾ ಶಪ್ತಃ ಸ ಸೂತಜಃ||

ವೈಶಂಪಾಯನನು ಹೇಳಿದನು: “ಯುಧಿಷ್ಠಿರನು ಹೀಗೆ ಹೇಳಲು ಮಾತನಾಡುವವರಲ್ಲಿ ಶ್ರೇಷ್ಠ ಮುನಿ ನಾರದನು ಸೂತಜನು ಹೇಗೆ ಶಪಿತನಾದನೆನ್ನುವುದೆಲ್ಲವನ್ನೂ ಹೇಳಿದನು.

12002002a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ|

12002002c ನ ಕರ್ಣಾರ್ಜುನಯೋಃ ಕಿಂ ಚಿದವಿಷಹ್ಯಂ ಭವೇದ್ರಣೇ||

“ಮಹಾಬಾಹೋ! ಭಾರತ! ರಣದಲ್ಲಿ ಕರ್ಣಾರ್ಜುನರು ಜಯಿಸಲಾರದವರು ಯಾರೂ ಇಲ್ಲ ಎಂದು ನೀನು ಹೇಳಿದುದು ಸತ್ಯ.

12002003a ಗುಹ್ಯಮೇತತ್ತು ದೇವಾನಾಂ ಕಥಯಿಷ್ಯಾಮಿ ತೇ ನೃಪ|

12002003c ತನ್ನಿಬೋಧ ಮಹಾರಾಜ ಯಥಾ ವೃತ್ತಮಿದಂ ಪುರಾ||

ನೃಪ! ದೇವತೆಗಳ ಈ ರಹಸ್ಯವನ್ನು ನಿನಗೆ ಹೇಳುತ್ತೇನೆ. ಮಹಾರಾಜ! ಹಿಂದೆ ನಡೆದುದನ್ನು ಕೇಳು.

12002004a ಕ್ಷತ್ರಂ ಸ್ವರ್ಗಂ ಕಥಂ ಗಚ್ಚೇಚ್ಚಸ್ತ್ರಪೂತಮಿತಿ ಪ್ರಭೋ|

12002004c ಸಂಘರ್ಷಜನನಸ್ತಸ್ಮಾತ್ಕನ್ಯಾಗರ್ಭೋ ವಿನಿರ್ಮಿತಃ||

ಪ್ರಭೋ! ಶಸ್ತ್ರಗಳಿಂದ ಪವಿತ್ರರನ್ನಾಗಿಸಿ ಕ್ಷತ್ರಿಯರನ್ನು ಸ್ವರ್ಗಕ್ಕೆ ಹೇಗೆ ಕರೆಯಿಸಿಕೊಳ್ಳಬೇಕೆಂದು ನಿಶ್ಚಯಿಸಿ ಸಂಘರ್ಷವನ್ನು ಹುಟ್ಟಿಸುವುದಕ್ಕೋಸ್ಕರ ಕನ್ಯೆ ಕುಂತಿಯಲ್ಲಿ ಗರ್ಭವನ್ನಿರಸಲಾಯಿತು.

12002005a ಸ ಬಾಲಸ್ತೇಜಸಾ ಯುಕ್ತಃ ಸೂತಪುತ್ರತ್ವಮಾಗತಃ|

12002005c ಚಕಾರಾಂಗಿರಸಾಂ ಶ್ರೇಷ್ಠೇ ಧನುರ್ವೇದಂ ಗುರೌ ತವ||

ತೇಜಾಯುಕ್ತನಾದ ಆ ಬಾಲಕನು ಸೂತಪುತ್ರತ್ವವನ್ನು ಪಡೆದನು. ನಿನ್ನ ಗುರುವಾದ ಆಂಗಿರಸ ಶ್ರೇಷ್ಠನಲ್ಲಿ ಧನುರ್ವೇದವನ್ನು ಕಲಿತನು.

