Aranyaka Parva: Chapter 294

ಆರಣ್ಯಕ ಪರ್ವ: ಕುಂಡಲಾಹರಣ ಪರ್ವ

೨೯೪

ಇಂದ್ರನು ಬ್ರಾಹ್ಮಣ ರೂಪದಲ್ಲಿ ಬಂದು ಕರ್ಣನ ಕವಚ-ಕುಂಡಲಗಳನ್ನು ಪಡೆದುದು

ಬ್ರಾಹ್ಮಣನು ಕರ್ಣನಲ್ಲಿ ಕವಚ-ಕುಂಡಲಗಳನ್ನು ಕೇಳುವುದು; ಬಹುವಿಧದಲ್ಲಿ ಕರ್ಣನು ಯಾಚಿಸಿದರೂ ಬ್ರಾಹ್ಮಣನು ತನ್ನ ಬೇಡಿಕೆಯನ್ನು ಬದಲಾಯಿಸದಿರುವುದು (೧-೧೨). ಒಬ್ಬನೇ ವೀರನನ್ನು ಕೊಲ್ಲಬಹುದಾದಂತಹ ಅಮೋಘಶಕ್ತಿಯನ್ನು ಇಂದ್ರನಿಂದ ಸ್ವೀಕರಿಸಿ ಕರ್ಣನು ತನ್ನ ಕವಚ-ಕುಂಡಲಗಳನ್ನು ಕೊಟ್ಟಿದುದು (೧೩-೩೯). ವಿಷಯವನ್ನು ತಿಳಿದ ಪಾಂಡವರು ಸಂತೋಷವನ್ನಾಚರಿಸಿದುದು (೪೦-೪೩).

03294001 ವೈಶಂಪಾಯನ ಉವಾಚ|

03294001a ದೇವರಾಜಮನುಪ್ರಾಪ್ತಂ ಬ್ರಾಹ್ಮಣಚ್ಚದ್ಮನಾ ವೃಷಃ|

03294001c ದೃಷ್ಟ್ವಾ ಸ್ವಾಗತಮಿತ್ಯಾಹ ನ ಬುಬೋಧಾಸ್ಯ ಮಾನಸಂ||

ವೈಶಂಪಾಯನನು ಹೇಳಿದನು: “ಬ್ರಾಹ್ಮಣವೇಷದಲ್ಲಿ ಮುಚ್ಚಿಕೊಂಡು ಬಂದಿದ್ದ ದೇವರಾಜನನ್ನು ನೋಡಿದ ವೃಷನು ಅವನಿಗೆ “ಸ್ವಾಗತ!” ಎಂದು ಹೇಳಿದನು. ಅವನ ಮನಸ್ಸು ಅವನಿಗೆ ತಿಳಿದಿರಲಿಲ್ಲ.

03294002a ಹಿರಣ್ಯಕಂಠೀಃ ಪ್ರಮದಾ ಗ್ರಾಮಾನ್ವಾ ಬಹುಗೋಕುಲಾನ್|

03294002c ಕಿಂ ದದಾನೀತಿ ತಂ ವಿಪ್ರಮುವಾಚಾಧಿರಥಿಸ್ತತಃ||

“ಬಂಗಾರದ ಕೊರಳಿನ ಸುಂದರಿಯರನ್ನು ಕೊಡಲೇ ಅಥವಾ ಬಹಳ ಗೋಕುಲಗಳನ್ನು ಹೊಂದಿದ ಗ್ರಾಮಗಳನ್ನು ಕೊಡಲೇ?” ಎಂದು ಆಧಿರಥಿಯು ವಿಪ್ರನಿಗೆ ಕೇಳಿದನು.

03294003 ಬ್ರಾಹ್ಮಣ ಉವಾಚ|

03294003a ಹಿರಣ್ಯಕಂಠ್ಯಃ ಪ್ರಮದಾ ಯಚ್ಚಾನ್ಯತ್ಪ್ರೀತಿವರ್ಧನಂ|

03294003c ನಾಹಂ ದತ್ತಮಿಹೇಚ್ಚಾಮಿ ತದರ್ಥಿಭ್ಯಃ ಪ್ರದೀಯತಾಂ||

ಬ್ರಾಹ್ಮಣನು ಹೇಳಿದನು: “ಹಿರಣ್ಯಕಂಠದ ಸುಂದರಿಯರಾಗಲೀ ಅಥವಾ ಸುಖವನ್ನು ಹೆಚ್ಚಿಸುವ ಇತರ ವಸ್ತುಗಳಾಗಲೀ ನನಗೆ ದಾನವಾಗಿ ಬೇಡ. ಅವುಗಳ ಬೇಕೆನಿಸುವವರಿಗೆ ಅವುಗಳನ್ನು ನೀಡುವವನಾಗು.

03294004a ಯದೇತತ್ಸಹಜಂ ವರ್ಮ ಕುಂಡಲೇ ಚ ತವಾನಘ|

03294004c ಏತದುತ್ಕೃತ್ಯ ಮೇ ದೇಹಿ ಯದಿ ಸತ್ಯವ್ರತೋ ಭವಾನ್||

ಅನಘ! ನಿನ್ನ ಈ ಸಹಜವಾಗಿರುವ ಕವಚ-ಕುಂಡಲಗಳು ನನಗೆ ಬೇಕು. ನೀನು ಸತ್ಯವ್ರತನಾಗಿರುವೆಯಾದರೆ ಅವುಗಳನ್ನು ಕತ್ತರಿಸಿ ನನಗೆ ಕೊಡು.

