Shanti Parva: Chapter 294

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೪

ಯೋಗ ಮತ್ತು ಸಾಂಖ್ಯ ಸ್ವರೂಪಗಳ ವರ್ಣನೆ (೧-೪೯).

12294001 ಕರಾಲಜನಕ ಉವಾಚ|

12294001a ನಾನಾತ್ವೈಕತ್ವಮಿತ್ಯುಕ್ತಂ ತ್ವಯೈತದೃಷಿಸತ್ತಮ|

12294001c ಪಶ್ಯಾಮಿ ಚಾಭಿಸಂದಿಗ್ಧಮೇತಯೋರ್ವೈ ನಿದರ್ಶನಮ್||

ಕರಾಲಜನಕನು ಹೇಳಿದನು: “ಋಷಿಸತ್ತಮ! ನೀನು ಕ್ಷರವು ಅನೇಕ ರೂಪೀ ಮತ್ತು ಅಕ್ಷರವು ಏಕರೂಪೀ ಎಂದು ಹೇಳಿದೆ. ಆದರೆ ಇವೆರಡೂ ತತ್ತ್ವಗಳ ಕುರಿತು ನೀನು ನೀಡಿದ ನಿದರ್ಶನದ ಕುರಿತು ಇನ್ನೂ ಸಂದಿಗ್ಧತೆಯನ್ನು ಕಾಣುತ್ತಿದ್ದೇನೆ.

12294002a ತಥಾಪ್ರಬುದ್ಧಬುದ್ಧಾಭ್ಯಾಂ ಬುಧ್ಯಮಾನಸ್ಯ ಚಾನಘ|

12294002c ಸ್ಥೂಲಬುದ್ಧ್ಯಾ ನ ಪಶ್ಯಾಮಿ ತತ್ತ್ವಮೇತನ್ನ ಸಂಶಯಃ||

ಅನಘ! ನನ್ನ ಮಂದಬುದ್ಧಿಯ ಕಾರಣದಿಂದಾಗಿ ಯಾರನ್ನು ಅಜ್ಞಾನಿಗಳು ಅನೇಕನೆಂದೂ ಜ್ಞಾನಿಗಳು ಏಕನೆಂದೂ ಕಾಣುತ್ತಾರೋ ಆ ಪರಮಾತ್ಮನನನ್ನು ಅರಿಯದವನಾಗಿದ್ದೇನೆ. ನನ್ನ ಈ ಹೇಳಿಕೆಯಲ್ಲಿ ಸ್ವಲ್ಪವೂ ಸಂಶಯವಿಲ್ಲ.

12294003a ಅಕ್ಷರಕ್ಷರಯೋರುಕ್ತಂ ತ್ವಯಾ ಯದಪಿ ಕಾರಣಮ್|

12294003c ತದಪ್ಯಸ್ಥಿರಬುದ್ಧಿತ್ವಾತ್ ಪ್ರನಷ್ಟಮಿವ ಮೇಽನಘ||

ಅನಘ! ಅಕ್ಷರ ಮತ್ತು ಕ್ಷರಗಳನ್ನು ತಿಳಿದುಕೊಳ್ಳಲು ನೀನು ಅನೇಕ ಯುಕ್ತಿಗಳನ್ನು ಹೇಳಿದ್ದೀಯೆ. ಆದರೂ ನನ್ನ ಬುದ್ಧಿಯು ಅಸ್ಥಿರವಾಗಿರುವುದರಿಂದ ನೀನು ಹೇಳಿದುದೆಲ್ಲವೂ ಮರೆತುಹೋಗುತ್ತಿದೆ.

12294004a ತದೇತಚ್ಚ್ರೋತುಮಿಚ್ಚಾಮಿ ನಾನಾತ್ವೈಕತ್ವದರ್ಶನಮ್|

12294004c ಬುದ್ಧಮಪ್ರತಿಬುದ್ಧಂ ಚ ಬುಧ್ಯಮಾನಂ ಚ ತತ್ತ್ವತಃ||

ಆದುದರಿಂದ ಆ ನಾನಾತ್ವ ಮತ್ತು ಏಕತ್ವರೂಪ ದರ್ಶನವನ್ನು ಪುನಃ ಕೇಳಬಯಸುತ್ತೇನೆ. ಬುದ್ಧ (ಜ್ಞಾನಿ) ನು ಯಾರು? ಅಪ್ರತಿಬುದ್ಧ (ಜ್ಞಾನಹೀನ) ನು ಯಾರು? ಮತ್ತು ಬುದ್ಧ್ಯಮಾನ (ಜ್ಞೇಯ) ವು ಯಾವುದು? ಇದರ ಕುರಿತು ತತ್ತ್ವತಃ ಹೇಳಬೇಕು.

12294005a ವಿದ್ಯಾವಿದ್ಯೇ ಚ ಭಗವನ್ನಕ್ಷರಂ ಕ್ಷರಮೇವ ಚ|

12294005c ಸಾಂಖ್ಯಂ ಯೋಗಂ ಚ ಕಾರ್ತ್ಸ್ನ್ಯೇನ ಪೃಥಕ್ಚೈವಾಪೃಥಕ್ಚ ಹ||

ಭಗವನ್! ನಾನು ವಿದ್ಯಾ, ಅವಿದ್ಯಾ, ಅಕ್ಷರ, ಕ್ಷರ, ಸಾಂಖ್ಯ ಮತ್ತು ಯೋಗಗಳ ಕುರಿತು ಪ್ರತ್ಯೇಕ ಪ್ರತ್ಯೇಕ ವಾಗಿ ಸಂಪೂರ್ಣವಾಗಿ ತಿಳಿಯಬಯಸುತ್ತೇನೆ.”

12294006 ವಸಿಷ್ಠ ಉವಾಚ|

12294006a ಹಂತ ತೇ ಸಂಪ್ರವಕ್ಷ್ಯಾಮಿ ಯದೇತದನುಪೃಚ್ಚಸಿ|

12294006c ಯೋಗಕೃತ್ಯಂ ಮಹಾರಾಜ ಪೃಥಗೇವ ಶೃಣುಷ್ವ ಮೇ||

ವಸಿಷ್ಠನು ಹೇಳಿದನು: “ಮಹಾರಾಜ! ನಿಲ್ಲು! ನೀನು ಏನನ್ನು ಕೇಳಿದ್ದೀಯೋ ಅದರ ಕುರಿತು ಹೇಳುತ್ತೇನೆ. ಈಗ ಪ್ರತ್ಯೇಕವಾಗಿ ಯೋಗಸಂಬಂಧೀ ಕೃತ್ಯದ ಕುರಿತು ಕೇಳು.

