Shanit Parva: Chapter 266

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೬

ಮೋಕ್ಷಸಾಧನೆಯ ವರ್ಣನೆ (1-19).

12266001 ಯುಧಿಷ್ಠಿರ ಉವಾಚ|

12266001a ಮೋಕ್ಷಃ ಪಿತಾಮಹೇನೋಕ್ತ ಉಪಾಯಾನ್ನಾನುಪಾಯತಃ|

12266001c ತಮುಪಾಯಂ ಯಥಾನ್ಯಾಯಂ ಶ್ರೋತುಮಿಚ್ಚಾಮಿ ಭಾರತ||

ಯುಧಿಷ್ಠಿರನು ಹೇಳಿದನು: “ಭಾರತ! ಪಿತಾಮಹ! ಉಪಾಯದಿಂದಲೇ ಮೋಕ್ಷವು. ಉಪಾಯವಿಲ್ಲದೇ ಮೋಕ್ಷವಿಲ್ಲ ಎಂದು ಹೇಳಿದ್ದೀಯೆ. ಆ ಉಪಾಯದ ಕುರಿತು ಯಥಾನ್ಯಾಯವಾಗಿ ಕೇಳಬಯಸುತ್ತೇನೆ.”

12266002 ಭೀಷ್ಮ ಉವಾಚ|

12266002a ತ್ವಯ್ಯೇವೈತನ್ಮಹಾಪ್ರಾಜ್ಞ ಯುಕ್ತಂ ನಿಪುಣದರ್ಶನಮ್|

12266002c ಯದುಪಾಯೇನ ಸರ್ವಾರ್ಥಾನ್ನಿತ್ಯಂ ಮೃಗಯಸೇಽನಘ||

ಭೀಷ್ಮನು ಹೇಳಿದನು: “ಮಹಾಪ್ರಾಜ್ಞ! ಅನಘ! ನೀನು ನಿಪುಣದೃಷ್ಟಿಯುಳ್ಳವನಾಗಿ ಉಪಾಯದಿಂದಲೇ ನಿತ್ಯವೂ ಸರ್ವಾರ್ಥಗಳನ್ನು ಹುಡುಕುತ್ತಿದ್ದೀಯೆ.

12266003a ಕರಣೇ ಘಟಸ್ಯ ಯಾ ಬುದ್ಧಿರ್ಘಟೋತ್ಪತ್ತೌ ನ ಸಾನಘ|

12266003c ಏವಂ ಧರ್ಮಾಭ್ಯುಪಾಯೇಷು ನಾನ್ಯದ್ಧರ್ಮೇಷು ಕಾರಣಮ್||

ಅನಘ! ಗಡಿಗೆಯನ್ನು ತಯಾರಿಸುವಾಗ ಯಾವ ಬುದ್ಧಿಯು ಬೇಕಾಗಿರುತ್ತದೆಯೋ ಅದೇ ಬುದ್ಧಿಯು ಗಡಿಗೆಯು ತಯಾರಾದ ನಂತರ ಅವಶ್ಯಕತೆಯಿರುವುದಿಲ್ಲ. ಅದೇ ರೀತಿ ಚಿತ್ತಶುದ್ಧಿಗೆ ಸಾಧಕವಾದ ಉಪಾಯಗಳು ನಂತರದ ಧರ್ಮಗಳಿಗೆ ಕಾರಕವಾಗುವುದಿಲ್ಲ[1].

12266004a ಪೂರ್ವೇ ಸಮುದ್ರೇ ಯಃ ಪಂಥಾ ನ ಸ ಗಚ್ಚತಿ ಪಶ್ಚಿಮಮ್|

12266004c ಏಕಃ ಪಂಥಾ ಹಿ ಮೋಕ್ಷಸ್ಯ ತನ್ಮೇ ವಿಸ್ತರತಃ ಶೃಣು||

ಪೂರ್ವಸಮುದ್ರಕ್ಕೆ ಹೋಗುವ ದಾರಿಯು ಪಶ್ಚಿಮ ಸಮುದ್ರಕ್ಕೆ ಎಂದೂ ಹೋಗುವುದಿಲ್ಲ. ಹಾಗೆಯೇ ಮೋಕ್ಷಕ್ಕೂ ಒಂದೇ ಮಾರ್ಗವಿದೆ. ಅದನ್ನು ವಿಸ್ತಾರವಾಗಿ ಕೇಳು.