03294005a ಏತದಿಚ್ಚಾಮ್ಯಹಂ ಕ್ಷಿಪ್ರಂ ತ್ವಯಾ ದತ್ತಂ ಪರಂತಪ|

03294005c ಏಷ ಮೇ ಸರ್ವಲಾಭಾನಾಂ ಲಾಭಃ ಪರಮಕೋ ಮತಃ||

ಪರಂತಪ! ಅವುಗಳನ್ನು ನನಗೆ ಬೇಗನೆ ಕೊಡಬೇಕೆಂದು ಬಯಸುತ್ತೇನೆ. ಅದನ್ನು ಎಲ್ಲ ದಾನಕ್ಕಿಂತಲೂ ಮಿಗಿಲಾದದ್ದು ಎಂದು ತಿಳಿಯುತ್ತೇನೆ.”

03294006 ಕರ್ಣ ಉವಾಚ|

03294006a ಅವನಿಂ ಪ್ರಮದಾ ಗಾಶ್ಚ ನಿರ್ವಾಪಂ ಬಹುವಾರ್ಷಿಕಂ|

03294006c ತತ್ತೇ ವಿಪ್ರ ಪ್ರದಾಸ್ಯಾಮಿ ನ ತು ವರ್ಮ ನ ಕುಂಡಲೇ||

ಕರ್ಣನು ಹೇಳಿದನು: “ಬ್ರಾಹ್ಮಣ! ನಾನು ನಿನಗೆ ಭೂಮಿ, ಸುಂದರಿಯರು, ಗೋವುಗಳು ಮತ್ತು ಬಹಳ ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಕೊಡುತ್ತೇನೆ. ಆದರೆ ಈ ಕವಚ ಕುಂಡಲಗಳನ್ನಲ್ಲ.””

03294007 ವೈಶಂಪಾಯನ ಉವಾಚ|

03294007a ಏವಂ ಬಹುವಿಧೈರ್ವಾಕ್ಯೈರ್ಯಾಚ್ಯಮಾನಃ ಸ ತು ದ್ವಿಜಃ|

03294007c ಕರ್ಣೇನ ಭರತಶ್ರೇಷ್ಠ ನಾನ್ಯಂ ವರಮಯಾಚತ||

ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ! ಈ ರೀತಿ ಬಹುವಿಧದಲ್ಲಿ ಬಹುವಾಕ್ಯಗಳಲ್ಲಿ ಆ ದ್ವಿಜನನ್ನು ಯಾಚಿಸಿದರೂ ಅವನು ಕರ್ಣನಿಂದ ಬೇರೆ ವರವನ್ನು ಕೇಳಲಿಲ್ಲ.

03294008a ಸಾಂತ್ವಿತಶ್ಚ ಯಥಾಶಕ್ತಿ ಪೂಜಿತಶ್ಚ ಯಥಾವಿಧಿ|

03294008c ನೈವಾನ್ಯಂ ಸ ದ್ವಿಜಶ್ರೇಷ್ಠಃ ಕಾಮಯಾಮಾಸ ವೈ ವರಂ||

ಯಥಾಶಕ್ತಿಯಾಗಿ ಸಂತವಿಸಲ್ಪಟ್ಟರೂ ಯಥಾವಿಧಿಯಾಗಿ ಪೂಜಿಸಲ್ಪಟ್ಟರೂ ಆ ದ್ವಿಜಶ್ರೇಷ್ಠನು ಬೇರೆ ಯಾವ ವರವನ್ನೂ ಬಯಸಲಿಲ್ಲ.

03294009a ಯದಾ ನಾನ್ಯಂ ಪ್ರವೃಣುತೇ ವರಂ ವೈ ದ್ವಿಜಸತ್ತಮಃ|

03294009c ತದೈನಮಬ್ರವೀದ್ಭೂಯೋ ರಾಧೇಯಃ ಪ್ರಹಸನ್ನಿವ||

ಆ ದ್ವಿಜಸತ್ತಮನು ಬೇರೆ ಯಾವ ವರವನ್ನೂ ಕೇಳದಿದ್ದಾಗ ರಾಧೇಯನು ನಕ್ಕು ಪುನಃ ಈ ಮಾತುಗಳನ್ನಾಡಿದನು:

03294010a ಸಹಜಂ ವರ್ಮ ಮೇ ವಿಪ್ರ ಕುಂಡಲೇ ಚಾಮೃತೋದ್ಭವೇ|

03294010c ತೇನಾವಧ್ಯೋಽಸ್ಮಿ ಲೋಕೇಷು ತತೋ ನೈತದ್ದದಾಮ್ಯಹಂ||

“ವಿಪ್ರ! ನಾನು ಲೋಕದಲ್ಲಿ ಅವಧ್ಯನಾಗಿರಲೆಂದು ಅಮೃತದಿಂದ ಉದ್ಭವಿಸಿದ ಈ ಕವಚ ಕುಂಡಲಗಳನ್ನು ಧರಿಸಿ ನಾನು ಹುಟ್ಟಿದ್ದೇನೆ. ಆದುದರಿಂದ ಇವುಗಳನ್ನು ನಾನು ಕೊಡುವುದಿಲ್ಲ.

