ಶಾಂತಿ ಪರ್ವ: ರಾಜಧರ್ಮ ಪರ್ವ

ಪರಶುರಾಮನಿಂದ ಬ್ರಹ್ಮಾಸ್ತ್ರವನ್ನು ಕಲಿತುಕೊಂಡ ಕರ್ಣನು ಗುರುವಿನ ಪ್ರೀತಿಪಾತ್ರನಾಗಿದ್ದುದು (೧-೪). ಪರಶುರಾಮನು ಸೌಹಾರ್ದತೆಯು ಬೆಳೆದಿದ್ದ ಕರ್ಣನ ತೊಡೆಯ ಮೇಲೆ ತನ್ನ ಶಿರವನ್ನಿತ್ತು ವಿಶ್ವಾಸದಿಂದ ಮಲಗಿದ್ದಾಗ ಕ್ರಿಮಿಯೊಂದು ಕರ್ಣನ ತೊಡೆಯನ್ನು ಕೊರೆದು ಹರಿದ ರಕ್ತವು ತಾಗಿ ಪರಶುರಾಮನು ಎಚ್ಚರಗೊಂಡಿದುದು (೫-೧೧). ಕ್ರಿಮಿಯ ರೂಪದಲ್ಲಿದ್ದ ರಾಕ್ಷಸನು ಶಾಪವಿಮೋಚನನಾದುದು (೧೨-೨೪). ಕರ್ಣನು ಬ್ರಾಹ್ಮಣನಲ್ಲವೆಂದು ತಿಳಿದುಕೊಂಡ ಪರಶುರಾಮನು ಕೋಪದಿಂದ “ನಿನ್ನ ವಧೆಯ ಕಾಲವಲ್ಲದಾಗ ಮತ್ತು ನಿನ್ನ ಸಮಾನರೊಡನೆ ಯುದ್ಧಮಾಡುವಾಗ ಮಾತ್ರ ಬ್ರಹ್ಮಾಸ್ತ್ರವು ನಿನಗೆ ಹೊಳೆಯುತ್ತದೆ” ಎಂಬ ಶಾಪವನ್ನಿತ್ತಿದುದು (೨೫-೩೩).

12003001 ನಾರದ ಉವಾಚ

12003001a ಕರ್ಣಸ್ಯ ಬಾಹುವೀರ್ಯೇಣ ಪ್ರಶ್ರಯೇಣ ದಮೇನ ಚ|

12003001c ತುತೋಷ ಭೃಗುಶಾರ್ದೂಲೋ ಗುರುಶುಶ್ರೂಷಯಾ ತಥಾ||

ನಾರದನು ಹೇಳಿದನು: “ಕರ್ಣನ ಬಾಹುವೀರ್ಯ, ಪರಿಶ್ರಮ, ಜಿತೇಂದ್ರಿಯತೆ ಮತ್ತು ಗುರುಶುಶ್ರೂಷೆಗಳಿಂದ ಭೃಗುಶಾರ್ದೂಲನು ಸಂತುಷ್ಟನಾದನು.

12003002a ತಸ್ಮೈ ಸ ವಿಧಿವತ್ಕೃತ್ಸ್ನಂ ಬ್ರಹ್ಮಾಸ್ತ್ರಂ ಸನಿವರ್ತನಮ್|

12003002c ಪ್ರೋವಾಚಾಖಿಲಮವ್ಯಗ್ರಂ ತಪಸ್ವೀ ಸುತಪಸ್ವಿನೇ||

ಉತ್ತಮ ತಪೋನಿರತನಾಗಿದ್ದ ತಪಸ್ವಿ ರಾಮನು ಅವ್ಯಗ್ರ ಕರ್ಣನಿಗೆ ವಿಧಿವತ್ತಾಗಿ ಸಂಪೂರ್ಣ ಬ್ರಹ್ಮಾಸ್ತ್ರ ಪ್ರಯೋಗ-ಉಪಸಂಹಾರಗಳೊಂದಿಗೆ ಎಲ್ಲವನ್ನೂ ಉಪದೇಶಿಸಿದನು.