12266005a ಕ್ಷಮಯಾ ಕ್ರೋಧಮುಚ್ಚಿಂದ್ಯಾತ್ಕಾಮಂ ಸಂಕಲ್ಪವರ್ಜನಾತ್|

12266005c ಸತ್ತ್ವಸಂಸೇವನಾದ್ಧೀರೋ ನಿದ್ರಾಮುಚ್ಚೇತುಮರ್ಹತಿ||

ಧೀರನಾದವನು ಕ್ಷಮೆಯಿಂದ ಕ್ರೋಧವನ್ನು ತೊರೆಯಬೇಕು. ಸಂಕಲ್ಪಿಸುವುದನ್ನು ಬಿಟ್ಟು ಕಾಮವನ್ನು ತ್ಯಜಿಸಬೇಕು. ಸತ್ತ್ವಗುಣ ಸಂಸೇವನೆಯಿಂದ ನಿದ್ರೆಯನ್ನು ತ್ಯಜಿಸಬೇಕು.

12266006a ಅಪ್ರಮಾದಾದ್ಭಯಂ ರಕ್ಷೇಚ್ಚ್ವಾಸಂ ಕ್ಷೇತ್ರಜ್ಞಶೀಲನಾತ್|

12266006c ಇಚ್ಚಾಂ ದ್ವೇಷಂ ಚ ಕಾಮಂ ಚ ಧೈರ್ಯೇಣ ವಿನಿವರ್ತಯೇತ್||

ಅಪ್ರಮತ್ತತೆಯಿಂದ ಭಯವನ್ನು ದೂರಗೊಳಿಸಬೇಕು. ಕ್ಷೇತ್ರಜ್ಞಶೀಲದಿಂದ ಶ್ವಾಸವನ್ನು ರಕ್ಷಿಸಬೇಕು. ಧೈರ್ಯದಿಂದ ಇಚ್ಛಾ, ದ್ವೇಷ ಮತ್ತು ಕಾಮಗಳನ್ನು ಹೋಗಲಾಡಿಸಿಕೊಳ್ಳಬೇಕು.

12266007a ಭ್ರಮಂ ಪ್ರಮೋಹಮಾವರ್ತಮಭ್ಯಾಸಾದ್ವಿನಿವರ್ತಯೇತ್|

12266007c ನಿದ್ರಾಂ ಚ ಪ್ರತಿಭಾಂ ಚೈವ ಜ್ಞಾನಾಭ್ಯಾಸೇನ ತತ್ತ್ವವಿತ್||

ತತ್ತ್ವವಿದುವು ಭ್ರಮೆ, ಪ್ರಮೋಹ, ಸಂಶಯಗಳನ್ನು ಶಾಸ್ತ್ರಾಭ್ಯಾಸದಿಂದಲೂ ನಿದ್ರೆ ಮತ್ತು ಪ್ರತಿಭೆಗಳನ್ನು[2] ಜ್ಞಾನಾಭ್ಯಾಸದ[3] ಮೂಲಕವೂ ನಿವಾರಿಸಿಕೊಳ್ಳಬೇಕು.

12266008a ಉಪದ್ರವಾಂಸ್ತಥಾ ರೋಗಾನ್ ಹಿತಜೀರ್ಣಮಿತಾಶನಾತ್|

12266008c ಲೋಭಂ ಮೋಹಂ ಚ ಸಂತೋಷಾದ್ವಿಷಯಾಂಸ್ತತ್ತ್ವದರ್ಶನಾತ್||

ಸುಲಭವಾಗಿ ಜೀರ್ಣವಾಗುವ ಮಿತ ಆಹಾರದಿಂದ ಶಾರೀರಕ ಉಪದ್ರವ-ರೋಗಗಳನ್ನೂ, ಸಂತೋಷದಿಂದಿರುವುದರ ಮೂಲಕ ಲೋಭ-ಮೋಹಗಳನ್ನೂ ಮತ್ತು ಅವುಗಳ ಸ್ವಭಾವಗಳನ್ನು ಯಥಾವತ್ತಾಗಿ ತಿಳಿಯುವುದರ ಮೂಲಕ ವಿಷಯಸುಖಗಳನ್ನೂ ತ್ಯಜಿಸಬೇಕು.