12294007a ಯೋಗಕೃತ್ಯಂ ತು ಯೋಗಾನಾಂ ಧ್ಯಾನಮೇವ ಪರಂ ಬಲಮ್|

12294007c ತಚ್ಚಾಪಿ ದ್ವಿವಿಧಂ ಧ್ಯಾನಮಾಹುರ್ವೇದವಿದೋ ಜನಾಃ||

12294008a ಏಕಾಗ್ರತಾ ಚ ಮನಸಃ ಪ್ರಾಣಾಯಾಮಸ್ತಥೈವ ಚ|

12294008c ಪ್ರಾಣಾಯಾಮಸ್ತು ಸಗುಣೋ ನಿರ್ಗುಣೋ ಮನಸಸ್ತಥಾ||

ಯೋಗಿಗಳಿಗೆ ಧ್ಯಾನವೇ ಪರಮ ಕರ್ತವ್ಯ ಮತ್ತು ಪರಮ ಬಲ. ವೇದವಿದ ಜನರು ಎರಡು ವಿಧದ ಧ್ಯಾನಗಳ ಕುರಿತು ಹೇಳಿದ್ದಾರೆ. ಒಂದು ಮನಸ್ಸಿನ ಏಕಾಗ್ರತೆ ಮತು ಇನ್ನೊಂದು ಪ್ರಾಣಾಯಾಮ. ಪ್ರಾಣಾಯಾಮದಲ್ಲಿಯೂ ಎರಡು ಪ್ರಕಾರಗಳಿವೆ: ಸಗುಣ ಮತ್ತು ನಿರ್ಗುಣ. ಮನಸ್ಸಿನ ಸಂಬಂಧವನ್ನು ಸಗುಣದೊಂದಿಗೆ ಇಟ್ಟುಕೊಂಡು ಮಾಡುವ ಪ್ರಾಣಾಯಾಮವು ಸಗುಣ ಪ್ರಾಣಾಯಾಮ. ಮನಸ್ಸನ್ನು ನಿರ್ಗುಣತತ್ತ್ವದಲ್ಲಿರಿಸಿ ಮಾಡುವ ಪ್ರಾಣಾಯಾಮವು ನಿರ್ಗುಣ ಪ್ರಾಣಾಯಾಮ.

12294009a ಮೂತ್ರೋತ್ಸರ್ಗೇ ಪುರೀಷೇ ಚ ಭೋಜನೇ ಚ ನರಾಧಿಪ|

12294009c ತ್ರಿಕಾಲಂ ನಾಭಿಯುಂಜೀತ ಶೇಷಂ ಯುಂಜೀತ ತತ್ಪರಃ||

ನರಾಧಿಪ! ಮಲವಿಸರ್ಜನೆ, ಮೂತ್ರವಿಸರ್ಜನೆ ಮತ್ತು ಭೋಜನ – ಈ ಮೂರರ ಸಮಯಗಳಲ್ಲಿ ಯೋಗಾಭ್ಯಾಸವನ್ನು ಮಾಡಬಾರದು. ಉಳಿದ ಸಮಯದಲ್ಲಿ ತತ್ಪರನಾಗಿ ಯೋಗಾಭ್ಯಾಸವನ್ನು ಮಾಡಬೇಕು.

12294010a ಇಂದ್ರಿಯಾಣೀಂದ್ರಿಯಾರ್ಥೇಭ್ಯೋ ನಿವರ್ತ್ಯ ಮನಸಾ ಮುನಿಃ|

12294010c ದಶದ್ವಾದಶಭಿರ್ವಾಪಿ ಚತುರ್ವಿಂಶಾತ್ಪರಂ ತತಃ||

12294011a ತಂ ಚೋದನಾಭಿರ್ಮತಿಮಾನಾತ್ಮಾನಂ ಚೋದಯೇದಥ|

12294011c ತಿಷ್ಠಂತಮಜರಂ ತಂ ತು ಯತ್ತದುಕ್ತಂ ಮನೀಷಿಭಿಃ||

ಮನಸ್ಸಿನ ಮೂಲಕ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂತೆಗೆದುಕೊಂಡು ಮುನಿಯು ಇಪ್ಪತ್ತೆರಡು ಪ್ರಕಾರದ[1] ಪ್ರೇರಣೆಗಳ ಮೂಲಕ ಇಪ್ಪತ್ನಾಲ್ಕು ತತ್ತ್ವಗಳನ್ನೂ ಮೀರಿರುವ, ಯಾರನ್ನು ಮನೀಷಿಣರು ಆತ್ಮಸ್ವರೂಪವೆಂದು ಹೇಳುತ್ತಾರೋ ಆ ಜರರಹಿತ ಜೀವಾತ್ಮ, ಪರಮ ಪುರುಷ ಪರಮಾತ್ಮನನ್ನು ಪ್ರಚೋದಿಸಬೇಕು.

12294012a ತೈಶ್ಚಾತ್ಮಾ ಸತತಂ ಜ್ಞೇಯ ಇತ್ಯೇವಮನುಶುಶ್ರುಮ|

12294012c ದ್ರವ್ಯಂ[2] ಹ್ಯಹೀನಮನಸೋ ನಾನ್ಯಥೇತಿ ವಿನಿಶ್ಚಯಃ||

ಹೀಗೆ ಪ್ರಾಣಾಯಾಮ ಮಾಡುವವರು ಸದಾ ಪರಮಾತ್ಮನನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ಕೇಳಿದ್ದೇನೆ. ದ್ರವ್ಯ ಹೀನ ಮನಸ್ಸಿಗೇ ಇದು ಸಾಧ್ಯ ಅನ್ಯಥಾ ಸಾಧ್ಯವಿಲ್ಲ ಎಂಬ ನಿಶ್ಚಯವಿದೆ.

12294013a ವಿಮುಕ್ತಃ ಸರ್ವಸಂಗೇಭ್ಯೋ ಲಘ್ವಾಹಾರೋ ಜಿತೇಂದ್ರಿಯಃ|

12294013c ಪೂರ್ವರಾತ್ರೇ ಪರೇ ಚೈವ ಧಾರಯೇತ ಮನೋಽಽತ್ಮನಿ||

ಸರ್ವಸಂಗಗಳಿಂದ ವಿಮುಕ್ತನಾಗಿ ಲಘು ಆಹಾರಿಯಾಗಿ ಮತ್ತು ಜಿತೇಂದ್ರಿಯನಾಗಿದ್ದುಕೊಂಡು ರಾತ್ರಿಯ ಮೊದಲನೇ ಮತ್ತು ಹಿಂದಿನ ಪ್ರಹರಗಳಲ್ಲಿ ಮನಸ್ಸನ್ನು ಆತ್ಮನಲ್ಲಿ ಏಕಾಗ್ರಗೊಳಿಸಬೇಕು.

