Shanti Parva: Chapter 292

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೨

ಪ್ರಕೃತಿ ಸಂಸರ್ಗದಿಂದಾಗಿ ಜೀವವು ತನ್ನನ್ನು ನಾನಾ ಪ್ರಕಾರದ ಕರ್ಮಗಳ ಕರ್ತಾ ಮತ್ತು ಕರ್ಮಫಲಗಳ ಭೋಕ್ತಾ ಎಂದು ತಿಳಿದು ನಾನಾ ಯೋನಿಗಳಲ್ಲಿ ಮತ್ತೆ ಮತ್ತೆ ಜನ್ಮವನ್ನು ಸ್ವೀಕರಿಸುವುದು (೧-೪೮).

12292001 ವಸಿಷ್ಠ ಉವಾಚ|

12292001a ಏವಮಪ್ರತಿಬುದ್ಧತ್ವಾದಬುದ್ಧಮನುವರ್ತತೇ|

12292001c ದೇಹಾದ್ದೇಹಸಹಸ್ರಾಣಿ ತಥಾ ಸಮಭಿಪದ್ಯತೇ||

ವಸಿಷ್ಠನು ಹೇಳಿದನು: “ಹೀಗೆ ಜೀವವು ಬೋಧಹೀನನಾಗುವುದರ ಕಾರಣ ಅಜ್ಞಾನವನ್ನೇ ಅನುಸರಿಸುತ್ತದೆ. ಅದಕ್ಕಾಗಿಯೇ ಅದಕ್ಕೆ ಒಂದು ಶರೀರದಿಂದ ಸಹಸ್ರಾರು ಶರೀರಗಳ ಭ್ರಮಣಮಾಡಬೇಕಾಗುತ್ತದೆ.

12292002a ತಿರ್ಯಗ್ಯೋನಿಸಹಸ್ರೇಷು ಕದಾ ಚಿದ್ದೇವತಾಸ್ವಪಿ|

12292002c ಉಪಪದ್ಯತಿ ಸಂಯೋಗಾದ್ಗುಣೈಃ ಸಹ ಗುಣಕ್ಷಯಾತ್||

ಗುಣಗಳೊಂದಿಗೆ ಸಂಬಂಧವನ್ನಿಟ್ಟುಕೊಂಡಿರುವುದಕ್ಕಾಗಿ ಗುಣಗಳ ಸಾಮರ್ಥ್ಯದಿಂದ ಅದು ಕೆಲವೊಮ್ಮೆ ಸಹಸ್ರಾರು ಬಾರಿ ತಿರ್ಯಗ್ಯೋನಿಯಲ್ಲಿ ಮತ್ತು ಕೆಲವೊಮ್ಮೆ ದೇವಯೋನಿಯಲ್ಲಿ ಜನ್ಮತಾಳುತ್ತದೆ.

12292003a ಮಾನುಷತ್ವಾದ್ದಿವಂ ಯಾತಿ ದಿವೋ ಮಾನುಷ್ಯಮೇವ ಚ|

12292003c ಮಾನುಷ್ಯಾನ್ನಿರಯಸ್ಥಾನಮಾನಂತ್ಯಂ ಪ್ರತಿಪದ್ಯತೇ||

ಮಾನುಷ್ಯತ್ವದಿಂದ ಸ್ವರ್ಗಕ್ಕೆ ಹೋಗುತ್ತಾನೆ ಮತ್ತು ಸ್ವರ್ಗದಿಂದ ಮನುಷ್ಯಲೋಕಕ್ಕೆ ಹಿಂದಿರುಗುತ್ತಾನೆ. ಮನುಷ್ಯಲೋಕದಿಂದ ಒಮ್ಮೆಮ್ಮೆ ಅನಂತ ನರಕಗಳಲ್ಲಿ ಬೀಳುತ್ತಾನೆ.

12292004a ಕೋಶಕಾರೋ ಯಥಾತ್ಮಾನಂ ಕೀಟಃ ಸಮನುರುಂಧತಿ|

12292004c ಸೂತ್ರತಂತುಗುಣೈರ್ನಿತ್ಯಂ ತಥಾಯಮಗುಣೋ ಗುಣೈಃ||

ರೇಷ್ಮೆಯ ಹುಳುವು ತಾನೇ ಉತ್ಪನ್ನಪಡಿಸಿದ ತಂತುಗಳಿಂದ ತನ್ನನ್ನು ತಾನೇ ಎಲ್ಲ ಕಡೆಗಳಿಂದ ಹೇಗೆ ಕಟ್ಟಿಹಾಕಿಕೊಳ್ಳುತ್ತದೆಯೋ ಹಾಗೆಯೇ ಈ ನಿರ್ಗುಣ ಆತ್ಮವೂ ಕೂಡ ತಾನೇ ಪ್ರಕಟಗೊಳಿಸಿದ ಪ್ರಾಕೃತ ಗುಣಗಳಿಂದ ತನ್ನನ್ನು ಕಟ್ಟಿಹಾಕಿಕೊಳ್ಳುತ್ತದೆ.

12292005a ದ್ವಂದ್ವಮೇತಿ ಚ ನಿರ್ದ್ವಂದ್ವಸ್ತಾಸು ತಾಸ್ವಿಹ ಯೋನಿಷು|

12292005c ಶೀರ್ಷರೋಗೇಽಕ್ಷಿರೋಗೇ ಚ ದಂತಶೂಲೇ ಗಲಗ್ರಹೇ||

ಅದು ಸ್ವಯಂ ಸುಖ-ದುಃಖ ಮೊದಲಾದ ದ್ವಂದ್ವಗಳ ರಹಿತನಾಗಿದ್ದರೂ ಭಿನ್ನ-ಭಿನ್ನ ಯೋನಿಗಳಲ್ಲಿ ಜನ್ಮಧಾರಣೆ ಮಾಡಿ ಸುಖ-ದುಃಖಗಳನ್ನು ಭೋಗಿಸುತ್ತದೆ. ಅವನಿಗೆ ಒಮ್ಮೆ ತಲೆನೋವಾಗುತ್ತದೆ, ಒಮ್ಮೆ ಕಣ್ಣು ನೋವಾಗುತ್ತದೆ, ಇನ್ನೊಮ್ಮೆ ಹಲ್ಲುನೋವಾಗುತ್ತದೆ ಮತ್ತು ಬೇರೆ ಇನ್ನೊಮ್ಮೆ ಗಂಟಲು ಕಟ್ಟುತ್ತದೆ.

12292006a ಜಲೋದರೇಽರ್ಶಸಾಂ ರೋಗೇ ಜ್ವರಗಂಡವಿಷೂಚಿಕೇ|

12292006c ಶ್ವಿತ್ರೇ ಕುಷ್ಠೇಽಗ್ನಿದಾಹೇ ಚ ಸಿಧ್ಮಾಪಸ್ಮಾರಯೋರಪಿ||

ಹೀಗೆಯೇ ಅವನು ಜಲೋದರ, ತೃಷಾರೋಗ, ಜ್ವರ, ಗಲಗಂಡ, ವಿಷೂಚಿಕಾ, ಕುಷ್ಟ, ಅಗ್ನಿದಾಹ, ಸಿಧ್ಮಾ, ಅಪಸ್ಮಾರ ಮೊದಲಾದ ರೋಗಗಳಿಗೆ ಶಿಕಾರಿಯಾಗುತ್ತಾನೆ.