03294011a ವಿಶಾಲಂ ಪೃಥಿವೀರಾಜ್ಯಂ ಕ್ಷೇಮಂ ನಿಹತಕಂಟಕಂ|

03294011c ಪ್ರತಿಗೃಹ್ಣೀಷ್ವ ಮತ್ತಸ್ತ್ವಂ ಸಾಧು ಬ್ರಾಹ್ಮಣಪುಂಗವ||

ಬ್ರಾಹ್ಮಣಪುಂಗವ! ಕ್ಷೇಮದಿಂದಿರುವ, ಶತ್ರುಗಳನ್ನು ನಾಶಪಡಿಸಿರುವ, ನನ್ನ ಈ ವಿಶಾಲ ಪೃಥಿವೀ ರಾಜ್ಯವನ್ನು ವಿಶ್ವಾಸದಿಂದ ಸ್ವೀಕರಿಸು.

03294012a ಕುಂಡಲಾಭ್ಯಾಂ ವಿಮುಕ್ತೋಽಹಂ ವರ್ಮಣಾ ಸಹಜೇನ ಚ|

03294012c ಗಮನೀಯೋ ಭವಿಷ್ಯಾಮಿ ಶತ್ರೂಣಾಂ ದ್ವಿಜಸತ್ತಮ||

ದ್ವಿಜಸತ್ತಮ! ಸಹಜವಾಗಿರುವ ಈ ಕುಂಡಲ ಮತ್ತು ಕವಚಗಳಿಂದ ವಿಮುಕ್ತನಾದ ನಾನು ಶತ್ರುಗಳಿಗೆ ಗಮನೀಯನಾಗುತ್ತೇನೆ.””

03294013a ಯದಾ ನಾನ್ಯಂ ವರಂ ವವ್ರೇ ಭಗವಾನ್ಪಾಕಶಾಸನಃ|

03294013c ತತಃ ಪ್ರಹಸ್ಯ ಕರ್ಣಸ್ತಂ ಪುನರಿತ್ಯಬ್ರವೀದ್ವಚಃ||

ವೈಶಂಪಾಯನನು ಹೇಳಿದನು: “ಭಗವಾನ್ ಪಾಕಶಾಸನನು ಬೇರೆ ಯಾವ ವರವನ್ನೂ ಕೇಳದಿದ್ದಾಗ ನಗುತ್ತ ಕರ್ಣನು ಪುನಃ ಹೇಳಿದನು:

03294014a ವಿದಿತೋ ದೇವದೇವೇಶ ಪ್ರಾಗೇವಾಸಿ ಮಮ ಪ್ರಭೋ|

03294014c ನ ತು ನ್ಯಾಯ್ಯಂ ಮಯಾ ದಾತುಂ ತವ ಶಕ್ರ ವೃತ್ರಹಾ ವರಂ|

“ಪ್ರಭೋ! ದೇವದೇವೇಶ! ನೀನು ಯಾರೆಂದು ನನಗೆ ಮೊದಲೇ ಗೊತ್ತಿತ್ತು. ಶಕ್ರ! ನಿನ್ನಿಂದ ವರವನ್ನು ಪಡೆಯದೇ ನಾನು ನಿನಗೆ ಕೊಡುವುದು ನ್ಯಾಯವಲ್ಲ.

03294015a ತ್ವಂ ಹಿ ದೇವೇಶ್ವರಃ ಸಾಕ್ಷಾತ್ತ್ವಯಾ ದೇಯೋ ವರೋ ಮಮ|

03294015c ಅನ್ಯೇಷಾಂ ಚೈವ ಭೂತಾನಾಮೀಶ್ವರೋ ಹ್ಯಸಿ ಭೂತಕೃತ್||

ಸಾಕ್ಷಾತ್ ದೇವೇಶ್ವರನಾದ ನೀನೇ ನನಗೆ ವರವನ್ನು ಕೊಡಬೇಕು. ಯಾಕೆಂದರೆ ನೀನು ಅನ್ಯ ಎಲ್ಲ ಭೂತಗಳ ಸೃಷ್ಟಿಕರ್ತ ಮತ್ತು ಭೂತಗಳ ಈಶ್ವರ!

03294016a ಯದಿ ದಾಸ್ಯಾಮಿ ತೇ ದೇವ ಕುಂಡಲೇ ಕವಚಂ ತಥಾ|

03294016c ವಧ್ಯತಾಮುಪಯಾಸ್ಯಾಮಿ ತ್ವಂ ಚ ಶಕ್ರಾವಹಾಸ್ಯತಾಂ||

ದೇವ! ಒಂದುವೇಳೆ ನಾನು ನಿನಗೆ ಕುಂಡಲ ಕವಚಗಳನ್ನು ಕೊಟ್ಟರೆ ನಾನು ವಧ್ಯನಾಗುತ್ತೇನೆ ಮತ್ತು ಶಕ್ರ! ನೀನು ನಗೆಗೊಳಗಾಗುತ್ತೀಯೆ.

03294017a ತಸ್ಮಾದ್ವಿನಿಮಯಂ ಕೃತ್ವಾ ಕುಂಡಲೇ ವರ್ಮ ಚೋತ್ತಮಂ|

03294017c ಹರಸ್ವ ಶಕ್ರ ಕಾಮಂ ಮೇ ನ ದದ್ಯಾಮಹಮನ್ಯಥಾ||

ಈ ಒಪ್ಪಂದವನ್ನು ಮಾಡಿಕೊಂಡು ನೀನು ನನ್ನ ಈ ಉತ್ತಮ ಕುಂಡಲ ಕವಚಗಳನ್ನು ತೆಗೆದುಕೋ. ಶಕ್ರ! ಅನ್ಯಥಾ ನಾನು ಇವುಗಳನ್ನು ಕೊಡಬಯಸುವುದಿಲ್ಲ.”