12002006a ಸ ಬಲಂ ಭೀಮಸೇನಸ್ಯ ಫಲ್ಗುನಸ್ಯ ಚ ಲಾಘವಮ್|

12002006c ಬುದ್ಧಿಂ ಚ ತವ ರಾಜೇಂದ್ರ ಯಮಯೋರ್ವಿನಯಂ ತಥಾ||

12002007a ಸಖ್ಯಂ ಚ ವಾಸುದೇವೇನ ಬಾಲ್ಯೇ ಗಾಂಡಿವಧನ್ವನಃ|

12002007c ಪ್ರಜಾನಾಮನುರಾಗಂ ಚ ಚಿಂತಯಾನೋ ವ್ಯದಹ್ಯತ||

ಅವನು ಭೀಮಸೇನನ ಬಲವನ್ನೂ, ಫಲ್ಗುನನ ಹಸ್ತಲಾಘವವನ್ನೂ, ರಾಜೇಂದ್ರ! ನಿನ್ನ ಬುದ್ಧಿಯನ್ನೂ, ಯಮಳರ ವಿನಯವನ್ನೂ, ಗಾಂಡೀವಧನ್ವಿಯೊಡನೆ ವಾಸುದೇವನಿಗಿದ್ದ ಸಖ್ಯವನ್ನೂ, ನಿಮ್ಮ ಮೇಲೆ ಪ್ರಜೆಗಳಿಗಿದ್ದ ಅನುರಾಗವನ್ನೂ ನೋಡಿ ಬಾಲ್ಯದಲ್ಲಿಯೇ ಅಸೂಯೆಯಿಂದ ಸುಡುತ್ತಿದ್ದನು.

12002008a ಸ ಸಖ್ಯಮಗಮದ್ಬಾಲ್ಯೇ ರಾಜ್ಞಾ ದುರ್ಯೋಧನೇನ ವೈ|

12002008c ಯುಷ್ಮಾಭಿರ್ನಿತ್ಯಸಂದ್ವಿಷ್ಟೋ ದೈವಾಚ್ಚಾಪಿ ಸ್ವಭಾವತಃ||

ಬಾಲ್ಯದಲ್ಲಿಯೇ ಅವನು ರಾಜಾ ದುರ್ಯೋಧನನ ಸಖ್ಯದಲ್ಲಿ ಬಂದನು. ದೈವೇಚ್ಛೆಯಿಂದ ಸ್ವಭಾವತಃ ಅವನು ನಿತ್ಯವೂ ನಿಮ್ಮನ್ನು ದ್ವೇಷಿಸುತ್ತಿದ್ದನು.

12002009a ವಿದ್ಯಾಧಿಕಮಥಾಲಕ್ಷ್ಯ ಧನುರ್ವೇದೇ ಧನಂಜಯಮ್|

12002009c ದ್ರೋಣಂ ರಹಸ್ಯುಪಾಗಮ್ಯ ಕರ್ಣೋ ವಚನಮಬ್ರವೀತ್||

ಧನಂಜಯನು ಧನುರ್ವೇದವಿಧ್ಯೆಯಲ್ಲಿ ತನ್ನನ್ನೂ ಮೀರಿಸಿರುವುದನ್ನು ನೋಡಿ ಕರ್ಣನು ರಹಸ್ಯದಲ್ಲಿ ದ್ರೋಣನ ಬಳಿಸಾರಿ ಹೀಗೆಂದನು:

12002010a ಬ್ರಹ್ಮಾಸ್ತ್ರಂ ವೇತ್ತುಮಿಚ್ಚಾಮಿ ಸರಹಸ್ಯನಿವರ್ತನಮ್|

12002010c ಅರ್ಜುನೇನ ಸಮೋ ಯುದ್ಧೇ ಭವೇಯಮಿತಿ ಮೇ ಮತಿಃ||

“ಅದನ್ನು ಹಿಂತೆಗೆದುಕೊಳ್ಳುವ ರಹಸ್ಯದೊಂದಿಗೆ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಯುದ್ಧದಲ್ಲಿ ಅರ್ಜುನನ ಸಮನಾಗಬೇಕೆಂದು ನನ್ನ ನಿಶ್ಚಯ.