12292007a ಯಾನಿ ಚಾನ್ಯಾನಿ ದ್ವಂದ್ವಾನಿ ಪ್ರಾಕೃತಾನಿ ಶರೀರಿಷು|

12292007c ಉತ್ಪದ್ಯಂತೇ ವಿಚಿತ್ರಾಣಿ ತಾನ್ಯೇಷೋಽಪ್ಯಭಿಮನ್ಯತೇ|

[1]12292007e ಅಭಿಮನ್ಯತ್ಯಭೀಮಾನಾತ್ತಥೈವ ಸುಕೃತಾನ್ಯಪಿ||

ಇನ್ನೂ ಅನ್ಯ ಪ್ರಕೃತಿಜನ್ಯ ವಿಚಿತ್ರ ದ್ವಂದ್ವಗಳು ಶರೀರಿಗಳಿಗೆ ಉತ್ಪನ್ನವಾಗುತ್ತವೆ. ಇವೆಲ್ಲವುಗಳೂ ಅವನ ಅಭಿಮಾನದಿಂದ ಉತ್ಪನ್ನವಾಗುತ್ತವೆ. ಈ ಅಭಿಮಾನದ ಕಾರಣವೇ ಶರೀರಗಳ ಮೂಲಕ ಮಾಡಿದ ಕರ್ಮಗಳ ಫಲವನ್ನು ಅನುಭವಿಸುತ್ತಾನೆ.

12292008a ಏಕವಾಸಾಶ್ಚ[2] ದುರ್ವಾಸಾಃ ಶಾಯೀ ನಿತ್ಯಮಧಸ್ತಥಾ|

12292008c ಮಂಡೂಕಶಾಯೀ ಚ ತಥಾ ವೀರಾಸನಗತಸ್ತಥಾ||

12292009a ಚೀರಧಾರಣಮಾಕಾಶೇ ಶಯನಂ ಸ್ಥಾನಮೇವ ಚ|

12292009c ಇಷ್ಟಕಾಪ್ರಸ್ತರೇ ಚೈವ ಕಂಟಕಪ್ರಸ್ತರೇ ತಥಾ||

12292010a ಭಸ್ಮಪ್ರಸ್ತರಶಾಯೀ ಚ ಭೂಮಿಶಯ್ಯಾನುಲೇಪನಃ|

12292010c ವೀರಸ್ಥಾನಾಂಬುಪಂಕೇ ಚ ಶಯನಂ ಫಲಕೇಷು ಚ||

12292011a ವಿವಿಧಾಸು ಚ ಶಯ್ಯಾಸು ಫಲಗೃದ್ಧ್ಯಾನ್ವಿತೋಽಫಲಃ|

12292011c ಮುಂಜಮೇಖಲನಗ್ನತ್ವಂ ಕ್ಷೌಮಕೃಷ್ಣಾಜಿನಾನಿ ಚ||

ಕರ್ಮಫಲಕ್ಕೆ ಬದ್ಧನಾದ ಮನುಷ್ಯನು ಒಮ್ಮೆ ಒಂದೇ ವಸ್ತ್ರವನ್ನು ಉಡುತ್ತಾನೆ ಮತ್ತು ಇನ್ನೊಮ್ಮೆ ಹರಕಲು ಹೊಲಸು ಬಟ್ಟೆಯನ್ನು ಧರಿಸುತ್ತಾನೆ. ಒಮ್ಮೆ ನೆಲದ ಮೇಲೆ ಮಲಗುತ್ತಾನೆ ಮತ್ತು ಇನ್ನೊಮ್ಮೆ ಕಪ್ಪೆಯಂತೆ ಕೈ-ಕಾಲುಗಳನ್ನು ಮಡಿಚಿಕೊಂಡು ಮಲಗುತ್ತಾನೆ. ಒಮ್ಮೆ ವೀರಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಮತ್ತು ಇನ್ನೊಮ್ಮೆ ಮುಕ್ತ ಆಕಾಶದ ಕೆಳಗೆ ಕುಳಿತುಕೊಳ್ಳುತ್ತಾನೆ. ಒಮ್ಮೊಮ್ಮೆ ಚೀರ ಮತ್ತು ವಲ್ಕಲಗಳನ್ನು ಧರಿಸುತ್ತಾನೆ. ಒಮ್ಮೆ ಇಟ್ಟಿಗೆ ಮತ್ತು ಕಲ್ಲಿನ ಮೇಲೆ ಮಲಗುತ್ತಾನೆ ಮತ್ತು ಕುಳಿತುಕೊಳ್ಳುತ್ತಾನೆ. ಇನ್ನೊಮ್ಮೆ ಮುಳ್ಳಿನ ಹಾಸಿಗೆಯ ಮೇಲೆ. ಕೆಲವೊಮ್ಮೆ ಭಸ್ಮವನ್ನು ಚೆಲ್ಲಿ ಅದರ ಮೇಲೆ ಮಲಗುತ್ತಾನೆ ಇನ್ನು ಕೆಲವೊಮ್ಮೆ ನೆಲದ ಮೇಲೆ ಮಲಗಿಕೊಳ್ಳುತ್ತಾನೆ. ಕೆಲವೊಮ್ಮೆ ಯಾವುದೋ ಒಂದು ಮರದ ಕೆಳಗೆ ಬಿದ್ದಿರುತ್ತಾನೆ. ಒಮ್ಮೆ ಯುದ್ಧಭೂಮಿಯಲ್ಲಿ, ಕೆಲವೊಮ್ಮೆ ನೀರು ಮತ್ತು ಕೆಸರಿನಲ್ಲಿ, ಇನ್ನೊಮ್ಮೆ ಚೌಕಿಗಳಲ್ಲಿ ಮತ್ತು ಕೆಲವೊಮ್ಮೆ ನಾನಾಪ್ರಕಾರದ ಹಾಸಿಗೆಗಳ ಮೇಲೆ ಮಲಗುತ್ತಾನೆ. ಒಮ್ಮೆ ಮುಂಜದ ಉಡದಾರವಿರುವ ಕೌಪೀನವನ್ನು ಉಡುತ್ತಾನೆ ಮತ್ತು ಇನ್ನೊಮ್ಮೆ ಬೆತ್ತಲೆಯಾಗಿ ತಿರುಗುತ್ತಾನೆ. ಒಮ್ಮೆ ರೇಷ್ಮೆ ವಸ್ತ್ರ ಮತ್ತು ಇನ್ನೊಮ್ಮೆ ಕೃಷ್ಣಮೃಗಚರ್ಮವನ್ನು ಧರಿಸುತ್ತಾನೆ.