12266009a ಅನುಕ್ರೋಶಾದಧರ್ಮಂ ಚ ಜಯೇದ್ಧರ್ಮಮುಪೇಕ್ಷಯಾ|

12266009c ಆಯತ್ಯಾ ಚ ಜಯೇದಾಶಾಮರ್ಥಂ ಸಂಗವಿವರ್ಜನಾತ್||

ಅನುಕ್ರೋಶದಿಂದ ಅಧರ್ಮವನ್ನು ಜಯಿಸಬೇಕು. ವಿಚಾರಿಸಿ ನಡೆದುಕೊಳ್ಳುವುದರಿಂದ ಧರ್ಮವನ್ನು ಗೆಲ್ಲಬೇಕು. ಮುಂದಾಗುವ ಪರಿಣಾಮವನ್ನು ಯೋಚಿಸಿ ಆಸೆಗಳನ್ನು ಜಯಿಸಬೇಕು. ಆಸಕ್ತಿಯನ್ನು ತ್ಯಜಿಸಿ ಅರ್ಥವನ್ನು ಗೆಲ್ಲಬೇಕು.

12266010a ಅನಿತ್ಯತ್ವೇನ ಚ ಸ್ನೇಹಂ ಕ್ಷುಧಂ ಯೋಗೇನ ಪಂಡಿತಃ|

12266010c ಕಾರುಣ್ಯೇನಾತ್ಮನೋ ಮಾನಂ ತೃಷ್ಣಾಂ ಚ ಪರಿತೋಷತಃ||

ವಸ್ತುಗಳ ಅನಿತ್ಯತೆಯ ಕುರಿತು ಯೋಚಿಸಿ ಪಂಡಿತನು ಸ್ನೇಹವನ್ನು ಕಳೆದುಕೊಳ್ಳಬೇಕು. ಯೋಗಾಭ್ಯಾಸದಿಂದ ಹಸಿವೆಯನ್ನು ಗೆಲ್ಲಬೇಕು. ಕಾರುಣ್ಯದಿಂದ ಆತ್ಮಾಭಿಮಾನವನ್ನು ತೊರೆಯಬೇಕು. ನಿತ್ಯಸಂತುಷ್ಟನಾಗಿರುವುದರ ಮೂಲಕ ತೃಷ್ಣೆಯನ್ನು ಜಯಿಸಬೇಕು.

12266011a ಉತ್ಥಾನೇನ ಜಯೇತ್ತಂದ್ರೀಂ ವಿತರ್ಕಂ ನಿಶ್ಚಯಾಜ್ಜಯೇತ್|

12266011c ಮೌನೇನ ಬಹುಭಾಷ್ಯಂ ಚ ಶೌರ್ಯೇಣ ಚ ಭಯಂ ಜಯೇತ್||

ನಿರಂತರ ಉದ್ಯೋಗದಿಂದ ಆಲಸ್ಯವನ್ನು ಜಯಿಸಬೇಕು. ಶಾಸ್ತ್ರನಿಶ್ಚಯಗಳಿಂದ ವಿಪರೀತ ತರ್ಕವನ್ನು ಗೆಲ್ಲಬೇಕು. ಮೌನದಿಂದ ಅತಿಯಾಗಿ ಮಾತನಾಡುವುದನ್ನು ಹಾಗೂ ಶೌರ್ಯದಿಂದ ಭಯವನ್ನು ಜಯಿಸಬೇಕು.

12266012a ಯಚ್ಚೇದ್ವಾಙ್ಮನಸೀ ಬುದ್ಧ್ಯಾ ತಾಂ ಯಚ್ಚೇಜ್ಜ್ಞಾನಚಕ್ಷುಷಾ|

12266012c ಜ್ಞಾನಮಾತ್ಮಾ ಮಹಾನ್ಯಚ್ಚೇತ್ತಂ ಯಚ್ಚೇಚ್ಚಾಂತಿರಾತ್ಮನಃ||

ಬುದ್ಧಿಯಿಂದ ಮಾತು-ಮನಸ್ಸುಗಳನ್ನು ಮತ್ತು ಬುದ್ಧಿಯನ್ನು ಜ್ಞಾನದ ಕಣ್ಣುಗಳಿಂದ ಗೆಲ್ಲಬೇಕು. ಆತ್ಮಜ್ಞಾನದ ಮೂಲಕ ಶಾಸ್ತ್ರಜ್ಞಾನವನ್ನು ಶಮನಗೊಳಿಸಬೇಕು. ಇದರಿಂದ ಮಹಾ ಆತ್ಮಶಾಂತಿಯುಂಟಾಗುತ್ತದೆ.