12002011a ಸಮಃ ಪುತ್ರೇಷು ಚ ಸ್ನೇಹಃ ಶಿಷ್ಯೇಷು ಚ ತವ ಧ್ರುವಮ್|

12002011c ತ್ವತ್ಪ್ರಸಾದಾನ್ನ ಮಾಂ ಬ್ರೂಯುರಕೃತಾಸ್ತ್ರಂ ವಿಚಕ್ಷಣಾಃ||

ನಿಮ್ಮ ಸ್ನೇಹವು ನಿಶ್ಚಯವಾಗಿಯೂ ಪುತ್ರರಲ್ಲಿ ಮತ್ತು ಶಿಷ್ಯರಲ್ಲಿ ಸಮನಾಗಿದೆ. ಆದುದರಿಂದ ನನ್ನನ್ನು ಅಸ್ತ್ರಗಳಲ್ಲಿ ಅಸಂಪೂರ್ಣನೆಂದು ತಿಳಿದವರು ಕರೆಯುವಂತಾಗದಂತೆ ಅನುಗ್ರಹಿಸಿ.”

12002012a ದ್ರೋಣಸ್ತಥೋಕ್ತಃ ಕರ್ಣೇನ ಸಾಪೇಕ್ಷಃ ಫಲ್ಗುನಂ ಪ್ರತಿ|

12002012c ದೌರಾತ್ಮ್ಯಂ ಚಾಪಿ ಕರ್ಣಸ್ಯ ವಿದಿತ್ವಾ ತಮುವಾಚ ಹ||

ಕರ್ಣನು ಹಾಗೆ ಹೇಳಲು ಕರ್ಣನ ದುರಾತ್ಮತೆಯನ್ನು ತಿಳಿದು, ಫಲ್ಗುನನ ಕುರಿತು ಪಕ್ಷಪಾತವಿದ್ದ ದ್ರೋಣನು ಅವನಿಗೆ ಹೇಳಿದನು:

12002013a ಬ್ರಹ್ಮಾಸ್ತ್ರಂ ಬ್ರಾಹ್ಮಣೋ ವಿದ್ಯಾದ್ಯಥಾವಚ್ಚರಿತವ್ರತಃ|

12002013c ಕ್ಷತ್ರಿಯೋ ವಾ ತಪಸ್ವೀ ಯೋ ನಾನ್ಯೋ ವಿದ್ಯಾತ್ಕಥಂ ಚನ||

“ವ್ರತನಿರತನಾಗಿರುವ ಬ್ರಾಹ್ಮಣನಾಗಲೀ ತಪಸ್ವಿಯಾದ ಕ್ಷತ್ರಿಯನಾಗಲೀ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಬಹುದು. ಬೇರೆ ಯಾರೂ ಎಂದೂ ಅದನ್ನು ತಿಳಿದುಕೊಳ್ಳಲಾರರು!”

12002014a ಇತ್ಯುಕ್ತೋಽಂಗಿರಸಾಂ ಶ್ರೇಷ್ಠಮಾಮಂತ್ರ್ಯ ಪ್ರತಿಪೂಜ್ಯ ಚ|

12002014c ಜಗಾಮ ಸಹಸಾ ರಾಮಂ ಮಹೇಂದ್ರಂ ಪರ್ವತಂ ಪ್ರತಿ||

ಆಂಗಿರಸ ಶ್ರೇಷ್ಠನು ಹೀಗೆ ಹೇಳಲು ಅವನನ್ನು ಪ್ರತಿಪೂಜಿಸಿ ಅನುಮತಿಯನ್ನು ಪಡೆದು ಕೂಡಲೇ ಮಹೇಂದ್ರ ಪರ್ವತದಲ್ಲಿದ್ದ ರಾಮನ ಬಳಿ ನಡೆದನು.

12002015a ಸ ತು ರಾಮಮುಪಾಗಮ್ಯ ಶಿರಸಾಭಿಪ್ರಣಮ್ಯ ಚ|

12002015c ಬ್ರಾಹ್ಮಣೋ ಭಾರ್ಗವೋಽಸ್ಮೀತಿ ಗೌರವೇಣಾಭ್ಯಗಚ್ಚತ||

ಅವನು ರಾಮನ ಬಳಿಸಾರಿ ಗೌರವದಿಂದ ಶಿರಸಾ ಸಮಸ್ಕರಿಸಿ “ನಾನು ಭಾರ್ಗವ ವಂಶದ ಬ್ರಾಹ್ಮಣ!” ಎಂದು ಹೇಳಿದನು.

