Shanti Parva: Chapter 293

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೩[1]

ಪ್ರಕೃತಿಯ ಸಂಸರ್ಗದೋಷದಿಂದಾಗಿ ಜೀವಿಯು ಪತನಹೊಂದುವುದು (೧-೧೧) ಕ್ಷರ ಮತ್ತು ಅಕ್ಷರ ಹಾಗೂ ಪ್ರಕೃತಿ-ಪುರುಷರ ಸಂಬಂಧದ ವಿಷಯದಲ್ಲಿ ರಾಜಾ ಜನಕನ ಪ್ರಶ್ನೆಗಳಿಗೆ ವಸಿಷ್ಠನು ಉತ್ತರಿಸುವುದು (೧೨-೫೦).

12293001 ವಸಿಷ್ಠ ಉವಾಚ|

12293001a ಏವಮಪ್ರತಿಬುದ್ಧತ್ವಾದಬುದ್ಧಜನಸೇವನಾತ್|

12293001c ಸರ್ಗಕೋಟಿಸಹಸ್ರಾಣಿ ಪತನಾಂತಾನಿ ಗಚ್ಚತಿ||

ವಸಿಷ್ಠನು ಹೇಳಿದನು: “ಹೀಗೆ ಅಜ್ಞಾನದ ಕಾರಣದಿಂದಾಗಿ ಮತ್ತು ಅಜ್ಞಾನಿಗಳ ಸಂಗದಿಂದಾಗಿ ಜೀವಿಯ ನಿರಂತರ ಪತನವಾಗುತ್ತಿರುತ್ತದೆ ಮತ್ತು ಅದಕ್ಕೆ ಸಹಸ್ರಾರು ಕೋಟಿ ಸಂಖ್ಯೆಗಳಲ್ಲಿ ಜನ್ಮವೆತ್ತಬೇಕಾಗುತ್ತದೆ.

12293002a ಧಾಮ್ನಾ ಧಾಮಸಹಸ್ರಾಣಿ ಮರಣಾಂತಾನಿ ಗಚ್ಚತಿ|

12293002c ತಿರ್ಯಗ್ಯೋನೌ ಮನುಷ್ಯತ್ವೇ ದೇವಲೋಕೇ ತಥೈವ ಚ||

ಅದು ಪಶು-ಪಕ್ಷೀ, ಮನುಷ್ಯ ಮತ್ತು ದೇವತಾ ಯೋನಿಗಳಲ್ಲಿ ಹಾಗೂ ಒಂದು ಸ್ಥಾನದಿಂದ ಸಹಸ್ರಾರು ಸ್ಥಾನಗಳಲ್ಲಿ ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತದೆ.

12293003a ಚಂದ್ರಮಾ ಇವ ಕೋಶಾನಾಂ ಪುನಸ್ತತ್ರ ಸಹಸ್ರಶಃ|

12293003c ಲೀಯತೇಽಪ್ರತಿಬುದ್ಧತ್ವಾದೇವಮೇಷ ಹ್ಯಬುದ್ಧಿಮಾನ್||

ಚಂದ್ರಮನು ಹೇಗೆ ಸಹಸ್ರಾರು ಬಾರಿ ಕ್ಷಯನಾಗುತ್ತಾನೆ ಮತ್ತು ಸಹಸ್ರಾರು ಬಾರಿ ವೃದ್ಧಿಹೊಂದುತ್ತಾನೋ ಹಾಗೆ ಅಜ್ಞಾನೀ ಜೀವವೂ ಕೂಡ ಅಜ್ಞಾನವಶದಿಂದಾಗಿ ಸಹಸ್ರಾರು ಬಾರಿ ಲಯವನ್ನು ಹೊಂದುತ್ತದೆ.

12293004a ಕಲಾಃ ಪಂಚದಶಾ ಯೋನಿಸ್ತದ್ಧಾಮ ಇತಿ ಪಠ್ಯತೇ|

12293004c ನಿತ್ಯಮೇತದ್ವಿಜಾನೀಹಿ ಸೋಮಃ ಷೋಡಶಮೀ ಕಲಾ||

ಚಂದ್ರನಿಗೆ ಹದಿನೈದು ಕಲೆಗಳಿದ್ದಂತೆ ಜೀವಿಗೂ ಹದಿನೈದು ಕಲೆಗಳ ಉತ್ಪತ್ತಿಸ್ಥಾನಗಳಿವೆ. ಅಜ್ಞಾನೀ ಜೀವವು ಅವುಗಳನ್ನೇ ತನ್ನ ಆಶ್ರಯಗಳೆಂದು ತಿಳಿದುಕೊಳ್ಳುತ್ತದೆ. ಆದರೆ ಅದರ ಹದಿನಾರನೆಯ ಕಲೆಯನ್ನು ನೀನು ನಿತ್ಯವೂ ತಿಳಿದುಕೊಳ್ಳಬೇಕು. ಅದು ಚಂದ್ರಮನ ಅಮಾ ಎಂಬ ಹೆಸರಿನ ಹದಿನಾರನೇ ಕಲೆಯ ಸಮನಾಗಿದೆ.

12293005a ಕಲಾಯಾಂ ಜಾಯತೇಽಜಸ್ರಂ ಪುನಃ ಪುನರಬುದ್ಧಿಮಾನ್|

12293005c ಧಾಮ ತಸ್ಯೋಪಯುಂಜಂತಿ ಭೂಯ ಏವ ತು ಜಾಯತೇ||

ಅಜ್ಞಾನೀ ಜೀವವು ಸದಾ ಪುನಃ ಪುನಃ ಕಲೆಗಳಿಂದಾದ ಜನ್ಮಗಳನ್ನು ಪರಿಗ್ರಹಿಸುತ್ತದೆ. ಅದೇ ಕಲೆಗಳೇ ಜೀವಿಗೆ ಆಶ್ರಯಯೋಗ್ಯವಾಗಿವೆ. ಆದುದರಿಂದ ಜೀವವು ಅವುಗಳಿಂದಲೇ ಪುನಃ ಪುನಃ ಜನ್ಮವೆತ್ತುತ್ತಿರುತ್ತದೆ.

12293006a ಷೋಡಶೀ ತು ಕಲಾ ಸೂಕ್ಷ್ಮಾ ಸ ಸೋಮ ಉಪಧಾರ್ಯತಾಮ್|

12293006c ನ ತೂಪಯುಜ್ಯತೇ ದೇವೈರ್ದೇವಾನುಪಯುನಕ್ತಿ ಸಾ||

ಅಮಾ ಎಂಬ ಹದಿನಾರನೆಯ ಸೂಕ್ಷ್ಮ ಕಲೆಯೇ ಸೋಮ ಅಥವಾ ಜೀವದ ಪ್ರಕೃತಿಯು. ಇದನ್ನು ನೀನು ತಿಳಿದುಕೋ. ದೇವತೆಗಳು ಆ ಹದಿನಾರನೇ ಕಲೆಯನ್ನು ಉಪಯೋಗಿಸಕೊಳ್ಳಲಾರರು. ಆದರೆ ಆ ಹದಿನಾರನೇ ಕಲೆಯು ಅವರನ್ನು ಉಪಯೋಗಿಸಿಕೊಳ್ಳುತ್ತದೆ.