12003003a ವಿದಿತಾಸ್ತ್ರಸ್ತತಃ ಕರ್ಣೋ ರಮಮಾಣೋಽಽಶ್ರಮೇ ಭೃಗೋಃ|

12003003c ಚಕಾರ ವೈ ಧನುರ್ವೇದೇ ಯತ್ನಮದ್ಭುತವಿಕ್ರಮಃ||

ಬ್ರಹ್ಮಾಸ್ತ್ರವನ್ನು ಕಲಿತುಕೊಂಡ ಅದ್ಭುತವಿಕ್ರಮಿ ಕರ್ಣನು ಭೃಗುವಿನ ಆ ಆಶ್ರಮದಲ್ಲಿ ಸಂತೋಷದಿಂದಲೇ ಇದ್ದುಕೊಂಡು ಧನುರ್ವೇದವನ್ನು ಹಸ್ತಗತಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದನು.

12003004a ತತಃ ಕದಾ ಚಿದ್ರಾಮಸ್ತು ಚರನ್ನಾಶ್ರಮಮಂತಿಕಾತ್|

12003004c ಕರ್ಣೇನ ಸಹಿತೋ ಧೀಮಾನುಪವಾಸೇನ ಕರ್ಶಿತಃ||

12003005a ಸುಷ್ವಾಪ ಜಾಮದಗ್ನ್ಯೋ ವೈ ವಿಸ್ರಂಭೋತ್ಪನ್ನಸೌಹೃದಃ|

12003005c ಕರ್ಣಸ್ಯೋತ್ಸಂಗ ಆಧಾಯ ಶಿರಃ ಕ್ಲಾಂತಮನಾ ಗುರುಃ||

ಅನಂತರ ಒಮ್ಮೆ ರಾಮನು ಕರ್ಣನ ಸಹಿತ ಆಶ್ರಮದ ಬಳಿಯಲ್ಲಿಯೇ ತಿರುಗಾಡುತ್ತಿದ್ದನು. ಆ ಧೀಮಂತನು ಉಪವಾಸದಿಂದ ಕೃಶನಾಗಿದ್ದನು. ಅವನ ಮನಸ್ಸೂ ಕೂಡ ಬಹಳವಾಗಿ ಆಯಾಸಗೊಂಡಿತ್ತು. ಆಗ ಗುರು ಜಾಮದಗ್ನಿಯು ಸೌಹಾರ್ದತೆಯು ಬೆಳೆದಿದ್ದ ಕರ್ಣನ ತೊಡೆಯ ಮೇಲೆ ತನ್ನ ಶಿರವನ್ನಿತ್ತು ವಿಶ್ವಾಸದಿಂದ ಮಲಗಿದನು.

12003006a ಅಥ ಕೃಮಿಃ ಶ್ಲೇಷ್ಮಮಯೋ ಮಾಂಸಶೋಣಿತಭೋಜನಃ|

12003006c ದಾರುಣೋ ದಾರುಣಸ್ಪರ್ಶಃ ಕರ್ಣಸ್ಯಾಭ್ಯಾಶಮಾಗಮತ್||

ಅದೇ ಸಮಯದಲ್ಲಿ ಕಫ, ಮೇಧಸ್ಸು, ಮಾಂಸ-ರಕ್ತಗಳನ್ನೇ ಭುಂಜಿಸುವ, ದಾರುಣವಾಗಿ ಕಚ್ಚಬಲ್ಲ, ದಾರುಣ ಕ್ರಿಮಿಯೊಂದು ಕರ್ಣನ ಬಳಿ ಬಂದಿತು.