12294014a ಸ್ಥಿರೀಕೃತ್ಯೇಂದ್ರಿಯಗ್ರಾಮಂ ಮನಸಾ ಮಿಥಿಲೇಶ್ವರ|

12294014c ಮನೋ ಬುದ್ಧ್ಯಾ ಸ್ಥಿರಂ ಕೃತ್ವಾ ಪಾಷಾಣ ಇವ ನಿಶ್ಚಲಃ||

12294015a ಸ್ಥಾಣುವಚ್ಚಾಪ್ಯಕಂಪಃ ಸ್ಯಾದ್ಗಿರಿವಚ್ಚಾಪಿ ನಿಶ್ಚಲಃ|

12294015c ಬುಧಾ ವಿಧಿವಿಧಾನಜ್ಞಾಸ್ತದಾ ಯುಕ್ತಂ ಪ್ರಚಕ್ಷತೇ||

ಮಿಥಿಲೇಶ್ವರ! ಮನಸ್ಸಿನ ಮೂಲಕ ಇಂದ್ರಿಯಗ್ರಾಮಗಳನ್ನು ಸ್ಥಿರೀಕರಿಸಿ, ಬುದ್ಧಿಯಿಂದ ಮನಸ್ಸನ್ನು ಸ್ಥಿರೀ ಕರಿಸಿ ಕಲ್ಲಿನಂತೆ ನಿಶ್ಚಲನಾಗಬೇಕು, ಒಣ ಕಟ್ಟಿಗೆಯಂತೆ ನಿಷ್ಕಂಪನಾಗಬೇಕು ಮತ್ತು ಪರ್ವತದಂತೆ ನಿಶ್ಚಲನಾಗಬೇಕು. ಅಂಥವನನ್ನೇ ವಿಧಿವಿಧಾನಜ್ಞ ವಿದ್ವಾಂಸರು ಯೋಗ ಯುಕ್ತನೆಂದು ಹೇಳುತ್ತಾರೆ.

12294016a ನ ಶೃಣೋತಿ ನ ಚಾಘ್ರಾತಿ ನ ರಸ್ಯತಿ ನ ಪಶ್ಯತಿ|

12294016c ನ ಚ ಸ್ಪರ್ಶಂ ವಿಜಾನಾತಿ ನ ಸಂಕಲ್ಪಯತೇ ಮನಃ||

12294017a ನ ಚಾಭಿಮನ್ಯತೇ ಕಿಂ ಚಿನ್ನ ಚ ಬುಧ್ಯತಿ ಕಾಷ್ಠವತ್|

12294017c ತದಾ ಪ್ರಕೃತಿಮಾಪನ್ನಂ ಯುಕ್ತಮಾಹುರ್ಮನೀಷಿಣಃ||

ಆ ಸಮಯದಲ್ಲಿ ಅವನು ಕೇಳುವುದಿಲ್ಲ, ಮೂಸುವುದಿಲ್ಲ, ಸ್ವಾದಿಸುವುದಿಲ್ಲ, ನೋಡುವುದಿಲ್ಲ, ಮುಟ್ಟುವುದಿಲ್ಲ ಮತ್ತು ಅವನ ಮನಸ್ಸಿನಲ್ಲಿ ಯಾವುದೇ ರೀತಿಯ ಸಂಕಲ್ಪಗಳೂ ಇರುವುದಿಲ್ಲ. ಒಣ ಕಟ್ಟಿಗೆಯಂತೆ ಏನನ್ನೂ ಅನುಭವಿಸುವುದಿಲ್ಲ ಮತ್ತು ಯಾವುದರ ಅರಿವೆಯೂ ಅವನಿಗಿರುವುದಿಲ್ಲ. ಅಂತಹ ಸ್ಥಿತಿಯನ್ನು ಪಡೆದುಕೊಂಡವರನ್ನು ಮನೀಷಿಣರು ಯೋಗಯುಕ್ತನೆಂದು ಹೇಳುತ್ತಾರೆ.

12294018a ನಿರ್ವಾತೇ ಚ ಯಥಾ ದೀಪ್ಯನ್ದೀಪಸ್ತದ್ವತ್ಸ ದೃಶ್ಯತೇ|

12294018c ನಿರ್ಲಿಂಗಶ್ಚಾಚಲಶ್ಚೋರ್ಧ್ವಂ ನ ತಿರ್ಯಗ್ಗತಿಮಾಪ್ನುಯಾತ್||

ಆ ಸಮಯದಲ್ಲಿ ಅವನು ಗಾಳಿಯಿಲ್ಲದ ಪ್ರದೇಶದಲ್ಲಿ ಇಟ್ಟಿರುವ ನಿಶ್ಚಲಭಾವದಿಂದ ಪ್ರಜ್ವಲಿತ ದೀಪದಂತೆ ಪ್ರಕಾಶಿತಗೊಳ್ಳುತ್ತಾನೆ. ಲಿಂಗ ಶರೀರದೊಂದಿಗೆ ಅವನ ಯಾವುದೇ ಸಂಬಂಧವೂ ಇರುವುದಿಲ್ಲ. ಅವನು ಎಷ್ಟು ನಿಶ್ಚಲನಾಗುತ್ತಾನೆ ಅಂದರೆ ಅವನ ಮೇಲೆ, ಕೆಳಗೆ, ಅಥವಾ ಮಧ್ಯದಲ್ಲಿ ಎಲ್ಲಿಯೂ ಯಾವುದೇ ತರಹದ ಗತಿಯೂ ಉಂಟಾಗುವುದಿಲ್ಲ.

12294019a ತದಾ ತಮನುಪಶ್ಯೇತ ಯಸ್ಮಿನ್ ದೃಷ್ಟೇ ತು ಕಥ್ಯತೇ|

12294019c ಹೃದಯಸ್ಥೋಽಂತರಾತ್ಮೇತಿ ಜ್ಞೇಯೋ ಜ್ಞಸ್ತಾತ ಮದ್ವಿಧೈಃ||

ಯಾರನ್ನು ನೋಡಿದರೆ ಮಾತೇ ಬರುವುದಿಲ್ಲವೋ ಅವನನ್ನು ನೋಡುತ್ತಾನೆ. ಅಯ್ಯಾ! ನನ್ನಂಥವರು ಹೃದಯಸ್ಥನಾಗಿರುವ ಜ್ಞೇಯನನ್ನೇ ಅಂತರಾತ್ಮ ಎಂದು ತಿಳಿದುಕೊಂಡಿದ್ದೇವೆ.

12294020a ವಿಧೂಮ ಇವ ಸಪ್ತಾರ್ಚಿರಾದಿತ್ಯ ಇವ ರಶ್ಮಿಮಾನ್|

12294020c ವೈದ್ಯುತೋಽಗ್ನಿರಿವಾಕಾಶೇ ದೃಶ್ಯತೇಽಽತ್ಮಾ ತಥಾತ್ಮನಿ||

ಆ ಸಮಯದಲ್ಲಿ ಯೋಗಿಗೆ ಅವನ ಆತ್ಮವು ಹೃದಯದಲ್ಲಿ ಹೊಗೆಯಿಲ್ಲದ ಅಗ್ನಿಯಂತೆ, ಕಿರಣಯುಕ್ತ ಸೂರ್ಯನಂತೆ ಮತ್ತು ಆಕಾಶದಲ್ಲಿನ ಮಿಂಚಿನ ಪ್ರಕಾಶದಂತೆ ಕಾಣುತ್ತಾನೆ.

12294021a ಯಂ ಪಶ್ಯಂತಿ ಮಹಾತ್ಮಾನೋ ಧೃತಿಮಂತೋ ಮನೀಷಿಣಃ|

12294021c ಬ್ರಾಹ್ಮಣಾ ಬ್ರಹ್ಮಯೋನಿಷ್ಠಾ ಹ್ಯಯೋನಿಮಮೃತಾತ್ಮಕಮ್||

ಮಹಾತ್ಮರು, ಧೃತಿಮಂತ ಮನೀಷಿಣರು, ಬ್ರಹ್ಮನಿಷ್ಠಾವಂತ ಬ್ರಾಹ್ಮಣರೇ ಆ ಅಮೃತಾತ್ಮಕ ಅಯೋನಿಯನ್ನು ನೋಡುತ್ತಾರೆ.

