Shanti Parva: Chapter 243

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೩

ಬ್ರಹ್ಮವಿದ ಬ್ರಾಹ್ಮಣನ ಲಕ್ಷಣಗಳು; ಪರಬ್ರಹ್ಮಪ್ರಾಪ್ತಿಯ ಉಪಾಯ (1-23).

12243001 ವ್ಯಾಸ ಉವಾಚ|

12243001a ಗಂಧಾನ್ರಸಾನ್ನಾನುರುಂಧ್ಯಾತ್ಸುಖಂ ವಾ

         ನಾಲಂಕಾರಾಂಶ್ಚಾಪ್ನುಯಾತ್ತಸ್ಯ ತಸ್ಯ|

12243001c ಮಾನಂ ಚ ಕೀರ್ತಿಂ ಚ ಯಶಶ್ಚ ನೇಚ್ಚೇತ್

         ಸ ವೈ ಪ್ರಚಾರಃ ಪಶ್ಯತೋ ಬ್ರಾಹ್ಮಣಸ್ಯ||

ವ್ಯಾಸನು ಹೇಳಿದನು: “ಗಂಧ-ರಸಗಳನ್ನು ಉಪಭೋಗಿಸದೇ ಅವುಗಳಿಂದ ದೊರೆಯುವ ಸುಖಗಳಿಗೆ ಆಸೆಪಡದೇ, ಅಲಂಕಾರ ಮಾಡಿಕೊಳ್ಳದೇ, ಮಾನ-ಕೀರ್ತಿ ಮತ್ತು ಯಶಸ್ಸುಗಳನ್ನು ಆಶಿಸದೇ ಇರುವುದೇ ಬ್ರಹ್ಮಜ್ಞಾನೀ ಬ್ರಾಹ್ಮಣನಲ್ಲಿ ಕಾಣುವ ಆಚಾರ ಲಕ್ಷಣಗಳು.

12243002a ಸರ್ವಾನ್ವೇದಾನಧೀಯೀತ ಶುಶ್ರೂಷುರ್ಬ್ರಹ್ಮಚರ್ಯವಾನ್|

12243002c ಋಚೋ ಯಜೂಂಷಿ ಸಾಮಾನಿ ನ ತೇನ ನ ಸ ಬ್ರಾಹ್ಮಣಃ||

ಋಕ್ಸಾಮ-ಯಜುಸ್ಸುಗಳೆಂಬ ಸರ್ವ ವೇದಗಳ ಅಧ್ಯಯನವನ್ನೂ ಮಾಡಿರಬೇಕು. ಬ್ರಹ್ಮಚರ್ಯದಲ್ಲಿದ್ದುಕೊಂಡು ಗುರುಶುಶ್ರೂಷೆಯನ್ನು ಮಾಡಿರಬೇಕು. ಇದರಿಂದ ಅವನು ಬ್ರಾಹ್ಮಣನಾಗದೇ ಇರುವುದಿಲ್ಲ.

12243003a ಜ್ಞಾತಿವತ್ಸರ್ವಭೂತಾನಾಂ ಸರ್ವವಿತ್ಸರ್ವವೇದವಿತ್|

12243003c ನಾಕಾಮೋ ಮ್ರಿಯತೇ ಜಾತು ನ ತೇನ ನ ಚ ಬ್ರಾಹ್ಮಣಃ||

ಸರ್ವಭೂತಗಳಲ್ಲಿಯೂ ಬಂಧುವಂತೆ ನಡೆದುಕೊಳ್ಳುವ, ಸರ್ವವಿದು, ಸರ್ವವೇದವಿದುವು ಕಾಮರಹಿತನಾಗುತ್ತಾನೆ. ಅವನಿಗೆ ಮೃತ್ಯುವಿಲ್ಲ. ಅಂಥವನು ಬ್ರಾಹ್ಮಣನಾಗದೇ ಇರುವುದಿಲ್ಲ.

