Shanit Parva: Chapter 264

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೪

ಉಂಚವೃತ್ತಿಯ ಪರಾವೃತ್ತ

ಯಜ್ಞದಲ್ಲಿ ಹಿಂಸೆಯ ನಿಂದೆ ಮತ್ತು ಅಹಿಂಸೆಯ ಪ್ರಶಂಸೆ (1-19).

12264001 ಯುಧಿಷ್ಠಿರ ಉವಾಚ|

12264001a ಬಹೂನಾಂ ಯಜ್ಞತಪಸಾಮೇಕಾರ್ಥಾನಾಂ ಪಿತಾಮಹ|

12264001c ಧರ್ಮಾರ್ಥಂ ನ ಸುಖಾರ್ಥಾರ್ಥಂ ಕಥಂ ಯಜ್ಞಃ ಸಮಾಹಿತಃ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಅನೇಕ ವಿಧದ ಯಜ್ಞ ಮತ್ತು ತಪಸ್ಸುಗಳ ಉದ್ದೇಶಗಳೂ ಒಂದೇ ಆಗಿದೆ. ಸುಖಕ್ಕಾಗಿ ಅಲ್ಲದೇ ಧರ್ಮಕ್ಕಾಗಿ ಮಾಡುವ ಯಜ್ಞಗಳು ಯಾವುವು ಮತ್ತು ಅವುಗಳನ್ನು ಹೇಗೆ ಮಾಡಬೇಕು?”

12264002 ಭೀಷ್ಮ ಉವಾಚ|

12264002a ಅತ್ರ ತೇ ವರ್ತಯಿಷ್ಯಾಮಿ ನಾರದೇನಾನುಕೀರ್ತಿತಮ್|

12264002c ಉಂಚವೃತ್ತೇಃ ಪುರಾವೃತ್ತಂ ಯಜ್ಞಾರ್ಥೇ ಬ್ರಾಹ್ಮಣಸ್ಯ ಹ||

ಭೀಷ್ಮನು ಹೇಳಿದನು: “ಹಿಂದೆ ಉಂಚವೃತ್ತಿಯಿಂದ ಜೀವನ ನಿರ್ವಹಿಸುತ್ತಿದ್ದ ಬ್ರಾಹ್ಮಣನು ಮಾಡಿದ ಯಜ್ಞದ ಕುರಿತಾಗಿ ನಾರದನು ನನಗೆ ಹೇಳಿದ್ದುದನ್ನು ನಿನಗೆ ಹೇಳುತ್ತೇನೆ.

12264003a ರಾಷ್ಟ್ರೇ ಧರ್ಮೋತ್ತರೇ ಶ್ರೇಷ್ಠೇ ವಿದರ್ಭೇಷ್ವಭವದ್ದ್ವಿಜಃ|

12264003c ಉಂಚವೃತ್ತಿರೃಷಿಃ ಕಶ್ಚಿದ್ಯಜ್ಞೇ ಯಜ್ಞಂ ಸಮಾದಧೇ||

ಧರ್ಮಪ್ರಧಾನವಾಗಿದ್ದ ವಿದರ್ಭ ದೇಶದಲ್ಲಿ ಉಂಚವೃತ್ತಿಯಲ್ಲಿ ನಿರತನಾಗಿದ್ದ ಋಷಿಯೋರ್ವನು ಒಂದು ಯಜ್ಞಮಾಡಲು ಸಂಕಲ್ಪಿಸಿದನು.