12292012a ಶಾಣೀವಾಲಪರೀಧಾನೋ ವ್ಯಾಘ್ರಚರ್ಮಪರಿಚ್ಚದಃ|

12292012c ಸಿಂಹಚರ್ಮಪರೀಧಾನಃ ಪಟ್ಟವಾಸಾಸ್ತಥೈವ ಚ||

ಕೆಲವೊಮ್ಮೆ ಸೆಣಬಿನಿಂದ ಮಾಡಿದ ವಸ್ತ್ರವನ್ನು ಧರಿಸುತ್ತಾನೆ. ಇನ್ನೊಮ್ಮೆ ಹುಲಿ ಅಥವಾ ಸಿಂಹದ ಚರ್ಮವನ್ನು ಧರಿಸುತ್ತಾನೆ. ಇನ್ನು ಕೆಲವೊಮ್ಮೆ ರೇಷ್ಮೆಯ ಪೀತಾಂಬರವನ್ನುಡುತ್ತಾನೆ.

[3]12292013a ಕೀಟಕಾವಸನಶ್ಚೈವ ಚೀರವಾಸಾಸ್ತಥೈವ ಚ|

12292013c ವಸ್ತ್ರಾಣಿ ಚಾನ್ಯಾನಿ ಬಹೂನ್ಯಭಿಮನ್ಯತ್ಯಬುದ್ಧಿಮಾನ್||

12292014a ಭೋಜನಾನಿ ವಿಚಿತ್ರಾಣಿ ರತ್ನಾನಿ ವಿವಿಧಾನಿ ಚ|

ಕೆಲವೊಮ್ಮೆ ಕೀಟಗಳಿಂದ ಉತ್ಪನ್ನವಾದ ರೇಷ್ಮೆಯ ಮೃದು ವಸ್ತ್ರವನ್ನು ಉಟ್ಟರೆ ಇನ್ನೊಮ್ಮೆ ನಾರುಮಡಿಯನ್ನು ಉಡುತ್ತಾನೆ. ಆ ಅಜ್ಞಾನಿಯು ಇನ್ನೂ ಅನೇಕ ಅನ್ಯ ವಸ್ತ್ರಗಳನ್ನು ಧರಿಸುತ್ತಾನೆ. ವಿವಿಧ ರತ್ನಗಳನ್ನೂ ಧರಿಸುತ್ತಾನೆ ಮತ್ತು ವಿಚಿತ್ರ ಭೋಜನಗಳನ್ನು ಮಾಡುತ್ತಾನೆ.

12292014c ಏಕವಸ್ತ್ರಾಂತರಾಶಿತ್ವಮೇಕಕಾಲಿಕಭೋಜನಮ್||

12292015a ಚತುರ್ಥಾಷ್ಟಮಕಾಲಶ್ಚ ಷಷ್ಠಕಾಲಿಕ ಏವ ಚ|

ಒಮ್ಮೊಮ್ಮೆ ಪ್ರತಿ ರಾತ್ರಿಗೊಮ್ಮೆ ಊಟಮಾಡುತ್ತಾನೆ, ಒಮ್ಮೆ ದಿನ-ರಾತ್ರಿ ಒಂದು ಬಾರಿ ಊಟಮಾಡುತ್ತಾನೆ. ಕೆಲವೊಮ್ಮೆ ದಿನಕ್ಕೆ ನಾಲ್ಕು ಬಾರಿ, ಕೆಲವೊಮ್ಮೆ ಎಂಟು ಬಾರಿ ಮತ್ತು ಇನ್ನು ಕೆಲವೊಮ್ಮೆ ಆರು ಬಾರಿ ಊಟ ಮಾಡುತ್ತಾನೆ.

12292015c ಷಡ್ರಾತ್ರಭೋಜನಶ್ಚೈವ ತಥೈವಾಷ್ಟಾಹಭೋಜನಃ||

12292016a ಸಪ್ತರಾತ್ರದಶಾಹಾರೋ ದ್ವಾದಶಾಹಾರ ಏವ ಚ|

ಕೆಲವೊಮ್ಮೆ ಆರು ರಾತ್ರಿಗಳನ್ನು ಕಳೆದು ನಂತರ ಊಟಮಾಡುತ್ತಾನೆ. ಇನ್ನು ಕೆಲವೊಮ್ಮೆ ಏಳು, ಎಂಟು, ಹತ್ತು ಅಥವಾ ಹನ್ನೆರಡು ದಿನಗಳ ನಂತರ ಊಟ ಮಾಡುತ್ತಾನೆ.

12292016c ಮಾಸೋಪವಾಸೀ ಮೂಲಾಶೀ ಫಲಾಹಾರಸ್ತಥೈವ ಚ||

12292017a ವಾಯುಭಕ್ಷೋಽಂಬುಪಿಣ್ಯಾಕಗೋಮಯಾದನ ಏವ ಚ|

ಕೆಲವೊಮ್ಮೆ ಒಂದು ತಿಂಗಳವರೆಗೆ ಉಪವಾಸದಿಂದಿರುತ್ತಾನೆ. ಕೆಲವೊಮ್ಮೆ ಫಲಾಹಾರಿಯಾಗಿರುತ್ತಾನೆ ಮತ್ತು ಇನ್ನೊಮ್ಮೆ ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡಿರುತ್ತಾನೆ. ಕೆಲವೊಮ್ಮೆ ಗಾಳಿ-ನೀರನ್ನು ಸೇವಿಸಿಕೊಂಡಿರುತ್ತಾನೆ ಮತ್ತು ಇನ್ನು ಕೆಲವೊಮ್ಮೆ ಎಳ್ಳಿನ ಹಿಂಡಿ, ಕೆಲವೊಮ್ಮೆ ಮೊಸರು ಮತ್ತು ಇನ್ನೊಮ್ಮೆ ಗೋಮಯವನ್ನು ತಿಂದುಕೊಂಡಿರುತ್ತಾನೆ.

12292017c ಗೋಮೂತ್ರಭೋಜನಶ್ಚೈವ ಶಾಕಪುಷ್ಪಾದ ಏವ ಚ||

12292018a ಶೈವಾಲಭೋಜನಶ್ಚೈವ ತಥಾಚಾಮೇನ ವರ್ತಯನ್|

ಕೆಲವೊಮ್ಮೆ ಅವನು ಗೋಮೂತ್ರವನ್ನು ಕುಡಿಯುವವನಾಗುತ್ತಾನೆ. ಕೆಲವೊಮ್ಮೆ ಅವನು ತರಕಾರಿ-ಹೂವುಗಳನ್ನು ತಿನ್ನುವವನಾಗುತ್ತಾನೆ. ಕೆಲವೊಮ್ಮೆ ಪಾಚಿಯನ್ನು ತಿಂದುಕೊಂಡಿರುವವನಾಗುತ್ತಾನೆ. ಇನ್ನು ಕೆಲವೊಮ್ಮೆ ಕೇವಲ ಆಚಮನೀಯವನ್ನು ಕುಡಿದುಕೊಂಡಿರುತ್ತಾನೆ.

12292018c ವರ್ತಯನ್ ಶೀರ್ಣಪರ್ಣೈಶ್ಚ ಪ್ರಕೀರ್ಣಫಲಭೋಜನಃ||

12292019a ವಿವಿಧಾನಿ ಚ ಕೃಚ್ಚ್ರಾಣಿ ಸೇವತೇ ಸುಖಕಾಂಕ್ಷಯಾ|

ಕೆಲವೊಮ್ಮೆ ಒಣಗಿದ ತರಗೆಲೆಗಳನ್ನು ಮತ್ತು ಮರದಿಂದ ಬಿದ್ದ ಹಣ್ಣುಗಳನ್ನು ತಿಂದುಕೊಂಡಿರುತ್ತಾನೆ. ಹೀಗೆ ಸಿದ್ಧಿಯನ್ನು ಬಯಸಿ ವಿವಿಧ ಕಠೋರ ನಿಯಮಗಳನ್ನು ಪಾಲಿಸುತ್ತಾನೆ.

