Shanti Parva: Chapter 244

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೪

ಶರೀರದಲ್ಲಿ ಪಂಚಭೂತಗಳ ಕಾರ್ಯ ಮತ್ತು ಗುಣಗಳ ವಿವರಣೆ (1-12).

12244001 ವ್ಯಾಸ ಉವಾಚ|

12244001a ದ್ವಂದ್ವಾನಿ ಮೋಕ್ಷಜಿಜ್ಞಾಸುರರ್ಥಧರ್ಮಾವನುಷ್ಠಿತಃ|

12244001c ವಕ್ತ್ರಾ ಗುಣವತಾ ಶಿಷ್ಯಃ ಶ್ರಾವ್ಯಃ ಪೂರ್ವಮಿದಂ ಮಹತ್||

ವ್ಯಾಸನು ಹೇಳಿದನು: “ದ್ವಂದ್ವಗಳನ್ನು ಸಹಿಸಿಕೊಂಡು ಅರ್ಥ-ಧರ್ಮಗಳನ್ನು ಅನುಷ್ಠಾನಮಾಡುತ್ತಿದ್ದರೂ ಮೋಕ್ಷಜಿಜ್ಞಾಸುವಾದ ಗುಣವಂತ ಶಿಷ್ಯನಿಗೆ ಪ್ರವಚನಕಾರರು ಮೊದಲು ಈ ಮಹತ್ತ್ವದ ಶಾಸ್ತ್ರವಿಷಯವನ್ನು ಹೇಳಬೇಕು.

12244002a ಆಕಾಶಂ ಮಾರುತೋ ಜ್ಯೋತಿರಾಪಃ ಪೃಥ್ವೀ ಚ ಪಂಚಮೀ|

12244002c ಭಾವಾಭಾವೌ ಚ ಕಾಲಶ್ಚ ಸರ್ವಭೂತೇಷು ಪಂಚಸು||

ಆಕಾಶ, ವಾಯು, ತೇಜಸ್ಸು, ಜಲ ಮತ್ತು ಐದನೆಯದಾದ ಪೃಥ್ವೀ, ವ್ಯಕ್ತ, ಅವ್ಯಕ್ತ ಮತ್ತು ಕಾಲ – ಪಂಚಭೂತಾತ್ಮಿಕವಾದ ಇವು ಎಲ್ಲ ಪ್ರಾಣಿಗಳ ಶರೀರದಲ್ಲಿಯೂ ಇರುತ್ತವೆ.

12244003a ಅಂತರಾತ್ಮಕಮಾಕಾಶಂ ತನ್ಮಯಂ ಶ್ರೋತ್ರಮಿಂದ್ರಿಯಮ್|

12244003c ತಸ್ಯ ಶಬ್ದಂ ಗುಣಂ ವಿದ್ಯಾನ್ಮೂರ್ತಿಶಾಸ್ತ್ರವಿಧಾನವಿತ್||

ಅಂತರಾತ್ಮಕವಾದ ಆಕಾಶವು ಶ್ರೋತ್ರವೆಂಬ ಇಂದ್ರಿಯವನ್ನು ಆವರಿಸಿದೆ. ಶರೀರಶಾಸ್ತ್ರವಿಧಾನವನ್ನು ತಿಳಿದವರು ಶಬ್ದವು ಆಕಾಶದ ಗುಣವೆಂದು ತಿಳಿಯಬೇಕು.

12244004a ಚರಣಂ ಮಾರುತಾತ್ಮೇತಿ ಪ್ರಾಣಾಪಾನೌ ಚ ತನ್ಮಯೌ|

12244004c ಸ್ಪರ್ಶನಂ ಚೇಂದ್ರಿಯಂ ವಿದ್ಯಾತ್ತಥಾ ಸ್ಪರ್ಶಂ ಚ ತನ್ಮಯಮ್||

ತಿರುಗಾಡುವುದು ವಾಯುವಿನ ಧರ್ಮ. ಪ್ರಾಣಾಪಾನಗಳು ವಾಯು ಸ್ವರೂಪಗಳು. ಸ್ಪರ್ಶೇಂದ್ರಿಯ ಮತ್ತು ಸ್ಪರ್ಶಗುಣವು ವಾಯುಮಯವೆಂದು ತಿಳಿಯಬೇಕು.

