Shanti Parva: Chapter 265

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೫

ಪಾಪ-ಧರ್ಮ-ವೈರಾಗ್ಯ ಮತ್ತು ಮೋಕ್ಷಗಳ ಕುರಿತಾದ ಯುಧಿಷ್ಠಿರನ ನಾಲ್ಕು ಪ್ರಶ್ನೆಗಳಿಗೆ ಭೀಷ್ಮನು ಉತ್ತರಿಸಿದುದು (1-23).

12265001 ಯುಧಿಷ್ಠಿರ ಉವಾಚ|

12265001a ಕಥಂ ಭವತಿ ಪಾಪಾತ್ಮಾ ಕಥಂ ಧರ್ಮಂ ಕರೋತಿ ವಾ|

12265001c ಕೇನ ನಿರ್ವೇದಮಾದತ್ತೇ ಮೋಕ್ಷಂ ವಾ ಕೇನ ಗಚ್ಚತಿ||

ಯುಧಿಷ್ಠಿರನು ಹೇಳಿದನು: “ಮನುಷ್ಯನು ಹೇಗೆ ಪಾಪಾತ್ಮನಾಗುತ್ತಾನೆ? ಅಥವಾ ಹೇಗೆ ಅವನು ಧರ್ಮಾಚರಣೆಯನ್ನು ಮಾಡುತ್ತಾನೆ? ಯಾವುದರಿಂದ ವೈರಾಗ್ಯವುಂಟಾಗುತ್ತದೆ? ಅಥವಾ ಯಾವುದರಿಂದ ಮೋಕ್ಷವನ್ನು ಹೊಂದಬಹುದು?”

12265002 ಭೀಷ್ಮ ಉವಾಚ|

12265002a ವಿದಿತಾಃ ಸರ್ವಧರ್ಮಾಸ್ತೇ ಸ್ಥಿತ್ಯರ್ಥಮನುಪೃಚ್ಚಸಿ|

12265002c ಶೃಣು ಮೋಕ್ಷಂ ಸನಿರ್ವೇದಂ ಪಾಪಂ ಧರ್ಮಂ ಚ ಮೂಲತಃ||

ಭೀಷ್ಮನು ಹೇಳಿದನು: “ನಿನಗೆ ಸರ್ವಧರ್ಮಗಳೂ ತಿಳಿದಿವೆ. ಆದರೂ ನಿರ್ದಿಷ್ಟಪಡಿಸಿಕೊಳ್ಳುವುದಕ್ಕಾಗಿ ಪ್ರಶ್ನಿಸುತ್ತಿರುವೆ. ಮೋಕ್ಷ, ಜೊತೆಗೆ ವೈರಾಗ್ಯ, ಪಾಪ ಮತ್ತು ಧರ್ಮಗಳ ಕುರಿತು ಮೂಲತಃ ಕೇಳು.

12265003a ವಿಜ್ಞಾನಾರ್ಥಂ ಹಿ ಪಂಚಾನಾಮಿಚ್ಚಾ ಪೂರ್ವಂ ಪ್ರವರ್ತತೇ|

12265003c ಪ್ರಾಪ್ಯ ತಾನ್ಜಾಯತೇ ಕಾಮೋ ದ್ವೇಷೋ ವಾ ಭರತರ್ಷಭ||

ಭರತರ್ಷಭ! ಮೊದಲು ಪಂಚ ಇಂದ್ರಿಯಾರ್ಥಗಳನ್ನು ಅನುಭವಿಸಲು ಇಚ್ಛೆಯಾಗುತ್ತದೆ. ಇಂದ್ರಿಯಾರ್ಥಗಳನ್ನು ಅನುಭವಿಸುವುದರಿಂದ ಕಾಮ ಅಥವಾ ದ್ವೇಷವು ಉತ್ಪನ್ನವಾಗುತ್ತದೆ.

12265004a ತತಸ್ತದರ್ಥಂ ಯತತೇ ಕರ್ಮ ಚಾರಭತೇ ಪುನಃ|

12265004c ಇಷ್ಟಾನಾಂ ರೂಪಗಂಧಾನಾಮಭ್ಯಾಸಂ ಚ ಚಿಕೀರ್ಷತಿ||

ಯಾವ ವಿಷಯದ ಮೇಲೆ ಅನುರಾಗವುಂಟಾಗುವುದೋ ಅದರ ಕುರಿತು ಮನುಷ್ಯನು ಕರ್ಮಗಳನ್ನು ಪ್ರಾರಂಭಿಸುತ್ತಾನೆ. ತನಗಿಷ್ಟವಾದ ರೂಪ-ಗಂಧಗಳನ್ನು ಪುನಃ ಪುನಃ ಸೇವಿಸುತ್ತಾ ಅದರ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾನೆ.