12294022a ತದೇವಾಹುರಣುಭ್ಯೋಽಣು ತನ್ಮಹದ್ಭ್ಯೋ ಮಹತ್ತರಮ್|

12294022c ತದಂತಃ[3] ಸರ್ವಭೂತೇಷು ಧ್ರುವಂ ತಿಷ್ಠನ್ನ ದೃಶ್ಯತೇ||

ಆ ಬ್ರಹ್ಮವನ್ನು ಅಣುವಿಗಿಂತಲೂ ಅಣು ಮತ್ತು ಮಹತ್ತರವಾದುದಕ್ಕಿಂತಲೂ ಮಹತ್ತರವಾದುದು ಎಂದು ಹೇಳುತ್ತಾರೆ. ಅದು ನಿಶ್ಚಯವಾಗಿಯೂ ಸರ್ವಭೂತಗಳಲ್ಲಿದ್ದರೂ ಕಾಣುವುದಿಲ್ಲ.

12294023a ಬುದ್ಧಿದ್ರವ್ಯೇಣ ದೃಶ್ಯೇತ ಮನೋದೀಪೇನ ಲೋಕಕೃತ್|

12294023c ಮಹತಸ್ತಮಸಸ್ತಾತ ಪಾರೇ ತಿಷ್ಠನ್ನತಾಮಸಃ||

ಬುದ್ಧಿಸಂಪನ್ನನು ಮನೋದೀಪದಿಂದ ಆ ಲೋಕಕೃತನನ್ನು ನೋಡಬಹುದು. ಅಯ್ಯಾ! ಅವನು ಮಹಾ ತಮಸ್ಸಿನ ಆಚೆಯಿದ್ದಾನೆ ಮತ್ತು ತಮೋಗುಣ ರಹಿತನಾಗಿದ್ದಾನೆ.

12294024a ಸ ತಮೋನುದ ಇತ್ಯುಕ್ತಸ್ತತ್ತ್ವಜ್ಞೈರ್ವೇದಪಾರಗೈಃ|

12294024c ವಿಮಲೋ ವಿತಮಸ್ಕಶ್ಚ ನಿರ್ಲಿಂಗೋಽಲಿಂಗಸಂಜ್ಞಿತಃ||

ಆದುದರಿಂದ ವೇದಪಾರಗ ಸತ್ತ್ವಜ್ಞರು ಅವನನ್ನು ತಮೋನುದ ಅರ್ಥಾತ್ ಅಜ್ಞಾನನಾಶಕ ಎನ್ನುತ್ತಾರೆ. ಅವನು ವಿಮಲ, ವಿತಮಸ್ಕ, ನಿರ್ಲಿಂಗ ಮತ್ತು ಅಲಿಂಗ ಎಂದೂ ಕರೆಯಲ್ಪಟ್ಟಿದ್ದಾನೆ.

12294025a ಯೋಗಮೇತದ್ಧಿ ಯೋಗಾನಾಂ ಮನ್ಯೇ ಯೋಗಸ್ಯ ಲಕ್ಷಣಮ್|

12294025c ಏವಂ ಪಶ್ಯಂ ಪ್ರಪಶ್ಯಂತಿ ಆತ್ಮಾನಮಜರಂ ಪರಮ್||

ಇದೇ ಯೋಗಿಗಳ ಯೋಗವೆಂದು ತಿಳಿ. ಇದೇ ಯೋಗಿಯ ಲಕ್ಷಣ. ಹೀಗೆಯೇ ಯೋಗಿಗಳು ಅಜರವೂ ಮತ್ತು ಎಲ್ಲರ ದ್ರಷ್ಟನೂ ಆಗಿರುವ ಪರಾಮಾತ್ಮನನ್ನು ಕಾಣುತ್ತಾರೆ.

12294026a ಯೋಗದರ್ಶನಮೇತಾವದುಕ್ತಂ ತೇ ತತ್ತ್ವತೋ ಮಯಾ|

12294026c ಸಾಂಖ್ಯಜ್ಞಾನಂ ಪ್ರವಕ್ಷ್ಯಾಮಿ ಪರಿಸಂಖ್ಯಾನಿದರ್ಶನಮ್||

ಇದೂವರೆಗೆ ನಾನು ನಿನಗೆ ಯೋಗದರ್ಶನದ ಕುರಿತು ಹೇಳಿದೆ. ಈಗ ಪರಿಸಂಖ್ಯಾನದರ್ಶನ ಸಾಂಖ್ಯಜ್ಞಾನದ ಕುರಿತು ಹೇಳುತ್ತೇನೆ.

12294027a ಅವ್ಯಕ್ತಮಾಹುಃ ಪ್ರಕೃತಿಂ ಪರಾಂ ಪ್ರಕೃತಿವಾದಿನಃ|

12294027c ತಸ್ಮಾನ್ಮಹತ್ಸಮುತ್ಪನ್ನಂ ದ್ವಿತೀಯಂ ರಾಜಸತ್ತಮ||

ರಾಜಸತ್ತಮ! ಪ್ರಕೃತಿವಾದಿಗಳು ಮೂಲ ಪ್ರಕೃತಿಯನ್ನು ಅವ್ಯಕ್ತ ಎಂದು ಹೇಳುತ್ತಾರೆ. ಅದರಿಂದ ಉತ್ಪನ್ನವಾದ ಎರಡನೇ ತತ್ತ್ವವನ್ನು ಮಹತ್ ಎಂದು ಹೇಳುತ್ತಾರೆ.

12294028a ಅಹಂಕಾರಸ್ತು ಮಹತಸ್ತೃತೀಯಮಿತಿ ನಃ ಶ್ರುತಮ್|

12294028c ಪಂಚ ಭೂತಾನ್ಯಹಂಕಾರಾದಾಹುಃ ಸಾಂಖ್ಯಾನುದರ್ಶಿನಃ||

ಮಹತ್ತಿನಿಂದ ಉಂಟಾದ ಅಹಂಕಾರವು ಮೂರನೆಯದು ಎಂದು ಕೇಳಿದ್ದೇವೆ. ಪಂಚಭೂತಗಳು ಅಹಂಕಾರದಿಂದಾದವು ಎಂದು ಸಾಂಖ್ಯಾನುದರ್ಶಿಗಳು ಹೇಳುತ್ತಾರೆ.

12294029a ಏತಾಃ ಪ್ರಕೃತಯಸ್ತ್ವಷ್ಟೌ ವಿಕಾರಾಶ್ಚಾಪಿ ಷೋಡಶ|

12294029c ಪಂಚ ಚೈವ ವಿಶೇಷಾ ವೈ ತಥಾ ಪಂಚೇಂದ್ರಿಯಾಣಿ ಚ||

ಈ ಎಂಟು ಪ್ರಕೃತಿಗಳು. ಇವುಗಳಿಂದ ಹದಿನಾರು ವಿಕಾರಗಳು ಉತ್ಪನ್ನವಾಗುತ್ತವೆ: ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಒಂದು ಮನಸ್ಸು ಮತ್ತು ಐದು ಸ್ಥೂಲಭೂತಗಳು. ಇವುಗಳಲ್ಲಿ ಐದು ತತ್ತ್ವಗಳು ಮತ್ತು ಐದು ಜ್ಞಾನೇಂದ್ರಿಯಗಳನ್ನು ವಿಶೇಷ ಎಂದು ಕರೆಯುತ್ತಾರೆ.