12292019c ಚಾಂದ್ರಾಯಣಾನಿ ವಿಧಿವಲ್ಲಿಂಗಾನಿ ವಿವಿಧಾನಿ ಚ||

12292020a ಚಾತುರಾಶ್ರಮ್ಯಪಂಥಾನಮಾಶ್ರಯತ್ಯಾಶ್ರಮಾನಪಿ|

ಕೆಲವೊಮ್ಮೆ ವಿಧಿವತ್ತಾಗಿ ಚಾಂದ್ರಾಯಣ ವ್ರತವನ್ನು ಮಾಡುತ್ತಾನೆ ಮತ್ತು ವಿವಿಧ ಚಿಹ್ನೆಗಳನ್ನು ಧರಿಸುತ್ತಾನೆ. ಕೆಲವೊಮ್ಮೆ ನಾಲ್ಕೂ ಆಶ್ರಮಗಳ ಮಾರ್ಗದಲ್ಲಿ ನಡೆಯುತ್ತಾನೆ ಮತ್ತು ಇನ್ನು ಕೆಲವೊಮ್ಮೆ ವಿಪರೀತ ಮಾರ್ಗಗಳನ್ನೂ ಆಶ್ರಯಿಸುತ್ತಾನೆ.

12292020c ಉಪಾಸೀನಶ್ಚ ಪಾಷಂಡಾನ್ಗುಹಾಃ ಶೈಲಾಂಸ್ತಥೈವ ಚ[4]||

12292021a ವಿವಿಕ್ತಾಶ್ಚ ಶಿಲಾಚಾಯಾಸ್ತಥಾ ಪ್ರಸ್ರವಣಾನಿ ಚ|

ಕೆಲವೊಮ್ಮೆ ಧರ್ಮವಿಧಿಗಳನ್ನು ಬಿಟ್ಟಿರುವ ಪಾಷಂಡರನ್ನು ಸೇವಿಸುತ್ತಾನೆ. ಇನ್ನು ಕೆಲವೊಮ್ಮೆ ಒಬ್ಬಂಟಿಗನಾಗಿ ಗುಹೆಗಳಲ್ಲಿ, ಗಿರಿಗಳಲ್ಲಿ, ಶಿಲೆಗಳ ಮೇಲೆ ಮತ್ತು ಝರಿಗಳಲ್ಲಿ ವಾಸಿಸುತ್ತಾನೆ.

[5]12292021c ವಿವಿಧಾನಿ[6] ಚ ಜಪ್ಯಾನಿ ವಿವಿಧಾನಿ ವ್ರತಾನಿ ಚ||

12292022a ನಿಯಮಾನ್ ಸುವಿಚಿತ್ರಾಂಶ್ಚ ವಿವಿಧಾನಿ ತಪಾಂಸಿ ಚ|

12292022c ಯಜ್ಞಾಂಶ್ಚ ವಿವಿಧಾಕಾರಾನ್ ವಿಧೀಂಶ್ಚ ವಿವಿಧಾಂಸ್ತಥಾ||

ವಿವಿಧ ಜಪಗಳನ್ನು, ವಿವಿಧ ವ್ರತಗಳನ್ನು, ವಿಚಿತ್ರ ನಿಯಮಗಳನ್ನು, ವಿವಿಧ ತಪಸ್ಸುಗಳನ್ನು, ವಿವಿಧಾಕಾರದ ಯಜ್ಞಗಳನ್ನೂ ವಿವಿಧ ವಿಧಿಗಳನ್ನೂ ಆಚರಿಸುತ್ತಾನೆ.

12292023a ವಣಿಕ್ಪಥಂ ದ್ವಿಜಕ್ಷತ್ರಂ ವೈಶ್ಯಶೂದ್ರಂ ತಥೈವ ಚ|

12292023c ದಾನಂ ಚ ವಿವಿಧಾಕಾರಂ ದೀನಾಂಧಕೃಪಣೇಷ್ವಪಿ||

ಕೆಲವೊಮ್ಮೆ ವ್ಯಾಪಾರ ಮಾಡುತ್ತಾನೆ, ಕೆಲವೊಮ್ಮೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರನಾಗಿರುತ್ತಾನೆ. ದೀನ ಅಂಧ ಕೃಪಣರಿಗೆ ವಿವಿಧಾಕಾರದ ದಾನಗಳನ್ನು ಮಾಡುತ್ತಾನೆ.

12292024a ಅಭಿಮನ್ಯತ್ಯಸಂಬೋಧಾತ್ತಥೈವ ತ್ರಿವಿಧಾನ್ಗುಣಾನ್|

12292024c ಸತ್ತ್ವಂ ರಜಸ್ತಮಶ್ಚೈವ ಧರ್ಮಾರ್ಥೌ ಕಾಮ ಏವ ಚ|

12292024e ಪ್ರಕೃತ್ಯಾತ್ಮಾನಮೇವಾತ್ಮಾ ಏವಂ ಪ್ರವಿಭಜತ್ಯುತ||

ಅಜ್ಞಾನವಶನಾಗಿ ಅವನು ತನ್ನಲ್ಲಿ ಸತ್ತ್ವ-ರಜ-ತಮ ಈ ಮೂರು ಗುಣಗಳು ಮತ್ತು ಧರ್ಮ-ಅರ್ಥ-ಕಾಮಗಳ ಅಭಿಮಾನವನ್ನಿಟ್ಟುಕೊಳ್ಳುತ್ತಾನೆ.

12292025a ಸ್ವಧಾಕಾರವಷಟ್ಕಾರೌ ಸ್ವಾಹಾಕಾರನಮಸ್ಕ್ರಿಯಾಃ|

12292025c ಯಾಜನಾಧ್ಯಾಪನಂ ದಾನಂ ತಥೈವಾಹುಃ ಪ್ರತಿಗ್ರಹಮ್|

12292025e ಯಜನಾಧ್ಯಯನೇ ಚೈವ ಯಚ್ಚಾನ್ಯದಪಿ ಕಿಂ ಚನ||

ಕೆಲವೊಮ್ಮೆ ಅವನು ಸ್ವಾಹಾ, ಕೆಲವೊಮ್ಮೆ ಸ್ವಧಾ, ಕೆಲವೊಮ್ಮೆ ವಷಟ್ಕಾರ, ಮತ್ತು ಇನ್ನು ಕೆಲವೊಮ್ಮೆ ನಮಸ್ಕಾರಗಳನ್ನು ಮಾಡುತ್ತಾನೆ. ಕೆಲವೊಮ್ಮೆ ಯಜ್ಞ ಮಾಡಿಸುತ್ತಾನೆ, ಮಾಡುತ್ತಾನೆ. ಕೆಲವೊಮ್ಮೆ ವೇದವನ್ನು ಓದುತ್ತಾನೆ ಮತ್ತು ಓದಿಸುತ್ತಾನೆ. ಕೆಲವೊಮ್ಮೆ ದಾನಮಾಡುತ್ತಾನೆ, ದಾನವನ್ನು ಸ್ವೀಕರಿಸುತ್ತಾನೆ. ಹೀಗೆ ಅವನು ಯಾವುದಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾನೆ.