12244005a ತತಃ[1] ಪಾಕಃ ಪ್ರಕಾಶಶ್ಚ ಜ್ಯೋತಿಶ್ಚಕ್ಷುಶ್ಚ ತನ್ಮಯಮ್|

12244005c ತಸ್ಯ ರೂಪಂ ಗುಣಂ ವಿದ್ಯಾತ್ತಮೋಽನ್ವವಸಿತಾತ್ಮಕಮ್||

ಪಚನ, ಪ್ರಕಾಶ, ಜ್ಯೋತಿ, ಚಕ್ಷುಸ್ಸು ಇವು ಅಗ್ನಿತತ್ತ್ವದ ಕಾರ್ಯಗಳು. ಕೆಂಪು, ಬಿಳಿಪು ಮತ್ತು ಕಪ್ಪು ಮೊದಲಾದ ವರ್ಣಗಳಿಂದ ಕೂಡಿದ ರೂಪವು ಅಗ್ನಿಯ ಗುಣವು.

12244006a ಪ್ರಕ್ಲೇದಃ ಕ್ಷುದ್ರತಾ ಸ್ನೇಹ ಇತ್ಯಾಪೋ ಹ್ಯುಪದಿಶ್ಯತೇ|

12244006c ರಸನಂ ಚೇಂದ್ರಿಯಂ ಜಿಹ್ವಾ ರಸಶ್ಚಾಪಾಂ ಗುಣೋ ಮತಃ||

ತೇವ, ಸೂಕ್ಷ್ಮತೆ ಮತ್ತು ಸ್ನಿಗ್ಧತೆ – ಇವು ಜಲತತ್ತ್ವದ ಧರ್ಮಗಳು. ರಸನೇಂದ್ರಿಯ, ನಾಲಿಗೆ ಮತ್ತು ರಸ – ಇವು ಜಲದ ಗುಣಗಳೆಂಬ ಮತವಿದೆ.

12244007a ಸಂಘಾತಃ ಪಾರ್ಥಿವೋ ಧಾತುರಸ್ಥಿದಂತನಖಾನಿ ಚ|

12244007c ಶ್ಮಶ್ರು ಲೋಮ ಚ ಕೇಶಾಶ್ಚ ಸಿರಾಃ ಸ್ನಾಯು ಚ ಚರ್ಮ ಚ||

ಶರೀರದಲ್ಲಿ ಒಂದಕ್ಕೊಂದು ಕೂಡಿಕೊಂಡಿರುವ ಸಂಧಿಬಂಧಗಳು ಪೃಥ್ವೀ ತತ್ತ್ವದ್ದಾಗಿವೆ. ಮೂಳೆ, ಹಲ್ಲು, ಉಗುರುಗಳು, ಗಡ್ಡ-ಮೀಸೆಗಳು, ರೋಮಗಳು, ತಲೆಗೂದಲು, ಸ್ನಾಯುಗಳು, ಚರ್ಮ – ಇವು ಪೃಥ್ವೀಭೂತಕ್ಕೆ ಸಂಬಂಧಿಸಿದವು.

12244008a ಇಂದ್ರಿಯಂ ಘ್ರಾಣಸಂಜ್ಞಾನಂ ನಾಸಿಕೇತ್ಯಭಿಧೀಯತೇ|

12244008c ಗಂಧಶ್ಚೈವೇಂದ್ರಿಯಾರ್ಥೋಽಯಂ ವಿಜ್ಞೇಯಃ ಪೃಥಿವೀಮಯಃ||

ನಾಸಿಕವೆಂದು ಸೂಚಿತವಾಗಿರುವ ಘ್ರಾಣೇಂದ್ರಿಯವೂ ಪೃಥ್ವಿಯ ಅಂಶವೇ ಆಗಿದೆ. ಗಂಧವೆಂಬ ಘ್ರಾಣೇಂದ್ರಿಯ ವಿಷಯವೂ ಪೃಥಿವೀಮಯವೆಂದು ತಿಳಿಯಬೇಕು.

12244009a ಉತ್ತರೇಷು ಗುಣಾಃ ಸಂತಿ ಸರ್ವೇ ಸರ್ವೇಷು ಚೋತ್ತರಾಃ|

12244009c ಪಂಚಾನಾಂ ಭೂತಸಂಘಾನಾಂ ಸಂತತಿಂ ಮುನಯೋ ವಿದುಃ||

ಮುಂದುಮುಂದಿನ ಭೂತಗಳಲ್ಲಿ ಹಿಂದು ಹಿಂದಿನ ಭೂತಗಳ ಗುಣಗಳೆಲ್ಲವೂ ಅಡಗಿರುತ್ತವೆ[2]. ಮುನಿಗಳು ಪಂಚಮಹಾಭೂತಗಳ ಸಮುದಾಯದ ಸಂತತಿಯನ್ನು ಅರಿತಿರುತ್ತಾರೆ.