12265005a ತತೋ ರಾಗಃ ಪ್ರಭವತಿ ದ್ವೇಷಶ್ಚ ತದನಂತರಮ್|

12265005c ತತೋ ಲೋಭಃ ಪ್ರಭವತಿ ಮೋಹಶ್ಚ ತದನಂತರಮ್||

ಅದರಿಂದ ರಾಗವುಂಟಾಗುತ್ತದೆ. ನಂತರ ದ್ವೇಷವೂ ಉಂಟಾಗುತ್ತದೆ. ಅನಂತರ ಲೋಭವುಂಟಾಗುತ್ತದೆ ಮತ್ತು ಅದರ ನಂತರ ಮೋಹ.

12265006a ಲೋಭಮೋಹಾಭಿಭೂತಸ್ಯ ರಾಗದ್ವೇಷಾನ್ವಿತಸ್ಯ ಚ|

12265006c ನ ಧರ್ಮೇ ಜಾಯತೇ ಬುದ್ಧಿರ್ವ್ಯಾಜಾದ್ಧರ್ಮಂ ಕರೋತಿ ಚ||

ಲೋಭ-ಮೋಹಗಳಿಂದ ಮತ್ತು ರಾಗ-ದ್ವೇಷಗಳಿಂದ ಕೂಡಿರುವವನಿಗೆ ಧರ್ಮದ ವಿಷಯದಲ್ಲಿ ಬುದ್ಧಿಯುಂಟಾಗುವುದಿಲ್ಲ. ನೆಪಕ್ಕೆ ಮಾತ್ರ ಅವನು ಧರ್ಮವನ್ನಾಚರಿಸುತ್ತಾನೆ.

12265007a ವ್ಯಾಜೇನ ಚರತೋ ಧರ್ಮಮರ್ಥವ್ಯಾಜೋಽಪಿ ರೋಚತೇ|

12265007c ವ್ಯಾಜೇನ ಸಿಧ್ಯಮಾನೇಷು ಧನೇಷು ಕುರುನಂದನ||

ಕುರುನಂದನ! ನೆಪಮಾತ್ರಕ್ಕೆ ಧರ್ಮಾಚರಣೆಯನ್ನು ಮಾಡುತ್ತಾನೆ. ನೆಪವನ್ನು ಮಾಡಿಕೊಂಡು ಹಣಸಂಪಾದನೆಗೆ ತೊಡಗುತ್ತಾನೆ. ಒಂದು ವೇಳೆ ಆ ನೆಪದಿಂದ ಅರ್ಥಸಂಪಾದನೆಯು ಸಿದ್ಧಿಸಿದರೆ ಧನದ ಹಿಂದೆಯೇ ಅವನು ಹೋಗುತ್ತಿರುತ್ತಾನೆ.

12265008a ತತ್ರೈವ ಕುರುತೇ ಬುದ್ಧಿಂ ತತಃ ಪಾಪಂ ಚಿಕೀರ್ಷತಿ|

12265008c ಸುಹೃದ್ಭಿರ್ವಾರ್ಯಮಾಣೋಽಪಿ ಪಂಡಿತೈಶ್ಚಾಪಿ ಭಾರತ||

ಭಾರತ! ಅದರಲ್ಲೇ ತನ್ನ ಬುದ್ಧಿಯನ್ನು ಉಪಯೋಗಿಸಿ ನಂತರ ಅವನು ಸುಹೃದಯರು ಮತ್ತು ಪಂಡಿತರು ತಡೆದರೂ, ಪಾಪಕರ್ಮಗಳನ್ನೆಸಗುತ್ತಾನೆ.