12292026a ಜನ್ಮಮೃತ್ಯುವಿವಾದೇ ಚ ತಥಾ ವಿಶಸನೇಽಪಿ ಚ|

12292026c ಶುಭಾಶುಭಮಯಂ ಸರ್ವಮೇತದಾಹುಃ ಕ್ರಿಯಾಪಥಮ್||

ಜನ್ಮ ತಾಳುತ್ತಾನೆ, ಮರಣ ಹೊಂದುತ್ತಾನೆ. ವಿವಾದ-ಸಂಗ್ರಾಮಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಇವೆಲ್ಲವೂ ಶುಭಾಶುಭಮಯ ಕರ್ಮಮಾರ್ಗವೆಂದು ವಿದ್ವಾಂಸರು ಹೇಳುತ್ತಾರೆ.

12292027a ಪ್ರಕೃತಿಃ ಕುರುತೇ ದೇವೀ ಮಹಾಪ್ರಲಯಮೇವ ಚ[7]|

12292027c ದಿವಸಾಂತೇ ಗುಣಾನೇತಾನಭ್ಯೇತ್ಯೈಕೋಽವತಿಷ್ಠತಿ||

12292028a ರಶ್ಮಿಜಾಲಮಿವಾದಿತ್ಯಸ್ತತ್ಕಾಲೇನ ನಿಯಚ್ಚತಿ|

ಪ್ರಕೃತಿ ದೇವಿಯೇ ಮಹಾಪ್ರಲಯವನ್ನುಂಟುಮಾಡುತ್ತಾಳೆ. ದಿವಸಾಂತ್ಯದಲ್ಲಿ ಸೂರ್ಯನು ಹೇಗೆ ತನ್ನ ಕಿರಣಗಳನ್ನು ಸೆಳೆದುಕೊಳ್ಳುತ್ತಾನೋ ಹಾಗೆ ಬ್ರಹ್ಮನೂ ಕೂಡ ಅವನ ದಿನದ ಅಂತ್ಯದಲ್ಲಿ ಗುಣಗಳೆಲ್ಲವನ್ನೂ ತನ್ನೊಳಗೇ ಸೆಳೆದುಕೊಂಡು ಏಕಾಂಗಿಯಾಗುತ್ತಾನೆ.

12292028c ಏವಮೇಷೋಽಸಕೃತ್ಸರ್ವಂ ಕ್ರೀಡಾರ್ಥಮಭಿಮನ್ಯತೇ||

12292029a ಆತ್ಮರೂಪಗುಣಾನೇತಾನ್ವಿವಿಧಾನ್ ಹೃದಯಪ್ರಿಯಾನ್|

ಹೀಗೆ ಪ್ರಕೃತಿಯೊಡನೆ ಕೂಡಿಕೊಂಡು ಪುರುಷನು ತನ್ನ ಹೃದಯಸಂತೋಷದ ಆಟಕ್ಕಾಗಿ ನಾನಾ ಪ್ರಕಾರದ ರೂಪ-ಗುಣಗಳನ್ನು ಧರಿಸಿ ಅವುಗಳನ್ನು ತನ್ನ ಕರ್ತ್ಯವ್ಯವೆಂದೇ ತಿಳಿದುಕೊಳ್ಳುತ್ತಾನೆ.

12292029c ಏವಮೇವ ವಿಕುರ್ವಾಣಃ ಸರ್ಗಪ್ರಲಯಕರ್ಮಣೀ||

12292030a ಕ್ರಿಯಾಕ್ರಿಯಾ ಪಥೇ ರಕ್ತಸ್ತ್ರಿಗುಣಸ್ತ್ರಿಗುಣಾತಿಗಃ|

12292030c ಕ್ರಿಯಾಕ್ರಿಯಾಪಥೋಪೇತಸ್ತಥಾ ತದಿತಿ ಮನ್ಯತೇ||

ಸೃಷ್ಟಿ ಮತ್ತು ಪ್ರಲಯವೇ ಧರ್ಮವಾಗಿರುವ ಆ ತ್ರಿಗುಣಮಯೀ ಪ್ರಕೃತಿಯನ್ನು ವಿಕೃತಗೊಳಿಸಿ ಮೂರೂ ಗುಣಗಳ ಸ್ವಾಮೀ ಆತ್ಮನು ಕರ್ಮಮಾರ್ಗದಲ್ಲಿ ಅನುರಕ್ತನಾಗಿ ಆ ಪ್ರಕೃತಿಯ ಮೂಲಕ ನಡೆಯುವ ಪ್ರತ್ಯೇಕ ತ್ರಿಗುಣಾತ್ಮಕ ಕರ್ಮಗಳನ್ನೂ ತನ್ನದೆಂದೇ ಭಾವಿಸಿಕೊಳ್ಳುತ್ತಾನೆ.

[8]12292031a ಏವಂ ದ್ವಂದ್ವಾನ್ಯಥೈತಾನಿ ವರ್ತಂತೇ ಮಮ ನಿತ್ಯಶಃ|

12292031c ಮಮೈವೈತಾನಿ ಜಾಯಂತೇ ಬಾಧಂತೇ[9] ತಾನಿ ಮಾಮಿತಿ||

12292032a ನಿಸ್ತರ್ತವ್ಯಾನ್ಯಥೈತಾನಿ ಸರ್ವಾಣೀತಿ ನರಾಧಿಪ|

12292032c ಮನ್ಯತೇಽಯಂ ಹ್ಯಬುದ್ಧಿತ್ವಾತ್ತಥೈವ ಸುಕೃತಾನ್ಯಪಿ||

12292033a ಭೋಕ್ತವ್ಯಾನಿ ಮಯೈತಾನಿ ದೇವಲೋಕಗತೇನ ವೈ|

12292033c ಇಹೈವ ಚೈನಂ ಭೋಕ್ಷ್ಯಾಮಿ ಶುಭಾಶುಭಫಲೋದಯಮ್||

ಹೀಗೆ ಪ್ರಕೃತಿಯ ಪ್ರೇರಣೆಯಿಂದ ಸ್ವಭಾವತಃ ಸುಖ-ದುಃಖಾದಿ ದ್ವಂದ್ವಗಳ ಪುನರಾವೃತ್ತಿಯು ಸದಾ ನಡೆಯುತ್ತಿರುತ್ತದೆ. ಆದರೆ ಜೀವಾತ್ಮನು ಅಜ್ಞಾನವಶ ಇವೆಲ್ಲ ದ್ವಂದ್ವಗಳೂ ತನ್ನಿಂದಲೇ ಹುಟ್ಟುತ್ತವೆ ಮತ್ತು ತನ್ನನ್ನೇ ಬಾಧಿಸುತ್ತವೆ ಎಂದು ತಿಳಿದುಕೊಂಡಿರುತ್ತಾನೆ. ನರಾಧಿಪ! ಪ್ರಕೃತಿಯೊಂದಿಗೆ ಸೇರಿದ ಪುರುಷನು ಅಜ್ಞಾನವಶದಿಂದ ತಾನು ದೇವಲೋಕಕ್ಕೆ ಹೋಗಿ ತನ್ನ ಸಮಸ್ತ ಪುಣ್ಯಫಲಗಳನ್ನು ಭೋಗಿಸುತ್ತೇನೆ ಮತ್ತು ಪೂರ್ವಜನ್ಮದಲ್ಲಿ ಮಾಡಿದ ಶುಭಾಶುಭ ಕರ್ಮಗಳ ಫಲಗಳನ್ನೂ ಭೋಗಿಸುತ್ತೇನೆ ಎಂದು ಅಂದುಕೊಳ್ಳುತ್ತಾನೆ.