03294018 ಶಕ್ರ ಉವಾಚ|

03294018a ವಿದಿತೋಽಹಂ ರವೇಃ ಪೂರ್ವಮಾಯನ್ನೇವ ತವಾಂತಿಕಂ|

03294018c ತೇನ ತೇ ಸರ್ವಮಾಖ್ಯಾತಮೇವಮೇತನ್ನ ಸಂಶಯಃ||

ಶಕ್ರನು ಹೇಳಿದನು: “ನಾನು ಬರುವವನಿದ್ದೇನೆಂದು ನಿನಗೆ ರವಿಯು ಹೇಳಿದ್ದನು. ಅವನು ನಿನಗೆ ಎಲ್ಲವನ್ನೂ ಹೇಳಿರಬಹುದು. ಅದರಲ್ಲಿ ಸಂಶಯವೇ ಇಲ್ಲ.

03294019a ಕಾಮಮಸ್ತು ತಥಾ ತಾತ ತವ ಕರ್ಣ ಯಥೇಚ್ಚಸಿ|

03294019c ವರ್ಜಯಿತ್ವಾ ತು ಮೇ ವಜ್ರಂ ಪ್ರವೃಣೀಷ್ವ ಯದಿಚ್ಚಸಿ||

ಕರ್ಣ! ಮಗೂ! ನಿನಗೆ ಬೇಕಾದುದನ್ನು ಬಯಸು. ಈ ವಜ್ರವನ್ನು ಬಿಟ್ಟು ನನ್ನಿಂದ ಏನು ಬೇಕೋ ಅದನ್ನು ಕೇಳಿಕೋ.””

03294020 ವೈಶಂಪಾಯನ ಉವಾಚ|

03294020a ತತಃ ಕರ್ಣಃ ಪ್ರಹೃಷ್ಟಸ್ತು ಉಪಸಂಗಮ್ಯ ವಾಸವಂ|

03294020c ಅಮೋಘಾಂ ಶಕ್ತಿಮಭ್ಯೇತ್ಯ ವವ್ರೇ ಸಂಪೂರ್ಣಮಾನಸಃ||

ವೈಶಂಪಾಯನನು ಹೇಳಿದನು: “ಆಗ ಕರ್ಣನು ಸಂತೋಷಗೊಂಡು ವಾಸವನ ಬಳಿಸಾರಿ ಸಂಪೂರ್ಣಮಾನಸನಾಗಿ ಅವನ ಅಮೋಘ ಶಕ್ತಿಯನ್ನು ವರಿಸಿದನು.

03294021 ಕರ್ಣ ಉವಾಚ|

03294021a ವರ್ಮಣಾ ಕುಂಡಲಾಭ್ಯಾಂ ಚ ಶಕ್ತಿಂ ಮೇ ದೇಹಿ ವಾಸವ|

03294021c ಅಮೋಘಾಂ ಶತ್ರುಸಂಘಾನಾಂ ಘಾತನೀಂ ಪೃತನಾಮುಖೇ||

ಕರ್ಣನು ಹೇಳಿದನು: “ವಾಸವ! ಕವಚ ಕುಂಡಲಗಳಿಗೆ ಬದಲಾಗಿ ನನಗೆ ರಣರಂಗದಲ್ಲಿ ಶತ್ರುಸಂಘಗಳನ್ನು ಘಾತಿಸುವ ಈ ಅಮೋಘ ಶಕ್ತಿಯನ್ನು ಕೊಡು.””

03294022 ವೈಶಂಪಾಯನ ಉವಾಚ|

03294022a ತತಃ ಸಂಚಿಂತ್ಯ ಮನಸಾ ಮುಹೂರ್ತಮಿವ ವಾಸವಃ|

03294022c ಶಕ್ತ್ಯರ್ಥಂ ಪೃಥಿವೀಪಾಲ ಕರ್ಣಂ ವಾಕ್ಯಮಥಾಬ್ರವೀತ್||

ವೈಶಂಪಾಯನನು ಹೇಳಿದನು: “ಪೃಥಿವೀಪಾಲ! ಆಗ ಒಂದು ಮುಹೂರ್ತ ಮನಸ್ಸಿನಲ್ಲಿಯೇ ಯೋಚಿಸಿ ವಾಸವನು  ಶಕ್ತಿಯನ್ನು ಕೇಳಿದ ಕರ್ಣನಿಗೆ ಈ ಮಾತುಗಳನ್ನಾಡಿದನು:

03294023a ಕುಂಡಲೇ ಮೇ ಪ್ರಯಚ್ಚಸ್ವ ವರ್ಮ ಚೈವ ಶರೀರಜಂ|

03294023c ಗೃಹಾಣ ಕರ್ಣ ಶಕ್ತಿಂ ತ್ವಮನೇನ ಸಮಯೇನ ಮೇ||

“ಕರ್ಣ! ನಿನ್ನ ಶರೀರದೊಂದಿಗೆ ಜನಿಸಿದ ಈ ಕುಂಡಲಗಳನ್ನು ಮತ್ತು ಕವಚವನ್ನು ಕೊಡು. ನಂತರ ಒಪ್ಪಂದದಂತೆ ನನ್ನ ಈ ಶಕ್ತಿಯನ್ನು ಪಡೆ.