12293007a ಏವಂ ತಾಂ ಕ್ಷಪಯಿತ್ವಾ ಹಿ ಜಾಯತೇ ನೃಪಸತ್ತಮ|

12293007c ಸಾ ಹ್ಯಸ್ಯ ಪ್ರಕೃತಿರ್ದೃಷ್ಟಾ ತತ್ಕ್ಷಯಾನ್ಮೋಕ್ಷ ಉಚ್ಯತೇ||

ನೃಪಸತ್ತಮ! ಅಜ್ಞಾನೀ ಜೀವವು ಆ ಹದಿನಾರನೆಯೇ ಕಲಾರೂಪ ಪ್ರಕೃತಿ ಸಂಯೋಗದ ಕ್ಷಯವನ್ನುಂಟುಮಾಡಲಾರದು. ಇದರಿಂದಲೇ ಅದು ಮತ್ತೆ ಮತ್ತೆ ಹುಟ್ಟನ್ನು ಸ್ವೀಕರಿಸುತ್ತಿರುತ್ತದೆ. ಅದೇ ಕಲೆಯೇ ಜೀವದ ಪ್ರಕೃತಿ ಅಥವಾ ಉತ್ಪತ್ತಿಯ ಕಾರಣವೆಂದು ಹೇಳಿದ್ದಾರೆ. ಆ ಸಂಯೋಗದ ಕ್ಷಯವಾದರೇ ಮೋಕ್ಷಪ್ರಾಪ್ತಿಯಾಗುತ್ತದೆ ಎಂದೂ ಹೇಳಿದ್ದಾರೆ.

12293008a ತದೇವಂ ಷೋಡಶಕಲಂ ದೇಹಮವ್ಯಕ್ತಸಂಜ್ಞಕಮ್|

12293008c ಮಮಾಯಮಿತಿ ಮನ್ವಾನಸ್ತತ್ರೈವ ಪರಿವರ್ತತೇ||

ಹದಿನಾರು ಕಲೆಗಳಿಂದ ಕೂಡಿದ ಈ ಸೂಕ್ಷ್ಮಶರೀರವು “ನನ್ನದು” ಎಂದು ತಿಳಿದುಕೊಂಡಿರುವ ಕಾರಣ ಅಜ್ಞಾನೀ ಜೀವವು ಅದರಲ್ಲಿಯೇ ಸುತ್ತಾಡುತ್ತಿರುತ್ತದೆ.

12293009a ಪಂಚವಿಂಶಸ್ತಥೈವಾತ್ಮಾ[2] ತಸ್ಯೈವಾ ಪ್ರತಿಬೋಧನಾತ್|

12293009c ವಿಮಲಸ್ಯ ವಿಶುದ್ಧಸ್ಯ ಶುದ್ಧಾನಿಲನಿಷೇವಣಾತ್[3]||

12293010a ಅಶುದ್ಧ ಏವ ಶುದ್ಧಾತ್ಮಾ ತಾದೃಗ್ಭವತಿ ಪಾರ್ಥಿವ|

12293010c ಅಬುದ್ಧಸೇವನಾಚ್ಚಾಪಿ ಬುದ್ಧೋಽಪ್ಯಬುಧತಾಂ ವ್ರಜೇತ್||

ಇಪ್ಪತ್ತೈದನೆಯ ತತ್ತ್ವರೂಪ ಆತ್ಮವು ವಿಮಲವೂ ವಿಶುದ್ಧವೂ ಆಗಿದ್ದು ಅದನ್ನು ತಿಳಿಯದೇ ಇರುವ ಕಾರಣದಿಂದಾಗಿ ಮತ್ತು ಶುದ್ಧ-ಅಶುದ್ಧ ವಸ್ತುಗಳ ಸೇವನೆಯ ಕಾರಣದಿಂದಾಗಿ ಅದೂ ಕೂಡ ಶುದ್ಧ-ಅಶುದ್ಧವಾಗಿಬಿಡುತ್ತದೆ. ಪಾರ್ಥಿವ! ಅವಿವೇಕಿಯ ಸಂಗದಿಂದ ವಿವೇಕಿಯೂ ಅವಿವೇಕಿಯಾಗಿಬಿಡುತ್ತಾನೆ!

12293011a ತಥೈವಾಪ್ರತಿಬುದ್ಧೋಽಪಿ ಜ್ಞೇಯೋ ನೃಪತಿಸತ್ತಮ|

12293011c ಪ್ರಕೃತೇಸ್ತ್ರಿಗುಣಾಯಾಸ್ತು ಸೇವನಾತ್ ಪ್ರಾಕೃತೋ ಭವೇತ್||

ನೃಪಸತ್ತಮ! ಇದೇ ರೀತಿ ಮೂರ್ಖನೂ ಕೂಡ ವಿವೇಕಶೀಲರ ಸಂಗಮಾಡುವುದರಿಂದ ವಿವೇಕಶೀಲನಾಗುತ್ತಾನೆ ಎಂದು ತಿಳಿದುಕೊಳ್ಳಬೇಕು. ತ್ರಿಗುಣಾತ್ಮಿಕ ಪ್ರಕೃತಿಯ ಸಂಬಂಧದಿಂದ ಆತ್ಮವೂ ಕೂಡ ತ್ರಿಗುಣಾಮಯನಾದಂತೆ ಆಗಿಬಿಡುತ್ತಾನೆ.”

12293012 ಕರಾಲಜನಕ ಉವಾಚ|

12293012a ಅಕ್ಷರಕ್ಷರಯೋರೇಷ ದ್ವಯೋಃ ಸಂಬಂಧ ಇಷ್ಯತೇ|

12293012c ಸ್ತ್ರೀಪುಂಸೋರ್ವಾಪಿ ಭಗವನ್ಸಂಬಂಧಸ್ತದ್ವದುಚ್ಯತೇ||

ಕರಾಲಜನಕನು ಹೇಳಿದನು: “ಭಗವನ್! ಅಕ್ಷರ ಮತ್ತು ಕ್ಷರ ಇವರಿಬ್ಬರ ಈ ಸಂಬಂಧವನ್ನು ಸ್ತ್ರೀ ಮತ್ತು ಪುರುಷರ ಸಂಬಂಧದಂತೆಯೂ ಹೇಳಬಹುದು.