12292034a ಸುಖಮೇವ ಚ ಕರ್ತವ್ಯಂ ಸಕೃತ್ ಕೃತ್ವಾ ಸುಖಂ ಮಮ|

12292034c ಯಾವದಂತಂ ಚ ಮೇ ಸೌಖ್ಯಂ ಜಾತ್ಯಾಂ ಜಾತ್ಯಾಂ ಭವಿಷ್ಯತಿ||

ಇನ್ನು ತನಗೆ ಸುಖಕ್ಕೆ ಸಾಧನವಾದ ಪುಣ್ಯಕರ್ಮಗಳನ್ನೇ ಮಾಡಬೇಕು. ಸುಕೃತಗಳನ್ನು ಒಮ್ಮೆಯಾದರೂ ಮಾಡಿದರೆ ತನಗೆ ಆಜೀವನ ಸುಖವುಂಟಾಗುತ್ತದೆ ಮತ್ತು ಭವಿಷ್ಯದಲ್ಲಿ ಪ್ರತ್ಯೇಕ ಜನ್ಮಗಳಲ್ಲಿಯೂ ಸುಖವು ದೊರೆಯುತ್ತದೆ ಎಂದು ಯೋಚಿಸುತ್ತಾನೆ.

12292035a ಭವಿಷ್ಯತಿ ಚ ಮೇ ದುಃಖಂ ಕೃತೇನೇಹಾಪ್ಯನಂತಕಮ್|

12292035c ಮಹದ್ದುಃಖಂ ಹಿ ಮಾನುಷ್ಯಂ ನಿರಯೇ ಚಾಪಿ ಮಜ್ಜನಮ್||

ಈ ಜನ್ಮದಲ್ಲಿ ತಾನು ಪಾಪಕರ್ಮಗಳನ್ನೆಸಗಿದರೆ ತನಗೆ ಇಲ್ಲಿಯೂ ಅನಂತ ದುಃಖವನ್ನು ಅನುಭವಿಸಬೇಕಾಗುತ್ತದೆ. ಈ ಮಾನವ ಜನ್ಮವು ಮಹಾ ದುಃಖಗಳಿಂದ ತುಂಬಿದೆ. ಇಲ್ಲದಿದ್ದರೆ ಪಾಪದ ಫಲವಾಗಿ ನರಕದಲ್ಲಿಯೇ ಮುಳುಗಿರಬೇಕಾಗುತ್ತದೆ.

12292036a ನಿರಯಾಚ್ಚಾಪಿ ಮಾನುಷ್ಯಂ ಕಾಲೇನೈಷ್ಯಾಮ್ಯಹಂ ಪುನಃ|

12292036c ಮನುಷ್ಯತ್ವಾಚ್ಚ ದೇವತ್ವಂ ದೇವತ್ವಾತ್ ಪೌರುಷಂ ಪುನಃ|

12292036e ಮನುಷ್ಯತ್ವಾಚ್ಚ ನಿರಯಂ ಪರ್ಯಾಯೇಣೋಪಗಚ್ಚತಿ||

ದೀರ್ಘಕಾಲದ ನಂತರ ನರಕದಿಂದ ಬಿಡುಗಡೆಯಾದ ಮೇಲೆ ತಾನು ಪುನಃ ಮನುಷ್ಯಲೋಕದಲ್ಲಿ ಜನ್ಮತಾಳುತ್ತೇನೆ. ಮನುಷ್ಯಯೋನಿಯಲ್ಲಿ ಮಾಡಿದ ಪುಣ್ಯದ ಫಲಸ್ವರೂಪವಾಗಿ ದೇವಯೋನಿಯಲ್ಲಿ ಹುಟ್ಟುತ್ತೇನೆ ಮತ್ತು ಪುಣ್ಯ ಕ್ಷೀಣವಾದ ನಂತರ ಪುನಃ ಮಾನವ ಶರೀರದಲ್ಲಿ ಜನ್ಮ ತಾಳುತ್ತೇನೆ. ಹೀಗೆ ಮತ್ತೆ ಮತ್ತೆ ಆ ಜೀವವು ಮಾನವ ಯೋನಿಯಿಂದ ನರಕ ಮತ್ತು ನರಕದಿಂದ ಮಾನವ ಯೋನಿಗೆ ಬಂದು-ಹೋಗುತ್ತಿರುತ್ತದೆ.

12292037a ಯ ಏವಂ ವೇತ್ತಿ ವೈ ನಿತ್ಯಂ ನಿರಾತ್ಮಾತ್ಮಗುಣೈರ್ವೃತಃ|

12292037c ತೇನ ದೇವಮನುಷ್ಯೇಷು ನಿರಯೇ ಚೋಪಪದ್ಯತೇ||

ತನ್ನದಲ್ಲದ ಗುಣಗಳಿಂದ ಆವೃತನಾದ ಅವನು ನಿತ್ಯವೂ ಹೀಗೆಯೇ ತಿಳಿದುಕೊಂಡು ಕೆಲವೊಮ್ಮೆ ದೇವತೆಗಳಲ್ಲಿ, ಕೆಲವೊಮ್ಮೆ ಮನುಷ್ಯರಲ್ಲಿ ಮತ್ತು ಕೆಲವೊಮ್ಮೆ ನರಕದಲ್ಲಿ  ಸಂಚರಿಸುತ್ತಿರುತ್ತಾನೆ.

12292038a ಮಮತ್ವೇನಾವೃತೋ ನಿತ್ಯಂ ತತ್ರೈವ ಪರಿವರ್ತತೇ|

12292038c ಸರ್ಗಕೋಟಿಸಹಸ್ರಾಣಿ ಮರಣಾಂತಾಸು ಮೂರ್ತಿಷು||

ಮಮತ್ವದಿಂದ ಆವೃತನಾಗಿ, ಸಹಸ್ರಾರು ಕೋಟಿ ಸೃಷ್ಟಿಪರ್ಯಂತ ನಶ್ವರ ಶರೀರಗಳಲ್ಲಿಯೇ ನಿತ್ಯವೂ ಸುತ್ತುತ್ತಿರುತ್ತಾನೆ.