03294024a ಅಮೋಘಾ ಹಂತಿ ಶತಶಃ ಶತ್ರೂನ್ಮಮ ಕರಚ್ಯುತಾ|

03294024c ಪುನಶ್ಚ ಪಾಣಿಮಭ್ಯೇತಿ ಮಮ ದೈತ್ಯಾನ್ವಿನಿಘ್ನತಃ||

ನಾನು ದೈತ್ಯರೊಂದಿಗೆ ಹೋರಾಡುವಾಗ ಈ ಅಮೋಘ ಶಕ್ತಿಯು ನನ್ನ ಕೈಯಿಂದ ಬಿಟ್ಟಾಗ ನೂರಾರು ಶತ್ರುಗಳನ್ನು ಕೊಂದು ಪುನಃ ನನ್ನ ಕೈಗೆ ಬಂದು ಸೇರುತ್ತದೆ.

03294025a ಸೇಯಂ ತವ ಕರಂ ಪ್ರಾಪ್ಯ ಹತ್ವೈಕಂ ರಿಪುಮೂರ್ಜಿತಂ|

03294025c ಗರ್ಜಂತಂ ಪ್ರತಪಂತಂ ಚ ಮಾಮೇವೈಷ್ಯತಿ ಸೂತಜ||

ಸೂತಜ! ನಿನ್ನ ಕೈಯಲ್ಲಿ ಈ ಶಕ್ತಿಯು ಒಬ್ಬನೇ ಶಕ್ತಿಶಾಲಿ ಗರ್ಜಿಸುವ ಮತ್ತು ಹೊಳೆಯುತ್ತಿರುವ ವೈರಿಯನ್ನು ಕೊಂದು ಮರಳಿ ನನ್ನ ಕೈಯನ್ನು ಸೇರುತ್ತದೆ.”

03294026 ಕರ್ಣ ಉವಾಚ|

03294026a ಏಕಮೇವಾಹಮಿಚ್ಚಾಮಿ ರಿಪುಂ ಹಂತುಂ ಮಹಾಹವೇ|

03294026c ಗರ್ಜಂತಂ ಪ್ರತಪಂತಂ ಚ ಯತೋ ಮಮ ಭಯಂ ಭವೇತ್||

ಕರ್ಣನು ಹೇಳಿದನು: “ಮಹಾಯುದ್ಧದಲ್ಲಿ ಗರ್ಜಿಸುವ, ಸುಡುತ್ತಿರುವ ಮತ್ತು ನನಗೆ ಭಯವನ್ನು ಕೊಡುವ ಒಬ್ಬನೇ ರಿಪುವನ್ನು ಕೊಲ್ಲಲು ಬಯಸುತ್ತೇನೆ.”

03294027 ಇಂದ್ರ ಉವಾಚ|

03294027a ಏಕಂ ಹನಿಷ್ಯಸಿ ರಿಪುಂ ಗರ್ಜಂತಂ ಬಲಿನಂ ರಣೇ|

03294027c ತ್ವಂ ತು ಯಂ ಪ್ರಾರ್ಥಯಸ್ಯೇಕಂ ರಕ್ಷ್ಯತೇ ಸ ಮಹಾತ್ಮನಾ||

03294028a ಯಮಾಹುರ್ವೇದವಿದ್ವಾಂಸೋ ವರಾಹಮಜಿತಂ ಹರಿಂ|

03294028c ನಾರಾಯಣಮಚಿಂತ್ಯಂ ಚ ತೇನ ಕೃಷ್ಣೇನ ರಕ್ಷ್ಯತೇ||

ಇಂದ್ರನು ಹೇಳಿದನು: “ರಣದಲ್ಲಿ ಗರ್ಜಿಸುವ ಬಲಶಾಲಿ ರಿಪು ಓರ್ವನನ್ನೇ ನೀನು ಕೊಲ್ಲಬಲ್ಲೆ. ನೀನು ಬಯಸುವ ಓರ್ವ ಪಾರ್ಥನು ವರಾಹ, ಅಜಿತ, ಹರಿ, ನಾರಾಯಣ, ಅಚಿಂತ್ಯ ಎಂದು ವಿದ್ವಾಂಸರು ಯಾರನ್ನು ಕರೆಯುತ್ತಾರೋ ಆ ಮಹಾತ್ಮ ಕೃಷ್ಣನ ರಕ್ಷಣೆಯಲ್ಲಿದ್ದಾನೆ[1].”

03294029 ಕರ್ಣ ಉವಾಚ|

03294029a ಏವಮಪ್ಯಸ್ತು ಭಗವನ್ನೇಕವೀರವಧೇ ಮಮ|

03294029c ಅಮೋಘಾ ಪ್ರವರಾ ಶಕ್ತಿರ್ಯೇನ ಹನ್ಯಾಂ ಪ್ರತಾಪಿನಂ||

ಕರ್ಣನು ಹೇಳಿದನು: “ಭಗವನ್! ಯಾವುದರಿಂದ ಪ್ರತಾಪಿಯನ್ನು ನಾನು ಕೊಲ್ಲುವೆನೋ ಈ ಅಮೋಘ ಪ್ರವರ ಶಕ್ತಿಯು ಒಬ್ಬ ವೀರನನ್ನು ವಧಿಸುವವರೆಗೆ ನನ್ನ ಬಳಿಯಿರಲಿ.