12293013a ಋತೇ ನ ಪುರುಷೇಣೇಹ ಸ್ತ್ರೀ ಗರ್ಭಂ ಧಾರಯತ್ಯುತ|

12293013c ಋತೇ ಸ್ತ್ರಿಯಂ ನ ಪುರುಷೋ ರೂಪಂ ನಿರ್ವರ್ತಯೇತ್ತಥಾ||

ಇಲ್ಲಿ ಪುರುಷನಿಲ್ಲದೇ ಸ್ತ್ರೀಯು ಗರ್ಭಧಾರಣ ಮಾಡಲಾರಳು ಮತ್ತು ಸ್ತ್ರೀಯಿಲ್ಲದೇ ಪುರುಷನೂ ಕೂಡ ಯಾವುದೇ ಶರೀರವನ್ನು ಉತ್ಪತ್ತಿಮಾಡಲಾರನು.

12293014a ಅನ್ಯೋನ್ಯಸ್ಯಾಭಿಸಂಬಂಧಾದನ್ಯೋನ್ಯಗುಣಸಂಶ್ರಯಾತ್|

12293014c ರೂಪಂ ನಿರ್ವರ್ತಯತ್ಯೇತದೇವಂ ಸರ್ವಾಸು ಯೋನಿಷು||

ಅನ್ಯೋನ್ಯ ಸಂಬಂಧದಿಂದಲೇ ಅನ್ಯೋನ್ಯರ ಗುಣಗಳನ್ನು ಆಶ್ರಯಿಸಿ ಯಾವುದೇ ಶರೀರವು ನಿರ್ಮಾಣವಾಗುತ್ತದೆ. ಪ್ರಾಯಶಃ ಎಲ್ಲ ಯೋನಿಗಳಲ್ಲಿಯೂ ಇದೇ ಪರಿಸ್ಥಿತಿಯಿರಬಹುದು.

12293015a ರತ್ಯರ್ಥಮಭಿಸಂರೋಧಾದನ್ಯೋನ್ಯಗುಣಸಂಶ್ರಯಾತ್|

12293015c ಋತೌ ನಿರ್ವರ್ತತೇ ರೂಪಂ ತದ್ವಕ್ಷ್ಯಾಮಿ ನಿದರ್ಶನಮ್||

12293016a ಯೇ ಗುಣಾಃ ಪುರುಷಸ್ಯೇಹ ಯೇ ಚ ಮಾತೃಗುಣಾಸ್ತಥಾ|

12293016c ಅಸ್ಥಿ ಸ್ನಾಯು ಚ ಮಜ್ಜಾ ಚ ಜಾನೀಮಃ ಪಿತೃತೋ ದ್ವಿಜ||

12293017a ತ್ವಗ್ಮಾಂಸಂ ಶೋಣಿತಂ ಚೈವ ಮಾತೃಜಾನ್ಯಪಿ ಶುಶ್ರುಮ|

12293017c ಏವಮೇತದ್ದ್ವಿಜಶ್ರೇಷ್ಠ ವೇದಶಾಸ್ತ್ರೇಷು ಪಠ್ಯತೇ||

ಸ್ತ್ರೀಯು ಋತುಮತಿಯಾದಾಗ ಪುರುಷನೊಂದಿಗೆ ಅವಳ ರತಿ ಸಂಬಂಧವಾದರೆ ಇಬ್ಬರ ಗುಣಗಳ ಮಿಶ್ರಣದಿಂದ ಶರೀರದ ಉತ್ಪತ್ತಿಯಾಗುತ್ತದೆ. ಶರೀರದಲ್ಲಿ ಪುರುಷನ ಮತ್ತು ತಾಯಿಯ ಇಬ್ಬರ ಗುಣಗಳೂ ಕಾಣಿಸುತ್ತವೆ. ಇದನ್ನು ನಿದರ್ಶನದಿಂದ ಹೇಳುತ್ತಿದ್ದೇನೆ. ಅಸ್ತಿ, ಸ್ನಾಯುಗಳು ಮತ್ತು ಮಜ್ಜೆ ಇವು ತಂದೆಯಿಂದ ಪ್ರಾಪ್ತವಾಗುತ್ತವೆ ಮತ್ತು ಚರ್ಮ, ಮಾಂಸ ಮತ್ತು ರಕ್ತ ಇವು ತಾಯಿಯಿಂದ ಪ್ರಾಪ್ತವಾಗುತ್ತವೆ ಎಂದು ನನಗನ್ನಿಸುತ್ತದೆ ಮತ್ತು ಇದರ ಕುರಿತು ಕೇಳಿದ್ದೇನೆ ಕೂಡ. ದ್ವಿಜಶ್ರೇಷ್ಠ! ಇದನ್ನು ನಾನು ವೇದ ಶಾಸ್ತ್ರಗಳಲ್ಲಿಯೂ ಓದಿದ್ದೇನೆ.

12293018a ಪ್ರಮಾಣಂ ಯಚ್ಚ ವೇದೋಕ್ತಂ ಶಾಸ್ತ್ರೋಕ್ತಂ ಯಚ್ಚ ಪಠ್ಯತೇ|

12293018c ವೇದಶಾಸ್ತ್ರಪ್ರಮಾಣಂ ಚ ಪ್ರಮಾಣಂ ತತ್ಸನಾತನಮ್||

ವೇದಗಳಲ್ಲಿ ಕೊಟ್ಟಿರುವ ಪ್ರಮಾಣಗಳು ಮತ್ತು ಶಾಸ್ತ್ರಗಳಲ್ಲಿ ಹೇಳಿರುವ ಪ್ರಮಾಣಗಳನ್ನು ಕೇಳಬಹುದು ಮತ್ತು ಓದಬಹುದು. ಏಕೆಂದರೆ ವೇದ ಮತ್ತು ಶಾಸ್ತ್ರ ಇವೆರಡೂ ಸನಾತನ ಪ್ರಮಾಣಗಳಾಗಿವೆ.

[4]12293019a ಏವಮೇವಾಭಿಸಂಬದ್ಧೌ ನಿತ್ಯಂ ಪ್ರಕೃತಿಪೂರುಷೌ|

12293019c ಪಶ್ಯಾಮಿ ಭಗವಂಸ್ತಸ್ಮಾನ್ಮೋಕ್ಷಧರ್ಮೋ ನ ವಿದ್ಯತೇ||

ಹೀಗೆ ನಾನು ಪ್ರಕೃತಿ ಮತ್ತು ಪುರುಷರ ನಡುವೆ ನಿತ್ಯ ಸಂಬಂಧವನ್ನು ಕಾಣುತ್ತೇನೆ. ಭಗವನ್! ಆದುದರಿಂದ ಪುರುಷನಿಗೆ ಮೋಕ್ಷಧರ್ಮದ ಸಿದ್ಧಿಯು ಅಸಂಭವವೆನಿಸುತ್ತದೆ.