12264004a ಶ್ಯಾಮಾಕಮಶನಂ ತತ್ರ ಸೂರ್ಯಪತ್ನೀ ಸುವರ್ಚಲಾ|

12264004c ತಿಕ್ತಂ ಚ ವಿರಸಂ ಶಾಕಂ ತಪಸಾ ಸ್ವಾದುತಾಂ ಗತಮ್||

ಅವನು ಸಾಮೆ ಅಕ್ಕಿ, ಸೂರ್ಯಪರ್ಣಿ (ಕಾಡಿನ ಉದ್ದು) ಮತ್ತು ಸುವರ್ಚಲೆ (ಬ್ರಾಹ್ಮೀಲತೆ) ಯನ್ನೇ ಊಟಕ್ಕೆ ಉಪಯೋಗಿಸುತ್ತಿದ್ದನು. ಕಹಿಯಾದ ಮತ್ತು ರುಚಿಯಿಲ್ಲದ ಅವುಗಳು ಅವನ ತಪಸ್ಸಿನಿಂದ ಸ್ವಾದುತ್ವವನ್ನು ಪಡೆಯುತ್ತಿದ್ದವು.

12264005a ಉಪಗಮ್ಯ ವನೇ ಪೃಥ್ವೀಂ ಸರ್ವಭೂತವಿಹಿಂಸಯಾ|

12264005c ಅಪಿ ಮೂಲಫಲೈರಿಜ್ಯೋ ಯಜ್ಞಃ ಸ್ವರ್ಗ್ಯಃ ಪರಂತಪ||

ಪರಂತಪ! ಭೂಮಿಯಲ್ಲಿರುವ ಸರ್ವಭೂತಗಳಿಗೂ ಅಹಿಂಸಕನಾಗಿದ್ದ ಮತ್ತು ಸ್ವರ್ಗಕ್ಕೆ ಹೋಗ ಬಯಸಿದ್ದ ಅವನು ವನಕ್ಕೆ ಹೋಗಿ ಆ ಯಜ್ಞದಲ್ಲಿ ಫಲಮೂಲಗಳನ್ನೇ ಅರ್ಪಿಸಿದನು.

12264006a ತಸ್ಯ ಭಾರ್ಯಾ ವ್ರತಕೃಶಾ ಶುಚಿಃ ಪುಷ್ಕರಚಾರಿಣೀ|

12264006c ಯಜ್ಞಪತ್ನೀತ್ವಮಾನೀತಾ ಸತ್ಯೇನಾನುವಿಧೀಯತೇ|

12264006e ಸಾ ತು ಶಾಪಪರಿತ್ರಸ್ತಾ ನ ಸ್ವಭಾವಾನುವರ್ತಿನೀ||

ಅವನ ಭಾರ್ಯೆ ಪುಷ್ಕರಚಾರಿಣಿಯು ವ್ರತದಿಂದ ಶುಚಿಯೂ ಕೃಶಳೂ ಆಗಿದ್ದಳು. ಋಷಿ ಸತ್ಯನು ಅವಳಿಗೆ ಯಜ್ಞಪತ್ನಿಯಾಗಲು ಆದೇಶವನ್ನಿತ್ತನು. ಅನುಸರಿಸುವ ಸ್ವಭಾವದವಳಾಗಿದ್ದ ಅವಳಾದರೋ ಶಾಪಕ್ಕೆ ಹೆದರಿ ಒಪ್ಪಿಕೊಂಡಳು.

12264007a ಮಯೂರಜೀರ್ಣಪರ್ಣಾನಾಂ ವಸ್ತ್ರಂ ತಸ್ಯಾಶ್ಚ ಪರ್ಣಿನಾಮ್|

12264007c ಅಕಾಮಾಯಾಃ ಕೃತಂ ತತ್ರ ಯಜ್ಞೇ ಹೋತ್ರಾನುಮಾರ್ಗತಃ||

ಅವಳು ಹಳೆಯ ನವಿಲುಗರಿಗಳನ್ನು ಒಟ್ಟಾಗಿ ಸೇರಿಸಿ ಹೆಣೆದಿದ್ದ ವಸ್ತ್ರವನ್ನು ಉಟ್ಟಿದ್ದಳು. ಇಷ್ಟವಿಲ್ಲದಿದ್ದರೂ ಆ ಯಜ್ಞದಲ್ಲಿ ಹೋತೃವಿನ ಆಜ್ಞೆಯಂತೆ ಅವಳು ಕಾರ್ಯನಿರ್ವಹಿಸುತ್ತಿದ್ದಳು.