12002016a ರಾಮಸ್ತಂ ಪ್ರತಿಜಗ್ರಾಹ ಪೃಷ್ಟ್ವಾ ಗೋತ್ರಾದಿ ಸರ್ವಶಃ|

12002016c ಉಷ್ಯತಾಂ ಸ್ವಾಗತಂ ಚೇತಿ ಪ್ರೀತಿಮಾಂಶ್ಚಾಭವದ್ಭೃಶಮ್||

ಗೋತ್ರ ಮೊದಲಾದ ಎಲ್ಲವನ್ನೂ ಕೇಳಿ ತಿಳಿದುಕೊಂಡು ರಾಮನು ಅವನನ್ನು “ಸ್ವಾಗತ! ಇಲ್ಲಿಯೇ ಇರು!” ಎಂದು ಅವನನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದನು.

12002017a ತತ್ರ ಕರ್ಣಸ್ಯ ವಸತೋ ಮಹೇಂದ್ರೇ ಪರ್ವತೋತ್ತಮೇ|

12002017c ಗಂಧರ್ವೈ ರಾಕ್ಷಸೈರ್ಯಕ್ಷೈರ್ದೇವೈಶ್ಚಾಸೀತ್ಸಮಾಗಮಃ||

ಉತ್ತಮ ಮಹೇಂದ್ರಪರ್ವತದಲ್ಲಿ ವಾಸಿಸುತ್ತಿರುವಾಗ ಗಂಧರ್ವ-ರಾಕ್ಷಸ-ಯಕ್ಷ-ದೇವತೆಗಳೊಂದಿಗೆ ಕರ್ಣನ ಸಂದರ್ಶನವೂ ಆಯಿತು.

12002018a ಸ ತತ್ರೇಷ್ವಸ್ತ್ರಮಕರೋದ್ಭೃಗುಶ್ರೇಷ್ಠಾದ್ಯಥಾವಿಧಿ|

12002018c ಪ್ರಿಯಶ್ಚಾಭವದತ್ಯರ್ಥಂ ದೇವಗಂಧರ್ವರಕ್ಷಸಾಮ್||

ಅಲ್ಲಿ ಅವನು ಭೃಗುಶ್ರೇಷ್ಠನಿಂದ ಯಥಾವಿಧಿಯಾಗಿ ಅಸ್ತ್ರಗಳನ್ನು ಕಲಿತುಕೊಂಡನು ಮತ್ತು ದೇವ-ಗಂಧರ್ವ-ರಾಕ್ಷಸರ ಪ್ರಿಯಪಾತ್ರನೂ ಆದನು.

12002019a ಸ ಕದಾ ಚಿತ್ಸಮುದ್ರಾಂತೇ ವಿಚರನ್ನಾಶ್ರಮಾಂತಿಕೇ|

12002019c ಏಕಃ ಖಡ್ಗಧನುಷ್ಪಾಣಿಃ ಪರಿಚಕ್ರಾಮ ಸೂತಜಃ||

ಒಮ್ಮೆ ಸೂತಜ ಕರ್ಣನು ಆಶ್ರಮ ಸಮೀಪದಲ್ಲಿ ಸಮುದ್ರತೀರದಲ್ಲಿ ಖಡ್ಗ-ಧನುಷ್ಪಾಣಿಯಾಗಿ ಒಬ್ಬನೇ ಸಂಚರಿಸುತ್ತಿದ್ದನು.

12002020a ಸೋಽಗ್ನಿಹೋತ್ರಪ್ರಸಕ್ತಸ್ಯ ಕಸ್ಯ ಚಿದ್ಬ್ರಹ್ಮವಾದಿನಃ|

12002020c ಜಘಾನಾಜ್ಞಾನತಃ ಪಾರ್ಥ ಹೋಮಧೇನುಂ ಯದೃಚ್ಚಯಾ||

ಪಾರ್ಥ! ಅಲ್ಲಿ ಅವನು ಅಗ್ನಿಹೋತ್ರದಲ್ಲಿ ತೊಡಗಿದ್ದ ಯಾರೋ ಒಬ್ಬ ಬ್ರಹ್ಮವಾದಿನಿಯ ಹೋಮಧೇನುವನ್ನು ತಿಳಿಯದೇ ಆಕಸ್ಮಿಕವಾಗಿ ಕೊಂದುಬಿಟ್ಟನು.