12294030a ಏತಾವದೇವ ತತ್ತ್ವಾನಾಂ ಸಾಂಖ್ಯಮಾಹುರ್ಮನೀಷಿಣಃ|

12294030c ಸಾಂಖ್ಯೇ ವಿಧಿವಿಧಾನಜ್ಞಾ ನಿತ್ಯಂ ಸಾಂಖ್ಯಪಥೇ ರತಾಃ||

ನಿತ್ಯವೂ ಸಾಂಖ್ಯಪಥದಲ್ಲಿಯೇ ಇರುವ ಸಾಂಖ್ಯ ವಿಧಿವಿಧಾನಜ್ಞ ಮನೀಷಿಣರು ಈ ತತ್ತ್ವಗಳನ್ನೇ ಸಾಂಖ್ಯಗಳು ಎನ್ನುತ್ತಾರೆ.

12294031a ಯಸ್ಮಾದ್ಯದಭಿಜಾಯೇತ ತತ್ತತ್ರೈವ ಪ್ರಲೀಯತೇ|

12294031c ಲೀಯಂತೇ ಪ್ರತಿಲೋಮಾನಿ ಸೃಜ್ಯಂತೇ ಚಾಂತರಾತ್ಮನಾ||

ಯಾವ ತತ್ತ್ವವು ಯಾವುದರಿಂದ ಉತ್ಪನ್ನವಾಗುತ್ತದೆಯೋ ಅದು ಅದರಲ್ಲಿಯೇ ಲೀನವೂ ಆಗುತ್ತದೆ. ಅನುಲೋಮಕ್ರಮದಂತೆ[4] ಆ ತತ್ತ್ವಗಳ ಉತ್ಪತ್ತಿಯಾಗುತ್ತದೆ. ಆದರೆ ಅವರ ಸಂಹಾರವು ವಿಲೋಮಕ್ರಮದಂತೆ[5] ಆಗುತ್ತದೆ. ಈ ಎಲ್ಲ ತತ್ತ್ವಗಳೂ ಅಂತರಾತ್ಮನಿಂದಲೇ ಸೃಷ್ಟಿಸಲ್ಪಡುತ್ತವೆ.

12294032a ಅನುಲೋಮೇನ ಜಾಯಂತೇ ಲೀಯಂತೇ ಪ್ರತಿಲೋಮತಃ|

12294032c ಗುಣಾ ಗುಣೇಷು ಸತತಂ ಸಾಗರಸ್ಯೋರ್ಮಯೋ ಯಥಾ||

ಸಮುದ್ರದ ಅಲೆಗಳು ಪುನಃ ಅವುಗಳಲ್ಲಿಯೇ ಶಾಂತವಾಗುವಂತೆ ಸತತವೂ ಗುಣಗಳು ಗುಣಗಳಿಂದ ಅನುಲೋಮ ಕ್ರಮದಲ್ಲಿ ಉತ್ಪನ್ನವಾಗುತ್ತವೆ ಮತ್ತು ಗುಣಗಳು ಗುಣಗಳಲ್ಲಿ ಪ್ರತಿಲೋಮಕ್ರಮದಲ್ಲಿ ಲಯಗೊಳ್ಳುತ್ತವೆ.

12294033a ಸರ್ಗಪ್ರಲಯ ಏತಾವಾನ್ ಪ್ರಕೃತೇರ್ನೃಪಸತ್ತಮ|

12294033c ಏಕತ್ವಂ ಪ್ರಲಯೇ ಚಾಸ್ಯ ಬಹುತ್ವಂ ಚ ಯದಾಸೃಜತ್|

12294033e ಏವಮೇವ ಚ ರಾಜೇಂದ್ರ ವಿಜ್ಞೇಯಂ ಜ್ಞೇಯಚಿಂತಕೈಃ||

ರಾಜೇಂದ್ರ! ನೃಪಸತ್ತಮ! ಇಷ್ಟೇ ಪ್ರಕೃತಿಯ ಸೃಷ್ಟಿ ಮತ್ತು ಪ್ರಲಯದ ವಿಷಯವು. ಪ್ರಲಯದಲ್ಲಿ ಇವುಗಳ ಏಕತ್ವವಾಗುತ್ತದೆ ಮತ್ತು ಸೃಷ್ಟಿಯ ಸಮಯದಲ್ಲಿ ಇವುಗಳ ಬಹುತ್ವವುಂಟಾಗುತ್ತದೆ. ಜ್ಞೇಯಚಿಂತಕರು ಇದನ್ನೇ ತಿಳಿದುಕೊಂಡಿದ್ದಾರೆ.

12294034a ಅಧಿಷ್ಠಾತಾರಮವ್ಯಕ್ತಮಸ್ಯಾಪ್ಯೇತನ್ನಿದರ್ಶನಮ್|

12294034c ಏಕತ್ವಂ ಚ ಬಹುತ್ವಂ ಚ ಪ್ರಕೃತೇರನು ತತ್ತ್ವವಾನ್|

12294034e ಏಕತ್ವಂ ಪ್ರಲಯೇ ಚಾಸ್ಯ ಬಹುತ್ವಂ ಚ ಪ್ರವರ್ತನಾತ್||

ಅವ್ಯಕ್ತ ಪ್ರಕೃತಿಯೇ ಅಧಿಷ್ಠಾತಾ ಪುರುಷನನ್ನು ಸೃಷ್ಟಿಕಾಲದಲ್ಲಿ ಬಹುತ್ವದ ಕಡೆ ಎಳೆದೊಯ್ಯುತ್ತದೆ. ಇದೇ ಪುರುಷನ ಏಕತ್ವದ ನಿದರ್ಶನವು. ಪ್ರಕೃತಿಯೂ ಕೂಡ ಪ್ರಲಯಕಾಲದಲ್ಲಿ ಏಕತ್ವವನ್ನೂ ಸೃಷ್ಟಿಕಾಲದಲ್ಲಿ ಬಹುತ್ವವನ್ನೂ ಪಡೆದುಕೊಳ್ಳುತ್ತದೆ ಎನ್ನುವುದನ್ನೂ ತತ್ತ್ವವಾನರು ತಿಳಿದುಕೊಂಡಿರುತ್ತಾರೆ. ಇದೇ ರೀತಿ ಪುರುಷನೂ ಕೂಡ ಪ್ರಲಯಕಾಲದಲ್ಲಿ ಏಕತ್ವವನ್ನು ಹೊಂದಿರುತ್ತಾನೆ. ಆದರೆ ಸೃಷ್ಟಿಕಾಲದಲ್ಲಿ ಪ್ರಕೃತಿಯ ಪ್ರೇರಕನಾಗುವ ಕಾರಣದಿಂದ ಅವನಲ್ಲಿ ಬಹುತ್ವದ ಆರೋಪವುಂಟಾಗುತ್ತದೆ.