03294030a ಉತ್ಕೃತ್ಯ ತು ಪ್ರದಾಸ್ಯಾಮಿ ಕುಂಡಲೇ ಕವಚಂ ಚ ತೇ|

03294030c ನಿಕೃತ್ತೇಷು ಚ ಗಾತ್ರೇಷು ನ ಮೇ ಬೀಭತ್ಸತಾ ಭವೇತ್||

ನನ್ನ ಕುಂಡಲ ಕವಚಗಳನ್ನು ಕಿತ್ತು ನಿನಗೆ ಕೊಡುತ್ತೇನೆ. ಗಾಯಗೊಂಡ ನನ್ನ ದೇಹವು ಬೀಭತ್ಸವಾಗದಿರಲಿ.”

03294031 ಇಂದ್ರ ಉವಾಚ|

03294031a ನ ತೇ ಬೀಭತ್ಸತಾ ಕರ್ಣ ಭವಿಷ್ಯತಿ ಕಥಂ ಚನ|

03294031c ವ್ರಣಶ್ಚಾಪಿ ನ ಗಾತ್ರೇಷು ಯಸ್ತ್ವಂ ನಾನೃತಮಿಚ್ಚಸಿ||

ಇಂದ್ರನು ಹೇಳಿದನು: “ಕರ್ಣ! ನೀನು ಎಂದೂ ವಿರೂಪನಾಗುವುದಿಲ್ಲ. ನೀನು ಬಯಸಿದಂತೆ ನಿನ್ನ ದೇಹದಮೇಲೆ ಗಾಯಗಳು ಕಾಣಿಸಿಕೊಳ್ಳುವುದಿಲ್ಲ.

03294032a ಯಾದೃಶಸ್ತೇ  ಪಿತುರ್ವರ್ಣಸ್ತೇಜಶ್ಚ ವದತಾಂ ವರ|

03294032c ತಾದೃಶೇನೈವ ವರ್ಣೇನ ತ್ವಂ ಕರ್ಣ ಭವಿತಾ ಪುನಃ||

ಮಾತುಗಾರರಲ್ಲಿ ಶ್ರೇಷ್ಠ ಕರ್ಣ! ನೀನು ಪುನಃ ಬಣ್ಣದಲ್ಲಿ ಮತ್ತು ತೇಜಸ್ಸಿನಲ್ಲಿ ನಿನ್ನ ತಂದೆಯಂತೆ ಆಗುತ್ತೀಯೆ.

03294033a ವಿದ್ಯಮಾನೇಷು ಶಸ್ತ್ರೇಷು ಯದ್ಯಮೋಘಾಮಸಂಶಯೇ|

03294033c ಪ್ರಮತ್ತೋ ಮೋಕ್ಷ್ಯಸೇ ಚಾಪಿ ತ್ವಯ್ಯೇವೈಷಾ ಪತಿಷ್ಯತಿ||

ಆದರೆ ನಿನ್ನ ಬಳಿ ಇತರ ಆಯುಧಗಳಿದ್ದರೂ ಪ್ರಮತ್ತನಾಗಿ ಈ ಅಮೋಘ ಶಕ್ತಿಯನ್ನು ಪ್ರಯೋಗಿಸಿದರೆ, ಅದು ನಿನ್ನ ಮೇಲೆಯೇ ಬಂದು ಬೀಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

03294034 ಕರ್ಣ ಉವಾಚ|

03294034a ಸಂಶಯಂ ಪರಮಂ ಪ್ರಾಪ್ಯ ವಿಮೋಕ್ಷ್ಯೇ ವಾಸವೀಮಿಮಾಂ|

03294034c ಯಥಾ ಮಾಮಾತ್ಥ ಶಕ್ರ ತ್ವಂ ಸತ್ಯಮೇತದ್ಬ್ರವೀಮಿ ತೇ||

ಕರ್ಣನು ಹೇಳಿದನು: “ಶಕ್ರ! ನೀನು ಹೇಳಿದಂತೆ ವಾಸವನ ಈ ಶಕ್ತಿಯನ್ನು ನಾನು ಅತ್ಯಂತ ಅಪಾಯದಲ್ಲಿದ್ದಾಗ ಮಾತ್ರ ಬಳಸುತ್ತೇನೆ. ಈ ಸತ್ಯವನ್ನು ನಿನಗೆ ಹೇಳುತ್ತೇನೆ.””

03294035 ವೈಶಂಪಾಯನ ಉವಾಚ|

03294035a ತತಃ ಶಕ್ತಿಂ ಪ್ರಜ್ವಲಿತಾಂ ಪ್ರತಿಗೃಹ್ಯ ವಿಶಾಂ ಪತೇ|

03294035c ಶಸ್ತ್ರಂ ಗೃಹೀತ್ವಾ ನಿಶಿತಂ ಸರ್ವಗಾತ್ರಾಣ್ಯಕೃಂತತ||

ವೈಶಂಪಾಯನನು ಹೇಳಿದನು: “ವಿಶಾಂಪತೇ! ಆಗ ಆ ಪ್ರಜ್ವಲಿಸುತ್ತಿರುವ ಶಕ್ತಿಯನ್ನು ಕರ್ಣನು ಸ್ವೀಕರಿಸಿದನು. ನಿಶಿತ ಖಡ್ಗವನ್ನು ಹಿಡಿದು ತನ್ನ ಸಂಪೂರ್ಣದೇಹದಮೇಲೆ ಗುರುತುಹಾಕಿದನು.