12244010a ಮನೋ ನವಮಮೇಷಾಂ ತು ಬುದ್ಧಿಸ್ತು ದಶಮೀ ಸ್ಮೃತಾ|

12244010c ಏಕಾದಶೋಽಂತರಾತ್ಮಾ ಚ ಸರ್ವತಃ ಪರ ಉಚ್ಯತೇ||

ಪಂಚಭೂತಗಳು, ವ್ಯಕ್ತ, ಅವ್ಯಕ್ತ, ಮತ್ತು ಕಾಲ – ಇವುಗಳಾದ ನಂತರ ಮನಸ್ಸು ಒಂಬತ್ತನೆಯದೆಂದೂ, ಬುದ್ಧಿಯು ಹತ್ತನೆಯದೆಂದೂ, ಹನ್ನೊಂದನೆಯದು ಎಲ್ಲಕ್ಕಿಂತ ಉತ್ತಮನಾದ ಅಂತರಾತ್ಮವೆಂದೂ ಹೇಳಿದ್ದಾರೆ.

12244011a ವ್ಯವಸಾಯಾತ್ಮಿಕಾ ಬುದ್ಧಿರ್ಮನೋ ವ್ಯಾಕರಣಾತ್ಮಕಮ್|

12244011c ಕರ್ಮಾನುಮಾನಾದ್ವಿಜ್ಞೇಯಃ ಸ ಜೀವಃ ಕ್ಷೇತ್ರಸಂಜ್ಞಕಃ||

ಬುದ್ಧಿಯು ವ್ಯವಸಾಯಾತ್ಮಕವು. ಮನಸ್ಸು ವ್ಯಾಕರಣಾತ್ಮಕವು. ಕರ್ಮಗಳನ್ನು ಮಾಡುವುದೂ ತಿಳಿಯುವುದೂ ಜಡತತ್ತ್ವಕ್ಕೆ ಸಾಧ್ಯವಿಲ್ಲ. ಆದುದರಿಂದ ಕರ್ಮಗಳ ಹಿನ್ನಲೆಯಲ್ಲಿ ಯಾವುದೋ ಚೈತನ್ಯವಿರಬೇಕೆಂಬ ಅನುಮಾನದಿಂದ ಕ್ಷೇತ್ರಜ್ಞನೆಂಬ ಜೀವನಿದ್ದಾನೆಂದು ತಿಳಿಯಬೇಕು.

12244012a ಏಭಿಃ ಕಾಲಾಷ್ಟಮೈರ್ಭಾವೈರ್ಯಃ ಸರ್ವೈಃ ಸರ್ವಮನ್ವಿತಮ್|

12244012c ಪಶ್ಯತ್ಯಕಲುಷಂ ಪ್ರಾಜ್ಞಃ ಸ ಮೋಹಂ ನಾನುವರ್ತತೇ||

ಎಲ್ಲವೂ ಎಂಟನೆಯದಾದ ಕಾಲದ ಭಾವಗಳಿಂದ ಕೂಡಿರುವುದೆಂದು ತಿಳಿದಿರುವ ಪ್ರಾಜ್ಞನು ಅಕಲ್ಮಷವನ್ನು ಕಂಡು ಮೋಹವಶನಾಗುವುದಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತುಶ್ಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ನಾಲ್ಕನೇ ಅಧ್ಯಾಯವು.

[1] ತಪಃ (ಭಾರತ ದರ್ಶನ).

[2] ಆಕಾಶದಲ್ಲಿ ಶಬ್ದಗುಣಮಾತ್ರವಿದೆ. ಎರಡನೆಯ ವಾಯುವಿನಲ್ಲಿ ಅದರ ವಿಶಿಷ್ಟ ಗುಣವಾದ ಸ್ಪರ್ಶದ ಜೊತೆಗೆ ಶಬ್ದಗುಣವೂ ಇರುತ್ತದೆ. ಮೂರನೆಯ ತೇಜಸ್ತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ರೂಪದೊಂದಿಗೆ ಶಬ್ದ-ಸ್ಪರ್ಶ ಗುಣಗಳೂ ಇರುತ್ತವೆ. ನಾಲ್ಕನೆಯದಾದ ಜಲತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ರಸದೊಂದಿಗೆ ಶಬ್ದ-ಸ್ಪರ್ಶ-ರೂಪ ಗುಣಗಳೂ ಇರುತ್ತವೆ. ಐದನೆಯದಾದ ಪೃಥ್ವೀತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ಗಂಧದ ಜೊತೆಗೆ ಶಬ್ದ-ಸ್ಪರ್ಶ-ರೂಪ-ರಸ ಗುಣಗಳೂ ಇರುತ್ತವೆ. (ಭಾರತ ದರ್ಶನ)

Comments are closed.