12003007a ಸ ತಸ್ಯೋರುಮಥಾಸಾದ್ಯ ಬಿಭೇದ ರುಧಿರಾಶನಃ|

12003007c ನ ಚೈನಮಶಕತ್ಕ್ಷೇಪ್ತುಂ ಹಂತುಂ ವಾಪಿ ಗುರೋರ್ಭಯಾತ್||

ರಕ್ತಾಹಾರಿಯಾದ ಆ ಕ್ರಿಮಿಯು ಅವನ ತೊಡೆಯ ಮೇಲೆ ಕುಳಿತು ತೊಡೆಯನ್ನು ಕೊರೆಯ ತೊಡಗಿತು. ಗುರುವಿನ ಭಯದಿಂದ ಅದನ್ನು ಎತ್ತಿ ಒಗೆಯಲು ಅಥವಾ ಕೊಲ್ಲಲು ಅವನಿಗೆ ಸಾಧ್ಯವಾಗಲಿಲ್ಲ.

12003008a ಸಂದಶ್ಯಮಾನೋಽಪಿ ತಥಾ ಕೃಮಿಣಾ ತೇನ ಭಾರತ|

12003008c ಗುರುಪ್ರಬೋಧಶಂಕೀ ಚ ತಮುಪೈಕ್ಷತ ಸೂತಜಃ||

ಭಾರತ! ಆ ಕ್ರಿಮಿಯು ತನ್ನನ್ನು ಕೊರೆಯುತ್ತಿದ್ದರೂ ಗುರುವಿಗೆ ಎಚ್ಚರವಾಗಬಹುದೆಂಬ ಶಂಕೆಯಿಂದ ಸೂತಜನು ಅದನ್ನು ಉಪೇಕ್ಷಿಸಿದನು.

12003009a ಕರ್ಣಸ್ತು ವೇದನಾಂ ಧೈರ್ಯಾದಸಹ್ಯಾಂ ವಿನಿಗೃಹ್ಯ ತಾಮ್|

12003009c ಅಕಂಪನ್ನವ್ಯಥಂಶ್ಚೈವ ಧಾರಯಾಮಾಸ ಭಾರ್ಗವಮ್||

ವೇದನೆಯು ಸಹಿಸಲಸಾಧ್ಯವಾಗಿದ್ದರೂ ಕರ್ಣನು ಧೈರ್ಯದಿಂದ ಅದನ್ನು ಸಹಿಸಿಕೊಂಡು, ತನ್ನ ದೇಹವನ್ನು ಕಂಪಿಸದೇ ಭಾರ್ಗವನನ್ನು ತೊಡೆಯಮೇಲೆ ಮಲಗಿಸಿಕೊಂಡೇ ಇದ್ದನು.

12003010a ಯದಾ ತು ರುಧಿರೇಣಾಂಗೇ ಪರಿಸ್ಪೃಷ್ಟೋ ಭೃಗೂದ್ವಹಃ|

12003010c ತದಾಬುಧ್ಯತ ತೇಜಸ್ವೀ ಸಂತಪ್ತಶ್ಚೇದಮಬ್ರವೀತ್||

ಕರ್ಣನ ತೊಡೆಯಿಂದ ಹರಿಯುತ್ತಿದ್ದ ರಕ್ತವು ಭೃಗೂದ್ವಹನನ್ನು ಸ್ಪರ್ಷಿಸಲು ಆ ತೇಜಸ್ವಿಯು ಎಚ್ಚೆದ್ದು ಸಂತಪ್ತನಾಗಿ ಹೇಳಿದನು:

12003011a ಅಹೋಽಸ್ಮ್ಯಶುಚಿತಾಂ ಪ್ರಾಪ್ತಃ ಕಿಮಿದಂ ಕ್ರಿಯತೇ ತ್ವಯಾ|

12003011c ಕಥಯಸ್ವ ಭಯಂ ತ್ಯಕ್ತ್ವಾ ಯಾಥಾತಥ್ಯಮಿದಂ ಮಮ||

“ಅಯ್ಯೋ! ರಕ್ತಸ್ಪರ್ಷದಿಂದ ನಾನು ಅಶುಚಿಯಾಗಿಬಿಟ್ಟೆನು! ನೀನೇನು ಮಾಡಿಬಿಟ್ಟೆ? ಭಯವನ್ನು ತೊರೆದು ಯಥಾವತ್ತಾಗಿ ಏನಾಯಿತೆಂದು ನನ್ನೊಡನೆ ಹೇಳು!”