03294036a ತತೋ ದೇವಾ ಮಾನವಾ ದಾನವಾಶ್ಚ|

         ನಿಕೃಂತಂತಂ ಕರ್ಣಮಾತ್ಮಾನಮೇವಂ|

03294036c ದೃಷ್ಟ್ವಾ ಸರ್ವೇ ಸಿದ್ಧಸಂಘಾಶ್ಚ ನೇದುರ್|

         ನ ಹ್ಯಸ್ಯಾಸೀದ್ದುಃಖಜೋ ವೈ ವಿಕಾರಃ||

ಆಗ ದೇವತೆಗಳು, ಮಾನವರು, ದೇವತೆಗಳು ಕರ್ಣನು ತನ್ನನ್ನು ತಾನೇ ಕತ್ತರಿಸಿಕೊಳ್ಳುತ್ತಿರುವದನ್ನು ನೋಡಿ ಸಿದ್ಧಸಂಘಗಳೆಲ್ಲವೂ ಉದ್ಗರಿಸಿದವು. ನೋವಿದ್ದರೂ ಅವನ ಒಂದು ಮಾಂಸಖಂಡವೂ ಕಂಪಿಸಲಿಲ್ಲ.

03294037a ತತೋ ದಿವ್ಯಾ ದುಂದುಭಯಃ ಪ್ರಣೇದುಃ|

         ಪಪಾತೋಚ್ಚೈಃ ಪುಷ್ಪವರ್ಷಂ ಚ ದಿವ್ಯಂ|

03294037c ದೃಷ್ಟ್ವಾ ಕರ್ಣಂ ಶಸ್ತ್ರಸಂಕೃತ್ತಗಾತ್ರಂ|

         ಮುಹುಶ್ಚಾಪಿ ಸ್ಮಯಮಾನಂ ನೃವೀರಂ||

ಕರ್ಣನು ಖಡ್ಗದಿಂದ ತನ್ನ ದೇಹವನ್ನು ಕತ್ತರಿಸುವುದನ್ನು ಮತ್ತು ಮನುಷ್ಯರಲ್ಲಿ ವೀರನು ಮತ್ತೆ ಮತ್ತೆ ಮುಗುಳ್ನಗುತ್ತಿರುವುದನ್ನು ನೋಡಿ, ದಿವ್ಯ ದುಂದುಭಿಗಳು ಮೊಳಗಿದವು. ಮೇಲಿಂದ ದಿವ್ಯ ಪುಷ್ಪಗಳ ಮಳೆಯು ಬಿದ್ದಿತು.

03294038a ತತಶ್ಚಿತ್ತ್ವಾ ಕವಚಂ ದಿವ್ಯಮಂಗಾತ್|

         ತಥೈವಾರ್ದ್ರಂ ಪ್ರದದೌ ವಾಸವಾಯ|

03294038c ತಥೋತ್ಕೃತ್ಯ ಪ್ರದದೌ ಕುಂಡಲೇ ತೇ|

         ವೈಕರ್ತನಃ ಕರ್ಮಣಾ ತೇನ ಕರ್ಣಃ||

ತನ್ನ ದೇಹದಿಂದ ಕವಚವನ್ನು ಕಿತ್ತು, ಒದ್ದೆಯಿರುವಾಗಲೇ ಅದನ್ನು ವಾಸವನಿಗೆ ಕೊಟ್ಟನು. ಕುಂಡಲಗಳನ್ನೂ ಕಿತ್ತು ಅವನಿಗೆ ಕೊಟ್ಟನು. ಈ ಕರ್ಮದಿಂದ ಕರ್ಣನು ವೈಕರ್ತನನೆನಿಸಿದನು.

03294039a ತತಃ ಶಕ್ರಃ ಪ್ರಹಸನ್ವಂಚಯಿತ್ವಾ|

         ಕರ್ಣಂ ಲೋಕೇ ಯಶಸಾ ಯೋಜಯಿತ್ವಾ|

03294039c ಕೃತಂ ಕಾರ್ಯಂ ಪಾಂಡವಾನಾಂ ಹಿ ಮೇನೇ|

         ತತಃ ಪಶ್ಚಾದ್ದಿವಮೇವೋತ್ಪಪಾತ||

ಆಗ ಶಕ್ರನು ಕರ್ಣನನ್ನು ಲೋಕದಲ್ಲಿ ಯಶಸ್ವಿಯನ್ನಾಗಿ ಮಾಡಿದ ತನ್ನ ಮೋಸಕ್ಕೆ ನಕ್ಕನು. ಪಾಂಡವರ ಹಿತ ಕಾರ್ಯವನ್ನು ಮಾಡಿದೆನೆಂದು ತಿಳಿದು ಅವನು ದಿವಿಗೆ ಹಾರಿದನು.

03294040a ಶ್ರುತ್ವಾ ಕರ್ಣಂ ಮುಷಿತಂ ಧಾರ್ತರಾಷ್ಟ್ರಾ|

         ದೀನಾಃ ಸರ್ವೇ ಭಗ್ನದರ್ಪಾ ಇವಾಸನ್|

03294040c ತಾಂ ಚಾವಸ್ಥಾಂ ಗಮಿತಂ ಸೂತಪುತ್ರಂ|

         ಶ್ರುತ್ವಾ ಪಾರ್ಥಾ ಜಹೃಷುಃ ಕಾನನಸ್ಥಾಃ||

ಕರ್ಣನು ಮೋಸಹೋದುದನ್ನು ಕೇಳಿ ಧಾರ್ತರಾಷ್ಟ್ರರೆಲ್ಲರೂ ದೀನರಾಗಿ ದರ್ಪಗಳು ಮುರಿದಂತೆ ಆದರು. ಸೂತಪುತ್ರನು ಯಾವ ಅವಸ್ಥೆಗೆ ಹೋದನೆಂದು ಕೇಳಿ ಕಾನನದಲ್ಲಿದ್ದ ಪಾಂಡವರು ಹರ್ಷವನ್ನಾಚರಿಸಿದರು.”