12294035a ಬಹುಧಾತ್ಮಾ ಪ್ರಕುರ್ವೀತ ಪ್ರಕೃತಿಂ ಪ್ರಸವಾತ್ಮಿಕಾಮ್|

12294035c ತಚ್ಚ ಕ್ಷೇತ್ರಂ ಮಹಾನಾತ್ಮಾ ಪಂಚವಿಂಶೋಽಧಿತಿಷ್ಠತಿ||

ಪರಮಾತ್ಮನೇ ಪ್ರಸವಾತ್ಮಿಕಾ ಪ್ರಕೃತಿಯನ್ನು ನಾನಾ ರೂಪಗಳಲ್ಲಿ ಪರಿವರ್ತನಗೊಳಿಸುತ್ತಾನೆ. ಪ್ರಕೃತಿ ಮತ್ತು ಅದರ ವಿಕಾರಗಳನ್ನು ಕ್ಷೇತ್ರ ಎಂದು ಹೇಳುತ್ತಾರೆ. ಇಪ್ಪತ್ನಾಲ್ಕು ತತ್ತ್ವಗಳಿಗಿಂತಲೂ ಭಿನ್ನವಾದ ಇಪ್ಪತ್ತೈದನೆಯದು ಮಹಾನ್ ಆತ್ಮವು. ಅದು ಕ್ಷೇತ್ರದಲ್ಲಿ ಅಧಿಷ್ಠಾನನ ರೂಪದಲ್ಲಿ ವಾಸಿಸಿಕೊಂಡಿರುತ್ತದೆ.

12294036a ಅಧಿಷ್ಠಾತೇತಿ ರಾಜೇಂದ್ರ ಪ್ರೋಚ್ಯತೇ ಯತಿಸತ್ತಮೈಃ|

12294036c ಅಧಿಷ್ಠಾನಾದಧಿಷ್ಠಾತಾ ಕ್ಷೇತ್ರಾಣಾಮಿತಿ ನಃ ಶ್ರುತಮ್||

ರಾಜೇಂದ್ರ! ಆದುದರಿಂದಲೇ ಯತಿಸತ್ತಮರು ಅದನ್ನು ಅಧಿಷ್ಠಾತ ಎಂದು ಕರೆಯುತ್ತಾರೆ. ಕ್ಷೇತ್ರಗಳ ಅಧಿಷ್ಠಾನನಾಗಿರುವ ಕಾರಣದಿಂದ ಅವನು ಅಧಿಷ್ಠಾತನೆನಿಸಿಕೊಳ್ಳುತ್ತಾನೆ ಎಂದು ನಾವು ಕೇಳಿದ್ದೇವೆ.

12294037a ಕ್ಷೇತ್ರಂ ಜಾನಾತಿ ಚಾವ್ಯಕ್ತಂ ಕ್ಷೇತ್ರಜ್ಞ ಇತಿ ಚೋಚ್ಯತೇ|

12294037c ಅವ್ಯಕ್ತಿಕೇ ಪುರೇ ಶೇತೇ ಪುರುಷಶ್ಚೇತಿ ಕಥ್ಯತೇ||

ಅದು ಕ್ಷೇತ್ರವಾದ ಅವ್ಯಕ್ತ ಪ್ರಕೃತಿಯನ್ನು ತಿಳಿದುಕೊಂಡಿರುವುದರಿಂದ ಅದನ್ನು ಕ್ಷೇತ್ರಜ್ಞ ಎಂದು ಹೇಳುತ್ತಾರೆ. ಅವ್ಯಕ್ತ ಪ್ರಾಕೃತಿಕ ಶರೀರವೆಂಬ ಪುರದಲ್ಲಿ ಶಯನಮಾಡುವುದರಿಂದ ಅವನನ್ನು ಪುರುಷ ಎಂದೂ ಕರೆಯುತ್ತಾರೆ.

12294038a ಅನ್ಯದೇವ ಚ ಕ್ಷೇತ್ರಂ ಸ್ಯಾದನ್ಯಃ ಕ್ಷೇತ್ರಜ್ಞ ಉಚ್ಯತೇ|

12294038c ಕ್ಷೇತ್ರಮವ್ಯಕ್ತಮಿತ್ಯುಕ್ತಂ ಜ್ಞಾತಾ ವೈ ಪಂಚವಿಂಶಕಃ||

ವಾಸ್ತವವಾಗಿ ಕ್ಷೇತ್ರವು ಅನ್ಯ ಮತ್ತು ಕ್ಷೇತ್ರಜ್ಞನು ಅನ್ಯ ಎಂದು ಹೇಳುತ್ತಾರೆ. ಕ್ಷೇತ್ರವನ್ನು ಅವ್ಯಕ್ತ ಎಂದು ಹೇಳುತ್ತಾರೆ ಮತ್ತು ಕ್ಷೇತ್ರಜ್ಞನು ಇಪ್ಪತ್ತೈದನೆಯದು ಎಂದು ಹೇಳುತ್ತಾರೆ.

12294039a ಅನ್ಯದೇವ ಚ ಜ್ಞಾನಂ ಸ್ಯಾದನ್ಯಜ್ಜ್ಞೇಯಂ ತದುಚ್ಯತೇ|

12294039c ಜ್ಞಾನಮವ್ಯಕ್ತಮಿತ್ಯುಕ್ತಂ ಜ್ಞೇಯೋ ವೈ ಪಂಚವಿಂಶಕಃ||

ಜ್ಞಾನವು ಅನ್ಯ ಮತ್ತು ಜ್ಞೇಯನು ಅದಕ್ಕಿಂತಲೂ ಭಿನ್ನವಾದುದು ಎಂದು ಹೇಳುತ್ತಾರೆ. ಜ್ಞಾನವನ್ನು ಅವ್ಯಕ್ತ ಪ್ರಕೃತಿಯೆಂದೂ ಜ್ಞೇಯನು ಇಪ್ಪತ್ತೈದನೆಯದೆಂದೂ ಹೇಳಿದ್ದಾರೆ.

12294040a ಅವ್ಯಕ್ತಂ ಕ್ಷೇತ್ರಮಿತ್ಯುಕ್ತಂ ತಥಾ ಸತ್ತ್ವಂ ತಥೇಶ್ವರಮ್|

12294040c ಅನೀಶ್ವರಮತತ್ತ್ವಂ ಚ ತತ್ತ್ವಂ ತತ್ಪಂಚವಿಂಶಕಮ್||

ಅವ್ಯಕ್ತವನ್ನು ಕ್ಷೇತ್ರ ಎಂದು ಹೇಳಿದ್ದಾರೆ. ಅದಕ್ಕೇ ಸತ್ತ್ವ (ಬುದ್ಧಿ) ಮತ್ತು ಶಾಸಕ ಎನ್ನುವ ಸಂಜ್ಞೆಗಳನ್ನೂ ಕೊಟ್ಟಿದ್ದಾರೆ. ಆದರೆ ಇಪ್ಪತ್ತೈದನೆಯದು ತತ್ತ್ವವಲ್ಲದ್ದು ಮತ್ತು ಈಶ್ವರರಹಿತವಾಗಿ ಭಿನ್ನವಾಗಿರುವುದು.