12003012a ತಸ್ಯ ಕರ್ಣಸ್ತದಾಚಷ್ಟ ಕೃಮಿಣಾ ಪರಿಭಕ್ಷಣಮ್|

12003012c ದದರ್ಶ ರಾಮಸ್ತಂ ಚಾಪಿ ಕೃಮಿಂ ಸೂಕರಸಂನಿಭಮ್||

ಕರ್ಣನು ಅವನಿಗೆ ಕ್ರಿಮಿಯು ತನ್ನ ತೊಡೆಯನ್ನು ಕೊರೆದು ತಿನ್ನುತ್ತಿದ್ದುದನ್ನು ಹೇಳಿದನು. ರಾಮನೂ ಕೂಡ ಹಂದಿಯಂತಿದ್ದ ಆ ಕ್ರಿಮಿಯನ್ನು ನೋಡಿದನು.

12003013a ಅಷ್ಟಪಾದಂ ತೀಕ್ಷ್ಣದಂಷ್ಟ್ರಂ ಸೂಚೀಭಿರಿವ ಸಂವೃತಮ್|

12003013c ರೋಮಭಿಃ ಸಂನಿರುದ್ಧಾಂಗಮಲರ್ಕಂ ನಾಮ ನಾಮತಃ||

ಎಂಟು ಕಾಲುಗಳಿದ್ದ, ತೀಕ್ಷ್ಣ ಹಲ್ಲುಗಳಿದ್ದ, ಸೂಜಿಗಳಂಥ ರೋಮಗಳಿಂದ ಆವೃತವಾಗಿದ್ದ, ಅಂಗಾಂಗಗಳನ್ನು ಸಂಕೋಚಿಸಿಕೊಂಡಿದ್ದ ಆ ಕ್ರಿಮಿಯು ಅಲರ್ಕ ಎಂಬ ನಾಮದಿಂದ ತಿಳಿಯಲ್ಪಟ್ಟಿತ್ತು.

12003014a ಸ ದೃಷ್ಟಮಾತ್ರೋ ರಾಮೇಣ ಕೃಮಿಃ ಪ್ರಾಣಾನವಾಸೃಜತ್|

12003014c ತಸ್ಮಿನ್ನೇವಾಸೃಕ್ಸಂಕ್ಲಿನ್ನೇ ತದದ್ಭುತಮಿವಾಭವತ್||

ರಾಮನ ದೃಷ್ಟಿಮಾತ್ರದಿಂದಲೇ ಕರ್ಣನ ರಕ್ತದಿಂದ ತೋಯ್ದುಹೋಗಿದ್ದ ಆ ಕ್ರಿಮಿಯು ಪ್ರಾಣವನ್ನು ತೊರೆಯಿತು. ಅದೊಂದು ಅದ್ಭುತವಾಗಿತ್ತು.

12003015a ತತೋಽಂತರಿಕ್ಷೇ ದದೃಶೇ ವಿಶ್ವರೂಪಃ ಕರಾಲವಾನ್|

12003015c ರಾಕ್ಷಸೋ ಲೋಹಿತಗ್ರೀವಃ ಕೃಷ್ಣಾಂಗೋ ಮೇಘವಾಹನಃ||

ಆಗ ಅಂತರಿಕ್ಷದಲ್ಲಿ ಕರಾಲ ರೂಪಧರಿಸಿದ್ದ, ಕೆಂಪುಕುತ್ತಿಗೆಯ, ಕಪ್ಪು ದೇಹದ, ಮೇಘವಾಹನ ರಾಕ್ಷಸನು ಕಾಣಿಸಿಕೊಂಡನು.