12002021a ತದಜ್ಞಾನಕೃತಂ ಮತ್ವಾ ಬ್ರಾಹ್ಮಣಾಯ ನ್ಯವೇದಯತ್|

12002021c ಕರ್ಣಃ ಪ್ರಸಾದಯಂಶ್ಚೈನಮಿದಮಿತ್ಯಬ್ರವೀದ್ವಚಃ||

ತಾನು ತಿಳಿಯದೇ ಮಾಡಿದ ಆ ಕೃತ್ಯವನ್ನು ಬ್ರಾಹ್ಮಣನಿಗೆ ಹೇಳಿಕೊಂಡನು. ಅವನನ್ನು ಪ್ರಸನ್ನಗೊಳಿಸಲು ಕರ್ಣನು ಈ ಮಾತನ್ನಾಡಿದನು:

12002022a ಅಬುದ್ಧಿಪೂರ್ವಂ ಭಗವನ್ಧೇನುರೇಷಾ ಹತಾ ತವ|

12002022c ಮಯಾ ತತ್ರ ಪ್ರಸಾದಂ ಮೇ ಕುರುಷ್ವೇತಿ ಪುನಃ ಪುನಃ||

“ಭಗವನ್! ಮೊದಲೇ ತಿಳಿದುಕೊಳ್ಳದೇ ಅಜ್ಞಾನದಿಂದ ನಿನ್ನ ಈ ಹಸುವನ್ನು ಕೊಂದುಬಿಟ್ಟೆನು! ನನ್ನ ಮೇಲೆ ಕರುಣೆ ತೋರಬೇಕು” ಎಂದು ಪುನಃ ಪುನಃ ಕೇಳಿಕೊಂಡನು.

12002023a ತಂ ಸ ವಿಪ್ರೋಽಬ್ರವೀತ್ಕೃದ್ಧೋ ವಾಚಾ ನಿರ್ಭರ್ತ್ಸಯನ್ನಿವ|

12002023c ದುರಾಚಾರ ವಧಾರ್ಹಸ್ತ್ವಂ ಫಲಂ ಪ್ರಾಪ್ನುಹಿ ದುರ್ಮತೇ||

ಆ ವಿಪ್ರನಾದರೋ ಕ್ರುದ್ಧನಾಗಿ ಅವನನ್ನು ಹೆದರಿಸುವನೋ ಎನ್ನುವಂತೆ ಹೀಗೆ ಹೇಳಿದನು: “ದುರ್ಮತೇ! ನಿನ್ನ ಈ ದುರಾಚಾರವು ವಧಾರ್ಹವು. ಇದರ ಫಲವನ್ನು ನೀನು ಪಡೆಯುತ್ತೀಯೆ!

12002024a ಯೇನ ವಿಸ್ಪರ್ಧಸೇ ನಿತ್ಯಂ ಯದರ್ಥಂ ಘಟಸೇಽನಿಶಮ್|

12002024c ಯುಧ್ಯತಸ್ತೇನ ತೇ ಪಾಪ ಭೂಮಿಶ್ಚಕ್ರಂ ಗ್ರಸಿಷ್ಯತಿ||

ಯಾರೊಂದಿಗೆ ನೀನು ನಿತ್ಯವೂ ಸ್ಪರ್ಧಿಸುತ್ತೀಯೋ ಮತ್ತು ಯಾರನ್ನು ಕೊಲ್ಲಲು ನೀನು ಅಹೋರಾತ್ರಿ ಪ್ರಯತ್ನಿಸುವೆಯೋ ಅವನೊಡನೆ ಯುದ್ಧಮಾಡುವಾಗ ಪಾಪಿಯಾದ ನಿನ್ನ ರಥಚಕ್ರವನ್ನು ಭೂಮಿಯು ನುಂಗಿಬಿಡುತ್ತದೆ!