12264008a ಶುಕ್ರಸ್ಯ ಪುನರಾಜಾತಿರಪಧ್ಯಾನಾದಧರ್ಮವಿತ್|

12264008c ತಸ್ಮಿನ್ವನೇ ಸಮೀಪಸ್ಥೋ ಮೃಗೋಽಭೂತ್ಸಹಚಾರಿಕಃ|

12264008e ವಚೋಭಿರಬ್ರವೀತ್ಸತ್ಯಂ ತ್ವಯಾ ದುಷ್ಕೃತಕಂ ಕೃತಮ್||

ಆ ವನದಲ್ಲಿ ಸಮೀಪದಲ್ಲಿಯೇ ಶುಕ್ರನ ವಂಶಜನಾದ ಓರ್ವನು ಮೃಗರೂಪದಲ್ಲಿ ವಾಸಿಸುತ್ತಿದ್ದನು. ಅವನು ಅಸೂಯಕನೂ ಅಧರ್ಮಿಯೂ ಆಗಿದ್ದನು. ಅವನು ಸತ್ಯನಿಗೆ ಈ ಮಾತನ್ನಾಡಿದನು: “ನೀನು ದುಷ್ಕೃತ ಕೃತ್ಯವನ್ನು ಮಾಡಲು ಹೊರಟಿರುವೆ.

12264009a ಯದಿ ಮಂತ್ರಾಂಗಹೀನೋಽಯಂ ಯಜ್ಞೋ ಭವತಿ ವೈಕೃತಃ|

12264009c ಮಾಂ ಭೋಃ ಪ್ರಕ್ಷಿಪ ಹೋತ್ರೇ ತ್ವಂ ಗಚ್ಚ ಸ್ವರ್ಗಮತಂದ್ರಿತಃ||

ಮಂತ್ರಾಂಗಹೀನವಾದ ಈ ಯಜ್ಞವು ಸರಿಯಾಗುವುದಿಲ್ಲ. ಭೋ! ಆದುದರಿಂದ ನನ್ನನ್ನು ಹವಿಸ್ಸನ್ನಾಗಿ ಅಗ್ನಿಯಲ್ಲಿ ಹಾಕು ಮತ್ತು ಅನಾಯಾಸನಾಗಿ ಸ್ವರ್ಗಕ್ಕೆ ಹೋಗು!”

12264010a ತತಸ್ತು ಯಜ್ಞೇ ಸಾವಿತ್ರೀ ಸಾಕ್ಷಾತ್ತಂ ಸಂನ್ಯಮಂತ್ರಯತ್|

12264010c ನಿಮಂತ್ರಯಂತೀ ಪ್ರತ್ಯುಕ್ತಾ ನ ಹನ್ಯಾಂ ಸಹವಾಸಿನಮ್||

ಆಗ ಸಾವಿತ್ರಿಯೇ ಆ ಯಜ್ಞದಲ್ಲಿ ಸಾಕ್ಷಾತ್ತಾಗಿ ಅವನಿಗೆ ಹಾಗೆಯೇ ಮಾಡಲು ಸಲಹೆಯನ್ನಿತ್ತಳು. ಅವಳು ಒತ್ತಾಯಿಸಿದರೂ ಮುನಿಯು “ನನ್ನ ಸಹವಾಸಿಯನ್ನು ಕೊಲ್ಲುವುದಿಲ್ಲ” ಎಂದು ಉತ್ತರಿಸಿದನು.