12003016a ಸ ರಾಮಂ ಪ್ರಾಂಜಲಿರ್ಭೂತ್ವಾ ಬಭಾಷೇ ಪೂರ್ಣಮಾನಸಃ|

12003016c ಸ್ವಸ್ತಿ ತೇ ಭೃಗುಶಾರ್ದೂಲ ಗಮಿಷ್ಯಾಮಿ ಯಥಾಗತಮ್||

ಪೂರ್ಣಮನಸ್ಕನಾದ ಅವನು ರಾಮನಿಗೆ ಕೈಮುಗಿದು ಹೇಳಿದನು: “ಭೃಗುಶಾರ್ದೂಲ! ನಿನಗೆ ಮಂಗಳವಾಗಲಿ! ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟು ಹೋಗುತ್ತೇನೆ!

12003017a ಮೋಕ್ಷಿತೋ ನರಕಾದಸ್ಮಿ ಭವತಾ ಮುನಿಸತ್ತಮ|

12003017c ಭದ್ರಂ ಚ ತೇಽಸ್ತು ನಂದಿಶ್ಚ ಪ್ರಿಯಂ ಮೇ ಭವತಾ ಕೃತಮ್||

ಮುನಿಸತ್ತಮ! ಈ ನರಕದಿಂದ ನೀನು ನನಗೆ ಬಿಡುಗಡೆಯನ್ನು ನೀಡಿರುವೆ! ನಿನಗೆ ಮಂಗಳವಾಗಲಿ! ನೀನು ನನಗೆ ಪ್ರಿಯವಾದುದನ್ನೇ ಮಾಡಿ ಸಂತೋಷವನ್ನಿತ್ತಿರುವೆ!”

12003018a ತಮುವಾಚ ಮಹಾಬಾಹುರ್ಜಾಮದಗ್ನ್ಯಃ ಪ್ರತಾಪವಾನ್|

12003018c ಕಸ್ತ್ವಂ ಕಸ್ಮಾಚ್ಚ ನರಕಂ ಪ್ರತಿಪನ್ನೋ ಬ್ರವೀಹಿ ತತ್||

ಮಹಾಬಾಹು ಜಾಮದಗ್ನ್ಯ ಪ್ರತಾಪವಾನನು ಅವನಿಗೆ ಹೇಳಿದನು: “ನೀನು ಯಾರು? ಯಾವ ಕಾರಣದಿಂದ ಈ ನರಕದಲ್ಲಿ ಬಿದ್ದಿರುವೆ? ಅದನ್ನು ಹೇಳು!”

12003019a ಸೋಽಬ್ರವೀದಹಮಾಸಂ ಪ್ರಾಗ್ಗೃತ್ಸೋ ನಾಮ ಮಹಾಸುರಃ|

12003019c ಪುರಾ ದೇವಯುಗೇ ತಾತ ಭೃಗೋಸ್ತುಲ್ಯವಯಾ ಇವ||

ಅವನು ಹೇಳಿದನು: “ಅಯ್ಯಾ! ನಾನು ಹಿಂದೆ ಸತ್ಯಯುಗದಲ್ಲಿ ಗೃತ್ಸ ಎಂಬ ಹೆಸರಿನ ಮಹಾಸುರನಾಗಿದ್ದೆನು. ವಯಸ್ಸಿನಲ್ಲಿ ನಾನು ಭೃಗುವಿನ ಸಮನಾಗಿದ್ದೆನು.

12003020a ಸೋಽಹಂ ಭೃಗೋಃ ಸುದಯಿತಾಂ ಭಾರ್ಯಾಮಪಹರಂ ಬಲಾತ್|

12003020c ಮಹರ್ಷೇರಭಿಶಾಪೇನ ಕೃಮಿಭೂತೋಽಪತಂ ಭುವಿ||

ಭೃಗುವಿನ ಪ್ರಿಯ ಭಾರ್ಯೆಯನ್ನು ನಾನು ಬಲಾತ್ಕಾರದಿಂದ

ಅಪಹರಿಸಿದ್ದೆನು. ಆ ಮಹರ್ಷಿಯ ಶಾಪದಿಂದ ಕ್ರಿಮಿಯಾಗಿ ಭೂಮಿಯ ಮೇಲೆ ಬಿದ್ದೆನು.