12265009a ಉತ್ತರಂ ನ್ಯಾಯಸಂಬದ್ಧಂ ಬ್ರವೀತಿ ವಿಧಿಯೋಜಿತಮ್|

12265009c ಅಧರ್ಮಸ್ತ್ರಿವಿಧಸ್ತಸ್ಯ ವರ್ಧತೇ ರಾಗಮೋಹಜಃ||

ಪ್ರಶ್ನಿಸಿದರೆ ಶಾಸ್ತ್ರವಾಕ್ಯಗಳನ್ನು ಆಧರಿಸಿ ನ್ಯಾಯಬದ್ಧವಾಗಿ ತೋರುವ ಉತ್ತರವನ್ನೇ ನೀಡುತ್ತಾನೆ. ಅವನಲ್ಲಿ ರಾಗ-ಮೋಹಗಳಿಂದ ಹುಟ್ಟಿದ ಮೂರು ವಿಧದ ಅಧರ್ಮಗಳು ವರ್ಧಿಸುತ್ತವೆ.

12265010a ಪಾಪಂ ಚಿಂತಯತೇ ಚೈವ ಪ್ರಬ್ರವೀತಿ ಕರೋತಿ ಚ|

12265010c ತಸ್ಯಾಧರ್ಮಪ್ರವೃತ್ತಸ್ಯ ದೋಷಾನ್ಪಶ್ಯಂತಿ ಸಾಧವಃ||

ಪಾಪಕರ್ಮಗಳ ಕುರಿತೇ ಚಿಂತಿಸುತ್ತಿರುತ್ತಾನೆ. ಪಾಪಕರ್ಮಗಳ ಕುರಿತೇ ಮಾತನಾಡುತ್ತಿರುತ್ತಾನೆ. ಮತ್ತು ಪಾಪಕರ್ಮಗಳನ್ನೇ ಮಾಡುತ್ತಿರುತ್ತಾನೆ. ಅಂತಹ ಅಧರ್ಮಪ್ರವೃತ್ತ ಮನುಷ್ಯನಲ್ಲಿ ಸಾಧುಗಳು ದೋಷಗಳನ್ನು ಕಾಣುತ್ತಾರೆ.

12265011a ಏಕಶೀಲಾಶ್ಚ ಮಿತ್ರತ್ವಂ ಭಜಂತೇ ಪಾಪಕರ್ಮಿಣಃ|

12265011c ಸ ನೇಹ ಸುಖಮಾಪ್ನೋತಿ ಕುತ ಏವ ಪರತ್ರ ವೈ||

ಅದೇ ನಡತೆಯುಳ್ಳವರು ಪಾಪಕರ್ಮಿಗಳ ಮಿತ್ರತ್ವವನ್ನು ಮಾಡಿಕೊಳ್ಳುತ್ತಾರೆ. ಅಂಥವನು ಇಲ್ಲಿಯೇ ಸುಖವನ್ನು ಹೊಂದುವುದಿಲ್ಲ. ಇನ್ನು ಪರಲೋಕದಲ್ಲಿ ಯಾವ ಸುಖವನ್ನು ಪಡೆಯುತ್ತಾನೆ?

12265012a ಏವಂ ಭವತಿ ಪಾಪಾತ್ಮಾ ಧರ್ಮಾತ್ಮಾನಂ ತು ಮೇ ಶೃಣು|

12265012c ಯಥಾ ಕುಶಲಧರ್ಮಾ ಸ ಕುಶಲಂ ಪ್ರತಿಪದ್ಯತೇ||

ಹೀಗೆ ಮನುಷ್ಯನು ಪಾಪಾತ್ಮನಾಗುತ್ತಾನೆ. ಇನ್ನು ಧರ್ಮಾತ್ಮನ ಕುರಿತು ನನ್ನಿಂದ ಕೇಳು. ಕುಶಲಧರ್ಮವನ್ನಾಚರಿಸುವವನು ಕುಶಲವನ್ನೇ ಪಡೆದುಕೊಳ್ಳುತ್ತಾನೆ.

12265013a ಯ ಏತಾನ್ಪ್ರಜ್ಞಯಾ ದೋಷಾನ್ಪೂರ್ವಮೇವಾನುಪಶ್ಯತಿ|

12265013c ಕುಶಲಃ ಸುಖದುಃಖಾನಾಂ ಸಾಧೂಂಶ್ಚಾಪ್ಯುಪಸೇವತೇ||

ಪ್ರಜ್ಞೆಯಿಂದ ರಾಗ-ದ್ವೇಷಗಳ ದೋಷಗಳನ್ನು ಮೊದಲೇ ಕಂಡುಕೊಂಡಿದ್ದವನು ಸುಖ-ದುಃಖಗಳಲ್ಲಿ ಕುಶಲನಾಗಿರುತ್ತಾನೆ. ಸಾಧುಗಳನ್ನು ಸೇವಿಸುತ್ತಾನೆ.