12292039a ಯ ಏವಂ ಕುರುತೇ ಕರ್ಮ ಶುಭಾಶುಭಫಲಾತ್ಮಕಮ್|

12292039c ಸ ಏವ ಫಲಮಶ್ನಾತಿ ತ್ರಿಷು ಲೋಕೇಷು ಮೂರ್ತಿಮಾನ್||

ಹೀಗೆ ಶುಭಾಶುಭಫಲಗಳನ್ನು ನೀಡುವ ಕರ್ಮಗಳನ್ನು ಮಾಡುತ್ತಿರುತ್ತಾನೆ ಮತ್ತು ಅವುಗಳ ಫಲವನ್ನು ಮೂರೂ ಲೋಕಗಳಲ್ಲಿ ಶರೀರಧಾರಣೆಮಾಡಿ ಅನುಭವಿಸುತ್ತಿರುತ್ತಾನೆ.

12292040a ಪ್ರಕೃತಿಃ ಕುರುತೇ ಕರ್ಮ ಶುಭಾಶುಭಫಲಾತ್ಮಕಮ್|

12292040c ಪ್ರಕೃತಿಶ್ಚ ತದಶ್ನಾತಿ ತ್ರಿಷು ಲೋಕೇಷು ಕಾಮಗಾ||

ವಾಸ್ತವವಾಗಿ ಪ್ರಕೃತಿಯೇ ಶುಭಾಶುಭ ಫಲಗಳನ್ನು ನೀಡುವ ಕರ್ಮಗಳನ್ನು ಮಾಡುತ್ತದೆ ಮತ್ತು ಮೂರು ಲೋಕಗಳಲ್ಲಿ ಇಚ್ಛಾನುಸಾರ ಸಂಚರಿಸುವ ಪ್ರಕೃತಿಯೇ ಆ ಕರ್ಮಫಲಗಳನ್ನು ಭೋಗಿಸುತ್ತದೆ.

12292041a ತಿರ್ಯಗ್ಯೋನೌ ಮನುಷ್ಯತ್ವೇ ದೇವಲೋಕೇ ತಥೈವ ಚ|

12292041c ತ್ರೀಣಿ ಸ್ಥಾನಾನಿ ಚೈತಾನಿ ಜಾನೀಯಾತ್ ಪ್ರಾಕೃತಾನಿ ಹ||

ತಿರ್ಯಗ್ಯೋನಿ, ಮನುಷ್ಯಯೋನಿ ಮತ್ತು ದೇವಲೋಕದಲ್ಲಿ ದೇವಯೋನಿ – ಇವೇ ಕರ್ಮಫಲಭೋಗದ ಮೂರು ಸ್ಥಾನಗಳು. ಇವು ಮೂರೂ ಪ್ರಾಕೃತ ಸ್ಥಾನಗಳೆಂದು ತಿಳಿ.

12292042a ಅಲಿಂಗಾಂ ಪ್ರಕೃತಿಂ ತ್ವಾಹುರ್ಲಿಂಗೈರನುಮಿಮೀಮಹೇ|

12292042c ತಥೈವ ಪೌರುಷಂ ಲಿಂಗಮನುಮಾನಾದ್ಧಿ ಪಶ್ಯತಿ||

ಪ್ರಕೃತಿಯನ್ನು ಲಿಂಗರಹಿತ ಎಂದು ಹೇಳುತ್ತಾರೆ. ಆದರೆ ವಿಶೇಷ ಹೇತುಗಳ ಮೂಲಕ ನಾವು ಅದರ ಅನುಮಾನ ಮಾಡಬಹುದು. ಹಾಗೆಯೇ ಅನುಮಾನದ ಮೂಲಕವೇ ನಮಗೆ ಪುರುಷನ ಸ್ವರೂಪದ ಅರಿವು ಅರ್ಥಾತ್ ಅವನ ಜ್ಞಾನವುಂಟಾಗುತ್ತದೆ.

12292043a ಸ ಲಿಂಗಾಂತರಮಾಸಾದ್ಯ ಪ್ರಾಕೃತಂ ಲಿಂಗಮವ್ರಣಮ್|

12292043c ವ್ರಣದ್ವಾರಾಣ್ಯಧಿಷ್ಠಾಯ ಕರ್ಮಾಣ್ಯಾತ್ಮನಿ ಮನ್ಯತೇ||

ಸ್ವಯಂ ಛಿದ್ರರಹಿತನಾಗಿದ್ದರೂ ಪ್ರಕೃತಿನಿರ್ಮಿತ ಚಿಹ್ನಸ್ವರೂಪ ವಿಭಿನ್ನ ಶರೀರಗಳ ಅವಲಂಬಿತನಾಗಿ ಛಿದ್ರಗಳಿಂದ ಕೂಡಿರುವ ಇಂದ್ರಿಯಗಳ ಅಧಿಷ್ಠಾತನಾಗಿದ್ದುಕೊಂಡು ಅವುಗಳ ಕರ್ಮಗಳನ್ನು ತನ್ನದೆಂದೇ ತಿಳಿದುಕೊಂಡಿರುತ್ತಾನೆ.

12292044a ಶ್ರೋತ್ರಾದೀನಿ ತು ಸರ್ವಾಣಿ ಪಂಚ ಕರ್ಮೇಂದ್ರಿಯಾಣಿ ಚ|

12292044c ವಾಗಾದೀನಿ ಪ್ರವರ್ತಂತೇ ಗುಣೇಷ್ವೇವ ಗುಣೈಃ ಸಹ|

ಶ್ರೋತ್ರಾದಿ ಪಂಚ ಜ್ಞಾನೇಂದ್ರಿಯಗಳು ಮತ್ತು ವಾಕ್ ಆದಿ ಐದು ಕರ್ಮೇಂದ್ರಿಯಗಳು ತಮ್ಮ ತಮ್ಮ ಗುಣಗಳೊಂದಿಗೆ ಗುಣಮಯ ಶರೀರದಲ್ಲಿ ಕಾರ್ಯಗತವಾಗಿರುತ್ತವೆ.

12292044e ಅಹಮೇತಾನಿ ವೈ ಕುರ್ವನ್ಮಮೈತಾನೀಂದ್ರಿಯಾಣಿ ಚ||

12292045a ನಿರಿಂದ್ರಿಯೋಽಭಿಮನ್ಯೇತ ವ್ರಣವಾನಸ್ಮಿ ನಿರ್ವ್ರಣಃ|

ಆದರೆ ಜೀವವು ವಾಸ್ತವವಾಗಿ ಇಂದ್ರಿಯ ರಹಿತನಾಗಿದ್ದರೂ ತಾನೇ ಈ ಎಲ್ಲ ಕರ್ಮಗಳನ್ನೂ ಮಾಡುತ್ತಿದ್ದೇನೆ ಮತ್ತು ತನ್ನಲ್ಲಿಯೇ ಈ ಎಲ್ಲ ಇಂದ್ರಿಯಗಳೂ ಇವೆ ಎಂದು ತಿಳಿದುಕೊಳ್ಳುತ್ತಾನೆ. ಹೀಗೆ ಅವನು ಛಿದ್ರರಹಿತನಾಗಿದ್ದರೂ ತನ್ನನ್ನು ಛಿದ್ರಯುಕ್ತನೆಂದು ತಿಳಿದುಕೊಳ್ಳುತ್ತಾನೆ.