12003021a ಅಬ್ರವೀತ್ತು ಸ ಮಾಂ ಕ್ರೋಧಾತ್ತವ ಪೂರ್ವಪಿತಾಮಹಃ|

12003021c ಮೂತ್ರಶ್ಲೇಷ್ಮಾಶನಃ ಪಾಪ ನಿರಯಂ ಪ್ರತಿಪತ್ಸ್ಯಸೇ||

ಕ್ರೋಧಿತನಾದ ನಿನ್ನ ಮುತ್ತಜ್ಜನು ನನಗೆ “ಮೂತ್ರ-ಕಫಗಳನ್ನು ತಿನ್ನುತ್ತಾ ನೀನು ಪಾಪ ನರಕದಲ್ಲಿ ಬೀಳುವೆ!” ಎಂದು ಹೇಳಿದನು.

12003022a ಶಾಪಸ್ಯಾಂತೋ ಭವೇದ್ಬ್ರಹ್ಮನ್ನಿತ್ಯೇವಂ ತಮಥಾಬ್ರುವಮ್|

12003022c ಭವಿತಾ ಭಾರ್ಗವೇ ರಾಮ ಇತಿ ಮಾಮಬ್ರವೀದ್ಭೃಗುಃ||

“ಬ್ರಹ್ಮನ್! ಈ ಶಾಪವು ಅಂತ್ಯವಾಗುವಂತೆ ಅನುಗ್ರಹಿಸು!” ಎಂದು ನಾನು ಕೇಳಿಕೊಳ್ಳಲು “ಭಾರ್ಗವ ರಾಮನಿಂದ ಶಾಪವಿಮೋಚನೆಯಾಗುತ್ತದೆ” ಎಂದು ಭೃಗುವು ಹೇಳಿದನು.

12003023a ಸೋಽಹಮೇತಾಂ ಗತಿಂ ಪ್ರಾಪ್ತೋ ಯಥಾ ನಕುಶಲಂ ತಥಾ|

12003023c ತ್ವಯಾ ಸಾಧೋ ಸಮಾಗಮ್ಯ ವಿಮುಕ್ತಃ ಪಾಪಯೋನಿತಃ||

ಯಾವರೀತಿಯ ಕುಶಲವನ್ನೂ ಕಾಣದೇ ನಾನು ಈ ದುರ್ಗತಿಯನ್ನು ಅನುಭವಿಸಿದೆನು. ಸಾಧುವೇ! ನಿನ್ನ ಸಮಾಗಮದಿಂದಾಗಿ ನಾನು ಈ ಪಾಪಜನ್ಮದಿಂದ ಮುಕ್ತನಾಗಿದ್ದೇನೆ!”

12003024a ಏವಮುಕ್ತ್ವಾ ನಮಸ್ಕೃತ್ಯ ಯಯೌ ರಾಮಂ ಮಹಾಸುರಃ|

12003024c ರಾಮಃ ಕರ್ಣಂ ತು ಸಕ್ರೋಧಮಿದಂ ವಚನಮಬ್ರವೀತ್||

ಹೀಗೆ ಹೇಳಿ ರಾಮನಿಗೆ ನಮಸ್ಕರಿಸಿ ಮಹಾಸುರನು ಹೊರಟುಹೋದನು. ರಾಮನಾದರೋ ಕ್ರೋಧದಿಂದ ಕರ್ಣನಿಗೆ ಹೀಗೆ ಹೇಳಿದನು:

12003025a ಅತಿದುಃಖಮಿದಂ ಮೂಢ ನ ಜಾತು ಬ್ರಾಹ್ಮಣಃ ಸಹೇತ್|

12003025c ಕ್ಷತ್ರಿಯಸ್ಯೈವ ತೇ ಧೈರ್ಯಂ ಕಾಮಯಾ ಸತ್ಯಮುಚ್ಯತಾಮ್||

“ಮೂಢ! ಇಂಥಹ ಅತಿದುಃಖವನ್ನು ಬ್ರಾಹ್ಮಣನಾದವನು ಎಂದಿಗೂ ಸಹಿಸಿಕೊಳ್ಳಲಾರ! ನಿನ್ನ ಈ ಧೈರ್ಯವು ಕ್ಷತ್ರಿಯನದ್ದೇ! ನೀನಾಗಿಯೇ ಸತ್ಯವನ್ನು ಹೇಳು!”