12293020a ಅಥ ವಾನಂತರಕೃತಂ ಕಿಂ ಚಿದೇವ ನಿದರ್ಶನಮ್|

12293020c ತನ್ಮಮಾಚಕ್ಷ್ವ ತತ್ತ್ವೇನ ಪ್ರತ್ಯಕ್ಷೋ ಹ್ಯಸಿ ಸರ್ವಥಾ||

ಅಥವಾ ಪುರುಷನಿಗೆ ಮೋಕ್ಷ ಸಾಕ್ಷಾತ್ಕಾರವಾದ ಯಾವುದಾದರೂ ದೃಷ್ಟಾಂತವಿದ್ದರೆ ಅದನು ನನಗೆ ಹೇಳಬೇಕು ಮತ್ತು ನನಗೆ ಸರಿಯಾಗಿ ತಿಳಿಸಬೇಕು. ಏಕೆಂದರೆ ನಿನಗೆ ಎಲ್ಲವೂ ಪ್ರತ್ಯಕ್ಷವಾಗಿದೆ.

12293021a ಮೋಕ್ಷಕಾಮಾ ವಯಂ ಚಾಪಿ ಕಾಂಕ್ಷಾಮೋ ಯದನಾಮಯಮ್|

12293021c ಅದೇಹಮಜರಂ ದಿವ್ಯಮತೀಂದ್ರಿಯಮನೀಶ್ವರಮ್||

ನನಗೂ ಕೂಡ ಮೋಕ್ಷದ ಅಭಿಲಾಷೆಯಿದೆ. ಆ ನಿರ್ವಿಕಾರ, ಅಜರ, ಅಮರ, ನಿತ್ಯ ಮತ್ತು ಇಂದ್ರಿಯಾತೀತ, ಅನೀಶ್ವರ ಪರಮ ಪದವನ್ನು ಪಡೆಯ ಬಯಸುತ್ತೇನೆ.”

12293022 ವಸಿಷ್ಠ ಉವಾಚ|

12293022a ಯದೇತದುಕ್ತಂ ಭವತಾ ವೇದಶಾಸ್ತ್ರನಿದರ್ಶನಮ್|

12293022c ಏವಮೇತದ್ಯಥಾ ಚೈತನ್ನ ಗೃಹ್ಣಾತಿ ತಥಾ ಭವಾನ್||

ವಸಿಷ್ಠನು ಹೇಳಿದನು: “ವೇದ-ಶಾಸ್ತ್ರಗಳ ದೃಷ್ಟಾಂತವನ್ನು ಆಧರಿಸಿ ನೀನು ಹೇಳಿದುದು ಸರಿಯಾಗಿಯೇ ಇದೆ. ನೀನು ಹೇಗೆ ಹೇಳಿದ್ದೀಯೋ ಅದು ಹಾಗೆಯೇ ಇದೆ.

12293023a ಧಾರ್ಯತೇ ಹಿ ತ್ವಯಾ ಗ್ರಂಥ ಉಭಯೋರ್ವೇದಶಾಸ್ತ್ರಯೋಃ|

12293023c ನ ತು ಗ್ರಂಥಸ್ಯ ತತ್ತ್ವಜ್ಞೋ ಯಥಾವತ್ತ್ವಂ ನರೇಶ್ವರ||

ನರೇಶ್ವರ! ವೇದ-ಶಾಸ್ತ್ರಗಳಲ್ಲಿ ಹೇಳಿರುವ ಎಲ್ಲವೂ ನಿನಗೆ ಬಾಯಿಪಾಠವಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಗ್ರಂಥದ ಯಥಾರ್ಥ ತತ್ತ್ವದ ಸರಿಯಾದ ಜ್ಞಾನವು ನಿನಗಿಲ್ಲ.

12293024a ಯೋ ಹಿ ವೇದೇ ಚ ಶಾಸ್ತ್ರೇ ಚ ಗ್ರಂಥಧಾರಣತತ್ಪರಃ|

12293024c ನ ಚ ಗ್ರಂಥಾರ್ಥತತ್ತ್ವಜ್ಞಸ್ತಸ್ಯ ತದ್ಧಾರಣಂ ವೃಥಾ||

ಶಾಸ್ತ್ರಗ್ರಂಥಗಳನ್ನು ಬಾಯಿಪಾಠಮಾಡುವುದರಲ್ಲಿ ತತ್ಪರನಾಗಿರುವವನಿಗೆ ಅದರ ಯಥಾರ್ಥ ತತ್ತ್ವಗಳು ಅರ್ಥವಾಗದೇ ಇದ್ದರೆ ಹಾಗೆ ಬಾಯಿಪಾಠ ಮಾಡುವುದು ವ್ಯರ್ಥವೇ ಸರಿ.

12293025a ಭಾರಂ ಸ ವಹತೇ ತಸ್ಯ ಗ್ರಂಥಸ್ಯಾರ್ಥಂ ನ ವೇತ್ತಿ ಯಃ|

12293025c ಯಸ್ತು ಗ್ರಂಥಾರ್ಥತತ್ತ್ವಜ್ಞೋ ನಾಸ್ಯ ಗ್ರಂಥಾಗಮೋ ವೃಥಾ||

ಗ್ರಂಥದ ಅರ್ಥವನ್ನು ತಿಳಿದುಕೊಳ್ಳದೇ ಕೇವಲ ಕಂಠಪಾಠ ಮಾಡಿಕೊಳ್ಳುವವನು ಗ್ರಂಥಗಳ ಭಾರವನ್ನು ಮಾತ್ರ ಹೊರುತ್ತಾನೆ. ಆದರೆ ಗ್ರಂಥಗಳ ಅರ್ಥವನ್ನು ತಿಳಿದುಕೊಳ್ಳುವವನಿಗೆ ಗ್ರಂಥದ ಅಧ್ಯಯನವು ವ್ಯರ್ಥವಾಗುವುದಿಲ್ಲ.

12293026a ಗ್ರಂಥಸ್ಯಾರ್ಥಂ ಚ ಪೃಷ್ಟಃ ಸಂಸ್ತಾದೃಶೋ ವಕ್ತುಮರ್ಹತಿ|

12293026c ಯಥಾ ತತ್ತ್ವಾಭಿಗಮನಾದರ್ಥಂ ತಸ್ಯ ಸ ವಿಂದತಿ||

ಅಂಥವನನ್ನು ಯಾರಾದರೂ ಗ್ರಂಥದ ಅರ್ಥವನ್ನು ಕೇಳಿದರೆ ತಾನು ಅರ್ಥಮಾಡಿಕೊಂಡಂತೆ ಇನ್ನೊಬ್ಬರಿಗೂ ಹೇಳಬಲ್ಲನು.