12294041a ಸಾಂಖ್ಯದರ್ಶನಮೇತಾವತ್ಪರಿಸಂಖ್ಯಾನದರ್ಶನಮ್|

12294041c ಸಾಂಖ್ಯಂ ಪ್ರಕುರುತೇ ಚೈವ ಪ್ರಕೃತಿಂ ಚ ಪ್ರಚಕ್ಷತೇ||

ಇದೇ ಸಾಂಖ್ಯದರ್ಶನದ ಪರಿಸಂಖ್ಯಾನದರ್ಶನ. ಇದು ತತ್ತ್ವಗಳ ಗಣನೆಯನ್ನು ಮಾಡುತ್ತದೆ ಮತ್ತು ಪ್ರಕೃತಿಯನ್ನೇ ಜಗತ್ತಿನ ಕಾರಣವೆಂದು ಹೇಳುತ್ತದೆ. ಆದುದರಿಂದ ಈ ದರ್ಶನದ ಹೆಸರು ಸಾಂಖ್ಯದರ್ಶನವು.

12294042a ತತ್ತ್ವಾನಿ ಚ ಚತುರ್ವಿಂಶತ್ಪರಿಸಂಖ್ಯಾಯ ತತ್ತ್ವತಃ|

12294042c ಸಾಂಖ್ಯಾಃ ಸಹ ಪ್ರಕೃತ್ಯಾ ತು ನಿಸ್ತತ್ತ್ವಃ ಪಂಚವಿಂಶಕಃ||

ಸಾಂಖ್ಯಜ್ಞರು ಪ್ರಕೃತಿಸಹಿತ ಇಪ್ಪತ್ನಾಲ್ಕು ತತ್ತ್ವಗಳನ್ನು ಎಣಿಸಿ ಪರಮ ಪುರುಷನನ್ನು ಜಡ ತತ್ತ್ವಗಳಿಗಿಂತ ಭಿನ್ನವಾದ ಇಪ್ಪತ್ತೈದನೆಯದು ಎಂದು ನಿಶ್ಚಯಿಸಿದ್ದಾರೆ.

12294043a ಪಂಚವಿಂಶೋಽಪ್ರಬುದ್ಧಾತ್ಮಾ[6] ಬುಧ್ಯಮಾನ ಇತಿ ಸ್ಮೃತಃ|

12294043c ಯದಾ ತು ಬುಧ್ಯತೇಽಽತ್ಮಾನಂ ತದಾ ಭವತಿ ಕೇವಲಃ||

ಈ ಇಪ್ಪತ್ತೈದನೆಯದನ್ನು ಅಪ್ರಬುದ್ಧಾತ್ಮಾ ಮತ್ತು ಬುಧ್ಯಮಾನ ಎಂದು ಹೇಳಿದ್ದಾರೆ. ಯಾವಾಗ ಅದು ತನ್ನನ್ನು ತಾನು ಅರಿತುಕೊಳ್ಳುತ್ತದೆಯೋ ಆಗ ಅದು ಕೇವಲವಾಗುತ್ತದೆ.

12294044a ಸಮ್ಯಗ್ದರ್ಶನಮೇತಾವದ್ಭಾಷಿತಂ ತವ ತತ್ತ್ವತಃ|

12294044c ಏವಮೇತದ್ವಿಜಾನಂತಃ ಸಾಮ್ಯತಾಂ ಪ್ರತಿಯಾಂತ್ಯುತ||

ಹೀಗೆ ನಾನು ಸಮ್ಯಗ್ದರ್ಶನವನ್ನು ಯಥಾವತ್ತಾಗಿ ಹೇಳಿದ್ದೇನೆ. ಯಾರು ಇದನ್ನು ಈ ಪ್ರಕಾರವಾಗಿ ತಿಳಿದುಕೊಳ್ಳುತ್ತಾರೋ ಅವರು ಸಾಮ್ಯತೆಯನ್ನು ಪಡೆದುಕೊಳ್ಳುತ್ತಾರೆ.

12294045a ಸಮ್ಯಗ್ ನಿದರ್ಶನಂ ನಾಮ ಪ್ರತ್ಯಕ್ಷಂ ಪ್ರಕೃತೇಸ್ತಥಾ|

12294045c ಗುಣತತ್ತ್ವಾನ್ಯಥೈತಾನಿ ನಿರ್ಗುಣೋಽನ್ಯಸ್ತಥಾ ಭವೇತ್||

ಪ್ರಕೃತಿ-ಪುರುಷರ ಪ್ರತ್ಯಕ್ಷ ದರ್ಶನವೇ ಸಮ್ಯಗ್ದರ್ಶನವು. ಈ ಗುಣಮಯ ತತ್ತ್ವಗಳಿಗಿಂತಲೂ ಭಿನ್ನ ಪರಮ ಪುರುಷ ಪರಮಾತ್ಮನು ನಿರ್ಗುಣನು.

12294046a ನ ತ್ವೇವಂ ವರ್ತಮಾನಾನಾಮಾವೃತ್ತಿರ್ವಿದ್ಯತೇ ಪುನಃ|

12294046c ವಿದ್ಯತೇಽಕ್ಷರಭಾವತ್ವಾದಪರಸ್ಪರಮವ್ಯಯಮ್||

ಈ ದರ್ಶನದ ಪ್ರಕಾರ ಜ್ಞಾನವನ್ನು ಪಡೆದುಕೊಂಡವರು ಈ ಸಂಸಾರದಲ್ಲಿ ಪುನಾರಾವೃತ್ತಿಯನ್ನು ಹೊಂದುವುದಿಲ್ಲ. ಏಕೆಂದರೆ ಅವರು ಅವಿನಾಶೀ ಬ್ರಹ್ಮಭಾವವನ್ನು ಹೊಂದುತ್ತಾರೆ ಮತ್ತು ಅವನಲ್ಲಿಯೇ ಅವರು ಸೇರಿಕೊಳ್ಳುತ್ತಾರೆ.

12294047a ಪಶ್ಯೇರನ್ನೇಕಮತಯೋ ನ ಸಮ್ಯಕ್ತೇಷು ದರ್ಶನಮ್|

12294047c ತೇಽವ್ಯಕ್ತಂ ಪ್ರತಿಪದ್ಯಂತೇ ಪುನಃ ಪುನರರಿಂದಮ||

ಅರಿಂದಮ! ಯಾರ ಬುದ್ಧಿಯು ಬಹುತ್ವವನ್ನು ಕಾಣುತ್ತದೆಯೋ ಅವರಿಗೆ ಸಮ್ಯಕ್ ಜ್ಞಾನವು ಪ್ರಾಪ್ತವಾಗುವುದಿಲ್ಲ. ಇಂಥವರು ಪುನಃ ಪುನಃ ಶರೀರಧಾರಣೆ ಮಾಡಬೇಕಾಗುತ್ತದೆ.