12243004a ಇಷ್ಟೀಶ್ಚ ವಿವಿಧಾಃ ಪ್ರಾಪ್ಯ ಕ್ರತೂಂಶ್ಚೈವಾಪ್ತದಕ್ಷಿಣಾನ್|

12243004c ನೈವ ಪ್ರಾಪ್ನೋತಿ ಬ್ರಾಹ್ಮಣ್ಯಮಭಿಧ್ಯಾನಾತ್ಕಥಂ ಚನ||

ವಿವಿಧ ಇಷ್ಟಿಗಳನ್ನೂ, ಆಪ್ತದಕ್ಷಿಣೆಯುಕ್ತ ಕ್ರತುಗಳನ್ನೂ ಮಾಡಿ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳದೇ ಇದ್ದರೆ ಯಾವುದೇ ಕಾರಣದಿಂದಲೂ ಬ್ರಾಹ್ಮಣನಾಗುವುದಿಲ್ಲ.

12243005a ಯದಾ ಚಾಯಂ ನ ಬಿಭೇತಿ ಯದಾ ಚಾಸ್ಮಾನ್ನ ಬಿಭ್ಯತಿ|

12243005c ಯದಾ ನೇಚ್ಚತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ||

ಇತರರ ಕುರಿತು ಭಯಪಡದಿರುವಾಗ ಮತ್ತು ಇತರರು ಅವನ ಕುರಿತು ಭಯಪಡದಿರುವಾಗ, ಹಾಗೂ ಯಾವಾಗ ಅವನು ಇಚ್ಛಿಸುವುದೂ ಇಲ್ಲವೋ ಮತ್ತು ದ್ವೇಷಿಸುವುದೂ ಇಲ್ಲವೋ ಆಗ ಅವನು ಬ್ರಹ್ಮಭಾವವನ್ನು ಪಡೆದುಕೊಳ್ಳುತ್ತಾನೆ.

12243006a ಯದಾ ನ ಕುರುತೇ ಭಾವಂ ಸರ್ವಭೂತೇಷು ಪಾಪಕಮ್|

12243006c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ||

ಕರ್ಮ, ಮನಸ್ಸು ಮತ್ತು ಮಾತಿನಿಂದ ಯಾರು ಸರ್ವಭೂತಗಳಿಗೂ ಪಾಪವನ್ನೆಸಗುವ ಭಾವವನ್ನು ಹೊಂದುವುದಿಲ್ಲವೋ ಅಂಥವನು ಬ್ರಹ್ಮಭಾವವನ್ನು ಹೊಂದುತ್ತಾನೆ.

12243007a ಕಾಮಬಂಧನಮೇವೈಕಂ ನಾನ್ಯದಸ್ತೀಹ ಬಂಧನಮ್|

12243007c ಕಾಮಬಂಧನಮುಕ್ತೋ ಹಿ ಬ್ರಹ್ಮಭೂಯಾಯ ಕಲ್ಪತೇ||

ಕಾಮಬಂಧನವೇ ಏಕೈಕಬಂಧನವು. ಇಲ್ಲಿ ಬೇರಾವ ಬಂಧನವೂ ಇಲ್ಲ. ಕಾಮಬಂಧನದಿಂದ ಮುಕ್ತನಾದವನೇ ಬ್ರಹ್ಮಭಾವವನ್ನು ಹೊಂದುತ್ತಾನೆ.

12243008a ಕಾಮತೋ ಮುಚ್ಯಮಾನಸ್ತು ಧೂಮ್ರಾಭ್ರಾದಿವ ಚಂದ್ರಮಾಃ|

12243008c ವಿರಜಾಃ ಕಾಲಮಾಕಾಂಕ್ಷನ್ಧೀರೋ ಧೈರ್ಯೇಣ ವರ್ತತೇ||

ಕಾಮನೆಗಳಿಂದ ಮುಕ್ತನಾದ ಧೀರನು ಧೂಮ್ರವರ್ಣದ ಮೋಡಗಳಿಂದ ಮುಕ್ತನಾದ ಚಂದ್ರಮನಂತೆ ರಜೋರಹಿತನಾಗಿ ನಿರ್ಮಲನಾಗಿ ಧೈರ್ಯದಿಂದ ಕಾಲಪ್ರತೀಕ್ಷೆಯನ್ನು ಮಾಡುತ್ತಿರುತ್ತಾನೆ.