12293027a ಯಸ್ತು ಸಂಸತ್ಸು ಕಥಯೇದ್ಗ್ರಂಥಾರ್ಥಂ ಸ್ಥೂಲಬುದ್ಧಿಮಾನ್|

12293027c ಸ ಕಥಂ ಮಂದವಿಜ್ಞಾನೋ ಗ್ರಂಥಂ ವಕ್ಷ್ಯತಿ ನಿರ್ಣಯಾತ್||

ವಿದ್ವಾಂಸರ ಸಭೆಯಲ್ಲಿ ಶಾಸ್ತ್ರಗ್ರಂಥಗಳ ಅರ್ಥವನ್ನು ಹೇಳಲಿಕ್ಕಾಗದ ಮಂದಬುದ್ಧಿಯು ನಿರ್ಣಯಪೂರ್ವಕವಾಗಿ ಗ್ರಂಥದ ತಾತ್ಪರ್ಯವನ್ನಾದರೂ ಹೇಗೆ ಹೇಳಬಲ್ಲನು?

12293028a ನಿರ್ಣಯಂ ಚಾಪಿ ಚಿದ್ರಾತ್ಮಾ ನ ತಂ ವಕ್ಷ್ಯತಿ ತತ್ತ್ವತಃ|

12293028c ಸೋಪಹಾಸಾತ್ಮತಾಮೇತಿ ಯಸ್ಮಾಚ್ಚೈವಾತ್ಮವಾನಪಿ||

ಶಾಸ್ತ್ರಜ್ಞಾನವಿಲ್ಲದಿರುವವನು ಗ್ರಂಥದ ತಾತ್ಪರ್ಯವನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ಅವನು ಏನಾದರೂ ಹೇಳಿದರೆ ಜನರ ಉಪಹಾಸ್ಯಕ್ಕೆ ಪಾತ್ರನಾಗುತ್ತಾನೆ.

12293029a ತಸ್ಮಾತ್ತ್ವಂ ಶೃಣು ರಾಜೇಂದ್ರ ಯಥೈತದನುದೃಶ್ಯತೇ|

12293029c ಯಾಥಾತಥ್ಯೇನ ಸಾಂಖ್ಯೇಷು ಯೋಗೇಷು ಚ ಮಹಾತ್ಮಸು||

ಆದುದರಿಂದ ರಾಜೇಂದ್ರ! ಸಾಂಖ್ಯ ಮತ್ತು ಯೋಗ ಜ್ಞಾನೀ ಮಹಾತ್ಮರು ಮೋಕ್ಷದ ಸ್ವರೂಪವನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ನಾನು ನಿನಗೆ ಯಥಾರ್ಥರೂಪದಲ್ಲಿ ಹೇಳುತ್ತೇನೆ. ಕೇಳು.

12293030a ಯದೇವ ಯೋಗಾಃ ಪಶ್ಯಂತಿ ಸಾಂಖ್ಯೈಸ್ತದನುಗಮ್ಯತೇ|

12293030c ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಬುದ್ಧಿಮಾನ್||

ಯೋಗಿಯು ಯಾವ ತತ್ತ್ವದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೋ ಸಾಂಖ್ಯ ವಿದ್ವಾಂಸರೂ ಕೂಡ ಅದರ ಜ್ಞಾನವನ್ನೇ ಪಡೆದುಕೊಳ್ಳುತ್ತಾರೆ. ಸಾಂಖ್ಯ ಮತ್ತು ಯೋಗಗಳ ಫಲದೃಷ್ಟಿಯು ಒಂದೇ ಎಂದು ತಿಳಿದುಕೊಳ್ಳುವವನೇ ಬುದ್ಧಿವಂತನು.

12293031a ತ್ವಗ್ಮಾಂಸಂ ರುಧಿರಂ ಮೇದಃ ಪಿತ್ತಂ ಮಜ್ಜಾಸ್ಥಿ ಸ್ನಾಯು ಚ|

12293031c ಏತದೈಂದ್ರಿಯಕಂ ತಾತ ಯದ್ಭವಾನಿದಮಾಹ ವೈ||

ಅಯ್ಯಾ! ಶರೀರದ ಚರ್ಮ, ಮಾಂಸ, ರಕ್ತ, ಮೇದ, ಪಿತ್ತ, ಮಜ್ಜೆ, ಸ್ನಾಯುಗಳು ಮತ್ತು ಇಂದ್ರಿಯ ಸಮೂಹಗಳ ಕುರಿತು ನೀನು ಹೇಳಿದೆಯಲ್ಲವೇ?

12293032a ದ್ರವ್ಯಾದ್ದ್ರವ್ಯಸ್ಯ ನಿಷ್ಪತ್ತಿರಿಂದ್ರಿಯಾದಿಂದ್ರಿಯಂ ತಥಾ|

12293032c ದೇಹಾದ್ದೇಹಮವಾಪ್ನೋತಿ ಬೀಜಾದ್ ಬೀಜಂ ತಥೈವ ಚ||

ಬೀಜದಿಂದ ಬೀಜವು ಹೇಗೆ ಉತ್ಪನ್ನವಾಗುತ್ತದೆಯೋ ಹಾಗೆ ದ್ರವ್ಯದಿಂದ ದ್ರವ್ಯ, ಇಂದ್ರಿಯದಿಂದ ಇಂದ್ರಿಯ ಮತ್ತು ದೇಹದಿಂದ ದೇಹದ ಉತ್ಪತ್ತಿಯಾಗುತ್ತದೆ.

12293033a ನಿರಿಂದ್ರಿಯಸ್ಯಾಬೀಜಸ್ಯ ನಿರ್ದ್ರವ್ಯಸ್ಯಾಸ್ಯ ದೇಹಿನಃ|

12293033c ಕಥಂ ಗುಣಾ ಭವಿಷ್ಯಂತಿ ನಿರ್ಗುಣತ್ವಾನ್ಮಹಾತ್ಮನಃ||

ಆದರೆ ಪರಮಾತ್ಮನಾದರೋ ಇಂದ್ರಿಯ, ಬೀಜ, ದ್ರವ್ಯ ಮತ್ತು ದೇಹರಹಿತನು ಹಾಗೂ ನಿರ್ಗುಣನು. ಹಾಗಿರುವಾಗ ಅವನಲ್ಲಿ ಗುಣವೆಲ್ಲಿಂದ?

12293034a ಗುಣಾ ಗುಣೇಷು ಜಾಯಂತೇ ತತ್ರೈವ ನಿವಿಶಂತಿ ಚ|

12293034c ಏವಂ ಗುಣಾಃ ಪ್ರಕೃತಿತೋ ಜಾಯಂತೇ ಚ ನ ಸಂತಿ ಚ||

ಆಕಾಶಾದಿ ಗುಣಗಳು ಸತ್ವಾದಿ ಗುಣಗಳಿಂದ ಹೇಗೆ ಉತ್ಪನ್ನವಾಗಿ ಅವುಗಳಲ್ಲಿಯೇ ಹೇಗೆ ಲೀನವಾಗುತ್ತವೆಯೋ ಹಾಗೆ ಸತ್ತ್ವ-ರಜ-ತಮೋಗುಣಗಳೂ ಕೂಡ ಪ್ರಕೃತಿಯಿಂದ ಉತ್ಪನ್ನವಾಗುತ್ತವೆ ಮತ್ತು ಅದರಲ್ಲಿಯೇ ಲೀನವಾಗುತ್ತವೆ.