12292045c ಅಲಿಂಗೋ ಲಿಂಗಮಾತ್ಮಾನಮಕಾಲಃ ಕಾಲಮಾತ್ಮನಃ||

12292046a ಅಸತ್ತ್ವಂ ಸತ್ತ್ವಮಾತ್ಮಾನಮತತ್ತ್ವಂ ತತ್ತ್ವಮಾತ್ಮನಃ|

ಲಿಂಗರಹಿತನಾಗಿದ್ದರೂ ತನ್ನನ್ನು ಲಿಂಗಯುಕ್ತನಾಗಿದ್ದೇನೆಂದು ತಿಳಿದುಕೊಳ್ಳುತ್ತಾನೆ. ಕಾಲಧರ್ಮ ರಹಿತನಾಗಿದ್ದರೂ ಕಾಲಧರ್ಮಿಯೆಂದು ತಿಳಿದುಕೊಳ್ಳುತ್ತಾನೆ. ಸತ್ತ್ವಕ್ಕೆ ಭಿನ್ನನಾಗಿದ್ದರೂ ಸತ್ತ್ವರೂಪಿಯೆಂದು ತಿಳಿದುಕೊಳ್ಳುತ್ತಾನೆ. ಹಾಗೆಯೇ ಮಹಾಭೂತಾದಿ ತತ್ತ್ವಗಳಿಂದ ರಹಿತನಾಗಿದ್ದರೂ ತನ್ನನ್ನು ತತ್ತ್ವಸ್ವರೂಪೀ ಎಂದು ತಿಳಿದುಕೊಳ್ಳುತ್ತಾನೆ.

12292046c ಅಮೃತ್ಯುರ್ಮೃತ್ಯುಮಾತ್ಮಾನಮಚರಶ್ಚರಮಾತ್ಮನಃ||

12292047a ಅಕ್ಷೇತ್ರಃ ಕ್ಷೇತ್ರಮಾತ್ಮಾನಮಸರ್ಗಃ ಸರ್ಗಮಾತ್ಮನಃ|

ಅವನು ಸರ್ವಥಾ ಮೃತ್ಯುರಹಿತನು. ಆದರೂ ತನ್ನನ್ನು ಮೃತ್ಯುಗ್ರಸ್ತನೆಂದು ತಿಳಿದುಕೊಂಡಿರುತ್ತಾನೆ. ಅಚರನಾಗಿದ್ದರೂ ಚರನೆಂದು ತಿಳಿಯುತ್ತಾನೆ. ಕ್ಷೇತ್ರದಿಂದ ಭಿನ್ನನಾಗಿದ್ದರೂ ಕ್ಷೇತ್ರವೆಂದೇ ತಿಳಿದುಕೊಳ್ಳುತ್ತಾನೆ. ಸೃಷ್ಟಿಗೂ ತನಗೂ ಯಾವುದೇ ಸಂಬಂಧವಿಲ್ಲದೇ ಇದ್ದರೂ ಸೃಷ್ಟಿಯು ತನ್ನದೇ ಎಂದು ತಿಳಿದುಕೊಂಡಿರುತ್ತಾನೆ.

12292047c ಅತಪಾಸ್ತಪ ಆತ್ಮಾನಮಗತಿರ್ಗತಿಮಾತ್ಮನಃ||

12292048a ಅಭವೋ ಭವಮಾತ್ಮಾನಮಭಯೋ ಭಯಮಾತ್ಮನಃ|

12292048c ಅಕ್ಷರಃ ಕ್ಷರಮಾತ್ಮಾನಮಬುದ್ಧಿಸ್ತ್ವಭಿಮನ್ಯತೇ||

ಅವನು ಎಂದೂ ತಪವನ್ನಾಚರಿಸದೇ ಇದ್ದರೂ ತನ್ನನ್ನು ತಪಸ್ವೀ ಎಂದು ತಿಳಿಯುತ್ತಾನೆ. ಎಂದೂ ಹೋಗಿ-ಬಂದು ಮಾಡದೇ ಇದ್ದರೂ ತನ್ನನ್ನು ಹೋಗಿ-ಬರುವವನು ಎಂದು ತಿಳಿಯುತ್ತಾನೆ. ಸಂಸಾರರಹಿತನಾಗಿದ್ದರೂ ತನ್ನನ್ನು ಸಂಸಾರೀ ಎಂದು  ತಿಳಿದುಕೊಂಡಿರುತ್ತಾನೆ. ನಿರ್ಭಯನಾಗಿದ್ದರೂ ತನ್ನನ್ನು ಭಯಭೀತನೆಂದು ತಿಳಿದುಕೊಂಡಿರುತ್ತಾನೆ. ಅಕ್ಷರ ಅವಿನಾಶಿಯಾಗಿದ್ದರೂ ತನ್ನನ್ನು ಕ್ಷರ ನಾಶನೀಯ ಎಂದು ತಿಳಿದಿರುತ್ತಾನೆ. ಬುದ್ಧಿಗಿಂತ ಭಿನ್ನನಾಗಿದ್ದರೂ ಬುದ್ಧಿವಂತನೆಂಬ ಅಭಿಮಾನವನ್ನಿಟ್ಟುಕೊಂಡಿರುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ದ್ವಿನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ತೆರಡನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತಿರ್ಯಗ್ಯೋನಿಸಹಸ್ರೇಷು ಕದಾಚಿದ್ದೇವತಾಸ್ವಪಿ| (ಗೀತಾ ಪ್ರೆಸ್).

[2] ಶುಕ್ಲವಾಸಾಶ್ಚ (ಗೀತಾ ಪ್ರೆಸ್).

[3] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಫಲಕಪರಿಧಾನಶ್ಚ ತಥಾ ಕಂಟಕವಸ್ತ್ರಧೃಕ್| (ಗೀತಾ ಪ್ರೆಸ್).

[4] ಉಪಾಶ್ರಮಾನಪ್ಯಪರಾನ್ ಪಾಷಂಡಾನ್ ವಿವಿಧಾನಪಿ| (ಗೀತಾ ಪ್ರೆಸ್).

[5] ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಪುಲಿನಾನಿ ವಿವಿಕ್ತಾನಿ ವಿವಿಕ್ತಾನಿ ವನಾನಿ ಚ| ದೇವಸ್ಥಾನಾನಿ ಪುಣ್ಯಾನಿ ವಿವಿಕ್ತಾನಿ ಸರಾಂಸಿ ಚ|| ವಿವಿಕ್ತಾಶ್ಚಾಪಿ ಶೈಲಾನಾಂ ಗುಹಾ ಗೃಹನಿಭೋಪಮಾಃ| (ಗೀತಾ ಪ್ರೆಸ್).

[6] ವಿವಿಕ್ತಾನಿ (ಗೀತಾ ಪ್ರೆಸ್).

[7] ಭವಂ ಪ್ರಲಯಮೇವ ಚ| (ಗೀತಾ ಪ್ರೆಸ್).

[8] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಪ್ರಕೃತ್ಯಾ ಸರ್ವವೇವೇದಂ ಜಗದಂಧೀಕೃತಂ ವಿಭೋ| ರಜಸಾ ತಮಸಾ ಚೈವ ವ್ಯಾಪ್ತಂ ಸರ್ವಮನೇಕಧಾ|| (ಗೀತಾ ಪ್ರೆಸ್).

[9] ಧಾವಂತೇ (ಗೀತಾ ಪ್ರೆಸ್).

Comments are closed.