12243009a ಆಪೂರ್ಯಮಾಣಮಚಲಪ್ರತಿಷ್ಠಂ

ಸಮುದ್ರಮಾಪಃ ಪ್ರವಿಶಂತಿ ಯದ್ವತ್[1]|

12243009c ಸ ಕಾಮಕಾಂತೋ ನ ತು ಕಾಮಕಾಮಃ

ಸ ವೈ ಲೋಕಾತ್ ಸ್ವರ್ಗಮುಪೈತಿ ದೇಹೀ||

ಸದಾ ತುಂಬಿಕೊಂಡು ಸುಸ್ಥಿರ ಸ್ಥಿತಿಯನ್ನು ಹೊಂದಿರುವ ಸಮುದ್ರವನ್ನು ಎಲ್ಲ ನದ-ನದಿಗಳೂ ಹೇಗೆ ಪ್ರವೇಶಿಸುತ್ತವೆಯೋ ಹಾಗೆ ಸ್ಥಿತಪ್ರಜ್ಞನು ಕಾಮನೆಗಳಿಗೆ ಪ್ರಿಯನಾಗಿರುತ್ತಾನೆ. ಕಾಮನೆಗಳು ಅವನನ್ನು ಹಿಂಬಾಲಿಸುತ್ತವೆ. ಆದರೆ ಅವನು ಮಾತ್ರ ಕಾಮಾಪೇಕ್ಷಿಯಾಗಿರುವುದಿಲ್ಲ. ಅವನೇನಾದರೂ ಕಾಮನೆಗಳನ್ನು ಬಯಸಿದ್ದೇ ಆದರೆ ಸ್ವರ್ಗವನ್ನೇ ಪಡೆದುಕೊಳ್ಳುತ್ತಾನೆ.

12243010a ವೇದಸ್ಯೋಪನಿಷತ್ಸತ್ಯಂ ಸತ್ಯಸ್ಯೋಪನಿಷದ್ದಮಃ|

12243010c ದಮಸ್ಯೋಪನಿಷದ್ದಾನಂ ದಾನಸ್ಯೋಪನಿಷತ್ ತಪಃ||

ಸತ್ಯವೇ ವೇದದ ರಹಸ್ಯವು. ಸತ್ಯದ ರಹಸ್ಯವು ದಮೆ (ಜಿತೇಂದ್ರಿಯತೆ). ದಮೆಯ ರಹಸ್ಯವು ದಾನ ಮತ್ತು ದಾನದ ರಹಸ್ಯವು ತಪಸ್ಸು.

12243011a ತಪಸೋಪನಿಷತ್ತ್ಯಾಗಸ್ತ್ಯಾಗಸ್ಯೋಪನಿಷತ್ಸುಖಮ್|

12243011c ಸುಖಸ್ಯೋಪನಿಷತ್ ಸ್ವರ್ಗಃ ಸ್ವರ್ಗಸ್ಯೋಪನಿಷಚ್ಚಮಃ||

ತಪಸ್ಸಿನ ರಹಸ್ಯವು ತ್ಯಾಗ. ತ್ಯಾಗದ ರಹಸ್ಯವು ಸುಖ. ಸುಖದ ರಹಸ್ಯವು ಸ್ವರ್ಗ. ಮತ್ತು ಸ್ವರ್ಗದ ರಹಸ್ಯವು ಶಮೆ (ಸರ್ವೋಪಶಮನರೂಪವಾದ ಮುಕ್ತಿ).