12265014a ತಸ್ಯ ಸಾಧುಸಮಾಚಾರಾದಭ್ಯಾಸಾಚ್ಚೈವ ವರ್ಧತೇ|

12265014c ಪ್ರಜ್ಞಾ ಧರ್ಮೇ ಚ ರಮತೇ ಧರ್ಮಂ ಚೈವೋಪಜೀವತಿ||

ಸಾಧುಗಳ ಸಂಗ-ಸಮಾಚಾರಗಳಿಂದ ಅವನ ಧರ್ಮಾಭ್ಯಾಸವು ವರ್ಧಿಸುತ್ತದೆ. ಅವನ ಪ್ರಜ್ಞೆಯು ಧರ್ಮದಲ್ಲಿ ರಮಿಸುತ್ತದೆ. ಧರ್ಮವನ್ನೇ ಆಶ್ರಯಿಸಿರುತ್ತದೆ.

12265015a ಸೋಽಥ ಧರ್ಮಾದವಾಪ್ತೇಷು ಧನೇಷು ಕುರುತೇ ಮನಃ|

12265015c ತಸ್ಯೈವ ಸಿಂಚತೇ ಮೂಲಂ ಗುಣಾನ್ಪಶ್ಯತಿ ಯತ್ರ ವೈ||

ಧರ್ಮಪೂರ್ವಕವಾಗಿ ಪಡೆದ ಧನದಲ್ಲಿಯೇ ಅವನ ಮನಸ್ಸು ನೆಲೆಸಿರುತ್ತದೆ. ಅವನು ತನ್ನ ಮೂಲವನ್ನು ಎಲ್ಲಿ ಗುಣಗಳನ್ನು ಕಾಣುತ್ತಾನೋ ಅವುಗಳಿಂದಲೇ ಸಿಂಪಡಿಸುತ್ತಾನೆ.

12265016a ಧರ್ಮಾತ್ಮಾ ಭವತಿ ಹ್ಯೇವಂ ಮಿತ್ರಂ ಚ ಲಭತೇ ಶುಭಮ್|

12265016c ಸ ಮಿತ್ರಧನಲಾಭಾತ್ತು ಪ್ರೇತ್ಯ ಚೇಹ ಚ ನಂದತಿ||

ಧರ್ಮಾತ್ಮನಿಗೆ ಅವನಂತಹ ಶುಭ ಮಿತ್ರನೇ ದೊರೆಯುತ್ತಾನೆ. ಆ ಮಿತ್ರಧನಲಾಭದಿಂದ ಅವನು ಇಹದಲ್ಲಿಯೂ ಪರದಲ್ಲಿಯೂ ಆನಂದಿಸುತ್ತಾನೆ.

12265017a ಶಬ್ದೇ ಸ್ಪರ್ಶೇ ತಥಾ ರೂಪೇ ರಸೇ ಗಂಧೇ ಚ ಭಾರತ|

12265017c ಪ್ರಭುತ್ವಂ ಲಭತೇ ಜಂತುರ್ಧರ್ಮಸ್ಯೈತತ್ಫಲಂ ವಿದುಃ||

ಭಾರತ! ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಮೇಲೆ ಪ್ರಭುತ್ವವನ್ನು ಪಡೆದುಕೊಳ್ಳುತ್ತಾನೆ. ಇದೇ ಜೀವಿಗೆ ಧರ್ಮದಿಂದ ದೊರೆಯುವ ಫಲ ಎಂದು ತಿಳಿದಿದ್ದಾರೆ.

12265018a ಸ ಧರ್ಮಸ್ಯ ಫಲಂ ಲಬ್ಧ್ವಾ ನ ತೃಪ್ಯತಿ ಯುಧಿಷ್ಠಿರ|

12265018c ಅತೃಪ್ಯಮಾಣೋ ನಿರ್ವೇದಮಾದತ್ತೇ ಜ್ಞಾನಚಕ್ಷುಷಾ||

ಯುಧಿಷ್ಠಿರ! ಅವನು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಶುಭಾಶುಭಫಲಗಳಿಂದ ತೃಪ್ತಿಯನ್ನು ಹೊಂದದೇ ಜ್ಞಾನಚಕ್ಷುಷುವು ವೈರಾಗ್ಯವನ್ನು ಹೊಂದುತ್ತಾನೆ.