12293035a ತ್ವಗ್ಮಾಂಸಂ ರುಧಿರಂ ಮೇದಃ ಪಿತ್ತಂ ಮಜ್ಜಾಸ್ಥಿ ಸ್ನಾಯು ಚ|

12293035c ಅಷ್ಟೌ ತಾನ್ಯಥ ಶುಕ್ರೇಣ ಜಾನೀಹಿ ಪ್ರಾಕೃತಾನಿ ವೈ||

ಚರ್ಮ, ಮಾಂಸ, ರಕ್ತ, ಮೇದ, ಪಿತ್ತ, ಮಜ್ಜೆ, ಅಸ್ಥಿ, ಸ್ನಾಯು ಈ ಎಂಟು ವಸ್ತುಗಳು ವೀರ್ಯದಿಂದ ಉತ್ಪನ್ನವಾಗುತ್ತವೆ. ಆದುದರಿಂದ ಅವು ಪ್ರಾಕೃತವೇ ಆಗಿವೆ.

12293036a ಪುಮಾಂಶ್ಚೈವಾಪುಮಾಂಶ್ಚೈವ ತ್ರೈಲಿಂಗ್ಯಂ ಪ್ರಾಕೃತಂ ಸ್ಮೃತಮ್|

12293036c ನೈವ ಪುಮಾನ್ ಪುಮಾಂಶ್ಚೈವ ಸ ಲಿಂಗೀತ್ಯಭಿಧೀಯತೇ||

ಪುರುಷ ಮತ್ತು ಪ್ರಕೃತಿ – ಇವು ಎರಡು ತತ್ತ್ವಗಳು. ಸಾತ್ತ್ವಿಕ, ರಾಜಸ ಮತ್ತು ತಾಪಸ ಗುಣಗಳು ಇವೆರಡರ ಸ್ವರೂಪವನ್ನು ವ್ಯಕ್ತಗೊಳಿಸುವ ಚಿಹ್ನೆಗಳು. ಇವೂ ಕೂಡ ಪ್ರಾಕೃತ ಎಂದು ಪರಿಗಣಿಸಿದ್ದಾರೆ. ಆದರೆ ಇವೆಲ್ಲವುಗಳ ಆಧಾರ ಆತ್ಮವು ಪುರುಷನೂ ಅಲ್ಲ ಮತ್ತು ಪ್ರಕೃತಿಯೂ ಅಲ್ಲ. ಅದು ಇವೆರಡಕ್ಕಿಂತಲೂ ಬೇರೆಯೇ ಆಗಿದೆ.

12293037a ಅಲಿಂಗಾ ಪ್ರಕೃತಿರ್ಲಿಂಗೈರುಪಲಭ್ಯತಿ ಸಾತ್ಮಜೈಃ|

12293037c ಯಥಾ ಪುಷ್ಪಫಲೈರ್ನಿತ್ಯಮೃತವೋ ಮೂರ್ತಯಸ್ತಥಾ||

ಪುಷ್ಪ-ಫಲಗಳಿಂದ ಸದಾ ನಿರಾಕಾರ ಋತುವನ್ನು ಹೇಗೆ ಅನುಮಾನಿಸಬಹುದೋ ನಿರಾಕಾರ ಪುರುಷನ ಸಂಯೋಗದಿಂದ ಉತ್ಪನ್ನ ಪಡಿಸಿದ ಮಹತ್ತತ್ವ ಮೊದಲಾದ ಚಿಹ್ನೆಗಳಿಂದ ಪ್ರಕೃತಿಯನ್ನು ಅನುಮಾನಿಸಬಹುದು.

12293038a ಏವಮಪ್ಯನುಮಾನೇನ ಹ್ಯಲಿಂಗಮುಪಲಭ್ಯತೇ|

12293038c ಪಂಚವಿಂಶತಿಮಸ್ತಾತ ಲಿಂಗೇಷ್ವನಿಯತಾತ್ಮಕಃ||

ಹೀಗೆ ಚಿಹ್ನೆಗಳಿಲ್ಲದ ಶುದ್ಧ ಚೇತನರೂಪ ಆತ್ಮವನ್ನೂ ಅನುಮಾನದ ಮೂಲಕ ತಿಳಿದುಕೊಳ್ಳಬಹುದು. ದೃಶ್ಯವನ್ನು ಪ್ರಕಾಶಗೊಳಿಸುವ ಸೂರ್ಯನು ಹೇಗೆ ದೃಶ್ಯಕ್ಕಿಂತ ಭಿನ್ನನೋ ಅದೇ ರೀತಿ ಜ್ಞಾನಸ್ವರೂಪೀ ಆತ್ಮವೂ ಜ್ಞೇಯ ವಸ್ತುಗಳನ್ನು ಪ್ರಕಾಶಗೊಳಿಸುವ ಕಾರಣ ಅವುಗಳಿಗಿಂತ ಭಿನ್ನವಾಗಿರುತ್ತದೆ. ಅಯ್ಯಾ! ಸರ್ವ ಲಿಂಗಗಳಲ್ಲಿ ನಿಯತನಾಗಿ ವ್ಯಾಪ್ತವಾಗಿರುವ ಅದೇ ಇಪ್ಪತ್ತೈದನೆಯ ತತ್ತ್ವವು.

12293039a ಅನಾದಿನಿಧನೋಽನಂತಃ ಸರ್ವದರ್ಶೀ ನಿರಾಮಯಃ|

12293039c ಕೇವಲಂ ತ್ವಭಿಮಾನಿತ್ವಾದ್ಗುಣೇಷ್ವಗುಣ ಉಚ್ಯತೇ||

ಆತ್ಮವಾದರೋ ಜನ್ಮ-ಮೃತ್ಯು ರಹಿತ, ಅನಂತ, ಸರ್ವದರ್ಶೀ ಮತ್ತು ನಿರಾಮಯನು. ಅದು ಸತ್ತ್ವ ಮೊದಲಾದ ಗುಣಗಳಲ್ಲಿ ಕೇವಲ ಅಭಿಮಾನವನ್ನಿಟ್ಟಿರುವುದರ ಕಾರಣವೇ ಗುಣಸ್ವರೂಪವೆಂದು ಕರೆಯಲ್ಪಟ್ಟಿದೆ.