12264011a ಏವಮುಕ್ತಾ ನಿವೃತ್ತಾ ಸಾ ಪ್ರವಿಷ್ಟಾ ಯಜ್ಞಪಾವಕಮ್|

12264011c ಕಿಂ ನು ದುಶ್ಚರಿತಂ ಯಜ್ಞೇ ದಿದೃಕ್ಷುಃ ಸಾ ರಸಾತಲಮ್||

ಸತ್ಯನು ಹೀಗೆ ಹೇಳಲು ಸಾವಿತ್ರಿಯು ಹಿಂದಿರುಗಿ ಯಜ್ಞಾಗ್ನಿಯನ್ನು ಪ್ರವೇಶಿಸಿದಳು. ಯಜ್ಞದಲ್ಲಿ ನಡೆಯುವ ದುಶ್ಚರಿತವನ್ನು ನೋಡಲು ಬಂದಿದ್ದ ಅವಳು ರಸಾತಲವನ್ನು ಸೇರಿದಳು.

12264012a ಸಾ ತು ಬದ್ಧಾಂಜಲಿಂ ಸತ್ಯಮಯಾಚದ್ಧರಿಣಂ ಪುನಃ|

12264012c ಸತ್ಯೇನ ಸಂಪರಿಷ್ವಜ್ಯ ಸಂದಿಷ್ಟೋ ಗಮ್ಯತಾಮಿತಿ||

ಜಿಂಕೆಯು ಪುನಃ ಕೈಮುಗಿದು ಸತ್ಯನನ್ನು ಯಾಚಿಸಿತು. ಆದರೆ ಸತ್ಯನು ಅದನ್ನು ಬಿಗಿದಪ್ಪಿ “ನೀನು ಹೊರಟು ಹೋಗು” ಎಂದನು.

12264013a ತತಃ ಸ ಹರಿಣೋ ಗತ್ವಾ ಪದಾನ್ಯಷ್ಟೌ ನ್ಯವರ್ತತ|

12264013c ಸಾಧು ಹಿಂಸಯ ಮಾಂ ಸತ್ಯ ಹತೋ ಯಾಸ್ಯಾಮಿ ಸದ್ಗತಿಮ್||

ಆಗ ಜಿಂಕೆಯು ಎಂಟು ಹೆಜ್ಜೆ ಹೊರಟು ಪುನಃ ಹಿಂದಿರುಗಿ ಹೇಳಿತು: “ಸತ್ಯ! ನನ್ನನ್ನು ಕೊಲ್ಲುವುದು ಸಾಧುವಾದುದು. ಹತನಾದ ನಾನು ಸದ್ಗತಿಯನ್ನು ಪಡೆದುಕೊಳ್ಳುತ್ತೇನೆ.

12264014a ಪಶ್ಯ ಹ್ಯಪ್ಸರಸೋ ದಿವ್ಯಾ ಮಯಾ ದತ್ತೇನ ಚಕ್ಷುಷಾ|

12264014c ವಿಮಾನಾನಿ ವಿಚಿತ್ರಾಣಿ ಗಂಧರ್ವಾಣಾಂ ಮಹಾತ್ಮನಾಮ್||

ನಾನು ಕೊಟ್ಟಿರುವ ದಿವ್ಯದೃಷ್ಟಿಯಿಂದ ಈ ಅಪ್ಸರೆಯರನ್ನೂ, ವಿಚಿತ್ರ ವಿಮಾನಗಳನ್ನೂ, ಮಹಾತ್ಮಾ ಗಂಧರ್ವರನ್ನೂ ನೋಡು.”

12264015a ತತಃ ಸುರುಚಿರಂ ದೃಷ್ಟ್ವಾ ಸ್ಪೃಹಾಲಗ್ನೇನ ಚಕ್ಷುಷಾ|

12264015c ಮೃಗಮಾಲೋಕ್ಯ ಹಿಂಸಾಯಾಂ ಸ್ವರ್ಗವಾಸಂ ಸಮರ್ಥಯತ್||

ಆಗ ಜಿಂಕೆಯು ನೀಡಿದ್ದ ಕಣ್ಣುಗಳಿಂದ ಅದನ್ನು ಬಹಳ ಹೊತ್ತು ನೋಡಿ ಸತ್ಯನು ಜಿಂಕೆಯನ್ನು ಅವಲೋಕಿಸಿ ಹಿಂಸೆಯಿಂದಲೂ ಸ್ವರ್ಗವಾಸವು ಸಮರ್ಥವಾಗುತ್ತದೆ ಎಂದು ಯೋಚಿಸಿದನು.