12265019a ಪ್ರಜ್ಞಾಚಕ್ಷುರ್ಯದಾ ಕಾಮೇ ದೋಷಮೇವಾನುಪಶ್ಯತಿ|

12265019c ವಿರಜ್ಯತೇ ತದಾ ಕಾಮಾನ್ನ ಚ ಧರ್ಮಂ ವಿಮುಂಚತಿ||

ಪ್ರಜ್ಞಾಚಕ್ಷುವು ಕಾಮದಲ್ಲಿ ದೋಷವನ್ನೇ ಯಾವಾಗ ಕಾಣುತ್ತಾನೋ ಆಗ ಅವನು ಕಾಮದಿಂದ ಮಿಮುಕ್ತನಾಗಿ ಧರ್ಮವನ್ನು ತೊರೆಯುವುದಿಲ್ಲ.

12265020a ಸರ್ವತ್ಯಾಗೇ ಚ ಯತತೇ ದೃಷ್ಟ್ವಾ ಲೋಕಂ ಕ್ಷಯಾತ್ಮಕಮ್|

12265020c ತತೋ ಮೋಕ್ಷಾಯ ಯತತೇ ನಾನುಪಾಯಾದುಪಾಯತಃ||

ಕ್ಷಯಾತ್ಮಕ ಲೋಕವನ್ನು ನೋಡಿ ಸರ್ವತ್ಯಾಗಕ್ಕೆ ಪ್ರಯತ್ನಿಸುತ್ತಾನೆ. ಅನಂತರ ಉಪಾಯದಿಂದಲೇ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ.

12265021a ಶನೈರ್ನಿರ್ವೇದಮಾದತ್ತೇ ಪಾಪಂ ಕರ್ಮ ಜಹಾತಿ ಚ|

12265021c ಧರ್ಮಾತ್ಮಾ ಚೈವ ಭವತಿ ಮೋಕ್ಷಂ ಚ ಲಭತೇ ಪರಮ್||

ನಿಧಾನವಾಗಿ ವೈರಾಗ್ಯವನ್ನು ಹೊಂದಿ ಸಾಧಕನು ಪಾಪಕರ್ಮಗಳನ್ನು ನಾಶಪಡಿಸುತ್ತಾನೆ. ಧರ್ಮಾತ್ಮನೂ ಆಗುತ್ತಾನೆ ಮತ್ತು ಪರಮ ಮೋಕ್ಷವನ್ನು ಹೊಂದುತ್ತಾನೆ.

12265022a ಏತತ್ತೇ ಕಥಿತಂ ತಾತ ಯನ್ಮಾಂ ತ್ವಂ ಪರಿಪೃಚ್ಚಸಿ|

12265022c ಪಾಪಂ ಧರ್ಮಂ ತಥಾ ಮೋಕ್ಷಂ ನಿರ್ವೇದಂ ಚೈವ ಭಾರತ||

ಭಾರತ! ಅಯ್ಯಾ! ನೀನು ನನಗೆ ಕೇಳಿದ ಪಾಪ, ಧರ್ಮ, ಮೋಕ್ಷ ಮತ್ತು ವೈರಾಗ್ಯಗಳ ಕುರಿತು ನಿನಗೆ ಹೇಳಿದ್ದೇನೆ.

12265023a ತಸ್ಮಾದ್ಧರ್ಮೇ ಪ್ರವರ್ತೇಥಾಃ ಸರ್ವಾವಸ್ಥಂ ಯುಧಿಷ್ಠಿರ|

12265023c ಧರ್ಮೇ ಸ್ಥಿತಾನಾಂ ಕೌಂತೇಯ ಸಿದ್ಧಿರ್ಭವತಿ ಶಾಶ್ವತೀ||

ಯುಧಿಷ್ಠಿರ! ಆದುದರಿಂದ ಸರ್ವಾವಸ್ಥೆಯಲ್ಲಿಯೂ ಧರ್ಮದಲ್ಲಿಯೇ ಪ್ರವರ್ತಿಸಬೇಕು. ಕೌಂತೇಯ! ಧರ್ಮದಲ್ಲಿ ಸ್ಥಿತರಾಗಿರುವವರಿಗೆ ಶಾಶ್ವತ ಸಿದ್ಧಿಯಾಗುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಚತುಃಪ್ರಾಶ್ನಿಕೋ ನಾಮ ಪಂಚಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಚತುಃಪ್ರಾಶ್ನಿಕ ಎನ್ನುವ ಇನ್ನೂರಾಅರವತ್ತೈದನೇ ಅಧ್ಯಾಯವು.

Comments are closed.