12266013a ತದೇತದುಪಶಾಂತೇನ ಬೋದ್ಧವ್ಯಂ ಶುಚಿಕರ್ಮಣಾ|

12266013c ಯೋಗದೋಷಾನ್ಸಮುಚ್ಚಿದ್ಯ ಪಂಚ ಯಾನ್ಕವಯೋ ವಿದುಃ||

ಹೀಗೆ ವಿದ್ವಾಂಸರು ತಿಳಿದಿರುವ ಐದು ಯೋಗದೋಷಗಳನ್ನು ಕಿತ್ತುಹಾಕಿ, ಶುಚಿಕರ್ಮಗಳಿಂದ ಶಾಂತಿಯನ್ನು ಪಡೆದು ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕು.

12266014a ಕಾಮಂ ಕ್ರೋಧಂ ಚ ಲೋಭಂ ಚ ಭಯಂ ಸ್ವಪ್ನಂ ಚ ಪಂಚಮಮ್|

12266014c ಪರಿತ್ಯಜ್ಯ ನಿಷೇವೇತ ತಥೇಮಾನ್ಯೋಗಸಾಧನಾನ್||

ಕಾಮ, ಕ್ರೋಧ, ಲೋಭ, ಭಯ ಮತ್ತು ಸ್ವಪ್ನ ಈ ಐದು ಯೋಗದೋಷಗಳನ್ನು ತ್ಯಜಿಸಿದ ನಂತರ ಯೋಗಸಾಧನಗಳಲ್ಲಿ ತೊಡಗಬೇಕು.

12266015a ಧ್ಯಾನಮಧ್ಯಯನಂ ದಾನಂ ಸತ್ಯಂ ಹ್ರೀರಾರ್ಜವಂ ಕ್ಷಮಾ|

12266015c ಶೌಚಮಾಹಾರತಃ ಶುದ್ಧಿರಿಂದ್ರಿಯಾಣಾಂ ಚ ಸಂಯಮಃ||

ಧ್ಯಾನ, ಅಧ್ಯಯನ, ದಾನ, ಸತ್ಯ, ಲಜ್ಜೆ, ಸರಳತೆ, ಕ್ಷಮೆ, ಶೌಚ, ಆಹಾರಶುದ್ಧಿ, ಇಂದ್ರಿಯಗಳ ಸಂಯಮ ಇವು ಯೋಗಕ್ಕೆ ಸಾಧನಗಳು.

12266016a ಏತೈರ್ವಿವರ್ಧತೇ ತೇಜಃ ಪಾಪ್ಮಾನಮಪಹಂತಿ ಚ|

12266016c ಸಿಧ್ಯಂತಿ ಚಾಸ್ಯ ಸಂಕಲ್ಪಾ ವಿಜ್ಞಾನಂ ಚ ಪ್ರವರ್ತತೇ||

ಇವುಗಳಿಂದ ತೇಜಸ್ಸು ವೃದ್ಧಿಯಾಗುತ್ತದೆ ಮತ್ತು ಪಾಪಗಳು ಕಳೆಯುತ್ತವೆ. ಸಂಕಲ್ಪಗಳು ಸಿದ್ಧಿಸಿ ವಿಜ್ಞಾನವು ಹುಟ್ಟಿಕೊಳ್ಳುತ್ತದೆ.

12266017a ಧೂತಪಾಪಃ ಸ ತೇಜಸ್ವೀ ಲಘ್ವಾಹಾರೋ ಜಿತೇಂದ್ರಿಯಃ|

12266017c ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ಬ್ರಹ್ಮಣಃ ಪದಮ್||

ಪಾಪವನ್ನು ತೊಳೆದುಕೊಂಡ ತೇಜಸ್ವೀ ಮಿತಾಹಾರೀ ಜಿತೇಂದ್ರಿಯನು ಕಾಮಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವನ್ನು ಹೊಂದಲು ಇಚ್ಛಿಸಬೇಕು.