12003026a ತಮುವಾಚ ತತಃ ಕರ್ಣಃ ಶಾಪಭೀತಃ ಪ್ರಸಾದಯನ್|

12003026c ಬ್ರಹ್ಮಕ್ಷತ್ರಾಂತರೇ ಸೂತಂ ಜಾತಂ ಮಾಂ ವಿದ್ಧಿ ಭಾರ್ಗವ||

ಶಾಪಕ್ಕೆ ಹೆದರಿದ ಕರ್ಣನು ಅವನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಭಾರ್ಗವ! ಬ್ರಾಹ್ಮಣ-ಕ್ಷತ್ರಿಯರಿಗೆ ಭಿನ್ನರಾದ ಸೂತರಲ್ಲಿ ಹುಟ್ಟಿದವನೆಂದು ತಿಳಿ.

12003027a ರಾಧೇಯಃ ಕರ್ಣ ಇತಿ ಮಾಂ ಪ್ರವದಂತಿ ಜನಾ ಭುವಿ|

12003027c ಪ್ರಸಾದಂ ಕುರು ಮೇ ಬ್ರಹ್ಮನ್ನಸ್ತ್ರಲುಬ್ಧಸ್ಯ ಭಾರ್ಗವ||

ರಾಧೇಯ ಕರ್ಣನೆಂದು ಭುವಿಯಲ್ಲಿ ಜನರು ನನ್ನನ್ನು ಕರೆಯುತ್ತಾರೆ. ಬ್ರಹ್ಮನ್! ಭಾರ್ಗವ! ಅಸ್ತ್ರಲೋಭಿಯಾದ ನನ್ನ ಮೇಲೆ ಕುರುಣೆತೋರಿಸು!

12003028a ಪಿತಾ ಗುರುರ್ನ ಸಂದೇಹೋ ವೇದವಿದ್ಯಾಪ್ರದಃ ಪ್ರಭುಃ|

12003028c ಅತೋ ಭಾರ್ಗವ ಇತ್ಯುಕ್ತಂ ಮಯಾ ಗೋತ್ರಂ ತವಾಂತಿಕೇ||

ವೇದವಿದ್ಯೆಗಳನ್ನು ನೀಡುವ ಪ್ರಭು ಗುರುವು ತಂದೆಯಂತೆ ಎಂದು ನನಗೆ ಸಂದೇಹವಿರಲಿಲ್ಲ. ಆದುದರಿಂದ ನನ್ನದು ಭಾರ್ಗವ ಗೋತ್ರವೆಂದು ಹೇಳಿ ನಿನ್ನ ಬಳಿ ಬಂದೆ!”

12003029a ತಮುವಾಚ ಭೃಗುಶ್ರೇಷ್ಠಃ ಸರೋಷಃ ಪ್ರಹಸನ್ನಿವ|

12003029c ಭೂಮೌ ನಿಪತಿತಂ ದೀನಂ ವೇಪಮಾನಂ ಕೃತಾಂಜಲಿಮ್||

ನೆಲದ ಮೇಲೆ ಬಿದ್ದು ದೀನನಾಗಿ ಕೈಮುಗಿದು ನಡುಗುತ್ತಿದ್ದ ಅವನಿಗೆ ರೋಷದಿಂದ ನಗುತ್ತಿರುವನೋ ಎನ್ನುವಂತೆ ಆ ಭೃಗುಶ್ರೇಷ್ಠನು ಹೇಳಿದನು:

12003030a ಯಸ್ಮಾನ್ಮಿಥ್ಯೋಪಚರಿತೋ ಅಸ್ತ್ರಲೋಭಾದಿಹ ತ್ವಯಾ|

12003030c ತಸ್ಮಾದೇತದ್ಧಿ ತೇ ಮೂಢ ಬ್ರಹ್ಮಾಸ್ತ್ರಂ ಪ್ರತಿಭಾಸ್ಯತಿ||

12003031a ಅನ್ಯತ್ರ ವಧಕಾಲಾತ್ತೇ ಸದೃಶೇನ ಸಮೇಯುಷಃ|

12003031c ಅಬ್ರಾಹ್ಮಣೇ ನ ಹಿ ಬ್ರಹ್ಮ ಧ್ರುವಂ ತಿಷ್ಠೇತ್ಕದಾ ಚನ||

“ಮೂಢ! ಅಸ್ತ್ರಲೋಭದಿಂದ ನೀನು ನನ್ನೊಡನೆ ಸುಳ್ಳಾಗಿ ನಡೆದುಕೊಂಡಿದುದರಿಂದ ನಿನ್ನ ವಧೆಯ ಕಾಲವಲ್ಲದಾಗ ಮತ್ತು ನಿನ್ನ ಸಮಾನರೊಡನೆ ಯುದ್ಧಮಾಡುವಾಗ ಮಾತ್ರ ಬ್ರಹ್ಮಾಸ್ತ್ರವು ನಿನಗೆ ಹೊಳೆಯುತ್ತದೆಯೆಂದು ತಿಳಿದುಕೋ! ಅಬ್ರಾಹ್ಮನಲ್ಲಿ ಬ್ರಹ್ಮಾಸ್ತ್ರವು ಎಂದೂ ನಿಲ್ಲುವುದಿಲ್ಲವೆನ್ನುವುದು ಸತ್ಯ!

12003032a ಗಚ್ಚೇದಾನೀಂ ನ ತೇ ಸ್ಥಾನಮನೃತಸ್ಯೇಹ ವಿದ್ಯತೇ|

12003032c ನ ತ್ವಯಾ ಸದೃಶೋ ಯುದ್ಧೇ ಭವಿತಾ ಕ್ಷತ್ರಿಯೋ ಭುವಿ||

ಅನೃತವಾದಿಗೆ ಇಲ್ಲಿ ಯಾವ ಸ್ಥಾನವೂ ಇಲ್ಲ. ಕೂಡಲೇ ಇಲ್ಲಿಂದ ಹೊರಟು ಹೋಗು! ಯುದ್ಧದಲ್ಲಿ ನಿನ್ನ ಸಮಾನನಾದ ಕ್ಷತ್ರಿಯನು ಭುವಿಯಲ್ಲಿಯೇ ಇರುವುದಿಲ್ಲ!”

12003033a ಏವಮುಕ್ತಸ್ತು ರಾಮೇಣ ನ್ಯಾಯೇನೋಪಜಗಾಮ ಸಃ|

12003033c ದುರ್ಯೋಧನಮುಪಾಗಮ್ಯ ಕೃತಾಸ್ತ್ರೋಽಸ್ಮೀತಿ ಚಾಬ್ರವೀತ್||

ರಾಮನು ಹೀಗೆ ಹೇಳಲು ನ್ಯಾಯರೀತಿಯಲ್ಲಿ ಅವನಿಂದ ಬೀಳ್ಕೊಂಡು ದುರ್ಯೋಧನನ ಬಳಿಸಾರಿ “ನಾನು ಅಸ್ತ್ರವಿದ್ಯಾಪಾರಂಗತನಾಗಿದ್ದೇನೆ!” ಎಂದು ಹೇಳಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕರ್ಣಾಸ್ತ್ರಪ್ರಾಪ್ತಿರ್ನಾಮ ತೃತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕರ್ಣಾಸ್ತ್ರಪ್ರಾಪ್ತಿ ಎನ್ನುವ ಮೂರನೇ ಅಧ್ಯಾಯವು.

Comments are closed.