12243012a ಕ್ಲೇದನಂ ಶೋಕಮನಸೋಃ ಸಂತಾಪಂ ತೃಷ್ಣಯಾ ಸಹ|

12243012c ಸತ್ತ್ವಮಿಚ್ಚಸಿ ಸಂತೋಷಾಚ್ಚಾಂತಿಲಕ್ಷಣಮುತ್ತಮಮ್||

ಸಂತೋಷಕ್ಕೋಸ್ಕರ ಸತ್ತ್ವಗುಣವನ್ನು ಆಶ್ರಯಿಸಬೇಕು. ಅದು ಉತ್ತಮ ಶಾಂತಿಯ ಲಕ್ಷಣವೇ ಆಗಿದೆ. ಅದು ತೃಷ್ಣೆಯನ್ನೂ, ಸಂಕಲ್ಪ-ವಿಕಲ್ಪಗಳನ್ನೂ, ಚಿಂತೆ-ದುಃಖಗಳ ಸಂತಾಪವನ್ನೂ ಹೋಗಲಾಡಿಸುತ್ತದೆ.

12243013a ವಿಶೋಕೋ ನಿರ್ಮಮಃ ಶಾಂತಃ ಪ್ರಸನ್ನಾತ್ಮಾತ್ಮವಿತ್ತಮಃ[2]|

12243013c ಷಡ್ಭಿರ್ಲಕ್ಷಣವಾನೇತೈಃ ಸಮಗ್ರಃ ಪುನರೇಷ್ಯತಿ||

ವಿಶೋಕ, ನಿರ್ಮಮಕಾರ, ಶಾಂತಿ, ಪ್ರಸನ್ನಾತ್ಮ, ಆತ್ಮವಿತ್ತಮ – ಈ ಆರು ಲಕ್ಷಣಗಳಿಂದ ಕೂಡಿದವನು ಪೂರ್ಣತೆಯನ್ನು ಪಡೆದು ಮೋಕ್ಷವನ್ನು ಹೊಂದುತ್ತಾನೆ.

12243014a ಷಡ್ಭಿಃ ಸತ್ತ್ವಗುಣೋಪೇತೈಃ ಪ್ರಾಜ್ಞೈರಧಿಕಮಂತ್ರಿಭಿಃ|

12243014c ಯೇ ವಿದುಃ ಪ್ರೇತ್ಯ ಚಾತ್ಮಾನಮಿಹಸ್ಥಾಂಸ್ತಾಂಸ್ತಥಾ ವಿದುಃ||

ಈ ಆರು ಲಕ್ಷಣಗಳಿಂದ ಕೂಡಿದ ಸತ್ತ್ವಗುಣೋಯುಕ್ತ ಪ್ರಾಜ್ಞರು ಯಜ್ಞ-ದಾನ-ತಪಸ್ಸುಗಳೆಂಬ ಅಥವಾ ಶ್ರವಣ-ಮನನ-ನಿಧಿಧ್ಯಾಸನಗಳೆಂಬ ಮೂರರ ಮೂಲಕ ಇಲ್ಲಿಯೇ ದೇಹದಲ್ಲಿರುವ ಆತ್ಮನನ್ನು ತಿಳಿಯುತ್ತಾರೆ. ಅವರು ದೇಹಾವಸಾನದ ನಂತರ ಆತ್ಮಭಾವವನ್ನು ಪಡೆದುಕೊಳ್ಳುತ್ತಾರೆ.

12243015a ಅಕೃತ್ರಿಮಮಸಂಹಾರ್ಯಂ ಪ್ರಾಕೃತಂ ನಿರುಪಸ್ಕೃತಮ್|

12243015c ಅಧ್ಯಾತ್ಮಂ ಸುಕೃತಪ್ರಜ್ಞಃ ಸುಖಮವ್ಯಯಮಶ್ನುತೇ||

ಉತ್ಪತ್ತಿರಹಿತನಾದ, ಅವಿನಾಶಿಯಾದ, ಸ್ವಭಾವಸಿದ್ಧನಾದ, ಅವಿಕಾರಿಯಾದ ಮತ್ತು ಶರೀರದಲ್ಲಿಯೇ ಇರುವ ಸುಕೃತ ಎನ್ನುವ ಬ್ರಹ್ಮನನ್ನು ಹೊಂದಿದವನು ಅಕ್ಷಯ ಸುಖಕ್ಕೆ ಭಾಗಿಯಾಗುತ್ತಾನೆ.