12002025a ತತಶ್ಚಕ್ರೇ ಮಹೀಗ್ರಸ್ತೇ ಮೂರ್ಧಾನಂ ತೇ ವಿಚೇತಸಃ|

12002025c ಪಾತಯಿಷ್ಯತಿ ವಿಕ್ರಮ್ಯ ಶತ್ರುರ್ಗಚ್ಚ ನರಾಧಮ||

ನೆಲದಲ್ಲಿ ಹುಗಿದುಹೋದ ಚಕ್ರವನ್ನು ನೋಡಿ ಕಂಗಾಲಾದ ನಿನ್ನ ಶಿರವನ್ನು ಶತ್ರುವು ವಿಕ್ರಮದಿಂದ ಕೆಳಗುರುಳಿಸುತ್ತಾನೆ! ಹೊರಟುಹೋಗು ನರಾಧಮ!

12002026a ಯಥೇಯಂ ಗೌರ್ಹತಾ ಮೂಢ ಪ್ರಮತ್ತೇನ ತ್ವಯಾ ಮಮ|

12002026c ಪ್ರಮತ್ತಸ್ಯೈವಮೇವಾನ್ಯಃ ಶಿರಸ್ತೇ ಪಾತಯಿಷ್ಯತಿ||

ಮೂಢ! ಹೇಗೆ ನೀನು ಪ್ರಮತ್ತತೆಯಿಂದ ನನ್ನ ಗೋವನ್ನು ಸಂಹರಿಸಿದೆಯೋ ಹಾಗೆ ನೀನು ಪ್ರಮತ್ತನಾಗಿದ್ದಾಗ ಅನ್ಯನು ನಿನ್ನ ಶಿರವನ್ನು ಕೆಳಗುರುಳಿಸುತ್ತಾನೆ!”

12002027a ತತಃ ಪ್ರಸಾದಯಾಮಾಸ ಪುನಸ್ತಂ ದ್ವಿಜಸತ್ತಮಮ್|

12002027c ಗೋಭಿರ್ಧನೈಶ್ಚ ರತ್ನೈಶ್ಚ ಸ ಚೈನಂ ಪುನರಬ್ರವೀತ್||

ಅನಂತರ ಕರ್ಣನು ಆ ದ್ವಿಜಸತ್ತಮನನ್ನು ಪುನಃ ಗೋವು-ಧನ-ರತ್ನಗಳಿಂದ ಪ್ರಸನ್ನಗೊಳಿಸಲು ಪ್ರಯತ್ನಿಸಲು, ಅವನು ಪುನಃ ಹೀಗೆ ಹೇಳಿದನು:

12002028a ನೇದಂ ಮದ್ವ್ಯಾಹೃತಂ ಕುರ್ಯಾತ್ಸರ್ವಲೋಕೋಽಪಿ ವೈ ಮೃಷಾ|

12002028c ಗಚ್ಚ ವಾ ತಿಷ್ಠ ವಾ ಯದ್ವಾ ಕಾರ್ಯಂ ತೇ ತತ್ಸಮಾಚರ||

“ಸರ್ವಲೋಕಗಳಿಗೂ ಇದನ್ನು ಸುಳ್ಳನ್ನಾಗಿಸಲು ಸಾಧ್ಯವಿಲ್ಲ! ಹೋಗು ಅಥವಾ ಇಲ್ಲಿಯೇ ಇರು! ನೀನು ಏನು ಮಾಡಿದರೂ ವ್ಯರ್ಥವೇ ಸರಿ!”

12002029a ಇತ್ಯುಕ್ತೋ ಬ್ರಾಹ್ಮಣೇನಾಥ ಕರ್ಣೋ ದೈನ್ಯಾದಧೋಮುಖಃ|

12002029c ರಾಮಮಭ್ಯಾಗಮದ್ಭೀತಸ್ತದೇವ ಮನಸಾ ಸ್ಮರನ್||

ಬ್ರಾಹ್ಮಣನು ಹೀಗೆ ಹೇಳಲು ಕರ್ಣನು ದೈನ್ಯದಿಂದ ಅಧೋಮುಖನಾಗಿ ಅದನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾ ಭಯಗೊಂಡವನಾಗಿ ರಾಮನ ಬಳಿ ಹೋದನು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕರ್ಣಶಾಪೋ ನಾಮ ದ್ವಿತೀಯೋಽಧ್ಯಾಯಃ|

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಕರ್ಣಶಾಪವೆನ್ನುವ ಎರಡನೇ ಅಧ್ಯಾಯವು.

Comments are closed.