12293040a ಗುಣಾ ಗುಣವತಃ ಸಂತಿ ನಿರ್ಗುಣಸ್ಯ ಕುತೋ ಗುಣಾಃ|

12293040c ತಸ್ಮಾದೇವಂ ವಿಜಾನಂತಿ ಯೇ ಜನಾ ಗುಣದರ್ಶಿನಃ||

12293041a ಯದಾ ತ್ವೇಷ ಗುಣಾನ್ಸರ್ವಾನ್ ಪ್ರಾಕೃತಾನಭಿಮನ್ಯತೇ|

12293041c ತದಾ ಸ ಗುಣವಾನೇವ ಪರಮೇಣಾನುಪಶ್ಯತಿ||

ಗುಣವಂತರಲ್ಲಿಯೇ ಗುಣಗಳಿರುತ್ತವೆ. ನಿರ್ಗುಣ ಆತ್ಮನಿಗೆ ಗುಣಗಳು ಎಲ್ಲಿಂದ? ಆದುದರಿಂದ ಗುಣಗಳ ಸ್ವರೂಪವನ್ನು ತಿಳಿದ ವಿದ್ವಾಂಸರ ಪ್ರಕಾರ ಜೀವಾತ್ಮನು ಈ ಗುಣಗಳು ಪ್ರಕೃತಿಯ ಕಾರ್ಯವೆಂದು ತಿಳಿದು ಅವುಗಳಲ್ಲಿ ತನ್ನತನದ ಅಭಿಮಾನವನ್ನು ತ್ಯಜಿಸಿದಾಗ ಅದು ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ಪರಿತ್ಯಜಿಸಿ ತನ್ನ ವಿಶುದ್ಧ ಪರಮಾತ್ಮ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ.

12293042a ಯತ್ತದ್ಬುದ್ಧೇಃ ಪರಂ ಪ್ರಾಹುಃ ಸಾಂಖ್ಯಾ ಯೋಗಾಶ್ಚ ಸರ್ವಶಃ|

12293042c ಬುಧ್ಯಮಾನಂ ಮಹಾಪ್ರಾಜ್ಞಮಬುದ್ಧಪರಿವರ್ಜನಾತ್||

12293043a ಅಪ್ರಬುದ್ಧಮಥಾವ್ಯಕ್ತಂ ಸಗುಣಂ ಪ್ರಾಹುರೀಶ್ವರಮ್|

12293043c ನಿರ್ಗುಣಂ ಚೇಶ್ವರಂ ನಿತ್ಯಮಧಿಷ್ಠಾತಾರಮೇವ ಚ||

12293044a ಪ್ರಕೃತೇಶ್ಚ ಗುಣಾನಾಂ ಚ ಪಂಚವಿಂಶತಿಕಂ ಬುಧಾಃ|

12293044c ಸಾಂಖ್ಯಯೋಗೇ ಚ ಕುಶಲಾ ಬುಧ್ಯಂತೇ ಪರಮೈಷಿಣಃ||

ಸಾಂಖ್ಯ ಮತ್ತು ಯೋಗಗಳ ಸಂಪೂರ್ಣ ವಿದ್ವಾಂಸರು ಬುದ್ಧಿಗಿಂತಲೂ ಆಚೆಯಿರುವ ಪರಮ ಜ್ಞಾನಸಂಪನ್ನ, ಅಹಂಕಾರಾದಿ ಜಡ ತತ್ತ್ವಗಳನ್ನು ಪರಿತ್ಯಜಿಸಿದ ನಂತರ ಉಳಿಯುವ ಅಜ್ಞಾತ, ಅವ್ಯಕ್ತ, ಸಗುಣ ಈಶ್ವರ, ನಿರ್ಗುಣ ಈಶ್ವರ, ನಿತ್ಯ ಮತ್ತು ಅಧಿಷ್ಠಾತಾ ಎಂದು ಕರೆಯಲ್ಪಡುವ ಆ ಪರಮಾತ್ಮನ ಕುರಿತು ಹೇಳುತ್ತಾರೆ. ಆ ಪರಮಾತ್ಮನೇ ಪಕೃತಿ ಮತ್ತು ಅದರ ಗುಣಗಳಿಗೂ (ಇಪ್ಪತ್ನಾಲ್ಕು ತತ್ತ್ವಗಳು) ಭಿನ್ನವಾಗಿರುವ ಇಪ್ಪತ್ತೈದನೆಯ ತತ್ತ್ವವು ಎಂದು ಸಾಂಖ್ಯ ಮತ್ತು ಯೋಗಕುಶಲ ಹಾಗೂ ಪರಮತತ್ತ್ವವನ್ನು ಅರಸುವ ವಿದ್ವಾಂಸರು ತಿಳಿಯುತ್ತಾರೆ.

12293045a ಯದಾ ಪ್ರಬುದ್ಧಾಸ್ತ್ವವ್ಯಕ್ತಮವಸ್ಥಾಜನ್ಮಭೀರವಃ|

12293045c ಬುಧ್ಯಮಾನಂ ಪ್ರಬುಧ್ಯಂತಿ ಗಮಯಂತಿ ಸಮಂ ತದಾ||

ಯಾವಾಗ ಬಾಲ್ಯ, ಯೌವನ ಮತ್ತು ವೃದ್ಧಾವಸ್ಥೆ ಅಥವಾ ಜನ್ಮ-ಮರಣಗಳಿಂದ ಭಯಭೀತನಾದ ವಿವೇಕಿಯು ಚೇತನ ಸ್ವರೂಪ ಅವ್ಯಕ್ತ ಪರಮಾತ್ಮನ ತತ್ತ್ವವನ್ನು ಸರಿಯಾಗಿ ತಿಳಿದುಕೊಳ್ಳುತ್ತಾನೋ ಆಗ ಅವನಿಗೆ ಪರಬ್ರಹ್ಮ ಪರಮಾತ್ಮನ ಸ್ವರೂಪವು ಪ್ರಾಪ್ತವಾಗುತ್ತದೆ.

12293046a ಏತನ್ನಿದರ್ಶನಂ ಸಮ್ಯಗಸಮ್ಯಗನುದರ್ಶನಮ್|

12293046c ಬುಧ್ಯಮಾನಾಪ್ರಬುದ್ಧಾಭ್ಯಾಂ ಪೃಥಕ್ ಪೃಥಗರಿಂದಮ||

ಅರಿಂದಮ! ಜ್ಞಾನಿಗಳ ಈ ಜ್ಞಾನವು ನಿದರ್ಶನಯುಕ್ತವಾಗಿದ್ದು ಉತ್ತಮವಾಗಿದೆ ಮತ್ತು ವಿಷಯವನ್ನು ಸರಿಯಾಗಿ ತೋರಿಸುತ್ತದೆ. ಆದರೆ ಅಜ್ಞಾನಿಗಳ ಅಪ್ರಾಮಾಣಿಕ ಜ್ಞಾನವು ಇದರಿಂದ ಬೇರೆಯಾಗಿರುವುದರಿಂದ ಅದು ಸರಿಯಾದ ಜ್ಞಾನವೆಂದಿನಿಸಿಕೊಳ್ಳುವುದಿಲ್ಲ.