12294048a ಸರ್ವಮೇತದ್ವಿಜಾನಂತೋ ನ ಸರ್ವಸ್ಯ ಪ್ರಬೋಧನಾತ್|

12294048c ವ್ಯಕ್ತೀಭೂತಾ ಭವಿಷ್ಯಂತಿ ವ್ಯಕ್ತಸ್ಯ ವಶವರ್ತಿನಃ||

ಯಾರು ಈ ಎಲ್ಲ ಪ್ರಪಂಚವನ್ನೂ ತಿಳಿದಿರುತ್ತಾರೋ ಆದರೆ ಇದಕ್ಕಿಂತಲೂ ಭಿನ್ನವಾದ ಪರಮಾತ್ಮ ತತ್ತ್ವವನ್ನು ತಿಳಿದಿರುವುದಿಲ್ಲವೋ ಅವರು ನಿಶ್ಚಯವಾಗಿಯೂ ಶರೀರಧಾರಿಗಳಾಗುತ್ತಾರೆ ಮತ್ತು ಕಾಮ-ಕ್ರೋಧಾದಿ ದೋಷಗಳ ವಶವರ್ತಿಗಳಾಗಿಯೇ ಉಳಿಯುತ್ತಾರೆ.

12294049a ಸರ್ವಮವ್ಯಕ್ತಮಿತ್ಯುಕ್ತಮಸರ್ವಃ ಪಂಚವಿಂಶಕಃ|

12294049c ಯ ಏನಮಭಿಜಾನಂತಿ ನ ಭಯಂ ತೇಷು ವಿದ್ಯತೇ||

ಅವ್ಯಕ್ತಕ್ಕೆ “ಸರ್ವ” ಎಂಬ ಹೆಸರಿದೆ ಮತ್ತು ಸರ್ವಕ್ಕಿಂತಲೂ ಭಿನ್ನವಾದ ಇಪ್ಪತ್ತೈದನೆಯ ಪರಮಾತ್ಮನನ್ನು “ಅಸರ್ವ” ಎಂದು ಹೇಳಿದ್ದಾರೆ. ಅವನನ್ನು ಯಾರು ಈ ರೀತಿ ತಿಳಿದಿರುತ್ತಾರೋ ಅವರಿಗೆ ಪುನಃ ಪುನಃ ಬಂದು-ಹೋಗುವ ಭಯವಿರುವುದಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ಚತುರ್ನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ನಾಲ್ಕನೇ ಅಧ್ಯಾಯವು.

[1] ಗಡಿಗೆಯಲ್ಲಿ ನೀರು ತುಂಬಿಸುವಂತೆ ಪಾದಾಂಗುಷ್ಠದಿಂದ ನೆತ್ತಿಯವರೆಗೆ ಸಂಪೂರ್ಣ ಶರೀರದಲ್ಲಿ ಮೂಗಿನ ಹೊಳ್ಳೆಗಳ ಮೂಲಕ ವಾಯುವನ್ನು ಸೆಳೆದು ತುಂಬಿಸಬೇಕು. ನಂತರ ವಾಯುವನ್ನು ಬ್ರಹ್ಮರಂಧ್ರ (ನೆತ್ತಿ) ದಿಂದ ಲಲಾಟದಲ್ಲಿ ಸ್ಥಾಪಿಸಬೇಕು. ಈದು ಪ್ರಾಣವಾಯುವಿನ ಪ್ರತ್ಯಾಹರದ ಪ್ರಥಮ ಸ್ಥಾನವು. ಇದೇ ರೀತಿ ಒಂದಾದ ಮೇಲೆ ಒಂದರಮ್ತೆ ಉಸಿರನ್ನು ತೆಗೆದು ನಿಲ್ಲಿಸುತ್ತಾ ಕ್ರಮಶಃ ಭ್ರೂ ಮಧ್ಯ, ಕಣ್ಣುಗಳು, ಮೂಗಿನ ಮೂಲ, ನಾಲಿಗೆಯ ಮೂಲ, ಕಂಟಕೂಪ, ಹೃದಯ ಮಧ್ಯ, ನಾಭಿಮಧ್ಯ, ಮೇಡ್ರ, ಉದರ, ಗುದ, ಊರುಮಧ್ಯ, ಜಾನು, ಚಿತಿಮೂಲ, ಜಂಘಾಮಧ್ಯ, ಗುಲ್ಫ ಮತ್ತು ಪಾದಾಂಗುಷ್ಠ – ಈ ಸ್ಥಾನಗಳಲ್ಲಿ ವಾಯುವನ್ನು ಸ್ಥಾಪಿಸಬೇಕು. ಈ ಹದಿನೆಂಟು ಸ್ಥಾನಗಳಲ್ಲಿ ಮಾಡುವ ಪ್ರತ್ಯಾಹಾರಗಳನ್ನು ಹದಿನೆಂಟು ಪ್ರಕಾರದ ಪ್ರೇರಣೆಗಳು ಎಂದು ತಿಳಿಯಬೇಕು. ಇದಲ್ಲದೇ ಧ್ಯಾನ, ಧಾರಣ, ಸಮಾಅದಿ ಮತ್ತು “ಸತ್ತ್ವಪುರುಷಾನ್ಯತಾ ಖ್ಯಾತಿ” ಅಂದರೆ ಬುದ್ಧಿ ಮತ್ತು ಪುರುಷ ಇವೆರಡರ ಭಿನ್ನತೆಯ ಬೋಧ – ಈ ನಾಲ್ಕು ಪ್ರೇರಣೆಗಳಿವೆ. ಇವೆಲ್ಲವೂ ಸೇರಿ ಒಟ್ಟು ಇಪ್ಪತ್ತೆರಡು ಪ್ರಕಾರದ ಪ್ರೇರಣೆಗಳು (ಗೀತಾ ಪ್ರೆಸ್).

[2] ವ್ರತಂ (ಗೀತಾ ಪ್ರೆಸ್).

[3] ತತ್ತತ್ತ್ವಂ (ಗೀತಾ ಪ್ರೆಸ್).

[4] ಪ್ರಕೃತಿಯಿಂದ ಮಹತ್ತತ್ತ್ವ, ಮಹತ್ತತ್ತ್ವದಿಂದ ಅಹಂಕಾರ, ಅಹಂಕಾರದಿಂದ ಸೂಕ್ಷ್ಮ ಭೂತ ಮೊದಲಾದವುಗಳು ಅನುಕ್ರಮವಾಗಿ ಸೃಷ್ಟಿಯಾಗುತ್ತವೆ (ಗೀತಾ ಪ್ರೆಸ್).

[5] ಅರ್ಥಾತ್ ಪೃಥ್ವಿಯು ಜಲದಲ್ಲಿ, ಜಲವು ತೇಜಸ್ಸಿನಲ್ಲಿ, ತೇಜಸ್ಸು ವಾಯುವಿನಲ್ಲಿ ಲೀನವಾಗುತ್ತವೆ. ಹೀಗೆ ಎಲ್ಲ ತತ್ತ್ವಗಳೂ ತಮ್ಮ ತಮ್ಮ ಕಾರಣಗಳಲ್ಲಿ ಲೀನವಾಗುತ್ತವೆ (ಗೀತಾ ಪ್ರೆಸ್).

[6] ಪಂಚವಿಂಶೋಽಪ್ರಕೃತ್ಯಾತ್ಮಾ (ಗೀತಾ ಪ್ರೆಸ್).

Comments are closed.