12243016a ನಿಷ್ಪ್ರಚಾರಂ ಮನಃ ಕೃತ್ವಾ ಪ್ರತಿಷ್ಠಾಪ್ಯ ಚ ಸರ್ವತಃ|

12243016c ಯಾಮಯಂ ಲಭತೇ ತುಷ್ಟಿಂ ಸಾ ನ ಶಕ್ಯಮತೋಽನ್ಯಥಾ||

ಎಲ್ಲಿಂದಲ್ಲಿಗೆ ತಿರುಗಾಡುವ ಮನಸ್ಸನ್ನು ಎಲ್ಲಕಡೆಗಳಿಂದಲೂ ತಡೆದು ಆತ್ಮನಲ್ಲಿಯೇ ಪ್ರತಿಷ್ಠಾಪಿಸಿ ಪಡೆಯುವ ತುಷ್ಟಿಯನ್ನು ಬೇರೆ ಯಾವ ವಿಧಾನದಿಂದಲೂ ಪಡೆಯಲು ಸಾಧ್ಯವಾಗುವುದಿಲ್ಲ.

12243017a ಯೇನ ತೃಪ್ಯತ್ಯಭುಂಜಾನೋ ಯೇನ ತುಷ್ಯತ್ಯವಿತ್ತವಾನ್|

12243017c ಯೇನಾಸ್ನೇಹೋ ಬಲಂ ಧತ್ತೇ ಯಸ್ತಂ ವೇದ ಸ ವೇದವಿತ್||

ತಿನ್ನದೇ ತೃಪ್ತಿಯನ್ನು ಹೊಂದುವ, ಧನವಿಲ್ಲದೇ ತುಷ್ಟಿಯನ್ನು ಹೊಂದುವ, ಸ್ನೇಹವಿಲ್ಲದೇ ಬಲವನ್ನು ನೀಡುವ ಆ ಬ್ರಹ್ಮವಸ್ತುವನ್ನು ತಿಳಿದವನೇ ವೇದವಿದುವು.

12243018a ಸಂಗೋಪ್ಯ ಹ್ಯಾತ್ಮನೋ ದ್ವಾರಾಣ್ಯಪಿಧಾಯ ವಿಚಿಂತಯನ್|

12243018c ಯೋ ಹ್ಯಾಸ್ತೇ ಬ್ರಾಹ್ಮಣಃ ಶಿಷ್ಟಃ ಸ ಆತ್ಮರತಿರುಚ್ಯತೇ||

ಪ್ರಮಾದಕ್ಕೆ ಒಳಗಾಗದಂತೆ ತನ್ನ ಶರೀರದ ಎಲ್ಲ ಬಾಗಿಲುಗಳನ್ನೂ ಮುಚ್ಚಿ ರಕ್ಷಿಸಿಕೊಳ್ಳುತ್ತಾ ಅನವರತವೂ ಬ್ರಹ್ಮವಸ್ತುವನ್ನು ಧ್ಯಾನಿಸುವ ಬ್ರಾಹ್ಮಣನನ್ನು ಶಿಷ್ಟನೆಂದೂ ಆತ್ಮರತಿಯೆಂದೂ ಹೇಳುತ್ತಾರೆ.

12243019a ಸಮಾಹಿತಂ ಪರೇ ತತ್ತ್ವೇ ಕ್ಷೀಣಕಾಮಮವಸ್ಥಿತಮ್|

12243019c ಸರ್ವತಃ ಸುಖಮನ್ವೇತಿ ವಪುಶ್ಚಾಂದ್ರಮಸಂ ಯಥಾ||

ಕಾಮನೆಗಳನ್ನು ಕಳೆದುಕೊಂಡು ಶ್ರೇಷ್ಠ ಪರತತ್ತ್ವದಲ್ಲಿ ಏಕಾಗ್ರಚಿತ್ತನಾಗಿರುವವನು ಚಂದ್ರನ ದೇಹದಂತೆ ಎಲ್ಲ ಕಡೆಗಳಿಂದಲೂ ಆನಂದದಿಂದ ವ್ಯಾಪ್ತನಾಗಿರುತ್ತಾನೆ.