12266018a ಅಮೂಢತ್ವಮಸಂಗಿತ್ವಂ ಕಾಮಕ್ರೋಧವಿವರ್ಜನಮ್|

12266018c ಅದೈನ್ಯಮನುದೀರ್ಣತ್ವಮನುದ್ವೇಗೋ ವ್ಯವಸ್ಥಿತಿಃ||

12266019a ಏಷ ಮಾರ್ಗೋ ಹಿ ಮೋಕ್ಷಸ್ಯ ಪ್ರಸನ್ನೋ ವಿಮಲಃ ಶುಚಿಃ|

12266019c ತಥಾ ವಾಕ್ಕಾಯಮನಸಾಂ ನಿಯಮಃ ಕಾಮತೋಽನ್ಯಥಾ||

ಮೂಢನಾಗದಿರುವುದು, ಅನಾಸಕ್ತಿ, ಕಾಮ-ಕ್ರೋಧಗಳ ತ್ಯಾಗ, ದೈನ್ಯವಿಲ್ಲದಿರುವುದು, ಗರ್ವವಿಲ್ಲದಿರುವುದು, ಉದ್ವೇಗವಿಲ್ಲದಿರುವುದು, ಚಿತ್ತಸ್ಥಿರತೆ, ವಾಕ್ಕಾಯಮನಸ್ಸುಗಳ ನಿಯಮ, ನಿಷ್ಕಾಮಭಾವ – ಇವು ಮೋಕ್ಷಕ್ಕೆ ಕೊಂಡೊಯ್ಯುವ ಸ್ವಚ್ಛ ನಿರ್ಮಲ ಮತ್ತು ಪವಿತ್ರ ಮಾರ್ಗಗಳಾಗಿವೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಯೋಗಾಚಾರಾನುವರ್ಣನ ನಾಮ ಷಟ್ಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಯೋಗಾಚಾರಾನುವರ್ಣನ ಎನ್ನುವ ಇನ್ನೂರಾಅರವತ್ತಾರನೇ ಅಧ್ಯಾಯವು.

[1] ಚಿತ್ತಶುದ್ಧಿಯ ಉಪಾಯಭೂತವಾದ ಯಜ್ಞಾದಿಗಳ ಧರ್ಮವು ಗುರಿಮುಟ್ಟಿದ ನಂತರ ಮೋಕ್ಷಸಾಧನರೂಪವಾದ ಶಮ-ದಮಾದಿ ಇತರ ಧರ್ಮಗಳಿಗೆ ಯಜ್ಞಧರ್ಮವು ಕಾರಣವಾಗುವುದಿಲ್ಲ. (ಭಾರತ ದರ್ಶನ).

[2] ಪರಬ್ರಹ್ಮಪ್ರಾಪ್ತಿಗೆ ಪ್ರತಿಕೂಲವಾದ ಹೊಸ ಹೊಸ ವಿಷಯಗಳು ಹೊಳೆಯುವ ಬುದ್ಧಿ (ಭಾರತ ದರ್ಶನ).

[3] ತಚ್ಚಿಂತನಂ ತತ್ಕಥನಮನ್ಯೋನ್ಯಂ ತತ್ಪ್ರಬೋಧನಮ್| ಏತದೇಕ ಪರತ್ವಂ ಚ ಜ್ಞಾನಾಭ್ಯಾಸಂ ವಿದುರ್ಬುಧಾಃ|| ಪರಬ್ರಹ್ಮವಸ್ತುವಿನ ಚಿಂತನೆ, ಪರಬ್ರಹ್ಮದ ವಿಷಯವಾಗಿರುವ ಶಾಸ್ತ್ರಗಳ ಅಧ್ಯಯನ, ಪರಸ್ಪರವಾಗಿ ಅದರ ಕುರಿತು ಮಾತನಾಡುವುದು – ಇವನ್ನು ವಿದ್ವಾಂಸರು ಜ್ಞಾನಾಭ್ಯಾಸವೆಂದು ಹೇಳಿದ್ದಾರೆ (ಭಾರತ ದರ್ಶನ).

Comments are closed.