03294041 ಜನಮೇಜಯ ಉವಾಚ|

03294041a ಕ್ವಸ್ಥಾ ವೀರಾಃ ಪಾಂಡವಾಸ್ತೇ ತೇ ಬಭೂವುಃ|

         ಕುತಶ್ಚೈತಚ್ಚ್ರುತವಂತಃ ಪ್ರಿಯಂ ತೇ|

03294041c ಕಿಂ ವಾಕಾರ್ಷುರ್ದ್ವಾದಶೇಽಬ್ದೇ ವ್ಯತೀತೇ|

         ತನ್ಮೇ ಸರ್ವಂ ಭಗವಾನ್ವ್ಯಾಕರೋತು||

ಜನಮೇಜಯನು ಹೇಳಿದನು: “ಆದರೆ ವೀರ ಪಾಂಡವರು ಆಗ ಎಲ್ಲಿದ್ದರು ಮತ್ತು ಅವರು ಈ ಸಂತೋಷದ ವೃತ್ತಾಂತವನ್ನು ಎಲ್ಲಿಂದ ಕೇಳಿದರು? ಹನ್ನೆರಡನೆಯ ವರ್ಷವು ಮುಗಿಯಲು ಅವರು ಏನು ಮಾಡಿದರು? ಭಗವನ್! ಅವೆಲ್ಲವನ್ನೂ ನನಗೆ ಹೇಳು.”

03294042 ವೈಶಂಪಾಯನ ಉವಾಚ|

03294042a ಲಬ್ಧ್ವಾ ಕೃಷ್ಣಾಂ ಸೈಂಧವಂ ದ್ರಾವಯಿತ್ವಾ|

         ವಿಪ್ರೈಃ ಸಾರ್ಧಂ ಕಾಮ್ಯಕಾದಾಶ್ರಮಾತ್ತೇ|

03294042c ಮಾರ್ಕಂಡೇಯಾಚ್ಚ್ರುತವಂತಃ ಪುರಾಣಂ|

         ದೇವರ್ಷೀಣಾಂ ಚರಿತಂ ವಿಸ್ತರೇಣ||

ವೈಶಂಪಾಯನನು ಹೇಳಿದನು: “ಸೈಂಧವನನ್ನು ಓಡಿಸಿ ಕೃಷ್ಣೆಯನ್ನು ಪಡೆದು ವಿಪ್ರರೊಂದಿಗೆ ಕಾಮ್ಯಕ ಆಶ್ರಮದಲ್ಲಿ ಮಾರ್ಕಂಡೇಯನು ಹೇಳುತ್ತಿದ್ದ ಪುರಾಣ ದೇವರ್ಷಿಗಳ ಚರಿತ್ರೆಗಳನ್ನು ವಿಸ್ತಾರವಾಗಿ ಕೇಳುತ್ತಿದ್ದರು.

03294043a ಪ್ರತ್ಯಾಜಗ್ಮುಃ ಸರಥಾಃ ಸಾನುಯಾತ್ರಾಃ|

         ಸರ್ವೈಃ ಸಾರ್ಧಂ ಸೂದಪೌರೋಗವೈಶ್ಚ|

03294043c ತತಃ ಪುಣ್ಯಂ ದ್ವೈತವನಂ ನೃವೀರಾ|

         ನಿಸ್ತೀರ್ಯೋಗ್ರಂ ವನವಾಸಂ ಸಮಗ್ರಂ||

ಅನಂತರ ಸಾರಥಿಗಳು ಮತ್ತು ಅನುಯಾಯಿಗಳೊಡನೆ, ಜೊತೆಗಿದ್ದ ಎಲ್ಲರೊಡನೆ, ಅಡುಗೆಯವರು ಮತ್ತು ಪೌರರೊಂದಿಗೆ ಪುಣ್ಯ ದ್ವೈತವನಕ್ಕೆ ಬಂದು ಅಲ್ಲಿ ಆ ಉಗ್ರ ವನವಾಸವನ್ನು ಪೂರೈಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಕವಚಕುಂಡಲದಾನೇ ಚತುರ್ನವತ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಕವಚಕುಂಡಲದಾನದಲ್ಲಿ ಇನ್ನೂರಾತೊಂಭತ್ನಾಲ್ಕನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೪೩/೧೦೦, ಅಧ್ಯಾಯಗಳು-೫೯೧/೧೯೯೫, ಶ್ಲೋಕಗಳು-೧೯೭೦೩/೭೩೭೮೪

Related image

[1] ಮುಂದೆ ಮಹಾಭಾರತದ ಯುದ್ಧದ ಹದಿನಾಲ್ಕನೆಯ ರಾತ್ರಿ ಕರ್ಣನ ಈ ಶಕ್ತಿಯಿಂದ ಅರ್ಜುನನನ್ನು ರಕ್ಷಿಸುವ ಸಲುವಾಗಿ ಕೃಷ್ಣನು ಘಟೋತ್ಕಚನನ್ನು ಯುದ್ಧಕ್ಕೆ ಕಳುಹಿಸಿ ಕರ್ಣನ ಶಕ್ತಿಯಿಂದ ಘಟೋತ್ಕಚನನನ್ನು ಕೊಲ್ಲಿಸಿದ ಕಥೆಯು ದ್ರೋಣಪರ್ವದಲ್ಲಿ ಬರುತ್ತದೆ.

Comments are closed.