12243020a ಸವಿಶೇಷಾಣಿ ಭೂತಾನಿ ಗುಣಾಂಶ್ಚಾಭಜತೋ ಮುನೇಃ|

12243020c ಸುಖೇನಾಪೋಹ್ಯತೇ ದುಃಖಂ ಭಾಸ್ಕರೇಣ ತಮೋ ಯಥಾ||

ಎಲ್ಲ ಪ್ರಾಣಿಗಳನ್ನೂ ಸಮಭಾವದಿಂದ ಕಾಣುವ, ಗುಣಾತೀತನಾದವನ ದುಃಖವು ಅಂಧಕಾರವು ಭಾಸ್ಕರನಿಂದ ಹೊರಟುಹೋಗುವಂತೆ ಅನಾಯಾಸವಾಗಿ ಹೊರಟು ಹೋಗುತ್ತದೆ.

12243021a ತಮತಿಕ್ರಾಂತಕರ್ಮಾಣಮತಿಕ್ರಾಂತಗುಣಕ್ಷಯಮ್|

12243021c ಬ್ರಾಹ್ಮಣಂ ವಿಷಯಾಶ್ಲಿಷ್ಟಂ ಜರಾಮೃತ್ಯೂ ನ ವಿಂದತಃ||

ಕರ್ಮಗಳನ್ನು ಪರಿತ್ಯಜಿಸಿ, ಗುಣಗಳ ಆಶ್ರಯವನ್ನೂ ಅತಿಕ್ರಮಿಸಿ. ವಿಷಯವಾಸನೆಗಳಿಂದ ರಹಿತನಾದ ಬ್ರಾಹ್ಮಣನನ್ನು ಜರಾಮೃತ್ಯುಗಳು ಬಾಧಿಸುವುದಿಲ್ಲ.

12243022a ಸ ಯದಾ ಸರ್ವತೋ ಮುಕ್ತಃ ಸಮಃ ಪರ್ಯವತಿಷ್ಠತೇ|

12243022c ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಶರೀರಸ್ಥೋಽತಿವರ್ತತೇ||

ಸರ್ವತಃ ಮುಕ್ತನಾಗಿ ಸಮಸ್ಥಿತಿಯಲ್ಲಿರುವವನು ಶರೀರಸ್ಥನಾಗಿದ್ದರೂ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳನ್ನು ಅತಿಕ್ರಮಿಸುತ್ತಾನೆ.

12243023a ಕಾರಣಂ ಪರಮಂ ಪ್ರಾಪ್ಯ ಅತಿಕ್ರಾಂತಸ್ಯ ಕಾರ್ಯತಾಮ್|

12243023c ಪುನರಾವರ್ತನಂ ನಾಸ್ತಿ ಸಂಪ್ರಾಪ್ತಸ್ಯ ಪರಾತ್ಪರಮ್||

ಪರಮಕಾರಣಸ್ವರೂಪನಾದ ಬ್ರಹ್ಮವನ್ನು ಹೊಂದಿ ಕಾರ್ಯರೂಪವಾದ ಪ್ರಕೃತಿಯನ್ನು ಅತಿಕ್ರಮಿಸುವವನು ಪರಮಪದವನ್ನು ಹೊಂದುತ್ತಾನೆ ಮತ್ತು ಅವನಿಗೆ ಪುನರಾವರ್ತನೆಯಿರುವುದಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ತ್ರಿಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ಮೂರನೇ ಅಧ್ಯಾಯವು.

[1] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮಃ| (ಭಾರತ ದರ್ಶನ).

[2] ಪ್ರಸನ್ನಾತ್ಮಾ ವಿಮತ್ಸರಃ| (ಭಾರತ ದರ್ಶನ).

Comments are closed.