12293047a ಪರಸ್ಪರೇಣೈತದುಕ್ತಂ ಕ್ಷರಾಕ್ಷರನಿದರ್ಶನಮ್|

12293047c ಏಕತ್ವಮಕ್ಷರಂ ಪ್ರಾಹುರ್ನಾನಾತ್ವಂ ಕ್ಷರಮುಚ್ಯತೇ||

ಕ್ಷರ ಮತ್ತು ಅಕ್ಷರ ತತ್ತ್ವಗಳನ್ನು ಪ್ರತಿಪಾದಿಸುವ ಈ ದರ್ಶನವನ್ನು ನಾನು ನಿನಗೆ ಹೇಳಿದ್ದೇನೆ. ಕ್ಷರ ಮತ್ತು ಅಕ್ಷರಗಳಲ್ಲಿರುವ ಅಂತರವೇನು ಎನ್ನುವುದನ್ನು ಈ ರೀತಿ ಅರ್ಥಮಾಡಿಕೋ: ಸದಾ ಏಕರೂಪನಾಗಿರುವ ಪರಮಾತ್ಮತತ್ತ್ವವನ್ನು ಅಕ್ಷರ ಎಂದು ಹೇಳುತ್ತಾರೆ ಮತ್ತು ನಾನಾ ರೂಪಗಳಲ್ಲಿ ಪ್ರತೀತಗೊಳ್ಳುವ ಈ ಪ್ರಾಕೃತ ಪ್ರಪಂಚವನ್ನು ಕ್ಷರ ಎಂದು ಹೇಳುತ್ತಾರೆ.

12293048a ಪಂಚವಿಂಶತಿನಿಷ್ಠೋಽಯಂ ಯದಾಸಮ್ಯಕ್ ಪ್ರವರ್ತತೇ|

12293048c ಏಕತ್ವಂ ದರ್ಶನಂ ಚಾಸ್ಯ ನಾನಾತ್ವಂ ಚಾಪ್ಯದರ್ಶನಮ್||

ಯಾವಾಗ ಈ ಪುರುಷನು ಇಪ್ಪತ್ತೈದನೆಯ ತತ್ತ್ವಸ್ವರೂಪ ಪರಮಾತ್ಮನಲ್ಲಿ ಸ್ಥಿತನಾಗುತ್ತಾನೋ ಆಗ ಅವನ ಸ್ಥಿತಿ ಉತ್ತಮ ಎಂದು ಹೇಳಿದ್ದಾರೆ – ಅವನೇ ಸರಿಯಾಗಿ ನಡೆದುಕೊಳ್ಳುತ್ತಾನೆ ಎಂಬ ಅಭಿಪ್ರಾಯವಿದೆ. ಏಕತ್ತ್ವದ ಅರಿವೇ ಜ್ಞಾನವು ಮತ್ತು ಅನೇಕತ್ವದ ನಂಬಿಕೆಯೇ ಅಜ್ಞಾನವು.

12293049a ತತ್ತ್ವನಿಸ್ತತ್ತ್ವಯೋರೇತತ್ ಪೃಥಗೇವ ನಿದರ್ಶನಮ್|

12293049c ಪಂಚವಿಂಶತಿಸರ್ಗಂ ತು ತತ್ತ್ವಮಾಹುರ್ಮನೀಷಿಣಃ||

12293050a ನಿಸ್ತತ್ತ್ವಂ ಪಂಚವಿಂಶಸ್ಯ ಪರಮಾಹುರ್ನಿದರ್ಶನಮ್|

12293050c ವರ್ಗಸ್ಯ ವರ್ಗಮಾಚಾರಂ ತತ್ತ್ವಂ ತತ್ತ್ವಾತ್ಸನಾತನಮ್||

ತತ್ತ್ವ (ಕ್ಷರ) ಮತ್ತು ನಿಸ್ತತ್ತ್ವ (ಅಕ್ಷರ)  ಗಳ ಈ ಪ್ರತ್ಯೇಕ ಪ್ರತ್ಯೇಕ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಕೆಲವು ಮನೀಷಿಣರು ಇಪ್ಪತ್ತೈದು ತತ್ತ್ವಗಳನ್ನೇ ತತ್ತ್ವ ಎಂದು ಹೇಳುತ್ತಾರೆ. ಆದರೆ ಇತರ ವಿದ್ವಾನರು ಇಪ್ಪತ್ನಾಲ್ಕು ಜಡ ತತ್ತ್ವಗಳನ್ನೇ ತತ್ತ್ವ ಎಂದು ಹೇಳುತ್ತಾರೆ ಮತ್ತು ಇಪ್ಪತ್ತೈದನೇ ಚೇತನ ಪರಮಾತ್ಮನನ್ನು ನಿಸ್ತತ್ತ್ವ ಎಂದು ಹೇಳುತ್ತಾರೆ. ಈ ಚೈತನ್ಯವೇ ಪರಮಾತ್ಮನ ಲಕ್ಷಣ. ಮಹತ್ತತ್ವ ಮೊದಲಾದ ವಿಕಾರಗಳೇನಿವೆಯೋ ಅವು ಕ್ಷರತತ್ತ್ವಗಳು ಮತ್ತು ಪರಮ ಪುರುಷ ಪರಮಾತ್ಮನು ಆ ಕ್ಷರ ತತ್ತ್ವಗಳಿಗಿಂತ ಭಿನ್ನನಾಗಿರುವ ಆದರೆ ಅವುಗಳ ಸನಾತನ ಆಧಾರನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ತ್ರಿನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ಮೂರನೇ ಅಧ್ಯಾಯವು.

[1] ಗೋರಖಪುರ ಗೀತಾ ಪ್ರೆಸ್ ಸಂಪುಟದಲ್ಲಿ ಈ ಒಂದು ಅಧ್ಯಾಯವನ್ನು ಎರಡು ಅಧ್ಯಾಯಗಳಲ್ಲಿ ಕೊಟ್ಟಿದ್ದಾರೆ (೧-೧೧ ಒಂದು ಅಧ್ಯಾಯ ಮತ್ತು ೧೨-೫೦ ಇನ್ನೊಂದು ಅಧ್ಯಾಯ.

[2] ಪಂಚವಿಂಶೋ ಮಹಾನಾತ್ಮಾ (ಗೀತಾ ಪ್ರೆಸ್).

[3] ಶುದ್ಧಾಶುದ್ಧನಿಷೇವಣಾತ್| (ಗೀತಾ ಪ್ರೆಸ್).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ:  ಅನ್ಯೋನ್ಯಗುಣಸಂರೋಢಾದನ್ಯೋನ್ಯಗುಣಸಂಶ್ರಯಾತ್| (ಗೀತಾ ಪ್ರೆಸ್).

Comments are closed.