12264016a ಸ ತು ಧರ್ಮೋ ಮೃಗೋ ಭೂತ್ವಾ ಬಹುವರ್ಷೋಷಿತೋ ವನೇ|

12264016c ತಸ್ಯ ನಿಷ್ಕೃತಿಮಾಧತ್ತ ನ ಹ್ಯಸೌ ಯಜ್ಞಸಂವಿಧಿಃ||

ಧರ್ಮನು ಜಿಂಕೆಯಾಗಿ ಅನೇಕ ವರ್ಷಗಳು ಆ ವನದಲ್ಲಿ ವಾಸಿಸಿಕೊಂಡಿದ್ದನು. ಧರ್ಮನು ಯೋಚಿಸಿದನು: “ಪಶುವಧೆಯು ಯಜ್ಞಸಂವಿಧಿಯಲ್ಲ. ಮುನಿಯನ್ನು ಉದ್ಧರಿಸಬೇಕು.

12264017a ತಸ್ಯ ತೇನ ತು ಭಾವೇನ ಮೃಗಹಿಂಸಾತ್ಮನಸ್ತದಾ|

12264017c ತಪೋ ಮಹತ್ಸಮುಚ್ಚಿನ್ನಂ ತಸ್ಮಾದ್ಧಿಂಸಾ ನ ಯಜ್ಞಿಯಾ||

ಇವನ ಈ ಮೃಗಹಿಂಸಾತ್ಮಕ ಭಾವದಿಂದ ಇವನು ಸಂಚಯಿಸಿಕೊಂಡಿದ್ದ ಮಹಾ ತಪಸ್ಸಿನ ಫಲವು ನಷ್ಟವಾಗಿಹೋಗುತ್ತದೆ. ಆದುದರಿಂದ ಯಜ್ಞದಲ್ಲಿ ಹಿಂಸೆಯು ಸರಿಯಲ್ಲ.”

12264018a ತತಸ್ತಂ ಭಗವಾನ್ ಧರ್ಮೋ ಯಜ್ಞಂ ಯಾಜಯತ ಸ್ವಯಮ್|

12264018c ಸಮಾಧಾನಂ ಚ ಭಾರ್ಯಾಯಾ ಲೇಭೇ ಸ ತಪಸಾ ಪರಮ್||

ಅನಂತರ ಭಗವಾನ್ ಧರ್ಮನು ಸ್ವಯಂ ತಾನೇ ಅವನಿಗೆ ಆ ಯಜ್ಞವನ್ನು ನಡೆಸಿಕೊಟ್ಟನು. ಆ ಮುನಿಯು ತನ್ನ ಭಾರ್ಯೆಯೊಂದಿಗೆ ಪರಮ ತಪಸ್ಸಿನ ಸಮಾಧಾನವನ್ನು ಹೊಂದಿದನು.

12264019a ಅಹಿಂಸಾ ಸಕಲೋ ಧರ್ಮೋ ಹಿಂಸಾ ಯಜ್ಞೇಽಸಮಾಹಿತಾ|

12264019c ಸತ್ಯಂ ತೇಽಹಂ ಪ್ರವಕ್ಷ್ಯಾಮಿ ಯೋ ಧರ್ಮಃ ಸತ್ಯವಾದಿನಾಮ್||

ಅಹಿಂಸೆಯೇ ಸಕಲ ಧರ್ಮವು. ಯಜ್ಞದಲ್ಲಿ ಹಿಂಸೆಯು ಇರುವುದಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದು ಸತ್ಯವಾದಿಗಳ ಧರ್ಮವು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಯಜ್ಞನಿಂದಾನಾಮ ಚತುಃಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಯಜ್ಞನಿಂದಾ ಎನ್ನುವ ಇನ್ನೂರಾಅರವತ್ನಾಲ್ಕನೇ ಅಧ್ಯಾಯವು.

Comments are closed.